೦೬

೦೦೦ ಸೂ ರಞ್ಜಿಸಿತು ...{Loading}...

ಸೂ. ರಂಜಿಸಿತು ತ್ರೈಭುವನವನು ರಿಪು
ಭಂಜನದ ಭಾರವಣೆ ಸುಭಟರ
ನಂಜಿಸಿತು ಕಲಿಭೀಮದುರಿಯೋಧನರ ಸಂಗ್ರಾಮ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲ ಸಹಿತ ಯುಧಿಷ್ಠಿರಾದಿ ನೃ
ಪಾಲಕರು ಕಾಣಿಕೆಯನಿತ್ತರು ನಮಿಸಿ ಹಲಧರಗೆ
ಮೇಲುದುಗುಡದ ಮುಖದ ನೀರೊರೆ
ವಾಲಿಗಳ ಕಕ್ಷದ ಗದೆಯ ಭೂ
ಪಾಲ ಬಂದನು ನೊಸಲ ಚಾಚಿದನವರ ಚರಣದಲಿ ॥1॥

೦೦೨ ಇಳಿದು ಗಜಹಯರಥವ ...{Loading}...

ಇಳಿದು ಗಜಹಯರಥವ ಸುಭಟಾ
ವಳಿ ಕೃತಾಂಜಲಿ ನೊಸಲೊಳಿರೆ ಕೆಲ
ಬಲಕೆ ಸಾರ್ದರು ನೋಡಿದನು ಪಾಂಡವ ಪತಾಕಿನಿಯ
ಉಳಿದುದೀಚೆಯಲೀಸು ಬಲವಿವ
ನುಳಿದನೊಬ್ಬನೆ ದೈವಗತಿಗಾ
ರಳಲಿ ಮಾಡುವುದೇನೆನುತ ನುಡಿಸಿದನು ಕುರುಪತಿಯ ॥2॥

೦೦೩ ಗುರುವೊ ಗಙ್ಗಾಸುತನೊ ...{Loading}...

ಗುರುವೊ ಗಂಗಾಸುತನೊ ಮಾದ್ರೇ
ಶ್ವರನೊ ಕರ್ಣನೊ ಸೈಂಧವನೊ ಸೋ
ದರರ ಶತಕವೊ ಪುತ್ರ ಮಿತ್ರ ಜ್ಞಾತಿ ಬಾಂಧವರೊ
ಹರಸಿ ಕುರಿಗಳನಿಕ್ಕಿದಡೆ ಗೋ
ಚರಿಸದೇ ರಣವಿಜಯನಿಧಿ ಹರ
ಹರ ಎನುತ ಕರಗಿದನು ಕಡು ಕರುಣದಲಿ ಬಲರಾಮ ॥3॥

೦೦೪ ಆಹವದಿ ಪಾಣ್ಡವ ...{Loading}...

ಆಹವದಿ ಪಾಂಡವ ಮಮ ಪ್ರಾ
ಣಾಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ ॥4॥

೦೦೫ ತಿಳಿದು ನೋಡಿರೆ ...{Loading}...

ತಿಳಿದು ನೋಡಿರೆ ರಾಮ ಧರ್ಮ
ಸ್ಥಳಕೆ ನೀವು ಸಹಾಯವಿನಿಬರ
ಗೆಲವು ನಿರ್ಮಳ ಧರ್ಮಮೂಲವೊ ಧರ್ಮವಿರಹಿತವೊ
ಛಲವ ಬಿಡಿರೇ ನಿಮ್ಮ ಶಿಷ್ಯನು
ಕಲಿವೃಕೋದರನಲ್ಲವೇ ತವೆ
ಬಳಸಬಹುದೇ ಪಕ್ಷಪಾತದೊಳೆಂದನಸುರಾರಿ ॥5॥

೦೦೬ ನಿವಗೆ ಪಾಣ್ಡವ ...{Loading}...

ನಿವಗೆ ಪಾಂಡವ ಪಕ್ಷಪಾತ
ವ್ಯವಹರಣೆ ಹುಸಿ ನಾವಲೇ ಕೌ
ರವನ ಪಕ್ಷಾವೇಶಿಗಳು ಸಾಕಿನ್ನದಂತಿರಲಿ
ಎವಗೆ ಸರಿಯಿಬ್ಬರು ಗದಾಭ್ಯಾ
ಸವನು ನಮ್ಮಲಿ ಮಾಡಿದರು ತಾ
ವಿವರು ಕಾದಲಿ ನಾವು ನೋಡುವೆವೆಂದನಾ ರಾಮ ॥6॥

೦೦೭ ಎಲೆ ಮುನೀಶ್ವರ ...{Loading}...

ಎಲೆ ಮುನೀಶ್ವರ ಪೂರ್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ ॥7॥

೦೦೮ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲ ಬಿಜಯಂಗೈಯನೇ ಕುರುಪತಿಯನವಗಡಿಸಿ
ತಾಳಹಳವಿಗೆಯವನು ಯಾದವ
ಜಾಲ ಸಹಿತೈತಂದು ಕಾರ್ಯದ
ಮೇಲುದಾಗಿನ ಹದನನರಿದನು ಕೃಷ್ಣನಭಿಮತವ ॥8॥

೦೦೯ ಎವಗೆ ಸರಿಯಿತ್ತಣ್ಡ ...{Loading}...

ಎವಗೆ ಸರಿಯಿತ್ತಂಡ ನೀ ಕೌ
ರವನ ಮುರಿವೆ ಯುಧಿಷ್ಠಿರನನಾ
ಹವವ ಗೆಲಿಸುವೆ ಸಾಕು ನೃಪರಿಬ್ಬರಲಿ ಸಂವಾದ
ಎವಗೆ ತೀರ್ಥಕ್ಷೇತ್ರ ಯಾತ್ರಾ
ವ್ಯವಸಿತಕೆ ಮನವಾದುದೆಂದು
ತ್ಸವದಿನಸುರಾರಿಯನುಪಪ್ಲವ್ಯದಲಿ ಬೀಳ್ಕೊಂಡ ॥9॥

೦೧೦ ರಾಮ ಕಳುಹಿಸಿಕೊಣ್ಡು ...{Loading}...

ರಾಮ ಕಳುಹಿಸಿಕೊಂಡು ವಿಪ್ರ
ಸ್ತೋಮಸಹಿತ ಸಮಸ್ತ ಋಷಿಗಳು
ರಾಮಣೀಯಕವಸ್ತು ದಾನವ್ಯಯದ ವೈಭವಕೆ
ಸೌಮನಸ್ಯನು ರಾಗಹರದ ಮ
ಹಾಮಹಿಮ ತೀರ್ಥಾಭಿರತಿಯಲಿ
ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನರ್ಚಿಸಿದ ॥10॥

೦೧೧ ಗಙ್ಗೆ ಮೊದಲಾದಮಳತರ ...{Loading}...

ಗಂಗೆ ಮೊದಲಾದಮಳತರ ತೀ
ರ್ಥಂಗಳಲಿ ತದ್ವಾರಣಾಖ್ಯಾ
ನಂಗಳಲಿ ತತ್ತದ್ವಿಶೇಷವಿಧಾನ ದಾನದಲಿ
ತುಂಗವಿಕ್ರಮನೀ ಸಮಸ್ತ ಜ
ನಂಗಳೊಡನೆ ಸುತೀರ್ಥಯಾತ್ರಾ
ಸಂಗತಿಯಲೇ ಬಳಸಿದನು ಭೂಮಿಪ್ರದಕ್ಷಿಣವ ॥11॥

೦೧೨ ಅವನಿಪತಿ ಕೇಳ್ ...{Loading}...

ಅವನಿಪತಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವಣನಕ್ಷತ್ರದಲಿ ಕಂಡನು ಕೃಷ್ಣಪಾಂಡವರ
ಅವರು ನೋಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ ॥12॥

೦೧೩ ಧಾರುಣೀಪತಿ ಕುಳ್ಳಿರೈ ...{Loading}...

ಧಾರುಣೀಪತಿ ಕುಳ್ಳಿರೈ ಪರಿ
ವಾರ ಕುಳ್ಳಿರಿ ಪಾರ್ಥ ಸಾತ್ಯಕಿ
ವೀರ ಧೃಷ್ಟದ್ಯುಮ್ನ ಯಮಳ ಶಿಖಂಡಿ ಸೃಂಜಯರು
ವೀರ ಭಟರೆಮ್ಮಾಹವದ ವಿ
ಸ್ತಾರವನು ಸಮ ವಿಷಮ ಪಯಗತಿ
ಯೋರೆಪೋರೆಯನರಿವುದೆಂದನು ನಗುತ ಕುರುರಾಯ ॥13॥

೦೧೪ ಚಿತ್ತವಿಸು ಬಲರಾಮ ...{Loading}...

ಚಿತ್ತವಿಸು ಬಲರಾಮ ರಿಪುಗಳ
ತೆತ್ತಿಗನೆ ಲೇಸಾಗಿ ನೋಡು ನೃ
ಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು
ಇತ್ತಲಭಿಮುಖವಾಗಿ ರಥಿಕರು
ಮತ್ತಗಜದಾರೋಹಕರು ರಾ
ವುತ್ತರೀಕ್ಷಿಸಿ ನಮ್ಮ ಸಮರವನೆಂದನವನೀಶ ॥14॥

೦೧೫ ಓಡಿ ಜಲದಲಿ ...{Loading}...

ಓಡಿ ಜಲದಲಿ ಮುಳುಗಿದವರಿಗೆ
ಖೋಡಿಯುಂಟೇ ರಥವಿಳಿದ ರಣ
ಖೇಡ ಕಾಲಾಳಿಂಗೆ ಪಯಗತಿಯೋರೆಪೋರೆಗಳೆ
ನೋಡುತಿದೆ ಪರಿವಾರ ನೀ ಕೈ
ಮಾಡಿ ತೋರಾ ಬರಿಯ ಕಂಠದ
ಮೂಡಿಗೆಯ ಡಾವರದ ಲೇಸಹುದೆಂದನಾ ಭೀಮ ॥15॥

೦೧೬ ಆಟವಿಕ ಸಙ್ಗದಲಿ ...{Loading}...

ಆಟವಿಕ ಸಂಗದಲಿ ಬಹುವಾ
ಚಾಟ ನೀನಹೆ ನಿನ್ನ ಪುಣ್ಯದ
ತೋಟವನು ತರಿದೊಟ್ಟಿ ನಿಮ್ಮೈವರನು ಯಮಪುರದ
ಗೋಟಿನಲಿ ಗುರಿಮಾಡುವೆನು ಜೂ
ಜಾಟದಲಿ ನೀವರಿಯಿರೇ ಬೊ
ಬ್ಬಾಟವಂದೇನಾಯಿತೆಂದನು ಜರೆದು ಕುರುರಾಯ ॥16॥

೦೧೭ ಶಕುನಿ ಕಲಿಸಿದ ...{Loading}...

ಶಕುನಿ ಕಲಿಸಿದ ಕಪಟದಲಿ ಕೌ
ಳಿಕದಲುಬ್ಬಿದಿರಿದರ ವಿಸ್ತಾ
ರಕರಲೇ ನಾವಿಂದಿನಲಿ ದುಶ್ಯಾಸನಾದಿಗಳ
ರಕುತಪಾನ ಭವತ್ಸಹೋದರ
ನಿಕರನಾಶನವರುಹದೇ ಸು
ಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ ॥17॥

೦೧೮ ಸಾಯಲಾಗದೆ ಸುಭಟರಾಚಂ ...{Loading}...

ಸಾಯಲಾಗದೆ ಸುಭಟರಾಚಂ
ದ್ರಾಯತವೆ ತನು ವಿಧಿಯ ಟಿಪ್ಪಣ
ದಾಯುಷವು ತೀರಿದಡೆ ಸಾವರು ನಿನ್ನಲೇನಹುದು
ಕಾಯಲಳವೇ ನಿನಗೆ ಮುನಿದಡೆ
ನೋಯಿಸುವಡಳವಲ್ಲ ಫಡ ದೈ
ವಾಯತಕೆ ನೀನೇಕೆ ಬೆರೆತಿಹೆಯೆಂದನಾ ಭೂಪ ॥18॥

೦೧೯ ಎಲವೊ ದುರ್ಮತಿ ...{Loading}...

ಎಲವೊ ದುರ್ಮತಿ ನಿನ್ನ ಕೌರವ
ಕುಲದ ಶಿಕ್ಷಾರಕ್ಷೆಗಿನ್ನಾ
ರೊಳರು ಹೊರಬಿಗ ದೈವವುಂಟೇ ತಾನೆ ದೈವ ಕಣಾ
ಕಳಚಿದೆನಲಾ ಕೊಂದು ನೂರ್ವರ
ತಲೆಯನಿನ್ನರೆಘಳಿಗೆಯಲಿ ಹೆಡ
ತಲೆಯನೊದೆವೆನು ಹೋಗೆನುತ ಹೊಯ್ದನು ಸುಯೋಧನನ ॥19॥

೦೨೦ ಬಿಡಸಿದಡೆ ಗದೆಯಿನ್ದ ...{Loading}...

ಬಿಡಸಿದಡೆ ಗದೆಯಿಂದ ಹೊಯ್ಗುಳ
ತಡೆದು ತಿವಿದನು ನಿನ್ನ ಮಗನವ
ಗಡದ ಘಾಯಕೆ ಗದೆಯನೊಡ್ಡಿ ಸಗಾಢ ಕೋಪದಲಿ
ತುಡುಕಿದನು ಕಲಿಭೀಮ ಹಜ್ಜೆಯೊ
ಳೆಡೆಮುರಿದು ನಿನ್ನಾತನೌಕಿದ
ರೊಡನೊಡನೆ ಗಾಹಿಸಿದರುಚಿತದ ಗತಿಯ ಗಮಕದಲಿ ॥20॥

೦೨೧ ಹೊಯ್ದು ಬಿಡಿಸಿದಡನಿಲಜನ ...{Loading}...

ಹೊಯ್ದು ಬಿಡಿಸಿದಡನಿಲಜನ ಮೇ
ಲ್ವಾಯ್ದನವನಿಪನೊಡ್ಡಿ ಗದೆಯಲಿ
ಕಾಯ್ದು ತಿವಿದನು ಭೀಮಸೇನನ ನೃಪತಿ ವಂಚಿಸಿದ
ಮೆಯ್ದೆಗೆದಡಿಟ್ಟಣಿಸಿ ಪವನಜ
ಹೊಯ್ದಡೊಲೆದನು ಭೂಪನಿಬ್ಬರ
ಕಯ್ದುಕಾರತನಕ್ಕೆ ಬೆರಗಾದುದು ಸುರಸ್ತೋಮ ॥21॥

೦೨೨ ಸುಳಿದರೆಡಬಲ ಚಾರಿಯಲಿ ...{Loading}...

ಸುಳಿದರೆಡಬಲ ಚಾರಿಯಲಿ ಚಾ
ಪಳದ ಪಯಪಾಡಿನಲಿ ಚಿತ್ರದ
ಚಳಗತಿಯ ಚೇತನದ ಚಡ್ಡಣೆಗಳ ಚಡಾಳದಲಿ
ಹೊಳೆದರಾವರ್ತದಲಿ ಪರಿಮಂ
ಡಳಿಸಿದರು ಠಾಣದಲಿ ಜಂಘೆಯ
ಲುಳಿಯಲವಠಾಣದಲಿ ಮೆರೆದರು ಭೀಮ ಕೌರವರು ॥22॥

೦೨೩ ಒಳಹೊಗುವ ಹೆರತೆಗೆವ ...{Loading}...

ಒಳಹೊಗುವ ಹೆರತೆಗೆವ ಘಾಯವ
ಕಳಚುವವಧಾನದಲಿ ದೃಷ್ಟಿಯ
ಬಳಿಗೆ ಕೈಮಾಡುವ ವಿಘಾತಿಗೆ ಜಗುಳ್ವ ಝಾಡಿಸುವ
ಸುಳಿವ ಸಂತೈಸುವ ಸುಸಂಚದೊ
ಳಳವರಿವ ವಂಚಿಸುವ ಗಮನಿಕೆ
ಯಳಬಳವನಾರೈವ ಭಟರೊದಗಿದರು ಸಮರದಲಿ ॥23॥

೦೨೪ ಬಿಡುವ ಬಿಡಿಸುವ ...{Loading}...

ಬಿಡುವ ಬಿಡಿಸುವ ಪರರ ಘಾಯವ
ತಡೆವ ಗೋಮೂತ್ರಕದ ಚಿತ್ರದ
ಝಡಪದವಧಾನದ ವಿಧಾನದ ಘಾಯಖಂಡಿಗಳ
ತುಡುಕುವವ್ವಳಿಸುವ ವಿಸಂಧಿಯ
ಹಿಡಿವ ಬಿಚ್ಚುವ ಬಿಗಿವ ಸೆಳೆವವ
ಗಡಿಸುವೌಕುವ ಕುಶಲದಲಿ ಕಾದಿದರು ಸಮರದಲಿ ॥24॥

೦೨೫ ಬವರಿ ಮತ್ಸ್ಯೋದ್ಗತಿ ...{Loading}...

ಬವರಿ ಮತ್ಸ್ಯೋದ್ಗತಿ ವಿಲಂಘನ
ವಿವಳಿತಾಂಗ ವರಾಹಮತ ಸಂ
ಪ್ಲವನ ಪಾರಿಷ್ಟವ ಗದಾಪರಿರಂಭ ವಿಕ್ಷೇಪ
ಲವಣಿ ಲಹರಿಯುದಂಚ ನವ ವಿ
ದ್ರವಣ ಲಘುವಿನ್ಯಸ್ತವೆಂಬೀ
ವಿವರದಲಿ ಕಾದಿದರು ಕೌತುಕವೆನಲು ಸುರನಿಕರ ॥25॥

೦೨೬ ನೂಕಿದರೆ ಹೆರತೆಗೆವ ...{Loading}...

ನೂಕಿದರೆ ಹೆರತೆಗೆವ ಹೆರತೆಗೆ
ದೌಕುವೌಕಿದಡೊತ್ತು ವೊತ್ತಿದ
ಡಾಕೆಯಲಿ ಪಂಠಿಸುವ ಪಂಠಿಸೆ ಕೂಡೆ ಸಂಧಿಸುವ
ಆ ಕಠೋರದ ಕಯ್ದು ಕಿಡಿಗಳ
ನೋಕರಿಸೆ ಖಣಿಖಟಿಲ ಝಾಡಿಯ
ಜೋಕೆಯಲಿ ಕಾದಿದರು ಸಮಬಲರಾಹವಾಗ್ರದಲಿ ॥26॥

೦೨೭ ಮರಹ ಪಡೆಯರು ...{Loading}...

ಮರಹ ಪಡೆಯರು ಘಾಯ ಖಂಡಿಗೆ
ತೆರಹುಗಾಣರು ಹೊಯ್ಲಹೋರಟೆ
ಹೊರಗೆ ಬಿದ್ದವು ಕದ್ದವಿಬ್ಬರ ದೃಷ್ಟಿ ಮನಮನವ
ಇರಿವ ಗದೆ ನೆಗ್ಗಿದವು ರೋಷದಿ
ಜರೆವ ನುಡಿ ತಾಗಿದವು ಹೊಗಳುವ
ಡರಿಯೆನಗ್ಗದ ಭೀಮ ದುರಿಯೋಧನರ ರಣರಸವ ॥27॥

೦೨೮ ಗಾಹಿನಲಿ ಗಾಢಿಸಿದ ...{Loading}...

ಗಾಹಿನಲಿ ಗಾಢಿಸಿದ ಗದೆ ಹೊರ
ಬಾಹೆಯಲಿ ಹಿಂಗಿದವು ಠಾಣದ
ಲೂಹಿಸಿದ ಮನ ಮುಗ್ಗಿದುದು ಕಂದೊಳಲ ತೋಹಿನಲಿ
ಕಾಹುರದ ಹೊಯ್ಲುಗಳು ನೋಟದ
ಕಾಹಿನಲಿ ಕಿಡಿಗೆದರೆ ಘಾಯದ
ಸೋಹೆಯರಿವ ಸುಜಾಣರೊದಗಿದರರಸ ಕೇಳ್ ಎಂದ ॥28॥

೦೨೯ ನೆನಹು ನೆಗ್ಗಿದುದುಪ್ಪರದ ...{Loading}...

ನೆನಹು ನೆಗ್ಗಿದುದುಪ್ಪರದ ಕೈ
ಮನವ ಕಬಳಿಸಿ ತೆರಹು ಬಿರುಬಿ
ಮ್ಮಿನಲಿ ಬಿಗಿದುದು ತೆಗೆದವಿಬ್ಬರ ಘಾಯಘಾತಿಗಳು
ಕೊನರ್ವ ಕೋಪದ ಕುದಿವ ಕರಣದ
ತನುವಿಗುಪ್ತಿಯ ಜಯದ ತವಕದ
ತನಿಮನದ ಕಡುತೋಟಿಕಾರರು ಕಾದಿದರು ಕಡುಗಿ ॥29॥

೦೩೦ ಜಾಣು ಜಗುಳಿತು ...{Loading}...

ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಳವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ ॥30॥

೦೩೧ ವಿಲಸದಪಸವ್ಯದಲಿ ರಿಪು ...{Loading}...

ವಿಲಸದಪಸವ್ಯದಲಿ ರಿಪು ಮಂ
ಡಳಿಸಿ ಹೊಯ್ದನು ಸವ್ಯಮಂಡಲ
ವಲಯದಿಂದಾ ಭೀಮಸೇನನ ಹೊಯ್ಲ ಹೊರಬೀಸಿ
ಒಳಬಗಿದು ಕಿಬ್ಬರಿಯ ಕಂಡ
ಪ್ಪಳಿಸಿದನು ನಿನ್ನಾತನಾಚೆಯ
ದಳದ ಭಟತತಿ ಹಾಯೆನಲು ಝೋಂಪಿಸಿದನಾ ಭೀಮ ॥31॥

೦೩೨ ಆಗಳೇ ಸನ್ತೈಸಿ ...{Loading}...

ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ ॥32॥

೦೩೩ ಸೈರಿಸಿದವೆರಡಙ್ಕ ತೆಗೆದವು ...{Loading}...

ಸೈರಿಸಿದವೆರಡಂಕ ತೆಗೆದವು
ದೂರದಲಿ ದುರುದುರಿಪ ರಕುತದ
ಧಾರೆಗಳ ತೊಳೆದೊರಸಿದರು ಸಿರಿಖಂಡ ಕರ್ದಮವ
ವೀರಕೇಳೀಶ್ರಮವಡಗೆ ಕ
ರ್ಪೂರ ವೀಳೆಯಗೊಂಡು ಮತ್ತೆ ಮ
ಹಾರುಭಟೆಯಲಿ ಸುಭಟರೆದ್ದರು ತೂಗಿ ನಿಜಗದೆಯ ॥33॥

೦೩೪ ಮತ್ತೆ ಹೊಕ್ಕರು ...{Loading}...

ಮತ್ತೆ ಹೊಕ್ಕರು ದಿಗ್ಗಜಕೆ ಮದ
ಮತ್ತದಿಗ್ಗಜ ಮಲೆತವೊಲು ಮಿಗೆ
ಹತ್ತಿದರು ಶತಮನ್ಯು ಜಂಭನ ಜೋಡಿಯಂದದಲಿ
ತತ್ತರಿಬ್ಬರು ಮೂಕದನುಜನ
ಕೃತ್ತಿವಾಸನವೋಲು ರಣಧೀ
ರೋತ್ತಮರು ಕಯ್ಯಿಕ್ಕಿದರು ಕೌರವ ವೃಕೋದರರು ॥34॥

೦೩೫ ಏನನೆಮ್ಬೆನು ಜೀಯ ...{Loading}...

ಏನನೆಂಬೆನು ಜೀಯ ಕುರುಪತಿ
ಯಾನುವನು ಕಲಿಭೀಮನುಬ್ಬೆಯ
ನಾನುವನು ದುರಿಯೋಧನನ ಥಟ್ಟಣೆಯನಾ ಭೀಮ
ದಾನವರು ಮಾನವರೊಳಿನ್ನು ಸ
ಘಾನರಾರಿವರಂತೆ ಪಾಂಡವ
ರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ ॥35॥

+೦೬ ...{Loading}...