೦೫

೦೦೦ ಸೂ ಮುತ್ತಿಮೂದಲಿಸಿದರು ...{Loading}...

ಸೂ. ಮುತ್ತಿಮೂದಲಿಸಿದರು ಕುರುರಾ
ಜೋತ್ತಮನನುದಕದಲಿ ಹೊರವಡಿ
ಸುತ್ತ ಕಂಡರು ಪಾಂಡುತನುಜರು ರೋಹಿಣೀಸುತನ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ ॥1॥

೦೦೨ ತಳಮಳಲ ಮೊಗೆಮೊಗೆದು ...{Loading}...

ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು ॥2॥

೦೦೩ ಬನ್ದುದರಿಬಲ ಕೊಳನ ...{Loading}...

ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ ॥3॥

೦೦೪ ವರ ಯುಧಾಮನ್ಯೂತ್ತಮೌಞ್ಜಸ ...{Loading}...

ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ ॥4॥

೦೦೫ ದೇವ ಕಣ್ಡಿರೆ ...{Loading}...

ದೇವ ಕಂಡಿರೆ ಕುರುಪತಿಯ ಮಾ
ಯಾವಿಡಂಬನವಿದ್ಯೆಯನು ನಿ
ಷ್ಠೀವನಾವಿರ್ಭೂತ ಸಲಿಲಸ್ತಂಭ ಡಂಬರವ
ಆವುದಿಲ್ಲಿಯ ವಿಧಿಯ ಸಮರ
ವ್ಯಾವಹಾರಿಕ ವಿಷಯ ತಪ್ಪದೆ
ನೀವು ಬೆಸಸುವುದೆಂದನರಸನು ದೇವಕೀಸುತನ ॥5॥

೦೦೬ ಭರತವಂಶಲಲಾಮ ಕೇಳ್ ...{Loading}...

ಭರತವಂಶಲಲಾಮ ಕೇಳ್ ನೃಪ
ವರರ ಪದ್ಧತಿ ಕಂಟಕದಿನು
ತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ
ಪರಿಹರಿಸುವುದು ಮಾಯೆಯಿಂ ಪ್ರತಿ
ಗರಳದಲಿ ಗರಳವನು ಮಾಯಾ
ಪರರು ಮಾಯೋಪಾಯವಧ್ಯರು ಭೂಪ ಕೇಳ್ ಎಂದ ॥6॥

೦೦೭ ಮರಣವೆನ್ದಿಙ್ಗಾಗದನ್ತಿರೆ ...{Loading}...

ಮರಣವೆಂದಿಂಗಾಗದಂತಿರೆ
ವರವ ಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ್ಮಪದ್ಧತಿಗೆ
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ ॥7॥

೦೦೮ ಲಲಿತ ವೈದಿಕ ...{Loading}...

ಲಲಿತ ವೈದಿಕ ಧರ್ಮಮಾರ್ಗವ
ನಳಿದು ಹೆಚ್ಚಿದ ಕಾಲನೇಮಿಯ
ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ
ಬಲನ ಜಂಭನ ವೃತ್ರನನು ಶೃಂ
ಖಳಿತ ಮಾಯರ ಮಾಯೆಯಿಂದವೆ
ಬಲವಿರೋಧಿ ವಿಭಾಡಿಸಿದನವನೀಶ ಕೇಳ್ ಎಂದ ॥8॥

೦೦೯ ಹರನ ವರದಲಿ ...{Loading}...

ಹರನ ವರದಲಿ ಹೆಚ್ಚಿ ಭಸ್ಮಾ
ಸುರನು ಶಿವನ ವಿರೋಧಿಸಿದನು
ಬ್ಬರದವನನುರುಹಿದನು ಹರಿ ಮಾಯಾಪ್ರಯೋಗದಲಿ
ಸುರರನರೆಯಾಳಿದನು ಭುವನವ
ನೊರಲಿಸಿದ ರಾವಣನ ರೂಢಿಯ
ಶಿರವ ನರರೂಪಿನಲಿ ಖತಿಯಲಿ ರಾಮ ಖಂಡಿಸಿದ ॥9॥

೦೧೦ ಎಮಗೆ ತಾಯೊಡಹುಟ್ಟಿದನು ...{Loading}...

ಎಮಗೆ ತಾಯೊಡಹುಟ್ಟಿದನು ನಿ
ರ್ಮಮತೆಯಲಿ ನಿರ್ದಾಟಿಸಿದನಾ
ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು
ಸಮರದೊಳಗೆ ಸೃಗಾಲನೃಪನಾ
ಕ್ರಮಿಸಿದನು ಠಕ್ಕಿನಲಿ ಮಾಯಾ
ತಿಮಿರವನು ಮಾಯೆಯಲಿ ಗೆಲಿದೆವು ಭೂಪ ಕೇಳ್ ಎಂದ ॥10॥

೦೧೧ ಕಾಲಯವನನ ದನ್ತವಕ್ರನ ...{Loading}...

ಕಾಲಯವನನ ದಂತವಕ್ರನ
ಸಾಲುವನ ಮಾಗಧನ ನರಕನ
ಸೀಳಿದೆವು ಕೃತಮಾಯರನು ಮಾಯಾಪ್ರಪಂಚದಲಿ
ಢಾಳರನು ಢವಳರನು ಠಕ್ಕಿನ
ಠೌಳಿಕಾರರನವರ ವಿದ್ಯೆಯ
ಲಾಳಿಗೊಂಡಡೆ ದೋಷವಿಲ್ಲವನೀಶ ಕೇಳ್ ಎಂದ ॥11॥

೦೧೨ ದ್ಯೂತ ಮೃಗಯಾವ್ಯಸನವಿವು ...{Loading}...

ದ್ಯೂತ ಮೃಗಯಾವ್ಯಸನವಿವು ನೃಪ
ಜಾತಿಗಾದ ವಿನೋದ ಕಪಟ
ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ
ಸೋತಿರಿಳೆಯನದಂತಿರಲಿ ನಿ
ರ್ಭೀತಿಯಲಿ ನಿಮ್ಮರಸಿಯುಟ್ಟುದ
ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ ॥12॥

೦೧೩ ಐಹಿಕದ ಸಮ್ಭಾವನೆಯ ...{Loading}...

ಐಹಿಕದ ಸಂಭಾವನೆಯ ಸ
ಮ್ಮೋಹನಕೆ ಮರುಳಾಗಿ ಸುಕೃತ
ದ್ರೋಹವಾಗದಲೇ ಸುಯೋಧನವಧೆಯ ದೆಸೆಯಿಂದ
ಈ ಹದನ ಬಿನ್ನೈಸಿದೆವು ನೀ
ವಾಹವಕೆ ಧರ್ಮಾರ್ಥಶಾಸ್ತ್ರವ
ನೂಹಿಸಿದಿರೆಂದರಸ ನುಡಿಸಿದನಿತ್ತ ಕುರುಪತಿಯ ॥13॥

೦೧೪ ಏಳು ಕೌರವರಾಯ ...{Loading}...

ಏಳು ಕೌರವರಾಯ ಸಲಿಲ
ವ್ಯಾಳನೇ ನೀನಕಟ ಜಲದೊಳ
ಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ
ಕಾಳೆಗದೊಳದ್ದಿದೆ ಸಹೋದರ
ಜಾಲ ಪುತ್ರಜ್ಞಾತಿ ಬಂಧು ನೃ
ಪಾಲರನು ನೀ ನೀರೊಳಡಗಿದೆ ಕಷ್ಟವಾಯ್ತೆಂದ ॥14॥

೦೧೫ ಜಾತಿಮಾತ್ರದಮೇಲೆ ಬನ್ದ ...{Loading}...

ಜಾತಿಮಾತ್ರದಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ್ಮಳಸೋಮವಂಶದಲಿ
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ ॥15॥

೦೧೬ ನಾಡೊಳರ್ಧವ ಕೊಡದೆ ...{Loading}...

ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ ॥16॥

೦೧೭ ಹೇಳಿದರಲಾ ಭೀಷ್ಮವಿದುರರು ...{Loading}...

ಹೇಳಿದರಲಾ ಭೀಷ್ಮವಿದುರರು
ಮೇಲುದಾಯದ ತಾಗುಥಟ್ಟನು
ಕೇಳದಖಿಳಾಕ್ಷೋಹಿಣಿಯ ಕ್ಷತ್ರಿಯರ ತಡೆಗಡಿಸಿ
ಕಾಳೆಗದೊಳೊಟ್ಟೈಸಿ ನೀರೊಳು
ಬೀಳುವುದ ನಿನಗಾರು ಬುದ್ಧಿಯ
ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ ॥17॥

೦೧೮ ಕಣ್ಡೆವನ್ದೊಬ್ಬನ ಪಲಾಯನ ...{Loading}...

ಕಂಡೆವಂದೊಬ್ಬನ ಪಲಾಯನ
ಪಂಡಿತನನುತ್ತರನನಾತನ
ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ
ಭಂಡರಿಬ್ಬರು ಭೂಮಿಪರೊಳಾ
ಭಂಡನಿಗೆ ನೀ ಮಿಗಿಲು ಸಲಿಲದ
ಕೊಂಡದಲಿ ಹೊಕ್ಕನೆ ವಿರಾಟಜನೆಂದನಾ ಭೂಪ ॥18॥

೦೧೯ ಅಡವಿಯೇ ನೆಲೆ ...{Loading}...

ಅಡವಿಯೇ ನೆಲೆ ಪಾಂಡುಸುತರಿಗೆ
ಕೊಡೆನು ಧರಣಿಯನೆಂದು ಖಡುಗವ
ಜಡಿದೆಲಾ ನಿನ್ನೋಲಗದ ನಾರಿಯರ ಸಮ್ಮುಖದಿ
ಖಡುಗವನು ಕಳನೊಳಗೆ ಹಾಯಿಕಿ
ನಡುಗೊಳನ ನೀನೋಡಿ ಹೊಕ್ಕಡೆ
ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ ॥19॥

೦೨೦ ಜೀವಸಖ ರಾಧೇಯನಾತನ ...{Loading}...

ಜೀವಸಖ ರಾಧೇಯನಾತನ
ಸಾವಿನಲಿ ನೀನುಳಿದೆ ಸೋದರ
ಮಾವ ಶಕುನಿಯ ಸೈಂಧವನ ದುಶ್ಯಾಸನಾದಿಗಳ
ಸಾವಿನಲಿ ಹಿಂದುಳಿದ ಜೀವನ
ಜೀವನವೆ ಜೀವನನಿವಾಸವಿ
ದಾವ ಗರುವಿಕೆ ಕೊಳನ ಹೊರವಡು ಕೈದುಗೊಳ್ಳೆಂದ ॥20॥

೦೨೧ ಓಡಿ ಕೈದುವ ...{Loading}...

ಓಡಿ ಕೈದುವ ಹಾಯ್ಕಿ ಕಳನೊಳು
ಹೇಡಿಗರ ಹಿಡಿದಳುಕಿ ಬದುಕಿದ
ಗೂಡಿಹುದೆ ಗರುವಾಯಿಯಲಿ ಕಲ್ಪಾಂತಪರಿಯಂತ
ಓಡಿ ಪಾತಾಳವನು ಹೊಕ್ಕಡೆ
ಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ ಕೈದುಗೊಳ್ಳೆಂದ ॥21॥

೦೨೨ ಭರತ ನಹುಷ ...{Loading}...

ಭರತ ನಹುಷ ಯಯಾತಿ ನಳ ಸಂ
ವರಣ ಸಗರ ದಿಳೀಪ ನೃಗ ರಘು
ವರ ಪುರೂರವ ದುಂದುಮಾರ ಭಗೀರಥಾದಿಗಳು
ಧರಣಿಪಾಲರನಂತಸಮರದೊ
ಳರಿಬಲವ ಸವರಿದರು ನಿನ್ನವೊ
ಲುರುಳಿದವರಾರುದಕದಲಿ ನೃಪ ಕೈದುಗೊಳ್ಳೆಂದ ॥22॥

೦೨೩ ಕೊಳನ ಬಿಡು ...{Loading}...

ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ ॥23॥

೦೨೪ ವಿಷವನಿಕ್ಕಿದೆ ಹಾವಿನಲಿ ...{Loading}...

ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ
ವಸತಿಯಲಿ ಬಳಿಕಗ್ನಿದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ ॥24॥

೦೨೫ ಎಲವೊ ರಾಯನ ...{Loading}...

ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ ॥25॥

೦೨೬ ಭೀಮನೆನೆ ಭುಗಿಲೆಮ್ಬ ...{Loading}...

ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್‍ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ ॥26॥

೦೨೭ ಕೆಡಹಿ ದುಶ್ಯಾಸನನ ...{Loading}...

ಕೆಡಹಿ ದುಶ್ಯಾಸನನ ರಕುತವ
ಕುಡಿದವನು ತಾನಲ್ಲಲೇ ನಿ
ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ
ಅಡಗಿದಡೆ ಬಿಡುವೆನೆ ಭಯಜ್ವರ
ಹಿಡಿದ ನಿನ್ನನು ಸೆಳೆದು ರಣದಲಿ
ತೊಡೆಯ ಕಳುಚವ ಮೃತ್ಯು ಭೀಮನ ಕಯ್ಯ ನೋಡೆಂದ ॥27॥

೦೨೮ ಜಲವಹೊಕ್ಕನ ಹುಲ್ಲ ...{Loading}...

ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ ॥28॥

೦೨೯ ಅರಸನಲಿ ಹಗೆಯಿಲ್ಲ ...{Loading}...

ಅರಸನಲಿ ಹಗೆಯಿಲ್ಲ ಯಮಳರು
ತರಳರಲಿ ಮುನಿಸಿಲ್ಲ ಫಲುಗುಣ
ನರೆವಿರೋಧಿ ಸಗರ್ವಿ ಭೀಮನ ಬಾಡ ಕೊಯ್‍ಕೊಯ್ದು
ಮರುಳ ಬಳಗವ ತಣಿಸಿದಡೆ
ಹಿರಿಯರಸರಲಿ ಸಂಧಾನವೆಂಬೈ
ಕುರುಪತಿಯೆ ನೆರೆ ವೈರಿ ಭೀಮನ ಸೀಳಲೇಳೆಂದ ॥29॥

೦೩೦ ತನತನಗೆ ಸಾತ್ಯಕಿ ...{Loading}...

ತನತನಗೆ ಸಾತ್ಯಕಿ ಯಮಳ ಫಲು
ಗುಣರು ಪಂಚದ್ರೌಪದೀನಂ
ದನರು ಧೃಷ್ಟದ್ಯುಮ್ನ ಸೃಂಜಯ ಸೋಮಕಾದಿಗಳು
ಅನುಚಿತವು ಸಲಿಲಪ್ರವೇಶವು
ಜನಪತಿಗೆ ಕರ್ತವ್ಯವೆಂಬುದು
ಜನಜನಿತವೆಂದುಲಿದುದೈದೆ ಸಮುದ್ರಘೋಷದಲಿ ॥30॥

೦೩೧ ಅರಸ ಕೇಳೈ ...{Loading}...

ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿ ಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ ॥31॥

೦೩೨ ಮರೆದುದುದಕಸ್ತಮ್ಭ ಸಲಿಲದ ...{Loading}...

ಮರೆದುದುದಕಸ್ತಂಭ ಸಲಿಲದ
ಹೊರಗೆ ಬೊಬ್ಬುಳಿಕೆಗಳ ತೆರೆ ನೊರೆ
ದುರುಗಿದವು ಘುಳುಘುಳಿಸಿ ಜಲಬುದ್ಬುದದ ಚೂಣಿಯಲಿ
ದುರುದುರಿಪ ಬಿಸುಸುಯ್ಲ ಸೆಕೆಯಲಿ
ಮರುಗಿ ಕುದಿದುದು ನೀರು ಭೀಮನ
ಬಿರುನುಡಿಯ ಬೇಳಂಬದಲಿ ಬೆಂಡಾದನಾ ಭೂಪ ॥32॥

೦೩೩ ಜ್ಞಾನವಳಿದುದು ವೀರಪಣದಭಿ ...{Loading}...

ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಂತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ ॥33॥

೦೩೪ ಜಲಧಿ ಮಧ್ಯದೊಳೇಳ್ವ ...{Loading}...

ಜಲಧಿ ಮಧ್ಯದೊಳೇಳ್ವ ವಡಬಾ
ನಲನವೊಲು ತವಕದಲಿ ತಡಿಗ
ವ್ವಳಿಸಿದನು ತತ್ಕ್ರೋಧಶಿಖಿ ಕಿಡಿಮಸಗೆ ಕಂಗಳಲಿ
ಹೊಳೆವ ಭಾರಿಯ ಹೆಗಲ ಗದೆ ಕರ
ತಳದ ವಿಪುಳ ಸಘಾಡಗರ್ವದ
ಚಳನಯನದ ಛಡಾಳಛಲದ ನೃಪಾಲ ಹೊರವಂಟ ॥34॥

೦೩೫ ಅರಳಿತರಸನ ವದನ ...{Loading}...

ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ ॥35॥

೦೩೬ ನಗೆ ಮಸಗಿ ...{Loading}...

ನಗೆ ಮಸಗಿ ಕರತಳವ ಹೊಯ್‍ಹೊ
ಯ್ದೊಗುಮಿಗೆಯ ಹರುಷದಲಿ ನಕುಲಾ
ದಿಗಳು ಬೊಬ್ಬಿರಿದಾರಿದರು ಬಹುವಾದ್ಯರವದೊಡನೆ
ಅಗಿದು ಗುಡಿಗಟ್ಟಿದವು ಮುಂಗಾ
ಲುಗಳ ಹೊಯ್ಲಲಿ ತೇಜಿಗಳು ಕೈ
ನೆಗಹಿ ಜಯಸೂಚನೆಯಲೊಲೆದವು ಪಟ್ಟದಾನೆಗಳು ॥36॥

೦೩೭ ಧರಣಿಪತಿ ಕೇಳ್ ...{Loading}...

ಧರಣಿಪತಿ ಕೇಳ್ ಕೊಳನ ತಡಿಯಲಿ
ಕುರುಕುಲಾಗ್ರಣಿ ನಿಂದು ನೋಡಿದ
ನರಿಭಟರ ಸುಮ್ಮಾನವನು ಸಂಭ್ರಾಂತಚೇತನವ
ಉರಿದುದಾ ಮಸ್ತಕದ ರೋಷೋ
ತ್ಕರದ ಝಳಝಾಡಿಸಿತು ಶುಭ್ರ
ಸ್ಫುರಣದಂತನಿಪೀಡಿತಾಧರನಾದನಾ ಭೂಪ ॥37॥

೦೩೮ ಪೂತು ಮಝ ...{Loading}...

ಪೂತು ಮಝ ಕುರುಪತಿಯ ಘನಸ
ತ್ವಾತಿಶಯವೈ ಕೌರವಾನ್ವಯ
ಜಾತನಲ್ಲಾ ಬುಧ ಪುರೂರವಸಕ್ರಮಾಗತರ
ಖ್ಯಾತನಲ್ಲಾ ಬಂದುದೊಂದ
ಖ್ಯಾತಿ ಸಲಿಲದ ಗಾಹವುಳಿದಂ
ತೀತನೊಳು ದೊರೆಯಾರು ಸರಿಯೆಂದನು ಮಹೀಪಾಲ ॥38॥

೦೩೯ ಅರಸ ತೊಡು ...{Loading}...

ಅರಸ ತೊಡು ಕವಚವನು ಚಾಮೀ
ಕರ ಪರಿಷ್ಕೃತ ವಜ್ರಮಯ ಬಂ
ಧುರದ ಸೀಸಕವಿದೆ ದುಕೂಲವರಾನುಲೇಪನವ
ಪರಿಹರಿಸಬೇಡೊಲವಿನಲಿ ಪತಿ
ಕರಿಸೆನುತ ಪೆಟ್ಟಿಗೆಯ ಮುಚ್ಚಳ
ತೆರೆದು ಮುಂದಿರಿಸಿದನು ಸೌಹಾರ್ದದಲಿ ಯಮಸೂನು ॥39॥

೦೪೦ ಪೂರವಿಸಿದನು ಗನ್ಧವನು ...{Loading}...

ಪೂರವಿಸಿದನು ಗಂಧವನು ಸರ
ಳೋರೆಪೋರೆಯ ಮೈಯ ಘಾಯದ
ಹೇರುಗಳ ಹೂಳಿದನು ವರಕಸ್ತುರಿಯ ಸಾರದಲಿ
ಸಾರತರ ಸಾದಿನ ಜವಾಜಿಯ
ಭೂರಿ ಪರಿಮಳದಿಂದ ನವಕ
ಸ್ತೂರಿ ತಿಲಕವ ರಚಿಸಿ ಗೆಲಿದನು ತಿಗುರ ತವಕದಲಿ ॥40॥

೦೪೧ ತೆಗೆದು ವಜ್ರಾಙ್ಗಿಯನು ...{Loading}...

ತೆಗೆದು ವಜ್ರಾಂಗಿಯನು ಮೈಯಲಿ
ಬಿಗಿದು ಹೊಂಬರಹದ ಸುರತ್ನಾ
ಳಿಗಳ ಬಲುಸೀಸಕವನಳವಡಿಸಿದನು ಸಿರಿಮುಡಿಗೆ
ಝಗಝಗಿಪ ಬೆಳುದಿಂಗಳಿನ ತೆಳು
ದಗಡೆನಲು ತೊಳಗುವ ದುಕೂಲವ
ಬಿಗಿದು ಮೊನೆಮುಂಜೆರಗನಳವಡಿಸಿದನು ದೇಸಿಯಲಿ ॥41॥

೦೪೨ ಘೋಳಿಸಿದ ಕರ್ಪೂರ ...{Loading}...

ಘೋಳಿಸಿದ ಕರ್ಪೂರ ಕಸ್ತ್ತುರಿ
ವೀಳೆಯವ ಕೊಂಡೆದ್ದು ಸಮರಾ
ಭೀಳ ಗದೆಯನು ತಿರುಹಿದನು ಪಯಪಾಡನಾರೈದು
ಆಳು ಕವಿಯಲಿ ರಾವುತರ ಸಮ
ಪಾಳಿಯಲಿ ಬಿಡಿ ಜೋದರಾನೆಯ
ತೂಳಿಸಲಿ ಸಮರಥರು ಸರಳಿಸಿಯೆಂದನಾ ಭೂಪ ॥42॥

೦೪೩ ಹಿಡಿ ಧನುವನೆಲೆ ...{Loading}...

ಹಿಡಿ ಧನುವನೆಲೆ ಭೂಪ ಪವನಜ
ತುಡುಕು ಗದೆಯನು ಪಾರ್ಥ ಸಮರಕೆ
ತಡೆಯದಿರು ಮಾದ್ರೀಕು ಮಾರಕರೇಳಿ ಕಾಳೆಗಕೆ
ಮಿಡುಕು ಧೃಷ್ಟದ್ಯುಮ್ನ ಸಾತ್ಯಕಿ
ಹೊಡಕರಿಸು ಪಾಂಚಾಲ ನೀ ವಂ
ಗಡದೊಳೆಮ್ಮೊಡನೇಳ್ವುದೊಬ್ಬನೆ ನಿಲುವೆ ತಾನೆಂದ ॥43॥

೦೪೪ ದಿಟ್ಟನೈ ನೃಪರಾವು ...{Loading}...

ದಿಟ್ಟನೈ ನೃಪರಾವು ಮಝ ಜಗ
ಜಟ್ಟಿಯಲ್ಲಾ ದೊರೆಗಳೊಡನೀ
ಥಟ್ಟಿಗೊಬ್ಬನೆ ನಿಲುವೆನೆಂದನದಾವ ಸತ್ವನಿಧಿ
ಹುಟ್ಟಿದವರಿಗೆ ಸಾವು ಹಣೆಯಲಿ
ಕಟ್ಟಿಹುದು ವಿಧಿಯೆಂದಡೀ ಪರಿ
ಮುಟ್ಟೆ ದೀವಸಿಯಾವನೆಂದುದು ನಿಖಿಳ ಪರಿವಾರ ॥44॥

೦೪೫ ಮೆಚ್ಚಿದನು ಯಮಸೂನು ...{Loading}...

ಮೆಚ್ಚಿದನು ಯಮಸೂನು ಛಲ ನಿನ
ಗೊಚ್ಚತವಲೈ ವೈರಿಭಟರಲಿ
ಬೆಚ್ಚಿದಾಡಿದೆಯಾದಡೇನದು ನಮ್ಮೊಳೈವರಲಿ
ಮೆಚ್ಚಿದರ ನೀ ವರಿಸಿ ಕಾದುವು
ದಚ್ಚರಿಯ ಮಾತೇನು ಗೆಲವಿನ
ನಿಚ್ಚಟನೆ ನೆಲಕೊಡೆಯನಹುದಿದು ಸಮಯಕೃತವೆಂದ ॥45॥

೦೪೬ ನಿನಗೆ ಸೋಲವೆ ...{Loading}...

ನಿನಗೆ ಸೋಲವೆ ನಾವು ಭೂಕಾ
ಮಿನಿಯನಾಳ್ವೆವು ನಮ್ಮೊಳೊಬ್ಬರು
ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು
ನಿನಗೆ ಹಸ್ತಿನಪುರದ ಸಿರಿ ಸಂ
ಜನಿತವೀ ಸಂಕೇತವೇ ಸಾ
ಧನ ನಿನಗೆ ನಮಗೆಂದು ನುಡಿದನು ಧರ್ಮಸುತ ನಗುತ ॥46॥

೦೪೭ ಹಾ ಯುಧಿಷ್ಠಿರ ...{Loading}...

ಹಾ ಯುಧಿಷ್ಠಿರ ನಿಮ್ಮ ಕೂಡೆಮ
ಗಾಯಛಲವಿಲ್ಲರ್ಜುನನು ಮಗು
ವೀ ಯಮಳರಿಗೆ ಕೈದುಗೊಳ್ಳೆನು ಹೊಯ್ದು ಕೆಣಕಿದಡೆ
ಬಾಯಿಬಡಿಕನು ಸತ್ವದಲಿ ನಾ
ಗಾಯುತದ ಬಲನೆಂಬ ಡೊಂಬಿನ
ವಾಯುವಿನ ಮಗನೆನ್ನೊಡನೆ ಮಾರಾಂತಡಹುದೆಂದ ॥47॥

೦೪೮ ವರಿಸಿದೆನು ಭೀಮನನು ...{Loading}...

ವರಿಸಿದೆನು ಭೀಮನನು ನೀವಾ
ದರಿಸುವಡೆ ಧರ್ಮವನು ದುರ್ಜನ
ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು
ತೆರಳುವವರಾವಲ್ಲ ನೀವ್ ಪತಿ
ಕರಿಸಿದುದೆ ನಮ್ಮಿಷ್ಟವೆನೆ ಮುರ
ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ ॥48॥

೦೪೯ ಮರುಳೆ ನೀ ...{Loading}...

ಮರುಳೆ ನೀ ಹೆಚ್ಚಾಳುತನಕು
ಬ್ಬರಿಸಿ ನುಡಿದೆ ಸುಯೋಧನನ ನೀ
ನರಿಯಲಾಗದೆ ಕೈಗೆ ಬಂದರೆ ಕದನಭೂಮಿಯಲಿ
ಸರಿಸದಲಿ ಮಲೆತವನು ಜೀವಿಸಿ
ಮರಳಲರಿವನೆ ನಮ್ಮೊಳೊಬ್ಬನ
ವರಿಸು ವಿಗ್ರಹಕೆಂದು ನಮ್ಮನು ಕೊಂದೆ ನೀನೆಂದ ॥49॥

೦೫೦ ಗೆಲಿದಡೈವರೊಳೊಬ್ಬನನು ಮಿ ...{Loading}...

ಗೆಲಿದಡೈವರೊಳೊಬ್ಬನನು ಮಿ
ಕ್ಕುಳಿದವರು ಕಿಂಕರರು ಗಡ ನೀ
ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ
ಗೆಲಲು ಬಲ್ಲಾ ನೀನು ಫಲುಗುಣ
ಗೆಲುವನೇ ನಿನ್ನುಳಿದರಿಬ್ಬರು
ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ ॥50॥

೦೫೧ ಇನ್ದು ನಮ್ಮಯ ...{Loading}...

ಇಂದು ನಮ್ಮಯ ಭಾಗ್ಯಲಕ್ಷ್ಮಿಯ
ಕಂದೆರೆವೆಯಲಿ ಭೀಮ ಕಾದುವು
ದೆಂದು ಜಾರಿಸಿ ನಿಮ್ಮ ಬಿಟ್ಟನು ನಮ್ಮ ಪುಣ್ಯದಲಿ
ಇಂದಿನೀ ಸಮರದಲಿ ಪವನಜ
ನಿಂದಡೇನಹುದೆಂಬ ಚಿತ್ತದ
ಸಂದೆಯವು ನಮಗುಂಟು ಕೌರವನೈಸು ಬಲುಹೆಂದ ॥51॥

೦೫೨ ಎಲೆ ಮುರಾನ್ತಕ ...{Loading}...

ಎಲೆ ಮುರಾಂತಕ ನಿಮ್ಮ ಮುಂದ
ಗ್ಗಳೆಯತನವೆಮಗಿಲ್ಲ ನಿಮ್ಮಡಿ
ಗಳ ಸುಧಾಕರುಣಾವಧಾನವೆ ವಜ್ರಕವಚವಲಾ
ಮಲೆತ ಹಗೆವನ ಪಡಿಮುಖದ ಬಲು
ವಲಗೆಯಲಿ ಗದೆಯಿಂದ ರಾಯನ
ಬಲುಹ ಬಿರುದಾವಳಿಯ ಬರೆವೆನು ಕೃಷ್ಣ ಕೇಳ್ ಎಂದ ॥52॥

೦೫೩ ಪೂತು ಮಝ ...{Loading}...

ಪೂತು ಮಝ ಭಟ ಎನುತ ಕಂಸಾ
ರಾತಿ ಕೊಂಡಾಡಿದನು ಸಾತ್ಯಕಿ
ಭೂತಳಾಧಿಪ ಪಾರ್ಥ ಯಮಳಾದಿಗಳು ನಲವಿನಲಿ
ವಾತಜನ ಹೊಗಳಿದರು ಸುಭಟ
ವ್ರಾತಸೌಹಾರ್ದದಲಿ ಶೌರ್ಯ
ಖ್ಯಾತಿಯನು ಬಣ್ಣಿಸಿದುದವನೀಪಾಲ ಕೇಳ್ ಎಂದ ॥53॥

೦೫೪ ಗದೆಯ ಕೊಣ್ಡನು ...{Loading}...

ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಭೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡವರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ ॥54॥

೦೫೫ ಚಟುಳತರ ಭಾರಙ್ಕದಙ್ಕದ ...{Loading}...

ಚಟುಳತರ ಭಾರಂಕದಂಕದ
ಭಟರು ತರುಬಿದರುಬ್ಬೆಯಲಿ ಲಟ
ಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ
ಕಟುವಚನ ವಿಕ್ಷೇಪರೋಷ
ಸ್ಫುಟನವೇಲ್ಲಿತವಾಕ್ಯಭಂಗೀ
ಘಟನ ವಿಘಟನದಿಂದ ಮೂದಲಿಸಿದರು ಮುಳಿಸಿನಲಿ ॥55॥

೦೫೬ ಅರಸ ಕೇಳಿವರಿಬ್ಬರುಬ್ಬಿನ ...{Loading}...

ಅರಸ ಕೇಳಿವರಿಬ್ಬರುಬ್ಬಿನ
ಧುರದ ಥಟ್ಟಣೆ ಪಸರಿಸಿತು ಸುರ
ನರರನಾ ಸಮಯದಲಿ ಪೂರ್ವೋತ್ತರದ ದೆಸೆಯಿಂದ
ವರ ಮುನಿಸ್ತೋಮದ ನಡುವೆ ಕಂ
ಧರದ ಮುಸಲದ ವಿಮಳ ನೀಲಾಂ
ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು ॥56॥

೦೫೭ ಆ ನಿಖಿಳ ...{Loading}...

ಆ ನಿಖಿಳ ಪರಿವಾರದನುಸಂ
ಧಾನ ದೃಷ್ಟಿಗಳತ್ತ ತಿರುಗಿದ
ವೇನನೆಂಬೆನು ಮುಸಲಧರನಾಗಮನ ಸಂಗತಿಯ
ಈ ನರೇಂದ್ರನ ಸುಮುಖತೆಯ ಸು
ಮ್ಮಾನ ಹೊಳೆದುದು ಭಯದಿ ಕುಂತೀ
ಸೂನುಗಳು ಮರೆಗೊಳುತಲಿರ್ದುದು ವೀರನರಾಯಣನ ॥57॥

+೦೫ ...{Loading}...