೦೪

೦೦೦ ಸೂ ರಾಯಧರ್ಮಜ ...{Loading}...

ಸೂ. ರಾಯಧರ್ಮಜ ಯಮಳ ಫಲುಗುಣ
ವಾಯುಸುತರರಸಿದರು ಕೌರವ
ರಾಯನನು ಕಳನೊಳಗೆ ಕಾಣದೆ ಮುತ್ತಿದರು ಕೊಳನ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ ॥1॥

೦೦೨ ಇಳಿದು ರಥವನು ...{Loading}...

ಇಳಿದು ರಥವನು ಸಂಜಯನ ಬರ
ಸೆಳೆದು ತಕ್ಕೈಸಿದರು ಹಗೆಯಲಿ
ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರಭೂಪತಿಯ
ಕಲಹಗತಿಯೇನಾಯ್ತು ಶಕುನಿಯ
ದಳದೊಳಿದ್ದನು ಕೌರವೇಶ್ವರ
ನುಳಿದನೇ ಹದನಾವುದೆಂದರು ಭಟರು ಸಂಜಯನ ॥2॥

೦೦೩ ಅರಿದುದಿಲ್ಲಾ ಕೌರವೇನ್ದ್ರನ ...{Loading}...

ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರು ತ್ರಿಗರ್ತರನು ಸೌಬಲ ಸುಶರ್ಮಕರ
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ ॥3॥

೦೦೪ ಬಳಿಕ ಭೀಮನ ...{Loading}...

ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಕ್ಷಣ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ ॥4॥

೦೦೫ ಸೆಳೆದುಕೊಣ್ಡನು ಮೃತ್ಯುವಿನ ...{Loading}...

ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ ॥5॥

೦೦೬ ಕಣ್ಡೆನರಸನ ನಿಬ್ಬರವ ...{Loading}...

ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ ॥6॥

೦೦೭ ಬನ್ದನೆನ್ನನು ಸನ್ತವಿಡುತಲ ...{Loading}...

ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ ॥7॥

೦೦೮ ಅವರು ಕಮ್ಬನಿದುಮ್ಬಿದರು ...{Loading}...

ಅವರು ಕಂಬನಿದುಂಬಿದರು ಕೌ
ರವ ಮಹಾವಂಶಾಭಿಚಾರ
ವ್ಯವಸಿತಕೆ ಫಲವಾಯ್ತಲಾ ಯಮನಂದನಾದಿಗಳ
ಶಿವಶಿವಾ ಪವಡಿಸಿತೆ ಚತುರ
ರ್ಣವ ವಿಪರಿಪರಿಧಾನ ಪೃಥ್ವೀ
ಧವನ ಬಾಳಿಕೆ ನೀರೊಳೆಂದಳಲಿದನು ಗುರುಸೂನು ॥8॥

೦೦೯ ಅಳಲದಿರಿ ಗಜಪುರಿಗೆ ...{Loading}...

ಅಳಲದಿರಿ ಗಜಪುರಿಗೆ ಸತಿಯರ
ಕಳುಹುವೆನು ನೀವವನಿಪಾಲನ
ತಿಳುಹಲಾಪಡೆ ಸಂಧಿಗೊಡಬಡಿಸುವದು ಕುರುಪತಿಯ
ಕೊಳನ ತಡಿಯಲಿ ಕಾಣದಂತಿರೆ
ಬಳಸಿ ನೀವೆಂದವರನತ್ತಲು
ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ ॥9॥

೦೧೦ ಅರಮನೆಗೆ ಬನ್ದಖಿಳ ...{Loading}...

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ ॥10॥

೦೧೧ ಕೂಡೆ ಗಜಬಜವಾಯ್ತು ...{Loading}...

ಕೂಡೆ ಗಜಬಜವಾಯ್ತು ಪಾಳೆಯ
ವೋಡಿತಲ್ಲಿಯದಲ್ಲಿ ಜನವ
ಲ್ಲಾಡಿದುದು ಕ್ರಯವಿಕ್ರಯದ ವಾಣಿಜ್ಯವೀಥಿಯಲಿ
ಹೂಡಿದವು ಬಂಡಿಗಳು ಹರಿದೆಡೆ
ಯಾಡಿದವು ಕೊಲ್ಲಾರಿಗಳು ರಥ
ಗೂಡಿದವು ಬದ್ದರದ ದಂಡಿಗೆ ಬಂದವರಮನೆಗೆ ॥11॥

೦೧೨ ಭಾನುಮತಿ ಹೊರವಣ್ಟಳರಸನ ...{Loading}...

ಭಾನುಮತಿ ಹೊರವಂಟಳರಸನ
ಮಾನಿನಿಯರು ಸಹಸ್ರಸಂಖ್ಯೆಯೊ
ಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ
ಭಾನುದತ್ತನ ಸೈಂಧವನ ರವಿ
ಸೂನುವಿನ ದುಶ್ಶಾಸನನ ಜಲ
ಜಾನನೆಯರೊಗ್ಗಿನಲಿ ರಥವೇರಿದರು ದುಗುಡದಲಿ ॥12॥

೦೧೩ ಸರಕ ಹಿಡಿದವು ...{Loading}...

ಸರಕ ಹಿಡಿದವು ಬಂಡಿ ಶತಸಾ
ವಿರ ನೃಪಾಲಯದಿಂದ ವಿವಿಧಾ
ಭರಣಭರಿತದ ಭೂರಿ ಪೆಟ್ಟಿಗೆ ಘಾಡಿಸಿತು ರಥವ
ವರ ದುಕೂಲದ ಪಟ್ಟಕರ್ಮದ
ಥರದದಿಂದೊತ್ತಿದವು ಚಾಮೀ
ಕರಮಯದ ಬಹುವಿಧದ ಭಾಂಡದ ಬಂಡಿ ನೂಕಿದವು ॥13॥

೦೧೪ ಬಳಿಯ ಚೌರಿಯ ...{Loading}...

ಬಳಿಯ ಚೌರಿಯ ಹೊರೆಯ ಚಿತ್ರಾ
ವಳಿ ವಿಧಾನದ ಹಾಸುಗಳ ಹೊಂ
ಬಳಿಯ ತೆರೆಸೀರೆಗಳ ಛತ್ರ ವ್ಯಜನ ಸೀಗುರಿಯ
ಹೊಳೆವ ಪಟ್ಟೆಯಲೋಡಿಗೆಯ ಹೊಂ
ಗೆಲಸದೊಳುಝಗೆಗಳ ಸುವರ್ಣಾ
ವಳಿಯ ದಿಂಡುಗಳೊಟ್ಟಿದವು ಬಂಡಿಗಳ ಜವ ಜಡಿಯೆ ॥14॥

೦೧೫ ಕರವತಿಗೆ ಹೊಙ್ಗಳಸ ...{Loading}...

ಕರವತಿಗೆ ಹೊಂಗಳಸ ಹೊಂಗೊ
ಪ್ಪರಿಗೆ ದೀಪಸ್ತಂಭ ಹೇಮದ
ಸರಪಣಿಯ ಮಣಿಮಯದ ಜಂತ್ರದ ಜೀವಪುತ್ರಿಗಳ
ಮರಕತದ ಮಧುಪಾತ್ರೆ ನೀಲದ
ಕರಗ ವೈಡೂರಿಯದ ಪಡಿಗವ
ಚರರು ತಂದೊಟ್ಟಿದರು ಬಂಡಿಗೆ ಭಾರಸಂಖ್ಯೆಯಲಿ ॥15॥

೦೧೬ ಮೆರೆವ ಗಜ ...{Loading}...

ಮೆರೆವ ಗಜ ಹಯಶಾಲೆಯಲಿ ಮೈ
ಮುರಿಕ ವೃದ್ಧ ವ್ಯಾಧಿತಾವಳಿ
ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ
ಉರುವ ಭಂಡಾರದ ಮಹಾರ್ಘದ
ನೆರವಣಿಗೆ ಗಾಢಿಸಿತು ಬೀದಿಯ
ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ ॥16॥

೦೧೭ ರಾಯನರಮನೆ ಮಣ್ಡವಿಗೆ ...{Loading}...

ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ ॥17॥

೦೧೮ ಪಾಳೆಯಕೆ ಗಜಪುರದ ...{Loading}...

ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ ॥18॥

೦೧೯ ತುಮ್ಬಿತಿದು ಗಜಪುರವನಲ್ಲಿಯ ...{Loading}...

ತುಂಬಿತಿದು ಗಜಪುರವನಲ್ಲಿಯ
ಕಂಬನಿಯ ಕಾಲುವೆಯನದನೇ
ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ
ಲಂಬಿಸಿತು ಭಯತಿಮಿರ ಶೋಕಾ
ಡಂಬರದ ಡಾವರ ವಿವೇಕವ
ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರ ಪರಿಜನದ ॥19॥

೦೨೦ ಬನ್ದು ಸಞ್ಜಯನನ್ಧನೃಪತಿಯ ...{Loading}...

ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ ॥20॥

೦೨೧ ಹೋಗಿ ತಳುವಿದೆ ...{Loading}...

ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ ॥21॥

೦೨೨ ಶಕುನಿ ಬಿದ್ದನು ...{Loading}...

ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ ॥22॥

೦೨೩ ಬಳಿಕ ನೂರಾನೆಯಲಿ ...{Loading}...

ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ ॥23॥

೦೨೪ ಕುರುಪತಿಯನರಸುತ್ತ ತಾನೈ ...{Loading}...

ಕುರುಪತಿಯನರಸುತ್ತ ತಾನೈ
ತರಲು ಸಾತ್ಯಕಿ ಕಂಡು ಸೂಠಿಯ
ಲುರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ
ಕರೆದು ಧೃಷ್ಟದ್ಯುಮ್ನ ತನ್ನಯ
ಶಿರವನರಿಯೆನೆ ಬಳಿಕ ಸಾತ್ಯಕಿ
ಕರದ ಖಡುಗವನುಗಿದು ಹೂಡಿದನೆನ್ನ ಗಂಟಲಲಿ ॥24॥

೦೨೫ ಜಲಧಿಯಲಿ ಫಣಿವದನದಲಿ ...{Loading}...

ಜಲಧಿಯಲಿ ಫಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡಿಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳ್ ಎಂದ ॥25॥

೦೨೬ ಆವ ವಹಿಲದೊಳಾದುದಾವಿ ...{Loading}...

ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದರಾಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ ॥26॥

೦೨೭ ಬೀಳುಕೊಣ್ಡೆನು ಮುನಿಯನವನೀ ...{Loading}...

ಬೀಳುಕೊಂಡೆನು ಮುನಿಯನವನೀ
ಪಾಲಕನನರಸಿದೆನು ಕಳನೊಳು
ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ
ಬೀಳುತೇಳುತ ನಿಲುತ ಬಳಲಿದು
ಕಾಲುನಡೆಯಲಿ ಸುಳಿವ ಕುರುಭೂ
ಪಾಲಕನ ಕಂಡೊಡನೆ ಬಂದೆನು ಕೊಳನ ತಡಿಗಾಗಿ ॥27॥

೦೨೮ ಇಳಿದು ಸರಸಿಯ ...{Loading}...

ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ ॥28॥

೦೨೯ ತನ್ದೆನಿಲ್ಲಿಗೆ ಸಕಲ ...{Loading}...

ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ವರ್ತಿಸಿತಿಲ್ಲಿ ಪರಿಯಂತ
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸೂನು ಮೇಲಣ ಹದನ ಹೇಳೆಂದ ॥29॥

೦೩೦ ಅರಸ ಕೇಳ್ ...{Loading}...

ಅರಸ ಕೇಳ್ ಕೃಪ ಗುರುಜ ಕೃತವ
ರ್ಮರು ರಥಾಶ್ವಂಗಳನು ದೂರದ
ಲಿರಿಸಿ ತಲೆಮುಸುಕಿನಲಿ ಬಂದರು ಕೊಳನ ತಡಿಗಾಗಿ
ತರುಲತೆಗಳಿರುಬಿನಲಿ ಕಂಜಾ
ಕರದ ತಡಿಯಲಿ ನಿಂದು ಮೆಲ್ಲನೆ
ಕರೆದು ಕೇಳಿಸಿ ಹೇಳಿದರು ತಂತಮ್ಮ ಹೆಸರುಗಳ ॥30॥

೦೩೧ ಬದುಕಿ ಬನ್ದಿರೆ ...{Loading}...

ಬದುಕಿ ಬಂದಿರೆ ಭೀಮ ನಿಮ್ಮನು
ಗದೆಯ ಸವಿಗಾಣಿಸನಲಾ ಸಾ
ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ
ಕದನದಲಿ ಸೌಬಲ ಸುಶರ್ಮರ
ಹೊದರ ಹರೆಗಡಿವಲ್ಲಿ ನೀವ್ ಮಾ
ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ ॥31॥

೦೩೨ ಜೀಯ ಖತಿಯೇಕೆಮ್ಮೊಡನೆ ...{Loading}...

ಜೀಯ ಖತಿಯೇಕೆಮ್ಮೊಡನೆ ಚ
ಕ್ರಾಯುಧನ ಚಾತುರ್ಯದಲಿ ರಣ
ದಾಯತಪ್ಪಿತು ಭಟರು ಬೀತುದು ಹೇಳಲೇನದನು
ಕಾಯಿದರೊ ಕಾದಿದರೊ ಗುರು ಗಾಂ
ಗೇಯ ಸೈಂಧವ ಮಾದ್ರಪತಿ ರಾ
ಧೇಯರನುಗತವಾಗದಿಹುದಪರಾಧ ನಮಗೆಂದ ॥32॥

೦೩೩ ಅರಸ ಹೊರವಡು ...{Loading}...

ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ ॥33॥

೦೩೪ ಏಳು ಕುರುಪತಿ ...{Loading}...

ಏಳು ಕುರುಪತಿ ಪಾಂಡುತನಯ
ವ್ಯಾಳಸೇನೆಗೆ ಸಿಂಹವಿದೆ ನಿ
ನ್ನಾಳ ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ
ಜಾಳಿಸಿದ ಜಯಕಾಮಿನಿಯ ಜಂ
ಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು ಮೈದೋರೆಂದರವನಿಪನ ॥34॥

೦೩೫ ಒಪ್ಪದಿದು ಭೀಷ್ಮಾದಿಯವ್ವನ ...{Loading}...

ಒಪ್ಪದಿದು ಭೀಷ್ಮಾದಿಯವ್ವನ
ದರ್ಪದಲಿ ಜಾರಿದ ಜಯಾಂಗನೆ
ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ
ತಪ್ಪಿದುದನೀ ಸಲಿಲವಾಸದೊ
ಳೊಪ್ಪವಿಡುವೆನು ನಾಳೆ ನೀವ್ ತೊಲ
ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ ॥35॥

೦೩೬ ಇವೆ ...{Loading}...

ಇವೆ ಮಹಾಮಂತ್ರಾಸ್ತ್ರಸಂತತಿ
ಯಿವೆ ಮಹಾಧನುರಾಜ್ಯಸತ್ಕೃತಿ
ಸವನ ಸಾಪೇಕ್ಷಂಗಳಿವೆ ತ್ರೈರಥಿಕರೊಬ್ಬರಲಿ
ಅವನಿಪತಿ ನೀ ಸೇಸೆದಳಿ ಮಿ
ಕ್ಕವರು ಸೇನೆ ವಿರೋಧಿವರ್ಗಕೆ
ದಿವವೊ ಧರೆಯೋ ನೋಡಲಹುದೇಳೆಂದನಾ ದ್ರೌಣಿ ॥36॥

೦೩೭ ಸೇಸೆದಳಿದೆನು ಭೀಷ್ಮಗಗ್ಗದ ...{Loading}...

ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯ್ತೇಸ ಪತಿಕರಿಸಿದೆನು ಕರ್ಣನನಂದು ನೀನರಿಯ
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ ॥37॥

೦೩೮ ರಣದೊಳಾ ಗಾಙ್ಗೇಯಗಿಮ್ಮಡಿ ...{Loading}...

ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ ॥38॥

೦೩೯ ಖರೆಯರೈ ನೀವುಭಯ ...{Loading}...

ಖರೆಯರೈ ನೀವುಭಯ ರಾಯರ
ಗುರುಗಳದು ಕುಂದಿಲ್ಲ ಕೃಪನೇ
ಹಿರಿಯನಾಚಾರಿಯನು ಯಾದವರೊಳಗೆ ಕೃತವರ್ಮ
ಗರುವರೈ ನೀವಿಲ್ಲಿ ರಣಬಾ
ಹಿರರೆ ಸಾಕಂತಿರಲಿ ಸುಕೃತದೊ
ಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ ॥39॥

೦೪೦ ಅರಸ ಕೇಳೈ ...{Loading}...

ಅರಸ ಕೇಳೈ ಸುಕೃತವನು ವಿ
ಸ್ತರಿಸುವೆನು ಪೂರಾಯವೆನೆ ಕಾ
ಹುರದ ನುಡಿ ಬೇಡೇಳು ನಡೆವುದು ಹಸ್ತಿನಾಪುರಿಗೆ
ಅರಿಗಳೈತಂದೌಕಿದಡೆ ಗಜ
ಪುರದ ದುರ್ಗವ ಬಲಿದು ನಿಲುವುದು
ಪರಮಮಂತ್ರವಿದೆಂದನಶ್ವತ್ಥಾಮನವನಿಪನ ॥40॥

೦೪೧ ಸಲಿಲ ಮಧ್ಯದೊಳಿನ್ದಿನಿರುಳನು ...{Loading}...

ಸಲಿಲ ಮಧ್ಯದೊಳಿಂದಿನಿರುಳನು
ಕಳೆದೆನಾದಡೆ ಪಾಂಡುಪುತ್ರರ
ಗೆಲುವೆನುದಯದೊಳಿದುವೆ ನಿಶ್ಚಯವೆನ್ನ ಚಿತ್ತದಲಿ
ಅಳುಕಿ ಕದನದೊಳೋಡಿ ನಗರಿಯ
ಲಲನೆಯರ ಮರೆಗೊಂಬೆನೇ ನೀವ್
ತೊಲಗಿ ಭೀಮನ ಬೇಹು ಬಹುದಿರಬೇಡ ನೀವೆಂದ ॥41॥

೦೪೨ ಅರಸ ಕೇಳೈ ...{Loading}...

ಅರಸ ಕೇಳೈ ದೈವಯೋಗವ
ಪರಿಹರಿಸಲಾರಳವು ಪವನಜ
ನರಮನೆಯ ಮೃಗವೇಂಟೆಕಾರರು ಮಾಂಸಭಾರದಲಿ
ಬರುತ ನೀರಡಿಸಿದರು ಕಂಡರು
ಸರಸಿಯನು ನೀರ್ಗುಡಿಯಲೈತಂ
ದಿರಿಸಿದರು ತೀರದಲಿ ಬಹಳಾಮಿಷದ ಕಂಬಿಗಳ ॥42॥

೦೪೩ ಚರಣ ವದನವ ...{Loading}...

ಚರಣ ವದನವ ತೊಳೆದು ನಿರ್ಮಳ
ತರವರಾಂಬುವನೀಂಟಿದರು ಕೃಪ
ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ
ಅರಿದರಿವರಾಲಿಸಿದರೇನಿದು
ಕುರುಪತಿಯ ತತ್ಸುಭಟವಾದೋ
ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು ॥43॥

೦೪೪ ಆಯಿತಿದು ನೃಪರಾಜಕಾರ್ಯದ ...{Loading}...

ಆಯಿತಿದು ನೃಪರಾಜಕಾರ್ಯದ
ದಾಯಕಿದು ಧುರಪಥವಲಾ ಕುರು
ರಾಯಗುಪ್ತ ನಿವಾಸವರ್ಥಪ್ರದವಲಾ ನಮಗೆ
ಕಾಯಿದಿರು ಕಂಡೌ ಸರೋಜದ
ತಾಯಿ ಸರಸಿಯೆನುತ್ತ ಹೋದರು
ವಾಯುತನುಜನ ಬೇಂಟೆಕಾರರು ನಗುತ ಪಾಳೆಯಕೆ ॥44॥

೦೪೫ ಅರಸ ಕೇಳ್ ...{Loading}...

ಅರಸ ಕೇಳ್ ಸಮಸಪ್ತಕರ ಸಂ
ಹರಿಸಿ ಶಕುನಿಯ ಮುರಿದು ಕಳನಲಿ
ದೊರೆಯ ಕಾಣದೆ ಭೀಮಸೇನಾರ್ಜುನರು ದುಗುಡದಲಿ
ಹರಿಸಿದರು ದೂತರನು ಕೌರವ
ಧರಣಿಪನ ಪಾಳೆಯಕೆ ಹಸ್ತಿನ
ಪುರಿಗೆ ಕೂಡೆ ದಿಗಂತದಲಿ ಚರರರಸಿದರು ನೃಪನ ॥45॥

೦೪೬ ಹರಿದು ದೂತರು ...{Loading}...

ಹರಿದು ದೂತರು ನೃಪನ ಕಾಣದೆ
ಮರಳಿದರು ಯಮಸೂನು ದುಗುಡದ
ಭರದ ಭಾರವಣೆಯಲಿ ಹೊಕ್ಕನು ತನ್ನ ಪಾಳೆಯವ
ಕುರುನೃಪತಿ ತಪ್ಪಿದನು ಭೀಷ್ಮಾ
ದ್ಯರ ವಿಜಯ ವ್ಯಥೆಯಾಯ್ತು ಹಸ್ತಿನ
ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ ॥46॥

೦೪೭ ಹೆಣನ ಬಗಿದರಸಿದರು ...{Loading}...

ಹೆಣನ ಬಗಿದರಸಿದರು ಕರಿಗಳ
ಹಣಿದದಲಿ ನೋಡಿದರು ರಥಸಂ
ದಣಿಗಳೊಟ್ಟಿಲ ಕೆದರಿ ಭೀಷ್ಮನ ಸರಳ ಮಂಚದಲಿ
ಹಣುಗಿದರು ಭಗದತ್ತನಾನೆಯ
ನಣೆದುನೋಡಿದರರುಣವಾರಿಯ
ಕೆಣಕಿ ಕೂಡರಸಿದರು ಚಾರರು ಕಳನ ಚೌಕದಲಿ ॥47॥

೦೪೮ ಹರಿಹರಿದು ಕೂಡರಸಿ ...{Loading}...

ಹರಿಹರಿದು ಕೂಡರಸಿ ದೂತರು
ಮರಳಿ ಬಂದರು ದುಗುಡಭರದಲಿ
ಬೆರಳ ಮೂಗಿನಲಿದ್ದುದವನಿಪಸಹಿತ ಪರಿವಾರ
ಇರುಳು ಬೇಗೆಯ ಚಕ್ರವಾಕಕೆ
ತರಣಿ ತಲೆದೋರಿದವೊಲಟವೀ
ಚರರಿಗರಸಗೆ ಭಾವಭಾವ ವ್ಯಕ್ತವಾಯ್ತೆಂದ ॥48॥

೦೪೯ ತನ್ದ ಮಾಂಸದ ...{Loading}...

ತಂದ ಮಾಂಸದ ಕಂಬಿಗಳನು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆಯ ಶಬರಪತಿ ನುಡಿಸಿದನು ಪವನಜನ ॥49॥

೦೫೦ ರಣಮುಖದೊಳೇ ಕಾದಶಾಕ್ಷೋ ...{Loading}...

ರಣಮುಖದೊಳೇ ಕಾದಶಾಕ್ಷೋ
ಹಿಣಿಯ ಗೆಲಿದುದು ವಿಫಲವಾದುದು
ಜುಣುಗಿದರಿನೃಪನಾವ ಜವನಿಕೆ ಮರೆಯೊಳಡಗಿದನೊ
ತೃಣವನದೊಳಿರುಬಿನಲಿ ಮೆಳೆಸಂ
ದಣಿಗಳಲಿ ಮರಗಾಡಿನಲಿ ಮೃಗ
ಗಣದ ನೆಲೆಯಲಿ ಕಾಣಿರಲೆ ನೀವೆಂದನಾ ಭೀಮ ॥50॥

೦೫೧ ಆದರೆಕ್ಕಟಿ ಬಿನ್ನಹವ ...{Loading}...

ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳ್ ಎಂದ ॥51॥

೦೫೨ ಜೀಯ ಕುರುಪತಿ ...{Loading}...

ಜೀಯ ಕುರುಪತಿ ಗುಪ್ತದಲಿ ದ್ವೈ
ಪಾಯನನ ಸರಸಿಯಲಿ ಸಮರವಿ
ಧಾಯಕದ ವಾರ್ತೆಯನು ತನ್ನವರೊಡನೆ ತೀರದಲಿ
ಬಾಯಿಗೇಳಿಸುತಿರ್ದ ನಾವ್ ತ
ತ್ತೋಯಪಾನಕೆ ತಿರುಗಿ ಕಂಡೆವು
ರಾಯನಂಘ್ರಿಗಳಾಣೆಯೆಂದರು ಶಬರರನಿಲಜಗೆ ॥52॥

೦೫೩ ಇತ್ತನವದಿರಿಗಙ್ಗಚಿತ್ತವ ...{Loading}...

ಇತ್ತನವದಿರಿಗಂಗಚಿತ್ತವ
ನುತ್ತಮಾಂಬರ ವೀರ ನೂಪುರರ
ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ
ಹೊತ್ತ ಹರುಷದ ಹೊಳೆವ ಕಂಗಳ
ತೆತ್ತಿಸಿದ ಪುಳಕದ ಸಘಾಡಿಕೆ
ವೆತ್ತ ಸುಮ್ಮಾನದಲಿ ಬಂದನು ರಾಯನರಮನೆಗೆ ॥53॥

೦೫೪ ಗುಡಿಯ ಕಟ್ಟಿಸು ...{Loading}...

ಗುಡಿಯ ಕಟ್ಟಿಸು ಜೀಯ ಚರರಿಗೆ
ಕೊಡು ಪಸಾಯವನರಿನೃಪನ ತಲೆ
ವಿಡಿದರಾ ದ್ವೈಪಾಯನ ಸರೋವರದ ಮಧ್ಯದಲಿ
ಅಡಗಿದನು ತಡಿವಿಡಿದು ನಿಂದವ
ರೊಡನೆ ಮಾತಾಡಿದನು ಗಡ ನಿ
ಮ್ಮಡಿಯೆ ಬಲ್ಲಿರಿ ರಾಜಕಾರ್ಯವನೆಂದನಾ ಭೀಮ ॥54॥

೦೫೫ ಕರೆ ಮುಕುನ್ದನನರ್ಜುನನ ...{Loading}...

ಕರೆ ಮುಕುಂದನನರ್ಜುನನ ಸಂ
ವರಣೆ ಬರಲಿ ಶಿಖಂಡಿ ಪಾಂಚಾ
ಲರಿಗೆ ನೇಮಿಸು ಕರಸು ಧೃಷ್ಟದ್ಯುಮ್ನ ಸೃಂಜಯರ
ಕರಿ ತುರಗ ರಥವಿಶ್ರಮವನಿಂ
ದಿರುಳಿನಲಿ ನೂಕುವುದು ಹೊರವಡಿ
ಹೊರವಡೆನೆ ನಿಸ್ಸಾಳ ಸೂಳವಿಸಿದವು ಲಗ್ಗೆಯಲಿ ॥55॥

೦೫೬ ಅವರ ಸುಮ್ಮಾನವನು ...{Loading}...

ಅವರ ಸುಮ್ಮಾನವನು ಸೇನಾ
ನಿವಹ ರಭಸದ ಭೂರಿಭೇರಿಯ
ವಿವಿಧ ವಾದ್ಯಧ್ವನಿಯ ರಥಗಜಹಯದ ಗರ್ಜನೆಯ
ಇವರು ಕೇಳಿದರಕಟಕಟ ಕೌ
ರವನ ಗುಪ್ತ ಪ್ರಕಟವಾದುದೆ
ಶಿವಶಿವಾ ಹರಿಸರ್ವಗತನಹುದೆಂದನಾ ದ್ರೌಣಿ ॥56॥

೦೫೭ ಏಳು ಕುರುಪತಿ ...{Loading}...

ಏಳು ಕುರುಪತಿ ಪಾಂಡುನಂದನ
ರಾಳು ಬರುತಿದೆ ನಾವು ನಾಲ್ವರು
ಕಾಳೆಗದೊಳಂಘೈಸುವೆವು ಬಿಡುಬಿಡು ಸರೋವರವ
ಹೇಳು ಮನವೇನೆನಲು ನೀವಿ
ನ್ನೇಳಿ ದೂರದಲಿರಿ ವಿರೋಧಿಗ
ಳಾಳು ಮಾಡುವುದೇನು ಸಲಿಲದೊಳೆಂದನಾ ಭೂಪ ॥57॥

೦೫೮ ಅನಿಮಿಷರು ಗನ್ಧರ್ವ ...{Loading}...

ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹೆನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ ॥58॥

೦೫೯ ಉರವಣಿಸಿತರಿಸೇನೆ ಮುತ್ತಿತು ...{Loading}...

ಉರವಣಿಸಿತರಿಸೇನೆ ಮುತ್ತಿತು
ಸರಸಿಯನು ವೇಢೆಯಲಿ ಗಿಡುಮೆಳೆ
ತರುಲತೆಯಲೊಳಕೊಂಡು ನಿಂದುದು ಚತುರಚತುರಂಗ
ನರರ ಗರ್ಜನೆ ವಾದ್ಯರವ ಕರಿ
ತುರಗ ರಥ ನಿರ್ಘೋಷ ಪರ್ವತ
ಬಿರಿಯೆ ಮೊಳಗಿತು ಸಿಲುಕಿದನು ಸಿಲುಕಿದನು ಹಗೆಯೆನುತ ॥59॥

೦೬೦ ಇವರು ತಿರುಗಿದರಿನ್ನು ...{Loading}...

ಇವರು ತಿರುಗಿದರಿನ್ನು ದೈವ
ವ್ಯವಸಿತವೆ ಫಲಿಸುವುದಲಾ ಕೌ
ರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ
ಅವರಿಗಿದನಾರರುಹಿದರೊ ಪಾಂ
ಡವರಿಗಾವುದು ಕೊರತೆ ಪುಣ್ಯ
ಪ್ರವರ ಗದುಗಿನ ವೀರನಾರಾಯಣನ ಕರುಣದಲಿ ॥60॥

+೦೪ ...{Loading}...