೦೦೦ ಸೂ ರಾಯದಳ ...{Loading}...
ಸೂ. ರಾಯದಳ ಸಲೆ ಸವೆಯೆ ಸಮರದ
ನಾಯಕರು ನೆರೆ ಮುರಿಯಲಾ ದ್ವೈ
ಪಾಯನ ಸರೋವರವ ಹೊಕ್ಕನು ಕೌರವರ ರಾಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ದುರ್ಯೋಧನನ ಸೈನ್ಯವು ನಿರ್ನಾಮವಾಗಲು ಯುದ್ಧದ ನಾಯಕರಾದವರು ಹಿಂದಿರುಗಿ ಹೋಗಲು ಕೌರವನು ದ್ವೈಪಾಯನ ಸರೋವರವನ್ನು ಪ್ರವೇಶಿಸಿದ
ಪದಾರ್ಥ (ಕ.ಗ.ಪ)
ಸವೆಯೆ-ನಾಶವಾಗಲು, ನಿರ್ನಾಮವಾಗಲು, ಮುರಿ-ಹಿಂದಿರುಗು
ಟಿಪ್ಪನೀ (ಕ.ಗ.ಪ)
ದ್ವೈಪಾಯನ ಸರೋವರ-ಕುರುಕ್ಷೇತ್ರದಲ್ಲಿರುವ ಒಂದು ಸರೋವರ. ಇದನ್ನು ಪಂಪ ರನ್ನರು ವೈಶಂಪಾಯನ ಸರೋವರವೆಂದು ಕರೆದಿದ್ದಾರೆ. ದ್ವೈಪಾಯನನೆಂಬ ಹೆಸರು ವ್ಯಾಸಮುನಿಗೆ ಸಲ್ಲುತ್ತದೆ. ವೈಶಂಪಾಯನ ವ್ಯಾಸಮುನಿಯ ಶಿಷ್ಯ.
ಮೂಲ ...{Loading}...
ಸೂ. ರಾಯದಳ ಸಲೆ ಸವೆಯೆ ಸಮರದ
ನಾಯಕರು ನೆರೆ ಮುರಿಯಲಾ ದ್ವೈ
ಪಾಯನ ಸರೋವರವ ಹೊಕ್ಕನು ಕೌರವರ ರಾಯ
೦೦೧ ಕೇಳು ಜನಮೇಜಯಧರಿತ್ರೀ ...{Loading}...
ಕೇಳು ಜನಮೇಜಯಧರಿತ್ರೀ
ಪಾಲ ಕುರುಪತಿ ಹೆಗಲ ಗದೆಯಲಿ
ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
ಆಳ ಕಾಣೆನು ಛತ್ರ ಚಮರದ
ವೀಳೆಯದ ವಿಸ್ತಾರವಿಭವವ
ಬೀಳುಕೊಟ್ಟನು ನಡೆದನಿಂದ್ರ ದಿಶಾಭಿಮುಖವಾಗಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇಳು ಜನಮೇಜಯ ಧರಿತ್ರೀಪಾಲ! ಕೌರವನು, ಹೆಗಲಮೇಲಿನ ಗದೆಯೊಂದಿಗೆ, ಕಾಲು ನಡೆಯಲ್ಲಿ ಏಕಾಂಗಿಯಾಗಿ, ವೇಗವಾಗಿ ಯುದ್ಧಭೂಮಿಯಲ್ಲಿ ನಡೆದ. ಅವನೊಂದಿಗೆ ಯಾವ ಸೇವಕರನ್ನು ಕಾಣೆ. ಛತ್ರ, ಚಾಮರ, ತಾಂಬೂಲ ಮುಂತಾದ ಎಲ್ಲ ವಿಶಾಲ ರಾಜವೈಭವಗಳನ್ನೂ ಬಿಟ್ಟು ಪೂರ್ವದಿಕ್ಕಿಗೆ ನಡೆದ.
ಪದಾರ್ಥ (ಕ.ಗ.ಪ)
ಹಾಯ್ದನು-ವೇಗವಾಗಿ ನಡೆದ, ಕಳ-ಕಣ, ಯುದ್ಧಭೂಮಿ, ಇಂದ್ರದಿಶೆ-ಪೂರ್ವದಿಕ್ಕು
ಮೂಲ ...{Loading}...
ಕೇಳು ಜನಮೇಜಯಧರಿತ್ರೀ
ಪಾಲ ಕುರುಪತಿ ಹೆಗಲ ಗದೆಯಲಿ
ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
ಆಳ ಕಾಣೆನು ಛತ್ರ ಚಮರದ
ವೀಳೆಯದ ವಿಸ್ತಾರವಿಭವವ
ಬೀಳುಕೊಟ್ಟನು ನಡೆದನಿಂದ್ರ ದಿಶಾಭಿಮುಖವಾಗಿ ॥1॥
೦೦೨ ಅಕಟ ನಮ್ಮಯ ...{Loading}...
ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠರ
ಸಕಲ ಬಲ ಪರಿಶೇಷವೇನೆಂದರಸ ಬೆಸಗೊಂಡ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಯ್ಯೋ, ನಮ್ಮ ಹಿಂದಿನ ಶ್ರೇಷ್ಠ ರಾಜಸಮೂಹಕ್ಕೆ ಈ ವಿಧಿಯಾಯಿತೇ, ಧರ್ಮದ ಪ್ರಭಾವದಿಂದ ನಡೆಯುವವರಿಗೆ ಕೌರವ ಕಂಟಕನಾದನಲ್ಲಾ. ಶಕುನಿಯ ಬೋಧೆಗಳೆಂಬ ವಿಷಬೀಜವೇ ಬಾಧಕವನ್ನು ತಂದಿತಲ್ಲಾ. ಯುಧಿಷ್ಠಿರನ ಸಕಲ ಸೈನ್ಯದಲ್ಲಿ ಉಳಿದಿರುವುದೆಷ್ಟು ಎಂದು ಜನಮೇಜಯ ವೈಶಂಪಾಯನರನ್ನು ಕೇಳಿದ.
ಪದಾರ್ಥ (ಕ.ಗ.ಪ)
ಪ್ರಕರ-ಸಮೂಹ, ಗುಂಪು, ಕಂಟಕ-ಅಡ್ಡಿಯನ್ನುಂಟುಮಾಡುವವ, ಅಡ್ಡಿ, ಮತ- ಅಭಿಪ್ರಾಯ, ಬೋಧನೆ, ಪರಿಶೇಷ-ಉಳಿದಿರುವುದು
ಮೂಲ ...{Loading}...
ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠರ
ಸಕಲ ಬಲ ಪರಿಶೇಷವೇನೆಂದರಸ ಬೆಸಗೊಂಡ ॥2॥
೦೦೩ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೂರು ಮಿಕ್ಕುದು ಲಕ್ಕ ಪಾಯದಳ
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಕೇಳು, ಧರ್ಮರಾಯನ ಸೈನ್ಯದಲ್ಲಿ ಎರಡು ಸಾವಿರ ತೇರುಗಳು ಉಳಿದುವು. ಏಳುನೂರು ಆನೆಗಳು ಮಿಕ್ಕವು. ಒಂದು ಲಕ್ಷ ಕಾಲಾಳುಗಳು, ಐದು ಸಾವಿರ ಕುದುರೆಗಳು, ಸಾತ್ಯಕಿ, ಯುಧಾಮನ್ಯು, ಉತ್ತಮೌಂಜಸ, ಶಿಖಂಡಿ, ಧೃಷ್ಟದ್ಯುಮ್ನ ಮತ್ತು ದ್ರೌಪದಿಯ ಐದು ಜನ ಮಕ್ಕಳು ಉಳಿದರು.
ಟಿಪ್ಪನೀ (ಕ.ಗ.ಪ)
1)ಸಾತ್ಯಕಿ-ಯುದು ವಂಶದ ಶಿನಿರಾಜನ ಮಗನಾದ ಸತ್ಯಕನ ಮಗನಾದ ಯುಯುಧಾನನಿಗೆ ಈ ಹೆಸರೂ ಉಂಟು. ಇವನು ಶ್ರೀ ಕೃಷ್ಣನ ಆಪ್ತ ಭಕ್ತ. ಯದುವೀರರಲ್ಲಿ ಪ್ರಮುಖನಾದವನು ಯುದ್ಧ ಮಾಡುವ ಯಾದವ ಬಲವೆಲ್ಲ ಒಂದು ಕಡೆ - ಯುದ್ಧ ಮಾಡದ ನಾನು ಮಾತ್ರ ಒಂದು ಕಡೆ - ಎಂದು ಹೇಳಿದ ಕೃಷ್ಣ ಅರ್ಜುನನ ಸಾರಥಿಯಾದ. ಯಾದವ ವೀರರೆಲ್ಲರೂ ದುರ್ಯೋಧನನ ಕಡೆಗೆ ಹೋದರು. ಕೃಷ್ಣನ ಈ ಮಾತಿಗೆ ವಿರುದ್ಧವಾಗಿ ಸಾತ್ಯಕಿ ಮಾತ್ರ ಪಾಂಡವರ ಪರ ನಿಂತು ಯುದ್ಧಮಾಡಿದ.
2)ಯುಧಾಮನ್ಯು- ಪಾಂಚಾಲದೇಶದ ರಾಜಕುಮಾರ, ಪಾಂಡವರ ಪರವಾಗಿ ಯುದ್ಧ ಮಾಡಿದ
3)ಉತ್ತಮೌಂಜಸ-ಉತ್ತಮೌಜ; ಪಾಂಚಾಲರಾಜನಾದ ದ್ರುಪದನ ಮಗ. ಪಾಂಡವರ ಪರ ಹೊರಾಟ ಮಾಡಿದ.
4)ಶಿಖಂಡಿ-ಪಾಂಚಾಲರಾಜನಾದ ದ್ರುಪದನ ಮಗ, ಪಾಂಡವರ ಪರ ಹೋರಾಟ ಮಾಡಿ, ಭೀಷ್ಮನ ಸಾವಿಗೆ ಕಾರಣನಾದ.
5)ದ್ರುಪದಸೂನು-ದ್ರುಪದನ ಮಕ್ಕಳಿಲ್ಲಿ ಒಬ್ಬ ಧೃಷ್ಟದ್ಯುಮ್ನ. ಪಾಂಡವರ ಸೇನಾನಾಯಕ.
6)ದ್ರೌಪದೀಸುತರು-ಪ್ರತಿವಿಂಧ್ಯ (ಯುಧಿಷ್ಠಿರನಿಂದ) ಶ್ರುತಸೋಮ (ಭೀಮನಿಂದ) ಶ್ರುತಕೀರ್ತಿ (ಅರ್ಜುನನಿಂದ) ಶತಾನೀಕ (ನಕುಲನಿಂದ) ಮತ್ತು ಶ್ರುತಸೇನ (ಸಹದೇವನಿಂದ)
ಮೂಲ ...{Loading}...
ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೂರು ಮಿಕ್ಕುದು ಲಕ್ಕ ಪಾಯದಳ
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು ॥3॥
೦೦೪ ಆ ಸುಯೋಧನ ...{Loading}...
ಆ ಸುಯೋಧನ ಸೇನೆಯಲಿ ಧರ
ಣೀಶ ಕೃಪ ಕೃತವರ್ಮ ಗುರುಸುತ
ರೈಸುಬಲದಲಿ ನಾಲ್ವರುಳಿದರು ಹೇಳಲೇನದನು
ಏಸು ಬಲವೆನಿತೈಶ್ವರಿಯವಿ
ದ್ದೇಸು ಭಟರೆನಿತಗ್ಗಳೆಯರಿ
ದ್ದೇಸರಲಿ ಫಲವೇನು ದೈವವಿಹೀನರಿವರೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಸೈನ್ಯದಲ್ಲಿ, ದುರ್ಯೋಧನ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ, ಹೀಗೆ ಅಷ್ಟು ದೊಡ್ಡ ಸೈನ್ಯದಲ್ಲಿ ಈ ನಾಲ್ಕು ಜನ ಉಳಿದರು, ಅದನ್ನು ಏನು ಹೇಳಲಿ. ಎಷ್ಟು ಬಲ, ಎಷ್ಟು ಐಶ್ವರ್ಯವಿದ್ದೂ, ಎಷ್ಟು ಸೈನಿಕರು, ಎಷ್ಟು ಹೆಸರಾಂತವರು ಇದ್ದೂ ಫಲವೇನು? ಇವರು ದೈವ ಕೃಪೆ ಇಲ್ಲದವರೆಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಅಗ್ಗಳೆಯರು-ಅಗ್ರಮಾನ್ಯರು, ಹೆಸರಾಂತವರು, ಶ್ರೇಷ್ಠರು, ದೈವವಿಹೀನರು - ದೈವಬಲವಿಲ್ಲದವರು.
ಮೂಲ ...{Loading}...
ಆ ಸುಯೋಧನ ಸೇನೆಯಲಿ ಧರ
ಣೀಶ ಕೃಪ ಕೃತವರ್ಮ ಗುರುಸುತ
ರೈಸುಬಲದಲಿ ನಾಲ್ವರುಳಿದರು ಹೇಳಲೇನದನು
ಏಸು ಬಲವೆನಿತೈಶ್ವರಿಯವಿ
ದ್ದೇಸು ಭಟರೆನಿತಗ್ಗಳೆಯರಿ
ದ್ದೇಸರಲಿ ಫಲವೇನು ದೈವವಿಹೀನರಿವರೆಂದ ॥4॥
೦೦೫ ಇತ್ತಲೀ ಸಞ್ಜಯನ ...{Loading}...
ಇತ್ತಲೀ ಸಂಜಯನ ತಂದುದು
ಮೃತ್ಯು ಧೃಷ್ಟದ್ಯುಮ್ನನೀತನ
ಕುತ್ತಿ ಕೆಡಹಿದಡಾಗದೇ ಕುರುಡಂಗೆ ರಣರಸವ
ಬಿತ್ತರಿಸುವನು ಕೌರವನ ಜಯ
ದತ್ತಲೆರಕ ದುರಾತ್ಮನನು ಕೈ
ವರ್ತಿಸಾ ಯಮನಗರಿಗೆಂದನು ಸಾತ್ಯಕಿಯ ಕರೆದು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆಯಲ್ಲಿ ಮೃತ್ಯುವು ಸಂಜಯನನ್ನು ಇಲ್ಲಿಗೆ ತಂದಿತು. ಧೃಷ್ಟದ್ಯುಮ್ನನು ಇವನನ್ನು ಇರಿದು ಕೆಡವಿದರೆ ಆಗದೇ, ಕುರುಡನಾದ ಧೃತರಾಷ್ಟ್ರನಿಗೆ ಯುದ್ಧದ ರಸವನ್ನು ವಿಸ್ತರಿಸಿ ಹೇಳುತ್ತಾನೆ. ಇವನಿಗೆ ಕೌರವನ ಗೆಲ್ಲುವಿಕೆಯತ್ತಲೇ ಮನಸ್ಸು. ಈ ದುರಾತ್ಮನನ್ನು ಯಮನ ಪಟ್ಟಣಕ್ಕೆ ಕಳಿಸು ಎಂದು ಸಾತ್ಯಕಿಯನ್ನು ಕರೆದು ಹೇಳಿದ.
ಪದಾರ್ಥ (ಕ.ಗ.ಪ)
ಕುತ್ತಿ-ಆಯುಧವನ್ನು ನಾಟಿಸಿ, ಇರಿದು, ರಣರಸ-ಯುದ್ಧದ ಸ್ವಾರಸ್ಯಗಳು, ಬಿತ್ತರಿಸು-ವಾರ್ತೆಯಂತೆ ಹೇಳು, ವಿಸ್ತಾರವಾಗಿ ಹೇಳು, ಎರಕ-ಪ್ರೀತಿ, ಕೈವರ್ತಿಸು-ಒಪ್ಪಿಸು.
ಮೂಲ ...{Loading}...
ಇತ್ತಲೀ ಸಂಜಯನ ತಂದುದು
ಮೃತ್ಯು ಧೃಷ್ಟದ್ಯುಮ್ನನೀತನ
ಕುತ್ತಿ ಕೆಡಹಿದಡಾಗದೇ ಕುರುಡಂಗೆ ರಣರಸವ
ಬಿತ್ತರಿಸುವನು ಕೌರವನ ಜಯ
ದತ್ತಲೆರಕ ದುರಾತ್ಮನನು ಕೈ
ವರ್ತಿಸಾ ಯಮನಗರಿಗೆಂದನು ಸಾತ್ಯಕಿಯ ಕರೆದು ॥5॥
೦೦೬ ಸೆಳೆದಡಾಯ್ದವ ಸಞ್ಜಯನ ...{Loading}...
ಸೆಳೆದಡಾಯ್ದವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿ ಸೆಳೆದ ಖಡ್ಗವನ್ನು ಸಂಜಯನ ತಲೆಯ ಹಿಂಭಾಗಕ್ಕೆ ಹೂಡಿದ. ಆ ಸಮಯಕ್ಕೆ ಸರಿಯಾಗಿ ಸಂಜಯನ ಪುಣ್ಯಕ್ಕೆ ಶ್ರೇಷ್ಠನಾದ ಬಾದರಾಯಣನು ಅಲ್ಲಿ ಪ್ರತ್ಯಕ್ಷನಾದನು. ಎಲೆಲೆ ಸಾತ್ಯಕಿ, ಒಳ್ಳೆಯದು ಮಾಡಿದೆ. ಸಂಜಯನು ದುಷ್ಟನೇ ನಮ್ಮ ಶಿಷ್ಯನನ್ನು ನೀನು ಕೊಲ್ಲುವುದೇ - ಎಂದು ಹೇಳುತ್ತಾ ಕೊರಳಿಗೆ ಹೂಡಿದ್ದ ಖಡ್ಗವನ್ನು ಬಾದರಾಯಣ ತನ್ನ ಕೈಗೆ ತೆಗೆದುಕೊಂಡ.
ಪದಾರ್ಥ (ಕ.ಗ.ಪ)
ಅಡಾಯ್ದ -ಒಂದು ಬಗೆಯ ಖಡ್ಗ, ಹೆಡತಲೆ-ತಲೆಯ ಹಿಂಭಾಗ, ಖಳ-ದುಷ್ಟ
ಟಿಪ್ಪನೀ (ಕ.ಗ.ಪ)
1)ಬಾದರಾಯಣ-ವ್ಯಾಸ, ಬದರೀಕ್ಷೇತ್ರದಲ್ಲಿ ಇದ್ದುದರಿಂದ ವ್ಯಾಸರಿಗೆ ಈ ಹೆಸರು.
ಮೂಲ ...{Loading}...
ಸೆಳೆದಡಾಯ್ದವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ ॥6॥
೦೦೭ ದೇವ ನಿಮ್ಮಯ ...{Loading}...
ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ
ನೀವು ಬಿಜಯಂಗೈವುದೆನೆ ಬದ
ರಾವಳೀಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ, ಸಂಜಯ ನಿಮ್ಮ ಶಿಷ್ಯನೇ? ನಾನು ಇದನ್ನು ಮನಸ್ಸಿಗೆ ತಂದುಕೊಂಡಿರಲಿಲ್ಲ. ಈ ವಿಚಾರ ನನಗೆ ಮೊದಲು ತಿಳಿದಿದ್ದರೆ (ತಿಳಿದೂ ಕೊಲ್ಲಲು ಹೋಗಿದ್ದರೆ) ಕೃಷ್ಣನಾಣೆ! ಸಂಜಯನನ್ನು ಕೊಲ್ಲುವ ವಿಚಾರವನ್ನು ಕೈ ಬಿಟ್ಟೆ ನೀವು ದಯಮಾಡಿಸಿ - ಎನ್ನಲು ಮುನಿಶ್ರೇಷ್ಠನಾದ ವ್ಯಾಸನು, ದುಃಖದಿಂದ ನೊಂದಮನದವನಾಗಿದ್ದ ಸಂಜಯನಿಗೆ ತಿಳುವಳಿಕೆಯನ್ನು ಹೇಳಿ, ಬದರೀವೃಕ್ಷಗಳಿಂದ ಕೂಡಿದ ತನ್ನ ಆಶ್ರಮಕ್ಕೆ ಹಿಂದಿರುಗಿದ.
ಪದಾರ್ಥ (ಕ.ಗ.ಪ)
ಪರಿಭಾವಿಸು- ಮನಸ್ಸಿಗೆ ತಂದುಕೊಳ್ಳುವುದು, ಆಲೋಚಿಸುವುದು, ಬದರಾವಳೀ ಮಂದಿರ-ಬದರೀವೃಕ್ಷಗಳ ಸಮೂಹದಲ್ಲಿನ ತನ್ನ ಮನೆ, ಆಶ್ರಮ, ವಿಗಡ-ಶ್ರೇಷ್ಠನಾದ.
ಮೂಲ ...{Loading}...
ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ
ನೀವು ಬಿಜಯಂಗೈವುದೆನೆ ಬದ
ರಾವಳೀಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ ॥7॥
೦೦೮ ಅರಸ ಕೇಳೈ ...{Loading}...
ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಜಾರುಗಳ
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಜೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಯರಾಯನೇ ಕೇಳು, ಸಂಜಯನು ಮುಂದೆ ಬರುತ್ತಾ, ನೆರಿಗೆ ನೆರಿಗೆಯಾಗಿದ್ದ ಕರುಳುಗಳಿಂದ ಕಾಲಿಗೆ ತೊಡಕಾಗುತ್ತಿದ್ದ, ಮಾಂಸದ ಅಂಟಿನಿಂದ ಕಾಲುಜಾರುತ್ತಿದ್ದ, ಆನೆಗಳ ರಾಶಿಗಳ ಮೇಲೆ ಹತ್ತಿ - ಇಳಿದು ಹಿಂದಕ್ಕೆ ಬಂದು, ರಕ್ತಸೋರುತ್ತಿರುವ ಮಿದುಳಿನ ಶತ್ತೆಗಳ ಗುಲ್ಮದಲ್ಲಿ ದಡದಡನೆ ಕಾಲಿಟ್ಟು ಜಾರುತ್ತ ಬೀಳುತ್ತ - ಏಳುತ್ತ ನಡೆಯುತ್ತಿರುವ ಒಬ್ಬ ವ್ಯಕ್ತಿಯನ್ನು ದೂರದಲ್ಲಿ ಕಂಡನು.
ಪದಾರ್ಥ (ಕ.ಗ.ಪ)
ನಿರಿಗರುಳು-ನಿರಿಗೆ ನಿರಿಗೆಯಾಗಿದ್ದ ಕರುಳು, ಗುಂಗುರು ಕರುಳು, ಖಂಡ-ಮಾಂಸ, ಜಿಗಿ-ಅಂಟು, ಜಿಡ್ಡು, ಜಾರು-ಜಾರುವುದು, ಒಟ್ಟಿಲು-ರಾಶಿ, ಒಂದರಮೇಲೆ ಒಂದನ್ನು ಒಟ್ಟಿರುವ, ಪೈಸರಿಸು-ಹಿಂದಕ್ಕೆ ಹೋಗು, ಹಿಮ್ಮೆಟ್ಟು, ಜೋರು-ಸೋರು, ಜೊಂಡು-ಶತ್ತೆ, ತೊರಳೆ-ಗುಲ್ಮ, ದೇಹದ ಒಂದು ಬಗೆಯ ಅಂಟುಳ್ಳ ವಸ್ತು
ಮೂಲ ...{Loading}...
ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಜಾರುಗಳ
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಜೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ ॥8॥
೦೦೯ ಎಡಹುದಲೆಗಳ ದಾಣ್ಟಿ ...{Loading}...
ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂಧ್ರ್ವಶ್ವಾಸ ಲಹರಿಯಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ವ್ಯಕ್ತಿಯು, ಕಾಲಿಗೆ ತಾಗುವ ತಲೆಗಳನ್ನು ದಾಟಿ, ರಕ್ತದ ಮಡುವಿನಲ್ಲಿ ಗದೆಯನ್ನು ಊರಿ ಅದರೊಳಗೆ ಕಾಲಿಡಲು ಗಟ್ಟಿಜಾಗವನ್ನು ಪರೀಕ್ಷಿಸುತ್ತಾ, ಕುಟುಕು ಜೀವದ ಹೆಣಗಳ ತಲೆಯಿಲ್ಲದ ದೇಹದ ಭಾಗವನ್ನು ಗದೆಯಲ್ಲಿ ಅಪ್ಪಳಿಸುತ್ತಾ, ಹೆಜ್ಜೆ ಹೆಜ್ಜೆಗೂ ದೊಡ್ಡ ಆನೆಗಳ ದೊಡ್ಡ ಶರೀರಗಳನ್ನು ಹತ್ತಿ ಇಳಿದು ಪುನಃ ಹತ್ತಿ ಬೆದರಿ ನಡುಗುತ್ತಾ ಬಳಲಿಕೆಯಿಂದ ಉಸಿರು ಅಲೆಗಳಾಗಿ ಮೇಲಕ್ಕೆ ಹತ್ತಿ ಬರಲು ನಿಲ್ಲುವನು.
ಪದಾರ್ಥ (ಕ.ಗ.ಪ)
ಎಡಹು-ಎಡವು, ಕಾಲಿಗೆ ಸಿಕ್ಕುವುದು, ನೆಲೆ-ನಿಲ್ಲಲು ಜಾಗ, ಕಾಲೂರಲು ಜಾಗ, ಕಂಪಿಸಿ-ನಡುಗಿ, ಮುಂಡ-ತಲೆಯಿಲ್ಲದ ದೇಹ, ಹೇರಾನೆ-ಹಿರಿದಾದ ಆನೆ, ದೊಡ್ಡ ಆನೆ, ಹೇರೊಡಲು-ಹಿರಿದಾದ ಒಡಲು, ದೊಡ್ಡ ಶರೀರ, ಝೊಂಪಿಸು-ಬೆದರು, ಮಿಡುಕಿ-ನಡುಗಿ, ಊಧ್ರ್ವಶ್ವಾಸ-ಮೇಲುಸಿರು
ಮೂಲ ...{Loading}...
ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂಧ್ರ್ವಶ್ವಾಸ ಲಹರಿಯಲಿ ॥9॥
೦೧೦ ಓಡದಿಹ ನರಿ ...{Loading}...
ಓಡದಿಹ ನರಿ ಹದ್ದು ಕಾಗೆಗೆ
ಕೂಡ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತಪಾನದ ಶಾಕಿನೀಜನವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಾನು ಹತ್ತಿರ ಬಂದರೂ ಓಡದಿರುವ ನರಿ, ಹದ್ದು, ಕಾಗೆಗಳಿಗೆ ಕೂಡ ಆತನು ಗದೆಯನ್ನು ಬೀಸುತ್ತಿದ್ದಾನೆ. ಹೆಣಗಳನ್ನು ತಿನ್ನುವ ಭೂತಬೇತಾಳಗಳನ್ನು, ದೊಡ್ಡ ದೇಹದ ರಾಕ್ಷಸರನ್ನು, ಹೆಣಗಳನ್ನು ತೋಡುತ್ತಿರುವ ಕೈಗಳ ಮತ್ತು ಬಾಯಿನಲ್ಲಿ ಮಿದುಳನ್ನು ಇಟ್ಟಿಕೊಂಡಿರುವ, ಮಾಂಸದೊಂದಿಗೆ ಕರುಳನ್ನು ಬಾಯಲ್ಲಿಟ್ಟುಕೊಂಡಿರುವ ಚೀತ್ಕಾರ ಮಾಡುತ್ತಿರುವ, ತಲೆಯನ್ನೇ ಓಡುಗಳನ್ನಾಗಿ ಮಾಡಿಕೊಂಡು ಹೊಸರಕ್ತವನ್ನು ಕುಡಿಯುತ್ತಿರುವ ರಣಪಿಶಾಚಿಗಳನ್ನು ಸಂಕೋಚದಿಂದ ನೋಡುತ್ತಿದ್ದಾನೆ.
ಪದಾರ್ಥ (ಕ.ಗ.ಪ)
ಭಿಡೆ-ಸಂಕೋಚ, ನಾಚಿಗೆ, ಚೆನ್ನಾಗಿ, ಹೆಣದಿನಿಹಿ-ಹೆಣಗಳನ್ನು ತಿನ್ನುವವು, ಭೂತಭೇತಾಳಗಳು, ಹೇರಾಳು-ಹಿರಿದಾದ ಆಳು, ದೊಡ್ಡ ಆಳು, ರಕ್ಕಸ-ರಾಕ್ಷಸ(ಸಂ), ತಲೆಯೋಡು- ತಲೆಯನ್ನು ಒಡೆದು ಕಪಾಲಗಳನ್ನು ಮಣ್ಣಿನ ಪಾತ್ರೆ (ಓಡು)ಯಂತೆ ಉಪಯೋಗಿಸುವುದು, ಶಾಕಿನಿ-ರಣಪಿಶಾಚಿ
ಮೂಲ ...{Loading}...
ಓಡದಿಹ ನರಿ ಹದ್ದು ಕಾಗೆಗೆ
ಕೂಡ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತಪಾನದ ಶಾಕಿನೀಜನವ ॥10॥
೦೧೧ ಕನ್ದ ಪಕ್ಕಲೆಗಳಲಿ ...{Loading}...
ಕಂದ ಪಕ್ಕಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಗಲಮೇಲಿನ ಪಾತ್ರೆಗಳಲ್ಲಿ ತುಂಬಿದ ಮಂದವಾದ ರಕ್ತದ, ರಕ್ತದಿಂದ ನನೆದ ತಲೆಗಳ, ತಿಂದು ಬಿಸಾಕುವ, ತಿಂದು ಹೆಚ್ಚಾಗಿ ಕೊಬ್ಬನ್ನು ಕಾರುತ್ತಿರುವ, ಮೇದಸ್ಸನ್ನು ಬಾಡಿಸುತ್ತಿರುವ, ಒಟ್ಟುಗೂಡಿಕೊಂಡು ಹೆಣಗಳ ದೇಹದಲ್ಲಿನ ಗಾಯಗಳಿಗೇ ಬಾಯನ್ನಿಡುವ ರಾಕ್ಷಸಮೂಹವನ್ನು ಕಂಡು ಅಸಹ್ಯಪಟ್ಟು ಬೇರೆ ದಿಕ್ಕಿಗೆ ಮುಖಮಾಡುತ್ತಿದ್ದಾನೆ.
ಪದಾರ್ಥ (ಕ.ಗ.ಪ)
ಕಂದ-ಹೆಗಲು, ಪಕ್ಕಲೆ-ಚೀಲ್ರ, ಮಂದ-ಸ್ನಿಗ್ಧವಾದ, ತೆಳುವಲ್ಲದ, ತೋದ-ತೋಯ್ದ ನನೆದ, ನೆಣ-ಕೊಬ್ಬು, ಬಸೆ-ಮೇದಸ್ಸು, ಕೊಬ್ಬು, ಬಾಡಿಸು-ಬೇಯಿಸು, ಸುಡು, ಹರಿದೇರ- ಹರಿದ +ಏರ, ಚರ್ಮಹರಿದು ಉಂಟಾದ ಗಾಯದ (ಏರು-ಗಾಯ), ಒಂದಿ-ಸೇರಿಸಿ, ಪೂತನಿ-ರಾಕ್ಷಸಿ, ಓಸರಿಸು-ಅಸಹ್ಯಪಡು
ಮೂಲ ...{Loading}...
ಕಂದ ಪಕ್ಕಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ ॥11॥
೦೧೨ ಕುಣಿವ ಕರಿಗಳ ...{Loading}...
ಕುಣಿವ ಕರಿಗಳ ತಲೆಯ ಮಡುಹಿನ
ಲಣೆದು ಹಜ್ಜೆಯನಿಡುತ ಭೂತದ
ಹೆಣನ ತೀನಿಗೆ ತವಕಿಸುವ ವೇತಾಳ ಸಂತತಿಯ
ರಣದೊಳಂಜಿಸಿ ಸೆರೆನರದ ಕಾ
ವಣದೊಳಗೆ ಕೈಯೂರಿ ಮಿಗೆ ಹಳ
ವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ ಸುಯ್ವವನ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಕ್ತದ ಮಡುವಿನಲ್ಲಿ ಕುಟುಕುಜೀವವಿದ್ದು ಕುಣಿಯುತ್ತಿದ್ದ ಆನೆಗಳ ತಲೆಗಳನ್ನು ಹೊಡೆದು ಹಾಕಿ ಮುಂದೆ ಹೆಜ್ಜೆ ಹಾಕುತ್ತ, ಭೂತದ, ಹೆಣದ ದೇಹಕ್ಕೆ ಆತುರಪಡುವ ಬೇತಾಳಗಳ ಸಮೂಹವನ್ನು ಯುದ್ಧಭೂಮಿಯಲ್ಲಿ ಹೆದರಿಸಿ, ನರ-ನಾಳಗಳ ಚಪ್ಪರದೊಳಗೆ ನಿಧಾನವಾಗಿ ಕೈಯನ್ನು ಊರಿ, ಹಳೆಯ (ಕೊಳೆತ) ಹೆಣಗಳ ಹೊಲಸಿಗೆ ಅಸಹ್ಯಪಟ್ಟು ಓಡಿಹೋಗುತ್ತ, ಹೆಜ್ಜೆಹೆಜ್ಜೆಗೆ ಏದುಸಿರು ಬಿಡುತ್ತಿರುವವನನ್ನು ಸಂಜಯ ದೂರದಿಂದ ಕಂಡ.
ಪದಾರ್ಥ (ಕ.ಗ.ಪ)
ಮಡುಹು-ನೀರುನಿಂತ ಸ್ಥಳ, ಕೆಸರುಹಳ್ಳ, ತೀನಿಗೆ-ಆಹಾರಕ್ಕೆ, ವೇತಾಳ-ಬೇತಾಳ, ಸಂತತಿ-ಸಮೂಹ, ಸೆರೆನರ-ನರನಾಳಗಳು, ಕಾವಣ-ಚಪ್ಪರ, ಸುಯ್ವವನ-ಏದುಸಿರು ಬಿಡುವವನನ್ನು
ಮೂಲ ...{Loading}...
ಕುಣಿವ ಕರಿಗಳ ತಲೆಯ ಮಡುಹಿನ
ಲಣೆದು ಹಜ್ಜೆಯನಿಡುತ ಭೂತದ
ಹೆಣನ ತೀನಿಗೆ ತವಕಿಸುವ ವೇತಾಳ ಸಂತತಿಯ
ರಣದೊಳಂಜಿಸಿ ಸೆರೆನರದ ಕಾ
ವಣದೊಳಗೆ ಕೈಯೂರಿ ಮಿಗೆ ಹಳ
ವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ ಸುಯ್ವವನ ॥12॥
೦೧೩ ಕಡಿವಡೆದ ಹಕ್ಕರಿಕೆ ...{Loading}...
ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸರ ಬಳಿಬಳಿದು
ಗಡಣಹೆಣದೆರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಡಿದು ತುಂಡಾದ ಕುದುರೆಯ ಪಕ್ಕರಕ್ಷೆಗಳು, ಮತ್ತು ಆನೆಯ ಜೂಲುಗಳು, ತಡಿ (ಕುದುರೆಯಜೀನು) ನೆಲದ ಮೇಲೆ ಹಾಸಿರಲು ಅದರ ಮೇಲೆ ಕುಳಿತು, ಕಡಿದುಹೋದ ಮೊಣಕಾಲಿನ ಆಳವಾದ ಗಾಯದಿಂದ ಬರುವ ಕೀವಿಗೆ ನೀರನ್ನು ಸವರಿ ಒರೆಸುತ್ತಾ, ಹೆಣಗಳ ನಡುವಿನ ಜಾಗದಲ್ಲಿ ಕಾಲಿಡುತ್ತಾ ಜಾಗವನ್ನು ಪರೀಕ್ಷಿಸಿ ಮುಂದಕ್ಕೆ ಹೆಜ್ಜೆಯನ್ನಿಡುತ್ತ, ಪುನಃ ಹಿಂದಕ್ಕೆ ಸರಿದು ಮಾರ್ಗದ ಆಯಾಸದಿಂದ ಬೆವರುತ್ತಿರುವನನ್ನು ಸಂಜಯ ಕಂಡ.
ಪದಾರ್ಥ (ಕ.ಗ.ಪ)
ಹಕ್ಕರಿಕೆ-ಪಕ್ಕ ರಕ್ಷೆ, ರೆಂಚೆ-ಪಕ್ಕ ರಕ್ಷೆ,ಆನೆಯ ಜೂಲು, ತಡಿ-ಕುದುರೆಯ ಜೀನು, ವ್ರಣ-ಗಾಯದಿಂದಾದ ಹುಣ್ಣು, ನೆಣವಸೆ-ಕೀವು, ನೆಣದ + ಪಸೆ, ಸೋದಿಸಿ-ಪರೀಕ್ಷಿಸಿ, ಪೈಸರ-ಹಿಮ್ಮೆಟ್ಟು
ಮೂಲ ...{Loading}...
ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸರ ಬಳಿಬಳಿದು
ಗಡಣಹೆಣದೆರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ ॥13॥
೦೧೪ ಕಡಿದ ಕೈದುಗಳೊಟ್ಟಿಲಲಿ ...{Loading}...
ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹೆಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡಿದು ದೈವವ ಬಯ್ದು ಬಯ್ದಡಿಗಡಿಗೆ ಸುಯ್ವವನ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತರಿಸಿ ಬಿದ್ದಿದ್ದ ಆಯುಧಗಳ ರಾಶಿಯ ಮೇಲೆ ಮುರಿದು ಹೋದ ರಥದ ಗಾಲಿಗಳನ್ನು ಹಾಕಿ, ಅದರ ಮೇಲೆ ನಿಧಾನವಾಗಿ ಹೆಜ್ಜೆಯಿಡುತ್ತಾ, ಹೆಜ್ಜೆಯನ್ನು ಊರಿದಾಗ ಕೊಬ್ಬು ರಕ್ತಗಳ ಕೆಸರು ಮೆತ್ತದಂತೆ, ಅಲ್ಲಲ್ಲಿ ಬಿದ್ದಿದ್ದ ಛತ್ರ-ಚಾಮರಗಳನ್ನು ನೆಲದ ಮೇಲೆ ಹಾಕಿ, ಹೆಜ್ಜೆಯನ್ನಿಡುತ್ತ, ರಕ್ತದ ಹಳ್ಳಗಳನ್ನು ಎಡಬಲಕ್ಕೆ ಬಿಟ್ಟು (ಅವುಗಳ ನಡುವಿನ ನೆಲದ ಮೇಲೆ ಕಾಲಿಡುತ್ತಾ) ನಿಧಾನವಾಗಿ ನಡೆಯುತ್ತಾ ತನ್ನ ವಿಧಿಯನ್ನು ಬಯ್ದು ಬಯ್ದು ಹೆಜ್ಜೆಹೆಜ್ಜೆಗೆ ಜೋರಾಗಿ ಉಸಿರು ಬಿಡುತ್ತಿರುವವನನ್ನು ಸಂಜಯ ಕಂಡ.
ಪದಾರ್ಥ (ಕ.ಗ.ಪ)
ಒಟ್ಟಿಲು-ರಾಶಿ, ಒಂದರಮೇಲೆ ಒಂದನ್ನು ಒಟ್ಟಿರುವುದು, ತನಿಗೆಡೆದ-ಮುರಿದ, ಹೊಸತನವನ್ನು ಕಳೆದುಕೊಂಡ, ಸುಯ್ವ-ಧೀರ್ಘವಾಗಿ ಉಸಿರುಬಿಡುವ, ಮೇಲುಸಿರು ಬಿಡುವ
ಮೂಲ ...{Loading}...
ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹೆಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡಿದು ದೈವವ ಬಯ್ದು ಬಯ್ದಡಿಗಡಿಗೆ ಸುಯ್ವವನ ॥14॥
೦೧೫ ಭೂತರವ ಭೇತಾಳ ...{Loading}...
ಭೂತರವ ಭೇತಾಳ ಕಲಹ ವಿ
ಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಆತು ಮರಳಿದು ಹಿಂದ ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ ॥15|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂತಗಳ ಶಬ್ದ, ಭೇತಾಳಗಳ ಕಲಹದ ಶಬ್ದ ನರಿ, ಗೂಬೆ, ಕಾಗೆಗಳ ಓಡಾಟದ ರಭಸಕ್ಕೆ ಪಾಂಡವರ ಸೈನ್ಯ ಬಂತೆಂದು ಭ್ರಮೆಯಿಂದ ಬೆಚ್ಚಿ ಬೀಳುತ್ತಿದ್ದಾನೆ. ಸಹಜ ಸ್ಥಿತಿಗೆ ಬಂದು, ಹಿಂದೆ ನೋಡಿ, ಇದು ಭೂತ ಪ್ರೇತಗಳ ವೈಭವವಲ್ಲವೇ, ಎಂದುಕೊಳ್ಳುತ್ತಾ ಚಲವನ್ನೇ ತನ್ನ ಜೀವವನ್ನಾಗಿ ಮಾಡಿಕೊಂಡಿರುವ ದುರ್ಯೋಧನನು ಯುದ್ಧಭೂಮಿಯಲ್ಲಿ ಕೋಪಗೊಂಡ.
ಪದಾರ್ಥ (ಕ.ಗ.ಪ)
ವಿಧೂತ-ಅಲುಗಾಡಿಸಲ್ಪಟ್ಟ, ಓಡಾಡುತ್ತಿರುವ, ಪರೇತ-ಪ್ರೇತ, ಚಂಡಿ-ಹಟ,ಕೋಪ
ಟಿಪ್ಪನೀ (ಕ.ಗ.ಪ)
1)ಈ ಮೇಲಿನ 8 ರಿಂದ 15ರವರೆಗಿನ ಪದ್ಯಗಳನ್ನು ರನ್ನಕವಿಯ ‘ಗದಾಯುದ್ಧಂ’ ಕಾವ್ಯದ ‘ದುರ್ಯೋಧನ ವಿಲಾಪಂ’ ಎಂಬ ಭಾಗದ ಪದ್ಯ 1, 2, 3, 7, 11 ಇವುಗಳೊಂದಿಗೆ ಹೋಲಿಸಿ ನೋಡಬಹುದು (ಗದಾಯುದ್ಧ ಸಂಗ್ರಹಂ - ತೀ.ನಂ.ಶ್ರೀ)
ಮೂಲ ...{Loading}...
ಭೂತರವ ಭೇತಾಳ ಕಲಹ ವಿ
ಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಆತು ಮರಳಿದು ಹಿಂದ ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ ॥15|
೦೧೬ ಹೇಳುವಡೆ ಕುರುಪತಿಯನೇ ...{Loading}...
ಹೇಳುವಡೆ ಕುರುಪತಿಯನೇ ನೆರೆ
ಹೋಲುವನು ಗದೆ ಹೆಗಲಲದೆ ಮೇ
ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
ಹೋಲುವುದು ಜನವೊಬ್ಬರೊಬ್ಬರ
ನಾಳೊಳೊಬ್ಬನೊ ಮೇಣು ಕುರು ಭೂ
ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೇಳಬೇಕೆಂದರೆ ಈ ವ್ಯಕ್ತಿ ದುರ್ಯೋಧನನನ್ನೇ ಹೆಚ್ಚಾಗಿ ಹೋಲುತ್ತಿದ್ದಾನೆ. ಗದೆ ಹೆಗಲಲ್ಲಿದೆ. ಚಾಮರ, ಬೀಸಣಿಗೆಗಳನ್ನು ಬೀಸುವ ಸೇವಕರು, ಆನೆ ಕುದುರೆಗಳ ಆರೈಕೆ ಮಾಡುವ ಸೇವಕರುಗಳು ಕಾಣಿಸುತ್ತಿಲ್ಲ. ಜನ ಒಬ್ಬರಂತೆ ಮತ್ತೊಬ್ಬರಿರುತ್ತಾರೆ. ಇವನು ಸೈನಿಕರಲ್ಲಿ ಒಬ್ಬನೋ ಅಥವ ಕುರುಭೂಪಾಲಕನೋ ನೋಡುತ್ತೇನೆ. - ಎಂದು ಸಂಜಯ ನಡೆದು ಬಂದ.
ಪದಾರ್ಥ (ಕ.ಗ.ಪ)
ನೆರೆ-ವಿಶೇಷವಾಗಿ, ಹೆಚ್ಚಾಗಿ, ಚಮರ-ಚಾಮರ, ಚಾಹಿ-ಛತ್ರ
ಟಿಪ್ಪನೀ (ಕ.ಗ.ಪ)
1)ಹೆಗಲಲದೆ-ಹೆಗಲಲ್ಲಿ ಇದೆ - ಎಂಬುದರ ಗ್ರಾಮ್ಯರೂಪ. ಇದೆ-ಅದೆ ಈ ಬಗ್ಗೆ ತೀನಂಶ್ರೀ ಅವರ ಲೇಖನ ನೋಡಿ. (ತೀನಂಶ್ರೀ ಅವರ ಸಮಗ್ರ ಗದ್ಯ ಪುಟ - 390- 409
ಗ್ರಂಥ ಪ್ರಕಾಶಕರು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು)
ಮೂಲ ...{Loading}...
ಹೇಳುವಡೆ ಕುರುಪತಿಯನೇ ನೆರೆ
ಹೋಲುವನು ಗದೆ ಹೆಗಲಲದೆ ಮೇ
ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
ಹೋಲುವುದು ಜನವೊಬ್ಬರೊಬ್ಬರ
ನಾಳೊಳೊಬ್ಬನೊ ಮೇಣು ಕುರು ಭೂ
ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ ॥16॥
೦೧೭ ಬನ್ದು ಕಣ್ಡನು ...{Loading}...
ಬಂದು ಕಂಡನು ರಾಜವನಮಾ
ಕಂದನನು ಧೃತರಾಷ್ಟ್ರ ರಾಯನ
ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು
ಮುಂದುವರಿದ ವಿಲೋಚನಾಂಬುಗ
ಳಿಂದ ಸೈರಣೆ ಮಿಗದೆ ಸಂಜಯ
ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ ಸಮೀಪಕ್ಕೆ ಬಂದು, ರಾಜವನದಲ್ಲಿ ಮಾವಿನ ಮರದಂತೆ ಇರುವವನನ್ನು, ಧೃತಾಷ್ಟ್ರರಾಯನ ಮುದ್ದಿನ ಮಗನನ್ನು, ದೌರ್ಜನ್ಯವೆಂಬ ಬಳ್ಳಿಯ ಗೆಡ್ಡೆಯಂತಿರುವವನನ್ನು ನೋಡಿದನು. ಹರಿಯುತ್ತಿರುವ ಕಣ್ಣೀರಿನೊಡನೆ ದುಃಖವನ್ನು ಸೈರಿಸಲು ಸಾಧ್ಯವಾಗದೆ ಸಂಜಯ ದುರ್ಯೋಧನ ರಾಜನ ಪಾದಗಳ ಮೇಲೆ ದೊಪ್ಪನೆ ಬಿದ್ದು ಹೊರಳಾಡಿದ.
ಪದಾರ್ಥ (ಕ.ಗ.ಪ)
ಮಾಕಂದ-ಮಾವಿನಮರ, ಕಂದ-1.ಮುದ್ದಿನ ಮಗು, 2.ಗೆಡ್ಡೆ , ದೌರ್ಜನ್ಯವಲ್ಲಿ- ದುಷ್ಟತನವೆಂಬ ಬಳ್ಳಿ, ವಿಪುಳ-ಹೆಚ್ಚಾದ, ದೊಡ್ಡದಾದ, ವಿಲೋಚನಾಂಬು-ಕಣ್ಣೀರು, ಅಂಘ್ರಿ- ಪಾದ
ಮೂಲ ...{Loading}...
ಬಂದು ಕಂಡನು ರಾಜವನಮಾ
ಕಂದನನು ಧೃತರಾಷ್ಟ್ರ ರಾಯನ
ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು
ಮುಂದುವರಿದ ವಿಲೋಚನಾಂಬುಗ
ಳಿಂದ ಸೈರಣೆ ಮಿಗದೆ ಸಂಜಯ
ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ ॥17॥
೦೧೮ ಕಡಲತಡಿ ಪರಿಯನ್ತ ...{Loading}...
ಕಡಲತಡಿ ಪರಿಯಂತ ರಾಯರ
ಗಡಣದಲಿ ನೀನೊಬ್ಬನೆಂಬೀ
ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ
ಬಿಡದೆ ಬಾಗುವ ನೃಪರ ಮಕುಟದೊ
ಳಿಡುವ ಕೋಮಲ ಚರಣವಿದರೊಳು
ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆ ದುರ್ಯೋಧನ “ಸಮುದ್ರದ ದಂಡೆಯವರೆಗೂ ಇರುವ ರಾಜರುಗಳ ಸಮೂಹದಲ್ಲಿ ನೀನೊಬ್ಬನೇ” - ಎಂಬ ಮಾತಿಗೆ ಈಗ ನಿಶ್ಚಯವಾಗಿಯೂ ಅರ್ಥ ಬಂತು. ಸತತವಾಗಿ ತಲೆಬಾಗುವ ರಾಜಾಧಿರಾಜರುಗಳ ಕಿರೀಟಗಳ ಮೇಲೆ ಇಡುತ್ತಿದ್ದ ನಿನ್ನ ಕೋಮಲ ಪಾದಗಳಿಂದ ನಡೆಯಲು (ಹೀಗೆ ಶ್ಮಶಾನಭೂಮಿಯಲ್ಲಿ) ಹೇಗೆ ಕಲಿತೆ - ಎಂದು ಸಂಜಯ ದುರ್ಯೋಧನನನ್ನು ಕೇಳಿದ
ಪದಾರ್ಥ (ಕ.ಗ.ಪ)
ಪರಿಯಂತ-ಅಲ್ಲಿಯವರೆಗೆ, ಗಡಣ-ಸಮೂಹ, ನಿಶ್ಚಯ-ತೀರ್ಮಾನ, ಸತ್ಯ, ನಿಜವಾದ ಅರ್ಥ, ಮಕುಟ-ಕಿರೀಟ
ಟಿಪ್ಪನೀ (ಕ.ಗ.ಪ)
ಚತುಃಸ್ಸಾಗರ ಪರ್ಯಂತ ಇರುವ ಭೂಮಂಡಲದ ರಾಜರುಗಳಿಗೆಲ್ಲ, ನೀನೊಬ್ಬನೇ ಚಕ್ರಾಧಿಪತಿ - ಎಂಬುದು ಈವರೆಗೆ ನಿನ್ನ ಹೆಗ್ಗಳಿಕೆಯಾಗಿತ್ತು. ಆದರೆ ಈಗ ಅದೇ ಮಾತು ಅಕ್ಷರಶಃ ನಿಜವಾಯಿತು - ಏಕೆಂದರೆ, ನೀನು ನಿನ್ನ ಸಹಾಯಕರಾದ ಇತರ ಎಲ್ಲ ರಾಜರನ್ನೂ ಕಳೆದುಕೊಂಡು, ಒಬ್ಬನೇ ಉಳಿದಿರುವೆ.
ಮೂಲ ...{Loading}...
ಕಡಲತಡಿ ಪರಿಯಂತ ರಾಯರ
ಗಡಣದಲಿ ನೀನೊಬ್ಬನೆಂಬೀ
ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ
ಬಿಡದೆ ಬಾಗುವ ನೃಪರ ಮಕುಟದೊ
ಳಿಡುವ ಕೋಮಲ ಚರಣವಿದರೊಳು
ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ ॥18॥
೦೧೯ ರಣಮುಖದೊಳೇಕಾದಶಾಕ್ಷೋ ...{Loading}...
ರಣಮುಖದೊಳೇಕಾದಶಾಕ್ಷೋ
ಹಿಣಿಗೆ ಹರಿವಾಯ್ತೇ ಯುಧಿಷ್ಠಿರ
ನುಣಲಿ ಧರೆಯನು ಗೋತ್ರವಧ ವಿನ್ಯಸ್ತ ಕಿಲ್ಬಿಷವ
ಸೆಣಸ ಮಾಡಿದೆ ದೈವದಲಿ ಧಾ
ರುಣಿಯ ಹುದುವಿನ ಸಿರಿಗೆ ಸೇರದೆ
ಹಣಿದವಾಡಿದೆ ರಾಜವಂಶದ ಕಲ್ಪತರುವನವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಹನ್ನೊಂದು ಅಕ್ಷೋಹಿಣಿಯ ಸೈನ್ಯಕ್ಕೂ ವಿನಾಶವಾಯಿತೇ, ಯುಧಿಷ್ಠಿರನು ಭೂಮಿಯನ್ನು ಅನುಭವಿಸಲಿ ಮತ್ತು ಅದರೊಂದಿಗೇ ತನ್ನದೇ ಗೋತ್ರದವರನ್ನು (ದಾಯಾದಿಗಳನ್ನು) ಕೊಂದ ದೋಷವನ್ನು ಉಣ್ಣಲಿ. ದುರ್ಯೋಧನಾ! ನೀನು ದೈವದ ವಿರುದ್ಧವೇ ಸೆಣಸಿದೆ. ಭೂಮಿಯೊಂದಿಗೆ ಜೊತೆಯಾಗಿರುವ ಐಶ್ವರ್ಯಕ್ಕೆ ಜೊತೆಯಾಗದೇ, ರಾಜವಂಶವೆಂಬ ಕಲ್ಪವೃಕ್ಷವನ್ನು ಕತ್ತರಿಸಿಬಿಟ್ಟೆ - ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಹರಿವು-ವಿನಾಶ, ಗೋತ್ರವಧ-ದಾಯಾದಿಗಳ ಸಂಹಾರ, ವಂಶನಾಶ, ವಿನ್ಯಸ್ತ-ರಚಿಸಿದ, ಮಾಡಿದ, ಕಿಲ್ಬಿಷ-ದೋಷ, ಮೈಲಿಗೆ, ಕುಂದು ಅಪರಾಧ, ಪಾಪ, ಸೆಣಸು-ಹೋರಾಟ, ಧಾರುಣಿ-ಭೂಮಿ, ಹುದುವು-ಜೊತೆ, ಸ್ನೇಹ, ಸೇರುವುದು ಹಣಿದವಾಡು -ಕತ್ತರಿಸು, ಯುದ್ಧಮಾಡು
ಮೂಲ ...{Loading}...
ರಣಮುಖದೊಳೇಕಾದಶಾಕ್ಷೋ
ಹಿಣಿಗೆ ಹರಿವಾಯ್ತೇ ಯುಧಿಷ್ಠಿರ
ನುಣಲಿ ಧರೆಯನು ಗೋತ್ರವಧ ವಿನ್ಯಸ್ತ ಕಿಲ್ಬಿಷವ
ಸೆಣಸ ಮಾಡಿದೆ ದೈವದಲಿ ಧಾ
ರುಣಿಯ ಹುದುವಿನ ಸಿರಿಗೆ ಸೇರದೆ
ಹಣಿದವಾಡಿದೆ ರಾಜವಂಶದ ಕಲ್ಪತರುವನವ ॥19॥
೦೨೦ ಶಶಿರುಚಿಗೆ ಸೈರಿಸದ ...{Loading}...
ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾದುದೆ ಸುಗೀತದ
ರಸದ ಮಧುವಿಂಗಾಂತ ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಂದ್ರನ ತಂಬೆಳಕನ್ನೂ ತಾಳದ ನಿನ್ನ ತಲೆಗೂದಲು ಬಿಸಿಲಿನ ಸೆಖೆಗೆ ಒಡ್ಡಿತೆ; ಸುಗಂಧದ ಸುವಾಸನೆಯನ್ನು ಆಘ್ರಾಣಿಸುತ್ತಿದ್ದ ನಿನ್ನ ಮೂಗು ಹಳೆಹೆಣಗಳ ಹೊಲಸಿನ ಗಾಳಿಯಲ್ಲಿ ಉಸಿರಾಡುವಂತಾದುದೆ. ಒಳ್ಳೆಯ ಗೀತೆಗಳ ರಸದ ಜೇನಿಗೆ ಒಡ್ಡಿದ ಕಿವಿ, ಕಾಗೆ ನರಿಗಳ ಧ್ವನಿಗೆ ಸಂತೋಷಿಸಿತೆ, ತಂದೆ ಕುರುರಾಯ ಹೇಳು - ಎಂದು ಸಂಜಯ ದುರ್ಯೋಧನನ ಮುಂದೆ ಮಾತನಾಡಿದ.
ಪದಾರ್ಥ (ಕ.ಗ.ಪ)
ಶಶಿರುಚಿ-ಬೆಳದಿಂಗಳು, ಮಧು-ಜೇನು, ವಾಯಸ-ಕಾಗೆ, ಸೃಗಾಲ-ನರಿ
ಮೂಲ ...{Loading}...
ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾದುದೆ ಸುಗೀತದ
ರಸದ ಮಧುವಿಂಗಾಂತ ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ ॥20॥
೦೨೧ ಲಲಿತ ಮೃದುತರ ...{Loading}...
ಲಲಿತ ಮೃದುತರ ಹಂಸತೂಳದ
ಲುಳಿತ ಕೋಮಲ ಕಾಯ ಕೈದುಗ
ಳೆಲುಗಳೊಟ್ಟಿಲ ಹಾಸಿನಲಿ ಪೈಸರಿಸಿ ಮಲಗಿತಲಾ
ಸುಳಿಯೆ ಕೈಗೊಡುವರಸುಗಳ ಕೆಲ
ಬಲದ ಪಾಯವಧಾರಿನವರನು
ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆಯೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲಲಿತವೂ ಮೃದುವೂ ಆಗಿದ್ದ ಹಂಸತೂಲಿಕಾತಲ್ಪದಲ್ಲಿ ಮಲಗಿದ್ದ ಕೋಮಲ ಶರೀರವು, ಆಯುಧಗಳ, ಎಲುಬುಗಳ ರಾಶಿಯ ಮೇಲೆ ಮಲಗಿತಲ್ಲಾ! ಸಮೀಪಕ್ಕೆ ಬಂದರೆ ಸಾಕು ಹಸ್ತಲಾಘವ ನೀಡುವ ರಾಜರುಗಳನ್ನು ಅಕ್ಕಪಕ್ಕಗಳಲ್ಲಿರುವ ಹೊಗಳುಭಟ್ಟರುಗಳನ್ನು ಕಳುಹಿಸಿ ಬಂದೆಯಾ? ಇದು ಸಾರ್ವಭೌಮರಾದಂತಹವರ ಲಕ್ಷಣವೇ - ಎಂದು ಸಂಜಯ ದುರ್ಯೋಧನನೊಂದಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಹಂಸತೂಳ-ಹಂಸತೂಲಿಕಾತಲ್ಪ, ಹಂಸಗಳ ತೂಳ - ತುಪ್ಪಳದಿಂದ ಮಾಡಿದ ಮೃದು ಹಾಸಿಗೆ, ಪೈಸರಿಸು-ಹಿಮ್ಮೆಟ್ಟು, ಹಿಂದಕ್ಕೆ ಹೋಗು (ಈ ಸಂದರ್ಭಕ್ಕೆ ಈ ಅರ್ಥ ಅಷ್ಟಾಗಿ ಸರಿಹೊಂದುವುದಿಲ್ಲ.)
ಮೂಲ ...{Loading}...
ಲಲಿತ ಮೃದುತರ ಹಂಸತೂಳದ
ಲುಳಿತ ಕೋಮಲ ಕಾಯ ಕೈದುಗ
ಳೆಲುಗಳೊಟ್ಟಿಲ ಹಾಸಿನಲಿ ಪೈಸರಿಸಿ ಮಲಗಿತಲಾ
ಸುಳಿಯೆ ಕೈಗೊಡುವರಸುಗಳ ಕೆಲ
ಬಲದ ಪಾಯವಧಾರಿನವರನು
ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆಯೆಂದ ॥21॥
೦೨೨ ಎತ್ತಣೇಕಾದಶ ಚಮೂಪತಿ ...{Loading}...
ಎತ್ತಣೇಕಾದಶ ಚಮೂಪತಿ
ಯೆತ್ತಣೀಯೇಕಾಕಿತನ ತಾ
ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು
ಎತ್ತಣೀ ಕೊಳುಗುಳದ ಕಾಲ್ನಡೆ
ಯೆತ್ತಣಾಹವದಭಿಮುಖತೆ ಬಳಿ
ಕೆತ್ತಣಪಜಯವಿಧಿಯ ಘಟನೆ ನೃಪಾಲ ನಿನಗೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನೇ, ನಿನಗೆ ಎಲ್ಲಿಯ ಹನ್ನೊಂದು ಅಕ್ಷೋಹಿಣಿಯ ಸೈನ್ಯದ ಒಡೆತನ ಎಲ್ಲಿಯ ಈ ಏಕಾಕಿತನ. ಆನೆ, ಕುದುರೆ, ರಥಗಳ ಮೇಲಿನ ಸುಖಾಸನಗಳಲ್ಲಿ ಕುಳಿತುಕೊಳ್ಳುವ ಅತಿಶಯದ ಸುಖವೆಲ್ಲಿ ಈ ಯುದ್ಧಭೂಮಿಯಲ್ಲಿನ ಕಾಲ್ನಡಿಗೆಯೆಲ್ಲಿ. ಎಲ್ಲಿಯ ಯುದ್ಧದ ಅಭಿಮುಖವಾಗಿ ಹೋಗುವಿಕೆ - ಎಲ್ಲಿಯ ಸೋಲೆಂಬ ವಿಧಿಯ ಆಟ - ಎಂದು ಸಂಜಯ ನುಡಿದ.
ಪದಾರ್ಥ (ಕ.ಗ.ಪ)
ಚಮೂಪತಿ-ಸೈನ್ಯದ ಒಡೆಯ, ಕೊಳುಗುಳ-ಯುದ್ಧಭೂಮಿ, ಆಹವ-ಯುದ್ಧ
ಮೂಲ ...{Loading}...
ಎತ್ತಣೇಕಾದಶ ಚಮೂಪತಿ
ಯೆತ್ತಣೀಯೇಕಾಕಿತನ ತಾ
ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು
ಎತ್ತಣೀ ಕೊಳುಗುಳದ ಕಾಲ್ನಡೆ
ಯೆತ್ತಣಾಹವದಭಿಮುಖತೆ ಬಳಿ
ಕೆತ್ತಣಪಜಯವಿಧಿಯ ಘಟನೆ ನೃಪಾಲ ನಿನಗೆಂದ ॥22॥
೦೨೩ ಮುಳಿದಡಗ್ಗದ ಪರಶುರಾಮನ ...{Loading}...
ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕಡೆಯಲೊಬ್ಬನೆ ಕೆಟ್ಟೆ ನೀನೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರುಶುರಾಮ ಕೋಪಿಸಿಕೊಂಡರೆ, ವೀರ ಭೀಷ್ಮ ಒಬ್ಬನೇ ಅವನನ್ನು ಗೆದ್ದನು. ಅಂತಹ ಭೀಷ್ಮ ಮತ್ತು ದ್ರೋಣರು ಪಾಂಡವ ಸೈನ್ಯದ ಮಹಾರಥರನ್ನೆಲ್ಲ ಸಂಹಾರ ಮಾಡಿದರು. ಕರ್ಣನನ್ನು ಸೇನಾನಾಯಕನನ್ನಾಗಿ ಮಾಡಲು ಅವನು ಅರ್ಜುನನನ್ನು ಸೋಲಿಸಿದ. ಈ ಹೆಸರಾಂತವರು ಮರಣಹೊಂದಿದರು. ಕಡೆಯಲ್ಲಿ ನೀನೊಬ್ಬನೇ ಕೆಟ್ಟೆ (ಗೆಲ್ಲಲೂ ಇಲ್ಲ ಯುದ್ಧದಲ್ಲಿ ಮರಣಹೊಂದಲೂ ಇಲ್ಲ) - ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಮುಳಿ-ಕೋಪಿಸು, ತಲೆಗೆ ತಂದನು-ತೊಂದರೆಯನ್ನುಂಟುಮಾಡಿದನು, ಸೋಲಿಸಿದನು, ತಲೆಹೋಗುವಂತೆ ಮಾಡಿದನು, ಅಗ್ಗಳೆಯರು-ಹೆಸರಾಂತವರು, ಪ್ರಥಮಸ್ಥಾನದಲ್ಲಿರುವವರು, ಅಗ್ಗು -ಅಳ್ಗು, ನಾಶವಾಗು, ಕ್ಷೀಣಿಸು
ಮೂಲ ...{Loading}...
ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕಡೆಯಲೊಬ್ಬನೆ ಕೆಟ್ಟೆ ನೀನೆಂದ ॥23॥
೦೨೪ ಅವರು ಬದುಕಿದರೈವರೂ ...{Loading}...
ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಐವರೂ ಬದುಕಿ ಉಳಿದಿದ್ದಾರೆ. ನಿನ್ನ ನೂರ್ವರಲ್ಲಿ ನೀನೊಬ್ಬನುಳಿದು ಮಿಕ್ಕೆಲ್ಲರೂ ಮರಣ ಹೊಂದಿದ್ದಾರೆ. ಅವರ ಮಕ್ಕಳೆಲ್ಲ ಸೌಖ್ಯವಾಗಿದ್ದಾರೆ, ನಿನ್ನವರು ನೂರು ಜನ ಮಕ್ಕಳೂ ಯುಮನ ಲೆಕ್ಕಕ್ಕೆ ಸೇರಿದ್ದಾರೆ. ಕುರುರಾಜ! ದೈವವನ್ನು ವಿರೋಧಿಸಿ ನೀನು ಈ ದುಃಸ್ಥಿತಿಗೆ ಬಂದೆ.
ಪದಾರ್ಥ (ಕ.ಗ.ಪ)
ಸವರು-ನಾಶಮಾಡು, ಸವರಿಹಾಕು, ಕೊಲ್ಲು, ಜವ-ಯಮ (ಸಂ) ಸಿವಡಿ-ಸಿವುಡಿ, ಲೆಕ್ಕದ ಪುಸ್ತಕ
ಮೂಲ ...{Loading}...
ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ ॥24॥
೦೨೫ ಗೆಲಿದನರಸನು ಹಸ್ತಿನಾಪುರ ...{Loading}...
ಗೆಲಿದನರಸನು ಹಸ್ತಿನಾಪುರ
ದೊಳಗೆ ಕಟ್ಟಿಸು ಗುಡಿಯನೆಂಬೆನೊ
ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು
ಲಲನೆಯರಿಗೇನೊಸಗೆ ಕುರುಡನ
ನಳಿಸುವೆನೊ ನಗಿಸುವೆನೊ ತಾಯಿಗೆ
ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳ್ ಎಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಗೆದ್ದನು, ಹಸ್ತಿನಾಪುರದೊಳಗೆ ಬಾವುಟಗಳನ್ನು ಕಟ್ಟಿಸು ಎನ್ನಲೇ ಅಥವ ತಲೆಉಳಿಸಿಕೊಂಡು ತಾನು ಓಡಿ ಬದುಕಿದನೆನ್ನಲೇ. ನಿನ್ನ ಮಡದಿಯರಿಗೆ ಏನು ಶುಭ ಸುದ್ದಿ. ಕುರುಡ ಧೃತರಾಷ್ಟ್ರನನ್ನು ಅಳಿಸಲೋ ನಗಿಸಲೋ. ನಿನ್ನ ತಾಯಿಗೆ ಏನು ಹೇಳಲಿ, ನನಗೆ ಈ ಎಲ್ಲದರ ಬಗ್ಗೆ ತಿಳಿಯಹೇಳು ಎಂದು ಸಂಜಯ ದುರ್ಯೋಧನನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಗುಡಿ-ಬಾವುಟ, ತಲೆಬಳಚಿ-ತಲೆತಪ್ಪಿಸಿ, ಒಸಗೆ-ಶುಭ, ಶುಭಸಮಾಚಾರ
ಮೂಲ ...{Loading}...
ಗೆಲಿದನರಸನು ಹಸ್ತಿನಾಪುರ
ದೊಳಗೆ ಕಟ್ಟಿಸು ಗುಡಿಯನೆಂಬೆನೊ
ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು
ಲಲನೆಯರಿಗೇನೊಸಗೆ ಕುರುಡನ
ನಳಿಸುವೆನೊ ನಗಿಸುವೆನೊ ತಾಯಿಗೆ
ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳೆಂದ ॥25॥
೦೨೬ ಏನು ಸಞ್ಜಯ ...{Loading}...
ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕೊಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಸಂಜಯ, ದುರ್ಯೋಧನ ಅಲ್ಲಿ ಏನು ಮಾಡಿದ, ಕುಂತಿಯ ಮಕ್ಕಳಲ್ಲಿ (ಪಾಂಡವರಲ್ಲಿ) ಯಾರು ಸತ್ತರು, ನಮ್ಮ ಪಕ್ಷದಲ್ಲಿ ಯಾರು ಉಳಿದರು, ಏನು ಸಂಗತಿ, ಶಕುನಿ ಯುದ್ಧಭೂಮಿಯಲ್ಲಿ ಏನು ಮಾಡಿದ - ಎಂದು ಗಾಂಧಾರಿ ನನ್ನನ್ನು ಕೇಳಿದರೆ ರಣದ ಉತ್ಸಾಹವನ್ನು ಆಕೆಗೆ ಏನೆಂದು ಹೇಳಲಿ - ಎಂದು ಸಂಜಯ ದುರ್ಯೋಧನನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಹದನ-ಸುದ್ದಿ, ಸಂಗತಿ, ಬೆಸಗೊಳ್-ಕೇಳು
ಮೂಲ ...{Loading}...
ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕೊಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ ॥26॥
೦೨೭ ಹಿನ್ದೆ ರಾಯನ ...{Loading}...
ಹಿಂದೆ ರಾಯನ ಪಟ್ಟದರಸಿಯ
ತಂದು ಭಾರಿಯ ಭಂಗಬಡಿಸಿದೆ
ಬಂದು ಹರಿಯೈದೂರ ಬೇಡಿದರವರ ಚಿತ್ತದಲಿ
ಕಂದ ಬಿತ್ತಿದೆ ಕದನದಲಿ ನೀ
ನೊಂದು ನೆಳಲುಳಿಯಲು ಸಹೋದರ
ವೃಂದ ತನುಜ ಜ್ಞಾತಿ ಬಾಂಧವರಳಿದರದರಿಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಧರ್ಮರಾಯನ ಪಟ್ಟದರಸಿಯಾದ ದ್ರೌಪದಿಯನ್ನು ಸಭೆಗೆ ತಂದು ಅವಳನ್ನು ಭಾರಿಯಾದ ಅವಮಾನಕ್ಕೆ ಈಡು ಮಾಡಿದೆ. ಕೃಷ್ಣ ಬಂದು ಐದು ಊರುಗಳನ್ನು ಬೇಡಲು, ಅವರ ಮನಸ್ಸಿನಲ್ಲಿ ವ್ಯಸನವುಂಟಾಗುವಂತೆ ಮಾಡಿದೆ. ಯುದ್ಧದಲ್ಲಿ ನೀನೊಬ್ಬ ನೆಳಲಾಗಿ (ಆಸರೆಯಾಗಿ) ಉಳಿದರೆ, ಸಹೋದರ ಸಮೂಹ, ಮಕ್ಕಳು, ದಾಯಾದಿಗಳು, ಬಂಧು-ಬಾಂಧವರು ಅದರಿಂದಾಗಿ ಸತ್ತರು.
ಪದಾರ್ಥ (ಕ.ಗ.ಪ)
ಭಂಗ-ಅವಮಾನ, ಸೋಲು, ಕಂದು-ವ್ಯಸನ, ಬಾಡಿದ, ಕಳಂಕ.
ಮೂಲ ...{Loading}...
ಹಿಂದೆ ರಾಯನ ಪಟ್ಟದರಸಿಯ
ತಂದು ಭಾರಿಯ ಭಂಗಬಡಿಸಿದೆ
ಬಂದು ಹರಿಯೈದೂರ ಬೇಡಿದರವರ ಚಿತ್ತದಲಿ
ಕಂದ ಬಿತ್ತಿದೆ ಕದನದಲಿ ನೀ
ನೊಂದು ನೆಳಲುಳಿಯಲು ಸಹೋದರ
ವೃಂದ ತನುಜ ಜ್ಞಾತಿ ಬಾಂಧವರಳಿದರದರಿಂದ ॥27॥
೦೨೮ ಕೇಳು ಸಞ್ಜಯ ...{Loading}...
ಕೇಳು ಸಂಜಯ ಪೂರ್ವ ಸುಕೃತದ
ಶಾಳಿವನವೊಣಗಿದೊಡೆ ಭಾರಿಯ
ತೋಳುಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ
ಭಾಳಲಿಪಿಗಳ ಲೆಕ್ಕವನು ಪ್ರತಿ
ಕೂಲವಿಧಿ ಪಲ್ಲಟಿಸಿ ಬರೆದಡೆ
ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ ಕೇಳು, ಹಿಂದಿನ ಜನ್ಮದಲ್ಲಿ ಸಂಪಾದಿಸಿದ ಪುಣ್ಯವೆಂಬ ಬತ್ತದ ಗದ್ದೆಗಳು ಒಣಗಿ ಹೋದರೆ, ಭಾರಿಯಾದ ತೋಳಿನ ನಿವಾಸಿಯಾಗಿದ್ದ ಜಯಲಕ್ಷ್ಮಿಯು, ತೋಳಿನ ಮಾಂಸಖಂಡಗಳಿಂದ ಜಾರಿಹೋದರೆ, ಪ್ರತಿಕೂಲ ವಿಧಿಯು ಹಣೆಯಬರಹದ ಅಕ್ಷರಗಳನ್ನು ಬದಲಾಯಿಸಿ ಬರೆದರೆ ಹೇಳಿ ಫಲವೇನು - ಎನ್ನುತ್ತಾ ದುರ್ಯೋಧನ ಕಣ್ಣೀರು ತುಂಬಿಕೊಂಡ.
ಪದಾರ್ಥ (ಕ.ಗ.ಪ)
ಸುಕೃತ-ಪುಣ್ಯ, ಒಳ್ಳೆಯಕೆಲಸಗಳು, ಶಾಳಿವನ-ಬತ್ತದ ಗದ್ದೆ, ತೋಳುಗುತ್ತು- ತೋಳನ್ನೇ ಮನೆಯಾಗಿಸಿಕೊಂಡಿರುವ (ಗುತ್ತು- ತಾವು, ಮನೆ) ಜಂಗಳ-ಮಾಂಸಖಂಡ, ಜಂಘಾಖಂಡ, ಪ್ರತಿಕೂಲ-ಅನುಕೂಲವಲ್ಲದ, ಪಲ್ಲಟಿಸು-ಬದಲಾಯಿಸು, ಕಂಬನಿ-ಕಣ್ಣ ನೀರು
ಮೂಲ ...{Loading}...
ಕೇಳು ಸಂಜಯ ಪೂರ್ವ ಸುಕೃತದ
ಶಾಳಿವನವೊಣಗಿದೊಡೆ ಭಾರಿಯ
ತೋಳುಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ
ಭಾಳಲಿಪಿಗಳ ಲೆಕ್ಕವನು ಪ್ರತಿ
ಕೂಲವಿಧಿ ಪಲ್ಲಟಿಸಿ ಬರೆದಡೆ
ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ ॥28॥
೦೨೯ ಕದಡಿತನ್ತಃಕರಣ ವಿಕ್ರಮ ...{Loading}...
ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥಕೆ
ಒದರಿದಡೆ ಫಲವೇನು ಸಂಜಯ ಹಿಂದನೆಣಿಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಅಂತಃಕರಣ ಕದಡಿತು. ಶಕ್ತಿಸಾಮರ್ಥ್ಯಗಳ ಸಮುದ್ರ ಪ್ರಯೋಜನಕ್ಕೆ ಬಾರದ ಕಡೆ ನಿಂತಿತು. ಹೇಳಿ ಫಲವೇನು. ಸಂಜಯ, ಹಿಂದೆ ಆಗಿದ್ದನ್ನು ಲೆಕ್ಕಹಾಕಬೇಡ. ಯುದ್ಧದಲ್ಲಿ ನನ್ನ ತಮ್ಮ ದುಶ್ಶಾಸನನನ್ನು ತಿಂದು ತೇಗಿದನಲ್ಲಾ, ಆ ಬಕವೈರಿ ಭೀಮ. ತಮ್ಮನನ್ನು ಅವನ ಹೊಟ್ಟೆಯಿಂದ ಆಚೆಗೆ ತೆಗೆಯುತ್ತೇನೆ. ನೀನು ಈ ವಿಚಿತ್ರವನ್ನು ನೋಡುತ್ತಿರು ಎಂದ.
ಪದಾರ್ಥ (ಕ.ಗ.ಪ)
ಕದಡು-ತಳಮೇಲಾಗು, ನೀರಿನತಳದಲ್ಲಿನ ಬಗ್ಗಡ ನೀರಿನೊಂದಿಗೆ ಸೇರುವಂತೆ ಮಾಡುವುದು, ಅಂತಃಕರಣ-ಮನಸ್ಸು, ವಿಕ್ರಮದುದಧಿ-ಪರಾಕ್ರಮ ಸಮುದ್ರ, ನಿರರ್ಥಕ-ಪ್ರಯೋಜನವಿಲ್ಲದ, ಅರ್ಥವಿಲ್ಲದ, ಒದರು-ಮಾತನಾಡು, ಬಕವೈರಿ-ಬಕಾಸುರ ಶತ್ರುವಾದ ಭೀಮ, ಉದರ-ಹೊಟ್ಟೆ.
ಮೂಲ ...{Loading}...
ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥಕೆ
ಒದರಿದಡೆ ಫಲವೇನು ಸಂಜಯ ಹಿಂದನೆಣಿಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ ॥29॥
೦೩೦ ನರನ ಬಸುರಲಿ ...{Loading}...
ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯನನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣಶಕ್ತಿಗೆ ಭಂಗಬಾರದು ನೋಡು ನೀನೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಹೊಟ್ಟೆಯಿಂದ ಕರ್ಣನನ್ನು, ಧರ್ಮರಾಯನನ್ನು ಸೀಳಿ ಶಲ್ಯನನ್ನು ಹಾಗೂ ಶಕುನಿ ಮತ್ತು ಅವನ ಮಗ ಉಳೂಕನನ್ನು ನಕುಲಸಹದೇವರಿಬ್ಬರ ಹೊಟ್ಟೆಯಿಂದ ತೆಗೆಯುತ್ತೇನೆ. ಕೃಷ್ಣನೇ ಈ ಯುದ್ಧದ ಕೆಲಸಕ್ಕೆ ಇದಿರಾಗಿ ಪಾಂಡವರನ್ನು ರಕ್ಷಿಸಿಕೊಂಡರೂ ಸಹ ನನ್ನ ತೋಳಶಕ್ತಿಗೆ ಭಂಗ ಬರುವುದಿಲ್ಲ. ನೀನು ಕಾತರಿಸಬೇಡ ನೋಡುತ್ತಿರು - ಎಂದು ದುರ್ಯೋಧನ ಸಂಜಯನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಭೂವರ-ರಾಜ (ಇಲ್ಲಿ ಧರ್ಮರಾಯ) ಯಮಳರು-ಅವಳಿ, ಜವಳಿ (ನಕುಲ ಸಹದೇವ) ಹರಿಬ-ಕರ್ತವ್ಯ, ಕೆಲಸ ಉದ್ಯೋಗ, ಹೊಣೆ, ಹರಹಿಕೊಳ್ಳು-ರಕ್ಷಿಸು, ಮದೀಯ- ನನ್ನ, ಬಾಹುಸ್ಪುರಣಶಕ್ತಿ-ತೋಳುಗಳ ಚಲನೆಯಿಂದುಂಟಾಗುವ ಶಕ್ತಿ
ಮೂಲ ...{Loading}...
ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯನನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣಶಕ್ತಿಗೆ ಭಂಗಬಾರದು ನೋಡು ನೀನೆಂದ ॥30॥
೦೩೧ ಕಾನನಕೆ ಕೈಯಿಕ್ಕುವರೆ ...{Loading}...
ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವ ತಿವಿವನದಾರ ನೆರವಿಯಲಿ
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಹೀನನೈ ನೀನಕಟ ಸಂಜಯ ಎಂದನಾ ಭೂಪ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನ ನಾಶಕ್ಕಾಗಿ ಕೈಹಾಕಬೇಕಾದರೆ ಅಗ್ನಿಯು ವಾಯುವಿನ ನೆರವನ್ನು ಪಡೆಯುತ್ತಾನೆ. ಆದರೆ ಸೂರ್ಯನು ಭಯಂಕರವಾದ ಕತ್ತಲನ್ನು ತಿವಿದುಹಾಕುತ್ತಾನೆ - ಯಾರ ಸಹಾಯದಿಂದ. (ಯಾರ ಸಹಾಯವೂ ಇಲ್ಲದೆ). ಈ ಶಕ್ತಿಶಾಲಿಯಾದ ಗದೆ ನನ್ನಲ್ಲಿರಲು ಕುಂತಿಯ ಮಕ್ಕಳನ್ನು ಲೆಕ್ಕಕ್ಕಿಡುತ್ತೇನೆಯೇ. ನೀನು ದಿಟವಾಗಿ ಅಂತಃಕರಣವೇ ಇಲ್ಲದವನು ಸಂಜಯ - ಎಂದು ದುರ್ಯೋಧನ ಸಂಜಯನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಕಾನನ-ಕಾಡು, ಅರಣ್ಯ, ಕೈಯಿಕ್ಕು-ಕೈಹಾಕು, ಪ್ರಾರಂಭಿಸು, ಪವಮಾನ-ವಾಯು, ತಮ-ಕತ್ತಲು, ತಿವಿ-ಎದುರಿಸು, ಹೋರಾಡು, ಈಟಿ, ಕಠಾರಿ, ಮುಂತಾದ ಆಯುಧದಿಂದ ತಿವಿಯುವುದು, ನೆರವಿ-ಸಮೂಹ (ಆದರೆ ಇಲ್ಲಿ ನೆರವು, ಸಹಾಯ), ನಿಭೃತ-ತುಂಬಿದ, ಆವರಸಿದ, ಶಕ್ತಿಯಿಂದ ಕೂಡಿದ.
ಟಿಪ್ಪನೀ (ಕ.ಗ.ಪ)
ಮನಹೀನ-ದುರ್ಯೋಧನನ ಎದುರೇ ಅವನಿಗೆ ದುಃಖ ಮತ್ತು ಬೇಜಾರಾಗುವಂತೆ ನುಡಿದ ಸಂಜಯ ಅವನನ್ನು ತೆಗಳುತ್ತಾನೆ. ಕಟಕಿಯಿಂದ ಮಾತನಾಡುತ್ತಾನೆ. ಇದು ಸಂಜಯನ ಸಹಜ ಸ್ವಭಾವ. ತನ್ನ ಮನಸ್ಸಿಗೆ ಸರಿಯೆನಿಸಿದ್ದನ್ನು ಹಾಗೆಯೇ ಹೇಳುವುದು ಅವನ ಗುಣ. ಇದಕ್ಕಾಗಿ, ರನ್ನ ಅವನನ್ನು ‘ನಿಸರ್ಗ ಮೂರ್ಖ’ ಎಂದಿದ್ದಾನೆ.
ಮೂಲ ...{Loading}...
ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವ ತಿವಿವನದಾರ ನೆರವಿಯಲಿ
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಹೀನನೈ ನೀನಕಟ ಸಂಜಯ ಎಂದನಾ ಭೂಪ ॥31॥
೦೩೨ ಆಳು ಬಿದ್ದುದು ...{Loading}...
ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರರಾಯನ ಕಂದನಲ್ಲೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯವೆಲ್ಲವೂ ಮಡಿದಿದೆ. ಬೇಕಾದ ನಾಯಕರು ದೇವತಾಸ್ತ್ರೀಯರನ್ನು ಓಲೈಸಲು ಹೋದರು (ಮರಣಹೊಂದಿದವರು) ಯುದ್ಧದ ಕೆಲಸಕ್ಕೆ ನಾನೊಬ್ಬನೇ ಉಳಿದಿದ್ದೇನೆ ಎಂದು ನಿನಗೆ ತೋರಿತೇ. ಸೈನಿಕರ ಹಂಗನ್ನು ಮತ್ತು ಸೇನಾನಾಯಕರ ಬಿಲ್ಲು-ಬಾಣಗಳ ಜೋಡಿನ ಬಲವನ್ನು ನಾನು ಮನಸ್ಸಿನಲ್ಲಿಟ್ಟುಕೊಂಡಿದ್ದರೆ, ನಾನು ಧೃತರಾಷ್ಟ್ರನ ಮಗನೇ ಅಲ್ಲ - ಎಂದು ದುರ್ಯೋಧನ ಸಂಜಯನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಆಳು-ಸೈನಿಕ, ಬಿದ್ದುದು-ಮಡಿದುದು, ಬೇಹ-ಬೇಕಾದ, ಅಮರಿಯರು-ಅಮರಸ್ತ್ರೀಯರು, ದೇವ ವಧುಗಳು, ರಣದೂಳಿಗ-ಯುದ್ಧದ ಕೆಲಸ, ಚಿತ್ತದೊಳಾಳಿದರೆ-ಮನಸ್ಸಿನಲ್ಲಿ ಇಟ್ಟುಕೊಂಡಿದ್ದರೆ.
ಟಿಪ್ಪನೀ (ಕ.ಗ.ಪ)
ತಾನು ಯಾರ ಮೇಲೂ ಅವಲಂಬಿಸಿ ಯುದ್ಧ ನಿರ್ಣಯ ಮಾಡಲಿಲ್ಲ. ನನ್ನ ಶೌರ್ಯವನ್ನೇ ನಂಬಿದವನು - ಎಂಬುದು ದುರ್ಯೋಧನನ ಮಾತಿನ ಅರ್ಥ.
ಮೂಲ ...{Loading}...
ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರರಾಯನ ಕಂದನಲ್ಲೆಂದ ॥32॥
೦೩೩ ಖಾತಿ ಕನ್ದದು ...{Loading}...
ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನೊಲ್ಲೆ ನಾನೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಕೋಪ ಕಡಿಮೆಯಾಗುವುದಿಲ್ಲ ಮನಸ್ಸಿನ ಧೈರ್ಯದ ಶಕ್ತಿ ಕುಂದುವುದಿಲ್ಲ. ಲಜ್ಜೆಯ ಅಭಿಪ್ರಾಯ ಬದಲಾಗುವುದಿಲ್ಲ. (ನನಗಾಗಿರುವ ಅವಮಾನದ ನಾಚಿಕೆಯ ಭಾವ ಬದಲಾಗದು) ಯುಧಿಷ್ಠರನೇ ಮೊದಲಾದವರಲ್ಲಿ ನಾನು ವಿರೋಧವನ್ನು ಬಿಡುವುದಿಲ್ಲ. ಸಂಜಯ, ಏಕೆ ನಿನ್ನ ಈ ಪ್ರಲಾಪ. ಕೌರವರಾಯ ವಿರೋಧಿಗಳ ಶತ್ರು ಎಂಬ ಈ ಪ್ರಖ್ಯಾತ ಹೆಸರಲ್ಲದೇ ನಾನು ಬೇರೆ ಯಾವ ರಾಜ್ಯವನ್ನೂ ಬಯಸುವುದಿಲ್ಲ - ಎಂದು ದುರ್ಯೋಧನ ಸಂಜಯನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಖಾತಿ-ಕೋಪ, ಕಂದದು-ಕಡಿಮೆಯಾಗದು, ಧಾತು-ಧೈರ್ಯ, ಶಕ್ತಿ, ಲಜ್ಜೆ- ನಾಚಿಕೆ, ಅಭಿಮತ-ಅಭಿಪ್ರಾಯ, ಜಾತಿಗೆಡು-ಬದಲಾಗು, ವಿಧೂತರಿಪು-ವಿರೋಧಿಗಳ ಶತ್ರು, ಖ್ಯಾತಿ-ಉತ್ತಮ ಹೆಸರು, ಪ್ರಸಿದ್ಧಿ
ಮೂಲ ...{Loading}...
ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನೊಲ್ಲೆ ನಾನೆಂದ ॥33॥
೦೩೪ ಜೀಯ ನಿಮ್ಮಡಿಗಳಿಗೆ ...{Loading}...
ಜೀಯ ನಿಮ್ಮಡಿಗಳಿಗೆ ಗುರು ಗಾಂ
ಗೇಯ ವಿದುರಾದಿಗಳು ಹೇಳಿದ
ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ
ರಾಯ ಫಲವೇನೈ ಯುಧಿಷ್ಠಿರ
ರಾಯನೊಲಿದಂತಿರಲಿ ನಿಮ್ಮಯ
ತಾಯಿತಂದೆಗೆ ಹೇಳ್ವೆನೇನನು ಬುದ್ಧಿಗಲಿಸೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾಮಿ, ನಿಮಗೆ ಗುರುಗಳಾದ ದ್ರೋಣಾಚಾರ್ಯರು, ಗಾಂಗೇಯರಾದ ಭೀಷ್ಮಾಚಾರ್ಯರು, ವಿದುರನೇ ಮುಂತಾದವರು ಹೇಳಿದ ಭವಿಷ್ಯದ ಮಾತುಗಳನ್ನು, ಬುದ್ಧಿವಾದವನ್ನು ನೀವು ಕೇಳಿದರೆ? ಅಂದಮೇಲೆ ಈಗ ನನ್ನ ಈ ಪ್ರಲಾಪದಿಂದ ಫಲವೇನು. ಧರ್ಮರಾಯ ಅವನಿಗೆ ಬೇಕಾದಂತಿರಲಿ (ಅದರಿಂದ ನನಗೇನು) ಈಗ ನಿಮ್ಮ ತಾಯಿ-ತಂದೆಗೆ ಏನು ಹೇಳಲಿ - ಎಂಬ ಬಗ್ಗೆ ನನಗೆ ತಿಳಿಸಿ ಹೇಳಿ - ಎಂದು ಸಂಜಯ ಕೇಳಿದ.
ಪದಾರ್ಥ (ಕ.ಗ.ಪ)
ನಿಮ್ಮಡಿಗಳಿಗೆ-ನಿಮಗೆ (ಗೌರವದಿಂದ ಹೇಳುವ ಮಾತು), ಜೋಯಿಸ-ಭವಿಷ್ಯ, ಬುದ್ಧಿವಾದ
ಮೂಲ ...{Loading}...
ಜೀಯ ನಿಮ್ಮಡಿಗಳಿಗೆ ಗುರು ಗಾಂ
ಗೇಯ ವಿದುರಾದಿಗಳು ಹೇಳಿದ
ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ
ರಾಯ ಫಲವೇನೈ ಯುಧಿಷ್ಠಿರ
ರಾಯನೊಲಿದಂತಿರಲಿ ನಿಮ್ಮಯ
ತಾಯಿತಂದೆಗೆ ಹೇಳ್ವೆನೇನನು ಬುದ್ಧಿಗಲಿಸೆಂದ ॥34॥
೦೩೫ ಇದೆ ಸರೋವರವೊನ್ದು ...{Loading}...
ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಶ್ವವಿಖ್ಯಾತವಾದ ಒಂದು ಸರೋವರವು ಇಲ್ಲಿಗೆ ಒಂದು ಹರಿದಾರಿಯ ದೂರದಲ್ಲಿದೆ. ಆದರ ಮಧ್ಯದಲ್ಲಿ ಒಂದು ದಿನದವರೆಗೆ ನೀರಿನಲ್ಲಿ ಮುಳುಗಿರುತ್ತೇನೆ. ಆನಂತರ ಯುದ್ಧದಲ್ಲಿ ಕೌಂತೇಯರನ್ನು ಯಮಸದನದಲ್ಲಿ ಕಾಣಿಸುತ್ತೇನೆ, ಇದು ರಹಸ್ಯ ವಿಚಾರ ತಂದೆ ತಾಯಿಯರಿಗೆ (ಮಾತ್ರ) ನೀನು ತಿಳಿಸು ಎಂದು ದುರ್ಯೊಧನ ಸಂಜಯನಿಗೆ ಹೇಳಿದ
ಪದಾರ್ಥ (ಕ.ಗ.ಪ)
ಹರಿದೂರ-ಹರದಾರಿ, ಮೂರು ಮೈಲಿಗಳಿಗೆ ಸಮನಾದ ದೂರ, ಭುವನಖ್ಯಾತ-ವಿಶ್ವವಿಖ್ಯಾತ, ಪರಿಯಂತ-ವರೆಗೆ (ಅಲ್ಲಿಯವರಿಗೆ - ಇತ್ಯಾದಿ) ಸಲಿಲ-ನೀರು.
ಮೂಲ ...{Loading}...
ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ ॥35॥
೦೩೬ ತೆಗೆಸು ಪಾಳೆಯವೆಲ್ಲವನು ...{Loading}...
ತೆಗೆಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧಭೂಮಿಯಲ್ಲಿರುವ ಎಲ್ಲ ಪಾಳೆಯಗಳನ್ನೂ ತೆಗೆಸಿ (ಖಾಲಿ ಮಾಡಿ) ಹಸ್ತಿನಾಪುರಿಗೆ ಕಳುಹಿಸು. ಕರ್ಣ, ದುಶ್ಯಾಸನಾದಿಗಳ ರಾಣಿಯರ ಪಲ್ಲಕ್ಕಿಗಳನ್ನು ಕಳುಹಿಸು (ಹಸ್ತಿನಾವತಿಗೆ) ಶತ್ರುಗಳಾದ ಪಾಂಡವರ ಗೆಲವನ್ನು ಪ್ರಚಾರ ಮಾಡಬೇಡ. ನಂಬುಗೆಯ ಮಾತಿನಿಂದ ಭಾನುಮತಿಯ ಮನಸ್ಸನ್ನು ಸಮಾಧಾನಗೊಳಿಸು (ದುರ್ಯೋಧನ ಯುದ್ಧದಲ್ಲಿ ಗೆಲ್ಲುತ್ತಾನೆಂದು ಭಾನುಮತಿಗೆ ನಂಬಿಕೆ ಬರುವಂತೆ ಹೇಳು) ಎಂದು ಸಂಜಯನನ್ನು ಸಮಾಧಾನಿಸಿದನು.
ಪದಾರ್ಥ (ಕ.ಗ.ಪ)
ಪಾಳಯ-ಪಾಳ್ಯ, ಯುದ್ಧ ಭೂಮಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ವಸತಿಗಳು, ಬೀಡು, ಶಿಬಿರ,
ದಂಡಿಗೆ-ಪಲ್ಲಕ್ಕಿ, ಮೇನೆ, ಹರಹು-ಪ್ರಚಾರ ಮಾಡು, ಹರಡು,
ಬಗೆ-ಮನಸ್ಸು, ಸಂತೈಸು-ಸಮಾಧಾನ ಮಾಡು,
ಬೋಳಯಿಸು-ಸಮಾಧಾನ ಮಾಡು, ನಯದಿಂದ ಒಪ್ಪಿಸು.
ಮೂಲ ...{Loading}...
ತೆಗೆಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ ॥36॥
೦೩೭ ಎನುತ ಸಞ್ಜಯಸಹಿತ ...{Loading}...
ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತಾ ದುರ್ಯೋಧನ ಸಂಜಯನೊಂದಿಗೆ ಆ ಸರೋವರಕ್ಕೆ ಬಂದನು. ಸುಗಂಧಭರಿತವಾದ ಗಾಳಿಯು ತಣ್ಣಗಿನ ನೀರಹನಿಗಳೊಂದಿಗೆ ಇದಿರಾಗಿ ಬೀಸಿತು. ದೇಹಕ್ಕೆ ಆಪ್ಯಾಯಮಾನವಾಗಿ ಒಳಮನಸ್ಸಿನ ಚಿಂತನೆಗಳು ಬದಲಾದುವು. ದುರ್ಯೋಧನನು ಗುಪ್ತ ಸ್ಥಾನದಲ್ಲಿ, ಈ ಸರೋವರದಲ್ಲಿ ಅವಿತಿಟ್ಟುಕೊಳ್ಳುವ ವಿಚಾರವನ್ನು ಭೀಮನ ತಂದೆಯಾದ ವಾಯುವು ತಿಳಿದನು.
ಪದಾರ್ಥ (ಕ.ಗ.ಪ)
ಅನಿಲ-ವಾಯು, ಗಾಳಿ, ಶೈತ್ಯ ಪೂರ-ತಣ್ಣಗಿನ ವಾತಾವರಣದಲ್ಲಿ, ಆಪ್ಯಾಯನ-ಹಿತ, ಅಂತರ್ಮನ-ಒಳಮನಸ್ಸು, ಪಲ್ಲಟ-ಬದಲಾವಣೆ, ಭೀಮನ ಜನಕ- ವಾಯು.
ಟಿಪ್ಪನೀ (ಕ.ಗ.ಪ)
1)“ಭೀಮನ ಜನಕರಿದನು ………………. ಸಂಗತಿಯ.” ಇದನ್ನು ಕವಿ ಕೇವಲ ಸ್ವಾರಸ್ಯಕ್ಕಾಗಿ ಬಳಸಿದ್ದಾನೆ. ವಾಯುವಿನಿಂದ ಈ ವಿಚಾರ ಭೀಮನಿಗೆ ಅಥವ ಪಾಂಡವರಿಗೆ ತಿಳಿದಂತೆ ಎಲ್ಲಿಯೂ ಪ್ರಸ್ತಾಪವಿರುವುದಿಲ್ಲ.
ಮೂಲ ...{Loading}...
ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ ॥37॥
೦೩೮ ಉಲಿವ ಕೋಕಿಲ ...{Loading}...
ಉಲಿವ ಕೋಕಿಲ ಪಾಠಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿತವಾಗಿ ಕೂಗುವ ಕೋಗಿಲೆಗಳೆಂಬ ಪಾಠಕರ, ಮೊರೆಯುತ್ತಿರುವ ದುಂಬಿಗಳ ಸಮೂಹವೆಂಬ ಹಾಡುಗಾರರ, ಹಂಸಗಳೆಂಬ ಶ್ರೇಷ್ಠಭಟರುಗಳ, ಜೋರಾಗಿ ಶಬ್ದ ಮಾಡುವ ಕೊಳದ ಹಕ್ಕಿಗಳೆಂಬ ಬಾಗಿಲು ಕಾಯುವವರ, ಹೊಸ ಸುಗಂಧದಿಂದ ಕೂಡಿ ಅರಳಿದ ಚಿನ್ನದ ಬಣ್ಣದ ತಾವರೆಗಳೆಂಬ ಸಿಂಹಾಸನದಲ್ಲಿನ ಲಕ್ಷೀದೇವಿಯ ಓಲಗ ಶಾಲೆಯಂತೆ ಆ ಸರೋವರವು ಮೆರೆಯುತ್ತಿತ್ತು.
ಪದಾರ್ಥ (ಕ.ಗ.ಪ)
ಪಾಠಕ-ಮಂಗಳವಾಚನದಿಂದ ರಾಜನನ್ನು ಎಚ್ಚರಿಸುವವರು, ಮೊರೆವ-ಮೊರೆತದ ಶಬ್ದ ಮಾಡುವ, ಅಳಿಕುಳ-ದುಂಬಿಗಳ ಗುಂಪು, ಜಡಿವ-ಜೋರಾಗಿ ಶಬ್ದ ಮಾಡುವ, ಜೋರಾಗಿ ಹೆಜ್ಜೆಹಾಕುವ, ಕೊಳರ್ವಕ್ಕಿ-ಒಂದು ಜಾತಿಯ ನೀರುಹಕ್ಕಿ, ಓಲಗಶಾಲೆ-ದುರ್ಬಾರು ಶಾಲೆ, ಸರಸಿ-ಸರೋವರ.
ಮೂಲ ...{Loading}...
ಉಲಿವ ಕೋಕಿಲ ಪಾಠಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ ॥38॥
೦೩೯ ಬನ್ದು ತಡಿಯಲಿ ...{Loading}...
ಬಂದು ತಡಿಯಲಿ ಸಂಜಯನ ಕರೆ
ದೆಂದನೀ ಸರಸಿಯಲಿ ತಾನಿಹೆ
ನಿಂದಿನೀ ದಿವಸವನು ಕಳೆವೆನು ಕೊಳನ ಮಧ್ಯದಲಿ
ಮುಂದೆ ಪಾಂಡವರೈವರನು ಗೆಲಿ
ದಂದು ಹೊಗುವೆನು ಗಜಪುರವನಿಂ
ತೆಂದು ಜನನಿಗೆ ಜನಕವಿದುರರಿಗರುಹು ನೀನೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ಕೊಳದ ದಡಕ್ಕೆ ಬಂದು, ಸಂಜಯನನ್ನು ಕರೆದು, ಈ ಸರೋವರದಲ್ಲಿ ನಾನು ಇದ್ದು ಇಂದಿನ ದಿನವನ್ನು ಕೊಳದ ಮಧ್ಯದಲ್ಲಿಯೇ ಕಳೆಯುತ್ತೇನೆ. ಮುಂದೆ ಐದೂಜನ ಪಾಂಡವರನ್ನು ಗೆದ್ದಂದು ಹಸ್ತಿನಾಪುರಕ್ಕೆ ಪ್ರವೇಶಮಾಡುತ್ತೇನೆ. ಹೀಗೆಂದು ನನ್ನ ತಾಯಿಗೆ, ತಂದೆಗೆ ಮತ್ತು ವಿದುರನಿಗೆ ನೀನು ಹೇಳುವುದು - ಎಂದು ಹೇಳಿದ.
ಪದಾರ್ಥ (ಕ.ಗ.ಪ)
ತಡಿ-ದಡ, ಸರಸಿ-ಸರೋವರ, ಹೊಗು-ಪ್ರವೇಶಿಸು.
ಮೂಲ ...{Loading}...
ಬಂದು ತಡಿಯಲಿ ಸಂಜಯನ ಕರೆ
ದೆಂದನೀ ಸರಸಿಯಲಿ ತಾನಿಹೆ
ನಿಂದಿನೀ ದಿವಸವನು ಕಳೆವೆನು ಕೊಳನ ಮಧ್ಯದಲಿ
ಮುಂದೆ ಪಾಂಡವರೈವರನು ಗೆಲಿ
ದಂದು ಹೊಗುವೆನು ಗಜಪುರವನಿಂ
ತೆಂದು ಜನನಿಗೆ ಜನಕವಿದುರರಿಗರುಹು ನೀನೆಂದ ॥39॥
೦೪೦ ಚಾರು ಚನ್ದ್ರೋಪಲದ ...{Loading}...
ಚಾರು ಚಂದ್ರೋಪಲದ ರಮ್ಯಾ
ಗಾರದಲಿ ಮಣಿಮಯದ ಬಹುವಿ
ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ
ಸಾರಮಣಿ ಪರಿಯಂಕ ಪರಿಸಂ
ಸ್ಕಾರದಲಿ ಮಲಗುವ ಮಹೀಪತಿ
ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಂದರವಾದ ಚಂದ್ರಕಾಂತ ಶಿಲೆಯಿಂದ ಕೂಡಿದ ರಮ್ಯವಾದ ಮನೆಯಲ್ಲಿ, ವಿವಿಧ ಮಣಿಗಳಿಂದ ಕೂಡಿದ ಬಹು ದೊಡ್ಡದಾದ, ಮಂಗಳಕರವಾದ ಉಪ್ಪರಿಗೆಯ ಭವನದ ಚಿತ್ರಶಾಲೆಯಲ್ಲಿ ಉತ್ತಮ ಮಣಿಗಳಿಂದ ಕೂಡಿದ ಹಾಸಿಗೆಯಲ್ಲಿ ಉತ್ತಮ ಅಭಿರುಚಿಗಳಿಂದ ಮಲಗುವ ರಾಜನು ನೀರಿನಲ್ಲಿ ಮಲಗುವನೆಂದು ಸಂಜಯ ನೆಲದ ಮೇಲೆ ಹೊರಳಿ ದುಃಖಿಸಿದ.
ಪದಾರ್ಥ (ಕ.ಗ.ಪ)
ಚಂದ್ರೋಪಲ-ಚಂದ್ರಕಾಂತಶಿಲೆ, ಸ್ವಯಂ ಪ್ರಕಾಶಿಸುವ ಮೃದುವಾದ ಶಿಲೆ, ಆಗಾರ-ಆಗರ-ಮನೆ, ಭದ್ರೋಪರಿ-ಮಂಗಳಕರವಾದ ಉಪ್ಪರಿಗೆಯಮನೆ, ಸಾರಮಣಿ-ಉತ್ತಮ ಮಣಿಗಳಿಂದ ಕೂಡಿದ, ಪರಿಸಂಸ್ಕಾರ-ಉತ್ತಮ ಅಭಿರುಚಿಗಳಿಂದ ಕೂಡಿದ.
ಮೂಲ ...{Loading}...
ಚಾರು ಚಂದ್ರೋಪಲದ ರಮ್ಯಾ
ಗಾರದಲಿ ಮಣಿಮಯದ ಬಹುವಿ
ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ
ಸಾರಮಣಿ ಪರಿಯಂಕ ಪರಿಸಂ
ಸ್ಕಾರದಲಿ ಮಲಗುವ ಮಹೀಪತಿ
ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ ॥40॥
೦೪೧ ಒರಲದಿರು ಸಞ್ಜಯ ...{Loading}...
ಒರಲದಿರು ಸಂಜಯ ವಿರೋಧಿಗ
ಳರಿವರಾನಿದ್ದೆಡೆಯನಿಲ್ಲಿಯೆ
ಮರೆದು ಕಳೆ ಪಾಳೆಯವ ತೆಗಸಬುಜಾಕ್ಷಿಯರ ಕಳುಹು
ತೆರಹುಗೊಡು ನೀ ಹೋಗೆನುತ ಮುಂ
ಜೆರಗನಳವಡೆ ಸೆಕ್ಕಿ ಪೂರ್ವದ
ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ ಅಳುತ್ತಾ ಶಬ್ದ ಮಾಡುಬೇಡ. ಶತ್ರುಗಳು ನಾನಿರುವ ಸ್ಥಳವನ್ನು ತಿಳಿದುಬಿಡುತ್ತಾರೆ. ಈ ಎಲ್ಲ ವಿಚಾರಗಳನ್ನೂ ಇಲ್ಲಿಯೇ ಮರೆತು ಬಿಡು. ಪಾಳೆಯಗಳನ್ನು ತೆಗೆಸಿ, ಹೆಂಗಸರನ್ನು ಹಸ್ತಿನಾವತಿಗೆ ಕಳುಹಿಸು. ನೀನು ಕೂಡಲೇ ಈ ಜಾಗವನ್ನು ಖಾಲಿ ಮಾಡಿ ಹೋಗು - ಎಂದು ಹೇಳಿ, ದುರ್ಯೋಧನನು, ತನ್ನ ಧೋತ್ರದ ಮುಂಭಾಗದ ತುದಿಯನ್ನು ಮೇಲಕ್ಕೆತ್ತಿ ಕಟ್ಟಿ, ಮೊದಲೇ ತಿಳಿದುಕೊಂಡಿದ್ದ ಸಲಿಲಸ್ತಂಭ ವಿದ್ಯೆಯನ್ನು ಮನಸ್ಸಿಗೆ ತಂದುಕೊಂಡ.
ಪದಾರ್ಥ (ಕ.ಗ.ಪ)
ಒರಲು-ಅಳು, ಶಬ್ದಮಾಡು, ತೆರಹುಗೊಡು-ಈ ಸ್ಥಳವನ್ನು ತೆರವು ಮಾಡು, ಜಾಗವನ್ನು ಖಾಲಿ ಮಾಡು, ಮುಂಜೆರಗು-ಧೋತ್ರದ ಮುಂಭಾಗದ ತುದಿ, ಅಳವಡೆ-ಅಳವಡಿಸಿ, ಬಿಗಿಯಾಗಿ, ಸೆಕ್ಕಿ-ಸಿಕ್ಕಿಸಿ, ಪೂರ್ವದಲ್ಲಿ-ಹಿಂದೆ, ಸಲಿಲಸ್ತಂಭವಿದ್ಯೆ-ನೀರೊಳಗೆ ಮುಳುಗಿಯೂ ಬದುಕಿರುವ ಒಂದು ವಿದ್ಯೆ.
ಟಿಪ್ಪನೀ (ಕ.ಗ.ಪ)
ಪೂರ್ವದಲರಿದ ಸಲಿಲಸ್ತಂಭವಿದ್ಯೆಯನು…… ದುರ್ಯೋಧನ ಮೊದಲೇ ಈ ವಿದ್ಯೆಯನ್ನು ಕಲಿತಿದ್ದನೆಂಬುದು ಇಲ್ಲಿನ ಅರ್ಥ. ಆದರೆ ಪಂಪ - ರನ್ನರು, ದುರ್ಯೋಧನನಿಗೆ ಈ ವಿದ್ಯೆಯನ್ನು ಶರಶಯನದಲ್ಲಿದ್ದ ಭೀಷ್ಮಾಚಾರ್ಯರು ಬೋಧಿಸಿದರೆಂದು ಹೇಳುತ್ತಾರೆ.
ಮೂಲ ...{Loading}...
ಒರಲದಿರು ಸಂಜಯ ವಿರೋಧಿಗ
ಳರಿವರಾನಿದ್ದೆಡೆಯನಿಲ್ಲಿಯೆ
ಮರೆದು ಕಳೆ ಪಾಳೆಯವ ತೆಗಸಬುಜಾಕ್ಷಿಯರ ಕಳುಹು
ತೆರಹುಗೊಡು ನೀ ಹೋಗೆನುತ ಮುಂ
ಜೆರಗನಳವಡೆ ಸೆಕ್ಕಿ ಪೂರ್ವದ
ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ ॥41॥
೦೪೨ ಚರಣವದನಕ್ಷಾಲನಾನ್ತಃ ...{Loading}...
ಚರಣವದನಕ್ಷಾಲನಾಂತಃ
ಕರಣಶುದ್ಧಿಯಲಾಚಮನವಿ
ಸ್ತರಣದಲಿ ಸತ್ಪ್ರಣವದಂಗನ್ಯಾಸವಿಧಿಗಳಲಿ
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಫುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲು - ಮುಖಗಳನ್ನು ತೊಳೆದು, ಅಂತಃಕರಣ ಶುದ್ಧಿಯಿಂದ ಆಚಮನ ಮಾಡಿ ಓಂಕಾರಮಂತ್ರವನ್ನು ಉಚ್ಚರಿಸಿ, ಅಂಗವಿನ್ಯಾಸಗಳನ್ನು ಮಾಡಿ, ವರುಣ ಮಂತ್ರಾಕ್ಷರಗಳನ್ನು ವ್ಯವಸ್ಥಿತವಾಗಿ ಜಪಿಸಿ, ನಿರ್ಣಯವಾಗಿರುವಂತೆ, ಚೇತನವನ್ನು ಅರಳಿಸುವ ಜಲಸ್ತಂಭನ ಮಂತ್ರವನ್ನು ಹೇಳಿದ.
ಪದಾರ್ಥ (ಕ.ಗ.ಪ)
ಕ್ಷಾಲನ-ತೊಳೆಯುವುದು, ಶುದ್ಧಿಮಾಡುವುದು, ಆಚಮನ-ಸಂಧ್ಯಾವಂದನಾದಿ ಕ್ರಿಯೆಗಳಲ್ಲಿ ಶುದ್ಧಿಗೋಸ್ಕರ ಆಚರಿಸುವ ಕ್ರಿಯೆ, ಪ್ರಣವ-ಓಂಕಾರಮಂತ್ರ, ಜಪಪರಿಕರಣ-ಜಪವನ್ನು ವ್ಯವಸ್ಥಿತವಾಗಿ ಮಾಡುವಕ್ರಿಯೆ, ನಿರ್ಣಿಕ್ತ-ನಿರ್ಣಯವಾಗಿರುವಂತೆ, ತೀರ್ಮಾನವಾಗಿರುವಂತೆ, ಚೇತಃಸ್ಪುರಣ-ಅಂತಃಚೇತನವನ್ನು ಅರಳಿಸುವ, ಸಲಿಲಸ್ತಂಭನ-ಜಲಸ್ತಂಭನ, ನೀರೊಳಗೆ ಮುಳುಗಿದ್ದರೂ ಉಸಿರಾಡುತ್ತಿರುವ ವಿದ್ಯೆ.
ಮೂಲ ...{Loading}...
ಚರಣವದನಕ್ಷಾಲನಾಂತಃ
ಕರಣಶುದ್ಧಿಯಲಾಚಮನವಿ
ಸ್ತರಣದಲಿ ಸತ್ಪ್ರಣವದಂಗನ್ಯಾಸವಿಧಿಗಳಲಿ
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಫುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ ॥42॥
೦೪೩ ದ್ಯುಮಣಿ ಮೊದಲಾದಖಿಳ ...{Loading}...
ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನೇ ಮೊದಲಾದ ಎಲ್ಲ ದೇವತೆಗಳಿಗೂ ನಮಸ್ಕರಿಸಿ, ವರುಣನ ಧ್ಯಾನವನ್ನು ಹೃದಯ ಕಮಲದಲ್ಲಿ ಸ್ಥಾಪಿಸಿ, ನಾಲ್ಕು ದಿಕ್ಕುಗಳನ್ನು ನೋಡಿ, ಕುಮತಿಯಾದ ದುರ್ಯೋಧನ ನೀರಿನೊಳಕ್ಕೆ ಇಳಿದನು. ಮಂಡಿಗಳು, ಸೊಂಟ, ಹೃದಯ, ಮುಖ, ಮೂಗಿನವರೆಗೆ ನೀರು ಹತ್ತಿತು. ಕೊಳದ ಮಧ್ಯದಲ್ಲಿ ಅರಸ ಮಲಗಿದ.
ಪದಾರ್ಥ (ಕ.ಗ.ಪ)
ದ್ಯುಮಣಿ-ಸೂರ್ಯ, ಹೃತ್ಕಮಲ-ಹೃದಯ ಕಮಲ, ನೆಲೆಗೊಳಿಸು-ಶಾಶ್ವತವಾಗಿ ನಿಲ್ಲುವಂತೆ ಮಾಡು, ಸ್ಥಾಪಿಸು, ದೆಸೆ-ದಿಕ್ಕು, ಕುಮತಿ-ಕೆಟ್ಟಬುದ್ಧಿಯವನು, ದುಷ್ಟ, ಜಾನು-ಮಂಡಿ, ಕಟಿ-ಸೊಂಟ, ಮೂರ್ಧ-ಮೂಗು, ಅಮರು-ಸುತ್ತಿಕೊಳ್ಳು, ಮೇಲೇರು.
ಮೂಲ ...{Loading}...
ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ ॥43॥
೦೪೪ ಕುರುಪತಿಯ ಬೀಳ್ಕೊಣ್ಡು ...{Loading}...
ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುತ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಪತಿಯನ್ನು ಬೀಳ್ಕೊಂಡು ಸಂಜಯ, ತನಗೆ ಹಿಂದೆ (ಬರುವಾಗ ಸಾತ್ಯಕಿಯಿಂದಾದ) ಆದ ಅಪಮಾನವನ್ನು ನೆನಪಿಸಿಕೊಳ್ಳುತ್ತಾ ಹೆಜ್ಜೆಹೆಜ್ಜೆಗೂ ಮನಸ್ಸಿನಲ್ಲಿಯೇ ನಡುಗುತ್ತಾ ಹಿಂದಿರುಗಿದನು. ಯುದ್ಧಭೂಮಿಯ ಮಧ್ಯದಲ್ಲಿ ಒಬ್ಬನೇ, ಬರುತ್ತಿರುವ ಭೂತಗಳ ಸಮೂಹಗಳನ್ನು ನೋಡಿ ಗುರುಗಳಾದ ವೇದವ್ಯಾಸರನ್ನು ನೆನಸಿಕೊಳ್ಳುತ್ತಿದ್ದ.
ಪದಾರ್ಥ (ಕ.ಗ.ಪ)
ಪರಿಭವ-ಅಪಮಾನ, ಸೋಲು, ಧುರ-ಯುದ್ಧ, ಯುದ್ಧಭೂಮಿ
ಮೂಲ ...{Loading}...
ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುತ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ ॥44॥
೦೪೫ ಬರುತ ಸಞ್ಜಯ ...{Loading}...
ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ಬರುತ್ತಾ ಸಂಜಯ ದೂರದಲ್ಲಿ ಕೃಪಾಚಾರ್ಯ, ಅಶ್ವತ್ಥಾಮ ಮತ್ತು ಕೃತವರ್ಮನನ್ನು ನೋಡಿ, ಇವರು ಶತ್ರುಪಕ್ಷದ ರಥಿಕರಲ್ಲ ತಾನೇ, ಶಿವಶಿವ ಮಹಾದೇವ ಎಂದುಕೊಂಡ. ಭರತ ಕುಲ ಮೊದಲು ಒಂದೇ ಇದ್ದುದು ನಂತರ ಎರಡು ಕವಲಾಯಿತು. ಒಬ್ಬರಿಗೆ ಗದುಗಿನ ವೀರ ನಾರಾಯಣನ ಕರುಣದಲ್ಲಿ ಜಯವಾಯಿತು (ಎಂದುಕೊಂಡು ಸಂಜಯ ಮುಂದೆ ನಡೆದ)
ಪದಾರ್ಥ (ಕ.ಗ.ಪ)
ಜಯ ವಿಸ್ತರಣ-ಜಯದ ವಿಸ್ತಾರ, ಜಯದ ಪರಂಪರೆ, ವಿಶಾಲ ಜಯ.
ಮೂಲ ...{Loading}...
ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ ॥45॥