೦೦೦ ಸೂ ಸಕಲಬಲ ...{Loading}...
ಸೂ. ಸಕಲಬಲ ನುಗ್ಗಾಯ್ತು ಸಮಸ
ಪ್ತಕರು ಮಡಿದರು ಪಾರ್ಥಶರದಲಿ
ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಕೌರವ ಬಲವೆಲ್ಲವೂ ನಾಶವಾಯಿತು. ಅರ್ಜುನನ ಬಾಣದಿಂದ ಸಮಸಪ್ತಕರು ಮಡಿದರು. ಸಹದೇವನು ಯುದ್ಧದಲ್ಲಿ ಶಕುನಿಯನ್ನು ಸೀಳಿಹಾಕಿದ.
ಪದಾರ್ಥ (ಕ.ಗ.ಪ)
ನುಗ್ಗಾಯ್ತು-ಜಜ್ಜಿ ಹೋಯಿತು, ನಾಶವಾಯಿತು.
ಮೂಲ ...{Loading}...
ಸೂ. ಸಕಲಬಲ ನುಗ್ಗಾಯ್ತು ಸಮಸ
ಪ್ತಕರು ಮಡಿದರು ಪಾರ್ಥಶರದಲಿ
ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಯನೇ ಕೇಳು-ಸಂಜಯ ಬಂದು ಯುದ್ಧ ಭೂಮಿಯಲ್ಲಿ ದುರ್ಯೋಧನನನ್ನು ಹುಡುಕಿದನು. ರಕ್ಷಣೆಗಾಗಿ ಬಂದಿದ್ದ ಕುದುರೆ ಪಡೆಯೊಂದಿಗೆ ವಿಸ್ತಾರವಾದ ಕುರುಭೂಮಿಯಲ್ಲಿ, ದುರ್ಯೋಧನನೆಲ್ಲಿ ಎಂದು ಕಂಡವರನ್ನು ಕೇಳುತ್ತಾ ಸಂಜಯ ಹುಡುಕಿದ.
ಪದಾರ್ಥ (ಕ.ಗ.ಪ)
ಸುಯಿಧಾನ- ಕಾವಲು, ರಕ್ಷಣೆ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ ॥1॥
೦೦೨ ವನ್ದಿಗಳ ನಿಸ್ಸಾಳಬಡಿಕರ ...{Loading}...
ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು
ನಿಂದುದದಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಗಳುಭಟ್ಟರು, ನಿಸ್ಸಾಳಗಳೆಂಬ ವಾದ್ಯಗಳನ್ನು ಬಾಜಿಸುವವರು, ಹಡಪಗಳನ್ನು ಹಿಡಿದವರು, ಚಾಮರ ಬೀಸುವವರು, ರಥ ಓಡಿಸುವ ಸೂತರು, ಔಷಧಗಳನ್ನು ಕೊಡುವವರು, ಕುದುರೆ, ಆನೆಗಳನ್ನು ನೋಡಿಕೊಂಡು ನಿರ್ವಹಿಸುವ ನಾಯಕರು ಮುಂತಾದವುರು ಅಸಂಖ್ಯಾತರಾಗಿ ನಿಂತಿದ್ದರು. ಇವರೆಲ್ಲರನ್ನು ಸಂಜಯ ಕರೆದು ಸೋಮವಂಶಸಂಭವನಾದ ದುರ್ಯೋಧನನನ್ನು ಕಂಡಿರೆ? - ಎಂದು ಕೇಳಿದ.
ಪದಾರ್ಥ (ಕ.ಗ.ಪ)
ವಂದಿ-ಹೊಗಳುಭಟ್ಟ, ಹಡಪಿಗ-ರಾಜರು ಮುಂತಾದ ಹಿರಿಯರಿಗೆ ಅವಶ್ಯವಾದ ವಸ್ತುಗಳನ್ನು ಚರ್ಮದ ಚೀಲದಲ್ಲಿ (ಹಡಪ) ಹಾಕಿಕೊಂಡು ಅವರ ಸಮೀಪದಲ್ಲಿರುತ್ತಿದ್ದವ,
ಚಾಹಿ-ಛತ್ರ ಹಿಡಿದಿರುವವನು,
ವಿಧಾಯಕ-ನಾಯಕ, ನಿಯಾಮಕ.
ಪಾಠಾನ್ತರ (ಕ.ಗ.ಪ)
ನಿಂದುದು ಸಂಖ್ಯಾತ - ನಿಂದುದದಸಂಖ್ಯಾತ
ಕುಮಾರವ್ಯಾಸ ಭಾರತ
ಸಂ: ಅ.ರಾ.ಸೇ.
ಮೂಲ ...{Loading}...
ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು
ನಿಂದುದದಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ ॥2॥
೦೦೩ ಕೂಡೆ ಸಞ್ಜಯನರಸಿದನು ...{Loading}...
ಕೂಡೆ ಸಂಜಯನರಸಿದನು ನಡೆ
ಜೋಡಿನವು ನಾನೂರು ಕುದುರೆಯ
ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ
ನೋಡುತಿರೆ ಸಾತ್ಯಕಿ ಚತುರ್ಬಲ
ಗೂಡಿ ಕವಿದನು ಹಯಬಲವ ಹುಡಿ
ಮಾಡಿದನು ನಾನೂರ ಕೊಂದನು ಸರಳ ಸಾರದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ ತನ್ನ ಸಹಾಯಕ್ಕಾಗಿ ಜೊತೆಯಲ್ಲಿ ನಡೆದು ಬರುವ ನಾನೂರು ಕುದುರೆಗಳ ಸಂಗಡ, ಯುದ್ಧಭೂಮಿಯಲ್ಲಿ ದುರ್ಯೋಧನನನ್ನು ಹುಡುಕಿ ಕಾಣದೆ ನೋಡುತ್ತಿರಲು, ಸಾತ್ಯಕಿ ತನ್ನ ಚತುರಂಗ ಬಲದೊಡನೆ ಬಂದು ಈ ಕುದುರೆಗಳನ್ನು ಮುತ್ತಿ ನಾನೂರು ಕುದುರೆಗಳನ್ನು ತನ್ನ ಬಾಣಗಳಿಂದ ಸಂಹರಿಸಿದನು.
ಪದಾರ್ಥ (ಕ.ಗ.ಪ)
ಕಳನಚೌಕ-ಯುದ್ಧಭೂಮಿ
ಮೂಲ ...{Loading}...
ಕೂಡೆ ಸಂಜಯನರಸಿದನು ನಡೆ
ಜೋಡಿನವು ನಾನೂರು ಕುದುರೆಯ
ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ
ನೋಡುತಿರೆ ಸಾತ್ಯಕಿ ಚತುರ್ಬಲ
ಗೂಡಿ ಕವಿದನು ಹಯಬಲವ ಹುಡಿ
ಮಾಡಿದನು ನಾನೂರ ಕೊಂದನು ಸರಳ ಸಾರದಲಿ ॥3॥
೦೦೪ ಹಿಡಿದು ಸಞ್ಜಯನನು ...{Loading}...
ಹಿಡಿದು ಸಂಜಯನನು ವಿಭಾಡಿಸಿ
ಕೆಡಹಿದನು ಬಲುರಾವುತರನವ
ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು
ಫಡಫಡೆಲವೊ ಸಂಜಯನ ಬಿಡು
ಬಿಡು ಮದೀಯ ಮಹಾಶರಕೆ ತಲೆ
ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿ, ಸಂಜಯನನ್ನು ಹಿಡಿದು ಕೆಳಕ್ಕೆ ಬೀಳಿಸಿದನು. ಶ್ರೇಷ್ಠ ಕುದುರೆ ಸವಾರರನ್ನು ಸೋಲಿಸಿದನು. ಈ ಗಲಿಬಿಲಿ ಶಬ್ದವನ್ನು ಕೇಳಿ ಅಶ್ವತ್ಥಾಮ, ಕೃತವರ್ಮ ಮತ್ತು ಕೃಪರು, ಫಡಫಡಾ, ಎಲವೋ ಸಾತ್ಯಕಿ, ಸಂಜಯನನ್ನು ಬಿಡು. ನಮ್ಮ ಮಹಾಶರಗಳಿಗೆ ನಿನ್ನ ತಲೆಯನ್ನು ಕೊಡಲು ಮನಸ್ಸಿದ್ದರೆ ನಮ್ಮೊಂದಿಗೆ ಯುದ್ದಕ್ಕೆ ಇದಿರಾಗು, ಎನ್ನುತ್ತ ಸಾತ್ಯಕಿಯನ್ನು ಅಡ್ಡಗಟ್ಟಿದರು.
ಪದಾರ್ಥ (ಕ.ಗ.ಪ)
ವಿಭಾಡಿಸು-ಸೋಲಿಸು, ಅಧೈರ್ಯಗೊಳಿಸು ನಾಶಮಾಡು, ಮದೀಯ-ನಮ್ಮ
ಮೂಲ ...{Loading}...
ಹಿಡಿದು ಸಂಜಯನನು ವಿಭಾಡಿಸಿ
ಕೆಡಹಿದನು ಬಲುರಾವುತರನವ
ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು
ಫಡಫಡೆಲವೊ ಸಂಜಯನ ಬಿಡು
ಬಿಡು ಮದೀಯ ಮಹಾಶರಕೆ ತಲೆ
ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ ॥4॥
೦೦೫ ದ್ರೋಣಸುತ ಕುರುಪತಿಯ ...{Loading}...
ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರಳೆಂದು ಸಾತ್ಯಕಿ ಸುರಿದನಂಬುಗಳ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ದುರ್ಯೋಧನನ ಪರ ಯುದ್ಧಕ್ಕೆ ಪ್ರತಿಜ್ಞೆ ಮಾಡಿ ನಿಂತವನಲ್ಲವೇ! ಅದು ನನಗೆ ಚನ್ನಾಗಿ ಗೊತ್ತು. ಬಾಣ ವಿದೆ್ಯಯನ್ನು ನನ್ನೆದುರು ಪ್ರಯೋಗಿಸಿ ಇವರು ಸಂಜಯನನ್ನು ಬಿಡಿಸುತ್ತಾರಲ್ಲವೇ! ಅದನ್ನು ಮುಂದೆ ನೋಡಬಹುದು, ಆ ವಿಚಾರ ಹಾಗಿರಲಿ, ನಿಮಗೆ ಈ ಕೋಪದಿಂದ ಯಾವುದೇ ಪ್ರಯೋಜನವಿಲ್ಲ. ಕೃಪಾಚಾರ್ಯರೇ ನನ್ನಾಣೆಯಾಗಿಯೂ ನೀವು ಹಿಂತಿರುಗಿ - ಎನ್ನುತ್ತಾ ಸಾತ್ಯಕಿ ಬಾಣಗಳ ಮಳೆಯನ್ನು ಸುರಿಸಿದ.
ಪದಾರ್ಥ (ಕ.ಗ.ಪ)
ಹೂಣಿಗ-ಪ್ರತಿಜ್ಞೆ ಮಾಡಿದವನು, ಭಾಷೆಕೊಟ್ಟವನು, ಕೇಣ-ಕೋಪ, ಮತ್ಸರ, ಅತ್ಯಾಶೆ.
ಮೂಲ ...{Loading}...
ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರಳೆಂದು ಸಾತ್ಯಕಿ ಸುರಿದನಂಬುಗಳ ॥5॥
೦೦೬ ಕೋಡಕಯ್ಯಲಿ ತಿರುಗಿ ...{Loading}...
ಕೋಡಕಯ್ಯಲಿ ತಿರುಗಿ ಕೃಪ ಕೈ
ಮಾಡಿದನು ಕೃತವರ್ಮನೆಸುಗೆಯ
ತೋಡುಬೀಡಿನ ಭರವ ಬಲ್ಲವನಾರು ಸಮರದಲಿ
ನೋಡಲೀತನ ಗರುಡಿಯಲಿ ಶ್ರವ
ಮಾಡಿದವರೇ ಮೂರು ಜಗವ ವಿ
ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಕ್ಕಕ್ಕೆ ತಿರುಗಿ ಕೃಪ ಪುನಃ ಬಾಣಪ್ರಯೋಗ ಮಾಡಿದ. ಯುದ್ಧದಲ್ಲಿ ಕೃತವರ್ಮನ ಹೊಡೆತದ ಪೆಟ್ಟು, ಆಯುಧಗಳನ್ನು ಬಿಡುವ ವೇಗವನ್ನು ಬಲ್ಲವರಾರು. ಇವನ ಗರುಡಿಯಲ್ಲಿ ಸಾಮು ಮಾಡಿ ಕಲಿತವರುಗಳೇ ಮೂಲೋಕಗಳನ್ನು ನಾಶಮಾಡಬಲ್ಲರೆಂದರೆ, ಅಶ್ವತ್ಥಾಮನನ್ನು ಹೊಗಳಲು ಯಾರಿಗೆ ಸಾಧ್ಯ.
ಪದಾರ್ಥ (ಕ.ಗ.ಪ)
ಕೋಡಕಯ್ಯಲಿ- ಪಕ್ಕಕ್ಕೆ
ತೋಡು-ಜೊತೆಪೆಟ್ಟು, ಬೀಡು-ಬಾಣ ಪ್ರಯೋಗದ ರೀತಿ, ಶ್ರವ-ಶ್ರಮ, ಅಭ್ಯಾಸ, ವಿಭಾಡಿಸು-ನಾಶಮಾಡು.
ಮೂಲ ...{Loading}...
ಕೋಡಕಯ್ಯಲಿ ತಿರುಗಿ ಕೃಪ ಕೈ
ಮಾಡಿದನು ಕೃತವರ್ಮನೆಸುಗೆಯ
ತೋಡುಬೀಡಿನ ಭರವ ಬಲ್ಲವನಾರು ಸಮರದಲಿ
ನೋಡಲೀತನ ಗರುಡಿಯಲಿ ಶ್ರವ
ಮಾಡಿದವರೇ ಮೂರು ಜಗವ ವಿ
ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ॥6॥
೦೦೭ ಎಚ್ಚನಶ್ವತ್ಥಾಮನಾ ಕೃಪ ...{Loading}...
ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ
ಬೆಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮ ಬಾಣದಿಂದ ಹೊಡೆದ, ಕೃಪ ಹೊಡೆದ, ಕೃತವರ್ಮನು ಮೇಲೆ ಬಿದ್ದು ಹೊಡೆದ, ಈ ಬಾಣಗಳ ಸಮೂಹವು ಕಿಡಿಗಳನ್ನು ಉಗುಳುತ್ತಾ ಸಾತ್ಯಕಿಯ ಮೇಲೆ ಬಿದ್ದುವು. ಸಾತ್ಯಕಿ ಇದಕ್ಕೆ ಬೆಚ್ಚಿದನೆ, ಹೆದರಿದನೆ, ಶತ್ರುಗಳ ಈ ಎಲ್ಲ ಬಾಣಗಳನ್ನೂ ಎದುರಿಸಿ, ಅವುಗಳನ್ನು ಕೊಚ್ಚಿ ಕೊಡಹಿದ, ವಿಶೇಷವಾಗಿ ಅವರುಗಳನ್ನು ಭಂಗಿಸಿ, ಸೋಲಿಸಿದ.
ಪದಾರ್ಥ (ಕ.ಗ.ಪ)
ಎಚ್ಚ-ಹೊಡೆದ, ಶರಜಾಲ-ಬಾಣಗಳಗುಂಪು, ಜಡಿದವು-ಬಾರಿಸಿದವು, ಹೊಡೆದವು, ಗಡಣ-ಗುಂಪು, ಭಂಗಿಸಿ-ಸೋಲಿಸಿ, ಅಪಮಾನಗೊಳಿಸಿ.
ಮೂಲ ...{Loading}...
ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ
ಬೆಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ ॥7॥
೦೦೮ ಎಲೆಲೆ ಸಾತ್ಯಕಿಗಾಹವದ ...{Loading}...
ಎಲೆಲೆ ಸಾತ್ಯಕಿಗಾಹವದ ಧುರ
ಬಲುಹೆನಲು ಸೃಂಜಯರು ಸೋಮಕ
ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು
ಚಳಪತಾಕೆಯ ವಿವಿಧವಾದ್ಯದ
ಕಳಕಳದ ಕೈದುಗಳ ಹೊಳಹಿನ
ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ, ಸಾತ್ಯಕಿಗೆ ಈ ಯುದ್ಧದ ಭಾರವು ದೊಡ್ಡದಾಯಿತು - ಎನ್ನುತ್ತಾ ಸೃಂಜಯರು, ಸೋಮಕರ ಸೈನ್ಯ, ಶಿಖಂಡಿ, ದ್ರುಪದನ ಮಗನಾದ ಧೃಷ್ಟದ್ಯುಮ್ನ ಮತ್ತು ಪಾಂಡವರ ಐದು ಜನ ಮಕ್ಕಳು, ಹೊಳೆಯುತ್ತಿರುವ ಬಾವುಟಗಳು ವಿವಿಧ ರಣವಾದ್ಯಗಳ ಶಬ್ದದೊಂದಿಗೆ, ಆಯುಧಗಳ ಹೊಳಪಿನ ಪ್ರಭೆ ಝಳಪಿಸಲು, ಸಾತ್ಯಕಿಯ ಸಹಾಯಕ್ಕಾಗಿ ಅವನ ಸುತ್ತ ಸೇರಿದರು.
ಪದಾರ್ಥ (ಕ.ಗ.ಪ)
ಧುರ-ಭಾರ, ಹೊಣೆ, ಚಳ-ಹೊಳೆಯುವ, ಚಲಿಸುವ, ತಳಪ-ಕಾಂತಿಯುಕ್ತವಾದ, ಪ್ರಭೆ, ಬಳಸಿನಲಿ-ಸುತ್ತಲೂ.
ಮೂಲ ...{Loading}...
ಎಲೆಲೆ ಸಾತ್ಯಕಿಗಾಹವದ ಧುರ
ಬಲುಹೆನಲು ಸೃಂಜಯರು ಸೋಮಕ
ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು
ಚಳಪತಾಕೆಯ ವಿವಿಧವಾದ್ಯದ
ಕಳಕಳದ ಕೈದುಗಳ ಹೊಳಹಿನ
ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ ॥8॥
೦೦೯ ಹರಿಯದಿಲ್ಲಿಯ ಬವರ ...{Loading}...
ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲಿ ಶರರಚನೆ
ಅರಿವೆವೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಯ ಇಲ್ಲಿನ ಯುದ್ಧ ಮುಗಿಯುವುದಿಲ್ಲ. ರಾಜನಾದ ದುರ್ಯೋಧನನನ್ನು ಹುಡುಕಬೇಕು. ಅವನ ಮುಂದೆ ಯುದ್ಧ ಮಾಡಿ ನಮ್ಮ ಕೀರ್ತಿಯನ್ನು ಮೆರೆಯಬೇಕು. ಇಲ್ಲಿನ ನಮ್ಮ ಬಾಣಪ್ರಯೋಗದ ಚಾತುರ್ಯವು ನಿಷ್ಪಲ. ಸಾತ್ಯಕಿಯ ಯುದ್ಧದ ವಿಲಾಸವನ್ನು ಆ ನಂತರ ನೋಡೋಣ - ಎನ್ನುತ್ತ ಕೌರವನನ್ನು ಹುಡುಕುತ್ತಾ ಕೃಪ, ಕೃತವರ್ಮ, ಅಶ್ವತ್ಥಾಮರು ಹಿಂದಿರುಗಿದರು.
ಪದಾರ್ಥ (ಕ.ಗ.ಪ)
ಹರಿಯದು-ಮುಗಿಯುವುದಿಲ್ಲ, ಸಾಧ್ಯವಿಲ್ಲ, ಮುರುಕ-ವಿಲಾಸ, ಒಯ್ಯಾರ
ಮೂಲ ...{Loading}...
ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲಿ ಶರರಚನೆ
ಅರಿವೆವೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು ॥9॥
೦೧೦ ತೆರಳಿದರು ಗುರುನನ್ದನಾದಿಗ ...{Loading}...
ತೆರಳಿದರು ಗುರುನಂದನಾದಿಗ
ಳರಿನೃಪಾಲನ ಕಾಣೆವಾತನ
ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು
ದೊರೆಗಳಿದು ಪರಿಶಿಷ್ಟರುಪಸಂ
ಹರಣವೇ ಕರ್ತವ್ಯವಿದು ದು
ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮಾದಿಗಳು ಹಿಂದಿರುಗಿದರು. ಶತ್ರುರಾಜನಾದ ದುರ್ಯೋಧನ ನಮಗೆ ಕಾಣಿಸುತ್ತಿಲ್ಲ. ಅವನನ್ನು ಹುಡುಕಬೇಕು. ಶಕುನಿ, ದುರ್ಯೋಧನ, ಸುಶರ್ಮಕರು, ದೊರೆಗಳು, ಹೀಗೆ ಉಳಿದಿರುವವರನ್ನು ಸಂಹಾರ ಮಾಡುವುದೇ ಈಗಿನ ಆದ್ಯಕರ್ತವ್ಯ. ಇದು ಕಷ್ಟಸಾಧ್ಯವಾದ ಶ್ರಮಕ್ಕೆ ಪ್ರತಿಫಲವೆಂದು ಧರ್ಮರಾಯ ನಕ್ಕು ಹೇಳಿದ.
ಪದಾರ್ಥ (ಕ.ಗ.ಪ)
ಪರಿಶಿಷ್ಟರು-ಉಳಿದವರು, ಉಪಸಂಹರಣ-ಸಂಹರಿಸುವುದು, ದುಸ್ತರಣ-ದಾಟಲು ಕಷ್ಟವಾದುದು, ಅಸಾಧ್ಯವಾದುದು, ಕಷ್ಟಸಾಧ್ಯವಾದುದು, ಕಠಿಣವಾದುದು (ತರಣ-ದಾಟು)
ಮೂಲ ...{Loading}...
ತೆರಳಿದರು ಗುರುನಂದನಾದಿಗ
ಳರಿನೃಪಾಲನ ಕಾಣೆವಾತನ
ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು
ದೊರೆಗಳಿದು ಪರಿಶಿಷ್ಟರುಪಸಂ
ಹರಣವೇ ಕರ್ತವ್ಯವಿದು ದು
ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ ॥10॥
೦೧೧ ಮಸಗಿದುದು ಪರಿವಾರ ...{Loading}...
ಮಸಗಿದುದು ಪರಿವಾರ ಕೌರವ
ವಸುಮತೀಶ್ವನರಕೆಯಲಿ ದಳ
ಪಸರಿಸಿತು ಬಿಡದರಸಿ ಕಂಡರು ಕಳನ ಮೂಲೆಯಲಿ
ಮಿಸುಪ ಸಿಂಧದ ಸೀಗುರಿಯ ಝಳ
ಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವ ಪರಿವಾರವೆಲ್ಲವೂ, ದುರ್ಯೋಧನ ತಪ್ಪಿಸಿಕೊಂಡದ್ದರಿಂದ ಕೋಪದಿಂದ ಹುರುಡಿಸುತ್ತಿದ್ದವು. ಪಾಂಡವ ಸೈನ್ಯವು ವಿಸ್ತಾರವಾದ ಕುರುಕ್ಷೇತ್ರದಲ್ಲಿ ಹರಡಿಕೊಂಡು ಕೌರವನನ್ನು ಬಿಡದೆ ಹುಡುಕಿ, ಕಡೆಗೆ ಯುದ್ಧಭೂಮಿಯ ಒಂದು ಮೂಲೆಯಲ್ಲಿ ಹೊಳೆಯುವ ಬಾವುಟದ, ಚಾಮರದ, ಝಳಪಿಸುವ ಕತ್ತಿಯ, ಬಿಚ್ಚಿಕೊಂಡಿರುವ ಬಿಳಿಯ ಛತ್ರಿಯ ವಿಸ್ತಾರ - ಇವುಗಳಿಂದಾಗಿ ಹೊಳೆಹೊಳೆಯುತ್ತಿದ್ದ ಶಕುನಿಯ ದೊಡ್ಡ ಸೈನ್ಯವನ್ನು ಕಂಡರು.
ಪದಾರ್ಥ (ಕ.ಗ.ಪ)
ಮಸಗು-ಹುರುಡಿಸು, ಕೋಪದಿಂದ ಶಬ್ದಮಾಡು, ಹರಿತಮಾಡು, ಅರಕೆ-ಕೊರತೆ, ಇಲ್ಲದಿರುವಿಕೆ,
ಮಿಸುಪ-ಹೊಳೆಯುವ, ಸಿಂಧ-ಬಾವುಟ, ಸೀಗುರಿ-ಚಾಮರ, ಸಿತಾತಪತ್ರ- ಬಿಳಿಯ ಕೊಡೆ
ಮೂಲ ...{Loading}...
ಮಸಗಿದುದು ಪರಿವಾರ ಕೌರವ
ವಸುಮತೀಶ್ವನರಕೆಯಲಿ ದಳ
ಪಸರಿಸಿತು ಬಿಡದರಸಿ ಕಂಡರು ಕಳನ ಮೂಲೆಯಲಿ
ಮಿಸುಪ ಸಿಂಧದ ಸೀಗುರಿಯ ಝಳ
ಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ ॥11॥
೦೧೨ ಅದೆ ಸುಯೋಧನನೊಡ್ಡು ...{Loading}...
ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಾರ್ಜುನರ ರಥಗಳು ಮುಂದಿರಲು, ಅರೆ! ದುರ್ಯೋಧನನ ಸೈನ್ಯ ಸ್ವಲ್ಪವೇ ದೂರದಲ್ಲಿ ಕಾಣುತ್ತಿದೆ. ಮುತ್ತಿಗೆಹಾಕಿ - ಎನ್ನುತ್ತಾ ಚತುರಂಗ ಬಲವೂ ಧಾಳಿ ಇಟ್ಟಿತು. ಗಿಡಗಂಟಿಗಳಿಂದ ಕೂಡಿದ್ದ ಪೊದೆಗಳೆಲ್ಲವೂ ತಳಮೇಲಾಯಿತು. ಪಾಂಡವ ಸೈನ್ಯದ ವೀರಭಟರ ಭುಜಬಲದ ಗರ್ವದಲ್ಲಿ ಕೌರವರಲ್ಲಿ ಗೌರವಕ್ಕೆ ಅರ್ಹರಾದವರ ಗಾಢವಾದ ಶೌರ್ಯದ ಮದ ಹಿಂದು ಮುಂದಾಯಿತು. ಕುರುಸೈನ್ಯದ ಮಾನ ಮೌನದಲ್ಲಿ ಸಿಕ್ಕಿಕೊಂಡಿತು.
ಪದಾರ್ಥ (ಕ.ಗ.ಪ)
ಒಡ್ಡು-ಸೈನ್ಯ, ಹೊದರು-ಪೊದರು, ಪೊದೆ, ಗಿಡಗಂಟಿಗಳು , ಹಳಚು-ಹಣಚು, ತಳಮೇಲಾಗು, ಯುದ್ಧಮಾಡು, ಹೊಡೆ, ಬಡಿ, ಮಡಮುರಿ-ಹಿಂಭಾಗ, ಪಾದದ ಹಿಂಭಾಗ, ಹಿಂದಿರುಗುವಿಕೆ.
ಮೂಲ ...{Loading}...
ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ ॥12॥
೦೧೩ ಹೆಗಲ ಹಿರಿಯುಬ್ಬಣದ ...{Loading}...
ಹೆಗಲ ಹಿರಿಯುಬ್ಬಣದ ಕೈತಳ
ಮಗುಚಲಮ್ಮದ ವಾಘೆಯಲಿ ಕೈ
ಬಿಗಿದುದಂಕಣೆದೊಡಕಿನಲಿ ಮರನಾದವಂಘ್ರಿಗಳು
ಬಗೆಯ ಮಡಿ ಮಸಳಿಸಿತು ವೀರಕೆ
ಬೆಗಡು ಹುದುವನೆಯಾಯ್ತು ಕೈನಂ
ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯೋಧರ ಹೆಗಲಿನ ಮೇಲಿದ್ದ ಹಿರಿಯುಬ್ಬಣವನ್ನು ಹೆಗಲು ಬದಲಾಯಿಸಲು (ಕೈಮಗುಚಲು) ಅವಕಾಶ ಕೊಡದೆ ಕುದುರೆಗಳ ಹಗ್ಗಗಳಿಂದ ಅವರ ಕೈಗಳೇ ಬಿಗಿದುಕೊಂಡವು. ಅಂಕಣೆಯು ಕಾಲಿಗೆ ಸಿಕ್ಕಿಕೊಂಡು ಕಾಲುಗಳು ಮರಗಟ್ಟಿದವು. ಮನಸ್ಸಿನಲ್ಲಿದ್ದ ಯುದ್ಧದ ಬಗೆಗಿನ ಮೀಸಲುಭಾವ ಮರೆಯಾಯಿತು. ವೀರತ್ವಕ್ಕೆ ವಿಸ್ಮಯವು ಬಚ್ಚಿಟ್ಟುಕೊಳ್ಳುವ ಮನೆಯಾಯ್ತು. ಕೈಮೇಲೆ ಭಾಷೆಯಿಡುತ್ತಾ ಒಬ್ಬೊಬ್ಬರಾಗಿ ಕುದುರೆ ಸವಾರರು ಹಿಂದಿರುಗಿದರು (ಇದು ಶಕುನಿಯ ಸೈನ್ಯದ ಆಗಿನ ಸ್ಥಿತಿ)
ಪದಾರ್ಥ (ಕ.ಗ.ಪ)
ಹಿರಿಯುಬ್ಬಣ-ಆಯುಧ ವಾಘೆ-ಕುದುರೆಯ ಲಗಾಮು, ಹಗ್ಗ, ಅಂಕಣೆ-ಕುದುರೆಯ ಮೇಲಕ್ಕೆ ಹತ್ತಲು ಕಾಲಿಡಲು ಅನುಕೂಲವಾಗುವಂತೆ ಜೀನಿಗೆ ಅಳವಡಿಸಿದ ಬಳೆ, ರಿಕಾಪು, ಅಂಘ್ರಿ-ಪಾದ, ಬಗೆ-ಮನಸ್ಸು, ಮಡಿ-ಮೀಸಲು, ಮಸಳಿಸು-ಕಾಣದಾಗು, ಕ್ಷೀಣವಾಗು, ಬೆಗಡು-ಆಶ್ಚರ್ಯ, ಭಯ, ಹುದುವನೆ-ಬಚ್ಚಿಟ್ಟುಕೊಳ್ಳವ ತಾಣ (ಹುದು+ಮನೆ).
ಮೂಲ ...{Loading}...
ಹೆಗಲ ಹಿರಿಯುಬ್ಬಣದ ಕೈತಳ
ಮಗುಚಲಮ್ಮದ ವಾಘೆಯಲಿ ಕೈ
ಬಿಗಿದುದಂಕಣೆದೊಡಕಿನಲಿ ಮರನಾದವಂಘ್ರಿಗಳು
ಬಗೆಯ ಮಡಿ ಮಸಳಿಸಿತು ವೀರಕೆ
ಬೆಗಡು ಹುದುವನೆಯಾಯ್ತು ಕೈನಂ
ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು ॥13॥
೦೧೪ ಬನ್ದುದಾ ಮೋಹರ ...{Loading}...
ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೈನ್ಯ ವೇಗವಾಗಿ ಶಕುನಿಯ ಸೈನ್ಯದೆಡೆಗೆ ಬಂತು. ಕೌರವ ಬಲವು ಎದುರು ನಿಂತಿತು. ಕುದುರೆಗಳು ವೇಗವಾಗಿ ಓಡಿದುವು. ದೊಡ್ಡ ಆನೆಗಳು ಮುಂಭಾಗದಲ್ಲಿ ಆಕ್ರಮಣ ಮಾಡಿದವು. ಪಾಂಡವ ಬಲ ನೊಂದಿತು. ಈಚೆಯ ವೀರರು (ಕೌರವ ವೀರರು) ಗಾಯಗೊಂಡರು. ಉಭಯ ಪಕ್ಷಗಳವರೂ ನೆಲಕ್ಕೆ ಬಿದ್ದರು. ಸೈನ್ಯವು ರಕ್ತಸಮುದ್ರದಲ್ಲಿ ಮುಳುಗಿತು.
ಪದಾರ್ಥ (ಕ.ಗ.ಪ)
ಸಘಾಡ-ರಭಸ, ವೇಗ, ಸೂಠಿ-ವೇಗ, ತೂಳಿದವು-ಆಕ್ರಮಣ ಮಾಡಿದವು, ಮುನ್ನುಗ್ಗಿದವು, ಸರಿಸ-ಮುಂಭಾಗ, ಸಾಲು, ಸಮೀಪ.
ಮೂಲ ...{Loading}...
ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ ॥14॥
೦೧೫ ಜಾರಿದನೆ ಕುರುಪತಿಯಕಟ ...{Loading}...
ಜಾರಿದನೆ ಕುರುಪತಿಯಕಟ ಮೈ
ದೋರನೇ ನಮಗೂರುಗಳ ಕೊಡ
ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ
ತೋರಿಸನೆ ಖಂಡೆಯದ ಸಿರಿ ಮೈ
ದೋರಹೇಳೋ ಕರೆಯೆನುತ ತಲೆ
ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕಟಾ, ದುರ್ಯೋಧನ ತಪ್ಪಿಸಿಕೊಂಡು ಹೋದನೇ, ಕಾಣಲು ಸಿಕ್ಕುವುದಿಲ್ಲವೇ, ನಮಗೆ ನಾವು ಕೇಳಿದ ಊರುಗಳನ್ನು (ಅಥವಾ ತೊಡೆಗಳನ್ನು) ಕೊಡದೇ, ಕಾಳಗವನ್ನೇ ಕೊಟ್ಟ. ಆದರೆ ಮತ್ತೆ ಕೊಟ್ಟಕಾಳಗವನ್ನು ಹಿಂದೆ ಕೊಂಡನಲ್ಲಾ, ತನ್ನ ಖಡ್ಗದ ಸಂಪತ್ತನ್ನು ತೋರಿಸುವುದಿಲ್ಲವೇ, ಅವನು ತನ್ನ ಇರುವಿಕೆಯನ್ನು ತೋರಿಸಲಿ ಕರೆ - ಎನ್ನುತ್ತಾ ಭೀಮಾರ್ಜುನರು ಶಕುನಿಯ ಸೈನ್ಯದಲ್ಲಿ ಕಾಣಿಸಿಕೊಂಡರು.
ಪದಾರ್ಥ (ಕ.ಗ.ಪ)
ಜಾರು-ನುಸುಳು, ತಪ್ಪಿಸಿಕೊಳ್ಳು, ಊರು-ತೊಡೆ, ಗ್ರಾಮ, ಖಂಡೆಯ-ಖಡ್ಗ, ಸೌಬಲ-ಸುಬಲ ದೇಶದ ರಾಜಪುತ್ರನಾದ ಶಕುನಿ
ಮೂಲ ...{Loading}...
ಜಾರಿದನೆ ಕುರುಪತಿಯಕಟ ಮೈ
ದೋರನೇ ನಮಗೂರುಗಳ ಕೊಡ
ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ
ತೋರಿಸನೆ ಖಂಡೆಯದ ಸಿರಿ ಮೈ
ದೋರಹೇಳೋ ಕರೆಯೆನುತ ತಲೆ
ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ ॥15॥
೦೧೬ ಫಡಫಡೆಲವೋ ಪಾರ್ಥ ...{Loading}...
ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಫಡಫಡಾ, ಎಲವೋ ಪಾರ್ಥ, ದುರ್ಯೋಧನ ಅಡಗಿಕೊಳ್ಳುತ್ತಾನೆಯೇ, ನಿನ್ನ ಮಾಂಸವನ್ನು ತರಿದು ಬೇತಾಳಗಳಿಗೆ ಬಡಿಸುವುದಿಲ್ಲವೇ, ನೀನು ರಾಜನನ್ನು ನಿದ್ರೆಯಿಂದ ಎಚ್ಚರಿಸುವ ಮಂಗಳ ಪಾಠಕನೇ, ತಡೆಯಿಲ್ಲದೇ, ಇತರರ ಮೇಲ್ಮೆಯನ್ನು ಕಡೆಗಣಿಸಿ, ಹೀನಾಯವಾಗಿ ಮಾತನಾಡಿ ಫಲವೇನು - ಎನ್ನುತ್ತ ಸುಶರ್ಮನು ಸಮಸಪ್ತಕರ ಸೈನ್ಯದೊಡಗೂಡಿ, ಅರ್ಜುನನನ್ನು ತಡೆದು ನಿಲ್ಲಿಸಿದ.
ಪದಾರ್ಥ (ಕ.ಗ.ಪ)
ಅಡಗು-ಅವಿತುಕೊಳ್ಳು, ಮಾಂಸ, ವೇತಾಳ-ಬೇತಾಳ, ವೈತಾಳಿಕ-ರಾಜನನ್ನು ಎಚ್ಚರಿಸುವ ಮಂಗಳ ಪಾಠಕ, ಗಡಬಡಿಸು-ತಡೆಯಿಲ್ಲದೆ ಮಾತನಾಡು, ಕೆಡೆನುಡಿ-ಹೀಗಳೆ
ಟಿಪ್ಪನೀ (ಕ.ಗ.ಪ)
1)ಸುಶರ್ಮ-ತ್ರಿಗರ್ತದೇಶದ ರಾಜ, ದುರ್ಯೋಧನನ ಆಪ್ತ ಮಿತ್ರ, 2)ಸಮಸಪ್ತಕರು-ಸಂಶಪ್ತಕರು, ಯುದ್ಧದಲ್ಲಿ ಶಪಥಮಾಡಿ ಯುದ್ಧ ಮಾಡುವವರು, ತ್ರಿಗರ್ತರಾಜನಾದ ಸುಶರ್ಮ, ಅವನ ತಮ್ಮಂದಿರಾದ ಸತ್ಯೇಷು, ಸತ್ಯಕರ್ಮ, ಸತ್ಯದೇವ, ಸತ್ಯರಥ ಈ ಐದು ಜನಕ್ಕೆ ಮಹಾಭಾರತದಲ್ಲಿ ಈ ಹೆಸರಿದೆ. ಇವರು ಶಪಥಮಾಡಿ ಯುದ್ಧಕ್ಕೆ ಹೊರಟ ವಿವರಕ್ಕೆ ದ್ರೋಣ ಪರ್ವದ ಸಂಧಿ 2, ಪದ್ಯಗಳು 4 ರಿಂದ 9ರ ವರೆಗೆ ನೋಡಿ.
ಮೂಲ ...{Loading}...
ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ ॥16॥
೦೧೭ ಮುತ್ತಿದವು ರಥವೇಳನೂರರು ...{Loading}...
ಮುತ್ತಿದವು ರಥವೇಳನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸಿದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದೆನೆ ಕೈದುಗಳ ರುಚಿ ವೇಢೈಸಿತರ್ಜುನನ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳುನೂರು ಅರವತ್ತು ರಥಗಳು, ಐದುನೂರು ಕುದುರೆಗಳು, ಸಾವಿರ ಮದಿಸಿದ ಆನೆಗಳು, ಇಪ್ಪತ್ತು ಸಾವಿರ ಕಾಲಾಳುಗಳು ಒಟ್ಟಾಗಿ ಮುತ್ತಿಗೆ ಹಾಕಿದುವು. ಬಾಣಗಳು ವೇಗವಾಗಿ ದೇಹದಲ್ಲಿ ನಾಟಿದುವು. ಎರಡೂ ಕೈಗಳಲ್ಲಿ ಹಿಡಿದ ಕತ್ತಿಗಳು ಹೊಳೆದುವು. ಯುದ್ಧದಲ್ಲಿ ಮುಖ ಮುಚ್ಚಿ ಹೋಯಿತೋ ಎಂಬಂತೆ ಆಯಿತು. ಆಯುಧಗಳ ಪ್ರಕಾಶವು ಅರ್ಜುನನನ್ನು ಆವರಿಸಿತು.
ಪದಾರ್ಥ (ಕ.ಗ.ಪ)
ತೆತ್ತಿಸು-ನಾಟು, ಮುಚ್ಚು, ಪೋಣಿಸು, ದೂಹತ್ತಿ-ಎರಡು ಕೈಗಳಿಂದ ಹಿಡಿಯುವ ಕತ್ತಿ, ಕೆತ್ತುದು-ಮುಚ್ಚಿ ಹೋಯಿತು, ಪ್ರಕಾಶವಾಯಿತು, ರುಚಿ-ಪ್ರಕಾಶ, ಕಾಂತಿ, ಸವಿ, ವೇಢೈಸು-ಆವರಿಸು, ಮುಚ್ಚು, ಸುತ್ತ್ತುವರಿ.
ಮೂಲ ...{Loading}...
ಮುತ್ತಿದವು ರಥವೇಳನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸಿದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದೆನೆ ಕೈದುಗಳ ರುಚಿ ವೇಢೈಸಿತರ್ಜುನನ ॥17॥
೦೧೮ ಶಕುನಿ ಸಹದೇವನನುಳೂಕನು ...{Loading}...
ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿಯು ಸಹದೇವನನ್ನು ಉಳೂಕನು ನಕುಲನನ್ನು ದುರ್ಯೋಧನನ ತಮ್ಮಂದಿರು ಆಶ್ಚರ್ಯಕರವಾಗಿ ಬಿಲ್ಲಿನಿಂದ ಬಾಣಪ್ರಯೋಗ ಮಾಡುವ ಭೀಮನನ್ನು ಕೆಣಕಿದರು. ಅಕಟ, ಅರ್ಜುನ - ಎನ್ನುತ್ತಾ ಸಮಸಪ್ತಕರು ಮುಗಿಬಿದ್ದರು. ನೂರುಗಜ ದೂರದಲ್ಲಿ ಸಂಪೂರ್ಣ ಸೈನ್ಯದ ಸಮೀಪದಲ್ಲಿ ದುರ್ಯೋಧನ ನಿಂತನು.
ಪದಾರ್ಥ (ಕ.ಗ.ಪ)
ಚಕಿತಚಾಪ-ಆಶ್ಚರ್ಯಕರ ರೀತಿಯಲ್ಲಿ ಬಿಲ್ಲಿನಿಂದ ಬಾಣ ಪ್ರಯೋಗಿಸುವವ (ಭೀಮ)
ಟಿಪ್ಪನೀ (ಕ.ಗ.ಪ)
ಉಳೂಕ-
ಉಲೂಕನು ಶಕುನಿಯ ಮಗ. ಸಂಧಿಯ ಪ್ರಸ್ತಾವಗಳೆಲ್ಲ ಮುರಿದು ಬಿದ್ದ ಮೇಲೆ ಪಾಂಡವರು ಹಿರಣ್ಯವತೀ ನದಿಯ ಪ್ರದೇಶದಲ್ಲಿ ಸೇನೆಯನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾಗ ದುರ್ಯೋಧನನು ಈ ಉಲೂಕನನ್ನು ಪಾಂಡವರ ಬಳಿಗೆ ಒಂದು ಸಂದೇಶ ಸಮೇತ ಕಳುಹಿಸುತ್ತಾನೆ. ಪಾಂಡವರ ಸಮಸ್ತ ಮಿತ್ರ ನಾಯಕರೆದುರಿಗೆ ಅವರನ್ನು ತೇಜೋವಧೆ ಮಾಡುವುದು ಕೌರವನ ಉದ್ದೇಶ. ತುಂಬ ಉದ್ಧಟತನದ ನಿಷ್ಠುರೋಕ್ತಿಗಳನ್ನು ಹೇಳಿ ಕಳುಹಿಸುತ್ತಾನೆ. ಮೊದಲೇ ಉಲೂಕನು ಪಾಂಡವ ದ್ವೇಷಿ. ಅವನು ಧೈರ್ಯವಾಗಿ ಕೌರವನ ಸಂದೇಶವನ್ನು ಚೆನ್ನಾಗಿ ಬಣ್ಣ ಹಚ್ಚಿ ಹೇಳುತ್ತಾನೆ. ಉದ್ಯೋಗಪರ್ವದ 160ನೇ ಪರ್ವದಿಂದ ನಾಲ್ಕು ಪರ್ವಗಳಲ್ಲಿ ಈ ಬಗೆಗೆ ದೀರ್ಘ ವಿವರಗಳಿವೆ.
ಪಾಂಡವ ಸಮಸ್ತರನ್ನು ಕೆರಳಿಸುವುದು, ಹೆದರಿಸುವುದು ಕೌರವನ ಉದ್ದೇಶವಾಗಿತ್ತು. ಉಲೂಕನು ಒಬ್ಬೊಬ್ಬರಾಗಿ ಪಾಂಡವರೈವರ ತೇಜೋವಧೆ ಮಾಡುವುದಲ್ಲದೆ ಶ್ರೀ ಕೃಷ್ಣ, ವಿರಾಟ, ದ್ರುಪದ, ಧೃಷ್ಟದ್ಯುಮ್ನರುಗಳನ್ನು ಕೆರಳಿಸಲು ನೋಡುತ್ತಾನೆ. ‘ಮಾರ್ಜಾಲ ಸಂನ್ಯಾಸ ಬೇಡ. ಧೈರ್ಯವಾಗಿ ಹೋರಾಡು’ ಎಂಬುದು ಧರ್ಮರಾಯನಿಗೆ ಸಿಕ್ಕಿದ ಸಂದೇಶ.
ಈ ಸಂದೇಶದ ಪ್ರಕಾರ ಭೀರ್ಮಾರ್ಜುನರು ಅಡುಗೆ ಭಟ್ಟರು ಹಾಗೂ ಹೆಂಗಸರು, ತನ್ನ ಬಿಲ್ಲು ತಾಳೆ ಮರದಷ್ಟಿದೆ ಎಂಬ ಅಹಂಕಾರದ ಅರ್ಜುನನಿಗೆ ಶ್ರೀ ಕೃಷ್ಣನ ಸಹಾಯವಿದೆ ಎಂಬ ಕೊಬ್ಬು ಬೇರೆ. ಆದರೆ ನೂರು ಅರ್ಜುನರು ಬಂದರೂ ಕೌರವರ ಹೆದರುವುದಿಲ್ಲವಂತೆ! ಭೀಮಾರ್ಜುನಾದಿಗಳಿಗೆ ದ್ರೋಣ, ಭೀಷ್ಮರ ದಿವ್ಯಾಸ್ತ್ರಗಳ ವೈಭವ ಗೊತ್ತಿಲ್ಲ.
ಅವರಿಬ್ಬರೂ ದ್ರೋಣ, ಭೀಷ್ಮರ ಹೊಡೆತಗಳನ್ನು ತಾಳಲಾಗದೆ ಉರುಳಿ ಬೀಳುತ್ತಾರೆ. ದುಶ್ಯಾಸನನ ರಕ್ತವನ್ನು ಕುಡಿಯಲಾಶಿಸಿರುವ ಭೀಮನ ಗತಿ ಏನಾಗುತ್ತದೆಂಬುದನ್ನು ಹೇಳುತ್ತಾನೆ. ‘ರಾಜ್ಯ ಕಳೆದುಕೊಂಡು ಅನುಭವಿಸಿದ ಕ್ಲೇಶ ಮತ್ತು ದ್ರೌಪದಿಗೆ ಆದ ಅವಮಾನಗಳನ್ನು ನೆನೆದು ನೀವು ಕೂಡಲೇ ಯುದ್ದಕ್ಕೆ ಬನ್ನಿ ನಾವು ಸಿದ್ಧರಾಗಿದ್ದೇವೆ’ ಎಂದೂ ಕೌರವ ಅವರನ್ನೆಲ್ಲ ಆಹ್ವಾನಿಸುತ್ತಾನೆ. ಶ್ರೀಕೃಷ್ಣನಿಗಂಗೂ ತುಂಬ ಚುಚ್ಚುವ ಕಟುಮಾತುಗಳು ‘ಅಯ್ಯಾ ಕೃಷ್ಣ, ಮಾಟ-ಮಂತ್ರಗಳಲ್ಲಿ ಪ್ರವೀಣ ನೀನು.
‘ಅಂದು ರಾಜಸಭೆಯಲ್ಲಿ ಎಂಥದೋ ಮಾಯಾಜಾಲ ಹೂಡಿ ತಪ್ಪಿಸಿಕೊಂಡಂತೆ ನಾಳಿನ ಯುದ್ಧದಲ್ಲ್ಲಿ ನೀನು ತಪ್ಪಿಸಿಕೊಳ್ಳುತ್ತಾರೆ…’ ಬರಿಯ ಪಾಂಡವರಿಗೇ ಅಲ್ಲದೆ ಧೃಷ್ಟದ್ಯುಮ್ನಾದಿಗಳಿಗೂ ಸಂದೇಶಗಳಿವೆ. ಕೌರವನ ದೃಷ್ಟಿಯಲ್ಲಿ ವಿರಾಟ, ದ್ರುಪದರು ತುಂಬ ಉನ್ನತ ಮಟ್ಟದ ಜನ. ಆದರೆ ಅವರು ನೀಚರ ಸಹವಾಸಕ್ಕೆ ಬಿದ್ದು ಹಾಳಾಗಲು ಹೊರಟಿದ್ದಾರೆ.
ಸಹಜವಾಗಿಯೇ ಪಾಂಡವರು ಕೆರಳುತ್ತ ಪ್ರತಿ ಸಂದೇಶವನ್ನು ಕಳಿಸುತ್ತಾರೆ. ವ್ಯರ್ಥವಾಗಿ ಕೌರವನು ಭೀಷ್ಮಾದಿಗಳ ಸಾವಿಗೆ ಹದಿ ಹಾಕಿದ್ದಾನೆಂದು ಆರೋಪಿಸುತ್ತಾರೆ. ಕೌರವನಿಗೆ ಕಳಿಸಿದ ಉತ್ತರವೂ ಉಗ್ರವಾಗಿದೆ. ‘ಅಯ್ಯಾ ಕೌರವ! ಎಂದೂ ನೀನು ಮನುಷ್ಯನಂತೆ ನಡೆದುಕೊಳ್ಳಲಿಲ್ಲ. ಈಗ ಯುದ್ಧದಲ್ಲಾದರೂ ಪ್ರಾಮಾಣಿಕವಾಗಿ ನಡೆದುಕೋ’ ಉಲೂಕ ತಾಂಬೂಲಾಭರಣಗಳಿಂದ ಸತ್ಕೃತನಾಗಿ ಹಿಂದಿರುಗಿದ. ಆದರೆ ಯುದ್ಧದಲ್ಲಿ ಸಹದೇವನಿಂದ ಅವನು ಮೃತನಾದ.
ಮೂಲ ...{Loading}...
ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ ॥18॥
೦೧೯ ಏರಿದರು ಸಮಸಪ್ತಕರು ...{Loading}...
ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸಪ್ತಕರು ಯುದ್ಧದಲ್ಲಿ ಮೇಲುಗೈಯಾದರು. ಅರ್ಜುನನ ಮೇಲೆ ತಮ್ಮ ಶಕ್ತಿಯನ್ನು ತೋರಿಸಿದರು. ಅರ್ಜುನನ ಕವಚಗಳ ಮೂಲಕ ಹಾದ ಬಾಣಗಳು ಅವನ ದೇಹದಲ್ಲಿ ಗಾಯಗಳನ್ನುಂಟು ಮಾಡಿದುವು. ಅವನ ಕುದುರೆಗಳು ಹೆಜ್ಜೆಹೆಜ್ಜೆಗೂ ನೊಂದವು. ನೂರು ಬಾಣಗಳಲ್ಲಿ ಅದರ ನಂತರ ನಾನೂರು ಬಾಣಗಳಲ್ಲಿ ಅದರ ಬಳಿಕ ಆರು ಸಾವಿರ ಬಾಣಗಳಿಂದ ಅರ್ಜುನ ಶತ್ರುಬಲವನ್ನು ಸಂಹಾರ ಮಾಡಿದ.
ಪದಾರ್ಥ (ಕ.ಗ.ಪ)
ಕೈದೋರು-ತಮ್ಮ ಪರಾಕ್ರಮವನ್ನು ತೋರಿಸು, ಜೋಡು-ಕವಚ, ಅಶ್ವಚಯ-ಕುದುರೆಗಳ ಸಮೂಹ, ವಿಶಿಖ-ಬಾಣ
ಮೂಲ ...{Loading}...
ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ ॥19॥
೦೨೦ ಕಡಿವಡೆದವೇಳ್ನೂರು ರಥ ...{Loading}...
ಕಡಿವಡೆದವೇಳ್ನೂರು ರಥ ಮುರಿ
ವಡಿದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು ಸಾವಿರದ
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳುನೂರು ರಥಗಳು ಕತ್ತರಿಸಿಹೋದುವು. ಐದುನೂರು ಕುದುರೆಗಳು ಮುರಿದುಬಿದ್ದವು. ಐದುನೂರು ಆನೆಗಳು ಮುಮ್ಮುಖವಾಗಿ ಬಿದ್ದವು. ಇಪ್ಪತ್ತು ಸಾವಿರ ವೀರರು ಭೂಮಿಗೆ ಉದುರಿಬಿದ್ದರು. ತ್ರಿಗರ್ತರ ಸೈನ್ಯವು ಕುರುಕ್ಷೇತ್ರದಲ್ಲಿ ಅರ್ಜುನನನ್ನು ಬಿಡದೆ ಬಳಸಲು, ತ್ರಿಗರ್ತರ ಸೈನ್ಯವೆಲ್ಲವೂ ಮಡಿಯಿತು.
ಪದಾರ್ಥ (ಕ.ಗ.ಪ)
ಮುರಿವಡಿ-ಮುರಿದುಬೀಳು, ಸತ್ತುಬೀಳು, ಮುಂಗೆಡೆ-ಮುಮ್ಮುಖವಾಗಿ ಬೀಳು, ಕವಚಿಬೀಳು, ಅನಿಬರು-ಎಲ್ಲರೂ
ಮೂಲ ...{Loading}...
ಕಡಿವಡೆದವೇಳ್ನೂರು ರಥ ಮುರಿ
ವಡಿದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು ಸಾವಿರದ
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ ॥20॥
೦೨೧ ದೊರೆಗಳವರಲಿ ಸತ್ಯಕರ್ಮನು ...{Loading}...
ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತ್ರಿಗರ್ತರಲ್ಲಿ ದೊರೆಗಳಾದ ಸತ್ಯಕರ್ಮ ಮತ್ತು ಸುಶರ್ಮ ದ್ರೋಣನ ನಾಯಕತ್ವದ ಯುದ್ಧದ ಎರಡನೆಯ ದಿನ ಅಗ್ನಿಯ ಸಾಕ್ಷಿಯಲ್ಲಿ ಪ್ರಮಾಣಮಾಡಿದ್ದರು. ಅವರುಗಳು ಯುದ್ಧದ ಶಪಥಕ್ಕೆ ಬೇಸರಿಸಿಹೋಗಿ ಪರಾಕ್ರಮವನ್ನು ಮರೆತು ಧನಂಜಯನ ಬಾಣಗಳಿಂದ ಕೆಳಗೆಬಿದ್ದರು.
ಪದಾರ್ಥ (ಕ.ಗ.ಪ)
ಅಗ್ನಿಸಾಕ್ಷಿಕ-ಅಗ್ನಿಯ ಸಾಕ್ಷಿಯಲ್ಲಿ ಪ್ರಮಾಣ ಮಾಡಿ ಭಾಷೆ ಕೊಡುವುದು, ಧುರದ- ಯುದ್ಧದ, ಸಂಗರ-ಸಂಗ್ರಾಮ, ಯುದ್ಧ, ಪರಿಗತ-ಮರೆತುಹೋದ, ಧನಂಜಯ-ಅರ್ಜುನ, ಅಗ್ನಿ
ಟಿಪ್ಪನೀ (ಕ.ಗ.ಪ)
ದ್ರೋಣ ಸಮರದೊಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ (ಹೆಚ್ಚಿನ ವಿವರಗಳಿಗೆ ದ್ರೋಣಪರ್ವದ 4ನೆಯ ಸಂಧಿಯ 4 ರಿಂದ 9ರವರೆಗಿನ ಪದ್ಯಗಳನ್ನು ನೋಡಿ).
ಮೂಲ ...{Loading}...
ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ॥21॥
೦೨೨ ತರಿದನಗ್ಗದ ಸತ್ಯಕರ್ಮನ ...{Loading}...
ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರಿವನಿನ್ನಾಹವ ವಿಲಂಬವ ಮಾಡಬೇಡೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ, ಸತ್ಯಕರ್ಮನನ್ನು ಮತ್ತು ಯುದ್ಧವನ್ನು ಸಂಭಾಳಿಸುತ್ತಿದ್ದ ತ್ರಿಗರ್ತರ ದೊರೆ ಸುಶರ್ಮನನ್ನು, ತರಿದು ಹಾಕಿದ. ಅವನ ಸಹೋದರರು ಮತ್ತು ಗೋತ್ರ ಬಾಂಧವರನ್ನು ಒರಸಿಹಾಕಿದ. ದುರ್ಯೋಧನನೆಲ್ಲಿ, ಇಲ್ಲಿಗೆ ಬರಲಿ ಅವನ ಆಪ್ತರಾದವರನ್ನು ಯುದ್ಧಭೂಮಿಯಿಂದ ಕೊನೆಗಾಣಿಸಿದ್ದೇನೆ. ಇನ್ನು ಯುದ್ಧಕ್ಕೆ ವಿಳಂಬ ಮಾಡಬೇಡ - ಎಂದು ಅರ್ಜುನ ಹೇಳಿದ.
ಪದಾರ್ಥ (ಕ.ಗ.ಪ)
ಧುರ-ಯುದ್ಧ, ಭಾರ, ಸಂತೈಸು-ಸಂಭಾಳಿಸು, ನಿರ್ವಹಿಸು, ಸಹಭವ-ಸಹೋದರ, ಗೋತ್ರಬಾಂಧವರು-ಒಂದೇ ಗೋತ್ರದಲ್ಲಿ ಹುಟ್ಟಿದ ಬಂಧುಗಳು, ಒರಸು-ಒರಸಿಹಾಕು, ನಿರ್ನಾಮಮಾಡು, ಹರಿವ-ಕೊನೆಗಾಣಿಸು, ನಾಶ, ವಿಲಂಬ-ವಿಳಂಬ, ತಡ
ಮೂಲ ...{Loading}...
ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರಿವನಿನ್ನಾಹವ ವಿಲಂಬವ ಮಾಡಬೇಡೆಂದ ॥22॥
೦೨೩ ಇತ್ತ ಭೀಮನ ...{Loading}...
ಇತ್ತ ಭೀಮನ ಕೂಡೆ ನೂರರು
ವತ್ತು ಗಜ ಸಹಿತರಿಭಟರೊಳು
ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು
ಹೆತ್ತಳವ್ವೆ ವಿರೋಧಿಸೇನೆಯ
ಮತ್ತ ಗಜಘಟೆಗೋಸುಗರವಿವು
ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ, ನೂರರುವತ್ತು ಆನೆಗಳ ಸಹಿತ ಭೀಮನ ವಿರುದ್ಧ ಮತ್ತು ಶತ್ರುಸೈನ್ಯದ ವಿರುದ್ಧ, ಅಂಧ ನೃಪನಾದ ಧೃತರಾಷ್ಟ್ರನ ಮಗ ದುರಾಚಾರಿಯಾದ ಸುದರ್ಶನನೆಂಬುವವನು ಮೇಲೆಬಿದ್ದ. ನನ್ನ ತಾಯಿ ಕುಂತಿಯು ನನ್ನನ್ನು ವಿರೋಧಿ ಸೈನ್ಯದ ಮದಿಸಿದ ಆನೆಗಳನ್ನು ಕೊಲ್ಲಲೆಂದೇ ಹೆತ್ತಿದ್ದಾಳೆ. ಇವುಗಳನ್ನು ಕೊಂದುಬಿಟ್ಟರೆ ಪುನಃ ಸಿಕ್ಕುವುದಿಲ್ಲವೆಂದು ಭೀಮ ಮನಸ್ಸಿನಲ್ಲಿ ಕಳವಳಿಸಿದ.
ಪದಾರ್ಥ (ಕ.ಗ.ಪ)
ಉದ್ವೃತ್ತ-ದುರಾಚಾರಿ, ನಡೆತಗೆಟ್ಟವ, ಉಮ್ಮಳಿಸು-ವ್ಯಥೆ, ಕಳವಳ, ದುಃಖ
ಮೂಲ ...{Loading}...
ಇತ್ತ ಭೀಮನ ಕೂಡೆ ನೂರರು
ವತ್ತು ಗಜ ಸಹಿತರಿಭಟರೊಳು
ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು
ಹೆತ್ತಳವ್ವೆ ವಿರೋಧಿಸೇನೆಯ
ಮತ್ತ ಗಜಘಟೆಗೋಸುಗರವಿವು
ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ ॥23॥
೦೨೪ ಸೊಕ್ಕಿದಾನೆಯ ಕೈಯ ...{Loading}...
ಸೊಕ್ಕಿದಾನೆಯ ಕೈಯ ಕದಳಿಯ
ನಿಕ್ಕಿ ಬಿಡಿಸುವನಾರು ಪವನಜ
ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ
ಇಕ್ಕಡಿಯ ಬಸುರುಚ್ಚುಗಳ ನರ
ಸುಕ್ಕುಗಳ ನಾಟಕದವೊಲು ಕೈ
ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮದವೇರಿದ ಆನೆಯ ಕೈಗೆ ಸಿಕ್ಕಿದ ಬಾಳೆಯ ಮರವನ್ನು ಬಿಡಿಸಿಕೊಳ್ಳಲು ಯಾರಿಗೆ ತಾನೆ ಸಾಧ್ಯ. ಭೀಮನು ಅಧಿಕಶಕ್ತಿಯಿಂದ ಆನೆಗಳ ಸಮೂಹವನ್ನು ಉತ್ಸಾಹದಿಂದ ಮುರಿದುಹಾಕಿದ. ಹೊಟ್ಟೆಯ ಎರಡೂ ಭಾಗಗಳು ಸಡಿಲವಾದುವು, ನರಗಳು ಸುಕ್ಕಾಗಿರಲು, ನಾಟಕವೋ ಎಂಬಂತೆ ಭೀಮ ಕೈಇಟ್ಟ ಆನೆಗಳ ಹಿಂಡು ನಿಮಿಷ ಮಾತ್ರದಲ್ಲಿ ನಿರ್ನಾಮವಾದುವು.
ಪದಾರ್ಥ (ಕ.ಗ.ಪ)
ಎಕ್ಕತುಳದಲಿ-ಅಧಿಕಶಕ್ತಿಯಿಂದ, ಒಮ್ಮೆಗೆ, ಬಸುರುಚ್ಚು-ಹೊಟ್ಟೆ ಸಡಿಲವಾಗಿ.
ಮೂಲ ...{Loading}...
ಸೊಕ್ಕಿದಾನೆಯ ಕೈಯ ಕದಳಿಯ
ನಿಕ್ಕಿ ಬಿಡಿಸುವನಾರು ಪವನಜ
ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ
ಇಕ್ಕಡಿಯ ಬಸುರುಚ್ಚುಗಳ ನರ
ಸುಕ್ಕುಗಳ ನಾಟಕದವೊಲು ಕೈ
ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ ॥24॥
೦೨೫ ಕೆಡಹಿ ದುರ್ಯೋಧನನ ...{Loading}...
ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ತಮ್ಮನನ್ನು ಕೆಳಕ್ಕೆ ಕೆಡವಿ ಮಾಂಸಗಳನ್ನು ಚೂರುಚೂರಾಗಿ ಕತ್ತರಿಸಿದನು. ನಕುಲನು ಇಪ್ಪತ್ತೈದು ಬಾಣಗಳಲ್ಲಿ ಉಳೂಕನನ್ನು ಕಡಿದು ಬೀಸಾಡಿದ. ಯುದ್ಧಕ್ಕೆ ತೊಡಗಿದ ಸಹದೇವನು ಬಾಣಗಳ ಸಮೂಹದೊಂದಿಗೆ ಶಕುನಿಯ ಸೈನ್ಯವೆಂಬ ಸಮುದ್ರವನ್ನು ಮೊಗೆದ. ಶರಜಾಲದ ಝೇಂಕಾರಧ್ವನಿಯನ್ನು ಅಡಗಿಸಿದ.
ಪದಾರ್ಥ (ಕ.ಗ.ಪ)
ಅಡಗುದರಿ-ಮಾಂಸವನ್ನು ತುಂಡುತಂಡಾಗಿ ಕತ್ತರಿಸು,
ತುಡುಕು-ಹಿಡಿ, ಆತುರದಿಂದ ಹಿಡಿ,
ಮೋದು-ಅಪ್ಪಳಿಸು, ಹೊಡೆ,
ಝಂಕೃತಿ-ಧ್ವನಿ
ಮೂಲ ...{Loading}...
ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ ॥25॥
೦೨೬ ಎಲವೊ ಕಪಟದ್ಯೂತ ...{Loading}...
ಎಲವೊ ಕಪಟದ್ಯೂತ ಬಂಧದೊ
ಳಳಲಿಸಿದಲಾ ಪಾಪಿ ಕೌರವ
ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ
ಸಿಲುಕಿದೆಯಲಾ ನಮ್ಮ ಬಾಣದ
ಬಲೆಗೆ ನಿನ್ನನು ಕಾವನಾವವ
ನೆಲೆ ಕುಠಾರ ಎನುತ್ತ ನುಡಿದನು ನಗುತ ಸಹದೇವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೋ, ಕಪಟದ್ಯೂತದಲ್ಲಿ ನಮ್ಮನ್ನು ಸಿಕ್ಕಿಸಿ ಅಳಲಿಸಿದೆಯಲ್ಲವೇ, ಎಲಾ ಪಾಪಿ. ಕುರುವಂಶದ ತಲೆಗಳನ್ನು ಚಂಡಾಡಿದವನು ನೀನೋ ಅಥವ ನನ್ನ ಅಣ್ಣನಾದ ಭೀಮನೋ (ನೀನೇ ಕಾರಣ ಎಂಬ ಭಾವ). ನನ್ನ ಬಾಣದ ಬಲೆಗೆ ಸಿಲುಕಿದ ಮೃಗವಾದೆಯಲ್ಲಾ. ನಿನ್ನನ್ನು ಇನ್ನು ಯಾರು ಕಾಯುತ್ತಾರೆ ಎಲೆ ಕುಠಾರ ಎಂದು ನಗುತ್ತ ಸಹದೇವ ಶಕುನಿಯನ್ನು ಉದ್ದೇಶಿಸಿ ಮಾತನಾಡಿದ.
ಪದಾರ್ಥ (ಕ.ಗ.ಪ)
ಸೆಂಡು-ಚೆಂಡು, ಕುಠಾರ-ಕೊಡಲಿ, ವಂಶಕ್ಕೆ ಕೊಡಲಿಯಂತಿರುವವನು, ಕುಲವಿನಾಶಕ.
ಮೂಲ ...{Loading}...
ಎಲವೊ ಕಪಟದ್ಯೂತ ಬಂಧದೊ
ಳಳಲಿಸಿದಲಾ ಪಾಪಿ ಕೌರವ
ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ
ಸಿಲುಕಿದೆಯಲಾ ನಮ್ಮ ಬಾಣದ
ಬಲೆಗೆ ನಿನ್ನನು ಕಾವನಾವವ
ನೆಲೆ ಕುಠಾರ ಎನುತ್ತ ನುಡಿದನು ನಗುತ ಸಹದೇವ ॥26॥
೦೨೭ ವ್ಯರ್ಥವೆಲೆ ಸಹದೇವ ...{Loading}...
ವ್ಯರ್ಥವೆಲೆ ಸಹದೇವ ನಿನ್ನ ಕ
ದರ್ಥನಕೆ ಫಲವಿಲ್ಲ ನೀ ಕದ
ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ
ಪಾರ್ಥ ಭೀಮರ ಮರೆಯೊಳಿರ್ದು ನಿ
ರರ್ಥಕರನಿರಿದಿರಿದು ಜಯವ ಸ
ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೋ ಸಹದೇವ! ನಿನ್ನ ಅವಹೇಳನೆಯಿಂದ ಏನೂ ಫಲವಿಲ್ಲ. ನೀನು ದಿಟವಾಗಿಯೂ ಯುದ್ಧವನ್ನು ಅಪೇಕ್ಷಿಸಿದವನೇ ಆದರೆ ನಿನ್ನ ತೋಳ ಬಲವನ್ನು ತೋರಿಸು. ಭೀಮಾರ್ಜುನರ ಹಿಂದೆ ಇದ್ದುಕೊಂಡು ಕೆಲಸಕ್ಕೆ ಬಾರದವರನ್ನು ಇರಿದಿರಿದು, ನೀನು ಜಯವನ್ನು ಗಳಿಸಿದೆಯೆಂದು ಹೊಗಳಿಕೊಳ್ಳುತ್ತಿದ್ದೀಯೆ. ಫಡ! ಹೋಗು -ಎನ್ನುತ್ತಾ ಶಕುನಿ ಸಹದೇವನ ಮೇಲೆ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಕದರ್ಥನ-ತಿರಸ್ಕಾರ, ನೀಚಕಾರ್ಯ, ಕದನಾರ್ಥಿ-ಯುದ್ಧವನ್ನು ಅಪೇಕ್ಷಿಸುವವನು, ನಿರರ್ಥಕರು-ಕೆಲಸಕ್ಕೆ ಬಾರದವರು
ಮೂಲ ...{Loading}...
ವ್ಯರ್ಥವೆಲೆ ಸಹದೇವ ನಿನ್ನ ಕ
ದರ್ಥನಕೆ ಫಲವಿಲ್ಲ ನೀ ಕದ
ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ
ಪಾರ್ಥ ಭೀಮರ ಮರೆಯೊಳಿರ್ದು ನಿ
ರರ್ಥಕರನಿರಿದಿರಿದು ಜಯವ ಸ
ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ ॥27॥
೦೨೮ ಮರುಗದಿರು ನಿನ್ನುಭಯ ...{Loading}...
ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವೆನೇ ಭವದೀಯ ರಚಿತ ವಿಕಾರ ವಿಭ್ರಮವ
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿಯೇ, ದುಃಖಿಸಬೇಡ ನಿನ್ನ ಎರಡೂ ತೋಳುಗಳನ್ನು ತರಿದು ಬಾಯನ್ನು ಸೀಳುತ್ತೇನೆ. ನೀನು ಮಾಡಿದ ವಿಕಾರದ ಕೆಲಸಗಳಾದ ಮೋಸದ ಜೂಜು ಇತ್ಯಾದಿ ಭ್ರಮೆಯನ್ನು ನಾನು ಮರೆಯತ್ತೇನೆಯೆ! ವಿಶೇಷವಾದ ಬಾಣಗಳಿವೆ. ಪತತ್ರಿಯ ಮತ್ತೊಂದು ಹೆಸರು ನಿನಗೆ. ಇವೆರಡರ ಮಾರಾಟಕ್ಕೆ ಅವಕಾಶ ಮಾಡಿಕೊಡು - ಎಂದು ಸಹದೇವ ಪುನಃ ಹೊಡೆದ.
ಪದಾರ್ಥ (ಕ.ಗ.ಪ)
ಮರುಗು-ದುಃಖಿಸು, ಪಕ್ಷ-ಭುಜ, ರೆಕ್ಕೆ, ತುಂಡ-ಪಕ್ಷಿಯ ಕೊಕ್ಕು, ಬಾಯಿ,
ಪತತ್ರಿ-ಗರಿ ಉಳ್ಳದ್ದು, ಬಾಣ, ಪಕ್ಷಿ,
ಮರುವೆಸರು-ಬೇರೆಹೆಸರು, ಕೇಣಿ-ಉದ್ಯೋಗ, ಮಾರಾಟ
ಟಿಪ್ಪನೀ (ಕ.ಗ.ಪ)
ಶಕುನಿಯೆಂಬುದು ಒಂದು ಪಕ್ಷಿಯ ಹೆಸರು. ಈ ಪದ್ಯದಲ್ಲಿ ಕವಿ ಅದನ್ನು ಉತ್ತಮವಾದ ಶ್ಲೇಷೆಗೆ ಬಳಸಿಕೊಂಡಿದ್ದಾನೆ. ಹಾಗಾಗಿ ಶಕುನಿಯ ತೋಳುಗಳನ್ನು ಪಕ್ಷ (ರೆಕ್ಕೆ)ವೆಂದೂ, ಬಾಯನ್ನು ತುಂಡ(ಕೊಕ್ಕು)ವೆಂದೂ ಹೇಳಿದ್ದಾನೆ. ಶಕುನಿ ಪಕ್ಷಿಯ ಪತತ್ರಿಗಳನ್ನು (ಶಕುನಿಯ ಬಾಹುಗಳನ್ನು) ನನ್ನ ಪತತ್ರಿಗಳಿಗೆ (ಬಾಣಗಳಿಗೆ) ಮಾರಲು ಅವಕಾಶ ಮಾಡಿಕೊಡು - ಎಂದು ಸಹದೇವ ಕೇಳುತ್ತಿದ್ದಾನೆ. ಇಲ್ಲಿ ಶ್ಲೇಷೆಯನ್ನು ಕಾಣಬಹುದು. ಶಕುನಿ ಎಂಬಲ್ಲಿ ಶಕುನಿಯ ಹೆಸರು ಮತ್ತು ಪಕ್ಷಿ, ಪತತ್ರಿ ಎಂಬಲ್ಲಿ ರೆಕ್ಕೆ ಮತ್ತು ಬಾಣ.
ಮೂಲ ...{Loading}...
ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವೆನೇ ಭವದೀಯ ರಚಿತ ವಿಕಾರ ವಿಭ್ರಮವ
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ ॥28॥
೦೨೯ ಎಸಲು ಸಹದೇವಾಸ್ತ್ರವನು ...{Loading}...
ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥತುರಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವನು ಅಸ್ತ್ರ ಪ್ರಯೋಗ ಮಾಡಲು, ಶಕುನಿಯು ಕತ್ತರಿಸಿ, ಬಾಣಗಳ ಸಮೂಹದಿಂದ ಶತ್ರು ವೀರನಾದ ಸಹದೇವನನ್ನು ಮುಚ್ಚಿಹಾಕಿದನು. ಹರಿತವಾದ ಬಾಣಗಳು ರಥದ ತುದಿಯಲ್ಲಿ ನಾಟಿಕೊಂಡುವು. ಅತಿರಥನಾದ ಶಕುನಿಯ ಅಸಂಖ್ಯಾತ ಬಾಣಗಳನ್ನು ಸಹದೇವ ಸಣ್ಣಗೆ ತುಂಡುತುಂಡು ಮಾಡಿದನು. ರಥದ ಕುದುರೆಗಳನ್ನು ಭಯರಸದಲ್ಲಿ ಅದ್ದಿದನು, ಶಕುನಿಯನ್ನು ಉಜ್ಜಿಹಾಕಿದನು.
ಪದಾರ್ಥ (ಕ.ಗ.ಪ)
ಎಸಲು-ಎಸೆಯಲು, ಪ್ರಯೋಗಿಸಲು, ಶರೌಘ-ಬಾಣಗಳ ಗುಂಪು, ಉದ್ದು-ಉಜ್ಜಿಹಾಕು.
ಮೂಲ ...{Loading}...
ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥತುರಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ ॥29॥
೦೩೦ ತೇರು ಹುಡಿಹುಡಿಯಾಗೆ ...{Loading}...
ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜ
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿಯು ತೇರು ಪುಡಿಯಾಗುವಂತೆ ಹೊಡೆದನು. ಕುದುರೆಯ ಮೇಲೆ ಖಡ್ಗವನ್ನು ನೆಟ್ಟು, ಆರ್ಭಟೆಯಿಂದ ಸಹದೇವನ ಕಡೆಗೆ ಶಕುನಿ ಕುದುರೆಯನ್ನು ಓಡಿಸಿ ಬಿಟ್ಟ. ನೀನು ನಿಜವಾಗಿಯೂ ವೀರನಾಗಿದ್ದೀಯ, ಶಕುನಿ! ಜೂಜಿನ ಕಳ್ಳ ವಿದ್ಯೆಯನ್ನು ಬಿಟ್ಟೆಯಲ್ಲವೇ! ಧೈರ್ಯವಂತನಾಗಿರುವೆ! ಮಜ, ಭಾಪುರೇ ಎನ್ನುತ್ತ ಸಹದೇವ ಆ ಕುದುರೆಯನ್ನು ಕತ್ತರಿಸಿದ.
ಪದಾರ್ಥ (ಕ.ಗ.ಪ)
ವಾರುವ-ಕುದುರೆ, ಅಡಾಯುಧ-ಒಂದು ಬಗೆಯ ಕತ್ತಿ, ಅಭಿಮುಖಕ್ಕೆ-ಮುಂದಕ್ಕೆ, ಜಜ್ಝಾರ-ಧೈರ್ಯವಂತ, ವೀರ ಪೂತು-ಶಹಬ್ಬಾಸ್!
ಮೂಲ ...{Loading}...
ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜ
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ ॥30॥
೦೩೧ ಬಳಿಕ ಕಾಲಾಳಾಗಿ ...{Loading}...
ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕೆ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ ಶಕುನಿ ಕುದುರೆಯಿಂದಿಳಿದು ಕಾಲಾಳಾಗಿ ಖಡ್ಗವನ್ನು ಝಳಪಿಸುತ್ತ ಬರಲು, ಶಕ್ತ್ಯಾಯುಧದಿಂದ ಸಹದೇವ ತನ್ನ ಕೈಚಳಕವನ್ನು ಬಳಸಿ ಶಕುನಿಯನ್ನು ಹೊಡೆದನು. ಆ ಆಯುಧ ದುಷ್ಟನಾದ ಶಕುನಿಯ ಎದೆಯನ್ನು ಹಾಯ್ದು ಹಿಂಭಾಗದಲ್ಲಿಯೂ (ಬೆನ್ನಿನಲ್ಲಿ) ಕಾಣುವಂತೆ ಹೊರಗೆ ಚಾಚಿತು. ಗಾಂಧಾರ ಸೈನ್ಯ ದುಃಖಿಸಲು ಶಕುನಿಯು ದೇವವಧುಗಳ ತೋಳಿನಲ್ಲಿ ತೋರಿದ (ಸ್ವರ್ಗಸ್ಥನಾದ)
ಪದಾರ್ಥ (ಕ.ಗ.ಪ)
ಶಕ್ತಿ-ಒಂದು ಆಯುಧ, ಇಟ್ಟನು-ಹೊಡೆದನು, ಸುಬಲನಂದನ-ಸುಬಲರಾಜನ ಮಗ ಶಕುನಿ, ಒದೆದು-ನೂಕಿ, ಹಾಯ್ದು, ಅಪರಭಾಗ-ಹಿಂಭಾಗ, ಸುರತರುಣಿಯರು-ದೇವತಾ ಸ್ತ್ರೀಯರು.
ಮೂಲ ...{Loading}...
ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕೆ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ ॥31॥
೦೩೨ ಕವಿದುದಾ ಪರಿವಾರ ...{Loading}...
ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿಯ ಪರಿವಾರವೆಲ್ಲವೂ ಪ್ರಳಯಕಾಲದ ಅಗ್ನಿಯನ್ನು ತಿವಿಯುವ ತುಂಬಿಗಳಂತೆ, ಸಹದೇವನ ರಥದ ಮುಂದೆ ಒಟ್ಟುಗೂಡಿತು. ಸಹದೇವ ಆ ಚತುರ್ಬಲವೆಲ್ಲವನ್ನು ಒಂದು ಕಡೆಗೆ ನೂಕಿ, ನುಗ್ಗಿಬರುತ್ತಿದ್ದ ಶಕುನಿಯ ಸೈನ್ಯವನ್ನು ಶಾಶ್ವತವಾಗಿ ಸಮಾಧಾನ ಪಡಿಸುವಂತೆ, ನಿಮಿಷಾರ್ಧದಲ್ಲಿ ಕೊಂದುಹಾಕಿದ.
ಪದಾರ್ಥ (ಕ.ಗ.ಪ)
ವಡಬ-ಪ್ರಳಯಕಾಲದಲ್ಲಿ ಸಮುದ್ರದಲ್ಲಿ ಉದ್ಭವಿಸುವ ಕಿಚ್ಚು, ಅಗ್ನಿ, ತಿವಿವ-ಮುತ್ತುವ, ತಿವಿಯುವ, ಬವರಿಗ-ಯುದ್ಧ ಮಾಡುವವ, ಮಂಡಳಿಸು-ಸುತ್ತುವರಿ, ಒಟ್ಟುಗೂಡು, ತೆವರಿಸು - ಧ್ವಂಸ ಮಾಡು, ಸಂತವಿಸು-ಸಂತೈಸು, ಸಮಾಧಾನಗೊಳಿಸು
ಮೂಲ ...{Loading}...
ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ ॥32॥
೦೩೩ ಹರಿಬದಲಿ ಹೊಕ್ಕೆರಡು ...{Loading}...
ಹರಿಬದಲಿ ಹೊಕ್ಕೆರಡು ಸಾವಿರ
ತುರಗ ಬಿದ್ದವು ನೂರು ಮದಸಿಂ
ಧುರಕೆ ಖಂಡನವಾಯ್ತು ಪಯದಳವೆಂಟು ಸಾವಿರದ
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳ್ ಎಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ತೊಡಗಿದ ಎರಡು ಸಾವಿರ ಕುದುರೆಗಳು ಕೆಳಕ್ಕೆ ಬಿದ್ದವು. ನೂರು ಮದಗಜಗಳು ನಾಶವಾದವು. ಎಂಟುಸಾವಿರ ಕಾಲುದಳದ ಹಣೆಯಬರಹ ಅಳಿಸಿಹೋಯಿತು (ಮರಣ ಹೊಂದಿದರು), ನೂರು ರಥಗಳು ಶತ್ರುಬಾಣಗಳಿಂದ ಸಂಪೂರ್ಣ ನಾಶವಾದುವು. ಕುರುಕುಲ ಸಮುದ್ರವೆಂದು ಹೇಳುತ್ತಿದ್ದುದು ಈಗ ಕೇವಲ ವೈಭವ , ಪೂರ್ಣವಾಗಿ ಬರಿದಾಯಿತು, ರಾಜನೆ ಕೇಳು - ಎಂದ.
ಪದಾರ್ಥ (ಕ.ಗ.ಪ)
ಹರಿಬ-ಕೆಲಸ, ಉದ್ಯೋಗ, ತೊಂದರೆ, ಸಂಬಂಧ, ಬರಹ-ಹಣೆಬರಹ, ವಿಧಿಬರಹ, ಆಯುಸ್ಸು, ಅಕ್ಕಾಡು-ಅಳ್ಕಾಡು, ಸಂಪೂರ್ಣನಾಶವಾಗು, ವಿಡಂಬ-ವೈಭವ, ಬರತುದು-ಬತ್ತಿಹೋಯಿತು.
ಪಾಠಾನ್ತರ (ಕ.ಗ.ಪ)
ಗಂಧನ - ಖಂಡನ
ಮೂಲ ...{Loading}...
ಹರಿಬದಲಿ ಹೊಕ್ಕೆರಡು ಸಾವಿರ
ತುರಗ ಬಿದ್ದವು ನೂರು ಮದಸಿಂ
ಧುರಕೆ ಖಂಡನವಾಯ್ತು ಪಯದಳವೆಂಟು ಸಾವಿರದ
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ ॥33॥
೦೩೪ ಓಡಿದವರಲ್ಲಲ್ಲಿ ಧೈರ್ಯವ ...{Loading}...
ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಹದೇವನ ಬಾಣಗಳಿಂದ ತಪ್ಪಿಸಿಕೊಂಡು ಚಲ್ಲಾಪಿಲ್ಲಿಯಾಗಿ ಓಡಿಹೋದವರು ಧೈರ್ಯಮಾಡಿ ಅಲ್ಲಲ್ಲಿ ಗುಂಪುಗೂಡಿಕೊಂಡು ನೂರು ಮದಗಜಗಳ ಸಹಿತ ದುರ್ಯೋಧನನ್ನು ಸೇರಿಕೊಂಡರು. ಓಡಿಹೋಗುವುದೇಕೆ, ಇನ್ನೊಂದು ಹಲಗೆ ಪಗಡೆಯಾಟವನ್ನು ಆಡಿನೋಡೋಣವೆಂಬಂತೆ, ದುರ್ಯೋಧನ, ಸಹದೇವನ ವಿರುದ್ಧ ಯುದ್ಧಕ್ಕೆ ನಿಂತ.
ಪದಾರ್ಥ (ಕ.ಗ.ಪ)
ಹಲಗೆ-ಪಗಡೆಯಾಟದ ಮಣೆ (ಪಗಡೆ ಹಾಸು)
ಮೂಲ ...{Loading}...
ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ ॥34॥
೦೩೫ ಧರಣಿಪನ ಥಟ್ಟಣೆಗೆ ...{Loading}...
ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ಡೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನೂರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಹೊಡೆತಕ್ಕೆ ನಿಲ್ಲಲಾರದೆ ಸಹದೇವ ಹಿಂದೆ ಸರಿದ. ಅವನ ಅಣ್ಣನಾದ ನಕುಲನು ತಡೆದು ಅಡ್ಡಗಟ್ಟಿದರೆ ಅವನನ್ನು ಬೋಳೆಯಂಬಿನಿಂದ ಹೊಡೆದನು. ಬಾಣದ ಹೊಡೆತಕ್ಕೆ ಹೆದರಿದ ನಕುಲ ಹಿಂದೆ ಸರಿದ. ಧೀರ ದುರ್ಯೋಧನ ನೂರು ಆನೆಗಳ ಪಡೆಯೊಂದಿಗೆ ಧರ್ಮಜನ ಸೈನ್ಯದಲ್ಲಿ ಯುದ್ಧ ಮಾಡುತ್ತಾ ಸುತ್ತಾಡಿದ.
ಪದಾರ್ಥ (ಕ.ಗ.ಪ)
ಧಟ್ಟಣೆ-ಹೊಡತೆ, ಅಡ್ಡೈಸು-ಅಡ್ಡಗಟ್ಟು, ತಡೆದು ನಿಲ್ಲಿಸು, ಬೋಳೆಯಂಬು-ಕುದುರೆಲಾಳದ ಆಕಾರದ ತುದಿಯಿರುವ ಬಾಣ,
ಸೆಡೆ-ಹೆದರು, ಕುಗ್ಗು, ನಡುಗು, ಪೈಸರಿಸು-ಹಿಮ್ಮೆಟ್ಟು, ಹಿಂದೆಹೋಗು, ಡಾವರಿಸು-ಸುತ್ತು, ಸುತ್ತ ತಿರುಗು, ದಹಿಸು.
ಪಾಠಾನ್ತರ (ಕ.ಗ.ಪ)
ಧರಣಿಪನ ಥಟ್ಟಣೆಗೆ…… ಎಂಬಲ್ಲಿನ ‘ಥಟ್ಟಣೆ’ ಎಂಬುದು ಈ ಸಂದರ್ಭಕ್ಕೆ ಸೂಕ್ತವಾದ ಅರ್ಥವನ್ನು ನೀಡುವುದಿಲ್ಲ. ‘ಥಟ್ಟಣೆ’ ಎಂಬುದಕ್ಕೆ ಹೊಡೆತ, ಆಟೋಪ, ಅಬ್ಬರ ಮುಂತಾದ ಅರ್ಥಗಳಿದ್ದು ಈ ಸಂದರ್ಭಕ್ಕೆ ಹೊಂದುತ್ತದೆ. ಆದ್ದರಿಂದ ‘ಧಟ್ಟಣೆ’ ಎಂಬ ಪಾಠ ಸ್ವೀಕಾರಾರ್ಹವಾಗಿದೆ. ಇದು ಊಹಾಪಾಠ.
ಮೂಲ ...{Loading}...
ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ಡೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನೂರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ ॥35॥
೦೩೬ ಎಲೆ ನಪುಂಸಕ ...{Loading}...
ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ನಪುಂಸಕನಾದ ಧರ್ಮರಾಯನೇ ಯುದ್ಧಭೂಮಿಯಿಂದ ನಡೆ. ನಿನಗೆ ಭೀಮನ ಶಕ್ತಿಯೇ ಶಕ್ತಿ. ಅರ್ಜುನನ ಪರಾಕ್ರಮವೇ ಪರಾಕ್ರಮ. ಸ್ವತಃ ಶಕ್ತಿವಂತನಾಗಿ ಕ್ಷತ್ರಧರ್ಮವನ್ನು ತೋರಿಸು. ಹೆದರಬೇಡ ನಿಲ್ಲು ಎನ್ನುತ್ತ ದುರ್ಯೋಧನ ಮೇಲೇರಿಬರಲು ಸೇವಕರ ಬೊಬ್ಬೆಯನ್ನು ಭೀಮ ಕೇಳಿದ.
ಪದಾರ್ಥ (ಕ.ಗ.ಪ)
ಮಲೆತು-ಶಕ್ತನಾಗಿ, ಗರ್ವದಿಂದ, ಇಟ್ಟಳಿಸು-ಮೇಲೇರಿ ಬರು, ಊಳಿಗದ-ಕೆಲಸಗಾರರ, ಸೇವಕರ.
ಮೂಲ ...{Loading}...
ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ ॥36॥
೦೩೭ ತೂಳಿ ತುಳಿದವು ...{Loading}...
ತೂಳಿ ತುಳಿದವು ನೂರು ಗಜ ಭೂ
ಪಾಲಕನ ನೆರೆಗಡಿತದಡವಿಗೆ
ಬಾಳೆ ಹೆಮ್ಮರನಾಯ್ತು ಗಡ ಫಡ ನೂಕು ನೂಕೆನುತ
ಆಲಿ ಕಿಡಿಯಿಡೆ ಕುಣಿವ ಮೀಸೆ ಕ
ರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೂರು ಆನೆಗಳು ಉತ್ಸಾಹದಿಂದ ಶತ್ರುಸೈನ್ಯವನ್ನು ತುಳಿದುಹಾಕಿದವು. ಭೂಪಾಲಕನು ಸಂಭ್ರಮದಿಂದ ಕಡಿದು ಹಾಕಿದ ಬಾಳೆಯೇ ಅರಣ್ಯಕ್ಕೆ ದೊಡ್ಡ ಮರವಾಯ್ತು ಎನ್ನುತ್ತ ಸೈನ್ಯವನ್ನು ಮುಂದಕ್ಕೆ ನೂಕು ಎನ್ನುತ್ತಾ ಕಣ್ಣುಗಳಲ್ಲಿ ಕಿಡಿಸೂಸಲು, ಮೀಸೆಗಳು ಕುಣಿಯುತ್ತಿರಲು, ಭೀಕರ ಮುಖದ, ಗಂಟಿಕ್ಕಿದ ಹುಬ್ಬಿನ, ಹೆಚ್ಚಿದ ಕೋಪದ ಭೀಮ ವೇಗವಾಗಿ ಯುದ್ಧರಂಗಕ್ಕೆ ಬಂದ.
ಪದಾರ್ಥ (ಕ.ಗ.ಪ)
ತೂಳಿ-ಉತ್ಸಾಹದಿಂದ, ಹಾರಿ, ನೆರೆ-ಸಂಭ್ರಮ, ತುಂಬು, ವಿಶೇಷವಾಗಿ, ಹೆಚ್ಚಾಗಿ, ಆಲಿ-ಕಣ್ಣು
ಮೂಲ ...{Loading}...
ತೂಳಿ ತುಳಿದವು ನೂರು ಗಜ ಭೂ
ಪಾಲಕನ ನೆರೆಗಡಿತದಡವಿಗೆ
ಬಾಳೆ ಹೆಮ್ಮರನಾಯ್ತು ಗಡ ಫಡ ನೂಕು ನೂಕೆನುತ
ಆಲಿ ಕಿಡಿಯಿಡೆ ಕುಣಿವ ಮೀಸೆ ಕ
ರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ ॥37॥
೦೩೮ ನೆತ್ತಿಯಗತೆಯೊಳೂರಿದಙ್ಕುಶ ...{Loading}...
ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ
ಕುತ್ತುವಾರೆಯ ಬಗೆಯದಾನೆಗ
ಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆತ್ತಿಯಲ್ಲಿ ನಾಟಿದ್ದ ಅಂಕುಶಗಳನ್ನು ಕಿತ್ತರೆ ಆನೆಗಳು ತಲೆಯನ್ನು ಕೊಡವಿದವು. ಶತ್ರುಸೈನ್ಯದ ಕಡೆಗೆ ಅವುಗಳನ್ನು ಓಡಿಸಲು ಬೆರಳುಗಳಿಂದ ಕಿವಿಯ ಹಿಂಭಾಗವನ್ನು ಒತ್ತಿಹಿಡಿದರೂ ಲೆಕ್ಕಿಸದೆ, ಹೆಚ್ಚುತ್ತಿರುವ ಬಾಯಾರಿಕೆಯ ತಾಪವನ್ನು, ನಾಟುವ ಹಾರೆಗಳನ್ನು ಲೆಕ್ಕಿಸದೆ ಆನೆಗಳು ಇತ್ತ ತಿರುಗಿದವು, ಭೀಮನ ಸಿಂಹನಾದಕ್ಕೆ ಕೌರವನ ಆನೆಗಳು ಮುಖತಿರುಗಿಸಿದುವು ಭೀಮ ಶತ್ರು ಸೈನ್ಯವನ್ನು ಸೂರೆಗೊಂಡ.
ಪದಾರ್ಥ (ಕ.ಗ.ಪ)
ಅಂಕುಶ-ಆನೆಯನ್ನು ನಿಯಂತ್ರಿಸಲು ಉಪಯೋಗಿಸುವ ಕಬ್ಬಿಣದ ತುಂಡು, ಡಾವರಿಪ-ಆವರಿಸುತ್ತಿರುವ, ನೋಯಿಸುತ್ತಿರುವ, ಸುಡುತ್ತಿರುವ, ಡಾವರ-ಬಾಯಾರಿಕೆ, ಕೋಟಲೆ, ತೊಂದರೆ, ಕುತ್ತು-ನಾಟಿಸು, ಮುರಿದುವು-ತಿರುಗಿದುವು, ಮೊಗದಿರುಹು-ಮುಖತಿರುಗಿಸು, ದಳವುಳಿಸು-ಸೂರೆಗೊಳ್ಳು
ಮೂಲ ...{Loading}...
ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ
ಕುತ್ತುವಾರೆಯ ಬಗೆಯದಾನೆಗ
ಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ ॥38॥
೦೩೯ ಮೆಟ್ಟಿದನು ಬಲವಙ್ಕವನು ...{Loading}...
ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಿಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲಗಡೆಯ ಆನೆಗಳನ್ನು ಮೆಟ್ಟಿದ. ಎಡಭಾಗದಲ್ಲಿದ್ದ ಆನೆಗಳನ್ನು ಹೊರಕ್ಕೆ ಅಟ್ಟಿದನು. ಒಂದು ಆನೆಯಿಂದ ಇನ್ನೊಂದು ಆನೆಯನ್ನು ಅಪ್ಪಳಿಸಿದನು. ಕಬ್ಬಿಣದ ಸಲಾಕೆಯಿಂದ ಹೊಡೆದನು. ಸಾಲುಸಾಲಾಗಿ ನಿಂತಿದ್ದ ಆನೆಗಳ ಗುಂಪನ್ನು ಕೆಡಹಿದನು. ಕುರುರಾಜನ ನೂರು ಆನೆಗಳು ಒಂದು ನಿಮಿಷದಲ್ಲಿ ಹೆಣದ ಸಾಲುಗಳಾದವು
ಪದಾರ್ಥ (ಕ.ಗ.ಪ)
ಬಲವಂಕ-ಬಲಭಾಗ, ಪರಿಘ-ಕಬ್ಬಿಣದ ಸಲಾಕೆ, ಘಟ್ಟಿಸು-ಹೊಡೆ, ಥಟ್ಟುಗೆಡಹು-ಗುಂಪು ಛಿದ್ರವಾಗುವಂತೆ ಮಾಡು
ಮೂಲ ...{Loading}...
ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಿಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ ॥39॥
೦೪೦ ಉಳಿದುದಿದಿರಲಿ ಛತ್ರ ...{Loading}...
ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿದಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಸೈನ್ಯದಲ್ಲಿ, ಛತ್ರ ಚಾಮರಗಳನ್ನು ಹಿಡಿಯುವವರು, ಹಡಪಗಳನ್ನು ಹಿಡಿದವರು, ಬಿರುದುಗಳನ್ನು ಹೇಳುವವರು, ಹೊಗಳುಭಟ್ಟರು, ವಾದ್ಯಗಳನ್ನು ಬಾರಿಸುವವರು ಮಲ್ಲರು, ಹಾಡುಗಾರರು, ನೀರು ಕೊಡುವವರು, ಭಕ್ಷ್ಯಗಳನ್ನು ನೀಡುವವರು, ಆನೆ ಕುದುರೆಗಳಿಗೆ ರಕ್ಷಣೆ ನೀಡಿ ಗಾಯಗಳಿಗೆ ಚಿಕಿತ್ಸೆ ನೀಡುವವರು, ರಥಗಳನ್ನು ಸಿದ್ಧಗೊಳಿಸುವವರು, ಬಿಲ್ಲುಬಾಣಗಳ ವ್ಯವಸ್ಥೆ ನೋಡಿಕೊಳ್ಳುವವರು ಮಾತ್ರ ಉಳಿದರು.
ಪದಾರ್ಥ (ಕ.ಗ.ಪ)
ಹಡಪಿಗ-ತಮ್ಮ ಯಜಮಾನರಿಗೆ ಅವಶ್ಯವುಳ್ಳ ವಸ್ತುಗಳನ್ನು ಹೊಂದಿರುವ ಚರ್ಮದ ಚೀಲ - ಹಡಪವನ್ನು ಹಿಡಿಯುವವರು, ವ್ರಣ-ಗಾಯ
ಮೂಲ ...{Loading}...
ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿದಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು ॥40॥
೦೪೧ ಕುದುರೆ ರಾವ್ತರು ...{Loading}...
ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪತಿ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಸೈನ್ಯದಲ್ಲಿ ಕುದುರೆ ಸವಾರರು, ಯೋಧ ಸಮೂಹ, ಮದಿಸಿದ ಆನೆಗಳ ತಂಡ, ಅತಿರಥರು, ಕಾಲಾಳುಗಳು, ಮುಂತಾದ ಚತುರಂಗಬಲದಲ್ಲಿ ಒಂದೂ ಉಳಿಯಲಿಲ್ಲ. ಕಾಲ ನಡೆಯಲ್ಲಿಯೇ ದುರ್ಯೋಧನ ಯುದ್ಧಭೂಮಿಯಿಂದ ತಪ್ಪಿಸಿಕೊಂಡ. ವೀರನಾರಾಯಣನಾದ ಕೃಷ್ಣನ ಕರುಣೆಯಿಂದ ಕುಂತೀಸುತರು ಹೆಚ್ಚಿನ ಅಭ್ಯುದಯವನ್ನು ಹೊಂದಿದರು.
ಪದಾರ್ಥ (ಕ.ಗ.ಪ)
ಪದದಲೇ-ಕಾಲುನಡೆಯಲ್ಲಿಯೇ, ಅಭ್ಯುದಯ-ಮೇಲೆಬರುವುದು, ಶ್ರೇಯಸ್ಸು ಪಡೆಯುವುದು.
ಮೂಲ ...{Loading}...
ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪತಿ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ ॥41॥