೦೩

೦೦೦ ಸೂ ಸವೆದುದಗ್ಗದ ...{Loading}...

ಸೂ. ಸವೆದುದಗ್ಗದ ಪಾಂಡುಸುತ ಕೌ
ರವ ಬಲಾಂಬುಧಿ ಧರ್ಮತನುಜನ
ನವಗಡಿಸಿ ಸಮರದಲಿ ಮಡಿದನು ಮಾದ್ರಭೂಪಾಲ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲ ಶಲ್ಯರ ಸಮರಕಿವರನು
ಕೂಲವಾದರಲೈ ಕೃಪಾದಿಗಳಿತ್ತಲಾಚೆಯಲಿ
ಮೇಳವಿಸಿತರ್ಜುನ ನಕುಲ ಪಾಂ
ಚಾಲ ಬಲಭೀಮಾದಿಗಳು ಪದ
ಧೂಳಿಯಲಿ ಜಗ ಮುಳುಗೆ ಜೋಡಿಸಿ ಜಡಿದುದುಭಯಬಲ ॥1॥

೦೦೨ ಕೆದರಿದನು ಕಲಿಭೀಮ ...{Loading}...

ಕೆದರಿದನು ಕಲಿಭೀಮ ಬಲವಂ
ಕದಲಿ ಸಾತ್ಯಕಿ ನಕುಲರೆಡವಂ
ಕದಲಿ ಚೂಣಿಗೆ ಚಿಮ್ಮಿದರು ಪಾಂಚಾಲನಾಯಕರು
ಮದಮುಖರನಿಕ್ಕಿದನು ಬಾಣೌ
ಘದಲಿ ಫಲುಗುಣನೊಂದು ಕಡೆಯಲಿ
ಸದೆದು ಸವರಿದರೊಂದು ಕಡೆಯಲಿ ದ್ರೌಪದೀಸುತರು ॥2॥

೦೦೩ ಕ್ಷಿತಿಪ ಚಿತ್ತೈಸೀಚೆಯಲಿ ...{Loading}...

ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ ॥3॥

೦೦೪ ಕೆಣಕಿದಡೆ ಗುರುಸುತನನಡಹಾ ...{Loading}...

ಕೆಣಕಿದಡೆ ಗುರುಸುತನನಡಹಾ
ಯ್ದಣೆದನಂಬಿನಲರ್ಜುನನ ಮಾ
ರ್ಗಣಮಹಾರಣ್ಯದಲಿ ನಡೆದುದು ಕಡಿತ ಗುರುಸುತನ
ರಣವಿಶಾರದರಹಿರಲೇ ನೀ
ವಣಕವೇತಕೆ ರಾಜಗುರುಗಳು
ಸೆಣಸುವರೆ ಸೈರಿಸಿರೆ ನೀವೆನುತೆಚ್ಚನಾ ಪಾರ್ಥ ॥4॥

೦೦೫ ಮೊಗೆದವಶ್ವತ್ಥಾಮನೆಚ್ಚಂ ...{Loading}...

ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ
ತಗಡುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದುವು ಗುರುಸುತನಂಬಿನಂಬುಧಿಯ ॥5॥

೦೦೬ ಅರಸು ಕೇಳಡಹಾಯ್ದು ...{Loading}...

ಅರಸು ಕೇಳಡಹಾಯ್ದು ಪಾರ್ಥನ
ವರ ರಥವ ಹಿಂದಿಕ್ಕಿ ಪವನಜ
ನುರವಣಿಸಿದನು ನಕುಲ ಸಾತ್ಯಕಿ ಸಹಿತ ಗುರುಸುತನ
ಸರಳ ಸರಿವಳೆಗಳ ಸಘಾಡದ
ಲರಿಭಟನು ನನೆದನು ಮಹೋಗ್ರದ
ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ ॥6॥

೦೦೭ ರಾಯ ಹೊಕ್ಕನು ...{Loading}...

ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮಗೌತಮರು
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ ॥7॥

೦೦೮ ಪಡಿಬಲಕೆ ಹೊಕ್ಕುದು ...{Loading}...

ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು ॥8॥

೦೦೯ ಫಡ ಎನುತ ...{Loading}...

ಫಡ ಎನುತ ಪಾಂಚಾಲಬಲ ಸಂ
ಗಡಿಸಿತನಿಲಜನೊಡನೆ ಸೃಂಜಯ
ರೆಡೆಯಲಡಹಾಯಿದರು ಸುತ ಸೋಮಾದಿಗಳು ಸಹಿತ
ಕಡೆವಿಡಿದು ಕಲಿಪಾರ್ಥನಂಬಿನ
ವಡಬನೆದ್ದುದು ಕುರುಬಲದ ಹೆ
ಗ್ಗಡಲು ಬರತುದು ಹೇಳಲೇನದ ಭೂಪ ಕೇಳ್ ಎಂದ ॥9॥

೦೧೦ ಆ ಸಮಯದಲಿ ...{Loading}...

ಆ ಸಮಯದಲಿ ಬಹಳ ಶೌರ್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ ॥10॥

೦೧೧ ಗಜದಳದ ಘಾಡಿಕೆಗೆ ...{Loading}...

ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತ ಮೋಹರವ
ಗುಜರು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ ॥11॥

೦೧೨ ಅಳಿದುದೈನೂರಾನೆ ಸಾವಿರ ...{Loading}...

ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ ॥12॥

೦೧೩ ತಡೆದನಶ್ವತ್ಥಾಮ ಭೀಮನ ...{Loading}...

ತಡೆದನಶ್ವತ್ಥಾಮ ಭೀಮನ
ಕಡುಹನಾ ಸಹದೇವ ನಕುಲರ
ನಡುಗಿಸಿದನುಡುಗಿಸಿದನಾಟೋಪವನು ಪವನಜನ
ಇಡಿದುದಂಬರವಂಬಿನಲಿ ಕೈ
ಗಡಿಯನಂಬಿನ ಲಕ್ಷ ್ಯಭೇದವ
ನುಡಿಯಬಲ್ಲವನಾರು ಗುರುನಂದನನ ಸಮರದಲಿ ॥13॥

೦೧೪ ಪವನಜನನೆಣ್ಟಮ್ಬಿನಲಿ ಪಾಂ ...{Loading}...

ಪವನಜನನೆಂಟಂಬಿನಲಿ ಪಾಂ
ಡವಸುತರನೈವತ್ತರಲಿ ಯಾ
ದವನನಿಪ್ಪತ್ತಂಬಿನಲಿ ಮಾದ್ರೀಕುಮಾರಕರ
ಕವಲುಗೋಲಿಪ್ಪತ್ತರಲಿ ಮುರಿ
ದವಗಡಿಸಿ ಪಾಂಚಾಲ ಸೃಂಜಯ
ನಿವಹವನು ನೂರಂಬಿನಲಿ ಕೆಡೆಯೆಚ್ಚು ಬೊಬ್ಬಿರಿದ ॥14॥

೦೧೫ ಏನ ಹೇಳುವೆ ...{Loading}...

ಏನ ಹೇಳುವೆ ಗಜಘಟಾಪ್ರತಿ
ಮಾನದಲಿ ಕೋದಂಬುಗಳು ಹಿಂ
ಡಾನೆಗಳನೇಳೆಂಟನೊದೆದೋಡಿದವು ಪೇಚಕವ
ಭಾನು ರಶ್ಮಿಗಳಂಧಕಾರದ
ಮಾನಗರ್ವವ ಮುರಿವವೊಲು ಗುರು
ಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ ॥15॥

೦೧೬ ತಾಗಿದವು ಕನ್ದದಲಿ ...{Loading}...

ತಾಗಿದವು ಕಂದದಲಿ ನಾಳಿಕೆ
ಗಾಗಿ ಹೊರವಂಟಶ್ವನಿಕರವ
ನೀಗಿದವು ಶರವೊಂದು ಸಾವಿರ ರಥಹಯಾವಳಿಯ
ಬೀಗಿದವು ಕಾಲಾಳ ಕಬಳಿಸಿ
ತೇಗಿದವು ಚತುರಂಗವನು ವಿನಿ
ಯೋಗಿಸಿದವಂತಕನ ಮನೆಗಂಬುಗಳು ಗುರುಸುತನ ॥16॥

೦೧೭ ಕಡಿವಡೆದುದಿನ್ನೂರು ಗಜ ...{Loading}...

ಕಡಿವಡೆದುದಿನ್ನೂರು ಗಜ ಧರೆ
ಗುಡಿದು ಬಿದ್ದುದು ತೇರು ಸಾವಿರ
ವಡಗುದರಿಯಾಯ್ತಶ್ವಚಯ ಸಾವಿರದ ಮೂನೂರು
ಕಡುಗಲಿಗಳರುವತ್ತು ಸಾವಿರ
ವೊಡಲನಿಕ್ಕಿತು ಪಾಯದಳವು
ಗ್ಗಡದ ಡಾವರ ಡಿಳ್ಳವಾದುದು ವೈರಿಸುಭಟರಿಗೆ ॥17॥

೦೧೮ ಮತ್ತೆ ಕವಿದುದು ...{Loading}...

ಮತ್ತೆ ಕವಿದುದು ಪಾಂಡುಬಲವರು
ವತ್ತು ಸಾವಿರ ಕುದುರೆ ನೂರಿ
ಪ್ಪತ್ತು ಗಜರಥ ನೂರ ಮೀರಿತು ಲಕ್ಕಪಾಯದಳ
ಸತ್ತಿಗೆಯ ಸಾಲಿನಲಿ ಧರಣಿಯ
ಕಿತ್ತು ಮಗುಚುವ ವಾದ್ಯರಭಸದ
ಲೆತ್ತಿ ನೂಕಿತು ಗುರುತನೂಜನ ರಥದ ಸಮ್ಮುಖಕೆ ॥18॥

೦೧೯ ಇತ್ತ ಹೇಳಿಕೆಯಾಯ್ತು ...{Loading}...

ಇತ್ತ ಹೇಳಿಕೆಯಾಯ್ತು ಹಯವಿ
ಪ್ಪತ್ತು ಸಾವಿರ ದಂತಿಘಟೆಯೈ
ವತ್ತು ನಾನೂರೇಳು ರಥ ಸಾವಿರದ ನಾನೂರು
ತೆತ್ತಿಗರು ಕಾಲಾಳು ಲಕ್ಕವು
ಹತ್ತಿತಲ್ಲಿಯ ವಾದ್ಯರವ ಕೀ
ರಿತ್ತು ಕಮಲಭವಾಂಡ ವಿಪುಲ ಕಟಾಹಖರ್ಪರವ ॥19॥

೦೨೦ ಉರವಣಿಸಿತಿದು ಗುರುಸುತನ ...{Loading}...

ಉರವಣಿಸಿತಿದು ಗುರುಸುತನ ಹಿಂ
ದಿರಿಸಿ ಪರಬಲದಭಿಮುಖಕೆ ಮೋ
ಹರಿಸಿ ನಿಂದುದು ಕಂಡನಿತ್ತಲು ಶಲ್ಯನಾ ಬಲವ
ಧುರಕೆ ನಾವಿರೆ ಸೇನೆಯುಪಸಂ
ಹರಿಸಬಹುದೇ ದ್ರೋಣ ಭೀಷ್ಮಾ
ದ್ಯರಿಗೆ ನಗೆಗೆಡೆ ನಾವಹೆವೆ ತೆಗೆಯೆನುತ ನಡೆತಂದ ॥20॥

೦೨೧ ದಳವ ತೆಗೆತೆಗೆ ...{Loading}...

ದಳವ ತೆಗೆತೆಗೆ ತಾನಿರಲು ಕುರು
ಬಲಕೆ ಬೀಯವೆ ಕೌರವೇಂದ್ರನ
ಕೆಲಬಲದ ಸುಯಿಧಾನದಲಿ ಕೃಪಗುರುಸುತಾದಿಗಳು
ನಿಲಲಿ ಶಕುನಿಯ ತುರಗದಳ ಹಿ
ನ್ನೆಲೆಗೆ ಹೋಗಲಿ ರಾಯದಳವೆ
ಮ್ಮಳವ ನೋಡುತ್ತಿರಲಿಯೆಂದನು ಶಲ್ಯ ಕುರುಪತಿಗೆ ॥21॥

೦೨೨ ಕೇಳು ಕೃಪ ...{Loading}...

ಕೇಳು ಕೃಪ ಕೃತವರ್ಮ ಗುರುಸುತ
ಕೇಳು ಶಕುನಿ ಸುಶರ್ಮ ಸಾಲ್ವನೃ
ಪಾಲ ರಾಯನ ಮಂತ್ರಿ ಸಚಿವ ಪಸಾಯ್ತರಾದವರು
ಕೇಳಿರೈ ಭೀಷ್ಮಾದಿ ಸುಭಟರ
ಕಾಳೆಗವ ಕಂಡಿರಿ ಮದೀಯ ಕ
ರಾಳ ಕದನೋತ್ಸವವ ನೋಡುವುದೆಂದನಾ ಶಲ್ಯ ॥22॥

೦೨೩ ತರಿಸಿ ಕಾಞ್ಚನಮಯ ...{Loading}...

ತರಿಸಿ ಕಾಂಚನಮಯ ರಥವ ಸಂ
ವರಿಸಿದನು ಟೆಕ್ಕೆಯವನೆತ್ತಿಸಿ
ಸರಳ ತುಂಬಿದ ಬಂಡಿಗಳ ಕೆಲಬಲಕೆ ಜೋಡಿಸಿದ
ಬಿರುದನೊದರುವ ಪಾಠಕರ ಮೋ
ಹರಕೆ ಮಣಿಕಾಂಚನವ ಮೊಗೆದಿ
ತ್ತರರೆ ಕರೆಯೋ ಧರ್ಮಜನನೆಂದುಬ್ಬಿದನು ಶಲ್ಯ ॥23॥

೦೨೪ ರಾಯ ನಿಲುವನೊ ...{Loading}...

ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರು ನಿಲುವೆನವರೊಡನೆ
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ ॥24॥

೦೨೫ ಬೆರಳ ತುಟಿಗಳ ...{Loading}...

ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ ॥25॥

೦೨೬ ದಳಪತಿಯ ಸುಮ್ಮಾನಮುಖ ...{Loading}...

ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತೆ ಕೊಂಡಾಡಿತ್ತು ಕುರುಸೇನೆ ॥26॥

೦೨೭ ಪೂತು ಮಝರೇ ...{Loading}...

ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇವ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು ॥27॥

೦೨೮ ತಡೆದು ನಿನ್ದನು ...{Loading}...

ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ ॥28॥

೦೨೯ ಚೆಲ್ಲಿತದು ನಾನಾಮುಖಕೆ ...{Loading}...

ಚೆಲ್ಲಿತದು ನಾನಾಮುಖಕೆ ನಿಂ
ದಲ್ಲಿ ನಿಲ್ಲದೆ ಸೃಂಜಯಾದ್ಯರ
ನಲ್ಲಿ ಕಾಣೆನು ಸೋಮಕರ ಪಾಂಚಾಲ ಮೋಹರವ
ಕೆಲ್ಲೆಯಲಿ ಭೀಮಾರ್ಜುನರು ಬಲು
ಬಿಲ್ಲನೊದರಿಸೆ ಕದನಚೌಪಟ
ಮಲ್ಲ ತಾನಿದಿರಾಗಿ ನಿಂದನು ಪಾಂಡವರ ರಾಯ ॥29॥

೦೩೦ ಜೀಯ ಬುಧನ ...{Loading}...

ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಂದುದು ವಂದಿಜನಜಲಧಿ ॥30॥

೦೩೧ ಹರಿಗೆ ಹೊಡವಣ್ಟಸ್ತ್ರ ...{Loading}...

ಹರಿಗೆ ಹೊಡವಂಟಸ್ತ್ರ ಶಿಕ್ಷಾ
ಗುರುವ ಮನದಲಿ ನೆನೆದು ಹೊಸ ಬಿಲು
ದಿರುವನೇರಿಸಿ ಮಿಡಿದು ನಿಜ ಸಾರಥಿಯ ಬೋಳೈಸಿ
ವರ ರಥವ ನೂಕಿದನು ಪವನಜ
ನರ ನಕುಲ ಸಹದೇವ ಸಾತ್ಯಕಿ
ಬರಲು ಬಲನೆಡವಂಕದಲಿ ನರನಾಥನಿದಿರಾದ ॥31॥

೦೩೨ ಮಾವನವರೇ ನಿಮ್ಮ ...{Loading}...

ಮಾವನವರೇ ನಿಮ್ಮ ಹಿಂಸೆಗೆ
ನಾವು ಕಡುಗೆವು ಕ್ಷತ್ರಜಾತಿಯ
ಜೀವನವಲೇ ಕಷ್ಟವಿದು ಕಾರ್ಪಣ್ಯತರವಾಗಿ
ನೀವು ಸೈರಿಸಬೇಕು ನಮ್ಮ ಶ
ರಾವಳಿಯನೆನುತವನಿಪತಿ ಬಾ
ಣಾವಳಿಯ ಕೆದರಿದನು ಸೇನಾಪತಿಯ ಸಮ್ಮುಖಕೆ ॥32॥

೦೩೩ ನಿನಗೆ ಮಾತುಳರಾವು ...{Loading}...

ನಿನಗೆ ಮಾತುಳರಾವು ಮಾಣಲಿ
ಮುನಿಯೆಮಗೆ ಮೊರೆಯಲ್ಲ ದುಶ್ಯಾ
ಸನ ಜಯದ್ರಥರಲ್ಲಲಾ ಸಂಬಂಧಿಗಳು ನಿನಗೆ
ಜನಪ ಧರ್ಮದ ಹಿಂಸೆ ಬಂದುದು
ನಿನಗೆ ಸಾಕದನಾಡಲೇತಕೆ
ಮನದ ಗರ್ವದ ಗಾಢವೈಸೆನುತೆಚ್ಚನಾ ಶಲ್ಯ ॥33॥

೦೩೪ ಅರಸ ಕೇಳ್ ...{Loading}...

ಅರಸ ಕೇಳ್ ಶಲ್ಯನ ಯುಧಿಷ್ಠಿರ
ಧರಣಿಪನ ಸಂಗ್ರಾಮವಂದಿನ
ಸುರನದೀನಂದನನ ದ್ರೋಣನ ಸೂತಸಂಭವನ
ನರನ ಭೂರಿಶ್ರವನ ಭೀಮನ
ಕುರುಪತಿಯ ವೃಷಸೇನ ಸೌಭ
ದ್ರರ ಸಮಗ್ರಾಹವವ ಮರಸಿತು ಹೇಳಲೇನೆಂದ ॥34॥

೦೩೫ ದಿಟ್ಟನೈ ಭೂಪತಿಗಳಲಿ ...{Loading}...

ದಿಟ್ಟನೈ ಭೂಪತಿಗಳಲಿ ಜಗ
ಜಟ್ಟಿಯೈ ನಿನಗಸ್ತ್ರವಿದ್ಯವ
ಕೊಟ್ಟವನ ನಾ ಬಲ್ಲೆನದನಿನ್ನಾಡಿ ಫಲವೇನು
ತೊಟ್ಟ ಜೋಹದ ವಾಸಿಯೆಂಬುದ
ಬಿಟ್ಟು ನಮಗೊಡ್ಡುವುದು ನಿನ್ನೊಡ
ವುಟ್ಟಿದರನಿಬ್ಬರನೆನುತ ತೆಗೆದೆಚ್ಚನಾ ಶಲ್ಯ ॥35॥

೦೩೬ ಮಾವ ಭೀಮಾರ್ಜುನರ ...{Loading}...

ಮಾವ ಭೀಮಾರ್ಜುನರ ಭಾರಣೆ
ಗಾವ ನಿಲುವನು ಸಾಕದಂತಿರ
ಲೀ ವಿಚಿತ್ರ ಕಳಂಬ ಖಂಡನ ಪಂಡಿತತ್ವವನು
ನೀವು ತೋರಿರೆ ಸಾಕು ಸಾಮ
ಥ್ರ್ಯಾವಲಂಬನವುಳ್ಳಡೀ ಶ
ಸ್ತ್ರಾವಳಿಯ ಸೈರಿಸಿಯೆನುತ ಯಮಸೂನು ತೆಗೆದೆಚ್ಚ ॥36॥

೦೩೭ ಧರಣಿಪತಿಯಮ್ಬುಗಳನೆಡೆಯಲಿ ...{Loading}...

ಧರಣಿಪತಿಯಂಬುಗಳನೆಡೆಯಲಿ
ತರಿದು ತುಳುಕಿದನಂಬಿನುಬ್ಬಿನ
ಗರಿಯ ಗಾಳಿಯ ದಾಳಿ ಪೈಸರಿಸಿದುದು ಪರ್ವತವ
ಮೊರೆವ ಕಣೆ ಮಾರ್ಗಣೆಗಳನು ಕ
ತ್ತರಿಸಿದವು ಬಳಿಯಂಬುಗಳು ಪಡಿ
ಸರಳ ತೂಳಿದಡೆಚ್ಚರೆಚ್ಚರು ಮೆಚ್ಚಲುಭಯಬಲ ॥37॥

೦೩೮ ಸೈರಿಸಾದಡೆಯೆನುತ ಮುಳಿದು ...{Loading}...

ಸೈರಿಸಾದಡೆಯೆನುತ ಮುಳಿದು ವ
ಹೀರಮಣ ಮದ್ರಾಧಿಪನನೆ
ಚ್ಚಾರಿದನು ಮಗುಳೆಚ್ಚು ಪುನರಪಿಯೆಚ್ಚು ಮಗುಳೆಸಲು
ಕೂರಲಗು ಸೀಸಕವ ಕವಚವ
ಹೋರುಗಳೆದವು ನೆತ್ತರಿನ ಬಾ
ಯ್ಧಾರೆಗಳ ತೋರಿದವು ದಳಪತಿಯಪರಭಾಗದಲಿ ॥38॥

೦೩೯ ಪ್ರಳಯಪವನನ ಹೊಯ್ಲಿನಲಿ ...{Loading}...

ಪ್ರಳಯಪವನನ ಹೊಯ್ಲಿನಲಿ ಕಳ
ವಳಿಸಿದಮರಾದ್ರಿಯವೊಲುದುರಿದ
ಬಿಲುಸರಳ ಹೆಗಲೋರೆಗೊರಳರೆಮುಚ್ಚುಗಣ್ಣುಗಳ
ತಳಿತ ರಕ್ತಾಂಕುರದ ಬಳಕೆಗೆ
ಬಳಲಿದಿಂದ್ರಿಯಕುಳದ ಮೂರ್ಛಾ
ವಿಲಸಿತಾಂಗದ ಶಲ್ಯನಿದ್ದನು ರಥದ ಮಧ್ಯದಲಿ ॥39॥

೦೪೦ ಅರಸ ಕೇಳೈ ...{Loading}...

ಅರಸ ಕೇಳೈ ಮರವೆಗಾತ್ಮನ
ನೆರವ ಕೊಟ್ಟು ಮುಹೂರ್ತಮಾತ್ರಕೆ
ಮರಳಿಚಿದವೊಲು ಕಂದೆರೆದು ನೋಡಿದನು ಕೆಲಬಲನ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ತೊಳೆತೊಳೆದು ನೂತನ
ವರ ದುಕೂಲವನುಟ್ಟು ಕೊಂಡನು ನಗುತ ವೀಳೆಯವ ॥40॥

೦೪೧ ತುಡುಕಿದನು ಬಿಲುಸರಳನಕಟವ ...{Loading}...

ತುಡುಕಿದನು ಬಿಲುಸರಳನಕಟವ
ಗಡಿಸಿದನಲಾ ಧರ್ಮಸುತನು
ಗ್ಗಡದಲೊಂದು ಮುಹೂರ್ತವಾಯಿತೆ ಹಗೆಗೆ ಸುಮ್ಮಾನ
ತೊಡಕಿದೆಡೆಗೆ ಜಯಾಪಜಯ ಸಂ
ಗಡಿಸುವುವು ತಪ್ಪೇನು ಯಮಸುತ
ಹಿಡಿ ಧನುವನನುವಾಗೆನುತ ಮೂದಲಿಸಿದನು ಶಲ್ಯ ॥41॥

೦೪೨ ನರನ ರಥವದೆ ...{Loading}...

ನರನ ರಥವದೆ ಮರೆಯಹೊಗು ಮುರ
ಹರನ ಮರೆವೊಗು ಭೀಮಸೇನನ
ಕರಸಿ ನೂಕು ಶಿಖಂಡಿ ಸಾತ್ಯಕಿ ಸೃಂಜಯಾದಿಗಳ
ಅರಸುಗುರಿಗಳ ಹೊಯ್ಸು ಗೆಲುವಿನ
ಗರುವನಾದಡೆ ನಿಲ್ಲೆನುತಲು
ಬ್ಬರಿಸಿ ಮಾದ್ರಾಧೀಶನೆಚ್ಚನು ಧರ್ಮನಂದನನ ॥42॥

೦೪೩ ಏನ ಹೇಳುವೆ ...{Loading}...

ಏನ ಹೇಳುವೆ ಭಟನ ಶರ ಸಂ
ಧಾನವನು ಪುಂಖಾನುಪುಂಖವಿ
ಧಾನವನು ಝೇಂಕಾರಶರಜಾಳಪ್ರಸಾರಣವ
ಆ ನಿರಂತರ ಸರಳ ಸಾರದ
ಸೋನೆ ಸದೆದುದು ಧರ್ಮಸುತನರ
ಣಾನುರಾಗವ ತೊಳೆದುದದ್ಭುತವಾಯ್ತು ನಿಮಿಷದಲಿ ॥43॥

೦೪೪ ಸರಳ ಮುರಿಯೆಸಲಾ ...{Loading}...

ಸರಳ ಮುರಿಯೆಸಲಾ ಸರಳ ಕ
ತ್ತರಿಸಿ ಹತ್ತಂಬಿನಲಿ ರಾಯನ
ಬರಿಯ ಕವಚವ ಹರಿಯಲೆಚ್ಚನು ಮೂರು ಬಾಣದಲಿ
ಶಿರದ ಸೀಸಕವನು ನಿಘಾತದ
ಲೆರಡು ಶರದಲಿ ಮತ್ತೆ ಭೂಪತಿ
ಯುರವನಗುಳಿದನೆಂಟರಲಿ ಮಗುಳೆಚ್ಚು ಬೊಬ್ಬಿರಿದ ॥44॥

೦೪೫ ಗರುಡತುಣ್ಡದ ಹತಿಗೆ ...{Loading}...

ಗರುಡತುಂಡದ ಹತಿಗೆ ಫಣಿಯೆದೆ
ಬಿರಿವವೊಲು ಯಮಸುತನ ತನು ಜ
ಜ್ರ್ಝರಿತವಾದುದು ಜರಿವ ಜೋಡಿನ ಜಿಗಿಯ ಶೋಣಿತದ
ಮುರಿದ ಕಂಗಳ ಮಲಗಿನಲಿ ಪೈ
ಸರದ ಗಾತ್ರದ ಗಾಢವೇದನೆ
ಯುರವಣಿಸೆ ಸೊಂಪಡಗಿ ನಿಮಿಷ ಮಹೀಶ ಮೈಮರೆದ ॥45॥

೦೪೬ ಬಿದ್ದನಾಚೆಯ ದೊರೆ ...{Loading}...

ಬಿದ್ದನಾಚೆಯ ದೊರೆ ಸುಯೋಧನ
ಗೆದ್ದನಿನ್ನೇನೆನುತ ಸುಭಟರ
ನದ್ದಿತತಿಸುಮ್ಮಾನಸಾಗರ ನಿನ್ನ ಮೋಹರದ
ಅದ್ದರೋ ಶೋಕಾಂಬುಧಿಯಲೊಡೆ
ಬಿದ್ದರೋ ಭೀಮಾರ್ಜುನರಿಗುಸು
ರಿದ್ದುದೋ ಬರಹೇಳೆನುತ ಬೊಬ್ಬಿರಿದನಾ ಶಲ್ಯ ॥46॥

೦೪೭ ಗಜಬಜಿಸಿದುದು ವೈರಿಸುಭಟ ...{Loading}...

ಗಜಬಜಿಸಿದುದು ವೈರಿಸುಭಟ
ವ್ರಜ ನಕುಲ ಸಹದೇವ ಸಾತ್ಯಕಿ
ವಿಜಯ ಧೃಷ್ಟದ್ಯುಮ್ನ ಭೀಮ ದ್ರೌಪದೀಸುತರು
ವಿಜಿತನೋ ವಿಗತಾಸುವೋ ಧ
ರ್ಮಜನ ಹದನೇನೆನುತ ಚಿಂತಾ
ರಜನಿಯಲಿ ಕಂಗೆಟ್ಟುದಾ ಬಲವರಸ ಕೇಳ್ ಎಂದ ॥47॥

೦೪೮ ಕ್ಷಣಕೆ ಮರಳೆಚ್ಚತ್ತನಸ್ತ್ರ ...{Loading}...

ಕ್ಷಣಕೆ ಮರಳೆಚ್ಚತ್ತನಸ್ತ್ರ
ವ್ರಣವ ತೊಳೆದರು ಘಾಯದಲಿ ಕೇ
ವಣಿಸಿದರು ದಿವ್ಯೌಷಧಿಯ ಗಂಧಾನುಲೇಪದಲಿ
ರಣವಿಜಯ ನವ ವಸನ ಮಣಿಭೂ
ಷಣ ಪರಿಷ್ಕೃತನಾಗಿ ತಿರುವಿನ
ಗೊಣೆಯವನು ನೇವರಿಸಿದನು ಸಂತೈಸಿ ಸಂಹನವ ॥48॥

೦೪೯ ಮರವೆ ಮಸಳಿತೆ ...{Loading}...

ಮರವೆ ಮಸಳಿತೆ ಭೂಮಿಪತಿ ಕಂ
ದೆರೆದಿರೇ ಭೀಮಾರ್ಜುನರು ನಿ
ಮ್ಮಿರಿತಕೊದಗಿದರಿಲ್ಲಲಾ ನೀವೇಕೆ ರಣವೇಕೆ
ನೆರೆ ಧನುರ್ವೇದಾರ್ಥಸಾರವ
ನರಿವೆಯಾದರೆ ಕೊಳ್ಳೆನುತ ಬಿಡೆ
ತರಿದನೆಂಟಂಬಿನಲಿ ಧ್ವಜ ರಥ ಹಯವನಾ ಶಲ್ಯ ॥49॥

೦೫೦ ಧನುವನೆರಡಮ್ಬಿನಲಿ ಮಗುಳೆ ...{Loading}...

ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮರಳೆಚ್ಚನು ಯುಧಿಷ್ಠಿರನ
ಮನನ ಶಾಸ್ತ್ರ ಶ್ರವಣ ನಿಯಮಾ
ವನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ ॥50॥

೦೫೧ ಉಡಿದು ಬಿದ್ದುದು ...{Loading}...

ಉಡಿದು ಬಿದ್ದುದು ಚಾಪ ಸಾರಥಿ
ಕಡಿವಡೆದು ರಥ ನುಗ್ಗುನುಸಿಯಾ
ಯ್ತಡಗುದರಿಯಾಯ್ತಶ್ವಚಯ ಸಜ್ಜೋಡು ತಡಿ ಸಹಿತ
ನಡುಗಿತರಿಬಲವವನಿಪತಿ ಕಾ
ಲ್ನಡೆಗೆ ಬಂದನು ಮತ್ತೆ ರಥವಂ
ಗಡವ ಮೇಳೈಸಿದನು ನಗುತಡರಿದನು ಮಣಿರಥವ ॥51॥

೦೫೨ ಬೊಬ್ಬಿರಿದುದಾ ಸೇನೆ ...{Loading}...

ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ
ಉಬ್ಬಿದನು ಸತ್‍ಕ್ಷತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬಿನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ ॥52॥

೦೫೩ ಕಾದುಕೊಳು ಮಾದ್ರೇಶ ...{Loading}...

ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗೀ ಸರಳು
ಕೈದುಕಾತಿಯರುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ ॥53॥

೦೫೪ ತೇರು ಹುಡಿಹುಡಿಯಾಯ್ತು ...{Loading}...

ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ ॥54॥

೦೫೫ ಅರಸ ಕೇಳೈ ...{Loading}...

ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಲೈಸಿತಕ್ಷಿಯಲಿ
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ ॥55॥

೦೫೬ ವಾರುವನ ವೈಚಿತ್ರಗತಿಯ ...{Loading}...

ವಾರುವನ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೇಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕಸಾವಿರವ ॥56॥

೦೫೭ ಮಲೆತ ಧೃಷ್ಟದ್ಯುಮ್ನನನು ...{Loading}...

ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ ॥57॥

೦೫೮ ಎಸು ಯುಧಿಷ್ಠಿರ ...{Loading}...

ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರಲೈ ತನುತ್ರ ರಥಂಗಳಿಲ್ಲೆಮಗೆ
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ ॥58॥

೦೫೯ ಅಕಟಕಟ ಧರ್ಮಜನನೀ ...{Loading}...

ಅಕಟಕಟ ಧರ್ಮಜನನೀ ಕಂ
ಟಕಕೆ ಕೈವರ್ತಿಸಿದರೇ ಪಾ
ತಕರು ಪಾಂಡವರೆನುತ ಕುರುಬಲವೆಲ್ಲ ಸಮತಳಿಸೆ
ವಿಕಟ ರೋಷಶಿಖಿಸ್ಫುಲಿಂಗ
ಪ್ರಕಟ ಭೀಷಣಸಹಿತ ಕೌಕ್ಷೇ
ಯಕವ ಖಂಡಿಸಿ ಧರೆ ಬಿರಿಯೆ ಬೊಬ್ಬಿರಿದನಾ ಭೀಮ ॥59॥

೦೬೦ ಲೇಸ ಮಾಡಿದೆ ...{Loading}...

ಲೇಸ ಮಾಡಿದೆ ಭೀಮ ಕಟ್ಟಾ
ಳೈಸಲೇ ನೀನವರೊಳಗೆ ನಿ
ನ್ನಾಸೆಯಲ್ಲಾ ಧರ್ಮಪುತ್ರನ ಸತ್ವಸಂಪದಕೆ
ಐಸೆ ಬಳಿಕೇನೆನುತ ಶಲ್ಯಮ
ಹೀಶ ಮುರಿಯಲು ಹೊಸ ರಥವ ಮೇ
ಳೈಸಿ ಸಾರಥಿ ಸಂಧಿಸಿದನವಧಾನ ಜೀಯೆನುತ ॥60॥

೦೬೧ ರಥಕೆ ಬನ್ದು ...{Loading}...

ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ
ಪೃಥೆಯ ಮಕ್ಕಳ ರಣಪರಾಕ್ರಮ
ವೃಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ್ಮಜನ ॥61॥

೦೬೨ ಸಾರಥಿಗೆ ಸೂಚಿಸಿ ...{Loading}...

ಸಾರಥಿಗೆ ಸೂಚಿಸಿ ನೃಪಾಲನ
ಸಾರೆ ದುವ್ವಾಳಿಸಲು ಮಿಗೆ ನೃಪ
ನೋರೆಗೊಂಡನು ತಿರುಗೆ ತಿರುಗಿದನೊಲೆದೊಡೊಡನೊಲೆದು
ಚೂರಿಸುವ ನಾರಾಚವಿಕ್ರಮ
ದೋರಣೆಗೆ ನಾರಾಚಿಸಿತು ವಿ
ಸ್ತಾರದಲಿ ವಿಸ್ತರಿಸಿದನು ಜಯಸಮರಸಾಹಸವ ॥62॥

೦೬೩ ಹಿನ್ದೆ ಕರ್ಣನು ...{Loading}...

ಹಿಂದೆ ಕರ್ಣನು ಫಲುಗುಣನು ಬಳಿ
ಕಿಂದು ಶಲ್ಯಯುಧಿಷ್ಠಿರರು ಸಾ
ನಂದದಲಿ ಸಮತಳಿಸಿ ಕಾದಿದರುಭಯಬಲ ಹೊಗಳೆ
ಇಂದು ಮಾದ್ರಾಧೀಶ್ವರಗೆ ಯಮ
ನಂದನನು ಯಮಸುತಗೆ ಪಡಿ ತಾ
ಸಂದನೈ ಮಾದ್ರಾಧಿಪತಿಯೆಂದುದು ಭಟಸ್ತೋಮ ॥63॥

೦೬೪ ಅರಸ ಕೇಳೈ ...{Loading}...

ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಟ್ಟನು ಹಸಾದದ ಮಧುರವಚನದಲಿ ॥64॥

೦೬೫ ಆಯಿದನು ಶಸ್ತ್ರಾಸ್ತ್ರದಲಿ ...{Loading}...

ಆಯಿದನು ಶಸ್ತ್ರಾಸ್ತ್ರದಲಿ ದಿ
ವ್ಯಾಯುಧವನರೆಬಳಿದ ವರ ತಪ
ನೀಯರೇಖೆಯ ಕುಣಿವ ಗಂಟೆಯ ಹೊಳೆವ ಹೊಂಗರಿಯ
ಬಾಯಿಧಾರೆಯ ತೈಲಲೇಪನ
ದಾಯತದ ಚೌರಿಗಳ ರಿಪುಭಟ
ನಾಯುಷದ ಕಡೆವಗಲ ಭುಕ್ತಿಯ ಶಕ್ತಿಯನು ನೃಪತಿ ॥65॥

೦೬೬ ತುಡುಕಿದನು ಹೊಸರವಿಯ ...{Loading}...

ತುಡುಕಿದನು ಹೊಸರವಿಯ ತೇಜದ
ದಡಿಯನುಗಿದಂದದಲಿ ಹೊಳೆಹೊಳೆ
ವುಡುನಿಕರವುಚ್ಚಳಿಪವೊಲು ಮಣಿಮಯದ ಕಾಂತಿಗಳ
ಕುಡಿಮೊನೆಯ ಪಡಿಮುಖದಲೊದರುವ
ಕಿಡಿಯ ಘಂಟಾರವದ ರಭಸದ
ಝಡಪದಲಿ ಜೋಡಿಸಿದ ಶಕ್ತಿಯಲಿಟ್ಟನವನೀಶ ॥66॥

೦೬೭ ಇದಿರೊಳೆಚ್ಚನು ಶಲ್ಯನಮ್ಬಿನ ...{Loading}...

ಇದಿರೊಳೆಚ್ಚನು ಶಲ್ಯನಂಬಿನ
ಹೊದೆ ಸವೆಯೆ ಹರಿತಪ್ಪ ಶಕ್ತಿಯ
ತುದಿಗೆ ಕಬಳಗ್ರಾಸವಾದುದಲೈ ವಿಚಿತ್ರವಲಾ
ಹೊದರುಗಿಡಿಗಳ ಕೇಸುರಿಯ ಹಾ
ರದಲಿ ಹರಿತಂದಹಿತ ದಳಪತಿ
ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ ॥67॥

೦೬೮ ಕಾರಿದನು ರುಧಿರವನು ...{Loading}...

ಕಾರಿದನು ರುಧಿರವನು ಧರಣಿಗೆ
ಹಾರಿ ಬಿದ್ದನು ಮಾದ್ರಪತಿಯೆದೆ
ಡೋರಿನಲಿ ಡಾವರಿಸಿದವು ರಕ್ತಾಂಬುಧಾರೆಗಳು
ಮೀರಿತಸು ಕಂಠವನು ನಾಸಿಕ
ಕೇರಿದುದು ನಿಟ್ಟುಸುರು ನಿಮಿಷಕೆ
ಚೀರಿದುದು ಕುರುರಾಯದಳ ಶಲ್ಯಾವಸಾನದಲಿ ॥68॥

೦೬೯ ಅಹಹ ಸೇನಾಪತಿಯ ...{Loading}...

ಅಹಹ ಸೇನಾಪತಿಯ ಮಗ್ಗುಲು
ಮಹಿಗೆ ಬಿದ್ದುದು ಬೆಚ್ಚಿತೀಚೆಯ
ಬಹಳಬಲರಿನ್ನಾರು ಕುರುಸೇನಾಧುರಂಧರರು
ಮಿಹಿರಸುತ ಗುರು ಭೀಷ್ಮರಲಿ ಸ
ನ್ನಿಹಿತನಾದನು ಶಲ್ಯನೆನೆ ಕಿಂ
ಗಹನವೀ ರಣವೆನುತ ಶಲ್ಯಾನುಜನು ಮಾರಾಂತ ॥69॥

೦೭೦ ಗೆಲವು ನಿನಗಾಯ್ತರಸ ...{Loading}...

ಗೆಲವು ನಿನಗಾಯ್ತರಸ ಹರಿಬಕೆ
ನಿಲುಕಿದೆನ್ನನು ಸಂತವಿಸಿ ನಿಜ
ಬಲದಲೊಸಗೆಯ ಮಾಡಿಸಾ ಮಾದ್ರೇಶಮಾರಣವ
ಅಳುಕದಿದಿರಾಗೆನುತ ಬಾಣಾ
ವಳಿಯ ತವಿಸೆ ನಿರಂತರಾಸ್ತ್ರದ
ಜಲನಿಧಿಗೆ ವಡಬಾಗ್ನಿಯಾದನು ನಗುತ ಯಮಸೂನು ॥70॥

೦೭೧ ಆತನಸ್ತ್ರವ ಮುರಿಯೆಸುತ ...{Loading}...

ಆತನಸ್ತ್ರವ ಮುರಿಯೆಸುತ ರಥ
ಸೂತ ಹಯವನು ತರಿದು ಬಾಣ
ವ್ರಾತದಲಿ ಶಲ್ಯಾನುಜನ ಹೂಳಿದನು ಹರಹಿನಲಿ
ಈತನನು ಕೆಡಹಿದನು ಸಾಲ್ವಮ
ಹೀತಳಾಧಿಪನವನ ಹರಿಬಕೆ
ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ ॥71॥

೦೭೨ ಆರಿ ಹೊಕ್ಕುದು ...{Loading}...

ಆರಿ ಹೊಕ್ಕುದು ಶಲ್ಯನೃಪಪರಿ
ವಾರ ಮಾದ್ರದ ನಾಯಕರು ಜ
ಜ್ಝಾರ ಮನ್ನೆಯ ಮಂಡಳಿಕ ಸಾಮಂತಸಂದೋಹ
ಭೂರಿಬಲ ಸಾಲ್ವನ ಭಟಾವಳಿ
ಯಾರುಭಟೆಯಲಿ ನೂಕಿದುದು ವಿ
ಸ್ತಾರಿಸಿತಲೈ ಧರ್ಮನಂದನನೊಡನೆ ಬಲುಸಮರ ॥72॥

೦೭೩ ಕೇಳಿದನು ಕುರುರಾಯ ...{Loading}...

ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ಯೆನುತ ಹೊಕ್ಕನು ಲಳಿಯ ಲಗ್ಗೆಯಲಿ ॥73॥

೦೭೪ ರಾಯನೊಡನೆ ಸಮಸ್ತ ...{Loading}...

ರಾಯನೊಡನೆ ಸಮಸ್ತ ಬಲವಡು
ಪಾಯಲೌಕಿತು ಪಾರ್ಥ ಸಾತ್ಯಕಿ
ವಾಯುಸುತರಾಚೆಯಲಿ ಮೇಳೈಸಿತ್ತು ನೃಪಸೇನೆ
ಸಾಯಕದ ಸೂಠಿಗಳ ಸಬಳದ
ಪಾಯದಳ ರಥ ವಾಜಿ ಗಜಘಟೆ
ಲಾಯಶುದ್ಧದ ತೇಜಿ ಹೊಕ್ಕವು ವಾಘೆಸರಿಸದಲಿ ॥74॥

೦೭೫ ಥಟ್ಟನೊಡಹೊಯ್ದವನಿಪತಿ ಜಗ ...{Loading}...

ಥಟ್ಟನೊಡಹೊಯ್ದವನಿಪತಿ ಜಗ
ಜಟ್ಟಿಗಳ ಕೆಣಕಿದನು ನಕುಲನ
ನಟ್ಟಿದನು ಸಹದೇವನಡಹಾಯ್ದರೆ ವಿಭಾಡಿಸಿದ
ಬಿಟ್ಟ ಧೃಷ್ಟದ್ಯುಮ್ನನನು ಹುಡಿ
ಗುಟ್ಟಿದನು ಸಾತ್ಯಕಿಯ ಜೋಡಿನ
ಲೊಟ್ಟಿದನು ಕೂರಂಬುಗಳನುಬ್ಬಿನಲಿ ಕುರುರಾಯ ॥75॥

೦೭೬ ಮರಳಿ ಪಞ್ಚದ್ರೌಪದೇಯರ ...{Loading}...

ಮರಳಿ ಪಂಚದ್ರೌಪದೇಯರ
ಪರಿಭವಿಸಿದನು ಧರ್ಮಪುತ್ರನ
ತೆರಳಿಚಿದ ಸಹದೇವ ನಕುಲರ ಮತ್ತೆ ಸೋಲಿಸಿದ
ವರ ಯುಧಾಮನ್ಯೂತ್ತಮೌಜರ
ಹೊರಳಿಸಿದನವನಿಯಲಿ ಭೀಮಾ
ದ್ಯರಿಗೆ ಭೀತಿಯ ಬೀರಿದನು ಬೇಸರದೆ ಕುರುರಾಯ ॥76॥

೦೭೭ ಕೆದರುತದೆ ನಮ್ಮವರ ...{Loading}...

ಕೆದರುತದೆ ನಮ್ಮವರ ದಳ ದೊರೆ
ಯದಟು ಸುಕ್ಕಿತು ರಾಯನೊಬ್ಬನೆ
ಕದನದಲಿ ಕೈದೋರಿ ಭಂಗಿಸಿದನು ಮಹಾರಥರ
ಹೊದರು ತಳಿತುದು ಲಗ್ಗೆವರೆ ಮೋ
ನದಲಿ ಮಗುಳ್ದುವು ಪಾರ್ಥ ದಿವ್ಯಾ
ಸ್ತ್ರದಲಿ ಕೈಮಾಡೆಂದು ನುಡಿದನು ವೀರನಾರಯಣ ॥77॥

೦೭೮ ಇತಿ ಶ್ರೀಮದಚಿನ್ತ್ಯ ...{Loading}...

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಶಲ್ಯಪರ್ವಂ ಸಮಾಪ್ತಮಾದುದು.

+೦೩ ...{Loading}...