೦೦೦ ಸೂ ರಾಯ ...{Loading}...
ಸೂ. ರಾಯ ಕೇಳೈ ಕದನದಲಿ ರಾ
ಧೇಯನವಸಾನದಲಿ ಕೌರವ
ರಾಯದಳಪತಿಯಾಗಿ ಹೊಕ್ಕನು ಶಲ್ಯನಾಹವವ ॥ 0 ॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ: ಜನಮೇಜಯರಾಯನೇ ಕೇಳು, ಯುದ್ಧದಲ್ಲಿ ಕರ್ಣನ ಮರಣದ ನಂತರ ದುರ್ಯೋಧನನ ಸೇನಾನಾಯಕನಾಗಿ ಶಲ್ಯನು ಯುದ್ಧರಂಗವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಆಹವ-ಯುದ್ಧಭೂಮಿ
ಮೂಲ ...{Loading}...
ಸೂ. ರಾಯ ಕೇಳೈ ಕದನದಲಿ ರಾ
ಧೇಯನವಸಾನದಲಿ ಕೌರವ
ರಾಯದಳಪತಿಯಾಗಿ ಹೊಕ್ಕನು ಶಲ್ಯನಾಹವವ ॥ 0 ॥
೦೦೧ ಹೇಳರೇ ಭೀಷ್ಮಾದಿ ...{Loading}...
ಹೇಳರೇ ಭೀಷ್ಮಾದಿ ಹಿರಿಯರು
ಮೇಲುದಾಯವ ಬಲ್ಲವರು ಹೆ
ಚ್ಚಾಳುತನದಲಿ ಹಿಗ್ಗಿಕಂಡಿರೆ ಜಯದ ಜಾರುಗಳ
ಮೇಲಣಾಹವದೊಳಗೆ ದೇಹವ
ಬೀಳುಕೊಂಡನು ಶಲ್ಯನಲ್ಲಿಂ
ಮೇಲೆ ದೊರೆಗೇನಾದುದೆಂಬುದನರಿಯೆ ನಾನೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧದ ಮುಂದಿನ ಪರಿಣಾಮವನ್ನು ಬಲ್ಲವರಾದ ಭೀಷ್ಮನೇ ಮುಂತಾದ ಹಿರಿಯರು ಮೊದಲೇ ಹೇಳಿರಲಿಲ್ಲವೇ; ಶೌರ್ಯದಿಂದ ಉಬ್ಬಿದಿರಿ. ಯುದ್ಧದಲ್ಲಿ ವಿಜಯವು ಜಾರಿಹೋಗುವುದನ್ನು ಊಹಿಸಿದಿರೆ? ಮುಂದಿನ ಯುದ್ಧದಲ್ಲಿ ಶಲ್ಯನ ಆತ್ಮ ತನ್ನ ದೇಹವನ್ನು ಬೀಳುಕೊಂಡಿತು - (ಶಲ್ಯ ಮಡಿದ). ಅಲ್ಲಿಂದ ಮುಂದೆ ದುರ್ಯೋಧನನಿಗೆ ಏನಾಯಿತೋ ಎಂಬುದು ನನಗೆ ತಿಳಿದಿಲ್ಲ” ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಮೇಲುದಾಯ-ಮುಂದಿನ ಪರಿಣಾಮ, ಹೆಚ್ಚಾಳುತನ-ಶೌರ್ಯ
ಟಿಪ್ಪನೀ (ಕ.ಗ.ಪ)
ಶಲ್ಯಪರ್ವದ ಪ್ರಾರಂಭದಲ್ಲಿಯೇ ಸಂಜಯ, ಧೃತರಾಷ್ಟ್ರನಿಗೆ ಶಲ್ಯನ ಮರಣದ ವಾರ್ತೆಯನ್ನು ಹೇಳುತ್ತಾನೆ. ಶಲ್ಯ ಮರಣ ಹೊಂದುವ ಸಂದರ್ಭ ಈ ಪರ್ವದ ಕಡೆಯ ಭಾಗದಲ್ಲಿ ಬರುತ್ತದೆ. ಯುದ್ಧ ಪರ್ವಗಳೆಲ್ಲೆಲ್ಲಾ ಕವಿ ಇದೇ ಕ್ರಮವನ್ನು ಅನುಸರಿಸಿದ್ದಾನೆ. ಸಂಜಯನಿಗೆ ಯುದ್ಧಭೂಮಿಯ ಘಟನಾವಳಿಗಳೆಲ್ಲವೂ ಮೊದಲೇ ಭಾಸವಾಗುತ್ತಿತ್ತೇ? ಅಥವಾ ದುರ್ಯೋಧನನ ಒಬ್ಬ ಸೇನಾಪತಿಯ ಅವಸಾನದವರೆಗೂ ಸಂಜಯ ಯುದ್ಧಭೂಮಿಯಲ್ಲಿದ್ದು, ಆ ನಂತರ ಬಂದು ಧೃತರಾಷ್ಟ್ರನಿಗೆ ಆ ಎಲ್ಲ ಘಟನೆಗಳ ವಿವರಗಳನ್ನು ತಿಳಿಸುತ್ತಾನೆಂದು ಭಾವಿಸಬೇಕೇ ಎಂಬ ಅನುಮಾನ ಮೂಡುತ್ತದೆ.
ಮೂಲ ...{Loading}...
ಹೇಳರೇ ಭೀಷ್ಮಾದಿ ಹಿರಿಯರು
ಮೇಲುದಾಯವ ಬಲ್ಲವರು ಹೆ
ಚ್ಚಾಳುತನದಲಿ ಹಿಗ್ಗಿಕಂಡಿರೆ ಜಯದ ಜಾರುಗಳ
ಮೇಲಣಾಹವದೊಳಗೆ ದೇಹವ
ಬೀಳುಕೊಂಡನು ಶಲ್ಯನಲ್ಲಿಂ
ಮೇಲೆ ದೊರೆಗೇನಾದುದೆಂಬುದನರಿಯೆ ನಾನೆಂದ ॥1॥
೦೦೨ ಮರುಳೆ ಸಞ್ಜಯ ...{Loading}...
ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಚ್ಚು ಸಂಜಯ! ಗಾಳಿಯ ಹೊಡೆತಕ್ಕೆ ಕುಲಗಿರಿಯ ಬೆಸುಗೆ ಬಿಚ್ಚಿದರೆ, ಸಣ್ಣಪುಟ್ಟ ಗುಡ್ಡಗಳ ಬಿಗಿಯೇನು? (ಗತಿಯೇನು); ಕರ್ಣನ ಸೈನ್ಯದ ಪ್ರತಿಷ್ಠೆಯೆಲ್ಲವೂ ಮುಗಿದುಹೋಯಿತು; ದುರ್ಯೋಧನನ ಪಾಡೇನಾಯಿತು? ಶಲ್ಯನ ಕೋಪವೇನಾಯಿತು? ಆ ವಿಚಾರ ಹಾಗಿರಲಿ, ಕುರುವಂಶ ನಾಶವಾಯಿತೆ? ಎಂದು ಧೃತರಾಷ್ಟ್ರ ಸಂಜಯನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಕುಲಗಿರಿ-ಮಹೇಂದ್ರ, ಮಲಯ, ಸಹ್ಯ, ಶಕ್ತಿಮಾನ್, ಋಕ್ಷವಾನ್, ವಿಂಧ್ಯ, ಪಾರಿಯಾತ್ರ ಎಂಬ ಏಳು ಪರ್ವಗಳು,
ಬೈಸಿಕೆ-ಬೆಸುಗೆ,
ಹುಲುಮೊರಡಿ-ಸಣ್ಣಗುಡ್ಡ, ಬೀತುದು-ನಾಶವಾಯಿತು, ಮುಗಿಯಿತು,
ಒಡ್ಡವಣೆ-ಸೈನ್ಯಸಮೂಹ, ಬಲದ ಪ್ರತಿಷ್ಠೆ,
ಮತ್ಸರ-ಕೋಪ ಸವರು -ಕತ್ತರಿಸು, ನಾಶಮಾಡು, ಅನ್ವಯ-ವಂಶ,
ಅಂಧನೃಪ-ಕುರುಡುದೊರೆ (ಧೃತರಾಷ್ಟ್ರ)
ಟಿಪ್ಪನೀ (ಕ.ಗ.ಪ)
ಭೀಷ್ಮದ್ರೋಣಾದಿಗಳಂತಹ ಸಾಹಸಿಗಳೇ ಯುದ್ಧದಲ್ಲಿ ನಿರ್ನಾಮರಾದರೆಂದರೆ ಕರ್ಣನಂತಹವರ ಪಾಡೇನು. ಕರ್ಣಾವಸಾನವನ್ನು ವಿಶೇಷವೆಂಬಂತೆ ಹೇಳುವ ಅವಶ್ಯಕತೆಯಿಲ್ಲವೆಂಬುದು ಧೃತರಾಷ್ಟ್ರನ ಮಾತು. ಇನ್ನು ದುರ್ಯೋಧನನೂ ನಾಶಹೊಂದಿರಬಹುದು ಎಂಬುದು ಧೃತರಾಷ್ಟ್ರನ ಅನುಮಾನ, ಆದ್ದರಿಂದ ಆ ವಿಚಾರವನ್ನು ಹೇಳು ಎಂದು ಸಂಜಯನನ್ನು ಕೇಳುತ್ತಾನೆ.
ಮೂಲ ...{Loading}...
ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ ॥2॥
೦೦೩ ಬೇಯದೆನ್ನೆದೆ ಶೋಕವಹ್ನಿಯ ...{Loading}...
ಬೇಯದೆನ್ನೆದೆ ಶೋಕವಹ್ನಿಯ
ಬಾಯಲಕಟಾ ಕರ್ಣ ಕೌರವ
ರಾಯನಳಿವಿನಲುಳಿವ ಪುತ್ರದ್ರೋಹಿಯಾರಿನ್ನು
ಸಾಯಿಸುವ ಸಾವಂಜಿತೆನಗೆ ಚಿ
ರಾಯು ತೊಡರಿಕ್ಕಿದೆನು ಮಾರ್ಕಂ
ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೋಕಾಗ್ನಿಯ ಬಾಯಿಗೆ ಬಿದ್ದರೂ ಎನ್ನೆದೆ ಬೆಂದು ಹೋಗುವುದಿಲ್ಲ; ಆಯ್ಯೋ! ಕರ್ಣ ಮತ್ತು ದುರ್ಯೋಧನನ ಸಾವಿನ ನಂತರವೂ ಬದುಕಿ ಉಳಿಯುವ ನನ್ನಂತಹ ಪುತ್ರದ್ರೋಹಿ ಯಾರಿದ್ದಾರೆ?. ಎಲ್ಲರನ್ನೂ ಸಾಯಿಸುವ ಸಾವೇ ನನಗೆ ಹೆದರಿಹೋಗಿದೆ. ನನ್ನ ಮಕ್ಕಳು - ಮರಿಗಳ, ಬಂಧುಬಾಂಧವರ ಸಾವನ್ನು ಕಂಡೂ ನಾನು ಬದುಕಿದ್ದೇನೆಂದರೆ ಚಿರಾಯುವಾಗಿ ಉಳಿದು ಚಿರಾಯುವೆಂದು ಶಿವನಿಂದ ವರ ಪಡೆದ ಮಾರ್ಕಂಡೇಯ ಋಷಿಗೂ ನಾನು ತೊಡರಾಗಿದ್ದೇನೆ ಎಂದು ಶೋಕಿಸುತ್ತಾ ನೆಲಕ್ಕೆ ಬಿದ್ದನು.
ಪದಾರ್ಥ (ಕ.ಗ.ಪ)
ವಹ್ನಿ-ಅಗ್ನಿ, ಚಿರಾಯು-ಸಾವಿಲ್ಲದವನು, ಅತಿದೀರ್ಘವಾದ ಆಯುಸ್ಸುಳ್ಳವನು, ತೊಡರಿಕ್ಕು-ಸೋಲಿಸು, ಅವನಿ-ಭೂಮಿ, ನೆಲ
ಟಿಪ್ಪನೀ (ಕ.ಗ.ಪ)
ಮೃಕಂಡು ಮಹರ್ಷಿಗಳ ಮಗನಾದ ಮಾರ್ಕಂಡೇಯನು ಬಾಲಕನಾಗಿದ್ದಾಗಲೇ ಶಿವನನ್ನು ಕುರಿತು ತಪಸ್ಸು ಮಾಡಿ ಅವನಿಂದ ‘ಚಿರಾಯು’ವೆಂಬ ವರವನ್ನು ಪಡೆದ. ಯಮನೇ ಬಂದರೂ ಅವನ ಪ್ರಾಣವನ್ನು ಕೊಂಡೊಯ್ಯಲಾಗಲಿಲ್ಲ. ತಾನು ಅಂತಹ ಮಾರ್ಕಂಡೇಯನನ್ನೂ ಸೋಲಿಸುವಂತೆ ಚಿರಾಯುವಾಗಿಬಿಟ್ಟೆನಲ್ಲಾ! ನನಗೆ ಸಾವೇ ಇಲ್ಲವೇ! ಎಂದು ಹಲುಬುತ್ತಾನೆ ಧೃತರಾಷ್ಟ್ರ. ಎಲ್ಲರನ್ನೂ ಅಂಜಿಸುವ ಯಮನೇ ನನಗೆ ಹೆದರಿದ್ದಾನೆ - ಎಂಬ ಅವನ ಮಾತು ಅವನ ಹತಾಶೆಯ ಪರಾಕಾಷ್ಠೆಯನ್ನು ಸೂಚಿಸುತ್ತದೆ.
ಮೂಲ ...{Loading}...
ಬೇಯದೆನ್ನೆದೆ ಶೋಕವಹ್ನಿಯ
ಬಾಯಲಕಟಾ ಕರ್ಣ ಕೌರವ
ರಾಯನಳಿವಿನಲುಳಿವ ಪುತ್ರದ್ರೋಹಿಯಾರಿನ್ನು
ಸಾಯಿಸುವ ಸಾವಂಜಿತೆನಗೆ ಚಿ
ರಾಯು ತೊಡರಿಕ್ಕಿದೆನು ಮಾರ್ಕಂ
ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ ॥3॥
೦೦೪ ಹದುಳಿಸೈ ರಾಜೇನ್ದ್ರ ...{Loading}...
ಹದುಳಿಸೈ ರಾಜೇಂದ್ರ ನೀ ಬಿ
ತ್ತಿದ ವಿಷದ್ರುಮ ಫಲಿತವಾಯಿತು
ಬೆದರಲೇಕಿನ್ನನುಭವಿಸು ಸಾಕುಳಿದ ಮಾತೇನು
ಕದನದಲಿ ಸುತನಿಧಿಯ ಹೋಗಾ
ಡಿದೆ ನಿಜಾನ್ವಯ ಕಲ್ಪತರುವನು
ಮದಕರಿಗೆ ಮಾರಿದೆಯೆನುತ ನೆಗಹಿದನು ಭೂಪತಿಯ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ! ಸಮಾಧಾನ ಮಾಡಿಕೋ, ನೀನು ಬಿತ್ತಿದ ವಿಷವೃಕ್ಷ ಈಗ ಫಲ ಕೊಡುತ್ತಿದೆ; ಅದಕ್ಕೆ ಹೆದರಿ ಪ್ರಯೋಜನವಿಲ್ಲ, ನಿನ್ನ ಕರ್ಮಫಲವನ್ನು ನೀನು ಆನುಭವಿಸಲೇಬೇಕು - ಇನ್ನುಳಿದ ಮಾತೇಕೆ. ಯುದ್ಧದಲ್ಲಿ ನಿನ್ನ ಮಕ್ಕಳೆಂಬ ಐಶ್ವರ್ಯವನ್ನು ಕಳೆದುಕೊಂಡೆ; ನಿನ್ನ ವಂಶವೆಂಬ ಕಲ್ಪವೃಕ್ಷವನ್ನು ಮದಿಸಿದ ಆನೆಗೆ ಬಿಟ್ಟುಕೊಟ್ಟೆ” - ಎನ್ನುತ್ತಾ ಸಂಜಯ ಧೃತರಾಷ್ಟ್ರನನ್ನು ಮೇಲಕ್ಕೆತ್ತಿದ.
ಪದಾರ್ಥ (ಕ.ಗ.ಪ)
ಹದುಳಿಸು-ಸಮಾಧಾನ ಮಾಡಿಕೋ (ಹದುಳ-ಕ್ಷೇಮ), ವಿಷದ್ರುಮ-ವಿಷವೃಕ್ಷ, ಫಲಿತ- ಫಲಬಿಟ್ಟ, ನಿಜ-ತನ್ನ, ಅನ್ವಯ-ವಂಶ, ಸುತನಿಧಿ-ಮಕ್ಕಳೆಂಬ ಐಶ್ವರ್ಯ, ಕಲ್ಪತರು-ಕೇಳಿದ್ದನ್ನು ಕೊಡುವ ಮರ, ಕಲ್ಪವೃಕ್ಷ, ಮದಕರಿ-ಮದಿಸಿದ ಆನೆ, ನೆಗಹು-ಮೇಲಕ್ಕೆ ಎತ್ತು.
ಟಿಪ್ಪನೀ (ಕ.ಗ.ಪ)
‘ಮಾರು’ ಎಂಬ ಶಬ್ದಕ್ಕೆ ಈಗ ಕ್ರಯಕ್ಕೆಕೊಡು, ಮಾರಾಟ ಮಾಡು - ಎಂಬ ಅರ್ಥಗಳಿವೆ. ಹಳೆಗನ್ನಡದ ಸಂದರ್ಭಗಳಲ್ಲಿ ಈ ಶಬ್ದಕ್ಕೆ ಬದಲಾಯಿಸಿಕೊಳ್ಳುವುದು ಎಂಬ ಅರ್ಥವಿದೆ. ಮಾರಿದನು ಮನವ, ಮಾರು ಹೋದನು, ಮಾರುಗೊಡು, ಮಾರುಗುಕ್ಕೆ ಮುಂತಾದ ಶಬ್ದಗಳನ್ನು ಪರಿಶೀಲಿಸಬಹುದು.
ಮೂಲ ...{Loading}...
ಹದುಳಿಸೈ ರಾಜೇಂದ್ರ ನೀ ಬಿ
ತ್ತಿದ ವಿಷದ್ರುಮ ಫಲಿತವಾಯಿತು
ಬೆದರಲೇಕಿನ್ನನುಭವಿಸು ಸಾಕುಳಿದ ಮಾತೇನು
ಕದನದಲಿ ಸುತನಿಧಿಯ ಹೋಗಾ
ಡಿದೆ ನಿಜಾನ್ವಯ ಕಲ್ಪತರುವನು
ಮದಕರಿಗೆ ಮಾರಿದೆಯೆನುತ ನೆಗಹಿದನು ಭೂಪತಿಯ ॥4॥
೦೦೫ ಮಲಗಿಸಿದನೊರವೇಳ್ವ ನಯನ ...{Loading}...
ಮಲಗಿಸಿದನೊರವೇಳ್ವ ನಯನ
ಸ್ಥಳವ ನೇವರಿಸಿದನು ಶೋಕಾ
ನಲನ ತಾಪಕೆ ತಂಪನೆರೆದನು ನೀತಿಮಯರಸದ
ಅಳಲಶ್ರವಮಾಡಿದೆ ನದೀಸುತ
ನಳಿವಿನಲಿ ಗುರು ಕರ್ಣ ಶಲ್ಯರ
ಕಳಿವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ, ಮಲಗಿದ್ದ ಧೃತರಾಷ್ಟ್ರನ ನೀರು ಸೂಸುತ್ತಿದ್ದ ಕಣ್ಣುಗಳ ಸ್ಥಳವನ್ನು ಸವರಿದನು, ಶೋಕಾಗ್ನಿಯ ತಾಪಕ್ಕೆ ನೀತಿರಸದ ತಂಪನ್ನೆರೆದನು. “ದುಃಖದ ಪರಿಶ್ರಮ ಮಾಡಿದ್ದೀಯೆ! ಭೀಷ್ಮನ ಅಳಿವಿನಲ್ಲಿ (ಸೋಲಿನಲ್ಲಿ) ಗುರುಗಳಾದ ದ್ರೋಣಾಚಾರ್ಯರ, ಕರ್ಣನ, ಶಲ್ಯನ ಸಾವಿನಲ್ಲಿ ಹಿರಿದಾದ ದುಃಖವನ್ನು ಅಭ್ಯಾಸ ಮಾಡಿಕೊಂಡಿರುವವನು ನೀನು” ಎಂದು ಸಂಜಯ ಧೃತರಾಷ್ಟ್ರನನ್ನು ಸಮಾಧಾನಪಡಿಸಿದ.
ಪದಾರ್ಥ (ಕ.ಗ.ಪ)
ಮಲಗಿಸು-ದಿಂಬಿಗೆ ಒರಗಿಸು, ಒರವೇಳ್ವ-ಒರತೆ ಬರುತ್ತಿರುವ, ಅನಲ-ಅಗ್ನಿ, ಅಳಲು-ಶೋಕ, ಶ್ರವ-ಶ್ರಮ, ಪರಿಶ್ರಮ, ತರಬೇತಿ, ಕಟ್ಟಳಲು-ಹಿರಿದಾದ ದುಃಖ
ಟಿಪ್ಪನೀ (ಕ.ಗ.ಪ)
ಇಲ್ಲಿ ಕವಿ ಬಳಸಿರುವ, ‘ಮಲಗಿಸಿದನು’ ಎಂಬಲ್ಲಿನ ‘ಮಲಗು’ ಶಬ್ದಕ್ಕೆ ಈಗ ಹಾಸಿಗೆಯಲ್ಲಿ ಮೈಚಾಚು, ನಿದ್ರಿಸು, ಎಂಬ ಅರ್ಥಗಳಿವೆ. ಆದರೆ ಕುಮಾರವ್ಯಾಸ ಈ ಶಬ್ದವನ್ನು ಆನಿಸು, ಒರಗು ಎಂಬ ಅರ್ಥಗಳಲ್ಲಿ ಬಳಸಿದ್ದಾನೆ. ಉದಾಹರಣೆಗೆ ‘ಮಾನಿನಿಯ ಮಲಗಿ’ ಎಂಬ ಅವನ ಪ್ರಯೋಗವನ್ನು ಗಮನಿಸಬಹುದು.
ಮೂಲ ...{Loading}...
ಮಲಗಿಸಿದನೊರವೇಳ್ವ ನಯನ
ಸ್ಥಳವ ನೇವರಿಸಿದನು ಶೋಕಾ
ನಲನ ತಾಪಕೆ ತಂಪನೆರೆದನು ನೀತಿಮಯರಸದ
ಅಳಲಶ್ರವಮಾಡಿದೆ ನದೀಸುತ
ನಳಿವಿನಲಿ ಗುರು ಕರ್ಣ ಶಲ್ಯರ
ಕಳಿವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ ॥5॥
೦೦೬ ಅಹುದು ಸಞ್ಜಯ ...{Loading}...
ಅಹುದು ಸಂಜಯ ಶೋಕಶಿಖಿ ನೆರೆ
ದಹಿಸಿತೆನ್ನನು ಬೆಂದ ವಸ್ತುಗೆ
ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ
ಮಿಹಿರಸುತ ಪರಿಯಂತ ಕಥೆ ನಿ
ರ್ವಹಿಸಿ ಬಂದುದು ಶಲ್ಯಕೌರವ
ರೆಹಗೆ ನೆಗಳಿದರದನು ವಿಸ್ತರವಾಗಿ ಹೇಳೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೌದು ಸಂಜಯ! ಶೋಕಾಗ್ನಿ ನನ್ನನ್ನು ಸುಟ್ಟುಹಾಕಿದೆ; ‘ಬೆಂದ ವಸ್ತುವಿಗೆ ಪುನಃ ದಹನವುಂಟೇ’ - ಎಂಬ ನಾಣ್ಣುಡಿ ನಮ್ಮ ವಂಶದಲ್ಲಾಯಿತು. ಕರ್ಣನ ಸಾವಿನವರೆಗೆ ಕಥೆಯನ್ನು ಹೇಳಿದ್ದೆ, ಈಗ ಶಲ್ಯ ಮತ್ತು ದುರ್ಯೋಧನರು ಹೇಗೆ ನಡೆದುಕೊಂಡರು (ಯಾವ ರೀತಿ ಯುದ್ಧದಲ್ಲಿ ಹೊರಾಡಿ ಸ್ವರ್ಗವನ್ನು ಸೇರಿ ಪ್ರಸಿದ್ಧರಾದರು) ಎಂಬುದನ್ನು ಇನ್ನು ವಿಸ್ತಾರವಾಗಿ ಹೇಳು” ಎಂದು ಧೃತರಾಷ್ಟ್ರ ಸಂಜಯನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಶೋಕಶಿಖಿ-ಶೋಕಾಗ್ನಿ, ನೆರೆ-ವಿಶೇಷವಾಗಿ, ಹೆಚ್ಚಾಗಿ, ಮಿಹಿರಸುತ-ಸೂರ್ಯನಮಗ ಕರ್ಣ, ಎಹಗೆ-ಹೇಗೆ, ನೆಗಳಿದರು-ನಡೆದುಕೊಂಡರು
ಟಿಪ್ಪನೀ (ಕ.ಗ.ಪ)
1)“ಬೆಂದ ವಸ್ತುಗೆ ದಹನವುಂಟೇ” ಎಂಬ ಗಾದೆಯ ಮಾತನ್ನು ಇಲ್ಲಿ ಸಮಯೋಚಿತವಾಗಿ ಕವಿ ಬಳಸಿದ್ದಾನೆ. ಒಮ್ಮೆ ಬೆಂದು ಹೋದ ವಸ್ತುವನ್ನು ಪುನಃ ಬೇಯಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆ ಈಗಾಗಲೇ ಬೆಂದು ಹೋಗಿರುವ ಹೃದಯವು ಎಂತಹ ಕಠೋರ ವಾರ್ತೆಗಳಿಂದಲೂ ಪುನಃ ಬೇಯಲು ಸಾಧ್ಯವಿಲ್ಲವೆಂಬ ಧೃತರಾಷ್ಟ್ರನ ಮಾತು ಅವನ ಹತಾಶೆಯನ್ನು ಮತ್ತು ದುಃಖದ ಪರಾಕಾಷ್ಠೆಯನ್ನು ಸಮರ್ಥವಾಗಿ ಚಿತ್ರಿಸುತ್ತದೆ.
2)“ಎಹಗೆ” ಎಂಬ ಶಬ್ದವು, ಎಲ್ಲಿ, ಏನು, ಎಂತು. ಎಷ್ಟು ಮುಂತಾದ ಪ್ರಶ್ನಾರ್ಥಕ ಪದಗಳಂತೆ ‘ಎ’ ಅಕ್ಷರದಿಂದ ಪ್ರಾರಂಭವಾಗಿದೆ; ಆದರೆ ಈಗ ಅದರ ‘ಎ’ಕಾರವು ‘ಹ’ಕಾರದಲ್ಲಿ ಸೇರಿ ಹೋಗಿ ‘ಹೇಗೆ’ ಎಂದಾಗಿದೆ.
ಮೂಲ ...{Loading}...
ಅಹುದು ಸಂಜಯ ಶೋಕಶಿಖಿ ನೆರೆ
ದಹಿಸಿತೆನ್ನನು ಬೆಂದ ವಸ್ತುಗೆ
ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ
ಮಿಹಿರಸುತ ಪರಿಯಂತ ಕಥೆ ನಿ
ರ್ವಹಿಸಿ ಬಂದುದು ಶಲ್ಯಕೌರವ
ರೆಹಗೆ ನೆಗಳಿದರದನು ವಿಸ್ತರವಾಗಿ ಹೇಳೆಂದ ॥6॥
೦೦೭ ತೆಗೆದುದಾಚೆಯಲವರ ಬಲ ...{Loading}...
ತೆಗೆದುದಾಚೆಯಲವರ ಬಲ ಜಗ
ದಗಲದುಬ್ಬಿನ ಬೊಬ್ಬೆಯಲಿ ಮೊರೆ
ಮುಗಿಲಮದದಂದದಲಿ ಮೊಳಗುವ ವಾದ್ಯರಭಸದಲಿ
ಬಿಗಿದ ಮೋನದ ಬೀತ ಹರುಷದ
ಹೊಗೆವ ಮೋರೆಯ ಹೊತ್ತುವೆದೆಗಳ
ದುಗುಡದೊಗ್ಗಿನ ನಮ್ಮ ಮೋಹರ ತೆಗೆದುದೀಚೆಯಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಚೆಯಲ್ಲಿ ಎಂದರೆ ಶತ್ರುಗಳಾದ ಪಾಂಡವರ ಕಡೆಯಲ್ಲಿ, ನೆಲದಗಲದ ವಿಸ್ತಾರವಾದ ಅವರ ಸೈನ್ಯ ಉತ್ಸಾಹದ ಬೊಬ್ಬೆಯಲ್ಲಿ, ಗುಡುಗು ಸಿಡಿಲುಗಳ ಮೊರೆತದಿಂದ ಮದಿಸಿದ ಮೋಡಗಳಂತೆ ಮೊಳಗುವ ವಾದ್ಯಗಳ ಶಬ್ದದಲ್ಲಿ, ಯುದ್ಧರಂಗದಿಂದ ತೆರಳಿತು; ಆದರೆ ಈಚೆಯಲ್ಲಿ, ನಿಮ್ಮ ಪಕ್ಷದವರಲ್ಲಿ, ಮೌನದಿಂದ ಬಿಗಿದ, ಸಂತೋಷ ಕಳೆದ, ದುಃಖದಿಂದ ಕಪ್ಪಾದ ಮುಖ, ದುಃಖ - ಕೋಪಗಳಿಂದ ಹೊತ್ತಿ ಉರಿಯುತ್ತಿರುವ ಎದೆ, ದುಗುಡದಿಂದ ಕೂಡಿದ ಸೈನ್ಯವು ಗುಂಪುಗುಂಪಾಗಿ ಯುದ್ಧರಂಗದಿಂದ ತೆರಳಿತು.
ಪದಾರ್ಥ (ಕ.ಗ.ಪ)
ಬಲ-ಸೈನ್ಯ, ಉಬ್ಬಿನ-ಉತ್ಸಾಹದ, ಮೊರೆ-ಭಯಂಕರ ಶಬ್ದ ಮಾಡು, ಮುಗಿಲು-ಮೋಡ, ಮೊಳಗು-ಶಬ್ದ ಮಾಡು, , ಮೋನ-ಮೌನ, ಬೀತ -ಕಳೆದು ಹೋದ, ನಾಶವಾದ, ಒಗ್ಗು-ಸಮೂಹ, ಮೋಹರ- ಸೈನ್ಯ
ಮೂಲ ...{Loading}...
ತೆಗೆದುದಾಚೆಯಲವರ ಬಲ ಜಗ
ದಗಲದುಬ್ಬಿನ ಬೊಬ್ಬೆಯಲಿ ಮೊರೆ
ಮುಗಿಲಮದದಂದದಲಿ ಮೊಳಗುವ ವಾದ್ಯರಭಸದಲಿ
ಬಿಗಿದ ಮೋನದ ಬೀತ ಹರುಷದ
ಹೊಗೆವ ಮೋರೆಯ ಹೊತ್ತುವೆದೆಗಳ
ದುಗುಡದೊಗ್ಗಿನ ನಮ್ಮ ಮೋಹರ ತೆಗೆದುದೀಚೆಯಲಿ ॥7॥
೦೦೮ ಸಿಡಿದು ಕರ್ಣನ ...{Loading}...
ಸಿಡಿದು ಕರ್ಣನ ತಲೆ ಧರಿತ್ರಿಗೆ
ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ
ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ
ಹಡಪಿಗರು ಚಾಮರದ ಚಾಹಿಯ
ರೊಡನೆ ನೆಲಕುರುಳಿದರು ಸಾರಥಿ
ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ತಲೆ ಸಿಡಿದು, ರಥದಿಂದ ಕೆಳಕ್ಕೆ ಬೀಳಲು, ದುರ್ಯೋಧನನು ಮೂರ್ಛೆ ಹೋಗಿ ಧೊಪ್ಪನೆ ಬಿದ್ದು ಕಣ್ಮುಚ್ಚಿದನು, ಶೋಕದಿಂದುಂಟಾದ ಜ್ವರದಿಂದಾಗಿ ದೇಹದಲ್ಲಿ ಧಗೆಯಾಯಿತು. ದುರ್ಯೋಧನನ ಹಡಪದವರು, (ಅವಶ್ಯಕ ಸಾಮಗ್ರಿಗಳನ್ನು ತುಂಬಿದ ಚರ್ಮದ ಚೀಲಗಳನ್ನು ಹಿಡಿದಿರುವ ಆಳುಗಳು) ಚಾಮರ ಹಿಡಿದಿರುವ ಆಳುಗಳು ತಕ್ಷಣವೇ ನೆಲಕ್ಕೆ ಉರುಳಿದರು; ರಥದ ಸಾರಥಿಯು ಕಡಿವಾಣದ ಹಗ್ಗವನ್ನು ಕೈಗೆ ಕೊಂಡು ರಥವನ್ನು ಪಾಳೆಯದ ಕಡೆಗೆ ತಿರುಗಿಸಿದ.
ಪದಾರ್ಥ (ಕ.ಗ.ಪ)
ಧರಿತ್ರಿ-ಭೂಮಿ, ಕೆಡೆ-ಬೀಳು, ಢಗೆ-ಧಗೆ, ಸೆಕೆ, ಹಡಪಿಗ-ಅವಶ್ಯ ವಸ್ತುಗಳನ್ನುಳ್ಳ ಚರ್ಮದ ಚೀಲವನ್ನು ಒಯ್ಯುವವನು, ಚಾಹಿ-ಚಾಮರವನ್ನು ಹಿಡಿಯುವವರು, ಕಡಿಯಣ-ಕಡಿವಾಣ
ಮೂಲ ...{Loading}...
ಸಿಡಿದು ಕರ್ಣನ ತಲೆ ಧರಿತ್ರಿಗೆ
ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ
ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ
ಹಡಪಿಗರು ಚಾಮರದ ಚಾಹಿಯ
ರೊಡನೆ ನೆಲಕುರುಳಿದರು ಸಾರಥಿ
ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ ॥8॥
೦೦೯ ಬನ್ದು ಕರ್ಣನ ...{Loading}...
ಬಂದು ಕರ್ಣನ ಹಾನಿ ಕೌರವ
ವೃಂದವನು ವೇಢೈಸಿತೇ ಹಾ
ಯೆಂದು ಕೃಪಗುರುಸುತರು ರಥವನು ಬಿಟ್ಟು ಸೂಠಿಯಲಿ
ತಂದು ಬಾಚಿಸಿದರಸನಿರವೆಂ
ತೆಂದುಸುರನಾರೈದು ವಿಧಿಯನು
ನಿಂದಿಸಿದರವಧಾನ ಜೀಯವಧಾನ ಜೀಯೆನುತ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾ! ಕರ್ಣನ ಮರಣವು ಕೌರವಸಮೂಹವನ್ನು ಮುತ್ತಿಕೊಂಡಿತೆ, ಎಂದು ಕೃಪ ಮತ್ತು ಅಶ್ವತ್ಥಾಮರು ರಥವನ್ನು ವೇಗವಾಗಿ ಓಡಿಸಿಕೊಂಡು ದುರ್ಯೋಧನನ ಪಾಳೆಯಕ್ಕೆ ಬಂದು, ಒಟ್ಟಿಗೆ ಸೇರಿ, ಅರಸನ ಸ್ಥಿತಿ ಹೇಗಿದೆಯಂದು ಮಾತನಾಡಿಕೊಳ್ಳುತ್ತ ಅವನು ಉಸಿರಾಡುತ್ತಿರುವುದನ್ನು ಪರೀಕ್ಷಿಸಿದರು; ವಿಧಿಯನ್ನು ಬೈದು, ಜೀಯಾ ಎಚ್ಚರವಾಗು, ಎಚ್ಚರವಾಗು, ಎಚ್ಚರವಾಗು, ಎಂದರು.
ಪದಾರ್ಥ (ಕ.ಗ.ಪ)
ವೇಢೈಸು-ಸುತ್ತುವರಿ, ಮುತ್ತಿಕೊಳ್ಳು, ಸೂಠಿ-ವೇಗ, ಬಾಚಿಸಿದು - ಒಟ್ಟುಗೂಡಿಸಿದ್ದು (ಬಾರ್ಚು > ಬಾಚು)
ಪಾಠಾನ್ತರ (ಕ.ಗ.ಪ)
ಬಾಚಿಸಿದರಸನಿರವೆಂತೆಂದು -ನಿಲಿಸಿದರರಸನಿರವೆಂತೆಂದು….. ಅಂಗಡಿ ಮುದ್ರಣ , ಹಂಪಿ ವಿವಿ ಪ್ರಕಟಣೆ,
ಟಿಪ್ಪನೀ (ಕ.ಗ.ಪ)
‘ಬಾಚಿಸಿದ’ ಎಂಬ ಬದಲಿಗೆ ‘ನಿಲಿಸಿದರು’ (ನಿಲಿಸಿದರರಸನಿರವೆಂತೆಂದು…..) ಎಂಬ ಪಾಠಾಂತರವಿದ್ದು, ಇದು ಅರ್ಥಕ್ಕೆ ಸರಿಹೊಂದುತ್ತದೆ. (“ಕನ್ನಡ ಭಾರತ” ಸಂ:ಡಾ:ಎ.ವಿ.ಪ್ರಸನ್ನ:ಪ್ರ:ಕನ್ನಡ ವಿಶ್ವವಿದ್ಯಾಲಯ; ಹಂಪಿ - 2005)
ಬಾಚಿಸುದು + ಅರಸನಿರವೆಂತೆಂದು
ಮೂಲ ...{Loading}...
ಬಂದು ಕರ್ಣನ ಹಾನಿ ಕೌರವ
ವೃಂದವನು ವೇಢೈಸಿತೇ ಹಾ
ಯೆಂದು ಕೃಪಗುರುಸುತರು ರಥವನು ಬಿಟ್ಟು ಸೂಠಿಯಲಿ
ತಂದು ಬಾಚಿಸಿದರಸನಿರವೆಂ
ತೆಂದುಸುರನಾರೈದು ವಿಧಿಯನು
ನಿಂದಿಸಿದರವಧಾನ ಜೀಯವಧಾನ ಜೀಯೆನುತ ॥9॥
೦೧೦ ತಳಿತಳಿದು ಪನ್ನೀರನಕ್ಷಿಗೆ ...{Loading}...
ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಳದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಪನ್ನೀರನ್ನು ಮೊಗೆಮೊಗೆದು ದುರ್ಯೋಧನನ ಕಣ್ಣುಗಳಿಗೆ ಸಿಂಪಡಿಸಿ, ಅವನನ್ನು ಹಿಡಿದೆತ್ತಿ ಒರಗಿಸಿ ಕುಳ್ಳಿರಿಸಿದರೆ, ದುರ್ಯೋಧನನು “ಏನಯ್ಯ ಕರ್ಣ” ಎನ್ನುತ್ತ ಕಣ್ಣುಬಿಟ್ಟು, ಕೂಡಲೇ ಒರಗಿದ್ದವನು ಘಳಿಲನೆ ಎದ್ದು ಕುಳಿತು, “ಕರ್ಣ ಸೈನ್ಯವನ್ನು ತೆಗೆಸು, ರಾತ್ರಿಯಾಯಿತು” ಎಂದು ಹೇಳಿ, ಶೋಕದ ಕಳವಳದಲ್ಲಿ, ಕಣ್ಣುಗಳನ್ನು ಅರೆಮುಚ್ಚಿ, ಪುನಃ ಮೈಮರೆದ.
ಪದಾರ್ಥ (ಕ.ಗ.ಪ)
ತಳಿತಳಿದು-ಬೊಗಸೆಯಲ್ಲಿ ಮೊಗೆದು, (ಚುಮುಕಿಸು) ಚಳೆಯ-ಸಿಂಪಡಿಸು, ಚುಮುಕಿಸು, ಮಲಗಿಸು-ಒರಗಿ ಕೂರಿಸು (ಇದೇ ಸಂಧಿಯ 5ನೆಯ ಪದ್ಯದ ಟಿಪ್ಪಣಿಯನ್ನು ನೋಡಿ) ಘಳಿಲನೆ-ಬೇಗ, ತಕ್ಷಣ (ಅನುಕರಣ ಶಬ್ದ) ದಳ-ಸೈನ್ಯ
ಮೂಲ ...{Loading}...
ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಳದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ ॥10॥
೦೧೧ ರಾಯ ಹದುಳಿಸು ...{Loading}...
ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟಲಾ ನಿ
ದಾರ್ಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಂದರು ಜರೆದು ಕುರುಪತಿಯ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ, ಎಚ್ಚರಗೊಂಡು ಸಮಾಧಾನಗೊಳ್ಳು, ನಿನ್ನ ದಾಯಾದಿಗಳಿಗೆ ಅವಕಾಶ ಮಾಡಿಕೊಟ್ಟೆಯಲ್ಲ! ಯಾವುದೇ ಶ್ರಮವಿಲ್ಲದೇ, ದಾಯಾದಿಗಳಿಗೆ ನೆಲ ಹೋಯಿತು! ಭೀಮನ ಭಾಷೆ ಸಫಲವಾಯಿತಲ್ಲ! ಸ್ವಾಮಿಯೇ - ನಿನ್ನ ತಮ್ಮಂದಿರನ್ನು ಭೀಮನ ಬಸುರಿನಿಂದ ತೆಗೆ, ಅರ್ಜುನನ ಬಾಯಿಂದ ಕರ್ಣನನ್ನು ತೆಗೆ” - ಎಂದು ದುರ್ಯೋಧನನನ್ನು ಹಂಗಿಸಿ ನುಡಿದರು.
ಪದಾರ್ಥ (ಕ.ಗ.ಪ)
ಹದುಳಿಸು-ಕ್ಷೇಮವಾಗು, ದಾಯಿಗ-ಭಾಗಸ್ಥ, ದಾಯಾದಿ, ನಿರ್ದಾಯ-ನಿರಾಯಾಸ, ವಾಯುಜ-ಭೀಮ, ಉಗಿ-ಸೆಳೆ, ಎಳೆದುಕೋ
ಮೂಲ ...{Loading}...
ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟಲಾ ನಿ
ದಾರ್ಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಂದರು ಜರೆದು ಕುರುಪತಿಯ ॥11॥
೦೧೨ ಏನು ಗುರುಸುತ ...{Loading}...
ಏನು ಗುರುಸುತ ಮಡಿದನೇ ತ
ನ್ನಾನೆ ಬವರದಲಕಟ ಕುಂತೀ
ಸೂನುವೇಕೈ ತಪ್ಪ ಮಾಡಿದನೇ ಮಹಾದೇವ
ಭಾನುಸನ್ನಿಭ ಸರಿದನೇ ತ
ಪ್ಪೇನು ಪಾರ್ಥನ ಬಸುರಲೆನ್ನ ನಿ
ಧಾನವಿದ್ದುದು ತೆಗೆವೆನೈಸಲೆಯೆಂದು ಕಂದೆರೆದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನು ಅಶ್ವತ್ಥಾಮ, ನನ್ನ ಮುದ್ದಿನ ಆನೆ ಕರ್ಣ ಯುದ್ಧದಲ್ಲಿ ಮಡಿದನೇ, ಕುಂತೀ ಸುತನಾದ ಅರ್ಜುನ ಕೈತಪ್ಪು ಮಾಡಿದನೇ; ಭಾನು ಸನ್ನಿಭನಾದ ಕರ್ಣ ಮರಣ ಹೊಂದಿದನೇ; ತಪ್ಪೇನು! ಪಾರ್ಥನ ಹೊಟ್ಟೆಯಲ್ಲಿ ನನ್ನ ನಿಧಿಯಿದೆ; (ಕರ್ಣನಿದ್ದಾನೆ); ಅದನ್ನು ತೆಗೆಯುತ್ತೇನಷ್ಟೇ! - ಎಂದು ಹೇಳುತ್ತಾ ದುರ್ಯೋಧನ ಕಣ್ಣು ಬಿಟ್ಟ.
ಪದಾರ್ಥ (ಕ.ಗ.ಪ)
ತನ್ನಾನೆ-ತನ್ನ ಮುದ್ದಿನ ಸ್ನೇಹಿತ, ಕರ್ಣ, ಬವರ-ಯುದ್ಧ, ಭಾನುಸನ್ನಿಭ-ಸೂರ್ಯನಿಗೆ ಸಮನಾದವನು, ಕರ್ಣ, ನಿಧಾನ-ಐಶ್ವರ್ಯ, ನಿಧಿ
ಟಿಪ್ಪನೀ (ಕ.ಗ.ಪ)
‘ತನ್ನಾನೆ’ ಎಂಬುದು, ತನ್ನ ಪ್ರೀತಿ ಪಾತ್ರನಾದ ಎಂಬ ಅರ್ಥವನ್ನು ನೀಡುತ್ತದೆ. ಈ ಕಾವ್ಯದಲ್ಲಿ ಈ ಶಬ್ದ ಅನೇಕ ಪ್ರಯೋಗಗಳನ್ನು ಕಂಡಿದೆ.
ಮೂಲ ...{Loading}...
ಏನು ಗುರುಸುತ ಮಡಿದನೇ ತ
ನ್ನಾನೆ ಬವರದಲಕಟ ಕುಂತೀ
ಸೂನುವೇಕೈ ತಪ್ಪ ಮಾಡಿದನೇ ಮಹಾದೇವ
ಭಾನುಸನ್ನಿಭ ಸರಿದನೇ ತ
ಪ್ಪೇನು ಪಾರ್ಥನ ಬಸುರಲೆನ್ನ ನಿ
ಧಾನವಿದ್ದುದು ತೆಗೆವೆನೈಸಲೆಯೆಂದು ಕಂದೆರೆದ ॥12॥
೦೧೩ ತಾಪವಡಗಿತು ಮನದ ...{Loading}...
ತಾಪವಡಗಿತು ಮನದ ಕಡುಹಿನ
ಕೋಪ ತಳಿತುದು ಭೀಮ ಪಾರ್ಥರ
ರೂಪು ಮುಖದಲಿ ಕರ್ಣ ದುಶ್ಯಾಸನರ ಕಲ್ಪಿಸಿದ
ಭೂಪ ಕೇಳೈ ಪಾಳಯಕೆ ಕುರು
ಭೂಪ ಬಂದನು ನಾಳೆ ಕರ್ಣೋ
ತ್ಥಾಪನವಲಾ ಎನುತ ಹೊಕ್ಕನು ಭದ್ರಮಂಟಪವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ದೇಹದ ಕಾವು ಕಡಿಮೆಯಾಯಿತು; ಪರಾಕ್ರಮ ಹೆಚ್ಚಿ ಕೋಪ ಮನಸ್ಸನ್ನಾವರಿಸಿತು; ಭೀಮ ಅರ್ಜುನರ ರೂಪು ಮನಸ್ಸಿನಲ್ಲಿ ಮೂಡಿದರೆ, ಅಲ್ಲಿ ಕರ್ಣ ದುಶ್ಶಾಸನರನ್ನು ಕಲ್ಪಿಸಿಕೊಂಡ, ಧೃತರಾಷ್ಟ್ರನೇ ಕೇಳು - ದುರ್ಯೋಧನ “ನಾಳೆ ಕರ್ಣನನ್ನು ಹೊರ ತೆಗೆಯುವ ದಿನವಲ್ಲವೆ! ಎನ್ನುತ್ತಾ ಭದ್ರ ಮಂಟಪವನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಕಡುಹು-ಬಲ, ಪರಾಕ್ರಮ ತಳಿತುದು-ಪ್ರಸಾರವಾಯಿತು, ಆವರಿಸಿತು, ಉತ್ಥಾಪನ- ಹೊರಕ್ಕೆ ತೆಗೆಯುವುದು
ಮೂಲ ...{Loading}...
ತಾಪವಡಗಿತು ಮನದ ಕಡುಹಿನ
ಕೋಪ ತಳಿತುದು ಭೀಮ ಪಾರ್ಥರ
ರೂಪು ಮುಖದಲಿ ಕರ್ಣ ದುಶ್ಯಾಸನರ ಕಲ್ಪಿಸಿದ
ಭೂಪ ಕೇಳೈ ಪಾಳಯಕೆ ಕುರು
ಭೂಪ ಬಂದನು ನಾಳೆ ಕರ್ಣೋ
ತ್ಥಾಪನವಲಾ ಎನುತ ಹೊಕ್ಕನು ಭದ್ರಮಂಟಪವ ॥13॥
೦೧೪ ಶಕುನಿ ಕೃಪ ...{Loading}...
ಶಕುನಿ ಕೃಪ ಗುರುಸೂನು ಕೃತವ
ರ್ಮಕ ಸುಕೇತು ಸುಶರ್ಮ ಸಮಸ
ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ
ಸಕಲ ಸುಭಟರು ಸಹಿತ ದಳನಾ
ಯಕರು ಬಂದರು ಕರ್ಣಹಾನಿ
ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕುನಿ, ಕೃಪ, ಅಶ್ವತ್ಥಾಮ, ಕೃತವರ್ಮ, ಸುಕೇತು, ಸುಶರ್ಮ, ಸಮಸಪ್ತಕರು, ಶಲ್ಯ, ಸುಬಾಹು, ಸುನಂದ, ಚಿತ್ರರಥ ಮುಂತಾದ ಸೇನಾ ನಾಯಕರು ಎಲ್ಲಾ ಸುಭಟರೊಂದಿಗೆ, ಕರ್ಣಹಾನಿಯಿಂದಾದ ಶೋಕದಿಂದ ಕೂಡಿ, ತಲೆಯ ಮೇಲೆ ಮುಸುಕು ಹಾಕಿಕೊಂಡು ದುಃಖಿತರಾಗಿ ಬಂದರು.
ಪದಾರ್ಥ (ಕ.ಗ.ಪ)
ದಳನಾಯಕರು-ಸೇನಾನಾಯಕರು, ಕಳಿತ-ಶೋಕದಿಂದ ಕೂಡಿದ, ಶಿರೋವಕುಂಠನ-ತಲೆಮುಸುಕು.
ಮೂಲ ...{Loading}...
ಶಕುನಿ ಕೃಪ ಗುರುಸೂನು ಕೃತವ
ರ್ಮಕ ಸುಕೇತು ಸುಶರ್ಮ ಸಮಸ
ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ
ಸಕಲ ಸುಭಟರು ಸಹಿತ ದಳನಾ
ಯಕರು ಬಂದರು ಕರ್ಣಹಾನಿ
ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ ॥14॥
೦೧೫ ಹಿಮದ ಹೊಯ್ಲಲಿ ...{Loading}...
ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾವಿಚ್ಛೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂಜಿನ ಹೊಡೆತಕ್ಕೆ ಸಿಕ್ಕಿ ಬಾಡಿಹೋದ ತಾವರೆಯ ಕೊಳದಂತೆ, ಶೌರ್ಯನಾಶವಾದ ಅಕೀರ್ತಿಯ ಬಹಳವಾದ ಭಾರಕ್ಕೆ ಬಗ್ಗಿರುವಂತೆ ತೋರುವ ಮುಖಗಳ, ಲಕ್ಷಣವಿಹೀನವಾದ, ಕಲ್ಮಷದಿಂದ ಕೂಡಿದವರನ್ನು ಕಂಡು “ನಾಳಿನ ಯುದ್ಧಕ್ಕೆ ಏನು ಏರ್ಪಾಟು?” ಎಂದು ದುರ್ಯೋಧನನು ಕೃಪಾಚಾರ್ಯ ಮತ್ತು ಅಶ್ವತ್ಥಾಮರನ್ನು ಕೇಳಿದ.
ಪದಾರ್ಥ (ಕ.ಗ.ಪ)
ಹೊಯ್ಲು-ಹೊಡೆತ, ಸೀದು-ಕಪ್ಪಾಗಿ, ಸಿಕ್ಕಿದ-ಸಿಕ್ಕಿಹೋದ (ಸುಕ್ಕಿದ - ?) ಸುಮುಖತಾ ವಿಚ್ಛೇದ-ಮುಖ ಲಕ್ಷಣವನ್ನು ಕಳೆದುಕೊಂಡ, ಕಲುಷಸ್ತಿಮಿತ-ಕಲ್ಮಷದ ಮನಸ್ಸಿನವರು, ಉದ್ಯೋಗ-ಕೆಲಸ, ಏರ್ಪಾಟು
ಮೂಲ ...{Loading}...
ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾವಿಚ್ಛೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ ॥15॥
೦೧೬ ಅರಸ ಕರ್ಣಚ್ಛೇದವೇ ...{Loading}...
ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳ್ ಎಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕರ್ಣನನ್ನು ಕೊಂದುದೇ ನಮ್ಮ ವಿಜಯಲಕ್ಷ್ಮಿಯ ಮೂಗನ್ನು ಕೊಯ್ದಂತೆ, ಇನ್ನು ಅದಕ್ಕಾಗಿ ದುಃಖಿಸಬೇಡ, ಯುದ್ಧದಲ್ಲಿ ಹೊರಾಡಿ ನಿನ್ನ ಭುಜಶೌರ್ಯವನ್ನು ಹೊಗಳುವಂತೆ ಮಾಡು. ದ್ರೋಣಾಚಾರ್ಯ ಮತ್ತು ಭೀಷ್ಮಾಚಾರ್ಯರು ಸತ್ತ ಬಳಿಕ, ನಿನಗೆ ಈ ಭೂಮಿಯ ಯಜಮಾನಿಕೆ ಇಲ್ಲ. ಕರ್ಣನ ಸಾವಿನಿಂದ ನೀನು ಅರ್ಧದೇಹಿಯಾದೆ.
ಪದಾರ್ಥ (ಕ.ಗ.ಪ)
ಕರ್ಣಚ್ಛೇದ-ಕರ್ಣನನ್ನು ಕೊಂದಿರುವುದು, ಜಯಸಿರಿ-ಜಯಲಕ್ಷ್ಮಿ, ನಾಸಾಚ್ಛೇದ-ಮೂಗುಕೊಯ್ಯುವುದು, ಅವಮಾನವಾಗುವುದು, ಅರವರಿಸು-ದುಃಖಿಸು
ಟಿಪ್ಪನೀ (ಕ.ಗ.ಪ)
‘ಗುರುನದೀಸುತರಳಿದ ಬಳಿಕ’ ಎಂಬಲ್ಲಿ ದ್ರೋಣ ಮತ್ತು ಭೀಷ್ಮರು ಸತ್ತ ಬಳಿಕ’ ಎಂದು ಅರ್ಥವಾಗುತ್ತಾದರೂ, ಭೀಷ್ಮರು ಇನ್ನೂ ಸತ್ತಿಲ್ಲ. ಆದರೂ ಇನ್ನೇನು ಸತ್ತಂತೆಯೇ ಲೆಕ್ಕ ಎಂಬ ಭಾವವಿದೆ.
ಮೂಲ ...{Loading}...
ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ ॥16॥
೦೧೭ ಆ ವೃಕೋದರ ...{Loading}...
ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ನಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಂದನು ನಿನ್ನ ಮಗ ನಗುತ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮ ಮತ್ತು ಅರ್ಜುನರ ಸಂಹಾರವೇ ದುಶ್ಶಾಸನನ ಮನಸ್ಸಿನ ಆಶಯ; ತನ್ನ ಜೀವದ ಗೆಳೆಯನಾದ ಕರ್ಣನಿಗೆ ಭೀಮ ಮತ್ತು ಅರ್ಜುನರ ಮರಣದಲ್ಲೇ ಸರ್ವಸಿದ್ಧಿ. ನಮ್ಮ ಕೈಹಿಡಿಯಲ್ಲಿಯೇ (ಮುಷ್ಟಿಯಲ್ಲಿಯೇ) ಕರ್ಣನಿದ್ದಾನೆಂದು ನಾವು ಭಾವಿಸಿದ್ದೆವು; ಕರ್ಣನ ಸಾವಿನ ಪರಿಣಾಮವನ್ನು ನಾಳೆ ತಿಳಿಯಬಹುದು” ಎಂದು ನಿನ್ನ ಮಗ ನಗುತ್ತ ಹೇಳಿದ - ಎಂದು ಸಂಜಯ ಧೃತರಾಷ್ಟ್ರನಿಗೆ ತಿಳಿಸಿದ.
ಪದಾರ್ಥ (ಕ.ಗ.ಪ)
ವೃಕೋದರ-ತೋಳದಂತಹ ಹೊಟ್ಟೆಯಿರುವವನು, ಭೀಮ, ಅಂತರ್ಭಾವ-ಮನಸ್ಸಿನ ಆಶಯ, ಕೈವಿಡಿ-ಕೈಪಿಡಿ, ಕೈಯೊಳಗೇ ಇರುವ
ಟಿಪ್ಪನೀ (ಕ.ಗ.ಪ)
ದುಶ್ಯಾಸನ ಮತ್ತು ಕರ್ಣರಿಂದ ಭೀಮಾರ್ಜುನರ ಸೋಲು-ಸಾವು ನಿಶ್ಚಿತವೆಂದು ನಂಬಿದ್ದ ದುರ್ಯೋಧನನಿಗೆ ಕರ್ಣನ ಸಾವಿನಿಂದ ಆಘಾತವಾಗಿದೆಯೆಂಬುದು ಈ ಪದ್ಯದ ಆಶಯ.
ಮೂಲ ...{Loading}...
ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ನಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಂದನು ನಿನ್ನ ಮಗ ನಗುತ ॥17॥
೦೧೮ ನಾವು ಹೊಯ್ದಾಡುವೆವು ...{Loading}...
ನಾವು ಹೊಯ್ದಾಡುವೆವು ಭುಜಸ
ತ್ವಾವಲಂಬವ ತೋರುವೆವು ಕ
ರ್ಣಾವಸಾನವ ಕಂಡು ಬಳಿಕುಗುಳುವೆವು ತಂಬುಲವ
ನೀವು ಸೇನಾಪತ್ಯವನು ಸಂ
ಭಾವಿಸಿರೆ ಸಾಕಿನ್ನು ಮಿಗಿಲಾ
ದೈವಕೃತ ಪೌರುಷವ ನಾಳಿನೊಳರಿಯಬಹುದೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ಹೋರಾಡುತ್ತೇವೆ, ನಮ್ಮ ಭುಜಬಲವನ್ನು ತೋರಿಸುತ್ತೇವೆ, ಕರ್ಣಾವಸಾನವನ್ನು ಕಂಡು ಬಳಿಕ ತಾಂಬೂಲವನ್ನು ಉಗುಳುತ್ತೇವೆ. ನೀವು ಸೇನಾಪತ್ಯವನ್ನು ಸ್ವೀಕರಿಸಿ, ಅಷ್ಟುಸಾಕು. ಅದಕ್ಕೂ ಮೀರಿದ ದೈವದ ಆಟವನ್ನು, ನಮ್ಮ ಪೌರುಷವನ್ನು ನಾಳೆ ತಿಳಿಯಬಹುದೆಂದು ದುರ್ಯೋಧನ ಅಶ್ವತ್ಥಾಮನಿಗೆ ಸೂಚಿಸಿದ.
ಪದಾರ್ಥ (ಕ.ಗ.ಪ)
ದೈವಕೃತ-ವಿಧಿಯ ಆಟ.
ಟಿಪ್ಪನೀ (ಕ.ಗ.ಪ)
ಕರ್ಣಾವಸಾನವ ಕಂಡು ಬಳಿಕುಗುಳುವೆವು ತಂಬುಲವ ಎಂಬಲ್ಲಿನ ‘ತಂಬುಲವನ್ನು ಉಗುಳುವುದು’ ಎಂಬ ಶಬ್ದಕ್ಕೆ ಅಲ್ಲಿಯವರೆಗೂ ಬಾಯಿಗೆ ಅನ್ನ ನೀರನ್ನೂ ಹಾಕುವುದಿಲ್ಲವೆಂದು ಅರ್ಥ. ಆದರೆ ಈ ಸಂದರ್ಭಕ್ಕೆ ಆ ಆರ್ಥಹೊಂದುವುದಿಲ್ಲ, ಏಕೆಂದರೆ ಕರ್ಣ ಈಗಾಗಲೇ ಮೃತನಾಗಿದ್ದಾನೆ. ಕೆಲವು ಜನಾಂಗಗಳಲ್ಲಿ ಶವಸಂಸ್ಕಾರದ ನಂತರ ಸಮಾಧಿಸ್ಥಳದಲ್ಲಿ ಉಗುಳಿ ಬರುವ ಪದ್ಧತಿ ಇದೆ. ಅಲ್ಲಿಗೆ ಸತ್ತವರೊಂದಿಗೆ ಸಂಬಂಧ ಮುಗಿಯಿತು ಎಂಬುದು ಉದ್ದೇಶ. ಆದರೆ ಇಲ್ಲಿ ಈಗಾಗಲೇ ಕರ್ಣಾವಸಾನ ಆಗಿರುವಾಗ ಕರ್ಣಾವಸಾನವ ಕಂಡು ಬಳಿಕ ಉಗುಳುವೆವು ಎಂದಿರುವುದರಿಂದ ಈ ಸಂಪ್ರದಾಯದ ಅರ್ಥವೂ ಇಲ್ಲಿಗೆ ಹೊಂದುವುದಿಲ್ಲ. ಹೀಗಾಗಿ ‘ಬಳಿಕುಗುಳುವುವೆ’ ಎಂಬ ಪಾಠವನ್ನು ಊಹಿಸಿಕೊಂಡು ಕರ್ಣಾವಸಾನನ್ನು ಕಂಡ ನಂತರ ತಾಂಬೂಲವನ್ನು ಹಾಕಿಕೊಂಡು ಉಗುಳುವುದಿಲ್ಲ - ಎಂದರೆ ಕರ್ಣನ ಸಾವಿಗೆ ಕಾರಣನಾದ ಅರ್ಜುನನನ್ನು ಕೊಲ್ಲುವವರೆಗೂ ಊಟ ಮಾಡುವುದಿಲ್ಲ, ತಾಂಬೂಲ ಹಾಕುವುದಿಲ್ಲ - ಎಂಬ ಅರ್ಥವನ್ನು ಹಚ್ಚಿದರೆ ಸಂದರ್ಭೋಚಿತವಾಗುತ್ತದೆ.
ಮೂಲ ...{Loading}...
ನಾವು ಹೊಯ್ದಾಡುವೆವು ಭುಜಸ
ತ್ವಾವಲಂಬವ ತೋರುವೆವು ಕ
ರ್ಣಾವಸಾನವ ಕಂಡು ಬಳಿಕುಗುಳುವೆವು ತಂಬುಲವ
ನೀವು ಸೇನಾಪತ್ಯವನು ಸಂ
ಭಾವಿಸಿರೆ ಸಾಕಿನ್ನು ಮಿಗಿಲಾ
ದೈವಕೃತ ಪೌರುಷವ ನಾಳಿನೊಳರಿಯಬಹುದೆಂದ ॥18॥
೦೧೯ ಧರಣಿಪತಿ ಚಿತ್ತೈಸು ...{Loading}...
ಧರಣಿಪತಿ ಚಿತ್ತೈಸು ಸೇನಾ
ಧುರವನೀವುದು ಮದ್ರಭೂಪತಿ
ಗೆರವಲಾ ಜಯಲಕ್ಷ್ಮಿ ಬಳಿಕಾ ಪಾಂಡುತನಯರಿಗೆ
ಸುರನದೀಜ ದ್ರೋಣ ರಾಧೇ
ಯರಿಗೆ ಸರಿಮಿಗಿಲಿಂದು ಮಾದ್ರೇ
ಶ್ವರನುಳಿಯೆ ದೊರೆಯಾರು ದಿಟ್ಟರು ನಮ್ಮ ಥಟ್ಟಿನಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದÉೂರೆಯೇ ಕೇಳು, ಮದ್ರಭೂಪತಿಯಾದ ಶಲ್ಯನಿಗೆ ಸೇನಾನಾಯಕತ್ವದ ಹೊಣೆಯನ್ನು ಕೊಡು; ಹಾಗಾದಲ್ಲಿ ಪಾಂಡವರಿಗೆ ಜಯಲಕ್ಷಿಯು ಎರವಾಗುತ್ತಾಳೆ. ಶಲ್ಯನು ಭೀಷ್ಮ, ದ್ರೋಣ, ಕರ್ಣರಿಗೆ ಸರಿಮಿಗಿಲು; ಅವನನ್ನು ಬಿಟ್ಟರೆ ನಮ್ಮ ಸೈನ್ಯದಲ್ಲಿ ಅವನಿಗೆ ಸರಿಸಮಾನರಾದ ದಿಟ್ಟರು ಇನ್ನಾರಿದ್ದಾರೆ? - ಎಂದು ಆಶ್ವತ್ಥಾಮ ದುರ್ಯೋಧನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಧುರ-ಹೊಣೆ, ಜವಾಬ್ದಾರಿ, ಎರವು-ವೈರಭಾವ, ಹೊರಗು, ದೊರೆ-ಸಮಾನ, ಥಟ್ಟು-ಸೈನ್ಯ
ಮೂಲ ...{Loading}...
ಧರಣಿಪತಿ ಚಿತ್ತೈಸು ಸೇನಾ
ಧುರವನೀವುದು ಮದ್ರಭೂಪತಿ
ಗೆರವಲಾ ಜಯಲಕ್ಷ್ಮಿ ಬಳಿಕಾ ಪಾಂಡುತನಯರಿಗೆ
ಸುರನದೀಜ ದ್ರೋಣ ರಾಧೇ
ಯರಿಗೆ ಸರಿಮಿಗಿಲಿಂದು ಮಾದ್ರೇ
ಶ್ವರನುಳಿಯೆ ದೊರೆಯಾರು ದಿಟ್ಟರು ನಮ್ಮ ಥಟ್ಟಿನಲಿ ॥19॥
೦೨೦ ನೀವು ಕಟಕಾಚಾರ್ಯಪುತ್ರರು ...{Loading}...
ನೀವು ಕಟಕಾಚಾರ್ಯಪುತ್ರರು
ನೀವಿರಲು ಕೃಪನಿರಲು ದಳವಾಯ್
ನಾವಹೆವೆ ನೀವಿಂದು ತೇಜೋದ್ವಯದಲಧಿಕರಲೆ
ನಾವು ತರುವಾಯವರೆನಲು ಜಯ
ಜೀವಿಗಳು ನೀವನ್ಯಗುಣಸಂ
ಭಾವಕರಲಾ ಎಂದನಶ್ವತ್ಥಾಮ ಶಲ್ಯಂಗೆ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಸೈನ್ಯಕ್ಕೆ - ಯುದ್ಧವಿದ್ಯೆಗೆ ಆಚಾರ್ಯರಾದ ದ್ರೋಣರ ಮಗ, ಅಂತಹ ನೀವಿರುವಾಗ, ಕೃಪಾಚಾರ್ಯರಿರುವಾಗ, ನಾವು ಸೇನಾಪತಿಗಳಾಗುವುದೆ? ನೀವು ತೇಜೋದ್ವಯದಲ್ಲಿ (ಬ್ರಹ್ಮತೇಜ ಮತ್ತು ಕ್ಷತ್ರತೇಜದಲ್ಲಿ) ಹೆಚ್ಚಿನವರಲ್ಲವೆ! ನಾವು ಏನಿದ್ದರೂ ನಿಮ್ಮ ಅನಂತರದವರು - ಎಂದು ಶಲ್ಯ ಹೇಳಲು, ನೀವು ಜಯವನ್ನೇ ಉಸಿರಾಗುಳ್ಳವರಾಗಿದ್ದು ಇತರರ ಗುಣಕ್ಕೆ ಮನ್ನಣೆ ನೀಡುವರಲ್ಲವೇ - ಎಂದು ಅಶ್ವತ್ಥಾಮ ಹೇಳಿದ.
ಪದಾರ್ಥ (ಕ.ಗ.ಪ)
ಕಟಕ-ಸೈನ್ಯ, ದಳವಾಯ್-ಸೇನಾನಾಯಕ, ದಳಪತಿ, ಜಯಜೀವಿ-ಜಯವನ್ನೇ ಉಸಿರಾಗುಳ್ಳವನು, ಸಂಭಾವಕರು-ಮನ್ನಣೆ ನೀಡುವವರು.
ಟಿಪ್ಪನೀ (ಕ.ಗ.ಪ)
ಈವರೆಗೂ ಸೇನಾಪತಿತ್ವ ನನಗೆ ತನಗೆ ಎಂದು ಜಗಳ ಮಾಡುತ್ತಿದ್ದವರು, ಈಗ ‘ನೀನು ಮೊದಲು ನೀನು ಮೊದಲು’ ಎಂಬ ಸ್ಥಿತಿಗೆ ಬಂದಿರುವುದನ್ನು ಕವಿ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾನೆ.
ಮೂಲ ...{Loading}...
ನೀವು ಕಟಕಾಚಾರ್ಯಪುತ್ರರು
ನೀವಿರಲು ಕೃಪನಿರಲು ದಳವಾಯ್
ನಾವಹೆವೆ ನೀವಿಂದು ತೇಜೋದ್ವಯದಲಧಿಕರಲೆ
ನಾವು ತರುವಾಯವರೆನಲು ಜಯ
ಜೀವಿಗಳು ನೀವನ್ಯಗುಣಸಂ
ಭಾವಕರಲಾ ಎಂದನಶ್ವತ್ಥಾಮ ಶಲ್ಯಂಗೆ ॥20॥
೦೨೧ ಉಚಿತವಿತರೇತರಗುಣಸ್ತುತಿ ...{Loading}...
ಉಚಿತವಿತರೇತರಗುಣಸ್ತುತಿ
ರಚನೆ ಗುಣಯುಕ್ತರಿಗೆ ವಿಜಯೋ
ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ
ಅಚಲ ಮೂರರ ಪೈಸರದ ಬಲ
ನಿಚಯ ನಮ್ಮದು ವೀರ ಸುಭಟ
ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸದ್ಗುಣಿಗಳಿಗೆ, ಇತರರ ಗುಣಗಳನ್ನು ಸ್ತುತಿಮಾಡುವುದು ಉಚಿತವಾದುದೇ ಆಗಿದೆ. ವಿಜಯವನ್ನು ಸಂಪಾದಿಸುವ ರಣ ನಾಟಕಕ್ಕೆ ರಾತ್ರಿಯು ತೆರೆಯಾಗಿದೆ. ಅಚಲವಾಗಿ ನಿಲ್ಲುವವರೆಂದು ನಾವು ತಿಳಿದ ಭೀಷ್ಮ, ದ್ರೋಣ, ಕರ್ಣರೆಂಬ ಮೂವರು ಹಿಂದೆ ಸರಿದಿರುವಂತಹ ಸೈನ್ಯ ನಮ್ಮದು, ವೀರ ಸುಭಟರ ಸಮೂಹಕ್ಕೆ ಸರಿಯಾದ ಸೇನಾನಾಯಕನನ್ನು ಮಾಡು ಎಂದು ಕೃಪಾಚಾರ್ಯನು ದುರ್ಯೋಧನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಉಪಚಿತ-ಒಟ್ಟಾದ, ಒಟ್ಟುಗೂಡಿದ, ಸಂಪಾದಿಸಿದ, ಕೂಡಿದ, ಜವನಿಕೆ-ಯವನಿಕಾ. ತೆರೆ, ರಜನಿ-ರಾತ್ರಿ, ನಿಚಯ-ಗುಂಪು, ಪ್ರಚಯ- ಒಟ್ಟುಗೂಡಿದ
ಮೂಲ ...{Loading}...
ಉಚಿತವಿತರೇತರಗುಣಸ್ತುತಿ
ರಚನೆ ಗುಣಯುಕ್ತರಿಗೆ ವಿಜಯೋ
ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ
ಅಚಲ ಮೂರರ ಪೈಸರದ ಬಲ
ನಿಚಯ ನಮ್ಮದು ವೀರ ಸುಭಟ
ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ ॥21॥
೦೨೨ ಸುರನದೀಜ ದ್ರೋಣ ...{Loading}...
ಸುರನದೀಜ ದ್ರೋಣ ಕೃಪರೀ
ಕುರುಬಲಕೆ ಕಟ್ಟೊಡೆಯರವರಿ
ಬ್ಬರ ಪರೋಕ್ಷದಲಾರವಿಲ್ಲಿಯ ಹಾನಿವೃದ್ಧಿಗಳು
ಗುರುಸುತನೊ ಶಲ್ಯನೊ ಚಮೂಮು
ಖ್ಯರನು ನೀವೇ ಬೆಸಸಿಯೆಂದನು
ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮ, ದ್ರೋಣ, ಕೃಪ ಈ ಮೂವರು ಕೌರವ ಬಲಕ್ಕೆ ಒಡೆಯರು; ಅವರಲ್ಲಿಬ್ಬರ ಅನುಪಸ್ಥಿತಿಯಲ್ಲಿ ಇಲ್ಲಿನ ಹಾನಿವೃದ್ಧಿಗಳು ಯಾರಿಗೆ ಸೇರಿದುವು? (ಉಳಿದ ಕೃಪನದು ಎಂದು ಭಾವ) ಆದ್ದರಿಂದ ಸೇನಾನಾಯಕನಾಗಿ ಅಶ್ವತ್ಥಾಮನಾಗಬೇಕೋ, ಶಲ್ಯನಾಗಬೇಕೋ ಎಂಬುದನ್ನು ನೀವೇ ತಿಳಿಸಿ ಎಂದು ದುರ್ಯೋಧನ, ಕೃಪಾಚಾರ್ಯರನ್ನು ಕೇಳಿದ.
ಪದಾರ್ಥ (ಕ.ಗ.ಪ)
ಕಟ್ಟೊಡೆಯರು-ದೊಡ್ಡನಾಯಕರು, ಪರೋಕ್ಷ-ಇಲ್ಲದಿರುವಿಕೆ, ಅನುಪಸ್ಥಿತಿ, ಚಮು-ಸೈನ್ಯ
ಮೂಲ ...{Loading}...
ಸುರನದೀಜ ದ್ರೋಣ ಕೃಪರೀ
ಕುರುಬಲಕೆ ಕಟ್ಟೊಡೆಯರವರಿ
ಬ್ಬರ ಪರೋಕ್ಷದಲಾರವಿಲ್ಲಿಯ ಹಾನಿವೃದ್ಧಿಗಳು
ಗುರುಸುತನೊ ಶಲ್ಯನೊ ಚಮೂಮು
ಖ್ಯರನು ನೀವೇ ಬೆಸಸಿಯೆಂದನು
ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ ॥22॥
೦೨೩ ಆದಡಾ ಭೀಷ್ಮಾದಿ ...{Loading}...
ಆದಡಾ ಭೀಷ್ಮಾದಿ ಸುಭಟರು
ಕಾದಿ ನೆಗ್ಗಿದ ಕಳನ ಹೊಗುವಡೆ
ಕೈದುಕಾರರ ಕಾಣೆನೀ ಮಾದ್ರೇಶ ಹೊರಗಾಗಿ
ಈ ದುರಂತರ ಸಮರಜಯ ನಿನ
ಗಾದಡೊಳ್ಳಿತು ಶಲ್ಯನಲಿ ಸಂ
ಪಾದಿಸಿರೆ ಸೇನಾಧಿಪತ್ಯವನರಸ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೂ ಸಹ, ಭೀಷ್ಮನೇ ಮುಂತಾದ ವೀರರು ಯುದ್ಧ ಮಾಡಿ ನೆಗ್ಗಿ ಹೋಗಿರುವ ಯುದ್ಧಭೂಮಿಯನ್ನು ಹೊಕ್ಕು ಯುದ್ಧ ಮಾಡುವ ಶಕ್ತಿಯುಳ್ಳ ಮಾದ್ರೇಶನಾದ ಶಲ್ಯನ ಹೊರತಾದ ಇತರ ವೀರರನ್ನು ನಾನು ಕಾಣೆ. ಈ ದುರಂತದ ಯುದ್ಧದಲ್ಲಿ ನಿನಗೆ ಜಯವಾದರೆ ಒಳ್ಳೆಯದು. ಆದ್ದರಿಂದ ಶಲ್ಯನಲ್ಲಿ ಸೇನಾಪತಿಯನ್ನು ಸಂಪಾದಿಸಿ - (ಶಲ್ಯನನ್ನು ಸೇನಾಪತಿನ್ನಾಗಿ ಮಾಡಿ) ಎಂದು ಕೃಪಾಚಾರ್ಯ ದುರ್ಯೋಧನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ನೆಗ್ಗಿದ-ನುಗ್ಗಾದ, ಗುಂಡಿಬಿದ್ದ, ಕಳ-ಯುದ್ಧಭೂಮಿ, ಕೈದುಕಾರ-ಆಯುಧವನ್ನು ಹಿಡಿದಿರುವವ, ವೀರ.
ಮೂಲ ...{Loading}...
ಆದಡಾ ಭೀಷ್ಮಾದಿ ಸುಭಟರು
ಕಾದಿ ನೆಗ್ಗಿದ ಕಳನ ಹೊಗುವಡೆ
ಕೈದುಕಾರರ ಕಾಣೆನೀ ಮಾದ್ರೇಶ ಹೊರಗಾಗಿ
ಈ ದುರಂತರ ಸಮರಜಯ ನಿನ
ಗಾದಡೊಳ್ಳಿತು ಶಲ್ಯನಲಿ ಸಂ
ಪಾದಿಸಿರೆ ಸೇನಾಧಿಪತ್ಯವನರಸ ಕೇಳೆಂದ ॥23॥
೦೨೪ ತರಿಸಿ ಮಙ್ಗಳವಸ್ತುಗಳನಾ ...{Loading}...
ತರಿಸಿ ಮಂಗಳವಸ್ತುಗಳನಾ
ದರಿಸಿ ಭದ್ರಾಸನದಲೀತನ
ನಿರಿಸಿ ನೃಪ ವಿಸ್ತರಿಸಿದನು ಮೂರ್ಧಾಭಿಷೇಚನವ
ಮೊರೆವ ವಾದ್ಯದ ಸಿಡಿಲ ಧರಣೀ
ಸುರರ ಮಂತ್ರಾಕ್ಷತೆಯ ಮಳೆಗಳೊ
ಳಿರುಳನುಗಿದವು ಮುಕುಟಮಣಿರಾಜಿಗಳ ಮಿಂಚುಗಳು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪಾಚಾರ್ಯನ ಮಾತಿನಂತೆ ಸೇನಾಪತಿಯ ಪಟ್ಟಾಭಿಷೇಕಕ್ಕೆ ಬೇಕಾದ ಮಂಗಳ ದ್ರವ್ಯಗಳನ್ನು ತರಿಸಿ, ಶಲ್ಯನನ್ನು ಗೌರವಿಸಿ, ಮಂಗಳಕರವಾದ ಸಿಂಹಾಸನದಲ್ಲಿ ಅವನನ್ನು ಕುಳ್ಳಿರಿಸಿ, ದುರ್ಯೋಧನನು ಅವನಿಗೆ ಪಟ್ಟಾಭಿಷೇಕವನ್ನು ಮಾಡಿದ. ವಾದ್ಯಗಳ ಮೊರೆತದ ಸಿಡಿಲಿನಲ್ಲಿ, ಬ್ರಾಹ್ಮಣರ ಮಂತ್ರಾಕ್ಷತೆಯ ಮಳೆಯಲ್ಲಿ, ರಾಜಾಧಿರಾಜರುಗಳು ಧರಿಸಿದ್ಧ ಕಿರೀಟದ ಮಣಿಗಳ ಮಿಂಚುಗಳು ರಾತ್ರಿಯನ್ನು ಭೇದಿಸಿದವು.
ಪದಾರ್ಥ (ಕ.ಗ.ಪ)
ಮೂರ್ಧಾಭಿಷೇಚನ-ತಲೆಯಮೇಲಿನಿಂದ ಮಂಗಳ ದ್ರವ್ಯಗಳನ್ನು ಅಭಿಷೇಕ ಮಾಡುವುದು (ಮೂರ್ಧ=ಮುಂದಲೆ), ಮುಕುಟ-ಕಿರೀಟ.
ಮೂಲ ...{Loading}...
ತರಿಸಿ ಮಂಗಳವಸ್ತುಗಳನಾ
ದರಿಸಿ ಭದ್ರಾಸನದಲೀತನ
ನಿರಿಸಿ ನೃಪ ವಿಸ್ತರಿಸಿದನು ಮೂರ್ಧಾಭಿಷೇಚನವ
ಮೊರೆವ ವಾದ್ಯದ ಸಿಡಿಲ ಧರಣೀ
ಸುರರ ಮಂತ್ರಾಕ್ಷತೆಯ ಮಳೆಗಳೊ
ಳಿರುಳನುಗಿದವು ಮುಕುಟಮಣಿರಾಜಿಗಳ ಮಿಂಚುಗಳು ॥24॥
೦೨೫ ಆದುದುತ್ಸವ ಕರ್ಣಮರಣದ ...{Loading}...
ಆದುದುತ್ಸವ ಕರ್ಣಮರಣದ
ಖೇದವಕ್ಕಿತು ಹಗೆಗೆ ಕಾಲ್ವೊಳೆ
ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ
ಬೀದಿವರಿದುದು ಬಿಂಕ ನನೆಕೊನೆ
ವೋದುದಾಶಾಬೀಜ ಲಜ್ಜೆಯ
ಹೋದ ಮೂಗಿಗೆ ಕದಪ ಹೊಯ್ದನು ನಿನ್ನ ಮಗನೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಕರ್ಣನ ಮರಣದ ದುಃಖ ತಗ್ಗಿತು. ಶತ್ರುಗಳಿಗೆ ಕಾಲ್ವೊಳೆಯಂತಾಗಿದ್ದ ವೀರರಸಸಾಗರವು ಒಂದು ಕ್ಷಣದಲ್ಲಿ ಮೇರೆದಪ್ಪಿದಂತೆ ಉಕ್ಕಿತು. ಸೈನಿಕರ ಗರ್ವ ಸ್ವೇಚ್ಛೆಯಾಗಿ ಹರಿಯಿತು. ಗೆಲುವೆಂಬ ಆಸೆಯ ಬೀಜ ಮೊಳೆತು ಚಿಗುರೊಡೆಯಿತು. “ನಿನ್ನ ಮಗ, ಮೂಗನ್ನು ಕಳೆದುಕೊಂಡ ಅವಮಾನಕ್ಕೆ ಕೆನ್ನೆಯನ್ನು ಕತ್ತರಿಸಿದ” - ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಉತ್ಸವ-ಉತ್ಸಾಹ, ಸಂಭ್ರಮ, ಹಬ್ಬ, ಕಾಲ್ವೊಳೆ-ಹಾದುಹೋಗಬಹುದಾದ ಚಿಕ್ಕಹೊಳೆ, ವೀರರಸಾಬ್ಧಿ-ವೀರರಸದ ಸಮುದ್ರ, ಬೀದಿವರಿ-ಸ್ವೇಚ್ಛೆಯಾಗಿ ಹರಿ, ಬಿಂಕ- ಗರ್ವ, ನನೆಕೊನೆವೋಗು-ಚಿಗುರು(ನನೆ-ಮೊಗ್ಗು) ಲಜ್ಜೆ-ಅವಮಾನ, ಕದಪು - ಕಪೋಲ, ಕೆನ್ನೆ
ಟಿಪ್ಪನೀ (ಕ.ಗ.ಪ)
(ಈ ವರೆಗೆ ಕೌರವರ ವೀರರಸವೆಂಬ ಸಾಗರ, ಪಾಂಡವರಿಗೆ ಕೇವಲ ಕಾಲು ಹೊಳೆಯಂಬಂತೆ ಕ್ಷುದ್ರವಾಗಿ ಕಂಡಿತ್ತು. ಆದರೆ ಶಲ್ಯನ ಸೇನಾಪತ್ಯ ಪಟ್ಟಾಭಿಷೇಕದ ಉತ್ಸಾಹದಿಂದ ಆ ವೀರರಸವು ಸಮುದ್ರದಂತೆ ಉಕ್ಕಿಹರಿದು ತನ್ನ ಮೇರೆಯನ್ನು ಮೀರಿತು).
ಶಲ್ಯನ ಸೇನಾಪತ್ಯಾಭಿಷೇಕದಿಂದ ಕೌರವನ ಪಾಳಯದಲ್ಲಿ ಉತ್ಸಾಹ ತುಂಬಿತುಳುಕುತ್ತಿತ್ತೆಂದು ಧೃತರಾಷ್ಟ್ರನಿಗೆ ವರದಿ ಮಾಡುವ ಸಂಜಯ, ನಿನ್ನ ಮಗ “ಮೂಗು ಕತ್ತರಸಿರುವ ಲಜ್ಜೆಗೆ ಕೆನ್ನೆಯನ್ನು ಕೊಯ್ದ” - ಎಂದು ಹೇಳಿ ಆ ಸಂದರ್ಭವನ್ನು ಅಪಹಾಸ್ಯ ಮಾಡುತ್ತಾನೆ. ಇದು ಅವನ ಸ್ವಂತ ಅಭಿಪ್ರಾಯವನ್ನು ಧೃತರಾಷ್ಟ್ರನಿಗೆ ತಿಳಿಸುವ ಕ್ರಮ.
ಮೂಲ ...{Loading}...
ಆದುದುತ್ಸವ ಕರ್ಣಮರಣದ
ಖೇದವಕ್ಕಿತು ಹಗೆಗೆ ಕಾಲ್ವೊಳೆ
ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ
ಬೀದಿವರಿದುದು ಬಿಂಕ ನನೆಕೊನೆ
ವೋದುದಾಶಾಬೀಜ ಲಜ್ಜೆಯ
ಹೋದ ಮೂಗಿಗೆ ಕದಪ ಹೊಯ್ದನು ನಿನ್ನ ಮಗನೆಂದ ॥25॥
೦೨೬ ಕಾಣಿಕೆಯನಿತ್ತಖಿಳ ಸುಭಟ ...{Loading}...
ಕಾಣಿಕೆಯನಿತ್ತಖಿಳ ಸುಭಟ
ಶ್ರೇಣಿ ಕಂಡುದು ನುಡಿಯ ಹಾಣಾ
ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ
ಪ್ರಾಣಚುಳಕೋದಕದ ಚೇಷ್ಟೆಯ
ಹೂಣಿಗರು ವಿಜಯಾಂಗನೋಪ
ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನಾಪತ್ಯಾಭಿಷೇಕವಾದೊಡನೆ ವೀರಾಧಿವೀರರುಗಳೆಲ್ಲರೂ ಶಲ್ಯನನ್ನು ಕಂಡು ಕಾಣಿಕೆಯಿಕ್ಕಿದರು. ಮಾತಿನಲ್ಲೇ ಹೋರಾಟ ಮಾಡಿ, ಭಾಷೆಗಳನ್ನು ನೀಡುವ (ಪ್ರತಿಜ್ಞೆಮಾಡುವ) ಹಕ್ಕಲು ವೀರರ (ಶೌರ್ಯವನ್ನು ಕಳೆದುಕೊಂಡ ವೀರರ) ಹುಸಿ ಪ್ರತಾಪಗಳ, ಪ್ರಾಣವನ್ನು ರಕ್ಷಿಸಿಕೊಳ್ಳಲು ಅಂಗೈ ನೀರನ್ನು ಬಳಸಿಕೊಂಡು ಭಾಷೆಗಳನ್ನು ಕೊಡುತ್ತಿರುವವರು, ವಿಜಯಾಂಗನೆಯಿಂದ ಉಪೇಕ್ಷೆಗೊಳಗಾದ ಮನುಷ್ಯರು ಕುರುಪತಿಯ ಪರಿವಾರವಾಗಿ ಆ ಸಭೆಯಲ್ಲಿದ್ದರು.
ಪದಾರ್ಥ (ಕ.ಗ.ಪ)
ಹಕ್ಕಲು-ಬೆಳೆಕೊಯ್ದಿರುವ ಜಮೀನು, ಉಕ್ಕುಗಳು-ಶಕ್ತಿ, ಪ್ರತಾಪಗಳು, ಚುಳಕೋದಕ-ಅಂಗೈಯಲ್ಲಿ ತುಂಬುವಷ್ಟು ನೀರು, ಹೂಣಿಗ-ಪ್ರತಿಜ್ಞೆಮಾಡುವವನು, ವಿಜಯಾಂಗನೋಪಕ್ಷೀಣ ಮಾನಸರು-ವಿಜಯಲಕ್ಷ್ಮಿಯು ತಿರಸ್ಕರಿಸಿದ ಮನುಷ್ಯರು.
ಮೂಲ ...{Loading}...
ಕಾಣಿಕೆಯನಿತ್ತಖಿಳ ಸುಭಟ
ಶ್ರೇಣಿ ಕಂಡುದು ನುಡಿಯ ಹಾಣಾ
ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ
ಪ್ರಾಣಚುಳಕೋದಕದ ಚೇಷ್ಟೆಯ
ಹೂಣಿಗರು ವಿಜಯಾಂಗನೋಪ
ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ ॥26॥
೦೨೭ ಪತಿಕರಿಸಿದೈ ವೀರಸುಭಟ ...{Loading}...
ಪತಿಕರಿಸಿದೈ ವೀರಸುಭಟ
ಪ್ರತಿತಮಧ್ಯದಲೆಮ್ಮನಹಿತ
ಚ್ಯುತಿಗೆ ಸಾಧನವೆಂದು ನಿಜಸೇನಾಧಿಪತ್ಯದಲಿ
ಕೃತಕವಿಲ್ಲದೆ ಕಾದುವೆನು ಯಮ
ಸುತನೊಡನೆ ಜಯಸಿರಿಗೆ ನೀನೇ
ಪತಿಯೆನಿಸಿ ತೋರಿಸುವೆನೆಂದನು ಶಲ್ಯ ಕುರುಪತಿಗೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳಾದ ಪಾಂಡವರ ಸೈನ್ಯದ ನಾಶಕ್ಕೆ ನನ್ನ ಸೇನಾಪತ್ಯದಿಂದ ನಾನು ಸಾಧನವಾಗುತ್ತೇನೆಂದು ವೀರ ಸುಭಟ ಸಮೂಹದ ಮಧ್ಯದಲ್ಲಿ ನನ್ನನ್ನು ಪ್ರೀತಿಯಿಂದ ಗೌರವಿಸಿದೆ. ಯಾವುದೇ ರೀತಿಯ ಕೃತಕ, ಮೋಸಗಳಿಲ್ಲದೇ ಧರ್ಮಜನೊಂದಿಗೆ ಯುದ್ಧ ಮಾಡುತ್ತೇನೆ. ವಿಜಯಲಕ್ಷ್ಮಿಗೆ ನೀನೆ ಪತಿಯೆನ್ನುವುದನ್ನು ತೋರಿಸುತ್ತೇನೆಂದು ಶಲ್ಯ ದುರ್ಯೋಧನನಿಗೆ ಮಾತು ಕೊಟ್ಟ.
ಪದಾರ್ಥ (ಕ.ಗ.ಪ)
ಪತಿಕರಿಸು-ಗೌರವಿಸು, ಪ್ರೀತಿಸು, ಪ್ರತತಿ-ಸಮೂಹ, ಚ್ಯುತಿ-ನಾಶ, ಕೃತಕ-ಮೋಸ, ಠಕ್ಕು
ಟಿಪ್ಪನೀ (ಕ.ಗ.ಪ)
ಕೃತಕವಿಲ್ಲದೆ ಕಾದುವೆನು ಎಂಬ ಶಲ್ಯನ ಮಾತಿನಲ್ಲಿ, ಈ ಹಿಂದೆ ಸೇನಾಪತಿಗಳಾಗಿ ಹೋರಾಡಿದ ಭೀಷ್ಮ, ದ್ರೋಣ ಮತ್ತು ಕರ್ಣರು ಯುದ್ಧದಲ್ಲಿ ದುರ್ಯೋಧನನಿಗೆ ನಿಷ್ಠ್ಟ್ಠರಾಗಿ ಹೋರಾಡದೇ ಕೃತಕವಾಗಿ ಹೋರಾಡಿ ಸ್ವ-ಇಚ್ಛೆಯಿಂದ ಸೋತರು ಎಂಬ ಭಾವವಿದೆ.
ಮೂಲ ...{Loading}...
ಪತಿಕರಿಸಿದೈ ವೀರಸುಭಟ
ಪ್ರತಿತಮಧ್ಯದಲೆಮ್ಮನಹಿತ
ಚ್ಯುತಿಗೆ ಸಾಧನವೆಂದು ನಿಜಸೇನಾಧಿಪತ್ಯದಲಿ
ಕೃತಕವಿಲ್ಲದೆ ಕಾದುವೆನು ಯಮ
ಸುತನೊಡನೆ ಜಯಸಿರಿಗೆ ನೀನೇ
ಪತಿಯೆನಿಸಿ ತೋರಿಸುವೆನೆಂದನು ಶಲ್ಯ ಕುರುಪತಿಗೆ ॥27॥
೦೨೮ ಉಬ್ಬಿದನಲೈ ಮಧುರವಚನದ ...{Loading}...
ಉಬ್ಬಿದನಲೈ ಮಧುರವಚನದ
ಹಬ್ಬದಲಿ ನಿನ್ನಾತನಿತ್ತಲು
ತುಬ್ಬಿನವದಿರು ತಂದು ಬಿಸುಟರು ನಿಮ್ಮ ಪಾಳೆಯದ
ಸರ್ಬ ವೃತ್ತಾಂತವನು ಗಾಢದ
ಗರ್ಭ ಮುರಿದುದು ಕೃಷ್ಣರಾಯನ
ನೆಬ್ಬಿಸಿದನಿರುಳವನಿಪತಿ ಬಿನ್ನೈಸಿದನು ಹದನ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ, ನಿನ್ನ ಮಗ ದುರ್ಯೋಧನ ಶಲ್ಯನ ಸವಿಮಾತುಗಳನ್ನು ಕೇಳುತ್ತಾ ಉಬ್ಬಿ ಹೋದ. ಇತ್ತ ಪಾಂಡವರ ಕಡೆಯ ಪತ್ತೇದಾರರು, ನಿಮ್ಮ ಪಾಳಯದಲ್ಲಿ ನಡೆದ ಸರ್ವವೃತ್ತಾಂತವನ್ನು ಪಾಂಡವರ ಮುಂದೆ ಹೇಳಿದರು. ಗಹನವಾದ ವಿಚಾರಗಳ ಗರ್ಭವೇ ಸೀಳಿದಂತಾಗಿ,(ವಿಚಾರಗಳನ್ನು ಪತ್ತೆ ಹಚ್ಚಿ ವರದಿ ಮಾಡಿದರು) ಎಲ್ಲ ವಿಚಾರಗಳು ಧರ್ಮಜನಿಗೆ ತಿಳಿದು ಹೋಯಿತು. ಶಲ್ಯಸೇನಾಪತ್ಯದಿಂದ ಗಾಬರಿಗೊಂಡ ಧರ್ಮರಾಯ ರಾತ್ರಿವೇಳೆಯಲ್ಲಿ ಮಲಗಿದ್ದ ಕೃಷ್ಣನನ್ನು ಎಬ್ಬಿಸಿ ಎಲ್ಲ ವಿಚಾರಗಳನ್ನು ತಿಳಿಸಿದ.
ಪದಾರ್ಥ (ಕ.ಗ.ಪ)
ಉಬ್ಬು-ಉತ್ಸಾಹಿತನಾಗು, ಸಂತೋಷಿಸು, ತುಬ್ಬಿನವದಿರು-ಬೇಹುಗಾರರು, ಗುಪ್ತಚರರು, ಪತ್ತೇದಾರರು, ಬಿಸುಟರು-ಹರಹಿದರು (ಹೇಳಿದರು), ಗಾಢದ - ಗುಪ್ತವಿಚಾರದ
ಮೂಲ ...{Loading}...
ಉಬ್ಬಿದನಲೈ ಮಧುರವಚನದ
ಹಬ್ಬದಲಿ ನಿನ್ನಾತನಿತ್ತಲು
ತುಬ್ಬಿನವದಿರು ತಂದು ಬಿಸುಟರು ನಿಮ್ಮ ಪಾಳೆಯದ
ಸರ್ಬ ವೃತ್ತಾಂತವನು ಗಾಢದ
ಗರ್ಭ ಮುರಿದುದು ಕೃಷ್ಣರಾಯನ
ನೆಬ್ಬಿಸಿದನಿರುಳವನಿಪತಿ ಬಿನ್ನೈಸಿದನು ಹದನ ॥28॥
೦೨೯ ದೇವ ಚಿತ್ತೈಸಿದಿರೆ ...{Loading}...
ದೇವ ಚಿತ್ತೈಸಿದಿರೆ ಬೊಪ್ಪನ
ಭಾವನನು ಸೇನಾಧಿಪತ್ಯದ
ಲೋವಿದರಲೇ ಶಲ್ಯ ಮಾಡಿದ ಭಾಷೆಯವರೊಡನೆ
ಆವನಂಘೈಸುವನೊ ಪಾರ್ಥನೊ
ಪಾವಮಾನಿಯೊ ನಕುಲನೋ ಸಹ
ದೇವನೋ ತಾನೋ ನಿದಾನಿಸಲರಿಯೆ ನಾನೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಾ, ಕೇಳಿದಿರೆ! ನಮ್ಮ ಅಪ್ಪನ ಭಾವನಾದ ಶಲ್ಯನನ್ನು ಕೌರವರು ತಮ್ಮ ಸೇನಾಧಿಪತಿಯನ್ನಾಗಿ ಪ್ರೀತಿವಿಶ್ವಾಸಗಳಿಂದ ನೇಮಿಸಿಕೊಂಡಿದ್ದಾರಲ್ಲವೆ! ಹಾಗೆಯೇ ಶಲ್ಯ ಅವರಿಗೆ ನೀಡಿದ ಭಾಷೆಯನ್ನೂ ಕೇಳಿದಿರಲ್ಲವೇ! ಶಲ್ಯನ ಇದಿರಾಗಿ ಯಾರು ಯುದ್ಧ ಮಾಡಬೇಕು? ಅರ್ಜುನನನೋ, ಭೀಮನೋ, ನಕುಲನೋ, ಸಹದೇವನೋ ಅಥವ ನಾನೋ, ನನಗೆ ಅಲೋಚಿಸಲು ಸಾಧ್ಯವಾಗುತ್ತಿಲ್ಲ - ಎಂದು ಧರ್ಮರಾಯನು ಕೃಷ್ಣನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಚಿತ್ತೈಸು-ಕೇಳು, ಬೊಪ್ಪನಭಾವ-ಧರ್ಮರಾಯನ ತಂದೆ ಪಾಂಡುರಾಜನ ಪತ್ನಿಯಾದ ಮಾದ್ರಿಯ ಅಣ್ಣ ಶಲ್ಯ. ಅಂಘೈಸು-ಇದಿರಿಸು, ಪಾವಮಾನಿ-ಪವಮಾನ(ವಾಯು)ನ ಮಗ-ಭೀಮ, ನಿದಾನಿಸು-ಆಲೋಚಿಸು
ಮೂಲ ...{Loading}...
ದೇವ ಚಿತ್ತೈಸಿದಿರೆ ಬೊಪ್ಪನ
ಭಾವನನು ಸೇನಾಧಿಪತ್ಯದ
ಲೋವಿದರಲೇ ಶಲ್ಯ ಮಾಡಿದ ಭಾಷೆಯವರೊಡನೆ
ಆವನಂಘೈಸುವನೊ ಪಾರ್ಥನೊ
ಪಾವಮಾನಿಯೊ ನಕುಲನೋ ಸಹ
ದೇವನೋ ತಾನೋ ನಿದಾನಿಸಲರಿಯೆ ನಾನೆಂದ ॥29॥
೦೩೦ ಕಲಹವೆನ್ನದು ದಳಪತಿಗೆ ...{Loading}...
ಕಲಹವೆನ್ನದು ದಳಪತಿಗೆ ತಾ
ನಿಲುವೆನೆಂದನು ಭೀಮನೆನ್ನನು
ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ
ಸಲುಗೆಯೆನಗೆಂದನು ನಕುಲನೆ
ನ್ನೊಲವಿನರ್ತಿಯಿದೆನ್ನ ಕಳುಹಿದ
ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯುದ್ಧ ನನ್ನದು, ಕೌರವರ ದಳಪತಿಯಾದ ಶಲ್ಯನ ಎದುರು ನಾನು ಯುದ್ಧಕ್ಕೆ ನಿಲ್ಲುತ್ತೇನೆಂದು ಭೀಮ ಹೇಳಿದ. ತನ್ನನ್ನು ಯುದ್ಧಕ್ಕೆ ಕಳುಹಿಸಿ ನೋಡು ಎಂದು ಅರ್ಜುನ ತಿಳಿಸಿದ. ನಮ್ಮ ಸೋದರ ಮಾವನಾದ ಶಲ್ಯನಲ್ಲಿ ನನಗೆ ಬಹು ಸಲುಗೆ, ಹಾಗಾಗಿ ನನ್ನನ್ನು ಯುದ್ಧಕ್ಕೆ ಕಳುಹಿಸೆಂದು ನಕುಲ ಕೇಳಿಕೊಂಡ. ಇದು ನನ್ನ ಪ್ರೀತಿಯ ಅಭಿಲಾಷೆ ಆದ್ದರಿಂದ ನನ್ನನ್ನು ಈ ಯುದ್ಧಕ್ಕೆ ಕಳುಹಿಸದರೆ ನನ್ನನ್ನು ಕಾಪಾಡಿದವರಾಗುತ್ತೀರಿ ಎಂದು ಸಹದೇವನು ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿ ಪ್ರಾರ್ಥಿಸಿದ.
ಪದಾರ್ಥ (ಕ.ಗ.ಪ)
ಅರ್ತಿ-ಆಭಿಲಾಷೆ
ಮೂಲ ...{Loading}...
ಕಲಹವೆನ್ನದು ದಳಪತಿಗೆ ತಾ
ನಿಲುವೆನೆಂದನು ಭೀಮನೆನ್ನನು
ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ
ಸಲುಗೆಯೆನಗೆಂದನು ನಕುಲನೆ
ನ್ನೊಲವಿನರ್ತಿಯಿದೆನ್ನ ಕಳುಹಿದ
ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ ॥30॥
೦೩೧ ಹರಿಯದರ್ಜುನನಿನ್ದ ಭೀಮನ ...{Loading}...
ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ನಕುಲನ
ಹೊರಿಗೆಯೊದಗದು ಸೈರಿಸದು ಸಹದೇವನಾಟೋಪ
ಇರಿವಡಾ ಮಾದ್ರೇಶನನು ನೆರೆ
ಮುರಿವಡೆಯು ನಿನಗಹುದು ನಿನ್ನನು
ತರುಬಿದವರೇ ಕಷ್ಟರೆಂದನು ನಗುತ ಮುರವೈರಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನಿಂದ ಈ ಕೆಲಸ ಹರಿಯುವುದಿಲ್ಲ, ಭೀಮನ ಸಂಪೂರ್ಣ ಶಕ್ತಿಯೂ ಶಲ್ಯನನ್ನು ನೋಯಿಸುವುದಿಲ್ಲ, ನಕುಲನ ಹೋರಾಟಕ್ಕೂ ಶಲ್ಯ ಸಿಕ್ಕುವುದಿಲ್ಲ, ಸಹದೇವನ ಆಟೋಪ ನಡೆಯುವುದಿಲ್ಲ. ಆ ಮಾದ್ರೇಶನಾದ ಶಲ್ಯನನ್ನು ಇರಿಯಲು ಹಾಗೂ ಮುರಿಯಲು ನಿನಗೆ ಮಾತ್ರ ಸಾಧ್ಯ. ನಿನ್ನನ್ನು ಯುದ್ಧದಲ್ಲಿ ಎದುರಿಸಿದವರೇ ಕಷ್ಟರು - ಎಂದು ಕೃಷ್ಣ ಧರ್ಮರಾಯನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಹರಿಯದು-ಸಾಧ್ಯವಾಗದು, ನೆರವಣಿಗೆ-ಪರಿಪೂರ್ಣತೆ, ಹೊರಿಗೆ-ಹೋರಾಟ, ಸ್ಪರ್ಧೆ, ಆಟೋಪ-ಅಬ್ಬರ, ಮುರಿವಡೆ-ಸೋಲಿಸಲು, ಸಂಹರಿಸಲು, ತರುಬು-ಎದುರಿಸು, ಅಡ್ಡಗಟ್ಟು.
ಮೂಲ ...{Loading}...
ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ನಕುಲನ
ಹೊರಿಗೆಯೊದಗದು ಸೈರಿಸದು ಸಹದೇವನಾಟೋಪ
ಇರಿವಡಾ ಮಾದ್ರೇಶನನು ನೆರೆ
ಮುರಿವಡೆಯು ನಿನಗಹುದು ನಿನ್ನನು
ತರುಬಿದವರೇ ಕಷ್ಟರೆಂದನು ನಗುತ ಮುರವೈರಿ ॥31॥
೦೩೨ ಲೇಸನಾಡಿದೆ ಕೃಷ್ಣ ...{Loading}...
ಲೇಸನಾಡಿದೆ ಕೃಷ್ಣ ಶಲ್ಯಂ
ಗೀಸು ಬಲುಹುಂಟಾದಡನುಜರು
ಘಾಸಿಯಾದರು ಹಿಂದೆ ಭೀಷ್ಮಾದಿಗಳ ಬವರದಲಿ
ಈ ಸಮರಜಯವೆನಗೆ ನಾಳಿನೊ
ಳೈಸಲೇ ನಳ ನಹುಷ ಭರತ ಮ
ಹೀಶ ವಂಶೋತ್ಪನ್ನ ತಾನೆಂದನು ಮಹೀಪಾಲ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರಿಯಾಗಿ ಹೇಳಿದೆ ಕೃಷ್ಣ! ಶಲ್ಯನಿಗೆ ಇಷ್ಟು ಶಕ್ತಿಯುಂಟು, ಆದರೆ, ನನ್ನ ತಮ್ಮಂದಿರು ಹಿಂದೆ ಭೀಷ್ಮಾದಿಗಳ ಯುದ್ಧದಲ್ಲಿ ಘಾಸಿಯಾದರು. ನನಗೆ ನಾಳೆ ಈ ಯುದ್ಧದಲ್ಲಿ ಜಯವಲ್ಲವೆ. ನಳ, ನಹುಷ, ಭರತ ಮುಂತಾದ ರಾಜರ ವಂಶದಲ್ಲಿ ಹುಟ್ಟಿದವನಲ್ಲವೇ ತಾನು - ಎಂದು ಧರ್ಮಜ ಕೃಷ್ಣನಲ್ಲಿ ಹೇಳಿದ.
ಪದಾರ್ಥ (ಕ.ಗ.ಪ)
ಬವರ-ಯುದ್ಧ
ಮೂಲ ...{Loading}...
ಲೇಸನಾಡಿದೆ ಕೃಷ್ಣ ಶಲ್ಯಂ
ಗೀಸು ಬಲುಹುಂಟಾದಡನುಜರು
ಘಾಸಿಯಾದರು ಹಿಂದೆ ಭೀಷ್ಮಾದಿಗಳ ಬವರದಲಿ
ಈ ಸಮರಜಯವೆನಗೆ ನಾಳಿನೊ
ಳೈಸಲೇ ನಳ ನಹುಷ ಭರತ ಮ
ಹೀಶ ವಂಶೋತ್ಪನ್ನ ತಾನೆಂದನು ಮಹೀಪಾಲ ॥32॥
೦೩೩ ತಾಯಿ ಹೆರಳೇ ...{Loading}...
ತಾಯಿ ಹೆರಳೇ ಮಗನ ನಿನ್ನನು
ನಾಯಕನೆ ಲೋಕೈಕವೀರರ
ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ
ರಾಯ ನೀ ಕ್ಷತ್ರಿಯನು ಸೇಸೆಯ
ತಾಯೆನುತ ತೂಪಿರಿದು ಕಮಲದ
ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಯಕನಾದ ಧರ್ಮಜನೇ, ನಿನ್ನ ತಾಯಿಯಾದ ಕುಂತಿಯು ನಿನ್ನನ್ನು ಮಗನಾಗಿ ಹೆತ್ತಿಲ್ಲವೆ! ನಿನ್ನಂತಹ ಲೋಕೈಕ ವೀರರ ತಾಯಿಯಲ್ಲವೇ ನಿಮ್ಮ ಅಮ್ಮ. ನಿಮ್ಮ ತಾಯಿಯ ಮೊಲೆಹಾಲ ಬಲದಿಂದ ನೀನು ವೀರ ಕ್ಷತ್ರಿಯನಾಗಿದ್ದೀಯೆ. ಮಂತ್ರಾಕ್ಷತೆಯನ್ನು ಕೊಡು ಎನ್ನುತ್ತ ದೃಷ್ಟಿ ತೆಗೆದು ಧರ್ಮರಾಯನನ್ನು ಅಪ್ಪಿಕೊಂಡನು.
ಪದಾರ್ಥ (ಕ.ಗ.ಪ)
ಸೇಸೆ-ಮಂತ್ರಾಕ್ಷತೆ, ತೂಪಿರಿದು-ದೃಷ್ಟಿದೋಷವನ್ನು ತೆಗೆಯಲು ನಿವಾಳಿಸಿ, ಕಮಲದಳಾಯತಾಕಾಂಬಕ-ಕಮಲ ಪುಷ್ಪದ ದಳದಂತಹ ಕಣ್ಣುಳ್ಳವನು, ಶ್ರೀ ಕೃಷ್ಣ
ಮೂಲ ...{Loading}...
ತಾಯಿ ಹೆರಳೇ ಮಗನ ನಿನ್ನನು
ನಾಯಕನೆ ಲೋಕೈಕವೀರರ
ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ
ರಾಯ ನೀ ಕ್ಷತ್ರಿಯನು ಸೇಸೆಯ
ತಾಯೆನುತ ತೂಪಿರಿದು ಕಮಲದ
ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ ॥33॥
೦೩೪ ಸನ್ದವೈ ಹದಿನೇಳು ...{Loading}...
ಸಂದವೈ ಹದಿನೇಳು ರಾತ್ರಿಗ
ಳಿಂದಿನಿರುಳಾ ಸೇನೆ ನಿರ್ಭಯ
ದಿಂದ ನಿದ್ರಾವ್ಯಸನನಿರ್ಭರ ಪೂರ್ಣಹರುಷದಲಿ
ಸಂದುದೀ ನಿನ್ನವರು ರಾಧಾ
ನಂದನ ವ್ಯಪಗಮನ ನಷ್ಟಾ
ನಂದವಿಹ್ವಲಕರಣರಿದ್ದರು ಭೂಪ ಕೇಳ್ ಎಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದಿಗೆ ಯುದ್ಧ ಪ್ರಾರಂಭವಾಗಿ ಹದಿನೇಳು ರಾತ್ರಿಗಳು ಕಳೆದವು. ಇಂದಿನ ರಾತ್ರಿ ಪಾಂಡವ ಸೇನೆಯು ನಿರ್ಭಯದಿಂದ ನಿದ್ರಾವ್ಯಸನಪೂರ್ಣರಾಗಿ ಪೂರ್ಣ ಹರುಷದಿಂದ ಇದ್ದಾರೆ. ಇತ್ತ ನಿನ್ನವರು ಕರ್ಣನು ನಾಶಹೊಂದಿದ ದುಃಖದಿಂದ ಕೂಡಿ, ವಿಹ್ವಲ ಮನೋಸ್ಥಿತಿಯಿಂದ ಇದ್ದರು.
ಪದಾರ್ಥ (ಕ.ಗ.ಪ)
ಸಂದವು-ಕಳೆದವು, ನಿರ್ಭರ-ಪೂರ್ಣಭಾರ, ವ್ಯಪಗಮನ-ನಾಶಹೊಂದಿದ, ವಿಹ್ವಲ - ವ್ಯಾಕುಲ, ಮನಃಸ್ಥಿತಿ
ಮೂಲ ...{Loading}...
ಸಂದವೈ ಹದಿನೇಳು ರಾತ್ರಿಗ
ಳಿಂದಿನಿರುಳಾ ಸೇನೆ ನಿರ್ಭಯ
ದಿಂದ ನಿದ್ರಾವ್ಯಸನನಿರ್ಭರ ಪೂರ್ಣಹರುಷದಲಿ
ಸಂದುದೀ ನಿನ್ನವರು ರಾಧಾ
ನಂದನ ವ್ಯಪಗಮನ ನಷ್ಟಾ
ನಂದವಿಹ್ವಲಕರಣರಿದ್ದರು ಭೂಪ ಕೇಳೆಂದ ॥34॥
೦೩೫ ಆ ಶಿಖಣ್ಡಿಯ ...{Loading}...
ಆ ಶಿಖಂಡಿಯ ತೋರಿ ಸರಳಿನ
ಹಾಸಿಕೆಯಲೊಬ್ಬನನು ಮಾತಿನ
ವಾಸಿಯಿಂದೊಬ್ಬನನು ಮುನ್ನಿನ ಕುಲವನೆಚ್ಚರಿಸಿ
ಘಾಸಿ ಮಾಡಿದನೊಬ್ಬನನು ಧರ
ಣೀಶ ಚೇಷ್ಟೆಯಲೊಬ್ಬನನು ಕೃಪೆ
ಯೇಸು ಘನವೋ ವೀರನಾರಾಯಣಗೆ ಭಕ್ತರಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಶಿಖಂಡಿಯನ್ನು ತೋರಿಸಿ ಬಾಣಗಳ ಹಾಸಿಗೆಯಲ್ಲಿ ಒಬ್ಬನನ್ನು (ಭೀಷ್ಮನನ್ನು) ಮಾತಿನ ಜಾಣತನದಿಂದ ಒಬ್ಬನನ್ನು (ದ್ರೋಣನನ್ನು), ಅವನ ಹಿಂದಿನ ಕುಲವನ್ನು ತಿಳಿಸಿ ಘಾಸಿ ಮಾಡಿ ಒಬ್ಬನನ್ನು (ಕರ್ಣನನ್ನು) ರಾಜೋಚಿತವಾದ ಮಾತು, ವರ್ತನೆಯಿಂದ ಒಬ್ಬನನ್ನು (ಶಲ್ಯನನ್ನು )ಧರ್ಮರಾಯನಿಂದ ಕೃಷ್ಣ ಸಂಹಾರ ಮಾಡಿಸಿದನು. ತನ್ನ ಭಕ್ತನಾದ ಪಾಂಡವರ ಮೇಲೆ ವೀರನಾರಾಯಣನ ಕರುಣೆ ಎಷ್ಟು ಘನವಾದುದು!
ಪದಾರ್ಥ (ಕ.ಗ.ಪ)
ಸರಳಿನ ಹಾಸಿಕೆ-ಶರಶಯನ, ಬಾಣಗಳಿಂದ ನಿರ್ಮಿತವಾದ ಮಂಚ, ಹಾಸಿಗೆ, ವಾಸಿ-ಶ್ರೇಷ್ಠತೆ (ಇಲ್ಲಿ, ಜಾಣತನ)
ಟಿಪ್ಪನೀ (ಕ.ಗ.ಪ)
ಈ ಷಟ್ಪದಿಯಲ್ಲಿ ಬಂದಿರುವ ‘ಮಾತಿನ ಘಾಸಿಯಲಿ’ ಎಂಬುದು ಧರ್ಮರಾಯನಾಡಿದ “ಅಶ್ವತ್ಥಾಮೋ ಹತಃ ಕುಂಜರಃ” ಎಂಬ ಸಂದರ್ಭವನ್ನು ಸೂಚಿಸುತ್ತದೆ. ಈ ಮಾತನ್ನು ಧರ್ಮರಾಯನಿಂದ ಕೇಳಿ, ತನ್ನ ಮಗ ಅಶ್ವತ್ಥಾಮ ಸತ್ತನೆಂದು ತಿಳಿದು ದ್ರೋಣ ಪ್ರಾಣಬಿಡುತ್ತಾನೆ.
“ಧರಣೀಶ ಚೇಷ್ಟೆಯಲಿ ಒಬ್ಬನನು” ಎಂಬ ಮಾತು, ಪಾಂಡವರ ಸಹಾಯಕ್ಕಾಗಿ ಬರುತ್ತಿದ್ದ ಶಲ್ಯನನ್ನು, ದುರ್ಯೋಧನನು ಕಪಟದಿಂದ ತನ್ನ ಕಡೆಗೆ ಬರುವಂತೆ ಮಾಡಿದ ಸಂದರ್ಭವನ್ನು ಸೂಚಿಸುತ್ತದೆ. (ಉದ್ಯೋಗ ಪರ್ವದ ಎರಡನೆಯ ಸಂಧಿ) ಶಲ್ಯನ ಸಾವನ್ನು ಮೊದಲೇ ತಿಳಿಸಿರುವ ಸಂಜಯ, ಶಲ್ಯನನ್ನು ಸಂಹಾರ ಮಾಡಿದನು - ಎಂಬ ವಿಷಯವನ್ನು ಶಲ್ಯನ ಯುದ್ಧದ ಪ್ರಾರಂಭಕ್ಕೆ ಮೊದಲು, ಇಲ್ಲಿಯೂ ಸಹ ಹೇಳಿದ್ದಾನೆ.
ಮೂಲ ...{Loading}...
ಆ ಶಿಖಂಡಿಯ ತೋರಿ ಸರಳಿನ
ಹಾಸಿಕೆಯಲೊಬ್ಬನನು ಮಾತಿನ
ವಾಸಿಯಿಂದೊಬ್ಬನನು ಮುನ್ನಿನ ಕುಲವನೆಚ್ಚರಿಸಿ
ಘಾಸಿ ಮಾಡಿದನೊಬ್ಬನನು ಧರ
ಣೀಶ ಚೇಷ್ಟೆಯಲೊಬ್ಬನನು ಕೃಪೆ
ಯೇಸು ಘನವೋ ವೀರನಾರಾಯಣಗೆ ಭಕ್ತರಲಿ ॥35॥