೨೬

೦೦೦ ಸೂ ಚಣ್ಡ ...{Loading}...

ಸೂ. ಚಂಡ ಭುಜಬಲ ವಿಕ್ರಮನ ಮಾ
ರ್ತಂಡತನಯನ ವಿಜಯಸಿರಿ ಮುಂ
ಕೊಂಡು ಮನ್ನಿಸಿ ಭುಜಕೆ ಬಂದಳು ಕಲಿಧನಂಜಯನ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳ ಜಯಸಿರಿ ಸರ್ಪಬಾಣದ
ಮೇಳೆಯದ ಸೀಮೆಯಲಿ ನಿಂದುದು ಹಲವು ಮಾತೇನು
ಹೇಳಿ ಫಲವೇನಿನ್ನು ಮುಂದಣ
ಕಾಳೆಗದ ಕರ್ಣಾಮೃತದ ಮಳೆ
ಗಾಲ ಮಾದು ವಿಲೋಚನದ ಮಳೆಗಾಲವಾಯ್ತೆಂದ ॥1॥

೦೦೨ ಕಳಿದ ಹೂವಿನ ...{Loading}...

ಕಳಿದ ಹೂವಿನ ಪರಿಮಳವೊ ಧರೆ
ಗಿಳಿದ ಸೂರ್ಯಪ್ರಭೆಯೊ ಶರದದ
ಹೊಳೆಯೊ ಮೇಘಸ್ಥಿತಿಯೊ ಸುರಪತಿ ಚಾಪ ವಿಭ್ರಮವೊ
ಇಳಿದ ಜವ್ವನದೊಲುಮೆಯೋ ಕುರು
ಬಲವ ಕಂಡೆನು ಜೀಯ ಜಯದ
ಗ್ಗಳಿಕೆಗಳ ಜಾರುಗಳ ನಿನ್ನ ಕುಮಾರನೊಡ್ಡಿನಲಿ ॥2॥

೦೦೩ ಆಗಳಳಿದುದು ಸರ್ಪಶರ ...{Loading}...

ಆಗಳಳಿದುದು ಸರ್ಪಶರ ತಾ
ನಾಗಳೇ ಕುರುರಾಯ ಭುಜವನು
ನೀಗಿದಳು ಜಯವಧು ಧರಾವಧು ಭಾಗ್ಯವಧು ಸಹಿತ
ಆಗಳೇ ಬಿನ್ನೈಸೆನೇ ರಣ
ದಾಗುಹೋಗಿನ ಹೊರಿಗೆಯನು ತಾ
ನೀಗಿ ಬಿಸುಟನು ತನ್ನ ಸತ್ಯಸ್ಥಿತಿಗೆ ಕಲಿಕರ್ಣ ॥3॥

೦೦೪ ಆದರೇನದು ಮತ್ತೆ ...{Loading}...

ಆದರೇನದು ಮತ್ತೆ ಕರ್ಣನ
ಕೈದುಕಾರತನಕ್ಕೆ ಸುಭಟರು
ಮೇದಿನಿಯೊಳಾರುಂಟು ಪಡಿ ದೈವಾಭಿಮುಖವುಳಿಯೆ
ಹೋದೆ ಹೋಗಿನ್ನೆನುತ ಕಣೆಗಳ
ಸಾದುಗಳ ತನಿವೀರರಸದಲಿ
ತೇದು ಚಿತ್ರವ ಬರೆದನರ್ಜುನನಂಗಭಿತ್ತಿಯಲಿ ॥4॥

೦೦೫ ಮತ್ತೆ ಕೃಷ್ಣನನೆಚ್ಚು ...{Loading}...

ಮತ್ತೆ ಕೃಷ್ಣನನೆಚ್ಚು ಹನುಮನ
ತೆತ್ತಿಸಿದ ಕೂರಂಬಿನಲಿ ಕೈ
ವರ್ತಿಸಿದನೀರೆಂಟು ಶರವನು ತುರಗದೇಹದಲಿ
ಹೊತ್ತಿದುದು ಕಡುಗೋಪ ವಹ್ನಿಯೊ
ಳಿತ್ತಲಿದೆ ನಿಲ್ಲೆನುತ ಪಾರ್ಥನ
ಮೆತ್ತಿ ನೂರಂಬಿನಲಿ ಪುನರಪಿ ಕಪಿಯನೊಡೆಯೆಚ್ಚ ॥5॥

೦೦೬ ನೆಲನ ಬೇಟದ ...{Loading}...

ನೆಲನ ಬೇಟದ ಬೇಗೆಗೋಸುಗ
ರಳಿವರಿವದಿರು ಪಾಂಡುನಂದನ
ರಳಿಯಲವದಿರ ಬಳಿಯ ವೇಳಾಯಿತನು ಕೃಷ್ಣ ಗಡ
ಅಳಿಯಲಥವಾ ನಿಲಲಿ ಹಣುಹಂ
ಪಲು ಮೆಲಿದು ನೀನಿವರ ಬಲೆಯಲಿ
ಸಿಲುಕಿ ನೊಂದೈ ತಂದೆ ಪವನಜ ಎಂದನಾ ಕರ್ಣ ॥6॥

೦೦೭ ಬಾಯಿಬಡಿಕನಲಾ ವೃಥಾ ...{Loading}...

ಬಾಯಿಬಡಿಕನಲಾ ವೃಥಾ ರಾ
ಧೇಯ ಮದವೇಕಿನ್ನು ನಿನಗಹಿ
ಸಾಯಕದ ಸಾವಿನಲಿ ನೀರಿಳಿಸುವೆನು ನೆತ್ತರಲಿ
ತಾಯ ಬಸುರಿಂಬಿಲ್ಲ ನೀನುಳಿ
ವಾಯತಿಕೆಯಿನ್ನೆಂತು ಕೌರವ
ರಾಯ ನೋಡಲಿ ಕರೆಯೆನುತ ತೆಗೆದೆಚ್ಚನಾ ಪಾರ್ಥ ॥7॥

೦೦೮ ಆರು ಶರದಿನ್ದೆಚ್ಚು ...{Loading}...

ಆರು ಶರದಿಂದೆಚ್ಚು ಮಗುಳೀ
ರಾರುಬಾಣದಲೌಕಿ ಮೂವ
ತ್ತಾರು ಮಾರ್ಗಣದಿಂದ ಮುಕ್ಕುರಿಕಿದನು ರಿಪುಭಟನ
ಮೂರುಬಾಣದಲರಿಯ ದೇಹವ
ಕೀರಿದನು ಮತ್ತೆರಡುಶರದಲಿ
ಜಾರಲೆಚ್ಚನು ಜರೆದು ಕರ್ಣನ ಕರ್ಣಕುಂಡಲವ ॥8॥

೦೦೯ ಜೋಡ ಕಡಿದನು ...{Loading}...

ಜೋಡ ಕಡಿದನು ಸೀಸಕವನೀ
ಡಾಡಿದನು ಕೆಲಬಲದ ಕಣೆಗಳ
ನೀಡುಕಾರರನಿಕ್ಕಿದನು ಗರಿಸಹಿತ ಸರಳುಗಿಯೆ
ಹೂಡಿದಂಬಿನ ಹೊದೆಯ ಬಂಡಿಯ
ತೋಡ ಕಡಿದನು ಛತ್ರ ಚಮರದ
ಝಾಡಿಗಳ ತರಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ॥9॥

೦೧೦ ಈತನಖ್ಖುಡಿಸುವನೆ ಬಳಕಿನೊ ...{Loading}...

ಈತನಖ್ಖುಡಿಸುವನೆ ಬಳಕಿನೊ
ಳಾ ತತುಕ್ಷಣವರ್ಜುನನ ಚಮ
ರಾತಪತ್ರವ್ಯೂಹವನು ಕೈದುಗಳ ಬಂಡಿಗಳ
ಘಾತಿಸಿದನೆಡಬಲದ ಸುಭಟ
ವ್ರಾತವನು ಕೆದರಿದನು ಸರಳ ವಿ
ಘಾತಿಯಲಿ ಬಲುಘಾಯವಡೆದನು ಪಾರ್ಥನಡಿಗಡಿಗೆ ॥10॥

೦೧೧ ಅರಸ ಹೇಳುವುದೇನು ...{Loading}...

ಅರಸ ಹೇಳುವುದೇನು ರಾಯನ
ಸಿರಿಯ ಪೈಸರವನು ಸುಯೋಧನ
ನರಸುತನದಾಧಾರ ಮೂಲಸ್ತಂಭ ಭಂಜನವ
ನರನ ಜಯವೆಲ್ಲಿಯದು ದೈವವ
ಮರುಳುಮಾಡಿದರವರು ನಿಮ್ಮಯ
ಧರಣಿ ನಿಮಗನುಚಿತವ ನೆನೆದಳು ಹೇಳಲೇನೆಂದ ॥11॥

೦೧೨ ಧರೆ ನೆನೆದ ...{Loading}...

ಧರೆ ನೆನೆದ ದುಷ್ಕೃತವದೇನೆಂ
ದರಸ ಬೆಸಗೊಂಬೈ ನಿರಂತರ
ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ
ಗರುವತನ ಗಾಳಾಯ್ತಲೇ ಖೊ
ಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ ॥12॥

೦೧೩ ಗಾಲಿಯದ್ದವು ಕೂಡೆ ...{Loading}...

ಗಾಲಿಯದ್ದವು ಕೂಡೆ ಯಂತ್ರದ
ಕೀಲುಗಳು ಕಳಚಿದವು ಹಯತತಿ
ತೂಳಿ ಸತ್ವದಲೌಕಿ ಸೆಳೆದವು ಕುಸಿದು ನಿಜಮುಖವ
ಮೇಲು ಮಿಡುಕದು ತೇರು ಕುರುಬಲ
ಜಾಲ ಜರಿದುದು ವೈರಿ ಬಲದಲಿ
ಸೂಳವಿಸಿದರು ಭುಜವನೊದರಿತು ಬೆರಳ ಬಾಯ್ಗಳಲಿ ॥13॥

೦೧೪ ಮೂಗಿನಲಿ ಬೆರಳಿಟ್ಟು ...{Loading}...

ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿ ತೊನೆದನು ಪೂತು ಮಝ ನಿ
ರ್ಭಾಗಧೇಯನು ರಾಯನಕಟಾ ಶಿವ ಮಹಾದೇವ
ಈಗಳಿದು ತಾನೇನು ವಿಧಿ ಬರೆ
ದೋಗಟೆಯೊ ಕುರುವಂಶ ವಜ್ರದ
ಬೇಗಡೆಯೊ ಮಾಮಾ ಎನುತ ಮರುಗಿದನು ಕಲಿ ಕರ್ಣ ॥14॥

೦೧೫ ಶಿವನ ಬಲುಹುಣ್ಟೆಮ್ಬೆನೇ ...{Loading}...

ಶಿವನ ಬಲುಹುಂಟೆಂಬೆನೇ ಶಿವ
ನವರ ಕಡೆ ಹರಿಯೆಂಬೆನೇ ಪಾಂ
ಡವರ ಬಂಡಿಯ ಬೋವನಿಂದ್ರಾದ್ಯರು ಸಹಾಯಿಗಳು
ಅವರು ಸಾಕ್ಷಾತರ್ಜುನರು ನ
ಮ್ಮವನಿ ನಮಗುಂಟೆಂಬೆನೇ ಕೌ
ರವನ ಪುಣ್ಯವನರಿಯೆನಿದು ಹದನೆಂದನಾ ಕರ್ಣ ॥15॥

೦೧೬ ಇಳುಹಿದನು ರಥದೊಳಗೆ ...{Loading}...

ಇಳುಹಿದನು ರಥದೊಳಗೆ ಚಾಪವ
ನಳವಡಿಸಿದನು ಸೆರಗನಲ್ಲಿಂ
ದಿಳಿದು ಗಾಲಿಯನಲುಗಿ ಪಾರ್ಥನ ನೋಡಿ ನಸುನಗುತ
ಎಲೆ ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ ನಿನಗಾ
ನಳವಿಗೊಡುವೆನು ತನ್ನ ಪರಿಯನು ಬಳಿಕ ನೋಡೆಂದ ॥16॥

೦೧೭ ರೂಡಿಸಿದ ಭಟ ...{Loading}...

ರೂಡಿಸಿದ ಭಟ ನೀನು ಪಂಥದ
ಪಾಡುಗಳ ಬಲ್ಲವನು ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ ಶಸ್ತ್ರಹೀನರ
ಕೂಡೆ ವಾಹನಹೀನರಲಿ ಕೈ
ಮಾಡಲನುಚಿತವೆಂಬ ಮಾರ್ಗವನೆಂದನಾ ಕರ್ಣ ॥17॥

೦೧೮ ಎನುತ ಗಾಲಿಯನಲುಗಿ ...{Loading}...

ಎನುತ ಗಾಲಿಯನಲುಗಿ ಕೀಲ
ಚ್ಚಿನಲಿ ಮುಂಗೈಗೊಟ್ಟು ಮೊಳಕಾ
ಲಿನಲಿ ಧರಣಿಯನೌಕಿ ತಗ್ಗಿದ ರಥದ ನೆಗಹುತಿರೆ
ದನುಜರಿಪು ಚಮ್ಮಟಿಗೆಯಲಿ ಫಲು
ಗುಣನ ತಿವಿದನು ನೋಡು ರಾಧಾ
ತನುಜನಿರವನು ಬೇಗಮಾಡೆಂದರ್ಜುನನ ಜರೆದ ॥18॥

೦೧೯ ಎಸು ಮರುಳೆ ...{Loading}...

ಎಸು ಮರುಳೆ ಗಾಂಡೀವಿಯಾಪ
ತ್ತೆಸಗಿದಾಗಳೆ ಹಗೆಯ ಗೆಲುವುದು
ವಸುಮತೀಶರ ನೀತಿ ತೊಡು ತೊಡು ದಿವ್ಯಮಾರ್ಗಣವ
ವಿಷಮವೀರನು ರಥವ ಮೇಳಾ
ಪಿಸದ ಮುನ್ನವೆ ಹರಿವ ನೆನೆ ಸೈ
ರಿಸಿದ ಬಳಿಕೀ ಕರ್ಣ ಕೈಕೊಂಬನೆ ತ್ರಿಯಂಬಕನ ॥19॥

೦೨೦ ಏನನೆಮ್ಬೆನು ಜೀಯ ...{Loading}...

ಏನನೆಂಬೆನು ಜೀಯ ಕರ್ಣಂ
ಗೇನಹನೊ ಫಲುಗುಣನು ಬಳಿಕಾ
ದಾನವಾರಿಯ ನುಡಿಯ ಕೇಳಿದು ಕೇಳಿದಾಕ್ಷಣಕೆ
ಗ್ಲಾನಿಯಲಿ ಮುಳುಗಿದನು ಮನದಭಿ
ಮಾನ ಸರ್ಪನ ಕೆಡಹಿ ಧೈರ್ಯನಿ
ಧಾನವನು ಕೈಸೂರೆಗೊಂಡುದು ಶೋಕವರ್ಜುನನ ॥20॥

೦೨೧ ಮುಕ್ಕಿದನು ಮಹಿಮೆಯನು ...{Loading}...

ಮುಕ್ಕಿದನು ಮಹಿಮೆಯನು ಕಂಗಳು
ಮುಕ್ಕುಳಿಸಿದವು ನೀರನಹಿತನೊ
ಳುಕ್ಕುವನುರಾಗದಲಿ ಕೊಂಡನು ಬಳಿಕ ವೀಳೆಯವ
ಸಿಕ್ಕಿದನು ಕರುಣಾಲತಾಂಗಿಯ
ತೆಕ್ಕೆಯಲಿ ನಾನೇನ ಹೇಳುವೆ
ನೊಕ್ಕಲಿಕ್ಕಿತು ಶೋಕವರ್ಜುನನಂತರಂಗದಲಿ ॥21॥

೦೨೨ ತೇರಿನಲಿ ಚಾಚಿದನು ...{Loading}...

ತೇರಿನಲಿ ಚಾಚಿದನು ಮೆಲ್ಲನೆ
ಭಾರಿ ಧನುವನು ಕಯ್ಯ ಕಣೆಗಳ
ನೋರೆಯಲಿ ಸೈತಿರಿಸೆ ಕಂಡನು ಮತ್ತೆ ಮುರವೈರಿ
ಹಾರವೇಕೈ ಕಂಗಳಲಿ ಕ
ಸ್ತೂರಿಯೇಕೈ ಕದಪಿನಲಿ ಶೃಂ
ಗಾರವಿದು ವಿಪತರೀತವೇನೈ ಪಾರ್ಥ ಹೇಳೆಂದ ॥22॥

೦೨೩ ದೇವ ಹಗೆಯಾಗಿರನು ...{Loading}...

ದೇವ ಹಗೆಯಾಗಿರನು ಕರ್ಣನಿ
ದಾವ ಹದನೆಂದರಿಯೆ ಮನದಲಿ
ನೋವು ಮಿಗುವುದು ಕೈಗಳೇಳವು ತುಡುಕುವಡೆ ಧನುವ
ಜೀವವೀತನಮೇಲೆ ಕರಗುವು
ದಾವ ಸಖನೋ ಶತ್ರುವೆಂಬೀ
ಭಾವನೆಯ ಬಗೆ ಬೀಳುಕೊಂಡುದು ಕರ್ಣನಾರೆಂದ ॥23॥

೦೨೪ ಕೌರವನ ಮೇಲಿಲ್ಲದಗ್ಗದ ...{Loading}...

ಕೌರವನ ಮೇಲಿಲ್ಲದಗ್ಗದ
ವೈರವೀತನಮೇಲೆ ನಮಗಪ
ಕಾರಿಯೀತನು ಮರಣದನುಸಂಧಾನವಿನ್ನೆಬರ
ವೈರವುಪಶಮಿಸಿತು ಯುಧಿಷ್ಠಿರ
ವೀರನಿಂದಿಮ್ಮಡಿಯ ನೇಹದ
ಭಾರವಣೆ ತೋರುವುದಿದೇನೈ ಕರ್ಣನಾರೆಂದ ॥24॥

೦೨೫ ಆಸುರದ ವ್ಯಾಮೋಹವಿದು ...{Loading}...

ಆಸುರದ ವ್ಯಾಮೋಹವಿದು ಡೊ
ಳ್ಳಾಸವೋ ಕೌರವರ ಥಟ್ಟಿನ
ವೈಸಿಕವೊ ನಿಮ್ಮಡಿಯ ಮಾಯಾಮಯದ ಮಾಲೆಗಳೊ
ವಾಸಿ ಬೀತುದು ಛಲಗಿಲದ ಕಾ
ಳಾಸ ಸೋತುದು ಕರ್ಣನಲಿ ಹಿರಿ
ದಾಸೆಯಾಯಿತು ಕೃಷ್ಣ ಕರುಣಿಸು ಕರ್ಣನಾರೆಂದ ॥25॥

೦೨೬ ಕಾಲಯವನನುಪಾಯದಿನ್ದವೆ ...{Loading}...

ಕಾಲಯವನನುಪಾಯದಿಂದವೆ
ಬೀಳಿಸಿದೆ ಮಾಗಧನನಾ ಪರಿ
ಸೀಳಿಸಿದೆ ಭೀಷ್ಮಾದಿಗಳ ಸೋಲಿಸಿದೆ ಸಾಮದಲಿ
ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು ನಿನ್ನ ಮಾಯೆಯ
ಹೇಳಲಮ್ಮೆನು ಕೃಷ್ಣ ಕರುಣಿಸು ಕರ್ಣನಾರೆಂದ ॥26॥

೦೨೭ ಋಷಿಗಳನುಮತದಿನ್ದ ಕುನ್ತಿಯ ...{Loading}...

ಋಷಿಗಳನುಮತದಿಂದ ಕುಂತಿಯ
ಬಸುರಲೇನುದಯಿಸನಲೇ ನೀ
ನಸುರರಿಪು ಬಹು ಕಪಟನಾಟಕ ಸೂತ್ರಧಾರನಲೆ
ವಸುಮತಿಯ ಭಾರವನು ಸಲೆ ಹಿಂ
ಗಿಸುವ ಕೃತ್ಯವು ನಿನ್ನದೆನಗು
ಬ್ಬಸವಿದೇನೆಂದರಿಯೆನಕಟಾ ಕರ್ಣನಾರೆಂದ ॥27॥

೦೨೮ ಧರೆಯ ಬಿಡುವೆವು ...{Loading}...

ಧರೆಯ ಬಿಡುವೆವು ಕುರುಪತಿಗೆ ನಾ
ವರುವರೊಡವುಟ್ಟಿದರು ವಿಪಿನಾಂ
ತರದೊಳಗೆ ಭಜಿಸುವೆವು ನಿನ್ನನು ಭಾವಶುದ್ಧಿಯಲಿ
ತೆರಳುವೀ ಸಿರಿಗೋಸುಗರ ಸೋ
ದರನ ಕೊಲವೆನೆ ಕೃಷ್ಣ ಕರುಣಿಸು
ಕರುಣಿಸಕಟಾ ಕೃಷ್ಣ ಕರುಣಿಸು ಕರ್ಣನಾರೆಂದ ॥28॥

೦೨೯ ದೂರುವವರಾವಲ್ಲ ಕರುಣವ ...{Loading}...

ದೂರುವವರಾವಲ್ಲ ಕರುಣವ
ತೋರಿ ಬಿನ್ನಹಮಾಡಿದೆನು ಹಗೆ
ಯೇರದಿವನಲಿ ಸೇರುವುದು ಸೋದರದ ಸಂಬಂಧ
ಆರೆನೀತನ ಕೊಲೆಗೆ ಹೃದಯವ
ಸೂರೆಗೊಂಡನು ಕರ್ಣನಕಟಾ
ತೋರಿ ನುಡಿಯಾ ಕೃಷ್ಣ ಕರುಣಿಸು ಕರ್ಣನಾರೆಂದ ॥29॥

೦೩೦ ಅರಸ ಕೇಳೈ ...{Loading}...

ಅರಸ ಕೇಳೈ ಬಳಿಕ ಪಾರ್ಥನ
ಕರುಣರಸದಾಳಾಪ ವಾಗ್ವಿ
ಸ್ತರಕೆ ಮನದಲಿ ಮರುಗಿದನು ಮುರವೈರಿ ನಸುನಗುತ
ಕೆರಳಿದನು ಮಾತಿನಲಿ ಸುಡು ಬಾ
ಹಿರನಲಾ ನೀ ನಿನ್ನ ವಂಶಕೆ
ಸರಿಯೆ ಸೂತನ ಮಗನಿದೇನೆಂದಸುರರಿಪು ಜರೆದ ॥30॥

೦೩೧ ವಾಸಿಗಾದುದೆ ಜಾತಿಸಙ್ಕರ ...{Loading}...

ವಾಸಿಗಾದುದೆ ಜಾತಿಸಂಕರ
ಬೇಸರಾಯಿತೆ ಧೃತಿಗೆ ಕಲಿತನ
ಕೀಸು ಮೊಲೆಗಳು ಮೂಡಿದವಲಾ ಪಾರ್ಥ ಸಮರದಲಿ
ಹೂಸಕದ ಛಲವೀಯಹಂಕೃತಿ
ಮೀಸಲಳಿದುದೆ ಶಿವಶಿವಾ ನಿ
ರ್ದೋಷದಲಿ ಬಹುದೋಷವಿದು ವಿಪರೀತವಾಯ್ತೆಂದ ॥31॥

೦೩೨ ಕ್ಷಿತಿಯೊಳೀ ಕ್ಷತ್ರಿಯರ ...{Loading}...

ಕ್ಷಿತಿಯೊಳೀ ಕ್ಷತ್ರಿಯರ ಧರ್ಮ
ಸ್ಥಿತಿಯನರಿಯಾ ಕೃಷ್ಣ ಚಾಪ
ಚ್ಯುತರನಪಗತವಾಹನರ ಪರಿಮುಕ್ತ ಕೇಶಿಗಳ
ಗತಿವಿಹೀನರ ದೈನ್ಯವಾಚಾ
ಯುತರ ತರು ವಲ್ಮೀಕ ಜಲ ಸಂ
ಗತರನಿರಿವುದು ಧರ್ಮವೇ ನಾವರಿಯೆವಿದನೆಂದ ॥32॥

೦೩೩ ಹೇಳು ಹೇಳಿನ್ನೊಮ್ಮೆ ...{Loading}...

ಹೇಳು ಹೇಳಿನ್ನೊಮ್ಮೆ ಧರ್ಮವ
ಕೇಳಿದರಿಯೆವು ನಿಮ್ಮ ಕಯ್ಯಲಿ
ಕೇಳಲಾಗದೆ ರಾಜಧರ್ಮ ಪುರಾಣ ಸಂಗತಿಯ
ಆಳಿವನಘಾಟವೆ ದೊಠಾರಿಸಿ
ಸೋಲಿಸುವುದೇನರಿದೆ ಬಲುಗೈ
ಯಾಳಲಾ ನೀ ರಣಕೆ ದಿಟ ವಸುದೇವನಾಣೆಂದ ॥33॥

೦೩೪ ಈಗಲೀ ಧರ್ಮಶ್ರವಣ ...{Loading}...

ಈಗಲೀ ಧರ್ಮಶ್ರವಣ ನೀ
ನಾಗಳೇರಿಸಿ ನುಡಿದ ಭಾಷೆಗೆ
ಮೂಗುಹೋದುದೆ ಮರೆದಲಾ ಮಾತುಗಳು ಹಳಸುವವೆ
ಹೋಗಲೆಲೆ ಮರುಳೇ ವಿಭಾಡಿಸು
ಬೇಗದಲಿ ಬಹುರಾಜಕಾರ್ಯವ
ನೀಗಳೇ ತಿದ್ದುವೆನು ತೊಲಗಿಸು ಸೂತಜನ ಶಿರವ ॥34॥

೦೩೫ ಅಕಟ ನಿಷ್ಕರುಣಿಯೆ ...{Loading}...

ಅಕಟ ನಿಷ್ಕರುಣಿಯೆ ವೃಥಾ ಪಾ
ತಕವಿದೇಕೈ ಹೇಳು ಜಯಕಾ
ಮುಕರು ನಾವೊಲ್ಲದಡೆ ನಿಮಗೇಕೀಸು ನಿರ್ಬಂಧ
ಪ್ರಕಟ ಕುರುವಂಶದಲಿ ಯದುರಾ
ಜಕರೊಡನೆ ಹಗೆಯಿಲ್ಲಲೇ ಮತಿ
ವಿಕಳನಾದೆನು ಕೃಷ್ಣ ಕರ್ಣನ ಕೊಲುವನಲ್ಲೆಂದ ॥35॥

೦೩೬ ಬಿಸುಟು ಹೋದನು ...{Loading}...

ಬಿಸುಟು ಹೋದನು ರಥವ ಸಾರಥಿ
ವಸುಧೆಯಲಿ ರಥವದ್ದು ಕೆಡೆದುದು
ನಿಶಿತಮಾರ್ಗಣವಿಲ್ಲ ಕಯ್ಯಲಿ ದಿವ್ಯಧನುವಿಲ್ಲ
ಎಸುವಡೆಂತೇಳುವುವು ಕಯ್ ನೀ
ಬೆಸಸುವಡೆ ಮನವೆಂತು ಬಂದುದು
ಬಸುರ ಶಿಖಿ ಬಲುಹಾಯ್ತು ಕರ್ಣನ ಕೊಲುವನಲ್ಲೆಂದ ॥36॥

೦೩೭ ಗುರುವನೆಸುವಡೆ ಮೇಣು ...{Loading}...

ಗುರುವನೆಸುವಡೆ ಮೇಣು ಭೀಷ್ಮನ
ಸರಳ ತಡಿಕೆಗೆ ಚಾಚುವಡೆ ಧಿ
ಕ್ಕರಿಸುವಡೆ ಕೃಪ ಶಲ್ಯ ಸೈಂಧವ ಮುಖ್ಯ ಬಾಂಧವರ
ತೆರಳಿದೆನೆ ತೇರೈಸಿದೆನೆ ಹೇ
ವರಿಸಿದೆನೆ ಹೋರಿದೆನೆ ಕಲಿತನ
ಕರಗಿತೇನೆಂದರಿಯೆ ಕರ್ಣನ ಕೊಲುವನಲ್ಲೆಂದ ॥37॥

೦೩೮ ಬಳಿಕ ಭೀಮಾದಿಗಳ ...{Loading}...

ಬಳಿಕ ಭೀಮಾದಿಗಳ ಮನದಲಿ
ಸುಳಿದುದೈ ಸಂದೇಹವೀತನ
ಕೊಲುವುದೇನನುಚಿತವೊ ಮೇಣುಚಿತವೊ ಶಿವಾ ಎನುತ
ಅಳುಕಿದರು ದ್ರೌಪದಿ ಯುಧಿಷ್ಠಿರ
ರೊಳಗೊಳಗೆ ಸಂತಾಪಶಿಖಿಯಲಿ
ತಳಿತ ದುಗುಡದ ಬಿಗಿದ ಬೆರಗಿನೊಳಿದ್ದುದಾಚೆಯಲಿ ॥38॥

೦೩೯ ಮೊದಲಲೆರಡೊಡ್ಡಿನಲಿ ಸುಮ್ಮಾ ...{Loading}...

ಮೊದಲಲೆರಡೊಡ್ಡಿನಲಿ ಸುಮ್ಮಾ
ನದ ಸಘಾಡವ ಕಂಡೆನೀಗಳು
ತುದಿಗೆ ಬರೆವರೆ ಕಂಡೆನಿವರವರೆರಡು ಥಟ್ಟಿನಲಿ
ತುದಿವೆರಳ ಕಂಬನಿಯ ಬಳಸಿದ
ಬೆದರುಗಳ ಕುಕ್ಕುಳಿಸಿದುತ್ಸಾ
ಹದ ವಿಘಾತಿಯ ನಟ್ಟ ಚಿಂತೆಯನರಸ ಕೇಳ್ ಎಂದ ॥39॥

೦೪೦ ಮತ್ತೆ ಜರೆದನು ...{Loading}...

ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ ॥40॥

೦೪೧ ಎಲೆ ಧನಞ್ಜಯ ...{Loading}...

ಎಲೆ ಧನಂಜಯ ನೀನು ಹಿಮಕರ
ಕುಲದ ಸುಕುಮಾರಕನು ಲೋಕದ
ಕುಲವಿಹೀನನು ಕರ್ಣನಿವ ನಿನಗೆಂತು ಸರಿಯಹನು
ತಲೆಯ ಮಾರಿ ಶರೀರವನು ಸಲೆ
ಸಲಹಲೋಸುಗ ಕೌರವನ ತಂ
ಬುಲಕೆ ಕಯ್ಯಾಂತವನು ಬಂಧುವೆ ಪಾರ್ಥ ಹೇಳೆಂದ ॥41॥

೦೪೨ ಕೇಡಹೊತ್ತಿಸಿ ನಿಮ್ಮ ...{Loading}...

ಕೇಡಹೊತ್ತಿಸಿ ನಿಮ್ಮ ಬೇಂಟೆಯ
ನಾಡಿಸಿದನಿವ ಜೂಜನಾಡಿಸಿ
ನಾಡ ಕೊಳಿಸಿದ ಹಿಸುಣನಿವ ನಿಮ್ಮೆಲ್ಲರನು ಕೆಡಿಸಿ
ನಾಡ ಸಂಧಾನವನು ನಾವ್ ಮಾ
ತಾಡಲೆಮ್ಮನು ಬಿಗಿಯಲನುವನು
ಮಾಡಿಸಿದನೀ ಕರ್ಣ ನಿಮಗತಿಹಿತವನಹನೆಂದ ॥42॥

೦೪೩ ಕೊಲ್ಲನೇ ಅಭಿಮನ್ಯುವನು ...{Loading}...

ಕೊಲ್ಲನೇ ಅಭಿಮನ್ಯುವನು ಹಗೆ
ಯಲ್ಲವೇ ಮಾರುತಿಯ ಕೊರಳನು
ಬಿಲ್ಲ ಕೊಪ್ಪಿನೊಳೆಳೆಯನೇ ಕೆಡೆಯೆಸನೆ ಧರ್ಮಜನ
ಖುಲ್ಲನೀತಿಯ ನೆನೆಯದಿರು ನೀ
ನೆಲ್ಲಿಯವನೀ ವೈರಿ ಕರ್ಣನ
ದೆಲ್ಲಿಯವನೆಸು ಮರುಳೆ ಎಂದನು ನಿಜವ ತೋರಿಸದೆ ॥43॥

೦೪೪ ಬೀಸಿದನು ನಿಜ ...{Loading}...

ಬೀಸಿದನು ನಿಜ ಮಾಯೆಯನು ಡೊ
ಳ್ಳಾಸದಲಿ ಹರಹಿದನು ತಮವನು
ರೋಷವನು ಬಿತ್ತಿದನು ಮನದಲಿ ನರನ ಕಲಿಮಾಡಿ
ಐಸೆ ಬಳಿಕೇನೆನ್ನಖಿಳಗುಣ
ದೋಷ ನಿನ್ನದು ಪುಣ್ಯಪಾಪದ
ವಾಸಿ ನಮಗೇಕೆನುತ ಕೊಂಡನು ಧನುವನಾ ಪಾರ್ಥ ॥44॥

೦೪೫ ಹಿಡಿ ಧನುವನನುವಾಗು ...{Loading}...

ಹಿಡಿ ಧನುವನನುವಾಗು ಸಾಕಿ
ನ್ನೆಡಬಲನ ಹಾರದಿರೆನುತ ಕಯ್
ಗಡಿಯನೆಚ್ಚನು ನೂರು ಶರದಲಿ ಸೂತನಂದನನ
ತೊಡಗಿತೇ ಕಕ್ಕುಲಿತೆ ಮನದಲಿ
ಫಡ ಎನುತ ನೂರಂಬನೆಡೆಯಲಿ
ಕಡಿದು ಬಿಸುಟನು ಸೆಳೆದು ಕಿಗ್ಗಟ್ಟಿನ ಕಠಾರಿಯಲಿ ॥45॥

೦೪೬ ರಥವ ಸನ್ತೈಸಿದನು ...{Loading}...

ರಥವ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ ॥46॥

೦೪೭ ಧನುವ ಕೊಣ್ಡನು ...{Loading}...

ಧನುವ ಕೊಂಡನು ಹಯವ ಜರೆದ
ರ್ಜುನನ ತರುಬಿದನಖಿಳ ಕುರುಬಲ
ವನಧಿಗಭಯವನಿತ್ತು ಮುಸುಕಿದನಂಬಿನಲಿ ನರನ
ಕನಲಿದವು ನಿಸ್ಸಾಳ ರಿಪುನೃಪ
ಜನವ ಬಯ್ದವು ಕಹಳೆ ಬಹುವಿಧ
ನಿನದದಲಿ ಗರ್ಜಿಸಿದವೆರಡೊಡ್ಡಿನಲಿ ಘನವಾದ್ಯ ॥47॥

೦೪೮ ಅಳುಕಿದನೆ ರಥ ...{Loading}...

ಅಳುಕಿದನೆ ರಥ ಮುಗ್ಗಿದರೆ ಕಳ
ವಳಿಸಿದನೆ ಶಲ್ಯಾಪಸರಣಕೆ
ಕೆಲಬಲನ ಹಾರಿದನೆ ನರನವಗಡಿಸಿ ಕಾದಿದಡೆ
ಬಲಿಮಥನ ಮಝ ಭಾಪು ಪಾಂಡವ
ಬಲದಿಶಾಪಟ ರಾಯಮದನ
ಪ್ರಳಯಹರ ಭಾಪೆಂದು ಹೊಗಳಿತು ವಂದಿಸಂದೋಹ ॥48॥

೦೪೯ ಅರಸ ಕೇಳೈ ...{Loading}...

ಅರಸ ಕೇಳೈ ಜೂಜುಗಾರರ
ಸಿರಿಯ ಸಡಗರ ಕಳಿವಗಲ ತಾ
ವರೆಯ ನಗೆ ಸಜ್ಜನರ ಖಾತಿ ನಿತಂಬಿನೀ ಸ್ನೇಹ
ಪರಮಯೋಗಿಯ ಲೀಲೆ ಕೌರವ
ರರಸನೊಡ್ಡಿನ ಜಯವಿದೀಸರ
ಗರುಡಿಯೊಂದೇ ಶ್ರಮವ ಕೊಡುವುದು ಶಕ್ರಧನುವೆಂದ ॥49॥

೦೫೦ ಉಬ್ಬಿದನು ನಿನ್ನಾತನಾತನ ...{Loading}...

ಉಬ್ಬಿದನು ನಿನ್ನಾತನಾತನ
ತುಬ್ಬಿನಲಿ ಕುರುಬಲದ ಹರುಷದ
ಜಬ್ಬುರಿಯ ಹುರಿಗೂಡಿ ತೋರಿತು ಚಾರು ಚತುರಂಗ
ತೆಬ್ಬಿ ತುಳುಕುವ ಕಣೆಯ ಕಣೆಯಲಿ
ಹಬ್ಬಿ ಹರೆದುದು ತೋರದಲಿ ಬಲಿ
ದುಬ್ಬುಗವಳದ ಕಣ್ಣುಗಳು ಕರ್ಣಾವಸಾನದಲಿ ॥50॥

೦೫೧ ಹತ್ತು ಶರದಲಿ ...{Loading}...

ಹತ್ತು ಶರದಲಿ ತುರಗವನು ಮೂ
ವತ್ತರಲಿ ಮುರವೈರಿಯನು ತೊಂ
ಬತ್ತರಲಿ ಫಲುಗುಣನನೈವತ್ತಂಬಿನಲಿ ಕಪಿಯ
ಮತ್ತೆ ಮೂವತ್ತರಲಿ ಮಗುಳರು
ವತ್ತರಲಿ ನರರಥವ ನೂರೈ
ವತ್ತು ಶರದಲಿ ಘಾಯಗಾಣಿಸಿದನು ಚತುರ್ಬಲವ ॥51॥

೦೫೨ ಬಲಜಲಧಿ ಸುಳಿಗೊಣ್ಡು ...{Loading}...

ಬಲಜಲಧಿ ಸುಳಿಗೊಂಡು ಪಾರ್ಥನ
ಬಳಿಗೆ ತೆಗೆದುದು ತೆಗೆದುದೀತನ
ಕಲಿತನದ ವಿಕ್ರಮ ಧನಂಜಯನಾ ಧನಂಜಯನ
ಅಳುಕಿದರು ಭೀಮಾದಿಗಳು ತ
ಲ್ಲಳಿಸಿತಾಚೆಯ ಥಟ್ಟು ಕೌರವ
ದಳದ ಕಳಕಳ ಕೆಟ್ಟುದೊಂದರೆಗಳಿಗೆ ಮಾತ್ರದಲಿ ॥52॥

+೨೬ ...{Loading}...