೦೦೦ ಸೂ ರಾಯಸಾಹಸಮಲ್ಲ ...{Loading}...
ಸೂ. ರಾಯಸಾಹಸಮಲ್ಲ ದೆಗ್ಗಳ
ರಾಯ ಸುಭಟಶಿರೋರತುನ ರಾ
ಧೇಯಪಾರ್ಥರ ವಿಷಮ ರಣ ರಂಜಿಸಿತು ಮೂಜಗವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವ ರಾಯನ ಸಾಹಸಮಲ್ಲನಾದ ರಾಧೇಯನಿಗೂ ಶ್ರೇಷ್ಠರಾದ ವೀರರ ಶಿರೋಮಣಿಯಾದ ಪಾರ್ಥನಿಗೂ ನಡೆದ ಭಯಂಕರವಾದ ಯುದ್ಧ ಮೂರು ಲೋಕಗಳನ್ನೂ ರಂಜಿಸಿತು.
ಮೂಲ ...{Loading}...
ಸೂ. ರಾಯಸಾಹಸಮಲ್ಲ ದೆಗ್ಗಳ
ರಾಯ ಸುಭಟಶಿರೋರತುನ ರಾ
ಧೇಯಪಾರ್ಥರ ವಿಷಮ ರಣ ರಂಜಿಸಿತು ಮೂಜಗವ
೦೦೧ ರಾಯ ಕೇಳೈ ...{Loading}...
ರಾಯ ಕೇಳೈ ಮತ್ತೆ ಕರ್ಣ ರ
ಸಾಯನವ ಕಟ್ಟಾಳು ರಣದಲಿ
ಸಾಯಲಾಗದೆ ಶಿವಶಿವಾ ಸಾಯರೆ ಸುರಾಸುರರು
ಬಾಯಬಿಡೆ ಪರಸೇನೆ ಭೀತಿಯ
ಲಾಯದಲಿ ಕಟ್ಟಿದನು ಪಾರ್ಥನ
ವಾಯುಜನ ಕರಣೇಂದ್ರಿಯಾಶ್ವಂಗಳನು ಕಲಿಕರ್ಣ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ ಕೇಳು, ಕಿವಿಗೆ ಹಿತವನ್ನುಂಟು ಮಾಡುವ ವಿಚಾರವನ್ನು ಹೇಳುತ್ತೇನೆ. ಯುದ್ಧದಲ್ಲಿ ಮಹಾವೀರರು ಸಾಯದೇ ಇರುತ್ತಾರೆಯೇ, ದೇವತೆಗಳೂ ರಾಕ್ಷಸರೂ ಸಾಯಲಿಲ್ಲವೇ. ಶತ್ರು ಸೈನ್ಯ ಬಾಯಿ ಬಾಯಿ ಬಿಡುವಂತೆ. ವೀರಕರ್ಣನು ಅರ್ಜುನನ ಭೀಮನ ಇಂದ್ರಿಯಗಳು ಎಂಬ ಕುದುರೆಗಳನ್ನು ಭಯವೆಂಬ ಲಾಯದಲ್ಲಿ ಕಟ್ಟಿ ಹಾಕಿದನು.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ರಾಯ ಕೇಳೈ ಮತ್ತೆ ಕರ್ಣ ರ
ಸಾಯನವ ಕಟ್ಟಾಳು ರಣದಲಿ
ಸಾಯಲಾಗದೆ ಶಿವಶಿವಾ ಸಾಯರೆ ಸುರಾಸುರರು
ಬಾಯಬಿಡೆ ಪರಸೇನೆ ಭೀತಿಯ
ಲಾಯದಲಿ ಕಟ್ಟಿದನು ಪಾರ್ಥನ
ವಾಯುಜನ ಕರಣೇಂದ್ರಿಯಾಶ್ವಂಗಳನು ಕಲಿಕರ್ಣ ॥1॥
೦೦೨ ಎಲೆ ಮುರಾನ್ತಕ ...{Loading}...
ಎಲೆ ಮುರಾಂತಕ ಸಾಕು ರಥದಿಂ
ದಿಳಿ ಸುದರ್ಶನವೆಲ್ಲಿ ಚಾಪವ
ಕಳೆದುಕೊಳು ಕೌಮೋದಕಿಯ ಹಿಡಿ ಹಾಯ್ಕು ವಾಘೆಯವ
ಉಳುಹುವವರಾವಲ್ಲ ಕೊಳ್ಳೆನು
ತಳವಿಯಲಿ ಕೈಕೊಂಡು ಕೃಷ್ಣನ
ನಳುಕದೆಚ್ಚನು ನೂರು ಶರದಲಿ ಕರ್ಣ ಬೊಬ್ಬಿರಿದು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಬೊಬ್ಬೆ ಹಾಕುತ್ತಾ ‘ಎಲೆ ಕೃಷ್ಣ, ಇನ್ನು ಸಾಕು, ರಥದಿಂದ ಇಳಿದು ಬಾ, ಸುದರ್ಶನ ಚಕ್ರ ಎಲ್ಲಿದೆ? ಬಿಲ್ಲನ್ನು ತೆಗೆದುಕೋ, ಕೌಮೋದಕಿಯನ್ನು ಹಿಡಿದುಕೋ, ಲಗಾಮುಗಳನ್ನು ಬಿಸುಡು, ನಾನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎನ್ನುತ್ತಾ ಹಿಂಜರಿಯದೆ ಕೃಷ್ಣನನ್ನು ನೂರು ಬಾಣಗಳಿಂದ ಹೊಡೆದನು.
ಪದಾರ್ಥ (ಕ.ಗ.ಪ)
ಕೌಮೋದಕಿ -ಕೃಷ್ಣನ ಗದೆಯ ಹೆಸರು.
ಮೂಲ ...{Loading}...
ಎಲೆ ಮುರಾಂತಕ ಸಾಕು ರಥದಿಂ
ದಿಳಿ ಸುದರ್ಶನವೆಲ್ಲಿ ಚಾಪವ
ಕಳೆದುಕೊಳು ಕೌಮೋದಕಿಯ ಹಿಡಿ ಹಾಯ್ಕು ವಾಘೆಯವ
ಉಳುಹುವವರಾವಲ್ಲ ಕೊಳ್ಳೆನು
ತಳವಿಯಲಿ ಕೈಕೊಂಡು ಕೃಷ್ಣನ
ನಳುಕದೆಚ್ಚನು ನೂರು ಶರದಲಿ ಕರ್ಣ ಬೊಬ್ಬಿರಿದು ॥2॥
೦೦೩ ಜೋಡಿನಲಿ ಸೀಸಕದ ...{Loading}...
ಜೋಡಿನಲಿ ಸೀಸಕದ ಮೇಲ
ಕ್ಕಾಡಿದವು ಕವಲಂಬು ಕವಚವ
ತೋಡಿ ನಟ್ಟವು ನೂಕಿದವು ನಾರಾಚ ಗರಿಸಹಿತ
ನೋಡಲೀ ವ್ಯಥೆಯುಂಟೆ ಭುವನದ
ಗೂಡು ಕೃಷ್ಣನ ದೇಹವಿದು ನಾ
ಡಾಡಿಗಳ ನಾಟಕವಲೈ ನರನಾಥ ಕೇಳ್ ಎಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣನು ಪ್ರಯೋಗಿಸಿದ ಕವಲು ಬಾಣಗಳು ಕೃಷ್ಣನ ಕವಚ, ಶಿರಸ್ತ್ರಾಣಗಳ ಮೇಲೆ ಅವು ಪೂರ್ತಿ ಹಾಳಾಗುವ ಹಾಗೆ ನಾಟಿಕೊಂಡಿವು. ಅವನ ಬಾಣಗಳು ಗರಿಸಹಿತ ಕವಚಗಳನ್ನು ಚುಚ್ಚಿಕೊಂಡು ಒಳಗೆ ತೂರಿದವು. ನಿಜವಾಗಲೂ ಇದು ಒಂದು ದುಃಖದ ವಿಚಾರವೇ ! ಕೃಷ್ಣನ ದೇಹ ಲೋಕಗಳಿಗೆಲ್ಲಾ ಮನೆ. ಅವನು ಸುಮ್ಮನೆ ನಾಡಾಡಿಯಾದ ಸಾಮಾನ್ಯ ಮನುಷ್ಯನಂತೆ ನಾಟಕವಾಡುತ್ತಿದ್ದಾನೆ. ಧೃತರಾಷ್ಟ್ರ ಕೇಳು” ಎಂದ ಸಂಜಯ.
ಪದಾರ್ಥ (ಕ.ಗ.ಪ)
ಜೋಡು-ಕವಚ, ಸೀಸಕ > ಶೀರ್ಷಕ - ಶಿರಸ್ತ್ರಾಣ, ಅಕ್ಕಾಡು-ಪೂರ್ತಿನಷ್ಟವಾಗು, ನಾಡಾಡಿ-ಸಾಮಾನ್ಯ ಮನುಷ್ಯ, ನಾರಾಚ-ಬಾಣ
ಮೂಲ ...{Loading}...
ಜೋಡಿನಲಿ ಸೀಸಕದ ಮೇಲ
ಕ್ಕಾಡಿದವು ಕವಲಂಬು ಕವಚವ
ತೋಡಿ ನಟ್ಟವು ನೂಕಿದವು ನಾರಾಚ ಗರಿಸಹಿತ
ನೋಡಲೀ ವ್ಯಥೆಯುಂಟೆ ಭುವನದ
ಗೂಡು ಕೃಷ್ಣನ ದೇಹವಿದು ನಾ
ಡಾಡಿಗಳ ನಾಟಕವಲೈ ನರನಾಥ ಕೇಳೆಂದ ॥3॥
೦೦೪ ಏನ ಹೇಳುವೆ ...{Loading}...
ಏನ ಹೇಳುವೆ ಹೂಡಿದಾ ಸಂ
ಧಾನವನು ರಥಹಯದ ವಾಘೆಯ
ಜೀನಗೆಲಸದ ಹಕ್ಕರಿಕೆಗಳ ನೊಗನ ಜೊತ್ತಗೆಯ
ಭಾನುಸುತ ಮುರಿಯೆಚ್ಚು ನಿನಗಿ
ನ್ನೇನು ಹದನೈ ಹನುಮ ಲಂಕೆಯ
ದಾನವರು ನಾವಲ್ಲೆನುತ ಕೈಮಾಡಿ ಬೊಬ್ಬಿರಿದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣನ ಬಾಣಗಳ ಪ್ರಯೋಗದ ರೀತಿಯನ್ನು ಏನೆಂದು ಹೇಳಲಿ - “ರಥದ ಕುದುರೆಗಳ ಲಗಾಮನ್ನು, ಅವುಗಳ ಜೀನು, ಮೈಜೋಡು, ನೊಗ, ಹಾಗೂ ಅದಕ್ಕೆ ಕಟ್ಟುವ ಹಗ್ಗಗಳನ್ನು ಕರ್ಣನು ಕತ್ತರಿಸಿಹಾಕಿ ‘ನಿನಗೆ ಇನ್ನೇನು ಕೆಲಸ ಹನುಮಂತ, ನಾವು ಲಂಕೆಯ ರಾಕ್ಷಸರಲ್ಲ’ ಎಂದು ಆಕ್ರಮಣ ಮಾಡಿದನು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಹಕ್ಕರಿಕೆ-ಮೈಜೋಡು, ಆನೆ ಕುದುರೆಗಳ ಪಕ್ಕಗಳನ್ನು ರಕ್ಷಿಸುವ ಸಾಧನ ಜೊತ್ತಗೆ-ನೊಗಕ್ಕೆ ಕಟ್ಟುವ ಹಗ್ಗ
ಮೂಲ ...{Loading}...
ಏನ ಹೇಳುವೆ ಹೂಡಿದಾ ಸಂ
ಧಾನವನು ರಥಹಯದ ವಾಘೆಯ
ಜೀನಗೆಲಸದ ಹಕ್ಕರಿಕೆಗಳ ನೊಗನ ಜೊತ್ತಗೆಯ
ಭಾನುಸುತ ಮುರಿಯೆಚ್ಚು ನಿನಗಿ
ನ್ನೇನು ಹದನೈ ಹನುಮ ಲಂಕೆಯ
ದಾನವರು ನಾವಲ್ಲೆನುತ ಕೈಮಾಡಿ ಬೊಬ್ಬಿರಿದ ॥4॥
೦೦೫ ಸೈರಿಸರ್ಜುನ ಶಿವನೊಡನೆ ...{Loading}...
ಸೈರಿಸರ್ಜುನ ಶಿವನೊಡನೆ ನೀ
ಹೋರಿದಾತನು ನಿನ್ನ ಕೊಲುವಡೆ
ತೀರದೇ ತಪ್ಪೇನು ತಳುವಿತು ಪೇಳಲೇಕೆನುತ
ಕೂರಲಗಿನಂಬುಗಳ ಹಿಳುಕಿನ
ಸಾರದಲಿ ಮುದ್ರಿಸಿದನುದಯದ
ಲಾರನಿದಿರಲಿ ಕಂಡನೋ ಕಡುನೊಂದನಾ ಪಾರ್ಥ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ‘ಅರ್ಜುನ, ಸಹಿಸಿಕೋ, ನೀನು ಶಿವನೊಡನೆ ಹೋರಾಡಿದವನು. ನಿನ್ನನ್ನು ಕೊಲ್ಲುವುದು ಸುಲಭವೇ. ನಾನು ಸ್ವಲ್ಪ ತಡಮಾಡಿದೆ. ಏನು ಹೇಳಲಿ’ ಎಂದು ಚೂಪಾದ ಬಾಣಗಳು ಹಿಂಭಾಗದವರೆಗೂ ಚುಚ್ಚಿಕೊಳ್ಳುವಂತೆ ಅರ್ಜುನನನ್ನು ಮುಚ್ಚಿಹಾಕಿದನು. ಅರ್ಜುನನು ಬೆಳಗ್ಗೆ ಯಾರ ಮುಖವನ್ನು ನೋಡಿದ್ದನೋ ಏನೂ ವಿಪರೀತ ನೋವನ್ನು ಅನುಭವಿಸಿದನು.
ಮೂಲ ...{Loading}...
ಸೈರಿಸರ್ಜುನ ಶಿವನೊಡನೆ ನೀ
ಹೋರಿದಾತನು ನಿನ್ನ ಕೊಲುವಡೆ
ತೀರದೇ ತಪ್ಪೇನು ತಳುವಿತು ಪೇಳಲೇಕೆನುತ
ಕೂರಲಗಿನಂಬುಗಳ ಹಿಳುಕಿನ
ಸಾರದಲಿ ಮುದ್ರಿಸಿದನುದಯದ
ಲಾರನಿದಿರಲಿ ಕಂಡನೋ ಕಡುನೊಂದನಾ ಪಾರ್ಥ ॥5॥
೦೦೬ ಹರಿದುದಿಮ್ಮೈಜೋಡು ನೆತ್ತರಿ ...{Loading}...
ಹರಿದುದಿಮ್ಮೈಜೋಡು ನೆತ್ತರಿ
ನೊರತೆ ನೂಕಿತು ಭದ್ರಪೀಠದ
ಹೊರಗು ನನೆದುದು ಝೊಮ್ಮಿನಲಿ ಜೋಲಿದನು ಮಲಗಿನಲಿ
ಉರುಕುಗೊಂಡುದು ಕರಣಚಯವರೆ
ದೆರೆದ ಕಂಗಳು ರೋಮಕಂಪದೊ
ಳರಿದುದಿಲ್ಲರೆಘಳಿಗೆ ಕೋಳಾಹಳವನಾ ಪಾರ್ಥ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಎರಡೂ ಕಡೆಯ ಕವಚಗಳು ಕತ್ತರಿಸಿ ಹೋದವು. ದೇಹದಲ್ಲಿ ರಕ್ತದ ಚಿಲುಮೆ ಉಕ್ಕಿತು. ರಥದಲ್ಲಿದ್ದ ಆಸನದ ಹೊರಭಾಗ ನೆನೆದು ಹೋಯಿತು. ಅವನ ಮೈ ಕಂಪಿಸಿ ಮೂರ್ಛೆಗೊಂಡು ಮಲಗಿದನು. ಅವನ ಇಂದ್ರಿಯಗಳು ತಮ್ಮ ಕೆಲಸವನ್ನು ನಿಲ್ಲಿಸಿ ಹಿಂಜರಿದವು. ಅರ್ಧ ತೆರೆದ ಕಣ್ಣುಗಳು ರೋಮಾಂಚನಗಳಲ್ಲಿ ಅರ್ಜುನನಿಗೆ ಅರ್ಧ ಘಳಿಗೆಯಷ್ಟು ಕಾಲ ನಡೆದ ಯುದ್ಧವೇ ತಿಳಿಯಲಿಲ್ಲ.
ಪದಾರ್ಥ (ಕ.ಗ.ಪ)
ಭದ್ರಪೀಠ-ಸಿಂಹಾಸನ, ಉರುಕುಗೊಳ್-ಹಿಂದೆ ಸರಿ, ಕೋಳಾಹಳ-ಯುದ್ಧ
ಮೂಲ ...{Loading}...
ಹರಿದುದಿಮ್ಮೈಜೋಡು ನೆತ್ತರಿ
ನೊರತೆ ನೂಕಿತು ಭದ್ರಪೀಠದ
ಹೊರಗು ನನೆದುದು ಝೊಮ್ಮಿನಲಿ ಜೋಲಿದನು ಮಲಗಿನಲಿ
ಉರುಕುಗೊಂಡುದು ಕರಣಚಯವರೆ
ದೆರೆದ ಕಂಗಳು ರೋಮಕಂಪದೊ
ಳರಿದುದಿಲ್ಲರೆಘಳಿಗೆ ಕೋಳಾಹಳವನಾ ಪಾರ್ಥ ॥6॥
೦೦೭ ಮತ್ತೆ ಕೇಳವನೀಶ ...{Loading}...
ಮತ್ತೆ ಕೇಳವನೀಶ ಭೀಮನ
ನೆತ್ತಿ ಬಿಸುಟವು ಬಾಣ ನಕುಲನ
ಕುತ್ತಿದವು ಸಹದೇವನೊಡಲಲಿ ಮಾಡಿದವು ಪಥವ
ಇತ್ತ ಸಾತ್ಯಕಿ ಚೇಕಿತಾನಕ
ನುತ್ತಮೌಂಜ ಶಿಖಂಡಿ ದಳಪತಿ
ಕೆತ್ತಿದೊಡಲಿನ ಜೋರಿನಲಿ ಹೊರಳಿದರು ಹುಡಿ ನನೆಯೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ ,ಮುಂದಿನದನ್ನು ಕೇಳು. ಕರ್ಣನ ಬಾಣಗಳು ಭೀಮನನ್ನು ಎತ್ತಿ ಬಿಸಾಡಿದವು. ನಕುಲನನ್ನು ಚುಚ್ಚಿ ಹಾಕಿದವು. ಸಹದೇವನ, ದೇಹದಲ್ಲಿ ದಾರಿಯನ್ನು ಮಾಡಿಕೊಂಡವು ಎಂದರೆ ತೂರಿದವು. ಈ ಕಡೆಯ ಸಾತ್ಯಕಿ, ಚೇಕಿತಾನಕ, ಉತ್ತಮೌಂಜ, ಶಿಖಂಡಿ ಮೊದಲಾದ ಸೇನಾಪತಿಗಳು ಗಾಯಗೊಂಡ ದೇಹದಿಂದ ಭೂಮಿಯ ಧೂಳು ರಕ್ತದಲ್ಲಿ ನೆನೆಯುವಂತೆ ಹೊರಳಾಡಿದರು.
ಟಿಪ್ಪನೀ (ಕ.ಗ.ಪ)
ಚೇಕಿತಾನಕ-ವೃಷ್ಣಿವಂಶದ ಕ್ಷತ್ರಿಯ ಯುದ್ಧದಲ್ಲಿ ಕೌರವನು ಇವನನ್ನು ಕೊಂದನು.
ಉತ್ತಮೌಂಜ-ದ್ರುಪದನ ಒಬ್ಬ ಮಗ. ಅಶ್ವತ್ಥಾಮನಿಂದ ಯುದ್ಧ ಮುಗಿದ ರಾತ್ರಿ ಹತನಾದವನು.
ಮೂಲ ...{Loading}...
ಮತ್ತೆ ಕೇಳವನೀಶ ಭೀಮನ
ನೆತ್ತಿ ಬಿಸುಟವು ಬಾಣ ನಕುಲನ
ಕುತ್ತಿದವು ಸಹದೇವನೊಡಲಲಿ ಮಾಡಿದವು ಪಥವ
ಇತ್ತ ಸಾತ್ಯಕಿ ಚೇಕಿತಾನಕ
ನುತ್ತಮೌಂಜ ಶಿಖಂಡಿ ದಳಪತಿ
ಕೆತ್ತಿದೊಡಲಿನ ಜೋರಿನಲಿ ಹೊರಳಿದರು ಹುಡಿ ನನೆಯೆ ॥7॥
೦೦೮ ಒಸಗೆಯಾದುದು ನೆಲನ ...{Loading}...
ಒಸಗೆಯಾದುದು ನೆಲನ ದಿಕ್ಕಿನ
ಬೆಸುಗೆ ಬಿಡೆ ನಿಸ್ಸಾಳತತಿ ಗ
ರ್ಜಿಸಿದವುಬ್ಬಿದ ಬೊಬ್ಬೆ ಬಿಡಿಸಿತು ಧ್ರುವನ ಮಂಡಲವ
ಅಸಮಭುಜಬಲ ಪೂತುರೇ ಸಾ
ಹಸಿಕೆ ಮಝರೇ ಭಾಪು ಧಣುಧಣು
ವಿಷಮರಣ ನರಸಿಂಹ ಜಾಗೆಂದುದು ಭಟಸ್ತೋಮ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಕೌರವ ಸೈನ್ಯಕ್ಕೆ ಹಬ್ಬದಷ್ಟು ಸಂತೋಷವಾಯಿತು. ಭೂಮಿಯ ದಿಕ್ಕುಗಳ ಬೆಸುಗೆ ಬಿಚ್ಚಿಕೊಳ್ಳುವಂತೆ ನಿಸ್ಸಾಳಗಳು ಗರ್ಜಿಸಿದವು. ಧ್ರುವ ಮಂಡಲ ಬೀಳುವಂತೆ ಸೈನಿಕರು ಉತ್ಸಾಹದಿಂದ ಬೊಬ್ಬೆ ಹಾಕಿದರು. ‘ಅಸಮ ಬಾಹುಬಲವುಳ್ಳವನೇ ಭೇಷ್, ನಿನ್ನ ಸಾಹಸಕ್ಕೆ ಭೇಷ್, ಭಯಂಕರವಾದ ರಣರಂಗದ ನರಸಿಂಹನೇ ಭಲೇ’ ಎಂದು ಸೈನಿಕರು ಕೂಗಿ ಹೊಗಳಿದರು.
ಮೂಲ ...{Loading}...
ಒಸಗೆಯಾದುದು ನೆಲನ ದಿಕ್ಕಿನ
ಬೆಸುಗೆ ಬಿಡೆ ನಿಸ್ಸಾಳತತಿ ಗ
ರ್ಜಿಸಿದವುಬ್ಬಿದ ಬೊಬ್ಬೆ ಬಿಡಿಸಿತು ಧ್ರುವನ ಮಂಡಲವ
ಅಸಮಭುಜಬಲ ಪೂತುರೇ ಸಾ
ಹಸಿಕೆ ಮಝರೇ ಭಾಪು ಧಣುಧಣು
ವಿಷಮರಣ ನರಸಿಂಹ ಜಾಗೆಂದುದು ಭಟಸ್ತೋಮ ॥8॥
೦೦೯ ಜನಪ ಕೇಳೈ ...{Loading}...
ಜನಪ ಕೇಳೈ ಮತ್ತೆ ಸುತಸೋ
ಮನ ಶತಾನೀಕಾದಿ ರಿಪುನಂ
ದನರನೈವರನೆಚ್ಚು ಬೆರಸಿದನವರ ಸೀಮೆಯಲಿ
ಅನಿಲಜನ ಮರಳೆಚ್ಚು ಪಾಂಚಾ
ಳನ ವಿಭಾಡಿಸಿ ಥಟ್ಟಿನೊಳು ಮು
ಮ್ಮೊನೆಯ ಬೋಳೆಯ ಸರಿಯ ಸುರಿದುದು ಕರ್ಣ ನವಮೇಘ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಕರ್ಣನು ಯುದ್ಧ ಮುಂದುವರೆಸಿ. ಸುತಸೋಮ, ಶತಾನೀಕ ಮೊದಲಾದ ಐದು ಜನ ಶತ್ರುಪುತ್ರರನ್ನು ಬಾಣ ಪ್ರಯೋಗಿಸಿ ದೂರಕ್ಕೆ ಅಟ್ಟಿದನು. ಮತ್ತೆ ಭೀಮ ದ್ರುಪದನನ್ನು ಹೊಡೆದನು. ಕರ್ಣನ ಸಾಹಸದ ಹೊಸ ಮೋಡಗಳು ಮೂರು ಮೊನೆಗಳಿರುವ ಬೋಳೆಯ ಎಂಬ ಬಾಣಗಳ ಸುರಿಮಳೆಯನ್ನು ಸುರಿದವು.
ಮೂಲ ...{Loading}...
ಜನಪ ಕೇಳೈ ಮತ್ತೆ ಸುತಸೋ
ಮನ ಶತಾನೀಕಾದಿ ರಿಪುನಂ
ದನರನೈವರನೆಚ್ಚು ಬೆರಸಿದನವರ ಸೀಮೆಯಲಿ
ಅನಿಲಜನ ಮರಳೆಚ್ಚು ಪಾಂಚಾ
ಳನ ವಿಭಾಡಿಸಿ ಥಟ್ಟಿನೊಳು ಮು
ಮ್ಮೊನೆಯ ಬೋಳೆಯ ಸರಿಯ ಸುರಿದುದು ಕರ್ಣ ನವಮೇಘ ॥9॥
೦೧೦ ಸಾಲ ಝಲ್ಲರಿಗಳ ...{Loading}...
ಸಾಲ ಝಲ್ಲರಿಗಳ ಪತಾಕಾ
ಜಾಲವನು ಚಾಮರವ ಗೋವಳಿ
ಗೋಲ ಡೊಂಕಣಿಯೊಡ್ಡನೆತ್ತಿದ ಸಿಂಧ ಸೀಗುರಿಯ
ಧೂಳಿಪಟಮಾಡಿದನು ಮಿಡುಕು
ಳ್ಳಾಳಕೊಂದನು ಗಜರಥಾಶ್ವದ
ಮಾಲೆಯನು ಮುತ್ತಿದುದು ಕರ್ಣನ ಶಿಳಿಮುಖವ್ರಾತ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಬಾಣಗಳ ಸಮೂಹ, ಝಲ್ಲರಿಗಳ ಸಾಲನ್ನು, ಬಾವುಟಗಳ ಸಮೂಹವನ್ನು ಚಾಮರಗಳನ್ನು ಗೋವಳಿಗೋಲನ್ನು, ಈಟಿಗಳನ್ನು, ಎತ್ತಿ ಹಿಡಿದ ಬಾವುಟಗಳನ್ನು, ಸೀಗುರಿಗಳನ್ನು, ಧೂಳೀಪಟ ಮಾಡಿದವು. ಸಾಹಸದ ವೀರರನ್ನು ಕೊಂದು ಹಾಕಿದವು. ಆನೆಗಳು ರಥ ಕುದುರೆಗಳನ್ನು ಮುತ್ತಿಗೆ ಹಾಕಿದವು.
ಮೂಲ ...{Loading}...
ಸಾಲ ಝಲ್ಲರಿಗಳ ಪತಾಕಾ
ಜಾಲವನು ಚಾಮರವ ಗೋವಳಿ
ಗೋಲ ಡೊಂಕಣಿಯೊಡ್ಡನೆತ್ತಿದ ಸಿಂಧ ಸೀಗುರಿಯ
ಧೂಳಿಪಟಮಾಡಿದನು ಮಿಡುಕು
ಳ್ಳಾಳಕೊಂದನು ಗಜರಥಾಶ್ವದ
ಮಾಲೆಯನು ಮುತ್ತಿದುದು ಕರ್ಣನ ಶಿಳಿಮುಖವ್ರಾತ ॥10॥
೦೧೧ ಅರಸ ಕೇಳಾ ...{Loading}...
ಅರಸ ಕೇಳಾ ನರನನಾ ವಾ
ನರನನಾ ಮುರಹರನನಾ ರಥ
ತುರಗನಿಚಯವನಾ ರಥವನಾ ಶರವನಾ ಧನುವ
ಹುರುಳುಗೆಡಿಸಿದು ಭುಜಪರಾಕ್ರಮ
ದುರಿಯೊಳಗೆ ಬಿಡೆಕಾಸಿ ಹಗೆನೆ
ತ್ತರಲಿ ನೀರೂಡಿದನು ನಿಜಶರನಿಕರವನು ಕರ್ಣ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಕರ್ಣನು, ಅರ್ಜುನ, ಹನುಮಂತ, ಕೃಷ್ಣ, ರಥದ ಕುದುರೆಗಳು, ರಥ, ಬಾಣ, ಬಿಲ್ಲುಗಳ ಸತ್ವವನ್ನು ಹಾಳುಮಾಡಿದನು. ತನ್ನ ಭುಜಪರಾಕ್ರಮದ ಬೆಂಕಿಯೊಳಗೆ ಚೆನ್ನಾಗಿ ಕಾಸಿದ ಬಾಣಗಳಿಗೆ ತನ್ನ ಶತ್ರುವಿನ ರಕ್ತವೆಂಬ ನೀರನ್ನು ಕುಡಿಸಿದನು.
ಮೂಲ ...{Loading}...
ಅರಸ ಕೇಳಾ ನರನನಾ ವಾ
ನರನನಾ ಮುರಹರನನಾ ರಥ
ತುರಗನಿಚಯವನಾ ರಥವನಾ ಶರವನಾ ಧನುವ
ಹುರುಳುಗೆಡಿಸಿದು ಭುಜಪರಾಕ್ರಮ
ದುರಿಯೊಳಗೆ ಬಿಡೆಕಾಸಿ ಹಗೆನೆ
ತ್ತರಲಿ ನೀರೂಡಿದನು ನಿಜಶರನಿಕರವನು ಕರ್ಣ ॥11॥
೦೧೨ ಹೇಳಲರಿಯೆನು ವಿಕ್ರಮಾಗ್ನಿ ...{Loading}...
ಹೇಳಲರಿಯೆನು ವಿಕ್ರಮಾಗ್ನಿ ಛ
ಡಾಳಿಸಿದುದಡಿಗಡಿಗೆ ಸೇನಾ
ಜಾಳವನು ಬೇಳಿದನು ಕೂರಂಬುಗಳ ಕೊಂಡದಲಿ
ಆಲಿಗಳು ಸವಿನೋಡಲಿಂದಿನ
ಕಾಳೆಗವ ಬರಹೇಳು ಕುರುಭೂ
ಪಾಲಕನ ಬರಹೇಳು ಬರಹೇಳೆನುತ ಬೊಬ್ಬಿರಿದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಸಾಹಸದ ಬೆಂಕಿ ಹೇಳಲು ಅಸಾಧ್ಯವಾಗುವಷ್ಟು ಹೆಚ್ಚಾಯಿತು. ಅವನು ತನ್ನ ಚೂಪಾದ ಬಾಣಗಳ ಅಗ್ನಿ ಕುಂಡದಲ್ಲಿ ಮತ್ತೆ ಮತ್ತೆ ಶತ್ರು ಸೈನ್ಯ ಸಮೂಹವನ್ನು ಯಜ್ಞಕ್ಕೆ ಆಹುತಿಕೊಡುವಂತೆ, ಆಹುತಿ ನೀಡಿದನು. “ಇಂದಿನ ಯುದ್ಧವನ್ನು ನೋಡಿ, ಕಣ್ಣುಗಳು ಸಂತೋಷ ಪಡಲಿ, ದುರ್ಯೋಧನನನ್ನು ಬರಲು ಹೇಳು’ ಎನ್ನುತ್ತಾ ಬೊಬ್ಬೆ ಹಾಕಿದನು.
ಪದಾರ್ಥ (ಕ.ಗ.ಪ)
ಬೇಳು-ಯಾಗ ಮಾಡು,
ಮೂಲ ...{Loading}...
ಹೇಳಲರಿಯೆನು ವಿಕ್ರಮಾಗ್ನಿ ಛ
ಡಾಳಿಸಿದುದಡಿಗಡಿಗೆ ಸೇನಾ
ಜಾಳವನು ಬೇಳಿದನು ಕೂರಂಬುಗಳ ಕೊಂಡದಲಿ
ಆಲಿಗಳು ಸವಿನೋಡಲಿಂದಿನ
ಕಾಳೆಗವ ಬರಹೇಳು ಕುರುಭೂ
ಪಾಲಕನ ಬರಹೇಳು ಬರಹೇಳೆನುತ ಬೊಬ್ಬಿರಿದ ॥12॥
೦೧೩ ಶರಹತಿಗೆ ಮುಖದಿರುಹಿ ...{Loading}...
ಶರಹತಿಗೆ ಮುಖದಿರುಹಿ ಕಾಲಾಳ್
ತುರಗಸೇನೆಯ ಮರೆಯ ಸಾರಿತು
ತುರಗದಳ ಬಗಿದಂಡುಗೊಂಡುದು ಗಜಘಟಾವಳಿಯ
ಕರಿಘಟಾವಳಿ ಕೋಲಿನುರುಬೆಗೆ
ತೆರಳಿದವು ತೇರುಗಳ ಮರೆಯಲಿ
ಹೊರಳಿಯೊಡೆದುದು ತೇರ ಥಟ್ಟು ನಿಹಾರದೆಸುಗೆಯಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಬಾಣಗಳ ಏಟಿಗೆ ಕಾಲಾಳುಗಳು ಕುದುರೆಯ ಸೈನ್ಯದ ಹಿಂದೆ ರಕ್ಷಣೆಯನ್ನು ಪಡೆದರು. ಕುದುರೆಯ ಸೈನ್ಯ ಹಿಂದೆ ಸರಿದು ಆನೆಗಳ ಸಮೂಹದ ಹಿಂಭಾಗದಲ್ಲಿ ನಿಂತಿತು. ಆನೆಗಳು, ಬಾಣಗಳ ರಭಸಕ್ಕೆ ಹೆದರಿ ರಥಗಳ ಹಿಂದೆ ರಕ್ಷಣೆ ಪಡೆದವು. ರಥದ ಸೈನ್ಯ, ಮಂಜಿನಂತೆ ಮುಸುಕಿದ ಬಾಣಗಳಿಗೆ ಹೆದರಿ ಚೆಲ್ಲಾಪಿಲ್ಲಿಯಾಯಿತು.
ಪದಾರ್ಥ (ಕ.ಗ.ಪ)
ನಿಹಾರ-ಮಂಜು, ಎಸುಗೆ-ಪ್ರಯೋಗ
ಮೂಲ ...{Loading}...
ಶರಹತಿಗೆ ಮುಖದಿರುಹಿ ಕಾಲಾಳ್
ತುರಗಸೇನೆಯ ಮರೆಯ ಸಾರಿತು
ತುರಗದಳ ಬಗಿದಂಡುಗೊಂಡುದು ಗಜಘಟಾವಳಿಯ
ಕರಿಘಟಾವಳಿ ಕೋಲಿನುರುಬೆಗೆ
ತೆರಳಿದವು ತೇರುಗಳ ಮರೆಯಲಿ
ಹೊರಳಿಯೊಡೆದುದು ತೇರ ಥಟ್ಟು ನಿಹಾರದೆಸುಗೆಯಲಿ ॥13॥
೦೧೪ ಕೋಲ ಕೋಳಾಹಳಕೆ ...{Loading}...
ಕೋಲ ಕೋಳಾಹಳಕೆ ತೇರಿನ
ಗಾಲಿಗ್ ಅಳನ್ ಒಡ್ಡಿದರು ಹರಿಗೆಯ
ಹೇಳಿದರು ಹಮ್ಮುಗೆಯ ಕೊಯ್ದ್ ಒಡ್ಡಿದರು ರೆಂಚೆಗಳ
ಮೇಳೆಯವ ಮೋಹಿದರು ಕಂಬುಗೆ
ನೂಲು ಹರಿಗೆ ತನುತ್ರ ಸೀಸಕ
ಜಾಲ ಗುಳ ಹಕ್ಕರಿಕೆ ಹಲ್ಲಣ ಬಾಹುರಕ್ಷೆಗಳ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಕಡೆಯವರು ಕರ್ಣನ ಬಾಣಗಳ ಆಕ್ರಮಣಕ್ಕೆ ರಥದ ಗಾಲಿಗಳನ್ನು ಒಡ್ಡಿ ಎದುರಿಸಿದರು, ಗುರಾಣಿಯನ್ನು+++(=ವರ್ಮವನ್)+++ ಅಡ್ಡ ಹಿಡಿದರು, ಜೀನುಗಳ+++(=ಅಜಿನಗಳ)+++ ಹೊಸೆದ ಹಗ್ಗಗಳನ್ನು ಕತ್ತರಿಸಿ ಱಿಂಚೆಗಳನ್ನು ಮುಂದಕ್ಕೆ ಹಿಡಿದರು. ಗುರಾಣಿ, ಕವಚ, ಶಿರಸ್ತ್ರಾಣಗಳನ್ನು ಕಂಠದ ಪಟ್ಟಿ, ಡಾಬು, ಗುಳ, ಜೀನು, ಬಾಹುರಕ್ಷೆ ಮೊದಲಾದವುಗಳನ್ನು ಹಿಡಿದು ಬಾಣಗಳನ್ನು ತಡೆದರು.
ಪದಾರ್ಥ (ಕ.ಗ.ಪ)
ಹರಿಗೆ-ಗುರಾಣಿ, ಹಮ್ಮುಗೆ-ಹಗ್ಗ, ಱೆಂಚೆ-ಆನೆ, ಕುದುರೆಗಳ ಪಕ್ಷ ರಕ್ಷೆಗಳು, ಕಂಬುಗ-ಕಂಠದ ಪಟ್ಟಿ, ನೂಲು-ಡಾಬು-ಸೊಂಟದ ಪಟ್ಟಿ, ಗುಳ-ಆನೆ ಕುದುರೆಗಳ ಮೇಲೆ ಹಾಕುವ ವಸ್ತ್ರ, ಹಲ್ಲಣ-ಜೀನು, ತನುತ್ರ-ಕವಚ
ಮೂಲ ...{Loading}...
ಕೋಲ ಕೋಳಾಹಳಕೆ ತೇರಿನ
ಗಾಲಿಗಳನೊಡ್ಡಿದರು ಹರಿಗೆಯ
ಹೇಳಿದರು ಹಮ್ಮುಗೆಯ ಕೊಯ್ದೊಡ್ಡಿದರು ರೆಂಚೆಗಳ
ಮೇಳೆಯವ ಮೋಹಿದರು ಕಂಬುಗೆ
ನೂಲು ಹರಿಗೆ ತನುತ್ರ ಸೀಸಕ
ಜಾಲ ಗುಳ ಹಕ್ಕರಿಕೆ ಹಲ್ಲಣ ಬಾಹುರಕ್ಷೆಗಳ ॥14॥
೦೧೫ ಉರಿಯ ಮಳೆಗಾಲದಲಿ ...{Loading}...
ಉರಿಯ ಮಳೆಗಾಲದಲಿ ದಡ್ಡಿಯ
ನರಗಿನಲಿ ಮಾಡಿದರೊ ಗಡ ಕಾ
ರಿರುಳ ಕೋಟೆಯ ರಚಿಸಿದರು ಗಡ ರವಿಯ ಮುತ್ತಿಗೆಗೆ
ಹರಿಗೆ ಸೀಸಕ ಜೋಡು ಕಾವವೆ
ಕೆರಳಿದಡೆ ಕರ್ಣಾಸ್ತ್ರವನು ನಿ
ಬ್ಬರದ ರಣದುಬ್ಬಟೆಯ ಕಂಡುಬ್ಬಿದನು ಕುರುರಾಯ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರಿಯ ಮಳೆ ಬೀಳುತ್ತಿರುವಾಗ ಅರಗಿನ ತೆರೆಯನ್ನು ಹಿಡಿದು ರಕ್ಷಣೆ ಬಯಸಿದಂತಾಯಿತು. ಸೂರ್ಯನ ಆಕ್ರಮಣ ನಡೆಯುತ್ತಿರುವಾಗ, ಕತ್ತಲೆಯ ಕೋಟೆಯನ್ನು ರಕ್ಷಣೆಗೆ ಒಡ್ಡಿದಂತಾಯಿತು. ಕರ್ಣನ ಬಾಣಗಳು ಕೆರಳಿದರೆ, ಗುರಾಣಿ, ಸೀಸಕ, ಕವಚಗಳು ರಕ್ಷಿಸುತ್ತವೆಯೋ ? ಕರ್ಣನ ಆಶ್ಚರ್ಯಕರವಾದ ಯುದ್ಧದ ರಭಸವನ್ನು ನೋಡಿ, ದುರ್ಯೋಧನನು ಸಂತೋಷದಿಂದ ಉಬ್ಬಿ ಹೋದನು.
ಪದಾರ್ಥ (ಕ.ಗ.ಪ)
ದಡ್ಡಿ-ತೆರೆ
ಮೂಲ ...{Loading}...
ಉರಿಯ ಮಳೆಗಾಲದಲಿ ದಡ್ಡಿಯ
ನರಗಿನಲಿ ಮಾಡಿದರೊ ಗಡ ಕಾ
ರಿರುಳ ಕೋಟೆಯ ರಚಿಸಿದರು ಗಡ ರವಿಯ ಮುತ್ತಿಗೆಗೆ
ಹರಿಗೆ ಸೀಸಕ ಜೋಡು ಕಾವವೆ
ಕೆರಳಿದಡೆ ಕರ್ಣಾಸ್ತ್ರವನು ನಿ
ಬ್ಬರದ ರಣದುಬ್ಬಟೆಯ ಕಂಡುಬ್ಬಿದನು ಕುರುರಾಯ ॥15॥
೦೧೬ ನೋಡಿರೈ ನಿಮ್ಮವರ ...{Loading}...
ನೋಡಿರೈ ನಿಮ್ಮವರ ದಳ ಕೈ
ಮಾಡುತದೆ ನಮ್ಮಾತನನು ನೀವ್
ಖೋಡಿಗಾಬರಿ ನಿಮ್ಮ ಫಲುಗುಣ ಭೀಮರುಬ್ಬಟೆಯ
ನೋಡಿರೈ ಲೇಸಾಗಿ ನೀವ್ ಮಾ
ತಾಡಲಾಗದೆ ನಿಮ್ಮ ನಾಲಗೆ
ಗೂಡುಗೊಂಡವೆಯೆಂದನವನಿಪ ಕೃಪನ ಗುರುಸುತನ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಕೃಪಾಚಾರ್ಯನನ್ನು, ಅಶ್ವತ್ಥಾಮನನ್ನು, ಟೀಕಿಸುತ್ತಾ ‘ನೋಡಿ, ನಿಮ್ಮ ಪಾಂಡವರ ಸೈನ್ಯ, ನಮ್ಮ ಸೇನಾಪತಿಯ ಮೇಲೆ ಹೇಗೆ ಯುದ್ಧ ಮಾಡುತ್ತಿದೆ. ನಿಮ್ಮ ಅರ್ಜುನ ಭೀಮರ ಉತ್ಸಾಹವನ್ನು ನೋಡಿ ನಿಮಗೆ ಹೆದರಿಕೆ ಅನಿಸಲಿಲ್ಲವೇ ? ಮಾತಾಡಲು ಸಾಧ್ಯವಾಗದೆ ನಿಮ್ಮ ನಾಲಗೆ ಸೇದಿ ಹೋಗಿದೆಯೇ ?’ ಎಂದನು.
ಪದಾರ್ಥ (ಕ.ಗ.ಪ)
ಖೋಡಿ-ದುಷ್ಟ , ಗೂಡುಗೊಳ್-ಮನೆಯನ್ನು ಸೇರು, ಸೇದು ಹೋಗು
ಮೂಲ ...{Loading}...
ನೋಡಿರೈ ನಿಮ್ಮವರ ದಳ ಕೈ
ಮಾಡುತದೆ ನಮ್ಮಾತನನು ನೀವ್
ಖೋಡಿಗಾಬರಿ ನಿಮ್ಮ ಫಲುಗುಣ ಭೀಮರುಬ್ಬಟೆಯ
ನೋಡಿರೈ ಲೇಸಾಗಿ ನೀವ್ ಮಾ
ತಾಡಲಾಗದೆ ನಿಮ್ಮ ನಾಲಗೆ
ಗೂಡುಗೊಂಡವೆಯೆಂದನವನಿಪ ಕೃಪನ ಗುರುಸುತನ ॥16॥
೦೧೭ ನರನ ಬಿಗಿದುದು ...{Loading}...
ನರನ ಬಿಗಿದುದು ಮೂರ್ಛೆ ಭೀಮನ
ಹರಣ ಕೊರಳಲಿ ಮಿಡುಕುತದೆ ಮುರ
ಹರನುಸುರ ವೈಹಾಳಿಯದೆ ಮೂಗಿನಲಿ ಮೋಹರಿಸಿ
ಬಿರುದ ಸಾತ್ಯಕಿ ನಕುಲ ಸಹದೇ
ವರಿಗದಾವದು ಹದನು ನಾವಿ
ನ್ನರಿಯೆವೈ ನೀವ್ನೋಡಿಯೆಂದನು ನಗುತ ಕುರುರಾಯ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅರ್ಜುನನು ಮೂರ್ಛೆಯಲ್ಲಿ ಸಿಕ್ಕಿದ್ದಾನೆ. ಭೀಮನ ಪ್ರಾಣ ಕುತ್ತಿಗೆಗೆ ಬಂದಿದೆ. ಕೃಷ್ಣನ ಉಸಿರು ಮೂಗಿನಲ್ಲಿ ಹೊರಳಾಡುತ್ತಿದೆ. ಬಿರುದಿನ ವೀರರಾದ ಸಾತ್ಯಕಿ, ನಕುಲ, ಸಹದೇವರಿಗೆ ಏನು ಗತಿ ಬಂದಿದೆಯೋ ನನಗೆ ತಿಳಿಯದು ನೀವೇ ನೋಡಿ’ ಎಂದನು ದುರ್ಯೋಧನ.
ಪದಾರ್ಥ (ಕ.ಗ.ಪ)
ವೈಹಾಳಿ-ಕುದುರೆ ಸವಾರಿ
ಮೂಲ ...{Loading}...
ನರನ ಬಿಗಿದುದು ಮೂರ್ಛೆ ಭೀಮನ
ಹರಣ ಕೊರಳಲಿ ಮಿಡುಕುತದೆ ಮುರ
ಹರನುಸುರ ವೈಹಾಳಿಯದೆ ಮೂಗಿನಲಿ ಮೋಹರಿಸಿ
ಬಿರುದ ಸಾತ್ಯಕಿ ನಕುಲ ಸಹದೇ
ವರಿಗದಾವದು ಹದನು ನಾವಿ
ನ್ನರಿಯೆವೈ ನೀವ್ನೋಡಿಯೆಂದನು ನಗುತ ಕುರುರಾಯ ॥17॥
೦೧೮ ನೋಡಿ ಮಕ್ಕಳನಿಕ್ಕಿ ...{Loading}...
ನೋಡಿ ಮಕ್ಕಳನಿಕ್ಕಿ ತಂದೆಗ
ಳೋಡುತದೆ ಸರಳಿಂಗೆ ತಮ್ಮನ
ನೀಡಿ ತೋರಿಸಿ ಜಾರುತದೆಯಣ್ಣಂದಿರಾದವರು
ಓಡುತದೆ ಆಳೊಡೆಯನನು ಬೀ
ಸಾಡಿ ತಾಯಿಗೆ ಮಕ್ಕಳಾಗದೆ
ಕೂಡೆ ಮುಮ್ಮಳಿ ಮಸಗುತದೆ ಗುರುತನುಜ ನೋಡೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶತ್ರುಸೈನ್ಯದಲ್ಲಿ ಮಕ್ಕಳನ್ನು ಬಲಿಕೊಟ್ಟು ತಂದೆ ಎನಿಸಿಕೊಂಡವರು ಪಲಾಯನ ಮಾಡುತ್ತಿದ್ದಾರೆ. ಬಾಣಕ್ಕೆ ತಮ್ಮನನ್ನು ಬಲಿಕೊಟ್ಟು ಅಣ್ಣಂದಿರು ಜಾರಿಕೊಳ್ಳುತ್ತಿದ್ದಾರೆ. ಸ್ವಾಮಿಯನ್ನು ತ್ಯಜಿಸಿ ಸೇವಕರು ಓಡುತ್ತಿದ್ದಾರೆ. ನೋಡು ಗುರುತನುಜ” ಎಂದು ದುರ್ಯೋಧನನು ಅಶ್ವತ್ಥಾಮನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ತಾಯಿಗೆ ಮಕ್ಕಳಾಗದೆ - ತಾಯಿಗೆ ಅವಮಾನ ಮಾಡುವ ಮಕ್ಕಳಾದರು
ಮುಮ್ಮಳಿ (<ಮಣ್ಮಳಿ) - ಕ್ಷೋಭೆ, ಗೊಂದಲ
ಮೂಲ ...{Loading}...
ನೋಡಿ ಮಕ್ಕಳನಿಕ್ಕಿ ತಂದೆಗ
ಳೋಡುತದೆ ಸರಳಿಂಗೆ ತಮ್ಮನ
ನೀಡಿ ತೋರಿಸಿ ಜಾರುತದೆಯಣ್ಣಂದಿರಾದವರು
ಓಡುತದೆ ಆಳೊಡೆಯನನು ಬೀ
ಸಾಡಿ ತಾಯಿಗೆ ಮಕ್ಕಳಾಗದೆ
ಕೂಡೆ ಮುಮ್ಮಳಿ ಮಸಗುತದೆ ಗುರುತನುಜ ನೋಡೆಂದ ॥18॥
೦೧೯ ಅರಿಬಲದ ಕಡುಗೇಡು ...{Loading}...
ಅರಿಬಲದ ಕಡುಗೇಡು ಹಬ್ಬಿತು
ಸುರಬಲದೊಳಕಟಕಟ ನೋಡೈ
ಸುರಪತಿಗೆ ದುಮ್ಮಾನವಡಸಿತಲಾ ಮಹಾದೇವ
ಸುರನದೀಜದ್ರೋಣರೀ ಪರಿ
ಪರಮ ಶೌರ್ಯದಲೊದಗಿದರೆ ನಿ
ಷ್ಠುರದ ನುಡಿಯೆನ್ನದಿರಿ ಕಂಡುದನಾಡಬೇಕೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶತ್ರುಗಳಾದ ಪಾಂಡವರಸೈನ್ಯಕ್ಕೆ ಉಂಟಾದ ಸೋಲು ಅವಮಾನಗಳು ದೇವತೆಗಳವರೆಗೂ ಹಬ್ಬಿತು. ಅಯ್ಯೋ ಶಿವನೇ, ಇಂದ್ರನಿಗೂ ದುಃಖ ಆವರಿಸಿತು. ಭೀಷ್ಮ ದ್ರೋಣರು ನಿಜವಾಗಿಯೂ ಈ ಬಗೆಯ ಸಾಹಸವನ್ನು ತೋರಿಸಿ ಯುದ್ಧ ಮಾಡಿದರೆ? ನಿಷ್ಠುರದ ಮಾತನ್ನು ಹೇಳುತ್ತಿದ್ದೇನೆಂದು ಭಾವಿಸಬೇಡಿ. ನೋಡಿದ್ದನ್ನು ಹೇಳುತ್ತಿದ್ದೇನೆ ಅಷ್ಟೆ” ಎಂದ ದುರ್ಯೋಧನ.
ಮೂಲ ...{Loading}...
ಅರಿಬಲದ ಕಡುಗೇಡು ಹಬ್ಬಿತು
ಸುರಬಲದೊಳಕಟಕಟ ನೋಡೈ
ಸುರಪತಿಗೆ ದುಮ್ಮಾನವಡಸಿತಲಾ ಮಹಾದೇವ
ಸುರನದೀಜದ್ರೋಣರೀ ಪರಿ
ಪರಮ ಶೌರ್ಯದಲೊದಗಿದರೆ ನಿ
ಷ್ಠುರದ ನುಡಿಯೆನ್ನದಿರಿ ಕಂಡುದನಾಡಬೇಕೆಂದ ॥19॥
೦೨೦ ಉಣ್ಟು ಜೀಯ ...{Loading}...
ಉಂಟು ಜೀಯ ವಿರೋಧಿಬಲವತಿ
ಕಂಟಣಿಸುತದೆ ಪಾಂಡುತನಯರ
ನಂಟರಿಷ್ಟರಿಗಾದುದೈ ದುಮ್ಮಾನ ಪುಸಿಯೇಕೆ
ಎಂಟುಮಡಿ ನಿಮಗಾದ ಜಯ ಹದಿ
ನೆಂಟುಮಡಿಯಾಚೆಯಲಿ ಸೇರುವು
ದುಂಟು ಪುಸಿದರೆ ಕೊಯ್ಸಿಕೊಟ್ಟೆವು ನಮ್ಮ ನಾಲಗೆಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಅಶ್ವತ್ಥಾಮನು ‘ಹೌದು ಸ್ವಾಮಿ, ಶತ್ರುಸೈನ್ಯ ವಿಪರೀತ ಹೆದರುತ್ತಿದೆ. ಪಾಂಡವರ ಬಂಧುಗಳಿಗೆ ದುಃಖವಾಗಿದೆ. ಅದರಲ್ಲಿ ಸುಳ್ಳೇನಿದೆ? ಈಗ ನಿಮಗೆ ಉಂಟಾದ ಎಂಟು ಮಡಿ ಜಯಕ್ಕೆ ಪಾಂಡವರು ಹದಿನೆಂಟು ಮಡಿ ಜಯವನ್ನು ಆ ಮೇಲೆ ಗಳಿಸುವುದು ಖಂಡಿತ. ನಾನು ಹೇಳುವುದು ಸುಳ್ಳಾದರೆ ನನ್ನ ನಾಲಗೆಯನ್ನೇ ಕೊಯ್ದು ಕೊಡುತ್ತೇನೆ’ ಎಂದನು.
ಪದಾರ್ಥ (ಕ.ಗ.ಪ)
ಕಂಟಣಿಸು-ಹೆದರು
ಮೂಲ ...{Loading}...
ಉಂಟು ಜೀಯ ವಿರೋಧಿಬಲವತಿ
ಕಂಟಣಿಸುತದೆ ಪಾಂಡುತನಯರ
ನಂಟರಿಷ್ಟರಿಗಾದುದೈ ದುಮ್ಮಾನ ಪುಸಿಯೇಕೆ
ಎಂಟುಮಡಿ ನಿಮಗಾದ ಜಯ ಹದಿ
ನೆಂಟುಮಡಿಯಾಚೆಯಲಿ ಸೇರುವು
ದುಂಟು ಪುಸಿದರೆ ಕೊಯ್ಸಿಕೊಟ್ಟೆವು ನಮ್ಮ ನಾಲಗೆಯ ॥20॥
೦೨೧ ಮುಗುಳುನಗೆಯೊಬ್ಬರಲಿ ಸವಿವಾ ...{Loading}...
ಮುಗುಳುನಗೆಯೊಬ್ಬರಲಿ ಸವಿವಾ
ತುಗಳ ರಸವೊಬ್ಬರಲಿ ಕಡೆಗ
ಣ್ಣುಗಳ ಮಿಂಚೊಬ್ಬರಲಿ ನೇವುರದೆಳೆಮೊಳಗು ಸಹಿತ
ಸೊಗಸು ಬೇರೊಬ್ಬರಲಿ ನೇಹದ
ತಗಹು ಬೇರೊಬ್ಬರಲಿ ಸತಿಯರ
ವಿಗಡತನವಿದು ಸಹಜ ಜಯವಧು ಜಾರೆ ನೋಡೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಯಲಕ್ಷ್ಮಿಯು ಒಬ್ಬನನ್ನು ಕಂಡು ಮುಗುಳ್ನಕ್ಕರೆ, ಇನ್ನೊಬ್ಬರ ಜೊತೆ ಸವಿಯಾದ ಮಾತುಗಳ ರಸವನ್ನೇ ಹರಿಸುತ್ತಾಳೆ. ಒಬ್ಬರಿಗೆ ಕಡೆಗಣ್ಣಿನ ನೋಟದ ಮಿಂಚನ್ನು ಬೀರಿದರೆ, ಇನ್ನೊಬ್ಬರ ಜೊತೆಗೆ ಪ್ರೀತಿ ತೋರಿಸುತ್ತಾಳೆ. ತನ್ನ ಕಾಲಿನ ಗೆಜ್ಜೆಯ ಶಬ್ದದಿಂದ ಇನ್ನೊಬ್ಬರ ಜೊತೆ ಸ್ನೇಹವನ್ನು ಧಿಕ್ಕರಿಸುತ್ತಾಳೆ. ಹೆಣ್ಣುಗಳ ಕ್ರೌರ್ಯ / ಶೌರ್ಯ ಹೀಗೆ ಸಹಜವಾದುದು - ಆದ್ದರಿಂದ ಈಕೆ ಜಾರಸ್ತ್ರೀ ಎಂದ.
ಪದಾರ್ಥ (ಕ.ಗ.ಪ)
ತಗಹು-ಅಡ್ಡಿ, ವಿಗಡತನ-ಕ್ರೌರ್ಯ
ಮೂಲ ...{Loading}...
ಮುಗುಳುನಗೆಯೊಬ್ಬರಲಿ ಸವಿವಾ
ತುಗಳ ರಸವೊಬ್ಬರಲಿ ಕಡೆಗ
ಣ್ಣುಗಳ ಮಿಂಚೊಬ್ಬರಲಿ ನೇವುರದೆಳೆಮೊಳಗು ಸಹಿತ
ಸೊಗಸು ಬೇರೊಬ್ಬರಲಿ ನೇಹದ
ತಗಹು ಬೇರೊಬ್ಬರಲಿ ಸತಿಯರ
ವಿಗಡತನವಿದು ಸಹಜ ಜಯವಧು ಜಾರೆ ನೋಡೆಂದ ॥21॥
೦೨೨ ಒನ್ದು ಕಡೆಗಣ್ಣಿನಲಿ ...{Loading}...
ಒಂದು ಕಡೆಗಣ್ಣಿನಲಿ ಕೌರವ
ವೃಂದವನು ನೋಡುವಳು ಕಯ್ಯೊಡ
ನೊಂದು ಕಡೆಗಣ್ಣಿನಲಿ ಮಾತಾಡಿಸುವಳರಿಬಲವ
ಇಂದು ಜಯವಧು ದೃಢಪತಿವ್ರತೆ
ಯೆಂದು ಬಗೆದೈ ಭೂಪ ಹುಸಿ ಹೋ
ಗೆಂದು ಗುರುಸುತ ನಗುತ ಹೋದನು ತನ್ನ ಮೋಹರಕೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಜಯವನಿತೆ ಒಂದು ಕಡೆಗಣ್ಣಿನಿಂದ ಕೌರವ ಸೈನ್ಯವನ್ನು ಒಲಿದಂತೆ ನೋಡುತ್ತಾಳೆ. ಜೊತೆಯಲ್ಲೇ ಇನ್ನೊಂದು ಕಡೆಗಣ್ಣಿನಿಂದ ಶತ್ರು ಸೈನ್ಯವನ್ನು ಮಾತನಾಡಿಸುತ್ತಾಳೆ. ಈಕೆಯನ್ನು ದೃಢವಾದ ಪತಿವ್ರತೆ ಎಂದು ಯೋಚಿಸಿದೆಯಾ ದೊರೆಯೇ, ಅದು ಸುಳ್ಳು " ಎನ್ನುತ್ತಾ ಅಶ್ವತ್ಥಾಮನು ತನ್ನ ಸೈನ್ಯದ ಗುಂಪಿನ ಕಡೆಗೆ ಹೊರಟುಹೋದನು.
ಮೂಲ ...{Loading}...
ಒಂದು ಕಡೆಗಣ್ಣಿನಲಿ ಕೌರವ
ವೃಂದವನು ನೋಡುವಳು ಕಯ್ಯೊಡ
ನೊಂದು ಕಡೆಗಣ್ಣಿನಲಿ ಮಾತಾಡಿಸುವಳರಿಬಲವ
ಇಂದು ಜಯವಧು ದೃಢಪತಿವ್ರತೆ
ಯೆಂದು ಬಗೆದೈ ಭೂಪ ಹುಸಿ ಹೋ
ಗೆಂದು ಗುರುಸುತ ನಗುತ ಹೋದನು ತನ್ನ ಮೋಹರಕೆ ॥22॥
೦೨೩ ಅರಸ ಚಿತ್ತ್ಯೆಸಿತ್ತಲರ್ಜುನ ...{Loading}...
ಅರಸ ಚಿತ್ತ್ಯೆಸಿತ್ತಲರ್ಜುನ
ನರೆಮುಗಿದ ಕಣ್ಣರಳ್ದವಂತಃ
ಕರಣ ಪಂಚೇಂದ್ರಿಯಕೆ ಬಿಟ್ಟುದು ತಗಹು ಕಳಕಳವ
ಮುರಿದು ಮುರಿದೆಡಬಲದ ತನ್ನವ
ರಿರವನೀಕ್ಷಿಸಿ ಕೋಪಶಿಖಿಯು
ಬ್ಬರದಲಿಬ್ಬಗಿಯಾದುದಂತರ್ಭಾವವಡಿಗಡಿಗೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಗಮನವಿಟ್ಟು ಕೇಳು ಈ ಕಡೆ. ಅರ್ಜುನನ ಅರ್ಧ ಮುಚ್ಚಿಕೊಂಡಿದ್ದ ಕಣ್ಣುಗಳು ತೆರೆದುಕೊಂಡವು. ಅವನ ಮನಸ್ಸು, ಪಂಚೇಂದ್ರಿಯಗಳಿಗೆ ಉಂಟಾಗಿದ್ದ ಚಿಂತೆಯ ನಂಟು ಕಡಿಮೆಯಾಯಿತು. ಸೋತು ಸುಣ್ಣವಾಗಿದ್ದ ತನ್ನ ಸೈನ್ಯದ ಕಡೆಗೆ ತಿರುಗಿ ನೋಡಿದನು. ಅವರ ಸ್ಥಿತಿಯನ್ನು ಕಂಡು ಕೋಪದ ಜ್ವಾಲೆಯ ಆರ್ಭಟದಲ್ಲಿ ಅವನ ಮನಸ್ಸಿನ ಭಾವ ಮತ್ತೆ ಮತ್ತೆ ದ್ವಂದ್ವಕ್ಕೆ ಒಳಗಾಯಿತು.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಅರಸ ಚಿತ್ತ್ಯೆಸಿತ್ತಲರ್ಜುನ
ನರೆಮುಗಿದ ಕಣ್ಣರಳ್ದವಂತಃ
ಕರಣ ಪಂಚೇಂದ್ರಿಯಕೆ ಬಿಟ್ಟುದು ತಗಹು ಕಳಕಳವ
ಮುರಿದು ಮುರಿದೆಡಬಲದ ತನ್ನವ
ರಿರವನೀಕ್ಷಿಸಿ ಕೋಪಶಿಖಿಯು
ಬ್ಬರದಲಿಬ್ಬಗಿಯಾದುದಂತರ್ಭಾವವಡಿಗಡಿಗೆ ॥23॥
೦೨೪ ಕಳಶಜಲದಲಿ ಮೆಯ್ಯ ...{Loading}...
ಕಳಶಜಲದಲಿ ಮೆಯ್ಯ ನೆತ್ತರ
ತೊಳೆದು ಪೊಸಮಡಿವರ್ಗದಲಿ ಮುರಿ
ಮಲಕ ಬಿಗಿದನು ಧರಿಸಿ ಸಾಧು ಜವಾಜಿ ಕಸ್ತುರಿಯ
ಲುಳಿಯ ಹೊಸ ಸೀಸಕದ ಕವಚವ
ನಳವಡಿಸಿ ಕರ್ಪುರದ ಕವಳದ
ಹಳುಕ ಹಾಯಿಕಿಕೊಳುತ ಕೊಂಡನು ಮತ್ತೆ ಗಾಂಡಿವವ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಳಶದ ನೀರಿನಿಂದ ದೇಹಕ್ಕೆ ಮೆತ್ತಿಕೊಂಡಿದ್ದ ರಕ್ತವನ್ನು ತೊಳೆದುಕೊಂಡು, ಹೊಸ ಮಡಿ ಬಟ್ಟೆಯನ್ನು ಗಂಟುಹಾಕಿ ಬಿಗಿದು ಉಟ್ಟುಕೊಂಡನು. ಸಾಧು ಜವಾಜಿ ಕಸ್ತೂರಿ ಮೊದಲಾದ ಸುಗಂಧಗಳನ್ನು ಲೇಪಿಸಿಕೊಂಡನು. ಹೊಳೆಯುತ್ತಿದ್ದ. ಹೊಸ ಶೀರ್ಷಕವನ್ನು, ಕವಚವನ್ನು ಧರಿಸಿ, ಕರ್ಪೂರದ ತಾಂಬೂಲವನ್ನು ಹಾಕಿಕೊಳ್ಳುತ್ತಾ ಮತ್ತೆ ಗಾಂಡೀವವನ್ನು ಕೈಗೆ ತೆಗೆದುಕೊಂಡನು.
ಪದಾರ್ಥ (ಕ.ಗ.ಪ)
ಮಲಕ-ಗಂಟು, ಲುಳಿ-ಕಾಂತಿ,
ಮೂಲ ...{Loading}...
ಕಳಶಜಲದಲಿ ಮೆಯ್ಯ ನೆತ್ತರ
ತೊಳೆದು ಪೊಸಮಡಿವರ್ಗದಲಿ ಮುರಿ
ಮಲಕ ಬಿಗಿದನು ಧರಿಸಿ ಸಾಧು ಜವಾಜಿ ಕಸ್ತುರಿಯ
ಲುಳಿಯ ಹೊಸ ಸೀಸಕದ ಕವಚವ
ನಳವಡಿಸಿ ಕರ್ಪುರದ ಕವಳದ
ಹಳುಕ ಹಾಯಿಕಿಕೊಳುತ ಕೊಂಡನು ಮತ್ತೆ ಗಾಂಡಿವವ ॥24॥
೦೨೫ ನಿಮ್ಮ ಸಿರಿಯೊಡಲಿನಲಿ ...{Loading}...
ನಿಮ್ಮ ಸಿರಿಯೊಡಲಿನಲಿ ಜೋಡಿನ
ಹಮ್ಮುಗೆಯನುಡಿದಂಬು ಹಾಯ್ದವು
ನಮ್ಮ ದುಷ್ಕೃತವೈಸಲೇ ನಿಮಗೆತ್ತಲೀ ವ್ಯಸನ
ನಿಮ್ಮಡಿಗಳೇ ಬಲ್ಲಿರಿಂತಿರ
ಲೆಮ್ಮ ರಾಜ್ಯದ ಹುದುವೆ ನೊಂದನು
ನಿಮ್ಮ ಹನುಮನ ನೋಡಿಯೆಂದನು ಹರಿಗೆ ಕಲಿಪಾರ್ಥ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಕೃಷ್ಣನನು ಕುರಿತು “ನಿನ್ನ ಸುಂದರವಾದ ದೇಹದಲ್ಲಿ ಕವಚದ ಕಟ್ಟುಗಳನ್ನು ಮುರಿದು ಹಾಕಿ ಬಾಣಗಳು ತೂರಿದವು. ಇದು ನಮ್ಮ ಪಾಪಕರ್ಮದ ಫಲವಲ್ಲವೇ? ಇಲ್ಲದಿದ್ದರೆ ನಿನಗೆ ಹೇಗೆ ನೋವಾಗುತ್ತಿತ್ತು ಅದು ನಿನಗೇ ಗೊತ್ತು. ಹೀಗಿರುವಾಗ ನಮಗೆ ರಾಜ್ಯದ ನಂಟು ಹೇಗಾಗುತ್ತದೆ. ನೋಡು, ನಿಮ್ಮ ಹನುಮಂತನಿಗೆ ನೋವಾಗಿದೆ” ಎಂದನು.
ಪದಾರ್ಥ (ಕ.ಗ.ಪ)
ಹಮ್ಮುಗೆ-ಕಟ್ಟು
ಮೂಲ ...{Loading}...
ನಿಮ್ಮ ಸಿರಿಯೊಡಲಿನಲಿ ಜೋಡಿನ
ಹಮ್ಮುಗೆಯನುಡಿದಂಬು ಹಾಯ್ದವು
ನಮ್ಮ ದುಷ್ಕೃತವೈಸಲೇ ನಿಮಗೆತ್ತಲೀ ವ್ಯಸನ
ನಿಮ್ಮಡಿಗಳೇ ಬಲ್ಲಿರಿಂತಿರ
ಲೆಮ್ಮ ರಾಜ್ಯದ ಹುದುವೆ ನೊಂದನು
ನಿಮ್ಮ ಹನುಮನ ನೋಡಿಯೆಂದನು ಹರಿಗೆ ಕಲಿಪಾರ್ಥ ॥25॥
೦೨೬ ಸಾಕದನ್ತಿರಲಾಹವಕೆ ಬರ ...{Loading}...
ಸಾಕದಂತಿರಲಾಹವಕೆ ಬರ
ಲೇಕೆ ಕಬ್ಬಿನ ಬನವೆ ಬಾಣಾ
ನೀಕಕಭಿಮುಖವಾಗೆ ಸಾವರು ನೋವರಿದಕೇನು
ಈ ಕುಠಾರನನೀಕ್ಷಣಕೆ ಕೈ
ತೂಕದಲಿ ಕಾದದೆ ವಿವೇಕದೊ
ಳಾಕರಿಸು ಜಯವಧುವನೆಂದನು ಕೃಷ್ಣನರ್ಜುನನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು “ಸಾಕು, ಆ ಮಾತು ಹಾಗಿರಲಿ. ಯುದ್ಧರಂಗಕ್ಕೆ ಬರುವುದು ಎಂದರೆ ಕಬ್ಬಿನ ಗದ್ದೆಗೆ ಹೋದಂತೆಯೇ ? ಬಾಣಗಳಿಗೆ ಎದುರಾದಾಗ, ಸಾವು ನೋವು ಸಹಜ. ಅದನ್ನು ಗಣಿಸಬಾರದು. ಈ ದುಷ್ಟನನ್ನು ಈ ಕ್ಷಣದಲ್ಲಿ ಬಲವನ್ನೆಲ್ಲಾ ಪ್ರಯೋಗಿಸಿ ಯುದ್ಧ ಮಾಡದೆ, ಚತುರತೆಯಿಂದ ಜಯವನಿತೆಯನ್ನು ಪಡೆದುಕೋ " ಎಂದು ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಕೈತೂಕ-ಬಲ
ಮೂಲ ...{Loading}...
ಸಾಕದಂತಿರಲಾಹವಕೆ ಬರ
ಲೇಕೆ ಕಬ್ಬಿನ ಬನವೆ ಬಾಣಾ
ನೀಕಕಭಿಮುಖವಾಗೆ ಸಾವರು ನೋವರಿದಕೇನು
ಈ ಕುಠಾರನನೀಕ್ಷಣಕೆ ಕೈ
ತೂಕದಲಿ ಕಾದದೆ ವಿವೇಕದೊ
ಳಾಕರಿಸು ಜಯವಧುವನೆಂದನು ಕೃಷ್ಣನರ್ಜುನನ ॥26॥
೦೨೭ ಹರಿಸು ರಥವನು ...{Loading}...
ಹರಿಸು ರಥವನು ವೈರಿಯುರುಬೆಗೆ
ತೆರಳುತದೆ ನಮ್ಮವರು ಕರ್ಣನ
ಕೊರಳ ಬಾರಲಿ ನಿಲುಕಿಸುವೆನೀ ಶರಸಲಾಕೆಗಳ
ಅರಸ ಕೇಳೈ ಮಾತು ಹಿಂಚಿತು
ನರನ ರಥ ಜೋಡಿಸಿತು ಕರ್ಣನ
ಸರಿಸದಲಿ ಜೀವಿಸಿತು ಪಾಂಡವಸೇನೆ ನಿಮಿಷದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಕೃಷ್ಣನಿಗೆ ‘ರಥವನ್ನು ಕರ್ಣನ ಕಡೆಗೆ ಓಡಿಸು. ಅವನ ಧಾಳಿಗೆ ನಮ್ಮವರು ಹಿಮ್ಮೆಟ್ಟುತ್ತಿದ್ದಾರೆ. ಕರ್ಣನ ಕುತ್ತಿಗೆಯ ಚರ್ಮದಲ್ಲಿ ನನ್ನ ಈ ಸಲಾಕೆಗಳಂತಹ ಬಾಣಗಳನ್ನು ಚುಚ್ಚಿಸುತ್ತೇನೆ’ ಎಂದನು. “ದೊರೆಯೇ ಕೇಳು, ಆ ಮಾತು ಮುಗಿಯುವುದಕ್ಕೆ ಮುಂಚೆಯೇ ಅರ್ಜುನನ ರಥ ಕರ್ಣನಿಗೆ ಹತ್ತಿರವಾಗಿ ಎದುರು ನಿಂತಿತು. ನಿಮಿಷದಲ್ಲಿ ಪಾಂಡವರ ಸೈನ್ಯಕ್ಕೆ ಧೈರ್ಯ ಬಂದಿತು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಉರುಬೆ -ಧಾಳಿ,
ಬಾರು-ಚರ್ಮ
ಮೂಲ ...{Loading}...
ಹರಿಸು ರಥವನು ವೈರಿಯುರುಬೆಗೆ
ತೆರಳುತದೆ ನಮ್ಮವರು ಕರ್ಣನ
ಕೊರಳ ಬಾರಲಿ ನಿಲುಕಿಸುವೆನೀ ಶರಸಲಾಕೆಗಳ
ಅರಸ ಕೇಳೈ ಮಾತು ಹಿಂಚಿತು
ನರನ ರಥ ಜೋಡಿಸಿತು ಕರ್ಣನ
ಸರಿಸದಲಿ ಜೀವಿಸಿತು ಪಾಂಡವಸೇನೆ ನಿಮಿಷದಲಿ ॥27॥
೦೨೮ ಎಲೆಲೆ ಕರ್ಣ ...{Loading}...
ಎಲೆಲೆ ಕರ್ಣ ಕಿರೀಟಿಯುರುಬೆಗೆ
ನಿಲುವುದರಿದೈ ಹಾವನರೆಗಡಿ
ದುಳುಹಿ ಕೆಡಿಸಿದೆ ಪಾಪಿ ರಾಯನ ರಾಜಕಾರಿಯವ
ತೊಲಗಿಸುವೆನೇ ರಥವನೆನೆ ಹೆ
ಕ್ಕಳಿಸಿ ಜರೆದನು ಕರ್ಣ ಶಲ್ಯನ
ನೆಲವೊ ಫಡ ನೋಡೆನುತ ತೆಗೆದೆಚ್ಚನು ಧನಂಜಯನ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೆ ಕರ್ಣ, ಅರ್ಜುನನ ಆಕ್ರಮಣದ ರಭಸಕ್ಕೆ ಎದುರಾಗಿ ನಿಲ್ಲುವುದು ಅಸಾಧ್ಯ. ನೀನು ಅರ್ಜುನನೆಂಬ ಹಾವನ್ನು ಅರ್ಧ ಕಡಿದು ಉಳಿಸಿ ಅಯ್ಯೋ ಪಾಪಿ, ರಾಯನಾದ ದುರ್ಯೋಧನನ ರಾಜಕಾರ್ಯವನ್ನು ಹಾಳು ಮಾಡಿದೆ. ರಥವನ್ನು ದೂರಕ್ಕೆ ತೆಗೆದುಕೊಂಡು ಹೋಗಲೇ ಎಂದು ಶಲ್ಯನು ಹಂಗಿಸಿದಾಗ ಕರ್ಣನು ಗರ್ವದಿಂದ ಅವನನ್ನು ನಿಂದಿಸುತ್ತಾ, ‘ಎಲವೋ ಈಗ ನೋಡು’ ಎನ್ನುತ್ತಾ ಅರ್ಜುನನ ಮೇಲೆ ಬಲವಾಗಿ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಹೆಕ್ಕಳಿಸು-ಗರ್ವಿಸು
ಮೂಲ ...{Loading}...
ಎಲೆಲೆ ಕರ್ಣ ಕಿರೀಟಿಯುರುಬೆಗೆ
ನಿಲುವುದರಿದೈ ಹಾವನರೆಗಡಿ
ದುಳುಹಿ ಕೆಡಿಸಿದೆ ಪಾಪಿ ರಾಯನ ರಾಜಕಾರಿಯವ
ತೊಲಗಿಸುವೆನೇ ರಥವನೆನೆ ಹೆ
ಕ್ಕಳಿಸಿ ಜರೆದನು ಕರ್ಣ ಶಲ್ಯನ
ನೆಲವೊ ಫಡ ನೋಡೆನುತ ತೆಗೆದೆಚ್ಚನು ಧನಂಜಯನ ॥28॥
೦೨೯ ಎಡೆಯಲೀತನ ಸರಳ ...{Loading}...
ಎಡೆಯಲೀತನ ಸರಳ ಸಾರವ
ಕಡಿದು ಕಯ್ಯೊಡನೆಚ್ಚು ಮಗುಳೆ
ಚ್ಚಡಿಗಡಿಗೆ ಬಿಡದೆಚ್ಚು ಪುನರಪಿ ಮತ್ತೆ ಮಗುಳೆಚ್ಚು
ಪಡಿಬಲಕೆ ರೋಷಾಗ್ನಿಯದನಿ
ಮ್ಮಡಿಸಿ ಬೀಸುವ ಖೇದಪವನನು
ಸುಡದೆ ಬಿಡುವನೆ ಕಲಿಧನಂಜಯನಹಿತ ತೃಣವನವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಮಧ್ಯದಲ್ಲೇ ಕರ್ಣನ ಬಾಣಗಳನ್ನೆಲ್ಲಾ ಕತ್ತರಿಸಿ ಹಾಕಿ ತಕ್ಷಣವೇ ಬಾಣಗಳನ್ನು ಮತ್ತೆ ಮತ್ತೆ ಪ್ರಯೋಗಿಸಿದನು. ವೀರ ಅರ್ಜುನನು ತನ್ನ ರೋಷದ ಗಾಳಿಯ ಸಹಾಯದಿಂದ ಎರಡು ಪಟ್ಟು ಹೆಚ್ಚು ಮಾಡುವ ಕೋಪದ ಬೆಂಕಿಯಿಂದ ಶತ್ರುಗಳೆಂಬ ಹುಲ್ಲುಗಾವಲನ್ನು ಸುಡದೇ ಬಿಡುತ್ತಾನೆಯೇ?
ಮೂಲ ...{Loading}...
ಎಡೆಯಲೀತನ ಸರಳ ಸಾರವ
ಕಡಿದು ಕಯ್ಯೊಡನೆಚ್ಚು ಮಗುಳೆ
ಚ್ಚಡಿಗಡಿಗೆ ಬಿಡದೆಚ್ಚು ಪುನರಪಿ ಮತ್ತೆ ಮಗುಳೆಚ್ಚು
ಪಡಿಬಲಕೆ ರೋಷಾಗ್ನಿಯದನಿ
ಮ್ಮಡಿಸಿ ಬೀಸುವ ಖೇದಪವನನು
ಸುಡದೆ ಬಿಡುವನೆ ಕಲಿಧನಂಜಯನಹಿತ ತೃಣವನವ ॥29॥
೦೩೦ ಒದೆದು ಕವಚವನೊಡೆದು ...{Loading}...
ಒದೆದು ಕವಚವನೊಡೆದು ಗರಿದೋ
ರಿದವು ವಕ್ಷದ ಮೇಲೆ ಮೊನೆಮೂ
ಡಿದವು ಬೆನ್ನಲಿ ಕರ್ಣ ನನೆದನು ರುಧಿರಧಾರೆಯಲಿ
ಉದುರಿದವು ಕಯ್ಯಂಬು ಬಲುಕಾ
ರಿದನು ರಕುತವ ಕಳವಳದ ಕಂ
ಪದಲಿ ಝೊಂಪಿಸಿ ಮಲಗಿದನು ಮಣಿಮಯದ ಗದ್ದುಗೆಯ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕವಚದ ಮೇಲೆ ಬಲವಾಗಿ ಚುಚ್ಚಿಕೊಳ್ಳುತ್ತಾ ಅದನ್ನು ಕತ್ತರಿಸಿ, ಬಾಣಗಳು, ಕರ್ಣನ ಎದೆಯ ಮೇಲೆ ತಮ್ಮ ಗರಿಯನ್ನು ತೋರಿಸುವಂತಾಯಿತು. ಅವುಗಳ ಇನ್ನೊಂದು ತುದಿ ಬೆನ್ನಿನ ಮೇಲೆ ಕಾಣಿಸಿತು. ರಕ್ತಧಾರೆಯಲ್ಲಿ ಕರ್ಣನು ನೆನೆದು ಹೋದನು. ಅವನ ಕೈಯಲ್ಲಿದ್ದ ಬಾಣಗಳು ಕೆಳಗೆ ಬಿದ್ದವು. ವಿಪರೀತ ರಕ್ತವನ್ನು ಕಾರುತ್ತಾ, ಚಿಂತೆಯಿಂದ ಕಂಪಿಸಿ, ತನ್ನ ರಥದ ರತ್ನ ಖಚಿತವಾದ ಪೀಠದ ಮೇಲೆ ಕುಸಿದು ಮೂರ್ಛೆ ಹೋದನು.
ಮೂಲ ...{Loading}...
ಒದೆದು ಕವಚವನೊಡೆದು ಗರಿದೋ
ರಿದವು ವಕ್ಷದ ಮೇಲೆ ಮೊನೆಮೂ
ಡಿದವು ಬೆನ್ನಲಿ ಕರ್ಣ ನನೆದನು ರುಧಿರಧಾರೆಯಲಿ
ಉದುರಿದವು ಕಯ್ಯಂಬು ಬಲುಕಾ
ರಿದನು ರಕುತವ ಕಳವಳದ ಕಂ
ಪದಲಿ ಝೊಂಪಿಸಿ ಮಲಗಿದನು ಮಣಿಮಯದ ಗದ್ದುಗೆಯ ॥30॥
೦೩೧ ತೋರಿಸಾ ನಿನ್ನೊಡೆಯನೋಲೆಯ ...{Loading}...
ತೋರಿಸಾ ನಿನ್ನೊಡೆಯನೋಲೆಯ
ಕಾರತನವನು ನಮ್ಮ ಬಲವನು
ಮೂರು ಮೂಲೆಯ ಹೊಗಿಸಿ ಬೆಚ್ಚನೆ ಬೆರತ ಗರುವನಲೆ
ಜಾರಿದವೆ ಕಯ್ಯಂಬು ಬಲು ರಣ
ವೀರಸಿರಿ ಹಾರಿದುದೆ ಶೌರ್ಯದ
ಮೋರೆಗೇಕೈ ಮರುಕವೆಂದನು ನಗುತ ಕಲಿಪಾರ್ಥ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ನಗುತ್ತಾ ’ ನಿನ್ನ ಸೇವಾ ವೃತ್ತಿಯನ್ನು ತೋರಿಸು. ನಮ್ಮ ಸೈನ್ಯವನ್ನು ಮೂರು ದಿಕ್ಕಿಗೆ ಅಟ್ಟಿ ಅಭಿಮಾನದಿಂದ ಮೆರೆದ ದೊಡ್ಡವನಲ್ಲವೇ ನೀನು. ನಿನ್ನ ಕೈಲಿದ್ದ ಬಾಣಗಳು ಕೆಳಕ್ಕೆ ಬಿದ್ದು ಹೋದವೇ? ಯುದ್ಧದಲ್ಲಿ ಗೆಲ್ಲುತ್ತಿದ್ದೇನೆ ಎಂಬ ಸಂಪತ್ತು ಈಗ ಹಾಳಾಗಿ ಹೋಯಿತೆ? ಶೌರ್ಯದ ನಿನ್ನ ಮುಖದಲ್ಲಿ ಏಕೆ ವಿಷಾದದ ಭಾವ?’ ಎಂದು ಟೀಕಿಸಿದನು.
ಪದಾರ್ಥ (ಕ.ಗ.ಪ)
ಓಲೆಯಕಾರತನ-ಸೇವಾವೃತ್ತಿ
ಮೂಲ ...{Loading}...
ತೋರಿಸಾ ನಿನ್ನೊಡೆಯನೋಲೆಯ
ಕಾರತನವನು ನಮ್ಮ ಬಲವನು
ಮೂರು ಮೂಲೆಯ ಹೊಗಿಸಿ ಬೆಚ್ಚನೆ ಬೆರತ ಗರುವನಲೆ
ಜಾರಿದವೆ ಕಯ್ಯಂಬು ಬಲು ರಣ
ವೀರಸಿರಿ ಹಾರಿದುದೆ ಶೌರ್ಯದ
ಮೋರೆಗೇಕೈ ಮರುಕವೆಂದನು ನಗುತ ಕಲಿಪಾರ್ಥ ॥31॥
೦೩೨ ಮರಳಿ ಶಲ್ಯನನೆಚ್ಚನಾತನ ...{Loading}...
ಮರಳಿ ಶಲ್ಯನನೆಚ್ಚನಾತನ
ಕರದ ವಾಘೆಯ ಕಡಿದನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ಹೊರೆಯ ಹಡಪಿಗ ಚಾಹಿಯರ ಚಾ
ಮರಿಯರನು ನೋಯಿಸಿದ ಗೆಲವಿನ
ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಮತ್ತೆ ಶಲ್ಯನ ಮೇಲೆ ಬಾಣ ಪ್ರಯೋಗಿಸಿದನು. ಅವನ ಕೈಯಲ್ಲಿದ್ದ ಲಗಾಮನ್ನು ಕತ್ತರಿಸಿದನು. ಅವನ ರಥದ ಕುದುರೆಗಳ ದೇಹದಲ್ಲಿ ಅಸಂಖ್ಯವಾದ ಬಾಣಗಳನ್ನು ಹೂತುಹಾಕಿದನು ಅಕ್ಕಪಕ್ಕದಲ್ಲಿದ್ದ ತಾಂಬೂಲದವರು. ಚಾಮರಧಾರಿಗಳನ್ನು ನೋಯಿಸಿದ ಕರ್ಣನ ಹಿರಿಮೆಯನ್ನು ಬಡ್ಡಿ ಸಹಿತ ಉಗುಳುವಂತೆ ಮಾಡಿದನು ಅರ್ಜುನ.
ಪದಾರ್ಥ (ಕ.ಗ.ಪ)
ಹೇರಾಳ-ಅಧಿಕ, ಹೆಚ್ಚು, ಹಡಪಗ-ತಾಂಬೂಲ ಹಿಡಿದಿರುವವನು, ಚಾಹಿ-ಛತ್ರಿ ಹಿಡಿಯುವವನು ?
ಮೂಲ ...{Loading}...
ಮರಳಿ ಶಲ್ಯನನೆಚ್ಚನಾತನ
ಕರದ ವಾಘೆಯ ಕಡಿದನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ಹೊರೆಯ ಹಡಪಿಗ ಚಾಹಿಯರ ಚಾ
ಮರಿಯರನು ನೋಯಿಸಿದ ಗೆಲವಿನ
ಗರುವತನವನು ಬಡ್ಡಿಸಹಿತುಗುಳಿಚಿದನಾ ಪಾರ್ಥ ॥32॥
೦೩೩ ದಳಪತಿಯ ದುಮ್ಮಾನದಲಿ ...{Loading}...
ದಳಪತಿಯ ದುಮ್ಮಾನದಲಿ ಕಳ
ವಳಿಸಿತೀಚೆಯ ಥಟ್ಟು ಪಾರ್ಥನ
ಹಿಳುಕು ಹೊಕ್ಕವು ಹರಹಿ ತಿವಿದುವು ರಾಯನಿದಿರಿನಲಿ
ಹಲವು ಮಾತೇನಾ ಕೃಪನ ಕೌ
ಸಲನನಾ ಗುರುಸುತನನಾ ಸೌ
ಬಲನನಾ ಕೃತವರ್ಮಕನ ಮುರಿಯೆಚ್ಚು ಬೊಬ್ಬಿರಿದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನಾಪತಿಯಾದ ಕರ್ಣನಿಗೆ ಒದಗಿದ ದುಃಖದಲ್ಲಿ, ಕೌರವರ ಸೈನ್ಯ ಚಿಂತೆಗೊಳಗಾಯಿತು. ಅರ್ಜುನನ ಬಾಣಗಳು ಕೌರವನ ಎದುರಿನಲ್ಲಿ ವಿಸ್ತಾರವಾಗಿ ತಿವಿದಾಡಿದವು. ಹೆಚ್ಚೇನು ಹೇಳುವುದು ! ಅರ್ಜುನನು ಕೃಪ, ಕೌಸಲ, ಅಶ್ವತ್ಥಾಮ, ಶಕುನಿ, ಕೃತವರ್ಮರು ಸೋತು ಹಿಮ್ಮೆಟ್ಟುವಂತೆ ಬಾಣ ಪ್ರಯೋಗಿಸಿ ಬೊಬ್ಬೆ ಹಾಕಿದನು.
ಮೂಲ ...{Loading}...
ದಳಪತಿಯ ದುಮ್ಮಾನದಲಿ ಕಳ
ವಳಿಸಿತೀಚೆಯ ಥಟ್ಟು ಪಾರ್ಥನ
ಹಿಳುಕು ಹೊಕ್ಕವು ಹರಹಿ ತಿವಿದುವು ರಾಯನಿದಿರಿನಲಿ
ಹಲವು ಮಾತೇನಾ ಕೃಪನ ಕೌ
ಸಲನನಾ ಗುರುಸುತನನಾ ಸೌ
ಬಲನನಾ ಕೃತವರ್ಮಕನ ಮುರಿಯೆಚ್ಚು ಬೊಬ್ಬಿರಿದ ॥33॥
೦೩೪ ಸಿಕ್ಕಿದನು ಕುರುರಾಯನಾದುದು ...{Loading}...
ಸಿಕ್ಕಿದನು ಕುರುರಾಯನಾದುದು
ಮಕ್ಕಳಾಟಿಕೆ ಗುರುನದೀಸುತ
ರಿಕ್ಕಿ ಹೋದರು ನಮ್ಮ ದಳಪತಿ ಕಾದಿ ಬಳಲಿದನು
ಪೊಕ್ಕನರ್ಜುನನಿವರ ದರ್ಪವ
ನೊಕ್ಕಿ ತೂರಿದನಿನ್ನು ಪರಿವಾ
ರಕ್ಕೆ ಬಂದುದು ಪಂಥವೆನುತಿದ್ದುದು ಭಟಸ್ತೋಮ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ದುರ್ಯೋಧನ ಸಿಕ್ಕಿ ಬಿದ್ದ, ಅಶ್ವತ್ಥಾಮ ಮೊದಲಾದವರ ಯುದ್ಧ ಮಕ್ಕಳಾಟವಾಗಿ, ಅವರೆಲ್ಲ ಬಿದ್ದು ಹೋದರು. ನಮ್ಮ ಸೇನಾಪತಿ ಯುದ್ಧ ಮಾಡಿ ಬಳಲಿ ಹೋದನು. ಮುನ್ನುಗ್ಗಿದ ಅರ್ಜುನನು ಇವರೆಲ್ಲರ ದರ್ಪವನ್ನು ರಾಶಿ ಹಾಕಿ ತೂರಿಬಿಟ್ಟ. ಪರಿವಾರದವರಾದ ನಮ್ಮ ಮೇಲೆ ರಕ್ಷಣೆಯ ಜವಾಬ್ದಾರಿ ಬಂದಿದೆ. “ಎಂದುಕೊಂಡರು ಕೌರವನ ಕಡೆಯ ಸೈನಿಕರು.
ಪದಾರ್ಥ (ಕ.ಗ.ಪ)
ಪಂಥ-ಹೊಣೆ, ಅಧಿಕಾರ.
ಮೂಲ ...{Loading}...
ಸಿಕ್ಕಿದನು ಕುರುರಾಯನಾದುದು
ಮಕ್ಕಳಾಟಿಕೆ ಗುರುನದೀಸುತ
ರಿಕ್ಕಿ ಹೋದರು ನಮ್ಮ ದಳಪತಿ ಕಾದಿ ಬಳಲಿದನು
ಪೊಕ್ಕನರ್ಜುನನಿವರ ದರ್ಪವ
ನೊಕ್ಕಿ ತೂರಿದನಿನ್ನು ಪರಿವಾ
ರಕ್ಕೆ ಬಂದುದು ಪಂಥವೆನುತಿದ್ದುದು ಭಟಸ್ತೋಮ ॥34॥
೦೩೫ ಅರಸ ಚಿತ್ತೈಸಾರುಸಾವಿರ ...{Loading}...
ಅರಸ ಚಿತ್ತೈಸಾರುಸಾವಿರ
ವರಮಹಾರಥರೌಕಿದರು ಝ
ಲ್ಲರಿಯ ಝಾಡಿಯ ಸೆಳೆಯ ಸಿಂಧದ ಸುಳಿವ ಸೀಗುರಿಯ
ಬಿರಿಯೆ ನೆಲನುಬ್ಬೇಳ್ವ ಬೊಬ್ಬೆಯ
ಮುರಜ ಡಿಂಡಿಮ ಪಟಹದಾಡಂ
ಬರದಲೊದಗಿತು ಕೆಲನ ಕೈವಾರಿಗಳ ರಭಸದಲಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಆರು ಸಾವಿರ ಸಂಖ್ಯೆಯ ಶ್ರೇಷ್ಠ ಮಹಾರಥರು, ಮಕರ ತೋರಣಗಳು, ದೊಣ್ಣೆಗಳು, ಅಲ್ಲಾಡುತ್ತಿರುವ ಚಾಮರಗಳು, ಬಾವುಟಗಳು ನೆಲ ಬಿರಿಯುವಂತೆ ಶಬ್ದ ಮಾಡುತ್ತಿದ್ದ , ಮುರಜ, ಡಿಂಡಿಮ, ಪಟಹ ಮೊದಲಾದ ವಾದ್ಯಗಳ ಆರ್ಭಟದಲ್ಲಿ ಪಕ್ಕದಲ್ಲಿದ್ದ ಹೊಗಳುಭಟ್ಟರ ಹೊಗಳಿಕೆಯ ಜೊತೆಯಲ್ಲಿ ಮುನ್ನುಗ್ಗಿದರು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಝಲ್ಲರಿ-ಮಕರ ತೋರಣ, ಝಾಡಿ-ದಟ್ಟ, ಸೆಳೆ-ದೊಣ್ಣೆ, ಸಿಂಧ-ಧ್ವಜ, ಸೀಗುರಿ-ಒಂದು ಬಗೆಯ ಚಾಮರ
ಮೂಲ ...{Loading}...
ಅರಸ ಚಿತ್ತೈಸಾರುಸಾವಿರ
ವರಮಹಾರಥರೌಕಿದರು ಝ
ಲ್ಲರಿಯ ಝಾಡಿಯ ಸೆಳೆಯ ಸಿಂಧದ ಸುಳಿವ ಸೀಗುರಿಯ
ಬಿರಿಯೆ ನೆಲನುಬ್ಬೇಳ್ವ ಬೊಬ್ಬೆಯ
ಮುರಜ ಡಿಂಡಿಮ ಪಟಹದಾಡಂ
ಬರದಲೊದಗಿತು ಕೆಲನ ಕೈವಾರಿಗಳ ರಭಸದಲಿ ॥35॥
೦೩೬ ಫಡಫಡೆಲವೋ ಪಾರ್ಥ ...{Loading}...
ಫಡಫಡೆಲವೋ ಪಾರ್ಥ ರಾಯನ
ತುಡುಕಲಹುದೇ ಕೂಟಗಿರಿಯಲಿ
ಕಡಲು ಹೂಳುವುದೇ ಸಧಾರನಲಾ ಮಹಾದೇವ
ಹಿಡಿ ಮಹಾಸ್ತ್ರವನಿನ್ನು ಮುಂದಡಿ
ಮಿಡುಕಿದಡೆ ತಮ್ಮಾಣೆಯೆನುತವ
ಗಡಿಸಿ ನೂಕಿತು ನಿನ್ನವನ ಮನ್ನಣೆಯ ಪರಿವಾರ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಕಡೆಯ ಮಾನ್ಯರಾದ ಪರಿವಾರದ ಸೈನಿಕರು “ಛೀ, ಅರ್ಜುನ, ದುರ್ಯೋಧನನನ್ನು ಹಿಡಿಯಲು ನಿನಗೆ ಆಗುತ್ತದೆಯೇ? ಕೃತಕ ಪರ್ವತದಿಂದ ಸಮುದ್ರವನ್ನು ಮುಚ್ಚಿ ಹಾಕಲು ಸಾಧ್ಯವೇ? ನೀನು ಮಹಾವೀರ. ಮಹಾಸ್ತ್ರವನ್ನು ಹಿಡಿದು ಪ್ರಯೋಗಿಸು. ಇನ್ನು ಮುಂದಕ್ಕೆ ಹೆಜ್ಜೆ ಇಟ್ಟರೆ ನಮ್ಮ ಆಣೆ” ಎನ್ನುತ್ತಾ ಪ್ರತಿಭಟಿಸಿ ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ತುಡುಕು-ಹಿಡಿ
ಮೂಲ ...{Loading}...
ಫಡಫಡೆಲವೋ ಪಾರ್ಥ ರಾಯನ
ತುಡುಕಲಹುದೇ ಕೂಟಗಿರಿಯಲಿ
ಕಡಲು ಹೂಳುವುದೇ ಸಧಾರನಲಾ ಮಹಾದೇವ
ಹಿಡಿ ಮಹಾಸ್ತ್ರವನಿನ್ನು ಮುಂದಡಿ
ಮಿಡುಕಿದಡೆ ತಮ್ಮಾಣೆಯೆನುತವ
ಗಡಿಸಿ ನೂಕಿತು ನಿನ್ನವನ ಮನ್ನಣೆಯ ಪರಿವಾರ ॥36॥
೦೩೭ ಜನಪ ಕೇಳೈ ...{Loading}...
ಜನಪ ಕೇಳೈ ರಕುತಜಲದಲಿ
ನನೆದ ನೆಲ ಪುಡಿಮಸಗೆ ಕೆಂಧೂ
ಳಿನಲಿ ಕತ್ತಲಿಸಿತ್ತು ದಿಗ್ಬ್ರಮೆಯಾದುದಡಿಗಡಿಗೆ
ಇನಿಬರಾವೆಡೆ ಕರ್ಣನೋ ಫಲು
ಗುಣನೊ ಪಾಂಡವಬಲವೊ ನಿನ್ನಾ
ತನೊ ನಿಧಾನಿಸಲರಿಯೆನೊಂದರೆಗಳಿಗೆ ಮಾತ್ರದಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಆ ಸೈನಿಕರ ತುಳಿತದಿಂದ ರಕ್ತದ ನೀರಿನಲ್ಲಿ ನೆನೆದು ಹೋಗಿದ್ದ ನೆಲ, ಧೂಳೆದ್ದು, ಹೆಜ್ಜೆ ಹೆಜ್ಜೆಗೆ ಭಯವುಂಟಾಗುವಂತೆ. ಕೆಂಪು ಧೂಳಿನಿಂದ ಕತ್ತಲೆಯುಂಟಾಯಿತು. ಅಲ್ಲಿರುವುದು ಕರ್ಣನೋ, ಅರ್ಜುನನೋ, ಪಾಂಡವರ ಸೈನ್ಯವೋ, ಕೌರವರ ಸೈನ್ಯವೋ, ಯೋಚಿಸಿದರೆ ಒಂದು ಅರ್ಧಗಳಿಗೆ ನನಗೆ ಏನೂ ತಿಳಿಯಲಿಲ್ಲ” ಎಂದ ಸಂಜಯ
ಮೂಲ ...{Loading}...
ಜನಪ ಕೇಳೈ ರಕುತಜಲದಲಿ
ನನೆದ ನೆಲ ಪುಡಿಮಸಗೆ ಕೆಂಧೂ
ಳಿನಲಿ ಕತ್ತಲಿಸಿತ್ತು ದಿಗ್ಬ್ರಮೆಯಾದುದಡಿಗಡಿಗೆ
ಇನಿಬರಾವೆಡೆ ಕರ್ಣನೋ ಫಲು
ಗುಣನೊ ಪಾಂಡವಬಲವೊ ನಿನ್ನಾ
ತನೊ ನಿಧಾನಿಸಲರಿಯೆನೊಂದರೆಗಳಿಗೆ ಮಾತ್ರದಲಿ ॥37॥
೦೩೮ ಮಳೆಗೆ ಹೆಚ್ಚಿದ ...{Loading}...
ಮಳೆಗೆ ಹೆಚ್ಚಿದ ಧೂಳಿನಬ್ಬರ
ವಳಿವವೊಲು ವಿಜಯಾಸ್ತ್ರಹತಿಯಲಿ
ಹಿಳಿದ ಕರಿ ನರ ತುರಗದೊಡಲರುಣಾಂಬುಧಾರೆಯಲಿ
ಕಳಚಿತೀ ಕೆಂಧೂಳಿ ಬಾಣಾ
ವಳಿಯ ಕತ್ತಲೆಯೊಳಗೆ ಕಾಣೆನು
ದಳದೊಳಾರಾರೆಂದು ಮತ್ತರೆಗಳಿಗೆ ಮಾತ್ರದಲಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಮೇಲಕ್ಕೆ ಎದ್ದಿದ್ದ ಧೂಳಿನ ಅಬ್ಬರವು ಮಳೆಯಿಂದ ನಾಶವಾಗುವ ಹಾಗೆ, ಅರ್ಜುನನ ಬಾಣಗಳ ಪೆಟ್ಟಿನಿಂದ ಆನೆ, ಕುದುರೆ, ಮನುಷ್ಯರ ದೇಹಗಳು ಸೀಳಿ ಹೋಗಿ, ಸುರಿದ ಕೆಂಪು ರಕ್ತದ ಮಳೆಯಲ್ಲಿ ರಣರಂಗದ ಕೆಂಧೂಳು ಅಡಗಿತು. ಬಾಣಗಳ ಕತ್ತಲೆಯಲ್ಲಿ ಸೈನ್ಯದಲ್ಲಿ ಯಾರು ಯಾರು ಎಂಬುದು ಒಂದು ಅರ್ಧಗಳಿಗೆ ನನಗೆ ತಿಳಿಯಲಿಲ್ಲ’ ಎಂದ ಸಂಜಯ.
ಪದಾರ್ಥ (ಕ.ಗ.ಪ)
ಹಿಳಿ- ಸೀಳು
ಮೂಲ ...{Loading}...
ಮಳೆಗೆ ಹೆಚ್ಚಿದ ಧೂಳಿನಬ್ಬರ
ವಳಿವವೊಲು ವಿಜಯಾಸ್ತ್ರಹತಿಯಲಿ
ಹಿಳಿದ ಕರಿ ನರ ತುರಗದೊಡಲರುಣಾಂಬುಧಾರೆಯಲಿ
ಕಳಚಿತೀ ಕೆಂಧೂಳಿ ಬಾಣಾ
ವಳಿಯ ಕತ್ತಲೆಯೊಳಗೆ ಕಾಣೆನು
ದಳದೊಳಾರಾರೆಂದು ಮತ್ತರೆಗಳಿಗೆ ಮಾತ್ರದಲಿ ॥38॥
೦೩೯ ಬೆರಸಿ ಹೊಯ್ದರು ...{Loading}...
ಬೆರಸಿ ಹೊಯ್ದರು ರಾವುತರು ರಥ
ತುರಗನಿಕರದ ಬೆಸುಗೆ ಬಿಡೆ ಮದ
ಕರಿಗಳಂಘವಿಸಿದವು ರಥ ಚಾಚಿದವು ಮುಂದಣಿಗೆ
ಹರಿಗೆಗಳ ತಲೆಗೊಡ್ಡಿ ಕಕ್ಕಡ
ಪರಶು ಖಂಡೆಯದವರು ಮಂಡಿಯ
ತೆರಳದಾಂತರು ಫಲುಗುಣನ ರಥದೆರಡುಪಕ್ಕದಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾವುತರು ಶತ್ರು ಸಮೂಹದ ಒಳಕ್ಕೆ ನುಗ್ಗಿ ರಥದ ಕುದುರೆಗಳು ರಥದಿಂದ ಕಳಚಿಕೊಳ್ಳುವಂತೆ ಯುದ್ಧ ಮಾಡಿದರು. ಮದದಾನೆಗಳು ಸಾಹಸದಿಂದ ನುಗ್ಗಿದವು. ರಥಗಳು ಮುಂದಕ್ಕೆ ಚಲಿಸಿದವು. ಗುರಾಣಿಗಳನ್ನು ತಲೆಗೆ ಅಡ್ಡ ಹಿಡಿದ, ಕಕ್ಕಡ, ಪರಶು, ಬಂಡೆಯ ಮೊದಲಾದ ಆಯುಧಗಳನ್ನು ಹಿಡಿದು, ಮಂಡಿಯೂರಿ ಮುನ್ನುಗ್ಗಿದ ವೀರರು ಅರ್ಜುನನ ರಥದ ಎರಡೂ ಪಕ್ಕದಲ್ಲಿ ನಿಂತು ಎದುರಿಸಿದರು.
ಟಿಪ್ಪನೀ (ಕ.ಗ.ಪ)
ಮಂಡಿ-ಮಲ್ಲಗಾಳಗ, ಕತ್ತಿವರಸೆ, ಬಾಣಪ್ರಯೋಗ ಮುಂತಾದ ಸಂದರ್ಭಗಳಲ್ಲಿ ಮೊಳಕಾಲನ್ನೂರಿ ಕುಳಿತುಕೊಳ್ಳುವ ಒಂದು ಭಂಗ.
ಮೂಲ ...{Loading}...
ಬೆರಸಿ ಹೊಯ್ದರು ರಾವುತರು ರಥ
ತುರಗನಿಕರದ ಬೆಸುಗೆ ಬಿಡೆ ಮದ
ಕರಿಗಳಂಘವಿಸಿದವು ರಥ ಚಾಚಿದವು ಮುಂದಣಿಗೆ
ಹರಿಗೆಗಳ ತಲೆಗೊಡ್ಡಿ ಕಕ್ಕಡ
ಪರಶು ಖಂಡೆಯದವರು ಮಂಡಿಯ
ತೆರಳದಾಂತರು ಫಲುಗುಣನ ರಥದೆರಡುಪಕ್ಕದಲಿ ॥39॥
೦೪೦ ಅರಸ ಕೇಳು ...{Loading}...
ಅರಸ ಕೇಳು ಜಯದ್ರಥನ ಮೋ
ಹರದ ಮಧ್ಯದೊಳಂದು ಸಿಲುಕದ
ನರನ ರಥವೀ ಹೊಳ್ಳುಗರ ಹೋರಟೆಗೆ ಹೆದರುವುದೇ
ಕರಿಘಟಾವಳಿಗೊಂದು ಶರವಾ
ತುರಗದಳಕೊಂದಂಬು ಬಳಿಕೆರ
ಡೆರಡು ಶರದಲಿ ಕೆಡಹಿದನು ಕಾಲಾಳುತೇರುಗಳ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆಯೇ ಕೇಳು, ಜಯದ್ರಥನ ಸೈನ್ಯದ ಮಧ್ಯದಲ್ಲಿ ಈ ಹಿಂದೆ ಸಿಕ್ಕಿ ಹಾಕಿಕೊಳ್ಳದ ಅರ್ಜುನನ ರಥ ಈ ಟೊಳ್ಳು ಜನಗಳ ಹೋರಾಟಕ್ಕೆ ಹೆದರುತ್ತದೆಯೇ? ಆನೆಗಳ ಸಮೂಹಕ್ಕೆ ಒಂದು ಬಾಣ, ಕುದುರೆಗಳ ಸೈನ್ಯಕ್ಕೆ ಒಂದು ಬಾಣ, ಮತ್ತು ಎರಡು ಬಾಣಗಳಿಂದ ಕಾಲಾಳುಗಳು ಹಾಗೂ ರಥಗಳನ್ನು ಕೆಡವಿದನು.
ಪದಾರ್ಥ (ಕ.ಗ.ಪ)
ಹೊಳ್ಳುಗ-ಟೊಳ್ಳಾಗಿರುವವರು
ಮೂಲ ...{Loading}...
ಅರಸ ಕೇಳು ಜಯದ್ರಥನ ಮೋ
ಹರದ ಮಧ್ಯದೊಳಂದು ಸಿಲುಕದ
ನರನ ರಥವೀ ಹೊಳ್ಳುಗರ ಹೋರಟೆಗೆ ಹೆದರುವುದೇ
ಕರಿಘಟಾವಳಿಗೊಂದು ಶರವಾ
ತುರಗದಳಕೊಂದಂಬು ಬಳಿಕೆರ
ಡೆರಡು ಶರದಲಿ ಕೆಡಹಿದನು ಕಾಲಾಳುತೇರುಗಳ ॥40॥
೦೪೧ ಆಳು ಮುರಿದುದಲೈ ...{Loading}...
ಆಳು ಮುರಿದುದಲೈ ಮಹಾರಥ
ರೇಳಿರೈ ನೀವಾರುಸಾವಿರ
ಮೇಲುದಳದವರಾಕೆವಾಳರು ನಿಮ್ಮ ಥಟ್ಟಿನಲಿ
ಮೇಳವದ ಪರಿ ಲೇಸು ಕರ್ಣನ
ಸೋಲದಲಿ ಸೀವರಿಸಿದರೆ ಭೂ
ಪಾಲನಾಣೆ ದೊಠಾರರಹಿರೆನುತೆಚ್ಚನಾ ಪಾರ್ಥ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ‘ನಿಮ್ಮ ಕಾಲಾಳುಗಳು ಸೋತು ಹೋದರು. ಆರು ಸಾವಿರ ಸಂಖ್ಯೆಯ ಮಹಾಶೂರರು ನಿಮ್ಮ ಸೈನ್ಯದ ಮಹಾರಥರು ಎದ್ದು ಬನ್ನಿ. ನೀವು ಒಟ್ಟಾಗಿ ಬಂದರೆ ಚೆನ್ನ. ಕರ್ಣನಿಗಾದ ಸೋಲಿನಿಂದ ನೀವು ಹಿಂದೆಗೆದರೆ ನಿಮ್ಮ ದೊರೆ ದುರ್ಯೋಧನನ ಮೇಲಿನ ಆಣೆ. ನೀವು ಬಲಿಷ್ಠರಾಗಿದ್ದೀರಿ’ ಎಂದು ಬಾಣಗಳಿಂದ ಹೊಡೆದನು.
ಪದಾರ್ಥ (ಕ.ಗ.ಪ)
ಸೀವರಿಸು-ತಿರಸ್ಕರಿಸು/ಹಿಂದೆಗೆ, ದೊಠಾರರು- ಬಲಿಷ್ಠರು
ಮೂಲ ...{Loading}...
ಆಳು ಮುರಿದುದಲೈ ಮಹಾರಥ
ರೇಳಿರೈ ನೀವಾರುಸಾವಿರ
ಮೇಲುದಳದವರಾಕೆವಾಳರು ನಿಮ್ಮ ಥಟ್ಟಿನಲಿ
ಮೇಳವದ ಪರಿ ಲೇಸು ಕರ್ಣನ
ಸೋಲದಲಿ ಸೀವರಿಸಿದರೆ ಭೂ
ಪಾಲನಾಣೆ ದೊಠಾರರಹಿರೆನುತೆಚ್ಚನಾ ಪಾರ್ಥ ॥41॥
೦೪೨ ಬಾಣಹತಿಗಕ್ಕುಡಿಸಿ ರಾಜ್ಯ ...{Loading}...
ಬಾಣಹತಿಗಕ್ಕುಡಿಸಿ ರಾಜ್ಯ
ಶ್ರೇಣಿ ಜರುಗಿತು ಶೌರ್ಯನಗರದ
ವಾಣಿಯರು ಹೊಕ್ಕಿರಿದು ಹೋಗಾಡಿದರು ಪತಿರಿಣವ
ಗೋಣಕೊಯ್ಲಿನ ಕಾವಣಕೆ ಮುಂ
ಗೇಣಿಕಾರನು ಮೊಳಗಿದನು ಫಡ
ಕೇಣವಿನ್ನೇಕೆನುತ ಕೈದೋರಿತು ಭಟಸ್ತೋಮ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣಗಳ ಪೆಟ್ಟಿಗೆ ರಾಜರ ಸಮೂಹ ನಿಂತು, ಹಿಮ್ಮೆಟ್ಟಿತು. ಸಾಹಸ ಎಂಬ ನಗರದ ವ್ಯಾಪಾರಿಗಳು ಒಳಕ್ಕೆ ನುಗ್ಗಿ ಒಡೆಯನ ಋಣವನ್ನು ತೀರಿಸಿದರು. “ಕತ್ತುಗಳ ಕುಯ್ಲನ್ನು ರಾಶಿ ಹಾಕಿದ, ಮೊದಲೇ ಅದರ ಗೇಣಿಯನ್ನು ಪಡೆದಿದ್ದ ಅರ್ಜುನನು ಆರ್ಭಟಿಸುತ್ತಿದ್ದಾನೆ. ಛೀ ಇನ್ನೇಕೆ ಮಾತ್ಸರ್ಯ” ಎಂದು ಸೈನಿಕರು ಸಾಹಸವನ್ನು ತೋರಿಸಿದರು.
ಪದಾರ್ಥ (ಕ.ಗ.ಪ)
ಅಕ್ಕುಡಿಸು-ಕುಗ್ಗು, ನಿಲ್ಲು, ಕಾವಣ-ಮಂಟಪ, ಕೇಣ-ಮತ್ಸರ, ಗೇಣಿ-ಭೂಮಿಯನ್ನು ಸಾಗುವಳಿಗೆ ಗುತ್ತಿಗೆ ಪಡೆಯುವುದು
ಮೂಲ ...{Loading}...
ಬಾಣಹತಿಗಕ್ಕುಡಿಸಿ ರಾಜ್ಯ
ಶ್ರೇಣಿ ಜರುಗಿತು ಶೌರ್ಯನಗರದ
ವಾಣಿಯರು ಹೊಕ್ಕಿರಿದು ಹೋಗಾಡಿದರು ಪತಿರಿಣವ
ಗೋಣಕೊಯ್ಲಿನ ಕಾವಣಕೆ ಮುಂ
ಗೇಣಿಕಾರನು ಮೊಳಗಿದನು ಫಡ
ಕೇಣವಿನ್ನೇಕೆನುತ ಕೈದೋರಿತು ಭಟಸ್ತೋಮ ॥42॥
೦೪೩ ಸೀಳಿದನು ಸಮರಥರ ...{Loading}...
ಸೀಳಿದನು ಸಮರಥರ ಸುಳಿಗೊಂ
ಡಾಳ ಸದೆದನು ಸವರಿದನು ಭೂ
ಪಾಲಪುತ್ರರನಖಿಳದೇಶದ ರಾಜಸಂತತಿಯ
ಆಳು ಮುರಿದುದು ಮಾನಹಾನಿಯ
ಹೇಳುವಡೆ ನಗೆಯದನು ಕುರುಬಲ
ಜಾಲದಲಿ ಜಳ್ಳುಗರು ಬಿದ್ದುದು ಭಂಗ ಶರಧಿಯಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಸಮರಥರನ್ನು ಸೀಳಿ ಹಾಕಿದನು. ಆಕ್ರಮಿಸಿದ ಸೈನಿಕರನ್ನು ಚಚ್ಚಿದನು. ಎಲ್ಲಾ ದೇಶದ ರಾಜವಂಶದ ರಾಜಕುಮಾರರನ್ನು ಸವರಿದನು. ಸೈನ್ಯ ವ್ಯವಸ್ಥೆ ಹಾಳಾಯಿತು. ಆದ ಮಾನಭಂಗವನ್ನು ಹೇಳೋಣವೆಂದರೆ ನಗೆಗೆ ಕಾರಣವಾಗುತ್ತದೆ. ಕೌರವ ಸೈನ್ಯ ಸಮೂಹದಲ್ಲಿ ಬಲಹೀನರಾದವರು ಅವಮಾನದ ಸಮುದ್ರದಲ್ಲಿ ಬಿದ್ದುಹೋದರು.
ಪದಾರ್ಥ (ಕ.ಗ.ಪ)
ಜಳ್ಳುಗ-ಬಲಹೀನ
ಮೂಲ ...{Loading}...
ಸೀಳಿದನು ಸಮರಥರ ಸುಳಿಗೊಂ
ಡಾಳ ಸದೆದನು ಸವರಿದನು ಭೂ
ಪಾಲಪುತ್ರರನಖಿಳದೇಶದ ರಾಜಸಂತತಿಯ
ಆಳು ಮುರಿದುದು ಮಾನಹಾನಿಯ
ಹೇಳುವಡೆ ನಗೆಯದನು ಕುರುಬಲ
ಜಾಲದಲಿ ಜಳ್ಳುಗರು ಬಿದ್ದುದು ಭಂಗ ಶರಧಿಯಲಿ ॥43॥
೦೪೪ ಬಿಡುದಲೆಯಲೋಡಿದರು ಬಿರುದಿನ ...{Loading}...
ಬಿಡುದಲೆಯಲೋಡಿದರು ಬಿರುದಿನ
ತೊಡರ ಬಿಸುಟರು ವಾಹನಂಗಳ
ತೊಡಕ ಬಿಟ್ಟರು ನೆಲಕೆ ಕೈಲೆಡೆಗೊಟ್ಟು ಕೈದುಗಳ
ಅಡಸಿ ಕಾವ ನರಪ್ರತಾಪದ
ಕಡುವಿಸಿಲ ಬೇಗೆಯಲಿ ವೀರದ
ಮಡುಗಳುರೆ ಬತ್ತಿದವು ಮೋರೆಗಳೊಣಗಿ ಪಟುಭಟರ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಕಡೆಯ ಸೈನ್ಯದವರು ‘ತಲೆಯ ಗಂಟು ಬಿಚ್ಚಿ ಹೋದರೂ ಗಮನಿಸದೆ ಓಡಿದರು. ತಮ್ಮ ತಮ್ಮ ಬಿರುದುಗಳ ಆಭರಣಗಳನ್ನು ಬಿಸುಟರು. ವಾಹನಗಳ ತಂಟೆಯೆ ಬೇಡ ಎಂದು ಬಿಟ್ಟು ಹೋದರು. ಆಯುಧಗಳನ್ನು ನೆಲಕ್ಕೆ ಬಿಸಾಡಿದರು. ಮೇಲೆ ಬಿದ್ದು ಸುಡುತ್ತಿರುವ ಅರ್ಜುನನ ಸಾಹಸದ ಬಿರು ಬಿಸಿಲಿನ ತಾಪದಲ್ಲಿ ಆ ಬಲಶಾಲಿ ವೀರರ ಮೋರೆಗಳು ಒಣಗಿ ಅವರ ಶೌರ್ಯದ ಮಡುಗಳು ಪೂರ್ತಿ ಬತ್ತಿಹೋದವು.
ಮೂಲ ...{Loading}...
ಬಿಡುದಲೆಯಲೋಡಿದರು ಬಿರುದಿನ
ತೊಡರ ಬಿಸುಟರು ವಾಹನಂಗಳ
ತೊಡಕ ಬಿಟ್ಟರು ನೆಲಕೆ ಕೈಲೆಡೆಗೊಟ್ಟು ಕೈದುಗಳ
ಅಡಸಿ ಕಾವ ನರಪ್ರತಾಪದ
ಕಡುವಿಸಿಲ ಬೇಗೆಯಲಿ ವೀರದ
ಮಡುಗಳುರೆ ಬತ್ತಿದವು ಮೋರೆಗಳೊಣಗಿ ಪಟುಭಟರ ॥44॥
೦೪೫ ಹೋಗದಿರಿ ಹೋಗದಿರಿ ...{Loading}...
ಹೋಗದಿರಿ ಹೋಗದಿರಿ ದಳಪತಿ
ಯಾಗುಹೋಗರಿಯದೆ ನೃಪಾಲನ
ಮೂಗನಾರಿಗೆ ಮಾರಿದಿರಿ ಕೊಂಬುವರು ನಾವಲ್ಲ
ಈ ಗರುವರೀ ಪರಿ ಪಲಾಯನ
ಯೋಗಸಿದ್ಧರೆ ಸಾಹಸಿಕರೈ
ಜಾಗೆನುತ ಬೆಂಬತ್ತಿ ಹುಡಿಗುಟ್ಟಿದ ಮಹಾರಥರ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಓಡುತ್ತಿದ್ದ ಮಹಾರಥರನ್ನು ಅಟ್ಟಿಕೊಂಡು ಹೋಗುತ್ತ, " ನಿಮ್ಮ ಸೇನಾಪತಿಯ ಅವಸ್ಥೆಯನ್ನು ತಿಳಿಯದೆ ಹೋಗಬೇಡಿ, ಹೋಗಬೇಡಿ. ದುರ್ಯೋಧನನ ಗೌರವವನ್ನು ಯಾರಿಗೆ ಮಾರಿದ್ದೀರಾ? ನಾನಂತೂ ಕೊಂಡು ಕೊಳ್ಳುವವನಲ್ಲ. ಇಂತಹ ಶ್ರೇಷ್ಠರು ಹೀಗೆ ಪಲಾಯನ ಮಾಡುವ ಯೋಗ ಸಿದ್ಧಿಯನ್ನು ಪಡೆದಿರುವವರೇ? ಸಾಹಸಿಗಳು ನೀವು ಭೇಷ್” ಎಂದು ಅರ್ಜುನನು ಅವರನ್ನು ಪುಡಿ ಪುಡಿ ಮಾಡಿದನು.
ಮೂಲ ...{Loading}...
ಹೋಗದಿರಿ ಹೋಗದಿರಿ ದಳಪತಿ
ಯಾಗುಹೋಗರಿಯದೆ ನೃಪಾಲನ
ಮೂಗನಾರಿಗೆ ಮಾರಿದಿರಿ ಕೊಂಬುವರು ನಾವಲ್ಲ
ಈ ಗರುವರೀ ಪರಿ ಪಲಾಯನ
ಯೋಗಸಿದ್ಧರೆ ಸಾಹಸಿಕರೈ
ಜಾಗೆನುತ ಬೆಂಬತ್ತಿ ಹುಡಿಗುಟ್ಟಿದ ಮಹಾರಥರ ॥45॥
೦೪೬ ಇವರ ಹದನಿದು ...{Loading}...
ಇವರ ಹದನಿದು ಕರ್ಣನಾಡಿದ
ಕವಡಿಕೆಯ ಬೆಸಗೊಳ್ಳಿರೈ ಕೌ
ರವನ ಸರ್ವಗ್ರಾಸಕಿವೆ ರಾಹುಗಳು ಲಟಕಟಿಸಿ
ನಿವಗೆ ಹರಿಬದೊಳೊಂದು ಮುಟ್ಟಿಗೆ
ರವಣವುಂಟೇ ಹಾಯ್ಕಿ ನಿಮ್ಮಾ
ಟವನು ನೋಡುವೆನೆಂದು ಕರೆದನು ಕೃಪನ ಗುರುಸುತನ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಕೃಪಾಚಾರ್ಯ, ಅಶ್ವತ್ಥಾಮರನ್ನು ಕರೆಯುತ್ತಾ ‘ಈ ಮಹಾರಥರ ರೀತಿ ಹೀಗಾಯ್ತು. ಕರ್ಣನು ಹೇಳಿಕೊಟ್ಟಿರುವ ಮೋಸದ ಮಾತುಗಳನ್ನು ನೆನಪಿಸಿಕೊಳ್ಳಿ. ಕೌರವನೆಂಬ ಸೂರ್ಯನನ್ನು ಸರ್ವಗ್ರಾಸವಾಗಿ ನುಂಗಲು ರಾಹುಗಳು ಆತುರದಿಂದ ಕಾದಿವೆ. ನಿಮಗೆ ಯುದ್ಧದ ಆಟದಲ್ಲಿ ಯಾವುದಾದರೂ ಸಣ್ಣ ಉಳಿಯಂತಹ ಸಾಮಗ್ರಿ ಪಣವಾಗಿ ಒಡ್ಡಲು ಇದ್ದರೆ, ಪ್ರಯೋಗಿಸಿ. ನಿಮ್ಮ ಆಟವನ್ನು ನೋಡುತ್ತೇನೆ’ ಎಂದನು.
ಪದಾರ್ಥ (ಕ.ಗ.ಪ)
ಕವಡಿಕೆ-ಮೋಸ, ಹರಿಬ-ಕರ್ತವ್ಯ, ಮುಟ್ಟಿಗೆ-ಸಣ್ಣ ಉಳಿ, ರವಣ-ರಪಣ, ಆಸ್ತಿ, ಪಣ
ಮೂಲ ...{Loading}...
ಇವರ ಹದನಿದು ಕರ್ಣನಾಡಿದ
ಕವಡಿಕೆಯ ಬೆಸಗೊಳ್ಳಿರೈ ಕೌ
ರವನ ಸರ್ವಗ್ರಾಸಕಿವೆ ರಾಹುಗಳು ಲಟಕಟಿಸಿ
ನಿವಗೆ ಹರಿಬದೊಳೊಂದು ಮುಟ್ಟಿಗೆ
ರವಣವುಂಟೇ ಹಾಯ್ಕಿ ನಿಮ್ಮಾ
ಟವನು ನೋಡುವೆನೆಂದು ಕರೆದನು ಕೃಪನ ಗುರುಸುತನ ॥46॥
೦೪೭ ಅರಸ ಕೇಳಾಕ್ಷಣಕೆ ...{Loading}...
ಅರಸ ಕೇಳಾಕ್ಷಣಕೆ ಮುಗ್ಗಿತು
ಮರವೆ ನೆಗ್ಗಿತು ಭೀತಿ ಧೈರ್ಯದ
ತಿರುಳು ಬಲಿದುದು ಕೋಪ ತಳಿದುದು ಖೋಡಿ ನೀರೊರೆಯೆ
ಕರಣಪಲ್ಲಟಪಾಡಿನಲಿ ಸಂ
ವರಿಸಿಕೊಂಡುದು ವೀರರಸವು
ಬ್ಬರಿಸಿ ಸರ್ವೇಂದ್ರಿಯವ ಮುಸುಕಿತು ನಿಮ್ಮ ದಳಪತಿಯ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ನಿಮ್ಮ ದಳಪತಿಯಾದ ಕರ್ಣನ ಮೂರ್ಛೆ ತಿಳಿಯಿತು. ಭಯ ತಗ್ಗಿತು. ಧೈರ್ಯದ ಸತ್ವ ಬಲವಾಯಿತು. ಕೋಪ ಮತ್ತೆ ಚಿಗುರಿತು. ಉಂಟಾಗಿದ್ದ ಹೀನಸ್ಥಿತಿ ನೀರಾಗಿ ಹರಿದುಹೋಯಿತು. ಪಲ್ಲಟವಾಗಿದ್ದ ಇಂದ್ರಿಯಗಳು ಸಮಾಧಾನಗೊಂಡವು. ವೀರರಸವು ಎಲ್ಲಾ ಇಂದ್ರಿಯಗಳನ್ನು ಉತ್ಸಾಹದಿಂದ ಆವರಿಸಿತು.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಅರಸ ಕೇಳಾಕ್ಷಣಕೆ ಮುಗ್ಗಿತು
ಮರವೆ ನೆಗ್ಗಿತು ಭೀತಿ ಧೈರ್ಯದ
ತಿರುಳು ಬಲಿದುದು ಕೋಪ ತಳಿದುದು ಖೋಡಿ ನೀರೊರೆಯೆ
ಕರಣಪಲ್ಲಟಪಾಡಿನಲಿ ಸಂ
ವರಿಸಿಕೊಂಡುದು ವೀರರಸವು
ಬ್ಬರಿಸಿ ಸರ್ವೇಂದ್ರಿಯವ ಮುಸುಕಿತು ನಿಮ್ಮ ದಳಪತಿಯ ॥47॥
೦೪೮ ನೋಡಿದನು ಕೆಲಬಲನನುಗಿದೀ ...{Loading}...
ನೋಡಿದನು ಕೆಲಬಲನನುಗಿದೀ
ಡಾಡಿದನು ನಟ್ಟಂಬುಗಳ ಹರಿ
ಜೋಡಬಿಟ್ಟನು ತೊಳೆದನಂಗೋಪಾಂಗ ಶೋಣಿತವ
ಕೂಡೆ ಕಸ್ತುರಿಗಂಧದಲಿ ಮುಳು
ಗಾಡಿ ದಿವ್ಯದುಕೂಲದಲಿ ಮೈ
ಗೂಡಿ ಮೆರೆದನು ಕರ್ಣನನುಪಮ ತೀವ್ರತೇಜದಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಆ ಕಡೆ ಈ ಕಡೆ ನೋಡಿದನು. ತನಗೆ ನಾಟಿದ್ದ ಬಾಣಗಳನ್ನು ಕಿತ್ತು ಹಾಕಿದನು. ಕಿತ್ತುಹೋಗಿದ್ದ ಕವಚವನ್ನು ತೆಗೆದುಹಾಕಿದನು. ದೇಹದ ಭಾಗಗಳಿಗೆ ಮೆತ್ತಿಕೊಂಡಿದ್ದ ರಕ್ತವನ್ನು ತೊಳೆದನು. ಜೊತೆಯಲ್ಲಿ ಆಗಲೇ ಕಸ್ತೂರಿ ಗಂಧವನ್ನು ಲೇಪಿಸಿಕೊಂಡು ದಿವ್ಯವಾದ ರೇಷ್ಮೆ ವಸ್ತ್ರವನ್ನು ಹೊದ್ದು, ಉಪಮಾತೀತವಾದ ತೇಜಸ್ಸಿನಿಂದ ಮೆರೆದನು.
ಮೂಲ ...{Loading}...
ನೋಡಿದನು ಕೆಲಬಲನನುಗಿದೀ
ಡಾಡಿದನು ನಟ್ಟಂಬುಗಳ ಹರಿ
ಜೋಡಬಿಟ್ಟನು ತೊಳೆದನಂಗೋಪಾಂಗ ಶೋಣಿತವ
ಕೂಡೆ ಕಸ್ತುರಿಗಂಧದಲಿ ಮುಳು
ಗಾಡಿ ದಿವ್ಯದುಕೂಲದಲಿ ಮೈ
ಗೂಡಿ ಮೆರೆದನು ಕರ್ಣನನುಪಮ ತೀವ್ರತೇಜದಲಿ ॥48॥
೦೪೯ ಬೋಳವಿಸಿದನು ಶಲ್ಯನನು ...{Loading}...
ಬೋಳವಿಸಿದನು ಶಲ್ಯನನು ಮಿಗೆ
ಸೂಳವಿಸಿದನು ಭುಜವನುಬ್ಬಿನೊ
ಳಾಳವಿಸಿದನು ಚಾಪಗಾನಸ್ವಾನಕವನರಿದು
ಮೇಳವಿಸಿ ನಿಜರಥವ ಕೆಲದಲಿ
ಜೋಳವಿಸಿ ಹೊದೆಯಂಬನಹಿತನ
ಪಾಳಿಸುವಡಂಬಿದೆಯೆನುತ ತೂಗಿದನು ಮಾರ್ಗಣೆಯ ॥|49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಶಲ್ಯನನ್ನು ಸಮಾಧಾನ ಪಡಿಸಿದನು. ತನ್ನ ಭುಜವನ್ನು ಚೆನ್ನಾಗಿ ತಟ್ಟಿಕೊಂಡನು. ಅತಿಯಾದ ಉತ್ಸಾಹದಿಂದ ತನ್ನ ಬಿಲ್ಲಿನ ದನಿಯನ್ನು ಆಲಾಪನೆ ಮಾಡಿ ಪರೀಕ್ಷಿಸಿ ಸಂತೋಷಿಸಿದನು. ತನ್ನ ರಥವನ್ನು ಸಿದ್ಧಪಡಿಸಿ, ಪಕ್ಕದಲ್ಲಿ ಬತ್ತಳಿಕೆ ಹಾಗೂ ಬಾಣಗಳನ್ನು ಅಳವಡಿಸಿಕೊಂಡು ‘ಶತ್ರುವನ್ನು ಸೀಳಬೇಕಾದರೆ ಈ ಬಾಣವೇ ಸರಿ’ ಎಂದು ಒಂದು ಬಾಣವನ್ನು ಪರೀಕ್ಷಿಸಿದನು.
ಪದಾರ್ಥ (ಕ.ಗ.ಪ)
ಬೋಳವಿಸು-ಸಮಾಧಾನ ಪಡಿಸು, ಸೂಳವಿಸು-ಹೊಡೆ, ತಟ್ಟು, ಆಳವಿಸು-ಆಲಾಪಿಸು, ಸಾನಕ-ಶಬ್ದ/ಧ್ವನಿ, ಪಾಳಿಸು-ಸೀಳು , ಜೋಳವಿಸು-ಜೋಳಿಸು-ಅಳವಡಿಸು,
ಹೊದೆ-ಬತ್ತಳಿಕೆ
ಮೂಲ ...{Loading}...
ಬೋಳವಿಸಿದನು ಶಲ್ಯನನು ಮಿಗೆ
ಸೂಳವಿಸಿದನು ಭುಜವನುಬ್ಬಿನೊ
ಳಾಳವಿಸಿದನು ಚಾಪಗಾನಸ್ವಾನಕವನರಿದು
ಮೇಳವಿಸಿ ನಿಜರಥವ ಕೆಲದಲಿ
ಜೋಳವಿಸಿ ಹೊದೆಯಂಬನಹಿತನ
ಪಾಳಿಸುವಡಂಬಿದೆಯೆನುತ ತೂಗಿದನು ಮಾರ್ಗಣೆಯ ॥|49॥
೦೫೦ ಫಡಫಡೆಲವೋ ಪಾರ್ಥ ...{Loading}...
ಫಡಫಡೆಲವೋ ಪಾರ್ಥ ಜೂಜಿಂ
ಗೊಡಬಡಿಕೆ ನಿಮಗೆಮಗೆ ಹಾರುವ
ರೊಡನೆ ಹೆಕ್ಕಳವೇಕೆ ಹೋಗದಿರಿತ್ತಲಿದಿರಾಗು
ಹಿಡಿದ ಮುಷ್ಟಿಗೆ ಸರ್ವ ರವಣವ
ಕೊಡಹಿ ನಿನ್ನೆದೆವೆರಳಕೊಳ್ಳದೆ
ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ‘ಎಲವೋ ಅರ್ಜುನ ಜೂಜಿನ ಒಪ್ಪಂದ ಇರುವುದು ನಮ್ಮ ನಿಮ್ಮ ನಡುವೆ. ಆ ಬ್ರಾಹ್ಮಣರಾದ ಕೃಪ, ಅಶ್ವತ್ಥಾಮರ ಜೊತೆ ಏಕೆ ಗರ್ವ ತೋರಿಸುತ್ತೀಯಾ ಹೋಗಬೇಡ, ನನ್ನನ್ನು ಎದುರಿಸು. ನೀನು ಹಿಡಿದಿರುವ ಎಲ್ಲಾ ಆಯುಧಗಳನ್ನು ಕೆಡವಿ, ನಿನ್ನ ಎದೆ ಮತ್ತು ಬೆರಳುಗಳನ್ನು ಘಾತಿಸದೆ ಬಿಡುತ್ತೇನೆಯೇ ಬಾ’ ಎನ್ನುತ್ತಾ ಕರೆದನು.
ಪದಾರ್ಥ (ಕ.ಗ.ಪ)
ಮುಷ್ಟಿಗೆ-ಸಣ್ಣ ಉಳಿಯಂತಹ ಒಂದು ಆಯುಧ
ಮೂಲ ...{Loading}...
ಫಡಫಡೆಲವೋ ಪಾರ್ಥ ಜೂಜಿಂ
ಗೊಡಬಡಿಕೆ ನಿಮಗೆಮಗೆ ಹಾರುವ
ರೊಡನೆ ಹೆಕ್ಕಳವೇಕೆ ಹೋಗದಿರಿತ್ತಲಿದಿರಾಗು
ಹಿಡಿದ ಮುಷ್ಟಿಗೆ ಸರ್ವ ರವಣವ
ಕೊಡಹಿ ನಿನ್ನೆದೆವೆರಳಕೊಳ್ಳದೆ
ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ ॥50॥
೦೫೧ ಅರಸ ಕೇಳೈ ...{Loading}...
ಅರಸ ಕೇಳೈ ಸಿಡಿಲಗರ್ಜನೆ
ಗುರುವಣಿಪ ಕೇಸರಿಯವೊಲು ಕೃಪ
ಗುರುಸುತರ ಬಿಸುಟಿತ್ತ ಹಾಯ್ದನು ಹಗೆಯ ಸಮ್ಮುಖಕೆ
ತಿರುಪು ಸದರವು ನಿನಗೆ ಗತಿಕಾ
ಹುರ ಕಣಾವಳಿ ಕಂಠಗತ ಬಾ
ಹಿರನು ನೀನೆಲೆ ಕರ್ಣ ಫಡ ಹೋಗೆನುತ ತೆಗೆದೆಚ್ಚ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೊರೆಯೇ ಕೇಳು, ಸಿಡಿಲ ಗರ್ಜನೆಯನ್ನು ಕೇಳಿ ಮುನ್ನುಗ್ಗುವ ಸಿಂಹದಂತೆ, ಕೃಪಾಚಾರ್ಯ ಅಶ್ವತ್ಥಾಮರನ್ನು ಬಿಟ್ಟು ಅರ್ಜುನನು ಶತ್ರುವಿನ ಮುಂದಕ್ಕೆ ನುಗ್ಗಿ ಬಂದನು. ‘ಬಿಲ್ಲಿನ ಕೊಪ್ಪನ್ನು ಕಂಡರೆ’ ನಿನಗೆ ಗೌರವವಿಲ್ಲ. ಬಾಣಗಳು ನಿನ್ನ ಕುತ್ತಿಗೆಯನ್ನು ಬಲವಾಗಿ ತಾಗುತ್ತವೆ. ನೀನು ಅಯೋಗ್ಯ, ಬಹಿಷ್ಕಾರಕ್ಕೆ ಯೋಗ್ಯನಾದವನು ಛೀ ಕರ್ಣ ಹೋಗು’ ಎನ್ನುತ್ತಾ ಬಾಣ ಪ್ರಯೋಗಿಸಿದನು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ತಿರುಪು - ಕೊಪ್ಪು
ಮೂಲ ...{Loading}...
ಅರಸ ಕೇಳೈ ಸಿಡಿಲಗರ್ಜನೆ
ಗುರುವಣಿಪ ಕೇಸರಿಯವೊಲು ಕೃಪ
ಗುರುಸುತರ ಬಿಸುಟಿತ್ತ ಹಾಯ್ದನು ಹಗೆಯ ಸಮ್ಮುಖಕೆ
ತಿರುಪು ಸದರವು ನಿನಗೆ ಗತಿಕಾ
ಹುರ ಕಣಾವಳಿ ಕಂಠಗತ ಬಾ
ಹಿರನು ನೀನೆಲೆ ಕರ್ಣ ಫಡ ಹೋಗೆನುತ ತೆಗೆದೆಚ್ಚ ॥51॥
೦೫೨ ಭರತಭಾಷೆಯಲಾ ವಿಧಾವಂ ...{Loading}...
ಭರತಭಾಷೆಯಲಾ ವಿಧಾವಂ
ತರು ವಿರಾಟನ ಮನೆಯಲಿದ್ದುದ
ನರಿಯೆವೇ ನಾವೆತ್ತ ಬಲ್ಲೆವು ನಿಮ್ಮ ವಿದ್ಯೆಗಳ
ಸರಸಮಾತಂತಿರಲಿ ಚಾಪ
ಸ್ಫುರಣದಭಿನಯದಂಗಹಾರದ
ಪರಿಯ ತೋರಾ ಎನುತ ತೆಗೆದೆಚ್ಚನು ಧನಂಜಯನ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ಅರ್ಜುನನ ಮೇಲೆ ಬಲವಾಗಿ ಬಾಣ ಪ್ರಯೋಗಿಸುತ್ತ ‘ನೀವು ಭರತನ ನಾಟ್ಯಶಾಸ್ತ್ರದಲ್ಲಿ ಪರಿಣತರು. ವಿರಾಟನ ಮನೆಯಲ್ಲಿ ಆ ಕೆಲಸವನ್ನು ಮಾಡಿಕೊಂಡಿದ್ದುದು ನನಗೆ ತಿಳಿಯದೇ. ನಿಮ್ಮ ವಿದ್ಯೆ ನನಗೆಲ್ಲಿ ಗೊತ್ತಿದೆ? ರಸಭರಿತವಾದ ನಾಟ್ಯದ ಮಾತು ಹಾಗಿರಲಿ. ಬಿಲ್ಲನ್ನು ಹಿಡಿಯುವ ಪ್ರತಿಭೆ. ಅದನ್ನು ಪ್ರಯೋಗಿಸುವ ಅಭಿನಯ. ಅಂಗಹಾರಗಳ ರೀತಿಯನ್ನು ತೋರಿಸು’ ಎಂದನು.
ಪದಾರ್ಥ (ಕ.ಗ.ಪ)
ಸ್ಫುರಣ-ಪ್ರತಿಭೆ, ಹೊಳಪು,
ಅಂಗಹಾರ-ಅಭಿನಯ
ಮುದ್ರೆ - ಅಂಗಗಳನ್ನು ಉಚಿತ ರೀತಿಯಲ್ಲಿ ಚಲಿಸುವುದರಿಂದ ಭಾವಗಳನ್ನು ವ್ಯಕ್ತಪಡಿಸುವುದು.
ಮೂಲ ...{Loading}...
ಭರತಭಾಷೆಯಲಾ ವಿಧಾವಂ
ತರು ವಿರಾಟನ ಮನೆಯಲಿದ್ದುದ
ನರಿಯೆವೇ ನಾವೆತ್ತ ಬಲ್ಲೆವು ನಿಮ್ಮ ವಿದ್ಯೆಗಳ
ಸರಸಮಾತಂತಿರಲಿ ಚಾಪ
ಸ್ಫುರಣದಭಿನಯದಂಗಹಾರದ
ಪರಿಯ ತೋರಾ ಎನುತ ತೆಗೆದೆಚ್ಚನು ಧನಂಜಯನ ॥52॥
೦೫೩ ಝಳಪಿಸಿದುದೆರಡಙ್ಕದಲಿ ನಿ ...{Loading}...
ಝಳಪಿಸಿದುದೆರಡಂಕದಲಿ ನಿ
ಷ್ಕಲಿತ ತೇಜಃಪುಂಜವಿಬ್ಬರ
ಹಳಹಳಿಕೆ ಹಬ್ಬಿದುದು ಗಬ್ಬರಿಸಿದುದು ಗಗನದಲಿ
ಹಿಳುಕನೀದವೊ ಹಿಳುಕು ಮೊನೆಯಲ
ಗಲಗನುಗುಳ್ದವೊ ಕಣೆಗಳಲಿ ಕಣೆ
ತಳಿತವೋ ತ್ರೈಲೋಕ್ಯಬಾಣಾದ್ವೈತವಾಯ್ತೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆಯ ಸೇನಾರಂಗದಲ್ಲಿ, ಪರಿಪೂರ್ಣವಾದ ತೇಜಸ್ಸಿನ ಸಮೂಹ ವಿಜೃಂಭಿಸಿತು. ಕರ್ಣ ಅರ್ಜುನರ ತೀವ್ರತೆ ಹಬ್ಬಿ, ಆಕಾಶದಲ್ಲೆಲ್ಲಾ ವ್ಯಾಪಿಸಿತು. ಒಂದು ಬಾಣ ಇನ್ನೊಂದು ಬಾಣವನ್ನು ಹೆತ್ತಿತೋ ಚೂಪಾದ ಬಾಣಗಳನ್ನು ಚೂಪಾದ ಬಾಣಗಳು ಉಗುಳಿದವೋ, ಬಾಣಗಳಲ್ಲಿ ಬಾಣಗಳು ಚಿಗುರಿದವೋ ಮೂರು ಲೋಕಗಳೆಲ್ಲಾ ಇವರಿಬ್ಬರ ಬಾಣಗಳಿಂದ ತುಂಬಿ ಹೋದವು.
ಪದಾರ್ಥ (ಕ.ಗ.ಪ)
ನಿಷ್ಕಲಿತ-ಪರಿಪೂರ್ಣವಾದ, ಹಳಹಳಿಕೆ-ತೀವ್ರತೆ , ಗಬ್ಬರಿಸು-ಆವರಿಸು
ಮೂಲ ...{Loading}...
ಝಳಪಿಸಿದುದೆರಡಂಕದಲಿ ನಿ
ಷ್ಕಲಿತ ತೇಜಃಪುಂಜವಿಬ್ಬರ
ಹಳಹಳಿಕೆ ಹಬ್ಬಿದುದು ಗಬ್ಬರಿಸಿದುದು ಗಗನದಲಿ
ಹಿಳುಕನೀದವೊ ಹಿಳುಕು ಮೊನೆಯಲ
ಗಲಗನುಗುಳ್ದವೊ ಕಣೆಗಳಲಿ ಕಣೆ
ತಳಿತವೋ ತ್ರೈಲೋಕ್ಯಬಾಣಾದ್ವೈತವಾಯ್ತೆಂದ ॥53॥
೦೫೪ ಪರಶುರಾಮನ ಕಾರ್ತವೀರ್ಯನ ...{Loading}...
ಪರಶುರಾಮನ ಕಾರ್ತವೀರ್ಯನ
ವರ ದಿಳೀಪನ ದುಂದುಮಾರನ
ಭರತ ದಶರಥ ನಹುಷ ನಳ ರಾಘವನ ಲಕ್ಷ್ಮಣನ
ಸರಿಮಿಗಿಲು ಕಲಿಪಾರ್ಥನೀ ಮಿ
ಕ್ಕರಸುಗಳ ಪಾಡೇ ಕಿರೀಟಿಯ
ದೊರೆಯದಾವವನೆನುತ ಕೊಂಡಾಡಿತು ಸುರಸ್ತೋಮ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳು ಅರ್ಜುನನ್ನು ‘ವೀರ ಅರ್ಜುನನೇ ನೀನು ಪರಶುರಾಮ, ಕಾರ್ತಎಲ್ಲ, ಶ್ರೇಷ್ಠನಾದ ದಿಲೀಪ, ದುಂದುಮರ, ಭರತ, ದಶರಥ, ನಹುಷ, ನಳ, ರಾಘು, ಲಕ್ಷಣರಗೊಂಡ ಸಮಾನರಷ್ಟೇ ಅಲ್ಲ, ಒಂದು ಕೈ ಹೆಚ್ಚು ಹೀಗಿರುವಾಗ ಇವನಿಗೆ ಉಳಿದ ದೊರೆಗಳು ಯಾವ ಲೆಕ್ಕ’ ಎಂದೂ ಹೊಗಳಿದರು.
ಮೂಲ ...{Loading}...
ಪರಶುರಾಮನ ಕಾರ್ತವೀರ್ಯನ
ವರ ದಿಳೀಪನ ದುಂದುಮಾರನ
ಭರತ ದಶರಥ ನಹುಷ ನಳ ರಾಘವನ ಲಕ್ಷ್ಮಣನ
ಸರಿಮಿಗಿಲು ಕಲಿಪಾರ್ಥನೀ ಮಿ
ಕ್ಕರಸುಗಳ ಪಾಡೇ ಕಿರೀಟಿಯ
ದೊರೆಯದಾವವನೆನುತ ಕೊಂಡಾಡಿತು ಸುರಸ್ತೋಮ ॥54॥
೦೫೫ ತಾರಕನ ಜಮ್ಭನ ...{Loading}...
ತಾರಕನ ಜಂಭನ ನಿಕುಂಭನ
ತಾರಕಾಕ್ಷನ ಕಾಲನೇಮಿಯ
ವೀರ ಮಹಿಷಾಸುರನ ಬಾಣಾಸುರನ ರಾವಣನ
ತೋರಹತ್ತರ ಬಾಹುಬಲವನು
ಸಾರಿಯಾ ಕರ್ಣಂಗೆ ಮಿಕ್ಕಿನ
ಸಾರಿಹೃದಯರು ನಿನಗೆ ಸರಿಯಿಲ್ಲೆಂದುದಮರಗಣ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಾರಕ, ಜಂಭ, ನಿಕುಂಭ, ತಾರಕಾಕ್ಷ, ಕಾಲನೇಮಿ, ಮಹಿಷಾಸುರ, ಬಾಣಸುರ, ರಾವಣ ಮೊದಲಾದ ಶೂರರ ಬಾಹುಬಲಕ್ಕೆ ಸಮಾನವಾದವನು ನೀನು , ಉಳಿದ ವೀರರು ಯಾರೂ ನಿನಗೆ ಸಮಾನರಿಲ್ಲ” ಎಂದು ದೇವತೆಗಳು ಕರ್ಣನನ್ನು ಹೊಗಳಿದರು.
ಪದಾರ್ಥ (ಕ.ಗ.ಪ)
ತೋರಹತ್ತ-ಶೂರ, ಅಸಾರಹೃದಯ- ಸತ್ವ ಹೀನರು
ಮೂಲ ...{Loading}...
ತಾರಕನ ಜಂಭನ ನಿಕುಂಭನ
ತಾರಕಾಕ್ಷನ ಕಾಲನೇಮಿಯ
ವೀರ ಮಹಿಷಾಸುರನ ಬಾಣಾಸುರನ ರಾವಣನ
ತೋರಹತ್ತರ ಬಾಹುಬಲವನು
ಸಾರಿಯಾ ಕರ್ಣಂಗೆ ಮಿಕ್ಕಿನ
ಸಾರಿಹೃದಯರು ನಿನಗೆ ಸರಿಯಿಲ್ಲೆಂದುದಮರಗಣ ॥55॥
೦೫೬ ಪೂತು ಮಝರೇ ...{Loading}...
ಪೂತು ಮಝರೇ ಕರ್ಣ ವಿಶಿಖ
ವ್ರಾತವೊಂದಿನಿತಿಲ್ಲ ಲಂಕೆಯ
ಘಾತಕರ ಚಾಪಳವ ಕಂಡೆನು ಚಾಪತಂತ್ರದಲಿ
ಈತನತಿಶಯಬಾಣರಚನಾ
ಜಾತಿಯಿದು ಭೀಷ್ಮಾದಿಸುಭಟ
ವ್ರಾತಕೆಲ್ಲಿಯದೆಂದು ತಲೆದೂಗಿದನು ಹನುಮಂತ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹನುಮಂತನೂ “ಕರ್ಣನ ಬಾಣಗಳಿಗೆ ಸಮಾನವಾದುದು ಇನ್ನಿಲ್ಲ. ಇವನ ಧನುರ್ವಿದ್ಯೆಯಲ್ಲಿ , ಲಂಕೆಯನ್ನು ಆಕ್ರಮಿಸಿದ ವೀರರ ಚತುರತೆಯನ್ನು ನೋಡಿದೆ. ಇವನ ಅತಿಶಯವಾದ ಬಾಣಪ್ರಯೋಗದ ಭಂಗಿಯು ಭೀಷ್ಮ ಮೊದಲಾದ ವೀರರಿಗೂ ಇರಲಿಲ್ಲ " ಎಂದು ಮೆಚ್ಚಿಕೊಂಡನು.
ಪದಾರ್ಥ (ಕ.ಗ.ಪ)
ವಿಶಿಖ-ಬಾಣ.
ಮೂಲ ...{Loading}...
ಪೂತು ಮಝರೇ ಕರ್ಣ ವಿಶಿಖ
ವ್ರಾತವೊಂದಿನಿತಿಲ್ಲ ಲಂಕೆಯ
ಘಾತಕರ ಚಾಪಳವ ಕಂಡೆನು ಚಾಪತಂತ್ರದಲಿ
ಈತನತಿಶಯಬಾಣರಚನಾ
ಜಾತಿಯಿದು ಭೀಷ್ಮಾದಿಸುಭಟ
ವ್ರಾತಕೆಲ್ಲಿಯದೆಂದು ತಲೆದೂಗಿದನು ಹನುಮಂತ ॥56॥
೦೫೭ ಅದ್ದು ದುಮ್ಮಾನದಲಿ ...{Loading}...
ಅದ್ದು ದುಮ್ಮಾನದಲಿ ಹೊಡೆಮಗು
ಳೆದ್ದುದೀ ಕುರುಸೇನೆ ತಡೆಯಲಿ
ಬಿದ್ದುದತಿಸಂತೋಷ ಸಾರಕ್ಷೀರಜಲಧಿಯಲಿ
ಗೆದ್ದನೈ ನಿನ್ನಾತನೊಸಗೆಯ
ಬಿದ್ದಿನರಲೈ ನಾವು ಪರರಿಗೆ
ಬಿದ್ದುದೊಂದು ವಿಘಾತಿಯೆಂದನು ಸಂಜಯನು ನಗುತ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು ನಗುತ್ತಾ “ದುಃಖದಲ್ಲಿ ಮುಳುಗಿದ್ದ ಕೌರವ ಸೈನ್ಯ ಚೇತರಿಸಿಕೊಂಡಿತು. ಅತ್ಯಂತ ಸಂತೋಷವೆಂಬ ಸಾರವತ್ತಾದ ಕ್ಷೀರ ಸಮುದ್ರದಲ್ಲಿ ಬಿದ್ದಿತು. ನಿನ್ನ ಕಡೆಯವನು ಗೆದ್ದ. ಒಳ್ಳೆಯ ಸುದ್ದಿಯನ್ನು ಸ್ವೀಕರಿಸುವ ಅತಿಥಿಗಳು ನಾವು ಶತ್ರುಗಳಾದ ಪಾಂಡವರಿಗೆ ಒಂದು ಆಘಾತವು ಉಂಟಾಯಿತು” ಎಂದನು.
ಪದಾರ್ಥ (ಕ.ಗ.ಪ)
ಹೊಡೆಮಗುಳ್-ಚೇತರಿಸು,
ಬಿದ್ದಿನರ್-ಅತಿಥಿಗಳು.
ಮೂಲ ...{Loading}...
ಅದ್ದು ದುಮ್ಮಾನದಲಿ ಹೊಡೆಮಗು
ಳೆದ್ದುದೀ ಕುರುಸೇನೆ ತಡೆಯಲಿ
ಬಿದ್ದುದತಿಸಂತೋಷ ಸಾರಕ್ಷೀರಜಲಧಿಯಲಿ
ಗೆದ್ದನೈ ನಿನ್ನಾತನೊಸಗೆಯ
ಬಿದ್ದಿನರಲೈ ನಾವು ಪರರಿಗೆ
ಬಿದ್ದುದೊಂದು ವಿಘಾತಿಯೆಂದನು ಸಂಜಯನು ನಗುತ ॥57॥