೦೦೦ ಸೂ ರಾಯನನು ...{Loading}...
ಸೂ. ರಾಯನನು ಕೆಡೆನುಡಿದನಾ ವ
ಜ್ರಾಯುಧನ ನಂದನನು ಬಳಿಕಬು
ಜಾಯತಾಂಬಕ ಸಂತವಿಟ್ಟನು ಧರ್ಮಜಾರ್ಜುನರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ಅರ್ಜುನನು ಧರ್ಮಜನ ಬಗ್ಗೆ ಕೆಟ್ಟದಾಗಿ ಮಾತನಾಡಿದನು. ಆನಂತರ ಕೃಷ್ಣನು ಧರ್ಮರಾಯ ಅರ್ಜುನರಿಬ್ಬರನ್ನು ಸಮಾಧಾನ ಮಾಡಿದನು.
ಮೂಲ ...{Loading}...
ಸೂ. ರಾಯನನು ಕೆಡೆನುಡಿದನಾ ವ
ಜ್ರಾಯುಧನ ನಂದನನು ಬಳಿಕಬು
ಜಾಯತಾಂಬಕ ಸಂತವಿಟ್ಟನು ಧರ್ಮಜಾರ್ಜುನರ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನಾಡಿದ ನುಡಿಯನಾಲಿಸಿ
ಕೇಳಿದನು ಕೆದರಿದನು ಜಡಿದವು ರೋಮರಾಜಿಗಳು
ಮೇಲು ಮೇಲುಬ್ಬೇಳ್ವ ರೋಷ
ಜ್ವಾಲೆ ಹೊದಸಿತು ವದನವನು ಕ
ಣ್ಣಾಲಿ ಕಾಹೇರಿದವು ಪಾರ್ಥಂಗೊಂದು ನಿಮಿಷದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, ಧರ್ಮರಾಯನು ಆಡಿದ ಮಾತುಗಳನ್ನು ಕೇಳಿ, ಅರ್ಜುನನು ಕೋಪಗೊಂಡನು. ಅವನ ಕೂದಲುಗಳು ಎದ್ದು ನಿಂತವು. ಹೆಚ್ಚು ಹೆಚ್ಚಾಗುತ್ತಿದ್ದ ಕೋಪದ ಜ್ವಾಲೆಗಳು ಅವನ ಮುಖವನ್ನು ಮುಚ್ಚಿತು. ಒಂದು ನಿಮಿಷದಲ್ಲಿ ಅವನ ಕಣ್ಣುಗಳು ಬಿಸಿಯಾದವು.
ಪದಾರ್ಥ (ಕ.ಗ.ಪ)
ಹೊದಸು-ಮುಚ್ಚು
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನಾಡಿದ ನುಡಿಯನಾಲಿಸಿ
ಕೇಳಿದನು ಕೆದರಿದನು ಜಡಿದವು ರೋಮರಾಜಿಗಳು
ಮೇಲು ಮೇಲುಬ್ಬೇಳ್ವ ರೋಷ
ಜ್ವಾಲೆ ಹೊದಸಿತು ವದನವನು ಕ
ಣ್ಣಾಲಿ ಕಾಹೇರಿದವು ಪಾರ್ಥಂಗೊಂದು ನಿಮಿಷದಲಿ ॥1॥
೦೦೨ ಆಯುಧವ ಹಿಡಿದೊರೆಯನುಗಿದನ ...{Loading}...
ಆಯುಧವ ಹಿಡಿದೊರೆಯನುಗಿದನ
ಡಾಯುಧವ ಝಳಪಿಸುತ ರೌದ್ರ
ಸ್ಥಾಯಿಭಾವದ ಭಾರದಲಿ ಭುಲ್ಲಯಿಸಿ ಭಯವಡಗಿ
ರಾಯನಲ್ಲಿಗೆ ಮೆಲ್ಲ ಮೆಲ್ಲನು
ಪಾಯಗತಿ ಪಲ್ಲವಿಸಲುಪ್ಪರ
ಘಾಯದಲಿ ಲಾಗಿಸುವ ಪಾರ್ಥನ ಕಂಡುದಖಿಳಜನ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಯುಧವನ್ನು ಹಿಡಿದಿದ್ದ ಒರೆಯಿಂದ ಅಡಾಯುಧವನ್ನು ಈಚೆಗೆ ತೆಗೆದನು. ಅದನ್ನು ಝಳಪಿಸುತ್ತ ರುದ್ರ ಭಯಂಕರ ಭಾವದಿಂದ ಆವೇಶಗೊಂಡು, ಭಯವನ್ನು ಬಿಟ್ಟು, ಧರ್ಮರಾಯನ ಬಳಿಗೆ ಮೆಲ್ಲನೆ ನಡೆದು, ಮೇಲೆತ್ತಿ ಹೊಡೆಯಲು ಸಿದ್ಧನಾದ ಅರ್ಜುನನನ್ನು ಎಲ್ಲರೂ ನೋಡಿದರು.
ಪದಾರ್ಥ (ಕ.ಗ.ಪ)
ಭುಲ್ಲಯಿಸು-ಆವೇಶಗೊಳ್ಳು, ಲಾಗಿಸು-ಸಿದ್ಧನಾಗು
ಮೂಲ ...{Loading}...
ಆಯುಧವ ಹಿಡಿದೊರೆಯನುಗಿದನ
ಡಾಯುಧವ ಝಳಪಿಸುತ ರೌದ್ರ
ಸ್ಥಾಯಿಭಾವದ ಭಾರದಲಿ ಭುಲ್ಲಯಿಸಿ ಭಯವಡಗಿ
ರಾಯನಲ್ಲಿಗೆ ಮೆಲ್ಲ ಮೆಲ್ಲನು
ಪಾಯಗತಿ ಪಲ್ಲವಿಸಲುಪ್ಪರ
ಘಾಯದಲಿ ಲಾಗಿಸುವ ಪಾರ್ಥನ ಕಂಡುದಖಿಳಜನ ॥2॥
೦೦೩ ಅಹಹ ಕೈತಪ್ಪಾಯ್ತು ...{Loading}...
ಅಹಹ ಕೈತಪ್ಪಾಯ್ತು ಹಾ ಹಾ
ರಹವಿದೇನೆನುತ ರಾಯನ
ಮಹಿಳೆ ಬಿದ್ದಳು ಮೇಲುಖಡ್ಗಕೆ ತನ್ನ ನಡೆಯೊಡ್ಡಿ
ಬಹಳ ಶೋಕದಲಖಿಳ ಜನವು
ಮ್ಮಹವ ಬಿಸುಟರು ದೈವಗತಿ ದು
ಸ್ಸಹವಲಾ ಎನುತಸುರರಿಪು ಹಿಡಿದನು ಧನಂಜಯನ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಯ್ಯೋ ಇದೇನು ಅನಾಹುತ’ ಎಂದು, ‘ಹಾ ಇದೇನು ಆಶ್ಚರ್ಯದ ನಡವಳಿಕೆ’ ಎಂದು ದ್ರೌಪದಿಯು ಅರ್ಜುನನು ಬೀಸಿದ ಖಡ್ಗಕ್ಕೆ ಅಡ್ಡಬಂದಳು. ಅಲ್ಲಿದ್ದ ಜನರು ದುಃಖಿತರಾದರು. ತಮ್ಮ ಉತ್ಸಾಹವನ್ನು ಕಳೆದುಕೊಂಡರು. ‘ದೇವರ ಆಟ ಸಹಿಸಲು ಅಸಾಧ್ಯವಾದುದು’ ಎನ್ನುತ್ತಾ ಕೃಷ್ಣನು ಅರ್ಜುನನನ್ನು ಹಿಡಿದುಕೊಂಡನು.
ಪದಾರ್ಥ (ಕ.ಗ.ಪ)
ಉಮ್ಮಹ-ಉತ್ಸಾಹ
ಮೂಲ ...{Loading}...
ಅಹಹ ಕೈತಪ್ಪಾಯ್ತು ಹಾ ಹಾ
ರಹವಿದೇನೆನುತ ರಾಯನ
ಮಹಿಳೆ ಬಿದ್ದಳು ಮೇಲುಖಡ್ಗಕೆ ತನ್ನ ನಡೆಯೊಡ್ಡಿ
ಬಹಳ ಶೋಕದಲಖಿಳ ಜನವು
ಮ್ಮಹವ ಬಿಸುಟರು ದೈವಗತಿ ದು
ಸ್ಸಹವಲಾ ಎನುತಸುರರಿಪು ಹಿಡಿದನು ಧನಂಜಯನ ॥3॥
೦೦೪ ಹಿಡಿಯದಿರು ಮುರವೈರಿ ...{Loading}...
ಹಿಡಿಯದಿರು ಮುರವೈರಿ ಪಾರ್ಥನ
ಬಿಡು ಬಿಡೀತನ ಖಡ್ಗಕಿದೆಯೆ
ನ್ನೊಡಲು ತನ್ನನೆ ಧಾರೆಯೆರಿದನು ನಯನವಾರಿಯಲಿ
ತೊಡಗಿದೀತನ ರಾಜಕಾರ್ಯವ
ಕೆಡಿಸದಿರು ನಿರ್ವಾಹಿಸಲಿ ನೀ
ಬಿಡು ಬಿಡೆನೆ ಜರೆದನು ಮುರಾಂತಕನಿಂದ್ರನಂದನನ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ‘ಕೃಷ್ಣ’ ಅರ್ಜುನನನ್ನು ಹಿಡಿಯಬೇಡ, ಅವನನ್ನು ಬಿಡು. ಅವನ ಖಡ್ಗಕ್ಕೆ ನನ್ನ ದೇಹವನ್ನು ಕಣ್ಣೀರಿನ ಧಾರೆಯೆರೆದು ಒಪ್ಪಿಸಿದ್ದೇನೆ. ಅವನು ಆರಂಭಿಸಿದ ರಾಜಕಾರ್ಯಕ್ಕೆ ಅಡ್ಡಿ ಬರಬೇಡ. ಅವನು ಹೇಗೆ ಮಾಡುತ್ತಾನೋ ಹಾಗೆ ಬಿಟ್ಟುಬಿಡು’ ಎಂದಾಗ ಕೃಷ್ಣನು ಅರ್ಜುನನನ್ನು ನಿಂದಿಸಿದನು.
ಮೂಲ ...{Loading}...
ಹಿಡಿಯದಿರು ಮುರವೈರಿ ಪಾರ್ಥನ
ಬಿಡು ಬಿಡೀತನ ಖಡ್ಗಕಿದೆಯೆ
ನ್ನೊಡಲು ತನ್ನನೆ ಧಾರೆಯೆರಿದನು ನಯನವಾರಿಯಲಿ
ತೊಡಗಿದೀತನ ರಾಜಕಾರ್ಯವ
ಕೆಡಿಸದಿರು ನಿರ್ವಾಹಿಸಲಿ ನೀ
ಬಿಡು ಬಿಡೆನೆ ಜರೆದನು ಮುರಾಂತಕನಿಂದ್ರನಂದನನ ॥4॥
೦೦೫ ಅಕಟ ಗುರುಹತ್ಯಾ ...{Loading}...
ಅಕಟ ಗುರುಹತ್ಯಾ ಮಹಾ ಪಾ
ತಕಕೆ ತಂದೈ ಮನವ ಭರತ
ಪ್ರಕಟಕುಲ ನಿರ್ಮೂಲಕನೆ ನೀನೊಬ್ಬನುದಿಸಿದಲ
ವಿಕಳ ಕುರುನೃಪರೊಳಗೆ ದುರಿತಾ
ತ್ಮಕರ ಕಾಣೆನು ನಿನ್ನ ಸರಿ ಹೋ
ಲಿಕೆಗೆ ಹರಹರದೇನನೆನೆದನೆನುತ್ತ ಗರ್ಜಿಸಿದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ‘ಅಯ್ಯೋ ಗುರುಹತ್ಯೆ ಎಂಬ ಮಹಾ ಪಾಪ ಕಾರ್ಯಕ್ಕೆ ಮನಸ್ಸು ಬಂದಿತೇ. ಪ್ರಸಿದ್ಧ ಭರತವಂಶವನ್ನೇ ನಿರ್ಮೂಲನ ಮಾಡುವಂತಹ ನಿನ್ನಂತಹವರು ಹುಟ್ಟಿದರಲ್ಲಾ. ತಲೆಕೆಟ್ಟ ಕೌರವ ಕುಲದ ದೊರೆಗಳಲ್ಲಿ ನಿನಗೆ ಸಮಾನರಾದ ಪಾಪದ ಕೆಲಸದವರನ್ನು ಒಬ್ಬರನ್ನೂ ನೋಡಲಿಲ್ಲ. ಶಿವನೇ, ಇವನು ಇದು ಏನನ್ನು ಯೋಚಿಸಿದ’ ಎಂದು ಗರ್ಜಿಸಿದ.
ಮೂಲ ...{Loading}...
ಅಕಟ ಗುರುಹತ್ಯಾ ಮಹಾ ಪಾ
ತಕಕೆ ತಂದೈ ಮನವ ಭರತ
ಪ್ರಕಟಕುಲ ನಿರ್ಮೂಲಕನೆ ನೀನೊಬ್ಬನುದಿಸಿದಲ
ವಿಕಳ ಕುರುನೃಪರೊಳಗೆ ದುರಿತಾ
ತ್ಮಕರ ಕಾಣೆನು ನಿನ್ನ ಸರಿ ಹೋ
ಲಿಕೆಗೆ ಹರಹರದೇನನೆನೆದನೆನುತ್ತ ಗರ್ಜಿಸಿದ ॥5॥
೦೦೬ ಧರಣಿಪನ ಕೊಲಲೆನ್ದೊ ...{Loading}...
ಧರಣಿಪನ ಕೊಲಲೆಂದೊ ಮೇಣೀ
ತರುಣಿಯರಿಗೋ ನಕುಲ ಸಹದೇ
ವರಿಗೆಯೋ ಮೇಣೆನಗೆಯೋ ನೀನುಗಿದಡಾಯುಧದ
ಪರಿಯ ಹೇಳೈ ಪಾರ್ಥ ಮೋನದೊ
ಳಿರದಿರೆನ್ನಾಣೆನಲು ಬೆರಗಿನ
ಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ಈ ಕತ್ತಿಯನ್ನು ಹಿರಿದದ್ದು ದೊರೆಯನ್ನು ಕೊಲ್ಲಲೆಂದೋ ಅಥವಾ ರಾಣಿಯರನ್ನೋ ನಕುಲ ಸಹದೇವರನ್ನೊ ಅಥವಾ ನನ್ನನ್ನೇ ಕೊಲ್ಲಲೆಂದೊ’ ಏತಕ್ಕಾಗಿ ಹೀಗೆ ಮಾಡಿದೆ, ಮಾತನಾಡದೆ ಸುಮ್ಮನಿರಬೇಡ, ನನ್ನ ಆಣೆ’ ಎಂದ ಕೃಷ್ಣ. ತನ್ನ ಕೆಲಸದಿಂದ ತಾನೇ ಆಶ್ಚರ್ಯಗೊಂಡಿದ್ದ ಅರ್ಜುನ ಅತಿಯಾಗಿ ಗ್ರಹಬಡಿದವನಂತೆ, ಮಾತನಾಡದೇ ಸುಮ್ಮನಿದ್ದನು.
ಪದಾರ್ಥ (ಕ.ಗ.ಪ)
ಗಾಹು-ಆಧಿಕ್ಯ
ಮೂಲ ...{Loading}...
ಧರಣಿಪನ ಕೊಲಲೆಂದೊ ಮೇಣೀ
ತರುಣಿಯರಿಗೋ ನಕುಲ ಸಹದೇ
ವರಿಗೆಯೋ ಮೇಣೆನಗೆಯೋ ನೀನುಗಿದಡಾಯುಧದ
ಪರಿಯ ಹೇಳೈ ಪಾರ್ಥ ಮೋನದೊ
ಳಿರದಿರೆನ್ನಾಣೆನಲು ಬೆರಗಿನ
ಗರದ ಗಾಹಿನಲದ್ದು ಮೋನದೊಳಿದ್ದನಾ ಪಾರ್ಥ ॥6॥
೦೦೭ ಬೆದರಿಸದಿರೈ ಕೃಷ್ಣ ...{Loading}...
ಬೆದರಿಸದಿರೈ ಕೃಷ್ಣ ದುಷ್ಕ
ರ್ಮದಲಿ ಸುಳಿಯೆನು ಭೂಪತಿಯ ಗ
ದ್ಗದ ವಚೋವಿನ್ಯಾಸವನ್ಯಾಯ ಪ್ರಪಂಚವಿದು
ಆದರಿನೀತನ ಪೊಯ್ದು ಕೊಂದ
ಲ್ಲದೆ ಸುನಿಷ್ಕೃತಿಯಿಲ್ಲ ಸತ್ಯಾ
ಭ್ಯುದಯವೇ ತನ್ನುದಯವದರಳಿವೆನ್ನ ಲಯವೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಮಾತನಾಡುತ್ತಾ ‘ಕೃಷ್ಣ ನನ್ನನ್ನು ಹೆದರಿಸಬೇಡ, ದುಷ್ಕರ್ಮದಲ್ಲಿ ತೊಡಗುವುದಿಲ್ಲ. ಧರ್ಮರಾಯನು ದುಃಖದಲ್ಲಿ ಆಡಿದ ಮಾತುಗಳೆಲ್ಲಾ ಅನ್ಯಾಯದ ಮಾತುಗಳು. ಆದ್ದರಿಂದ, ಇವನನ್ನು ಹೊಡೆದು ಕೊಲ್ಲದೇ ಹೋದರೆ ನನಗೆ ಒಳ್ಳೆಯದಾಗುವುದಿಲ್ಲ. ಸತ್ಯವನ್ನು ಎತ್ತಿ ಹಿಡಿಯುವುದೇ ನನ್ನ ಅಭ್ಯುದಯ. ಅದರ ನಾಶವೇ ನನ್ನ ನಾಶ, ಎಂದನು.
ಮೂಲ ...{Loading}...
ಬೆದರಿಸದಿರೈ ಕೃಷ್ಣ ದುಷ್ಕ
ರ್ಮದಲಿ ಸುಳಿಯೆನು ಭೂಪತಿಯ ಗ
ದ್ಗದ ವಚೋವಿನ್ಯಾಸವನ್ಯಾಯ ಪ್ರಪಂಚವಿದು
ಆದರಿನೀತನ ಪೊಯ್ದು ಕೊಂದ
ಲ್ಲದೆ ಸುನಿಷ್ಕೃತಿಯಿಲ್ಲ ಸತ್ಯಾ
ಭ್ಯುದಯವೇ ತನ್ನುದಯವದರಳಿವೆನ್ನ ಲಯವೆಂದ ॥7॥
೦೦೮ ದೇವ ಪೂರ್ವದಲೆನ್ನ ...{Loading}...
ದೇವ ಪೂರ್ವದಲೆನ್ನ ನುಡಿ ಗಾಂ
ಡೀವವೇತಕೆ ನಿನಗೆ ನಿನಗೀ
ದೇವಧನು ಸಾದೃಶ್ಯವೇ ತೆಗೆಯೆಂದು ರೋಷದಲಿ
ಆವನೊಬ್ಬನ ನುಡಿದನಾತನ
ಜೀವನವ ಜಕ್ಕುಲಿಸಿಯೆನ್ನ ವ
ಚೋವಿಳಾಸವ ಕಾಯ್ವೆನೆಂದೆನು ಕೃಷ್ಣ ಕೇಳ್ ಎಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕೃಷ್ಣ ಗಾಂಡೀವ ನಿನಗೆ ಏತಕ್ಕೆ ಬೇಕು, ಈ ದೇವ ಧನುಸ್ಸು ನಿನಗೆ ಹೊಂದುವುದಿಲ್ಲ’ ಎಂದು ಯಾರಾದರೂ ರೋಷದಿಂದ ಹೇಳಿದರೆ, ಅಂತಹವನ ಪ್ರಾಣವನ್ನು ತೆಗೆಯುವೆನೆಂದು ಪ್ರತಿಜ್ಞೆಮಾಡಿದ್ದೆ. ಈಗ ಆ ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ" ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಜಕ್ಕುಲಿಸು-ಆಟವಾಡು, ತೆಗೆ
ಮೂಲ ...{Loading}...
ದೇವ ಪೂರ್ವದಲೆನ್ನ ನುಡಿ ಗಾಂ
ಡೀವವೇತಕೆ ನಿನಗೆ ನಿನಗೀ
ದೇವಧನು ಸಾದೃಶ್ಯವೇ ತೆಗೆಯೆಂದು ರೋಷದಲಿ
ಆವನೊಬ್ಬನ ನುಡಿದನಾತನ
ಜೀವನವ ಜಕ್ಕುಲಿಸಿಯೆನ್ನ ವ
ಚೋವಿಳಾಸವ ಕಾಯ್ವೆನೆಂದೆನು ಕೃಷ್ಣ ಕೇಳೆಂದ ॥8॥
೦೦೯ ಸಾರು ತೆಗೆ ...{Loading}...
ಸಾರು ತೆಗೆ ಗಾಂಡಿವವ ನಿನಗನು
ಸಾರಿಯೇ ಬಿಸುಡೆಂದು ನುಡಿಯನೆ
ಧಾರುಣೀಪತಿ ಕೇಳಿರೇ ನೀವಿನಿಬರೀ ನುಡಿಯ
ಆರದನ್ಯಾಯವು ವಿಚಾರ ವಿ
ಶಾರದನು ನೀನೆಲೆ ಮುಕುಂದ ವಿ
ಕಾರಿಯೇ ತಾನೆಂದು ಬಿನ್ನಹ ಮಾಡಿದನು ಪಾರ್ಥ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೂರ ಹೋಗು, ಗಾಂಡೀವನನ್ನು ಬಿಸಾಡು, ನಿನಗೆ ಅದು ಸರಿಹೊಂದುವುದಿಲ್ಲ ಎಂದು ಧರ್ಮರಾಯನು ಹೇಳಲಿಲ್ಲವೆ, ನೀವು ಎಲ್ಲರೂ ಆ ಮಾತನ್ನು ಕೇಳಿಸಿಕೊಂಡಿರಲ್ಲವೇ. ಇಲ್ಲಿ ಅನ್ಯಾಯ ಯಾರದು? ನೀನು ವಿಚಾರದಲ್ಲಿ ಪಂಡಿತ. ನಾನು ಅಧರ್ಮಿಯೇ ಮುಕುಂದ’ ಎಂದನು ಅರ್ಜುನ.
ಮೂಲ ...{Loading}...
ಸಾರು ತೆಗೆ ಗಾಂಡಿವವ ನಿನಗನು
ಸಾರಿಯೇ ಬಿಸುಡೆಂದು ನುಡಿಯನೆ
ಧಾರುಣೀಪತಿ ಕೇಳಿರೇ ನೀವಿನಿಬರೀ ನುಡಿಯ
ಆರದನ್ಯಾಯವು ವಿಚಾರ ವಿ
ಶಾರದನು ನೀನೆಲೆ ಮುಕುಂದ ವಿ
ಕಾರಿಯೇ ತಾನೆಂದು ಬಿನ್ನಹ ಮಾಡಿದನು ಪಾರ್ಥ ॥9॥
೦೧೦ ಲೇಸು ಲೇಸಿದು ...{Loading}...
ಲೇಸು ಲೇಸಿದು ತಮ್ಮನಾಡಿದ
ಭಾಷೆ ಬಾಹಿರವಾಗಬೇಡ ವಿ
ನಾಶಕಾನಂಜೆನು ಮುರಾಂತಕ ಬಿಡು ಧನಂಜಯನ
ಆಸೆಯೆನಗೀ ರಾಜ್ಯದಲಿ ಮೇ
ಣೀ ಶರೀರದಲಿಲ್ಲ ಪಾರ್ಥನ
ಭಾಷೆ ಸಂದರೆ ಸಾಕು ನೀ ಸಾರೆಂದನಾ ಭೂಪ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು, ‘ಒಳ್ಳೆಯದು, ತಮ್ಮನು ಮಾಡಿದ ಪ್ರತಿಜ್ಞೆ ತಪ್ಪುವುದು ಬೇಡ. ನಾನು ಸಾವಿಗೆ ಹೆದರುವುದಿಲ್ಲ. ಕೃಷ್ಣ, ಅರ್ಜುನನನ್ನು ಬಿಟ್ಟುಬಿಡು. ನನಗೆ ಈ ರಾಜ್ಯದ ಮೇಲಾಗಲೀ ಶರೀರದ ಮೇಲಾಗಲಿ ಆಸೆಯಿಲ್ಲ. ಅರ್ಜುನನ ಪ್ರತಿಜ್ಞೆ ನಡೆಯುವಂತಾದರೆ ಸಾಕು. ನೀನು ಪಕ್ಕಕ್ಕೆ ಹೋಗು’ ಎಂದನು.
ಮೂಲ ...{Loading}...
ಲೇಸು ಲೇಸಿದು ತಮ್ಮನಾಡಿದ
ಭಾಷೆ ಬಾಹಿರವಾಗಬೇಡ ವಿ
ನಾಶಕಾನಂಜೆನು ಮುರಾಂತಕ ಬಿಡು ಧನಂಜಯನ
ಆಸೆಯೆನಗೀ ರಾಜ್ಯದಲಿ ಮೇ
ಣೀ ಶರೀರದಲಿಲ್ಲ ಪಾರ್ಥನ
ಭಾಷೆ ಸಂದರೆ ಸಾಕು ನೀ ಸಾರೆಂದನಾ ಭೂಪ ॥10॥
೦೧೧ ಮರುಳೆ ಮೋನದೊಳಿರು ...{Loading}...
ಮರುಳೆ ಮೋನದೊಳಿರು ಯುಧಿಷ್ಠಿರ
ನರನ ನೀ ಮುಂದಿಟ್ಟು ಯಮದೂ
ತರಿಗೆ ಕೈವರ್ತಿಸುವ ಪರಿಯೇ ಕೋಟಿ ನರಕದಲಿ
ಹುರುಳನರಿಯದೆ ಧರ್ಮಶಾಸ್ತ್ರದ
ಪರಮ ತತ್ತ್ವವದಾವ ಮುಖವೆಂ
ದರಿಯೆ ವಿಷಮ ಕ್ಷತ್ರತಾಮಸ ನಿನ್ನ ಬಿಡದೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯುಧಿಷ್ಠಿರ, ನಿನಗೆ ಬುದ್ಧಿಯಿಲ್ಲವೇ, ಮೌನವಾಗಿರು ನೀನು. ಅರ್ಜುನನನ್ನು ಉತ್ತೇಜಿಸುತ್ತಾ ಏನು ಮಾಡುತ್ತಿರುವೆನೆಂದು ತಿಳಿಯದೆ ಯಮದೂತರಿಗೆ ಸಹಾಯ ಮಾಡುತ್ತಾ ಅವನನ್ನು ಕೋಟಿ ನರಕದಲ್ಲಿ ಬೀಳುವಂತೆ ಮಾಡುತ್ತೀಯಾ. ಧರ್ಮಶಾಸ್ತ್ರದ ಶ್ರೇಷ್ಠವಾದ ತತ್ತ್ವದ ಅರ್ಥವನ್ನೇ ನೀನು ತಿಳಿದಿಲ್ಲ. ಅನ್ಯಾಯಕ್ಕೆ ಕಾರಣವಾಗುವ ಕ್ಷತ್ರಿಯರ ತಾಮಸ ಬುದ್ಧಿ ನಿನ್ನನ್ನೂ ಬಿಟ್ಟಿಲ್ಲ’ ಎಂದು ಕೃಷ್ಣನು ಗದರಿಸಿದನು.
ಮೂಲ ...{Loading}...
ಮರುಳೆ ಮೋನದೊಳಿರು ಯುಧಿಷ್ಠಿರ
ನರನ ನೀ ಮುಂದಿಟ್ಟು ಯಮದೂ
ತರಿಗೆ ಕೈವರ್ತಿಸುವ ಪರಿಯೇ ಕೋಟಿ ನರಕದಲಿ
ಹುರುಳನರಿಯದೆ ಧರ್ಮಶಾಸ್ತ್ರದ
ಪರಮ ತತ್ತ್ವವದಾವ ಮುಖವೆಂ
ದರಿಯೆ ವಿಷಮ ಕ್ಷತ್ರತಾಮಸ ನಿನ್ನ ಬಿಡದೆಂದ ॥11॥
೦೧೨ ಎಲೆ ಧನಞ್ಜಯ ...{Loading}...
ಎಲೆ ಧನಂಜಯ ಧರ್ಮಪುತ್ರನ
ಕೊಲುವೆನುಳುಹುವದಿಲ್ಲವೆಂಬ
ಗ್ಗಳಿಕೆಯಿದು ನಗೆಯಲ್ಲವೇ ನಿಶ್ಚಯವೆ ಹಿಂಸೆಯಲಿ
ಕಲುಮನವಲಾ ನಿನಗಕಟ ನಿ
ರ್ಮಳದ ಧರ್ಮಸ್ಥಿತಿ ರಹಸ್ಯವ
ತಿಳುಪಿದವರಾರೆನುತ ತಲೆದೂಗಿದನು ಮುರವೈರಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನನ್ನು ಕುರಿತು ‘ಎಲೆ ಅರ್ಜುನ, ಧರ್ಮರಾಯನನ್ನು ಕೊಲ್ಲುತ್ತೇನೆ, ಉಳಿಸುವುದಿಲ್ಲ ಎಂಬ ನಿನ್ನ ಅಹಂಕಾರದ ಮಾತುಗಳು ನಗೆಗೆ ಕಾರಣವಾಗುವುದಿಲ್ಲವೇ ? ಹಿಂಸೆಯನ್ನು ಮಾಡಬೇಕೆಂದು ನಿಶ್ಚಯ ಮಾಡಿದ್ದೆಯೋ ಹೇಗೆ. ನಿನ್ನದು ಕಲ್ಲು ಮನಸ್ಸು’ ಅಯ್ಯೋ ನಿರ್ಮಲವಾದ ಧರ್ಮಸ್ಥಿತಿಯ ರಹಸ್ಯವನ್ನು ನಿನಗೆ ಯಾರು ಹೇಳಿಕೊಟ್ಟರು ?, ಎಂದು ಕೃಷ್ಣನು ತಲೆಯನ್ನು ಅಲ್ಲಾಡಿಸಿ ಅಸಮಾಧಾನವನ್ನು ಸೂಚಿಸಿದನು.
ಮೂಲ ...{Loading}...
ಎಲೆ ಧನಂಜಯ ಧರ್ಮಪುತ್ರನ
ಕೊಲುವೆನುಳುಹುವದಿಲ್ಲವೆಂಬ
ಗ್ಗಳಿಕೆಯಿದು ನಗೆಯಲ್ಲವೇ ನಿಶ್ಚಯವೆ ಹಿಂಸೆಯಲಿ
ಕಲುಮನವಲಾ ನಿನಗಕಟ ನಿ
ರ್ಮಳದ ಧರ್ಮಸ್ಥಿತಿ ರಹಸ್ಯವ
ತಿಳುಪಿದವರಾರೆನುತ ತಲೆದೂಗಿದನು ಮುರವೈರಿ ॥12॥
೦೧೩ ನುಡಿದ ಮಾತ್ರದಲಿರದು ...{Loading}...
ನುಡಿದ ಮಾತ್ರದಲಿರದು ಧರ್ಮದ
ಬೆಡಗು ತಾನದು ಬೇರೆ ಸತ್ಯವ
ನುಡಿದು ಕೆಟ್ಟವರುಂಟು ಹಿಂಸಾಧರ್ಮವೃತ್ತಿಯಲಿ
ನಡೆದು ಯಾವಜ್ಜೀವದಲಿ ಗತಿ
ವಡೆದರುಂಟೆಲೆ ಪಾರ್ಥ ನಿನ್ನು
ಗ್ಗಡದ ವೀರಾವೇಶ ಮಾಣಲಿ ಮಾತ ಕೇಳ್ ಎಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧರ್ಮದ ರಹಸ್ಯವೇ ಬೇರೆ.. ಮಾತಿಗೆ ಸಿಗುವಷ್ಟು ಅದು ಸುಲಭವಲ್ಲ. ಸತ್ಯದ ಮಾತನ್ನು ಹೇಳಿ ಹಾಳಾದವರೂ ಇದ್ದಾರೆ, ಹಿಂಸೆಯನ್ನು ಮಾಡುತ್ತಾ ಬದುಕಿರುವವರೆಗೂ ಒಳ್ಳೆಯ ಗತಿಯನ್ನು ಪಡೆದವರೂ ಇದ್ದಾರೆ. ಅರ್ಜುನ, ನಿನ್ನ ಆತ್ಮ ಪ್ರಶಂಸೆಯ ವೀರಾವೇಶವನ್ನು ನಿಲ್ಲಿಸು. ನನ್ನ ಮಾತು ಕೇಳು’ ಎಂದ ಕೃಷ್ಣ.
ಪದಾರ್ಥ (ಕ.ಗ.ಪ)
ಉಗ್ಗಡ-ಹೊಗಳಿಕೆ
ಮೂಲ ...{Loading}...
ನುಡಿದ ಮಾತ್ರದಲಿರದು ಧರ್ಮದ
ಬೆಡಗು ತಾನದು ಬೇರೆ ಸತ್ಯವ
ನುಡಿದು ಕೆಟ್ಟವರುಂಟು ಹಿಂಸಾಧರ್ಮವೃತ್ತಿಯಲಿ
ನಡೆದು ಯಾವಜ್ಜೀವದಲಿ ಗತಿ
ವಡೆದರುಂಟೆಲೆ ಪಾರ್ಥ ನಿನ್ನು
ಗ್ಗಡದ ವೀರಾವೇಶ ಮಾಣಲಿ ಮಾತ ಕೇಳೆಂದ ॥13॥
೦೧೪ ವನದೊಳೊಬ್ಬನು ಕೌಶಿಕಾಹ್ವಯ ...{Loading}...
ವನದೊಳೊಬ್ಬನು ಕೌಶಿಕಾಹ್ವಯ
ಮುನಿ ತಪಶ್ಚರಿಯದಲಿ ಸತ್ಯವೆ
ತನಗೆ ಸುವ್ರತವೆಂದು ಬಟ್ಟೆಯೊಳಿದ್ದನೊಂದು ದಿನ
ವನಚರರು ಬೇಹಿನಲಿ ಭೂಸುರ
ಜನವ ಬೆಂಬತ್ತಿದರು ಕೌಶಿಕ
ಮುನಿಯ ಬೆಸಗೊಂಡರು ಮಹೀಸುರ ಮಾರ್ಗಸಂಗತಿಯ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌಶಿಕ ಎಂಬ ಹೆಸರಿನ ಮುನಿಯೊಬ್ಬನು ಕಾಡಿನಲ್ಲಿ ತಪಸ್ಸು ಮಾಡುತ್ತಾ ‘ಸತ್ಯವನ್ನು ಹೇಳುವುದೇ ತನಗೆ ವ್ರತ’ ಎಂದು ನಡೆದುಕೊಳ್ಳುತ್ತಿದ್ದನು. ಒಂದು ದಿನ ಕಾಡಿನ ಜನರು ಬ್ರಾಹ್ಮಣರನ್ನು ಹಿಂಬಾಲಿಸಿ ಹುಡುಕುತ್ತಾ ಬಂದು, ಬ್ರಾಹ್ಮಣರು ಹೋದ ದಾರಿಯನ್ನು ಕುರಿತು ಕೌಶಿಕ ಮುನಿಯನ್ನು ಪ್ರಶ್ನಿಸಿದರು.
ಪದಾರ್ಥ (ಕ.ಗ.ಪ)
ಬೇಹು-ಶೋಧ, ಹುಡುಕು
ಟಿಪ್ಪನೀ (ಕ.ಗ.ಪ)
ಕೌಶಿಕ - ವನಪರ್ವದಲ್ಲಿ ಮಾರ್ಕಂಡೇಯ ಮಹರ್ಷಿಗಳು ಧರ್ಮರಾಯನಿಗೆ ಹೇಳಿದ ಒಂದು ಕಥೆ ಕೌಶಿಕನದು. ಕೌಶಿಕ ಧನಿಕ, ಜ್ಞಾನಿ, ವೇದವಿಶಾರದ. ಆದರೂ ಅವನ ತಪಸ್ಸ್ವಾಧ್ಯಾಯ ನಿರತನಾಗಿದ್ದ. ಒಂದು ದಿನ ಊರ ಹೊರಗೆ ಒಂದು ಮರದ ಕೆಳಗೆ ತಪಸ್ಸು ಮಾಡುತ್ತ ಕುಳಿತಿದ್ದಾಗ ಒಂದು ಕಗೆ (ಬಕಪಕ್ಷಿ) ಇವನ ತಲೆಯ ಮೇಲೆ ಹಿಚಿಕೆ ಹಾಕಿತು. ಈ ಬ್ರಾಹ್ಮಣ ಜ್ಞಾನಿಗೆ ಆ ಹಕ್ಕಿಯ ಮೇಲೆ ತುಂಬ ಸಿಟ್ಟು ಬಂದಿತು. ಅದನ್ನೇ ದುರುಗುಟ್ಟಿಕೊಂಡು ನೋಡಿದ. ಇವನ ದೃಷ್ಟಿ ಶಕ್ತಿಯೋ ಅಥವ ಆಕಸ್ಮಿಕವೋ ಅಂತೂ ಆ ಪಕ್ಷಿ ಕೆಳಗೆ ಬಿದ್ದು ಸತ್ತುಹೋಯಿತು. ಇದು ತನ್ನ ತಪಶ್ಯಕ್ತಿಯ ಪ್ರಭಾವ ಎಂಬ ಭಾವನೆ ಅವನಿಗೆ ಬಂದಿದ್ದರೆ ಆಶ್ಯರ್ಯವಿಲ್ಲ. ಅನಂತರ ಅವನು ಎಂದಿನಂತೆ ಆ U್ಫ್ರಮದಲ್ಲಿ ಭಿಕ್ಷೆಗೆ ಹೋದ. ಪ್ರಾಣಿ ಹಿಂಸೆ ಮಾಡಿದೆನಲ್ಲ ಎಂಬ ಕೊರಗೂ ಅವನನ್ನು ಕಾಡುತ್ತಿತ್ತು. ನಾಲ್ಕಾರು ಮನೆಗಳಾದ ಮೇಲೆ ಪರಿಚಿತ ಸಾಧ್ವಿಯೊಬ್ಬಳ ಮನೆಗೆ ಹೋದ. ಅವಳು ಭಿಕ್ಷೆ ಹಾಕಲು ಸ್ವಲ್ಪ ತಡ ಮಾಡಿದಳು. ಆ ಬಗ್ಗೆ ವಿವರಣೆಯನ್ನೂ ಕೊಟ್ಟಳು. ತನ್ನಪತಿ ಆಗತಾನೇ ಬಳಲಿ ಮನೆಗೆ ಬಂದಿದ್ದರಿಂದ ಅವನಿಗೆ ಊಟ ಬಡಿಸುತ್ತಿದ್ದುದಾಗಿಯೂ ಅದರಿಂದ ತಡವಾಯಿತು ಎಂದೂ ಅವಳು ಹೇಳಿದಳು. ಆದರೆ ಅವನ ದೃಷ್ಟಿಯಲ್ಲಿ ಮನೆಯವರಿಗಿಂತ ಅತಿಥಿ ಮುಖ್ಯವಲ್ಲವೆ? ಸಿಟ್ಟಿನಿಂದ ಅವಳ ಕಡೆ ನೋಡಿದ. ಅವಳು ನಗುತ್ತ ‘ನೀನು ದುರುಗುಟ್ಟಿಕೊಂಡು ನೋಡಿದ ಕೂಡಲೇ ಕೆಳಗೆ ಉರುಳಲು ನಾನೇನು ಪಕ್ಷಿಯಲ್ಲ’ ಎಂದು ಹೇಳಿದಳು. ಕೌಶಿಕನಿಗೆ ಆಶ್ಚರ್ಯ. ಕೊನೆಗೆ ಆ ಸಾಧ್ವಿ ‘‘ನಿನಗೆ ಧರ್ಮವೆಂದರೇನೆಂಬುದೇ ತಿಳಿದಿಲ್ಲ. ಆ ಬಗೆಗೆ ಹೆಚ್ಚು ತಿಳಿಯಬೇಕಾದರೆ ಮಿಥಿಲಾ ನಗರದಲ್ಲಿರುವ ಧರ್ಮವ್ಯಾದನ ಮನೆಗೆ ಹೋಗು. ಅವನು ಆತ್ಮಜ್ಞಾನಿಯಾದ ಮಹಾನುಭಾವ’’ ಎಂದಳು. ಕೌಶಿಕನ ಆಶ್ಚರ್ಯ ಹೆಚ್ಚಾಯಿತು. ನೋಡೋಣವೆಂದು ಮಿಥಿಲೆಗೆ ಹೊರಟ. ಮಾಂಸದ ಅಂಗಡಿಯಲ್ಲ್ಲಿ ವ್ಯಾಧನು ವ್ಯಾಪಾರದಲ್ಲಿ ನಿರತನಾಗಿದ್ದ. ಒಳಗೆ ಹೋಗಲು ಮನಸ್ಸಾಗದೆ ಕೌಶಿಕನು ಹೊರಗೇ ನಿಂತ. ವ್ಯಾಧನುವ್ಯಾಪಾರ ಮುಗಿಸಿಕೊಂಡು ಬಂದು ಕೌಶಿಕನನ್ನು ಮನೆಗೆ ಕರೆದ. ‘‘ಒಬ್ಬಳು ಪತಿವ್ರತೆ ನಿಮ್ಮನು ಇಲ್ಲಿಗೆ ಕಳಿಸಿದ್ದಾಳಲ್ಲವೆ?’’ ಎಂದು ಕೇಳಿದ. ಕೌಶಿಕನಿಗೆ ಇನ್ನೂ ಆಶ್ಚರ್ಯವಾಯಿತು. ಆದರೂ ವ್ಯಾಧನ ಹಿಂಸಾ ಜೀವನದ ಬಗೆಗೆ ವ್ಯಾಪಾರದ ಬಗೆಗೆ ತನ್ನ ಆಕ್ಷೇಪಣೆ ಸ್ರಚಿಸಿದ. ಆದರೆ ವ್ಯಾಧನು ತಾನು ಮಾಂಸವನ್ನು ಹೊರಗಿನಿಂದ ತರಿಸಿ ಮಾರಾಟ ಮಾಡುವುದಾಗಿಯೂ ಅದು ತನ್ನ ವೃತ್ತಿ ಧರ್ಮವೆಂದೂ ಅದನ್ನು ಶ್ರದ್ಧೆಯಿಂದ ಹೆಚ್ಚು ಲಾಭದ ಆಸೆಯಿಲ್ಲದೆ ಮಾರಾಟ ಮಾಡುವುದೇ ಧರ್ಮವೆಂದೂ ಹೇಳಿದ. ತಾನು ವೃದ್ಧ ಮಾತಾಪಿತೃಗಳನ್ನು ಹೇಗೆ ಪ್ರೀತಿಯಿಂದ ಸೇವಿಸುತ್ತಿದ್ದೇನೆಂಬುದನ್ನು ಪ್ರತ್ಯಕ್ಷವಾಗಿ ತೋರಿಸಿದ. ಜೀವ ಲಕ್ಷಣ ಮತ್ತು ಅಹಿಂಸಾ ಸ್ವರೂಪವನ್ನು ಕುರಿತು ತನ್ನ ಆಳವಾದ ಚಿಂತನೆಯನ್ನು ಹೇಳಿಕೊಂಡ. ತಾನು ಸಮಸ್ತ ಧರ್ಮಗಳನ್ನೂ ಅಧ್ಯಯನ ಮಾಡಿರುವ ಸಂಗತಿಯನ್ನು ತಿಳಿಸಿದ. ಶಿಷ್ಟಾಚಾರಗಳೆಂದರೆ ಶೌಚ, ದಾನ, ಸತ್ಯ, ದಮ, ಋಜುನಡತೆ, ಕಾಮಲೋಭ ಪರಿತ್ಯಾಗ, ನಿಷ್ಕ್ರೋಧ, ಅನಸೂಯೆ, ಶೀಲ ರಕ್ಷಣೆ, ಸರ್ವ ಭೂತದಯೆ… ಇತ್ಯದಿ ಗುಣಗಳು ಎನ್ನುವ ವ್ಯಾಧನ ಹಿತೋಪದೇಶವು ಅರ್ಥಪೂರ್ಣವಾಗಿದೆ. ಚಿತ್ತಶಾಚಿತಿ ಪಡೆಯುವುದು ಹೇಗೆ ಎಂಬ ಬಗೆಗೆ ಅವನ ವಿವರಣೆಯಂತೂ ಆಚರಣ ಯೋಗ್ಯವಾಗಿದೆ. ಹೀಗೆ ವಿಸ್ಥಾರವಾಗಿ ವ್ಯಾಧನೊಂದಿಗೆ Z್ಪರ್ಚಿಸಿ ಅಹಿಂಸಾ ಸ್ವರೂಪ ಜೀವಲಕ್ಷಣಗಳ ಬಗೆಗೆ ತಿಳಿದುಕೊಂಡ ಕೌಶಿಕನು ಇದುವರೆಗಿನ ತನ್ನ ಸಾಧನೆ ಅಲ್ಪ ಎಂಬುದನ್ನು ಅರ್ಥಮಾಡಿಕೊಂಡು ಮನೆಗೆ ಹಿಂದಿರುಗಿ ತಂದೆ ತಾಯಿಗಳ ಸೇವೆ ಮಾಡುತ್ತ ಜ್ಞಾನಾರ್ಜನೆಯಲ್ಲಿ ತೊಡಗಿದ. ಮೇಲುನೋಟಕ್ಕೆ ಎಲ್ಲರಂತೆ ಸಾಮಾನ್ಯರಾಗಿ ಕಾಣಿÂಸುವ ಕೆಲವರು ಒಳಗೆ ಗಟ್ಟಿ ವ್ಯಕ್ತಿತ್ವದವರಾಗಿರುವ ಸಂಭವವಿದೆ ಎಂಬ ಸಂಗತಿ ಈ ಕಥೆಯಿಂದ ತಿಳಿಯುತ್ತದೆ.
ಮೂಲ ...{Loading}...
ವನದೊಳೊಬ್ಬನು ಕೌಶಿಕಾಹ್ವಯ
ಮುನಿ ತಪಶ್ಚರಿಯದಲಿ ಸತ್ಯವೆ
ತನಗೆ ಸುವ್ರತವೆಂದು ಬಟ್ಟೆಯೊಳಿದ್ದನೊಂದು ದಿನ
ವನಚರರು ಬೇಹಿನಲಿ ಭೂಸುರ
ಜನವ ಬೆಂಬತ್ತಿದರು ಕೌಶಿಕ
ಮುನಿಯ ಬೆಸಗೊಂಡರು ಮಹೀಸುರ ಮಾರ್ಗಸಂಗತಿಯ ॥14॥
೦೧೫ ವಿತತ ಸತ್ಯದ ...{Loading}...
ವಿತತ ಸತ್ಯದ ವಿಷಯಭೇದ
ಸ್ಥಿತಿಯನರಿಯದ ಮುನಿಪ ವನಚರ
ತತಿಗೆ ಭೂಸುರಜನದ ಮಾರ್ಗವನರುಹಿದನು ಬಳಿಕ
ಅತಿ ದುರಾತ್ಮಕರವದಿರನಿಬರು
ಕ್ಷಿತಿಸುರರ ಕೊಂದಮಳ ಭೂಷ
ಪ್ರತತಿಯನು ಕೊಂಡೊಯ್ದರೆಲೆ ಕೌಂತೇಯ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ‘ವಿಸ್ತಾರವಾದ ಸತ್ಯದ ಸೂಕ್ಷ್ಮವನ್ನು ತಿಳಿಯದ ಕೌಶಿಕ, ವನಚರರಿಗೆ ಬ್ರಾಹ್ಮಣರು ಹೋದ ದಾರಿಯನ್ನು ತಿಳಿಸಿದನು. ಆನಂತರ ಆ ದುಷ್ಟರು ಎಲ್ಲಾ ಬ್ರಾಹ್ಮಣರನ್ನು ಕೊಂದು ಆಭರಣಗಳನ್ನು ಸುಲಿಗೆ ಮಾಡಿ ತೆಗೆದುಕೊಂಡು ಹೋದರು’ - ಅರ್ಜುನ ಕೇಳು ಮುಂದಿನದನ್ನು." ಎಂದು ಕೃಷ್ಣನು ಹೇಳಿದನು.
ಮೂಲ ...{Loading}...
ವಿತತ ಸತ್ಯದ ವಿಷಯಭೇದ
ಸ್ಥಿತಿಯನರಿಯದ ಮುನಿಪ ವನಚರ
ತತಿಗೆ ಭೂಸುರಜನದ ಮಾರ್ಗವನರುಹಿದನು ಬಳಿಕ
ಅತಿ ದುರಾತ್ಮಕರವದಿರನಿಬರು
ಕ್ಷಿತಿಸುರರ ಕೊಂದಮಳ ಭೂಷ
ಪ್ರತತಿಯನು ಕೊಂಡೊಯ್ದರೆಲೆ ಕೌಂತೇಯ ಕೇಳೆಂದ ॥15॥
೦೧೬ ಕಾಲವಶದಲಿ ಕೌಶಿಕನನಾ ...{Loading}...
ಕಾಲವಶದಲಿ ಕೌಶಿಕನನಾ
ಕಾಲದೂತರು ತಂದರಾತನ
ಮೇಲುಪೋಗಿನ ಸುಕೃತ ದುಷ್ಕೃತವನು ವಿಚಾರಿಸಲು
ಮೇಲನರಿಯದೆ ಸತ್ಯದಲಿ ವಿ
ಪ್ರಾಳಿ ವಧೆಯಾತಂಗೆ ಬಂದುದು
ಹೇಳಲದು ಭೋಕ್ತವ್ಯವತಿ ಪಾತಕದ ಫಲವೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದೆ ಕಾಲಕ್ಕೆ ತಕ್ಕಂತೆ ಕೌಶಿಕನು ಸತ್ತಾಗ ಯಮದೂತರು ಅವನನ್ನು ಯಮನ ಬಳಿಗೆ ಕರೆದುಕೊಂಡು ಹೋದರು. ಅವನು ಮಾಡಿದ ಪಾಪ-ಪುಣ್ಯದ ಕೆಲಸಗಳನ್ನು ವಿಚಾರಿಸಲಾಯಿತು. ಸತ್ಯವನ್ನು ಹೇಳುವ ಭರದಲ್ಲಿ ಒಳ್ಳೆಯದನ್ನು ಮಾಡುವುದರಿಂದ ದೂರವಾಗುವುದರಿಂದ ಬ್ರಾಹ್ಮಣರನ್ನು ಕೊಂದ ಪಾಪ ಅವನ ಮೇಲೆ ಬಂದಿತು. ಹೇಳಬೇಕು ಎಂದರೆ ಅವನು ಅತಿಪಾಪದ ಫಲವನ್ನು ಅನುಭವಿಸಬೇಕಾಗಿ ಬಂದಿತು.
ಪದಾರ್ಥ (ಕ.ಗ.ಪ)
ಭೋಕ್ತವ್ಯ-ಅನುಭವಿಸತಕ್ಕದ್ದು
ಮೂಲ ...{Loading}...
ಕಾಲವಶದಲಿ ಕೌಶಿಕನನಾ
ಕಾಲದೂತರು ತಂದರಾತನ
ಮೇಲುಪೋಗಿನ ಸುಕೃತ ದುಷ್ಕೃತವನು ವಿಚಾರಿಸಲು
ಮೇಲನರಿಯದೆ ಸತ್ಯದಲಿ ವಿ
ಪ್ರಾಳಿ ವಧೆಯಾತಂಗೆ ಬಂದುದು
ಹೇಳಲದು ಭೋಕ್ತವ್ಯವತಿ ಪಾತಕದ ಫಲವೆಂದ ॥16॥
೦೧೭ ನರಕಕಾತನ ನೂಕಿದರು ...{Loading}...
ನರಕಕಾತನ ನೂಕಿದರು ವಿ
ಸ್ತರಣವೆಂತೈ ಪಾರ್ಥ ಸತ್ಯದ
ಹುರುಳನರಿಯದೆ ಕಾಳುಗೆಡೆದರೆ ಕಾರ್ಯವೆಂತಹುದು
ಮರುಳೆ ಕೇಳದ್ಭುತವ ಹಿಂಸಾ
ಪರನಹರ್ನಿಶವಾ ದುರಾತ್ಮನ
ವರಿಸಿದರು ದೇವಾಂಗನೆಯರೀ ಕಥೆಯ ಕೇಳ್ ಎಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆ ಕೌಶಿಕನನ್ನು ನರಕಕ್ಕೆ ನೂಕಿದರು. ಅರ್ಜುನ, ಏನೆಂದು ವಿವರಿಸಲಿ, ಸತ್ಯದ ಅರ್ಥಶಕ್ತಿಯನ್ನು ತಿಳಿಯದೆ, ಸುಮ್ಮನೆ ನಿಂದಿಸಿದರೆ ಅದು ಎಂತಹ ಕೆಲಸ ? ಹುಚ್ಚೇ, ಕೇಳು ಒಂದು ಅದ್ಭುತದ ಕಥೆಯನ್ನು ಹೇಳುತ್ತೇನೆ. ಹಗಲೂ ರಾತ್ರಿ ಹಿಂಸಾಪರನಾಗಿದ್ದ ಒಬ್ಬ ದುಷ್ಟನನ್ನು ದೇವತಾ ಸ್ತ್ರೀಯರು ಮದುವೆ ಮಾಡಿಕೊಂಡರು.”
ಪದಾರ್ಥ (ಕ.ಗ.ಪ)
ಕಾಳುಗೆಡೆ-ನಿಂದಿಸಿ
ಮೂಲ ...{Loading}...
ನರಕಕಾತನ ನೂಕಿದರು ವಿ
ಸ್ತರಣವೆಂತೈ ಪಾರ್ಥ ಸತ್ಯದ
ಹುರುಳನರಿಯದೆ ಕಾಳುಗೆಡೆದರೆ ಕಾರ್ಯವೆಂತಹುದು
ಮರುಳೆ ಕೇಳದ್ಭುತವ ಹಿಂಸಾ
ಪರನಹರ್ನಿಶವಾ ದುರಾತ್ಮನ
ವರಿಸಿದರು ದೇವಾಂಗನೆಯರೀ ಕಥೆಯ ಕೇಳೆಂದ ॥17॥
೦೧೮ ಬನದೊಳೊಬ್ಬ ಬಳಾಕನೆಮ್ಬವ ...{Loading}...
ಬನದೊಳೊಬ್ಬ ಬಳಾಕನೆಂಬವ
ವನಚರನು ತನ್ನಯ ಕುಟುಂಬವ
ನನುದಿನವು ಮೃಗವಧೆಯಲೇ ಸಲಹಿದನು ಬೇಸರದೆ
ತನಗೆ ಕಡೆಪರಿಯಂತ ಮತ್ತೊಂ
ದನುವನರಿಯನು ರಾಗ ಲೋಭವ
ನೆನೆಯನದರಿಂ ಹಿಂಸೆ ಸಂದುದು ವೃತ್ತಿರೂಪದಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಾಡಿನಲ್ಲಿದ್ದ ಬಳಾಕ ಎಂಬ ವನಚರನು, ಪ್ರತಿದಿನ ಮೃಗಗಳನ್ನು ಕೊಂದು, ತನ್ನ ಕುಟುಂಬವನ್ನು ಬೇಸರಿಸದೆ ಸಲಹುತ್ತಿದ್ದನು. ತನ್ನ ಮರಣ ಕಾಲದವರೆಗೂ ಅವನಿಗೆ ಬೇರೆ ಒಂದು ಬದುಕಿನ ರೀತಿ ಗೊತ್ತಿರಲಿಲ್ಲ. ಅವನಿಗೆ ರಾಗ, ಲೋಭಗಳು ಇರಲಿಲ್ಲ. ಆದರೆ, ತನ್ನ ವೃತ್ತಿಯಲ್ಲಿ ಹಿಂಸೆಯನ್ನು ಮಾಡುತ್ತಲೇ ಇದ್ದ.
ಮೂಲ ...{Loading}...
ಬನದೊಳೊಬ್ಬ ಬಳಾಕನೆಂಬವ
ವನಚರನು ತನ್ನಯ ಕುಟುಂಬವ
ನನುದಿನವು ಮೃಗವಧೆಯಲೇ ಸಲಹಿದನು ಬೇಸರದೆ
ತನಗೆ ಕಡೆಪರಿಯಂತ ಮತ್ತೊಂ
ದನುವನರಿಯನು ರಾಗ ಲೋಭವ
ನೆನೆಯನದರಿಂ ಹಿಂಸೆ ಸಂದುದು ವೃತ್ತಿರೂಪದಲಿ ॥18॥
೦೧೯ ವರವವಙ್ಗೆ ಕುಟುಮ್ಬ ...{Loading}...
ವರವವಂಗೆ ಕುಟುಂಬ ರಕ್ಷಾ
ಕರಣ ಕಾರಣವಾದ ಹಿಂಸಾ
ಚರಣೆಯೆಂದೇ ಬರಹ ಧರ್ಮನ ಸೇನಬೋವನಲಿ
ಮರಣವಾತಂಗಾಗೆ ಕೊಂಡೊ
ಯ್ದರು ಸುರಾಂಗನೆಯರು ಧನಂಜಯ
ಪರಮ ಧರ್ಮರಹಸ್ಯವಾವಂಗರಿಯಬಹುದೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆ ಬಳಾಕನಿಗೆ, ಕುಟುಂಬ ರಕ್ಷಣೆಗೆ ಕಾರಣವಾದ ಹಿಂಸೆಯನ್ನು ಆಚರಣೆ ಮಾಡುವುದೇ ವರ ಎಂದು ಯಮಧರ್ಮನ ಶಾನುಭೋಗನಾದ ಚಿತ್ರಗುಪ್ತನು ಬರೆದುಕೊಂಡಿದ್ದನು. ಸತ್ತಾಗ ದೇವತಾಸ್ತ್ರಿಯರು ಅವನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋದರು. ಅರ್ಜುನ, ಧರ್ಮದ ಸೂಕ್ಷ್ಮ ವಿಚಾರಗಳನ್ನು ತಿಳಿಯಲು ಯಾರಿಗೆ ಸಾಧ್ಯ’ ಎಂದ ಕೃಷ್ಣನು ಹೇಳಿದನು
ಮೂಲ ...{Loading}...
ವರವವಂಗೆ ಕುಟುಂಬ ರಕ್ಷಾ
ಕರಣ ಕಾರಣವಾದ ಹಿಂಸಾ
ಚರಣೆಯೆಂದೇ ಬರಹ ಧರ್ಮನ ಸೇನಬೋವನಲಿ
ಮರಣವಾತಂಗಾಗೆ ಕೊಂಡೊ
ಯ್ದರು ಸುರಾಂಗನೆಯರು ಧನಂಜಯ
ಪರಮ ಧರ್ಮರಹಸ್ಯವಾವಂಗರಿಯಬಹುದೆಂದ ॥19॥
೦೨೦ ಪಿತೃಸಮೋ ಭ್ರಾತಾ ...{Loading}...
ಪಿತೃಸಮೋ ಭ್ರಾತಾ ಎನಿಪ್ಪುದು
ಶ್ರುತಿವಚನವರಸಂಗೆ ನೀನುಪ
ಹತಿಯ ಮಾಡಲು ನೆನೆದೆ ಮಾತಿನ ವಾಸಿ ಬೇಕೆಂದು
ಕ್ಷಿತಿಯೊಳಬುಜ ಮೃಣಾಳಕೋಸುಗ
ಕೃತತಟಾಕವನೊಡೆದವೊಲು ಭೂ
ಪತಿ ವಧವ್ಯಾಪಾರ ನಿರ್ಮಳ ಧರ್ಮವಹುದೆಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿರಿಯ ಸಹೋದರನು ತಂದೆಗೆ ಸಮಾನ ಎಂದು ವೇದದ ಮಾತುಗಳಲ್ಲಿ ಹೇಳಿದೆ. ಆಡಿದ ಪ್ರತಿಜ್ಞೆಯನ್ನು ಉಳಿಸಿಕೊಳ್ಳಬೇಕೆಂದು ನೀನು ಧರ್ಮರಾಯನನ್ನು ಕೊಲ್ಲಲು ಯೋಚಿಸಿದೆ. ಕಮಲದ ನಾಳವನ್ನು ಕೀಳಲು ಕೆರೆಯ ಕಟ್ಟೆಯನ್ನೇ ಒಡೆದು ಹಾಕಿದಂತೆ ನಿನ್ನ ಯೋಚನೆ. ಧರ್ಮರಾಯನನ್ನು ಕೊಲ್ಲುವ ನಿನ್ನ ಯೋಚನೆ ನಿರ್ಮಲವಾದ ಧರ್ಮವಾಗುತ್ತದೆಯೇ ಪಿತೃಸಮೋಭ್ರಾತಾ - ದೊಡ್ಡಣ್ಣನು ತಂದೆಗೆ ಸರಿಸಮಾನ.
ಮೂಲ ...{Loading}...
ಪಿತೃಸಮೋ ಭ್ರಾತಾ ಎನಿಪ್ಪುದು
ಶ್ರುತಿವಚನವರಸಂಗೆ ನೀನುಪ
ಹತಿಯ ಮಾಡಲು ನೆನೆದೆ ಮಾತಿನ ವಾಸಿ ಬೇಕೆಂದು
ಕ್ಷಿತಿಯೊಳಬುಜ ಮೃಣಾಳಕೋಸುಗ
ಕೃತತಟಾಕವನೊಡೆದವೊಲು ಭೂ
ಪತಿ ವಧವ್ಯಾಪಾರ ನಿರ್ಮಳ ಧರ್ಮವಹುದೆಂದ ॥20॥
೦೨೧ ಗುರುಹತಿಯೆ ಕರ್ತವ್ಯ ...{Loading}...
ಗುರುಹತಿಯೆ ಕರ್ತವ್ಯ ತಾನಾ
ದರಿಸಿ ಮಾಡಿದ ಮಾತನೇ ಪತಿ
ಕರಿಸುವುದು ಶ್ರುತಿವಿಹಿತ ಧರ್ಮವಿದೆಂಬುದೀ ಲೋಕ
ಎರಡರಭ್ಯಂತರವ ನೀನೇ
ನರಿಯದವನೇ ವೇದಶಾಸ್ತ್ರದ
ವರ ನಿಧಾನಜ್ಞಾತೃವಲ್ಲಾ ಪಾರ್ಥ ನೀನೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹಿರಿಯರನ್ನು ಕೊಲ್ಲುವುದು ಕರ್ತವ್ಯವಾಗುತ್ತದೆಯೇ ? ತನ್ನ ಪ್ರತಿಜ್ಞೆಯನ್ನು ಉಳಿಸಿಕೊಳ್ಳುವುದು ವೇದಗಳು ಒಪ್ಪುವ ಧರ್ಮಮಾರ್ಗ ಎಂದು ಈ ಲೋಕ ಹೇಳುತ್ತದೆ. ಈ ಎರಡರ ವ್ಯತ್ಯಾಸ ನಿನಗೆ ತಿಳಿದಿಲ್ಲವೇ. ವೇದಶಾಸ್ತ್ರಗಳಲ್ಲಿ ಅಡಗಿರುವ ಜ್ಞಾನವನ್ನು ನೀನು ತಿಳಿದಿಲ್ಲವೇ? ಅರ್ಜುನ’ ಎಂದು ಕೃಷನು ಹೇಳಿದನು,
ಮೂಲ ...{Loading}...
ಗುರುಹತಿಯೆ ಕರ್ತವ್ಯ ತಾನಾ
ದರಿಸಿ ಮಾಡಿದ ಮಾತನೇ ಪತಿ
ಕರಿಸುವುದು ಶ್ರುತಿವಿಹಿತ ಧರ್ಮವಿದೆಂಬುದೀ ಲೋಕ
ಎರಡರಭ್ಯಂತರವ ನೀನೇ
ನರಿಯದವನೇ ವೇದಶಾಸ್ತ್ರದ
ವರ ನಿಧಾನಜ್ಞಾತೃವಲ್ಲಾ ಪಾರ್ಥ ನೀನೆಂದ ॥21॥
೦೨೨ ಈಸು ನಿರ್ದಯನೆಮ್ಬುದನು ...{Loading}...
ಈಸು ನಿರ್ದಯನೆಂಬುದನು ನಾ
ವೀಸು ದಿನವರಿಯೆವು ಮಹಾದೇ
ವೇಸು ಪರಿಯಂತಿದ್ದುದೋ ನಿನ್ನಂತರಂಗದಲಿ
ಏಸನೋದಿದಡೇನು ಪಾಪ ವಿ
ಳಾಸ ರಚನಾ ರೌರವಾತ್ಮರ
ವಾಸನೆಗಳವು ಬೇರೆ ಹರಹರ ಎಂದನಸುರಾರಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇಷ್ಟು ದಿವಸದಿಂದ ನಿನ್ನ ಜೊತೆಯಲ್ಲಿದ್ದರೂ. ನೀನು ಇಷ್ಟೊಂದು ನಿರ್ದಯಿ ಎಂದು ತಿಳಿದಿರಲಿಲ್ಲ. ಅಯ್ಯೋ ಶಿವನೇ. ಅದು ಎಷ್ಟು ಕಾಲದಿಂದ ನಿನ್ನ ಮನಸ್ಸಿನಲ್ಲಿ ಹುದುಗಿತ್ತೋ. ಎಷ್ಟು ಓದಿದರೆ ಏನು ಪ್ರಯೋಜನ. ಪಾಪದ ಕೆಲಸಗಳನ್ನು ಮಾಡುವ ರೌರವ ನರಕಕ್ಕೆ ಹೋಗುವಂತಹವರ ಸಂಸ್ಕಾರವೇ ಬೇರೆ’ ಎಂದನು ಕೃಷ್ಣ.
ಪದಾರ್ಥ (ಕ.ಗ.ಪ)
ವಾಸನೆ-ಸಂಸ್ಕಾರ
ಮೂಲ ...{Loading}...
ಈಸು ನಿರ್ದಯನೆಂಬುದನು ನಾ
ವೀಸು ದಿನವರಿಯೆವು ಮಹಾದೇ
ವೇಸು ಪರಿಯಂತಿದ್ದುದೋ ನಿನ್ನಂತರಂಗದಲಿ
ಏಸನೋದಿದಡೇನು ಪಾಪ ವಿ
ಳಾಸ ರಚನಾ ರೌರವಾತ್ಮರ
ವಾಸನೆಗಳವು ಬೇರೆ ಹರಹರ ಎಂದನಸುರಾರಿ ॥22॥
೦೨೩ ನನೆದುದನ್ತಃಕರಣ ಮಧುಸೂ ...{Loading}...
ನನೆದುದಂತಃಕರಣ ಮಧುಸೂ
ದನನ ಸೂಕ್ತಿ ಸುಧಾರಸದಿ ನೆರೆ
ನೆನೆದುದಾತನ ಮೈ ವಿಲೋಚನವಾರಿ ಪೂರದಲಿ
ಮನದ ಪರಿತಾಪ ವ್ಯಥಾ ದು
ರ್ಮನನು ಖಡ್ಗವನೊರೆಯೊಳೌಕುತ
ವಿನಯದಲಿ ಕೃಷ್ಣಂಗೆ ಬಿನ್ನಹ ಮಾಡಿದನು ಪಾರ್ಥ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಮಾತುಗಳೆಂಬ ಅಮೃತ ರಸದಲ್ಲಿ ಅರ್ಜುನನ ಮನಸ್ಸು ನೆನೆದು ಕರಗಿತು. ಅವನ ದೇಹವೆಲ್ಲಾ ಕಣ್ಣೀರಿನಲ್ಲಿ ನೆನೆದು ಹೋಯಿತು. ದುಃಖ ವ್ಯಥೆಗಳಿಂದ ಮನಸ್ಸು ಕೆಟ್ಟಿದ್ದ ಅವನು ಖಡ್ಗವನ್ನು ಒರೆಗೆ ಸೇರಿಸುತ್ತ ವಿನಯದಿಂದ ಕೃಷ್ಣನ ಬಳಿ ಹೇಳಿಕೊಂಡನು.
ಮೂಲ ...{Loading}...
ನನೆದುದಂತಃಕರಣ ಮಧುಸೂ
ದನನ ಸೂಕ್ತಿ ಸುಧಾರಸದಿ ನೆರೆ
ನೆನೆದುದಾತನ ಮೈ ವಿಲೋಚನವಾರಿ ಪೂರದಲಿ
ಮನದ ಪರಿತಾಪ ವ್ಯಥಾ ದು
ರ್ಮನನು ಖಡ್ಗವನೊರೆಯೊಳೌಕುತ
ವಿನಯದಲಿ ಕೃಷ್ಣಂಗೆ ಬಿನ್ನಹ ಮಾಡಿದನು ಪಾರ್ಥ ॥23॥
೦೨೪ ನಾವು ನೆರೆ ...{Loading}...
ನಾವು ನೆರೆ ಸರ್ವಾಪರಾಧಿಗ
ಳಾವ ಗುಣದೋಷವನು ನಮ್ಮಲಿ
ಭಾವಿಸುವೆ ನಾವೆತ್ತ ಬಲ್ಲೆವು ಧರ್ಮನಿರ್ಣಯವ
ಆವ ಪರಿಯಲಿ ತನ್ನ ಸತ್ಯದ
ಠಾವು ನಿಲುವುದು ರಾಯನುಪಹತಿ
ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ಪೂರ್ತಿಯಾಗಿ ಸರ್ವಾಪರಾಧ ಮಾಡಿದವರು. ನಮ್ಮಲ್ಲಿ ಯಾವ ಗುಣದೋಷಗಳನ್ನು ನೋಡುತ್ತೀಯ. ನಮಗೆ ಧರ್ಮಸೂಕ್ಷ್ಮದ ತೀರ್ಮಾನಗಳು ಗೊತ್ತಿಲ್ಲ. ಹೇಗೆ ಮಾಡಿದರೆ ನನ್ನ ಪ್ರತಿಜ್ಞೆ ಉಳಿಯುತ್ತದೆ. ಧರ್ಮರಾಯನನ್ನು ಕೊಲ್ಲುವುದನ್ನು ಹೇಗೆ ನಿಲ್ಲಿಸುವುದು. ಇದನ್ನು ತಿಳಿದು ಅಪ್ಪಣೆ ಮಾಡು’ ಎಂದನು.
ಮೂಲ ...{Loading}...
ನಾವು ನೆರೆ ಸರ್ವಾಪರಾಧಿಗ
ಳಾವ ಗುಣದೋಷವನು ನಮ್ಮಲಿ
ಭಾವಿಸುವೆ ನಾವೆತ್ತ ಬಲ್ಲೆವು ಧರ್ಮನಿರ್ಣಯವ
ಆವ ಪರಿಯಲಿ ತನ್ನ ಸತ್ಯದ
ಠಾವು ನಿಲುವುದು ರಾಯನುಪಹತಿ
ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ ॥24॥
೦೨೫ ಭರತವಂಶದೊಳುದಿಸಿದೆಮ್ಮೈ ...{Loading}...
ಭರತವಂಶದೊಳುದಿಸಿದೆಮ್ಮೈ
ವರಿಗೆ ಇಹಲೋಕದ ನಿವಾಸಕೆ
ಪರದ ಸೌಖ್ಯಸ್ಥಿತಿಗೆ ಹೊಣೆ ನೀನಲ್ಲದೆಮಗಾರು
ದುರುಳರಾವನ್ವಯ ಮದದ ದು
ರ್ಧರ ಪರಾಕ್ರಮ ಮದದ ಘನಮ
ತ್ತರಿಗೆ ಕೃಪೆಮಾಡೆಂದು ಬಿನ್ನಹ ಮಾಡಿದನು ಪಾರ್ಥ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭರತವಂಶದಲ್ಲಿ ಹುಟ್ಟಿದ ನಾವು ಐದೂ ಜನರಿಗೆ’ ಇಹಲೋಕದ ಬದುಕಿನ ರೀತಿ ಹಾಗೂ ಪರಲೋಕದ ಸುಖದ ಸ್ಥಿತಿ ಇವುಗಳಿಗೆ ನೀನೇ ಹೊಣೆ, ಬೇರೆ ಯಾರೂ ಇಲ್ಲ. ನಾವು ದುಷ್ಟರು. ವಂಶದ ಮದ, ಮಹಾ ಪರಾಕ್ರಮದ ಮದದಿಂದ ಕೊಬ್ಬಿರುವ ನಮಗೆ ಕರುಣೆ ತೋರಿಸು, ಎಂದು ಅರ್ಜುನನು ಕೃಷ್ಣನ ಬಳಿ ಕೇಳಿಕೊಂಡನು.
ಮೂಲ ...{Loading}...
ಭರತವಂಶದೊಳುದಿಸಿದೆಮ್ಮೈ
ವರಿಗೆ ಇಹಲೋಕದ ನಿವಾಸಕೆ
ಪರದ ಸೌಖ್ಯಸ್ಥಿತಿಗೆ ಹೊಣೆ ನೀನಲ್ಲದೆಮಗಾರು
ದುರುಳರಾವನ್ವಯ ಮದದ ದು
ರ್ಧರ ಪರಾಕ್ರಮ ಮದದ ಘನಮ
ತ್ತರಿಗೆ ಕೃಪೆಮಾಡೆಂದು ಬಿನ್ನಹ ಮಾಡಿದನು ಪಾರ್ಥ ॥25॥
೦೨೬ ಕೊಲುವುದೇನೊನ್ದರಿದೆ ...{Loading}...
ಕೊಲುವುದೇನೊಂದರಿದೆ ಟಿಕ್ಕರಿ
ಗಳೆವುದೇ ಪರಹಿಂಸೆ ಲೋಗರ
ಹಳಿವುದೇ ವಧೆ ಶಸ್ತ್ರವಧೆ ವಧೆಯಲ್ಲ ನೋಡುವರೆ
ಖಳರ ದುಸ್ಸಹ ದುಷ್ಟವಚನದ
ಹಿಳುಕು ಹೃದಯವ ಕೊಂಡು ಮರುಮೊನೆ
ಮೊಳೆತ ಬಳಿಕವ ಬದುಕಿದವನೇ ಪಾರ್ಥ ಹೇಳೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕೊಲ್ಲುವುದೇನೂ ಕಷ್ಟದ ಕೆಲಸವಲ್ಲ. ಧಿಕ್ಕರಿಸಿ ತೆಗಳಿ ಮಾತನಾಡುವುದೇ ಪರಹಿಂಸೆ, ಸಾಮಾನ್ಯರನ್ನು ನಿಂದಿಸುವುದೇ ವಧೆ, ಹಾಗೆ ನೋಡಿದರೆ ಶಸ್ತ್ರಗಳಿಂದ ಕೊಲ್ಲುವುದೇ ವಧೆಯಲ್ಲ. ಸಹಿಸಲು ಅಸಾಧ್ಯವಾದ ದುಷ್ಟರ ದುಷ್ಟ ಮಾತುಗಳೆಂಬ ಬಾಣಗಳ ತುದಿ ಹೃದಯವನ್ನು ಆಳವಾಗಿ ಮರುಮೊನೆ ಕಾಣುವಂತೆ ಚುಚ್ಚಿಸಿಕೊಂಡವನು ಬದುಕಿದ್ದರೂ ಸತ್ತಂತೆ ಅಲ್ಲವೇ ಅರ್ಜುನ ಹೇಳು’ ಎಂದ ಕೃಷ್ಣ.
ಪದಾರ್ಥ (ಕ.ಗ.ಪ)
ಟಿÉಕ್ಕರಿಗಳೆ-ನಿಂದಿಸು,
ಮೂಲ ...{Loading}...
ಕೊಲುವುದೇನೊಂದರಿದೆ ಟಿಕ್ಕರಿ
ಗಳೆವುದೇ ಪರಹಿಂಸೆ ಲೋಗರ
ಹಳಿವುದೇ ವಧೆ ಶಸ್ತ್ರವಧೆ ವಧೆಯಲ್ಲ ನೋಡುವರೆ
ಖಳರ ದುಸ್ಸಹ ದುಷ್ಟವಚನದ
ಹಿಳುಕು ಹೃದಯವ ಕೊಂಡು ಮರುಮೊನೆ
ಮೊಳೆತ ಬಳಿಕವ ಬದುಕಿದವನೇ ಪಾರ್ಥ ಹೇಳೆಂದ ॥26॥
೦೨೭ ಅರಸಗುಪಹತಿಯೆನಿಸದೇ ನಿ ...{Loading}...
ಅರಸಗುಪಹತಿಯೆನಿಸದೇ ನಿ
ಷ್ಠುರ ದುರುಕ್ತಿ ಕೃಪಾಣದಲಿ ಸಂ
ಹರಿಸಿದರೆ ನಿರ್ವಾಹವಾಗದೆ ನಿನ್ನ ನುಡಿಗಳಿಗೆ
ಪರಮ ಋಷಿಮತವೆನೆ ಮುರಾರಿಯ
ಸಿರಿವಚನಕೆ ಹಸಾದವೆಂದು
ಬ್ಬರದ ಗರ್ವೋಕ್ತಿಯಲಿ ಗರುವಿಕೆಗೆಡಿಸಿದನು ನೃಪನ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ನಿಷ್ಠುರವಾದ ಕೆಟ್ಟ ಮಾತುಗಳೆಂಬ ಕತ್ತಿಯಿಂದ ಸಂಹಾರ ಮಾಡಿದರೆ ಧರ್ಮರಾಯನ ಕೊಲೆಯಾದಂತಲ್ಲವೆ? ಇದರಿಂದ ನಿನ್ನ ಪ್ರತಿಜ್ಞೆಯ ಮಾತುಗಳು ನಡೆದಂತಾಗುತ್ತದಲ್ಲವೆ? ಇದು ಶ್ರೇಷ್ಠರಾದ ಮುನಿಗಳು ಹೇಳಿದ ಮಾತುಗಳು’ ಎಂದಾಗ ಅರ್ಜುನನು ಕೃಷ್ಣನ ಮಾತನ್ನು ‘ಮಹಾಪ್ರಸಾದ’ ಎಂದು ಸ್ವೀಕರಿಸಿ, ಧರ್ಮರಾಯನ ಗೌರವಕ್ಕೆ ಭಂಗಬರುವಂತೆ ಮಹಾ ಗರ್ವದ ಮಾತುಗಳಿಂದ ಹಂಗಿಸಿದನು.
ಮೂಲ ...{Loading}...
ಅರಸಗುಪಹತಿಯೆನಿಸದೇ ನಿ
ಷ್ಠುರ ದುರುಕ್ತಿ ಕೃಪಾಣದಲಿ ಸಂ
ಹರಿಸಿದರೆ ನಿರ್ವಾಹವಾಗದೆ ನಿನ್ನ ನುಡಿಗಳಿಗೆ
ಪರಮ ಋಷಿಮತವೆನೆ ಮುರಾರಿಯ
ಸಿರಿವಚನಕೆ ಹಸಾದವೆಂದು
ಬ್ಬರದ ಗರ್ವೋಕ್ತಿಯಲಿ ಗರುವಿಕೆಗೆಡಿಸಿದನು ನೃಪನ ॥27॥
೦೨೮ ಎಲೆ ಯುಧಿಷ್ಠಿರ ...{Loading}...
ಎಲೆ ಯುಧಿಷ್ಠಿರ ಜನಿಸಿದೈ ಶಶಿ
ಕುಲದ ವೀರ ಕ್ಷತ್ರ ಪಂತಿಯೊ
ಳೆಳಮನದ ಕಾಳಿಕೆಯ ತೊಡಹದ ಗಂಡು ರೂಪಿನಲಿ
ನೆಲನ ಕೊಂಡರು ನಿನ್ನ ಮೋರೆಯ
ಬಲುಹ ಕಂಡೇ ಕೌರವರು ನಿ
ನ್ನೊಳಗೆ ಬಲ್ಲಿದನೆನ್ನ ಭಂಗಿಸಲೇಕೆ ನೀನೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೆ ಧರ್ಮರಾಯ, ನೀನು ಚಂದ್ರವಂಶದ ಕ್ಷತ್ರಿಯರ ಪಂಕ್ತಿಯಲ್ಲಿ ದುರ್ಬಲವಾದ ಮನಸ್ಸಿನ, ಕಿಲುಬಾದ ಆಭರಣಗಳನ್ನು ತೊಟ್ಟ ಗಂಡು ರೂಪಿನಲ್ಲಿ ಜನಿಸಿದೆ. ನಿನ್ನ ಮುಖದಲ್ಲಿ ಆ ದುರ್ಬಲತೆಯನ್ನು ನೋಡಿದ ಕೌರವರು ರಾಜ್ಯವನ್ನು ಕಿತ್ತುಕೊಂಡರು. ಬಲಶಾಲಿಯಾದ ನನ್ನನ್ನು ನೀನು ಅವಮಾನಿಸಿದ್ದು ಏಕೆ’ ಎಂದ.
ಪದಾರ್ಥ (ಕ.ಗ.ಪ)
ಕಾಳಿಕೆ-ಕಿಲುಬು, ತೊಡಹು-ಆಭರಣ
ಮೂಲ ...{Loading}...
ಎಲೆ ಯುಧಿಷ್ಠಿರ ಜನಿಸಿದೈ ಶಶಿ
ಕುಲದ ವೀರ ಕ್ಷತ್ರ ಪಂತಿಯೊ
ಳೆಳಮನದ ಕಾಳಿಕೆಯ ತೊಡಹದ ಗಂಡು ರೂಪಿನಲಿ
ನೆಲನ ಕೊಂಡರು ನಿನ್ನ ಮೋರೆಯ
ಬಲುಹ ಕಂಡೇ ಕೌರವರು ನಿ
ನ್ನೊಳಗೆ ಬಲ್ಲಿದನೆನ್ನ ಭಂಗಿಸಲೇಕೆ ನೀನೆಂದ ॥28॥
೦೨೯ ನಿನ್ನ ಜೂಜಿನ ...{Loading}...
ನಿನ್ನ ಜೂಜಿನ ವಿಲಗದಲಿ ಸಂ
ಪನ್ನ ರಾಜ್ಯವ ಬಿಸುಟು ನಿನ್ನಯ
ಬೆನ್ನಲಡವಿಯಲಾಡಿದೆವು ಹನ್ನೆರಡು ವರ್ಷದಲಿ
ಮನ್ನಿಸಿದೆ ಲೇಸಾಗಿ ಕೌರವ
ರಿನ್ನು ಕೊಡುವರೆ ನಿನಗೆ ರಾಜ್ಯವ
ನಿನ್ನ ಹಿಡಿದೇ ಭೀಮ ಬದುಕಲಿ ಎಂದನಾ ಪಾರ್ಥ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀನು ಆಡಿದ ಜೂಜಿನ ತಾಪತ್ರಯದಿಂದ, ನಾವು ರಾಜ್ಯವನ್ನು ಕಳೆದುಕೊಂಡು, ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿ ನಿನ್ನ ಬೆನ್ನ ಹಿಂದೆ ಅಲೆದಾಡಬೇಕಾಯಿತು. ಆದರೂ ಕೌರವರನ್ನು ಚೆನ್ನಾಗಿಯೇ ಗೌರವಿಸಿದೆ. ನಿನಗೆ ಅವರು ರಾಜ್ಯವನ್ನು ಕೊಡುತ್ತಾರೆಯೇ, ಬೇಕಾದರೆ ಭೀಮನು ನಿನ್ನನ್ನು ಅನುಸರಿಸಿ ಬದುಕಲಿ’ ಎಂದನು ಪಾರ್ಥ.
ಪದಾರ್ಥ (ಕ.ಗ.ಪ)
ವಿಲಗ-ಕಷ್ಟ
ಮೂಲ ...{Loading}...
ನಿನ್ನ ಜೂಜಿನ ವಿಲಗದಲಿ ಸಂ
ಪನ್ನ ರಾಜ್ಯವ ಬಿಸುಟು ನಿನ್ನಯ
ಬೆನ್ನಲಡವಿಯಲಾಡಿದೆವು ಹನ್ನೆರಡು ವರ್ಷದಲಿ
ಮನ್ನಿಸಿದೆ ಲೇಸಾಗಿ ಕೌರವ
ರಿನ್ನು ಕೊಡುವರೆ ನಿನಗೆ ರಾಜ್ಯವ
ನಿನ್ನ ಹಿಡಿದೇ ಭೀಮ ಬದುಕಲಿ ಎಂದನಾ ಪಾರ್ಥ ॥29॥
೦೩೦ ರಣದ ಘಾರಾಘಾರಿಯಾರೋ ...{Loading}...
ರಣದ ಘಾರಾಘಾರಿಯಾರೋ
ಗಣೆಯ ಮನೆಯಲ್ಲರಸ ಶಿರದಲಿ
ಕುಣಿವಡಾಯ್ದಕೆ ಸುಳಿವ ಸುರಗಿಗೆ ತಿವಿವ ಬಲ್ಲೆಹಕೆ
ಹಣಿವ ಲೌಡಿಗೆ ಪಾಯ್ದು ಬೀಳುವ
ಕಣೆಗೆ ಖಂಡದ ರುಧಿರ ರಣದೌ
ತಣವ ರಚಿಸದೆ ಬರಿದೆ ರಾಜ್ಯವ ಕೊಂಬೆ ನೀನೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯುದ್ಧದ ಆವೇಶವೆಂದರೆ ಊಟದ ಮನೆಯ ಕೆಲಸವಲ್ಲ. ದೊರೆಯೇ, ತಲೆಯ ಬಳಿ ಕುಣಿಯುವ ಅಡಾಯುಧಕ್ಕೆ, ಸುಳಿದಾಡುವ ಸುರಗಿಗೆ, ತಿವಿಯುವ ಈಟಿಗೆ, ಹೊಡೆಯುವ ಲೌಡಿಗೆ, ಮೇಲೆ ಬೀಳುವ ಬಾಣಕ್ಕೆ ಮಾಂಸಖಂಡದ ರಕ್ತದ ಔತಣವನ್ನು ನೀಡದೆ ಸುಲಭವಾಗಿ ರಾಜ್ಯವನ್ನು ಸಂಪಾದಿಸುತ್ತೀಯಾ ನೀನು’ ಎಂದು ಅಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಘಾರಾಘಾರಿ-ಆವೇಶ, ಬಲ್ಲೆಹ-ಈಟಿ, ಹಣಿ-ಮೇಲೆ ಬೀಳು
ಮೂಲ ...{Loading}...
ರಣದ ಘಾರಾಘಾರಿಯಾರೋ
ಗಣೆಯ ಮನೆಯಲ್ಲರಸ ಶಿರದಲಿ
ಕುಣಿವಡಾಯ್ದಕೆ ಸುಳಿವ ಸುರಗಿಗೆ ತಿವಿವ ಬಲ್ಲೆಹಕೆ
ಹಣಿವ ಲೌಡಿಗೆ ಪಾಯ್ದು ಬೀಳುವ
ಕಣೆಗೆ ಖಂಡದ ರುಧಿರ ರಣದೌ
ತಣವ ರಚಿಸದೆ ಬರಿದೆ ರಾಜ್ಯವ ಕೊಂಬೆ ನೀನೆಂದ ॥30॥
೦೩೧ ಕರುಳ ಕಙ್ಕಣದಾರ ...{Loading}...
ಕರುಳ ಕಂಕಣದಾರ ಮಿದುಳಿನ
ಶಿರದ ಬಾಸಿಗ ಭುಜದ ವಕ್ಷದ
ಕರದ ಘಾಯದ ತೋಳ ಬಂದಿಯ ಪದಕ ಸರಪಣಿಯ
ಅರುಣಜಲ ಲುಳಿತಾಂಬರದ ಸಂ
ಗರ ವಿವಾಹದ ಭೂಷಣದ ಸೌಂ
ದರಿಯವಿಲ್ಲದೆ ರಾಜ್ಯಸಿರಿ ನಿನಗೊಲಿವಳಲ್ಲೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕರುಳ ಕಂಕಣದ ದಾರ, ತಲೆಯಿಂದ ಹೊರಬಂದಿರುವ ಮಿದುಳಿನ ಬಾಸಿಂಗ, ಭುಜ, ಎದೆ, ಕೈಗಳ ಗಾಯಗಳ ತೋಳಬಂದಿ, ಪದಕ, ಸರಪಣಿಗಳು, ರಕ್ತ ಮೆತ್ತಿದ ಬಟ್ಟೆ ಇವುಗಳಿಂದ ಕೂಡಿದ ಯುದ್ಧವೆಂಬ ವಿವಾಹದ ಆಭರಣಗಳ ಸೌಂದರ್ಯ ಇಲ್ಲದೆ ರಾಜಲಕ್ಷ್ಮಿ ನಿನಗೆ ಒಲಿಯುವವಳಲ್ಲ’
ಮೂಲ ...{Loading}...
ಕರುಳ ಕಂಕಣದಾರ ಮಿದುಳಿನ
ಶಿರದ ಬಾಸಿಗ ಭುಜದ ವಕ್ಷದ
ಕರದ ಘಾಯದ ತೋಳ ಬಂದಿಯ ಪದಕ ಸರಪಣಿಯ
ಅರುಣಜಲ ಲುಳಿತಾಂಬರದ ಸಂ
ಗರ ವಿವಾಹದ ಭೂಷಣದ ಸೌಂ
ದರಿಯವಿಲ್ಲದೆ ರಾಜ್ಯಸಿರಿ ನಿನಗೊಲಿವಳಲ್ಲೆಂದ ॥31॥
೦೩೨ ಇನ್ದಿನಲಿ ಹದಿನೇಳು ...{Loading}...
ಇಂದಿನಲಿ ಹದಿನೇಳು ದಿನವಿ
ಲ್ಲಿಂದ ಹಿಂದಣ ಬವರದಲಿ ನೀ
ನೊಂದುದುಂಟೇ ದ್ರೋಣ ಭೀಷ್ಮರ ಕೋಲ ತೋಹಿನಲಿ
ಒಂದು ತೂರಂಬಿನಲಿ ಗಡ ನೀ
ನಿಂದು ಜೀವವ ಜಾರಿಸುವೆ ಸುಡ
ಲಿಂದುಕುಲ ಕಂಟಕರನಿರಿದರೆ ದೋಷವೇನೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇಂದಿಗೆ ಹದಿನೇಳು ದಿನದ ಯುದ್ಧ ಮುಗಿಯಿತು. ಈ ಹಿಂದೆ ಯುದ್ಧದಲ್ಲಿ ಎಂದಾದರೂ ದ್ರೋಣ ಭೀಷ್ಮರ ಬಾಣಗಳ ಪ್ರಯೋಗದಿಂದ ನಿನಗೆ ನೋವಾಗಿದೆಯೇ. ಒಂದು ಬಾಣ ಚುಚ್ಚಿಕೊಂಡದ್ದಕ್ಕೇ ಜೀವ ಹೋದವನಂತೆ ಆಡುತ್ತಿದ್ದೀಯೆ. ಹಾಳಾಗಲಿ, ಚಂದ್ರವಂಶಕ್ಕೆ ಕಂಟಕರಾದವರನ್ನು ಕೊಂದರೆ ಅದರಲ್ಲಿ ಏನು ದೋಷ’ ಎಂದನು.
ಪದಾರ್ಥ (ಕ.ಗ.ಪ)
ತೋಹು-ಮುತ್ತಿಗೆ
ಮೂಲ ...{Loading}...
ಇಂದಿನಲಿ ಹದಿನೇಳು ದಿನವಿ
ಲ್ಲಿಂದ ಹಿಂದಣ ಬವರದಲಿ ನೀ
ನೊಂದುದುಂಟೇ ದ್ರೋಣ ಭೀಷ್ಮರ ಕೋಲ ತೋಹಿನಲಿ
ಒಂದು ತೂರಂಬಿನಲಿ ಗಡ ನೀ
ನಿಂದು ಜೀವವ ಜಾರಿಸುವೆ ಸುಡ
ಲಿಂದುಕುಲ ಕಂಟಕರನಿರಿದರೆ ದೋಷವೇನೆಂದ ॥32॥
೦೩೩ ಎನುತಡಾಯ್ದವನೊರೆಯೊಳುಗಿದ ...{Loading}...
ಎನುತಡಾಯ್ದವನೊರೆಯೊಳುಗಿದ
ರ್ಜುನನು ತನ್ನಯ ಕೊರಳ ಸಂದಿಗೆ
ಮನದೊಳಗೆ ಖಯಖೋಡಿಯಿಲ್ಲದೆ ಚಾಚಿದನು ಬಳಿಕ
ದನುಜರಿಪುವಡಹಾಯ್ದು ಪಿಡಿದೀ
ತನ ಕೃಪಾಣವ ಕೊಂಡು ನಿನ್ನಯ
ನೆನಹಿದೇನೈ ಪಾರ್ಥ ಹೇಳೆನ್ನಾಣೆ ಹೇಳೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತಾ ಅರ್ಜುನನು, ಒರೆಯಿಂದ ಅಡಾಯುಧವನ್ನು ಈಚೆಗೆ ತೆಗೆದು, ಮನಸ್ಸಿನಲ್ಲಿ ಸ್ವಲ್ಪವೂ ಹಿಂಜರಿಯದೆ, ತನ್ನ ಕುತ್ತಿಗೆಯನ್ನು ಕತ್ತರಿಸಿಕೊಳ್ಳಲು ಸಿದ್ಧನಾದನು. ಕೃಷ್ಣನು ಅಡ್ಡಬಂದು ಕತ್ತಿಯನ್ನು ಕಿತ್ತುಕೊಂಡು ‘ಏನು ನೀನು ಮಾಡುತ್ತಿರುವುದು ಅರ್ಜುನ, ಹೇಳು ನನ್ನ ಆಣೆ’ ಎಂದು ಅವನನ್ನು ತಡೆದನು.
ಪದಾರ್ಥ (ಕ.ಗ.ಪ)
ಖಯಖೋಡಿ-ಹಿಂಜರಿಕೆ, ದಾಕ್ಷಿಣ್ಯ.
ಮೂಲ ...{Loading}...
ಎನುತಡಾಯ್ದವನೊರೆಯೊಳುಗಿದ
ರ್ಜುನನು ತನ್ನಯ ಕೊರಳ ಸಂದಿಗೆ
ಮನದೊಳಗೆ ಖಯಖೋಡಿಯಿಲ್ಲದೆ ಚಾಚಿದನು ಬಳಿಕ
ದನುಜರಿಪುವಡಹಾಯ್ದು ಪಿಡಿದೀ
ತನ ಕೃಪಾಣವ ಕೊಂಡು ನಿನ್ನಯ
ನೆನಹಿದೇನೈ ಪಾರ್ಥ ಹೇಳೆನ್ನಾಣೆ ಹೇಳೆಂದ ॥33॥
೦೩೪ ಏನ ಹೇಳುವೆನಡ್ಡ ...{Loading}...
ಏನ ಹೇಳುವೆನಡ್ಡ ಹಾಯಿದು
ನೀನೆ ಕೆಡಿಸಿದೆಯೆಮ್ಮನಲ್ಲದ
ಡೇನ ಮಾಡೆನು ಸತ್ಯಶೌರ್ಯದ ಹಾನಿ ಹರಿಬದಲಿ
ಈ ನರೇಂದ್ರನ ಕೊಂದ ನನಗಿ
ನ್ನೇನು ದೇಹಕೆ ತಲೆಯೊಡನೆ ಸಂ
ಧಾನವೇ ಸಾಕೆನ್ನ ಕೈದುವನೆನಗೆ ನೀಡೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಏನೆಂದು ಹೇಳಲಿ, ನೀನು ಅಡ್ಡಬಂದು ನನ್ನನ್ನು ಹಾಳು ಮಾಡಿದೆ. ಸತ್ಯದ ಮಾತಿನ ಹಾನಿಯಾಗುತ್ತದೆ ಎಂಬ ಚಿಂತೆಯಲ್ಲಿ ಈ ಧರ್ಮರಾಯನನ್ನು ಕೊಂದ ನನಗೆ, ದೇಹದ ಮೇಲೆ ತಲೆಯನ್ನು ಇಟ್ಟುಕೊಂಡು ಬದುಕುವುದು ಉಚಿತವೇ. ಸಾಕು ನನ್ನ ಆಯುಧವನ್ನು ನನಗೆ ಹಿಂತಿರುಗಿಸು’ ಎಂದ ಅರ್ಜುನ.
ಮೂಲ ...{Loading}...
ಏನ ಹೇಳುವೆನಡ್ಡ ಹಾಯಿದು
ನೀನೆ ಕೆಡಿಸಿದೆಯೆಮ್ಮನಲ್ಲದ
ಡೇನ ಮಾಡೆನು ಸತ್ಯಶೌರ್ಯದ ಹಾನಿ ಹರಿಬದಲಿ
ಈ ನರೇಂದ್ರನ ಕೊಂದ ನನಗಿ
ನ್ನೇನು ದೇಹಕೆ ತಲೆಯೊಡನೆ ಸಂ
ಧಾನವೇ ಸಾಕೆನ್ನ ಕೈದುವನೆನಗೆ ನೀಡೆಂದ ॥34॥
೦೩೫ ಎಲವೊ ಖೂಳ ...{Loading}...
ಎಲವೊ ಖೂಳ ಕಿರೀಟಿ ಮತ್ತೆಯು
ತಿಳಿಯೆಲಾ ನೀನಾವ ಪರಿಯಲಿ
ಮುಳಿದು ರಾಯನನಿರಿದೆ ನಿನಗೆಯು ತದ್ವಿಧಾನದಲಿ
ಅಳಿವ ನೆನೆಯಾ ಸಾಕು ದೇಹವ
ನಳಿವುದೇ ಕೊಲೆಯಲ್ಲ ನಿನ್ನ
ಗ್ಗಳಿಕೆಗಳ ನೀನಾಡಿ ನಿನ್ನನೆ ಕೊಂದುಕೊಳ್ಳೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲವೊ ಹಾಳುಬುದ್ಧಿಯ ಅರ್ಜುನ, ಮತ್ತೆ ಯೋಚನೆ ಮಾಡು. ನೀನು ಯಾವ ರೀತಿಯಲ್ಲಿ ಧರ್ಮರಾಯನನ್ನು ಕೊಂದೆ, ನೀನೂ ಅದೇ ವಿಧಾನದಲ್ಲಿ ಸಾವನ್ನು ನೆನೆದರೆ ಸಾಕು. ಶರೀರವನ್ನು ಕೊನೆಗೊಳಿಸುವುದೇ ಕೊಲೆಯಲ್ಲ. ನಿನ್ನ ಹಿರಿತನಗಳನ್ನು ನೀನೇ ಕೊಚ್ಚಿಕೊಂಡು, ನಿನ್ನನ್ನೇ ಕೊಲೆ ಮಾಡಿಕೊ’ ಎಂದ ಕೃಷ್ಣ.
ಮೂಲ ...{Loading}...
ಎಲವೊ ಖೂಳ ಕಿರೀಟಿ ಮತ್ತೆಯು
ತಿಳಿಯೆಲಾ ನೀನಾವ ಪರಿಯಲಿ
ಮುಳಿದು ರಾಯನನಿರಿದೆ ನಿನಗೆಯು ತದ್ವಿಧಾನದಲಿ
ಅಳಿವ ನೆನೆಯಾ ಸಾಕು ದೇಹವ
ನಳಿವುದೇ ಕೊಲೆಯಲ್ಲ ನಿನ್ನ
ಗ್ಗಳಿಕೆಗಳ ನೀನಾಡಿ ನಿನ್ನನೆ ಕೊಂದುಕೊಳ್ಳೆಂದ ॥35॥
೦೩೬ ಸನ್ದ ಪರಿಯಿದು ...{Loading}...
ಸಂದ ಪರಿಯಿದು ಜಗಕೆ ಲೋಗರ
ನಿಂದಿಸುವುದೇ ಹಿಂಸೆ ತನ್ನನೆ
ಕೊಂದವನು ತನ್ನಾಳುತನವನು ತಾನೆ ಹೊಗಳಿದರೆ
ಎಂದಡರ್ಜುನನವನಿಪಾಲಂ
ಗೆಂದನೆನಗಿದಿರಾಗಿ ರಣದಲಿ
ನಿಂದು ಕಾದುವನಾರು ದನುಜಾಮರರ ಥಟ್ಟಿನಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಜನರನ್ನು ನಿಂದಿಸುವುದೇ ಹಿಂಸೆ. ಇದು ಲೋಕದಲ್ಲಿ ಪ್ರಸಿದ್ಧವಾದ ವಿಚಾರ. ಅದರಲ್ಲೂ ತನ್ನ ಶೌರ್ಯವನ್ನು ತಾನೇ ಹೊಗಳಿಕೊಂಡರೆ, ತನ್ನನ್ನೇ ಕೊಲೆ ಮಾಡಿಕೊಂಡಂತೆ ’ ಎಂದು ಕೃಷ್ಣನು ಹೇಳಿದಾಗ ಅರ್ಜುನನು, ಧರ್ಮರಾಯನಿಗೆ ಹೀಗೆ ಹೇಳಿದನು. ‘ನನಗೆ ಎದುರಾಗಿ ಯುದ್ಧದಲ್ಲಿ ನಿಂತು ಹೋರಾಡುವವರು, ರಾಕ್ಷಸರು ದೇವತೆಗಳ ಸೈನ್ಯದಲ್ಲಿ ಯಾರಿದ್ದಾರೆ’.
ಮೂಲ ...{Loading}...
ಸಂದ ಪರಿಯಿದು ಜಗಕೆ ಲೋಗರ
ನಿಂದಿಸುವುದೇ ಹಿಂಸೆ ತನ್ನನೆ
ಕೊಂದವನು ತನ್ನಾಳುತನವನು ತಾನೆ ಹೊಗಳಿದರೆ
ಎಂದಡರ್ಜುನನವನಿಪಾಲಂ
ಗೆಂದನೆನಗಿದಿರಾಗಿ ರಣದಲಿ
ನಿಂದು ಕಾದುವನಾರು ದನುಜಾಮರರ ಥಟ್ಟಿನಲಿ ॥36॥
೦೩೭ ನಾನಲಾ ದ್ರೌಪದಿಯ ...{Loading}...
ನಾನಲಾ ದ್ರೌಪದಿಯ ಮದುವೆಯೊ
ಳಾ ನರೇಂದ್ರರ ಗೆಲಿದವನು ಬಳಿ
ಕಾ ನಿಳಿಂಪ ವ್ರಜವ ಮುರಿದುರುಪಿದೆನು ಖಾಂಡವವ
ಏನನೆಂಬೆನು ಸಕಲ ಕೌರವ
ಸೇನೆಯನು ಗೋಗ್ರಹಣದಲಿ ಸಲೆ
ನಾನಲೇ ರಥವೊಂದರಿಂದವೆ ಗೆಲಿದೆ ದಿಟವೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದ್ರೌಪದಿಯ ಮದುವೆಯ ಸಂದರ್ಭದಲ್ಲಿ ಪ್ರತಿಭಟಿಸಿದ ರಾಜರನ್ನು ಗೆದ್ದವನು ನಾನಲ್ಲವೇ. ಆನಂತರ ಆ ದೇವತೆಗಳ ಸೈನ್ಯವನ್ನು ಸೋಲಿಸಿ ಖಾಂಡವ ವನವನ್ನು ಸುಡಲಿಲ್ಲವೇ. ಇನ್ನು ಏನು ಹೇಳಲಿ, ಕೌರವನ ಸೈನ್ಯವೆಲ್ಲವನ್ನೂ ಗೋಗ್ರಹಣದ ಸಮಯದಲ್ಲಿ ನಾನೊಬ್ಬನೆ ಒಂದು ರಥದ ಸಹಾಯದಿಂದಲೇ ಗೆದ್ದದ್ದು ನಿಜವಲ್ಲವೇ’ ಎಂದ.
ಮೂಲ ...{Loading}...
ನಾನಲಾ ದ್ರೌಪದಿಯ ಮದುವೆಯೊ
ಳಾ ನರೇಂದ್ರರ ಗೆಲಿದವನು ಬಳಿ
ಕಾ ನಿಳಿಂಪ ವ್ರಜವ ಮುರಿದುರುಪಿದೆನು ಖಾಂಡವವ
ಏನನೆಂಬೆನು ಸಕಲ ಕೌರವ
ಸೇನೆಯನು ಗೋಗ್ರಹಣದಲಿ ಸಲೆ
ನಾನಲೇ ರಥವೊಂದರಿಂದವೆ ಗೆಲಿದೆ ದಿಟವೆಂದ ॥37॥
೦೩೮ ಬಳಿಕ ಭೀಷ್ಮನನಾರು ...{Loading}...
ಬಳಿಕ ಭೀಷ್ಮನನಾರು ರಣದಲಿ
ಗೆಲಿದವನು ದ್ರೋಣ ಪ್ರತಾಪಾ
ನಳನ ನಂದಿಸಿದಾತನಾರು ಮಹಾಹವಾಗ್ರದಲಿ
ಮಲೆತು ನಿಂದರೆ ಸೂತತನಯನ
ಕೊಲುವನಾವನು ಎನ್ನ ಟಿಕ್ಕರಿ
ಗಳೆವೆ ನೀನೆನ್ನೊಡನೆ ಸೆಣಸುವ ಭಟನ ತೋರೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆ ಮೇಲೆ ಯುದ್ಧದಲ್ಲಿ ಭೀಷ್ಮನನ್ನು ಗೆದ್ದವನು ಯಾರು ? ದ್ರೋಣರ ಪ್ರತಾಪದ ಬೆಂಕಿಯನ್ನು ಆರಿಸಿದವನು ಯಾರು ? ಈ ಮಹಾ ಯುದ್ಧದಲ್ಲಿ ಪ್ರತಿಭಟಿಸಿ ನಿಂತರೆ ಸೂತಪುತ್ರ ಕರ್ಣನನ್ನು ಕೊಲ್ಲುವವನು ಯಾರು ? ಅಂತಹ ನನ್ನನ್ನು ನೀನು ನಿಂದಿಸುತ್ತೀಯಾ ನನ್ನ ಜೊತೆಯಲ್ಲಿ ಸರಿಸಮನಾಗಿ ಯುದ್ಧ ಮಾಡುವ ವೀರನನ್ನು ತೋರಿಸು’ ಎಂದು ಹೊಗಳಿಕೊಂಡನು.
ಮೂಲ ...{Loading}...
ಬಳಿಕ ಭೀಷ್ಮನನಾರು ರಣದಲಿ
ಗೆಲಿದವನು ದ್ರೋಣ ಪ್ರತಾಪಾ
ನಳನ ನಂದಿಸಿದಾತನಾರು ಮಹಾಹವಾಗ್ರದಲಿ
ಮಲೆತು ನಿಂದರೆ ಸೂತತನಯನ
ಕೊಲುವನಾವನು ಎನ್ನ ಟಿಕ್ಕರಿ
ಗಳೆವೆ ನೀನೆನ್ನೊಡನೆ ಸೆಣಸುವ ಭಟನ ತೋರೆಂದ ॥38॥
೦೩೯ ಉಣ್ಟು ಫಲುಗುಣ ...{Loading}...
ಉಂಟು ಫಲುಗುಣ ನಿನ್ನ ಹೋಲಿಸ
ಲುಂಟೆ ಸುಭಟರು ದೇವ ದೈತ್ಯರೊ
ಳೆಂಟು ಮಡಿ ನಾವರಿಯವೇ ಕೈವಾರವೇನದಕೆ
ಕಂಟಣಿಸದಿರು ಕೃಷ್ಣನಿಕ್ಕಿದ
ಗಂಟಿನಲಿ ಸಿಲುಕದಿರು ತನ್ನಯ
ಗಂಟಲಿದೆ ಶಸ್ತ್ರೌಘವಿದೆ ನೀ ಬೇಗ ಮಾಡೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೌದು ಅರ್ಜುನ, ನಿನಗೆ ಹೋಲಿಕೆ ಮಾಡಲು ದೇವತೆಗಳು ರಾಕ್ಷಸರಲ್ಲಿ ಯಾರೂ ಇಲ್ಲ. ನೀನು ಅವರಿಗೆ ಎಂಟು ಮಡಿ ಹೆಚ್ಚು. ಅದು ನನಗೆ ತಿಳಿಯದ ವಿಚಾರವೇ. ಅದರಲ್ಲಿ ಹೊಗಳ ಬೇಕಾದದ್ದೇನು ಇಲ್ಲ. ಹಿಂಜರಿಯಬೇಡ, ಕೃಷ್ಣನು ಹಾಕಿದ ಧರ್ಮಸೂಕ್ಷ್ಮದ ಗಂಟಿನಲ್ಲಿ ಸಿಕ್ಕಿಹಾಕಿಕೊಳ್ಳಬೇಡ. ನನ್ನ ಕುತ್ತಿಗೆ ಇದೆ. ಶಸ್ತ್ರಗಳು ಇವೆ. ಬೇಗ ನಿನ್ನ ಕೆಲಸವನ್ನು ಮುಗಿಸು’ ಎಂದನು ಧರ್ಮರಾಯ.
ಪದಾರ್ಥ (ಕ.ಗ.ಪ)
ಕಂಟಣಿಸು-ಬೆದರು, ಹಿಂಜರಿ,
ಕೈವಾರ-ಹೊಗಳಿಕೆ,
ಪಾಠಾನ್ತರ (ಕ.ಗ.ಪ)
ಕಂಟಣಿಸದಿರು – ಟೆಂಟಣಿಸದಿರು ಎಂಬ ಪಾಠಾಂತರವೂ ಇದೆ.
ಮೂಲ ...{Loading}...
ಉಂಟು ಫಲುಗುಣ ನಿನ್ನ ಹೋಲಿಸ
ಲುಂಟೆ ಸುಭಟರು ದೇವ ದೈತ್ಯರೊ
ಳೆಂಟು ಮಡಿ ನಾವರಿಯವೇ ಕೈವಾರವೇನದಕೆ
ಕಂಟಣಿಸದಿರು ಕೃಷ್ಣನಿಕ್ಕಿದ
ಗಂಟಿನಲಿ ಸಿಲುಕದಿರು ತನ್ನಯ
ಗಂಟಲಿದೆ ಶಸ್ತ್ರೌಘವಿದೆ ನೀ ಬೇಗ ಮಾಡೆಂದ ॥39॥
೦೪೦ ಭರತ ಕುಲದಲಿ ...{Loading}...
ಭರತ ಕುಲದಲಿ ಭಾಗಧೇಯ
ಸ್ಫುರಣ ಹೀನರನೆಮ್ಮನುರೆ ಧಿ
ಕ್ಕರಿಸಿದಾದಡೆ ಮುನಿದು ಮಾಡುವದೇನು ವಿಧಿಯೊಡನೆ
ಅರಿನೃಪಾಲರ ಗೆಲಿದು ವಿಶ್ವಂ
ಭರೆಯ ಕೊಂಡರೆ ಭೀಮಸೇನನ
ನರಸುತನದಲಿ ನಿಲಿಸು ಸುಖದಲಿ ಬದುಕಿ ನೀವೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭರತವಂಶದಲ್ಲಿ ಹುಟ್ಟಿ ರಾಜ್ಯದ ಅಧಿಕಾರದ ಹಕ್ಕನ್ನು ಕಳೆದುಕೊಂಡ ನನ್ನನ್ನು ವಿಪರೀತವಾಗಿ ಅವಮಾನಿಸಿದೆ. ಆದರೆ ನಾನು ವಿಧಿಯೊಡನೆ ಕೋಪ ಮಾಡಿಕೊಂಡರೆ ಏನೂ ಆಗುವುದಿಲ್ಲ. ಶತ್ರುಗಳನ್ನು ನೀನು ಗೆದ್ದು ಭೂಮಿಯನ್ನು ಪಡೆಯುವಂತಾದರೆ ಭೀಮನಿಗೆ ಪಟ್ಟವನ್ನು ಕಟ್ಟಿ ದೊರೆಯನ್ನಾಗಿ ಮಾಡಿ, ಸುಖದಿಂದ ಬಾಳ್ವೆ ಮಾಡಿರಿ’ ಎಂದನು ಧರ್ಮರಾಯ.
ಪದಾರ್ಥ (ಕ.ಗ.ಪ)
ಭಾಗಧೇಯ- ಬಾಧ್ಯಸ್ಥ, ಹಕ್ಕುದಾರ
ಮೂಲ ...{Loading}...
ಭರತ ಕುಲದಲಿ ಭಾಗಧೇಯ
ಸ್ಫುರಣ ಹೀನರನೆಮ್ಮನುರೆ ಧಿ
ಕ್ಕರಿಸಿದಾದಡೆ ಮುನಿದು ಮಾಡುವದೇನು ವಿಧಿಯೊಡನೆ
ಅರಿನೃಪಾಲರ ಗೆಲಿದು ವಿಶ್ವಂ
ಭರೆಯ ಕೊಂಡರೆ ಭೀಮಸೇನನ
ನರಸುತನದಲಿ ನಿಲಿಸು ಸುಖದಲಿ ಬದುಕಿ ನೀವೆಂದ ॥40॥
೦೪೧ ಇರಿದು ಮೆರೆವ ...{Loading}...
ಇರಿದು ಮೆರೆವ ವಿನೋದ ವಿಗ್ರಹ
ದಿರಿತವೇ ಹಿಂದಾಯ್ತು ಹರಹಿನೊ
ಳುರುವ ಫಲಿತದ ಬೀಡು ಬಿಟ್ಟುದು ನಮ್ಮ ತನುವಿನಲಿ
ಇರಿದ ಕರ್ಣನೆ ಸಾಲದೇ ಪೆಣ
ನಿರಿದು ಪಗೆಯೇಕೆಂಬ ಮಾತನು
ಮರೆದು ಕಳೆದೈ ತಮ್ಮ ಎಂದವನೀಶ ಬಿಸುಸುಯ್ದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯುದ್ಧ ಮಾಡಿ ಮೆರೆಯುವ ವಿನೋದಗೊಳ್ಳುವ ಕಾಲ ಮುಗಿಯಿತು. ಯುದ್ಧದ ಫಲವಾಗಿ, ನಮ್ಮ ದೇಹದಲ್ಲಿ ವಿಸ್ತಾರವಾಗಿ ಬೇಕಾದಷ್ಟು ಗಾಯಗಳಾಗಿವೆ. ಬಾಣದಿಂದ ಚುಚ್ಚಿದ ಕರ್ಣನೊಬ್ಬನ ಕೆಲಸವೇ ಸಾಕು. ಹೆಣವನ್ನು ಚುಚ್ಚುತ್ತಾ ಶತ್ರು ಎಲ್ಲಿದ್ದಾನೆ ಎಂಬಂತೆ ನನ್ನನ್ನು ಇರಿಯುತ್ತಿದ್ದೀಯೆ, ಎಂದು ಧರ್ಮರಾಯನು ನಿಟ್ಟುಸಿರು ಬಿಟ್ಟನು.
ಮೂಲ ...{Loading}...
ಇರಿದು ಮೆರೆವ ವಿನೋದ ವಿಗ್ರಹ
ದಿರಿತವೇ ಹಿಂದಾಯ್ತು ಹರಹಿನೊ
ಳುರುವ ಫಲಿತದ ಬೀಡು ಬಿಟ್ಟುದು ನಮ್ಮ ತನುವಿನಲಿ
ಇರಿದ ಕರ್ಣನೆ ಸಾಲದೇ ಪೆಣ
ನಿರಿದು ಪಗೆಯೇಕೆಂಬ ಮಾತನು
ಮರೆದು ಕಳೆದೈ ತಮ್ಮ ಎಂದವನೀಶ ಬಿಸುಸುಯ್ದ ॥41॥
೦೪೨ ನಿನ್ನ ಜನನಿಯ ...{Loading}...
ನಿನ್ನ ಜನನಿಯ ಜಠರದಲಿ ತಾ
ಮುನ್ನ ಜನಿಸಿದೆನೀ ಗುರುತ್ವಕೆ
ಮನ್ನಿಸಿದೆ ಸಾಕೈಸಲೇ ಸರ್ವಾಪರಾಧವನು
ಎನ್ನನೊಬ್ಬನನುಳಿಯಲುಳಿದರ
ಭಿನ್ನ ಸಾಹೋದರ್ಯ ಸಂಪ್ರತಿ
ಪನ್ನಗುಣರವರೊಡನೆ ಸುಖದಲಿ ರಾಜ್ಯ ಮಾಡೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ತಾಯಿಯ ಹೊಟ್ಟೆಯಲ್ಲಿ ನಾನು ಮೊದಲು ಹುಟ್ಟಿದೆ. ಹಾಗೆ ಹಿರಿಯನಾದುದಕ್ಕೆ ನನ್ನ ಸರ್ವಾಪರಾಧವನ್ನು ಮನ್ನಿಸಿದೆಯಲ್ಲ. ಅಷ್ಟು ಸಾಕು. ನನ್ನೊಬ್ಬನನ್ನು ಬಿಟ್ಟು ಉಳಿದವರು ನೀವೆಲ್ಲ ಒಂದು, ಸಹೋದರರ ಪ್ರೀತಿಯನ್ನು ಪಡೆದವರು. ಅವರೊಡನೆ ಸುಖದಲ್ಲಿ ರಾಜ್ಯಭಾರ ಮಾಡು’ ಎಂದನು ಧರ್ಮರಾಯ.
ಪದಾರ್ಥ (ಕ.ಗ.ಪ)
ಸಂಪ್ರತಿಪನ್ನ-ಲಭಿಸಿದ
ಮೂಲ ...{Loading}...
ನಿನ್ನ ಜನನಿಯ ಜಠರದಲಿ ತಾ
ಮುನ್ನ ಜನಿಸಿದೆನೀ ಗುರುತ್ವಕೆ
ಮನ್ನಿಸಿದೆ ಸಾಕೈಸಲೇ ಸರ್ವಾಪರಾಧವನು
ಎನ್ನನೊಬ್ಬನನುಳಿಯಲುಳಿದರ
ಭಿನ್ನ ಸಾಹೋದರ್ಯ ಸಂಪ್ರತಿ
ಪನ್ನಗುಣರವರೊಡನೆ ಸುಖದಲಿ ರಾಜ್ಯ ಮಾಡೆಂದ ॥42॥
೦೪೩ ಸೇರುವುದು ಭೀಮನಲಿ ...{Loading}...
ಸೇರುವುದು ಭೀಮನಲಿ ಸಾಹಂ
ಕಾರನಾತನ ಕೊಂಡು ನಡೆವುದು
ಕಾರಣಿಕ ನೀನಾದಡೀ ಸಹದೇವ ನಕುಲರನು
ಆರಯಿದು ಸಲಹುವುದು ದ್ರುಪದ ಕು
ಮಾರಿಯನು ಬೇಸರಿಸದೀ ಪರಿ
ವಾರವನು ಮನ್ನಿಸುವುದರ್ಜುನದೇವ ಕೇಳ್ ಎಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಮನು ಅಹಂಕಾರಿ. ಅವನ ಜೊತೆಯಲ್ಲಿ ಹೊಂದಿಕೊಂಡು ಬದುಕಬೇಕು. ನೀನು ಮಹಾಪುರುಷನಾದರೆ, ನಕುಲ ಸಹದೇವರನ್ನು ರಕ್ಷಿಸಿ ನೋಡಿಕೋ. ದ್ರೌಪದಿಯ ಬಗೆಗೆ ಬೇಸರ ತಾಳದೆ, ಈ ಪರಿವಾರವನ್ನು ಕಾಪಾಡು ಅರ್ಜುನ’ ಎಂದ ಧರ್ಮರಾಯ.
ಪದಾರ್ಥ (ಕ.ಗ.ಪ)
ಕಾರಣಿಕ-ಮಹಾಪುರುಷ, ಪವಾಡಪುರುಷ, ಆರಯ್ದು-ರಕ್ಷಿಸಿ
ಮೂಲ ...{Loading}...
ಸೇರುವುದು ಭೀಮನಲಿ ಸಾಹಂ
ಕಾರನಾತನ ಕೊಂಡು ನಡೆವುದು
ಕಾರಣಿಕ ನೀನಾದಡೀ ಸಹದೇವ ನಕುಲರನು
ಆರಯಿದು ಸಲಹುವುದು ದ್ರುಪದ ಕು
ಮಾರಿಯನು ಬೇಸರಿಸದೀ ಪರಿ
ವಾರವನು ಮನ್ನಿಸುವುದರ್ಜುನದೇವ ಕೇಳೆಂದ ॥43॥
೦೪೪ ಎನುತ ನಯನೋದಕದ ...{Loading}...
ಎನುತ ನಯನೋದಕದ ಸರಿಯಲಿ
ನನೆದವಲ್ಲಿಯ ಬಾಹುಮೂಲದ
ಕನಕದೊರೆಯ ಕಠಾರಿಯವನಿಪನೆದ್ದು ಸಂವರಿಸಿ
ಮನದ ದುಗುಡದ ದಡಿಯ ಮೋರೆಯ
ತನಿಹೊಗರ ಬಿಸುಸುಯ್ಲ ತವಕದ
ಬನದ ಪಯಣದ ಧರ್ಮಸುತ ಹೊರವಂಟನರಮನೆಯ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತಾ, ಕಣ್ಣೀರಿನ ಸುರಿಯುವಿಕೆಯಿಂದ ನೆನೆದು ಹೋದ ಮೇಲುವಸ್ತ್ರ, ಕಂಕುಳಲ್ಲಿ ಚಿನ್ನದ ಒರೆಯ ಕಠಾರಿಯನ್ನು ಧರಿಸಿದ್ದ ಧರ್ಮರಾಯನು ಮನಸ್ಸಿನಲ್ಲಿ ದುಃಖ, ಮುಖದಲ್ಲಿ ಚಿಂತೆ, ಹೊರಸೂಸುತ್ತಿರುವ ಬಿಸಿಯುಸಿರು, ಆತುರವಾಗಿ ಕಾಡಿಗೆ ಪ್ರಯಾಣ ಮಾಡಲು ಸಿದ್ಧನಾಗಿ ಎದ್ದು ಅರಮನೆಯಿಂದ ಹೊರಟನು.
ಪದಾರ್ಥ (ಕ.ಗ.ಪ)
ದಡಿ-ದಂಡ, ಕೋಲು
ಮೂಲ ...{Loading}...
ಎನುತ ನಯನೋದಕದ ಸರಿಯಲಿ
ನನೆದವಲ್ಲಿಯ ಬಾಹುಮೂಲದ
ಕನಕದೊರೆಯ ಕಠಾರಿಯವನಿಪನೆದ್ದು ಸಂವರಿಸಿ
ಮನದ ದುಗುಡದ ದಡಿಯ ಮೋರೆಯ
ತನಿಹೊಗರ ಬಿಸುಸುಯ್ಲ ತವಕದ
ಬನದ ಪಯಣದ ಧರ್ಮಸುತ ಹೊರವಂಟನರಮನೆಯ ॥44॥
೦೪೫ ರಾಯನಪರೋಕ್ಷದಲಿ ರಾಜ್ಯ ...{Loading}...
ರಾಯನಪರೋಕ್ಷದಲಿ ರಾಜ್ಯ
ಶ್ರೀಯ ಬೇಟವೆ ಶಿವ ಶಿವಾದಡೆ
ತಾಯ ನುಡಿ ತೊದಳಾಯ್ತೆ ತಮತಮ್ಮಂತರಂಗದಲಿ
ಆಯಿತಿದು ಲೇಸೆನುತ ತಮ ತ
ಮ್ಮಾಯುಧಂಗಳ ಕೊಂಡು ವರ ಮಾ
ದ್ರೇಯರರಸನ ಕೂಡೆ ಹೊರವಂಟರು ನೃಪಾಲಯವ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನಿಲ್ಲದ ಮೇಲೆ ರಾಜ್ಯಲಕ್ಷ್ಮಿಯೊಡನೆ ಪ್ರೀತಿಯೆ ? ಶಿವಶಿವಾ, ನಮ್ಮ ತಾಯಿ ಹೇಳಿದ ಮಾತು ನಮ್ಮ ನಮ್ಮಲ್ಲಿ ನಡೆಯದ ಹಾಗಾಯಿತೇ ? ಆಗಿದ್ದು ಒಳ್ಳೆಯದೇ ಆಯಿತು ಎಂದು ತಮ್ಮ ತಮ್ಮ ಆಯುಧಗಳನ್ನು ತೆಗೆದುಕೊಂಡು ನಕುಲ ಸಹದೇವರು ತಾವೂ ಧರ್ಮರಾಯನ ಜೊತೆಗೆ ರಾಜನ ಬಿಡಾರದಿಂದ ಹೊರಗೆ ಹೊರಟರು.
ಮೂಲ ...{Loading}...
ರಾಯನಪರೋಕ್ಷದಲಿ ರಾಜ್ಯ
ಶ್ರೀಯ ಬೇಟವೆ ಶಿವ ಶಿವಾದಡೆ
ತಾಯ ನುಡಿ ತೊದಳಾಯ್ತೆ ತಮತಮ್ಮಂತರಂಗದಲಿ
ಆಯಿತಿದು ಲೇಸೆನುತ ತಮ ತ
ಮ್ಮಾಯುಧಂಗಳ ಕೊಂಡು ವರ ಮಾ
ದ್ರೇಯರರಸನ ಕೂಡೆ ಹೊರವಂಟರು ನೃಪಾಲಯವ ॥45॥
೦೪೬ ಕೊರಳನೊಲೆದಳು ಬಾಪು ...{Loading}...
ಕೊರಳನೊಲೆದಳು ಬಾಪು ದೈವದ
ಪರುಠವಣೆ ದುಶ್ಯಾಸನನ ನೆ
ತ್ತರಿನ ವೇಣೀಬಂಧಕಘಟಿತವಾಯ್ತು ಸಂಬಂಧ
ತರಣಿ ಬಿಜಯಂಗೈದರಬುಜದ
ಸಿರಿಗೆ ಸುಮ್ಮಾನವೆ ಎನುತ ಪಂ
ಕರುಹಮುಖಿ ಸಖಿಯರು ಸಹಿತ ಹೊರವಂಟಳರಮನೆಯ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಡೆದದ್ದನ್ನು ಗಮನಿಸಿದ ದ್ರೌಪದಿಯೂ ತಲೆಯಲ್ಲಾಡಿಸುತ್ತಾ ‘ಭೇಷ್, ದೈವದ ಕೈವಾಡ ಎಂತಹುದೋ ! ದುಶ್ಶಾಸನನ ರಕ್ತ ಲೇಪನ ಮಾಡಿ ನನ್ನ ಜಡೆಯನ್ನು ಕಟ್ಟಿಕೊಳ್ಳುವುದು ಇನ್ನು ಆದ ಹಾಗೆಯೇ. ಸೂರ್ಯನು ಮುಳುಗಿದ ಮೇಲೆ ಕಮಲಕ್ಕೆ ತನ್ನ ಸೌಂದರ್ಯದ ಬಗ್ಗೆ ಸಂತೋಷ ಎಲ್ಲ ಉಳಿಯುತ್ತದೆ’. ಎನ್ನುತ್ತಾ ಆ ಕಮಲಮುಖಿ ತನ್ನ ಸಖಿಯರ ಜೊತೆಯಲ್ಲಿ ಅರಮನೆಯಿಂದ ಹೊರ ಹೊರಟಳು.
ಪದಾರ್ಥ (ಕ.ಗ.ಪ)
ಪರುಠವಣೆ-ಸಿದ್ಧತೆ
ಮೂಲ ...{Loading}...
ಕೊರಳನೊಲೆದಳು ಬಾಪು ದೈವದ
ಪರುಠವಣೆ ದುಶ್ಯಾಸನನ ನೆ
ತ್ತರಿನ ವೇಣೀಬಂಧಕಘಟಿತವಾಯ್ತು ಸಂಬಂಧ
ತರಣಿ ಬಿಜಯಂಗೈದರಬುಜದ
ಸಿರಿಗೆ ಸುಮ್ಮಾನವೆ ಎನುತ ಪಂ
ಕರುಹಮುಖಿ ಸಖಿಯರು ಸಹಿತ ಹೊರವಂಟಳರಮನೆಯ ॥46॥
೦೪೭ ಸದನವನು ತಮತಮಗೆ ...{Loading}...
ಸದನವನು ತಮತಮಗೆ ಹೊರವಂ
ಟುದು ನೃಪಾಲಸ್ತೋಮ ದುಮ್ಮಾ
ನದಲಿ ಧೃಷ್ಟದ್ಯುಮ್ನ ಸಾತ್ಯಕಿ ಚೇಕಿತಾನಕರು
ಕದಡಿತಾ ಪರಿವಾರ ವಾರಿಧಿ
ಕೆದರಿ ಹೊರವಂಟುದು ಕಿರೀಟಿಯ
ಹೃದಯ ಹೊಗೆದುದು ಹೊತ್ತಿದನುಪಮ ಶೋಕವಹ್ನಿಯಲಿ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಃಖದಿಂದ ಎಲ್ಲ ದೊರೆಗಳೂ ಧೃಷ್ಟದ್ಯುಮ್ನ, ಸಾತ್ಯಕಿ, ಚೇಕಿತಾನ ಮೊದಲಾದವರೂ ತಮ್ಮ ತಮ್ಮ ಬಿಡಾರಗಳಿಂದ ಹೊರ ಹೊರಟರು. ಪಾಂಡವರ ಪರಿವಾರ ಸಾಗರ ಕದಡಿತು. ಚೆಲ್ಲಾಪಿಲ್ಲಿಯಾಗಿ ಅವರೂ ಹೊರ ಹೊರಟರು. ಇದರಿಂದ ಅರ್ಜುನನ ಹೃದಯ ಹೋಲಿಕೆಗೆ ಸಿಗದ ದುಃಖದ ಬೆಂಕಿಯಲ್ಲಿ ಹೊಗೆದು ಹೊತ್ತಿಕೊಂಡಿತು.
ಮೂಲ ...{Loading}...
ಸದನವನು ತಮತಮಗೆ ಹೊರವಂ
ಟುದು ನೃಪಾಲಸ್ತೋಮ ದುಮ್ಮಾ
ನದಲಿ ಧೃಷ್ಟದ್ಯುಮ್ನ ಸಾತ್ಯಕಿ ಚೇಕಿತಾನಕರು
ಕದಡಿತಾ ಪರಿವಾರ ವಾರಿಧಿ
ಕೆದರಿ ಹೊರವಂಟುದು ಕಿರೀಟಿಯ
ಹೃದಯ ಹೊಗೆದುದು ಹೊತ್ತಿದನುಪಮ ಶೋಕವಹ್ನಿಯಲಿ ॥47॥
೦೪೮ ಮೂಗನಾದನು ಪಾರ್ಥ ...{Loading}...
ಮೂಗನಾದನು ಪಾರ್ಥ ನೃಪ ಚಿಂ
ತಾಗಮದೊಳಳ್ಳಿರಿವ ಶೋಕದ
ಸಾಗರವನೀಸಾಡಿ ತೆರೆಗಳ ಹೊಯ್ಲ ಹೊದರಿನಲಿ
ಆ ಗರುವನಡಿಗದ್ದು ಮೂಡಿದ
ನಾಗಳೇ ತಡಿಗಡರಿ ಬಳಲಿದು
ತಾಗಿದನು ನೆರೆ ತಳ್ಳವಾರುತ ಪಾರ್ಥ ಹೊರವಂಟ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನೆಲ್ಲಾ ನೋಡಿದ ಅರ್ಜುನನಿಗೆ ಮಾತನಾಡಲು ತೋರದಾಯಿತು. ಚಿಂತೆಯ ಕಾರಣದಿಂದ ಪಕ್ಕೆಯನ್ನು ಚುಚ್ಚುವ ದುಃಖದ ಸಮುದ್ರದಲ್ಲಿ ಈಜಾಡಿ, ಅದರ ಅಲೆಗಳ ಪೆಟ್ಟಿನ ರಾಶಿಯಲ್ಲಿ ಆ ಶ್ರೇಷ್ಠನು ಮುಳುಗಿದನು. ತಕ್ಷಣ ಸಾವರಿಸಿಕೊಂಡು ಎದ್ದು ದಡಕ್ಕೆ ಹತ್ತಿ ನಿಂತನು ಎಂದರೆ ಸಮಾಧಾನಗೊಂಡು ತತ್ತರಿಸುತ್ತಾ ತಾನೂ ಹೊರ ಹೊರಟನು.
ಪದಾರ್ಥ (ಕ.ಗ.ಪ)
ತಳ್ಳವಾರು-ತತ್ತರಿಸು
ಮೂಲ ...{Loading}...
ಮೂಗನಾದನು ಪಾರ್ಥ ನೃಪ ಚಿಂ
ತಾಗಮದೊಳಳ್ಳಿರಿವ ಶೋಕದ
ಸಾಗರವನೀಸಾಡಿ ತೆರೆಗಳ ಹೊಯ್ಲ ಹೊದರಿನಲಿ
ಆ ಗರುವನಡಿಗದ್ದು ಮೂಡಿದ
ನಾಗಳೇ ತಡಿಗಡರಿ ಬಳಲಿದು
ತಾಗಿದನು ನೆರೆ ತಳ್ಳವಾರುತ ಪಾರ್ಥ ಹೊರವಂಟ ॥48॥
೦೪೯ ಹರಿದು ಬೀದಿಯೊಳವನಿಪಾಲನ ...{Loading}...
ಹರಿದು ಬೀದಿಯೊಳವನಿಪಾಲನ
ಚರಣದಗ್ರದೊಳೊಡಲ ಹಾಯಿಕಿ
ಹೊರಳಿದನು ಹೊನಲಿಡುವ ಲೋಚನವಾರಿ ಪೂರದಲಿ
ಧರಣಿಪತಿಯೆ ದುರಾತ್ಮಕನನು
ದ್ಧರಿಸಬೇಹುದು ಜೀಯ ಕರುಣಾ
ಕರನಲಾ ನೀನೆನುತ ಪಿಡಿದನು ಭೂಪನಂಘ್ರಿಗಳ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಬೀದಿಯಲ್ಲಿ ಬೇಗ ಬೇಗ ಹೋಗಿ. ದೊರೆಯ ಪಾದಗಳ ಮೇಲೆ ತನ್ನ ಶರೀರವನ್ನು ಇಟ್ಟು ಕಣ್ಣೀರನ್ನು ಸುರಿಸುತ್ತಾ ಹೊರಳಾಡಿದನು. ‘ದೊರೆಯೇ, ಈ ದುಷ್ಟನನ್ನು ಉದ್ಧಾರ ಮಾಡು, ಸ್ವಾಮಿ ನೀನು ಕರುಣಾಕರನಲ್ಲವೇ’ ಎಂದು ಕಾಲುಗಳನ್ನು ಹಿಡಿದುಕೊಂಡನು.
ಮೂಲ ...{Loading}...
ಹರಿದು ಬೀದಿಯೊಳವನಿಪಾಲನ
ಚರಣದಗ್ರದೊಳೊಡಲ ಹಾಯಿಕಿ
ಹೊರಳಿದನು ಹೊನಲಿಡುವ ಲೋಚನವಾರಿ ಪೂರದಲಿ
ಧರಣಿಪತಿಯೆ ದುರಾತ್ಮಕನನು
ದ್ಧರಿಸಬೇಹುದು ಜೀಯ ಕರುಣಾ
ಕರನಲಾ ನೀನೆನುತ ಪಿಡಿದನು ಭೂಪನಂಘ್ರಿಗಳ ॥49॥
೦೫೦ ಮಾಡಿದೆನ್ನಪರಾಧಶತವನು ...{Loading}...
ಮಾಡಿದೆನ್ನಪರಾಧಶತವನು
ನೋಡಲಾಗದು ಕರುಣದಲಿ ನೀ
ಖೋಡಿಯನು ಬಿಡು ಚಿತ್ತಗೊಡದಿರು ಖತಿಯ ಘಲ್ಲಣೆಗೆ
ನೋಡುವುದು ಕಾರುಣ್ಯದೃಷ್ಟಿಯೊ
ಳೀಡಿರಿವ ಘನ ಶೋಕವಹ್ನಿಗೆ
ಖೇಡನಾದೆನು ಜೀಯೆನುತ ಹಲುಬಿದನು ಕಲಿಪಾರ್ಥ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನು ಮಾಡಿದ ಎಲ್ಲಾ ಅಪರಾಧಗಳನ್ನು ಕರುಣೆಯಿಂದ ಮರೆತು ಬಿಡು. ನೀನು ದಾಕ್ಷಿಣ್ಯವನ್ನು ಬಿಡು, ಕೋಪದ ಒತ್ತಡಕ್ಕೆ ಮನಸ್ಸು ಕೊಡಬೇಡ, ಕರುಣೆಯ ದೃಷ್ಟಿಯಿಂದ ನೋಡು, ಬಲವಾಗಿ ಹಿಂಸಿಸುತ್ತಿರುವ ಶೋಕದ ಬೆಂಕಿಗೆ ನಾನು ಸಿಲುಕಿದ್ದೇನೆ, ಸ್ವಾಮಿ ಎನ್ನುತ್ತಾ ಅರ್ಜುನನು ಹಲುಬಿದನು.
ಪದಾರ್ಥ (ಕ.ಗ.ಪ)
ಖೋಡಿ-ದಾಕ್ಷಿಣ್ಯ, ಈಡಿರಿ-ಬಲವಾಗಿ ಹೊಡೆ
ಮೂಲ ...{Loading}...
ಮಾಡಿದೆನ್ನಪರಾಧಶತವನು
ನೋಡಲಾಗದು ಕರುಣದಲಿ ನೀ
ಖೋಡಿಯನು ಬಿಡು ಚಿತ್ತಗೊಡದಿರು ಖತಿಯ ಘಲ್ಲಣೆಗೆ
ನೋಡುವುದು ಕಾರುಣ್ಯದೃಷ್ಟಿಯೊ
ಳೀಡಿರಿವ ಘನ ಶೋಕವಹ್ನಿಗೆ
ಖೇಡನಾದೆನು ಜೀಯೆನುತ ಹಲುಬಿದನು ಕಲಿಪಾರ್ಥ ॥50॥
೦೫೧ ಏಳು ತನ್ದೆ ...{Loading}...
ಏಳು ತಂದೆ ಕಿರೀಟಿ ತನ್ನಾ
ಣೇಳು ಸಾಕೀ ಹವಣಿನಲಿ ಮು
ನ್ನಾಳಿಕೆಯ ಕಾಂತಾರ ರಾಜ್ಯದ ಸಿರಿಯೆ ಸಾಕೆಮಗೆ
ಬಾಲಕರು ನೀವ್ ಮೇಲಣದು ದು
ಷ್ಕಾಲವೀ ಸಾಮ್ರಾಜ್ಯ ಭೋಗ
ವ್ಯಾಳ ವಿಷಕಂಜುವೆನು ಪಾಂಡುವಿನಾಣೆ ಸಾರೆಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಅಪ್ಪಾ’ ಅರ್ಜುನ ಏಳು ನನ್ನಾಣೆಯಾಗಿ ಏಳು - ಎಂದು ಅರ್ಜುನನನ್ನು ಎಬ್ಬಿಸಿ ಧರ್ಮರಾಯನು “ಈಗ ಇರುವ ಸ್ಥಿತಿಯಲ್ಲಿ. ನನಗೆ ಈ ಮೊದಲು ಆಳುತ್ತಿದ್ದ ಕಾಡಿನ ರಾಜ್ಯಭಾರವೇ ಸಾಕು. ನೀವು ಇನ್ನೂ ಚಿಕ್ಕವರು. ಮುಂದೆ ಇನ್ನೂ ಕೆಟ್ಟ ಕಾಲ ಕಾದಿದೆ. ಈ ಸಾಮ್ರಾಜ್ಯ ಸುಖವೆಂಬ ಹಾವಿನ ವಿಷಕ್ಕೆ ನಾನು ಹೆದರುತ್ತೇನೆ. ಪಾಂಡುವಿನ ಆಣೆ ನೀನು ಹೊರಟುಹೋಗು’ ಎಂದನು.
ಪದಾರ್ಥ (ಕ.ಗ.ಪ)
ವ್ಯಾಳ-ಹಾವು
ಮೂಲ ...{Loading}...
ಏಳು ತಂದೆ ಕಿರೀಟಿ ತನ್ನಾ
ಣೇಳು ಸಾಕೀ ಹವಣಿನಲಿ ಮು
ನ್ನಾಳಿಕೆಯ ಕಾಂತಾರ ರಾಜ್ಯದ ಸಿರಿಯೆ ಸಾಕೆಮಗೆ
ಬಾಲಕರು ನೀವ್ ಮೇಲಣದು ದು
ಷ್ಕಾಲವೀ ಸಾಮ್ರಾಜ್ಯ ಭೋಗ
ವ್ಯಾಳ ವಿಷಕಂಜುವೆನು ಪಾಂಡುವಿನಾಣೆ ಸಾರೆಂದ ॥51॥
೦೫೨ ಹಿಙ್ಗದಿನ್ನೂ ದ್ವಾಪರದ ...{Loading}...
ಹಿಂಗದಿನ್ನೂ ದ್ವಾಪರದ ಸ
ರ್ವಾಂಗವೀ ದ್ವಾಪರದ ಸೀಮಾ
ಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡ ಸೋಹಿನಲಿ
ಸಂಗಡಿಸಿತಧರೋತ್ತರದ ಸಮ
ರಂಗವೀ ಹದನರಿದು ರಾಜ್ಯಾ
ಸಂಗ ಸುಗತಿವ್ಯರ್ಥನಹೆನೇ ಪಾರ್ಥ ಹೇಳೆಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇನ್ನು ದ್ವಾಪರಯುಗ ಪೂರ್ತಿಯಾಗಿ ಮುಗಿದಿಲ್ಲ. ಈ ದ್ವಾಪರಯುಗದ ಅಂಚಿನಲ್ಲಿ, ಕಲಿತವರು ಎಂಬ ಗರ್ವದ ಕಾರಣದಿಂದ ನಮಗೆ ಮಾತಿನ ಯುದ್ಧವಾಯಿತು. ಇದು ತಿಳಿದೂ ತಿಳಿದೂ ರಾಜ್ಯತ್ಯಾಗ ಮಾಡುವ ಅವಕಾಶ ನಾನು ಕಳೆದುಕೊಳ್ಳಲೇ ಅರ್ಜುನ’ ಎಂದು ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಸಿಗುರು-ಗಾಯಮಾಡು,
ಸೊಗಡು-ಒಂದು ವಾಸನೆ,
ಸೋಹು-ಬೇಟೆ
ಸಿಗುರೆದ್ದ-ಗಾಯ ಮಾಡುವಂತೆ (ನಮ್ಮ ಗರ್ವ ನಮ್ಮನ್ನೇ ಬೇಟೆಯಾಡಿತು ಎಂದೂ ಅರ್ಥ ಮಾಡಬಹುದು.)
ಮೂಲ ...{Loading}...
ಹಿಂಗದಿನ್ನೂ ದ್ವಾಪರದ ಸ
ರ್ವಾಂಗವೀ ದ್ವಾಪರದ ಸೀಮಾ
ಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡ ಸೋಹಿನಲಿ
ಸಂಗಡಿಸಿತಧರೋತ್ತರದ ಸಮ
ರಂಗವೀ ಹದನರಿದು ರಾಜ್ಯಾ
ಸಂಗ ಸುಗತಿವ್ಯರ್ಥನಹೆನೇ ಪಾರ್ಥ ಹೇಳೆಂದ ॥52॥
೦೫೩ ಸಾಕು ಪಾರ್ಥನ ...{Loading}...
ಸಾಕು ಪಾರ್ಥನ ಬಿನ್ನಹವ ಕೆಡೆ
ನೂಕದಿರು ನೆಳಲಿಂಗೆ ಬೇರೆ ವಿ
ವೇಕ ಚೇಷ್ಟೆಗಳೇ ಸಹೋದರರೀ ಚತುಷ್ಟಯಕೆ
ಈ ಕಮಲಮುಖಿಯರಿಗೆ ನಿನ್ನಾ
ಲೋಕವಲ್ಲದೆ ಬೇರೆ ಕಾರ್ಯ
ವ್ಯಾಕುಳತೆ ಬೇಡೆಂದು ಮುರರಿಪು ತಿರುಹಿದನು ನೃಪನ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು, “ಧರ್ಮರಾಯ ಇನ್ನು ಸಾಕು ಅರ್ಜುನನ ಬೇಡಿಕೆಯನ್ನು ತಳ್ಳಿಹಾಕಬೇಡ. ಈ ನಾಲ್ಕು ಮಂದಿ ನಿನ್ನ ಸಹೋದರರು ನಿನ್ನ ನೆರಳಿನಂತೆ. ಅವರಿಗೆ ಬೇರೆ ನಡೆಯಿಲ್ಲ. ಈ ನಿನ್ನ ರಾಣಿಗೆ ನಿನ್ನನ್ನು ನೋಡುವ ಕೆಲಸವಲ್ಲದೆ ಉಳಿದ ಕೆಲಸಗಳ ಚಿಂತೆ ಬೇಡ, " ಎಂದು ಹೇಳಿ ಧರ್ಮರಾಯನು ಹಿಂತಿರುಗುವಂತೆ ಮಾಡಿದನು.
ಪದಾರ್ಥ (ಕ.ಗ.ಪ)
ಚೇಷ್ಟೆ - ಅಲುಗಾಟ, ನಡೆ
ಮೂಲ ...{Loading}...
ಸಾಕು ಪಾರ್ಥನ ಬಿನ್ನಹವ ಕೆಡೆ
ನೂಕದಿರು ನೆಳಲಿಂಗೆ ಬೇರೆ ವಿ
ವೇಕ ಚೇಷ್ಟೆಗಳೇ ಸಹೋದರರೀ ಚತುಷ್ಟಯಕೆ
ಈ ಕಮಲಮುಖಿಯರಿಗೆ ನಿನ್ನಾ
ಲೋಕವಲ್ಲದೆ ಬೇರೆ ಕಾರ್ಯ
ವ್ಯಾಕುಳತೆ ಬೇಡೆಂದು ಮುರರಿಪು ತಿರುಹಿದನು ನೃಪನ ॥53॥