೧೩

೦೦೦ ಸೂಚನೆ ಮಡಿದರಾಹವದೊಳಗೆ ...{Loading}...

ಸೂಚನೆ: ಮಡಿದರಾಹವದೊಳಗೆ ಕೌರವ
ನೊಡನೆ ಹುಟ್ಟಿದರನಿಲಸುತನಿಂ
ದಡಿಗಡಿಗೆ ಹಳಚಿದನು ಯಮನಂದನನಾ ಕರ್ಣ

೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ನಿ
ನ್ನಾಳನಗ್ಗಳಿಕೆಯ ವಿಘಾತಿಯ
ಗಾಳಿ ತಾಗಿತು ತಿರುಗಿದುದು ಬಳಿಕೀ ಸಮಸ್ತಬಲ
ಕೋಲು ತಪ್ಪಿದ ಫಣಿಯವೊಲು ಲಯ
ಕಾಲಕೊದರುವ ಸಿಡಿಲವೊಲು ಹೀ
ಹಾಳಿಸುತ ತಮತಮಗೆ ಬಯ್ದುದು ಕೂಡೆ ಪರಿವಾರ ॥1॥

೦೦೨ ರಣದೊಳೊಪ್ಪಿಸಿಕೊಟ್ಟು ಕರ್ಣನ ...{Loading}...

ರಣದೊಳೊಪ್ಪಿಸಿಕೊಟ್ಟು ಕರ್ಣನ
ಹಣವ ಹೊಳ್ಳಿಸಿ ಮರೆದೆವೇ ಮ
ನ್ನಣೆಯ ಮೋಹವ ತೊರೆದೆವೇ ಕರ್ಪುರದ ವೀಳೆಯವ
ಗುಣ ಪಸಾಯದ ಕಾಣಿಕೆಯ ಹರಿ
ಯಣದ ಹಂತಿಯ ದಾಯದೂಟಕೆ
ಋಣಿಗಳಾದೆವೆ ಶಿವಶಿವಾ ಎಂದೊಳರಿತಖಿಳಬಲ ॥2॥

೦೦೩ ಮೀಸೆಯೇಕಿವ ಸುಡಲಿ ...{Loading}...

ಮೀಸೆಯೇಕಿವ ಸುಡಲಿ ಸುಭಟರ
ವೇಷವೇಕಿವು ತಮ್ಮ ವಧುಗಳು
ಹೇಸಿ ನಮ್ಮನು ಬಿಸುಟು ಹೋಗಳೆ ಚಂಡಿಕಾದೇವಿ
ಭಾಷೆ ಬಾಯಲಿ ಕೈದು ಕೈಯಲಿ
ವಾಸಿಯನು ಬಿಸುಟಕಟ ಜೀವದ
ಲಾಸೆ ಮಾಡಿದೆವೆನುತ ಮರುಗಿತು ಕೂಡೆ ಪರಿವಾರ ॥3॥

೦೦೪ ಬಯ್ವ ಹೆಣ್ಡಿರ ...{Loading}...

ಬಯ್ವ ಹೆಂಡಿರ ಚಿಂತೆಯಿಲ್ಲದೆ
ಹೊಯ್ವ ಕೀರ್ತಿಯ ಹಂಬಲಿಲ್ಲದೆ
ಒಯ್ವ ನರಕದ ನೆನಹದಿಲ್ಲದೆ ಪತಿಯ ಸಮಯದಲಿ
ಕಾಯ್ವರಾವಲ್ಲೆಂದು ಕೆಲದಲಿ
ಬಯ್ವರಿಗೆ ಮೈಗೊಟ್ಟು ಬದುಕುವ
ದೈವದೂರರು ನಾವೆನುತ ಮರುಗಿತ್ತು ಪರಿವಾರ ॥4॥

೦೦೫ ನುಡಿಯ ಭಣ್ಡರು ...{Loading}...

ನುಡಿಯ ಭಂಡರು ಕೆಲರು ಸಿಂಧದ
ಗುಡಿಯ ಭಂಡರು ಕೆಲರು ಹಾಹೆಯ
ತೊಡರ ಭಂಡರು ಕೆಲರು ಕೆಲರು ಕುಲಕ್ರಮಾಗತದ
ಗಡಬಡೆಯ ಭಂಡರು ವಿಪತ್ತಿನೊ
ಳೊಡೆಯನಿರೆ ಕೈದುಗಳ ಹೊರೆತಲೆ
ಯೊಡನೆ ಬಿಟ್ಟಿಯ ಭಂಡರಾವೆಂದುದು ಭಟವ್ರಾತ ॥5॥

೦೦೬ ಮೀಸೆ ಸೀದವು ...{Loading}...

ಮೀಸೆ ಸೀದವು ಭಟರ ಸುಯ್ಲಿನ
ಲಾಸೆ ಬೀತುದು ದೇಹದಲಿ ಬಲು
ವಾಸಿಯಲಿ ಮನ ಮುಳುಗಿತನಿಬರಿಗೇಕಮುಖವಾಗಿ
ಬೀಸಿದರು ಚೌರಿಗಳ ಬಲ ವಾ
ರಾಶಿ ಮಸಗಿತು ರಿಪುಗಳಸುವಿನ
ಮೀಸಲನು ತುಡುಕಿದುದು ಮನ ಕೌರವ ಮಹಾರಥರ ॥6॥

೦೦೭ ಕುದುರೆ ಕುದುರೆಯ ...{Loading}...

ಕುದುರೆ ಕುದುರೆಯ ಮುಂಚಿದವು ಕರಿ
ಮದಕರಿಯ ಹಿಂದಿಕ್ಕಿದವು ನೂ
ಕಿದವು ರಥ ರಥದಿಂದ ಮುನ್ನ ಮಹಾರಥಾದಿಗಳು
ಇದಿರೊಳೊಬ್ಬನನೊಬ್ಬನೊದಗುವ
ಕದನ ಭರದ ಪದಾತಿ ಪೂರಾ
ಯದಲಿ ಕವಿದುದು ಜಡಿವ ಬಹುವಿಧವಾದ್ಯ ರಭಸದಲಿ ॥7॥

೦೦೮ ಪೂತು ಮಝ ...{Loading}...

ಪೂತು ಮಝ ದಳಪತಿಯ ಹರಿಬವ
ನಾತುದೇ ಕುರುಸೇನೆ ಸುಭಟ
ವ್ರಾತವಳವಿಗೆ ಬರಲಿ ಬರಲಿ ವಿಶೋಕ ನೋಡೆನುತ
ಹೂತ ಸಂಪಗೆ ವನವನಳಿ ಸಂ
ಘಾತ ಮುತ್ತಿದಡೇನೆನುತ ನಿ
ರ್ಭೀತನಿದ್ದನು ಭೀಮ ಸುಮ್ಮಾನದ ಸಘಾಡದಲಿ ॥8॥

೦೦೯ ಕವಿದುದಿದು ಗರಿಗಟ್ಟಿ ...{Loading}...

ಕವಿದುದಿದು ಗರಿಗಟ್ಟಿ ಕೌರವ
ನಿವಹ ಮೋಡಾಮೋಡಿಯಲಿ ರಣ
ದವಕಿ ಕರ್ಣದ್ರೋಹಿಯಾವೆಡೆ ತೋರು ತೋರೆನುತ
ತಿವಿವ ಬಲ್ಲೆಹದಿಡುವ ಚಕ್ರದ
ಕವಿವ ಬಾಣದ ಹೊಯ್ವ ಖಡ್ಗದ
ವಿವಿಧಬಲ ಬಿಡದೌಕಿ ಮುತ್ತಿತು ಪವನನಂದನನ ॥9॥

೦೧೦ ಸಿಕ್ಕಿದನು ರಿಪು ...{Loading}...

ಸಿಕ್ಕಿದನು ರಿಪು ಸ್ವಾಮಿದ್ರೋಹನು
ಚುಕ್ಕಿಯೋ ತಡೆ ಹೋಗಬಿಡದಿರಿ
ಹೊಕ್ಕುಳಲಿ ಮಗುವುಂಟೆ ಹಣೆಯಲಿ ನೋಟವೇ ಹಗೆಗೆ
ಹೊಕ್ಕು ಹೊಯ್ ಹೊಯ್ ನೆತ್ತರೊಬ್ಬರಿ
ಗೊಕ್ಕುಡಿತೆಯೇ ಸಾಕೆನುತ ಬಲ
ಮುಕ್ಕುರುಕಿತನಿಲಜನ ಕಾಣೆನು ನಿಮಿಷಮಾತ್ರದಲಿ ॥10॥

೦೧೧ ಹರಿಬದೋಲೆಯಕಾರರೋ ಮು ...{Loading}...

ಹರಿಬದೋಲೆಯಕಾರರೋ ಮು
ಕ್ಕುರುಕಿದರೊ ಪವನಜನು ಸಿಕ್ಕಿದ
ದೊರೆಯ ಬಿಡಿಸೋ ನೂಕೆನುತ ಪಾಂಚಾಲ ಕೈಕೆಯರು
ವರ ನಕುಳ ಸಹದೇವ ಸಾತ್ಯಕಿ
ತುರುಕ ಬರ್ಬರ ಭೋಟ ಮಾಗಧ
ಮರು ಪುಳಿಂದಾದಿಗಳು ಕವಿದುದು ನೃಪನ ಸನ್ನೆಯಲಿ ॥11॥

೦೧೨ ಸರಕಟಿಸಿ ರಿಪುರಾಯದಳ ...{Loading}...

ಸರಕಟಿಸಿ ರಿಪುರಾಯದಳ ಸಂ
ವರಿಸಿಕೊಂಡುದು ಸಿಕ್ಕಿದಹಿತನ
ಸೆರೆಯ ಬಿಡದಿರಿ ಬಿಡದಿರಂಜದಿರಂಜದಿರಿ ಎನುತ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಕಳಿಂಗ ಕರೂಷ ಕೌರವ
ರರಸ ಮೊದಲಾದಖಿಳ ಬಲ ಜೋಡಿಸಿತು ಝಡಿತೆಯಲಿ ॥12॥

೦೧೩ ಏನ ಹೇಳುವೆನರಸ ...{Loading}...

ಏನ ಹೇಳುವೆನರಸ ಕರ್ಣನ
ಹಾನಿ ಹರಿಬದ ಬವರವನು ಪವ
ಮಾನನಂದನ ನಿಮಿಷದಲಿ ಮುಸುಕಿದನು ಬಾಣದಲಿ
ದಾನವರ ಥಟ್ಟಣೆಯ ಕೀಲಣ
ದಾ ನಗರಿಯನು ನೆಗ್ಗಿದಂತಿರ
ಲೀ ನಿಘಾತದ ಸೇನೆ ಮುರಿದುದು ಭಟನ ಭಾರಣೆಗೆ ॥13॥

೦೧೪ ಸಿಲುಕುವುವು ಮೃಗಪಕ್ಷಿ ...{Loading}...

ಸಿಲುಕುವುವು ಮೃಗಪಕ್ಷಿ ಹೂಡಿದ
ಬಲೆಗಳಲಿ ಕಾಡಾನೆ ಬೀಸಿದ
ಬಲೆಯ ಕೊಂಬುದೆ ನಿನ್ನ ದಳ ಥಟ್ಟೈಸಿ ಮುತ್ತಿದರೆ
ಅಳುಕುವನೆ ಕಲಿ ಭೀಮನೆಡದಲಿ
ಕಲಕಿದನು ಬಲವಂಕದಲಿ ಕೈ
ವಳಿಸಿ ಕೊಂದನು ವರ ಪುರೋಭಾಗವ ವಿಭಾಡಿಸಿದ ॥14॥

೦೧೫ ಆಳ ಮೇಳೆಯ ...{Loading}...

ಆಳ ಮೇಳೆಯ ಮುರಿದುದೀ ಸಾ
ಯಾಳು ಸತ್ತುದು ಹಲವು ಪಡಿಬಲ
ದಾಳು ಕೂಡದ ಮುನ್ನ ಕೊಂದನು ಕೋಟಿ ಸಂಖ್ಯೆಗಳ
ಮೇಲೆ ಮೇಲೊಡಗವಿವ ಸಮರಥ
ಜಾಲವನು ಮುರಿಯೆಚ್ಚು ನಿಮಿಷಕೆ
ಧೂಳಿಪಟ ಮಾಡಿದನು ಕರ್ಣನ ಮನ್ನಣೆಯ ಭಟರ ॥15॥

೦೧೬ ಮತ್ತೆ ಕವಿದುದು ...{Loading}...

ಮತ್ತೆ ಕವಿದುದು ಮೇಲೆ ಪಡಿಬಲ
ವೊತ್ತಿ ಹೊಕ್ಕುದು ಹೆಣದ ಬೆಟ್ಟವ
ಹತ್ತಿ ಹುಡಿಹುಡಿ ಮಾಡಿ ಹಿಡಿದರು ರಥದ ಕುದುರೆಗಳ
ಕುತ್ತಿದರು ಸಾರಥಿಯನಾತನ
ತೆತ್ತಿಸಿದರಿಟ್ಟಿಯಲಿ ಭೀಮನ
ಮುತ್ತಿ ಕೈಮಾಡಿದರು ರವಿಸುತ ಸಾಕಿದತಿಬಳರು ॥16॥

೦೧೭ ಇಳಿದು ರಥವನು ...{Loading}...

ಇಳಿದು ರಥವನು ಗದೆಯ ಕೊಂಡ
ಪ್ಪಳಿಸಿದನು ಹೊರಕೈಯಲರೆದಿ
ಟ್ಟಳಿಸಿದರನೆಡಗಾಲಲೊದೆದನು ಹೊಯ್ದು ಮುಡುಹಿನಲಿ
ಕಲಕಿದನು ಕೌರವ ಮಹಾಬಲ
ಜಲಧಿಯನು ಸರ್ವಾಂಗ ಶೋಣಿತ
ಜಲದಲೆಸೆದನು ನನೆದ ಜಾಜಿನ ಗಿರಿಯವೊಲು ಭೀಮ ॥17॥

೦೧೮ ಸವರಿದನು ರವಿಸುತನ ...{Loading}...

ಸವರಿದನು ರವಿಸುತನ ಪರಿವಾ
ರವನು ಮಗುಳುಬ್ಬೆದ್ದ ಕೌರವ
ನಿವಹದಲಿ ಕಾದಿದನು ದುರ್ಯೋಧನ ಸಹೋದರರ
ತಿವಿದು ನಾಲ್ವರ ಕೊಂದನುಬ್ಬರಿ
ಸುವರ ಗರ್ವವ ಮುರಿದು ಪ್ರಳಯದ
ಭವನ ರೌದ್ರದವೋಲು ಭುಲ್ಲಯಿಸಿದನು ಕಲಿಭೀಮ ॥18॥

೦೧೯ ಶಿವ ಶಿವಾ ...{Loading}...

ಶಿವ ಶಿವಾ ಕೌರವನ ತಮ್ಮದಿ
ರವಗಡಿಸಿದರು ನಂದೋಪನಂದರು
ಜವಗೆ ಜೇವಣಿಯಾದರೇ ಕಲಿ ಭೀಮನಿದಿರಿನಲಿ
ತಿವಿವರಿನ್ನಾರೆನುತ ಗುರುಸಂ
ಭವ ಕೃಪಾದಿಗಳೊತ್ತಿ ನಡೆತಹ
ರವವ ಕೇಳಿದು ಕುದಿದನವಮಾನದಲಿ ಕಲಿಕರ್ಣ ॥19॥

೦೨೦ ಪೂತು ದೈವವೆ ...{Loading}...

ಪೂತು ದೈವವೆ ಭೀಮಸೇನನ
ಘಾತಿಯಲಿ ಸೊಪ್ಪಾದೆನೈ ಸುಡ
ಲೇತಕೀ ಧನುವೇತಕೀ ದಿವ್ಯಾಸ್ತ್ರ ನಿಕರಗಳು
ಜಾತಿ ನಾನೆಂದೆನ್ನನಗ್ಗಿಸಿ
ಭೂತಳಾಧಿಪ ಸಾಕಿದನು ತಾ
ನೇತರಿಂದುಪಕಾರಿ ಎಂದನು ಸುಯ್ದು ಕಲಿಕರ್ಣ ॥20॥

೦೨೧ ಎಲೆ ಮರುಳೆ ...{Loading}...

ಎಲೆ ಮರುಳೆ ರಾಧೇಯ ಫಡ ಮನ
ವಿಳುಹದಿರು ತಪ್ಪೇನು ಸೋಲವು
ಗೆಲವು ದೈವಾಧೀನ ನಿನ್ನಾಳ್ತನಕೆ ಕುಂದೇನು
ಹಲಬರಮರಾಸುರರೊಳಗೆ ಹೆ
ಬ್ಬಲವೆ ದುರ್ಬಲವಾಯ್ತು ನೀ ಮನ
ವಳುಕದಿರು ಹಿಡಿ ಧನುವನನುವಾಗೆಂದನಾ ಶಲ್ಯ ॥21॥

೦೨೨ ಖಾತಿ ಮೊಳೆತುದು ...{Loading}...

ಖಾತಿ ಮೊಳೆತುದು ಮತ್ತೆ ಬಲ ಸಂ
ಘಾತಕಭಯವನಿತ್ತು ಬಾಣ
ವ್ರಾತವನು ಹೊದೆಗೆದರಿ ಹೊಸ ಹೊಗರೆದ್ದನಡಿಗಡಿಗೆ
ಭೂತನಾಥನ ಮರೆಯ ಹೊಗಲಿ ಮ
ಹೀತಳೇಶನ ಹಿಡಿವೆನೆನುತ ವಿ
ಧೂತ ರಿಪುಬಲ ರಥವ ಬಿಟ್ಟನು ಧರ್ಮಜನ ಹೊರೆಗೆ ॥22॥

೦೨೩ ಕಾಲಯಮನೋ ಕರ್ಣನೋ ...{Loading}...

ಕಾಲಯಮನೋ ಕರ್ಣನೋ ಭೂ
ಪಾಲಕನ ಬೆಂಬತ್ತಿದನು ಪಾಂ
ಚಾಲೆಯೋಲೆಯ ಕಾವರಿಲ್ಲಾ ಎನುತ ಬಲನೊದರೆ
ಕೇಳಿದನು ಕಳವಳವನೀ ರಿಪು
ಜಾಲವನು ಜರೆದಡ್ಡಹಾಯ್ದನು
ಗಾಳಿಗುದಿಸಿದ ವೀರನದ್ಭುತ ಸಿಂಹನಾದದಲಿ ॥23॥

೦೨೪ ಮತ್ತೆ ಕರ್ಣನ ...{Loading}...

ಮತ್ತೆ ಕರ್ಣನ ಭೀಮನಾಹವ
ಹೊತ್ತಿದುದು ಹಿಂದಾದ ಹೆಕ್ಕಳ
ಹತ್ತು ಸಾವಿರ ಹಡೆಯದೇ ಫಡ ನೂಕು ನೂಕೆನುತ
ಮತ್ತೆ ಗಜಘಟೆಯಾರು ಸಾವಿರ
ಮುತ್ತಿದವು ಸೌಬಲನ ಥಟ್ಟಿನೊ
ಳೊತ್ತಿಬಿಟ್ಟವು ನಾಲ್ಕು ಸಾವಿರ ಕುದುರೆ ರಥಸಹಿತ ॥24॥

೦೨೫ ಸನ್ದಣಿಸಿ ದಳ ...{Loading}...

ಸಂದಣಿಸಿ ದಳ ನೂಕಿಕೊಂಡೈ
ತಂದುದಿದು ರವಿಸುತನ ತೊಲಗಿಸಿ
ಮುಂದೆ ಮೋಹರದೆಗೆದು ಮೂದಲಿಸಿತು ಮರುತ್ಸುತನ
ಬಂದುದೇ ಕರ್ಣಂಗೆ ಪಡಿಬಲ
ತಂದುದೇ ನಮಗೊಸಗೆಯನು ಲೇ
ಸೆಂದು ಸುಭಟರ ದೇವ ಸುಮ್ಮಾನದಲಿ ಲಾಗಿಸಿದ ॥25॥

೦೨೬ ದಳದೊಳಗೆ ದಳವುಳಿಸಿದನು ...{Loading}...

ದಳದೊಳಗೆ ದಳವುಳಿಸಿದನು ಕೆಲ
ಬಲನನೆಚ್ಚನು ಕೇಣವಿಲ್ಲದೆ
ನಿಲುಕಿದರಿಗಳು ಚಿಗಿದರಮರೀಜನದ ತೋಳಿನಲಿ
ತಲೆಗಳೊಟ್ಟಿಲ ತೋಳ ಕಡಿಗಳ
ತಳಿದ ಖಂಡದ ಕುಣಿವ ಮುಂಡದ
ಸುಳಿಯ ರಕುತದ ಕಡಲ ರೌಕುಳವಾಯ್ತು ನಿಮಿಷದಲಿ ॥26॥

೦೨೭ ಬಿಟ್ಟ ಸೂಠಿಯೊಳೊಗ್ಗು ...{Loading}...

ಬಿಟ್ಟ ಸೂಠಿಯೊಳೊಗ್ಗು ಮುರಿಯದೆ
ಬಿಟ್ಟ ಕುದುರೆಯ ದಳವ ಕೊಂದನು
ಬೆಟ್ಟವನು ಬಲವೈರಿ ತರಿವವೊಲಿಭದ ಮೋಹರವ
ಥಟ್ಟುಗೆಡಹಿದನುರವಣಿಸಿ ಸಾ
ಲಿಟ್ಟು ರಥವಾಜಿಗಳ ನೆರೆ ಹುಡಿ
ಗುಟ್ಟಿದನು ಕಾಲಾಳ ಘಾಸಿಯನರಿಯೆ ನಾನೆಂದ ॥27॥

೦೨೮ ಮುರಿಯೆ ಪಡಿಬಲವಾಕೆಯಲಿ ...{Loading}...

ಮುರಿಯೆ ಪಡಿಬಲವಾಕೆಯಲಿ ಬಿಡೆ
ಜರೆದು ಬಿಟ್ಟನು ರಥವ ಭೀಮನ
ಬಿರುಬ ಕೊಳ್ಳದೆ ನೂಕಿದನು ಧರ್ಮಜನ ಸಮ್ಮುಖಕೆ
ಇರಿತಕಂಜದಿರಂಜದಿರು ಕೈ
ಮರೆಯದಿರು ಕಲಿಯಾಗೆನುತ ಬೊ
ಬ್ಬಿರಿದು ಧಾಳಾಧೂಳಿಯಲಿ ತಾಗಿದನು ಕಲಿಕರ್ಣ ॥28॥

೦೨೯ ಎಚ್ಚನರಸನ ಭುಜವ ...{Loading}...

ಎಚ್ಚನರಸನ ಭುಜವ ಕೆಲ ಸಾ
ರ್ದೆಚ್ಚನಾತನ ಸಾರಥಿಯ ರಥ
ದಚ್ಚನಾತನ ಹಯವನವನೀಪತಿಯ ಟೆಕ್ಕೆಯವ
ಎಚ್ಚು ಮೂದಲಿಸಿದನು ಪುನರಪಿ
ಯೆಚ್ಚು ಭಂಗಿಸಿ ನೃಪನ ಮರ್ಮವ
ಚುಚ್ಚಿ ನುಡಿದನು ಘಾಸಿ ಮಾಡಿದನಾ ನೃಪಾಲಕನ ॥29॥

೦೩೦ ಚೆಲ್ಲಿತವನೀಪತಿಯ ಮೋಹರ ...{Loading}...

ಚೆಲ್ಲಿತವನೀಪತಿಯ ಮೋಹರ
ವೆಲ್ಲ ನೆರೆ ನುಗ್ಗಾಯ್ತು ರಾಯನ
ಘಲ್ಲಿಸಿದನೇಳೆಂಟು ಬಾಣದಲೀತನಡಿಗಡಿಗೆ
ಅಲ್ಲಿಯದುಭುತ ರಣವನಪ್ರತಿ
ಮಲ್ಲ ಮಾರುತಿ ಕೇಳಿದನು ಮಗು
ಳಲ್ಲಿಯೇ ಮೊಳಗಿದನು ನಿಮಿಷಕೆ ಕರ್ಣನಿದಿರಿನಲಿ ॥30॥

೦೩೧ ಅಳಲಿಸಿದನೇ ಧರ್ಮಪುತ್ರನ ...{Loading}...

ಅಳಲಿಸಿದನೇ ಧರ್ಮಪುತ್ರನ
ಬಳಿಚಿ ಬಿಟ್ಟೆನು ನಾಯ ಕೊಲ್ಲದೆ
ಕಳುಹಿದರೆ ಬೆಂಬಿಡನಲಾ ಮರುಕೊಳಿಸಿ ಮರುಕೊಳಿಸಿ
ತಲೆ ಕೊರಳ ಸಂಪ್ರತಿಗೆ ಭೇದವ
ಬಳಸಿದರೆ ಸಾಕೈಸಲೇ ಎನು
ತುಲಿದು ಕಣೆಗಳ ಕೆದರಿ ಕರ್ಣನ ತರುಬಿದನು ಭೀಮ ॥31॥

೦೩೨ ಭೀಮಸೇನನ ದಳಪತಿಯ ...{Loading}...

ಭೀಮಸೇನನ ದಳಪತಿಯ ಸಂ
ಗ್ರಾಮ ಮಸೆದುದು ಮತ್ತೆ ಕೈಕೊಳ
ಲೀ ಮಹಾರಥರೆನುತ ಕೈ ಬೀಸಿದನು ಕುರುರಾಯ
ಸೋಮದತ್ತನ ಸೂನು ಕೃಪನು
ದ್ದಾಮ ಶಕುನಿ ಸುಯೋಧನಾನುಜ
ನಾ ಮಹಾಹವಕೊದಗಿದರು ಕೃತವರ್ಮ ಗುರುಸುತರು ॥32॥

೦೩೩ ಅಖಿಳ ಬಲ ...{Loading}...

ಅಖಿಳ ಬಲ ಭಾರಣೆಯಲೊಂದೇ
ಮುಖದಲೊಡ್ಡಿತು ಪವನಜನ ಸಂ
ಮುಖದೊಳನಿಬರು ಕೆಣಕಿದರು ಕಲ್ಪಾಂತಭೈರವನ
ಸುಖಿಗಳಕಟಾ ನೀವು ಸಮರೋ
ನ್ಮುಖರಹರೆ ಕರ್ಣಂಗೆ ಸಾವಿನ
ಸಖಿಗಳೇ ಲೇಸೆನುತ ಕೈಕೊಂಡೆಚ್ಚನಾ ಭೀಮ ॥33॥

೦೩೪ ಗುರುಸುತನನೈವತ್ತು ಬಾಣದ ...{Loading}...

ಗುರುಸುತನನೈವತ್ತು ಬಾಣದ
ಲರಸನನುಜರ ಕೃಪನ ಕೃತವ
ರ್ಮರನು ಮೂನೂರಂಬಿನಲಿ ವೃಷಸೇನ ಸೌಬಲರ
ಸರಳು ಮೂವತ್ತರಲಿ, ಪುನರಪಿ
ಗುರುಸುತಾದಿ ಮಹಾರಥರನೆರ
ಡೆರಡರಲಿ, ಮುರಿಯೆಚ್ಚು ವಿಮುಖರ ಮಾಡಿದನು ಭೀಮ ॥34॥

೦೩೫ ಮತ್ತೆ ಜೋಡಿಸಿ ...{Loading}...

ಮತ್ತೆ ಜೋಡಿಸಿ ಕೌರವೇಂದ್ರನ
ನೊತ್ತಲಿಕ್ಕಿ ಮಹಾರಥರು ರಿಪು
ಮತ್ತದಂತಿಯ ಕೆಣಕಿದರು ಕೆದರಿದರು ಮಾರ್ಗಣವ
ಎತ್ತಲವನೀಪತಿಯ ಮೋಹರ
ವತ್ತ ಮೆಲ್ಲನೆ ರಥವ ಬಿಟ್ಟನು
ಮತ್ತೆ ಮೂದಲಿಸಿದನು ಯಮಸೂನುವನು ಕಲಿಕರ್ಣ ॥35॥

೦೩೬ ದ್ರೋಣ ಬರಸಿದ ...{Loading}...

ದ್ರೋಣ ಬರಸಿದ ಭಾಷೆಯೆಂದೇ
ಕ್ಷೋಣಿಪತಿ ಬಗೆಯದಿರು ತನ್ನನು
ವಾಣಿಯದ ವಿವರದಲಿ ಸಲಹನು ಕೌರವರ ರಾಯ
ಪ್ರಾಣದಾಸೆಯ ಮರೆದು ತನ್ನೊಳು
ಕೇಣವಿಲ್ಲದೆ ಕಾದೆನುತ ನಿ
ತ್ರಾಣನನು ನಿಬ್ಬರದ ನುಡಿಗಳಲಿರಿದನಾ ಕರ್ಣ ॥36॥

೦೩೭ ಬಿಡನು ರಾಯನ ...{Loading}...

ಬಿಡನು ರಾಯನ ಬೆನ್ನನೀತನ
ಕೆಡಹಿ ರಕುತವ ಕುಡಿಯೆನುತ ಬಲ
ನೆಡನೊಳಿಟ್ಟಣಿಸಿದರು ಸಾತ್ಯಕಿ ನಕುಳ ಸಹದೇವ
ತುಡುಕಿದರು ಪಾಂಚಾಲ ಮತ್ಸ್ಯರ
ಗಡಣ ಕೈಕಯ ಪಂಚಪಾಂಡವ
ರಡಸಿದರು ಹೊದಿಸಿದರು ಕಣೆಯಲಿ ರವಿಸುತನ ರಥವ ॥37॥

೦೩೮ ಇನಿಬರೊನ್ದೇ ಸೂಠಿಯಲಿ ...{Loading}...

ಇನಿಬರೊಂದೇ ಸೂಠಿಯಲಿ ಮುಂ
ಮೊನೆಯ ಬೋಳೆಯ ಸುರಿದರಡಿಗಡಿ
ಗಿನಿಬರಂಬನು ಮುರಿದು ತರಿದನು ಸೂತ ವಾಜಿಗಳ
ತನತನಗೆ ಹೊಸ ರಥದೊಳೊಂದೊ
ಗ್ಗಿನಲಿ ಕವಿದೆಚ್ಚರು ಮಹಾಹವ
ವೆನಗೆ ಬಣ್ಣಿಸಲರಿದು ಧರಣೀಪಾಲ ಕೇಳ್ ಎಂದ ॥38॥

೦೩೯ ಭಟರು ಮುತ್ತಿದರಿನಸುತನ ...{Loading}...

ಭಟರು ಮುತ್ತಿದರಿನಸುತನ ಲಟ
ಕಟಿಸಲೆಚ್ಚರು ಶಿವ ಶಿವಾ ನಿ
ಚ್ಚಟದ ನಿಬ್ಬರದಂಘವಣೆ ಮಝ ಪೂತು ಲೇಸೆನುತ
ನಿಟಿಲನೇತ್ರನ ನಯನ ಶಿಖಿಯು
ಬ್ಬಟೆಗೆ ಸಮ ಜೋಡಿಸಿತು ಕರ್ಣನ
ಚಟುಳ ವಿಕ್ರಮಪವನ ಪರಿಗತ ಬಾಣಶಿಖಿನಿಕರ ॥39॥

೦೪೦ ನಕುಳನನು ನೋಯಿಸಿದ ...{Loading}...

ನಕುಳನನು ನೋಯಿಸಿದ ಸಹದೇ
ವಕನ ಘಾಯಂಬಡಿಸಿದನು ಸಾ
ತ್ಯಕಿಯ ಮಸೆಗಾಣಿಸಿದನಾ ಪಾಂಚಾಲ ಕೈಕೆಯರ
ವಿಕಳಗೊಳಿಸಿದನಾ ಮಹಾರಥ
ನಿಕರ ಸೈರಿಸಿ ಮತ್ತೆ ಮೇಳಾ
ಪಕದಲಂಘೈಸಿದರು ತಡೆದರು ಭಾನುನಂದನನ ॥40॥

೦೪೧ ಹೇಳಲರಿಯೆನು ನಿನ್ನವನ ...{Loading}...

ಹೇಳಲರಿಯೆನು ನಿನ್ನವನ ಕ
ಟ್ಟಾಳುತನವನು ದೇವ ದೈತ್ಯರ
ಕಾಳೆಗದಲಿವನಂತೆ ಬಲ್ಲಿದರಿಲ್ಲ ಬಿಲ್ಲಿನಲಿ
ಆಳ ಮುರಿದನು ಹೂಣೆ ಹೊಗುವು
ಬ್ಬಾಳುಗಳ ಬಲು ದೇಹದಂಬಿನ
ಕೀಲಣದ ಕಾಳಾಸದಿರಿತವ ಮೆರೆದನಾ ಕರ್ಣ ॥41॥

೦೪೨ ಸರಳ ಹತಿಯಲಿ ...{Loading}...

ಸರಳ ಹತಿಯಲಿ ನಕುಲ ಸಾತ್ಯಕಿ
ಬಿರುದ ಸಹದೇವಾದಿ ವೀರರು
ಪಿರಿದು ನೊಂದರು ಮತ್ತೆ ತರುಬಿದನವನಿಪಾಲಕನ
ಅರಸ ಹಿಡಿಹಿಡಿ ಧನುವನಿನ್ನೆರ
ಡರಸನಾನದು ಧರಣಿಯೊಬ್ಬನ
ಶಿರದ ಬರಹವ ತೊಡೆವೆನಿದೆಯೆಂದೆನುತ ತೆಗೆದೆಚ್ಚ ॥42॥

೦೪೩ ಅಕಟಕಟ ರಾಧೇಯ ...{Loading}...

ಅಕಟಕಟ ರಾಧೇಯ ಕೇಳೀ
ನಕುಳನೀ ಸಹದೇವನೀ ಸಾ
ತ್ಯಕಿ ನರೇಶ್ವರರೆನಿಸುವೀ ಕುಂತೀಕುಮಾರಕರು
ಅಕುಟಿಲರು ನಯಕೋವಿದರು ಧಾ
ರ್ಮಿಕರ ಕೊಲಬೇಡಿವರನತಿ ಬಾ
ಧಕರು ಭೀಮಾರ್ಜುನರ ಸಂಹರಿಸೆಂದನಾ ಶಲ್ಯ ॥43॥

೦೪೪ ಮುಳಿದು ಕಬ್ಬಿನ ...{Loading}...

ಮುಳಿದು ಕಬ್ಬಿನ ತೋಟದಲಿ ನರಿ
ಹುಲಿಯವೋಲ್ ಗರ್ಜಿಸಿತು ಗಡ ಹೆ
ಕ್ಕಳದ ಹೇರಾಳದಲಿ ಹೆಣಗಿದೆ ಬಾಲವೃದ್ಧರಲಿ
ಬಲುಹು ನಿನಗುಂಟಾದಡಿತ್ತಲು
ಫಲುಗುಣನ ಕೂಡಾಡು ನಡೆ ಮರು
ವಲಗೆಯನು ಭೀಮನಲಿ ಬೇಡಿನ್ನೆಂದನಾ ಶಲ್ಯ ॥44॥

೦೪೫ ಎನಲು ಕಿಡಿಕಿಡಿವೋಗಿ ...{Loading}...

ಎನಲು ಕಿಡಿಕಿಡಿವೋಗಿ ಭೀಮಾ
ರ್ಜುನರ ತೋರಾದರೆ ಎನುತ ನಿಜ
ಧನುವ ಮಿಡಿದಬ್ಬರಿಸಲಿತ್ತಲು ರಾಯದಳದೊಳಗೆ
ಅನಿಲಜನ ಕಾಲಾಟ ಕದಳೀ
ವನದ ಕಾಡಾನೆಯ ಮೃಗಾಳಿಯ
ವನಚರರ ದೆಖ್ಖಾಳದಬ್ಬರ ಕಾಣಲಾಯ್ತೆಂದ ॥45|

೦೪೬ ಮಣ್ಡಳಿಸಿ ಬಲಜಲಧಿ ...{Loading}...

ಮಂಡಳಿಸಿ ಬಲಜಲಧಿ ಸುಳಿ ಸುಳಿ
ಗೊಂಡು ಸಿಕ್ಕಿದ ಕೌರವೇಂದ್ರನ
ಕೊಂಡು ಹಿಂಗುವ ಜೋಕೆ ನೂಕದೆ ಡಗೆಯ ಡಾವರದ
ಗಂಡುಗುಂದಿನ ಬೀತ ಬಿರುದಿನ
ತೊಂಡುಗೇಡಿನ ಜಯದ ಜಾರಿನ
ಖಂಡ ಶೌರ್ಯದ ಧೀರರಿದ್ದುದು ನೃಪನ ಬಳಸಿನಲಿ ॥46॥

೦೪೭ ವಾಯದಲಿ ಕೌರವನ ...{Loading}...

ವಾಯದಲಿ ಕೌರವನ ವಿಜಯ
ಶ್ರೀಯ ಸೆರೆವೋಯಿತ್ತು ಶಿವ ಶಿವ
ಕಾಯಲಾಪವರಿಲ್ಲಲಾ ಗುರುಸೂನು ಮೊದಲಾದ
ನಾಯಕರು ದುಷ್ಕೀರ್ತಿ ನಾರಿಯ
ನಾಯಕರು ಸುಪಲಾಯನದ ನಿ
ರ್ಣಾಯಕರು ಮಝ ಪೂತುರೆಂದುದು ನಿಖಿಳ ಪರಿವಾರ ॥47॥

೦೪೮ ಕೇಳಿದನು ಕಳವಳವ ...{Loading}...

ಕೇಳಿದನು ಕಳವಳವ ಕಿವಿಗೊ
ಟ್ಟಾಲಿಸಿದನೆಲೆ ಕರ್ಣ ಕರ್ಣ ಛ
ಡಾಳ ರವವೇನದು ಸುಯೋಧನ ಸೈನ್ಯ ಮಧ್ಯದಲಿ
ಖೂಳ ಬಿಡಿಸಾ ಭೀಮಸೇನನ
ತೋಳುವಲೆಯಲಿ ಸಿಕ್ಕಿದನು ಭೂ
ಪಾಲನಕಟಕಟೆನುತ ತೇಜಿಯ ತಿರುಹಿದನು ಶಲ್ಯ ॥48॥

+೧೩ ...{Loading}...