೦೦೦ ಸೂ ರಾಯದಳ ...{Loading}...
ಸೂ. ರಾಯದಳ ಹಳಚಿದುದು ಕಲಿರಾ
ಧೇಯನಲಿ ಸಂಕುಳದೊಳೊದಗಿದ
ವಾಯುಸುತ ಸಮರದಲಿ ಕೊಂದನು ಕರ್ಣನಂದನನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ. ಧರ್ಮರಾಯನ ಸೈನ್ಯವು ಕರ್ಣನ ಮೇಲೆ ಬಿದ್ದಿತು. ಸಂಕುಳಯುದ್ಧದಲ್ಲಿ ಭೀಮನು ಕರ್ಣನ ಮಗನನ್ನು ಕೊಂದನು.
ಮೂಲ ...{Loading}...
ಸೂ. ರಾಯದಳ ಹಳಚಿದುದು ಕಲಿರಾ
ಧೇಯನಲಿ ಸಂಕುಳದೊಳೊದಗಿದ
ವಾಯುಸುತ ಸಮರದಲಿ ಕೊಂದನು ಕರ್ಣನಂದನನ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ತ
ಮ್ಮಾಳ ಮೇಳಾಪದಲಿ ಪಾಂಡು ನೃ
ಪಾಲಕರ ದಳ ನಡೆದು ಬಂದುದು ಭೂರಿ ರಭಸದಲಿ
ಆಳೊಳಗ್ಗಳೆಯರಿಗೆ ಕೊಟ್ಟನು
ವೀಳೆಯವನಾ ಕರ್ಣನತಿರಥ
ಜಾಳವನು ಪರುಠವಿಸಿ ನಿಲಿಸಿದನೆರಡು ಪಕ್ಕದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೇಳು ಧೃತರಾಷ್ಟ್ರ ರಾಜನೆ, ತಮ್ಮ ವೀರರ ಮೇಳಾಪದಲ್ಲಿ ಪಾಂಡು ರಾಜರ ದಳವು ಅತಿ ರಭಸದಿಂದ ನಡೆದು ಬಂದಿತು. ಕರ್ಣನು ಪ್ರಸಿದ್ಧರಾದ ವೀರರಿಗೆ ವೀಳೆಯವನ್ನು ಕೊಟ್ಟನು. ಅತಿರಥರ ಜಾಲವನ್ನು ಎರಡು ಪಕ್ಕದಲ್ಲಿ ವಿಸ್ತಾರವಾಗಿ ನಿಲ್ಲಿಸಿದನು.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ತ
ಮ್ಮಾಳ ಮೇಳಾಪದಲಿ ಪಾಂಡು ನೃ
ಪಾಲಕರ ದಳ ನಡೆದು ಬಂದುದು ಭೂರಿ ರಭಸದಲಿ
ಆಳೊಳಗ್ಗಳೆಯರಿಗೆ ಕೊಟ್ಟನು
ವೀಳೆಯವನಾ ಕರ್ಣನತಿರಥ
ಜಾಳವನು ಪರುಠವಿಸಿ ನಿಲಿಸಿದನೆರಡು ಪಕ್ಕದಲಿ ॥1॥
೦೦೨ ರಾಯ ಥಟ್ಟಿನ ...{Loading}...
ರಾಯ ಥಟ್ಟಿನ ಬಲದ ಬಾಹೆಯ
ನಾಯಕರು ಸಂಶಪ್ತಕರು ವಿವಿ
ಧಾಯುಧದ ಕಾಂಭೋಜ ಬರ್ಬರ ಚೀನ ಭೋಟಕರು
ಸಾಯಕದ ಕಿವಿವರೆಯ ತೆಗಹಿನ
ಘಾಯ ತವಕಿಗರೆಡಬಲದ ಕುರು
ರಾಯನನುಜರು ರಂಜಿಸಿತು ದುಶ್ಯಾಸನಾದಿಗಳು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜಸೈನ್ಯದ ಬಲ ಪಕ್ಕದಲ್ಲಿ ನಾಯಕರು, ಸಂಸಪ್ತಕರು, ವಿವಿಧ ಆಯುಧಗಳ ಕಾಂಭೋಜ ಬರ್ಬರ ಚೀನ ಭೋಟಕರು, ಯುದ್ದಕ್ಕಾಗಿ ತವಕಿಸುತ್ತಿದ್ದ ಬಿಲ್ಲಾಳುಗಳು . ಎಡಪಕ್ಕದಲ್ಲಿ ಕುರುರಾಯನ ಅನುಜರಾದ ದುಶ್ಶಾಸನ ಮೊದಲಾದವರು ರಂಜಿಸಿದರು.
ಮೂಲ ...{Loading}...
ರಾಯ ಥಟ್ಟಿನ ಬಲದ ಬಾಹೆಯ
ನಾಯಕರು ಸಂಶಪ್ತಕರು ವಿವಿ
ಧಾಯುಧದ ಕಾಂಭೋಜ ಬರ್ಬರ ಚೀನ ಭೋಟಕರು
ಸಾಯಕದ ಕಿವಿವರೆಯ ತೆಗಹಿನ
ಘಾಯ ತವಕಿಗರೆಡಬಲದ ಕುರು
ರಾಯನನುಜರು ರಂಜಿಸಿತು ದುಶ್ಯಾಸನಾದಿಗಳು ॥2॥
೦೦೩ ಗುರುಸುತನ ಕೂಡೆಣ್ಟುಸಾವಿರ ...{Loading}...
ಗುರುಸುತನ ಕೂಡೆಂಟುಸಾವಿರ
ವರಮಹಾರಥರೈದುಸಾವಿರ
ಕರಿಘಟೆಗಳಿಪ್ಪತ್ತು ಸಾವಿರರಾವ್ತರೊಗ್ಗಿನಲಿ
ಧರಣಿಪತಿ ಕೃತವರ್ಮ ಕೃಪ ಹ
ನ್ನೆರಡುಸಾವಿರ ರಥಸಹಿತ ಮೋ
ಹರಿಸಿದರು ಬಲವಂಕದಲಿ ದಳಪತಿಯ ನೇಮದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನ ಆಜ್ಞೆಯಂತೆ, ಎಂಟುಸಾವಿರ ಶ್ರೇಷ್ಠರಾದ ಮಹಾರಥರು ಐದುಸಾವಿರ ಆನೆಗಳು ಇಪ್ಪತ್ತು ಸಾವಿರ ರಾವುತರೊಂದಿಗೆ ಅಶ್ವತ್ಥಾಮನು, ಮತ್ತು ದುರ್ಯೋಧನ, ಕೃತವರ್ಮ ಕೃಪರು ಹನ್ನೆರಡುಸಾವಿರ ರಥಸಹಿತ ದಳಪತಿಯ ಬಲಪಕ್ಕದಲ್ಲಿ ಬಂದು ಸೇರಿದರು.
ಮೂಲ ...{Loading}...
ಗುರುಸುತನ ಕೂಡೆಂಟುಸಾವಿರ
ವರಮಹಾರಥರೈದುಸಾವಿರ
ಕರಿಘಟೆಗಳಿಪ್ಪತ್ತು ಸಾವಿರರಾವ್ತರೊಗ್ಗಿನಲಿ
ಧರಣಿಪತಿ ಕೃತವರ್ಮ ಕೃಪ ಹ
ನ್ನೆರಡುಸಾವಿರ ರಥಸಹಿತ ಮೋ
ಹರಿಸಿದರು ಬಲವಂಕದಲಿ ದಳಪತಿಯ ನೇಮದಲಿ ॥3॥
೦೦೪ ಥಟ್ಟಿನೆಡವಙ್ಕದಲಿ ಹಗೆಗೊರೆ ...{Loading}...
ಥಟ್ಟಿನೆಡವಂಕದಲಿ ಹಗೆಗೊರೆ
ಗಟ್ಟಿ ನಿಂದರು ಕುರುಬಲದ ಜಗ
ಜಟ್ಟಿ ವೃಷಸೇನನು ಸುಷೇಣನು ಶಕುನಿ ಬಲಸಹಿತ
ಬೆಟ್ಟ ಬೀಳಲುವರಿದವೆನೆ ಕೈ
ಮುಟ್ಟಿ ಮಹಿಯನು ದಂತಿಘಟೆ ಸಾ
ಲಿಟ್ಟುದೆತ್ತಣ ಸೇನೆಯೋ ನಾವರಿಯೆವಿದನೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕುರುಸೈನ್ಯದ ಜಗಜಟ್ಟಿಗಳಾದ ವೃಷಸೇನ, ಸುಷೇಣ, ಶಕುನಿಯರು ಬಲಸಹಿತ ಸೈನ್ಯದ ಎಡ ಪಕ್ಕದಲ್ಲಿ ಹಗೆಗೆ ಒರೆಯನ್ನು ಕಟ್ಟಿ ನಿಂತರು. ಬೆಟ್ಟ ಬಿಳಲುಬಿಟ್ಟವೋ ಎನ್ನುವ ಹಾಗೆ ಆನೆಗ¼ ಸೊಂಡಿಲುಗಳು ನೆಲವನ್ನು ತಾಕುತ್ತಿದ್ದವು. ಇದು ಎಲ್ಲಿಯ ಸೇನೆಯೋ ನಾವು ಅರಿಯೆವು ಎಂದನು.
ಮೂಲ ...{Loading}...
ಥಟ್ಟಿನೆಡವಂಕದಲಿ ಹಗೆಗೊರೆ
ಗಟ್ಟಿ ನಿಂದರು ಕುರುಬಲದ ಜಗ
ಜಟ್ಟಿ ವೃಷಸೇನನು ಸುಷೇಣನು ಶಕುನಿ ಬಲಸಹಿತ
ಬೆಟ್ಟ ಬೀಳಲುವರಿದವೆನೆ ಕೈ
ಮುಟ್ಟಿ ಮಹಿಯನು ದಂತಿಘಟೆ ಸಾ
ಲಿಟ್ಟುದೆತ್ತಣ ಸೇನೆಯೋ ನಾವರಿಯೆವಿದನೆಂದ ॥4॥
೦೦೫ ಆ ನದೀನನ್ದನನ ...{Loading}...
ಆ ನದೀನಂದನನ ಸಮರದಿ
ಸೇನೆ ಸವೆದುದನಂತ ಬಳಿಕಿನ
ಸೇನೆ ಗರಿ ಸೋಂಕಿಲ್ಲ ಕಂಡೆನು ದ್ರೋಣ ಪರ್ವದಲಿ
ಏನನೆಂಬೆನು ಜೀಯ ಮತ್ತೀ
ಭಾನುತನಯನ ಕದನಕೊದಗಿದ
ಸೇನೆ ಸಂಖ್ಯಾತೀತವೆಂದನು ಸಂಜಯನು ನೃಪಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಭೀಷ್ಮನ ಯುದ್ಧದಲ್ಲಿ ಸೇನೆಯು ಸವೆಯಿತು. ಅನಂತರ ದ್ರೋಣ ಪರ್ವದಲ್ಲಿ ಬಾಣ ಸೋಕದ ಸೇನೆಯನ್ನು ಕಂಡೆನು. ಏನು ಹೇಳಲಿ, ಒಡೆಯಾ, ಮತ್ತೆ ಈ ಕರ್ಣನ ಕದನಕ್ಕೆ ಒದಗಿದ ಸೇನೆ ಸಂಖ್ಯಾತೀತ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಸೇನೆ ನುಗ್ಗಾದುದನು ಕಂಡೆ ದ್ರೋಣ ಪರ್ವದಲಿ - ಅ ರಾ ಸೆ. ?
ಮೂಲ ...{Loading}...
ಆ ನದೀನಂದನನ ಸಮರದಿ
ಸೇನೆ ಸವೆದುದನಂತ ಬಳಿಕಿನ
ಸೇನೆ ಗರಿ ಸೋಂಕಿಲ್ಲ ಕಂಡೆನು ದ್ರೋಣ ಪರ್ವದಲಿ
ಏನನೆಂಬೆನು ಜೀಯ ಮತ್ತೀ
ಭಾನುತನಯನ ಕದನಕೊದಗಿದ
ಸೇನೆ ಸಂಖ್ಯಾತೀತವೆಂದನು ಸಂಜಯನು ನೃಪಗೆ ॥5॥
೦೦೬ ಒಡ್ಡಿತೀ ಬಲ ...{Loading}...
ಒಡ್ಡಿತೀ ಬಲ ರಿಪುಭಟರು ಮಾ
ರೊಡ್ಡ ಮೆರೆದರು ತಮ್ಮ ನೆರತೆಯೊ
ಳೊಡ್ಡಿಗೊಬ್ಬರ ಕರೆದು ಪರುಠವಿಸಿದನು ಮುರವೈರಿ
ಒಡ್ಡಿನೆಡದಲಿ ಭೀಮನಾ ಬಲ
ದೊಡ್ಡಿನಲಿ ಕಲಿಪಾರ್ಥ ದಳಪತಿ
ಯೊಡ್ಡಿನಲಿ ನಿಂದನು ಯುಧಿಷ್ಠಿರರಾಯ ದಳಸಹಿತ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಬಲವು ಎದುರಾಗಿ (ವ್ಯೂಹ ರಚನೆಯಲ್ಲಿ) ನಿಂತಿತು. ಶತ್ರುಗಳು ಅದಕ್ಕೆ ಪ್ರತಿವ್ಯೂಹ ರಚನೆ ಮಾಡಿ ನಿಂತರು. ಶ್ರೀಕೃಷ್ಣನು ಪ್ರತಿಯೊಂದು ಸೇನಾ ಸಮೂಹಕ್ಕೂ ಸಮಾನ ಬಲರಾದ ಒಬ್ಬೊಬ್ಬರನ್ನು ನಿಯಮಿಸಿದನು. ಆ ವ್ಯೂಹದ ಎಡದಲ್ಲಿ ಭೀಮ, ಬಲಕ್ಕೆ ವೀರನಾದ ಅರ್ಜುನ, ಸೇನಾಪತಿ (ಧೃಷ್ಟದ್ಯುಮ್ನನ) ಸೇನಾ ಸಮೂಹದಲ್ಲಿ ಧರ್ಮರಾಯನು ತನ್ನ ದಳ ಸಹಿತ ನಿಂತುಕೊಂಡನು.
ಪದಾರ್ಥ (ಕ.ಗ.ಪ)
ಒಡ್ಡು-ವ್ಯೂಹ, ನೆರತೆ-ಸಮಾನ
ಮೂಲ ...{Loading}...
ಒಡ್ಡಿತೀ ಬಲ ರಿಪುಭಟರು ಮಾ
ರೊಡ್ಡ ಮೆರೆದರು ತಮ್ಮ ನೆರತೆಯೊ
ಳೊಡ್ಡಿಗೊಬ್ಬರ ಕರೆದು ಪರುಠವಿಸಿದನು ಮುರವೈರಿ
ಒಡ್ಡಿನೆಡದಲಿ ಭೀಮನಾ ಬಲ
ದೊಡ್ಡಿನಲಿ ಕಲಿಪಾರ್ಥ ದಳಪತಿ
ಯೊಡ್ಡಿನಲಿ ನಿಂದನು ಯುಧಿಷ್ಠಿರರಾಯ ದಳಸಹಿತ ॥6॥
೦೦೭ ಈ ಮಹಾ ...{Loading}...
ಈ ಮಹಾ ಮೋಹರವನತಿ ನಿ
ಸ್ಸೀಮರಾಂತರು ಮೂವರೇ ಬಳಿ
ಕಾ ಮಹಾರಥರಾಜಿಯಡಗಿದುದವರ ರಶ್ಮಿಯಲಿ
ಸೋಮಸೂರ್ಯಾಗ್ನಿಗಳಿದಿರೊಳು
ದ್ದಾಮ ತೇಜಸ್ವಿಗಳೆ ದಿಟ ಕುರು
ಭೂಮಿಪತಿ ಹೇಳೆಂದು ನುಡಿದನು ಸಂಜಯನು ನಗುತ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇಷ್ಟು ದೊಡ್ಡ ಸೈನ್ಯವನ್ನು ಈ ಮೂವರೇ (ಭೀಮ, ಅರ್ಜುನ, ಧರ್ಮರಾಯ) ಎದುರಿಸಿದರು. ಅವರ ಆ ತೇಜಸ್ಸಿನಲ್ಲಿ (ಪರಾಕ್ರಮದ ಮುಂದೆ) ಆ ಮಹಾರಥರು ಅಡಗಿ ಹೋದರು. ಚಂದ್ರ, ಸೂರ್ಯ, ಅಗ್ನಿಗಳ ಸಮಾನ ತೇಜಸ್ಸಿನವರಾದ ಇವರ ಮುಂದೆ ಬೇರೆ ತೇಜಸ್ವಿಗಳು ನಿಲ್ಲುವುದುಂಟೇ? ಕುರುಮಹಾರಾಜ ನೀನೇ ಹೇಳು” ಎಂದು ಸಂಜಯ ನಗುತ್ತ ನುಡಿದನು.
ಮೂಲ ...{Loading}...
ಈ ಮಹಾ ಮೋಹರವನತಿ ನಿ
ಸ್ಸೀಮರಾಂತರು ಮೂವರೇ ಬಳಿ
ಕಾ ಮಹಾರಥರಾಜಿಯಡಗಿದುದವರ ರಶ್ಮಿಯಲಿ
ಸೋಮಸೂರ್ಯಾಗ್ನಿಗಳಿದಿರೊಳು
ದ್ದಾಮ ತೇಜಸ್ವಿಗಳೆ ದಿಟ ಕುರು
ಭೂಮಿಪತಿ ಹೇಳೆಂದು ನುಡಿದನು ಸಂಜಯನು ನಗುತ ॥7॥
೦೦೮ ಎರಡು ಬಲವುಬ್ಬೆದ್ದುದಿದರೊಳು ...{Loading}...
ಎರಡು ಬಲವುಬ್ಬೆದ್ದುದಿದರೊಳು
ಮೊರೆವ ಭೇರಿಯ ಭಟರ ಬೊಬ್ಬೆಯ
ಕರಿಯ ಗಜರಿನ ಹಯದ ಹೇಷಾರವದ ಹಲ್ಲಣೆಯ
ಜರಿವ ಕಹಳೆಯ ಝಾಡಿಸುವ ಜ
ಝ್ಝರದ ಡಿಂಡಿಮ ಡಮರು ಪಟಹದ
ಧರಧುರದ ದನಿ ಧೈರ್ಯಗೆಡಿಸಿತು ಸಕಲ ಸಾಗರವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಬಲಗಳು ಉತ್ಸಾಹದಿಂದ ಕುಣಿಯುತ್ತಿದ್ದವು. ಇದರಲ್ಲಿ ಭೇರಿಯ ನಾದ, ಭಟರ ಕೂಗು, ಆನೆಗಳ ಘೀಳಿಡುವಿಕೆ, ಕುದುರೆಗಳ ಹೇಷಾರವದ ಅಬ್ಬರ, (ಅಲ್ಲದೆ) ಕಹಳೆಯ ಮೊಳಗು, ಹೆಚ್ಚಾಗಿ ಸದ್ದು ಮಾಡುವ ಡಮರು, ಡಿಂಡಿಮ, ತಂಬಟೆ ಇವುಗಳ ಅತಿಶಯದ ದನಿಗಳ ಅಬ್ಬರ ಎಲ್ಲರನ್ನು ಎದೆಗಡಿಸಿತು.
ಮೂಲ ...{Loading}...
ಎರಡು ಬಲವುಬ್ಬೆದ್ದುದಿದರೊಳು
ಮೊರೆವ ಭೇರಿಯ ಭಟರ ಬೊಬ್ಬೆಯ
ಕರಿಯ ಗಜರಿನ ಹಯದ ಹೇಷಾರವದ ಹಲ್ಲಣೆಯ
ಜರಿವ ಕಹಳೆಯ ಝಾಡಿಸುವ ಜ
ಝ್ಝರದ ಡಿಂಡಿಮ ಡಮರು ಪಟಹದ
ಧರಧುರದ ದನಿ ಧೈರ್ಯಗೆಡಿಸಿತು ಸಕಲ ಸಾಗರವ ॥8॥
೦೦೯ ಬೆರಸಿದವು ಬಲವೆರಡು ...{Loading}...
ಬೆರಸಿದವು ಬಲವೆರಡು ಹೊಕ್ಕವು
ಕರಿಘಟೆಗಳೇರಿದವು ಕುದುರೆಗ
ಳುರವಣಿಸಿದವು ತೇರ ತಿವಿದರು ಹೊಂತಕಾರಿಗಳು
ಉರುಳ್ವ ತಲೆಗಳ ಬಸಿವ ಮಿದುಳಿನ
ಸುರಿವ ಕರುಳಿನ ಸೂಸುವೆಲುವಿನ
ಹೊರಳ್ವ ಮುಂಡದ ರೌದ್ರರಣ ರಂಜಿಸಿತು ಚೂಣಿಯಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ವಾದ್ಯಧ್ವನಿ, ಘೋಷದೊಡನೆ ಎರಡೂ ಬಲಗಳು ಒಂದಕ್ಕೊಂದು ಕೂಡಿದವು. ಆನೆಗಳು ಒಳ ನುಗ್ಗಿದವು, ಕುದುರೆಗಳು ಮುನ್ನುಗ್ಗಿದವು, ತೇರುಗಳು ಉರವಣಿಸಿದವು. ವೀರರು ತಿವಿದರು. ಬಳಿಕ ಉರುಳಿದ ತಲೆಗಳು, ಬಸಿಯುವ ಮಿದುಳುಗಳು, ಸುರಿಯುವ ಕರುಳುಗಳು, ಸೂಸುತ್ತಿರುವ ಎಲುವುಗಳು, ಅಲ್ಲದೆ ಹೊರಳಾಡುವ ಮುಂಡಗಳು ಇವುಗಳಿಂದ ಸೈನ್ಯದ ಮುಂಭಾಗದಲ್ಲಿ ರಣವು ರೌದ್ರಮಯವಾಗಿ ರಂಜಿಸಿತು.
ಪದಾರ್ಥ (ಕ.ಗ.ಪ)
ಹೊಂತಕಾರಿ-ವೀರರು;
ಮೂಲ ...{Loading}...
ಬೆರಸಿದವು ಬಲವೆರಡು ಹೊಕ್ಕವು
ಕರಿಘಟೆಗಳೇರಿದವು ಕುದುರೆಗ
ಳುರವಣಿಸಿದವು ತೇರ ತಿವಿದರು ಹೊಂತಕಾರಿಗಳು
ಉರುಳ್ವ ತಲೆಗಳ ಬಸಿವ ಮಿದುಳಿನ
ಸುರಿವ ಕರುಳಿನ ಸೂಸುವೆಲುವಿನ
ಹೊರಳ್ವ ಮುಂಡದ ರೌದ್ರರಣ ರಂಜಿಸಿತು ಚೂಣಿಯಲಿ ॥9॥
೦೧೦ ಜೋಡನೊಡೆದವಯವದ ರಕುತವ ...{Loading}...
ಜೋಡನೊಡೆದವಯವದ ರಕುತವ
ತೋಡಿದವು ಕೂರಂಬು ಸಬಳದ
ನೀಡುಮೊನೆ ನಿರಿಗರುಳನೆಂಜಲಿಸಿದವು ಪಟುಭಟರ
ಖೇಡರಸು ಬೆನ್ನೀಯೆ ನೆತ್ತಿಯ
ಬೀಡೆ ಬಿರಿಯಲು ಬಿದ್ದ ಲೌಡೆಗ
ಳೀಡಿರಿದವರಿ ಚಾತುರಂಗದ ಚಪಳ ಚೂಣಿಯಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹದನವಾದ ಬಾಣಗಳು ಕವಚಗಳನ್ನು ಸೀಳಿ ಹಾಕಿ ಅವಯವಗಳ ರಕ್ತವನ್ನು ತೋಡಿದವು. ಕೋಲ ತುದಿಯ ಚೂಪಾದ ಆಯುಧಗಳು ಒಡಲಿಗೆ ತಾಗಿ ಅವು ನೆರಿಗೆಯಂತಿರುವ ಪಟುಭಟರ ಕರುಳುಗಳನ್ನು ತಿವಿದು ಹೊರಬಂದವು. ಹೇಡಿಗಳು ಪ್ರಾಣಕ್ಕೆ ಹೆದರಿ ಬೆನ್ನು ತೋರಿಸಿ ಓಡಲು ಪ್ರಾರಂಭಿಸಿದಾಗ ಲೌಡೆಗಳು ಅವರ ನೆತ್ತಿಯ ಮೇಲೆ ಬಿದ್ದು ಅವರ ತಲೆಗಳನ್ನು ಬಿರಿಯುವಂತೆ ಮಾಡಿದವು. ಈ ಎಲ್ಲ ಅನರ್ಥಗಳು ಚತುರಂಗ ಬಲದ ಎಲ್ಲೆಡೆಯಲ್ಲೂ ನಡೆಯಿತು.
ಪದಾರ್ಥ (ಕ.ಗ.ಪ)
ಕೂರಂಬು-ಚೂಪಾದ ಬಾಣ; ನೀಡುಮೊನೆ-ಉದ್ದವಾದ ಚೂಪಾದ ತುದಿ; ನಿರಿಗರಳು-ನೆರಿಗೆಯಂತಿರುವ ಕರುಳು; ಖೇಡರಸು-ಹೇಡಿಗಳ ಪ್ರಾಣ; ಲೌಡೆ-ಕಬ್ಬಿಣದ ಆಯುಧ
ಮೂಲ ...{Loading}...
ಜೋಡನೊಡೆದವಯವದ ರಕುತವ
ತೋಡಿದವು ಕೂರಂಬು ಸಬಳದ
ನೀಡುಮೊನೆ ನಿರಿಗರುಳನೆಂಜಲಿಸಿದವು ಪಟುಭಟರ
ಖೇಡರಸು ಬೆನ್ನೀಯೆ ನೆತ್ತಿಯ
ಬೀಡೆ ಬಿರಿಯಲು ಬಿದ್ದ ಲೌಡೆಗ
ಳೀಡಿರಿದವರಿ ಚಾತುರಂಗದ ಚಪಳ ಚೂಣಿಯಲಿ ॥10॥
೦೧೧ ತೆಗೆಯ ಹೇಳೋ ...{Loading}...
ತೆಗೆಯ ಹೇಳೋ ಚೂಣಿಯಲಿ ಕಾ
ಳೆಗದ ಕೌತುಕವೆತ್ತ ದೊರೆಗಳು
ಹೊಗಲಿ ದಳನಾಯಕರು ನುಗ್ಗಿನ ಬೀಯಕಳುಕರಲ
ವಿಗಡ ಭೀಮಾರ್ಜುನರ ಬಸುರ
ಲ್ಲುಗಿ ಕರುಳನೆನುತಬ್ಬರದ ಬೊ
ಬ್ಬೆಗಳ ಬಿರುದರು ಕೆಣಕಿದರು ಸಮಸಪ್ತಕರು ನರನ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮುಂಭಾಗದಲ್ಲಿಯ ಸಾಮಾನ್ಯ ಸೈನಿಕರು ಹಿಂದೆ ಸರಿಯಲಿ, ಯುದ್ಧದ ಮೋಜನ್ನು ನೋಡಬೇಕಾದರೆ ಅರಸರು ಮುಂದೆ ಬರಲಿ. ಮುನ್ನುಗ್ಗುವದರಿಂದ ಉಂಟಾಗುವ ಹಾನಿಗೆ ಹೆದರದ ಸೇನಾಪತಿಗಳು ಭೀಮಾರ್ಜುನರ ಮೇಲೆ ನುಗ್ಗಲಿ. ಅವರ ಮೇಲೆ ಹದನಾದ ಬಾಣಗಳನ್ನು ಬಿಟ್ಟು ಅವರ ಕರುಳನ್ನು ಹೊರತೆಗೆಯಿರಿ” ಎಂದು ಅಬ್ಬರ ಮಾಡುತ್ತ, ಸಮಸಪ್ತಕರು ಅರ್ಜುನನ್ನು ಕೆಣಕಿದರು.
ಮೂಲ ...{Loading}...
ತೆಗೆಯ ಹೇಳೋ ಚೂಣಿಯಲಿ ಕಾ
ಳೆಗದ ಕೌತುಕವೆತ್ತ ದೊರೆಗಳು
ಹೊಗಲಿ ದಳನಾಯಕರು ನುಗ್ಗಿನ ಬೀಯಕಳುಕರಲ
ವಿಗಡ ಭೀಮಾರ್ಜುನರ ಬಸುರ
ಲ್ಲುಗಿ ಕರುಳನೆನುತಬ್ಬರದ ಬೊ
ಬ್ಬೆಗಳ ಬಿರುದರು ಕೆಣಕಿದರು ಸಮಸಪ್ತಕರು ನರನ ॥11॥
೦೧೨ ರಾಯನಾವೆಡೆ ಕೌರವೇನ್ದ್ರನ ...{Loading}...
ರಾಯನಾವೆಡೆ ಕೌರವೇಂದ್ರನ
ದಾಯಿಗನ ಬರಹೇಳು ಹಿಂದಣು
ಪಾಯ ಕೊಳ್ಳದು ನಿಮ್ಮ ಭೀಷ್ಮದ್ರೋಣರಾವಲ್ಲ
ಕಾಯಿದೆವು ಕೈಮುಗಿದನಾದರೆ
ಸಾಯಬಲ್ಲರೆ ತಿರುವನೊದೆಯಲಿ
ಸಾಯಕದ ಹಿಳುಕೆನುತ ಬಿಟ್ಟನು ಸೂಠಿಯಲಿ ರಥವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕರ್ಣನು “(ಧರ್ಮ)ರಾಯನು ಎಲ್ಲಿ? ಕೌರವನ ದಾಯಾದಿಯು ಎಲ್ಲಿ? ಆತನಿಗೆ ಬರಲಿಕ್ಕೆ ಹೇಳು. ಈ ಮೊದಲಿನ ಉಪಾಯಗಳು (ನಮ್ಮಲ್ಲಿ) ನಡೆಯಲಾರವು. ನಾವೇನು ಭೀಷ್ಮ-ದ್ರೋಣರು ಅಲ್ಲ, ಕೈ ಮುಗಿದು ಕೇಳಿಕೊಂಡರೆ ಆಗ ಕಾಯುತ್ತೇವೆ. ಸಾಯಲು ಸಿದ್ಧನಿದ್ದರೆ, ಬಿಲ್ಲಿಗೆ ಬಾಣ ಹೂಡಲಿ. ಅದು ತಿರುವನ್ನು ಒದ್ದು ನೆಗೆದು ಬರಲಿ” ಎಂದು ಹೇಳುತ್ತ ಕರ್ಣನು ರಥವನ್ನು ವೇಗವಾಗಿ ಬಿಟ್ಟನು.
ಪದಾರ್ಥ (ಕ.ಗ.ಪ)
ದಾಯಿಗ-ಭಾಗಾದಿ;
ಮೂಲ ...{Loading}...
ರಾಯನಾವೆಡೆ ಕೌರವೇಂದ್ರನ
ದಾಯಿಗನ ಬರಹೇಳು ಹಿಂದಣು
ಪಾಯ ಕೊಳ್ಳದು ನಿಮ್ಮ ಭೀಷ್ಮದ್ರೋಣರಾವಲ್ಲ
ಕಾಯಿದೆವು ಕೈಮುಗಿದನಾದರೆ
ಸಾಯಬಲ್ಲರೆ ತಿರುವನೊದೆಯಲಿ
ಸಾಯಕದ ಹಿಳುಕೆನುತ ಬಿಟ್ಟನು ಸೂಠಿಯಲಿ ರಥವ ॥12॥
೦೧೩ ಬಿಟ್ಟ ಸೂಠಿಯೊಳುಗಿವ ...{Loading}...
ಬಿಟ್ಟ ಸೂಠಿಯೊಳುಗಿವ ಕರ್ಣನ
ಥಟ್ಟಣೆಯ ಕಂಡನಿಲಸುತನಡ
ಗಟ್ಟಿದನು ಹದಿನೆಂಟು ಸಾವಿರ ರಥಿಕರೊಗ್ಗಿನಲಿ
ಇಟ್ಟಣಿಸಿ ಬರೆ ರವಿಸುತನ ಕೈ
ಮುಟ್ಟಲೀಯದೆ ಕೌರವೇಂದ್ರನ
ಥಟ್ಟಿನಲಿ ಮೂವತ್ತು ಸಾವಿರ ಕರಿಗಳೌಕಿದವು ॥13
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ವೇಗವಾಗಿ ಬರುತ್ತಿರುವ ಕರ್ಣನನ್ನು ನೋಡಿ, ಹದಿನೆಂಟು ಸಾವಿರ ರಥಿಕರೊಡನೆ ಭೀಮನು ಅಡ್ಡಗಟ್ಟಿದನು. ಭೀಮನು ಸಮೂಹಗಟ್ಟಿಕೊಂಡು ಬರಲು, ಅವನು ಕರ್ಣನನ್ನು ಮುಟ್ಟಲು ಅವಕಾಶ ಕೊಡದಂತೆ ಕೌರವೇಂದ್ರನ ಸೈನ್ಯದಲ್ಲಿನ ಮೂವತ್ತು ಸಾವಿರ ಆನೆಯ ಸೈನ್ಯ ಮುನ್ನುಗ್ಗಿ ಬಂದಿತು.
ಮೂಲ ...{Loading}...
ಬಿಟ್ಟ ಸೂಠಿಯೊಳುಗಿವ ಕರ್ಣನ
ಥಟ್ಟಣೆಯ ಕಂಡನಿಲಸುತನಡ
ಗಟ್ಟಿದನು ಹದಿನೆಂಟು ಸಾವಿರ ರಥಿಕರೊಗ್ಗಿನಲಿ
ಇಟ್ಟಣಿಸಿ ಬರೆ ರವಿಸುತನ ಕೈ
ಮುಟ್ಟಲೀಯದೆ ಕೌರವೇಂದ್ರನ
ಥಟ್ಟಿನಲಿ ಮೂವತ್ತು ಸಾವಿರ ಕರಿಗಳೌಕಿದವು ॥13
೦೧೪ ಕರಿಘಟೆಯಲಾ ನಮ್ಮ ...{Loading}...
ಕರಿಘಟೆಯಲಾ ನಮ್ಮ ಪುಣ್ಯದ
ಪರಿಣತೆಯಲಾ ನಮ್ಮ ರಥಿಕರು
ಸರಳ ತೊಡದಿರಿ ಸೈರಿಸುವುದರೆಗಳಿಗೆ ಮಾತ್ರದಲಿ
ಅರಿ ಹಿರಣ್ಯಕಬಲಕೆ ನರಕೇ
ಸರಿಯ ಪಾಡೆನಿಸುವೆನು ಕಣ್ಣೆವೆ
ಮರೆಗೆ ಮುಂಚುವೆನೆನುತ ಹೊಕ್ಕನು ಭೀಮ ಗಜಬಲವ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಓ ! ಆನೆಯ ಹಿಂಡೆ? ನಮ್ಮ ಪುಣ್ಯದ ಪ್ರತಿಫಲವೆ ! (ಅಡ್ಡಿಯಿಲ್ಲ) ನಮ್ಮ ರಥಿಕರಾರೂ ಬಾಣ ತೊಡಬೇಡಿರಿ. ಒಂದು ಅರಗಳಿಗೆ ಮಾತ್ರ ಸೈರಿಸಿ. ಅಷ್ಟರಲ್ಲಿ ನಾನು ವೈರಿ ಬಲಕ್ಕೆ ಹಿರಣ್ಯಕಶಿಪುವಿಗೆ ನರಸಿಂಹ ಕೊಟ್ಟ ಗತಿಯನ್ನೇ ಕೊಡುತ್ತೇನೆ. ನೀವು ಕಣ್ಣು ಮುಚ್ಚಿ ತೆಗೆಯುವದರಲ್ಲೇ ಬಂದು ಬಿಡುತ್ತೇನೆ” ಎಂದು ಭೀಮನು ಕೌರವನ ಗಜಬಲವನ್ನು ಹೊಕ್ಕನು.
ಮೂಲ ...{Loading}...
ಕರಿಘಟೆಯಲಾ ನಮ್ಮ ಪುಣ್ಯದ
ಪರಿಣತೆಯಲಾ ನಮ್ಮ ರಥಿಕರು
ಸರಳ ತೊಡದಿರಿ ಸೈರಿಸುವುದರೆಗಳಿಗೆ ಮಾತ್ರದಲಿ
ಅರಿ ಹಿರಣ್ಯಕಬಲಕೆ ನರಕೇ
ಸರಿಯ ಪಾಡೆನಿಸುವೆನು ಕಣ್ಣೆವೆ
ಮರೆಗೆ ಮುಂಚುವೆನೆನುತ ಹೊಕ್ಕನು ಭೀಮ ಗಜಬಲವ ॥14॥
೦೧೫ ಬಿರಿದುವೀತನ ಸಿಂಹ ...{Loading}...
ಬಿರಿದುವೀತನ ಸಿಂಹ ನಾದಕೆ
ಕರಿಗಳೆದೆಮಣಿ ಗದೆಯ ಹೊಯ್ಲಲಿ
ತಿರುಗಿ ಕೋಡಡಿಯಾಗಿ ಕೆಡೆದವು ಮಡಿದವಾಕ್ಷಣಕೆ
ಉರುಳಿದವು ಪರ್ವತದ ವಜ್ರದ
ಸರಿಸ ಹೋರಟೆ ಕಾಣಲಾದುದು
ಕರಿಘಟೆಯ ಪವನಜನ ರಣದಲಿ ರಾಯ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಸಿಂಹನಾದಕ್ಕೆ ಆನೆಗಳ ಎದೆಗುಂಡಿಗೆಗಳು ಬಿರಿದವು. ಗದೆಯ ಹೊಡೆತಕ್ಕೆ ಆನೆಗಳು ಕೋರೆಗಳು ನೆಲ ಕಚ್ಚುವಂತೆ ಬಿದ್ದವು. ಬಿದ್ದ ಮರುಕ್ಷಣದಲ್ಲಿ ಮಡಿದವು. ಕೆಲವು ಉರುಳಿದವು. ಭೀಮ ಮತ್ತು ಆನೆಗಳ ಈ ಹೋರಾಟ ವಜ್ರಾಯುಧ ಹಾಗೂ ಪರ್ವತಗಳ ಹೋರಾಟದಂತೆ ಕಾಣುತ್ತಿತ್ತು. ರಾಯಾ ಕೇಳು” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಕೋಡಡಿಯಾಗಿ-ಕೋರೆಗಳು ನೆಲ ಕಚ್ಚುವಂತೆ
ಮೂಲ ...{Loading}...
ಬಿರಿದುವೀತನ ಸಿಂಹ ನಾದಕೆ
ಕರಿಗಳೆದೆಮಣಿ ಗದೆಯ ಹೊಯ್ಲಲಿ
ತಿರುಗಿ ಕೋಡಡಿಯಾಗಿ ಕೆಡೆದವು ಮಡಿದವಾಕ್ಷಣಕೆ
ಉರುಳಿದವು ಪರ್ವತದ ವಜ್ರದ
ಸರಿಸ ಹೋರಟೆ ಕಾಣಲಾದುದು
ಕರಿಘಟೆಯ ಪವನಜನ ರಣದಲಿ ರಾಯ ಕೇಳೆಂದ ॥15॥
೦೧೬ ನೀಲಗಿರಿಗಳ ನೆಮ್ಮಿ ...{Loading}...
ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವು ಮಳೆಯನೆನೆ ಶರ
ಜಾಳ ಕವಿದುದು ಗಜದ ಜೋಧರ ಝಾಡಿಯೆಸುಗೆಯಲಿ
ಕೋಲ ಕೊಂಬನೆ ಭೀಮ ಸಿಡಿಲುರಿ
ನಾಲಗೆಗೆ ನೀರೇಗುವುದು ಮೇ
ಲಾಳ ಮುರಿದನು ವಿವಿಧ ಶಸ್ತ್ರಾಸ್ತ್ರ ಪ್ರಹಾರದಲಿ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀಲ ಪರ್ವತವನ್ನು ಆಶ್ರಯಿಸಿ ದೊಡ್ಡ ದೊಡ್ಡ ಮೇಘಗಳು ಮಳೆ ಸುರಿಸಿದಂತೆ, ಆನೆಯ ಮೇಲಿನ ಯೋಧರು ಬೀಮನ ಮೇಲೆ ಬಾಣಗಳ ಜಾಲವನ್ನೇ ಕವಿಸಿದರು. ಆದರೆ ಆ ಬಾಣಗಳಿಗೆ ಆತನು ಸೊಪ್ಪು ಹಾಕಲಿಲ್ಲ. ಸಿಡಿಲಿನ ಉರಿ ನಾಲಗೆಗೆ ನೀರು ಏನು ಮಾಡೀತು? ನಾನಾ ವಿಧದ ಅಸ್ತ್ರ ಶಸ್ತ್ರಗಳನ್ನು ಬಿಟ್ಟು ಭೀಮನು ಮುಖ್ಯರಾದವರನ್ನು ಹೊಡೆದು ಉರುಳಿಸಿದನು.
ಮೂಲ ...{Loading}...
ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವು ಮಳೆಯನೆನೆ ಶರ
ಜಾಳ ಕವಿದುದು ಗಜದ ಜೋಧರ ಝಾಡಿಯೆಸುಗೆಯಲಿ
ಕೋಲ ಕೊಂಬನೆ ಭೀಮ ಸಿಡಿಲುರಿ
ನಾಲಗೆಗೆ ನೀರೇಗುವುದು ಮೇ
ಲಾಳ ಮುರಿದನು ವಿವಿಧ ಶಸ್ತ್ರಾಸ್ತ್ರ ಪ್ರಹಾರದಲಿ ॥16॥
೦೧೭ ಕರಿಯ ಬರಿಕೈಯೆಸುವ ...{Loading}...
ಕರಿಯ ಬರಿಕೈಯೆಸುವ ಜೋಧರ
ಕರ ಮಹಾಂಕುಶದವನ ಕೈ ಕ
ತ್ತರಿಸಲೊಂದೇ ಶರದಲೆಚ್ಚನು ಮತ್ತೆ ಗದೆಗೊಂಡು
ತಿರುಗಿ ಹೊಯ್ದನು ಜೋಡು ಜೋಧರು
ಕರಿಯೊಡಲು ಸಮಸೀಳ ಸೀಳಲು
ಅರಸ ಬಣ್ಣಿಸಲಾರು ಬಲ್ಲರು ಭೀಮ ಸಾಹಸವ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಆನೆಯ ಸೊಂಡಿಲು, ಯೋಧರ ಕರ, ಮಹಾಂಕುಶದವನ ಕೈ, ಈ ಮೂರು ಕೈಗಳನ್ನು ಒಂದೇ ಬಾಣದಿಂದ ಕತ್ತರಿಸಿದನು. ಆಮೇಲೆ ಗದೆ ಹಿಡಿದು ತಿರುಗಿ ಹೊಡೆದನು. ಆಗ ಮೈಯ ಕವಚ, ಕಾದುವ ಯೋಧ, ಮತ್ತು ಆನೆಯ ದೇಹ ಇವು ಏಕಕಾಲಕ್ಕೆ ಸಮಾನವಾದ ಹೋಳುಗಳಾಗಿ ಬಿದ್ದವು. ಅರಸನೇ ! ಭೀಮಸೇನನ ಈ ಅಪರೂಪದ ಪರಾಕ್ರಮವನ್ನು ಬಣ್ಣಿಸುವವರು ಯಾರು ?
ಮೂಲ ...{Loading}...
ಕರಿಯ ಬರಿಕೈಯೆಸುವ ಜೋಧರ
ಕರ ಮಹಾಂಕುಶದವನ ಕೈ ಕ
ತ್ತರಿಸಲೊಂದೇ ಶರದಲೆಚ್ಚನು ಮತ್ತೆ ಗದೆಗೊಂಡು
ತಿರುಗಿ ಹೊಯ್ದನು ಜೋಡು ಜೋಧರು
ಕರಿಯೊಡಲು ಸಮಸೀಳ ಸೀಳಲು
ಅರಸ ಬಣ್ಣಿಸಲಾರು ಬಲ್ಲರು ಭೀಮ ಸಾಹಸವ ॥17॥
೦೧೮ ಹಿಣ್ಡೊಡೆದು ಗಜಸೇನೆ ...{Loading}...
ಹಿಂಡೊಡೆದು ಗಜಸೇನೆ ಮುಮ್ಮುಳಿ
ಗೊಂಡು ಮುರಿದುದು ಮುಳಿದು ಭೀಮನ
ಗಂಡುಗೆಡಿಸುವರಿಲ್ಲ ಕೌರವ ದಳದ ಸುಭಟರಲಿ
ಅಂಡುಗೊಂಡುದು ಬಿರುದುಗಿರುದಿನ
ಗಂಡರಕಟಕಟೆನುತ ನಿಜ ಕೋ
ದಂಡವನು ದನಿಮಾಡುತಶ್ವತ್ಥಾಮನಿದಿರಾದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನ ಉರವಣೆಗೆಗೆ ಆನೆಗಳು ಹಿಂಡನ್ನು ಬಿಟ್ಟ ರೂಪಗೇಡಿಯಾಗಿ ಶಕ್ತಿಗುಂದಿ ಹಿಂತಿರುಗಿ ಮನಬಂದತ್ತ ತೆರಳಿದವು. ಕೌರವರ ದಳದಲ್ಲಿ ಭೀಮನ ಈ ಉಬ್ಬಾಳತನವನ್ನು ನಿಲ್ಲಿಸುವವರೇ ಇಲ್ಲ. ಪ್ರಸಿದ್ಧರಾದ ನಾಯಕರೂ ಸಹ ಕೈಚೆಲ್ಲಿ ಕುಳಿತರು. ಇದನ್ನು ನೋಡಿ ಅಕಟಕಟಾ ! ಕೆಲಸ ಕೆಟ್ಟಿತು ಎನ್ನುತ್ತ ಬಿಲ್ಲು ಹಿಡಿದು ಶಬ್ದ ಮಾಡುತ್ತ ಅಶ್ವತ್ಥಾಮನು ಇದಿರಾದನು.
ಪದಾರ್ಥ (ಕ.ಗ.ಪ)
ಮುಮ್ಮುಳಿಗೊಂಡು-ರೂಪಗೇಡಿಯಾಗಿ ನಾಶವಾಗು; ಗಂಡುಗೆಡಿಸು-ಸೋಲಿಸು; ಅಂಡುಗೊಳು-ಕೈ ಚಲ್ಲಿ ಕೂಡು;
ಮೂಲ ...{Loading}...
ಹಿಂಡೊಡೆದು ಗಜಸೇನೆ ಮುಮ್ಮುಳಿ
ಗೊಂಡು ಮುರಿದುದು ಮುಳಿದು ಭೀಮನ
ಗಂಡುಗೆಡಿಸುವರಿಲ್ಲ ಕೌರವ ದಳದ ಸುಭಟರಲಿ
ಅಂಡುಗೊಂಡುದು ಬಿರುದುಗಿರುದಿನ
ಗಂಡರಕಟಕಟೆನುತ ನಿಜ ಕೋ
ದಂಡವನು ದನಿಮಾಡುತಶ್ವತ್ಥಾಮನಿದಿರಾದ ॥18॥
೦೧೯ ಎಲೆಲೆ ರಾಯನ ...{Loading}...
ಎಲೆಲೆ ರಾಯನ ತಮ್ಮನೋ ಗಜ
ಬಲದೊಡನೆ ಬಳಲಿದನು ಗುರುಸುತ
ನಳವು ಕಿರಿದೇ ಸ್ವಾಮಿದ್ರೋಹರ ನೂಕು ನೂಕೆನುತ
ಉಲಿದು ಧೃಷ್ಟದ್ಯುಮ್ನ ಬಲವಿ
ಟ್ಟಳಿಸಿ ನೂಕಿತು ಭೀಮಸೇನನ
ನೆಲನ ಕೊಂಡರು ಕಡುಹಿನಲಿ ಪಾಂಚಾಲ ನಾಯಕರು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಭೀಮನ ಮೇಲೆ ಏರಿ ಬಂದದ್ದನ್ನು ಕಂಡು ಧೃಷ್ಟಧ್ಯುಮ್ನನ ಸೈನಿಕರು “ಎಲೆಲೇ ! (ಧರ್ಮ) ರಾಯನ ತಮ್ಮನೋ ! ಆನೆಗಳೊಂದಿಗೆ ಇಷ್ಟು ಹೊತ್ತಿನವರೆಗೂ ಸೆಣಸಿ ಬಳಲಿದ್ದಾನೆ. ಅಶ್ವತ್ಥಾಮನ ಸಾಮಥ್ರ್ಯವೇನು ಸಣ್ಣದೇ? ಈ ಹೊತ್ತಿನಲ್ಲಿ ಹಿಂಜರಿಯುವ ಸ್ವಾಮಿದ್ರೋಹಿಗಳನ್ನು ಆಚೆಗೆ ಅಟ್ಟು” ಎಂದು ಕೂಗುತ್ತಾ ಒಟ್ಟಾಗಿ ಮುನ್ನುಗ್ಗಿದರು. ಆಗ ಪಾಂಚಾಲ ನಾಯಕರು ಸಾಹಸದಿಂದ ಮುಂದುವರೆದು ಭೀಮನ ಸಮೀಪಕ್ಕೆ ಬಂದು ಅವನಿಗೆ ಬೆಂಬಲವಾಗಿ ನಿಂತರು.
ಮೂಲ ...{Loading}...
ಎಲೆಲೆ ರಾಯನ ತಮ್ಮನೋ ಗಜ
ಬಲದೊಡನೆ ಬಳಲಿದನು ಗುರುಸುತ
ನಳವು ಕಿರಿದೇ ಸ್ವಾಮಿದ್ರೋಹರ ನೂಕು ನೂಕೆನುತ
ಉಲಿದು ಧೃಷ್ಟದ್ಯುಮ್ನ ಬಲವಿ
ಟ್ಟಳಿಸಿ ನೂಕಿತು ಭೀಮಸೇನನ
ನೆಲನ ಕೊಂಡರು ಕಡುಹಿನಲಿ ಪಾಂಚಾಲ ನಾಯಕರು ॥19॥
೦೨೦ ಮರುಗದಿರಿ ಪಾಞ್ಚಾಲರಾಯನ ...{Loading}...
ಮರುಗದಿರಿ ಪಾಂಚಾಲರಾಯನ
ಮರಿಗಳಿರ ಭೀಮಂಗೆ ತಪ್ಪೇ
ನುರುವ ದೊರೆ ಸೊಪ್ಪಾಗದಂತಿರೆ ನೀವು ಕಾದುವಿರೆ
ಅರಿವೆನಾದರೆಯೆನುತ ಬಾಣವ
ತಿರುಹಲಾ ನಿಮಿಷದಲಿ ನಿಂದನು
ಗುರುಸುತನ ಹಿಂದಿಕ್ಕಿ ಪಾಂಚಾಲರಿಗೆ ಕಲಿಕರ್ಣ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಪಾಂಚಾಲರಾಯನ ಮರಿಗಳಿರಾ ! ಭೀಮನಿಗಾಗಿ ನೀವು ಮರುಗಬೇಡಿರಿ. ತಪ್ಪೇನು ಅದರಲ್ಲಿ? ಇರಲಿ ನೀವು ದೊಡ್ಡದೊರೆಯ (ಧರ್ಮರಾಯನ) ಮನಸ್ಸು ನೋಯದಂತೆ ಯುದ್ಧ ಮಾಡಬಲ್ಲಿರಾ? ಮಾಡುವಿರಾದರೆ ಸರಿ ಅದಕ್ಕೆ ಔಷಧವ ಬಲ್ಲೆನು” ಎನ್ನುತ್ತ ಅಶ್ವತ್ಥಾಮನು ಬಾಣವನ್ನು ಬತ್ತಳಿಕೆಯಿಂದ ಸೆಳೆದನು. ಅಷ್ಟರಲ್ಲಿ ವೀರ ಕರ್ಣನು ಅಶ್ವತ್ಥಾಮನನ್ನು ಹಿಂದೆ ಸರಿಸಿ, ಪಾಂಚಾಲರಿಗೆ ಎದುರಾಗಿ ನಿಂತನು.
ಮೂಲ ...{Loading}...
ಮರುಗದಿರಿ ಪಾಂಚಾಲರಾಯನ
ಮರಿಗಳಿರ ಭೀಮಂಗೆ ತಪ್ಪೇ
ನುರುವ ದೊರೆ ಸೊಪ್ಪಾಗದಂತಿರೆ ನೀವು ಕಾದುವಿರೆ
ಅರಿವೆನಾದರೆಯೆನುತ ಬಾಣವ
ತಿರುಹಲಾ ನಿಮಿಷದಲಿ ನಿಂದನು
ಗುರುಸುತನ ಹಿಂದಿಕ್ಕಿ ಪಾಂಚಾಲರಿಗೆ ಕಲಿಕರ್ಣ ॥20॥
೦೨೧ ಕ್ಷಮಿಸುವುದು ಗುರುಸೂನು ...{Loading}...
ಕ್ಷಮಿಸುವುದು ಗುರುಸೂನು ರಣವನು
ನಿಮಿಷ ಚಿತ್ತೈಸುವುದು ಶೌರ್ಯ
ಭ್ರಮಿತರೀ ಪಾಂಚಾಲರನು ಬರಿಕೈದು ತೋರುವೆನು
ದ್ಯುಮಣಿ ಪರಿಯಂತೇಕೆ ರಶ್ಮಿಗೆ
ತಿಮಿರವಿದಿರೇ ನೀವು ನೋಟಕ
ರೆಮಗೆ ರಣ ದೆಖ್ಖಾಳವೆಂದನು ಕರ್ಣ ಗುರುಸುತಗೆ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ! ಗುರುಪುತ್ರಾ ! ಕ್ಷಮಿಸಬೇಕು, ಇಂದಿನ ರಣವನ್ನು ಕ್ಷಣಕಾಲ ನೀವು ನೋಡಬೇಕು. ಈ ಶೌರ್ಯಭ್ರಮಿತರಾದ ಪಾಂಚಾಲರೆಲ್ಲರನ್ನೂ ನಾಶ ಮಾಡಿ ತೋರಿಸುವೆನು. ಕತ್ತಲೆಗೆ ಸೂರ್ಯನೆ ಎದುರಾಗಬೇಕೆ? ಅವನ ರಶ್ಮಿಗಳಳೆ ಆ ಕೆಲಸವನ್ನು ಮಾಡುತ್ತವೆ. ನೀವು ಕೇವಲ ನೋಟಕರಾಗಿರಿ. ರಣದ ಹೊಣೆಯನ್ನು ನಮಗೆ ಬಿಡಿ” ಎಂದು ಕರ್ಣನು ಅಶ್ವತ್ಥಾಮನಿಗೆ ಹೇಳಿದನು.
ಮೂಲ ...{Loading}...
ಕ್ಷಮಿಸುವುದು ಗುರುಸೂನು ರಣವನು
ನಿಮಿಷ ಚಿತ್ತೈಸುವುದು ಶೌರ್ಯ
ಭ್ರಮಿತರೀ ಪಾಂಚಾಲರನು ಬರಿಕೈದು ತೋರುವೆನು
ದ್ಯುಮಣಿ ಪರಿಯಂತೇಕೆ ರಶ್ಮಿಗೆ
ತಿಮಿರವಿದಿರೇ ನೀವು ನೋಟಕ
ರೆಮಗೆ ರಣ ದೆಖ್ಖಾಳವೆಂದನು ಕರ್ಣ ಗುರುಸುತಗೆ ॥21॥
೦೨೨ ಬಳಿಕ ಹೇಳುವುದೇನು ...{Loading}...
ಬಳಿಕ ಹೇಳುವುದೇನು ರಣದ
ಗ್ಗಳೆಯರವದಿರು ಮುತ್ತಿದರು ಕೈ
ಚಳಕಿಗರು ಕವಿದೆಚ್ಚರೀತನನೆಂಟು ದೆಸೆಗಳಲಿ
ಲುಳಿತ ಜಲಧರಪಟಲ ಜಠರದೊ
ಳಿಳಿದ ರವಿಮಂಡಲದವೋಲರೆ
ಘಳಿಗೆ ಕರ್ಣನ ಕಾಣೆನೈ ನರನಾಥ ಕೇಳ್ ಎಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆ ಬಳಿಕ ಹೇಳುವುದೇನು? ರಣದಲ್ಲಿ ಅತಿಶಯ ಶ್ರೇಷ್ಠರೆನಿಸಿದವರು ತೀರ ಚುರುಕಾದ ಕೈಗುಣದ ಅವರು ಕರ್ಣನನ್ನು ಎಂಟೂ ದಿಕ್ಕುಗಳಿಂದ ಹೊಡೆದರು. ಆಗ ಹರಡಿದ ಮೋಡಗಳ ಒಡಲೊಳಗೆ ಅರೆಕ್ಷಣ ಮರೆಯಾದ ಸೂರ್ಯನಂತೆ ಕರ್ಣನು ಎಲ್ಲಿಯೂ ಕಾಣದಾದನು. ನರನಾಥ ಕೇಳು “ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ಜಲಧರಪಟ-ಮೋಡಗಳ ಸಮೂಹ
ಮೂಲ ...{Loading}...
ಬಳಿಕ ಹೇಳುವುದೇನು ರಣದ
ಗ್ಗಳೆಯರವದಿರು ಮುತ್ತಿದರು ಕೈ
ಚಳಕಿಗರು ಕವಿದೆಚ್ಚರೀತನನೆಂಟು ದೆಸೆಗಳಲಿ
ಲುಳಿತ ಜಲಧರಪಟಲ ಜಠರದೊ
ಳಿಳಿದ ರವಿಮಂಡಲದವೋಲರೆ
ಘಳಿಗೆ ಕರ್ಣನ ಕಾಣೆನೈ ನರನಾಥ ಕೇಳೆಂದ ॥22॥
೦೨೩ ಗಾಳಿಯೆತ್ತಲು ಘಾಡಿಸುವ ...{Loading}...
ಗಾಳಿಯೆತ್ತಲು ಘಾಡಿಸುವ ಮೇ
ಘಾಳಿಯೆತ್ತಲು ವೈರಿ ಸೇನೆಯ
ನಾಳೆಗಡಿತದ ನೊರೆಯ ರಕುತದ ನೂಕುಧಾರೆಗಳ
ಏಳಿಗೆಯಲಾ ಛತ್ರ ಚಮರೀ
ಜಾಳ ನನೆದವು ಕರ್ಣನಂಬಿನ
ಕೋಲ ಕಡಿದೊಡನೊಡನೆ ಕೊಂದನು ಕೋಟಿಸಂಖ್ಯೆಗಳ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಳಿ ಎಲ್ಲಿ? ವ್ಯಾಪಿಸಿದ ಮೇಘಗಳೆಲ್ಲಿ? ಎಂಬ ವಾತಾವರಣವನ್ನುಂಟುಮಾಡಿ ಆಗ ಕರ್ಣನು ವೈರಿಗಳ ಶಿರಸ್ಸನ್ನು ಕಡಿಕಡಿದು ಉರುಳಿಸುತ್ತಿದ್ದನು. ಕೊರಳ ನಾಡಿಗಳು ಕತ್ತರಿಸಿ ಬೀಳಲು ಬಿಸಿರಕ್ತ ಧಾರೆಯಾಗಿ ಹರಿಯುತ್ತಿತ್ತು. ಕರ್ಣನ ಏಳಿಗೆ ಕಾಣುತ್ತಿತ್ತು. ಛತ್ರ-ಚಾಮರಗಳೂ ಪುಟಿವ ನೆತ್ತರದಿಂದ ತೊಯ್ದವು. ಹೀಗೆ ಕೋಟ್ಯಾನುಕೋಟಿ ವೀರರನ್ನು ಕರ್ಣನು ಕೊಂದನು.
ಪದಾರ್ಥ (ಕ.ಗ.ಪ)
ಘಾಡಿಸುವ-ವ್ಯಾಪಿಸುವ; ನಾಳಿಗಡಿತ-ಗಂಟನಾಳ ಕೊಯ್ಯುವದು; ನೂಕುಧಾರೆ-ಪ್ರವಾಹದ ಒತ್ತಡ
ಮೂಲ ...{Loading}...
ಗಾಳಿಯೆತ್ತಲು ಘಾಡಿಸುವ ಮೇ
ಘಾಳಿಯೆತ್ತಲು ವೈರಿ ಸೇನೆಯ
ನಾಳೆಗಡಿತದ ನೊರೆಯ ರಕುತದ ನೂಕುಧಾರೆಗಳ
ಏಳಿಗೆಯಲಾ ಛತ್ರ ಚಮರೀ
ಜಾಳ ನನೆದವು ಕರ್ಣನಂಬಿನ
ಕೋಲ ಕಡಿದೊಡನೊಡನೆ ಕೊಂದನು ಕೋಟಿಸಂಖ್ಯೆಗಳ ॥23॥
೦೨೪ ಮೇಲೆ ಬಿದ್ದುದು ...{Loading}...
ಮೇಲೆ ಬಿದ್ದುದು ಮತ್ತೆ ರಿಪು ಪಾಂ
ಚಾಲಬಲ ಸಾವುದಕೆ ಕಡೆಯಿ
ಲ್ಲಾಳ ಬರವಿಂಗರಿಯೆ ನಾನವಸಾನವನು ಮರಳಿ
ಕೋಲುಗಳ ತೆಗೆದೆಸುವನೋ ಶರ
ಜಾಳವನು ವಿರಚಿಸುವನೋ ಹಗೆ
ಯಾಳಿ ಮುರಿದುದ ಕಾಬೆನೆಸುಗೆಯ ಕಾಣೆ ನಾನೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೈರಿಗಳು ಮತ್ತೆ ಬಂದು ಮುಸುಕಿದರು. ಪಾಂಚಾಲ ಸೈನ್ಯ ಸಾಯುವುದಕ್ಕೆ ತೆರಪೇ ಇಲ್ಲ. ಮತ್ತೆ ಬರುವ ವೀರಾಳುಗಳಿಗೂ ಕೊರತೆಯಿಲ್ಲ, ಪುನಃ ಎಷ್ಟು ಅವಸಾನಗಳಾದವೋ ಅದನ್ನು ನಾನು ಅರಿಯೆ. ಕರ್ಣನು ಒಂದೊಂದೇ ಬಾಣವನ್ನು ತೆಗೆ ತೆಗೆದು ಹೊಡೆಯುತ್ತಿದ್ದನೋ, ಬಾಣಗಳ ಸಮೂಹವನ್ನೇ ಸೃಷ್ಟಿಸುತ್ತಿದ್ದನೋ ತಿಳಿಯೆ. ವೈರಿಗಳು ಪಟಪಟನೆ ಭೂಮಿಗುರುಳುತ್ತಿದ್ದುದನ್ನು ಮಾತ್ರ ನೋಡುತ್ತಿದ್ದೆ, ಆದರೆ (ಯಾವ ಬಾಣವನ್ನು ಯಾವಾಗ ಬಿಟ್ಟನು?) ಆ ಬಾಣದ ಎಸುಗೆಯನ್ನೇ ಕಾಣದಾದೆ.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಮೇಲೆ ಬಿದ್ದುದು ಮತ್ತೆ ರಿಪು ಪಾಂ
ಚಾಲಬಲ ಸಾವುದಕೆ ಕಡೆಯಿ
ಲ್ಲಾಳ ಬರವಿಂಗರಿಯೆ ನಾನವಸಾನವನು ಮರಳಿ
ಕೋಲುಗಳ ತೆಗೆದೆಸುವನೋ ಶರ
ಜಾಳವನು ವಿರಚಿಸುವನೋ ಹಗೆ
ಯಾಳಿ ಮುರಿದುದ ಕಾಬೆನೆಸುಗೆಯ ಕಾಣೆ ನಾನೆಂದ ॥24॥
೦೨೫ ವೈರಿ ಪಾಞ್ಚಾಲಕರೊಳೈವರು ...{Loading}...
ವೈರಿ ಪಾಂಚಾಲಕರೊಳೈವರು
ಧಾರುಣೀಶ್ವರರಸುವ ಬಿಟ್ಟರು
ಚಾರು ಚಾಪಳ ಚಾತುರಂಗದ ನಿಧನ ನಿರ್ಣಯವ
ಆರು ಬಲ್ಲರು ಖಾತಿಯಲಿ ಜ
ಝ್ಝಾರರೆದ್ದುದು ಮತ್ತೆ ಸಕಲ ಮ
ಹಾರಥರು ನೂಕಿದರು ಲಗ್ಗೆಯ ಲಳಿಯ ಲಹರಿಯಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈರಿಯಾದ ಪಾಂಚಾಲರ ಸೈನ್ಯದಲ್ಲಿ ಐದು ಜನ ಅರಸರು ಅಸು ತೊರೆದರು. (ದೂರಿನ ನೋಟಕ್ಕೆ) ಅಂದವಾದ ಚತುರಂಗ ಬಲದ ತುರುಸಿನ ಯುದ್ಧದಲ್ಲಿ ಎಷ್ಟು ಜನರು ಸತ್ತರೆಂಬುದನ್ನು ಯಾರು ಬಲ್ಲರು? ಪರಾಕ್ರಮಿಗಳಾದವರು ಸಿಟ್ಟಾಗಿ ಉಬ್ಬೆದ್ದು ಮತ್ತೆ ನುಗ್ಗಿದರು. ಮಹಾರಥರು ದಾಳಿಯನ್ನು ಉತ್ಸಾಹದಿಂದ ಮತ್ತೆ ಮುಂದುವರಿಸಿದರು.
ಮೂಲ ...{Loading}...
ವೈರಿ ಪಾಂಚಾಲಕರೊಳೈವರು
ಧಾರುಣೀಶ್ವರರಸುವ ಬಿಟ್ಟರು
ಚಾರು ಚಾಪಳ ಚಾತುರಂಗದ ನಿಧನ ನಿರ್ಣಯವ
ಆರು ಬಲ್ಲರು ಖಾತಿಯಲಿ ಜ
ಝ್ಝಾರರೆದ್ದುದು ಮತ್ತೆ ಸಕಲ ಮ
ಹಾರಥರು ನೂಕಿದರು ಲಗ್ಗೆಯ ಲಳಿಯ ಲಹರಿಯಲಿ ॥25॥
೦೨೬ ನಕುಲ ಧೃಷ್ಟದ್ಯುಮ್ನ ...{Loading}...
ನಕುಲ ಧೃಷ್ಟದ್ಯುಮ್ನ ಸುತ ಸೋ
ಮಕ ಶಿಖಂಡಿ ಯುಯುತ್ಸು ವರಸಾ
ತ್ಯಕಿ ಶತಾನೀಕಾಖ್ಯ ಪ್ರತಿವಿಂಧ್ಯಕರು ಶ್ರುತಕೀರ್ತಿ
ಸಕಲ ಕೈಕೆಯ ಪಾಂಡ್ಯ ಶಿಶುಪಾ
ಲಕಸುತ ಯುಧಾಮನ್ಯು ಸಹದೇ
ವಕರು ಸನ್ನಾಹದಲಿ ಕವಿದುದು ವರಮಹಾರಥರು ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕುಲ ದೃಷ್ಟದ್ಯುಮ್ನ, ಸುತಸೋಮಕ, ಶಿಖಂಡಿ, ಯುಯುತ್ಸು, ಸಾತ್ಯಕಿ, ಶತಾನೀಕ, ಪ್ರತಿವಿಂಧ್ಯಕರು, ಶ್ರುತಕೀರ್ತಿ, ಎಲ್ಲ ಕೈಕೆಯರು, ಪಾಂಡ್ಯರು, ಶಿಶುಪಾಲನ ಮಗ, ಯುಧಾಮನ್ಯು ಮತ್ತು ಸಹದೇವ ಮೊದಲಾದ ಶ್ರೇಷ್ಠ ಮಹಾರಥರು ತಕ್ಕ ಸನ್ನಾಹ ಮಾಡಿಕೊಂಡು ಕರ್ಣನನ್ನು ಮುತ್ತಿದರು.
ಮೂಲ ...{Loading}...
ನಕುಲ ಧೃಷ್ಟದ್ಯುಮ್ನ ಸುತ ಸೋ
ಮಕ ಶಿಖಂಡಿ ಯುಯುತ್ಸು ವರಸಾ
ತ್ಯಕಿ ಶತಾನೀಕಾಖ್ಯ ಪ್ರತಿವಿಂಧ್ಯಕರು ಶ್ರುತಕೀರ್ತಿ
ಸಕಲ ಕೈಕೆಯ ಪಾಂಡ್ಯ ಶಿಶುಪಾ
ಲಕಸುತ ಯುಧಾಮನ್ಯು ಸಹದೇ
ವಕರು ಸನ್ನಾಹದಲಿ ಕವಿದುದು ವರಮಹಾರಥರು ॥26॥
೦೨೭ ಭೀಮ ಫಲುಗುಣ ...{Loading}...
ಭೀಮ ಫಲುಗುಣ ಕೃಷ್ಣ ಧರ್ಮಜ
ರೀ ಮಹಾರಥರಲ್ಲದಿತರ
ಸ್ತೋಮವಳವಿಯ ಮೀರಿ ಕವಿದುದು ಕರ್ಣನಿದಿರಿನಲಿ
ಹಾ ಮಹಾದೇವಾ ಸಮಸ್ತ ಸ
ನಾಮರಥಿಕರು ಕರ್ಣನೊಬ್ಬನ
ಕಾಮಿಸಿದರೈ ಕದನಕವನೀಪಾಲ ಕೇಳ್ ಎಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಮ, ಅಜುನ, ಕೃಷ್ಣ, ಧರ್ಮರಾಜ ಈ ಮಹಾರಥರು ಹೊರತಾಗಿ ಇತರ ಸಮೂಹವೂ ಶಕ್ತಿಮೀರಿ ಕರ್ಣನಿದಿರಿಗೆ ಕವಿದು ನಿಂತಿತು. ಶಿವಶಿವಾ! ಎಲ್ಲ ಹೆಸರಾದ ವೀರರೂ ಯುದ್ಧಕ್ಕಾಗಿ ಕರ್ಣನೊಬ್ಬನನ್ನು ಬಯಸಿದರು. ರಾಜಾ ! ಕೇಳು” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಭೀಮ ಫಲುಗುಣ ಕೃಷ್ಣ ಧರ್ಮಜ
ರೀ ಮಹಾರಥರಲ್ಲದಿತರ
ಸ್ತೋಮವಳವಿಯ ಮೀರಿ ಕವಿದುದು ಕರ್ಣನಿದಿರಿನಲಿ
ಹಾ ಮಹಾದೇವಾ ಸಮಸ್ತ ಸ
ನಾಮರಥಿಕರು ಕರ್ಣನೊಬ್ಬನ
ಕಾಮಿಸಿದರೈ ಕದನಕವನೀಪಾಲ ಕೇಳೆಂದ ॥27॥
೦೨೮ ಉರಿಯ ಪೇಟೆಗಳಲಿ ...{Loading}...
ಉರಿಯ ಪೇಟೆಗಳಲಿ ಪತಂಗದ
ಸರಕು ಮಾರದೆ ಮರಳುವುದೆ ನಿ
ಬ್ಬರದಬಿರುದಿನೊಳೀ ಮಹಾರಥರಾಜಿ ರವಿಸುತನ
ಕೆರಳಿಚಿದರೈ ಕೇಣವಿಲ್ಲದೆ
ಬೆರಸಿದರು ಬೇಸರಿಸಿದರು ಹೊಡ
ಕರಿಸಿದರು ಹೊಯ್ದರು ವಿಭಾಡಿಸಿದರು ವಿಘಾತಿಯಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರಿಯ ಪೇಟೆಯಲ್ಲಿ ಪತಂಗದ ಸರಕು ಮಾರಾಟವಾಗದೆ ಹಿಂದಕ್ಕೆ ಬರುವುದುಂಟೆ? ರಭಸದ ಬಿರುಬಿನಬ್ಬರದಿಂದ ಮಹಾರಥರ ಸಮೂಹ ಕರ್ಣನನ್ನು ದಾಕ್ಷಿಣ್ಯವಿಲ್ಲದೆ ಕೆಣಕಿ, ಕೆರಳಿಸಿತು. ಶತ್ರು ಸೈನ್ಯವನ್ನು ಹೊಕ್ಕು ಬೆರಸಿದರು ಬೇಸರಿಸಿದರು. ಮೇಲೆ ಬಿದ್ದು ಹೊಯ್ದರು. ಹೊಯ್ದು ಅನೇಕರನ್ನು ನಾಶ ಮಾಡಿದರು. ಕೆಲವರನ್ನು ವಿಶೇಷವಾಗಿ ಗಾಯಪಡಿಸಿದರು.
ಮೂಲ ...{Loading}...
ಉರಿಯ ಪೇಟೆಗಳಲಿ ಪತಂಗದ
ಸರಕು ಮಾರದೆ ಮರಳುವುದೆ ನಿ
ಬ್ಬರದಬಿರುದಿನೊಳೀ ಮಹಾರಥರಾಜಿ ರವಿಸುತನ
ಕೆರಳಿಚಿದರೈ ಕೇಣವಿಲ್ಲದೆ
ಬೆರಸಿದರು ಬೇಸರಿಸಿದರು ಹೊಡ
ಕರಿಸಿದರು ಹೊಯ್ದರು ವಿಭಾಡಿಸಿದರು ವಿಘಾತಿಯಲಿ ॥28॥
೦೨೯ ತಮ್ಮ ಸತ್ವೋದಧಿಯ ...{Loading}...
ತಮ್ಮ ಸತ್ವೋದಧಿಯ ತೋರಿದ
ರೊಮ್ಮೆ ಮೊಗೆದನು ಬಳಿಕ ರಾಯನ
ಸೊಮ್ಮಿನವರಲಿ ಸೀಳಿದನು ಹದಿನೆಂಟುಸಾವಿರವ
ಹಮ್ಮುಗೆಯ ಕೈಮನದ ಹೊಣಕೆಯ
ಹಮ್ಮಿನುಬ್ಬಟೆಯವರ ಪಾರ್ಥನ
ತಮ್ಮದಿರ ಸಾಹಸಕೆ ಸೇರಿಸಿದನು ಪಲಾಯನವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಅರಿಗಳು ಕರ್ಣನನ್ನು ಕೆಣಕಿ ತಮ್ಮ ಸತ್ವ ಸಾಹಸವನ್ನು ತೋರಿದರೆ, ಕರ್ಣನು ಅವರ ಶಕ್ತಿಯನ್ನೆಲ್ಲ ಒಮ್ಮೆ ಹೀರಿದನು. ಬಳಿಕ ರಾಯನ ಹದಿನೆಂಟು ಸಾವಿರ ಸಂಬಂಧಿಕರನ್ನು ಸೀಳಿ ಹಾಕಿದನು. ಉತ್ಸಾದಿಂದ ಮತ್ತು ಶೌರ್ಯದಿಂದ ಹೋರಾಡುತ್ತಿದ್ದ ಪಾರ್ಥನ ತಮ್ಮಂದಿರನ್ನು ಹಿಮ್ಮೆಟ್ಟಿಸಿದನು.
ಪದಾರ್ಥ (ಕ.ಗ.ಪ)
ಸೊಮ್ಮಿನವರು-ಸಂಬಂಧಿಕರು
ಮೂಲ ...{Loading}...
ತಮ್ಮ ಸತ್ವೋದಧಿಯ ತೋರಿದ
ರೊಮ್ಮೆ ಮೊಗೆದನು ಬಳಿಕ ರಾಯನ
ಸೊಮ್ಮಿನವರಲಿ ಸೀಳಿದನು ಹದಿನೆಂಟುಸಾವಿರವ
ಹಮ್ಮುಗೆಯ ಕೈಮನದ ಹೊಣಕೆಯ
ಹಮ್ಮಿನುಬ್ಬಟೆಯವರ ಪಾರ್ಥನ
ತಮ್ಮದಿರ ಸಾಹಸಕೆ ಸೇರಿಸಿದನು ಪಲಾಯನವ ॥29॥
೦೩೦ ರಥ ಮುರಿದು ...{Loading}...
ರಥ ಮುರಿದು ಬಲು ಘಾಯದಲಿ ಸು
ವ್ಯಥಿತಸಾತ್ಯಕಿ ಹಿಂಗಿದನು ಸಾ
ರಥಿಗಳಳಿವಿನಲೋಡಿದರು ಸುತಸೋಮಕಾದಿಗಳು
ಪೃಥುವಿಗೊರಗಿತು ನಾಲ್ಕುಸಾವಿರ
ರಥಿಗಳುಳಿದ ಪದಾತಿ ಗಜ ಹಯ
ರಥವ ಕೆಡಹಿದನೆನಿತನೆಂಬುದನರಿಯೆ ನಾನೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಥವು ಮುರಿದು ಗಾಯಹೊಂದಿ ಬಹಳಷ್ಟು ನೊಂದು ಸಾತ್ಯಕಿ ಹಿಂಜರಿದು ಮರೆಯಾದನು. ಸಾರಥಿಗಳು ಸಾವನ್ನಪ್ಪಿದರೆಂದು ಸುತಸೋಮಕಾದಿಗಳು ರಣಭೂಮಿಯಲ್ಲಿ ನಿಲ್ಲಲಾರದೆ ಓಡಿಹೋದರು. ಕರ್ಣನ ಆ ಕಾಳಗದಲ್ಲಿ ನಾಲ್ಕು ಸಾವಿರ ರಥಿಕರು ನೆಲಕ್ಕೆ ಉರುಳಿದರು. ಉಳಿದ ಆನೆ, ಕುದುರೆ, ಕಾಲಾಳುಗಳನ್ನು ರವಿಸುತನು ಹೊಡೆಹೊಡೆದು ಕೆಡವಿದನು. ಹಾಗೆ ಕೆಡವಿದ ಆನೆ, ಕುದುರೆ, ಸೈನ್ಯಗಳು ಎಷ್ಟೆಂಬುದನ್ನು ನಾನು ಅರಿಯೆ” ಎಂದು ಸಂಜಯನು ಹೇಳಿದನು.
ಮೂಲ ...{Loading}...
ರಥ ಮುರಿದು ಬಲು ಘಾಯದಲಿ ಸು
ವ್ಯಥಿತಸಾತ್ಯಕಿ ಹಿಂಗಿದನು ಸಾ
ರಥಿಗಳಳಿವಿನಲೋಡಿದರು ಸುತಸೋಮಕಾದಿಗಳು
ಪೃಥುವಿಗೊರಗಿತು ನಾಲ್ಕುಸಾವಿರ
ರಥಿಗಳುಳಿದ ಪದಾತಿ ಗಜ ಹಯ
ರಥವ ಕೆಡಹಿದನೆನಿತನೆಂಬುದನರಿಯೆ ನಾನೆಂದ ॥30॥
೦೩೧ ಮುರಿದು ಮತ್ತೆ ...{Loading}...
ಮುರಿದು ಮತ್ತೆ ಮಹಾರಥರು ಸಂ
ವರಿಸಿಕೊಂಡು ಶಿಖಂಡಿ ಸಾತ್ಯಕಿ
ವರನಕುಲ ಸಹದೇವ ಧೃಷ್ಟದ್ಯುಮ್ನ ಶೃಂಜಯರು
ಸರಳ ಬಿರುಬಿನ ಬಾಯ ಬೈಗುಳ
ಬಿರುದುಗಹಳೆಯ ಬಿಂಕದವರು
ಬ್ಬರಿಸಿ ಕವಿದರು ಕರ್ಣನಾವೆಡೆ ತೋರು ತೋರೆನುತ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಮ್ಮೆ ಕರ್ಣನ ಏಟಿಗೆ ಚೆಲ್ಲಾಪಿಲ್ಲಿಯಾದ ಮಹಾರಥರು ಮತ್ತೆ ಸಿದ್ದರಾದರು. ಶಿಖಂಡಿ, ಸಾತ್ಯಕಿ, ನಕುಲ, ಸಹದೇವ, ದೃಷ್ಟಧ್ಯುಮ್ನ, ಶೃಂಜಯ ಇವರೆಲ್ಲರೂ ಮತ್ತೆ ಕಾಳಗಕ್ಕೆ ನುಗ್ಗಿ ಬಂದರು. ಆವೇಶದಿಂದ ಬಾಣಗಳ ಮಳೆ ಕರೆದರು. ಬಾಯಿಂದ ಬೈಗುಳ ಮಳೆಯನ್ನೂ ಸುರಿಸಿದರು. ಬಿರುದು ಕಹಳೆಯನ್ನು ಮೊಳಗಿಸುತ್ತ ಗರುವದವರು ಅಬ್ಬರದಿಂದ ಕರ್ಣನನ್ನು ಮುತ್ತ ಹೊರಟರು. “ಕರ್ಣನೆಲ್ಲಿ ತೋರು” ಎನ್ನುತ್ತ ಏರಿ ಹೋದರು.
ಮೂಲ ...{Loading}...
ಮುರಿದು ಮತ್ತೆ ಮಹಾರಥರು ಸಂ
ವರಿಸಿಕೊಂಡು ಶಿಖಂಡಿ ಸಾತ್ಯಕಿ
ವರನಕುಲ ಸಹದೇವ ಧೃಷ್ಟದ್ಯುಮ್ನ ಶೃಂಜಯರು
ಸರಳ ಬಿರುಬಿನ ಬಾಯ ಬೈಗುಳ
ಬಿರುದುಗಹಳೆಯ ಬಿಂಕದವರು
ಬ್ಬರಿಸಿ ಕವಿದರು ಕರ್ಣನಾವೆಡೆ ತೋರು ತೋರೆನುತ ॥31॥
೦೩೨ ನುಸಿಗಳಿರ ನಿಮಗೇಕೆ ...{Loading}...
ನುಸಿಗಳಿರ ನಿಮಗೇಕೆ ಕರ್ಣನ
ಘಸಣೆ ನಾವೇ ನಿಮ್ಮ ನೆತ್ತಿಯ
ಮುಸಲವಲ್ಲಾ ಫಡ ನಕುಲ ಸಹದೇವ ನಿಲ್ಲೆನುತ
ಮುಸುಡ ಹೊಗರಿನ ಕಣ್ಣ ಕೆಂಪಿನ
ವಿಷಮರಗ್ಗದ ಕರ್ಣತನುಜರು
ಮಸಗಿ ಮುಂಚುವ ಮೋಹರವನಡಹಾಯ್ದು ತರುಬಿದರು ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ! ನೊರಜುಗಳಿರಾ! ನಿಮಗೇಕೆ ಕರ್ಣನ ತೊಂದರೆ? ನಾವೇ ನಿಮ್ಮ ನೆತ್ತಿಯ ಮೇಲಿನ ಒನಕೆಯಲ್ಲವೇ? ಫಡಾ ! ನಕುಲಾ ! ಸಹದೇವಾ ! ನಿಲ್ಲಿರಿ ಎನ್ನುತ್ತ ಕಿಡಿಕಾರುತ್ತಿದ್ದ ಕೆಂಪುಕಣ್ಣಿನ ಅಸಾಮಾನ್ಯ ಶೂgರಾದ ಕರ್ಣನ ಮಕ್ಕಳು, ಯುದ್ಧ ಮಾಡಲು ಮುನ್ನುಗ್ಗುತ್ತಿರುವ ಸೈನ್ಯವನ್ನು ಅಡ್ಡಗಟ್ಟಿ ತರುಬಿದರು.
ಮೂಲ ...{Loading}...
ನುಸಿಗಳಿರ ನಿಮಗೇಕೆ ಕರ್ಣನ
ಘಸಣೆ ನಾವೇ ನಿಮ್ಮ ನೆತ್ತಿಯ
ಮುಸಲವಲ್ಲಾ ಫಡ ನಕುಲ ಸಹದೇವ ನಿಲ್ಲೆನುತ
ಮುಸುಡ ಹೊಗರಿನ ಕಣ್ಣ ಕೆಂಪಿನ
ವಿಷಮರಗ್ಗದ ಕರ್ಣತನುಜರು
ಮಸಗಿ ಮುಂಚುವ ಮೋಹರವನಡಹಾಯ್ದು ತರುಬಿದರು ॥32॥
೦೩೩ ಏನ ಹೇಳುವೆನವರ ...{Loading}...
ಏನ ಹೇಳುವೆನವರ ಶರಸಂ
ಧಾನ ಸೌರಂಭವನು ಕಲಿ ವೃಷ
ಸೇನ ವೀರಸುಷೇಣರೇರಿದರೆಚ್ಚರತಿಬಳರ
ಭಾನುಸುತನಿಂದೆಂಟುಮಡಿಯ ಸ
ಘಾನರಹಿರೋ ಪೂತು ಮಝ ಎನು
ತಾ ನಿಖಿಳ ರಥನಿಕರ ಕವಿದುದು ಮತ್ತೆ ಸಂದಣಿಸಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಬಾಣಬಿಡುವ ವೈಖರಿಯನ್ನು ಏನೆಂದು ಹೇಳಲಿ? ಕಲಿ ವೃಷಸೇನ ಮತ್ತು ವೀರ ಸುಷೇಣ ಇವರು ಇಬ್ಬರೂ ಏರಿ ಹೋಗಿ ಅತಿಬಲರನ್ನು ಹೊಡೆದರು. ಅವರ ಶೌರ್ಯವನ್ನು ಕಂಡ ರಿಪುಭಟರು “ಭಲೇ ನೀವು ಶಕ್ತಿವಂತರೋ, ಘನತೆವೆತ್ತವರೋ, ನೀವು ಕರ್ಣನ ಎಂಟು ಮಡಿ ಶೂರರಹುದು, ಭಲೆ ವಾಹವ್ವಾ!” ಎನ್ನುತ್ತ ಎಲ್ಲ ರಥಸಮುದಾಯದೊಂದಿಗೆ ಒಟ್ಟುಗೂಡಿ ಅವರನ್ನು ಕವಿದರು.
ಮೂಲ ...{Loading}...
ಏನ ಹೇಳುವೆನವರ ಶರಸಂ
ಧಾನ ಸೌರಂಭವನು ಕಲಿ ವೃಷ
ಸೇನ ವೀರಸುಷೇಣರೇರಿದರೆಚ್ಚರತಿಬಳರ
ಭಾನುಸುತನಿಂದೆಂಟುಮಡಿಯ ಸ
ಘಾನರಹಿರೋ ಪೂತು ಮಝ ಎನು
ತಾ ನಿಖಿಳ ರಥನಿಕರ ಕವಿದುದು ಮತ್ತೆ ಸಂದಣಿಸಿ ॥33॥
೦೩೪ ಕಡಿದು ಬಿಸುಟರು ...{Loading}...
ಕಡಿದು ಬಿಸುಟರು ತೇರುಗಳನಡ
ಗೆಡಹಿದರು ಹೇರಾನೆಗಳ ಕೆಲ
ಕಡೆಯಲೌಕುವ ಕುದುರೆ ನನೆದವು ಬಸಿವ ನೆತ್ತರಲಿ
ತುಡುಕಿದರೆ ಕಾಲಾಳನಟ್ಟೆಯ
ನುಡಿಯಲರಿಯೆನು ಕರ್ಣತನುಜರ
ಕಡುಹು ನಕುಲಾದಿಗಳ ಬೆದರಿಸಿತರಸ ಕೇಳ್ ಎಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಮ್ಮನ್ನು ಮುತ್ತಿದ ತೇರುಗಳನ್ನು ಕಡಿದು ಚೆಲ್ಲಿದರು. ದೊಡ್ಡ ದೊಡ್ಡ ಆನೆಗಳನ್ನು ಅಡ್ಡ ಬೀಳಿಸಿದರು. ಅಕ್ಕಪಕ್ಕದಲ್ಲಿ ಏರಿಬರುತ್ತಿರುವ ಕುದುರೆಗಳು ಬಸಿಯುವ ನೆತ್ತರಿನಲ್ಲಿ ನೆನೆದು ಹೋದವು. ಕಾಲಾಳುಗಳು ತುಡುಕಿ ಮೇಲ್ವಾಯ್ದರೆ, ಅವರ ತಲೆಯಿಲ್ಲದ ದೇಹಗಳು ಕುಣಿದು ಕುಪ್ಪಳಿಸುವಂತೆ ಮಾಡಿದರು. ಹೆಚ್ಚಿಗೆ ಏನು ಹೇಳಲಿ? ಕರ್ಣನ ಮಕ್ಕಳ ಪರಾಕ್ರಮವು ನಕುಲ-ಸಹದೇವಾದಿಗಳನ್ನು ಬೆದರಿಸಿತು. ಅರಸಾ ಕೇಳು” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಕಡಿದು ಬಿಸುಟರು ತೇರುಗಳನಡ
ಗೆಡಹಿದರು ಹೇರಾನೆಗಳ ಕೆಲ
ಕಡೆಯಲೌಕುವ ಕುದುರೆ ನನೆದವು ಬಸಿವ ನೆತ್ತರಲಿ
ತುಡುಕಿದರೆ ಕಾಲಾಳನಟ್ಟೆಯ
ನುಡಿಯಲರಿಯೆನು ಕರ್ಣತನುಜರ
ಕಡುಹು ನಕುಲಾದಿಗಳ ಬೆದರಿಸಿತರಸ ಕೇಳೆಂದ ॥34॥
೦೩೫ ತಿರುಗಿ ಕಣ್ಡನು ...{Loading}...
ತಿರುಗಿ ಕಂಡನು ಭೀಮನೆಲೆ ತರು
ವಲಿಗಳಿರ ಕೊಂಡಾಡಿ ಕಾದುವ
ದೊರೆಗಳೇ ನಕುಲಾಂಕ ತೆಗೆ ಸಹದೇವ ಸಾರೆನುತ
ಸರಳ ಕೆನ್ನೆಯ ಬಿಗಿದ ಹುಬ್ಬಿನ
ಮುರಿದ ಮೀಸೆಯಲೌಡುಗಚ್ಚಿನ
ಕುರುಕುಲಾಂತಕ ಭೀಮ ಬಿಟ್ಟನು ಸೂಠಿಯಲಿ ರಥವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ಕಡೆ ನೋಡಿ, ಭೀಮನು “ಎಲೈ ತಬ್ಬಲಿಗಳಿರಾ ನೀವು ಕೊಂಡಾಡಿ ಕಾದುವ ದೊರೆಗಳೆ? ನಕುಲ ಅತ್ತ ಕಡೆಗೆ ನಡೆ. ಸಹದೇವಾ ನೀನೂ ತೊಲಗು” ಎನ್ನುತ್ತ ಬಾಣವನ್ನು ಕೆನ್ನೆಯವರೆಗೆ ಸೇದಿ, ಹುಬ್ಬುಗಂಟಿಕ್ಕಿ ಮೀಸೆ ತಿರುವಿ ತುಟಿಕಚ್ಚಿ, ಕುರುಕುಲಕ್ಕೆ ಯಮಸ್ವರೂಪನಾದ ಭೀಮನು ವೇಗವಾಗಿ ರಥವನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ತರುವಲಿ-ತಬ್ಬಲಿ;
ಮೂಲ ...{Loading}...
ತಿರುಗಿ ಕಂಡನು ಭೀಮನೆಲೆ ತರು
ವಲಿಗಳಿರ ಕೊಂಡಾಡಿ ಕಾದುವ
ದೊರೆಗಳೇ ನಕುಲಾಂಕ ತೆಗೆ ಸಹದೇವ ಸಾರೆನುತ
ಸರಳ ಕೆನ್ನೆಯ ಬಿಗಿದ ಹುಬ್ಬಿನ
ಮುರಿದ ಮೀಸೆಯಲೌಡುಗಚ್ಚಿನ
ಕುರುಕುಲಾಂತಕ ಭೀಮ ಬಿಟ್ಟನು ಸೂಠಿಯಲಿ ರಥವ ॥35॥
೦೩೬ ರಾಯ ದಳದಲಿ ...{Loading}...
ರಾಯ ದಳದಲಿ ಸೆಣಸಲಿದು ಕ
ಜ್ಜಾಯವೇ ಮಕ್ಕಳಿರ ಮನ್ನಿಸಿ
ಕಾಯಿದೆನು ಬಳಿಕೇನು ನಿಮ್ಮಂಘವಣೆ ಲೇಸಾಯ್ತು
ಸಾಯಲೇತಕೆ ಹಿಂಗಿ ನಿಮ್ಮನು
ನೋಯಿಸುವುದನುಚಿತವು ಸೇನಾ
ನಾಯಕನು ನಿಮ್ಮಯ್ಯನಾತನ ಕಳುಹಿ ನೀವೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸರ ಮೋಹರದಲ್ಲಿ ಯುದ್ದ ಮಾಡುವದೆಂದರೆ ಇದೇನು ಕಜ್ಜಾಯವೆಂದು ತಿಳಿದಿರುವಿರಾ? ಮಕ್ಕಳೆಂದು ಮನ್ನಿಸಿ ನಿಮ್ಮನ್ನು ಉಳಿಸಿರುವೆನು. ನಿಮ್ಮ ಪರಾಕ್ರಮ ಲೇಸು, ಇನ್ನು ಯುದ್ಧಕ್ಕೆ ನಿಂತು ಸುಮ್ಮನೆ ಜೀವ ಕಳೆದುಕೊಳ್ಳಬೇಡಿರಿ. ನಾನು ನಿಮ್ಮನ್ನು ನೋಯಿಸುವದೂ ಒಳ್ಳೆಯದಲ್ಲ, ನಿಮ್ಮ ತಂದೆ ಸೇನಾನಾಯಕನಷ್ಟೇ? ಆತನನ್ನು ಇತ್ತ ಕಳಿಸಿರಿ” ಎಂದು ಭೀಮನು ವೃಷಸೇನ, ಸುಷೇಣರಿಗೆ ಹೇಳಿದನು
ಮೂಲ ...{Loading}...
ರಾಯ ದಳದಲಿ ಸೆಣಸಲಿದು ಕ
ಜ್ಜಾಯವೇ ಮಕ್ಕಳಿರ ಮನ್ನಿಸಿ
ಕಾಯಿದೆನು ಬಳಿಕೇನು ನಿಮ್ಮಂಘವಣೆ ಲೇಸಾಯ್ತು
ಸಾಯಲೇತಕೆ ಹಿಂಗಿ ನಿಮ್ಮನು
ನೋಯಿಸುವುದನುಚಿತವು ಸೇನಾ
ನಾಯಕನು ನಿಮ್ಮಯ್ಯನಾತನ ಕಳುಹಿ ನೀವೆಂದ ॥36॥
೦೩೭ ಮರುಳಲಾ ಪವಮಾನಸುತ ...{Loading}...
ಮರುಳಲಾ ಪವಮಾನಸುತ ನಿ
ನ್ನೊರೆಗೆ ಪಡಿಯೊರೆ ತೂಕ ತೂಕಕೆ
ಸರಿಸರಾವಿರೆ ಕನಕಗಿರಿಪರಿಯಂತ ಮಾತೇಕೆ
ತರಣಿಬಿಂಬದ ತತ್ತಿಗಳನು
ತ್ತರಿಸಿ ತೋರುವ ತಿಮಿರವುಂಟೇ
ತರಹರಿಸಿ ತೋರಾ ಎನುತ ಕವಿದೆಚ್ಚರನಿಲಜನ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ! ಪವನಸುತ, ಎಂಥ ಹುಚ್ಚನು ನೀನು? ನಿನ್ನ ಶೂರತನಕ್ಕೆ ಪ್ರತಿಶೂರರು, ನಿನ್ನ ತೂಕಕ್ಕೆ ತೂಕ ಹೀಗೆ ಸರಿಸಮಾನರಾದ ನಾವು ಇರುವಾಗ ಕನಕ ಪರ್ವತದವರೆಗಿನ ಮಾತೇಕೆ? ಸೂರ್ಯಬಿಂಬದ ತತ್ತಿಗಳನ್ನು ದಾಟಿ ಕತ್ತಲೆ ಓಡಬಲ್ಲುದೇ? ನೀನು ಸ್ವಲ್ಪ ನಿಧಾನಿಸಿ ನಿನ್ನ ಪರಾಕ್ರಮವನ್ನು ತೋರು” ಎಂದು ಕವಿದು ಆತನ ಮೇಲೆ ಬಾಣಗಳನ್ನು ಬಿಟ್ಟರು.
ಮೂಲ ...{Loading}...
ಮರುಳಲಾ ಪವಮಾನಸುತ ನಿ
ನ್ನೊರೆಗೆ ಪಡಿಯೊರೆ ತೂಕ ತೂಕಕೆ
ಸರಿಸರಾವಿರೆ ಕನಕಗಿರಿಪರಿಯಂತ ಮಾತೇಕೆ
ತರಣಿಬಿಂಬದ ತತ್ತಿಗಳನು
ತ್ತರಿಸಿ ತೋರುವ ತಿಮಿರವುಂಟೇ
ತರಹರಿಸಿ ತೋರಾ ಎನುತ ಕವಿದೆಚ್ಚರನಿಲಜನ ॥37॥
೦೩೮ ಗಳಹತನವಿದು ನಿಮ್ಮ ...{Loading}...
ಗಳಹತನವಿದು ನಿಮ್ಮ ತಂದೆಯು
ಗಳಿಸಿದರ್ಥವು ನಿಮ್ಮ ಬೀಯಕೆ
ಬಳಸುವಿರಿ ತಪ್ಪಾವುದೆನುತೆಚ್ಚಂಬ ಹರೆಗಡಿದು
ಹಿಳುಕ ಕವಿಸಿದನೀತನೀತನ
ಹಿಳುಕ ಮುರಿದೊಡನೆಚ್ಚು ಭೀಮನ
ಕೆಳರಿಚಿದರೈ ಕರ್ಣನಂದನರರಸ ಕೇಳ್ ಎಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಾಯಿಬಡಕತನವು ನಿಮ್ಮ ತಂದೆ ಸಂಪಾದಿಸಿದ ಆಸ್ತಿ, ಧನ. ಅದನ್ನೇ ನೀವು ನಿಮ್ಮ ವೆಚ್ಚಕ್ಕಾಗಿ ಬಳಸುತ್ತಿದ್ದೀರಿ. ಇದರಲ್ಲಿ ತಪ್ಪೇನು? ಎಂದು ಕರ್ಣತನುಜರ ಬಾಣಗಳನ್ನು ಸಂಪೂರ್ಣ ಕಡಿದೊಗೆದು ತನ್ನ ಬಾಣಗಳನ್ನು ಅವರ ಮೇಲೆ ಕವಿಸಿದನು. ಇವನ ಬಾಣಗಳನ್ನು ಅವರು ಮೇಲಿಂದ ಮೇಲೆ ಕತ್ತರಿಸಿ ಭೀಮನನ್ನು ಸಿಟ್ಟಿಗೆಬ್ಬಿಸಿದರು. ಅರಸಾ! ಕೇಳು” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಗಳಹತನವಿದು ನಿಮ್ಮ ತಂದೆಯು
ಗಳಿಸಿದರ್ಥವು ನಿಮ್ಮ ಬೀಯಕೆ
ಬಳಸುವಿರಿ ತಪ್ಪಾವುದೆನುತೆಚ್ಚಂಬ ಹರೆಗಡಿದು
ಹಿಳುಕ ಕವಿಸಿದನೀತನೀತನ
ಹಿಳುಕ ಮುರಿದೊಡನೆಚ್ಚು ಭೀಮನ
ಕೆಳರಿಚಿದರೈ ಕರ್ಣನಂದನರರಸ ಕೇಳೆಂದ ॥38॥
೦೩೯ ಬಾಲರೆನ್ದೇ ಮನ್ನಿಸಿದರೆ ...{Loading}...
ಬಾಲರೆಂದೇ ಮನ್ನಿಸಿದರೆ ಛ
ಡಾಳಿಸಿತೆ ಚಪಳತ್ವವಾಗಲಿ
ಖೂಳರಾವೈ ಸಲೆಯೆನುತ ನಾರಾಚಶತಕದಲಿ
ಬೀಳಲೆಚ್ಚನು ರಥವ ಗಜಹಯ
ಜಾಳವನು ಸಾರಥಿಗಳನು ಬಲು
ಗೋಲೊಳಿಬ್ಬರೊಳೊಬ್ಬನನು ಕೆಡೆಯೆಚ್ಚು ಬೊಬ್ಬಿರಿದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಚಿಕ್ಕ ಬಾಲಕರೆಂದು ಮನ್ನಿಸಿದರೆ ನಿಮ್ಮ ಚಪಲತೆ ಹೆಚ್ಚಾಯಿತೇ? ನಾವೇ ಮೂರ್ಖರಾದೆವು. ಆಗಲಿ” ಎನ್ನುತ್ತ ನೂರು ಬಾಣಗಳನ್ನು ತೆಗೆದು ಅದರಿಂದ ರಥ, ಆನೆ. ಕುದುರೆ ಇವುಗಳ ಸಮೂಹ ಹಾಗೂ ಸಾರಥಿಗಳು ಇವರನ್ನು ಕೊಂದನು. ನಂತರ ಶಕ್ತವಾದ ಬಾಣಗಳಿಂದ ಕರ್ಣನ ಮಕ್ಕಳಲ್ಲಿ ಒಬ್ಬನನ್ನು ಕೊಂದು ಬೊಬ್ಬಿರಿದನು.
ಮೂಲ ...{Loading}...
ಬಾಲರೆಂದೇ ಮನ್ನಿಸಿದರೆ ಛ
ಡಾಳಿಸಿತೆ ಚಪಳತ್ವವಾಗಲಿ
ಖೂಳರಾವೈ ಸಲೆಯೆನುತ ನಾರಾಚಶತಕದಲಿ
ಬೀಳಲೆಚ್ಚನು ರಥವ ಗಜಹಯ
ಜಾಳವನು ಸಾರಥಿಗಳನು ಬಲು
ಗೋಲೊಳಿಬ್ಬರೊಳೊಬ್ಬನನು ಕೆಡೆಯೆಚ್ಚು ಬೊಬ್ಬಿರಿದ ॥39॥
೦೪೦ ಶಿವಶಿವಾ ಕರ್ಣಾತ್ಮಜನೆ ...{Loading}...
ಶಿವಶಿವಾ ಕರ್ಣಾತ್ಮಜನೆ ಮಡಿ
ದವನು ದಳಪತಿ ಮಡಿದನೋ ಕೌ
ರವನ ಕೇಡೋ ಹಾಯೆನುತ ಕುರುಸೇನೆ ಕಳವಳಿಸೆ
ಕವಿದರಶ್ವತ್ಥಾಮ ಕೃಪ ಕೌ
ರವ ಶಕುನಿ ದುಶ್ಯಾಸನಾದಿಗ
ಳವಗಡಿಸಲನಿಬರನು ತೊಲಗಿಸಿ ಕರ್ಣನಿದಿರಾದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವಶಿವಾ! ಕರ್ಣನ ಮಗನೇ ಮಡಿದವನು? ಅಥವಾ ದಳಪತಿಯೇ ಅಳಿದನೋ? ಕೌರವನಿಗೆ ಎಂಥ ಹಾನಿ! ಅಯ್ಯೋ! ಎನ್ನುತ್ತ ಕೌರವ ಸೈನ್ಯವೆಲ್ಲ ಕಳವಳಿಸಲು ಆಗ ಅಶ್ವತ್ಥಾಮ, ಕೃಪ, ಕೌರವ, ಶಕುನಿ, ದುಶ್ಶಾಸನಾದಿಗಳು ಪ್ರತಿಭಟಿಸಿ ನಿಲ್ಲಲು, ಅವರೆಲ್ಲರನ್ನೂ ಹಿಂದೆ ಸರಿಸಿ ಕರ್ಣನು ಇದಿರಾದನು.
ಮೂಲ ...{Loading}...
ಶಿವಶಿವಾ ಕರ್ಣಾತ್ಮಜನೆ ಮಡಿ
ದವನು ದಳಪತಿ ಮಡಿದನೋ ಕೌ
ರವನ ಕೇಡೋ ಹಾಯೆನುತ ಕುರುಸೇನೆ ಕಳವಳಿಸೆ
ಕವಿದರಶ್ವತ್ಥಾಮ ಕೃಪ ಕೌ
ರವ ಶಕುನಿ ದುಶ್ಯಾಸನಾದಿಗ
ಳವಗಡಿಸಲನಿಬರನು ತೊಲಗಿಸಿ ಕರ್ಣನಿದಿರಾದ ॥40॥
೦೪೧ ಆತುಕೊಳ್ಳೈ ಭ್ರೂಣಹತ್ಯಾ ...{Loading}...
ಆತುಕೊಳ್ಳೈ ಭ್ರೂಣಹತ್ಯಾ
ಪಾತಕಿಯೆ ಪಡಿತಳಿಸು ವಿಶಿಖ
ವ್ರಾತವಿವೆಯೆನುತೆಚ್ಚನಿನಸುತನನಿಲನಂದನನ
ಆತುಕೊಂಬರೆ ಸರಿಸನಲ್ಲ ವಿ
ಜಾತಿಯಲಿ ಸಂಭವಿಸಿದನೆ ಫಡ
ಸೂತನಂದನ ಎನುತ ಕರ್ಣನನೆಚ್ಚನಾ ಭೀಮ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೋ ಭ್ರೂಣಹತ್ಯಾ ಪಾತಕಿಯೇ ! ತಡೆದುಕೋ ಇದಿರಾಗು. ಬಾಣಗಳ ಸಮೂಹ ಇದೆ” ಎನ್ನುತ್ತ ಕರ್ಣನು ಭೀಮನನ್ನು ಹೊಡೆದನು. ಆಗ ಭೀಮನು “ಎದುರು ಬಂದರೆ ನೀನು ನನ್ನ ಸರಿಸಮನಲ್ಲ, ವಿಜಾತಿಯಲ್ಲಿ ಹುಟ್ಟಿದವನು, ಎಲೋ ! ಸೂತನಂದನ” ಎನ್ನುತ್ತ ಕರ್ಣನನ್ನು ಹೊಡೆದನು.
ಮೂಲ ...{Loading}...
ಆತುಕೊಳ್ಳೈ ಭ್ರೂಣಹತ್ಯಾ
ಪಾತಕಿಯೆ ಪಡಿತಳಿಸು ವಿಶಿಖ
ವ್ರಾತವಿವೆಯೆನುತೆಚ್ಚನಿನಸುತನನಿಲನಂದನನ
ಆತುಕೊಂಬರೆ ಸರಿಸನಲ್ಲ ವಿ
ಜಾತಿಯಲಿ ಸಂಭವಿಸಿದನೆ ಫಡ
ಸೂತನಂದನ ಎನುತ ಕರ್ಣನನೆಚ್ಚನಾ ಭೀಮ ॥41॥
೦೪೨ ಎಚ್ಚರೊಡನೊಡನೆಚ್ಚ ಬಾಣವ ...{Loading}...
ಎಚ್ಚರೊಡನೊಡನೆಚ್ಚ ಬಾಣವ
ಕೊಚ್ಚಿದನು ಕಲಿ ಕರ್ಣನಾತನ
ನೆಚ್ಚನಂಬಿನ ಮೇಲೆ ನೂಕಿದವಂಬು ವಹಿಲದಲಿ
ಎಚ್ಚು ಕವಿಸಿದಡವನು ಪವನಜ
ನೆಚ್ಚಡವ ಪರಿಹರಿಸಿ ರವಿಸುತ
ನೆಚ್ಚಡಿಬ್ಬರು ಕಾದಿದರು ಕೈಮೈಯ ಮನ್ನಿಸದೆ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರಿಬ್ಬರೂ ತೆರಪಿಲ್ಲದೆ ಕಾದಿದರು. ಭೀಮನು ಎಚ್ಚ ಬಾಣವನ್ನು ಕಲಿ ಕರ್ಣ ಕೊಚ್ಚಿಹಾಕಿದನು. ಅಲ್ಲದೆ ಅವನ ಮೇಲೆ ತನ್ನ ಬಾಣಗಳನ್ನು ಬಿಟ್ಟನು. ಬಹಳ ವೇಗದಿಂದ ಬಾಣದ ಮೇಲೆ ಬಾಣಗಳು ತಾಕಲಾಡಿದವು. ಕವಿದು ಬಂದ ಆ ಬಾಣಗಳನ್ನು ನಿವಾರಿಸಿಕೊಂಡು ತನ್ನ ಕೂರಂಬುಗಳನ್ನು ಕರೆದನು. ಅವನ್ನು ಪರಿಹರಿಸಿ ಕರ್ಣನು ತಾನು ಬಾಣಗಳ ಮಳೆಗರೆದನು. ಹೀಗೆ ಇಬ್ಬರೂ ತಮ್ಮ ಶ್ರಮವನ್ನು ಲೆಕ್ಕಿಸದೆ ಬಾಣ ಬಿಡುತ್ತ ಕಾದಾಡಿದರು.
ಮೂಲ ...{Loading}...
ಎಚ್ಚರೊಡನೊಡನೆಚ್ಚ ಬಾಣವ
ಕೊಚ್ಚಿದನು ಕಲಿ ಕರ್ಣನಾತನ
ನೆಚ್ಚನಂಬಿನ ಮೇಲೆ ನೂಕಿದವಂಬು ವಹಿಲದಲಿ
ಎಚ್ಚು ಕವಿಸಿದಡವನು ಪವನಜ
ನೆಚ್ಚಡವ ಪರಿಹರಿಸಿ ರವಿಸುತ
ನೆಚ್ಚಡಿಬ್ಬರು ಕಾದಿದರು ಕೈಮೈಯ ಮನ್ನಿಸದೆ ॥42॥
೦೪೩ ಭಾರಿಯಙ್ಕವು ದಳಪತಿಗೆ ...{Loading}...
ಭಾರಿಯಂಕವು ದಳಪತಿಗೆ ಪಡಿ
ಸಾರಿಕೆಯ ಭಟರಿಲ್ಲಲಾ ಪರಿ
ವಾರಕಿದು ಪಂಥವೆ ಎನುತ ಕುರುರಾಯ ಮೂದಲಿಸೆ
ಕೂರಲಗಿನಂಬುಗಿದು ಬಳಿಯ ಮ
ಹಾರಥರ ಕೈವೀಸಿ ರವಿಸುತ
ಸಾರೆನುತ ಕೆಣಕಿದನು ದುಶ್ಯಾಸನನು ಪವನಜನ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗಿನ ಆ ಪರಿಸ್ಥಿತಿಯನ್ನು ಕಂಡು ಕೌರವರಾಯ “ಅಯ್ಯೋ ! ದಳಪತಿಗೆ ಭಾರಿಯ ಯುದ್ಧ ಕೈಗಟ್ಟಿತು. ಅವನ ಸಹಾಯಕ್ಕೆ ಹೋಗುವ ಶೂರಭಟರು ಇಲ್ಲವಾಯಿತೆ? ಎಲಲಾ ! ಪರಿವಾರಕ್ಕೆ ಇದು ರೀತಿಯೇ? ” ಎಂದು ಮೂದಲಿಸಿದನು. ಆಗ ಕೂಡಲೇ ಕೂರಲಗಿನ ಬಾಣ ಹಿಡಿದುಕೊಂಡು ಹತ್ತಿರದ ಮಹಾರಥರಿಗೆಲ್ಲ ಕೈಬೀಸಿ ಕರ್ಣನಿಗೆ ನೀನು ಬದಿಗೆ ಸರಿ ಎಂದು ಹೇಳಿ ದುಶ್ಶಾಸನನು ಭೀಮನನ್ನು ಕೆಣಕಿದನು.
ಮೂಲ ...{Loading}...
ಭಾರಿಯಂಕವು ದಳಪತಿಗೆ ಪಡಿ
ಸಾರಿಕೆಯ ಭಟರಿಲ್ಲಲಾ ಪರಿ
ವಾರಕಿದು ಪಂಥವೆ ಎನುತ ಕುರುರಾಯ ಮೂದಲಿಸೆ
ಕೂರಲಗಿನಂಬುಗಿದು ಬಳಿಯ ಮ
ಹಾರಥರ ಕೈವೀಸಿ ರವಿಸುತ
ಸಾರೆನುತ ಕೆಣಕಿದನು ದುಶ್ಯಾಸನನು ಪವನಜನ ॥43॥
೦೪೪ ಎಲವೊ ಕರ್ಣಾತ್ಮಜನ ...{Loading}...
ಎಲವೊ ಕರ್ಣಾತ್ಮಜನ ಹೊಯ್ದ
ಗ್ಗಳಿಕೆಯಲಿ ಹೊರೆಯೇರದಿರು ಪಡಿ
ಬಲಕೆ ಕರಸಾ ಕೃಷ್ಣ ಪಾರ್ಥರ ನಿನ್ನಲೇನಹುದು
ಬಳಿಯ ಬಿಗುಹಿನ ಬಿಂಕ ನಿನ್ನಯ
ತಲೆಗೆ ಬಹುದಾವರಿಯೆವೆನುತತಿ
ಬಳನನೆಚ್ಚನು ನಿನ್ನ ನಂದನನರಸ ಕೇಳ್ ಎಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ ಭೀಮಾ! ಕರ್ಣನ ಮಗನನ್ನು ಕೊಂದೆನೆಂಬ ಹಿಗ್ಗಿನಿಂದ ಉಬ್ಬಿ ಮೆರೆಯಬೇಡ ! ನಿನ್ನ ಸಹಾಯಕ್ಕೆ ಬೆಂಬಲವಾಗಿ ಕೃಷ್ಣಾರ್ಜುನರನ್ನು ಕರೆಸಿಕೊ. ನಿನ್ನೊಬ್ಬನಿಂದ ಏನಾದೀತು. ಕೇವಲ ನಿನ್ನ ಬಿಂಕ ಮಾತ್ರ ನಿನ್ನ ತಲೆಗೆ ಬಂದೀತು. ಇದನ್ನು ನಾವು ಅರಿಯೆವೆ?” ಎನ್ನುತ್ತ ನಿನ್ನ ಮಗನು, ಅರಸಾ ಅತಿಬಲನಾದ ಭೀಮನಿಗೆ ಹೊಡೆದನು ” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಎಲವೊ ಕರ್ಣಾತ್ಮಜನ ಹೊಯ್ದ
ಗ್ಗಳಿಕೆಯಲಿ ಹೊರೆಯೇರದಿರು ಪಡಿ
ಬಲಕೆ ಕರಸಾ ಕೃಷ್ಣ ಪಾರ್ಥರ ನಿನ್ನಲೇನಹುದು
ಬಳಿಯ ಬಿಗುಹಿನ ಬಿಂಕ ನಿನ್ನಯ
ತಲೆಗೆ ಬಹುದಾವರಿಯೆವೆನುತತಿ
ಬಳನನೆಚ್ಚನು ನಿನ್ನ ನಂದನನರಸ ಕೇಳೆಂದ ॥44॥
೦೪೫ ತಗರು ಮುಳಿದಾರಿದರೆ ...{Loading}...
ತಗರು ಮುಳಿದಾರಿದರೆ ತೋಳನು
ತೆಗೆದು ಜೀವಿಸಲರಿವುದೇ ನಾ
ಲಗೆಯ ವೀರರು ನೀವು ಮೂಢರು ನಾವು ನುಡಿಗಳಲಿ
ಉಗಿದಡಾಯ್ದದ ಮೊನೆಯ ತುದಿ ನಾ
ಲಗೆಗಳಲಿ ಮಾತಾಡಬಲ್ಲರೆ
ಸೊಗಸುವೆವು ನಾವೆನುತ ಪವನಜನೆಚ್ಚನರಿಭಟನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಟಗರು ಸಿಟ್ಟಾಗಿ ಅಬ್ಬರಿಸಿದರೆ ತೋಳ ಹೆದರಿ ಹಿಂಜರಿದು ಅಯ್ಯೋ ! ಬದುಕಿದೆ ಎಂದು ನಿಲ್ಲುವುದೇ? ನೀವು ನಾಲಗೆಯ ವೀರರು. ನಾವು ಮಾತಿನಲ್ಲಿ ಮೂಢರು. ಬಿಟ್ಟ ಅಡಾಯುಧದ ತುದಿನಾಲಿಗೆಯಿಂದ ಮಾತಾಡಬಲ್ಲೆವು. ನೀವೂ ಹೀಗೆ ಮಾತಾಡಬಲ್ಲಿರಾದರೆ ನಾವು ಮೆಚ್ಚಿಕೊಳ್ಳುತ್ತೇವೆ” ಎಂದು ನುಡಿಯುತ್ತ ಭೀಮನು ವೈರಿ ಭಟನಾದ ದುಶ್ಶಾಸನನನ್ನು ಘಾತಿಸಿದನು.
ಮೂಲ ...{Loading}...
ತಗರು ಮುಳಿದಾರಿದರೆ ತೋಳನು
ತೆಗೆದು ಜೀವಿಸಲರಿವುದೇ ನಾ
ಲಗೆಯ ವೀರರು ನೀವು ಮೂಢರು ನಾವು ನುಡಿಗಳಲಿ
ಉಗಿದಡಾಯ್ದದ ಮೊನೆಯ ತುದಿ ನಾ
ಲಗೆಗಳಲಿ ಮಾತಾಡಬಲ್ಲರೆ
ಸೊಗಸುವೆವು ನಾವೆನುತ ಪವನಜನೆಚ್ಚನರಿಭಟನ ॥45॥
೦೪೬ ಪವನಸುತನೆಚ್ಚಮ್ಬ ಹರೆಗಡಿ ...{Loading}...
ಪವನಸುತನೆಚ್ಚಂಬ ಹರೆಗಡಿ
ದವಿರಳಾಸ್ತ್ರವನೀತ ಕವಿಸಿದ
ನಿವನ ಬಳಿಯ ಮಹಾರಥರು ಸೂಸಿದರು ಶರವಳೆಯ
ರವಿಯ ಕೈಕತ್ತಲೆಯ ಹೊರಳಿಯ
ತಿವಿಗುಳಿಗೆ ತೆರಳುವುದೆ ರಿಪು ಶರ
ನಿವಹವನು ಕಡಿಯೆಚ್ಚು ಕೆಡಹಿದನಾ ಮಹಾರಥರ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಬಿಟ್ಟ ಬಾಣಗಳನ್ನು ಕಡಿದು, ದಟ್ಟವಾದ ಬಾಣಗಳನ್ನು ದುಶ್ಶಾಸನನು ಕವಿಸಿದನು. ಅವನ ಅಕ್ಕಪಕ್ಕದಲ್ಲಿದ್ದ ಮಹಾರಥರೂ ಬಾಣಗಳ ಮಳೆಗರೆದರು. ಆದರೆ ಸೂರ್ಯನ ಕಿರಣಗಳು ಕತ್ತಲೆಯ ಸಮೂಹವನ್ನು ಕಂಡು ಹಿಂದೆ ಸರಿಯುವುವೇ? ವೈರಿಗಳ ಬಾಣ ಸಮೂಹವನ್ನು ಕಡಿದು ಭೀಮನು ಮಹಾರಥರನ್ನು ಹೊಡೆದು ಕೆಡಹಿದನು.
ಮೂಲ ...{Loading}...
ಪವನಸುತನೆಚ್ಚಂಬ ಹರೆಗಡಿ
ದವಿರಳಾಸ್ತ್ರವನೀತ ಕವಿಸಿದ
ನಿವನ ಬಳಿಯ ಮಹಾರಥರು ಸೂಸಿದರು ಶರವಳೆಯ
ರವಿಯ ಕೈಕತ್ತಲೆಯ ಹೊರಳಿಯ
ತಿವಿಗುಳಿಗೆ ತೆರಳುವುದೆ ರಿಪು ಶರ
ನಿವಹವನು ಕಡಿಯೆಚ್ಚು ಕೆಡಹಿದನಾ ಮಹಾರಥರ ॥46॥
೦೪೭ ಸಿಕ್ಕಿದರೆ ಬಳಿಕೇನು ...{Loading}...
ಸಿಕ್ಕಿದರೆ ಬಳಿಕೇನು ತಾಯಿಗೆ
ಮಕ್ಕಳಾಗರು ನಿನ್ನ ತನಯನ
ನಿಕ್ಕಿ ಹಾಯ್ದರು ಹಿಂಡೊಡೆದು ನೀ ಸಾಕಿದವರೆಲ್ಲ
ಹೊಕ್ಕು ಬಳಿಕೊಂದೆರಡು ಪಸರದ
ಲುಕ್ಕುಡಿಯಲೊದಗಿದನು ನಿನ್ನವ
ನೆಕ್ಕತುಳದಲಿ ಸರಿಮಿಗಿಲ ಕಾದಿದನು ಹಗೆಯೊಡನೆ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಕಟದಲ್ಲಿ ಸಿಕ್ಕರೆ, ತಾಯಿಗೆ ಮಕ್ಕಳೇ ಬೆಂಬಲವಾಗಲಾರರು. ನಿನ್ನ ಮಗನನ್ನು ಇಕ್ಕಟ್ಟಿಗೆ ಸಿಕ್ಕಿಸಿ, ಹಿಂಡು ಬಿಟ್ಟು ನೀ ಸಾಕಿದವರೆಲ್ಲ ಓಡಿ ಹೋದರು. ಬಳಿಕ ನಿನ್ನವರು ಒಂದೆರಡು ಗುಂಪುಗಳಾಗಿ ಬಂದು ರಣವನ್ನು ಹೊಕ್ಕರು. ನಿನ್ನ ಮಗನು ಪರಾಕ್ರಮದಿಂದ ವೈರಿಯೊಡನೆ ಸರಿಮಿಗಿಲಾಗಿ ಕಾದಿದನು.
ಮೂಲ ...{Loading}...
ಸಿಕ್ಕಿದರೆ ಬಳಿಕೇನು ತಾಯಿಗೆ
ಮಕ್ಕಳಾಗರು ನಿನ್ನ ತನಯನ
ನಿಕ್ಕಿ ಹಾಯ್ದರು ಹಿಂಡೊಡೆದು ನೀ ಸಾಕಿದವರೆಲ್ಲ
ಹೊಕ್ಕು ಬಳಿಕೊಂದೆರಡು ಪಸರದ
ಲುಕ್ಕುಡಿಯಲೊದಗಿದನು ನಿನ್ನವ
ನೆಕ್ಕತುಳದಲಿ ಸರಿಮಿಗಿಲ ಕಾದಿದನು ಹಗೆಯೊಡನೆ ॥47॥
೦೪೮ ತೇರು ಹುಡಿಹುಡಿಯಾಗಿ ...{Loading}...
ತೇರು ಹುಡಿಹುಡಿಯಾಗಿ ರಣದಲಿ
ಸಾರಥಿಯ ತಲೆ ಹೋಗಿ ಕಾಲಿನ
ಲಾರುಭಟೆಯಲಿ ನಿನ್ನ ಮಗನೆಸುತಿರ್ದನನಿಲಜನ
ಸಾರು ನೀ ಸಾರೆನುತ ಕರ್ಣಕು
ಮಾರನಡಹಾಯಿದನು ಭೀಮನ
ಭೂರಿ ಬಾಣದ ಪಂಜರವ ಭಂಜಿಸುತ ವಹಿಲದಲಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೇರು ಪುಡಿ ಪುಡಿಯಾಗಿ ಹೋಯಿತು. ಕಾಳಗದಲ್ಲಿ ಸಾರಥಿಯ ತಲೆ ಹೋಯಿತು. ನೆಲದ ಮೇಲೇ ನಿಂತು ನಿನ್ನ ಮಗನು ಭೀಮನ ಮೇಲೆ ಬಾಣ ಬಿಡುತ್ತಿದ್ದನು. ಆಗ ನಡೆ ನೀನು ಅತ್ತ ನಡೆ ಎನ್ನುತ್ತಾ ಕರ್ಣನ ಮಗನು ಭೀಮನ ಬಾಣಗಳ ಪಂಜರವನ್ನು ಖಂಡಿಸುತ್ತ ಕೂಡಲೇ ದುಶ್ಶಾಸನನ ರಕ್ಷಣೆಗೆಂದು ಧಾವಿಸಿ ಬಂದನು.
ಮೂಲ ...{Loading}...
ತೇರು ಹುಡಿಹುಡಿಯಾಗಿ ರಣದಲಿ
ಸಾರಥಿಯ ತಲೆ ಹೋಗಿ ಕಾಲಿನ
ಲಾರುಭಟೆಯಲಿ ನಿನ್ನ ಮಗನೆಸುತಿರ್ದನನಿಲಜನ
ಸಾರು ನೀ ಸಾರೆನುತ ಕರ್ಣಕು
ಮಾರನಡಹಾಯಿದನು ಭೀಮನ
ಭೂರಿ ಬಾಣದ ಪಂಜರವ ಭಂಜಿಸುತ ವಹಿಲದಲಿ ॥48॥
೦೪೯ ಎಲೆಲೆ ಕರ್ಣ ...{Loading}...
ಎಲೆಲೆ ಕರ್ಣ ಕುಮಾರನೋ ಪಡಿ
ಬಲವ ಕರೆಯೋ ಬಾಲನೊಬ್ಬನೆ
ನಿಲುವುದರಿದೋ ಸ್ವಾಮಿದ್ರೋಹರ ಹಿಡಿದು ನೂಕೆನುತ
ಉಲಿಯೆ ಕೌರವರಾಯನುಬ್ಬಿದ
ಕಳಕಳದ ಬಹುವಿಧದ ವಾದ್ಯದ
ದಳದ ದೆಖ್ಖಾದೆಖ್ಖಿಯಲಿ ಕಲಿಕರ್ಣ ನಡೆತಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆಲೈ ಕರ್ಣನ ಮಗನೋ. ಸಹಾಯಕ ದಳವನ್ನು ಕರೆಯೋ; (ಚಿಕ್ಕ) ಬಾಲಕನು ಒಬ್ಬನೇ ನಿಲ್ಲವುದು ಕಷ್ಟದಾಯಕವಲ್ಲವೇ ? ಇಂತಹ ಹೊತ್ತಿನಲ್ಲಿ ಮುನ್ನುಗ್ಗಿಬಾರದ ಸ್ವಾಮಿದ್ರೋಹಿಗಳನ್ನು ಹಿಡಿದು ನೂಕು” ಎಂದು ಕೌರವೇಶ್ವರನು ನುಡಿಯಲು , ಬಹುವಿಧದ ವಾದ್ಯದ ಹೆಚ್ಚಿದ ಕಲರವದ ಮಧ್ಯೆ ಕರ್ಣನು ಮುಖಾಮುಖಿ ಹೋರಾಡಲು ದಳದ ನಡುವೆ ಕರ್ಣನು ಬಂದನು.
ಮೂಲ ...{Loading}...
ಎಲೆಲೆ ಕರ್ಣ ಕುಮಾರನೋ ಪಡಿ
ಬಲವ ಕರೆಯೋ ಬಾಲನೊಬ್ಬನೆ
ನಿಲುವುದರಿದೋ ಸ್ವಾಮಿದ್ರೋಹರ ಹಿಡಿದು ನೂಕೆನುತ
ಉಲಿಯೆ ಕೌರವರಾಯನುಬ್ಬಿದ
ಕಳಕಳದ ಬಹುವಿಧದ ವಾದ್ಯದ
ದಳದ ದೆಖ್ಖಾದೆಖ್ಖಿಯಲಿ ಕಲಿಕರ್ಣ ನಡೆತಂದ ॥49॥