೦೦೦ ಸೂ ಪೃಥಿವಿಪತಿ ...{Loading}...
ಸೂ. ಪೃಥಿವಿಪತಿ ಮಾದ್ರೇಶನನು ಸಾ
ರಥಿಯ ಮಾಡಿದನೊಲವು ಮಿಗಲತಿ
ರಥ ಭಯಂಕರ ಭಾನುಸುತನಾಹವಕೆ ನಡೆತಂದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ. ದುರ್ಯೋಧನನು ಮಾದ್ರೇಶನನ್ನು ಸಾರಥಿಯಾಗಿ ಮಾಡಿದನು. ಅತಿರಥ ಭಯಂಕರನಾದ ಕರ್ಣನು ಅತಿ ಪ್ರೀತಿಯಿಂದ ಯುದ್ಧಕ್ಕೆ ಬಂದನು.
ಮೂಲ ...{Loading}...
ಸೂ. ಪೃಥಿವಿಪತಿ ಮಾದ್ರೇಶನನು ಸಾ
ರಥಿಯ ಮಾಡಿದನೊಲವು ಮಿಗಲತಿ
ರಥ ಭಯಂಕರ ಭಾನುಸುತನಾಹವಕೆ ನಡೆತಂದ
೦೦೧ ಹರನ ಬೀಳ್ಕೊಣ್ಡಖಿಳ ...{Loading}...
ಹರನ ಬೀಳ್ಕೊಂಡಖಿಳ ದಿವಿಜರು
ಹರೆದುದೀ ಪರಿ ಕಮಲಭವನೀ
ಶ್ವರನ ಸಾರಥಿಯಾಗೆ ಸಾರಿದುದಮರರಭ್ಯುದಯ
ಹರಿಯ ಸಾರಥಿತನದಿ ಜಯವಂ
ಕುರಿಸಿತವರಿಗೆ ನಿಮ್ಮ ಕೃಪೆಯಲಿ
ಕುರುಬಲಕೆ ಗೆಲವಾದಡೊಳ್ಳಿತು ಮಾವ ಕೇಳ್ ಎಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲ್ಲ ದೇವತೆಗಳು ಹರನನ್ನು ಬೀಳ್ಕೊಂಡು ನಿರ್ಗಮಿಸಿದರು. ಈ ರೀತಿ ಬ್ರಹ್ಮನು ಈಶ್ವರನ ಸಾರಥಿಯಾಗಲು ದೇವತೆಗಳ ಅಭ್ಯುದಯ ಹತ್ತಿರವಾಯಿತು. ಕೃಷ್ಣನ ಸಾರಥಿತನದಿಂದ ಪಾಂಡವರಿಗೆ ಜಯವು ಅಂಕುರಿಸಿತು. ನಿಮ್ಮ ಕೃಪೆಯಲ್ಲಿ ಕುರುಬಲಕ್ಕೆ ಗೆಲವಾದರೆ ಒಳ್ಳೆಯದು ಮಾವ, ಕೇಳು “ಎಂದು ದುರ್ಯೋಧನನು ಶಲ್ಯನಿಗೆ ಹೇಳಿದನು.
ಮೂಲ ...{Loading}...
ಹರನ ಬೀಳ್ಕೊಂಡಖಿಳ ದಿವಿಜರು
ಹರೆದುದೀ ಪರಿ ಕಮಲಭವನೀ
ಶ್ವರನ ಸಾರಥಿಯಾಗೆ ಸಾರಿದುದಮರರಭ್ಯುದಯ
ಹರಿಯ ಸಾರಥಿತನದಿ ಜಯವಂ
ಕುರಿಸಿತವರಿಗೆ ನಿಮ್ಮ ಕೃಪೆಯಲಿ
ಕುರುಬಲಕೆ ಗೆಲವಾದಡೊಳ್ಳಿತು ಮಾವ ಕೇಳೆಂದ ॥1॥
೦೦೨ ಹರನು ಬಿಲುವಿದ್ಯವನು ...{Loading}...
ಹರನು ಬಿಲುವಿದ್ಯವನು ಕೊಡುತವೆ
ಪರಶುರಾಮಂಗೆಂದನಧಮರಿ
ಗೊರೆಯದಿರು ಸತ್ಪಾತ್ರಕಿದನಾದರಿಸಿ ಕಲಿಸೆಂದ
ಸುರರ ಮೆಚ್ಚದ ರಾಮನೀತನ
ಕರೆದು ಗರುಡಿಯ ಹೊಗಿಸಿದನು ಕಡು
ಗರುವನೀ ರಾಧೇಯನಧಮನೆ ಮಾವ ಕೇಳ್ ಎಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹರನು ಪರಶುರಾಮನಿಗೆ ಬಿಲ್ಲುವಿದ್ಯೆಯನ್ನು ಕೊಡುವಾಗಲೇ ಈ ವಿದ್ಯೆಯನ್ನು ಅಧಮರಿಗೆ ತಿಳಿಸಬೇಡ, ಇದನ್ನು ಸತ್ಪಾತ್ರರಿಗೆ ಆದರದಿಂದ ಕಲಿಸು ಎಂದು ಹೇಳಿದನು. ದೇವತೆಗಳನ್ನೂ ಮೆಚ್ಚದ ಪರಶುರಾಮನು ಕರ್ಣನನ್ನು ಕರೆದು ಶಾಲೆಗೆ ಸೇರಿಸಿಕೊಂಡನು. ಮಹಾ ಅಭಿಮಾನಿಯಾದ ಈ ರಾಧೇಯನು ಅಧಮನೆ? ಮಾವ ಕೇಳು” ಎಂದನು.
ಮೂಲ ...{Loading}...
ಹರನು ಬಿಲುವಿದ್ಯವನು ಕೊಡುತವೆ
ಪರಶುರಾಮಂಗೆಂದನಧಮರಿ
ಗೊರೆಯದಿರು ಸತ್ಪಾತ್ರಕಿದನಾದರಿಸಿ ಕಲಿಸೆಂದ
ಸುರರ ಮೆಚ್ಚದ ರಾಮನೀತನ
ಕರೆದು ಗರುಡಿಯ ಹೊಗಿಸಿದನು ಕಡು
ಗರುವನೀ ರಾಧೇಯನಧಮನೆ ಮಾವ ಕೇಳೆಂದ ॥2॥
೦೦೩ ಸೂತಕುಲಸಮ್ಭವನೆ ಭುವನ ...{Loading}...
ಸೂತಕುಲಸಂಭವನೆ ಭುವನ
ಖ್ಯಾತಕರ್ಣನು ಸಾಕಿದಾತನು
ಸೂತನಾದಡೆ ಮಾವ ಕೇಳನ್ವಯಕೆ ಹಳಿವುಂಟೆ
ಸ್ವಾತಿಯುದಕದೊಳಾದ ಮೌಕ್ತಿಕ
ವ್ರಾತಕಯ್ಯನೆ ಚಿಪ್ಪು ನಿಮಗಿ
ನ್ನೇತಕೀ ಸಂದೇಹ ರವಿಸುತ ಸೂತನಲ್ಲೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭುವನಖ್ಯಾತನಾದ ಕರ್ಣನು ಸೂತಕುಲದಲ್ಲಿ ಹುಟ್ಟಿದವನೆ? ಸಾಕಿವನು ಸೂತನಾದರೆ ಮಾವ, ಕೇಳು, ವಂಶಕ್ಕೆ ಅಪಖ್ಯಾತಿಯೆ? ಸ್ವಾತಿಯು ಉದಕದಲ್ಲಿ ಹುಟ್ಟಿದ ಮುತ್ತಿನ ಸಮೂಹಕ್ಕೆ ಚಿಪ್ಪು ತಂದೆಯೆ? ನಿಮಗೆ ಇನ್ನೂ ಏಕೆ ಈ ಸಂದೇಹ? ರವಿಸುತ ಸೂತನಲ್ಲ " ಎಂದನು.
ಮೂಲ ...{Loading}...
ಸೂತಕುಲಸಂಭವನೆ ಭುವನ
ಖ್ಯಾತಕರ್ಣನು ಸಾಕಿದಾತನು
ಸೂತನಾದಡೆ ಮಾವ ಕೇಳನ್ವಯಕೆ ಹಳಿವುಂಟೆ
ಸ್ವಾತಿಯುದಕದೊಳಾದ ಮೌಕ್ತಿಕ
ವ್ರಾತಕಯ್ಯನೆ ಚಿಪ್ಪು ನಿಮಗಿ
ನ್ನೇತಕೀ ಸಂದೇಹ ರವಿಸುತ ಸೂತನಲ್ಲೆಂದ ॥3॥
೦೦೪ ಈ ದುರಾಗ್ರಹ ...{Loading}...
ಈ ದುರಾಗ್ರಹ ನಿನ್ನ ಚಿತ್ತದೊ
ಳಾದುದೇ ತಪ್ಪೇನು ಕೋಗಿಲೆ
ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
ಕಾದಿ ಗೆಲುವುದು ಭಾರಿ ಗುರು ಭೀ
ಷ್ಮಾದಿಭಟರೇನಾದರೈ ತಾ
ನಾದುದಾಗಲಿ ನಾವು ಸಾರಥಿಯಾದೆವೇಳೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ದುರಾಗ್ರಹ ನಿನ್ನ ಚಿತ್ತದಲ್ಲಿ ಉಂಟಾಯಿತೆ? ಅದರಲ್ಲಿ ತಪ್ಪೇನು? ಕೋಗಿಲೆಯನ್ನು ಸತ್ಕರಿಸಿದರೆ ಬೇವು ಮಾವಾಗುವುದಾದರೆ ನಮಗೇನು? ಯುದ್ಧಮಾಡಿ ಗೆಲ್ಲಬೇಕು. ಭಾರಿ ಗುರುಗಳಾದ ಭೀಷ್ಮ ಮೊದಲಾದ ವೀರರು ಏನಾದರು? ಆದದ್ದಾಗಲಿ. ನಾವು ಸಾರಥಿಯಾದೆವು ಏಳು” ಎಂದು ಶಲ್ಯನು ಹೇಳಿದನು.
ಮೂಲ ...{Loading}...
ಈ ದುರಾಗ್ರಹ ನಿನ್ನ ಚಿತ್ತದೊ
ಳಾದುದೇ ತಪ್ಪೇನು ಕೋಗಿಲೆ
ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
ಕಾದಿ ಗೆಲುವುದು ಭಾರಿ ಗುರು ಭೀ
ಷ್ಮಾದಿಭಟರೇನಾದರೈ ತಾ
ನಾದುದಾಗಲಿ ನಾವು ಸಾರಥಿಯಾದೆವೇಳೆಂದ ॥4॥
೦೦೫ ನಿಮ್ಮ ವಿಜಯಶ್ರೀಯ ...{Loading}...
ನಿಮ್ಮ ವಿಜಯಶ್ರೀಯ ಕಡೆಗ
ಣ್ಣೆಮ್ಮ ಮುಖದಲಿ ಮುರಿದುದಾದಡೆ
ನಮ್ಮ ಕೊರತೆಯದೇಕೆ ಕರಸೈ ಸೂತನಂದನನ
ನಮ್ಮ ಹೇಳಿಕೆ ಯಾವುದದನೀ
ತಮ್ಮ ಮೀರಿದು ನಡೆದನಾದಡೆ
ನಮ್ಮ ವಾಘೆಯ ಬೀಳುಕೊಡುವೆವು ರಾಯ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಮ್ಮ ವಿಜಯಶ್ರೀಯು ನಮ್ಮ ಮೂಲಕ ನಿನಗೆ ಒಲಿಯುವುದಾದರೆ ಅದು ನನಗೇನು ನಷ್ಟದ ವಿಷಯವೇ? ಸೂತನಂದನನನ್ನು ಕರೆಸು. ನಮ್ಮ ಹೇಳಿಕೆ ಯಾವುದನ್ನಾದರೂ ಅವನು ಮೀರಿ ನಡೆದುಕೊಂಡರೆ ನಮ್ಮ ಸಾರಥಿತನವನ್ನು ಬಿಟ್ಟು ಕೊಡುತ್ತೇವೆ ರಾಜನೆ ಕೇಳು” ಎಂದು ಶಲ್ಯನು ದುರ್ಯೋಧನನಿಗೆ ಹೇಳಿದನು.
ಮೂಲ ...{Loading}...
ನಿಮ್ಮ ವಿಜಯಶ್ರೀಯ ಕಡೆಗ
ಣ್ಣೆಮ್ಮ ಮುಖದಲಿ ಮುರಿದುದಾದಡೆ
ನಮ್ಮ ಕೊರತೆಯದೇಕೆ ಕರಸೈ ಸೂತನಂದನನ
ನಮ್ಮ ಹೇಳಿಕೆ ಯಾವುದದನೀ
ತಮ್ಮ ಮೀರಿದು ನಡೆದನಾದಡೆ
ನಮ್ಮ ವಾಘೆಯ ಬೀಳುಕೊಡುವೆವು ರಾಯ ಕೇಳೆಂದ ॥5॥
೦೦೬ ಹೊತ್ತ ದುಗುಡವ ...{Loading}...
ಹೊತ್ತ ದುಗುಡವ ಹಾಯ್ಕಿ ಕೈವಿಡಿ
ದೆತ್ತಿ ಕರ್ಣನ ಕೊಟ್ಟು ಮೈಗಳ
ಲೆತ್ತು ಗುಡಿಗಳ ರೋಮ ಪುಳಕದ ಪೂರ್ಣ ಹರುಷದಲಿ
ಬತ್ತಿತಂತಸ್ತಾಪಜಲನಿಧಿ
ಚಿತ್ತದುರು ಸಂದೇಹ ತರುವಿನ
ಬಿತ್ತು ಕರಿಮೊಳೆವೋಯ್ತು ನಿನ್ನ ಮಗಂಗೆ ನಿಮಿಷದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊತ್ತ ದುಃಖದ ಭಾರವನ್ನು ದುರ್ಯೋಧನನು ಇಳಿಸಿಕೊಂಡನು. ಕರ್ಣನನ್ನು (ಅವನ ಯೋಗಕ್ಷೇಮವನ್ನು ) ಕೈಯಾರೆ ಶಲ್ಯನಿಗೆ ಒಪ್ಪಿಸಿದನು. ದುರ್ಯೋಧನನಿಗೆ ರೋಮಾಂಚನವಾಯಿತು. ಅವನು ಪೂರ್ಣ ಹರುಷ ತಾಳಿದನು. ಅವನ ಮನಸ್ಸಿನ ತಾಪ ಅಳಿಯಿತು. ದೊಡ್ಡ ಸಂದೇಹದ ಬೀಜ ಸುಟ್ಟು ಬೂದಿಯಾಯಿತು. ಅವನಿಗೆ ಒಂದು ನಿಮಿಷದಲ್ಲಿ ಈ ಎಲ್ಲಾ ಅನುಭವಗಳಾದವು.
ಪದಾರ್ಥ (ಕ.ಗ.ಪ)
ಅಂತಸ್ತಾಪ-ಒಳಗಿನ ದುಃಖ;
ಮೂಲ ...{Loading}...
ಹೊತ್ತ ದುಗುಡವ ಹಾಯ್ಕಿ ಕೈವಿಡಿ
ದೆತ್ತಿ ಕರ್ಣನ ಕೊಟ್ಟು ಮೈಗಳ
ಲೆತ್ತು ಗುಡಿಗಳ ರೋಮ ಪುಳಕದ ಪೂರ್ಣ ಹರುಷದಲಿ
ಬತ್ತಿತಂತಸ್ತಾಪಜಲನಿಧಿ
ಚಿತ್ತದುರು ಸಂದೇಹ ತರುವಿನ
ಬಿತ್ತು ಕರಿಮೊಳೆವೋಯ್ತು ನಿನ್ನ ಮಗಂಗೆ ನಿಮಿಷದಲಿ ॥6॥
೦೦೭ ಬೀಳುಕೊಣ್ಡನು ಶಲ್ಯನನು ...{Loading}...
ಬೀಳುಕೊಂಡನು ಶಲ್ಯನನು ಭೂ
ಪಾಲನಿತ್ತಲು ಕರ್ಣನಾಯುಧ
ಶಾಲೆಯಲಿ ಶುಚಿಯಾಗಿ ಶಸ್ತ್ರಾಸ್ತ್ರವನು ಪೂಜಿಸಿದ
ಸಾಲದೀವಿಗೆಗಳನು ಶಸ್ತ್ರ
ಜ್ವಾಲೆ ಮಿಕ್ಕವು ತೀಕ್ಷ ್ಣಧಾರಾ
ಭೀಳವಿಕ್ರಮ ವಿಸ್ಫುಲಿಂಗಿತವಾದವಡಿಗಡಿಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ ದುರ್ಯೋಧನನು ಶಲ್ಯನನ್ನು ಬೀಳಕೊಂಡನು. ಇತ್ತ ಕರ್ಣನು ಶುಚಿಯಾಗಿ ಆಯುಧ ಶಾಲೆಯಲ್ಲಿ ನಾನಾವಿಧ ಶಸ್ತ್ರಾಸ್ತ್ರಗಳನ್ನು ಪೂಜಿಸುತ್ತಿದ್ದನು. ಅವನು ಸಾಲು ದೀಪಗಳನ್ನು ಹಚ್ಚಿದನು. ಆದರೆ ತೀಕ್ಷ್ಣಧಾರೆಯ ಆ ಶಸ್ತ್ರಾಸ್ತ್ರಗಳು ಆ ದೀಪಗಳಿಗಿಂತ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು. ಅವು ಆಗಾಗ ಕಿಡಿಗಾರುತ್ತಿವೆಯೋ ಏನೋ ಎನಿಸುತ್ತಿತ್ತು. ಅವು ಭಯಂಕರವಾಗಿ ಕಾಣುತ್ತಿದ್ದವು.
ಪದಾರ್ಥ (ಕ.ಗ.ಪ)
ಶಸ್ತ್ರಜ್ವಾಲೆ-ಆಯುಧಗಳ ಬೆಳಕು; ತೀಕ್ಷ್ಣಧಾರಾ-ಹರಿತಾದ ಬಾಯಿಯ; ಆಭೀಳ-ಭಯಂಕರ; ವಿಸ್ಫುಲಿಂಗ-ಕಿಡಿಗಾರು
ಮೂಲ ...{Loading}...
ಬೀಳುಕೊಂಡನು ಶಲ್ಯನನು ಭೂ
ಪಾಲನಿತ್ತಲು ಕರ್ಣನಾಯುಧ
ಶಾಲೆಯಲಿ ಶುಚಿಯಾಗಿ ಶಸ್ತ್ರಾಸ್ತ್ರವನು ಪೂಜಿಸಿದ
ಸಾಲದೀವಿಗೆಗಳನು ಶಸ್ತ್ರ
ಜ್ವಾಲೆ ಮಿಕ್ಕವು ತೀಕ್ಷ ್ಣಧಾರಾ
ಭೀಳವಿಕ್ರಮ ವಿಸ್ಫುಲಿಂಗಿತವಾದವಡಿಗಡಿಗೆ ॥7॥
೦೦೮ ಕುರಿಯ ಹಣಿದದ ...{Loading}...
ಕುರಿಯ ಹಣಿದದ ಕೋಳಿ ಕೋಣನ
ಮುರಿದಲೆಯ ಮೀಸಲಿನ ರಕುತದ
ದುರುದುರಿಪ ದಂಡೆಯಲಿ ಕಲಸಿದ ಕೂಳ ಮುದ್ದೆಗಳ
ಹೊರಗೆ ಬಡಿಸಿದ ಭೂತಬಲಿ ಬೊ
ಬ್ಬಿರಿತದೊಡನುಬ್ಬೇಳ್ವ ಲಗ್ಗೆಯ
ಹರೆಗಳಬ್ಬರವಾಯ್ತು ಕರ್ಣನ ಶಸ್ತ್ರಪೂಜೆಯಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಡಿದ ಕುರಿಗಳ, ಕೋಳಿ, ಕೋಣಗಳ ತಲೆಗಳಿಂದ ಚಿಮ್ಮುವ ಮೀಸಲಿನ ರಕ್ತದಲ್ಲಿ ಕಲಸಿದ ಕೂಳ ಮುದ್ದೆಗಳನ್ನು ಶಸ್ತ್ರಾಸ್ತ್ರಗಳಿಗೆ ನೈವೇದ್ಯ ಮಾಡಲಾಯಿತು. ಹೊರಗೆ ಭೂತಬಲಿಗಾಗಿ ಆಹಾರ ಬಡಿಸಿದ್ದಿತು. ಕಾಳಗದ ವಾದ್ಯಗಳು ಮೊರೆಯುತ್ತಿದ್ದವು. ಒಳ್ಳೆಯ ಉತ್ಸಾಹದಿಂದ ಕರ್ಣನ ಶಸ್ತ್ರ ಪೂಜೆ ಜರುಗಿತು.
ಪದಾರ್ಥ (ಕ.ಗ.ಪ)
ದುರುದುರಿಪ-ಚಿಮ್ಮುವ; ಉಬ್ಬೇಳ್ವ-ಉತ್ಸಾಹದ; ಲಗ್ಗೆಯ ಹರೆ(ಯುದ್ಧ ಕಾಲದ) ವಾದ್ಯ ಧ್ವನಿ
ಮೂಲ ...{Loading}...
ಕುರಿಯ ಹಣಿದದ ಕೋಳಿ ಕೋಣನ
ಮುರಿದಲೆಯ ಮೀಸಲಿನ ರಕುತದ
ದುರುದುರಿಪ ದಂಡೆಯಲಿ ಕಲಸಿದ ಕೂಳ ಮುದ್ದೆಗಳ
ಹೊರಗೆ ಬಡಿಸಿದ ಭೂತಬಲಿ ಬೊ
ಬ್ಬಿರಿತದೊಡನುಬ್ಬೇಳ್ವ ಲಗ್ಗೆಯ
ಹರೆಗಳಬ್ಬರವಾಯ್ತು ಕರ್ಣನ ಶಸ್ತ್ರಪೂಜೆಯಲಿ ॥8॥
೦೦೯ ವಿರಚಿಸಿತು ಶಸ್ತ್ರಾಸ್ತ್ರ ...{Loading}...
ವಿರಚಿಸಿತು ಶಸ್ತ್ರಾಸ್ತ್ರ ಪೂಜಾ
ಪರಿಸರಣ ರವಿಸೂನು ದರ್ಭಾಂ
ಕುರದ ಶಯನಸ್ಥಾನದಲಿ ಮಾಡಿದನು ಜಾಗರವ
ಕುರು ನೃಪಾಲನ ಪಾಳೆಯದೊಳಾ
ಯ್ತಿರುಳು ಮನೆಮನೆಗಳಲಿ ಶಸ್ತ್ರೋ
ತ್ಕರ ಸಮಾರಾಧನೆಯೊಳಿರ್ದುದು ಕೂಡೆ ನೃಪಕಟಕ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಧಿಪೂರ್ವಕವಾಗಿ ಕರ್ಣನು ಶಸ್ತ್ರಾಸ್ತ್ರ ಪೂಜೆಯನ್ನು ನೆರವೇರಿಸಿದನು. ಬಳಿಕ ಎಳೆಯ ದರ್ಭೆಗಳ ಮೇಲೆ ಪವಡಿಸಿ ಶಯನಾಗಾರದಲ್ಲಿ ಜಾಗರಣೆಯನ್ನು ಮಾಡಿದನು. ದುರ್ಯೋಧನನ ಪಾಳಯಗಳಲ್ಲಿ ರಾತ್ರಿ ಮನೆ ಮನೆಗಳಲ್ಲಿಯೂ ಶಸ್ತ್ರಾಸ್ತ್ರಗಳ ಪೂಜೆ ಸಮಾರಾಧನೆ ನಡೆಯಿತು. ಆ ಹಬ್ಬದಲ್ಲಿ ಅನೇಕ ಅರಸರೂ ಪಾಲುಗೊಂಡಿದ್ದರು.
ಮೂಲ ...{Loading}...
ವಿರಚಿಸಿತು ಶಸ್ತ್ರಾಸ್ತ್ರ ಪೂಜಾ
ಪರಿಸರಣ ರವಿಸೂನು ದರ್ಭಾಂ
ಕುರದ ಶಯನಸ್ಥಾನದಲಿ ಮಾಡಿದನು ಜಾಗರವ
ಕುರು ನೃಪಾಲನ ಪಾಳೆಯದೊಳಾ
ಯ್ತಿರುಳು ಮನೆಮನೆಗಳಲಿ ಶಸ್ತ್ರೋ
ತ್ಕರ ಸಮಾರಾಧನೆಯೊಳಿರ್ದುದು ಕೂಡೆ ನೃಪಕಟಕ ॥9॥
೦೧೦ ಸವೆದುದಿರುಳರುಣೋದಯದಲಾ ಹವದ ...{Loading}...
ಸವೆದುದಿರುಳರುಣೋದಯದಲಾ
ಹವದ ಸಂಭ್ರಮರಭಸವೆದ್ದುದು
ವಿವಿಧ ಬಲ ಭಾರಣೆಯ ಭುಲ್ಲವಣೆಯ ಛಡಾಳದಲಿ
ತವಕಿಸುತ ಬಿಗಿ ವಾರುವನ ತಾ
ಸವಗವನು ಬಲ್ಲೆಹವ ಸೀಸಕ
ಕವಚಗಳನೆಂಬಬ್ಬರಣೆ ರಂಜಿಸಿತು ರಾವ್ತರಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇರುಳು ಕಳೆಯಿತು. ಅರುಣೋದಯವಾಯಿತು. ಸಮರದ ಸಂಭ್ರಮ, ರಭಸಕ್ಕೆ ಮೊದಲಾಯಿತು. ನಾನಾ ಪ್ರಕಾರದ ಬಲಗಳು ತಮ್ಮ ತಮ್ಮ ಸಿದ್ಧತೆಯಲ್ಲಿ ತೊಡಗಿದವು. ಸಂತೋಷದಿಂದ ಜೋರಾಗಿ ತಯಾರಿ ನಡೆಸಿದರು. ಆತುರದಿಂದ “ಕುದುರೆಗಳನ್ನು ಬಿಗಿ ಮೈಜೋಡು ತಾ ಭಲ್ಲೆ, ಸೀಸಕ, ಕವಚಗಳನ್ನು ಕೊಡು” ಎಂಬ ಅಬ್ಬರ ರಾವುತ ಸಮೂಹದಲ್ಲಿ ಒಳ್ಳೆಯ ರಂಜನೀಯವಾಗಿ ಕೇಳಿಸಿತು.
ಮೂಲ ...{Loading}...
ಸವೆದುದಿರುಳರುಣೋದಯದಲಾ
ಹವದ ಸಂಭ್ರಮರಭಸವೆದ್ದುದು
ವಿವಿಧ ಬಲ ಭಾರಣೆಯ ಭುಲ್ಲವಣೆಯ ಛಡಾಳದಲಿ
ತವಕಿಸುತ ಬಿಗಿ ವಾರುವನ ತಾ
ಸವಗವನು ಬಲ್ಲೆಹವ ಸೀಸಕ
ಕವಚಗಳನೆಂಬಬ್ಬರಣೆ ರಂಜಿಸಿತು ರಾವ್ತರಲಿ ॥10॥
೦೧೧ ಬಿಡು ಗಜವ ...{Loading}...
ಬಿಡು ಗಜವ ಬಿಗಿ ರೆಂಚೆಗಳ ತೆಗೆ
ದಡಿಯ ಹಾಯಿಕು ಗುಳವ ತಾ ಮೊಗ
ವಡವ ಕೊಡು ಪಟ್ಟೆಯವ ಕೈಯಲಿ ಬೀಸು ಚೌರಿಗಳ
ತಡವಿದೇನೋ ಸಾಯಿ ಫಡಿ ಫಡ
ಕೆಡೆಯೆನುತ ತಮ್ಮೊಬ್ಬರೊಬ್ಬರ
ಜಡಿಯಲಬ್ಬರವಾದುದಾರೋಹಕರ ಕೇರಿಯಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆನೆಯನ್ನು ಬಿಡು, ಅವಕ್ಕೆ ಪಕ್ಕರೆಕ್ಕೆಗಳನ್ನು ಬಿಗಿ, ಕೋಲು ತೆಗೆ, ಗುಳವನ್ನು ಹಾಕು. ಮುಖವಾಡವನ್ನು ತಾ, ರೇಶಿಮೆ ಬಟ್ಟೆಯನ್ನು ಕೈಯಲ್ಲಿ ಕೊಡು, ಚೌರಿಗಳನ್ನು ಬೀಸು ಇಷ್ಟೇಕೆ ತಡವೋ ಥೂ ! ಸಾಯಿ ಹಾಳಾಗಿ ಹೋಗು” ಎನ್ನುತ್ತ ಒಬ್ಬರೊಬ್ಬರು ಗರ್ಜಿಸುತ್ತಿರಲು ಮಾವುತರ ಕೇರಿಯಲ್ಲಿ ಅಬ್ಬರವೇ ಅಬ್ಬರವಾಯಿತು.
ಪದಾರ್ಥ (ಕ.ಗ.ಪ)
ರೆಂಚೆ-ಪಕ್ಕರೆಕ್ಕೆ, ಆನೆಯಜೂಲು; ದಡಿ-ಕೋಲು; ಪಟ್ಟೆ-ರೇಶಿಮೆ ವಸ್ತ್ರ;
ಮೂಲ ...{Loading}...
ಬಿಡು ಗಜವ ಬಿಗಿ ರೆಂಚೆಗಳ ತೆಗೆ
ದಡಿಯ ಹಾಯಿಕು ಗುಳವ ತಾ ಮೊಗ
ವಡವ ಕೊಡು ಪಟ್ಟೆಯವ ಕೈಯಲಿ ಬೀಸು ಚೌರಿಗಳ
ತಡವಿದೇನೋ ಸಾಯಿ ಫಡಿ ಫಡ
ಕೆಡೆಯೆನುತ ತಮ್ಮೊಬ್ಬರೊಬ್ಬರ
ಜಡಿಯಲಬ್ಬರವಾದುದಾರೋಹಕರ ಕೇರಿಯಲಿ ॥11॥
೦೧೨ ಕೀಲ ತೆಗೆಯಚ್ಚುಗಳ ...{Loading}...
ಕೀಲ ತೆಗೆಯಚ್ಚುಗಳ ಹೆರೆ ಬಲು
ಗಾಲಿಗಳ ಜೋಡಿಸು ಪತಾಕಾ
ಜಾಲವನು ನಿಲಿಸೀಸ ಬಲಿ ಬಲುಮಿಣಿಯ ಬಿಗಿಯೆನುತ
ಮೇಲೆ ಮೇಲಬ್ಬರದ ಘೋಳಾ
ಘೋಳಿ ಘಲ್ಲಿಸೆ ದೆಸೆಯಲತಿರಥ
ಜಾಲ ಕವಿದುದು ಕದನಕೌತೂಹಲರ ಕೇರಿಯಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೀಲುಗಳನ್ನು ತೆಗೆ,ಅಚ್ಚಿನ ಎರಡೂ ತುದಿಗೆ ಎಣ್ಣೆ ಹಾಕು, ಒಳ್ಳೆಯ ಗಾಲಿಗಳನ್ನು ಕೂಡಿಸು. ಪತಾಕೆಗಳನ್ನು ಅಲ್ಲಲ್ಲಿ ನಿಲ್ಲಿಸು. ಈಸನ್ನು ಬಿಗಿ, ದೊಡ್ಡ ಗಟ್ಟಿಯಾದ ಹಗ್ಗವನ್ನು ಬಿಗಿ” ಎಂದು ಮೇಲಿಂದ ಮೇಲೆ ಕೂಗಾಡುತ್ತಿರಲು ಅದು ದಿಕ್ಕನ್ನು ತುಂಬಿತು. ಅನೇಕ ಅತಿರಥರು ಬಂದರು. ಆ ಕೇರಿಯು ಯುದ್ಧಾತುರದಿಂದ ತುಂಬಿಹೋಯಿತು.
ಪದಾರ್ಥ (ಕ.ಗ.ಪ)
ಹೆರೆ-ಎಣ್ಣೆ ಹಾಕು; ಈಸಬಲಿ-ಅಚ್ಚುಗಳನ್ನು ಬಿಗಿ; ಘೋಳಾಘೋಳಿ -ಕೂಗಾಟ; ಕದನ ಕೌತೂಹಲರು-ಯುದ್ಧಾತುರರು.
ಮೂಲ ...{Loading}...
ಕೀಲ ತೆಗೆಯಚ್ಚುಗಳ ಹೆರೆ ಬಲು
ಗಾಲಿಗಳ ಜೋಡಿಸು ಪತಾಕಾ
ಜಾಲವನು ನಿಲಿಸೀಸ ಬಲಿ ಬಲುಮಿಣಿಯ ಬಿಗಿಯೆನುತ
ಮೇಲೆ ಮೇಲಬ್ಬರದ ಘೋಳಾ
ಘೋಳಿ ಘಲ್ಲಿಸೆ ದೆಸೆಯಲತಿರಥ
ಜಾಲ ಕವಿದುದು ಕದನಕೌತೂಹಲರ ಕೇರಿಯಲಿ ॥12॥
೦೧೩ ನೀಡು ಬಿಲುಬತ್ತಳಿಕೆಯನು ...{Loading}...
ನೀಡು ಬಿಲುಬತ್ತಳಿಕೆಯನು ನಡೆ
ಜೋಡ ತೆಗೆ ತಾ ಸವಳವನು ರಣ
ಖೇಡನೇ ಫಡ ಘಾಯವನು ಬಿಗಿ ಮದ್ದನರೆಯೆನುತ
ಕೂಡೆ ತಮತಮಗಾಹವದ ಖಯ
ಖೋಡಿಯಿಲ್ಲದೆ ಸುಭಟರಬ್ಬರ
ಝಾಡಿ ಮಸಗಿತು ಕದನದಲಿ ಕಾಲಾಳ ಕೇರಿಯಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಿಲ್ಲು ಬಾಣವನ್ನು ಕೊಡು, ಮುಂದೆ ನಡೆ, ಕವಚ ತೆಗೆ, ಬಡಿಗೆಯನ್ನು ತಾ. ನಾನೇನು ರಣ ಹೇಡಿಯೇ? ಹೋಗು ಗಾಯವನ್ನು ಕಟ್ಟು, ಮದ್ದನ್ನು ಅರೆ” ಎನ್ನುತ್ತ ಆ ಕೂಡಲೇ ಯುದ್ಧದ ಕುರಿತು ತಮಗೆ ಯಾವ ಅಳುಕು ಅಂಜಿಕೆ ಇಲ್ಲದೆ ವೀರ ಕಾಲಾಳುಗಳು ಗಟ್ಟಿಯಾಗಿ ನುಡಿಯುತ್ತಿರಲು ಆ ಕದನದ ಕಾಲಾಳಿನ ಬೀದಿಯಲ್ಲಿ ಗದ್ದಲವೋ ಗದ್ದಲ.
ಪದಾರ್ಥ (ಕ.ಗ.ಪ)
ಸವಳ-ಸಬಳ, ಈಟಿ. ; ಖೇಡ-ಹೇಡಿ; ಖಯ-ಖೋಡಿ-ದಾಕ್ಷಿಣ್ಯ, ಅಳುಕು.
ಝಾಡಿ -ಗದ್ದಲ
ಮೂಲ ...{Loading}...
ನೀಡು ಬಿಲುಬತ್ತಳಿಕೆಯನು ನಡೆ
ಜೋಡ ತೆಗೆ ತಾ ಸವಳವನು ರಣ
ಖೇಡನೇ ಫಡ ಘಾಯವನು ಬಿಗಿ ಮದ್ದನರೆಯೆನುತ
ಕೂಡೆ ತಮತಮಗಾಹವದ ಖಯ
ಖೋಡಿಯಿಲ್ಲದೆ ಸುಭಟರಬ್ಬರ
ಝಾಡಿ ಮಸಗಿತು ಕದನದಲಿ ಕಾಲಾಳ ಕೇರಿಯಲಿ ॥13॥
೦೧೪ ಬಿರಿದುದಬುಜಭವಾಣ್ಡವೆನೆ ಭೋಂ ...{Loading}...
ಬಿರಿದುದಬುಜಭವಾಂಡವೆನೆ ಭೋಂ
ಕರಿಸಿದವು ನಿಸ್ಸಾಳತತಿ ನಿ
ಬ್ಬರದ ಬಿರುದನು ಬೀರುತಿರ್ದವು ಗೌರುಗಹಳೆಗಳು
ಎರಲು ಸುಳಿದುದು ದೀಪಶಿಖಿ ಪರಿ
ಹರಿಸಿದತಿಬಲದಬ್ಬರದ ನಿ
ಷ್ಠುರತೆಗಂಜದೆ ಮಾಣದೆನೆ ಹೆರಹಿಂಗಿತಾ ರಜನಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬ್ರಹ್ಮಾಂಡವು ಬಿರಿಯಿತು ಎಂಬಂತೆ ನಿಸ್ಸಾಳಗಳು (ಭೇರಿಗಳು) ಮೊಳಗಿದವು. ಗೌರುಗಹಳೆಗಳು ಬಿರುದುಗಳನ್ನು ಸಾರುತ್ತ ಉಲಿಯುತ್ತಿದ್ದವು. ಸುಳಿಗಾಳಿ ಬೀಸಿತು. ದೀಪ ಕಾಂತಿಹೀನವಾಯಿತು. ಆಗಿನ ಬಹಳ ಬಲದ ನಿಷ್ಠುರತೆಗೆ ಅಂಜಲಾರದೆ ಇರದು ಎಂಬಂತೆ ರಾತ್ರಿಯು ಮೆಲ್ಲಮೆಲ್ಲನೆ ಅಡಗಿತು.
ಪದಾರ್ಥ (ಕ.ಗ.ಪ)
ಎರಲು-ಗಾಳಿ;
ಹೆರಹಿಂಗು-ಮರೆಯಾಗು
ಮೂಲ ...{Loading}...
ಬಿರಿದುದಬುಜಭವಾಂಡವೆನೆ ಭೋಂ
ಕರಿಸಿದವು ನಿಸ್ಸಾಳತತಿ ನಿ
ಬ್ಬರದ ಬಿರುದನು ಬೀರುತಿರ್ದವು ಗೌರುಗಹಳೆಗಳು
ಎರಲು ಸುಳಿದುದು ದೀಪಶಿಖಿ ಪರಿ
ಹರಿಸಿದತಿಬಲದಬ್ಬರದ ನಿ
ಷ್ಠುರತೆಗಂಜದೆ ಮಾಣದೆನೆ ಹೆರಹಿಂಗಿತಾ ರಜನಿ ॥14॥
೦೧೫ ಅರಸ ಕೇಳಭ್ಯುದಿತವಾದುದು ...{Loading}...
ಅರಸ ಕೇಳಭ್ಯುದಿತವಾದುದು
ಸರಸಕೈರವ ರಾಜಿ ಕೋಮಲ
ಸರಸಿರುಹವನವಾದುದಾಕ್ಷಣ ಸುರಭಿ ನಿರ್ಮುಕ್ತ
ಕಿರಣ ತೋಮರ ದಕ್ಷಿಣೋರು
ಸ್ಫುರಣ ತಿಮಿರ ಮೃಗೀಕದಂಬಕ
ತರಣಿ ನೂಕಿದನುದಯಶೈಲಕೆ ರತುನಮಯ ರಥವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ಬಿಳಿಕಮಲಗಳ ಸಮೂಹಗಳು ಅರಳಿದವು. ಆ ಕಮಲಗಳಿಂದ ತುಂಬಿದ ಸರೋವರ ಆ ಕ್ಷಣವೇ ಸುವಾಸನಾಭರಿತವಾಯಿತು. ಗದಾರೂಪದ ಕಿರಣಗಳು ಅಪ್ಪಳಿಸಿದಾಗ ಕತ್ತಲೆ ಎಂಬ ಚಿಗರೆಗಳ ಸಮೂಹವು ಕಾಲುಕಿತ್ತವು. ಹೀಗೆ ಸೂರ್ಯನು ತನ್ನ ಕಿರಣಗಳಿಂದ ಕತ್ತಲೆಯನ್ನು ಓಡಿಸುತ್ತ ರತ್ನಖಚಿತವಾದ ರಥವನ್ನು ಏರಿ ಪೂರ್ವ ಶೈಲಶಿಖರಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಕೈರವ-ಬಿಳಿಕಮಲ;
ಮೂಲ ...{Loading}...
ಅರಸ ಕೇಳಭ್ಯುದಿತವಾದುದು
ಸರಸಕೈರವ ರಾಜಿ ಕೋಮಲ
ಸರಸಿರುಹವನವಾದುದಾಕ್ಷಣ ಸುರಭಿ ನಿರ್ಮುಕ್ತ
ಕಿರಣ ತೋಮರ ದಕ್ಷಿಣೋರು
ಸ್ಫುರಣ ತಿಮಿರ ಮೃಗೀಕದಂಬಕ
ತರಣಿ ನೂಕಿದನುದಯಶೈಲಕೆ ರತುನಮಯ ರಥವ ॥15॥
೦೧೬ ಉಲಿವ ಮಙ್ಗಳಪಾಠಕರ ...{Loading}...
ಉಲಿವ ಮಂಗಳಪಾಠಕರ ಕಳ
ಕಳಿಕೆ ಮೆರೆಯಲು ಹೊಳೆವ ಹೊಂಬ
ಟ್ಟಲಲಿ ಸೂಸಿದನಘ್ರ್ಯಜಲವನು ಜನಕನಿದಿರಿನಲಿ
ಲಲಿತ ಮಂತ್ರಾಕ್ಷತೆಗಳನು ಕರ
ತಳದೊಳಾಂತು ಮಹೀಸುರರಿಗ
ಗ್ಗಳೆಯನಿತ್ತನು ಧೇನುಮಣಿಕನಕಾದಿ ವಸ್ತುಗಳ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಂದಿಮಾಗಧಿರ ಘೋಷಣೆಯ ಕಲರವವು ಶೋಭಿಸುತ್ತಿರಲು ಕರ್ಣನು ಹೊಳೆಯುವ ಬಂಗಾರದ ಬಟ್ಟಲಲ್ಲಿ ತುಂಬಿದ ನೀರಿನಿಂದ ತನ್ನ ತಂದೆ ಸೂರ್ಯನಿಗೆ ಅಘ್ರ್ಯವನ್ನು ಕೊಟ್ಟನು. ಮಂಗಳವಾದ ಮಂತ್ರಾಕ್ಷತೆಗಳನ್ನು ಕೈಯಲ್ಲಿ ಹಿಡಿದು ಬ್ರಾಹ್ಮಣರಿಗೆ ಆಕಳು, ಬೆಳ್ಳಿ, ಬಂಗಾರ ಮುತ್ತು ರತ್ನ ಮುಂತಾದವುಗಳನ್ನು ದಾನ ಮಾಡಿದನು.
ಮೂಲ ...{Loading}...
ಉಲಿವ ಮಂಗಳಪಾಠಕರ ಕಳ
ಕಳಿಕೆ ಮೆರೆಯಲು ಹೊಳೆವ ಹೊಂಬ
ಟ್ಟಲಲಿ ಸೂಸಿದನಘ್ರ್ಯಜಲವನು ಜನಕನಿದಿರಿನಲಿ
ಲಲಿತ ಮಂತ್ರಾಕ್ಷತೆಗಳನು ಕರ
ತಳದೊಳಾಂತು ಮಹೀಸುರರಿಗ
ಗ್ಗಳೆಯನಿತ್ತನು ಧೇನುಮಣಿಕನಕಾದಿ ವಸ್ತುಗಳ ॥16॥
೦೧೭ ವರ ನಿಭಾರಿಯ ...{Loading}...
ವರ ನಿಭಾರಿಯ ಬಳವಿನಲಿ ಬಲ
ಮುರಿಯ ಬಿಗಿದನು ಪದಮುಖಕೆ ಮುಂ
ಜೆರಗ ಬಿಟ್ಟನು ಬಿಗಿದ ಬದ್ದುಗೆ ದಾರ ಗೊಂಡೆಯವ
ಕಿರಣ ಲಹರಿಯ ವಜ್ರಮಾಣಿಕ
ಪರಿರಚಿತ ಭುಜಕಂಠಕರ್ಣಾ
ಭರಣ ಚರಣದ ಖಡೆಯದಲಿ ರಂಜಿಸಿದನಾ ಕರ್ಣ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠ ಸೊಂಟದ ಪಟ್ಟಿಯನ್ನು ಸುತ್ತಿ ಬಲಗಡೆಯಿಂದ ಬಿಗಿದುಕೊಂಡನು. ಪಾದಗಳಿಗೆ ಪಾದರಕ್ಷೆ ಹಾಕಿಕೊಂಡನು. ಅಂಗಾಲು ಮುಚ್ಚುವಂತೆ ಮುಂಜೆರಗನ್ನು ಬಿಟ್ಟನು. ನಡುವಿಗೆ ಉಡಿದಾರ, ಗೊಂಡೆಗಳನ್ನು ಕಟ್ಟಿಕೊಂಡನು. ಕಿರಣಗಳು ಸೂಸುವ ವಜ್ರ, ಮಾಣಿಕ್ಯಗಳಿಂದ ಕೆತ್ತಿ ಮಾಡಿದ ಭುಜಗಳ ಆಭೂಷಣ, ಕಂಠಗಳಿಗೆ ಕೊರಳ ಸರ, ಅಲ್ಲದೆ ಕರ್ಣಾಭರಣ ಮತ್ತು ಕಾಲಲ್ಲಿ ಖಡೆಗಳನ್ನು ತೊಟ್ಟನು. ಈ ಅಲಂಕಾರಗಳಿಂದ ಕರ್ಣನು ಅಂದವಾಗಿ ಶೋಭಿಸಿದನು.
ಪದಾರ್ಥ (ಕ.ಗ.ಪ)
ನಿಭಾರಿ-ಸೊಂಟದ ಪಟ್ಟಿ; ಬಳವು-ಸುತ್ತು; ಬದ್ದುಗೆ ದಾರ- ಉಡಿದಾರ,
ಮೂಲ ...{Loading}...
ವರ ನಿಭಾರಿಯ ಬಳವಿನಲಿ ಬಲ
ಮುರಿಯ ಬಿಗಿದನು ಪದಮುಖಕೆ ಮುಂ
ಜೆರಗ ಬಿಟ್ಟನು ಬಿಗಿದ ಬದ್ದುಗೆ ದಾರ ಗೊಂಡೆಯವ
ಕಿರಣ ಲಹರಿಯ ವಜ್ರಮಾಣಿಕ
ಪರಿರಚಿತ ಭುಜಕಂಠಕರ್ಣಾ
ಭರಣ ಚರಣದ ಖಡೆಯದಲಿ ರಂಜಿಸಿದನಾ ಕರ್ಣ ॥17॥
೦೧೮ ದಿನ ಗಣನೆ ...{Loading}...
ದಿನ ಗಣನೆ ಹದಿನೆಂಟು ಕೋಟಿಯ
ಕನಕವಂದಿನ ದಿನದಿ ಚೆಲ್ಲಿದ
ನನುಪಮಿತ ಧನ ರತುನ ಭಂಡಾರವನು ತೆಗೆತೆಗಸಿ
ಮನದಣಿಯೆ ಯಾಚಕರಿಗಿತ್ತುದ
ನೆನಗೆ ಬಣ್ಣಿಸಲಳವೆ ಕೇಳೈ
ಜನಪ ಕರ್ಣನದೇನ ನಿಶ್ಚಯಿಸಿದನೊ ಮನದೊಳಗೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪ್ರತಿದಿನದಂತೆ ಕರ್ಣನು ಕೋಟಿ ಕೋಟಿ ಬಂಗಾರದ ನಾಣ್ಯವನ್ನು ಸೂರೆ ಮಾಡಿದನು. ಅಪಾರ ಧನ, ರತ್ನಗಳನ್ನು ಭಾಂಡಾರದಿಂದ ತೆಗೆಸಿ, ತೆಗೆಸಿ ಮನದಣಿವಂತೆ ಯಾಚಕರಿಗೆ ದಾನ ಮಾಡಿದನು. ಅದನ್ನು ವರ್ಣಿಸಲು ನನ್ನ ಅಳವಲ್ಲ. ಅರಸನೇ, ಅಂದು ಕರ್ಣನು ಮನಸ್ಸಿನಲ್ಲಿ ಏನು ನಿಶ್ಚಯ ಮಾಡಿದ್ದನೋ ತಿಳಿಯದು.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ದಿನ ಗಣನೆ ಹದಿನೆಂಟು ಕೋಟಿಯ
ಕನಕವಂದಿನ ದಿನದಿ ಚೆಲ್ಲಿದ
ನನುಪಮಿತ ಧನ ರತುನ ಭಂಡಾರವನು ತೆಗೆತೆಗಸಿ
ಮನದಣಿಯೆ ಯಾಚಕರಿಗಿತ್ತುದ
ನೆನಗೆ ಬಣ್ಣಿಸಲಳವೆ ಕೇಳೈ
ಜನಪ ಕರ್ಣನದೇನ ನಿಶ್ಚಯಿಸಿದನೊ ಮನದೊಳಗೆ ॥18॥
೦೧೯ ಹೊಳೆಹೊಳೆದವಾಭರಣ ತಾರಾ ...{Loading}...
ಹೊಳೆಹೊಳೆದವಾಭರಣ ತಾರಾ
ವಳಿಗಳಂತಿರೆ ಪೂರ್ಣಶಶಿಮಂ
ಡಲದವೊಲು ತನುಕಾಂತಿ ತಿವಿದುದು ನಿಖಿಳದಿಗುತಟವ
ತಳಿತ ವಿಕ್ರಮ ಸುಪ್ರತಾಪೋ
ಜ್ವಲಿತಸೂರ್ಯಪ್ರಭೆ ಜಗತ್ರಯ
ದೊಳಗೆ ಝಳಪಿಸೆ ಕರ್ಣನೆಸೆದನು ದಿವ್ಯತೇಜದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ತೊಟ್ಟ ಆಭರಣಗಳು ನಕ್ಷತ್ರಗಳಂತೆ ಥಳಥಳ ಹೊಳೆದವು. ಪೂರ್ಣಚಂದ್ರನಂತೆ ಅವನ ದೇಹದ ಕಾಂತಿಯು ಸಮಗ್ರ ದಿಗ್ದೇಶವನ್ನೇ ತುಂಬಿ ಹೊಳೆಯುತ್ತಿತ್ತು. ಆತನ ಉಕ್ಕುತ್ತಿರುವ ಶೌರ್ಯ, ಸಾಹಸಗಳ ಸೂರ್ಯ ಪ್ರಕಾಶವು ಮೂರು ಲೋಕದೊಳಗೂ ಬೆಳಗುತ್ತಿತ್ತು. ತೇಜಸ್ಸಿನಿಂದ ಕರ್ಣನು ಶೋಭಿಸಿದನು.
ಮೂಲ ...{Loading}...
ಹೊಳೆಹೊಳೆದವಾಭರಣ ತಾರಾ
ವಳಿಗಳಂತಿರೆ ಪೂರ್ಣಶಶಿಮಂ
ಡಲದವೊಲು ತನುಕಾಂತಿ ತಿವಿದುದು ನಿಖಿಳದಿಗುತಟವ
ತಳಿತ ವಿಕ್ರಮ ಸುಪ್ರತಾಪೋ
ಜ್ವಲಿತಸೂರ್ಯಪ್ರಭೆ ಜಗತ್ರಯ
ದೊಳಗೆ ಝಳಪಿಸೆ ಕರ್ಣನೆಸೆದನು ದಿವ್ಯತೇಜದಲಿ ॥19॥
೦೨೦ ದೇವ ಗುರು ...{Loading}...
ದೇವ ಗುರು ವಿಪ್ರರಿಗೆ ಬಹು ಸಂ
ಭಾವನೆಯ ಮಾಡಿದನು ಶಸ್ತ್ರಾ
ಸ್ತ್ರಾವಳಿಯ ತರಿಸಿದನು ತುಂಬಿಸಿದನು ವರೂಥದಲಿ
ರಾವುತರಿಗಾರೋಹಕರಿಗೆ ಭ
ಟಾವಳಿಗೆ ರಥಿಕರಿಗೆ ಚೆಲ್ಲಿದ
ನಾ ವಿವಿಧ ಸೌಗಂಧಭಾವಿತ ಯಕ್ಷ ಕರ್ದಮವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವರು ಗುರುಗಳಿಗೆ, ಬ್ರಾಹ್ಮಣರಿಗೆ ಬಹಳಷ್ಟು ಕಾಣಿಕೆ, ಕೊಡುಗೆಗಳನ್ನು ಕೊಟ್ಟನು. ಶಸ್ತ್ರ ಅಸ್ತ್ರಗಳನ್ನು ತರಿಸಿ ರಥದಲ್ಲಿ ತುಂಬಿಸಿದನು. ಬಳಿಕ ರಾವುತರು, ಮಾವುತರು, ಭಟರು ಮತ್ತು ರಥಿಕರು ಇವರೆಲ್ಲರಿಗೂ ನಾನಾ ವಿಧದ ಪರಿಮಳವುಳ್ಳ ಒಳ್ಳೆಯ (ಯಕ್ಷಕರ್ದಮ) ಸುಗಂಧದ ಲೇಪನವನ್ನು ಕೊಡಿಸಿದನು.
ಮೂಲ ...{Loading}...
ದೇವ ಗುರು ವಿಪ್ರರಿಗೆ ಬಹು ಸಂ
ಭಾವನೆಯ ಮಾಡಿದನು ಶಸ್ತ್ರಾ
ಸ್ತ್ರಾವಳಿಯ ತರಿಸಿದನು ತುಂಬಿಸಿದನು ವರೂಥದಲಿ
ರಾವುತರಿಗಾರೋಹಕರಿಗೆ ಭ
ಟಾವಳಿಗೆ ರಥಿಕರಿಗೆ ಚೆಲ್ಲಿದ
ನಾ ವಿವಿಧ ಸೌಗಂಧಭಾವಿತ ಯಕ್ಷ ಕರ್ದಮವ ॥20॥
೦೨೧ ನಡೆದು ಬನ್ದನು ...{Loading}...
ನಡೆದು ಬಂದನು ರಥಕೆ ದೆಸೆ ಕಂ
ಪಿಡುತ ನೆರೆದ ಮಹಾಪ್ರಧಾನರ
ನಡುವೆ ಚಲಿಸುವ ಚಾತುರಂಗದ ಸುಳಿಯ ಸಂದಣಿಯ
ಒಡನೆ ನೆಲನಳ್ಳಿರಿಯೆ ವಾದ್ಯದ
ಗಡಣ ಮೊರೆದುದು ಪಾಠಕರ ಗಡ
ಬಡಿಯ ಕಳರವ ಬಗಿದುದಬುಜಭವಾಂಡಮಂಡಲವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ರಥದತ್ತ ಬಂದನು. ದಿಕ್ಕುಗಳು ನಡುಗಿದವು. ಮಹಾಪ್ರಧಾನರ ಸಮೇತ ಚಾತುರಂಗ ಬಲ ನಡೆಯಿತು. ಇದರ ಸಂಚಾರ, ಸಂದಣಿಗಳಿಂದ ನೆಲವು ನಡುಗಿತು. ವಾದ್ಯಗಳ ಸಮೂಹ ಒಂದೇ ಸಮನೆ ಮೊಳಗಹತ್ತಿದವು. ಸ್ತುತಿಪಾಠಕರ ಸಮೂಹ ತಮ್ಮ ಇಂಪಾದ ಧ್ವನಿಯಲ್ಲಿ ಉಲಿಯತೊಡಗಿತು. ಈ ಗದ್ದಲವು ಇಡೀ ಬ್ರಹ್ಮಾಂಡವನ್ನೇ ಭೇದಿಸಿದವು.
ಮೂಲ ...{Loading}...
ನಡೆದು ಬಂದನು ರಥಕೆ ದೆಸೆ ಕಂ
ಪಿಡುತ ನೆರೆದ ಮಹಾಪ್ರಧಾನರ
ನಡುವೆ ಚಲಿಸುವ ಚಾತುರಂಗದ ಸುಳಿಯ ಸಂದಣಿಯ
ಒಡನೆ ನೆಲನಳ್ಳಿರಿಯೆ ವಾದ್ಯದ
ಗಡಣ ಮೊರೆದುದು ಪಾಠಕರ ಗಡ
ಬಡಿಯ ಕಳರವ ಬಗಿದುದಬುಜಭವಾಂಡಮಂಡಲವ ॥21॥
೦೨೨ ಅತಿರಭಸದಿನ್ದಾಯ್ತು ಸೇನಾ ...{Loading}...
ಅತಿರಭಸದಿಂದಾಯ್ತು ಸೇನಾ
ಪತಿಯ ಪಯಣವಲಾ ಎನುತ ಗುರು
ಸುತ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ವಿತತಸನ್ನಾಹದಲಿ ಕುರುಭೂ
ಪತಿಸಹಿತ ಹೊರವಂಟು ಭಾಸ್ಕರ
ಸುತನ ಸನ್ನೆಯ ಮೇಲೆ ನಡೆದರು ಮುಂದೆ ಸಂದಣಿಸಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸೇನಾಪತಿಯ ಪಯಣ ಬಹಳ ರಭಸದಿಂದ ಆಯಿತು’ ಎನ್ನುತ್ತ ಅಶ್ವತ್ಥಾಮ, ಶಕುನಿ, ಕೃತವರ್ಮ, ಕೃಪ, ದುಶ್ಶಾಸನ ಮುಂತಾದವರು ದುರ್ಯೋಧನನ ಸಹಿತ ಪಾಳೆಯದಿಂದ ಹೊರಟರು. ಅವರು ಕರ್ಣನ ಸೂಚನೆಯಂತೆ ನಡೆದು ಮುಂದೆ ಸಂದಣಿಸಿದರು.
ಮೂಲ ...{Loading}...
ಅತಿರಭಸದಿಂದಾಯ್ತು ಸೇನಾ
ಪತಿಯ ಪಯಣವಲಾ ಎನುತ ಗುರು
ಸುತ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ವಿತತಸನ್ನಾಹದಲಿ ಕುರುಭೂ
ಪತಿಸಹಿತ ಹೊರವಂಟು ಭಾಸ್ಕರ
ಸುತನ ಸನ್ನೆಯ ಮೇಲೆ ನಡೆದರು ಮುಂದೆ ಸಂದಣಿಸಿ ॥22॥
೦೨೩ ಬಳಿಯ ನೆಲನುಗ್ಗಡಣೆಗಳ ...{Loading}...
ಬಳಿಯ ನೆಲನುಗ್ಗಡಣೆಗಳ ವೆ
ಗ್ಗಳೆಯ ಸುಭಟರ ಮೇಳದಲಿ ಬಂ
ದಿಳಿದು ದಂಡಿಗೆಯಿಂದ ನಸುನಗುತೇರಿದನು ರಥವ
ಚಳಹಯಂಗಳು ಹುರಿಯ ವಾಘೆಯ
ನಳವಡಿಸೆ ಬಲನೆಡಕೆ ವಾಜಿಯ
ಸುಳಿಸಿ ಸಾರಥಿತನವ ತೋರಿದನಂದು ಕಲಿಶಲ್ಯ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಯಲ್ಲಿ ಹೊಗಳುಭಟರು ನೆಲಮುಟ್ಟಿ ನಮಸ್ಕರಿಸಿ ಜಯ ಜಯಕಾರ ಮಾಡುತ್ತಿರಲು ವೀರರ ಗುಂಪಿನೊಡನೆ ಬಂದು ಪಲ್ಲಕ್ಕಿಯಿಂದ ಇಳಿದು, ಕರ್ಣನು ನಸುನಗುತ್ತ ರಥವನ್ನು ಏರಿದನು. ಚಪಲಗತಿಯ ಹಯಗಳಿಗೆ ಹುರಿಕಟ್ಟಾದ ಕಡಿವಾಣ ತೊಡಿಸಿ ಕುದುರೆಗಳನ್ನು ಎಡಕ್ಕೊಮ್ಮೆ ಬಲಕ್ಕೊಮ್ಮೆ ಓಡಾಡಿಸಿ, ವೀರನಾದ ಶಲ್ಯನು ತನ್ನ ಸಾರಥಿತನವನ್ನು ತೋರಿಸಿದನು.
ಮೂಲ ...{Loading}...
ಬಳಿಯ ನೆಲನುಗ್ಗಡಣೆಗಳ ವೆ
ಗ್ಗಳೆಯ ಸುಭಟರ ಮೇಳದಲಿ ಬಂ
ದಿಳಿದು ದಂಡಿಗೆಯಿಂದ ನಸುನಗುತೇರಿದನು ರಥವ
ಚಳಹಯಂಗಳು ಹುರಿಯ ವಾಘೆಯ
ನಳವಡಿಸೆ ಬಲನೆಡಕೆ ವಾಜಿಯ
ಸುಳಿಸಿ ಸಾರಥಿತನವ ತೋರಿದನಂದು ಕಲಿಶಲ್ಯ ॥23॥
೦೨೪ ಬಳಿಯ ಪಾಯವಧಾರುಗಳ ...{Loading}...
ಬಳಿಯ ಪಾಯವಧಾರುಗಳ ಕಳ
ಕಳದೊಳಗೆ ರಥವೇರಿದನು ನೆಲ
ಹಿಳಿಯೆ ಹೇರಾಳಿಸಿತು ಬಹುವಿಧವಾದ್ಯನಿರ್ಘೋಷ
ತಳಿತವಮಳಚ್ಛತ್ರ ಚಮರಾ
ವಳಿಯ ಝಲ್ಲಿಯ ಪಟ್ಟಿಗಳ ನವ
ಪಳಹರಧ್ವಜ ದಂಡವೆತ್ತಿತು ವರ ರಥಾಗ್ರದಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹತ್ತಿರದಲ್ಲಿ ಎಚ್ಚರಿಕೆ! ಜಾಗ್ರತೆ ! ಎಂಬ ಉಲಿಯ ಕಳಕಳದಲ್ಲಿ ಕರ್ಣನು ರಥವನ್ನು ಏರಿದನು. ನೆಲ ಕುಸಿಯುವಂತಾಯಿತು. ನಾನಾ ತರಹದ ವಾದ್ಯಗಳ ಗರ್ಜನೆ ಹೆಚ್ಚಾಯಿತು. ಅನೇಕ ಛತ್ರಗಳು ಅರಳಿದವು. ಚಾಮರಗಳು ಬೀಸತೊಡಗಿದವು. ಕುಚ್ಚುಗಳಂದ ಕೂಡಿದ ಹೊಸದಾದ ಧ್ವಜಸ್ತಂಭಕ್ಕೆ ಧ್ವಜವನ್ನು ರಥದ ತುದಿಯಲ್ಲಿ ಜೋಡಿಸಲಾಯಿತು.
ಪದಾರ್ಥ (ಕ.ಗ.ಪ)
ಹಿಳಿ-ಕುಸಿ ಹೇರಾಳಿಸು-ಬಹಳವಾಗು; ಝಲ್ಲಿ - ಕುಚ್ಚು, ಗೊಂಡೆ
ಮೂಲ ...{Loading}...
ಬಳಿಯ ಪಾಯವಧಾರುಗಳ ಕಳ
ಕಳದೊಳಗೆ ರಥವೇರಿದನು ನೆಲ
ಹಿಳಿಯೆ ಹೇರಾಳಿಸಿತು ಬಹುವಿಧವಾದ್ಯನಿರ್ಘೋಷ
ತಳಿತವಮಳಚ್ಛತ್ರ ಚಮರಾ
ವಳಿಯ ಝಲ್ಲಿಯ ಪಟ್ಟಿಗಳ ನವ
ಪಳಹರಧ್ವಜ ದಂಡವೆತ್ತಿತು ವರ ರಥಾಗ್ರದಲಿ ॥24॥
೦೨೫ ಇಕ್ಕೆಲದ ರಾವುತರ ...{Loading}...
ಇಕ್ಕೆಲದ ರಾವುತರ ತೇರಿನ
ತೆಕ್ಕೆಗಳ ಗಜಘಟೆಯ ಕಾಲಾ
ಳಕ್ಕಜದ ನಿಸ್ಸಾಳ ಸೂಳಿನ ಲಗ್ಗೆದಂಬಟದ
ಉಕ್ಕಿತೋ ವಿಲಯಾಬ್ಧಿಯೆನೆ ಸಾ
ಲಿಕ್ಕಿ ನಡೆದುದು ಸೇನೆ ರಾಯನ
ಸಿಕ್ಕಿನವಸರದಾನೆ ನಿಜಪಾಳೆಯವ ಬೀಳ್ಕೊಂಡ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆಯಲ್ಲಿ ಕುದುರೆ ಸೈನ್ಯ, ರಥಗಳು, ಆನೆಯದಳ, ಕಾಲಾಳುಗಳು ಸಾಗಿದ್ದವು. ಯುದ್ಧದ ಉತ್ಸಾಹದಲ್ಲಿ ನಿಸ್ಸಾಳ ಭೇರಿಗಳು ಮೊಳಗುತ್ತಿದ್ದವು. ಪ್ರಳಯ ಕಾಲದ ಸಮುದ್ರವೇ ಉಕ್ಕಿ ಹರಿಯುತ್ತಿದೆಯೋ ಏನೋ ಎಂಬಂತೆ ಸೇನೆ ಸಾಲಾಗಿ ನಡೆಯುತ್ತಿತ್ತು. ಹೀಗೆ ದುರ್ಯೋಧನನ ನೆಚ್ಚಿನ ಕರ್ಣನು ತನ್ನ ಪಾಳಯವನ್ನು ಬಿಟ್ಟು ಯುದ್ಧಭೂಮಿಗೆ ತೆರಳಿದನು.
ಮೂಲ ...{Loading}...
ಇಕ್ಕೆಲದ ರಾವುತರ ತೇರಿನ
ತೆಕ್ಕೆಗಳ ಗಜಘಟೆಯ ಕಾಲಾ
ಳಕ್ಕಜದ ನಿಸ್ಸಾಳ ಸೂಳಿನ ಲಗ್ಗೆದಂಬಟದ
ಉಕ್ಕಿತೋ ವಿಲಯಾಬ್ಧಿಯೆನೆ ಸಾ
ಲಿಕ್ಕಿ ನಡೆದುದು ಸೇನೆ ರಾಯನ
ಸಿಕ್ಕಿನವಸರದಾನೆ ನಿಜಪಾಳೆಯವ ಬೀಳ್ಕೊಂಡ ॥25॥
೦೨೬ ರಾಯ ಕೇಳೈ ...{Loading}...
ರಾಯ ಕೇಳೈ ಬಳಿಕ ಕಲಿರಾ
ಧೇಯ ಬರುತಿರೆ ತೋರಿದುತ್ಪಾ
ತಾಯತವನೇನೆಂಬೆನೈ ಶಿವಶಿವ ಮಹಾದೇವ
ವಾಯಸದ ತಡೆ ಭೂಮಿಕಂಪ ನಿ
ಜಾಯುಧಂಗಳ ಕಿಡಿ ಗಜಾಶ್ವನಿ
ಕಾಯ ರಥವಾಜಿಗಳ ಕಂಬನಿ ಕಾಣಲಾಯ್ತೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
s26. ರಾಯನೇ ಕೇಳು, ಆಮೇಲೆ ಶೂರನಾದ ಕರ್ಣನು ಬರುತ್ತಿರಲು ಅನೇಕ ಅಪಶಕುನಗಳು ಕಂಡವು. ಕಾಗೆಗಳು ಅಡ್ಡ ಬಂದು ಅಡ್ಡಿಮಾಡಿದವು. ಭೂಮಿ ಕಂಪಿಸಿತು. ಆಯುಧಗಳು ತಾವೇ ಕಿಡಿಯುಗುಳಿದವು. ಆನೆ-ಕುದುರೆ ರಥದ ಕುದುರೆ ಇವೆಲ್ಲ ಕಣ್ಣೀರು ಸುರಿಸಿದವು. ಇವೆಲ್ಲವೂ ಕಾಣಿಸಿದವು.
ಮೂಲ ...{Loading}...
ರಾಯ ಕೇಳೈ ಬಳಿಕ ಕಲಿರಾ
ಧೇಯ ಬರುತಿರೆ ತೋರಿದುತ್ಪಾ
ತಾಯತವನೇನೆಂಬೆನೈ ಶಿವಶಿವ ಮಹಾದೇವ
ವಾಯಸದ ತಡೆ ಭೂಮಿಕಂಪ ನಿ
ಜಾಯುಧಂಗಳ ಕಿಡಿ ಗಜಾಶ್ವನಿ
ಕಾಯ ರಥವಾಜಿಗಳ ಕಂಬನಿ ಕಾಣಲಾಯ್ತೆಂದ ॥26॥
೦೨೭ ಒದರಿದವು ನರಿ ...{Loading}...
ಒದರಿದವು ನರಿ ಮುಂದೆ ಕರ್ಣನ
ಕುದುರೆಗಳು ಮುಗ್ಗಿದವು ಪರಿವೇ
ಷದಲಿ ಸಪ್ತಗ್ರಹದ ವಕ್ರತೆ ಸೂರ್ಯಮಂಡಲಕೆ
ಇದಿರಿನಲಿ ಬಿರುಗಾಳಿ ಧೂಳಿಯ
ಕೆದರಿ ಬೀಸಿತು ನಿಖಿಳಬಲ ಮು
ಚ್ಚಿದುದು ಕಂಗಳನವನಿಪತಿ ಕಂಡನು ಮಹಾದ್ಭುತವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನರಿಗಳು ಊಳಿಟ್ಟವು. ಮುಂದೆ ಹೋಗುತ್ತಿರುವಾಗ ಕರ್ಣನ ಕುದುರೆಗಳು ಮುಗ್ಗರಿಸಿದವು. ಏಳು ಗ್ರಹಗಳ ವಕ್ರತೆಯಿಂದಾಗಿ ಸೂರ್ಯಮಂಡಲದ ಪ್ರಭಾವಲಯ ಮಸುಕಾಯಿತು. ಎದುರಿನಿಂದ ಬಿರುಗಾಳಿ ಬೀಸಿ ಧೂಳೆದ್ದಿತು. ಇದರಿಂದಾಗಿ ಸಮಸ್ತ ಸೈನ್ಯವೂ ಕಣ್ಣುಮುಚ್ಚತೊಡಗಿತು. ಈ ಎಲ್ಲಾ ಅಪಶಕುನಗಳನ್ನೂ ದುರ್ಯೋಧನನು ಕಂಡನು.
ಮೂಲ ...{Loading}...
ಒದರಿದವು ನರಿ ಮುಂದೆ ಕರ್ಣನ
ಕುದುರೆಗಳು ಮುಗ್ಗಿದವು ಪರಿವೇ
ಷದಲಿ ಸಪ್ತಗ್ರಹದ ವಕ್ರತೆ ಸೂರ್ಯಮಂಡಲಕೆ
ಇದಿರಿನಲಿ ಬಿರುಗಾಳಿ ಧೂಳಿಯ
ಕೆದರಿ ಬೀಸಿತು ನಿಖಿಳಬಲ ಮು
ಚ್ಚಿದುದು ಕಂಗಳನವನಿಪತಿ ಕಂಡನು ಮಹಾದ್ಭುತವ ॥27॥
೦೨೮ ತೃಣಕೆ ಕೊಮ್ಬನೆ ...{Loading}...
ತೃಣಕೆ ಕೊಂಬನೆ ಕರ್ಣನಿದನಾ
ರೆಣಿಸುವರು ದುಷ್ಕರ್ಮಶೇಷದ
ಋಣನಿಬದ್ಧರು ಕಂಡು ಮಾಡುವುದೇನು ಕೌರವರು
ರಣಮನೋರಾಗದಲಿ ದಳಸಂ
ದಣಿಯ ನಿಲಿಸಿದನತಿರಥರ ಲಾ
ವಣಿಗೆಗೊಂಡನು ಕರ್ಣ ಪರಿವಾರಕ್ಕೆ ಕೈಮುಗಿದು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವಕ್ಕೆ ಕರ್ಣನು ಹುಲ್ಲಿನಷ್ಟಾದರೂ ಮಹತ್ವ ಕೊಟ್ಟಾನೆಯೇ? ಇದನ್ನು ಯಾರು ತಿಳಿಯುವರು ? ಪಾಪವಿಶೇಷದಿಂದ ಬಿಗಿಯಲ್ಪಟ್ಟ ಕೌರವರು ಕಂಡು ಮಾಡುವದಾದರೂ ಏನು? ಅವರು ಕೇವಲ ಯುದ್ಧ ಪಿಪಾಸುಗಳು. ಕರ್ಣನು ಸಾಗುತ್ತಿರುವ ಸೈನ್ಯದ ಗುಂಪನ್ನು ನಿಲ್ಲಿಸಿ ಅತಿರಥರನ್ನು ಸಮಾವೇಶಗೊಳಿಸಿದನು. ಬಳಿಕ ಎಲ್ಲ ಪರಿವಾರಕ್ಕೆ ಕೈಮುಗಿದು ಈ ರೀತಿ ನುಡಿದನು.
ಪದಾರ್ಥ (ಕ.ಗ.ಪ)
ಲಾವಣಿಗೆ- ಸಮಾವೇಶ
ಮೂಲ ...{Loading}...
ತೃಣಕೆ ಕೊಂಬನೆ ಕರ್ಣನಿದನಾ
ರೆಣಿಸುವರು ದುಷ್ಕರ್ಮಶೇಷದ
ಋಣನಿಬದ್ಧರು ಕಂಡು ಮಾಡುವುದೇನು ಕೌರವರು
ರಣಮನೋರಾಗದಲಿ ದಳಸಂ
ದಣಿಯ ನಿಲಿಸಿದನತಿರಥರ ಲಾ
ವಣಿಗೆಗೊಂಡನು ಕರ್ಣ ಪರಿವಾರಕ್ಕೆ ಕೈಮುಗಿದು ॥28॥
೦೨೯ ನೊನ್ದವರು ನಿಲಿ ...{Loading}...
ನೊಂದವರು ನಿಲಿ ಸ್ವಾಮಿಕಾರ್ಯಕೆ
ಹಿಂದುಗಳೆವರು ಮರಳಿ ಮನೆಗಳ
ಹಿಂದಣಾಸೆಯ ಹೇವಹರುಕರಿಗಿಂದು ಮಹನವಮಿ
ನಿಂದರೊಳ್ಳಿತು ನೃಪನ ದೆಸೆಯಲಿ
ಕಂದು ಕಲೆಯುಳ್ಳವರು ಕಾಳೆಗ
ವಿಂದು ಬೆಟ್ಟಿತು ಬೀಳುಕೊಂಬುದು ಭೀತಿ ಬೇಡೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೊಂದವರು ನಿಂತುಕೊಳ್ಳಿರಿ. ಒಡೆಯನ ಕಾರ್ಯಕ್ಕೆ ಮನಸ್ಸಿಲ್ಲದವರು ಮರಳಿ ಹೋಗಿರಿ. ಮನೆಗಳ ಮೇಲೆ ಆಸೆಯಿದ್ದವರು ತೆರಳಿರಿ. ನಾಚಿಕೆಗೇಡಿಗಳಿಗೆ ಇಂದು (ಹಿಂದಿರುಗಲು) ಒಳ್ಳೆಯ ಅವಕಾಶ. ರಾಜನಲ್ಲಿ ಕುಂದುಕೊರತೆ ಎಣಿಸುವವರು ಇಲ್ಲಿಯೇ ನಿಂತುಕೊಂಡರೆ ಒಳ್ಳೆಯದು. ಇಂದಿನ ಕಾಳಗ ಭಾರಿಯದು. ಯಾರು ಹೋಗಬೇಕೆನ್ನುವಿರೋ ಅವರು ಬೀಳ್ಕೊಂಡು ಹೋಗಿರಿ. ಅಂಜುವ ಕಾರಣವಿಲ್ಲ” ಎಂದು ಕರ್ಣನು ನುಡಿದನು.
ಪದಾರ್ಥ (ಕ.ಗ.ಪ)
ಹಿಂದುಗಳೆ-ಹಿಂದೆಗೆ; ಹೇವ ಹರುಕರು- ನಾಚಿಕೆಗೇಡಿಗಳು ; ಬೆಟ್ಟಿತು-ಕಠಿಣವಾದುದು
ಮೂಲ ...{Loading}...
ನೊಂದವರು ನಿಲಿ ಸ್ವಾಮಿಕಾರ್ಯಕೆ
ಹಿಂದುಗಳೆವರು ಮರಳಿ ಮನೆಗಳ
ಹಿಂದಣಾಸೆಯ ಹೇವಹರುಕರಿಗಿಂದು ಮಹನವಮಿ
ನಿಂದರೊಳ್ಳಿತು ನೃಪನ ದೆಸೆಯಲಿ
ಕಂದು ಕಲೆಯುಳ್ಳವರು ಕಾಳೆಗ
ವಿಂದು ಬೆಟ್ಟಿತು ಬೀಳುಕೊಂಬುದು ಭೀತಿ ಬೇಡೆಂದ ॥29॥
೦೩೦ ಓಡಿ ನಾಚಿಸುವವರು ...{Loading}...
ಓಡಿ ನಾಚಿಸುವವರು ನಿಲಿ ರಣ
ಖೇಡರೀಗಳೆ ಮರಳಿ ಮನವ
ಲ್ಲಾಡಿ ಮರುಗುವರೇಳಿ ಮರಣದಲಾವ ಫಲಸಿದ್ಧಿ
ಕೂಡುಗಲಕರು ನಿಲ್ಲಿ ಇಹಪರ
ಗೇಡಿಗರು ಹೆರಸಾರಿ ಗುಣದಲಿ
ಬೇಡಿಕೊಂಬೆನು ಖಾತಿಗೊಳ್ಳೆನು ಹೋಗಿ ನೀವೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧಭೂಮಿಯಿಂದ ಓಡಿ ನಾಚಿಸುವಂತೆ ಮಾಡುವವರು ಇಲ್ಲಿಯೇ ನಿಲ್ಲಿರಿ. ರಣಹೇಡಿಗಳಾದವರು ತಿರುಗಿರಿ. ಮನಸ್ಸು ಹೊಯ್ದಾಡಿ ಕನಿಕರ ತಾಳಿದವರು ಮೇಲಕ್ಕೆ ಏಳಿರಿ. ಮರಣದಿಂದ ಏನು ಫಲ? ಕೂಡಿಯೇ ಇದ್ದು ನಡುವೆ ಕೆಡಿಸುವವರು ನಿಂತುಕೊಳ್ಳಿರಿ. ಈ ಲೋಕ, ಪರಲೋಕ ಎರಡಕ್ಕೂ ಕೇಡು ಬಗೆಯುವವರು ಹೊರಟು ಹೋಗಿರಿ. ನಾನು ಗುಣದಿಂದ ಬೇಡಿಕೊಳ್ಳುವೆ. ಯಾರ ಮೇಲೂ ಸಿಟ್ಟಿಗೆ ಏಳಲಾರೆ, ಹೋಗಬಯಸುವವರು ಹೋಗಿರಿ” ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ರಣಖೇಡರು-ಯುದ್ಧಕ್ಕೆ ಹೆದರುವವರು; ಕೂಡುಗಲಕರು-ಒಗ್ಗಟ್ಟನ್ನು ಮುರಿಯುವವರು; ಹೆರಸಾರಿ-ಬದಿಗೆ ಸರಿಯಿರಿ;
ಮೂಲ ...{Loading}...
ಓಡಿ ನಾಚಿಸುವವರು ನಿಲಿ ರಣ
ಖೇಡರೀಗಳೆ ಮರಳಿ ಮನವ
ಲ್ಲಾಡಿ ಮರುಗುವರೇಳಿ ಮರಣದಲಾವ ಫಲಸಿದ್ಧಿ
ಕೂಡುಗಲಕರು ನಿಲ್ಲಿ ಇಹಪರ
ಗೇಡಿಗರು ಹೆರಸಾರಿ ಗುಣದಲಿ
ಬೇಡಿಕೊಂಬೆನು ಖಾತಿಗೊಳ್ಳೆನು ಹೋಗಿ ನೀವೆಂದ ॥30॥
೦೩೧ ಸನ್ದ ಸುಭಟರು ...{Loading}...
ಸಂದ ಸುಭಟರು ಬನ್ನಿ ಸ್ವರ್ಗದ
ಬಂದಿಕಾರರು ಬನ್ನಿ ಮನದಿಂ
ಮುಂದೆ ಹಜ್ಜೆಯ ತವಕಿಗರು ಬಹುದೆನ್ನ ಸಂಗಾತ
ನೊಂದಡುಬ್ಬುವರಿತ್ತು ಬನ್ನಿ ಪು
ರಂದರನ ಸರಿಗದ್ದುಗೆಗೆ ಮನ
ಸಂದವರು ಹೊಗಿ ರಣವನೆಂದನು ಕರ್ಣ ನಿಜಬಲಕೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶ್ರೇಷ್ಠವಾದ ವೀರರು ಬನ್ನಿರಿ, ಸ್ವರ್ಗದ ಅಧೀನರಾಗಬಯಸುವವರು ಬನ್ನಿರಿ. ಮನಸ್ಸಿನಿಂದ ಮುಂದೆ ಹೆಜ್ಜೆಯಿಡುವ ಆತುರದವರು ನನ್ನ ಸಂಗಡ ಬನ್ನಿರಿ. ಗಾಯಗೊಂಡಷ್ಟೂ ಹುರುಪಿಗೇಳುವವರು ಇತ್ತ ಬನ್ನಿರಿ. ಇಂದ್ರನ ಸರಿಸಮನಾಗಿ ಅವನ ಸಿಂಹಾಸನವೇರುವ ಅಪೇಕ್ಷೆಯುಳ್ಳವರು ಬನ್ನಿರಿ. ನೀವೆಲ್ಲ ರಣವನ್ನು ಸೇರಿ” ಎಂದು ಕರ್ಣ ತನ್ನ ಬಲಕ್ಕೆ ಹೇಳಿದನು.
ಮೂಲ ...{Loading}...
ಸಂದ ಸುಭಟರು ಬನ್ನಿ ಸ್ವರ್ಗದ
ಬಂದಿಕಾರರು ಬನ್ನಿ ಮನದಿಂ
ಮುಂದೆ ಹಜ್ಜೆಯ ತವಕಿಗರು ಬಹುದೆನ್ನ ಸಂಗಾತ
ನೊಂದಡುಬ್ಬುವರಿತ್ತು ಬನ್ನಿ ಪು
ರಂದರನ ಸರಿಗದ್ದುಗೆಗೆ ಮನ
ಸಂದವರು ಹೊಗಿ ರಣವನೆಂದನು ಕರ್ಣ ನಿಜಬಲಕೆ ॥31॥
೦೩೨ ವೀರ ಭಟರಾಹವವ ...{Loading}...
ವೀರ ಭಟರಾಹವವ ಹೊಗಿ ಜ
ಝ್ಝಾರರಿತ್ತಲು ನಡಯಿ ಕದನವಿ
ಚಾರಶೀಲರು ಮುಂದೆ ಹೋಗಿ ಮಹಾರಥಾದಿಗಳು
ಆರು ಬಲ್ಲರು ಸಮರ ಯಜ್ಞದ
ಸಾರವನು ಪಾಪಿಗಳಿರಕಟ ಶ
ರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೀರರಾದವರು ಸಮರವನ್ನು ಪ್ರವೇಶಿಸಿ. ಶೂರರಾದವರು ಇತ್ತ ನಡೆಯಿರಿ. ಸಮರದ ನೀತಿಯನ್ನು ಬಲ್ಲವರು ಮಹಾರಥಿಕರು ಮುಂದೆ ಹೋಗಿರಿ. ಈ ಸಮರ ಎಂಬುದು ಒಂದು ಯಜ್ಞವಿದ್ದಂತೆ. ಇದರ ಸಾರ, ಮಹತ್ವವನ್ನು ಬಲ್ಲವರು ಯಾರು? (ಅಯ್ಯೋ) ಪಾಪಿಗಳಿರಾ ! ನೀವು ನಿಮ್ಮ ದೇಹವನ್ನು ಸಮರದಲ್ಲಿ ಈಡಾಡಿ, (ಉತ್ತಮವಾದ) ಮುಕ್ತಿಯನ್ನು ಪಡೆಯಿರಿ” ಎಂದು ಕರ್ಣನು ಹೇಳಿದನು.
ಮೂಲ ...{Loading}...
ವೀರ ಭಟರಾಹವವ ಹೊಗಿ ಜ
ಝ್ಝಾರರಿತ್ತಲು ನಡಯಿ ಕದನವಿ
ಚಾರಶೀಲರು ಮುಂದೆ ಹೋಗಿ ಮಹಾರಥಾದಿಗಳು
ಆರು ಬಲ್ಲರು ಸಮರ ಯಜ್ಞದ
ಸಾರವನು ಪಾಪಿಗಳಿರಕಟ ಶ
ರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ ॥32॥
೦೩೩ ರಾಯ ಕೇಳೈ ...{Loading}...
ರಾಯ ಕೇಳೈ ಕರ್ಪುರದ ತವ
ಲಾಯಿಗಳನೊಡೆದೊಡೆದು ಭಟರಿಗೆ
ಹಾಯಿಕಿದನಂಜುಳಿಗಳಲಿ ಮೊಗೆಮೊಗೆದು ಬೇಸರದೆ
ಸಾಯದಿಹರೇ ರಣದೊಳಗೆ ರಾ
ಧೇಯನೀ ಮನ್ನಣೆಗೆ ಬದುಕುವ
ನಾಯಿಗಿಹಪರವುಂಟೆ ಎಂದುದು ನಿಖಿಳ ಪರಿವಾರ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರಸನೇ! ಕೇಳು. ಕರ್ಪೂರ ಸಹಿತವಾದ ತಾಂಬೂಲವನ್ನು ಬೇಸರಿಸದೆ ಬೊಗಸೆಯಲ್ಲಿ ತೆಗೆತೆಗೆದು ಎಲ್ಲ ವೀರರಿಗೂ ಹಂಚಿದನು. ಹೀಗಿರುವಾಗ ರಣದಲ್ಲಿ ದೇಹ ಬಿಡಲು ಅಂಜುವವರಾರು? ರಾಧೇಯನ ಈ ಗೌರವಕ್ಕೆ ಪಾತ್ರರಾದ ಎಲ್ಲರೂ ಸಾಯಲು ಅಂಜದೆ ಸಿದ್ಧರಾದರು. “ಅಪ್ಪಿ ತಪ್ಪಿ ಯಾರಾದರೂ ಬದುಕಲು ಇಚ್ಛಿಸಿದರೆ ಅವರು ನಾಯಿಗಳಿದ್ದಂತೆ. ಅಂಥವರಿಗೆ ಇಹ-ಪರಗಳು ದಕ್ಕುವವೇ?” ಎಂದು ಪರಿವಾರದ ಜನರು ಮಾತನಾಡಿಕೊಳ್ಳುತ್ತಿದ್ದರು.” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ತವಲಾಯಿ-ಕರ್ಪುರದ ಹಳಕುಗಳು
ಮೂಲ ...{Loading}...
ರಾಯ ಕೇಳೈ ಕರ್ಪುರದ ತವ
ಲಾಯಿಗಳನೊಡೆದೊಡೆದು ಭಟರಿಗೆ
ಹಾಯಿಕಿದನಂಜುಳಿಗಳಲಿ ಮೊಗೆಮೊಗೆದು ಬೇಸರದೆ
ಸಾಯದಿಹರೇ ರಣದೊಳಗೆ ರಾ
ಧೇಯನೀ ಮನ್ನಣೆಗೆ ಬದುಕುವ
ನಾಯಿಗಿಹಪರವುಂಟೆ ಎಂದುದು ನಿಖಿಳ ಪರಿವಾರ ॥33॥
೦೩೪ ಕೇಳಿರೈ ಪರಿವಾರವಿನ್ದಿನ ...{Loading}...
ಕೇಳಿರೈ ಪರಿವಾರವಿಂದಿನ
ಕಾಳೆಗವಲೇ ನಮಗೆ ಭೀಷ್ಮರ
ಕೋಲಗುರುವಿನ ಹರಿಬವನು ಮನವಾರೆ ಹೊತ್ತೆವಲ
ಸೋಲವೋ ಕೌರವನ ಭಾಗ್ಯದ
ಕಾಲವೋ ವಿಧಿ ಬಲ್ಲದೆನ್ನಯ
ತೋಳ ಬಲುಹನು ಹಗೆಗೆ ತೋರುವೆನೆಂದನಾ ಕರ್ಣ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪರಿವಾರ ಜನರೇ ಕೇಳಿರಿ. ಇಂದಿನ ಯುದ್ಧವೆಂದರೆ, ಭೀಷ್ಮರು, ದ್ರೋಣರು ಇವರ ಹೊಣೆಗಾರಿಕೆಯನ್ನು ನಾವು ಮನಸಾರೆ ಹೊತ್ತಂತೆ. ಇದರಲ್ಲಿ ಸೋಲೋ? ಗೆಲುವೋ? ಹೇಳಲಾಗದು. ಕೌರವನ ಭಾಗ್ಯದ ಕಾಲವೊ? ಇದನ್ನು ಆ ವಿಧಿಯೇ ಬಲ್ಲದು. ನಾನು ಮಾತ್ರ ನನ್ನ ತೋಳ ಬಲವನ್ನು ವೈರಿಗಳಿಗೆ ತೋರುವೆನು” ಎಂದು ಕರ್ಣನು ನುಡಿದನು.
ಪದಾರ್ಥ (ಕ.ಗ.ಪ)
ಹರಿಬ-ಹೊಣೆಗಾರಿಕೆ;
ಮೂಲ ...{Loading}...
ಕೇಳಿರೈ ಪರಿವಾರವಿಂದಿನ
ಕಾಳೆಗವಲೇ ನಮಗೆ ಭೀಷ್ಮರ
ಕೋಲಗುರುವಿನ ಹರಿಬವನು ಮನವಾರೆ ಹೊತ್ತೆವಲ
ಸೋಲವೋ ಕೌರವನ ಭಾಗ್ಯದ
ಕಾಲವೋ ವಿಧಿ ಬಲ್ಲದೆನ್ನಯ
ತೋಳ ಬಲುಹನು ಹಗೆಗೆ ತೋರುವೆನೆಂದನಾ ಕರ್ಣ ॥34॥
೦೩೫ ಆವ ತೋರಿಸಲಾಪನರ್ಜುನ ...{Loading}...
ಆವ ತೋರಿಸಲಾಪನರ್ಜುನ
ದೇವನನು ರಿಪುಬಲದೊಳಾತಂ
ಗೀವೆನೀ ಪದಕವನು ಖಡೆಯವ ವಜ್ರಮಾಣಿಕದ
ಆವನೀ ಫಲುಗುಣನ ತೇರಿನ
ಠಾವಿದೇ ಎಂದವಗೆ ಇದೆ ಮು
ಕ್ತಾವಳಿಯಲಂಕಾರವೆಂದನು ಕರ್ಣ ನಿಜಬಲಕೆ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವೈರಿಯ ಸೈನ್ಯದಲ್ಲಿ ಯಾವನು ಅರ್ಜುನನನ್ನು ತೋರಿಸಬಲ್ಲನೋ ಅವನಿಗೆ ವಜ್ರ, ಮಾಣಿಕ್ಯಗಳ ಪದಕ, ಖಡೆಯಗಳನ್ನು ಕೊಡುವೆನು ಮತ್ತು ಯಾರು ಇದು ಅರ್ಜುನನ ತೇರು, ಅದರದೇ ಸ್ಥಳ ಎಂದು ಹೇಳುವನೋ ಅವನಿಗೆ ಮುತ್ತಿನ ಸರದ ಕಾಣಿಕೆ ಕೊಡುವೆ” ಎಂದು ಕರ್ಣ ತನ್ನ ಸೇನೆಗೆ ಹೇಳಿದನು.
ಮೂಲ ...{Loading}...
ಆವ ತೋರಿಸಲಾಪನರ್ಜುನ
ದೇವನನು ರಿಪುಬಲದೊಳಾತಂ
ಗೀವೆನೀ ಪದಕವನು ಖಡೆಯವ ವಜ್ರಮಾಣಿಕದ
ಆವನೀ ಫಲುಗುಣನ ತೇರಿನ
ಠಾವಿದೇ ಎಂದವಗೆ ಇದೆ ಮು
ಕ್ತಾವಳಿಯಲಂಕಾರವೆಂದನು ಕರ್ಣ ನಿಜಬಲಕೆ ॥35॥
೦೩೬ ನರನ ತೋರಿಸಿದವಗೆ ...{Loading}...
ನರನ ತೋರಿಸಿದವಗೆ ಶತ ಸಾ
ವಿರದ ಪಟ್ಟಣವರ್ಜುನನ ಮೋ
ಹರವಿದೇ ಎಂದವಗೆ ಕೊಡುವೆನು ಹತ್ತುಸಾವಿರವ
ನರನ ತೆರಳಿಚಿ ತಂದು ತನ್ನೊಡ
ನರುಹಿದಗೆ ನೂರಾನೆ ಹಯ ಸಾ
ವಿರದ ವಳಿತವ ಬರಸಿ ಕೊಡುವೆನು ರಾಯನಾಣೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನನ್ನು ತೋರಿಸಿದವನಿಗೆ ನೂರು, ಸಾವಿರ ಪಟ್ಟಣಗಳು. ‘ಅರ್ಜುನನ ಸೈನ್ಯ ಇದೇ’ ಎಂದು ಹೇಳುವವನಿಗೆ ಹತ್ತು ಸಾವಿರ ಬಹುಮಾನ, ಅರ್ಜುನನನ್ನು ಹಿಂದಕ್ಕೆ ಹೊರಳಿಸಿ ತಂದು, ತನಗೆ ಹೇಳಿದವನಿಗೆ ನೂರು ಆನೆ, ಕುದುರೆ (ಅಷ್ಟೇ ಏಕೆ?) ಸಾವಿರದ ಪ್ರದೇಶವನ್ನು ಬರೆಸಿ ಕೊಡುವೆ. ದುರ್ಯೋಧನನ ಆಣೆಯಾಗಿಯೂ ನಿಜ” ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ವಳಿತ -ಪ್ರದೇಶ;
ಮೂಲ ...{Loading}...
ನರನ ತೋರಿಸಿದವಗೆ ಶತ ಸಾ
ವಿರದ ಪಟ್ಟಣವರ್ಜುನನ ಮೋ
ಹರವಿದೇ ಎಂದವಗೆ ಕೊಡುವೆನು ಹತ್ತುಸಾವಿರವ
ನರನ ತೆರಳಿಚಿ ತಂದು ತನ್ನೊಡ
ನರುಹಿದಗೆ ನೂರಾನೆ ಹಯ ಸಾ
ವಿರದ ವಳಿತವ ಬರಸಿ ಕೊಡುವೆನು ರಾಯನಾಣೆಂದ ॥36॥
೦೩೭ ತೋರಿರೈ ಫಲುಗುಣನನಿದಿರಲಿ ...{Loading}...
ತೋರಿರೈ ಫಲುಗುಣನನಿದಿರಲಿ
ತೋರಿರೈ ಸಿತಹಯನನಕಟಾ
ತೋರಿರೈ ವಿಜಯನನು ನಿಮಗೆಯು ಸ್ವಾಮಿಕಾರ್ಯವಲ
ತೋರಿ ಪಾರ್ಥನನವನ ನೆತ್ತರ
ಸೂರೆ ಶಾಕಿನಿಯರಿಗೆ ನಿಮಗುರೆ
ಸೂರೆಯೋ ಭಂಡಾರ ಕೌರವ ರಾಯನಾಣೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನನ್ನು ಎದುರಿಗೆ ತೋರಿಸಿರಿ. ಬಿಳಿಯ ಕುದುರೆಗಳನ್ನು ರಥಕ್ಕೆ ಹೂಡಿದಾತನನ್ನು ತೋರಿಸಿರಿ. ವಿಜಯನನ್ನು ತೋರಿಸಿರಿ. ನಿಮಗೂ ಇದು ಸ್ವಾಮಿ ಕಾರ್ಯ. ನೀವು ಅರ್ಜುನನನ್ನು ತೋರಿಸಿದರೆ ಆತನ ರಕ್ತವನ್ನು ಶಾಕಿನಿಯರಿಗೆ ಸೂರೆ ಮಾಡುವೆನು. ನಿಮಗೋ ಒಳ್ಳೆ ಬೊಕ್ಕಸವನ್ನೇ ಸೂರೆ ಮಾಡಿಬಿಡುವೆನು. (ಇದು ಸುಳ್ಳಲ್ಲ) ಕೌರವರಾಯನ ಆಣೆ” ಎಂದು ಕರ್ಣನು ತನ್ನ ಬಲದ ಎದುರಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಸಿತಹಯ-ಬಿಳಿಕುದುರೆಯವ;
ಮೂಲ ...{Loading}...
ತೋರಿರೈ ಫಲುಗುಣನನಿದಿರಲಿ
ತೋರಿರೈ ಸಿತಹಯನನಕಟಾ
ತೋರಿರೈ ವಿಜಯನನು ನಿಮಗೆಯು ಸ್ವಾಮಿಕಾರ್ಯವಲ
ತೋರಿ ಪಾರ್ಥನನವನ ನೆತ್ತರ
ಸೂರೆ ಶಾಕಿನಿಯರಿಗೆ ನಿಮಗುರೆ
ಸೂರೆಯೋ ಭಂಡಾರ ಕೌರವ ರಾಯನಾಣೆಂದ ॥37॥
೦೩೮ ನರನ ಶರಹತಿಗೆನ್ನ ...{Loading}...
ನರನ ಶರಹತಿಗೆನ್ನ ತನು ಜ
ಝ್ಝರಿತವಾಗಲಿ ನನ್ನ ಕಣೆಯಲಿ
ಬಿರಿಯಲಾತನ ದೇಹ ಖಾಡಾಖಾಡಿಯುದ್ಧದಲಿ
ಕರುಳು ಕರುಳಲಿ ತೊಡಕಿ ನೊರೆ ನೆ
ತ್ತರಲಿ ನೆತ್ತರು ಕೂಡಿ ಕಡಿಯಲಿ
ಬೆರಸಿ ಕಡಿ ಪಲ್ಲಟಿಸೆ ಕಾದುವೆನಿಂದು ಹಗೆಯೊಡನೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನ ಬಾಣಗಳ ಹೊಡೆತಕ್ಕೆ ನನ್ನ ದೇಹ ನುಗ್ಗುನುಗ್ಗಾಗಲಿ. ನನ್ನ ಬಾಣಗಳಿಂದ ಆತನ ದೇಹ ಬಿರಿದು ಹೋಗಲಿ. ಕೈಕೈ ಯುದ್ಧವಾಗಲಿ, ಕರುಳಿನಲ್ಲಿ ಕರುಳು ತೊಡಕಲಿ. ನೊರೆ ನೆತ್ತರಲ್ಲಿ ಮತ್ತೆ ನೆತ್ತರು ಕೂಡಲಿ. ಮಾಂಸದ ತುಂಡುಗಳಲ್ಲಿ ತುಂಡುಗಳು ಬೆರೆಯಲಿ, ಅದಲು ಬದಲಾಗಲಿ. ಇಂದು ನಾನು ವೈರಿಯೊಡನೆ ಚೆನ್ನಾಗಿ ಕಾದುವೆನು.”
ಮೂಲ ...{Loading}...
ನರನ ಶರಹತಿಗೆನ್ನ ತನು ಜ
ಝ್ಝರಿತವಾಗಲಿ ನನ್ನ ಕಣೆಯಲಿ
ಬಿರಿಯಲಾತನ ದೇಹ ಖಾಡಾಖಾಡಿಯುದ್ಧದಲಿ
ಕರುಳು ಕರುಳಲಿ ತೊಡಕಿ ನೊರೆ ನೆ
ತ್ತರಲಿ ನೆತ್ತರು ಕೂಡಿ ಕಡಿಯಲಿ
ಬೆರಸಿ ಕಡಿ ಪಲ್ಲಟಿಸೆ ಕಾದುವೆನಿಂದು ಹಗೆಯೊಡನೆ ॥38॥
೦೩೯ ಸರಳು ಸರಳಿಙ್ಗೊಮ್ಮೆ ...{Loading}...
ಸರಳು ಸರಳಿಂಗೊಮ್ಮೆ ರೋಮಾಂ
ಕುರದ ಗುಡಿಯಲಿ ರಕ್ತಜಲದಲಿ
ಕರುಳ ಹೂಮಾಲೆಯಲಿ ವೀರರಣಾಭಿಷೇಕವನು
ಧರಿಸಿ ವೈರಿಯ ಘಾಯಘಾಯದ
ಧರಧುರಕೆ ತನಿಹೆಚ್ಚಿ ಮನದು
ಬ್ಬರದಲಿರಿದಾಡಿದರೆ ದಿಟ ಕೃತಕೃತ್ಯ ತಾನೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪ್ರತಿ ಬಾಣಕ್ಕೊಮ್ಮೆ ನನಗೆ ರೋಮಾಂಚನವಾಗಿ ಉಬ್ಬಿ, ರಕ್ತಜಲ ಹಾಗೂ ಕರುಳ ಹೂಮಾಲೆಗಳಿಂದ ವೀರ ರಣಾಭಿಷೇಕವನ್ನು ಮಾಡುವೆನು. ವೈರಿಯ ಘಾಯಗಳು ಹೆಚ್ಚಿದಂತೆಲ್ಲ ಸವಿ ಎನಿಸಿ ನಾನು ಉಬ್ಬಿ ಮನದ ಉತ್ಸಾಹದಿಂದ ಕಾದಾಡಿದ್ದಾದರೆ ನಾನು ಧನ್ಯನು” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಸರಳು ಸರಳಿಂಗೊಮ್ಮೆ ರೋಮಾಂ
ಕುರದ ಗುಡಿಯಲಿ ರಕ್ತಜಲದಲಿ
ಕರುಳ ಹೂಮಾಲೆಯಲಿ ವೀರರಣಾಭಿಷೇಕವನು
ಧರಿಸಿ ವೈರಿಯ ಘಾಯಘಾಯದ
ಧರಧುರಕೆ ತನಿಹೆಚ್ಚಿ ಮನದು
ಬ್ಬರದಲಿರಿದಾಡಿದರೆ ದಿಟ ಕೃತಕೃತ್ಯ ತಾನೆಂದ ॥39॥
೦೪೦ ಅವನ ಮುನ್ದಲೆ ...{Loading}...
ಅವನ ಮುಂದಲೆ ತನ್ನ ಕೈಯಲಿ
ಅವನ ಕೈಯಲಿ ತನ್ನ ಮುಂದಲೆ
ಅವನ ದೇಹದ ಘಾಯವೆನ್ನಯ ಘಾಯ ಚುಂಬಿಸುತ
ಅವನ ಖಡುಗದಲೆನ್ನ ಮೈ ನಾ
ತಿವಿದ ಖಡ್ಗಕೆ ನರನ ಮೈ ಲವ
ಲವಿಸಲಡಿಮೇಲಾಗಿ ಹೊರಳ್ದರೆ ಧನ್ಯ ತಾನೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನ ಮುಂದಲೆಯು ತನ್ನ ಕೈಯೊಳಗೆ ಮತ್ತು ತನ್ನ ತಲೆಯ ಮುಂಭಾಗ ಅವನ ಕೈಯಲ್ಲಿ ಸಿಗಬೇಕು. ಅವನ ದೇಹದ ಘಾಯ ನನ್ನ ದೇಹದ ಘಾಯಕ್ಕೆ ತಾಗಬೇಕು. ಅವನ ಖಡ್ಗದಿಂದ ನನ್ನ ಮೈ ನುಚ್ಚುನುರಿಯಾಗಬೇಕು. ನನ್ನ ಬಾಣದ ತಿವಿತದಿಂದ ಅವನ ಮೈ ಚಡಪಡಿಸಬೇಕು. ಕಡೆಗೆ ಅವನು ತಲೆಕೆಳಗಾಗಿ ಬಿದ್ದರೆ ಆಗ ತಾನು ಧನ್ಯನು” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಅವನ ಮುಂದಲೆ ತನ್ನ ಕೈಯಲಿ
ಅವನ ಕೈಯಲಿ ತನ್ನ ಮುಂದಲೆ
ಅವನ ದೇಹದ ಘಾಯವೆನ್ನಯ ಘಾಯ ಚುಂಬಿಸುತ
ಅವನ ಖಡುಗದಲೆನ್ನ ಮೈ ನಾ
ತಿವಿದ ಖಡ್ಗಕೆ ನರನ ಮೈ ಲವ
ಲವಿಸಲಡಿಮೇಲಾಗಿ ಹೊರಳ್ದರೆ ಧನ್ಯ ತಾನೆಂದ ॥40॥
೦೪೧ ಕೈದಣಿಯೆ ಹೊಯ್ದರಿಯ ...{Loading}...
ಕೈದಣಿಯೆ ಹೊಯ್ದರಿಯ ಸೀಳಿದು
ಬಾಯ್ದಣಿಯೆ ಮೂದಲಿಸಿ ಹೆಚ್ಚಿದ
ಮೈದಣಿಯೆ ರಿಪುಭಟನ ಹೊಯ್ಲಲಿ ಘಾಯವನು ಪಡೆದು
ಹಾಯ್ದ ಕರುಳಿನ ಮಿದುಳ ಜೋರಿನ
ತೊಯ್ದ ರಕ್ತಾಂಬರದಿ ತಾನಿರ
ಲೈದಿ ಕುರುಪತಿ ಕಂಡನಾದರೆ ಧನ್ಯ ತಾನೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೈ ಸೋಲುವವರೆಗೂ ವೈರಿಯನ್ನು ಹೊಯ್ದು ಸೀಳಿ, ಬಾಯಿ ಸೋಲುವಂತೆ ವೈರಿಯನ್ನು ಹೀಯಾಳಿಸಿ, ಮೈದಣಿಯುವಂತೆ ಹೋರಾಡಿ ವೈರಿಯಿಂದ ಏಟು ತಿಂದು ಘಾಯ ಪಡೆದು ಕರುಳು ಹೊರಬಿದ್ದಿರಲು, ಮಿದುಳು ಬಿರಿದು ಅದರ ರಸ ಹರಿದು ರಕ್ತದಿಂದ ತೊಯ್ದ ಬಟ್ಟೆಯಲ್ಲಿ ನಾನು ಬಿದ್ದಿರಲು. ಅದನ್ನು ದುರ್ಯೋಧನನು ಕಂಡದ್ದಾದರೆ ನಾನು ಧನ್ಯನು” ಎಂದ.
ಮೂಲ ...{Loading}...
ಕೈದಣಿಯೆ ಹೊಯ್ದರಿಯ ಸೀಳಿದು
ಬಾಯ್ದಣಿಯೆ ಮೂದಲಿಸಿ ಹೆಚ್ಚಿದ
ಮೈದಣಿಯೆ ರಿಪುಭಟನ ಹೊಯ್ಲಲಿ ಘಾಯವನು ಪಡೆದು
ಹಾಯ್ದ ಕರುಳಿನ ಮಿದುಳ ಜೋರಿನ
ತೊಯ್ದ ರಕ್ತಾಂಬರದಿ ತಾನಿರ
ಲೈದಿ ಕುರುಪತಿ ಕಂಡನಾದರೆ ಧನ್ಯ ತಾನೆಂದ ॥41॥
೦೪೨ ನರನ ರಕುತದ ...{Loading}...
ನರನ ರಕುತದ ಮದ್ಯಪಾನವ
ನೆರೆದು ಶಾಕಿನಿಯರಿಗೆ ಪಾರ್ಥನ
ಕರುಳ ದೊಂಡೆಯ ಕೂಳ ಮುದ್ದೆಯ ಬಡಿಸಿ ದೈತ್ಯರಿಗೆ
ಅರಿಯ ಖಂಡದಿ ಹಸಿಯ ಸುಂಟಿಗೆ
ವೆರಸಿ ಭೂತಾವಳಿಯ ದಣಿಸಿದ
ಡರಸು ಕೌರವನೆನ್ನ ಸಾಕಿತಕಿಂದು ಫಲವೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನ ರಕ್ತವೆಂಬುದೇ ಮದ್ಯ. ಅದನ್ನು ಶಾಕಿನಿಯರಿಗೆ ಧಾರೆಯಾಗಿ ಎರೆಯುವೆನು. ಅರ್ಜುನನ ಕರುಳ ಗೊಂಚಲುಗಳೇ ಕೂಳು. ಮಾಂಸದ ಮುದ್ದೆ. ಇವುಗಳನ್ನು ದೈತ್ಯರಿಗೆ ಬಡಿಸುವೆನು. ವೈರಿಯ ಹಸಿಯ ಮಾಂಸದ ಜೊತೆಗೆ ಸುಟ್ಟ ಮಾಂಸವನ್ನು ಭೂತಗಳಿಗೆ ನೀಡಿ ತಣಿಸಿದರೆ, ಆಗ ಕೌರವೇಶ್ವರನು ಇಷ್ಟು ದಿನಗಳವರೆಗೆ ನನ್ನನ್ನು ಸಾಕಿದ್ದಕ್ಕೆ ಸಾರ್ಥಕವಾಗುತ್ತದೆ” ಎಂದು ಕರ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ದೊಂಡೆ-ಗೊಂಚಲು, ಸಿವಡು ಸುಂಟಿಗೆ-ಸುಟ್ಟಮಾಂಸ;
ಮೂಲ ...{Loading}...
ನರನ ರಕುತದ ಮದ್ಯಪಾನವ
ನೆರೆದು ಶಾಕಿನಿಯರಿಗೆ ಪಾರ್ಥನ
ಕರುಳ ದೊಂಡೆಯ ಕೂಳ ಮುದ್ದೆಯ ಬಡಿಸಿ ದೈತ್ಯರಿಗೆ
ಅರಿಯ ಖಂಡದಿ ಹಸಿಯ ಸುಂಟಿಗೆ
ವೆರಸಿ ಭೂತಾವಳಿಯ ದಣಿಸಿದ
ಡರಸು ಕೌರವನೆನ್ನ ಸಾಕಿತಕಿಂದು ಫಲವೆಂದ ॥42॥