೦೦೦ ಸೂಚನೆ ಕಾಮಕೋಳಾಹಳನು ...{Loading}...
ಸೂಚನೆ: ಕಾಮಕೋಳಾಹಳನು ದಕ್ಷನ
ಹೋಮದಳವುಳಕಾರ ಹರ ನಿ
ಸ್ಸೀಮದಲಿ ಪುರ ಮೂರ ಗೆಲಿದನು ಸಲಹಿದನು ಸುರರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ: ಕಾಮಕೋಳಾಹಳನೂ ದಕ್ಷನ ಹೋಮವನ್ನು ಸೂರೆಮಾಡಿದವನೂ ಆದ ಹರನು ನಿಸ್ಸೀಮನಾಗಿ ಮೂರು ಪುರಗಳನ್ನು ಗೆದ್ದು ದೇವತೆಗಳನ್ನು ಕಾಪಾಡಿದನು.
ಪದಾರ್ಥ (ಕ.ಗ.ಪ)
ದಳವುಳ- ಸೂರೆ.
ಮೂಲ ...{Loading}...
ಸೂಚನೆ: ಕಾಮಕೋಳಾಹಳನು ದಕ್ಷನ
ಹೋಮದಳವುಳಕಾರ ಹರ ನಿ
ಸ್ಸೀಮದಲಿ ಪುರ ಮೂರ ಗೆಲಿದನು ಸಲಹಿದನು ಸುರರ
೦೦೧ ರಚಿಸಿ ರಥವನು ...{Loading}...
ರಚಿಸಿ ರಥವನು ಭೀತಿ ಬೇಡಿ
ನ್ನುಚಿತವೇನದ ಮಾಡಿ ದೈತ್ಯ
ಪ್ರಚಯವನು ಪರಿಹರಿಸಿ ಕೊಡುವುದು ಪಾಶುಪತ ಬಾಣ
ಕುಚಿತರಿನ್ನೇಗುವರು ಖಳರಿ
ನ್ನಚಳಿತವಲೇ ನಿಮ್ಮ ಪದವೆನೆ
ನಿಚಿತಹರುಷರು ವಿಶ್ವಕರ್ಮಂಗರುಹಿದರು ಹದನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಥವನ್ನು ಸಿದ್ಧಪಡಿಸಿ. ಇನ್ನು ಭೀತಿ ಬೇಡ. ಉಚಿತವಾದುದನ್ನೇ ಮಾಡಿ, ಪಾಶುಪತ ಬಾಣವು ದೈತ್ಯ ಸಮೂಹವನ್ನು ಪರಿಹರಿಸಿ ಕೊಡುತ್ತದೆ. ಅಲ್ಪರು ಇನ್ನು ಏನು ಮಾಡಿಯಾರು? ದುಷ್ಟರು ಇನ್ನು ಏನು ಮಾಡಿಯಾರು ನಿಮ್ಮ ಪದವಿ ಅಚಲಿತವಾಗಿರುತ್ತದೆಯಲ್ಲವೇ? -ಎಂದು ಶಿವನು ಹೇಳಲು ಸಂತೋಷಗೊಂಡ ದೇವತೆಗಳು ವಿಶ್ವಕರ್ಮನಿಗೆ ರಥದ ರೀತಿಯನ್ನು ತಿಳಿಸಿದರು.
ಪದಾರ್ಥ (ಕ.ಗ.ಪ)
ಪ್ರಚಯ- ಸಮೂಹ.
ಕುಚಿತ- ಅಲ್ಪ.
ಏಗು- ಏನನ್ನು ಮಾಡು?
ನಿಚಿತ- ಗುಡ್ಡೆಹಾಕಿದ.
ಮೂಲ ...{Loading}...
ರಚಿಸಿ ರಥವನು ಭೀತಿ ಬೇಡಿ
ನ್ನುಚಿತವೇನದ ಮಾಡಿ ದೈತ್ಯ
ಪ್ರಚಯವನು ಪರಿಹರಿಸಿ ಕೊಡುವುದು ಪಾಶುಪತ ಬಾಣ
ಕುಚಿತರಿನ್ನೇಗುವರು ಖಳರಿ
ನ್ನಚಳಿತವಲೇ ನಿಮ್ಮ ಪದವೆನೆ
ನಿಚಿತಹರುಷರು ವಿಶ್ವಕರ್ಮಂಗರುಹಿದರು ಹದನ ॥1॥
೦೦೨ ಮಾವ ಕೇಳದುಭುತವನೀ ...{Loading}...
ಮಾವ ಕೇಳದುಭುತವನೀ ವಿ
ಶ್ವಾವನೀತಳವಾಯ್ತು ರಥ ತಾ
ರಾವಳಿಗಳೀಸಾಯ್ತು ಸತ್ತಿಗೆಯಾಯ್ತು ಕನಕಾದ್ರಿ
ಆವುದಯಘನಶೈಲವಸ್ತ್ರ
ಗ್ರಾವ ಕೂಬರ ರಥದಧಿಷ್ಠಾ
ನಾವಲಂಬನವಾಗೆ ರಚಿಸಿದನಾತ ನಿಮಿಷದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಾವ, ಅದ್ಭುತವನ್ನು ಕೇಳು. ಇಡೀ ಬ್ರಹ್ಮಾಂಡವೇ ರಥವಾಯಿತು. ನಕ್ಷತ್ರ ಸಮೂಹಗಳು ಅದರ ಈಚಾದವು. ಕನಕಪರ್ವತವು ಛತ್ರಿಯಾಯಿತು. ಆ ಉದಯ ಘನಶೈಲವು ರಥದ ಪೀಠವಾಯಿತು. ಈ ರೀತಿ ಅಸ್ತ್ರಗ್ರಾವ(ಮ?)ವಾಯಿತು. ಪೂರ್ವಾದ್ರಿಯೇ ಆಯುಧ ಸಮೂಹ ; ಸಾಗರವೇ(ಕೂಬರ) ರಥದ ಪೀಠವಾಗಲು ವಿಶ್ವಕರ್ಮನು ರಥವನ್ನು ನಿಮಿಷದಲ್ಲಿ ರಚಿಸಿದನು.” ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಈಸು- ರಥದ ಈಚು.
ಕೂಬರ- ರಥದ ಈಸು, ಮೂಕಿ. ಅಧಿಷ್ಠಾನ- ಆಧಾರ. ಆಸ್ತ್ರಗ್ರಾಮ(?)- ಅಸ್ತ್ರ ಕದಂಬಕ, ಅಸ್ತ್ರಗಳ ಸಮೂಹ.
ಮೂಲ ...{Loading}...
ಮಾವ ಕೇಳದುಭುತವನೀ ವಿ
ಶ್ವಾವನೀತಳವಾಯ್ತು ರಥ ತಾ
ರಾವಳಿಗಳೀಸಾಯ್ತು ಸತ್ತಿಗೆಯಾಯ್ತು ಕನಕಾದ್ರಿ
ಆವುದಯಘನಶೈಲವಸ್ತ್ರ
ಗ್ರಾವ ಕೂಬರ ರಥದಧಿಷ್ಠಾ
ನಾವಲಂಬನವಾಗೆ ರಚಿಸಿದನಾತ ನಿಮಿಷದಲಿ ॥2॥
೦೦೩ ಆಸುರವಲೇ ವಿನ್ಧ್ಯ ...{Loading}...
ಆಸುರವಲೇ ವಿಂಧ್ಯ ಹಿಮಗಿರಿ
ಹಾಸು ಹಲಗೆಗಳಾದವಚ್ಚು ಮ
ಹಾಸಮುದ್ರವೆ ಆಯ್ತು ಗಾಲಿಗೆಬೇರೆ ತರಲೇಕೆ
ಆ ಸಸಿಯ ಸೂರಿಯನ ಮಂಡಲ
ವೈಸಲೇ ಗಂಗಾದಿ ಸಕಲ ಮ
ಹಾ ಸರಿತ್ಕುಲವಾಯ್ತು ಚಮರಗ್ರಾಹಿಣಿಯರಲ್ಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಅತಿಶಯವಲ್ಲವೆ! ವಿಂಧ್ಯ, ಮತ್ತು ಹಿಮಗಿರಿಗಳು ಹಾಸುವ ಹಲಗೆಗಳಾದವು. ಮಹಾಸಮುದ್ರವೆ ರಥದ ಅಚ್ಚು ಆಯಿತು. ಗಾಲಿಗಳಿಗೆ ಬೇರೆ ತರುವುದೇಕೆ? ಚಂದ್ರ ಮತ್ತು ಸೂರ್ಯ ಮಂಡಲಗಳೇ ಇವೆಯಲ್ಲವೆ? ಗಂಗೆ ಮೊದಲಾದ ಎಲ್ಲ ಮಹಾನದಿಗಳು ಚಾಮರ ಹಿಡಿಯುವವರಾದುವು.
ಪದಾರ್ಥ (ಕ.ಗ.ಪ)
ಆಸುರ- ಭಯಂಕರ, ಅತಿಶಯ.
ಚಮರಗ್ರಾಹಿಣಿ- ಚಾಮರ ಹಿಡಿಯುವರು.
ಮೂಲ ...{Loading}...
ಆಸುರವಲೇ ವಿಂಧ್ಯ ಹಿಮಗಿರಿ
ಹಾಸು ಹಲಗೆಗಳಾದವಚ್ಚು ಮ
ಹಾಸಮುದ್ರವೆ ಆಯ್ತು ಗಾಲಿಗೆಬೇರೆ ತರಲೇಕೆ
ಆ ಸಸಿಯ ಸೂರಿಯನ ಮಂಡಲ
ವೈಸಲೇ ಗಂಗಾದಿ ಸಕಲ ಮ
ಹಾ ಸರಿತ್ಕುಲವಾಯ್ತು ಚಮರಗ್ರಾಹಿಣಿಯರಲ್ಲಿ ॥3॥
೦೦೪ ರಾಯ ಕೇಳೈ ...{Loading}...
ರಾಯ ಕೇಳೈ ಮತ್ತೆಯಾಹವ
ನೀಯ ಗಾರುಹಪತ್ಯ ದಕ್ಷಿಣ
ವಾಯುಸಖರಾದರು ತ್ರಿವೇಣುಕವಾ ರಥಾಗ್ರದಲಿ
ಆಯಿತಲ್ಲಿ ವರೂಥ ನಕ್ಷ
ತ್ರಾಯತವು ಬಳೆಯನುಕರುಷವೊಂ
ದಾಯಿತಾ ಗ್ರಹರಾಜಿಯಾದವು ಮಾವ ಕೇಳ್ ಎಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಯನೇ ಕೇಳು. ಮತ್ತೆ ತ್ರೇತಾಗ್ನಿಗಳಾದ ಆಹವನೀಯ, ಗಾರುಹಪತ್ಯ ಮತ್ತು ದಕ್ಷಿಣಾಗ್ನಿಗಳು ರಥದ ಮುಂಭಾಗದಲ್ಲಿ ಬಾವುಟದ ಕೋಲನ್ನು ಕಟ್ಟುವ ಮೂರು ಹಗ್ಗಗಳಾದರು. ರಥವು ನಕ್ಷತ್ರಗಳಿಂದ ತುಂಬಿತ್ತು. ಗ್ರ್ರಹಗಳ ಸಮೂಹವು ರಥದ ಗಾಲಿಗಳ ನಡುವಣ ಅಚ್ಚಾಯಿತು. " ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ವರೂಥ- ರಥ. ತ್ರಿವೇಣುಕ- ಬಾವುಟದ ಕೋಲನ್ನು ಕಟ್ಟಿರುವ ಮೂರು ಹಗ್ಗಗಳು.
ನಕ್ಷತ್ರಾಯತ- ನಕ್ಷತ್ರಗಳ ವಿಸ್ತಾರ.
ಅನುಕರುಷ- ರಥದ ಅಚ್ಚು
U್ಪ್ರಹರಾಜಿ- U್ಪ್ರಹಗಳ ಸಮೂಹ.
ಮೂಲ ...{Loading}...
ರಾಯ ಕೇಳೈ ಮತ್ತೆಯಾಹವ
ನೀಯ ಗಾರುಹಪತ್ಯ ದಕ್ಷಿಣ
ವಾಯುಸಖರಾದರು ತ್ರಿವೇಣುಕವಾ ರಥಾಗ್ರದಲಿ
ಆಯಿತಲ್ಲಿ ವರೂಥ ನಕ್ಷ
ತ್ರಾಯತವು ಬಳೆಯನುಕರುಷವೊಂ
ದಾಯಿತಾ ಗ್ರಹರಾಜಿಯಾದವು ಮಾವ ಕೇಳೆಂದ ॥4॥
೦೦೫ ಆ ರಥಾಗ್ರಕೆ ...{Loading}...
ಆ ರಥಾಗ್ರಕೆ ವೇದ ನಾಲುಕು
ವಾರುವಂಗಳ ಹೂಡಿದರು ನೊಗ
ನಾ ರಜನಿ ದಿನ ಮಾಸವುತ್ತರದಕ್ಷಿಣಾಯನವು
ಸಾರ ಧೃತಿ ವೇದಪ್ರತತಿ ವಿ
ಸ್ತಾರವಾದವು ನೊಗನ ಕೀಲ್ಗಳು
ಚಾರು ಕುಲಫಣಿನಿಕರ ಹಯಬಂಧನದ ನೇಣುಗಳು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ರಥದ ಮುಂಭಾಗದಲ್ಲಿ ವೇದಗಳೆಂಬ ನಾಲ್ಕು ಕುದುರೆಗಳನ್ನು ಹೂಡಿದರು. ರಾತ್ರಿ, ಹಗಲು, ತಿಂಗಳು, ಉತ್ತರ- ದಕ್ಷಿಣ ಅಯನಗಳು ನೊಗವಾದುವು. ಸಾರ ಧೃತಿ ವೇದಗಳ ಸಮೂಹ ವಿಸ್ತಾರವು ನೊಗದ ಕೀಲುಗಳಾದವು. ಸುಂದರವಾದ ಕುಲಸರ್ಪಗಳ ಸಮೂಹವು ಕುದುರೆಗಳನ್ನು ಕಟ್ಟುವ ಹಗ್ಗಗಳಾದವು.
ಪದಾರ್ಥ (ಕ.ಗ.ಪ)
ವಾರುವ- ಕುದುರೆ
ಮೂಲ ...{Loading}...
ಆ ರಥಾಗ್ರಕೆ ವೇದ ನಾಲುಕು
ವಾರುವಂಗಳ ಹೂಡಿದರು ನೊಗ
ನಾ ರಜನಿ ದಿನ ಮಾಸವುತ್ತರದಕ್ಷಿಣಾಯನವು
ಸಾರ ಧೃತಿ ವೇದಪ್ರತತಿ ವಿ
ಸ್ತಾರವಾದವು ನೊಗನ ಕೀಲ್ಗಳು
ಚಾರು ಕುಲಫಣಿನಿಕರ ಹಯಬಂಧನದ ನೇಣುಗಳು ॥5॥
೦೦೬ ಮಿಳಿಗಳಾದವು ಕುಹು ...{Loading}...
ಮಿಳಿಗಳಾದವು ಕುಹು ಸುತಾರಾ
ವಳಿಗಳಮಳ ಪ್ರಣವವಾದುದು
ಮೊಳೆಯ ಬಲುಚಮ್ಮಟಿಗೆ ಹಗ್ಗಕೆ ವರ ಷಡಂಗಮವು
ನಿಲಿಸಲಖಿಳ ಕ್ರತು ರಥಾಂಗಾ
ವಳಿಗಳಾದವು ವಿವಿಧವರ್ಣದ
ಜಲದಪಟಲ ಪತಾಕೆಯಾದವು ರಥದ ಬಳಸಿನಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಮಾವಾಸ್ಯೆ ಮತ್ತು ನಕ್ಷತ್ರರಾಶಿಗಳು ಮಿಣಿಗಳಾದವು. ನಿರ್ಮಲವಾದ ಪ್ರಣವವು ಕಡಾಣಿÉಯಾಯಿತು. ವೇದದ ಆರು ಅಂಗಗಳು ಚಾವಟಿಯಾದವು. ಎಲ್ಲ ಯಜ್ಞಗಳು ರಥದ ಚಕ್ರಗಳಾದವು. ರಥದ ಸುತ್ತ ಬೇರೆಬೇರೆ ಬಣ್ಣಗಳ ಮೋಡಗಳ ಸಮೂಹಗಳು ಪತಾಕೆಗಳಾದುವು.
ಪದಾರ್ಥ (ಕ.ಗ.ಪ)
ಮಿಳಿ- ಮಿಣಿ ಹಗ್ಗ.
ಕುಹು- ಚಂದ್ರನು ಕಾಣಿಸದ, ಅಮಾವಾಸ್ಯೆ.
ಷಡಂಗಮ- ವೇದದ ಆರು ಅಂಗಗಳು
ಬಳಸು- ಸುತ್ತು. ಕ್ರತು- ಯಜ್ಞ. ರಥಾಂಗ- ರಥದ ಚಕ್ರ. ಆಲದ- ಮೋಡ.
ಟಿಪ್ಪನೀ (ಕ.ಗ.ಪ)
ಷಡಂಗ - ಶಿಕ್ಷೆ, ಕಲ್ಪ, ನಿರುಕ್ತ, ವ್ಯಾಕರಣ, ಛಂದಸ್ಸು, ಜ್ಯೋತಿಷ
ಮೂಲ ...{Loading}...
ಮಿಳಿಗಳಾದವು ಕುಹು ಸುತಾರಾ
ವಳಿಗಳಮಳ ಪ್ರಣವವಾದುದು
ಮೊಳೆಯ ಬಲುಚಮ್ಮಟಿಗೆ ಹಗ್ಗಕೆ ವರ ಷಡಂಗಮವು
ನಿಲಿಸಲಖಿಳ ಕ್ರತು ರಥಾಂಗಾ
ವಳಿಗಳಾದವು ವಿವಿಧವರ್ಣದ
ಜಲದಪಟಲ ಪತಾಕೆಯಾದವು ರಥದ ಬಳಸಿನಲಿ ॥6॥
೦೦೭ ಕಾಲದಣ್ಡದ ರೌದ್ರದಣ್ಡ ...{Loading}...
ಕಾಲದಂಡದ ರೌದ್ರದಂಡ ಕ
ರಾಳ ರಥ ಸೀಮಾಗ್ರ ದಂಡ ವಿ
ಶಾಲ ವಿಮಳ ಬ್ರಹ್ಮದಂಡದ ಸಾಲು ಚೆಲುವಾಯ್ತು
ಮೇಲುವಲಗೆಯ ಸುತ್ತ ಚಮರೀ
ಜಾಳ ಕನಕಧ್ವಜದ ತುದಿಯಲಿ
ಮೇಳವಿಸಿದನು ವಿಶ್ವಕರ್ಮನು ವಿಪುಳ ಶಾಕ್ವರವ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲದಂಡ, ರೌದ್ರದಂಡ ಮತ್ತು ಶ್ರೇಷ್ಠವಾದ ಬ್ರಹ್ಮದಂqಗಳು ರಥದ ಅಂಚುಗಳಲ್ಲಿದ್ದು ಶೋಭಿಸುತ್ತಿದ್ದವು. ಮೇಲುಹಲಗೆಯ ಸುತ್ತ ಚಮರೀಮೃಗಗಳ ಜಾಲವನ್ನೂ ಕನಕಧ್ವಜದ ತುದಿಯಲ್ಲಿ ನಂದಿಯನ್ನೂ ವಿಶ್ವಕರ್ಮನು ಸ್ಥಾಪಿಸಿದನು.
ಪದಾರ್ಥ (ಕ.ಗ.ಪ)
ಚಮರಿ- ಚಮರೀಮೃಗ. ಶಾಕ್ವರ- ನಂದಿ
ಮೂಲ ...{Loading}...
ಕಾಲದಂಡದ ರೌದ್ರದಂಡ ಕ
ರಾಳ ರಥ ಸೀಮಾಗ್ರ ದಂಡ ವಿ
ಶಾಲ ವಿಮಳ ಬ್ರಹ್ಮದಂಡದ ಸಾಲು ಚೆಲುವಾಯ್ತು
ಮೇಲುವಲಗೆಯ ಸುತ್ತ ಚಮರೀ
ಜಾಳ ಕನಕಧ್ವಜದ ತುದಿಯಲಿ
ಮೇಳವಿಸಿದನು ವಿಶ್ವಕರ್ಮನು ವಿಪುಳ ಶಾಕ್ವರವ ॥7॥
೦೦೮ ಅರಸ ಕೇಳ್ ...{Loading}...
ಅರಸ ಕೇಳ್ ಋತುಚರಿತ ಸಂವ
ತ್ಸರವೆ ಧನು ತತ್ಕಾಳ ರಾತ್ರಿಯೆ
ತಿರುವಿದೇನಾಶ್ಚರ್ಯವೈ ಶಿವ ಕಾಲರೂಪಿನಲಿ
ಸರಳರಚನೆಗೆ ವಿಷ್ಣುವನೆ ಸಂ
ಸ್ಮರಿಸಿದರು ವೈಕುಂಠತೇಜ
ಸ್ಫುರಿತ ಮಾರ್ಗಣ ಮೆರೆದುದಗ್ನಿಷ್ಟೋಮ ಮುಖವಾಗಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಕೇಳು. ಆರು ಋತುಗಳು, ಸಂವತ್ಸರಗಳೇ ಧನಸ್ಸು. ಆ ಕಾಳರಾತ್ರಿಯೆ ಬಿಲ್ಲಿನ ಹಗ್ಗ. ಇದೇನಾಶ್ಚರ್ಯ! ಕಾಲರೂಪಿನಲ್ಲಿದ್ದ ಶಿವನು ಬಾಣವನ್ನು ಸಿದ್ಧಪಡಿಸಲು ವಿಷ್ಣುವನ್ನು ನೆನೆಸಿಕೊಂಡನು. ವೈಕುಂಠದ ತೇಜಸ್ಸಿನಿಂದ ಕೂಡಿದ ಬಾಣವು ಅಗ್ನಿಷ್ಟೋಮ ಯಜ್ಞದ ಮೂಲಕ ಅವನ ಕೈಗೆ ಸಿದ್ಧಿಸಿತು.
ಪದಾರ್ಥ (ಕ.ಗ.ಪ)
ತಿರುವು- ಬಿಲ್ಲಿನ ಹಗ್ಗ.
ಮಾರ್ಗಣ- ಬಾಣ.
ಅಗ್ನಿಷ್ಟೋಮ ಜ್ಞೊಂದು ಬಗೆಯ ಯಜ್ಞ
ಮೂಲ ...{Loading}...
ಅರಸ ಕೇಳ್ ಋತುಚರಿತ ಸಂವ
ತ್ಸರವೆ ಧನು ತತ್ಕಾಳ ರಾತ್ರಿಯೆ
ತಿರುವಿದೇನಾಶ್ಚರ್ಯವೈ ಶಿವ ಕಾಲರೂಪಿನಲಿ
ಸರಳರಚನೆಗೆ ವಿಷ್ಣುವನೆ ಸಂ
ಸ್ಮರಿಸಿದರು ವೈಕುಂಠತೇಜ
ಸ್ಫುರಿತ ಮಾರ್ಗಣ ಮೆರೆದುದಗ್ನಿಷ್ಟೋಮ ಮುಖವಾಗಿ ॥8॥
೦೦೯ ಶ್ರುತವೆ ನಿಮಗಿದು ...{Loading}...
ಶ್ರುತವೆ ನಿಮಗಿದು ಮಾವ ಬಹಳಾ
ದ್ಭುತದ ರಥ ನಿರ್ಮಾಣ ದೇವ
ಪ್ರತತಿ ನೆರೆದುದು ನೆರೆ ಚತುರ್ದಶಭುವನವಾಸಿಗಳ
ಶತಮಖಬ್ರಹ್ಮಾದಿಗಳು ತ
ಮ್ಮತಿಶಯದ ತೇಜೋರ್ಧವನು ಪಶು
ಪತಿಯ ಪದಕೋಲೈಸಿದರು ಮಾದ್ರೇಶ ಕೇಳ್ ಎಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾವ ಮಾದ್ರೇಶ, ತುಂಬ ಅದ್ಭುತವಾದ ರಥದ ನಿರ್ಮಾಣವು ನಿಮಗೆ ಶ್ರುತವೆ? ದೇವಸಮೂಹ ನೆರೆಯಿತು. ತುಂಬಿದ ಹದಿನಾಲ್ಕು ಲೋಕ ವಾಸಿಗಳು, ಇಂದ್ರ, ಬ್ರಹ್ಮ ಮೊದಲಾದವರು ತಮ್ಮ ಅತಿಶಯವಾದ ತೇಜಸ್ಸಿನ ಅರ್ಧವನ್ನು ಶಿವನ ಪಾದಕ್ಕೆ ಒಪ್ಪಿಸಿದರು. ಕೇಳು, ಎಂದನು.
ಪದಾರ್ಥ (ಕ.ಗ.ಪ)
ಶತಮಖ- ನೂರು ಯಜ್ಞಗಳನ್ನು ಮಾಡಿದವನು, ಇಂದ್ರ.
ಮೂಲ ...{Loading}...
ಶ್ರುತವೆ ನಿಮಗಿದು ಮಾವ ಬಹಳಾ
ದ್ಭುತದ ರಥ ನಿರ್ಮಾಣ ದೇವ
ಪ್ರತತಿ ನೆರೆದುದು ನೆರೆ ಚತುರ್ದಶಭುವನವಾಸಿಗಳ
ಶತಮಖಬ್ರಹ್ಮಾದಿಗಳು ತ
ಮ್ಮತಿಶಯದ ತೇಜೋರ್ಧವನು ಪಶು
ಪತಿಯ ಪದಕೋಲೈಸಿದರು ಮಾದ್ರೇಶ ಕೇಳೆಂದ ॥9॥
೦೧೦ ಆ ಮಹಾ ...{Loading}...
ಆ ಮಹಾ ಶಾಂಭವ ಸುತೇಜ
ಸ್ತೋಮಕೇನದು ಕೊರತೆಯೇ ಮ
ತ್ತೀ ಮಹೇಂದ್ರ ಬ್ರಹ್ಮಮುಖ ತೇಜಸ್ವಿಗಳ ಶಕ್ತಿ
ಆ ಮಹಾದೇವನಲಿ ಸೇರಿದು
ದೀ ಮಹಾರಥಕಾಗಿ ವಿಮಳ
ವ್ಯೋಮಕೇಶನು ನಗುತ ಬಿಜಯಂಗೆಯ್ಯಲನುವಾದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾ ಶಂಭುವಿನ ಒಳ್ಳೆಯ ತೇಜಸ್ಸಿನ ಶ್ರೀಮಂತಿಕೆಗೆ ಏನಾದರೂ ಕೊರತೆಯಾಗಿತ್ತೇ? ಮತ್ತೆ ಈ ಮಹೇಂದ್ರ, ಬ್ರಹ್ಮಮುಖ ತೇಜಸ್ವಿಗಳ ಶಕ್ತಿ ಆ ಮಹಾದೇವನಲ್ಲಿ ಸೇರಿತು. ನಿರ್ಮಲನಾದ ಶಿವನು ನಗುತ್ತ ಈ ಮಹಾರಥವನ್ನು ಹತ್ತಲು ಸಿದ್ಧವಾದನು.
ಮೂಲ ...{Loading}...
ಆ ಮಹಾ ಶಾಂಭವ ಸುತೇಜ
ಸ್ತೋಮಕೇನದು ಕೊರತೆಯೇ ಮ
ತ್ತೀ ಮಹೇಂದ್ರ ಬ್ರಹ್ಮಮುಖ ತೇಜಸ್ವಿಗಳ ಶಕ್ತಿ
ಆ ಮಹಾದೇವನಲಿ ಸೇರಿದು
ದೀ ಮಹಾರಥಕಾಗಿ ವಿಮಳ
ವ್ಯೋಮಕೇಶನು ನಗುತ ಬಿಜಯಂಗೆಯ್ಯಲನುವಾದ ॥10॥
೦೧೧ ಕಳಚಿ ತಲೆಮಾಲೆಯನು ...{Loading}...
ಕಳಚಿ ತಲೆಮಾಲೆಯನು ಕೊಟ್ಟನು
ಕೆಲದವರ ಕೈಯಲಿ ವಿಭೂತಿಯ
ಗುಳಿಗೆಯನು ನೆಗ್ಗೊತ್ತಿ ಸರ್ವಾಂಗದಲಿ ಧೂಳಿಸಿದ
ಹೊಳೆಹೊಳೆವ ಕೆಂಜೆಡೆಯನಹಿಪತಿ
ಯಳುಕೆ ಬಿಗಿದನು ದಂತಿಚರ್ಮವ
ನೆಲಕೆ ಮುಂಜೆರಗೆಳೆಯಲುಟ್ಟನು ದೇಸಿ ಪರಿ ಮೆರೆಯೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
11.ಶಿವನು ತಲೆಯ ಮಾಲೆಯನ್ನು ಕಳಚಿ ಪಕ್ಕದಲ್ಲಿದ್ದವರ ಕೈಯಲ್ಲಿ ಕೊಟ್ಟನು. ವಿಭೂತಿಯ ಗುಳಿಗೆಯನ್ನು ಪುಡಿಯಾಗುವಂತೆ ಒತ್ತಿ ಸರ್ವಾಂಗದಲ್ಲಿ ಲೇಪಿಸಿಕೊಂಡನು. ಹೊಳೆಹೊಳೆಯುವ ಕೆಂಪು ಜಡೆಯನ್ನು ನಾಗರಾಜನು ಅಳುಕುವಂತೆ ಬಿಗಿದು ಕಟ್ಟಿದನು. ಆನೆಯ ಚರ್ಮವನ್ನ್ಲು ಮೆರೆಯಲು ನೆಲಕ್ಕೆ ಮುಂಜೆರಗು ತಾಗುವಂತೆ ದೇಸಿಯ ಪರಿಯಲ್ಲಿ ಅಂದವಾಗಿ ಕಾಣುವಂತೆ ಉಟ್ಟನು.
ಪದಾರ್ಥ (ಕ.ಗ.ಪ)
ನೆಗ್ಗೊತ್ತು - ಪುಡಿಪುಡಿಯಾಗಿಸು
ಅಹಿಪತಿ- ನಾಗರಾಜ.
ಮೂಲ ...{Loading}...
ಕಳಚಿ ತಲೆಮಾಲೆಯನು ಕೊಟ್ಟನು
ಕೆಲದವರ ಕೈಯಲಿ ವಿಭೂತಿಯ
ಗುಳಿಗೆಯನು ನೆಗ್ಗೊತ್ತಿ ಸರ್ವಾಂಗದಲಿ ಧೂಳಿಸಿದ
ಹೊಳೆಹೊಳೆವ ಕೆಂಜೆಡೆಯನಹಿಪತಿ
ಯಳುಕೆ ಬಿಗಿದನು ದಂತಿಚರ್ಮವ
ನೆಲಕೆ ಮುಂಜೆರಗೆಳೆಯಲುಟ್ಟನು ದೇಸಿ ಪರಿ ಮೆರೆಯೆ ॥11॥
೦೧೨ ಖಡೆಯ ಸರಪಣಿ ...{Loading}...
ಖಡೆಯ ಸರಪಣಿ ತೋಳಬಂದಿಗೆ
ಪೆಡೆವಣಿಯ ಮರಿವಾವುಗಳನಳ
ವಡಿಸಿದನು ಜೋಡಿಸಿದ ಶೇಷನ ಜಳವಟಿಗೆ ಮೆರೆಯೆ
ಜಡಿವ ಕಿರುಗೆಜ್ಜೆಗಳ ಬಿಗುಹಿನ
ಲುಡೆಯ ಬದ್ದುಗೆ ದಾರ ಉರಗನ
ಪೆಡೆವಣಿಯ ಗೊಂಡೆಯದ ಕಿಗ್ಗಟ್ಟೆಸೆಯೆ ಪಶುಪತಿಯ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಕಡಗ, ಸರಪಣಿ, ತೋಳಬಂದಿಗೆ ಹೆಡೆಮಣಿಯುಳ್ಳ ಮರಿ ಹಾವುಗಳನ್ನು ಅಳವಡಿಸಿದನು. ಕಂಠಾಭರಣವಾಗಿ ಧರಿಸಿದ್ದ ಶೇಷನು ಮೆರೆಯಲು, ಪಶುಪತಿಯ ಶಬ್ದಮಾಡುವ ಕಿರುಗೆಜ್ಜೆಗಳ ಉಡಿದಾರವಾಗಿ ನಾಗರಾಜನ ಹೆಡೆಮಣಿಯ ಗೊಂಚಲಿನ ಕಿರಿಯ ಕಟ್ಟುಗಳು ಶೋಭಿಸಿದವು.
ಪದಾರ್ಥ (ಕ.ಗ.ಪ)
ಖಡೆಯ- ಕಾಲಕಡಗ.
ಪೆಡೆವಣಿ- ಹೆಡೆಯ ಮಣಿ.
ಜಳವಟಿಗೆ- ಜಲವಟ್ಟಿಗೆ, ಒಂದು ಬಗೆಯ ಕಂಠಾಭರಣ.
ಬದ್ದುಗೆ ದಾರ- ಉಡಿದಾರ.
ಮೂಲ ...{Loading}...
ಖಡೆಯ ಸರಪಣಿ ತೋಳಬಂದಿಗೆ
ಪೆಡೆವಣಿಯ ಮರಿವಾವುಗಳನಳ
ವಡಿಸಿದನು ಜೋಡಿಸಿದ ಶೇಷನ ಜಳವಟಿಗೆ ಮೆರೆಯೆ
ಜಡಿವ ಕಿರುಗೆಜ್ಜೆಗಳ ಬಿಗುಹಿನ
ಲುಡೆಯ ಬದ್ದುಗೆ ದಾರ ಉರಗನ
ಪೆಡೆವಣಿಯ ಗೊಂಡೆಯದ ಕಿಗ್ಗಟ್ಟೆಸೆಯೆ ಪಶುಪತಿಯ ॥12॥
೦೧೩ ನೆರೆದುದಭವನ ಕೆಲಬಲದಲು ...{Loading}...
ನೆರೆದುದಭವನ ಕೆಲಬಲದಲು
ಬ್ಬರದ ಬೊಬ್ಬಿಯ ಜಡಿವ ಖಡ್ಗದ
ಬೆರಳ ಚಕ್ರದ ಭವಣಿಗಳ ಢವಣಿಸುವ ಢಾಣೆಗಳ
ಪರಿಪರಿಯ ಕೈದುಗಳ ಕರ್ಕಶ
ತರದ ಚರಿತದ ರೌದ್ರವೇಷದ
ವರ ಮಹಾಗಣ ನಿಕರವೊದಗಿತು ಮಾವ ಕೇಳ್ ಎಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಿವನ ಅಕ್ಕಪಕ್ಕಗಳಲ್ಲಿ ಖಡ್ಗವನ್ನೂ ಚಕ್ರವನ್ನೂ ಕೈಗಳಲ್ಲಿ ಹಿಡಿದ, ಜೋರಾಗಿ ಬೊಬ್ಬೆಯನ್ನು ಹೊಡೆಯುವ ಖಡ್ಗದ, ಬೆರಳ ಚಕ್ರದ, ಢವಣಿಸುವ ಬಡಿಗೆಗಳ, ಬಗೆಬಗೆಯ ಆಯುಧಗಳ ಕರ್ಕಶ ರೀತಿಯ ವರ್ತನೆಯ, ರೌದ್ರವೇಷದ, ಶ್ರೇಷ್ಠರಾದ ಮಹಾಗಣಗಳ ಸಮೂಹವು ಬಂದಿತು, ಮಾವ ಕೇಳು ಎಂದನು.
ಪದಾರ್ಥ (ಕ.ಗ.ಪ)
ಉಬ್ಬರ- ಜೋರು. ಭವಣಿ- ತೊಂದರೆ, ಸಂಕಟ. ಢವಣಿಸು- ಢವಣಿ ಎಂಬ ಚರ್ಮವಾದ್ಯವನ್ನು ಬಾರಿಸು. ಢಾಣೆ- ಬಡಿಗೆ, ಕೋಲು.
ಭವಣಿಗಳು - ?
ಮೂಲ ...{Loading}...
ನೆರೆದುದಭವನ ಕೆಲಬಲದಲು
ಬ್ಬರದ ಬೊಬ್ಬಿಯ ಜಡಿವ ಖಡ್ಗದ
ಬೆರಳ ಚಕ್ರದ ಭವಣಿಗಳ ಢವಣಿಸುವ ಢಾಣೆಗಳ
ಪರಿಪರಿಯ ಕೈದುಗಳ ಕರ್ಕಶ
ತರದ ಚರಿತದ ರೌದ್ರವೇಷದ
ವರ ಮಹಾಗಣ ನಿಕರವೊದಗಿತು ಮಾವ ಕೇಳೆಂದ ॥13॥
೦೧೪ ಸುರಬಲದ ನಿಸ್ಸಾಳ ...{Loading}...
ಸುರಬಲದ ನಿಸ್ಸಾಳ ಕೋಟಿಯ
ಮೊರಹು ಮೊಳಗಿತು ಬಿಲುದಿರುವಿನ
ಬ್ಬರದಲಾ ದನಿಯಡಗಿತಗಣಿತ ವಂದಿ ಘೋಷದಲಿ
ಅರರೆ ವಂದಿ ಧ್ವನಿಯ ಗರ್ಭೀ
ಕರಿಸಿ ಹೆಚ್ಚಿತು ಜಯಜಯ ಧ್ವನಿ
ನೆರೆ ಚತುರ್ದಶಜಗವ ಜಡಿದುದು ಮಾವ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಿಲ್ಲಿನ ಹೆದೆಯ ಅಬ್ಬರದಲ್ಲಿ ದೇವತೆಗಳ ಬಲದ ನಿಸ್ಸಾಳ ಕೋಟಿಯ ಝೇಂಕಾರ ಮೊಳಗಿತು. ಅಗಣಿತ ಹೊಗಳುಭಟ್ಟರ ಘೋಷದಲ್ಲಿ ಅದು ಅಡಗಿತು. ಅರರೆ! ಹೊಗಳುಭಟ್ಟರ ಧ್ವನಿಯನ್ನು ಗರ್ಭೀಕರಿಸಿ ಜಯಜಯ ಧ್ವನಿ ಹೆಚ್ಚಿತು. ಸುತ್ತಲಿನ ಹದಿನಾಲ್ಕು ಲೋಕಗಳನ್ನು ತಟ್ಟಿತು, ಮಾವ, ಕೇಳು” ಎಂದು ದುರ್ಯೋಧನನು ಶಲ್ಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮೊರಹು- ಝೇಂಕಾರ, ಧ್ವನಿ.
ಮೂಲ ...{Loading}...
ಸುರಬಲದ ನಿಸ್ಸಾಳ ಕೋಟಿಯ
ಮೊರಹು ಮೊಳಗಿತು ಬಿಲುದಿರುವಿನ
ಬ್ಬರದಲಾ ದನಿಯಡಗಿತಗಣಿತ ವಂದಿ ಘೋಷದಲಿ
ಅರರೆ ವಂದಿ ಧ್ವನಿಯ ಗರ್ಭೀ
ಕರಿಸಿ ಹೆಚ್ಚಿತು ಜಯಜಯ ಧ್ವನಿ
ನೆರೆ ಚತುರ್ದಶಜಗವ ಜಡಿದುದು ಮಾವ ಕೇಳೆಂದ ॥14॥
೦೧೫ ಮುರಿಯೆ ಬಲವಙ್ಕದಲುಘೇ ...{Loading}...
ಮುರಿಯೆ ಬಲವಂಕದಲುಘೇ ಎಂ
ದೆರಗಿದವು ಶ್ರುತಿಕೋಟಿ ವಾಮದ
ಕೊರಳ ಕೊಂಕಿನಲುಪನಿಷತ್ತುಗಳೆರಗಿದವು ಕೋಟಿ
ತಿರುಗೆ ಬೆನ್ನಲಿ ನೆರೆದ ಸಚರಾ
ಚರವುಘೇ ಎಂದುದು ಕಪರ್ದಿಯ
ಸರಿಸದಲಿ ಸಿಡಿಲಂತೆ ಮೊಳಗಿತು ವೀರಗಣನಿಕರ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಪಾರವಾದ ವೇದ ರಾಶಿಯು ಬಲಭಾಗದಲ್ಲಿ ಉಘೇ ಎಂದು ಬಾಗಿ ನಮಸ್ಕರಿಸಲು, ಎಡಗಡೆ ಕೊರಳನ್ನು ಬಾಗಿಸಿ ಉಪನಿಷತ್ತುಗಳು ನಮಸ್ಕರಿಸಿದವು. ಹಿಂಭಾಗದಲ್ಲಿ ನೆರೆದ ಸಚರಾಚರಗಳು ಉಘೇ ಎಂದವು. ಶಿವನ ಸಮೀಪದಲ್ಲಿ ವೀರಗಣಗಳ ಸಮೂಹವು ಸಿಡಿಲಿನಂತೆ ಮೊಳಗಿತು.
ಪದಾರ್ಥ (ಕ.ಗ.ಪ)
ಶ್ರುತಿಕೋಟಿ- ಅಪಾರವಾದ ವೇದ ರಾಶಿ. ಮುರಿ- ಬಾಗು. ಎರಗು- ನಮಸ್ಕರಿಸು. ಕೊಂಕು ಬಾಗು.
ಮೂಲ ...{Loading}...
ಮುರಿಯೆ ಬಲವಂಕದಲುಘೇ ಎಂ
ದೆರಗಿದವು ಶ್ರುತಿಕೋಟಿ ವಾಮದ
ಕೊರಳ ಕೊಂಕಿನಲುಪನಿಷತ್ತುಗಳೆರಗಿದವು ಕೋಟಿ
ತಿರುಗೆ ಬೆನ್ನಲಿ ನೆರೆದ ಸಚರಾ
ಚರವುಘೇ ಎಂದುದು ಕಪರ್ದಿಯ
ಸರಿಸದಲಿ ಸಿಡಿಲಂತೆ ಮೊಳಗಿತು ವೀರಗಣನಿಕರ ॥15॥
೦೧೬ ನಡೆದು ರಥದಲಿ ...{Loading}...
ನಡೆದು ರಥದಲಿ ವಾಮ ಚರಣವ
ನಿಡುತ ಧೂರ್ಜಟಿ ದೇವ ನಿಕರಕೆ
ನುಡಿದನಾವನನೀ ರಥಕೆ ಸಾರಥಿಯ ಮಾಡಿದಿರಿ
ಕಡೆಗೆ ಸಾರಥಿಯಿಲ್ಲದೀ ರಥ
ನಡೆವುದೇ ದಾನವರ ಥಟ್ಟಣೆ
ತೊಡೆವುದೇ ಲೇಸಾಯ್ತೆನುತ ನೋಡಿದನು ಸುರಪತಿಯ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನು ನಡೆದು ಬಂದು ರಥದಲ್ಲಿ ಎಡ ಪಾದವನ್ನು ಇಡುತ್ತ, ‘ಈ ರಥಕ್ಕೆ ಯಾರನ್ನು ಸಾರಥಿಯನ್ನಾಗಿ ಮಾಡಿದಿರಿ’ ಎಂದು ದೇವತೆಗಳ ಸಮೂಹವನ್ನು ಕೇಳಿದನು. ‘ಕಡೆಗೆ ಸಾರಥಿಯಿಲ್ಲದೆ ಈ ರಥ ನಡೆಯುತ್ತದೆಯೆ? ರಾಕ್ಷಸರ ಸಮೂಹ ನಿವಾರಣೆಯಾಗುವುದೆ? ಒಳ್ಳೆಯದಾಯಿತು!’ ಎನ್ನುತ್ತ ಇಂದ್ರನ ಕಡೆ ನೋಡಿದನು.
ಪದಾರ್ಥ (ಕ.ಗ.ಪ)
ಥಟ್ಟಣೆ- ಸಮೂಹ, ಮುತ್ತಿಗೆ.
ತೊಡೆ- ನಿವಾರಣೆ.
ಮೂಲ ...{Loading}...
ನಡೆದು ರಥದಲಿ ವಾಮ ಚರಣವ
ನಿಡುತ ಧೂರ್ಜಟಿ ದೇವ ನಿಕರಕೆ
ನುಡಿದನಾವನನೀ ರಥಕೆ ಸಾರಥಿಯ ಮಾಡಿದಿರಿ
ಕಡೆಗೆ ಸಾರಥಿಯಿಲ್ಲದೀ ರಥ
ನಡೆವುದೇ ದಾನವರ ಥಟ್ಟಣೆ
ತೊಡೆವುದೇ ಲೇಸಾಯ್ತೆನುತ ನೋಡಿದನು ಸುರಪತಿಯ ॥16॥
೦೧೭ ಮಾವ ಕೇಳೈ ...{Loading}...
ಮಾವ ಕೇಳೈ ಬಳಿಕ ಹರಿದುದು
ದೇವಕುಲ ಪರಮೇಷ್ಠಿಯಲ್ಲಿಗೆ
ಭಾವವನು ಬಿನ್ನೈಸಿದರು ನಿಜರಾಜಕಾರಿಯದ
ಆ ವಿಭುವನೊಡಬಡಿಸಿದರು ದಿವಿ
ಜಾವಳಿಗಳಿಂದಿನಲಿ ಕರ್ಣಗೆ
ನೀವು ಸಾರಥಿಯಾದಡಭಿಮತ ಸಿದ್ಧಿ ತನಗೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾವ, ಕೇಳು, ಬಳಿಕ ದೇವಕುಲವು ಬ್ರಹ್ಮನಲ್ಲಿಗೆ ಹರಿಯಿತು. ತಮ್ಮ ರಾಜಕಾರ್ಯದ ಭಾವವನ್ನು ಬಿನ್ನವಿಸಿತು. ದೇವತೆಗಳ ಸಮೂಹಗಳು ಆ ವಿಭುವನ್ನು ಒಪ್ಪಿಸಿದವು. ಅ ರೀತಿಯಲ್ಲಿ ನೀವು ಇಂದು ಕರ್ಣನಿಗೆ ಸಾರಥಿಯಾದರೆ ನನ್ನ ಆಶಯ ಈಡೇರುತ್ತದೆ ಎಂದನು.
ಪದಾರ್ಥ (ಕ.ಗ.ಪ)
ಅಭಿಮತ- ಆಶಯ
ಮೂಲ ...{Loading}...
ಮಾವ ಕೇಳೈ ಬಳಿಕ ಹರಿದುದು
ದೇವಕುಲ ಪರಮೇಷ್ಠಿಯಲ್ಲಿಗೆ
ಭಾವವನು ಬಿನ್ನೈಸಿದರು ನಿಜರಾಜಕಾರಿಯದ
ಆ ವಿಭುವನೊಡಬಡಿಸಿದರು ದಿವಿ
ಜಾವಳಿಗಳಿಂದಿನಲಿ ಕರ್ಣಗೆ
ನೀವು ಸಾರಥಿಯಾದಡಭಿಮತ ಸಿದ್ಧಿ ತನಗೆಂದ ॥17॥
೦೧೮ ಕೋಗಿಲೆಯ ಠಾಯಕ್ಕೆ ...{Loading}...
ಕೋಗಿಲೆಯ ಠಾಯಕ್ಕೆ ಬಂದುದು
ಕಾಗೆಗಳ ಧುರಪಥವದಂತಿರ
ಲಾಗಳಬುಜಾಸನನ ಸಾರಥಿತನವದೇನಾಯ್ತೊ
ಹೋಗಲದು ಸಾರಥ್ಯಕಾಯತ
ವಾಗಿ ಬಂದು ವಿರಿಂಚ ಮಕುಟವ
ತೂಗಿದನು ಹೊಗಳಿದನು ತ್ರಿಪುರ ನಿವಾಸಿಗಳ ಬಲುಹ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಗೆಗಳ ಕಾಳಗದಲ್ಲಿ ಕೋಗಿಲೆಯ ಸಹಾಯವನ್ನು ಬೇಡಿದ ಹಾಗಾಯಿತು. ಅದು ಹಾಗಿರಲಿ. ಆಗ ಬ್ರಹ್ಮನ ಸಾರಥಿತನವು ಏನಾಯಿತೊ ಅದನ್ನು ಹೇಳು. ಸಾರಥ್ಯಕ್ಕೆ ಒಪ್ಪಿ ಸಿದ್ಧವಾಗಿ ಬಂದು ಬ್ರಹ್ಮನು ತಲೆಯನ್ನು ತೂಗಿದನು. ತ್ರಿಪುರ ನಿವಾಸಿಗಳ ಪರಾಕ್ರಮವನ್ನು ಹೊಗಳಿದನು.
ಪದಾರ್ಥ (ಕ.ಗ.ಪ)
ಠಾಯ- ಸ್ಥಳ
ಧುರಪಥ- ಕಾಳಗದ ಹಾದಿ
ಮೂಲ ...{Loading}...
ಕೋಗಿಲೆಯ ಠಾಯಕ್ಕೆ ಬಂದುದು
ಕಾಗೆಗಳ ಧುರಪಥವದಂತಿರ
ಲಾಗಳಬುಜಾಸನನ ಸಾರಥಿತನವದೇನಾಯ್ತೊ
ಹೋಗಲದು ಸಾರಥ್ಯಕಾಯತ
ವಾಗಿ ಬಂದು ವಿರಿಂಚ ಮಕುಟವ
ತೂಗಿದನು ಹೊಗಳಿದನು ತ್ರಿಪುರ ನಿವಾಸಿಗಳ ಬಲುಹ ॥18॥
೦೧೯ ಹುಸಿಯೆ ಬಳಿಕದು ...{Loading}...
ಹುಸಿಯೆ ಬಳಿಕದು ಸಕಲ ಜಗವೊಂ
ದೆಸೆ ಪುರತ್ರಯ ದೈತ್ಯಭಟರೊಂ
ದೆಸೆ ಮಹಾದೇವೆನುತ ಕಮಲಜನೇರಿದನು ರಥವ
ಸಸಿನೆ ವಾಘೆಯ ತಿದ್ದಿ ತುರಗ
ಪ್ರಸರವನು ಬೋಳೈಸಿ ರಥವನು
ದೆಸೆದೆಸೆಗೆ ಹೊಳಸಿದನು ಲುಳಿವಡಿಸಿದ ಮಹಾರಥವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಅದು ಹುಸಿಯೆ! ಜಗತ್ತೆಲ್ಲ ಒಂದು ದಿಕ್ಕು. ಮೂರುಪುರಗಳ ದೈತ್ಯಭಟರು ಒಂದು ದಿಕ್ಕು! ಮಹಾದೇವ! ಎನ್ನುತ್ತ ಬ್ರಹ್ಮನು ರಥವನ್ನು ಏರಿದನು. ಕ್ಷೇಮವಾಗಿ ಲಗಾಮನ್ನು ಸರಿಪಡಿಸಿ ಕುದುರೆಗಳ ಸಮೂಹವನ್ನು ಸಮಾಧಾನಪಡಿಸಿ ಮಹಾರಥವನ್ನು ವೇಗಗೊಳಿಸಿ ದಿಕ್ಕುದಿಕ್ಕಿಗೆ ತಿರುಗಿಸಿದನು.
ಪದಾರ್ಥ (ಕ.ಗ.ಪ)
ಸಸಿನೆ- ಕ್ಷೇಮವಾಗಿ.
ವಾಘೆ- ಲಗಾಮು.
ಮೂಲ ...{Loading}...
ಹುಸಿಯೆ ಬಳಿಕದು ಸಕಲ ಜಗವೊಂ
ದೆಸೆ ಪುರತ್ರಯ ದೈತ್ಯಭಟರೊಂ
ದೆಸೆ ಮಹಾದೇವೆನುತ ಕಮಲಜನೇರಿದನು ರಥವ
ಸಸಿನೆ ವಾಘೆಯ ತಿದ್ದಿ ತುರಗ
ಪ್ರಸರವನು ಬೋಳೈಸಿ ರಥವನು
ದೆಸೆದೆಸೆಗೆ ಹೊಳಸಿದನು ಲುಳಿವಡಿಸಿದ ಮಹಾರಥವ ॥19॥
೦೨೦ ದೇವ ಬಿಜಯಙ್ಗೈವುದೆನೆ ...{Loading}...
ದೇವ ಬಿಜಯಂಗೈವುದೆನೆ ದಿವಿ
ಜಾವಳಿಗಳುಬ್ಬರದ ಬೊಬ್ಬೆಯ
ಡಾವರದಲೇರಿದನು ಧೂರ್ಜಟಿ ವೇದಮಯ ರಥವ
ಮಾವ ಕೇಳದುಭುತವನೀ ವಿ
ಶ್ವಾವನೀತಳ ರಥ ರಥಾಂಗ
ಗ್ರಾವತತಿ ನುಗ್ಗಾಯ್ತು ಮುಗ್ಗಿತು ತೇರು ನಿಮಿಷದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾವ, ಅದ್ಭುತವನ್ನು ಕೇಳು. ದೇವತೆಗಳ ಸಮೂಹಗಳು, ‘ದೇವ, ಬಿಜಯ ಮಾಡಬೇಕು’ ಎನ್ನಲು ಜೋರಾದ ಬೊಬ್ಬೆಯಾ ಅಬ್ಬರದಲ್ಲಿ ಶಿವನು ವೇದಮಯವಾದ ರಥವನ್ನು ಏರಿದನು. ಇಡೀ ಬ್ರಹ್ಮಾಂಡವೇ ರಥವಾಗಿರುವ ರಥದ ಚಕ್ರಗಳ ದೃಢತೆ ಪುಡಿಯಾಯಿತು. ನಿಮಿಷದಲ್ಲಿ ರಥವು ಮುಗ್ಗರಿಸಿತು.
ಪದಾರ್ಥ (ಕ.ಗ.ಪ)
ಗ್ರಾವ- ದೃಢತೆ.
ಮುಗ್ಗು- ಮುಗ್ಗರಿಸು.
ಮೂಲ ...{Loading}...
ದೇವ ಬಿಜಯಂಗೈವುದೆನೆ ದಿವಿ
ಜಾವಳಿಗಳುಬ್ಬರದ ಬೊಬ್ಬೆಯ
ಡಾವರದಲೇರಿದನು ಧೂರ್ಜಟಿ ವೇದಮಯ ರಥವ
ಮಾವ ಕೇಳದುಭುತವನೀ ವಿ
ಶ್ವಾವನೀತಳ ರಥ ರಥಾಂಗ
ಗ್ರಾವತತಿ ನುಗ್ಗಾಯ್ತು ಮುಗ್ಗಿತು ತೇರು ನಿಮಿಷದಲಿ ॥20॥
೦೨೧ ಕುದುರೆ ತಲೆಕೆಳಗಾದುದಿಳೆಯ ...{Loading}...
ಕುದುರೆ ತಲೆಕೆಳಗಾದುದಿಳೆಯ
ದ್ದುದು ರಸಾತಳಕವರ ಭಾರಕೆ
ಕೆದರಿದವು ಕುಲಗಿರಿಯ ಹೂಟದ ಸಂಚ ದೆಸೆದೆಸೆಗೆ
ಕುದಿದುದಮರ ವ್ರಾತ ಸಂತಾ
ಪದಲಿ ವಿತಳಕೆ ಹಾಯ್ದು ನಿಮಿಷಾ
ರ್ಧದಲಿ ಹೆಗಲಿಂದೆತ್ತಿದನು ಹರಿ ವೃಷಭ ರೂಪಿನಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಯು ತಲೆಕೆಳಗಾಯಿತು; ಭೂಮಿಯು ರಸಾತಳಕ್ಕೆ ಮುಳುಗಿತು. ಇವುಗಳ ಬಾರಕ್ಕೆ ಕುಲಗಿರಿಗಳ ಜೋಡಣೆ ದಿಕ್ಕುದಿಕ್ಕಿಗೆ ಚೆದುರಿತು. ದೇವತೆಗಳ ಸಮೂಹವು ಸಂತಾಪದಲ್ಲಿ ಕುದಿಯಿತು. ಹರಿಯು ನಿಮಿಷಾರ್ಧದಲ್ಲಿ ವಿತಳಕ್ಕೆ ಹಾಯ್ದು ವೃಷಭ ರೂಪಿನಲ್ಲಿ ಅವೆಲ್ಲವನ್ನು ಹೆಗಲಿನಿಂದ ಎತ್ತಿದನು.
ಪದಾರ್ಥ (ಕ.ಗ.ಪ)
ಅದ್ದು- ಮುಳುಗು
ಹೂಟ- ಕ್ರಮ
ಪಾಠಾನ್ತರ (ಕ.ಗ.ಪ)
ತಲೆಕೆಳಗಾದುದಿಳೆಯೆ - ತಲೆಕೆಳಗಾದುದಿಳೆಯ
ಮುಂದಿನ ಪದ್ಯದಲ್ಲಿ ಅದ್ದಿದ ರಥ ಎಂಬಲ್ಲಿಂದ ಪ್ರಾರಂಭವಾಗುತ್ತದೆ.
ಮೂಲ ...{Loading}...
ಕುದುರೆ ತಲೆಕೆಳಗಾದುದಿಳೆಯ
ದ್ದುದು ರಸಾತಳಕವರ ಭಾರಕೆ
ಕೆದರಿದವು ಕುಲಗಿರಿಯ ಹೂಟದ ಸಂಚ ದೆಸೆದೆಸೆಗೆ
ಕುದಿದುದಮರ ವ್ರಾತ ಸಂತಾ
ಪದಲಿ ವಿತಳಕೆ ಹಾಯ್ದು ನಿಮಿಷಾ
ರ್ಧದಲಿ ಹೆಗಲಿಂದೆತ್ತಿದನು ಹರಿ ವೃಷಭ ರೂಪಿನಲಿ ॥21॥
೦೨೨ ಅದ್ದ ರಥ ...{Loading}...
ಅದ್ದ ರಥ ಹರಿಯುರವಣೆಗೆ ಚಿಗಿ
ದೆದ್ದು ಸಮವಾಯ್ತುಭಯ ಪುಟ ನೆಗೆ
ದೆದ್ದು ವಳಯವ ಕೊಡಹಿ ನಿಂದವು ವೇದವಾಜಿಗಳು
ಎದ್ದುದೋ ರಥ ಖಳ ಮನೋರಥ
ವದ್ದುದೋ ಮಝ ಪೂತುರೆನುತು
ಬ್ಬೆದ್ದುದಮರಕದಂಬ ಭಾರಿಯ ಭುಜದ ಬೊಬ್ಬೆಯಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಳುಗಿದ್ದ ರಥವು ಹರಿಯ ಬಲದಿಂದ ಜಿಗಿದು ಎದ್ದು ಸಮವಾಯಿತು. ವೇದ ಕುದುರೆಗಳು ಎರಡು ಪುಟ ನೆಗೆದೆದ್ದು ಬಳೆಯನ್ನು ಕೊಡವಿ ನಿಂತವು. ರಥವು ಎದ್ದಿತೋ, ದುಷ್ಟರ ಮನೋರಥವು ಮುಳುಗಿತೋ! ಮಝ! ಪೂತುರೆ! ಎನ್ನುತ್ತ ದೇವತೆಗಳ ಸಮೂಹವು ಭುಜವನ್ನು ಬಾರಿಸುತ್ತ ಬೊಬ್ಬೆಯಲ್ಲಿ ಉಬ್ಬೆದ್ದಿತು.
ಪದಾರ್ಥ (ಕ.ಗ.ಪ)
ವಲಯ- ಬಳೆ
ಟಿಪ್ಪನೀ (ಕ.ಗ.ಪ)
ಶೇಷ - ಇವನಿಗೆ ಶೇಷನಾಗ, ಅನಂತ, ವಿಷ್ಣುಶಯ್ಯಾ, ಪನ್ನಾಗಶ್ರೇಷ್ಠ ಎಂಬ ಹೆಸರುಗಳು ಇವೆ. ಸಾವಿರ ನಾಲಗೆಗಳಲ್ಲಿ ಉರಿ ಕಾರು ಆದಿಶೇಷ ಎಂಬ ನಮ್ಮ ಪುರಾಣಗಳು ಈತನನ್ನು ವರ್ಣಿಸಿವೆ. ಭೂಮಿಯನ್ನು ಹೊತ್ತಿರುವುದು ಮತ್ತು ಭಗವಾನ್ ವಿಷ್ಣುವಿಗೆ ಹಾಸಿಗೆಯಾಗಿರುವುದು ಇವನ ಎರಡು ಮಹತ್ಕರ್ಯಗಳು.
óಶೇಷನು ಕದ್ರು-ಕಶ್ಯಪರ ಮಗ. ‘ಪ್ರಥಮತಾ ಜಾತೆ… ವಾಸುಕೀಸ್ತದನಂತರಂ’ ಎಂಬ ಮಾತಿನಿಂದ ಪ್ರಥಮ ಪತುರ ಎಂಬ ಅಂಶ ಸ್ಪಷ್ಟ. ಲಕ್ಷ್ಮಣ, ಬಲರಾಮರು ಶೇಷನ ಅಂಶಾವತಾರಿಗಳು ಎಂದೂ ಹೇಳುತ್ತಾರೆ.
ಸೋದರರಂತೆ, ತಾಯಿಯಂತೆ ಈತನಿಗೆ ವಿನತೆ, ಗರುಡ, ಅರುಣರ ಮೇಲೆ ದ್ವೇಷವಿರಲಿಲ್ಲ. ಅವರೆಲ್ಲರಿಂದ ವಿನತೆ ಗರುಡರಿಗಾದ ಅವಮಾನದಿಂದ ಜುಗುಪ್ಸೆಗೊಂಡ ಶೇಷ ಬದರಿ, ಗಂಧಮಾದನ, ಗೋಕರ್ಣ, ಪುಷ್ಕರವನ, ಹಿಮವತ್ ಪರ್ವತಗಳಲ್ಲಿ ಸಂಚರಿಸಿ ಕೊನೆಗೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ಬ್ರಹ್ಮನು ಪ್ರತ್ಯಕ್ಷನಾದಾಗ ತನ್ನ ತಾಯಿ, ಸೋದರರ ವರ್ತನೆಯನ್ನೂ ಈಗ ಗರುಡನು ತಮಗೆಲ್ಲ ಪ್ರತೀಕಾರ ಮಾಡಲು ಹೊರಟಿರುವುದನ್ನೂ ತಿಳಿಸಿದಾಗ ಸಂತುಷ್ಟಗೊಂಡ ಬ್ರಹ್ಮನು ‘ಶೇಷ, ನೀನು ಸತ್ಯಭಾಷಿ, ಧರ್ಮಪರ ಇಡೀ ಜಗತ್ತನ್ನು ಹೊರಬಲ್ಲ ಸಾಮಥ್ರ್ಯ ನಿನಗಿದೆ. ಈ ಕೆಲಸವನ್ನು ವಹಿಸಿಕೊ ಎರಡನೆಯದಾಗಿ ಗರುಡನೊಂದಿಗೆ ಸ್ನೇಹ ಬೆಳೆಸಿಕೋ’ ಎಂದ. ಸಂತೋಷದಿಂದ ಒಪ್ಪಿಕೊಂಡ ಶೇಷನು ಸ್ಥಿರಭಾವದಿಂದ ಭೂಮಿಯನ್ನು ಭಾರತದಲ್ಲಿ ಹೇಳಲಾಗಿದೆ. ಸುಧೆಗಾಗಿ ಕ್ಷೀರಸಾಗರವನ್ನು ಕಡೆಯಲು ಹೊರಟಾಗ ಅದರ ಹಗ್ಗವಾದವನು ಶೇಷ ಎಂದು ಆದಿಪರ್ವದ ಹದಿನೆಂಟನೆಯ ಅಧ್ಯಾಯ ವಿವರಿಸುತ್ತದೆ.
ಆದರೆ ವಾಸುಕಿ ಮೊದಲಾದ ಉಳಿದ ಸರ್ಪಗಳಿಗೆ ಅಣ್ಣ ಶೇಷನ ವರ್ತನೆ ಸರಿಕಾಣಲಿಲ್ಲ. ಜನಮೇಜಯನು ಸರ್ಪಯಾಗ ಮಾಡಬೇಕೆಂಬ ಸಂಕಲ್ಪ ತೊಟ್ಟಾಗ ವಾಸುಕಿಯ ಸರ್ಪ ಸಭೆ ಸೇರಿಸಿ ತಮ್ಮ ಮುಂದಿನ ಕರ್ಯಚಟುವಟಿಕೆಗಳ ಬಗೆಗೆ ಸಮಾಲೋಚಿಸಿದಾಗ ಕೂಡ ಶೇಷನ ನಿರ್ಲಕ್ಷ್ಯವನ್ನು ಖಂಡಿಸುತ್ತಾನೆ.
ಶ್ರೀಮನ್ನಾರಾಯಣನೇ ಶೇಷನಾದನವೆಂಬುವರೆಗೂ ಈತನ ಬೆಳವಣಿಗೆಯಿದೆ. ‘ಅಸ್ಮಾನ್ ಮೂರ್ತಿ ಚತುರ್ಥಿಯಾ ಸಸೃಜೋ óಶೇಷಮವ್ಯಯಂ’ ಶೇಷೋ ಭೂತಯಿತ್ವಾಹಂ ಏವೈತಾಂ ಧಾರಯಾಮಿ ವಸುಂಧರಾಂ… ಸುಶ್ವಾಪ ಭಗವಾನ್ ವಿಷ್ಣುಃ…ನಾಗಸ್ಯ ಭೋಗೇಮಹತಿ (ಜಯದ್ರಥ ವಿಮೋಕ್ಷ ಪರ್ವ) ಎಂಬ ಮಾತುಗಳನ್ನು ಗಮನಿಸಬಹುದು.
ಗರುಡ, ಶೇಷ ಸ್ನೇಹಿತರಾದದ್ದು ನಮ್ಮ ಪುರಾಣ ಲೋಕದ ಒಂದು ಸುಂದರ ಪ್ರತಿಮೆ. ಗರುಡ ವಿಷ್ಣುವಿನ ಪ್ರಯಾಣ ಕಾಲದ ವಾಹನವಾದರೆ, ಶೇಷನು ನಿದ್ರಾಕಾಲದ ಶಯ್ಯೆಯಾದದ್ದು ಈ ಸ್ನೇಹದ ಫಲ.
ತ್ರಿಪುರ ದಹನದ ಕಾಲದಲ್ಲಿ ಶೇಷನು ರಥದ ಒಂದು ಅಕ್ಷವಾಗ್ದಿನೆಂಬುದೂ ಶೇಷನ ಸಾಮಥ್ರ್ಯವನ್ನು ತೋರುವ ಸಂಗತಿಯಾಗಿದೆ.
ಮೂಲ ...{Loading}...
ಅದ್ದ ರಥ ಹರಿಯುರವಣೆಗೆ ಚಿಗಿ
ದೆದ್ದು ಸಮವಾಯ್ತುಭಯ ಪುಟ ನೆಗೆ
ದೆದ್ದು ವಳಯವ ಕೊಡಹಿ ನಿಂದವು ವೇದವಾಜಿಗಳು
ಎದ್ದುದೋ ರಥ ಖಳ ಮನೋರಥ
ವದ್ದುದೋ ಮಝ ಪೂತುರೆನುತು
ಬ್ಬೆದ್ದುದಮರಕದಂಬ ಭಾರಿಯ ಭುಜದ ಬೊಬ್ಬೆಯಲಿ ॥22॥
೦೨೩ ಪ್ರಣವನಾದಾ ಹತಿಗೆ ...{Loading}...
ಪ್ರಣವನಾದಾ ಹತಿಗೆ ಗತಿಯಲಿ
ಕುಣಿದವಗ್ಗದ ವೇದಹಯ ಹ
ಲ್ಲಣೆಯ ಹೇಷಿತ ರವಕೆ ಹೆದರಿತು ರಾಕ್ಷಸ ವ್ರಾತ
ಗಣಸಮೂಹದ ಚೂಣಿಯಲಿ ಸುರ
ಗಣ ಸುರಾರಿಗಳೂರ ಮುತ್ತಿತು
ಕೆಣಕಿದರು ಕಾಳೆಗವನಸುರರ ಥಟ್ಟು ಕಳವಳಿಸೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಓಂಕಾರದ ಲಯಕ್ಕೆ ಅನುಗುಣವಾಗಿ ಶ್ರೇಷ್ಠವಾದ ವೇದದ ಕುದುರೆಗಳು ಕುಣಿದವು. ಜೀನಿನ ಸದ್ದು ಮತ್ತು ಹೇಷಾರವಕ್ಕೆ ರಾಕ್ಷಸ ಗುಂಪು ಹೆದರಿತು. ಗಣಸಮೂಹದ ಮುಂದಾಳುತನದಲ್ಲಿ ದೇವತೆಗಳ ಸಮೂಹವು ರಾಕ್ಷಸರ ಊರನ್ನು ಮುತ್ತಿತು. ರಾಕ್ಷಸರ ಸೈನ್ಯವು ಕಳವಳಿಸುತ್ತಿರಲು ದೇವತೆಗಳು ಕಾಳೆಗವನ್ನು ಪ್ರಾರಂಭಿಸಿದರು.
ಪದಾರ್ಥ (ಕ.ಗ.ಪ)
ಹತಿ- ತಾಳ.
ಮೂಲ ...{Loading}...
ಪ್ರಣವನಾದಾ ಹತಿಗೆ ಗತಿಯಲಿ
ಕುಣಿದವಗ್ಗದ ವೇದಹಯ ಹ
ಲ್ಲಣೆಯ ಹೇಷಿತ ರವಕೆ ಹೆದರಿತು ರಾಕ್ಷಸ ವ್ರಾತ
ಗಣಸಮೂಹದ ಚೂಣಿಯಲಿ ಸುರ
ಗಣ ಸುರಾರಿಗಳೂರ ಮುತ್ತಿತು
ಕೆಣಕಿದರು ಕಾಳೆಗವನಸುರರ ಥಟ್ಟು ಕಳವಳಿಸೆ ॥23॥
೦೨೪ ಭಟರು ವಿದ್ಯುನ್ಮಾಲಿಯದು ...{Loading}...
ಭಟರು ವಿದ್ಯುನ್ಮಾಲಿಯದು ಲಟ
ಕಟಿಸಿ ನೂಕಿತು ತಾರಕಾಕ್ಷನ
ಚಟುಳ ಹಯ ಬಲ ಹೊಕ್ಕು ಹೊಯ್ದುದು ಬಿಟ್ಟ ಸೂಠಿಯಲಿ
ಲಟಕಟಿಸೆ ಸುರಸೇನೆ ಬಲುಗಜ
ಘಟೆಗಳೌಕಿತು ದೈತ್ಯ ಸುರ ಸಂ
ಘಟಿತ ಸಮರವನೇನನೆಂಬೆನು ಮಾವ ಕೇಳ್ ಎಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಿದ್ಯುನ್ಮಾಲಿಯ ಭಟರು ಅಬ್ಬರಿಸಿ ಮುನ್ನುಗ್ಗಿದರು. ತಾರಕಾಕ್ಷನ ಚುರುಕಾದ ಕುದುರೆಗಳ ಸೈನ್ಯವು ವೇಗದಿಂದ ಒಳಗೆ ಪ್ರವೇಶಿಸಿ ದೇವತೆಗಳ ಮೇಲೆ ಆಕ್ರಮಣ ನಡೆಸಿತು. ಸುರಸೇನೆ ತರಹರಿಸಲು, ರಾಕ್ಷಸರ ಬಲಿಷ್ಠವಾದ ಆನೆಗಳ ಸಮೂಹವು ಮುನ್ನುಗ್ಗಿತು. ದೈತ್ಯರು ಮತ್ತು ಸುರರಿಗೆ ನಡೆದ ಯುದ್ಧವನ್ನು ಏನೆಂದು ಹೇಳಲಿ, ಮಾವ.” ಕೇಳು ಎಂದು ದುರ್ಯಧನನು ಹೇಳಿದನು.
ಪದಾರ್ಥ (ಕ.ಗ.ಪ)
ಲಟಕಟಿಸು- ಬಳಲು, ತವಕಿಸು, ಅಬ್ಬರಿಸು,
ಮೂಲ ...{Loading}...
ಭಟರು ವಿದ್ಯುನ್ಮಾಲಿಯದು ಲಟ
ಕಟಿಸಿ ನೂಕಿತು ತಾರಕಾಕ್ಷನ
ಚಟುಳ ಹಯ ಬಲ ಹೊಕ್ಕು ಹೊಯ್ದುದು ಬಿಟ್ಟ ಸೂಠಿಯಲಿ
ಲಟಕಟಿಸೆ ಸುರಸೇನೆ ಬಲುಗಜ
ಘಟೆಗಳೌಕಿತು ದೈತ್ಯ ಸುರ ಸಂ
ಘಟಿತ ಸಮರವನೇನನೆಂಬೆನು ಮಾವ ಕೇಳೆಂದ ॥24॥
೦೨೫ ಹೊಯ್ದುದಮರರನಸುರರಗ್ಗದ ...{Loading}...
ಹೊಯ್ದುದಮರರನಸುರರಗ್ಗದ
ಕೈದುಕಾರರು ಮತ್ತೆ ನೂಕಿತು
ಮೈದೆಗೆಯಲೊಡವೆರಸಿ ನೂಕಿತು ಬೇಹ ಬೇಹವರು
ಬೈದರಿಂದ್ರನನಿಂದುಮೌಳಿಗೆ
ನೆಯ್ದ ರಥ ನುಗ್ಗಾಯ್ತು ನಾಳವ
ಕೊಯ್ದರೋ ಹುಗ್ಗಿಗರೆನುತೊರಲಿದುದು ಸುರ ಸ್ತೋಮ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರ ಶ್ರೇಷ್ಠರಾದ ಯೋಧರು ದೇವತೆಗಳನ್ನು ಹೊಡೆದು ಮತ್ತೆ ಮುನ್ನುಗ್ಗಿದರು. ದೇವತೆಗಳು ಓಡುತ್ತಿರಲು, ವೀರ ರಾಕ್ಷಸರು ಒಟ್ಟಿಗೆ ಸೇರಿ ಮುನ್ನುಗ್ಗಿದರು. ದೇವತೆಗಳು ಇಂದ್ರನನ್ನು ಬೈದರು. “ಶಿವನಿಗೆಂದು ಸಿದ್ಧಪಡಿಸಿದ ರಥ ನಾಶವಾಯಿತು. ಸೊಕ್ಕಿನವರು ನಮ್ಮ ರಕ್ತನಾಳವನ್ನು ಕೊಯ್ದರೋ” ಎನ್ನುತ್ತ ದೇವತೆಗಳ ಸಮೂಹವು ಒರಲಿತು.
ಪದಾರ್ಥ (ಕ.ಗ.ಪ)
ಮೈದೆಗೆ- ಮೆಯ್ದೆಗೆ, ಹೆದರು. ಹಿಂದೆಗೆ
ಹುಗ್ಗಿಗ- ಸೊಕ್ಕಿನವನು, ಬಿಂಕದವನು.
ಬೇಹ ಬೇಹವರು- ವೀರರು
ಮೂಲ ...{Loading}...
ಹೊಯ್ದುದಮರರನಸುರರಗ್ಗದ
ಕೈದುಕಾರರು ಮತ್ತೆ ನೂಕಿತು
ಮೈದೆಗೆಯಲೊಡವೆರಸಿ ನೂಕಿತು ಬೇಹ ಬೇಹವರು
ಬೈದರಿಂದ್ರನನಿಂದುಮೌಳಿಗೆ
ನೆಯ್ದ ರಥ ನುಗ್ಗಾಯ್ತು ನಾಳವ
ಕೊಯ್ದರೋ ಹುಗ್ಗಿಗರೆನುತೊರಲಿದುದು ಸುರ ಸ್ತೋಮ ॥25॥
೦೨೬ ಹೊಗಲಿ ಸಮರಕೆ ...{Loading}...
ಹೊಗಲಿ ಸಮರಕೆ ಸ್ವಾಮಿದ್ರೋಹರು
ತೆಗೆಯಬೇಡೋ ಬೆನ್ನಲಾಂಕೆಗೆ
ಜಗದೊಡೆಯನೋ ಫಡಫಡಂಜದಿರೆನಲು ಸುರರಾಜ
ಉಗಿದ ಖಡುಗದ ತಿರುವಿನಂಬಿನ
ಬಿಗಿದ ಬಿಲ್ಲಿನ ಸುರಪನಿದಿರಿನೊ
ಳಗಣಿತಾಮರ ಭಟರು ಹೊಕ್ಕುದು ದೈತ್ಯಬಲದೊಳಗೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸ್ವಾಮಿದ್ರೋಹಿಗಳು ಯುದ್ಧವನ್ನು ಪ್ರವೇಶಿಸಲಿ. ಯುದ್ಧಕ್ಕೆ ಬೆನ್ನು ತೋರಿಸಬೇಡಿ. ನಮ್ಮ ಬೆಂಬಲಕ್ಕೆ ಜಗದೊಡೆಯನೆ ಇದ್ದಾನೆ. ಫಡ! ಫಡ! ಅಂಜದಿರಿ” ಎಂದು ಸುರರಾಜನು ಹೇಳಲು , ಹಿರಿದ ಕತ್ತಿಯೊಡನೆ ಬಿಲ್ಲಿಗೆ ಬಾಣವನ್ನು ಜೋಡಿಸುತ್ತ ಇಂದ್ರನ ಸಮ್ಮುಖದಲ್ಲಿ ಅಸಂಖ್ಯವಾದ ದೇವತೆಗಳು ದೈತ್ಯ ಬಲದೊಳಗೆ ಮುನ್ನುಗ್ಗಿದರು.
ಪದಾರ್ಥ (ಕ.ಗ.ಪ)
ಆಂಕೆ- ಬೆಂಬಲ ಒತ್ತಾಸೆ
ಮೂಲ ...{Loading}...
ಹೊಗಲಿ ಸಮರಕೆ ಸ್ವಾಮಿದ್ರೋಹರು
ತೆಗೆಯಬೇಡೋ ಬೆನ್ನಲಾಂಕೆಗೆ
ಜಗದೊಡೆಯನೋ ಫಡಫಡಂಜದಿರೆನಲು ಸುರರಾಜ
ಉಗಿದ ಖಡುಗದ ತಿರುವಿನಂಬಿನ
ಬಿಗಿದ ಬಿಲ್ಲಿನ ಸುರಪನಿದಿರಿನೊ
ಳಗಣಿತಾಮರ ಭಟರು ಹೊಕ್ಕುದು ದೈತ್ಯಬಲದೊಳಗೆ ॥26॥
೦೨೭ ಮೊಲನ ಮರಿ ...{Loading}...
ಮೊಲನ ಮರಿ ಕೈವೊಯ್ದು ನಕ್ಕುದು
ಹುಲಿಯೊಡನೆ ಗಡ ಶಿವಶಿವಾ ವೆ
ಗ್ಗಳೆಯರನು ವಿಗ್ರಹದಲರಿವೆವು ಕಂಡು ಕೈಗುಣವ
ಹುಲುಪರೆಯ ದೇವಾಳಿ ತ್ರಿಪುರದ
ನೆಲನ ಮೆಟ್ಟಿತು ನಾಯ್ಗಳಿರ ಮುಂ
ದಲೆಯ ಕೊಯ್ ಕಡಿ ಬೆರಳನೆಂದರು ಖಳರು ತಮ್ಮೊಳಗೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೊಲದ ಮರಿ ಹುಲಿಯೊಡನೆ ಚಪ್ಪಾಳೆ ತಟ್ಟಿ, ನಕ್ಕಿತಂತೆ, ಶಿವ ಶಿವಾ ಇವರ ಶೌರ್ಯವನ್ನು ನಾವು ಯುದ್ಧದಲ್ಲಿ ತಿಳಿಯುತ್ತೇವೆ. ಅಂತೂ ಕ್ಷುಲ್ಲಕರಾದ ದೇವತೆಗಳು ಈ ತ್ರಿಪುರದ ನೆಲವನ್ನು ಮೆಟ್ಟಿದರು. (ಉಳಿದ ರಾಕ್ಷಸರಿಗೆ) ಎಲೋ ! ನಾಯಿಗಳಿರಾ ! ಮುನ್ನುಗ್ಗಿರಿ. ಮುಂದಲೆಯ ಕೊಯ್ಯಿರಿ, ಬೆರಳ ಕತ್ತರಿಸಿರಿ” ಎಂದು ತಮ್ಮ ಯೋಧರಿಗೆ ಹೇಳಿದರು.
ಮೂಲ ...{Loading}...
ಮೊಲನ ಮರಿ ಕೈವೊಯ್ದು ನಕ್ಕುದು
ಹುಲಿಯೊಡನೆ ಗಡ ಶಿವಶಿವಾ ವೆ
ಗ್ಗಳೆಯರನು ವಿಗ್ರಹದಲರಿವೆವು ಕಂಡು ಕೈಗುಣವ
ಹುಲುಪರೆಯ ದೇವಾಳಿ ತ್ರಿಪುರದ
ನೆಲನ ಮೆಟ್ಟಿತು ನಾಯ್ಗಳಿರ ಮುಂ
ದಲೆಯ ಕೊಯ್ ಕಡಿ ಬೆರಳನೆಂದರು ಖಳರು ತಮ್ಮೊಳಗೆ ॥27॥
೦೨೮ ಕಾದ ಲೋಹದ ...{Loading}...
ಕಾದ ಲೋಹದ ಹಳಿಯವೊಲು ಕೆಂ
ಪಾದವಸುರರ ಮೋರೆಗಳು ತಿದಿ
ಯೂದುಗಿಚ್ಚಿನ ಹೊದರಿನಂತಿರೆ ಬಿಡದೆ ಭುಗಿಲಿಡುತ
ಸೇದುವೆರಳಿನ ತಿರುವಿನಂಬಿನ
ವಾದಿನೆಸುಗೆಯ ಬಿರುದರಗ್ಗದ
ಕೈದುಕಾರರು ಕೆಣಕಿದಮರರ ಹೊಟ್ಟ ತೂರಿದರು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೆನ್ನಾಗಿ ಕಾದ ಲೋಹದ ಹಳಿಯಂತೆ ರಾಕ್ಷಸರ ಮೋರೆಗಳು ಕೆಂಪಾದವು. ಅವರು ತಿದಿಯು ಊದಿ ಬೆಂಕಿಯು ಕಿಡಿಗಳನ್ನು ಹಾರಿಸಿದ ಹಾಗೆ ಒಂದೇ ಸಮನೆ ಕಿಡಿ ಕಾರುತ್ತಿದ್ದರು. ಬಿಲ್ಲಿನ ಹೆದೆಗೆ ಹೂಡಿದ ಬಾಣವನ್ನು ಸೇದುತ್ತಲೂ, ಬೆರಳಿನಿಂದ ಬಿಡುತ್ತಲೂ ಇದ್ದರು. ಶ್ರೇಷ್ಠ ಆಯುಧ ಪಾಣಿಗಳು ತಮ್ಮನ್ನು ಕೆಣಕಿದ ದೇವತೆಗಳನ್ನು ಹೊಟ್ಟನ್ನು ತೂರುವಂತೆ ತೂರಿಬಿಟ್ಟರು.
ಮೂಲ ...{Loading}...
ಕಾದ ಲೋಹದ ಹಳಿಯವೊಲು ಕೆಂ
ಪಾದವಸುರರ ಮೋರೆಗಳು ತಿದಿ
ಯೂದುಗಿಚ್ಚಿನ ಹೊದರಿನಂತಿರೆ ಬಿಡದೆ ಭುಗಿಲಿಡುತ
ಸೇದುವೆರಳಿನ ತಿರುವಿನಂಬಿನ
ವಾದಿನೆಸುಗೆಯ ಬಿರುದರಗ್ಗದ
ಕೈದುಕಾರರು ಕೆಣಕಿದಮರರ ಹೊಟ್ಟ ತೂರಿದರು ॥28॥
೦೨೯ ಮುರಿದುದಿದು ಕಲ್ಪಾನ್ತ ...{Loading}...
ಮುರಿದುದಿದು ಕಲ್ಪಾಂತ ವಹ್ನಿಯ
ಸೆರೆಯ ಬಿಟ್ಟರೊ ಶಿವಶಿವಾ ಖಳ
ರುರುಬೆ ಘನ ನಾವೇಕೆ ರಣವೇಕಿವರ ಕೂಡೆನುತ
ಒರಲುವಮರರ ಬಾಯಿ ಕೈಗಳ
ಮೊರೆಯ ತೆಗಸಿ ಮಹಾ ಗಣಂಗಳೊ
ಳುರುವ ನಂದೀಶ್ವರನು ಹೊಕ್ಕನು ಹೊಯ್ದು ದಾನವರ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದೇವತೆಗಳ ಸೈನ್ಯ ಮುರಿದು ಹಿಂದೆ ಸರಿಯಿತು. ಕಲ್ಪದ ಕೊನೆಗೆ ಉರಿಯುವ ಅಗ್ನಿಯನ್ನು ಸೆರೆ ತೆಗೆದುಬಿಟ್ಟರೋ ಎನ್ನುವಂತೆ ದುಷ್ಟ ರಾಕ್ಷಸರ ಏರಾಟ ಹೆಚ್ಚಾಯಿತು. “ಇನ್ನು ನಾವೆಲ್ಲಿ? ಈ ಯುದ್ಧವು ಏಕೆ?” ಎಂದು ಕೈ-ಬಾಯಿ ಬಡಿದುಕೊಂಡು ಒದರುವ ದೇವತೆಗಳು ಹಿಮ್ಮೆಟ್ಟಿ ತೊಡಗಿದರು. ಇದನ್ನು ಕಂಡು ಅವರ ಚೀರಾಟವನ್ನು ನಿಲ್ಲಿಸಿ ಮಹಾಗಣಂಗಳಲ್ಲಿ ಮುಖ್ಯನಾದ ನಂದೀಶ್ವರನು ದಾನವರ ಸೈನ್ಯದಲ್ಲಿ ಹೊಕ್ಕು ಅವರನ್ನು ಸದೆದನು.
ಮೂಲ ...{Loading}...
ಮುರಿದುದಿದು ಕಲ್ಪಾಂತ ವಹ್ನಿಯ
ಸೆರೆಯ ಬಿಟ್ಟರೊ ಶಿವಶಿವಾ ಖಳ
ರುರುಬೆ ಘನ ನಾವೇಕೆ ರಣವೇಕಿವರ ಕೂಡೆನುತ
ಒರಲುವಮರರ ಬಾಯಿ ಕೈಗಳ
ಮೊರೆಯ ತೆಗಸಿ ಮಹಾ ಗಣಂಗಳೊ
ಳುರುವ ನಂದೀಶ್ವರನು ಹೊಕ್ಕನು ಹೊಯ್ದು ದಾನವರ ॥29॥
೦೩೦ ದಿಣ್ಡುದರಿದನು ದಾನವರ ...{Loading}...
ದಿಂಡುದರಿದನು ದಾನವರ ಕಡಿ
ಖಂಡಮಯಮಾಯ್ತವನಿ ರಕುತದ
ದೊಂಡೆಗೆಸರಿನೊಳದ್ದುದಗಣಿತ ರಥಗಜಾಶ್ವಚಯ
ಹಿಂಡೊಡೆದು ಹೇರಾಳ ರಕ್ಕಸ
ದಿಂಡೆಯರು ಧಿಮ್ಮೆನಲು ಹೊಯ್ದರು
ಖಂಡಪರಶುವಿನಾಳು ಹೊಯ್ದನು ಸಾಲಹೆಣ ಹರೆಯೆ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂದೀಶ್ವರನು ದಾನವರನ್ನು ದಿಂಡಿನಂತೆ ಕತ್ತರಿಸಿದನು. ಭೂಮಿಯೆಲ್ಲ ರಕ್ತ, ತುಂಡಾದ ಮಾಂಸ, ಕರುಳುಗಳ ಮಯವಾಯಿತು. ಆ ಕೆಸರಿನಲ್ಲಿ ಅಸಂಖ್ಯ ರಥ, ಆನೆ, ಕುದುರೆಗಳು ಮುಳುಗಿ ಹೋದವು. ರಾಕ್ಷಸರ ಹಿಂಡು ಒಡೆಯಿತು. ರಾಕ್ಷಸರನೇಕರು ಹಿಂಡೊಡೆದು ಭಯ ಹುಟ್ಟುವಂತೆ ಮೇಲ್ವಾಯಲು ಖಂಡ ಪರಶುವಿನ (ಈಶ್ವರ) ಭಕ್ತನಾದ ನಂದಿಯು ಅವರನ್ನೆಲ್ಲ ಸವರಿಹಾಕಿದನು. ಸಾಲು ಸಾಲಾಗಿ ಹೆಣಗಳ ರಾಶಿಯೇ ಬಿದ್ದಿತು.
ಮೂಲ ...{Loading}...
ದಿಂಡುದರಿದನು ದಾನವರ ಕಡಿ
ಖಂಡಮಯಮಾಯ್ತವನಿ ರಕುತದ
ದೊಂಡೆಗೆಸರಿನೊಳದ್ದುದಗಣಿತ ರಥಗಜಾಶ್ವಚಯ
ಹಿಂಡೊಡೆದು ಹೇರಾಳ ರಕ್ಕಸ
ದಿಂಡೆಯರು ಧಿಮ್ಮೆನಲು ಹೊಯ್ದರು
ಖಂಡಪರಶುವಿನಾಳು ಹೊಯ್ದನು ಸಾಲಹೆಣ ಹರೆಯೆ ॥30॥
೦೩೧ ಅರನೆಲೆಯ ಮುರಿದಿಟ್ಟಣಿಸಿ ...{Loading}...
ಅರನೆಲೆಯ ಮುರಿದಿಟ್ಟಣಿಸಿ ತಲೆ
ವರಿಗೆಯಲಿ ಹೊಕ್ಕೌಕಿ ದುರ್ಗದ
ಹಿರಿಯ ಹುಲಿಮುಖದೊಳಗೆ ಹೊಯ್ದರು ಬೇಹಬೇಹವರ
ಅರಸ ಕೇಳೈ ದೈತ್ಯ ಭಟರ
ಚ್ಚರಿಯ ಮಾಡಿದರಳಿದವರನೆ
ಚ್ಚರಿಸಿದರು ಮಯವಿರಚಿತಾಮೃತ ಸಲಿಲ ಕೂಪದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂಭಾಗದಲ್ಲಿದ್ದ ಸೇನೆಯ ಎಲ್ಲರೂ ಒತ್ತೊತ್ತಾಗಿ ಕೂಡಿ, ತಲೆಗೆ ಸೀಸಕವನ್ನು ಹಾಕಿಕೊಂಡು ಕೋಟೆಯ ಹೆಬಾಗಿಲುವರೆಗೂ ಬಂದು ವೀರ ದೇವತೆಗಳನ್ನು ಹೊಯ್ದರು. ರಾಜನೇ ಕೇಳು. ರಾಕ್ಷಸ ವೀರರು ಆಶ್ಚರ್ಯವಾಗುವಂತೆ ಮಡಿದು, ಮಡಿದವರನ್ನು ಮಯನಿಂದ ನಿರ್ಮಿತವಾದ ಅಮೃತದ ಬಾವಿಯಲ್ಲಿ ಅದ್ದಿ ಪುನಃ ಬದುಕಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಅರನೆಲೆ-ಹಿಂಬಾಗದ ನೆಲೆ
ಹುಲಿಮುಖ-ಕೋಟೆಯ ಹೆಬ್ಬಾಗಿಲು;
ಅಮೃತಸಲಿಲಕೂಪ-ಅಮೃತದ ನೀರಿನಬಾವಿ;
ಮೂಲ ...{Loading}...
ಅರನೆಲೆಯ ಮುರಿದಿಟ್ಟಣಿಸಿ ತಲೆ
ವರಿಗೆಯಲಿ ಹೊಕ್ಕೌಕಿ ದುರ್ಗದ
ಹಿರಿಯ ಹುಲಿಮುಖದೊಳಗೆ ಹೊಯ್ದರು ಬೇಹಬೇಹವರ
ಅರಸ ಕೇಳೈ ದೈತ್ಯ ಭಟರ
ಚ್ಚರಿಯ ಮಾಡಿದರಳಿದವರನೆ
ಚ್ಚರಿಸಿದರು ಮಯವಿರಚಿತಾಮೃತ ಸಲಿಲ ಕೂಪದಲಿ ॥31॥
೦೩೨ ಮಯನ ಬಿನ್ನಾಣವನು ...{Loading}...
ಮಯನ ಬಿನ್ನಾಣವನು ದೇವ
ತ್ರಯವರಿದುದಿದು ತೀರಲಸುರರ
ಲಯವೆನುತ ಹರಿ ಧೇನುವಬುಜಾಸನನು ಕರುವಾಗಿ
ಭಯವಿಹೀನರು ಹೊಕ್ಕರಾ ಬಾ
ವಿಯನು ಬತ್ತಿಸಿ ಬಳಿಕ ದೈತ್ಯರ
ಜಯವ ಮುರಿದರು ಮೋಹನದ ಬೌದ್ಧಾವತಾರದಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಯಾಸುರನ ತಂತ್ರವನ್ನು ತ್ರಿಮೂರ್ತಿಗಳು ದೇವತೆಗಳು ತಿಳಿದರು. ಅಮೃತದ ಬಾವಿ ಬತ್ತದ ವಿನಹ ರಾಕ್ಷಸರು ಸಾಯರು. ಇದು ಬತ್ತಿದಾಗಲೇ ಅವರಿಗೆ ಅಳಿವು ಎಂದು ತಿಳಿದು ವಿಷ್ಣುವು ಆಕಳಾಗಿಯೂ, ಬ್ರಹ್ಮನು ಕರುವಾಗಿಯೂ, ನಿರ್ಭಯದಿಂದ ಆ ಅಮೃತದ ಬಾವಿಯ ಬಳಿಗೆ ಬಂದರು. ಆ ಅಮೃತವನ್ನು ಹೀರಿ ಆ ಬಾವಿಯನ್ನು ಬತ್ತಿಸಿದರು. ಬಳಿಕ ಬುದ್ಧನ ಮಾಯಾ ತಂತ್ರವನ್ನು ಉಪಯೋಗಿಸಿ ರಾಕ್ಷಸರು ಗೆಲ್ಲುವುದನ್ನು ತಪ್ಪಿಸಿದರು.
ಪದಾರ್ಥ (ಕ.ಗ.ಪ)
ಬಿನ್ನಾಣ-ತಂತ್ರ
ದೇವತ್ರಯ-ಮೂರು ದೇವರಾದ ಬ್ರಹ್ಮ, ವಿಷ್ಣು, ಮಹೇಶ್ವರ; ಬೌದ್ಧ-ಬುದ್ಧನ ಒಂದು ಮತ
ಮೂಲ ...{Loading}...
ಮಯನ ಬಿನ್ನಾಣವನು ದೇವ
ತ್ರಯವರಿದುದಿದು ತೀರಲಸುರರ
ಲಯವೆನುತ ಹರಿ ಧೇನುವಬುಜಾಸನನು ಕರುವಾಗಿ
ಭಯವಿಹೀನರು ಹೊಕ್ಕರಾ ಬಾ
ವಿಯನು ಬತ್ತಿಸಿ ಬಳಿಕ ದೈತ್ಯರ
ಜಯವ ಮುರಿದರು ಮೋಹನದ ಬೌದ್ಧಾವತಾರದಲಿ ॥32॥
೦೩೩ ಭವನ ಭಕುತಿಯ ...{Loading}...
ಭವನ ಭಕುತಿಯ ಬಿಡಿಸಿದರು ಶಾಂ
ಭವ ಸುಸಿದ್ಧಾಂತವನು ಬೌದ್ಧ
ವ್ಯವಹರಣೆಗಳ ಮಾಯೆಯಲಿ ಕೆಡಹಿದರು ಕಪಟದಲಿ
ಯುವತಿಯರು ಪರಪುರುಷ ಯೋಗ
ಪ್ರವರದೀಕ್ಷಿತರಾಯ್ತು ಬೌದ್ಧನ
ವಿವಿಧ ಮಾಯೆಗೆ ಮಾರುವೋದುದು ಮನ ಸುರಾರಿಗಳ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರಿಗೆ ಈಶ್ವರನಲ್ಲಿದ್ದ ಭಕ್ತಿ ನಾಶವಾಯಿತು. ಬುದ್ಧನ ಮಾಯೆಯಿಂದ ಶಿವನ ಸಂಬಂಧದ ತತ್ವ ವ್ರತಗಳನ್ನೂ ತಪ್ಪಿಸಿದರು. ಕಪಟತನದಿಂದ ಎಲ್ಲರೂ ಬೌದ್ಧಾಚಾರದಂತೆ ನಡೆಯುವಂತೆ ಮಾಡಿದರು. ರಾಕ್ಷಸರ ಪತ್ನಿಯರು ಪರಪುರುಷರೊಂದಿಗೆ ಬೆರೆತರು. ನಾನಾ ವಿಧದ ಬೌದ್ಧಮಾಯೆಗೆ ರಾಕ್ಷಸರ ಮನ ಮರುಳಾಗಿ ಹೋಯಿತು.
ಪದಾರ್ಥ (ಕ.ಗ.ಪ)
ಭವನಭಕ್ತಿ-ಮನೆಯ ಮೋಹ;
ಶಾಂಭವ ಸಿದ್ಧಾಂತ-ಶಿವನ ವಿಷಯದ ತತ್ವ;
ಬೌದ್ಧವ್ಯವಹರಣೆ-ಬೌದ್ಧ ಮತದ ಆಚರಣೆ
ಮೂಲ ...{Loading}...
ಭವನ ಭಕುತಿಯ ಬಿಡಿಸಿದರು ಶಾಂ
ಭವ ಸುಸಿದ್ಧಾಂತವನು ಬೌದ್ಧ
ವ್ಯವಹರಣೆಗಳ ಮಾಯೆಯಲಿ ಕೆಡಹಿದರು ಕಪಟದಲಿ
ಯುವತಿಯರು ಪರಪುರುಷ ಯೋಗ
ಪ್ರವರದೀಕ್ಷಿತರಾಯ್ತು ಬೌದ್ಧನ
ವಿವಿಧ ಮಾಯೆಗೆ ಮಾರುವೋದುದು ಮನ ಸುರಾರಿಗಳ ॥33॥
೦೩೪ ಹರಿ ಸರೋಜಾಸನರು ...{Loading}...
ಹರಿ ಸರೋಜಾಸನರು ಶೂಲಿಯ
ಹೊರೆಗೆ ಬಂದರು ದೇವ ದೈತ್ಯರ
ಪುರವಧರ್ಮದ ಪೇಟೆಯಾದುದು ನಯನಪಾವಕನ
ಕರೆದು ಬೆಸಸುವಡಿದು ಸಮಯವೀ
ಸುರರ ಸಲಹುವ ಚಿತ್ತವುಳ್ಳರೆ
ಕರುಣಿ ಬಿಜಯಂಗೈವುದೆಂದರು ಪಾರ್ವತೀಪತಿಗೆ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಷ್ಣು ಮತ್ತು ಬ್ರಹ್ಮ ಇವರು ಶಿವನ ಬಳಿಗೆ ಬಂದರು. “ದೇವಾ ! ದೈತ್ಯರ ಪಟ್ಟಣಗಳು ಈಗ ಅಧರ್ಮದ ಪೇಟೆಯಾದವು. ನೀವು ನಿಮ್ಮ ಅಗ್ನಿಗಣ್ಣಿನ ಅಗ್ನಿಯನ್ನು ಕರೆದು ಪುರಗಳನ್ನೆಲ್ಲ ಸುಡಲು ಹೇಳಲಿಕ್ಕೆ ಸರಿಯಾದ ಸಮಯವಿದು. ನಿಮಗೆ ದೇವತೆಗಳನ್ನು ಕಾಪಾಡಬೇಕೆಂದು ಮನಸ್ಸು ಇದ್ದದೇ ಆದರೆ ದಯಾಳುಗಳಾದ ತಾವು ಬಿಜಯ ಮಾಡಬೇಕು” ಎಂದು ಪಾರ್ವತೀಪತಿಗೆ ಬಿನ್ನಹ ಮಾಡಿಕೊಂಡರು.
ಮೂಲ ...{Loading}...
ಹರಿ ಸರೋಜಾಸನರು ಶೂಲಿಯ
ಹೊರೆಗೆ ಬಂದರು ದೇವ ದೈತ್ಯರ
ಪುರವಧರ್ಮದ ಪೇಟೆಯಾದುದು ನಯನಪಾವಕನ
ಕರೆದು ಬೆಸಸುವಡಿದು ಸಮಯವೀ
ಸುರರ ಸಲಹುವ ಚಿತ್ತವುಳ್ಳರೆ
ಕರುಣಿ ಬಿಜಯಂಗೈವುದೆಂದರು ಪಾರ್ವತೀಪತಿಗೆ ॥34॥
೦೩೫ ಬಿಲ್ಲ ತುಡುಕಿದನಭವನೆಡಬಲ ...{Loading}...
ಬಿಲ್ಲ ತುಡುಕಿದನಭವನೆಡಬಲ
ದಲ್ಲಿ ಜಯಜಯಜಯಜಯಧ್ವನಿ
ಘಲ್ಲಿಸಿತ್ತೀರೇಳು ಭುವನ ಶ್ರವಣ ವೀಧಿಗಳ
ಭುಲ್ಲವಿಸಿ ಹಯ ಪದಸಮೂಹವ
ಚೆಲ್ಲಿದವು ಸಕ್ರಮದ ಪಾಳಿಯ
ಪಲ್ಲವಿಕೆ ಪರಿವಡೆದುದಮಳಪ್ರಣವಮಯವಾಗಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹದಿನಾಲ್ಕು ಲೋಕಗಳೂ, ಶಿವನ ಎಡ ಬಲದಲ್ಲಿ ಜಯ ಜಯ ಎಂದು ಜಯ ಧ್ವನಿ ಮಾಡುತ್ತಿರಲು ಈಶ್ವರನು ಬಿಲ್ಲನ್ನು ಕೈಗೆತ್ತಿಕೊಂಡನು. ಜಯನಿನಾದವು ಹದಿನಾಲ್ಕು ಲೋಕವನ್ನೂ ತುಂಬಿತು. ಕುದುರೆಗಳು ಹಿಗ್ಗಿನಿಂದ ಕುಣಿಯುತ್ತ ತಮ್ಮ ಕಾಲುಗಳನ್ನು ಮುಂದೆ ಮುಂದೆ ಕ್ರಮವಾಗಿ ಚೆಲ್ಲಿದವು. ಈ ಮುನ್ನಡೆಯು ಬಳಿಕ ನಿರ್ಮಲವಾದ ಓಂಕಾರಮಯವಾಗಿ ಪರಿಣಮಿಸಿತು.
ಪದಾರ್ಥ (ಕ.ಗ.ಪ)
ಪಲ್ಲವಿಕೆ-ಮುಂದರಿ
ಮೂಲ ...{Loading}...
ಬಿಲ್ಲ ತುಡುಕಿದನಭವನೆಡಬಲ
ದಲ್ಲಿ ಜಯಜಯಜಯಜಯಧ್ವನಿ
ಘಲ್ಲಿಸಿತ್ತೀರೇಳು ಭುವನ ಶ್ರವಣ ವೀಧಿಗಳ
ಭುಲ್ಲವಿಸಿ ಹಯ ಪದಸಮೂಹವ
ಚೆಲ್ಲಿದವು ಸಕ್ರಮದ ಪಾಳಿಯ
ಪಲ್ಲವಿಕೆ ಪರಿವಡೆದುದಮಳಪ್ರಣವಮಯವಾಗಿ ॥35॥
೦೩೬ ಅಡಿಗಡಿಗೆ ಚಮ್ಮಟಿಗೆಯಳ್ಳೆಯ ...{Loading}...
ಅಡಿಗಡಿಗೆ ಚಮ್ಮಟಿಗೆಯಳ್ಳೆಯ
ತುಡುಕೆ ಕುಣಿದವು ವೇದಹಯ ಬಲ
ನೆಡ ಪುರಃಪಶ್ಚಿಮದಲೆರಗುವ ಮಂತ್ರ ಕೋಟಿಗಳ
ನುಡಿಯಲರಿದಾಕಾಶ ಸರಸಿಯೊ
ಳಿಡಿದ ತಾವರೆಮುಗುಳುಗಳೊ ಸುರ
ಪಡೆಯೊಳೊತ್ತಿದ ಮುಗಿದ ಕೈಗಳೊ ಚಿತ್ರವಾಯ್ತೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಜ್ಜೆ ಹೆಜ್ಜೆಗೆ ಸಾರಥಿಯ ಕೋರಡೆಯ ಪೆಟ್ಟು ಪಕ್ಕೆಗೆ ತಾಗಿ ವೇದದ ಕುದುರೆಗಳು ಕುಣಿದವು. ಎಡಕ್ಕೆ, ಬಲಕ್ಕೆ, ಮುಂದಕ್ಕೆ ಮತ್ತು ಹಿಂದಕ್ಕೆ ಮಂತ್ರಕೋಟಿಗಳು ತುಂಬುತ್ತಿರಲು, ದೇವತೆಗಳ ಸೈನ್ಯದಲ್ಲಿ ದೇವತೆಗಳು ಕೈಮುಗಿಯುತ್ತಿರಲು, ಅವು ಆಕಾಶವೆಂಬ ಸರಸ್ಸಿನಲ್ಲಿ ಮೇಲೆದ್ದ ತಾವರೆಯ ಮೊಗ್ಗೆಗಳೋ, ಮುಗಿದ ಕೈಗಳೋ ಹೇಳಲಿಕ್ಕೆ ಬಾರದಂತೆ ಇದು ಬಹಳ ವಿಚಿತ್ರವಾಗಿತ್ತು.
ಪದಾರ್ಥ (ಕ.ಗ.ಪ)
ಅಳ್ಳೆ-ಪಕ್ಕೆ; ಅರಿದು-ಆಗಲಾರದು; ಒತ್ತಿದ-ಗುಂಪಾದ
ಮೂಲ ...{Loading}...
ಅಡಿಗಡಿಗೆ ಚಮ್ಮಟಿಗೆಯಳ್ಳೆಯ
ತುಡುಕೆ ಕುಣಿದವು ವೇದಹಯ ಬಲ
ನೆಡ ಪುರಃಪಶ್ಚಿಮದಲೆರಗುವ ಮಂತ್ರ ಕೋಟಿಗಳ
ನುಡಿಯಲರಿದಾಕಾಶ ಸರಸಿಯೊ
ಳಿಡಿದ ತಾವರೆಮುಗುಳುಗಳೊ ಸುರ
ಪಡೆಯೊಳೊತ್ತಿದ ಮುಗಿದ ಕೈಗಳೊ ಚಿತ್ರವಾಯ್ತೆಂದ ॥36॥
೦೩೭ ಪರಮ ಶ್ರುತಿ ...{Loading}...
ಪರಮ ಶ್ರುತಿ ವೇದಾಂಗ ಮಂತ್ರೋ
ತ್ಕರ ಧರಿತ್ರಿ ಕುಲಾದ್ರಿ ಸಸಿ ಭಾ
ಸ್ಕರ ಸುರೋರಗ ಜಲಧಿ ನದಿ ನಕ್ಷತ್ರ ರಾಶಿಗಳು
ಸರಸಿರುಹಭವ ವಿಷ್ಣು ವಿವಿಧಾ
ಧ್ವರ ಮುನೀಂದ್ರ ಗ್ರಹವು ಸಚರಾ
ಚರವುಘೇ ಎಂದೆರಗುತಿರ್ದುದು ಶಿವನ ಬಳಸಿನಲಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠವಾದ ಶ್ರುತಿಗಳು, ವೇದಾಂಗಗಳು, ಮಂತ್ರ ಸಮೂಹಗಳು, ಭೂಮಿ, ಕುಲಪರ್ವತಗಳು, ಚಂದ್ರ, ಸೂರ್ಯ, ಸುರರು, ಪನ್ನಗರು, ಸಮುದ್ರ, ನದಿಗಳು, ನಕ್ಷತ್ರ ರಾಶಿಗಳು, ಬ್ರಹ್ಮ, ವಿಷ್ಣು, ಅನೇಕ ಬಗೆಯ ಯಜ್ಞಗಳು, ಋಷಿಮುನಿಗಳು, ಗ್ರಹಗಳು, ಸಚರಾಚರಗಳು ಎಲ್ಲವೂ ಉಘೇ ಎಂದು ಉಲಿಯುತ್ತ ಶಿವನ ಸುತ್ತಲೂ ನಿಂತು ನಮಸ್ಕರಿಸುತ್ತಿದ್ದವು.
ಮೂಲ ...{Loading}...
ಪರಮ ಶ್ರುತಿ ವೇದಾಂಗ ಮಂತ್ರೋ
ತ್ಕರ ಧರಿತ್ರಿ ಕುಲಾದ್ರಿ ಸಸಿ ಭಾ
ಸ್ಕರ ಸುರೋರಗ ಜಲಧಿ ನದಿ ನಕ್ಷತ್ರ ರಾಶಿಗಳು
ಸರಸಿರುಹಭವ ವಿಷ್ಣು ವಿವಿಧಾ
ಧ್ವರ ಮುನೀಂದ್ರ ಗ್ರಹವು ಸಚರಾ
ಚರವುಘೇ ಎಂದೆರಗುತಿರ್ದುದು ಶಿವನ ಬಳಸಿನಲಿ ॥37॥
೦೩೮ ಒದಗಿತೀ ಹೇಳಿದ ...{Loading}...
ಒದಗಿತೀ ಹೇಳಿದ ಸಮಸ್ತ
ತ್ರಿದಶಸಚರಾಚರವು ತಮ್ಮಂ
ಗದಲಿ ರಚಿಸಿದ ವಿಶ್ವಕರ್ಮನ ಕೃತ ನಿಯೋಗದಲಿ
ಅದು ಬಳಿಕ ನಿರ್ಜರ ಸಮೂಹಾ
ಭ್ಯುದಯವೈಸಲೆ ಧನುವ ಕೊಂಡನು
ಮದನರಿಪು ತಿರುಹಿದನು ಬೆರಳಲಿ ಪಾಶುಪತ ಶರವ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ಮೇಲೆ ಹೇಳಿದ ದೇವತೆ ಚರಾಚರ ವಸ್ತುಗಳು ವಿಶ್ವಕರ್ಮನ ನೇಮಕದಂತೆ ತಮ್ಮ ತಮ್ಮ ಸ್ಥಾನಗಳಲ್ಲಿ ಕರ್ತವ್ಯನಿರತವಾಗಿ ನಿಂತು ಕೊಂಡವು. ನಂತರ ಆಹಾ ! ದೇವತೆಗಳಿಗೆ ಯಶಸ್ಸು ತಂದು ಕೊಡಬೇಕಲ್ಲವೇ? ಅದಕ್ಕಾಗಿ ಮದನರಿಪು ಸಿದ್ಧನಾದನು. ಬಿಲ್ಲನ್ನು ಎತ್ತಿಕೊಂಡನು. ಪಾಶುಪತ ಬಾಣವನ್ನು ಬೆರಳಿನಿಂದ ತಿರುಗಿಸಿದನು.
ಮೂಲ ...{Loading}...
ಒದಗಿತೀ ಹೇಳಿದ ಸಮಸ್ತ
ತ್ರಿದಶಸಚರಾಚರವು ತಮ್ಮಂ
ಗದಲಿ ರಚಿಸಿದ ವಿಶ್ವಕರ್ಮನ ಕೃತ ನಿಯೋಗದಲಿ
ಅದು ಬಳಿಕ ನಿರ್ಜರ ಸಮೂಹಾ
ಭ್ಯುದಯವೈಸಲೆ ಧನುವ ಕೊಂಡನು
ಮದನರಿಪು ತಿರುಹಿದನು ಬೆರಳಲಿ ಪಾಶುಪತ ಶರವ ॥38॥
೦೩೯ ಕೃತಕವೋ ದಿಟವೋ ...{Loading}...
ಕೃತಕವೋ ದಿಟವೋ ದುರಂತರ
ಶ್ರುತಿಗಳರಿಯವು ನಮ್ಮ ಮಿಡುಕುವ
ಮತಿಯ ಪಾಡೇ ನಿಮಿಷಕಬುಜಭವಾಂಡ ಕೋಟಿಗಳ
ಸ್ಥಿತಿಗತಿಯನಗ್ಗಳದ ನಯನಾ
ಹುತಿಯ ಮಾಡುವ ತ್ರಿಪುರಹರ ಸಂ
ಗತಿಯ ಸಮಯವ ಹಾರಿದನು ಸುರವರುಷ ಸಾವಿರವ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇನು ಕೃತಕವೋ? ನಿಜವೋ? ಅಸಂಖ್ಯವಾದ ಶ್ರುತಿಗಳೇ ತಿಳಿಯಲಾರವು. ಇನ್ನು ಚಂಚಲವಾದ ನಮ್ಮ ಮತಿಯ ಪಾಡೇನು? ನಿಮಿಷ ಮಾತ್ರದಲ್ಲಿ ಬ್ರಹ್ಮಾಂಡ ಕೋಟಿಗಳ ಸ್ಥಿತಿಗತಿಯನ್ನು ತನ್ನ ಅಗ್ನಿಗಣ್ಣಿಗೆ ಆಹುತಿ ಕೊಡಬಲ್ಲ ಪರಶಿವನು ತ್ರಿಪುರಗಳನ್ನು ನಾಶಮಾಡುವ ಕ್ಷಣಕ್ಕಾಗಿ ಅಂದರೆ ದೇವತೆಗಳ ಸಾವಿರ ವರುಷವನ್ನು (ನಿಮಿಷ ಮಾತ್ರದಲ್ಲಿ) ದಾಟಿದನು.
ಪದಾರ್ಥ (ಕ.ಗ.ಪ)
ದುರಂತರ - ದಟ್ಟವಾದ, ಅಸಂಖ್ಯ
ಮೂಲ ...{Loading}...
ಕೃತಕವೋ ದಿಟವೋ ದುರಂತರ
ಶ್ರುತಿಗಳರಿಯವು ನಮ್ಮ ಮಿಡುಕುವ
ಮತಿಯ ಪಾಡೇ ನಿಮಿಷಕಬುಜಭವಾಂಡ ಕೋಟಿಗಳ
ಸ್ಥಿತಿಗತಿಯನಗ್ಗಳದ ನಯನಾ
ಹುತಿಯ ಮಾಡುವ ತ್ರಿಪುರಹರ ಸಂ
ಗತಿಯ ಸಮಯವ ಹಾರಿದನು ಸುರವರುಷ ಸಾವಿರವ ॥39॥
೦೪೦ ಕೂಡಿದವು ಪುರ ...{Loading}...
ಕೂಡಿದವು ಪುರ ಮೂರು ನಿಮಿಷದೊ
ಳೀಡಿರಿದುದುರಿ ನಯನವಹ್ನಿಯ
ಕೂಡಿ ಹುರಿಗೊಂಡೌಕಿ ಹರಿದುದು ಪಾಶುಪತಬಾಣ
ಝಾಡಿ ಹೊರಳಿಯ ಹೊಗೆಯ ಜೋಡಿಯ
ನೀಡುನಾಲಗೆ ಪುರದ ಸುತ್ತಲು
ಕೂಡೆ ವೇಢಯವಾಯ್ತು ಹರಹಿನ ಕಿಡಿಯ ಗಡಣದಲಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಲಕೂಡಿ ಬಂತು. ಮೂರೂ ಪುರಗಳು ಕೂಡಿದವು. ಒಂದೇ ಸಾಲಿನಲ್ಲಿ ಬಂದವು. ಆ ನಿಮಿಷದಲ್ಲಿ ಶಿವನ ಹಣೆಗಣ್ಣಿನ ಉರಿ ಚಾಚಿತು. ಹುರಿಗೊಂಡು ಪಾಶುಪತ ಬಾಣ (ಅದೇ ಹೊತ್ತಿಗೆ) ನುಗ್ಗಿತು. ಕಣ್ಣಿನ ಉರಿ ಚಿಮ್ಮಿ ರಾಶಿಯಾಗಿ ಹೊಗೆ ಸಹಿತ ತನ್ನ ದೊಡ್ಡ ನಾಲಗೆಯನ್ನು ಪುರದ ಸುತ್ತಲೂ ಹರಡಿತು. ಕೂಡಲೇ ವಿಸ್ತಾರವಾದ ಕಿಡಿಗಳ ಸಮೂಹದಿಂದ ಕೂಡಿದ ಆ ಪುರಗಳನ್ನು ಮುತ್ತಿತು.
ಮೂಲ ...{Loading}...
ಕೂಡಿದವು ಪುರ ಮೂರು ನಿಮಿಷದೊ
ಳೀಡಿರಿದುದುರಿ ನಯನವಹ್ನಿಯ
ಕೂಡಿ ಹುರಿಗೊಂಡೌಕಿ ಹರಿದುದು ಪಾಶುಪತಬಾಣ
ಝಾಡಿ ಹೊರಳಿಯ ಹೊಗೆಯ ಜೋಡಿಯ
ನೀಡುನಾಲಗೆ ಪುರದ ಸುತ್ತಲು
ಕೂಡೆ ವೇಢಯವಾಯ್ತು ಹರಹಿನ ಕಿಡಿಯ ಗಡಣದಲಿ ॥40॥
೦೪೧ ಕಟ್ಟಿತುರಿ ದೆಸೆ ...{Loading}...
ಕಟ್ಟಿತುರಿ ದೆಸೆ ನಾಲ್ಕರಲಿ ಬೆ
ನ್ನಟ್ಟಿ ಹೊಯ್ದುದು ಬಿನುಗುಗಳ ಜಗ
ಜಟ್ಟಿಗಳನೊರಗಿಸಿತು ಮರುಗಿಸಿತಸುರ ನಾರಿಯರ
ದಿಟ್ಟರುರಿದುದು ವೀರರಸುಗಳ
ಬಿಟ್ಟರಭವದ್ರೋಹಿಗಳು ನೆರೆ
ಕೆಟ್ಟ ಕೇಡಿಂಗಾರು ಮರುಗುವರರಸ ಕೇಳ್ ಎಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾಲ್ಕೂ ದಿಕ್ಕಿಗೂ ಉರಿ ಹಬ್ಬಿತು. ಬೆನ್ನು ಹತ್ತಿ ಹೊಯ್ದಿತು. ಕ್ಷುಲ್ಲಕರಾದ ರಾಕ್ಷಸರನ್ನೂ ಜಗಜಟ್ಟಿಗಳನ್ನೂ ನೆಲಕ್ಕೆ ಕೆಡವಿತು. ಅವರ ಸ್ತ್ರೀಯರು ಮರುಗಿದರು. ದಿಟ್ಟರಾದವರೂ ಸುಟ್ಟು ಹೋದರು. ವೀರರಾದವರೂ ಆಸುಗಳನ್ನು ಬಿಟ್ಟರು. ಶಿವನಿಗೆ ದ್ರೋಹ ಬಗೆದವರು ಸಂಪೂರ್ಣವಾಗಿ ಹಾಳಾಗಿ ಹೋದ ಬಗ್ಗೆ ಮರುಗುವವರು ಯಾರು? ಅರಸಾ ಕೇಳು” ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಮೂಲ ...{Loading}...
ಕಟ್ಟಿತುರಿ ದೆಸೆ ನಾಲ್ಕರಲಿ ಬೆ
ನ್ನಟ್ಟಿ ಹೊಯ್ದುದು ಬಿನುಗುಗಳ ಜಗ
ಜಟ್ಟಿಗಳನೊರಗಿಸಿತು ಮರುಗಿಸಿತಸುರ ನಾರಿಯರ
ದಿಟ್ಟರುರಿದುದು ವೀರರಸುಗಳ
ಬಿಟ್ಟರಭವದ್ರೋಹಿಗಳು ನೆರೆ
ಕೆಟ್ಟ ಕೇಡಿಂಗಾರು ಮರುಗುವರರಸ ಕೇಳೆಂದ ॥41॥
೦೪೨ ಸರಳ ಮೊನೆಯಲಿ ...{Loading}...
ಸರಳ ಮೊನೆಯಲಿ ಸಿಡಿದ ಕಿಡಿಯೊಂ
ದೆರಡರಲಿ ಬೆಂದುದು ಪುರತ್ರಯ
ವರಸ ಕೇಳೈ ಬಳಿಕ ಬಾಣದ ಬಾಯಿಧಾರೆಗಳ
ಹರನ ನಯನದ ಕಿಚ್ಚು ಕಾಣದು
ಪುರವನಾ ಖಾತಿಯಲಿ ಭೇದಿಸಿ
ಮುರಿಮುರಿದು ಸುಡತೊಡಗಿತಬುಜಭವಾಂಡ ಮಂಡಲವ ॥42|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣದ ತುದಿಯಿಂದ ಸಿಡಿದು ಒಂದೆರಡು ಕಿಡಿಗಳಲ್ಲಿ ಮೂರು ಪಟ್ಟಣಗಳೂ ಬೆಂದು ಹೋದವು. ಅರಸನೇ ಕೇಳು. ಪಾಶುಪತ ಬಾಣದ ಬಾಯಿಂದ ಉಗುಳುವ ಮತ್ತು ಶಿವನ ಹಣೆಗಣ್ಣಿನ ಕಿಚ್ಚು ಇವುಗಳಿಂದ ಪಟ್ಟಣವೇ ಕಾಣದಂತಾಯಿತು. ಸಿಟ್ಟಿನಿಂದ ಹೊಕ್ಕು ಮತ್ತೆ ಮತ್ತೆ ಬ್ರಹ್ಮಾಂಡ ಮಂಡಳವನ್ನೂ ಸುಡತೊಡಗಿತು.
ಪದಾರ್ಥ (ಕ.ಗ.ಪ)
ಬಾಯಿಧಾರೆ-ಬಾಯಿಂದ ಬರುವ ಉರಿ;
ಮೂಲ ...{Loading}...
ಸರಳ ಮೊನೆಯಲಿ ಸಿಡಿದ ಕಿಡಿಯೊಂ
ದೆರಡರಲಿ ಬೆಂದುದು ಪುರತ್ರಯ
ವರಸ ಕೇಳೈ ಬಳಿಕ ಬಾಣದ ಬಾಯಿಧಾರೆಗಳ
ಹರನ ನಯನದ ಕಿಚ್ಚು ಕಾಣದು
ಪುರವನಾ ಖಾತಿಯಲಿ ಭೇದಿಸಿ
ಮುರಿಮುರಿದು ಸುಡತೊಡಗಿತಬುಜಭವಾಂಡ ಮಂಡಲವ ॥42|
೦೪೩ ಎಲೆ ಚತುರ್ದಶ ...{Loading}...
ಎಲೆ ಚತುರ್ದಶ ಜಗವನುರಿಯ
ಪ್ಪಳಿಸಿತೇ ಬೆಂದುದು ಸುರೌಘದ
ಗೆಲವು ಕರೆಯಾ ಕಲ್ಪಮೇಘವನುರಿಯ ಮಾಣಿಸಲಿ
ಬಲುಕಣಿಗಳಲ್ಲಾ ಜನಾರ್ದನ
ನಳಿನಭವರಾವೆಡೆಯೆನುತ ಕಳ
ವಳಿಸಿದುದು ಮೊರೆಯಿಟ್ಟುದಭವನ ಮುಂದೆ ಭುವನಜನ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲಲಾ ಹದಿನಾಲ್ಕು ಲೋಕಗಳಿಗೂ ಉರಿ ಹಬ್ಬಿತೇ? ಈ ದೇವತೆಗಳ ಗೆಲುವು ಸುಡಲಿ. ಬೇಗ ಕಲ್ಪ ಮೇಘವನ್ನು ಕರೆಯಿರೋ. ಅದು ಈ ಉರಿಯನ್ನು ನಿಲ್ಲಿಸಲಿ, ಜನಾರ್ದನ, ಬ್ರಹ್ಮರು ಬಲ್ಲಿದರಲ್ಲಾ? ಅವರು ಎಲ್ಲಿ ಹೋದರು? " ಎನ್ನುತ್ತ ಪರಶಿವನ ಮುಂದೆ ಎಲ್ಲರೂ ಮೊರೆಯಿಟ್ಟರು.
ಪದಾರ್ಥ (ಕ.ಗ.ಪ)
ಬಲುಕಣಿ-ಬಲ್ಲಿದರು;
ಮೂಲ ...{Loading}...
ಎಲೆ ಚತುರ್ದಶ ಜಗವನುರಿಯ
ಪ್ಪಳಿಸಿತೇ ಬೆಂದುದು ಸುರೌಘದ
ಗೆಲವು ಕರೆಯಾ ಕಲ್ಪಮೇಘವನುರಿಯ ಮಾಣಿಸಲಿ
ಬಲುಕಣಿಗಳಲ್ಲಾ ಜನಾರ್ದನ
ನಳಿನಭವರಾವೆಡೆಯೆನುತ ಕಳ
ವಳಿಸಿದುದು ಮೊರೆಯಿಟ್ಟುದಭವನ ಮುಂದೆ ಭುವನಜನ ॥43॥
೦೪೪ ಅರಿಪುರತ್ರಯ ದಹನ ...{Loading}...
ಅರಿಪುರತ್ರಯ ದಹನ ಕರ್ಮ
ಸ್ಫುರಣವಸ್ಮತ್ಕಾರ್ಯವದು ಗೋ
ಚರಿಸಿತಲ್ಲಿಂ ಮೇಲಣುಚಿತಾನುಚಿತ ಕೃತ್ಯವನು
ಕರುಣಿ ನೀನೇ ಬಲ್ಲೆ ಜನ ಸಂ
ಹರಣ ಕಾಲವೊ ಮೇಣು ರಕ್ಷಾ
ಕರಣ ಕಾಲವೊ ದೇವ ಎಂದೊರಲಿದುದು ಭುವನಜನ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈರಿಗಳ ಮೂರು ಊರುಗಳನ್ನು ಸುಡುವುದು ನಮಗಾಗಿ ಕೈಕೊಂಡ ಕಾರ್ಯವು. ಅದು ಮುಗಿಯಿತು. ಅದರ ಮೇಲೆ ಉಚಿತ, ಅನುಚಿತ ಎಂಬುದು ಕರುಣಿಯಾದ ನೀನೇ ಬಲ್ಲೆ. ಈಗ ಜನಸಂಹಾರದ ಕಾಲವೋ? ರಕ್ಷಿಸುವ ಕಾಲವೊ? (ತಿಳಿದು ನೋಡು) ದೇವಾ ! ಎಂದು ಲೋಕದ ಜನ ಬಾಯಿಬಿಟ್ಟು ಒರಲಿತು, ನಮ್ಮನ್ನು ರಕ್ಷಿಸು ಎಂದು ಬೇಡಿಕೊಂಡಿತು.
ಮೂಲ ...{Loading}...
ಅರಿಪುರತ್ರಯ ದಹನ ಕರ್ಮ
ಸ್ಫುರಣವಸ್ಮತ್ಕಾರ್ಯವದು ಗೋ
ಚರಿಸಿತಲ್ಲಿಂ ಮೇಲಣುಚಿತಾನುಚಿತ ಕೃತ್ಯವನು
ಕರುಣಿ ನೀನೇ ಬಲ್ಲೆ ಜನ ಸಂ
ಹರಣ ಕಾಲವೊ ಮೇಣು ರಕ್ಷಾ
ಕರಣ ಕಾಲವೊ ದೇವ ಎಂದೊರಲಿದುದು ಭುವನಜನ ॥44॥
೦೪೫ ತ್ರಾಹಿ ಮದನಾನ್ತಕ ...{Loading}...
ತ್ರಾಹಿ ಮದನಾಂತಕ ಪುರತ್ರಯ
ದಾಹ ಹರ ಶಂಕರ ಮಹೇಶ
ತ್ರಾಹಿ ಮೃತ್ಯುಂಜಯ ಪಿನಾಕಿ ತ್ರಾಹಿ ಲೋಕೇಶ
ದ್ರೋಹಿಗಳು ಧೂಳಾಯ್ತು ಬಳಿಕಿನೊ
ಳೀ ಹದನು ಬಂದಿದೆ ಜಗತ್ರಯ
ರೂಹುಗೆಡುತಿದೆ ದೇವ ಎಂದುದು ಸಕಲ ಭುವನಜನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಮನನ್ನು ದಹಿಸಿದವನೇ ಕಾಪಾಡು. ತ್ರಿಪುರಗಳನ್ನು ಭಸ್ಮ ಮಾಡಿದವನೇ ಕಾಪಾಡು. ಹರ, ಶಂಕರ, ಮಹೇಶ ಕಾಪಾಡು, ಮೃತ್ಯುಂಜಯನೇ, ಪಿನಾಕಿಯೇ ಕಾಪಾಡು, ಎಲೈ ಲೋಕೇಶನೇ, ವೈರಿಗಳು ಸುಟ್ಟು ಭಸ್ಮವಾದರು. ಈಗ ಈ ಸ್ಥಿತಿ ಬಂದೊದಗಿದೆ. (ಉರಿ ಆರದೆ ಜಗತ್ತನ್ನೇ ಸುಡುತ್ತ ಹೊರಟಿದೆ) ಮೂರು ಲೋಕಗಳ ಸ್ಥಿತಿಗತಿ ಕೆಡುತ್ತಲಿದೆ. ಆದ್ದರಿಂದ ದೇವಾ ! ರಕ್ಷಿಸು ಎಂದು ಲೋಕದ ಜನ ಮೊರೆಯಿಟ್ಟಿತು.
ಮೂಲ ...{Loading}...
ತ್ರಾಹಿ ಮದನಾಂತಕ ಪುರತ್ರಯ
ದಾಹ ಹರ ಶಂಕರ ಮಹೇಶ
ತ್ರಾಹಿ ಮೃತ್ಯುಂಜಯ ಪಿನಾಕಿ ತ್ರಾಹಿ ಲೋಕೇಶ
ದ್ರೋಹಿಗಳು ಧೂಳಾಯ್ತು ಬಳಿಕಿನೊ
ಳೀ ಹದನು ಬಂದಿದೆ ಜಗತ್ರಯ
ರೂಹುಗೆಡುತಿದೆ ದೇವ ಎಂದುದು ಸಕಲ ಭುವನಜನ ॥45॥
೦೪೬ ಕರುಣರಸದಲಿ ನನೆದು ...{Loading}...
ಕರುಣರಸದಲಿ ನನೆದು ನಗೆಯಂ
ಕುರಿಸಲಾಜ್ಞಾಹಸ್ತದಲಿ ಶಂ
ಕರನ ಹೂಂಕರಣೆಯಲಿ ತಳಿತುರಿ ತಗ್ಗಿತಲ್ಲಲ್ಲಿ
ಶಿರವ ತಡಹುತ ದೇವತತಿ ಪುರ
ಹರನ ಬೀಳ್ಕೊಂಡರು ಮಹಾರಥ
ಹರಿದು ನಿಜಸಂಸ್ಥಾನ ಸಂಗತವಾಯ್ತು ನಿಮಿಷದಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕದ ಜನರ ಈ ಮೊರೆಯನ್ನು ಕೇಳಿ ಶಿವನು ಕರುಣರಸದಿಂದ ನೆನೆದು ಮುಗುಳು ನಗೆ ನಕ್ಕು ಅಪ್ಪಣೆಯ ಕೈತೋರಿದನು. ಹೂಂಕಾರದಿಂದ ಹಬ್ಬುತ್ತಿದ್ದ ಉರಿ ಎಲ್ಲೆಡೆಯೂ ಆರಿ ಶಾಂತವಾಯಿತು. ದೇವತೆಗಳ ಸಮೂಹ (ತಲೆ ಭಾರ ಇಳಿದಂತಾಗಿ) ತಲೆಯ ಮೇಲೆ ಕೈಯಾಡಿಸಿಕೊಂಡು ಪುರಹರನನ್ನು ಬೀಳ್ಕೊಂಡರು. ಆ ಮಹಾರಥವು ಮೊದಲು ಯಾವ ಯಾವ ಸ್ಥಾನದಿಂದ ಬಂದು ನಿರ್ಮಾಣವಾಗಿತ್ತೋ ಅವೆಲ್ಲವೋ ಆಯಾ ಸ್ಥಾನವನ್ನು ಸೇರಿಕೊಂಡವು.
ಮೂಲ ...{Loading}...
ಕರುಣರಸದಲಿ ನನೆದು ನಗೆಯಂ
ಕುರಿಸಲಾಜ್ಞಾಹಸ್ತದಲಿ ಶಂ
ಕರನ ಹೂಂಕರಣೆಯಲಿ ತಳಿತುರಿ ತಗ್ಗಿತಲ್ಲಲ್ಲಿ
ಶಿರವ ತಡಹುತ ದೇವತತಿ ಪುರ
ಹರನ ಬೀಳ್ಕೊಂಡರು ಮಹಾರಥ
ಹರಿದು ನಿಜಸಂಸ್ಥಾನ ಸಂಗತವಾಯ್ತು ನಿಮಿಷದಲಿ ॥46॥