೦೦೦ ಸೂ ರಣಭಯಙ್ಕರನಹಿತ ...{Loading}...
ಸೂ. ರಣಭಯಂಕರನಹಿತ ಸುಭಟರ
ಹಣಿದವನು ಹೊಯ್ದಾಡಿ ಸಾತ್ಯಕಿ
ಕೆಣಕಿದನು ಕಲಕಿದನು ಕುರುಸೇನಾ ಮಹಾರ್ಣವವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ರಣಭಯಂಕರನೂ, ಶತ್ರುಯೋಧರನ್ನು ಹಣಿಯುವವನೂ ಆದ ಸಾತ್ಯಕಿಯು ಹೊಡೆದಾಡಿ ಕುರುಸೇನಾ ಮಹಾರ್ಣವವನ್ನು ಕೆಣಕಿ, ಕಲಕಿದನು.
ಪದಾರ್ಥ (ಕ.ಗ.ಪ)
ಹೊಯ್ದಾಡಿ-ಹೊಡೆದಾಡಿ, ಹಣಿ-ಹೊಡೆ, ಬಡಿ, ಅಹಿತ-ಶತ್ರು
ಮೂಲ ...{Loading}...
ಸೂ. ರಣಭಯಂಕರನಹಿತ ಸುಭಟರ
ಹಣಿದವನು ಹೊಯ್ದಾಡಿ ಸಾತ್ಯಕಿ
ಕೆಣಕಿದನು ಕಲಕಿದನು ಕುರುಸೇನಾ ಮಹಾರ್ಣವವ
೦೦೧ ಬೀಳಲಗ್ಗದ ಕ್ಷೇಮಧೂರ್ತಿ ...{Loading}...
ಬೀಳಲಗ್ಗದ ಕ್ಷೇಮಧೂರ್ತಿ ನೃ
ಪಾಲಕನ ಪರಿವಾರ ರೋಷ ಕ
ರಾಳ ಶಿಖಿಪರಿತಪ್ತ ಕಂಪಿತ ಖಡ್ಗದೊಗ್ಗಿನಲಿ
ಆಳಿದನ ಮರಣದಲಿ ಹಿಂದಣ
ಕೂಳಿನಾಸೆಯ ಕುನ್ನಿಗಳಿರೆನು
ತಾಳು ಕವಿದುದು ಭೀಮ ಫಡ ಫಡ ನಿಲ್ಲು ನಿಲ್ಲೆನುತ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠರಾಜನಾದ ಕ್ಷೇಮಧೂರ್ತಿಯು ಸಾಯಲು, ಅವನ ಪರಿವಾರವು ರೋಷಾಗ್ನಿಯಿಂದ ಪ್ರಜ್ವಲಿಸುತ್ತಾ ಖಡ್ಗಗಳನ್ನು ಝಳಪಿಸುತ್ತ ಗುಂಪಿನಲ್ಲಿ, ‘ಆಳಿದವನಾದ ಕ್ಷೇಮಧೂರ್ತಿಯ ಉಪ್ಪನ್ನು ತಿಂದಂತಹ ಆಸೆಯ ಕುನ್ನಿಗಳಿರಾ,’ ಎನ್ನುತ್ತ ಗುಂಪಾಗಿ ‘ಇರೆನು ತಾಳು, ಭೀಮ ಫಡ ಫಡ ನಿಲ್ಲು ನಿಲ್ಲ್ಲು’ ಎನ್ನುತ್ತ ಮುತ್ತಿದರು.
ಪದಾರ್ಥ (ಕ.ಗ.ಪ)
ಒಗ್ಗು-ಗುಂಪು
ಮೂಲ ...{Loading}...
ಬೀಳಲಗ್ಗದ ಕ್ಷೇಮಧೂರ್ತಿ ನೃ
ಪಾಲಕನ ಪರಿವಾರ ರೋಷ ಕ
ರಾಳ ಶಿಖಿಪರಿತಪ್ತ ಕಂಪಿತ ಖಡ್ಗದೊಗ್ಗಿನಲಿ
ಆಳಿದನ ಮರಣದಲಿ ಹಿಂದಣ
ಕೂಳಿನಾಸೆಯ ಕುನ್ನಿಗಳಿರೆನು
ತಾಳು ಕವಿದುದು ಭೀಮ ಫಡ ಫಡ ನಿಲ್ಲು ನಿಲ್ಲೆನುತ ॥1॥
೦೦೨ ಕರೆದು ಮೂದಲಿಸಿದರೆ ...{Loading}...
ಕರೆದು ಮೂದಲಿಸಿದರೆ ಹುಲ್ಲೆಯ
ಮರಿಗಳಿಗೆ ಖತಿಗೊಂಬುದೇ ಮದ
ಕರಿ ಕರೂಷದ ಕೊಬ್ಬಿನವದಿರು ಹಿಂದೆ ಹತ್ತಿದರೆ
ಮರಳಬಲ್ಲನೆ ಭೀಮನಿವರ
ಬ್ಬರಿಸಿ ಕವಿದರು ಹತ್ತು ಸಾವಿರ
ತುರಗ ಸರಿಸದಲೇರಿದವು ಪಡಿಮುಖದ ಬಲ ಬೆದರೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಿಂಕೆಯ ಮರಿಗಳು ಕರೆದು ಮೂದಲಿಸಿದರೆ ಮದಿಸಿದ ಆನೆ ಕೋಪಗೊಳ್ಳುತ್ತದೆಯೆ? ಕರೂಷ ದೇಶದ ಕೊಬ್ಬಿನ ಜನರು ತನ್ನ ಹಿಂದೆ ಬಿದ್ದರೆ ಭೀಮನು ಹಿಂದಕ್ಕೆ ತಿರುಗಬಲ್ಲನೆ? ಅವರು ಶತ್ರುಗಳ ಸೈನ್ಯವು ಬೆದರುವಂತೆ ಅಬ್ಬರಿಸಿ ಕವಿದರು, ಇದಿರು ಸೈನ್ಯದವರು ಬೆದರುವಂತೆ ಹತ್ತು ಸಾವಿರ ಕುದುರೆಗಳು ವೇಗವಾಗಿ ರಣರಂಗಕ್ಕೆ ಬಂದವು .
ಟಿಪ್ಪನೀ (ಕ.ಗ.ಪ)
ಕರೂಷ ದೇಶ -: ನೋಡಿ ಸಂಸ್ಕೃತ ಕನ್ನಡ ಪದಕೋಶ ನಿಘಂಟು (3-2) ಸಂ. 2. 613
ಕರೂಷ ದೇಶ ಇಂದ್ರನು ವೃತವಧೆಯನ್ನು ಮಾಡಿದಾಗ ಬ್ರಹ್ಮ ಹತ್ಯೆಯು ಅವನ ದೇಹವನ್ನು ಪ್ರವೇಶಿಸಲು ಋಷಿಗಳೆಲ್ಲರೂ ಆ ಪಾತಕವನ್ನು ದೇಹದಿಂದ ಹೊರಕ್ಕೆ ತಳ್ಳಿದರು. ಆ ಪಾತಕವು ಬಿದ್ದ ದೇಶಕ್ಕೆ ‘ಕರೂಷ’ ವೆಂದು ಹೆಸರಾಯಿತು. ರಾಮಾಯಣ - ಈ ಪ್ರದೇಶವು ಈಗಿನ ಬಿಹಾರ ಸಂಸ್ಥಾನಕ್ಕೆ ಸೇರಿದೆ.
ಮೂಲ ...{Loading}...
ಕರೆದು ಮೂದಲಿಸಿದರೆ ಹುಲ್ಲೆಯ
ಮರಿಗಳಿಗೆ ಖತಿಗೊಂಬುದೇ ಮದ
ಕರಿ ಕರೂಷದ ಕೊಬ್ಬಿನವದಿರು ಹಿಂದೆ ಹತ್ತಿದರೆ
ಮರಳಬಲ್ಲನೆ ಭೀಮನಿವರ
ಬ್ಬರಿಸಿ ಕವಿದರು ಹತ್ತು ಸಾವಿರ
ತುರಗ ಸರಿಸದಲೇರಿದವು ಪಡಿಮುಖದ ಬಲ ಬೆದರೆ ॥2॥
೦೦೩ ರಾವುತೋ ಎನಿತೊನ್ದು ...{Loading}...
ರಾವುತೋ ಎನಿತೊಂದು ಹಂತಿಯ
ಸಾವಿನಾತಗಳೇರಿದರು ಪರಿ
ಧಾವನೋದ್ಗತ ಧೂಳಿ ಮುಸುಕಿತು ತರಣಿಮಂಡಲವ
ಆ ವೃಕೋದರ ಗತಿಯ ಕಂಡನು
ರಾವುತರ ದೃಢವಾಘೆ ವಾಘೆಯ
ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೆ ಭಲೆ, ಎಷ್ಟೊಂದು ಸಂಖ್ಯೆಯ ಸೈನಿಕರು ಆಕ್ರಮಣ ಮಾಡಿದರು. ಜೋರಾಗಿ ಓಡುವುದರಿಂದ ಮೇಲೆದ್ದ ಧೂಳು ಸೂರ್ಯಮಂಡಲವನ್ನು ಮುಸುಕಿತು. ಆ ಭೀಮನ ಸ್ಥಿತಿಯನ್ನು ಕಂಡು ಶತ್ರು ರಾವುತರ ಆಕ್ರಮಣ ದೃಢವಾಗಿದೆ ಎನ್ನುತ್ತ ಸಾತ್ಯಕಿ ಧನುವನ್ನು ತುಡುಕಿದನು.
ಪದಾರ್ಥ (ಕ.ಗ.ಪ)
ಪರಿಧಾವನ-ಓಡುವುದು,
ಲಾವಣಿಗೆ-ಹೊಂದಾಣಿಕೆ,
ಮೂಲ ...{Loading}...
ರಾವುತೋ ಎನಿತೊಂದು ಹಂತಿಯ
ಸಾವಿನಾತಗಳೇರಿದರು ಪರಿ
ಧಾವನೋದ್ಗತ ಧೂಳಿ ಮುಸುಕಿತು ತರಣಿಮಂಡಲವ
ಆ ವೃಕೋದರ ಗತಿಯ ಕಂಡನು
ರಾವುತರ ದೃಢವಾಘೆ ವಾಘೆಯ
ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ ॥3॥
೦೦೪ ಅರರೆ ರಾವುತು ...{Loading}...
ಅರರೆ ರಾವುತು ಜಾಗು ಸ್ವಾಮಿಯ
ಹರಿಬಕೋಸುಗ ಹಗೆಯ ಹೊಯ್ದಿರಿ
ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ
ಸರಳನೊಂದನೆ ತೊಡಚಿ ತುರಗದ
ಕೊರಳ ವಾಘೆಯ ಕರವ ರಾವ್ತರ
ಶಿರವನೆಚ್ಚನು ಕೊಂದನೀಪರಿ ಹತ್ತು ಸಾವಿರವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೆ! ಭಲೆ! ಸ್ವಾಮಿಯ ಕಾರ್ಯಕ್ಕಾಗಿ ಹಗೆಯನ್ನು ಹೊಡೆದಿರಿ. ವೀರರಲ್ಲವೆ ? ಎನ್ನುತ್ತ ಮೇಲೆ ನುಗ್ಗಿ ಬರುತ್ತಿರುವ ಕುದುರೆಯನ್ನು ಮುರಿಯಲು ಬಾಣವನ್ನು ಹೂಡುತ್ತ, ಕುದುರೆಯ ಕೊರಳನ್ನು, ಕಡಿವಾಣ ಹಿಡಿದ ಕೈಯ್ಯನ್ನು ರಾವುತರ ತಲೆಯನ್ನು ತೆಗೆದನು. ಈ ರೀತಿ ಹತ್ತು ಸಾವಿರ ರಾವುತರನ್ನು ಕೊಂದನು.
ಮೂಲ ...{Loading}...
ಅರರೆ ರಾವುತು ಜಾಗು ಸ್ವಾಮಿಯ
ಹರಿಬಕೋಸುಗ ಹಗೆಯ ಹೊಯ್ದಿರಿ
ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ
ಸರಳನೊಂದನೆ ತೊಡಚಿ ತುರಗದ
ಕೊರಳ ವಾಘೆಯ ಕರವ ರಾವ್ತರ
ಶಿರವನೆಚ್ಚನು ಕೊಂದನೀಪರಿ ಹತ್ತು ಸಾವಿರವ ॥4॥
೦೦೫ ಬಿದ್ದವಗಣಿತ ತುರಗ ...{Loading}...
ಬಿದ್ದವಗಣಿತ ತುರಗ ದಳ ಕೈ
ಮುದ್ದೆಗೊಂಡನು ಕಾಲನಸುವಿಡಿ
ದಿದ್ದವರ ನಾ ಕಾಣೆ ತೊಡಕಿದ ವೈರಿ ಬಲದೊಳಗೆ
ಹದ್ದು ಕಾಗೆಗೆ ನಿನ್ನವರು ಸಾ
ಲಿದ್ದು ಬೋನವ ಸವಸಿದರು ಬಲ
ವಿದ್ದು ಮಾಡುವುದೇನು ನಿಮಗಿನ್ನರಸ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಲೆಕ್ಕವಿಲ್ಲದಷ್ಟು ಕುದುರೆಗಳ ದಳ ಬಿದ್ದವು. ಯಮನು ಇವುಗಳನ್ನು ನುಂಗಿದನು. ಸಾತ್ಯಕಿಯ ಎದುರು ಆಕ್ರಮಣಮಾಡಿದ ಶತ್ರುಗಳ ಸೈನ್ಯದಲ್ಲಿ ಜೀವಂತ ಇದ್ದವರನ್ನು ಕಾಣೆ. ನಿನ್ನವರು ಸಾಲಾಗಿ ಇದ್ದು ಹದ್ದು ಕಾಗೆಗಳಿಗೆ ಆಹಾರವಾದರು. ನಿಮಗೆ ಇನ್ನು ಸೈನ್ಯವಿದ್ದು ಮಾಡುವುದೇನು ಅರಸ " ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಕೈಮುದ್ದೆ-ಕೈತುತ್ತು
ಮೂಲ ...{Loading}...
ಬಿದ್ದವಗಣಿತ ತುರಗ ದಳ ಕೈ
ಮುದ್ದೆಗೊಂಡನು ಕಾಲನಸುವಿಡಿ
ದಿದ್ದವರ ನಾ ಕಾಣೆ ತೊಡಕಿದ ವೈರಿ ಬಲದೊಳಗೆ
ಹದ್ದು ಕಾಗೆಗೆ ನಿನ್ನವರು ಸಾ
ಲಿದ್ದು ಬೋನವ ಸವಸಿದರು ಬಲ
ವಿದ್ದು ಮಾಡುವುದೇನು ನಿಮಗಿನ್ನರಸ ಕೇಳೆಂದ ॥5॥
೦೦೬ ಥಟ್ಟು ಮುರಿದುದು ...{Loading}...
ಥಟ್ಟು ಮುರಿದುದು ಕೊಂಡ ನೆಲನನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜಗ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಸೈನ್ಯ ಇದ್ದ ಜಾಗದಿಂದ ಹಿಂದೆ ಸರಿಯಿತು. ದೊರೆಗಳ ಎದುರು ಸಾತ್ಯಕಿ ಕಾಣಿಸಿಕೊಂಡನು. ಇಷ್ಟು ಮುಷ್ಟಾಮುಷ್ಟಿಯಲ್ಲಿ ಬಂದ ಈ ದಿಟ್ಟನು ಯಾರು? ಎನ್ನುತ್ತ ಜಗಜಟ್ಟಿಗಳಾದ ವಿಂದಾನುವಿಂದರು ಎದುರಿನಲ್ಲಿ ನಿಂತರು.
ಮೂಲ ...{Loading}...
ಥಟ್ಟು ಮುರಿದುದು ಕೊಂಡ ನೆಲನನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜಗ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ ॥6॥
೦೦೭ ಕವಿದುದಿವದಿರ ಸೇನೆ ...{Loading}...
ಕವಿದುದಿವದಿರ ಸೇನೆ ಸಾತ್ಯಕಿ
ಹವಣನರಿಯದೆ ಹೊಕ್ಕು ಸಿಕ್ಕಿದ
ನವರೊಳಗೆ ಕಟ್ಟಿದವು ಸುತ್ತಲು ಸಾವಿರಾನೆಗಳು
ನವ ಸಹಸ್ರ ತುರಂಗ ಕಾಲಾ
ಳವಗಡಿಸಿತೈವತ್ತು ಸಾವಿರ
ವವನಿತಳ ನುಗ್ಗಾಯ್ತು ಪದಘಟ್ಟಣೆಯ ಘಲ್ಲಣೆಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಂದಾನುವಿಂದರ ಸೇನೆ ಕವಿದಿದೆ. ಸಾತ್ಯಕಿಯು ಶತ್ರುಗಳ ಪ್ರಮಾಣ ತಿಳಿಯದೆ ಅವರೊಳಹೊಕ್ಕು ಸಿಕ್ಕಿಕೊಂಡ. ಸುತ್ತಲು ಸಾವಿರ ಆನೆಗಳು. ಒಂಬತ್ತು ಸಾವಿರ ಕುದುರೆ, ಐವತ್ತು ಸಾವಿರ ಕಾಲಾಳುಗಳು ಮುತ್ತಿಕೊಂಡವು. ಅವುಗಳ ಹೆಜ್ಜೆಗಳ ತುಳಿತಕ್ಕೆ, ಭೂಮಿ ನುಗ್ಗಾಯಿತು.
ಪದಾರ್ಥ (ಕ.ಗ.ಪ)
ಅವಗಡಿಸು-ಅಡ್ಡಿಪಡಿಸು, ಘಲ್ಲಣೆ-ಘಲ್ಘಲ್ ಶಬ್ದ
ಮೂಲ ...{Loading}...
ಕವಿದುದಿವದಿರ ಸೇನೆ ಸಾತ್ಯಕಿ
ಹವಣನರಿಯದೆ ಹೊಕ್ಕು ಸಿಕ್ಕಿದ
ನವರೊಳಗೆ ಕಟ್ಟಿದವು ಸುತ್ತಲು ಸಾವಿರಾನೆಗಳು
ನವ ಸಹಸ್ರ ತುರಂಗ ಕಾಲಾ
ಳವಗಡಿಸಿತೈವತ್ತು ಸಾವಿರ
ವವನಿತಳ ನುಗ್ಗಾಯ್ತು ಪದಘಟ್ಟಣೆಯ ಘಲ್ಲಣೆಗೆ ॥7॥
೦೦೮ ಕೆಣಕಿದರೆ ಭುಗಿಲೆನ್ದುದೀತನ ...{Loading}...
ಕೆಣಕಿದರೆ ಭುಗಿಲೆಂದುದೀತನ
ರಣ ಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣಿದವೋ ನಿನ್ನಾಳು ಕುದುರೆಯನರಿಯೆ ನಾನೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಂದಾನುವಿಂದರು ಹಾಗೂ ಅವರ ಸೇನೆ ಕೆಣಕಿದಾಗ ಸಾತ್ಯಕಿಯ ರಣ ಪರಾಕ್ರಮದ ಬೆಂಕಿ, ಭುಗಿಲೆಂದಿತು. ಕಾಳು ಕಿಚ್ಚಿನ ಬಾಯಿಯ ಗುಣಿಗೆ ಹುಲ್ಲಿನ ವಿಂದಾನುವಿಂದರ ಸೈನ್ಯ ಎಂಬ ಬಣವೆ ಸಿಕ್ಕಿದೆ. ಬಾಣವನ್ನು ಕಾಣುತ್ತಿಲ್ಲ. ಸುತ್ತಲೂ ಒಟ್ಟಿದ ಹೆಣಗಳನ್ನು ಕಂಡೆನು. ಇದಾವ ರೀತಿ ಹೊಡೆತವೋ. ವಿಂದಾನುವಿಂದರ ಸೈನ್ಯದ ಕುದುರೆಗಳು ಕೊಚ್ಚಿದ ಬಾಳೆಯ ಗಿಡಗಳಂತೆ ಕೆಳಗೆ ಬಿದ್ದವು. ನಿನ್ನ ಸೈನ್ಯ, ಕುದುರೆಗಳ ಸ್ಥಿತಿಯನ್ನು ನಾನು ಅರಿಯೆ ಎಂದು ಸಂಜಯನು ಹೇಳಿದನು.
ಮೂಲ ...{Loading}...
ಕೆಣಕಿದರೆ ಭುಗಿಲೆಂದುದೀತನ
ರಣ ಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣಿದವೋ ನಿನ್ನಾಳು ಕುದುರೆಯನರಿಯೆ ನಾನೆಂದ ॥8॥
೦೦೯ ದೊರೆಗಳವದಿರು ತಮ್ಮ ...{Loading}...
ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಿಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸು ಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಂದಾನುವಿಂದರು ತಮ್ಮ ಬಲ ಕುಸಿಯಿತಲ್ಲ ಎಂಬ ಅಪಮಾನದಲ್ಲಿ ಕೋಪಗೊಂಡು ನುಗ್ಗಿದರು. ಸಾತ್ಯಕಿಯ ಮೇಲೆ ಬಾಣಗಳ ಮಳೆ ಕರೆದರು. “ಬಾಣಗಳ ಬರವು ಒಳ್ಳೆಯದು ಮಹಾದೇವ. ರಾಜಪುತ್ರರಲ್ಲವೇ, ನಿಮ್ಮೊಡನೆ ವಿರೋಧವೆ? ಹರಹರ! ಅತಿಸಾಹಸಿಕರು! ಅಹುದು ಅಹುದು!” ಎನ್ನುತ್ತ ಸಾತ್ಯಕಿಯು ಬಾಣವನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಸಂವರಣೆ-ಗುಂಪು
ಹೇವ- ಅವಮಾನ
ಹೊಡಕರಿಸು-ಕೋಪಿಸು
ಬರವು-ಪ್ರಯೋಗವು, ಆಗಮನ
ಮೂಲ ...{Loading}...
ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಿಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸು ಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ ॥9॥
೦೧೦ ಏನನೆಮ್ಬೆನು ಮೊದಲ ...{Loading}...
ಏನನೆಂಬೆನು ಮೊದಲ ಲಗ್ಗೆಯ
ಲಾ ನಿಶಿತಶರ ದೈತ್ಯಭಟ ವಿಂ
ದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ
ಚೀನ ಭೋಟ ಕರೂಷ ಖರ್ಪರ
ಸೂನು ಜೋನೆಗ ತುರಕ ಬರ್ಬರ
ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲ ಲಗ್ಗೆಯಲ್ಲಿಯೇ ಆ ಹರಿತವಾದ ಬಾಣದ ಹಿರಿಮೆಯನ್ನು ಏನೆಂದು ಹೇಳಲಿ! ದೈತ್ಯಭಟ ವಿಂದಾನುವಿಂದರ ಜೀವಗಳು ಯಮನ ಪಟ್ಟಣಕ್ಕೆ ಧುಮ್ಮಿಕ್ಕಿದವು. ಚೀನ, ಭೋಟ, ಕರೂಷ, ಖರ್ಪರಸೂನು, ಜೋನೆಗ, ತುರಕ, ಬರ್ಬರ ಸೇನೆಗಳು ಸಾತ್ಯಕಿಯನ್ನು ತಾಗಿದವು. ತಾಗಿದ ಕೂಡಲೇ ನಾಶ ಹೊಂದಿದವು.
ಮೂಲ ...{Loading}...
ಏನನೆಂಬೆನು ಮೊದಲ ಲಗ್ಗೆಯ
ಲಾ ನಿಶಿತಶರ ದೈತ್ಯಭಟ ವಿಂ
ದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ
ಚೀನ ಭೋಟ ಕರೂಷ ಖರ್ಪರ
ಸೂನು ಜೋನೆಗ ತುರಕ ಬರ್ಬರ
ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ ॥10॥
೦೧೧ ಮುರಿದುದಿದು ನಮ್ಮವರು ...{Loading}...
ಮುರಿದುದಿದು ನಮ್ಮವರು ಸಾತ್ಯಕಿ
ಯುರುಬೆಗಾನುವರಿಲ್ಲ ದೊರೆ ಕೈ
ಮರೆದನೋ ಕಾಳಾಯ್ತೆನುತ ಕುರುಸೇನೆ ಕಳವಳಿಸೆ
ಜರೆದು ಮೂದಲಿಸಿದನು ಮಾದ್ರೇ
ಶ್ವರನ ದುಶ್ಯಾಸನನ ಸೌಬಲ
ಗುರುಜ ಕೃತವರ್ಮಾದಿ ಪರಿವಾರವನು ಕಲಿಕರ್ಣ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಈ ಸೈನ್ಯ ಭಂಗಗೊಂಡಿತು ಸಾತ್ಯಕಿಯ ರಭಸವನ್ನು ಎದುರಿಸುವವರು ಇಲ್ಲ. ಕೌರವನ ಸೈನ್ಯದ ಶಕ್ತಿ ಕುಸಿಯಿತೋ ದೊರೆ ಶಕ್ತಿಗುಂದಿದನೋ ಕೇಡಾಯಿತು ಎನ್ನುತ್ತ ಕುರುಸೇನೆ ಕಳವಳಿಸುತ್ತಿದ್ದಾಗ ಕಲಿಕರ್ಣನು ಮಾದ್ರೇಶ್ವರ , ದುಶ್ಶಾಸನ, ಸೌಬಲ, ಅಶ್ವತ್ಥಾಮ, ಕೃತವರ್ಮಾದಿ ಪರಿವಾರವನ್ನು ಜರಿದು ಮೂದಲಿಸಿದನು.
ಪದಾರ್ಥ (ಕ.ಗ.ಪ)
ಉರುಬೆ-ರಭಸ ಒತ್ತಾಯ, ಕೈಮರೆ-ಕೈನೀಡಿ ಅಡ್ಡಿಪಡಿಸು, ಕಾಳು-ಕೆಡುಕು
ಮೂಲ ...{Loading}...
ಮುರಿದುದಿದು ನಮ್ಮವರು ಸಾತ್ಯಕಿ
ಯುರುಬೆಗಾನುವರಿಲ್ಲ ದೊರೆ ಕೈ
ಮರೆದನೋ ಕಾಳಾಯ್ತೆನುತ ಕುರುಸೇನೆ ಕಳವಳಿಸೆ
ಜರೆದು ಮೂದಲಿಸಿದನು ಮಾದ್ರೇ
ಶ್ವರನ ದುಶ್ಯಾಸನನ ಸೌಬಲ
ಗುರುಜ ಕೃತವರ್ಮಾದಿ ಪರಿವಾರವನು ಕಲಿಕರ್ಣ ॥11॥
೦೧೨ ಪೂತು ಮಝ ...{Loading}...
ಪೂತು ಮಝ ದಳಪತಿಯ ಚಿತ್ತದ
ಖಾತಿ ಕೊಬ್ಬಿತು ನಮ್ಮ ಭುಜಬಲ
ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ
ಭೂತನಾಥನ ಕಡುಹ ತಡೆವಭಿ
ಜಾತರಲ್ಲಾ ತಾವೆನುತ ನಿಜ
ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪೂತು! ಮಝ! ದಳಪತಿಯ ಚಿತ್ತದ ಕೋಪ ಹೆಚ್ಚಿತು. ನಮ್ಮ ಭುಜಬಲವು ಏತಕ್ಕಾಗಿ? ತಮಗೆ ಸಾತ್ಯಕಿ ಸರಸವೇ? ಪರಶಿವನ ಪರಾಕ್ರಮವನ್ನು ತಡೆಯುವ ಉತ್ತಮ ಕುಲದವರಲ್ಲವೆ ತಾವು ಎನ್ನುತ್ತ ಆಶ್ವತ್ಥಾಮ ಮೊದಲಾದವರು ತಮ್ಮ ಸೂತರನ್ನು ಸಂತೈಸಿ ಮುಂದುವರಿದರು.
ಮೂಲ ...{Loading}...
ಪೂತು ಮಝ ದಳಪತಿಯ ಚಿತ್ತದ
ಖಾತಿ ಕೊಬ್ಬಿತು ನಮ್ಮ ಭುಜಬಲ
ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ
ಭೂತನಾಥನ ಕಡುಹ ತಡೆವಭಿ
ಜಾತರಲ್ಲಾ ತಾವೆನುತ ನಿಜ
ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು ॥12॥
೦೧೩ ಮುರಿದ ಬಲ ...{Loading}...
ಮುರಿದ ಬಲ ಗರಿಗಟ್ಟಿತೊಗ್ಗಿನ
ಲೊರಲಿದವು ನಿಸ್ಸಾಳ ಕಹಳೆಯ
ಬಿರುಸರದ ಬಹುವಿಧದ ವಾದ್ಯಧ್ವನಿಯ ಕಳಕಳದ
ತುರುಗಿ ತೂಳುವ ಸಿಂಧ ಸೆಳೆ ಮಡ
ಲಿರಿವ ಝಲ್ಲರಿ ಪಲ್ಲವದ ನಿಡು
ದೆರೆಯ ಧವಳಚ್ಛತ್ರ ಚಮರದೊಳೊದಗಿತತಿರಥರು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುರಿದ ಸೈನ್ಯವು ಒಟ್ಟಾಗಿ ಗರಿಗಟ್ಟಿತು. ನಿಸ್ಸಾಳ ಕಹಳೆಯ ಬಿರುಸಿನ ಸ್ವರದ ವಿವಿಧ ವಾದ್ಯಧ್ವನಿಗಳು ಅಬ್ಬರಿಸಿದುವು, ಕೂಗಿದವು. ಕಂಬಕ್ಕೆ ಕಟ್ಟಿರುವ ಬಿಚ್ಚಿ ತೊನೆದಾಡುವ ರಥಧ್ವಜ, ಇಳಿ ಬಿದ್ದಿರುವ ಕುಚ್ಚುಗಳು ಉದ್ದವಾದ ತೆರೆಯ ಬೆಳ್ಗೊಡೆಯ ಚಮರಗಳೊಡನೆ ದಲ್ಲಿ ಅತಿರಥರು ಒದಗಿದರು.
ಪದಾರ್ಥ (ಕ.ಗ.ಪ)
ಸೆಳೆ-ದಂಡ, ಪಲ್ಲವ-ಬಾವುಟದ ಬಟ್ಟೆ
ಮೂಲ ...{Loading}...
ಮುರಿದ ಬಲ ಗರಿಗಟ್ಟಿತೊಗ್ಗಿನ
ಲೊರಲಿದವು ನಿಸ್ಸಾಳ ಕಹಳೆಯ
ಬಿರುಸರದ ಬಹುವಿಧದ ವಾದ್ಯಧ್ವನಿಯ ಕಳಕಳದ
ತುರುಗಿ ತೂಳುವ ಸಿಂಧ ಸೆಳೆ ಮಡ
ಲಿರಿವ ಝಲ್ಲರಿ ಪಲ್ಲವದ ನಿಡು
ದೆರೆಯ ಧವಳಚ್ಛತ್ರ ಚಮರದೊಳೊದಗಿತತಿರಥರು ॥13॥
೦೧೪ ಮುಙ್ಕಣಿಯಲಿಟ್ಟಣಿಸಿದರು ಭಾ ...{Loading}...
ಮುಂಕಣಿಯಲಿಟ್ಟಣಿಸಿದರು ಭಾ
ರಂಕದಾಳುಗಳೆಂಟು ಸಾವಿರ
ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ
ಶಂಕಿಸುವನೇ ಬಳಿಕ ಯದುಕುಲ
ದಂಕಕಾರನು ನಿಂದನನಿಬರಿ
ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂಟು ಸಾವಿರ ಯೋಧರು ಮುಂಭಾಗದಲ್ಲಿ ದಟ್ಟವಾಗಿ ನೆರೆದರು. ಎಂಟು ಕೋಟಿ ಬಿಂಕದ ಅತಿರಥರು, ಕುದುರೆ, ಕಾಲಾಳುಗಳು ಬಂದರು. ಇನ್ನು ಯದುಕುಲದ ಪರಾಕ್ರಮಿಯು ಶಂಕಿಸುತ್ತಾನೆಯೆ? ಎಲ್ಲರಿಗೆ ಎದುರಾಗಿ ಸಾತ್ಯಕಿ ನಿಂತನು. ಅವನ ಮನಸ್ಥೈರ್ಯದ ವೈಖರಿಯನ್ನು ಏನೆಂದು ಹೇಳಲಿ?
ಪದಾರ್ಥ (ಕ.ಗ.ಪ)
ಮುಂಕಣಿ-ಮುಂಭಾಗ, ಭಾರಂಕದಾಳು-ಯೋಧರು, ಝಂಕೆ-ಆರ್ಭಟ, ಗದರಿಕೆ,
ಮೂಲ ...{Loading}...
ಮುಂಕಣಿಯಲಿಟ್ಟಣಿಸಿದರು ಭಾ
ರಂಕದಾಳುಗಳೆಂಟು ಸಾವಿರ
ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ
ಶಂಕಿಸುವನೇ ಬಳಿಕ ಯದುಕುಲ
ದಂಕಕಾರನು ನಿಂದನನಿಬರಿ
ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ ॥14॥
೦೧೫ ಭಾರಿಯಾಹವವಾಯ್ತಖಿಳದಳ ಭಾರ ...{Loading}...
ಭಾರಿಯಾಹವವಾಯ್ತಖಿಳದಳ
ಭಾರ ಬಿದ್ದುದು ಸಾತ್ಯಕಿಯ ಸುರ
ನಾರಿಯರ ತೋಳಿನಲಿ ಕಾಬುದು ನೆಲನ ರಿಣ ಹರಿದು
ಹೋರಿದರೆ ಹುರುಳಿಲ್ಲೆನುತ ಪರಿ
ವಾರವೊರಲಿತು ಪಾಂಡ್ಯ ಕೈಕೆಯ
ಕೇರಳರ ಹಿಂದಿಕ್ಕಿ ಪಡಿಬಲವಾದನಾ ಭೀಮ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಾರಿ ಯುದ್ಧ ನಡೆಯಿತು. ಸಾತ್ಯಕಿಯ ಎಲ್ಲ ಸೈನಿಕರ ಭಾರವು ದೇವಲೋಕದ ನಾರಿಯರ ತೋಳಿನಲ್ಲಿ ಬಿದ್ದಿತು. ನೆಲದ ಋಣ ಹರಿದುದು ಕಾಣುತಿತ್ತು. ಹೋರಾಡಿದರೆ ಪ್ರಯೋಜನವಿಲ್ಲ ಎಂದು ಪರಿವಾರ ಕೂಗಿತು. ಆಗ ಭೀಮನು ಪಾಂಡ್ಯ, ಕೈಕೆಯ, ಕೇರಳದವರನ್ನು ಹಿಂದಿಕ್ಕಿ ಸಾತ್ಯಕಿಗೆ ಬೆಂಬಲವಾಗಿ ಬಂದನು.
ಮೂಲ ...{Loading}...
ಭಾರಿಯಾಹವವಾಯ್ತಖಿಳದಳ
ಭಾರ ಬಿದ್ದುದು ಸಾತ್ಯಕಿಯ ಸುರ
ನಾರಿಯರ ತೋಳಿನಲಿ ಕಾಬುದು ನೆಲನ ರಿಣ ಹರಿದು
ಹೋರಿದರೆ ಹುರುಳಿಲ್ಲೆನುತ ಪರಿ
ವಾರವೊರಲಿತು ಪಾಂಡ್ಯ ಕೈಕೆಯ
ಕೇರಳರ ಹಿಂದಿಕ್ಕಿ ಪಡಿಬಲವಾದನಾ ಭೀಮ ॥15॥
೦೧೬ ಮುನ್ದೆ ಹರಿದರು ...{Loading}...
ಮುಂದೆ ಹರಿದರು ಪಾಂಡುತನಯರ
ನಂದನರು ತಾವೈವರೀತನ
ಹಿಂದುಳುಹಿ ಹಿಂಡಿದರು ಹೇರಾಳದ ಚತುರ್ಬಲವ
ಕೊಂದರಗ್ಗದ ಚಿತ್ರಸೇನನ
ಬಂದ ಹರಿಬದ ಚಿತ್ರನನು ಗುರು
ನಂದನನು ಬಳಿಕವರ ಬೆದರಿಸಿ ನೂಕಿದನು ರಥವ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಪ-ಪಾಂಡವರು ಭೀಮನನ್ನು ಹಿಂದೆ ಉಳಿಸಿದರು. ಮುಂದೆ ಸಾಗಿ ಅವರು ಅಪಾರವಾದ ಚತುರ್ಬಲವನ್ನು ನಾಶಮಾಡಿದರು. ಯುದ್ಧಕ್ಕೆ ಬಂದ ಚಿತ್ರಸೇನನನ್ನೂ, ಸಹಾಯಕನಾದ ಚಿತ್ರನನ್ನು ಕೊಂದರು. ಬಳಿಕ ಆಶ್ವತ್ಥಾಮನು ಅವರನ್ನು ಬೆದರಿಸಿ ತನ್ನ ರಥವನ್ನು ಮುನ್ನಡೆಸಿದನು.
ಮೂಲ ...{Loading}...
ಮುಂದೆ ಹರಿದರು ಪಾಂಡುತನಯರ
ನಂದನರು ತಾವೈವರೀತನ
ಹಿಂದುಳುಹಿ ಹಿಂಡಿದರು ಹೇರಾಳದ ಚತುರ್ಬಲವ
ಕೊಂದರಗ್ಗದ ಚಿತ್ರಸೇನನ
ಬಂದ ಹರಿಬದ ಚಿತ್ರನನು ಗುರು
ನಂದನನು ಬಳಿಕವರ ಬೆದರಿಸಿ ನೂಕಿದನು ರಥವ ॥16॥
೦೧೭ ಹೆರತೆಗೆದು ಕೆಲಸಾರಿ ...{Loading}...
ಹೆರತೆಗೆದು ಕೆಲಸಾರಿ ಮಕ್ಕಳು
ಮರಿಗಳಿಗೆ ರಣವೇಕೆ ಪಾಂಡವ
ರುರುವ ಸಂತತಿ ನೀವಕಟ ಎನುತವರನೊಡಹಾಯ್ಸಿ
ಇರಿವ ಭಟನಹೆ ಯಾದವರ ಬಡ
ಕರುವೆ ಬಾ ಬಾ ಎಂದು ಚಿಟಿಕಿಸಿ
ಕರೆದು ಗುರುಸುತ ಸಾತ್ಯಕಿಯ ತಾಗಿದನು ನಗೆಮಾಡಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಸರಿಯಿರಿ, ಪಕ್ಕಕ್ಕೆ ನಿಲ್ಲಿರಿ. ಮಕ್ಕಳು ಮರಿಗಳಿಗೆ ಯುದ್ಧವೇಕೆ? ಪಾಂಡವರ ಶ್ರೇಷ್ಠವಾದ ಸಂತತಿ ನೀವು. ಅಕಟ, ಎನ್ನತ್ತ ಆಶ್ವತ್ಥಾಮನು ಅವರನ್ನು ಪಕ್ಕಕ್ಕೆ ಸರಿಸಿ, ನೀನು ಹೋರಾಡುವ " ಬಹುಶೂರನೆ, ಯಾದವರ ಬಡಕರುವೆ ಬಾ ಬಾ” ಎಂದು ಸಾತ್ಯಕಿಯನ್ನು ಚಿಟಿಕೆಹೊಡೆದು ನಗೆಮಾಡಿ ಕರೆದು ತಾಗಿದನು.
ಪದಾರ್ಥ (ಕ.ಗ.ಪ)
ಚಿಟಕಿಸು-ಚಿಟಿಕೆಹೊಡೆ
ಮೂಲ ...{Loading}...
ಹೆರತೆಗೆದು ಕೆಲಸಾರಿ ಮಕ್ಕಳು
ಮರಿಗಳಿಗೆ ರಣವೇಕೆ ಪಾಂಡವ
ರುರುವ ಸಂತತಿ ನೀವಕಟ ಎನುತವರನೊಡಹಾಯ್ಸಿ
ಇರಿವ ಭಟನಹೆ ಯಾದವರ ಬಡ
ಕರುವೆ ಬಾ ಬಾ ಎಂದು ಚಿಟಿಕಿಸಿ
ಕರೆದು ಗುರುಸುತ ಸಾತ್ಯಕಿಯ ತಾಗಿದನು ನಗೆಮಾಡಿ ॥17॥
೦೧೮ ಸಾರು ನೀ ...{Loading}...
ಸಾರು ನೀ ಸಾರೆಲವೊ ಭೀಮನ
ತೋರಗರುಳಿನ ದಂಡೆಯನು ಕೈ
ಯಾರೆ ಮಾರಿಗೆ ಮುಡಿಸುವೆನು ಫಡ ಭೀಮ ನಿಲ್ಲೆನುತ
ಆರಿದನು ಜಗ ನಡುಗಲಾ ಜಂ
ಭಾರಿ ಜವಗೆಡೆ ಬೊಬ್ಬಿರಿದನಾ
ಭಾರತದ ಭಾರಣೆಯಲೈದಿದನನಿಲನಂದನನ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಸಾತ್ಯಕಿಗೆ “ನೀನು ಪಕ್ಕಕ್ಕೆ ನಿಲ್ಲು. ಭೀಮನ ದಪ್ಪ ಕರುಳಿನ ದಂಡೆಯನ್ನು ನಾನು ಕೈಯಾರೆ ಮಾರಿಗೆ ಮುಡಿಸುವೆನು. ಫಡ! ಭೀಮ ನಿಲ್ಲು! " ಎಂದು ಆರ್ಭಟಿಸಿದನು. ಜಗತ್ತು ನಡುಗಿತು. ದೇವೇಂದ್ರನ ಶಕ್ತಿ ಕೆಡುವಂತೆ ಬೊಬ್ಬಿರಿದು ತಾನೇ ಭಾರತದ ಯುದ್ಧದ ಹೊಣೆ ಹೊತ್ತವನಂತೆ ಭೀಮನನ್ನು ಸಮೀಪಿಸಿದನು.
ಪದಾರ್ಥ (ಕ.ಗ.ಪ)
ಆರು-ಆರ್ಬಟಿಸು, ಭಾರಣೆ-ಹೊಣೆ
ಮೂಲ ...{Loading}...
ಸಾರು ನೀ ಸಾರೆಲವೊ ಭೀಮನ
ತೋರಗರುಳಿನ ದಂಡೆಯನು ಕೈ
ಯಾರೆ ಮಾರಿಗೆ ಮುಡಿಸುವೆನು ಫಡ ಭೀಮ ನಿಲ್ಲೆನುತ
ಆರಿದನು ಜಗ ನಡುಗಲಾ ಜಂ
ಭಾರಿ ಜವಗೆಡೆ ಬೊಬ್ಬಿರಿದನಾ
ಭಾರತದ ಭಾರಣೆಯಲೈದಿದನನಿಲನಂದನನ ॥18॥
೦೧೯ ಗುರುತನೂಜ ಕಣಾ ...{Loading}...
ಗುರುತನೂಜ ಕಣಾ ವಿರೋಧಿ
ಸ್ಮರಕಪರ್ದಿ ಕಣಾ ವೃಕೋದರ
ಕರಿ ಮೃಗೇಂದ್ರ ಕಣಾ ಕಣಾಳಿಯ ಕಾಯ್ದುಕೊಳ್ಳೆನುತ
ಸರಳನೆಚ್ಚನು ಸರಳನಾ ಬಳಿ
ಸರಳು ಮುಂಚಿದುದಾ ಸರಳ ಬಳಿ
ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನು, ಗುರುವಿನ ಮಗ ಆಶ್ವತ್ಥಾಮ ಕಣಾ. ವಿರೋಧಿಗಳೆಂಬ ಮನ್ಮಥನಿಗೆ ಈಶ್ವರನಿಂದ್ದಂತೆ ಕಣಾ. ಭೀಮನೆಂಬ ಆನೆಗೆ ಸಿಂಹವಿದ್ದಂತೆ ಕಣಾ. ನನ್ನ ಕಣಾಳಿಯಿಂದ(ನನ್ನ ಬಾಣಗಳ ಸಮೂಹದಿಂದ) ಕಾಪಾಡಿಕೊ” ಎನ್ನುತ್ತಾ ಬಾಣದಿಂದ ಹೊಡೆದನು. ಬಾಣದ ಬಳಿಕ ಬಾಣ, ಆ ಬಾಣದ ಅನಂತರ ಮತ್ತೊಂದು ಬಾಣ, ಅದರ ಅನಂತರ ಮತ್ತೊಂದು ಬಾಣ ಅದರ ಅನಂತರ ಮತ್ತೊಂದು ಬಾಣ - ಇದು ಯಾವ ಕೈಚಳಕವೊ ಶಿವಾ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಮುಂಚು-ಮೀರಿ ಹೋಗು,
ಮೂಲ ...{Loading}...
ಗುರುತನೂಜ ಕಣಾ ವಿರೋಧಿ
ಸ್ಮರಕಪರ್ದಿ ಕಣಾ ವೃಕೋದರ
ಕರಿ ಮೃಗೇಂದ್ರ ಕಣಾ ಕಣಾಳಿಯ ಕಾಯ್ದುಕೊಳ್ಳೆನುತ
ಸರಳನೆಚ್ಚನು ಸರಳನಾ ಬಳಿ
ಸರಳು ಮುಂಚಿದುದಾ ಸರಳ ಬಳಿ
ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ ॥19॥
೦೨೦ ತಿರುಗಿ ನಿನ್ದನು ...{Loading}...
ತಿರುಗಿ ನಿಂದನು ಪವನಸುತನೆಲೆ
ಗುರುಜ ನಿನ್ನಗ್ಗಳಿಕೆಗಳ ಜಗ
ವರಿಯದೇ ಫಡ ಭಟ್ಟನಾದೈ ನಿನಗೆ ನೀನೆನುತ
ಸರಳ ಬಳಿಸರಳುಗಳನಾ ಲಘು
ತರದ ಲೆಕ್ಕದಲೆಸೆವ ವಿವರದ
ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ತಿರುಗಿ ನಿಂತನು. “ಎಲೆ ಅಶ್ವತ್ಥಾಮನೆ, ನಿನ್ನ ಹಿರಿಮೆಗಳು ಜಗತ್ತು ತಿಳಿಯದವೆ? ಫಡ! ನಿನಗೆ ನೀನೇ ಪ್ರಶಂಸಕನಾದೆ ಎನ್ನುತ್ತ ಭೀಮನು ಬಾಣದ ಬಳಿಕ ಬಾಣಗಳನ್ನು, ವೇಗದಲ್ಲಿ ಬಿಟ್ಟು ತನ್ನ ಬಿಲ್ವಿದ್ಯೆಯ ಕೌಶಲವನ್ನು ತೋರಿದನು.
ಪದಾರ್ಥ (ಕ.ಗ.ಪ)
ವೇಗಾಯ್ಲತನ-ವೇಗಗಾರಿಕೆ,
ಮೂಲ ...{Loading}...
ತಿರುಗಿ ನಿಂದನು ಪವನಸುತನೆಲೆ
ಗುರುಜ ನಿನ್ನಗ್ಗಳಿಕೆಗಳ ಜಗ
ವರಿಯದೇ ಫಡ ಭಟ್ಟನಾದೈ ನಿನಗೆ ನೀನೆನುತ
ಸರಳ ಬಳಿಸರಳುಗಳನಾ ಲಘು
ತರದ ಲೆಕ್ಕದಲೆಸೆವ ವಿವರದ
ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ ॥20॥
೦೨೧ ಜಾಗು ಮಝರೇ ...{Loading}...
ಜಾಗು ಮಝರೇ ಭೀಮ ಬಲುಗೈ
ಲಾಗು ಮರೆಯದಲಾ ಶರೌಘ
ತ್ಯಾಗದಸ್ತ್ರ ಪ್ರವರ ಬಂಧವ ಮತ್ತೆ ನೋಡೆನುತ
ಆ ಗಗನವಿದು ಧರಣಿಯಿದು ದಿ
ಗ್ಭಾಗವೆಲ್ಲಿಯದೆಂಬ ವಿವರವ
ನಾಗಳರಿಯೆನು ದ್ರೋಣನಂದನನೆಚ್ಚನನಿಲಜನ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಾಗು! ಮಝರೇ! ಭೀಮ, ಮೆಚ್ಚಿದೆ ! ಬಲುಗೈ ಚಳಕವು ಮರೆತು ಹೋಗಿಲ್ಲವಲ್ಲವೆ? ಆ ಬಾಣಗಳ ರಾಶಿಯನ್ನು ಬಿಡುವ, ಅಸ್ತ್ರ ಪ್ರವರ ಬಂಧವನ್ನು ಮತ್ತೆ ನೋಡು ಎನ್ನುತ್ತ, ಬಾಣಗಳನ್ನು ಭೀಮನ ಮೇಲೆ ಪ್ರಯೋಗಿಸಲು “ನನಗೆ ಇದು ಆಕಾಶ, ಇದು ಭೂಮಿ, ದಿಕ್ಕುಗಳು ಎಲ್ಲಿವೆ ಎಂಬ ವಿವರಗಳೆ ತಿಳಿಯಲಿಲ್ಲ " ಎಂದು ಸಂಜಯನು ಧೃತರಾಷ್ಟನಿಗೆ ಹೇಳಿದನು. .
ಮೂಲ ...{Loading}...
ಜಾಗು ಮಝರೇ ಭೀಮ ಬಲುಗೈ
ಲಾಗು ಮರೆಯದಲಾ ಶರೌಘ
ತ್ಯಾಗದಸ್ತ್ರ ಪ್ರವರ ಬಂಧವ ಮತ್ತೆ ನೋಡೆನುತ
ಆ ಗಗನವಿದು ಧರಣಿಯಿದು ದಿ
ಗ್ಭಾಗವೆಲ್ಲಿಯದೆಂಬ ವಿವರವ
ನಾಗಳರಿಯೆನು ದ್ರೋಣನಂದನನೆಚ್ಚನನಿಲಜನ ॥21॥
೦೨೨ ಎಲೆಲೆ ಹಾರುವನೇಕೆ ...{Loading}...
ಎಲೆಲೆ ಹಾರುವನೇಕೆ ಹರಿಮೇ
ಖಳೆಯ ಕೇಳಿಕೆಯೇಕೆ ಪಡಿಮ
ದ್ದಳೆಯ ಬಡಿಕರ ಬಿಂಕ ಮೇಳವವಿಲ್ಲಲಾ ನಿನಗೆ
ಹೊಲಬುಗೆಡುವನೆ ಭೀಮನೀ ಸರ
ಳೊಳಗೆ ಹುಸಿಯೇಕೆನುತ ಬಾಣಾ
ವಳಿಯ ನಿಮಿಷಕೆ ಕಡಿದು ಗುರುಜನನೆಚ್ಚನಾ ಭೀಮ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆಲೆ ಬ್ರಾಹ್ಮಣನೆ, ನಿನಗೆ ಏಕೆ ಈ ಇಂದ್ರಜಾಲದ ಪ್ರದರ್ಶನ ? ಎದುರಾಗಿ ಮದ್ದಳೆಯನ್ನು ಬಡಿಯುವವರ ಬಿಂಕದ ಮೇಳವು ಇಲ್ಲವಲ್ಲ ನಿನಗೆ. ಭೀಮನು ಈ ಬಾಣಗಳಿಂದ ಧೈರ್ಯಕಳೆದುಕೊಳ್ಳುತ್ತಾನೆಯೆ ? ಈ ಬಾಣದಲ್ಲಿ ಹುಸಿ ಏಕೆ?” ಎನ್ನುತ್ತ ಭೀಮನು ಆ ಬಾಣಗಳ ಸಮೂಹವನ್ನು ನಿಮಿಷದಲ್ಲಿ ಕಡಿದು ಅಶ್ವತ್ಥಾಮನನ್ನು ಬಾಣಗಳಿಂದ ಹೊಡೆದನು.
ಪದಾರ್ಥ (ಕ.ಗ.ಪ)
ಹರಿಮೇಖಲೆ-ಇಂದ್ರಜಾಲ, ಕೇಳಿಕೆ-ಆಟ, ಹೊಲಬುಗೆಡು-ದಾರಿತಪ್ಪು,
ಮೂಲ ...{Loading}...
ಎಲೆಲೆ ಹಾರುವನೇಕೆ ಹರಿಮೇ
ಖಳೆಯ ಕೇಳಿಕೆಯೇಕೆ ಪಡಿಮ
ದ್ದಳೆಯ ಬಡಿಕರ ಬಿಂಕ ಮೇಳವವಿಲ್ಲಲಾ ನಿನಗೆ
ಹೊಲಬುಗೆಡುವನೆ ಭೀಮನೀ ಸರ
ಳೊಳಗೆ ಹುಸಿಯೇಕೆನುತ ಬಾಣಾ
ವಳಿಯ ನಿಮಿಷಕೆ ಕಡಿದು ಗುರುಜನನೆಚ್ಚನಾ ಭೀಮ ॥22॥
೦೨೩ ರಥದ ಮೇಲಮ್ಬುಗಳು ...{Loading}...
ರಥದ ಮೇಲಂಬುಗಳು ರಿಪು ಸಾ
ರಥಿಯ ಮೈಯಲಿ ಘಾಯ ತುರಗ
ವ್ಯಥೆಯನೇವೇಳುವೆನು ಟೆಕ್ಕೆಯವೈದೆ ಬಾಣಮಯ
ಶಿಥಿಲವಾದುವು ಗಾಲಿಗಳು ಬಳಿ
ರಥಿಕರೀತನ ಬಿಟ್ಟು ಹಾಯ್ದರು
ಪೃಥುಳಬಲನೈ ಭೀಮನೆಚ್ಚನು ಗುರುತನೂಭವನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥದ ಮೇಲೆ ಬಾಣಗಳು, ಶತ್ರುವಿನ ಸಾರಥಿಯ ಮೈಯಲ್ಲಿ ಗಾಯ, ಕುದುರೆಯ ವ್ಯಥೆಯನ್ನು ಏನೆಂದು ಹೇಳಲಿ. ಬಾವುಟಗಳು ಬಾಣಮಯವಾದವು. ಗಾಲಿಗಳು ಶಿಥಿಲವಾದುವು. ಸಮೀಪದಲ್ಲಿದ್ದ ರಥಿಕರು ಹಿಂದೆಸರಿದು ಈತನನ್ನು ಬಿಟ್ಟು ಓಡಿದರು. ಭೀಮನು ಮಹಾಬಲನಾದವಲ್ಲವೆ ? ಅವನು ಗುರುಪುತ್ರ ಅಶ್ವತ್ಥಾಮನನ್ನು ಬಾಣಗಳಿಂದ ಹೊಡೆದನು.
ಮೂಲ ...{Loading}...
ರಥದ ಮೇಲಂಬುಗಳು ರಿಪು ಸಾ
ರಥಿಯ ಮೈಯಲಿ ಘಾಯ ತುರಗ
ವ್ಯಥೆಯನೇವೇಳುವೆನು ಟೆಕ್ಕೆಯವೈದೆ ಬಾಣಮಯ
ಶಿಥಿಲವಾದುವು ಗಾಲಿಗಳು ಬಳಿ
ರಥಿಕರೀತನ ಬಿಟ್ಟು ಹಾಯ್ದರು
ಪೃಥುಳಬಲನೈ ಭೀಮನೆಚ್ಚನು ಗುರುತನೂಭವನ ॥23॥
೦೨೪ ನೊಗನನೀಡಾಡಿದವು ಕುದುರೆಗ ...{Loading}...
ನೊಗನನೀಡಾಡಿದವು ಕುದುರೆಗ
ಳೊಗಡಿಸಲು ರಕುತವನು ಸಾರಥಿ
ಬಿಗಿದ ಹಿಳುಕುಗಳೌಕಿದವು ತೇರಿನಲಿ ಸಿಂಧದಲಿ
ಒಗುವ ನೆತ್ತರ ಸುರಿವ ಬಾಣದ
ನುಗುತೆಗಂಡಿಯ ಮೆಯ್ಯ ಭೀಮನ
ಬೆಗಡು ಮೊಳೆತುದು ಗುರುತನೂಭವನೆಚ್ಚನನಿಲಜನ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳು ರಥದ ನೊಗವನ್ನು ಬೀಳಿಸಿದವು. ಸಾರಥಿಯ ಮೈಯಿಂದ ನೆತ್ತರು ಸುರಿಯಿತು. ಬೀಮನ ಬಾಣಗಳು ತೇರು ಮತ್ತು ಅದರ ಬಾವುಟವನ್ನು ಕವಿದವು. ಭೀಮನ ಶರೀರದಲ್ಲಿಯೂ ಗಾಯಗಳಾಗಿ ನೆತ್ತರು ಚಿಮ್ಮುವಂತೆ ಅಶ್ವತ್ಥಾಮನು ಬಾಣಗಳಿಂದ ಅವನನ್ನು ಹೊಡೆದನು. ಭೀಮನಿಗೆ ಭಯ ಅಂಕುರಿಸತು.
ಪದಾರ್ಥ (ಕ.ಗ.ಪ)
ಒಗಡಿಸು-ವಾಂತಿಮಾಡಿಸು,
ನುಗುತೆಗಂಡಿ- ಪ್ರವೇಶದ್ವಾರ
ಮೂಲ ...{Loading}...
ನೊಗನನೀಡಾಡಿದವು ಕುದುರೆಗ
ಳೊಗಡಿಸಲು ರಕುತವನು ಸಾರಥಿ
ಬಿಗಿದ ಹಿಳುಕುಗಳೌಕಿದವು ತೇರಿನಲಿ ಸಿಂಧದಲಿ
ಒಗುವ ನೆತ್ತರ ಸುರಿವ ಬಾಣದ
ನುಗುತೆಗಂಡಿಯ ಮೆಯ್ಯ ಭೀಮನ
ಬೆಗಡು ಮೊಳೆತುದು ಗುರುತನೂಭವನೆಚ್ಚನನಿಲಜನ ॥24॥
೦೨೫ ಈತನೆಚ್ಚನು ಮತ್ತೆ ...{Loading}...
ಈತನೆಚ್ಚನು ಮತ್ತೆ ಶರ ಸಂ
ಘಾತವೋ ಗುರುಸುತನ ತನುವೋ
ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ
ಭೀತಿ ಬಿಗಿದುದು ದಿಟ್ಟತನದನು
ಧಾತುಗೆಟ್ಟುದು ನೋಡಿ ಕಂಗಳು
ಸೋತು ಮರಳಿದನಿತ್ತಲಶ್ವತ್ಥಾಮ ಮೈಮರೆದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಭೀಮನೂ ಬಾಣಪ್ರಯೋಗ ಮಾಡಿದ. ಅದು ಬಾಣಗಳ ರಾಶಿಯೊ, ಆಶ್ವತ್ಥಾಮನ ದೇಹವೊ, ಹೂಬಿಟ್ಟ ಮುತ್ತುಗದ ಮರವೊ, ಕೊಳದಲ್ಲಿ ಚಿಗುರಿ ಶೋಭಿಸುತಿರುವ ಕೆಂಪು ತಾವರೆಗಳೋ ಎಂದು ತಿಳಿಯದಂತೆ ಹೆದರಿಕೆಯಾಯಿತು. ಆಗ ದಿಟ್ಟತನದ ಧೈರ್ಯ ಕುಂದಿತು. ಅದನ್ನು ನೋಡಿ ಕಣ್ಣುಗಳು ಸೋತು ಮೈಮರೆದ ಅಶ್ವತ್ಥಾಮನು ಈ ಕಡೆ ಮರಳಿದನು.
ಪದಾರ್ಥ (ಕ.ಗ.ಪ)
ಪೂತ-ಹೂಬಿಟ್ಟ,
ಮೂಲ ...{Loading}...
ಈತನೆಚ್ಚನು ಮತ್ತೆ ಶರ ಸಂ
ಘಾತವೋ ಗುರುಸುತನ ತನುವೋ
ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ
ಭೀತಿ ಬಿಗಿದುದು ದಿಟ್ಟತನದನು
ಧಾತುಗೆಟ್ಟುದು ನೋಡಿ ಕಂಗಳು
ಸೋತು ಮರಳಿದನಿತ್ತಲಶ್ವತ್ಥಾಮ ಮೈಮರೆದ ॥25॥
೦೨೬ ನನೆದ ಜಾಜಿನ ...{Loading}...
ನನೆದ ಜಾಜಿನ ಗಿರಿಯೊ ಭೀಮನ
ತನುವೊ ಖಂಡಿತ ರಕ್ತಚಂದನ
ಬನವೊ ರಥವೋ ತಳಿತಶೋಕೆಯ ಮರನೊ ಸಾರಥಿಯೊ
ಮನ ಹಣುಗಿ ತುಟಿಯೊಣಗಿ ನೋಟದ
ಮೊನೆ ಮುರಿದು ಝೊಂಪಿಸುತ ಮುಂದಣಿ
ಗೊನೆದು ಬಿದ್ದನು ಭೀಮ ಪಾಂಡವ ಸೇನೆ ಕಳವಳಿಸೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ದೇಹವೊ ಕೆಂಪು ಕಲ್ಲಿನ ಗಿರಿಯೊ? ಕಡಿದ ರಕ್ತಚಂದನದ ಬನವೊ, ರಥವೋ? ಚಿಗುರಿದ ಅಶೋಕ ಮರವೊ ಸಾರಥಿಯೊ? ಎಂದು ಪಾಂಡವ ಸೇನೆಯು ಕಳವಳಿಸಲು, ಭೀಮನು ಮನಸ್ಸು ಹಿಂಜರಿದು, ತುಟಿಯು ಒಣಗಿ, ನೋಟದ ಮೊನೆ ಮುರಿದು, ಜೋಲುತ್ತಾ ಮುಂಭಾಗಕ್ಕೆ ಜೋಲಿ ಹೊಡೆದು ಬಿದ್ದನು.
ಪದಾರ್ಥ (ಕ.ಗ.ಪ)
ನನೆ-ನೆನೆದ,
ಹಣುಗು-ಕುಗ್ಗಿ
ಜಾಜುಗಿರಿ-ಕೆಂಪು ಕಲ್ಲಿನ ಬೆಟ್ಟ
ಮೂಲ ...{Loading}...
ನನೆದ ಜಾಜಿನ ಗಿರಿಯೊ ಭೀಮನ
ತನುವೊ ಖಂಡಿತ ರಕ್ತಚಂದನ
ಬನವೊ ರಥವೋ ತಳಿತಶೋಕೆಯ ಮರನೊ ಸಾರಥಿಯೊ
ಮನ ಹಣುಗಿ ತುಟಿಯೊಣಗಿ ನೋಟದ
ಮೊನೆ ಮುರಿದು ಝೊಂಪಿಸುತ ಮುಂದಣಿ
ಗೊನೆದು ಬಿದ್ದನು ಭೀಮ ಪಾಂಡವ ಸೇನೆ ಕಳವಳಿಸೆ ॥26॥
೦೨೭ ಅಹಹ ವೈರಿಗೆ ...{Loading}...
ಅಹಹ ವೈರಿಗೆ ಧರೆಗೆ ಪಾಣಿ
ಗ್ರಹಣವಾಯಿತೆ ಪಾಂಡುಸುತರಿಗೆ
ಬಹ ವಿಪತ್ತುಗಳೊಳಗಿದೊಂದೇ ಕಳಶವಾದುದಲ
ಅಹಿತರಿಗೆ ಗೆಲುವಾಯ್ತು ನಮಗಿ
ಲ್ಲಿಹುದು ಮತವಲ್ಲೆನುತ ಸಾರಥಿ
ಸಹಸಿಗನ ಸಂತೈಸಿ ತಂದನು ರಾಜಮಂದಿರಕೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಹಹ! ವೈರಿಗೂ ಭೂಮಿಗೂ ಪಾಣಿಗ್ರಹಣವಾಯಿತೆ? ಪಾಂಡುಸುತರಿಗೆ ಬರುವ ವಿಪತ್ತುಗಳಲ್ಲಿ ಇದು ಒಂದೇ ಕಳಶಪ್ರಾಯವಾದುದಲ್ಲವೆ? ಶತ್ರುಗಳಿಗೆ ಗೆಲುವಾಯಿತು. ನಮಗೆ ಇಲ್ಲಿರುವುದು ಮತವಲ್ಲ ಎನ್ನುತ್ತ ಸಾರಥಿಯು ಆ ಪರಾಕ್ರಮಿ ಭೀಮನನ್ನು ಸಂತೈಸಿ ರಾಜಮಂದಿರಕ್ಕೆ ಕರೆದು ತಂದನು.
ಮೂಲ ...{Loading}...
ಅಹಹ ವೈರಿಗೆ ಧರೆಗೆ ಪಾಣಿ
ಗ್ರಹಣವಾಯಿತೆ ಪಾಂಡುಸುತರಿಗೆ
ಬಹ ವಿಪತ್ತುಗಳೊಳಗಿದೊಂದೇ ಕಳಶವಾದುದಲ
ಅಹಿತರಿಗೆ ಗೆಲುವಾಯ್ತು ನಮಗಿ
ಲ್ಲಿಹುದು ಮತವಲ್ಲೆನುತ ಸಾರಥಿ
ಸಹಸಿಗನ ಸಂತೈಸಿ ತಂದನು ರಾಜಮಂದಿರಕೆ ॥27॥
೦೨೮ ತನ್ದೆಯಳಿದಾ ಹೊತ್ತು ...{Loading}...
ತಂದೆಯಳಿದಾ ಹೊತ್ತು ಹಗೆಯನು
ಕೊಂದು ಸಾಯದೆ ದೇಹ ಮೋಹಕೆ
ನಿಂದು ನೀ ನಿಶ್ಶಂಕನಾದೈ ವೈರಿಶರಹತಿಗೆ
ಎಂದು ಸಾರಥಿ ಶೋಕಿಸುತ ಗುರು
ನಂದನನ ಕೊಂಡೊಯ್ದನಿತ್ತಲು
ಸಂದಣಿಸಿತತಿರಥರು ಸೌಬಲ ಶಲ್ಯ ಮೊದಲಾಗಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಮ್ಮ ತಂದೆಯು ಅಳಿದಾಗಲೇ ಹಗೆಯನು ಕೊಂದು ಸಾಯದೆ ದೇಹದ ಮೋಹಕ್ಕೆ ನಿಂತು, ಈಗ ನೀನು ಅನುಮಾನಕ್ಕೆ ಆಸ್ಪದವಿಲ್ಲದೆ ಹೋರಾಡಿ ವೈರಿಯ ಬಾಣದ ಹೊಡೆತಕ್ಕೆ ಬಲಿಯಾದೆ “. ಎಂದು ಸಾರಥಿ ಶೋಕಿಸುತ್ತ ಅಶ್ವತ್ಥಾಮನನ್ನು ಕೊಂಡೊಯ್ದನು. ಇತ್ತ ಶಕುನಿ, ಶಲ್ಯ ಮೊದಲಾದ ಅತಿರಥರು ಸೇರಿದರು.
ಪದಾರ್ಥ (ಕ.ಗ.ಪ)
ಶರಹತಿ-ಬಾಣದ ಹೊಡೆತ, ನಿಶ್ಶಂಕ-ಸಂದೇಹವಿಲ್ಲದ, ಸಂದಣಿಸು-ಸೇರು
ಮೂಲ ...{Loading}...
ತಂದೆಯಳಿದಾ ಹೊತ್ತು ಹಗೆಯನು
ಕೊಂದು ಸಾಯದೆ ದೇಹ ಮೋಹಕೆ
ನಿಂದು ನೀ ನಿಶ್ಶಂಕನಾದೈ ವೈರಿಶರಹತಿಗೆ
ಎಂದು ಸಾರಥಿ ಶೋಕಿಸುತ ಗುರು
ನಂದನನ ಕೊಂಡೊಯ್ದನಿತ್ತಲು
ಸಂದಣಿಸಿತತಿರಥರು ಸೌಬಲ ಶಲ್ಯ ಮೊದಲಾಗಿ ॥28॥
೦೨೯ ದೊರೆಗಳಿಬ್ಬರ ಸೋಲವನು ...{Loading}...
ದೊರೆಗಳಿಬ್ಬರ ಸೋಲವನು ವಿ
ಸ್ತರಿಸಿ ಹೊಕ್ಕರು ಮತ್ತೆ ಮಾದ್ರೇ
ಶ್ವರ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ಅರಿಬಲದಲಾ ದ್ರೌಪದೇಯರು
ಹರಿಯನುಜ ಮಾದ್ರೇಯ ಕೈಕೆಯ
ವರಯುಧಾಮನ್ಯೂತ್ತಮೌಂಜಸ ಪಾಂಡ್ಯ ಶೃಂಜಯರು ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರು ವೀರರ ಸಮಬಲದ ಸೋಲನ್ನು ಕಂಡು ಶಲ್ಯ, ಶಕುನಿ, ಕೃತವರ್ಮ, ಕೃಪ, ದುಶ್ಶಾಸನ ಹಾಗೂ ಪಾಂಡವರ ಬಲದಲ್ಲಿ ದ್ರೌಪದಿಯ ಮಕ್ಕಳು, ಸಾತ್ಯಕಿ, ಮಾದ್ರೇಯ ಕೈಕೆಯ ವರ ಯುಧಾಮನ್ಯು, ಉತ್ತಮೌಂಜಸ ಪಾಂಡ್ಯ ಸೃಂಜಯ ಮೊದಲಾದವರೂ ಯುದ್ಧಕ್ಕೆ ಮುನ್ನುಗ್ಗಿದರು.
ಮೂಲ ...{Loading}...
ದೊರೆಗಳಿಬ್ಬರ ಸೋಲವನು ವಿ
ಸ್ತರಿಸಿ ಹೊಕ್ಕರು ಮತ್ತೆ ಮಾದ್ರೇ
ಶ್ವರ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ಅರಿಬಲದಲಾ ದ್ರೌಪದೇಯರು
ಹರಿಯನುಜ ಮಾದ್ರೇಯ ಕೈಕೆಯ
ವರಯುಧಾಮನ್ಯೂತ್ತಮೌಂಜಸ ಪಾಂಡ್ಯ ಶೃಂಜಯರು ॥29॥
೦೩೦ ಬಲಿದುದಾಹವ ಮತ್ತೆ ...{Loading}...
ಬಲಿದುದಾಹವ ಮತ್ತೆ ಚಾತು
ರ್ಬಲ ಛಡಾಳಿಸಿ ಕಾದುತಿರ್ದುದು
ಮುಳಿದು ಶಲ್ಯನ ಕೂಡೆ ಪಂಚದ್ರೌಪದೀಸುತರು
ಅಳವಿಗೊಟ್ಟಿರಿಯಕಟಕಟ ಮ
ಕ್ಕಳಿರ ನಿಮಗೇಕಿದು ಯುಧಿಷ್ಠಿರ
ಫಲುಗುಣರ ಬರಹೇಳೆನುತಲೆಚ್ಚನು ಮಹಾಸ್ತ್ರದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಯುದ್ಧವು ಕೈಗಟ್ಟಿತು. ಚಾತುರ್ಬಲವು ಉತ್ಸಾಹದಿಂದ ಕಾದಾಡುತ್ತಿತ್ತು. ದ್ರೌಪದಿಯ ಐವರು ಸುತರು ಶಲ್ಯನೊಡನೆ ಮುನಿಸಿಕೊಂಡು ಯುದ್ಧಮಾಡುತ್ತಿದ್ದರು. ಆಗ ಶಲ್ಯನು “ಅಯ್ಯೊ! ಮಕ್ಕಳಿರ, ಯುದ್ಧ ಮಾಡುತ್ತಿದ್ದೀರಿ ! ನಿಮಗೇಕಿದು? ಯುಧಿಷ್ಠಿರ, ಫಲುಗುಣರನ್ನು ಬರಹೇಳಿ” ಎನ್ನುತ್ತ ಮಹಾಸ್ತ್ರವನ್ನು ಪ್ರಯೋಗಿಸಿದ.
ಪದಾರ್ಥ (ಕ.ಗ.ಪ)
ಛಡಾಳಿಸು-ಅತಿಶಯವಾಗು, ಅಳವಿಗೊಡು-ಯುದ್ಧಮಾಡು,
ಮೂಲ ...{Loading}...
ಬಲಿದುದಾಹವ ಮತ್ತೆ ಚಾತು
ರ್ಬಲ ಛಡಾಳಿಸಿ ಕಾದುತಿರ್ದುದು
ಮುಳಿದು ಶಲ್ಯನ ಕೂಡೆ ಪಂಚದ್ರೌಪದೀಸುತರು
ಅಳವಿಗೊಟ್ಟಿರಿಯಕಟಕಟ ಮ
ಕ್ಕಳಿರ ನಿಮಗೇಕಿದು ಯುಧಿಷ್ಠಿರ
ಫಲುಗುಣರ ಬರಹೇಳೆನುತಲೆಚ್ಚನು ಮಹಾಸ್ತ್ರದಲಿ ॥30॥
೦೩೧ ಎಚ್ಚನಿವನಿವನೊಡನೆ ಬಾಣವ ...{Loading}...
ಎಚ್ಚನಿವನಿವನೊಡನೆ ಬಾಣವ
ಕೊಚ್ಚಿದರು ಕೊಡಹಿದರು ಶರದಲಿ
ಚುಚ್ಚಿದನು ಜೀಕುಳಿಯ ಬಿಟ್ಟನು ನೆತ್ತರನು ನೆಲಕೆ
ಬೆಚ್ಚಿದವು ರಥವಾಜಿ ಹತ್ತಿಗೆ
ಬಿಚ್ಚಿ ರಥ ನುಗ್ಗಾಯ್ತು ಶೌರ್ಯದ
ಕೆಚ್ಚು ಮುರಿದುದು ಹಿಂಗಿದರು ಪಾಂಡವಕುಮಾರಕರು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರು ಪರಸ್ಪರ ಬಾಣವನ್ನು ಪ್ರಯೋಗಿಸಿದರು, ಕೊಚ್ಚಿದರು, ಕೊಡಹಿದರು. ಶಲ್ಯನು ಬಾಣದಿಂದ ದ್ರೌಪದೀಸುತರನ್ನು ಚುಚ್ಚಿದನು. ಅವರ ದೇಹದಿಂದ ನೆಲಕ್ಕೆ ರಕ್ತದ ಓಕುಳಿ ಚಿಮ್ಮುವ ಹಾಗೆ ಮಾಡಿದನು. ಅವರ ರಥದ ಕುದುರೆಗಳು ಬೆಚ್ಚಿದವು. ರಥದ ಭಾಗಗಳು ಕಳಚಿ ರಥವು ನುಗ್ಗಾಯಿತು. ಶೌರ್ಯದ ಕೆಚ್ಚು ಮುರಿಯಿತು. ಉಪ ಪಾಂಡವರು ಹಿಮ್ಮೆಟ್ಟಿದರು.
ಪದಾರ್ಥ (ಕ.ಗ.ಪ)
ಹತ್ತಿಗೆ-ಕಟ್ಟುಗಳು
ಮೂಲ ...{Loading}...
ಎಚ್ಚನಿವನಿವನೊಡನೆ ಬಾಣವ
ಕೊಚ್ಚಿದರು ಕೊಡಹಿದರು ಶರದಲಿ
ಚುಚ್ಚಿದನು ಜೀಕುಳಿಯ ಬಿಟ್ಟನು ನೆತ್ತರನು ನೆಲಕೆ
ಬೆಚ್ಚಿದವು ರಥವಾಜಿ ಹತ್ತಿಗೆ
ಬಿಚ್ಚಿ ರಥ ನುಗ್ಗಾಯ್ತು ಶೌರ್ಯದ
ಕೆಚ್ಚು ಮುರಿದುದು ಹಿಂಗಿದರು ಪಾಂಡವಕುಮಾರಕರು ॥31॥