೦೧

೦೦೦ ಸೂ ರಾಯ ...{Loading}...

ಸೂ. ರಾಯ ಕಟಕಾಚಾರ್ಯನಾ ತರು
ವಾಯ ಸೇನಾಪಟ್ಟವನು ರಾ
ಧೇಯನಲಿ ರಚಿಸಿದನು ಮುದದಲಿ ಕೌರವರ ರಾಯ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಕೆ ಪರಿತೋಷ ಖೇದಸ್ತಿಮಿತವಿಕ್ರಮರು
ಕೋಲಗುರುವಿನ ಮರಣವಾರ್ತಾ
ಕಾಲಸರ್ಪನ ತಂದು ಸಂಜಯ
ಹೇಳಿಗೆಯನೀಡಾಡಿದನು ಧೃತರಾಷ್ಟ್ರನಿದಿರಿನಲಿ ॥1॥

೦೦೨ ಬೆದರಿತಾಯಾಸ್ಥಾನ ಧಿಗಿಲೆಂ ...{Loading}...

ಬೆದರಿತಾಯಾಸ್ಥಾನ ಧಿಗಿಲೆಂ
ದುದು ಧರಾಧೀಶ್ವರನ ತಂದೆಯ
ಹೃದಯದಲಿ ಹುರುಳೇನು ಬಳಿಕುಳಿದವರ ಮೋರೆಗಳ
ಕದಡಿತಂತಃಕರಣವರಸನ
ಕದಪು ಕೈಯಲಿ ಕೀಲಿಸಿತು ಹೇ
ಳಿದನು ಸಂಜಯ ಮತ್ತೆ ಮೇಲಣ ರಣದ ವಾರ್ತೆಯನು ॥2॥

೦೦೩ ಗುಡಿಯ ಕಟ್ಟಿಸು ...{Loading}...

ಗುಡಿಯ ಕಟ್ಟಿಸು ಜೀಯ ಬರತುದು
ಕಡಲು ಮುರಿದುದು ಮೇರು ತಿರುಗಿತು
ಪೊಡವಿ ಬಿದ್ದುದು ಭಾನುಮಂಡಲವಹಹ ವಿತಳದಲಿ
ಮಡಿದುದೈ ನಿನ್ನಾನೆ ನಿನ್ನು
ಗ್ಗಡದ ಭಟ ಬೀಳ್ಕೊಂಡನೈ ಕಡಿ
ವಡೆದನೈ ಕಲಿ ಕರ್ಣನೊಸಗೆಯ ಮಾಡಹೇಳೆಂದ ॥3॥

೦೦೪ ಮೊದಲಲಿದ್ದುದು ಜೀವಕಳೆ ...{Loading}...

ಮೊದಲಲಿದ್ದುದು ಜೀವಕಳೆ ಹೃದ
ಯದಲಿ ಹೃದಯವನೊಡೆದು ಮಿಗೆ ಕಂ
ಠದಲಿ ಕವಿದುದು ಮಂಚದಲಿ ಮೈಮರೆದು ಮಲಗಿದನು
ಕೆದರಿತಲ್ಲಿಯದಲ್ಲಿ ರಾಯನ
ಹದನನರಿದೊಳಗೊಳಗೆ ರಾಣಿಯ
ರೊದರಲಂತಃಪುರದಲುಕ್ಕಿತು ಶೋಕರಸ ಜಲಧಿ ॥4॥

೦೦೫ ಬಾಯ ಬಸುರಿನ ...{Loading}...

ಬಾಯ ಬಸುರಿನ ನೊಸಲ ಹೊಯ್ಲಿನ
ರಾಯನರಸಿಯರರಸನಿದಿರಲಿ
ಹಾಯಿದರು ಭಿತ್ತಿಗಳನೊದರಿದರೊಡನೆ ದೆಸೆಯೊದರೆ
ರಾಯನಾವೆಡೆ ಜೀಯ ಕಲಿ ರಾ
ಧೇಯನಾವೆಡೆ ನೂರು ಮಕ್ಕಳು
ಬೀಯವಾದರೆ ಮಾವ ಎಂದರು ಸೊಸೆಯರಡಗೆಡೆದು ॥5॥

೦೦೬ ರವಕುಳವ ನಾನೇನ ...{Loading}...

ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನ ಕವಾಟತತಿ ಗಾಳಾಯ್ತು U್ಪಜನಗರ ॥6॥

೦೦೭ ನೆರೆದುದಲ್ಲಿಯದಲ್ಲಿ ಸೂರೆಗೆ ...{Loading}...

ನೆರೆದುದಲ್ಲಿಯದಲ್ಲಿ ಸೂರೆಗೆ
ಹರಿದುದಲ್ಲಿಯದಲ್ಲಿ ಮನ ಮ
ತ್ಸರದ ಜಗಳಕೆ ಸೂಳುಬಂಟರು ಹೊಯ್ದರೊಳಗೊಳಗೆ
ಅರಮನೆಯಲಾ ಬೊಬ್ಬೆ ಹಸ್ತಿನ
ಪುರದಲೀ ಬೊಬ್ಬಾಟವಿನ್ನುಳಿ
ದರಸುಗಳ ಪಾಡಾವುದೆಂದನು ಮುನಿ ನೃಪಾಲಂಗೆ ॥7॥

೦೦೮ ಸೂರೆ ಹೋದುದು ...{Loading}...

ಸೂರೆ ಹೋದುದು ನಗರಿ ಖಳರಿಗೆ
ಮಾರಿದರು ಪಟ್ಟಣವನಕಟಾ
ಕಾರುಮದ್ದಿಗೆ ಹೋಹುದೇ ಕೈಮಸಕವವನಿಪನ
ನೂರುಮಕ್ಕಳನಿಕ್ಕಿ ಸಾಧಿಸ
ಲಾರನೇ ಜಯಸಿರಿಯನೆಂದುರೆ
ಮೀರಿ ನುಡಿದುದು ಮಂತ್ರಿಗಳು ಧೃತರಾಷ್ಟ್ರನಿದಿರಿನಲಿ ॥8॥

೦೦೯ ಎರಡು ಗಲ್ಲದ ...{Loading}...

ಎರಡು ಗಲ್ಲದ ನಯನವಾರಿಯ
ಹರಿಕುಣಿಯ ನಿಲಿಸಿದನು ಸಂಜಯ
ನರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ
ಅರಸ ಹದುಳಿಸು ನಿನ್ನ ಸೊಸೆಯರ
ಕರೆದು ಸಂತೈಸಕಟ ಹಸ್ತಿನ
ಪುರದ ಗಾವಳಿಗಜಬಜಕೆ ಡಂಗುರವ ಹೊಯ್ಸೆಂದ ॥9॥

೦೧೦ ಬೀದಿ ಬೀದಿಗಳೊಳಗೆ ...{Loading}...

ಬೀದಿ ಬೀದಿಗಳೊಳಗೆ ಡಂಗುರ
ನಾದವೆಸೆದವು ಕೇರಿ ಕೇರಿಗೆ
ಕೈದುಕಾರರು ನೆರೆದು ನಿಂದರು ಸೂರೆಗರ ಕೆಡಹಿ
ಸುಯ್ದನಡಿಗಡಿಗೊಲೆದೊಲೆದು ಪರಿ
ಖೇದಶೋಕಜ್ವಲನ ಜನಿತ
ಸ್ವೇದ ಸಲಿಲ ಸ್ತಿಮಿತಕಾಯನು ರಾಯನಿಂತೆಂದ ॥10॥

೦೧೧ ಹೇಳು ಸಞ್ಜಯ ...{Loading}...

ಹೇಳು ಸಂಜಯ ನಮ್ಮ ಭಾಗ್ಯದ
ಶಾಳಿವನ ಫಲವಾಯ್ತಲಾ ಕೈ
ಮೇಳವಿಸಿದನೆ ಕರ್ಣನಮರಸ್ತ್ರೀ ಕದಂಬದಲಿ
ಹೇಳು ಹೇಳೆನ್ನಾಣೆ ಮಾತಿನ
ಜಾಳಿಗೆಯ ಮರೆ ಬೇಡ ಕುರುಪತಿ
ಕಾಳೆಗದೊಳಸ್ತಮಿಸಿದನೆ ನುಡಿಯಂಜಬೇಡೆಂದ ॥11॥

೦೧೨ ಸಾವೆನಾನೆನ್ದಞ್ಜದಿರು ಕ ...{Loading}...

ಸಾವೆನಾನೆಂದಂಜದಿರು ಕ
ರ್ಣಾವಸಾನವ ಕೇಳಿ ತನ್ನಯ
ಜೀವವಿದಲಾ ದೇಹದಲಿ ಬೇರಿನ್ನು ಕೆಲಬರಲಿ
ಸಾವೆನೇ ತಾನಕಟ ಕೌರವ
ಜೀವಿಸಲಿ ಮೇಣಳಿಯಲೆಮಗಿ
ನ್ನಾವ ತೊಡಕಿಲ್ಲಿನ್ನು ವಜ್ರಶರೀರ ತಾನೆಂದ ॥12॥

೦೧೩ ಘಾಯವಡೆದನು ಭೀಷ್ಮ ...{Loading}...

ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ ॥13॥

೦೧೪ ಸರಳ ಕೊರತೆಯೊ ...{Loading}...

ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸುತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ ॥14॥

೦೧೫ ಹರುಹುಗೆಟ್ಟುದು ತೇರು ...{Loading}...

ಹರುಹುಗೆಟ್ಟುದು ತೇರು ಸಾರಥಿ
ಹುರುಳುಗೆಡಿಸಿಯೆ ನುಡಿದನಂಬಿನ
ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ
ಅರಿವಿಜಯವೆಲ್ಲಿಯದು ನೀವ್ ಮನ
ಬರಡರೈ ನಿಮ್ಮನ್ವಯವ ಸಂ
ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ ॥15॥

೦೧೬ ಸುರ ನರೋರಗರರಿಯೆ ...{Loading}...

ಸುರ ನರೋರಗರರಿಯೆ ನಾವ್ ಬಾ
ಹಿರರು ಭಂಗಿಸಬೇಡ ಸಾಕಂ
ತಿರಲಿ ಕರ್ಣಾಹವದ ಕರ್ಣಾಮೃತವ ಸುರಿ ಸಾಕು
ಅರಿಗಳಭ್ಯುದಯವನು ನಮ್ಮಪ
ಸರಣವನು ಕಿವಿಯಾರೆ ಕೇಳುವ
ಪರಮ ಸುಕೃತಿಗಳಾವು ನೀ ಹೇಳಂಜಬೇಡೆಂದ ॥16॥

೦೧೭ ಹೇಳಿದನು ಬಳಿಕೆರಡು ...{Loading}...

ಹೇಳಿದನು ಬಳಿಕೆರಡು ಥಟ್ಟಿನೊ
ಳಾಳು ಕುದುರೆಯ ಗಜ ರಥವ ಭೂ
ಪಾಲರಳಿದುಳಿದವರ ಲೆಕ್ಕವನೈದೆ ವಿಸ್ತರಿಸಿ
ಕೇಳು ನಿನ್ನಾತನ ವಿನೋದದ
ಖೂಳ ಬೋಳೆಯತನದಲೊದಗಿದ
ಬಾಳಿಕೆಯ ಬೀಸರವನೆಂದನು ಸಂಜಯನು ನಗುತ ॥17॥

೦೧೮ ತೊಡರ ತೆಗೆದರು ...{Loading}...

ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ ॥18॥

೦೧೯ ಸಾಲ ಸಾವಿರ ...{Loading}...

ಸಾಲ ಸಾವಿರ ದೀವಿಗೆಯ ಹರಿ
ದಾಳಿಗಳುಕದೆ ನೃಪರ ಮೋರೆಗ
ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಲ್ಲಿ
ಹೇಳಲೇನದ ಬಹಳ ದುಗುಡದ
ಪಾಳೆಯವೊ ನಿನ್ನಾತನೋಲಗ
ಶಾಲೆಯೋ ನಾವರಿಯೆವೆಂದನು ಸಂಜಯನು ನೃಪಗೆ ॥19॥

೦೨೦ ಎಲೆ ಮಿಡುಕದಾಸ್ಥಾನ ...{Loading}...

ಎಲೆ ಮಿಡುಕದಾಸ್ಥಾನ ವೀಳೆಯ
ದೆಲೆಯ ಮಡಿಸುವ ರಭಸವಿಲ್ಲೊಳ
ಗೊಳಗೆ ಸನ್ನೆಗಳೋರೆಗೊರಳುಗಳೌಡುಗಚ್ಚುಗಳ
ಹಳಸಿದಗ್ಗಳಿಕೆಗಳ ಮೀಸಲು
ಗಳೆದ ಬಿರುದಿನ ಮಾನಭಂಗದ
ಕಳವಳದ ಕನಸುಗಳಲಿದ್ದುದು ರಾಯನಾಸ್ಥಾನ ॥20॥

೦೨೧ ಕೆತ್ತು ಕೊಣ್ಡಿರಲೇಕೆ ...{Loading}...

ಕೆತ್ತು ಕೊಂಡಿರಲೇಕೆ ನೀವಿ
ನ್ನುತ್ತರಾಯಿಗಳೆಮ್ಮ ಭಾಗ್ಯದ
ಬಿತ್ತು ಹುರಿದರೆ ಬಿರುದ ಭಟರಿದ್ದೇನಮಾಡುವರು
ಮೆತ್ತಿದಂಬಿನ ಮೆಯ್ಯ ಭೀಷ್ಮನು
ಹೊತ್ತ ಕೈದುವ ಬಿಸುಟ ಕಳಶಜ
ನುತ್ತಮಿಕೆಗಳ ಮೆರೆದರೆಂದನು ಕೌರವರ ರಾಯ ॥21॥

೦೨೨ ಬಿಗಿದ ತಿಮಿರದ ...{Loading}...

ಬಿಗಿದ ತಿಮಿರದ ಕೆಚ್ಚು ಸೂರ್ಯನ
ಸೊಗಡು ಹೊಯ್ದರೆ ಮುರಿಯದೇ ಕಾ
ಳೆಗಕೆ ಕರ್ಣನ ಕೈದು ಭಂಡಾರಿಸಿದುದಿನ್ನಬರ
ತೆಗೆಸುವೆವು ನಾಳಿನಲಿ ನಿಮ್ಮಯ
ಮೊಗದ ದುಗುಡದ ದಡ್ಡಿಯನು ಮೈ
ದೆಗೆಯದಿರಿ ಕಲಿಯಾಗಿಯೆಂದನು ನೃಪತಿ ಸುಭಟರಿಗೆ ॥22॥

೦೨೩ ಜೀಯ ಸಂಶಯವಿಲ್ಲ ...{Loading}...

ಜೀಯ ಸಂಶಯವಿಲ್ಲ ಗುರು ಗಾಂ
ಗೇಯರಳುಕಿದರೇನು ಕಲಿ ರಾ
ಧೇಯನೇ ವಜ್ರಾಂಗಿಯಲ್ಲಾ ನಮ್ಮ ಮೋಹರಕೆ
ರಾಯ ನೀ ಪತಿಕರಿಸಿದರೆ ಚ
ಕ್ರಾಯುಧನ ಚಾತುರ್ಯ ಕೊಳ್ಳದು
ಜೀಯ ಕರ್ಣನ ಮುಂದೆಯೆಂದುದು ನಿಖಿಳ ಪರಿವಾರ ॥23॥

೦೨೪ ಬೇರೆ ತನಗಗ್ಗಳಿಕೆಯೋಲೆಯ ...{Loading}...

ಬೇರೆ ತನಗಗ್ಗಳಿಕೆಯೋಲೆಯ
ಕಾರತನವೇ ರಾಯ ಮನವೊಲಿ
ದೇರಿಸಿದರೇರುವುದು ದೊರೆ ಮನಮುರಿಯೆ ಕುಂದುವುದು
ತೋರಿ ನುಡಿದರೆ ಭೀಷ್ಮ ದ್ರೋಣರು
ಜಾರಿಸಿದ ರಣವೆಮಗೆ ಸದರವೆ
ದೂರುವವರಾವಲ್ಲವೆಂದನು ಭಾನುಸುತ ನಗುತ ॥24॥

೦೨೫ ಸಾಕದನ್ತಿರಲಿನ್ನು ಥಟ್ಟಿಂ ...{Loading}...

ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರುನದೀಸುತರ
ಸಾಕಿ ಸಲಹಿದೆ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ ॥25॥

೦೨೬ ಎಮ್ಮ ತೋರಿಸಬೇಡ ...{Loading}...

ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ ॥26॥

೦೨೭ ಆ ಮಹಾರಥ ...{Loading}...

ಆ ಮಹಾರಥ ಭೀಷ್ಮನೇ ಸ್ವೇ
ಚ್ಛಾಮರಣಿಯಾಚಾರ್ಯಚಾಪ
ವ್ಯೋಮಕೇಶನು ಹೊಕ್ಕು ಕಾಣರು ಹಗೆಗೆ ಹರಿವುಗಳ
ಆ ಮಹಾ ನಾರಾಯಣಾಸ್ತ್ರದ
ಸೀಮೆ ಸೀದುದು ಮಿಕ್ಕ ಭಟರು
ದ್ದಾಮರೇ ಸಾಕಿನ್ನು ಸೇನಾಪತಿಯ ಮಾಡೆಂದ ॥27॥

೦೨೮ ಕರಸಿದನು ಭೂಸುರರನೌದುಂ ...{Loading}...

ಕರಸಿದನು ಭೂಸುರರನೌದುಂ
ಬರದ ಮಣಿ ಮಡಿವರ್ಗ ದೂರ್ವಾಂ
ಕುರ ಸಿತಾಕ್ಷತ ಧವಳಸರ್ಷಪ ವರಫಲಾವಳಿಯ
ತರಿಸಿದನು ಹೊಂಗಳಶ ತತಿಯಲಿ
ವರ ನದೀವಾರಿಗಳನಾಡಂ
ಬರದ ಲಗ್ಗೆಯಲೊದರಿದವು ನಿಸ್ಸಾಳಕೋಟಿಗಳು ॥28॥

೦೨೯ ವಿರಚಿಸಿತು ಪಟ್ಟಾಭಿಷೇಕೋ ...{Loading}...

ವಿರಚಿಸಿತು ಪಟ್ಟಾಭಿಷೇಕೋ
ತ್ಕರುಷ ಮಂತ್ರಾಕ್ಷತೆಯ ಮಳೆಗಳ
ಕರೆದರವನೀಸುರರು ಜಯರವಮೇಘಘೋಷದಲಿ
ಗುರುಸುತಾದಿ ಮಹಾಪ್ರಧಾನರು
ದರುಶನವ ನೀಡಿದರು ಕರ್ಣನ
ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ ॥29॥

೦೩೦ ಅರಳಿತರಸನ ವದನ ...{Loading}...

ಅರಳಿತರಸನ ವದನ ಶಕುನಿಯ
ಹರುಷಮಿಗೆ ದುಶ್ಯಾಸನಂಗು
ಬ್ಬರಿಸೆ ರೋಮಾವಳಿ ವಿಕರ್ಣಾದಿಗಳ ಮನ ನಲಿಯೆ
ಗುರುಜ ಕೃಪ ಕೃತವರ್ಮ ಶಲ್ಯಾ
ದ್ಯರಿಗೆ ಹೂಸಕದೊಲಹು ಮಿಗಿಲಾ
ಯ್ತಿರುಳು ಕರ್ಣಗೆ ಪಟ್ಟವಾಯಿತು ಭೂಪ ಕೇಳ್ ಎಂದ ॥30॥

+೦೧ ...{Loading}...