೦೦೦ ಸೂ ರಾಯ ...{Loading}...
ಸೂ. ರಾಯ ಕಟಕಾಚಾರ್ಯನಾ ತರು
ವಾಯ ಸೇನಾಪಟ್ಟವನು ರಾ
ಧೇಯನಲಿ ರಚಿಸಿದನು ಮುದದಲಿ ಕೌರವರ ರಾಯ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂ : ದ್ರೋಣನ ತರುವಾಯ ಸೇನಾಧಿಪತಿಪಟ್ಟವನ್ನು ಕರ್ಣನಿಗೆ ದುರ್ಯೋಧನನು ಸಂತೋಷದಿಂದ ಕಟ್ಟಿದನು.
ಪದಾರ್ಥ (ಕ.ಗ.ಪ)
ರಾಯ ಕಟಕಾಚಾರ್ಯ-ಸೇನಾಪತಿ, ರಾಜಗುರು
ಮೂಲ ...{Loading}...
ಸೂ. ರಾಯ ಕಟಕಾಚಾರ್ಯನಾ ತರು
ವಾಯ ಸೇನಾಪಟ್ಟವನು ರಾ
ಧೇಯನಲಿ ರಚಿಸಿದನು ಮುದದಲಿ ಕೌರವರ ರಾಯ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಕೆ ಪರಿತೋಷ ಖೇದಸ್ತಿಮಿತವಿಕ್ರಮರು
ಕೋಲಗುರುವಿನ ಮರಣವಾರ್ತಾ
ಕಾಲಸರ್ಪನ ತಂದು ಸಂಜಯ
ಹೇಳಿಗೆಯನೀಡಾಡಿದನು ಧೃತರಾಷ್ಟ್ರನಿದಿರಿನಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿಪಾಲನಾದ ಜನಮೇಜಯನೇ ಕೇಳು! ಎರಡು ಸೈನ್ಯಗಳವರೂ ಸಂತೋಷ ಮತ್ತು ದುಃಖಗಳಿಂದ ಕೂಡಿ ತಮ್ಮ ಪಾಳಯಗಳಿಗೆ ಹಿಂದಿರುಗಿದರು. ಸಂಜಯನು ಬಿಲ್ಲುವಿದ್ಯೆಯ ಗುರು ದ್ರೋಣನ ಮರಣವಾರ್ತೆಯ ಕಾಲಸರ್ಪದ ಬುಟ್ಟಿಯನ್ನು ತಂದು ಧೃತರಾಷ್ಟ್ರನ ಎದುರು ಚೆಲಾ್ಲಡಿದನು.
ಪದಾರ್ಥ (ಕ.ಗ.ಪ)
ಕೋಲಗುರು-ಬಿಲ್ಲುವಿದ್ಯೆಯ ಗುರು, ಹೇಳಿಗೆ -(ಹಾವುಗಳನ್ನಿಡುವ) ಬಿದಿರಿನ ಬುಟ್ಟಿ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಕೆ ಪರಿತೋಷ ಖೇದಸ್ತಿಮಿತವಿಕ್ರಮರು
ಕೋಲಗುರುವಿನ ಮರಣವಾರ್ತಾ
ಕಾಲಸರ್ಪನ ತಂದು ಸಂಜಯ
ಹೇಳಿಗೆಯನೀಡಾಡಿದನು ಧೃತರಾಷ್ಟ್ರನಿದಿರಿನಲಿ ॥1॥
೦೦೨ ಬೆದರಿತಾಯಾಸ್ಥಾನ ಧಿಗಿಲೆಂ ...{Loading}...
ಬೆದರಿತಾಯಾಸ್ಥಾನ ಧಿಗಿಲೆಂ
ದುದು ಧರಾಧೀಶ್ವರನ ತಂದೆಯ
ಹೃದಯದಲಿ ಹುರುಳೇನು ಬಳಿಕುಳಿದವರ ಮೋರೆಗಳ
ಕದಡಿತಂತಃಕರಣವರಸನ
ಕದಪು ಕೈಯಲಿ ಕೀಲಿಸಿತು ಹೇ
ಳಿದನು ಸಂಜಯ ಮತ್ತೆ ಮೇಲಣ ರಣದ ವಾರ್ತೆಯನು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ಕೇಳಿ, ಆ ಆಸ್ಥಾನ ಬೆದರಿತು . ದುರ್ಯೋಧನನ ತಂದೆಯ ಹೃದಯ ಧಿಗಿಲೆಂದಿತು. ಇನ್ನು ಉಳಿದವರ ಮೋರೆಗಳಲ್ಲಿ ಯಾವ ಹುರುಳಿದ್ದೀತು? ಅರಸನ ಅಂತಃಕರಣವು ಕದಡಿತು. ಅವನ ಕೆನ್ನೆ ಅಂಗೈಯಲ್ಲಿ ನಾಟಿತು. ಆಮೇಲಿನ ಯುದ್ಧದ ಸುದ್ದಿಯನ್ನು ಸಂಜಯನು ಮತ್ತೆ ಹೇಳಿದನು.
ಮೂಲ ...{Loading}...
ಬೆದರಿತಾಯಾಸ್ಥಾನ ಧಿಗಿಲೆಂ
ದುದು ಧರಾಧೀಶ್ವರನ ತಂದೆಯ
ಹೃದಯದಲಿ ಹುರುಳೇನು ಬಳಿಕುಳಿದವರ ಮೋರೆಗಳ
ಕದಡಿತಂತಃಕರಣವರಸನ
ಕದಪು ಕೈಯಲಿ ಕೀಲಿಸಿತು ಹೇ
ಳಿದನು ಸಂಜಯ ಮತ್ತೆ ಮೇಲಣ ರಣದ ವಾರ್ತೆಯನು ॥2॥
೦೦೩ ಗುಡಿಯ ಕಟ್ಟಿಸು ...{Loading}...
ಗುಡಿಯ ಕಟ್ಟಿಸು ಜೀಯ ಬರತುದು
ಕಡಲು ಮುರಿದುದು ಮೇರು ತಿರುಗಿತು
ಪೊಡವಿ ಬಿದ್ದುದು ಭಾನುಮಂಡಲವಹಹ ವಿತಳದಲಿ
ಮಡಿದುದೈ ನಿನ್ನಾನೆ ನಿನ್ನು
ಗ್ಗಡದ ಭಟ ಬೀಳ್ಕೊಂಡನೈ ಕಡಿ
ವಡೆದನೈ ಕಲಿ ಕರ್ಣನೊಸಗೆಯ ಮಾಡಹೇಳೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಡೆಯಾ, ಕಡಲು ಬತ್ತಿತು. ಮೇರುಪರ್ವತ ಮುರಿಯಿತು. ಭೂಮಿ ತಿರುಗಿತು. ಅಹಹಾ! ಭಾನುಮಂಡಲವು ವಿತಳದಲ್ಲಿ ಬಿದ್ದಿತು. ನಿನ್ನ ಆನೆ (ದ್ರೋಣ) ಮಡಿಯಿತು. ನಿನ್ನ ಉಗ್ಗಡದ ಭಟ ಮರಣ ಹೊಂದಿದನು. ಕಲಿ ಕರ್ಣನಿಗೆ (ಸೇನಾಪಟ್ಟವನ್ನು ಕಟ್ಟುವ) ಉತ್ಸವವನ್ನು ಮಾಡಲು ಹೇಳು.
ಪದಾರ್ಥ (ಕ.ಗ.ಪ)
ಉಗ್ಗಡ-ಘೋಷಿಸುವ, ಹೇಳಿಕೊಳ್ಳುವ, ಒಸಗೆ-ಉತ್ಸವ
ಮೂಲ ...{Loading}...
ಗುಡಿಯ ಕಟ್ಟಿಸು ಜೀಯ ಬರತುದು
ಕಡಲು ಮುರಿದುದು ಮೇರು ತಿರುಗಿತು
ಪೊಡವಿ ಬಿದ್ದುದು ಭಾನುಮಂಡಲವಹಹ ವಿತಳದಲಿ
ಮಡಿದುದೈ ನಿನ್ನಾನೆ ನಿನ್ನು
ಗ್ಗಡದ ಭಟ ಬೀಳ್ಕೊಂಡನೈ ಕಡಿ
ವಡೆದನೈ ಕಲಿ ಕರ್ಣನೊಸಗೆಯ ಮಾಡಹೇಳೆಂದ ॥3॥
೦೦೪ ಮೊದಲಲಿದ್ದುದು ಜೀವಕಳೆ ...{Loading}...
ಮೊದಲಲಿದ್ದುದು ಜೀವಕಳೆ ಹೃದ
ಯದಲಿ ಹೃದಯವನೊಡೆದು ಮಿಗೆ ಕಂ
ಠದಲಿ ಕವಿದುದು ಮಂಚದಲಿ ಮೈಮರೆದು ಮಲಗಿದನು
ಕೆದರಿತಲ್ಲಿಯದಲ್ಲಿ ರಾಯನ
ಹದನನರಿದೊಳಗೊಳಗೆ ರಾಣಿಯ
ರೊದರಲಂತಃಪುರದಲುಕ್ಕಿತು ಶೋಕರಸ ಜಲಧಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲು ಅರಸನ ಹೃದಯದಲ್ಲಿದ್ದ ಜೀವಕಳೆ ಹೃದಯವನ್ನು (ಒಡೆದು) ಮೀರಿ ಕಂಠದಲ್ಲಿ ಕವಿಯಿತು. ಅವನು ಮಂಚದಲ್ಲಿ ಮೈಮರೆದು ಒರಗಿದನು. ಪರಿಸ್ಥಿತಿ ಅಸ್ತವ್ಯಸ್ತವಾಯಿತು. ಅರಸನ ಮನಃಸ್ಥಿತಿಯನ್ನು ಅರಿತು ಅರಸಿಯರು ಅಳಲು, ಅಂತಃಪುರದಲ್ಲಿ ಶೋಕರಸದ ಜಲಧಿ ಉಕ್ಕಿತು.
ಮೂಲ ...{Loading}...
ಮೊದಲಲಿದ್ದುದು ಜೀವಕಳೆ ಹೃದ
ಯದಲಿ ಹೃದಯವನೊಡೆದು ಮಿಗೆ ಕಂ
ಠದಲಿ ಕವಿದುದು ಮಂಚದಲಿ ಮೈಮರೆದು ಮಲಗಿದನು
ಕೆದರಿತಲ್ಲಿಯದಲ್ಲಿ ರಾಯನ
ಹದನನರಿದೊಳಗೊಳಗೆ ರಾಣಿಯ
ರೊದರಲಂತಃಪುರದಲುಕ್ಕಿತು ಶೋಕರಸ ಜಲಧಿ ॥4॥
೦೦೫ ಬಾಯ ಬಸುರಿನ ...{Loading}...
ಬಾಯ ಬಸುರಿನ ನೊಸಲ ಹೊಯ್ಲಿನ
ರಾಯನರಸಿಯರರಸನಿದಿರಲಿ
ಹಾಯಿದರು ಭಿತ್ತಿಗಳನೊದರಿದರೊಡನೆ ದೆಸೆಯೊದರೆ
ರಾಯನಾವೆಡೆ ಜೀಯ ಕಲಿ ರಾ
ಧೇಯನಾವೆಡೆ ನೂರು ಮಕ್ಕಳು
ಬೀಯವಾದರೆ ಮಾವ ಎಂದರು ಸೊಸೆಯರಡಗೆಡೆದು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಿಯರು ತಮ್ಮ ಬಾಯಿ, ಹೊಟ್ಟೆ, ಹಣೆಗಳನ್ನು ಬಡಿದುಕೊಳ್ಳುತ್ತಾ ಅರಸನ ಎದುರಿನಲ್ಲಿ ಅಳುತ್ತಾ ಗೋಡೆಗಳಿಗೆ ತಲೆ ಚೆಚ್ಚಿಕೊಂಡರು. ಸೊಸೆಯರು ಮಾವನಿಗೆ ಅಡ್ಡ ಬಿದ್ದು, ‘ರಾಜನೆಲ್ಲಿ? ಒಡೆಯಾ, ಕಲಿ ರಾಧೇಯನೆಲ್ಲಿ? ನೂರು ಮಕ್ಕಳೂ ತೀರಿಹೋದರೆ?’ ಎಂದು ಕೇಳಿದರು.
ಪದಾರ್ಥ (ಕ.ಗ.ಪ)
ಬೀಯ-ನಾಶ
ಮೂಲ ...{Loading}...
ಬಾಯ ಬಸುರಿನ ನೊಸಲ ಹೊಯ್ಲಿನ
ರಾಯನರಸಿಯರರಸನಿದಿರಲಿ
ಹಾಯಿದರು ಭಿತ್ತಿಗಳನೊದರಿದರೊಡನೆ ದೆಸೆಯೊದರೆ
ರಾಯನಾವೆಡೆ ಜೀಯ ಕಲಿ ರಾ
ಧೇಯನಾವೆಡೆ ನೂರು ಮಕ್ಕಳು
ಬೀಯವಾದರೆ ಮಾವ ಎಂದರು ಸೊಸೆಯರಡಗೆಡೆದು ॥5॥
೦೦೬ ರವಕುಳವ ನಾನೇನ ...{Loading}...
ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನ ಕವಾಟತತಿ ಗಾಳಾಯ್ತು U್ಪಜನಗರ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜ (ದುರ್ಯೋಧನ), ಕರ್ಣ ಮೊದಲಾದವರ ರಾಣೀವಾಸದವರ ಅತಿಯಾದ ಆಕ್ರಂದನವನ್ನು ಏನೆಂದು ಹೇಳಲಿ? ಒಳಸೂರೆಗಾರರು, ಕೋಟೆಯನ್ನು ಮುತ್ತಿದರು. ಆಸೆಬುರುಕರು ಗುಜುಗುಜಿಸಲು ಹಸ್ತಿನಾವತಿಯ ಎಲ್ಲ ಮನೆಗಳ ಬಾಗಿಲುಗಳನ್ನು ಮುಚ್ಚಲಾಯಿತು. ಹಸ್ತಿನಾವತಿಯು ಹಾಳಾಯಿತು.
ಪದಾರ್ಥ (ಕ.ಗ.ಪ)
ರವಕುಳ-ಆಕ್ರಂದನ, ಒಳಸೂರೆಗರು-ಒಳಗೆ ಕೊಳ್ಳೆಹೊಡೆಯುವವರು,
ಮೂಲ ...{Loading}...
ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನ ಕವಾಟತತಿ ಗಾಳಾಯ್ತು U್ಪಜನಗರ ॥6॥
೦೦೭ ನೆರೆದುದಲ್ಲಿಯದಲ್ಲಿ ಸೂರೆಗೆ ...{Loading}...
ನೆರೆದುದಲ್ಲಿಯದಲ್ಲಿ ಸೂರೆಗೆ
ಹರಿದುದಲ್ಲಿಯದಲ್ಲಿ ಮನ ಮ
ತ್ಸರದ ಜಗಳಕೆ ಸೂಳುಬಂಟರು ಹೊಯ್ದರೊಳಗೊಳಗೆ
ಅರಮನೆಯಲಾ ಬೊಬ್ಬೆ ಹಸ್ತಿನ
ಪುರದಲೀ ಬೊಬ್ಬಾಟವಿನ್ನುಳಿ
ದರಸುಗಳ ಪಾಡಾವುದೆಂದನು ಮುನಿ ನೃಪಾಲಂಗೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಲ್ಲಿ ನೆರೆದಿದ್ದ ವಸ್ತುಗಳು ಅಲ್ಲಲ್ಲಿಯೇ ಸೂರೆಹೋದವು. (ಕೊಳ್ಳೆಗೆ ಬಂದ) ಸರದಿಯ ಬಂಟರು ಮತ್ಸರದ ಜಗಳದಿಂದ ತಮ್ಮಲ್ಲೇ ಹೊಡೆದಾಡಿದರು. ಅರಮನೆಯಲ್ಲಿ ಆ ಬೊಬ್ಬೆ; ಹಸ್ತಿನಪುರದಲ್ಲಿ ಈ ಬೊಬ್ಬಾಟ. ಇನ್ನು ಉಳಿದ ಅರಸುಗಳ ಪಾಡು ಯಾವುದು ಎಂದು (ವೈಶಂಪಾಯನ) ಮುನಿಯು ಜನಮೇಜಯ ರಾಜನನ್ನು ಕೇಳಿದನು.
ಪದಾರ್ಥ (ಕ.ಗ.ಪ)
ಸೂಳು ಬಂಟರು-ಸರದಿಯ ಸೇವಕರು?
ಮೂಲ ...{Loading}...
ನೆರೆದುದಲ್ಲಿಯದಲ್ಲಿ ಸೂರೆಗೆ
ಹರಿದುದಲ್ಲಿಯದಲ್ಲಿ ಮನ ಮ
ತ್ಸರದ ಜಗಳಕೆ ಸೂಳುಬಂಟರು ಹೊಯ್ದರೊಳಗೊಳಗೆ
ಅರಮನೆಯಲಾ ಬೊಬ್ಬೆ ಹಸ್ತಿನ
ಪುರದಲೀ ಬೊಬ್ಬಾಟವಿನ್ನುಳಿ
ದರಸುಗಳ ಪಾಡಾವುದೆಂದನು ಮುನಿ ನೃಪಾಲಂಗೆ ॥7॥
೦೦೮ ಸೂರೆ ಹೋದುದು ...{Loading}...
ಸೂರೆ ಹೋದುದು ನಗರಿ ಖಳರಿಗೆ
ಮಾರಿದರು ಪಟ್ಟಣವನಕಟಾ
ಕಾರುಮದ್ದಿಗೆ ಹೋಹುದೇ ಕೈಮಸಕವವನಿಪನ
ನೂರುಮಕ್ಕಳನಿಕ್ಕಿ ಸಾಧಿಸ
ಲಾರನೇ ಜಯಸಿರಿಯನೆಂದುರೆ
ಮೀರಿ ನುಡಿದುದು ಮಂತ್ರಿಗಳು ಧೃತರಾಷ್ಟ್ರನಿದಿರಿನಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗರವು ಸೂರೆ ಹೋಯಿತು. ಪಟ್ಟಣವನ್ನು ಖಳರಿಗೆ ಮಾರಿದರು. ಅಕಟಾ! ಧರ್ಮರಾಯ ಇಕ್ಕಿರುವ ಕೈಮದ್ದು ಸಾಧಾರಣ ಔಷಧಿಗೆ ಹೋಗುತ್ತದೆಯೆ? ‘ನೂರುಮಕ್ಕಳನ್ನು ಯುದ್ಧಕ್ಕೆ ಕಳಿಸಿದರೂ ಜಯಲಕ್ಷ್ಮಿಯನ್ನು ಪಡೆಯಲು ಅರಸನಿಗೆ ಸಾಧ್ಯವೇ ’ ಎಂದು ಮಂತ್ರಿಗಳು ಧೃತರಾಷ್ಟ್ರನ ಎದುರಿನಲ್ಲೇ ಮೀರಿ ಮಾತನಾಡಿದರು.
ಪದಾರ್ಥ (ಕ.ಗ.ಪ)
ಕಾರುಮದ್ದು-ವಾಂತಿಮಾಡಿಸುವ ಔಷಧ, ಕೈಮಸಕ-ಕೈಮದ್ದು-ನಿಧಾನ ವಿಷ ?
ಮೂಲ ...{Loading}...
ಸೂರೆ ಹೋದುದು ನಗರಿ ಖಳರಿಗೆ
ಮಾರಿದರು ಪಟ್ಟಣವನಕಟಾ
ಕಾರುಮದ್ದಿಗೆ ಹೋಹುದೇ ಕೈಮಸಕವವನಿಪನ
ನೂರುಮಕ್ಕಳನಿಕ್ಕಿ ಸಾಧಿಸ
ಲಾರನೇ ಜಯಸಿರಿಯನೆಂದುರೆ
ಮೀರಿ ನುಡಿದುದು ಮಂತ್ರಿಗಳು ಧೃತರಾಷ್ಟ್ರನಿದಿರಿನಲಿ ॥8॥
೦೦೯ ಎರಡು ಗಲ್ಲದ ...{Loading}...
ಎರಡು ಗಲ್ಲದ ನಯನವಾರಿಯ
ಹರಿಕುಣಿಯ ನಿಲಿಸಿದನು ಸಂಜಯ
ನರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ
ಅರಸ ಹದುಳಿಸು ನಿನ್ನ ಸೊಸೆಯರ
ಕರೆದು ಸಂತೈಸಕಟ ಹಸ್ತಿನ
ಪುರದ ಗಾವಳಿಗಜಬಜಕೆ ಡಂಗುರವ ಹೊಯ್ಸೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು ಧೃತರಾಷ್ಟ್ರನ ಎರಡು ಕೆನ್ನೆಗಳ ಮೇಲಿನ ಕಣ್ಣೀರಿನ ಕಾಲುವೆಯನ್ನು ನಿಲ್ಲಿಸಿ, ಅವನನ್ನು ಕುಳ್ಳಿರಿಸಿ ಬೆನ್ನಿಗೆ ಒರಗನ್ನು ನೀಡಿದನು. ‘ಅರಸನೇ ಕ್ಷೇಮವಾಗಿರು. ನಿನ್ನ ಸೊಸೆಯರನ್ನು ಕರೆದು ಸಂತೈಸು. ಅಕಟ! ಹಸ್ತಿನಪುರದ ಗದ್ದಲ, ಕೋಲಾಹಲಗಳನ್ನು ನಿಲ್ಲಿಸುವಂತೆ ಡಂಗುರವನ್ನು ಹೊಡೆಸು’ ಎಂದ.
ಪದಾರ್ಥ (ಕ.ಗ.ಪ)
ಹರಿಕುಣಿ-ಕಾಲುವೆ, ಹದುಳಿಸು-ಕ್ಷೇಮದಿಂದಿರು, ಗಾವಳಿಗಜಬಜ-ಗದ್ದಲ, ಕೋಲಾಹಲ
ಮೂಲ ...{Loading}...
ಎರಡು ಗಲ್ಲದ ನಯನವಾರಿಯ
ಹರಿಕುಣಿಯ ನಿಲಿಸಿದನು ಸಂಜಯ
ನರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ
ಅರಸ ಹದುಳಿಸು ನಿನ್ನ ಸೊಸೆಯರ
ಕರೆದು ಸಂತೈಸಕಟ ಹಸ್ತಿನ
ಪುರದ ಗಾವಳಿಗಜಬಜಕೆ ಡಂಗುರವ ಹೊಯ್ಸೆಂದ ॥9॥
೦೧೦ ಬೀದಿ ಬೀದಿಗಳೊಳಗೆ ...{Loading}...
ಬೀದಿ ಬೀದಿಗಳೊಳಗೆ ಡಂಗುರ
ನಾದವೆಸೆದವು ಕೇರಿ ಕೇರಿಗೆ
ಕೈದುಕಾರರು ನೆರೆದು ನಿಂದರು ಸೂರೆಗರ ಕೆಡಹಿ
ಸುಯ್ದನಡಿಗಡಿಗೊಲೆದೊಲೆದು ಪರಿ
ಖೇದಶೋಕಜ್ವಲನ ಜನಿತ
ಸ್ವೇದ ಸಲಿಲ ಸ್ತಿಮಿತಕಾಯನು ರಾಯನಿಂತೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀದಿಬೀದಿಗಳಲ್ಲಿ ಡಂಗುರದ ಸದ್ದು ಕೇಳಿಸಿತು. ಕೇರಿಕೇರಿಗಳಲ್ಲಿ ಆಯುಧಧಾರಿಗಳು ಕೂಡಿ ನಿಂತು ಸೂರೆಮಾಡುವವರನ್ನು ನಿಗ್ರಹಿಸಿದರು. ಅಡಿಗಡಿಗೆ ಒಲೆದು ಒಲೆದು ಬರುತ್ತಿರುವ ವಿಷಾದ, ದುಃಖಗಳ ಬೇಗೆಯಿಂದ ಹುಟ್ಟಿದ ಬೆವರಿನ ಪ್ರವಾಹದಿಂದ ಬಾಧಿತನಾದ ಶರೀರವುಳ್ಳ ಧೃತರಾಷ್ಟ್ರನು ಪದೇ ಪದೇ ನಿಟ್ಟುಸಿರಿಟ್ಟನು.
ಮೂಲ ...{Loading}...
ಬೀದಿ ಬೀದಿಗಳೊಳಗೆ ಡಂಗುರ
ನಾದವೆಸೆದವು ಕೇರಿ ಕೇರಿಗೆ
ಕೈದುಕಾರರು ನೆರೆದು ನಿಂದರು ಸೂರೆಗರ ಕೆಡಹಿ
ಸುಯ್ದನಡಿಗಡಿಗೊಲೆದೊಲೆದು ಪರಿ
ಖೇದಶೋಕಜ್ವಲನ ಜನಿತ
ಸ್ವೇದ ಸಲಿಲ ಸ್ತಿಮಿತಕಾಯನು ರಾಯನಿಂತೆಂದ ॥10॥
೦೧೧ ಹೇಳು ಸಞ್ಜಯ ...{Loading}...
ಹೇಳು ಸಂಜಯ ನಮ್ಮ ಭಾಗ್ಯದ
ಶಾಳಿವನ ಫಲವಾಯ್ತಲಾ ಕೈ
ಮೇಳವಿಸಿದನೆ ಕರ್ಣನಮರಸ್ತ್ರೀ ಕದಂಬದಲಿ
ಹೇಳು ಹೇಳೆನ್ನಾಣೆ ಮಾತಿನ
ಜಾಳಿಗೆಯ ಮರೆ ಬೇಡ ಕುರುಪತಿ
ಕಾಳೆಗದೊಳಸ್ತಮಿಸಿದನೆ ನುಡಿಯಂಜಬೇಡೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೇಳು ಸಂಜಯ, ನಮ್ಮ ಗದ್ದೆಯಲ್ಲಿ ಭಾಗ್ಯದ ಬತ್ತ ಫಲಿಸಿತೆ? ಕರ್ಣನು ದೇವಲೋಕದ ಸ್ತ್ರೀ ಸಮೂಹದೊಂದಿಗೆ ಕೈಗೂಡಿಸಿದನೆ? ಹೇಳು, ಹೇಳು ನನ್ನಾಣೆ. ಮಾತಿನ ಬಲೆಯ ಮರೆ ಬೇಡ. ಕುರುಪತಿ ಕಾಳಗದಲ್ಲಿ ಅಸ್ತಮಿಸಿದನೆ? ಮಾತಾಡು, ಹೆದರಬೇಡ.
ಪದಾರ್ಥ (ಕ.ಗ.ಪ)
ಶಾಲಿವನ-ಬತ್ತದ ಗದ್ದೆ, ಕೈಮೇಳವಿಸು-ಕೈಗೂಡಿಸು, ಜಾಳಿಗೆ-ಬಲೆ
ಮೂಲ ...{Loading}...
ಹೇಳು ಸಂಜಯ ನಮ್ಮ ಭಾಗ್ಯದ
ಶಾಳಿವನ ಫಲವಾಯ್ತಲಾ ಕೈ
ಮೇಳವಿಸಿದನೆ ಕರ್ಣನಮರಸ್ತ್ರೀ ಕದಂಬದಲಿ
ಹೇಳು ಹೇಳೆನ್ನಾಣೆ ಮಾತಿನ
ಜಾಳಿಗೆಯ ಮರೆ ಬೇಡ ಕುರುಪತಿ
ಕಾಳೆಗದೊಳಸ್ತಮಿಸಿದನೆ ನುಡಿಯಂಜಬೇಡೆಂದ ॥11॥
೦೧೨ ಸಾವೆನಾನೆನ್ದಞ್ಜದಿರು ಕ ...{Loading}...
ಸಾವೆನಾನೆಂದಂಜದಿರು ಕ
ರ್ಣಾವಸಾನವ ಕೇಳಿ ತನ್ನಯ
ಜೀವವಿದಲಾ ದೇಹದಲಿ ಬೇರಿನ್ನು ಕೆಲಬರಲಿ
ಸಾವೆನೇ ತಾನಕಟ ಕೌರವ
ಜೀವಿಸಲಿ ಮೇಣಳಿಯಲೆಮಗಿ
ನ್ನಾವ ತೊಡಕಿಲ್ಲಿನ್ನು ವಜ್ರಶರೀರ ತಾನೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾನು ಸಾಯುತ್ತೇನೆ ಎಂದು ಹೆದರಬೇಡ. ಕರ್ಣನ ಸಾವನ್ನು ಕೇಳಿಯೂ ನನ್ನ ಜೀವ ಇದೆಯಲ್ಲಾ ! ಬೇರೆ ಕೆಲವರ ಸಾವನ್ನು ಕೇಳಿ ನಾನು ಸಾಯುವೆನೆ ! ಅಕಟ ! ಕೌರವ ಬದುಕಿರಲಿ ಅಥವಾ ಸಾಯಲಿ ನಮಗೆ ಇನ್ನು ಯಾವ ತೊಡಕೂ ಇಲ್ಲ. ಇನ್ನು ನಾನು ವಜ್ರಶರೀರಿ.
ಮೂಲ ...{Loading}...
ಸಾವೆನಾನೆಂದಂಜದಿರು ಕ
ರ್ಣಾವಸಾನವ ಕೇಳಿ ತನ್ನಯ
ಜೀವವಿದಲಾ ದೇಹದಲಿ ಬೇರಿನ್ನು ಕೆಲಬರಲಿ
ಸಾವೆನೇ ತಾನಕಟ ಕೌರವ
ಜೀವಿಸಲಿ ಮೇಣಳಿಯಲೆಮಗಿ
ನ್ನಾವ ತೊಡಕಿಲ್ಲಿನ್ನು ವಜ್ರಶರೀರ ತಾನೆಂದ ॥12॥
೦೧೩ ಘಾಯವಡೆದನು ಭೀಷ್ಮ ...{Loading}...
ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭೀಷ್ಮ ಗಾಯಗೊಂಡಿದ್ದಾನೆ. ಅನಂತರ ವಿದ್ಯಾಗುರು ದ್ರೋಣ ಮರಣ ಹೊಂದಿದ್ದಾನೆ. ಕರ್ಣನು ನಮ್ಮನ್ನು ಈ ಅವಸ್ಥೆಗೆ ತಂದಿದ್ದಾನೆ. ಇನ್ನು ಮಗ ದುರ್ಯೋಧನ ಸಾಯದೆ ಇರುತ್ತಾನೆಯೆ? ಸಾಕು, ಆ ನಾಯನುಡಿ ದುರ್ಯೋಧನನ ಕುರಿತ ಮಾತು ಹಾಗಿರಲಿ. ಕರ್ಣನ ಕೊನೆಯಾಯಿತೆ? ಆ ಶೋಕವನ್ನು ವಿಸ್ತರಿಸಿ ಹೇಳು’.
ಪದಾರ್ಥ (ಕ.ಗ.ಪ)
ತೊಡಬೆ-ತೊಟ್ಟು
ಮೂಲ ...{Loading}...
ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ ॥13॥
೦೧೪ ಸರಳ ಕೊರತೆಯೊ ...{Loading}...
ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸುತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬಾಣಗಳ ಕೊರತೆಯೇ? ಸಾರಥಿಯ ಮತ್ಸರವೇ? ರಥದ ನಾಶವೇ? ಮಹಾ ಧನುಸ್ಸಿನ ಭಂಗವೇ? ಮಹಾಸ್ತ್ರದ ವ್ಯಥೆಯೇ? ಕರ್ಣನ ಸತ್ವವನ್ನು ಹೇಗೆ ಕೆಡಿಸಿದರು? ನಾವು ಶತ್ರುರಾಜರಿಗೆ ಸುಲಭಗೋಚರರೆ? ಪಾಪಗಳು ಹೆಚ್ಚಿ ನಮ್ಮನ್ನು ಕೆಡಿಸಿದವು. ಶಿವಶಿವಾ’ ಎಂದು ಧೃತರಾಷ್ಟ್ರನು ಹೇಳಿದನು.
ಮೂಲ ...{Loading}...
ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸುತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ ॥14॥
೦೧೫ ಹರುಹುಗೆಟ್ಟುದು ತೇರು ...{Loading}...
ಹರುಹುಗೆಟ್ಟುದು ತೇರು ಸಾರಥಿ
ಹುರುಳುಗೆಡಿಸಿಯೆ ನುಡಿದನಂಬಿನ
ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ
ಅರಿವಿಜಯವೆಲ್ಲಿಯದು ನೀವ್ ಮನ
ಬರಡರೈ ನಿಮ್ಮನ್ವಯವ ಸಂ
ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತೇರು ಚಲನೆಗೆಟ್ಟಿತು. ಸಾರಥಿಯು ಹುರುಳುಗೆಡಿಸಿಯೆ ನುಡಿದನು. ಬಾಣಗಳ ಕೊರತೆಯೂ ಮೊದಲಾಯಿತು. ನೀವು ದೈವದ್ರೋಹಿಗಳು. ನಿಮಗೆ ಶತ್ರುವಿಜಯ ಎಲ್ಲಿಯದು? ನೀವು ಮನಸ್ಸಿನ ಬರಡುತನದವರು. ನಿಮ್ಮ ವಂಶವನ್ನು ನಾಶ ಮಾಡಿದಿರಿ. ಸಾಕು’ ಎಂದು ಸಂಜಯ ತಲೆಯನ್ನು ತೂಗಿದನು.
ಪದಾರ್ಥ (ಕ.ಗ.ಪ)
ಹರಹುಗೆಡು-ಚಲನೆಗೆಡು, ಹುರುಳುಗೆಡಿಸು-ಸತ್ತ್ವ ಕುಂದಿಸು
ಮೂಲ ...{Loading}...
ಹರುಹುಗೆಟ್ಟುದು ತೇರು ಸಾರಥಿ
ಹುರುಳುಗೆಡಿಸಿಯೆ ನುಡಿದನಂಬಿನ
ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ
ಅರಿವಿಜಯವೆಲ್ಲಿಯದು ನೀವ್ ಮನ
ಬರಡರೈ ನಿಮ್ಮನ್ವಯವ ಸಂ
ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ ॥15॥
೦೧೬ ಸುರ ನರೋರಗರರಿಯೆ ...{Loading}...
ಸುರ ನರೋರಗರರಿಯೆ ನಾವ್ ಬಾ
ಹಿರರು ಭಂಗಿಸಬೇಡ ಸಾಕಂ
ತಿರಲಿ ಕರ್ಣಾಹವದ ಕರ್ಣಾಮೃತವ ಸುರಿ ಸಾಕು
ಅರಿಗಳಭ್ಯುದಯವನು ನಮ್ಮಪ
ಸರಣವನು ಕಿವಿಯಾರೆ ಕೇಳುವ
ಪರಮ ಸುಕೃತಿಗಳಾವು ನೀ ಹೇಳಂಜಬೇಡೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು, ‘ಮೂರು ಲೋಕಗಳವರಿಗೂ ಗೊತ್ತಿರುವಂತೆಯೇ ನಾವು ಬಾಹಿರರು. ಭಂಗಿಸಬೇಡ ಸಾಕು. ಅದು ಹಾಗಿರಲಿ. ಕರ್ಣನ ಯುದ್ಧದ ಕರ್ಣಾಮೃತವನ್ನು ಹೇಳು ಸಾಕು. ಶತ್ರುಗಳ ಏಳಿಗೆಯನ್ನೂ ನಮ್ಮ ಪತನವನ್ನೂ ಕಿವಿಯಾರೆ ಕೇಳುವ ಪರಮ ಪುಣ್ಯವಂತರು ನಾವು! ಹೆದರಬೇಡ ನೀನು ಹೇಳು’ ಎಂದ.
ಮೂಲ ...{Loading}...
ಸುರ ನರೋರಗರರಿಯೆ ನಾವ್ ಬಾ
ಹಿರರು ಭಂಗಿಸಬೇಡ ಸಾಕಂ
ತಿರಲಿ ಕರ್ಣಾಹವದ ಕರ್ಣಾಮೃತವ ಸುರಿ ಸಾಕು
ಅರಿಗಳಭ್ಯುದಯವನು ನಮ್ಮಪ
ಸರಣವನು ಕಿವಿಯಾರೆ ಕೇಳುವ
ಪರಮ ಸುಕೃತಿಗಳಾವು ನೀ ಹೇಳಂಜಬೇಡೆಂದ ॥16॥
೦೧೭ ಹೇಳಿದನು ಬಳಿಕೆರಡು ...{Loading}...
ಹೇಳಿದನು ಬಳಿಕೆರಡು ಥಟ್ಟಿನೊ
ಳಾಳು ಕುದುರೆಯ ಗಜ ರಥವ ಭೂ
ಪಾಲರಳಿದುಳಿದವರ ಲೆಕ್ಕವನೈದೆ ವಿಸ್ತರಿಸಿ
ಕೇಳು ನಿನ್ನಾತನ ವಿನೋದದ
ಖೂಳ ಬೋಳೆಯತನದಲೊದಗಿದ
ಬಾಳಿಕೆಯ ಬೀಸರವನೆಂದನು ಸಂಜಯನು ನಗುತ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಸಂಜಯನು ಎರಡೂ ಸೈನ್ಯಗಳಲ್ಲಿ ಅಳಿದುಳಿದ ಆಳು, ಕುದುರೆ, ಆನೆ, ರಥ ಮತ್ತು ರಾಜರ ಲೆಕ್ಕವನ್ನು ಚೆನ್ನಾಗಿ ವಿವರಿಸಿ. ‘ನಿನ್ನಾತ(ದುರ್ಯೋಧನ)ನ ವಿನೋದ, ದುಷ್ಟತನ, ಅವಿವೇಕಗಳಿಂದ ಒದಗಿದ ಜೀವನನಾಶದ ವಿವರವನ್ನು ಕೇಳು’ ಎಂದು ನಗುತ್ತಾ ಹೇಳಿದನು.
ಪದಾರ್ಥ (ಕ.ಗ.ಪ)
ಬೀಸರ - ವಿನಾಶ
ಮೂಲ ...{Loading}...
ಹೇಳಿದನು ಬಳಿಕೆರಡು ಥಟ್ಟಿನೊ
ಳಾಳು ಕುದುರೆಯ ಗಜ ರಥವ ಭೂ
ಪಾಲರಳಿದುಳಿದವರ ಲೆಕ್ಕವನೈದೆ ವಿಸ್ತರಿಸಿ
ಕೇಳು ನಿನ್ನಾತನ ವಿನೋದದ
ಖೂಳ ಬೋಳೆಯತನದಲೊದಗಿದ
ಬಾಳಿಕೆಯ ಬೀಸರವನೆಂದನು ಸಂಜಯನು ನಗುತ ॥17॥
೦೧೮ ತೊಡರ ತೆಗೆದರು ...{Loading}...
ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ರಾಯನ ಓಲಗದಲ್ಲಿ ಪರಿವಾರದವರು ಬಿರುದಿನ ಕಂಕಣಗಳನ್ನು ತೆಗೆದರು; ಕೈಯಲ್ಲಿದ್ದ ಕತ್ತಿಯನ್ನು ಅಲುಗಿಸಲೂ ಸಮರ್ಥರಾಗಲಿಲ್ಲ. ದುಗುಡವನ್ನು ಹೊತ್ತ, ಉದ್ದ ಮುಸುಕು ಬಿಗಿದ, ಬೆರಗಿನ, ಬಿಟ್ಟ ಕಣ್ಣುಗಳ ಸೈನಿಕರು ಒಡೆಯನ ಎದುರು ಕುಳಿತುಕೊಳ್ಳಲೂ ಅಗದೆ ಪಕ್ಕದಲ್ಲಿದ್ದ ಕೈದೀವಿಗೆಯ ಮರೆಯಲ್ಲಿ ಅಲುಗಾಡದೆ ಇದ್ದರು.
ಪದಾರ್ಥ (ಕ.ಗ.ಪ)
ತೊಡರು-ಬಿರುದಿನ ಕಂಕಣ , ಅಡಾಯುಧ-ಒಂದು ಬಗೆಯ ಕತ್ತಿ
ಮೂಲ ...{Loading}...
ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ ॥18॥
೦೧೯ ಸಾಲ ಸಾವಿರ ...{Loading}...
ಸಾಲ ಸಾವಿರ ದೀವಿಗೆಯ ಹರಿ
ದಾಳಿಗಳುಕದೆ ನೃಪರ ಮೋರೆಗ
ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಲ್ಲಿ
ಹೇಳಲೇನದ ಬಹಳ ದುಗುಡದ
ಪಾಳೆಯವೊ ನಿನ್ನಾತನೋಲಗ
ಶಾಲೆಯೋ ನಾವರಿಯೆವೆಂದನು ಸಂಜಯನು ನೃಪಗೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಾವಿರ ದೀವಿಗೆ ಸಾಲಿನ ಬೆಳಕಿನ ಪ್ರವಾಹದ ದಾಳಿಗೆ ಹೆದರದ ಕತ್ತಲೆಯು ಅಲ್ಲಲ್ಲಿ ರಾಜರ ಮುಖಸಮೂಹಗಳಲ್ಲಿ ಆಶ್ರಯವನ್ನು ಪಡೆದು ನಿಂತಿತು. ಅದನ್ನು ಏನು ಹೇಳಲಿ? ಅದು ತುಂಬು ದುಗುಡದ ಪಾಳೆಯವೊ? ನಿನ್ನವನ ಆಸ್ಥಾನವೊ? ನಾವು ಅರಿಯೆವು’ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಮೂಲ ...{Loading}...
ಸಾಲ ಸಾವಿರ ದೀವಿಗೆಯ ಹರಿ
ದಾಳಿಗಳುಕದೆ ನೃಪರ ಮೋರೆಗ
ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಲ್ಲಿ
ಹೇಳಲೇನದ ಬಹಳ ದುಗುಡದ
ಪಾಳೆಯವೊ ನಿನ್ನಾತನೋಲಗ
ಶಾಲೆಯೋ ನಾವರಿಯೆವೆಂದನು ಸಂಜಯನು ನೃಪಗೆ ॥19॥
೦೨೦ ಎಲೆ ಮಿಡುಕದಾಸ್ಥಾನ ...{Loading}...
ಎಲೆ ಮಿಡುಕದಾಸ್ಥಾನ ವೀಳೆಯ
ದೆಲೆಯ ಮಡಿಸುವ ರಭಸವಿಲ್ಲೊಳ
ಗೊಳಗೆ ಸನ್ನೆಗಳೋರೆಗೊರಳುಗಳೌಡುಗಚ್ಚುಗಳ
ಹಳಸಿದಗ್ಗಳಿಕೆಗಳ ಮೀಸಲು
ಗಳೆದ ಬಿರುದಿನ ಮಾನಭಂಗದ
ಕಳವಳದ ಕನಸುಗಳಲಿದ್ದುದು ರಾಯನಾಸ್ಥಾನ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಒಂದು ಎಲೆಯೂ ಅಲುಗದಂತಿದ್ದ ಆಸ್ಥಾನದಲ್ಲಿ ವೀಳೆಯದ ಎಲೆಯ ಮಡಿಸುವ ರಭಸವಿರಲಿಲ್ಲ. ಅಲ್ಲಿ ಅಗ್ಗಳಿಕೆ, ಮೀಸಲು ಮತ್ತು ಮಾನವನನ್ನು ಕಳೆದುಕೊಂಡ ಭಾವದಲ್ಲಿ ಇದ್ದ ಭಟರು ಒಳಗೊಳಗಿನ ಸನ್ನೆಗಳು, ಓರೆಗೊರಳುಗಳು, ಔಡುಗಚ್ಚುಗಳು ಇವುಗಳ ಮೂಲಕ ಮಾತ್ರವೇ ವ್ಯವಹರಿಸುತ್ತಿದ್ದರು.
ಮೂಲ ...{Loading}...
ಎಲೆ ಮಿಡುಕದಾಸ್ಥಾನ ವೀಳೆಯ
ದೆಲೆಯ ಮಡಿಸುವ ರಭಸವಿಲ್ಲೊಳ
ಗೊಳಗೆ ಸನ್ನೆಗಳೋರೆಗೊರಳುಗಳೌಡುಗಚ್ಚುಗಳ
ಹಳಸಿದಗ್ಗಳಿಕೆಗಳ ಮೀಸಲು
ಗಳೆದ ಬಿರುದಿನ ಮಾನಭಂಗದ
ಕಳವಳದ ಕನಸುಗಳಲಿದ್ದುದು ರಾಯನಾಸ್ಥಾನ ॥20॥
೦೨೧ ಕೆತ್ತು ಕೊಣ್ಡಿರಲೇಕೆ ...{Loading}...
ಕೆತ್ತು ಕೊಂಡಿರಲೇಕೆ ನೀವಿ
ನ್ನುತ್ತರಾಯಿಗಳೆಮ್ಮ ಭಾಗ್ಯದ
ಬಿತ್ತು ಹುರಿದರೆ ಬಿರುದ ಭಟರಿದ್ದೇನಮಾಡುವರು
ಮೆತ್ತಿದಂಬಿನ ಮೆಯ್ಯ ಭೀಷ್ಮನು
ಹೊತ್ತ ಕೈದುವ ಬಿಸುಟ ಕಳಶಜ
ನುತ್ತಮಿಕೆಗಳ ಮೆರೆದರೆಂದನು ಕೌರವರ ರಾಯ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ರಾಯನು, ‘ಏಕೆ ಅವಿತುಕೊಂಡಿದ್ದೀರಿ? ನೀವೇನು ನಮ್ಮ ವಿಜಯಕ್ಕೆ ಜವಾಬ್ದಾರರೆ? ನಮ್ಮ ಭಾಗ್ಯದ ಬೀಜವೇ ಹುರಿದು ಹೋಗಿರುವಾಗ ಬಿರುದಿನ ಭಟರಿದ್ದರೂ ಏನು ಮಾಡಲು ಸಾಧ್ಯ? ಬಾಣಗಳು ಮೆತ್ತಿರುವ ಮೈಯಿನ ಭೀಷ್ಮ ಮತ್ತು ಹಿಡಿದಿದ್ದ ಆಯುಧವನ್ನು ಬಿಸುಟ ದ್ರೋಣರು ತಮ್ಮ ಉತ್ತಮಿಕೆಗಳನ್ನು ಮೆರೆದರು’ ಎಂದನು.
ಪದಾರ್ಥ (ಕ.ಗ.ಪ)
ಕೆತ್ತುಕೊಂಡಿರು-ಅವಿತುಕೊಂಡಿರು, ಉತ್ತರಾಯಿ-ಜವಾಬ್ದಾರಿ
ಮೂಲ ...{Loading}...
ಕೆತ್ತು ಕೊಂಡಿರಲೇಕೆ ನೀವಿ
ನ್ನುತ್ತರಾಯಿಗಳೆಮ್ಮ ಭಾಗ್ಯದ
ಬಿತ್ತು ಹುರಿದರೆ ಬಿರುದ ಭಟರಿದ್ದೇನಮಾಡುವರು
ಮೆತ್ತಿದಂಬಿನ ಮೆಯ್ಯ ಭೀಷ್ಮನು
ಹೊತ್ತ ಕೈದುವ ಬಿಸುಟ ಕಳಶಜ
ನುತ್ತಮಿಕೆಗಳ ಮೆರೆದರೆಂದನು ಕೌರವರ ರಾಯ ॥21॥
೦೨೨ ಬಿಗಿದ ತಿಮಿರದ ...{Loading}...
ಬಿಗಿದ ತಿಮಿರದ ಕೆಚ್ಚು ಸೂರ್ಯನ
ಸೊಗಡು ಹೊಯ್ದರೆ ಮುರಿಯದೇ ಕಾ
ಳೆಗಕೆ ಕರ್ಣನ ಕೈದು ಭಂಡಾರಿಸಿದುದಿನ್ನಬರ
ತೆಗೆಸುವೆವು ನಾಳಿನಲಿ ನಿಮ್ಮಯ
ಮೊಗದ ದುಗುಡದ ದಡ್ಡಿಯನು ಮೈ
ದೆಗೆಯದಿರಿ ಕಲಿಯಾಗಿಯೆಂದನು ನೃಪತಿ ಸುಭಟರಿಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನು ಸುಭಟರಿಗೆ, ‘ಕಟ್ಟಿರುವ ಕತ್ತಲಿನ ಪ್ರತಾಪವು ಸೂರ್ಯನ ಕಿರಣಗಳು ಸೋಕಿದ ಕೂಡಲೇ ನಾಶವಾಗುವುದಿಲ್ಲವೆ? ಈವರೆಗೆ ಕರ್ಣನು ತನ್ನ ಪ್ರತಾಪವನ್ನು ತೋರಿಸಿಲ್ಲ. ನಿಮ್ಮ ಮುಖದ ದುಗುಡದ ಮುಸುಕನ್ನು ನಾಳೆ ತೆರೆಸುತ್ತೇವೆ. ಹಿಮ್ಮೆಟ್ಟದಿರಿ, ಕಲಿಗಳಾಗಿರಿ’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ದಡ್ಡಿ-ತೆರೆ, ಮುಸುಕು
ಭಂಡಾರಿಸು-ಮುಚ್ಚಿಡು
ಮೂಲ ...{Loading}...
ಬಿಗಿದ ತಿಮಿರದ ಕೆಚ್ಚು ಸೂರ್ಯನ
ಸೊಗಡು ಹೊಯ್ದರೆ ಮುರಿಯದೇ ಕಾ
ಳೆಗಕೆ ಕರ್ಣನ ಕೈದು ಭಂಡಾರಿಸಿದುದಿನ್ನಬರ
ತೆಗೆಸುವೆವು ನಾಳಿನಲಿ ನಿಮ್ಮಯ
ಮೊಗದ ದುಗುಡದ ದಡ್ಡಿಯನು ಮೈ
ದೆಗೆಯದಿರಿ ಕಲಿಯಾಗಿಯೆಂದನು ನೃಪತಿ ಸುಭಟರಿಗೆ ॥22॥
೦೨೩ ಜೀಯ ಸಂಶಯವಿಲ್ಲ ...{Loading}...
ಜೀಯ ಸಂಶಯವಿಲ್ಲ ಗುರು ಗಾಂ
ಗೇಯರಳುಕಿದರೇನು ಕಲಿ ರಾ
ಧೇಯನೇ ವಜ್ರಾಂಗಿಯಲ್ಲಾ ನಮ್ಮ ಮೋಹರಕೆ
ರಾಯ ನೀ ಪತಿಕರಿಸಿದರೆ ಚ
ಕ್ರಾಯುಧನ ಚಾತುರ್ಯ ಕೊಳ್ಳದು
ಜೀಯ ಕರ್ಣನ ಮುಂದೆಯೆಂದುದು ನಿಖಿಳ ಪರಿವಾರ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಒಡೆಯಾ, ಅನುಮಾನವಿಲ್ಲ. ಗುರು, ಭೀಷ್ಮರು ಅಳುಕಿದರೆ ಏನಂತೆ? ನಮ್ಮ ಯುದ್ಧಕ್ಕೆ ವೀರನಾದ ಕರ್ಣನೇ ವಜ್ರದ ಕವಚವಲ್ಲವೆ? ರಾಜನೇ, ನೀನು ಮನಸ್ಸುಮಾಡಿದರೆ ಕರ್ಣನ ಮುಂದೆ ಚಕ್ರಾಯುಧ(ಕೃಷ್ಣ)ನ ಚಾತುರ್ಯ ನಡೆಯುವುದಿಲ್ಲ’ ಎಂದು ಇಡೀ ಪರಿವಾರ ಹೇಳಿತು.
ಮೂಲ ...{Loading}...
ಜೀಯ ಸಂಶಯವಿಲ್ಲ ಗುರು ಗಾಂ
ಗೇಯರಳುಕಿದರೇನು ಕಲಿ ರಾ
ಧೇಯನೇ ವಜ್ರಾಂಗಿಯಲ್ಲಾ ನಮ್ಮ ಮೋಹರಕೆ
ರಾಯ ನೀ ಪತಿಕರಿಸಿದರೆ ಚ
ಕ್ರಾಯುಧನ ಚಾತುರ್ಯ ಕೊಳ್ಳದು
ಜೀಯ ಕರ್ಣನ ಮುಂದೆಯೆಂದುದು ನಿಖಿಳ ಪರಿವಾರ ॥23॥
೦೨೪ ಬೇರೆ ತನಗಗ್ಗಳಿಕೆಯೋಲೆಯ ...{Loading}...
ಬೇರೆ ತನಗಗ್ಗಳಿಕೆಯೋಲೆಯ
ಕಾರತನವೇ ರಾಯ ಮನವೊಲಿ
ದೇರಿಸಿದರೇರುವುದು ದೊರೆ ಮನಮುರಿಯೆ ಕುಂದುವುದು
ತೋರಿ ನುಡಿದರೆ ಭೀಷ್ಮ ದ್ರೋಣರು
ಜಾರಿಸಿದ ರಣವೆಮಗೆ ಸದರವೆ
ದೂರುವವರಾವಲ್ಲವೆಂದನು ಭಾನುಸುತ ನಗುತ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣನು ನಗುತ್ತ, ’ ನನಗೆ ಈ ಅಗ್ಗಳಿಕೆಯ ಓಲೆಯಕಾರತನ ಬೇರೆ ಬೇಕೆ? ರಾಜನು ಇಷ್ಟಪಟ್ಟು ಇರಿಸಿದ ಸ್ಥಾನದಲ್ಲಿ ಅದು ಯಾವ ಸ್ಥಾನವೇ ಇರಲಿ, ನಾನು ಅಲ್ಲಿಯೆ ಇರುತ್ತೇನೆ. ನಿಜವಾಗಿ ನೋಡಿದರೆ ಭೀಷ್ಮ ದ್ರೋಣರು ಗೆಲ್ಲಲಾಗದ ಈ ಯುದ್ಧವು ನನಗೆ ಸುಲಭವೆ? ನಾನು ದೂರುವವನಲ’್ಲ ಎಂದು ಹೇಳಿದನು.
ಮೂಲ ...{Loading}...
ಬೇರೆ ತನಗಗ್ಗಳಿಕೆಯೋಲೆಯ
ಕಾರತನವೇ ರಾಯ ಮನವೊಲಿ
ದೇರಿಸಿದರೇರುವುದು ದೊರೆ ಮನಮುರಿಯೆ ಕುಂದುವುದು
ತೋರಿ ನುಡಿದರೆ ಭೀಷ್ಮ ದ್ರೋಣರು
ಜಾರಿಸಿದ ರಣವೆಮಗೆ ಸದರವೆ
ದೂರುವವರಾವಲ್ಲವೆಂದನು ಭಾನುಸುತ ನಗುತ ॥24॥
೦೨೫ ಸಾಕದನ್ತಿರಲಿನ್ನು ಥಟ್ಟಿಂ ...{Loading}...
ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರುನದೀಸುತರ
ಸಾಕಿ ಸಲಹಿದೆ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಪಾಚಾರ್ಯನು, ‘ಸಾಕು. ಅದು ಹಾಗಿರಲಿ. ಪುಣ್ಯವಂತರಾದ ಭೀಷ್ಮರ, ದ್ರೋಣರ ಮಾತು ಏತಕ್ಕೆ? ಸೇನೆಗೆ ಶೂರರನ್ನು ನೇಮಿಸು. ಕರ್ಣನನ್ನು ನೀನು ಸಾಕಿ ಸಲಹಿರುವೆ. ಸ್ಫರ್ಧೆ ಏಕೆ ? ಗುಣದೊಳಗೆ ಈತ ಸೇನಾಸಮೂಹದ ಭಾರವನ್ನು ಹೊರುವುದಕ್ಕೆ ಸಮರ್ಥನಾಗಿದ್ದಾನೆ’ ಎಂದನು.
ಪದಾರ್ಥ (ಕ.ಗ.ಪ)
ಅಸ್ತೋಕಪುಣ್ಯ - ಮಹಾ ಪುಣ್ಯವಂತ,
ಮೂಲ ...{Loading}...
ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರುನದೀಸುತರ
ಸಾಕಿ ಸಲಹಿದೆ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ ॥25॥
೦೨೬ ಎಮ್ಮ ತೋರಿಸಬೇಡ ...{Loading}...
ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಮ್ಮನ್ನು ಕೇಳುವುದು ಬೇಡ. ನಿಮ್ಮ ಮನಸ್ಸಿಗೆ ಬರುವುದನ್ನು ನಿರಾತಂಕವಾಗಿ ಮಾಡುವುದು. ನಮ್ಮ ಹೃದಯದ ವ್ಯಥೆಯನ್ನು ನಾವು ಇನ್ನು ಆಡಿ ಏನು ಪ್ರಯೋಜನ? ನಮ್ಮ ಪುಣ್ಯದ ಬೆಳೆಗಳು ಒಣಗಿದರೆ ಪ್ರತಿಭಟಿಸಿ ಮಾಡುವುದೇನು? ಕರ್ಣನು ನಮ್ಮ ದಳವಾಯಿ’ ಎಂದು ಅಶ್ವತ್ಥಾಮನು ದುರ್ಯೋಧನನಿಗೆ ಹೇಳಿದನು.
ಮೂಲ ...{Loading}...
ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ ॥26॥
೦೨೭ ಆ ಮಹಾರಥ ...{Loading}...
ಆ ಮಹಾರಥ ಭೀಷ್ಮನೇ ಸ್ವೇ
ಚ್ಛಾಮರಣಿಯಾಚಾರ್ಯಚಾಪ
ವ್ಯೋಮಕೇಶನು ಹೊಕ್ಕು ಕಾಣರು ಹಗೆಗೆ ಹರಿವುಗಳ
ಆ ಮಹಾ ನಾರಾಯಣಾಸ್ತ್ರದ
ಸೀಮೆ ಸೀದುದು ಮಿಕ್ಕ ಭಟರು
ದ್ದಾಮರೇ ಸಾಕಿನ್ನು ಸೇನಾಪತಿಯ ಮಾಡೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆ ಮಹಾವೀರ ಭೀಷ್ಮನೇ ಸ್ವೇಚ್ಛಾಮರಣಿ. ಬಿಲ್ಲುವಿದ್ಯೆಯಲ್ಲಿ ಆಚಾರ್ಯನು ಶಿವನಂತೆ ಇದ್ದವನು. ಅಂಥವರಿಗೂ ಶತ್ರುಗಳನ್ನು ಭೇದಿಸಿ ಒಳಹೊಗುವ ಮಾರ್ಗವನ್ನು ಕಾಣಲಾಗಲಿಲ್ಲ. ಆ ಮಹಾನಾರಾಯಣಾಸ್ತ್ರವೇ ವಿಫಲವಾದ ಮೇಲೆ ಸುಟ್ಟಿರುವಾಗ ಮಿಕ್ಕ ಯೋಧರು ಉದ್ದಾಮರೇ? ಸಾಕು. ಇನ್ನು ಸೇನಾಪತಿಯನ್ನು ನಿಯಮಿಸು’ ಎಂದು ಅಶ್ವತ್ಥಾಮನು ಹೇಳಿದನು.
ಪದಾರ್ಥ (ಕ.ಗ.ಪ)
ನೋಡಿ : ದ್ರೋಣಪರ್ವ : ನಾರಾಯಣಾಸ್ತ್ರ (13-19)
ಮೂಲ ...{Loading}...
ಆ ಮಹಾರಥ ಭೀಷ್ಮನೇ ಸ್ವೇ
ಚ್ಛಾಮರಣಿಯಾಚಾರ್ಯಚಾಪ
ವ್ಯೋಮಕೇಶನು ಹೊಕ್ಕು ಕಾಣರು ಹಗೆಗೆ ಹರಿವುಗಳ
ಆ ಮಹಾ ನಾರಾಯಣಾಸ್ತ್ರದ
ಸೀಮೆ ಸೀದುದು ಮಿಕ್ಕ ಭಟರು
ದ್ದಾಮರೇ ಸಾಕಿನ್ನು ಸೇನಾಪತಿಯ ಮಾಡೆಂದ ॥27॥
೦೨೮ ಕರಸಿದನು ಭೂಸುರರನೌದುಂ ...{Loading}...
ಕರಸಿದನು ಭೂಸುರರನೌದುಂ
ಬರದ ಮಣಿ ಮಡಿವರ್ಗ ದೂರ್ವಾಂ
ಕುರ ಸಿತಾಕ್ಷತ ಧವಳಸರ್ಷಪ ವರಫಲಾವಳಿಯ
ತರಿಸಿದನು ಹೊಂಗಳಶ ತತಿಯಲಿ
ವರ ನದೀವಾರಿಗಳನಾಡಂ
ಬರದ ಲಗ್ಗೆಯಲೊದರಿದವು ನಿಸ್ಸಾಳಕೋಟಿಗಳು ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು, ಬ್ರಾಹ್ಮಣರನ್ನು ಕರಸಿದನು. ಔದುಂಬರದ ಮಣಿ, ರೇಷ್ಮೆ ವಸ್ತ್ರಗಳು ಎಳೆಯ ಗರಿಕೆಯ , ಬಿಳಿಯ ಅಕ್ಷತೆ, ಬಿಳಿಯ ಸಾಸುವೆ, ಜೊತೆಗೆ ಶ್ರೇಷ್ಠವಾದ ಹಣ್ಣುಗಳನ್ನೂ, ಹೊನ್ನಿನ ಕಳಶಸಮೂಹದಲ್ಲಿ ಶ್ರೇಷ್ಠವಾದ ನದಿಗಳ ನೀರನ್ನೂ ತರಿಸಿದನು. ಆಡಂಬರದ ಕೋಲಾಹಲದಲ್ಲಿ ಕೋಟಿವಾದ್ಯಗಳು ಮೊಳಗಿದವು.
ಪದಾರ್ಥ (ಕ.ಗ.ಪ)
ಔದುಂಬರ-ಅತ್ತಿಯ ಮರ
ಸರ್ಷಪ-ಸಾಸುವೆ
ಮೂಲ ...{Loading}...
ಕರಸಿದನು ಭೂಸುರರನೌದುಂ
ಬರದ ಮಣಿ ಮಡಿವರ್ಗ ದೂರ್ವಾಂ
ಕುರ ಸಿತಾಕ್ಷತ ಧವಳಸರ್ಷಪ ವರಫಲಾವಳಿಯ
ತರಿಸಿದನು ಹೊಂಗಳಶ ತತಿಯಲಿ
ವರ ನದೀವಾರಿಗಳನಾಡಂ
ಬರದ ಲಗ್ಗೆಯಲೊದರಿದವು ನಿಸ್ಸಾಳಕೋಟಿಗಳು ॥28॥
೦೨೯ ವಿರಚಿಸಿತು ಪಟ್ಟಾಭಿಷೇಕೋ ...{Loading}...
ವಿರಚಿಸಿತು ಪಟ್ಟಾಭಿಷೇಕೋ
ತ್ಕರುಷ ಮಂತ್ರಾಕ್ಷತೆಯ ಮಳೆಗಳ
ಕರೆದರವನೀಸುರರು ಜಯರವಮೇಘಘೋಷದಲಿ
ಗುರುಸುತಾದಿ ಮಹಾಪ್ರಧಾನರು
ದರುಶನವ ನೀಡಿದರು ಕರ್ಣನ
ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಟ್ಟಾಭಿಷೇಕವು ವೈಭವದಿಂದ ನಡೆಯಿತು. ಬ್ರಾಹ್ಮಣರು ಜಯರವದ ಮೇಘಘೋಷದಲ್ಲಿ ಮಂತ್ರಾಕ್ಷತೆಯ ಮಳೆಗರೆದರು. ಆಶ್ವತ್ಥಾಮ ಮೊದಲಾದ ಮಹಾಪ್ರಧಾನರು ದರ್ಶನವನ್ನು ನೀಡಿದರು. ಹೊಗಳುಭಟ್ಟರ ಸಮುದ್ರದಲ್ಲಿ ಕರ್ಣನ ಬಿರುದುಗಳ ಉಬ್ಬರದ ಅಲೆಗಳು ಹೆಚ್ಚಾದವು.
ಪದಾರ್ಥ (ಕ.ಗ.ಪ)
ಉಬ್ಬಟೆ-ಉಬ್ಬರ
ಮೂಲ ...{Loading}...
ವಿರಚಿಸಿತು ಪಟ್ಟಾಭಿಷೇಕೋ
ತ್ಕರುಷ ಮಂತ್ರಾಕ್ಷತೆಯ ಮಳೆಗಳ
ಕರೆದರವನೀಸುರರು ಜಯರವಮೇಘಘೋಷದಲಿ
ಗುರುಸುತಾದಿ ಮಹಾಪ್ರಧಾನರು
ದರುಶನವ ನೀಡಿದರು ಕರ್ಣನ
ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ ॥29॥
೦೩೦ ಅರಳಿತರಸನ ವದನ ...{Loading}...
ಅರಳಿತರಸನ ವದನ ಶಕುನಿಯ
ಹರುಷಮಿಗೆ ದುಶ್ಯಾಸನಂಗು
ಬ್ಬರಿಸೆ ರೋಮಾವಳಿ ವಿಕರ್ಣಾದಿಗಳ ಮನ ನಲಿಯೆ
ಗುರುಜ ಕೃಪ ಕೃತವರ್ಮ ಶಲ್ಯಾ
ದ್ಯರಿಗೆ ಹೂಸಕದೊಲಹು ಮಿಗಿಲಾ
ಯ್ತಿರುಳು ಕರ್ಣಗೆ ಪಟ್ಟವಾಯಿತು ಭೂಪ ಕೇಳ್ ಎಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದುರ್ಯೋಧನನ ಮುಖವು ಅರಳಿತು. ಶಕುನಿಯ ಹರ್ಷ ಹೆಚ್ಚಾಯಿತು. ದುಶ್ಶಾಸನಿಗೆ ರೋಮಾವಳಿ ಉಬ್ಬರಿಸಿತು. ವಿಕರ್ಣ ಮೊದಲಾದವರ ಮನಸ್ಸು ನಲಿಯಿತು. ಆದರೆ, ಅಶ್ವತ್ಥಾಮ, ಕೃಪ, ಕೃತವರ್ಮ, ಶಲ್ಯ ಮೊದಲಾದವರಿಗೆ ತೋರಿಕೆಯ ಪ್ರೀತಿ ಹೆಚ್ಚಿನದಾಯಿತು. ಹೀಗೆ ಕರ್ಣನಿಗೆ ಇರುಳು ಪಟ್ಟವಾಯಿತು. ಭೂಪನೇ ಕೇಳು’ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹೂಸಕ-ತೋರಿಕೆ
ಮೂಲ ...{Loading}...
ಅರಳಿತರಸನ ವದನ ಶಕುನಿಯ
ಹರುಷಮಿಗೆ ದುಶ್ಯಾಸನಂಗು
ಬ್ಬರಿಸೆ ರೋಮಾವಳಿ ವಿಕರ್ಣಾದಿಗಳ ಮನ ನಲಿಯೆ
ಗುರುಜ ಕೃಪ ಕೃತವರ್ಮ ಶಲ್ಯಾ
ದ್ಯರಿಗೆ ಹೂಸಕದೊಲಹು ಮಿಗಿಲಾ
ಯ್ತಿರುಳು ಕರ್ಣಗೆ ಪಟ್ಟವಾಯಿತು ಭೂಪ ಕೇಳೆಂದ ॥30॥