೦೦೦ ಸೂ ರಾಯಕಟಕವ ...{Loading}...
ಸೂ. ರಾಯಕಟಕವ ಬೆದರಿಸಿದ ನಾ
ರಾಯಣಾಸ್ತ್ರದ ಬಾಧೆಯನು ಕಮ
ಲಾಯತಾಂಬಕ ನಿಲಿಸಿ ಸಂತೈಸಿದನು ಪಾಂಡವರ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ರಾಜ ಧರ್ಮಜನ ಸೈನ್ಯವನ್ನು ಬೆದರಿಸಿದ ನಾರಾಯಣಾಸ್ತ್ರದ ಆಪತ್ತನ್ನು ಶ್ರೀ ಕೃಷ್ಣನು ನಿವಾರಿಸಿ ಪಾಂಡವರನ್ನು ಸಂತೈಸಿದನು.
ಮೂಲ ...{Loading}...
ಸೂ. ರಾಯಕಟಕವ ಬೆದರಿಸಿದ ನಾ
ರಾಯಣಾಸ್ತ್ರದ ಬಾಧೆಯನು ಕಮ
ಲಾಯತಾಂಬಕ ನಿಲಿಸಿ ಸಂತೈಸಿದನು ಪಾಂಡವರ
೦೦೧ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಗುರು
ಬೀಳುಕೊಟ್ಟನು ದೇಹವನು ನ
ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ
ಮೇಲೆ ಬಂದುದು ಕಷ್ಟವರಿ ಭೂ
ಪಾಲರಿಗೆ ಕೇಳಿದನು ಖಳ ಪಾಂ
ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ಧೃತರಾಷ್ಟ್ರನೇ ಕೇಳು. ಗುರು ದ್ರೋಣನು ದೇಹವನ್ನು ತ್ಯಜಿಸಿದನು. ನಮ್ಮ ಪಕ್ಷದ ಶೂರರ ಹಣೆ ಬರಹವೇನು ? ನಮ್ಮದು ಸೋಲಿನ ತವರು ಮನೆ ಅಲ್ಲವೇ ? ನಂತರ ಶತ್ರುರಾಜರಿಗೆ ಕಷ್ಟವೊಂದು ಒದಗಿತು. ಅದನ್ನು ಕೇಳು, ಪಾಂಚಾಲ ಸುತ ನೀಚ ಧೃಷ್ಟದ್ಯುಮ್ನನು ಅಡಾಯುಧವನ್ನು ಝಳಪಿಸುತ್ತಾ ಅಲ್ಲಿಗೆ ಬಂದನು.
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಗುರು
ಬೀಳುಕೊಟ್ಟನು ದೇಹವನು ನ
ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ
ಮೇಲೆ ಬಂದುದು ಕಷ್ಟವರಿ ಭೂ
ಪಾಲರಿಗೆ ಕೇಳಿದನು ಖಳ ಪಾಂ
ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ ॥1॥
೦೦೨ ಐದಿ ಮುನ್ದಲೆವಿಡಿದು ...{Loading}...
ಐದಿ ಮುಂದಲೆವಿಡಿದು ಬಾಗಿಸಿ
ಕೊಯ್ದನಾತನ ಕೊರಳನೆಡದಲಿ
ಹೊಯ್ದು ಮುರಿದನು ಬರಿಯಲಪ್ಪಳಿಸಿದನು ಬೆನ್ನೆಲುವ
ಕೈದಣಿಯೆ ಕಡಿಖಂಡಮಯವೆನೆ
ಹೊಯ್ದು ರಥದಲಿ ಕೆದರಿ ಜಡಿದನ
ಡಾಯ್ದವನು ಕಡುಗೋಪದಲಿ ನೋಡಿದನು ರಿಪುಶಿರವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂದು, ದ್ರೋಣನ ತಲೆಯ ಮುಂಭಾಗ ಹಿಡಿದು ಬಾಗಿಸಿ ಆತನ ಕೊರಳನ್ನು ಕತ್ತರಿಸಿದನು. ಶರೀರದ ಎಡಭಾಗವನ್ನು ಹೊಡೆದು ಮಗ್ಗುಲು ಮಾಡಿ ಬೆನ್ನೆಲುಬನ್ನು ಅಪ್ಪಳಿಸಿ ಮುರಿದನು. ಕೈಗಳಿಗೆ ತೃಪ್ತಿಯಾಗುವಂತೆ ದೇಹವನ್ನು ಚೂರು ಚೂರಾಗುವಂತೆ ಹೊಡೆದು ಆ ಚೂರುಗಳನ್ನು ರಥದಲ್ಲಿ ಕೆದರಿ ಅಡಾಯುಧವನ್ನು ರಭಸದಿಂದ ಬೀಸಿ ಅತಿಕೋಪದಿಂದ ಆ ಶತ್ರುವಿನ ರುಂಡವನ್ನೇ ನೋಡಿದನು.
ಮೂಲ ...{Loading}...
ಐದಿ ಮುಂದಲೆವಿಡಿದು ಬಾಗಿಸಿ
ಕೊಯ್ದನಾತನ ಕೊರಳನೆಡದಲಿ
ಹೊಯ್ದು ಮುರಿದನು ಬರಿಯಲಪ್ಪಳಿಸಿದನು ಬೆನ್ನೆಲುವ
ಕೈದಣಿಯೆ ಕಡಿಖಂಡಮಯವೆನೆ
ಹೊಯ್ದು ರಥದಲಿ ಕೆದರಿ ಜಡಿದನ
ಡಾಯ್ದವನು ಕಡುಗೋಪದಲಿ ನೋಡಿದನು ರಿಪುಶಿರವ ॥2॥
೦೦೩ ಎಲೆಲೆ ಪಾತಕಿ ...{Loading}...
ಎಲೆಲೆ ಪಾತಕಿ ಹೆಣನ ಹೊಯ್ದರೆ
ಬಲುಗಡಿಯ ನೀನೆಂಬರೇ ಸುಡು
ಹೊಲೆಯರಿದಕಂಗೈಸುವರೆ ತಾ ರಾಜಸೂನು ಗಡ
ಅಳಿದನಾದರೆ ನಿನ್ನ ಭಾಗ್ಯವು
ಉಳಿದಡೀತನ ಮಗನು ನಿನ್ನಯ
ಕುಲದ ತಲೆ ಚೆಂಡಾಡಿದಲ್ಲದೆ ಬರಿದೆ ಬಿಡನೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆಲೆ ಪಾಪಿ, ಹೆಣವನ್ನು ಹೊಡೆದರೆ ನಿನ್ನನ್ನು ಬಹುವೀರ ಎನ್ನುವರೇ ? ಪಾಪಿಗಳೂ ಕೂಡ ಈ ಕಾರ್ಯವನ್ನು ಬಯಸುವರೇ? ನೀನು ರಾಜಪುತ್ರ ಅಲ್ಲವೆ ? ದ್ರೋಣನು ನಾಶವಾದನು, ಅಶ್ವತ್ಥಾಮನು ಮರಣಿಸಿದ್ದರೆ ಅದು ನಿನ್ನ ಭಾಗ್ಯ. ಉಳಿದಿರುವುದಾದರೆ ಅವನು ನಿನ್ನ ಕುಲದ ತಲೆಯನ್ನು ಚೆಂಡಾಡಿದಲ್ಲದೆ ಸುಮ್ಮನೆ ಬಿಡುವುದಿಲ್ಲ” ಎಂದು ದ್ರೋಣನ ಸಾರಥಿಯು ಹೇಳಿದನು.
ಪದಾರ್ಥ (ಕ.ಗ.ಪ)
ಬಲುಗಡಿಯ-ಶೂರ, ಪರಾಕ್ರಮಿ
ಮೂಲ ...{Loading}...
ಎಲೆಲೆ ಪಾತಕಿ ಹೆಣನ ಹೊಯ್ದರೆ
ಬಲುಗಡಿಯ ನೀನೆಂಬರೇ ಸುಡು
ಹೊಲೆಯರಿದಕಂಗೈಸುವರೆ ತಾ ರಾಜಸೂನು ಗಡ
ಅಳಿದನಾದರೆ ನಿನ್ನ ಭಾಗ್ಯವು
ಉಳಿದಡೀತನ ಮಗನು ನಿನ್ನಯ
ಕುಲದ ತಲೆ ಚೆಂಡಾಡಿದಲ್ಲದೆ ಬರಿದೆ ಬಿಡನೆಂದ ॥3॥
೦೦೪ ಎನ್ದ ಸೂತನ ...{Loading}...
ಎಂದ ಸೂತನ ಬಾಯ ಹೊರಕ
ಯ್ಯಿಂದ ಹೊಯ್ದನು ಹಡಪದವರನು
ಹಿಂದಣಾಪ್ತರನಖಿಳ ಚಮರಚ್ಛತ್ರಧಾರಿಗಳ
ಮುಂದುವರಿದೊಡೆ ತಿವಿದು ಮುರಿದನು
ಮಂದಮತಿ ಬಳಿಕವನ ಸುಡು ಸುಡ
ಲೆಂದು ಧೃಷ್ಟದ್ಯುಮ್ನನನು ನೆರೆ ಬೈದುದಖಿಳಜನ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಿದ ಸಾರಥಿಯ ಬಾಯನ್ನು ಕೈಯ ಮೇಲ್ಭಾಗದಿಂದ ಹೊಡೆದನು. ಸೇವಕರನ್ನು, ಹಿಂದಿದ್ದ ಆಪ್ತರನ್ನು, ಚಮರ ಛತ್ರಧಾರಿಗಳನ್ನು ಮುನ್ನುಗ್ಗಿ ಬಂದವರನ್ನು ತಿವಿದು ಕೊಂದನು. ಅನಂತರ ಬುದ್ಧಿಗೇಡಿಯಾದ ಧೃಷ್ಟದ್ಯುಮ್ನನನ್ನು ಸುಡು ಸುಡು ಎಂದು ಎಲ್ಲಾ ಜನರೂ ಬೈದರು.
ಮೂಲ ...{Loading}...
ಎಂದ ಸೂತನ ಬಾಯ ಹೊರಕ
ಯ್ಯಿಂದ ಹೊಯ್ದನು ಹಡಪದವರನು
ಹಿಂದಣಾಪ್ತರನಖಿಳ ಚಮರಚ್ಛತ್ರಧಾರಿಗಳ
ಮುಂದುವರಿದೊಡೆ ತಿವಿದು ಮುರಿದನು
ಮಂದಮತಿ ಬಳಿಕವನ ಸುಡು ಸುಡ
ಲೆಂದು ಧೃಷ್ಟದ್ಯುಮ್ನನನು ನೆರೆ ಬೈದುದಖಿಳಜನ ॥4॥
೦೦೫ ಕಡಿಕುಗಳನಾಯ್ದರಸಿ ರಥದೊಳು ...{Loading}...
ಕಡಿಕುಗಳನಾಯ್ದರಸಿ ರಥದೊಳು
ಗುಡಿಸಿ ಸಿಂಧವನೆತ್ತಿ ಸಾರಥಿ
ತುಡುಕಿ ವಾಘೆಯ ಮುರುಹಿ ಮರಳಿಚಿ ರಥದ ಕುದುರೆಗಳ
ತಡೆಯದಶ್ವತ್ಥಾಮನಲ್ಲಿಗೆ
ನಡೆದು ಬರುತಿರೆ ಕಂಡು ಮನದಲಿ
ಕಡು ನಿರೋಧವ ಹಿಡಿದು ಚಿಂತಿಸುತಿರ್ದನಾ ದ್ರೌಣಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನ ದೇಹದ ಕತ್ತರಿಸಿದ ಚೂರುಗಳನ್ನು ಆಯ್ದು ಹುಡುಕಿ ರಥದಲ್ಲಿ ಒಂದೆಡೆ ಸೇರಿಸಿ, ಬಾವುಟವನ್ನು ಎತ್ತಿ ಸಾರಥಿಯು ಆತುರದಿಂದ ಲಗಾಮನ್ನು ಹಿಡಿದು, ರಥದ ಕುದುರೆಗಳನ್ನು ಹಿಂತಿರುಗಿಸಿದನು, ಎಲ್ಲಿಯೂ ನಿಲ್ಲದೆ ನೇರವಾಗಿ ಅಶ್ವತ್ಥಾಮನಿರುವಲ್ಲಿಗೆ ನಡೆದು ಬರುತ್ತಿರುವಾಗ ಅದನ್ನು ಕಂಡು ಅಶ್ವತ್ಥಾಮನು ಮನದಲ್ಲಿ ಅತ್ಯಂತ ವ್ಯಥೆಯಿಂದ ಚಿಂತಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಕಡಿಕು-ತುಂಡು, ನಿರೋಧ -ವ್ಯಥೆ
ಮೂಲ ...{Loading}...
ಕಡಿಕುಗಳನಾಯ್ದರಸಿ ರಥದೊಳು
ಗುಡಿಸಿ ಸಿಂಧವನೆತ್ತಿ ಸಾರಥಿ
ತುಡುಕಿ ವಾಘೆಯ ಮುರುಹಿ ಮರಳಿಚಿ ರಥದ ಕುದುರೆಗಳ
ತಡೆಯದಶ್ವತ್ಥಾಮನಲ್ಲಿಗೆ
ನಡೆದು ಬರುತಿರೆ ಕಂಡು ಮನದಲಿ
ಕಡು ನಿರೋಧವ ಹಿಡಿದು ಚಿಂತಿಸುತಿರ್ದನಾ ದ್ರೌಣಿ ॥5॥
೦೦೬ ಏನಿದಚ್ಚರಿ ಕೌರವೇನ್ದ್ರನ ...{Loading}...
ಏನಿದಚ್ಚರಿ ಕೌರವೇಂದ್ರನ
ಸೇನೆ ತಲೆಕೆಳಗಾಗುತಿದೆ ರಿಪು
ಸೇನೆ ಬೊಬ್ಬಿರಿದಾರುತಿದೆ ಮಡಿದಾತನಾವವನೊ
ಸೇನೆಗೊಡೆಯನು ಬೊಪ್ಪನಿದು ತಾ
ನೇನು ರಥವೇ ಬರಿದೆ ಬರುತಿದೆ
ಹಾನಿ ಜನಕಂಗಾಯ್ತೊ ಶಿವ ಶಿವ ಎಂದನಾ ದ್ರೌಣಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏನಿದಾಶ್ಚರ್ಯ ? ಕೌರವೇಂದ್ರನ ಸೇನೆ ತಲೆ ಕೆಳಗಾಗುತ್ತಿದೆ. ಶತ್ರು ಸೇನೆ ಅಟ್ಟಹಾಸದಿಂದ ಕೂಗುತ್ತಿದೆ. ರಣದಲ್ಲಿ ಮಡಿದಾತನು ಆರ ಕಡೆಯವನೋ ? ಸೇನೆಗೆ ಒಡೆಯನು (ಸೇನಾಪತಿ) ತಂದೆಯಾದ ದ್ರೋಣನು. ಈ ರಥ ಖಾಲಿಯಾಗಿ ಬರುತ್ತಿದೆಯಲ್ಲಾ! ತಂದೆಗೇನಾದರೂ ಹಾನಿ ಸಂಭವಿಸಿತೋ ಶಿವ ಶಿವಾ” ಎಂದು ಅಶ್ವತ್ಥಾಮನು ಚಿಂತಿಸಿದನು.
ಮೂಲ ...{Loading}...
ಏನಿದಚ್ಚರಿ ಕೌರವೇಂದ್ರನ
ಸೇನೆ ತಲೆಕೆಳಗಾಗುತಿದೆ ರಿಪು
ಸೇನೆ ಬೊಬ್ಬಿರಿದಾರುತಿದೆ ಮಡಿದಾತನಾವವನೊ
ಸೇನೆಗೊಡೆಯನು ಬೊಪ್ಪನಿದು ತಾ
ನೇನು ರಥವೇ ಬರಿದೆ ಬರುತಿದೆ
ಹಾನಿ ಜನಕಂಗಾಯ್ತೊ ಶಿವ ಶಿವ ಎಂದನಾ ದ್ರೌಣಿ ॥6॥
೦೦೭ ತನ್ದು ಸಾರಥಿ ...{Loading}...
ತಂದು ಸಾರಥಿ ರಥವನೀತನ
ಮುಂದೆ ನಿಲಿಸಿದ ಬಿದ್ದನಂಘ್ರಿಯೊ
ಳಂದು ಗೋಳಿಟ್ಟೊರಲಿದುದು ಕಳಶಜನ ಪರಿವಾರ
ತಂದೆಯೈದನೆ ಚಾಪವೇದ ಮು
ಕುಂದನೈದನೆ ನಿನ್ನ ಕಾಣಲು
ಬಂದನಯ್ಯನನಪ್ಪಿಕೊಳು ಮಾತಾಡಿ ನೋಡೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಥಿಯು ರಥವನ್ನು ಅಶ್ವತ್ಥಾಮನ ಮುಂದೆ ತಂದು ನಿಲ್ಲಿಸಿ, ಆತನ ಪಾದಗಳ ಮೇಲೆ ಬಿದ್ದನು. ಅಂದು ದ್ರೋಣನ ಪರಿವಾರ ಗೋಳಿಟ್ಟು ದುಃಖಿಸಿತು. “ತಂದೆ ಹೊರಟು ಹೋದನೇ ? ಚಾಪವೇದ ಮುಕುಂದನು ಹೊರಟು ಹೋದನೇ ? ನಿನ್ನನ್ನು ಕಾಣಲು ಬಂದ ನಿನ್ನ ತಂದೆಯನ್ನು ಅಪ್ಪಿಕೋ ಮಾತಾಡಿ ನೋಡು” ಎಂದು ಸಾರಥಿಯು ವಿಲಪಿಸಿದನು.
ಮೂಲ ...{Loading}...
ತಂದು ಸಾರಥಿ ರಥವನೀತನ
ಮುಂದೆ ನಿಲಿಸಿದ ಬಿದ್ದನಂಘ್ರಿಯೊ
ಳಂದು ಗೋಳಿಟ್ಟೊರಲಿದುದು ಕಳಶಜನ ಪರಿವಾರ
ತಂದೆಯೈದನೆ ಚಾಪವೇದ ಮು
ಕುಂದನೈದನೆ ನಿನ್ನ ಕಾಣಲು
ಬಂದನಯ್ಯನನಪ್ಪಿಕೊಳು ಮಾತಾಡಿ ನೋಡೆಂದ ॥7॥
೦೦೮ ಕೂಡೆ ಹರಿಹಞ್ಚಾದ ...{Loading}...
ಕೂಡೆ ಹರಿಹಂಚಾದ ತಂದೆಯ
ಗೂಡ ನೋಡದ ಮುನ್ನ ಕಂಬನಿ
ಮೂಡಿ ಮುಳುಗಿದವಾಲಿ ಕಾಣವು ಪಿತೃಕಳೇವರವ
ನೋಡಲೆಳಸದ ಮುನ್ನ ಕಿಡಿಗಳ
ಝಾಡಿಯನು ಕಣ್ಣುಗುಳಿದವು ಮಿಗೆ
ನೋಡಿದಶ್ವತ್ಥಾಮ ಕಾಣನು ಮುಂದೆ ಪರಬಲವ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಚೂರು ಚೂರಾದ ತಂದೆಯ ದೇಹವನ್ನು ನೋಡುವುದಕ್ಕೆ ಮೊದಲೇ ಕಣ್ಣುಗಳಲ್ಲಿ ನೀರು ತುಂಬಿ ತಂದೆಯ ಮೃತದೇಹ ಕಾಣದಾಯಿತು. ನೋಡುವುದಕ್ಕೆ ಮೊದಲೇ ಕಣ್ಣುಗಳು ಪ್ರಖರವಾದ ಕಿಡಿಗಳನ್ನು ಉಗುಳಿದವು. ಉಗ್ರದೃಷ್ಟಿಯಿಂದ ನೋಡಿದ ಅಶ್ವತ್ಥಾಮನಿಗೆ ತನ್ನ ಮುಂದೆ ಶತ್ರು ಸೈನ್ಯವು ಕಾಣಲಿಲ್ಲ.
ಪದಾರ್ಥ (ಕ.ಗ.ಪ)
ಗೂಡು-ದೇಹ
ಮೂಲ ...{Loading}...
ಕೂಡೆ ಹರಿಹಂಚಾದ ತಂದೆಯ
ಗೂಡ ನೋಡದ ಮುನ್ನ ಕಂಬನಿ
ಮೂಡಿ ಮುಳುಗಿದವಾಲಿ ಕಾಣವು ಪಿತೃಕಳೇವರವ
ನೋಡಲೆಳಸದ ಮುನ್ನ ಕಿಡಿಗಳ
ಝಾಡಿಯನು ಕಣ್ಣುಗುಳಿದವು ಮಿಗೆ
ನೋಡಿದಶ್ವತ್ಥಾಮ ಕಾಣನು ಮುಂದೆ ಪರಬಲವ ॥8॥
೦೦೯ ಅದ್ದನಳಲಿನ ಜಲಧಿಯೊಳು ...{Loading}...
ಅದ್ದನಳಲಿನ ಜಲಧಿಯೊಳು ಮುರಿ
ದೆದ್ದು ಕೋಪಾನಳನ ಝಳದಲಿ
ಬಿದ್ದು ನನೆದನು ನೀರಿನಲಿ ಕಾಹೇರಿ ಕಿಚ್ಚಿನಲಿ
ಗೆದ್ದುದುದಕವನನಲನನಲನ
ನದ್ದಿತುದಕವದೊಂದನೊಂದನು
ಕದ್ದುವೆರಡರ ಹೋರಟೆಗೆ ಗುರುಸೂನು ಬೆಂಡಾದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ದುಃಖದ ಸಮುದ್ರದಲ್ಲಿ ಅದ್ದಿಹೋದನು. ಅದರಿಂದ ಎದ್ದು ಕೋಪವೆಂಬ ಬೆಂಕಿಯ ಝಳದಲ್ಲಿ ಬಿದ್ದನು. ದುಃಖವೆಂಬ ಕಣ್ಣೀರಿನಲ್ಲಿ ನೆನೆದು, ಕ್ರೋಧವೆಂಬ ಕಿಚ್ಚಿನಲ್ಲಿ ಆವೇಶಗೊಂಡನು. ಕಣ್ಣೀರನ್ನು ಬೆಂಕಿಯು ಗೆದ್ದಿತು. ಬೆಂಕಿಯನ್ನು ಕಣ್ಣೀರು ತೋಯಿಸಿತು. ಒಂದು ಮತ್ತೊಂದನ್ನು ಕದ್ದುವು. ಇವೆರಡರ ಹೋರಾಟದಲ್ಲಿ ಅಶ್ವತ್ಥಾಮನು ಬಳಲಿದನು.
ಮೂಲ ...{Loading}...
ಅದ್ದನಳಲಿನ ಜಲಧಿಯೊಳು ಮುರಿ
ದೆದ್ದು ಕೋಪಾನಳನ ಝಳದಲಿ
ಬಿದ್ದು ನನೆದನು ನೀರಿನಲಿ ಕಾಹೇರಿ ಕಿಚ್ಚಿನಲಿ
ಗೆದ್ದುದುದಕವನನಲನನಲನ
ನದ್ದಿತುದಕವದೊಂದನೊಂದನು
ಕದ್ದುವೆರಡರ ಹೋರಟೆಗೆ ಗುರುಸೂನು ಬೆಂಡಾದ ॥9॥
೦೧೦ ಕೆದರಿ ಹೊರಳುವ ...{Loading}...
ಕೆದರಿ ಹೊರಳುವ ಸಾರಥಿಯನೆ
ತ್ತಿದನು ರಣವೃತ್ತಾಂತವನು ಕೇ
ಳಿದನು ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
ಒದೆದನಳಲನು ರೋಮ ಹರುಷವ
ಹೊದೆದು ಹೊರೆ ಹೆಚ್ಚಿದನು ಕಾಹೇ
ರಿದನು ಕಲಿ ಮನವಳುಕಿ ತಗ್ಗಿತು ರೋಷಭಾವದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಳಗೆ ಬಿದ್ದು ಹೊರಳುವ ಸಾರಥಿಯನ್ನು ಮೇಲೆತ್ತಿದನು. ಯುದ್ಧದ ಸಮಾಚಾರವನ್ನು ಕೇಳಿದನು. ಶಮೆ, ಸಹನೆ, ವಿವೇಕವನ್ನು ಪಕ್ಕಕ್ಕೆ ನೂಕಿದನು. ದುಃಖವನ್ನು ಪಕ್ಕಕ್ಕೆ ಒದ್ದು, ರೋಮರೋಮದಲ್ಲಿ ಉತ್ಸಾಹವನ್ನು ಹೆಚ್ಚಿಸಿಕೊಂಡನು. ಪರಾಕ್ರಮ ಹೆಚ್ಚಾಗಿ ರೋಷಭಾವದಲ್ಲಿ ಅಶ್ವತ್ಥಾಮನ ಮನದ ಅಳುಕು ಕಡಿಮೆಯಾಯಿತು.
ಮೂಲ ...{Loading}...
ಕೆದರಿ ಹೊರಳುವ ಸಾರಥಿಯನೆ
ತ್ತಿದನು ರಣವೃತ್ತಾಂತವನು ಕೇ
ಳಿದನು ಶಮೆ ಸೈರಣೆವಿವೇಕವ ನೂಕಿದನು ಸೆರೆಗೆ
ಒದೆದನಳಲನು ರೋಮ ಹರುಷವ
ಹೊದೆದು ಹೊರೆ ಹೆಚ್ಚಿದನು ಕಾಹೇ
ರಿದನು ಕಲಿ ಮನವಳುಕಿ ತಗ್ಗಿತು ರೋಷಭಾವದಲಿ ॥10॥
೦೧೧ ಚಟುಳಕೋಪಾಗ್ನಿಯಲಿ ನಾಸಾ ...{Loading}...
ಚಟುಳಕೋಪಾಗ್ನಿಯಲಿ ನಾಸಾ
ಪುಟದ ಸುಯ್ಲಲಿ ವಿಸ್ಫುಲಿಂಗೋ
ತ್ಕಟಸಮಾಧಿಗಳಿದ್ದಿಲಲಿ ನಿಗ್ರಹಕಟಾಹದಲಿ
ಪಟುತರದ ಬಾಹುಪ್ರತಾಪದ
ಪುಟವನೆತ್ತದೆ ಮಾಣನೆನಲು
ತ್ಕಟಿಸುತಿರ್ದುದು ರೌದ್ರವೀರಾಭ್ಯುದಯ ಸನ್ನಾಹ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡಿಯುವ ಕೋಪಾಗ್ನಿಯಲ್ಲಿ, ಮೂಗಿನ ಹೊಳ್ಳೆಗಳ ತೀವ್ರ ಉಸಿರಾಟದಲ್ಲಿ, ತೀವ್ರವಾದ ಕ್ರೋಧ, ಸೇಡು ಮೊದಲಾದ ಭಾವನೆಗಳೆಂಬ ಕಿಡಿಗಳಿಂದ ಅಶ್ವತ್ಥಾಮನ ಸಂಯಮದ ಕಡಾಯಿ ತುಂಬಿ ಹೋಗಿತ್ತು. ಬಲಿಷ್ಠ ಬಾಹು ಪ್ರತಾಪವನ್ನು ಪುಟಗೊಳಿಸದೆ ಬಿಡುವುದಿಲ್ಲ ಎನ್ನುವಂತೆ ಆತನ ರೌದ್ರ, ವೀರ್ಯಗಳು ತೀವ್ರವಾಗುತ್ತಿತ್ತು.
ಮೂಲ ...{Loading}...
ಚಟುಳಕೋಪಾಗ್ನಿಯಲಿ ನಾಸಾ
ಪುಟದ ಸುಯ್ಲಲಿ ವಿಸ್ಫುಲಿಂಗೋ
ತ್ಕಟಸಮಾಧಿಗಳಿದ್ದಿಲಲಿ ನಿಗ್ರಹಕಟಾಹದಲಿ
ಪಟುತರದ ಬಾಹುಪ್ರತಾಪದ
ಪುಟವನೆತ್ತದೆ ಮಾಣನೆನಲು
ತ್ಕಟಿಸುತಿರ್ದುದು ರೌದ್ರವೀರಾಭ್ಯುದಯ ಸನ್ನಾಹ ॥11॥
೦೧೨ ನೊನ್ದ ಜವನೋ ...{Loading}...
ನೊಂದ ಜವನೋ ಜಗವನುರುಹಲು
ಬಂದ ಶಿವನೋ ಕಂಬದಿಂದೊಗೆ
ತಂದ ರೌದ್ರಾಟೋಪ ಮಾನವರೂಪ ಕೇಸರಿಯೊ
ತಂದೆಯಳಲಿಗನಿರವು ವಿಶ್ವವ
ನೊಂದು ನಿಮಿಷಕೆ ಸುಡುವುದೋ ಹಾ
ಯೆಂದುದಮರಾನೀಕವೆಲೆ ಭೂಪಾಲ ಕೇಳ್ ಎಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೊಂದಿರುವ ಯಮನೋ, ಜಗತ್ತನ್ನು ಸುಡಲು ಬಂದ ಶಿವನೋ, ಕಂಬದಿಂದ ಹೊರಗೆ ಬಂದ ರೌದ್ರಾಟೋಪದಿಂದ ಕೂಡಿದ ಮಾನವ ರೂಪದ ಕೇಸರಿಯೋ - ಎಂಬಂತೆ ಅಶ್ವತ್ಥಾಮನು ಕಾಣಿಸಿದನು. ತಂದೆಯನ್ನು ಅಗಲಿದವನ ದುಃಖಸ್ಥಿತಿಯು ಇಡೀ ಜಗತ್ತನ್ನು ಒಂದು ನಿಮಿಷಕ್ಕೆ ಸುಡುವುದೋ ? ಹಾ.. ಎಂದು ದೇವತೆಗಳ ಸಮೂಹವು ನಿಟ್ಟುಸಿರಿಟ್ಟಿತು. ಎಲೆ ರಾಜನೇ ಕೇಳು” ಎಂದು ಸಂಜಯನು ಹೇಳಿದನು.
ಮೂಲ ...{Loading}...
ನೊಂದ ಜವನೋ ಜಗವನುರುಹಲು
ಬಂದ ಶಿವನೋ ಕಂಬದಿಂದೊಗೆ
ತಂದ ರೌದ್ರಾಟೋಪ ಮಾನವರೂಪ ಕೇಸರಿಯೊ
ತಂದೆಯಳಲಿಗನಿರವು ವಿಶ್ವವ
ನೊಂದು ನಿಮಿಷಕೆ ಸುಡುವುದೋ ಹಾ
ಯೆಂದುದಮರಾನೀಕವೆಲೆ ಭೂಪಾಲ ಕೇಳೆಂದ ॥12॥
೦೧೩ ಮುರುಹಿದನು ಮೀಸೆಯನು ...{Loading}...
ಮುರುಹಿದನು ಮೀಸೆಯನು ಕಣ್ಣುಗ
ಳರಳಿದವು ಹೊಗೆ ಸುತ್ತಿ ಸುಯ್ಲಲಿ
ಸುರಿದುದುರಿ ಹುಬ್ಬುಗಳನುರೆ ಬಿಗಿದೌಡನೊಡೆಯೊತ್ತಿ
ಬೆರಳ ತುದಿಯಲಿ ಬೊಬ್ಬಿರಿದು ಹರಿ
ಶರಕೆ ಕೈನೀಡಿದನು ಕಲ್ಪದ
ಹರನವೊಲು ಹರರೂಪ ಹೊಂಗಿದನಧಿಕ ರೋಷದಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೀಸೆಯನ್ನು ತಿರುಗಿಸಿದನು. ಕಣ್ಣುಗಳಲ್ಲಿ ಕೋಪ ಕೆರಳಿತು. ದ್ವೇಷದ ಹೊಗೆ ಸುತ್ತಿ ನಿಟ್ಟುಸಿರಿನಲ್ಲಿ ಬೆಂಕಿ ಸುರಿಯಿತು. ಹುಬ್ಬುಗಳನ್ನು ಬಿಗಿದು, ದವಡೆ ಒತ್ತಿ ಆರ್ಭಟಿಸಿ, ಬೆರಳ ತುದಿಯಿಂದ ನಾರಾಯಣಾಸ್ತ್ರವನ್ನು ಹೊರತೆಗೆದನು. ಪ್ರಳಯಕಾಲದ ರೌದ್ರರೂಪಿ ಶಿವನಂತೆ ಹರರೂಪಿಯಾಗಿ ಅಧಿಕ ರೋಷದಿಂದ ಉತ್ಸಾಹಗೊಂಡನು.
ಮೂಲ ...{Loading}...
ಮುರುಹಿದನು ಮೀಸೆಯನು ಕಣ್ಣುಗ
ಳರಳಿದವು ಹೊಗೆ ಸುತ್ತಿ ಸುಯ್ಲಲಿ
ಸುರಿದುದುರಿ ಹುಬ್ಬುಗಳನುರೆ ಬಿಗಿದೌಡನೊಡೆಯೊತ್ತಿ
ಬೆರಳ ತುದಿಯಲಿ ಬೊಬ್ಬಿರಿದು ಹರಿ
ಶರಕೆ ಕೈನೀಡಿದನು ಕಲ್ಪದ
ಹರನವೊಲು ಹರರೂಪ ಹೊಂಗಿದನಧಿಕ ರೋಷದಲಿ ॥13॥
೦೧೪ ದನುಜಹರ ಮನ್ತ್ರವನು ...{Loading}...
ದನುಜಹರ ಮಂತ್ರವನು ಮನದಲಿ
ನೆನೆದು ಕೈನೀಡಿದನು ತುದಿಯಂ
ಬಿನಲಿ ತುರುಗಿದ ಕಿಡಿಯ ಬಿರುಕೇಸರಿಯ ಧಾಳಿಗಳ
ತನಿವೊಗರ ಬಲುವೊಗೆಯ ಹೊರಳಿಯ
ಕನಕರಸ ರೇಖಾವಳಿಯ ಮೈ
ಮಿನುಗುಗಳ ಹೊಂಗರಿಯ ನಾರಾಯಣ ಮಹಾಶರಕೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದನುಜಹರ ಮಂತ್ರವನ್ನು ಮನದಲ್ಲಿ ಜಪಿಸಿ, ಬಾಣದ ತುದಿಯಲ್ಲಿ ಕಿಡಿಯನ್ನು ಕಾರುವ, ವೇಗವಾದ, ಸೊಕ್ಕಿದ ಸಿಂಹದ ದಾಳಿಯಂತಿರುವ ತುದಿಯನ್ನು ಹೊಂದಿದ್ದ, ಹೆಚ್ಚಾದ ಕಾಂತಿಯ, ಸುರುಳಿ ಸುರುಳಿಯಾಗಿ ಹೊಗೆಯನ್ನು ಸೂಸುವ, ಬಂಗಾರದ ರೇಖೆಗಳ, ಪ್ರಕಾಶಮಾನವಾಗಿ ಮಿನುಗುವ, ಬಂಗಾರದ ಗರಿಯುಳ್ಳ ನಾರಾಯಣ ಮಹಾಶರಕ್ಕೆ ಕೈನೀಡಿದನು.
ಮೂಲ ...{Loading}...
ದನುಜಹರ ಮಂತ್ರವನು ಮನದಲಿ
ನೆನೆದು ಕೈನೀಡಿದನು ತುದಿಯಂ
ಬಿನಲಿ ತುರುಗಿದ ಕಿಡಿಯ ಬಿರುಕೇಸರಿಯ ಧಾಳಿಗಳ
ತನಿವೊಗರ ಬಲುವೊಗೆಯ ಹೊರಳಿಯ
ಕನಕರಸ ರೇಖಾವಳಿಯ ಮೈ
ಮಿನುಗುಗಳ ಹೊಂಗರಿಯ ನಾರಾಯಣ ಮಹಾಶರಕೆ ॥14॥
೦೧೫ ಪ್ರಳಯ ಮೇಘವನೊಡೆವ ...{Loading}...
ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಳತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳ್ ಎಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪ್ರಳಯಕಾಲದ ಮೇಘವನ್ನು ಒಡೆಯುವ ರವಿಮಂಡಲದ ಸಹಸ್ರ ರಶ್ಮಿಯೋ, ವಿಶಾಲವಾದ ಜಗತ್ತನ್ನು ಬೆಚ್ಚಿ ಬೀಳುವಂತೆ ಮಾಡುವ ಶಿವನ ಹಣೆಗಣ್ಣಿನ ದೀಪ್ತಿಯೋ, ಕೋಪಿಸಿದ ನರಕೇಸರಿಯ ದಾಡೆಯ ಥಳ ಥಳದ ಹೊಳಪೋ ? ಮಹಾಸ್ತ್ರದ ಹೊಳೆಯುವ ಬೆಳಗೋ ಎಂಬಂತೆ ಆ ಅಸ್ತ್ರದ ಪ್ರಖರತೆ ಅದ್ಭುತವಾಯಿತು. ಆ ಅಸ್ತ್ರಕ್ಕೆ ಹೆಸರಿಡಲು ಯಾರು ಬಲ್ಲರು ? ರಾಜನೇ ಕೇಳು” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಳತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ ॥15॥
೦೧೬ ಸರಳ ಚೂಳಿಯ ...{Loading}...
ಸರಳ ಚೂಳಿಯ ಝಳದೊಳಗೆ ಸಾ
ವಿರ ನಿದಾಘದ ಸೂರ್ಯರುಬ್ಬಟೆ
ಕರಗಿ ಹೋಯಿತು ಬಾಯಿಧಾರೆಯ ಕಿಡಿಯ ಧಾಳಿಯಲಿ
ಬರಸಿಡಿಲ ಶತಕೋಟಿ ಸೀದವು
ನಿರಿವೊಗರ ಕಬ್ಬೊಗೆಯ ಕಿಡಿಯಲಿ
ನೆರೆದವಂತ್ಯದ ಮೇಘವೆನೆ ಝಗಝಗಿಸಿತಮಳಾಸ್ತ್ರ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಣದ ತುದಿಯ ರಭಸದ ಕಿಡಿಯ ಧಾರೆಯಲ್ಲಿ ಬೇಸಿಗೆ ಕಾಲದ ಸಾವಿರ ಸೂರ್ಯರ ಆರ್ಭಟ ಕರಗಿಹೋಯಿತು. ಶತಕೋಟಿ ಬರಸಿಡಿಲುಗಳು ಸೀದವು. ಪ್ರಕಾಶಮಾನವಾಗಿ ಹೊಳೆಯುವ ಕಪ್ಪು ಹೊಗೆಯ ಕಿಡಿಯಲ್ಲಿ ಪ್ರಳಯ ಕಾಲದ ಮೋಡಗಳು ಗುಂಪು ಸೇರಿದವು ಎನ್ನುವಂತೆ ಅಮಳಾಸ್ತ್ರವು ಝಗಝಗಿಸಿತು.
ಪದಾರ್ಥ (ಕ.ಗ.ಪ)
ಚೂಳಿ-ತುದಿ, ಕೊನೆ,
ನಿದಾಘ-ಬೇಸಿಗೆ,
ಮೂಲ ...{Loading}...
ಸರಳ ಚೂಳಿಯ ಝಳದೊಳಗೆ ಸಾ
ವಿರ ನಿದಾಘದ ಸೂರ್ಯರುಬ್ಬಟೆ
ಕರಗಿ ಹೋಯಿತು ಬಾಯಿಧಾರೆಯ ಕಿಡಿಯ ಧಾಳಿಯಲಿ
ಬರಸಿಡಿಲ ಶತಕೋಟಿ ಸೀದವು
ನಿರಿವೊಗರ ಕಬ್ಬೊಗೆಯ ಕಿಡಿಯಲಿ
ನೆರೆದವಂತ್ಯದ ಮೇಘವೆನೆ ಝಗಝಗಿಸಿತಮಳಾಸ್ತ್ರ ॥16॥
೦೧೭ ಒಳಗೆ ಜಲಚರವೊದರೆ ...{Loading}...
ಒಳಗೆ ಜಲಚರವೊದರೆ ಕುದಿದುದು
ಜಲಧಿ ಕಾದುದು ಧರಣಿ ಸೀದುದು
ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ
ನೆಲಕೆ ದಾಡೆಯ ಕೊಟ್ಟು ಕುಂಭ
ಸ್ಥಳವ ತೆಗೆದವು ದಿಗಿಭತತಿ ಹೆಡೆ
ನೆಳಿಯೆ ಮಣಿಗಳಲಾಂತನವನಿಯನುರಗಪತಿಯಂದು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಮಲಾಸ್ತ್ರದ ಪರಿಣಾಮವೆಂದರೆ ಒಳಗೆ ಜಲಚರಗಳು ಒದರಿದವು. ಸಮುದ್ರ ಕುದಿಯಿತು. ಭೂಮಿ ಕಾದು ಹೋಯಿತು. ಕುಲಗಿರಿಗಳು ಸೀದವು. ವನಸಮೂಹ ಸಿಡಿದು ಸುಟ್ಟು ಹೋದುವು. ದಿಗ್ಗಜಗಳ ಸಮೂಹ ನೆಲಕ್ಕೆ ದಾಡೆಯನ್ನು ಕೊಟ್ಟು ಕುಂಭ ಸ್ಥಳವನ್ನು ಒರಗಿಸಿದವು. ಆದಿಶೇಷನು ತನ್ನ ಮಣಿಗಳ ಸಹಿತ ಹೆಡೆಯನ್ನು ಮುದುರಿಕೊಂಡು ಭೂಮಿಯನ್ನು ತನ್ನ ಹೆಗಲ ಮೇಲೆ ಧರಿಸಿದನು.
ಮೂಲ ...{Loading}...
ಒಳಗೆ ಜಲಚರವೊದರೆ ಕುದಿದುದು
ಜಲಧಿ ಕಾದುದು ಧರಣಿ ಸೀದುದು
ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ
ನೆಲಕೆ ದಾಡೆಯ ಕೊಟ್ಟು ಕುಂಭ
ಸ್ಥಳವ ತೆಗೆದವು ದಿಗಿಭತತಿ ಹೆಡೆ
ನೆಳಿಯೆ ಮಣಿಗಳಲಾಂತನವನಿಯನುರಗಪತಿಯಂದು ॥17॥
೦೧೮ ಗುಳವ ಕೊಯ್ದಿಳುಹಿದರು ...{Loading}...
ಗುಳವ ಕೊಯ್ದಿಳುಹಿದರು ಕರಿ ಸಂ
ಕುಳದಲಾರೋಹಕರು ಜೋಡನು
ಕಳಚಿ ಬಿಸುಟರು ರಾವುತರು ಹಕ್ಕರಿಕೆಗಳು ಸಹಿತ
ಝಳದ ಝಾಡಿಗೆ ಬೆವರಿ ವಸನಾಂ
ಚಲವ ಗಾಳಿಗೆ ಮೊಗವನೆತ್ತಿದ
ರಳುಕಿ ಕಣ್ ಕೋರೈಸಿ ಮಮ್ಮಲ ಮರುಗಿತುಭಯಬಲ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳ ಸಮೂಹದ ಮಾವುತರು ಕವಚ ಕಳಚಿ ಇಳಿಸಿದರು. ಕುದುರೆ ಸವಾರರು ಹಕ್ಕರಿಕೆಗಳ ಸಮೇತ ಕವಚವನ್ನು ಕಳಚಿ ಬಿಸಾಡಿದರು. ರಭಸದ ಪ್ರಖರತೆಗೆ ಬೆವರಿ ತಮ್ಮ ವಸ್ತ್ರದ ತುದಿಯಿಂದ ಗಾಳಿಯನ್ನು ಬೀಸಿಕೊಳ್ಳಲು ಮುಖವನ್ನು ಎತ್ತಿದರು. ಹೆದರಿ ಕಣ್ಣು ಕೋರೈಸಿ ಉಭಯಸೇನೆ ಮಮ್ಮಲ ಮರುಗಿತು.
ಮೂಲ ...{Loading}...
ಗುಳವ ಕೊಯ್ದಿಳುಹಿದರು ಕರಿ ಸಂ
ಕುಳದಲಾರೋಹಕರು ಜೋಡನು
ಕಳಚಿ ಬಿಸುಟರು ರಾವುತರು ಹಕ್ಕರಿಕೆಗಳು ಸಹಿತ
ಝಳದ ಝಾಡಿಗೆ ಬೆವರಿ ವಸನಾಂ
ಚಲವ ಗಾಳಿಗೆ ಮೊಗವನೆತ್ತಿದ
ರಳುಕಿ ಕಣ್ ಕೋರೈಸಿ ಮಮ್ಮಲ ಮರುಗಿತುಭಯಬಲ ॥18॥
೦೧೯ ಮೇಲ ಜಗವೇಳೋಡಿದವು ...{Loading}...
ಮೇಲ ಜಗವೇಳೋಡಿದವು ಧ್ರುವ
ನಾಲಯಕೆ ನೆಲೆದಪ್ಪಿದಂದು ಗ್ರಹ
ಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು
ಧಾಳಿಡುವ ಸೆಗಳಿಯಲಿ ತಳ ಪಾ
ತಾಳಕದ್ದುದು ಕಮಲಜಾಂಡದ
ಮೇಲಣಾವರಣಾಂಬು ಕುದಿದುದು ಹೇಳಲೇನೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೇಲಿನ ಸಪ್ತಲೋಕಗಳು ಧ್ರುವನಾಲಯಕ್ಕೆ ಓಡಿದುವು. ಅಂದು ಗ್ರಹಗಳ ಗುಂಪು, ನಕ್ಷತ್ರಗಳ ರಾಸಿ ದಾರಿ ತಪ್ಪಿದವು. ಜೋಯಿಸರ ಭವಿಷ್ಯದ ಮಾತು ಸುಳ್ಳಾಯಿತು. ಧಾಳಿಯಿಡುವ ಬೇಸಿಗೆಯಲ್ಲಿ ನೆಲ ಪಾತಾಳಕ್ಕೆ ಅದ್ದಿ ಹೋಯಿತು. ಬ್ರಹ್ಮಾಂಡದ ಮೇಲಣ ತೆರೆಯಾದ ನೀರು ಕುದಿಯಿತು, ಅದನ್ನು ಏನೆಂದು ಹೇಳಲಿ ?”
ಪದಾರ್ಥ (ಕ.ಗ.ಪ)
ಸೆಗಳಿ-ಬೇಸಿಗೆ,
ಮೂಲ ...{Loading}...
ಮೇಲ ಜಗವೇಳೋಡಿದವು ಧ್ರುವ
ನಾಲಯಕೆ ನೆಲೆದಪ್ಪಿದಂದು ಗ್ರಹ
ಮಾಲೆ ತಾರಾರಾಸಿ ಜೋಯಿಸರೋದು ಹುಸಿಯಾಯ್ತು
ಧಾಳಿಡುವ ಸೆಗಳಿಯಲಿ ತಳ ಪಾ
ತಾಳಕದ್ದುದು ಕಮಲಜಾಂಡದ
ಮೇಲಣಾವರಣಾಂಬು ಕುದಿದುದು ಹೇಳಲೇನೆಂದ ॥19॥
೦೨೦ ಒಡೆಯರಿಲ್ಲಾ ಜಗಕೆ ...{Loading}...
ಒಡೆಯರಿಲ್ಲಾ ಜಗಕೆ ಲೋಗರ
ಸುಡುವರೊಪ್ಪಿಸಿ ಕೊಡುವರೇ ನಾ
ನೊಡೆಯ ಫಡ ತಾನೊಡೆಯರೆಂಬರು ಮೂವರೀ ಜಗಕೆ
ನುಡಿಯರೀ ಹೊತ್ತಿನಲಿ ನಮಗಿ
ನ್ನೊಡೆಯರಾರಿನ್ನಾರ ಬಸುರೊಳ
ಗಡಗುವೆವು ಶಿವ ಶಿವ ಎನುತ ತಲ್ಲಣಿಸಿತಮರಗಣ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಜಗತ್ತಿಗೆ ಒಡೆಯರಿಲ್ಲವೇ ? ಸುಟ್ಟು ಭಸ್ಮವಾಗಲು ಜನರನ್ನು ಒಪ್ಪಿಸಿ ಕೊಡುವರೇ ? ಜಗತ್ತಿಗೆ ತಾನು ಒಡೆಯ ತಾನು ಒಡೆಯ ಎಂದು ತ್ರಿಮೂರ್ತಿಗಳು ಸ್ಪರ್ಧಿಸುತ್ತಿರುವರಲ್ಲವೇ ? ಈ ಸಮಯದಲ್ಲಿ ಮಾತನಾಡುತ್ತಿಲ್ಲವಲ್ಲ. ನಮಗೆ ಇನ್ನು ಒಡೆಯರಾರು ? ನಾವು ಯಾರ ಬಸುರಿನಲ್ಲಿ ಅಡಗೋಣ ? ಶಿವಶಿವಾ” ಎನ್ನುತ್ತಾ ದೇವತೆಗಳ ಸಮೂಹ ತಲ್ಲಣಿಸಿತು.
ಮೂಲ ...{Loading}...
ಒಡೆಯರಿಲ್ಲಾ ಜಗಕೆ ಲೋಗರ
ಸುಡುವರೊಪ್ಪಿಸಿ ಕೊಡುವರೇ ನಾ
ನೊಡೆಯ ಫಡ ತಾನೊಡೆಯರೆಂಬರು ಮೂವರೀ ಜಗಕೆ
ನುಡಿಯರೀ ಹೊತ್ತಿನಲಿ ನಮಗಿ
ನ್ನೊಡೆಯರಾರಿನ್ನಾರ ಬಸುರೊಳ
ಗಡಗುವೆವು ಶಿವ ಶಿವ ಎನುತ ತಲ್ಲಣಿಸಿತಮರಗಣ ॥20॥
೦೨೧ ಕವಿದ ಕೌರವ ...{Loading}...
ಕವಿದ ಕೌರವ ಬಲದ ಸುಮ್ಮಾ
ನವನು ತಮ್ಮಂಜಿಕೆಯನಾ ಭೈ
ರವನ ಭಾರಿಯ ಸರಳ ಸೊಗಡಿಗೆ ಬೇವ ಮೂಜಗವ
ಅವರು ಕಂಡರು ಖಾತಿಯಲಿ ಪಾಂ
ಡವರು ಧೃಷ್ಟದ್ಯುಮ್ನನನು ತವ
ತವಗೆ ಬೈದರು ಪಾಪಿ ಲೋಕವ ಕೊಂದೆ ನೀನೆನುತ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಪಕ್ಷದಲ್ಲಿ ಆವರಿಸಿದ ಸಂತೋಷವನ್ನು, ತಮ್ಮ ಸೈನ್ಯದ ಹೆದರಿಕೆಯ ವಾತಾವರಣವನ್ನು, ಆ ಭಯಂಕರನಾದ ಅಶ್ವತ್ಥಾಮನ ಮಹಿಮೆಯುಳ್ಳ ಬಾಣದ ರಭಸಕ್ಕೆ ಬೇಯುತ್ತಿರುವ ಮೂರು ಲೋಕಗಳನ್ನು, ಪಾಂಡವರು ಕಂಡರು. ಕೋಪದಿಂದ ಪಾಪಿ… ಲೋಕವ ಕೊಂದೆ ನೀನೆನುತ ಧೃಷ್ಟದ್ಯುಮ್ನನನ್ನು ತಮ್ಮ ತಮ್ಮಲ್ಲೇ ಬೈದರು.
ಮೂಲ ...{Loading}...
ಕವಿದ ಕೌರವ ಬಲದ ಸುಮ್ಮಾ
ನವನು ತಮ್ಮಂಜಿಕೆಯನಾ ಭೈ
ರವನ ಭಾರಿಯ ಸರಳ ಸೊಗಡಿಗೆ ಬೇವ ಮೂಜಗವ
ಅವರು ಕಂಡರು ಖಾತಿಯಲಿ ಪಾಂ
ಡವರು ಧೃಷ್ಟದ್ಯುಮ್ನನನು ತವ
ತವಗೆ ಬೈದರು ಪಾಪಿ ಲೋಕವ ಕೊಂದೆ ನೀನೆನುತ ॥21॥
೦೨೨ ಅಕಟ ಗುರುಹತ್ಯಾ ...{Loading}...
ಅಕಟ ಗುರುಹತ್ಯಾ ಮಹಾ ಪಾ
ತಕವನೇ ನೆರೆ ಮಾಡಿತಲ್ಲದೆ
ಸಕಲ ಲೋಕದ ಬೇರುಗೊಲೆಗೆಲೆ ಪಾಪಿ ನೀನಾದೈ
ವಿಕಟ ವಿಕ್ರಮ ವಿಸ್ಫುಲಿಂಗ
ಪ್ರಕರದಲಿ ಧಗಧಗಿಸುತಿದೆ ಸಾ
ಯಕವ ನಿಲಿಸಾ ನೀನೆನುತ ಭಂಗಿಸಿತು ಪರಿವಾರ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ…. ಗುರು ಹತ್ಯಾ ಮಹಾಪಾತಕವನ್ನು ಮಾಡಿದ್ದಲ್ಲದೆ ಸಕಲ ಲೋಕದ ಸರ್ವನಾಶಕ್ಕೆ ವಿಶೇಷವಾಗಿ ಪಾಪಿಯಾದ ನೀನೇ ಕಾರಣನಾದೆ. ವೀರ ವಿಕ್ರಮದಿಂದ ಪೌರುಷ ತೋರುತ್ತಾ ಕಿಡಿಗಳನ್ನು ಕಾರುತ್ತಾ ಬಾಣ ಬರುತ್ತಿದೆ. ಧಗಧಗಿಸುತ್ತಿದೆ. ಆ ಬಾಣವನ್ನು ನೀನು ತಡೆ” ಎನ್ನುತ್ತಾ ಪರಿವಾರದ ಜನ ಧೃಷ್ಟದ್ಯಮ್ನನನ್ನು ಅವಮಾನಗೊಳಿಸಿತು.
ಮೂಲ ...{Loading}...
ಅಕಟ ಗುರುಹತ್ಯಾ ಮಹಾ ಪಾ
ತಕವನೇ ನೆರೆ ಮಾಡಿತಲ್ಲದೆ
ಸಕಲ ಲೋಕದ ಬೇರುಗೊಲೆಗೆಲೆ ಪಾಪಿ ನೀನಾದೈ
ವಿಕಟ ವಿಕ್ರಮ ವಿಸ್ಫುಲಿಂಗ
ಪ್ರಕರದಲಿ ಧಗಧಗಿಸುತಿದೆ ಸಾ
ಯಕವ ನಿಲಿಸಾ ನೀನೆನುತ ಭಂಗಿಸಿತು ಪರಿವಾರ ॥22॥
೦೨೩ ಅವನ ಗುರುತನವೇನು ...{Loading}...
ಅವನ ಗುರುತನವೇನು ವಿಪ್ರಾ
ಧಮನಲಾ ಶಸ್ತ್ರೋಪಜೀವನ
ನಿವನು ಋಷಿಯೇ ದ್ರೋಣವಧೆಯನ್ಯಾಯವೇ ತನಗೆ
ಇವನು ತಮ್ಮಯ್ಯನನು ನೆರೆ ಪರಿ
ಭವಿಸನೇ ಚಿಕ್ಕಂದು ನಿಮಗೇ
ಕಿವನನಿರಿದರೆ ಖಾತಿಯೆಂದನು ದ್ರುಪದಸುತ ಮುಳಿದು ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅವನ ಹಿರಿತನವೇನು ? ವಿಪ್ರರಲ್ಲಿ ಅಧಮನಲ್ಲವೇ ? ಶಸ್ತ್ರ ವಿದ್ಯಾಗುರುವಾಗಿ ಜೀವನ ಮಾಡುತ್ತಿರುವ ಇವನು ಋಷಿಯೇ ? ತಾನು ಮಾಡಿದ ದ್ರೋಣವಧೆ ಅನ್ಯಾಯವೇ ? ಇವನು ಚಿಕ್ಕವಯಸ್ಸಿನಲ್ಲಿ ತನ್ನ ತಂದೆಯನ್ನು ಅವಮಾನ ಗೊಳಿಸಲಿಲ್ಲವೇ ? ಇವನನ್ನು ಇರಿದರೆ ನಿಮಗೇಕೆ ಕೋಪ ?” ಎಂದು ದ್ರುಪದ ಸುತನು ಕೋಪದಿಂದ ನುಡಿದನು.
ಮೂಲ ...{Loading}...
ಅವನ ಗುರುತನವೇನು ವಿಪ್ರಾ
ಧಮನಲಾ ಶಸ್ತ್ರೋಪಜೀವನ
ನಿವನು ಋಷಿಯೇ ದ್ರೋಣವಧೆಯನ್ಯಾಯವೇ ತನಗೆ
ಇವನು ತಮ್ಮಯ್ಯನನು ನೆರೆ ಪರಿ
ಭವಿಸನೇ ಚಿಕ್ಕಂದು ನಿಮಗೇ
ಕಿವನನಿರಿದರೆ ಖಾತಿಯೆಂದನು ದ್ರುಪದಸುತ ಮುಳಿದು ॥23॥
೦೨೪ ಅವಗಡಿಸಲೇಕಗ್ರ ಜನ್ಮ ...{Loading}...
ಅವಗಡಿಸಲೇಕಗ್ರ ಜನ್ಮ
ಬ್ರುವನೆ ಕಟಕಾಚಾರ್ಯನೆಲೆ ನೀ
ನವರಿವರನೆಂಬಂತೆ ನುಡಿವರೆ ಗುರುವಲಾ ನಿನಗೆ
ಇವರಿಗೀ ನುಡಿಯುರಿಸಿತೇನಿದು
ಶಿವ ಶಿವಾ ಗುರುನಿಂದೆಯನು ಕೇ
ಳುವರು ನಾವಲ್ಲೆನುತ ಸಾತ್ಯಕಿ ಮುಚ್ಚಿದನು ಕಿವಿಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಿಲ್ವಿದ್ಯಾಗುರು ದ್ರೋಣನು ಬ್ರಾಹ್ಮಣ ಶ್ರೇಷ್ಠನಲ್ಲವೇ ? ಅವನೇನು ತೋರಿಕೆಯ ಬ್ರಾಹ್ಮಣನೇ ? ಕಡೆಗಣಿಸಿದ್ದೇಕೆ ? ಅವಮಾನ ಮಾಡಿದ್ದೇಕೆ ? ನೀನು ಅವರಿವರ ಬಗ್ಗೆ ಹೇಳುವಂತೆ ಹೇಳುವುದೇ ? ನಿನಗೆ ಆತನು ಗುರುವಲ್ಲವೇ ? ಇವರಿಗೆ ಈ ಮಾತು ಹೊಂದುವುದೇ ? ಶಿವ ಶಿವಾ ಗುರುನಿಂದೆಯನ್ನು ನಾವು ಕೇಳಲಾರೆವು” ಎನ್ನುತ್ತಾ ಸಾತ್ಯಕಿ ಕಿವಿಯನ್ನು ಮುಚ್ಚಿಕೊಂಡನು.
ಮೂಲ ...{Loading}...
ಅವಗಡಿಸಲೇಕಗ್ರ ಜನ್ಮ
ಬ್ರುವನೆ ಕಟಕಾಚಾರ್ಯನೆಲೆ ನೀ
ನವರಿವರನೆಂಬಂತೆ ನುಡಿವರೆ ಗುರುವಲಾ ನಿನಗೆ
ಇವರಿಗೀ ನುಡಿಯುರಿಸಿತೇನಿದು
ಶಿವ ಶಿವಾ ಗುರುನಿಂದೆಯನು ಕೇ
ಳುವರು ನಾವಲ್ಲೆನುತ ಸಾತ್ಯಕಿ ಮುಚ್ಚಿದನು ಕಿವಿಯ ॥24॥
೦೨೫ ಗುರುವಿಘಾತಕರಾವು ತಾನತಿ ...{Loading}...
ಗುರುವಿಘಾತಕರಾವು ತಾನತಿ
ಗುರುಪದೋಪಾಸಕನು ತನ್ನನು
ಕರೆದರಾರಿದಕೆಂದು ಧೃಷ್ಟದ್ಯುಮ್ನನುರಿದೇಳೆ
ದುರುಳತನವಾರೊಡನೆಯೋ ಬಾ
ಹಿರ ಮಹಾಪಾತಕಿಯನೊದೆದಿ
ಟ್ಟೊರಸುವೆನು ತಾನೆನುತ ಸಾತ್ಯಕಿ ಖಂಡೆಯವನುಗಿದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಗುರುವನ್ನು ಕೊಂದ ಕೊಲೆಗಾರರು ತಾನು ಮಾತ್ರ ಅತಿ ಗುರುಪಾದ ಭಕ್ತ ಅಲ್ಲವೇ ? ತನ್ನನ್ನು ಹೀಗೆ ಕರೆದವರಾರು ?” ಎಂದು ಧೃಷ್ಟದ್ಯುಮ್ನನು ಉರಿದೇಳಲು " ನೀಚತನ ಯಾರ ಜೊತೆಯೋ ? ದುಷ್ಟನೇ, ಮಹಾಪಾತಕಿಯಾದ ನಿನ್ನನ್ನು ಒದೆದು ನಾಶಮಾಡುವೆನು ನಾನು" ಎನ್ನುತ್ತಾ ಸಾತ್ಯಕಿ ಕತ್ತಿಯನ್ನು ಹೊರತೆಗೆದನು.
ಪದಾರ್ಥ (ಕ.ಗ.ಪ)
ವಿಘಾತಕ-ಕೊಲೆಗಾರ
ಮೂಲ ...{Loading}...
ಗುರುವಿಘಾತಕರಾವು ತಾನತಿ
ಗುರುಪದೋಪಾಸಕನು ತನ್ನನು
ಕರೆದರಾರಿದಕೆಂದು ಧೃಷ್ಟದ್ಯುಮ್ನನುರಿದೇಳೆ
ದುರುಳತನವಾರೊಡನೆಯೋ ಬಾ
ಹಿರ ಮಹಾಪಾತಕಿಯನೊದೆದಿ
ಟ್ಟೊರಸುವೆನು ತಾನೆನುತ ಸಾತ್ಯಕಿ ಖಂಡೆಯವನುಗಿದ ॥25॥
೦೨೬ ಎಲೆಲೆ ಹಿಡಿಹಿಡಿ ...{Loading}...
ಎಲೆಲೆ ಹಿಡಿಹಿಡಿ ಸಾತ್ಯಕಿಯನೊಳ
ಗೊಳಗೆ ತೋಟಿಯೆ ಜಾಗು ಕೌರವ
ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ
ನಿಲಿಸೆನುತ ನೃಪನೊರಲೆ ಕವಿದೆಡೆ
ಗಲಿಸಿ ಹಿಡಿದನು ಭೀಮನೀತನ
ಬಲುಭುಜವನೌಚಿದನು ಕೊಂಡನು ಕಯ್ಯ ಖಂಡೆಯವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆಲೆ… ಹಿಡಿ ಹಿಡಿ ಸಾತ್ಯಕಿಯನ್ನು, ಪಕ್ಷದ ಒಳಗೇ ಜಗಳವೇ ? ಭಲೆ, ಚೆನ್ನಾಗಿದೆ. ನಮ್ಮ ಸೈನ್ಯದಲ್ಲೂ ಕೌರವ ಸೇನೆಯಂತೆ ಭಂಡರ ಆಟ ಆಯಿತೇ ? ನಿಲ್ಲಿಸು” ಎನ್ನುತ್ತಾ ರಾಜನು ಕಿರುಚಲಾಗಿ ಭೀಮನು ಮೇಲೆ ಬಿದ್ದು ಇಬ್ಬರನ್ನೂ ಬೇರೆ ಮಾಡಿ ಹಿಡಿದನು. ಸಾತ್ಯಕಿಯ ಬಲಿಷ್ಠ ಭುಜಗಳನ್ನು ಅಮುಕಿ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡನು.
ಮೂಲ ...{Loading}...
ಎಲೆಲೆ ಹಿಡಿಹಿಡಿ ಸಾತ್ಯಕಿಯನೊಳ
ಗೊಳಗೆ ತೋಟಿಯೆ ಜಾಗು ಕೌರವ
ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ
ನಿಲಿಸೆನುತ ನೃಪನೊರಲೆ ಕವಿದೆಡೆ
ಗಲಿಸಿ ಹಿಡಿದನು ಭೀಮನೀತನ
ಬಲುಭುಜವನೌಚಿದನು ಕೊಂಡನು ಕಯ್ಯ ಖಂಡೆಯವ ॥26॥
೦೨೭ ಸೆಳೆದನೊರೆಯಲಡಾಯುಧವನ ...{Loading}...
ಸೆಳೆದನೊರೆಯಲಡಾಯುಧವನ
ವ್ವಳಿಸಿದನು ಪಾಂಚಾಲಸುತನೀ
ಗಳಹನನು ಬಿಡು ಭೀಮ ಕೊಡು ಸಾತ್ಯಕಿಯ ಖಂಡೆಯವ
ಎಲವೊ ಸಾತ್ಯಕಿ ಕೃಷ್ಣ ದೇವರಿ
ಗಳುಕಿ ಸೈರಿಸಿದರೆ ದೊಠಾರಿಸಿ
ಗೆಲನುಡಿದೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲಸುತನು ಒರೆಯಿಂದ ಅಡಾಯುಧವನ್ನು ಸೆಳೆದು ಅಪ್ಪಳಿಸಿದನು. “ಈ ಹರಟೆ ಮಲ್ಲನನ್ನು ಬಿಡು ಭೀಮ ಸಾತ್ಯಕಿಯ ಕತ್ತಿಯನ್ನು ಅವನಿಗೆ ಕೊಡು. ಎಲವೋ ಸಾತ್ಯಕಿ.. ಕೃಷ್ಣದೇವನಿಗೆ ಹಿಂಜರಿದು ಸೈರಿಸಿದರೆ ಸೊಕ್ಕಿನಿಂದ ಅಣಕಿಸಿ ಗೆಲ್ಲುವಂತೆ ಮಾತಾಡಿದೆ. ನಿನ್ನ ನಾಲಿಗೆಯನ್ನು ಹಿಂಭಾಗದಿಂದ ಹೊರಕ್ಕೆ ಸೆಳೆಯುತ್ತೇನೆ.” ಎಂದು ಧೃಷ್ಟದ್ಯುಮ್ನನು ಗರ್ಜಿಸಿದನು.
ಮೂಲ ...{Loading}...
ಸೆಳೆದನೊರೆಯಲಡಾಯುಧವನ
ವ್ವಳಿಸಿದನು ಪಾಂಚಾಲಸುತನೀ
ಗಳಹನನು ಬಿಡು ಭೀಮ ಕೊಡು ಸಾತ್ಯಕಿಯ ಖಂಡೆಯವ
ಎಲವೊ ಸಾತ್ಯಕಿ ಕೃಷ್ಣ ದೇವರಿ
ಗಳುಕಿ ಸೈರಿಸಿದರೆ ದೊಠಾರಿಸಿ
ಗೆಲನುಡಿದೆ ಹೆಡತಲೆಯಲುಗಿವೆನು ನಿನ್ನ ನಾಲಗೆಯ ॥27॥
೦೨೮ ತನ್ನೊಳಿದ್ದವಗುಣವ ನೋಡದೆ ...{Loading}...
ತನ್ನೊಳಿದ್ದವಗುಣವ ನೋಡದೆ
ಚುನ್ನವಾಡುವನಿದಿರನೆಲವೋ
ನಿನ್ನ ಹೋಲುವರಾರು ಬಾಹಿರ ಭಂಡರವನಿಯಲಿ
ನಿನ್ನೆ ಶಸ್ತ್ರವ ಬಿಸುಟ ಯೋಗ ವಿ
ಪನ್ನನನು ನೀನೇನ ಮಾಡಿದೆ
ನಿನ್ನ ಶೋಧಿಸಿ ಬಳಿಕ ಪರರನು ಹಳಿವುದೇನೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತನ್ನಲ್ಲಿರುವ ಅವಗುಣಗಳನ್ನು ಕಾಣದೆ ಬೇರೆಯವರನ್ನು ನಿಂದಿಸುವವನೂ, ಭಂಡನೂ, ಭ್ರಷ್ಟನೂ ಆದ ನಿನ್ನನ್ನು ಹೋಲುವವರು ಈ ಲೋಕದಲ್ಲಿ ಬೇರೆಯಾರಿದ್ದಾರೆ ? ನಿನ್ನೆ ಶಸ್ತ್ರವನ್ನು ತ್ಯಾಗ ಮಾಡಿದ, ಯೋಗ ಮಾರ್ಗವನ್ನು ಹಿಡಿದು ಕುಗ್ಗಿದ ದ್ರೋಣನನ್ನು ನೀನೇನು ಮಾಡಿದೆ ? ನಿನ್ನನ್ನು ಪರೀಕ್ಷಿಸಿಕೊಂಡು ಅನಂತರ ಬೇರೆಯವರನ್ನು ಹೀಯಾಳಿಸು” ಎಂದು ಸಾತ್ಯಕಿಯು ಹೇಳಿದನು.
ಪದಾರ್ಥ (ಕ.ಗ.ಪ)
ಚುನ್ನವಾಡು-ನಿಂದಿಸು,
ಮೂಲ ...{Loading}...
ತನ್ನೊಳಿದ್ದವಗುಣವ ನೋಡದೆ
ಚುನ್ನವಾಡುವನಿದಿರನೆಲವೋ
ನಿನ್ನ ಹೋಲುವರಾರು ಬಾಹಿರ ಭಂಡರವನಿಯಲಿ
ನಿನ್ನೆ ಶಸ್ತ್ರವ ಬಿಸುಟ ಯೋಗ ವಿ
ಪನ್ನನನು ನೀನೇನ ಮಾಡಿದೆ
ನಿನ್ನ ಶೋಧಿಸಿ ಬಳಿಕ ಪರರನು ಹಳಿವುದೇನೆಂದ ॥28॥
೦೨೯ ಮಿಡುಕಿದನು ಸಾತ್ಯಕಿ ...{Loading}...
ಮಿಡುಕಿದನು ಸಾತ್ಯಕಿ ವೃಕೋದರ
ನೊಡೆಯವಚಿದನು ಮತ್ತೆ ಪವನಜ
ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ
ಬಿಡು ಬಿಡಕಟಾ ಭೀಮ ಸಾತ್ಯಕಿ
ಹಿಡಿಹಿಡಿಯ ಹಮ್ಮೈಸುವನು ಬಿಡು
ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಯು ಒದ್ದಾಡಿದನು. ಭೀಮನ ಬಗ್ಗೆ ಬೇಸರಪಟ್ಟು ಪುನಃ “ಭೀಮನೇ ಬಿಡು. ನಿನಗೆ ರಾಜನಾಣೆ ದುಷ್ಟನ ರಕ್ತವನ್ನು ಕುಡಿಯುತ್ತೇನೆ " ಎಂದನು. ಅದಕ್ಕೆ ಧೃಷ್ಟದ್ಯುಮ್ನನು “ಅಯ್ಯೋ… ಭೀಮನೇ ಬಿಡು ಬಿಡು. ಸಾತ್ಯಕಿಯು ನನ್ನನ್ನು ಹಿಡಿಯಲು ಅಪೇಕ್ಷಿಸುತ್ತಿದ್ದಾನೆ. ಅವನನ್ನು ಬಿಡು. ಯುದ್ಧದಲ್ಲಿ ತೊಡಗಿಕೊಂಡು ನೋಡಲಿ”-ಎಂದು ಅಬ್ಬರಿಸಿದ.
ಪದಾರ್ಥ (ಕ.ಗ.ಪ)
ಹಮ್ಮೈಸು - ಅಪೇಕ್ಷಿಸು
ಮೂಲ ...{Loading}...
ಮಿಡುಕಿದನು ಸಾತ್ಯಕಿ ವೃಕೋದರ
ನೊಡೆಯವಚಿದನು ಮತ್ತೆ ಪವನಜ
ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ
ಬಿಡು ಬಿಡಕಟಾ ಭೀಮ ಸಾತ್ಯಕಿ
ಹಿಡಿಹಿಡಿಯ ಹಮ್ಮೈಸುವನು ಬಿಡು
ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ ॥29॥
೦೩೦ ಮುಳಿದು ಯಾದವ ...{Loading}...
ಮುಳಿದು ಯಾದವ ಸೇನೆ ಕೈದುವ
ಸೆಳೆದುದಾ ಪಾಂಚಾಲನಾಯಕ
ರುಲಿದು ನಿಂದುದು ಕಂಡನಸುರಧ್ವಂಸಿ ನಸುನಗುತ
ಎಲೆಲೆ ಪಾಪಿಗಳಿರ ವೃಥಾ ತ
ಮ್ಮೊಳಗೆ ತೋಟಿ ಶರಾಗ್ನಿಯಿತ್ತಲು
ಮೊಳಗುತದೆ ಕೆಡೆಬೀಳಹೊಯ್ ಹೊಯ್ ಕುನ್ನಿಗಳನೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಯಾದವ ಸೇನೆ ಕೋಪಿಸಿ ಆಯುಧವನ್ನು ಸೆಳೆಯಿತು. ಪಾಂಚಾಲ ನಾಯಕರು ಕೋಪದಿಂದ ಕೂಗಿ ನಿಂತರು. ಇದನ್ನು ನಸುನಗುತ್ತಾ ಇದ್ದ ರಾಕ್ಷಸ ಧ್ವಂಸಿಯಾದ ಕೃಷ್ಣನು ಕಂಡನು. “ಎಲೆಲೆ.. ಪಾಪಿಗಳಿರಾ, ವ್ಯರ್ಥವಾಗಿ ತಮ್ಮ ತಮಮಲ್ಲೆ ಸ್ಪರ್ಧೆ ಏಕೆ ? ಬಾಣವೆಂಬ ಬೆಂಕಿ ಮೊಳಗುತ್ತಿದೆ. ಕುನ್ನಿಗಳನ್ನು ನೆಲಕ್ಕೆ ಬೀಳುವಂತೆ ಹೇಳಿರಿ” ಎಂದನು.
ಮೂಲ ...{Loading}...
ಮುಳಿದು ಯಾದವ ಸೇನೆ ಕೈದುವ
ಸೆಳೆದುದಾ ಪಾಂಚಾಲನಾಯಕ
ರುಲಿದು ನಿಂದುದು ಕಂಡನಸುರಧ್ವಂಸಿ ನಸುನಗುತ
ಎಲೆಲೆ ಪಾಪಿಗಳಿರ ವೃಥಾ ತ
ಮ್ಮೊಳಗೆ ತೋಟಿ ಶರಾಗ್ನಿಯಿತ್ತಲು
ಮೊಳಗುತದೆ ಕೆಡೆಬೀಳಹೊಯ್ ಹೊಯ್ ಕುನ್ನಿಗಳನೆಂದ ॥30॥
೦೩೧ ಬೇರೆ ತಮಗೊನ್ದಾಳುತನವುರಿ ...{Loading}...
ಬೇರೆ ತಮಗೊಂದಾಳುತನವುರಿ
ಸೂರೆಗೊಳುತಿದೆ ಜಗವನಿತ್ತಲು
ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ
ತೋರಲಾಪರೆ ಬಾಹು ಸತ್ವವ
ತೋರಿರೈ ದಿಟ ಪಂಥದೋಲೆಯ
ಕಾರರಹಿರೆನುತಸುರರಿಪು ಗಜಬಜವ ನಿಲಿಸಿದನು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತನ್ನು ಬೆಂಕಿಯ ಉರಿ ಸೂರೆಗೊಳ್ಳುತ್ತಿದೆ. ಈ ಕಡೆ ದುರ್ವಾಸನೆ ಹೊಡೆಯುವ ಕಪ್ಪು ಹೊಗೆಯ ಕವಚದಲ್ಲಿ ಪ್ರಳಯಕಾಲದ ಅಗ್ನಿಯಿದೆ. ತೋರಲು ಸಾಧ್ಯವಾದರೆ ನೀವು ನಿಮ್ಮ ಬಾಹು ಪರಾಕ್ರಮವನ್ನು ಅದರ ವಿರುದ್ಧ ತೋರಿರಿ. ನಿಜ, ನೀವು ಪ್ರತಿಜ್ಞೆಯನ್ನು ಕೈಗೊಂಡ ಪರಾಕ್ರಮಿಗಳಾಗಿದ್ದೀರಿ ಅಲ್ಲವೇ ? ಎನ್ನುತ್ತಾ ಕೃಷ್ಣನು ಗಲಾಟೆಯನ್ನು ನಿಲ್ಲಿಸಿದನು.
ಪದಾರ್ಥ (ಕ.ಗ.ಪ)
ಕೌರಿಡುವ-ದುರ್ವಾಸನೆ ಹೊಡೆವ
ಮೂಲ ...{Loading}...
ಬೇರೆ ತಮಗೊಂದಾಳುತನವುರಿ
ಸೂರೆಗೊಳುತಿದೆ ಜಗವನಿತ್ತಲು
ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ
ತೋರಲಾಪರೆ ಬಾಹು ಸತ್ವವ
ತೋರಿರೈ ದಿಟ ಪಂಥದೋಲೆಯ
ಕಾರರಹಿರೆನುತಸುರರಿಪು ಗಜಬಜವ ನಿಲಿಸಿದನು ॥31॥
೦೩೨ ಇತ್ತ ಲೋಕದ ...{Loading}...
ಇತ್ತ ಲೋಕದ ಕಂಗಳೆವೆಗಳು
ಕೆತ್ತವಳ್ಳಿರಿವುರಿಯ ಜಾಳಿಗೆ
ತೆತ್ತಿಸಿತು ಹರಿದಶ್ವ ಶತವನು ಶಿವ ಮಹಾದೇವ
ಕಿತ್ತು ಶರವನು ತೂಗಿ ಬಿಲ್ಲಿಗೆ
ತೆತ್ತಿಸಿದನುರೆ ಸೇದಿ ತೋರಿಹ
ತುತ್ತು ನಿನಗರಿಸೇನೆ ಹೋಗೆನುತೆಚ್ಚು ಬೊಬ್ಬಿರಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಲೋಕದ ಕಣ್ಣಿನ ರೆಪ್ಪೆಗಳು ಮುಚ್ಚಿದವು. ರಭಸದಿಂದ ಎರಗುವ ಉರಿಯು ಶತ ಸೂರ್ಯರ ಪ್ರಭೆಯನ್ನು ಮೀರಿಸಿತು. ಶಿವ ಮಹಾದೇವ… ಅಶ್ವತ್ಥಾಮನು ಬಾಣವನ್ನು ಸೆಳೆದು ಬಿಲ್ಲಿಗೇರಿಸಿ ಹೂಡಿದನು. ಅಸ್ತ್ರವನ್ನು ಕಿವಿಯವರೆಗೆ ಸೇದಿ ಪ್ರಯೋಗಿಸಿದನು. “ಅರಿಸೇನೆಯು ನಿನಗೆ ಆಹಾರ ಹೋಗು” ಎನ್ನುತ್ತಾ ಆರ್ಭಟಿಸಿದನು.
ಮೂಲ ...{Loading}...
ಇತ್ತ ಲೋಕದ ಕಂಗಳೆವೆಗಳು
ಕೆತ್ತವಳ್ಳಿರಿವುರಿಯ ಜಾಳಿಗೆ
ತೆತ್ತಿಸಿತು ಹರಿದಶ್ವ ಶತವನು ಶಿವ ಮಹಾದೇವ
ಕಿತ್ತು ಶರವನು ತೂಗಿ ಬಿಲ್ಲಿಗೆ
ತೆತ್ತಿಸಿದನುರೆ ಸೇದಿ ತೋರಿಹ
ತುತ್ತು ನಿನಗರಿಸೇನೆ ಹೋಗೆನುತೆಚ್ಚು ಬೊಬ್ಬಿರಿದ ॥32॥
೦೩೩ ಜಗದ ಹುಯ್ಯಲು ...{Loading}...
ಜಗದ ಹುಯ್ಯಲು ಜಡಿಯಲಭ್ರದ
ಲಗಿದು ಕೌರವಸೇನೆ ಹರುಷದ
ಸೊಗಸಿನಲಿ ಮೈಮರೆಯೆ ಕೃಷ್ಣಾದಿಗಳು ಕೈಮರೆಯೆ
ಹೊಗೆಯ ಹೊರಳಿಯ ಕಿಡಿಯ ಥಟ್ಟಿನ
ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತ ಮೋಹರಕೆ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗದ ಹುಯ್ಯಲು ಆಕಾಶದೆತ್ತರಕ್ಕೂ ವ್ಯಾಪಿಸಿತು. ಕುರುಸೇನೆ ಹರ್ಷದ ಸೊಗಸಿನಲಿ ಮೈಮರೆಯಿತು. ಕೃಷ್ಣಾದಿಗಳು ಬೆರಗಾದರು. ಸುರುಳಿ ಸುರುಳಿಯಾದ ಹೊಗೆಯ, ಗುಂಪಾದ ಕಿಡಿಗಳಿಂದ ಜ್ವಲಿಸುತ್ತಿರುವ ಉರಿಯ ಸಮೀಪದಲ್ಲಿ ಮಹಾಶರವು ಧಗಧಗಿಸಿ ಶತ್ರು ಸೇನೆಯ ಮೇಲೆ ಧಾಳಿ ಮಾಡಿತು.
ಪದಾರ್ಥ (ಕ.ಗ.ಪ)
ಕೈಮರೆ-ಆಶ್ಚರ್ಯ
ಮೂಲ ...{Loading}...
ಜಗದ ಹುಯ್ಯಲು ಜಡಿಯಲಭ್ರದ
ಲಗಿದು ಕೌರವಸೇನೆ ಹರುಷದ
ಸೊಗಸಿನಲಿ ಮೈಮರೆಯೆ ಕೃಷ್ಣಾದಿಗಳು ಕೈಮರೆಯೆ
ಹೊಗೆಯ ಹೊರಳಿಯ ಕಿಡಿಯ ಥಟ್ಟಿನ
ತಗೆದುರಿಯ ತೆಕ್ಕೆಯಲಿ ಧಗಧಗ
ಧಗಿಸಿ ಧಾಳಿಟ್ಟುದು ಮಹಾಶರವಹಿತ ಮೋಹರಕೆ ॥33॥
೦೩೪ ಹಾ ಮುರಾನ್ತಕ ...{Loading}...
ಹಾ ಮುರಾಂತಕ ಹಾ ಯುಧಿಷ್ಠಿರ
ಹಾ ಮರುತ್ಸುತ ಹಾ ಧನಂಜಯ
ಹಾ ಮಗನೆ ಹಾ ತಂದೆ ಹಾ ಒಡವುಟ್ಟಿದನೆಯೆನುತ
ಭೂಮಿ ತೆರೆಯಳೆ ಬಾಯನಕಟಕ
ಟಾ ಮಹೋದಧಿ ದೂರವಿನ್ನೇ
ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಾ… ಕೃಷ್ಣಾ, ಹಾ ಯುಧಿಷ್ಠಿರ, ಹಾ ಭೀಮ, ಹಾ… ಧನಂಜಯ, ಹಾ ಮಗನೇ, ಹಾ ತಂದೇ, ಹಾ ಒಡಹುಟ್ಟಿದವನೇ ,… ಭೂಮಿ ಬಾಯನ್ನು ತೆರೆಯಬಾರದೇಕೆ ? ಅಯ್ಯೋ ಆ ಮಹಾಸಮುದ್ರ ಎಷ್ಟು ದೂರವಿದೆ ? ಈ ಮಹಾಸ್ತ್ರಕ್ಕೆ ಸಿಕ್ಕಿ ಬಿಟ್ಟೆವೇ ?” ಎಂದು ಶತ್ರುಸೇನೆ ಕಿರುಚಿತು.
ಮೂಲ ...{Loading}...
ಹಾ ಮುರಾಂತಕ ಹಾ ಯುಧಿಷ್ಠಿರ
ಹಾ ಮರುತ್ಸುತ ಹಾ ಧನಂಜಯ
ಹಾ ಮಗನೆ ಹಾ ತಂದೆ ಹಾ ಒಡವುಟ್ಟಿದನೆಯೆನುತ
ಭೂಮಿ ತೆರೆಯಳೆ ಬಾಯನಕಟಕ
ಟಾ ಮಹೋದಧಿ ದೂರವಿನ್ನೇ
ನೀ ಮಹಾಸ್ತ್ರಕೆ ಸಿಕ್ಕಿದೆವೆಯೆಂದೊರಲಿತರಿಸೇನೆ ॥34॥
೦೩೫ ಕಳವಳಿಸಿತರಿಸೇನೆ ಚೂಣಿಯ ...{Loading}...
ಕಳವಳಿಸಿತರಿಸೇನೆ ಚೂಣಿಯ
ಕೊಳುಗಿಡಿಯ ಸೆಖೆ ತಾಗಿ ಸುಭಟಾ
ವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು
ಬಲದ ಸುತ್ತಲು ಕಟ್ಟಿತುರಿ ಕೆಂ
ಬೆಳಗು ಕುಡಿದವು ಕರ್ಬೊಗೆಗಳ
ಗ್ಗಳದ ಬಾಣದ ಬಂದಿಯಲಿ ಸಿಲುಕಿತ್ತು ರಿಪುಸೇನೆ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೇನೆ ಕಳವಳಿಸಿತು. ಸೇನೆಯ ಮುಂಭಾಗದಲ್ಲಿ ಕಿಡಿಯನ್ನು ಕಾರುವಂಥ ಸೆಕೆ ತಾಗಿ ಸುಭಟರ ಸಮೂಹದ ಮೀಸೆಗಳು ಸುಟ್ಟು ವಿಶೇಷವಾಗಿ ಮೋರೆಗಳು ಬಾಡಿದವು. ಸೇನೆಯ ಸುತ್ತಲೂ ಉರಿ ಹರಡಿತು. ಕೆಂಪಾದ ಬೆಳಕು ಕಪ್ಪು ಹೊಗೆಯನ್ನು ಕುಡಿದವು. ಶತ್ರುಸೇನೆ ಶ್ರೇಷ್ಠವಾದ ಬಾಣದ ಬಂಧನದಲ್ಲಿ ಸಿಲುಕಿತ್ತು.
ಮೂಲ ...{Loading}...
ಕಳವಳಿಸಿತರಿಸೇನೆ ಚೂಣಿಯ
ಕೊಳುಗಿಡಿಯ ಸೆಖೆ ತಾಗಿ ಸುಭಟಾ
ವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು
ಬಲದ ಸುತ್ತಲು ಕಟ್ಟಿತುರಿ ಕೆಂ
ಬೆಳಗು ಕುಡಿದವು ಕರ್ಬೊಗೆಗಳ
ಗ್ಗಳದ ಬಾಣದ ಬಂದಿಯಲಿ ಸಿಲುಕಿತ್ತು ರಿಪುಸೇನೆ ॥35॥
೦೩೬ ಝಳಕೆ ಘೀಳಿಟ್ಟೊರಲಿದವು ...{Loading}...
ಝಳಕೆ ಘೀಳಿಟ್ಟೊರಲಿದವು ಕರಿ
ಕುಳ ತುರಂಗದ ಥಟ್ಟು ಖುರದಲಿ
ನೆಲನ ಹೊಯ್ದವ್ವಳಿಸಿದವು ರಾವುತರನೀಡಾಡಿ
ಬಲು ರಥವನಸಬಡಿದು ಸೂತನ
ನಿಳುಹಿ ಹಯವೋಡಿದವು ಮು
ಮ್ಮುಳಿಸಿ ತನಿಗುದಿಗುದಿದು ಕೋಟಲೆಗೊಂಡುದರಿಸೇನೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಸಿಯ ಝಳಕ್ಕೆ ಆನೆ ಸಮೂಹ ಘೀಳಿಟ್ಟು ಕಿರುಚಿದವು. ಕುದುರೆ ಸೈನ್ಯ ಗೊರಸಿನಲಿ ನೆಲವನ್ನು ಹೊಡೆದು ಅಪ್ಪಳಿಸಿ, ಸವಾರರನ್ನು ನೆಲಕ್ಕೆ ಬೀಳುವಂತೆ ಮಾಡಿದವು. ದೊಡ್ಡ ರಥವನ್ನು ಅಗಸನು ಬಟ್ಟೆ ಒಗೆಯುವಂತೆ ಹೊಡೆದು ಸಾರಥಿಯನ್ನು ಬೀಳಿಸಿ ಕುದುರೆಗಳು ಓಡಿದವು. ಬೇಗೆಯು ಹೆಚ್ಚಾಗಿ ಕುದಿದು ಶತ್ರುಸೇನೆ ತೊಂದರೆಗೊಳಪಟ್ಟಿತು.
ಪದಾರ್ಥ (ಕ.ಗ.ಪ)
ಅಸಬಡಿ-ಅಗಸನ್ನು ಬಟ್ಟೆಯನ್ನು ಬಡಿಯುವಂತೆ ಬಡಿ,
ಮೂಲ ...{Loading}...
ಝಳಕೆ ಘೀಳಿಟ್ಟೊರಲಿದವು ಕರಿ
ಕುಳ ತುರಂಗದ ಥಟ್ಟು ಖುರದಲಿ
ನೆಲನ ಹೊಯ್ದವ್ವಳಿಸಿದವು ರಾವುತರನೀಡಾಡಿ
ಬಲು ರಥವನಸಬಡಿದು ಸೂತನ
ನಿಳುಹಿ ಹಯವೋಡಿದವು ಮು
ಮ್ಮುಳಿಸಿ ತನಿಗುದಿಗುದಿದು ಕೋಟಲೆಗೊಂಡುದರಿಸೇನೆ ॥36॥
೦೩೭ ವಾಯಕಞ್ಜದಿರಞ್ಜದಿರಿ ಫಡ ...{Loading}...
ವಾಯಕಂಜದಿರಂಜದಿರಿ ಫಡ
ಬಾಯ ಬಿಟ್ಟರೆ ಹೋಹುದೇ ನಿ
ಮ್ಮಾಯುಷಕೆ ಹೊಣೆ ತಾನು ಹೇಳಿತ ಮಾಡಿ ಬೇಗದಲಿ
ಆಯುಧಂಗಳ ಬಿಸುಟು ಕರಿ ರಥ
ಜಾಯಿಲಂಗಳನಿಳಿದು ಬದುಕುವು
ಪಾಯವೆಂದಸುರಾರಿ ಸಾರಿದನಂದು ಕೈ ನೆಗಹಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೋಸಕ್ಕೆ ಹೆದರದಿರಿ, ಹೆದರದಿರಿ, ಫಡ, ಬಾಯಿ ಬಿಟ್ಟರೆ ಕಷ್ಟ ನಿವಾರಣೆಯಾಗುತ್ತದೆಯೇ ? ನಿಮ್ಮ ಆಯುಸ್ಸಿಗೆ ನಾನು ಹೊಣೆ. ನಾನು ಹೇಳಿದ್ದನ್ನು ಬೇಗ ಮಾಡಿ. ಆಯುಧಗಳನ್ನು ಬಿಸಾಡಿ. ಆನೆ, ರಥ, ಕುದುರೆಗಳಿಂದ ಇಳಿದು ನಿಲ್ಲಿ. ಇದು ಬದುಕುವ ಉಪಾಯ” ಎಂದು ಕೃಷ್ಣನು ಕೈಗಳನ್ನೆತ್ತಿ ಸಾರಿ ಹೇಳಿದನು.
ಪದಾರ್ಥ (ಕ.ಗ.ಪ)
ವಾಯ-ಮೋಸ, ಮಾಯೆ,
ಜಾಯಿಲ-ಜಾತಿ ಕುದುರೆ, ಜಾತ್ಯಶ್ವ,
ಮೂಲ ...{Loading}...
ವಾಯಕಂಜದಿರಂಜದಿರಿ ಫಡ
ಬಾಯ ಬಿಟ್ಟರೆ ಹೋಹುದೇ ನಿ
ಮ್ಮಾಯುಷಕೆ ಹೊಣೆ ತಾನು ಹೇಳಿತ ಮಾಡಿ ಬೇಗದಲಿ
ಆಯುಧಂಗಳ ಬಿಸುಟು ಕರಿ ರಥ
ಜಾಯಿಲಂಗಳನಿಳಿದು ಬದುಕುವು
ಪಾಯವೆಂದಸುರಾರಿ ಸಾರಿದನಂದು ಕೈ ನೆಗಹಿ ॥37॥
೦೩೮ ಕಳಿದ ಹೂವಿನ ...{Loading}...
ಕಳಿದ ಹೂವಿನ ತೊಡಬೆಯೋ ಕುಸಿ
ದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ
ನಳಿನನಾಭನ ಮಾತು ಹಿಂಚಿತು
ಕಳಚಿದವು ಕೈದುಗಳು ಕೈಗಳ
ಲುಳಿವುಪಾಯದ ಜೋಡ ತೊಟ್ಟುದು ಪಾಂಡುಸುತಸೇನೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉದುರಿ ಹೋಗಲಿರುವ ಹೂವಿನ ಗೊಂಚಲೋ, ಕುಸಿದ ತಲೆಯ ಮೇಲಣ ವ್ಯರ್ಥವಾದ ಭಾರವೋ, ಪರಿಶುದ್ಧ ಮನದ ಕೋಪವೋ, ದಾನ ಮಾಡಲು ಅತ್ಯಾಸಕ್ತಿವುಳ್ಳವನ ಒಡವೆಗಳೋ ? ಎಂಬಂತೆ ನಳಿನನಾಭನಾದ ಕೃಷ್ಣನ ಮಾತಿನ ಹಿಂದೆಯೇ ಸೈನಿಕರ ಕೈಗಳಿಂದ ಆಯುಧಗಳು ಕಳಚಿದವು. ಪಾಂಡುಸುತ ಸೇನೆ ತನ್ನನ್ನು ರಕ್ಷಿಸಿಕೊಳ್ಳುವ ಉಪಾಯದ ಕವಚವನ್ನು ತೊಟ್ಟಿತು.
ಪದಾರ್ಥ (ಕ.ಗ.ಪ)
ತೊಡಬೆ-ಗೊಂಚಲು,
ಹಿಂಚಿತು-ಹಿಂದೆಯೇ
ಮೂಲ ...{Loading}...
ಕಳಿದ ಹೂವಿನ ತೊಡಬೆಯೋ ಕುಸಿ
ದಲೆಯ ಬಿಟ್ಟಿಯ ಭಾರವೋ ನಿ
ರ್ಮಳನ ಚಿತ್ತದ ಖತಿಯೊ ದಾನವ್ಯಸನಿಯೊಡವೆಗಳೊ
ನಳಿನನಾಭನ ಮಾತು ಹಿಂಚಿತು
ಕಳಚಿದವು ಕೈದುಗಳು ಕೈಗಳ
ಲುಳಿವುಪಾಯದ ಜೋಡ ತೊಟ್ಟುದು ಪಾಂಡುಸುತಸೇನೆ ॥38॥
೦೩೯ ಬೀತ ಕೈದುಗಳಖಿಳದಳ ...{Loading}...
ಬೀತ ಕೈದುಗಳಖಿಳದಳ ಸಂ
ಘಾತವನು ಬಾಣಾಗ್ನಿ ಬೆರಸಿತು
ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ
ಆತನಾವೆಡೆ ಧರ್ಮಜನು ವಿ
ಖ್ಯಾತನರ್ಜುನನನಿಲಸುತ ಮಾ
ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲ್ಲಾ ಸೈನಿಕರ ಕೆಳಗೆ ಬಿದ್ದ ಆಯುಧಗಳ ಸಮೂಹವನ್ನು ಬಾಣಾಗ್ನಿ ನಾಶಮಾಡಿತು. “ಎಲೆ, ಭಂಡರಿರ…” ಎನ್ನುತ್ತ ಬಾಣವು ಶತ್ರು ಸೈನಿಕರನ್ನು ಮುಟ್ಟದೆ ಬಿಟ್ಟಿತು. “ಧರ್ಮಜನು ಎಲ್ಲಿದ್ದಾನೆ ? ಪ್ರಖ್ಯಾತರಾದ ಅರ್ಜುನ, ಭೀಮ ಮಾದ್ರೀಸುತರಾದ ನಕುಲ ಸಹದೇವರು ಎಲ್ಲಿ ?” ಎನ್ನುತ್ತಾ ರಾಜಸೈನ್ಯವನ್ನು ಪ್ರವೇಶಿಸಿತು.
ಮೂಲ ...{Loading}...
ಬೀತ ಕೈದುಗಳಖಿಳದಳ ಸಂ
ಘಾತವನು ಬಾಣಾಗ್ನಿ ಬೆರಸಿತು
ಪೂತು ಭಂಡರಿರೆನುತ ಬಿಟ್ಟುದು ಬಾಣವರಿಭಟರ
ಆತನಾವೆಡೆ ಧರ್ಮಜನು ವಿ
ಖ್ಯಾತನರ್ಜುನನನಿಲಸುತ ಮಾ
ದ್ರೀತನುಜರೆಂದೆನುತ ಹೊಕ್ಕುದು ರಾಜ ಮೋಹರವ ॥39॥
೦೪೦ ಹರಿಯ ಬಯ್ಗುಳು ...{Loading}...
ಹರಿಯ ಬಯ್ಗುಳು ಬೆದರಿಸಲು ನೃಪ
ನಿರೆ ನಿರಾಯುಧನಾಗಿ ಮಾದ್ರೇ
ಯರು ಶಿಖಂಡಿ ಯುಯುತ್ಸು ಸಾತ್ಯಕಿ ಸೃಂಜಯಾದಿಗಳು
ಕರದ ಕದಪಿನ ತಳಿತ ಮುಸುಕಿನ
ಮುರಿದ ಮೋರೆಯ ಮುಂದೆ ಹರಹಿದ
ತರತರದ ಕೈದುಗಳ ಸುಭಟರ ಕಂಡುದಮಳಾಸ್ತ್ರ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನ ಬೈಗುಳದ ಮಾತು ಬೆದರಿಸಲು ರಾಜ ಯುಧಿಷ್ಠಿರನು ನಿರಾಯುಧನಾಗಿದ್ದನು. ಮಾದ್ರೇಯರು, ಶಿಖಂಡಿ, ಯುಯುತ್ಸು, ಸಾತ್ಯಕಿ, ಸೃಂಜಯಾದಿಗಳು ಗಲ್ಲದ ಮೇಲೆ ಕೈಗಳನ್ನಿಟ್ಟುಕೊಂಡಿದ್ದರು. ಆತಂಕದ ತೆರೆಯನ್ನು ಧರಿಸಿದ ಜೋಲು ಮೋರೆಯ ಸೈನಿಕರ ಮುಂದೆ ಹರಡಿ ಬಿದ್ದಿರುವ ತರತರದ ಆಯುಧಗಳನ್ನು ಅಮಳಾಸ್ತ್ರವು ಕಂಡಿತು.
ಮೂಲ ...{Loading}...
ಹರಿಯ ಬಯ್ಗುಳು ಬೆದರಿಸಲು ನೃಪ
ನಿರೆ ನಿರಾಯುಧನಾಗಿ ಮಾದ್ರೇ
ಯರು ಶಿಖಂಡಿ ಯುಯುತ್ಸು ಸಾತ್ಯಕಿ ಸೃಂಜಯಾದಿಗಳು
ಕರದ ಕದಪಿನ ತಳಿತ ಮುಸುಕಿನ
ಮುರಿದ ಮೋರೆಯ ಮುಂದೆ ಹರಹಿದ
ತರತರದ ಕೈದುಗಳ ಸುಭಟರ ಕಂಡುದಮಳಾಸ್ತ್ರ ॥40॥
೦೪೧ ಏಕೆ ನಾಚಿಕೆ ...{Loading}...
ಏಕೆ ನಾಚಿಕೆ ಧರ್ಮಹಾನಿ
ವ್ಯಾಕುಳತೆಯಿನ್ನೇಕೆ ವೈದಿಕ
ಲೌಕಿಕವದೇಗುವುವು ಜೀವವ್ರಯಕೆ ಕುಲವುಂಟೆ
ಏಕೆ ಭಯ ನಮಗಿನ್ನು ಕೈದುವ
ನೂಕಿದವರನು ಹೆಂಗುಸನು ತಾ
ಸೋಕಿದರೆ ಮುರಹರನ ಪದದಾಣೆಂದುದಮಳಾಸ್ತ್ರ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಏಕೆ ನಾಚಿಕೆ ? ಧರ್ಮಹಾನಿ, ವ್ಯಾಕುಲತೆ ಇನ್ನೇಕೆ ? ವೈದಿಕವು, ಲೌಕಿಕವು ಏನು ಮಾಡುತ್ತವೆ ? ಜೀವಿಗಳ ಹಾನಿಗೆ ಕುಲವುಂಟೇ ? ಇನ್ನು ನಮಗೆ ಭಯವೇಕೆ ? ಆಯುಧವನ್ನು ಬಿಟ್ಟವರನ್ನು, ಹೆಂಗಸರನ್ನು ತಾನು ಸೋಕಿದರೆ ಮುರಹರನ ಪಾದಗಳ ಮೇಲಾಣೆ” ಎಂದು ಅಮಳಾಸ್ತ್ರ ಹೇಳಿತು.
ಮೂಲ ...{Loading}...
ಏಕೆ ನಾಚಿಕೆ ಧರ್ಮಹಾನಿ
ವ್ಯಾಕುಳತೆಯಿನ್ನೇಕೆ ವೈದಿಕ
ಲೌಕಿಕವದೇಗುವುವು ಜೀವವ್ರಯಕೆ ಕುಲವುಂಟೆ
ಏಕೆ ಭಯ ನಮಗಿನ್ನು ಕೈದುವ
ನೂಕಿದವರನು ಹೆಂಗುಸನು ತಾ
ಸೋಕಿದರೆ ಮುರಹರನ ಪದದಾಣೆಂದುದಮಳಾಸ್ತ್ರ ॥41॥
೦೪೨ ಇವರೊಳುಣ್ಟೇ ಕೈದುವೊತ್ತವ ...{Loading}...
ಇವರೊಳುಂಟೇ ಕೈದುವೊತ್ತವ
ರವರನರಸುವೆನೆನುತ ಬರಲಾ
ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು
ಆವನಿಗಿಳಿದೀಡಾಡಿ ಕಳೆ ಕೈ
ದುವನು ತಾ ಮೊದಲಾಗಿ ನಿಂದಂ
ದವನು ನೋಡೆನಲನಿಲಸುತ ನಸುನಗುತಲಿಂತೆಂದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವರಲ್ಲಿ ಆಯುಧವನ್ನು ಹಿಡಿದವರು ಯಾರಾದರೂ ಇದ್ದಾರೆಯೇ ಹುಡುಕುವೆನು” ಎನ್ನುತ್ತಾ ಆ ಬಾಣವು ಬರಲು, ಕೃಷ್ಣನು ಕೋಪಿಸಿ ಭೀಮನನ್ನು ಗದರಿದನು. “ರಥದಿಂದ ಕೆಳಗಿಳಿದು ಆಯುಧಗಳನ್ನು ಕೆಳಗೆ ಹಾಕು, ತನ್ನನ್ನೂ ಒಳಗೊಂಡಂತೆ ಎಲ್ಲರೂ ನಿಂತಿರುವ ರೀತಿಯನ್ನು ನೋಡು” ಎನಲು ಭೀಮನು ನಸುನಗುತ್ತ ಹೀಗೆಂದನು.
ಮೂಲ ...{Loading}...
ಇವರೊಳುಂಟೇ ಕೈದುವೊತ್ತವ
ರವರನರಸುವೆನೆನುತ ಬರಲಾ
ಪವನಸುತನನು ಥಟ್ಟಿಸಿದನಾ ದನುಜರಿಪು ಮುಳಿದು
ಆವನಿಗಿಳಿದೀಡಾಡಿ ಕಳೆ ಕೈ
ದುವನು ತಾ ಮೊದಲಾಗಿ ನಿಂದಂ
ದವನು ನೋಡೆನಲನಿಲಸುತ ನಸುನಗುತಲಿಂತೆಂದ ॥42॥
೦೪೩ ದೇಹ ಕೀರ್ತಿಗಳೊಳಗೆ ...{Loading}...
ದೇಹ ಕೀರ್ತಿಗಳೊಳಗೆ ನಿಲುವುದು
ದೇಹವೋ ಕೀರ್ತಿಯೊ ಮುರಾಂತಕ
ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ
ಗಾಹುಗತಕದಲುಳಿವ ಧರ್ಮ
ದ್ರೋಹಿ ತಾನಲ್ಲಿನ್ನು ನೋಡಾ
ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹ ಮತ್ತು ಕೀರ್ತಿಗಳಲ್ಲಿ ಶಾಶ್ವತವಾಗಿ ನಿಲ್ಲುವುದು ದೇಹವೋ, ಕೀರ್ತಿಯೋ ? ಕೃಷ್ಣನೇ… ಬೇಕಾದುದನ್ನು ಅಪ್ಪಣೆ ಮಾಡಿದರೆ ಮಾಡುವುದಿಲ್ಲ. ಏನು ಮಾಡಬೇಕೆಂಬುದನ್ನು ನಾನೇ ಬಲ್ಲೆ. ಮೋಸದಿಂದ ಬದುಕಿ ಉಳಿಯಲು ಪ್ರಯತ್ನಿಸುವ ಧರ್ಮದ್ರೋಹಿ ತಾನಲ್ಲ. ಇನ್ನು ನನ್ನ ಸಾಹಸವನ್ನು ನೋಡು ಎನ್ನುತ್ತಾ ಅಮಲಾಸ್ತ್ರಕ್ಕೆ ಎದುರಾಗಿ ಆಯುಧಧಾರಿಯಾಗಿ ಹೊರಟನು.
ಮೂಲ ...{Loading}...
ದೇಹ ಕೀರ್ತಿಗಳೊಳಗೆ ನಿಲುವುದು
ದೇಹವೋ ಕೀರ್ತಿಯೊ ಮುರಾಂತಕ
ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ
ಗಾಹುಗತಕದಲುಳಿವ ಧರ್ಮ
ದ್ರೋಹಿ ತಾನಲ್ಲಿನ್ನು ನೋಡಾ
ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ ॥43॥
೦೪೪ ಪೂತು ಪಾಯಿಕು ...{Loading}...
ಪೂತು ಪಾಯಿಕು ಭೀಮ ನೆರೆದೀ
ಬೂತು ಬಲದಲಿ ವೀರ ನೀನಹೆ
ಯೇತಕಿವದಿರು ಗಂಡು ಜೋಹದ ಗರುವ ಸೂಳೆಯರು
ಸೋತಡೆಯು ಜಯ ನಿನ್ನದೆನುತ ವಿ
ಧೂತಧೂಮದಿ ಕಿಡಿಯ ಝಾಡಿಗ
ಳೀತನನು ಮುಸುಕಿದವು ಚುಂಬಿಸಿತಂಬು ಪವನಜನ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
44.” ಭಲೆ, ಒಳ್ಳೆಯದಾಯಿತು ಭೀಮ… ಇಲ್ಲಿ ಸೇರಿರುವ ಭಂಡರ ಸೈನ್ಯದಲ್ಲಿ ಶೌರ್ಯ ನಿನಗೇತಕ್ಕೆ ? ಇವರೆಲ್ಲಾ ಗಂಡು ವೇಷದ ಜಂಬದ ಸೂಳೆಯರು. ಸೋತರೂ ಸಹ ಜಯ ನಿನ್ನದೇ ಎನ್ನುತ್ತಾ ಚೆದುರಿದ ಹೊಗೆಯ ಕಿಡಿಯ ಪ್ರಖರತೆ ಈತನನ್ನು ಮುಸುಕಿ, ಆ ಬಾಣವು ಭೀಮನನ್ನು ಚುಂಬಿಸಿತು.
ಪದಾರ್ಥ (ಕ.ಗ.ಪ)
ಬೂತುಬಲ-ಭಂಡರ ಸೈನ್ಯ,
ಜೋಹ-ವೇಷ,
ವಿಧೂತ-ಚೆದುರಿದ
ಮೂಲ ...{Loading}...
ಪೂತು ಪಾಯಿಕು ಭೀಮ ನೆರೆದೀ
ಬೂತು ಬಲದಲಿ ವೀರ ನೀನಹೆ
ಯೇತಕಿವದಿರು ಗಂಡು ಜೋಹದ ಗರುವ ಸೂಳೆಯರು
ಸೋತಡೆಯು ಜಯ ನಿನ್ನದೆನುತ ವಿ
ಧೂತಧೂಮದಿ ಕಿಡಿಯ ಝಾಡಿಗ
ಳೀತನನು ಮುಸುಕಿದವು ಚುಂಬಿಸಿತಂಬು ಪವನಜನ ॥44॥
೦೪೫ ಗಿರಿಯ ಮುತ್ತಿದ ...{Loading}...
ಗಿರಿಯ ಮುತ್ತಿದ ಮುಗಿಲವೊಲು ಹೊಗೆ
ಹೊರಳಿಗಟ್ಟಿತು ಮೇಲೆ ದಳ್ಳುರಿ
ಧರಧುರದಲೊಳಬೀಳುತಿದ್ದವು ಕಿಡಿಯ ಚೂಣಿಯಲಿ
ಉರಿಯೊಳದ್ದೈ ತಮ್ಮ ಹಾಯೆಂ
ದರಸ ಮೊದಲಾದಖಿಳಭೂಪರು
ಕರದ ಬಿರುವೊಯ್ಲುಗಳ ಬಾಯವರೊರಲಿ ಹೊರಳಿದರು ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಟ್ಟವನ್ನು ಮುತ್ತಿದ ಮೋಡದಂತೆ ಹೊಗೆ ಸುರುಳಿಗಟ್ಟಿತು. ಮೇಲೆ ದಳ್ಳುರಿ ಆರ್ಭಟದೊಂದಿಗೆ ಮುಂದೆ ಕಿಡಿಗಳನ್ನು ಕಾರುತ್ತಾ ವ್ಯಾಪಿಸುತ್ತಿತ್ತು. ‘ಉರಿಯಲ್ಲಿ ಅದ್ದಿ ಹೋದೆಯಲ್ಲೋ ತಮ್ಮಾ’ ಎಂದು ಅರಸನೇ ಮೊದಲಾದ ಎಲ್ಲಾ ರಾಜರು ಬಾಯಿಯ ಮೇಲೆ ಕೈಗಳಿಂದ ಬಿರುಸಾಗಿ ಹೊಡೆದುಕೊಳ್ಳುತ್ತಾ ಒಟ್ಟಾಗಿ ಕಿರುಚಿದರು.
ಮೂಲ ...{Loading}...
ಗಿರಿಯ ಮುತ್ತಿದ ಮುಗಿಲವೊಲು ಹೊಗೆ
ಹೊರಳಿಗಟ್ಟಿತು ಮೇಲೆ ದಳ್ಳುರಿ
ಧರಧುರದಲೊಳಬೀಳುತಿದ್ದವು ಕಿಡಿಯ ಚೂಣಿಯಲಿ
ಉರಿಯೊಳದ್ದೈ ತಮ್ಮ ಹಾಯೆಂ
ದರಸ ಮೊದಲಾದಖಿಳಭೂಪರು
ಕರದ ಬಿರುವೊಯ್ಲುಗಳ ಬಾಯವರೊರಲಿ ಹೊರಳಿದರು ॥45॥
೦೪೬ ವಾಯುಸುತ ಹಾಯೆನುತ ...{Loading}...
ವಾಯುಸುತ ಹಾಯೆನುತ ಫಲುಗುಣ
ಬಾಯಿಬಿಡೆ ಹರಿ ಜರೆದನಳುವನ
ಬಾಯ ನೋಡಾ ಬೇಗ ತೊಡು ತೊಡು ವರುಣ ಮಾರ್ಗಣವ
ಸಾಯಲರಿಯನು ಭೀಮನೆನೆ ನಾ
ರಾಯಣನ ನುಡಿಯಿಂದ ಮುನ್ನ ಜ
ಲಾಯತಾಸ್ತ್ರವನರ್ಜುನನು ಗಾಂಡಿವದಲುಗುಳಿಸಿದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಾಯುಸುತನೇ ಹಾ " ಎನ್ನುತ್ತಾ ಅರ್ಜುನನು ಬಾಯಿ ಬಿಡಲಾಗಿ ಶ್ರೀಹರಿಯು ಜರಿದನು. “ಅಳುತ್ತಿರುವವನ ಬಾಯಿಯನ್ನು ನೋಡು. ಬೇಗನೆ ವರುಣಾಸ್ತ್ರವನ್ನು ತೊಡು. ಭೀಮನು ಸಾಯಲು ಸಾಧ್ಯವಿಲ್ಲ” ಎನ್ನಲಾಗಿ, ನಾರಾಯಣನ ಮಾತಿನಿಂದ ಕೂಡಲೇ ಅರ್ಜುನನು ಗಾಂಡೀವದಿಂದ ವರುಣಾಸ್ತ್ರವನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಮಾರ್ಗಣ-ಬಾಣ
ಮೂಲ ...{Loading}...
ವಾಯುಸುತ ಹಾಯೆನುತ ಫಲುಗುಣ
ಬಾಯಿಬಿಡೆ ಹರಿ ಜರೆದನಳುವನ
ಬಾಯ ನೋಡಾ ಬೇಗ ತೊಡು ತೊಡು ವರುಣ ಮಾರ್ಗಣವ
ಸಾಯಲರಿಯನು ಭೀಮನೆನೆ ನಾ
ರಾಯಣನ ನುಡಿಯಿಂದ ಮುನ್ನ ಜ
ಲಾಯತಾಸ್ತ್ರವನರ್ಜುನನು ಗಾಂಡಿವದಲುಗುಳಿಸಿದ ॥46॥
೦೪೭ ಹೊಗೆಯನೊದೆದೊಳಬಿದ್ದು ...{Loading}...
ಹೊಗೆಯನೊದೆದೊಳಬಿದ್ದು ಕಿಡಿಗಳ
ನುಗಿದು ದಳ್ಳುರಿದುರುಗಲನು ತನಿ
ಬಿಗಿದು ಭೀಮನ ರಥದ ಸುತ್ತಲು ಸೂಸಿ ತೆರೆ ಮಸಗೆ
ಹಗೆಯನೆನಗಿದಿರೊಡ್ಡಿ ಜುಣುಗಲು
ಬಗೆದರೇ ಖಂಡೆಯದ ಮೊನೆಯಲಿ
ಮಗುಳಿಚುವರೇ ತನ್ನನೆನುತುರವಣಿಸಿತಮಳಾಸ್ತ್ರ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೊಗೆಯನ್ನು ಒದ್ದು ಒಳಹೋಗಿ ಕಿಡಿಗಳನ್ನು ಸೂಸಿ ದೊಡ್ಡದಾಗಿ ಉರಿದು ಸುಟ್ಟದ್ದರ ಮೇಲೆ ತಂಪು ಹರಡಿ ಭೀಮನ ರಥದ ಸುತ್ತಲೂ ತಂಪು ಸೂಸಿ, ನೀರಿನ ತೆರೆ ರೂಪುಗೊಂಡಿತು. " ಶತ್ರುಗಳು ನನಗೆ ಅಡಚಣೆಯನ್ನು ಒಡ್ಡಿ ತಾವು ಜಾರಿಕೊಳ್ಳಲು ಬಯಸಿದರೇ ? ಕತ್ತಿಯ ತುದಿಯಲಿ ತನ್ನನ್ನು ಹಿಂತಿರುಗಿಸುವರೇ” ಎನ್ನುತ್ತಾ ಅಮಳಾಸ್ತ್ರವು ಮುನ್ನುಗ್ಗಿತು.
ಪದಾರ್ಥ (ಕ.ಗ.ಪ)
ಜುಣುಗಲು-ಜಾರಿಕೊಳ್ಳಲು
ಮೂಲ ...{Loading}...
ಹೊಗೆಯನೊದೆದೊಳಬಿದ್ದು ಕಿಡಿಗಳ
ನುಗಿದು ದಳ್ಳುರಿದುರುಗಲನು ತನಿ
ಬಿಗಿದು ಭೀಮನ ರಥದ ಸುತ್ತಲು ಸೂಸಿ ತೆರೆ ಮಸಗೆ
ಹಗೆಯನೆನಗಿದಿರೊಡ್ಡಿ ಜುಣುಗಲು
ಬಗೆದರೇ ಖಂಡೆಯದ ಮೊನೆಯಲಿ
ಮಗುಳಿಚುವರೇ ತನ್ನನೆನುತುರವಣಿಸಿತಮಳಾಸ್ತ್ರ ॥47॥
೦೪೮ ಉರುಬಿದವು ಕೇಸುರಿಗಳುದಕವ ...{Loading}...
ಉರುಬಿದವು ಕೇಸುರಿಗಳುದಕವ
ಸುರಿದುವೊಣಗಿಲುಗಿಡಿಯ ಹಬ್ಬುಗೆ
ಹೊರಗೆ ಮಸಗಿತು ಮುಸುಕಿತುದಕದ ಬಾಣವಕ್ಕುಡಿಸೆ
ಒರತೆಯಾರಿತು ವರುಣಶರ ಬಾ
ಯರತು ನೀರಡಿಸಿದುದು ಭೀಮನ
ಸೆರಗ ಹಿಡಿದಳು ಮೃತ್ಯುವವನೀಪಾಲ ಕೇಳ್ ಎಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೆಂಬಣ್ಣದ ಕಿಡಿಗಳು ವೇಗದಿಂದ ಎದುರಾದುವು. ನೀರು ಸುರಿದು ಒಣಗಿ ಕರಿಕಾಗಿ ಕಿಡಿಯ ದಟ್ಟಣೆ ಹೊರಗೆ ವ್ಯಾಪಿಸಿತು. ಉದಕದ ಬಾಣವು ಕ್ಷೀಣವಾಗಿ ಅಮಳಾಸ್ತ್ರದ ಹೊಗೆ ವ್ಯಾಪಿಸಿ, ನೀರಿನ ಒರತೆ ಬತ್ತಿಹೋಯಿತು. ವರುಣಾಸ್ತ್ರದ ಬಾಯಿ ಒಣಗಿ ಅದಕ್ಕೆ ನೀರಡಸಿತು. ಮೃತ್ಯುವು ಭೀಮನ ಸೆರಗನ್ನು ಹಿಡಿದಳು. ರಾಜನೇ ಕೇಳು” ಎಂದನು ಸಂಜಯ.
ಮೂಲ ...{Loading}...
ಉರುಬಿದವು ಕೇಸುರಿಗಳುದಕವ
ಸುರಿದುವೊಣಗಿಲುಗಿಡಿಯ ಹಬ್ಬುಗೆ
ಹೊರಗೆ ಮಸಗಿತು ಮುಸುಕಿತುದಕದ ಬಾಣವಕ್ಕುಡಿಸೆ
ಒರತೆಯಾರಿತು ವರುಣಶರ ಬಾ
ಯರತು ನೀರಡಿಸಿದುದು ಭೀಮನ
ಸೆರಗ ಹಿಡಿದಳು ಮೃತ್ಯುವವನೀಪಾಲ ಕೇಳೆಂದ ॥48॥
೦೪೯ ಆವ ಶರವಿದ್ದೇಗುವುದು ...{Loading}...
ಆವ ಶರವಿದ್ದೇಗುವುದು ಮೈ
ಗಾವನಸುತರಾಂತಕನಲೈ ತಾ
ನಾವ ವಹಿಲದೊಳುರಿಯೊಳೆಡೆಹಾಯ್ದನಿಲಜನ ತೆಗೆದ
ನಾವರಿಯೆವಾ ಪವನಜನ ಶ
ಸ್ತ್ರಾವಳಿಯನಾ ಫಲುಗುಣನ ಗಾಂ
ಡೀವವನು ಹರಿ ಸೆಳೆದುಕೊಂಡನು ಬಿಸುಟನವನಿಯಲಿ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ಬಾಣವಿದ್ದು ತಾನೇ ಏನು ಮಾಡುವುದು ? ರಕ್ಷಣೆ ಮಾಡುವವನು ಶ್ರೀಕೃಷ್ಣನಲ್ಲವೇ ? ತಾನು ಯಾವ ವೇಗದಲ್ಲಿ ಉರಿಯಲ್ಲಿ ಸಿಕ್ಕಿದ ಭೀಮನನ್ನು ಹೊರಕ್ಕೆ ಸೆಳೆದನೋ ತಿಳಿಯದು. ಆ ಭೀಮನ ಶಸ್ತ್ರಗಳನ್ನೂ, ಅರ್ಜುನನ ಗಾಂಡೀವವನ್ನೂ ಹರಿ ಸೆಳೆದುಕೊಂಡನು. ಭೂಮಿಯ ಮೇಲೆ ಬಿಸಾಡಿದನು. ಕ್ಷಣಮಾತ್ರದಲ್ಲಿ ಈ ಕೆಲಸ ನಡೆಯಿತು.
ಮೂಲ ...{Loading}...
ಆವ ಶರವಿದ್ದೇಗುವುದು ಮೈ
ಗಾವನಸುತರಾಂತಕನಲೈ ತಾ
ನಾವ ವಹಿಲದೊಳುರಿಯೊಳೆಡೆಹಾಯ್ದನಿಲಜನ ತೆಗೆದ
ನಾವರಿಯೆವಾ ಪವನಜನ ಶ
ಸ್ತ್ರಾವಳಿಯನಾ ಫಲುಗುಣನ ಗಾಂ
ಡೀವವನು ಹರಿ ಸೆಳೆದುಕೊಂಡನು ಬಿಸುಟನವನಿಯಲಿ ॥49॥
೦೫೦ ಮುರಿಮುರಿದು ಕಬ್ಬೊಗೆಯ ...{Loading}...
ಮುರಿಮುರಿದು ಕಬ್ಬೊಗೆಯ ಹೊದರಿನ
ಹೊರಳಿ ಹರೆದುದು ಸೂಸುಗಿಡಿಗಳ
ನೆರವಿ ನಸಿದುದು ನಿಮಿರ್ದ ಹೊಂಗರಿಯಂಬು ಹೊಳೆಹೊಳೆದು
ಮುರಹರನ ಪಾದಾರವಿಂದದ
ಹೊರೆಯೊಳಡಗಿತು ಹೋಯ್ತು ಭಯವು
ಬ್ಬರದೊಳಗೆ ಬೊಬ್ಬಿರಿದವುರು ನಿಸ್ಸಾಳಕೋಟಿಗಳು ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಪ್ಪನೆಯ ಹೊಗೆಯ ರಾಶಿಗಳು ತಿರುತಿರುಗಿ ನಾಶವಾದವು. ಕಿಡಿಗಳನ್ನು ಸೂಸುವ ಗುಂಪು ಕ್ಷೀಣಿಸಿತು. ನೆಟ್ಟಗೆ ನಿಂತ ಬಂಗಾರದ ಗರಿಯ ಬಾಣ ಹೊಳೆಯುತ್ತಾ ಶ್ರೀಕೃಷ್ಣನ ಪಾದಾರವಿಂದದಲ್ಲಿ ಅಡಗಿ ಹೋಯಿತು. ಅದರೊಡನೆ ಪಾಂಡವರ ಭೀತಿಯೂ ಅಡಗಿತು. ಭಯವು ನಿವಾರಣೆಯಾಯ್ತು. ವಾದ್ಯ ಕೋಟಿಗಳು ವಿಶೇಷವಾಗಿ ಆರ್ಭಟದಿಂದ ಬೊಬ್ಬಿರಿದುವು.
ಮೂಲ ...{Loading}...
ಮುರಿಮುರಿದು ಕಬ್ಬೊಗೆಯ ಹೊದರಿನ
ಹೊರಳಿ ಹರೆದುದು ಸೂಸುಗಿಡಿಗಳ
ನೆರವಿ ನಸಿದುದು ನಿಮಿರ್ದ ಹೊಂಗರಿಯಂಬು ಹೊಳೆಹೊಳೆದು
ಮುರಹರನ ಪಾದಾರವಿಂದದ
ಹೊರೆಯೊಳಡಗಿತು ಹೋಯ್ತು ಭಯವು
ಬ್ಬರದೊಳಗೆ ಬೊಬ್ಬಿರಿದವುರು ನಿಸ್ಸಾಳಕೋಟಿಗಳು ॥50॥
೦೫೧ ಜಗದುಸುರು ಪಸರಿಸಿತು ...{Loading}...
ಜಗದುಸುರು ಪಸರಿಸಿತು ಹರುಷದ
ಹೊಗರು ಮಸಗಿತು ರಿಪುನೃಪರ ನಿ
ನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ
ಹೊಗೆವ ಮೋರೆಯ ಕಯ್ಯಗಲ್ಲದ
ಬಿಗಿದ ಬೆರಗಿನ ಖತಿಯೊಳುಸುರುವ
ನಗೆಯೊಳಶ್ವತ್ಥಾಮನಿದ್ದನು ಮೊಗದ ಮೋನದಲಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತು ನಿರಾಳವಾಗಿ ಉಸಿರಾಡುವಂತಾಯಿತು. ಶತ್ರುರಾಜರ ಹರುಷದ ಕಾಂತಿ ವ್ಯಾಪಿಸಿತು. ನಿನ್ನ ಮೊಂಡು ಮಗನ ಉತ್ಸಾಹವು ದುಃಖವೆಂಬ ಕೆಸರಿನಲ್ಲಿ ಅದ್ದಿಹೋಯಿತು. ಸಿಟ್ಟಾದ ಮೋರೆಯ, ಗಲ್ಲದ ಮೇಲೆ ಕೈಯನ್ನಿಟ್ಟ, ಆಶ್ಚರ್ಯದಿಂದ ಕೂಡಿದ, ಕೋಪದಿಂದ ಉಸುರುವ ನಗೆಯ ಮೊಗದ ಮೌನದಲ್ಲಿ ಅಶ್ವತ್ಥಾಮನಿದ್ದನು.
ಮೂಲ ...{Loading}...
ಜಗದುಸುರು ಪಸರಿಸಿತು ಹರುಷದ
ಹೊಗರು ಮಸಗಿತು ರಿಪುನೃಪರ ನಿ
ನ್ನಗಡು ಮಗನುತ್ಸಾಹವದ್ದುದು ಖೇದಪಂಕದಲಿ
ಹೊಗೆವ ಮೋರೆಯ ಕಯ್ಯಗಲ್ಲದ
ಬಿಗಿದ ಬೆರಗಿನ ಖತಿಯೊಳುಸುರುವ
ನಗೆಯೊಳಶ್ವತ್ಥಾಮನಿದ್ದನು ಮೊಗದ ಮೋನದಲಿ ॥51॥
೦೫೨ ಏನು ಮಾಡುವೆನಿನ್ನು ...{Loading}...
ಏನು ಮಾಡುವೆನಿನ್ನು ಭಾಗ್ಯ ವಿ
ಹೀನನಕಟಾ ಕೌರವನು ಸುರ
ಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು
ಹಾನಿಯಿವದಿರಿಗೊಲಿದುದಾರಿ
ದ್ದೇನಹುದು ಪರದೈವದನುಸಂ
ಧಾನವತ್ತಲು ಸುಡಲೆನುತ ತಿರುಗಿದನು ಪಾಳೆಯಕೆ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇನ್ನೇನು ಮಾಡುವೆನು ? ಅಯ್ಯೋ… ಕೌರವನು ಭಾಗ್ಯವಿಹೀನನು. ಕಾಮಧೇನು ಗೊಡ್ಡಾಯ್ತು. ಕಲ್ಪವೃಕ್ಷ ಕಾಡುಮರವಾಯ್ತು. ಇವರುಗಳಿಗೆ ಹಾನಿಯೇ ಒಲಿದಿವೆ. ಯಾರಿದ್ದೇನಾಗುವುದು ? ದೈವದ ಯೋಜನೆ ಆ ಕಡೆ ಇದೆ. ಸುಡಲಿ” ಎನ್ನುತ್ತಾ ಅಶ್ವತ್ಥಾಮನು ಪಾಳಯಕ್ಕೆ ಹಿಂತಿರುಗಿದನು.
ಮೂಲ ...{Loading}...
ಏನು ಮಾಡುವೆನಿನ್ನು ಭಾಗ್ಯ ವಿ
ಹೀನನಕಟಾ ಕೌರವನು ಸುರ
ಧೇನು ನೆರೆ ಗೊಡ್ಡಾಯ್ತು ಸುರತರು ಕಾಡಮರನಾಯ್ತು
ಹಾನಿಯಿವದಿರಿಗೊಲಿದುದಾರಿ
ದ್ದೇನಹುದು ಪರದೈವದನುಸಂ
ಧಾನವತ್ತಲು ಸುಡಲೆನುತ ತಿರುಗಿದನು ಪಾಳೆಯಕೆ ॥52॥
೦೫೩ ಬನ್ದು ವೇದವ್ಯಾಸಮುನಿ ...{Loading}...
ಬಂದು ವೇದವ್ಯಾಸಮುನಿ ಗುರು
ನಂದನಂಗರುಹಿದನು ಪಾರ್ಥಮು
ಕುಂದರನು ಪೂರ್ವದಲಿ ನರನಾರಾಯಣಾಹ್ವಯದ
ಸಂದ ಋಷಿಗಳು ಭೂಮಿಭಾರವ
ನೊಂದುಪಾಯದಲಪಹರಿಸಲೈ
ತಂದ ಹದನನು ತಿಳುಹಿ ಬಂದನು ಫಲುಗುಣನ ಹೊರೆಗೆ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸಮಯಕ್ಕೆ ಸರಿಯಾಗಿ ವೇದವ್ಯಾಸಮುನಿ ಬಂದು ಗುರುನಂದನ ಅಶ್ವತ್ಥಾಮನಿಗೆ ತಿಳಿಸಿ ಹೇಳಿದನು. ಪೂರ್ವಕಾಲದಲ್ಲಿ ಪಾರ್ಥ, ಮುಕುಂದರು -ಪೂರ್ವದಲ್ಲಿ ನರನಾರಾಯಣರು- , ಯಜ್ಞದಲ್ಲಿ ಭೇಟಿ ಮಾಡಿದ ಋಷಿಗಳ ಕೋರಿಕೆಯಂತೆ, ಭೂಮಿಯ ಭಾರವನ್ನು ಪರಿಹರಿಸಲು ಒಂದು ಉಪಾಯವೋ ಎಂಬಂತೆ ಭೂಮಿಗೆ ಬಂದ ರೀತಿಯನ್ನು ತಿಳಿಸಿ, ಅರ್ಜುನನ ಬಳಿಗೆ ಬಂದನು.
ಮೂಲ ...{Loading}...
ಬಂದು ವೇದವ್ಯಾಸಮುನಿ ಗುರು
ನಂದನಂಗರುಹಿದನು ಪಾರ್ಥಮು
ಕುಂದರನು ಪೂರ್ವದಲಿ ನರನಾರಾಯಣಾಹ್ವಯದ
ಸಂದ ಋಷಿಗಳು ಭೂಮಿಭಾರವ
ನೊಂದುಪಾಯದಲಪಹರಿಸಲೈ
ತಂದ ಹದನನು ತಿಳುಹಿ ಬಂದನು ಫಲುಗುಣನ ಹೊರೆಗೆ ॥53॥
೦೫೪ ನರನ ಚಿತ್ತಗ್ಲಾನಿಯನು ...{Loading}...
ನರನ ಚಿತ್ತಗ್ಲಾನಿಯನು ಪರಿ
ಹರಿಸಿದನು ಶೂಲದಲಿ ಮುಂಕೊಂ
ಡರಿ ಬಲವನಿರಿದಾತನಾರೆನಲಿಂದುಧರನೆಂದು
ಹರನ ಕರುಣದ ಹದನನೀತಂ
ಗೊರೆದು ಶತರುದ್ರೀಯವನು ವಿ
ಸ್ತರಿಸಿ ಬಿಜಯಂಗೈದನಾ ಮುನಿಪತಿ ನಿಜಾಶ್ರಮಕೆ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವ್ಯಾಸನು ಅರ್ಜುನನ ಮನದ ದುಃಖವನ್ನು ಪರಿಹರಿಸಿದನು. ಅಜುನನು “ಮುಂದೆ ನಿಂತು ಶತ್ರುಸೈನ್ಯವನ್ನು ಶೂಲದಲ್ಲಿ ಇರಿದಾತನು ಯಾರು ?” ಎನ್ನಲು ಚಂದ್ರ ಧರನಾದ ಶಿವನು ಎಂದು ತಿಳಿಸಿ, ಹರನ ಕರುಣೆಯ ಆಳವನ್ನು ಅರ್ಜುನನಿಗೆ ಕಂಡರಿಸಿ ಶತರುದ್ರೀಯವೆಂಬ ಮಂತ್ರವನ್ನು ವಿವರಿಸಿ, ಆ ಮುನಿಶ್ರೇಷ್ಠನು ತನ್ನ ಆಶ್ರಮಕ್ಕೆ ಹೊರಟನು.
ಮೂಲ ...{Loading}...
ನರನ ಚಿತ್ತಗ್ಲಾನಿಯನು ಪರಿ
ಹರಿಸಿದನು ಶೂಲದಲಿ ಮುಂಕೊಂ
ಡರಿ ಬಲವನಿರಿದಾತನಾರೆನಲಿಂದುಧರನೆಂದು
ಹರನ ಕರುಣದ ಹದನನೀತಂ
ಗೊರೆದು ಶತರುದ್ರೀಯವನು ವಿ
ಸ್ತರಿಸಿ ಬಿಜಯಂಗೈದನಾ ಮುನಿಪತಿ ನಿಜಾಶ್ರಮಕೆ ॥54॥
೦೫೫ ಬಿಸುಟು ಕೈದುಗಳೆಲ್ಲವನು ...{Loading}...
ಬಿಸುಟು ಕೈದುಗಳೆಲ್ಲವನು ಕೈ
ವಶವ ಮಾಡಿತು ಸೇನೆ ಲಜ್ಜಾ
ರಸಕೆ ಗುರಿಯಾಯ್ತೊಮ್ಮೆ ಮರಳಿದು ಹರುಷಮಯರಸಕೆ
ಮುಸುಕುದಲೆಯಲಿ ಮುರಿದುದದು ಭಯ
ರಸದ ರಹಿಯಲಿ ತಿರುಗಿತಿದು ರವಿ
ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಸಾಡಿದ್ದ ಆಯುಧಗಳನ್ನು ಭಟರು ಪುನಃ ಕೈಗೆತ್ತಿಕೊಂಡರು. ಒಮ್ಮೆ ಲಜ್ಜಾ ರಸಕ್ಕೆ ಗುರಿಯಾಗಿದ್ದ ಸೇನೆ ಪುನಃ ಹರುಷಮಯ ರಸಕ್ಕೆ ಹಿಂತಿರುಗಿತು. ಇಷ್ಟಾದರೂ ಸೇನೆ ಮುಖ ಮುಚ್ಚಿಕೊಂಡು ಹಿಂತಿರುಗಿತು. ಭಯದ ನೆನಪಿನಲ್ಲೇ ಮರಳಿತು. ಸೂರ್ಯನು ಮುಖವನ್ನು ತಿರುಗಿಸಿ ವೈರಾಗ್ಯದಿಂದ (ರಾಗರಹಿತವಾಗಿ) ಆಕಾಶವನ್ನು ಬೀಳ್ಕೊಟ್ಟನು.
ಪದಾರ್ಥ (ಕ.ಗ.ಪ)
ರಹಿ-ಮಾರ್ಗ, ಸೊಗಸು, ರೀತಿ
ಟಿಪ್ಪನೀ (ಕ.ಗ.ಪ)
ಹೀಗೂ ಈ ಪದ್ಯಕ್ಕೆ ವಿವರಣೆ ನೀಡಬಹುದು :
ವೀರರಾಗಿದ್ದೂ ಆಯುಧಗಳನ್ನು ಬಿಸಾಡಿ ಗೆಲುವನ್ನು ಪಡೆಯಬೇಕಾಯಿತಲ್ಲಾ ಎಂಬ ಲಜ್ಜೆ ಒಂದು ಕಡೆ, ಮರುಕ್ಷಣವೇ ಗೆಲುವನ್ನು ಪಡೆದ ಸಂತೋಷ ಈ ಉಭಯ ರಸಗಳ ಮಿಶ್ರಣದಲ್ಲಿ ಪಾಂಡವಸೇನೆ ಹಿಂತಿರುಗಿತು.
ಮೂಲ ...{Loading}...
ಬಿಸುಟು ಕೈದುಗಳೆಲ್ಲವನು ಕೈ
ವಶವ ಮಾಡಿತು ಸೇನೆ ಲಜ್ಜಾ
ರಸಕೆ ಗುರಿಯಾಯ್ತೊಮ್ಮೆ ಮರಳಿದು ಹರುಷಮಯರಸಕೆ
ಮುಸುಕುದಲೆಯಲಿ ಮುರಿದುದದು ಭಯ
ರಸದ ರಹಿಯಲಿ ತಿರುಗಿತಿದು ರವಿ
ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ ॥55॥
೦೫೬ ಆವ ಶರದಲಿ ...{Loading}...
ಆವ ಶರದಲಿ ಕೊರತೆ ನಿನ್ನವ
ರಾವ ಬಲದಲಿ ಕುಂದು ಭುವನದೊ
ಳಾವನೈ ಸಮಜೋಳಿ ನಿನ್ನರಮನೆಯ ಸುಭಟರಿಗೆ
ಆವನಿದ್ದೇನಹುದು ಜಗದಧಿ
ದೈವದಲಿ ಸೆಣಸಿದಿರಿ ಪಾಂಡವ
ಜೀವಿಯೆಂದರಿದರಿದು ಗದುಗಿನ ವೀರನಾರಯಣ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆವ ಶಸ್ತ್ರಾಸ್ತ್ರಗಳಲ್ಲಿ ನಿಮಗೆ ಯಾವ ಕೊರತೆ ತಾನೆ ಇತ್ತು? ? ನಿನ್ನವರ ಬಲದಲ್ಲಿ ಯಾವ ಕುಂದಿತ್ತು? ಜಗತ್ತಿನಲ್ಲಿ ನಿನ್ನ ಅರಮನೆಯ ಸುಭಟರಿಗೆ ಯಾರು ತಾನೇ ಸಮಾನರು ? ಯಾರಿದ್ದೇನು ಪ್ರಯೋಜನ ? ಜಗದಧಿದೇವನಾದ ಶ್ರೀಕೃಷ್ಣನಲ್ಲಿ ಸ್ಪರ್ಧಿಸಿದಿರಿ. ಶ್ರೀಕೃಷ್ಣನು ಪಾಂಡವ ಜೀವಿ ಎಂಬುದನ್ನರಿತೂ ವಿರೋಧ ಮಾಡಿಕೊಂಡಿರಿ. ಇವೆಲ್ಲವೂ ಗದುಗಿನ ವೀರನಾರಾಯಣನ ಲೀಲೆ.” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಆವ ಶರದಲಿ ಕೊರತೆ ನಿನ್ನವ
ರಾವ ಬಲದಲಿ ಕುಂದು ಭುವನದೊ
ಳಾವನೈ ಸಮಜೋಳಿ ನಿನ್ನರಮನೆಯ ಸುಭಟರಿಗೆ
ಆವನಿದ್ದೇನಹುದು ಜಗದಧಿ
ದೈವದಲಿ ಸೆಣಸಿದಿರಿ ಪಾಂಡವ
ಜೀವಿಯೆಂದರಿದರಿದು ಗದುಗಿನ ವೀರನಾರಯಣ ॥56॥
೦೫೭ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
sದ್ರೋಣಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಇಲ್ಲಿಗೆ ಶ್ರೀಮತ್ ಅನಂತ ಮಹಿಮನಾದ ಗದಗಿನ
ವೀರನಾರಾಯಣನ ಪಾದ ಕಮಲಗಳ ಮಕರಂದದ
ಮಧುಪಾನದಿಂದ ಪರಿಪುಷ್ಪವಾದ ಷಟ್ಪದೀ ಛಂದಸ್ಸಿನ
ಪದ್ಯಗಳಲ್ಲಿ ಶ್ರೀಕುಮಾರವ್ಯಾಸ ಯೋಗೀಂದ್ರನಿಂದ
ವಿರಚಿತವಾದ ಕರ್ಣಾಟ ಭಾರತ ಕಥಾಮಂಜರಿಯಲ್ಲಿ ದ್ರೋಣಪರ್ವವು ಮುಗಿಯಿತು.
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
sದ್ರೋಣಪರ್ವಂ ಸಮಾಪ್ತಮಾದುದು.