೦೦೦ ಸೂ ರಿಪುಬಲವ ...{Loading}...
ಸೂ. ರಿಪುಬಲವ ಗೆಲುವಲ್ಲಿ ಶಾಪಾ
ದಪಿ ಶರಾದಪಿಯೆಂಬ ಜಯ ಲೋ
ಲುಪನು ಸಂಗ್ರಾಮದಲಿ ಮಡಿದನು ಪುತ್ರಮೋಹದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಶತ್ರುಸೇನೆಯನ್ನು ಗೆಲ್ಲುವಲ್ಲಿ ಶಾಪಾದಪಿ ಶರಾದಪಿಯೆಂಬ ಜಯಲೋಲುಪನಾದ ದ್ರೋಣನು ಪುತ್ರಮೋಹದಿಂದ ಸಂಗ್ರಾಮದಲ್ಲಿ ಮಡಿದನು.
ಟಿಪ್ಪನೀ (ಕ.ಗ.ಪ)
(ಶಾಪಾದಪಿ ಶರಾದಪಿ ಎಂಬುದು ಒಂದು ಪ್ರಚಲಿತವಾದ ಮಾತು. ಶಾಪದಿಂದಲೇ ಆಗಲೀ ಬಾಣದಿಂದಲೇ ಆಗಲಿ ಮರಣವನ್ನುಂಟು ಮಾಡುವ ಸಾಮರ್ಥ್ಯವುಳ್ಳ, ಯುದ್ಧದಲ್ಲಿ ಸೋಲನ್ನೇ ಕಾಣದ, ಸದಾ ವಿಜಯದಲ್ಲೇ ಆಸಕ್ತನಾದ ದ್ರೋಣನು ಪುತ್ರಮೋಹದಿಂದ ಮಡಿದನು) ಶ್ಲೋಕದ ಪೂರ್ಣ ಪಾಠ ?
ಮೂಲ ...{Loading}...
ಸೂ. ರಿಪುಬಲವ ಗೆಲುವಲ್ಲಿ ಶಾಪಾ
ದಪಿ ಶರಾದಪಿಯೆಂಬ ಜಯ ಲೋ
ಲುಪನು ಸಂಗ್ರಾಮದಲಿ ಮಡಿದನು ಪುತ್ರಮೋಹದಲಿ
೦೦೧ ಸಾಲದೇ ಸಮರಙ್ಗವಿರುಳಿನ ...{Loading}...
ಸಾಲದೇ ಸಮರಂಗವಿರುಳಿನ
ಕಾಳೆಗದ ಜಯ ನಮ್ಮದರಿ ಭೂ
ಪಾಲಕನ ಥಟ್ಟಿನಲಿ ಮಡಿದುದು ಬೇಹ ಬೇಹವರು
ಮೇಲುಗಾಳೆಗ ನಮ್ಮದೀಸರ
ಮೇಲೆ ತೆಗೆಸುವುದತಿಮಥನದಲಿ
ಕಾಳಹುದು ಬಳಿಕೆನಲು ನೃಪತಿಗೆ ನುಡಿದನಾಚಾರ್ಯ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಲದೇ ಯುದ್ಧಭೂಮಿ ? ರಾತ್ರಿ ಕಾಳಗದ ಜಯ ನಮ್ಮದು. ಶತ್ರುರಾಜನ ಸೇನೆಯಲ್ಲಿ ವೀರಾಧಿವೀರರು ಮಡಿದರು. ಕಾಳಗದಲ್ಲಿ ಮೇಲುಗೈ ನಮ್ಮದು. ಇಷ್ಟರ ಮೇಲೆ ಸದ್ಯಕ್ಕೆ ಯುದ್ಧವನ್ನು ನಿಲ್ಲಿಸಬಹುದು. ಇಲ್ಲದಿದ್ದರೆ ಅತಿಯಾದ ಘರ್ಷಣೆಯಿಂದ ಕೆಡುಕಾಗುವುದು ಎಂದು ದುರ್ಯೋಧನನು ಹೇಳಲು ದ್ರೋಣನು ರಾಜನಾದ ಕೌರವನಿಗೆ ಹೀಗೆ ಹೇಳಿದನು.
ಮೂಲ ...{Loading}...
ಸಾಲದೇ ಸಮರಂಗವಿರುಳಿನ
ಕಾಳೆಗದ ಜಯ ನಮ್ಮದರಿ ಭೂ
ಪಾಲಕನ ಥಟ್ಟಿನಲಿ ಮಡಿದುದು ಬೇಹ ಬೇಹವರು
ಮೇಲುಗಾಳೆಗ ನಮ್ಮದೀಸರ
ಮೇಲೆ ತೆಗೆಸುವುದತಿಮಥನದಲಿ
ಕಾಳಹುದು ಬಳಿಕೆನಲು ನೃಪತಿಗೆ ನುಡಿದನಾಚಾರ್ಯ ॥1॥
೦೦೨ ಅವನಿಪಾಲರು ಕಙ್ಗಳಿನ್ದವೆ ...{Loading}...
ಅವನಿಪಾಲರು ಕಂಗಳಿಂದವೆ
ಕಿವಿಗೆ ಕರವೊಳ್ಳಿದರು ಕಂಡುದ
ನವರು ನಂಬರು ಕೊಂಡೆಯರ ನುಡಿಗೇಳ್ದು ನಂಬುವರು
ನಿವಗೆ ಹೇಳುವುದಲ್ಲ ಲೋಕದ
ಹವಣನೆಂದೆವು ನಾವು ಪಾಂಡವ
ರವರು ನಿನ್ನವರೆಂಬುದನು ನೀನಿಂದು ನೋಡೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜರುಗಳು ಕಣ್ಣುಗಳಿಗಿಂತ ವಿಶೇಷವಾಗಿ ಕಿವಿಗೆ ಹೆಚ್ಚು ಬೆಲೆ ಕೊಡುತ್ತಾರೆ. ಕಂಡುದನ್ನು ಅವರು ನಂಬರು. ಚಾಡಿಕೋರರ ಮಾತುಕೇಳಿ ನಂಬುವರು. ನಿನ್ನ ಬಗ್ಗೆ ಹೇಳುವುದಲ್ಲ. ಲೋಕದ ರೀತಿಯನ್ನು ನಾವು ಹೇಳಿದೆವು. ನಾವು ಪಾಂಡವರ ಕಡೆಯವರೋ ಅಥವಾ ನಿನ್ನವರೋ ಎಂಬುದನ್ನು ನೀನಿಂದು ನೋಡು” ಎಂದು ದ್ರೋಣನು ದುರ್ಯೋಧನನಿಗೆ ಹೇಳಿದನು..
ಮೂಲ ...{Loading}...
ಅವನಿಪಾಲರು ಕಂಗಳಿಂದವೆ
ಕಿವಿಗೆ ಕರವೊಳ್ಳಿದರು ಕಂಡುದ
ನವರು ನಂಬರು ಕೊಂಡೆಯರ ನುಡಿಗೇಳ್ದು ನಂಬುವರು
ನಿವಗೆ ಹೇಳುವುದಲ್ಲ ಲೋಕದ
ಹವಣನೆಂದೆವು ನಾವು ಪಾಂಡವ
ರವರು ನಿನ್ನವರೆಂಬುದನು ನೀನಿಂದು ನೋಡೆಂದ ॥2॥
೦೦೩ ಬಿಲ್ಲನೊದರಿಸಿ ವೈರಿ ...{Loading}...
ಬಿಲ್ಲನೊದರಿಸಿ ವೈರಿ ಭಟರಿಗೆ
ಚೆಲ್ಲಿದನು ಭೀತಿಯನು ಬರಸಿಡಿ
ಲೆಲ್ಲಿ ತುಡುಕುವುದಾರು ಬಲ್ಲರು ದ್ರೋಣನುರವಣೆಯ
ಘಲ್ಲಣೆಯ ಖುರಪುಟದ ತುರಗದ
ಹಲ್ಲಣೆಯ ಹೇಷಿತಕೆ ಹಗೆಯೆದೆ
ಝಲ್ಲೆನಲು ಕಣೆ ಜಾಡಿ ಕವಿದುದು ಕಟಕದಗಲದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲನ್ನು ಹೆದೆ ಏರಿಸುವುದರ ಮೂಲಕ ಶತ್ರು ಸೈನಿಕರಿಗೆ ಭೀತಿಯನ್ನುಂಟು ಮಾಡಿದನು. ಬರಸಿಡಿಲಿನಂತೆ ಬೀಸಿ ಹೋದ ದ್ರೋಣನ ರಭಸದ ಬಾಣವು ಯಾರನ್ನು ತಾಗುವುದೋ ಯಾರು ಬಲ್ಲರು ? ಕುದುರೆಯ ಗೊರಸಿನ ಘಲ್-ಘಲ್ ಎಂಬ ಧ್ವನಿಗೆ ಹಾಗೂ ಅವುಗಳ ಅತಿಶಯದ ಹೇಷಾರವದ ಶತ್ರುವಿನ ಎದೆ ಝಲ್ಲೆನಲು, ಸೇನೆಯ ಉದ್ದಗಲಕ್ಕೂ ಬಾಣಗಳು ಕವಿದವು.
ಮೂಲ ...{Loading}...
ಬಿಲ್ಲನೊದರಿಸಿ ವೈರಿ ಭಟರಿಗೆ
ಚೆಲ್ಲಿದನು ಭೀತಿಯನು ಬರಸಿಡಿ
ಲೆಲ್ಲಿ ತುಡುಕುವುದಾರು ಬಲ್ಲರು ದ್ರೋಣನುರವಣೆಯ
ಘಲ್ಲಣೆಯ ಖುರಪುಟದ ತುರಗದ
ಹಲ್ಲಣೆಯ ಹೇಷಿತಕೆ ಹಗೆಯೆದೆ
ಝಲ್ಲೆನಲು ಕಣೆ ಜಾಡಿ ಕವಿದುದು ಕಟಕದಗಲದಲಿ ॥3॥
೦೦೪ ಇಳೆಯೊಳದುಭುತವಿದು ಕೃತಾನ್ತನ ...{Loading}...
ಇಳೆಯೊಳದುಭುತವಿದು ಕೃತಾಂತನ
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ಆಚಾರ್ಯನಂಬುಗಳೋ ಮಹಾದೇವ
ನಿಳಿನಿಳಿಲು ಭುಗಿಲೆಂಬ ಛಿಳಿಛಿಳಿ
ಛಿಳಿಛಿಟಿಲು ಭೋರೆಂಬ ಖಣಿಖಟಿ
ಖಳಿಲು ಖಳಿಲೆಂಬಂಬುಗಳ ದನಿ ತುಂಬಿತಂಬರವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತಿನಲ್ಲಿ ಇದೊಂದು ಅದ್ಭುತ. ಆಚಾರ್ಯನ ಬಾಣಗಳು ಫಲದುಂಬಿರುವ ಬತ್ತದ ಗದ್ದೆಗೆ ಮುತ್ತಿದ ಮೃತ್ಯುದೇವತೆಯ ಗಿಳಿಗಳೋ ಎಂಬಂತೆ ಗೋಚರಿಸುತ್ತಿದ್ದುವು. ಬಾಣಗಳಿಂದ ಹೊರಟ ನಿಳಿನಿಳಿಲು ಭುಗಿಲೆಂಬ ಛಿಳಿಛಿಳಿ ಛಟಿಲು ಭೋರೆಂಬ ಖಣಿ ಖಟಿ ಖಳಿಲು ಖಳಿಲೆಂಬ ದನಿ ಆಕಾಶವನ್ನು ವ್ಯಾಪಿಸಿತು.
ಪದಾರ್ಥ (ಕ.ಗ.ಪ)
ಶಾಳೀವನ-ಬತ್ತದ ಗದ್ದೆ
ಮೂಲ ...{Loading}...
ಇಳೆಯೊಳದುಭುತವಿದು ಕೃತಾಂತನ
ಫಲಿತ ಶಾಳೀವನವ ಮುತ್ತಿದ
ಗಿಳಿಗಳೋ ಆಚಾರ್ಯನಂಬುಗಳೋ ಮಹಾದೇವ
ನಿಳಿನಿಳಿಲು ಭುಗಿಲೆಂಬ ಛಿಳಿಛಿಳಿ
ಛಿಳಿಛಿಟಿಲು ಭೋರೆಂಬ ಖಣಿಖಟಿ
ಖಳಿಲು ಖಳಿಲೆಂಬಂಬುಗಳ ದನಿ ತುಂಬಿತಂಬರವ ॥4॥
೦೦೫ ಕಡಿದು ಬೀಳುವ ...{Loading}...
ಕಡಿದು ಬೀಳುವ ಕೈದುಗಳನರೆ
ಗಡಿದು ಜೋಲುವ ಜೋಡುಗಳ ನೆರೆ
ಸಿಡಿದು ಹಾರುವ ಸೀಸಕದ ನುಗ್ಗಾದ ಹಲಗೆಗಳ
ಉಡಿದ ಸಿಂಧದ ನೆಲಕೆ ಹರಹಿದ
ಕೊಡೆಯ ಚಮರದ ತಾರು ಥಟ್ಟಿಗೆ
ಕೆಡೆದ ಚಾತುರ್ಬಲವನಭಿವರ್ಣಿಸುವನಾರೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತರಿಸಿ ಬೀಳುವ ಆಯುಧಗಳನ್ನು, ಅರ್ಧಕಡಿದು ನೇತಾಡುವ ಕವಚಗಳ, ವಿಶೇಷವಾಗಿ ಸಿಡಿದು ಹಾರುವ ಶಿರಸ್ತ್ರಾಣಗಳ, ನುಗ್ಗಾದ ಹಲಗೆಗಳ, ಮುರಿದ ಬಾವುಟದ, ನೆಲದ ಮೇಲೆ ಹರಡಿರುವ ಕೊಡೆಯ, ಚಾಮರದ ಹೀಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಚತುರಂಗ ಸೇನೆಯನ್ನು ವರ್ಣಿಸುವವನು ಯಾರು ? ಎಂದುಸಂಜಯನು ಹೇಳಿದನು.
ಮೂಲ ...{Loading}...
ಕಡಿದು ಬೀಳುವ ಕೈದುಗಳನರೆ
ಗಡಿದು ಜೋಲುವ ಜೋಡುಗಳ ನೆರೆ
ಸಿಡಿದು ಹಾರುವ ಸೀಸಕದ ನುಗ್ಗಾದ ಹಲಗೆಗಳ
ಉಡಿದ ಸಿಂಧದ ನೆಲಕೆ ಹರಹಿದ
ಕೊಡೆಯ ಚಮರದ ತಾರು ಥಟ್ಟಿಗೆ
ಕೆಡೆದ ಚಾತುರ್ಬಲವನಭಿವರ್ಣಿಸುವನಾರೆಂದ ॥5॥
೦೦೬ ಅಳಿದವೈನೂರಾನೆ ಮಗ್ಗುಲ ...{Loading}...
ಅಳಿದವೈನೂರಾನೆ ಮಗ್ಗುಲ
ನೆಲಕೆ ಕೀಲಿಸಿ ಪಾಡಿಗೈದವು
ಬಲುಗುದುರೆ ಹದಿನೈದು ಸಾವಿರವೇಳುನೂರು ರಥ
ಮಲಗಿದವು ಕಾಲಾಳು ಲೆಕ್ಕದ
ಕಲೆಯ ತೊಡಸಿತು ರಾಜಪುತ್ರರು
ಹಲಬರವರಲಿ ಹೊಯ್ದು ಹೊಕ್ಕರು ಸುರರ ಪಟ್ಟಣವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದು ನೂರು ಆನೆ ನೆಲಕ್ಕೆ ಉರುಳಿ ನಾಶವಾದುವು. ಹದಿನೈದು ಸಾವಿರ ಬಲಿಷ್ಠ ಕುದುರೆಗಳು ನಾಶಗೈದವು. ಏಳು ನೂರು ರಥಗಳು ಮಗಚಿ ಬಿದ್ದವು. ಲೆಕ್ಕ ಹಾಕುವ ಕಲೆಯನ್ನೇ ಗೊಂದಲಕ್ಕೀಡುಮಾಡುವಷ್ಟು ಸಂಖ್ಯೆಯ ಕಾಲಾಳುಗಳು ಮಡಿದರು. ರಾಜಪುತ್ರರಲ್ಲಿ ಹಲವರು ಕಾದಾಡಿ ಸುರರ ಪಟ್ಟಣ ಸೇರಿದರು.
ಮೂಲ ...{Loading}...
ಅಳಿದವೈನೂರಾನೆ ಮಗ್ಗುಲ
ನೆಲಕೆ ಕೀಲಿಸಿ ಪಾಡಿಗೈದವು
ಬಲುಗುದುರೆ ಹದಿನೈದು ಸಾವಿರವೇಳುನೂರು ರಥ
ಮಲಗಿದವು ಕಾಲಾಳು ಲೆಕ್ಕದ
ಕಲೆಯ ತೊಡಸಿತು ರಾಜಪುತ್ರರು
ಹಲಬರವರಲಿ ಹೊಯ್ದು ಹೊಕ್ಕರು ಸುರರ ಪಟ್ಟಣವ ॥6॥
೦೦೭ ಸಾಲ ಮೇಘದ ...{Loading}...
ಸಾಲ ಮೇಘದ ಮನೆಗಳಿಗೆ ಬಿರು
ಗಾಳಿ ಬಿದ್ದಿನನಾಗಿ ಬರಲವ
ರಾಲಯದ ಸಿರಿ ಮೆರೆವುದೇ ಧೃತರಾಷ್ಟ್ರ ಚಿತ್ತಯಿಸು
ಬೀಳಹೊಯ್ದರು ಹೊಕ್ಕು ಭೂಮೀ
ಪಾಲನೆಯನಿವರೊಲ್ಲೆವೆಂಬವೊ
ಲೂಳಿಗವ ಮಾಡಿದನು ಪರಬಲದೊಳಗೆ ಕಲಿದ್ರೋಣ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೇಘದ ಸಾಲೆಂಬ ಮನೆಗಳಿಗೆ ಬಿರುಗಾಳಿಯು ಅತಿಥಿಯಾಗಿ ಬರಲು ಆ ಮನೆಯ ಸಿರಿ ಶೋಭಿಸುತ್ತದೆಯೇ ? ಧೃತರಾಷ್ಟ್ರನೇ ಕೇಳು. ರಣರಂಗದಲ್ಲಿ ದ್ರೋಣನು ಶತ್ರುಗಳನ್ನು ಬೀಳುವಂತೆ ಹೊಡೆದನು. ಮುಂದುವರಿದು ಶತ್ರು ಸೈನ್ಯದ ರಾಜರಿಗೆ ಭೂಮಿಪಾಲನೆಯೇ ಬೇಡವೆನ್ನಿಸುವಂತೆ ಶೂರ ದ್ರೋಣನು ರಣರಂಗದಲ್ಲಿ ತನ್ನ ಕೈಂಕರ್ಯವನ್ನು ಮಾಡಿದನು.” ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಬಿದ್ದಿನ-ಅತಿಥಿ
ಮೂಲ ...{Loading}...
ಸಾಲ ಮೇಘದ ಮನೆಗಳಿಗೆ ಬಿರು
ಗಾಳಿ ಬಿದ್ದಿನನಾಗಿ ಬರಲವ
ರಾಲಯದ ಸಿರಿ ಮೆರೆವುದೇ ಧೃತರಾಷ್ಟ್ರ ಚಿತ್ತಯಿಸು
ಬೀಳಹೊಯ್ದರು ಹೊಕ್ಕು ಭೂಮೀ
ಪಾಲನೆಯನಿವರೊಲ್ಲೆವೆಂಬವೊ
ಲೂಳಿಗವ ಮಾಡಿದನು ಪರಬಲದೊಳಗೆ ಕಲಿದ್ರೋಣ ॥7॥
೦೦೮ ಮುರಿದು ಬರುತಿದೆ ...{Loading}...
ಮುರಿದು ಬರುತಿದೆ ಸೇನೆ ಸಾಕೀ
ಪರಿಯ ಸೈರಣೆ ನಿಮ್ಮ ಮಾವನ
ಕುರಿದರಿಗೆ ಖತಿಗೊಂಡು ಕಾದಿ ವಿರಾಟ ಕೈಕೆಯರು
ತುರುಗಿದರು ತೆತ್ತೀಸರಲಿ ತೆಗೆ
ಮರೆಯ ಮಾತೇ ವಿಜಯಲಕ್ಷ್ಮಿಯ
ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನಿಮ್ಮ ಸೇನೆ ಹಿಂತಿರುಗಿ ಬರುತ್ತಿದೆ. ಈ ರೀತಿಯ ಸೈರಣೆ ಇನ್ನು ಸಾಕು. ನಿಮ್ಮ ಮಾವ ಶಲ್ಯನು ನಮ್ಮ ಸೈನ್ಯವನ್ನು ಕುರಿಗಳನ್ನು ಕತ್ತರಿಸಿದಂತೆ ಕತ್ತರಿಸುವುದನ್ನು ಕಂಡು ಕೋಪಗೊಂಡು ವಿರಾಟ, ಕೈಕೆಯರು ಕಾದಿ ಮೂವತ್ಮೂರು ದೇವತೆಗಳಲ್ಲಿ ಸೇರಿದರು. ಬಿಡು ಮುಚ್ಚುಮರೆಯ ಮಾತೇನಿದೆ? ? ದ್ರೋಣನು ವಿಜಯಲಕ್ಷ್ಮಿಯ ಸೆರಗನ್ನು ಹಿಡಿದನು" ಎಂದು ಪಾಂಡವ ಪಕ್ಷದ ಚರರು ಭೂಪತಿಯಾದ ಧರ್ಮರಾಜನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಕುರಿದರಿ-ಕುರಿಯಂತೆ ಕತ್ತರಿಸುವಿಕೆ,
ಟಿಪ್ಪನೀ (ಕ.ಗ.ಪ)
ತೆತ್ತೀಸ - ಹರಿಬ್ರಹ್ಮಾದಿ ಮುವ್ವತ್ಮೂರು ದೇವತೆಗಳು
ಮೂಲ ...{Loading}...
ಮುರಿದು ಬರುತಿದೆ ಸೇನೆ ಸಾಕೀ
ಪರಿಯ ಸೈರಣೆ ನಿಮ್ಮ ಮಾವನ
ಕುರಿದರಿಗೆ ಖತಿಗೊಂಡು ಕಾದಿ ವಿರಾಟ ಕೈಕೆಯರು
ತುರುಗಿದರು ತೆತ್ತೀಸರಲಿ ತೆಗೆ
ಮರೆಯ ಮಾತೇ ವಿಜಯಲಕ್ಷ್ಮಿಯ
ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ ॥8॥
೦೦೯ ಹೊಳೆಹೊಳೆದು ತಮ್ಬುಲದ ...{Loading}...
ಹೊಳೆಹೊಳೆದು ತಂಬುಲದ ರಸದಲಿ
ಮುಳುಗಿ ಮೂಡುವ ಢಗೆಯ ತೊಡೆಹದ
ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ
ಹಿಳಿದ ಛಲದ ವಿಡಾಯಿ ಧೈರ್ಯದ
ತಳಿತ ಭೀತಿಗೆ ಕಾಲುವೊಳೆಯಾ
ದಳಿಮನದ ಭೂಪಾಲನಿರವನು ಕಂಡನಾ ಪಾರ್ಥ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಳೆಯುವ ತಾಂಬೂಲದ ರಸದಿಂದಾದ ಧಗೆಯ ಬೆವರಿನ, ಪೆಚ್ಚುನಗೆಯುಳ್ಳ, ಕಳವಳಗೊಂಡ, ಕಣ್ಣೀರು ಒಸರುತ್ತಿರುವ, ಹಿಂಡಿ ಹೋದ ಛಲದ, ಅಧೈರ್ಯಗೊಂಡಿರುವ, ಕಾಲು ಹೊಳೆಯಷ್ಟುಮಟ್ಟಿನ ಭೀತಿ ತುಂಬಿದ್ದ ದುರ್ಬಲ ಮನಸ್ಸಿನ ರಾಜ ಧರ್ಮಜನ ಸ್ಥಿತಿಯನ್ನು ಪಾರ್ಥನು ಕಂಡನು.
ಮೂಲ ...{Loading}...
ಹೊಳೆಹೊಳೆದು ತಂಬುಲದ ರಸದಲಿ
ಮುಳುಗಿ ಮೂಡುವ ಢಗೆಯ ತೊಡೆಹದ
ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ
ಹಿಳಿದ ಛಲದ ವಿಡಾಯಿ ಧೈರ್ಯದ
ತಳಿತ ಭೀತಿಗೆ ಕಾಲುವೊಳೆಯಾ
ದಳಿಮನದ ಭೂಪಾಲನಿರವನು ಕಂಡನಾ ಪಾರ್ಥ ॥9॥
೦೧೦ ನಾಯಿಗಳ ಹೊಯ್ ...{Loading}...
ನಾಯಿಗಳ ಹೊಯ್ ನೂಕು ರಣದಲಿ
ಸಾಯಬೇಡಾ ಕ್ಷತ್ರಿಯರು ತಾ
ವಾಯುಧಂಗಳ ಹಿಡಿದರೋ ಮೇಣೇಕದಂಡಿಗಳೊ
ಜೀಯ ಖಾತಿಯಿದೇಕೆ ಬೀಳಲಿ
ನಾಯಕರು ನಿನಗೇನು ಹರನಡ
ಹಾಯಲಿಂದರಿಬಲವನುರುಹುವೆನೆಂದನಾ ಪಾರ್ಥ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕೌರವ ನಾಯಿಗಳನ್ನು ಹೊಡೆದು ನೂಕು, ಯುದ್ಧದಲ್ಲಿ ಕ್ಷತ್ರಿಯರು ಸಾಯಬೇಡವೇ? ತಾವು ಆಯುಧಗಳನ್ನು ಹಿಡಿದರೋ ಅಥವಾ ಸನ್ಯಾಸವನ್ನು ಸ್ವೀಕರಿಸಿದ್ದಾರೋ? ಜೀಯ ಚಿಂತೆ ಇದೇಕೆ ? ನಾಯಕರು ಕಾದು ಬೀಳಲಿ. ನಿನಗೇನು ? ಇಂದು ಶಿವನೇ ಅಡ್ಡಬಂದರೂ ಶತ್ರು ಸೈನ್ಯವನ್ನು ನಾಶಮಾಡುವೆನು ಎಂದು ಆ ಪಾರ್ಥನು ಹೇಳಿದನು.
ಪದಾರ್ಥ (ಕ.ಗ.ಪ)
ಏಕದಂಡಿ-ದಂಡವನ್ನು ಮಾತ್ರ ಉಳ್ಳ ಸಂನ್ಯಾಸಿ.
ಮೂಲ ...{Loading}...
ನಾಯಿಗಳ ಹೊಯ್ ನೂಕು ರಣದಲಿ
ಸಾಯಬೇಡಾ ಕ್ಷತ್ರಿಯರು ತಾ
ವಾಯುಧಂಗಳ ಹಿಡಿದರೋ ಮೇಣೇಕದಂಡಿಗಳೊ
ಜೀಯ ಖಾತಿಯಿದೇಕೆ ಬೀಳಲಿ
ನಾಯಕರು ನಿನಗೇನು ಹರನಡ
ಹಾಯಲಿಂದರಿಬಲವನುರುಹುವೆನೆಂದನಾ ಪಾರ್ಥ ॥10॥
೦೧೧ ನಿಲ್ಲು ಫಲುಗುಣ ...{Loading}...
ನಿಲ್ಲು ಫಲುಗುಣ ನಿನ್ನ ಪರಿಯಂ
ತೆಲ್ಲಿಯದು ರಣವಕಟ ಹಾರುವ
ನಲ್ಲಿ ಕೆಲಬರ ಹೊಯ್ದು ಕೊಂದನು ಬಿನುಗು ಬಿಚ್ಚಟೆಯ
ಬಲ್ಲೆನಾತನ ಬಲುಹನೀಶ್ವರ
ನಲ್ಲಿ ಹರಿಮೇಖಳೆಯೆ ಸಾಕಿ
ನ್ನೆಲ್ಲವೇತಕೆಯೆನುತ ಧೃಷ್ಟದ್ಯುಮ್ನನನುವಾದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನೇ ನಿಲ್ಲು ಈ ಯುದ್ಧವು ನಿನ್ನವರೆಗೂ ಬರಬೇಕಾದ ಅಗತ್ಯವಿಲ್ಲ. ಅಯ್ಯೋ….. ಅಲ್ಲಿ ಬ್ರಾಹ್ಮಣನಾದ ದ್ರೋಣನು ಕೆಲವು ಸಾಮಾನ್ಯ ಜನರನ್ನು ಹೊಡೆದು ಕೊಂದನು. ಆತನ ಹಿರಿಮೆಯನ್ನು ಬಲ್ಲೆನು. ನನ್ನ ಮುಂದೆ ದ್ರೋಣನ ಯುದ್ಧವು ಶಿವನ ಮುಂದೆ ಇಂದ್ರಜಾಲ ಪ್ರದರ್ಶಿಸಿದಂತೆ. ಸಾಕು. ಇನ್ನು ಈ ಎಲ್ಲ ಮಾತುಗಳೇಕೆ ಎನ್ನುತ್ತಾ ಧೃಷ್ಟದ್ಯುಮ್ನನು ಯುದ್ಧಕ್ಕೆ ಸಿದ್ಧನಾದನು.
ಮೂಲ ...{Loading}...
ನಿಲ್ಲು ಫಲುಗುಣ ನಿನ್ನ ಪರಿಯಂ
ತೆಲ್ಲಿಯದು ರಣವಕಟ ಹಾರುವ
ನಲ್ಲಿ ಕೆಲಬರ ಹೊಯ್ದು ಕೊಂದನು ಬಿನುಗು ಬಿಚ್ಚಟೆಯ
ಬಲ್ಲೆನಾತನ ಬಲುಹನೀಶ್ವರ
ನಲ್ಲಿ ಹರಿಮೇಖಳೆಯೆ ಸಾಕಿ
ನ್ನೆಲ್ಲವೇತಕೆಯೆನುತ ಧೃಷ್ಟದ್ಯುಮ್ನನನುವಾದ ॥11॥
೦೧೨ ನೇಮವಾಯಿತು ಸಾತ್ಯಕಿಗೆ ...{Loading}...
ನೇಮವಾಯಿತು ಸಾತ್ಯಕಿಗೆ ಶ್ರುತ
ಸೋಮಕಾದಿ ಕುಮಾರರಿಗೆ ಸಂ
ಗ್ರಾಮವೀರ ಶಿಖಂಡಿ ಸೃಂಜಯ ಚೇಕಿತಾನರಿಗೆ
ಆ ಮಹಾರಥರೈದಿದರು ಘನ
ತೋಮರದಿ ತುರುಗಿದ ವರೂಥ
ಸ್ತೋಮದಲಿ ಬಹುವಿಧದ ವಾದ್ಯ ವಿಡಾಯಿ ರಭಸದಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಗೆ, ಶ್ರುತ ಸೋಮಕಾದಿ ಕುಮಾರರಿಗೆ, ಯುದ್ಧ ವೀರರಾದ ಶಿಖಂಡಿ, ಸೃಂಜಯ, ಚೇಕಿತಾನರಿಗೆ ಯುದ್ಧಕ್ಕೆ ಬರಲು ಅಪ್ಪಣೆಯಾಯಿತು. ಘನ ತೋಮರಗಳು ಒತ್ತೊತ್ತಾಗಿ ತುಂಬಿರುವ ರಥ ಸಮೂಹ ಹಾಗೂ ಬಹು ವಿಧದ ವಾದ್ಯಗಳ ಅಧಿಕವಾದ ರಭಸದೊಂದಿಗೆ ಆ ಮಹಾರಥರು ಸಂಗ್ರಾಮಕ್ಕೆ ಬಂದರು.
ಮೂಲ ...{Loading}...
ನೇಮವಾಯಿತು ಸಾತ್ಯಕಿಗೆ ಶ್ರುತ
ಸೋಮಕಾದಿ ಕುಮಾರರಿಗೆ ಸಂ
ಗ್ರಾಮವೀರ ಶಿಖಂಡಿ ಸೃಂಜಯ ಚೇಕಿತಾನರಿಗೆ
ಆ ಮಹಾರಥರೈದಿದರು ಘನ
ತೋಮರದಿ ತುರುಗಿದ ವರೂಥ
ಸ್ತೋಮದಲಿ ಬಹುವಿಧದ ವಾದ್ಯ ವಿಡಾಯಿ ರಭಸದಲಿ ॥12॥
೦೧೩ ಸರಕಟಸಿ ನೂಕಿತು ...{Loading}...
ಸರಕಟಸಿ ನೂಕಿತು ಚತುರ್ಬಲ
ವರರೆ ಹಾರುವನೆಲ್ಲಿ ಯಾವೆಡೆ
ದೊರೆ ಸುಯೋಧನನೆಲ್ಲಿ ರಾಧೆಯ ಮಗನ ಬರಹೇಳು
ಗುರುಸುತನ ಕರೆ ಕಾದುಹೇಳೋ
ದುರುಳ ದುಶ್ಯಾಸನನನೆನುತ
ಬ್ಬರಿಸಿ ಕವಿದುದು ವೈರಿಬಲವಾಚಾರ್ಯನಿದಿರಿನಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರ್ಬಲವು ಉತ್ಸಾಹಿಸಿ ಮುಂದುವರಿಯಿತು. ಅರರೆ… ಬ್ರಾಹ್ಮಣ ದ್ರೋಣನೆಲ್ಲಿ ? ದೊರೆ ಸುಯೋಧನನೆಲ್ಲಿ ? ರಾಧೆಯ ಮಗ ಕರ್ಣನನ್ನು ಬರಹೇಳು. ಗುರುಸುತನನ್ನು ಕರೆ, ದುಷ್ಟ ದುಶ್ಶಾಸನನನ್ನು ಯುದ್ಧ ಮಾಡಲು ಹೇಳು ಎನ್ನುತ್ತಾ ಅಬ್ಬರಿಸಿ ಪಾಂಡವ ಸೇನೆ ಶತ್ರು ಸೇನೆಯನ್ನು ಆಚಾರ್ಯನ ಎದುರಿಗೆ ಮುತ್ತಿತು.
ಪದಾರ್ಥ (ಕ.ಗ.ಪ)
ಸರಕಟಿಸಿ-ಉತ್ಸಾಹಿಸಿ
ಪಾಠಾನ್ತರ (ಕ.ಗ.ಪ)
ಯಾದೆಡೆ - ಯಾವೆಡೆ
ದ್ರೋಣಪರ್ವ, ಮೈ.ವಿ.ವಿ.
ಮೂಲ ...{Loading}...
ಸರಕಟಸಿ ನೂಕಿತು ಚತುರ್ಬಲ
ವರರೆ ಹಾರುವನೆಲ್ಲಿ ಯಾವೆಡೆ
ದೊರೆ ಸುಯೋಧನನೆಲ್ಲಿ ರಾಧೆಯ ಮಗನ ಬರಹೇಳು
ಗುರುಸುತನ ಕರೆ ಕಾದುಹೇಳೋ
ದುರುಳ ದುಶ್ಯಾಸನನನೆನುತ
ಬ್ಬರಿಸಿ ಕವಿದುದು ವೈರಿಬಲವಾಚಾರ್ಯನಿದಿರಿನಲಿ ॥13॥
೦೧೪ ಅಙ್ಗವಣೆಯೊಳ್ಳಿತು ಮಹಾದೇ ...{Loading}...
ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣೆಯುಂಟಾಗೆ ಮೆಚ್ಚುವೆನೆಂದನಾ ದ್ರೋಣ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಮ್ಮ ಪರಾಕ್ರಮ ದೊಡ್ಡದು. ಮಹಾದೇವನಿಗೂ ವಿರೋಧಿಸುವುದು ಅಸಾಧ್ಯ. ಮೊದಲಲ್ಲಿ ಸಿಂಹದಂಥ ಶಕ್ತಿಯುತವಾದ ಬಾಣ ಸುಳಿದರೆ ಮೊಲಕ್ಕಿಂತ ವೇಗವಾಗಿ ಓಡುವಿರಿ. ಸೋಲನ್ನೇ ಕಾಣದೆ ಸ್ವರ್ಗ ಸೇರಿದ ನಿಮ್ಮಯ್ಯನಿಗೆ ದೋಷವನ್ನು ಹೊರಿಸದಂತೆ ನಿಮ್ಮ ಮನದಲ್ಲಿ ಪರಾಕ್ರಮ ಉಂಟಾದರೆ ಮೆಚ್ಚುವೆನು” ಎಂದು ದ್ರೋಣನು ಹೇಳಿದನು.
ಪದಾರ್ಥ (ಕ.ಗ.ಪ)
ಮೊಗಸು-ವಿರೋಧಿಸು,
ಮುಂಚು-ಮೀರಿಸು
ಮೂಲ ...{Loading}...
ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣೆಯುಂಟಾಗೆ ಮೆಚ್ಚುವೆನೆಂದನಾ ದ್ರೋಣ ॥14॥
೦೧೫ ಗಳಹತನ ನಿಮ್ಮಲ್ಲಿ ...{Loading}...
ಗಳಹತನ ನಿಮ್ಮಲ್ಲಿ ನೆಲೆ ನೀವ್
ಕಲಿತ ವಿದ್ಯವು ಮಾತಿನಲಿ ನೀವ್
ಗೆಲುವುದಿದು ತಪ್ಪಲ್ಲ ಮುಖದಿಂ ದ್ವಿಜರು ಜನಿಸಿದಿರಿ
ಗೆಲವು ತೋಳಿಂದೆಮಗೆ ಜನ್ಮ
ಸ್ಥಳವಲೇ ಭುಜವರಸುಗಳಿಗಿ
ನ್ನಳುಕದಿದಿರಲಿ ನಿಂದಿರಾದಡೆ ಗೆಲವು ನಿಮಗೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಾಯಿಗೆ ಬಂದಂತೆ ಹರಟುವುದು ನಿಮ್ಮಲ್ಲಿ ನೆಲೆಯಾಗಿದೆ. ನೀವು ಕಲಿತ ವಿದ್ಯವು ನಿಮ್ಮ ಮಾತಿನಲ್ಲಿದೆ. ನೀವು ಮಾತಿನಲ್ಲಿ ಗೆಲ್ಲುವುದೇನೂ ತಪ್ಪಲ್ಲ. ದ್ವಿಜರು ನೀವು ಬ್ರಹ್ಮನ ಮುಖದಿಂದ ಜನಿಸಿದಿರಿ. ಆದರೆ ಕ್ಷತ್ರಿಯರಾದ ನಮಗೆ ತೋಳಿನಿಂದಲೆ ಗೆಲುವು. ಅರಸುಗಳಿಗೆ ಬ್ರಹ್ಮನ ತೋಳುಗಳೇ ಜನ್ಮಸ್ಥಳವಲ್ಲವೇ ? ಇನ್ನು ಹೆದರದೆ ನಮ್ಮ ಇದಿರಿನಲ್ಲಿ ನಿಂತಿದ್ದೇ ಆದರೆ ಗೆಲುವು ನಿಮಗೇ " ಎಂದು ಅರ್ಜುನನು ಹೇಳಿದನು..
ಮೂಲ ...{Loading}...
ಗಳಹತನ ನಿಮ್ಮಲ್ಲಿ ನೆಲೆ ನೀವ್
ಕಲಿತ ವಿದ್ಯವು ಮಾತಿನಲಿ ನೀವ್
ಗೆಲುವುದಿದು ತಪ್ಪಲ್ಲ ಮುಖದಿಂ ದ್ವಿಜರು ಜನಿಸಿದಿರಿ
ಗೆಲವು ತೋಳಿಂದೆಮಗೆ ಜನ್ಮ
ಸ್ಥಳವಲೇ ಭುಜವರಸುಗಳಿಗಿ
ನ್ನಳುಕದಿದಿರಲಿ ನಿಂದಿರಾದಡೆ ಗೆಲವು ನಿಮಗೆಂದ ॥15॥
೦೧೬ ಎನ್ನು ಮತ್ತೊಮ್ಮೆನ್ನು ...{Loading}...
ಎನ್ನು ಮತ್ತೊಮ್ಮೆನ್ನು ತನ್ನಾ
ಣೆನ್ನು ಗೆಲವೇ ನಮಗೆ ನಿಂದರೆ
ನಿನ್ನ ಸಮ್ಮುಖದಲಿ ಮಹಾದೇವಹುದು ಬಳಿಕೇನು
ತನ್ನಲುಂಟೇ ಖರೆಯತನ ಬರಿ
ದೆನ್ನನಿವನಿದ ಹಲವು ಬಾರಿಯ
ಮುನ್ನ ಬಲ್ಲೈ ನೀನೆನುತ ಸಾರಥಿಯ ಕೈವೊಯ್ದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೇಳು, ಮತ್ತೊಮ್ಮೆ ಹೇಳು ತನ್ನಾಣೆ ಹೇಳು ನಿನ್ನೆದುರು ನಿಂತರೆ ಗೆಲುವು ನಮಗೇ ಅಲ್ಲವೇ ? ಮಹಾದೇವ, ಹೌದು ಬಳಿಕೇನು? ತನ್ನಲ್ಲಿ ಸತ್ಯವಂತಿಕೆ ಇದೆ ತಾನೇ ? ಸುಮ್ಮನೆ ಇವನು ಹೇಳುವವನಲ್ಲ. ಇದನ್ನು ಹಲವು ಸಲ ನೀನು ತಿಳಿದಿದ್ದೀಯೆ” ಎನ್ನುತ್ತಾ ದ್ರೋಣನು ಸಾರಥಿಯ ಕೈಯನ್ನು ತಟ್ಟಿದನು.
ಮೂಲ ...{Loading}...
ಎನ್ನು ಮತ್ತೊಮ್ಮೆನ್ನು ತನ್ನಾ
ಣೆನ್ನು ಗೆಲವೇ ನಮಗೆ ನಿಂದರೆ
ನಿನ್ನ ಸಮ್ಮುಖದಲಿ ಮಹಾದೇವಹುದು ಬಳಿಕೇನು
ತನ್ನಲುಂಟೇ ಖರೆಯತನ ಬರಿ
ದೆನ್ನನಿವನಿದ ಹಲವು ಬಾರಿಯ
ಮುನ್ನ ಬಲ್ಲೈ ನೀನೆನುತ ಸಾರಥಿಯ ಕೈವೊಯ್ದ ॥16॥
೦೧೭ ಈತ ಸೇನಾಪತಿ ...{Loading}...
ಈತ ಸೇನಾಪತಿ ಕಣಾ ತಾ
ನೀತನೈವರ ಮೈದುನನು ವಿ
ಖ್ಯಾತನಿವ ಪಾಂಚಾಲಕುಲದಲಿ ದ್ರುಪದತನುಜನಿವ
ಈತ ಸಾತ್ಯಕಿ ಯಾದವರ ಕುಲ
ದಾತನೀತ ಶಿಖಂಡಿ ಮೊದಲಾ
ದೀತಗಳು ನೆರೆ ಖರೆಯರೆಂದನು ನಗುತ ಸಾರಥಿಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತ ಸೇನಾಪತಿ. ಈತನು ಐವರ ಮೈದುನನು. ಪಾಂಚಾಲಕುಲದಲ್ಲಿ ಪ್ರಖ್ಯಾತನು. ಇವನು ದ್ರುಪದನ ಮಗ. ಈತನು ಸಾತ್ಯಕಿ, ಯಾದವರ ಕುಲದಲ್ಲಿ ಹುಟ್ಟಿದವನು. ಶಿಖಂಡಿಯೇ ಮೊದಲಾದ ಇವರುಗಳು ವಿಶೇಷವಾಗಿ ಸತ್ಯವಂತರು ಎಂದು ಸಾರಥಿಗೆ ನಗುತ್ತ ನುಡಿದನು.
ಮೂಲ ...{Loading}...
ಈತ ಸೇನಾಪತಿ ಕಣಾ ತಾ
ನೀತನೈವರ ಮೈದುನನು ವಿ
ಖ್ಯಾತನಿವ ಪಾಂಚಾಲಕುಲದಲಿ ದ್ರುಪದತನುಜನಿವ
ಈತ ಸಾತ್ಯಕಿ ಯಾದವರ ಕುಲ
ದಾತನೀತ ಶಿಖಂಡಿ ಮೊದಲಾ
ದೀತಗಳು ನೆರೆ ಖರೆಯರೆಂದನು ನಗುತ ಸಾರಥಿಗೆ ॥17॥
೦೧೮ ಮುಟ್ಟಿ ಬನ್ದುದು ...{Loading}...
ಮುಟ್ಟಿ ಬಂದುದು ಸೇನೆ ಕವಿದುದು
ಕಟ್ಟಳವಿಯಲಿ ಕಲಿಗಳೆದು ಬಳಿ
ಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ
ಕಟ್ಟೆಯೊಡೆದಂಬುಧಿಯೊ ಮೇಣ್ ಜಗ
ಜಟ್ಟಿ ಸುರಿದಂಬುಗಳೊ ನಿಮಿಷಕೆ
ಕೆಟ್ಟುದಾಚೆಯ ಬಲದ ತರಹರವರಸ ಕೇಳ್ ಎಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆ ಹತ್ತಿರ ಬಂದು ಆವರಿಸಿತು. ತನ್ನ ವಶಕ್ಕೆ ತೆಗೆದುಕೊಂಡು ಶೌರ್ಯವನ್ನು ಕಳೆದು ಬಳಿಕ ಅಟ್ಟಿ ತಿನ್ನುವ ಮಹಾ ಮೃತ್ಯುದೇವತೆಗೆ ಔತಣಕ್ಕೆ ಹೇಳಿದಂತೆ ಕಟ್ಟೆಯೊಡೆದ ಸಮುದ್ರವೋ ಅಥವಾ ಜಗಜಟ್ಟಿಯಾದ ದ್ರೋಣನು ಸುರಿದ ಬಾಣಗಳೋ ಎನ್ನುವಂತೆ ಶತ್ರುಸೇನೆಯ ಸಮಾಧಾನವು ಒಂದೇ ನಿಮಿಷದಲ್ಲಿ ಕೆಟ್ಟುಹೋಯಿತು. ಅರಸನೇ ಕೇಳು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.
ಮೂಲ ...{Loading}...
ಮುಟ್ಟಿ ಬಂದುದು ಸೇನೆ ಕವಿದುದು
ಕಟ್ಟಳವಿಯಲಿ ಕಲಿಗಳೆದು ಬಳಿ
ಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ
ಕಟ್ಟೆಯೊಡೆದಂಬುಧಿಯೊ ಮೇಣ್ ಜಗ
ಜಟ್ಟಿ ಸುರಿದಂಬುಗಳೊ ನಿಮಿಷಕೆ
ಕೆಟ್ಟುದಾಚೆಯ ಬಲದ ತರಹರವರಸ ಕೇಳೆಂದ ॥18॥
೦೧೯ ನುಡಿಗೆ ಮುಞ್ಚುವ ...{Loading}...
ನುಡಿಗೆ ಮುಂಚುವ ಬಾಣ ಮಾರುತ
ನಡಸಿ ಬೀಸುವ ಲಾಗು ತಲೆಗಳ
ತೊಡಬೆಗಳಚುವ ಬೇಗವನು ಬಣ್ಣಿಸುವರೆನ್ನಳವೆ
ಕಡಲ ಕಡಹದಲುರಿವ ಗರಳವ
ನುಡುಗಿದವರಿವರೋ ಶಿವಾಯೆಂ
ದೊಡನೊಡನೆ ಪಡೆ ನಡುಗಲೊರಸಿದನಾ ಮಹಾರಥರ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾತಿಗಿಂತ ಮುಂದಾಗುವ ಬಾಣ, ಗಾಳಿಯು ಸುಳಿ ಮೀರಿ ಆಯುಧಗಳನ್ನು ಬೀಸುವ ರಭಸ, ತಲೆಗಳ ಬೆಸುಗೆಯನ್ನು ಕಳಚುವ ವೇಗವನ್ನು ಬಣ್ಣಿಸಲು ನನಗೆ ಸಾಧ್ಯವೆ? ಸಮುದ್ರಮಥನದಲ್ಲಿ ಉರಿಯುವ ವಿಷವನ್ನು ನಿವಾರಿಸಿದವರಿವರೋ ? ಶಿವಾ ಎಂದು ದ್ರೋಣನು ತ್ವರಿತವಾಗಿ ಸೇನೆ ನಡುಗುವಂತೆ ಮಹಾರಥರನ್ನು ನಾಶ ಮಾಡಿದನು.
ಪದಾರ್ಥ (ಕ.ಗ.ಪ)
ತೊಡಬೆ - ಬೆಸುಗೆ
ಮೂಲ ...{Loading}...
ನುಡಿಗೆ ಮುಂಚುವ ಬಾಣ ಮಾರುತ
ನಡಸಿ ಬೀಸುವ ಲಾಗು ತಲೆಗಳ
ತೊಡಬೆಗಳಚುವ ಬೇಗವನು ಬಣ್ಣಿಸುವರೆನ್ನಳವೆ
ಕಡಲ ಕಡಹದಲುರಿವ ಗರಳವ
ನುಡುಗಿದವರಿವರೋ ಶಿವಾಯೆಂ
ದೊಡನೊಡನೆ ಪಡೆ ನಡುಗಲೊರಸಿದನಾ ಮಹಾರಥರ ॥19॥
೦೨೦ ಕರಿಗಳೈ ಸಾವಿರ ...{Loading}...
ಕರಿಗಳೈ ಸಾವಿರ ತುರಂಗಮ
ವೆರಡು ಸಾವಿರವೆಂಟು ಸಾವಿರ
ವರವರೂಥದ ಥಟ್ಟು ಮುರಿದುದು ಲಕ್ಷ ಪಾಯದಳ
ಅರಸುಗಳು ಮೂನೂರು ಪುನರಪಿ
ಕರಿ ತುರಗ ರಥ ಮತ್ತೆ ಮೂವ
ತ್ತೆರಡು ಸಾವಿರವಳಿದುದರಿ ಪಾಂಚಾಲ ಸೇನೆಯಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದು ಸಾವಿರ ಆನೆಗಳು, ಎರಡು ಸಾವಿರ ಕುದುರೆಗಳು, ಎಂಟು ಸಾವಿರ ಶ್ರೇಷ್ಠ ರಥದ ಸೈನ್ಯ, ಲಕ್ಷ ಪದಾತಿಸೈನ್ಯ ನಾಶವಾಯಿತು. ಮುನ್ನೂರು ಅರಸುಗಳು, ಪುನಃ ಮೂವತ್ತೆರಡು ಸಾವಿರದಷು ಆನೆ, ಕುದುರೆ, ರಥ ಮುಂತದವುಗಳು ಇವು ಶತ್ರು ಪಾಂಚಾಲ ಸೇನೆಯಲ್ಲಿ ನಾಶವಾಯಿತು.
ಮೂಲ ...{Loading}...
ಕರಿಗಳೈ ಸಾವಿರ ತುರಂಗಮ
ವೆರಡು ಸಾವಿರವೆಂಟು ಸಾವಿರ
ವರವರೂಥದ ಥಟ್ಟು ಮುರಿದುದು ಲಕ್ಷ ಪಾಯದಳ
ಅರಸುಗಳು ಮೂನೂರು ಪುನರಪಿ
ಕರಿ ತುರಗ ರಥ ಮತ್ತೆ ಮೂವ
ತ್ತೆರಡು ಸಾವಿರವಳಿದುದರಿ ಪಾಂಚಾಲ ಸೇನೆಯಲಿ ॥20॥
೦೨೧ ಮತ್ತೆ ಕವಿದುದು ...{Loading}...
ಮತ್ತೆ ಕವಿದುದು ಹೆಣನ ತುಳಿದೊ
ತ್ತೊತ್ತೆಯಲಿ ರಿಪುಸೇನೆ ಮಂಜಿನ
ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ
ಮತ್ತೆ ನಿಮಿಷಾರ್ಧದಲಿ ಕಾಲನ
ತುತ್ತು ಜೋಡಿಸಿತೇನನೆಂಬೆನು
ಹತ್ತು ಕೋಟಿಯನಿಳುಹಿದನು ರಿಪುಚಾತುರಂಗದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿದ್ದಿದ್ದ ಹೆಣವನ್ನು ತುಳಿದು ಶತ್ರುಸೇನೆಯು ಪುನಃ ಒತ್ತೊತ್ತಾಗಿ ಕವಿಯಿತು. ಮಂಜು ಮುಸುಕಿದ ರವಿಯಂತೆ ದ್ರೋಣನನ್ನು ಮಾತ್ರ ಕಾಣಲಾಗಲಿಲ್ಲ. ಪುನಃ ನಿಮಿಷಾರ್ಧದಲ್ಲಿ ಮೃತ್ಯುವಿನ ಆಹಾರ ಹೆಚ್ಚಿತು. ಏನೆಂದು ಹೇಳಲಿ ? ಶತ್ರು ಚತುರಂಗ ಸೇನೆಯಲ್ಲಿ ಹತ್ತು ಕೋಟಿ ಸೈನ್ಯವನ್ನು ದ್ರೋಣನು ನಾಶಮಾಡಿದನು.
ಮೂಲ ...{Loading}...
ಮತ್ತೆ ಕವಿದುದು ಹೆಣನ ತುಳಿದೊ
ತ್ತೊತ್ತೆಯಲಿ ರಿಪುಸೇನೆ ಮಂಜಿನ
ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ
ಮತ್ತೆ ನಿಮಿಷಾರ್ಧದಲಿ ಕಾಲನ
ತುತ್ತು ಜೋಡಿಸಿತೇನನೆಂಬೆನು
ಹತ್ತು ಕೋಟಿಯನಿಳುಹಿದನು ರಿಪುಚಾತುರಂಗದಲಿ ॥21॥
೦೨೨ ಘಾಸಿಯಾದುದು ಸೇನೆ ...{Loading}...
ಘಾಸಿಯಾದುದು ಸೇನೆ ಸುಡಲೆನು
ತಾ ಸುಭಟರಿದಿರಾಗಿ ಕಾದಿದ
ರೈಸೆ ಬಳಿಕೇನವರ ಸತ್ವ ತ್ರಾಣವೇನಲ್ಲಿ
ಸೂಸುಗಣೆಗಳ ಸೊಗಡು ಹೊಯ್ದುಪ
ಹಾಸಕೊಳಗಾದರು ಮಹಾರಥ
ರೀಸು ಭಂಗಕೆ ಬಂದುದಿಲ್ಲ ನೃಪಾಲ ಕೇಳ್ ಎಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆ ಘಾಸಿಗೊಂಡಿತು ಸುಡಲಿ ಎನ್ನುತ್ತಾ ಯೋಧರು ಇದಿರಾಗಿ ಕಾದಿದರಲ್ಲವೇ ? ಬಳಿಕ ಏನು ? ಫಲವೇನು ? ಸತ್ವ, ತ್ರಾಣ ಎಲ್ಲಿಂದ ಬರಬೇಕು ? ಸುರಿಯುವ ಬಾಣಗಳ ಸೊಗಡು ಸುರಿದು ಮಹಾರಥರು ನಗೆಗೀಡಾದರು. ಮಹಾರಥರು ಇಷ್ಟು ಅವಮಾನಕ್ಕೆ ಎಂದೂ ಒಳಗಾದುದಿಲ್ಲ ರಾಜನೇ ಕೇಳು ಎಂದು ಸಂಜಯನು ಹೇಳಿದನು.
ಮೂಲ ...{Loading}...
ಘಾಸಿಯಾದುದು ಸೇನೆ ಸುಡಲೆನು
ತಾ ಸುಭಟರಿದಿರಾಗಿ ಕಾದಿದ
ರೈಸೆ ಬಳಿಕೇನವರ ಸತ್ವ ತ್ರಾಣವೇನಲ್ಲಿ
ಸೂಸುಗಣೆಗಳ ಸೊಗಡು ಹೊಯ್ದುಪ
ಹಾಸಕೊಳಗಾದರು ಮಹಾರಥ
ರೀಸು ಭಂಗಕೆ ಬಂದುದಿಲ್ಲ ನೃಪಾಲ ಕೇಳೆಂದ ॥22॥
೦೨೩ ಕಣ್ಡುದಿವರನು ರಾಯ ...{Loading}...
ಕಂಡುದಿವರನು ರಾಯ ಮೋಹರ
ವಂಡುಗೊಂಡುದು ದೊರೆಗಳಿದು ಕೋ
ದಂಡ ರುದ್ರನ ರಣ ಕಣಾ ತಾವೇನನೊದಗುವರು
ಉಂಡ ಬಾಸಣದೇರು ಮದ್ದಿನ
ಗಂಡನೋ ದ್ರೋಣಾಸ್ತ್ರವನು ಸವಿ
ಗಂಡನೋ ಸಾತ್ಯಕಿಯೆನುತ ಗರ್ಜಿಸಿದನಾ ಭೀಮ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವರನ್ನು ಕಂಡು ರಾಯನ ಸೇನೆ ಓಡಿ ಹೋಯಿತು. ದೊರೆಗಳು ಇವರು. ಇದು ಬಿಲ್ವಿದ್ಯೆಯಲ್ಲಿ ಕೋದಂಡವನ್ನು ಹೊಂದಿರುವ ರುದ್ರನ ಯುದ್ಧವಲ್ಲವೇ? ನಮ್ಮ ಕಡೆಯವರು ಏನು ಮಾಡಲು ಸಾಧ್ಯ ? ಸಾತ್ಯಕಿಯು ಏಟುಗಳನ್ನು ತಿಂದಿದ್ದರೂ ಸಹ ಅದನ್ನು ಮೀರಿನಿಂತ ಅಥವಾ ಅದಕ್ಕೆ ಔಷಧಿಯ ರೂಪದ ಶೂರನೋ ಅಥವಾ ದ್ರೋಣಾಸ್ತ್ರದ ರುಚಿಯನ್ನು ನೋಡಿದ ಶೂರನೋ” ಎನ್ನುತ್ತಾ ಭೀಮನು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಅಂಡುಗೊಂಡುದು-ಓಡಿ ಹೋಗು,
ಮುಸುಕು, ಬಾಣಸದೇರು-ಮುಚ್ಚಿದ ಗಾಯ,
ಕೋದಂಡರುದ್ರ-ಬಿಲ್ವಿದ್ಯೆಯಲ್ಲಿ ಶಿವ
ಮೂಲ ...{Loading}...
ಕಂಡುದಿವರನು ರಾಯ ಮೋಹರ
ವಂಡುಗೊಂಡುದು ದೊರೆಗಳಿದು ಕೋ
ದಂಡ ರುದ್ರನ ರಣ ಕಣಾ ತಾವೇನನೊದಗುವರು
ಉಂಡ ಬಾಸಣದೇರು ಮದ್ದಿನ
ಗಂಡನೋ ದ್ರೋಣಾಸ್ತ್ರವನು ಸವಿ
ಗಂಡನೋ ಸಾತ್ಯಕಿಯೆನುತ ಗರ್ಜಿಸಿದನಾ ಭೀಮ ॥23॥
೦೨೪ ನುಡಿದು ಭಙ್ಗಿಸಲೇಕೆ ...{Loading}...
ನುಡಿದು ಭಂಗಿಸಲೇಕೆ ಸದರವ
ಕೊಡುವುದಾಹವವೊಮ್ಮೆ ಮಗುಳವ
ಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ
ಪಡೆ ಸವೆದುದಿನ್ನೇನೆನುತ ಬಿಲು
ದುಡುಕಿ ಹೊಕ್ಕನು ಪಾರ್ಥನನಿಲಜ
ನೊಡನೆ ಬಳಿಸಂಧಿಸಿತು ಸನ್ನಾಹದಲಿ ಪರಿವಾರ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನುಡಿದು ಅವಮಾನಿಸುವುದು ಏಕೆ ? ಯುದ್ಧವು ಒಂದು ಸಲ ಸದರವನ್ನು / ಸಮಾಧಾನವನ್ನು ಉಂಟು ಮಾಡುತ್ತದೆ. ಪುನಃ ಮತ್ತೊಮ್ಮೆ ತೊಂದರೆಯನ್ನುಂಟು ಮಾಡುವುದು. ಪರಾಕ್ರಮಕ್ಕೆ ಕುಂದೇನು ? ಇದು ಮುಹೂರ್ತವಶ. ಸೇನೆ ಕ್ಷೀಣಿಸುತ್ತಿದೆ ಇನ್ನೇನು ? ಎನ್ನುತ್ತಾ ಪಾರ್ಥನು ಬಿಲ್ಲನ್ನು ಹಿಡಿದು ನುಗ್ಗಿದನು. ಪರಿವಾರದವರು ಉಪಾಯದಿಂದ ಭೀಮನೊಡನೆ ಹತ್ತಿರ ಸೇರಿದರು.
ಮೂಲ ...{Loading}...
ನುಡಿದು ಭಂಗಿಸಲೇಕೆ ಸದರವ
ಕೊಡುವುದಾಹವವೊಮ್ಮೆ ಮಗುಳವ
ಗಡಿಸುವುದು ವಿಕ್ರಮಕೆ ಕುಂದೇನಿದು ಮುಹೂರ್ತ ವಶ
ಪಡೆ ಸವೆದುದಿನ್ನೇನೆನುತ ಬಿಲು
ದುಡುಕಿ ಹೊಕ್ಕನು ಪಾರ್ಥನನಿಲಜ
ನೊಡನೆ ಬಳಿಸಂಧಿಸಿತು ಸನ್ನಾಹದಲಿ ಪರಿವಾರ ॥24॥
೦೨೫ ಭೀತಿ ಮಾಣಲಿ ...{Loading}...
ಭೀತಿ ಮಾಣಲಿ ಭೀಮ ಫಲುಗುಣ
ರಾತುಕೊಂಡರು ಬವರವನು ನೆರೆ
ಸೋತವರು ಸಂವರಿಸಿ ಕೊಂಬುದೆನುತ್ತ ಚರರುಲಿಯೆ
ಚಾತುರಂಗದ ಚರಣಹತಿ ನಿ
ರ್ಧೂತ ಧೂಳೀಮಯವಖಿಳ ದಿಗು
ಜಾತವೆನೆ ಥಟ್ಟಣೆಯಲೇರಿತು ಪಾಂಡುಸುತಸೇನೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಯ ನಿವಾರಣೆಯಾಗಲಿ ಭೀಮ ಪಾರ್ಥರು ಯುದ್ಧವನ್ನು ಕೈಗೊಂಡರು. ವಿಶೇಷವಾಗಿ ಸೋತವರು ಸರಿಪಡಿಸಿಕೊಳ್ಳುವುದು ಸಮಾಧಾನ ಮಾಡಿಕೊಳ್ಳುವುದು ಎನ್ನುತ್ತಾ ಸೇವಕರು ಹೇಳುತ್ತಿರಲು, ಚತುರಂಗ ಸೇನೆಯ ಪಾದಗಳ ಏಟಿನಿಂದ ಮೇಲೆದ್ದ ಧೂಳಿನ ಸಮೂಹವು ಎಲ್ಲಾ ದಿಕ್ಕುಗಳಿಂದ ಹುಟ್ಟಿವೆಯೋ ಎನ್ನುವಂತೆ ಪಾಂಡುಸುತ ಸೇನೆಯೂ ಗುಂಪಾಗಿ ಸೇರಿತು.
ಮೂಲ ...{Loading}...
ಭೀತಿ ಮಾಣಲಿ ಭೀಮ ಫಲುಗುಣ
ರಾತುಕೊಂಡರು ಬವರವನು ನೆರೆ
ಸೋತವರು ಸಂವರಿಸಿ ಕೊಂಬುದೆನುತ್ತ ಚರರುಲಿಯೆ
ಚಾತುರಂಗದ ಚರಣಹತಿ ನಿ
ರ್ಧೂತ ಧೂಳೀಮಯವಖಿಳ ದಿಗು
ಜಾತವೆನೆ ಥಟ್ಟಣೆಯಲೇರಿತು ಪಾಂಡುಸುತಸೇನೆ ॥25॥
೦೨೬ ಆಳಿಯೇ ನಿಮಗೆನ್ನ ...{Loading}...
ಆಳಿಯೇ ನಿಮಗೆನ್ನ ಸರಳಿಂ
ದಾಳು ಕುದುರೆಯ ಕೊಲಿಸುವುದು ನಿಮ
ಗಾಳುತನವುಂಟೆಂಬ ಗರ್ವವನಿಲ್ಲಿ ತೋರಿಸಿರೆ
ಆಳು ನೋಡುತ್ತಿರಲಿ ನಮ್ಮೀ
ಕಾಳೆಗವನೆಲೆ ಪಾರ್ಥ ಪವನಜ
ಹೇಳೆನುತ ಕೈವರ್ತಿಸಿದನಂಬುಗಳಿಗಿವರೊಡಲ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಮಾನ್ಯರಾದ ಭಟರು, ಕುದುರೆಗಳನ್ನು ನಾನು ಕಲಿಸಿದ ಬಾಣಗಳಿಂದ ಕೊಲ್ಲಿಸುವುದು ನಿಮಗೆ ಯೋಗ್ಯವೆ? ಅಥವಾ ನಿಮಗೆ ನ್ಯಾಯವೇ ? ನಿಮ್ಮಲ್ಲಿ ಪರಾಕ್ರಮ ಉಂಟೆಂಬ ಗರ್ವವನ್ನು ನನ್ನಲ್ಲಿ ತೋರಿಸಿರಿ. ನಮ್ಮೀ ಕಾಳಗವನ್ನು ಅನ್ಯ ಯೋಧರು ನೋಡುತ್ತಿರಲಿ. ಎಲೆ ಪಾರ್ಥ, ಭೀಮನೇ ಹೇಳು ಎನ್ನುತ್ತಾ ಇವರ ಶರೀರವನ್ನು ತನ್ನ ಬಾಣಗಳ ವಶ ಮಾಡಿದನು. (ಬಾಣ ಪ್ರಯೋಗ ಮಾಡಿದನು)
ಪದಾರ್ಥ (ಕ.ಗ.ಪ)
ಕೈವರ್ತಿಸು-ವಶಮಾಡು
ಮೂಲ ...{Loading}...
ಆಳಿಯೇ ನಿಮಗೆನ್ನ ಸರಳಿಂ
ದಾಳು ಕುದುರೆಯ ಕೊಲಿಸುವುದು ನಿಮ
ಗಾಳುತನವುಂಟೆಂಬ ಗರ್ವವನಿಲ್ಲಿ ತೋರಿಸಿರೆ
ಆಳು ನೋಡುತ್ತಿರಲಿ ನಮ್ಮೀ
ಕಾಳೆಗವನೆಲೆ ಪಾರ್ಥ ಪವನಜ
ಹೇಳೆನುತ ಕೈವರ್ತಿಸಿದನಂಬುಗಳಿಗಿವರೊಡಲ ॥26॥
೦೨೭ ನರನನೆಚ್ಚನು ಪವನಜನ ...{Loading}...
ನರನನೆಚ್ಚನು ಪವನಜನ ತನು
ಬಿರಿಯಲೆಚ್ಚನು ಸಾರಥಿಗಳಿ
ಬ್ಬರಲಿ ಹೂಳಿದನಂಬ ನೆರೆ ನೋಯಿಸಿದ ರಥ ಹಯವ
ನರನ ಕಣೆಯನು ಭೀಮನಂಬನು
ಹರೆಗಡಿದು ಮಗುಳೆಚ್ಚನವರನು
ಸರಳ ಪುನರಪಿ ಸವರಿ ಸೆಕ್ಕಿದನೊಡಲೊಳಂಬುಗಳ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಮೇಲೆ ಬಾಣಪ್ರಯೋಗ ಮಾಡಿದನು. ಭೀಮನ ದೇಹ ಬಿರಿಯುವಂತೆ ಬಾಣ ಪ್ರಯೋಗಿಸಿದನು. ಸಾರಥಿಗಳಿಬ್ಬರ ಮೇಲೆ ಬಾಣಗಳನ್ನು ಹೂಳಿದನು. ರಥ, ಕುದುರೆಗಳನ್ನು ಹೆಚ್ಚು ನೋಯಿಸಿದನು. ಪಾರ್ಥ, ಭೀಮರ ಬಾಣವನ್ನು ಸಂಪೂರ್ಣವಾಗಿ ಕಡಿದು ಪುನಃ ಅವರ ಮೇಲೆ ಬಾಣ ಪ್ರಯೋಗಿಸಿ ಅವರನ್ನು ನೋಯಿಸಿ, ದೇಹದಲ್ಲಿ ಬಾಣಗಳನ್ನು ಸೆಕ್ಕಿದನು.
ಪದಾರ್ಥ (ಕ.ಗ.ಪ)
ಹರೆಗಡಿ-ಸಂಪೂರ್ಣವಾಗಿ ನಾಶಮಾಡು, ಚದುರುವಂತೆ ಹೊಡೆ
ಮೂಲ ...{Loading}...
ನರನನೆಚ್ಚನು ಪವನಜನ ತನು
ಬಿರಿಯಲೆಚ್ಚನು ಸಾರಥಿಗಳಿ
ಬ್ಬರಲಿ ಹೂಳಿದನಂಬ ನೆರೆ ನೋಯಿಸಿದ ರಥ ಹಯವ
ನರನ ಕಣೆಯನು ಭೀಮನಂಬನು
ಹರೆಗಡಿದು ಮಗುಳೆಚ್ಚನವರನು
ಸರಳ ಪುನರಪಿ ಸವರಿ ಸೆಕ್ಕಿದನೊಡಲೊಳಂಬುಗಳ ॥27॥
೦೨೮ ದಿಟ್ಟಿ ಮುಷ್ಟಿಯ ...{Loading}...
ದಿಟ್ಟಿ ಮುಷ್ಟಿಯ ಸರಿಸದಲಿ ತಲೆ
ಮಟ್ಟು ಕವಿದರು ಭೀಮ ಫಲುಗುಣ
ರಿಟ್ಟ ತೊಡರಿನೊಳಾರು ಸಿಲುಕರು ದಿವಿಜ ದನುಜರಲಿ
ನೆಟ್ಟನೈದುವ ಹಿಳುಕುಗಳ ತರಿ
ದೊಟ್ಟಿದನು ದೆಖ್ಖಾಯಿಯಲಿ ಗರಿ
ಗಟ್ಟಿತೀತನ ಖಾತಿ ಮೆರೆದುದು ಕೇಣವಿಲ್ಲೆನಿಸಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೃಷ್ಟಿ-ಮುಷ್ಟಿಯ ಯುದ್ಧದಲ್ಲಿ ತಲೆಯ ಮೇಲೆ ಹೊಡೆತ ಬೀಳುವಷ್ಟರ ಮಟ್ಟಿಗೆ ಸರಿಸಮವಾಗಿ ಕಾದಿದರು. ಭೀಮ-ಪಾರ್ಥರು ಉಂಟು ಮಾಡಿದ ಆಪತ್ತಿನಲ್ಲಿ ದೇವ ರಾಕ್ಷಸರಲ್ಲಿ ಯಾರು ತಾನೇ ಸಿಲುಕುವುದಿಲ್ಲ ? ನೇರವಾಗಿ ಬರುವ ಬಾಣಗಳನ್ನು ತರಿದು ಹಾಕಿದರು. ಶೌರ್ಯದ ಆಧಿಕ್ಯದಲ್ಲಿ ದ್ರೋಣನ ಕೋಪ ಗರಿಗಟ್ಟಿ ಕೊರತೆಯೇ ಇಲ್ಲವೆನ್ನುವಂತೆ ಶೋಭಿಸಿತು.
ಪದಾರ್ಥ (ಕ.ಗ.ಪ)
ತಲೆಮಟ್ಟು-ತಲೆಯ ಮೇಲಿನ ಹೊಡೆತ,
ಕೇಣ-ದೋಷ, ಕೊರತೆ
ಮೂಲ ...{Loading}...
ದಿಟ್ಟಿ ಮುಷ್ಟಿಯ ಸರಿಸದಲಿ ತಲೆ
ಮಟ್ಟು ಕವಿದರು ಭೀಮ ಫಲುಗುಣ
ರಿಟ್ಟ ತೊಡರಿನೊಳಾರು ಸಿಲುಕರು ದಿವಿಜ ದನುಜರಲಿ
ನೆಟ್ಟನೈದುವ ಹಿಳುಕುಗಳ ತರಿ
ದೊಟ್ಟಿದನು ದೆಖ್ಖಾಯಿಯಲಿ ಗರಿ
ಗಟ್ಟಿತೀತನ ಖಾತಿ ಮೆರೆದುದು ಕೇಣವಿಲ್ಲೆನಿಸಿ ॥28॥
೦೨೯ ರಾಯನನು ಬರಹೇಳು ...{Loading}...
ರಾಯನನು ಬರಹೇಳು ನಾವ್ ಕೈ
ಗಾಯೆವೋ ಕಾಯಿದೆವೊ ಕಾಣಲಿ
ಬಾಯಿಬಡುಕರು ಬಂದು ನೋಡಲಿ ಕರ್ಣ ಶಕುನಿಗಳು
ಆಯುಧವ ಹಿಡಿದವರು ಮೇಣಿವ
ರಾಯತದೊಳೊಡವೆರಸಿ ನೋಡಲಿ
ರಾಯನಾಣೆಯೆನುತ್ತ ಮೂದಲಿಸಿದನು ತನ್ನವರ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದುರ್ಯೋಧನನನ್ನು ಬರಹೇಳು ನಾವು ರಕ್ಷಿಸುವುದಿಲ್ಲವೋ ? ರಕ್ಷಿಸಿದೆವೋ ? ಕಾಣಲಿ. ಬಾಯಿ ಬಡುಕರಾದ ಕರ್ಣ ಶಕುನಿಗಳು ಬಂದು ನೋಡಲಿ. ಬೇಕಾದರೆ, ಆಯುಧವನ್ನು ಹಿಡಿದವರು ಅವರೊಡನೆ ಸೇರಿ ನನ್ನನ್ನು ಪರೀಕ್ಷಿಸಲಿ. ಇದು ರಾಯನಾಣೆ” ಎನ್ನುತ್ತಾ ದ್ರೋಣನು ತನ್ನವರನ್ನು ಮೂದಲಿಸಿದನು.
ಪದಾರ್ಥ (ಕ.ಗ.ಪ)
ಆಯತ-ಯೋಗ್ಯತೆ, ಯೋಗ್ಯವಾದ ರೀತಿ.
ಮೂಲ ...{Loading}...
ರಾಯನನು ಬರಹೇಳು ನಾವ್ ಕೈ
ಗಾಯೆವೋ ಕಾಯಿದೆವೊ ಕಾಣಲಿ
ಬಾಯಿಬಡುಕರು ಬಂದು ನೋಡಲಿ ಕರ್ಣ ಶಕುನಿಗಳು
ಆಯುಧವ ಹಿಡಿದವರು ಮೇಣಿವ
ರಾಯತದೊಳೊಡವೆರಸಿ ನೋಡಲಿ
ರಾಯನಾಣೆಯೆನುತ್ತ ಮೂದಲಿಸಿದನು ತನ್ನವರ ॥29॥
೦೩೦ ಬಾಲಸೂರ್ಯನವೊಲ್ ಪ್ರತಿಕ್ಷಣ ...{Loading}...
ಬಾಲಸೂರ್ಯನವೊಲ್ ಪ್ರತಿಕ್ಷಣ
ದೇಳಿಗೆಯ ತೇಜದ ವಿಕಾರ ಚ
ಡಾಳಿಸಿತು ವಿಕ್ರಮದ ಝಳ ಜಗವಳುಕೆ ಝೊಂಪಿಸಿತು
ಹೇಳಲೇನರ್ಜುನನ ಭೀಮನ
ಸೋಲವದು ತಾ ಮೃತ್ಯುವೀ ಪರಿ
ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಲಸೂರ್ಯನ ಪ್ರತಿಕ್ಷಣದ ಏಳಿಗೆಯ ಹಾಗೆ ದ್ರೋಣನ ತೇಜಸ್ಸು ಪ್ರಜ್ವಲಿಸಿತು. ಅದರ ವಿಕ್ರಮದ ಝಳ ಜಗತ್ತೇ ಹೆದರುವಂತೆ ಝೊಂಪಿಸಿತು. ಹೇಳಲೇನು ? ಅರ್ಜುನನ, ಭೀಮನ ಸೋಲು ಅದು, ಸ್ವಯಂ ಮೃತ್ಯುದೇವತೆಯ ಈ ರೀತಿಯ ಕಾಳಗವನ್ನು ಅಮರಾಸುರರ ಸೈನ್ಯದಲ್ಲೂ ಸಹ ನಾನು ಕಂಡಿಲ್ಲ. ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಚಡಾಳಿಸು-ಪ್ರಜ್ವಲಿಸು,
ಮೂಲ ...{Loading}...
ಬಾಲಸೂರ್ಯನವೊಲ್ ಪ್ರತಿಕ್ಷಣ
ದೇಳಿಗೆಯ ತೇಜದ ವಿಕಾರ ಚ
ಡಾಳಿಸಿತು ವಿಕ್ರಮದ ಝಳ ಜಗವಳುಕೆ ಝೊಂಪಿಸಿತು
ಹೇಳಲೇನರ್ಜುನನ ಭೀಮನ
ಸೋಲವದು ತಾ ಮೃತ್ಯುವೀ ಪರಿ
ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ ॥30॥
೦೩೧ ಸಾಕು ನಿಮಗಾಗದು ...{Loading}...
ಸಾಕು ನಿಮಗಾಗದು ವೃಥಾ ನೀ
ವೇಕಹಂಕರಿಸುವಿರಿ ಸೇನಾ
ನೀಕ ಹೊದ್ದಲಿ ಹೊಗಲಿ ಧೃಷ್ಟದ್ಯುಮ್ನ ಮೊದಲಾಗಿ
ಆಕೆವಾಳರು ನಿಲಲಿ ಕುಪಿತ ಪಿ
ನಾಕಿಯರಿಯಾ ದ್ರೋಣನೆನುತ ನ
ರಾಕೃತಿಯ ಪರಬೊಮ್ಮರೂಪನು ತಿರುಹಿದನು ರಥವ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನ ವೀರಾಟವನ್ನು, ಪಾರ್ಥನ ಇಳಿಮುಖವನ್ನು ಕಂಡು -” ಸಾಕು ನಿಮಗಾಗದು. ವ್ಯರ್ಥವಾಗಿ ನೀವೇಕೆ ಅಹಂಕರಿಸುವಿರಿ ? ಧೃಷ್ಟದ್ಯುಮ್ನನೇ ಮೊದಲಾಗಿ ಸೇನಾ ಸಮೂಹ ಪ್ರವೇಶಿಸಲಿ, ಮುನ್ನುಗ್ಗಲಿ. ಶೂರರು ನಿಲ್ಲಲಿ. ದ್ರೋಣನು ಕುಪಿತನಾದ ಶಿವ ಎಂಬುದನ್ನು ತಿಳಿದಿಲ್ಲವೇ ?” ಎನ್ನುತ್ತಾ ಮನುಷ್ಯಾಕಾರದ ಪರಬ್ರಹ್ಮ ರೂಪನಾದ ಕೃಷ್ಣನು ರಥವನ್ನು ತಿರುಗಿಸಿದನು.
ಮೂಲ ...{Loading}...
ಸಾಕು ನಿಮಗಾಗದು ವೃಥಾ ನೀ
ವೇಕಹಂಕರಿಸುವಿರಿ ಸೇನಾ
ನೀಕ ಹೊದ್ದಲಿ ಹೊಗಲಿ ಧೃಷ್ಟದ್ಯುಮ್ನ ಮೊದಲಾಗಿ
ಆಕೆವಾಳರು ನಿಲಲಿ ಕುಪಿತ ಪಿ
ನಾಕಿಯರಿಯಾ ದ್ರೋಣನೆನುತ ನ
ರಾಕೃತಿಯ ಪರಬೊಮ್ಮರೂಪನು ತಿರುಹಿದನು ರಥವ ॥31॥
೦೩೨ ಮೇಲೆ ಬಿದ್ದುದು ...{Loading}...
ಮೇಲೆ ಬಿದ್ದುದು ಮುಳಿಸಿನಲಿ ಪಾಂ
ಚಾಲರಾಯನ ಥಟ್ಟು ನಿಶಿತ ಶ
ರಾಳಿಯಲಿ ಹೂಳಿದನು ಧೃಷ್ಟದ್ಯುಮ್ನನಂಬರವ
ಬಾಲಕರಲೇ ಖಡ್ಗಧಾರೆಯ
ಮೇಲೆ ಮೋಹಿದ ಮಧುವ ಸವಿಯಲಿ
ನಾಲಗೆಯಲಿವರೊಲ್ಲರೆಂದನು ನಗುತ ಕಲಿದ್ರೋಣ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಚಾಲ ರಾಜನ ಸೈನ್ಯ ಕೋಪದಿಂದ ಮೇಲೆ ಬಿದ್ದು ಆಕ್ರಮಣ ಮಾಡಿತು. ಧೃಷ್ಟದ್ಯುಮ್ನನು ಆಕಾಶವನ್ನು ಹರಿತವಾದ ಬಾಣಗಳಿಂದ ತುಂಬಿದನು. ಕಲಿದ್ರೋಣನು ನಗುನಗುತ್ತಾ ‘ಬಾಲಕರಲ್ಲವೇ ? ಇವರುಗಳು ಇಷ್ಟಪಟ್ಟರೆ ಖಡ್ಗಧಾರೆಯ ಮೇಲೆ ಸವರಿದ ಮಧುವನ್ನು ನಾಲಿಗೆಯಲ್ಲಿ ಸವಿಯಲಿ. ಆದರೆ ಇವರು ಅದನ್ನು ಒಲ್ಲರು’ ಎಂದನು.
ಪದಾರ್ಥ (ಕ.ಗ.ಪ)
ಮೋಹಿದ- ಸವರಿದ
ಮೂಲ ...{Loading}...
ಮೇಲೆ ಬಿದ್ದುದು ಮುಳಿಸಿನಲಿ ಪಾಂ
ಚಾಲರಾಯನ ಥಟ್ಟು ನಿಶಿತ ಶ
ರಾಳಿಯಲಿ ಹೂಳಿದನು ಧೃಷ್ಟದ್ಯುಮ್ನನಂಬರವ
ಬಾಲಕರಲೇ ಖಡ್ಗಧಾರೆಯ
ಮೇಲೆ ಮೋಹಿದ ಮಧುವ ಸವಿಯಲಿ
ನಾಲಗೆಯಲಿವರೊಲ್ಲರೆಂದನು ನಗುತ ಕಲಿದ್ರೋಣ ॥32॥
೦೩೩ ತೆರಹ ಕೊಟ್ಟೊಳಹೊಗಿಸಿ ...{Loading}...
ತೆರಹ ಕೊಟ್ಟೊಳಹೊಗಿಸಿ ಸದೆದನು
ಬರಸಿಡಿಲು ಜಡಿವಂತೆ ರಿಪುಬಲ
ವೊರಲಿ ಕೆಡೆದುದು ಘಾಯವಡೆದುದು ಬೇಹ ನಾಯಕರು
ದುರುದುರಿಪ ತಲೆಮಿದುಳ ದಂಡೆಯ
ಹರಿಗರುಳ ನೆಣವಸೆಯ ಮೂಳೆಯ
ಮುರಿಕುಗಳ ಕಡಿಖಂಡಮಯವಾಯ್ತಖಿಳ ಚತುರಂಗ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ಶತ್ರುಗಳಿಗೆ ಅವಕಾಶಕೊಟ್ಟು ಒಳಗೆ ಪ್ರವೇಶ ಮಾಡುವಂತೆ ಮಾಡಿ ನಾಶಮಾಡಿದನು. ಬರಸಿಡಿಲು ಜಡಿಯುವ ಹಾಗೆ ಶತ್ರುಸೇನೆ ಕಿರುಚಿ ಕೆಳಗೆ ಬಿದ್ದಿತು. ವೀರ ನಾಯಕರು ಗಾಯಗೊಂಡರು. ಇಡೀ ಚತುರಂಗ ಸೇನೆ ಒಂದೇ ಸಮನೆ ಚಿಮ್ಮುವ ತಲೆಮಿದುಳ ದಂಡೆ, ಕೊಬ್ಬಿನ ಹೊರಬಂದಿರುವ ಕರುಳು, ಹೊರಬಿದ್ದ ಕೊಬ್ಬಿನಿಂದ, ಮೂಳೆಯ ಚೂರು, ಕತ್ತರಿಸಿದ ಮಾಂಸದ ಚೂರುಗಳಿಂದ ತುಂಬಿಹೋಯಿತು.
ಪದಾರ್ಥ (ಕ.ಗ.ಪ)
ನೆಣವಸೆ-ಕೊಬ್ಬು, ದುರುದುರಿಪ-ಒಂದೇ ಸಮನೆ ಚಿಮ್ಮುವ
ಮೂಲ ...{Loading}...
ತೆರಹ ಕೊಟ್ಟೊಳಹೊಗಿಸಿ ಸದೆದನು
ಬರಸಿಡಿಲು ಜಡಿವಂತೆ ರಿಪುಬಲ
ವೊರಲಿ ಕೆಡೆದುದು ಘಾಯವಡೆದುದು ಬೇಹ ನಾಯಕರು
ದುರುದುರಿಪ ತಲೆಮಿದುಳ ದಂಡೆಯ
ಹರಿಗರುಳ ನೆಣವಸೆಯ ಮೂಳೆಯ
ಮುರಿಕುಗಳ ಕಡಿಖಂಡಮಯವಾಯ್ತಖಿಳ ಚತುರಂಗ ॥33॥
೦೩೪ ಬೆರಳ ಬಾಯ್ಗಳ ...{Loading}...
ಬೆರಳ ಬಾಯ್ಗಳ ಬಿಸುಟ ಕೈದುಗ
ಳರೆಗಿರಿದ ಹಲ್ಲುಗಳ ಕೂಡಿದ
ಕರಪುಟದ ಬಿಡುದಲೆಯ ಬಸಿವೇರುಗಳ ಶೋಣಿತದ
ನರಳುವಾರೋಹಕರ ರಾವ್ತರ
ವರ ಮಹಾರಥ ಪಾಯದಳದು
ಬ್ಬರದ ಭಂಗವನೇನನೆಂಬೆನು ವೈರಿಸೇನೆಯಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈರಿ ಸೇನೆಯಲ್ಲಿ ಕಣಬಂದ ಬೆರಳು, ಬಾಯ್ಗಳ ಮೇಲೆ ಬಿಸಾಡಿದ ಆಯುಧಗಳು, ಅರೆಬಿರಿದ ಹಲ್ಲುಗಳ, ಜೋಡಿಸಿದ ಕೈಗಳ , ಬಿಚ್ಚಿದ ತಲೆಕೂದಲಿನ, ಗಾಯಗಳಿಂದ ಬಸಿಯುವ ರಕ್ತದ, ನರಳುತ್ತಿರುವ ಕುದುರೆ ಸವಾರರ, ಶ್ರೇಷ್ಠ ಮಹಾರಥರು, ಕಾಲಾಳುಗಳ ಅಬ್ಬರದ ಅವಮಾನದ ಸೋಲನ್ನು ಏನೆಂದು ಹೇಳಲಿ ? ಎಂದು ಸಂಜಯನು ಹೇಳಿದನು
ಮೂಲ ...{Loading}...
ಬೆರಳ ಬಾಯ್ಗಳ ಬಿಸುಟ ಕೈದುಗ
ಳರೆಗಿರಿದ ಹಲ್ಲುಗಳ ಕೂಡಿದ
ಕರಪುಟದ ಬಿಡುದಲೆಯ ಬಸಿವೇರುಗಳ ಶೋಣಿತದ
ನರಳುವಾರೋಹಕರ ರಾವ್ತರ
ವರ ಮಹಾರಥ ಪಾಯದಳದು
ಬ್ಬರದ ಭಂಗವನೇನನೆಂಬೆನು ವೈರಿಸೇನೆಯಲಿ ॥34॥
೦೩೫ ಮುನ್ದೆ ಹೊಗುವತಿಬಳರು ...{Loading}...
ಮುಂದೆ ಹೊಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣ ಬಲದಲಿ
ನಿಂದನೇವೇಳುವೆನು ನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮುಂದಿನಯೋಧರು ಹಿಂದಿನವರ ಸಹಾಯವನ್ನು ನಿರೀಕ್ಷಿಸಿದರು. ಮುಂದಿನವರೇ ಹೋರಾಡಲಿ ಎಂಬ ಆಸೆಯಿಂದ ಪಾರ್ಥನ ಸಹಿತ ಹಿಂದಿನವರೆಲ್ಲಾ ನಿಂತರು. ಅಂದು ಪಾರ್ಥನು ಕೃಷ್ಣನ ಬಲದಿಂದ ನಿಂತನು. ಏನು ಹೇಳಲಿ ? ಮೋಸಗಾರಿಕೆಯನ್ನು (ಕುತಂತ್ರ) ಬಿಟ್ಟು ಯುದ್ಧ ಮಾಡುವುದಾದರೆ ನಿನ್ನವರು ಎಂದೂ ಗೆಲ್ಲುವುದಿಲ್ಲ.” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ಗಾಹುಗತಕ-ಮೋಸ
ಮೂಲ ...{Loading}...
ಮುಂದೆ ಹೊಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣ ಬಲದಲಿ
ನಿಂದನೇವೇಳುವೆನು ನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ ॥35॥
೦೩೬ ಆರು ಸಾವಿರ ...{Loading}...
ಆರು ಸಾವಿರ ತೇರು ಗಜ ಹದಿ
ನಾರುಸಾವಿರ ಲಕ್ಷ ಕುದುರೆಗ
ಳಾರು ಕೋಟಿ ಪದಾತಿ ಮುಗ್ಗಿತು ಮತ್ತೆ ಸಂದಣಿಸಿ
ಆರು ಲಕ್ಷ ತುರಂಗ ನೃಪರೈ
ನೂರು ಗಜಘಟೆ ಲಕ್ಷ ರಥ ಹದಿ
ಮೂರು ಸಾವಿರವಳಿದುದರಿಪಾಂಚಾಲ ಸೇನೆಯಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನಃ ಗುಂಪಾಗಿ ಸೇರಿದ ಆರುಸಾವಿರ ತೇರು, ಹದಿನಾರು ಸಾವಿರ ಆನೆಗಳು, ಲಕ್ಷ ಕುದುರೆಗಳು, ಆರು ಕೋಟಿ ಪದಾತಿ ಸೈನ್ಯ ನಾಶವಾಯಿತು. ಆರು ಲಕ್ಷ ಕುದುರೆಗಳು, ಐದುನೂರು ಅರಸರು, ಲಕ್ಷ ಆನೆಗಳು, ಹದಿಮೂರು ಸಾವಿರ ರಥಗಳು ಶತ್ರು ಪಾಂಚಾಲ ಸೇನೆಯಲ್ಲಿ ನಾಶವಾದವು.
ಮೂಲ ...{Loading}...
ಆರು ಸಾವಿರ ತೇರು ಗಜ ಹದಿ
ನಾರುಸಾವಿರ ಲಕ್ಷ ಕುದುರೆಗ
ಳಾರು ಕೋಟಿ ಪದಾತಿ ಮುಗ್ಗಿತು ಮತ್ತೆ ಸಂದಣಿಸಿ
ಆರು ಲಕ್ಷ ತುರಂಗ ನೃಪರೈ
ನೂರು ಗಜಘಟೆ ಲಕ್ಷ ರಥ ಹದಿ
ಮೂರು ಸಾವಿರವಳಿದುದರಿಪಾಂಚಾಲ ಸೇನೆಯಲಿ ॥36॥
೦೩೭ ಅಙ್ಗವಿಸುವವರಿಲ್ಲ ಭಟರಿಗೆ ...{Loading}...
ಅಂಗವಿಸುವವರಿಲ್ಲ ಭಟರಿಗೆ
ಭಂಗವಿಕ್ಕಿತು ಕೌರವೇಂದ್ರಗೆ
ಸಂಗರದ ಸಿರಿ ಸೊಗಸಿನಲಿ ಕಡೆಗಣ್ಣ ಸೂಸಿದಳು
ಮುಂಗುಡಿಯಲಿನ್ನಾರು ನಮಗಾ
ವಂಗದಲಿ ಜಯವೇನು ಹದನರ
ಸಂಗೆ ಬಿನ್ನಹ ಮಾಡಿಯೆಂದರು ನಿಖಿಳ ಮಂತ್ರಿಗಳು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವ ಭಟರಲ್ಲಿ ಸಾಹಸ ತೋರುವವರಿಲ್ಲ. ಭಟರಿಗೆ ಸೋಲು ಉಂಟಾಯಿತು. ಕೌರವೇಂದ್ರನಿಗೆ ಸಂಗ್ರಾಮದ ಸಿರಿದೇವತೆಯು ಸೊಗಸಿನಿಂದ ಕೃಪಾಕಟಾಕ್ಷ ಬೀರಿದಳು. ಮುಂಭಾಗದಲ್ಲಿ ಇನ್ಯಾರು ? ನಮಗೆ ಯಾವ ರೀತಿ ಜಯವಾಯಿತು ? ಇದನ್ನು ಅರಸನಿಗೆ ಬಿನ್ನಹ ಮಾಡಿ” ಎಂದು ಎಲ್ಲಾ ಮಂತ್ರಿಗಳು ಹೇಳಿದರು.
ಮೂಲ ...{Loading}...
ಅಂಗವಿಸುವವರಿಲ್ಲ ಭಟರಿಗೆ
ಭಂಗವಿಕ್ಕಿತು ಕೌರವೇಂದ್ರಗೆ
ಸಂಗರದ ಸಿರಿ ಸೊಗಸಿನಲಿ ಕಡೆಗಣ್ಣ ಸೂಸಿದಳು
ಮುಂಗುಡಿಯಲಿನ್ನಾರು ನಮಗಾ
ವಂಗದಲಿ ಜಯವೇನು ಹದನರ
ಸಂಗೆ ಬಿನ್ನಹ ಮಾಡಿಯೆಂದರು ನಿಖಿಳ ಮಂತ್ರಿಗಳು ॥37॥
೦೩೮ ಕರಸಿದನು ಹರಿ ...{Loading}...
ಕರಸಿದನು ಹರಿ ಧರ್ಮಪುತ್ರನ
ನರಸ ಕೇಳಿಂದಿನಲಿ ಗುರುವನು
ಸರಳ ಮೊನೆಯಲಿ ಗೆಲಲು ನೂಕದು ಭೂತನಾಥಂಗೆ
ತೆರಳಿ ಬರುತಿದೆ ನಮ್ಮ ಬಲ ಸಂ
ಗರದ ಜಯವಹುದೆಂತು ಹೇಳೈ
ಧರಣಿಪತಿ ನೀನೆನಲು ನೀವೇ ಬಲ್ಲಿರಿದನೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಹರಿಯು ಅರಸನಾದ ಧರ್ಮಜನನ್ನು ಕರೆಸಿದನು. “ಅರಸನೇ ಕೇಳು. ಇಂದಿನ ಯುದ್ಧದಲ್ಲಿ ಬಾಣಗಳಿಂದ ಗುರು ದ್ರೋಣರನ್ನು ಗೆಲ್ಲಲು ಭೂತನಾಥನಿಗೂ ಸಾಧ್ಯವಿಲ್ಲ. ನಮ್ಮ ಸೇನೆ ಯುದ್ಧ ಭೂಮಿಯಿಂದ ಹಿಂದಿರುಗುತ್ತಿದೆ. ಯುದ್ಧದಲ್ಲಿ ಜಯವಾಗುವುದಾದರೂ ಹೇಗೆ ? ನೀನೇ ಹೇಳು ರಾಜನೇ” ಎನಲು, “ಏನು ಮಾಡಬೇಕೆಂಬ ಉಪಾಯವನ್ನು ನೀವೇ ಬಲ್ಲಿರಿ " ಎಂದು ಧರ್ಮರಾಯನು ಹೇಳಿದನು.
ಮೂಲ ...{Loading}...
ಕರಸಿದನು ಹರಿ ಧರ್ಮಪುತ್ರನ
ನರಸ ಕೇಳಿಂದಿನಲಿ ಗುರುವನು
ಸರಳ ಮೊನೆಯಲಿ ಗೆಲಲು ನೂಕದು ಭೂತನಾಥಂಗೆ
ತೆರಳಿ ಬರುತಿದೆ ನಮ್ಮ ಬಲ ಸಂ
ಗರದ ಜಯವಹುದೆಂತು ಹೇಳೈ
ಧರಣಿಪತಿ ನೀನೆನಲು ನೀವೇ ಬಲ್ಲಿರಿದನೆಂದ ॥38॥
೦೩೯ ಧುರದ ಜಯವಹುದೊನ್ದು ...{Loading}...
ಧುರದ ಜಯವಹುದೊಂದು ಪರಿಯಲಿ
ನಿರುತವಲ್ಲದ ನುಡಿಯ ನುಡಿದರೆ
ಪರಿಹರಿಸಬಹುದೆಂದನಸುರಾರಾತಿ ನಸುನಗುತ
ನರನದೆಂತೆನೆ ಗುರುತನುಜ ಸಂ
ಗರದೊಳೊರಗಿದನೆಂದು ದ್ರೋಣಂ
ಗರುಹು ಫಲುಗುಣ ಮನದೊಳಳುಕದೆ ಬೇಗ ಮಾಡೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಂದು ರೀತಿಯನ್ನು ಅನುಸರಿಸಿದರೆ ಯುದ್ಧದಲ್ಲಿ ಜಯವುಂಟಾಗುತ್ತದೆ. ಸತ್ಯವಲ್ಲದ ಮಾತನ್ನು ನುಡಿದರೆ ದ್ರೋಣನನ್ನು ಪರಿಹರಿಸಬಹುದು” ಎಂದು ಕೃಷ್ಣನು ನಗುತ್ತಾ ಹೇಳಿದನು. “ಅದು ಹೇಗೆ ?” ಎಂದು ಪಾರ್ಥನು ಕೇಳಲು, ಕೃಷ್ಣನು ‘ಸಂಗರದಲ್ಲಿ ಗುರುಪುತ್ರ ಅಶ್ವತ್ತಾಮನು ಮಡಿದನೆಂದು ದ್ರೋಣನಿಗೆ ತಿಳಿಸು, ಅರ್ಜುನಾ… ಮನದಲ್ಲಿ ಹಿಂಜರಿಯದೆ, ಹಿಂದು ಮುಂದು ನೋಡದೆ ಬೇಗ ಮಾಡು’ ಎಂದನು.
ಪದಾರ್ಥ (ಕ.ಗ.ಪ)
ನಿರುತ-ಸತ್ಯ,
ಮೂಲ ...{Loading}...
ಧುರದ ಜಯವಹುದೊಂದು ಪರಿಯಲಿ
ನಿರುತವಲ್ಲದ ನುಡಿಯ ನುಡಿದರೆ
ಪರಿಹರಿಸಬಹುದೆಂದನಸುರಾರಾತಿ ನಸುನಗುತ
ನರನದೆಂತೆನೆ ಗುರುತನುಜ ಸಂ
ಗರದೊಳೊರಗಿದನೆಂದು ದ್ರೋಣಂ
ಗರುಹು ಫಲುಗುಣ ಮನದೊಳಳುಕದೆ ಬೇಗ ಮಾಡೆಂದ ॥39॥
೦೪೦ ಕಿವಿಯ ಮುಚ್ಚಿದನರ್ಜುನನು ...{Loading}...
ಕಿವಿಯ ಮುಚ್ಚಿದನರ್ಜುನನು ಹರಿ
ಯವಗಡಿಸೆ ಕೈಕೊಂಡನರಸನು
ಪವನಸುತನಾ ಮಾತಕೊಂಡನು ಹೊಕ್ಕನಾಹವವ
ತವಕದಲಿ ತೆಗೆದೆಸುತ ರಿಪುಶರ
ನಿವಹವನು ಖಂಡಿಸುತಲಿಂದಿನ
ಬವರದಲಿ ಕಡಿವಡೆದುದಶ್ವತ್ಥಾಮ ಕೇಳ್ ಎಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕೇಳಿ ಅರ್ಜುನನು ಕಿವಿಯನ್ನು ಮುಚ್ಚಿದನು. ಕೃಷ್ಣನು ಆತುರ ಪಡಿಸಲಾಗಿ ಅರಸನಾದ ಧರ್ಮಜನು ಒಪ್ಪಿದನು. ವಾಯುಪುತ್ರ ಭೀಮನು ಆ ಮಾತನ್ನು ಸ್ವೀಕರಿಸಿ ರಣಭೂಮಿಯನ್ನು ಪ್ರವೇಶಿಸಿದನು. ತವಕದಿಂದ ಬಾಣ ಪ್ರಯೋಗಿಸುತ್ತಾ, ಶತ್ರುಗಳ ಬಾಣ ಸಮೂಹವನ್ನು ಖಂಡಿಸುತ್ತಾ “ಇಂದಿನ ಯುದ್ಧದಲ್ಲಿ ಅಶ್ವತ್ತಾಮ ಹತವಾಯಿತು ಕೇಳು” ಎಂದು ದ್ರೋಣನಿಗೆ ಕೇಳುವ ಹಾಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅವಗಡಿಸು-ಆತುರಪಡಿಸು
ಮೂಲ ...{Loading}...
ಕಿವಿಯ ಮುಚ್ಚಿದನರ್ಜುನನು ಹರಿ
ಯವಗಡಿಸೆ ಕೈಕೊಂಡನರಸನು
ಪವನಸುತನಾ ಮಾತಕೊಂಡನು ಹೊಕ್ಕನಾಹವವ
ತವಕದಲಿ ತೆಗೆದೆಸುತ ರಿಪುಶರ
ನಿವಹವನು ಖಂಡಿಸುತಲಿಂದಿನ
ಬವರದಲಿ ಕಡಿವಡೆದುದಶ್ವತ್ಥಾಮ ಕೇಳೆಂದ ॥40॥
೦೪೧ ಶಿವ ಶಿವಾ ...{Loading}...
ಶಿವ ಶಿವಾ ಕರ್ಣಜ್ವರಾಯತ
ರವವಿದೆತ್ತಣದೋ ಕುಮಾರನ
ತಿವಿದರಾರೋ ತಾನಿದದುಭುತವೆನುತ ತನ್ನೊಳಗೆ
ತವಕಿಸುತ ತಿಳಿದನು ವೃಕೋದರ
ನಿವ ದುರಾತ್ಮನು ತನ್ನ ಮಗನಾ
ಶಿವನೊಡನೆ ಸಮಜೋಳಿ ಹುಸಿ ಹೋಗೆಂದನಾ ದ್ರೋಣ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವ ಶಿವಾ… ಕಿವಿಗಳಿಗೆ ಜ್ವರವನ್ನುಂಟು ಮಾಡುವ ಧ್ವನಿಯು ಇದೆಲ್ಲಿಂದ ಬಂತು ? ಕುಮಾರನನ್ನು ತಿವಿದವರು ಯಾರು ? ಇದೊಂದು ಅದ್ಭುತ ಎಂದು ತನ್ನೊಳಗೆ ತವಕಿಸುತ್ತ, ಇದನ್ನು ನುಡಿದ ಭೀಮನು ದುರಾತ್ಮ ಎಂದು ಚಿಂತಿಸಿ ತನ್ನ ಮಗನು ಆ ಶಿವನಿಗೆ ಸರಿಸಮಾನನಾದವನು. ಈ ಮಾತು ಸುಳ್ಳು, ಅದನ್ನು ಬಿಡು ಎಂದು ದ್ರೋಣನು ತನ್ನಲ್ಲೇ ಹೇಳಿಕೊಂಡನು.
ಮೂಲ ...{Loading}...
ಶಿವ ಶಿವಾ ಕರ್ಣಜ್ವರಾಯತ
ರವವಿದೆತ್ತಣದೋ ಕುಮಾರನ
ತಿವಿದರಾರೋ ತಾನಿದದುಭುತವೆನುತ ತನ್ನೊಳಗೆ
ತವಕಿಸುತ ತಿಳಿದನು ವೃಕೋದರ
ನಿವ ದುರಾತ್ಮನು ತನ್ನ ಮಗನಾ
ಶಿವನೊಡನೆ ಸಮಜೋಳಿ ಹುಸಿ ಹೋಗೆಂದನಾ ದ್ರೋಣ ॥41॥
೦೪೨ ಮತ್ತೆ ಮಸೆದುದು ...{Loading}...
ಮತ್ತೆ ಮಸೆದುದು ಖಾತಿ ಕರ್ಬೊಗೆ
ಸುತ್ತಿದುಸುರಲಿ ಮೀಸೆಗಡಿದೌ
ಡೊತ್ತಿ ಸೆಳೆದನು ಶರವನೆಚ್ಚನು ಪವನನಂದನನ
ಹತ್ತೆಗಡಿದನು ಭೀಮ ಮಗುಳಿವ
ನೊತ್ತಿ ಹೊಕ್ಕರೆ ಕೈ ನೆರವ ಹಾ
ರುತ್ತ ಮುರಿದನು ಬಳಿಕ ಧೃಷ್ಟದ್ಯುಮ್ನನಿದಿರಾದ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನಲ್ಲಿ ಪುನಃ ಕ್ರೋಧ ವ್ಯಾಪಿಸಿತು. ಹೊಗೆ ಬರುವಂತೆ ಉಸಿರಾಡುತ್ತ, ದವಡೆ ಕಚ್ಚಿ, ಬಾಣವನ್ನು ಸೆಳೆದು ಭೀಮನ ಮೇಲೆ ಪ್ರಯೋಗಿಸಿದನು. ಭೀಮನು ಆ ಬಾಣಗಳನ್ನು ಕೂಡಲೇ ಕಡಿದು ಹಾಕಿದನು. ದ್ರೋಣನು ಮರಳಿ ಭೀಮನನ್ನೆದುರಿಸಲು ಹೋದಾಗ ಅವನು ಸಹಾಯವನ್ನಪೇಕ್ಷಿಸಿ ಹಿಂತಿರುಗಿದನು. ನಂತರ ದ್ರೋಣನಿಗೆ ಧೃಷ್ಟದ್ಯುಮ್ನನು ಇದಿರಾದನು.
ಪದಾರ್ಥ (ಕ.ಗ.ಪ)
ಹತ್ತೆ-ಸಮೀಪ
ಮೂಲ ...{Loading}...
ಮತ್ತೆ ಮಸೆದುದು ಖಾತಿ ಕರ್ಬೊಗೆ
ಸುತ್ತಿದುಸುರಲಿ ಮೀಸೆಗಡಿದೌ
ಡೊತ್ತಿ ಸೆಳೆದನು ಶರವನೆಚ್ಚನು ಪವನನಂದನನ
ಹತ್ತೆಗಡಿದನು ಭೀಮ ಮಗುಳಿವ
ನೊತ್ತಿ ಹೊಕ್ಕರೆ ಕೈ ನೆರವ ಹಾ
ರುತ್ತ ಮುರಿದನು ಬಳಿಕ ಧೃಷ್ಟದ್ಯುಮ್ನನಿದಿರಾದ ॥42॥
೦೪೩ ಎನಿತು ಬಾರಿ ...{Loading}...
ಎನಿತು ಬಾರಿ ಪಲಾಯನದ ಸಿರಿ
ನಿನಗೆ ಸೇರಿತು ವೀರ ಭಂಡನೊ
ಳೆನಗೆ ನೂಕದು ಸಾಕು ಧೃಷ್ಟದ್ಯುಮ್ನ ನಿಲ್ಲೆನುತ
ಅನಿಲ ಜವದಲಿ ರಥವ ಬಿಟ್ಟನು
ಜನಪತಿಯ ಮೋಹರಕೆ ಕವಿದುದು
ತನತನಗೆ ರಾಯನ ವಿಪತ್ತಿನೊಳಖಿಳ ಭಟನಿಕರ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಷ್ಟು ಬಾರಿ ಪಲಾಯನ ಮಾಡುವ ಸಿರಿ ನಿನ್ನದಾಯಿತು. ವೀರಭಂಡನಾದ ನಿನ್ನಲ್ಲಿ ನನಗೆ ಯುದ್ಧ ಮಾಡಲು ಸಾಧ್ಯವಿಲ್ಲ. ಧೃಷ್ಟದ್ಯುಮ್ನನೇ ನಿಲ್ಲು ಎನ್ನುತ್ತಾ ವಾಯುವೇಗದಲ್ಲಿ ಜನಪತಿಯಾದ ಧರ್ಮಜನ ಹತ್ತಿರ ರಥವನ್ನು ಓಡಿಸಿದನು. ರಾಜನಿಗೆ ಉಂಟಾದ ವಿಪತ್ತನ್ನು ಕಂಡು ಎಲ್ಲಾ ಭಟರ ಸಮೂಹ ತಮ್ಮಷ್ಟಕ್ಕೆ ತಾವೇ ರಾಯನಿಗೆ ಬೆಂಬಲವಾಗಿ ನಿಂತು ದ್ರೋಣನ ಸೇನೆಯನ್ನು ಮುತ್ತಿದರು.
ಮೂಲ ...{Loading}...
ಎನಿತು ಬಾರಿ ಪಲಾಯನದ ಸಿರಿ
ನಿನಗೆ ಸೇರಿತು ವೀರ ಭಂಡನೊ
ಳೆನಗೆ ನೂಕದು ಸಾಕು ಧೃಷ್ಟದ್ಯುಮ್ನ ನಿಲ್ಲೆನುತ
ಅನಿಲ ಜವದಲಿ ರಥವ ಬಿಟ್ಟನು
ಜನಪತಿಯ ಮೋಹರಕೆ ಕವಿದುದು
ತನತನಗೆ ರಾಯನ ವಿಪತ್ತಿನೊಳಖಿಳ ಭಟನಿಕರ ॥43॥
೦೪೪ ಒಲೆದು ಗಜವಿಟ್ಟಣಿಸಿದವು ...{Loading}...
ಒಲೆದು ಗಜವಿಟ್ಟಣಿಸಿದವು ತಲೆ
ವಲಗೆಯಲಿ ಕಲಿ ಪಾಯದಳ ಪಡಿ
ತಳಿಸಿತೊಳಹೊಕ್ಕೌಕಿದವು ಬದ್ಧರದ ಬಂಡಿಗಳು
ಸೆಳೆದಡಾಯ್ದದ ರಾವುತರು ಕೈ
ನಿಲುಕಿದರು ಮುತ್ತಿದರು ಪರಿಮಂ
ಡಳಿಸಿ ಬೊಬ್ಬಿರಿದಾರಿದರು ಸಿಕ್ಕಿದನು ಹಗೆಯೆನುತ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೂಗಾಡುತ್ತಾ ಆನೆಗಳು ಸಮೀಪಿಸಿದುವು. ತಲೆದೂಗುತ್ತಾ ಶೂರ ಕಾಲಾಳುಗಳು ಇದಿರಾದರು. ಆಯುಧಗಳಿಂದ ತುಂಬಿದ ಬಂಡಿಗಳು ಒಂದೇ ಸಮನೆ ಒಳಪ್ರವೇಶಿಸಿದುವು. ಹೊರಸೆಳೆದ ಅಡಾಯುಧದ ರಾವುತರು ಮುಂದಾದರು, ಮುತ್ತಿದರು, ಗುಂಪಾಗಿ ಮುಂದುವರಿದು ಬೊಬ್ಬಿರಿದು ಶತ್ರು ಸಿಕ್ಕಿದನೆಂದು ಕೂಗಿದರು.
ಪದಾರ್ಥ (ಕ.ಗ.ಪ)
ಪಡಿತಳಿಸು-ಇದಿರಾಗು,
ಬದ್ಭರದ ಬಂಡಿ-ಆಯುಧಗಳನ್ನು ತುಂಬುವ ಬಂಡಿ
ಆರು-ಕೂಗು
ಮೂಲ ...{Loading}...
ಒಲೆದು ಗಜವಿಟ್ಟಣಿಸಿದವು ತಲೆ
ವಲಗೆಯಲಿ ಕಲಿ ಪಾಯದಳ ಪಡಿ
ತಳಿಸಿತೊಳಹೊಕ್ಕೌಕಿದವು ಬದ್ಧರದ ಬಂಡಿಗಳು
ಸೆಳೆದಡಾಯ್ದದ ರಾವುತರು ಕೈ
ನಿಲುಕಿದರು ಮುತ್ತಿದರು ಪರಿಮಂ
ಡಳಿಸಿ ಬೊಬ್ಬಿರಿದಾರಿದರು ಸಿಕ್ಕಿದನು ಹಗೆಯೆನುತ ॥44॥
೦೪೫ ಸಾರಥಿಯ ತುಡುಕಿದರು ...{Loading}...
ಸಾರಥಿಯ ತುಡುಕಿದರು ತಿವಿದರು
ತೇರ ಕುದುರೆಯನಿಭದ ಬರಿಕೈ
ತೇರ ಹಿಡಿದವು ಘಲ್ಲಿಸಿದವನುಕರುಷ ಕೂಬರವ
ಭಾರಿಯೀಚಿನ ಮೇಲೆ ಬಿದ್ದವು
ವಾರುವಂಗಳ ಖುರನಿಕರವಸಿ
ಧಾರೆ ಮೊಗದಲಿ ಮಿಂಚಿದವು ಮುತ್ತಿದವು ಕಳಶಜನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಥಿಯ ಮೇಲೆ ಕೈಮಾಡಿದರು. ರಥದ ಕುದುರೆಯನ್ನು ತಿವಿದರು. ಆನೆಯ ಸೊಂಡಿಲು ರಥವನ್ನು ಹಿಡಿಯಿತು. ಆಗ ರಥದ ಅಚ್ಚಿನ ಮರ, ನೊಗ ಘಲ್ಲಿಸಿ ಭಯಂಕರ ಶಬ್ದ ಉಂಟಾಯಿತು. ಕುದುರೆಗಳ ಗೊರಸಿನ ಗುಂಪು ರಥದ ಹಿಡಿಕೆಯ ಮೇಲೆ ಬಿದ್ದವು. ರಥದ ಭಾಗಗಳನ್ನು ನಾಶ ಮಾಡಿದವು. ಕತ್ತಿಯ ಹೊಡೆತದ ಧಾರೆ ಮೊಗದಲ್ಲಿ ಮಿಂಚುವಂತೆ ದ್ರೋಣನನ್ನು ಆವರಿಸಿದುವು.
ಪದಾರ್ಥ (ಕ.ಗ.ಪ)
ಅನುಕರುಷ-ರಥದ ಅಚ್ಚಿನ ಮರ,
ಕೂಬರ-ನೊಗ,
ಈಚು-ಹಿಡಿಕೆ,
ಮೂಲ ...{Loading}...
ಸಾರಥಿಯ ತುಡುಕಿದರು ತಿವಿದರು
ತೇರ ಕುದುರೆಯನಿಭದ ಬರಿಕೈ
ತೇರ ಹಿಡಿದವು ಘಲ್ಲಿಸಿದವನುಕರುಷ ಕೂಬರವ
ಭಾರಿಯೀಚಿನ ಮೇಲೆ ಬಿದ್ದವು
ವಾರುವಂಗಳ ಖುರನಿಕರವಸಿ
ಧಾರೆ ಮೊಗದಲಿ ಮಿಂಚಿದವು ಮುತ್ತಿದವು ಕಳಶಜನ ॥45॥
೦೪೬ ದ್ರೋಹಿ ಸಿಲುಕಿದನೆನುತೆ ...{Loading}...
ದ್ರೋಹಿ ಸಿಲುಕಿದನೆನುತೆ ಜೀವ
ಗ್ರಾಹವೋ ಸಾಹಸ ವಿಚಾರಿಸು
ಬೇಹವರನೆನುತೊರಲಿ ಧೃಷ್ಟದ್ಯುಮ್ನನಿದಿರಾಗೆ
ಸಾಹಸಿಕರಳುಕಿದರು ಕೌರವ
ಮೋಹರದ ಮೊನೆಯಾಳುಗಳು ಸ
ನ್ನಾಹದಲಿ ಪಡಿತಳಿಸಿ ಕರ್ಣ ಕೃಪಾದಿ ನಾಯಕರು ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ದ್ರೋಹಿ ಸಿಲುಕಿದನು ಎನ್ನುತ್ತಾ ಜೀವವನ್ನು ತೆಗೆಯಬೇಕೋ ಬೇಡವೋ ಅವನ ಆಪ್ತರನ್ನು ವಿಚಾರಿಸು” ಎನ್ನುತ್ತಾ ಧೃಷ್ಟದ್ಯುಮ್ನನು ಎದುರಾಗಲು ಕೌರವ ಸಾಹಸಿಗರು ಅಳುಕಿದರು. ಕೌರವ ಸೇನೆಯ ಕರ್ಣ, ಕೃಪ ಮೊದಲಾದ ಪ್ರಮುಖ ನಾಯಕರು ಸಕಲ ಸಿದ್ಧತೆಯಿಂದ ಇದಿರಾದರು.
ಪದಾರ್ಥ (ಕ.ಗ.ಪ)
ಪಡಿತಳಿಸು-ಇದಿರಾಗು, ಬೇಹವರು-ಆಪ್ತರು
ಮೂಲ ...{Loading}...
ದ್ರೋಹಿ ಸಿಲುಕಿದನೆನುತೆ ಜೀವ
ಗ್ರಾಹವೋ ಸಾಹಸ ವಿಚಾರಿಸು
ಬೇಹವರನೆನುತೊರಲಿ ಧೃಷ್ಟದ್ಯುಮ್ನನಿದಿರಾಗೆ
ಸಾಹಸಿಕರಳುಕಿದರು ಕೌರವ
ಮೋಹರದ ಮೊನೆಯಾಳುಗಳು ಸ
ನ್ನಾಹದಲಿ ಪಡಿತಳಿಸಿ ಕರ್ಣ ಕೃಪಾದಿ ನಾಯಕರು ॥46॥
೦೪೭ ಗಾಳ ಗಣ್ಟಲಲಿಳಿವುದೇ ...{Loading}...
ಗಾಳ ಗಂಟಲಲಿಳಿವುದೇ ಮ
ತ್ಸ್ಯಾಳಿಗಕಟೀ ದೊದ್ದೆ ಕವಿದರೆ
ಕೋಲಗುರು ಕಳವಳಿಸುವನೆ ಬಯಸುವನೆ ಕೆಲಬಲನ
ಮೇಲುಗಾಣದೆ ಕವಿದಡಿದಿರೇ
ಬಾಲಹರಿಣನ ಹಿಂಡು ಹೆಬ್ಬುಲಿ
ಗಾಳ ತತ್ತರಿದರಿದು ತಳಪಟ ಮಾಡಿದನು ದ್ರೋಣ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೀನುಗಳ ಸಮೂಹಕ್ಕೆ ಗಾಳವು ಗಂಟಲಲ್ಲಿಳಿಯುವುದೇ ? ಅಯ್ಯೋ… ಈ ಗುಂಪು ಕವಿದರೆ ಬಿಲ್ಲಿನ ಗುರು ಕಳವಳಿಸುವನೇ? ಅಕ್ಕಪಕ್ಕದ ಸಹಾಯವನ್ನು ಬಯಸುವನೇ ? ಎಳೆಯ ಜಿಂಕೆಯ ಹಿಂಡು ಹೆಬ್ಬುಲಿಯ ಹಿರಿಮೆಯನ್ನು ಮನಗಾಣದೇ ಮುತ್ತಿದರೆ, ಇದಿರಾಗಿ ನಿಲ್ಲಲು ಸಾಧ್ಯವೇ ? ದ್ರೋಣನು ಶೂರ ಸೈನಿಕರನ್ನು ಕತ್ತರಿಸಿ ಸೇನೆಯಲ್ಲಿ ಕೋಲಾಹಲವನ್ನುಂಟು ಮಾಡಿದನು.
ಮೂಲ ...{Loading}...
ಗಾಳ ಗಂಟಲಲಿಳಿವುದೇ ಮ
ತ್ಸ್ಯಾಳಿಗಕಟೀ ದೊದ್ದೆ ಕವಿದರೆ
ಕೋಲಗುರು ಕಳವಳಿಸುವನೆ ಬಯಸುವನೆ ಕೆಲಬಲನ
ಮೇಲುಗಾಣದೆ ಕವಿದಡಿದಿರೇ
ಬಾಲಹರಿಣನ ಹಿಂಡು ಹೆಬ್ಬುಲಿ
ಗಾಳ ತತ್ತರಿದರಿದು ತಳಪಟ ಮಾಡಿದನು ದ್ರೋಣ ॥47॥
೦೪೮ ಆರ ನೆರವಿಯೊಳನ್ಧಕಾರದ ...{Loading}...
ಆರ ನೆರವಿಯೊಳಂಧಕಾರದ
ಭಾರವನು ರವಿ ಗೆಲುವನಿನ್ನೀ
ವೈರಿಬಲಭಂಜನಕೆ ಗುರು ಹಂಗಹನೆ ಕೆಲಬಲಕೆ
ಭೂರಿ ರಿಪುಚತುರಂಗಬಲಸಂ
ಹಾರದಲಿ ಒರವೆದ್ದ ರಕುತದ
ಪೂರದಲಿ ಮುಳುಗಿದರು ಪಾಂಚಾಲಾದಿ ನಾಯಕರು ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನು ಕತ್ತಲನ್ನು ಹೋಗಲಾಡಿಸುವ ಹೊಣೆಯನ್ನು ನಿರ್ವಹಿಸಲು ಯಾರ ಸಹಾಯವನ್ನಾದರೂ ಬಯಸುವನೇ? ಇನ್ನು ಈ ವೈರಿ ಬಲ ಸಂಹಾರಕ್ಕೆ ಗುರು ಅಕ್ಕಪಕ್ಕದವರ ಸಹಾಯವನ್ನು ಬಯಸಿ ಹಂಗಿಗನಾಗುವನೇ ? ಅಧಿಕವಾದ ಶತ್ರು ಚತುರಂಗ ಬಲ ಸಂಹಾರದಲ್ಲಿ ಕಾರಂಜಿಯಾಗಿ ಎದ್ದ ಹೊರಚಿಮ್ಮುವ ರಕ್ತದ ಪ್ರವಾಹದಲ್ಲಿ ಪಾಂಚಾಲಾದಿ ನಾಯಕರು ಮುಳುಗಿದರು.
ಮೂಲ ...{Loading}...
ಆರ ನೆರವಿಯೊಳಂಧಕಾರದ
ಭಾರವನು ರವಿ ಗೆಲುವನಿನ್ನೀ
ವೈರಿಬಲಭಂಜನಕೆ ಗುರು ಹಂಗಹನೆ ಕೆಲಬಲಕೆ
ಭೂರಿ ರಿಪುಚತುರಂಗಬಲಸಂ
ಹಾರದಲಿ ಒರವೆದ್ದ ರಕುತದ
ಪೂರದಲಿ ಮುಳುಗಿದರು ಪಾಂಚಾಲಾದಿ ನಾಯಕರು ॥48॥
೦೪೯ ಘಾಯವಾಯ್ತರ್ಜುನಗೆ ಮಿಗೆ ...{Loading}...
ಘಾಯವಾಯ್ತರ್ಜುನಗೆ ಮಿಗೆ ಪೂ
ರಾಯದೇರಿನೊಳೊದೆದು ಕೊಂಡರು
ವಾಯುತನುಜ ಶಿಖಂಡಿ ಸಾತ್ಯಕಿ ದ್ರುಪದನಂದನರು
ಬಾಯ ಬಿಟ್ಟುದು ಭೀತಿಯಲಿ ಕೌಂ
ತೇಯಸುತರಿನ್ನುಳಿದ ಸುಭಟರ
ನಾಯಕರ ಪಾಡೇನು ನಸಿದುದು ಪಾಂಡುಸುತಸೇನೆ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನಿಗೆ ಘಾಯವಾಯ್ತು, ಭೀಮ, ಶಿಖಂಡಿ, ಸಾತ್ಯಕಿ, ದ್ರುಪದನಂದನರು ಮೈತುಂಬ ಗಾಯಗೊಂಡು ವಿಶೇಷವಾಗಿ ಒದ್ದಾಡಿದರು. ಕೌಂತೇಯ ಸುತರು ಭಯದಿಂದ ಬಾಯಿಬಿಟ್ಟರು. ಇನ್ನುಳಿದ ಸುಭಟರ ನಾಯಕರ ಸ್ಥಿತಿ ಏನು ? ಪಾಂಡುಕುಮಾರರ ಸೇನೆ ನಶಿಸಿತು.
ಪದಾರ್ಥ (ಕ.ಗ.ಪ)
ಪೂರಾಯ-ವಿಶೇಷವಾದ
ಮೂಲ ...{Loading}...
ಘಾಯವಾಯ್ತರ್ಜುನಗೆ ಮಿಗೆ ಪೂ
ರಾಯದೇರಿನೊಳೊದೆದು ಕೊಂಡರು
ವಾಯುತನುಜ ಶಿಖಂಡಿ ಸಾತ್ಯಕಿ ದ್ರುಪದನಂದನರು
ಬಾಯ ಬಿಟ್ಟುದು ಭೀತಿಯಲಿ ಕೌಂ
ತೇಯಸುತರಿನ್ನುಳಿದ ಸುಭಟರ
ನಾಯಕರ ಪಾಡೇನು ನಸಿದುದು ಪಾಂಡುಸುತಸೇನೆ ॥49॥
೦೫೦ ಮೊದಲಲೌಕಿದ ಚಾತುರಙ್ಗವ ...{Loading}...
ಮೊದಲಲೌಕಿದ ಚಾತುರಂಗವ
ಸದೆದನೊಂದೇ ಲಕ್ಷವನು ಮೀ
ರಿದರೆ ಮೋದಿದನೆಂಟುಲಕ್ಷವನೊಂದು ನಿಮಿಷದಲಿ
ಕದನದಲಿ ದಿಗ್ದೇವಿಯರಿಗಿ
ಕ್ಕಿದನು ಲಕ್ಷವನೇಳು ಲಕ್ಷವ
ನೊದಗಿಸಿದನಂತಕನ ಪುರಿಗವನೀಶ ಕೇಳ್ ಎಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮೊದಲು ಮುತ್ತಿದ ಒಂದು ಲಕ್ಷ ಚತುರಂಗ ಸೇನೆಯನ್ನು ನಾಶಮಾಡಿದನು. ಅದನ್ನು ಮೀರಿ ಒಂದು ನಿಮಿಷದಲ್ಲಿ ಎಂಟು ಲಕ್ಷ ಸೇನೆಯನ್ನು ನಾಶಗೈದನು. ಕದನದಲ್ಲಿ ದಿಕ್ಕೆಂಬ ದೇವಿಯರಿಗೆ ಒಂದು ಲಕ್ಷ ಸೇನೆಯನ್ನು ಬಲಿಯಾಗಿ ಅರ್ಪಿಸಿದನು. ಏಳು ಲಕ್ಷ ಸೇನೆಯನ್ನು ಯಮಪುರಿಗೆ ಕಳಿಸಿದನು ರಾಜನೇ ಕೇಳು” ಎಂದು ಸಂಜಯನು ಹೇಳಿದನು.
ಮೂಲ ...{Loading}...
ಮೊದಲಲೌಕಿದ ಚಾತುರಂಗವ
ಸದೆದನೊಂದೇ ಲಕ್ಷವನು ಮೀ
ರಿದರೆ ಮೋದಿದನೆಂಟುಲಕ್ಷವನೊಂದು ನಿಮಿಷದಲಿ
ಕದನದಲಿ ದಿಗ್ದೇವಿಯರಿಗಿ
ಕ್ಕಿದನು ಲಕ್ಷವನೇಳು ಲಕ್ಷವ
ನೊದಗಿಸಿದನಂತಕನ ಪುರಿಗವನೀಶ ಕೇಳೆಂದ ॥50॥
೦೫೧ ಧಾರುಣೀಶರು ಮಡಿದರೊನ್ದೇ ...{Loading}...
ಧಾರುಣೀಶರು ಮಡಿದರೊಂದೇ
ಸಾರಿಗೆಯಲೈನೂರು ಮತ್ತೆ ಮ
ಹಾರಥರು ಮೂನೂರು ಪುನರಪಿ ನೂರು ನಾನೂರು
ಮಾರಿ ಬಿರುದೇಗಿದಳು ಯಮನವ
ರಾರದೊಯ್ಯಲು ನಾಕದಲಿ ಹೊರ
ಕೇರಿಗಟ್ಟಿದುದೆನಲು ಕೊಂದನು ರಿಪುಚತುರ್ಬಲವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೇ ಸಲಕ್ಕೆ ಐದುನೂರು ರಾಜರುಗಳು ಮಡಿದರು. ಪುನಃ ಮಹಾರಥರು ಮುನ್ನೂರು ಪುನಃ ಪುನಃ ನೂರು ನಾನೂರು ಸಂಖ್ಯೆಯಲ್ಲಿ ನಾಶವಾದರು. ಮಾರಿ ದೇವತೆಯು ಬಿರುಸಾಗಿ ತೇಗಿದಳು. ಯಮನ ದೂತರು ಸತ್ತವರನ್ನೆಲ್ಲಾ ಕರೆದೊಯ್ಯಲು ಸಾಧ್ಯವಾಗದೆ ಸ್ವರ್ಗದ ಹೊರಕೇರಿಗೆ ಅಟ್ಟಿದರು ಎನ್ನುವಷ್ಟರ ಮಟ್ಟಿಗೆ ಶತ್ರುಚತುರ್ಬಲವನ್ನು ದ್ರೋಣನು ಕೊಂದನು.
ಮೂಲ ...{Loading}...
ಧಾರುಣೀಶರು ಮಡಿದರೊಂದೇ
ಸಾರಿಗೆಯಲೈನೂರು ಮತ್ತೆ ಮ
ಹಾರಥರು ಮೂನೂರು ಪುನರಪಿ ನೂರು ನಾನೂರು
ಮಾರಿ ಬಿರುದೇಗಿದಳು ಯಮನವ
ರಾರದೊಯ್ಯಲು ನಾಕದಲಿ ಹೊರ
ಕೇರಿಗಟ್ಟಿದುದೆನಲು ಕೊಂದನು ರಿಪುಚತುರ್ಬಲವ ॥51॥
೦೫೨ ಇಳಿದರಿತ್ತಲು ಗಗನದಿಂ ...{Loading}...
ಇಳಿದರಿತ್ತಲು ಗಗನದಿಂ ಹೊಳೆ
ಹೊಳೆವ ಢಾಳದ ಝಾಢಿಯಲಿ ಜಗ
ಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ
ಪುಲಿದೊಗಲ ಸುಲಿಪಲ್ಲ ಮುಕ್ತಾ
ವಳಿಯ ಮಣಿ ಜಪಮಾಲಿಕೆಯ ನಿ
ರ್ಮಳ ತಪೋಧನರೈದಿದರು ಸಂಗ್ರಾಮಭೂಮಿಯನು ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಆಕಾಶದಿಂದ ತಪಸ್ವಿಗಳು ಇಳಿದರು. ಹೊಳೆ ಹೊಳೆವ ಬಿಳಿ ಬಣ್ಣದ ಸಹಜವಾದ ಪ್ರಕಾಶದಲ್ಲಿ ಜಗತ್ತು ಮುಳುಗಲಾಗಿ ಭಸ್ಮವನ್ನು ತನ್ನ ಅಂಗಗಳಿಗೆ ಬಳಿದುಕೊಂಡು ಅದರಿಂದಲೇ ವಿಭೂಷಿತನಾದ, ನೇತಾಡುವ ಕೆಂಜಡೆಯ, ಹುಲಿಯ ಚರ್ಮದ, ಶುದ್ಧವಾದ ಬಿಳಿಯ ಹಲ್ಲಿನ ಸಾಲಿನ, ಮುತ್ತಿನ ಸರದ, ಮಣಿ ಜಪಮಾಲಿಕೆಯ ಪರಿಶುದ್ಧರಾದ ನಿರ್ಮಲ ತಪೋಧನರು ಸಂಗ್ರಾಮ ಭೂಮಿಗೆ ಬಂದರು.
ಮೂಲ ...{Loading}...
ಇಳಿದರಿತ್ತಲು ಗಗನದಿಂ ಹೊಳೆ
ಹೊಳೆವ ಢಾಳದ ಝಾಢಿಯಲಿ ಜಗ
ಮುಳುಗೆ ಭಸ್ಮವಿಭೂಷಿತಾಂಗದ ಜಡಿವ ಕೆಂಜೆಡೆಯ
ಪುಲಿದೊಗಲ ಸುಲಿಪಲ್ಲ ಮುಕ್ತಾ
ವಳಿಯ ಮಣಿ ಜಪಮಾಲಿಕೆಯ ನಿ
ರ್ಮಳ ತಪೋಧನರೈದಿದರು ಸಂಗ್ರಾಮಭೂಮಿಯನು ॥52॥
೦೫೩ ಅತ್ರಿ ಭಾರದ್ವಾಜ ...{Loading}...
ಅತ್ರಿ ಭಾರದ್ವಾಜ ವಿಶ್ವಾ
ಮಿತ್ರ ಗೌತಮ ಕಣ್ವ ಕಶ್ಯಪ
ಮಿತ್ರಸೂನು ವಸಿಷ್ಠ ಗಾಗ್ರ್ಯಾಂಗಿರಸ ಭಾರ್ಗವರು
ಅತ್ರಿಸುತ ವರ ವಾಲಖಿಲ್ಯರು
ಚಿತ್ರಚರಿತರು ಬಂದರಲ್ಲಿಗೆ
ಮಿತ್ರಭಾವದಲವರನಭಿವಂದಿಸಿದನಾಚಾರ್ಯ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ರಿ, ಭಾರಧ್ವಾಜ, ವಿಶ್ವಾಮಿತ್ರ, ಗೌತಮ, ಕಣ್ವ, ಕಶ್ಯಪ, ಮಿತ್ರಸೂನು, ವಸಿಷ್ಠ, ಗಾಗ್ರ್ಯ, ಆಂಗಿರಸ, ಭಾರ್ಗವರು, ಅತ್ರಿಮಹರ್ಷಿಯ ಮಗ, ಶ್ರೇಷ್ಠ ವಾಲಖಿಲ್ಯರು, ಚಿತ್ರಚರಿತರು ಇವರೇ ಮೊದಲಾದವರು ಅಲ್ಲಿಗೆ ಬಂದರು. ದ್ರೋಣರು ಮಿತ್ರಭಾವದಲ್ಲಿ ಅವರನ್ನು ಅಭಿವಂದಿಸಿದರು.
ಟಿಪ್ಪನೀ (ಕ.ಗ.ಪ)
ವಾಲಖಿಲ್ಯರು - ಮಹಾಭಾರತದ ಆದಿಪರ್ವ (ಅಧ್ಯಾಯ 30) ಮತ್ತು ವನಪರ್ವಗಳಲ್ಲಿ ವಾಲಖಿಲ್ಯರ ಪ್ರಸ್ತಾವ ಬರುತ್ತದೆ. ಇವರು ಸೂರ್ಯಮಂಡಲ ವಾಸಿಗಲು. ಸೂರ್ಯಕಿರಣಗಳೇ ಇವರಿಗೆ ಆಹಾರ. ಇವರ ಸಂಖ್ಯೆ ಎಪ್ಪತ್ತುಸಾವಿರ, ಮಹಾತೇಜಸ್ವಿಗಳು, ತಪೋಧನರು, ತಲೆಕೆಳಗಾಗಿ ನಿಂತು ತಪಸ್ಸು ಮಾಡುತ್ತಿದ್ದವರು. ವ್ರತಪರಾಯಣರಾದ ಇವರು ಸೂರ್ಯನ ಮುಂದೆ ಚಲಿಸುವವರಾಗಿದ್ದರು. ತಪಸ್ಸಿದ್ಧಿಗಳಿಸಿದ ಈ ಮಹಾನುಭಾವರು ಸರ್ವಧರ್ಮಗಳನ್ನೂ ಬಲ್ಲವರಾಗಿದ್ದರಂತೆ! ಇವರ ಗಾತ್ರ ಎಷ್ಟು ಗೊತ್ತೆ? ಒಂದು ಬೆರಳಿನ ಗಾತ್ರ ಅಷ್ಟೆ. ದೇವೇಂದ್ರನ ಕಣ್ಣಿಗೆ ಮಾತ್ರ ಇವರು ಅಪಹಾಸ್ಯದ ವಸ್ತುವಾಗಿ ಕಂಡದ್ದು ಆಶ್ಚರ್ಯ. ಸಂದರ್ಭ ಇದು. ಕಶ್ಯಪ ಮಹರ್ಷಿ ಪುತ್ರಕಾಮೇಷ್ಟಿಯಾಗ ಮಾಡಿದ. ಮುಖ್ಯ ಆಹ್ವಾನಿತರಾಗಿದ್ದ ಇವರುಗಳು ತಮ್ಮ ಕೈಯಲ್ಲಿ ಹೊರಲು ಕಷ್ಟವಾಗುವಷ್ಟು ಭಾರಿಯ ಪುಷ್ಪಗುಚ್ಚಗಳನ್ನು ಹೊತ್ತು ಬಂದರು. ಅದನ್ನು ಕಂಡು ದೇವೇಂದ್ರ ಜೋರಾಗಿ ನಕ್ಕುಬಿಟ್ಟನಂತೆ! ದೇವರಾಜನ ಪ್ರಮಾದ ಮತ್ತು ಅಪರಾಧಗಳನ್ನು ಕಂಡು ವಾಲಖಿಲ್ಯರು ಸಿಟ್ಟಿಗೆದ್ದರು. ಈ ಮದೋನ್ಮತ್ತನಾದ ದೇವೇಂದ್ರ ನಮಗೆ ಬೇಕಾಗಿಲ್ಲ. ಇವನನ್ನು ಪೀಠದಿಂದ ಓಡಿಸಿದ ಇವನ ಸ್ಥಾನದಲ್ಲಿ ಬೇರೊಬ್ಬ ಇಂದ್ರನನ್ನು ತಂದು ಪ್ರತಿಷ್ಠಾಪಿಸುತ್ತೇವೆ ಎಂದು ಸಂಕಲ್ಪಿಸಿಕೊಂಡರು. ಅದಕ್ಕಾಗಿ ವಿಧಿವತ್ತಾಗಿ ಹೋಮಕಾರ್ಯವನ್ನು ಪೂರೈಸಿದರು. ಆದರೆ ಮಹರ್ಷಿ ಕಶ್ಯಪರು ಅಡ್ಡಬಂದು ಅನುನಯಪೂರ್ವಕವಾಗಿ ವಾಲಖಿಲ್ಯರ ಮನಸ್ಸನ್ನು ಒಲಿಸಿಕೊಂಡರು. ಆದರೆ ಹೋಮ ಮಾಡಿ ಆಗಿದೆ. ಸಂಕಲ್ಪ ನೆರವೇರದಿದ್ದರೆ ಆಗುವುದಿಲ್ಲವಲ್ಲ. ಕಶ್ಯಪರು ಅದಕ್ಕೂ ಒಂದು ಪರಿಹಾರವನ್ನು ಸೂಚಿಸಿದರು. ಎರಡನೆಯ ಇಂದ್ರನನ್ನು ನಿರ್ಮಿಸುವ ಸಂಕಲಪ್ದ ಬದಲಿಗೆ ಬಲಶಾಲಿಯೂ ಲೋಕಕಲ್ಯಾಣಕಾರಕನೂ ಆದ ಗರುಡನ ಸೃಷ್ಟಿಗೆ ಪ್ರಯತ್ನಿಸಿದರೆ ಒಳ್ಳೆಯದು ಎಂದು ಸೂಚಿಸಿದರು. ಕಶ್ಯಪರ ಈ ಬೇಡಿಕೆಗೆ ವಾಲಖಿಲ್ಯರು ಮಣಿದರು. ಯಾಚಕನಾಗಿ ಬಂದಿದ್ದ ಇಂದ್ರನನ್ನು ಅನುಗ್ರಹಿಸಿದರು. ಗರುಡನಂಥ ಮಹಾತ್ಮನ ಉದಯಕ್ಕೆ ಸಹಕಾರಿಗಳಾದರು.
ವಾಲಖಿಲ್ಯರು ರಾಜಾ ಪೃಥುವಿನ ಮಂತ್ರಿಗಳಾಗಿದ್ದರೆಂದು ಶಾಚಿತಿಪರ್ವ ಹೇಳುತ್ತದೆ. ಅಗಸ್ತ್ಯರ ಬಳಿ ಇದ್ದ ಕಮಲಗಳನ್ನು ಅಪಹರಿಸಿದರೆಂದೂ ಹೇಳಲಾಗಿದೆ. ಮೃಗಚರ್ಮ ಚೀರ ಮತ್ತು ವಲ್ಕಲಗಳೇ ಇವರ ವಸ್ತ್ರಗಳಾಗಿದ್ದುವು. ಇವರು ಶೀತೋಷ್ಣ ದ್ವಂದ್ವರಹಿತರಾಗಿದ್ದರಂತೆ. ಸನ್ಮಾರ್ಗಿಗಳು ತಪೋಧನರೂ ಆಗಿದ್ದರು. ಇವರ ಧರ್ಮದ ಫಲ ಮಹತ್ತರವಾದದ್ದು. ತಪಶ್ಯಕ್ತಿಯಿಂದ ಸರ್ವಪಾಪಗಳನ್ನು ಸುಟ್ಟ ಇವರು ಸರ್ವಲೋಕಗಳನ್ನು ತಮ್ಮ ತೇಜಸ್ಸಿನಿಂದ ಬೆಳಗುತ್ತಿದ್ದರಂತೆ. ಪ್ರತಿನಿತ್ಯವೂ ಇವರು ವೈವಿಧ್ಯಮಯವಾಗಿ ಸೂರ್ಯಸ್ತುತಿ ಮಾಡುತ್ತ ಮುಂದೆ ಸಾಗುತ್ತಿದ್ದರಂತೆ. ಲೋಕ ರಕ್ಷಣೆಯ ಕಾಳಜಿ ಇದ್ದ ಇವರಿಂದ ಸಮಸ್ತಲೋಕವೂ ಉಪಕೃತವಾಗಿದೆ ಎಂದು ವನಪರ್ವ ಹೇಳುತ್ತದೆ.ಅತ್ರಿ, ಭಾರಧ್ವಾಜ, ವಿಶ್ವಾಮಿತ್ರ, ಗೌತಮ, ಕಣ್ವ, ಕಶ್ಯಪ, ಮಿತ್ರಸೂನು, ವಸಿಷ್ಠ, ಗಾಗ್ರ್ಯ, ಆಂಗಿರಸ, ಭಾರ್ಗವರು, ಅತ್ರಿಮಹರ್ಷಿಯ ಮಗ, ಶ್ರೇಷ್ಠ ವಾಲಖಿಲ್ಯರು, ಚಿತ್ರಚರಿತರು
ಮೂಲ ...{Loading}...
ಅತ್ರಿ ಭಾರದ್ವಾಜ ವಿಶ್ವಾ
ಮಿತ್ರ ಗೌತಮ ಕಣ್ವ ಕಶ್ಯಪ
ಮಿತ್ರಸೂನು ವಸಿಷ್ಠ ಗಾಗ್ರ್ಯಾಂಗಿರಸ ಭಾರ್ಗವರು
ಅತ್ರಿಸುತ ವರ ವಾಲಖಿಲ್ಯರು
ಚಿತ್ರಚರಿತರು ಬಂದರಲ್ಲಿಗೆ
ಮಿತ್ರಭಾವದಲವರನಭಿವಂದಿಸಿದನಾಚಾರ್ಯ ॥53॥
೦೫೪ ವರಮುನೀಶ್ವರರವನಿಯಲಿ ಮೂ ...{Loading}...
ವರಮುನೀಶ್ವರರವನಿಯಲಿ ಮೂ
ವರಿಗೆ ಗೋಚರವಾದರಿತ್ತಲು
ಮುರವಿರೋಧಿಗೆ ನರಗೆ ಕುರುಸೇನಾಧಿನಾಥಂಗೆ
ಅರಿಯರುಳಿದವರೀತನಿಂ ಸ
ತ್ಕರಿಸಿಕೊಂಡರು ನುಡಿದರಾ ಮುನಿ
ವರರು ಕಡಿದರು ಕೌರವಾನ್ವಯ ಕಲ್ಪ ಭೂರುಹವ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿಶ್ರೇಷ್ಠರು ಲೋಕದಲ್ಲಿ ಈ ಕಡೆ ಮುರವಿರೋಧಿಯಾದ ಕೃಷ್ಣನಿಗೆ, ಅರ್ಜುನನಿಗೆ ಕುರು ಸೇನಾಪತಿಯಾದ ದ್ರೋಣನಿಗೆ ಈ ಮೂವರಿಗೆ ಮಾತ್ರ ಗೋಚರವಾದರು. ಉಳಿದವರಿಗೆ ತಿಳಿಯಲಿಲ್ಲ. ಅವರು ದ್ರೋಣನಿಂದ ಸತ್ಕಾರವನ್ನು ಪಡೆದರು. ಆ ಮುನಿಶ್ರೇಷ್ಠರು ನುಡಿದರು. ಕೌರವಾನ್ವಯದ ಕಲ್ಪವೃಕ್ಷವನ್ನೇ ಕಡಿದರು.
ಪದಾರ್ಥ (ಕ.ಗ.ಪ)
ಭೂರುಹ-ವೃಕ್ಷ, ಮರ
ಮೂಲ ...{Loading}...
ವರಮುನೀಶ್ವರರವನಿಯಲಿ ಮೂ
ವರಿಗೆ ಗೋಚರವಾದರಿತ್ತಲು
ಮುರವಿರೋಧಿಗೆ ನರಗೆ ಕುರುಸೇನಾಧಿನಾಥಂಗೆ
ಅರಿಯರುಳಿದವರೀತನಿಂ ಸ
ತ್ಕರಿಸಿಕೊಂಡರು ನುಡಿದರಾ ಮುನಿ
ವರರು ಕಡಿದರು ಕೌರವಾನ್ವಯ ಕಲ್ಪ ಭೂರುಹವ ॥54॥
೦೫೫ ಪಾತಕವಲಾ ದ್ರೋಣ ...{Loading}...
ಪಾತಕವಲಾ ದ್ರೋಣ ನಿನಗೀ
ಭೂತಹಿಂಸೆಯದೇಕೆ ಪಾರ್ಥಿವ
ಜಾತಿಯಲಿ ಜನಿಸಿದವರೀ ನಿನ್ನಂತೆ ನಿರ್ದಯರೆ
ಸೋತರೇನದು ಋಷಿತನಕಪ
ಖ್ಯಾತಿಯೇ ಶಸ್ತ್ರೋಪಜೀವನ
ವೇತಕಿದು ನಿನಗೆಂದು ಭಾರದ್ವಾಜಮುನಿ ನುಡಿದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನೇ ನಿನಗೆ ಈ ಪ್ರಾಣಿ ಹಿಂಸೆ ಪಾತಕವಲ್ಲವೇ ? ಕ್ಷತ್ರಿಯ ಜಾತಿಯಲ್ಲಿ ಜನಿಸಿದವರೆಲ್ಲರೂ ನಿನ್ನಂತೆ ನಿರ್ದಯರಾಗಿದ್ದಾರೆಯೇ ? ಸೋತರೆ ಅದು ಋಷಿತನಕ್ಕೆ ಅಪಖ್ಯಾತಿಯೇ ? ಶಸ್ತ್ರೋಪ ಜೀವನವು ನಿನಗೇಕೆ ? ಎಂದು ಭಾರದ್ವಾಜ ಮುನಿ ಹೇಳಿದನು.
ಮೂಲ ...{Loading}...
ಪಾತಕವಲಾ ದ್ರೋಣ ನಿನಗೀ
ಭೂತಹಿಂಸೆಯದೇಕೆ ಪಾರ್ಥಿವ
ಜಾತಿಯಲಿ ಜನಿಸಿದವರೀ ನಿನ್ನಂತೆ ನಿರ್ದಯರೆ
ಸೋತರೇನದು ಋಷಿತನಕಪ
ಖ್ಯಾತಿಯೇ ಶಸ್ತ್ರೋಪಜೀವನ
ವೇತಕಿದು ನಿನಗೆಂದು ಭಾರದ್ವಾಜಮುನಿ ನುಡಿದ ॥55॥
೦೫೬ ಲೋಕವೆಮ್ಬುದು ವರ್ಣಧರ್ಮವ ...{Loading}...
ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತ ಕರ್ಮಶ್ರುತಿ ಪರಿತ್ಯಾಗ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಲೋಕವೆಂಬುದು ವರ್ಣಧರ್ಮವನ್ನು ಅನುಸರಿಸಿಯೆ ನಡೆಯುವುದು. ವೈದಿಕ ಧರ್ಮಕ್ಕೆ ನಾವು ಮೊದಲಿಗರು (ಪ್ರಮುಖರು) ನಾವೇ ತಪ್ಪಿ ನಡೆದರೆ ವಿದ್ವಾಂಸರು ಭ್ರಮೆಗೆ ಒಳಗಾಗುತ್ತಾರೆ. ಲೋಕವು ನಮ್ಮನ್ನೇ ಉದಾಹರಿಸುವುದು. ಅಪಹಾಸ್ಯ ಮಾಡುವುದು. ವಿಹಿತವಾದ ಕರ್ಮಶ್ರುತಿ ಪರಿತ್ಯಾಗ ನಿಮಗೇಕೆ ? ದುರ್ಯಶವೇಕೆ ?” ಎಂದರು.
ಮೂಲ ...{Loading}...
ಲೋಕವೆಂಬುದು ವರ್ಣಧರ್ಮವ
ನೌಕಿ ನಡೆವುದು ವೈದಿಕಕೆ ನಾ
ವಾಕೆವಾಳರು ತಪ್ಪಿ ನಡೆದರೆ ಭ್ರಮಿಸುವರು ಬುಧರು
ಲೋಕ ನಮ್ಮನುದಾಹರಿಸುವುದು
ಕಾಕನೇ ಬಳಸುವುದು ದುರ್ಯಶ
ವೇಕೆ ನಿಮಗಿದು ವಿಹಿತ ಕರ್ಮಶ್ರುತಿ ಪರಿತ್ಯಾಗ ॥56॥
೦೫೭ ಶ್ರುತಿಪಠಣವೋ ತರ್ಪಣವೊ ...{Loading}...
ಶ್ರುತಿಪಠಣವೋ ತರ್ಪಣವೊ ಮೇ
ಣತಿಥಿ ಪೂಜೆಯೊ ಭೂತಯಜ್ಞವೊ
ಹುತವಹಾರಾಧನೆಯೊ ರಣವೀಯೈಯ್ದರೊಳಗೇನು
ಶ್ರುತಿ ತದರ್ಥಸ್ಮೃತಿಗಳಲಿ ಪಂ
ಡಿತರು ನಡೆವುದ ಮಾದು ಮೂರ್ಖರ
ಗತಿಯನನುಕರಿಸಿದರೆ ಬಳಿಕ ವಿಶೇಷವೇನೆಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶ್ರುತಿ ಪಠಣವೋ, ತರ್ಪಣವೋ ಅಥವಾ ಅತಿಥಿ ಪೂಜೆಯೋ, ಭೂತಯಜ್ಞವೋ, ಅಗ್ನಿದೇವನ ಆರಾಧನೆಯೋ-ಇವಲ್ಲವೇ ನಿಮಗೆ ಭೂಷಣವು. ಯುದ್ಧವು ಈ ಐದರೊಳಗೆ ಸೇರಿದೆಯೇ ? ಶ್ರುತಿ, ಸ್ಮೃತಿಗಳಿಗನುಸಾರವಾಗಿ ಪಂಡಿತರು ನಡೆಯುವ ಮಾರ್ಗವನ್ನು ಬಿಟ್ಟು ಮೂರ್ಖರ ರೀತಿಯನ್ನು ಅನುಕರಿಸಿದರೆ ಬರುವ ವಿಶೇಷವಾದ ಫಲವೇನು ?” ಎಂದನು.
ಪದಾರ್ಥ (ಕ.ಗ.ಪ)
ಮಾದು-ಬಿಟ್ಟು, ಹುತವಹ-ಅಗ್ನಿ
ಮೂಲ ...{Loading}...
ಶ್ರುತಿಪಠಣವೋ ತರ್ಪಣವೊ ಮೇ
ಣತಿಥಿ ಪೂಜೆಯೊ ಭೂತಯಜ್ಞವೊ
ಹುತವಹಾರಾಧನೆಯೊ ರಣವೀಯೈಯ್ದರೊಳಗೇನು
ಶ್ರುತಿ ತದರ್ಥಸ್ಮೃತಿಗಳಲಿ ಪಂ
ಡಿತರು ನಡೆವುದ ಮಾದು ಮೂರ್ಖರ
ಗತಿಯನನುಕರಿಸಿದರೆ ಬಳಿಕ ವಿಶೇಷವೇನೆಂದ ॥57॥
೦೫೮ ಆದುದವಿವೇಕದಲಿ ಸತ್ಪಥ ...{Loading}...
ಆದುದವಿವೇಕದಲಿ ಸತ್ಪಥ
ವೈದಿಕಾತಿಕ್ರಮಣವಿನ್ನು ಗ
ತೋದಕದಲುರೆ ಸೇತುಸಂಬಂಧದಲಿ ಫಲವೇನು
ಈ ದುರಾಗ್ರಹ ನಿಲಲಿ ಹಾಯಿಕು
ಕೈದುವನು ಸುಸಮಾಧಿ ಯೋಗದ
ಲೈದು ನಿಜವನು ದೇಹ ನಿಸ್ಪೃಹನಾಗು ನೀನೆಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದುವರೆಗೆ ಅವಿವೇಕದಿಂದ ಒಳ್ಳೆಯ ಮಾರ್ಗವಾದ ವೈದಿಕ ಧರ್ಮವನ್ನು ಅತಿಕ್ರಮಣ ಮಾಡಿದ್ದಾಯಿತು. ನೀರು ಹರಿದು ಹೋದಮೇಲೆ ಸೇತುವೆ ಏಕೆ ಕಟ್ಟಬೇಕು ? ಈ ದುರಾಗ್ರಹವು ನಿಲ್ಲಲಿ. ಆಯುಧವನ್ನು ಕೆಳಗೆ ಹಾಕು. ಸುಸಮಾಧಿಯೋಗದಲ್ಲಿ ನೆಲೆನಿಲ್ಲು, ನಿಜವನ್ನು ಅರಿತು ನೀನು ದೇಹ ನಿಸ್ಪೃಹನಾಗು " ಎಂದನು. (ದೇಹದ ಮೇಲಿನ ವ್ಯಾಮೋಹ ಬಿಡು)
ಮೂಲ ...{Loading}...
ಆದುದವಿವೇಕದಲಿ ಸತ್ಪಥ
ವೈದಿಕಾತಿಕ್ರಮಣವಿನ್ನು ಗ
ತೋದಕದಲುರೆ ಸೇತುಸಂಬಂಧದಲಿ ಫಲವೇನು
ಈ ದುರಾಗ್ರಹ ನಿಲಲಿ ಹಾಯಿಕು
ಕೈದುವನು ಸುಸಮಾಧಿ ಯೋಗದ
ಲೈದು ನಿಜವನು ದೇಹ ನಿಸ್ಪೃಹನಾಗು ನೀನೆಂದ ॥58॥
೦೫೯ ದೇಹವಿದು ಭೂತೇನ್ದ್ರಿಯಾದಿಯ ...{Loading}...
ದೇಹವಿದು ಭೂತೇಂದ್ರಿಯಾದಿಯ
ಗೇಹವುಪಚಿತ ಕರ್ಮ ಫಲ ಸಂ
ದೋಹದಲಿ ತಿರುಗುವುವು ಸುರ ನರ ತಿರ್ಯಗಾದಿಯಲಿ
ದೇಹ ಕರಣಾದಿ ಪ್ರಪಂಚವು
ನಾಹಮೆನಲಳಿದುಳಿದ ನಿತ್ಯ ನಿ
ರೀಹ ವಿಮಳ ಜ್ಞಾನರೂಪನು ನಿನ್ನ ನೋಡೆಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ದೇಹವು ಪಂಚಭೂತಗಳ, ಪಂಚ ಇಂದ್ರಿಯಗಳ ಮನೆಯು. ಶೇಖರಿಸಿದ ಕರ್ಮಫಲ ಸಮೂಹದಲ್ಲಿ ಈ ದೇಹವು ಸುರ, ನರ, ತಿರ್ಯಗ್ ಜಂತುಗಳಾದಿಯಾಗಿ ಹುಟ್ಟು, ಸಾವುಗಳ ಚಕ್ರದಲ್ಲಿ ತಿರುಗುವುವು. ದೇಹ, ಇಂದ್ರಿಯಗಳಾದಿಯಾದ ಈ ಪ್ರಪಂಚವು ನಾನಲ್ಲ ಎನ್ನುವಂತೆ ದೇಹಭಾವ ನಾಶವಾಗಿ ಉಳಿದ ನಿತ್ಯ, ಆಸೆಯಿಲ್ಲದ, ನಿರ್ಮಲ ಜ್ಞಾನ ಸ್ವರೂಪನು ನೀನೇ ಎಂದು ಅರಿತು ನಿನ್ನನ್ನು ನೀನು ನೋಡಿಕೋ” ಎಂದನು (ನಿನ್ನ ಸ್ವರೂಪವನ್ನು ಅರ್ಥಮಾಡಿಕೊ)
ಮೂಲ ...{Loading}...
ದೇಹವಿದು ಭೂತೇಂದ್ರಿಯಾದಿಯ
ಗೇಹವುಪಚಿತ ಕರ್ಮ ಫಲ ಸಂ
ದೋಹದಲಿ ತಿರುಗುವುವು ಸುರ ನರ ತಿರ್ಯಗಾದಿಯಲಿ
ದೇಹ ಕರಣಾದಿ ಪ್ರಪಂಚವು
ನಾಹಮೆನಲಳಿದುಳಿದ ನಿತ್ಯ ನಿ
ರೀಹ ವಿಮಳ ಜ್ಞಾನರೂಪನು ನಿನ್ನ ನೋಡೆಂದ ॥59॥
೦೬೦ ನನೆದುದನ್ತಃಕರಣ ರೋಮಾಂ ...{Loading}...
ನನೆದುದಂತಃಕರಣ ರೋಮಾಂ
ಚನದಲಾನಂದಾಶ್ರುಜಲದಲಿ
ನನೆದು ಹೊಂಪುಳಿಯೋಗಿ ಕಣ್ಣಿವೆ ಮುಚ್ಚಿ ಹೊರೆಹೆಚ್ಚಿ
ನೆನೆದೆನೆನ್ನನು ನಿಮ್ಮ ಪದದರು
ಶನದಿ ಧನ್ಯನು ಬಿಜಯಮಾಡುವು
ದೆನುತ ಕಂದೆರೆದೀಕ್ಷಿಸಿದನಂದುಭಯಸೈನಿಕವ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೋಣನ ಅಂತಃಕರಣ ನೆನೆಯಿತು. ರೋಮಾಂಚನದ ಆನಂದಾಶ್ರುಜಲದಲ್ಲಿ ನೆನೆದು ಪುಲಕಿತಗೊಂಡು ಕಣ್ಣನ್ನು ಮುಚ್ಚಿ ಸಂತೋಷ ಹೆಚ್ಚಿ ತನ್ಮಯನಾದೆನು. ನಿಮ್ಮ ಪಾದ ದರ್ಶನದಿಂದ ಧನ್ಯನಾದೆ. ಬೀಳ್ಕೊಡಿರಿ” ಎನ್ನುತ್ತಾ ಕಣ್ಣುಗಳನ್ನು ತೆರೆದು ಅಂದು ಉಭಯ ಸೈನ್ಯವನ್ನು ನೋಡಿದನು.
ಮೂಲ ...{Loading}...
ನನೆದುದಂತಃಕರಣ ರೋಮಾಂ
ಚನದಲಾನಂದಾಶ್ರುಜಲದಲಿ
ನನೆದು ಹೊಂಪುಳಿಯೋಗಿ ಕಣ್ಣಿವೆ ಮುಚ್ಚಿ ಹೊರೆಹೆಚ್ಚಿ
ನೆನೆದೆನೆನ್ನನು ನಿಮ್ಮ ಪದದರು
ಶನದಿ ಧನ್ಯನು ಬಿಜಯಮಾಡುವು
ದೆನುತ ಕಂದೆರೆದೀಕ್ಷಿಸಿದನಂದುಭಯಸೈನಿಕವ ॥60॥
೦೬೧ ತಿರುಗಿದುದು ...{Loading}...
ತಿರುಗಿದುದು ಮುನಿನಿಕರವತ್ತಲು
ಮರಳಿತೀತನ ಬುದ್ಧಿಯಿತ್ತಲು
ತೆರೆಯ ಹಿಡಿದುದು ಮರವೆ ಸಮ್ಯಜ್ಞಾನದೀಧಿತಿಗೆ
ಅರಸನನು ಬೆಸಗೊಂಬ ತನುಜನ
ಮರಣ ಹುಸಿಯೋ ದಿಟವೊ ಭೀಮನ
ಸೊರಹ ನಂಬೆನೆನುತ್ತ ರಾಯನನರಸುತೈತಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುನಿ ಸಮೂಹವು ಅತ್ತ ತಿರುಗಲು ಈ ಕಡೆ ದ್ರೋಣನ ಬುದ್ಧಿ ಹಿಂತಿರುಗಿತು. ಸಂಪೂರ್ಣವಾದ ಜ್ಞಾನ ಪ್ರಕಾಶಕ್ಕೆ ಮರವೆಯ ತೆರೆ ಹಿಡಿಯಿತು. ಸಮಗ್ರಜ್ಞಾನ ಮಸುಕಾಯಿತು. ತನ್ನ ಮಗನ ಮರಣ ಸುಳ್ಳೋ, ನಿಜವೋ ಎಂದು ಅರಸನಾದ ಧರ್ಮರಾಯನನ್ನು ಕೇಳೋಣ. ಭೀಮನ ಮಾತನ್ನು ನಂಬುವುದಿಲ್ಲ ಎನ್ನುತ್ತಾ ರಾಯನನ್ನು ಹುಡುಕುತ್ತಾ ಬಂದನು.
ಮೂಲ ...{Loading}...
ತಿರುಗಿದುದು ಮುನಿನಿಕರವತ್ತಲು
ಮರಳಿತೀತನ ಬುದ್ಧಿಯಿತ್ತಲು
ತೆರೆಯ ಹಿಡಿದುದು ಮರವೆ ಸಮ್ಯಜ್ಞಾನದೀಧಿತಿಗೆ
ಅರಸನನು ಬೆಸಗೊಂಬ ತನುಜನ
ಮರಣ ಹುಸಿಯೋ ದಿಟವೊ ಭೀಮನ
ಸೊರಹ ನಂಬೆನೆನುತ್ತ ರಾಯನನರಸುತೈತಂದ ॥61॥
೦೬೨ ಎಲೆ ಯುಧಿಷ್ಠಿರ ...{Loading}...
ಎಲೆ ಯುಧಿಷ್ಠಿರ ನನ್ನ ಸುತನೇ
ನಳಿದನೇ ಹುಸಿಯಲ್ಲಲೇ ನಿ
ರ್ಮಳವಚೋನಿಧಿ ನೀನು ಹೇಳೆನಲಸುರಹರ ನಗುತ
ಎಲೆಲೆ ನುಡಿಯಾ ಪಾಪಿ ಕದನದೊ
ಳಳಿದುದಶ್ವತ್ಥಾಮನೆಂಬ
ಗ್ಗಳೆಯ ಕರಿ ಮಾಳವರ ಥಟ್ಟಿನೊಳಂಜಬೇಡೆಂದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು “ಎಲೆ ಯುಧಿಷ್ಠಿರನೇ… ನನ್ನ ಮಗ ಮಡಿದನೇನು ? ಆ ಮಾತು ಸುಳ್ಳಲ್ಲವೇ ? ಪರಿಶುದ್ಧ ಸತ್ಯವಾದಿಯಾದ ನೀನು ಹೇಳು” ಎನ್ನಲು, ಶ್ರೀಕೃಷ್ಣನು ನಗುತ್ತಾ…..ಧರ್ಮರಾಯನನ್ನು ಕುರಿತು " ಎಲೆಲೆ, ಹೇಳಯ್ಯಾ… ಪಾಪಿ, ಯುದ್ಧದಲ್ಲಿ ಮಾಳವರ ಥಟ್ಟಿನಲ್ಲಿ ಅಶ್ವತ್ಥಾಮನೆಂಬ ಶ್ರೇಷ್ಠ ಆನೆ ಮಡಿದುದು. ಹೆದರಬೇಡ. ಹೀಗೆಂದು ಹೇಳಯ್ಯಾ " ಎಂದನು.
ಪದಾರ್ಥ (ಕ.ಗ.ಪ)
ವಚೋನಿಧಿ-ಸತ್ಯವಾದಿ
ಮೂಲ ...{Loading}...
ಎಲೆ ಯುಧಿಷ್ಠಿರ ನನ್ನ ಸುತನೇ
ನಳಿದನೇ ಹುಸಿಯಲ್ಲಲೇ ನಿ
ರ್ಮಳವಚೋನಿಧಿ ನೀನು ಹೇಳೆನಲಸುರಹರ ನಗುತ
ಎಲೆಲೆ ನುಡಿಯಾ ಪಾಪಿ ಕದನದೊ
ಳಳಿದುದಶ್ವತ್ಥಾಮನೆಂಬ
ಗ್ಗಳೆಯ ಕರಿ ಮಾಳವರ ಥಟ್ಟಿನೊಳಂಜಬೇಡೆಂದ ॥62॥
೦೬೩ ಆದರಶ್ವತ್ಥಾಮ ಗಜವಿದಿ ...{Loading}...
ಆದರಶ್ವತ್ಥಾಮ ಗಜವಿದಿ
ರಾದುದಳಿದುದು ದಿಟವೆನಲು ಬಿಸು
ಸುಯ್ದನರಸನ ನುಡಿಗೆ ನಂಬಿದನಕಟ ಮಗನೆನುತ
ಕೈದು ಕಯ್ಯಲಿ ಜಾರೆ ಝೊಂಪಿಸಿ
ಖೇದದಲಿ ಕಾತರಿಸಿ ಚಿತ್ತವಿ
ಭೇದದಲಿ ಕಳವಳಿಸಿ ಕರೆದನು ರೋಷತಾಮಸವ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
63.ಧರ್ಮರಾಯನು " ಅಶ್ವತ್ಥಾಮನೆಂಬ ಆನೆಯು ಇದಿರಾಗಿ ನಾಶವಾಯಿತು. ಇದು ನಿಜ” ಎನ್ನಲು ರಾಜನ ಮಾತಿಗೆ ನಿಟ್ಟುಸಿರು ಬಿಟ್ಟು ದ್ರೋಣನು ಸತ್ತದ್ದು ತನ್ನ ಮಗನೇ ಎಂದು ನಂಬಿದನು. ಕೈಯಲ್ಲಿದ್ದ ಆಯುಧ ಜಾರಿ ಬೀಳಲಾಗಿ ನಡುಗಿ ದುಃಖದಿಂದ ಕಾತರಿಸಿ ಮನಸ್ಸಿನ ದ್ವಂದ್ವದಲ್ಲಿ ಕಳವಳಿಸಿ ರೋಷವೆಂಬ ತಾಮಸ ಗುಣವನ್ನು ಆಹ್ವಾನಿಸಿದನು.
ಪದಾರ್ಥ (ಕ.ಗ.ಪ)
ಚಿತ್ತ ವಿಭೇದ-ಮನಸ್ಸಿನ ದ್ವಂದ್ವ
ಟಿಪ್ಪನೀ (ಕ.ಗ.ಪ)
ಮದ್ದಾನೆಯೆಂಬ ಅಶ್ವತ್ಥಾಮ ಸತ್ತ ಎಂದು ದ್ರೋಣ ತಿಳಿಯುತ್ತಾನೆ. ಅಶ್ವತ್ಥಾಮ ಎಂಬ ಹೆಸರಿನ ಅನೆ ನಾಶವಾಯಿತು ಎಂದು ಹೇಳಿ ಧರ್ಮಜ ಸಮಾಧಾನಗೊಳ್ಳುತ್ತಾನೆ.
ಮೂಲ ...{Loading}...
ಆದರಶ್ವತ್ಥಾಮ ಗಜವಿದಿ
ರಾದುದಳಿದುದು ದಿಟವೆನಲು ಬಿಸು
ಸುಯ್ದನರಸನ ನುಡಿಗೆ ನಂಬಿದನಕಟ ಮಗನೆನುತ
ಕೈದು ಕಯ್ಯಲಿ ಜಾರೆ ಝೊಂಪಿಸಿ
ಖೇದದಲಿ ಕಾತರಿಸಿ ಚಿತ್ತವಿ
ಭೇದದಲಿ ಕಳವಳಿಸಿ ಕರೆದನು ರೋಷತಾಮಸವ ॥63॥
೦೬೪ ಬಿಲುದುಡುಕಿ ಬಲುಸರಳ ...{Loading}...
ಬಿಲುದುಡುಕಿ ಬಲುಸರಳ ತಿರುವಾಯ್
ಗೊಳಿಸಿ ಮಲೆತನು ಮಾರ್ಬಲಕೆ ಬಲೆ
ಕಳಚಿದರೆ ಮೃಗ ಬಿದ್ದುದಿರುಬಿನ ಕುಳಿಯೊಳೆಂಬಂತೆ
ತಿಳುಹಿ ಹೋದರು ಮುನಿಗಳೀತನ
ತಿಳಿವು ತೊಟ್ಟುದು ಮರವೆಯನು ಮುಂ
ಕೊಳಿಸಿ ಮೊಗೆದನು ಮತ್ತೆ ಪಾಂಡವಸೈನ್ಯಸಾಗರವ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಲೆ ಕಳಚಿದರೆ ಮೃಗ ಇಕ್ಕಟ್ಟಿನ ಕುಳಿಯೊಳಗೆ ಬಿದ್ದಿತು ಎಂಬಂತೆ ದ್ರೋಣನು ಬಿಲ್ಲನ್ನು ಹಿಡಿದು ಬಾಣವನ್ನು ಹೆದೆಯೇರಿಸಿ ಶತ್ರು ಸೈನ್ಯವನ್ನು ಪ್ರತಿಭಟಿಸಿ ನಿಂತನು. ಮುನಿಗಳೇನೋ ಜ್ಞಾನ ಮಾರ್ಗವನ್ನು ತಿಳಿಸಿ ಹೋದರು. ಆದರೆ ಈತನ ತಿಳಿವಿಗೆ ಅಜ್ಞಾನವೆಂಬ ಮುಸುಕು ಕವಿಯಿತು. ಪುನಃ ಮುಂದಾಗಿ ಪಾಂಡವ ಸೇನಾ ಸಾಗರವನ್ನು ಮೊಗೆದನು. ಆಪೋಶನ ತೆಗೆದುಕೊಂಡನು.
ಪದಾರ್ಥ (ಕ.ಗ.ಪ)
ತಿರುವಾಯ್ಗೊಳಿಸು-ಹೆದೆಯೇರಿಸು,
ಮೂಲ ...{Loading}...
ಬಿಲುದುಡುಕಿ ಬಲುಸರಳ ತಿರುವಾಯ್
ಗೊಳಿಸಿ ಮಲೆತನು ಮಾರ್ಬಲಕೆ ಬಲೆ
ಕಳಚಿದರೆ ಮೃಗ ಬಿದ್ದುದಿರುಬಿನ ಕುಳಿಯೊಳೆಂಬಂತೆ
ತಿಳುಹಿ ಹೋದರು ಮುನಿಗಳೀತನ
ತಿಳಿವು ತೊಟ್ಟುದು ಮರವೆಯನು ಮುಂ
ಕೊಳಿಸಿ ಮೊಗೆದನು ಮತ್ತೆ ಪಾಂಡವಸೈನ್ಯಸಾಗರವ ॥64॥
೦೬೫ ತಿರುಗಿ ಭೀಮನನೆಚ್ಚನಿತ್ತಲು ...{Loading}...
ತಿರುಗಿ ಭೀಮನನೆಚ್ಚನಿತ್ತಲು
ನರನ ಮಸೆಗಾಣಿಸಿದನರಸನ
ಹೊರೆಯ ಬಿರುದರ ಬಸಿಯಲೆಚ್ಚನು ವಾಮದಕ್ಷಿಣವ
ಮರಳಿ ಧೃಷ್ಟದ್ಯುಮ್ನ ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರರಸುಮಕ್ಕಳ ಹಲಬರನು ಮುರಿಯೆಚ್ಚು ಬೊಬ್ಬಿರಿದ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪುನಃ ಭೀಮನ ಮೇಲೆ ಬಾಣ ಪ್ರಯೋಗಿಸಿದನು. ಅರ್ಜುನನನ್ನು ಗಾಯಗೊಳಿಸಿದನು. ರಾಜನ ಸಮೀಪದ ಬಲ ಎಡಭಾಗದ ವೀರರ ಮೇಲೆ ರಕ್ತ ಬಸಿಯುವಂತೆ ಬಾಣ ಪ್ರಯೋಗಿಸಿದನು. ಪುನಃ ಧೃಷ್ಟದ್ಯುಮ್ನ, ಸಾತ್ಯಕಿ, ಶ್ರೇಷ್ಠ ಯುಧಾಮನ್ಯು, ಉತ್ತಮೌಂಜಸ ಮೊದಲಾದ ಅರಸು ಮಕ್ಕಳಲ್ಲಿ ಹಲವರ ಮೇಲೆ ನಾಶವಾಗುವಂತೆ ಬಾಣ ಪ್ರಯೋಗಿಸಿ ಬೊಬ್ಬಿರಿದನು.
ಮೂಲ ...{Loading}...
ತಿರುಗಿ ಭೀಮನನೆಚ್ಚನಿತ್ತಲು
ನರನ ಮಸೆಗಾಣಿಸಿದನರಸನ
ಹೊರೆಯ ಬಿರುದರ ಬಸಿಯಲೆಚ್ಚನು ವಾಮದಕ್ಷಿಣವ
ಮರಳಿ ಧೃಷ್ಟದ್ಯುಮ್ನ ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರರಸುಮಕ್ಕಳ ಹಲಬರನು ಮುರಿಯೆಚ್ಚು ಬೊಬ್ಬಿರಿದ ॥65॥
೦೬೬ ಈಸು ಭರದಲಿ ...{Loading}...
ಈಸು ಭರದಲಿ ಭೂತಹಿಂಸಾ
ದೋಷವನು ನೆರೆ ಮಾಡಿ ಮಕ್ಕಳಿ
ಗೋಸುಗವಲೇ ಹಣವ ಗಳಿಸುವುದಾತ ತಾನಳಿಯೆ
ಆಸೆಯಿದರೊಳಗೇಕೆ ಧುರದಾ
ವೇಶವಳಿಯದು ಶಿವ ಶಿವಾ ಸುತ
ನಾಶವನು ಬಗೆಗೊಳ್ಳನೆಂದನು ಪವನಸುತ ನಗುತ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಇವನ ಆರ್ಭಟೆಗೆ ನಸುನಗುತ್ತ “ಇಷ್ಟು ವೇಗವಾಗಿ ಭೂತ ಹಿಂಸಾದೋಷವನ್ನು ವಿಶೇಷವಾಗಿ ಮಾಡಿ ಹಣವನ್ನು ಗಳಿಸುವುದು ಮಕ್ಕಳಿಗೋಸ್ಕರವೇ ಅಲ್ಲವೇ ? ತಾನೂ ನಾಶವಾದ ಮೇಲೆ ಪ್ರಯೋಜನವೇನು ? ಆಸೆ ಇದರಲ್ಲಿ ಏಕೆ ? ಯುದ್ಧದ ಆವೇಶ ನಾಶವಾಗುತ್ತಿಲ್ಲವಲ್ಲಾ ? ಶಿವ ಶಿವಾ ಮಗನ ಮರಣದ ವಿಷಯವನ್ನೂ ಸಹ ಮನಸ್ಸಿಗೆ ತಂದುಕೊಳ್ಳುತ್ತಿಲ್ಲವಲ್ಲ ?” ಎಂದನು.
ಮೂಲ ...{Loading}...
ಈಸು ಭರದಲಿ ಭೂತಹಿಂಸಾ
ದೋಷವನು ನೆರೆ ಮಾಡಿ ಮಕ್ಕಳಿ
ಗೋಸುಗವಲೇ ಹಣವ ಗಳಿಸುವುದಾತ ತಾನಳಿಯೆ
ಆಸೆಯಿದರೊಳಗೇಕೆ ಧುರದಾ
ವೇಶವಳಿಯದು ಶಿವ ಶಿವಾ ಸುತ
ನಾಶವನು ಬಗೆಗೊಳ್ಳನೆಂದನು ಪವನಸುತ ನಗುತ ॥66॥
೦೬೭ ಕೇಳಿದನು ಕಡುನೊನ್ದನಡಿಗಡಿ ...{Loading}...
ಕೇಳಿದನು ಕಡುನೊಂದನಡಿಗಡಿ
ಗಾಲಿ ನೀರೇರಿದವು ಕೈಯಲಿ
ಕೋಲು ಬಿಲು ಸಡಲಿದವು ಸಾಕೀ ದೇಹವೇಕೆನುತ
ಮೇಲು ದುಗುಡದ ಮೊಗದಲವನೀ
ಪಾಲ ಕರ್ಣ ಕೃಪಾದಿ ಭಟರಿಗೆ
ಹೇಳಿದನು ಮಗನಳಿದನಸ್ತ್ರ ತ್ಯಾಗ ತನಗೆಂದು ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಈ ಮಾತುಗಳನ್ನು ಕೇಳಿ ದ್ರೋಣನು ಅತ್ಯಂತ ನೊಂದನು. ಅಡಿಗಡಿಗೆ ಕಣ್ಣಿನಲ್ಲಿ ನೀರು ತುಂಬಿದವು. ಕೈಯಲ್ಲಿನ ಬಿಲ್ಲು-ಬಾಣಗಳು ಜಾರಿದವು. ಸಾಕು ಈ ದೇಹವೇಕೆ ? ಎನ್ನುತ್ತಾ ಹೆಚ್ಚು ದುಃಖದ ಮುಖದಿಂದ “ಮಗನು ಮಡಿದ ಕಾರಣ ಅಸ್ತ್ರತ್ಯಾಗ ಮಾಡುವೆನು " ಎಂದು ರಾಜ ದುರ್ಯೋಧನ, ಕರ್ಣ, ಕೃಪಾದಿ ಭಟರಿಗೆ ಹೇಳಿದನು.
ಮೂಲ ...{Loading}...
ಕೇಳಿದನು ಕಡುನೊಂದನಡಿಗಡಿ
ಗಾಲಿ ನೀರೇರಿದವು ಕೈಯಲಿ
ಕೋಲು ಬಿಲು ಸಡಲಿದವು ಸಾಕೀ ದೇಹವೇಕೆನುತ
ಮೇಲು ದುಗುಡದ ಮೊಗದಲವನೀ
ಪಾಲ ಕರ್ಣ ಕೃಪಾದಿ ಭಟರಿಗೆ
ಹೇಳಿದನು ಮಗನಳಿದನಸ್ತ್ರ ತ್ಯಾಗ ತನಗೆಂದು ॥67॥
೦೬೮ ಎನುತ ರಥದೊಳು ...{Loading}...
ಎನುತ ರಥದೊಳು ರಚಿಸಿ ಪದ್ಮಾ
ಸನವನಿಂದ್ರಿಯ ಕರಣವೃತ್ತಿಯ
ನನಿತುವನು ತಡೆದೆತ್ತಿ ಮೂಲಾಧಾರ ಮಾರುತನ
ಇನ ಶಶಿಗಳೊಂದಾಗೆ ನಾಡಿಗ
ಳನಿಲನಿಕರವನುಗಿದು ಬಿಂದು
ಧ್ವನಿಕಳಾಪರಿಲುಳಿತನೆಸೆದನು ವರ ಸಮಾಧಿಯಲಿ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತಾ ರಥದಲ್ಲಿ ಪದ್ಮಾಸನವನ್ನು ರಚಿಸಿ ಕುಳಿತು ಇಂದ್ರಿಯಗಳ ವೃತ್ತಿಯನ್ನು ನಿಗ್ರಹಿಸಿ / ತಡೆದು ಪ್ರಾಣ ವಾಯುವನ್ನು ಮೂಲಾಧಾರದಲ್ಲಿ ನಿಲ್ಲಿಸಿದನು. ಸೂರ್ಯನಾಡಿ ಚಂದ್ರನಾಡಿಗಳು ಒಂದಾಗಲು, ಪ್ರಾಣವಾಯುವನ್ನು ಮೇಲಕ್ಕೆತ್ತಿ ನಿಲ್ಲಿಸಿ, ಸಹಸ್ರದಳ ಕಮಲದ ಮಧ್ಯದ ಬಿಂದುವಿನಲ್ಲಿ ಒಂದಾಗುವ ಕಲೆಯಲ್ಲಿ ತನ್ಮಯನಾಗಿ ವರಸಮಾಧಿಯಲ್ಲಿ ಸ್ಥಿತನಾದನು.
ಪದಾರ್ಥ (ಕ.ಗ.ಪ)
ಮಾರುತ-ಪ್ರಾಣವಾಯು, ಇನ-ಸೂರ್ಯ, ಶಶಿ-ಚಂದ್ರ, ಬಿಂದು-ಪರಮಾತ್ಮನ ಸಾನ್ನಿಧ್ಯ, ಸಹಸ್ರದಳ ಕಮಲದ ಮಧ್ಯದ ಸ್ಥಾನವೇ ಬಿಂದು, ಐಕ್ಯಸ್ಥಿತಿ-ಅದ್ವೈತದ ಅನುಭವ
ಟಿಪ್ಪನೀ (ಕ.ಗ.ಪ)
ನಾದ ಬಿಂದು ಕಳೆ
ಮೂಲ ...{Loading}...
ಎನುತ ರಥದೊಳು ರಚಿಸಿ ಪದ್ಮಾ
ಸನವನಿಂದ್ರಿಯ ಕರಣವೃತ್ತಿಯ
ನನಿತುವನು ತಡೆದೆತ್ತಿ ಮೂಲಾಧಾರ ಮಾರುತನ
ಇನ ಶಶಿಗಳೊಂದಾಗೆ ನಾಡಿಗ
ಳನಿಲನಿಕರವನುಗಿದು ಬಿಂದು
ಧ್ವನಿಕಳಾಪರಿಲುಳಿತನೆಸೆದನು ವರ ಸಮಾಧಿಯಲಿ ॥68॥
೦೬೯ ನಾಸಿಕಾಗ್ರದಲಿಟ್ಟ ಕಙ್ಗಳ ...{Loading}...
ನಾಸಿಕಾಗ್ರದಲಿಟ್ಟ ಕಂಗಳ
ಸೂಸದುಸುರಿನ ಶಶಿಕಿರಣಪೀ
ಯೂಷಪಾನದ ರೋಮಪುಳಕದ ಗುಡಿಯ ಬೀಡುಗಳ
ಆ ಸುಷುಮ್ನಾ ನಾಡಿಯಲಿ ಕಾ
ಳಾಶಿಸಿದ ಪವನನ ಸಮಾಧಿ ವಿ
ಳಾಸನೆಸೆದನು ಸೌಖ್ಯ ಭಾವದ ಜಡಿವ ಝೊಮ್ಮಿನಲಿ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೂಗಿನ ತುದಿಗೆ ದೃಷ್ಟಿಯನ್ನು ನಿಲ್ಲಿಸಿ (ಏಕಾಗ್ರತೆ) ಉಸಿರನ್ನು ತಡೆದು, ಪೂರ್ಣಚಂದ್ರನ ಕಿರಣದ ಅಮೃತಪಾನದ, ರೋಮಾಂಚನದ ಗುಡಿಯ ಬೀಡಾದ ಸಹಸ್ರಾರ ಚಕ್ರದಲ್ಲಿ ಗಾಢವಾದ ಸಮಾಧಿಯಲ್ಲಿ ಸ್ಥಿತನಾಗಿ, ಆ ಸುಷುಮ್ನಾನಾಡಿಯ ಮೂಲಕ ಪ್ರಾಣ ವಾಯುವನ್ನು ಸಮಾಧಿ ಸ್ಥಿತಿಗೆ ಕೊಂಡೊಯ್ದು ಸೌಖ್ಯ ಭಾವದಲ್ಲಿ ಬೆರೆತು ದ್ರೋಣನು ಮೈಮರೆತನು.
ಪದಾರ್ಥ (ಕ.ಗ.ಪ)
ಶಶಿಕಿರಣ ಪೀಯೂಷ-ಚಂದ್ರಕಿರಣವೆಂಬ ಅಮೃತ, ಸುಷುಮ್ನಾನಾಡಿ-ಸೂರ್ಯ ಚಂದ್ರನಾಡಿಗಳ ಮಧ್ಯದಲ್ಲಿರುವ ನಾಳವೇ ಸುಷುಮ್ನಾನಾಡಿ, ನಾಸಿಕ-ಮೂಗು, ಗುಡಿಯ ಬೀಡು-ಪರಮಾತ್ಮನ ಪವಿತ್ರ ಸ್ಥಾನ, ಕಾಳಾಶಿಸು - ಹೊಂದಿಸು, ಸೇರಿಸು
ಜಡಿವ-ಬೆರೆತು, ಝೊಮ್ಮು-ಮೈಮರೆ.
ಟಿಪ್ಪನೀ (ಕ.ಗ.ಪ)
ದ್ರೋಣರು ಸೂರ್ಯಚಂದ್ರನಾಡಿಗಳಲ್ಲಿ ಸಂಚರಿಸುತ್ತಿದ್ದ ಪ್ರಾಣವಾಯುವನ್ನು ನಿರೋಧಿಸಿ, ಸುಷುಮ್ನಾ ನಾಡಿಯಲ್ಲಿ ಪ್ರವೇಶಿಸಿ, ಊಧ್ರ್ವಗತಿಯಲ್ಲಿ ಹೋಗಿ, ಅಲ್ಲಿದ್ದ ಪೂರ್ಣ ಕಳೆಯಿಂದ ಕೂಡಿದ ಚಂದ್ರನಲ್ಲಿ ಹೊರಸೂಸುತ್ತಿದ್ದ ಅಮೃತವನ್ನು ಸವಿಯುತ್ತಾ ಸಹಸ್ರದಳ ಕಮಲದ ಮಧ್ಯದ ಬಿಂದುವಿನಲ್ಲಿ ಐಕ್ಯವಾದರು
ಮೂಲ ...{Loading}...
ನಾಸಿಕಾಗ್ರದಲಿಟ್ಟ ಕಂಗಳ
ಸೂಸದುಸುರಿನ ಶಶಿಕಿರಣಪೀ
ಯೂಷಪಾನದ ರೋಮಪುಳಕದ ಗುಡಿಯ ಬೀಡುಗಳ
ಆ ಸುಷುಮ್ನಾ ನಾಡಿಯಲಿ ಕಾ
ಳಾಶಿಸಿದ ಪವನನ ಸಮಾಧಿ ವಿ
ಳಾಸನೆಸೆದನು ಸೌಖ್ಯ ಭಾವದ ಜಡಿವ ಝೊಮ್ಮಿನಲಿ ॥69॥
೦೭೦ ತನ್ನೊಳಿತರವನಿತರದೊಳು ನೆರ ...{Loading}...
ತನ್ನೊಳಿತರವನಿತರದೊಳು ನೆರ
ತನ್ನ ನೀಕ್ಷಿಸಿ ತಾನು ತನ್ನಿಂ
ದನ್ಯವೆರಡರೊಳೈಕ್ಯವೆಂಬುಪಚರಿತ ಭಾವವನು
ತನ್ನೊಳಗೆ ಹುಸಿಯೆಂದು ನಿತ್ಯನ
ನನ್ಯನಮಳಜ್ಞಾನರೂಪವೆ
ತನ್ನ ನಿಜವೆಂದರಿದು ತಾನಾಗಿರ್ದನಾ ದ್ರೋಣ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನಲ್ಲಿ ಇತರ ವಸ್ತುಗಳನ್ನು ಇತರರಲ್ಲಿ ತನ್ನನ್ನು ಕಂಡು ತಾನು ತನ್ನಿಂದ ಅನ್ಯವು ಇವೆರಡರ ಐಕ್ಯವೆಂಬ, ಪರಮಾತ್ಮನಿಗೆ ಹತ್ತಿರವಿರುವೆನೆಂಬ ಭಾವವನ್ನು ಕಂಡು ತನ್ನೊಳಗೆ ಎಲ್ಲವೂ ಹುಸಿಯೆಂಬುದನ್ನು ಮನಗಂಡು, ನಿತ್ಯ, ಅನನ್ಯ, ನಿರ್ಮಲ ಜ್ಞಾನರೂಪವೇ ತನ್ನ ನಿಜರೂಪವೆಂದರಿತು ದ್ರೋಣನು ತಾನೇ ತಾನಾಗಿದ್ದನು.
ಪದಾರ್ಥ (ಕ.ಗ.ಪ)
ಉಪಚರಿತ ಭಾವ-ಪರಮಾತ್ಮನಿಗೆ ಹತ್ತಿರವಾಗುವ ಸ್ಥಿತಿ.
ಮೂಲ ...{Loading}...
ತನ್ನೊಳಿತರವನಿತರದೊಳು ನೆರ
ತನ್ನ ನೀಕ್ಷಿಸಿ ತಾನು ತನ್ನಿಂ
ದನ್ಯವೆರಡರೊಳೈಕ್ಯವೆಂಬುಪಚರಿತ ಭಾವವನು
ತನ್ನೊಳಗೆ ಹುಸಿಯೆಂದು ನಿತ್ಯನ
ನನ್ಯನಮಳಜ್ಞಾನರೂಪವೆ
ತನ್ನ ನಿಜವೆಂದರಿದು ತಾನಾಗಿರ್ದನಾ ದ್ರೋಣ ॥70॥
೦೭೧ ಒಡೆದು ನಡು ...{Loading}...
ಒಡೆದು ನಡು ನೆತ್ತಿಯನು ಝಳಪಿಸಿ
ಕಡುವೆಳಗು ಥಳಥಳಿಸಿ ತರಣಿಯ
ತುಡುಕಿ ಹಾಯ್ದುದು ರಶ್ಮಿ ರಂಜಿಸಿತಖಿಳ ದಿಗುತಟವ
ಕುಡಿವೆಳಗನಸುರಾರಿ ಮುನಿಗಳ
ಗಡಣವರ್ಜುನ ಕೃಪರು ಕಂಡರು
ಪಡೆಯೊಳಗೆ ತಾನುಳಿಯೆ ಕಂಡವರಿಲ್ಲ ಕೇಳ್ ಎಂದ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನ ಆತ್ಮತೇಜವು ನಡುನೆತ್ತಿಯನ್ನು ಒಡೆದು ಝಳಪಿಸಿ ಹೆಚ್ಚು ಬೆಳಕಿನಿಂದ ಥಳಥಳಿಸುತ್ತಾ ಸೂರ್ಯನನ್ನೂ ಸಹ ಮೀರಿಸಿ ಹಾರಿತು. ಅದರ ರಶ್ಮಿ ದಿಗುತಟವನ್ನು ರಂಜಿಸಿತು. ಆ ಕುಡಿ ಬೆಳಕನ್ನು ಶ್ರೀಕೃಷ್ಣ, ಮುನಿಗಳ ಸಮೂಹ, ಅರ್ಜುನ, ಕೃಪರು ಕಂಡರು. ನನ್ನನ್ನು ಬಿಟ್ಟರೆ ಆ ಸೇನೆಯಲ್ಲಿ ಇದನ್ನು ಬೇರೆ ಯಾರೂ ಕಂಡವರಿಲ್ಲ ಕೇಳು ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಕಡುವೆಳಗು-ಹೆಚ್ಚಾದ ಬೆಳಕು,
ಮೂಲ ...{Loading}...
ಒಡೆದು ನಡು ನೆತ್ತಿಯನು ಝಳಪಿಸಿ
ಕಡುವೆಳಗು ಥಳಥಳಿಸಿ ತರಣಿಯ
ತುಡುಕಿ ಹಾಯ್ದುದು ರಶ್ಮಿ ರಂಜಿಸಿತಖಿಳ ದಿಗುತಟವ
ಕುಡಿವೆಳಗನಸುರಾರಿ ಮುನಿಗಳ
ಗಡಣವರ್ಜುನ ಕೃಪರು ಕಂಡರು
ಪಡೆಯೊಳಗೆ ತಾನುಳಿಯೆ ಕಂಡವರಿಲ್ಲ ಕೇಳೆಂದ ॥71॥
೦೭೨ ತೀರಿತೇ ಮಗನುಬ್ಬಟೆಯ ...{Loading}...
ತೀರಿತೇ ಮಗನುಬ್ಬಟೆಯ ಜ
ಜ್ಜಾರತನವಾಚಾರ್ಯನಳಿದನ
ದಾರು ನಮಗಾಪ್ತಿಗರು ದೊರೆಯಿನ್ನಾರು ಸಂಗರಕೆ
ಆರು ನಿಮಗಿದ್ದೇಗುವರು ರಣ
ವೀರರಗ್ಗದ ದೈವವೇ ಮನ
ವಾರೆ ಮೆಚ್ಚಿಹುದವರನಿನ್ನೇನರಸ ಕೇಳ್ ಎಂದ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನ ಉಬ್ಬಟೆಯ ಹೆಮ್ಮೆ, ಪರಾಕ್ರಮ ಮುಗಿಯಿತೇ ? ಆಚಾರ್ಯನು ನಾಶವಾದನು. ಮುಂದೆ ಅದ್ಯಾರು ನಮಗೆ ಆಪ್ತರು ? ಯುದ್ಧಕ್ಕೆ ಸರಿಸಮಾನರಾದವರು ಯಾರು ? ಯುದ್ಧ ವೀರರು ಯಾರು ಇದ್ದು ನಿಮಗೆ ಏನು ಮಾಡಲು ಸಾಧ್ಯ ? ಶ್ರೇಷ್ಠ ದೈವವೇ ಮನಸಾರೆ ಅವರನ್ನು (ಪಾಂಡವರನ್ನು) ಮೆಚ್ಚಿದೆ. ಇನ್ನೇನು ಮಾಡಲು ಸಾಧ್ಯ ? ಅರಸನೇ ಕೇಳು ಎಂದನು ಸಂಜಯ.
ಪದಾರ್ಥ (ಕ.ಗ.ಪ)
ಜಜ್ಜಾರಿತನ-ಹೆಮ್ಮೆ, ಪರಾಕ್ರಮ
ಮೂಲ ...{Loading}...
ತೀರಿತೇ ಮಗನುಬ್ಬಟೆಯ ಜ
ಜ್ಜಾರತನವಾಚಾರ್ಯನಳಿದನ
ದಾರು ನಮಗಾಪ್ತಿಗರು ದೊರೆಯಿನ್ನಾರು ಸಂಗರಕೆ
ಆರು ನಿಮಗಿದ್ದೇಗುವರು ರಣ
ವೀರರಗ್ಗದ ದೈವವೇ ಮನ
ವಾರೆ ಮೆಚ್ಚಿಹುದವರನಿನ್ನೇನರಸ ಕೇಳೆಂದ ॥72॥