೦೦೦ ಸೂ ಸಙ್ಗರದೊಳನ್ದಹಿತಭಟ ...{Loading}...
ಸೂ. ಸಂಗರದೊಳಂದಹಿತಭಟ ಮಾ
ತಂಗ ಕಂಠೀರವನು ರಣದೊಳ
ಭಂಗ ಮುರಿದನು ಫಲುಗುಣನು ರಿಪುರಾಯ ಸೈಂಧವನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಯುದ್ಧಭೂಮಿಯಲ್ಲಿ ಅಂದು ಶತ್ರುಸೇನೆಯೆಂಬ ಆನೆಗೆ ಸಿಂಹಪ್ರಾಯನಾದ, ಯುದ್ಧದಲ್ಲಿ ಸೋಲಿಲ್ಲದ ಅರ್ಜುನನು ಶತ್ರುರಾಜನಾದ ಸೈಂಧವನನ್ನು ನಾಶಗೊಳಿಸಿದನು.
ಪದಾರ್ಥ (ಕ.ಗ.ಪ)
ಸಂಗರ-ಯುದ್ಧ, ಮಾತಂಗ-ಆನೆ, ಕಂಠೀರವ-ಸಿಂಹ, ಅಭಂಗ-ಸೋಲಿಲ್ಲದ, ಮುರಿದನು-ನಾಶಗೊಳಿಸಿದನು.
ಮೂಲ ...{Loading}...
ಸೂ. ಸಂಗರದೊಳಂದಹಿತಭಟ ಮಾ
ತಂಗ ಕಂಠೀರವನು ರಣದೊಳ
ಭಂಗ ಮುರಿದನು ಫಲುಗುಣನು ರಿಪುರಾಯ ಸೈಂಧವನ
೦೦೧ ಚಿತ್ತವಿಸು ಧೃತರಾಷ್ಟ್ರ ...{Loading}...
ಚಿತ್ತವಿಸು ಧೃತರಾಷ್ಟ್ರ ರವಿಸುತ
ನಿತ್ತ ಮುರಿದನು ಸಾತ್ಯಕಿಯ ರಥ
ದತ್ತ ತಿರುಗಿದನನಿಲಸುತ ಭಾರಣೆಯ ದುಗುಡದಲಿ
ಇತ್ತ ಭೂರಿಶ್ರವನು ಭಾರಿಯ
ಹತ್ತು ಸಾವಿರ ರಥಸಹಿತ ಕೈ
ಗುತ್ತಿದನು ರಣವಿಜಯಲಕ್ಷ್ಮಿಯ ಲಲಿತಕಬರಿಯಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನೇ ಕೇಳು, “ಕರ್ಣನು ಈ ಕಡೆ ಹಿಂತಿರುಗಿದನು. ಭೀಮನು ಯುದ್ಧದ ಭಾರವನ್ನು ಹೊತ್ತು ದುಗುಡದಿಂದ ಸಾತ್ಯಕಿಯ ರಥದ ಕಡೆ ತಿರುಗಿದನು. ಕೌರವರ ಕಡೆ ಭೂರಿಶ್ರವನು ದೊಡ್ಡದಾದ ಹತ್ತು ಸಾವಿರ ರಥ ಸಮೇತನಾಗಿ ರಣವಿಜಯಲಕ್ಷ್ಮಿಯ ಸುಂದರವಾದ ಮುಡಿಗೆ ಕೈಹಾಕಿದನು. (ವಿಜಯವನ್ನರಸಿ ಮುನ್ನಡೆದನು)” ಎಂದು ಸಂಜಯನು ಹೇಳಿದನು
ಪದಾರ್ಥ (ಕ.ಗ.ಪ)
ಕಬರಿ-ಹೆರಳು, ಮುಡಿ, ಭಾರಣೆ- ಹೊರೆ, ಹೆಚ್ಚಳ, ಭಾರಿ
ಮೂಲ ...{Loading}...
ಚಿತ್ತವಿಸು ಧೃತರಾಷ್ಟ್ರ ರವಿಸುತ
ನಿತ್ತ ಮುರಿದನು ಸಾತ್ಯಕಿಯ ರಥ
ದತ್ತ ತಿರುಗಿದನನಿಲಸುತ ಭಾರಣೆಯ ದುಗುಡದಲಿ
ಇತ್ತ ಭೂರಿಶ್ರವನು ಭಾರಿಯ
ಹತ್ತು ಸಾವಿರ ರಥಸಹಿತ ಕೈ
ಗುತ್ತಿದನು ರಣವಿಜಯಲಕ್ಷ್ಮಿಯ ಲಲಿತಕಬರಿಯಲಿ ॥1॥
೦೦೨ ಒನ್ದು ಕಡೆಯಲಿ ...{Loading}...
ಒಂದು ಕಡೆಯಲಿ ಕರ್ಣ ಗುರುಸುತ
ರೊಂದು ದೆಸೆಯಲಿ ಶಲ್ಯ ಶಕುನಿಗ
ಳೊಂದು ದೆಸೆಯಲಿ ಭೂರಿ ಕೃತವರ್ಮಕ ಸುಯೋಧನರು
ಮುಂದುಗೆಡಿಸಿದರರ್ಜುನನನೀ
ಬಂದ ಭೂರಿಶ್ರವನ ನಿಲಿಸುವೆ
ನೆಂದು ಸಾತ್ಯಕಿ ಬಿಟ್ಟನಾತನ ಹೊರೆಗೆ ನಿಜರಥವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆಯಲ್ಲಿ ಕರ್ಣ, ಅಶ್ವತ್ಥಾಮರು, ಒಂದು ದಿಕ್ಕಿನಲ್ಲಿ ಶಲ್ಯ-ಶಕುನಿಗಳು, ಮತ್ತೊಂದು ಕಡೆಯಿಂದ ಭೂರಿ, ಕೃತವರ್ಮಾ, ಸುಯೋಧನರು ಅರ್ಜುನನಿಗೆ ಮುಂದಾಗಿ ದಿಕ್ಕುತಪ್ಪಿಸಿದರು. ಈಗ ಎದುರಾಗಿ ಬಂದ ಭೂರಿಶ್ರವನನ್ನು ತಡೆಯುವೆನೆಂದು ಸಾತ್ಯಕಿಯು ತನ್ನ ರಥವನ್ನು ಆತನ ಸಮೀಪಕ್ಕೆ ಬಿಟ್ಟನು.
ಮೂಲ ...{Loading}...
ಒಂದು ಕಡೆಯಲಿ ಕರ್ಣ ಗುರುಸುತ
ರೊಂದು ದೆಸೆಯಲಿ ಶಲ್ಯ ಶಕುನಿಗ
ಳೊಂದು ದೆಸೆಯಲಿ ಭೂರಿ ಕೃತವರ್ಮಕ ಸುಯೋಧನರು
ಮುಂದುಗೆಡಿಸಿದರರ್ಜುನನನೀ
ಬಂದ ಭೂರಿಶ್ರವನ ನಿಲಿಸುವೆ
ನೆಂದು ಸಾತ್ಯಕಿ ಬಿಟ್ಟನಾತನ ಹೊರೆಗೆ ನಿಜರಥವ ॥2॥
೦೦೩ ಎಲವೆಲವೋ ಭೂರಿಶ್ರವನೆ ...{Loading}...
ಎಲವೆಲವೋ ಭೂರಿಶ್ರವನೆ ಫಡ
ಗೆಲಿದು ಹೋಗದಿರೆಲ್ಲಿ ಹೊಗುವಡೆ
ತಲೆವೆರಸಿ ಹೊಗಲೀಯೆನಿದಿರಾಗೆನುತ ಮೂದಲಿಸೆ
ಎಲವೊ ಸಾತ್ಯಕಿ ಸುಭಟ ಬಾಹಿರ
ಗಳಹದಿರು ದಿಟ ವೀರನೇ ಕೂ
ರಲಗಿನಲಿ ಮಾತಾಡು ಬರಿನುಡಿ ಭಂಡತನವೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಯು “ಎಲವೆಲವೋ ಭೂರಿಶ್ರವನೆ ಫಡ, ಗೆದ್ದು ಹೋಗಬೇಡ. ಎಲ್ಲಿ ಹೋದರೂ ತಲೆಮರೆಸಿಕೊಂಡು ಹೋಗಲು ಅವಕಾಶ ಕೊಡುವುದಿಲ್ಲ. ಎದುರಾಗು” ಎನ್ನುತ್ತಾ ಭೂರಿಶ್ರವನನ್ನು ಮೂದಲಿಸಲು, ಭೂರಿಶ್ರವನು “ಎಲವೋ ಸಾತ್ಯಕಿ…. ಸುಭಟ ಬಾಹಿರನೇ, ಹರಟಬೇಡ, ನಿಜವಾಗಿಯೂ ನೀನು ವೀರನಾದರೆ ಹರಿತವಾದ ಬಾಣಗಳೊಡನೆ ಮಾತಾಡು. ಬರಿ ಮಾತು (ವ್ಯರ್ಥ ಮಾತು) ಭಂಡತನ " ಎಂದನು.
ಮೂಲ ...{Loading}...
ಎಲವೆಲವೋ ಭೂರಿಶ್ರವನೆ ಫಡ
ಗೆಲಿದು ಹೋಗದಿರೆಲ್ಲಿ ಹೊಗುವಡೆ
ತಲೆವೆರಸಿ ಹೊಗಲೀಯೆನಿದಿರಾಗೆನುತ ಮೂದಲಿಸೆ
ಎಲವೊ ಸಾತ್ಯಕಿ ಸುಭಟ ಬಾಹಿರ
ಗಳಹದಿರು ದಿಟ ವೀರನೇ ಕೂ
ರಲಗಿನಲಿ ಮಾತಾಡು ಬರಿನುಡಿ ಭಂಡತನವೆಂದ ॥3॥
೦೦೪ ಆದಡಿದ ಕೊಳ್ಳೆನುತ ...{Loading}...
ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆದರೆ ಇದನ್ನು ತೆಗೆದುಕೊ” ಎನ್ನುತ್ತಾ ಸಾತ್ಯಕಿಯು ಆಕಾಶವನ್ನು ಬಾಣಗಳಿಂದ ಪೋಣಿಸಿದನು. “ಬಲುಗಟ್ಟಿಗನು, ಭಲೆ” ಎನ್ನುತ್ತ ಭೂರಿಶ್ರವನು ಆ ಬಾಣಗಳನ್ನು ಕಡಿದುಹಾಕಿದನು.” ಕಾಪಾಡಿಕೊ" ಎನ್ನುತ್ತಾ ಸಾತ್ಯಕಿ ಬಾಣಪ್ರಯೋಗಿಸಿದನು. ಬಾಣಗಳ ರಭಸ ಹೆಚ್ಚಾಯಿತು. ಆಯುಧಗಳನ್ನು ಹಿಡಿದು ಕೋಪದಿಂದ ಯುದ್ಧ ಮಾಡುತ್ತಿದ್ದ ಪರಾಕ್ರಮಿಗಳು ದೇವಾಸುರರನ್ನು ಮೆಚ್ಚಿಸಿದರು.
ಪದಾರ್ಥ (ಕ.ಗ.ಪ)
ಬಲುಹಾದನೈ-ಬಲುಗಟ್ಟಿಗನು, ಬೀದಿವರಿ-ಓಟ, ರಭಸ,
ಟಿಪ್ಪನೀ (ಕ.ಗ.ಪ)
ಭೂರಿಶ್ರವ್ -ಚಂದ್ರವಂಶದ ಪ್ರತೀಪರಾಜನ ಮಗನಾದ ಬಾಹ್ಲಿಕ ರಾಜನ ಮಗ ಸೋಮದತ್ತ. ಸೋಮದತ್ತನ ಮಗ ಭೂರಿಶ್ರವ
ಮೂಲ ...{Loading}...
ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ ॥4॥
೦೦೫ ದೂರದಲಿ ನಿನ್ದೊಬ್ಬರೊಬ್ಬರ ...{Loading}...
ದೂರದಲಿ ನಿಂದೊಬ್ಬರೊಬ್ಬರ
ನಾರು ಮಾಡುವುದೇನು ಸಾತ್ಯಕಿ
ಕೂರಸಿಯನುಗಿ ಬಿಸುಟು ಕಳೆ ಕೋದಂಡ ಮಾರ್ಗಣವ
ವೀರನಹಡಿದಿರಾಗೆನುತ ಬಹು
ಭಾರಣದ ಚಮ್ಮಟದ ಖಡುಗದ
ಪಾರಗದ ಪರಿಣತರು ಹೆಣಗಿದರುಬ್ಬಣಾಯತರು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೂರದಲ್ಲಿ ನಿಂತು ಒಬ್ಬರನ್ನೊಬ್ಬರು ಪರಸ್ಪರ ಏನು ಮಾಡಲು ಸಾಧ್ಯ ? ಸಾತ್ಯಕಿ… ಹರಿತವಾದ ಕತ್ತಿಯನ್ನು ಹೊರಗೆಳೆ, ಬಿಲ್ಲು ಬಾಣಗಳನ್ನು ಬಿಸಾಡು. ವೀರನಾದರೆ ಎದುರಾಗು” ಎಂದು ಭೂರಿಶ್ರವನು ಹೇಳಲು ಬಹುಭಾರವಾದ ಚರ್ಮದ ಹೊದಿಕೆಯುಳ್ಳ ಗುರಾಣಿಯನ್ನು ಹಿಡಿದು ಖಡ್ಗದಲ್ಲಿ ಹೋರಾಡುವ ವೀರ ಪರಿಣತರು, ಹೆಚ್ಚಿನ ಕೀರ್ತಿವಂತರು ಹೋರಾಡಿದರು.
ಪದಾರ್ಥ (ಕ.ಗ.ಪ)
ಉಗಿ-ಬಿಸಾಡು
ಪಾರಗ-ಗುರಾಣಿ ಹಿಡಿದಿರುವ ಯೊಧ ,
ಉಬ್ಬಣ-ಅತಿಶಯ, ಹೆಚ್ಚಿನ,
ಆಯತರು-ಕೀರ್ತಿವಂತರು,
ಮೂಲ ...{Loading}...
ದೂರದಲಿ ನಿಂದೊಬ್ಬರೊಬ್ಬರ
ನಾರು ಮಾಡುವುದೇನು ಸಾತ್ಯಕಿ
ಕೂರಸಿಯನುಗಿ ಬಿಸುಟು ಕಳೆ ಕೋದಂಡ ಮಾರ್ಗಣವ
ವೀರನಹಡಿದಿರಾಗೆನುತ ಬಹು
ಭಾರಣದ ಚಮ್ಮಟದ ಖಡುಗದ
ಪಾರಗದ ಪರಿಣತರು ಹೆಣಗಿದರುಬ್ಬಣಾಯತರು ॥5॥
೦೦೬ ನೆಲನ ತಗ್ಗಿನಲುಪ್ಪರದ ...{Loading}...
ನೆಲನ ತಗ್ಗಿನಲುಪ್ಪರದ ಮೆ
ಯ್ಯೊಲವಿನಲಿ ಪಾರಗದ ಬವರಿಯ
ಸುಳುಹಿನಲಿ ಚಮ್ಮಟದ ಪಯವಂಚನೆಯಲುಜ್ಝಟದ
ಬಲಿದ ದಂಡೆಯ ಮಸೆಯ ಬಯಸಿಕೆ
ಲುಳಿಯ ಮೈಗಳ ಲವಣಿಸಾರರು
ಕೊಳುಗಿಡಿಯ ಖಂಡೆಯದ ಖಣಿಕಟಿಲೆಸೆಯೆ ಕಾದಿದರು ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಲದ ತಗ್ಗಿನಲ್ಲಿ , ಮೇಲ್ಭಾಗದಲ್ಲಿ ಮೈಬಳುಕಿಸುತ್ತ , ಗುರಾಣಿಯಿಂದ ಶತ್ರುಗಳ ದಾರಿತಪ್ಪಿಸಿ ಕಾದಾಡುವ ಕಾಂತಿಯುಕ್ತರು ಹಾಗೂ ಅತಿಶಯದ ತೋಳ್ತೀಟೆಯಿಂದ ಕೂಡಿದ, ಚತುರ ಯುದ್ಧಪಟುಗಳು, ಕಿಡಿಕಾರುವಂಥ ಕತ್ತಿಯ ಖಣೆ ಖಣೆಲೆಂಬ ಧ್ವನಿ ಹೊಮ್ಮುವಂತೆ ಕಾದಾಡಿದರು.
ಪದಾರ್ಥ (ಕ.ಗ.ಪ)
ಪಾರಗ- ಗುರಾಣಿ
ಪಯವಂಚನೆ-ದಾರಿ ತಪ್ಪಿಸು,
ಚಮ್ಮಟ-ಚರ್ಮದ ಹೊದಿಕೆಯುಳ್ಳ ಗುರಾಣಿ,
ಲವಣಿಸಾರರು-ಯುದ್ಧಪಟುಗಳು
ಕೊಳುಗಿಡಿ-ಕಿಡಿಕಾರುವಂಥ,
ಉಜ್ಝಟ-ಉದ್ಯತ -ಸಿದ್ಧತೆ, ಮೇಲೆತ್ತಿದ ನೋಡಿ : ಕರ್ಣಪರ್ವ 19-35
ಮೂಲ ...{Loading}...
ನೆಲನ ತಗ್ಗಿನಲುಪ್ಪರದ ಮೆ
ಯ್ಯೊಲವಿನಲಿ ಪಾರಗದ ಬವರಿಯ
ಸುಳುಹಿನಲಿ ಚಮ್ಮಟದ ಪಯವಂಚನೆಯಲುಜ್ಝಟದ
ಬಲಿದ ದಂಡೆಯ ಮಸೆಯ ಬಯಸಿಕೆ
ಲುಳಿಯ ಮೈಗಳ ಲವಣಿಸಾರರು
ಕೊಳುಗಿಡಿಯ ಖಂಡೆಯದ ಖಣಿಕಟಿಲೆಸೆಯೆ ಕಾದಿದರು ॥6॥
೦೦೭ ತಳಿತ ಮಿಞ್ಚಿನ ...{Loading}...
ತಳಿತ ಮಿಂಚಿನ ಮುರಿವುಗಳೊ ತನಿ
ಹೊಳಹುಗಳೊ ಖಂಡೆಯದ ಧಾರೆಯ
ಕೊಳುಗಿಡಿಯೊ ಖದ್ಯೋತರಾಸಿಯೊ ಹೇಳಲೇನದನು
ಖಳಿಕಟಿಲ ಬಿರುವೊಯಿಲೊ ಸಿಡಿಲಿನ
ಸುಳಿಯೊ ಮೈಮಸೆಯರುಣವಾರಿಯೊ
ಮಳೆಗಳಿಲ್ಲದ ಹೊನಲೊ ರಣದಲಿ ಚಿತ್ರವಾಯ್ತೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೊಳೆಯುವ ಮಿಂಚಿನ ತುಂಡುಗಳೋ ? ಅತಿಶಯದ ಪ್ರಕಾಶವೋ ! ಖಡ್ಗದ ಧಾರೆಯ ಕಿಡಿಯೋ ? ಅನೇಕ ಸೂರ್ಯರ ತೇಜಸ್ಸೋ ? ಅದನ್ನು ಹೇಳಲು ಹೇಗೆ ಸಾಧ್ಯ ?
ಆಯುಧಗಳ ಬಿರುಸಾದ ಹೊಡೆತದ ಧ್ವನಿಯೋ ? ಸಿಡಿಲಿನ ಸುಳಿಯೋ, ಮೈ ಮೇಲೆ ಗಾಯದಿಂದ ಒಸರುವ ರಕ್ತಜಲವೋ, ಮಳೆಯಿಲ್ಲದ ಹೊನಲೋ ಎಂಬಂತೆ ರಣದಲ್ಲಿ ವಿಚಿತ್ರವಯಿತು ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಮುರಿ-ತುಂಡು,
ತನಿಹೊಳಹು-ಹೆಚ್ಚು ಪ್ರಕಾಶ,
ಖದ್ಯೋತ-ಸೂರ್ಯ,
ಮೂಲ ...{Loading}...
ತಳಿತ ಮಿಂಚಿನ ಮುರಿವುಗಳೊ ತನಿ
ಹೊಳಹುಗಳೊ ಖಂಡೆಯದ ಧಾರೆಯ
ಕೊಳುಗಿಡಿಯೊ ಖದ್ಯೋತರಾಸಿಯೊ ಹೇಳಲೇನದನು
ಖಳಿಕಟಿಲ ಬಿರುವೊಯಿಲೊ ಸಿಡಿಲಿನ
ಸುಳಿಯೊ ಮೈಮಸೆಯರುಣವಾರಿಯೊ
ಮಳೆಗಳಿಲ್ಲದ ಹೊನಲೊ ರಣದಲಿ ಚಿತ್ರವಾಯ್ತೆಂದ ॥7॥
೦೦೮ ಲುಳಿಯ ಪಯಪಾಡುಗಳ ...{Loading}...
ಲುಳಿಯ ಪಯಪಾಡುಗಳ ಬವರಿಯ
ಸುಳಿವುಗಳ ಜಾರುಗಳ ಘಾಯದ
ಕಳವುಗಳ ಕೈಮೆಗಳ ಮೋಡಾಮೋಡಿಯುಬ್ಬಣದ
ಲಲಿತ ಚಿತ್ರದ ಚದುರ ಭಟರ
ವ್ವಳಿಸಿ ಹೊಯ್ದಾಡಿದರು ನೋಟಕ
ರುಲಿದುದಿಬ್ಬರ ಶ್ರಮದ ಶೌರ್ಯದ ವೆಗ್ಗಳೆಯತನಕೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೇಗವಾಗಿ ಹೆಜ್ಜೆಹಾಕುವ ರೀತಿಯ, ಸುಳಿಯುತ್ತಾ, ಜಾರಿಕೊಳ್ಳುತ್ತಾ , ಮೋಸದಿಂದ ಘಾಯಗೊಳಿಸುವ ಕೈಚಳಕದ, ಆಕರ್ಷಣೀಯವಾದ ಆರ್ಭಟೆಯ, ಮನೋಹರ ರೂಪಗಳ ಚತುರರಾದ ಭಟರು ಅಪ್ಪಳಿಸಿ ಹೋರಾಡಿದರು. ಅವರಿಬ್ಬರ ಶೌರ್ಯದ, ಶ್ರಮದ ಶ್ರೇಷ್ಠತೆಗೆ ನೋಟಕರು ಹರ್ಷಿಸಿದರು.
ಪದಾರ್ಥ (ಕ.ಗ.ಪ)
ಪಯಪಾಡು-ಹೆಜ್ಜೆಹಾಕುವ ರೀತಿ,
ಕೈಮೆ-ಕೈಚಳಕ, ವೆಗ್ಗಳೆಯತನ-ಅತಿಶಯವಾದ ಶೌರ್ಯ, ಶ್ರೇಷ್ಠತೆ
ಮೂಲ ...{Loading}...
ಲುಳಿಯ ಪಯಪಾಡುಗಳ ಬವರಿಯ
ಸುಳಿವುಗಳ ಜಾರುಗಳ ಘಾಯದ
ಕಳವುಗಳ ಕೈಮೆಗಳ ಮೋಡಾಮೋಡಿಯುಬ್ಬಣದ
ಲಲಿತ ಚಿತ್ರದ ಚದುರ ಭಟರ
ವ್ವಳಿಸಿ ಹೊಯ್ದಾಡಿದರು ನೋಟಕ
ರುಲಿದುದಿಬ್ಬರ ಶ್ರಮದ ಶೌರ್ಯದ ವೆಗ್ಗಳೆಯತನಕೆ ॥8॥
೦೦೯ ಮಸೆಯ ಮೈಗಳೊಳೊರೆವುತಿರ್ದುವು ...{Loading}...
ಮಸೆಯ ಮೈಗಳೊಳೊರೆವುತಿರ್ದುವು
ಬಿಸಿರಕುತ ಮೊನೆಗುತ್ತುಗಳ ಕಿ
ಬ್ಬಸುರಿನಲಿ ಜೋಲಿದವು ಕರುಳುಗಳಾಹವದ ಭಟರ
ಮಸಕ ಮಸುಳದು ಮನದ ಖಾತಿಯ
ಮುಸುಡು ಮುರಿಯದು ಬಿಗಿದ ಹುಬ್ಬಿನ
ಬೆಸುಗೆ ಸಡಿಲದು ಭೂಪ ಭೂರಿಶ್ರವನ ಸಾತ್ಯಕಿಯ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಯಗೊಂಡ ಮೈಯಿಂದ ಬಿಸಿರಕ್ತ ಹರಿಯುತ್ತಿತ್ತು. ಬಾಣದ ತುದಿಯಿಂದ ಚುಚ್ಚಿದ ಭಟರ ಹೊಟ್ಟೆಯ ಕೆಳಭಾಗದಲ್ಲಿ ಕರುಳುಗಳು ನೇತಾಡಿದುವು. ಆದರೂ ರಾಜ ಭೂರಿಶ್ರವ ಹಾಗೂ ಸಾತ್ಯಕಿಯ ಆವೇಶ ಕಡಿಮೆಯಾಗಲಿಲ್ಲ. ಮನದ ಕ್ರೋಧ ಮುಖದಿಂದ ದೂರವಾಗಲಿಲ್ಲ. ಬಿಗಿದ ಹುಬ್ಬುಗಂಟು ಸಡಿಲವಾಗಲಿಲ್ಲ.
ಪದಾರ್ಥ (ಕ.ಗ.ಪ)
ಮಸೆಯ-ಗಾಯ, ಮೊನೆಗುತ್ತು-ಬಾಣಗಳ ತುದಿಯಿಂದುಂಟಾದ ತೆಗ್ಗು,
ಕಿಬ್ಬಸರು-ಕಿಬ್ಬೊಟ್ಟೆ
ಮಸಕ-ಆವೇಶ
ಮೂಲ ...{Loading}...
ಮಸೆಯ ಮೈಗಳೊಳೊರೆವುತಿರ್ದುವು
ಬಿಸಿರಕುತ ಮೊನೆಗುತ್ತುಗಳ ಕಿ
ಬ್ಬಸುರಿನಲಿ ಜೋಲಿದವು ಕರುಳುಗಳಾಹವದ ಭಟರ
ಮಸಕ ಮಸುಳದು ಮನದ ಖಾತಿಯ
ಮುಸುಡು ಮುರಿಯದು ಬಿಗಿದ ಹುಬ್ಬಿನ
ಬೆಸುಗೆ ಸಡಿಲದು ಭೂಪ ಭೂರಿಶ್ರವನ ಸಾತ್ಯಕಿಯ ॥9॥
೦೧೦ ಬರಬರಲು ರಿಪುಭಟನ ...{Loading}...
ಬರಬರಲು ರಿಪುಭಟನ ಹೊಯ್ಗುಳ
ಧರಧುರಕೆ ಕಲಿ ಸಾತ್ಯಕಿಯ ತರ
ಹರಣೆ ತಗ್ಗಿತು ಮಹಿಮೆ ಮುಗ್ಗಿತು ಮುರಿದುದಗ್ಗಳಿಕೆ
ಉರವಣಿಸಿ ಭೂರಿಶ್ರವನು ರಿಪು
ವರನ ಖಡುಗವ ಮುರಿಯ ಹೊಯ್ದ
ಬ್ಬರಿಸಿ ಕಡೆಗಾಲಿಂದ ಹೊಯ್ದನು ಹಾಯ್ದು ಮುಂದಲೆಗೆ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರಬರುತ್ತ ಶತ್ರು ಸೈನಿಕನ ಹೊಡೆತದ ಆಘಾತಕ್ಕೆ ಶೂರಸಾತ್ಯಕಿಯ ಸೈರಣೆ ಕಡಿಮೆಯಾಯಿತು. ಅವನ ಮಹಿಮೆ ತಗ್ಗಿ, ಹಿರಿತನ ನುಚ್ಚು ನೂರಾಯಿತು. ಭೂರಿಶ್ರವನು ಸಂಭ್ರಮದಿಂದ ಶತ್ರುವಿನ ಖಡ್ಗವನ್ನು ಮುರಿಯುವಂತೆ ಹೊಡೆದು ಆರ್ಭಟಿಸಿ ಮುಂದುವರೆದು ಅವನ ಮುಂದಲೆಗೆ ತನ್ನ ಕಡೆಗಾಲಿನಿಂದ ಒದ್ದನು.
ಪದಾರ್ಥ (ಕ.ಗ.ಪ)
ಧರದುರ-ಭೀಕರವಾದ ಯುದ್ಧ
ಟಿಪ್ಪನೀ (ಕ.ಗ.ಪ)
ಭೂರಿಶ್ರವ : ಚಂದ್ರವಂಶದ ಸೋಮದತ್ತನ ಮಗ. ದುರ್ಯೋಧನನ ಪರವಾಗಿ ಹೋರಾಡಿದವ, ಇವನಿಗೆ ಕೌರವ, ದಾಯಾದ, ಕುರುಪುಂಗವ, ಕುರೂದ್ವಹ ಎಂಬ ಹೆಸರುಗಳೂ ಇವೆ. ಯಜ್ಞ ಸಂದರ್ಭದಲ್ಲಿ ಹೇರಳವಾಗಿ ದಾನ ಮಾಡುತ್ತಿದ್ದನಾದ್ದರಿಂದ ಈತನಿಗೆ `ಭೂರಿ ದಕ್ಷಿಣ’ ಎಂಬ ಅನ್ಯರ್ಥ ನಾಮವೂ ಇದೆ. ಈತನು ಯೋಗಶಕ್ತಿ ಉಳ್ಳ ಮಹಾವೀರ.
ಸಾತ್ಯಕಿಯ ಮೇಲೆ ಭೂರಿಶ್ರವನಿಗೆ ಇದ್ದದ್ದು ಕುಟುಂಬ ವೈರ. ಸಾತ್ಯಕಿಯ ವಂಶದ ಶಿನಿ ಎಂಬಾತನು ಭೂರಿಶ್ರವನ ತಂದೆಯಾದ ಸೋಮದತ್ತನ ಜುಟ್ಟು ಹಿಡಿದು ಎದೆಗೆ ಒದ್ದು ಅವಮಾನಿಸಿದ್ದ. ಮಹಾಭಾರತ ಯುದ್ಧದಲ್ಲಿ ಭೂರಿಶ್ರವ ಆ ಸೇಡನ್ನು ತೀರಿಸಿಕೊಳ್ಳಲು ಬಯಸಿದ.
ಮೂಲ ...{Loading}...
ಬರಬರಲು ರಿಪುಭಟನ ಹೊಯ್ಗುಳ
ಧರಧುರಕೆ ಕಲಿ ಸಾತ್ಯಕಿಯ ತರ
ಹರಣೆ ತಗ್ಗಿತು ಮಹಿಮೆ ಮುಗ್ಗಿತು ಮುರಿದುದಗ್ಗಳಿಕೆ
ಉರವಣಿಸಿ ಭೂರಿಶ್ರವನು ರಿಪು
ವರನ ಖಡುಗವ ಮುರಿಯ ಹೊಯ್ದ
ಬ್ಬರಿಸಿ ಕಡೆಗಾಲಿಂದ ಹೊಯ್ದನು ಹಾಯ್ದು ಮುಂದಲೆಗೆ ॥10॥
೦೧೧ ಕೊಡಹಿ ಕುಸುಕಿರಿದಡ್ಡ ...{Loading}...
ಕೊಡಹಿ ಕುಸುಕಿರಿದಡ್ಡ ಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತೆರಹಿಲ್ಲೆಂದು ಮುರರಿಪು ಜರೆದನರ್ಜುನನ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಯನ್ನು ನೂಕಿ ಪುನಃ ತಬ್ಬಿ ಹಿಡಿದು ಭುಜದಿಂದ ಹೊಡೆದು ಕಠಾರಿಯನ್ನು ಸೆಳೆದು ಕೊರಳನ್ನು ಕತ್ತರಿಸಲು ಗಂಟಲ ಬಳಿಗೆ ತಂದನು. ಕೃಷ್ಣನು ಇದನ್ನು ಗಮನಿಸಿ “ಪಾರ್ಥನೇ ಮಹಾಸ್ತ್ರವನ್ನು ಹಿಡಿ. ನಿನ್ನ ಶಿಷ್ಯನ ಕಡು ಕಷ್ಟವನ್ನು ನೋಡು. ಬರೀ ಮಾತಿಗೆ ಅವಕಾಶವಿಲ್ಲ” ಎಂದು ಅರ್ಜುನನನ್ನು ಜರೆದನು.
ಪದಾರ್ಥ (ಕ.ಗ.ಪ)
ಬೀಡಿಕೆ-ಸೈನ್ಯ,
ಮಡ-ಭುಜ
ಮೂಲ ...{Loading}...
ಕೊಡಹಿ ಕುಸುಕಿರಿದಡ್ಡ ಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತೆರಹಿಲ್ಲೆಂದು ಮುರರಿಪು ಜರೆದನರ್ಜುನನ ॥11॥
೦೧೨ ದೇವ ನಮ್ಮದು ...{Loading}...
ದೇವ ನಮ್ಮದು ಧರ್ಮಯುದ್ಧವಿ
ದಾವ ಹದನನು ಬೆಸಸಿದಿರಿ ತಲೆ
ಗಾವುದೇನರಿದಲ್ಲ ಮೊದಲಲಿ ನುಡಿದ ಸಮಯವನು
ಭಾವಿಸುವುದೆನೆ ಮುಗುಳುನಗೆಯಲಿ
ರಾವಣಾಂತಕನೆಂದನೆಲೆ ಮರು
ಳಾವ ನಿರುತದ ಧರ್ಮವಿದ್ದುದು ಕೌರವೇಂದ್ರನಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವಾ, ನಮ್ಮದು ಧರ್ಮಯುದ್ಧ, ಇದಾವ ಕೆಲಸವನ್ನು ಅಪ್ಪಣೆ ಮಾಡುತ್ತಿದ್ದೀರಿ. ಸಾತ್ಯಕಿಯನ್ನು ಕಾಯುವುದೇನೂ ಅಸಾಧ್ಯವಲ್ಲ. ಮೊದಲಲ್ಲಿ ನುಡಿದ ಒಪ್ಪಂದವನ್ನು ಭಾವಿಸುವುದು” ಎಂದು ಅರ್ಜುನನು ಹೇಳಲು ಕೃಷ್ಣನು ಮುಗುಳುನಗೆ ನಕ್ಕು, “ಎಲೆ ಮರುಳೆ, ಕೌರವೇಶ್ವರನಲ್ಲಿ ಯಾವ ರೀತಿಯ ಸತ್ಯ, ಧರ್ಮ ಮನೆಮಾಡಿತ್ತು ?” ಎಂದನು.
ಪದಾರ್ಥ (ಕ.ಗ.ಪ)
ರಾವಣನ + ಅಂತಕ - ನಾಶಮಾಡಿದವನು, ರಾಕ್ಷಸನ + ಅಂತಕ - ನಾಶಮಾಡಿದವನು - ಶ್ರೀಕೃಷ್ಣ, ನಿರುತ - ಸತ್ಯ, ಧರ್ಮಶ್ರದ್ಧೆ.
ಟಿಪ್ಪನೀ (ಕ.ಗ.ಪ)
ಸಾತ್ಯಕಿ - ಭೂರಿಶ್ರವನ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಧ್ಯೆ ಪ್ರವೇಶಿಸಬಾರದೆಂಬ ಧರ್ಮಪ್ರಜೆಯಿದ್ದರೂ ಅರ್ಜುನನು ಕೃಷ್ಣನ ಸಲಹೆಯಂತೆ ಮಧ್ಯೆ ಪ್ರವೇಶಿಸಿ, ಭೂರಿಶ್ರವನ ಕೈಯನ್ನು ಕತ್ತರಿಸಿ ಸಾತ್ಯಕಿಯನ್ನು ರಕ್ಷಿಸುತ್ತಾನೆ.
ಆದರೆ ಕೃಷ್ಣನ ಸಲಹೆಯಂತೆ ಅರ್ಜುನನು ತನ್ನ ಆಪ್ತ ಶಿಷ್ಯನಾದ ಸಾತ್ಯಕಿಯನ್ನು ಉಳಿಸುವುದಕ್ಕಾಗಿ ಭಲ್ಲಾಯುಧವನ್ನು ಬಿಟ್ಟು ಭೂರಿಶ್ರವನ ಕತ್ತಿ ಹಿಡಿದ ಕೈಯನ್ನು ಕತ್ತರಿಸಿ ಹಾಕಿದ. ಅರ್ಜುನನ ಈ ಧರ್ಮವಿರುದ್ಧ ನಡವಳಿಕೆಯಿಂದ ಬೇಸತ್ತ ಭೂರಿಶ್ರವ ಯುದ್ಧವನ್ನು ಕೈಬಿಟ್ಟು ದರ್ಭೆಯನ್ನು ನೆಲದ ಮೇಲೆ ಹರಡಿ ಪ್ರಾಯೋಪವೇಶ ಮಾಡಲು ಕುಳಿತುಕೊಂಡ. ಆಗ ಸಾತ್ಯಕಿ ಕೃಷ್ಣಾರ್ಜುನನ ಮಾತನ್ನು ಧಿಕ್ಕರಿಸಿ ಕತ್ತಿಯಿಂದ ಭೂರಿಶ್ರವನನ್ನು ಕೊಂದು ಹಾಕಿದ.
ಮೂಲ ...{Loading}...
ದೇವ ನಮ್ಮದು ಧರ್ಮಯುದ್ಧವಿ
ದಾವ ಹದನನು ಬೆಸಸಿದಿರಿ ತಲೆ
ಗಾವುದೇನರಿದಲ್ಲ ಮೊದಲಲಿ ನುಡಿದ ಸಮಯವನು
ಭಾವಿಸುವುದೆನೆ ಮುಗುಳುನಗೆಯಲಿ
ರಾವಣಾಂತಕನೆಂದನೆಲೆ ಮರು
ಳಾವ ನಿರುತದ ಧರ್ಮವಿದ್ದುದು ಕೌರವೇಂದ್ರನಲಿ ॥12॥
೦೧೩ ನೆರೆದ ಷಡುರಥರೊಬ್ಬ ...{Loading}...
ನೆರೆದ ಷಡುರಥರೊಬ್ಬ ಹಸುಳೆಯ
ಕೊರಳನರಿವಂದಾವ ಧರ್ಮದ
ನಿರುತವನು ನೀ ಕಂಡೆಯೆನಲುರಿ ಮಸಗಿತುದರದಲಿ
ಸರಳ ಕೆನ್ನೆಗೆ ಸೇದಿದನು ಸಂ
ಗರದ ಭೂರಿಶ್ರವನ ಖಡುಗದ
ಕರವ ಕತ್ತರಿಸಿದನು ತಲೆಗಾಯಿದನು ಸಾತ್ಯಕಿಯ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುತ್ತುವರಿದ ಆರು ಜನ ರಥಿಗಳು ಒಬ್ಬ ಬಾಲಕನ ಕೊರಳನ್ನು ಕತ್ತರಿಸುವಾಗ ನೀನು ಅವರಲ್ಲಿ ಯಾವ ಧರ್ಮಶ್ರದ್ಧೆಯನ್ನು ಕಂಡೆ ಎನ್ನಲು ಅರ್ಜುನನ ಹೊಟ್ಟೆಯಲ್ಲಿ / ಹೃದಯದಲ್ಲಿ ಉರಿ ಹೊತ್ತಿಕೊಂಡಿತು. ಬಾಣವನ್ನು ಕೆನ್ನೆಯ ವರೆಗೂ ಸೆಳೆದು ಯುದ್ಧದಲ್ಲಿ ತೊಡಗಿದ್ದ ಭೂರಿಶ್ರವನ ಖಡ್ಗವನ್ನು ಹಿಡಿದ ಕೈಗಳನ್ನು ಕತ್ತರಿಸಿದನು. ಸಾತ್ಯಕಿಯನ್ನು ರಕ್ಷಿಸಿದನು.
ಮೂಲ ...{Loading}...
ನೆರೆದ ಷಡುರಥರೊಬ್ಬ ಹಸುಳೆಯ
ಕೊರಳನರಿವಂದಾವ ಧರ್ಮದ
ನಿರುತವನು ನೀ ಕಂಡೆಯೆನಲುರಿ ಮಸಗಿತುದರದಲಿ
ಸರಳ ಕೆನ್ನೆಗೆ ಸೇದಿದನು ಸಂ
ಗರದ ಭೂರಿಶ್ರವನ ಖಡುಗದ
ಕರವ ಕತ್ತರಿಸಿದನು ತಲೆಗಾಯಿದನು ಸಾತ್ಯಕಿಯ ॥13॥
೦೧೪ ಭರದಲೆತ್ತಿದ ತೋಳು ...{Loading}...
ಭರದಲೆತ್ತಿದ ತೋಳು ಕಡಿವಡೆ
ದುರುಳಿತವನಿಗೆ ಸುರಿವ ರಕುತದ
ಸರಿವಿನಲಿ ನೆರೆ ನನೆದು ಭೂರಿಶ್ರವನು ನಸುನಗುತ
ಮುರಿದು ಪಾರ್ಥನ ನೋಡಿ ವಾಮದ
ಬೆರಳನೊಲೆದನು ಲೇಸು ಲೇಸ
ಬ್ಬರದ ಬಿರುದಿನ ಧರ್ಮನಿಷ್ಠರು ಪಾಂಡುಸುತರೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಭರದಿಂದ ಎತ್ತಿದ ತೋಳು ಕತ್ತರಿಸಿ ನೆಲಕ್ಕೆ ಬಿದ್ದಿತು. ಸುರಿಯುವ ರಕ್ತದ ಕೋಡಿಯಲ್ಲಿ ನೆನೆದು ಹೋಯಿತು. ಭೂರಿಶ್ರವನು ನಸುನಗುತ್ತ ಹಿಮ್ಮೆಟ್ಟಿ, ಅರ್ಜುನನನ್ನು ನೋಡಿ, ಎಡದ ಬೆರಳನ್ನು ತೂಗುತ್ತಾ “ಒಳ್ಳೆಯದು, ಒಳ್ಳೆಯದು. ಪಾಂಡವರು ಅತಿಶಯದ ಬಿರುದಿನ, ಧರ್ಮನಿಷ್ಠರು " ಎಂದು ವ್ಯಂಗ್ಯವಾಗಿ ನುಡಿದನು.
ಮೂಲ ...{Loading}...
ಭರದಲೆತ್ತಿದ ತೋಳು ಕಡಿವಡೆ
ದುರುಳಿತವನಿಗೆ ಸುರಿವ ರಕುತದ
ಸರಿವಿನಲಿ ನೆರೆ ನನೆದು ಭೂರಿಶ್ರವನು ನಸುನಗುತ
ಮುರಿದು ಪಾರ್ಥನ ನೋಡಿ ವಾಮದ
ಬೆರಳನೊಲೆದನು ಲೇಸು ಲೇಸ
ಬ್ಬರದ ಬಿರುದಿನ ಧರ್ಮನಿಷ್ಠರು ಪಾಂಡುಸುತರೆಂದ ॥14॥
೦೧೫ ಆರು ಕೊಟ್ಟರು ...{Loading}...
ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋಣರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ಶರವನ್ನು ನಿನಗಾರು ಕೊಟ್ಟರು ? ಶಿವನೋ, ನಿನ್ನ ತಂದೆ ಇಂದ್ರನೋ, ಅಥವಾ ಕೃಷ್ಣ, ದ್ರೋಣರೋ ? ಸುಳ್ಳಾಡದೆ ಹೇಳು. ಎಲೈಪಾರ್ಥ, ನೀನು ವೀರನಾಗಿದ್ದೀಯೆ. ನಿನ್ನಂತೆ ಬಿಲ್ಲುಗಾರರು ಯಾರಿದ್ದಾರೆ ? ಈ ಮಹಾಸ್ತ್ರವನ್ನು ಯಾರು ಕಲಿಸಿದರು ? ಈ ವಿದ್ಯೆಯು ನಿನಗೆ ಒಳ್ಳೆಯ ಉಪಯೋಗಕ್ಕೆ ಬಂದಿತು” ಎಂದು ಭೂರಿಶ್ರವನು ಹೇಳಿದನು.
ಮೂಲ ...{Loading}...
ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋಣರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ ॥15॥
೦೧೬ ಅರಿದೆನೀ ವಿದ್ಯವನು ...{Loading}...
ಅರಿದೆನೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗಗಳನರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟಿರಕಟೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ವಿದ್ಯೆಯನ್ನು ಕಲಿತಿರುವುದಾದರೆ, ನೀನು ಕೃಷ್ಣನಿಂದಲೇ ಕಲಿತಿರಬೇಕು. ಏಕೆಂದರೆ ಈ ಕಪಟದ ಸಂಚನ್ನು ಇಂದ್ರ, ದ್ರೋಣ, ಶಂಕರರು ತಿಳಿದಿಲ್ಲ. ಮರೆಯಿಂದ ಇರಿಯುವ ಕೃಷ್ಣನು ರಾಕ್ಷಸರನ್ನು ನಾಶಗೈದನು ಎನ್ನುವರು. ಕುಹಕ, ಕಪಟ ತಂತ್ರದ ರಕ್ಷಕನಾದ ಕೃಷ್ಣನ ಸಹವಾಸದಿಂದ ಅಯ್ಯೋ ನೀವು ಕೆಟ್ಟಿರಿ ಎಂದು ಭೂರಿಶ್ರವನು ಹೇಳಿದನು.
ಪದಾರ್ಥ (ಕ.ಗ.ಪ)
ನೆರವಣಿಗೆ - ಸಂಚು
ಹೊರಿಗೆವಾಳ-ರಕ್ಷಣೆಯ ಭಾರ ಹೊರುವವನು
ಮೂಲ ...{Loading}...
ಅರಿದೆನೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗಗಳನರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟಿರಕಟೆಂದ ॥16॥
೦೧೭ ಓಡಿ ಕೊನ್ದನು ...{Loading}...
ಓಡಿ ಕೊಂದನು ಕಾಲಯವನನು
ಬೇಡಿ ಕೊಂದನು ಕೈಟಭನ ಕೈ
ಮಾಡಿ ಕೊಲಿಸಿದ ಮಾಗಧನನಭಿಮಾನಗೇಡುಗನ
ಕೂಡಿಕೊಂಡಿರಿ ಮೂರುಲೋಕದ
ಬೀಡರಿಯೆ ಬಾಹಿರನನೀ ಹರಿ
ಯಾಡಿಸಿದವೋಲಾಡಿ ಕೆಟ್ಟಿರಿ ಖಳರು ನೀವೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಾಲಯವನನ್ನು ಓಡಿ ಹೋಗಿ ಕೊಂದನು. ಕೈಟಭನನ್ನು ಬೇಡಿ ಕೊಂದನು. ಮಾಗಧನನ್ನು ಕೈಮಾಡಿ ಕೊಲ್ಲಿಸಿದನು. ಅಭಿಮಾನ ರಹಿತನನ್ನು, ಮೂರು ಲೋಕದ ಜನರೂ ತಿಳಿದಿರುವಂತೆ ಭ್ರಷ್ಟನನ್ನು ಕೂಡಿಕೊಂಡಿರಿ. ಅಂತಹ ಹರಿ ಆಡಿಸಿದಂತೆ ಆಡಿ ಕೆಟ್ಟಿರಿ. ನೀವೂ ಸಹ ನೀಚರಾದಿರಿ” ಎಂದು ಭೂರಿಶ್ರವನು ಹೇಳಿದನು.
ಪದಾರ್ಥ (ಕ.ಗ.ಪ)
ಬಾಹಿರ-ನೀಚ
ಟಿಪ್ಪನೀ (ಕ.ಗ.ಪ)
ಕಾಲಯವ : ಯಾದವರ ಪುರೋಹಿತನಾದ ಗರ್ಗಮುನಿಯನ್ನು ಯಾದವರು ಒಮ್ಮೆ ಗರ್ಗಮುನಿಯನ್ನು ಅಪಹಾಸ್ಯ ಮಾಡಿದರು. ಸಿಟ್ಟುಗೊಂಡ ಮುನಿ ಯಾದವರನ್ನು ಧ್ವಂಸ ಮಾಡತಕ್ಕ ಮಗ ತನಗೆ ಹುಟ್ಟಬೇಕೆಂದು ಶಿವನನ್ನು ಬೇಡಿದನು. ಆಗ ಓರ್ವ ಅಪ್ಸರಸಿಯಿಂದ ಪಡೆದ ಪುತ್ರನೇ ಕಾಲಯವ. ಈತನು ಶಿವನ ವರದಿಂದ ಜನಿಸಿದವನಾದ್ದರಿಂದ ಮಹಾಬಲ ಸಂಪನ್ನನೆನಿಸಿ ಯಾದವರನ್ನು ಪೀಡಿಸಿದ, ಇವನನ್ನು ಸೋಲಿಸುವುದು ಕೃಷ್ಣನಿಗೆ ಸಾಧ್ಯವಾಗಲಿಲ್ಲ. ಕೃಷ್ಣ ಓಡಿಹೋಗಿ ಮುಚುಕುಂದನು ಮಲಗಿದ್ದ ಗವಿಯೊಳಗೆ ಅಡಗಿಕೊಂಡ, ಕಾಲಯವನನೂ ಅದೇ ಗವಿಯನ್ನು ಹೊಕ್ಕು ಅಲ್ಲಿ ಮಲಗಿದ್ದ ಮುಚುಕುಂದನನ್ನೇ ಕೃಷ್ಣನೆಂದು ಭಾವಿಸಿ ಎಡಗಾಲಿನಿಂದ ಒದೆಯಲಾಗಿ, ನಿದ್ರಾಭಂಗದಿಂದ ಎಚ್ಚತ್ತು ಕೋಪಗೊಂಡ ಮುಚುಕುಂದನ ದೃಷ್ಟಿಪಾತದಿಂದ ಕಾಲಯವನನು ಬೂದಿಯಾದನು.
ಮುಚುಕುಂದ - ಒಬ್ಬ ಅರಸು, ಸೂರ್ಯವಂಶದ ಮಾಂಧಾತ-ರಾಜನ ಮಗ.
ಕೈಟಭ : ಒಬ್ಬ ರಾಕ್ಷಸ, ಕಲ್ಪಾದಿಯುಲ್ಲಿ ವಿಷ್ಣು ವಟಪತ್ರಶಾಯಿಯಾಗಿ ಮಲಗಿದ್ದಾಗ ಆತನ ಕಿವಿಯ ಮಲದಿಂದ ಮಧು-ಕೈಟಭರೆಂಬ ಇಬ್ಬರು ರಾಕ್ಷಸರು ಜನಿಸಿ, ನಾಭಿ ಕಮಲದಲ್ಲಿದ್ದ ಚತುರ್ಮುಖನನ್ನು ಪೀಡಿಸತೊಡಗಿದನು. ಚತುರ್ಮುಖ ವಿಷ್ಣುವನ್ನು ಹೊಗಳಲಾಗಿ, ಎಚ್ಚೆತ್ತ ವಿಷ್ಣು ಚತುರ್ಮುಖನಿಗೆ ಅಭಯವಿತ್ತು ಮಧು-ಕೈಟಭರ ಸಂಗಡ ಯುದ್ಧ ಮಾಡತೊಡಗಿದ. ರಾಕ್ಷಸರು ಜಗ್ಗಲಿಲ್ಲ. ವಿಷ್ಣು ಪರಾಶಕ್ತಿಯನ್ನು ಪ್ರಾರ್ಥಿಸಿ ಅವಳ ಅನುಗ್ರಹ ಪಡೆದು ಪುನಃ ರಾಕ್ಷಸರ ಸಂಗಡ ಯುದ್ಧಮಾಡಲು, ಆ ರಾಕ್ಷಸರು ನಿನ್ನ ಸಾಮಥ್ರ್ಯಕ್ಕೆ ಮೆಚ್ಚಿದೆವು, ಬೇಕಾದ ವರವನ್ನು ಬೇಡು - ಎಂದರು. ಆಗ ವಿಷ್ಣುವು “ನೀವು ನನ್ನಿಂದ ವಧ್ಯರಾಗುವ ವರವನ್ನು ಕೊಡಿ” ಎಂದನು. ಮೋಸಹೋದ ರಾಕ್ಷಸರು, ಎಲ್ಲೆಲ್ಲಿಯೂ ಜಲವೇ ಆವರಿಸಿಕೊಂಡಿದ್ದರಿಂದ “ಎಲ್ಲಿ ಭೂಮಿಯನ್ನು ನೀರು ಆವರಿಸಿಕೊಂಡಿಲ್ಲವೋ ಅಲ್ಲಿ ಸಂಹರಿಸು” ಎಂದರು. ಆಗ ವಿಷ್ಣು ಅವರಿಬ್ಬರನ್ನೂ ತನ್ನ ತೊಡೆಯ ಮೇಲೆಯೇ ಕೊಂದನು.
ಮಾಗಧ-ಮಗಧ ದೇಶದ ಅರಸು, ಜರಾಸಂಧ. ಇವನ್ನು ಕೃಷ್ಣನು ಭೀಮನಿಂದ ಕೊಲ್ಲಿಸಿದನು.
ಮೂಲ ...{Loading}...
ಓಡಿ ಕೊಂದನು ಕಾಲಯವನನು
ಬೇಡಿ ಕೊಂದನು ಕೈಟಭನ ಕೈ
ಮಾಡಿ ಕೊಲಿಸಿದ ಮಾಗಧನನಭಿಮಾನಗೇಡುಗನ
ಕೂಡಿಕೊಂಡಿರಿ ಮೂರುಲೋಕದ
ಬೀಡರಿಯೆ ಬಾಹಿರನನೀ ಹರಿ
ಯಾಡಿಸಿದವೋಲಾಡಿ ಕೆಟ್ಟಿರಿ ಖಳರು ನೀವೆಂದ ॥17॥
೦೧೮ ಪೊಡವಿಯೊಳು ಯಾದವರು ...{Loading}...
ಪೊಡವಿಯೊಳು ಯಾದವರು ಕ್ಷತ್ರಿಯ
ಗೆಡುಕರದರೊಳು ಹುಟ್ಟಿದನು ಕೊಲೆ
ಗಡಿಗ ಹಾವಿನ ಹುತ್ತದಲಿ ಹಾವ್ಮೆಕ್ಕೆ ಬೆಳೆದಂತೆ
ನಡೆವಳಿಯ ನೋಡಿದರೆ ಲೋಗರ
ಮಡದಿಯರು ತನ್ನವರು ಠಕ್ಕಿನ
ಕಡಲು ಕೃಷ್ಣನ ನಂಬಲಿಹಪರವಿಲ್ಲ ನಿಮಗೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಲೋಕದಲ್ಲಿ ಯಾದವರು ಕ್ಷತ್ರಿಯರಿಗೆ ಕೆಡುಕನ್ನುಂಟು ಮಾಡುವವರು. ಹಾವಿನ ಹುತ್ತದಲ್ಲಿ ಹಾವು, ವಿಷದ ಫಲ ಬಿಡುವ ಗಿಡ ಜೊತೆಯಾಗಿರುವಂತೆ ಆ ವಂಶದಲ್ಲಿ ಕೊಲೆಗಡಿಕನಾದ ಕೃಷ್ಣನು ಹುಟ್ಟಿದನು. ಆತನ ನಡವಳಿಕೆಯನ್ನು ನೋಡಿದರೆ, ಲೋಕದ ಸ್ತ್ರೀಯರನ್ನೆಲ್ಲಾ ತನ್ನವರನ್ನಾಗಿಸಿಕೊಂಡವನು, ಮೋಸದ ಸಮುದ್ರ ಕೃಷ್ಣ. ಆತನನ್ನು ನಂಬಿದರೆ ನಿಮಗೆ ಇಹಪರವಿಲ್ಲ " ಎಂದು ಭೂರಿಶ್ರವನು ಹೇಳಿದನು.
ಮೂಲ ...{Loading}...
ಪೊಡವಿಯೊಳು ಯಾದವರು ಕ್ಷತ್ರಿಯ
ಗೆಡುಕರದರೊಳು ಹುಟ್ಟಿದನು ಕೊಲೆ
ಗಡಿಗ ಹಾವಿನ ಹುತ್ತದಲಿ ಹಾವ್ಮೆಕ್ಕೆ ಬೆಳೆದಂತೆ
ನಡೆವಳಿಯ ನೋಡಿದರೆ ಲೋಗರ
ಮಡದಿಯರು ತನ್ನವರು ಠಕ್ಕಿನ
ಕಡಲು ಕೃಷ್ಣನ ನಂಬಲಿಹಪರವಿಲ್ಲ ನಿಮಗೆಂದ ॥18॥
೦೧೯ ಎನ್ದಡೆನ್ದನು ಪಾರ್ಥನೆಲವೋ ...{Loading}...
ಎಂದಡೆಂದನು ಪಾರ್ಥನೆಲವೋ
ಮಂದಮತಿ ನೀನೆಂದರಹುದೆ ಮು
ಕುಂದನನು ನಂಬಿದರಿಗಿಹಪರಸೌಖ್ಯಭಯವಿಲ್ಲ
ಇಂದು ನಾವ್ ಮಾಡಿದುದು ಹೊಲ್ಲೆಹ
ವೆಂದೆ ನೀನದನರಿಯೆ ಶಿಷ್ಯನ
ಕುಂದು ಹೆಚ್ಚುಗಳಾರದೆಂಬುದ ಹೇಳು ನೀನೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಲಾಗಿ ಪಾರ್ಥನು " ಎಲವೋ, ಮಂದಮತಿ, ಮೂಢನೇ… ಮುಕುಂದನನ್ನು ನಂಬಿದವರಿಗೆ ಇಹಪರ ಸೌಖ್ಯ. ಭಯವಿಲ್ಲ. ಇಂದು ನಾವು ಮಾಡಿದ್ದನ್ನು ಕೆಟ್ಟದ್ದು ಎಂದೆ. ನೀನು ಅದನ್ನು ತಿಳಿದಿಲ್ಲ. ಶಿಷ್ಯನ ದೋಷ, ಗುಣಗಳಾರದೆಂಬುದನ್ನು ನೀನೇ ಹೇಳು” ಎಂದನು.
ಮೂಲ ...{Loading}...
ಎಂದಡೆಂದನು ಪಾರ್ಥನೆಲವೋ
ಮಂದಮತಿ ನೀನೆಂದರಹುದೆ ಮು
ಕುಂದನನು ನಂಬಿದರಿಗಿಹಪರಸೌಖ್ಯಭಯವಿಲ್ಲ
ಇಂದು ನಾವ್ ಮಾಡಿದುದು ಹೊಲ್ಲೆಹ
ವೆಂದೆ ನೀನದನರಿಯೆ ಶಿಷ್ಯನ
ಕುಂದು ಹೆಚ್ಚುಗಳಾರದೆಂಬುದ ಹೇಳು ನೀನೆಂದ ॥19॥
೦೨೦ ಎನಗೆ ಸಾತ್ಯಕಿ ...{Loading}...
ಎನಗೆ ಸಾತ್ಯಕಿ ಕೋಲ ಮಗನಾ
ತನ ವಧೆಯನಾ ಕಾಣಲಾಗದು
ಮನಕೆ ಮತವೇ ನಮ್ಮ ಹರಿಬಕೆ ಬಂದು ಕಾದುವನ
ನಿನಗೆ ಕೊಡುವೆನೆ ನಮ್ಮ ಧರ್ಮವ
ಜನವರಿಯದೇ ಹೋಗು ಹೋಗೆನೆ
ಮನದೊಳಗೆ ನಗುತಿರ್ದನಾ ಭೂರಿಶ್ರವ ಕ್ಷಿತಿಪ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನಗೆ ಸಾತ್ಯಕಿಯು ಧನುರ್ವಿದ್ಯೆಯಲ್ಲಿ ಶಿಷ್ಯ, ಆತನ ವಧೆಯನ್ನು ನಾನು ಕಾಣುವುದು ಸರಿಯಲ್ಲ. ಮನಸ್ಸಿಗೆ ಒಪ್ಪತ್ತದೆಯೇ? ನಮ್ಮ ಕಾರ್ಯಕ್ಕಾಗಿ, ನಮಗೋಸ್ಕರ ಕಾದಾಡುವವನನ್ನು ನಿನ್ನ ಬಾಣಕ್ಕೆ ಆಹುತಿ ಮಾಡುವೆನೇ ? ನಮ್ಮ ಧರ್ಮವನ್ನು ಲೋಕ ತಿಳಿಯದೇ ? ಹೋಗು, ಹೋಗು” ಎಂದು ಅರ್ಜುನನು ಹೇಳಲು ಭೂರಿಶ್ರವ ರಾಜನು ಮನದೊಳಗೇ ನಗುತ್ತಿದ್ದನು.
ಪದಾರ್ಥ (ಕ.ಗ.ಪ)
ಕೋಲಮಗ-ಧನುರ್ವಿದ್ಯೆಯಲ್ಲಿ ಶಿಷ್ಯ,
ಮೂಲ ...{Loading}...
ಎನಗೆ ಸಾತ್ಯಕಿ ಕೋಲ ಮಗನಾ
ತನ ವಧೆಯನಾ ಕಾಣಲಾಗದು
ಮನಕೆ ಮತವೇ ನಮ್ಮ ಹರಿಬಕೆ ಬಂದು ಕಾದುವನ
ನಿನಗೆ ಕೊಡುವೆನೆ ನಮ್ಮ ಧರ್ಮವ
ಜನವರಿಯದೇ ಹೋಗು ಹೋಗೆನೆ
ಮನದೊಳಗೆ ನಗುತಿರ್ದನಾ ಭೂರಿಶ್ರವ ಕ್ಷಿತಿಪ ॥20॥
೦೨೧ ಎಲವೊ ಸಾತ್ಯಕಿ ...{Loading}...
ಎಲವೊ ಸಾತ್ಯಕಿ ಬದುಕಿದೈ ನರ
ನುಳುಹಿಕೊಂಡನು ಹೋಗೆನುತ ಹೆಡ
ತಲೆಯನೊದೆದನು ನಿಂದು ಬರಿಕೈ ಮುರಿದ ಗಜದಂತೆ
ಒಲೆವುತೈತಂದೊಂದು ರಣಮಂ
ಡಲದೊಳಗೆ ಪದ್ಮಾಸನವನನು
ಕೊಳಿಸಿ ಯೋಗಾರೂಢನಾದನು ವರಸಮಾಧಿಯಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲವೋ ಸಾತ್ಯಕಿ, ಬದುಕಿಕೊಂಡೆ ಅರ್ಜುನನು ನಿನ್ನನ್ನು ಉಳಿಸಿಕೊಂಡನು. ಹೋಗು ಎನ್ನುತ್ತಾ ಸಾತ್ಯಕಿಯ ಹೆಡತಲೆಯನ್ನು ಒದ್ದನು. ನಿಂತು ಸೊಂಡಿಲು ಮುರಿದ ಆನೆಯಂತೆ, ತುಯ್ದಾಡುತ್ತ ಬಂದು ರಣಮಂಡಲದೊಳಗೆ ಪದ್ಮಾಸನದಲ್ಲಿ ಕುಳಿತು ವರಸಮಾಧಿಯಲ್ಲಿ ಯೋಗಾರೂಢನಾದನು.
ಪದಾರ್ಥ (ಕ.ಗ.ಪ)
ಹೆಡತಲೆ-ತಲೆಯ ಹಿಂಭಾಗ.
ಮೂಲ ...{Loading}...
ಎಲವೊ ಸಾತ್ಯಕಿ ಬದುಕಿದೈ ನರ
ನುಳುಹಿಕೊಂಡನು ಹೋಗೆನುತ ಹೆಡ
ತಲೆಯನೊದೆದನು ನಿಂದು ಬರಿಕೈ ಮುರಿದ ಗಜದಂತೆ
ಒಲೆವುತೈತಂದೊಂದು ರಣಮಂ
ಡಲದೊಳಗೆ ಪದ್ಮಾಸನವನನು
ಕೊಳಿಸಿ ಯೋಗಾರೂಢನಾದನು ವರಸಮಾಧಿಯಲಿ ॥21॥
೦೨೨ ತರಣಿಮಣ್ಡಲದಲ್ಲಿ ದೃಷ್ಟಿಯ ...{Loading}...
ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯಮಂಡಲದಲ್ಲಿ ದೃಷ್ಟಿಯನ್ನಿರಿಸಿ, ಹೊರಗಿನ ಇಂದ್ರಿಯಗಳನ್ನು ನಿಗ್ರಹಿಸಿ, ವೇದಾಂತದ ರಹಸ್ಯದ ವಸ್ತು ತಾನಾಗಿ ಸಹಜ ಸ್ಥಿತಿಯಲ್ಲಿರಲು, ಸಾತ್ಯಕಿ ಇದನ್ನು ಕಂಡು ಕೋಪದಿಂದ ಆರ್ಭಟಿಸಿ, ತನ್ನ ಕಠಾರಿಯನ್ನು ಒರೆಯಿಂದ ಸೆಳೆದು, ಆತುರದಿಂದ ಮುನ್ನುಗ್ಗಿ ಭೂರಿಶ್ರವನ ತುರುಬಿಗೆ ಹೊಡೆದನು.
ಮೂಲ ...{Loading}...
ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ ॥22॥
೦೨೩ ಆಗದಾಗದು ಕಷ್ಟವಿದು ...{Loading}...
ಆಗದಾಗದು ಕಷ್ಟವಿದು ತೆಗೆ
ಬೇಗದೆನಲರ್ಜುನನ ಕೃಷ್ಣನ
ನಾಗಳವ ಕೈಕೊಳ್ಳದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗದು, ಇದು ಸರಿಯಲ್ಲ, ಇದು ಕಷ್ಟ, ಬೇಗ ತೆಗೆ ತೆಗೆ ಎಂದು ಕೃಷ್ಣಾರ್ಜುನರು ನುಡಿಯುತ್ತಿರುವಾಗಲೇ ಅವರ ಮಾತನ್ನು ಲಕ್ಷಿಸದೆ ಸಾತ್ಯಕಿಯು ಭೂರಿಶ್ರವನ ಕುತ್ತಿಗೆಯನ್ನು ಕತ್ತರಿಸಿದನು. ಆಗ ಸಕಲ ಪರಿವಾರದ ಜನ “ಎಲೆ ಪಾಪಿ, ಹೋಗು, ಹೋಗು. ಪುಣ್ಯವನ್ನು ಕಳೆದುಕೊಂಡು ಹುಟ್ಟಿದೆ. (ಪುಣ್ಯಹೀನ) ರಾಜಋಷಿಯಾದ ಆತನು ನಿನಗೇನು ಮಾಡಿದ್ದನು ?” ಎಂದು ಬೈದರು.
ಪದಾರ್ಥ (ಕ.ಗ.ಪ)
ರಾಜಋಷಿ-ರಾಜನಾಗಿದ್ದೂ, ಋಷಿಯ ಮನಃಸ್ಥಿತಿಯುಳ್ಳವನು.
ಮೂಲ ...{Loading}...
ಆಗದಾಗದು ಕಷ್ಟವಿದು ತೆಗೆ
ಬೇಗದೆನಲರ್ಜುನನ ಕೃಷ್ಣನ
ನಾಗಳವ ಕೈಕೊಳ್ಳದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ ॥23॥
೦೨೪ ಒಡಲನೊಡೆದಾ ಜ್ಯೋತಿ ...{Loading}...
ಒಡಲನೊಡೆದಾ ಜ್ಯೋತಿ ಗಗನಕೆ
ನಡೆದುದಿತ್ತಲು ಸುರರು ಮತ್ರ್ಯರು
ಸುಡು ಸುಡೆಂದುದು ಸಾತ್ಯಕಿಯ ದುಷ್ಕರ್ಮವಾಸನೆಗೆ
ಹಿಡಿದ ದುಗುಡದಲರ್ಜುನನು ಮನ
ಮಿಡುಕಿದನು ಕುರುನೃಪರು ಶೋಕದ
ಕಡಲೊಳದ್ದರು ಬೈವುತಿದ್ದರು ಕೃಷ್ಣಫಲುಗುಣರ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂರಿಶ್ರವನ ಜೀವಜ್ಯೋತಿ ಶರೀರವನ್ನು ಭೇದಿಸಿ ಗಗನಕ್ಕೆ ನೆಗೆಯಿತು. ಈ ಕಡೆ ಸಾತ್ಯಕಿಯ ಕೆಟ್ಟ ಕೆಲಸದ ಬಗ್ಗೆ ದೇವತೆಗಳು, ಮಾನವರು ಸಾತ್ಯಕಿಯ ಪೂರ್ವಾಜಿತ ದುಷ್ಕರ್ಮದ ಸ್ವಭಾವಕ್ಕೆ ಕೋಪಿಸಿ ಸುಡು-ಸುಡು ಎಂದರು. ಅರ್ಜುನನು ಆವರಿಸಿದ ದುಃಖದಲ್ಲಿ ಮುಳುಗಿದನು. ಮನದಲ್ಲೇ ಮಿಡುಕಿದನು. ಕುರುರಾಜರು ಶೋಕ ಸಾಗರದಲ್ಲಿ ಮುಳುಗಿದರು. ಕೃಷ್ಣಾರ್ಜುನರನ್ನು ಬೈಯುತ್ತಿದ್ದರು.
ಮೂಲ ...{Loading}...
ಒಡಲನೊಡೆದಾ ಜ್ಯೋತಿ ಗಗನಕೆ
ನಡೆದುದಿತ್ತಲು ಸುರರು ಮತ್ರ್ಯರು
ಸುಡು ಸುಡೆಂದುದು ಸಾತ್ಯಕಿಯ ದುಷ್ಕರ್ಮವಾಸನೆಗೆ
ಹಿಡಿದ ದುಗುಡದಲರ್ಜುನನು ಮನ
ಮಿಡುಕಿದನು ಕುರುನೃಪರು ಶೋಕದ
ಕಡಲೊಳದ್ದರು ಬೈವುತಿದ್ದರು ಕೃಷ್ಣಫಲುಗುಣರ ॥24॥
೦೨೫ ಇತ್ತ ರವಿರಶ್ಮಿಗಳು ...{Loading}...
ಇತ್ತ ರವಿರಶ್ಮಿಗಳು ನೆರೆ ಕೆಂ
ಪೊತ್ತಿದವು ಸೈಂಧವನನೀಗೊ
ತ್ತೊತ್ತೆಯಲಿ ನೆಲೆ ಕಾಣಬಾರದು ಸಾಕು ದುಮ್ಮಾನ
ಇತ್ತ ನಿಜ ಭಾಷೆಗೆ ಪರಾಭವ
ಹತ್ತಿರಾಯಿತು ನರ ನಿದಾನಿಸೆ
ನುತ್ತ ಮುರರಿಪು ರಥವ ಬಿಟ್ಟನು ಕಡೆಯ ಮೋಹರಕೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಸೂರ್ಯರಶ್ಮಿಗಳು ವಿಶೇಷವಾಗಿ ಕೆಂಪು ಬಣ್ಣವನ್ನು ಹೊಂದಿದವು. (ಅಂದರೆ ಸೂರ್ಯಾಸ್ತ ಸಮೀಪಿಸಿತು.) ಈ ನೂಕಾಟದಲ್ಲಿ ಸೈಂಧವನನ್ನು ಕಾಣಲಾಗುತ್ತಿಲ್ಲ. ದುಃಖ, ದುಗುಡ ಸಾಕು, ಈ ಕಡೆ ನೀನು ಮಾಡಿದ ಪ್ರತಿಜ್ಞೆಗೆ ಸೋಲು ಹತ್ತಿರವಾಗುವ ಸಮಯ ಬಂದಿದೆ. ಅರ್ಜುನ ಸಾವಧಾನದಿಂದಿರು ಎನ್ನುತ್ತಾ ಕೃಷ್ಣನು ಅತ್ತಕಡೆಯ ವ್ಯೂಹದೆಡೆಗೆ ರಥವನ್ನು ನಡೆಸಿದನು.
ಮೂಲ ...{Loading}...
ಇತ್ತ ರವಿರಶ್ಮಿಗಳು ನೆರೆ ಕೆಂ
ಪೊತ್ತಿದವು ಸೈಂಧವನನೀಗೊ
ತ್ತೊತ್ತೆಯಲಿ ನೆಲೆ ಕಾಣಬಾರದು ಸಾಕು ದುಮ್ಮಾನ
ಇತ್ತ ನಿಜ ಭಾಷೆಗೆ ಪರಾಭವ
ಹತ್ತಿರಾಯಿತು ನರ ನಿದಾನಿಸೆ
ನುತ್ತ ಮುರರಿಪು ರಥವ ಬಿಟ್ಟನು ಕಡೆಯ ಮೋಹರಕೆ ॥25॥
೦೨೬ ಕಾದಿರೈ ಷಡು ...{Loading}...
ಕಾದಿರೈ ಷಡು ರಥರು ನೃಪತಿಗೆ
ಕಾದು ಕೊಡಿರೈ ಸೈಂಧವನನಿದು
ಕೈದುಕಾರರ ಠಾವು ಸಾಹಸಿಗರಿಗೆ ಸಮಯವಿದು
ಮೂದಲೆಗಳಿವು ಮುಟ್ಟುವಡೆ ಮುನಿ
ಸಾದಡೊಳ್ಳಿತು ನಿಪ್ಪಸರದಲಿ
ಕಾದುವಿರಲೈ ಕಾಣಲಹುದೆಂದೊರಲಿದನು ಪಾರ್ಥ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರು ಜನ ರಥಿಕರು ಕಾದಾಡಿರಿ. ರಾಜನಾದ ದುರ್ಯೋಧನನಿಗೆ ಸೈಂಧವನನ್ನು ರಕ್ಷಿಸಿ ಕೊಡಿ ಇದು ಪರಾಕ್ರಮ ತೋರುವ ಜಾಗ. ಸಾಹಸಿಗಳಿಗೆ ಒಳ್ಳೆಯ ಅವಕಾಶ. ನನ್ನ ಮೂದಲಿಕೆಗಳು ತಾಗಿ ಕೋಪ ಬಂದರೆ ಒಳ್ಳೆಯದೆ ಆಯಿತು. ಆವೇಶದಿಂದ ಕಾದುವಿರಿ ತಾನೆ ? ಕಾಣಬರುತ್ತದೆ. ಎಂದು ಅರ್ಜುನ ಕೂಗಿ ಹೇಳಿದನು.
ಪದಾರ್ಥ (ಕ.ಗ.ಪ)
ರಥಿ-ರಥದಲ್ಲಿ ಕುಳಿತು ಯುದ್ಧ ಮಾಡುವವರು,
ಮೂಲ ...{Loading}...
ಕಾದಿರೈ ಷಡು ರಥರು ನೃಪತಿಗೆ
ಕಾದು ಕೊಡಿರೈ ಸೈಂಧವನನಿದು
ಕೈದುಕಾರರ ಠಾವು ಸಾಹಸಿಗರಿಗೆ ಸಮಯವಿದು
ಮೂದಲೆಗಳಿವು ಮುಟ್ಟುವಡೆ ಮುನಿ
ಸಾದಡೊಳ್ಳಿತು ನಿಪ್ಪಸರದಲಿ
ಕಾದುವಿರಲೈ ಕಾಣಲಹುದೆಂದೊರಲಿದನು ಪಾರ್ಥ ॥26॥
೦೨೭ ಜರಿದುದೀ ಬಲರಾಸಿ ...{Loading}...
ಜರಿದುದೀ ಬಲರಾಸಿ ಗಾಳಿಯ
ಹೊರಳಿಗೊಡ್ಡಿದ ಹೊಟ್ಟು ಹಾರುವು
ದರಿದೆ ಗಿರಿಗಳು ನೆಲನ ಬಿಟ್ಟುದನೇನ ಹೇಳುವೆನು
ಗುರುತನುಜ ಕೃಪ ಕರ್ಣ ಮಾದ್ರೇ
ಶ್ವರ ಸುಯೋಧನ ಚಿತ್ರಸೇನರು
ಮುರಿದು ತರಹರಿಸಿದರು ಸೂಚೀವ್ಯೂಹದಗ್ರದಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸೈನ್ಯ ಸಮೂಹ ಹಿಮ್ಮೆಟ್ಟಿತು. ಗಾಳಿಯ ಬೀಸುವಿಕೆಗೆ ಒಡ್ಡಿದ ಹೊಟ್ಟು ಹಾರುವುದು ಅಸಾಧ್ಯವೇ ? ಇಲ್ಲಿ, ಬೆಟ್ಟಗಳೇ ಭೂಮಿಯನ್ನು ಬಿಟ್ಟು ಹಾರಿದ್ದನ್ನು ಹೇಗೆ ವರ್ಣಿಸುವುದು? ಅಶ್ವತ್ಥಾಮ, ಕೃಪ, ಕರ್ಣ, ಮಾದ್ರೇಶ್ವರ, ಸುಯೋಧನ, ಚಿತ್ರಸೇನರೇ ಮೊದಲಾದವರು ಹಿಂತಿರುಗಿ ಸೂಚೀವ್ಯೂಹದ ಮುಂಭಾಗಕ್ಕೆ ಬಂದರು.
ಮೂಲ ...{Loading}...
ಜರಿದುದೀ ಬಲರಾಸಿ ಗಾಳಿಯ
ಹೊರಳಿಗೊಡ್ಡಿದ ಹೊಟ್ಟು ಹಾರುವು
ದರಿದೆ ಗಿರಿಗಳು ನೆಲನ ಬಿಟ್ಟುದನೇನ ಹೇಳುವೆನು
ಗುರುತನುಜ ಕೃಪ ಕರ್ಣ ಮಾದ್ರೇ
ಶ್ವರ ಸುಯೋಧನ ಚಿತ್ರಸೇನರು
ಮುರಿದು ತರಹರಿಸಿದರು ಸೂಚೀವ್ಯೂಹದಗ್ರದಲಿ ॥27॥
೦೨೮ ಹರಿಯ ಬೊಬ್ಬೆ ...{Loading}...
ಹರಿಯ ಬೊಬ್ಬೆ ರಥಾಶ್ವದಬ್ಬರ
ನರನ ಬಿಲುಟಂಕಾರ ತೇರಿನ
ಧರಧುರದ ಚೀತ್ಕಾರ ಹನುಮನ ಸಿಂಹನಿರ್ಘೋಷ
ಅರಿಬಲವ ತಿವಿದುದು ಚತುರ್ಬಲ
ಹೊರಳಿಯೊಡೆದುದು ಸುಭಟರೆದೆ ಜ
ರ್ಝರಿತವಾದುದು ಪಾರ್ಥ ಹೊಕ್ಕನು ಸೈಂಧವನ ದಳವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನ ಬೊಬ್ಬೆ, ರಥ, ಕುದುರೆಗಳ ಆರ್ಭಟ, ಅರ್ಜುನನ ಬಿಲ್ಲಿನ ಟಂಕಾರ, ರಥದ ಅತಿಶಯವಾದ ಚೀತ್ಕಾರ, ಹನುಮನ ಸಿಂಹಧ್ವನಿ-ಇವು ಶತ್ರುಸೇನೆಯನ್ನು ಹಿಮ್ಮೆಟ್ಟಿಸಿತು. ಚತುರ್ಬಲ ಹಿಮ್ಮೆಟ್ಟಿತು. ಸುಭಟರ ಎದೆ ಜರ್ಝರಿತವಾಗುವಂತೆ ಅರ್ಜುನನು ಸೈಂಧವನ ದಳವನ್ನು ಪ್ರವೇಶಿಸಿದನು.
ಮೂಲ ...{Loading}...
ಹರಿಯ ಬೊಬ್ಬೆ ರಥಾಶ್ವದಬ್ಬರ
ನರನ ಬಿಲುಟಂಕಾರ ತೇರಿನ
ಧರಧುರದ ಚೀತ್ಕಾರ ಹನುಮನ ಸಿಂಹನಿರ್ಘೋಷ
ಅರಿಬಲವ ತಿವಿದುದು ಚತುರ್ಬಲ
ಹೊರಳಿಯೊಡೆದುದು ಸುಭಟರೆದೆ ಜ
ರ್ಝರಿತವಾದುದು ಪಾರ್ಥ ಹೊಕ್ಕನು ಸೈಂಧವನ ದಳವ ॥28॥
೦೨೯ ಅಳವಿಗೊಡಲಿ ಮಹಾರಥರು ...{Loading}...
ಅಳವಿಗೊಡಲಿ ಮಹಾರಥರು ಕೈ
ಕೊಳಲಿ ಸೈಂಧವ ನೃಪನನೊಂದರೆ
ಘಳಿಗೆ ಕಾಯ್ದರೆ ನಾವು ನೆರೆ ಕೊಂದವರು ಫಲುಗುಣನ
ಹೊಳಹುಗಳಿದುದು ಕಾಲವಿನ್ನರೆ
ಘಳಿಗೆ ಸೈರಿಸಿ ಶಿವ ಶಿವಾಯೆಂ
ದೊಳಗೊಳಗೆ ಮೂದಲಿಸುತಿರ್ದರು ಭಟರು ತಮ್ಮೊಳಗೆ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಥರು ಯುದ್ಧ ಮಾಡಲಿ ಸೈಂಧವ ರಾಜನನ್ನು ಕಾಪಾಡಲಿ. ಒಂದರೆಗಳಿಗೆ ಸೈಂಧವರಾಜನನ್ನು ಕಾಪಾಡಿಕೊಂಡು ಬಿಟ್ಟರೆ ನಾವು ಅರ್ಜುನನನ್ನು ಕೊಂದಂತೆ ಆಗುತ್ತದೆ. ಹಗಲಿನ ಕಾಲ ಕಳೆಯುತ್ತಿದೆ. ಇನ್ನರೆಗಳಿಗೆ ಸೈರಿಸಿ. ಶಿವಶಿವಾ ಎಂದು ಒಳಗೊಳಗೆ ಕೌರವ ಯೋಧರು ತಮ್ಮ ತಮ್ಮಲ್ಲೆ ಮೂದಲಿಸುತ್ತಿದ್ದರು.
ಮೂಲ ...{Loading}...
ಅಳವಿಗೊಡಲಿ ಮಹಾರಥರು ಕೈ
ಕೊಳಲಿ ಸೈಂಧವ ನೃಪನನೊಂದರೆ
ಘಳಿಗೆ ಕಾಯ್ದರೆ ನಾವು ನೆರೆ ಕೊಂದವರು ಫಲುಗುಣನ
ಹೊಳಹುಗಳಿದುದು ಕಾಲವಿನ್ನರೆ
ಘಳಿಗೆ ಸೈರಿಸಿ ಶಿವ ಶಿವಾಯೆಂ
ದೊಳಗೊಳಗೆ ಮೂದಲಿಸುತಿರ್ದರು ಭಟರು ತಮ್ಮೊಳಗೆ ॥29॥
೦೩೦ ಧನುವನೊದರಿಸಿ ಸಕಲ ...{Loading}...
ಧನುವನೊದರಿಸಿ ಸಕಲ ಸುಭಟರು
ಮನವ ಬಲಿದೊಗ್ಗಾಗಿ ಸರಳಿನ
ಜಿನುಗುವಳೆಯಲಿ ನಾದಿದರು ನಾರಾಯಣಾರ್ಜುನರ
ಅನಿಬರಂಬನು ಕಡಿದು ಗುರುನಂ
ದನನ ಕರ್ಣನ ಕೃಪನ ದುರಿಯೋ
ಧನನ ಮೆಯ್ಯಲಿ ಮೆತ್ತಿದನು ಮುಮ್ಮೊನೆಯ ಬೋಳೆಗಳ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಕಲ ಯೋಧರು ಧನುಸ್ಸನ್ನು ಸಿದ್ಧಗೊಳಿಸಿ, (ಜಾಡಿಸಿ) ಮನದಲ್ಲಿ ದೃಢರಾಗಿ, ಒಟ್ಟಾಗಿ ನಾರಾಯಣಾರ್ಜುನರನ್ನು ಬಾಣಗಳ ಜಿನುಗು ಮಳೆಯಲ್ಲಿ ನೆನೆಯುವಂತೆ ಮಾಡಿದರು. ಅರ್ಜುನನು ಅಷ್ಟೂ ಜನರ ಬಾಣಗಳನ್ನು ಕಡಿದು, ಅಶ್ವತ್ಥಾಮ, ಕರ್ಣ, ಕೃಪ, ದುರ್ಯೋಧನರ ಮೈಯಲ್ಲಿ ಹರಿತವಾದ ಬಾಣಗಳನ್ನು ನಾಟಿಸಿದನು.
ಪದಾರ್ಥ (ಕ.ಗ.ಪ)
ಒದರಿಸು-ಜಾಡಿಸು, ನಾದು-ನೆನೆಯುವಂತೆ ಮಾಡು, ಬೋಳೆ-ಬಾಣ
ಮೂಲ ...{Loading}...
ಧನುವನೊದರಿಸಿ ಸಕಲ ಸುಭಟರು
ಮನವ ಬಲಿದೊಗ್ಗಾಗಿ ಸರಳಿನ
ಜಿನುಗುವಳೆಯಲಿ ನಾದಿದರು ನಾರಾಯಣಾರ್ಜುನರ
ಅನಿಬರಂಬನು ಕಡಿದು ಗುರುನಂ
ದನನ ಕರ್ಣನ ಕೃಪನ ದುರಿಯೋ
ಧನನ ಮೆಯ್ಯಲಿ ಮೆತ್ತಿದನು ಮುಮ್ಮೊನೆಯ ಬೋಳೆಗಳ ॥30॥
೦೩೧ ಫಡಫಡರ್ಜುನ ಹೋಗು ...{Loading}...
ಫಡಫಡರ್ಜುನ ಹೋಗು ಹೋಗಳ
ವಡದು ಸೈಂಧವನಳಿವು ಭಾಷೆಯ
ನಡಸಬಲ್ಲರೆ ಬೇಗ ಬೆಳಗಿಸು ಹವ್ಯವಾಹನನ
ಕಡಲ ಮಧ್ಯದ ಗಿರಿಗೆ ಸುರಪತಿ
ಕಡುಗಿ ಮಾಡುವುದೇನೆನುತ ಕೈ
ಗಡಿಯ ಬಿಲ್ಲಾಳುಗಳು ಬಿಗಿದರು ಸರಳಲಂಬರವ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೆ….. ಅರ್ಜುನ ಹೋಗು, ಹೋಗು, ಸೈಂಧವನ ನಾಶ ಸಾಧ್ಯವಿಲ್ಲ. ನಿನ್ನ ಭಾಷೆಯನ್ನು ನೆರವೇರಿಸಬೇಕಾದರೆ ಬೇಗ ಅಗ್ನಿಕುಂಡವನ್ನು ಸಿದ್ಧ ಪಡಿಸಿಕೊ. ಮೈನಾಕ ಪರ್ವತ ಸಮುದ್ರದಲ್ಲಿ ಮುಳುಗಿದಾಗ, ದೇವೇಂದ್ರನೂ ಸಹ ಉತ್ಸಾಹಗೊಂಡು ನಾನೂ ಮಾಡಲಾಗಲಿಲ್ಲ ಎನ್ನುತ್ತಾ……. ಶೂರ ಬಿಲ್ಲಾಳುಗಳು ಬಾಣಗಳಿಂದ ಆಕಾಶವನ್ನು ತುಂಬಿದರು.
ಪದಾರ್ಥ (ಕ.ಗ.ಪ)
ಹವ್ಯವಾಹನ-ಬೆಂಕಿ, ಕಡುಗಿ-ಕೋಪಿಸಿ
ಕೈಗಡಿಯ-ಶೂರ,
ಟಿಪ್ಪನೀ (ಕ.ಗ.ಪ)
ಮೈನಾಕ : ಹಿಮವಂತನಿಂದ ಮೇನಕೆಯಲ್ಲಿ ಜನಿಸಿದ ಹಿರಿಯ ಮಗ. ಇಂದ್ರನು ಪರ್ವಗಳ ರೆಕ್ಕೆಗಳನ್ನು ಕತ್ತರಿಸುವಾಗ ದಕ್ಷಿಣ ಸಮುದ್ರದಲ್ಲಿ ಮುಳುಗಿ ಇಂದ್ರನಿಂದ ಅಭಯ ಪಡೆದ ಹನುಮಂತ ಲಂಕೆಗೆ ಹೊರಟಾಗ ಸಮುದ್ರ ಮಧ್ಯದಿಂದ ಎದ್ದು ಹನುಮಂತನನ್ನು ಸತ್ಕರಿಸಿದ.
ಮೂಲ ...{Loading}...
ಫಡಫಡರ್ಜುನ ಹೋಗು ಹೋಗಳ
ವಡದು ಸೈಂಧವನಳಿವು ಭಾಷೆಯ
ನಡಸಬಲ್ಲರೆ ಬೇಗ ಬೆಳಗಿಸು ಹವ್ಯವಾಹನನ
ಕಡಲ ಮಧ್ಯದ ಗಿರಿಗೆ ಸುರಪತಿ
ಕಡುಗಿ ಮಾಡುವುದೇನೆನುತ ಕೈ
ಗಡಿಯ ಬಿಲ್ಲಾಳುಗಳು ಬಿಗಿದರು ಸರಳಲಂಬರವ ॥31॥
೦೩೨ ದ್ಯುಮಣಿಯೊದೆದರೆ ...{Loading}...
ದ್ಯುಮಣಿಯೊದೆದರೆ ತರಹರಿಸುವುದೆ
ತಿಮಿರ ರಾಜನ ದೇಹವೀ ವಿ
ಕ್ರಮ ದರಿದ್ರರಿಗಳುಕಿದರೆ ಬಳಿಕವ ಧನಂಜಯನೆ
ಸಮತಳಿಸಿ ಶರವಳೆಯ ಕರೆದು
ದ್ಭ ್ರಮಿ ಮಹಾರಥ ಭಟರ ವಿಜಯದ
ಮಮತೆಗಳ ಮಾಣಿಸಿದನಂದಮಳಾಸ್ತ್ರಬೋಧೆಯಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೂರ್ಯನ ಬೆಳಕು ಬಿದ್ದರೆ ಕತ್ತಲೆಂಬ ರಾಜನ ದೇಹ ಸೈರಿಸುವುದೇ ? ಪರಾಕ್ರಮವಿಲ್ಲದ ಹೇಡಿಗಳಿಗೆ ಹಿಂಜರಿದರೆ ಅವನು ಧನಂಜಯನೆನಿಸಿಕೊಳ್ಳಲು ಸಾಧ್ಯವೇ ? ಸಿದ್ಧತೆ ಮಾಡಿಕೊಂಡು, ಬಾಣಗಳ ಮಳೆಯನ್ನು ಕರೆದು. ಭ್ರಮೆಯಿಂದ ಕೂಡಿದ್ದ ಭಟರ ವಿಜಯದ ಮೇಲಿನ ವ್ಯಾಮೋಹವನ್ನು ಶ್ರೇಷ್ಠವಾದ ಬಾಣಗಳ ಪ್ರಯೋಗದಿಂದ ಬಿಡಿಸಿದನು.
ಪದಾರ್ಥ (ಕ.ಗ.ಪ)
ದ್ಯುಮಣಿ-ಸೂರ್ಯ,
ಉದ್ಭ್ರಮಿ -ಭ್ರಮೆಯಿಂದ ಕೂಡಿದವನು
ಮೂಲ ...{Loading}...
ದ್ಯುಮಣಿಯೊದೆದರೆ ತರಹರಿಸುವುದೆ
ತಿಮಿರ ರಾಜನ ದೇಹವೀ ವಿ
ಕ್ರಮ ದರಿದ್ರರಿಗಳುಕಿದರೆ ಬಳಿಕವ ಧನಂಜಯನೆ
ಸಮತಳಿಸಿ ಶರವಳೆಯ ಕರೆದು
ದ್ಭ ್ರಮಿ ಮಹಾರಥ ಭಟರ ವಿಜಯದ
ಮಮತೆಗಳ ಮಾಣಿಸಿದನಂದಮಳಾಸ್ತ್ರಬೋಧೆಯಲಿ ॥32॥
೦೩೩ ನೊನ್ದು ಮರಳದೆ ...{Loading}...
ನೊಂದು ಮರಳದೆ ಮಸಗಿ ಸೂರ್ಯನ
ನಂದನನು ತಾಗಿದನು ಗುರುಸುತ
ಮುಂದುವರಿದನು ತಲೆ ಹರಿದರೆನ್ನಟ್ಟೆ ಕಲಿಯೆನುತ
ಇಂದಿನಲಿ ಮಹನವಮಿಯ ತಲೆಗಳಿ
ಗೆಂದು ಕವಿದರು ಸಕಲ ಭಟರರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೊಂದು ಹಿಂದಿರುಗದೆ ರೇಗಿ ಸೂರ್ಯನಂದನ ಕರ್ಣನು ನುಗ್ಗಿ ಬಂದನು. ಅಶ್ವತ್ಥಾಮನು ತನ್ನ ಕಲೆ ಕತ್ತರಿಸಿಹೋದರೂ, ತನ್ನ ಮುಂಡವು ವೀರನಾಗಿಯೆ ಇರುತ್ತದೆ ಎನ್ನುತ್ತ ಮುಂದುವರಿದನು. ಈ ದಿನ ತಲೆಗಳಿಗೆ ಮಹಾನವಮಿ ಹಬ್ಬ ಎಂದು ಎಲ್ಲಾ ಯೋಧರು ಮೇಲೆ ಬಿದ್ದರು. ಅಷ್ಟರಲ್ಲಿ ಸೂರ್ಯನು ಪಶ್ಚಿಮ ಸಮುದ್ರವನ್ನು ಮೆಲ್ಲನೆ ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ಮಸಗಿ-ರೇಗಿ,
ಮೂಲ ...{Loading}...
ನೊಂದು ಮರಳದೆ ಮಸಗಿ ಸೂರ್ಯನ
ನಂದನನು ತಾಗಿದನು ಗುರುಸುತ
ಮುಂದುವರಿದನು ತಲೆ ಹರಿದರೆನ್ನಟ್ಟೆ ಕಲಿಯೆನುತ
ಇಂದಿನಲಿ ಮಹನವಮಿಯ ತಲೆಗಳಿ
ಗೆಂದು ಕವಿದರು ಸಕಲ ಭಟರರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ ॥33॥
೦೩೪ ಮೇಲೆ ಬಿದ್ದುದು ...{Loading}...
ಮೇಲೆ ಬಿದ್ದುದು ಸೇನೆ ಸವೆಯದು
ನಾಳೆ ಪರಿಯಂತರ ಘಳಿಗೆಗಿನ
ನಾಳುವನು ಜಲಧಿಯಲಿ ಕಾಣೆನು ವೈರಿ ಸೈಂಧವನ
ಹೇಳಿ ಫಲವೇನಿನ್ನು ವಹ್ನಿ
ಜ್ವಾಲೆ ಕೊಳ್ಳಲಿ ದೇಹವನು ಸಾ
ಕೇಳು ಮುರಹರ ತೇರ ತಿರುಹಿನ್ನೆಂದನಾ ಪಾರ್ಥ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆ ಮುನ್ನುಗ್ಗುತ್ತಿದೆ. ನಾಳೆಯವರೆಗೂ ಈ ಸೈನ್ಯ ಕ್ಷೀಣಿಸುವುದಿಲ್ಲ. ಇನ್ನೊಂದು ಘಳಿಗೆಯಲ್ಲಿ ಸೂರ್ಯ ಸಮುದ್ರದಲ್ಲಿ ಮುಳುಗುತ್ತಾನೆ. ಶತ್ರು ಸೈಂಧವನನ್ನು ಕಾಣುತ್ತಿಲ್ಲ. ಹೇಳಿ ಫಲವೇನು ? ಇನ್ನು ಈ ದೇಹವನ್ನು ಅಗ್ನಿ ಜ್ವಾಲೆ ಸ್ವೀಕರಿಸಲಿ. ಸಾಕು, ಏಳು ಕೃಷ್ಣನೇ, ಇನ್ನು ರಥವನ್ನು ತಿರುಗಿಸು ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಮೇಲೆ ಬಿದ್ದುದು ಸೇನೆ ಸವೆಯದು
ನಾಳೆ ಪರಿಯಂತರ ಘಳಿಗೆಗಿನ
ನಾಳುವನು ಜಲಧಿಯಲಿ ಕಾಣೆನು ವೈರಿ ಸೈಂಧವನ
ಹೇಳಿ ಫಲವೇನಿನ್ನು ವಹ್ನಿ
ಜ್ವಾಲೆ ಕೊಳ್ಳಲಿ ದೇಹವನು ಸಾ
ಕೇಳು ಮುರಹರ ತೇರ ತಿರುಹಿನ್ನೆಂದನಾ ಪಾರ್ಥ ॥34॥
೦೩೫ ಸಲಿಸಬೇಹುದು ಭಕುತ ...{Loading}...
ಸಲಿಸಬೇಹುದು ಭಕುತ ಮಾಡಿದ
ಛಲದ ಭಾಷೆಯನೆನುತ ರವಿಮಂ
ಡಲಕೆ ಮರೆಯೊಡ್ಡಿದನು ಮುರರಿಪು ವರಸುದರ್ಶನವ
ಕಳನೊಳಗೆ ಕತ್ತಲಿಸಿತಹಿತನ
ಕೊಲೆಗೆ ಕಾವಳ ಕವಿದವೋಲರೆ
ಘಳಿಗೆಯಲಿ ಸುಮ್ಮಾನ ಮಸಗಿತು ಸಕಲ ಕುರುಬಲಕೆ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತನಾದ ಅರ್ಜುನ ಮಾಡಿದ ಛಲದ ಪ್ರತಿಜ್ಞೆಯನ್ನು ನೆರವೇರಿಸಿ ಕೊಡಬೇಕು ಎನ್ನುತ್ತಾ ಕೃಷ್ಣನು ತನ್ನ ಶ್ರೇಷ್ಠ ಸುದರ್ಶನ ಚಕ್ರವನ್ನೊಡ್ಡಿ ಸೂರ್ಯಮಂಡಲಕ್ಕೆ ಮರೆಮಾಡಿದನು. ಶತ್ರುವಿನ ಕೊಲೆಗೆ ಮಬ್ಬುಗತ್ತಲೆ ಆವರಿಸಿದಂತೆ ಯುದ್ಧ ಭೂಮಿಯಲ್ಲಿ ಕತ್ತಲೆ ಕವಿಯಿತು. ಅರೆಗಳಿಗೆಯಲ್ಲಿ ಸಕಲ ಕುರುಸೇನೆಯಲ್ಲಿ ಸಂತೋಷ ವ್ಯಾಪಿಸಿತು.
ಮೂಲ ...{Loading}...
ಸಲಿಸಬೇಹುದು ಭಕುತ ಮಾಡಿದ
ಛಲದ ಭಾಷೆಯನೆನುತ ರವಿಮಂ
ಡಲಕೆ ಮರೆಯೊಡ್ಡಿದನು ಮುರರಿಪು ವರಸುದರ್ಶನವ
ಕಳನೊಳಗೆ ಕತ್ತಲಿಸಿತಹಿತನ
ಕೊಲೆಗೆ ಕಾವಳ ಕವಿದವೋಲರೆ
ಘಳಿಗೆಯಲಿ ಸುಮ್ಮಾನ ಮಸಗಿತು ಸಕಲ ಕುರುಬಲಕೆ ॥35॥
೦೩೬ ಸೆರಗ ಬೀಸಿದರಾರಿದರು ...{Loading}...
ಸೆರಗ ಬೀಸಿದರಾರಿದರು ಬೊ
ಬ್ಬಿರಿದರುರು ಗಂಭೀರಭೇರಿಯ
ಬಿರುದನಿಗಳುಬ್ಬರಿಸಿದವು ಗಬ್ಬರಿಸಿದವು ನಭವ
ತೆರಹ ಕೊಡು ಕೊಡು ಭಾಷೆಕಾರನು
ಮೆರೆದು ಹೋಗಲಿ ವಹ್ನಿ ಕುಂಡದೊ
ಳೊರಗುವುದ ನೋಡುವೆವೆನುತ ತನಿಗೆದರಿತರಿಸೇನೆ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸೈನಿಕರು ಉತ್ತರೀಯವನ್ನು ಬೀಸಿದರು. ಕೂಗಿದರು, ಬೊಬ್ಬಿರಿದರು, ವಿಶೇಷವಾಗಿ ಗಂಭೀರ ಭೇರಿಯ ಬಿರುದನಿಗಳು ಉಬ್ಬರಿಸಿದವು. ಆ ಧ್ವನಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಜಾಗವನ್ನು ಕೊಡು. ಭಾಷೆ ತೊಟ್ಟವನು ಶೋಭಿಸಲಿ. ಆತನು ಅಗ್ನಿಕುಂಡದಲ್ಲಿ ಒರಗುವುದನ್ನು ನೋಡುವೆವು - ಎನ್ನುತ್ತಾ ಶತ್ರುಸೇನೆ ಚೆದುರಿತು.
ಪದಾರ್ಥ (ಕ.ಗ.ಪ)
ಸೆರಗು-ಉತ್ತರೀಯ,
ಗಬ್ಬರಿಸು-ವ್ಯಾಪಿಸು,
ತನಿಗೆದರು-ಚೆದುರು
ಮೂಲ ...{Loading}...
ಸೆರಗ ಬೀಸಿದರಾರಿದರು ಬೊ
ಬ್ಬಿರಿದರುರು ಗಂಭೀರಭೇರಿಯ
ಬಿರುದನಿಗಳುಬ್ಬರಿಸಿದವು ಗಬ್ಬರಿಸಿದವು ನಭವ
ತೆರಹ ಕೊಡು ಕೊಡು ಭಾಷೆಕಾರನು
ಮೆರೆದು ಹೋಗಲಿ ವಹ್ನಿ ಕುಂಡದೊ
ಳೊರಗುವುದ ನೋಡುವೆವೆನುತ ತನಿಗೆದರಿತರಿಸೇನೆ ॥36॥
೦೩೭ ಹೊಲಬುದಪ್ಪಿದ ತಳಪಟದ ...{Loading}...
ಹೊಲಬುದಪ್ಪಿದ ತಳಪಟದ ಹೆ
ಬ್ಬುಲಿಯವೊಲು ನಿನ್ನಾತ ಸಿಲುಕಿದ
ನಿಲುಕಿ ನೋಡಿದನೆಲ್ಲಿ ತೋರರ್ಜುನನನೆನಗೆನುತ
ಉಲಿಯೆ ಸೈಂಧವನಿತ್ತ ಪಾರ್ಥನ
ಮುಳಿದು ಜರೆದನು ಕೃಷ್ಣನಹಿತನ
ತಲೆಗೆ ಹರ ಹಿಡಿವಂಬ ತೊಡು ತೊಡು ಬೇಗ ಮಾಡೆಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಸಂಜಯನು ಧೃತರಾಷ್ಟ್ರನನ್ನು ಕುರಿತು.) " ಕಾಡಿನಿಂದ ಮಧ್ಯೆ ದಾರಿ ತಪ್ಪಿ ಬಯಲಿಗೆ ಬಂದ ಹೆಬ್ಬುಲಿಯಂತೆ ಸಿಲುಕಿದ್ದ ನಿನ್ನ ಕಡೆಯವನಾದ ಜಯದ್ರಥನು ನಿಮಿರಿ ನೋಡುತ್ತಾ ಎಲ್ಲಿ, ಅರ್ಜುನನನ್ನು ನನಗೆ ತೋರಿಸು” ಎಂದು ಹೇಳಿದನು. ಈ ಕಡೆ ಕೃಷ್ಣನು ಪಾರ್ಥನ ಬಗ್ಗೆ ಕೋಪಿಸಿ, ಜರಿಯುತ್ತಾ, ಶತ್ರುವಿನ ತಲೆಗೆ ಬೇಗ ಶಿವನ ಬಾಣವನ್ನು ಹೂಡು, ತೊಡು, ಬೇಗ ಮಾಡು ಎಂದನು" ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಹೊಲಬುದಪ್ಪಿದ-ದಾರಿತಪ್ಪಿದ, ತಳಪಟ-ಬಯಲು
ಮೂಲ ...{Loading}...
ಹೊಲಬುದಪ್ಪಿದ ತಳಪಟದ ಹೆ
ಬ್ಬುಲಿಯವೊಲು ನಿನ್ನಾತ ಸಿಲುಕಿದ
ನಿಲುಕಿ ನೋಡಿದನೆಲ್ಲಿ ತೋರರ್ಜುನನನೆನಗೆನುತ
ಉಲಿಯೆ ಸೈಂಧವನಿತ್ತ ಪಾರ್ಥನ
ಮುಳಿದು ಜರೆದನು ಕೃಷ್ಣನಹಿತನ
ತಲೆಗೆ ಹರ ಹಿಡಿವಂಬ ತೊಡು ತೊಡು ಬೇಗ ಮಾಡೆಂದ ॥37॥
೦೩೮ ದೇವ ರವಿಯಸ್ತಮಿಸಿದನು ...{Loading}...
ದೇವ ರವಿಯಸ್ತಮಿಸಿದನು ನೀ
ವಾವುದುಚಿತವ ಕಂಡಿರೆನೆ ನಿನ
ಗಾವ ಭಯ ಬೇಡಾಡಬಾರದು ತೊಡು ಮಹಾಶರವ
ಈ ವಿರೋಧಿಯ ಕೆಡಹು ಸೂರ್ಯನ
ನಾವು ತೋರಿಸಿ ಕೊಡುವೆವೆನೆ ಗಾಂ
ಡೀವದಲಿ ಹೂಡಿದನು ಫಲುಗುಣ ಪಾಶುಪತಶರವ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ, ಸೂರ್ಯ ಮುಳುಗಿದನು. ನೀವು ಯಾವ ನ್ಯಾಯವನ್ನು ಕಂಡಿರಿ ? ಎನಲು ಕೃಷ್ಣನು ‘ನಿನಗಾವ ಭಯಬೇಡ. ಮಾತಾಡಬೇಡ ಮಹಾಸ್ತ್ರವನ್ನು ತೊಡು. ಈ ಶತ್ರುವನ್ನು ಉರುಳಿಸು. ಸೂರ್ಯನನ್ನು ನಾವು ತೋರಿಸಿಕೊಡುತ್ತೇವೆ’ - ಎನಲಾಗಿ ಅರ್ಜುನನು ತನ್ನ ಗಾಂಡೀವ ಧನುಸ್ಸಿನಲ್ಲಿ ಪಾಶುಪತ ಬಾಣವನ್ನು ಹೂಡಿದನು.
ಮೂಲ ...{Loading}...
ದೇವ ರವಿಯಸ್ತಮಿಸಿದನು ನೀ
ವಾವುದುಚಿತವ ಕಂಡಿರೆನೆ ನಿನ
ಗಾವ ಭಯ ಬೇಡಾಡಬಾರದು ತೊಡು ಮಹಾಶರವ
ಈ ವಿರೋಧಿಯ ಕೆಡಹು ಸೂರ್ಯನ
ನಾವು ತೋರಿಸಿ ಕೊಡುವೆವೆನೆ ಗಾಂ
ಡೀವದಲಿ ಹೂಡಿದನು ಫಲುಗುಣ ಪಾಶುಪತಶರವ ॥38॥
೦೩೯ ತೆಗೆಯೆ ಜಗ ...{Loading}...
ತೆಗೆಯೆ ಜಗ ಕಂಪಿಸಿತು ತಾರೆಗ
ಳೊಗಡಿಸಿತು ನಭ ಜಲಧಿ ರತ್ನಾ
ಳಿಗಳನೋಕರಿಸಿತು ಕುಲಾದ್ರಿಗಳೊಲೆದವೆಡಬಲಕೆ
ದಿಗಿಭತತಿ ನಡುನಡುಗೆ ತಳ ವಾ
ಸುಗಿ ಫಣಾಳಿಯ ಸೆಳೆಯೆ ಬಲುಸರ
ಳುಗಿದು ದಳ್ಳುರಿದಿರುಳ ಕಾರಿತು ಬೆಸಸು ಬೆಸಸೆನುತ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಉಜ್ವಲ ಪಾಶುಪತ ಶರವನ್ನು ತೆಗೆಯಲಾಗಿ ಜಗತ್ತೇ ನಡುಗತೊಡಗಿತು. ಆಕಾಶದಿಂದ ನಕ್ಷತ್ರಗಳು ಉದುರಿದವು. ಸಮುದ್ರವು ರತ್ನರಾಶಿಯನ್ನು ಹೊರಗೆಡಹಿತು. ಕುಲಪರ್ವತಗಳು ಎಡಬಲಕ್ಕೆ ಅಲ್ಲಾಡತೊಡಗಿದವು. ದಿಗ್ಗಜಗಳ ಸಮೂಹ ನಡುಗಿದವು. ತಳಭಾಗದಲ್ಲಿ ವಾಸುಕಿಯು ತನ್ನ ಹೆಡೆಗಳನ್ನು ಸೆಳೆದುಕೊಳ್ಳಲು, ಬಲಿಷ್ಠವಾದ ಪಾಶುಪತ ಶರವು ಚಿಮ್ಮಿ, ಪ್ರಳಯಾಗ್ನಿಯನ್ನೇ ಸುರಿಸುತ್ತಾ ಅಪ್ಪಣೆ, ಅಪ್ಪಣೆ, ಎಂದಿತು.
ಮೂಲ ...{Loading}...
ತೆಗೆಯೆ ಜಗ ಕಂಪಿಸಿತು ತಾರೆಗ
ಳೊಗಡಿಸಿತು ನಭ ಜಲಧಿ ರತ್ನಾ
ಳಿಗಳನೋಕರಿಸಿತು ಕುಲಾದ್ರಿಗಳೊಲೆದವೆಡಬಲಕೆ
ದಿಗಿಭತತಿ ನಡುನಡುಗೆ ತಳ ವಾ
ಸುಗಿ ಫಣಾಳಿಯ ಸೆಳೆಯೆ ಬಲುಸರ
ಳುಗಿದು ದಳ್ಳುರಿದಿರುಳ ಕಾರಿತು ಬೆಸಸು ಬೆಸಸೆನುತ ॥39॥
೦೪೦ ಬಲಿದು ಮಣ್ಡಿಯನೂರಿ ...{Loading}...
ಬಲಿದು ಮಂಡಿಯನೂರಿ ಕೆನ್ನೆಗೆ
ಸೆಳೆದು ಮುಷ್ಟಿಯ ಪಾರ್ಥನಹಿತನ
ತಲೆಯನೆಚ್ಚನು ಗೋಣ ಕಡಿದುದು ಪಾಶುಪತ ಬಾಣ
ಹೊಳೆವ ಮಕುಟದ ವದನ ಗಗನಾಂ
ಗಳಕೆ ಚಿಮ್ಮಿತು ರಕುತಧಾರಾ
ವಳಿಯ ರಿಂಗಣವಾಯ್ತು ಮುಂಡದ ತಲೆಯ ಮಧ್ಯದಲಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಗಿಯಾಗಿ ಮಂಡಿಯನ್ನೂರಿ ಬಾಣವನ್ನು ಹಿಡಿದಿದ್ದ ಮುಷ್ಠಿಯನ್ನು ಕೆನ್ನೆಯವರೆಗೂ ಸೆಳೆದು, ಪಾರ್ಥನು ಶತ್ರುವಿನ ತಲೆಗೆ ಬಾಣ ಪ್ರಯೋಗಿಸಿದನು. ಪಾಶುಪತ ಬಾಣವು ಸೈಂಧವನ ಕತ್ತನ್ನು ಕತ್ತರಿಸಿತು. ಪ್ರಕಾಶಮಾನವಾದ ಕಿರೀಟವನ್ನು ಹೊತ್ತ ತಲೆ ಆಕಾಶದೆತ್ತರಕ್ಕೆ ಚಿಮ್ಮಿತು. ಮುಂಡದ ತಲೆಯ ಮಧ್ಯದಲ್ಲಿ ರಕ್ತದ ಧಾರೆ ಆಕಾಶಕ್ಕೆಲ್ಲ ಚಿಮ್ಮಿತು.
ಮೂಲ ...{Loading}...
ಬಲಿದು ಮಂಡಿಯನೂರಿ ಕೆನ್ನೆಗೆ
ಸೆಳೆದು ಮುಷ್ಟಿಯ ಪಾರ್ಥನಹಿತನ
ತಲೆಯನೆಚ್ಚನು ಗೋಣ ಕಡಿದುದು ಪಾಶುಪತ ಬಾಣ
ಹೊಳೆವ ಮಕುಟದ ವದನ ಗಗನಾಂ
ಗಳಕೆ ಚಿಮ್ಮಿತು ರಕುತಧಾರಾ
ವಳಿಯ ರಿಂಗಣವಾಯ್ತು ಮುಂಡದ ತಲೆಯ ಮಧ್ಯದಲಿ ॥40॥
೦೪೧ ಬೀಳು ಬೀಳಭಿಮನ್ಯುವಿನ ...{Loading}...
ಬೀಳು ಬೀಳಭಿಮನ್ಯುವಿನ ವಧೆ
ಬಾಳಲೀವುದೆ ನಿನ್ನನೆನುತು
ಬ್ಬಾಳುತನದಲಿ ಪಾರ್ಥ ಬೊಬ್ಬಿಡೆ ಕೃಷ್ಣ ಖಾತಿಯಲಿ
ಖೂಳ ಕೇಳಿಳೆಗವನ ತಲೆಯನು
ಬೀಳಿಕಿದನ ಕಪಾಲ ಸಾವಿರ
ಹೋಳಹುದು ತೊಡು ಪಾಪಿ ಬೇಗದಲಂಬ ಕಳುಹೆಂದ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
41." ಬೀಳು, ಬೀಳು ಅಭಿಮನ್ಯುವಿನ ವಧೆ ನಿನ್ನನ್ನು ಬಾಳಲು ಅವಕಾಶ ಕೊಡುವುದೇ ?" ಎನ್ನುತ್ತಾ ಪಾರ್ಥನು ಗರ್ವದಿಂದ ಆರ್ಭಟಿಸಲು, ಕೃಷ್ಣನು ಕೋಪಿಸಿ, “ಮೂರ್ಖನೇ, ಕೇಳು. ಅವನ ತಲೆಯನ್ನು ಭೂಮಿಗೆ ಬೀಳಿಸಿದವನ ತಲೆ ಸಾವಿರ ಚೂರುಗಳಾಗುತ್ತವೆ. ಪಾಪಿಯೇ…. ಮೊದಲು ಬೇಗ ಬಾಣವನ್ನು ತೊಟ್ಟು ಅದನ್ನು ಅಟ್ಟು” ಎಂದನು.
ಮೂಲ ...{Loading}...
ಬೀಳು ಬೀಳಭಿಮನ್ಯುವಿನ ವಧೆ
ಬಾಳಲೀವುದೆ ನಿನ್ನನೆನುತು
ಬ್ಬಾಳುತನದಲಿ ಪಾರ್ಥ ಬೊಬ್ಬಿಡೆ ಕೃಷ್ಣ ಖಾತಿಯಲಿ
ಖೂಳ ಕೇಳಿಳೆಗವನ ತಲೆಯನು
ಬೀಳಿಕಿದನ ಕಪಾಲ ಸಾವಿರ
ಹೋಳಹುದು ತೊಡು ಪಾಪಿ ಬೇಗದಲಂಬ ಕಳುಹೆಂದ ॥41॥
೦೪೨ ಇವನ ತನ್ದೆಯ ...{Loading}...
ಇವನ ತಂದೆಯ ಶಾಪವಾವವ
ನಿವನ ತಲೆಯನು ನೆಲಕೆ ಕೆಡಹುವ
ನವನ ಮಸ್ತಕ ಬಿರಿದು ಬೀಳಲಿಯೆಂದನೀ ತಲೆಯ
ಇವನ ತಂದೆಯ ಕೈಯೊಳಗೆ ಬೀ
ಳುವವುಪಾಯವ ಮಾಡು ನೀನೆನೆ
ದಿವಿಜಪತಿಸುತನಾ ಮಹಾಸ್ತ್ರಕೆ ಬೆಸಸಿದನು ಹದನ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾವನು ಸೈಂಧವನ ತಲೆಯನ್ನು ನೆಲಕ್ಕೆ ಬೀಳಿಸುವನೋ ಅವನ ತಲೆ ಬಿರಿದು ಬೀಳಲಿ ಎಂದು ಸೈಂಧವನ ತಂದೆಯ ಶಾಪವಿದೆ. ಆದ್ದರಿಂದ ಇವನ ತಲೆಯು ಇವನ ತಂದೆಯ ಕೈಯೊಳಗೆ ಬೀಳುವ ಉಪಾಯವನ್ನು ಮಾಡು " ಎನ್ನಲು ಅರ್ಜುನನು ಮಹಾಸ್ತ್ರಕ್ಕೆ ಅಂತೆಯೇ ಅಪ್ಪಣೆ ಮಾಡಿದನು.
ಮೂಲ ...{Loading}...
ಇವನ ತಂದೆಯ ಶಾಪವಾವವ
ನಿವನ ತಲೆಯನು ನೆಲಕೆ ಕೆಡಹುವ
ನವನ ಮಸ್ತಕ ಬಿರಿದು ಬೀಳಲಿಯೆಂದನೀ ತಲೆಯ
ಇವನ ತಂದೆಯ ಕೈಯೊಳಗೆ ಬೀ
ಳುವವುಪಾಯವ ಮಾಡು ನೀನೆನೆ
ದಿವಿಜಪತಿಸುತನಾ ಮಹಾಸ್ತ್ರಕೆ ಬೆಸಸಿದನು ಹದನ ॥42॥
೦೪೩ ತುಡುಕಿ ಖಣ್ಡವ ...{Loading}...
ತುಡುಕಿ ಖಂಡವ ಕಚ್ಚಿ ನಭದಲಿ
ಗಿಡಿಗ ಹಾಯ್ವಂದದಲಿ ತಲೆಯನು
ಹಿಡಿದು ಹಾಯ್ದುದು ಬಾಣ ವೃದ್ಧ ಕ್ಷತ್ರನಿದ್ದೆಡೆಗೆ
ಕುಡಿತೆಯೆರಡರೊಳಘ್ರ್ಯಜಲವನು
ಹಿಡಿದು ಹಾಯ್ಕುವ ಸಮಯದಲಿ ತಲೆ
ನಡುವೆ ಬಿದ್ದುದು ಅಘ್ರ್ಯಜಲ ನರರಕ್ತಮಯವಾಗೆ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆತುರಪಟ್ಟು ಮಾಂಸದ ಚೂರನ್ನು ಕಚ್ಚಿ ಹಿಡಿದ ಗಿಡುಗವು ಆಕಾಶದಲ್ಲಿ ಹಾರುವ ರೀತಿಯಲ್ಲಿ ಆ ಬಾಣವು ತಲೆಯನ್ನು ಹಿಡಿದು ವೃದ್ಧ ಕ್ಷತ್ರನಿದ್ದ ಕಡೆಗೆ ಹಾರಿತು. ಆತನು ಬೊಗಸೆಯಲ್ಲಿ ಅಘ್ರ್ಯಜಲವನ್ನು ಹಿಡಿದು ಅಂಜಲಿಬದ್ಧನಾದ ಸಮಯದಲ್ಲಿ ಮಗನ ತಲೆ ಆತನ ಅಂಜಲಿಯಲ್ಲಿ ಬಿದ್ದಿತು. ಅಘ್ರ್ಯಜಲ ರಕ್ತಮಯವಾಯ್ತು.
ಮೂಲ ...{Loading}...
ತುಡುಕಿ ಖಂಡವ ಕಚ್ಚಿ ನಭದಲಿ
ಗಿಡಿಗ ಹಾಯ್ವಂದದಲಿ ತಲೆಯನು
ಹಿಡಿದು ಹಾಯ್ದುದು ಬಾಣ ವೃದ್ಧ ಕ್ಷತ್ರನಿದ್ದೆಡೆಗೆ
ಕುಡಿತೆಯೆರಡರೊಳಘ್ರ್ಯಜಲವನು
ಹಿಡಿದು ಹಾಯ್ಕುವ ಸಮಯದಲಿ ತಲೆ
ನಡುವೆ ಬಿದ್ದುದು ಅಘ್ರ್ಯಜಲ ನರರಕ್ತಮಯವಾಗೆ ॥43॥
೦೪೪ ಏನಿದದ್ಭುತವೆನುತ ತಲೆಯನು ...{Loading}...
ಏನಿದದ್ಭುತವೆನುತ ತಲೆಯನು
ತಾನೆ ಕೊಡಹಿದನಂಜಲಿಯನದ
ನೇನನೆಂಬೆನು ಕೃಷ್ಣರಾಯನ ಮಂತ್ರಶಕ್ತಿಯನು
ಆ ನರೇಂದ್ರನ ತಲೆ ಸಹಸ್ರವಿ
ಧಾನದಲಿ ಬಿರಿದುದು ಸುಯೋಧನ
ಸೇನೆ ಹರಿದುದು ಜರಿದುದರಿಭಟಧೈರ್ಯಗಿರಿನಿಕರ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇನು ಆಶ್ಚರ್ಯವೆನ್ನುತ್ತಾ ತಲೆ ಬಿದ್ದಿದ್ದ ಬೊಗಸೆಯನ್ನು ತಾನೇ ಕೊಡಹಲಾಗಿ, ಕೃಷ್ಣರಾಯನ ಪವಾಡಶಕ್ತಿಯನ್ನು ಏನೆಂದು ಹೇಳಲಿ ? ಆ ಕ್ಷತ್ರರಾಜನ ತಲೆ ಸಹಸ್ರ ಹೋಳುಗಳಾಗಿ ಒಡೆಯಿತು. ಇತ್ತ ಸುಯೋಧನನ ಸೇನೆ ಹಿಂತಿರುಗಿತು. ಶತ್ರು ಸೈನಿಕರ ಧೈರ್ಯವೆಂಬ ಬೆಟ್ಟದ ಸಮೂಹ ಕುಸಿಯಿತು.
ಪದಾರ್ಥ (ಕ.ಗ.ಪ)
ಅಂಜಲಿ-ಬೊಗಸೆ,
ಮೂಲ ...{Loading}...
ಏನಿದದ್ಭುತವೆನುತ ತಲೆಯನು
ತಾನೆ ಕೊಡಹಿದನಂಜಲಿಯನದ
ನೇನನೆಂಬೆನು ಕೃಷ್ಣರಾಯನ ಮಂತ್ರಶಕ್ತಿಯನು
ಆ ನರೇಂದ್ರನ ತಲೆ ಸಹಸ್ರವಿ
ಧಾನದಲಿ ಬಿರಿದುದು ಸುಯೋಧನ
ಸೇನೆ ಹರಿದುದು ಜರಿದುದರಿಭಟಧೈರ್ಯಗಿರಿನಿಕರ ॥44॥
೦೪೫ ನಡುಗಿ ಸಙ್ಗರ ...{Loading}...
ನಡುಗಿ ಸಂಗರ ಭೀತಿಯಲಿ ಬೆಂ
ಗೊಡುವ ನಾಯಕವಾಡಿಗಳ ಪಂ
ಗಡವ ನೋಡುತ ಮರೆಯ ಚಕ್ರವ ತೆಗೆದನಸುರಾರಿ
ಪಡುವಲಿಳಿಯದ ರವಿಯ ಬಯ್ವುತ
ನಡೆದನಾ ಕುರುರಾಯನಿತ್ತಲು
ಹಿಡಿದ ಚೌರಿಗಳಾಡಿದವು ಪಾಂಡವರ ಸೇನೆಯಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಡುಗಿ ಯುದ್ಧ ಭೀತಿಯಿಂದ ಬೆನ್ನು ತಿರುಗಿಸಿದ ಶೂರರ ಗುಂಪನ್ನು ನೋಡುತ್ತಾ ಸೂರ್ಯನಿಗೆ ಮರೆಮಾಡಿದ್ದ ಚಕ್ರವನ್ನು ಕೃಷ್ಣನು ತೆಗೆದನು. ಪಶ್ಚಿಮದಿಕ್ಕಿಗೆ ಇಳಿಯದ ಸೂರ್ಯನನ್ನು ಬಯ್ಯುತ್ತಾ ಕುರುರಾಯನು ನಡೆದನು. ಈ ಕಡೆ ಪಾಂಡವರ ಸೇನೆಯಲ್ಲಿ ಸಂತೋಷಸೂಚಕವಾಗಿ ಚೌರಿಗಳು ಕುಣಿದಾಡಿದವು.
ಮೂಲ ...{Loading}...
ನಡುಗಿ ಸಂಗರ ಭೀತಿಯಲಿ ಬೆಂ
ಗೊಡುವ ನಾಯಕವಾಡಿಗಳ ಪಂ
ಗಡವ ನೋಡುತ ಮರೆಯ ಚಕ್ರವ ತೆಗೆದನಸುರಾರಿ
ಪಡುವಲಿಳಿಯದ ರವಿಯ ಬಯ್ವುತ
ನಡೆದನಾ ಕುರುರಾಯನಿತ್ತಲು
ಹಿಡಿದ ಚೌರಿಗಳಾಡಿದವು ಪಾಂಡವರ ಸೇನೆಯಲಿ ॥45॥
೦೪೬ ದೈವ ಪೌರುಷದೊಳಗೆ ...{Loading}...
ದೈವ ಪೌರುಷದೊಳಗೆ ಶಿವ ಶಿವ
ದೈವ ಬಲವೇ ಬಲವಲಾ ನಿ
ರ್ದೈವರಂಗೈತಳಕೆ ಬಂದರೆ ಪರುಷ ಪಾಷಾಣ
ದೈವದೂರರು ಧರ್ಮಹೀನರು
ನೆಯ್ವ ನೆಯ್ಗೆಗಳೆನುತ ಮಿಗೆ ಬಿಸು
ಸುಯ್ವುತಿರ್ದರು ಕರ್ಣ ಕೃಪ ಗುರುನಂದನಾದಿಗಳು ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೈವ-ಪೌರುಷದೊಳಗೆ ಶಿವ ಶಿವಾ ದೈವಬಲವೇ ನಿಜವಾದ ಬಲವಲ್ಲವೇ ? ದೈವಹೀನರ ಅಂಗೈತಳಕ್ಕೆ ಬಂದರೆ ಸ್ಪರ್ಶಮಣಿಯೂ ಬಂಡೆಕಲ್ಲಾಗುತ್ತದೆ. ದೈವದೂರರೂ, ಧರ್ಮಹೀನರೂ ಆದ ಕೌರವರು ಮಾಡಿದ ಕರ್ಮಫಲ ಎನ್ನುತ್ತಾ ಕರ್ಣ, ಕೃಪ, ಅಶ್ವತ್ಥಾಮಾದಿಗಳು ನಿಟ್ಟುಸಿರು ಬಿಡುತ್ತಿದ್ದರು.
ಪದಾರ್ಥ (ಕ.ಗ.ಪ)
ಪರುಷ-ಸ್ಪರ್ಶಮಣಿ, ಕಬ್ಬಿಣವನ್ನೂ ಬಂಗಾರವಾಗಿಸುವ ಶಕ್ತಿಯುಳ್ಳದ್ದು, ಪಾಷಾಣ-ಕಲ್ಲು, ನೆಯ್ದ ನೆಯ್ಗೆಗಳು -ನೇದ ಬಟ್ಟೆ, ಅಂದರೆ ಮಾಡಿದ ಕರ್ಮಫಲ,
ಮೂಲ ...{Loading}...
ದೈವ ಪೌರುಷದೊಳಗೆ ಶಿವ ಶಿವ
ದೈವ ಬಲವೇ ಬಲವಲಾ ನಿ
ರ್ದೈವರಂಗೈತಳಕೆ ಬಂದರೆ ಪರುಷ ಪಾಷಾಣ
ದೈವದೂರರು ಧರ್ಮಹೀನರು
ನೆಯ್ವ ನೆಯ್ಗೆಗಳೆನುತ ಮಿಗೆ ಬಿಸು
ಸುಯ್ವುತಿರ್ದರು ಕರ್ಣ ಕೃಪ ಗುರುನಂದನಾದಿಗಳು ॥46॥
೦೪೭ ಕಡಲ ಮೊರಹಿನ ...{Loading}...
ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೊಡಗಿದೆವು ದೈವದಲಿ ಕಲಹವನೆಂದನಾ ಕರ್ಣ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೋಣ ರಚಿಸಿದ ಈ ವ್ಯೂಹ ಪರ್ವತವನ್ನು ಯಾರು ಭೇದಿಸಲು ಸಹಸ್ರಯುಗಗಳಲ್ಲಿ ಯಾರಿಗಾದರೂ ಸಾಧ್ಯವಿತ್ತೇ? ಯಾವ ಸಮುದ್ರದ ಘರ್ಜನೆ. ಅಲೆಗಳೂ ಈ ವ್ಯೂಹವನ್ನು ಭೇÉದಿಸಲು ಸಲದಾಗಿದ್ದವು. ಆದರೆ ಸೈನ್ಯ ಒಡೆದು ಹೋಯಿತು. ಸೈಂಧವನ ದೇಹ ತಲೆಯನ್ನು ಕಳೆದುಕೊಂಡಿತು. ಅಯ್ಯೋ… ದೈವದ ಜೊತೆ ಕಲಹಕ್ಕೆ ತೊಡಗಿದೆವಲ್ಲಾ” ಎಂದು ಕರ್ಣನು ಹೇಳಿದನು.
ಮೂಲ ...{Loading}...
ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೊಡಗಿದೆವು ದೈವದಲಿ ಕಲಹವನೆಂದನಾ ಕರ್ಣ ॥47॥
೦೪೮ ಮುನಿದು ಮಾಡುವುದೇನು ...{Loading}...
ಮುನಿದು ಮಾಡುವುದೇನು ಕೃಷ್ಣನ
ನೆನಹು ಘನ ನಮ್ಮಸುವ ನಾವೀ
ಜನಪತಿಗೆ ಮಾರಿದೆವು ನಮಗೀ ಚಿಂತೆಯೇಕೆನುತ
ಇನಸುತಾದಿಗಳಿದ್ದರಿತ್ತಲು
ಮನದ ಹರುಷದ ಹರಹಿನಲಿ ಪಾ
ರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಪಿಸಿ ಮಾಡುವುದಾದರೂ ಏನು ? ಕೃಷ್ಣನ ಆಲೋಚನೆ ಘನವಾದದ್ದು. ನಮ್ಮ ಪ್ರಾಣವನ್ನು ನಾವು ಈ ರಾಜನಾದ ದುರ್ಯೋಧನನಿಗೆ ಮಾರಿದೆವು. ಈಗ ನಮಗೆ ಚಿಂತೆ ಏಕೆ ? ಎನ್ನುತ್ತಾ ಕರ್ಣನೇ ಮೊದಲಾದವರು ಸುಮ್ಮನಿದ್ದರು. ಈ ಕಡೆ ಮನಸ್ಸಿನ ಹರ್ಷದ ಉತ್ಸಾಹದಲ್ಲಿ ಕೃಷ್ಣನು ಪಾರ್ಥನ ರಥವನ್ನು ತಿರುಗಿಸಿದನು.
ಮೂಲ ...{Loading}...
ಮುನಿದು ಮಾಡುವುದೇನು ಕೃಷ್ಣನ
ನೆನಹು ಘನ ನಮ್ಮಸುವ ನಾವೀ
ಜನಪತಿಗೆ ಮಾರಿದೆವು ನಮಗೀ ಚಿಂತೆಯೇಕೆನುತ
ಇನಸುತಾದಿಗಳಿದ್ದರಿತ್ತಲು
ಮನದ ಹರುಷದ ಹರಹಿನಲಿ ಪಾ
ರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ ॥48॥