೦೦೦ ಸೂ ನಡೆದು ...{Loading}...
ಸೂ. ನಡೆದು ಪರಬಲ ಮಧ್ಯದಲಿ ನೀ
ರ್ಗುಡಿಸಿ ಹರಿಯನು ಸಕಲ ಸುಭಟರ
ಮಡುಹಿ ಫಲುಗುಣ ಗೆಲಿದನಗ್ಗದ ಕೌರವೇಶ್ವರನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅರ್ಜುನನು ಶತ್ರುಸೇನೆಯ ಮಧ್ಯದಲ್ಲಿ ನಡೆದಾಡುತ್ತ, ಬಳಲಿದ ಕುದುರೆಗಳಿಗೆ ನೀರು ಕುಡಿಸಿ, ಸಕಲ ಸೈನಿಕರನ್ನೂ ಕೊಂದು ಕುರುಶ್ರೇಷ್ಠನಾದ ದುರ್ಯೋಧನನನ್ನು ಗೆದ್ದನು.
ಪದಾರ್ಥ (ಕ.ಗ.ಪ)
ಹರಿ-ಕುದುರೆ, ಮಡಹಿ-ಕೊಂದು,
ಮೂಲ ...{Loading}...
ಸೂ. ನಡೆದು ಪರಬಲ ಮಧ್ಯದಲಿ ನೀ
ರ್ಗುಡಿಸಿ ಹರಿಯನು ಸಕಲ ಸುಭಟರ
ಮಡುಹಿ ಫಲುಗುಣ ಗೆಲಿದನಗ್ಗದ ಕೌರವೇಶ್ವರನ
೦೦೧ ನರನು ಕಳುಹಿಸಿಕೊಳಲು ...{Loading}...
ನರನು ಕಳುಹಿಸಿಕೊಳಲು ಗುರುಮೋ
ಹರವನಪಸವ್ಯದಲಿ ವಂಚಿಸಿ
ಮುರುಹಿದನು ಮುರವೈರಿ ರಥವನು ಮುಂದಣೊಡ್ಡಿಂಗೆ
ಅರರೆ ನರನೋ ನೂಕು ನೂಕರಿ
ಬಿರುದರಾವಡೆ ಪೂತು ಮಝ ಎಂ
ದುರವಣಿಸಿದರು ಮುರಿದು ಮಕರವ್ಯೂಹದತಿರಥರು ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ದ್ರೋಣರಿಂದ ಬೀಳ್ಕೊಂಡ ನಂತರ ಗುರು ದ್ರೋಣರ ಸೇನೆಯನ್ನು ಕೃಷ್ಣನು ಬಲಭಾಗಕ್ಕೆ ರಥವನ್ನು ತಿರುಗಿಸುವುದರ ಮೂಲಕ ವಂಚಿಸಿ ಮುಂದೆ ಕಾಣುವ ಸೇನೆಯ ಕಡೆಗೆ ಸಾಗಿಸಿದನು. ಅರರೇ-ನರನೋ-ನೂಕು, ನೂಕು ಬಿರುದುಳ್ಳ ಶತ್ರುಗಳು ಎಲ್ಲೆಂದರಲ್ಲಿ ಕಾಣುತ್ತಿರುವರು ಭಲೆ ಎಂದು ಮಕರವ್ಯೂಹದ ಅತಿರಥರು ಇವರತ್ತ ತಿರುಗಿ ಯುದ್ಧೋತ್ಸಾಹದಿಂದ ಸಂಭ್ರಮಿಸಿದರು.
ಪದಾರ್ಥ (ಕ.ಗ.ಪ)
ಅಪಸವ್ಯ-ಎಡವಲ್ಲದ್ದು-ಬಲಗಡೆ,
ಟಿಪ್ಪನೀ (ಕ.ಗ.ಪ)
ನರ-ಅರ್ಜುನನ ಹೆಸರು, ನಾರಾಯಣನ ಸಹೋದರ, ಧರ್ಮಮುನಿಯ-ಅವಳಿ ಮಕ್ಕಳಾಗಿ ಜನಿಸಿದವರು. ಹರಿಯ ಅವತಾರಗಳಲ್ಲಿ ನರನಾರಾಯಣಾವತಾರವೂ ಒಂದು
ಮಕರವ್ಯೂಹ-ಮೊಸಳೆಯ ಆಕಾರದಲ್ಲಿ ಸಜ್ಜಾದ ಸೈನ್ಯ,
ಅತಿರಥ-ಹನ್ನೊಂದು ಸಾವಿರ ಮಂದಿ ವೀರರೊಡನೆ ತನ್ನ ರಥ, ಕುದುರೆ, ಸಾರಥಿಯನ್ನು ರಕ್ಷಿಸಿಕೊಂಡು ಹೋರಾಡಿ ಗೆಲ್ಲಬಲ್ಲ ವೀರ.
ಮೂಲ ...{Loading}...
ನರನು ಕಳುಹಿಸಿಕೊಳಲು ಗುರುಮೋ
ಹರವನಪಸವ್ಯದಲಿ ವಂಚಿಸಿ
ಮುರುಹಿದನು ಮುರವೈರಿ ರಥವನು ಮುಂದಣೊಡ್ಡಿಂಗೆ
ಅರರೆ ನರನೋ ನೂಕು ನೂಕರಿ
ಬಿರುದರಾವಡೆ ಪೂತು ಮಝ ಎಂ
ದುರವಣಿಸಿದರು ಮುರಿದು ಮಕರವ್ಯೂಹದತಿರಥರು ॥1॥
೦೦೨ ನೂಕಿತರಿಚತುರಙ್ಗಬಲ ನೆಲ ...{Loading}...
ನೂಕಿತರಿಚತುರಂಗಬಲ ನೆಲ
ನೋಕರಿಸಿತೋ ಪ್ರಳಯಜಲಧಿಯ
ನೂಕುತೆರೆಗಳ ಲಹರಿಯೋ ನಿಲುವಾತನಾರಿದಕೆ
ನಾಕು ಕಡೆಯಲಿ ಕವಿದುದಳವಿಗೆ
ನೂಕುನೂಕಾಯಿತ್ತು ನರನ
ವ್ಯಾಕುಳತೆಯಲಿ ಸವರ ತೊಡಗಿದನಹಿತಬಲ ವನವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆ ಮುನ್ನುಗ್ಗಿತು. ಚತುರಂಗ ಸೇನೆಯನ್ನು ಭೂಮಿಯೇ ಕಾರಿತೋ, ಪ್ರಳಯಕಾಲದ ಸಮುದ್ರದ ಒತ್ತಿ ಬರುವ ತೆರೆಗಳ ಲಹರಿಯೋ ಸೇನೆಗೆ ಎದುರಾಗಿ ನಿಲ್ಲುವವರಾರು ? ನಾಲ್ಕೂ ಕಡೆಯಿಂದ ಆವರಿಸಿದ ಸೇನೆಯ ರಭಸಕ್ಕೆ ನೂಕು ನುಗ್ಗಲಾಯಿತು. ಅರ್ಜುನನು ನಿರಾತಂಕವಾಗಿ (ಆತಂಕವಿಲ್ಲದೆ) ಶತ್ರುಸೇನೆ ಎಂಬ ಕಾಡನ್ನು ನಾಶಮಾಡಲು ಪ್ರಾರಂಭಿಸಿದನು.
ಮೂಲ ...{Loading}...
ನೂಕಿತರಿಚತುರಂಗಬಲ ನೆಲ
ನೋಕರಿಸಿತೋ ಪ್ರಳಯಜಲಧಿಯ
ನೂಕುತೆರೆಗಳ ಲಹರಿಯೋ ನಿಲುವಾತನಾರಿದಕೆ
ನಾಕು ಕಡೆಯಲಿ ಕವಿದುದಳವಿಗೆ
ನೂಕುನೂಕಾಯಿತ್ತು ನರನ
ವ್ಯಾಕುಳತೆಯಲಿ ಸವರ ತೊಡಗಿದನಹಿತಬಲ ವನವ ॥2॥
೦೦೩ ಕುಸುರಿದರಿದವು ಜೋಡು ...{Loading}...
ಕುಸುರಿದರಿದವು ಜೋಡು ವಜ್ರದ
ರಸುಮೆಗಳು ಹಾರಿದವು ರಿಪುಗಳ
ಯೆಸೆವ ಸೀಸಕ ಕವಚವನು ಸೀಳಿದನು ತೋಳಿನಲಿ
ನೊಸಲ ಸೀಸಕ ನುಗ್ಗುನುಸಿ ಬಂ
ಧಿಸಿದ ಸರಪಣಿ ಹಿಳಿದವರಿಬಲ
ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಪ್ರಯೋಗಿಸಿದ ಬಾಣಗಳಿಂದ ಸೈನಿಕರು ಧರಿಸಿದ್ದ ಕವಚಗಳು ಚೂರು ಚೂರಾದವು. ಕವಚಗಳಲ್ಲಿ ಖಚಿತವಾಗಿದ್ದ ವಜ್ರದ ರಶ್ಮಿಗಳು ಹರಡಿದುವು. ಅವನು ಶತ್ರುಗಳ ತಲೆಯಲ್ಲಿ ಮೆರೆಯುತ್ತಿದ್ದ ಉಕ್ಕಿನ ಟೊಪ್ಪಿಗೆಯನ್ನು ಹಾರಿಸಿ, ಕವಚವನ್ನು ತೋಳ ಬಳಿ ಸೀಳಿ ಹಾಕಿದ. ಹಣೆಯ ಮೇಲಿನ ಶಿರಸ್ತ್ರಾಣವು ನುಚ್ಚುನೂರಾಗಿ, ಬಂಧಿಸಿದ ಸರಪಣಿಗಳು ಧ್ವಂಸವಾದುವು. ಶತ್ರು ಸೈನಿಕರ ಪರಾಕ್ರಮವೆಲ್ಲ ಅಡಗಿಹೋಯಿತು.
ಪದಾರ್ಥ (ಕ.ಗ.ಪ)
ಕುಸುರಿದರಿ-ಕೊಚ್ಚು, ಚೂರು ಚೂರು ಮಾಡು, ರಸುಮೆ-ರಶ್ಮಿ, ಕಿರಣ, ಹಿಳಿ-ನಾಶವಾಗು, ಅಡಗಿಹೋಗು
ಮೂಲ ...{Loading}...
ಕುಸುರಿದರಿದವು ಜೋಡು ವಜ್ರದ
ರಸುಮೆಗಳು ಹಾರಿದವು ರಿಪುಗಳ
ಯೆಸೆವ ಸೀಸಕ ಕವಚವನು ಸೀಳಿದನು ತೋಳಿನಲಿ
ನೊಸಲ ಸೀಸಕ ನುಗ್ಗುನುಸಿ ಬಂ
ಧಿಸಿದ ಸರಪಣಿ ಹಿಳಿದವರಿಬಲ
ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ ॥3॥
೦೦೪ ಕುಳುವೆಳಗು ಕಿಡಿಗೆದರೆ ...{Loading}...
ಕುಳುವೆಳಗು ಕಿಡಿಗೆದರೆ ಹೊಗರಿನ
ಹೊಳಹು ಗಗನವನುಗುಳೆ ಧಾರೆಯ
ಬಲುಗಿಡಿಗಳುರಿ ಮಸಗೆ ತಳಿಹದ ಬಣ್ಣ ಗಜಗಜಿಸೆ
ಹಿಳುಕು ಬೊಬ್ಬಿಡೆ ಹೊದರಡಸಿ ಕಣ
ಗಿಲೆಯ ಕೋಲುಳಿಯಂಬು ಕವಲಂ
ಬಲಗಿನಂಬೀಸಾಡಿದವು ಪರಸೈನ್ಯಸಾಗರವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈಟಿಯ ಬೆಳಕು ಕಿಡಿಕಾರುವಂತೆ, ಹೊಳೆಯುವ ಖಡ್ಗದ ಪ್ರಕಾಶ ಆಕಾಶವನ್ನೇ ವ್ಯಾಪಿಸಲಾಗಿ, ಖಡ್ಗಧಾರೆಯ ಬಲುಕಿಡಿಗಳ ಉರಿ ವಿಜೃಂಭಿಸಲಾಗಿ, ಸೂಸಿದ ಬಗೆಬಗೆಯ ಬಣ್ಣಗಳು ಒಂದರ ಮೇಲೊಂದು ಆವರಿಸಿ ಬಾಣದ ಗರಿಗಳು ಭೋರ್ಗರೆಯುತ್ತಿರಲು ಕೆಂಪಾದ ಬಾಣ, ಉಳಿಯಂಬು, ಕವಲಂಬು ಮೊದಲಾದ ನಾನಾ ರೀತಿಯ ಬಾಣಗಳು ರಾಶಿ ರಾಶಿಯಾಗಿ ಪರಸೈನ್ಯ ಸಾಗರದಲ್ಲಿ ಈಜಾಡಿದುವು.
ಪದಾರ್ಥ (ಕ.ಗ.ಪ)
ಕುಳುವೆಳಗು-ಈಟಿ ಅಥವಾ ಕತ್ತಿಯ ಹೊಳಪು,
ಉಳಿಯಂಬು - ಉಳಿಯ ಬಾಯಿನಂತೆ ಅಗಲವಾದ , ಹರಿತವಗಿರುವ ಬಾಣ
ಮೂಲ ...{Loading}...
ಕುಳುವೆಳಗು ಕಿಡಿಗೆದರೆ ಹೊಗರಿನ
ಹೊಳಹು ಗಗನವನುಗುಳೆ ಧಾರೆಯ
ಬಲುಗಿಡಿಗಳುರಿ ಮಸಗೆ ತಳಿಹದ ಬಣ್ಣ ಗಜಗಜಿಸೆ
ಹಿಳುಕು ಬೊಬ್ಬಿಡೆ ಹೊದರಡಸಿ ಕಣ
ಗಿಲೆಯ ಕೋಲುಳಿಯಂಬು ಕವಲಂ
ಬಲಗಿನಂಬೀಸಾಡಿದವು ಪರಸೈನ್ಯಸಾಗರವ ॥4॥
೦೦೫ ವ್ರಣದ ಬಲುವೊನಲೊಳಗೆ ...{Loading}...
ವ್ರಣದ ಬಲುವೊನಲೊಳಗೆ ತಲೆಗಳು
ಕುಣಿದವರ್ಜುನನಂಬಿನುರುಬೆಗೆ
ಹೆಣನ ದಾವಣಿ ಹಾಸಿದವು ಸೂಸಿದವು ದೊಂಡೆಗಳು
ತಣಿದನಂತಕನಟ್ಟೆಗಳ ರಿಂ
ಗಣದ ನಾಟಕದೊಳಗೆ ಸಮರಾಂ
ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರ ಮೈಯ ಗಾಯದಿಂದ ಸುರಿಯುವ ರಕ್ತದ ಪ್ರವಾಹದಲ್ಲಿ ತಲೆಗಳು ಕುಣಿದವು. ಅರ್ಜುನನ ಬಾಣಗಳ ರಭಸಕ್ಕೆ ಹೆಣದ ರಾಶಿಗಳೇ ಹರಡಿದವು. ಹೆಣದ (ರಾಶಿ) ಗೊಂಚಲುಗಳೇ ಗೋಚರಿಸಿದುವು. ಮೃತ್ಯುದೇವತೆಗೆ ತೃಪ್ತಿಯಾಯಿತು. ತಲೆಯಿಲ್ಲದ ಮುಂಡಗಳ ರಿಂಗಣದ (ಕುಣಿತ) ನಾಟಕದಲ್ಲಿ ಯುದ್ಧದ ಭಯಂಕರತೆ ರಣರಂಗದ ಪ್ರಾಂಗಣದಲ್ಲಿ ಮತ್ತಷ್ಟು ಭೀಕರವಾಯಿತು.
ಪದಾರ್ಥ (ಕ.ಗ.ಪ)
ದಾವಣಿ-ರಾಶಿ, ಉರುಬೆ-ರಭಸ, ದೊಂಡೆ-ಗುಪ್ಪೆ,
ಮೂಲ ...{Loading}...
ವ್ರಣದ ಬಲುವೊನಲೊಳಗೆ ತಲೆಗಳು
ಕುಣಿದವರ್ಜುನನಂಬಿನುರುಬೆಗೆ
ಹೆಣನ ದಾವಣಿ ಹಾಸಿದವು ಸೂಸಿದವು ದೊಂಡೆಗಳು
ತಣಿದನಂತಕನಟ್ಟೆಗಳ ರಿಂ
ಗಣದ ನಾಟಕದೊಳಗೆ ಸಮರಾಂ
ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ ॥5॥
೦೦೬ ಏರುಗಳು ಬುದುಬುದಿಸಿ ...{Loading}...
ಏರುಗಳು ಬುದುಬುದಿಸಿ ರಕುತವ
ಕಾರಿ ಕಾಳಿಜ ಖಂಡ ನೆಣ ಜಿಗಿ
ದೋರಿ ಬೆಳುನೊರೆ ಮಸಗಿ ನಸುಬಿಸಿರಕುತ ಹೊನಲಿಡಲು
ಕೌರಿಡಲು ಕಡಿದುಡಿದವೆಲು ಮೊಗ
ದೋರುಗಳ ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಳ ರಂಜಿಸಿತು ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೈಯ ಗಾಯಗಳಿಂದ ರಕ್ತದ ಕೋಡಿ ಒಂದೇ ಸಮನೆ ಹರಿಯಿತು. ರಕ್ತ, ಮಾಂಸ, ಕೊಬ್ಬು ಪಿತ್ತಕೋಶಗಳು ಕಾಣಿಸಿಕೊಂಡು ಅಂಟುಅಂಟಾಗಿ, ಬಿಳುಪಾದ ನೊರೆ ಹರಡಿತು. ನಸು ಬಿಸಿಯಾದ ರಕ್ತ, ಚೂರುಚೂರಾದ ಎಲುಬುಗಳೊಡನೆ, ಪ್ರವಾಹದಂತೆ ಹರಿದು ಕಮರುನಾತ ಹರಡಲು ಶರೀರದ ಮೇಲೆ ವಿಶೇಷ ಗಾಯಗಳಾಗಿದ್ದ, ಚೆಲ್ಲಾಪಿಲ್ಲಿಯಾದ ಹೆಣಗಳ ರಾಶಿ ಭಯಂಕರವಾಗಿ ಕಂಡಿತು.
ಪದಾರ್ಥ (ಕ.ಗ.ಪ)
ಏರು-ಗಾಯ, ಬುದುಬುದಿಸಿ-ಉಕ್ಕಿ ಉಕ್ಕಿ (ಅನುಕರಣ ಶಬ್ದ)
ಕೌರಿಡಲು-ಕಮರುವಾಸನೆಯಿಂದ ಕೂಡಿರಲು,
ತಾರುಥಟ್ಟಿನ-ಚೆಲ್ಲಾಪಿಲ್ಲಿಯಾದ,
ಮೂಲ ...{Loading}...
ಏರುಗಳು ಬುದುಬುದಿಸಿ ರಕುತವ
ಕಾರಿ ಕಾಳಿಜ ಖಂಡ ನೆಣ ಜಿಗಿ
ದೋರಿ ಬೆಳುನೊರೆ ಮಸಗಿ ನಸುಬಿಸಿರಕುತ ಹೊನಲಿಡಲು
ಕೌರಿಡಲು ಕಡಿದುಡಿದವೆಲು ಮೊಗ
ದೋರುಗಳ ಪೂರಾಯ ಘಾಯದ
ತಾರುಥಟ್ಟಿನ ಹೆಣನ ಮೆದೆ ಹೇರಾಳ ರಂಜಿಸಿತು ॥6॥
೦೦೭ ಎಲೆಲೆ ಪ್ರಳಯದ ...{Loading}...
ಎಲೆಲೆ ಪ್ರಳಯದ ರುದ್ರನನು ತಲೆ
ಬಳಿಚಿಬಿಟ್ಟನು ದ್ರೋಣನಕಟಾ
ನೆಲನೊಡೆಯನಾಪ್ತಿಗರು ಬಗೆದರು ಸ್ವಾಮಿದ್ರೋಹಿಕೆಯ
ಕೊಲುವವನು ಫಲುಗುಣನೊ ದ್ರೋಣನೊ
ಕೊಲೆಗಡಿಗನೋ ಕೊಂದನೋ ಕುರು
ಕುಲತಿಲಕ ನೆರೆ ಪಾಪಿಯೆಂದರು ನಿಖಿಳ ಪರಿವಾರ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೆ, ಪ್ರಳಯಕಾಲದ ರುದ್ರನನ್ನು ಆಶೀರ್ವದಿಸಿ ಬಿಟ್ಟನಲ್ಲಾ ದ್ರೋಣನು ! ಅಯ್ಯೋ ನೆಲನೊಡೆಯನಾದ ದುರ್ಯೋಧನನ ಆಪ್ತರು ಸ್ವಾಮಿ ದ್ರೋಹವನ್ನು ಬಗೆದರಲ್ಲಾ ! ಯುದ್ಧದಲ್ಲಿ ಕೊಲ್ಲುವವನು ಫಲುಗುಣನೋ, ದ್ರೋಣನೋ. ದ್ರೋಣನು ಕೊಲೆಗಡಿಗನಾಗಿ ನಮ್ಮನ್ನು ಕೊಂದನಲ್ಲ ಎಂದು ಅಚ್ಚರಿ ಪಡುತ್ತಾ ಸಕಲ ಪರಿವಾರದ ಜನ ಕುರುಕುಲತಿಲಕ ದುರ್ಯೋಧನನನ್ನು ಪರಮಪಾಪಿ ಎಂದು ಜರೆದರು.
ಪದಾರ್ಥ (ಕ.ಗ.ಪ)
ತಲೆ ಬಳಿಚಿ -ತಲೆಸವರಿ
ಮೂಲ ...{Loading}...
ಎಲೆಲೆ ಪ್ರಳಯದ ರುದ್ರನನು ತಲೆ
ಬಳಿಚಿಬಿಟ್ಟನು ದ್ರೋಣನಕಟಾ
ನೆಲನೊಡೆಯನಾಪ್ತಿಗರು ಬಗೆದರು ಸ್ವಾಮಿದ್ರೋಹಿಕೆಯ
ಕೊಲುವವನು ಫಲುಗುಣನೊ ದ್ರೋಣನೊ
ಕೊಲೆಗಡಿಗನೋ ಕೊಂದನೋ ಕುರು
ಕುಲತಿಲಕ ನೆರೆ ಪಾಪಿಯೆಂದರು ನಿಖಿಳ ಪರಿವಾರ ॥7॥
೦೦೮ ಈತನರ್ಜುನನಿತ್ತಲಿದೆ ಪುರು ...{Loading}...
ಈತನರ್ಜುನನಿತ್ತಲಿದೆ ಪುರು
ಹೂತಸುತನ ವರೂಥವಿದೆ ಕಪಿ
ಕೇತನನ ಬೊಬ್ಬಾಟವಿದೆ ಫಲುಗುಣನ ಶರಜಾಲ
ಈತ ಪಾರ್ಥನು ಹೊಕ್ಕನಿತ್ತಲು
ಶ್ವೇತಹಯನಿತ್ತಲು ಧನಂಜಯ
ನೀತನೆನೆ ಫಲುಗುಣನ ಮಯವಾಯ್ತಖಿಳ ತಳತಂತ್ರ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈತನು ಅರ್ಜುನನು, ಈ ಕಡೆ ಇರುವುದು ದೇವೇಂದ್ರಸುತನಾದ ಅರ್ಜುನನ ರಥ ಕಪಿಯ ಚಿಹ್ನೆಯುಳ್ಳ ಬಾವುಟದ ಆರ್ಭಟವಿದೆ. ಇದೇ ಫಲುಗುಣನ ಬಾಣಗಳ ರಾಶಿಯ ಹಾವಳಿ. ಈತ ಪಾರ್ಥನು, ಈ ಕಡೆ ಪ್ರವೇಶಿಸಿದವನು ಶ್ವೇತಹಯನು. ಈತನು ಧನಂಜಯನು ಎನ್ನುವಂತೆ ಇಡೀ ಸೈನ್ಯ ಅರ್ಜುನಮಯವಾಯ್ತು.
ಪದಾರ್ಥ (ಕ.ಗ.ಪ)
ಶ್ವೇತಹಯ-ಅರ್ಜುನನ ಹೆಸರು, ಬಿಳಿಕುದುರೆಗಳನ್ನು ಕಟ್ಟಿದ ರಥವುಳ್ಳವನು,
ಟಿಪ್ಪನೀ (ಕ.ಗ.ಪ)
ಧನಂಜಯ : ರಾಜಸೂಯಯಾಗದ ಸಮಯದಲ್ಲಿ ವಿಪುಲವಾದ ಧನರಾಶಿಯನ್ನು ಅರ್ಜುನ ಸಂಪಾದಿಸಿ ತಂದನಾಗಿ ಧನಂಜಯನೆಂಬ ಹೆಸರು.
ಮೂಲ ...{Loading}...
ಈತನರ್ಜುನನಿತ್ತಲಿದೆ ಪುರು
ಹೂತಸುತನ ವರೂಥವಿದೆ ಕಪಿ
ಕೇತನನ ಬೊಬ್ಬಾಟವಿದೆ ಫಲುಗುಣನ ಶರಜಾಲ
ಈತ ಪಾರ್ಥನು ಹೊಕ್ಕನಿತ್ತಲು
ಶ್ವೇತಹಯನಿತ್ತಲು ಧನಂಜಯ
ನೀತನೆನೆ ಫಲುಗುಣನ ಮಯವಾಯ್ತಖಿಳ ತಳತಂತ್ರ ॥8॥
೦೦೯ ಇದೆ ಕಿರೀಟಿಯ ...{Loading}...
ಇದೆ ಕಿರೀಟಿಯ ಬಿಲ್ಲ ಜೀವಡೆ
ಯದೆ ಸಿತಾಶ್ವನ ಸಿಂಹಗರ್ಜನೆ
ಯಿದೆ ಮುರಾರಿಯ ಮನಕೆ ಮುಂಚುವ ಹಯದ ಖುರನಿನದ
ಅದೆ ವಿಜಯನಸ್ತ್ರೌಘವತ್ತಲು
ಕದನ ಕಾಲಾನಲನ ತೀವ್ರತೆ
ಯದೆಯೆನುತ ಹೆದರೆದೆಯ ಸುಭಟರು ಬಿಸುಟರುತ್ಸಹವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇ ಕಿರೀಟಿಯ ಬಿಲ್ಲಿನ ಠೇಂಕಾರ. ಅದೇ ಸಿತಾಶ್ವನ ಸಿಂಹಗರ್ಜನೆ. ಇದೇ ಶ್ರೀಕೃಷ್ಣನ ಮನೋವೇಗಕ್ಕೆ ಮೀರಿದ ಕುದುರೆಗಳ ಗೊರಸಿನ ಧ್ವನಿ. ಅದೇ ವಿಜಯನ ಅಸ್ತ್ರಗಳ ರಾಶಿ. ಆ ಕಡೆ ಯುದ್ಧದಲ್ಲಿ ಪ್ರಳಯಾಗ್ನಿ ಸ್ವರೂಪನಾದ ಅರ್ಜುನನ ತೀವ್ರತೆ ಎನ್ನುತ್ತಾ ಹೆದರು ಪುಕ್ಕರಾದ ಸುಭಟರು ಉತ್ಸಾಹಗುಂದಿದರು.
ಪದಾರ್ಥ (ಕ.ಗ.ಪ)
ಮನಕೆ ಮುಂಚುವ-ಮನೋವೇಗವನ್ನು ಮೀರುವ, ಹೆದರೆದೆಯ-ಪುಕ್ಕಲ, ಸಿತಾಶ್ವ-ಅರ್ಜುನ.
ಟಿಪ್ಪನೀ (ಕ.ಗ.ಪ)
ಕಿರೀಟಿ- ಅರ್ಜುನ ಇಂದ್ರನಿಂದ ಜಯಿಸಲಾಗದ ಶತ್ರುಗಳನ್ನು ಗೆದ್ದು ಮಹೋಪಕಾರ ಮಾಡಿದ್ದಕ್ಕಾಗಿ, ಇಂದ್ರನು ಅರ್ಜುನನನ್ನು ದೇವಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿ, ತನ್ನ ಕಿರೀಟಿವನ್ನು ಅವನ ತಲೆಯ ಮೇಲಿಟ್ಟು ಗೌರವಿಸಿದ. ಆದ್ದರಿಂದ ಅರ್ಜುನನಿಗೆ ಕಿರೀಟಿ ಎಂಬ ಹೆಸರು ಬಂತು.
ಮೂಲ ...{Loading}...
ಇದೆ ಕಿರೀಟಿಯ ಬಿಲ್ಲ ಜೀವಡೆ
ಯದೆ ಸಿತಾಶ್ವನ ಸಿಂಹಗರ್ಜನೆ
ಯಿದೆ ಮುರಾರಿಯ ಮನಕೆ ಮುಂಚುವ ಹಯದ ಖುರನಿನದ
ಅದೆ ವಿಜಯನಸ್ತ್ರೌಘವತ್ತಲು
ಕದನ ಕಾಲಾನಲನ ತೀವ್ರತೆ
ಯದೆಯೆನುತ ಹೆದರೆದೆಯ ಸುಭಟರು ಬಿಸುಟರುತ್ಸಹವ ॥9॥
೦೧೦ ಉಡಿದು ಕುಪ್ಪಳಿಸಿದವು ...{Loading}...
ಉಡಿದು ಕುಪ್ಪಳಿಸಿದವು ರಥ ಕಡಿ
ವಡೆದುದಗ್ಗದ ಸಾರಥಿಗಳೆಡೆ
ಗೆಡೆದುದತಿರಥ ಸಮರಥಾರ್ಧ ಮಹಾರಥಾದಿಗಳು
ಹೊಡೆಗೆಡೆದ ದಂತಿಗಳು ರಕ್ತದ
ಕಡಲೊಳೀಸಾಡಿದವು ತೇಜಿಯ
ಕಡಿಕು ಹರಿದವು ಹೊರೆದನಂತಕನುರುಪರಿಗ್ರಹವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥಗಳು ಮುರಿದು ಕುಪ್ಪಳಿಸಿದುವು. ಪ್ರಸಿದ್ಧಿ ಪಡೆದ ಸಾರಥಿಗಳು ತುಂಡು ತುಂಡಾದರು. ಅತಿರಥ, ಸಮರಥ, ಅರ್ಧ ಮಹಾರಥಾದಿಗಳು ಹಿಮ್ಮೆಟ್ಟಿದರು. ಉದ್ದಕ್ಕೆ ಸಾಲಾಗಿ ನೆಲಕ್ಕೆ ಬಿದ್ದ ಆನೆಗಳು ರಕ್ತದ ಸಾಗರದಲ್ಲಿ ಈಜಾಡಿದವು. ಕುದುರೆಗಳು ತುಂಡುತುಂಡಾಗಿ ಹರಡಿದವು. ಮೃತ್ಯುದೇವತೆ ತಾನು ಕೊಳ್ಳಬೇಕಾದ ಕಾಣಿಕೆಯನ್ನು ಪಡೆದು ತೃಪ್ತನಾದನು.
ಪದಾರ್ಥ (ಕ.ಗ.ಪ)
ಉಡಿ-ಮುರಿ, ಕಡಿವಡೆ-ತುಂಡು ತುಂಡಾಗು, ಹೊಡೆಗೆಡೆ-ಉದ್ದಕ್ಕೆ ಬೀಳು, ಕಡಿಕು-ತುಂಡು, ಪರಿಗ್ರಹ-ಕೊಳ್ಳಬೇಕಾದ ಕಾಣಿಕೆ, ಎಡೆಗಡೆ-ಕೆಳಕ್ಕೆ ಬೀಳು,
ಮೂಲ ...{Loading}...
ಉಡಿದು ಕುಪ್ಪಳಿಸಿದವು ರಥ ಕಡಿ
ವಡೆದುದಗ್ಗದ ಸಾರಥಿಗಳೆಡೆ
ಗೆಡೆದುದತಿರಥ ಸಮರಥಾರ್ಧ ಮಹಾರಥಾದಿಗಳು
ಹೊಡೆಗೆಡೆದ ದಂತಿಗಳು ರಕ್ತದ
ಕಡಲೊಳೀಸಾಡಿದವು ತೇಜಿಯ
ಕಡಿಕು ಹರಿದವು ಹೊರೆದನಂತಕನುರುಪರಿಗ್ರಹವ ॥10॥
೦೧೧ ಸರಳು ಸೇನೆಯ ...{Loading}...
ಸರಳು ಸೇನೆಯ ತಾಗಿ ರಿಪುಗಳ
ಕೊರಳ ಕೊಯ್ಯದ ಮುನ್ನವರಿಮೋ
ಹರವ ಹಿಂದಿಕ್ಕುವುದು ರಥವತಿಜವದ ಜೋಕೆಯಲಿ
ಹೊರಳಿದವು ಭಟರಟ್ಟೆ ಶೋಣಿತ
ಶರಧಿ ಮಸಗಿತು ಮಕುಟಬದ್ಧರ
ಹರಣದನಿಲಸಮೂಹ ಬೀಸಿತು ನಭಕೆ ಬಿರುಬಿನಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನ ಬಾಣ ಸೇನೆಯನ್ನು ಮುಟ್ಟಿ ಶತ್ರುಗಳ ಕೊರಳನ್ನು ಕೊಯ್ಯದ ಮುನ್ನವೇ ಶತ್ರುಗಳ ರಥವು ಅತಿವೇಗ ಹಾಗೂ ಎಚ್ಚರಿಕೆಯಿಂದ ಹಿಮ್ಮೆಟ್ಟುತ್ತಿದ್ದವು. ಯೋಧರ ತಲೆಯಿಲ್ಲದ ದೇಹ ಗಳು ಹೊರಳಿ ಬಿದ್ದವು. ರಕ್ತದ ಸಮುದ್ರವೇ ವಿಜೃಂಭಿಸಿತು. ಕಿರೀಟಧಾರಿಗಳಾದ ರಾಜರ ಪ್ರಾಣವಾಯು ಆಕಾಶಮಾರ್ಗದಲ್ಲಿ ಬಿರುಸಾಗಿ ಬೀಸಿತು. (ಕಿರೀಟಧಾರಿಗಳಾದ ರಾಜರ ಪಂಚಪ್ರಾಣಗಳು ಆಕಾಶ ಮಾರ್ಗದಲ್ಲಿ ದಾಟಿಹೋದವು.)
ಮೂಲ ...{Loading}...
ಸರಳು ಸೇನೆಯ ತಾಗಿ ರಿಪುಗಳ
ಕೊರಳ ಕೊಯ್ಯದ ಮುನ್ನವರಿಮೋ
ಹರವ ಹಿಂದಿಕ್ಕುವುದು ರಥವತಿಜವದ ಜೋಕೆಯಲಿ
ಹೊರಳಿದವು ಭಟರಟ್ಟೆ ಶೋಣಿತ
ಶರಧಿ ಮಸಗಿತು ಮಕುಟಬದ್ಧರ
ಹರಣದನಿಲಸಮೂಹ ಬೀಸಿತು ನಭಕೆ ಬಿರುಬಿನಲಿ ॥11॥
೦೧೨ ಮುರಿವಡೆದು ಚತುರಙ್ಗವರ್ಜುನ ...{Loading}...
ಮುರಿವಡೆದು ಚತುರಂಗವರ್ಜುನ
ನುರುಬೆಗಾರದೆ ನಿಲೆ ಶ್ರುತಾಯುಧ
ನಿರಿಯಲುತ್ಸಾಹಿಸಿದನಿದಿರಾದನು ಧನಂಜಯನ
ಮುರಿಯೆಸುತ ಮುಂಕೊಂಡು ಪಾರ್ಥನ
ತರುಬಿದರು ಬಳಿಕೀತನಾತನ
ನೆರೆವಣಿಗೆ ಲೇಸೆನುತ ತುಳುಕಿದನಂಬಿನಂಬುಧಿಯ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರಂಗ ಸೇನೆ ನಾಶಗೊಂಡು ಅರ್ಜುನನ ರಭಸವನ್ನು ತಡೆಯದಾದಾಗ ಶ್ರುತಾಯುಧನು ಯುದ್ಧಮಾಡಲು ಉತ್ಸಾಹಿಸಿ ಧನಂಜಯನಿಗೆ ಇದಿರಾದನು. ಆತನ ಸೈನ್ಯದವರು ನಾಶಗೊಳಿಸುವಂತಹ ಬಾಣವನ್ನು ಪ್ರಯೋಗಿಸುತ್ತ ಪಾರ್ಥನನ್ನು ಆಕ್ರಮಿಸಿದರು. ಬಳಿಕ ಪಾರ್ಥನು ಶ್ರುತಾಯುಧನ ಬಾಣ ಪ್ರಯೋಗದ ಕುಶಲತೆಗೆ ಬೆರಗಾಗಿ ಒಳ್ಳೆಯದೆನ್ನುತ್ತಾ ಬಾಣಗಳ ಸುರಿಮಳೆಗರೆದನು.
ಪದಾರ್ಥ (ಕ.ಗ.ಪ)
ಮುರಿವಡೆ-ನಾಶವಾಗು,
ನೆರೆವಣೆ-ಕುಶಲತೆ
ಮುಂಕೊಂಡು-ಎದುರಿಸಿ
ಮೂಲ ...{Loading}...
ಮುರಿವಡೆದು ಚತುರಂಗವರ್ಜುನ
ನುರುಬೆಗಾರದೆ ನಿಲೆ ಶ್ರುತಾಯುಧ
ನಿರಿಯಲುತ್ಸಾಹಿಸಿದನಿದಿರಾದನು ಧನಂಜಯನ
ಮುರಿಯೆಸುತ ಮುಂಕೊಂಡು ಪಾರ್ಥನ
ತರುಬಿದರು ಬಳಿಕೀತನಾತನ
ನೆರೆವಣಿಗೆ ಲೇಸೆನುತ ತುಳುಕಿದನಂಬಿನಂಬುಧಿಯ ॥12॥
೦೧೩ ನರನ ಬಾಣಾನೀಕವನು ...{Loading}...
ನರನ ಬಾಣಾನೀಕವನು ಕ
ತ್ತರಿಸಿದನು ನಿಜಗದೆಯಲಾತನ
ಧುರಚಮತ್ಕಾರವನು ನೋಡುತ ಪಾರ್ಥ ಬೆರಗಾಗೆ
ಕೆರಳಿ ವಾಘೆಯ ಕೊಂಡು ರಥವನು
ಧುರಕೆ ದುವ್ವಾಳಿಸಲು ಮುರಹರ
ನುರವಣೆಗೆ ಕನಲುತ ಶ್ರುತಾಯುಧ ಹೊಯ್ದನಚ್ಯುತನ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರುತಾಯುಧನು ಪಾರ್ಥನ ಬಾಣಗಳ ಸಮೂಹವನ್ನು ತನ್ನ ಗದೆಯಿಂದ ಕತ್ತರಿಸಿದನು. ಪಾರ್ಥನು ಆತನ ರಣಚಮತ್ಕಾರವನ್ನು ನೋಡುತ್ತ ಬೆರಗಾದನು. ಆಗ ಮುರಹರನು ಕೆರಳಿ ಕಡಿವಾಣ ಹಿಡಿದು ರಥವನ್ನು ರಭಸದಿಂದ ಮುನ್ನುಗ್ಗಿಸಿದಾಗ ಆತನ ರಭಸಕ್ಕೆ ಕೋಪಿಸಿಕೊಂಡ ಶ್ರುತಾಯುಧನು ಅಚ್ಯುತನನ್ನೇ ಹೊಡೆದನು.
ಮೂಲ ...{Loading}...
ನರನ ಬಾಣಾನೀಕವನು ಕ
ತ್ತರಿಸಿದನು ನಿಜಗದೆಯಲಾತನ
ಧುರಚಮತ್ಕಾರವನು ನೋಡುತ ಪಾರ್ಥ ಬೆರಗಾಗೆ
ಕೆರಳಿ ವಾಘೆಯ ಕೊಂಡು ರಥವನು
ಧುರಕೆ ದುವ್ವಾಳಿಸಲು ಮುರಹರ
ನುರವಣೆಗೆ ಕನಲುತ ಶ್ರುತಾಯುಧ ಹೊಯ್ದನಚ್ಯುತನ ॥13॥
೦೧೪ ವರುಣನಿತ್ತುಪದೇಶ ಬರಿದಿ ...{Loading}...
ವರುಣನಿತ್ತುಪದೇಶ ಬರಿದಿ
ದ್ದರನು ಹೊಯ್ದರೆ ತನ್ನ ಕೊಲುವುದು
ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ
ಕೆರಳಿ ಗದೆ ಮುರಹರನ ಮುಟ್ಟದೆ
ಮರಳಿ ತನ್ನನೆ ಕೊಂದುದೇನ
ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧದಲ್ಲಿ ಆಯುಧವಿಲ್ಲದೆ ಇದ್ದವರನ್ನು ಹೊಡೆದರೆ ಅದು ತನ್ನನ್ನೇ ಕೊಲ್ಲುವುದು ಸತ್ಯ ಎಂಬ ವರುಣನಿತ್ತ ಉಪದೇಶವನ್ನು ಮರೆತು ಶ್ರುತಾಯುಧನು ಹರಿಯ ತಲೆಗೆ ಹೊಡೆದನು. ಕೋಪದಿಂದ ಬಿಸುಟ ಗದೆ ಮುರಹರನನ್ನು ಮುಟ್ಟದೆ ಮರಳಿ ಬಂದು ಆತನನ್ನೇ ಕೊಂದಿತು. ಏನಾಶ್ಚರ್ಯವೋ ? ದೈವ ದ್ರೋಹಿಗೆ ಹೇಗೆ ಒಳ್ಳೆಯದಾಗುತ್ತದೆ ?” ಎಂದು (ಸಂಜಯನು) ಹೇಳಿದನು.
ಪದಾರ್ಥ (ಕ.ಗ.ಪ)
ವರುಣ-ಪಶ್ಚಿಮ ದಿಕ್ಕಿನ ಒಡೆಯ, ಹರಿ-ಕೃಷ್ಣ, ಮಸ್ತಕ-ತಲೆ, ಕೆರಳು-ಕೋಪಿಸು.
ಮೂಲ ...{Loading}...
ವರುಣನಿತ್ತುಪದೇಶ ಬರಿದಿ
ದ್ದರನು ಹೊಯ್ದರೆ ತನ್ನ ಕೊಲುವುದು
ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ
ಕೆರಳಿ ಗದೆ ಮುರಹರನ ಮುಟ್ಟದೆ
ಮರಳಿ ತನ್ನನೆ ಕೊಂದುದೇನ
ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ ॥14॥
೦೧೫ ಆ ಶ್ರುತಾಯುಧ ...{Loading}...
ಆ ಶ್ರುತಾಯುಧ ಮಡಿದನಲ್ಲಿ ಮ
ಹಾಸುರದ ರಣವಾಯ್ತು ಕಾಂಭೋ
ಜೇಶ ಕೈದುಡುಕಿದನು ಕದನವನಿಂದ್ರಸುತನೊಡನೆ
ಸೂಸಿದನು ಸರಳುಗಳನಾತನ
ಸಾಸವನು ಮನ್ನಿಸುತ ಫಲುಗುಣ
ಬೇಸರದೆ ಕೊಂಡಾಡಿ ಕಾದಿದನೊಂದು ನಿಮಿಷದಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಶ್ರುತಾಯುಧನು ಮಡಿದನು. ಅಲ್ಲಿ ಮಹಾಭಯಂಕರವಾದ ಯುದ್ಧವಾಯಿತು. ಕಾಂಭೋಜದ ರಾಜನಾದ ಸುದಕ್ಷಿಣನು ಆತುರದಿಂದ ಇದಿರಾಗಿ ಇಂದ್ರಸುತ ಅರ್ಜುನನೊಡನೆ ಕಾಳಗವನ್ನು ಕೈಕೊಂಡನು. ಸುದಕ್ಷಿಣನು ಸೂಸಿದ (ಪ್ರಯೋಗಿಸಿದ) ಬಾಣಗಳನ್ನು ಆತನ ಸಾಹಸವನ್ನು ಗೌರವಿಸುತ್ತ, ಅರ್ಜುನನು ಬೇಸರಿಸದೆ ಮೆಚ್ಚಿ ನಿಮಿಷಮಾತ್ರದಲ್ಲಿ ಯುದ್ಧಕ್ಕೆ ತೊಡಗಿದನು.
ಪದಾರ್ಥ (ಕ.ಗ.ಪ)
ಆಸುರ-ಭಯಂಕರ,
ಮೂಲ ...{Loading}...
ಆ ಶ್ರುತಾಯುಧ ಮಡಿದನಲ್ಲಿ ಮ
ಹಾಸುರದ ರಣವಾಯ್ತು ಕಾಂಭೋ
ಜೇಶ ಕೈದುಡುಕಿದನು ಕದನವನಿಂದ್ರಸುತನೊಡನೆ
ಸೂಸಿದನು ಸರಳುಗಳನಾತನ
ಸಾಸವನು ಮನ್ನಿಸುತ ಫಲುಗುಣ
ಬೇಸರದೆ ಕೊಂಡಾಡಿ ಕಾದಿದನೊಂದು ನಿಮಿಷದಲಿ ॥15॥
೦೧೬ ಸರಳು ಸವೆಯಲು ...{Loading}...
ಸರಳು ಸವೆಯಲು ಶಕ್ತಿಯಲಿ ಕಾ
ತರಿಸಿ ಕವಿದಿಡೆ ಶಕ್ತಿಯನು ಕ
ತ್ತರಿಸಿದನು ಕಾಂಭೋಜಭೂಪನ ಮುಕುಟಮಸ್ತಕವ
ಕೊರಳ ತೊಲಗಿಸಿ ಮುಂದೆ ನೂಕುವ
ವರ ಶ್ರುತಾಯುವಿನೊಡನೆ ಘನಸಂ
ಗರಕೆ ತೆಗೆದನು ಕಳುಹಿದನು ಕಾಂಭೋಜನೊಡನವರ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮಿಷ ಮಾತ್ರದಲ್ಲಿ ಕಾಂಭೋಜರಾಜನ ಬಾಣ ಸವೆಯಲು, ತನ್ನ ಶಕ್ತಿಯಿಂದಲೇ ಕಾತರಿಸಿ ಆಕ್ರಮಿಸಲಾಗಿ, ಅರ್ಜುನನು ಶಕ್ತ್ಯಾಯುಧವನ್ನು ಕತ್ತರಿಸಿದನು. ಕಿರೀಟ ಧರಿಸಿದ ಆತನ ಮಸ್ತಕವನ್ನು ಕತ್ತರಿಸಿದನು. ಮುಂದೆ ಎದುರಾಗಿ ನುಗ್ಗಿ ಬರುವವರ ಜೊತೆ, ಶ್ರುತಾಯುವಿನೊಡನೆ ದೊಡ್ಡ ಕಾಳಗವನ್ನು ಪ್ರಾರಂಭಿಸಿ, ಕಾಂಭೋಜನೊಡನೆ ಅವನನ್ನೂ ಯಮಪುರಿಗೆ ಕಳುಹಿಸಿದನು.
ಮೂಲ ...{Loading}...
ಸರಳು ಸವೆಯಲು ಶಕ್ತಿಯಲಿ ಕಾ
ತರಿಸಿ ಕವಿದಿಡೆ ಶಕ್ತಿಯನು ಕ
ತ್ತರಿಸಿದನು ಕಾಂಭೋಜಭೂಪನ ಮುಕುಟಮಸ್ತಕವ
ಕೊರಳ ತೊಲಗಿಸಿ ಮುಂದೆ ನೂಕುವ
ವರ ಶ್ರುತಾಯುವಿನೊಡನೆ ಘನಸಂ
ಗರಕೆ ತೆಗೆದನು ಕಳುಹಿದನು ಕಾಂಭೋಜನೊಡನವರ ॥16॥
೦೧೭ ಹರಿಬದಯುತಾಯುವನು ಮಗುಳಿ ...{Loading}...
ಹರಿಬದಯುತಾಯುವನು ಮಗುಳಿ
ಬ್ಬರು ಸುತರು ನಿಯತಾಯು ಘನಸಂ
ಗರದ ದೀರ್ಘಾಯುವನು ಕಳುಹಿದನಮರಮಂದಿರಕೆ
ಧುರಕೆ ನೂಕಿದವಂಗರಾಜನ
ಕರಿಘಟೆಗಳಂಬಟ್ಟ ಮೊದಲಾ
ದರಿ ಸುಭಟ ಸಂದೋಹ ಮುತ್ತಿತು ಮತ್ತೆ ಫಲುಗುಣನ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ತವ್ಯದ ಹೊಣೆಹೊತ್ತ ಆಯುತಾಯುವನ್ನು ಪುನಃ ಆತನ ಇಬ್ಬರು ಸುತರು, ನಿಯತಾಯು ಹಾಗೂ ಯುದ್ಧ ಭಯಂಕರನಾದ ದೀರ್ಘಾಯುವನ್ನು ಅರ್ಜುನನು ದೇವಲೋಕಕ್ಕೆ ಕಳುಹಿಸಿದನು. ರಣರಂಗಕ್ಕೆ ನುಗ್ಗಿಬಂದ ಅಂಗರಾಜನ ಆನೆಗಳು, ಅಂಬಟ್ಟ ಮೊದಲಾದ ಶತ್ರು ಯೋಧರ ಗುಂಪು ಪುನಃ ಅರ್ಜುನನನ್ನು ಮುತ್ತಿದವು.
ಪದಾರ್ಥ (ಕ.ಗ.ಪ)
ಹರಿಬ-ಕರ್ತವ್ಯ,
ಟಿಪ್ಪನೀ (ಕ.ಗ.ಪ)
ಆಯುತಾಯು/ಶ್ರುತಾಯು : ಕಳಿಂಗ ದೇಶದ ಅರಸು. ಭಾರತ ಯುದ್ಧದ ಹದಿನಾಲ್ಕನೆಯ ದಿನ ಇವನೂ ಇವನ ಮಕ್ಕಳಾದ ದೀರ್ಘಾಯು, ನಿಯತಾಯು ಎಂಬುವರು ಅರ್ಜುನನಿಂದ ಮಡಿದರು.
ನಿಯತಾಯು : ಕಲಿಂಗ ದೇಶಾಧಿಪತಿಯಾದ ಶ್ರುತಾಯು ರಾಜನ ಮಗ. ಭಾರತ ಯುದ್ಧದಲ್ಲಿ ದುರ್ಯೋಧನನ ಪರವಾಗಿ ಹೋರಾಡಿ ಹದಿನಾಲ್ಕನೆಯ ದಿನದ ಯುದ್ಧದಲ್ಲಿ ಅರ್ಜುನನಿಂದ ಹತನಾದನು.
ದೀರ್ಘಾಯು : ಒಬ್ಬ ಅರಸು, ಕಳಿಂಗ ದೇಶದ ಅರಸನಾದ ಶ್ರುತಾಯುವಿನ ಮಗ. ಭಾರತ ಯುದ್ಧದಲ್ಲಿ ದುರ್ಯೋಧನನ ಪರವಾಗಿ ಹೋರಡಿ ಹದಿನಾಲ್ಕನೆಯ ದಿನದ ಯುದ್ಧದಲ್ಲಿ ಅರ್ಜುನನಿಂದ ಹತನಾದನು.
ಮೂಲ ...{Loading}...
ಹರಿಬದಯುತಾಯುವನು ಮಗುಳಿ
ಬ್ಬರು ಸುತರು ನಿಯತಾಯು ಘನಸಂ
ಗರದ ದೀರ್ಘಾಯುವನು ಕಳುಹಿದನಮರಮಂದಿರಕೆ
ಧುರಕೆ ನೂಕಿದವಂಗರಾಜನ
ಕರಿಘಟೆಗಳಂಬಟ್ಟ ಮೊದಲಾ
ದರಿ ಸುಭಟ ಸಂದೋಹ ಮುತ್ತಿತು ಮತ್ತೆ ಫಲುಗುಣನ ॥17॥
೦೧೮ ಕರಿಘಟೆಯನಮ್ಬಟ್ಟಭೂಪನ ...{Loading}...
ಕರಿಘಟೆಯನಂಬಟ್ಟಭೂಪನ
ಶಿರವನೆಚ್ಚನು ಪಾರಸೀಕರ
ತುರಗ ಕವಿಯಲು ಕುಸುರಿದರಿದನು ಕೋಟಿಸಂಖ್ಯೆಗಳ
ಬಿರುದ ಹೊಗಳಿಸಿಕೊಂಡು ದಾತಾ
ರರ ಹಣವ ಸಲೆ ತಿಂದು ಹೆಚ್ಚಿದ
ಹಿರಿಯ ಡೊಳ್ಳಿನ ರಾವುತರ ಕೆಡಹಿದನು ನಿಮಿಷದಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆ ಸಮೂಹವನ್ನು, ಅಂಬಟ್ಟ ಭೂಪನ ಶಿರವನ್ನು ಬಾಣಪ್ರಯೋಗಿಸಿ ಕತ್ತರಿಸಿದನು. ಪಾರಸಿಕರ ಕೋಟಿ ಸಂಖ್ಯೆಯ ತುರಗದಳ ಮೇಲೆ ಬೀಳಲು ಅವನ್ನು ನಾಶಮಾಡಿದನು. ಪ್ರಖ್ಯಾತರಾದ, ತಮ್ಮ ಒಡೆಯರ ಹಣವನ್ನು ತಿಂದು ಕೊಬ್ಬಿದ, ದೊಡ್ಡ ಹೊಟ್ಟೆಯ ರಾವುತರು ಆಕ್ರಮಣ ಮಾಡಲು ಅವರನ್ನು ನಿಮಿಷ ಮಾತ್ರದಲ್ಲಿ ನೆಲಕ್ಕೆ ಬೀಳಿಸಿದನು.
ಮೂಲ ...{Loading}...
ಕರಿಘಟೆಯನಂಬಟ್ಟಭೂಪನ
ಶಿರವನೆಚ್ಚನು ಪಾರಸೀಕರ
ತುರಗ ಕವಿಯಲು ಕುಸುರಿದರಿದನು ಕೋಟಿಸಂಖ್ಯೆಗಳ
ಬಿರುದ ಹೊಗಳಿಸಿಕೊಂಡು ದಾತಾ
ರರ ಹಣವ ಸಲೆ ತಿಂದು ಹೆಚ್ಚಿದ
ಹಿರಿಯ ಡೊಳ್ಳಿನ ರಾವುತರ ಕೆಡಹಿದನು ನಿಮಿಷದಲಿ ॥18॥
೦೧೯ ಇರಿದು ಚಕ್ರವ್ಯೂಹವನು ...{Loading}...
ಇರಿದು ಚಕ್ರವ್ಯೂಹವನು ಕುರಿ
ದರಿಯ ಮಾಡಿ ಕಿರೀಟಿಯದರಿಂ
ಹೊರಗೆ ಹಂಸವ್ಯೂಹದಲಿ ಕೆಣಕಿದನು ಕಾಳೆಗವ
ತುರುಗಿದವು ತೂರಂಬು ತಲೆಗಳ
ತರಿದು ಬಿಸುಟವು ಘಮ್ಮು ಘಲಿಲೆನೆ
ನಿರಿನಿಳಿಲುಗರೆದೊರಲಿದವು ಫಲುಗುಣನ ಶರಜಾಲ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಚಕ್ರವ್ಯೂಹವನ್ನು ಭೇದಿಸಿ, ಚೂರು ಚೂರು ಮಾಡಿ, ಅದರಿಂದ ಹೊರಗೆ ಹಂಸವ್ಯೂಹದಲ್ಲಿ ಯುದ್ಧವನ್ನು ಕೈಗೊಂಡನು. ಬಾಣ ಹಾರಿ ಬಂದು ಆವರಿಸಿ ಘಮ್-ಘಲಿಲ್, ಎಂದು ಶಬ್ದ ಮಾಡುತ್ತ ಶತ್ರು ಸೈನಿಕರ ತಲೆಗಳನ್ನು ಕತ್ತರಿಸಿ ಬಿಸುಟವು. ಪಾರ್ಥನ ಶರಜಾಲ ಒಂದರ ಹಿಂದೆ ಒಂದರಂತೆ ಬಂದು ಬಾಣದ ಗರಿಗಳ ಧ್ವನಿ ಜಯಭೇರಿಯಂತೆ ಝೇಂಕರಿಸಿತು.
ಪದಾರ್ಥ (ಕ.ಗ.ಪ)
ಕುರಿದರಿಯಮಾಡು-ಚೂರು ಚೂರುಮಾಡು
ಮೂಲ ...{Loading}...
ಇರಿದು ಚಕ್ರವ್ಯೂಹವನು ಕುರಿ
ದರಿಯ ಮಾಡಿ ಕಿರೀಟಿಯದರಿಂ
ಹೊರಗೆ ಹಂಸವ್ಯೂಹದಲಿ ಕೆಣಕಿದನು ಕಾಳೆಗವ
ತುರುಗಿದವು ತೂರಂಬು ತಲೆಗಳ
ತರಿದು ಬಿಸುಟವು ಘಮ್ಮು ಘಲಿಲೆನೆ
ನಿರಿನಿಳಿಲುಗರೆದೊರಲಿದವು ಫಲುಗುಣನ ಶರಜಾಲ ॥19॥
೦೨೦ ಬಿಲುರವದ ಮೊಳಗಿನಲಿ ...{Loading}...
ಬಿಲುರವದ ಮೊಳಗಿನಲಿ ಕೃಷ್ಣನ
ಫಲುಗುಣನ ಮೈಕಾಂತಿ ಮೇಘಾ
ವಳಿಗಳಲಿ ಹೊಂಗರಿಯ ಗಾಳಿಯ ಸರಳಸೋನೆಯಲಿ
ನಿಲುವ ಹಂಸವ್ಯೂಹವೆಲ್ಲಿಯ
ದೆಲೆ ಮಹೀಪತಿ ಕೇಳು ನಿನ್ನ
ಗ್ಗಳೆಯ ಸುಭಟರ ವಿಧಿಯನೆಂದನು ಸಂಜಯನು ನಗುತ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿನ ಠೇಂಕಾರದ ನಾದವೆಂಬ ಗುಡುಗಿನಲ್ಲಿ, ಕೃಷ್ಣಾರ್ಜುನರ ದೇಹದ ಕಾಂತಿಯೆಂಬ ಮೋಡಗಳ ರಾಸಿಯಲ್ಲಿ, ಆ ಬಾಣಗಳ ಹೊಂಬಣ್ಣದ ಗರಿಯಿಂದ ಹೊರಟ ಗಾಳಿಯೊಡಗೂಡಿದ ಬಾಣಗಳ ಮಳೆಗೆ ದ್ರೋಣರ ಹಂಸವ್ಯೂಹ ನಿಲ್ಲಲು ಸಾಧ್ಯವಾಗಲಿಲ್ಲ. ಎಲೆ ರಾಜನಾದ ಧೃತರಾಷ್ಟ್ರನೇ ನಿನ್ನ ಶ್ರೇಷ್ಠರಾದ ಯೋಧರ ಹಣೆ ಬರಹವನ್ನು ಕೇಳು ಎಂದು ಸಂಜಯನು ನಗುತ್ತ ನುಡಿದನು.
ಟಿಪ್ಪನೀ (ಕ.ಗ.ಪ)
ಇಲ್ಲಿನ ಅರ್ಜುನನ ಯುದ್ಧವನ್ನು ಮಳೆಗಾಲದ ಮೋಡ ಗುಡುಗು ಮಳೆಗೆ ಹೋಲಿಸಿ ವರ್ಣಿಸಿರುವುದು ಸೊಗಸಾಗಿದೆ. ಹೀಗೆ ಅರ್ಜುನನ ಬಾಣಗಳ ಸೋನೆ ಸುರಿಯತೊಡಗಿದರೆ ಶತ್ರುಸೈನ್ಯವೆಂಬ ಹಂಸಗಳೆಲ್ಲ ಹಾರಿ ಹೋಗದೆ ಹೇಗೆ ಉಳಿದವು ?
ಮೂಲ ...{Loading}...
ಬಿಲುರವದ ಮೊಳಗಿನಲಿ ಕೃಷ್ಣನ
ಫಲುಗುಣನ ಮೈಕಾಂತಿ ಮೇಘಾ
ವಳಿಗಳಲಿ ಹೊಂಗರಿಯ ಗಾಳಿಯ ಸರಳಸೋನೆಯಲಿ
ನಿಲುವ ಹಂಸವ್ಯೂಹವೆಲ್ಲಿಯ
ದೆಲೆ ಮಹೀಪತಿ ಕೇಳು ನಿನ್ನ
ಗ್ಗಳೆಯ ಸುಭಟರ ವಿಧಿಯನೆಂದನು ಸಂಜಯನು ನಗುತ ॥20॥
೦೨೧ ಅಳಿದುದೈನೂರರಸುಗಳು ಮು ...{Loading}...
ಅಳಿದುದೈನೂರರಸುಗಳು ಮು
ಮ್ಮುಳಿತವಾಯ್ತೈವತ್ತು ಸಾವಿರ
ಬಲುಗುದುರೆ ನುಗ್ಗಾದುದೊಂಬೈನೂರು ಭದ್ರಗಜ
ಅಳಿದುದಕೆ ಕೊಲೆಕೊತ್ತುವಡೆದ
ಗ್ಗಳ ಪದಾತಿಗೆ ಗಣನೆಯೆಲ್ಲೀ
ಬಲದ ಮೈವಶವವರ ಕೈವಶವೇನು ಹೊಸತೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಐದುನೂರು ರಾಜರುಗಳು ನಾಶವಾದರು. ಐವತ್ತು ಸಾವಿರ ಬಲಿಷ್ಠ ಕುದುರೆಗಳು ಇಲ್ಲವಾದವು. ಒಂಭೈನೂರು ಶುಭಲಕ್ಷಣಗಳಿಂದ ಕೂಡಿದ ಆನೆಗಳು ನುಚ್ಚುನೂರಾದುವು. ನಾಶವಾದದ್ದಕ್ಕೆ, ಗಾಯಗೊಂಡ ಕಾಲಾಳುಗಳ ಗಣನೆಗೆ ಕೊನೆಯೇ ಇಲ್ಲ. ಕೌರವ ಸೈನ್ಯದ ಭಟರು ಅರ್ಜುನನ ಕೈವಶವಾದದ್ದರಲ್ಲಿ ಹೊಸದೇನಿಲ್ಲ.
ಪದಾರ್ಥ (ಕ.ಗ.ಪ)
ಮುಮ್ಮುಳಿತ ವಾಯ್ತು-ರೂಪವಿಕಾರವಾದ ಸಾವುಂಟಾಯಿತು, ಕೊಲೆಗೊತ್ತುವಡೆದ-ಇರಿತಗೊಂಡ/ಗಾಯಗೊಂಡ,
ಮೂಲ ...{Loading}...
ಅಳಿದುದೈನೂರರಸುಗಳು ಮು
ಮ್ಮುಳಿತವಾಯ್ತೈವತ್ತು ಸಾವಿರ
ಬಲುಗುದುರೆ ನುಗ್ಗಾದುದೊಂಬೈನೂರು ಭದ್ರಗಜ
ಅಳಿದುದಕೆ ಕೊಲೆಕೊತ್ತುವಡೆದ
ಗ್ಗಳ ಪದಾತಿಗೆ ಗಣನೆಯೆಲ್ಲೀ
ಬಲದ ಮೈವಶವವರ ಕೈವಶವೇನು ಹೊಸತೆಂದ ॥21॥
೦೨೨ ಕೆಡಹಿದನು ವಿನ್ದಾನುವಿನ್ದರ ...{Loading}...
ಕೆಡಹಿದನು ವಿಂದಾನುವಿಂದರ
ನಡಗುದರಿಯಾಯ್ತಖಿಳಬಲದು
ಗ್ಗಡದ ವೀರರು ಕಾದಿ ಬಿದ್ದುದು ಕಾಯಮಾರಿಗಳು
ನಡುಹಗಲು ಪರಿಯಂತ ಕಾಳೆಗ
ಬಿಡದೆ ಬಲುಹಾಯ್ತಖಿಳ ವೇಗದ
ಕಡುಗುದುರೆ ಬಳಲಿದವು ಬಗೆಯದೆ ಹರಿಯ ಗರ್ಜನೆಯ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಂದಾನುವಿಂದರನ್ನು ಹೊಡೆದು ಕೆಡವಿದನು. ಇಡೀ ಸೈನ್ಯವನ್ನು ಮಾಂಸವನ್ನು ಚೂರು ಚೂರಾಗಿ ಕತ್ತರಿಸಿದಂತೆ ಕತ್ತರಿಸಿದನು. ಶ್ರೇಷ್ಠ ಯೋಧರು ದುಡ್ಡಿಗಾಗಿ ಶರೀರವನ್ನು ಮಾರಿಕೊಂಡು ಹೋರಾಡುವವರು ಯುದ್ಧ ಮಾಡಿ ಬಿದ್ದರು. ನಡುಹಗಲಿನವರೆಗೂ ಕಾಳಗ ನಿರಂತರವಾಗಿ ನಡೆದು ಭಯಂಕರವಾಯಿತು. ಕೃಷ್ಣನ ಗರ್ಜನೆಯನ್ನು ಗಮನಿಸದೆ ವೇಗದ ಬಲಿಷ್ಠ ಕುದುರೆಗಳು ಆಯಾಸಗೊಂಡವು.
ಪದಾರ್ಥ (ಕ.ಗ.ಪ)
ಅಡಗುದರಿ-ಮಾಂಸವನ್ನು ಕತ್ತರಿಸಿದಂತೆ ಚೂರು ಚೂರಾಗಿಸುವುದು,
ಕಾಯಮಾರಿ-ದುಡ್ಡಿಗಾಗಿ ಹೋರಾಡುವವರು.
ಟಿಪ್ಪನೀ (ಕ.ಗ.ಪ)
ವಿಂದ-ಅವಂತಿಯ ರಾಜಪುತ್ರ, ಈತನ ಸಹೋದರ ಅನುವಿಂದ, ಅರ್ಜುನನಿಂದ ಇಬ್ಬರೂ ಹತರಾದರು
ಮೂಲ ...{Loading}...
ಕೆಡಹಿದನು ವಿಂದಾನುವಿಂದರ
ನಡಗುದರಿಯಾಯ್ತಖಿಳಬಲದು
ಗ್ಗಡದ ವೀರರು ಕಾದಿ ಬಿದ್ದುದು ಕಾಯಮಾರಿಗಳು
ನಡುಹಗಲು ಪರಿಯಂತ ಕಾಳೆಗ
ಬಿಡದೆ ಬಲುಹಾಯ್ತಖಿಳ ವೇಗದ
ಕಡುಗುದುರೆ ಬಳಲಿದವು ಬಗೆಯದೆ ಹರಿಯ ಗರ್ಜನೆಯ ॥22॥
೦೨೩ ಭಾರಿಸಿತು ಮೈ ...{Loading}...
ಭಾರಿಸಿತು ಮೈ ಮುಷ್ಟಿಯಲಿ ಲುಳಿ
ಸಾರತರ ಲಂಬಿಸಿತು ತಾಗಿದ
ಕೂರಲಗು ಗರಿದೋರಿದವು ನಿಜ ಹಯದ ಮೈಗಳಲಿ
ಹಾರಿದರ್ಜುನನರಿದನಾ ದೈ
ತ್ಯಾರಿಗೆಂದನು ದೇವ ಬಿನ್ನಹ
ವಾರುವಂಗಳ ವಹಿಲತೆಯ ಚಿತ್ತೈಸಿದಿರೆಯೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಷ್ಠಿಯ ಏಟುಗಳಿಂದ ಮೈ ಭಾರವಾಗಿ ಸೈನಿಕರ ಚಲನೆ ಕುಗ್ಗಿತು. ತಾಗಿದ ಹರಿತವಾದ ಬಾಣ ಕುದುರೆಗಳ ಮೈಗಳಲ್ಲಿ ನಾಟಿಕೊಂಡು ಗರಿಯ ಭಾಗ ಹೊರಗೆ ಕಾಣಿಸಿದವು. ಪರಿಸ್ಥಿತಿಯನ್ನರಿತ ಅರ್ಜುನನು ರಥದಿಂದ ಹಾರಿ, ಕೃಷ್ಣನನ್ನು ಕುರಿತು…. ‘ದೇವ, ಪ್ರಾರ್ಥನೆ, ಕುದುರೆಗಳ ವೇಗ ಹೇಗೆ ಕುಗ್ಗಿತೆಂಬುದನ್ನು ಗಮನಿಸಿದಿರಿ ತಾನೇ ?’ ಎಂದನು.
ಪದಾರ್ಥ (ಕ.ಗ.ಪ)
ಲುಳಿಸಾರತರ ಲಂಬಿಸಿತು-ಗತಿ ಮಂದವಾಯಿತು.
ಮೂಲ ...{Loading}...
ಭಾರಿಸಿತು ಮೈ ಮುಷ್ಟಿಯಲಿ ಲುಳಿ
ಸಾರತರ ಲಂಬಿಸಿತು ತಾಗಿದ
ಕೂರಲಗು ಗರಿದೋರಿದವು ನಿಜ ಹಯದ ಮೈಗಳಲಿ
ಹಾರಿದರ್ಜುನನರಿದನಾ ದೈ
ತ್ಯಾರಿಗೆಂದನು ದೇವ ಬಿನ್ನಹ
ವಾರುವಂಗಳ ವಹಿಲತೆಯ ಚಿತ್ತೈಸಿದಿರೆಯೆಂದ ॥23॥
೦೨೪ ಕಡಿಯಣವ ಕಾರಿದವು ...{Loading}...
ಕಡಿಯಣವ ಕಾರಿದವು ಕಂದವ
ನಡಿಗಡಿಗೆ ಹಾಯ್ಕಿದವು ಸುತ್ತಿದ
ಕುಡಿನೊರೆಯ ಕಟವಾಯ ಲೋಳೆಯ ನಿಮಿರ್ದಮೈಲುಳಿಯ
ತಡಿನೆನೆದ ಬಲುಬೆಮರ ಘುಡುಘುಡು
ಘುಡಿಪ ನಾಸಾಶ್ವಾಸ ಲಹರಿಯ
ಕಡುಮನದ ರಥತುರಗ ಮಿಕ್ಕವು ಸರಳಸೂಠಿಯಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಯ ಬಾಯಿಗೆ ಕಟ್ಟಿದ ಕಡಿವಾಣವು ಹÉೂರಬಂದಿತು. ಕುತ್ತಿಗೆಯನ್ನು ಮತ್ತೆ ಮತ್ತೆ ಒಲೆಯತೊಡಗಿದವು. ಬಾಯಿತುದಿಯಿಂದ ಜೊಲ್ಲಿನ ನೊರೆಯು ಚಿಮ್ಮಲಾರಂಭಿಸಿತು. ಕುದುರೆಗಳು ಮೈ ಮುರಿಯುತ್ತಿದ್ದುವು. ಬೆವರ ನೀರಿನಿಂದ ಜೀನು ನೆನೆಯಿತು. ಬಾಣದ ಏಟುಗಳ ರಭಸದಿಂದ, ಉಸಿರಾಟದ ಘುಡುಘುಡಿಸುವ ಅಲೆಗಳಿಂದ ಆ ರಥದ ಕುದುರೆಗಳು ನಿರುತ್ಸಾಹಗೊಂಡವು.
ಪದಾರ್ಥ (ಕ.ಗ.ಪ)
ತಡಿ - ಜೀನು, ಹಲ್ಲಣ
ಕಂದ-ಕುತ್ತಿಗೆ, ಸ್ಕಂಧ, ಮೈಲುಳಿ-ಮೈಕಾಂತಿ,
ಮೂಲ ...{Loading}...
ಕಡಿಯಣವ ಕಾರಿದವು ಕಂದವ
ನಡಿಗಡಿಗೆ ಹಾಯ್ಕಿದವು ಸುತ್ತಿದ
ಕುಡಿನೊರೆಯ ಕಟವಾಯ ಲೋಳೆಯ ನಿಮಿರ್ದಮೈಲುಳಿಯ
ತಡಿನೆನೆದ ಬಲುಬೆಮರ ಘುಡುಘುಡು
ಘುಡಿಪ ನಾಸಾಶ್ವಾಸ ಲಹರಿಯ
ಕಡುಮನದ ರಥತುರಗ ಮಿಕ್ಕವು ಸರಳಸೂಠಿಯಲಿ ॥24॥
೦೨೫ ಗಮನ ತಟ್ಟೆಯವಾಯ್ತು ...{Loading}...
ಗಮನ ತಟ್ಟೆಯವಾಯ್ತು ವೇಗ
ಭ್ರಮಣ ಜಡವಾಯ್ತಡಿಗಡಿಗೆ ನಿ
ಗ್ಗಮದೊಳಗೆ ರಥವದ್ದುದರಿ ಭಾರಣೆಯ ಭರವಸದ
ಸಮತೆ ನಿಂದುದು ಸಾಹಸೀಕರು
ಭ್ರಮಿಸುತಿದೆ ಭಟಜಲಧಿ ತುರಗ
ಶ್ರಮವ ನಾವ್ ಪರಿಹರಿಸಿದಲ್ಲದೆ ಕಾದಲರಿದೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕುದುರೆಗಳ ಗಮನ ತಡವಾಯಿತು (ಸಾವಧಾನವಾಯಿತು). ಕುದುರೆಗಳ ವೇಗದ ಓಟ ಜಡವಾಯ್ತು. ಹೆಜ್ಜೆ ಹೆಜ್ಜೆಗೂ ರಥಗಳು ಆನೆಗಳ ಕೋರೆಗಳ ಮಧ್ಯದಲ್ಲಿ ಸಿಕ್ಕಿ ಬಿದ್ದವು. ಶತ್ರುಗಳ ನಿರ್ವಹಣೆಯ ನಂಬಿಕೆ ಕಡಿಮೆಯಾಯಿತು. ಸಾಹಸಿಗಳು ಭ್ರಮೆಗೆ ಒಳಗಾದರು. ಈ ಸೇನಾಶರಧಿಯಲ್ಲಿ ಕುದುರೆಗಳ ಶ್ರಮವನ್ನು ನಾವು ಪರಿಹರಿಸದಿದ್ದರೆ ಯುದ್ಧವನ್ನು ಮುಂದುವರಿಸುವುದು ಅಸಾಧ್ಯ” ಎಂದು ಪಾರ್ಥನು ಕೃಷ್ಣನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ತಟ್ಟೆಯ-ತಡ, ನಿಗ್ಗಮ-ಆನೆಯ ಕೋರೆ, ಭಾರಣೆ-ಜವಾಬ್ದಾರಿ, ಹೊಣೆ,
ಮೂಲ ...{Loading}...
ಗಮನ ತಟ್ಟೆಯವಾಯ್ತು ವೇಗ
ಭ್ರಮಣ ಜಡವಾಯ್ತಡಿಗಡಿಗೆ ನಿ
ಗ್ಗಮದೊಳಗೆ ರಥವದ್ದುದರಿ ಭಾರಣೆಯ ಭರವಸದ
ಸಮತೆ ನಿಂದುದು ಸಾಹಸೀಕರು
ಭ್ರಮಿಸುತಿದೆ ಭಟಜಲಧಿ ತುರಗ
ಶ್ರಮವ ನಾವ್ ಪರಿಹರಿಸಿದಲ್ಲದೆ ಕಾದಲರಿದೆಂದ ॥25॥
೦೨೬ ಉಣ್ಟು ಹೊಲ್ಲೆಹವಲ್ಲ ...{Loading}...
ಉಂಟು ಹೊಲ್ಲೆಹವಲ್ಲ ರಣದೊಳ
ಗೆಂಟುಮಡಿ ಬಳಲಿದವು ತೇಜಿಗ
ಳೀಂಟುವರೆ ನೀರಿಲ್ಲ ಮುರಿದರೆ ಬೆನ್ನ ಬಿಡರಿವರು
ಗೆಂಟರಲಿ ನಮ್ಮೊಡ್ಡ ಸುತ್ತಲು
ವೆಂಟಣಿಸಿ ರಿಪುಸೇನೆಯಿದೆ ಏ
ನುಂಟು ಮಾಡುವುಪಾಯವೆಂದನು ನಗುತ ಮುರವೈರಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿಜ, ನೀನು ಹೇಳಿದ್ದರಲ್ಲಿ ದೋಷವಿಲ್ಲ. ಕುದುರೆಗಳು ರಣದೊಳಗೆ ಎಂಟುಪಟ್ಟು ಬಳಲಿವೆ. ಕುದುರೆಗಳಿಗೆ ಕುಡಿಸಲು ನೀರಿಲ್ಲ. ಹಿಂತಿರುಗಿದರೆ ವೈರಿ ಭಟರು ಹಿಂಬಾಲಿಸದೇ ಇರುವುದಿಲ್ಲ. ಹತ್ತಿರದಲ್ಲೇ ನಮ್ಮ ಸೈನ್ಯದ ಸುತ್ತಲೂ ಶತ್ರುಸೇನೆ ಆಕ್ರಮಿಸಿ ನಿಂತಿದೆ. ಮಾಡುವ ಉಪಾಯವೇನು ?” ಎಂದು ಕೃಷ್ಣನು ನಗುತ್ತಾ ನುಡಿದನು.
ಪದಾರ್ಥ (ಕ.ಗ.ಪ)
ಈಂಟುವರೆ-ಕುಡಿಯಲು,
ಗೆಂಟಿರಲಿ-ಹತ್ತಿರದಲ್ಲಿ,
ವೆಂಟಿಣಿಸು-ಆಕ್ರಮಿಸು, ವ್ಯಾಪಿಸು,
ಮೂಲ ...{Loading}...
ಉಂಟು ಹೊಲ್ಲೆಹವಲ್ಲ ರಣದೊಳ
ಗೆಂಟುಮಡಿ ಬಳಲಿದವು ತೇಜಿಗ
ಳೀಂಟುವರೆ ನೀರಿಲ್ಲ ಮುರಿದರೆ ಬೆನ್ನ ಬಿಡರಿವರು
ಗೆಂಟರಲಿ ನಮ್ಮೊಡ್ಡ ಸುತ್ತಲು
ವೆಂಟಣಿಸಿ ರಿಪುಸೇನೆಯಿದೆ ಏ
ನುಂಟು ಮಾಡುವುಪಾಯವೆಂದನು ನಗುತ ಮುರವೈರಿ ॥26॥
೦೨೭ ದೇವ ಕಾಳೆಗ ...{Loading}...
ದೇವ ಕಾಳೆಗ ಬಲುಹು ಬಿಸಿಲಿನ
ಡಾವರಕೆ ರಥತುರಗವತಿ ನಿ
ರ್ಜೀವಿಯಾದವು ಹರಿಯ ಗಮನದ ಹದನನರಿಯೆನಲು
ಆ ವಿನೋದಿಗಳರಸ ಶರಣರ
ಕಾವ ಭರದಲಿ ದನುಜಕುಲ ವಿ
ದ್ರಾವಣನು ನಸುನಗುತ ಬೋಳೈಸಿದನು ತೇಜಿಗಳ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಪಾರ್ಥನು " ದೇವ…… ಕಾಳಗ ಬಲಿಷ್ಠವಾದುದು, ಬಿಸಿಲಿನ ಬೇಗೆಗೆ ರಥದ ಕುದುರೆಗಳು ನಿರ್ಜೀವಿಗಳಾಗಿವೆ. ಕುದುರೆಯ ಚಲನದ ರೀತಿಯ ಕಡೆಗೆ ಗಮನ ಹರಿಸಿರಿ ಎನಲಾಗಿ, ಆ ವಿನೋದಿಗಳರಸ ಕೃಷ್ಣನು ಭಕ್ತರನ್ನು ಕಾಯುವ ಭರದಲ್ಲಿ ಶತ್ರುಕುಲ ವಿನಾಶಕನಾದ ಕೃಷ್ಣನು ನಸುನಗುತ್ತ ಕುದುರೆಗಳನ್ನು ಸಂತೈಸಿದನು.
ಪದಾರ್ಥ (ಕ.ಗ.ಪ)
ಹರಿ-ಕುದುರೆ, ವಿದ್ರಾವಣ-ಓಡಿಸುವಿಕೆ, ನಾಶ,
ಮೂಲ ...{Loading}...
ದೇವ ಕಾಳೆಗ ಬಲುಹು ಬಿಸಿಲಿನ
ಡಾವರಕೆ ರಥತುರಗವತಿ ನಿ
ರ್ಜೀವಿಯಾದವು ಹರಿಯ ಗಮನದ ಹದನನರಿಯೆನಲು
ಆ ವಿನೋದಿಗಳರಸ ಶರಣರ
ಕಾವ ಭರದಲಿ ದನುಜಕುಲ ವಿ
ದ್ರಾವಣನು ನಸುನಗುತ ಬೋಳೈಸಿದನು ತೇಜಿಗಳ ॥27॥
೦೨೮ ದೇವ ವಾಘೆಯ ...{Loading}...
ದೇವ ವಾಘೆಯ ಹಿಡಿ ತುರಂಗಕೆ
ಜೀವನವನೀ ಕಳನೊಳಗೆ ಸಂ
ಭಾವಿಸುವೆ ನೋಡೆನುತ ಧುಮ್ಮಿಕ್ಕಿದನು ಧಾರುಣಿಗೆ
ತೀವಿ ತೆಗೆದನು ವಜ್ರಶರದಲಿ
ಡಾವರಿಸಿದನು ಕಳನೊಳುದಕದ
ಸೈವಳೆಯ ಸೆಲೆಯರಿದು ಚೌಕಕೆ ಸೀಳಿದನು ನೆಲನ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವ ಲಗಾಮನ್ನು ಹಿಡಿ, ಕುದುರೆಗಳಿಗೆ ಜೀವನಾಧಾರವಾದ ನೀರನ್ನು ಈ ಯುದ್ಧಭೂಮಿಯಲ್ಲಿ ಉಂಟು ಮಾಡುತ್ತೇನೆ. ನೋಡು” - ಎಂದು ಪಾರ್ಥನು ನೆಲಕ್ಕೆ ಧುಮುಕಿದನು. ರಣರಂಗದಲ್ಲಿ ನೀರಿನ ಒರತೆ ಇರುವ ಸ್ಥಳವನ್ನು ಗುರುತಿಸಿಕೊಂಡು ವಜ್ರಶರದಿಂದ ಒಣಗಿದ ನೆಲವನ್ನು ಸೀಳಿದನು. ನೀರು ಚಿಮ್ಮಿ ಹರಿಯುವಂತೆ ಮಾಡಿದನು.
ಪದಾರ್ಥ (ಕ.ಗ.ಪ)
ಸೈವೊಳೆ -ಒರತೆ
ಮೂಲ ...{Loading}...
ದೇವ ವಾಘೆಯ ಹಿಡಿ ತುರಂಗಕೆ
ಜೀವನವನೀ ಕಳನೊಳಗೆ ಸಂ
ಭಾವಿಸುವೆ ನೋಡೆನುತ ಧುಮ್ಮಿಕ್ಕಿದನು ಧಾರುಣಿಗೆ
ತೀವಿ ತೆಗೆದನು ವಜ್ರಶರದಲಿ
ಡಾವರಿಸಿದನು ಕಳನೊಳುದಕದ
ಸೈವಳೆಯ ಸೆಲೆಯರಿದು ಚೌಕಕೆ ಸೀಳಿದನು ನೆಲನ ॥28॥
೦೨೯ ನೋಡಿ ನರನುದ್ದಣ್ಡತನವನು ...{Loading}...
ನೋಡಿ ನರನುದ್ದಂಡತನವನು
ತೋಡುತೈದನೆ ತುರಗ ಲೀಲೆಗೆ
ಖೇಡಕುಳಿಯನು ಶೌರ್ಯಗರ್ವಿತನೈ ಶಿವಾ ಎನುತ
ಕೂಡೆ ಮಸಗಿತು ರಿಪುಚತುರ್ಬಲ
ಜೋಡು ಮಾಡಿತು ಕಡಹದಮರರು
ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಸಾಮಥ್ರ್ಯವನ್ನು ನೋಡಿ, ಕುದುರೆಗಳ ಸಂತೋಷಕ್ಕೋಸ್ಕರ ದಿಗಿಲುಗೊಳಿಸುವ ರೀತಿಯಲ್ಲಿ ಹಳ್ಳವನ್ನು ತೋಡಿ ನೀರನ್ನು ತೆಗೆದನಲ್ಲಾ ! ತನ್ನ ಶೌರ್ಯಕ್ಕಾಗಿ ಗರ್ವಿತನಾಗಿದ್ದಾನಲ್ಲಾ ! ಶಿವ, ಶಿವ ಎನ್ನುತ್ತಾ, ಶತ್ರುಗಳ ಚತುರಂಗ ಸೇನೆ ಗರ್ಜಿಸುತ್ತಾ ಆಕ್ರಮಿಸಿತು. ಸಮುದ್ರ ಮಥನವನ್ನು ನಡೆಸಿದ ಅಮರರು ಹೂಡಿದ ಮಂದರ ಪರ್ವತವನ್ನು ಸಮುದ್ರದ ಅಲೆಗಳ ಮಾಲೆ ಕವಿಯುವ ಹಾಗೆ ಅರ್ಜುನನ ಮೇಲೆ ಸೇನೆ ಆವರಿಸಿತು.
ಪದಾರ್ಥ (ಕ.ಗ.ಪ)
ಉದ್ದಂಡತನ-ಶೌರ್ಯ, ಖೇಡಕುಳಿ-ದಿಗಿಲುಗೊಳಿಸುವ ರೀತಿ, ಮಸಗು-ಗರ್ಜಿಸು ಕಡಹ-ಮಥನ,
ಮೂಲ ...{Loading}...
ನೋಡಿ ನರನುದ್ದಂಡತನವನು
ತೋಡುತೈದನೆ ತುರಗ ಲೀಲೆಗೆ
ಖೇಡಕುಳಿಯನು ಶೌರ್ಯಗರ್ವಿತನೈ ಶಿವಾ ಎನುತ
ಕೂಡೆ ಮಸಗಿತು ರಿಪುಚತುರ್ಬಲ
ಜೋಡು ಮಾಡಿತು ಕಡಹದಮರರು
ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ ॥29॥
೦೩೦ ಒದರಿ ಮೇಲಿಕ್ಕಿದರು ...{Loading}...
ಒದರಿ ಮೇಲಿಕ್ಕಿದರು ನಿಸ್ಸಾ
ಳದ ನಿರಂತರ ಸೂಳುವೊಯ್ಲಿನ
ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ
ಸದರವೀ ಹೊತ್ತೆನುತ ಗೆಲವಿನ
ಕುದುಕುಳಿಗಳುರವಣಿಸೆ ಕಾಣುತ
ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈರಿಗಳು ಅಬ್ಬರಿಸುತ್ತಾ ಆಕ್ರಮಿಸಿದರು. ರಣಭೇರಿಗಳು ನಿರಂತರವಾಗಿ ಮೊಳಗಿದವು. ಹೊಸದಾಗಿ ಸಾಣೆ ಹಿಡಿದ ಅಡಾಯುಧವೆಂಬ ಕತ್ತಿಗಳ ರಾಶಿ ಸಾಲು ಸಾಲಾಗಿ ಸಂದಣಿಸಿದವು. ಇದೇ ಸದವಕಾಶವೆನ್ನುತ್ತಾ ಗೆಲುವೆವೆಂಬ ಆವೇಶದಿಂದ ಮುನ್ನುಗ್ಗಿ ಬರುತ್ತಿದ್ದ ಶತ್ರುಸೈನ್ಯವನ್ನು ಕಾಣುತ್ತ ಆತಂಕಗೊಂಡು ಕೃಷ್ಣನು ಅರ್ಜುನನ ಮುಂದೆ ರಥವನ್ನು ತಂದು ನಿಲ್ಲಿಸಿದ.
ಪದಾರ್ಥ (ಕ.ಗ.ಪ)
ಅಡಾಯ-ಒಂದು ಬಗೆಯ ಕತ್ತಿ, ಕುದುಕುಳಿಗಳು-ಮತ್ಸರಿಗಳು, ಉರವಣಿಸು-ಸಂಭ್ರಮಿಸು, ಗದಗದಿಸು-ಆತಂಕಗೊಳ್ಳು
ಮೂಲ ...{Loading}...
ಒದರಿ ಮೇಲಿಕ್ಕಿದರು ನಿಸ್ಸಾ
ಳದ ನಿರಂತರ ಸೂಳುವೊಯ್ಲಿನ
ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ
ಸದರವೀ ಹೊತ್ತೆನುತ ಗೆಲವಿನ
ಕುದುಕುಳಿಗಳುರವಣಿಸೆ ಕಾಣುತ
ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ ॥30॥
೦೩೧ ಆಲಿಕಲುಗಳ ಕಡಿವಡುಕ್ಕಿನ ...{Loading}...
ಆಲಿಕಲುಗಳ ಕಡಿವಡುಕ್ಕಿನ
ಚೀಲಣದ ಹಂಗೇಕೆ ನಿಮ್ಮಡಿ
ಮೇಲುನೋಟವ ನೋಡೆ ರಥ ಪರಿಯಂತ ಕಾಳೆಗವೆ
ಹೋಳುಗಳೆವೆನು ಹುಗ್ಗಿಗರನೆನು
ತಾಳೊಳಗೆ ಬೆರಸಿದನು ಬರಿಗಾ
ಲಾಳುತನದಲಿ ಕಾದಿ ಕೊಂದನು ಕೋಟಿ ರಿಪುಭಟರ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಲಿಕಲ್ಲುಗಳನ್ನು ಕಡಿಯಲು ಉಕ್ಕಿನ ಉಳಿಯ ಹಂಗೇಕೆ ? ನಿಮ್ಮ ಕೃಪೆಯೊಂದೇ ಸಾಕು. ಮೇಲುನೋಟಕ್ಕೆ ರಥ ಏರಿ ಮಾಡಬೇಕಾದ ಯುದ್ಧವೇ ? ಸೊಕ್ಕಿದ ಇವರನ್ನು ತುಂಡು ಮಾಡುವೆನು” ಎನ್ನುತ್ತಾ ಅರ್ಜುನನು ಸೈನಿಕರೊಡನೆ ಬೆರೆತು ರಥರಹಿತನಾಗಿಯೇ ಪರಾಕ್ರಮದಿಂದ ಕಾದಿ ಕೋಟಿ ಸಂಖ್ಯೆಯಲ್ಲಿ ಶತ್ರು ಸೈನಿಕರನ್ನು ಕೊಂದನು.
ಪದಾರ್ಥ (ಕ.ಗ.ಪ)
ಚೀಲಣ-ಉಳಿ, ಹೋಳುಗಳೆವೆ-ಹೋಳು ಮಾಡು, ಕತ್ತರಿಸು, ಹುಗ್ಗಿಗರು-ಸೊಕ್ಕಿನವರು,
ಮೂಲ ...{Loading}...
ಆಲಿಕಲುಗಳ ಕಡಿವಡುಕ್ಕಿನ
ಚೀಲಣದ ಹಂಗೇಕೆ ನಿಮ್ಮಡಿ
ಮೇಲುನೋಟವ ನೋಡೆ ರಥ ಪರಿಯಂತ ಕಾಳೆಗವೆ
ಹೋಳುಗಳೆವೆನು ಹುಗ್ಗಿಗರನೆನು
ತಾಳೊಳಗೆ ಬೆರಸಿದನು ಬರಿಗಾ
ಲಾಳುತನದಲಿ ಕಾದಿ ಕೊಂದನು ಕೋಟಿ ರಿಪುಭಟರ ॥31॥
೦೩೨ ವರುಣ ಬಾಣದಲುದಕವನು ...{Loading}...
ವರುಣ ಬಾಣದಲುದಕವನು ತ
ತ್ಸರಸಿಯಲಿ ತುಂಬಿದನು ತಮಗವ
ಸರವಿದೆಂದೌಕುವ ಮಹೀಶರ ಮತ್ತೆ ಬರಿಕೈದು
ಕರಿ ರಥಾಶ್ವ ಪದಾತಿಯನು ಸಂ
ಗರದ ಮಧ್ಯದೊಳೊಬ್ಬನೇ ಸಂ
ಹರಿಸಿದನು ಶತಗುಣವನೊಂದೇ ಲೋಭ ಗೆಲುವಂತೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವರುಣ ಬಾಣದಿಂದ ಆ ಸರೋವರದಲ್ಲಿ ನೀರು ತುಂಬುವಂತೆ ಮಾಡಿದನು. ಇದೇ ಸಮಯವೆಂದು ಮೇಲೆ ಬಿದ್ದ ರಾಜರುಗಳನ್ನು ನಾಶಮಾಡಿದನು. ನೂರು ಗುಣಗಳನ್ನೂ ಲೋಭವೆಂಬ ಗುಣವೊಂದೇ ನಾಶಮಾಡುವ ಹಾಗೆ ಅರ್ಜುನನೊಬ್ಬನೇ ರಣರಂಗದ ಮಧ್ಯದಲ್ಲಿ ನಿಂತು ಆನೆ, ಕುದುರೆ, ರಥ, ಪದಾತಿಗಳನ್ನು ಸಂಹರಿಸಿದನು.
ಪದಾರ್ಥ (ಕ.ಗ.ಪ)
ಬರಿಕೈದು-ನಾಶಮಾಡು
ಮೂಲ ...{Loading}...
ವರುಣ ಬಾಣದಲುದಕವನು ತ
ತ್ಸರಸಿಯಲಿ ತುಂಬಿದನು ತಮಗವ
ಸರವಿದೆಂದೌಕುವ ಮಹೀಶರ ಮತ್ತೆ ಬರಿಕೈದು
ಕರಿ ರಥಾಶ್ವ ಪದಾತಿಯನು ಸಂ
ಗರದ ಮಧ್ಯದೊಳೊಬ್ಬನೇ ಸಂ
ಹರಿಸಿದನು ಶತಗುಣವನೊಂದೇ ಲೋಭ ಗೆಲುವಂತೆ ॥32॥
೦೩೩ ಕೊಳನ ತಡಿಯಲಿ ...{Loading}...
ಕೊಳನ ತಡಿಯಲಿ ಹೂಡಿದನು ಶರ
ವಳಯದಲಿ ಚಪ್ಪರವನಾತನ
ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ
ಕಳಚಿ ನೊಗನನು ತೆಗೆದು ಕಬ್ಬಿಯ
ನಿಳುಹಿ ಪಡಿವಾಘೆಗಳ ಸರಿದನು
ಕೊಳಿಸಿ ಪಿಡಿಯಲು ಪಾಡಿಗೈದವು ಮರಳಿದೆಡಬಲಕೆ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಳದ ತಡಿಯಲ್ಲಿ ಬಾಣ ಸಮೂಹಗಳಿಂದ ಚಪ್ಪರವನ್ನು ಹೂಡಿದ ಪಾರ್ಥನ ಸಾಮಥ್ರ್ಯವನ್ನು ಕಂಡು ಕೃಷ್ಣನು ಮೆಚ್ಚಿ ಪುನಃ ಪುನಃ ಹೊಗಳಿದನು. ಕುದುರೆಗಳ ನೊಗವನ್ನು ಕಳಚಿ ಕಡಿವಾಣವನ್ನು ಹೊರೆ ತೆಗೆದು, ಲಗಾಮನ್ನು ಸಡಿಲಗೊಳಿಸಿ ಅನುಗೊಳಿಸಿ. ಹಿಡಿಯಲಾಗಿ ಕುದುರೆಗಳು ತಮ್ಮಷ್ಟಕ್ಕೆ ತಾವು ಎಡಬಲಕ್ಕೆ ತಿರುಗಿ ಮೈ ಕೊಡಹಿಕೊಂಡುವು.
ಪದಾರ್ಥ (ಕ.ಗ.ಪ)
ತಡಿ-ತೀರ, ಕಬ್ಬಿ-ಕಡಿವಾಣ, ಪಡಿವಾಘೆ-ಲಗಾಮು
ಮೂಲ ...{Loading}...
ಕೊಳನ ತಡಿಯಲಿ ಹೂಡಿದನು ಶರ
ವಳಯದಲಿ ಚಪ್ಪರವನಾತನ
ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ
ಕಳಚಿ ನೊಗನನು ತೆಗೆದು ಕಬ್ಬಿಯ
ನಿಳುಹಿ ಪಡಿವಾಘೆಗಳ ಸರಿದನು
ಕೊಳಿಸಿ ಪಿಡಿಯಲು ಪಾಡಿಗೈದವು ಮರಳಿದೆಡಬಲಕೆ ॥33॥
೦೩೪ ಮುರುಹಿ ನಿನ್ದವು ...{Loading}...
ಮುರುಹಿ ನಿಂದವು ಕೊಡಹಿದವು ಕೇ
ಸರವನಧ್ವ ಶ್ರಮದ ಢಗೆ ಪರಿ
ಹರಿಸೆ ನೀರೊಳು ಹೊಗಿಸಿದನು ಹರಿ ಹಯ ಚತುಷ್ಟಯವ
ಸರಸಿಯಲಿ ಮೊಗವಿಟ್ಟು ಮೊಗೆದವು
ವರ ಜಲವನೆರಡಳ್ಳೆ ಹಿಗ್ಗಲು
ಮುರುಹಿದವು ಮುಖವನು ಮುರಾಂತಕ ತಡಿಯನಡರಿಸಿದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳು ತಿರುಗಿ ನಿಂತವು. ಕತ್ತಿನ ಕೂದಲನ್ನು ಕೊಡಹಿದವು. ಸಮರದ ಶ್ರಮ ಪರಿಹಾರ ಮಾಡುವ ಸಲುವಾಗಿ ಕೃಷ್ಣನು ನಾಲ್ಕು ಕುದುರೆಗಳನ್ನೂ ಸರೋವರದ ನೀರಿನಲ್ಲಿ ಪ್ರವೇಶ ಮಾಡಿಸಿದ. ಅವು ಮೊಗವಿಟ್ಟು ವರಜಲವನ್ನು ಕುಡಿದವು. ಎರಡು ಪಕ್ಕೆಗಳೂ ಹಿಗ್ಗುವಂತೆ ನೀರನ್ನು ಹೀರಿ ಮುಖವನ್ನು ತಿರುಗಿಸಿದವು. ಮುರಾಂತಕನಾದ ಕೃಷ್ಣನು ಅವುಗಳನ್ನು ಕೊಳದ ತೀರಕ್ಕೆ ಕರೆತಂದನು.
ಪದಾರ್ಥ (ಕ.ಗ.ಪ)
ಕೇಸರ-ಕುದುರೆಗಳ ಕತ್ತಿನ ಜೂಲು ಕೂದಲು, ಅಧ್ವಶ್ರಮ-ಮಾರ್ಗನಡೆದ ಆಯಾಸ,
ಮೊಗೆ-ಕುಡಿ,
ಅಡರಿಸಿದ-ಹತ್ತಿಸಿದ.
ಮೂಲ ...{Loading}...
ಮುರುಹಿ ನಿಂದವು ಕೊಡಹಿದವು ಕೇ
ಸರವನಧ್ವ ಶ್ರಮದ ಢಗೆ ಪರಿ
ಹರಿಸೆ ನೀರೊಳು ಹೊಗಿಸಿದನು ಹರಿ ಹಯ ಚತುಷ್ಟಯವ
ಸರಸಿಯಲಿ ಮೊಗವಿಟ್ಟು ಮೊಗೆದವು
ವರ ಜಲವನೆರಡಳ್ಳೆ ಹಿಗ್ಗಲು
ಮುರುಹಿದವು ಮುಖವನು ಮುರಾಂತಕ ತಡಿಯನಡರಿಸಿದ ॥34॥
೦೩೫ ಕರತಳದಿ ಮೈದಡವಿ ...{Loading}...
ಕರತಳದಿ ಮೈದಡವಿ ಗಾಯದ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ಕರುಣದಲಿ ಚಪ್ಪರಿಸಿದನು ಕಂಧರವ
ಹರುಷ ಮಿಗೆ ಕೊರಳೆತ್ತಿ ನಯನವ
ತಿರುಹಿ ದೇವನ ನೋಡುತಿರ್ದುವು
ತುರಗ ನಾಲ್ಕರ ಪುಣ್ಯ ಸನಕಾದಿಗಳಿಗಿಲ್ಲೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಕೈಗಳಿಂದ ಮೈದಡವಿ ಸವರಿ, ಗಾಯ ಮಾಡಿ ನೆಟ್ಟಿದ್ದ ಬಾಣಗಳನ್ನು ಕಿತ್ತು, ಔಷಧಿಯನ್ನು ಲೇಪಿಸಿ, ಕರುಣೆಯಿಂದ, ಪ್ರೀತಿಯಿಂದ ಕುದುರೆಗಳ ಕುತ್ತಿಗೆಯನ್ನು ಚಪ್ಪರಿಸಿದನು. ಸಂತೋಷ ಹೆಚ್ಚಾಗಲಾಗಿ ಕುದುರೆಗಳು ಕೊರಳೆತ್ತಿ, ಕಣ್ಣುಗಳನ್ನು ತಿರುಗಿಸಿ ದೇವನಾದ ಕೃಷ್ಣನನ್ನು ನೋಡುತ್ತಿದ್ದುವು. “ಆ ನಾಲ್ಕು ಕುದುರೆಗಳ ಪುಣ್ಯ ಸನಕಾದಿಗಳಿಗೂ ಇಲ್ಲ ಎಂಬುದು ಸತ್ಯ” ಎಂದು ಸಂಜಯ ನುಡಿದ.
ಪದಾರ್ಥ (ಕ.ಗ.ಪ)
ಕಂಧರ-ಕುತ್ತಿಗೆ
ಮೂಲ ...{Loading}...
ಕರತಳದಿ ಮೈದಡವಿ ಗಾಯದ
ಸರಳ ಕಿತ್ತೌಷಧಿಯ ಲೇಪವ
ನೊರಸಿದನು ಕರುಣದಲಿ ಚಪ್ಪರಿಸಿದನು ಕಂಧರವ
ಹರುಷ ಮಿಗೆ ಕೊರಳೆತ್ತಿ ನಯನವ
ತಿರುಹಿ ದೇವನ ನೋಡುತಿರ್ದುವು
ತುರಗ ನಾಲ್ಕರ ಪುಣ್ಯ ಸನಕಾದಿಗಳಿಗಿಲ್ಲೆಂದ ॥35॥
೦೩೬ ಮೊಗಕೆ ಭಾಣವ ...{Loading}...
ಮೊಗಕೆ ಭಾಣವ ಕಟ್ಟಿ ನೆಳಲಲಿ
ಬಿಗಿದು ಫಲುಗುಣ ಸಹಿತ ಕೊಳನನು
ನಗುತ ಹೊಕ್ಕನು ನೋಡುತಿದ್ದುದು ಕೂಡೆ ಕುರುಸೇನೆ
ಬಿಗಿದ ಕತ್ತಲೆ ದೂರದಲಿ ದೀ
ವಿಗೆಯ ಸುತ್ತಲು ಕಟ್ಟಿ ನಿಂದವೊ
ಲಗಣಿತ ಪ್ರತಿಸುಭಟರಿದ್ದುದು ನರನ ಬಳಸಿನಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳ ಬಾಯಿಗೆ ಆಹಾರದ ಚೀಲವನ್ನು ಕಟ್ಟಿ, ನೆರಳಿನಲ್ಲಿ ಅವುಗಳನ್ನು ಕಟ್ಟಿ, ಅರ್ಜುನನ ಜೊತೆ ಕೃಷ್ಣನು ಕೊಳವನ್ನು ಪ್ರವೇಶಿಸಿದ ದೃಶ್ಯವನ್ನು ಕುರು ಸೇನೆ ನೋಡುತ್ತಿತ್ತು. ಒಂದು ದೀಪದ ಸುತ್ತಲೂ ದಟ್ಟವಾದ ಕತ್ತಲೆ ಆವರಿಸಿ ನಿಂತಂತೆ ಲೆಕ್ಕವಿಲ್ಲದಷ್ಟು ಶತ್ರುಸೈನಿಕರು ಪಾರ್ಥನನ್ನು ಬಳಸಿ ನಿಂತರು.
ಪದಾರ್ಥ (ಕ.ಗ.ಪ)
ಭಾಣ-ಕುದುರೆಯ ಬಾಯಿಗೆ ಕಟ್ಟುವ ಆಹಾರದ ಚೀಲ / ಹುಲ್ಲಿನ ಚೀಲ,
ಮೂಲ ...{Loading}...
ಮೊಗಕೆ ಭಾಣವ ಕಟ್ಟಿ ನೆಳಲಲಿ
ಬಿಗಿದು ಫಲುಗುಣ ಸಹಿತ ಕೊಳನನು
ನಗುತ ಹೊಕ್ಕನು ನೋಡುತಿದ್ದುದು ಕೂಡೆ ಕುರುಸೇನೆ
ಬಿಗಿದ ಕತ್ತಲೆ ದೂರದಲಿ ದೀ
ವಿಗೆಯ ಸುತ್ತಲು ಕಟ್ಟಿ ನಿಂದವೊ
ಲಗಣಿತ ಪ್ರತಿಸುಭಟರಿದ್ದುದು ನರನ ಬಳಸಿನಲಿ ॥36॥
೦೩೭ ಚರಣ ವದನವ ...{Loading}...
ಚರಣ ವದನವ ತೊಳೆದು ನಿರ್ಮಳ
ವರಜಲವನೀಂಟಿದರು ನಿರುಪಮ
ಪರಮ ಕರುಣಾರ್ಣವನು ಮೈದುನಸಹಿತ ಸರಸಿಯಲಿ
ಪರಿಹೃತಶ್ರಮನಾಗಿ ಹರುಷೋ
ತ್ಕರುಷದಲಿ ಹರಿ ಕಳೆದುಕೊಂಡನು
ನರಗೆ ಕೊಟ್ಟನು ಹೋಳಿಸಿದ ಕರ್ಪುರದ ವೀಳೆಯವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನುಪಮ ಕರುಣಾ ಸಮುದ್ರನಾದ ಕೃಷ್ಣನು ತನ್ನ ಮೈದುನ ಅರ್ಜುನನ ಸಹಿತ ಸರೋವರದ ನೀರಿನಲ್ಲಿ ಕೈಕಾಲು ಮುಖಗಳನ್ನು ತೊಳೆದು ಪುಣ್ಯ ಜಲವನ್ನು ಕುಡಿದು ಶ್ರಮವನ್ನು ಪರಿಹರಿಸಿಕೊಂಡನು. ನಂತರ ಹರ್ಷೋತ್ಸಾಹದಿಂದ ಕೃಷ್ಣನು ಅರ್ಜುನನಿಗೆ ಕರ್ಪೂರದ ಚೂರುಗಳಿದ್ದ ವೀಳಯವನ್ನು ಕೊಟ್ಟನು.
ಮೂಲ ...{Loading}...
ಚರಣ ವದನವ ತೊಳೆದು ನಿರ್ಮಳ
ವರಜಲವನೀಂಟಿದರು ನಿರುಪಮ
ಪರಮ ಕರುಣಾರ್ಣವನು ಮೈದುನಸಹಿತ ಸರಸಿಯಲಿ
ಪರಿಹೃತಶ್ರಮನಾಗಿ ಹರುಷೋ
ತ್ಕರುಷದಲಿ ಹರಿ ಕಳೆದುಕೊಂಡನು
ನರಗೆ ಕೊಟ್ಟನು ಹೋಳಿಸಿದ ಕರ್ಪುರದ ವೀಳೆಯವ ॥37॥
೦೩೮ ರಾಗ ಮಿಗೆ ...{Loading}...
ರಾಗ ಮಿಗೆ ಬ್ರಹ್ಮಾಂಡಕೋಟಿಯ
ನಾಗುಮಾಡುವನಲಸಿದರೆ ಮುನಿ
ದಾಗ ನುಂಗುವುದೊಂದು ಲೀಲೆ ಮನುಷ್ಯದೇಹದಲಿ
ಲೋಗರೆಂದುದನೈದೆ ಮಾಡುವ
ನಾಗಿ ಜನಿಸಿಹುದೊಂದು ಲೀಲಾ
ಸಾಗರನು ಲಕ್ಷ್ಮೀಪತಿಗೆ ನಮೊ ಎಂದುದಮರಗಣ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹರ್ಷ ಹೆಚ್ಚಾದಾಗ ಬ್ರಹ್ಮಾಂಡ ಕೋಟಿಯನ್ನು ಸೃಷ್ಟಿಸುವ ಹಾಗೂ ಬೇಸರಗೊಂಡು ಮುನಿದಾಗ ಅದನ್ನು ನುಂಗುವಂಥಹದು ಕೃಷ್ಣನ ಲೀಲೆ. ಅಂತಹ ಕೃಷ್ಣನು ಮನುಷ್ಯದೇಹವನ್ನು ತಳೆದು ಲೋಕದ ಜನ ಹೇಳಿದಂತೆ ಕೆಲಸ ಮಾಡುವ ಸಾಮಾನ್ಯನಂತೆ ಜನಿಸಿದ್ದೂ ಒಂದು ಲೀಲೆಯಾಗಿದೆ. ಈ ಲೀಲಾ ಸಾಗರನಾದ ಲಕ್ಷ್ಮೀ ಪತಿಗೆ ದೇವ ಸಮೂಹ ನಮೋ ಎಂದಿತು.
ಪದಾರ್ಥ (ಕ.ಗ.ಪ)
ರಾಗ-ಸಂತೋಷ, ಅಲಸು-ಬೇಸರ
ಮೂಲ ...{Loading}...
ರಾಗ ಮಿಗೆ ಬ್ರಹ್ಮಾಂಡಕೋಟಿಯ
ನಾಗುಮಾಡುವನಲಸಿದರೆ ಮುನಿ
ದಾಗ ನುಂಗುವುದೊಂದು ಲೀಲೆ ಮನುಷ್ಯದೇಹದಲಿ
ಲೋಗರೆಂದುದನೈದೆ ಮಾಡುವ
ನಾಗಿ ಜನಿಸಿಹುದೊಂದು ಲೀಲಾ
ಸಾಗರನು ಲಕ್ಷ್ಮೀಪತಿಗೆ ನಮೊ ಎಂದುದಮರಗಣ ॥38॥
೦೩೯ ಸೆಳೆದು ಪಡಿವಾಘೆಯಲಿ ...{Loading}...
ಸೆಳೆದು ಪಡಿವಾಘೆಯಲಿ ತುರಗಾ
ವಳಿಯನನುಕೊಳಿಸಿದನು ಹರಿ ಕೈ
ಚಳಕದಲಿ ತುಡುಕಿದನು ಫಲುಗುಣನತುಳ ಗಾಂಡಿವವ
ಉಲಿದುದಾಹವ ಸೇನೆ ರಿಪುಮಂ
ಡಳಿಕರೋರಣಗೆಡಲು ರಣಮಂ
ಡಲದ ಪದ್ಮವ್ಯೂಹದಲಿ ಕೆಣಕಿದನು ಕಾಳೆಗವ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಲಗಾಮನ್ನು ಸೆಳೆದು ಕುದುರೆಗಳನ್ನು ಯುದ್ಧಕ್ಕೆ ಸಿದ್ಧಗೊಳಿಸಿದನು. ಅರ್ಜುನನು ತನ್ನ ಕೈಚಳಕದಿಂದ ಗಾಂಡೀವ ಧನಸ್ಸಿಗೆ ಕೈಹಾಕಿದನು. ಯುದ್ಧದ ಸೇನೆಯ ಆರ್ಭಟ ಮತ್ತೆ ಪ್ರಾರಂಭವಾಗಿ ಶತ್ರು ರಾಜರು ಅಸ್ತವ್ಯಸ್ತರಾಗಲು, ರಣರಂಗದ ಪದ್ಮವ್ಯೂಹದಲ್ಲಿ ಅಜುನನು ಕಾಳಗವನ್ನು ಕೈಗೊಂಡನು.
ಮೂಲ ...{Loading}...
ಸೆಳೆದು ಪಡಿವಾಘೆಯಲಿ ತುರಗಾ
ವಳಿಯನನುಕೊಳಿಸಿದನು ಹರಿ ಕೈ
ಚಳಕದಲಿ ತುಡುಕಿದನು ಫಲುಗುಣನತುಳ ಗಾಂಡಿವವ
ಉಲಿದುದಾಹವ ಸೇನೆ ರಿಪುಮಂ
ಡಳಿಕರೋರಣಗೆಡಲು ರಣಮಂ
ಡಲದ ಪದ್ಮವ್ಯೂಹದಲಿ ಕೆಣಕಿದನು ಕಾಳೆಗವ ॥39॥
೦೪೦ ಇದು ಕೃತಾನ್ತನ ...{Loading}...
ಇದು ಕೃತಾಂತನ ಸೀಮೆಗಳವ
ಟ್ಟುದು ಸುಯೋಧನನೃಪತಿ ವಿಗತಾ
ಭ್ಯುದಯನಾದನೆನುತ್ತ ಕರ್ಣಾದಿಗಳು ಕಳವಳಿಸೆ
ಹೆದರೆದೆಯ ಹೇರಾಳ ವೀರರ
ಕದನದನುವನು ಕಂಡು ಕಡುಗೋ
ಪದಲಿ ಕೌರವರಾಯ ಸಮರೋದ್ಯೋಗಪರನಾದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಮೃತ್ಯು ದೇವತೆಯ ಸೀಮೆಗೆ ಒಳಪಟ್ಟದ್ದು, ಸುಯೋಧನ ನೃಪತಿ ಅಭ್ಯುದಯವನ್ನು ಕಳೆದುಕೊಂಡವನಾದನು ಎನ್ನುತ್ತಾ ಕರ್ಣಾದಿಗಳು ಕಳವಳಿಸುತ್ತಿದ್ದರು. ಪುಕ್ಕಲಾದ ಅಸಂಖ್ಯ ವೀರರ ಕದನದ ರೀತಿಯನ್ನು ಕಂಡು ಅತ್ಯಂತ ಕೋಪದಿಂದ ಕೌರವರಾಯನು ಸ್ವತಃ ಸಮರಕ್ಕೆ ಸಿದ್ಧನಾದನು.
ಮೂಲ ...{Loading}...
ಇದು ಕೃತಾಂತನ ಸೀಮೆಗಳವ
ಟ್ಟುದು ಸುಯೋಧನನೃಪತಿ ವಿಗತಾ
ಭ್ಯುದಯನಾದನೆನುತ್ತ ಕರ್ಣಾದಿಗಳು ಕಳವಳಿಸೆ
ಹೆದರೆದೆಯ ಹೇರಾಳ ವೀರರ
ಕದನದನುವನು ಕಂಡು ಕಡುಗೋ
ಪದಲಿ ಕೌರವರಾಯ ಸಮರೋದ್ಯೋಗಪರನಾದ ॥40॥
೦೪೧ ತಳತವಮಳಚ್ಛತ್ರ ಚಾಮರ ...{Loading}...
ತಳತವಮಳಚ್ಛತ್ರ ಚಾಮರ
ವಲುಗಿದವು ನವಹೇಮ ದಂಡದ
ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ
ಮೊಳಗಿದವು ನಿಸ್ಸಾಳ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರೆ ಬಿರುದ ಹೊಗಳಿತು ಭಟ್ಟ ಸಂದೋಹ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ವೇತಛತ್ರವನ್ನು ಅರಳಿಸಿದರು. ಚಾಮರವು ಬೀಸಲಾಗಿ, ಹೊಸ ಬಂಗಾರದ ದಂಡದ ಧ್ವಜದ ತುದಿಹಲಗೆಯಲ್ಲಿ (ದುರ್ಯೋಧನನ ಚಿಹ್ನೆಯಾದ) ಸರ್ಪದ ಸಂಕೇತವನ್ನು ಹಾಕಿದರು. ರಣಭೇರಿಗಳು ಮೊಳಗಿದವು. ಚಕ್ರವರ್ತಿಯ ಬಿರುದಾವಳಿಗಳ ಕಹಳೆಗಳು ಊದಿದವು. ರಣವಾದ್ಯಗಳ ಧ್ವನಿ ರಣರಂಗದಲ್ಲೆಲ್ಲಾ ಮೊಳಗುತ್ತಿರಲು ಹೊಗಳು ಭಟರ ಗುಂಪು ರಾಜನ ಬಿರುದುಗಳನ್ನು ಹೊಗಳಿತು.
ಪದಾರ್ಥ (ಕ.ಗ.ಪ)
ತಳಿತ-ತಳ್ತ-ಅರಳಿಸಿದ,
ಮೂಲ ...{Loading}...
ತಳತವಮಳಚ್ಛತ್ರ ಚಾಮರ
ವಲುಗಿದವು ನವಹೇಮ ದಂಡದ
ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ
ಮೊಳಗಿದವು ನಿಸ್ಸಾಳ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರೆ ಬಿರುದ ಹೊಗಳಿತು ಭಟ್ಟ ಸಂದೋಹ ॥41॥
೦೪೨ ತಳಿತುದರನೆಲೆ ರಾಯ ...{Loading}...
ತಳಿತುದರನೆಲೆ ರಾಯ ಥಟ್ಟಿನ
ಕಳವಳಿಗರುರವಣಿಸಿದರು ಮುರಿ
ದೊಳಸರಿವ ಮನ್ನೆಯರ ಹೊಯ್ದರು ಮುಂದೆ ಕಂಬಿಯಲಿ
ಉಲಿವ ಪಾಠಕರೋದುಗಳ ಕಳ
ಕಳಿಕೆಯಲಿ ನೃಪ ಬಂದು ಗುರುವಿನ
ದಳವ ಹೊಕ್ಕನು ನಮಿಸಿ ಬಿನ್ನಹಮಾಡಿದನು ನಗುತ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರಿಗೆ ಕಾಣಿಸಿಕೊಂಡ ಯೋಧರನ್ನು ದುರ್ಯೋಧನನ ಸೇನೆಯ ಯೋಧರು ಸಂಭ್ರಮದಿಂದ ಎದುರಿಸಿದರು. ಸೋತು ಹಿಮ್ಮೆಟ್ಟಿದ ಗೌರವಾನ್ವಿತರನ್ನೂ ಸಹ ಆಯುಧಗಳಿಂದ ಹೊಡೆದರು. ಹೊಗಳುಭಟರ ಬಿರುದುಗಳ ಕೊಂಡಾಟದ ಧ್ವನಿಯಾಗುತ್ತಿರಲು ರಾಜನಾದ ದುರ್ಯೋಧನನು ಗುರು ದ್ರೋಣರ ಸೇನಾದಳವನ್ನು ಪ್ರವೇಶಿಸಿ, ನಮಸ್ಕಾರ ಮಾಡಿ ನಗುತ್ತ ಪ್ರಾರ್ಥಿಸಿದನು.
ಪದಾರ್ಥ (ಕ.ಗ.ಪ)
ತಳಿತು-ಕಾಣು, ತೋರು, ಕಂಬಿ-ಆಯುಧ,
ಮೂಲ ...{Loading}...
ತಳಿತುದರನೆಲೆ ರಾಯ ಥಟ್ಟಿನ
ಕಳವಳಿಗರುರವಣಿಸಿದರು ಮುರಿ
ದೊಳಸರಿವ ಮನ್ನೆಯರ ಹೊಯ್ದರು ಮುಂದೆ ಕಂಬಿಯಲಿ
ಉಲಿವ ಪಾಠಕರೋದುಗಳ ಕಳ
ಕಳಿಕೆಯಲಿ ನೃಪ ಬಂದು ಗುರುವಿನ
ದಳವ ಹೊಕ್ಕನು ನಮಿಸಿ ಬಿನ್ನಹಮಾಡಿದನು ನಗುತ ॥42॥
೦೪೩ ನರನ ಬಲುಗೈತನವನೀ ...{Loading}...
ನರನ ಬಲುಗೈತನವನೀ ಮೋ
ಹರದ ಹೆಂಗುಸುತನವ ನೀವವ
ಧರಿಸಿದಿರೆ ಜಗಭಂಡರಿವರಿಗೆ ಮತ್ತೆ ಬಿರುದುಗಳೆ
ತುರಗ ನೀರಡಸಿದರೆ ರಣದಲಿ
ಸರಸಿಯನು ತೋಡಿದನು ನಮ್ಮನು
ಸರಕುಮಾಡನು ಕಂಡು ಬಲ್ಲಿರೆ ಮುನ್ನ ನೀವೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನನ ಪರಾಕ್ರಮವನ್ನು ಹಾಗೂ ಸೈನ್ಯದ ಹೆಂಗಸುತನವನು (ಷಂಡತನ) ನೀವು ಗಮನಿಸಿದಿರಿ ಅಲ್ಲವೇ? ಜಗತ್ತಿನಲ್ಲೇ ಭಂಡರಾದ ಇವರಿಗೆ ಬಿರುದುಗಳೇಕೆ ? ಕುದುರೆಗೆ ಬಾಯಾರಿಕೆಯಾಗಲು ರಣಭೂಮಿಯಲ್ಲಿಯೇ ಸರೋವರವನ್ನು ತೋಡಿದನು. ನಮ್ಮನ್ನು ಲೆಕ್ಕಿಸಲೇ ಇಲ್ಲ ನೋಡಿದಿರಾ ? ಇಂಥ ಶೂರನನ್ನು ಹಿಂದೆ ಎಂದಾದರೂ ಕಂಡಿದ್ದೀರಾ ನೀವು ?” ಎಂದನು.
ಪದಾರ್ಥ (ಕ.ಗ.ಪ)
ಸರಕು-ಲಕ್ಷ್ಯ
ಮೂಲ ...{Loading}...
ನರನ ಬಲುಗೈತನವನೀ ಮೋ
ಹರದ ಹೆಂಗುಸುತನವ ನೀವವ
ಧರಿಸಿದಿರೆ ಜಗಭಂಡರಿವರಿಗೆ ಮತ್ತೆ ಬಿರುದುಗಳೆ
ತುರಗ ನೀರಡಸಿದರೆ ರಣದಲಿ
ಸರಸಿಯನು ತೋಡಿದನು ನಮ್ಮನು
ಸರಕುಮಾಡನು ಕಂಡು ಬಲ್ಲಿರೆ ಮುನ್ನ ನೀವೆಂದ ॥43॥
೦೪೪ ಅರಸ ಮೃತಸಞ್ಜೀವಿನಿಯ ...{Loading}...
ಅರಸ ಮೃತಸಂಜೀವಿನಿಯ ಬಲು
ಹಿರಲು ಬಹಳವ್ಯಾಧಿ ಮಾಡುವ
ದುರುಳತನ ತಾನೇನು ನರರಿಗೆ ದಿಟ ವಿಚಾರಿಸಲು
ಪರಮಪುರುಷೋತ್ತಮ ಮುಕುಂದನ
ಕರುಣಕವಚದ ಬಲದಿನಮರಾ
ಸುರರ ಬಗೆಯನು ಪಾರ್ಥನಿದು ನಮ್ಮಾರ ಹವಣೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸತ್ತರೂ ಬದುಕಿಸುವಂತಹ ಸಾಮಥ್ರ್ಯವಿರುವಾಗ ಎಂತಹ ಘೋರ ವ್ಯಾಧಿ ತಾನೇ ಏನು ಕೆಟ್ಟದ್ದು ಮಾಡೀತು ? ಪರಮ ಪುರುಷೋತ್ತಮ ಮುಕುಂದನ ಕರುಣ ಕವಚದ ಬಲ, ಬೆಂಬಲವಿರುವಾಗ ಪಾರ್ಥನು ಅಮರಾಸುರರನ್ನೂ ಲೆಕ್ಕಿಸುವುದಿಲ್ಲ. ಇನ್ನು ನಾವು ಯಾವ ಲೆಕ್ಕ ? ಎಂದು ದ್ರೋಣನು ಹೇಳಿದನು.
ಪದಾರ್ಥ (ಕ.ಗ.ಪ)
ಹವಣು-ಅಳತೆ, ಶಕ್ತಿ,
ಮೂಲ ...{Loading}...
ಅರಸ ಮೃತಸಂಜೀವಿನಿಯ ಬಲು
ಹಿರಲು ಬಹಳವ್ಯಾಧಿ ಮಾಡುವ
ದುರುಳತನ ತಾನೇನು ನರರಿಗೆ ದಿಟ ವಿಚಾರಿಸಲು
ಪರಮಪುರುಷೋತ್ತಮ ಮುಕುಂದನ
ಕರುಣಕವಚದ ಬಲದಿನಮರಾ
ಸುರರ ಬಗೆಯನು ಪಾರ್ಥನಿದು ನಮ್ಮಾರ ಹವಣೆಂದ ॥44॥
೦೪೫ ಹಗೆಯ ಪತಿಕರಿಸುವರೆ ...{Loading}...
ಹಗೆಯ ಪತಿಕರಿಸುವರೆ ನಾಲಗೆ
ನಿಗುರುವುದು ನೂರು ಮಡಿಯಲಿ ಕಾ
ಳೆಗಕೆ ತನ್ನನು ಬಿಟ್ಟು ನೋಡಿರೆ ನುಡಿದು ಫಲವೇನು
ತೆಗೆಸುವೆನು ಫಲುಗುಣನನೆನೆ ನಸು
ನಗುತ ಗುರು ಕೌರವ ಮಹೀಶನ
ಮೊಗದ ಸುಮ್ಮಾನಕ್ಕೆ ಹರುಷಿತನಾಗುತಿಂತೆಂದ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ಕುಪಿತನಾಗಿ “ಶತ್ರುಗಳನ್ನು ಹೊಗಳಲು ನಿಮ್ಮ ನಾಲಗೆ ನೂರು ಪಟ್ಟು ನಿಗುರುವುದು. ಕಾಳಗಕ್ಕೆ ನನ್ನನ್ನು ಬಿಟ್ಟು ನೋಡಿರಿ. ಸುಮ್ಮನೆ ಮಾತಾಡಿ ಫಲವೇನು ? ಅರ್ಜುನನನ್ನು ಹೊಡೆದೋಡಿಸುತ್ತೇನೆ " ಎನ್ನಲು ದ್ರೋಣರು ನಸುನಗುತ್ತ ರಾಜನಾದ ದುರ್ಯೋಧನನ ಬಾಯಿಂದ ಹೊರಟ ಉತ್ಸಾಹದ ಮಾತುಗಳಿಗೆ ಹರ್ಷಗೊಂಡು ಹೀಗೆ ಹೇಳಿದರು.
ಮೂಲ ...{Loading}...
ಹಗೆಯ ಪತಿಕರಿಸುವರೆ ನಾಲಗೆ
ನಿಗುರುವುದು ನೂರು ಮಡಿಯಲಿ ಕಾ
ಳೆಗಕೆ ತನ್ನನು ಬಿಟ್ಟು ನೋಡಿರೆ ನುಡಿದು ಫಲವೇನು
ತೆಗೆಸುವೆನು ಫಲುಗುಣನನೆನೆ ನಸು
ನಗುತ ಗುರು ಕೌರವ ಮಹೀಶನ
ಮೊಗದ ಸುಮ್ಮಾನಕ್ಕೆ ಹರುಷಿತನಾಗುತಿಂತೆಂದ ॥45॥
೦೪೬ ಆದಡೆಲೆ ಭೂಪಾಲ ...{Loading}...
ಆದಡೆಲೆ ಭೂಪಾಲ ನರನೊಳು
ಕಾದಲೀಶಂಗರಿದು ನೀನಿದಿ
ರಾದಡಪಜಯವಾಗದಿದ್ದರೆ ನಮ್ಮ ಪುಣ್ಯವದು
ಕಾದಲಾಪರೆ ಮಗನೆ ಪರರಿಗೆ
ಭೇದಿಸುವರಳವಲ್ಲ ಕವಚವ
ನಾದಿಯದು ಕೊಳ್ಳೆಂದು ಕೊಟ್ಟನು ಗವಸಣಿಗೆದೆಗೆದು ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆದರೆ ಎಲೆ ಭೂಪಾಲ, ಅರ್ಜುನನ ಜೊತೆ ಯುದ್ಧ ಮಾಡಲು ಶಿವನಿಗೂ ಸಾಧ್ಯವಿಲ್ಲ. ನೀನು ಅವನಿಗಿದಿರಾಗಿ ಯುದ್ಧ ಮಾಡಿದರೆ ಅಪಜಯವಾಗದಿದ್ದರೆ ನಮ್ಮ ಪುಣ್ಯ ಮಗನೇ. ಯುದ್ಧ ಮಾಡುವೆಯಾದರೆ ಪರರಿಗೆ ಭೇದಿಸಲು ಅಸಾಧ್ಯವಾದ, ಪ್ರಾಚೀನವಾದ ಈ ಕವಚವನ್ನು ತೆಗೆದುಕೋ” ಎಂದು ದ್ರೋಣನು ಕವಚವನ್ನು ಚೀಲದಿಂದ ತೆಗೆದುಕೊಟ್ಟನು.
ಮೂಲ ...{Loading}...
ಆದಡೆಲೆ ಭೂಪಾಲ ನರನೊಳು
ಕಾದಲೀಶಂಗರಿದು ನೀನಿದಿ
ರಾದಡಪಜಯವಾಗದಿದ್ದರೆ ನಮ್ಮ ಪುಣ್ಯವದು
ಕಾದಲಾಪರೆ ಮಗನೆ ಪರರಿಗೆ
ಭೇದಿಸುವರಳವಲ್ಲ ಕವಚವ
ನಾದಿಯದು ಕೊಳ್ಳೆಂದು ಕೊಟ್ಟನು ಗವಸಣಿಗೆದೆಗೆದು ॥46॥
೦೪೭ ಇದು ಮಹಾದೇವರದು ...{Loading}...
ಇದು ಮಹಾದೇವರದು ವೃತ್ರನ
ಕದನದಲಿ ಕೈಸಾರ್ದುದೀಶಂ
ಗಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕವಚ ಮಹಾದೇವನದು. ವೃತ್ರಾಸುರನೊಡನೆ ನಡೆದ ಕದನದಲ್ಲಿ ಇದು ಅವನ ಕೈಸೇರಿತು. ಅನಂತರ ಇದು ದೇವೇಂದ್ರನಿಗೆ ಸೇರಿ ಆತನು ಅಂಗಿರನಿಗೆ ಕೊಟ್ಟನು. ಅಂಗಿರನಿಂದ ಬೃಹಸ್ಪತಿಯ ಕೈಸೇರಿತು. ಅನಂತರ ಭರದ್ವಾಜನ ಕೈಸೇರಿ ಆತನು ಕರುಣಿಸಿ ಕವಚವನ್ನು ನನಗೆ ಕೊಟ್ಟನು.
ಟಿಪ್ಪನೀ (ಕ.ಗ.ಪ)
ಬೃಹಸ್ಪತಿ - ಹಳೆಯ ಸಂಸ್ಕೃತ ಕಾವ್ಯ ನಾಟಕ ಇತಿಹಾಸ ಪುರಾಣಗಳಲ್ಲೆಲ್ಲ ಪ್ರಕೀರ್ತಿತವಾಗಿರುವ ಒಂದು ಪಾತ್ರ ಎಂದರೆ ಬೃಹಸ್ಪತಿಯದು. ದೇವಗುರುವಾಗಿ ಅವನು ದೇವಗಣಗಳಿಗೆ ಕೊಟ್ಟ ಮಾನಸಿಕ ಸ್ಥೈರ್ಯ ಮತ್ತು ರಾಕ್ಷಸಗುರು ಶುಕ್ರಾಚಾರ್ಯರ ವ್ಯೂಹಗಳಿಗೆ ಪ್ರತಿವ್ಯೂಹಗಳನ್ನು ಒಡ್ಡುತ್ತಿದ್ದ ಬಗೆ ಭಾರತ ರಾಮಾಯಣ ಪುರಾಣಗಳಲ್ಲಿ ವರ್ಣನೆಗೊಡಿದೆ. ಬರಿಯ ಮಹಾಭಾರತಕ್ಕೆ ಸೀಮಿತಗೊಳಿಸಿರುವ ಈ ಲೇಖನದಲ್ಲೂ ಬೃಹಸ್ಪತಿಯ ಪಾತ್ರದ ಹರಹು ದೊಡ್ಡದು.
ಮೂಲ ...{Loading}...
ಇದು ಮಹಾದೇವರದು ವೃತ್ರನ
ಕದನದಲಿ ಕೈಸಾರ್ದುದೀಶಂ
ಗಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ
ಇದು ಬೃಹಸ್ಪತಿಗಾಂಗಿರನಿನಾ
ದುದು ಭರದ್ವಾಜಂಗೆ ಬಳಿಕಾ
ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ ॥47॥
೦೪೮ ನರ ಸುರಾಸುರರಿದನು ...{Loading}...
ನರ ಸುರಾಸುರರಿದನು ಭೇದಿಸ
ಲರಿದು ಕೈಕೊಳ್ಳೆಂದು ಮಂತ್ರಿಸಿ
ಬರಿಗೆ ಕವಚವ ಕಟ್ಟಿದನು ಕೌರವ ಮಹೀಪತಿಗೆ
ಗುರುವಿನಂಘ್ರಿಯೊಳೆರಗಿ ಮರಳಿದು
ಧುರವ ಹೊಕ್ಕನು ಶಕ್ರತನುಜನ
ಕರೆದು ಮೂದಲಿಸಿದನು ತುಳುಕಿದನಂಬಿನಂಬುಧಿಯ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನರ ಸುರಾಸುರರು ಇದನ್ನು ಭೇದಿಸಲು ಅಸಾಧ್ಯ ತೆಗೆದುಕೊ ಎಂದು ಮಂತ್ರಿಸಿ ಕೌರವ ರಾಜನಾದ ದುರ್ಯೋಧನನ ಪಕ್ಕೆಗಳಿಗೆ ಕವಚವನ್ನು ಕಟ್ಟಿದನು. ಕೌರವನು ಗುರುವಿನ ಪಾದಗಳಿಗೆ ನಮಸ್ಕರಿಸಿ, ಪುನಃ ರಣರಂಗವನ್ನು ಪ್ರವೇಶಿಸಿ ದೇವೇಂದ್ರನ ಮಗನಾದ ಅರ್ಜುನನನ್ನು ಕರೆದು ಮೂದಲಿಸಿ ಬಾಣಗಳ ಸಮುದ್ರವನ್ನೇ ಆತನ ಮೇಲೆ ಸುರಿಸಿದನು.
ಮೂಲ ...{Loading}...
ನರ ಸುರಾಸುರರಿದನು ಭೇದಿಸ
ಲರಿದು ಕೈಕೊಳ್ಳೆಂದು ಮಂತ್ರಿಸಿ
ಬರಿಗೆ ಕವಚವ ಕಟ್ಟಿದನು ಕೌರವ ಮಹೀಪತಿಗೆ
ಗುರುವಿನಂಘ್ರಿಯೊಳೆರಗಿ ಮರಳಿದು
ಧುರವ ಹೊಕ್ಕನು ಶಕ್ರತನುಜನ
ಕರೆದು ಮೂದಲಿಸಿದನು ತುಳುಕಿದನಂಬಿನಂಬುಧಿಯ ॥48॥
೦೪೯ ಎಲವೊ ಕೌರವ ...{Loading}...
ಎಲವೊ ಕೌರವ ಹಿಂದೆ ವಂಚಿಸಿ
ಕಳವಿನಲಿ ಜೂಜಾಡಿ ರಾಜ್ಯವ
ಗೆಲಿದ ಗರ್ವವನುಗುಳು ಸಮರದ್ಯೂತಕೇಳಿಯಲಿ
ಹಲಗೆಯೈ ಕುರುಭೂಮಿ ಕೌರವ
ಕುಲದ ತಲೆ ಸಾರಿಗಳು ಸೆರೆಯಲಿ
ಗೆಲಲು ಬಂದೆನು ಕೊಳ್ಳು ಹಾಸಂಗಿಗಳನೆನುತೆಚ್ಚ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನು “ಎಲವೋ ಕೌರವ, ಹಿಂದೆ ಮೋಸದಿಂದ ವಂಚಿಸಿ ಜೂಜಾಡಿ ರಾಜ್ಯವನ್ನು ಗೆದ್ದ ಗರ್ವವನ್ನು ಉಗುಳು (ಬಿಸಾಡು). ಇದು ಸಮರ ದ್ಯೂತ ಕೇಳಿ. (ರಣರಂಗದ ಜೂಜಿನ ಪಗಡೆಯಾಟ) ಇಲ್ಲಿ ಕುರುಭೂಮಿಯೇ ಪಣ. ಕೌರವ ಕುಲದವರ ತಲೆಗಳೇ ಪಗಡೆಕಾಯಿಗಳು. ಕಾಯಿಗಳನ್ನು ಕಟ್ಟಿ ಹಾಕಿ ಆಟವನ್ನು ಗೆಲ್ಲಲು ಇದೋ, ದಾಳಗಳನ್ನು ಉರುಳಿಸುತ್ತಿದ್ದೇನೆ.” ಎಂದು ಬಾಣಗಳನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಸೆರೆ - ಕಾಯಿಗಳನ್ನು ಕಟ್ಟಿಹಕುವುದು
ಮೂಲ ...{Loading}...
ಎಲವೊ ಕೌರವ ಹಿಂದೆ ವಂಚಿಸಿ
ಕಳವಿನಲಿ ಜೂಜಾಡಿ ರಾಜ್ಯವ
ಗೆಲಿದ ಗರ್ವವನುಗುಳು ಸಮರದ್ಯೂತಕೇಳಿಯಲಿ
ಹಲಗೆಯೈ ಕುರುಭೂಮಿ ಕೌರವ
ಕುಲದ ತಲೆ ಸಾರಿಗಳು ಸೆರೆಯಲಿ
ಗೆಲಲು ಬಂದೆನು ಕೊಳ್ಳು ಹಾಸಂಗಿಗಳನೆನುತೆಚ್ಚ ॥49॥
೦೫೦ ಎಸಲು ಪಾರ್ಥನ ...{Loading}...
ಎಸಲು ಪಾರ್ಥನ ಬಾಣವನು ಖಂ
ಡಿಸಿದನೆಲವೋ ತಮ್ಮ ನಿಮಗಿಂ
ದಸುರರಿಪು ತೆತ್ತಿಗನಲೇ ತುಡುಕಲಿ ಸುದರ್ಶನವ
ನುಸಿಗಳೌಕಿದರಕಟ ದಿಗ್ಗಜ
ಘಸಣಿಗೊಂಬುದೆ ನಿನ್ನ ಬಾಣ
ಪ್ರಸರಕಾನಂಜುವೆನೆ ಫಡ ಹೋಗೆನುತ ತೆಗೆದೆಚ್ಚ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾರ್ಥನು ಪ್ರಯೋಗಿಸಿದ ಬಾಣಗಳನ್ನೆಲ್ಲಾ ಖಂಡಿಸುತ್ತಾ ಕೌರವನು, “ಎಲವೋ-ತಮ್ಮ ನಿಮಗಿಂದು ಕೃಷ್ಣನು ಸೇವಕನು, ಸಂಬಂಧಿಯಾಗಿದ್ದಾನೆ ಆತನೇ ಬೇಕಾದರೆ ಸುದರ್ಶನ ಚಕ್ರವನ್ನು ಹಿಡಿಯಲಿ. ಸೊಳ್ಳೆಗಳು ಆಕ್ರಮಿಸಿದರೆ ಅಯ್ಯೋ…. ದಿಗ್ಗಜ ಘಾಸಿಗೊಳ್ಳುತ್ತದೆಯೇ ? ನಿನ್ನ ಬಾಣಗಳ ಸಮೂಹಕ್ಕೆ ನಾನು ಹೆದರುವೆನೇ ? ಘಡ, ಹೋಗು” ಎನ್ನುತ್ತ ಪ್ರತಿಯಾಗಿ ಬಾಣ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಘಸಣಿ-ತೊಂದರೆ,
ಮೂಲ ...{Loading}...
ಎಸಲು ಪಾರ್ಥನ ಬಾಣವನು ಖಂ
ಡಿಸಿದನೆಲವೋ ತಮ್ಮ ನಿಮಗಿಂ
ದಸುರರಿಪು ತೆತ್ತಿಗನಲೇ ತುಡುಕಲಿ ಸುದರ್ಶನವ
ನುಸಿಗಳೌಕಿದರಕಟ ದಿಗ್ಗಜ
ಘಸಣಿಗೊಂಬುದೆ ನಿನ್ನ ಬಾಣ
ಪ್ರಸರಕಾನಂಜುವೆನೆ ಫಡ ಹೋಗೆನುತ ತೆಗೆದೆಚ್ಚ ॥50॥
೦೫೧ ಕಾಲುವೊಳೆಗೇಕವನಿಪತಿ ಹರು ...{Loading}...
ಕಾಲುವೊಳೆಗೇಕವನಿಪತಿ ಹರು
ಗೋಲು ನೀವಿನ್ನರಿಯದಿದ್ದರೆ
ಹೇಳೆವಾತ್ಮಸ್ತುತಿಯ ಮಾಡೆವು ಸಾಕದಂತಿರಲಿ
ಮೇಲುಗವಚವ ನಂಬಿ ನಮ್ಮೊಳು
ಕಾಳೆಗವ ನೀ ಬಯಸಿ ಬಂದೆ ನೃ
ಪಾಲ ಜೋಡಿನ ಬಲದಿ ನಮ್ಮನು ಜಯಸುವೈ ಎಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜನೇ….. ಕಾಲಿನಿಂದಲೇ ದಾಟಬಹುದಾದ ಹೊಳೆಗೆ ಹರಿಗೋಲೇಕೆ ? ನೀವು ಇನ್ನೂ ತಿಳಿಯದಿದ್ದರೆ ನಾವು ಇನ್ನು ಹೇಳೆವು. ಆತ್ಮಸ್ತುತಿಯನು ಮಾಡೆವು. ಸಾಕು ಆ ಮಾತಿರಲಿ, ಮೈಮೇಲೆ ತೊಟ್ಟಿರುವ ಮಹಿಮೆಯುಳ್ಳ ಕವಚವನ್ನು ನಂಬಿ ನಮ್ಮೊಂದಿಗೆ ಕಾಳಗವನ್ನು ಬಯಸಿ ಬಂದಿರುವೆ. ರಾಜನೇ, ಕವಚದ ಬಲದಿಂದ ನಮ್ಮನ್ನು ಜಯಿಸುವೆ ಅಲ್ಲವೇ ?” ಎಂದು ಅರ್ಜುನನು ಛೇಡಿಸಿದನು.
ಮೂಲ ...{Loading}...
ಕಾಲುವೊಳೆಗೇಕವನಿಪತಿ ಹರು
ಗೋಲು ನೀವಿನ್ನರಿಯದಿದ್ದರೆ
ಹೇಳೆವಾತ್ಮಸ್ತುತಿಯ ಮಾಡೆವು ಸಾಕದಂತಿರಲಿ
ಮೇಲುಗವಚವ ನಂಬಿ ನಮ್ಮೊಳು
ಕಾಳೆಗವ ನೀ ಬಯಸಿ ಬಂದೆ ನೃ
ಪಾಲ ಜೋಡಿನ ಬಲದಿ ನಮ್ಮನು ಜಯಸುವೈ ಎಂದ ॥51॥
೦೫೨ ಆರ ದೀಪನ ...{Loading}...
ಆರ ದೀಪನ ಚೂರ್ಣಬಲದಲಿ
ವೀರರುದ್ರನು ಜಗವ ನುಂಗುವ
ನೋರೆಗೆಡೆಯದಿರಂಬ ಸುರಿ ಸುರಿ ಹೊಳ್ಳುನುಡಿಯೇಕೆ
ಸಾರು ನೀ ಬರಹೇಳು ಕೀಚಕ
ವೈರಿಯನು ಪಡಿಸಣವ ನೋಡಲಿ
ಭೂರಿಬಾಣದ ಸವಿಯನೆಂದನು ಕೌರವರರಾಯ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಬೇರೆಯವರು ನೀಡಿದ ಜೀರ್ಣಶಕ್ತಿಯನ್ನು ಹೆಚ್ಚಿಸುವ ಚೂರ್ಣದ ಬಲದಿಂದ (ಪ್ರಚೋದನಕಾರೀ ಶಕ್ತಿಯಿಂದ) ಶಿವನು ಜಗತ್ತನ್ನು ನುಂಗುವನೇ? ಅದನ್ನು ನೀನು ಅರಿತುಕೊ ! ಒರಟುತನ ಬೇಡ. ಬಾಣವನ್ನು ಸುರಿಸು. ಪೊಳ್ಳು ಮಾತೇಕೆ ? ನಿನ್ನಿಂದಾಗದಿದ್ದರೆ ಅತ್ತ ಸರಿ. ಕೀಚಕ ವೈರಿಯಾದ ಭೀಮನನ್ನು ಬರಹೇಳು. ಮಹಾಸ್ತ್ರಗಳ ಸವಿಯನ್ನು ಒರೆಹಚ್ಚಿ, ಪರೀಕ್ಷಿಸಿ ನೋಡಲಿ” ಎಂದನು ಕೌರವರ ರಾಯ.
ಪದಾರ್ಥ (ಕ.ಗ.ಪ)
ದೀಪನ ಚೂರ್ಣ-ಜೀರ್ಣ ಶಕ್ತಿ ಹೆಚ್ಚಿಸುವ, ಪ್ರಚೋದನಕಾರಿಯಾದ ಚೂರ್ಣ, ಓರೆಗೆಡೆಯದಿರ್-ಒರಟುತನಬೇಡ, ,
ಪಡಿಸಣ-ಪ್ರತೀಕ್ಷಣ, ಒರೆಹಚ್ಚಿ ನೋಡುವುದು,
ಮೂಲ ...{Loading}...
ಆರ ದೀಪನ ಚೂರ್ಣಬಲದಲಿ
ವೀರರುದ್ರನು ಜಗವ ನುಂಗುವ
ನೋರೆಗೆಡೆಯದಿರಂಬ ಸುರಿ ಸುರಿ ಹೊಳ್ಳುನುಡಿಯೇಕೆ
ಸಾರು ನೀ ಬರಹೇಳು ಕೀಚಕ
ವೈರಿಯನು ಪಡಿಸಣವ ನೋಡಲಿ
ಭೂರಿಬಾಣದ ಸವಿಯನೆಂದನು ಕೌರವರರಾಯ ॥52॥
೦೫೩ ಗರುಡನಾರೋಗಣೆಯ ಬೋನಕೆ ...{Loading}...
ಗರುಡನಾರೋಗಣೆಯ ಬೋನಕೆ
ಮರಳಿ ಪಡಿಸಣವೇಕೆ ಮಾತಿನ
ಮುರಿವುಗಳು ಗೆಲ್ಲವಲೆ ನೀ ನೆರೆ ನೋಡು ಕೈಗುಣವ
ಅರಸ ನಿನ್ನಯ ಕೊರಳಕಡಿತಕೆ
ಸರಳು ಕುದಿತದಲೆನಗೆ ತನಗೆಂ
ದೊರಲುತಿದೆ ನಿನಗಿಂದಿನಲಿ ಸಾವಿಲ್ಲ ಹೋಗೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗರುಡನು ತನಗೆ ಬೇಕಾದ ಆಹಾರ ಕಂಡ ತಕ್ಷಣ ತಡಮಾಡದೆ ತಿಂದು ಮುಗಿಸುವನು. ಅದಕ್ಕೆ ಪ್ರತೀಕ್ಷೆ, ಪರೀಕ್ಷೆ ಬೇಕಾಗಿಲ್ಲ. ಮಾತಿನ ಕೊಂಕು ಯುದ್ಧವನ್ನು ಗೆಲ್ಲಲಾರದಲ್ಲವೆ ? ನನ್ನ ಕೈಗುಣವನ್ನು ನೋಡು. ರಾಜನೇ, ನಿನ್ನ ಕೊರಳನ್ನು ಕತ್ತರಿಸಲು ನನ್ನ ಬಾಣಗಳು ನಾನು, ತಾನೆಂದು ಕುದಿಯುತ್ತಿವೆ ಹಾಗೂ ಆತುರಪಡುತ್ತಿವೆ. ಆದರೂ ನಿನಗೆ ಇಂದು ಸಾವಿಲ್ಲ ಹೋಗು” ಎಂದು ಅರ್ಜುನನು ಹೇಳಿದನು.
ಮೂಲ ...{Loading}...
ಗರುಡನಾರೋಗಣೆಯ ಬೋನಕೆ
ಮರಳಿ ಪಡಿಸಣವೇಕೆ ಮಾತಿನ
ಮುರಿವುಗಳು ಗೆಲ್ಲವಲೆ ನೀ ನೆರೆ ನೋಡು ಕೈಗುಣವ
ಅರಸ ನಿನ್ನಯ ಕೊರಳಕಡಿತಕೆ
ಸರಳು ಕುದಿತದಲೆನಗೆ ತನಗೆಂ
ದೊರಲುತಿದೆ ನಿನಗಿಂದಿನಲಿ ಸಾವಿಲ್ಲ ಹೋಗೆಂದ ॥53॥
೦೫೪ ಎನುತ ಕೂರಮ್ಬಿನಲಿ ...{Loading}...
ಎನುತ ಕೂರಂಬಿನಲಿ ದುರ್ಯೋ
ಧನನನೆಚ್ಚನು ವಜ್ರ ಕವಚದ
ಲನಿತು ಶರವಕ್ಕಾಡಿದವು ಸೊಪ್ಪಾದವೇಣುಗಳು
ಅನಲ ಗಿರಿ ವಜ್ರಾಸ್ತ್ರದಲಿ ಫಲು
ಗುಣನು ಬೊಬ್ಬಿರಿದೆಚ್ಚನೆಚ್ಚಂ
ಬನಿತು ಮುರಿದವು ಮಸೆಯ ಕಾಣದು ಮೈ ಮಹೀಪತಿಯ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತಾ ಅರ್ಜುನನು ಹರಿತವಾದ ಬಾಣಗಳನ್ನು ದುರ್ಯೋಧನನ ಮೇಲೆ ಪ್ರಯೋಗಿಸಿದನು. ವಜ್ರ ಕವಚವಿದ್ದ ಕಾರಣ ಅಷ್ಟೂ ಶರಗಳು ನಾಶವಾದುವು. ಅವುಗಳ ಅಂಚುಗಳು ಮೊಂಡಾದವು. ಅಗ್ನಿ, ಪರ್ವತ ಮತ್ತು ವಜ್ರಾಸ್ತ್ರಗಳನ್ನು ಅರ್ಜುನನು ಆರ್ಭಟಿಸಿ ಪ್ರಯೋಗಿಸಿದಾಗ ಅಷ್ಟೂ ಶರಗಳೂ ಮುರಿದವು. ರಾಜನಾದ ದುರ್ಯೋಧನನ ಶರೀರದಲ್ಲಿ ಬಾಣಗಳ ಹೊಡೆತದಿಂದ ಗಾಯಗಳಾಗಲಿಲ್ಲ. ಅವನ ಅಂಗಗಳಲ್ಲಿ ಅವು ಕಾಣಲಿಲ್ಲ.
ಪದಾರ್ಥ (ಕ.ಗ.ಪ)
ಅಕ್ಕಾಡು-ಜೀರ್ಣವಾಗು ನಾಶವಾಗು,
ಮೂಲ ...{Loading}...
ಎನುತ ಕೂರಂಬಿನಲಿ ದುರ್ಯೋ
ಧನನನೆಚ್ಚನು ವಜ್ರ ಕವಚದ
ಲನಿತು ಶರವಕ್ಕಾಡಿದವು ಸೊಪ್ಪಾದವೇಣುಗಳು
ಅನಲ ಗಿರಿ ವಜ್ರಾಸ್ತ್ರದಲಿ ಫಲು
ಗುಣನು ಬೊಬ್ಬಿರಿದೆಚ್ಚನೆಚ್ಚಂ
ಬನಿತು ಮುರಿದವು ಮಸೆಯ ಕಾಣದು ಮೈ ಮಹೀಪತಿಯ ॥54॥
೦೫೫ ಹರಿಯನೆಚ್ಚನು ಫಲುಗುಣನ ...{Loading}...
ಹರಿಯನೆಚ್ಚನು ಫಲುಗುಣನ ತನು
ಬಿರಿಯೆ ಬಿಗಿದನು ಶರವನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ವರ ಕಪೀಂದ್ರನ ಘಾಸಿಮಾಡಿದ
ನುರವಣಿಸಿ ಕವಿದೆಸುವ ಭೂಪನ
ಭರದ ಬಲುವೇಗಾಯ್ಲತನವನು ಹೊಗಳಿದನು ಪಾರ್ಥ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಹರಿಯ ಮೇಲೆ ಬಾಣ ಪ್ರಯೋಗ ಮಾಡಿದನು. ಅರ್ಜುನನ ಶರೀರ ಬಿರಿಯುವಂತೆ ಬಾಣಗಳಿಂದ ಬಿಗಿದನು. ರಥ, ಕುದುರೆಗಳ ಶರೀರದ ಮೇಲೆ ಯಥೇಷ್ಟವಾಗಿ ಬಾಣಗಳನ್ನು ನಾಟಿದನು. ಅರ್ಜುನನ ರಥದ ಧ್ವಜದಲ್ಲಿದ್ದ ವಾನರ ಶ್ರೇಷ್ಠನನ್ನು ತನ್ನ ಬಾಣಗಳಿಂದ ಘಾಸಿ ಮಾಡಿದನು. ಸಂಭ್ರಮಿಸಿ, ಮೇಲೆ ಬಿದ್ದು ಬಾಣ ಪ್ರಯೋಗಿಸುವ ರಾಜನ ಬಾಣಗಳ ರಭಸವನ್ನು ಪಾರ್ಥನು ಹೊಗಳಿದನು.
ಪದಾರ್ಥ (ಕ.ಗ.ಪ)
ವೇಗಾಯ್ಲತನ - ರಭಸ
ಮೂಲ ...{Loading}...
ಹರಿಯನೆಚ್ಚನು ಫಲುಗುಣನ ತನು
ಬಿರಿಯೆ ಬಿಗಿದನು ಶರವನಾ ರಥ
ತುರಗದೊಡಲಲಿ ಹೂಳಿದನು ಹೇರಾಳದಂಬುಗಳ
ವರ ಕಪೀಂದ್ರನ ಘಾಸಿಮಾಡಿದ
ನುರವಣಿಸಿ ಕವಿದೆಸುವ ಭೂಪನ
ಭರದ ಬಲುವೇಗಾಯ್ಲತನವನು ಹೊಗಳಿದನು ಪಾರ್ಥ ॥55॥
೦೫೬ ಕವಚವಿದೆ ಸರ್ವಾಙ್ಗದಲಿ ...{Loading}...
ಕವಚವಿದೆ ಸರ್ವಾಂಗದಲಿ ನೃಪ
ನವಯವಕೆ ಕೇಡಿಲ್ಲ ಕೆಲಬಲ
ದವರು ನೆರೆ ಕೈಮಾಡುತಿದೆ ಕರ್ಣಾದಿನಾಯಕರು
ರವಿಯ ಕೈಗಳನಸ್ತಗಿರಿಯಾ
ನುವವೊಲಿದೆ ಮುನಿದಿವನ ಕೊಂದರೆ
ಪವನಜನ ಕೊಂದವನು ಹದನೇನೆಂದು ಚಿಂತಿಸಿದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜನ ಅಂಗಾಂಗಗಳಲ್ಲಿ ಕವಚವಿರುವುದರಿಂದ ಅವನ ಅವಯವಗಳಿಗೆ ಕೇಡಿಲ್ಲ. ಅಕ್ಕಪಕ್ಕದವರು, ಕರ್ಣಾದಿ ನಾಯಕರು ತನ್ನ ಮೇಲೆ ಅತಿಶಯವಾಗಿ ಯುದ್ಧ ಮಾಡುತ್ತಿದ್ದಾರೆ. ರವಿಯ ಕಿರಣಗಳೆಂಬ ಕೈಗಳನ್ನು ಪಶ್ಚಿಮ ದಿಕ್ಕೆಂಬ ಬೆಟ್ಟ ಹಿಡಿಯುವಂತಿದೆ. (ಸೂರ್ಯಾಸ್ತವಾಗುವುದರಲ್ಲಿದೆ.) ಕೋಪಿಸಿ ಇವನನ್ನು ಕೊಂದರೆ ಭೀಮನನ್ನೇ ಕೊಂದಂತಾದೀತು. (ಅವನನ್ನು ತಾನು ಕೊಲ್ಲಬೇಕೆಂದಿರುವ ವಾಯುಪುತ್ರನಾದ ಭೀಮನ ಪ್ರತಿಜ್ಞೆಯ ಗತಿಯೇನು ?) " ಎಂದು ಚಿಂತಿಸಿ ಅರ್ಜುನನು ಅವನನ್ನು ಕೊಲ್ಲಬಾರದೆಂದು ನಿರ್ಧರಿಸಿದನು.
ಮೂಲ ...{Loading}...
ಕವಚವಿದೆ ಸರ್ವಾಂಗದಲಿ ನೃಪ
ನವಯವಕೆ ಕೇಡಿಲ್ಲ ಕೆಲಬಲ
ದವರು ನೆರೆ ಕೈಮಾಡುತಿದೆ ಕರ್ಣಾದಿನಾಯಕರು
ರವಿಯ ಕೈಗಳನಸ್ತಗಿರಿಯಾ
ನುವವೊಲಿದೆ ಮುನಿದಿವನ ಕೊಂದರೆ
ಪವನಜನ ಕೊಂದವನು ಹದನೇನೆಂದು ಚಿಂತಿಸಿದ ॥56॥
೦೫೭ ಎನುತ ಮೂರಮ್ಬಿನಲಿ ...{Loading}...
ಎನುತ ಮೂರಂಬಿನಲಿ ರಾಯನ
ಧನುವ ಖಂಡಿಸಿ ಮತ್ತೆ ಕೂರಂ
ಬಿನಲಿ ನೃಪನಂಗೈಯನೆಚ್ಚನು ಬಾಣ ಥಟ್ಟುಗಿಯೆ
ಜನಪ ನೊಂದನು ಬಳಿಕ ಕೃತವ
ರ್ಮನು ಕೃಪಾಚಾರಿಯನು ನಿನ್ನಯ
ತನುಜನನು ತೊಲಗಿಸಿದರೈ ಧೃತರಾಷ್ಟ್ರ ಕೇಳ್ ಎಂದ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೀಗೆಂದುಕೊಳ್ಳುತ್ತಾ ಪಾರ್ಥನು ಮೂರು ಬಾಣಗಳಿಂದ ದುರ್ಯೋಧನನ ಧನುವನ್ನು ಕಡಿದು ಮತ್ತೆ ಹರಿತವಾದ ಬಾಣವನ್ನು ರಾಜನ ಅಂಗೈಗೆ ಹೊಡೆದನು. ರಾಜ ದುರ್ಯೋಧನನು ನೊಂದನು. ಸೇನೆ ಚದುರಿತು. ಅನಂತರ ಕೃತವರ್ಮ ಕೃಪಾಚಾರ್ಯರು ಬಂದು ನಿನ್ನಯ ಮಗನನ್ನು ಅಲ್ಲಿಂದ ಕಳುಹಿಸಿದರು. ಧೃತರಾಷ್ಟ್ರನೇ ಕೇಳು” ಎಂದನು ಸಂಜಯ.
ಮೂಲ ...{Loading}...
ಎನುತ ಮೂರಂಬಿನಲಿ ರಾಯನ
ಧನುವ ಖಂಡಿಸಿ ಮತ್ತೆ ಕೂರಂ
ಬಿನಲಿ ನೃಪನಂಗೈಯನೆಚ್ಚನು ಬಾಣ ಥಟ್ಟುಗಿಯೆ
ಜನಪ ನೊಂದನು ಬಳಿಕ ಕೃತವ
ರ್ಮನು ಕೃಪಾಚಾರಿಯನು ನಿನ್ನಯ
ತನುಜನನು ತೊಲಗಿಸಿದರೈ ಧೃತರಾಷ್ಟ್ರ ಕೇಳೆಂದ ॥57॥
೦೫೮ ರಾಯ ನೊನ್ದನು ...{Loading}...
ರಾಯ ನೊಂದನು ಹರಿಬಕಿಲ್ಲದ
ನಾಯಕರ ಸುಡು ಹೊಟ್ಟೆ ಹೊರೆಕರ
ವಾಯಕಿವದಿರ ಸಂತವಿಟ್ಟನು ಸ್ವಾಮಿಕಂಟಕರ
ಆಯುಧವ ಹಿಡಿದಕಟ ರಣದಲಿ
ಸಾಯಲಮ್ಮರು ಬಿರುದ ಹೊಗಳುವ
ಬಾಯ ನೋಡೆನುತಿದ್ದುದಾ ದುಶ್ಯಾಸನಾದಿಗಳು ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜನಾದ ದುರ್ಯೋಧನನು ನೊಂದನು. ತನ್ನ ಕರ್ತವ್ಯ ನಿರ್ವಹಣೆಗೆ ಯಾವ ನಾಯಕನೂ ನೆರವಿಗೆ ಬರಲಿಲ್ಲವಲ್ಲಾ ! ಹೊಟ್ಟೆ ಹೊರೆಯುವವರನ್ನು ಸುಡು. ಸ್ವಾಮಿಕಂಟಕರಾದ ಇವರನ್ನು ವ್ಯರ್ಥವಾಗಿ ಪಾಲಿಸಿದನಲ್ಲಾ. ಅಯ್ಯೋ ಇವರು ಕ್ಷತ್ರಿಯೋಚಿತವಾಗಿ ಆಯುಧವನ್ನು ಹಿಡಿದಿದ್ದರೂ ರಣದಲ್ಲಿ ಸಾಯಲು ಅಸಮರ್ಥರು. ಕೇವಲ ಬಿರುದುಗಳಿಂದ ಹೊಗಳಿಕೊಳ್ಳುವ ಭಟರ ಬಾಯನ್ನು ನೋಡಿ” ಎಂದು ದುಶ್ಶಾಸನಾದಿಗಳು ಹಂಗಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಹೊಟ್ಟೆ ಹೊರೆಕ -ವೃಥಾ ಹೊಟ್ಟೆ ಹೊರೆಯುವವರು, , ವಾಯ-ವ್ಯರ್ಥ,
ಮೂಲ ...{Loading}...
ರಾಯ ನೊಂದನು ಹರಿಬಕಿಲ್ಲದ
ನಾಯಕರ ಸುಡು ಹೊಟ್ಟೆ ಹೊರೆಕರ
ವಾಯಕಿವದಿರ ಸಂತವಿಟ್ಟನು ಸ್ವಾಮಿಕಂಟಕರ
ಆಯುಧವ ಹಿಡಿದಕಟ ರಣದಲಿ
ಸಾಯಲಮ್ಮರು ಬಿರುದ ಹೊಗಳುವ
ಬಾಯ ನೋಡೆನುತಿದ್ದುದಾ ದುಶ್ಯಾಸನಾದಿಗಳು ॥58॥
೦೫೯ ಕದಡಿತೀ ಬಲಜಲಧಿ ...{Loading}...
ಕದಡಿತೀ ಬಲಜಲಧಿ ಸುಭಟರು
ಹೊದರುಗಟ್ಟಿತು ಹೊಳೆವಡಾಯುಧ
ಹೊದಕೆಗಳ ಸತ್ತಿಗೆಯ ಸೂಸುವ ಚಮರ ಸೀಗುರಿಯ
ತುದಿವೆರಳ ಕಿರುದನಿಯ ಕೆಂಪಿನ
ಕದಡುಗಂಗಳ ಕುಣಿವಮೀಸೆಯ
ಕದನಗಲಿಗಳು ಕವಿದರೀ ಕರ್ಣಾದಿ ನಾಯಕರು ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸೇನಾ ಸಮುದ್ರ ಕದಡಿತು. ಹೊಳೆಯುವ ಅಡಾಯುಧ, ಬತ್ತಳಿಕೆ, ಬಿಳಿಯ ಕೊಡೆ ಛತ್ರ, ಚಾಮರಗಳೊಡನೆ ಸುಭಟರೆಲ್ಲಾ ಪುನಃ ಒಂದೆಡೆ ಗುಂಪಾಗಿ ಸೇರಿದರು. ತುದಿ ಬೆರಳಿನಲ್ಲಿ ಹಿಡಿದಿರುವ ಆಯುಧಗಳ ಮೆಲುದನಿಯ, ಕೆಂಪಾದ, ತಿರುಗುತ್ತಿರುವ ಕಣ್ಣುಗಳ , ಹುರಿ ಮೀಸೆಯ , ಕರ್ಣನೇ ಮೊದಲಾದ ಯುದ್ಧ ವೀರರು ಬಂದು ಅರ್ಜುನನ ಮೇಲೆ ಆಕ್ರಮಣ ಮಡಿದರು.
ಮೂಲ ...{Loading}...
ಕದಡಿತೀ ಬಲಜಲಧಿ ಸುಭಟರು
ಹೊದರುಗಟ್ಟಿತು ಹೊಳೆವಡಾಯುಧ
ಹೊದಕೆಗಳ ಸತ್ತಿಗೆಯ ಸೂಸುವ ಚಮರ ಸೀಗುರಿಯ
ತುದಿವೆರಳ ಕಿರುದನಿಯ ಕೆಂಪಿನ
ಕದಡುಗಂಗಳ ಕುಣಿವಮೀಸೆಯ
ಕದನಗಲಿಗಳು ಕವಿದರೀ ಕರ್ಣಾದಿ ನಾಯಕರು ॥59॥
೦೬೦ ಮುತ್ತಿದರು ಹಿನ್ದೆಡಬಲನ ...{Loading}...
ಮುತ್ತಿದರು ಹಿಂದೆಡಬಲನ ಮುಂ
ದೆತ್ತಲೀಕ್ಷಿಸಲತ್ತ ರಾಯನ
ತೆತ್ತಿಗರ ಕೂರಂಬು ಕವಿದವು ನರನ ಹಯರಥವ
ಎತ್ತ ನೋಡುವಡತ್ತ ಬಲ ದು
ರ್ವೃತ್ತ ಸುಭಟರ ಬಲಶರೌಘದ
ಕತ್ತಲೆಗೆ ಹದನೇನೆನುತ ದೈತ್ಯಾರಿ ಚಿಂತಿಸಿದ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ, ಮುಂದೆ, ಎಡ ಬಲಗಳಲ್ಲಿ ಮುತ್ತಿಗೆ ಹಾಕಿದರು. ಎಲ್ಲಿ ನೋಡಿದರಲ್ಲಿ ರಾಜನ ಸೇವಕರ ಹರಿತವಾದ ಬಾಣಗಳು ಅರ್ಜುನನ ಕುದುರೆ ಮತ್ತು ರಥಗಳನ್ನು ಆಕ್ರಮಿಸಿದವು. ಎಲ್ಲಿ ನೋಡಿದರಲ್ಲಿ ಸೇನೆಯ ದುಷ್ಟ ಸುಭಟರ ಬಲ ಹಾಗೂ ಬಾಣಗಳ ಬಿರುಸಿನಿಂದುಂಟಾದ ಕತ್ತಲೆಯನ್ನು ಕಂಡು ಮುಂದೆ ಹೇಗೆ ? ಹದನೇನು ? ಎನ್ನುತ್ತಾ ರಾಕ್ಷಸರ ಶತ್ರು ಎನಿಸಿದ ಕೃಷ್ಣ ಚಿಂತಿಸಿದ.
ಮೂಲ ...{Loading}...
ಮುತ್ತಿದರು ಹಿಂದೆಡಬಲನ ಮುಂ
ದೆತ್ತಲೀಕ್ಷಿಸಲತ್ತ ರಾಯನ
ತೆತ್ತಿಗರ ಕೂರಂಬು ಕವಿದವು ನರನ ಹಯರಥವ
ಎತ್ತ ನೋಡುವಡತ್ತ ಬಲ ದು
ರ್ವೃತ್ತ ಸುಭಟರ ಬಲಶರೌಘದ
ಕತ್ತಲೆಗೆ ಹದನೇನೆನುತ ದೈತ್ಯಾರಿ ಚಿಂತಿಸಿದ ॥60॥
೦೬೧ ಅರಿಭಟರು ಕಟ್ಟಳವಿಯಲಿ ...{Loading}...
ಅರಿಭಟರು ಕಟ್ಟಳವಿಯಲಿ ಮು
ಕ್ಕುರುಕೆ ಮುರರಿಪು ಪಾಂಚಜನ್ಯವ
ನಿರದೆ ಮೊಳಗಿದ ಹನುಮ ಗರ್ಜಿಸಿದನು ಪತಾಕೆಯಲಿ
ಸುರರ ದೈತ್ಯರ ಸಮರಸಿರಿ ವಿ
ಸ್ತರಿಸಿತಿತ್ತಲು ದ್ರೋಣನತ್ತಲು
ತೆರಳಿಚಿದನೈ ಪಾಂಡುಪುತ್ರರ ಸೈನ್ಯ ಸಾಗರವ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಸೈನಿಕರು ಅತ್ಯಂತ ಸಾಹಸದಿಂದ ಮುತ್ತಿ ಬರುತ್ತಿರಲಾಗಿ ಕೃಷ್ಣನು ಸುಮ್ಮನಿರಲಾರದೆ ಪಾಂಚಜನ್ಯವನ್ನು ಊದಿದನು. ಪಾರ್ಥನ ರಥದ ಪತಾಕೆಯ ಹನುಮನು ಘರ್ಜಿಸಿದನು. ದೇವಾಸುರರ ಸಮರಸಿರಿ ಈ ಕಡೆ ವಿಸ್ತರಿಸಿತು. ಆ ಕಡೆ ದ್ರೋಣನು ಪಾಂಡುಪುತ್ರರ ಸೈನ್ಯ ಸಾಗರವನ್ನು ಹಿಮ್ಮೆಟ್ಟಿಸಿದನು.
ಮೂಲ ...{Loading}...
ಅರಿಭಟರು ಕಟ್ಟಳವಿಯಲಿ ಮು
ಕ್ಕುರುಕೆ ಮುರರಿಪು ಪಾಂಚಜನ್ಯವ
ನಿರದೆ ಮೊಳಗಿದ ಹನುಮ ಗರ್ಜಿಸಿದನು ಪತಾಕೆಯಲಿ
ಸುರರ ದೈತ್ಯರ ಸಮರಸಿರಿ ವಿ
ಸ್ತರಿಸಿತಿತ್ತಲು ದ್ರೋಣನತ್ತಲು
ತೆರಳಿಚಿದನೈ ಪಾಂಡುಪುತ್ರರ ಸೈನ್ಯ ಸಾಗರವ ॥61॥
೦೬೨ ನಕುಲನನು ಮಸೆಗಾಣಿಸಿಯೆ ...{Loading}...
ನಕುಲನನು ಮಸೆಗಾಣಿಸಿಯೆ ಸಾ
ತ್ಯಕಿಯ ವಿರಥನ ಮಾಡಿ ಪಾಂಚಾ
ಲಕರನೋಡಿಸಿ ಮತ್ಸ್ಯ ಕೇಕೆಯ ಬಲವ ಬರಿಕೈದು
ಸಕಲ ಸನ್ನಾಹದಲಿ ಚೈದ್ಯ
ಪ್ರಕರವನು ತವೆ ಕೊಂದು ಭೂಪಾ
ಲಕನ ಬೆಂಬತ್ತಿದನು ಭೀಮ ಘಟೋತ್ಕಚರ ಗೆಲಿದ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕುಲನನ್ನು ಗಾಯಗೊಳಿಸಿ, ಸಾತ್ಯಕಿಯನ್ನು ರಥಹೀನನನ್ನಾಗಿಸಿ, ಪಾಂಚಾಲರಾಜರನ್ನು ಓಡಿಸಿ, ಮತ್ಸ್ಯು, ಕೇಕೆಯರ ಸೈನ್ಯವನ್ನು ನಾಶಗೊಳಿಸಿದನು. ಎಲ್ಲ ರೀತಿಯ ಸಿದ್ಧತೆಯಿಂದ ಚೈದ್ಯ ಸಮೂಹವನ್ನು ಕೊಂದು, ಭೀಮ, ಘಟೋತ್ಕಚರನ್ನು ಗೆದ್ದು ಭೂಪಾಲಕನಾದ ಧರ್ಮರಾಜನನ್ನು ಬೆನ್ನಟ್ಟಿದನು.
ಪದಾರ್ಥ (ಕ.ಗ.ಪ)
ಮಸೆಗಾಣಿಸು-ಗಾಯಗೊಳಿಸು,
ಮೂಲ ...{Loading}...
ನಕುಲನನು ಮಸೆಗಾಣಿಸಿಯೆ ಸಾ
ತ್ಯಕಿಯ ವಿರಥನ ಮಾಡಿ ಪಾಂಚಾ
ಲಕರನೋಡಿಸಿ ಮತ್ಸ್ಯ ಕೇಕೆಯ ಬಲವ ಬರಿಕೈದು
ಸಕಲ ಸನ್ನಾಹದಲಿ ಚೈದ್ಯ
ಪ್ರಕರವನು ತವೆ ಕೊಂದು ಭೂಪಾ
ಲಕನ ಬೆಂಬತ್ತಿದನು ಭೀಮ ಘಟೋತ್ಕಚರ ಗೆಲಿದ ॥62॥
೦೬೩ ದಾನವರು ಬಲುಗೈಗಳಪ್ರತಿ ...{Loading}...
ದಾನವರು ಬಲುಗೈಗಳಪ್ರತಿ
ಮಾನರಹುದಾದಡೆಯು ಸಮರದೊ
ಳಾನಲಸದಳವಸುರರಿಗೆ ಸುರರಿಗೆ ಜಯಾಭ್ಯುದಯ
ಏನ ಹೇಳುವುದಲ್ಲಿ ಸುಭಟ ನಿ
ಧಾನರಿದ್ದುದು ಪಾಂಡವರೊಳವ
ಧಾನಗುಂದನು ರಾಯ ಗದುಗಿನ ವೀರನಾರಯಣ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಕ್ಷಸರು ಪರಾಕ್ರಮವುಳ್ಳ ಎಣೆಯಿಲ್ಲದ ಮಾನವಂತರು ಹೌದು. ಆದರೂ ಸಮರದಲ್ಲಿ ಎದುರಿಸುವುದು ಅಸಾಧ್ಯ. ಸುರಾಸುರರಿಗೆ ಜಯಾಭ್ಯುದಯಗಳನ್ನು ಏನು ಹೇಳುವುದು ? ಅಲ್ಲಿ ನಿಧಿಯಂತಿದ್ದ ಸುಭಟರಿದ್ದರು. ಆದರೆ ಗದುಗಿನ ವೀರನಾರಾಯಣ ಕೃಷ್ಣನು ಪಾಂಡವರ ಕುರಿತ ಲಕ್ಷ್ಯವನ್ನು ಕಳೆದುಕೊಳ್ಳವವನಲ್ಲ.
ಮೂಲ ...{Loading}...
ದಾನವರು ಬಲುಗೈಗಳಪ್ರತಿ
ಮಾನರಹುದಾದಡೆಯು ಸಮರದೊ
ಳಾನಲಸದಳವಸುರರಿಗೆ ಸುರರಿಗೆ ಜಯಾಭ್ಯುದಯ
ಏನ ಹೇಳುವುದಲ್ಲಿ ಸುಭಟ ನಿ
ಧಾನರಿದ್ದುದು ಪಾಂಡವರೊಳವ
ಧಾನಗುಂದನು ರಾಯ ಗದುಗಿನ ವೀರನಾರಯಣ ॥63॥