೦೯

೦೦೦ ಸೂ ಜಯಸಮರ ...{Loading}...

ಸೂ. ಜಯಸಮರ ಸೌರಂಭನಾಹವ
ಭಯ ಬಹಿರ್ಮುಖನಸ್ತ್ರವಿದ್ಯಾ
ನಿಯತಮತಿ ಮೋಹರಿಸಿ ಸಮರಕೆ ದ್ರೋಣನನುವಾದ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಫಲುಗುಣ ಹೊಕ್ಕನಾಯುಧ
ಶಾಲೆಯನು ತೆಗೆಸಿದನು ಧನು ಮೊದಲಾದ ಕೈದುಗಳ
ಸಾಲರಿದು ನಿಲಿಸಿದನು ನಿಶಿತ ಶ
ರಾಳಿ ಚಾಪ ಕೃಪಾಣ ಪರಶು ತ್ರಿ
ಶೂಲ ಮುದ್ಗರ ಚಕ್ರ ಸೆಲ್ಲೆಹ ಶಕುತಿ ತೋಮರವ ॥1॥

೦೦೨ ಸವಗ ಮೊಚ್ಚಯ ...{Loading}...

ಸವಗ ಮೊಚ್ಚಯ ಜೋಡು ಸೀಸಕ
ಕವಚ ಬಾಹುರಿಕೆಗಳ ನಿಲಿಸಿದ
ನವಿರಳಾಕ್ಷತೆ ಗಂಧ ಪುಷ್ಪ ಸುಧೂಪ ದೀಪದಲಿ
ವಿವಿಧ ಸತ್ಕಾರದಲಿ ದುರ್ಗಾ
ಸ್ತವವ ಜಪಿಸಿದ ವರ ಘೃತೋದನ
ನವರುಧಿರ ಮಾಂಸೋಪಹಾರಂಗಳಲಿ ಪೂಜಿಸಿದ ॥2॥

೦೦೩ ಒಡನೆ ಗಜರುವ ...{Loading}...

ಒಡನೆ ಗಜರುವ ವಾದ್ಯದಲಿ ಕೆಂ
ಪಡರಿದೋಗರಸಹಿತ ಭೂತಕೆ
ಬಡಿಸಿದರು ಮಾಂತ್ರಿಕರು ಬಲಿಗೆದರಿದರು ದೆಸೆದೆಸೆಗೆ
ತೊಡವು ವಸನಾದಿಗಳಲೊಪ್ಪಂ
ಬಡುವ ಬಲಿಯನು ಹರಿಯೊಳರ್ಪಿಸಿ
ನಡುವಿರುಳು ಕಲಿಪಾರ್ಥನರ್ಚಿಸಿದನು ನಿಜಾಯುಧವ ॥3॥

೦೦೪ ಇರುಳಿನದ್ಭುತ ರವವನಾಲಿಸಿ ...{Loading}...

ಇರುಳಿನದ್ಭುತ ರವವನಾಲಿಸಿ
ಮುರಮಥನನೀ ಫಲುಗುಣನ ಸಂ
ಗರ ಜಯೋದ್ಧತಮಂತ್ರವೆಂದನು ದಾರುಕನ ಕರೆದು
ಹರ ಮಹಾಸೇನಾದಿಗಳು ಗೆಲ
ಲರಿದು ನಾಳಿನ ಬವರವಿನ್ನೀ
ನರನ ಜಯವೆಂತೆನುತ ಚಿಂತಿಸುತಲ್ಲಿಗೈತಂದ ॥4॥

೦೦೫ ರಚನೆ ಚೆಲುವಿದು ...{Loading}...

ರಚನೆ ಚೆಲುವಿದು ನಾಳಿನಾಹವ
ಖಚರ ಕಿಂಪುರುಷರಿಗೆ ಅಸದಳ
ವಚಲಬಲಗಾಂಡಿವಿಗೆ ಹರಿಯದು ಸುಪ್ತಿಯೊಳಗವನ
ಉಚಿತದಲಿ ಕೊಂಡೊಯ್ದು ರುದ್ರನ
ವಚನದನುವನು ತಿಳಿವೆನೆಂದಾ
ಶಚಿಯಗಂಡನಮಗನನೀಶನ ಪದವ ಕಾಣಿಸಿದ ॥5॥

೦೦೬ ಶಿವನ ಕರುಣಾಲಾಭ ...{Loading}...

ಶಿವನ ಕರುಣಾಲಾಭ ಪುಣ್ಯ
ಪ್ರವರ ಪಾರ್ಥನ ಮುನ್ನಿನಂದದ
ಲವನಿಗಿಳುಹಿದ ನಿಖಿಳದಿವ್ಯಾಯುಧದ ವೇದಿಕೆಗೆ
ಸವೆದುದಿರುಳಿಂದೂಪಲಂಗಳ
ನಿವಹ ಬಲಿದುದು ಚಕ್ರವಾಕದ
ತವಕ ತಗ್ಗಿತು ತರಣಿಯಡರಿದನುದಯಪರ್ವತವ ॥6॥

೦೦೭ ವಿಮಳ ದರ್ಭಾಙ್ಕುರದ ...{Loading}...

ವಿಮಳ ದರ್ಭಾಂಕುರದ ಶಯನದೊ
ಳಮರಪತಿಸುತ ಪವಡಿಸಿದನನು
ಪಮ ವಿಳಾಸನು ಕನಸ ಕಂಡೆನೆನುತ್ತ ಕಂದೆರೆದ
ಸಮರವಿಜಯಕೆ ಶಿವನ ಕೃಪೆ ಸಂ
ಕ್ರಮಿಸಿತೆನಗೆನುತಿರಲು ಮುಂದಣ
ಕಮಲನಾಭನ ಕಂಡು ಬಿನ್ನಹ ಮಾಡಿದನು ನಗುತ ॥7॥

೦೦೮ ದೇವ ನಿಮ್ಮಡಿ ...{Loading}...

ದೇವ ನಿಮ್ಮಡಿ ಸಹಿತ ಕಂಡೆನು
ದೇವದೇವನ ಚರಣವನು ಸಂ
ಭಾವಿಸಿದ ನಮ್ಮಿಬ್ಬರನು ದಕ್ಷಾಧ್ವರಧ್ವಂಸಿ
ನಾವು ಬಂದುದನರಿದು ವರ ರಾ
ಜೀವಸರಸಿಗೆ ಕಳುಹಿದನು ಗಾಂ
ಡೀವ ನಿಜಚಾಪವನು ಕಂಡೆನು ಕೊಳನ ಮಧ್ಯದಲಿ ॥8॥

೦೦೯ ಬಳಿಕ ತಿರುವಿಟ್ಟಾಗಲಸ್ತ್ರವ ...{Loading}...

ಬಳಿಕ ತಿರುವಿಟ್ಟಾಗಲಸ್ತ್ರವ
ಸೆಳೆದು ಬಿಲುವಿದ್ಯಾಚಮತ್ಕೃತಿ
ಯಳವ ತೋರಿದಡಾಗಳೀಶನ ಹೊರೆಗೆ ನಾನೈದಿ
ನಿಲೆ ತದೀಯಾಸ್ತ್ರಪ್ರಯೋಗದ
ಬಲುಹನೀಕ್ಷಿಸೆ ತೆಗೆವ ಬೆಡಗನು
ಕಲಿಸೆ ಪಾಶುಪತಾಸ್ತ್ರವೆನಗಾಯ್ತಲ್ಲಿ ವಶವರ್ತಿ ॥9॥

೦೧೦ ಕನಸನೀ ಹದನಾಗಿ ...{Loading}...

ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವ ವಧವ್ಯಾಪಾರವಹುದೆಂದ ॥10॥

೦೧೧ ಉಲಿವ ಮಙ್ಗಳಪಾಠಕರ ...{Loading}...

ಉಲಿವ ಮಂಗಳಪಾಠಕರ ಕಳ
ಕಳದೊಳುಪ್ಪವಡಿಸಿದನವನಿಪ
ತಿಲಕ ಮಾಡಿದನಮಲ ಸಂಧ್ಯಾವಂದನಾದಿಗಳ
ನಳಿನನಾಭನ ಪಾದಪದ್ಮವ
ನೊಲವಿನಿಂದಭಿನಮಿಸಿ ಸುಭಟಾ
ವಳಿಗೆ ನೇಮವ ಕೊಟ್ಟನಂತಕಸೂನು ಸಂಗರಕೆ ॥11॥

೦೧೨ ನಡೆದುದುರುಸನ್ನಾಹದಲಿ ಸೂ ...{Loading}...

ನಡೆದುದುರುಸನ್ನಾಹದಲಿ ಸೂ
ಳಡಿಸಿ ಮೊರೆವ ಗಭೀರ ಭೇರಿಯ
ಕಡುರವದ ರಿಪುಭಟರ ಬೈಗುಳ ಗೌರುಗಹಳೆಗಳ
ಎಡಬಲಕೆ ತನಿಹೊಳೆವ ತೇಜಿಯ
ಕಡುಮದದ ಕರಿಘಟೆಯ ತೇರಿನ
ನಿಡುವರಿಯ ಕಾಲಾಳ ಕಳಕಳವಾಯ್ತು ರಣದೊಳಗೆ ॥12॥

೦೧೩ ಎದ್ದುದೀ ಕಟಕದಲಿ ...{Loading}...

ಎದ್ದುದೀ ಕಟಕದಲಿ ಬಲ ಮಿಂ
ಡೆದ್ದು ಸುಭಟರು ಸಮರಭೂಮಿಯ
ಹೊದ್ದಿದರು ಝಳಪಿಸುವಡಾಯ್ದದ ಹೊಗರ ಹೊಳಹುಗಳ
ಅದ್ದುದತಳಕೆ ಅವನಿಯೆನೆ ಹೊದ
ರೆದ್ದು ನಡೆದುದು ದಂತಿಘಟೆ ಬರು
ತಿದ್ದುದಗಣಿತ ರಥ ಪದಾತಿಗಳಾಹವಾಂಗಣಕೆ ॥13॥

೦೧೪ ವಿನುತ ಸನ್ಧ್ಯಾವನ್ದನಾದಿಯ ...{Loading}...

ವಿನುತ ಸಂಧ್ಯಾವಂದನಾದಿಯ
ನನುಕರಿಸಿ ಹರಿಪದ ಪಯೋಜವ
ನೆನೆದು ವಿರಚಿತ ದೇವವಿಪ್ರಾನಳ ಸಮಾರ್ಚನನು
ಕನಕ ಕವಚವ ತೊಟ್ಟು ಗಡ್ಡದ
ಘನತೆಯನು ಗಂಟಿಕ್ಕಿ ವರಕಾಂ
ಚನಮಯದ ಯಜ್ಞೋಪವೀತವನಿಳುಹಿದನು ದ್ರೋಣ ॥14॥

೦೧೫ ನಿರಿಯುಡಿಗೆಯಲಿ ಮಲ್ಲಗಣ್ಟಿನ ...{Loading}...

ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ ॥15॥

೦೧೬ ಸೂಳವಿಸಿದವು ಸನ್ನೆಯಲಿ ...{Loading}...

ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಕೋಟಿಗಳುರವಣಿಸಿ ಹೆ
ಗ್ಗಾಳೆಗಳು ಸಾರಿದವು ಸುಭಟರ ವೀರ ವಿತರಣವ
ಸಾಲು ಝಲ್ಲರಿಗಳ ಪತಾಕಾ
ಜಾಲ ಸಬಳದ ಹೊದರ ಗೋವಳಿ
ಗೋಲ ತೂಗಾಟದಲಿ ದ್ರೋಣ ನಡೆತಂದ ॥16॥

೦೧೭ ನೆಗಹಿ ಬೀಸುವ ...{Loading}...

ನೆಗಹಿ ಬೀಸುವ ಚೌರಿಗಳ ಸ
ನ್ನೆಗೆ ಚತುರ್ಬಲವೆಲ್ಲ ದ್ರೋಣನ
ದೃಗುಪಥಕೆ ತೋರಿದರು ತಂತಮ್ಮಾಳು ಕುದುರೆಗಳ
ತೆಗೆದು ಯೋಜನವಾರರಲಿ ಕಾ
ಳೆಗಕೆ ಶಕಟವ್ಯೂಹವನು ಹೂ
ಣಿಗರ ಬಲಿದನು ಕೌರವೇಂದ್ರಾನುಜರ ಗಡಣದಲಿ ॥17॥

೦೧೮ ಇದಿರೆ ಶಕಟವ್ಯೂಹವದರ ...{Loading}...

ಇದಿರೆ ಶಕಟವ್ಯೂಹವದರ
ಗ್ರದಲಿ ದುಶ್ಯಾಸನನು ಕೆಲಬಲ
ದೊದವಿನಲಿ ಬಾಹ್ಲಿಕನು ಸೌಬಲ ಸಿಂಧು ಮಾಗಧರು
ಇದರ ಹಿಂದಣ ಮೈಯೊಳೈಗಾ
ವುದದ ನೀಳದೊಳೆರಡುವರೆ ಗಾ
ವುದದ ವಿಸ್ತಾರದಲಿ ಮಕರವ್ಯೂಹವನು ಬಲಿದ ॥18॥

೦೧೯ ಹಿನ್ದೆ ಯೋಜನವೈದರಳವಿಯೊ ...{Loading}...

ಹಿಂದೆ ಯೋಜನವೈದರಳವಿಯೊ
ಳಂದು ಚಕ್ರವ್ಯೂಹವನು ನಲ
ವಿಂದ ಬಲಿದನು ನಿಲಿಸಿದನು ಕಾಂಭೋಜಭೂಪತಿಯ
ವಿಂದನನುವಿಂದನನು ದಕ್ಷಿಣ
ವೃಂದ ಸಮಸಪ್ತಕರ ಬಲವನು
ಸಂದಣಿಸಿದರು ಹತ್ತು ಸಾವಿರ ನೃಪರ ಗಡಣದಲಿ ॥19॥

೦೨೦ ತುರಗವರುವತ್ತಾರು ಕೋಟಿಯ ...{Loading}...

ತುರಗವರುವತ್ತಾರು ಕೋಟಿಯ
ನುರು ಮದೇಭವನೆಂಟು ಲಕ್ಷವ
ವರ ರಥವನರುವತ್ತು ಸಾವಿರವನು ಸಗಾಢದಲಿ
ಧುರದ ಕಾಲಾಳಗಣಿತವ ಮೋ
ಹರಿಸಿ ಹಂಸವ್ಯೂಹವನು ಸಡ
ಗರಿಸಿದನು ನಿಯತಾಯು ಮೊದಲಾದವರ ಕಾಹಿನಲಿ ॥20॥

೦೨೧ ಕೆಲಬಲದ ಸಬಳಿಗರು ...{Loading}...

ಕೆಲಬಲದ ಸಬಳಿಗರು ಸಬಳದ
ವಳಯದಲಿ ಹರಿಗೆಗಳು ಹರಿಗೆಗ
ಳೊಳಗೆ ಬಿಲ್ಲಾಳುಗಳ ಮರೆಯಲಿ ವಾಜಿ ಗಜ ರಥವ
ನಿಲಿಸಿ ಗರ್ಭವ್ಯೂಹವನು ಮಂ
ಡಳಿಸಿದನು ಸಂವೀರರನು ಸಿಂ
ಹಳರ ನಿಲಿಸಿದ ಹತ್ತು ಸಾವಿರ ಮಂಡಳೇಶ್ವರರ ॥21॥

೦೨೨ ಅಪರಭಾಗದಲಳವಿಯಲಿ ಭೂ ...{Loading}...

ಅಪರಭಾಗದಲಳವಿಯಲಿ ಭೂ
ಮಿಪರ ಭೂರಿಶ್ರವನ ಶಲ್ಯನ
ಕೃಪನ ವೃಷಸೇನನ ಸುಲೋಚನ ದೀರ್ಘಬಾಹುಕರ
ನೃಪತಿಗಳನೆಂಬತ್ತು ಸಾವಿರ
ಚಪಳಗಜ ಹದಿನೆಂಟು ಕೋಟಿಯ
ನಪರಿಮಿತತೇಜಿಯಲಿ ಪದ್ಮವ್ಯೂಹವನು ಬಲಿದ ॥22॥

೦೨೩ ಆ ಮಹಾಮೋಹರದ ...{Loading}...

ಆ ಮಹಾಮೋಹರದ ಬಳಿಯಲಿ
ಸೋಮದತ್ತನ ದಂಡಧರನನು
ತಾಮರಸಬಂಧುವಿನ ಮಗನನು ಕ್ಷೇಮಧೂರ್ತಕನ
ಆ ಮಹಾಬಾಹುಕನನಶ್ವ
ತ್ಥಾಮನನು ಕೃತವರ್ಮಕರೆನಿಪ ಸ
ನಾಮರನು ನಿಲಿಸಿದನು ಸೂಚೀವ್ಯೂಹ ವಳಯದಲಿ ॥23॥

೦೨೪ ಪದುಮ ಸೂಚೀವ್ಯೂಹ ...{Loading}...

ಪದುಮ ಸೂಚೀವ್ಯೂಹ ಮಧ್ಯದೊ
ಳದಟರನು ನಿಲಿಸಿದನು ಸಮರಾ
ಗ್ರದಲಿ ಅವನಳಲಿಗರನಾಪ್ತರನವನ ಬಾಂಧವರ
ಕದನಗಲಿಸೈಂಧವನನಾ ಮ
ಧ್ಯದಲಿ ನಿಲಿಸಿದನಮಮ ಸಮರಕೆ
ಮದನ ಮಥನನು ಮೊಗಸಲಸದಳವೆನಿಸಿ ರಂಜಿಸಿತು ॥24॥

೦೨೫ ತಿವಿವ ಸಿಡಿಲೊಬ್ಬುಳಿಯೊ ...{Loading}...

ತಿವಿವ ಸಿಡಿಲೊಬ್ಬುಳಿಯೊ ಪ್ರಳಯದ
ಜವನ ನೆರವಿಯೊ ಕಾಳಕೂಟಾ
ರ್ಣವದ ಸೀಮಾಲಂಘನವೊ ಮೃತ್ಯುವಿನ ಪಾಳಯವೊ
ಅವನಿ ಕುಸಿದುದು ನೆರೆದ ಸೇನೆಯ
ಹವಣಿಗೀಶ್ವರ ಬಲ್ಲನೆನೆ ಸೈಂ
ಧವನ ಕಾಹಿನ ಮೋಹರಂಗಳು ಕಿಡಿಯನುಗುಳಿದವು ॥25॥

೦೨೬ ಜಡಿವ ಮದದಾನೆಗಳ ...{Loading}...

ಜಡಿವ ಮದದಾನೆಗಳ ಗಗನವ
ನಡರ್ವ ಕಡುಗುದುರೆಗಳ ಸೂಠಿಯೊ
ಳೆಡಬಲಕೆ ಬಿರುವರಿವ ತೇರಿನ ಸೂತರೋಜೆಗಳ
ಖಡುಗ ಕೊಂತವ ನಭಕೆ ಹಾಯಿಕಿ
ಹಿಡಿವ ಸುಭಟರ ಭುಜದ ಹೊಯ್ಲಿನ
ಕಡುಮನದ ರಣದವಕಿಗರ ಸೌರಂಭ ರಂಜಿಸಿತು ॥26॥

೦೨೭ ಮೊಳಗಿದವು ನಿಸ್ಸಾಳ ...{Loading}...

ಮೊಳಗಿದವು ನಿಸ್ಸಾಳ ಕೋಳಾ
ಹಳಿಸಿದವು ಕಹಳೆಗಳು ಪರ್ವತ
ಹಿಳಿಯೆ ಹೆಚ್ಚಿದ ಪಣಹ ಪಟಹ ಮೃದಂಗ ಡಿಂಡಿಮದ
ಉಲಿಯ ತೇಜಿಯ ಹೇಷಿತದ ವೆ
ಗ್ಗಳೆಯ ಕರಿಗಳ ಬೃಂಹಿತದ ಗೊಂ
ದಳದ ಕಳಗರ್ಚಾಯ್ತು ಕೌರವ ಸೈನ್ಯಶರಧಿಯಲಿ ॥27॥

೦೨೮ ಮುನ್ದೆ ಶಕಟವ್ಯೂಹದಲಿ ...{Loading}...

ಮುಂದೆ ಶಕಟವ್ಯೂಹದಲಿ ನಡೆ
ತಂದು ನಿಂದನು ದ್ರೋಣ ನಿಜಬಲ
ದಂದವನು ನೆರೆನೋಡಿ ನೋಡಿ ಕಿರೀಟವನು ತೂಗಿ
ಇಂದು ಗೆಲಿದರೆ ಧರ್ಮಸುತನವ
ರಿಂದುಕುಲದಗ್ಗಳರು ಬರಹೇ
ಳೆಂದು ಭಟ್ಟರನಟ್ಟಿದನು ಪಾಂಡವರ ಪಾಳಯಕೆ ॥28॥

೦೨೯ ಕೇಳು ಧೃತರಾಷ್ಟ್ರಾವನಿಪ ...{Loading}...

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತ ಯುಧಿಷ್ಠಿರಾದಿಗ
ಳಾಳಮೇಳಾಪದಲಿ ಹೊಕ್ಕರು ಕಾಳೆಗದ ಕಳನ
ಸಾಲರಿದು ನಿಜಸೇನೆಯನು ಪಾಂ
ಚಾಲಸುತ ಮೋಹರಿಸಿದನು ಕೆಂ
ಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ ॥29॥

೦೩೦ ಅರಸನೆಡವಙ್ಕದಲಿ ಮತ್ಸ್ಯರು ...{Loading}...

ಅರಸನೆಡವಂಕದಲಿ ಮತ್ಸ್ಯರು
ಬಿರುದ ಕೈಕೆಯ ಚೈದ್ಯ ಕೇರಳ
ಮರು ಯವನ ಸಂವೀರ ಕೌಸಲ ಪಾಂಡ್ಯ ಮಾಗಧರು
ಧರಣಿಪನ ಬಲವಂಕದಲಿ ಮೋ
ಹರಿಸಿ ಪಾಂಚಾಲಕರು ಚೂಣಿಯೊ
ಳುರವಣಿಸಿದರು ನಕುಲ ಸಾತ್ಯಕಿ ಭೀಮನಂದನರು ॥30॥

೦೩೧ ನರ ಮುರಾನ್ತಕರೊನ್ದು ...{Loading}...

ನರ ಮುರಾಂತಕರೊಂದು ಕಡೆಯಲಿ
ಮುರಿಯೆ ಕಂಡನು ನೃಪತಿ ಕೃಷ್ಣನ
ಹೊರೆಗೆ ಬಂದನು ನಮಿಸಿ ಬಿನ್ನಹ ಮಾಡಿದನು ಬಳಿಕ
ನರನಿವನು ಮಗನಿದಿರುಗಾಣದೆ
ಹಿರಿದನೇರಿಸಿ ನುಡಿದನಿದ ಪತಿ
ಕರಿಸಬೇಹುದು ನಿನ್ನ ಕರುಣವೆ ಹರಣವೆಮಗೆಂದ ॥31॥

೦೩೨ ಹಗೆಯ ತಲೆ ...{Loading}...

ಹಗೆಯ ತಲೆ ಹೋಗದಡೆ ವಹ್ನಿಯ
ಹೊಗುವ ನುಡಿ ತಮ್ಮನದು ಬಳಿಕಾ
ಸೆಗಳಿಕೆಯೊಳುಳಿದೆಮ್ಮ ನಾಲ್ವರ ದೇಹ ನಿಕ್ಷೇಪ
ಬಗೆಯಲೈವರ ಜೀವನದ ವಿಲ
ಗಿಗನು ನೀನೆಂದರಸ ಕರುಣಾ
ಳುಗಳ ದೇವನ ಬೇಡಿಕೊಂಡನು ಕೇಳು ಧೃತರಾಷ್ಟ್ರ ॥32॥

೦೩೩ ಪಡೆಗಡಲು ಕುಡಿನೀರು ...{Loading}...

ಪಡೆಗಡಲು ಕುಡಿನೀರು ನೆರೆ ನೀ
ರಡಸಿದುದು ಪಾರ್ಥನ ಶರಾವಳಿ
ವಡಬನಿದರೊಳು ಕೆಲಬಲದ ಹಂಗೇಕೆ ಕದನದಲಿ
ಕಡುಹಿನಲಿ ಸೈಂಧವನ ತಲೆಯನು
ಹೊಡೆದು ನಿನ್ನಯ ಕಾಲ ಬಳಿಯಲಿ
ಕೆಡಹುವನು ನಿಮಿಷದಲಿ ಫಲುಗುಣನೆಂದನಸುರಾರಿ ॥33॥

೦೩೪ ಕರೆದು ಸಾತ್ಯಕಿ ...{Loading}...

ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ ॥34॥

೦೩೫ ಇಳಿದು ರಥವನು ...{Loading}...

ಇಳಿದು ರಥವನು ಮುರಹರನ ಪದ
ತಳದ ಧೂಳಿಯ ಕೊಂಡನತಿ ನಿ
ರ್ಮಲ ಸಮಾಧಾನದಲಿ ಕೃಷ್ಣನ ಚರಣಕೆರಗಿದನು
ತಲೆಯ ಹಿಡಿದೆತ್ತಿದನು ಹರಿ ಕೋ
ಮಳ ಕರಾಂಬುಜದಿಂದ ಪಾರ್ಥನ
ನೊಲಿದು ಮೈದಡವಿದನು ಗೆಲು ಹೋಗೆಂದು ಹರಸಿದನು ॥35॥

೦೩೬ ಖುರಕೆ ರತುನವ ...{Loading}...

ಖುರಕೆ ರತುನವ ಸುರಿದು ತೇರಿನ
ತುರಗವನು ವಂದಿಸಿದನಾ ಪಳ
ಹರದ ಹನುಮಂಗೆರಗಿದನು ಸುರಕುಲಕೆ ಕೈಮುಗಿದು
ವರರಥವ ಬಲಗೊಂಡು ಕವಚವ
ಬರಿಗೆ ಬಿಗಿದನು ಕೈಗೆ ವಜ್ರದ
ತಿರುವೊಡೆಯನವಚಿದನು ರಥವೇರಿದನು ಕಲಿಪಾರ್ಥ ॥36॥

೦೩೭ ದೇವದತ್ತವ ಮೊಳಗಿದನು ...{Loading}...

ದೇವದತ್ತವ ಮೊಳಗಿದನು ಗಾಂ
ಡೀವಿ ಚಾಪವ ಮಿಡಿದ ನಿಷ್ಠುರ
ರಾವ ತಿವಿದುದು ಜರಿದವಡಕಿಲು ಜಗದ ಜೋಡಿಗಳ
ರಾವು ಫಲುಗುಣಯೆನುತ ಪಾರ್ಥನ
ಭಾವ ಕುಡಿ ಚಮ್ಮಟಿಗೆಯಲಿ ತುರ
ಗಾವಳಿಯನದುಹಿದನು ಸುಳಿಸಿದನಾಹವಕೆ ರಥವ ॥37॥

೦೩೮ ವರಯುಧಾಮನ್ಯೂತ್ತಮೌಞ್ಜಸ ...{Loading}...

ವರಯುಧಾಮನ್ಯೂತ್ತಮೌಂಜಸ
ರೆರಡು ಕಡೆಯಲಿ ಬರೆ ಮುರಾರಿಯ
ಪರಮ ಸಾಹಾಯ್ಯದಲಿ ಸಾಹಸಮಲ್ಲನುರವಣಿಸೆ
ಅರಿಬಲವ ಕೆಣಕಿದನು ಪಾರ್ಥನ
ಬರವನೀಕ್ಷಿಸಿ ತನ್ನ ಸೇನೆಗೆ
ಬೆರಳ ಚೌರಿಯ ಬೀಸಿ ದುಶ್ಯಾಸನನು ಮಾರಾಂತ ॥38॥

೦೩೯ ಇವನ ಕೊನ್ದರೆ ...{Loading}...

ಇವನ ಕೊಂದರೆ ಮುನ್ನ ಮಾಡಿದ
ಪವನತನಯನ ಭಾಷೆಗೂಣೆಯ
ವಿವನ ಕೊಲ್ಲದೆ ಗೆಲುವ ಹದನೇನೆನುತ ನಿಮಿಷದಲಿ
ಕವಲುಗೋಲಿನಲರಿಭಟನ ಚಾ
ಪವನು ಸೂತನ ರಥವ ರಥವಾ
ಹವನು ಖಂಡಿಸಿ ಬಿಸುಡಲವ ಜಾರಿದನು ದುಗುಡದಲಿ ॥39॥

೦೪೦ ಉರಿಯ ಬನ್ದಿಯ ...{Loading}...

ಉರಿಯ ಬಂದಿಯ ಹಿಡಿದು ಹೆಚ್ಚುವ
ದೊರೆಯಲೇ ದಿಟ ಪಾದರಸವೆಲೆ
ಯರಸ ನಿನ್ನ ಕುಮಾರನೇಸರ ಪಾಡು ಪಾರ್ಥಂಗೆ
ತೆರಳಿದನು ನಿನ್ನಾತ ಸೂಠಿಯೊ
ಳುರವಣಿಸಿತಾ ತೇರು ನರನೈ
ತರಲು ಕಂಡನು ಶಸ್ತ್ರವಿದ್ಯಾ ಭಾಳಲೋಚನನ ॥40॥

೦೪೧ ಅರುಣಮಯ ರಥವಾಜಿಗಳ ...{Loading}...

ಅರುಣಮಯ ರಥವಾಜಿಗಳ ವಿ
ಸ್ತರದ ಹೇಮದ ಕಳಶ ಸಿಂಧದ
ಸರಳು ತೀವಿದ ಬಂಡಿ ಬಳಿಯಲಿ ಲಕ್ಷಸಂಖ್ಯೆಗಳ
ತರಣಿಯನು ಸೋಲಿಸುವ ರತ್ನಾ
ಭರಣಕಾಂತಿಯ ರಾಯಕಟಕದ
ಗುರುವ ಕಂಡನು ಪಾರ್ಥ ಶಕಟ ವ್ಯೂಹದಗ್ರದಲಿ ॥41॥

೦೪೨ ಆರಿವನು ಕಲಿಪಾರ್ಥನೇ ...{Loading}...

ಆರಿವನು ಕಲಿಪಾರ್ಥನೇ ತ್ರಿಪು
ರಾರಿ ಹಿಡಿವಂಬಾಯಿತೆಂಬ ದೊ
ಠಾರನೇ ದೈತ್ಯಾರಿ ಸಾರಥಿಯೆಂಬ ಗರ್ವಿತನೆ
ಹಾರುವರು ನಾವಸ್ತ್ರ ವಿದ್ಯಾ
ಪಾರಗರು ನಾವಲ್ಲ ರಣದೌ
ದಾರಿಯವ ತೋರೆಮಗೆನುತ್ತಡಹಾಯ್ದನಾ ದ್ರೋಣ ॥42॥

೦೪೩ ನಾಳೆ ಹಗೆವನ ...{Loading}...

ನಾಳೆ ಹಗೆವನ ಹೊಯ್ವೆನೆಂಬು
ಬ್ಬಾಳುತನವಿನ್ನೊಮ್ಮೆ ಭೂಪತಿ
ಯೋಲೆಗಾತಿಯರಿದಿರಲಾಡಿದ ಭಾಷೆಯಿನ್ನೊಮ್ಮೆ
ಆಳು ನೆರೆದಿದೆ ಚೂಣಿಯೊಳಗೊಂ
ದಾಳ ಹೊಯ್ದರೆ ಗೆಲವು ನಿನ್ನದು
ಕಾಳಕೂಟದ ಕಮಲ ತುಂಬಿಗೆ ಪಥ್ಯವಲ್ಲೆಂದ ॥43॥

೦೪೪ ಎಮ್ಬಡಿದಿರುತ್ತರವಲೇ ಗರ ...{Loading}...

ಎಂಬಡಿದಿರುತ್ತರವಲೇ ಗರ
ಳಾಂಬುಜದ ಪರಿಮಳಕೆ ಗರುಡನು
ತುಂಬಿಯಾದರೆ ಸೇರುವುದಲೇ ಸಾಕದಂತಿರಲಿ
ಅಂಬುಗಳಿಗೆಡೆದೆರಹ ಕುಡಿ ನೀ
ವೆಂಬ ನುಡಿಗಂಜುವೆನು ಸೈಂಧವ
ನೆಂಬವನ ತೋರಿಸಿರೆಯೆಂದನು ನಗುತ ಕಲಿಪಾರ್ಥ ॥44॥

೦೪೫ ಎಲೆ ಮರುಳೆ ...{Loading}...

ಎಲೆ ಮರುಳೆ ಮುಂದಿದ್ದ ನಮ್ಮಯ
ವಿಲಗವನು ಪರಿಹರಿಸಿ ಸೈಂಧವ
ನಳಿವುಪಾಯವ ಮಾಡು ಗರುವರು ನುಡಿದು ಕೆಡಿಸುವರೆ
ಅಳವಿಗೊಡು ಕೊಳ್ಳಂಬನೆನುತ
ಗ್ಗಳೆಯನೆಚ್ಚನು ನರನ ಮೆಯ್ಯಲಿ
ತಳಿತವಂಬುಗಳೇನನೆಂಬೆನು ವಿಗಡ ವಿಗ್ರಹವ ॥45॥

೦೪೬ ಅವರ ಪಾದಾಮ್ಬುಜಕೆ ...{Loading}...

ಅವರ ಪಾದಾಂಬುಜಕೆ ಫಲುಗುಣ
ಕವಿಸಿದನು ಸರಳುಗಳ ಲೆಕ್ಕಿಸ
ದವಗಡಿಸಿ ಗುರುವೆಚ್ಚು ಕಡಿದನು ಗಾಂಡಿವದ ತಿರುವ
ಸವತಳಿಸಿ ಮಾರ್ತಿರುವಿನಲಿ ಸಂ
ತವಿಸಿಕೊಂಡರ್ಜುನನು ದ್ರೋಣನ
ನವ ನಿಶಿತ ಬಾಣೌಘದಲಿ ಹೂಳಿದನು ನಿಮಿಷದಲಿ ॥46॥

೦೪೭ ಸರಳ ಸವರಿ ...{Loading}...

ಸರಳ ಸವರಿ ಮಹಾಸ್ತ್ರಚಯದಲಿ
ನರನನೆಚ್ಚನು ನಮ್ಮ ಲಾಗಿನ
ಧುರವು ತಾನಿದು ದಿಟ್ಟನಹೆಯೋ ಪಾರ್ಥ ಲೇಸೆನುತ
ಸರಳು ಸುರಿಯಲು ಕೃಷ್ಣ ಪಾರ್ಥನ
ಕೆರಳಿದನು ಫಡ ಮರುಳೆ ಗುಣದಲಿ
ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ ॥47॥

೦೪೮ ಇಳುಹಿದನು ಗಾಣ್ಡಿವವನುರು ...{Loading}...

ಇಳುಹಿದನು ಗಾಂಡಿವವನುರು ಬ
ತ್ತಳಿಕೆಯನು ಕಳಚಿದನು ರಥದಿಂ
ದಿಳಿದು ಮೈಯಿಕ್ಕಿದನು ದ್ರೋಣನ ಚರಣಕಮಲದಲಿ
ತಿಳಿಯಲೆಮ್ಮೈವರಿಗೆ ಜೀವನ
ದುಳಿವು ನಿನ್ನದು ನಿನ್ನ ಮಕ್ಕಳ
ಸಲಹು ಮೇಣ್ ಕೊಲ್ಲೆನುತ ನುಡಿದನು ವಿನಯದಲಿ ಪಾರ್ಥ ॥48॥

೦೪೯ ಆ ಶಿಶುತ್ವದಲೆಮ್ಮ ...{Loading}...

ಆ ಶಿಶುತ್ವದಲೆಮ್ಮ ಬೊಪ್ಪನು
ವಾಸವನ ಪುರಕೈದಿದನು ನಿ
ಮ್ಮಾಸೆಯಲಿ ಗಾಂಗೇಯರಿಂದವೆ ಹಿರಿದು ಬದುಕಿದೆವು
ಘಾಸಿಯಾದೆವು ಜೂಜಿನಲಿ ವನ
ವಾಸವನು ನೂಕಿದೆವು ಮೈಮರೆ
ದೀಸನೇರಿಸಿ ನುಡಿದ ನುಡಿಗಳ ಕಾಯಬೇಕೆಂದ ॥49॥

೦೫೦ ನೀವು ಹೂಣಿಗರಾಗಿ ...{Loading}...

ನೀವು ಹೂಣಿಗರಾಗಿ ರಿಪುವನು
ಕಾವಡಿತ್ತಲೆ ತೊಲಗುವೆನು ಕರು
ಣಾವಲೋಕನವೆನ್ನ ಮೇಲುಂಟಾದಡಿದಿರಹೆನು
ಆವುದನು ನಮಗೇನು ಗತಿ ತಲೆ
ಗಾವ ಮತವೇ ನಿಮ್ಮ ಚಿತ್ತದೊ
ಳಾವ ಹದನೆನೆ ಮುಗುಳುನಗೆಯಲಿ ದ್ರೋಣನಿಂತೆಂದ ॥50॥

೦೫೧ ಕನ್ದನಶ್ವತ್ಥಾಮ ಹುಸಿಯೆನ ...{Loading}...

ಕಂದನಶ್ವತ್ಥಾಮ ಹುಸಿಯೆನ
ಗಿಂದು ಬೇಹ ಕುಮಾರ ನೀ ನಿ
ನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ
ತಂದೆ ನಿನಗಾ ಮುನಿಯಲಾಪೆನೆ
ಸಂದುದಾಡಿದ ಭಾಷೆ ನೀ ಹೋ
ಗೆಂದು ಗುಣದಲಿ ಬೀಳುಕೊಟ್ಟನು ದ್ರೋಣನರ್ಜುನನ ॥51॥

೦೫೨ ಬಲದೊಳಧಿಕರು ಭಟರೊಳತಿ ...{Loading}...

ಬಲದೊಳಧಿಕರು ಭಟರೊಳತಿ ವೆ
ಗ್ಗಳರು ಹೆಸರುಳ್ಳವರು ವಿದ್ಯಾ
ಕುಲ ತಪೋಧರ್ಮಾದಿ ಗುಣಿಗಳು ಧೈರ್ಯಸಂಯುತರು
ಹಲಬರಿಹುದುಸುರಿಲ್ಲದೊಡಲಿನ
ಚೆಲುವಿನಂತಿರೆ ನಮ್ಮ ಬಲ ಹರಿ
ಯೊಲವಿನವರಭ್ಯುದಯವನು ಧೃತರಾಷ್ಟ್ರ ಕೇಳ್ ಎಂದ ॥52॥

+೦೯ ...{Loading}...