೦೦೦ ಸೂ ಜಯಸಮರ ...{Loading}...
ಸೂ. ಜಯಸಮರ ಸೌರಂಭನಾಹವ
ಭಯ ಬಹಿರ್ಮುಖನಸ್ತ್ರವಿದ್ಯಾ
ನಿಯತಮತಿ ಮೋಹರಿಸಿ ಸಮರಕೆ ದ್ರೋಣನನುವಾದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಯುದ್ಧದಲ್ಲಿ ಜಯವನ್ನು ಸಾಧಿಸಲು ಸಂಭ್ರಮದಿಂದಿರುವವನೂ ಯುದ್ಧದ ಬಗ್ಗೆ ಯಾವ ಭಯವನ್ನು ಹೊಂದದೆ, ಬಿಲ್ವಿದ್ಯೆಯಲ್ಲಿ ನಿಯತವಾದ ಪಾಂಡಿತ್ಯವನ್ನು ಹೊಂದಿದ ದ್ರೋಣಾಚಾರ್ಯನು ಸೈನ್ಯವನ್ನು ಒಟ್ಟುಗೂಡಿಸಿ ಯುದ್ಧಕ್ಕೆ ಸಿದ್ಧನಾದ.
ಮೂಲ ...{Loading}...
ಸೂ. ಜಯಸಮರ ಸೌರಂಭನಾಹವ
ಭಯ ಬಹಿರ್ಮುಖನಸ್ತ್ರವಿದ್ಯಾ
ನಿಯತಮತಿ ಮೋಹರಿಸಿ ಸಮರಕೆ ದ್ರೋಣನನುವಾದ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಫಲುಗುಣ ಹೊಕ್ಕನಾಯುಧ
ಶಾಲೆಯನು ತೆಗೆಸಿದನು ಧನು ಮೊದಲಾದ ಕೈದುಗಳ
ಸಾಲರಿದು ನಿಲಿಸಿದನು ನಿಶಿತ ಶ
ರಾಳಿ ಚಾಪ ಕೃಪಾಣ ಪರಶು ತ್ರಿ
ಶೂಲ ಮುದ್ಗರ ಚಕ್ರ ಸೆಲ್ಲೆಹ ಶಕುತಿ ತೋಮರವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಯನೇ ಕೇಳು ಅರ್ಜುನನು ಆಯುಧ ಶಾಲೆಗೆ ಹೋಗಿ ಬಿಲ್ಲು, ಮೊದಲಾದ ಆಯುಧಗಳನ್ನು ತೆಗೆಸಿದನು. ಹರಿತವಾದ ಬಾಣಗಳ ಸಮೂಹ, ಬಿಲ್ಲು ಚಿಕ್ಕ ಖಡ್ಗ, ಕೊಡಲಿ, ತ್ರಿಶೂಲ, ಮುದ್ಗರ, ಚಕ್ರ, ಸೆಲ್ಲೆಹ, ಶಕ್ತಿ ಆಯುಧ, ತೋಮರವೇ ಮೊದಲಾದ ಆಯುಧಗಳನ್ನು ಸಾಲು ಸಾಲಾಗಿ ನಿಲ್ಲಿಸಿದನು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಫಲುಗುಣ ಹೊಕ್ಕನಾಯುಧ
ಶಾಲೆಯನು ತೆಗೆಸಿದನು ಧನು ಮೊದಲಾದ ಕೈದುಗಳ
ಸಾಲರಿದು ನಿಲಿಸಿದನು ನಿಶಿತ ಶ
ರಾಳಿ ಚಾಪ ಕೃಪಾಣ ಪರಶು ತ್ರಿ
ಶೂಲ ಮುದ್ಗರ ಚಕ್ರ ಸೆಲ್ಲೆಹ ಶಕುತಿ ತೋಮರವ ॥1॥
೦೦೨ ಸವಗ ಮೊಚ್ಚಯ ...{Loading}...
ಸವಗ ಮೊಚ್ಚಯ ಜೋಡು ಸೀಸಕ
ಕವಚ ಬಾಹುರಿಕೆಗಳ ನಿಲಿಸಿದ
ನವಿರಳಾಕ್ಷತೆ ಗಂಧ ಪುಷ್ಪ ಸುಧೂಪ ದೀಪದಲಿ
ವಿವಿಧ ಸತ್ಕಾರದಲಿ ದುರ್ಗಾ
ಸ್ತವವ ಜಪಿಸಿದ ವರ ಘೃತೋದನ
ನವರುಧಿರ ಮಾಂಸೋಪಹಾರಂಗಳಲಿ ಪೂಜಿಸಿದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕವಚ ಪಾದರಕ್ಷೆ, ಕವಚ ಶಿರಸ್ತ್ರಾಣ, ಬಾಹು ರಕ್ಷೆಗಳೆಲ್ಲವನ್ನು ಸಾಲಾಗಿ ನಿಲ್ಲಿಸಿ, ಮಂತ್ರಾಕ್ಷತೆ, ಗಂಧ, ಹೂವು, ಧೂಪ, ದೀಪಗಳಿಂದ ಪೂಜೆ ಮಾಡಿದನು. ದುರ್ಗಾಸ್ತವವನ್ನು ಜಪಿಸಿ, ಶ್ರೇಷ್ಠವಾದ ತುಪ್ಪದ ಅನ್ನ ಹೊಸ ರಕ್ತ, ಮಾಂಸಗಳನ್ನು ನೈವೇದ್ಯ ಮಾಡಿ ಆಯುಧಗಳನ್ನು ಪೂಜಿಸಿದ.
ಪದಾರ್ಥ (ಕ.ಗ.ಪ)
ಸವಗ-ಕವಚ, ಮೊಚ್ಚಯ-ಪಾದರಕ್ಷೆ,
ಬಾಹುರಿಕೆ-ತೋಳುಗಳಿಗೆ ಹಾಕಿಕೊಳ್ಳುವ ಕವಚ,
ಘೃತೋದನ-ತುಪ್ಪದ ಅನ್ನ,
ನವರುಧಿರ-ಹೊಸರಕ್ತ
ಮೂಲ ...{Loading}...
ಸವಗ ಮೊಚ್ಚಯ ಜೋಡು ಸೀಸಕ
ಕವಚ ಬಾಹುರಿಕೆಗಳ ನಿಲಿಸಿದ
ನವಿರಳಾಕ್ಷತೆ ಗಂಧ ಪುಷ್ಪ ಸುಧೂಪ ದೀಪದಲಿ
ವಿವಿಧ ಸತ್ಕಾರದಲಿ ದುರ್ಗಾ
ಸ್ತವವ ಜಪಿಸಿದ ವರ ಘೃತೋದನ
ನವರುಧಿರ ಮಾಂಸೋಪಹಾರಂಗಳಲಿ ಪೂಜಿಸಿದ ॥2॥
೦೦೩ ಒಡನೆ ಗಜರುವ ...{Loading}...
ಒಡನೆ ಗಜರುವ ವಾದ್ಯದಲಿ ಕೆಂ
ಪಡರಿದೋಗರಸಹಿತ ಭೂತಕೆ
ಬಡಿಸಿದರು ಮಾಂತ್ರಿಕರು ಬಲಿಗೆದರಿದರು ದೆಸೆದೆಸೆಗೆ
ತೊಡವು ವಸನಾದಿಗಳಲೊಪ್ಪಂ
ಬಡುವ ಬಲಿಯನು ಹರಿಯೊಳರ್ಪಿಸಿ
ನಡುವಿರುಳು ಕಲಿಪಾರ್ಥನರ್ಚಿಸಿದನು ನಿಜಾಯುಧವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಾದ್ಯಗಳು ಮೊಳಗುತ್ತಿರಲು, ಕೆಂಪು ಬಣ್ಣದಿಂದ ಕೂಡಿದ ಅನ್ನದ ಸಹಿತ ಭೂತಗಳಿಗೆ ಬಡಿಸಿದರು. ಮಾಂತ್ರಿಕರು ಎಲ್ಲ ದಿಕ್ಕುಗಳಿಗೂ ಬಲಿಯನ್ನು ಅರ್ಪಿಸಿದರು. ಆಭರಣ, ವಸ್ತ್ರ, ಮೊದಲಾದುವುಗಳಿಂದ ಬಲಿಯನ್ನು ರಚಿಸಿ ಅದನ್ನು ಹರಿಗೆ ಅರ್ಪಿಸಿ ಅರ್ಜುನನು ಆ ದಿನ ರಾತ್ರಿ ಬಹು ವಿಧದಲ್ಲಿ ಶಸ್ತ್ರಾಸ್ತ್ರಗಳ ಪೂಜೆಗಳನ್ನು ನಡೆಸಿದನು.
ಪದಾರ್ಥ (ಕ.ಗ.ಪ)
ಗಜರುವ-ಜೋರಾಗಿ ಧ್ವನಿ ಮಾಡುವ, ಓಗರ-ಅನ್ನ,
ಮೂಲ ...{Loading}...
ಒಡನೆ ಗಜರುವ ವಾದ್ಯದಲಿ ಕೆಂ
ಪಡರಿದೋಗರಸಹಿತ ಭೂತಕೆ
ಬಡಿಸಿದರು ಮಾಂತ್ರಿಕರು ಬಲಿಗೆದರಿದರು ದೆಸೆದೆಸೆಗೆ
ತೊಡವು ವಸನಾದಿಗಳಲೊಪ್ಪಂ
ಬಡುವ ಬಲಿಯನು ಹರಿಯೊಳರ್ಪಿಸಿ
ನಡುವಿರುಳು ಕಲಿಪಾರ್ಥನರ್ಚಿಸಿದನು ನಿಜಾಯುಧವ ॥3॥
೦೦೪ ಇರುಳಿನದ್ಭುತ ರವವನಾಲಿಸಿ ...{Loading}...
ಇರುಳಿನದ್ಭುತ ರವವನಾಲಿಸಿ
ಮುರಮಥನನೀ ಫಲುಗುಣನ ಸಂ
ಗರ ಜಯೋದ್ಧತಮಂತ್ರವೆಂದನು ದಾರುಕನ ಕರೆದು
ಹರ ಮಹಾಸೇನಾದಿಗಳು ಗೆಲ
ಲರಿದು ನಾಳಿನ ಬವರವಿನ್ನೀ
ನರನ ಜಯವೆಂತೆನುತ ಚಿಂತಿಸುತಲ್ಲಿಗೈತಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿಯ ಅದ್ಭುತ ಧ್ವನಿಯನ್ನು ಕೇಳಿದ ಕೃಷ್ಣನು “ಇದು ಅರ್ಜುನನು ಜಯ ಗಳಿಸಲೆಂದು ಮಾಡುತ್ತಿರುವ ಮಂತ್ರ ಕಾರ್ಯವಾಗಿದೆ” ಎಂದು ತನ್ನ ಸಾರಥಿಯಾದ ದಾರುಕನನ್ನು ಕರೆದು ಹೇಳಿದನು. ನಾಳೆಯ ದಿನದ ಯುದ್ಧವನ್ನು ಶಿವನಾಗಲೀ, ಮಹಾ ಸೇನಾನಾಗಲಿ ಗೆಲ್ಲಲು ಸಾಧ್ಯವಿಲ್ಲ. ಹೀಗೆಂದ ಮೇಲೆ ಈ ಅರ್ಜುನನ ಜಯವು ಹೇಗೆ ಎಂದು ಚಿಂತಿಸುತ್ತಾ ಅರ್ಜುನನ ಬಳಿಗೆ ಬಂದನು.
ಪದಾರ್ಥ (ಕ.ಗ.ಪ)
ಉದ್ಧತ -ಉಚ್ಚ ದನಿಯ
ಮೂಲ ...{Loading}...
ಇರುಳಿನದ್ಭುತ ರವವನಾಲಿಸಿ
ಮುರಮಥನನೀ ಫಲುಗುಣನ ಸಂ
ಗರ ಜಯೋದ್ಧತಮಂತ್ರವೆಂದನು ದಾರುಕನ ಕರೆದು
ಹರ ಮಹಾಸೇನಾದಿಗಳು ಗೆಲ
ಲರಿದು ನಾಳಿನ ಬವರವಿನ್ನೀ
ನರನ ಜಯವೆಂತೆನುತ ಚಿಂತಿಸುತಲ್ಲಿಗೈತಂದ ॥4॥
೦೦೫ ರಚನೆ ಚೆಲುವಿದು ...{Loading}...
ರಚನೆ ಚೆಲುವಿದು ನಾಳಿನಾಹವ
ಖಚರ ಕಿಂಪುರುಷರಿಗೆ ಅಸದಳ
ವಚಲಬಲಗಾಂಡಿವಿಗೆ ಹರಿಯದು ಸುಪ್ತಿಯೊಳಗವನ
ಉಚಿತದಲಿ ಕೊಂಡೊಯ್ದು ರುದ್ರನ
ವಚನದನುವನು ತಿಳಿವೆನೆಂದಾ
ಶಚಿಯಗಂಡನಮಗನನೀಶನ ಪದವ ಕಾಣಿಸಿದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಆಯುಧಗಳ ಪೂಜಾ ವಿಧಾನ ಚೆನ್ನಾಗಿದೆ. ಆದರೆ ನಾಳಿನ ಯುದ್ಧವು ಆಕಾಶ ಮಾರ್ಗಿಗಳಾದ ಖಚರ ಕಿಂಪುರುಷರಿಗೆ ಅಸಾಧ್ಯವಾದುದು. ಅಚಲ ಬಲನಾದ ಗಾಂಡೀವಿಗೆ ಈ ಯುದ್ಧ ಸಾಧ್ಯವಾಗುವುದಿಲ್ಲ. ಸುಷುಪ್ತಿಯ ಸ್ಥಿತಿಯಲ್ಲಿ ಅವನನ್ನು ರುದ್ರನಲ್ಲಿಗೆ ಕೊಂಡೊಯ್ದು ಅವನ ಮಾತಿನ ಕ್ರಮವನ್ನು ತಿಳಿಯುತ್ತೇನೆಂದು ಕೃಷ್ಣನು ಅರ್ಜುನನಿಗೆ ಶಿವನ ಪಾದದರ್ಶನವನ್ನು ಮಾಡಿಸಿದ.
ಪದಾರ್ಥ (ಕ.ಗ.ಪ)
ಸುಷುಪ್ತಿ-ಅರೆಪ್ರಜ್ಞಾವಸ್ಥೆ.
ಮೂಲ ...{Loading}...
ರಚನೆ ಚೆಲುವಿದು ನಾಳಿನಾಹವ
ಖಚರ ಕಿಂಪುರುಷರಿಗೆ ಅಸದಳ
ವಚಲಬಲಗಾಂಡಿವಿಗೆ ಹರಿಯದು ಸುಪ್ತಿಯೊಳಗವನ
ಉಚಿತದಲಿ ಕೊಂಡೊಯ್ದು ರುದ್ರನ
ವಚನದನುವನು ತಿಳಿವೆನೆಂದಾ
ಶಚಿಯಗಂಡನಮಗನನೀಶನ ಪದವ ಕಾಣಿಸಿದ ॥5॥
೦೦೬ ಶಿವನ ಕರುಣಾಲಾಭ ...{Loading}...
ಶಿವನ ಕರುಣಾಲಾಭ ಪುಣ್ಯ
ಪ್ರವರ ಪಾರ್ಥನ ಮುನ್ನಿನಂದದ
ಲವನಿಗಿಳುಹಿದ ನಿಖಿಳದಿವ್ಯಾಯುಧದ ವೇದಿಕೆಗೆ
ಸವೆದುದಿರುಳಿಂದೂಪಲಂಗಳ
ನಿವಹ ಬಲಿದುದು ಚಕ್ರವಾಕದ
ತವಕ ತಗ್ಗಿತು ತರಣಿಯಡರಿದನುದಯಪರ್ವತವ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವನ ಕರುಣಾ ಲಾಭದ ಪುಣ್ಯದಿಂದ ಶ್ರೇಷ್ಠತೆಯನ್ನು ಪಡೆದ ಅರ್ಜುನನನ್ನು ಕೃಷ್ಣನು ಮೊದಲಿನಂತೆಯೇ ಭೂಮಿಗೆ ಕರೆ ತಂದು ಸಮಸ್ತ ದಿವ್ಯಾಯುಧಗಳನ್ನು ಜೋಡಿಸಿದ್ದ ಆ ಆಯುಧ ಶಾಲೆಯ ವೇದಿಕೆಗೆ, ಇಳುಹಿದ. ರಾತ್ರಿ ಕಳೆಯಿತು. ಚಂದ್ರಕಾಂತ ಶಿಲೆಗಳು ಗಟ್ಟಿಯಾದುವು. ಚಕ್ರವಾಕ ಪಕ್ಷಿಗಳ ಆತಂಕ ಕಳೆದು ಜೊತೆಗೂಡಿದವು. ಸೂರ್ಯನು ಉದಯ ಪರ್ವತವನ್ನು ಏರಿದ.
ಪದಾರ್ಥ (ಕ.ಗ.ಪ)
ಇಂದೂಪಲ-ಚಂದ್ರಕಾಂತ ಶಿಲೆ
ಟಿಪ್ಪನೀ (ಕ.ಗ.ಪ)
ಇಂದೂಪಲ-ಚಂದ್ರಕಾಂತ ಶಿಲೆ. ಇದು ಬೆಳುದಿಂಗಳಿಗೆ ಕರಗಿ ನೀರಾಗುತ್ತದೆ. ಬೆಳದಿಂಗಳು ಮುಗಿದಾಗ ಪುನಃ ಗಟ್ಟಿಗೊಳ್ಳುತ್ತದೆ. ಇದೊಂದು ಕವಿ ಸಮಯ.
ಚಕ್ರವಾಕ - ಗಂಡು - ಹೆಣ್ಣು ಚಕ್ರವಾಕ ಪಕ್ಷಿಗಳು ರಾತ್ರಿಯ ವೇಳೆಯಲ್ಲಿ ಬೇರೆಯಾಗಿದ್ದು ಹಗಲಿನ ಹೊತ್ತು ಒಂದನ್ನೊಂದು ತಬ್ಬಿಕೊಂಡೇ ಇರುತ್ತವೆ ಇದು ಸಹ ಕವಿ ಸಮಯ.
ಮೂಲ ...{Loading}...
ಶಿವನ ಕರುಣಾಲಾಭ ಪುಣ್ಯ
ಪ್ರವರ ಪಾರ್ಥನ ಮುನ್ನಿನಂದದ
ಲವನಿಗಿಳುಹಿದ ನಿಖಿಳದಿವ್ಯಾಯುಧದ ವೇದಿಕೆಗೆ
ಸವೆದುದಿರುಳಿಂದೂಪಲಂಗಳ
ನಿವಹ ಬಲಿದುದು ಚಕ್ರವಾಕದ
ತವಕ ತಗ್ಗಿತು ತರಣಿಯಡರಿದನುದಯಪರ್ವತವ ॥6॥
೦೦೭ ವಿಮಳ ದರ್ಭಾಙ್ಕುರದ ...{Loading}...
ವಿಮಳ ದರ್ಭಾಂಕುರದ ಶಯನದೊ
ಳಮರಪತಿಸುತ ಪವಡಿಸಿದನನು
ಪಮ ವಿಳಾಸನು ಕನಸ ಕಂಡೆನೆನುತ್ತ ಕಂದೆರೆದ
ಸಮರವಿಜಯಕೆ ಶಿವನ ಕೃಪೆ ಸಂ
ಕ್ರಮಿಸಿತೆನಗೆನುತಿರಲು ಮುಂದಣ
ಕಮಲನಾಭನ ಕಂಡು ಬಿನ್ನಹ ಮಾಡಿದನು ನಗುತ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಪರಿಶುದ್ಧವಾದ ದರ್ಭೆಯ ಹಾಸಿಗೆಯ ಮೇಲೆ ಮಲಗಿದ್ದನು. ಹೋಲಿಕೆಗೆ ಮೀರಿದ ಚಾರಿತ್ರ್ಯವುಳ್ಳವನಾದ ಅವನು ಅದ್ಭುತವಾದ ಕನಸನ್ನು ಕಂಡೆನೆನ್ನುತ್ತಾ ಕಣ್ಣುಗಳನ್ನು ತೆರೆದನು. ಯುದ್ಧದಲ್ಲಿ ಅಂದು ಜಯವನ್ನು ಗಳಿಸಲು ಅಗತ್ಯವಾದ ಶಿವನ ಕೃಪೆ ತನಗಾಯಿತೆಂದುಕೊಳ್ಳುತ್ತಿರುವಾಗ ತನ್ನೆದುರು ಕಾಣಿಸಿಕೊಂಡ ಕೃಷ್ಣನಿಗೆ ನಗುತ್ತ ಹೇಳಿದ.
ಪದಾರ್ಥ (ಕ.ಗ.ಪ)
ದರ್ಭಾಂಕುರ ಶಯನ-ಹುಲ್ಲಿನ ಹಾಸಿಗೆ
ಮೂಲ ...{Loading}...
ವಿಮಳ ದರ್ಭಾಂಕುರದ ಶಯನದೊ
ಳಮರಪತಿಸುತ ಪವಡಿಸಿದನನು
ಪಮ ವಿಳಾಸನು ಕನಸ ಕಂಡೆನೆನುತ್ತ ಕಂದೆರೆದ
ಸಮರವಿಜಯಕೆ ಶಿವನ ಕೃಪೆ ಸಂ
ಕ್ರಮಿಸಿತೆನಗೆನುತಿರಲು ಮುಂದಣ
ಕಮಲನಾಭನ ಕಂಡು ಬಿನ್ನಹ ಮಾಡಿದನು ನಗುತ ॥7॥
೦೦೮ ದೇವ ನಿಮ್ಮಡಿ ...{Loading}...
ದೇವ ನಿಮ್ಮಡಿ ಸಹಿತ ಕಂಡೆನು
ದೇವದೇವನ ಚರಣವನು ಸಂ
ಭಾವಿಸಿದ ನಮ್ಮಿಬ್ಬರನು ದಕ್ಷಾಧ್ವರಧ್ವಂಸಿ
ನಾವು ಬಂದುದನರಿದು ವರ ರಾ
ಜೀವಸರಸಿಗೆ ಕಳುಹಿದನು ಗಾಂ
ಡೀವ ನಿಜಚಾಪವನು ಕಂಡೆನು ಕೊಳನ ಮಧ್ಯದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇವಾ, ನಿಮ್ಮ ಜೊತೆಯಲ್ಲಿ ದೇವ ದೇವನಾದ ಶಿವನ ಚರಣಗಳನ್ನು ಕಂಡೆನು. ದಕ್ಷಾಯಾಗವನ್ನು ಧ್ವಂಸ ಮಾಡಿದ ಶಿವನು ನಮ್ಮಿಬ್ಬರನ್ನು ಸನ್ಮಾನಿಸಿದ. ನಾವು ಬಂದುದನ್ನು ತಿಳಿದು ಕಮಲ ಸರೋವರಕ್ಕೆ ಕಳಿಸಿದ. ಆ ಕೊಳದ ಮಧ್ಯದಲ್ಲಿ ಗಾಂಡೀವ ಧನಸ್ಸನ್ನು ನೋಡಿದೆ.”
ಪದಾರ್ಥ (ಕ.ಗ.ಪ)
ಅಧ್ವರ-ಯಾಗ
ಮೂಲ ...{Loading}...
ದೇವ ನಿಮ್ಮಡಿ ಸಹಿತ ಕಂಡೆನು
ದೇವದೇವನ ಚರಣವನು ಸಂ
ಭಾವಿಸಿದ ನಮ್ಮಿಬ್ಬರನು ದಕ್ಷಾಧ್ವರಧ್ವಂಸಿ
ನಾವು ಬಂದುದನರಿದು ವರ ರಾ
ಜೀವಸರಸಿಗೆ ಕಳುಹಿದನು ಗಾಂ
ಡೀವ ನಿಜಚಾಪವನು ಕಂಡೆನು ಕೊಳನ ಮಧ್ಯದಲಿ ॥8॥
೦೦೯ ಬಳಿಕ ತಿರುವಿಟ್ಟಾಗಲಸ್ತ್ರವ ...{Loading}...
ಬಳಿಕ ತಿರುವಿಟ್ಟಾಗಲಸ್ತ್ರವ
ಸೆಳೆದು ಬಿಲುವಿದ್ಯಾಚಮತ್ಕೃತಿ
ಯಳವ ತೋರಿದಡಾಗಳೀಶನ ಹೊರೆಗೆ ನಾನೈದಿ
ನಿಲೆ ತದೀಯಾಸ್ತ್ರಪ್ರಯೋಗದ
ಬಲುಹನೀಕ್ಷಿಸೆ ತೆಗೆವ ಬೆಡಗನು
ಕಲಿಸೆ ಪಾಶುಪತಾಸ್ತ್ರವೆನಗಾಯ್ತಲ್ಲಿ ವಶವರ್ತಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಂತರ ಶಿವನು ಗಾಂಡೀವ ಧನಸ್ಸಿಗೆ ಹೆದೆಯನ್ನು ಏರಿಸಿ ಅಸ್ತ್ರವನ್ನು ಸೆಳೆದು ಬಿಲ್ವಿದ್ಯಾ ಚಮತ್ಕಾರವನ್ನು ತೋರಿಸಿದ. ನಾನು ಅವನ ಸಮೀಪಕ್ಕೆ ಹೋಗಿ ನಿಂತು ಆ ಅಸ್ತ್ರದ ಪ್ರಯೋಗದ ಶಕ್ತಿಯನ್ನು ನೋಡಿದೆ. ಅವನು ಅಸ್ತ್ರವನ್ನು ಹಿಂದೆಗೆಯುವ ಚಮತ್ಕಾರವನ್ನು ಕಲಿಸಿದ. ನನಗೆ ಪಾಶುಪತಾಸ್ತ್ರವು ವಶವರ್ತಿಯಾಯಿತು.”
ಮೂಲ ...{Loading}...
ಬಳಿಕ ತಿರುವಿಟ್ಟಾಗಲಸ್ತ್ರವ
ಸೆಳೆದು ಬಿಲುವಿದ್ಯಾಚಮತ್ಕೃತಿ
ಯಳವ ತೋರಿದಡಾಗಳೀಶನ ಹೊರೆಗೆ ನಾನೈದಿ
ನಿಲೆ ತದೀಯಾಸ್ತ್ರಪ್ರಯೋಗದ
ಬಲುಹನೀಕ್ಷಿಸೆ ತೆಗೆವ ಬೆಡಗನು
ಕಲಿಸೆ ಪಾಶುಪತಾಸ್ತ್ರವೆನಗಾಯ್ತಲ್ಲಿ ವಶವರ್ತಿ ॥9॥
೦೧೦ ಕನಸನೀ ಹದನಾಗಿ ...{Loading}...
ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವ ವಧವ್ಯಾಪಾರವಹುದೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕನಸನ್ನು ಈ ರೀತಿಯಾಗಿ ಕಂಡೆನು. ಕೃಷ್ಣ ಇದರ ಫಲವನ್ನು ನನಗೆ ತಿಳಿಸು” ಎಂದು ಅರ್ಜುನನು ಹೇಳಲು, ದಾನವ ಧ್ವಂಸಿಯಾದ ಕೃಷ್ಣನು ನಸುನಗುತ್ತಾ " ನಿನಗೆ ಶಿವನ ಕರುಣೆಯಾಗಿದೆ. ಇಂದು ಪಾಶುಪತಾಸ್ತ್ರ ನಿನ್ನದು. ಇಂದು ಸೈಂಧವನ ವಧೆಯಾಗುವುದೆಂದು ತಿಳಿ" ಎಂದು ಹೇಳಿದನು.
ಮೂಲ ...{Loading}...
ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವ ವಧವ್ಯಾಪಾರವಹುದೆಂದ ॥10॥
೦೧೧ ಉಲಿವ ಮಙ್ಗಳಪಾಠಕರ ...{Loading}...
ಉಲಿವ ಮಂಗಳಪಾಠಕರ ಕಳ
ಕಳದೊಳುಪ್ಪವಡಿಸಿದನವನಿಪ
ತಿಲಕ ಮಾಡಿದನಮಲ ಸಂಧ್ಯಾವಂದನಾದಿಗಳ
ನಳಿನನಾಭನ ಪಾದಪದ್ಮವ
ನೊಲವಿನಿಂದಭಿನಮಿಸಿ ಸುಭಟಾ
ವಳಿಗೆ ನೇಮವ ಕೊಟ್ಟನಂತಕಸೂನು ಸಂಗರಕೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಪಾಠಕರಿಂದ ಪಠನೆಯಾಗುತ್ತಿದ್ದ ಮಂಗಳವಾದ ಮಂತ್ರಗಳ ಶಬ್ದ ಕೇಳುತ್ತಿರುವಾಗ ಎದ್ದು ಸಂಧ್ಯಾವಂದನಾದಿಗಳನ್ನು ಮಾಡಿದನು. ಕೃಷ್ಣನ ಪಾದಕಮಲಗಳಿಗೆ ನಮಸ್ಕರಿಸಿ ತನ್ನ ಸೇನೆಯ ವೀರರಿಗೆ ಯುದ್ಧಕ್ಕೆ ಆದೇಶವನ್ನು ನೀಡಿದನು.
ಪದಾರ್ಥ (ಕ.ಗ.ಪ)
ಉಪ್ಪವಡಿಸಿ-ಎದ್ದು,
ಮೂಲ ...{Loading}...
ಉಲಿವ ಮಂಗಳಪಾಠಕರ ಕಳ
ಕಳದೊಳುಪ್ಪವಡಿಸಿದನವನಿಪ
ತಿಲಕ ಮಾಡಿದನಮಲ ಸಂಧ್ಯಾವಂದನಾದಿಗಳ
ನಳಿನನಾಭನ ಪಾದಪದ್ಮವ
ನೊಲವಿನಿಂದಭಿನಮಿಸಿ ಸುಭಟಾ
ವಳಿಗೆ ನೇಮವ ಕೊಟ್ಟನಂತಕಸೂನು ಸಂಗರಕೆ ॥11॥
೦೧೨ ನಡೆದುದುರುಸನ್ನಾಹದಲಿ ಸೂ ...{Loading}...
ನಡೆದುದುರುಸನ್ನಾಹದಲಿ ಸೂ
ಳಡಿಸಿ ಮೊರೆವ ಗಭೀರ ಭೇರಿಯ
ಕಡುರವದ ರಿಪುಭಟರ ಬೈಗುಳ ಗೌರುಗಹಳೆಗಳ
ಎಡಬಲಕೆ ತನಿಹೊಳೆವ ತೇಜಿಯ
ಕಡುಮದದ ಕರಿಘಟೆಯ ತೇರಿನ
ನಿಡುವರಿಯ ಕಾಲಾಳ ಕಳಕಳವಾಯ್ತು ರಣದೊಳಗೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತಮವಾದ ಸಿದ್ಧತೆಯೊಂದಿಗೆ ಸೈನ್ಯವು ನಡೆಯಿತು. ಕ್ರಮದಿಂದ ಮೊರೆಯುವ ಗಂಭೀರವಾದ ದೊಡ್ಡ ಶಬ್ದದ ಭೇರಿಗಳು ಗಂಭೀರವಾಗಿ ಮೊರೆದವು. ಕಹಳೆಗಳು ಶತ್ರುಗಳನ್ನು ಬೈಯುವಂತೆ ಶಬ್ದ ಮಾಡಿದವು. ಎಡಬಲಗಳಲ್ಲಿ ಮಿರುಗುತ್ತಿರುವ ಕುದುರೆಗಳಿದ್ದವು. ಮದದಿಂದ ಮೆರೆಯುತ್ತಿರುವ ಆನೆಗಳ ಸೈನ್ಯವಿದ್ದಿತು. ಇವುಗಳ ಜೊತೆಗೆ ವೇಗವಾದ ಹರಿದಾಟದ ರಥಗಳು ಮತ್ತು ಕಾಲಾಳುಗಳ ಚಲನೆಯಿಂದ ಕಳಕಳ ಶಬ್ದಗಳು ರಣಭೂಮಿಯಲ್ಲಿ ಉಂಟಾದವು.
ಪದಾರ್ಥ (ಕ.ಗ.ಪ)
ಸೂಳಡಿಸಿ-ಕ್ರಮವಾಗಿ
ಮೂಲ ...{Loading}...
ನಡೆದುದುರುಸನ್ನಾಹದಲಿ ಸೂ
ಳಡಿಸಿ ಮೊರೆವ ಗಭೀರ ಭೇರಿಯ
ಕಡುರವದ ರಿಪುಭಟರ ಬೈಗುಳ ಗೌರುಗಹಳೆಗಳ
ಎಡಬಲಕೆ ತನಿಹೊಳೆವ ತೇಜಿಯ
ಕಡುಮದದ ಕರಿಘಟೆಯ ತೇರಿನ
ನಿಡುವರಿಯ ಕಾಲಾಳ ಕಳಕಳವಾಯ್ತು ರಣದೊಳಗೆ ॥12॥
೦೧೩ ಎದ್ದುದೀ ಕಟಕದಲಿ ...{Loading}...
ಎದ್ದುದೀ ಕಟಕದಲಿ ಬಲ ಮಿಂ
ಡೆದ್ದು ಸುಭಟರು ಸಮರಭೂಮಿಯ
ಹೊದ್ದಿದರು ಝಳಪಿಸುವಡಾಯ್ದದ ಹೊಗರ ಹೊಳಹುಗಳ
ಅದ್ದುದತಳಕೆ ಅವನಿಯೆನೆ ಹೊದ
ರೆದ್ದು ನಡೆದುದು ದಂತಿಘಟೆ ಬರು
ತಿದ್ದುದಗಣಿತ ರಥ ಪದಾತಿಗಳಾಹವಾಂಗಣಕೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಪಾಳೆಯದಲ್ಲಿ ಸೈನಿಕರು ಹಿಂಡೆದ್ದು, ಯುದ್ಧ ಭೂಮಿಯನ್ನು ಸೇರಿದರು. ಝಳಪಿಸುತ್ತಿದ್ದ ಅವರ ಕತ್ತಿಗಳ ಪ್ರಭೆ ರಣಾಂಗಣವನ್ನು ತುಂಬಿತು. ಆನೆಗಳ ಸೇನೆಯು ಉತ್ಸಾಹದಿಂದ ಹೊರಟಾಗ ಭೂಮಿಯು ಪಾತಾಳಕ್ಕೆ ಕುಸಿಯಿತೋ ಎನ್ನಿಸಿತು. ಲೆಕ್ಕವಿಲ್ಲದಷ್ಟು ರಥ, ಪದಾತಿ ಸೇನೆಯು ರಣರಂಗಕ್ಕೆ ಬರುತ್ತಿತ್ತು.
ಮೂಲ ...{Loading}...
ಎದ್ದುದೀ ಕಟಕದಲಿ ಬಲ ಮಿಂ
ಡೆದ್ದು ಸುಭಟರು ಸಮರಭೂಮಿಯ
ಹೊದ್ದಿದರು ಝಳಪಿಸುವಡಾಯ್ದದ ಹೊಗರ ಹೊಳಹುಗಳ
ಅದ್ದುದತಳಕೆ ಅವನಿಯೆನೆ ಹೊದ
ರೆದ್ದು ನಡೆದುದು ದಂತಿಘಟೆ ಬರು
ತಿದ್ದುದಗಣಿತ ರಥ ಪದಾತಿಗಳಾಹವಾಂಗಣಕೆ ॥13॥
೦೧೪ ವಿನುತ ಸನ್ಧ್ಯಾವನ್ದನಾದಿಯ ...{Loading}...
ವಿನುತ ಸಂಧ್ಯಾವಂದನಾದಿಯ
ನನುಕರಿಸಿ ಹರಿಪದ ಪಯೋಜವ
ನೆನೆದು ವಿರಚಿತ ದೇವವಿಪ್ರಾನಳ ಸಮಾರ್ಚನನು
ಕನಕ ಕವಚವ ತೊಟ್ಟು ಗಡ್ಡದ
ಘನತೆಯನು ಗಂಟಿಕ್ಕಿ ವರಕಾಂ
ಚನಮಯದ ಯಜ್ಞೋಪವೀತವನಿಳುಹಿದನು ದ್ರೋಣ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ಶ್ರೇಷ್ಠವಾದ ಸಂಧ್ಯಾವಂದನೆಯೇ ಮೊದಲಾದ ಕಾರ್ಯಗಳನ್ನು ಮಾಡಿ, ಶ್ರೀಹರಿಯ ಪಾದಕಮಲಗಳನ್ನು ಸ್ಮರಿಸಿ ದೇವತೆಗಳ ಬ್ರಾಹ್ಮಣರ ಹಾಗೂ ಅಗ್ನಿಯ ಪೂಜೆಯನ್ನು ಮಾಡಿ ಬಂಗಾರದ ಕವಚವನ್ನು ತೊಟ್ಟು ದೊಡ್ಡದಾದ ಗಡ್ಡವನ್ನು ಗಂಟು ಹಾಕಿಕೊಂಡು ಶ್ರೇಷ್ಠವಾದ ಬಂಗಾರದ ಜನಿವಾರವನ್ನು ಹಾಕಿಕೊಂಡು ಯುದ್ಧಕ್ಕೆ ಹೊರಡಲು ಸಿದ್ಧರಾದರು.
ಪದಾರ್ಥ (ಕ.ಗ.ಪ)
ಪಯೋಜ-ಕಮಲ, ಅನಳ-ಬೆಂಕಿ, ಸಮಾರ್ಚನನು-ಚೆನ್ನಾಗಿ ಪೂಜಿಸುವವನು.
ಮೂಲ ...{Loading}...
ವಿನುತ ಸಂಧ್ಯಾವಂದನಾದಿಯ
ನನುಕರಿಸಿ ಹರಿಪದ ಪಯೋಜವ
ನೆನೆದು ವಿರಚಿತ ದೇವವಿಪ್ರಾನಳ ಸಮಾರ್ಚನನು
ಕನಕ ಕವಚವ ತೊಟ್ಟು ಗಡ್ಡದ
ಘನತೆಯನು ಗಂಟಿಕ್ಕಿ ವರಕಾಂ
ಚನಮಯದ ಯಜ್ಞೋಪವೀತವನಿಳುಹಿದನು ದ್ರೋಣ ॥14॥
೦೧೫ ನಿರಿಯುಡಿಗೆಯಲಿ ಮಲ್ಲಗಣ್ಟಿನ ...{Loading}...
ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿರಿಗೆಯಾಗಿ ಉಟ್ಟ ಧೋತ್ರವನ್ನು ಮಲ್ಲಗಂಟು ಹಾಕಿ ಅದರ ತುದಿಯನ್ನು (ಸೆರಗ) ಸಿಕ್ಕಿಸಿ ಬೆರಳಿನಲ್ಲಿದ್ದ ದರ್ಭೆಯನ್ನು ಹರಿದು ಎಸೆದು ಕವಚ, ಶಿರಸ್ತ್ರಾಣ, ಬಾಹುವಿಗೆ ರಕ್ಷಾ ಕವಚಗಳನ್ನು ಚೆನ್ನಾಗಿ ಬಿಗಿದು ಶ್ರೇಷ್ಠರಾದ ಎಲ್ಲ ವಿಪ್ರರಿಂದ ಮಂತ್ರಾಕ್ಷತೆಯನ್ನು ಪಡೆದು, ಜೋರಾಗಿ ಶಬ್ದ ಮಾಡುವ ಜಯಘೋಷದೊಂದಿಗೆ ದ್ರೋಣರು ರಥವನ್ನು ಹತ್ತಿದರು.
ಮೂಲ ...{Loading}...
ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ ॥15॥
೦೧೬ ಸೂಳವಿಸಿದವು ಸನ್ನೆಯಲಿ ...{Loading}...
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಕೋಟಿಗಳುರವಣಿಸಿ ಹೆ
ಗ್ಗಾಳೆಗಳು ಸಾರಿದವು ಸುಭಟರ ವೀರ ವಿತರಣವ
ಸಾಲು ಝಲ್ಲರಿಗಳ ಪತಾಕಾ
ಜಾಲ ಸಬಳದ ಹೊದರ ಗೋವಳಿ
ಗೋಲ ತೂಗಾಟದಲಿ ದ್ರೋಣ ನಡೆತಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ಸನ್ನೆಯ ಮೂಲಕ ಸೂಚನೆ ನೀಡಲು ನಿಸ್ಸಾಳ ವಾದ್ಯಗಳು ಕೋಟಿ ಸಂಖ್ಯೆಯಲ್ಲಿ ಗಟ್ಟಿಯಾಗಿ ಧ್ವನಿ ಮಾಡಿದವು. ದೊಡ್ಡ ಕಹಳೆಗಳು ವೀರರ ಗುಣಗಳನ್ನು ಸಾರುವಂತೆ ಧ್ವನಿ ಮಾಡಿದವು. ಅನುಕ್ರಮವಾಗಿ ಚರ್ಮವಾದ್ಯಗಳು, ಧ್ವಜಗಳು, ಸಬಳ ಎಂಬ ಆಯುಧಗಳ ಗುಂಪು, ಆನೆ,ಕುದುರೆಗಳನ್ನು ಪ್ರಚೋದಿಸಲು ಸೈನಿಕರು ಹಿಡಿದಿದ್ದ ಕೋಲುಗಳ ತೂಗಾಟ -ಇವುಗಳ ನಡುವೆ ದ್ರೋಣರು ಬಂದರು.
ಪದಾರ್ಥ (ಕ.ಗ.ಪ)
ಹೆಗ್ಗಾಳೆ-ಒಂದು ವಾದ್ಯ,
ಗೋವಳಿಗೋಲು- ಆನೆ ಕುದುರೆಗಳನ್ನು ಪ್ರಚೋದಿಸಲು ಸೈನಿಕರು ಬಳಸುವ ಕೋಲು
ಮೂಲ ...{Loading}...
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಕೋಟಿಗಳುರವಣಿಸಿ ಹೆ
ಗ್ಗಾಳೆಗಳು ಸಾರಿದವು ಸುಭಟರ ವೀರ ವಿತರಣವ
ಸಾಲು ಝಲ್ಲರಿಗಳ ಪತಾಕಾ
ಜಾಲ ಸಬಳದ ಹೊದರ ಗೋವಳಿ
ಗೋಲ ತೂಗಾಟದಲಿ ದ್ರೋಣ ನಡೆತಂದ ॥16॥
೦೧೭ ನೆಗಹಿ ಬೀಸುವ ...{Loading}...
ನೆಗಹಿ ಬೀಸುವ ಚೌರಿಗಳ ಸ
ನ್ನೆಗೆ ಚತುರ್ಬಲವೆಲ್ಲ ದ್ರೋಣನ
ದೃಗುಪಥಕೆ ತೋರಿದರು ತಂತಮ್ಮಾಳು ಕುದುರೆಗಳ
ತೆಗೆದು ಯೋಜನವಾರರಲಿ ಕಾ
ಳೆಗಕೆ ಶಕಟವ್ಯೂಹವನು ಹೂ
ಣಿಗರ ಬಲಿದನು ಕೌರವೇಂದ್ರಾನುಜರ ಗಡಣದಲಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇಲಕ್ಕೆ ಎತ್ತಿ ಬೀಸುವ ಚೌರಿಗಳ ಸೂಚನೆಗೆ ಚತುರಂಗ ಸೇನೆಯೆಲ್ಲವೂ ತಮ್ಮ ತಮ್ಮ ಕುದುರೆ, ಕಾಲಾಳುಗಳನ್ನು ದ್ರೋಣನ ದೃಷ್ಟಿಗೆ ಬೀಳುವಂತೆ ಪ್ರದರ್ಶಿಸಿತು. ಆರು ಯೋಜನ ವಿಸ್ತಾರ ಪ್ರದೇಶದಲ್ಲಿ ಶಕಟವ್ಯೂಹವನ್ನು ರಚಿಸಿದನು. ಅದರಲ್ಲಿ ವೀರರನ್ನು ದುರ್ಯೋಧನನ ತಮ್ಮಂದಿರ ಗುಂಪಿನಲ್ಲಿ ಸೇರಿಸಿದನು.
ಮೂಲ ...{Loading}...
ನೆಗಹಿ ಬೀಸುವ ಚೌರಿಗಳ ಸ
ನ್ನೆಗೆ ಚತುರ್ಬಲವೆಲ್ಲ ದ್ರೋಣನ
ದೃಗುಪಥಕೆ ತೋರಿದರು ತಂತಮ್ಮಾಳು ಕುದುರೆಗಳ
ತೆಗೆದು ಯೋಜನವಾರರಲಿ ಕಾ
ಳೆಗಕೆ ಶಕಟವ್ಯೂಹವನು ಹೂ
ಣಿಗರ ಬಲಿದನು ಕೌರವೇಂದ್ರಾನುಜರ ಗಡಣದಲಿ ॥17॥
೦೧೮ ಇದಿರೆ ಶಕಟವ್ಯೂಹವದರ ...{Loading}...
ಇದಿರೆ ಶಕಟವ್ಯೂಹವದರ
ಗ್ರದಲಿ ದುಶ್ಯಾಸನನು ಕೆಲಬಲ
ದೊದವಿನಲಿ ಬಾಹ್ಲಿಕನು ಸೌಬಲ ಸಿಂಧು ಮಾಗಧರು
ಇದರ ಹಿಂದಣ ಮೈಯೊಳೈಗಾ
ವುದದ ನೀಳದೊಳೆರಡುವರೆ ಗಾ
ವುದದ ವಿಸ್ತಾರದಲಿ ಮಕರವ್ಯೂಹವನು ಬಲಿದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎದುರು ಭಾಗದಲ್ಲಿನ ಶಕಟವ್ಯೂಹದ ಮುಂಭಾಗದಲ್ಲಿ ದುಶ್ಶಾಸನ, ಅಕ್ಕಪಕ್ಕಗಳಲ್ಲಿ ಬಾಹ್ಲಿಕ ಸೌಬಲ, ಸಿಂಧು , ಮಾಗzsರು ಇದ್ದರು. ಇದರ ಹಿಂದೆ ಐದು ಗಾವುದದಷ್ಟು ಉದ್ದ, ಎರಡೂವರೆ ಗಾವುದದಷ್ಟು ಅಗಲವಿರುವ ವಿಸ್ತಾರ ಪ್ರದೇಶದಲ್ಲಿ ಮಕರವ್ಯೂಹವನ್ನು ರಚಿಸಿದ.
ಪದಾರ್ಥ (ಕ.ಗ.ಪ)
ಐಗಾವುದ-ಐದು ಗಾವುದ,
ಬಲಿದ-ರಚಿಸಿದ.
ಮೂಲ ...{Loading}...
ಇದಿರೆ ಶಕಟವ್ಯೂಹವದರ
ಗ್ರದಲಿ ದುಶ್ಯಾಸನನು ಕೆಲಬಲ
ದೊದವಿನಲಿ ಬಾಹ್ಲಿಕನು ಸೌಬಲ ಸಿಂಧು ಮಾಗಧರು
ಇದರ ಹಿಂದಣ ಮೈಯೊಳೈಗಾ
ವುದದ ನೀಳದೊಳೆರಡುವರೆ ಗಾ
ವುದದ ವಿಸ್ತಾರದಲಿ ಮಕರವ್ಯೂಹವನು ಬಲಿದ ॥18॥
೦೧೯ ಹಿನ್ದೆ ಯೋಜನವೈದರಳವಿಯೊ ...{Loading}...
ಹಿಂದೆ ಯೋಜನವೈದರಳವಿಯೊ
ಳಂದು ಚಕ್ರವ್ಯೂಹವನು ನಲ
ವಿಂದ ಬಲಿದನು ನಿಲಿಸಿದನು ಕಾಂಭೋಜಭೂಪತಿಯ
ವಿಂದನನುವಿಂದನನು ದಕ್ಷಿಣ
ವೃಂದ ಸಮಸಪ್ತಕರ ಬಲವನು
ಸಂದಣಿಸಿದರು ಹತ್ತು ಸಾವಿರ ನೃಪರ ಗಡಣದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕಟವ್ಯೂಹ ಹಾಗೂ ಮಕರವ್ಯೂಹಗಳ ಹಿಂಭಾಗದಲ್ಲಿ ಐದು ಯೋಜನ ವಿಸ್ತಾರ ಪ್ರದೇಶದಲ್ಲಿ ಉತ್ಸಾಹದಿಂದ ಚಕ್ರವ್ಯೂಹವನ್ನು ರಚಿಸಿ, ಕಾಂಭೋಜ ರಾಜನನ್ನು ನಿಲ್ಲಿಸಿದನು. ವಿಂದ, ಅನುವಿಂದರನ್ನು ದಕ್ಷಿಣ ಭಾಗದಲ್ಲಿ, ಸಮಸಪ್ತಕರ ಸೈನ್ಯವನ್ನು ಹತ್ತು ಸಾವಿರ ರಾಜರ ಸಮೂಹದಲ್ಲಿ ಒಟ್ಟುಗೂಡಿಸಿದನು.
ಮೂಲ ...{Loading}...
ಹಿಂದೆ ಯೋಜನವೈದರಳವಿಯೊ
ಳಂದು ಚಕ್ರವ್ಯೂಹವನು ನಲ
ವಿಂದ ಬಲಿದನು ನಿಲಿಸಿದನು ಕಾಂಭೋಜಭೂಪತಿಯ
ವಿಂದನನುವಿಂದನನು ದಕ್ಷಿಣ
ವೃಂದ ಸಮಸಪ್ತಕರ ಬಲವನು
ಸಂದಣಿಸಿದರು ಹತ್ತು ಸಾವಿರ ನೃಪರ ಗಡಣದಲಿ ॥19॥
೦೨೦ ತುರಗವರುವತ್ತಾರು ಕೋಟಿಯ ...{Loading}...
ತುರಗವರುವತ್ತಾರು ಕೋಟಿಯ
ನುರು ಮದೇಭವನೆಂಟು ಲಕ್ಷವ
ವರ ರಥವನರುವತ್ತು ಸಾವಿರವನು ಸಗಾಢದಲಿ
ಧುರದ ಕಾಲಾಳಗಣಿತವ ಮೋ
ಹರಿಸಿ ಹಂಸವ್ಯೂಹವನು ಸಡ
ಗರಿಸಿದನು ನಿಯತಾಯು ಮೊದಲಾದವರ ಕಾಹಿನಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರುವತ್ತಾರು ಕೋಟಿ ಕುದುರೆಗಳು, ಎಂಟು ಲಕ್ಷ ಮದಿಸಿದ ಆನೆಗಳೂ, ಅರುವತ್ತು ಸಾವಿರ ರಥಗಳನ್ನು ಲೆಕ್ಕಕ್ಕೆ ದೊರಕದಿರುವಷ್ಟು ಅಸಂಖ್ಯಾತವಾದ ಕಾಲಾಳು ಸೇನೆಯನ್ನು ಕೂಡಿಸಿ ನಿಯತಾಯುವೇ ಮೊದಲಾದವರ ರಕ್ಷಣೆಯಲ್ಲಿ ನಿಲ್ಲಿಸಿ, ದ್ರೋಣನು ಹಂಸವ್ಯೂಹವನ್ನು ರಚಿಸಿದನು.
ಮೂಲ ...{Loading}...
ತುರಗವರುವತ್ತಾರು ಕೋಟಿಯ
ನುರು ಮದೇಭವನೆಂಟು ಲಕ್ಷವ
ವರ ರಥವನರುವತ್ತು ಸಾವಿರವನು ಸಗಾಢದಲಿ
ಧುರದ ಕಾಲಾಳಗಣಿತವ ಮೋ
ಹರಿಸಿ ಹಂಸವ್ಯೂಹವನು ಸಡ
ಗರಿಸಿದನು ನಿಯತಾಯು ಮೊದಲಾದವರ ಕಾಹಿನಲಿ ॥20॥
೦೨೧ ಕೆಲಬಲದ ಸಬಳಿಗರು ...{Loading}...
ಕೆಲಬಲದ ಸಬಳಿಗರು ಸಬಳದ
ವಳಯದಲಿ ಹರಿಗೆಗಳು ಹರಿಗೆಗ
ಳೊಳಗೆ ಬಿಲ್ಲಾಳುಗಳ ಮರೆಯಲಿ ವಾಜಿ ಗಜ ರಥವ
ನಿಲಿಸಿ ಗರ್ಭವ್ಯೂಹವನು ಮಂ
ಡಳಿಸಿದನು ಸಂವೀರರನು ಸಿಂ
ಹಳರ ನಿಲಿಸಿದ ಹತ್ತು ಸಾವಿರ ಮಂಡಳೇಶ್ವರರ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಕ್ಕಪಕ್ಕಗಳಲ್ಲಿ ಸಬಳ ಎಂಬ ಆಯುಧವನ್ನು ಹಿಡಿದವರು, ಸಬಳದ ವಲಯದಲ್ಲಿ ಹರಿಗೆ ಎಂಬ ಆಯುಧವನ್ನು ಹಿಡಿದವರು, ಅದರ ಸುತ್ತಿನ ಒಳಗೆ ಬಿಲ್ಲನ್ನು ಹಿಡಿದ ವೀರರು, ಅದರ ಹಿಂದೆ ಕುದುರೆ, ಆನೆ, ರಥದ ಸೇನೆಯನ್ನು ನಿಲ್ಲಿಸಿ ಗರ್ಭವ್ಯೂಹವನ್ನು ರಚಿಸಿದನು. ಸಿಂಹಳರನ್ನು ಹತ್ತು ಸಾವಿರ ಮಂಡಲೇಶ್ವರರನ್ನು ಅಲ್ಲಿ ನಿಲ್ಲಿಸಿದ.
ಪದಾರ್ಥ (ಕ.ಗ.ಪ)
ವಳಯ-ಸುತ್ತು,
ಮಂಡಳಿಸಿ-ಸುತ್ತ ನಿಲ್ಲಿಸಿ
ಮೂಲ ...{Loading}...
ಕೆಲಬಲದ ಸಬಳಿಗರು ಸಬಳದ
ವಳಯದಲಿ ಹರಿಗೆಗಳು ಹರಿಗೆಗ
ಳೊಳಗೆ ಬಿಲ್ಲಾಳುಗಳ ಮರೆಯಲಿ ವಾಜಿ ಗಜ ರಥವ
ನಿಲಿಸಿ ಗರ್ಭವ್ಯೂಹವನು ಮಂ
ಡಳಿಸಿದನು ಸಂವೀರರನು ಸಿಂ
ಹಳರ ನಿಲಿಸಿದ ಹತ್ತು ಸಾವಿರ ಮಂಡಳೇಶ್ವರರ ॥21॥
೦೨೨ ಅಪರಭಾಗದಲಳವಿಯಲಿ ಭೂ ...{Loading}...
ಅಪರಭಾಗದಲಳವಿಯಲಿ ಭೂ
ಮಿಪರ ಭೂರಿಶ್ರವನ ಶಲ್ಯನ
ಕೃಪನ ವೃಷಸೇನನ ಸುಲೋಚನ ದೀರ್ಘಬಾಹುಕರ
ನೃಪತಿಗಳನೆಂಬತ್ತು ಸಾವಿರ
ಚಪಳಗಜ ಹದಿನೆಂಟು ಕೋಟಿಯ
ನಪರಿಮಿತತೇಜಿಯಲಿ ಪದ್ಮವ್ಯೂಹವನು ಬಲಿದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂಭಾಗದ ಕಾವಲಿನಲ್ಲಿ ಶಕ್ತಿ ಶಾಲಿಗಳಾದ ರಾಜರನ್ನು ಭೂರಿಶ್ರವ, ಶಲ್ಯ, ಕೃಪ, ವೃಷಸೇನ, ಸುಲೋಚನ, ದೀರ್ಘಬಾಹುವೇ ಮೊದಲಾದವರನ್ನು ನಿಲ್ಲಿಸಲಾಯಿತು. ಎಂಭತ್ತು ಸಾವಿರ ರಾಜರನ್ನು ಹದಿನೆಂಟು ಕೋಟಿಯಷ್ಟು ಉತ್ಸಾಹೀ ಗಜಸೇನೆಯನ್ನು ಅಪರಿಮಿತವಾದ ಕುದುರೆಯ ಸೇನೆಯೊಡನೆ ನಿಲ್ಲಿಸಿ ದ್ರೋಣರು ಪದ್ಮವ್ಯೂಹವನ್ನು ರಚಿಸಿದರು.
ಮೂಲ ...{Loading}...
ಅಪರಭಾಗದಲಳವಿಯಲಿ ಭೂ
ಮಿಪರ ಭೂರಿಶ್ರವನ ಶಲ್ಯನ
ಕೃಪನ ವೃಷಸೇನನ ಸುಲೋಚನ ದೀರ್ಘಬಾಹುಕರ
ನೃಪತಿಗಳನೆಂಬತ್ತು ಸಾವಿರ
ಚಪಳಗಜ ಹದಿನೆಂಟು ಕೋಟಿಯ
ನಪರಿಮಿತತೇಜಿಯಲಿ ಪದ್ಮವ್ಯೂಹವನು ಬಲಿದ ॥22॥
೦೨೩ ಆ ಮಹಾಮೋಹರದ ...{Loading}...
ಆ ಮಹಾಮೋಹರದ ಬಳಿಯಲಿ
ಸೋಮದತ್ತನ ದಂಡಧರನನು
ತಾಮರಸಬಂಧುವಿನ ಮಗನನು ಕ್ಷೇಮಧೂರ್ತಕನ
ಆ ಮಹಾಬಾಹುಕನನಶ್ವ
ತ್ಥಾಮನನು ಕೃತವರ್ಮಕರೆನಿಪ ಸ
ನಾಮರನು ನಿಲಿಸಿದನು ಸೂಚೀವ್ಯೂಹ ವಳಯದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾಸೇನೆಯ ಬಳಿಯಲ್ಲಿ ಸೋಮದತ್ತನನ್ನು ದಂಡಧರನನ್ನು, ಕರ್ಣನ ಮಗನನ್ನು, ಕ್ಷೇಮಧೂರ್ತಕನನ್ನು, ಮಹಾಬಾಹುಕನಾದ ಅಶ್ವತ್ಥಾಮನನ್ನು ಹಾಗೂ ಕೃತವರ್ಮನೇ ಮುಂತಾದ ಖ್ಯಾತರನ್ನು ದ್ರೋಣರು ಸೂಚೀ ವ್ಯೂಹದಲ್ಲಿ ನಿಲ್ಲಿಸಿದರು.
ಪದಾರ್ಥ (ಕ.ಗ.ಪ)
ತಾಮರಸ ಬಂಧು-ಸೂರ್ಯ,
ಸೂಚೀವ್ಯೂಹ-ಸೂಜಿಯ ಆಕಾರದ ಒಂದು ವ್ಯೂಹ
ಮೂಲ ...{Loading}...
ಆ ಮಹಾಮೋಹರದ ಬಳಿಯಲಿ
ಸೋಮದತ್ತನ ದಂಡಧರನನು
ತಾಮರಸಬಂಧುವಿನ ಮಗನನು ಕ್ಷೇಮಧೂರ್ತಕನ
ಆ ಮಹಾಬಾಹುಕನನಶ್ವ
ತ್ಥಾಮನನು ಕೃತವರ್ಮಕರೆನಿಪ ಸ
ನಾಮರನು ನಿಲಿಸಿದನು ಸೂಚೀವ್ಯೂಹ ವಳಯದಲಿ ॥23॥
೦೨೪ ಪದುಮ ಸೂಚೀವ್ಯೂಹ ...{Loading}...
ಪದುಮ ಸೂಚೀವ್ಯೂಹ ಮಧ್ಯದೊ
ಳದಟರನು ನಿಲಿಸಿದನು ಸಮರಾ
ಗ್ರದಲಿ ಅವನಳಲಿಗರನಾಪ್ತರನವನ ಬಾಂಧವರ
ಕದನಗಲಿಸೈಂಧವನನಾ ಮ
ಧ್ಯದಲಿ ನಿಲಿಸಿದನಮಮ ಸಮರಕೆ
ಮದನ ಮಥನನು ಮೊಗಸಲಸದಳವೆನಿಸಿ ರಂಜಿಸಿತು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪದ್ಮವ್ಯೂಹ ಹಾಗೂ ಸೂಚಿವ್ಯೂಹದ ನಡುವೆ ಮಹಾವೀರರನ್ನು ನಿಲ್ಲಿಸಿದನು. ಯುದ್ಧರಂಗದ ಮುಂಭಾಗದಲ್ಲಿ ಜಯದ್ರಥನ ಆಪ್ತರನ್ನು ಅವನ ಬಂಧುಗಳನ್ನು ನಿಲ್ಲಿಸಿದನು. ರಣರಂಗದಲ್ಲಿ ಮಹಾವೀರನೆನಿಸಿಕೊಂಡ ಸೈಂಧವನನ್ನು ಈ ವ್ಯೂಹದ ಮಧ್ಯೆ ನಿಲ್ಲಿಸಿದನು. ಸಾಕ್ಷಾತ್ ಶಿವನೂ ಪ್ರವೇಶಿಸಲು ಸಾಧ್ಯವಿಲ್ಲವೆಂಬಂತೆ ಯುದ್ಧರಂಗವು ಶೋಭಿಸಿತು.
ಮೂಲ ...{Loading}...
ಪದುಮ ಸೂಚೀವ್ಯೂಹ ಮಧ್ಯದೊ
ಳದಟರನು ನಿಲಿಸಿದನು ಸಮರಾ
ಗ್ರದಲಿ ಅವನಳಲಿಗರನಾಪ್ತರನವನ ಬಾಂಧವರ
ಕದನಗಲಿಸೈಂಧವನನಾ ಮ
ಧ್ಯದಲಿ ನಿಲಿಸಿದನಮಮ ಸಮರಕೆ
ಮದನ ಮಥನನು ಮೊಗಸಲಸದಳವೆನಿಸಿ ರಂಜಿಸಿತು ॥24॥
೦೨೫ ತಿವಿವ ಸಿಡಿಲೊಬ್ಬುಳಿಯೊ ...{Loading}...
ತಿವಿವ ಸಿಡಿಲೊಬ್ಬುಳಿಯೊ ಪ್ರಳಯದ
ಜವನ ನೆರವಿಯೊ ಕಾಳಕೂಟಾ
ರ್ಣವದ ಸೀಮಾಲಂಘನವೊ ಮೃತ್ಯುವಿನ ಪಾಳಯವೊ
ಅವನಿ ಕುಸಿದುದು ನೆರೆದ ಸೇನೆಯ
ಹವಣಿಗೀಶ್ವರ ಬಲ್ಲನೆನೆ ಸೈಂ
ಧವನ ಕಾಹಿನ ಮೋಹರಂಗಳು ಕಿಡಿಯನುಗುಳಿದವು ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಳಯ ಕಾಲದ ಯಮನ ಸಮೂಹವೋ, ಕಾಳಕೂಟ ವಿಷದ ಸಮುದ್ರವು ತನ್ನ ಗಡಿಯನ್ನು ಮೀರಿ ಬಂದು ಕುರುಕ್ಷೇತ್ರದಲ್ಲಿ ನಿಂತಿದೆಯೊ, ಮೃತ್ಯುದೇವತೆಯ ಪಾಳಯ ಇದಾಗಿದೆಯೋ, ಎನ್ನುವಂತೆ ಆ ಸೇನೆ ಗೋಚರಿಸಿತು. ಆ ಸೇನೆಯ ಭಾರಕ್ಕೆ ಭೂಮಿ ಕುಸಿಯಿತು; ಅಲ್ಲಿ ಸೇರಿದ ಸೇನೆಯ ಶಕ್ತಿ ಎಷ್ಟೆಂದು ಶಿವನಿಗೆ ಮಾತ್ರ ತಿಳಿಯಬಹುದೆನ್ನಿಸುವಂತೆ. ಸೈಂಧವನ ರಕ್ಷಣೆಗೆ ನಿಂತ ಮಹಾಸೇನೆ ಕಿಡಿಯನ್ನು ಉಗುಳಿದುವು.
ಪದಾರ್ಥ (ಕ.ಗ.ಪ)
ಒಬ್ಬುಳಿ-ಗುಂಪು,
ಮೂಲ ...{Loading}...
ತಿವಿವ ಸಿಡಿಲೊಬ್ಬುಳಿಯೊ ಪ್ರಳಯದ
ಜವನ ನೆರವಿಯೊ ಕಾಳಕೂಟಾ
ರ್ಣವದ ಸೀಮಾಲಂಘನವೊ ಮೃತ್ಯುವಿನ ಪಾಳಯವೊ
ಅವನಿ ಕುಸಿದುದು ನೆರೆದ ಸೇನೆಯ
ಹವಣಿಗೀಶ್ವರ ಬಲ್ಲನೆನೆ ಸೈಂ
ಧವನ ಕಾಹಿನ ಮೋಹರಂಗಳು ಕಿಡಿಯನುಗುಳಿದವು ॥25॥
೦೨೬ ಜಡಿವ ಮದದಾನೆಗಳ ...{Loading}...
ಜಡಿವ ಮದದಾನೆಗಳ ಗಗನವ
ನಡರ್ವ ಕಡುಗುದುರೆಗಳ ಸೂಠಿಯೊ
ಳೆಡಬಲಕೆ ಬಿರುವರಿವ ತೇರಿನ ಸೂತರೋಜೆಗಳ
ಖಡುಗ ಕೊಂತವ ನಭಕೆ ಹಾಯಿಕಿ
ಹಿಡಿವ ಸುಭಟರ ಭುಜದ ಹೊಯ್ಲಿನ
ಕಡುಮನದ ರಣದವಕಿಗರ ಸೌರಂಭ ರಂಜಿಸಿತು ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೆಲವನ್ನು ಅಪ್ಪಳಿಸುವ ಮದದಾನೆಗಳ, ಆಕಾಶವನ್ನೆ ಮುಟ್ಟುವ ಹಾಗೆ ನೆಗೆಯುತ್ತಿದ್ದ ಕುದುರೆಗಳ, ವೇಗವಾಗಿ ಎಡಬಲಕ್ಕೆ ಓಡುವ ರಥಗಳ ಸೂತರ ವರ್ತನೆಗಳ, ಖಡ್ಗ, ಈಟಿಗಳನ್ನು ಆಕಾಶಕ್ಕೆ ಎಸೆದು ಹಿಡಿಯುವ ವೀರರ ಭುಜವನ್ನು ತಟ್ಟಿಕೊಳ್ಳುತ್ತಿರುವ ಗಟ್ಟಿ ಮನಸ್ಸಿನ ಯುದ್ಧೋತ್ಸಾಹಿಗಳ ಸಂಭ್ರಮ ಶೋಭಿಸಿತು.
ಪದಾರ್ಥ (ಕ.ಗ.ಪ)
ಅಡರ್ವ -ಏರುವ, ಓಜೆ-ರೀತಿ,
ರಣದವಕಿಗಳು-ಯುದ್ಧವನ್ನು ಮಾಡಲು ಕಾತರರಾಗಿದ್ದವರು.
ಮೂಲ ...{Loading}...
ಜಡಿವ ಮದದಾನೆಗಳ ಗಗನವ
ನಡರ್ವ ಕಡುಗುದುರೆಗಳ ಸೂಠಿಯೊ
ಳೆಡಬಲಕೆ ಬಿರುವರಿವ ತೇರಿನ ಸೂತರೋಜೆಗಳ
ಖಡುಗ ಕೊಂತವ ನಭಕೆ ಹಾಯಿಕಿ
ಹಿಡಿವ ಸುಭಟರ ಭುಜದ ಹೊಯ್ಲಿನ
ಕಡುಮನದ ರಣದವಕಿಗರ ಸೌರಂಭ ರಂಜಿಸಿತು ॥26॥
೦೨೭ ಮೊಳಗಿದವು ನಿಸ್ಸಾಳ ...{Loading}...
ಮೊಳಗಿದವು ನಿಸ್ಸಾಳ ಕೋಳಾ
ಹಳಿಸಿದವು ಕಹಳೆಗಳು ಪರ್ವತ
ಹಿಳಿಯೆ ಹೆಚ್ಚಿದ ಪಣಹ ಪಟಹ ಮೃದಂಗ ಡಿಂಡಿಮದ
ಉಲಿಯ ತೇಜಿಯ ಹೇಷಿತದ ವೆ
ಗ್ಗಳೆಯ ಕರಿಗಳ ಬೃಂಹಿತದ ಗೊಂ
ದಳದ ಕಳಗರ್ಚಾಯ್ತು ಕೌರವ ಸೈನ್ಯಶರಧಿಯಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರ್ವತಗಳು ಬಿರಿಯುವ ಹಾಗೆ ನಿಸ್ಸಾಳ ವಾದ್ಯಗಳು ಮೊಳಗಿದವು, ಕಹಳೆಗಳು ಕೋಲಾಹಲವನ್ನುಂಟು ಮಾಡಿದವು. ಮೃದಂಗ, ಡಿಂಡಿಮ, ಮೊದಲಾದ ವಾದ್ಯಗಳಿಂದ ಅಧಿಕವಾದ ಶಬ್ದ ಹೊರಟಿತು, ಕುದುರೆಗಳ ಹೇಷಾರವ (ಕೆನೆತದ ಧ್ವನಿ) ದೊಡ್ಡ ದೊಡ್ಡ ಆನೆಗಳ ಘೀಳಿಡುವಿಕೆಯು ರಣರಂಗದಲ್ಲಿ ಗೊಂದಲವನ್ನು ಹೆಚ್ಚಿಸಿತು, ಈ ಗೊಂದಲದಲ್ಲಿ ಕೌರವನ ಸೇನೆ ಎಂಬ ಮಹಾಸಮುದ್ರ ಕಲಕಿಹೋಗಿತ್ತು.
ಪದಾರ್ಥ (ಕ.ಗ.ಪ)
ಹಿಳಿಯೆ-ಸಿಡಿಯಲು, ಪಟಹ-ಚರ್ಮವಾದ್ಯ,
ಮೂಲ ...{Loading}...
ಮೊಳಗಿದವು ನಿಸ್ಸಾಳ ಕೋಳಾ
ಹಳಿಸಿದವು ಕಹಳೆಗಳು ಪರ್ವತ
ಹಿಳಿಯೆ ಹೆಚ್ಚಿದ ಪಣಹ ಪಟಹ ಮೃದಂಗ ಡಿಂಡಿಮದ
ಉಲಿಯ ತೇಜಿಯ ಹೇಷಿತದ ವೆ
ಗ್ಗಳೆಯ ಕರಿಗಳ ಬೃಂಹಿತದ ಗೊಂ
ದಳದ ಕಳಗರ್ಚಾಯ್ತು ಕೌರವ ಸೈನ್ಯಶರಧಿಯಲಿ ॥27॥
೦೨೮ ಮುನ್ದೆ ಶಕಟವ್ಯೂಹದಲಿ ...{Loading}...
ಮುಂದೆ ಶಕಟವ್ಯೂಹದಲಿ ನಡೆ
ತಂದು ನಿಂದನು ದ್ರೋಣ ನಿಜಬಲ
ದಂದವನು ನೆರೆನೋಡಿ ನೋಡಿ ಕಿರೀಟವನು ತೂಗಿ
ಇಂದು ಗೆಲಿದರೆ ಧರ್ಮಸುತನವ
ರಿಂದುಕುಲದಗ್ಗಳರು ಬರಹೇ
ಳೆಂದು ಭಟ್ಟರನಟ್ಟಿದನು ಪಾಂಡವರ ಪಾಳಯಕೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯನು ಶಕಟ ವ್ಯೂಹದ ಮುಂದೆ ಬಂದು ನಿಂತ. ತನ್ನ ಸೇನೆಯ ವ್ಯವಸ್ಥೆಯ ಸೊಗಸನ್ನು ನೋಡಿ ಕಿರೀಟ ಸಹಿತವಾದ ತಲೆಯನ್ನು ತೂಗುತ್ತಾ ಇಂದಿನ ಯುದ್ಧದಲ್ಲಿ ಪಾಂಡವರು ಗೆದ್ದರೆ ಅವರು ಚಂದ್ರವಂಶದ ಶ್ರೇಷ್ಠರು, “ಬರಹೇಳು” ಎಂದು ಭಟ್ಟರುಗಳನ್ನು ಪಾಂಡವರ ಪಾಳಯಕ್ಕೆ ಕಳಿಸಿದನು.
ಮೂಲ ...{Loading}...
ಮುಂದೆ ಶಕಟವ್ಯೂಹದಲಿ ನಡೆ
ತಂದು ನಿಂದನು ದ್ರೋಣ ನಿಜಬಲ
ದಂದವನು ನೆರೆನೋಡಿ ನೋಡಿ ಕಿರೀಟವನು ತೂಗಿ
ಇಂದು ಗೆಲಿದರೆ ಧರ್ಮಸುತನವ
ರಿಂದುಕುಲದಗ್ಗಳರು ಬರಹೇ
ಳೆಂದು ಭಟ್ಟರನಟ್ಟಿದನು ಪಾಂಡವರ ಪಾಳಯಕೆ ॥28॥
೦೨೯ ಕೇಳು ಧೃತರಾಷ್ಟ್ರಾವನಿಪ ...{Loading}...
ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತ ಯುಧಿಷ್ಠಿರಾದಿಗ
ಳಾಳಮೇಳಾಪದಲಿ ಹೊಕ್ಕರು ಕಾಳೆಗದ ಕಳನ
ಸಾಲರಿದು ನಿಜಸೇನೆಯನು ಪಾಂ
ಚಾಲಸುತ ಮೋಹರಿಸಿದನು ಕೆಂ
ಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರರಾಜನೆ ಕೇಳು, ಕೃಷ್ಣನೊಡನೆ ಯುಧಿಷ್ಠಿರನೇ ಮೊದಲಾದವರು ಸೈನ್ಯ ಸಮೇತವಾಗಿ ಯುದ್ಧ ಮಾಡುವ ಸ್ಥಳವನ್ನು ಪ್ರವೇಶಿಸಿದರು. ಪಾಂಚಾಲ ರಾಜನ ಮಗನಾದ ದ್ರುಷ್ಟದ್ಯುಮ್ನನು ತನ್ನ ಸೇನೆಯನ್ನು ಸರಿಯಾದ ಸಾಲುಗಳಲ್ಲಿ ಜೋಡಿಸಿದನು. ಸೈನ್ಯದ ಪದಹತಿಯಿಂದೆದ್ದ ಕೆಂಪು ಧೂಳು ದೇವತೆಗಳ ಅನಿಮಿಷತ್ವಕ್ಕೆ ಭಂಗವನ್ನು ತಂದಿತು.
ಟಿಪ್ಪನೀ (ಕ.ಗ.ಪ)
“ಕೆಂಧೂಳಿ…. ಸಂತತಿಯ”- ದೇವತೆಗಳು ಕಣ್ಣನ್ನು ಮಿಟುಕಿಸುವುದಿಲ್ಲ. ಆದ್ದರಿಂದ ಅವರನ್ನು ‘ಅನಿಮಿಷರು’ ಎಂದು ಕರೆಯುತ್ತಾರೆ. ಯುದ್ಧರಂಗದಲ್ಲಿ ಎದ್ದ ಧೂಳು ಮೇಲೇರಿ ಸ್ವರ್ಗವನ್ನು ಸೇರಿ ದೇವತೆಗಳ ಕಣ್ಣಲ್ಲಿ ಬಿದ್ದು, ಅವರೂ ಕಣ್ಣನ್ನು ಮುಚ್ಚುವಂತಾಯಿತೆಂಬದು ಕವಿಯ ಉತ್ಪ್ರೇಕ್ಷೆ .
ಮೂಲ ...{Loading}...
ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತ ಯುಧಿಷ್ಠಿರಾದಿಗ
ಳಾಳಮೇಳಾಪದಲಿ ಹೊಕ್ಕರು ಕಾಳೆಗದ ಕಳನ
ಸಾಲರಿದು ನಿಜಸೇನೆಯನು ಪಾಂ
ಚಾಲಸುತ ಮೋಹರಿಸಿದನು ಕೆಂ
ಧೂಳಿ ಮಾಣಿಸಿತನಿಮಿಷತ್ವವನಮರ ಸಂತತಿಯ ॥29॥
೦೩೦ ಅರಸನೆಡವಙ್ಕದಲಿ ಮತ್ಸ್ಯರು ...{Loading}...
ಅರಸನೆಡವಂಕದಲಿ ಮತ್ಸ್ಯರು
ಬಿರುದ ಕೈಕೆಯ ಚೈದ್ಯ ಕೇರಳ
ಮರು ಯವನ ಸಂವೀರ ಕೌಸಲ ಪಾಂಡ್ಯ ಮಾಗಧರು
ಧರಣಿಪನ ಬಲವಂಕದಲಿ ಮೋ
ಹರಿಸಿ ಪಾಂಚಾಲಕರು ಚೂಣಿಯೊ
ಳುರವಣಿಸಿದರು ನಕುಲ ಸಾತ್ಯಕಿ ಭೀಮನಂದನರು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನ ಎಡಭಾಗದಲ್ಲಿ ವಿರಾಟರಾಜನ ಸೈನ್ಯ, ವೀರರಾದ ಕೈಕೆಯ ರಾಜ, ಚೈದ್ಯರಾಜ, ಕೇರಳರಾಜ, ಯವನರಾಜ, ಕೌಸಲ, ಪಾಂಡ್ಯ ಮಾಗಧರಾಜರು ಅವರ ಪರಿವಾರದೊಂದಿಗೆ ನಿಂತರು, ಧರ್ಮರಾಯನ ಬಲಭಾಗದಲ್ಲಿ ದ್ರುಪದನ ಸೈನ್ಯದೊಡನೆ ಅವನ ಮಕ್ಕಳು ಮುಂದೆ ನಿಂತರು. ಅವರೊಡನೆ ನಕುಲ, ಸಾತ್ಯಕಿ, ಭೀಮನ ಮಕ್ಕಳು ಯುದ್ಧ ಮಾಡಲು ಉತ್ಸಾಹದಿಂದ ನಿಂತರು.
ಪದಾರ್ಥ (ಕ.ಗ.ಪ)
ಅಂಕ-ಭಾಗ, ಧರಣಿಪ-ರಾಜ-ಧರ್ಮರಾಯ, ಮೋಹರಿಸಿ-ಒಟ್ಟಾಗಿ, ಚೂಣಿ-ಮುಂಭಾಗ
ಮೂಲ ...{Loading}...
ಅರಸನೆಡವಂಕದಲಿ ಮತ್ಸ್ಯರು
ಬಿರುದ ಕೈಕೆಯ ಚೈದ್ಯ ಕೇರಳ
ಮರು ಯವನ ಸಂವೀರ ಕೌಸಲ ಪಾಂಡ್ಯ ಮಾಗಧರು
ಧರಣಿಪನ ಬಲವಂಕದಲಿ ಮೋ
ಹರಿಸಿ ಪಾಂಚಾಲಕರು ಚೂಣಿಯೊ
ಳುರವಣಿಸಿದರು ನಕುಲ ಸಾತ್ಯಕಿ ಭೀಮನಂದನರು ॥30॥
೦೩೧ ನರ ಮುರಾನ್ತಕರೊನ್ದು ...{Loading}...
ನರ ಮುರಾಂತಕರೊಂದು ಕಡೆಯಲಿ
ಮುರಿಯೆ ಕಂಡನು ನೃಪತಿ ಕೃಷ್ಣನ
ಹೊರೆಗೆ ಬಂದನು ನಮಿಸಿ ಬಿನ್ನಹ ಮಾಡಿದನು ಬಳಿಕ
ನರನಿವನು ಮಗನಿದಿರುಗಾಣದೆ
ಹಿರಿದನೇರಿಸಿ ನುಡಿದನಿದ ಪತಿ
ಕರಿಸಬೇಹುದು ನಿನ್ನ ಕರುಣವೆ ಹರಣವೆಮಗೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು, ಅರ್ಜುನ ಹಾಗೂ ಕೃಷ್ಣರು ಒಂದೆಡೆ ಹಿಂದಿರುಗುತ್ತಿರುವುದನ್ನು ಕಂಡು ಅವರ ಕಡೆಗೆ ಹೋಗಿ ಕೃಷ್ಣನಿಗೆ ನಮಸ್ಕಾರ ಮಾಡಿ ತನ್ನ ಬೇಡಿಕೆಯನ್ನು ಸಲ್ಲಿಸಿದನು. ಅರ್ಜುನನು ಮಗನನ್ನು ಕಾಣದೆ ಹಿರಿದಾದ ಪ್ರತಿಜ್ಞೆಯನ್ನು ಮಾಡಿಬಿಟ್ಟಿದ್ದಾನೆ. ಇದನ್ನು ನೀವು ನಡೆಸಿಕೊಡಬೇಕು. ನಿನ್ನ ಕರುಣೆಯೇ ನಮಗೆ ಪ್ರಾಣ ಎಂದು ಹೇಳಿದನು.
ಮೂಲ ...{Loading}...
ನರ ಮುರಾಂತಕರೊಂದು ಕಡೆಯಲಿ
ಮುರಿಯೆ ಕಂಡನು ನೃಪತಿ ಕೃಷ್ಣನ
ಹೊರೆಗೆ ಬಂದನು ನಮಿಸಿ ಬಿನ್ನಹ ಮಾಡಿದನು ಬಳಿಕ
ನರನಿವನು ಮಗನಿದಿರುಗಾಣದೆ
ಹಿರಿದನೇರಿಸಿ ನುಡಿದನಿದ ಪತಿ
ಕರಿಸಬೇಹುದು ನಿನ್ನ ಕರುಣವೆ ಹರಣವೆಮಗೆಂದ ॥31॥
೦೩೨ ಹಗೆಯ ತಲೆ ...{Loading}...
ಹಗೆಯ ತಲೆ ಹೋಗದಡೆ ವಹ್ನಿಯ
ಹೊಗುವ ನುಡಿ ತಮ್ಮನದು ಬಳಿಕಾ
ಸೆಗಳಿಕೆಯೊಳುಳಿದೆಮ್ಮ ನಾಲ್ವರ ದೇಹ ನಿಕ್ಷೇಪ
ಬಗೆಯಲೈವರ ಜೀವನದ ವಿಲ
ಗಿಗನು ನೀನೆಂದರಸ ಕರುಣಾ
ಳುಗಳ ದೇವನ ಬೇಡಿಕೊಂಡನು ಕೇಳು ಧೃತರಾಷ್ಟ್ರ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶತ್ರುವಾಗಿರುವ ಜಯದ್ರಥನ ತಲೆ ಹೋಗದಿದ್ದರೆ ಅಗ್ನಿ ಪ್ರವೇಶ ಮಾಡಿ ಪ್ರಾಣವನ್ನು ಕಳೆದುಕೊಳ್ಳುವ ಪ್ರತಿಜ್ಞೆ ತಮ್ಮನಾದ ಅರ್ಜುನನದು. ಆನಂತರ ಆ ಉರಿಯ ಕಾವಿನಲ್ಲಿಯೇ ನಮ್ಮ ನಾಲ್ವರ ದೇಹಗಳೂ ಐಕ್ಯವಾಗುತ್ತವೆ. ನಮ್ಮೈವರ ಜೀವನದ ಹೊಣೆಗಾರ ನೀನೇ ಅಲ್ಲವೆ” ಎಂದು ಧರ್ಮರಾಯನು ಕರುಣಾಳುಗಳ ಅರಸನಾದ ಕೃಷ್ಣನನ್ನು ಬೇಡಿಕೊಂಡನು ಎಂದು ಸಂಜಯ ಹೇಳಿದ
ಪದಾರ್ಥ (ಕ.ಗ.ಪ)
ಸೆಗಳಿಕೆ-ಕಾವು-ಬೆಂಕಿ, ವಿಲಗಿಗ-ಹಂಗಿಗ, ಹೊಣೆಗಾರ
ಮೂಲ ...{Loading}...
ಹಗೆಯ ತಲೆ ಹೋಗದಡೆ ವಹ್ನಿಯ
ಹೊಗುವ ನುಡಿ ತಮ್ಮನದು ಬಳಿಕಾ
ಸೆಗಳಿಕೆಯೊಳುಳಿದೆಮ್ಮ ನಾಲ್ವರ ದೇಹ ನಿಕ್ಷೇಪ
ಬಗೆಯಲೈವರ ಜೀವನದ ವಿಲ
ಗಿಗನು ನೀನೆಂದರಸ ಕರುಣಾ
ಳುಗಳ ದೇವನ ಬೇಡಿಕೊಂಡನು ಕೇಳು ಧೃತರಾಷ್ಟ್ರ ॥32॥
೦೩೩ ಪಡೆಗಡಲು ಕುಡಿನೀರು ...{Loading}...
ಪಡೆಗಡಲು ಕುಡಿನೀರು ನೆರೆ ನೀ
ರಡಸಿದುದು ಪಾರ್ಥನ ಶರಾವಳಿ
ವಡಬನಿದರೊಳು ಕೆಲಬಲದ ಹಂಗೇಕೆ ಕದನದಲಿ
ಕಡುಹಿನಲಿ ಸೈಂಧವನ ತಲೆಯನು
ಹೊಡೆದು ನಿನ್ನಯ ಕಾಲ ಬಳಿಯಲಿ
ಕೆಡಹುವನು ನಿಮಿಷದಲಿ ಫಲುಗುಣನೆಂದನಸುರಾರಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಕೌರವ) ಸೇನೆಯೆಂಬ ಸಮುದ್ರವು ಕುಡಿಯುವ ನೀರಿನಂತೆ. ಅರ್ಜುನನ ಬಾಣಗಳೆಂಬ ವಡಬಾಗ್ನಿಗೆ ಬಾಯಾರಿಕೆಯಾಗಿದೆ. ಇನ್ನು ಯುದ್ಧದಲ್ಲಿ ಅವರಿವರ ಹಂಗೇಕೆ. ಅರ್ಜುನನು ತನ್ನ ಪರಾಕ್ರಮದಿಂದ ಸೈಂಧವನ ತಲೆಯನ್ನು ನಿಮಿಷಮಾತ್ರದಲ್ಲಿ ಹೊಡೆದು ನಿನ್ನ ಕಾಲಬಳಿಯಲ್ಲಿ ಕೆಡಹುತ್ತಾನೆ ಎಂದು ಕೃಷ್ಣ ಹೇಳಿದ.
ಪದಾರ್ಥ (ಕ.ಗ.ಪ)
ಪಡೆಗಡಲು-ಸೇನಾ ಸಮುದ್ರ,
ಮೂಲ ...{Loading}...
ಪಡೆಗಡಲು ಕುಡಿನೀರು ನೆರೆ ನೀ
ರಡಸಿದುದು ಪಾರ್ಥನ ಶರಾವಳಿ
ವಡಬನಿದರೊಳು ಕೆಲಬಲದ ಹಂಗೇಕೆ ಕದನದಲಿ
ಕಡುಹಿನಲಿ ಸೈಂಧವನ ತಲೆಯನು
ಹೊಡೆದು ನಿನ್ನಯ ಕಾಲ ಬಳಿಯಲಿ
ಕೆಡಹುವನು ನಿಮಿಷದಲಿ ಫಲುಗುಣನೆಂದನಸುರಾರಿ ॥33॥
೦೩೪ ಕರೆದು ಸಾತ್ಯಕಿ ...{Loading}...
ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾತ್ಯಕಿಯು ಭೀಮನನ್ನು ಕರೆದು ಧರ್ಮರಾಯನ ರಕ್ಷಣೆಗಾಗಿ ನಿಲ್ಲಿಸಿದ. ಕೈಕೆಯ ರಾಜ, ಚೈದ್ಯರಾಜ, ಸೃಂಜಯನೇ ಮೊದಲಾದವರನ್ನು ಶತ್ರು ಸೇನೆಯ ನಿಗ್ರಹಕ್ಕೆ ಕಳುಹಿಸಿದನು. ಅರ್ಜುನನು ಕೃಷ್ಣನೊಡನೆ ಸೇನೆಯಿದ್ದ ಜಾಗದಿಂದ ಐದು ನೂರು ಬಿಲ್ಲಿನಷ್ಟು ದೂರದ ಸ್ಥಳಕ್ಕೆ ಹೋಗಿ ಮಹಾ ಅಸ್ತ್ರ (ಪಾಶಪತಾಸ್ತ್ರ) ಮಂತ್ರವನ್ನು ಜಪಿಸಿದನು.
ಮೂಲ ...{Loading}...
ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ ॥34॥
೦೩೫ ಇಳಿದು ರಥವನು ...{Loading}...
ಇಳಿದು ರಥವನು ಮುರಹರನ ಪದ
ತಳದ ಧೂಳಿಯ ಕೊಂಡನತಿ ನಿ
ರ್ಮಲ ಸಮಾಧಾನದಲಿ ಕೃಷ್ಣನ ಚರಣಕೆರಗಿದನು
ತಲೆಯ ಹಿಡಿದೆತ್ತಿದನು ಹರಿ ಕೋ
ಮಳ ಕರಾಂಬುಜದಿಂದ ಪಾರ್ಥನ
ನೊಲಿದು ಮೈದಡವಿದನು ಗೆಲು ಹೋಗೆಂದು ಹರಸಿದನು ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ರಥದಿಂದ ಇಳಿದು ಕೃಷ್ಣನ ಪಾದದ ಧೂಳಿಯನ್ನು ತೆಗೆದು ತಲೆಯ ಮೇಲಿಟ್ಟುಕೊಂಡು ಅತ್ಯಂತ ಪರಿಶುದ್ಧವೂ, ಶಾಂತವೂ ಆದ ಮನಸ್ಸಿನಿಂದ ಕೃಷ್ಣನ ಪಾದಗಳಿಗೆ ನಮಸ್ಕಾರ ಮಾಡಿದನು. ಆಗ ಕೃಷ್ಣನು ಅರ್ಜುನನ ತಲೆಯನ್ನು ಹಿಡಿದೆತ್ತಿ ತನ್ನ ಕೋಮಲವಾದ ಕರಕಮಲಗಳಿಂದ ಅರ್ಜುನನ ದೇಹವನ್ನು ಸವರಿ “ಯುದ್ಧವನ್ನು ಜಯಿಸು ಹೋಗು” ಎಂದು ಆಶೀರ್ವದಿಸಿದನು.
ಮೂಲ ...{Loading}...
ಇಳಿದು ರಥವನು ಮುರಹರನ ಪದ
ತಳದ ಧೂಳಿಯ ಕೊಂಡನತಿ ನಿ
ರ್ಮಲ ಸಮಾಧಾನದಲಿ ಕೃಷ್ಣನ ಚರಣಕೆರಗಿದನು
ತಲೆಯ ಹಿಡಿದೆತ್ತಿದನು ಹರಿ ಕೋ
ಮಳ ಕರಾಂಬುಜದಿಂದ ಪಾರ್ಥನ
ನೊಲಿದು ಮೈದಡವಿದನು ಗೆಲು ಹೋಗೆಂದು ಹರಸಿದನು ॥35॥
೦೩೬ ಖುರಕೆ ರತುನವ ...{Loading}...
ಖುರಕೆ ರತುನವ ಸುರಿದು ತೇರಿನ
ತುರಗವನು ವಂದಿಸಿದನಾ ಪಳ
ಹರದ ಹನುಮಂಗೆರಗಿದನು ಸುರಕುಲಕೆ ಕೈಮುಗಿದು
ವರರಥವ ಬಲಗೊಂಡು ಕವಚವ
ಬರಿಗೆ ಬಿಗಿದನು ಕೈಗೆ ವಜ್ರದ
ತಿರುವೊಡೆಯನವಚಿದನು ರಥವೇರಿದನು ಕಲಿಪಾರ್ಥ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥಕ್ಕೆ ಕಟ್ಟಿದ ಕುದುರೆಗಳ ಪಾದಗಳಿಗೆ ರತ್ನವನ್ನು ಸುರಿದು, ನಮಸ್ಕರಿಸಿ ಧ್ವಜದಲ್ಲಿದ್ದ ಹನುಮಂತನಿಗೆ ವಂದನೆ ಗೈದು, ದೇವತೆಗಳಿಗೆ ಕೈಮುಗಿದು, ಶ್ರೇಷ್ಠವಾದ ರಥಕ್ಕೆ ಪ್ರದಕ್ಷಿಣೆ ಹಾಕಿ, ಕವಚವನ್ನು ಸೊಂಟಕ್ಕೆ ಬಿಗಿದುಕೊಂಡು ಕೈಗೆ ವಜ್ರದ ಕವಚವನ್ನು ಧರಿಸಿ ವೀರಪಾರ್ಥನು ರಥವನ್ನು ಹತ್ತಿದನು.
ಪದಾರ್ಥ (ಕ.ಗ.ಪ)
ಪಳಹರ-ಧ್ವಜ,
ಮೂಲ ...{Loading}...
ಖುರಕೆ ರತುನವ ಸುರಿದು ತೇರಿನ
ತುರಗವನು ವಂದಿಸಿದನಾ ಪಳ
ಹರದ ಹನುಮಂಗೆರಗಿದನು ಸುರಕುಲಕೆ ಕೈಮುಗಿದು
ವರರಥವ ಬಲಗೊಂಡು ಕವಚವ
ಬರಿಗೆ ಬಿಗಿದನು ಕೈಗೆ ವಜ್ರದ
ತಿರುವೊಡೆಯನವಚಿದನು ರಥವೇರಿದನು ಕಲಿಪಾರ್ಥ ॥36॥
೦೩೭ ದೇವದತ್ತವ ಮೊಳಗಿದನು ...{Loading}...
ದೇವದತ್ತವ ಮೊಳಗಿದನು ಗಾಂ
ಡೀವಿ ಚಾಪವ ಮಿಡಿದ ನಿಷ್ಠುರ
ರಾವ ತಿವಿದುದು ಜರಿದವಡಕಿಲು ಜಗದ ಜೋಡಿಗಳ
ರಾವು ಫಲುಗುಣಯೆನುತ ಪಾರ್ಥನ
ಭಾವ ಕುಡಿ ಚಮ್ಮಟಿಗೆಯಲಿ ತುರ
ಗಾವಳಿಯನದುಹಿದನು ಸುಳಿಸಿದನಾಹವಕೆ ರಥವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ದೇವದತ್ತ ಎಂಬ ತನ್ನ ಶಂಖವನ್ನು ಊದಿ, ಬಿಲ್ಲಿನ ಹಗ್ಗವನ್ನು ಎಳೆದು ಠೇಂಕಾರ ಮಾಡಿದಾಗ ಉಂಟಾದ ಶಬ್ದದಿಂದ ಒಂದರ ಮೇಲೊಂದಿದ್ದ ಜಗತ್ತು ಬಿರುಕು ಬಿಟ್ಟಿರಬೇಕೆನಿಸುವಂತಾಯಿತು. ಭಲೇ ಅರ್ಜುನ ಎನ್ನುತ್ತ ಅರ್ಜುನನ ಭಾವನಾದ ಕೃಷ್ಣನು ಚಾವಟಿ ಕುಡಿಯಿಂದ ಹೊಡೆದು ಕುದುರೆಗಳ ಬೆನ್ನನ್ನು ಚಪ್ಪರಿಸಿ ರಥವನ್ನು ಯುದ್ಧಭೂಮಿಗೆ ನಡೆಸಿದನು.
ಪದಾರ್ಥ (ಕ.ಗ.ಪ)
ರಾವು-ಭಲೇ,
ಅದುಹು-ಒತ್ತು,
ಅಡಕಿಲು-ಒಂದರ ಮೇಲೊಂದಿದ್ದ
ಮೂಲ ...{Loading}...
ದೇವದತ್ತವ ಮೊಳಗಿದನು ಗಾಂ
ಡೀವಿ ಚಾಪವ ಮಿಡಿದ ನಿಷ್ಠುರ
ರಾವ ತಿವಿದುದು ಜರಿದವಡಕಿಲು ಜಗದ ಜೋಡಿಗಳ
ರಾವು ಫಲುಗುಣಯೆನುತ ಪಾರ್ಥನ
ಭಾವ ಕುಡಿ ಚಮ್ಮಟಿಗೆಯಲಿ ತುರ
ಗಾವಳಿಯನದುಹಿದನು ಸುಳಿಸಿದನಾಹವಕೆ ರಥವ ॥37॥
೦೩೮ ವರಯುಧಾಮನ್ಯೂತ್ತಮೌಞ್ಜಸ ...{Loading}...
ವರಯುಧಾಮನ್ಯೂತ್ತಮೌಂಜಸ
ರೆರಡು ಕಡೆಯಲಿ ಬರೆ ಮುರಾರಿಯ
ಪರಮ ಸಾಹಾಯ್ಯದಲಿ ಸಾಹಸಮಲ್ಲನುರವಣಿಸೆ
ಅರಿಬಲವ ಕೆಣಕಿದನು ಪಾರ್ಥನ
ಬರವನೀಕ್ಷಿಸಿ ತನ್ನ ಸೇನೆಗೆ
ಬೆರಳ ಚೌರಿಯ ಬೀಸಿ ದುಶ್ಯಾಸನನು ಮಾರಾಂತ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುಧಾಮನ್ಯು ಮತ್ತು ಉತ್ತಮೌಂಜಸರು ಕೃಷ್ಣನ ರಥದ ಎರಡು ಕಡೆಗಳಲ್ಲಿ ಬರಲು ಕೃಷ್ಣನ ಸಹಾಯದಲ್ಲಿ ಅರ್ಜುನನು ಉತ್ಸಾಹದಿಂದ ಶತ್ರು ಸೈನ್ಯವನ್ನು ಕೆಣಕಿದನು. ಅರ್ಜುನನು ಬರುತ್ತಿರುವುದನ್ನು ನೋಡಿ ದುಶ್ಯಾಸನನು ಚೌರಿಯನ್ನು ಬೀಸಿ ತನ್ನ ಸೇನೆಗೆ ಹಿಂಬಾಲಿಸಲು ಸೂಚಿಸಿ ಅರ್ಜುನನನ್ನು ಎದುರಿಸಿದ.
ಪದಾರ್ಥ (ಕ.ಗ.ಪ)
ಸಾಹಾಯ್ಯ-ಅನುಕೂಲ
ಮೂಲ ...{Loading}...
ವರಯುಧಾಮನ್ಯೂತ್ತಮೌಂಜಸ
ರೆರಡು ಕಡೆಯಲಿ ಬರೆ ಮುರಾರಿಯ
ಪರಮ ಸಾಹಾಯ್ಯದಲಿ ಸಾಹಸಮಲ್ಲನುರವಣಿಸೆ
ಅರಿಬಲವ ಕೆಣಕಿದನು ಪಾರ್ಥನ
ಬರವನೀಕ್ಷಿಸಿ ತನ್ನ ಸೇನೆಗೆ
ಬೆರಳ ಚೌರಿಯ ಬೀಸಿ ದುಶ್ಯಾಸನನು ಮಾರಾಂತ ॥38॥
೦೩೯ ಇವನ ಕೊನ್ದರೆ ...{Loading}...
ಇವನ ಕೊಂದರೆ ಮುನ್ನ ಮಾಡಿದ
ಪವನತನಯನ ಭಾಷೆಗೂಣೆಯ
ವಿವನ ಕೊಲ್ಲದೆ ಗೆಲುವ ಹದನೇನೆನುತ ನಿಮಿಷದಲಿ
ಕವಲುಗೋಲಿನಲರಿಭಟನ ಚಾ
ಪವನು ಸೂತನ ರಥವ ರಥವಾ
ಹವನು ಖಂಡಿಸಿ ಬಿಸುಡಲವ ಜಾರಿದನು ದುಗುಡದಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನನ್ನು ಕೊಂದರೆ ವಾಯುಪುತ್ರನಾದ ಭೀಮನು ಹಿಂದೆ ಮಾಡಿರುವ ಪ್ರತಿಜ್ಞೆಗೆ ಭಂಗವುಂಟಾಗುತ್ತದೆ. ಆದ್ದರಿಂದ ಇವನನ್ನು ಕೊಲ್ಲದೆ ಹೇಗೆ ಗೆಲ್ಲುವುದು ಎಂದು ಅರ್ಜುನನು ಒಂದು ನಿಮಿಷ ಯೋಚಿಸಿದನು. ಅನಂತರ ಕವಲು ಬಾಣಗಳಿಂದ ದುಶ್ಯಾಸನನ ಬಿಲ್ಲನ್ನು, ಅವನ ರಥದ ಸಾರಥಿಯನ್ನು, ಕುದುರೆಗಳನ್ನು ಕತ್ತರಿಸಿ ಹಾಕಿದನು. ಆಗ ದುಶ್ಯಾಸನನು ದುಃಖದಿಂದ ರಣರಂಗದಿಂದ ನಿರ್ಗಮಿಸಿದನು.
ಪದಾರ್ಥ (ಕ.ಗ.ಪ)
ಊಣೆ-ಕುಂದು
ಮೂಲ ...{Loading}...
ಇವನ ಕೊಂದರೆ ಮುನ್ನ ಮಾಡಿದ
ಪವನತನಯನ ಭಾಷೆಗೂಣೆಯ
ವಿವನ ಕೊಲ್ಲದೆ ಗೆಲುವ ಹದನೇನೆನುತ ನಿಮಿಷದಲಿ
ಕವಲುಗೋಲಿನಲರಿಭಟನ ಚಾ
ಪವನು ಸೂತನ ರಥವ ರಥವಾ
ಹವನು ಖಂಡಿಸಿ ಬಿಸುಡಲವ ಜಾರಿದನು ದುಗುಡದಲಿ ॥39॥
೦೪೦ ಉರಿಯ ಬನ್ದಿಯ ...{Loading}...
ಉರಿಯ ಬಂದಿಯ ಹಿಡಿದು ಹೆಚ್ಚುವ
ದೊರೆಯಲೇ ದಿಟ ಪಾದರಸವೆಲೆ
ಯರಸ ನಿನ್ನ ಕುಮಾರನೇಸರ ಪಾಡು ಪಾರ್ಥಂಗೆ
ತೆರಳಿದನು ನಿನ್ನಾತ ಸೂಠಿಯೊ
ಳುರವಣಿಸಿತಾ ತೇರು ನರನೈ
ತರಲು ಕಂಡನು ಶಸ್ತ್ರವಿದ್ಯಾ ಭಾಳಲೋಚನನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾದರಸಕ್ಕೆ ಉರಿಯಿಂದ ಬಂಧನ ಮಾಡಿದರೆ ಅದು ಹೇಗೆ ವಿಕಾಸವಾಗುತ್ತದೋ (ಹೆಚ್ಚುತ್ತದೋ) ಹಾಗೆ, ಧೃತರಾಷ್ಟ್ರನೇ ನಿನ್ನ ಮಗನಾದ ದುಶ್ಶಾಸನ ಅರ್ಜುನನಿಗೆ ಎಷ್ಟರ ಲೆಕ್ಕ (ಯಾವ ಲೆಕ್ಕ) ನಿನ್ನ ಮಗ ದುಶ್ಶಾಸನ ಯುದ್ಧ ಭೂಮಿಯಿಂದ ಹೊರಟು ಹೋದನು. ಅರ್ಜುನನ ರಥ ವೇಗವಾಗಿ ಮುಂದಕ್ಕೆ ಓಡಿತು. ಅಲ್ಲಿ ಅರ್ಜುನನು ಶಸ್ತ್ರ ವಿದ್ಯೆಯಲ್ಲಿ ಸಾಕ್ಷಾತ್ ಶಿವನಂತಿದ್ದ ದ್ರೋಣಾಚಾರ್ಯರನ್ನು ನೋಡಿದನು.
ಮೂಲ ...{Loading}...
ಉರಿಯ ಬಂದಿಯ ಹಿಡಿದು ಹೆಚ್ಚುವ
ದೊರೆಯಲೇ ದಿಟ ಪಾದರಸವೆಲೆ
ಯರಸ ನಿನ್ನ ಕುಮಾರನೇಸರ ಪಾಡು ಪಾರ್ಥಂಗೆ
ತೆರಳಿದನು ನಿನ್ನಾತ ಸೂಠಿಯೊ
ಳುರವಣಿಸಿತಾ ತೇರು ನರನೈ
ತರಲು ಕಂಡನು ಶಸ್ತ್ರವಿದ್ಯಾ ಭಾಳಲೋಚನನ ॥40॥
೦೪೧ ಅರುಣಮಯ ರಥವಾಜಿಗಳ ...{Loading}...
ಅರುಣಮಯ ರಥವಾಜಿಗಳ ವಿ
ಸ್ತರದ ಹೇಮದ ಕಳಶ ಸಿಂಧದ
ಸರಳು ತೀವಿದ ಬಂಡಿ ಬಳಿಯಲಿ ಲಕ್ಷಸಂಖ್ಯೆಗಳ
ತರಣಿಯನು ಸೋಲಿಸುವ ರತ್ನಾ
ಭರಣಕಾಂತಿಯ ರಾಯಕಟಕದ
ಗುರುವ ಕಂಡನು ಪಾರ್ಥ ಶಕಟ ವ್ಯೂಹದಗ್ರದಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರುಣ ವರ್ಣದ ರಥಕುದುರೆಗಳ, ದೊಡ್ಡದಾದ ಚಿನ್ನದ ಕಳಶ, ಬಾವುಟಗಳನ್ನುಳ್ಳ ರಥದಲ್ಲಿದ್ದ, ದ್ರೋಣನ ಬಳಿಯಲ್ಲಿ ಬಾಣಗಳನ್ನು ತುಂಬಿದ ಲಕ್ಷ ಸಂಖ್ಯೆಯ ಗಾಡಿಗಳಿದ್ದವು. ಕಾಂತಿಯಲ್ಲಿ ಸೂರ್ಯನನ್ನು ಮೀರುವ ರತ್ನಾಭರಣಗಳನ್ನು ಧರಿಸಿರುವ ಕೌರವನ ಸೇನಾನಾಯಕರಾದ ದ್ರೋಣಾಚಾರ್ಯನನ್ನು ಶಕಟವ್ಯೂಹದ ಮುಂಭಾಗದಲ್ಲಿ ಅರ್ಜುನನು ನೋಡಿದನು.
ಪದಾರ್ಥ (ಕ.ಗ.ಪ)
ಸಿಂಧ-ಬಾವುಟ
ಮೂಲ ...{Loading}...
ಅರುಣಮಯ ರಥವಾಜಿಗಳ ವಿ
ಸ್ತರದ ಹೇಮದ ಕಳಶ ಸಿಂಧದ
ಸರಳು ತೀವಿದ ಬಂಡಿ ಬಳಿಯಲಿ ಲಕ್ಷಸಂಖ್ಯೆಗಳ
ತರಣಿಯನು ಸೋಲಿಸುವ ರತ್ನಾ
ಭರಣಕಾಂತಿಯ ರಾಯಕಟಕದ
ಗುರುವ ಕಂಡನು ಪಾರ್ಥ ಶಕಟ ವ್ಯೂಹದಗ್ರದಲಿ ॥41॥
೦೪೨ ಆರಿವನು ಕಲಿಪಾರ್ಥನೇ ...{Loading}...
ಆರಿವನು ಕಲಿಪಾರ್ಥನೇ ತ್ರಿಪು
ರಾರಿ ಹಿಡಿವಂಬಾಯಿತೆಂಬ ದೊ
ಠಾರನೇ ದೈತ್ಯಾರಿ ಸಾರಥಿಯೆಂಬ ಗರ್ವಿತನೆ
ಹಾರುವರು ನಾವಸ್ತ್ರ ವಿದ್ಯಾ
ಪಾರಗರು ನಾವಲ್ಲ ರಣದೌ
ದಾರಿಯವ ತೋರೆಮಗೆನುತ್ತಡಹಾಯ್ದನಾ ದ್ರೋಣ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯಾರಿವನು ವೀರ ಪಾರ್ಥನೇ, ಶಿವನು ಹಿಡಿಯುವ ಬಾಣ ತನ್ನದಾಯಿತೆಂಬ ಗರ್ವಿತನೇ, ಕೃಷ್ಣನೇ ಸಾರಥಿಯೆಂಬ ಅಹಂಕಾರಿಯೇ, ನಾವು ಬ್ರಾಹ್ಮಣರು, ಶಸ್ತ್ರಾಸ್ತ್ರ ವಿದ್ಯೆಯಲ್ಲಿ ಪಾರಂಗತರಲ್ಲ. ರಣರಂಗದಲ್ಲಿ ನಮ್ಮ ಮೇಲೆ ಔದಾರ್ಯವನ್ನು ತೋರಿಸು” ಎಂದು (ವ್ಯಂಗ್ಯವಾಗಿ) ಹೇಳುತ್ತಾ ದ್ರೋಣನು ಅರ್ಜುನನ ಮೇಲೆ ಬಿದ್ದನು.
ಪದಾರ್ಥ (ಕ.ಗ.ಪ)
ದೊಠಾರ-ಗರ್ವಿತ
ಮೂಲ ...{Loading}...
ಆರಿವನು ಕಲಿಪಾರ್ಥನೇ ತ್ರಿಪು
ರಾರಿ ಹಿಡಿವಂಬಾಯಿತೆಂಬ ದೊ
ಠಾರನೇ ದೈತ್ಯಾರಿ ಸಾರಥಿಯೆಂಬ ಗರ್ವಿತನೆ
ಹಾರುವರು ನಾವಸ್ತ್ರ ವಿದ್ಯಾ
ಪಾರಗರು ನಾವಲ್ಲ ರಣದೌ
ದಾರಿಯವ ತೋರೆಮಗೆನುತ್ತಡಹಾಯ್ದನಾ ದ್ರೋಣ ॥42॥
೦೪೩ ನಾಳೆ ಹಗೆವನ ...{Loading}...
ನಾಳೆ ಹಗೆವನ ಹೊಯ್ವೆನೆಂಬು
ಬ್ಬಾಳುತನವಿನ್ನೊಮ್ಮೆ ಭೂಪತಿ
ಯೋಲೆಗಾತಿಯರಿದಿರಲಾಡಿದ ಭಾಷೆಯಿನ್ನೊಮ್ಮೆ
ಆಳು ನೆರೆದಿದೆ ಚೂಣಿಯೊಳಗೊಂ
ದಾಳ ಹೊಯ್ದರೆ ಗೆಲವು ನಿನ್ನದು
ಕಾಳಕೂಟದ ಕಮಲ ತುಂಬಿಗೆ ಪಥ್ಯವಲ್ಲೆಂದ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾಳೆ ಶತ್ರುವನ್ನು ಹೊಡೆದು (ಜಯದ್ರಥನನ್ನು) ಹಾಕುತ್ತೇನೆ ಎಂಬ ಶೌರ್ಯದ ಮಾತುಗಳು ಇನ್ನೊಂದು ಬಾರಿಗೆ ಇರಲಿ. ಧರ್ಮರಾಯನ ದಾಸಿಯರ ಮುಂದೆ ಮಾಡಿದ ಪ್ರತಿಜ್ಞೆ ಮತ್ತೊಮ್ಮೆಗಿರಲಿ. ಈಗ ಮಹಾ ಸೇನೆ ಸೇರಿದೆ. ನನ್ನ ಈ ಸೈನ್ಯದಲ್ಲಿ ಒಬ್ಬ ಸೈನಿಕನನ್ನು ಕೊಂದರೆ ಜಯ ನಿನ್ನದು. ಆದರೆ ಕಾಲಕೂಟ ವಿಷದ ಕಮಲವು ದುಂಬಿಗೆ ಹಿತವಲ್ಲ.” ಎಂದು ದ್ರೋಣನು ಹೇಳಿದನು.
ಪದಾರ್ಥ (ಕ.ಗ.ಪ)
ಓಲೆಗಾತಿ - ದಾಸಿ
ಮೂಲ ...{Loading}...
ನಾಳೆ ಹಗೆವನ ಹೊಯ್ವೆನೆಂಬು
ಬ್ಬಾಳುತನವಿನ್ನೊಮ್ಮೆ ಭೂಪತಿ
ಯೋಲೆಗಾತಿಯರಿದಿರಲಾಡಿದ ಭಾಷೆಯಿನ್ನೊಮ್ಮೆ
ಆಳು ನೆರೆದಿದೆ ಚೂಣಿಯೊಳಗೊಂ
ದಾಳ ಹೊಯ್ದರೆ ಗೆಲವು ನಿನ್ನದು
ಕಾಳಕೂಟದ ಕಮಲ ತುಂಬಿಗೆ ಪಥ್ಯವಲ್ಲೆಂದ ॥43॥
೦೪೪ ಎಮ್ಬಡಿದಿರುತ್ತರವಲೇ ಗರ ...{Loading}...
ಎಂಬಡಿದಿರುತ್ತರವಲೇ ಗರ
ಳಾಂಬುಜದ ಪರಿಮಳಕೆ ಗರುಡನು
ತುಂಬಿಯಾದರೆ ಸೇರುವುದಲೇ ಸಾಕದಂತಿರಲಿ
ಅಂಬುಗಳಿಗೆಡೆದೆರಹ ಕುಡಿ ನೀ
ವೆಂಬ ನುಡಿಗಂಜುವೆನು ಸೈಂಧವ
ನೆಂಬವನ ತೋರಿಸಿರೆಯೆಂದನು ನಗುತ ಕಲಿಪಾರ್ಥ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನು ಮಾತನಾಡಿದರೆ ನಿಮಗೆ ಎದುರುತ್ತರವನ್ನು ಕೊಟ್ಟಂತಾಗುತ್ತದೆ. ವಿಷಪೂರಿತವಾದ ಕಮಲದ ಪರಿಮಳವನ್ನು ಹೀರಲು ಗರುಡನೇ ದುಂಬಿಯಾಗಿ ಬಂದರೆ ಅವನಿಗೆ ಅದು ಸೇರುತ್ತದೆಯಲ್ಲವೇ? ಆ ವಿಚಾರ ಹಾಗಿರಲಿ. ಬಾಣಗಳು ಪ್ರವೇಶಿಸಲು ದಾರಿಯನ್ನು ಬಿಟ್ಟುಕೊಡಿ. ನೀವು ಆಡಿದ ಮಾತುಗಳಿಗೆ ಹೆದರುತ್ತೇನೆ. ಜಯದ್ರಥನು ಎಲ್ಲಿರುವನೆಂದು ನನಗೆ ತೋರಿಸಿರಿ " ಎಂದು ನಗುತ್ತಾ ವೀರನಾದ ಅರ್ಜುನ ಹೇಳಿದ.
ಮೂಲ ...{Loading}...
ಎಂಬಡಿದಿರುತ್ತರವಲೇ ಗರ
ಳಾಂಬುಜದ ಪರಿಮಳಕೆ ಗರುಡನು
ತುಂಬಿಯಾದರೆ ಸೇರುವುದಲೇ ಸಾಕದಂತಿರಲಿ
ಅಂಬುಗಳಿಗೆಡೆದೆರಹ ಕುಡಿ ನೀ
ವೆಂಬ ನುಡಿಗಂಜುವೆನು ಸೈಂಧವ
ನೆಂಬವನ ತೋರಿಸಿರೆಯೆಂದನು ನಗುತ ಕಲಿಪಾರ್ಥ ॥44॥
೦೪೫ ಎಲೆ ಮರುಳೆ ...{Loading}...
ಎಲೆ ಮರುಳೆ ಮುಂದಿದ್ದ ನಮ್ಮಯ
ವಿಲಗವನು ಪರಿಹರಿಸಿ ಸೈಂಧವ
ನಳಿವುಪಾಯವ ಮಾಡು ಗರುವರು ನುಡಿದು ಕೆಡಿಸುವರೆ
ಅಳವಿಗೊಡು ಕೊಳ್ಳಂಬನೆನುತ
ಗ್ಗಳೆಯನೆಚ್ಚನು ನರನ ಮೆಯ್ಯಲಿ
ತಳಿತವಂಬುಗಳೇನನೆಂಬೆನು ವಿಗಡ ವಿಗ್ರಹವ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೆ ಮರುಳೆ, ನಿನ್ನ ಮುಂದಿರುವ ಈ ತೊಂದರೆಯನ್ನು ಮೊದಲು ನಿವಾರಣೆ ಮಾಡಿ ಅನಂತರ ಸೈಂಧವನನ್ನು ಕೊಲ್ಲುವ ಉಪಾಯವನ್ನು ಮಾಡು. ಘನತೆಯುಳ್ಳವರು ಆಡಿದ ಮಾತುಗಳನ್ನು ಮುರಿಯುವುದಿಲ್ಲ. ನನಗೆ ಎದುರುಗೊಡು. ಈ ಬಾಣಗಳನ್ನು ಸ್ವೀಕರಿಸು” ಎನ್ನುತ್ತಾ ಶ್ರೇಷ್ಠನಾದ ದ್ರೋಣನು ಬಾಣಗಳನ್ನು ಅರ್ಜುನನ ಮೇಲೆ ಪ್ರಯೋಗಿಸಿದನು. ಬಾಣಗಳು ಅರ್ಜುನನ ಮೈಯಲ್ಲಿ ತುಂಬಿಕೊಂಡವು. ಆ ಭಯಂಕರ ಯುದ್ಧವನ್ನು ಏನು ಹೇಳಲಿ ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ವಿಲಗ - ತೊಂದರೆ, ವಿಘ್ನ
ಮೂಲ ...{Loading}...
ಎಲೆ ಮರುಳೆ ಮುಂದಿದ್ದ ನಮ್ಮಯ
ವಿಲಗವನು ಪರಿಹರಿಸಿ ಸೈಂಧವ
ನಳಿವುಪಾಯವ ಮಾಡು ಗರುವರು ನುಡಿದು ಕೆಡಿಸುವರೆ
ಅಳವಿಗೊಡು ಕೊಳ್ಳಂಬನೆನುತ
ಗ್ಗಳೆಯನೆಚ್ಚನು ನರನ ಮೆಯ್ಯಲಿ
ತಳಿತವಂಬುಗಳೇನನೆಂಬೆನು ವಿಗಡ ವಿಗ್ರಹವ ॥45॥
೦೪೬ ಅವರ ಪಾದಾಮ್ಬುಜಕೆ ...{Loading}...
ಅವರ ಪಾದಾಂಬುಜಕೆ ಫಲುಗುಣ
ಕವಿಸಿದನು ಸರಳುಗಳ ಲೆಕ್ಕಿಸ
ದವಗಡಿಸಿ ಗುರುವೆಚ್ಚು ಕಡಿದನು ಗಾಂಡಿವದ ತಿರುವ
ಸವತಳಿಸಿ ಮಾರ್ತಿರುವಿನಲಿ ಸಂ
ತವಿಸಿಕೊಂಡರ್ಜುನನು ದ್ರೋಣನ
ನವ ನಿಶಿತ ಬಾಣೌಘದಲಿ ಹೂಳಿದನು ನಿಮಿಷದಲಿ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರ ಪಾದ ಕಮಲಗಳ ಮುಂದೆ ಅರ್ಜುನನು ಬಾಣಗಳನ್ನು ಸುರಿಸಿದನು. ಬಿಟ್ಟ ಬಾಣಗಳನ್ನು ಲೆಕ್ಕಿಸದೆ ದ್ರೋಣನು ಅರ್ಜುನನ ಗಾಂಡಿವದ ಹಗ್ಗವನ್ನು ಕತ್ತರಿಸಿದನು. ಗಾಂಡೀವ ಧನುಸ್ಸಿಗೆ ಮತ್ತೊಂದು ಹಗ್ಗವನ್ನು ಜೋಡಿಸಿಕೊಂಡು ಹೊಸದಾದ, ಚೂಪಾದ ಬಾಣ ಸಮೂಹದಿಂದ ನಿಮಿಷಮಾತ್ರದಲ್ಲಿ ದ್ರೋಣಾಚಾರ್ಯರನ್ನು ಮುಳುಗಿಸಿದನು.
ಮೂಲ ...{Loading}...
ಅವರ ಪಾದಾಂಬುಜಕೆ ಫಲುಗುಣ
ಕವಿಸಿದನು ಸರಳುಗಳ ಲೆಕ್ಕಿಸ
ದವಗಡಿಸಿ ಗುರುವೆಚ್ಚು ಕಡಿದನು ಗಾಂಡಿವದ ತಿರುವ
ಸವತಳಿಸಿ ಮಾರ್ತಿರುವಿನಲಿ ಸಂ
ತವಿಸಿಕೊಂಡರ್ಜುನನು ದ್ರೋಣನ
ನವ ನಿಶಿತ ಬಾಣೌಘದಲಿ ಹೂಳಿದನು ನಿಮಿಷದಲಿ ॥46॥
೦೪೭ ಸರಳ ಸವರಿ ...{Loading}...
ಸರಳ ಸವರಿ ಮಹಾಸ್ತ್ರಚಯದಲಿ
ನರನನೆಚ್ಚನು ನಮ್ಮ ಲಾಗಿನ
ಧುರವು ತಾನಿದು ದಿಟ್ಟನಹೆಯೋ ಪಾರ್ಥ ಲೇಸೆನುತ
ಸರಳು ಸುರಿಯಲು ಕೃಷ್ಣ ಪಾರ್ಥನ
ಕೆರಳಿದನು ಫಡ ಮರುಳೆ ಗುಣದಲಿ
ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಹೊಡೆದ ಬಾಣಗಳನ್ನು ದ್ರೋಣನು ಕತ್ತರಿಸಿ ಹಾಕಿ ಮಹಾಸ್ತ್ರಗಳಿಂದ ಅರ್ಜುನನನ್ನು ಹೊಡೆದನು. “ನಮ್ಮ ಯುದ್ಧದ ರೀತಿ ಇದು. ನೀನು ದಿಟ್ಟನಾಗಿದ್ದೀ ಅರ್ಜುನ ಒಳ್ಳೆಯದಾಯಿತು” ಎನ್ನುತ್ತಾ ಬಾಣಗಳನ್ನು ಸುರಿಯಲು ಕೃಷ್ಣನು ಅರ್ಜುನನ ಮೇಲೆ ಕೋಪಿಸಿಕೊಂಡು “ಅಯ್ಯೋ ಮರುಳೇ, ಒಳ್ಳೆಯ ಗುಣವನ್ನು ತೋರಿಸಿ ಗುರುವನ್ನು ಗೆಲ್ಲಲು ಪ್ರಯತ್ನಿಸು. ಹೋರಾಟದಿಂದ ಗುರುಗಳನ್ನು ನೀನು ಗೆಲ್ಲಬಲ್ಲೆಯಾ ? ಎಂದು ಹೇಳಿದ.
ಮೂಲ ...{Loading}...
ಸರಳ ಸವರಿ ಮಹಾಸ್ತ್ರಚಯದಲಿ
ನರನನೆಚ್ಚನು ನಮ್ಮ ಲಾಗಿನ
ಧುರವು ತಾನಿದು ದಿಟ್ಟನಹೆಯೋ ಪಾರ್ಥ ಲೇಸೆನುತ
ಸರಳು ಸುರಿಯಲು ಕೃಷ್ಣ ಪಾರ್ಥನ
ಕೆರಳಿದನು ಫಡ ಮರುಳೆ ಗುಣದಲಿ
ಗುರುವ ಗೆಲುವುದ ಮಾಡು ಗೆಲುವಾ ಕಾದಿ ನೀನೆಂದ ॥47॥
೦೪೮ ಇಳುಹಿದನು ಗಾಣ್ಡಿವವನುರು ...{Loading}...
ಇಳುಹಿದನು ಗಾಂಡಿವವನುರು ಬ
ತ್ತಳಿಕೆಯನು ಕಳಚಿದನು ರಥದಿಂ
ದಿಳಿದು ಮೈಯಿಕ್ಕಿದನು ದ್ರೋಣನ ಚರಣಕಮಲದಲಿ
ತಿಳಿಯಲೆಮ್ಮೈವರಿಗೆ ಜೀವನ
ದುಳಿವು ನಿನ್ನದು ನಿನ್ನ ಮಕ್ಕಳ
ಸಲಹು ಮೇಣ್ ಕೊಲ್ಲೆನುತ ನುಡಿದನು ವಿನಯದಲಿ ಪಾರ್ಥ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಂಡೀವ ಧನುಸ್ಸನ್ನು ಕೆಳಗಿಳಿಸಿ ಬತ್ತಳಿಕೆಯನ್ನು ಬಿಚ್ಚಿಟ್ಟು ರಥದಿಂದ ಇಳಿದು ದ್ರೋಣಾಚಾರ್ಯರ ಬಳಿಗೆ ಬಂದು ಅವರ ಪಾದಕಮಲಗಳಿಗೆ ನಮಸ್ಕರಿಸಿ “ಪಂಚಪಾಂಡವರಾದ ನಮಗೆ ನಿಮ್ಮಿಂದಲೇ ಜೀವ ಉಳಿಯಬೇಕಾಗಿದೆ. ನಿಮ್ಮ ಮಕ್ಕಳನ್ನು ಕಾಪಾಡು ಅಥವಾ ಕೊಲ್ಲು” ಎಂದು ಅರ್ಜುನ ವಿನಯದಿಂದ ನುಡಿದನು.
ಮೂಲ ...{Loading}...
ಇಳುಹಿದನು ಗಾಂಡಿವವನುರು ಬ
ತ್ತಳಿಕೆಯನು ಕಳಚಿದನು ರಥದಿಂ
ದಿಳಿದು ಮೈಯಿಕ್ಕಿದನು ದ್ರೋಣನ ಚರಣಕಮಲದಲಿ
ತಿಳಿಯಲೆಮ್ಮೈವರಿಗೆ ಜೀವನ
ದುಳಿವು ನಿನ್ನದು ನಿನ್ನ ಮಕ್ಕಳ
ಸಲಹು ಮೇಣ್ ಕೊಲ್ಲೆನುತ ನುಡಿದನು ವಿನಯದಲಿ ಪಾರ್ಥ ॥48॥
೦೪೯ ಆ ಶಿಶುತ್ವದಲೆಮ್ಮ ...{Loading}...
ಆ ಶಿಶುತ್ವದಲೆಮ್ಮ ಬೊಪ್ಪನು
ವಾಸವನ ಪುರಕೈದಿದನು ನಿ
ಮ್ಮಾಸೆಯಲಿ ಗಾಂಗೇಯರಿಂದವೆ ಹಿರಿದು ಬದುಕಿದೆವು
ಘಾಸಿಯಾದೆವು ಜೂಜಿನಲಿ ವನ
ವಾಸವನು ನೂಕಿದೆವು ಮೈಮರೆ
ದೀಸನೇರಿಸಿ ನುಡಿದ ನುಡಿಗಳ ಕಾಯಬೇಕೆಂದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾವು ಶಿಶುಗಳಾಗಿರುವಾಗಲೇ ನಮ್ಮ ತಂದೆ ಇಂದ್ರನ ಲೋಕಕ್ಕೆ ಹೋದನು. ನಾವು ನಿಮ್ಮ ಮತ್ತು ಭೀಷ್ಮರ ಭರವಸೆಯಿಂದ ಬದುಕಿದೆವು. ಜೂಜಿನಲ್ಲಿ ಅಪಾರವಾದ ನೋವನ್ನು ಅನುಭವಿಸಿದೆವು. ವನವಾಸವನ್ನು ಕಳೆದೆವು. ಮೈಮರೆದು ನಾನು ಮಾಡಿರುವ ಪ್ರತಿಜ್ಞೆಯ ಮಾತುಗಳನ್ನು ನೀವು ಉಳಿಸಿಕೊಡಬೇಕು” ಎಂದು ಅರ್ಜುನ ಪ್ರಾರ್ಥಿಸಿದ.
ಮೂಲ ...{Loading}...
ಆ ಶಿಶುತ್ವದಲೆಮ್ಮ ಬೊಪ್ಪನು
ವಾಸವನ ಪುರಕೈದಿದನು ನಿ
ಮ್ಮಾಸೆಯಲಿ ಗಾಂಗೇಯರಿಂದವೆ ಹಿರಿದು ಬದುಕಿದೆವು
ಘಾಸಿಯಾದೆವು ಜೂಜಿನಲಿ ವನ
ವಾಸವನು ನೂಕಿದೆವು ಮೈಮರೆ
ದೀಸನೇರಿಸಿ ನುಡಿದ ನುಡಿಗಳ ಕಾಯಬೇಕೆಂದ ॥49॥
೦೫೦ ನೀವು ಹೂಣಿಗರಾಗಿ ...{Loading}...
ನೀವು ಹೂಣಿಗರಾಗಿ ರಿಪುವನು
ಕಾವಡಿತ್ತಲೆ ತೊಲಗುವೆನು ಕರು
ಣಾವಲೋಕನವೆನ್ನ ಮೇಲುಂಟಾದಡಿದಿರಹೆನು
ಆವುದನು ನಮಗೇನು ಗತಿ ತಲೆ
ಗಾವ ಮತವೇ ನಿಮ್ಮ ಚಿತ್ತದೊ
ಳಾವ ಹದನೆನೆ ಮುಗುಳುನಗೆಯಲಿ ದ್ರೋಣನಿಂತೆಂದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗುರುಗಳೇ, ನೀವು ಪ್ರತಿಜ್ಞೆ ಮಾಡಿ ನಮ್ಮ ಶತ್ರುಗಳನ್ನು ರಕ್ಷಿಸುವುದಾದರೆ ನಾನು ಈ ಕ್ಷಣವೇ ರಣರಂಗದಿಂದ ಹೊರಟು ಹೋಗುತ್ತೇನೆ. ನನ್ನ ಮೇಲೆ ತಮ್ಮ ದಯೆಯ ನೋಟವಿರುವುದಾದರೆ ನಾನು ರಣರಂಗದಲ್ಲಿ ಎದುರಾಗಿ ಯುದ್ಧ ಮಾಡುತ್ತೇನೆ. ನನಗೆ ಯಾವುದಕ್ಕೆ ಅನುಮತಿ ? ನಮ್ಮ ಗತಿ ಏನು? ನಮ್ಮ ತಲೆಗಳನ್ನು ಕಾಪಾಡುವ ದೃಷ್ಟಿ ಉಂಟೊ ? ನಿಮ್ಮ ಮನಸ್ಸಿನಲ್ಲಿ ಏನಿದೆ ?” ಎಂದು ಕೇಳಲು ದ್ರೋಣಾಚಾರ್ಯನು ಮುಗುಳು ನಗೆಯಿಂದ ಹೀಗೆ ಹೇಳಿದ.
ಪದಾರ್ಥ (ಕ.ಗ.ಪ)
ಹೂಣಿಗರು-ಪ್ರತಿಜ್ಞೆ ಗೈದವರು,
ಮೂಲ ...{Loading}...
ನೀವು ಹೂಣಿಗರಾಗಿ ರಿಪುವನು
ಕಾವಡಿತ್ತಲೆ ತೊಲಗುವೆನು ಕರು
ಣಾವಲೋಕನವೆನ್ನ ಮೇಲುಂಟಾದಡಿದಿರಹೆನು
ಆವುದನು ನಮಗೇನು ಗತಿ ತಲೆ
ಗಾವ ಮತವೇ ನಿಮ್ಮ ಚಿತ್ತದೊ
ಳಾವ ಹದನೆನೆ ಮುಗುಳುನಗೆಯಲಿ ದ್ರೋಣನಿಂತೆಂದ ॥50॥
೦೫೧ ಕನ್ದನಶ್ವತ್ಥಾಮ ಹುಸಿಯೆನ ...{Loading}...
ಕಂದನಶ್ವತ್ಥಾಮ ಹುಸಿಯೆನ
ಗಿಂದು ಬೇಹ ಕುಮಾರ ನೀ ನಿ
ನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ
ತಂದೆ ನಿನಗಾ ಮುನಿಯಲಾಪೆನೆ
ಸಂದುದಾಡಿದ ಭಾಷೆ ನೀ ಹೋ
ಗೆಂದು ಗುಣದಲಿ ಬೀಳುಕೊಟ್ಟನು ದ್ರೋಣನರ್ಜುನನ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನಾ, ಅಶ್ವತ್ಥಾಮ ನನ್ನ ಮಗ ಎಂಬುದು ಸುಳ್ಳು. ನನಗೆ ಈ ದಿನ ವೀರನಾದ ಮಗ ಎಂದರೆ ನೀನೇ ; ನಿನ್ನಿಂದ ನನ್ನ ಕೀರ್ತಿ ಮೂರು ಲೋಕಗಳಲ್ಲಿ ಮೆರೆಯುತ್ತದೆ. ತಂದೆಯಾದ ನಾನು ನಿನ್ನಲ್ಲಿ ಕೋಪಿಸುತ್ತೇನೆಯೆ. ಆಡಿದ ಭಾಷೆ ನಡೆಯಿತು ಹೋಗು” ಎಂದು ಒಳ್ಳೆಯ ರೀತಿಯಿಂದ ದ್ರೋಣನು ಅರ್ಜುನನನ್ನು ಬೀಳುಕೊಟ್ಟನು.
ಮೂಲ ...{Loading}...
ಕಂದನಶ್ವತ್ಥಾಮ ಹುಸಿಯೆನ
ಗಿಂದು ಬೇಹ ಕುಮಾರ ನೀ ನಿ
ನ್ನಿಂದ ತನ್ನಯ ಕೀರ್ತಿ ಮೆರೆವುದು ಮೂರುಲೋಕದಲಿ
ತಂದೆ ನಿನಗಾ ಮುನಿಯಲಾಪೆನೆ
ಸಂದುದಾಡಿದ ಭಾಷೆ ನೀ ಹೋ
ಗೆಂದು ಗುಣದಲಿ ಬೀಳುಕೊಟ್ಟನು ದ್ರೋಣನರ್ಜುನನ ॥51॥
೦೫೨ ಬಲದೊಳಧಿಕರು ಭಟರೊಳತಿ ...{Loading}...
ಬಲದೊಳಧಿಕರು ಭಟರೊಳತಿ ವೆ
ಗ್ಗಳರು ಹೆಸರುಳ್ಳವರು ವಿದ್ಯಾ
ಕುಲ ತಪೋಧರ್ಮಾದಿ ಗುಣಿಗಳು ಧೈರ್ಯಸಂಯುತರು
ಹಲಬರಿಹುದುಸುರಿಲ್ಲದೊಡಲಿನ
ಚೆಲುವಿನಂತಿರೆ ನಮ್ಮ ಬಲ ಹರಿ
ಯೊಲವಿನವರಭ್ಯುದಯವನು ಧೃತರಾಷ್ಟ್ರ ಕೇಳ್ ಎಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟ್ರ, ನಮ್ಮ ಕಡೆಗೆ ಬಲದಲ್ಲಿ ಅತಿಶಯತೆಯನ್ನು ಹೊಂದಿರುವವರೂ, ಸೈನಿಕರಲ್ಲಿ ಖ್ಯಾತರಾದವರು, ವಿದ್ಯೆ, ಕುಲ, ತಪಸ್ಸು, ಧರ್ಮವೇ ಮೊದಲಾದ ಗುಣಗಳನ್ನು ಹೊಂದಿರುವವರೂ, ಗುಣವಂತರೂ, ಧೀರರೂ ಆದವರು ಅನೇಕರಿದ್ದಾರೆ. ಆದರೆ ಅವರೆಲ್ಲ ಉಸಿರಾಡದ ದೇಹದ ಚೆಲುವಿನಂತಿರುವವರು. ಹರಿಯ ಪ್ರೀತಿಯುಳ್ಳ ಅವರ ಏಳಿಗೆಯನ್ನು ಕೇಳು” ಎಂದು ಸಂಜಯ ಹೇಳಿದ.
ಮೂಲ ...{Loading}...
ಬಲದೊಳಧಿಕರು ಭಟರೊಳತಿ ವೆ
ಗ್ಗಳರು ಹೆಸರುಳ್ಳವರು ವಿದ್ಯಾ
ಕುಲ ತಪೋಧರ್ಮಾದಿ ಗುಣಿಗಳು ಧೈರ್ಯಸಂಯುತರು
ಹಲಬರಿಹುದುಸುರಿಲ್ಲದೊಡಲಿನ
ಚೆಲುವಿನಂತಿರೆ ನಮ್ಮ ಬಲ ಹರಿ
ಯೊಲವಿನವರಭ್ಯುದಯವನು ಧೃತರಾಷ್ಟ್ರ ಕೇಳೆಂದ ॥52॥