೦೦೦ ಸೂ ರಾಯ ...{Loading}...
ಸೂ. ರಾಯ ಕಟಕಾಚಾರ್ಯನಾ ಚಾ
ಪಾಯುಧಾಗ್ರಣಿ ಮೋಹಿದನು ಪ
ದ್ಮಾಯತ ವ್ಯೂಹವನು ಸೈನ್ಯದ ಜಾಣನಾ ದ್ರೋಣ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವ ಸೇನಾ ನಾಯಕನಾಗಿದ್ದ , ಧನುರ್ವಿದ್ಯೆಯಲ್ಲಿ ಅಗ್ರಗಣ್ಯನಾದ, ಸೈನ್ಯವನ್ನು ನಡೆಸುವುದರಲ್ಲಿ ಜಾಣನಾದ ದ್ರೋಣಾಚಾರ್ಯನು ಪದ್ಮವ್ಯೂಹವನ್ನು ರಚಿಸಿದನು.
ಪದಾರ್ಥ (ಕ.ಗ.ಪ)
ಕಟಕಾಚಾರ್ಯ-ಸೇನಾನಾಯಕ, ಮೋಹಿದನು-ರಚಿಸಿದನು, ಪದ್ಮಾಯತ-ಕಮಲದ ಆಕಾರ.
ಮೂಲ ...{Loading}...
ಸೂ. ರಾಯ ಕಟಕಾಚಾರ್ಯನಾ ಚಾ
ಪಾಯುಧಾಗ್ರಣಿ ಮೋಹಿದನು ಪ
ದ್ಮಾಯತ ವ್ಯೂಹವನು ಸೈನ್ಯದ ಜಾಣನಾ ದ್ರೋಣ
೦೦೧ ನೀನು ನೆರಹಿದ ...{Loading}...
ನೀನು ನೆರಹಿದ ಸುಕೃತ ಫಲವದ
ನೇನ ಹೇಳುವೆನಿತ್ತಲುಗ್ಗಡ
ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ
ಧ್ಯಾನವಿತ್ತಲು ರಾಗವತ್ತಲು
ಮೋನವಿತ್ತಲು ರಭಸವತ್ತಲು
ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳ್ ಎಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನೀನು ಸಂಪಾದಿಸಿದ ಪುಣ್ಯವನ್ನು ಎಷ್ಟೆಂದು ಹೇಳಲಿ? ಈ ಕಡೆಗೆ ಮಹಾಬಲವುಳ್ಳ ಸುಪ್ರತೀಕ ಗಜವೇ ಸತ್ತು ಹೋಯಿತು. ಶತ್ರು ಸೇನೆಯೂ ಸ್ವಲ್ಪ ಬಳಲಿತು. ಸೈನ್ಯದ ಈ ಭಾಗದಲ್ಲಿ (ಕೌರವ ಸೈನ್ಯದಲ್ಲಿ) ಧ್ಯಾನ (ನಿಶ್ಶಬ್ದ) ಆ ಭಾಗದಲ್ಲಿ (ಪಾಂಡವರ ಸೈನ್ಯದಲ್ಲಿ) ಸಂತೋಷ. ಕೌರವರ ಕಡೆಗೆ ಮೌನ, ಪಾಂಡವರ ಕಡೆಗೆ ಉತ್ಸಾಹ. ಕೌರವನ ಕಡೆಗೆ ನಷ್ಟ, ಪಾಂಡವರ ಕಡೆಗೆ ಅಭಿವೃದ್ಧಿಯಾಗುತ್ತಿದೆ" ಎಂದು ಸಂಜಯನು ಧೃತರಾಷ್ಟ್ರ,ನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ನೆರಹಿದ-ಸಂಗ್ರಹಿಸಿದ, ಸೊಪ್ಪಾದುದು-ನಿಶ್ಶಕ್ತವಾಯಿತು, ರಾಗ-ಪ್ರೀತಿ, ರಭಸ-ಉತ್ಸಾಹ, ಹಾನಿ-ನಷ್ಟ.
ಮೂಲ ...{Loading}...
ನೀನು ನೆರಹಿದ ಸುಕೃತ ಫಲವದ
ನೇನ ಹೇಳುವೆನಿತ್ತಲುಗ್ಗಡ
ದಾನೆ ಬಿದ್ದುದು ಕಾದಿ ನಸು ಸೊಪ್ಪಾದುದರಿಸೇನೆ
ಧ್ಯಾನವಿತ್ತಲು ರಾಗವತ್ತಲು
ಮೋನವಿತ್ತಲು ರಭಸವತ್ತಲು
ಹಾನಿಯಿತ್ತಲು ವೃದ್ಧಿಯತ್ತಲು ಭೂಪ ಕೇಳೆಂದ ॥1॥
೦೦೨ ಎತ್ತಲೊಲೆವುದು ಧರ್ಮಬಲ ...{Loading}...
ಎತ್ತಲೊಲೆವುದು ಧರ್ಮಬಲ ತಾ
ನತ್ತಲೊಲೆವುದು ದೈವ ದೈವವ
ದೆತ್ತಲೊಲೆದಿಹುದತ್ತ ವಿಜಯಶ್ರೀಯ ಕುಡಿನೋಟ
ಹೆತ್ತ ನಿನ್ನೊಡಲಿಂಗೆ ತಂಪಿನ
ತೆತ್ತಿಗನೊ ಮೇಣ್ ಬಹಳ ತಾಪದ
ಮುತ್ತಯನೊ ಕುರುರಾಯನೆಲೆ ಧೃತರಾಷ್ಟ್ರ ಕೇಳ್ ಎಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮದ ಶಕ್ತಿ ಯಾವ ಕಡೆಗೆ ಅಧಿಕವಾಗಿರುವುದೋ ಆ ಕಡೆಗೆ ದೈವದ ಕೃಪೆ ಉಂಟಾಗುತ್ತದೆ. ದೇವರು ಯಾರ ಕಡೆಗೆ ಒಲಿಯುವನೋ ಆ ಕಡೆಗೆ ವಿಜಯಲಕ್ಷ್ಮಿಯ ಕುಡಿನೋಟ ತಿರುಗುತ್ತದೆ. ಜನ್ಮವಿತ್ತ ನಿನ್ನ ದೇಹಕ್ಕೆ ಕೌರವನು ತಂಪನ್ನುಂಟು ಮಾಡುವನೋ ಅಥವಾ ತುಂಬ ತಾಪವನ್ನುಂಟು ಮಾಡುವ ಹಿರಿಯನೋ ಹೇಳಲಾಗದೆಂದು ಧೃತರಾಷ್ಟ್ರನಿಗೆ ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಒಲೆವುದು-ವಾಲುವುದೋ, ತೆತ್ತಿಗ-ನಂಟ
ಮೂಲ ...{Loading}...
ಎತ್ತಲೊಲೆವುದು ಧರ್ಮಬಲ ತಾ
ನತ್ತಲೊಲೆವುದು ದೈವ ದೈವವ
ದೆತ್ತಲೊಲೆದಿಹುದತ್ತ ವಿಜಯಶ್ರೀಯ ಕುಡಿನೋಟ
ಹೆತ್ತ ನಿನ್ನೊಡಲಿಂಗೆ ತಂಪಿನ
ತೆತ್ತಿಗನೊ ಮೇಣ್ ಬಹಳ ತಾಪದ
ಮುತ್ತಯನೊ ಕುರುರಾಯನೆಲೆ ಧೃತರಾಷ್ಟ್ರ ಕೇಳೆಂದ ॥2॥
೦೦೩ ಸಾಕು ಸಞ್ಜಯ ...{Loading}...
ಸಾಕು ಸಂಜಯ ನುಡಿಯ ಖಡ್ಗದ
ಲೇಕೆ ಗಂಟಲ ಕೊಯ್ವೆ ತಾನವಿ
ವೇಕದಲುಪಾರ್ಜಿಸಿದ ದುಷ್ಕೃತ ಫಲವೆ ತನಗಾಯ್ತು
ಸಾಕದಂತಿರಲಿನ್ನದೇಹರಿ
ಶೋಕಿಸುವೆನಿಲ್ಲಿಂದ ಮೇಲು
ದ್ರೇಕಿ ಕೌರವನೇನ ನೆಗಳಿದ ಹದನ ಹೇಳೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಂಜಯ ನಿನ್ನ ಮಾತನ್ನು ನಿಲ್ಲಿಸು, ಮಾತಿನ ಖಡ್ಗದಿಂದ ನನ್ನ ಕೊರಳನ್ನು ಕೊಯ್ಯ ಬೇಡ. ನಾನು ಅವಿವೇಕದಿಂದ ಸಂಪಾದಿಸಿದ ಪಾಪದ ಫಲವು ಈಗ ನನಗೆ ಒದಗಿದೆ. ಆ ವಿಚಾರ ಹಾಗಿರಲಿ, ಇನ್ನು ಅದೆಷ್ಟೆಂದು ಶೋಕಿಸಲಿ. ಇಲ್ಲಿಂದ ಮುಂದೆ ಉದ್ರೇಕಿಯಾದ ದುರ್ಯೋಧನ ಏನು ಮಾಡಿದ ಎಂಬ ವಿಚಾರವನ್ನು ಹೇಳು” ಎಂದು ಧೃತರಾಷ್ಟ್ರ ಸಂಜಯನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಉಪಾರ್ಜಿಸಿದ-ಸಂಪಾದಿಸಿದ, ಅದೇಹರಿ - ಅದೆಷ್ಟು
ಮೂಲ ...{Loading}...
ಸಾಕು ಸಂಜಯ ನುಡಿಯ ಖಡ್ಗದ
ಲೇಕೆ ಗಂಟಲ ಕೊಯ್ವೆ ತಾನವಿ
ವೇಕದಲುಪಾರ್ಜಿಸಿದ ದುಷ್ಕೃತ ಫಲವೆ ತನಗಾಯ್ತು
ಸಾಕದಂತಿರಲಿನ್ನದೇಹರಿ
ಶೋಕಿಸುವೆನಿಲ್ಲಿಂದ ಮೇಲು
ದ್ರೇಕಿ ಕೌರವನೇನ ನೆಗಳಿದ ಹದನ ಹೇಳೆಂದ ॥3॥
೦೦೪ ಚಿತ್ತವಿಸು ಧೃತರಾಷ್ಟ್ರ ...{Loading}...
ಚಿತ್ತವಿಸು ಧೃತರಾಷ್ಟ್ರ ಕೌರವ
ನಿತ್ತನಿರುಳೋಲಗವ ಮಂಜಿನ
ಮುತ್ತಿಗೆಯ ನಭದಂತೆ ಹೊಗೆದುದು ರಾಯನಾಸ್ಥಾನ
ನೆತ್ತಿ ಮುಸುಕಿನ ಕೈಯ ಗಲ್ಲದ
ಕುತ್ತದಲೆ ನೆಟ್ಟಾಲಿಗಳ ಚಲ
ಚಿತ್ತರಿದ್ದುದು ಸಕಲ ನಾಯಕವಾಡಿ ದುಗುಡದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಧೃತರಾಷ್ಟನೆ ಕೇಳು, ದುರ್ಯೋಧನನು ರಾತ್ರಿಯ ಹೊತ್ತಿನಲ್ಲಿ ಸಭೆಯನ್ನು ಏರ್ಪಡಿಸಿದನು. ಆಗ ರಾಜನ ಆಸ್ಥಾನವು ಮಂಜು ಮುತ್ತಿದ್ದ ಆಕಾಶದಂತೆ ಮಬ್ಬಾಯಿತು. ನೆತ್ತಿಯ ಮೇಲೆ ಮುಸುಕನ್ನು ಹಾಕಿಕೊಂಡು, ಕೈಗಳನ್ನು ಗಲ್ಲದ ಮೇಲಿಟ್ಟುಕೊಂಡು ಕಣ್ಣಿನ ನೋಟವನ್ನು ಒಂದೇ ಕಡೆಗೆ ಬೀರುತ್ತಾ, ಮನಸ್ಸು ಚಿಂತೆಯಿಂದ ಕೂಡಿ, ಎಲ್ಲ ನಾಯಕರುಗಳು ದುಃಖದಿಂದಿದ್ದರು.”
ಮೂಲ ...{Loading}...
ಚಿತ್ತವಿಸು ಧೃತರಾಷ್ಟ್ರ ಕೌರವ
ನಿತ್ತನಿರುಳೋಲಗವ ಮಂಜಿನ
ಮುತ್ತಿಗೆಯ ನಭದಂತೆ ಹೊಗೆದುದು ರಾಯನಾಸ್ಥಾನ
ನೆತ್ತಿ ಮುಸುಕಿನ ಕೈಯ ಗಲ್ಲದ
ಕುತ್ತದಲೆ ನೆಟ್ಟಾಲಿಗಳ ಚಲ
ಚಿತ್ತರಿದ್ದುದು ಸಕಲ ನಾಯಕವಾಡಿ ದುಗುಡದಲಿ ॥4॥
೦೦೫ ದುಗುಡವೇಕೈ ನಿಮಗೆ ...{Loading}...
ದುಗುಡವೇಕೈ ನಿಮಗೆ ಕರ್ಣಾ
ದಿಗಳು ನೀವಕ್ಕುಡರೆ ಬಲುಗಾ
ಳೆಗದೊಳಗೆ ಕೈಮಾಡಿ ನೊಂದಿರಿ ಕೊಂದಿರರಿಭಟರ
ಹಗೆಯ ಕಟ್ಟಲು ಕೊಟ್ಟ ಭಾಷೆಯ
ಬಿಗುಹು ಬೀತುದು ಗುರುಗಳಲಿ ನಂ
ಬುಗೆ ನಿರರ್ಥಕವಾಯ್ತೆನುತ ಕುರುರಾಯ ಬಿಸುಸುಯ್ದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀವೆಲ್ಲ ಏಕೆ ಇಷ್ಟು ದುಃಖದಿಂದಿದ್ದೀರಿ ? ಕರ್ಣನೇ ಮೊದಲಾದ ನೀವೆಲ್ಲರೂ ಶಕ್ತಿಹೀನರೇ, ಘೋರಯುದ್ಧದಲ್ಲಿ ಹೋರಾಟ ಮಾಡಿ ಶತ್ರುಗಳನ್ನು ಕೊಂದಿದ್ದೀರಿ. ಆದರೆ ಗುರುಗಳಾದ ದ್ರೋಣಾಚಾರ್ಯರು ಧರ್ಮರಾಯನನ್ನು ಕಟ್ಟಿ ಹಾಕುವುದಾಗಿ ಕೊಟ್ಟ ಮಾತಿನ ಬಿಗಿ ತಪ್ಪಿತು. ಗುರುಗಳನ್ನು ನಂಬಿದ್ದು ಅರ್ಥವಿಲ್ಲದಂತಾಯಿತು”. ಎಂದು ದುರ್ಯೋಧನನು ನಿಟ್ಟುಸಿರು ಬಿಟ್ಟನು.
ಪದಾರ್ಥ (ಕ.ಗ.ಪ)
ಕೈಮಾಡಿ-ಯುದ್ಧ ಮಾಡಿ, ಬೀತುದು-ವ್ಯಯವಾಯಿತು,
ಮೂಲ ...{Loading}...
ದುಗುಡವೇಕೈ ನಿಮಗೆ ಕರ್ಣಾ
ದಿಗಳು ನೀವಕ್ಕುಡರೆ ಬಲುಗಾ
ಳೆಗದೊಳಗೆ ಕೈಮಾಡಿ ನೊಂದಿರಿ ಕೊಂದಿರರಿಭಟರ
ಹಗೆಯ ಕಟ್ಟಲು ಕೊಟ್ಟ ಭಾಷೆಯ
ಬಿಗುಹು ಬೀತುದು ಗುರುಗಳಲಿ ನಂ
ಬುಗೆ ನಿರರ್ಥಕವಾಯ್ತೆನುತ ಕುರುರಾಯ ಬಿಸುಸುಯ್ದ ॥5॥
೦೦೬ ದ್ರೋಣ ಮನಗೊಣ್ಡಿರಿವಡಮ್ಬುಜ ...{Loading}...
ದ್ರೋಣ ಮನಗೊಂಡಿರಿವಡಂಬುಜ
ಪಾಣಿಯಿದಿರೇ ನಮ್ಮ ಭಾಗ್ಯದ
ಬಾಣಸಿಗ ವಿಧಿ ವಿಷವ ಬೆರಸಿದಡಾರು ಕಾವವರು
ಹೂಣಿ ಹೊಕ್ಕನು ಹಿಡಿದು ವೈರಿ
ಕ್ಷೋಣಿಪನ ತರುಬಿದನು ನಾವ
ಕ್ಷೀಣದುರಿತರು ಹಲುಬಿ ಮಾಡುವುದಾವುದುಂಟೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರು ಮನಸ್ಸು ಮಾಡಿ ಹೋರಾಡಿದರೆ ಕಮಲವನ್ನು ಧರಿಸಿದ ವಿಷ್ಣುವೇ ಎದುರು ನಿಂತು ಯುದ್ಧ ಮಾಡಲಾರನು. ನಮ್ಮ ಭಾಗ್ಯದ ಅಡಿಗೆಯನ್ನು ಮಾಡುವ ವಿಧಿಯು ವಿಷವನ್ನು ಬೆರೆಸಿದರೆ ಯಾರೇನು ಮಾಡಲು ಸಾಧ್ಯ ? ದ್ರೋಣರು ಪ್ರತಿಜ್ಞೆ ಮಾಡಿ ಯುದ್ಧರಂಗವನ್ನು ಹೊಕ್ಕು ಶತ್ರುರಾಜನಾದ ಧರ್ಮಜನನ್ನು ಎದುರಿಸಿದರು. ಆದರೆ ನಾವು ಪಾಪಿಗಳು ಈಗ ಹಲುಬಿ ಏನು ಮಾಡಲು ಸಾಧ್ಯ ಎಂದು ದುರ್ಯೋಧನ ತನ್ನ ಅಸಹಾಯಕತೆ ಮತ್ತು ಅಸಮಾಧಾನವನ್ನು ಪ್ರಕಟಿಸಿದ.
ಪದಾರ್ಥ (ಕ.ಗ.ಪ)
ಇರಿವಡೆ-ಹೋರಾಡಿದರೆ, ಅಂಬುಜ ಪಾಣಿ-ಕಮಲವನ್ನು ಕೈಯಲ್ಲಿ ಹಿಡಿದಿರುವವನು-ವಿಷ್ಣು, ಕ್ಷೋಣಿಪ-ರಾಜ, ತರುಬಿದನು-ಪ್ರತಿಭಟಿಸಿದನು, ಅಕ್ಷೀಣದುರಿತರು-ಪಾಪಿಗಳು, (ದುರಿತವು ಕ್ಷೀಣಿಸದೇ ಇರುವವರು)
ಮೂಲ ...{Loading}...
ದ್ರೋಣ ಮನಗೊಂಡಿರಿವಡಂಬುಜ
ಪಾಣಿಯಿದಿರೇ ನಮ್ಮ ಭಾಗ್ಯದ
ಬಾಣಸಿಗ ವಿಧಿ ವಿಷವ ಬೆರಸಿದಡಾರು ಕಾವವರು
ಹೂಣಿ ಹೊಕ್ಕನು ಹಿಡಿದು ವೈರಿ
ಕ್ಷೋಣಿಪನ ತರುಬಿದನು ನಾವ
ಕ್ಷೀಣದುರಿತರು ಹಲುಬಿ ಮಾಡುವುದಾವುದುಂಟೆಂದ ॥6॥
೦೦೭ ಬಲದೊಳಗೆ ಹೆಸರುಳ್ಳವರು ...{Loading}...
ಬಲದೊಳಗೆ ಹೆಸರುಳ್ಳವರು ಮು
ಮ್ಮುಳಿತವಾಯಿತ್ತಾನೆ ಕುದುರೆಗ
ಳಳಿದುದಕೆ ಕಡೆಯಿಲ್ಲ ಪವನಜ ಪಾರ್ಥರುಬ್ಬಟೆಯ
ನಿಲಿಸುವಾಪತ್ತಿಗರು ನಮಗಿ
ಲ್ಲಳಲಿ ಮಾಡುವುದೇನೆನುತ ನೃಪ
ತಿಲಕ ಬೇಸರ ನುಡಿಯೆ ಬಳಿಕಿಂತೆಂದನಾ ದ್ರೋಣ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪರಾಕ್ರಮಿಗಳೆಂದು ಹೆಸರನ್ನು ಪಡೆದವರು ಹೀನಾಯವಾದ ಸಾವನ್ನು ಕಂಡರು. ನಮ್ಮ ಕಡೆ ಸತ್ತ ಆನೆ, ಕುದುರೆಗಳ ಸಂಖ್ಯೆ ಗಣನೆಗೆ ಮೀರಿದ್ದಾಯಿತು. ಅರ್ಜುನ ಮತ್ತು ಭೀಮಸೇನರ ಉರುಬನ್ನು ನಿಲ್ಲಿಸುವ ಆಪದ್ಬಾಂಧವರು ನಮ್ಮಲ್ಲಿರಲಿಲ್ಲ. ನಾವು ದುಃಖಿಸುವುದರಿಂದ ಯಾವ ಪ್ರಯೋಜನವೂ ಇಲ್ಲ” ಎಂದು ರಾಜತಿಲಕನೆನಿಸಿಕೊಂಡ ದುರ್ಯೋಧನನು ಬೇಸರದ ಮಾತುಗಳನ್ನಾಡಿದಾಗ ದ್ರೋಣನು ಹೀಗೆಂದ.
ಪದಾರ್ಥ (ಕ.ಗ.ಪ)
ಮುಮ್ಮುಳಿತ-ಹೀನಾಯವಾದ ಸಾವು, ಆಪತ್ತಿಗರು-ತೊಂದರೆಯನ್ನು ನಿವಾರಿಸುವವರು,
ಮೂಲ ...{Loading}...
ಬಲದೊಳಗೆ ಹೆಸರುಳ್ಳವರು ಮು
ಮ್ಮುಳಿತವಾಯಿತ್ತಾನೆ ಕುದುರೆಗ
ಳಳಿದುದಕೆ ಕಡೆಯಿಲ್ಲ ಪವನಜ ಪಾರ್ಥರುಬ್ಬಟೆಯ
ನಿಲಿಸುವಾಪತ್ತಿಗರು ನಮಗಿ
ಲ್ಲಳಲಿ ಮಾಡುವುದೇನೆನುತ ನೃಪ
ತಿಲಕ ಬೇಸರ ನುಡಿಯೆ ಬಳಿಕಿಂತೆಂದನಾ ದ್ರೋಣ ॥7॥
೦೦೮ ಪರಮ ಗರುಡೋದ್ಗಾರ ...{Loading}...
ಪರಮ ಗರುಡೋದ್ಗಾರ ಮಣಿಯನು
ಗರಳ ಸುಡುವುದೆ ಕೃಷ್ಣರಾಯನ
ಕರುಣ ಕವಚವನೊಡೆಯಲಾಪವೆ ಎಮ್ಮ ಕೈದುಗಳು
ಅರಸ ಮರುಳೈ ಧರ್ಮಪುತ್ರನ
ಬೆರಸಿ ತುಡುಕಲು ತಡೆದನರಿಯಾ
ಮುರಹರನ ಮೈದುನನು ಬಳಿಕೆಮ್ಮಳವೆ ಹೇಳೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅತ್ಯಂತ ಶ್ರೇಷ್ಠವಾದ ಗರುಡ ಮಣಿಯನ್ನು ವಿಷವು ಸುಡುವುದೆ. ಶ್ರೀಕೃಷ್ಣನ ದಯೆಯ ಕವಚವನ್ನು ಒಡೆದು ಹಾಕಲು ನಮ್ಮಲ್ಲಿರುವ ಆಯುಧಗಳಿಗೆ ಸಾಧ್ಯವೆ. ರಾಜನಾದ ದುರ್ಯೋಧನನೆ, ನೀನು ವಿವೇಕಯುತವಾಗಿ ವಿಚಾರವನ್ನು ಪರಾಮರ್ಶಿಸಿಲ್ಲ. ಧರ್ಮರಾಯನನ್ನು ಹಿಡಿಯಲು ಪ್ರಯತ್ನಿಸಿದಾಗ ಕೃಷ್ಣನ ಮೈದುನನಾದ ಅರ್ಜುನನು ಹೇಗೆ ನಮ್ಮನ್ನು ಸೋಲಿಸಿದನೆಂಬುದನ್ನು ನೀನು ನೋಡಲಿಲ್ಲವೆ? ಹೀಗೆಂದ ಮೇಲೆ ನಮ್ಮ ಶಕ್ತಿಗೆ ಇದು ಸಾಧ್ಯವಾಗಬಹುದಾದ ಕೆಲಸವೆ? ಹೇಳು” ಎಂದು ದ್ರೋಣರು ಹೇಳಿದರು.
ಪದಾರ್ಥ (ಕ.ಗ.ಪ)
ಗರಳ-ವಿಷ, ಕೈದು-ಆಯುಧ, ಅಳವೆ-ಅಳತೆಯೆ, ಸಾಧ್ಯವೆ.
ಮೂಲ ...{Loading}...
ಪರಮ ಗರುಡೋದ್ಗಾರ ಮಣಿಯನು
ಗರಳ ಸುಡುವುದೆ ಕೃಷ್ಣರಾಯನ
ಕರುಣ ಕವಚವನೊಡೆಯಲಾಪವೆ ಎಮ್ಮ ಕೈದುಗಳು
ಅರಸ ಮರುಳೈ ಧರ್ಮಪುತ್ರನ
ಬೆರಸಿ ತುಡುಕಲು ತಡೆದನರಿಯಾ
ಮುರಹರನ ಮೈದುನನು ಬಳಿಕೆಮ್ಮಳವೆ ಹೇಳೆಂದ ॥8॥
೦೦೯ ನಾಳೆ ಫಲುಗುಣ ...{Loading}...
ನಾಳೆ ಫಲುಗುಣ ತಪ್ಪಿದರೆ ಭೂ
ಪಾಲಕನ ಕಟ್ಟುವೆನು ರಣದಲಿ
ಶೂಲಿಯಡ್ಡೈಸಿದರೆ ಹಿಡಿವೆನು ಚಿಂತೆ ಬೇಡಿದಕೆ
ಕೇಳು ಪದ್ಮವ್ಯೂಹದಲಿ ಹೊ
ಕ್ಕಾಳು ಮರಳಿದಡಸ್ತ್ರವಿದ್ಯಾ
ಭಾಳಲೋಚನನೆಂಬ ಬಿರುದನು ಬಿಟ್ಟೆ ನಾನೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾಳೆಯ ದಿನ ಅರ್ಜುನನನ್ನು ತಪ್ಪಿಸಿದರೆ ಧರ್ಮರಾಯನನ್ನು ರಣರಂಗದಲ್ಲಿ ಕಟ್ಟಿ ಹಾಕುತ್ತೇನೆ. ಶೂಲಪಾಣಿಯಾದ ಶಿವನೇ ಅಡ್ಡ ಬಂದರೂ ಧರ್ಮರಾಯನನ್ನು ಹಿಡಿಯುತ್ತೇನೆ, ಚಿಂತಿಸಬೇಡ. ಪದ್ಮವ್ಯೂಹದೊಳಗೆ ಪ್ರವೇಶಿಸಿದ ಸೈನಿಕ ಅಲ್ಲಿಂದ ಹಿಂದಿರುಗಿದರೆ. ‘ಅಸ್ತ್ರ ವಿದ್ಯೆಯಲ್ಲಿ ಶಿವ’ ಎಂದು ಪಡೆದಿರುವ ಬಿರುದನ್ನು ತ್ಯಜಿಸುತ್ತೇನೆ.É” ಎಂದು ದ್ರೋಣರು ಹೇಳಿದರು.
ಮೂಲ ...{Loading}...
ನಾಳೆ ಫಲುಗುಣ ತಪ್ಪಿದರೆ ಭೂ
ಪಾಲಕನ ಕಟ್ಟುವೆನು ರಣದಲಿ
ಶೂಲಿಯಡ್ಡೈಸಿದರೆ ಹಿಡಿವೆನು ಚಿಂತೆ ಬೇಡಿದಕೆ
ಕೇಳು ಪದ್ಮವ್ಯೂಹದಲಿ ಹೊ
ಕ್ಕಾಳು ಮರಳಿದಡಸ್ತ್ರವಿದ್ಯಾ
ಭಾಳಲೋಚನನೆಂಬ ಬಿರುದನು ಬಿಟ್ಟೆ ನಾನೆಂದ ॥9॥
೦೧೦ ಒಳ್ಳಿತಿದು ಕಡುಭಾಷೆ ...{Loading}...
ಒಳ್ಳಿತಿದು ಕಡುಭಾಷೆ ನಾಳಿನ
ಗೆಲ್ಲವೇ ಗೆಲವರ್ಜುನನು ಹೊ
ಕ್ಕಲ್ಲಿ ಹೊಗುವೆವು ತರುಬಿ ಕಾದುವೆವೆಮ್ಮ ಕಳನೊಳಗೆ
ಅಲ್ಲಿ ನೀನೊಲಿದಂತೆ ಮಾಡಿ
ನ್ನೆಲ್ಲವೇತಕೆಯೆನುತ ಸಾಹಸ
ಮಲ್ಲರೆದ್ದರು ವೀರ ಸಮಸಪ್ತಕರು ಗರ್ಜಿಸುತ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದ್ರೋಣರ ಭಾಷೆ ಚೆನ್ನಾಗಿದೆ, ನಾಳೆಯ ದಿನದ ಗೆಲವೇ ನಮ್ಮ ಸಂಪೂರ್ಣ ಗೆಲವು, ಅರ್ಜುನನು ಎಲ್ಲಿ ಯುದ್ಧ ಮಾಡುವನೋ ಅಲ್ಲಿಗೆ ನಾವು ಅವನನ್ನು ಅಟ್ಟಿಸಿಕೊಂಡು ಹೋಗಿ ನಮ್ಮ ಜೊತೆ ಯುದ್ಧರಂಗದಲ್ಲಿ ಕಾದುವಂತೆ ಮಾಡುತ್ತೇವೆ. ಪದ್ಮವ್ಯೂಹದಲ್ಲಿ ನೀವು ಇಷ್ಟ ಬಂದಂತೆ ಯುದ್ಧ ಮಾಡಿ, ಇನ್ನು ಬೇರೆಲ್ಲ ವಿಚಾರಗಳು ಏಕೆ ಎನ್ನುತ್ತ ಸಾಹಸಮಲ್ಲರೆನಿಸಿದ ಸಂಸಪ್ತಕರು ಹೇಳಿ ಎದ್ದರು.
ಪದಾರ್ಥ (ಕ.ಗ.ಪ)
ಕಡು ಭಾಷೆ-ದಿಟ್ಟ ನುಡಿ, ತರುಬಿ-ಅಡ್ಡಗಟ್ಟಿ, ಕಾದುವೆವು-ಯುದ್ಧ ಮಾಡುತ್ತೇವೆ, ಕಳ-ರಣರಂಗ, ಎಲ್ಲವೇತಕೆ-ಇತರ ಮಾತುಗಳು ಬೇಡ
ಮೂಲ ...{Loading}...
ಒಳ್ಳಿತಿದು ಕಡುಭಾಷೆ ನಾಳಿನ
ಗೆಲ್ಲವೇ ಗೆಲವರ್ಜುನನು ಹೊ
ಕ್ಕಲ್ಲಿ ಹೊಗುವೆವು ತರುಬಿ ಕಾದುವೆವೆಮ್ಮ ಕಳನೊಳಗೆ
ಅಲ್ಲಿ ನೀನೊಲಿದಂತೆ ಮಾಡಿ
ನ್ನೆಲ್ಲವೇತಕೆಯೆನುತ ಸಾಹಸ
ಮಲ್ಲರೆದ್ದರು ವೀರ ಸಮಸಪ್ತಕರು ಗರ್ಜಿಸುತ ॥10॥
೦೧೧ ಪೂತು ಪಾಯಿಕು ...{Loading}...
ಪೂತು ಪಾಯಿಕು ತತ್ತ ಹೊತ್ತಿನೊ
ಳಾತುಕೊಂಬವರಾರು ಪಾರ್ಥಿವ
ಜಾತಿಯಲಿ ರಣದಿಟ್ಟರುಂಟೇ ನಿಮ್ಮ ಹೋಲಿಸಲು
ಸೋತುದರಿಬಲ ಹೋಗೆನುತ ಮು
ಯ್ಯಾಂತು ಮನ್ನಿಸಿ ಹೊನ್ನ ಬಟ್ಟಲೊ
ಳಾತಗಳಿಗೊಲಿದಿತ್ತನೈ ಕರ್ಪುರದ ವೀಳೆಯವ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಲೇ, ಸರಿಯಾದ ಸಮಯದಲ್ಲಿ ಹೀಗೆ ಹೊಣೆಯನ್ನು ಹೊತ್ತುಕೊಳ್ಳುವವರು ಯಾರಿದ್ದಾರೆ. ಪಾಂಡವ ಸೈನ್ಯದಲ್ಲಿ ನಿಮ್ಮನ್ನು ಹೋಲಿಸಲು ಬೇರೆ ಸಂಗ್ರಾಮ ವೀರರುಂಟೆ. ಇನ್ನು ಶತ್ರು ಸೈನ್ಯ ಸೋತು ಹೋಯಿತು. ಹೋಗು ! ಎನ್ನುತ್ತ ಉಡುಗೊರೆಗಳನ್ನಿತ್ತು ಚಿನ್ನದ ಹರಿವಾಣದಲ್ಲಿ ಕರ್ಪೂರ ವೀಳಯಗಳನ್ನು ಕೊಟ್ಟು ದುರ್ಯೋಧನ ಸಮಸಪ್ತಕರನ್ನು ಗೌರವಿಸಿದ.
ಪದಾರ್ಥ (ಕ.ಗ.ಪ)
ಪೂತು-ಭಲೆ, ಪಾಯಿಕು-ಭೇಷ್, ಪಾರ್ಥಿವರು-ಪೃಥೆಯ ಮಕ್ಕಳು-ಕುಂತಿಯ ಮಕ್ಕಳು-ಪಾಂಡವರು, ದಿಟ್ಟರು-ಧೀರರು, ಮುಯ್ಯಾಂತು-ಉಡುಗೊರೆಗಳನ್ನು ನೀಡಿ ಮನ್ನಿಸಿ-ಗೌರವಿಸಿ
ಮೂಲ ...{Loading}...
ಪೂತು ಪಾಯಿಕು ತತ್ತ ಹೊತ್ತಿನೊ
ಳಾತುಕೊಂಬವರಾರು ಪಾರ್ಥಿವ
ಜಾತಿಯಲಿ ರಣದಿಟ್ಟರುಂಟೇ ನಿಮ್ಮ ಹೋಲಿಸಲು
ಸೋತುದರಿಬಲ ಹೋಗೆನುತ ಮು
ಯ್ಯಾಂತು ಮನ್ನಿಸಿ ಹೊನ್ನ ಬಟ್ಟಲೊ
ಳಾತಗಳಿಗೊಲಿದಿತ್ತನೈ ಕರ್ಪುರದ ವೀಳೆಯವ ॥11॥
೦೧೨ ಹರೆದುದೋಲಗವಿತ್ತ ಭುವನದೊ ...{Loading}...
ಹರೆದುದೋಲಗವಿತ್ತ ಭುವನದೊ
ಳಿರುಳಡವಿಗಡಿತಕ್ಕೆ ಹರಿದವು
ಕಿರಣ ತೆತ್ತಿದವಭ್ರದಲಿ ತಾರಕೆಯ ತೇರುಗಳು
ಹರಿವ ಮಂಜಿನ ನದಿಯ ಹೂಳ್ದವು
ಸರಸವಾಯಿತು ಗಗನತಳ ತಾ
ವರೆಯ ಸಖ ನಿಜರಥವ ನೂಕಿದನುದಯ ಪರ್ವತಕೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಭೆಯು ಮುಗಿಯಿತು. ಭೂಮಿಯಲ್ಲಿ ರಾತ್ರಿಯೆಂಬ ಕಾಡನ್ನು ಕಡಿಯಲು ಉಷೆಯ ಕಿರಣಗಳು ಆಕಾಶವನ್ನು ವ್ಯಾಪಿಸಿಕೊಂಡವು. ನಕ್ಷತ್ರಗಳ ತೇರುಗಳು ಹೋಗುತ್ತ, ಹರಿಯುತ್ತಿದ್ದ ಮಬ್ಬಿನ ಕತ್ತಲೆಯನ್ನು ನಾಶಮಾಡಿದವು. ಆಕಾಶವು ಪ್ರಸನ್ನವಾಯಿತು. ತಾವರೆಯ ಮಿತ್ರನಾದ ಸೂರ್ಯ ಉದಯ ಪರ್ವತಕ್ಕೆ ತನ್ನ ರಥವನ್ನು ನಡೆಸಿದ. (ಬೆಳಗಾಯಿತು)
ಪದಾರ್ಥ (ಕ.ಗ.ಪ)
ಹರೆದುದು-ಮುಗಿಯಿತು, ಓಲಗ-ಸಭೆ, ತೆತ್ತಿದವು-ತುಂಬಿಕೊಂಡವು, ಅಭ್ರ-ಆಕಾಶ, ತಾವರೆಯ ಸಖ-ಕಮಲಮಿತ್ರ-ಸೂರ್ಯ
ಮೂಲ ...{Loading}...
ಹರೆದುದೋಲಗವಿತ್ತ ಭುವನದೊ
ಳಿರುಳಡವಿಗಡಿತಕ್ಕೆ ಹರಿದವು
ಕಿರಣ ತೆತ್ತಿದವಭ್ರದಲಿ ತಾರಕೆಯ ತೇರುಗಳು
ಹರಿವ ಮಂಜಿನ ನದಿಯ ಹೂಳ್ದವು
ಸರಸವಾಯಿತು ಗಗನತಳ ತಾ
ವರೆಯ ಸಖ ನಿಜರಥವ ನೂಕಿದನುದಯ ಪರ್ವತಕೆ ॥12॥
೦೧೩ ಕೆದರಿದವು ನಿಸ್ಸಾಳ ...{Loading}...
ಕೆದರಿದವು ನಿಸ್ಸಾಳ ಬರ ಸಿಡಿ
ಲದುಭುತ ಧ್ವನಿಯಲಿ ನಿರಂತರ
ವೊದರಿ ಬಯ್ದವು ಕಹಳೆ ಬಿರುದಾವಳಿಯಲತಿರಥರ
ಕದುಬಿದವು ತಂಬಟದ ದನಿ ದಿಗು
ಸದನವನು ಬಲು ಬೊಬ್ಬೆಯಲಿ ನೆಲ
ನದಿರೆ ನಡೆದುದು ಸೇನೆ ಕಲಶೋದ್ಭವನ ನೇಮದಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಸ್ಸಾಳವೇ ಮೊದಲಾದ ರಣವಾದ್ಯಗಳು ಬರಸಿಡಿಲಿನಂತೆ ಭಯಂಕರವಾಗಿ ಶಬ್ದ ಮಾಡುತ್ತಾ ಶತ್ರುಗಳನ್ನು ಬಯ್ಯುವ ಹಾಗೆ ಧ್ವನಿ ಗೈಯುತ್ತಿದ್ದವು. ಕಹಳೆಗಳು ಅತಿರಥರ ಬಿರುದಾವಳಿಗಳನ್ನು ಹೊಗಳಿ ಘೋಷಿಸುವ ಹಾಗೆ ಧ್ವನಿ ಗೈದವು. ತಮಟೆಯ ಧ್ವನಿಯು ದಿಗಂತವನ್ನು ಅಪ್ಪಳಿಸಿತು. ದ್ರೋಣನ ಆಜ್ಞೆಯಂತೆ, ಬಲು ಬೊಬ್ಬೆಯಲ್ಲಿ ನೆಲವೇ ಅದಿರುವಂತೆ ಸೈನ್ಯ ನಡೆಯಿತು.
ಪದಾರ್ಥ (ಕ.ಗ.ಪ)
ಕದುಬು-ಒತ್ತು, ತಂಬಟ-ತಮಟೆ, ಕಲಶೋದ್ಭವ-ದ್ರೋಣ
ಮೂಲ ...{Loading}...
ಕೆದರಿದವು ನಿಸ್ಸಾಳ ಬರ ಸಿಡಿ
ಲದುಭುತ ಧ್ವನಿಯಲಿ ನಿರಂತರ
ವೊದರಿ ಬಯ್ದವು ಕಹಳೆ ಬಿರುದಾವಳಿಯಲತಿರಥರ
ಕದುಬಿದವು ತಂಬಟದ ದನಿ ದಿಗು
ಸದನವನು ಬಲು ಬೊಬ್ಬೆಯಲಿ ನೆಲ
ನದಿರೆ ನಡೆದುದು ಸೇನೆ ಕಲಶೋದ್ಭವನ ನೇಮದಲಿ ॥13॥
೦೧೪ ಉಲಿದು ಸಮಸಪ್ತಕರು ...{Loading}...
ಉಲಿದು ಸಮಸಪ್ತಕರು ತಮ್ಮಯ
ಕಳನ ಗೆಲಿದರು ಚಾತುರಂಗದ
ದಳದ ತೆರಳಿಕೆ ತೆಕ್ಕೆ ಮಿಗೆ ಕುರುಸೇನೆ ನಡೆತಂದು
ಕಳನ ವೆಂಠಣಿಸಿದವು ರಾಯನ
ಕೆಲಬಲದ ಸುಯಿಧಾನದಲಿ ರಿಪು
ವಳಯ ಧೂಳೀಪಟನು ಹೊಕ್ಕನು ರಣವನಾ ದ್ರೋಣ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸಪ್ತಕರು ಸಂತೋಷದ ಧ್ವನಿಮಾಡುತ್ತಾ ತಾವು ಯುದ್ಧ ಮಾಡಬೇಕಾದ ಸ್ಥಳವನ್ನು ಸೇರಿದರು. ಚತುರಂಗ ಬಲವೂ ಯುದ್ಧ ರಂಗದೆಡೆ ನಡೆದು ಯುದ್ಧ ರಂಗವನ್ನು ಸುತ್ತುವರಿದವು. ದುರ್ಯೋಧನನ ಎಡಬಲದವರ ರಕ್ಷಣೆಯಲ್ಲಿ ಶತ್ರುಸೈನ್ಯವನ್ನು ಧೂಳಿಪಟಮಾಡವಂತಹ ದ್ರೋಣಾಚಾರ್ಯ ರಣಭೂಮಿಯನ್ನು ಪ್ರವೇಶಿಸಿದ.
ಪದಾರ್ಥ (ಕ.ಗ.ಪ)
ಉಲಿದು-ಕೂಗಿ, ಕಳನ-ಯುದ್ಧವನ್ನು, ವೆಂಠಣಿಸು-ಸುತ್ತುವರಿ, ಸುಯಿಧಾನ-ರಕ್ಷಣೆ, ಧೂಳಿಪಟ-ನಾಶ
ಮೂಲ ...{Loading}...
ಉಲಿದು ಸಮಸಪ್ತಕರು ತಮ್ಮಯ
ಕಳನ ಗೆಲಿದರು ಚಾತುರಂಗದ
ದಳದ ತೆರಳಿಕೆ ತೆಕ್ಕೆ ಮಿಗೆ ಕುರುಸೇನೆ ನಡೆತಂದು
ಕಳನ ವೆಂಠಣಿಸಿದವು ರಾಯನ
ಕೆಲಬಲದ ಸುಯಿಧಾನದಲಿ ರಿಪು
ವಳಯ ಧೂಳೀಪಟನು ಹೊಕ್ಕನು ರಣವನಾ ದ್ರೋಣ ॥14॥
೦೧೫ ನೆರೆದ ನಿಜಸೇನಾಧಿಪರ ...{Loading}...
ನೆರೆದ ನಿಜಸೇನಾಧಿಪರ ಸಂ
ವರಣೆಗಳ ನೋಡಿದನು ನೀಡಿದ
ನರಿಬಿರುದ ಮಂಡಳಿಕರಿಗೆ ಕಾಳೆಗದ ವೀಳೆಯವ
ಹರಿಗೆ ಹಲಗೆ ಕೃಪಾಣು ತೋಮರ
ಪರಶು ಕಕ್ಕಡೆ ಕೊಂತ ಮುದ್ಗರ
ಸುರಗಿಯತಿಬಳ ಪಾಯ್ದಳವನಿರಿಸಿದನು ವಳಯದಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು, ಅಲ್ಲಿ ಸೇರಿದ್ದ ತನ್ನ ಸೇನಾಧಿಕಾರಿಗಳ ಸಿದ್ಧತೆಗಳನ್ನು ನೋಡಿದನು. ಶತ್ರು ಸೈನ್ಯವಿನಾಶದ ಬಿರುದುಗಳನ್ನು ಹೊಂದಿದ್ದ ಮಂಡಳಿಕರಿಗೆ ರಣವೀಳ್ಯವನ್ನು ನೀಡಿದ. ಹರಿಗೆ, ಹಲಗೆ, ಕೃಪಾಣು, ತೋಮರ, ಕೊಡಲಿ, ಕಕ್ಕಡೆ, ಕೊಂತ, ಮುದ್ಗರ, ಸುರಗಿಯೇ ಮೊದಲಾದ ಆಯುಧಗಳನ್ನು ಹಿಡಿದ ಕಾಲಾಳುಗಳನ್ನು ದ್ರೋಣನು ವರ್ತುಲಾಕಾರದಲ್ಲಿ ನಿಲ್ಲಿಸಿದನು.
ಪದಾರ್ಥ (ಕ.ಗ.ಪ)
ಸಂವರಣೆ-ಸಿದ್ಧತೆ, ಕೃಪಾಣು-ಚಿಕ್ಕಖಡ್ಗ, ಪರಶು-ಕೊಡಲಿ, ಕೊಂತ-ಈಟಿ, ಸುರಗಿ-ಕತ್ತಿ, ಪಾಯ್ದಳ-ಕಾಲಾಳು, ವಳಯ-ವರ್ತುಲ
ಮೂಲ ...{Loading}...
ನೆರೆದ ನಿಜಸೇನಾಧಿಪರ ಸಂ
ವರಣೆಗಳ ನೋಡಿದನು ನೀಡಿದ
ನರಿಬಿರುದ ಮಂಡಳಿಕರಿಗೆ ಕಾಳೆಗದ ವೀಳೆಯವ
ಹರಿಗೆ ಹಲಗೆ ಕೃಪಾಣು ತೋಮರ
ಪರಶು ಕಕ್ಕಡೆ ಕೊಂತ ಮುದ್ಗರ
ಸುರಗಿಯತಿಬಳ ಪಾಯ್ದಳವನಿರಿಸಿದನು ವಳಯದಲಿ ॥15॥
೦೧೬ ಎಸೆಳೆಸಳು ಮಿಗೆ ...{Loading}...
ಎಸೆಳೆಸಳು ಮಿಗೆ ಸರಿಸದಲಿ ಜೋ
ಡಿಸಿದನವನೀಪಾಲರನು ತ
ದ್ಬಿಸಜ ಕರ್ಣಿಕೆಯೊಡ್ಡಿನಲಿ ಬಲಿದನು ಸುಯೋಧನನ
ಪಸರಿಸಿತು ಕೌರವಕುಮಾರ
ಪ್ರಸರ ಕೇಸರವಾಯ್ತು ಮೃತ್ಯುವಿ
ನೊಸಗೆಗೆತ್ತಿದ ಗುಡಿಗಳೆನೆ ತಳಿತವು ಪತಾಕೆಗಳು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಮಲದ ಹೂವಿನಲ್ಲಿ ಹೇಗೆ ಒಂದೊಂದು ದಳವು ಮತ್ತೊಂದು ದಳಕ್ಕೆ ಪೂರಕವಾಗಿರುವುದೋ ಆ ರೀತಿಯಲ್ಲಿ ದ್ರೋಣರು ರಾಜಾಧಿರಾಜರಲ್ಲಿ ಒಬ್ಬೊಬ್ಬರನ್ನೂ ಪದ್ಮವ್ಯೂಹ ಏರ್ಪಡುವ ಹಾಗೆ ನಿಲ್ಲಿಸಿ ಆ ಕಮಲದ ಹೂವಿನ ನಡು ಭಾಗದ ಬೀಜಕೋಶದ ಸ್ಥಾನದಲ್ಲಿ ದುರ್ಯೋಧನನನ್ನು ನಿಲ್ಲಿಸಿದನು. ಕೌರವರ ಮಕ್ಕಳು ಹೂವಿನ ಕೇಸರಗಳ ಸ್ಥಾನದಲ್ಲಿ ನಿಂತರು. ಮೃತ್ಯು ದೇವತೆಯ ಸಂತೋಷಕ್ಕೆ ಎತ್ತಿದ ಬಾವುಟಗಳೋ ಎನ್ನುವಂತೆ ಸೇನೆಯ ಪತಾಕೆಗಳು ಅರಳಿದವು.
ಪದಾರ್ಥ (ಕ.ಗ.ಪ)
ಬಿಸಜ-ಕಮಲ, ಕರ್ಣಿಕೆ-ಬೀಜ ಕೋಶ, ಪ್ರಸರ-ಗುಂಪು, ಒಸಗೆ-ಹಬ್ಬ,
ಮೂಲ ...{Loading}...
ಎಸೆಳೆಸಳು ಮಿಗೆ ಸರಿಸದಲಿ ಜೋ
ಡಿಸಿದನವನೀಪಾಲರನು ತ
ದ್ಬಿಸಜ ಕರ್ಣಿಕೆಯೊಡ್ಡಿನಲಿ ಬಲಿದನು ಸುಯೋಧನನ
ಪಸರಿಸಿತು ಕೌರವಕುಮಾರ
ಪ್ರಸರ ಕೇಸರವಾಯ್ತು ಮೃತ್ಯುವಿ
ನೊಸಗೆಗೆತ್ತಿದ ಗುಡಿಗಳೆನೆ ತಳಿತವು ಪತಾಕೆಗಳು ॥16॥
೦೧೭ ನಿಲಿಸಿದನು ರಾವುತರನಾ ...{Loading}...
ನಿಲಿಸಿದನು ರಾವುತರನಾ ಹೊರ
ವಳಯದಲಿ ರಾವುತರು ಮುರಿದರೆ
ನಿಲುವುದೊಗ್ಗಿನ ದಂತಿಘಟೆ ಗಜಸೇನೆಗಡಹಾಗಿ
ತೊಳಗಿದವು ತೇರುಗಳು ತೇರಿನ
ದಳಕೆ ತಾನೊತ್ತಾಗಿ ರಣದ
ಗ್ಗಳೆಯರಿದ್ದುದು ರಾಯನೊಡಹುಟ್ಟಿದರು ಸಂದಣಿಸಿ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣನು ಕುದುರೆಯ ಸವಾರರನ್ನು ಹೊರವಲಯದಲ್ಲಿ ನಿಲ್ಲಿಸಿದನು. ಒಂದು ವೇಳೆ ಕುದುರೆ ಸವಾರರು ಸೋತು ಹಿಂದಿರುಗಿದರೆ ಆನೆಯ ಸೇನೆಯನ್ನು ಅದರ ಸುತ್ತ ನಿಲ್ಲಿಸಿದನು. ಈ ಸೇನೆಗೆ ಅಡ್ಡವಾಗಿ ರಥದ ಸೇನೆಯನ್ನು ಜೋಡಿಸಿದನು. ರಥದ ಸೇನೆಯೊಡನೆ ಕೌರವನು ಹಾಗೂ ಅವನ ಸೋದರರು ಸಜ್ಜಾಗಿ ನಿಂತರು. ರಥಗಳಿಗೆ ಸಮೀಪವಾಗಿ ಯುದ್ಧ ವೀರರು ಒತ್ತೊತ್ತಾಗಿ ನಿಂತು ಎಲ್ಲ ಸೇನೆಗೆ ಬೆಂಬಲವಾಗಿ ಸೇರಿದರು.
ಮೂಲ ...{Loading}...
ನಿಲಿಸಿದನು ರಾವುತರನಾ ಹೊರ
ವಳಯದಲಿ ರಾವುತರು ಮುರಿದರೆ
ನಿಲುವುದೊಗ್ಗಿನ ದಂತಿಘಟೆ ಗಜಸೇನೆಗಡಹಾಗಿ
ತೊಳಗಿದವು ತೇರುಗಳು ತೇರಿನ
ದಳಕೆ ತಾನೊತ್ತಾಗಿ ರಣದ
ಗ್ಗಳೆಯರಿದ್ದುದು ರಾಯನೊಡಹುಟ್ಟಿದರು ಸಂದಣಿಸಿ ॥17॥
೦೧೮ ಅರನೆಲೆಯ ಸುಯಿಧಾನ ...{Loading}...
ಅರನೆಲೆಯ ಸುಯಿಧಾನ ಬಾಹ್ಲಿಕ
ತರಣಿಸುತ ಗುರುಸೂನು ಕೃತವ
ರ್ಮರಿಗೆ ಕೃಪ ದುಶ್ಯಾಸನಾದ್ಯರಿಗಿದಿರಿನಾರೈಕೆ
ಎರಡು ಕೆಲದಲಿ ಶಲ್ಯ ಶಕುನಿಗ
ಳಿರವು ಸೇನೆಯ ಸುತ್ತುವಳಯದ
ಭರವ ಕೈಕೊಂಡೊಡ್ಡ ಮೆರೆದನು ಗರುಡಿಯಾಚಾರ್ಯ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ರಕ್ಷಣೆಗಾಗಿ ಅದರ ಹಿಂದೆ ನಿಲ್ಲುವ ಹೊಣೆ ಬಾಹ್ಲಿಕ ಮಹಾರಾಜ, ಕರ್ಣ, ಅಶ್ವತ್ಥಾಮ, ಕೃತವರ್ಮರಿಗೆ. ಕೃಪ ದುಶ್ಶಾಸನಾದಿಗಳಿಗೆ ಎದುರು ಭಾಗದ ಸೈನ್ಯದ ರಕ್ಷಣೆಯ ಹೊಣೆ. ಸೇನೆಯ ಎರಡು ಭಾಗಗಳಲ್ಲಿ ಶಲ್ಯ, ಶಕುನಿಗಳು ನಿಂತರು, ಸೇನೆಯ ಸುತ್ತ ಮಹಾವೇಗದಿಂದ ಸಂಚರಿಸುತ್ತಾ ದ್ರೋಣಾಚಾರ್ಯರು ಯುದ್ಧದ ನಿರ್ದೇಶನದ ಜವಾಬ್ದಾರಿಯನ್ನು ಸ್ವೀಕರಿಸಿದರು.
ಪದಾರ್ಥ (ಕ.ಗ.ಪ)
ಸುಯಿಧಾನ-ರಕ್ಷಣೆ, ಗುರುಸೂನು-ಅಶ್ವತ್ಥಾಮ, ಅರೆನೆಲೆ-ಸೈನ್ಯಕ್ಕೆ ಬೆಂಬಲವಾಗಿ ಹಿಂದೆ ನಿಲ್ಲುವ ಸೈನ್ಯ.
ಮೂಲ ...{Loading}...
ಅರನೆಲೆಯ ಸುಯಿಧಾನ ಬಾಹ್ಲಿಕ
ತರಣಿಸುತ ಗುರುಸೂನು ಕೃತವ
ರ್ಮರಿಗೆ ಕೃಪ ದುಶ್ಯಾಸನಾದ್ಯರಿಗಿದಿರಿನಾರೈಕೆ
ಎರಡು ಕೆಲದಲಿ ಶಲ್ಯ ಶಕುನಿಗ
ಳಿರವು ಸೇನೆಯ ಸುತ್ತುವಳಯದ
ಭರವ ಕೈಕೊಂಡೊಡ್ಡ ಮೆರೆದನು ಗರುಡಿಯಾಚಾರ್ಯ ॥18॥
೦೧೯ ಹಿಳುಕ ತಿರುಹುತ ...{Loading}...
ಹಿಳುಕ ತಿರುಹುತ ಸಮ್ಮುಖದ ಬಲ
ದಳವಿಯಲಿ ಗಿರಿಯಂತೆ ಸೈಂಧವ
ಬಿಲುದುಡುಕೆ ಮೋಹರಿಸಿದರು ಭೂರಿಶ್ರವಾದಿಗಳು
ದಳದ ಕೆಲಬಲದೊಳಗೆ ನೃಪ ಸಂ
ಕುಲವ ನಿಲಿಸಿದನಮಮ ಕಾಲನ
ಬಳಗಕೌತಣವೆನಲು ಪದ್ಮವ್ಯೂಹ ರಂಜಿಸಿತು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈಂಧವನು ಸೈನ್ಯದ ಸಮೀಪದಲ್ಲಿ ಎದುರಿನಿಂದ, ಬಾಣವನ್ನು ತಿರುಗಿಸುತ್ತ ಬೆಟ್ಟದಂತೆ ನಿಂತು ಬಿಲ್ಲನ್ನು ಕೈಗೆತ್ತಿಕೊಳ್ಳಲು ಭೂರಿಶ್ರವನೇ ಮುಂತಾದವರು ಒಗ್ಗೂಡಿದರು. ಸೈನ್ಯದ ಎಡಬಲದಲ್ಲಿ ರಾಜಸಮೂಹವನ್ನು ನಿಲ್ಲಿಸಲಾಯಿತು. ಯಮನ ಪರಿವಾರಕ್ಕೆ ಔತಣವೆನ್ನುವಂತೆ ಪದ್ಮವ್ಯೂಹವು ಬೆಳಗುತ್ತಿತ್ತು.
ಟಿಪ್ಪನೀ (ಕ.ಗ.ಪ)
ವ್ಯೂಹಗಳು - ವ್ಯೂಹಸ್ತು ಬಲ ವಿನ್ಹಾಸ; ಎಂದು ಅಮರಕೋಶ ಹೇಳುತ್ತದೆ. ಅಂದರೆ ವ್ಯೂಹ ಎನ್ನುವುದು ಯುದ್ಧದಲ್ಲಿ ಸೇನೆಯನ್ನು ನಿಲ್ಲಿಸುವ ಒಂದು ಕ್ರಮ. ಸೇನೆಯನ್ನು ಒಂದು ಪೂರ್ವನಿಶ್ಚಿತ ತಂತ್ರದಲ್ಲಿ ವ್ಯವಸ್ಥಿತವಾಗಿ ನಿಲ್ಲಿಸಿ ಶತ್ರುಗಳಿಗೆ ಗೊಂದಲವನ್ನುಂಟು ಮಾಡುವುದೇ ವ್ಯೂಹದ ಉದ್ದೇಶ. ಈ ವ್ಯೂಹಗಳ ಬಗೆಗೆ ವಿವರಗಳನ್ನು ಕೊಡುವ ಕಪ್ಪನಂತುಲ ಲಕ್ಷ್ಮಣ ಶಾಸ್ತ್ರಿಗಳು ಈ ವ್ಯೂಹಗಳ ಸೃಷ್ಟಿ ರೂಪರೇಖೆ ಗೊತ್ತಾಗುವುದಿಲ್ಲ ಎಂದು ದ್ರೋಣಪರ್ವದ ತೆಲುಗು ಅವತರಣಿಕೆಯಲ್ಲಿ ಹೇಳುತ್ತಾರೆ.
ವ್ಯೂಹಗಳಲ್ಲಿ ದಂಡ, ಭೋಗ, ಅಸ್ತ್ರಮಂಡಲ ಮತ್ತು ಅಸಂಹತ ಎಂದು ನಾಲ್ಕು ಭಾಗಗಳಿವೆ. ಪಾಂಡವ-ಕೌರವ ಸೇನೆಯವರಿಬ್ಬರೂ ಈ ವ್ಯೂಹಗಳನ್ನು ಬಳಸಿದ್ದಾರೆ. ಉದಾಹರಣೆಗೆ ಕೆಲವನ್ನು ನೋಡೋಣ.
‘ಪಂಚವ್ಯೂಹೋ ಮಹಾರಜ ಆಚಾರ್ಮೇಣಾಭಿಕಲ್ಪಿತಂ’ ಈ ಐದರಲ್ಲಿ ಮುಖ್ಯವಾಗಿ ಗರುಡವ್ಯೂಹ, ಚಕ್ರ (ಪದ್ಮ) ವ್ಯೂಹ ಶಕಟವ್ಯೂಹಗಳು ದ್ರೋಣರವು.
ಕ್ರೌಂಚವ್ಯೂಹ ಮಂಡಲಾರ್ಥ ವ್ಯೂಹಗಳು ಧರ್ಮರಾಯನವು ಚಂದ್ರವ್ಯೂಹ ಸಂಶಪ್ತಕರು ರಚಿಸಿದ್ದು.
ಇವುಗಳೇ ಅಲ್ಲದೆ ಶ್ಯೇನ (ಡೇಗೆ ಆಕಾರದ್ದು) ಸರ್ವತೋ ಭದ್ರವ್ಯೂಹ, ಹಂಸವ್ಯೂಹ, ಅಸಹುವ್ಯೂಹ, ಮಕರವ್ಯೂಹ, ಅರ್ಧಚಂದ್ರವ್ಯೂಹ, ವಿಜಯವ್ಯೂಹ, ಸೂಜೀವ್ಯೂಹ, ವಜ್ರವ್ಯೂಹಗಳೂ ಇವೆ (ವಿವರಗಳಿಗೆ ನೋಡಿ ಅಗ್ನಿಪುರಾಣ-236)
ಪಕ್ಷಿ ಪ್ರಾಣಿಗಳ ಆಕಾರದ ವ್ಯೂಹಗಳೇ ಹೆಚ್ಚಾಗಿದೆ. ತುಂಬ ಎತ್ತರದ ಗುಡ ಪ್ರದೇಶದಿಂದ ನೋಡಿದರೆ ಈ ವ್ಯೂಹಗಳ ಮೊಸಳೆಯಂತೆ, ಪದ್ಮದಂತೆ, ಬಂಡಿಯ ಗಾಲಿಯಂತೆ, ಹಂಸದಂತೆ ಡೇಗೆಯಂತೆ ಕಾಣುತ್ತಿದ್ದುದರಿಂದ ಈ ಬಗೆಯ ಹೆಸರುಗಳು ಬಂದಿವೆ. ಇವುಗಳಲ್ಲೆಲ್ಲ ತುಂಬ ಸಂಕೀರ್ಣವಾದದ್ದೆಂದರೆ ಚಕ್ರವ್ಯೂಹ ಅಥವಾ ಪದ್ಮವ್ಯೂಹ! ಇದು ಒಳಕ್ಕೆ ತೆರೆದುಕೊಳ್ಳುತ್ತದೆ ನಿಜ. ಆದರೆ ಮುಂದೆ ಶತ್ರುಗಳು ಯೋಜಿಸಿರುವ ನಿಟ್ಟಿನಲ್ಲೇ ನಡೆದು ದಾರಿ ತಪ್ಪಬೇಕಾಗುತ್ತದೆ. ಅಭಿಮನ್ಯುವನ್ನು ಒಳಗೆ ಬಿಟ್ಟುಕೊಂಡ ನಂತರ ಸೈಂಧವನು ಶಿವನಿಂದ ಪಡೆದಿದ್ದ ವರದ ಸಹಾಯದಿಂದ ಭೀಮ ಧೃಷ್ಟದ್ಯುಮ್ನ ಸಾತ್ಯಕಿಗಳಾದಿಯಾಗಿ ಯಾರನ್ನೂ ಒಳಗೇ ಬಿಡದೆ ಕಾಡಿಸಿ ಅಭಿಮನ್ಯು ವಧೆಗೆ ಕಾರಣನಾದ.
ಈಗ ಒಂದು ವ್ಯೂಹದ ಬಗೆಗೆ ಮಾಹಿತಿ ಪಡೆಯೋಣ. ಗರುಡ; ದ್ರೋಣರು ರಚಿಸಿದ್ದು. (ಆಧಾರ: ದ್ರೋನ ಪರ್ವಮುಗಪ್ಪಗಂತುಲ ಲಕ್ಷ್ಮಣಶಾಸ್ತ್ರಿ ಪುಟ.65)
ಉದ್ದೇಶ= ಧರ್ಮರಾಯನನ್ನು ಹಿಡಿಯುವುದು.
ಮುಖಸ್ಥಾನದಲ್ಲಿ ದ್ರೋಣ, ಶೊರೋಭಾಗದಲ್ಲಿ ದುರ್ಯೋಧನ, ಅವನ ತಮ್ಮಂದಿರು ಮತ್ತು ಸೈನಿಕರು ನೇತ್ರಸ್ಥಾನದಲ್ಲಿ ಕೃಪ ಕೃತವರ್ಮ ಮತ್ತು ಇತರರು, ಕುತ್ತಿಗೆಯ ಭಾಗದಲ್ಲಿ ಕವಚಧಾರಿಗಳಾದ ಭೂತಶರ್ಮ ಕ್ಷೇಮಶರ್ಮ ಕರಕಾಶ ಕಳಿಂಗ ಸಿಂಹದರು ಅಧೀರರುಶೂರರು, ದಾಶೇರಕಗಣ, ಯವನ ಕಾಂಭೋಜ, ಶೂರಸೇನ, ದರದ, ದೂದ್ರ, ಕೇಕಯ, ಯವನ ಇತ್ಯಾದಿ.
ದಕ್ಷಿಣ ಭಾಗದಲ್ಲಿ ಭೂರಿಶ್ರವ ಸೋಮದತ್ತ, ಶಲ್ಯಬಾಹ್ಲಿಕ ಮೊದಲಾದವರು.
ಪ್ರಾಚೀನ ಗ್ರೀಕರ ಸೇನೆಯನ್ನು ಈ ಬಗೆಯ ವ್ಯೂಹಗಳಿದ್ದುವೆಂದು ಹೇಳಲಾಗಿದೆ.
ವ್ಯೂಹಕ್ಕೆ ಪ್ರತಿವ್ಯಾಹವೂ ಇತ್ತೆಂದು ಹೇಳಲಾಗಿದೆ. ಆದರೆ ಅದು ಹೇಗೆ ಮೂಲವ್ಯೂಹವನ್ನು ಛೇದಿಸುತ್ತಿತ್ತು ಎಂಬುದು ಸ್ಪಷ್ಟವಾಗುವುದಿಲ್ಲ.
ಮೂಲ ...{Loading}...
ಹಿಳುಕ ತಿರುಹುತ ಸಮ್ಮುಖದ ಬಲ
ದಳವಿಯಲಿ ಗಿರಿಯಂತೆ ಸೈಂಧವ
ಬಿಲುದುಡುಕೆ ಮೋಹರಿಸಿದರು ಭೂರಿಶ್ರವಾದಿಗಳು
ದಳದ ಕೆಲಬಲದೊಳಗೆ ನೃಪ ಸಂ
ಕುಲವ ನಿಲಿಸಿದನಮಮ ಕಾಲನ
ಬಳಗಕೌತಣವೆನಲು ಪದ್ಮವ್ಯೂಹ ರಂಜಿಸಿತು ॥19॥
೦೨೦ ಏನ ಹೇಳುವೆನದನು ...{Loading}...
ಏನ ಹೇಳುವೆನದನು ನೃಪ ತವ
ಸೂನುವಿನ ಮೋಹರದೊಳಳ್ಳಿರಿ
ವಾನೆಗಳನುಪ್ಪರಿಸಿ ಗಗನವ ಮೊಗೆವ ಕುದುರೆಗಳ
ಆ ನೃಪರ ರಥ ವಾಜಿಗಳ ಗಿರಿ
ಸಾನು ಸಡಿಲಲು ಜಡಿವ ಭೇರಿ
ಧ್ವಾನವನು ಪಯದಳದ ಸುಭಟರ ಸಿಂಹಗರ್ಜನೆಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏನ ಹೇಳಲಿ ಧೃತರಾಷ್ಟ್ರ ರಾಜ, ನಿನ್ನ ಮಗನ ಸೈನ್ಯದಲ್ಲಿ ಘೀಳಿಡುತ್ತಿದ್ದ ಆನೆಗಳ, ನೆಗೆದು ಆಕಾಶವನ್ನೇ ಮೊಗೆಯುವ ಕುದುರೆಗಳನ್ನು ಏನು ವರ್ಣಿಸಲಿ? ಆ ರಾಜರು, ರಥಗಳು ಮತ್ತು ಕುದುರೆಗಳೆಂಬ ಬೆಟ್ಟದ ಸಾಲು ಅದುರುವಂತೆ ಮಾಡುತ್ತಿದ್ದ ಭೇರಿಗಳ ಶಬ್ದವನ್ನು, ಕಾಲುದಳದ ವೀರರ ಸಿಂಹ ಗರ್ಜನೆಯನ್ನು ಏನು ಹೇಳಲಿ.
ಮೂಲ ...{Loading}...
ಏನ ಹೇಳುವೆನದನು ನೃಪ ತವ
ಸೂನುವಿನ ಮೋಹರದೊಳಳ್ಳಿರಿ
ವಾನೆಗಳನುಪ್ಪರಿಸಿ ಗಗನವ ಮೊಗೆವ ಕುದುರೆಗಳ
ಆ ನೃಪರ ರಥ ವಾಜಿಗಳ ಗಿರಿ
ಸಾನು ಸಡಿಲಲು ಜಡಿವ ಭೇರಿ
ಧ್ವಾನವನು ಪಯದಳದ ಸುಭಟರ ಸಿಂಹಗರ್ಜನೆಯ ॥20॥
೦೨೧ ಮೇಳವದಲೆನ್ನಾನೆಗಳ ಬರ ...{Loading}...
ಮೇಳವದಲೆನ್ನಾನೆಗಳ ಬರ
ಹೇಳು ಸುಭಟರೊಳಗ್ಗಳರ ಬರ
ಹೇಳು ಬಿಂಕಕೆ ಮೆರೆವ ಭೀಮಾರ್ಜುನರ ಬರಹೇಳು
ಲೋಲುಪತೆಯವನಿಯಲಿಹರೆ ಬರ
ಹೇಳು ಯಮನಂದನನನಿಂದಿನ
ಕಾಳೆಗಕ್ಕೆಂದಿತ್ತ ಭಟ್ಟರನಟ್ಟಿದನು ದ್ರೋಣ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದಲ್ಲಿರುವ ನನಗೆ ಪ್ರೀತಿಪಾತ್ರರಾದ ಸುಭಟರುಗಳನ್ನು ಅವರ ಗುಂಪಿನೊಡನೆ ಬರಹೇಳು. ವೀರರಲ್ಲಿ ಶ್ರೇಷ್ಠರಾದವರನ್ನು ಬರಹೇಳು. ಬಿಂಕದಿಂದ ಮೆರೆಯುವ ಭೀಮಾರ್ಜುನರನ್ನು ಬರಹೇಳು. ಭೂಮಿಯನ್ನು ಪಡೆಯುವ ಆಶೆಯಿದ್ದರೆ ಧರ್ಮಜನನ್ನು ಇಂದಿನ ಯುದ್ಧಕ್ಕೆ ಬರಹೇಳು ಎಂದು ದ್ರೋಣ ತನ್ನ ಭಟ್ಟರುಗಳನ್ನು ಪಾಂಡವರಲ್ಲಿಗೆ ಅಟ್ಟಿದನು.
ಮೂಲ ...{Loading}...
ಮೇಳವದಲೆನ್ನಾನೆಗಳ ಬರ
ಹೇಳು ಸುಭಟರೊಳಗ್ಗಳರ ಬರ
ಹೇಳು ಬಿಂಕಕೆ ಮೆರೆವ ಭೀಮಾರ್ಜುನರ ಬರಹೇಳು
ಲೋಲುಪತೆಯವನಿಯಲಿಹರೆ ಬರ
ಹೇಳು ಯಮನಂದನನನಿಂದಿನ
ಕಾಳೆಗಕ್ಕೆಂದಿತ್ತ ಭಟ್ಟರನಟ್ಟಿದನು ದ್ರೋಣ ॥21॥
೦೨೨ ತುರಗ ಹಲ್ಲಣಿಸಿದವು ...{Loading}...
ತುರಗ ಹಲ್ಲಣಿಸಿದವು ಸಮರ
ದ್ವಿರದ ಸಜ್ಜಂಬಡೆದವೊಗ್ಗಿನ
ತುರಗದಲಿ ಹೂಡಿದವು ರಥ ಕಾಲಾಳು ಮುಂಕೊಳಿಸಿ
ಅರಸನನುಜರು ಸಹಿತ ಕೃಷ್ಣನ
ಬೆರಳ ಸನ್ನೆಯೊಳೈದೆ ಬಿಡೆ ಮೋ
ಹರಿಸಿ ನಿಂದುದು ಮುರಿದ ಮಕರವ್ಯೂಹ ರಚನೆಯಲಿ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಕಡೆ ಕುದುರೆಗಳಿಗೆ ಲಗಾಮನ್ನು ಬಿಗಿದು ಸಿದ್ಧಗೊಳಿಸಲಾಯಿತು. ಯುದ್ಧದ ಆನೆಗಳು ಸಿದ್ಧವಾದವು. ಕುದುರೆಗಳನ್ನು ರಥಕ್ಕೆ ಹೂಡಲಾಯಿತು. ಕಾಲಾಳು ಸೇನೆಯು ಮುಂದೆ ಬಂದು ಯುದ್ಧಕ್ಕೆ ಸಿದ್ಧವಾಯಿತು. ಧರ್ಮರಾಜನು ತಮ್ಮಂದಿರೊಡನೆ ಸಜ್ಜಾಗಿ ಕೃಷ್ಣನ ಸೂಚನೆಯಿಂದ ರಚಿತವಾದ ಮಕರ ವ್ಯೂಹದಲ್ಲಿ ನಿಂತನು.
ಪದಾರ್ಥ (ಕ.ಗ.ಪ)
ಹಲ್ಲಣಿಸು-ಲಗಾಮನು ಹಾಕಿ ಕುದುರೆಯನ್ನು ಸಿದ್ಧಗೊಳಿಸುವುದು, ದ್ವಿರದ-ಆನೆ, ಮುಂಕೊಳಿಸಿ-ಸಿದ್ಧಗೊಳಿಸಿ, ಮಕರವ್ಯೂಹ-ಮೊಸಳೆಯಾಕಾರದಲ್ಲಿ ಸೈನ್ಯವನ್ನು ನಿಲ್ಲಿಸುವುದು
ಮೂಲ ...{Loading}...
ತುರಗ ಹಲ್ಲಣಿಸಿದವು ಸಮರ
ದ್ವಿರದ ಸಜ್ಜಂಬಡೆದವೊಗ್ಗಿನ
ತುರಗದಲಿ ಹೂಡಿದವು ರಥ ಕಾಲಾಳು ಮುಂಕೊಳಿಸಿ
ಅರಸನನುಜರು ಸಹಿತ ಕೃಷ್ಣನ
ಬೆರಳ ಸನ್ನೆಯೊಳೈದೆ ಬಿಡೆ ಮೋ
ಹರಿಸಿ ನಿಂದುದು ಮುರಿದ ಮಕರವ್ಯೂಹ ರಚನೆಯಲಿ ॥22॥
೦೨೩ ಬನ್ದು ಸಮಸಪ್ತಕರ ...{Loading}...
ಬಂದು ಸಮಸಪ್ತಕರ ದೂತರು
ನಿಂದರರ್ಜುನನಿದಿರಲೇಳೈ
ನಂದಗೋಪನ ಮಗನ ಬಿಡು ನೆರವಿಂಗೆ ಕರೆ ಹರನ
ಇಂದು ರಣದಲಿ ಬದುಕಿದರೆ ನೀ
ನೆಂದಿಗೆಯು ಬದುಕಿದನೆ ನಿಂದಿರು
ನಿಂದಿರೆಂದವಗಡಿಸಿ ಹಿಡಿದರು ಫಲುಗುಣನ ಸೆರಗ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸಪ್ತಕರ ದೂತರು ರಣರಂಗದಲ್ಲಿ ಅರ್ಜುನನ ಮುಂದೆ ಬಂದು ನಿಂತರು. ಎಲೈ ಅರ್ಜುನಾ, ಈ ದಿನ ನೀನು ನಂದಗೋಪನ ಮಗನಾದ ಕೃಷ್ಣನನ್ನು ಬಿಟ್ಟು ಸಾಕ್ಷಾತ್ ಈಶ್ವರನನ್ನೇ ಕರೆ. ಈ ದಿನ ಯುದ್ಧದಲ್ಲಿ ನೀನು ಬದುಕಿದರೆ ಮುಂದೆ ನೀನು ಸಾಯುವುದೇ ಇಲ್ಲವೆಂದು ಹೇಳಿ ರೇಗಿಸಿ ಅರ್ಜುನನ ಸೆರಗನ್ನು ಹಿಡಿದು ನಿಲ್ಲಿಸಿದರು.
ಪದಾರ್ಥ (ಕ.ಗ.ಪ)
ಅವಗಡಿಸಿ-ರೇಗಿಸಿ,
ಮೂಲ ...{Loading}...
ಬಂದು ಸಮಸಪ್ತಕರ ದೂತರು
ನಿಂದರರ್ಜುನನಿದಿರಲೇಳೈ
ನಂದಗೋಪನ ಮಗನ ಬಿಡು ನೆರವಿಂಗೆ ಕರೆ ಹರನ
ಇಂದು ರಣದಲಿ ಬದುಕಿದರೆ ನೀ
ನೆಂದಿಗೆಯು ಬದುಕಿದನೆ ನಿಂದಿರು
ನಿಂದಿರೆಂದವಗಡಿಸಿ ಹಿಡಿದರು ಫಲುಗುಣನ ಸೆರಗ ॥23॥
೦೨೪ ಖರೆಯರಹಿರುಣ್ಟುಣ್ಟು ನೆರವನೆ ...{Loading}...
ಖರೆಯರಹಿರುಂಟುಂಟು ನೆರವನೆ
ಕರಸಿಕೊಂಡೇ ಬಹೆನೆನುತ ರಿಪು
ಚರರ ಕಳುಹಲು ದ್ರೋಣನಟ್ಟಿದ ದೂತರೈತಂದು
ಕರೆದರರ್ಜುನನನು ವೃಕೋದರ
ಧರಣಿಪತಿ ಮಾದ್ರೇಯ ಹೈಡಿಂ
ಬರಿಗೆ ನೂಕದು ಪಾರ್ಥ ಪದ್ಮವ್ಯೂಹವಿಂದಿನಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ಸತ್ಯವನ್ನೇ ಹೇಳುವವರು. ಇರಲಿ, ಸಹಾಯವನ್ನು ಕರೆದುಕೊಂಡೇ ಬರುತ್ತೇನೆ ಎಂದು ಶತ್ರುಗಳಾದ ಸಮಸಪ್ತಕರ ದೂತರನ್ನು ಅರ್ಜುನ ಕಳಿಸಿದ. ಅನಂತರ ದ್ರೋಣಾಚಾರ್ಯರು ಕಳಿಸಿದ ದೂತರು ಬಂದು ಅರ್ಜುನನೇ, ಭೀಮ, ಧರ್ಮರಾಯ, ನಕುಲ, ಸಹದೇವ ಹಾಗೂ ಘಟೋತ್ಕಚರೇ ಮೊದಲಾದ ಯಾವ ವೀರರಿಗೂ ಇಂದಿನ ಪದ್ಮವ್ಯೂಹವನ್ನು ಭೇದಿಸಲು ಸಾಧ್ಯವಾಗದು ಎಂದು ಹೇಳಿ ಅಜುನನನ್ನು ಯುದ್ಧಕ್ಕೆ ಕರೆದರು.
ಮೂಲ ...{Loading}...
ಖರೆಯರಹಿರುಂಟುಂಟು ನೆರವನೆ
ಕರಸಿಕೊಂಡೇ ಬಹೆನೆನುತ ರಿಪು
ಚರರ ಕಳುಹಲು ದ್ರೋಣನಟ್ಟಿದ ದೂತರೈತಂದು
ಕರೆದರರ್ಜುನನನು ವೃಕೋದರ
ಧರಣಿಪತಿ ಮಾದ್ರೇಯ ಹೈಡಿಂ
ಬರಿಗೆ ನೂಕದು ಪಾರ್ಥ ಪದ್ಮವ್ಯೂಹವಿಂದಿನಲಿ ॥24॥
೦೨೫ ಶಿವನ ಬೇಡಿದ ...{Loading}...
ಶಿವನ ಬೇಡಿದ ಶರವ ತೆಗೆ ಗಾಂ
ಡಿವವ ಬಿಗಿ ನಿನ್ನಿಷ್ಟದೈವವ
ತವಕದಲಿ ನೀ ಬೇಡಿಕೊಂಬುದು ಪರಮಸದ್ಗತಿಯ
ಅವರಿವರ ಹವಣಲ್ಲ ಗುರು ಮುನಿ
ದವಗಡಿಸಿದರೆ ನಿಲುವನಾವನು
ಬವರಕೇಳೇಳೆಂದು ಜರಿದರು ದೂತರರ್ಜುನನ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶಿವನನ್ನು ಬೇಡಿ ಪಡೆದುಕೊಂಡ ಅಸ್ತ್ರಗಳನ್ನು ತೆಗೆದಿಟ್ಟುಕೋ ; ಗಾಂಡೀವ ಧನುಸ್ಸನ್ನು ಹಿಡಿ; ನಿನಗೆ ಅತ್ಯಂತ ಇಷ್ಟವಾದ ದೇವತೆಯನ್ನು ಪರಮ ಸದ್ಗತಿ ನೀಡುವಂತೆ ಬೇಡಿಕೊ. ಸಾಮಾನ್ಯರಿಗೆ ಇಂದು ದ್ರೋಣರನ್ನು ಎದುರಿಸಲು ಸಾಧ್ಯವಿಲ್ಲ. ದ್ರೋಣಾಚಾರ್ಯ ಕೋಪಿಸಿಕೊಂಡು ತಿರುಗಿ ಬಿದ್ದರೆ ಅವರ ಮುಂದೆ ಯಾರೂ ನಿಂತು ಯುದ್ಧ ಮಾಡಲು ಸಾಧ್ಯವಿಲ್ಲ. ಯುದ್ಧಕ್ಕೆ ಸಿದ್ಧವಾಗು” ಎಂದು ದೂತರು ಅರ್ಜುನನನ್ನು ಹೀಯಾಳಿಸಿದರು.
ಪದಾರ್ಥ (ಕ.ಗ.ಪ)
ಹವಣು-ಹಿಡಿತ
ಮೂಲ ...{Loading}...
ಶಿವನ ಬೇಡಿದ ಶರವ ತೆಗೆ ಗಾಂ
ಡಿವವ ಬಿಗಿ ನಿನ್ನಿಷ್ಟದೈವವ
ತವಕದಲಿ ನೀ ಬೇಡಿಕೊಂಬುದು ಪರಮಸದ್ಗತಿಯ
ಅವರಿವರ ಹವಣಲ್ಲ ಗುರು ಮುನಿ
ದವಗಡಿಸಿದರೆ ನಿಲುವನಾವನು
ಬವರಕೇಳೇಳೆಂದು ಜರಿದರು ದೂತರರ್ಜುನನ ॥25॥
೦೨೬ ಚರರ ಕಳುಹಿದನಸುರವೈರಿಗೆ ...{Loading}...
ಚರರ ಕಳುಹಿದನಸುರವೈರಿಗೆ
ಕರವ ಮುಗಿದನು ಪಾರ್ಥನೀ ಸಂ
ಗರದೊಳಗೆ ನಿಮ್ಮಡಿಯ ಚಿತ್ತದೊಳಾವ ಥಟ್ಟಿನಲಿ
ಬೆರಸುವೆವು ನಾವಿಂದಿನೀ ಮೋ
ಹರದ ಮುರಿವಸದಳ ನಿಧಾನಿಸ
ಲರಿದೆನಲು ಮನದೊಳಗೆ ನಿಶ್ಚೈಸಿದನು ಮುರವೈರಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ದ್ರೋಣರ ದೂತರನ್ನು ಕಳುಹಿಸಿಕೊಟ್ಟು, ರಾಕ್ಷಸರ ಶತ್ರುವಾದ ಕೃಷ್ಣನ ಬಳಿಗೆ ಬಂದು ಕೈಗಳನ್ನು ಮುಗಿದು ಇಂದಿನ ಯುದ್ಧದಲ್ಲಿ ನಿಮ್ಮ ಮನಸ್ಸಿನಲ್ಲಿರುವಂತೆ ನಾವು ಯಾವ ಸೈನ್ಯದ ವಿರುದ್ಧ ಹೋರಾಡಬೇಕೆಂದುನೀವು ಮನಸ್ಸು ಮಾಡಿದ್ದೀರಿ? ದ್ರೋಣರ ಈ ವ್ಯೂಹ ಅಸಮಬಲವಾದುದು. ನನಗೆ ಯೋಚಿಸಲು ಆಗುತ್ತಿಲ್ಲವೆಂದು ಅರ್ಜುನ ಹೇಳಲು ಕೃಷ್ಣನು ತನ್ನ ಮನದಲ್ಲಿಯೇ ತೀರ್ಮಾನವನ್ನು ಕೈಗೊಂಡ.
ಮೂಲ ...{Loading}...
ಚರರ ಕಳುಹಿದನಸುರವೈರಿಗೆ
ಕರವ ಮುಗಿದನು ಪಾರ್ಥನೀ ಸಂ
ಗರದೊಳಗೆ ನಿಮ್ಮಡಿಯ ಚಿತ್ತದೊಳಾವ ಥಟ್ಟಿನಲಿ
ಬೆರಸುವೆವು ನಾವಿಂದಿನೀ ಮೋ
ಹರದ ಮುರಿವಸದಳ ನಿಧಾನಿಸ
ಲರಿದೆನಲು ಮನದೊಳಗೆ ನಿಶ್ಚೈಸಿದನು ಮುರವೈರಿ ॥26॥
೦೨೭ ಅಳಿಯನೀ ಮೋಹರದೊಳಲ್ಲದೆ ...{Loading}...
ಅಳಿಯನೀ ಮೋಹರದೊಳಲ್ಲದೆ
ಫಲುಗುಣನ ಮಗನಿವನು ಬಲುಗೈ
ಯುಳುಹ ಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ
ಫಲುಗುಣನ ನಾವಿತ್ತಲೊಯ್ದರೆ
ಬಳಿಕ ನಿರ್ಣಯವೆಂದು ಮನದಲಿ
ತಿಳಿದು ಪಾರ್ಥಂಗೆಂದನಸುರಾರಾತಿ ನಸುನಗುತ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದಿನದ ಯುದ್ಧದಲ್ಲಲ್ಲದೇ ಅರ್ಜುನ ಪುತ್ರನಾದ ಅಭಿಮನ್ಯುವು ಸಾಯುವುದಿಲ್ಲ. ಇವನು ಬಲುಗೈಯಾಳು (ಮಹಾವೀರ) ಇವನನ್ನು ಇಂದು ಉಳಿಸಬಾರದು. ಉಳಿಸಿದರೆ ಕಲಿಯುಗ ಪ್ರಾರಂಭವಾಗದು. ಅರ್ಜುನನನ್ನು ನಾವು ಇತ್ತ (ಸಮಸಪ್ತಕರ ಎದುರು) ಕರೆದುಕೊಂಡು ಹೋದರೆ ನಂತರ ಯುದ್ಧದ ಪರಿಣಾಮ ನಿರ್ಣಯವಾಗುತ್ತದೆ (ಅಭಿಮನ್ಯು ಸಾಯುತ್ತಾನೆ) ಎಂದು ಕೃಷ್ಣ ಮನಸ್ಸಿನಲ್ಲಿ ನಿಶ್ಚಯಿಸಿದನು.
ಮೂಲ ...{Loading}...
ಅಳಿಯನೀ ಮೋಹರದೊಳಲ್ಲದೆ
ಫಲುಗುಣನ ಮಗನಿವನು ಬಲುಗೈ
ಯುಳುಹ ಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ
ಫಲುಗುಣನ ನಾವಿತ್ತಲೊಯ್ದರೆ
ಬಳಿಕ ನಿರ್ಣಯವೆಂದು ಮನದಲಿ
ತಿಳಿದು ಪಾರ್ಥಂಗೆಂದನಸುರಾರಾತಿ ನಸುನಗುತ ॥27॥
೦೨೮ ಗುಣಕೆ ಹುರುಡೇ ...{Loading}...
ಗುಣಕೆ ಹುರುಡೇ ನಿನ್ನ ಮಗನೀ
ರಣವ ಬಗೆವನೆ ಸೂರ್ಯನಾರೋ
ಗಣೆಗೆ ಸೊಡರೇ ಸಾಕಿದೇತಕೆ ಬಯಲ ಭಂಡತನ
ಕೆಣಕು ನಡೆ ಸಮಸಪ್ತಕರನೀ
ಬಣಗುಗಳ ಕೊಂಬನೆ ಕುಮಾರಕ
ನಣಕವಲ್ಲೆಂದಸುರರಿಪು ತಿರುಹಿದನು ನಿಜರಥವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನಾ, ನಿನ್ನ ಮಗನಾದ ಅಭಿಮನ್ಯುವಿನ ಗುಣ ಶಕ್ತಿಯೊಡನೆ ಇತರರು ಸ್ಪರ್ಧಿಸಲು ಸಾಧ್ಯವೇ. ಸೂರ್ಯನ ಭೋಜನಕ್ಕೆಂದು ಯಾರಾದರೂ ದೀಪವನ್ನು ಹಚ್ಚಿಡುತ್ತಾರೆಯೆ ? ನೀನು ಭಂಡತನವನ್ನು ಮಾಡಬೇಡ. ಸಮಸಪ್ತಕರನ್ನು ಎದುರಿಸಲು ಸಿದ್ಧವಾಗು. ನಿನ್ನ ಮಗನು ಪದ್ಮವ್ಯೂಹದೊಳಗೆ ಕಾದುವ ಬಣಗು ವೀರರನ್ನು ಲೆಕ್ಕಿಸುತ್ತಾನೆಯೇ, ಇದು ಅಣಕವಲ್ಲ - ಎಂದು ಹೇಳಿ ರಥವನ್ನು ಸಮಸಪ್ತಕರಿದ್ದ ಕಡೆಗೆ ತಿರುಗಿಸಿದನು.
ಪದಾರ್ಥ (ಕ.ಗ.ಪ)
ಹುರುಡೇ-ಸ್ಪರ್ಧೆಯೆ, ಆರೋಗಣೆ-ನೈವೇದ್ಯ-ಭೋಜನ, ಆಹಾರ,
ಮೂಲ ...{Loading}...
ಗುಣಕೆ ಹುರುಡೇ ನಿನ್ನ ಮಗನೀ
ರಣವ ಬಗೆವನೆ ಸೂರ್ಯನಾರೋ
ಗಣೆಗೆ ಸೊಡರೇ ಸಾಕಿದೇತಕೆ ಬಯಲ ಭಂಡತನ
ಕೆಣಕು ನಡೆ ಸಮಸಪ್ತಕರನೀ
ಬಣಗುಗಳ ಕೊಂಬನೆ ಕುಮಾರಕ
ನಣಕವಲ್ಲೆಂದಸುರರಿಪು ತಿರುಹಿದನು ನಿಜರಥವ ॥28॥
೦೨೯ ಹರಿ ಸಹಿತ ...{Loading}...
ಹರಿ ಸಹಿತ ಕಲಿ ಪಾರ್ಥನತ್ತಲು
ತಿರುಗಿದನು ಬಳಿಕಿತ್ತಲೀ ಮೋ
ಹರ ಮಹಾಂಭೋನಿಧಿಗೆ ಮೊಗಸಿತು ಸರ್ವತೋಮುಖರು
ಮೊರೆವ ಪಟಹ ಮೃದಂಗ ಘನ ಜ
ರ್ಜರಿತವಹ ನಿಸ್ಸಾಳ ಚಯದ
ಬ್ಬರಣೆ ಗಬ್ಬರಿಸಿದುದು ಕಮಲಭವಾಂಡ ಖರ್ಪರವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರನಾದ ಅರ್ಜುನನು ಕೃಷ್ಣನೊಡನೆ ಸಮಸಪ್ತಕರಿದ್ದ ಕಡೆಗೆ ಯುದ್ಧ ಮಾಡಲು ಧಾವಿಸಿದನು. ಈ ಕಡೆಗೆ ಸೇನೆಯೆಂಬ ಮಹಾ ಸಮುದ್ರಕ್ಕೆ (ಪಾಂಡವರ) ಸಮಸ್ತ ವೀರರೂ ಲಗ್ಗೆ ಇಟ್ಟರು. ಯಾವ ಕಡೆಗೆ ತಿರುಗಿದರೂ ಸೈನ್ಯದ ಮುಖವೇ ಕಾಣುತ್ತಿತ್ತು. ಪಟಹ, ಮೃದಂಗಗಳ, ರಣವಾದ್ಯಗಳ, ಜರ್ಜರಿತವನ್ನುಂಟು ಮಾಡುವ ನಿಸ್ಸಾಳ ವಾದ್ಯಗಳ ಗುಂಪಿನ ಧ್ವನಿ ಬ್ರಹ್ಮಾಂಡದ ಹೊರ ಕವಚವನ್ನು ಭೇದಿಸಿಕೊಂಡು ಹೋಗುತ್ತಿದೆ ಎನಿಸಿತು.
ಪದಾರ್ಥ (ಕ.ಗ.ಪ)
ಅಂಬೋನಿಧಿ-ಸಮುದ್ರ, ಮೊರೆವ-ಧ್ವನಿ ಮಾಡುವ, ಪಟಹ-ಚರ್ಮವಾದ್ಯ, ನಿಸ್ಸಾಳ-ಚರ್ಮವಾದ್ಯ, ಚಯದ-ಗುಂಪಿನ, ಅಬ್ಬರಣೆ-ಮಹಾಶಬ್ದ, ಗಬ್ಬರಿಸಿದುದು-ಒಡೆಯಿತು, ಕಮಲಭವಾಂಡ-ಬ್ರಹ್ಮಾಂಡ, ಖರ್ಪರ-ಹೊರ ಆವರಣ
ಮೂಲ ...{Loading}...
ಹರಿ ಸಹಿತ ಕಲಿ ಪಾರ್ಥನತ್ತಲು
ತಿರುಗಿದನು ಬಳಿಕಿತ್ತಲೀ ಮೋ
ಹರ ಮಹಾಂಭೋನಿಧಿಗೆ ಮೊಗಸಿತು ಸರ್ವತೋಮುಖರು
ಮೊರೆವ ಪಟಹ ಮೃದಂಗ ಘನ ಜ
ರ್ಜರಿತವಹ ನಿಸ್ಸಾಳ ಚಯದ
ಬ್ಬರಣೆ ಗಬ್ಬರಿಸಿದುದು ಕಮಲಭವಾಂಡ ಖರ್ಪರವ ॥29॥
೦೩೦ ಉರವಣಿಸಿದರು ನಕುಲ ...{Loading}...
ಉರವಣಿಸಿದರು ನಕುಲ ಸಾತ್ಯಕಿ
ವರ ವಿರಾಟ ದ್ರುಪದ ಕೈಕೆಯ
ಬಿರುದ ಧೃಷ್ಟದ್ಯುಮ್ನ ಕುಂತೀಭೋಜ ಮೊದಲಾಗಿ
ಧರಣಿಪರು ಥಟ್ಟೈಸಿ ರಿಪು ಮೋ
ಹರಕೆ ಕವಿದುದು ಕಾದಿ ದುರ್ಗವ
ಮುರಿಯಲರಿಯದೆ ಮುರಿವುತಿದ್ದುದು ಬಸಿವ ರಕ್ತದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಕುಲ, ಸಾತ್ಯಕಿ, ವಿರಾಟ, ದ್ರುಪದ, ಕೈಕೇಯ, ಬಿರುದಾಂಕಿತನಾದ ಧೃಷ್ಟದ್ಯುಮ್ನ, ಕುಂತೀಭೋಜರೇ ಮೊದಲಾದ ರಾಜರು ತಮ್ಮ ಸೈನ್ಯದೊಡನೆ ಶತ್ರು ರಾಜರ ಮೇಲೆ ಬಿದ್ದು ಪರಾಕ್ರಮದಿಂದ ಹೋರಾಡಿದರು. ಆದರೆ ಅವರಿಗೆ ಪದ್ಮವ್ಯೂಹವನ್ನು ಮುರಿಯಲು ಸಾಧ್ಯವಾಗಲಿಲ್ಲ. ಕೇವಲ ರಕ್ತ ಸುರಿಸಿಕೊಂಡು ಪಾಂಡವ ಸೈನ್ಯದವರು ಹಿಮ್ಮೆಟ್ಟುತ್ತಿದ್ದರು.
ಮೂಲ ...{Loading}...
ಉರವಣಿಸಿದರು ನಕುಲ ಸಾತ್ಯಕಿ
ವರ ವಿರಾಟ ದ್ರುಪದ ಕೈಕೆಯ
ಬಿರುದ ಧೃಷ್ಟದ್ಯುಮ್ನ ಕುಂತೀಭೋಜ ಮೊದಲಾಗಿ
ಧರಣಿಪರು ಥಟ್ಟೈಸಿ ರಿಪು ಮೋ
ಹರಕೆ ಕವಿದುದು ಕಾದಿ ದುರ್ಗವ
ಮುರಿಯಲರಿಯದೆ ಮುರಿವುತಿದ್ದುದು ಬಸಿವ ರಕ್ತದಲಿ ॥30॥
೦೩೧ ಸುಳಿದು ಹರಿ ...{Loading}...
ಸುಳಿದು ಹರಿ ಮೇಖಲೆಯ ಮೋಹರ
ದೊಳಗೆ ಮುಗ್ಗಿದಿರೈ ಮಹಾ ಮಂ
ಡಳಿಕರಿರ ಫಡ ಹೋಗಿರೈ ನೀವೆನುತ ಖಾತಿಯಲಿ
ಬಿಲುದುಡುಕಿ ಪವಮಾನ ನಂದನ
ನಳವಿಗೊಟ್ಟನು ಹೂಣೆ ಹೊಕ್ಕರಿ
ಬಲವನಿರಿದನು ಘಾಯವಡೆದನು ಘೋರ ಸಮರದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರಜಾಲದ ಕಣ್ ಕಟ್ಟಿನೊಳಗೆ ಪ್ರವೇಶಿಸಿ (ಕೃತಕವಾದ ವ್ಯೂಹ) ಯುದ್ಧದಲ್ಲಿ ಸೋತಿರಿ, ಮಹಾಮಂಡಳಿಕರೇ ನೀವು ಇಲ್ಲಿಂದ ಹೊರಡಿ ಎನ್ನುತ್ತ ಭೀಮನು ಕೋಪದಿಂದ ಬಿಲ್ಲನ್ನು ತೆಗೆದುಕೊಂಡು, ದ್ರೋಣರ ಸೈನ್ಯಕ್ಕೆ ಎದುರಾಗಿ ಪರಾಕ್ರಮವನ್ನು ಪ್ರದರ್ಶಿಸಿದನು. ಪ್ರತಿಜ್ಞೆ ಮಾಡಿದಂತೆ ಸೈನ್ಯದ ನಡುವೆ ಹೊಕ್ಕು ಶತ್ರುಸೈನ್ಯವನ್ನು ಇರಿದನು. ಆದರೆ ಭೀಮಸೇನನು ಈ ಘೋರ ಯುದ್ಧದಲ್ಲಿ ಘಾಯಗೊಂಡನು.
ಪದಾರ್ಥ (ಕ.ಗ.ಪ)
ಹರಿಮೇಖಲೆ-ಇಂದ್ರಜಾಲ, ಮೋಹರ-ಸೇನೆ, ಖಾತಿ-ಕೋಪ, ಪವಮಾನ ನಂದನ-ಭೀಮ, ಅಳವಿಗೊಟ್ಟನು-ಪರಾಕ್ರಮವನ್ನು ಪ್ರದರ್ಶಿಸಿದನು, ಹೂಣೆ-ಪ್ರತಿಜ್ಞೆ
ಮೂಲ ...{Loading}...
ಸುಳಿದು ಹರಿ ಮೇಖಲೆಯ ಮೋಹರ
ದೊಳಗೆ ಮುಗ್ಗಿದಿರೈ ಮಹಾ ಮಂ
ಡಳಿಕರಿರ ಫಡ ಹೋಗಿರೈ ನೀವೆನುತ ಖಾತಿಯಲಿ
ಬಿಲುದುಡುಕಿ ಪವಮಾನ ನಂದನ
ನಳವಿಗೊಟ್ಟನು ಹೂಣೆ ಹೊಕ್ಕರಿ
ಬಲವನಿರಿದನು ಘಾಯವಡೆದನು ಘೋರ ಸಮರದಲಿ ॥31॥
೦೩೨ ಕಾದಲೆನ್ನಳವಲ್ಲ ಬಲ ...{Loading}...
ಕಾದಲೆನ್ನಳವಲ್ಲ ಬಲ ದು
ರ್ಭೇದವಿದು ಶಿವಶಿವಯೆನುತ್ತ ವೃ
ಕೋದರನು ಮರಳಿದನು ದುಗುಡಕೆ ತೆತ್ತು ನಿಜಮುಖವ
ಕೈದೆಗೆಯೆ ರಿಪುಬಲದ ಸುಭಟರು
ಕಾದಿದನು ಕಲಿ ಭೀಮ ಗೆಲಿದನು
ಪೋದನೆಂದರು ಕೂಡೆ ಕೈಗಳ ಹೊಯ್ದು ತಮತಮಗೆ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನನಗೆ ಯುದ್ಧ ಮಾಡಲು ಸಾಧ್ಯವಿಲ್ಲ. ಈ ಸೇನಾ ಶಕ್ತಿಯು ಅಭೇದ್ಯವಾದುದು ಶಿವಶಿವ ಎನ್ನುತ್ತಾ ದುಃಖಿಸುತ್ತಾ ಭೀಮನು ರಣರಂಗದಿಂದ ಹಿಂದಿರುಗಿದನು. ಕೌರವ ಸೇನೆಯು ಭೀಮನು ಯುದ್ಧದಿಂದ ಕೈದೆಗೆಯಲು ಶತ್ರುಸೈನಿಕರರಲ್ಲಿ ಭೀಮ ಗೆದ್ದ ! ಹೋದ ! ಎಂದು ಕೈ ತಟ್ಟಿದರು.
ಪದಾರ್ಥ (ಕ.ಗ.ಪ)
ಕೈದೆಗೆಯೆ-ಶೌರ್ಯವನ್ನು ತೋರಲಾಗದೆ, ಕೈಗಳ ಹೊಯ್ದು-ಚಪ್ಪಾಳೆ ಹೊಡೆದು.
ಮೂಲ ...{Loading}...
ಕಾದಲೆನ್ನಳವಲ್ಲ ಬಲ ದು
ರ್ಭೇದವಿದು ಶಿವಶಿವಯೆನುತ್ತ ವೃ
ಕೋದರನು ಮರಳಿದನು ದುಗುಡಕೆ ತೆತ್ತು ನಿಜಮುಖವ
ಕೈದೆಗೆಯೆ ರಿಪುಬಲದ ಸುಭಟರು
ಕಾದಿದನು ಕಲಿ ಭೀಮ ಗೆಲಿದನು
ಪೋದನೆಂದರು ಕೂಡೆ ಕೈಗಳ ಹೊಯ್ದು ತಮತಮಗೆ ॥32॥
೦೩೩ ಆ ಮಹಾ ...{Loading}...
ಆ ಮಹಾ ಮೋಹರವನೊಡೆಯಲು
ಸೋಮಕುಲಜರು ಭೀತರಾದರು
ಹಾ ಮಹಾದೇವೆನುತ ಧರ್ಮಜ ನೋಡಿ ತಲೆದೂಗಿ
ರಾಮನರಿವನು ಕೃಷ್ಣನರಿವನು
ಸೀಮೆಯಲಿ ಕಲಿ ಪಾರ್ಥನರಿವನು
ಭೂಮಿಪತಿಗಳೊಳುಳಿದ ಸುಭಟರಿಗರಿವುದಿಲ್ಲೆಂದ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕೌರವ ಸೇನೆಯನ್ನು ಒಡೆಯಲು ಚಂದ್ರ ವಂಶದವರು ಹೆದರಿದರು. ಹಾ ಮಹಾದೇವ ಎನ್ನುತ್ತಾ ಧರ್ಮರಾಯನು ಈ ಪದ್ಮವ್ಯೂಹವನ್ನು ಭೇದಿಸಲು ಬಲರಾಮನಿಗೆ ಗೊತ್ತಿದೆ ; ಕೃಷ್ಣನಿಗೆ ತಿಳಿದಿದೆ ; ಈ ದೇಶದಲ್ಲಿ ಅರ್ಜುನನಿಗೆ ಸಾಧ್ಯವಿದೆ, ಉಳಿದ ರಾಜರುಗಳಲ್ಲಿ ಯಾವ ವೀರರಿಗೂ ತಿಳಿದಿಲ್ಲ ಎಂದನು.
ಮೂಲ ...{Loading}...
ಆ ಮಹಾ ಮೋಹರವನೊಡೆಯಲು
ಸೋಮಕುಲಜರು ಭೀತರಾದರು
ಹಾ ಮಹಾದೇವೆನುತ ಧರ್ಮಜ ನೋಡಿ ತಲೆದೂಗಿ
ರಾಮನರಿವನು ಕೃಷ್ಣನರಿವನು
ಸೀಮೆಯಲಿ ಕಲಿ ಪಾರ್ಥನರಿವನು
ಭೂಮಿಪತಿಗಳೊಳುಳಿದ ಸುಭಟರಿಗರಿವುದಿಲ್ಲೆಂದ ॥33॥
೦೩೪ ಹೊಗಲು ಬಲ್ಲನು ...{Loading}...
ಹೊಗಲು ಬಲ್ಲನು ಹೊಕ್ಕವೊಲು ಹೆರ
ದೆಗೆಯಲರಿಯನು ವೀರ ಪಾರ್ಥನ
ಮಗನು ಮತ್ತಯ್ದನೆಯ ಸುಭಟರ ಕಾಣೆ ನಾನೆನುತ
ಅಗಿವ ಚಿಂತೆಯೊಳರಸ ಕದನದ
ದುಗುಡ ಭಾರದಲಿರಲು ಮುಂಗೈ
ನಿಗಳವನು ತಿರುಹುತ್ತ ನಸುನಗುತೆದ್ದನಭಿಮನ್ಯು ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವಿಗೆ ಪದ್ಮವ್ಯೂಹವನ್ನು ಪ್ರವೇಶಿಸಲು ತಿಳಿದಿದೆ ; ಆದರೆ ಹಿಂದಿರುಗಿ ಬರಲು ತಿಳಿದಿಲ್ಲ. ಈ ನಾಲ್ವರಲ್ಲದೆ ಪದ್ಮವ್ಯೂಹವನ್ನು ಭೇದಿಸುವ ಐದನೆಯ ವ್ಯಕ್ತಿಯನ್ನು ನಾನು ಕಾಣೆ ಎಂದು ಧರ್ಮರಾಯನು ಯುದ್ಧದ ಗಾಢವಾದ ಚಿಂತೆಯ ಭಾರದಲ್ಲಿರಲು ಅಭಿಮನ್ಯು ನಸುನಗುತ್ತಾ ಮುಂಗೈಯ ಬಳೆಯನ್ನು ತಿರುಗಿಸುತ್ತಾ ಎದ್ದನು.
ಪದಾರ್ಥ (ಕ.ಗ.ಪ)
ಹೆರದೆಗೆಯಲು-ಹಿಂದಕ್ಕೆ ಬರಲು, ದುಗುಡ-ದುಃಖ, ನಿಗಳ-ಮುಂಗೈ ಆಭರಣ
ಮೂಲ ...{Loading}...
ಹೊಗಲು ಬಲ್ಲನು ಹೊಕ್ಕವೊಲು ಹೆರ
ದೆಗೆಯಲರಿಯನು ವೀರ ಪಾರ್ಥನ
ಮಗನು ಮತ್ತಯ್ದನೆಯ ಸುಭಟರ ಕಾಣೆ ನಾನೆನುತ
ಅಗಿವ ಚಿಂತೆಯೊಳರಸ ಕದನದ
ದುಗುಡ ಭಾರದಲಿರಲು ಮುಂಗೈ
ನಿಗಳವನು ತಿರುಹುತ್ತ ನಸುನಗುತೆದ್ದನಭಿಮನ್ಯು ॥34॥
೦೩೫ ಜನಪನಙ್ಘ್ರಿಗೆ ಮಣಿದು ...{Loading}...
ಜನಪನಂಘ್ರಿಗೆ ಮಣಿದು ಕೈ ಮುಗಿ
ದೆನಗೆ ಬೆಸಸೈ ಬೊಪ್ಪ ತಾ ಬ
ಲ್ಲೆನು ಮಹಾಹವದೊಳಗೆ ಪದ್ಮವ್ಯೂಹ ಭೇದನವ
ಅನುವರವ ಗೆಲುವೆನು ಕೃತಾಂತನ
ಮನೆಗೆ ಕಳುಹುವೆನಹಿತರನು ನೀ
ನಿನಿತು ಚಿಂತಿಸಲೇಕೆ ಕಾಳೆಗಕೆನ್ನ ಕಳುಹೆಂದ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜನಾದ ಧರ್ಮರಾಯನ ಪಾದಗಳಿಗೆ ನಮಸ್ಕರಿಸಿ ಕೈಮುಗಿದು ಅಭಿಮನ್ಯುವು “ತಂದೆಯೇ, ನೀವು ನನಗೆ ಆದೇಶವನ್ನು ನೀಡಿರಿ. ನನಗೆ ಪದ್ಮವ್ಯೂಹವನ್ನು ಹೇಗೆ ಒಡೆಯುವುದೆಂಬು ತಿಳಿದಿದೆ. ನಾನು ಯುದ್ಧದಲ್ಲಿ ಜಯವನ್ನು ಸಾಧಿಸುತ್ತೇನೆ. ಶತ್ರುಗಳನ್ನು ಯಮನ ಮನೆಗೆ ಕಳುಹಿಸುತ್ತೇನೆ. ನೀವು ಇಷ್ಟೇಕೆ ಚಿಂತಿಸುತ್ತೀರಿ ? ನನ್ನನ್ನು ಯುದ್ಧಕ್ಕೆ ಕಳುಹಿಸಿಕೊಡಿ” ಎಂದನು.
ಮೂಲ ...{Loading}...
ಜನಪನಂಘ್ರಿಗೆ ಮಣಿದು ಕೈ ಮುಗಿ
ದೆನಗೆ ಬೆಸಸೈ ಬೊಪ್ಪ ತಾ ಬ
ಲ್ಲೆನು ಮಹಾಹವದೊಳಗೆ ಪದ್ಮವ್ಯೂಹ ಭೇದನವ
ಅನುವರವ ಗೆಲುವೆನು ಕೃತಾಂತನ
ಮನೆಗೆ ಕಳುಹುವೆನಹಿತರನು ನೀ
ನಿನಿತು ಚಿಂತಿಸಲೇಕೆ ಕಾಳೆಗಕೆನ್ನ ಕಳುಹೆಂದ ॥35॥
೦೩೬ ಹಸುಳೆಯದಟಿನ ನುಡಿಯ ...{Loading}...
ಹಸುಳೆಯದಟಿನ ನುಡಿಯ ಕೇಳಿದು
ನಸುನಗುತ ಧರ್ಮಜನು ಘನ ಪೌ
ರುಷವು ನಿನಗುಂಟೆಂದು ಕಂದನ ತೆಗೆದು ಬಿಗಿಯಪ್ಪಿ
ಶಿಶುವು ನೀನೆಲೆ ಮಗನೆ ಕಾದುವ
ರಸಮ ಬಲರು ಕಣಾ ಮಹಾ ರಥ
ರೆಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಿಕ್ಕವನಾದ ಅಭಿಮನ್ಯುವಿನ ಪರಾಕ್ರಮದ ಮಾತುಗಳನ್ನು ಕೇಳಿದ ಧರ್ಮರಾಯನು ನಸುನಗುತ್ತಾ “ನಿನ್ನಲ್ಲಿ ಅತಿಶಯವಾದ ಪರಾಕ್ರಮವಿದೆ” ಎಂದು ನುಡಿದು ಆಲಂಗಿಸಿಕೊಂಡು, “ನೀನು ಇನ್ನೂ ಬಹಳ ಚಿಕ್ಕವನು. ಎದುರು ನಿಂತು ಯುದ್ಧ ಮಾಡುವವರು ಅಸಾಧ್ಯ ಶಕ್ತಿಯನ್ನು ಹೊಂದಿರುವವರು. ಆ ಮಹಾರಥರ ಹೊಡೆತವನ್ನು ನೀನು ಹೇಗೆ ಸೈರಿಸಿಕೊಳ್ಳುತ್ತೀಯೆ ? ಎಂದನು.
ಮೂಲ ...{Loading}...
ಹಸುಳೆಯದಟಿನ ನುಡಿಯ ಕೇಳಿದು
ನಸುನಗುತ ಧರ್ಮಜನು ಘನ ಪೌ
ರುಷವು ನಿನಗುಂಟೆಂದು ಕಂದನ ತೆಗೆದು ಬಿಗಿಯಪ್ಪಿ
ಶಿಶುವು ನೀನೆಲೆ ಮಗನೆ ಕಾದುವ
ರಸಮ ಬಲರು ಕಣಾ ಮಹಾ ರಥ
ರೆಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ ॥36॥
೦೩೭ ಸುಳಿಯಬಹುದಮ್ಬುಧಿಯ ನಡುವಣ ...{Loading}...
ಸುಳಿಯಬಹುದಂಬುಧಿಯ ನಡುವಣ
ಸುಳಿಯೊಳಗೆ ಸಂವರ್ತಕನ ಕೊರ
ಳೊಳಗೆ ಕುಣಿಯಲುಬಹುದು ಮೃತ್ಯುವಿನಣಲ ಹೊಳಲೊಳಗೆ
ಹೊಳಕಬಹುದಹಿಪನ ಫಣಾ ಮಂ
ಡಳದೊಳಾಡಲುಬಹುದು ಕಾಣೆನು
ಗೆಲುವ ಹದನನು ಮಗನೆ ಪದ್ಮವ್ಯೂಹದೊಡ್ಡಣೆಯ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸಮುದ್ರದ ಮಧ್ಯದ ಸುಳಿಯಲ್ಲಿ ಈಜಾಡಬಹುದು, ಪ್ರಳಯ ಕಾಲದ ಅಗ್ನಿಯ ಕೊರಳಲ್ಲಿ ಕುಣಿಯಬಹುದು, ಮೃತ್ಯು ದೇವತೆಯ ಗಂಟಲನ್ನು ಹೊಕ್ಕು ಬರಬಹುದು. ಆದಿಶೇಷನ ಹೆಡೆಯ ಮಂಡಲದಲ್ಲಿ ಆಟವಾಡಬಹುದು. ಆದರೆ ಪದ್ಮವ್ಯೂಹದೊಳಗೆ ಪ್ರವೇಶಿಸಿ ಜಯಿಸಿ ಬರುವ ರೀತಿಯನ್ನು ಕಾಣೆನು ಮಗನೆ” ಎಂದು ಧರ್ಮರಾಯನು ಅಭಿಮನ್ಯುವಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಸಂವರ್ತಕ-ಪ್ರಳಯ ಕಾಲದ ಅಗ್ನಿ, ಅಣಲು-ಕಿರುನಾಲಿಗೆ, ಅಹಿಪ-ಆದಿಶೇಷ, ಫಣಾ-ಹೆಡೆ,
ಮೂಲ ...{Loading}...
ಸುಳಿಯಬಹುದಂಬುಧಿಯ ನಡುವಣ
ಸುಳಿಯೊಳಗೆ ಸಂವರ್ತಕನ ಕೊರ
ಳೊಳಗೆ ಕುಣಿಯಲುಬಹುದು ಮೃತ್ಯುವಿನಣಲ ಹೊಳಲೊಳಗೆ
ಹೊಳಕಬಹುದಹಿಪನ ಫಣಾ ಮಂ
ಡಳದೊಳಾಡಲುಬಹುದು ಕಾಣೆನು
ಗೆಲುವ ಹದನನು ಮಗನೆ ಪದ್ಮವ್ಯೂಹದೊಡ್ಡಣೆಯ ॥37॥
೦೩೮ ಬಿಡು ಮರೀಚಿಯ ...{Loading}...
ಬಿಡು ಮರೀಚಿಯ ತೊರೆಗೆ ಹರುಗೋ
ಲಿಡುವರುಂಟೇ ಲೆಪ್ಪದುರಗನ
ಹಿಡಿವಡೇತಕೆ ಗರುಡಮಂತ್ರವು ಚಪಲನೆನ್ನದಿರು
ಕೊಡನ ಮಗನ ಕುಮಂತ್ರದೊಡ್ಡಿನ
ಕಡಿತಕಾನಂಜುವೆನೆ ವೆಗ್ಗಳ
ನುಡಿಯಲಮ್ಮೆನು ತನ್ನನೀಗಳೆ ಬಿಟ್ಟು ನೋಡೆಂದ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಿಸಿಲುಗುದುರೆಯನ್ನು ದಾಟಲು ಯಾರಾದರೂ ದೋಣಿಯನ್ನು ಬಳಸುತ್ತಾರೆಯೆ ? ಹಾವಿನ ಬೊಂಬೆಯನ್ನು ಹಿಡಿಯಲು ಗರುಡ ಮಂತ್ರವೇಕೆ ? ನನ್ನನ್ನು ಚಪಲ ಚಿತ್ತದವನೆಂದು ಭಾವಿಸಬೇಡಿ. ದ್ರೋಣಾಚಾರ್ಯನ ಕೆಟ್ಟ ತಂತ್ರದಿಂದ ರಚನೆಯಾಗಿರುವ ಪದ್ಮವ್ಯೂಹವನ್ನು ನಾಶ ಮಾಡಲು ನಾನು ಹೆದರುವುದಿಲ್ಲ. ನನ್ನ ಶಕ್ತಿ ಪರಾಕ್ರಮಗಳ ಬಗ್ಗೆ ಹೆಚ್ಚು ಹೇಳಲು ಇಚ್ಛಿಸುವುದಿಲ್ಲ. ಈಗಲೇ ಕಳುಹಿಸಿ ನನ್ನ ಪರಾಕ್ರಮವನ್ನು ನೋಡಿ” ಎಂದು ಅಭಿಮನ್ಯು ಧರ್ಮರಾಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮರೀಚಿ-ಬಿಸಿಲುಗುದುರೆ, ಹರುಗೋಲು-ನೀರನ್ನು ದಾಟಲು ಬಿದಿರು ಮತ್ತು ಚರ್ಮದಿಂದ ಮಾಡಿದ ದೊಡ್ಡ ಕುಕ್ಕೆಯಂತಹ ಸಾಧನ, ಲೆಪ್ಪದುರಗ-ಹಾವಿನ ಬೊಂಬೆ, ಕೊಡನ ಮಗ-ದ್ರೋಣ, ವೆಗ್ಗಳ-ಅತಿಶಯ, ನುಡಿಯಲಮ್ಮೆ-ಹೇಳಲಾರೆ
ಮೂಲ ...{Loading}...
ಬಿಡು ಮರೀಚಿಯ ತೊರೆಗೆ ಹರುಗೋ
ಲಿಡುವರುಂಟೇ ಲೆಪ್ಪದುರಗನ
ಹಿಡಿವಡೇತಕೆ ಗರುಡಮಂತ್ರವು ಚಪಲನೆನ್ನದಿರು
ಕೊಡನ ಮಗನ ಕುಮಂತ್ರದೊಡ್ಡಿನ
ಕಡಿತಕಾನಂಜುವೆನೆ ವೆಗ್ಗಳ
ನುಡಿಯಲಮ್ಮೆನು ತನ್ನನೀಗಳೆ ಬಿಟ್ಟು ನೋಡೆಂದ ॥38॥
೦೩೯ ಅವರೊಳಗಲಕೆ ನಿನ್ದ ...{Loading}...
ಅವರೊಳಗಲಕೆ ನಿಂದ ರಿಪುಗಳ
ಜವನ ಬೋನವ ಮಾಡದಿದ್ದರೆ
ಅವನಿಯನು ಗೆಲದೇ ಮಹಾರಥರೆನಿಪ ನಾಯಕರ
ಅವನಿಯೊಳಗೊರಗಿಸದೆ ಮಾರಾಂ
ತವರ ನುಂಗದೆ ಮಾಣ್ದೆನಾದರೆ
ದಿವಿಜಪತಿತನಯಂಗೆ ತಾ ಜನಿಸಿದವನಲ್ಲೆಂದ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ವಿಶಾಲವಾದ ಜಾಗದಲ್ಲಿ ನಿಂತಿರುವ ಕೌರವರ ಸೇನೆಯ ವೀರರೆಲ್ಲರನ್ನು ಯಮನಿಗೆ ಔತಣವಾಗಿಸದೆ, ಭೂಮಿಯನ್ನು ಗೆಲ್ಲದೇ ಮಹಾರಥರೆನ್ನಿಸಿಕೊಂಡವರನ್ನು ಭೂಮಿಯ ಮೇಲೆ ಮಲಗಿಸದೆ, ನನಗೆ ಎದುರಾದವರನ್ನು ನುಂಗದೆ ಬಿಟ್ಟರೆ, ನಾನು ದೇವೇಂದ್ರನ ಮಗನಾದ ಅರ್ಜುನನಿಗೆ ಮಗನಲ್ಲ.” ಎಂದು ಅಭಿಮನ್ಯು ಹೇಳಿದನು.
ಮೂಲ ...{Loading}...
ಅವರೊಳಗಲಕೆ ನಿಂದ ರಿಪುಗಳ
ಜವನ ಬೋನವ ಮಾಡದಿದ್ದರೆ
ಅವನಿಯನು ಗೆಲದೇ ಮಹಾರಥರೆನಿಪ ನಾಯಕರ
ಅವನಿಯೊಳಗೊರಗಿಸದೆ ಮಾರಾಂ
ತವರ ನುಂಗದೆ ಮಾಣ್ದೆನಾದರೆ
ದಿವಿಜಪತಿತನಯಂಗೆ ತಾ ಜನಿಸಿದವನಲ್ಲೆಂದ ॥39॥
೦೪೦ ಕನ್ದ ವೈರಿವ್ಯೂಹವಸದಳ ...{Loading}...
ಕಂದ ವೈರಿವ್ಯೂಹವಸದಳ
ವೆಂದೆನಿಪುದದರೊಳಗೆ ಕೃಪ ಗುರು
ನಂದನರು ರಾಧೇಯ ಭೂರಿಶ್ರವ ಜಯದ್ರಥರು
ಇಂದುಧರನಡಹಾಯ್ದರೊಮ್ಮಿಗೆ
ಹಿಂದು ಮುಂದೆನಿಸುವರು ನೀ ಗೆಲು
ವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಮಗು, ಶತ್ರುವಿನ ಪದ್ಮವ್ಯೂಹವು ಅಸದಳವಾದುದು ಎಂದು ಹೇಳುತ್ತಾರೆ. ಅದರೊಳಗೆ ಕೃಪಾಚಾರ್ಯ, ಅಶ್ವತ್ಥಾಮ, ಕರ್ಣ, ಭೂರಿಶ್ರವ, ಜಯದ್ರಥನೇ ಮೊದಲಾದ ಮಹಾ ಪರಾಕ್ರಮಿಗಳಿದ್ದಾರೆ, ಸಾಕ್ಷಾತ್ ಶಿವನೇ ಯುದ್ಧಕ್ಕೆ ಬಂದರೂ ಅವನ್ನೆ ಅಲ್ಲಾಡಿಸಿ ಬಿಡುತ್ತಾರೆ. ನೀನು ಇವರನ್ನು ಹೇಗೆ ಗೆಲ್ಲುತ್ತೀಯೆ ? ಇದು ಸಾಮಾನ್ಯವಾದ ಯುದ್ಧವಲ್ಲ” ಎಂದು ಧರ್ಮರಾಯನು ಹೇಳಿದನು.
ಮೂಲ ...{Loading}...
ಕಂದ ವೈರಿವ್ಯೂಹವಸದಳ
ವೆಂದೆನಿಪುದದರೊಳಗೆ ಕೃಪ ಗುರು
ನಂದನರು ರಾಧೇಯ ಭೂರಿಶ್ರವ ಜಯದ್ರಥರು
ಇಂದುಧರನಡಹಾಯ್ದರೊಮ್ಮಿಗೆ
ಹಿಂದು ಮುಂದೆನಿಸುವರು ನೀ ಗೆಲು
ವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ ॥40॥
೦೪೧ ಗಾಳಿ ಬೆಮರುವುದುಣ್ಟೆ ...{Loading}...
ಗಾಳಿ ಬೆಮರುವುದುಂಟೆ ವಹ್ನಿ
ಜ್ವಾಲೆ ಹಿಮಕಂಜುವುದೆ ಮಂಜಿನ
ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ
ಬಾಲನಿವನೆನ್ನದಿರು ದುಗುಡವ
ತಾಳಲಾಗದು ಬೊಪ್ಪ ನಿಮ್ಮಡಿ
ಯಾಲಿಗಳಿಗೌತಣವನಿಕ್ಕುವೆನೊರಸಿ ರಿಪುಬಲವ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗಾಳಿ ಬೆವರುವುದು ಉಂಟೆ. ಬೆಂಕಿಯ ಜ್ವಾಲೆಯು ಮಂಜಿಗೆ ಹೆದರುವುದೇ ; ಮಹಾ ಬೇಸಿಗೆಯ ಬಿಸಿಲಿನೊಡನೆ, ಮಂಜು ಸ್ಪರ್ಧಿಸಲು ಸಾಧ್ಯವೆ? ನನ್ನನ್ನು ಬಾಲಕ ಎಂದು ಹೇಳಬೇಡ. ದುಃಖಿಸಬೇಡಿ. ಶತ್ರು ಸೇನೆಯನ್ನು ಸಂಹಾರ ಮಾಡುವುದರ ಮೂಲಕ ನಿಮ್ಮ ಕಣ್ಣುಗಳಿಗೆ ಸಂತೋಷದ ದೃಶ್ಯವೆಂಬ ಭೋಜನವನ್ನು ಮಾಡಿಸುತ್ತೇನೆ” ಎಂದು ಅಭಿಮನ್ಯುವು ಧರ್ಮರಾಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮೇಲುಗಾಳೆಗ - ಸ್ಪರ್ಧೆ
ಮೂಲ ...{Loading}...
ಗಾಳಿ ಬೆಮರುವುದುಂಟೆ ವಹ್ನಿ
ಜ್ವಾಲೆ ಹಿಮಕಂಜುವುದೆ ಮಂಜಿನ
ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ
ಬಾಲನಿವನೆನ್ನದಿರು ದುಗುಡವ
ತಾಳಲಾಗದು ಬೊಪ್ಪ ನಿಮ್ಮಡಿ
ಯಾಲಿಗಳಿಗೌತಣವನಿಕ್ಕುವೆನೊರಸಿ ರಿಪುಬಲವ ॥41॥
೦೪೨ ಅಹುದು ಮಗನೆ ...{Loading}...
ಅಹುದು ಮಗನೆ ಸಮಗ್ರಬಲ ನೀ
ನಹೆ ನಿಧಾನಿಸಲಿಂದು ಪವನಜ
ನಹವ ಮುರಿದರು ಕಾಯ್ದು ಬಿಟ್ಟರು ನಕುಲ ಸಾತ್ಯಕಿಯ
ಸಹಸ ದ್ರುಪದ ವಿರಾಟರುಗಳು
ಮ್ಮಹವ ಸೆಳೆದರು ವಿಜಯ ಗರ್ವದ
ಲಿಹ ಬಲವ ನೀನೊಬ್ಬನೇ ಸಾಧಿಸುವುದರಿದೆಂದ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನು ಸಂಪೂರ್ಣವಾಗಿ ಶೂರನಾಗಿದ್ದೀಯೆ. ಆಲೋಚಿಸಿದರೆ ಭೀಮಸೇನನ ಅಹಂಕಾರವನ್ನು ಮುರಿದರು. ನಕುಲ, ಸಾತ್ಯಕಿಯರನ್ನು ಯುದ್ಧದಿಂದ ಓಡಿಸಿದರು. ಸಾಹಸಿಗರಾದ ದ್ರುಪದ, ವಿರಾಟ ರಾಜರುಗಳ ಮೇರೆ ಮೀರಿದ ಅಹಂಕಾರವನ್ನು ಸೆಳೆದು ಹಾಕಿದರು. ಕೌರವ ಸೇನೆ ವಿಜಯದ ಉತ್ಸಾಹದಲ್ಲಿರುವಾಗ ಅದನ್ನು ಸೋಲಿಸುವ ಕಾರ್ಯ ನಿನಗೆ ಸಾಧ್ಯವಿಲ್ಲ.” ಎಂದು ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ನಿಧಾನಿಸಲು-ಯೋಚಿಸಲು, ಅಹವ ಮುರಿ-ಅಹಂಕಾರವನ್ನು ಮುರಿ,
ಮೂಲ ...{Loading}...
ಅಹುದು ಮಗನೆ ಸಮಗ್ರಬಲ ನೀ
ನಹೆ ನಿಧಾನಿಸಲಿಂದು ಪವನಜ
ನಹವ ಮುರಿದರು ಕಾಯ್ದು ಬಿಟ್ಟರು ನಕುಲ ಸಾತ್ಯಕಿಯ
ಸಹಸ ದ್ರುಪದ ವಿರಾಟರುಗಳು
ಮ್ಮಹವ ಸೆಳೆದರು ವಿಜಯ ಗರ್ವದ
ಲಿಹ ಬಲವ ನೀನೊಬ್ಬನೇ ಸಾಧಿಸುವುದರಿದೆಂದ ॥42॥
೦೪೩ ಧರಣಿಪತಿ ಕೇಳುಳಿದ ...{Loading}...
ಧರಣಿಪತಿ ಕೇಳುಳಿದ ಪುಷ್ಪದ
ಪರಿಮಳವು ಪಥಿಸಿದರೆ ಸಂಪಗೆ
ಯರಳ ಪರಿಮಳ ಪಥ್ಯವೇ ತುಂಬಿಗಳ ತಿಂತಿಣಿಗೆ
ಅರಿಭಟರು ಭೀಮಾದಿಗಳ ಗೆಲಿ
ದಿರಲಿ ಹೊಲ್ಲಹವೇನು ಘನ ಸಂ
ಗರದೊಳಗೆ ನನ್ನೊಡನೆ ತುಡುಕಿದಡರಿಯಬಹುದೆಂದ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ರಾಜನೇ ಕೇಳು, ಇತರ ಪುಷ್ಪಗಳ ಪರಿಮಳವು ಜೇನುದುಂಬಿಗಳಿಗೆ ಇಷ್ಟವಾದರೆ, ಸಂಪಗೆಯ ಹೂವು ಅವಕ್ಕೆ ಪಥ್ಯವೇ, ಹಾಗೆಯೇ ಶತ್ರು ಸೈನಿಕರು ಭೀಮಾದಿಗಳನ್ನು ಗೆದ್ದಿರಬಹುದು. ಆಗಬಾರದ್ದೇನಾದರೂ ಆಗಿದೆಯೆ ! ಘನ ಸಂಗ್ರಾಮದಲ್ಲಿ ನನ್ನೊಡನೆ ಯುದ್ಧಕ್ಕೆ ನಿಂತಾಗ ನನ್ನ ಸಾಮಥ್ರ್ಯವನ್ನು ತಿಳಿಯಬಹುದು” ಎಂದು ಅಭಿಮನ್ಯು ಹೇಳಿದನು.
ಪದಾರ್ಥ (ಕ.ಗ.ಪ)
ಪಥ್ಯವೇ-ರುಚಿಸುವುದೆ, ತಿಂತಿಣಿ-ಗುಂಪು
ಮೂಲ ...{Loading}...
ಧರಣಿಪತಿ ಕೇಳುಳಿದ ಪುಷ್ಪದ
ಪರಿಮಳವು ಪಥಿಸಿದರೆ ಸಂಪಗೆ
ಯರಳ ಪರಿಮಳ ಪಥ್ಯವೇ ತುಂಬಿಗಳ ತಿಂತಿಣಿಗೆ
ಅರಿಭಟರು ಭೀಮಾದಿಗಳ ಗೆಲಿ
ದಿರಲಿ ಹೊಲ್ಲಹವೇನು ಘನ ಸಂ
ಗರದೊಳಗೆ ನನ್ನೊಡನೆ ತುಡುಕಿದಡರಿಯಬಹುದೆಂದ ॥43॥
೦೪೪ ಕೈದುಕಾರರ ಬಿಗುಹು ...{Loading}...
ಕೈದುಕಾರರ ಬಿಗುಹು ಘನ ನೀ
ಹೊಯ್ದು ಮೊದಲಲಿ ಬಿಡಿಸು ಬಳಿಕಾ
ವೈದಿ ನಿನ್ನನು ಕೂಡಿಕೊಂಬೆವು ಹೊಕ್ಕು ಬಳಿಸಲಿಸಿ
ಎಯ್ದೆ ಹಗೆಯಲಿ ಹೂಣೆ ಹೊಗದಿರು
ಮೈದೆಗೆದು ಕಾದುವುದು ಜಯಸಿರಿ
ಯೈದೆತನ ನಿನ್ನಿಂದ ಮೆರೆವುದು ಕಂದ ಕೇಳ್ ಎಂದ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶತ್ರು ಪಕ್ಷದಲ್ಲಿರುವ ವೀರರ ಹಿಡಿತ ತುಂಬ ಬಲಿಷ್ಠವಾದುದು, ನೀನು ಮೊದಲು ಹೋಗಿ ಪದ್ಮವ್ಯೂಹವನ್ನು ಭೇದಿಸು, ಅನಂತರ ನಾವು ಬಂದು ನಿನ್ನನ್ನು ಕೂಡಿಕೊಳ್ಳುತ್ತೇವೆ. ನೀನು ಶತ್ರು ಸೈನ್ಯದ ಜೊತೆ ಯುದ್ಧಲ್ಲಿ ರಭಸದಿಂದ ಮುನ್ನುಗ್ಗಬೇಡ. ಹಿಂದಿದ್ದುಕೊಂಡು ತುಂಬ ಎಚ್ಚರದಿಂದ ಪರಾಕ್ರಮದಿಂದ ಯುದ್ಧ ಮಾಡುವುದು. ಜಯಲಕ್ಷ್ಮಿಯ ಮುತ್ತೈದೆತನ ನಿನ್ನಿಂದ ಮೆರೆಯುತ್ತದೆ ಕಂದಾ ಕೇಳು” ಎಂದು ಧರ್ಮರಾಯನು ನುಡಿದನು.
ಪದಾರ್ಥ (ಕ.ಗ.ಪ)
ಮೈದೆಗೆದು- ಪರಾಕ್ರಮದಿಂದ, ಎಯ್ದೆ, - ಸಮೀಪಿಸಿ
ಹೂಣಿ ಹೊಗದಿರು - ಪೂಣೆಪೊಗದಿರು - ರಭಸದಿಂದ ಮುನ್ನುಗ್ಗಬೇಡ.
ಮೂಲ ...{Loading}...
ಕೈದುಕಾರರ ಬಿಗುಹು ಘನ ನೀ
ಹೊಯ್ದು ಮೊದಲಲಿ ಬಿಡಿಸು ಬಳಿಕಾ
ವೈದಿ ನಿನ್ನನು ಕೂಡಿಕೊಂಬೆವು ಹೊಕ್ಕು ಬಳಿಸಲಿಸಿ
ಎಯ್ದೆ ಹಗೆಯಲಿ ಹೂಣೆ ಹೊಗದಿರು
ಮೈದೆಗೆದು ಕಾದುವುದು ಜಯಸಿರಿ
ಯೈದೆತನ ನಿನ್ನಿಂದ ಮೆರೆವುದು ಕಂದ ಕೇಳೆಂದ ॥44॥
೦೪೫ ಕೆತ್ತು ಕೊಣ್ಡಿರೆ ...{Loading}...
ಕೆತ್ತು ಕೊಂಡಿರೆ ಬಿಡಿಸುವೆನು ರಥ
ವೆತ್ತಲುರುಬಿದರತ್ತ ಕಣನೊಳು
ಮತ್ತಗಜ ಮುರಿದಂತೆ ಕದಡುವೆನಹಿತ ಮೋಹರವ
ಹೊತ್ತಿ ಹೊಗೆವ ಪರಾಕ್ರಮಾಗ್ನಿಯ
ತುತ್ತು ಪದ್ಮವ್ಯೂಹ ದೇವರು
ಚಿತ್ತಯಿಸುವುದು ಹೊತ್ತುಗಳೆಯದೆ ಎನ್ನ ಕಳುಹೆಂದ ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶತ್ರು ಸೈನ್ಯವು ಒಗ್ಗೂಡಿದ್ದರೆ ಅದನ್ನು ಬಿಡಿಸುವೆನು. ಯುದ್ಧಭೂಮಿಯಲ್ಲಿ ರಥವು ಓಡಿದಲ್ಲೆಲ್ಲ ಮದ್ದಾನೆಯಂತೆ ಶತ್ರುಸೈನ್ಯವನ್ನು ಕದಡುತ್ತೇನೆ. ನನ್ನಲ್ಲಿ ಹೊತ್ತಿ ಉರಿಯುತ್ತಿರುವ ಪರಾಕ್ರಮವೆಂಬ ಅಗ್ನಿಗೆ ಪದ್ಮವ್ಯೂಹ ತುತ್ತಾಗುತ್ತದೆ. ಇದನ್ನು ಒಪ್ಪಿ ಹೊತ್ತುಗಳೆಯದೆ ನನ್ನನ್ನು ಇನ್ನು ಯುದ್ಧಕ್ಕೆ ಕಳುಹಿಸು” ಎಂದು ಆಭಿಮನ್ಯುವು ಹೇಳಿದನು.
ಮೂಲ ...{Loading}...
ಕೆತ್ತು ಕೊಂಡಿರೆ ಬಿಡಿಸುವೆನು ರಥ
ವೆತ್ತಲುರುಬಿದರತ್ತ ಕಣನೊಳು
ಮತ್ತಗಜ ಮುರಿದಂತೆ ಕದಡುವೆನಹಿತ ಮೋಹರವ
ಹೊತ್ತಿ ಹೊಗೆವ ಪರಾಕ್ರಮಾಗ್ನಿಯ
ತುತ್ತು ಪದ್ಮವ್ಯೂಹ ದೇವರು
ಚಿತ್ತಯಿಸುವುದು ಹೊತ್ತುಗಳೆಯದೆ ಎನ್ನ ಕಳುಹೆಂದ ॥45॥
೦೪೬ ಶರನಿಧಿಯ ವಡಬಾನಳನ ...{Loading}...
ಶರನಿಧಿಯ ವಡಬಾನಳನ ದ
ಳ್ಳುರಿಯ ವರ್ಮವ ತಿವಿವ ತುಂಬಿಗೆ
ಮರಳುದಲೆಯುಂಟಾದಡದು ಭವಭವದ ಪುಣ್ಯಫಲ
ಅರಿಬಲವ ನೀ ಖಂಡಿಗಳೆ ಮೋ
ಹರ ಸಹಿತ ನಾ ಬಹೆನು ನಡೆ ಯೆಂ
ದರಸನಭಿಮನ್ಯುವಿಗೆ ನೇಮವ ಕೊಟ್ಟನಾಹವಕೆ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಬಾಣಗಳ ಸಮುದ್ರದ ಬಡಬಾನಲದ ದಳ್ಳುರಿಯ ಕವಚವನ್ನು (ತಿನ್ನಲು ಬಯಸಿ) ಇರಿಯುವ ದುಂಬಿಯು ಮರಳಿ ಬಂದರೆ ಅದು ಅದರ ಜನ್ಮಜನ್ಮಾಂತರದ ಪುಣ್ಯ ಫಲ. ಶತ್ರು ಸೈನ್ಯವನ್ನು ನೀನು ಕತ್ತರಿಸಿ ನಾಶಮಾಡು. ಸೈನ್ಯ ಸಮೇತನಾಗಿ ನಾನು ಬರುತ್ತೇನೆ, ನಡೆ” ಎಂದು ಧರ್ಮರಾಯನು ಅಭಿಮನ್ಯುವಿಗೆ ಯುದ್ಧಕ್ಕೆ ಅನುಮತಿಯನ್ನು ನೀಡಿದ.
ಪದಾರ್ಥ (ಕ.ಗ.ಪ)
ವರ್ಮ-ಕವಚ, ಮರಳುದಲೆ-ಹಿಂದಿರುಗು.
ಮೂಲ ...{Loading}...
ಶರನಿಧಿಯ ವಡಬಾನಳನ ದ
ಳ್ಳುರಿಯ ವರ್ಮವ ತಿವಿವ ತುಂಬಿಗೆ
ಮರಳುದಲೆಯುಂಟಾದಡದು ಭವಭವದ ಪುಣ್ಯಫಲ
ಅರಿಬಲವ ನೀ ಖಂಡಿಗಳೆ ಮೋ
ಹರ ಸಹಿತ ನಾ ಬಹೆನು ನಡೆ ಯೆಂ
ದರಸನಭಿಮನ್ಯುವಿಗೆ ನೇಮವ ಕೊಟ್ಟನಾಹವಕೆ ॥46॥
೦೪೭ ಶಿವಶಿವಾ ಶಿಶುವಿವನು ...{Loading}...
ಶಿವಶಿವಾ ಶಿಶುವಿವನು ರಿಪುಗಳು
ಜವನ ಜೂಜೆನಿಸುವ ಮಹಾರಥ
ನಿವಹಕೊಬ್ಬನೆ ಗಡ ಸಮಾಹಿತವಲ್ಲ ಸಮರಂಗ
ಅವನಿಪತಿ ನಿರ್ದಯನಲಾ ಕಂ
ಡೆವು ಕುಮಾರನನಿಕ್ಕಿ ಬಹ ರಾ
ಜ್ಯವನು ಸುಡು ಸುಡಲೇತಕೆಂದುದು ನಿಖಿಳ ಪರಿವಾರ ॥47॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಿವಶಿವಾ ಇವನು ಬಾಲಕ. ಶತ್ರುಗಳು ಯಮನೊಂದಿಗೆ ಜೂಜಾಡಲು ಸಮರ್ಥರಾದ ಮಹಾರಥರು. ಇವರ ಸಮೂಹಕ್ಕೆ ಈ ಬಾಲಕ ಒಬ್ಬನೇ ಎದುರಾಳಿಯೇ. ಯುದ್ಧ ಭೂಮಿಯು ಸಮಬಲವಾಗಿಲ್ಲ. ಧರ್ಮರಾಯನು ನಿರ್ದಯನಲ್ಲವೇ, ಕಂಡೆವು. ಈ ಬಾಲಕನನ್ನು ಪಣವಿಟ್ಟು ಬರುವ ರಾಜ್ಯವನ್ನು ಸುಡು ಸುಡು, ಅದು ಏಕೆ ಬೇಕು ಎಂದು ಧರ್ಮಜನ ಪರಿವಾರವೆಲ್ಲವೂ ಹೇಳುತ್ತಿತ್ತು.
ಪದಾರ್ಥ (ಕ.ಗ.ಪ)
ನಿವಹ-ಗುಂಪು, ಸಮಾಹಿತ-ಸಮಬಲ
ಮೂಲ ...{Loading}...
ಶಿವಶಿವಾ ಶಿಶುವಿವನು ರಿಪುಗಳು
ಜವನ ಜೂಜೆನಿಸುವ ಮಹಾರಥ
ನಿವಹಕೊಬ್ಬನೆ ಗಡ ಸಮಾಹಿತವಲ್ಲ ಸಮರಂಗ
ಅವನಿಪತಿ ನಿರ್ದಯನಲಾ ಕಂ
ಡೆವು ಕುಮಾರನನಿಕ್ಕಿ ಬಹ ರಾ
ಜ್ಯವನು ಸುಡು ಸುಡಲೇತಕೆಂದುದು ನಿಖಿಳ ಪರಿವಾರ ॥47॥
೦೪೮ ಲಲಿತ ಚನ್ದ್ರಿಕೆಗೇಕೆ ...{Loading}...
ಲಲಿತ ಚಂದ್ರಿಕೆಗೇಕೆ ದಾವಾ
ನಳನ ಖಾಡಾಖಾಡಿ ಸುರಲತೆ
ಯೆಳೆಯ ಕುಡಿ ಮುರಿದೊತ್ತಲಾಪುದೆ ವಜ್ರಧಾರೆಗಳ
ನಳಿನ ನಾಳವು ಗಜದ ಕೈಯೊಡ
ನಳವಿಗೊಡಲಂತರವೆ ಪಾಪಿಗ
ಳೆಳಮಗನ ನೂಕಿದರು ಕಾಳೆಗಕೆಂದುದಮರಗಣ ॥48॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಮಲವಾದ ಚಂದ್ರನ ಬೆಳುದಿಂಗಳಿಗೆ ಬೆಂಕಿಯೊಡನೆ ಹೋರಾಡಿ ಗೆಲ್ಲುವ ಭ್ರಮೆ ಏಕೆ ? ವಜ್ರಾಯುಧದ ಪೆಟ್ಟನ್ನು ಕಲ್ಪಲತೆಯ ಕೋಮಲವಾದ ಚಿಗುರು ಹೇಗೆ ತಡೆದುಕೊಳ್ಳಲು ಸಾಧ್ಯವಾಗುತ್ತದೆ ? ಕಮಲದ ನಾಳವು ಆನೆಯ ಸೊಂಡಿಲಿನೊಡನೆ ಹೋರಾಟ ಮಾಡಬಹುದೆ ? ಪಾಪಿಗಳಾದ ಪಾಂಡವರು ಎಳೆಯ ಬಾಲಕನನ್ನು ಅನ್ಯಾಯವಾಗಿ ರಣರಂಗಕ್ಕೆ ಅಟ್ಟಿದರು ಎಂದು ದೇವತೆಗಳು ಮರುಗಿದರು.
ಪದಾರ್ಥ (ಕ.ಗ.ಪ)
ಸುರಲತೆ - ಕಲ್ಪಲತೆ
ಮೂಲ ...{Loading}...
ಲಲಿತ ಚಂದ್ರಿಕೆಗೇಕೆ ದಾವಾ
ನಳನ ಖಾಡಾಖಾಡಿ ಸುರಲತೆ
ಯೆಳೆಯ ಕುಡಿ ಮುರಿದೊತ್ತಲಾಪುದೆ ವಜ್ರಧಾರೆಗಳ
ನಳಿನ ನಾಳವು ಗಜದ ಕೈಯೊಡ
ನಳವಿಗೊಡಲಂತರವೆ ಪಾಪಿಗ
ಳೆಳಮಗನ ನೂಕಿದರು ಕಾಳೆಗಕೆಂದುದಮರಗಣ ॥48॥
೦೪೯ ಬಿಗಿದ ಗಣ್ಡುಡಿಗೆಯಲಿ ...{Loading}...
ಬಿಗಿದ ಗಂಡುಡಿಗೆಯಲಿ ಹೊನ್ನಾ
ಯುಗದ ಹೊಳೆವ ಕಠಾರಿಯನು ಮೊನೆ
ಮಗುಚಿ ಸಾಧು ಜವಾಜಿ ಕತ್ತುರಿ ಗಂಧಲೇಪದಲಿ
ಮಗಮಗಿಪ ಹೊಂದೊಡರ ಹಾರಾ
ದಿಗಳಲೊಪ್ಪಂಬಡೆದು ನಸುನಗೆ
ಮೊಗದ ಸೊಂಪಿನಲಾಹವಕ್ಕನುವಾದನಭಿಮನ್ಯು ॥49॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವು ಯುದ್ಧದ ಉಡುಗೆಯನ್ನು ಧರಿಸಿ, ಬಂಗಾರದ ಹಿಡಿಕೆಯುಳ್ಳ ಹೊಳೆಯುವ ಕಠಾರಿಯನ್ನು ಹರಿತಗೊಳಿಸಿ, ಸಾದು, ಜವಾಜಿ, ಕಸ್ತೂರಿ, ಗಂಧ ಮೊದಲಾದ ಪರಿಮಳ ದ್ರವ್ಯವನ್ನು ಲೇಪಿಸಿಕೊಂಡು, ಬಂಗಾರದ ಹಾರಗಳನ್ನು ಧರಿಸಿ, ಶೋಭಿಸುತ್ತಾ, ನಸುನಗುವ ಮುಖದಿಂದ, ಉತ್ಸಾಹದಿಂದ ಯುದ್ಧಕ್ಕೆ ಸಿದ್ಧನಾದನು.
ಪದಾರ್ಥ (ಕ.ಗ.ಪ)
ಕತ್ತುರಿ-ಕಸ್ತೂರಿ, ಒಪ್ಪಂ ಬಡೆದು-ಶೋಭೆಯನ್ನು ಹೊಂದಿ,
ಮೂಲ ...{Loading}...
ಬಿಗಿದ ಗಂಡುಡಿಗೆಯಲಿ ಹೊನ್ನಾ
ಯುಗದ ಹೊಳೆವ ಕಠಾರಿಯನು ಮೊನೆ
ಮಗುಚಿ ಸಾಧು ಜವಾಜಿ ಕತ್ತುರಿ ಗಂಧಲೇಪದಲಿ
ಮಗಮಗಿಪ ಹೊಂದೊಡರ ಹಾರಾ
ದಿಗಳಲೊಪ್ಪಂಬಡೆದು ನಸುನಗೆ
ಮೊಗದ ಸೊಂಪಿನಲಾಹವಕ್ಕನುವಾದನಭಿಮನ್ಯು ॥49॥
೦೫೦ ಉಲಿವ ಘಣ್ಟೆಯ ...{Loading}...
ಉಲಿವ ಘಂಟೆಯ ಕುಣಿವ ತುರಗಾ
ವಳಿಯ ಗಗನದೊಳಗಿವ ಬಿರುದಿನ
ಪಳಹರದ ತೆತ್ತಿಸಿದ ಕನಕದ ಚೌಕ ಸತ್ತಿಗೆಯ
ಘುಳುಘುಳಿಪ ಚೀತ್ಕಾರ ಕೋಳಾ
ಹಳದ ಸೂತನ ರೇಖೆಯಲಿ ಭಟ
ಕುಲಲಲಾಮನ ತೇರು ಬಂದುದು ತೀವಿದಸ್ತ್ರದಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥಕ್ಕೆ ಕಟ್ಟಿದ ಗಂಟೆಗಳ ಸದ್ದು, ಕುಣಿಯುತ್ತಿದ್ದ ಕುದುರೆಗಳ ಸಮೂಹ , ಆಕಾಶವನ್ನು ತಾಗುವ ಬಿರುದಿನ ಬಾವುಟ, ಒಟ್ಟಾಗಿ ಕಟ್ಟಿದ್ದ ಚಿನ್ನದ ಚೌಕಾಕಾರದ ಛತ್ರಿಗಳು- ಇವುಗಳೊಡನೆ, ಸಾರಥಿಯ ನಿರ್ದೇಶನದಲ್ಲಿ ಘುಳುಘುಳು ಶಬ್ದ ಮಾಡುತ್ತಾ ಭಟಕುಲ ಶ್ರೇಷ್ಠನಾದ ಅಭಿಮನ್ಯುವಿನ ರಥ ಅಸ್ತ್ರಗಳನ್ನು ತುಂಬಿಕೊಂಡು ಬಂದಿತು. ರಣರಂಗದಲ್ಲಿ ಎಲ್ಲಿ ನೋಡಿದರೂ ಚೀತ್ಕಾರದ ಧ್ವನಿ ಉಂಟಾಯಿತು, ಸೂತನು ಸೂಚಿಸಿದ ಮಾರ್ಗದಲ್ಲಿ ರಥ ಹೊರಟಿತು.
ಪದಾರ್ಥ (ಕ.ಗ.ಪ)
ಸತ್ತಿಗೆ-ಛತ್ರಿ, ತೀವಿದ-ತುಂಬಿದ, ಪಳಹರ - ಬಾವುಟ, ಧ್ವಜ
ಮೂಲ ...{Loading}...
ಉಲಿವ ಘಂಟೆಯ ಕುಣಿವ ತುರಗಾ
ವಳಿಯ ಗಗನದೊಳಗಿವ ಬಿರುದಿನ
ಪಳಹರದ ತೆತ್ತಿಸಿದ ಕನಕದ ಚೌಕ ಸತ್ತಿಗೆಯ
ಘುಳುಘುಳಿಪ ಚೀತ್ಕಾರ ಕೋಳಾ
ಹಳದ ಸೂತನ ರೇಖೆಯಲಿ ಭಟ
ಕುಲಲಲಾಮನ ತೇರು ಬಂದುದು ತೀವಿದಸ್ತ್ರದಲಿ ॥50॥
೦೫೧ ತುರಗ ತತಿಗಭಿನಮಿಸಿ ...{Loading}...
ತುರಗ ತತಿಗಭಿನಮಿಸಿ ರಥವನು
ತಿರುಗಿ ಬಲವಂದೆರಗಿ ಚಾಪಕೆ
ಕರವ ನೊಸಲಲಿ ಚಾಚಿ ಭಾರಿಯ ಭುಜವನೊದರಿಸುತ
ಅರಸಗಭಿವಂದಿಸುತ ಭೀಮನ
ಹರಕೆಗಳ ಕೈಕೊಳುತ ನಕುಳಾ
ದ್ಯರಿಗೆ ಪೊಡವಟ್ಟಡರಿದನು ನವರತುನಮಯ ರಥವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳಿಗೆ ನಮಸ್ಕರಿಸಿ ರಥಕ್ಕೆ ಪ್ರದಕ್ಷಿಣೆಯನ್ನು ಮಾಡಿ, ಬಿಲ್ಲನ್ನು ಹಣೆಗೊತ್ತಿಕೊಂಡು ಭಾರಿಯಾದ ತನ್ನ ಭುಜಗಳನ್ನು ಕೊಡವುತ್ತಾ, ಧರ್ಮರಾಯನಿಗೆ ನಮಸ್ಕರಿಸಿ, ಭೀಮನ ಆಶೀರ್ವಾದಗಳನ್ನು ಸ್ವೀಕರಿಸಿ ನಕುಲಾದಿಗಳಿಗೆ ನಮಸ್ಕರಿಸಿ ಅಭಿಮನ್ಯುವು ನವರತ್ನಮಯವಾದ ರಥವನ್ನು ಏರಿದನು.
ಮೂಲ ...{Loading}...
ತುರಗ ತತಿಗಭಿನಮಿಸಿ ರಥವನು
ತಿರುಗಿ ಬಲವಂದೆರಗಿ ಚಾಪಕೆ
ಕರವ ನೊಸಲಲಿ ಚಾಚಿ ಭಾರಿಯ ಭುಜವನೊದರಿಸುತ
ಅರಸಗಭಿವಂದಿಸುತ ಭೀಮನ
ಹರಕೆಗಳ ಕೈಕೊಳುತ ನಕುಳಾ
ದ್ಯರಿಗೆ ಪೊಡವಟ್ಟಡರಿದನು ನವರತುನಮಯ ರಥವ ॥51॥
೦೫೨ ಸೂಳವಿಸಿದವು ಲಗ್ಗೆಯಲಿ ...{Loading}...
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳತತಿ ಸಿಡಿಲೆರಗಿತೆನಲು
ಬ್ಬಾಳು ಮಿಗೆ ಕೈನೆಗಹಿ ಕೈವಾರಿಸುವ ಗಮಕಿಗಳು
ಸಾಲ ಹೆಗ್ಗಹಳೆಗಳು ರಿಪು ಭೂ
ಪಾಲಕರ ಬೈಬೈದು ಗಜರಿದ
ವಾಳುತನದಾಳಾಪ ಬೀರಿತು ಬೆರಗನಹಿತರಿಗೆ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಸ್ಸಾಳವಾದ್ಯಗಳು ಸಿಡಿಲು ಎರಗಿದಂತೆ ಭೋರ್ಗರೆದುವು. ವೀರರಾದ ಸೈನಿಕರು ಕೈಯೆತ್ತಿ ಸಂತೋಷವನ್ನು ಸೂಚಿಸಿದರು. ಗಮಕಿಗಳು ಅಭಿಮನ್ಯುವಿನ ಪ್ರತಾಪವನ್ನು ಹಾಡಿ ಹೊಗಳಿದರು. ಸಾಲು ಸಾಲಾಗಿ ದೊಡ್ಡ ದೊಡ್ಡ ಕಹಳೆಗಳ ಧ್ವನಿಯು ಶತ್ರುರಾಜರನ್ನು ಬೈಯುತ್ತಿವೆ ಎನಿಸುವಂತಿತ್ತು. ವೀರರ ಆಟೋಪಗಳು ಶತ್ರು ಸೇನೆಗೆ ಬೆರಗನ್ನುಂಟು ಮಾಡಿತು.
ಪದಾರ್ಥ (ಕ.ಗ.ಪ)
ಸೂಳವಿಸು-ಕ್ರಮವಾಗಿ, ಲಗ್ಗೆಯಲಿ-ಮೇಲಿಂದ ಮೇಲೆ ಬಿದ್ದು,
ಮೂಲ ...{Loading}...
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳತತಿ ಸಿಡಿಲೆರಗಿತೆನಲು
ಬ್ಬಾಳು ಮಿಗೆ ಕೈನೆಗಹಿ ಕೈವಾರಿಸುವ ಗಮಕಿಗಳು
ಸಾಲ ಹೆಗ್ಗಹಳೆಗಳು ರಿಪು ಭೂ
ಪಾಲಕರ ಬೈಬೈದು ಗಜರಿದ
ವಾಳುತನದಾಳಾಪ ಬೀರಿತು ಬೆರಗನಹಿತರಿಗೆ ॥52॥
೦೫೩ ಒಡನೆ ಕಳುಹುತ ...{Loading}...
ಒಡನೆ ಕಳುಹುತ ಬಂದನಾ ನೆಲ
ದೊಡೆಯನನುಜರು ಸಹಿತ ನಯನದಿ
ಬಿಡುವನಿಯ ಸಾಲಿನಲಿ ನನೆದರು ಬಂದು ಕಿರಿದೆಡೆಯ
ನಡೆ ವಿಜಯನಾಗೆಂದು ತನುವನು
ತಡವಿದರು ಕಡುಮೋಹವೆಡೆಯಲಿ
ಘುಡುಘುಡಿಸೆ ಶಿಶು ಬೀಳುಕೊಂಡನು ಪಿತೃಚತುಷ್ಟಯವ ॥53॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಭಿಮನ್ಯುವನ್ನು ಬೀಳ್ಕೊಡಲು ರಾಜನಾದ ಧರ್ಮರಾಯನು ಎಲ್ಲ ಸೋದರರೊಡನೆ ಅಭಿಮನ್ಯುವಿನ ಬಳಿಗೆ ಬಂದನು. ತಮ್ಮ ಕಣ್ಣುಗಳಿಂದ ಉಕ್ಕುತ್ತಿದ್ದ ಅಶ್ರುಧಾರೆಯಿಂದ ನೆನೆದ ಅವರು, ಅಭಿಮನ್ಯುವಿನ ಮೈದಡವಿ"ನಿನಗೆ ವಿಜಯವಾಗಲಿ” ಎಂದು ಹಾರೈಸಿದರು. ಅಭಿಮನ್ಯುವಿನ ಮೇಲಿನ ಬಗೆಗೆ ಇದ್ದ ಅವರ ಮೋಹವು ಹೆಚ್ಚಾಗುತ್ತಿರುವಂತೆ ಬಾಲಕನಾದ ಅಭಿಮನ್ಯುವು ತನ್ನ ನಾಲ್ಕು ಜನ ತಂದೆಯರನ್ನು ಬೀಳುಕೊಟ್ಟನು.
ಪದಾರ್ಥ (ಕ.ಗ.ಪ)
ಬಿಡುವನಿಯ-ಬೀಳುತ್ತಿರುವ ಹನಿಗಳಿಂದ
ಮೂಲ ...{Loading}...
ಒಡನೆ ಕಳುಹುತ ಬಂದನಾ ನೆಲ
ದೊಡೆಯನನುಜರು ಸಹಿತ ನಯನದಿ
ಬಿಡುವನಿಯ ಸಾಲಿನಲಿ ನನೆದರು ಬಂದು ಕಿರಿದೆಡೆಯ
ನಡೆ ವಿಜಯನಾಗೆಂದು ತನುವನು
ತಡವಿದರು ಕಡುಮೋಹವೆಡೆಯಲಿ
ಘುಡುಘುಡಿಸೆ ಶಿಶು ಬೀಳುಕೊಂಡನು ಪಿತೃಚತುಷ್ಟಯವ ॥53॥
೦೫೪ ಎಲೆ ಕುಮಾರಕ ...{Loading}...
ಎಲೆ ಕುಮಾರಕ ಹರ ಕುಮಾರಂ
ಗಳವಿಯಲಿ ನಿಲಲರಿದು ಕೊರಳಿನ
ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು
ಬಲುಗಡಿಯನೀ ಕರ್ಣನೀ ಕೃಪ
ನಲಘು ಭುಜಬಲ ದ್ರೋಣನೀ ವೆ
ಗ್ಗಳೆಯ ಜಯದ್ರಥನೆಂದು ಸಾರಥಿ ತೂಗಿದನು ಶಿರವ ॥54॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಬಾಲಕನಾದ ಅಭಿಮನ್ಯುವೆ, ಈಶ್ವರನ ಪುತ್ರನಿಗೆ ಈ ಯುದ್ಧದಲ್ಲಿ ಎದುರು ನಿಲ್ಲಲು ಸಾಧ್ಯವಾಗದು. ಕೊರಳಿಗೆ ಇರುವ ಶಕ್ತಿ ಎಷ್ಟೆಂಬುದನ್ನು ತಿಳಿಯದೆ ಪರ್ವತವನ್ನು ತಲೆಯ ಮೇಲಿಟ್ಟುಕೊಳ್ಳಲು ವೀರರಾದವರು ಪ್ರಯತ್ನಿಸುತ್ತಾರೆಯೆ. ಶತ್ರು ಸೇನೆಯಲ್ಲಿರುವ ಈ ಕರ್ಣ ಬಹಳ ಸಮರ್ಥ, ಈ ಕೃಪನು ಲಘುವಲ್ಲ. ದ್ರೋಣನು ಅಸಾಮಾನ್ಯವಾದ ಭುಜಬಲ ಉಳ್ಳವನು. ಜಯದ್ರಥನು ಶ್ರೇಷ್ಠನಾದವನು” ಎಂದು ಹೇಳುತ್ತ ಸಾರಥಿ ತಲೆದೂಗಿದನು.
ಪದಾರ್ಥ (ಕ.ಗ.ಪ)
ಅಂಘೈಸುವರೆ-ಪ್ರಯತ್ನಿಸುವರೆ.
ಮೂಲ ...{Loading}...
ಎಲೆ ಕುಮಾರಕ ಹರ ಕುಮಾರಂ
ಗಳವಿಯಲಿ ನಿಲಲರಿದು ಕೊರಳಿನ
ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು
ಬಲುಗಡಿಯನೀ ಕರ್ಣನೀ ಕೃಪ
ನಲಘು ಭುಜಬಲ ದ್ರೋಣನೀ ವೆ
ಗ್ಗಳೆಯ ಜಯದ್ರಥನೆಂದು ಸಾರಥಿ ತೂಗಿದನು ಶಿರವ ॥54॥
೦೫೫ ಮರುಳು ಸಾರಥಿ ...{Loading}...
ಮರುಳು ಸಾರಥಿ ನಮ್ಮ ನಾವ್ ಪತಿ
ಕರಿಸಿಕೊಳಲಾಗದು ಕಣಾ ನೀ
ನರಿಯೆ ನಮ್ಮಂತರವ ನಾವಿನ್ನಾಡಿ ಫಲವೇನು
ಗುರುತನುಜನೇ ಕೃಪನೆ ದ್ರೋಣನೆ
ತರಣಿತನಯನೆ ಸೈಂಧವನೆ ಹುಲು
ನರರು ಗಣ್ಯವೆ ಕೇಳು ಭಾಷೆಯನೆಂದನಭಿಮನ್ಯು ॥55॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಮರುಳು, ನಮ್ಮನ್ನು ನಾವೇ ಹೊಗಳಿಕೊಳ್ಳುವುದು ಸರಿಯಲ್ಲ. ನಿನಗೆ ನನ್ನ ಶಕ್ತಿ ಎಷ್ಟೆಂದು ತಿಳಿದಿಲ್ಲವೆನಿಸುತ್ತದೆ. ನಾನು ನನ್ನ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ. ಗುರುಸುತನಾದ ಅಶ್ವತ್ಥಾಮ, ಕೃಪ, ದ್ರೋಣ, ಕರ್ಣ, ಸೈಂಧವ ಇಂತಹ ಹುಲುಮನುಷ್ಯರು ನನಗೆ ಲೆಕ್ಕವೇ, ನನ್ನ ಭಾಷೆಯನ್ನು ಕೇಳು” ಎಂದು ಅಭಿಮನ್ಯು ಹೇಳಿದನು.
ಮೂಲ ...{Loading}...
ಮರುಳು ಸಾರಥಿ ನಮ್ಮ ನಾವ್ ಪತಿ
ಕರಿಸಿಕೊಳಲಾಗದು ಕಣಾ ನೀ
ನರಿಯೆ ನಮ್ಮಂತರವ ನಾವಿನ್ನಾಡಿ ಫಲವೇನು
ಗುರುತನುಜನೇ ಕೃಪನೆ ದ್ರೋಣನೆ
ತರಣಿತನಯನೆ ಸೈಂಧವನೆ ಹುಲು
ನರರು ಗಣ್ಯವೆ ಕೇಳು ಭಾಷೆಯನೆಂದನಭಿಮನ್ಯು ॥55॥
೦೫೬ ಬವರವಾದರೆ ಹರನ ...{Loading}...
ಬವರವಾದರೆ ಹರನ ವದನಕೆ
ಬೆವರ ತಹೆನವಗಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ
ಜವನ ಜವಗೆಡಿಸುವೆನು ಸಾಕಿ
ನ್ನಿವರವರಲೇನರ್ಜುನನು ಮಾ
ಧವನು ಮುನಿದಡೆ ಗೆಲುವೆನಂಜದೆ ರಥವ ಹರಿಸೆಂದ ॥56॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧಕ್ಕೆ ಸಾಕ್ಷಾತ್ ಶಿವನೇ ಬಂದರೂ ಅವನ ಮುಖದಲ್ಲಿ ಬೆವರು ಬರಿಸುತ್ತೇನೆ. ಇಂದ್ರನೇ ಬಂದು ನನ್ನನ್ನು ಎದುರಿಸಿದರೆ ಅವನನ್ನು ಸೋಲಿಸುತ್ತೇನೆ. ಪರಶುರಾಮನೇ ಬಂದು ಯುದ್ಧಕ್ಕೆ ನಿಂತರೆ ಅವನು ಮೆಚ್ಚಿ ಅಹುದು ಎನ್ನುವ ಹಾಗೆ ಮಾಡುತ್ತೇನೆ. ಯಮನ ವೇಗವನ್ನೇ ನಿಲ್ಲಿಸುತ್ತೇನೆ. (ದಿಕ್ಕು ತಪ್ಪಿಸುತ್ತೇನೆ) ಇನ್ನು ಉಳಿದವರು ಲೆಕ್ಕಕ್ಕಿಲ್ಲ, ಅರ್ಜುನ ಅಥವಾ ಕೃಷ್ಣನೇ ಕೋಪಿಸಿಕೊಂಡು ಯುದ್ಧಕ್ಕೆ ಬಂದರೂ ಜಯವನ್ನು ಸಾಧಿಸುತ್ತೇನೆ, ಹೆದರದೆ ರಥವನ್ನು ನಡೆಸು" ಎಂದು ಸಾರಥಿಗೆ ಅಭಿಮನ್ಯು ಹೇಳಿದನು.
ಪದಾರ್ಥ (ಕ.ಗ.ಪ)
ವಾಸವ-ಇಂದ್ರ
ಮೂಲ ...{Loading}...
ಬವರವಾದರೆ ಹರನ ವದನಕೆ
ಬೆವರ ತಹೆನವಗಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ
ಜವನ ಜವಗೆಡಿಸುವೆನು ಸಾಕಿ
ನ್ನಿವರವರಲೇನರ್ಜುನನು ಮಾ
ಧವನು ಮುನಿದಡೆ ಗೆಲುವೆನಂಜದೆ ರಥವ ಹರಿಸೆಂದ ॥56॥
೦೫೭ ಬಾಲನೆನ್ನದಿರೆನುತ ರಿಪುಭಟ ...{Loading}...
ಬಾಲನೆನ್ನದಿರೆನುತ ರಿಪುಭಟ
ಭಾಳಲೋಚನನೆನಿಸುವರ್ಜುನ
ಬಾಳುಗೆನುತುದ್ದಂಡ ಕೋದಂಡವನು ಜೇವೊಡೆಯೆ
ಮೇಲು ಜಗವಲ್ಲಾಡಿದವು ಕೊರ
ಳೋಳಿ ಕೆದರಿತು ಕುಸಿದನಹಿ ಪಾ
ತಾಳ ಗೂಳೆಯ ತೆಗೆಯಲಳ್ಳಿರಿಯಿತ್ತು ಬಿಲು ರಭಸ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನನ್ನು ‘ಬಾಲಕ-ಚಿಕ್ಕವನು’ ಎಂದು ಕರೆಯದಿರು. ಶತ್ರುವೀರನಿಗೆ ಹಣೆಯಲ್ಲಿ ಕಣ್ಣಿರುವ ಸಾಕ್ಷಾತ್ ಶಿವನಂತಿದ್ದ ಅರ್ಜುನ ಬಾಳಲಿ. ಎಂದು ದೊಡ್ಡದಾದ ಬಿಲ್ಲಿನ ಹಗ್ಗವನ್ನು ಎಳೆದು ಠೇಂಕಾರ ಮಾಡಿದಾಗ ಮೇಲಿನ ಲೋಕಗಳೆಲ್ಲವೂ ನಡುಗಿ ಹೋದವು. ಭೂಮಿಯನ್ನು ಹೊತ್ತ ಆದಿಶೇಷನ ಕೊರಳೂ ಕುಸಿಯಿತು. ಪಾತಾಳ ಲೋಕ ತನ್ನ ಸಮಸ್ತವನ್ನು ತೆಗೆದುಕೊಂಡು ಬೇರೊಂದು ಲೋಕಕ್ಕೆ ವಲಸೆ ಹೊರಡುವಂತಾಯಿತು.
ಪದಾರ್ಥ (ಕ.ಗ.ಪ)
ಜೇವೊಡೆ-ಬಿಲ್ಲಿನ ಹಗ್ಗವನ್ನೆಳೆದು ಧ್ವನಿಮಾಡು, ಗೂಳೆತೆಗೆ-ಎಲ್ಲ ವಸ್ತುವಿನೊಡನೆ ಹೊರಡು, ಗುಳೆ ಹೋಗು, ವಲಸೆ
ಮೂಲ ...{Loading}...
ಬಾಲನೆನ್ನದಿರೆನುತ ರಿಪುಭಟ
ಭಾಳಲೋಚನನೆನಿಸುವರ್ಜುನ
ಬಾಳುಗೆನುತುದ್ದಂಡ ಕೋದಂಡವನು ಜೇವೊಡೆಯೆ
ಮೇಲು ಜಗವಲ್ಲಾಡಿದವು ಕೊರ
ಳೋಳಿ ಕೆದರಿತು ಕುಸಿದನಹಿ ಪಾ
ತಾಳ ಗೂಳೆಯ ತೆಗೆಯಲಳ್ಳಿರಿಯಿತ್ತು ಬಿಲು ರಭಸ ॥57॥
೦೫೮ ಸುರನದಿಗೆ ಶಿವನಾಯ್ತು ...{Loading}...
ಸುರನದಿಗೆ ಶಿವನಾಯ್ತು ಮಕರಾ
ಕರಕೆ ಕಳಶಜನಾಯ್ತು ತರಣಿಗೆ
ಅರಿ ವಿಧುಂತುದನಾಯ್ತು ರಥಪದತಳಿತ ಧೂಳಿಯಲಿ
ಅರರೆ ಸತ್ವ ರಜಸ್ತಮಂಗಳೊ
ಳೆರಡು ಗುಣವಡಗಿತು ರಜೋ ಗುಣ
ದುರುಳಿಯಾದುದು ಲೋಕವೆನೆ ಘಾಡಿಸಿತು ಪದಧೂಳಿ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಂಗಾನದಿ ಶಿವನ ಜಟೆಯಲ್ಲಿ ತುಂಬಿದಂತೆ, ಸಮುದ್ರ ನೀರೆಲ್ಲ ಅಗಸ್ತ್ಯನ ಉದರವನ್ನು ತುಂಬಿದಂತೆ É, ರಾಹು ಸೂರ್ಯನಿಗೆ ಅಡ್ಡವಾದಂತೆ, ಅಭಿಮನ್ಯುವಿನ ರಥದ ರಭಸದಿಂದೆದ್ದ ಧೂಳು, ಆಕಾಶವನ್ನೆಲ್ಲ ತುಂಬಿಕೊಂಡಿತು. ಸತ್ವ, ರಜೋ, ತಮೋ ಗುಣಗಳಲ್ಲಿ ಸತ್ವ ಮತ್ತು ತಮ ಗುಣಗಳು ಮಾಯವಾಗಿ ರಜೋಗುಣವು ಪ್ರಪಂಚವನ್ನೇ ಮುತ್ತಿಕೊಳ್ಳುತ್ತಿದೆಯೋ ಎಂಬಂತೆ ಧೂಳು ಆಕಾಶಕ್ಕೆ ಏರಿತು.
ಪದಾರ್ಥ (ಕ.ಗ.ಪ)
ವಿಧುಂತುದ-ರಾಹು
ಟಿಪ್ಪನೀ (ಕ.ಗ.ಪ)
ರಜ (ದೂಳು) ಮತ್ತು ರಜೋಗುಣದ ನಡವಣ ಶ್ಲೇಷೆಯನ್ನು ಗಮನಿಸಿ
ಮೂಲ ...{Loading}...
ಸುರನದಿಗೆ ಶಿವನಾಯ್ತು ಮಕರಾ
ಕರಕೆ ಕಳಶಜನಾಯ್ತು ತರಣಿಗೆ
ಅರಿ ವಿಧುಂತುದನಾಯ್ತು ರಥಪದತಳಿತ ಧೂಳಿಯಲಿ
ಅರರೆ ಸತ್ವ ರಜಸ್ತಮಂಗಳೊ
ಳೆರಡು ಗುಣವಡಗಿತು ರಜೋ ಗುಣ
ದುರುಳಿಯಾದುದು ಲೋಕವೆನೆ ಘಾಡಿಸಿತು ಪದಧೂಳಿ ॥58॥
೦೫೯ ಆರ ರಥವಿದು ...{Loading}...
ಆರ ರಥವಿದು ಸೈನ್ಯ ಪಾರಾ
ವಾರಕಿದನಂಘೈಸುವನು ತ್ರಿಪು
ರಾರಿಯೋ ಮೇಣಾ ತ್ರಿವಿಕ್ರಮನೋ ಸುರೇಶ್ವರನೊ
ವೀರನಹನೋ ಪೂತು ರಣದ ದೊ
ಠಾರನಿವನಾರೆನುತ ತರುಬಿಯೆ
ತೋರಹತ್ತರು ತಾಗಿದರು ಸೌಬಲ ಜಯದ್ರಥರು ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದು ಯಾರ ರಥ ? ಕೊನೆಯೇ ಇಲ್ಲದ ನಮ್ಮ ಮಹಾ ಸೈನ್ಯದ ಎದುರು ಈ ರಥವನ್ನು ಒಡ್ಡುತ್ತಿದ್ದಾನೆ. ಇವನು ತ್ರಿಪುರಾಸುರನನ್ನು ಕೊಂದ ಶಿವನೊ ? ಅಥವಾ ವಿಷ್ಣುವಿನ ಅವತಾರವಾದ ತ್ರಿವಿಕ್ರಮನೊ ? ಇಂದ್ರನೊ ? ಇವನು ಮಹಾವೀರನಾಗಿದ್ದಾನೆ. ಯುದ್ಧದಲ್ಲಿ ಗಟ್ಟಿಗನಾಗಿರುವ ಇವನಾರು ಎನ್ನುತ್ತ ಅವನ ರಥವನ್ನು ಶಕುನಿ ಜಯದ್ರಥಾದಿಗಳೇ ಮುಂತಾದ ವೀರರು ಎದುರಿಸಿದರು.
ಪದಾರ್ಥ (ಕ.ಗ.ಪ)
ಪಾರಾವಾರ-ಕೊನೆಯಿಲ್ಲದ್ದು, ಅಂಘೈಸು-ಹೋರಾಡು, ದೊಠಾರ-ಗಟ್ಟಿ ಮನಸ್ಸಿನವನು,
ಮೂಲ ...{Loading}...
ಆರ ರಥವಿದು ಸೈನ್ಯ ಪಾರಾ
ವಾರಕಿದನಂಘೈಸುವನು ತ್ರಿಪು
ರಾರಿಯೋ ಮೇಣಾ ತ್ರಿವಿಕ್ರಮನೋ ಸುರೇಶ್ವರನೊ
ವೀರನಹನೋ ಪೂತು ರಣದ ದೊ
ಠಾರನಿವನಾರೆನುತ ತರುಬಿಯೆ
ತೋರಹತ್ತರು ತಾಗಿದರು ಸೌಬಲ ಜಯದ್ರಥರು ॥59॥
೦೬೦ ಫಡ ಜಯದ್ರಥ ...{Loading}...
ಫಡ ಜಯದ್ರಥ ಹೋಗು ಹೋಗಳ
ವಡಿಕೆಯಲ್ಲಿದು ಸಾರು ಸೌಬಲ
ಮಿಡುಕಿದಡೆ ಮರುಳಹಿರಿ ಲೇಸಲ್ಲೆಮ್ಮೊಳತಿಮಥನ
ತುಡುಕಿದರೆ ಕೈ ಬೇವುದೀ ಬಲು
ಗಡಿಯತನ ಬಯಲಹುದೆನುತ ತಡೆ
ಗಡಿದು ಬಿಸುಟನು ಭಟರ ಹಯ ರಥ ಧನುವ ಸಾರಥಿಯ ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಯದ್ರಥನೆ, ಸೌಬಲನೆ, ಹಿಂದಕ್ಕೆ ಹೋಗುವುದು ಒಳ್ಳೆಯದು. ನಿಮಗೆ ಯುದ್ಧ ಮಾಡಲು ಸಾಧ್ಯವಾಗದು. ಮುಂದೆ ಬಂದು ಯುದ್ಧ ಮಾಡಿದರೆ ಹುಚ್ಚುತನವಾದೀತು. ನಮ್ಮೊಡನೆ ಅತಿಯಾಗಿ ಕಾದುವುದು ಒಳ್ಳೆಯದಲ್ಲ. ಯುದ್ಧ ಮಾಡಲು ಕೈ ಎತ್ತಿದರೆ ಅದು ಬೆಂದು ಹೋಗುತ್ತದೆ. ನಿಮ್ಮ ಬಲುಗಡಿಯತನ (ಶತ್ರುಗಳನ್ನು ಕತ್ತರಿಸುವ ಗುಣ) ಸಾಬೀತಾಗುತ್ತದೆ ಎಂದು ಹೇಳುತ್ತಾ ಎದುರಿಗಿದ್ದ ಎಲ್ಲ ಸೈನಿಕರನ್ನು ಅವರ ರಥ, ಕುದುರೆ, ಬಿಲ್ಲು, ಸಾರಥಿಯರನ್ನು ಕತ್ತರಿಸಿ ಹಾಕಿದನು.
ಪದಾರ್ಥ (ಕ.ಗ.ಪ)
ಅಳವಡಿಕೆಯಲ್ಲ-ಹೊಂದಿಕೆಯಾಗದು,
ಬಲುಗಡಿಯತನ -ಶತ್ರುಗಳನ್ನು ಕತ್ತರಿಸುವ ಗುಣ
ಮೂಲ ...{Loading}...
ಫಡ ಜಯದ್ರಥ ಹೋಗು ಹೋಗಳ
ವಡಿಕೆಯಲ್ಲಿದು ಸಾರು ಸೌಬಲ
ಮಿಡುಕಿದಡೆ ಮರುಳಹಿರಿ ಲೇಸಲ್ಲೆಮ್ಮೊಳತಿಮಥನ
ತುಡುಕಿದರೆ ಕೈ ಬೇವುದೀ ಬಲು
ಗಡಿಯತನ ಬಯಲಹುದೆನುತ ತಡೆ
ಗಡಿದು ಬಿಸುಟನು ಭಟರ ಹಯ ರಥ ಧನುವ ಸಾರಥಿಯ ॥60॥
೦೬೧ ರಥ ಮುರಿದು ...{Loading}...
ರಥ ಮುರಿದು ಮನನೊಂದು ಸುಮಹಾ
ರಥರು ಹಿಮ್ಮೆಟ್ಟಿದರು ಬಳಿಕತಿ
ರಥಭಯಂಕರನೊಡೆದು ಹೊಕ್ಕನು ವೈರಿಮೋಹರವ
ಮಥನದಲಿ ಮುರಿಯೊಡೆದ ಶೈಲ
ವ್ಯಥಿತ ಸಾಗರದಂತೆ ಬಿರಿದವು
ರಥನಿಕರ ಕಾಲಾಳು ಕುದುರೆಗಳೊಂದು ನಿಮಿಷದಲಿ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥ ಮುರಿದು ದುಃಖದಿಂದ ಮಹಾರಥರು ರಣರಂಗದಿಂದ ಹಿಮ್ಮೆಟ್ಟಿದರು. ಅನಂತರ ಅತಿರಥ ಭಯಂಕರನಾದ ಅಭಿಮನ್ಯುವು ಶತ್ರು ಸಮೂಹದ ಕೋಟೆಯನ್ನು ಒಡೆದು ಶತ್ರು ಸೇನೆಯನ್ನು ಪ್ರವೇಶಿಸಿದನು. ಸಮುದ್ರಮಥನದಲ್ಲಿ ಕಡೆಯಲಾದ ಮಂದರಪರ್ವತದ ಚಲನೆಯಿಂದ ಸಾಗರವು ಅಲ್ಲೋಲಕಲ್ಲೋಲವಾದಂತೆ ರಥ, ಕಾಲಾಳು, ಕುದುರೆಯ ಸೈನ್ಯ ಚೆದುರಿ ಹೋಯಿತು.
ಮೂಲ ...{Loading}...
ರಥ ಮುರಿದು ಮನನೊಂದು ಸುಮಹಾ
ರಥರು ಹಿಮ್ಮೆಟ್ಟಿದರು ಬಳಿಕತಿ
ರಥಭಯಂಕರನೊಡೆದು ಹೊಕ್ಕನು ವೈರಿಮೋಹರವ
ಮಥನದಲಿ ಮುರಿಯೊಡೆದ ಶೈಲ
ವ್ಯಥಿತ ಸಾಗರದಂತೆ ಬಿರಿದವು
ರಥನಿಕರ ಕಾಲಾಳು ಕುದುರೆಗಳೊಂದು ನಿಮಿಷದಲಿ ॥61॥