೦೦೦ ಸೂ ಹನುಮನನುಜನ ...{Loading}...
ಸೂ. ಹನುಮನನುಜನ ಬಾಹುಬಲ ರಿಪು
ವನಧಿಯನು ತುಳುಕಿದನು ಭಗದ
ತ್ತನನು ಮರ್ದಿಸಿ ಮುರಿದನರ್ಜುನ ಸುಪ್ರತೀಕವನು
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಹನುಮಂತನ ಸೋದರನೆನಿಸಿದ ಭೀಮಸೇನನು ಬಾಹುಬಲದಿಂದ ಶತ್ರು ಸೇನಾ ಸಮುದ್ರವನ್ನು ಸೂರೆಗೊಂಡನು. ಅರ್ಜುನನು ಭಗದತ್ತನನ್ನು ಸೋಲಿಸಿ, ಕೊಂದು, ಅವನ ಸುಪ್ರತೀಕ ಎಂಬ ಮಹಾ ಆನೆಯನ್ನು ಸೀಳಿ ಹಾಕಿದನು.
ಮೂಲ ...{Loading}...
ಸೂ. ಹನುಮನನುಜನ ಬಾಹುಬಲ ರಿಪು
ವನಧಿಯನು ತುಳುಕಿದನು ಭಗದ
ತ್ತನನು ಮರ್ದಿಸಿ ಮುರಿದನರ್ಜುನ ಸುಪ್ರತೀಕವನು
೦೦೧ ಗುರುಗಳಾಡಿದ ಭಾಷೆ ...{Loading}...
ಗುರುಗಳಾಡಿದ ಭಾಷೆ ಪರಬಲ
ದರಸ ಕಟ್ಟುವದದು ನಿಲಲಿ ನ
ಮ್ಮರಸ ಸಿಲುಕಿದ ಭೀಮ ಗಜ ಕಟ್ಟಿದುದು ಬೀದಿಗಳ
ತಿರುಗಲಾಪರೆ ಸಮಯವಿದು ಸಂ
ಗರ ಸಮರ್ಥರು ಬರಲಿಯೆಂಬ
ಬ್ಬರದೊಳಗೆ ಭಗದತ್ತ ಮೇಳೈಸಿದನು ನಿಜಗಜನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರೋಧಿ ಸೈನ್ಯದ ಅರಸನಾದ ಧರ್ಮರಾಯನನ್ನು ಸೆರೆಹಿಡಿಯುವುದು ಗುರುಗಳಾದ ದ್ರೋಣರು ಮಾಡಿರುವ ಪ್ರತಿಜ್ಞೆ. ಆ ವಿಷಯ ಒತ್ತಟ್ಟಿಗಿರಲಿ. ಆದರೆ ಈಗ ನಮ್ಮ ಅರಸನಾದ ದುರ್ಯೋಧನನೇ ಪಾಂಡವರಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಭೀಮನೆಂಬ ಆನೆ ನಮ್ಮ ದಾರಿಗಳನ್ನು ಕಟ್ಟಿಹಾಕಿದೆ. ಹೆದರಿ ಹಿಂದಕ್ಕೆ ಹೋಗುವವರಿಗೆ ಇದು ಸಮಯ. ಹೆದರದೆ ಯುದ್ಧ ಮಾಡುವ ಸಂಗ್ರಾಮ ಸಮರ್ಥರು ಬರಲಿ ಎಂಬ ಅಬ್ಬರದೊಂದಿಗೆ ಭಗದತ್ತನು ತನ್ನ ಆನೆಯನ್ನು ಸಿದ್ಧಗೊಳಿಸಿದನು.
ಮೂಲ ...{Loading}...
ಗುರುಗಳಾಡಿದ ಭಾಷೆ ಪರಬಲ
ದರಸ ಕಟ್ಟುವದದು ನಿಲಲಿ ನ
ಮ್ಮರಸ ಸಿಲುಕಿದ ಭೀಮ ಗಜ ಕಟ್ಟಿದುದು ಬೀದಿಗಳ
ತಿರುಗಲಾಪರೆ ಸಮಯವಿದು ಸಂ
ಗರ ಸಮರ್ಥರು ಬರಲಿಯೆಂಬ
ಬ್ಬರದೊಳಗೆ ಭಗದತ್ತ ಮೇಳೈಸಿದನು ನಿಜಗಜನ ॥1॥
೦೦೨ ಬಲವೊರಜೆ ಎಡವೊರಜೆ ...{Loading}...
ಬಲವೊರಜೆ ಎಡವೊರಜೆ ಬೆನ್ನಿನ
ಮಿಳಿಯ ಜಾಳಿಗೆವೊರಜೆ ತಳ ಸಂ
ಕಲೆಯ ತೊಡರಂಕಣಿಯ ಕೊಂಡೆಯ ಪಕ್ಕ ಗಂಟೆಗಳ
ತುಳುಕಿನುಗ್ಗಡಣೆಗಳ ಹಿಣಿಲಿನ
ಬಲುವೊರಜೆಗಳ ಭಾರ ಸಂಕಲೆ
ಗಳನು ಬಿಗಿದರು ಜೋಡಿಸಿದರುಬ್ಬರದ ಮದಗಜವ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನ ಆನೆಯ (ಸುಪ್ರತೀಕಗಜ) ಬೆನ್ನಿನ ಎಡಭಾಗ ಮತ್ತು ಬಲಭಾಗಗಳಿಗೆ ಹಗ್ಗಗಳನ್ನು ಕಟ್ಟಿದರು. ಬೆನ್ನಿನ ಮೇಲೆ ಚರ್ಮದ ಹಗ್ಗದಿಂದ ಮಾಡಿದ ಜಾಳಿಗೆಯನ್ನು ಹರಡಿಕಟ್ಟಿದರು. ಹೊಟ್ಟೆಗೆ ಸರಪಣಿಯನ್ನು ಬಿಗಿದರು. ಆನೆಯನ್ನು ಹತ್ತಲು ಅನುಕೂಲವಾಗುವ ಎಳೆಗಳನ್ನು ಕಟ್ಟಿದರು. ಬದಿಗಳಲ್ಲಿ ಗಂಟೆಗಳನ್ನು ಗೊಂಡೆಗಳೊಂದಿಗೆ ಅಳವಡಿಸಿದರು. ಹೆಗ್ಗಳಿಕೆಯನ್ನು ತೋರ್ಪಡಿಸುವಂತಿದ್ದ ಬೆನ್ನ ಮೇಲಿನ ಹಿಣಿಲಿಗೆ ದೊಡ್ಡ ಹಗ್ಗಗಳನ್ನು ಮತ್ತು ಭಾರವಾದ ಸರಪಳಿಗಳನ್ನು ಬಿಗಿದು ಆನೆಯನ್ನು ಸಿದ್ಧಗೊಳಿಸಿದರು.
ಪದಾರ್ಥ (ಕ.ಗ.ಪ)
ಬಲವೊರಜೆ=(ಬಲ+ಪೊರಜೆ) ಬಲಭಾಗದಿಂದ ಕಟ್ಟಿದ ಹಗ್ಗ, ಎಡವೊರಜೆ = (ಎಡ+ವೊರಜೆ) ಎಡಭಾಗದಿಂದ ಕಟ್ಟಿದ ಹಗ್ಗ, ಮಿಳಿ-ಚರ್ಮದ ಹಗ್ಗ, ಜಾಳಿಗೆವೊರಜೆ = ಹಗ್ಗದ ಬಲೆ, ಚರ್ಮದ ಹಗ್ಗದ ಬಲೆ, ಸಂಕಲೆ = ಸಂಕೋಲೆ, ತೊಡರಂಕಣಿ = ಆನೆಯನ್ನು ಹತ್ತಲು ಕಟ್ಟಿದ್ದ ಬಳೆ, ಕೊಂಡೆಯ = ಕೊಂಡೆ = ಗೊಂಡೆ = ಕುಚ್ಚು, ಗೊಂಚಲು (ಇಲ್ಲಿ, (ಕೊಂಡೆ +ಅ = ಕೊಂಡೆಯ ಷಷ್ಠೀ ವಿಭಕ್ತಿಯಲ್ಲಿ ಅರ್ಥೈಸಬೇಕು. ಇಲ್ಲದಿದ್ದಲ್ಲಿ, ‘ಕೊಂಡೆಯ’ ಶಬ್ದಕ್ಕೆ ‘ಚಾಡಿ’ ಎಂಬರ್ಥವಾಗುತ್ತದೆ. ಅದು ಇಲ್ಲಿಗೆ ಸರಿಹೊಂದುವುದಿಲ್ಲ) ಪಕ್ಕ ಗಂಟೆ = ಬದಿಗೆ ಕಟ್ಟಿದ ಗಂಟೆಗಳು, ತುಳಿಕನುಗ್ಗಡಣೆಗಳ = ಉತ್ಸಾಹವನ್ನು ಪ್ರಕಟಿಸುವ, ಹಿಣಿಲು-ಪ್ರಾಣಿಗಳ ಹೆಗಲು, ಡುಬ್ಬ, ಉಬ್ಬರದ-ಉತ್ಸಾಹದ, ಘನವಾದ
ಮೂಲ ...{Loading}...
ಬಲವೊರಜೆ ಎಡವೊರಜೆ ಬೆನ್ನಿನ
ಮಿಳಿಯ ಜಾಳಿಗೆವೊರಜೆ ತಳ ಸಂ
ಕಲೆಯ ತೊಡರಂಕಣಿಯ ಕೊಂಡೆಯ ಪಕ್ಕ ಗಂಟೆಗಳ
ತುಳುಕಿನುಗ್ಗಡಣೆಗಳ ಹಿಣಿಲಿನ
ಬಲುವೊರಜೆಗಳ ಭಾರ ಸಂಕಲೆ
ಗಳನು ಬಿಗಿದರು ಜೋಡಿಸಿದರುಬ್ಬರದ ಮದಗಜವ ॥2॥
೦೦೩ ಬಿಗಿದು ಗಳವತ್ತಿಗೆಯನೆದೆವ ...{Loading}...
ಬಿಗಿದು ಗಳವತ್ತಿಗೆಯನೆದೆವ
ತ್ತಿಗೆಯ ಘನಮುಂಡಿಗೆಯ ಲೌಡಿಯ
ಬಿಗಿದು ಗುಳ ರೆಂಚೆಗಳ ಭಾರಿಯ ಕೈಯ ಪಟ್ಟೆಯವ
ಅಗಿವ ಬಡಿಗೆಯನಂಕುಶದ ಕ
ಟ್ಟಿಗೆಯ ಧಾರೆಯ ಕಮಳದಳ ಕೊಡ
ತಿಗಳ ಕೈಹಾರೆಗಳನಳವಡಿಸಿದರು ವಹಿಲದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜದ ಕೊರಳು, ಎದೆಯ ಭಾಗಗಳಿಗೆ ಕವಚಗಳನ್ನು ತೊಡಿಸಿದರು. ಅಂಕುಶ, ಬಡಿಗೆಯೇ ಮೊದಲಾದುವುಗಳನ್ನು ಆನೆಯ ಕೊರಳಿಗೆ ಅಳವಡಿಸಿದರು. ಕೈಹಾರೆ, ಕೊಡತಿಗಳನ್ನು ಆನೆಯ ಕೊರಳಿಗೆ ಇಡಿಸಲಾಗಿತ್ತು. ಆನೆಯನ್ನು ನಿಯಂತ್ರಿಸಲು ಅಗತ್ಯವಾದ ಕೋಲು ಮತ್ತು ಅಂಕುಶಗಳನ್ನು ಹರಿತವಾದ ಕಮಲಾಕಾರದ ಕೊಡತಿ ಹಾಗೂ ಕೈಹಾರೆಗಳನ್ನು ಆನೆಯ ಮೇಲೆ ಬೇಗ ಬೇಗ ಅಳವಡಿಸಿದರು. ಪಕ್ಕ ರಕ್ಷೆಗಳನ್ನು ಜೋಡಿಸಿದರು.
ಪದಾರ್ಥ (ಕ.ಗ.ಪ)
ಗಳವತ್ತಿಗೆ-ಕೊರಳ ಕವಚ, ಎದೆವತ್ತಿಗೆ-ಎದೆಯ ಕವಚ, ಲೌಡಿ-ಕಬ್ಬಿಣದ ಆಯುಧ, ಕೊಡತಿ-ಒಂದು ಆಯುಧ, ಮುಡಿಗೆ-ದಿಮ್ಮಿ, ಕೊಡತಿ-ಕೊರಳ ಕೋಲು, ಗುಳ-ಪಕ್ಕರಕ್ಷೆ, ಧಾರೆಯ-ಹರಿತವಾದ
ಟಿಪ್ಪನೀ (ಕ.ಗ.ಪ)
ರೆಂಚೆ, ಗುಳ, ಪಕ್ಕ ರಕ್ಕೆ ಇವು ಒಂದೇ ಅರ್ಥ ಉಳ್ಳ ಶಬ್ದಗಳು
ರೆಂಚೆ- ಕುದುರೆ ಆನೆ ಮೊದಲಾದವುಗಳಿಗೆ ಹಾಕುವ ರಕ್ಷಾ ಕವಚ, ಮೈಜೋಡು.
ಆಧಾರ ಗಜಶಾಸ್ತ್ರ ಶಬ್ದಕೋಶ - ಟಿ ವಿ ವೆಂಟಾಚಲ ಶಾಸ್ತ್ರೀ
ಮೂಲ ...{Loading}...
ಬಿಗಿದು ಗಳವತ್ತಿಗೆಯನೆದೆವ
ತ್ತಿಗೆಯ ಘನಮುಂಡಿಗೆಯ ಲೌಡಿಯ
ಬಿಗಿದು ಗುಳ ರೆಂಚೆಗಳ ಭಾರಿಯ ಕೈಯ ಪಟ್ಟೆಯವ
ಅಗಿವ ಬಡಿಗೆಯನಂಕುಶದ ಕ
ಟ್ಟಿಗೆಯ ಧಾರೆಯ ಕಮಳದಳ ಕೊಡ
ತಿಗಳ ಕೈಹಾರೆಗಳನಳವಡಿಸಿದರು ವಹಿಲದಲಿ ॥3॥
೦೦೪ ಮುಗಿಲ ಹೊದರಿನೊಳೆಳೆಯ ...{Loading}...
ಮುಗಿಲ ಹೊದರಿನೊಳೆಳೆಯ ರವಿ ರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾ ನದಿಯ ಕಾಲುವೆ
ತೆಗೆದರೆನೆ ಠೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೋಡದ ರಾಶಿಯಲ್ಲಿ ಎಳೆಯ ಸೂರ್ಯನ ಕಿರಣಗಳು ಪ್ರಸರಿಸುವಂತೆ ಆನೆಯ ದೇಹದ ಸುತ್ತಲೂ ಬಿಗಿದಿದ್ದ ಹಾಸುಬಟ್ಟೆಯ ಮೇಲೆ ಮಾಡಿದ್ದ ಕುಸುರಿ ಕೆಲಸದ ಚಿನ್ನದ ರೇಖೆಗಳು ಪ್ರಕಾಶಿಸುತ್ತಿದ್ದುವು. ದೇವಲೋಕದ ಗಂಗಾನದಿಗೆ ಕಾಲುವೆಯನ್ನು ತೆಗೆದರೋ ಎಂಬಂತೆ ಹೊಳೆವ ಮಣಿಗಳ ಪ್ರಕಾಶದಿಂದ ಆನೆಯ ಮುಖಕ್ಕೆ ಕಟ್ಟಿದ್ದ ಮುಖವಾಡವು ಶೋಭಿಸುತ್ತಿತ್ತು.
ಪದಾರ್ಥ (ಕ.ಗ.ಪ)
ಠೆಕ್ಕೆಯ-ಟಿಕ್ಕೆಯ-ಹೊಳೆವ ಗಾಜಿನ ಮಣಿ, ಪಲ್ಲವ-ಚಿಗುರು, ಮೊಗರಂಬ-ಮುಖವಾಡ
ಮೂಲ ...{Loading}...
ಮುಗಿಲ ಹೊದರಿನೊಳೆಳೆಯ ರವಿ ರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾ ನದಿಯ ಕಾಲುವೆ
ತೆಗೆದರೆನೆ ಠೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ ॥4॥
೦೦೫ ಗಗನ ತಳವನು ...{Loading}...
ಗಗನ ತಳವನು ಬಿಗಿದ ಬಲು ರೆಂ
ಚೆಗಳ ತುಂಬಿದ ಹೊದೆಯ ಕಣೆಗಳ
ಬಿಗಿದ ನಾಳಿಯ ಬಿಲ್ಲುಗಳ ತೆತ್ತಿಸಿದ ಸೂನಿಗೆಯ
ಉಗಿವ ಸರಿನೇಣುಗಳ ಕೈ ಗುಂ
ಡುಗಳ ಕವಣೆಯ ಲೌಡಿ ಕರವಾ
ಳುಗಳ ಜೋಡಿಸಿ ಜೋದರಡರಿದರಂದು ಬೊಬ್ಬಿರಿದು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಕಾಶದೆತ್ತರಕ್ಕಿದ್ದ ಆನೆಯ ಬೆನ್ನಿಗೆ ಬಿಗಿದು ಕಟ್ಟಿದ್ದ ದೊಡ್ಡ ಬಟ್ಟೆಗಳ, ಬಾಣ ತುಂಬಿದ ಬತ್ತಳಿಕೆಗಳ, ಬಿದಿರಿನ ಬಿಲ್ಲುಗಳ, ಸೂನಿಗೆಯೆಂಬ ಆಯುಧವನ್ನು ಬಿಗಿದ, ಹಗ್ಗಗಳನ್ನು ಬಿಗಿದು ಆ ಹಗ್ಗಕ್ಕೆ ಕವಣೆ, ಕೈಗುಂಡು, ಲೌಡಿ ಎಂಬ ಆಯುಧ ಮತ್ತು ಕತ್ತಿಗಳನ್ನು ಬಿಗಿಯಲಾಗಿದ್ದ ಆನೆಯ ಮೇಲೆ ಯೋಧರು ಹತ್ತಿದರು.
ಪದಾರ್ಥ (ಕ.ಗ.ಪ)
ಹೊದೆ-ಬತ್ತಳಿಕೆ, ಸೂನಿಗೆ-ಒಂದು ಬಗೆಯ ಆಯುಧ,
ಮೂಲ ...{Loading}...
ಗಗನ ತಳವನು ಬಿಗಿದ ಬಲು ರೆಂ
ಚೆಗಳ ತುಂಬಿದ ಹೊದೆಯ ಕಣೆಗಳ
ಬಿಗಿದ ನಾಳಿಯ ಬಿಲ್ಲುಗಳ ತೆತ್ತಿಸಿದ ಸೂನಿಗೆಯ
ಉಗಿವ ಸರಿನೇಣುಗಳ ಕೈ ಗುಂ
ಡುಗಳ ಕವಣೆಯ ಲೌಡಿ ಕರವಾ
ಳುಗಳ ಜೋಡಿಸಿ ಜೋದರಡರಿದರಂದು ಬೊಬ್ಬಿರಿದು ॥5॥
೦೦೬ ಸುತ್ತ ಮೆರೆದವು ...{Loading}...
ಸುತ್ತ ಮೆರೆದವು ಮೇಲೆ ಪಲ್ಲವ
ಸತ್ತಿಗೆಯ ಸಾಲುಗಳು ಬಿರುದಿನ
ಕತ್ತರಿಯ ಹೀಲಿಗಳ ಝಲ್ಲರಿ ಮುಸುಕಿದವು ಗಜವ
ಒತ್ತಿ ಕಿವಿಗಳನೊದೆದು ಶಿರದಲಿ
ತೆತ್ತಿಸಿದರಂಕುಶವನಾ ಭಗ
ದತ್ತ ದಂತಿಯನೇರಿದನು ಜಯರವದ ರಭಸದಲಿ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜದ ಸುತ್ತ ಅಳವಡಿಸಲಾಗಿದ್ದ ಅನೇಕ ಛತ್ರಿಗಳು ಮೆರೆಯುತ್ತಿದ್ದವು. ದೊಡ್ಡ ದೊಡ್ಡ ನವಿಲು ಗರಿಯ ಬೀಸಣಿಗೆಗಳನ್ನು ಬಣ್ಣ ಬಣ್ಣದ ಕುಚ್ಚುಗಳನ್ನು ಅಲಂಕರಿಸಲಾಗಿದ್ದು, ಅವುಗಳು ಆನೆಯನ್ನು ಮುಸುಕಿದ್ದವು. ಕಿವಿಗಳನ್ನು ಒತ್ತಿ ಅಂಕುಶಗಳನ್ನು ಬಿಗಿದಿದ್ದ ಆನೆಯ ಮೇಲೆ ಭಗದತ್ತನು ಸೈನಿಕರ ಜಯಕಾರದ ರಭಸದೊಡನೆ ಏರಿದನು.
ಪದಾರ್ಥ (ಕ.ಗ.ಪ)
ಪಲ್ಲವ-ಅರಳಿದ, ಸತ್ತಿಗೆ-ಛತ್ರಿ, ಹೀಲಿ-ನವಿಲುಗರಿ, ಝಲ್ಲರಿ-ಕುಚ್ಚು , ದಂತಿ-ಆನೆ,
ಮೂಲ ...{Loading}...
ಸುತ್ತ ಮೆರೆದವು ಮೇಲೆ ಪಲ್ಲವ
ಸತ್ತಿಗೆಯ ಸಾಲುಗಳು ಬಿರುದಿನ
ಕತ್ತರಿಯ ಹೀಲಿಗಳ ಝಲ್ಲರಿ ಮುಸುಕಿದವು ಗಜವ
ಒತ್ತಿ ಕಿವಿಗಳನೊದೆದು ಶಿರದಲಿ
ತೆತ್ತಿಸಿದರಂಕುಶವನಾ ಭಗ
ದತ್ತ ದಂತಿಯನೇರಿದನು ಜಯರವದ ರಭಸದಲಿ ॥6॥
೦೦೭ ಕಾಲುಗಾಹಿನ ಕುದುರೆಗಳ ...{Loading}...
ಕಾಲುಗಾಹಿನ ಕುದುರೆಗಳ ಕಾ
ಲಾಳ ಕೈವಾರಿಗಳ ಸಬಳದ
ಸೂಲಿಗೆಯ ತೇರುಗಳ ಹರಹಿನ ಹೊಂತಕಾರಿಗಳ
ಆಳ ಬಲು ಬೊಬ್ಬೆಯಲಿ ಘನ ನಿ
ಸ್ಸಾಳತತಿ ಮೊಳಗಿದವು ಡೌಡೆಯ
ತೂಳುವರೆಗಳು ಗಜರಿದವು ತಂಬಟದ ಲಗ್ಗೆಯಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನ ಆನೆಯ ಸುತ್ತ ನೆರೆದ ರಾವುತರ, ಕಾಲಾಳುಗಳ, ಹೊಗಳುಭಟ್ಟರ, ಈಟಿ ಶೂಲ ಮೊದಲಾದ ಆಯುಧಗಳನ್ನು ಹಿಡಿದವರ ಮತ್ತು ರಥಗಳಲ್ಲಿದ್ದ ಪರಾಕ್ರಮಿಗಳ ಉತ್ಸಾಹದ ಕೂಗಾಟದೊಂದಿಗೆ ಕಹಳೆ, ತಮಟೆಯೇ ಮೊದಲಾದ ವಾದ್ಯಗಳು ಶಬ್ದ ಮಾಡಿದವು. ಆಗ ರಣರಂಗದಲ್ಲಿ ಮಹಾ ಕೋಲಾಹಲ ಉಂಟಾಯಿತು.
ಪದಾರ್ಥ (ಕ.ಗ.ಪ)
ಸೂಲಿಗೆ-ಶೂಲ, ಹೊಂತಕಾರಿ-ಪರಾಕ್ರಮಿ, ತೂಳುವರೆ-ಶಬ್ದ ಮಾಡುವ ‘ಪರೆ’ಯೆಂಬ ರಣವಾದ್ಯ
ಮೂಲ ...{Loading}...
ಕಾಲುಗಾಹಿನ ಕುದುರೆಗಳ ಕಾ
ಲಾಳ ಕೈವಾರಿಗಳ ಸಬಳದ
ಸೂಲಿಗೆಯ ತೇರುಗಳ ಹರಹಿನ ಹೊಂತಕಾರಿಗಳ
ಆಳ ಬಲು ಬೊಬ್ಬೆಯಲಿ ಘನ ನಿ
ಸ್ಸಾಳತತಿ ಮೊಳಗಿದವು ಡೌಡೆಯ
ತೂಳುವರೆಗಳು ಗಜರಿದವು ತಂಬಟದ ಲಗ್ಗೆಯಲಿ ॥7॥
೦೦೮ ಸುರಪ ಕಡಿಯಲು ...{Loading}...
ಸುರಪ ಕಡಿಯಲು ಕೆರಳಿ ಕುಲಗಿರಿ
ಯುರಿಯನುಗುಳುವುದೆನಲು ದಾಡೆಗ
ಳರುಣಮಯ ರಶ್ಮಿಗಳ ಪಸರದಲೆಸೆದುದಿಭಪತಿಯ
ಧರಣಿಯಳತೆಯ ಹರಿಯ ನೆಗಹಿನ
ಚರಣದಗ್ರದೊಳಿಳಿವ ಘನ ನಿ
ರ್ಝರದವೊಲು ಮದಧಾರೆ ಮೆರೆದುದು ಕರಿಕಪೋಲದಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವತೆಗಳ ಒಡೆಯನಾದ ಇಂದ್ರನು ಕುಲಪರ್ವತಗಳ ರೆಕ್ಕೆಗಳನ್ನು ಕತ್ತರಿಸಿ ಹಾಕಿದ ಕಾರಣದಿಂದ ಕೋಪಿಸಿಕೊಂಡು ಬೆಂಕಿಯನ್ನುಗುಳುತ್ತಿವೆಯೋ ಎಂಬಂತೆ ಸುಪ್ರತೀಕ ಆನೆಯ ದಾಡೆಗಳಿಂದ ಕೆಂಪಾದ ಕಿರಣಗಳು ದಿಕ್ಕು ದಿಕ್ಕುಗಳಿಗೆ ಪ್ರಸಾರವಾಗುತ್ತಿತ್ತು. ಇಡೀ ಭೂಮಂಡಲವನ್ನೇ ಆಕ್ರಮಿಸಿದ ತ್ರಿವಿಕ್ರಮನ ಪಾದದ ತುದಿಯಿಂದ ಇಳಿಯುತ್ತಿದ್ದ ಗಂಗಾನದಿಯ ಹಾಗೆ ಸುಪ್ರತೀಕ ಗಜದ ಮದೋದಕವು ಆನೆಯ ಕೆನ್ನೆಯ ಮೇಲೆ ಧಾರಾಕಾರವಾಗಿ ಸುರಿಯುತ್ತಿತ್ತು.
ಪದಾರ್ಥ (ಕ.ಗ.ಪ)
ಸುರಪ-ಇಂದ್ರ, ಮದಧಾರೆ-ಮದೋದಕ, ನೆಗಹು-ಎತ್ತು,
ಟಿಪ್ಪನೀ (ಕ.ಗ.ಪ)
ಧರಣಿಯಳತೆಯ…. ನಿರ್ಝರದವೊಲು =
ಮೂಲ ...{Loading}...
ಸುರಪ ಕಡಿಯಲು ಕೆರಳಿ ಕುಲಗಿರಿ
ಯುರಿಯನುಗುಳುವುದೆನಲು ದಾಡೆಗ
ಳರುಣಮಯ ರಶ್ಮಿಗಳ ಪಸರದಲೆಸೆದುದಿಭಪತಿಯ
ಧರಣಿಯಳತೆಯ ಹರಿಯ ನೆಗಹಿನ
ಚರಣದಗ್ರದೊಳಿಳಿವ ಘನ ನಿ
ರ್ಝರದವೊಲು ಮದಧಾರೆ ಮೆರೆದುದು ಕರಿಕಪೋಲದಲಿ ॥8॥
೦೦೯ ಜಗದ ನಿಡುನಿದ್ರೆಯಲಿ ...{Loading}...
ಜಗದ ನಿಡುನಿದ್ರೆಯಲಿ ಮೋಹರ
ದೆಗೆದ ಮುಗಿಲೋ ಮೇಣಖಿಳ ಕುಲ
ದಿಗಿಭವೆಂಟೊಂದಾಯ್ತೊ ಕೈ ಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾಗಜವೈದಿತಾಹವವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜವು ಹೆಜ್ಜೆ ಇಟ್ಟು ನಡೆಯಲಾರಂಭಿಸಿದಾಗ, ಜಗತ್ತು ಮಹಾ ನಿದ್ರೆಯನ್ನು ಮಾಡುತ್ತಿರುವಾಗ ಮೋಡಗಳ ಸೈನ್ಯ ಮುನ್ನಡೆಯುತ್ತಿದೆ ಎನಿಸಿತು. ಸುಪ್ರತೀಕ ಗಜದ ಆಗಮನವನ್ನು ಕಂಡವರಿಗೆ ಎಂಟು ದಿಗ್ಗಜಗಳು ಒಂದಾಗಿ ಬರುತ್ತಿದೆ ಎನಿಸಿತು ; ಆಕಾಶಕ್ಕೆ ಕೈ ಕಾಲುಗಳು ಮೂಡಿದುವೋ ಎಂಬ ಭಾವನೆ ಉಂಟಾಯಿತು ; ಆನೆಯ ನೆಲವನ್ನು ಗಟ್ಟಿಯಾಗಿ ಮೆಟ್ಟಿದರೆ ಭೂಮಿಯು ಪಡುವಣ ದಿಕ್ಕಿಗೆ ಚಿಮ್ಮಿತು. ಮುಂಭಾಗವನ್ನು ಮೆಟ್ಟಿದರೆ ಭೂಮಿಯು ಮೂಡಲು ದಿಕ್ಕಿಗೆ ಚಿಮ್ಮಿತು. ಹೀಗೆ ಆ ಮಹಾಗಜವು ರಣರಂಗಕ್ಕೆ ಬಂದಿತು.
ಪದಾರ್ಥ (ಕ.ಗ.ಪ)
ನಿಡುನಿದ್ರೆ-ಮಹಾನಿದ್ರೆ, ದಿಗಿಭ-ದಿಗ್ಗಜ,
ಮೂಲ ...{Loading}...
ಜಗದ ನಿಡುನಿದ್ರೆಯಲಿ ಮೋಹರ
ದೆಗೆದ ಮುಗಿಲೋ ಮೇಣಖಿಳ ಕುಲ
ದಿಗಿಭವೆಂಟೊಂದಾಯ್ತೊ ಕೈ ಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾಗಜವೈದಿತಾಹವವ ॥9॥
೦೧೦ ಪವನಬಲ ಪರಿದಳಿತ ...{Loading}...
ಪವನಬಲ ಪರಿದಳಿತ ಕದಳೀ
ನಿವಹದಲಿ ನಭ ಧಾತುಗೆಟ್ಟುದು
ರವಿಗೆ ಕಾಪಥವಾಯ್ತು ಹೊಗಳುವೆನೇನನದುಭುತವ
ಭುವನ ಕೋಶದೊಳಾದ ವಿಪಿನೋ
ದ್ಭವವೊ ಭಾರಿಯ ದಂತಿ ಮಹದಾ
ಹವದೊಳಿಳಿದುದು ಕೃಷ್ಣನೊಲಿದರಿಗಾವುದರಿದೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಳಿಯ ಹೊಡೆತಕ್ಕೆ ಸಿಕ್ಕಿದ ಬಾಳೆಯ ಮರಗಳು ಹಾರಿ ಹೋಗುವಂತೆ ಸುಪ್ರತೀಕ ಗಜ ಬಂದ ರಭಸಕ್ಕೆ ಆಕಾಶದ ಶಕ್ತಿ ಉಡುಗಿ ಹೋಯಿತು. ಸೂರ್ಯನಿಗೆ ಪಥ ತಪ್ಪಿತು. ಈ ಆನೆಯ ಕೋಲಾಹಲ ಯುದ್ಧ ಭೂಮಿಯಲ್ಲಿ ಅದ್ಭುತವನ್ನುಂಟು ಮಾಡಿತು. ಅದನ್ನು ಹೇಗೆ ಹೊಗಳಲಿ. ಭೂ ಮಧ್ಯದಲ್ಲಿ ಹುಟ್ಟಿದ ಮಹಾ ಅರಣ್ಯವೋ ಎಂದು ತೋರುತ್ತಿದ್ದ ಆನೆಯು ಮಹಾಸಂಗ್ರಾಮ ಭೂಮಿಗೆ ಬಂದಿಳಿಯಿತು. ಆದರೆ ಕೃಷ್ಣನು ಒಲಿದವರಿಗೆ (ಪಾಂಡವರಿಗೆ) ಯಾವುದು ತಾನೇ ಸಾಧ್ಯವಿಲ್ಲ ? (ಈ ಆನೆ ಒಂದು ಲೆಕ್ಕವೇ)
ಪದಾರ್ಥ (ಕ.ಗ.ಪ)
ಕದಳೀ ನಿವಹ-ಬಾಳೆಯ ಗಿಡಗಳ ಗುಂಪು, ಧಾತು-ಶಕ್ತಿ, ಕಾಪಥ- ಬದಲಾದ ಪಥ
ಮೂಲ ...{Loading}...
ಪವನಬಲ ಪರಿದಳಿತ ಕದಳೀ
ನಿವಹದಲಿ ನಭ ಧಾತುಗೆಟ್ಟುದು
ರವಿಗೆ ಕಾಪಥವಾಯ್ತು ಹೊಗಳುವೆನೇನನದುಭುತವ
ಭುವನ ಕೋಶದೊಳಾದ ವಿಪಿನೋ
ದ್ಭವವೊ ಭಾರಿಯ ದಂತಿ ಮಹದಾ
ಹವದೊಳಿಳಿದುದು ಕೃಷ್ಣನೊಲಿದರಿಗಾವುದರಿದೆಂದ ॥10॥
೦೧೧ ಹಿಡಿವ ಬಿಡುವೊಬ್ಬುಳಿಗೆ ...{Loading}...
ಹಿಡಿವ ಬಿಡುವೊಬ್ಬುಳಿಗೆ ತಹ ಬಲ
ನೆಡಕೆ ಹಾಯ್ಕುವ ಸುತ್ತಲೊತ್ತುವ
ತಡೆವ ನಡಸುವ ಸೆಳೆವ ತಿರುಹುವ ಹದಿರ ಜೋಕೆಯಲಿ
ಗಡಣಿಸಿದನವನಿಭಪತಿಯನವ
ಗಡಿಸಿ ನೂಕಿದೊಡಮಮ ದಿಕ್ಕರಿ
ನಡುಗೆ ಚೌಕದ ಕಳನ ತುಳಿದುದು ಸುಪ್ರತೀಕಗಜ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜವನ್ನು ನಿಯಂತ್ರಿಸಲು ಹಗ್ಗವನ್ನು ಎಳೆಯುವ, ಸಡಿಲ ಬಿಡುವ ಕೆಲಸವನ್ನು ಒಗ್ಗೂಡಿಸಿಕೊಂಡು ಅದನ್ನು ಸಮಸ್ಥಿತಿಯಲ್ಲಿರಿಸುವ, ಎಡಕ್ಕೂ, ಬಲಕ್ಕೂ ಹೋಗುವ ಹಾಗೆ ಹದವಾಗಿ ಎಚ್ಚರಿಕೆಯಿಂದ ನಡೆಸುವ ಕಾರ್ಯವನ್ನು ಭಗದತ್ತನು ನಿರ್ವಹಿಸುತ್ತಿದ್ದನು. ಇಂತಹ ಆನೆಯನ್ನು ಭಗದತ್ತನು ಮುಂದೆ ಮುಂದೆ ಓಡಿಸಿದಾಗ ದಿಗ್ಗಜಗಳು ನಡುಗಿದವು. ಹೀಗೆ ಸುಪ್ರತೀಕ ಗಜವು ರಣರಂಗದ ಮುಖ್ಯ ಭಾಗಕ್ಕೆ ಬಂದು ನಿಂತಿತು.
ಪದಾರ್ಥ (ಕ.ಗ.ಪ)
ಒಬ್ಬುಳಿಗೆ-ಒಗ್ಗೂಡು, ಹದಿರ-ಹದವಾದ, ಗಡಣಿಸಿದನು-ಒಟ್ಟುಗೂಡಿಸಿದನು, ಅವಗಡಿಸಿ-ಬಲವಂತವಾಗಿ, ದಿಕ್ಕರಿ-ದಿಗ್ಗಜ,
ಮೂಲ ...{Loading}...
ಹಿಡಿವ ಬಿಡುವೊಬ್ಬುಳಿಗೆ ತಹ ಬಲ
ನೆಡಕೆ ಹಾಯ್ಕುವ ಸುತ್ತಲೊತ್ತುವ
ತಡೆವ ನಡಸುವ ಸೆಳೆವ ತಿರುಹುವ ಹದಿರ ಜೋಕೆಯಲಿ
ಗಡಣಿಸಿದನವನಿಭಪತಿಯನವ
ಗಡಿಸಿ ನೂಕಿದೊಡಮಮ ದಿಕ್ಕರಿ
ನಡುಗೆ ಚೌಕದ ಕಳನ ತುಳಿದುದು ಸುಪ್ರತೀಕಗಜ ॥11॥
೦೧೨ ಇದು ಗಜಾಸುರನೋ ...{Loading}...
ಇದು ಗಜಾಸುರನೋ ಮಹಾ ದೇ
ವಿದುವೆ ಮಹಿಷಾಸುರನೊ ಮಾಯಾ
ರದನಿಯೋ ದಿಟವಿದನು ಗೆಲುವರೆ ಭೀಮ ಫಲುಗುಣರು
ತ್ರಿದಶ ರಿಪುಗಳ ಗಂಡನಿದು ಕಾ
ದಿದೆವು ನಾವಿಂದೆನುತ ಸುಭಟರು
ಕದಡಿ ಸರಿದುದು ಸೂರೆಗೊಂಡುದು ಬಲ ಪಲಾಯನವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಗಜಾಸುರನೋ, ಮಹಿಷಾಸುರನೋ ಅಥವಾ ಇದೊಂದು ಮಾಯಾಗಜವೋ? ಈ ಆನೆಯನ್ನು ನಿಜಕ್ಕೂ ಭೀಮ ಹಾಗೂ ಅರ್ಜುನರು ಗೆಲ್ಲಲು ಸಾಧ್ಯವೆ? ಇದು ದೇವತೆಗಳ ಶತ್ರುಗಳೆನಿಸಿದ ರಾಕ್ಷಸರಿಗೆ ವಿನಾಶಕನಾಗಿರುವಂತಹದು. ಇಂತಹ ಆನೆಯ ವಿರುದ್ಧ ನಾವು ಕಾದಿಯೇವೆ? ಎನ್ನುತ್ತ ವೀರ ಭಟರು ಜಾರಿದರು. ಎಲ್ಲ ಸೈನ್ಯ ಪಲಾಯನ ಮಾಡಿತು.
ಪದಾರ್ಥ (ಕ.ಗ.ಪ)
ರದನಿ-ಆನೆ, ತ್ರಿದಶ-ದೇವತೆ, ಗಂಡ-ನಾಶಪಡಿಸುವ
ಟಿಪ್ಪನೀ (ಕ.ಗ.ಪ)
ತ್ರಿದಶರು- ದೇವತೆಗಳು- ಸದಾ ಯೌವನದಿಂದ ಕೂಡಿರುವವರು. ಬಾಲ್ಯ, ಕೌಮಾರ್ಯ ಮತ್ತು ಯೌವನ ಎಂಬ ಮೂರು ಅವಸ್ಥೆಗಳನ್ನು ಮಾತ್ರ ಉಳ್ಳವರು.
ಮೂಲ ...{Loading}...
ಇದು ಗಜಾಸುರನೋ ಮಹಾ ದೇ
ವಿದುವೆ ಮಹಿಷಾಸುರನೊ ಮಾಯಾ
ರದನಿಯೋ ದಿಟವಿದನು ಗೆಲುವರೆ ಭೀಮ ಫಲುಗುಣರು
ತ್ರಿದಶ ರಿಪುಗಳ ಗಂಡನಿದು ಕಾ
ದಿದೆವು ನಾವಿಂದೆನುತ ಸುಭಟರು
ಕದಡಿ ಸರಿದುದು ಸೂರೆಗೊಂಡುದು ಬಲ ಪಲಾಯನವ ॥12॥
೦೧೩ ಮೊಗದ ಜವನಿಕೆದೆಗೆದು ...{Loading}...
ಮೊಗದ ಜವನಿಕೆದೆಗೆದು ನೆತ್ತಿಯ
ಬಗಿದು ಕೂರಂಕುಶದಲಾನೆಯ
ಬೆಗಡುಗೊಳಿಸಲು ಬೀದಿವರಿದುದು ಸುಭಟರೆದೆಯೊಡೆಯೆ
ಹಗೆಯ ಬಲದಲಿ ಹರಿದು ಸುಭಟರ
ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು ದಿಕ್ಕರಿ ಹೊಕ್ಕು ಮೋಹರವ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜದ ಮುಖಕ್ಕೆ ಹಾಕಿದ್ದ ತೆರೆಯನ್ನು ತೆಗೆದು ಚೂಪಾದ ಅಂಕುಶದಿಂದ ಅದರ ಕುಂಭ ಸ್ಥಳವನ್ನು ತಿವಿದು, ಉತ್ಸಾಹದಿಂದ ಓಡುವ ಹಾಗೆ ಮಾಡಿದಾಗ ಅದು ವೀರಭಟರ ಎದೆ ಒಡೆಯುವಂತೆ ಮಹಾವೇಗದಿಂದ ಓಡಲಾರಂಭಿಸಿತು. ಶತ್ರು ಸೇನೆಯ ಮೇಲೆ ನುಗ್ಗಿ ವೀರಭಟರ ತಲೆಗಳನ್ನು ಅವು ಚಿಗುಳಿಯ ಉಂಡೆಗಳೋ ಎನ್ನುವಂತೆ ತುಳಿದು ಅವನ್ನು ಆಕಾಶದಗ¯ಕ್ಕೆ ಹರಡಿತು.
ಪದಾರ್ಥ (ಕ.ಗ.ಪ)
ಜವನಿಕೆ-ತೆರೆ-ಮುಸುಕು, ಬಗಿದು-ಚುಚ್ಚಿ, ಬೆಗಡು-ಉದ್ರೇಕ, ಬೀದಿವರಿ-ಓಡು, ಹರಿ-ಚಲಿಸು, ಚಿಗುಳಿದುಳಿ-ಚಿಗುಳಿಯ ಉಂಡೆಯನ್ನು ತುಳಿದಂತೆ ತುಳಿ, ದಿಕ್ಕರಿ-ಸುಪ್ರತೀಕ ಗಜ
ಮೂಲ ...{Loading}...
ಮೊಗದ ಜವನಿಕೆದೆಗೆದು ನೆತ್ತಿಯ
ಬಗಿದು ಕೂರಂಕುಶದಲಾನೆಯ
ಬೆಗಡುಗೊಳಿಸಲು ಬೀದಿವರಿದುದು ಸುಭಟರೆದೆಯೊಡೆಯೆ
ಹಗೆಯ ಬಲದಲಿ ಹರಿದು ಸುಭಟರ
ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು ದಿಕ್ಕರಿ ಹೊಕ್ಕು ಮೋಹರವ ॥13॥
೦೧೪ ನೆಳಲು ಸುಳಿಯಲು ...{Loading}...
ನೆಳಲು ಸುಳಿಯಲು ದಂತಿಯೆಂದ
ಪ್ಪಳಿಸೆ ವಾಸುಕಿ ನೊಂದನಂಬುಧಿ
ತುಳುಕಿದವು ಸತ್ವಾತಿಶಯವೆಂತುಟು ಮಹಾದೇವ
ತುಳಿದುದರಿ ಸುಭಟರನು ಸಾವಿರ
ತಲೆಯ ಸೆಳೆದುದು ಸೊಂಡಿಲಲಿ ವೆ
ಗ್ಗಳೆಯ ಮದಕರಿ ಕೇಣಿಗೊಂಡುದು ವೈರಿಮೋಹರವ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜದ ಸುತ್ತ ಮುತ್ತ ಶತ್ರುಸೇನೆಯ ನೆರಳು ಕಾಣಿಸಿದರೂ ಅದು ಆನೆ ಎಂದೇ ಭಾವಿಸಿ ಸೊಂಡಿಲಿನಿಂದ ಅಪ್ಪಳಿಸುತ್ತಿತ್ತು. ಆಗ ಭೂಮಿಯನ್ನು ಹೊತ್ತ ವಾಸುಕಿ ನೊಂದನು. ಆಗ ಸಮುದ್ರಗಳು ತುಳುಕಿದವು. ಆ ಆನೆಯ ಶಕ್ತಿ ಎಷ್ಟು ಅತಿಶಯವಾದುದೋ ಮಹಾದೇವ ! ಆನೆಯು ಶತ್ರು ಸೈನಿಕರನ್ನು ತುಳಿಯಿತು, ಸಾವಿರ ಸೈನಿಕರ ತಲೆಯನ್ನು ಸೊಂಡಿಲಿನಲ್ಲಿ ಎಳೆದು ನಾಶಮಾಡುತ್ತಿತ್ತು. ಅದು ಶತ್ರು ಸೇನೆಯ ನಾಶದ ಗುತ್ತಿಗೆಯನ್ನು ತೆಗೆದುಕೊಂಡಂತಿತ್ತು.
ಪದಾರ್ಥ (ಕ.ಗ.ಪ)
ವೆಗ್ಗಳೆಯ-ಹೆಚ್ಚಿನ, ಕೇಣಿಗೊಂಡುದು-ಗುತ್ತಿಗೆಯನ್ನು ತೆಗೆದುಕೊಂಡಿತು.
ಟಿಪ್ಪನೀ (ಕ.ಗ.ಪ)
ವಾಸುಕಿ - ಅಷ್ಟ ಫಣಿಗಳಲ್ಲಿ ಒಂದು. ದೇವತೆಗಳೂ , ರಾಕ್ಷಸರೂ ಕ್ಷೀರಸಾಗರವನ್ನು ಕಡೆಯುವಾಗ ವಾಸುಕಿಯನ್ನು ಮಂದರಪರ್ವತವನ್ನು ಕಡೆಯುವಾಗ ಹಗ್ಗವಾಗಿ ಬಳಸಿದರೆಂದು ಹೇಳಲಾಗಿದೆ.ಕನ್ನಡದಲ್ಲಿ ಎಷ್ಟು ಭಾಷೆ ಪ್ರಭೇದಗಳಿವೆ ಎಂಬುದನ್ನು ಸಾವಿರ ಹೆಡೆಯ ವಾಸುಕಿಯೂ ಅರಿಯಲಾರನಂತೆ! ಅಂದರೆ ವಾಸುಕಿಗೆ ಸಾವಿರ ಹೆಡೆ, ಎರಡು ಸಾವಿರ ನಾಲಿಗೆ ಎಂದು ಕನ್ನಡ ಕಾವ್ಯಗಳು ಹೇಳುತ್ತವೆ. ಈ ವಾಸುಕಿಯು ಕಶ್ಯಪ-ಕದ್ರು ಇವರ ಪುತ್ರ. ಶೇಷನ ಸೋದರ. ಉಚ್ಚೈಶ್ರವಸ್ಸು ಎಂಬ ಕುದುರೆಯ ಬಾಲವನ್ನು ಕಪ್ಪಾಗಿ ಕಾಣುವಂತೆ ಮಾಡಿ ಎಂದು ತಾಯಿ ಹೇಳಿದಾಗ ವಂಚನೆಗೆ ಒಪ್ಪದೆ ಪರಿಣಾಮವಾಗಿ ನಾಗಗಳೆಲ್ಲ ‘ನಿಮ್ಮಕುಲ ಅಗ್ನಿಗೆ ಆಹುತಿಯಾಗಲಿ’ ಎಂದು ಶಾಪ ಪಡೆದವಷ್ಟೆ. ಈ ಕುಲಕ್ಷಯವನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ವಿಯಾದವನು ವಾಸುಕಿ.
ವಾಸುಕಿ ಭೋಗವತೀ ನಗರವಾಸಿ. ಸಮುದ್ರ ಮಥನದಲ್ಲಿ ಸಮುದ್ರವನ್ನು ಕಡೆಯುವ ಮಥನದಂಡವಾಗಿದ್ದನು. W್ರಪುರಾಖ್ಯಾನ ಪರ್ವದಲ್ಲಿ ವಾಸುಕಿಯು ಶಿವನ ಬಿಲ್ಲಿನ ಹಗ್ಗವಾಗಿದ್ದನೆಂದೂ ರಥನ ಕಂಬವಾಗಿದ್ದನೆಂದೂ ಹೇಳಲಾಗಿದೆ. ಷಣ್ಮುಖನಿಗೆ ಜಯ-ಮಹಾಜಯ ಎಂಬ ಪಾರ್ಶದರನ್ನು ಪ್ರದಾನ ಮಾಡಿದವನು.
ಭೂಮಿಯನ್ನು ಹೊತ್ತಿರುವ ಸಪ್ತಧರಣೀಧರರರಲ್ಲಿ ಒಬ್ಬ. ವಾಸುಕಿಯ ಪತ್ನಿ ಶತಶೀರ್ಷೆ. ತಕ್ಷಕ, ಕಾರ್ಕೋಟಕ, ಐರಾವತ, ಕುಮುದ, ಪದ್ಮ ಮಹಾಪದ್ಮ ಮೊದಲಾದವರೆಲ್ಲ ಈತನ ಸೋದರರು. ವಾಸುಕಿಯ ಬಗೆಗೆ ಆದಿಪರ್ವದ ಅನೇಕ ಅಧ್ಯಾಯಗಳಲ್ಲಿ ವಿವರಗಳಿವೆ.
ಏಲಾಪುತ್ರನೆಂಬ ಸಹಚರ ನಾಗನು ಸರ್ಪಕುಲ ಕ್ಷಯವನ್ನು ತಡೆಗಟ್ಟುವ ಬಗೆಗೆ ಸೂಕ್ತ ಸಲಹೆಯನ್ನು ಕೊಟ್ಟಾಗ ವಾಸುಕಿ ಅದನ್ನು ಪಾಲಿಸಿದ. ಯಾಯಾವರ ಕುಲದಲ್ಲಿ ಜರತ್ಕಾರು ಎಂಬ ಲೋಕವಿಖ್ಯಾತ ಮಹರ್ಷಿಯ ಮಗನಾಗಿ ಆಸ್ತಿಕ ಎಂಬ ಮಹಾಪುರುಷನು ಹುಟ್ಟಿ ಬಂದು ಜನಮೇಜಯನ ಸರ್ಪಯಾಗವನ್ನು ನಿಲ್ಲಿಸುತ್ತಾನೆ ಎಂದು ಬ್ರಹ್ಮನು ಹೇಳಿದ್ದನಂತೆ.
‘ಆ ಜತ್ಕಾರುವಿಗೆ ಅದೇ ಹೆಸರುಳ್ಳ ತನ್ನ ತಂಗಿಯನ್ನು ಮದುವೆ ಮಾಡಿಕೊಡು’ ಎಂಬುದು ಏಲಾಪುತ್ರನ ಸಲಹೆ. ಬ್ರಹ್ಮಚಾರಿಯಾಗಿಯೇ ಉಳಿಯಲು ನಿಶ್ಚಯಿಸಿದ್ದ ಜರತ್ಕಾರುವು ತನ್ನ ಪಿತೃಗಳು ನರಕದಲ್ಲಿ ನರಳುತ್ತಿರುವುದನ್ನು ಕಂಡು ಅದನ್ನು ತಪ್ಪಿಸಲು ಮದುವೆಯಾಗುವ ನಿಶ್ಚಯ ಮಾಡುತ್ತಾನೆ. ಆದರೆ ಕನ್ಯೆ ತನ್ನ ಹೆಸರಿನವಳೇ ಆಗಿರಬೇಕೆಂದು ಹೇಳುತ್ತಾನೆ.
ಪುಣ್ಯಕ್ಕೆ ವಾಸುಕಿಯ ತಂಗಿಯ ಹೆಸರೂ ಜರತ್ಕಾರು! ಜರತ್ಕಾರುವನ್ನು ಮದುವೆಗೆ ಒಪ್ಪಿಸಿದ ವಾಸುಕಿ ಅವರಿಗೆ ಮಗನು ಹುಟ್ಟಿದಾಗ ಆಸ್ತಿಕನೆಂದು ಹೆಸರಿಟ್ಟು ತನ್ನ ಮನೆಯಲ್ಲೇ ಇರಿಸಿಕೊಂಡು ಸಾಕಿದ. ಮುಂದೆ ಆಸ್ತಿಕನು ಮಹಾಜ್ಞಾನಿಯಾಗಿ ಬೆಳೆದಾಗ ವಾಸುಕಿಯ ತಂಗಿಯ ಬಳಿಗೆ ಬಂದು ‘ಮಗನಿಗೆ ಎಲ್ಲ ವಿವರಗಳನ್ನೂ ತಿಳಿಸು. ನಾಗಕುಲೋದ್ಧಾರ ಕಾರ್ಯದಲ್ಲಿ ನೆರವಾಗುವಂತೆ ಹೇಳು. ಆನಮೇಜಯನು ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸುವಂತೆ ಮಾಡು’ ಎಂದು ಕೇಳಿಕೊಂಡ. ಆಸ್ತಿಕನು ಮಾವ, ತಾಯಿಯರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ ಎಂಬುದು ಒಂದು ಸಂತಸದ ಸುದ್ದಿ.
ತನಗೆ ತೊಂದರೆಯಾಗುತ್ತದೆಂದು ಗೊತ್ತಿದ್ದರೂ ತಾಯಿಯ ದುಷ್ಟ ಸಲಹೆಯನ್ನು ತಿರಸ್ಕರಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ತನ್ನ ಕುಲದವರ ಸಾಮೂಹಿಕ ಕೊಲೆ ನಡೆಯುತ್ತಿದ್ದಾಗ ಅದನ್ನು ತಪ್ಪಿಸುವ ಸತ್ಸಂಕಲ್ಪ ಮಾಡಿ ಯಶಸ್ವಿಯಾದದ್ದು ಈತನ ಮಹತ್ ಸಾಧನೆ.
ಮೂಲ ...{Loading}...
ನೆಳಲು ಸುಳಿಯಲು ದಂತಿಯೆಂದ
ಪ್ಪಳಿಸೆ ವಾಸುಕಿ ನೊಂದನಂಬುಧಿ
ತುಳುಕಿದವು ಸತ್ವಾತಿಶಯವೆಂತುಟು ಮಹಾದೇವ
ತುಳಿದುದರಿ ಸುಭಟರನು ಸಾವಿರ
ತಲೆಯ ಸೆಳೆದುದು ಸೊಂಡಿಲಲಿ ವೆ
ಗ್ಗಳೆಯ ಮದಕರಿ ಕೇಣಿಗೊಂಡುದು ವೈರಿಮೋಹರವ ॥14॥
೦೧೫ ಸೀಳಿ ಹರಹಿತು ...{Loading}...
ಸೀಳಿ ಹರಹಿತು ಕರಿಗಳನು ನೇ
ಪಾಳಗುದುರೆಯ ಥಟ್ಟುಗಳ ಹಿಂ
ಗಾಲಲಣೆದುದು ರಥವನೈದಾರೇಳನೊಂದಾಗಿ
ತೋಳೊಳಗೆ ನೆಗ್ಗೊತ್ತಿ ಮಿಗೆ ಕಾ
ಲಾಳ ತೊತ್ತಳದುಳಿದು ಕಾಲನ
ಗೂಳೆಯಕ್ಕುಪಕಾರಿಯಾದುದು ಸುಪ್ರತೀಕಗಜ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜವು ತನಗೆದುರಾದ ಎಲ್ಲ ಆನೆಗಳನ್ನು ಸೀಳಿ ಹಾಕಿತು ; ನೇಪಾಳದ ಕುದುರೆಗಳ ಸೈನ್ಯವನ್ನು ಹಿಂದಿನ ಕಾಲುಗಳಿಂದ ತುಳಿದು ನಾಶಪಡಿಸಿತು. ಒಂದೇ ಬಾರಿಗೆ ಐದು, ಆರು, ಏಳು ರಥಗಳನ್ನು ಒಟ್ಟಿಗೆ ಸೊಂಡಿಲಿನಿಂದ ಒತ್ತಿ ಪುಡಿ ಪುಡಿ ಮಾಡಿತು. ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಕಾಲಾಳು ಸೈನ್ಯವನ್ನು ತುಳಿದು ಆ ಸೈನ್ಯಕ್ಕೆ ಯಮನ ಬೀಡಾರದತ್ತ ವಲಸೆ ಹೋಗಲು ಸಹಕಾರಿಯಾಯಿತು.
ಪದಾರ್ಥ (ಕ.ಗ.ಪ)
ಹರಹು-ಹರಡು, ಕರಿ-ಆನೆ, ಅಣೆದುದು-ಹೊಡೆದುದು, ಗೂಳೆಯ- ವಲಸೆ
ಮೂಲ ...{Loading}...
ಸೀಳಿ ಹರಹಿತು ಕರಿಗಳನು ನೇ
ಪಾಳಗುದುರೆಯ ಥಟ್ಟುಗಳ ಹಿಂ
ಗಾಲಲಣೆದುದು ರಥವನೈದಾರೇಳನೊಂದಾಗಿ
ತೋಳೊಳಗೆ ನೆಗ್ಗೊತ್ತಿ ಮಿಗೆ ಕಾ
ಲಾಳ ತೊತ್ತಳದುಳಿದು ಕಾಲನ
ಗೂಳೆಯಕ್ಕುಪಕಾರಿಯಾದುದು ಸುಪ್ರತೀಕಗಜ ॥15॥
೦೧೬ ದ್ವಿಗುಣ ತ್ರಿಗುಣದಲಣೆದು ...{Loading}...
ದ್ವಿಗುಣ ತ್ರಿಗುಣದಲಣೆದು ಜೋಡಿಸಿ
ಚಿಗಿದು ಹಾಯ್ಕುವ ಮೆಟ್ಟಿ ಸೀಳುವ
ತೆಗೆದು ಕಟ್ಟುವ ತಿರುಹಿ ನೂಕುವ ಹೆಡತಲೆಯೊಳಡಸಿ
ಉಗುರೊಳೌಕುವ ನಿಗ್ಗವದೊಳಿ
ಬ್ಬಗಿಯ ಮಾಡುವ ಕಾಲುಗೊಲೆಯಲಿ
ವಿಗಡ ಕರಿ ತುಳಿದಾಡಿತಿದಿರಿದಿರಾದ ಪಟುಭಟರ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜವು ಒಮ್ಮೆಗೆ ಇಬ್ಬರು ಮೂವರಂತೆ ಸೊಂಡಿಲಿನಲ್ಲಿ ಜೋಡಿಸಿ ಸಿಗಿದು ಹಾಕಿತು. ಪುನಃ ಶತ್ರುಸೈನ್ಯವನ್ನು ಕಾಲಿನಲ್ಲಿ ಮೆಟ್ಟಿ ಸೀಳಿ ಹಾಕಿತು. ಸೊಂಡಲಿನಲ್ಲಿ ಸುತ್ತಿ ಕಟ್ಟಿತು, ತಿರುಗಿಸಿ ನೂಕಿತು. ತಲೆಯಿಂದ ಡಿಕ್ಕಿ ಹೊಡೆಯಿತು. ಕಾಲುಗುರುಗಳಿಂದ ಒತ್ತಿ ದಂತದಿಂದ ಎರಡು ಹೋಳಾಗಿ ಸೀಳಿತು. ಈ ಭಯಂಕರ ಆನೆಯು ಇದಿರಾದ ವೀರಾಧಿ ವೀರರನ್ನು ಕಾಲಿನ ಸರಪಳಿಯಿಂದ ತುಳಿದು ಹಾಕಿತು.
ಪದಾರ್ಥ (ಕ.ಗ.ಪ)
ಅಣೆದು-ಮೇಲೆಬಿದ್ದು, ಔಕುವ-ಒತ್ತುವ, ನಿಗ್ಗವದೊಳು-ದಂತದಲ್ಲಿ, ವಿಗಡ-ಭಯಂಕರ, ಇಬ್ಬಗಿ-ಎರಡು ಭಾಗ,
ಟಿಪ್ಪನೀ (ಕ.ಗ.ಪ)
ಸಮುದ್ರ ಮಥನ - ವಿಷ್ಣುವು ಮೋಹಿನಿಯ ರೂಪವನು ಧರಿಸಿದ ಬಂದು ಅಮೃತವನ್ನು ದೇವ-ದಾವನರಿಗೆ ಸಮನಾಗಿ ಹಂಚುವುದಾಗಿ ಹೇಳಿ ವಂಚಿಸಿದ ಪ್ರಸಂಗ ಸಮುದ್ರ ಮಥನದ್ದು. ದೇವದಾನವರಿಬ್ಬರೂ ಅಮೃತಕ್ಕಾಗಿ ಹಾಲುಗಡಲನ್ನು ಮಥಿಸುವ ತೀರ್ಮಾನ ಕೈಗೊಂಡರು. ಮಥನದ ಕ್ರಮವನನು ಮೇರುಪರ್ವತದಲ್ಲಿ ಕುಳಿತು ತೀರ್ಮಾನಿಸಿದರು. ಕೂಲಂಕಷವಾಗಿ Z್ಪರ್ಚಿಸಿದ ಬಳಿಕ ಭಾರಿಯ ಮಂದರ ಪರ್ವತವನ್ನು ಕಡೆಗೋಲಾಗಿ ವಾಸುಕಿಯನ್ನು ಹಗ್ಗವಾಗಿ ಕೆಳಗೆ ಕೂರ್ಮನನ್ನು ಆಧಾರವಾಗಿ ಇರಿಸಿದರು. ಹನ್ನೊಂದು ಸಾವಿರ ಯೋಜನ ಉದ್ದಗಲಗಳಿಂದ ಮಂದರ ಪರ್ವತವನ್ನು ಆದಿಶೇóಷನು ಎತ್ತಿ ತಂದನು. ಅಧಿಕೋತ್ಸಾಹದಿಂದ ದೇವದಾನವರು ಮಥಿಸುವ ಕ್ರಿಯೆಯಲ್ಲಿ ತೊಡಗಿದರು.
ಮೂಲ ...{Loading}...
ದ್ವಿಗುಣ ತ್ರಿಗುಣದಲಣೆದು ಜೋಡಿಸಿ
ಚಿಗಿದು ಹಾಯ್ಕುವ ಮೆಟ್ಟಿ ಸೀಳುವ
ತೆಗೆದು ಕಟ್ಟುವ ತಿರುಹಿ ನೂಕುವ ಹೆಡತಲೆಯೊಳಡಸಿ
ಉಗುರೊಳೌಕುವ ನಿಗ್ಗವದೊಳಿ
ಬ್ಬಗಿಯ ಮಾಡುವ ಕಾಲುಗೊಲೆಯಲಿ
ವಿಗಡ ಕರಿ ತುಳಿದಾಡಿತಿದಿರಿದಿರಾದ ಪಟುಭಟರ ॥16॥
೦೧೭ ಅರೆದುದೋ ಪರಬಲವ ...{Loading}...
ಅರೆದುದೋ ಪರಬಲವ ಕಾಲನ
ಹೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರು
ಹರೆದುದೋ ಹವಣಿಲ್ಲ ದಂತಿಯ ಸಮರಸೌರಂಭ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವ ಸೇನೆಯನ್ನು ಅದು ಅರೆದು ಹಾಕಿತೋ ; ಯಮನನ್ನು ಕಾಪಾಡಿತೋ, (ಸೈನಿಕರನ್ನು ಕೊಂದು ಯಮನ ಕೆಲಸವನ್ನು ಕಡಿಮೆ ಮಾಡಿತು). ಪಾಂಡವ ಸೇನೆಗೆ ಮಾರಣ ಮಂತ್ರವನ್ನು ಬರೆದ ಹಾಗಾಯಿತೋ ಯುದ್ಧಕ್ಕೆ ಕೈಗಳನ್ನು ಎತ್ತಿ ಕರೆಯಿತೋ, ಶತ್ರು ಸೇನೆಯಲ್ಲವೂ ನೀರಿನಲ್ಲಿ ಮುಳುಗಿತೋ . ಶತ್ರುಪಕ್ಷದ ಸೈನಿಕರು ಪಲಾಯನ ಮಾಡಿದರೋ ಎಂಬಂತಹ ಸನ್ನಿವೇಶದಲ್ಲಿ , ಈ ಆನೆಯ ಸಮರೋತ್ಸಾಹಕ್ಕೆ ಸಮನಿಲ್ಲವಾಯಿತು.
ಪದಾರ್ಥ (ಕ.ಗ.ಪ)
ಹವಣಿಲ್ಲ-ನಿಯಂತ್ರಣಕ್ಕೆ ಮೀರಿದ್ದು, ಸೌರಂಭ-ಉತ್ಸಾಹ,
ಮೂಲ ...{Loading}...
ಅರೆದುದೋ ಪರಬಲವ ಕಾಲನ
ಹೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರು
ಹರೆದುದೋ ಹವಣಿಲ್ಲ ದಂತಿಯ ಸಮರಸೌರಂಭ ॥17॥
೦೧೮ ಮುರಿದು ಮನ್ದರಗಿರಿ ...{Loading}...
ಮುರಿದು ಮಂದರಗಿರಿ ಪಯೋಧಿಯ
ತೆರೆಗಳನು ತುಳಿವಂತೆ ರಿಪು ಮೋ
ಹರವನರೆದುದು ನುಗ್ಗುನುಸಿಯಾಯ್ತಖಿಳ ತಳತಂತ್ರ
ತೆರಳಿದರು ರಾವುತರು ರಥಿಕರು
ಹೊರಳಿಯೊಡೆದುದು ಗಜದ ಗಾವಳಿ
ಜರಿದುದಳಿದುದನಾರು ಬಲ್ಲರು ಭೂಪ ಕೇಳ್ ಎಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರ ಮಥನದ ಸಂದರ್ಭದಲ್ಲಿ ಮಂದರ ಪರ್ವತವು ತಿರುಗಿ ಸಮುದ್ರದ ತೆರೆಗಳನ್ನು ತುಳಿದುಹಾಕುವಂತೆ ಈ ಗಜವು ಶತ್ರು ಸೈನ್ಯವನ್ನು ಅರೆದುಹಾಕಿತು. ಸಂಪೂರ್ಣ ಸೇನೆಯೇ ನುಗ್ಗು ನುರಿಯಾಯಿತು. ಕುದುರೆ ಸವಾರರು ಹಿಂದಿರುಗಿದರು. ರಥದಲ್ಲಿ ಕುಳಿತು ಯುದ್ಧ ಮಾಡುತ್ತಿದ್ದವರು ಹೊರಳಿ ಓಡಿದರು. ಈ ಆನೆಯ ಉಪಟಳದಿಂದ ನುಜ್ಜುಗುಜ್ಜಾದವರನ್ನು, ಮರಣ ಹೊಂದಿದುದನ್ನು ಯಾರು ಬಲ್ಲರು. ರಾಜನೇ ಕೇಳು ಎಂದು ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ಪಯೋಧಿ-ಹಾಲಿನ ಸಮುದ್ರ, ಗಾವಳಿ-ತೊಂದರೆ, ತಳತಂತ್ರ- ರಣರಂಗ ,
ಮೂಲ ...{Loading}...
ಮುರಿದು ಮಂದರಗಿರಿ ಪಯೋಧಿಯ
ತೆರೆಗಳನು ತುಳಿವಂತೆ ರಿಪು ಮೋ
ಹರವನರೆದುದು ನುಗ್ಗುನುಸಿಯಾಯ್ತಖಿಳ ತಳತಂತ್ರ
ತೆರಳಿದರು ರಾವುತರು ರಥಿಕರು
ಹೊರಳಿಯೊಡೆದುದು ಗಜದ ಗಾವಳಿ
ಜರಿದುದಳಿದುದನಾರು ಬಲ್ಲರು ಭೂಪ ಕೇಳೆಂದ ॥18॥
೦೧೯ ಮುರಿದು ಕೊಟ್ಟುದು ...{Loading}...
ಮುರಿದು ಕೊಟ್ಟುದು ದಂತಿ ಗುರುವಿ
ನ್ನುರುಬಿ ರಾಯನ ಹಿಡಿಯದಿರನಿದ
ತರುಬಲಾಪರೆ ಬರಲಿ ಸಾತ್ಯಕಿ ನಕುಲ ಪವನಜರು
ಇರಿತಕಿವರಂಜಿದರೆ ಪಾರ್ಥಂ
ಗರುಹಿ ಬೇಗದೊಳೆನುತ ನಾಯಕ
ರೊರಲುತಿರಲನುವಾದುದಿತ್ತಲು ದೊರೆಗಳೊಗ್ಗಿನಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಯು ಪಾಂಡವ ಸೈನ್ಯವನ್ನು ತಿರುಗಿ ಓಡುವಂತೆ ಮಾಡಿರುವುದರಿಂದ ಗುರುವಾದ ದ್ರೋಣನು ಧರ್ಮರಾಯನನ್ನು ಹಿಡಿಯದೇ ಬಿಡುವುದಿಲ್ಲ. ಈ ಆನೆಯನ್ನು ಎದುರಿಸಲು ಶಕ್ತರಾದರೆ ಸಾತ್ಯಕಿ, ನಕುಲ, ಭೀಮರು ಬರಲಿ. ಇವರುಗಳು ಯುದ್ಧಕ್ಕೆ ಹೆದರಿದರೆ ಬೇಗ ಅರ್ಜುನನಿಗೆ ತಿಳಿಸಿ ಎನ್ನುತ್ತ ನಾಯಕರು ಕೂಗುತ್ತಿರಲು ಇತ್ತ ಪಾಂಡವ ರಾಜರುಗಳು ಒಟ್ಟಾಗಿ ಯುದ್ಧಕ್ಕೆ ಸಿದ್ಧವಾದರು.
ಪದಾರ್ಥ (ಕ.ಗ.ಪ)
ತರುಬಲು-ತಡೆಯಲು,
ಮೂಲ ...{Loading}...
ಮುರಿದು ಕೊಟ್ಟುದು ದಂತಿ ಗುರುವಿ
ನ್ನುರುಬಿ ರಾಯನ ಹಿಡಿಯದಿರನಿದ
ತರುಬಲಾಪರೆ ಬರಲಿ ಸಾತ್ಯಕಿ ನಕುಲ ಪವನಜರು
ಇರಿತಕಿವರಂಜಿದರೆ ಪಾರ್ಥಂ
ಗರುಹಿ ಬೇಗದೊಳೆನುತ ನಾಯಕ
ರೊರಲುತಿರಲನುವಾದುದಿತ್ತಲು ದೊರೆಗಳೊಗ್ಗಿನಲಿ ॥19॥
೦೨೦ ಅಳ್ಳೆದೆಯ ಮನ್ನೆಯರನೊಗ್ಗಿನ ...{Loading}...
ಅಳ್ಳೆದೆಯ ಮನ್ನೆಯರನೊಗ್ಗಿನ
ಡೊಳ್ಳುಗರ ಕಟವಾಯ ಕೊಯ್ ತಲೆ
ಗಳ್ಳರಿವದಿರು ತರಿಚುಗೆಡೆವರ ಹೋಗ ಹೇಳೆನುತ
ಬಿಲ್ಲಗೊಲೆಗೇರಿಸುತ ಚೌಪಟ
ಮಲ್ಲ ಹೊಕ್ಕನು ಭೀಮ ಭಟರ
ಲ್ಲಲ್ಲಿ ಕವಿದುದು ದ್ರುಪದ ನಕುಲ ಯುಧಿಷ್ಠಿರಾದಿಗಳು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮನ್ನಣೆಗೆ ಪಾತ್ರರಾಗಿದ್ದು ಈಗ ಅಳ್ಳೆದೆಯವರಾದ, ಗುಂಪು ಗುಂಪಾಗಿರುವ ಸತ್ವಹೀನರುಗಳ ಕಟವಾಯನ್ನು ಕತ್ತರಿಸಿ ಹಾಕಿ; ಅವರು ತಲೆಗಳ್ಳರು. ಹೆದರಿ ಹೋದವರನ್ನು ಯುದ್ಧದಿಂದ ಹಿಂತಿರುಗಿ ಹೋಗಲು ಹೇಳು ಎನ್ನುತ್ತ, ಬಿಲ್ಲಿಗೆ ಹೆದೆಯೇರಿಸುತ್ತ ಮಹಾವೀರನಾದ ಭೀಮ ಯುದ್ಧ ರಂಗವನ್ನು ಪ್ರವೇಶಿಸಿದ. ದ್ರುಪದ, ನಕುಲ, ಯುಧಿಷ್ಠಿರರೇ ಮುಂತಾದ ವೀರಭಟರು ಅಲ್ಲಲ್ಲಿ ಗುಂಪುಗೂಡಿದರು.
ಪದಾರ್ಥ (ಕ.ಗ.ಪ)
ಡೊಳ್ಳುಗರ-ಸತ್ವಹೀನರ, ಗೊಲಗೆ-ಹೆದೆಗೆ (ಬಿಲ್ಲಿನ ತುದಿಗೆ)
ಮೂಲ ...{Loading}...
ಅಳ್ಳೆದೆಯ ಮನ್ನೆಯರನೊಗ್ಗಿನ
ಡೊಳ್ಳುಗರ ಕಟವಾಯ ಕೊಯ್ ತಲೆ
ಗಳ್ಳರಿವದಿರು ತರಿಚುಗೆಡೆವರ ಹೋಗ ಹೇಳೆನುತ
ಬಿಲ್ಲಗೊಲೆಗೇರಿಸುತ ಚೌಪಟ
ಮಲ್ಲ ಹೊಕ್ಕನು ಭೀಮ ಭಟರ
ಲ್ಲಲ್ಲಿ ಕವಿದುದು ದ್ರುಪದ ನಕುಲ ಯುಧಿಷ್ಠಿರಾದಿಗಳು ॥20॥
೦೨೧ ಕರಿ ಬಲುಹು ...{Loading}...
ಕರಿ ಬಲುಹು ಕಲಿ ಭೀಮಸೇನನು
ದುರುಳನಿನ್ನೇನಹನೆನುತ ಮೋ
ಹರಿಸಿ ಕವಿದುದು ಮತ್ಸ್ಯ ಸೃಂಜಯ ಪಂಚ ಕೈಕೆಯರು
ತಿರುವಿಗಂಬನು ತೊಡಚಿ ಸಾತ್ಯಕಿ
ನರನ ಮಗ ಹೈಡಿಂಬ ಯವನೇ
ಶ್ವರರು ಧೃಷ್ಟದ್ಯುಮ್ನ ಮೊದಲಾಗೈದಿದರು ಗಜವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಯು ಬಲಶಾಲಿಯಾದುದು. ಭೀಮನು ದುರುಳನು. ಅವನಿಗೆ ಏನು ಸಂಭವಿಸುವುದೋ ಎನ್ನುತ್ತಾ, ಮತ್ಸ್ಯ, ಸೃಂಜಯ, ಪಂಚ ಕೈಕಯರು ಒಟ್ಟುಗೂಡಿ ಮುತ್ತಿದರು. ಸಾತ್ಯಕಿ, ಅಭಿಮನ್ಯು, ಘಟೋತ್ಕಚ ಯವನೇಶ್ವರ ದೃಷ್ಟದ್ಯುಮ್ನ ಮೊದಲಾದವರು ಬಿಲ್ಲಿಗೆ ಬಾಣವನ್ನು ಹೂಡಿ ಗಜದ ಸಮೀಪಕ್ಕೆ ಬಂದರು.
ಪದಾರ್ಥ (ಕ.ಗ.ಪ)
ತಿರುವಿಗೆ-ಬಿಲ್ಲಿಗೆ, ಅಂಬನು-ಬಾಣವನ್ನು, ತೊಡಚಿ-ತೊಡಿಸಿ, ಹೈಡಿಂಬ-ಘಟೋತ್ಕಚ, ನರನಮಗ-ಅಭಿಮನ್ಯು, ಯವನೇಶ್ವರ-ಯವನರಾಜ,
ಮೂಲ ...{Loading}...
ಕರಿ ಬಲುಹು ಕಲಿ ಭೀಮಸೇನನು
ದುರುಳನಿನ್ನೇನಹನೆನುತ ಮೋ
ಹರಿಸಿ ಕವಿದುದು ಮತ್ಸ್ಯ ಸೃಂಜಯ ಪಂಚ ಕೈಕೆಯರು
ತಿರುವಿಗಂಬನು ತೊಡಚಿ ಸಾತ್ಯಕಿ
ನರನ ಮಗ ಹೈಡಿಂಬ ಯವನೇ
ಶ್ವರರು ಧೃಷ್ಟದ್ಯುಮ್ನ ಮೊದಲಾಗೈದಿದರು ಗಜವ ॥21॥
೦೨೨ ಗಿರಿಯ ತರಿವರೆ ...{Loading}...
ಗಿರಿಯ ತರಿವರೆ ಶಕ್ರನಲ್ಲದೆ
ನೆರೆದ ದಿವಿಜ ಸಮೂಹ ಮಾಡುವ
ಭರವಸಿಕೆ ತಾನೇನು ಹೊದ್ದಿದರಿವರು ದಿಗ್ಗಜವ
ಸರಳ ಬಲುವಳೆಗಾಲವಹಿತ
ದ್ವಿರದ ಗಿರಿಯಲಿ ಕಾಣಲಾದುದು
ಕೆರಳಿ ಕರಿ ಕೈಕೊಂಡುದರೆಯಟ್ಟಿತು ಮಹಾರಥರ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರ್ವತವನ್ನು ಕತ್ತರಿಸಿ ಹಾಕಲು ಸಾಕ್ಷಾತ್ ಇಂದ್ರನೇ ಬರಬೇಕು. ಇತರ ದೇವತೆಗಳ ಗುಂಪು ಸೇರಿ ಆ ಕೆಲಸವನ್ನು ನಿರ್ವಹಿಸುವ ಭರವಸೆ ಇದೆಯೆ ? ಪಾಂಡವರು ಆ ದಿಗ್ಗಜವನ್ನು ಸಮೀಪಿಸಿದರು. ಬಾಣಗಳ ಬಲುಮಳೆಗಾಲವನ್ನು ಆನೆಯೆಂಬ ಬೆಟ್ಟದ ಮೇಲೆ ಕಾಣಲಾಯಿತು. ಆನೆಯು ಕೋಪಗೊಂಡು ಪಾಂಡವ ಸೈನ್ಯದ ಮಹಾರಥರನ್ನು ಬೆನ್ನಟ್ಟಿತು.
ಪದಾರ್ಥ (ಕ.ಗ.ಪ)
ಸರಿವಳೆ-ಒಂದೇ ಸಮನೆ ಉಂಟಾಗುವ ಮಳೆ, ದ್ವಿರದ-ಆನೆ, ಅರೆಯಟ್ಟು- ಅಟ್ಟಿಸಿಕೊಂಡು ಹೋಗು, ಹೊದ್ದು-ಸಮೀಪಿಸು
ಮೂಲ ...{Loading}...
ಗಿರಿಯ ತರಿವರೆ ಶಕ್ರನಲ್ಲದೆ
ನೆರೆದ ದಿವಿಜ ಸಮೂಹ ಮಾಡುವ
ಭರವಸಿಕೆ ತಾನೇನು ಹೊದ್ದಿದರಿವರು ದಿಗ್ಗಜವ
ಸರಳ ಬಲುವಳೆಗಾಲವಹಿತ
ದ್ವಿರದ ಗಿರಿಯಲಿ ಕಾಣಲಾದುದು
ಕೆರಳಿ ಕರಿ ಕೈಕೊಂಡುದರೆಯಟ್ಟಿತು ಮಹಾರಥರ ॥22॥
೦೨೩ ಚೆಲ್ಲಿತಿದು ದೆಸೆದೆಸೆಗೆ ...{Loading}...
ಚೆಲ್ಲಿತಿದು ದೆಸೆದೆಸೆಗೆ ಚೌಪಟ
ಮಲ್ಲ ಗಿಲ್ಲರ ಪಾಡೆ ನಮ್ಮದು
ಬಲ್ಲಿತಹುದುಸುರಿಲ್ಲದೊಡಲಿನ ಚೆಲುವು ಫಲವೇನು
ಅಲ್ಲಿ ದೈವದ ನೆನಹು ಘನ ಜಯ
ವೆಲ್ಲಿಯದು ನಮಗಿನ್ನು ಸಾಕಿ
ನ್ನೆಲ್ಲವೇತಕೆ ಚಿತ್ತವಿಸು ಚೌದಂತನಾಹವವ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಆನೆಯು ಚೌಪಟ ಮಲ್ಲಗಿಲ್ಲರ ನಾವೆಯನ್ನು ದಿಕ್ಕಾಪಾಲಾಗಿಸಿತು. ನಮ್ಮ ಸೈನ್ಯ ಬಲಶಾಲಿಯಾದುದು. ಆದರೆ ಅದು ಉಸುರಿಲ್ಲದ ದೇಹದಂತೆ, ಅದರಿಂದ ಫಲವೇನು. ಅಲ್ಲಿ ಪಾಂಡವರಲ್ಲಿ ದೈವದ ಆಲೋಚನೆ ಘನವಾಗಿದೆ. ಅಂದ ಮೇಲೆ ನಮಗೆ ಜಯವೆಲ್ಲಿಯದು. ಸಾಕು ಇನ್ನು ಆ ವಿಚಾರಗಳೆಲ್ಲ ಏತಕ್ಕೆ, ಈ ಆನೆಯ ಯುದ್ಧದ ವಿವರವನ್ನು ಕೇಳು ಎಂದು ಸಂಜಯ ಧೃತರಾಷ್ಟ್ರನಿಗೆ ತಿಳಿಸಿದ.
ಪದಾರ್ಥ (ಕ.ಗ.ಪ)
ಪಾಡೆ - ನಾವೆ, ದೋಣಿ
ಚೌದಂತ-ನಾಲ್ಕು ದಂತಗಳನ್ನು ಹೊಂದಿದ ಆನೆ
ಮೂಲ ...{Loading}...
ಚೆಲ್ಲಿತಿದು ದೆಸೆದೆಸೆಗೆ ಚೌಪಟ
ಮಲ್ಲ ಗಿಲ್ಲರ ಪಾಡೆ ನಮ್ಮದು
ಬಲ್ಲಿತಹುದುಸುರಿಲ್ಲದೊಡಲಿನ ಚೆಲುವು ಫಲವೇನು
ಅಲ್ಲಿ ದೈವದ ನೆನಹು ಘನ ಜಯ
ವೆಲ್ಲಿಯದು ನಮಗಿನ್ನು ಸಾಕಿ
ನ್ನೆಲ್ಲವೇತಕೆ ಚಿತ್ತವಿಸು ಚೌದಂತನಾಹವವ ॥23॥
೦೨೪ ಸೆಳೆವಿಡಿದು ತುರುಗಾಹಿ ...{Loading}...
ಸೆಳೆವಿಡಿದು ತುರುಗಾಹಿ ಪಶು ಸಂ
ಕುಲವ ತೆವರುವವೋಲು ವಾಯಸ
ಕುಲವನೊಂದೇ ಗೂಗೆ ಹೊಯ್ದರೆಯಟ್ಟುವಂದದಲಿ
ಬಲುಕಣಿಗಳಿವದಿರನು ಕರಿ ಮುಂ
ಕೊಳಿಸಿ ಕೆಡಹಿತು ಯವನ ಕೌಸಲ
ಬಲವ ಕೈಕೆಯ ಮಗಧಭೂಪರ ಕೊಡಹಿ ಹಾಯಿಕಿತು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದೇ ಒಂದು ಕೋಲನ್ನು ಹಿಡಿದು ದನಕಾಯುವವನು ದನಗಳ ಹಿಂಡನ್ನು ಒಟ್ಟಾಗಿ ಮುಂದೆ ನಡೆಸುವಂತೆ, ಕಾಗೆಗಳ ದೊಡ್ಡ ಗುಂಪನ್ನು ಒಂದೇ ಒಂದು ಗೂಗೆ ಹೊಡೆದು ನಾಶ ಮಾಡುವ ಹಾಗೆ, ಮಹಾವೀರರಾದವರನ್ನು ಸುಪ್ರತೀಕ ಗಜವು ಮುನ್ನುಗ್ಗಿ ಬಡಿದು ಕೊಂದು ಹಾಕಿತು. ವೀರರಾದ ಯವನ, ಕೌಸಲ, ಕೈಕೆಯ, ಮಗಧ ಮಹಾರಾಜರನ್ನು ಹಾಗೂ ಅವರ ಸೇನೆಯನ್ನು ಆನೆ ಕೊಡವಿ ಹಾಕಿತು.
ಪದಾರ್ಥ (ಕ.ಗ.ಪ)
ಸೆಳೆ-ಬೆತ್ತ, ಕೋಲು, ತೆವರುವ-ಒಟ್ಟಾಗಿ ನಡೆಸುವ, ವಾಯಸ-ಕಾಗೆ, ಕಣಿಗಳು-ಶಕ್ತಿ ಸಂಪನ್ನರು, ಅರೆಯಟ್ಟು-ನಾಶ ಮಾಡು
ಮೂಲ ...{Loading}...
ಸೆಳೆವಿಡಿದು ತುರುಗಾಹಿ ಪಶು ಸಂ
ಕುಲವ ತೆವರುವವೋಲು ವಾಯಸ
ಕುಲವನೊಂದೇ ಗೂಗೆ ಹೊಯ್ದರೆಯಟ್ಟುವಂದದಲಿ
ಬಲುಕಣಿಗಳಿವದಿರನು ಕರಿ ಮುಂ
ಕೊಳಿಸಿ ಕೆಡಹಿತು ಯವನ ಕೌಸಲ
ಬಲವ ಕೈಕೆಯ ಮಗಧಭೂಪರ ಕೊಡಹಿ ಹಾಯಿಕಿತು ॥24॥
೦೨೫ ಹಿಡಿಹಿಡಿಯಲೋಡಿದನು ...{Loading}...
ಹಿಡಿಹಿಡಿಯಲೋಡಿದನು ದ್ರುಪದನು
ಸಿಡಿದು ಕೆಲಸಾರಿದನು ಪವನಜ
ನೊಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ
ಒಡೆಮುರಿದು ಸಾತ್ಯಕಿಯ ರಥವನು
ತುಡುಕಿ ಹಾಯ್ಕಿತು ಭೀಮತನಯನ
ಕೊಡಹಿ ಬಿಸುಟುದು ಕೊಂದುದಗಣಿತ ಕರಿ ತುರಂಗಮವ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜವು ಹಿಡಿಯಲು ಅಟ್ಟಿಸಿ ಬಂದಾಗ ದ್ರುಪದನು ಓಡಿ ತಪ್ಪಿಸಿಕೊಂಡನು. ಭೀಮನು ಪಕ್ಕಕ್ಕೆ ಹಾರಿ ಬದುಕಿದನು. ಆನೆಯ ಹಿಡಿತಕ್ಕೆ ಸಿಕ್ಕಿ ಹಾಕಿಕೊಂಡವರೆಲ್ಲರ ಪ್ರಾಣ ದೇಹದಿಂದ ಹಾರಿ ಹೋಯಿತು. ಅದು ತಿರುಗಿ ಸಾತ್ಯಕಿಯ ರಥವನ್ನು ಹಿಡಿದು ಪುಡಿ ಮಾಡಿತು. ಭೀಮನ ಮಗನಾದ ಘಟೋತ್ಕಚನನ್ನು ಕೆಡವಿ ಹಾಕಿತು. ಅಲ್ಲದೆ ನೂರಾರು ಕುದುರೆಗಳನ್ನು ಸೈನಿಕರನ್ನು ಕೊಂದು ಹಾಕಿತು.
ಪದಾರ್ಥ (ಕ.ಗ.ಪ)
ಒಡೆ ಮುರಿದು-ಪಕ್ಕಕ್ಕೆ ತಿರುಗಿ, ತುಡುಕಿ-ಹಿಡಿದು, ತುರಂಗಮವ-ಕುದುರೆಗಳನ್ನು.
ಮೂಲ ...{Loading}...
ಹಿಡಿಹಿಡಿಯಲೋಡಿದನು ದ್ರುಪದನು
ಸಿಡಿದು ಕೆಲಸಾರಿದನು ಪವನಜ
ನೊಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ
ಒಡೆಮುರಿದು ಸಾತ್ಯಕಿಯ ರಥವನು
ತುಡುಕಿ ಹಾಯ್ಕಿತು ಭೀಮತನಯನ
ಕೊಡಹಿ ಬಿಸುಟುದು ಕೊಂದುದಗಣಿತ ಕರಿ ತುರಂಗಮವ ॥25॥
೦೨೬ ಮರಳಿ ಮತ್ತೆ ...{Loading}...
ಮರಳಿ ಮತ್ತೆ ಮಹಾರಥರು ಸಂ
ವರಿಸಿಕೊಂಡುದು ಸರಳ ಮಳೆಗಳ
ಸುರಿದರಾನೆಯ ಮೇಲೆ ಜೋದರ ಕೋಲ ಮನ್ನಿಸದೆ
ಗಿರಿಯ ಮುತ್ತಿದ ಮಿಂಚುಬುಳುವಿನ
ಹೊರಳಿಯಂತಿರೆ ಹೊನ್ನ ಬರಹದ
ಸರಳು ಮೆರೆದವು ಕರೆದರದುಭುತ ಕಣೆಯ ಸರಿವಳೆಯ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಥರೆನಿಸಿಕೊಂಡವರೆಲ್ಲ ಪುನಃ ಒಟ್ಟಿಗೆ ಸೇರಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಶತ್ರು ಸೈನಿಕರ ಬಾಣಗಳನ್ನು ಗಣನೆಗೆ ತೆಗೆದುಕೊಳ್ಳದೇ, ಬಾಣಗಳ ಮಳೆಯನ್ನು ಆನೆಯ ಮೇಲೆ ಸುರಿಸಿದರು. ಪರ್ವತವನ್ನು ಸಾವಿರಾರು ಮಿಂಚು ಹುಳುಗಳು ಮುತ್ತಿಕೊಂಡರೆ ಹೇಗೋ ಹಾಗೆ ಇವರು ಹೊಡೆದ ಬಂಗಾರದ ಬಾಣಗಳು ಆನೆಗೆ ಚುಚ್ಚಿಕೊಂಡು ಅಲಂಕಾರವಾಯಿತು. ಈ ಮಹಾರಥರು ಅದ್ಭುತವಾದ ಬಾಣಗಳ ಧಾರಾಕಾರವಾದ ಮಳೆಯನ್ನು ಕರೆದರು.
ಪದಾರ್ಥ (ಕ.ಗ.ಪ)
ಸರಿವಳೆ- ಧಾರಾಕಾರವಾದ ಮಳೆ
ಮೂಲ ...{Loading}...
ಮರಳಿ ಮತ್ತೆ ಮಹಾರಥರು ಸಂ
ವರಿಸಿಕೊಂಡುದು ಸರಳ ಮಳೆಗಳ
ಸುರಿದರಾನೆಯ ಮೇಲೆ ಜೋದರ ಕೋಲ ಮನ್ನಿಸದೆ
ಗಿರಿಯ ಮುತ್ತಿದ ಮಿಂಚುಬುಳುವಿನ
ಹೊರಳಿಯಂತಿರೆ ಹೊನ್ನ ಬರಹದ
ಸರಳು ಮೆರೆದವು ಕರೆದರದುಭುತ ಕಣೆಯ ಸರಿವಳೆಯ ॥26॥
೦೨೭ ಬಾಲರೆಸುಗೆಯ ಮಿಟ್ಟೆಯಮ್ಬಿಗೆ ...{Loading}...
ಬಾಲರೆಸುಗೆಯ ಮಿಟ್ಟೆಯಂಬಿಗೆ
ಸೋಲುವುದೆ ಗಿರಿ ವೈರಿ ಸುಭಟರ
ಕೋಲ ಕೊಂಬುದೆ ವೀರ ಕುಂಜರ ಮತ್ತೆ ಮೊಗ ನೆಗಹಿ
ಆಳೊಳಗೆ ಬೆರಸಿತು ಮಹಾ ರಥ
ರೋಳಿ ಮುರಿದುದು ಕುರಿಯ ಹಿಂಡಿನ
ತೋಳನೈ ನಿನ್ನಾನೆ ಸವರಿತು ಮತ್ತೆ ಮಾರ್ಬಲವ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಕ್ಕಳು ಮಣ್ಣಿನ ಬಾಣಗಳಲ್ಲಿ ಹೊಡೆದರೆ ಬೆಟ್ಟ ಸೋಲುವುದೆ ! ಅದೇ ರೀತಿ, ವೀರಗಜವು ವೈರಿ ಸೈನ್ಯದ ವೀರಭಟರ ಬಾಣಗಳನ್ನು ಲೆಕ್ಕಿಸುತ್ತದೆಯೆ ! ಪುನಃ ಆ ಆನೆಯು ಮುಖವನ್ನು ಮೇಲಕ್ಕೆತ್ತಿ ಸೈನಿಕರ ಮಧ್ಯೆ ಸೇರಿಕೊಂಡಿತು. ಮಹಾರಥರುಗಳ ಗುಂಪು ಚದುರಿತು. ನಿನ್ನ ಆನೆಯು ಕುರಿಯ ಹಿಂಡಿನಲ್ಲಿನ ತೋಳನಂತೆ. ವೈರಿ ಬಲವನ್ನು ಸವರಿ ಹಾಕಿತು ಎಂದು ಸಂಜಯ ಧೃತರಾಷ್ಟ್ರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಕುಂಜರ-ಆನೆ, ಓಳಿ-ಗುಂಪು.
ಮೂಲ ...{Loading}...
ಬಾಲರೆಸುಗೆಯ ಮಿಟ್ಟೆಯಂಬಿಗೆ
ಸೋಲುವುದೆ ಗಿರಿ ವೈರಿ ಸುಭಟರ
ಕೋಲ ಕೊಂಬುದೆ ವೀರ ಕುಂಜರ ಮತ್ತೆ ಮೊಗ ನೆಗಹಿ
ಆಳೊಳಗೆ ಬೆರಸಿತು ಮಹಾ ರಥ
ರೋಳಿ ಮುರಿದುದು ಕುರಿಯ ಹಿಂಡಿನ
ತೋಳನೈ ನಿನ್ನಾನೆ ಸವರಿತು ಮತ್ತೆ ಮಾರ್ಬಲವ ॥27॥
೦೨೮ ಹಡಗು ಜಲಧಿಯೊಳೋಡಿ ...{Loading}...
ಹಡಗು ಜಲಧಿಯೊಳೋಡಿ ಗಿರಿಗಳ
ನೆಡಹಿ ನುಗ್ಗಾದಂತೆ ಸುಭಟರ
ಗಡಣ ಗಜವನು ತಾಗಿ ತಾಗಿ ವಿಘಾತಿಯಲಿ ನೊಂದು
ಒಡಲ ಮೇಲೆಳ್ಳನಿತು ಮೋಹವ
ಹಿಡಿಯದಿವರೌಕಿದರು ಹಾವಿನ
ಕೊಡನು ದೋಷಿಗೆ ಸುಲಭವೇ ಧೃತರಾಷ್ಟ್ರ ಕೇಳ್ ಎಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮುದ್ರದಲ್ಲಿ ಹಡಗು ಓಡುವಾಗ ಸಮುದ್ರದೊಳಗಿರುವ ಪರ್ವತಕ್ಕೆ ಡಿಕ್ಕಿ ಹೊಡೆದು ನುಗ್ಗಾಗುವಂತೆ ಈ ಆನೆಯ ಮೇಲೆ ಬಿದ್ದು ಅದಕ್ಕೆ ತಾಗಿದ ಸೈನಿಕರೇ ನೋವನ್ನನುಭವಿಸಿದರು. ದೇಹದ ಮೇಲೆ ಸ್ವಲ್ಪವೂ ಅಭಿಮಾನವನ್ನಿಟ್ಟುಕೊಳ್ಳದೆ ಆನೆಯ ಮೇಲೆ ಯುದ್ಧವನ್ನು ಮಾಡಿದರು. ದೋಷಿಯಾದವನಿಗೆ ಹಾವನ್ನು ಒಳಗೆ ಉಳ್ಳ ಕೊಡದೊಳಗೆ ಕೈಹಾಕುವುದು ಸುಲಭವೇ ಕೇಳು ಧೃತರಾಷ್ಟ್ರ ಎಂದು ಸಂಜಯ ಹೇಳಿದ.
ಟಿಪ್ಪನೀ (ಕ.ಗ.ಪ)
ಹಾವಿನ ಕೊಡನು- ಇದನ್ನು ಒಂದು ದಿವ್ಯವೆನ್ನುತ್ತಾರೆ. ತಪ್ಪು ಮಾಡಿದ್ದಾನೆಂದು ಅನುಮಾನ ಬಂದವನನ್ನು ಪರೀಕ್ಷಿಸುವ ಒಂದು ವಿಧಾನ. ಒಂದು ಕೊಡದಲ್ಲಿ ವಿಷ ಸರ್ಪವನ್ನು ಇಟ್ಟು, ಆಪಾದಿತನನ್ನು ಆ ಕೊಡದೊಳಕ್ಕೆ ಕೈಹಾಕಲು ಹೇಳಲಾಗುವುದು. ಹಾಗೆ ಕೈಹಾಕಿದಾಗ ಸರ್ಪವು ಅವನ ಕೈಯನ್ನು ಕಚ್ಚಿದರೆ ಆತ ದೋಷಿಯೆಂದೂ, ಕಚ್ಚದಿದ್ದರೆ ನಿರ್ದೋಷಿಯೆಂದೂ ನಿರ್ಣಯಿಸಲಾಗುತ್ತಿತ್ತು. ಇದನ್ನು ‘ಘಟದಿವ್ಯ’ವೆನ್ನುತ್ತಾರೆ. ಹೀಗೆಯೇ ‘ಅಗ್ನಿದಿವ್ಯ’, ‘ತೈಲದಿವ್ಯ’ ಮುಂತಾದ ಅನೇಕ ದಿವ್ಯಗಳಿವೆ.
ಮೂಲ ...{Loading}...
ಹಡಗು ಜಲಧಿಯೊಳೋಡಿ ಗಿರಿಗಳ
ನೆಡಹಿ ನುಗ್ಗಾದಂತೆ ಸುಭಟರ
ಗಡಣ ಗಜವನು ತಾಗಿ ತಾಗಿ ವಿಘಾತಿಯಲಿ ನೊಂದು
ಒಡಲ ಮೇಲೆಳ್ಳನಿತು ಮೋಹವ
ಹಿಡಿಯದಿವರೌಕಿದರು ಹಾವಿನ
ಕೊಡನು ದೋಷಿಗೆ ಸುಲಭವೇ ಧೃತರಾಷ್ಟ್ರ ಕೇಳೆಂದ ॥28॥
೦೨೯ ಮುರಿದು ಮೋದಿತು ...{Loading}...
ಮುರಿದು ಮೋದಿತು ಸಮ್ಮುಖದೊಳಿ
ಟ್ಟೊರಸಿತೆಡದಲಿ ಹೊಯ್ದು ಸೀಳಿತು
ಹರಹಿತಪಸವ್ಯದಲಿ ಮೆದೆಗೆಡಹಿತು ಮಹಾರಥರ
ಹೊರೆದ ರಕುತದ ಧಾರೆಗಳ ತುದಿ
ಕರದೊಳೆಳಲುವ ತಲೆಗಳಂಘ್ರಿಯೊ
ಳೊರೆದ ನೆಣನಡಗಿನ ಮಹಾಗಜ ಮೊಗೆದುದರಿಬಲವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾರಥರ ಮೇಲೆರಗಿದ ಆನೆಯು ಅವರನ್ನು ಹೊಡೆದು ನೆಲಕ್ಕೆ ಹಾಕಿ ತಿಕ್ಕಿತು. ಎದುರಿನಲ್ಲಿ ಬಂದವರನ್ನು ಒರೆಸಿ ಹಾಕಿತು. ಎಡಕ್ಕೆ ತಿರುಗಿ ಅಲ್ಲಿದ್ದವರೆಲ್ಲರನ್ನು ಹೊಡೆದು ಸೀಳಿತು. ಮತ್ತೆ ಬಲಕ್ಕೆ ತಿರುಗಿ ಅಲ್ಲಿದ್ದ ಮಹಾರಥರ ಗುಂಪನ್ನು ನಾಶಪಡಿಸಿತು. ಒಸರುತ್ತಿದ್ದ ರಕ್ತದ ಧಾರೆಯಿಂದ, ತಲೆಗಳನ್ನು ಸೊಂಡಿಲಿನ ತುದಿಗೆ ಸಿಕ್ಕಿಸಿಕೊಂಡ, ಮಾಂಸವನ್ನು ಪಾದಗಳಲ್ಲಿ ಮೆತ್ತಿಕೊಂಡಿದ್ದ ಮಹಾಗಜವು ಶತ್ರುಸೈನ್ಯವನ್ನು ಗೋರಿ ಹಾಕಿತು.
ಪದಾರ್ಥ (ಕ.ಗ.ಪ)
ಮೋದಿತು-ತಿಕ್ಕಿತು. ಅಪಸವ್ಯ -ಬಲಗಡೆ , ತುದಿಕರ-ಸೊಂಡಿಲ ತುದಿ, ಮೊಗೆ-ಗೋರಿಕೊಳ್ಳು
ಮೂಲ ...{Loading}...
ಮುರಿದು ಮೋದಿತು ಸಮ್ಮುಖದೊಳಿ
ಟ್ಟೊರಸಿತೆಡದಲಿ ಹೊಯ್ದು ಸೀಳಿತು
ಹರಹಿತಪಸವ್ಯದಲಿ ಮೆದೆಗೆಡಹಿತು ಮಹಾರಥರ
ಹೊರೆದ ರಕುತದ ಧಾರೆಗಳ ತುದಿ
ಕರದೊಳೆಳಲುವ ತಲೆಗಳಂಘ್ರಿಯೊ
ಳೊರೆದ ನೆಣನಡಗಿನ ಮಹಾಗಜ ಮೊಗೆದುದರಿಬಲವ ॥29॥
೦೩೦ ಹಿನ್ದೆ ಹಿಡಿವರು ...{Loading}...
ಹಿಂದೆ ಹಿಡಿವರು ಮುರಿದರೆಡದಲಿ
ಸಂದಣಿಸುವರು ತಿರುಗಿದರೆ ಬಲ
ದಿಂದ ಕೈ ಮಾಡುವರು ಕವಿದರೆ ಸಿಡಿವರೆಡಬಲಕೆ
ಮುಂದೆ ಕಟ್ಟುವರಟ್ಟಿದರೆ ಮುರಿ
ವಿಂದ ಜಾರುವರಾ ಮಹಾರಥ
ವೃಂದ ಕಾದಿತು ಮದಕರಿಯ ಬೇಸರದೆ ಬಳಿಸಲಿಸಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಪ್ರತೀಕ ಗಜವನ್ನು ಪಾಂಡವ ಸೈನ್ಯದವರು ಹಿಂದಿನಿಂದ ಹಿಡಿಯುತ್ತಿದ್ದರು. ಅದು ಪಕ್ಕಕ್ಕೆ ತಿರುಗಿದಾಕ್ಷಣ ಎಡಭಾಗದಲ್ಲಿ ಒಟ್ಟುಗೂಡಿ ಹಿಡಿಯ ಹೊರಡುತ್ತಿದ್ದರು. ಅದು ಪುನಃ ತಿರುಗಲು, ಸೇನೆಯು ಬಲಕ್ಕೆ ತಿರುಗಿ ಹಿಡಿಯಲು ಯತ್ನಿಸುವಾಗ ಅದು ಆ ಕಡೆಗೂ ತಿರುಗಿದಾಗ ಸೇನೆ ಎಡಬಲಕ್ಕೆ ಹಾರಿ ಹೋಗುತ್ತಿತ್ತು. ಮುಂಭಾಗದಿಂದಲೇ ಕಟ್ಟಲು ಯತ್ನಿಸಿದರೆ ಅದು ಅಟ್ಟಿಸಿಕೊಂಡು ಬರಲು ಪಕ್ಕಕ್ಕೆ ತಿರುಗಿ ತಪ್ಪಿಸಿಕೊಳ್ಳುತ್ತಿದ್ದರು. ಆ ಮಹಾರಥಿಕರ ಸಮೂಹ ಬೇಸರಿಸದೇ ಆನೆಯೊಡನೆ ಹೋರಾಡುತ್ತಿತ್ತು.
ಮೂಲ ...{Loading}...
ಹಿಂದೆ ಹಿಡಿವರು ಮುರಿದರೆಡದಲಿ
ಸಂದಣಿಸುವರು ತಿರುಗಿದರೆ ಬಲ
ದಿಂದ ಕೈ ಮಾಡುವರು ಕವಿದರೆ ಸಿಡಿವರೆಡಬಲಕೆ
ಮುಂದೆ ಕಟ್ಟುವರಟ್ಟಿದರೆ ಮುರಿ
ವಿಂದ ಜಾರುವರಾ ಮಹಾರಥ
ವೃಂದ ಕಾದಿತು ಮದಕರಿಯ ಬೇಸರದೆ ಬಳಿಸಲಿಸಿ ॥30॥
೦೩೧ ಕರಿಯ ಕೋಲಾಹಲವನಾ ...{Loading}...
ಕರಿಯ ಕೋಲಾಹಲವನಾ ಜೋ
ದರ ಶರೌಘವ ಸೈರಿಸುತ ಮು
ಕ್ಕುರುಕಿ ಧರ್ಮಜ ನಕುಲ ಸಾತ್ಯಕಿ ಭೀಮ ನಂದನರು
ಸರಳ ಸಾರವ ಕಟ್ಟಿದರು ಮಿಗೆ
ಕೆರಳಿದನು ಭಗದತ್ತನನಿಬರ
ಹರೆಗಡಿದು ಹೊಗರಂಬ ಸುರಿದನು ಸರಿದರತಿರಥರು ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಯು ಉಂಟು ಮಾಡುತ್ತಿದ್ದ ಕೋಲಾಹಲವನ್ನು ಮತ್ತು ಯೋಧರ ಬಾಣ ವರ್ಷವನ್ನು ಸೈರಿಸಿ, ನಕುಲ, ಸಾತ್ಯಕಿ ಹಾಗೂ ಭೀಮನ ಮಕ್ಕಳು ಬಾಣಗಳಿಂದ ಆನೆಯನ್ನು ಕಟ್ಟಿದರು (ನಿಲ್ಲಿಸಿದ್ದರು). ಇದರಿಂದ ಭಗದತ್ತನಿಗೆ ಕೋಪಾವೇಶ ಉಂಟಾಯಿತು. ಭಗದತ್ತನು ಎಲ್ಲರ ಬಾಣಗಳನ್ನು ಕತ್ತರಿಸಿ, ಕಾಂತಿಯುಕ್ತವಾದ - ಬಾಣಗಳನ್ನು ಸುರಿಯಲು ಹೆದರಿ ಅತಿ ರಥರು ಹಿಂದಕ್ಕೆ ಸರಿದರು.
ಪದಾರ್ಥ (ಕ.ಗ.ಪ)
ಜೋದರ-ಯೋಧರ, ಮುಕ್ಕುರುಕಿ-ಮುತ್ತಿಕೊಂಡು,
ಮೂಲ ...{Loading}...
ಕರಿಯ ಕೋಲಾಹಲವನಾ ಜೋ
ದರ ಶರೌಘವ ಸೈರಿಸುತ ಮು
ಕ್ಕುರುಕಿ ಧರ್ಮಜ ನಕುಲ ಸಾತ್ಯಕಿ ಭೀಮ ನಂದನರು
ಸರಳ ಸಾರವ ಕಟ್ಟಿದರು ಮಿಗೆ
ಕೆರಳಿದನು ಭಗದತ್ತನನಿಬರ
ಹರೆಗಡಿದು ಹೊಗರಂಬ ಸುರಿದನು ಸರಿದರತಿರಥರು ॥31॥
೦೩೨ ಹತ್ತು ಶರದಲಿ ...{Loading}...
ಹತ್ತು ಶರದಲಿ ಧರ್ಮಜನನಿ
ಪ್ಪತ್ತರಿಂದಭಿಮನ್ಯುವನು ತೊಂ
ಬತ್ತು ಶರದಲಿ ನಕುಲ ಸಾತ್ಯಕಿ ದ್ರುಪದ ಕೈಕೆಯರ
ಕೆತ್ತಿದನು ಹದಿನೆಂಟು ಬಾಣದ
ಲಿತ್ತ ಭೀಮನ ನಂದನನನೈ
ವತ್ತು ಶರದಲಿ ಸಕಲ ರಥಿಕರನೆಚ್ಚು ಬೊಬ್ಬಿರಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನು ಹತ್ತು ಬಾಣಗಳಿಂದ ಧರ್ಮರಾಯನನ್ನು, ಇಪ್ಪತ್ತು ಬಾಣಗಳಿಂದ ಅಭಿಮನ್ಯುವನ್ನು, ತೊಂಬತ್ತು ಬಾಣಗಳಿಂದ ನಕುಲ, ಸಾತ್ಯಕಿ, ದ್ರುಪದ, ಕೈಕೆಯರನ್ನು, ಗಾಯಗೊಳಿಸಿದ. ಹದಿನೆಂಟು ಬಾಣಗಳಿಂದ ಭೀಮನ ಮಗನಾದ ಘಟೋತ್ಕಚನನ್ನು, ಐವತ್ತು ಬಾಣಗಳಿಂದ ಇತರ ರಥಿಕರನ್ನು ಹೊಡೆದು ಅಟ್ಟಹಾಸದಿಂದ ಕೂಗಿದನು.
ಮೂಲ ...{Loading}...
ಹತ್ತು ಶರದಲಿ ಧರ್ಮಜನನಿ
ಪ್ಪತ್ತರಿಂದಭಿಮನ್ಯುವನು ತೊಂ
ಬತ್ತು ಶರದಲಿ ನಕುಲ ಸಾತ್ಯಕಿ ದ್ರುಪದ ಕೈಕೆಯರ
ಕೆತ್ತಿದನು ಹದಿನೆಂಟು ಬಾಣದ
ಲಿತ್ತ ಭೀಮನ ನಂದನನನೈ
ವತ್ತು ಶರದಲಿ ಸಕಲ ರಥಿಕರನೆಚ್ಚು ಬೊಬ್ಬಿರಿದ ॥32॥
೦೩೩ ಬಿನುಗುಗಳ ತೆಗೆ ...{Loading}...
ಬಿನುಗುಗಳ ತೆಗೆ ಭೀಮಸೇನನ
ಮೊನೆಗೆ ಬಿಡು ಬಿಡು ಗಜವನೆಂದು
ಬ್ಬಿನಲಿ ತಿರುಹಿದನಾನೆಯನು ಪವನಜನ ಸಮ್ಮುಖಕೆ
ಧನುವ ಬಿಸುಟನು ಗದೆಯ ತುಡುಕಿದ
ನನುವರದೊಳಡ್ಡೈಸಿ ದಂತಿಯ
ಕನಲಿಸಿದನೊಳಹೊಕ್ಕು ಹೊಯ್ದನು ಸಿಂಹನಾದzಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲಸಕ್ಕೆ ಬಾರದವರನ್ನು ಬಿಟ್ಟು, ಆನೆಯನ್ನು ಭೀಮಸೇನನ ಮುಂದಕ್ಕೆ ಬಿಡು ಎಂದು ಹೇಳಿಕೊಳ್ಳುತ್ತಾ, ಭಗದತ್ತನು ಆನೆಯನ್ನು ಭೀಮನ ಎದುರು ಭಾಗಕ್ಕೆ ತಿರುಗಿಸಿದನು. ಆಗ ಭೀಮಸೇನನು ಕೈಯಲ್ಲಿದ್ದ ಬಿಲ್ಲನ್ನು ಬಿಸಾಡಿ ಗದೆಯನ್ನು ಕೈಗೆತ್ತಿಕೊಂಡನು. ರಣರಂಗದಲ್ಲಿ ಭಗದತ್ತನ ಆನೆಯಾದ ಸುಪ್ರತೀಕ ಗಜಕ್ಕೆ ಅಡ್ಡವಾಗಿ ನಿಂತು. ಆ ಆನೆಗೆ ಕೋಪ ಬರಿಸಿದನು. ಭೀಮನು ಸಿಂಹನಾದವನ್ನು ಮಾಡುತ್ತಾ ಸೈನ್ಯದೊಳಕ್ಕೆ ಪ್ರವೇಶಿಸಿ ಆನೆಯನ್ನು ಹೊಡೆದನು.
ಪದಾರ್ಥ (ಕ.ಗ.ಪ)
ಬಿನುಗು-ಕ್ಷುದ್ರ
ಅನುವರ-ಯುದ್ಧ,
ಮೂಲ ...{Loading}...
ಬಿನುಗುಗಳ ತೆಗೆ ಭೀಮಸೇನನ
ಮೊನೆಗೆ ಬಿಡು ಬಿಡು ಗಜವನೆಂದು
ಬ್ಬಿನಲಿ ತಿರುಹಿದನಾನೆಯನು ಪವನಜನ ಸಮ್ಮುಖಕೆ
ಧನುವ ಬಿಸುಟನು ಗದೆಯ ತುಡುಕಿದ
ನನುವರದೊಳಡ್ಡೈಸಿ ದಂತಿಯ
ಕನಲಿಸಿದನೊಳಹೊಕ್ಕು ಹೊಯ್ದನು ಸಿಂಹನಾದzಲಿ ॥33॥
೦೩೪ ಭುಜದ ಸಾಹಸ ...{Loading}...
ಭುಜದ ಸಾಹಸ ಹತ್ತು ಸಾವಿರ
ಗಜದ ಘಾಡಿಕೆ ಸಿಂಹನಾದದ
ವಿಜಯ ವಿಗ್ರಹ ವೀರ ಹಳಚಿದನಮಮ ಮದಕರಿಯ
ತ್ರಿಜಗ ತಲೆಕೆಳಗಾಗೆ ದಿವಿಜ
ವ್ರಜ ಭಯಂಗೊಳೆ ಮಿಕ್ಕು ಸುರಪನ
ಗಜದ ಹೊಯ್ ಕೈಯ್ಯಾನೆ ಹೆಣಗಿತು ಭೀಮಸೇನನಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹತ್ತು ಸಾವಿರ ಆನೆಗಳ ಬಲವನ್ನು ಹೊಂದಿದ್ದ ಭುಜ ಬಲದ, ಸಿಂಹನಾದ ಮಾಡುತ್ತಿದ್ದ, ವಿಜಯ ವಿಗ್ರಹದಂತಿದ್ದ ವೀರನಾದ ಭೀಮ, ಅಹಹ ಆ ಮದಗಜವನ್ನು ಹೊಯ್ದ. ಮೂರು ಲೋಕಗಳೂ ತಲೆಕೆಳಗಾಗಲು, ದೇವತೆಗಳ ಸಮೂಹವು ಭಯಗೊಳ್ಳಲು, ದೇವೇಂದ್ರನ ಆನೆಗೆ ಸರಿಸಮನಾದ ಸುಪ್ರತೀಕಗಜವು ಭೀಮನೊಂದಿಗೆ ಹೆಣಗಾಡಿತು.
ಪದಾರ್ಥ (ಕ.ಗ.ಪ)
ಘಾಡಿಕೆ-ಸಾಂದ್ರತೆ, ಹಳಚಿದನು-ಹೊಡೆzನು, ಹೊಯ್ಕೆಯ್-ಸರಿಸಮಾನ
ಮೂಲ ...{Loading}...
ಭುಜದ ಸಾಹಸ ಹತ್ತು ಸಾವಿರ
ಗಜದ ಘಾಡಿಕೆ ಸಿಂಹನಾದದ
ವಿಜಯ ವಿಗ್ರಹ ವೀರ ಹಳಚಿದನಮಮ ಮದಕರಿಯ
ತ್ರಿಜಗ ತಲೆಕೆಳಗಾಗೆ ದಿವಿಜ
ವ್ರಜ ಭಯಂಗೊಳೆ ಮಿಕ್ಕು ಸುರಪನ
ಗಜದ ಹೊಯ್ ಕೈಯ್ಯಾನೆ ಹೆಣಗಿತು ಭೀಮಸೇನನಲಿ ॥34॥
೦೩೫ ಚಿಗಿದು ಹರಿಸುತ ...{Loading}...
ಚಿಗಿದು ಹರಿಸುತ ಹಳಚಿದರೆ ಕುಲ
ದಿಗಿಭವೆದೆಯೊಡೆದವು ನಗಂಗಳ
ಬಿಗುಹು ಸಡಿಲಿತು ಧರಣಿ ನೆಗ್ಗಿತು ಚರಣ ಹತಿಗಳಲಿ
ಜಿಗಿವ ರಕುತದ ಗದೆಯ ಬಿರುವೊ
ಯ್ಲುಗಳೊಳಗೆ ಕಿಡಿ ಮಸಗಿ ಕಬ್ಬೊಗೆ
ನೆಗೆಯೆ ಹೊಯ್ದನು ಭೀಮ ಲಂಘಿಸಿ ಗಜದ ಮಸ್ತಕವ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಮೇಲಕ್ಕೆ ನೆಗೆದು ಗದೆಯಿಂದ ಆನೆಯನ್ನು ಹೊಡೆಯಲು ದಿಗ್ಗಜಗಳ ಎದೆ ಒಡೆದಂತಾಯಿತು. ಬೆಟ್ಟಗಳು ಸಡಿಲಗೊಳ್ಳುವಂತಾಯಿತು. ಭೀಮನ ಕಾಲಿನ ಆಘಾತಕ್ಕೆ ಭೂಮಿಯು ನೆಗ್ಗಿತು, ಗದೆಯ ಏಟುಗಳಿಂದ ಆನೆಯ ದೇಹದಿಂದ ರಕ್ತ ಚಿಮ್ಮಲಾರಂಭಿಸಿತು. ಗದೆಯು ಹೊಡೆತದ ರಭಸಕ್ಕೆ ಕಿಡಿಗಳು ಚಿಮ್ಮುತ್ತಾ ಕಪ್ಪಾದ ಹೊಗೆಯು ಏಳುತ್ತಿತ್ತು. ಭೀಮನು ಹಾರಿ ಸುಪ್ರತೀಕ ಗಜದ ನೆತ್ತಿಯ ಮೇಲೆ ಗದಾ ಪ್ರಹಾರವನ್ನು ಮಾಡಿದನು.
ಪದಾರ್ಥ (ಕ.ಗ.ಪ)
ಚಿಗಿದು-ಹಾರಿ, ಹತಿ-ಏಟು, ಕಬ್ಬೊಗೆ-ಕಪ್ಪು ಹೊಗೆ,
ಮೂಲ ...{Loading}...
ಚಿಗಿದು ಹರಿಸುತ ಹಳಚಿದರೆ ಕುಲ
ದಿಗಿಭವೆದೆಯೊಡೆದವು ನಗಂಗಳ
ಬಿಗುಹು ಸಡಿಲಿತು ಧರಣಿ ನೆಗ್ಗಿತು ಚರಣ ಹತಿಗಳಲಿ
ಜಿಗಿವ ರಕುತದ ಗದೆಯ ಬಿರುವೊ
ಯ್ಲುಗಳೊಳಗೆ ಕಿಡಿ ಮಸಗಿ ಕಬ್ಬೊಗೆ
ನೆಗೆಯೆ ಹೊಯ್ದನು ಭೀಮ ಲಂಘಿಸಿ ಗಜದ ಮಸ್ತಕವ ॥35॥
೦೩೬ ಹೊಯ್ದು ಹಿಙ್ಗದ ...{Loading}...
ಹೊಯ್ದು ಹಿಂಗದ ಮುನ್ನ ಭೀಮನ
ಕೈದುಡುಕಿದರೆ ಮುರಿದು ಹಿಂದಕೆ
ಹಾಯ್ದಡೊಡೆಮುರಿಯಿತ್ತು ಕುಸಿದರೆ ಕಾಲೊಳೊಡೆಯವುಚಿ
ಮೈದೆಗೆದರಿಟ್ಟಣಿಸಿ ಪೂತ್ಕೃತಿ
ಗೈದು ಸುಭಟನ ಸಿಂಹನಾದಕೆ
ಮುಯ್ದೆಗೆದು ಕರಿ ಕಾದುತಿರ್ದುದು ಭೀಮಸೇನನಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ಒಂದು ಏಟನ್ನು ಹೊಡೆದು ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ಆನೆಯ ಭೀಮನ ಮೇಲೆ ಸೊಂಡಿಲಿನಿಂದ ಪ್ರಹಾರ ಮಾಡುವುದು. ಹಿಂದಕ್ಕೆ ಹಾರಿ ಹೊಡೆಯಲು ಸಿದ್ಧವಾದರೆ ಮತ್ತೊಂದು ಕಡೆಗೆ ತಿರುಗುತ್ತಿತ್ತು. ಕೆಳಗೆ ಕುಸಿದು ಹೊಡೆಯಲು ಯತ್ನಿಸಿದಾಗ ಕಾಲಿನಲ್ಲಿ ತುಳಿದು ಒತ್ತುತ್ತಿತ್ತು. ಹಿಡಿತವನ್ನು ಬಿಡಿಸಿಕೊಂಡರೆ ಘೀಳಿಡುತ್ತಾ, ಭೀಮನ ಸಿಂಹನಾದದಿಂದ ಮಹಾ ಉತ್ಸಾಹವನ್ನು ಹೊಂದಿ ಭೀಮನೊಡನೆ ಯುದ್ಧವನ್ನು ಮಾಡುತ್ತಿತ್ತು.
ಪದಾರ್ಥ (ಕ.ಗ.ಪ)
ಪೂತ್ಕೃತಿ-ಗರ್ಜನೆ,
ಮೂಲ ...{Loading}...
ಹೊಯ್ದು ಹಿಂಗದ ಮುನ್ನ ಭೀಮನ
ಕೈದುಡುಕಿದರೆ ಮುರಿದು ಹಿಂದಕೆ
ಹಾಯ್ದಡೊಡೆಮುರಿಯಿತ್ತು ಕುಸಿದರೆ ಕಾಲೊಳೊಡೆಯವುಚಿ
ಮೈದೆಗೆದರಿಟ್ಟಣಿಸಿ ಪೂತ್ಕೃತಿ
ಗೈದು ಸುಭಟನ ಸಿಂಹನಾದಕೆ
ಮುಯ್ದೆಗೆದು ಕರಿ ಕಾದುತಿರ್ದುದು ಭೀಮಸೇನನಲಿ ॥36॥
೦೩೭ ನೆಳಲುಗಣ್ಡವ್ವಳಿಸುವುದು ಸುಂ ...{Loading}...
ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗ ನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಕಣಿಯ ಹಿಡಿಹಿಂಗೆ ಲಾಗಿಸುತಿರ್ದುದಾ ದಂತಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ನೆರಳನ್ನು ನೋಡಿಯೇ ಅದು ಕೋಪಾವೇಶವನ್ನು ಹೊಂದುತ್ತಿತ್ತು. ಸೊಂಡಿಲನ್ನು ತೂಗಾಡಿಸುತ್ತಾ ಹೋರಾಟ ಮಾಡಿ ಆಯಾಸವನ್ನೂ ಹೊಂದಿತು. ಮುಖವನ್ನು ಎತ್ತಿ ಭೀಮನ ಧ್ವನಿಯನ್ನು ಆಲಿಸುತ್ತಿತ್ತು. ಜೇನುದುಂಬಿಗಳು (ಮದ ಜಲವನ್ನು ಹೀರಲು) ಮುಖಕ್ಕೆ ಮುತ್ತಿಕೊಂಡರೂ ಸಹ ಕಿವಿಗಳನ್ನು ಬೀಸದೆ ಕಿವಿಗಳನ್ನು ನೆಲಕ್ಕೆ ಜೋತು ಬಿಟ್ಟಿತು. ಭೀಮನನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸುಪ್ರತೀಕ ಗಜವು ಮಹಾಪ್ರಯತ್ನವನ್ನು ಮಾಡುತ್ತಿತ್ತು.
ಪದಾರ್ಥ (ಕ.ಗ.ಪ)
ಅವ್ವಳಿಸು-ಆವೇಶಹೊಂದು, ಹೋರಿದು-ಹೋರಾಡಿ, ಹಿಡಿಹಿಂಗೆ-ನಿಯಂತ್ರಣಕ್ಕೆ, ಲಾಗಿಸುತ-ಚಾಚುತ್ತಾ
ಮೂಲ ...{Loading}...
ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗ ನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಕಣಿಯ ಹಿಡಿಹಿಂಗೆ ಲಾಗಿಸುತಿರ್ದುದಾ ದಂತಿ ॥37॥
೦೩೮ ಭೀಮನಿನ್ನರೆಘಳಿಗೆಯಲಿ ನಿ ...{Loading}...
ಭೀಮನಿನ್ನರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಂತಿಯ
ತಾಮಸಿಕೆ ಘನ ತೆಗೆಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ಇನ್ನು ಕೇವಲ ಅರ್ಧ ಘಳಿಗೆಯಲ್ಲಿ ನಿರ್ನಾಮವಾಗುತ್ತಾನೆ ; ಅವನು ಸಾಯುವುದು ದೂರವಿಲ್ಲ, ಈ ಆನೆಯ ಶಕ್ತಿ ಘನವಾದುದು. ಎಂದು ಕಳವಳಗೊಂಡು ಭೀಮನನ್ನು ಅಲ್ಲಿಂದ ದೂರಕ್ಕೆ ಕಳಿಸಿ ಎನ್ನುತ್ತಾ ಧರ್ಮರಾಯನು ಯುದ್ಧಕ್ಕೆ ಸಿದ್ಧನಾಗಲು ನಕುಲ, ಸಾತ್ಯಕಿ, ಭೀಮನ ಮಗನಾದ ಘಟೋತ್ಕಚ ದ್ರುಪದ, ಶಿಖಂಡಿ ಹಾಗೂ ಕೈಕೇಯರೇ ಮೊದಲಾದವರೆಲ್ಲರೂ ಆನೆಯ ಸಮೀಪಕ್ಕೆ ಧಾವಿಸಿ ಬಂದರು.
ಪದಾರ್ಥ (ಕ.ಗ.ಪ)
ತಾಮಸಿಕೆ-ರಾಕ್ಷಸತನ, ಸನಾಮರು-ವೀರರೆಂದು ಹೆಸರಾದವರು.
ಮೂಲ ...{Loading}...
ಭೀಮನಿನ್ನರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಂತಿಯ
ತಾಮಸಿಕೆ ಘನ ತೆಗೆಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು ॥38॥
೦೩೯ ಮತ್ತೆ ರಥವರುವತ್ತು ...{Loading}...
ಮತ್ತೆ ರಥವರುವತ್ತು ಸಾವಿರ
ಮುತ್ತಿಕೊಂಡುದು ಗಜವನಾ ಭಗ
ದತ್ತ ಬಳಲಿದನವಧಿಯಿಲ್ಲದೆ ಶರವ ನೆರೆ ತುಳುಕಿ
ಮೆತ್ತಿದವು ಶರವಿಭದ ಮೆಯ್ಯಲಿ
ಬೆತ್ತ ಬೆಳೆದದ್ರಿಯವೊಲಿದ್ದುದು
ಮತ್ತಗಜ ನೊಂದರಿಯದನಿಬರ ಬಾಣ ಹತಿಗಳಲಿ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೇನೆ ಅರುವತ್ತು ಸಾವಿರ ರಥಗಳು ಬಂದು ಸುಪ್ರತೀಕ ಗಜವನ್ನು ಮುತ್ತಿಕೊಂಡಿತು. ಭಗದತ್ತನು ಬಿಡುವಿಲ್ಲದೆ , ಬಾಣಗಳನ್ನು ಪ್ರಯೋಗಿಸಿ ಬಳಲಿದನು. ಆನೆಯ ಮೇಲೆ ಅಸಂಖ್ಯಾತ ಬಾಣಗಳು ಚುಚ್ಚಿಕೊಂಡಾಗ ಬಿದಿರು ಬೆಟ್ಟದಂತೆ ಆನೆಯು ತೋರುತ್ತಿತ್ತು. ಆದರೂ ಆ ಮದಗಜ ಬಾಣಗಳ ಪೆಟ್ಟಿನ ನೋವನ್ನು ತಿಳಿಯಲಿಲ್ಲ. (ನೋಯಲಿಲ್ಲ).
ಪದಾರ್ಥ (ಕ.ಗ.ಪ)
ಅವಧಿಯಿಲ್ಲದ-ಬಿಡುವಿಲ್ಲದ,
ಮೂಲ ...{Loading}...
ಮತ್ತೆ ರಥವರುವತ್ತು ಸಾವಿರ
ಮುತ್ತಿಕೊಂಡುದು ಗಜವನಾ ಭಗ
ದತ್ತ ಬಳಲಿದನವಧಿಯಿಲ್ಲದೆ ಶರವ ನೆರೆ ತುಳುಕಿ
ಮೆತ್ತಿದವು ಶರವಿಭದ ಮೆಯ್ಯಲಿ
ಬೆತ್ತ ಬೆಳೆದದ್ರಿಯವೊಲಿದ್ದುದು
ಮತ್ತಗಜ ನೊಂದರಿಯದನಿಬರ ಬಾಣ ಹತಿಗಳಲಿ ॥39॥
೦೪೦ ಕರಿ ವಿನೋದದಿ ...{Loading}...
ಕರಿ ವಿನೋದದಿ ಕುಡಿದ ಜಲವನು
ಕರಣಿಯಲಿ ತೆಗೆತೆಗೆದು ರಿಪು ಮೋ
ಹರಕೆ ಚೆಲ್ಲಿತು ಕಲ್ಪಮೇಘದ ಬಸುರ ಬಗಿದಂತೆ
ಕರ ತುಷಾರದಲಿವರು ಮೋರೆಯ
ತಿರುಹೆ ನನೆದವು ಬಾಹುರಕೆ ಹ
ಕ್ಕರಿಕೆ ಹಲ್ಲಣ ಜೋಡು ಸೀಸಕ ಛತ್ರ ಚಮರಿಗಳು ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನ ಆನೆಯಾದ ಸುಪ್ರತೀಕವು ಕುಡಿದ ನೀರನ್ನು ಸೊಂಡಿಲಿನಿಂದ ತೆಗೆದು ಶತ್ರು ಸೈನ್ಯದ ಮೇಲೆ ಚೆಲ್ಲಿತು. ಪ್ರಳಯಕಾಲದ ಮೋಡಗಳ ಗರ್ಭದಿಂದ ಮೊಗೆದದ್ದು ಎನ್ನುವಂತೆ ಆನೆಯು ಸೊಂಡಿಲಿನಿಂದ ಎರಚುತ್ತಿದ್ದ ನೀರಿನ ರಭಸವನ್ನು ತಾಳಿಕೊಳ್ಳಲಾಗದೆ ಶತ್ರು ಸೇನೆಯು ಮುಖವನ್ನು ಬೇರೆಡೆ ತಿರುಗಿಸಿಕೊಳ್ಳುವಂತಾಗುತ್ತಿತ್ತು. ಸೈನಿಕರ ಶಿರಸ್ತ್ರಾಣ, ಛತ್ರ , ಚಾಮರ, ಕುದುರೆಯ ಲಗಾಮುಗಳೆಲ್ಲ ನೆನೆದು ಹೋದವು.
ಪದಾರ್ಥ (ಕ.ಗ.ಪ)
ಕರಿ-ಆನೆ, ವಿನೋದದಿ-ತಮಾಷೆಯಿಂದ, ಸಂತೋಷಕ್ಕೆ, ಕರಣಿ-ಸೊಂಡಿಲು, ಬಾಹುರಕೆ-ಬಾಹುರಕ್ಷೆ, ತೋಳಿಗೆ ಕಟ್ಟಿರುವ ರಕ್ಷಾ ಕವಚ, ಹಕ್ಕರಿಕೆ-, ಹಲ್ಲಣ-ಲಗಾಮು, ಸೀಸಕ-ಶಿರಸ್ತ್ರಾಣ
ಮೂಲ ...{Loading}...
ಕರಿ ವಿನೋದದಿ ಕುಡಿದ ಜಲವನು
ಕರಣಿಯಲಿ ತೆಗೆತೆಗೆದು ರಿಪು ಮೋ
ಹರಕೆ ಚೆಲ್ಲಿತು ಕಲ್ಪಮೇಘದ ಬಸುರ ಬಗಿದಂತೆ
ಕರ ತುಷಾರದಲಿವರು ಮೋರೆಯ
ತಿರುಹೆ ನನೆದವು ಬಾಹುರಕೆ ಹ
ಕ್ಕರಿಕೆ ಹಲ್ಲಣ ಜೋಡು ಸೀಸಕ ಛತ್ರ ಚಮರಿಗಳು ॥40॥
೦೪೧ ಸಾಕು ಬಳಲಿದಿರಕಟಕಟ ...{Loading}...
ಸಾಕು ಬಳಲಿದಿರಕಟಕಟ ನಿಮ
ಗೇಕೆ ಸಂಗರವಾನೆಯೊಡನೆ ಪಿ
ನಾಕಿ ಸಮರದೊಳಳುಕುವನು ಕರಿ ನಿಮ್ಮ ಪಾಡೇನು
ಆ ಕಿರೀಟಿಯ ಕರಸಿಕೊಳ್ಳಿ ವಿ
ವೇಕವುಳ್ಳರೆ ತೊಲಗಿಯೆನುತವೆ
ನೂಕಿದನು ಭಗದತ್ತನನಿಬರ ಮೇಲೆ ದಿಗ್ಗಜವ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನು ಸಾಕು, ನೀವು ಬಳಲಿದ್ದೀರಿ ಆನೆಯೊಡನೆ ನಿಮಗೇಕೆ ಯುದ್ಧ. ಸುಪ್ರತೀಕ ಗಜದೊಡನೆ ಯುದ್ಧ ಮಾಡಲು ಸಾಕ್ಷಾತ್ ಈಶ್ವರನೇ ಹೆದರುತ್ತಾನೆ. ; ಈ ಗಜವು ನಿಮಗೆ ಸಮನೆ ? ಅರ್ಜುನನನ್ನು ಕರೆಸಿಕೊಳ್ಳಿ. ; ವಿವೇಕವಿದ್ದರೆ ರಣರಂಗದಿಂದ ಹಿಂದೆ ಸರಿಯಿರಿ. ಎನ್ನುತ್ತಾ ಭಗದತ್ತನು ವಿರೋಧಿ ಸೈನಿಕರೆಲ್ಲರ ಮೇಲೆ ಆನೆಯನ್ನು ಓಡಿಸಿದನು.
ಮೂಲ ...{Loading}...
ಸಾಕು ಬಳಲಿದಿರಕಟಕಟ ನಿಮ
ಗೇಕೆ ಸಂಗರವಾನೆಯೊಡನೆ ಪಿ
ನಾಕಿ ಸಮರದೊಳಳುಕುವನು ಕರಿ ನಿಮ್ಮ ಪಾಡೇನು
ಆ ಕಿರೀಟಿಯ ಕರಸಿಕೊಳ್ಳಿ ವಿ
ವೇಕವುಳ್ಳರೆ ತೊಲಗಿಯೆನುತವೆ
ನೂಕಿದನು ಭಗದತ್ತನನಿಬರ ಮೇಲೆ ದಿಗ್ಗಜವ ॥41॥
೦೪೨ ಮಿಗೆ ತಿಮಿಙ್ಗಿಲನೊಡನೆ ...{Loading}...
ಮಿಗೆ ತಿಮಿಂಗಿಲನೊಡನೆ ಹುಲು ಮೀ
ನುಗಳು ಮಾಡುವುದೇನು ಹೊರ ಕಾ
ಲುಗಳ ಹೋರಟೆ ಕಾಣಲಾದುದು ಪರರ ಥಟ್ಟಿನಲಿ
ತೆಗೆಯೆ ರಿಪುಬಲ ಕೊಲುತ ಬಂದುದು
ದಿಗಿಭವಿದರೊಡನೈದಿ ದ್ರೋಣಾ
ದಿಗಳು ಹೊಕ್ಕುದು ಧರ್ಮಪುತ್ರನ ಹಿಡಿವ ತವಕದಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಿಮಿಂಗಿಲದೊಡನೆ ಸಾಮಾನ್ಯ ಮೀನುಗಳು ಏನು ಮಾಡಲಾಗುತ್ತದೆ. ಶತ್ರು ಸೈನ್ಯವು ಹಿಮ್ಮೆಟ್ಟಿತು. ಆನೆಯು ಅವರನ್ನು ಬೆನ್ನಟ್ಟಿತು. ದ್ರೋಣಾದಿಗಳು ಧರ್ಮರಾಯನನ್ನು ಹಿಡಿಯುವ ತವಕದಿಂದ ರಣರಂಗಕ್ಕೆ ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ಮಿಗೆ-ಅಧಿಕ,
ಮೂಲ ...{Loading}...
ಮಿಗೆ ತಿಮಿಂಗಿಲನೊಡನೆ ಹುಲು ಮೀ
ನುಗಳು ಮಾಡುವುದೇನು ಹೊರ ಕಾ
ಲುಗಳ ಹೋರಟೆ ಕಾಣಲಾದುದು ಪರರ ಥಟ್ಟಿನಲಿ
ತೆಗೆಯೆ ರಿಪುಬಲ ಕೊಲುತ ಬಂದುದು
ದಿಗಿಭವಿದರೊಡನೈದಿ ದ್ರೋಣಾ
ದಿಗಳು ಹೊಕ್ಕುದು ಧರ್ಮಪುತ್ರನ ಹಿಡಿವ ತವಕದಲಿ ॥42॥
೦೪೩ ತಿದ್ದಿತೋ ಕಲಿ ...{Loading}...
ತಿದ್ದಿತೋ ಕಲಿ ಪಾರ್ಥನಿದ್ದರೆ
ಹೊದ್ದ ಹೇಳೋ ರಾಯ ದಳವಡಿ
ಗದ್ದುದೋ ಬಿದ್ದುದು ಭಯಾಂಬುಧಿಯೊಳಗೆ ಭಟನಿಕರ
ಹದ್ದು ಕಾಗೆಯ ಮನೆಗೆ ಬಾಣಸ
ವಿದ್ದುದೋ ಗಜವೆನುತ ಬೊಬ್ಬಿಡು
ತಿದ್ದುದರಿ ಬಲವಿತ್ತ ಹರಿ ಕೇಳಿದನು ಕಳಕಳವ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಯು ಸೈನಿಕರನ್ನು ಓಡಿಸುತ್ತಿದೆ. ವೀರನಾದ ಅರ್ಜುನನು ಇದ್ದರೆ ಬರಹೇಳಿ. ಧರ್ಮಜನ ಸೈನ್ಯ ಕೆಳಗೆ ಬಿದ್ದಿತೋ ಎನ್ನುತ್ತಾ ಪಾಂಡವ ಸೈನಿಕರು ಭಯಸಾಗರದಲ್ಲಿ ಮುಳುಗಿದರು. ಹದ್ದು ಮತ್ತು ಕಾಗೆಯ ಮನೆಗೆ ಸುಪ್ರತೀಕ ಗಜವು ಅಡಿಗೆಯವನಾಯಿತೋ ಎಂದು ಶತ್ರು ಸೈನ್ಯ ಬೊಬ್ಬಿಡುತ್ತಿತ್ತು. ಆ ಕೋಲಾಹಲವನ್ನು ಇತ್ತ ಕಡೆ ಕೃಷ್ಣನು ಕೇಳಿಸಿಕೊಂಡನು.
ಪದಾರ್ಥ (ಕ.ಗ.ಪ)
ಕಳಕಳ - ಕೋಲಾಹಲ
ಮೂಲ ...{Loading}...
ತಿದ್ದಿತೋ ಕಲಿ ಪಾರ್ಥನಿದ್ದರೆ
ಹೊದ್ದ ಹೇಳೋ ರಾಯ ದಳವಡಿ
ಗದ್ದುದೋ ಬಿದ್ದುದು ಭಯಾಂಬುಧಿಯೊಳಗೆ ಭಟನಿಕರ
ಹದ್ದು ಕಾಗೆಯ ಮನೆಗೆ ಬಾಣಸ
ವಿದ್ದುದೋ ಗಜವೆನುತ ಬೊಬ್ಬಿಡು
ತಿದ್ದುದರಿ ಬಲವಿತ್ತ ಹರಿ ಕೇಳಿದನು ಕಳಕಳವ ॥43॥
೦೪೪ ಮರಳು ಫಲುಗುಣ ...{Loading}...
ಮರಳು ಫಲುಗುಣ ಸುಪ್ರತೀಕದ
ಖುರಪುಟವ ನೋಡಿತ್ತಲಗ್ಗದ
ಪರಶುರಾಮನ ಖಾತಿಗಂಬುಧಿ ನೆಲನ ಬಿಡುವಂತೆ
ತೆರಳುತಿದೆ ನಮ್ಮವರು ದಿಕ್ಕರಿ
ಹರಹಿ ಕೊಲುತಿದೆ ಮಾತಿಗಿಲ್ಲವ
ಸರವೆನುತ ಕರಿಯತ್ತ ತಿರುಹಿದನಸುರರಿಪು ರಥವ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ, ತಿರುಗಿ ನಡೆ, ಭಗದತ್ತನ ಆನೆಯು ಪಾದಗಳ ತುಳಿತವನ್ನು ನೋಡು ಪರಶುರಾಮನ ಕೋಪಕ್ಕೆ ತುತ್ತಾಗಿ ಸಮುದ್ರವೇ ಹಿಂz ಸರಿದು ಹೋದ ಹಾಗೆ ನಮ್ಮ ಸೇನೆಯು ಹೆದರಿ ಹಿಂದಕ್ಕೆ ಓಡುತ್ತಿದೆ, ಆ ಆನೆಯು ನಮ್ಮ ಸೇನೆಯ ಸೈನಿಕರನ್ನು ಕೊಂದು ಹಾಕುತ್ತಿದೆ. ಈಗ ಮಾತನಾಡಲು ಸಮಯವಿಲ್ಲ” ಎಂದು ಹೇಳುತ್ತಾ ಕೃಷ್ಣನು ರಥವನ್ನು ಸುಪ್ರತೀಕ ಗಜವಿದ್ದ ಕಡೆಗೆ ತಿರುಗಿಸಿದನು.
ಪಾಠಾನ್ತರ (ಕ.ಗ.ಪ)
ಮರುಳು ಫಲುಗುಣ —–> ಮರಳು ಫಲುಗುಣ
ದ್ರೋಣ ಪವ್, ಮೈ.ವಿ.ವಿ.
ಮೂಲ ...{Loading}...
ಮರಳು ಫಲುಗುಣ ಸುಪ್ರತೀಕದ
ಖುರಪುಟವ ನೋಡಿತ್ತಲಗ್ಗದ
ಪರಶುರಾಮನ ಖಾತಿಗಂಬುಧಿ ನೆಲನ ಬಿಡುವಂತೆ
ತೆರಳುತಿದೆ ನಮ್ಮವರು ದಿಕ್ಕರಿ
ಹರಹಿ ಕೊಲುತಿದೆ ಮಾತಿಗಿಲ್ಲವ
ಸರವೆನುತ ಕರಿಯತ್ತ ತಿರುಹಿದನಸುರರಿಪು ರಥವ ॥44॥
೦೪೫ ಹೆದರದಿರು ನರ ...{Loading}...
ಹೆದರದಿರು ನರ ಹೋಗದಿರು ಹೋ
ಗದಿರು ಕೊಡು ಕೊಡು ಕಾಳೆಗವನೆಂ
ದದಟರಟ್ಟಿತು ವೀರ ಸಮಸಪ್ತಕರು ಸೂಠಿಯಲಿ
ಇದಿರಲಿನಸುತ ಶಲ್ಯರಡಗ
ಟ್ಟಿದರು ಖತಿಯಲಿ ಪಾರ್ಥನನಿಬರ
ಸದೆದು ವಹಿಲದಲೈದಿದನು ದಿಕ್ಕರಿಯ ಸಮ್ಮುಖಕೆ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನಾ, ಹೋಗಬೇಡ, ಹೆದರಬೇಡ, ಯುದ್ಧವನ್ನು ಮಾಡು” ಎಂದು ವೀರಾಧಿವೀರರಾದ ಸಮಸಪ್ತಕರು ಅರ್ಜುನನನ್ನು ಅಡ್ಡ್ಡಗಟ್ಟಿದರು. ಅರ್ಜುನನ ಎದುರಿನಲ್ಲಿದ್ದ ಸೂರ್ಯಪುತ್ರನಾದ ಕರ್ಣ, ಶಲ್ಯರೂ ಅರ್ಜುನನ ರಥಕ್ಕೆ ಅಡ್ಡಹಾಕಿದರು. ಆಗ ಅರ್ಜುನನು ಕೋಪಾತಿಶಯದಿಂದ ಅವರೆಲ್ಲರನ್ನು ಬಾಣಗಳಿಂದ ಹೊಡೆದು ಅಟ್ಟಿ ಮಹಾವೇಗದಿಂದ ಸುಪ್ರತೀಕ ಗಜವಿದ್ದೆಡೆಗೆ ಬಂದನು.
ಪದಾರ್ಥ (ಕ.ಗ.ಪ)
ಅದಟರು-ಪರಾಕ್ರಮಿಗಳು, ಸೂಠಿಯಲಿ-ವೇಗದಲ್ಲಿ, ಸದೆದು-ಹೊಡೆದು,
ಮೂಲ ...{Loading}...
ಹೆದರದಿರು ನರ ಹೋಗದಿರು ಹೋ
ಗದಿರು ಕೊಡು ಕೊಡು ಕಾಳೆಗವನೆಂ
ದದಟರಟ್ಟಿತು ವೀರ ಸಮಸಪ್ತಕರು ಸೂಠಿಯಲಿ
ಇದಿರಲಿನಸುತ ಶಲ್ಯರಡಗ
ಟ್ಟಿದರು ಖತಿಯಲಿ ಪಾರ್ಥನನಿಬರ
ಸದೆದು ವಹಿಲದಲೈದಿದನು ದಿಕ್ಕರಿಯ ಸಮ್ಮುಖಕೆ ॥45॥
೦೪೬ ಬಲು ಬಿಸಿಲೊಳುರೆ ...{Loading}...
ಬಲು ಬಿಸಿಲೊಳುರೆ ನೊಂದ ನೈದಿಲೆ
ಗಳಿಗೆ ಚಂದ್ರಿಕೆ ದೈತ್ಯರುರುಬೆಗೆ
ಸಿಲುಕಿದಮರರಿಗಸುರಹರನ ಕಟಾಕ್ಷವಿಕ್ಷೇಪ
ಬಲಿದ ತಾಪತ್ರಯದ ಭವಗೋ
ಟಲೆಯ ಜೀವಿಗೆ ಸುಪ್ರಬೋಧದ
ಸುಳುವಿನಂತಿರೆ ಪಾರ್ಥ ಮೈದೋರಿದನು ನಿಜಬಲಕೆ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಹಾಬಿಸಿಲಿನ ಬೇಗೆಗೆ ತೀವ್ರವಾಗಿ ನೊಂದ ನೈದಿಲೆಯ ಹೂವುಗಳಿಗೆ ಚಂದ್ರೋದಯವಾದಂತೆ, ರಾಕ್ಷಸರಿಂದ ತೊಂದರೆಗೆ ಸಿಕ್ಕ ದೇವತೆಗಳು ವಿಷ್ಣುವಿನ ಕೃಪಾ ಕಟಾಕ್ಷ ದೊರೆತಂತೆ, ಮಹಾ ತಾಪತ್ರಯಗಳಿಗೆ ಸಿಲುಕಿದ ಜೀವಿಗೆ ಅಮೃತ ಸದೃಶವಾದ ತತ್ವ ಬೋಧೆ ಪ್ರಾಪ್ತವಾದ ಹಾಗೆ ಅರ್ಜುನನು ಸೈನಿಕರಿಗೆ ಕಾಣಿಸಿಕೊಂಡನು.
ಪದಾರ್ಥ (ಕ.ಗ.ಪ)
ಉರೆ-ಚೆನ್ನಾಗಿ, ಚಂದ್ರಿಕೆ-ಚಂದ್ರನ ಕಿರಣ,
ಮೂಲ ...{Loading}...
ಬಲು ಬಿಸಿಲೊಳುರೆ ನೊಂದ ನೈದಿಲೆ
ಗಳಿಗೆ ಚಂದ್ರಿಕೆ ದೈತ್ಯರುರುಬೆಗೆ
ಸಿಲುಕಿದಮರರಿಗಸುರಹರನ ಕಟಾಕ್ಷವಿಕ್ಷೇಪ
ಬಲಿದ ತಾಪತ್ರಯದ ಭವಗೋ
ಟಲೆಯ ಜೀವಿಗೆ ಸುಪ್ರಬೋಧದ
ಸುಳುವಿನಂತಿರೆ ಪಾರ್ಥ ಮೈದೋರಿದನು ನಿಜಬಲಕೆ ॥46॥
೦೪೭ ಕೆದರಿತೀ ಬಲ ...{Loading}...
ಕೆದರಿತೀ ಬಲ ಬೆರಳ ತುಟಿಗಳೊ
ಳೊದರಿತಾ ಬಲ ತಾಪಶಿಖಿಯಲಿ
ಕುದಿದುದೀ ಬಲ ಭೀತಿಕಂಚುಕ ಕಳೆದುದಾ ಬಲಕೆ
ಕದಡಿತೀ ಬಲ ರೋಮಪುಳಕವ
ಹೊದೆದುದಾ ಬಲ ಹಿಂಡೊಡೆದು ನೆರೆ
ಕದುಬಿತೀ ಬಲ ನೆರೆದುದಾ ಬಲ ನರನ ರಥ ಸುಳಿಯೆ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ರಥವು ಸುಪ್ರತೀಕ ಗಜವಿದ್ದ ಕಡೆಗೆ ಬರುತ್ತಿದ್ದಂತೆ ಕೌರವ ಸೇನೆ ಚದುರಲಾರಂಭಿಸಿತು. ಪಾಂಡವ ಸೇನೆಯು ಬೆರಳುಗಳನ್ನು ತುಟಿಯ ಮೇಲಿಟ್ಟು ಗಲಭೆ ಮಾಡಿತು. ಶತ್ರುವಿನ ಶಕ್ತಿ ಎಂಬ ಬಿಸಿಯಿಂದ ಕೌರವ ಬಲ ಕುದಿದು ಹೋಯಿತು. ಭಯವೆಂಬ ಪರದೆಯನ್ನು ಪಾಂಡವ ಸೈನ್ಯ ಕಳಚಿಕೊಂಡಿತು. ಕೌರವನ ಸೇನೆ ಚೆದುರುವಂತಾದರೆ, ಪಾಂಡವ ಸೇನೆಗೆ ರೋಮಾಂಚನವಾಯಿತು. ಪಾಂಡವರ ಸೇನೆಗೆ ಉತ್ಸಾಹ ಉಂಟಾಗಿ ಸೈನಿಕರೆಲ್ಲರೂ ಒಟ್ಟಾಗಿ ಯುದ್ಧಕ್ಕೆ ಸಿದ್ಧರಾದರೆ, ಕೌರವನ ಸೇನೆ ಭಯದಿಂದ ಓಡಿತು.
ಪದಾರ್ಥ (ಕ.ಗ.ಪ)
ಶಿಖಿ-ಅಗ್ನಿ, ಕದುಬಿತು-ತಳಮಳಿಸಿತು, ನರನ-ಅರ್ಜುನನ, ಕಂಚುಕ-ಕವಚ
ಮೂಲ ...{Loading}...
ಕೆದರಿತೀ ಬಲ ಬೆರಳ ತುಟಿಗಳೊ
ಳೊದರಿತಾ ಬಲ ತಾಪಶಿಖಿಯಲಿ
ಕುದಿದುದೀ ಬಲ ಭೀತಿಕಂಚುಕ ಕಳೆದುದಾ ಬಲಕೆ
ಕದಡಿತೀ ಬಲ ರೋಮಪುಳಕವ
ಹೊದೆದುದಾ ಬಲ ಹಿಂಡೊಡೆದು ನೆರೆ
ಕದುಬಿತೀ ಬಲ ನೆರೆದುದಾ ಬಲ ನರನ ರಥ ಸುಳಿಯೆ ॥47॥
೦೪೮ ಗಿರಿಯ ವಿಸಟಮ್ಬರಿಯನಮರೇ ...{Loading}...
ಗಿರಿಯ ವಿಸಟಂಬರಿಯನಮರೇ
ಶ್ವರನು ತಡೆವವೊಲಳ್ಳಿರಿವ ದಿ
ಕ್ಕರಿಯನಡಗಟ್ಟಿದನು ಕಾಯದೊಳೊಟ್ಟಿದನು ಶರವ
ಕೆರಳಿದನು ಭಗದತ್ತನಿವನೇ
ನರನು ಫಡ ಫಡ ನಿಲ್ಲು ನಿಲ್ಲೆನು
ತುರು ಶರೌಘವ ಕರೆದು ಮುಸುಕಿದನರ್ಜುನನ ರಥವ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರೆಕ್ಕೆಗಳನ್ನು ಕತ್ತರಿಸುವುದರ ಮೂಲಕ ಪರ್ವತಗಳ ಹಾರಾಟವನ್ನು ಇಂದ್ರನು ನಿಲ್ಲಿಸಿದ ಹಾಗೆ ಮೇಲೆ ಬೀಳುತ್ತಿದ್ದ ಸುಪ್ರತೀಕ ಗಜವನ್ನು ಅರ್ಜುನನು ತಡೆದನು ಅದರ ದೇಹದ ಮೇಲೆ ಬಾಣಗಳನ್ನು ಒಟ್ಟಿದನು. ಆಗ ಭಗದತ್ತನಿಗೆ ಅರ್ಜುನನ ಮೇಲೆ ಅತಿಶಯವಾದ ಕೋಪ ಉಂಟಾಯಿತು, ಭಗದತ್ತನು “ಓಹೋ, ಇವನು ಅರ್ಜುನನೆ ? ನಿಲ್ಲು ನಿಲ್ಲು” ಎಂದು ಕೂಗುತ್ತಾ ಅರ್ಜುನನ ರಥವು ಮುಚ್ಚಿ ಹೋಗುವ ಹಾಗೆ ಬಾಣಗಳ ರಾಶಿಯನ್ನು ಬಿಟ್ಟನು.
ಪದಾರ್ಥ (ಕ.ಗ.ಪ)
ವಿಸಟಂಬರಿಯನು-ಸುತ್ತಾಟವನ್ನು, ಅಳ್ಳಿರಿವ-ಮೇಲೆ ಬೀಳು,
ಮೂಲ ...{Loading}...
ಗಿರಿಯ ವಿಸಟಂಬರಿಯನಮರೇ
ಶ್ವರನು ತಡೆವವೊಲಳ್ಳಿರಿವ ದಿ
ಕ್ಕರಿಯನಡಗಟ್ಟಿದನು ಕಾಯದೊಳೊಟ್ಟಿದನು ಶರವ
ಕೆರಳಿದನು ಭಗದತ್ತನಿವನೇ
ನರನು ಫಡ ಫಡ ನಿಲ್ಲು ನಿಲ್ಲೆನು
ತುರು ಶರೌಘವ ಕರೆದು ಮುಸುಕಿದನರ್ಜುನನ ರಥವ ॥48॥
೦೪೯ ಪೂತುರೇ ಭಗದತ್ತ ...{Loading}...
ಪೂತುರೇ ಭಗದತ್ತ ಬಿಲು ವಿ
ದ್ಯಾತಿಶಯ ಕಿರಿದುಂಟಲಾ ಶರ
ಪಾತವಿನಿತಿಲ್ಲದಡೆ ಹೊಳ್ಳಿಸಬಹುದೆ ನೃಪ ಧನವ
ನೂತನ ದ್ವಿಪದಿಂದ ವೈರಿ
ವ್ರಾತವನು ಸೋಲಿಸಿದ ಗರ್ವದ
ರೀತಿಗಿದು ಠಾವಲ್ಲೆನುತ ತೆಗೆದೆಚ್ಚನಾ ಪಾರ್ಥ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು “ಭಲೇ ಭಗದತ್ತ ! ನಿನಗೂ ಬಿಲ್ಲು ವಿದ್ಯೆಯಲ್ಲಿ ಸ್ವಲ್ಪ ಪ್ರವೇಶವಿದ್ದಂತಾಯಿತು. ಇಷ್ಟಾದರೂ ಬಾಣಗಳನ್ನು ಹೊಡೆಯುವ ಸಾಮಥ್ರ್ಯವಿಲ್ಲದಿದ್ದರೆ ನೀನು ರಾಜನಾದ ಕೌರವನಿಂದ ಹಣವನ್ನು ಕಸಿದುಕೊಳ್ಳಬಹುದೇ, ನೀನು ಈ ಹೊಸ ಆನೆಯಿಂದ ಶತ್ರು ಸಮೂಹವನ್ನು ಸೋಲಿಸಿದ ಅಹಂಕಾರದ ವರಸೆಗೆ ಇದು ಸ್ಥಳವಲ್ಲ” ಎನ್ನುತ್ತಾ ಭಗದತ್ತನ ಮೇಲೆ ಬಾಣಗಳನ್ನು ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಫೂತುರೆ-ಭಲೆ, ಹೊಳ್ಳಿಸಬಹುದೆ-ಪಡೆದುಕೊಳ್ಳಬಹುದೆ, ದ್ವಿಪ-ಆನೆ,
ಠಾವಲ್ಲ-ಸ್ಥಳವಲ್ಲ
ಎಚ್ಚನು-ಹೊಡೆದನು.
ಮೂಲ ...{Loading}...
ಪೂತುರೇ ಭಗದತ್ತ ಬಿಲು ವಿ
ದ್ಯಾತಿಶಯ ಕಿರಿದುಂಟಲಾ ಶರ
ಪಾತವಿನಿತಿಲ್ಲದಡೆ ಹೊಳ್ಳಿಸಬಹುದೆ ನೃಪ ಧನವ
ನೂತನ ದ್ವಿಪದಿಂದ ವೈರಿ
ವ್ರಾತವನು ಸೋಲಿಸಿದ ಗರ್ವದ
ರೀತಿಗಿದು ಠಾವಲ್ಲೆನುತ ತೆಗೆದೆಚ್ಚನಾ ಪಾರ್ಥ ॥49॥
೦೫೦ ನರನ ಶರಜಾಲವನು ...{Loading}...
ನರನ ಶರಜಾಲವನು ಖಂಡಿಸಿ
ಸುರಿದನಂಬನು ಕೃಷ್ಣರಾಯನ
ಸಿರಿಯೊಡಲ ಸೋಂಕಿದವು ನೂಕಿದವಂಬು ಗರಿ ಸಹಿತ
ನರನ ಕುದುರೆಯ ಮೇಲೆ ಸಿಂಧದ
ಹರಿಯ ತನುವಿನ ಮೇಲೆ ತಳಿತವು
ಶರನಿಕರ ಬಿಡದೆಚ್ಚನಾ ಭಗದತ್ತನರ್ಜುನನ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಬಿಟ್ಟ ಎಲ್ಲ ಬಾಣಗಳನ್ನು ಕತ್ತರಿಸಿ ಭಗದತ್ತನು ಪ್ರತಿಯಾಗಿ ಬಾಣಗಳನ್ನು ಹೊಡೆದನು. ಆ ಬಾಣಗಳು ಅರ್ಜುನನ ಸಾರಥಿಯಾಗಿದ್ದ ಕೃಷ್ಣನ ಸಿರಿಯೊಡಲನ್ನು ಪ್ರವೇಶಿಸಿ ಹಿಂಭಾಗದ ಗರಿ ಸಮೇತ ಅವನ ದೇಹವನ್ನು ಹೊಕ್ಕವು. ರಥದ ಕುದುರೆಯ ಮೇಲೂ ಬಿದ್ದವು. ರಥದ ಮೇಲಿನ ಬಾವುಟದಲ್ಲಿದ್ದ ಹನುಮನ ದೇಹದ ಮೇಲೆ ಬಾಣಗಳು ತುಂಬಿದುವು. ಭಗದತ್ತನು ಒಂದೇ ಸಮನೆ ಬಾಣಗಳನ್ನು ಅರ್ಜುನನ ಮೇಲೆ ಸುರಿದನು.
ಪದಾರ್ಥ (ಕ.ಗ.ಪ)
ಹರಿ-ಆಂಜನೇಯ, ಸಿಂಧದ-ಬಾವುಟದ,
ಮೂಲ ...{Loading}...
ನರನ ಶರಜಾಲವನು ಖಂಡಿಸಿ
ಸುರಿದನಂಬನು ಕೃಷ್ಣರಾಯನ
ಸಿರಿಯೊಡಲ ಸೋಂಕಿದವು ನೂಕಿದವಂಬು ಗರಿ ಸಹಿತ
ನರನ ಕುದುರೆಯ ಮೇಲೆ ಸಿಂಧದ
ಹರಿಯ ತನುವಿನ ಮೇಲೆ ತಳಿತವು
ಶರನಿಕರ ಬಿಡದೆಚ್ಚನಾ ಭಗದತ್ತನರ್ಜುನನ ॥50॥
೦೫೧ ಸೆಳೆದು ಬಾಣತ್ರಯದಲೆಚ್ಚನು ...{Loading}...
ಸೆಳೆದು ಬಾಣತ್ರಯದಲೆಚ್ಚನು
ಫಲುಗುಣನ ಮಕುಟವನು ಮುರಿದುದು
ಕೆಲಕೆ ಸಡಿಲುವ ಮಣಿಗಳಲಿ ವರ ಮೌಳಿಯೋಸರಿಸೆ
ಬಲಿದು ಸಸಿನವ ಮಾಡಿ ಖಾತಿಯ
ತಳೆದು ಕೂರಂಬಿನಲಿ ಹೂಳಿದ
ನಳವಿಯಲಿ ರಿಪುಗಜವನಾ ಭಗದತ್ತನವಯವವ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನು ಬಿಲ್ಲಿನ ಹಗ್ಗವನ್ನು ಜೋರಾಗಿ ಎಳೆದು ಮೂರು ಬಾಣಗಳಲ್ಲಿ ಅರ್ಜುನನನ್ನು ಹೊಡೆದನು. ಆಗ ಅರ್ಜುನನ ಕಿರೀಟವು ಮುರಿದು ಬಿದ್ದಿತು. ಕಿರೀಟದಲ್ಲಿದ್ದ ಮಣಿಗಳು ಭೂಮಿಯ ಮೇಲೆ ಉದುರಿ ಚೆಲ್ಲಾಪಿಲ್ಲಿಯಾದವು. ಆಗ ಅರ್ಜುನನು ಮತ್ತೆ ಕಿರೀಟವನ್ನು ಸರಿಪಡಿಸಿಕೊಂಡು ಕೋಪಗೊಂಡು ಪರಾಕ್ರಮದಿಂದ, ಚೂಪಾದ ಬಾಣಗಳಿಂದ ಶತ್ರುವಿನ ಆನೆಯನ್ನು ಮತ್ತು ಭಗದತ್ತನನ್ನು ಮುಚ್ಚಿದನು.
ಪದಾರ್ಥ (ಕ.ಗ.ಪ)
ಬಾಣತ್ರಯ-ಮೂರು ಬಾಣಗಳು, ಓಸರಿಸೆ-ತಿರುಗಲು, ಸಸಿನ-ನೇರ, ಅಳವಿಯಲಿ-ಶಕ್ತಿಯಿಂದ
ಮೂಲ ...{Loading}...
ಸೆಳೆದು ಬಾಣತ್ರಯದಲೆಚ್ಚನು
ಫಲುಗುಣನ ಮಕುಟವನು ಮುರಿದುದು
ಕೆಲಕೆ ಸಡಿಲುವ ಮಣಿಗಳಲಿ ವರ ಮೌಳಿಯೋಸರಿಸೆ
ಬಲಿದು ಸಸಿನವ ಮಾಡಿ ಖಾತಿಯ
ತಳೆದು ಕೂರಂಬಿನಲಿ ಹೂಳಿದ
ನಳವಿಯಲಿ ರಿಪುಗಜವನಾ ಭಗದತ್ತನವಯವವ ॥51॥
೦೫೨ ಇಳುಹಿದನು ಬಲುಗುಳವ ...{Loading}...
ಇಳುಹಿದನು ಬಲುಗುಳವ ಖಂಡಿಸಿ
ಕಳಚಿದನು ಮೊಗರಂಬವನು ಹೊ
ಮ್ಮಿಳಿಯ ಕುಣಿಕೆಯ ಮುರಿದು ತರಿದನು ಸುತ್ತ ರೆಂಚೆಗಳ
ಹಳವಿಗೆಯನಾ ಛತ್ರ ಚಮರಾ
ವಳಿಯ ಸೀಳಿದು ಬಿಸುಟನಾ ಗಜ
ತಿಲಕ ಮುಂಡಾಸನದಲಿರ್ದುದು ಭೂಪ ಕೇಳ್ ಎಂದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಬಾಣದಿಂದ, ಸುಪ್ರತೀಕ ಗಜದ ಮೇಲೆ ಹೊದಿಸಿದ್ದ ದೊಡ್ಡ ಪಾವುಡವನ್ನು ಹರಿದು ತುಂಡು ಮಾಡಿದನು. ಆ ಆನೆಗೆ ಹಾಕಿದ್ದ ಮುಖವಾಡವನ್ನು ಕೆಳಕ್ಕೆ ಬೀಳಿಸಿದನು. ಹಗ್ಗದ ಕುಣಿಕೆಗಳನ್ನು ಕತ್ತರಿಸಿ, ಸುತ್ತ ಕಟ್ಟಿದ್ದ ಬಟ್ಟೆಗಳನ್ನು ಕತ್ತರಿಸಿದನು. ಬಾವುಟ, ಆ ಆನೆಗೆ ಹಿಡಿದಿದ್ದ ಛತ್ರ, ಚಾಮರಗಳೆಲ್ಲ ಸೀಳಿ ನಾಶವಾದುವು. ಆ ಆನೆಯು ಮುಂಗಾಲುಗಳನ್ನು ಮಡಿಸಿದ ಭಂಗಿಯಲ್ಲಿ ನಿಂತಿತು.
ಪದಾರ್ಥ (ಕ.ಗ.ಪ)
ಬಲುಗುಳ-ಆನೆಯ ಪಕ್ಕೆಗಳಿಗೆ ಹಾಕುವ ಬಟ್ಟೆಯ ಹೊದಿಕೆ, ಮೊಗರಂಬ-ಮುಖವಾಡ, ಹೊಮ್ಮಿಳಿ-ಹಗ್ಗ, ರೆಂಚೆ-ಆನೆಯ ಪಕ್ಕೆಗಳಿಗೆ ಹಾಕುವ ಬಟ್ಟೆಯ ಹೊದಿಕೆ, ಹಳವಿಗೆ-ಹೊಯ್ದಾಟ, ಮುಂಡಾಸನ-ಕಪ್ಪೆಯಂತೆ ಕುಳಿತು ಕೊಳ್ಳುವ ಭಂಗಿ
ಮೂಲ ...{Loading}...
ಇಳುಹಿದನು ಬಲುಗುಳವ ಖಂಡಿಸಿ
ಕಳಚಿದನು ಮೊಗರಂಬವನು ಹೊ
ಮ್ಮಿಳಿಯ ಕುಣಿಕೆಯ ಮುರಿದು ತರಿದನು ಸುತ್ತ ರೆಂಚೆಗಳ
ಹಳವಿಗೆಯನಾ ಛತ್ರ ಚಮರಾ
ವಳಿಯ ಸೀಳಿದು ಬಿಸುಟನಾ ಗಜ
ತಿಲಕ ಮುಂಡಾಸನದಲಿರ್ದುದು ಭೂಪ ಕೇಳೆಂದ ॥52॥
೦೫೩ ಮತ್ತೆ ಖಾತಿಯೊಳಙ್ಕುಶದಿನೊಡೆ ...{Loading}...
ಮತ್ತೆ ಖಾತಿಯೊಳಂಕುಶದಿನೊಡೆ
ಯೊತ್ತಿ ಬಿಟ್ಟನು ಗಜವನರ್ಜುನ
ನತ್ತಲಿಭ ತೂಳಿದಡೆ ತಿರುಹಿದನಸುರರಿಪು ರಥವ
ಇತ್ತ ಬಲದಲಿ ಬಲಕೆ ಮೊಗವಿಡ
ಲತ್ತಲೆಡದಲಿ ಮರಳಲಲ್ಲಿಂ
ದತ್ತ ತಿರುಗಿಸಿ ಬಳಲಿಸಿದನಸುರಾರಿ ದಿಗ್ಗಜವ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನು ಕೋಪದಿಂದ ಆ ಆನೆಯನ್ನು ಅಂಕುಶದಿಂದ ಒತ್ತಿ ತಿವಿದು ಬಿಡಲು ಅದು ಅರ್ಜುನನ ಕಡೆಗೆ ನುಗ್ಗಿತು. ಆಗ ಕೃಷ್ಣನು ರಥವನ್ನು ತಿರುಗಿಸಿದನು. ಕೃಷ್ಣನು ರಥವನ್ನು ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಚಲಿಸುವ ಹಾಗೆ ಮಾಡಿ ಆನೆಯು ಮೇಲಿಂದ ಮೇಲೆ ಎಡಬಲಗಳಿಗೆ ತಿರುಗಿ ಆಯಾಸ ಹೊಂದುವ ಹಾಗೆ ಮಾಡಿದನು.
ಪದಾರ್ಥ (ಕ.ಗ.ಪ)
ತೂಳಿದಡೆ-ವೇಗವಾಗಿ ಬಂದರೆ,
ಮೂಲ ...{Loading}...
ಮತ್ತೆ ಖಾತಿಯೊಳಂಕುಶದಿನೊಡೆ
ಯೊತ್ತಿ ಬಿಟ್ಟನು ಗಜವನರ್ಜುನ
ನತ್ತಲಿಭ ತೂಳಿದಡೆ ತಿರುಹಿದನಸುರರಿಪು ರಥವ
ಇತ್ತ ಬಲದಲಿ ಬಲಕೆ ಮೊಗವಿಡ
ಲತ್ತಲೆಡದಲಿ ಮರಳಲಲ್ಲಿಂ
ದತ್ತ ತಿರುಗಿಸಿ ಬಳಲಿಸಿದನಸುರಾರಿ ದಿಗ್ಗಜವ ॥53॥
೦೫೪ ಸಾರಥಿಯ ಕೊನ್ದಲ್ಲದರ್ಜುನ ...{Loading}...
ಸಾರಥಿಯ ಕೊಂದಲ್ಲದರ್ಜುನ
ತೀರುವವನಲ್ಲೆನುತ ದಳ್ಳುರಿ
ಧಾರೆಯಂಬೈದರಲಿ ದೇವನನೆಸಲು ಮಧ್ಯದಲಿ
ಹಾರಿಸಿದನಾ ಪಾರ್ಥನಿವನೆಡೆ
ಗೋರಿದನಲಾಯೆನುತ ಕೆಡೆಯೆನು
ತಾರಿ ಸುರಿದನು ನೂರು ಬಾಣವನರ್ಜುನನ ಮೇಲೆ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾರಥಿಯಾದ ಕೃಷ್ಣನನ್ನು ಕೊಲ್ಲುವ ತನಕ ಅರ್ಜುನನು ಸಾಯುವವನಲ್ಲ ಎನ್ನುತ್ತ ಭಗದತ್ತನು ಮಹಾ ಬೆಂಕಿಯನ್ನು ಕಾರುವಂತಿದ್ದ ಐದು ಬಾಣಗಳನ್ನು ಕೃಷ್ಣನೆಡೆಗೆ ಹೊಡೆದನು. ಆದರೆ ಅರ್ಜುನನು ಅವುಗಳನ್ನು ಮಾರ್ಗ ಮಧ್ಯದಲ್ಲಿಯೇ ಕತ್ತರಿಸಿ ಹಾಕಿದನು. ಅಯ್ಯೋ ಈ ಅರ್ಜುನನು ಬಾಣಗಳನ್ನು ಮಧ್ಯದಲ್ಲಿ ಹಿಡಿದನಲ್ಲ ಎಂದು ಕೂಗುತ್ತಾ ಭಗದತ್ತನು ‘ಬೀಳು’ ಎನ್ನುತ್ತಾ ನೂರು ಬಾಣಗಳನ್ನು ಅರ್ಜುನನಿಗೆ ಹೊಡೆದನು.
ಪದಾರ್ಥ (ಕ.ಗ.ಪ)
ತೀರುವವನಲ್ಲ-ಸಾಯುವವನಲ್ಲ, ದಳ್ಳುರಿ-ಮಹಾಬೆಂಕಿ, ಎಸಲು-ಹೊಡೆಯಲು, ಕೆಡೆ-ಸಾಯಿ, ಆರಿ-ಕೂಗಿ, ಎಡೆಗೋರಿದನು-ಮಧ್ಯದಲ್ಲಿ ಹಿಡಿದನು.
ಮೂಲ ...{Loading}...
ಸಾರಥಿಯ ಕೊಂದಲ್ಲದರ್ಜುನ
ತೀರುವವನಲ್ಲೆನುತ ದಳ್ಳುರಿ
ಧಾರೆಯಂಬೈದರಲಿ ದೇವನನೆಸಲು ಮಧ್ಯದಲಿ
ಹಾರಿಸಿದನಾ ಪಾರ್ಥನಿವನೆಡೆ
ಗೋರಿದನಲಾಯೆನುತ ಕೆಡೆಯೆನು
ತಾರಿ ಸುರಿದನು ನೂರು ಬಾಣವನರ್ಜುನನ ಮೇಲೆ ॥54॥
೦೫೫ ಅನಿತು ಶರವನು ...{Loading}...
ಅನಿತು ಶರವನು ಕಡಿದು ಭಗದ
ತ್ತನ ಧನುವನಿಕ್ಕಡಿಗಡಿಯೆ ಕಂ
ಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ದಿನಪ ಕೋಟಿಯ ರಶ್ಮಿಯನು ತುದಿ
ಮೊನೆಯೊಳುಗುಳುವ ಬಾಯಿ ಧಾರೆಯ
ತನಿಯುರಿಯ ತೆಕ್ಕೆಯಲಿ ಥಳಥಳಿಸುವ ಮಹಾಂಕುಶವ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನು ಏಕಕಾಲಕ್ಕೆ ಬಿಟ್ಟ ನೂರು ಬಾಣಗಳನ್ನು ಅರ್ಜುನನು ಕತ್ತರಿಸಿ ಹಾಕಿ. ಭಗದತ್ತನ ಕೈಯಲ್ಲಿದ್ದ ಬಿಲ್ಲನ್ನು ಎರಡು ತುಂಡಾಗುವಂತೆ ಕತ್ತರಿಸಿದನು. ಆಗ ಭಗದತ್ತನು ಕೆಟ್ಟ ಕೋಪದಿಂದ ಕೋಟಿ ಸೂರ್ಯರ ಪ್ರಕಾಶವನ್ನು ಉಗುಳುವ ಹರಿತವಾದ ಅಲಗಿನಲ್ಲಿ ಥಳಥಳಿಸುತ್ತಿದ್ದ ತನ್ನ ತನ್ನ ಆಯುಧವಾದ ಮಹಾಂಕುಶವನ್ನು ಅದರ ಗವಸಣಿಗೆಯಿಂದ ಸೆಳೆದ.
ಪದಾರ್ಥ (ಕ.ಗ.ಪ)
ಗವಸಣಿಗೆ-ಕೋಶ, ತನಿಯುರಿ-ಹೊಸದಾದ ಬೆಂಕಿ
ಮೂಲ ...{Loading}...
ಅನಿತು ಶರವನು ಕಡಿದು ಭಗದ
ತ್ತನ ಧನುವನಿಕ್ಕಡಿಗಡಿಯೆ ಕಂ
ಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ದಿನಪ ಕೋಟಿಯ ರಶ್ಮಿಯನು ತುದಿ
ಮೊನೆಯೊಳುಗುಳುವ ಬಾಯಿ ಧಾರೆಯ
ತನಿಯುರಿಯ ತೆಕ್ಕೆಯಲಿ ಥಳಥಳಿಸುವ ಮಹಾಂಕುಶವ ॥55॥
೦೫೬ ತೈಲ ಲೇಪದ ...{Loading}...
ತೈಲ ಲೇಪದ ನಯದ ಹೊಗರಿನ
ಜಾಳಿಗೆಯ ಗಹಗಹಿಕೆಗಳ ಹೂ
ಮಾಲೆಗಳ ಸಿಂಪಿಸಿದ ಗಂಧದ ಬಂಧದಕ್ಷತೆಯ
ಕೀಲಣೆಯ ಮಣಿವೆಳಗುಗಳ ಹರಿ
ದಾಳಿಯಲಿ ಕಾಳೋರಗನ ಕುಡಿ
ನಾಲಗೆಯವೋಲೆಸೆದುದಂಕುಶ ಭಟನ ಮುಷ್ಟಿಯಲಿ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಣ್ಣೆಯನ್ನು ಲೇಪಿಸಿದ್ದ, ತುಂಬ ನುಣುಪಾಗಿದ್ದು ಕಾಂತಿಯನ್ನು ಚೆಲ್ಲುವ, ಪ್ರಸನ್ನವಾದ ಹೂಮಾಲೆಯನ್ನು ಹಾಕಿ, ಶ್ರೀಗಂಧವನ್ನು ಲೇಪಿಸಿದ್ದ ಮಂತ್ರಾಕ್ಷತೆಯಿಂದ ಪೂಜಿಸಿದ್ದ, ಹಿಡಿಯಲ್ಲಿ ಹದ್ದಿದ್ದ ರತ್ನಗಳ ಬೆಳಕಿನಲ್ಲ್ಲಿ, ಕಾಳಸರ್ಪನ ಕುಡಿ ನಾಲಗೆಯಂತೆ ಆ ಅಂಕುಶವು ವೀರ ಭಗದತ್ತನ ಮುಷ್ಟಿಯಲ್ಲಿ ಹೊಳೆಯುತ್ತಿತ್ತು.
ಪದಾರ್ಥ (ಕ.ಗ.ಪ)
ಹೊಗರಿನ-ಕಾಂತಿಯ, ಸಿಂಪಿಸಿದ-ಎರೆಚಿದ, ಕೀಲಣೆಯ-ಬಂಧದ, ಜೋಡಣೆಯ, ಮಣಿವೆಳಗು-ರತ್ನದ ಕಾಂತಿ, ಕಾಳೋರಗ-ಕಾಳಿಂಗಸರ್ಪ,
ಮೂಲ ...{Loading}...
ತೈಲ ಲೇಪದ ನಯದ ಹೊಗರಿನ
ಜಾಳಿಗೆಯ ಗಹಗಹಿಕೆಗಳ ಹೂ
ಮಾಲೆಗಳ ಸಿಂಪಿಸಿದ ಗಂಧದ ಬಂಧದಕ್ಷತೆಯ
ಕೀಲಣೆಯ ಮಣಿವೆಳಗುಗಳ ಹರಿ
ದಾಳಿಯಲಿ ಕಾಳೋರಗನ ಕುಡಿ
ನಾಲಗೆಯವೋಲೆಸೆದುದಂಕುಶ ಭಟನ ಮುಷ್ಟಿಯಲಿ ॥56॥
೦೫೭ ಕುಡಿ ಕಿರೀಟಿಯ ...{Loading}...
ಕುಡಿ ಕಿರೀಟಿಯ ರಕುತವನು ಹಗೆ
ಕೆಡಲಿ ಕೌರವ ರಾಯನಾಳಲಿ
ಪೊಡವಿಯನು ಪರಿತೋಷವಾಗಲಿ ನೃಪನ ಮಿತ್ರರಿಗೆ
ತಡೆದು ಹಲಕಾಲದಲುಪಾಸಂ
ಬಡಿಸಿದೆನ್ನದು ದೋಷ ಖಾತಿಯ
ಹಿಡಿಯದಿರು ನೀನೆನುತ ತಿರುಹಿಟ್ಟನು ಮಹಾಂಕುಶವ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಅಂಕುಶವೇ ನೀನು ಅರ್ಜುನನ ರಕ್ತವನ್ನು ಈಗ ಕುಡಿ; ಶತ್ರು ನಾಶವಾಗಲಿ ; ದುರ್ಯೋಧನನು ರಾಜ್ಯವನ್ನು ಆಳಲಿ, ದುರ್ಯೋಧನನ ಗೆಳೆಯರಿಗೆ ಸಂತೋಷವಾಗಲಿ ; ನಿನ್ನನ್ನು ಯಾರ ಮೇಲೂ ಪ್ರಯೋಗಿಸದೆ ಹಲವು ವರ್ಷಗಳಿಂದ ಒಳಗಿಟ್ಟು ನಿನ್ನ ಉಪವಾಸಕ್ಕೀಡು ಮಾಡಿದ್ದು, ನನ್ನ ತಪ್ಪು ; ಈ ಕಾರಣಕ್ಕಾಗಿ ಕೋಪಿಸಿಕೊಳ್ಳಬೇಡ” ಎಂದು ಮಹಾ ಅಂಕುಶಕ್ಕೆ ಹೇಳಿ ಅದನ್ನು ಅರ್ಜುನನ ಮೇಲೆ ಪ್ರಯೋಗಿಸಿದನು.
ಪದಾರ್ಥ (ಕ.ಗ.ಪ)
ಉಪಸಂಬಡಿಸಿದೆ-ಉಪವಾಸ ಮಾಡಿಸಿದೆ,
ಮೂಲ ...{Loading}...
ಕುಡಿ ಕಿರೀಟಿಯ ರಕುತವನು ಹಗೆ
ಕೆಡಲಿ ಕೌರವ ರಾಯನಾಳಲಿ
ಪೊಡವಿಯನು ಪರಿತೋಷವಾಗಲಿ ನೃಪನ ಮಿತ್ರರಿಗೆ
ತಡೆದು ಹಲಕಾಲದಲುಪಾಸಂ
ಬಡಿಸಿದೆನ್ನದು ದೋಷ ಖಾತಿಯ
ಹಿಡಿಯದಿರು ನೀನೆನುತ ತಿರುಹಿಟ್ಟನು ಮಹಾಂಕುಶವ ॥57॥
೦೫೮ ತೀರಿತಿನ್ನೇನಕಟ ಪಾಣ್ಡವ ...{Loading}...
ತೀರಿತಿನ್ನೇನಕಟ ಪಾಂಡವ
ವೀರರುಬ್ಬಟೆ ಹಾರಿತೇ ತ್ರಿಪು
ರಾರಿಯುರಿಗಣ್ಣಿಂಗೆ ಸೋಲದ ಕೈದುಗೊಂಡನಲ
ಧಾರುಣಿಯನಿನ್ನುಣಲಿ ಧರ್ಮ ಕು
ಮಾರನಕಟಿನ್ನಾರು ಕಾವವ
ರಾರೆನುತ ತಲ್ಲಣಿಸುತಿರ್ದುದು ಪಾಂಡುಸುತ ಸೇನೆ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇನ್ನು ಪಾಂಡವ ವೀರರ ಸಾಹಸ ಪರಾಕ್ರಮ ಶೌರ್ಯಗಳೆಲ್ಲವೂ ಮುಗಿದಂತಾಯಿತು. ತ್ರಿಪುರಗಳನ್ನು ನಾಶ ಮಾಡಿದ ಈಶ್ವರನ ಬೆಂಕಿಯ ಕಣ್ಣಿಗೂ ಸೋಲದಿರುವಂತಹ ಆಯುಧವನ್ನು ಕೊಂಡನಲ್ಲವೆ ! ಧರ್ಮರಾಯನು ಸಾಮ್ರಾಜ್ಯವನ್ನು ಇನ್ನು ಆಳಲಿ. ಅಯ್ಯೋ ಇನ್ನು ಕಾಪಾಡುವರಾರು ?” ಎಂದು ಪಾಂಡವರ ಸೈನ್ಯ ಚಿಂತಾಕ್ರಾಂತವಾಯಿತು.
ಪದಾರ್ಥ (ಕ.ಗ.ಪ)
ಉಬ್ಬಟೆ-ಅತಿಶಯತೆ, ತ್ರಿಪುರಾರಿ-ಈಶ್ವರ,
ಮೂಲ ...{Loading}...
ತೀರಿತಿನ್ನೇನಕಟ ಪಾಂಡವ
ವೀರರುಬ್ಬಟೆ ಹಾರಿತೇ ತ್ರಿಪು
ರಾರಿಯುರಿಗಣ್ಣಿಂಗೆ ಸೋಲದ ಕೈದುಗೊಂಡನಲ
ಧಾರುಣಿಯನಿನ್ನುಣಲಿ ಧರ್ಮ ಕು
ಮಾರನಕಟಿನ್ನಾರು ಕಾವವ
ರಾರೆನುತ ತಲ್ಲಣಿಸುತಿರ್ದುದು ಪಾಂಡುಸುತ ಸೇನೆ ॥58॥
೦೫೯ ಹಾ ಯುಧಿಷ್ಠಿರ ...{Loading}...
ಹಾ ಯುಧಿಷ್ಠಿರ ರಾಯ ಶಿವ ಶಿವ
ವಾಯುಸುತ ಹಾ ಪಾರ್ಥ ಹಾ ಮಾ
ದ್ರೇಯರಿರ ಹಾಯೆನುತ ಹರೆದುದು ಸೇನೆ ದೆಸೆದೆಸೆಗೆ
ಬಾಯ ಬಿಟ್ಟುದು ದಿವಿಜಬಲ ನಿ
ರ್ದಾಯದಲಿ ನೆಲನಾಯಿತಲ ಕುರು
ರಾಯಗೆನುತಿರ್ದುದು ಜಗತ್ರಯವೊಂದು ನಿಮಿಷದಲಿ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವ ಸೇನೆಯು “ಅಯ್ಯೋ ಧರ್ಮರಾಯ, ಅಯ್ಯೋ ಭೀಮಸೇನ, ಅಯ್ಯೋ ಅರ್ಜುನ, ಅಯ್ಯೋ ನಕುಲ, ಅಯ್ಯೋ ಸಹದೇವ” ಎನ್ನುತ್ತಾ ದಿಕ್ಕಾ ಪಾಲಾಗಿ ಓಡಲಾರಂಭಿಸಿದರು. ದೇವತಾ ಸೇನೆಯು ವಿಸ್ಮಿತವಾಯಿತು. “ಅಯ್ಯೋ ಇನ್ನು ನಿಶ್ಚಿತವಾಗಿ ದುರ್ಯೋಧನನಿಗೆ ರಾಜ್ಯ ದೊರಕಿದಂತಾಯಿತು” ಎಂದು ಆ ನಿಮಿಷದಲ್ಲಿ ಮೂರು ಲೋಕಗಳೂ ಹೇಳುತ್ತಿದ್ದುವು.
ಪದಾರ್ಥ (ಕ.ಗ.ಪ)
ನಿರ್ದಾಯದಲ್ಲಿ-ನಿಶ್ಚಿತವಾಗಿ
ಮೂಲ ...{Loading}...
ಹಾ ಯುಧಿಷ್ಠಿರ ರಾಯ ಶಿವ ಶಿವ
ವಾಯುಸುತ ಹಾ ಪಾರ್ಥ ಹಾ ಮಾ
ದ್ರೇಯರಿರ ಹಾಯೆನುತ ಹರೆದುದು ಸೇನೆ ದೆಸೆದೆಸೆಗೆ
ಬಾಯ ಬಿಟ್ಟುದು ದಿವಿಜಬಲ ನಿ
ರ್ದಾಯದಲಿ ನೆಲನಾಯಿತಲ ಕುರು
ರಾಯಗೆನುತಿರ್ದುದು ಜಗತ್ರಯವೊಂದು ನಿಮಿಷದಲಿ ॥59॥
೦೬೦ ಇದರ ಪಾಡೇನೇಸಪಾಯವ ...{Loading}...
ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಶಕ್ತ್ಯಾಯುಧದದ ಪಾಡಾವುದು ! ಕೃಷ್ಣ ಭಕ್ತರಾದವರು ಎಷ್ಟು ಅಪಾಯಗಳನ್ನು ಒದೆದು ಕಳೆಯುವುದಿಲ್ಲ. ಉರಿಗೆಂಡವು ಒರಲೆಗಳ (ಗೆದ್ದಲು ಹುಳುಗಳ) ಬಾಯಿಗೆ ಸದರವಾದ ಆಹಾರವೇ. ಅತಿಶಯವಾದ ಕಿಡಿಗಳನ್ನುಗುಳುತ್ತಾ, ಕಪ್ಪಾದ ದಟ್ಟ ಹೊಗೆಯನ್ನು ಚಿಮ್ಮಿಸುತ್ತಾ ಅರ್ಜುನನ ಮೇಲೆ ನುಗ್ಗುತ್ತಿದ್ದ ದಿವ್ಯವಾದ ಆ ಮಹಾ ಅಂಕುಶಕ್ಕೆ ಶ್ರೀಕೃಷ್ಣನು ಅಡ್ಡವಾಗಿ ಬಂದು ತನ್ನ ವಕ್ಷ ಸ್ಥಳವನ್ನು ಒಡ್ಡಿದನು.
ಪದಾರ್ಥ (ಕ.ಗ.ಪ)
ಒರಲೆ-ಗೆದ್ದಲು ಹುಳು, ಹೇರಾಳ-ಅತಿಶಯ, ಅತಿಹೆಚ್ಚಾದ, ವಕ್ಷ-ಎದೆ, ಅಸುರ+ಅರಾತಿ=ರಾಕ್ಷಸರ ಶತ್ರು, ಅಡ ಹಾಯ್ದ-ಅಡ್ಡವಾಗಿ ಬಂದನು.
ಮೂಲ ...{Loading}...
ಇದರ ಪಾಡೇನೇಸಪಾಯವ
ನೊದೆದು ಕಳೆಯರು ಕೃಷ್ಣಭಕ್ತರು
ಸದರವೇ ಉರಿಗೆಂಡವೊರಲೆಯ ಬಾಯ್ಗೆ ಭಾವಿಸಲು
ಹೊದರುಗಿಡಿಗಳ ಹೊಗೆಯ ಹೇರಾ
ಳದಲಿ ಬಹ ದಿವ್ಯಾಯುಧಕೆ ಚಾ
ಚಿದನು ವಕ್ಷಸ್ಥಳವನಸುರಾರಾತಿಯಡಹಾಯ್ದು ॥60॥
೦೬೧ ಮೆರೆದುದುರದಲಿ ಕೌಸ್ತುಭದ ...{Loading}...
ಮೆರೆದುದುರದಲಿ ಕೌಸ್ತುಭದ ಮಣಿ
ಮರಿಯನಿಳುಹಿದ ವೋಲು ಬೆಳಗಿನ
ತುರುಗಲಲಿ ತೂಗಾಡುತಿದ್ದುದು ಕೈದು ತೊಡವಾಗಿ
ಮುರಿದುದಗ್ಗದ ಭೀತಿ ಹರುಷದ
ಸೆರೆಗೆ ಬಿಡುಗಡೆಯಾಯ್ತು ಬಲು ಬೊ
ಬ್ಬಿರಿವುತಿರ್ದುದು ವೈರಿಕಟಕದೊಳರಸ ಕೇಳ್ ಎಂದ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌಸ್ತುಭ ರತ್ನವು ಮರಿಯನ್ನು ಹಾಕಿದ ಹಾಗೆ ಕೃಷ್ಣನ ಎದೆಯ ಮೇಲೆ, ಬೆಳಕಿನ ಗೊಂಚಲನ್ನು ಇಳಿಸಿದಂತೆ, ಆಯುಧವು ಆಭರಣವಾಗಿ ತೂಗಾಡುತ್ತಿತ್ತು. ಪಾಂಡವ ಸೈನ್ಯದ ಅತಿಶಯವಾದ ಭೀತಿಯು ನಾಶವಾಯಿತು. ಅಡಗಿದ್ದ ಹರುಷ ಮುಕ್ತವಾಗಿ ಹರಡಿತು. ಶತ್ರುಸೈನ್ಯದವರು ದೊಡ್ಡದಾಗಿ ಬೊಬ್ಬೆ ಹಾಕುತ್ತಿದ್ದರು ಎಂದು ಧೃತರಾಷ್ಟ್ರನಿಗೆ ಸಂಜಯ ಹೇಳಿದ.
ಪದಾರ್ಥ (ಕ.ಗ.ಪ)
ತುರುಗಲು-ಗೊಂಚಲು
ಮೂಲ ...{Loading}...
ಮೆರೆದುದುರದಲಿ ಕೌಸ್ತುಭದ ಮಣಿ
ಮರಿಯನಿಳುಹಿದ ವೋಲು ಬೆಳಗಿನ
ತುರುಗಲಲಿ ತೂಗಾಡುತಿದ್ದುದು ಕೈದು ತೊಡವಾಗಿ
ಮುರಿದುದಗ್ಗದ ಭೀತಿ ಹರುಷದ
ಸೆರೆಗೆ ಬಿಡುಗಡೆಯಾಯ್ತು ಬಲು ಬೊ
ಬ್ಬಿರಿವುತಿರ್ದುದು ವೈರಿಕಟಕದೊಳರಸ ಕೇಳೆಂದ ॥61॥
೦೬೨ ಕೌತುಕವನಿದ ಕಣ್ಡು ...{Loading}...
ಕೌತುಕವನಿದ ಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನೆ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಆಶ್ಚರ್ಯವನ್ನು ಕಂಡ ಅರ್ಜುನ ಆತುರದಿಂದ, ಕೃಷ್ಣ ಸಾರಥ್ಯದ ಕೆಲಸ ಮಾಡಲು ಬೇಸರಿಸಿದನೆ, ಅವನೇ ಕೌರವನೊಂದಿಗೆ ಯುದ್ಧ ಮಾಡಲಿ. ನನಗೆ ಸಾರಥಿ ತನವೇ ಸಾಕು ಎನ್ನುತ್ತಾ ಆ ಕ್ಷಣವೇ ಬಿಲ್ಲನ್ನು ಬಿಸುಡಿದ. ಶತ್ರುಬಲವನ್ನು ನಡುಗಿಸುವ ಪರಾಕ್ರಮಿಯಾದ ಅರ್ಜುನನು ದುಗುಡದಿಂದ ಇದ್ದ.
ಪದಾರ್ಥ (ಕ.ಗ.ಪ)
ವಿಧೂತ-ನಡುಗಿಸುವ,
ಮೂಲ ...{Loading}...
ಕೌತುಕವನಿದ ಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನೆ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ ॥62॥
೦೬೩ ತಿರುಗಿ ಕಣ್ಡನು ...{Loading}...
ತಿರುಗಿ ಕಂಡನು ಕೃಷ್ಣನೀತನ
ಪರಿಯನರಿದನು ಮನದಲಿವನು
ತ್ತರವ ಕೇಳುವೆವೆಂದು ಪಾರ್ಥನ ನುಡಿಸಿದನು ನಗುತ
ಉರವಣಿಸುತಿದೆ ಮತ್ತೆ ಕರಿ ನಿಜ
ಕರದೊಳಾಯುಧವಿಲ್ಲ ಘನ ಸಂ
ಗರಕೆ ಬೇಸರು ತೋರಿತೇ ತನ್ನಾಣೆ ಹೇಳೆಂದ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಹಿಂತಿರುಗಿ ನೋಡಿ ಅರ್ಜುನನ ಈ ಸ್ಥಿತಿಯನ್ನು ತಿಳಿದ. ಇವನ ಈ ಸ್ಥಿತಿಗೆ ಕಾರಣವನ್ನು ಕೇಳುವೆನೆಂದುಕೊಂಡು ನಗುತ್ತಾ ಅರ್ಜುನನನ್ನು ಮಾತನಾಡಿಸಿದ. ಆನೆಯು ಪುನಃ ಉತ್ಸಾಹದಿಂದ ನುಗ್ಗುತ್ತಿದೆ. ಆದರೂ ನಿನ್ನ ಕೈಯಲ್ಲಿ ಆಯುಧವಿಲ್ಲ. ಈ ಮಹಾಯುದ್ಧ ನಿನಗೆ ಬೇಸರವಾಯಿತೇ ನನ್ನಾಣೆ ಹೇಳು ಎಂದ.
ಮೂಲ ...{Loading}...
ತಿರುಗಿ ಕಂಡನು ಕೃಷ್ಣನೀತನ
ಪರಿಯನರಿದನು ಮನದಲಿವನು
ತ್ತರವ ಕೇಳುವೆವೆಂದು ಪಾರ್ಥನ ನುಡಿಸಿದನು ನಗುತ
ಉರವಣಿಸುತಿದೆ ಮತ್ತೆ ಕರಿ ನಿಜ
ಕರದೊಳಾಯುಧವಿಲ್ಲ ಘನ ಸಂ
ಗರಕೆ ಬೇಸರು ತೋರಿತೇ ತನ್ನಾಣೆ ಹೇಳೆಂದ ॥63॥
೦೬೪ ಕಾದುವಾತನು ನೀನು ...{Loading}...
ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೋ ಕೃಷ್ಣ ನೀನೇ
ಕಾದು ವಾಘೆಯ ತಾಯೆನಲು ಮರು
ಳಾದನೈ ನರನೆನುತ ನಗುತ ಮುರಾರಿಯಿಂತೆಂದ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು “ನಾನು ಯುದ್ಧ ಮಾಡುವವನಲ್ಲ, ನೀನೇ ಯುದ್ಧವನ್ನು ಮಾಡುತ್ತಿರುವವನು. ನೀನು ಶತ್ರುವಾದ ಭಗದತ್ತನು ಬಿಟ್ಟ ಅಂಕುಶವನ್ನು ಜಯಿಸಿದ್ದೀಯೆ, ಆದ್ದರಿಂದ ನಾನು ಯುದ್ಧ ಮಾಡುವುದಿಲ್ಲ. ನನಗೆ ಸಾರಥಿತನವೇ ಸಾಕು; ಈ ಶಸ್ತ್ರಾಸ್ತ್ರಗಳನ್ನು ನೀನು ಸ್ವೀಕರಿಸಿ ಯುದ್ಧ ಮಾಡು. ನನಗೆ ಕುದುರೆಗಳ ಲಗಾಮನ್ನು ಕೊಡು” ಎಂದು ಹೇಳಲು ಕೃಷ್ಣನು ಅರ್ಜುನನು ಹುಚ್ಚನಾಗಿದ್ದಾನೆ ಎಂದುಕೊಂಡು ನಗುನಗುತ್ತಾ ಹೀಗೆಂದ.
ಮೂಲ ...{Loading}...
ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೋ ಕೃಷ್ಣ ನೀನೇ
ಕಾದು ವಾಘೆಯ ತಾಯೆನಲು ಮರು
ಳಾದನೈ ನರನೆನುತ ನಗುತ ಮುರಾರಿಯಿಂತೆಂದ ॥64॥
೦೬೫ ಆಡಬಾರದು ತೋರಿ ...{Loading}...
ಆಡಬಾರದು ತೋರಿ ನುಡಿದರೆ
ಖೋಡಿ ನಿನಗಹುದೆಲೆ ಮರುಳೆ ನೀ
ನೋಡಲೆವೆ ಸೀವವು ಕಣಾ ನಿನ್ನಳವಿನಾಯುಧವೆ
ಹೂಡಲಾಪುದು ಜಗವನಂತಕ
ಗೂಡಲಾಪುದು ಮುನಿದರಿದ ಕೈ
ಮಾಡುವರೆ ನಿಲಬಾರದಜ ರುದ್ರಾಮರೇಂದ್ರರಿಗೆ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ಆ ವಿಷಯವಾಗಿ ಮಾತಾಡಬಾರದು, ಆಡಿದರೆ ನಿನಗೆ ಕೋಪವುಂಟಾಗುತ್ತದೆ. ಎಲೆ ಮರುಳೆ, ನೀನು ಆ ಶಕ್ತ್ಯಾಯುಧವನ್ನು ನೋಡಿದರೆ ಕಣ್ಣಿನ ರೆಪ್ಪೆಗಳು ಸೀದು ಹೋಗುವುವು. ಅದು ನಿನ್ನ ಅಳತೆಗೆ ಸಿಕ್ಕುವ ಆಯುಧವೇ. ಈ ಆಯುಧ ಜಗತ್ತನ್ನೇ ಯಮನಿಗೆ ಉಣ ಬಡಿಸಬಲ್ಲುದು, ಇದು ಕೋಪಿಸಿಕೊಂಡರೆ ಬ್ರಹ್ಮ, ರುದ್ರ, ದೇವೇಂದ್ರರೂ ಇದರೆದುರು ನಿಲ್ಲಲಾರರು.
ಪದಾರ್ಥ (ಕ.ಗ.ಪ)
ಖೋಡಿ-ಕೋಪ, ಎವೆ-ಕಣ್ಣಿನ ರೆಪ್ಪೆ, ಸೀವವು-ಸುಟ್ಟು ಹೋಗುತ್ತದೆ,
ಮೂಲ ...{Loading}...
ಆಡಬಾರದು ತೋರಿ ನುಡಿದರೆ
ಖೋಡಿ ನಿನಗಹುದೆಲೆ ಮರುಳೆ ನೀ
ನೋಡಲೆವೆ ಸೀವವು ಕಣಾ ನಿನ್ನಳವಿನಾಯುಧವೆ
ಹೂಡಲಾಪುದು ಜಗವನಂತಕ
ಗೂಡಲಾಪುದು ಮುನಿದರಿದ ಕೈ
ಮಾಡುವರೆ ನಿಲಬಾರದಜ ರುದ್ರಾಮರೇಂದ್ರರಿಗೆ ॥65॥
೦೬೬ ವಿಲಸದುಪನಿಷದುರು ರಹಸ್ಯವ ...{Loading}...
ವಿಲಸದುಪನಿಷದುರು ರಹಸ್ಯವ
ತಿಳುಹಿದೆನು ನಿನಗೊಮ್ಮೆ ಮತ್ತೆಯು
ತಿಳಿದುದಿಲ್ಲಾ ಕ್ಷತ್ರತಾಮಸ ಬಿಡದು ಬುದ್ಧಿಯಲಿ
ಸುಲಭವಂತರ್ನಿಷ್ಠರಿಗೆ ನಿ
ಷ್ಕಳ ನಿರೂಪನನಂತ ನಿಜ ನಿ
ರ್ಮಳವೆನಿಪ ಪರಮಾತ್ಮ ಚಿನುಮಯ ರೂಪ ತಾನೆಂದ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹಿಂದೆ ಪವಿತ್ರವಾದ ಉಪನಿಷತ್ತಿನ ರಹಸ್ಯವನ್ನು ತಿಳಿಸಿದ್ದೆನು. ಆದರೂ ಅದು ನಿನಗೆ ಅರ್ಥವಾದಂತಿಲ್ಲ. ಕ್ಷತ್ರಿಂiನಾದ ನಿನಗೆ ತಾಮಸ ಬುದ್ಧಿಯುಂಟಾಗಿದೆ. ಅಂತರಂಗದಲ್ಲಿ ನಿಷ್ಠೆ ಇದ್ದರೆ ಮಾತ್ರ ವಿಚಾರದ ಅರಿವಾಗುತ್ತದೆ. ನಾನು ಅತ್ಯಂತ ಶುದ್ಧ, ನಿರ್ವಿಕಾರ, ನಿಷ್ಕಳ, ನಿರೂಪನೂ ಆದ ಚಿನುಮಯ ರೂಪನಾಗಿದ್ದೇನೆ” ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ವಿಲಸತ್-ಪವಿತ್ರವಾದ, ಉರು-ಶ್ರೇಷ್ಠ, ನಿಷ್ಕಳ-ಕಳಾಹೀನ, ಚಿನುಮಯ-ಚಿದ್ರೂಪಿ
ಮೂಲ ...{Loading}...
ವಿಲಸದುಪನಿಷದುರು ರಹಸ್ಯವ
ತಿಳುಹಿದೆನು ನಿನಗೊಮ್ಮೆ ಮತ್ತೆಯು
ತಿಳಿದುದಿಲ್ಲಾ ಕ್ಷತ್ರತಾಮಸ ಬಿಡದು ಬುದ್ಧಿಯಲಿ
ಸುಲಭವಂತರ್ನಿಷ್ಠರಿಗೆ ನಿ
ಷ್ಕಳ ನಿರೂಪನನಂತ ನಿಜ ನಿ
ರ್ಮಳವೆನಿಪ ಪರಮಾತ್ಮ ಚಿನುಮಯ ರೂಪ ತಾನೆಂದ ॥66॥
೦೬೭ ಸಙ್ಗಿಯಲ್ಲದ ವಿಮಳ ...{Loading}...
ಸಂಗಿಯಲ್ಲದ ವಿಮಳ ಪರಮಾ
ತ್ಮಂಗೆ ಲೀಲೆಯೊಳಾಯ್ತು ಮಾಯಾ
ಸಂಗವದರಿಂದಾಯ್ತು ನಾಲುಕು ಮೂರ್ತಿಗಳು ತನಗೆ
ಅಂಗಿಯಂಗ ವಿಭಾಗವಿಲ್ಲದ
ಭಂಗ ಸನ್ಮಾತ್ರಂಗೆ ಭಾವಿಸ
ಲಂಗ ಕಲ್ಪನೆ ಮಿಥ್ಯವಲ್ಲಾ ಪಾರ್ಥ ಹೇಳೆಂದ ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಸ್ಸಂಗಿಯಾದ (ಯಾವುದರೊಂದಿಗೂ ಸೇರದ) ಪರಿಶುದ್ಧ ಪರಮಾತ್ಮನಿಗೆ ಲೀಲೆಯಿಂದ ಮಾಯೆಯ ಸಂಗವಾಯಿತು. ಅದರಿಂದ ನನಗೆ ನಾಲ್ಕು ಮೂರ್ತಿಗಳಾದುವು. ಅಂಗಿ ಮತ್ತು ಅಂಗ ಎಂಬ ಭೇದವಿಲ್ಲದೆ ಅಭಂಗನಾಗಿರುವ ಶ್ರೇಷ್ಠನಿಗೆ ಪರಿಶೀಲಿಸಿ ನೋಡಿದರೆ, ಅಂಗ ಕಲ್ಪನೆ ಮಿಥ್ಯವಲ್ಲವೇ - ಪಾರ್ಥ ಹೇಳು ಎಂದ.
ಪದಾರ್ಥ (ಕ.ಗ.ಪ)
ಲೀಲೆ-ಆಟ, ಮಿಥ್ಯ-ಸುಳ್ಳು
ಮೂಲ ...{Loading}...
ಸಂಗಿಯಲ್ಲದ ವಿಮಳ ಪರಮಾ
ತ್ಮಂಗೆ ಲೀಲೆಯೊಳಾಯ್ತು ಮಾಯಾ
ಸಂಗವದರಿಂದಾಯ್ತು ನಾಲುಕು ಮೂರ್ತಿಗಳು ತನಗೆ
ಅಂಗಿಯಂಗ ವಿಭಾಗವಿಲ್ಲದ
ಭಂಗ ಸನ್ಮಾತ್ರಂಗೆ ಭಾವಿಸ
ಲಂಗ ಕಲ್ಪನೆ ಮಿಥ್ಯವಲ್ಲಾ ಪಾರ್ಥ ಹೇಳೆಂದ ॥67॥
೦೬೮ ಇನ್ದು ಕಮಳಭವ ...{Loading}...
ಇಂದು ಕಮಳಭವ ಪ್ರಜೇಶ್ವರ
ರೊಂದು ಮೂರುತಿ ವಿಷ್ಣು ಮನುಗಳು
ಸಂದ ಪಾರ್ಥಿವ ಲೋಕಪಾಲಕರೊಂದು ಮೂರ್ತಿಯದು
ಇಂದುಶೇಖರನಗ್ನಿ ಯಮನರ
ವಿಂದಸಖ ಕಾಲಾಗ್ನಿ ಮೂರ್ತಿಯ
ರೊಂದು ಮೂರುತಿ ವಿಶ್ವದೊಳು ನಿಷ್ಯೂತಚೈತನ್ಯ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚಂದ್ರ, ಬ್ರಹ್ಮ, ಪ್ರಜೇಶ್ವರರು ವಿಷ್ಣುವಿನ ಒಂದು ಮೂರುತಿಯೇ ಆಗಿದ್ದಾರೆ. ವಿಷ್ಣು ಮತ್ತು ಹದಿನಾಲ್ಕು ಮನುಗಳು ಈ ಲೋಕವನ್ನು ಪಾಲನೆ ಗೈಯುತ್ತಿದ್ದಾರೆ. ಚಂದ್ರನನ್ನು ಧರಿಸಿರುವ ಶಿವ, ಅಗ್ನಿ, ಯಮ, ಕಮಲ ಮಿತ್ರನಾದ ಸೂರ್ಯ, ಕಾಲಾಗ್ನಿ ಎಂಬ ಮೂರುತಿಗಳು ವಿಷ್ಣುವಿನ ಬೇರೆ ಬೇರೆ ರೂಪಗಳಾಗಿ ವಿಷ್ಣುವೇ ಇವರೆಲ್ಲರಿಗೆ ಚೈತನ್ಯವನ್ನು ನೀಡಿರುವನೆಂದು ಈ ಎಲ್ಲ ಆತ್ಮಗಳು ಕೂಡಿಕೊಂಡಿರುವುದೆಂದೂ ಕೃಷ್ಣನು ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಕಮಳ ಭವ-ಕಮಲದಲ್ಲಿ ಹುಟ್ಟಿದವನು-ಬ್ರಹ್ಮ, ಇಂದು ಶೇಖರ-ಚಂದ್ರನನ್ನು ತಲೆಯಲ್ಲಿ ಧರಿಸಿದವನು-ಶಿವ, ಅರವಿಂದ ಸಖ-ಕಮಲದ ಮಿತ್ರ-ಸೂರ್ಯ, ನಿಷ್ಯೂತ ಚೈತನ್ಯ-ಕೂಡಿಕೊಂಡಿರುವ ಆತ್ಮ
ಟಿಪ್ಪನೀ (ಕ.ಗ.ಪ)
ಪ್ರಜೇಶ್ವರ -ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಕ್ರತು, ಪುಲಹ, ವಸಿಷ್ಠ, ಭೃಗು ಮತ್ತು ನಾರದರೆಂಬ ಹತ್ತು ಜನ
- ಶ್ರೀವತ್ಸ ನಿಘಂಟು
ಮೂಲ ...{Loading}...
ಇಂದು ಕಮಳಭವ ಪ್ರಜೇಶ್ವರ
ರೊಂದು ಮೂರುತಿ ವಿಷ್ಣು ಮನುಗಳು
ಸಂದ ಪಾರ್ಥಿವ ಲೋಕಪಾಲಕರೊಂದು ಮೂರ್ತಿಯದು
ಇಂದುಶೇಖರನಗ್ನಿ ಯಮನರ
ವಿಂದಸಖ ಕಾಲಾಗ್ನಿ ಮೂರ್ತಿಯ
ರೊಂದು ಮೂರುತಿ ವಿಶ್ವದೊಳು ನಿಷ್ಯೂತಚೈತನ್ಯ ॥68॥
೦೬೯ ಇದುವೆ ಮತ ...{Loading}...
ಇದುವೆ ಮತ ಕೆಲಬರಿಗೆ ಕೆಲಬರಿ
ಗಿದು ಮತವು ವಿವಿಧಾವತಾರದ
ಲುದಿಸುತೊಂದಿಹುದೊಂದು ಮೂರ್ತಿ ತಪೋ ವಿನೋದದಲಿ
ಉದಧಿಯೊಳು ವರ ಯೋಗ ನಿದ್ರಾ
ಸ್ಪದದಲೊಂದಿಹುದೊಂದಖಿಳ ವಿ
ಶ್ವದ ಸುಕೃತ ದುಷ್ಕೃತವನೀಕ್ಷಿಸುತಿಹುದು ಕೇಳ್ ಎಂದ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಕೆಲವರ ಅಭಿಪ್ರಾಯವಾದರೆ ಮತ್ತೆ ಕೆಲವರ ಅಭಿಪ್ರಾಯದಂತೆ ಒಂದೇ ಮೂರ್ತಿಯು ತಪಸ್ಸಿನ ವಿನೋದದಲ್ಲಿ ವಿವಿಧ ಅವತಾರಗಳಲ್ಲಿ ಹುಟ್ಟುತ್ತಿದೆ. ಸಮುದ್ರದಲ್ಲಿ ಯೋಗ ನಿದ್ರೆಯಲ್ಲಿರುವ ಒಂದು ಮೂರ್ತಿಯು ಪ್ರಪಂಚದ ಒಳಿತು-ಕೆಡುಕುಗಳನ್ನು ನೋಡುತ್ತಿರುತ್ತದೆ, ಕೇಳು ಎಂದು ಕೃಷ್ಣನು ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಉದಧಿ-ಸಮುದ್ರ,
ಟಿಪ್ಪನೀ (ಕ.ಗ.ಪ)
ಯೋಗನಿದ್ರೆ - ಪ್ರಪಂಚದಲ್ಲಿ ಪ್ರಳಯವಾದ ಮೇಲೆ ಬ್ರಹ್ಮಾಂಡವು ಸಂಪೂರ್ಣವಾಗಿ ನೀರಿನಿಂದ ಆವೃತ್ತಗೊಂಡಿರುತ್ತದೆ. ಆಗ ಪ್ರಪಂಚದಲ್ಲಿ ಯಾವ ಜೀವಿಯೂ ಬದುಕಿರುವುದಿಲ್ಲ. ವಿಷ್ಣುವು ಮಾತ್ರ ಶಿಶುವಿನ ರೂಪವನ್ನು ತಾಳಿ ಆಲದೆಲೆಯ ಮೇಲೆ ಮಲಗಿ ಯೋಗನಿದ್ರೆಯಲ್ಲಿರುವನೆಂದು ಹೇಳಲಾಗುತ್ತದೆ.
ಮೂಲ ...{Loading}...
ಇದುವೆ ಮತ ಕೆಲಬರಿಗೆ ಕೆಲಬರಿ
ಗಿದು ಮತವು ವಿವಿಧಾವತಾರದ
ಲುದಿಸುತೊಂದಿಹುದೊಂದು ಮೂರ್ತಿ ತಪೋ ವಿನೋದದಲಿ
ಉದಧಿಯೊಳು ವರ ಯೋಗ ನಿದ್ರಾ
ಸ್ಪದದಲೊಂದಿಹುದೊಂದಖಿಳ ವಿ
ಶ್ವದ ಸುಕೃತ ದುಷ್ಕೃತವನೀಕ್ಷಿಸುತಿಹುದು ಕೇಳೆಂದ ॥69॥
೦೭೦ ಕೆಲರು ಧರ್ಮಾರ್ಥಾದಿ ...{Loading}...
ಕೆಲರು ಧರ್ಮಾರ್ಥಾದಿ ನಾಲುಕು
ಲಲಿತ ಮೂರ್ತಿಗಳೆಂಬರಿದರೊಳು
ಕೆಲರು ಜಾಗರಣಾದ್ಯವಸ್ಥೆಗಳೆಂಬ ಮೂರ್ತಿಗಳು
ತಿಳಿಯಲೋತಪ್ರೋತದಲಿ ನಿ
ಷ್ಕಳವೆ ಸಕಳವೆಯಾಗಿ ವಿಶ್ವದೊ
ಳೊಳಗು ಹೊರಗಾನಲ್ಲದಿಲ್ಲೆಲೆ ಪಾರ್ಥ ಕೇಳ್ ಎಂದ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೆಲವರು ಧರ್ಮ, ಅರ್ಥ, ಕಾಮ, ಮೋಕ್ಷವೆಂಬುದೇ ಪರಮಾತ್ಮನ ನಾಲ್ಕು ರೂಪಗಳೆಂದು ಹೇಳುತ್ತಾರೆ. ಕೆಲವರು ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಅವಸ್ಥೆಗಳನ್ನೆ ಭಗವಂತನ ರೂಪಗಳೆಂದು ಹೇಳುತ್ತಾರೆ. ಸರಿಯಾಗಿ ಪರಮಾತ್ಮನ ಸ್ವರೂಪವನ್ನು ತಿಳಿಯುವುದಾದರೆ ಪ್ರಪಂಚದಲ್ಲಿ ಹಾಸುಹೊಕ್ಕಾಗಿರುವ ನಿಷ್ಕಳವೇ (ಶೂನ್ಯವೇ) ಸಕಳ ಎನಿಸಿ. ವಿಶ್ವದೊಳಗೂ ಹೊರಗೂ ನಾನೇ ಇದ್ದೇನೆ, ಬೇರಾರೂ ಇಲ್ಲ” ಎಂದು ಅರ್ಜುನನಿಗೆ ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಅರ್ಥ-ಸಂಪತ್ತು, ಜಾಗರಣ-ಎಚ್ಚರ, ಓತಪ್ರೋತ-ಒಂದೇ ಸಮ, ಆನು-ನಾನು
ಮೂಲ ...{Loading}...
ಕೆಲರು ಧರ್ಮಾರ್ಥಾದಿ ನಾಲುಕು
ಲಲಿತ ಮೂರ್ತಿಗಳೆಂಬರಿದರೊಳು
ಕೆಲರು ಜಾಗರಣಾದ್ಯವಸ್ಥೆಗಳೆಂಬ ಮೂರ್ತಿಗಳು
ತಿಳಿಯಲೋತಪ್ರೋತದಲಿ ನಿ
ಷ್ಕಳವೆ ಸಕಳವೆಯಾಗಿ ವಿಶ್ವದೊ
ಳೊಳಗು ಹೊರಗಾನಲ್ಲದಿಲ್ಲೆಲೆ ಪಾರ್ಥ ಕೇಳೆಂದ ॥70॥
೦೭೧ ಉದಧಿಶಯನನ ಮೂರ್ತಿ ...{Loading}...
ಉದಧಿಶಯನನ ಮೂರ್ತಿ ಕಲ್ಪಾಂ
ತದಲಿ ಕರಗಿದ ಧರೆಯನುದ್ಧರಿ
ಸಿದೆನು ಯಜ್ಞವರಾಹ ರೂಪಿನಲಂದು ಕರುಣದಲಿ
ಪದವ ಭಜಿಸಿಯೆ ಭೂಮಿ ತಾ ಬೇ
ಡಿದಳು ಪುತ್ರನನಾಕೆಯಲಿ ಜನಿ
ಸಿದನು ನರಕಾಸುರನವಧ್ಯನು ಸಕಲ ದಿವಿಜರಿಗೆ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಂಧುಶಯನನೆನಿಸಿದ ನಾನು ಪ್ರಳಯದ ಕೊನೆಯ ಕಾಲದಲ್ಲಿ ಕರಗಿ ಹೋಗಿದ್ದ ಭೂಮಿಯನ್ನು ಯಜ್ಞ ವರಾಹ ರೂಪದಿಂದ ಉದ್ಧಾರ ಮಾಡಿದೆನು. ಆಗ ಭೂದೇವಿಯು ನನ್ನ ಚರಣಗಳನ್ನು ಭಜಿಸಿ ತನಗೆ ಪುತ್ರನು ಜನಿಸಬೇಕೆಂದು ಮಾಡಿದ ಪ್ರಾರ್ಥನೆಗೆ ಓಗೊಟ್ಟು ಕರುಣೆಯಿಂದ ಆಕೆಯ ಮಗನಾಗಿ ನರಕಾಸುರನು ಹುಟ್ಟುವ ಹಾಗೆ ಅನುಗ್ರಹಿಸಿದೆನು. ನರಕಾಸುರನು ಯಾವ ದೇವತೆಗಳಿಂದಲೂ ಸಂಹಾರವಾಗುವವನಲ್ಲ.
ಪದಾರ್ಥ (ಕ.ಗ.ಪ)
ಕಲ್ಪಾಂತ-ಪ್ರಳಯ ಕಾಲದ ಕೊನೆ,
ಟಿಪ್ಪನೀ (ಕ.ಗ.ಪ)
ನರಕಾಸುರ - ನರಕಾಸುರನು ಶ್ರೀವಿಷ್ಣು ಭೂದೇವಿಯರ ಮಗ. ವಿಷ್ಣುವು ವರಹಾವತಾರವನ್ನು ತಾಳಿದಾಗ ಸುರಿದ ಅವನ ಮೈಬೆವರು ಭೂಮಿಯಲ್ಲಿ ಬಿದ್ದು ಈತ ಹುಟ್ಟಿದನೆಂದೂ ಪುರಾಣ ಹೇಳುತ್ತದೆ. ವಿಷ್ಣು ಯೋಗನಿದ್ರೆಯಿಂದ ಎದ್ದ ಸಂದರ್ಭದಲ್ಲಿ ಭೂಮಿ ಬಂದು ತನ್ನ ಮಗನಿಗೆ ವೈಷ್ಣವಾಸ್ತ್ರವನ್ನಿತ್ತು ಕಾಪಾಡಬೇಕೆಂದು ವರವನ್ನು ಕೋರುತ್ತಾಳೆ. ಶ್ರೀವಿಷ್ಣು ಅದನ್ನು ಕೊಟ್ಟು (ಇದು ವರಾಹನ ದಾಡೆ ಎಂದೂ ಕೆಲವರು ಹೇಳುತ್ತಾರೆ), ‘ದೇವಿ ಈ ಅಸ್ತ್ರ ಮಗನ ಆತ್ಮರಕ್ಷಣೆಗೆ ಸದಾ ಅವನ ಬಳಿ ಇರಲಿ. ಇದರಿಂದ ಲೋಕವನ್ನೇ ಗೆಲ್ಲಬಹುದು’ ಎಂದು ಹೇಳಿದ. ಈ ನರಕ ಭೂಮಿಯ ಮಗನಾದ್ದರಿಂದ ‘ಭೌಮ’ ಎಂಬ ಹೆಸರೂ ಈತನಿಗಿದೆ.
ಮುಂದೆ ಎಲ್ಲ ರಾಕ್ಷಸರಂತೆ ನರಕನೂ ಲೋಕ ಕಂಟಕನಾದ. 1000 ವರ್ಷ ತಪಸ್ಸು, ವಿದ್ಯಾಸಾಧನೆ ಮಾಡಿ ಇಂದ್ರಪದವಿಗೆ ಆಸೆಪಟ್ಟ. ಆದಿತಿಯ ಕರ್ಣಕುಂಡಲಗಳನ್ನೂ ವರುಣನ ಶ್ವೇತಚ್ಛತ್ರವನ್ನೂ ಮೇರುವಿನ ಮಹಾಮಣಿಯನ್ನೂ ಅಪಹರಿಸಿದ. ವೈಜಯಂತೀ ಮಾಲೆಯೂ ಇವನ ಪಾಲಾಯಿತು. ಸುಪ್ರತೀಕ ಎಂಬ ಆನೆ ಇವನಿಗಿತ್ತು. ಪ್ರಾಗ್ಜೋತಿಕ್ಷಪುರ ರಾಜಧಾನಿ.
ಈತನ ಉಪಟಳ ತಡೆಯಲಾರದೆ ಇಂದ್ರನು ಬಂದು ಶ್ರೀಕೃಷ್ಣನ ಮೊರೆಹೊಕ್ಕ. ಶ್ರೀಕೃಷ್ಣನು ಪ್ರಾಗ್ಜೋತಿಷ ನಗರಕ್ಕೆ ಹೊರಟದ್ದು ಸತ್ಯಭಾಮೆಯ ಸಂಗಡ. ಅವಳೂ ಭೂದೇವಿಯ ಅಂಶಸಂಭೂತೆಯಲ್ಲವೆ? ಸತ್ಯಭಾಮೆಯೂ ಯುದ್ಧದಲ್ಲಿ ಸಹಕರಿಸಿದ್ದಳು. ಗರುಡವಾಹನರಾಗಿ ಬಂದ ಕೃಷ್ಣ ಸತ್ಯಭಾಮೆಯರೂ ಮೊದಲಿಗೆ ನರಕಾಸುರ ನಿರ್ಮಿಸಿದ್ದ ಐದು ದುರ್ಗಗಳನ್ನು ಭೇಧಿಸಬೇಕಾಯಿತು. ಗಿರಿದುರ್ಗ, ಜಲದುರ್ಗ, ಅಗ್ನಿದುರ್ಗ, ಶಸ್ತ್ರದುರ್ಗ ಮತ್ತು ವಾಯುದುರ್ಗಗಳನ್ನು ಭೇದಿಸಿದರು. ಶ್ರೀಕೃಷ್ಣನ ಶಂಖ ಧ್ವನಿಗೆ ಶತ್ರು ಸೇನೆಯ ಯಂತ್ರದ ಕೀಲುಗಳೆಲ್ಲ ಕಳಚಿಕೊಂಡವು. ನರಕನ ಸೇನಾಪತಿಗಳು ಸತ್ತರು. ಅವರಲ್ಲಿ ಪೀಠ ಎಂಬುವವನು ಪ್ರಮುಖ. ಇನ್ನೊಬ್ಬ ಸೇನಾಪತಿ ಐದುತಲೆಯ ಮುರ ಎಂಬ ಅಸರು. ಚಕ್ರಾಯುಧದಿಂದ ಈತನ ತಲೆಗಳನ್ನು ಕತ್ತರಿಸಿದ ಶ್ರೀಕೃಷ್ಣನಿಗೆ ಮುರಾರಿ, ಮುರಹರ ಎಂಬ ಹೆಸರುಗಳೂ ಬಂದಿರುವುದನ್ನು ನೆನೆಯಬಹುದು. ಇದೇ ರೀತಿ ಕೊನೆಗೆ, ಶ್ರೀಕೃಷ್ಣನು ಚಕ್ರಾಯುಧದಿಂದ ನರಕನ ತಲೆಯನ್ನೂ ಕತ್ತರಿಸಿ ಹಾಕಿದ. ಅವನು ಅಪಹರಿಸಿ ತಂದಿದ್ದ ವಸ್ತುಗಳನ್ನೆಲ್ಲ ಅದಿತಿ, ವರುಣಾದಿಗಳಿಗೆ ಮರಳಿ ಒಪ್ಪಿಸಲಾಯಿತು. ನರಕಾಸುರನು ಸೆರೆಯಲ್ಲಿಟ್ಟಿದ್ದ 60000 ಮಂದಿ ರಾಜಕನ್ಯೆಯರನ್ನು ಶ್ರೀಕೃಷ್ಣನು ಬಿಡುಗಡೆ ಮಾಡಿದ. ನರಕಾಸುರನ ಹದಿನಾರು ಸಾವಿರದ ಒಂದು ನೂರು ಪತ್ನಿಯರನ್ನೂ ರಥ ಸಂಪತ್ತು 64 ಬಿಳಿಆನೆಗಳನ್ನೂ ದ್ವಾರಕೆಗೆ ತಂದ. ನರಕ ಪತ್ನಿಯರಿಗೆಲ್ಲ ಶ್ರೀಕೃಷ್ಣನೇ ಪತಿಯಾದ!
ಮಹಾಭಾರತದ ದ್ರೋಣಪರ್ವದ 29ನೇ ಅಧ್ಯಾಯದಲ್ಲಿ ವಿವರವಾಗಿ ಬರುವ ಈ ನರಕಾಸುರನ ಕಥೆ ಅಂಶಾವತಾರ ಪರ್ವ, ವರುಣ ಸಭಾಪರ್ವ, ಗಂಧಮಾದನ ಪರ್ವಗಳಲ್ಲೂ ಉಲ್ಲೇಖಿತವಾಗಿದೆ.
ಮೂಲ ...{Loading}...
ಉದಧಿಶಯನನ ಮೂರ್ತಿ ಕಲ್ಪಾಂ
ತದಲಿ ಕರಗಿದ ಧರೆಯನುದ್ಧರಿ
ಸಿದೆನು ಯಜ್ಞವರಾಹ ರೂಪಿನಲಂದು ಕರುಣದಲಿ
ಪದವ ಭಜಿಸಿಯೆ ಭೂಮಿ ತಾ ಬೇ
ಡಿದಳು ಪುತ್ರನನಾಕೆಯಲಿ ಜನಿ
ಸಿದನು ನರಕಾಸುರನವಧ್ಯನು ಸಕಲ ದಿವಿಜರಿಗೆ ॥71॥
೦೭೨ ಇದು ವರಾಹನ ...{Loading}...
ಇದು ವರಾಹನ ದಾಡೆಯಿದನಾ
ತ್ರಿದಶವೈರಿಗೆ ಕೊಟ್ಟೆನವನಿಂ
ದಿದುವೆ ಭಗದತ್ತಂಗೆ ಬಂದುದು ವೈಷ್ಣವಾಸ್ತ್ರವಿದು
ಇದು ಹರಬ್ರಹ್ಮಾದಿಗಳ ಗೆಲು
ವುದು ಕಣಾ ನಿಮಿಷದಲಿ ತನಗ
ಲ್ಲದೆ ಮಹಾಂಕುಶವುಳಿದ ಭಟರಿಗೆ ಮಣಿವುದಲ್ಲೆಂದ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗದತ್ತನು ಪ್ರಯೋಗಿಸಿದ ಅಂಕುಶವು ವರಾಹದ ದಾಡೆ. ಇದನ್ನು ದೇವತೆಗಳ ಶತ್ರುವಾದ (ನರಕಾಸುರನಿಗೆ) ನಾನು ಕೊಟ್ಟೆನು. ಅವನಿಂದ ಈ ಅಂಕುಶವು ಭಗದತ್ತನಿಗೆ ಬಂದಿತು. ಇದನ್ನು ವೈಷ್ಣವಾಸ್ತ್ರ ಎಂದೂ ಕರೆಯುತ್ತಾರೆ. ಇದಕ್ಕೆ ಬ್ರಹ್ಮ ಶಿವನೇ ಮೊದಲಾದ ದೇವತೆಗಳನ್ನು ಒಂದೇ ನಿಮಿಷದಲ್ಲಿ ಗೆಲ್ಲುವ ಶಕ್ತಿ ಇದೆ. ಈ ಮಹಾ ಅಂಕುಶವು ಉಳಿದ ಯಾರಿಗೂ ಸೋಲುವುದಿಲ್ಲ ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ತ್ರಿದಶ-ದೇವತೆ, ಮಣಿವುದಲ್ಲ-ಸೋಲುವುದಿಲ್ಲ
ಟಿಪ್ಪನೀ (ಕ.ಗ.ಪ)
ನರಕಾಸುರ -
ಮೂಲ ...{Loading}...
ಇದು ವರಾಹನ ದಾಡೆಯಿದನಾ
ತ್ರಿದಶವೈರಿಗೆ ಕೊಟ್ಟೆನವನಿಂ
ದಿದುವೆ ಭಗದತ್ತಂಗೆ ಬಂದುದು ವೈಷ್ಣವಾಸ್ತ್ರವಿದು
ಇದು ಹರಬ್ರಹ್ಮಾದಿಗಳ ಗೆಲು
ವುದು ಕಣಾ ನಿಮಿಷದಲಿ ತನಗ
ಲ್ಲದೆ ಮಹಾಂಕುಶವುಳಿದ ಭಟರಿಗೆ ಮಣಿವುದಲ್ಲೆಂದ ॥72॥
೦೭೩ ತೀರಿತಾತನ ಶಕ್ತಿ ...{Loading}...
ತೀರಿತಾತನ ಶಕ್ತಿ ಚಾಪದ
ನಾರಿ ಬೆಸಲಾಗಲಿ ಮಹಾಸ್ತ್ರವ
ನಾರುಭಟೆಯಲಿ ಗಜವ ಮುರಿ ಕೆಡೆಯೆಸು ಮಹೀಸುತನ
ಹೋರದಿರು ಹೊಗು ಬವರಕೆನಲಸು
ರಾರಿಯಂಘ್ರಿಯೊಳೆರಗಿ ಕರುಣಾ
ವಾರಿಧಿಯೊಳಭಯವನು ಪಡೆದನು ತುಡುಕಿದನು ಧನುವ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲಿನ ಹೆದೆಯು ಮಹಾ ಅಸ್ತ್ರವನ್ನು ಹೆರಲಿ. ಆರ್ಭಟದಿಂದ ಈ ಆನೆಯನ್ನು ಸಂಹರಿಸಿ, ಭಗದತ್ತ ಬೀಳುವಂತೆ ಹೊಡೆ. ಇನ್ನು ನನ್ನೊಂದಿಗೆ ವಾದ ಮಾಡಬೇಡ ಯುದ್ಧಕ್ಕೆ ಹೋಗು ಎನ್ನಲು ಅರ್ಜುನನು ಕರುಣಾಸಮುದ್ರನಾದ ಕೃಷ್ಣನ ಪಾದಗಳಿಗೆ ಎರಗಿ ಅವನಿಂದ ಅಭಯವನ್ನು ಪಡೆದು ಬಿಲ್ಲನ್ನು ಕೈಗೆತ್ತಿಕೊಂಡನು.
ಪದಾರ್ಥ (ಕ.ಗ.ಪ)
ಚಾಪ-ಬಿಲ್ಲು, ನಾರಿ-ಬಿಲ್ಲಿನ ಹಗ್ಗ, ಬೆಸಲಾಗಲಿ-ಬಾಣಗಳನ್ನು ಹಡೆಯುವಂತಾಗಲಿ, ಆರುಭಟೆಯಲಿ -ಆರ್ಭಟದಿಂದ, ಕೆಡೆಯಿಸು-ಬೀಳಿಸು
ಟಿಪ್ಪನೀ (ಕ.ಗ.ಪ)
ನಾರಿ ಬೆಸಲೆಯಾಗಲಿ : ಬೆಸಲೆ ಎಂದರೆ ಬಾಣಂತಿ, ನಾರಿ ಎಂದರೆ ಹೆಂಗುಸು ಎಂಬುದು ಪ್ರಸಿದ್ಧವಾದ ಅರ್ಥ. ಕವಿಯು ಈ ಅರ್ಥವನ್ನು ಗೌಣವಾಗಿಸಿ ಬಿಲ್ಲಿನ ಹಗ್ಗವು ಬಾಣಂತಿಯಾಗಲೆಂದು ಹೇಳುವುದರ ಮೂಲಕ ಬಿಲ್ಲಿನ ಹಗ್ಗದಿಂದ ಬಾಣವೆಂಬ ಮಗು ಹೆರುವಂತಾಗಲೆಂಬ ಅರ್ಥವನ್ನಿಟ್ಟು ಈ ವಾಕ್ಯವನ್ನು ಪ್ರಯೋಗಿಸಿದ್ದಾನೆ. ಇಲ್ಲಿ ‘ನಾರಿ’ ಶಬ್ದವನ್ನು ಶ್ಲೇಷೆಯಲ್ಲಿ ಬಳಸಲಾಗಿದೆ.
ಹೆರಸಿರೆ ನಾರಿಯನು ನಿಮ್ಮಯ ಬಾಣ ಗರ್ಭಿಣಿಯಾ - ಭೀಷ್ಮ ಪರ್ವ, ಬೇರೆ ರೀತಿಯ ಪ್ರಯೋಗ.
ಮೂಲ ...{Loading}...
ತೀರಿತಾತನ ಶಕ್ತಿ ಚಾಪದ
ನಾರಿ ಬೆಸಲಾಗಲಿ ಮಹಾಸ್ತ್ರವ
ನಾರುಭಟೆಯಲಿ ಗಜವ ಮುರಿ ಕೆಡೆಯೆಸು ಮಹೀಸುತನ
ಹೋರದಿರು ಹೊಗು ಬವರಕೆನಲಸು
ರಾರಿಯಂಘ್ರಿಯೊಳೆರಗಿ ಕರುಣಾ
ವಾರಿಧಿಯೊಳಭಯವನು ಪಡೆದನು ತುಡುಕಿದನು ಧನುವ ॥73॥
೦೭೪ ಎಲವೆಲವೊ ಭಗದತ್ತ ...{Loading}...
ಎಲವೆಲವೊ ಭಗದತ್ತ ಕಲಿತನ
ದಳವ ತೋರಿನ್ನೆನಗೆನುತ ಹೊಳೆ
ಹೊಳೆವ ಕೂರಂಬಿನಲಿ ಕೋದನು ಗಜದ ಮಸ್ತಕವ
ನಿಲುಕಿ ನೆತ್ತಿಯನೊಡೆದು ನಿಡುಪ
ಚ್ಚಳಕೆ ಹಾಯ್ದವು ಬಾಣ ದಿಕ್ಕರಿ
ನೆಲಕೆ ದಾಡೆಯನೂರಿ ಕೆಡೆದುದು ಸುಪ್ರತೀಕಗಜ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲೈ ಭಗದತ್ತನೆ, ನಿನ್ನ ಪರಾಕ್ರಮವನ್ನು ಇನ್ನು ನನ್ನಲ್ಲಿ ಪ್ರದರ್ಶಿಸು” ಎನ್ನುತ್ತಾ ಚೆನ್ನಾಗಿ ಹೊಳೆಯುತ್ತಿರುವ ಚೂಪಾದ ಬಾಣಗಳಿಂದ ಸುಪ್ರತೀಕ ಗಜದ ತಲೆಗೆ ಗುರಿಯಿಟ್ಟು ಹೊಡೆದನು. ಆ ಬಾಣವು ಆನೆಯ ನೆತ್ತಿಯನ್ನು ಸೀಳಿಕೊಂಡು ಬೆನ್ನಿನ ಕೆಳಭಾಗದ ಪಿರ್ರೆಯನ್ನು ಭೇದಿಸಿತು. ಆನೆಯು ದಾಡೆಯನ್ನು ನೆಲಕ್ಕೆ ಊರಿತು. ಸುಪ್ರತೀಕ ಗಜವು ನೆಲದ ಮೇಲೆ ಉರುಳಿತು.
ಪದಾರ್ಥ (ಕ.ಗ.ಪ)
ಕೋದನು-ಹೊಡೆದನು, ನಿಡುಪಚ್ಚಳ-ದೊಡ್ಡದಾದ ಪಿರ್ರೆ, ಕೆಡೆದುದು-ಬಿದ್ದಿತು,
ಮೂಲ ...{Loading}...
ಎಲವೆಲವೊ ಭಗದತ್ತ ಕಲಿತನ
ದಳವ ತೋರಿನ್ನೆನಗೆನುತ ಹೊಳೆ
ಹೊಳೆವ ಕೂರಂಬಿನಲಿ ಕೋದನು ಗಜದ ಮಸ್ತಕವ
ನಿಲುಕಿ ನೆತ್ತಿಯನೊಡೆದು ನಿಡುಪ
ಚ್ಚಳಕೆ ಹಾಯ್ದವು ಬಾಣ ದಿಕ್ಕರಿ
ನೆಲಕೆ ದಾಡೆಯನೂರಿ ಕೆಡೆದುದು ಸುಪ್ರತೀಕಗಜ ॥74॥
೦೭೫ ಸುತ್ತಿದುರಗನ ಮನ್ದರಾಚಲ ...{Loading}...
ಸುತ್ತಿದುರಗನ ಮಂದರಾಚಲ
ಕಿತ್ತು ಬೀಳ್ವಂದದಲಿ ಬರಿಕೈ
ಸುತ್ತಿ ಮಗ್ಗುಲನೂರಿ ಕೆಡೆದುದು ಸುಪ್ರತೀಕಗಜ
ಇತ್ತಲರ್ಜುನ ದೇವನುಗಿದನು
ಬತ್ತಳಿಕೆಯಲಿ ದಿವ್ಯ ಶರವನು
ತೆತ್ತಿಸಿದನವನುರವನಿಬ್ಬಗಿಯಾದುದರಿ ದೇಹ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸರ್ಪವನ್ನು ಸುತ್ತಿದ ಮಂದರ ಪರ್ವತವು ನೆಲಕ್ಕೆ ಬೀಳುವ ಹಾಗೆ ಸುಪ್ರತೀಕ ಗಜವು ತನ್ನ ದೇಹಕ್ಕೆ ಸೊಂಡಿಲನ್ನು ಸುತ್ತಿಕೊಂಡು ಮಗ್ಗುಲನ್ನು ನೆಲಕ್ಕೆ ಊರಿ ಉರುಳಿತು. ಈ ಕಡೆಗೆ ಅರ್ಜುನನು ಬತ್ತಳಿಕೆಯಿಂದ ಮತ್ತೊಂದು ಬಾಣವನ್ನು ತೆಗೆದು ಬಿಲ್ಲಿಗೆ ಹೂಡಿ ಪ್ರಯೋಗಿಸಲು ಶತ್ರುವಾದ ಭಗದತ್ತನ ದೇಹ ಎರಡು ತುಂಡಾಯಿತು.
ಪದಾರ್ಥ (ಕ.ಗ.ಪ)
ಉರಗ-ಹಾವು, ಉಗಿದನು-ಬಿಟ್ಟನು, ತೆತ್ತಿಸಿದನು-ಹೊಡೆದನು, ಇಬ್ಬಗಿ-ಎರಡು ಭಾಗ
ಮೂಲ ...{Loading}...
ಸುತ್ತಿದುರಗನ ಮಂದರಾಚಲ
ಕಿತ್ತು ಬೀಳ್ವಂದದಲಿ ಬರಿಕೈ
ಸುತ್ತಿ ಮಗ್ಗುಲನೂರಿ ಕೆಡೆದುದು ಸುಪ್ರತೀಕಗಜ
ಇತ್ತಲರ್ಜುನ ದೇವನುಗಿದನು
ಬತ್ತಳಿಕೆಯಲಿ ದಿವ್ಯ ಶರವನು
ತೆತ್ತಿಸಿದನವನುರವನಿಬ್ಬಗಿಯಾದುದರಿ ದೇಹ ॥75॥
೦೭೬ ಗಿರಿಯ ಶಿರದಲಿ ...{Loading}...
ಗಿರಿಯ ಶಿರದಲಿ ಹೂತ ಕಕ್ಕೆಯ
ಮರ ಮುರಿದು ಬೀಳ್ವಂತೆ ವಿಮಳಾ
ಭರಣ ಕಾಂತಿಯ ಕಡಲ ಕೋಮಲಕಾಯ ಭಗದತ್ತ
ಉರುಳಿದನು ಗಜದಿಂದ ಕುರುಬಲ
ಸರಿಯೆ ಸುರಕುಲ ಕುಸುಮ ವೃಷ್ಟಿಯ
ಸುರಿಯೆ ರಿಪುಸೇನೆಯಲಿ ಹರುಷದ ಹೊನಲು ಬಿರುವರಿಯೆ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರ್ವತದ ತುದಿಯಿಂದ ಕಕ್ಕೆಯ ಮರ (ರಾಜತರು) ಉರುಳಿ ನೆಲದ ಮೇಲೆ ಬೀಳುವ ಹಾಗೆ, ಪರಿಶುದ್ಧವಾದ ಕಾಂತಿಯುಕ್ತ ಆಭರಣಗಳನ್ನು ಧರಿಸಿದ್ದ ಭಗದತ್ತ ನೆಲಕ್ಕುರುಳಿದನು. ಕೌರವ ಸೇನೆ ಹೆದರಿ ಹಿಂದಕ್ಕೋಡಿತು. ದೇವತೆಗಳು ಆಕಾಶದಿಂದ ಹೂವಿನ ಮಳೆಯನ್ನು ಸುರಿಸಿದರು. ಪಾಂಡವ ಸೇನೆಯಲ್ಲಿ ಸಂತೋಷದ ಪ್ರವಾಹ ಉಂಟಾಯಿತು.
ಪದಾರ್ಥ (ಕ.ಗ.ಪ)
ಹೂತ-ಹೂಬಿಟ್ಟ, ಕಕ್ಕೆಯ-ಮರ ರಾಜತರು (ಕೆಂಪು ಹೂವನ್ನು ಬಿಡುತ್ತದೆ)
ಮೂಲ ...{Loading}...
ಗಿರಿಯ ಶಿರದಲಿ ಹೂತ ಕಕ್ಕೆಯ
ಮರ ಮುರಿದು ಬೀಳ್ವಂತೆ ವಿಮಳಾ
ಭರಣ ಕಾಂತಿಯ ಕಡಲ ಕೋಮಲಕಾಯ ಭಗದತ್ತ
ಉರುಳಿದನು ಗಜದಿಂದ ಕುರುಬಲ
ಸರಿಯೆ ಸುರಕುಲ ಕುಸುಮ ವೃಷ್ಟಿಯ
ಸುರಿಯೆ ರಿಪುಸೇನೆಯಲಿ ಹರುಷದ ಹೊನಲು ಬಿರುವರಿಯೆ ॥76॥
೦೭೭ ಹರಿದುದಗ್ಗದ ಸುಪ್ರತೀಕ ...{Loading}...
ಹರಿದುದಗ್ಗದ ಸುಪ್ರತೀಕ
ದ್ವಿರದ ಭಗದತ್ತಾಂಕನವನಿಯೊ
ಳುರುಳಿದನು ದಳ ಮುರಿದುದಿನ್ನೇನೆನುತ ಬಲ ಬೆದರೆ
ನರನ ತಡೆದರು ಸುಬಲ ಸುತರಿ
ಬ್ಬರು ನೃಪಾಲ ಕುಮಾರರೈನೂ
ರುರುಬಿದರು ಗಾಂಧಾರ ರಾಜರು ಶಕುನಿಯೊಡಗೂಡಿ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠ ಸುಪ್ರತೀಕಗಜ ನಾಶಹೊಂದಿತು. ಭಗದತ್ತನು ನೆಲಕ್ಕುರುಳಿದನು. ಇನ್ನೇನು ಕೌರವ ಸೇನೆ ಹಿಂದಕ್ಕೆ ಸರಿಯಿತು ಎನ್ನುವಾಗ ಸುಬಲನ ಇಬ್ಬರು ಮಕ್ಕಳು ಅರ್ಜುನನನ್ನು ತಡೆದರು. ಐನೂರು ಜನ ರಾಜಕುಮಾರರು ಹಾಗೂ ಗಾಂಧಾರ ದೇಶದ ರಾಜರುಗಳು ಶಕುನಿಯನ್ನು ಕೂಡಿಕೊಂಡು ಯುದ್ಧವನ್ನಾರಂಭಿಸಿದರು.
ಪದಾರ್ಥ (ಕ.ಗ.ಪ)
ದ್ವಿರದ-ಆನೆ, ಭಗದತ್ತಾಂಕ-ಭಗದತ್ತ ಎಂಬ ಹೆಸರಿನ ವ್ಯಕ್ತಿ,
ಟಿಪ್ಪನೀ (ಕ.ಗ.ಪ)
ಸುಬಲ - ಗಾಂಧಾರಿಯ ತಂದೆ
ಮೂಲ ...{Loading}...
ಹರಿದುದಗ್ಗದ ಸುಪ್ರತೀಕ
ದ್ವಿರದ ಭಗದತ್ತಾಂಕನವನಿಯೊ
ಳುರುಳಿದನು ದಳ ಮುರಿದುದಿನ್ನೇನೆನುತ ಬಲ ಬೆದರೆ
ನರನ ತಡೆದರು ಸುಬಲ ಸುತರಿ
ಬ್ಬರು ನೃಪಾಲ ಕುಮಾರರೈನೂ
ರುರುಬಿದರು ಗಾಂಧಾರ ರಾಜರು ಶಕುನಿಯೊಡಗೂಡಿ ॥77॥
೦೭೮ ಕೊನ್ದನಿಬ್ಬರ ಸೌಬಲರ ...{Loading}...
ಕೊಂದನಿಬ್ಬರ ಸೌಬಲರ ನೃಪ
ನಂದನರ ಗಾಂಧಾರರೊಂದೆರ
ಡೆಂದು ಸಲುಗೆಗೆ ಸಲಿಸಿ ಬಂದೈನೂರ ಬರಿಕೈದು
ಬಂದ ದ್ರೋಣನ ಹಳಚಿ ಭಂಗಕೆ
ತಂದನಹಿತ ವ್ರಜವನಿತ್ತಲು
ಸಂದಣಿಸಿದರು ಕೌರವರು ಪವಮಾನಸುತನೊಡನೆ ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಸೌಬಲರ ಇಬ್ಬರು ಮಕ್ಕಳನ್ನು ಕೊಂದು ಹಾಕಿದನು. ಗಾಂಧಾರ ರಾಜರಲ್ಲಿ ಒಂದು-ಎರಡು ಎಂದು ಲೆಕ್ಕ ಹಾಕಿ ಒಬ್ಬೊಬ್ಬರಾಗಿ ಬಂದ ಐದು ನೂರು ಸೈನಿಕರನ್ನು ಅರ್ಜುನನು ನಿರ್ನಾಮ ಮಾಡಿದನು. ಅನಂತರ ಎದುರು ಬಂದ ದ್ರೋಣರನ್ನೂ ಸೋಲಿಸಿ ಶತ್ರು ಸೈನಿಕರಿಗೆ ಭಂಗವನ್ನುಂಟು ಮಾಡಿದನು. ಈ ಕಡೆಗೆ ಕೌರವರೆಲ್ಲರೂ ಸೇರಿ ಭೀಮಸೇನನೊಡನೆ ಹೋರಾಟಕ್ಕಾಗಿ ಒಂದಾದರು.
ಪದಾರ್ಥ (ಕ.ಗ.ಪ)
ಸೌಬಲರು-ಸುಬಲ ವಂಶದವರು, ಹಳಚಿ-ಅಪ್ಪಳಿಸಿ,
ಮೂಲ ...{Loading}...
ಕೊಂದನಿಬ್ಬರ ಸೌಬಲರ ನೃಪ
ನಂದನರ ಗಾಂಧಾರರೊಂದೆರ
ಡೆಂದು ಸಲುಗೆಗೆ ಸಲಿಸಿ ಬಂದೈನೂರ ಬರಿಕೈದು
ಬಂದ ದ್ರೋಣನ ಹಳಚಿ ಭಂಗಕೆ
ತಂದನಹಿತ ವ್ರಜವನಿತ್ತಲು
ಸಂದಣಿಸಿದರು ಕೌರವರು ಪವಮಾನಸುತನೊಡನೆ ॥78॥
೦೭೯ ಗುರುತನುಜ ರವಿಸೂನು ...{Loading}...
ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರ ಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣಾಚಾರ್ಯರ ಪುತ್ರನಾದ ಅಶ್ವತ್ಥಾಮ, ಕರ್ಣ, ಮದ್ರರಾಜನಾದ ಶಲ್ಯ, ಜಯದ್ರಥ ಹಾಗೂ ಕೌರವಾದಿಗಳು ಶತ್ರುವಾದ ಭೀಮಸೇನನ ಗದೆಯ ಏಟುಗಳಿಂದ ಕೈ ಮೈನೊಂದು ಆಯಾಸವನ್ನು ಹೊಂದಿ ಮನಸ್ಸು ಆಯಾಸಗೊಂಡು ರಣರಂಗದಿಂದ ಹೊರಟು ಹೋದರು. ಅನಂತರ ಪಶ್ಚಿಮ ಸಮುದ್ರದಲ್ಲಿ ಬಡಬಾಗ್ನಿಯ ಅತಿ ಹೆಚ್ಚಾದ ಪ್ರಕಾಶವು ಇಳಿಯುವ ಹಾಗೆ ಸೂರ್ಯ ಮಂಡಲವು ಇಳಿಯಿತು-ಕತ್ತಲಾಯಿತು.
ಪದಾರ್ಥ (ಕ.ಗ.ಪ)
ಗುರು ತನುಜ-ದ್ರೋಣ, ರವಿಸೂನು-ಕರ್ಣ, ದಣಿದು-ಆಯಾಸ ಹೊಂದಿ, ಅಪರ ಜಲಧಿ-ಪಶ್ಚಿಮ ಸಮುದ್ರ, ವಡಬ-ಬಡಬಾಗ್ನಿ-ಸಮುದ್ರದೊಳಗಿನ ಬೆಂಕಿ, ದೀಪ್ತ-ಪ್ರಕಾಶಗೊಂಡ, ಪತಂಗ-ಸೂರ್ಯ
ಮೂಲ ...{Loading}...
ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರ ಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ ॥79॥
೦೮೦ ತಿರುಗಿದರು ಕೌರವರು ...{Loading}...
ತಿರುಗಿದರು ಕೌರವರು ದ್ರೋಣನ
ಬೆರಳ ಸನ್ನೆಗೆ ಸನ್ನೆಗಾಳೆಗ
ಳುರವಣಿಸಿತೆನೆ ತಂಬಟದ ನಿಸ್ಸಾಳ ರಭಸದಲಿ
ಮುರಿದರಿವರಳ್ಳಿರಿವ ಬೊಬ್ಬೆಯ
ಧರಧುರದ ಕಹಳೆಗಳ ಭೇರಿಯ
ಭರಿತ ರವದಲಿ ವೀರನಾರಾಯಣನ ಕರುಣದಲಿ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣರು ಬೆರಳಿನಲ್ಲಿ ನೀಡಿದ ಸೂಚನೆಗೆ ಸನ್ನೆಗಹಳೆಗಳು (ಸೂಚನೆ ನೀಡುವ ಕಹಳೆಗಳು) ಉತ್ಸಾಹಿಸಿದುವೋ ಎಂಬಂತೆ ತಮಟೆಯ, ನಿಸ್ಸಾಳದ ರಭಸದಲ್ಲಿ ಕೌರವರು ಯುದ್ಧ ಭೂಮಿಯಿಂದ ಹಿಂದಿರುಗಿದರು. ತೀವ್ರವಾಗಿ ಶಬ್ದ ಮಾಡುತ್ತಿದ್ದ ರಣಕಹಳೆಗಳ, ಭೇರಿಗಳ ಶಬ್ದದೊಂದಿಗೆ ವೀರನಾರಾಯಣನ ಕರುಣೆಯಿಂದ ಪಾಂಡವರು ಹಿಂದಿರುಗಿದರು.
ಪದಾರ್ಥ (ಕ.ಗ.ಪ)
ಸನ್ನೆಗಾಳೆಗಳು-ಸೂಚನೆ ನೀಡುವ ಕಹಳೆಗಳು, ನಿಸ್ಸಾಳ-ರಣವಾದ್ಯ, ಧರಧುರ-ರಣರಂಗ,
ಮೂಲ ...{Loading}...
ತಿರುಗಿದರು ಕೌರವರು ದ್ರೋಣನ
ಬೆರಳ ಸನ್ನೆಗೆ ಸನ್ನೆಗಾಳೆಗ
ಳುರವಣಿಸಿತೆನೆ ತಂಬಟದ ನಿಸ್ಸಾಳ ರಭಸದಲಿ
ಮುರಿದರಿವರಳ್ಳಿರಿವ ಬೊಬ್ಬೆಯ
ಧರಧುರದ ಕಹಳೆಗಳ ಭೇರಿಯ
ಭರಿತ ರವದಲಿ ವೀರನಾರಾಯಣನ ಕರುಣದಲಿ ॥80॥