೦೧

೦೦೦ ಸೂ ರಾಯ ...{Loading}...

ಸೂ. ರಾಯ ಕಟಕ ಪಿತಾಮಹನ ತರು
ವಾಯಲಭಿಷೇಕವನು ಕೌರವ
ರಾಯ ಮಾಡಿಸಿ ಪತಿಕರಿಸಿದನು ಕುಂಭಸಂಭವನ

೦೦೧ ಸೋಲಿಸಿತೆ ಕರ್ಣಾಮೃತದ ...{Loading}...

ಸೋಲಿಸಿತೆ ಕರ್ಣಾಮೃತದ ಮಳೆ
ಗಾಲ ನಿನ್ನಯ ಕಿವಿಗಳನು ನೆರೆ
ಕೇಳಿದೈ ಕೌರವನ ಕದನದ ಬಾಲಕೇಳಿಗಳ
ಹೇಳುವುದು ತಾನೇನು ಕೆಂಗರಿ
ಗೋಲ ಮಂಚದ ಮಹಿಮನಿರವನು
ಮೇಲುಪೋಗಿನ ಕಥೆಯನವಧಾನದಲಿ ಕೇಳ್ ಎಂದ ॥1॥

೦೦೨ ಬತ್ತಿತಮ್ಬುಧಿ ನಿನ್ನ ...{Loading}...

ಬತ್ತಿತಂಬುಧಿ ನಿನ್ನ ಮಗ ಹೊಗು
ವತ್ತ ಕಾದುದು ನೆಲನು ನೃಪ ತಲೆ
ಗುತ್ತಿ ಹೊಗಲೊಳಕೊಳ್ಳದಂಬರವೇನನುಸುರುವೆನು
ಮೃತ್ಯು ನಿನಗೊಲಿದಿಹಳು ಬಳಿಕಿ
ನ್ನುತ್ತರೋತ್ತರವೆಲ್ಲಿಯದು ನೆರೆ
ಚಿತ್ತವಿಸುವುದು ಜೀಯ ದ್ರೋಣಂಗಾಯ್ತು ಹರಿವೆಂದ ॥2॥

೦೦೩ ಐದು ದಿವಸದೊಳಹಿತ ...{Loading}...

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರರ ನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ ॥3॥

೦೦೪ ಶಿವಶಿವಾ ಭೀಷ್ಮಾವಸಾನ ...{Loading}...

ಶಿವಶಿವಾ ಭೀಷ್ಮಾವಸಾನ
ಶ್ರವಣ ವಿಷವಿದೆ ಮತ್ತೆ ಕಳಶೋ
ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ
ಅವನಿಪತಿ ದುಗುಡದಲಿ ಮೋರೆಯ
ಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ ॥4॥

೦೦೫ ಶೋಕವೇತಕೆ ಜೀಯ ...{Loading}...

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ ॥5॥

೦೦೬ ಆರು ಕುಹಕಿಗಳಾರು ...{Loading}...

ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ ॥6॥

೦೦೭ ಹರಿದುದೈ ಕುರುಸೇನೆ ...{Loading}...

ಹರಿದುದೈ ಕುರುಸೇನೆ ಬತ್ತಿದ
ಕೆರೆಯೊಳಗೆ ಬಲೆಯೇಕೆ ಹಗೆ ಹೊ
ಕ್ಕಿರಿವರಿನ್ನಾರಡ್ಡಬೀಳ್ವರು ನಿನ್ನ ಮಕ್ಕಳಿಗೆ
ಬರಿದೆ ಮನ ನೋಯದಿರು ಸಾಕೆ
ಚ್ಚರುವುದೆನೆ ತನ್ನೊಳಗೆ ಹದುಳಿಸಿ
ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ ॥7॥

೦೦೮ ಘಾಸಿಯಾದೆನು ಮಗನ ...{Loading}...

ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲುಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧ ನೃಪ ॥8॥

೦೦೯ ಬೇಡ ಮಗನೇ ...{Loading}...

ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರೆವುದು ಬಂಧು ವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ ॥9॥

೦೧೦ ಹೋಗಲಿನ್ನಾ ಮಾತು ...{Loading}...

ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿದ ಪರಿಯನು ರಚಿಸಿ ಹೇಳೆಂದ ॥10॥

೦೧೧ ಚಿತ್ತವಿಸು ಧೃತರಾಷ್ಟ್ರ ...{Loading}...

ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೋರೆಯ ಮಹೀಪತಿ ಹೊಕ್ಕನರಮನೆಯ ॥11॥

೦೧೨ ಗಾಹು ಕೊಳ್ಳದ ...{Loading}...

ಗಾಹು ಕೊಳ್ಳದ ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ ॥12॥

೦೧೩ ಗುರುತನುಜ ವೃಷಸೇನ ...{Loading}...

ಗುರುತನುಜ ವೃಷಸೇನ ಮಾದ್ರೇ
ಶ್ವರ ಕಳಿಂಗ ವಿಕರ್ಣ ದುಸ್ಸಹ
ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು
ವರ ಸುಲೋಚನ ವಿಂದ್ಯ ಯವನೇ
ಶ್ವರರು ಕೃಪ ಕೃತವರ್ಮ ಭಗದ
ತ್ತರು ಮಹಾಮಂತ್ರಿಗಳು ಬಂದರು ರಾಯನೋಲಗಕೆ ॥13॥

೦೧೪ ತೊಡರ ಝಣಝಣ ...{Loading}...

ತೊಡರ ಝಣಝಣ ರವದ ಹೆಗಲಲಿ
ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡುಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ ॥14॥

೦೧೫ ಇತ್ತ ಬಾರೈ ...{Loading}...

ಇತ್ತ ಬಾರೈ ಕರ್ಣ ಕುರುಕುಲ
ಮತ್ತವಾರಣ ಕುಳ್ಳಿರೈ ಬಾ
ಯಿತ್ತ ಬಾ ತನ್ನಾಣೆಯೆನುತವೆ ಸೆರಗ ಹಿಡಿದೆಳೆದು
ಹತ್ತಿರಾತನ ನಿಲಿಸಿ ಬಟ್ಟಲ
ಲಿತ್ತು ವೀಳೆಯವನು ಸುಯೋಧನ
ಕೆತ್ತುಕೊಂಡಿರೆ ನುಡಿಸಿದನು ಕಲಿ ಕರ್ಣನವನಿಪನ ॥15॥

೦೧೬ ಜೀಯ ದುಗುಡವಿದೇಕೆ ...{Loading}...

ಜೀಯ ದುಗುಡವಿದೇಕೆ ಬಿಡು ಗಾಂ
ಗೇಯನಳುಕಿದರೇನು ಕಾಣಿಯ
ಬೀಯದಲಿ ಬಡವಹುದೆ ಕನಕಾಚಲ ನಿಧಾನಿಸಲು
ರಾಯ ಜಗಜಟ್ಟಿಗಳು ರಣದೊಳ
ಜೇಯರಿದೆ ಪರಿವಾರವನು ನಿ
ರ್ದಾಯದಲಿ ದಣಿಸುವೆನು ರಿಪುಗಳ ಸಿರಿಯ ಸೂರೆಯಲಿ ॥16॥

೦೧೭ ಕರ್ಣ ಕರ್ಣಕಠೋರ ...{Loading}...

ಕರ್ಣ ಕರ್ಣಕಠೋರ ಸಾಹಸ
ನಿರ್ಣಯಿಸು ಪರಸೈನ್ಯ ಸುಭಟ ಮ
ಹಾರ್ಣವಕೆ ಬಿಡು ನಿನ್ನ ವಿಕ್ರಮಬಾಡಬಾನಳನ
ಪೂರ್ಣಕಾಮನು ನೀನು ಕುರುಬಲ
ಕರ್ಣಧಾರನು ನೀನು ವಿಶ್ವವಿ
ಕರ್ಣ ನೀನೇ ರಕ್ಷಿಸೆಂದುದು ನಿಖಿಳ ಪರಿವಾರ ॥17॥

೦೧೮ ಕಾದುವೆನು ರಿಪುಭಟರ ...{Loading}...

ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ ॥18॥

೦೧೯ ಎನ್ದು ನೃಪತಿಯ ...{Loading}...

ಎಂದು ನೃಪತಿಯ ಬೀಳುಕೊಂಡಿನ
ನಂದನನು ಬೊಂಬಾಳ ದೀಪದ
ಸಂದಣಿಗಳಲಿ ಸೆಳೆದಡಾಯ್ದದ ಭಟರ ಮುತ್ತಿಗೆಯ
ಮುಂದೆ ಪಾಯವಧಾರು ರಿಪುನೃಪ
ಬಂದಿಕಾರವಧಾರು ಧಿರುಪಯ
ವೆಂದು ಕಳಕಳ ಗಜರು ಮಿಗೆ ಕುರು ಭೂಮಿಗೈತಂದ ॥19॥

೦೨೦ ಹಾಯಿದವು ನರಿ ...{Loading}...

ಹಾಯಿದವು ನರಿ ನಾಯಿಗಳು ಕಟ
ವಾಯಲೆಳಲುವ ಕರುಳಿನಲಿ ಬಸಿ
ವಾಯ ರಕುತದಲೋಡಿದವು ರಣ ಭೂತ ದೆಸೆದೆಸೆಗೆ
ಆಯುಧದ ಹರಹುಗಳ ತಲೆಗಳ
ಡೋಯಿಗೆಯ ಕಡಿ ಖಂಡಮಯದ ಮ
ಹಾಯತದ ರಣದೊಳಗೆ ಬಂದನು ಭೀಷ್ಮನಿದ್ದೆಡೆಗೆ ॥20॥

೦೨೧ ಸರಳ ಮಞ್ಚವ ...{Loading}...

ಸರಳ ಮಂಚವ ಹೊದ್ದಿ ಭೀಷ್ಮನ
ಚರಣಕಮಲವ ಹಿಡಿದು ನೊಸಲಿನೊ
ಳೊರಸಿಕೊಂಡನು ನಾದಿದನು ಕಂಬನಿಯೊಳಂಘ್ರಿಗಳ
ಕರುಣಿಸೈ ಗಾಂಗೇಯ ಕರುಣಾ
ಶರಧಿಯೈ ಖಳತಿಲಕ ಕರ್ಣನ
ದುರುಳತನವನು ಮರೆದು ಮೆರೆವುದು ನಿಮ್ಮ ಸದ್ಗುಣವ ॥21॥

೦೨೨ ಎನಲು ಹೃದಯಾಮ್ಬುಜದ ...{Loading}...

ಎನಲು ಹೃದಯಾಂಬುಜದ ಪೀಠದ
ವನಜನಾಭಧ್ಯಾನಸುಧೆಯಲಿ
ನನೆದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕ ತಲೆದೋರೆ ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ ॥22॥

೦೨೩ ಅಳಲದಿರು ಬಾ ...{Loading}...

ಅಳಲದಿರು ಬಾ ಮಗನೆ ಕುರುಕುಲ
ತಿಲಕನವಸರದಾನೆ ರಿಪು ಮಂ
ಡಳಿಕಮಸ್ತಕಶೂಲ ಬಾರೈ ಕರ್ಣ ಬಾಯೆನುತ
ತುಳುಕಿದನು ಕಂಬನಿಯ ಕೋಮಳ
ತಳದಿ ಮೈದಡವಿದನು ಕೌರವ
ನುಳಿವು ನಿನ್ನದು ಕಂದ ಕದನವ ಜಯಿಸು ಹೋಗೆಂದ ॥23॥

೦೨೪ ಗಾರುಗೆಡೆದೆನು ನಿಮ್ಮನೋಲೆಯ ...{Loading}...

ಗಾರುಗೆಡೆದೆನು ನಿಮ್ಮನೋಲೆಯ
ಕಾರತನದುಬ್ಬಿನಲಿ ತನಿ ಮದ
ವೇರಿ ನಿಮ್ಮಲಿ ಸೆಣಸಿದೆನು ಸೇನಾಧಿಪತ್ಯದಲಿ
ದೂರ ಹೊತ್ತೆನು ರಣದ ಮೀಸಲಿ
ನೇರು ತಪ್ಪಿತು ನೀಲಮಣಿ ತಲೆ
ಗೇರಿಸಿದ ತೃಣವದಕೆ ಸರಿಯೇ ಭೀಷ್ಮ ಹೇಳೆಂದ ॥24॥

೦೨೫ ತನುಜ ತಪ್ಪೇನದಕೆ ...{Loading}...

ತನುಜ ತಪ್ಪೇನದಕೆ ಕಾಳೆಗ
ವೆನಗೆ ತನಗೆನಬೇಕು ವೀರರು
ಮನದ ಕಲಿತನದುಬ್ಬುಗೊಬ್ಬಿನಲೆಂಬರಿದಕೇನು
ಮನದೊಳಗೆ ಖತಿಯಿಲ್ಲ ದುರಿಯೋ
ಧನ ನೃಪತಿಯೋಪಾದಿ ನೀ ಬೇ
ರೆನಗೆ ಲೋಗನೆ ಕಂದ ಕದನವ ಜಯಿಸು ಹೋಗೆಂದ ॥25॥

೦೨೬ ಆಳುತನದ ದೊಠಾರತನ ...{Loading}...

ಆಳುತನದ ದೊಠಾರತನ ಸರಿ
ಯಾಳಿನಲಿ ಸೆಣಸಾದೊಡೊಳ್ಳಿತು
ಮೇಳವೇ ಗುರು ದೈವದಲಿ ಕಟ್ಟುವರೆ ಬಿರುದುಗಳ
ಹಾಳಿ ಹಸುಗೆಯನರಿಯದಾ ಹೀ
ಹಾಳಿಗೆಡಿಸಿದೆನಂದು ಸಭೆಯಲಿ
ಖೂಳನವಗುಣ ಶತವ ನೋಡದೆ ನಿಮ್ಮ ಮೆರೆಯೆಂದ ॥26॥

೦೨೭ ನೋವು ಮನದೊಳಗುಳ್ಳಡಾ ...{Loading}...

ನೋವು ಮನದೊಳಗುಳ್ಳಡಾ ರಾ
ಜೀವಲೋಚನನಾಣೆ ಮಗನೇ
ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು
ಆವನಾತನ ಬಂಧುವಾತನೆ
ಜೀವವೆನ್ನಯ ದೆಸೆಯ ಭಯ ಬೇ
ಡಾವ ಪರಿಯಿಂದವನನುಳುಹುವ ಹದನ ಮಾಡೆಂದ ॥27॥

೦೨೮ ಎನ್ನ ಹವಣೇ ...{Loading}...

ಎನ್ನ ಹವಣೇ ಹಗೆಯ ಗೆಲುವಡೆ
ನಿನ್ನ ವಂದಿಗರಿರಲು ನೂಕದು
ತನ್ನ ಸಾಹಸವೆಲ್ಲಿಪರಿಯಂತಹುದು ಕದನದಲಿ
ಗನ್ನಕಾರನು ಕೃಷ್ಣನವರಿಗೆ
ತನ್ನನೊಚ್ಚತಗೊಟ್ಟನಹಿತರ
ನಿನ್ನು ಗೆಲುವವರಾರು ಜಯವೆಲ್ಲಿಯದು ನಮಗೆಂದ ॥28॥

೦೨೯ ಆಲವಟ್ಟದ ಗಾಳಿಯಲಿ ...{Loading}...

ಆಲವಟ್ಟದ ಗಾಳಿಯಲಿ ಮೇ
ಘಾಳಿ ಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ ॥29॥

೦೩೦ ಲೇಸನಾಡಿದೆ ಕರ್ಣ ...{Loading}...

ಲೇಸನಾಡಿದೆ ಕರ್ಣ ದಿಟ ನೀ
ನೀಸು ಸಮ್ಯಜ್ಞಾನಿಯೆಂಬುದ
ನೀಸು ದಿನ ನಾವರಿಯೆವೈ ನೀ ಸತ್ಕುಲೀನನಲ
ಆ ಸುಯೋಧನಗರುಹಿ ಸಂಧಿಯ
ನೀ ಸಮಯದಲಿ ಘಟಿಸು ನೀನೆನ
ಲೈಸೆ ಮೀರನು ಪಾಂಡವರ ಸಂಪ್ರತಿಯ ಮಾಡೆಂದ ॥30॥

೦೩೧ ಜೀಯ ಮನ್ತ್ರದ ...{Loading}...

ಜೀಯ ಮಂತ್ರದ ಮಾತು ರಾವುತ
ಪಾಯಕರಿಗೊಪ್ಪುವುದೆ ಅವರವ
ರಾಯತದಲೋಲೈಸಬೇಹುದು ಮೇರೆ ಮಾರ್ಗದಲಿ
ರಾಯನೊಲಿದುದ ಹಿಡಿವೆನೊಲ್ಲದ
ದಾಯವನು ಬಿಡುವೆನು ನಿಜಾಭಿ
ಪ್ರಾಯವಿದು ಸಂಪ್ರತಿಯ ನುಡಿ ತನಗಂಗವಲ್ಲೆಂದ ॥31॥

೦೩೨ ಭಾನುಸನ್ನಿಭ ಮರಳು ...{Loading}...

ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ಧಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ ॥32॥

೦೩೩ ಭಾನುಸುತ ಕುಳ್ಳಿರು ...{Loading}...

ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ ॥33॥

೦೩೪ ಇನ್ನು ಸೇನಾಪತಿಯದಾರೈ ...{Loading}...

ಇನ್ನು ಸೇನಾಪತಿಯದಾರೈ
ನಿನ್ನ ಮತವೇನುದಯವಾಗದ
ಮುನ್ನ ಬವರವ ಹಿಡಿಯಬೇಹುದು ವೈರಿ ರಾಯರಲಿ
ಎನ್ನು ನಿನ್ನಭಿಮತವನೆನೆ ಸಂ
ಪನ್ನಭುಜಬಲ ದ್ರೋಣನಿರಲಾ
ರಿನ್ನು ಸೇನಾಪತಿಗಳೆಂದನು ಭೂಪತಿಗೆ ಕರ್ಣ ॥34॥

೦೩೫ ಪ್ರಭೆಯದಾರಿಗೆ ...{Loading}...

ಪ್ರಭೆಯದಾರಿಗೆ ಸೂರ್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ ॥35॥

೦೩೬ ಜಾಗು ಜಾಗುರೆ ...{Loading}...

ಜಾಗು ಜಾಗುರೆ ಕರ್ಣ ಪರರ ಗು
ಣಾಗಮವ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ ॥36॥

೦೩೭ ನುಡಿಸು ನಿಸ್ಸಾಳವನು ...{Loading}...

ನುಡಿಸು ನಿಸ್ಸಾಳವನು ಕರೆ ಹೊಂ
ಗೊಡನ ಹಿಡಿದೈತರಲಿ ನಾರಿಯ
ರೆಡ ಬಲನು ತೆರಹಾಗಲಿಕ್ಕಲಿ ಸಿಂಹವಿಷ್ಟರವ
ತಡವು ಬೇಡೆನೆ ಕೌರವೇಂದ್ರನ
ನುಡಿಗೆ ಮುನ್ನನುವಾಯ್ತು ವಿಪ್ರರ
ಗಡಣ ಬಂದುದು ರಚಿಸಿದರು ಮೂರ್ಧಾಭಿಷೇಚನವ ॥37॥

೦೩೮ ಸಕಲ ಸಾವನ್ತರು ...{Loading}...

ಸಕಲ ಸಾವಂತರು ಮಹೀಪಾ
ಲಕರು ಬಂದುದು ಚರಣದಲಿ ಕಾ
ಣಿಕೆಯನಿಕ್ಕಿತು ಕೈಯ ಮುಗಿದುದು ನಿಖಿಳ ಪರಿವಾರ
ಮಕುಟರತ್ನದ ಲಹರಿ ಖಡುಗದ
ವಿಕಟ ಧಾರಾರಶ್ಮಿ ದೀಪ
ಪ್ರಕರದಲಿ ಥಳಥಳಿಸೆ ರವಿಯವೊಲೆಸೆದನಾ ದ್ರೋಣ ॥38॥

೦೩೯ ಅರಸ ಬೇಡೈ ...{Loading}...

ಅರಸ ಬೇಡೈ ವರವನೆನ್ನನು
ಕರೆದು ಮಿಗೆ ಪತಿಕರಿಸೆ ಬಳಿಕಾ
ಬರಿದೆ ಹೋಹೆನೆ ಮೆಚ್ಚಿದುದ ನುಡಿ ಖೇಡತನವೇಕೆ
ಹೊರೆ ಹೊಗದೆ ಹೇಳೆನಲು ನಗೆಮೊಗ
ವರಳಿ ಹೊಂಪುಳಿಯೋಗಿ ಕೌರವ
ರರಸ ನುಡಿದನು ಕಟ್ಟಿಕೊಡಿ ಧರ್ಮಜನ ತನಗೆಂದು ॥39॥

೦೪೦ ಮರಣ ಮನ್ತ್ರಾನುಗ್ರಹವನವ ...{Loading}...

ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ ॥40॥

೦೪೧ ಕೊಡುವಡಿದು ವರವಲ್ಲದಿದ್ದರೆ ...{Loading}...

ಕೊಡುವಡಿದು ವರವಲ್ಲದಿದ್ದರೆ
ನುಡಿಗೆ ಮೊಳೆ ಹೊಮ್ಮುವರೆ ನಿಮ್ಮಯ
ತೊಡಕನೊಲುವವನಲ್ಲ ನೀವೇ ಬಲ್ಲಿರೆನೆ ನಗುತ
ಹಿಡಿದು ಬಿಗಿವೆನು ಪಾರ್ಥನನು ಕೆಲ
ಕಡೆಗೆ ತಪ್ಪಿಸಿ ಧರ್ಮಪುತ್ರನ
ಬಿಡೆನು ನಿನ್ನಯ ಪುಣ್ಯದಳತೆಯನರಿಯಬಹುದೆಂದ ॥41॥

೦೪೨ ಸಾಕಿದೊಳ್ಳಿತು ಚಾಪತನ್ತ್ರ ...{Loading}...

ಸಾಕಿದೊಳ್ಳಿತು ಚಾಪತಂತ್ರ ಪಿ
ನಾಕಿಯೇರಿಸಿ ನುಡಿದ ನುಡಿಗಳು
ಕಾಕಹುದೆ ಕೈಕೊಂಡೆವೆನುತವನೀಶ ಹರುಷದಲಿ
ಆ ಕೃಪಾದಿ ಮಹಾಪ್ರಧಾನಾ
ನೀಕವನು ಕಳುಹಿದನು ಮನೆಗೆ ದಿ
ವಾಕರನು ಹೆಡತಲೆಗೆ ಹಗರಿಕ್ಕಿದನು ಚಂದ್ರಮನ ॥42॥

೦೪೩ ಜಗವರಾಜಕವಾಯ್ತು ಕುಮುದಾ ...{Loading}...

ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ ॥43॥

೦೪೪ ಸೂಳವಿಸಿ ಬೊಬ್ಬಿರಿದವುರು ...{Loading}...

ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದುವು ಕುಣಿವುತಿದ್ದುವು ಕೂಡೆ ವಾಜಿಗಳು ॥44॥

೦೪೫ ತಳಿತ ಝಲ್ಲರಿಗಳಿಗೆ ...{Loading}...

ತಳಿತ ಝಲ್ಲರಿಗಳಿಗೆ ಗಗನದ
ವಳಯವೈದದು ನೆರೆದ ಸೇನೆಗೆ
ನೆಲನಗಲ ನೆರೆಯದು ನಿರೂಢಿಯ ಭಟರ ವಿಕ್ರಮಕೆ
ಅಳವು ಕಿರಿದರಿರಾಯರಿಗೆ ದಿಗು
ವಳಯವಿಟ್ಟೆಡೆಯಾಗೆ ರಥ ಹಯ
ದಳವುಳಕೆ ಕುರುಸೇನೆ ನಡೆದುದು ದೊರೆಯ ನೇಮದಲಿ ॥45॥

೦೪೬ ಹರಿಗೆ ಹರಿದವು ...{Loading}...

ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿ ಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ ॥46॥

೦೪೭ ಸಿಡಿಲ ಕುಡುಹುಗಳಿನ್ದ ...{Loading}...

ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿದ್ದವು ಗೌರುಗಹಳೆಗಳು ॥47॥

೦೪೮ ಬಿಗಿದ ಝಲ್ಲರಿ ...{Loading}...

ಬಿಗಿದ ಝಲ್ಲರಿ ಮುಗಿಲ ಹೊಸ ಕೈ
ದುಗಳ ಮಿಂಚಿನ ಮಕುಟಮಣಿಕಾಂ
ತಿಗಳ ಸುರಧನುವಿನ ಚತುರ್ಬಲ ರವದ ಸಿಡಿಲುಗಳ
ವಿಗಡ ಕುಂಭಜ ಮೇಘ ಋತು ತನಿ
ಹೊಗರಿರಿದು ಪರಬಲದ ಕಡುವೇ
ಸಗೆಗೆ ಕವಿದುದು ರಾಜಹಂಸ ಪ್ರಕರವೋಸರಿಸೆ ॥48॥

೦೪೯ ಕಳನ ಗೆಲಿದುದು ...{Loading}...

ಕಳನ ಗೆಲಿದುದು ಬಂದು ಕೌರವ
ಬಲ ಯುಧಿಷ್ಠಿರರಾಯ ದಳ ಮುಂ
ಕೊಳಿಸಿ ಹೊಕ್ಕುದು ಜಯದ ಸುಮ್ಮಾನದ ಸಘಾಡದಲಿ
ಬಲಿದರೊಡ್ಡನು ಮಂಡಳಾಕೃತಿ
ಗೊಳಿಸಿ ಕೌರವರಿವರು ಥಟ್ಟನು
ನಿಲಿಸಿದರು ಚಂದ್ರಾರ್ಧಸದೃಶದಲಖಿಳ ಮೋಹರವ ॥49॥

೦೫೦ ಚೌರಿಗಳು ಬಲವೆರಡರೊಳಗೊ ...{Loading}...

ಚೌರಿಗಳು ಬಲವೆರಡರೊಳಗೊ
ಯ್ಯಾರದಲಿ ತೂಗಿದವು ಚೂಣಿಯ
ವೀರರುರವಣೆ ಮಿಗಲು ಹೊಯ್ದರು ಹೊಕ್ಕು ಪರಬಲವ
ಮಾರಿ ಮೊಗವಡದೆರೆದವೊಲು ಜ
ಜ್ಝಾರ ಮಾಸಾಳುಗಳು ನಿಜ ದಾ
ತಾರನವಸರಕೊದಗಿ ಹಣವಿನ ಋಣನ ನೀಗಿದರು ॥50॥

೦೫೧ ಬಿಟ್ಟ ಸೂಠಿಯೊಳೇರಿ ...{Loading}...

ಬಿಟ್ಟ ಸೂಠಿಯೊಳೇರಿ ಕುದುರೆಗ
ಳಟ್ಟಿದುವು ಕಿವಿಗೌಂಕಿದುಂಗುಟ
ವಿಟ್ಟ ಸನ್ನೆಯೊಳೊಲೆದು ಕವಿದವು ಸೊಕ್ಕಿದಾನೆಗಳು
ನಿಟ್ಟುವರಿಯಲು ಕೂಡೆ ರಥ ಸಾ
ಲಿಟ್ಟು ಹರಿದವು ಬಿಡದೆ ಸುಭಟರು
ಮುಟ್ಟಿ ಮೂದಲಿಸುತ್ತ ಹೊಯ್ದರು ಹೊಕ್ಕು ಪರಬಲವ ॥51॥

೦೫೨ ಏರುವಡೆದರು ಹೊಕ್ಕವರು ...{Loading}...

ಏರುವಡೆದರು ಹೊಕ್ಕವರು ಕೈ
ದೋರಿ ಕಳಕಳಕಾರರಸುಗಳ
ಕಾರಿದರು ಕೈಮಾಡಿ ಕೊಂಡರು ಸುರರ ಕೋಟೆಗಳ
ತಾರು ಥಟ್ಟಿನೊಳಟ್ಟಿ ಮೈಮಸೆ
ಸೂರೆಕಾರರು ಮಿದುಳ ಜೊಂಡಿನ
ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ ॥52॥

೦೫೩ ತೆಗೆಸು ...{Loading}...

ತೆಗೆಸು ದೊದ್ದೆಯನುರವಣಿಸದಿರಿ
ವಿಗಡ ಸುಭಟರು ಸಾಹಸದ ತನಿ
ಹೊಗರಿನಾತಗಳೆಲ್ಲಿ ಭೀಮಾರ್ಜುನರ ಬರಹೇಳು
ಹೊಗುವ ಬಿನುಗನು ಹೊಯ್ಯದಿರಿ ತೆಗೆ
ತೆಗೆಯೆನುತ ಸಾವಿರ ಮಹಾರಥ
ರಗಲದಲಿ ಬರಲುರುಬಿ ಹೊಕ್ಕನು ದ್ರೋಣ ಪರಬಲವ ॥53॥

೦೫೪ ಸಾರಿರೈ ಸಾಹಸಿಕರಿರ ...{Loading}...

ಸಾರಿರೈ ಸಾಹಸಿಕರಿರ ಕೆಲ
ಸಾರಿರೈ ಪಾಂಚಾಲ ಮತ್ಸ್ಯರು
ವೀರರಹುದಲ್ಲೆಂಬೆವೇ ಶಿವ ಶಿವ ಮಹಾದೇವ
ಸಾರಿರೈ ನಮ್ಮೊಡನೆ ಕೈ ಮನ
ವಾರೆ ಕಾದುವ ಬಳಿಕ ಮೊದಲೊಳು
ದಾರ ಭೀಮಾರ್ಜುನರ ನೋಡುವೆನೆನುತ ಕೈಕೊಂಡ ॥54॥

೦೫೫ ಬಿನುಗು ಹಾರುವ ...{Loading}...

ಬಿನುಗು ಹಾರುವ ನಿನಗೆ ಭೀಮಾ
ರ್ಜುನರ ಪರಿಯಂತೇಕೆಯಂಬಿನ
ಮೊನೆಯಲುಣಲಿಕ್ಕುವೆನು ರಣಭೂತಕ್ಕೆ ನಿನ್ನೊಡಲ
ಎನುತ ಧೃಷ್ಟದ್ಯುಮ್ನನಿದಿರಾ
ದನು ಶರೌಘದ ಸೋನೆಯಲಿ ಮು
ಮ್ಮೊನೆಯ ರಥಿಕರ ಮುರಿದು ದ್ರೋಣನ ರಥಕೆ ಮಾರಾಂತ ॥55॥

೦೫೬ ಕಡಗಿದಡೆ ಕೋದಣ್ಡ ...{Loading}...

ಕಡಗಿದಡೆ ಕೋದಂಡ ರುದ್ರನ
ತೊಡಕಿ ಬದುಕುವರಾರು ಸಾರೆಂ
ದೊಡನೊಡನೆ ನಾರಾಚ ಜಾಲದಲರಿಭಟನ ಬಿಗಿದು
ಕಡಿದು ಬಿಸುಟನು ದ್ರುಪದತನಯನು
ಹಿಡಿದ ಬಿಲ್ಲನು ಸಾರಥಿಯನಡೆ
ಗೆಡಹಿದನು ಚಂದ್ರಾರ್ಧಶರದಲಿ ನೊಸಲನೊಡೆಯೆಚ್ಚ ॥56॥

೦೫೭ ಎಸಲು ಧೃಷ್ಟದ್ಯುಮ್ನ ...{Loading}...

ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖ ಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದರು ಪಾಂಚಾಲ ನಾಯಕರು
ಮುಸುಡ ಬಿಗುಹಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು ॥57॥

೦೫೮ ರಾಯರೊಳು ಪಾಞ್ಚಾಲರುಬ್ಬಟೆ ...{Loading}...

ರಾಯರೊಳು ಪಾಂಚಾಲರುಬ್ಬಟೆ
ಕಾಯಗಟ್ಟಿತು ಪೂತು ಮಝ ಕುರು
ರಾಯನಾಡಿತು ದಿಟವೆನುತ ಹೊಗರಂಬ ಹೊದೆಗೆದರಿ
ನೋಯಿಸಿದನುರವಣಿಸಿ ಹರಿತಹ
ನಾಯಕರನುಬ್ಬೆದ್ದ ಬಿರುದರ
ಬೀಯ ಮಾಡಿದನಹಿತ ರಥಿಕರನೆಂಟು ಸಾವಿರವ ॥58॥

೦೫೯ ಆಳುತನವುಳ್ಳವರ ಕರೆ ...{Loading}...

ಆಳುತನವುಳ್ಳವರ ಕರೆ ಪಾಂ
ಚಾಲರೊಳ್ಳೆಗರವದಿರಂಬಿನ
ಕೋಲ ಕಾಣದ ಮುನ್ನ ಹಮ್ಮೈಸುವರು ಹುರಿಯೊಡೆದು
ಖೂಳರಿವರಂತಿರಲಿ ದೊರೆ ಕ
ಟ್ಟಾಳಹನು ಕರೆ ಧರ್ಮಪುತ್ರನ
ತೋಳ ಬಲುಹನು ನೋಡಬೇಕೆಂದುರುಬಿದನು ದ್ರೋಣ ॥59॥

೦೬೦ ಸವರಿ ಹೊಕ್ಕನು ...{Loading}...

ಸವರಿ ಹೊಕ್ಕನು ಕೆಲಬಲದ ಪಾಂ
ಡವ ಮಹಾರಥರನು ವಿಭಾಡಿಸಿ
ಪವನಜನ ಮುರಿಯೆಚ್ಚು ನಕುಲನ ರಥವ ಹುಡಿಮಾಡಿ
ಕವಲುಗೋಲಲಿ ದ್ರುಪದ ಮತ್ಸ್ಯರ
ನವಗಡಿಸಿ ಹೈಡಿಂಬನಭಿಮ
ನ್ಯುವನು ಮಸೆಗಾಣಿಸಿ ಮಹೀಶನ ರಥಕೆ ಮಾರಾಂತ ॥60॥

೦೬೧ ಅರಸ ಘಡ ...{Loading}...

ಅರಸ ಘಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸೆ ಧನುವನೊದರಿಸಿ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ ॥61॥

೦೬೨ ಶಿವಶಿವಾ ಬೆಳುದಿಙ್ಗಳಲಿ ...{Loading}...

ಶಿವಶಿವಾ ಬೆಳುದಿಂಗಳಲಿ ಮೈ
ಬೆವರುವುದೆ ಕಲಿ ಧರ್ಮಪುತ್ರನ
ಬವರದಲಿ ಬೆಂಡಹರೆ ವೀರರು ಕಂಡೆವದುಭುತವ
ನಿವಗಿದೆತ್ತಣ ಕೈಮೆ ಕೋಲ್ಗಳ
ಕವಿಸುವಂದವಿದೊಳ್ಳಿತಿದಲೇ
ನವಗಭೀಷ್ಟವೆನುತ್ತ ಕಟ್ಟಳವಿಯಲಿ ಕೈಕೊಂಡ ॥62॥

೦೬೩ ಎಲೆಲೆ ದೊರೆ ...{Loading}...

ಎಲೆಲೆ ದೊರೆ ಸಿಕ್ಕಿದನು ಕರೆ ಪಡಿ
ತಳಿಸ ಹೇಳೋ ಸ್ವಾಮಿದ್ರೋಹರು
ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು
ಕಳವಳಿಸಿ ಸಾತ್ಯಕಿ ಘಟೋತ್ಕಚ
ರುಲಿದು ಹರಿತರೆ ಕೇಳಿದಾ ಕ್ಷಣ
ದಲಿ ಮುರಾಂತಕ ಸಹಿತ ವಹಿಲದಿ ಬಂದನಾ ಪಾರ್ಥ ॥63॥

೦೬೪ ಕಾಳಕೂಟದ ಬಹಳ ...{Loading}...

ಕಾಳಕೂಟದ ಬಹಳ ದಾಳಿಗೆ
ಶೂಲಿಯೊಡ್ಡೈಸುವವೊಲವನೀ
ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ
ಆಲಿಯಳುಕಿತು ತಿರುಹಿದಂಬಿನ
ಕೋಲ ಝಳಪಿಸಿ ಪೂತು ಮಝ ಮೇ
ಲಾಳು ಬಂದುದೆ ಅಕಟೆನುತ ಹಲುಮೊರೆದನಾ ದ್ರೋಣ ॥64॥

೦೬೫ ಮನ್ದಭಾಗ್ಯನು ಕೌರವನು ...{Loading}...

ಮಂದಭಾಗ್ಯನು ಕೌರವನು ನಾ
ವೆಂದು ಮಾಡುವುದೇನು ನಿಮಿಷವು
ನಿಂದನಾದರೆ ಹಿಡಿವೆನಾಗಳೆ ಧರ್ಮನಂದನನ
ಬಂದು ಫಲಗುಣನಡ್ಡವಿಸಲಿ
ನ್ನಿಂದುಧರ ಮುಳಿದೇನ ಮಾಡುವ
ನೆಂದು ಖಾತಿಯ ಹಿಡಿದು ರಥವನು ತಿರುಹಿದನು ದ್ರೋಣ ॥65॥

೦೬೬ ಎರಡು ಬಲದಲಿ ...{Loading}...

ಎರಡು ಬಲದಲಿ ವೀರ ನೀ ಮಡ
ಮುರಿಯಲಿವನೇಸರವನಂಧಾ
ಸುರನೊ ತಾರಕನೋ ಹಿರಣ್ಯಾಸುರನೊ ಕೈಟಭನೊ
ಗುರುಗಳಿದಿರಲಿ ವೀರವೇ ಸಾ
ಕಿರಲಿ ಮೂದಲೆಯೆನುತಲಾ ಬಿಲು
ದಿರುವ ಮಿಡಿದೈದಿದರು ನಾಸಾವಿರ ಮಹಾರಥರು ॥66॥

೦೬೭ ಫಡ ಫಡೆಲವೋ ...{Loading}...

ಫಡ ಫಡೆಲವೋ ಪಾರ್ಥ ಭೀಷ್ಮನ
ಕೆಡಹಿದುಬ್ಬಟೆ ನಮ್ಮ ಕೂಡಳ
ವಡದು ತೆಗೆ ತೆಗೆಯೆನುತ ತುಳುಕಿದನಂಬಿನಂಬುಧಿಯ
ಗಡಣವೊಳ್ಳಿತು ಗಾಢ ಮಿಗೆ ಬಿಲು
ವಿಡಿಯ ಬಲ್ಲಿರಿ ಸಮರ ಜಯವಳ
ವಡುವುದಳವಡದಿಹುದು ತಪ್ಪೇನೆನುತ ನರನೆಚ್ಚ ॥67॥

೦೬೮ ಜೋಡು ಜರಿಯದೆ ...{Loading}...

ಜೋಡು ಜರಿಯದೆ ಹುರುಳುಗೆಡದೆ
ಚ್ಚಾಡಿದರು ಫಲುಗುಣನ ರಥದಲಿ
ಹೂಡಿದರು ಹೊಗರಂಬುಗಳನುಬ್ಬೆದ್ದು ತಮತಮಗೆ
ನೋಡಿದನು ಸಾಕಿವದಿರನು ಕೊಂ
ಡಾಡಲೇಕೆನುತನಿಬರಸುಗಳ
ತೋಡಿದನು ಕೂರಂಬಿನಲಿ ಸಾವಿರ ಮಹಾರಥರ ॥68॥

೦೬೯ ಮಡಿದು ಕೆಲಬರು ...{Loading}...

ಮಡಿದು ಕೆಲಬರು ಕೊರಳಲಸುಗಳ
ಹಿಡಿದು ಕೆಲಬರು ಘಾಯವಡೆದೆಲು
ವೊಡೆದು ಕೆಲಬರು ಕೈದು ರಥವನು ಬಿಸುಟು ಕೆಲಕೆಲರು
ಹೊಡೆವ ಬಿರುಗಾಳಿಯಲಿ ಮುಗಿಲೊ
ಡ್ಡೊಡೆದವೊಲು ಮೈಮಾರಿಗಳು ಹಿಂ
ಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ ಪಾರ್ಥ ॥69॥

೦೭೦ ನಿಮಗೆ ಸದರವೆ ...{Loading}...

ನಿಮಗೆ ಸದರವೆ ಪಾರ್ಥನೆಲೆ ವಿ
ಕ್ರಮದರಿದ್ರರಿರಾ ವೃಥಾ ಸಂ
ಭ್ರಮಿತರಿರ ಭಂಡಾಟವೇತಕೆ ರಣಕೆ ಹೆರತೆಗೆಯಿ
ಸಮರವಿಜಯ ತ್ಯಾಗಿಯೇ ತಾ
ನಮರಪತಿ ನಂದನನು ಸಾಕೀ
ಕುಮತಿಗಳ ತಡೆಯದಿರಿ ಹೋಗಲಿ ಎಂದನಾ ದ್ರೋಣ ॥70॥

೦೭೧ ಸೋಲದಲಿ ಕೌರವನ ...{Loading}...

ಸೋಲದಲಿ ಕೌರವನ ಸೇನಾ
ಜಾಲ ಚೆಲ್ಲಿತು ವೀರ ಪಾರ್ಥನ
ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ
ಕೋಲು ಧರಿಸಿದವೆರಕೆಗಳನೆನೆ
ಚಾಳಿಸಿತು ಪಡೆ ರವಿಯ ರಶ್ಮಿಯ
ಗೂಳೆಯವು ತೆಗೆಯಿತ್ತು ಪಡುವಣ ಕಡಲೊಳಿನನಿಳಿದ ॥71॥

+೦೧ ...{Loading}...