೦೦೦ ಸೂ ಕುಲಕಮಲ ...{Loading}...
ಸೂ. ಕುಲಕಮಲ ಖರಕಿರಣ ಪಾಂಡವ
ಬಲಕೆ ಶರಣಾಗತ ಜಲಧಿ ವರ
ನಿಲಯವೆನೆ ರಂಜಿಸಿತು ಗಂಗಾಸುತನ ಶರಶಯನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವಂಶವೆಂಬ ಕಮಲಕ್ಕೆ ಸೂರ್ಯನಾಗಿರುವ ಶರಣಾಗತರಾದ ಪಾಂಡವರ ವಂಶಕ್ಕೆ ಆಶ್ರಯಭೂತನೂ ಆದ ಭೀಷ್ಮನ ಬಾಣಗಳ ಹಾಸಿಗೆಯು ಶ್ರೇಷ್ಠ ನಿಲಯದಂತೆ ಶೋಭಿಸಿತು.
ಪದಾರ್ಥ (ಕ.ಗ.ಪ)
ಖರಕಿರಣ-ಸೂರ್ಯ, ಜಲಧಿ-ಸಮುದ್ರ, ಶರಶಯನ-ಬಾಣಗಳ ಸಜ್ಜೆ, ಗಂಗಾಸುತ-ಭೀಷ್ಮ
ಮೂಲ ...{Loading}...
ಸೂ. ಕುಲಕಮಲ ಖರಕಿರಣ ಪಾಂಡವ
ಬಲಕೆ ಶರಣಾಗತ ಜಲಧಿ ವರ
ನಿಲಯವೆನೆ ರಂಜಿಸಿತು ಗಂಗಾಸುತನ ಶರಶಯನ
೦೦೧ ಕಣ್ಡನರ್ಜುನನೌಕಿ ಕವಿವ ...{Loading}...
ಕಂಡನರ್ಜುನನೌಕಿ ಕವಿವ ಶಿ
ಖಂಡಿಯನು ಮಝ ಪೂತು ಪಾಯಕು
ಗಂಡುಗಲಿಯಹೆ ಚಾಗು ತೊಟ್ಟೆಸು ಭೀಷ್ಮನವಯವವ
ಕೊಂಡು ನಡೆ ನೀನಂಜದಿರು ಕೈ
ಕೊಂಡು ನಿಲುವೆನೆನುತ್ತ ಫಲುಗುಣ
ಮಂಡಿಸಿದನಾಲಿದನು ಸೆಳೆದನು ಬೋಳೆಯಂಬುಗಳ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ತ ಕಡೆಯಿಂದ ಭೀಷ್ಮನ ಮೇಲೆ ನುಗ್ಗಿ ಮೇಲೆ ಬೀಳುತ್ತಿರುವ ಶಿಖಂಡಿಯನ್ನು ಅರ್ಜುನನು ನೋಡಿದನು. ಭಲೆ ! ಭೇಷ್ ! ಶಹಭಾಷ್ ! ಎಂದು ಸಂತೋಷದ ಉದ್ಗಾರಗಳಿಂದ ಶಿಖಂಡಿಯೇ, ನೀನು ಮಹಾಶೂರನಾಗಿರುವೆ. ಭಪ್ಪರೆ ! ಬಾಣವನು ಹೂಡಿ ಭೀಷ್ಮನ ಶರೀರದ ಮೇಲೆ ಪ್ರಯೋಗಿಸು ಯುದ್ಧವನ್ನು ಮುಂದುವರಿಸು. ನೀನು ಹೆದರಬೇಡ ನಿನಗೆ ಒತ್ತಾಸೆಯಾಗಿ ನಾನು ನಿಲ್ಲುತ್ತೇನೆ ಎಂದು ಹೇಳುತ್ತಾ ಅರ್ಜುನನು ಸಿದ್ಧನಾದನು. ಬೊಬ್ಬಿರಿದು ಬೋಳೆಯ ಎಂಬ ಕವಲಂಬುಗಳನ್ನು ಬತ್ತಳಿಕೆಯಿಂದ ಸೆಳೆದನು.
ಪದಾರ್ಥ (ಕ.ಗ.ಪ)
ಆಲಿದನು-ಗರ್ಜಿಸಿದನು (ಆಲು-ಗರ್ಜಿಸು), ಬೋಳೆಯಂಬು-ಕವಲಂಬು (ಎರಡು ಮೊನೆಗಳುಳ್ಳ ಬಾಣ) ಕೈಕೊಂಡು-ಬೆಂಬಲವಾಗಿ, ಒತ್ತಾಸೆಯಾಗಿ, ಚಾಗು ! ಭಪ್ಪರೆ (ಮೆಚ್ಚುಗೆ ಸೂಚಕ ಅವ್ಯಯಗಳು) ಮಝ, ಪೂತು ಪಾಯಿತು (ಮರಾಠಿ ಶಬ್ದಗಳು), ಚಾಗು-ನುಗ್ಗಿ, ಕವಿವ-ಮೇಲೆ ಬೀಳುವ
ಮೂಲ ...{Loading}...
ಕಂಡನರ್ಜುನನೌಕಿ ಕವಿವ ಶಿ
ಖಂಡಿಯನು ಮಝ ಪೂತು ಪಾಯಕು
ಗಂಡುಗಲಿಯಹೆ ಚಾಗು ತೊಟ್ಟೆಸು ಭೀಷ್ಮನವಯವವ
ಕೊಂಡು ನಡೆ ನೀನಂಜದಿರು ಕೈ
ಕೊಂಡು ನಿಲುವೆನೆನುತ್ತ ಫಲುಗುಣ
ಮಂಡಿಸಿದನಾಲಿದನು ಸೆಳೆದನು ಬೋಳೆಯಂಬುಗಳ ॥1॥
೦೦೨ ಒದರಿ ಜೇವಡೆಗೈದು ...{Loading}...
ಒದರಿ ಜೇವಡೆಗೈದು ಬಾಣವ
ಕೆದರಿದನು ಥಟ್ಟೈಸಿ ಚಾಪವ
ನೊದೆದು ಹಾಯ್ದವು ತೋದವಂಬುಗಳರಿಯ ನೆತ್ತರಲಿ
ಇದಿರೊಳುಲಿದು ಶಿಖಂಡಿ ಶರ ಸಂ
ಘದಲಿ ಹೂಳಿದನಾಗ ಭೀಷ್ಮನ
ಹೃದಯದಲಿ ವೈರಾಗ್ಯ ಮನೆಗಟ್ಟಿತ್ತು ನಿಮಿಷದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲನ್ನು ಒದರಿ ಬಿಲ್ಲಿನ ಹುರಿಯನ್ನು ಮಿಡಿದು ಧ್ವನಿಮಾಡಿ ಬಾಣಗಳನ್ನು ಕೂಡಿಸಿದನು. ಅವು ಗುಂಪಾಗಿ ಬಿಲ್ಲಿನಿಂದ ಮುಂದೆ ನುಗ್ಗಿದವು. ಬಾಣಗಳು ಶತ್ರುವಾದ ಭೀಷ್ಮನಲ್ಲಿ ನಾಟಿದವು. ಭೀಷ್ಮನ ಮುಂದೆ ಇದ್ದ ಶಿಖಂಡಿ ಗರ್ಜಿಸಿ ಬಾಣಗಳ ಸಮೂಹದಿಂದ ಭೀಷ್ಮನನ್ನು ಹೂಳಿದನು. ಶಿಖಂಡಿ ಎದುರು ಬಂದು ನಿಂತಾಗ ಆ ಗಳಿಗೆಯಲ್ಲಿ ಭೀಷ್ಮನ ಮನಸ್ಸಿನಲ್ಲಿ ಯುದ್ಧದ ಬಗ್ಗೆ ನಿರಾಸಕ್ತಿ ಮೂಡಿತ್ತು.
ಪಾಠಾನ್ತರ (ಕ.ಗ.ಪ)
ಕೋದವಂಬುಗಳರಿಯ ನೆತ್ತಿಯಲಿ -ತೋದವಂಬುಗಳರಿಯ ನೆತ್ತರಲಿ
ಎಂವಿಸೀ ಅವರ ಕುಮಾರವ್ಯಾಸ ಭಾರತ ಸಂಗ್ರಹ
ಮೂಲ ...{Loading}...
ಒದರಿ ಜೇವಡೆಗೈದು ಬಾಣವ
ಕೆದರಿದನು ಥಟ್ಟೈಸಿ ಚಾಪವ
ನೊದೆದು ಹಾಯ್ದವು ತೋದವಂಬುಗಳರಿಯ ನೆತ್ತರಲಿ
ಇದಿರೊಳುಲಿದು ಶಿಖಂಡಿ ಶರ ಸಂ
ಘದಲಿ ಹೂಳಿದನಾಗ ಭೀಷ್ಮನ
ಹೃದಯದಲಿ ವೈರಾಗ್ಯ ಮನೆಗಟ್ಟಿತ್ತು ನಿಮಿಷದಲಿ ॥2॥
೦೦೩ ಎಲೆ ಮಹಾದೇವೀನಪುಂಸಕ ...{Loading}...
ಎಲೆ ಮಹಾದೇವೀನಪುಂಸಕ
ನಲಿ ನಿರಂತರವೆಮಗೆ ಸಮರವೆ
ಗೆಲವಿದೊಳ್ಳಿತೆ ಸುಡು ಶಿಖಂಡಿಯ ಕೂಡೆ ಬಿಲುವಿಡಿದು
ಅಳುಕದೆಚ್ಚನಲಾ ದುರಾತ್ಮನ
ನಿಲವ ತೆಗೆ ತೆಗೆಯೆನುತ ಚಾಪವ
ನಿಳುಹಿದನು ರಥದೊಳಗೆ ಗಂಗಾಸೂನು ವಹಿಲದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಮಹಾದೇವ, ಈ ನಪುಂಸಕನಾದ ಶಿಖಂಡಿಯೊಂದಿಗೆ ಸಮವಿಲ್ಲದ ಸಮರವು ನಮಗೆ ಉಂಟಾಯಿತೇ ? ನಪುಂಸಕನಾದ ಶಿಖಂಡಿಯ ಜತೆ ಬಿಲ್ಲು ಹಿಡಿದು ಹೋರಾಡಿ ಪಡೆವ ಜಯವು ಒಳ್ಳೆಯದೆ ? ಈ ಜನ್ಮ ಸುಡಲಿ ಈ ಶಿಖಂಡಿ ನನಗೆ ಹೆದರದೆ ಬಾಣ ಬಿಡುತ್ತಿರುವನಲ್ಲಾ ! ಈ ದುಷ್ಟನ ಎದುರಿನಲ್ಲಿ ನಿಲ್ಲುವುದು ಸಲ್ಲದು ಸಲ್ಲದು ಎನ್ನುತ್ತಾ ಭೀಷ್ಮನು ಕೂಡಲೆ ರಥದಲ್ಲಿ ತನ್ನ ಬಿಲ್ಲನ್ನು ಕೆಳಗಿಟ್ಟನು.
ಮೂಲ ...{Loading}...
ಎಲೆ ಮಹಾದೇವೀನಪುಂಸಕ
ನಲಿ ನಿರಂತರವೆಮಗೆ ಸಮರವೆ
ಗೆಲವಿದೊಳ್ಳಿತೆ ಸುಡು ಶಿಖಂಡಿಯ ಕೂಡೆ ಬಿಲುವಿಡಿದು
ಅಳುಕದೆಚ್ಚನಲಾ ದುರಾತ್ಮನ
ನಿಲವ ತೆಗೆ ತೆಗೆಯೆನುತ ಚಾಪವ
ನಿಳುಹಿದನು ರಥದೊಳಗೆ ಗಂಗಾಸೂನು ವಹಿಲದಲಿ ॥3॥
೦೦೪ ನರನ ಸರಳಿಗೆ ...{Loading}...
ನರನ ಸರಳಿಗೆ ಮೈಯ ಕೊಟ್ಟರೆ
ಮುರಿದು ರಥದಲಿ ನಿಂದು ನಿಜ ಮೋ
ಹರವ ನೋಡುತ ಶಲ್ಯ ಗುರು ಕೃಪ ಕೌರವಾನುಜರ
ಕರೆದು ನುಡಿದನು ಪಾರ್ಥನಂಬಿನ
ಹೊರಳಿ ಹೊಳ್ಳಿಸುತಿದೆ ಮದಂತಃ
ಕರಣ ಕುಂದಿತು ಕಾಯಲಾಪರೆ ಬನ್ನಿ ನೀವೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣಗಳಿಗೆ ಮೈ ತೆತ್ತು, ಅರ್ಧ ಭಾಗ ತಿರುಗಿಕೊಂಡು, ರಥದಲ್ಲಿ ನಿಂತು ತನ್ನ ಸೇನೆಯನ್ನು ನೋಡುತ್ತ ಶಲ್ಯ, ದ್ರೋಣ ಕೃಪಾಚಾರ್ಯ ದುರ್ಯೋಧನ ಮತ್ತು ಅವನ ತಮ್ಮಂದಿರನ್ನು ಹತ್ತಿರಕ್ಕೆ ಕರೆದು ಹೇಳಿದನು. ಅರ್ಜುನನ ಬಾಣ ಸಮೂಹ ನನ್ನನ್ನು ಬಲಗುಂದಿಸುತ್ತಿದೆ ನನ್ನ ಸಾಮಥ್ರ್ಯವನ್ನು ಪೊಳ್ಳುಮಾಡುತ್ತಿದೆ. ನನ್ನ ಮನಸು ಕುಸಿಯಿತು ನನ್ನನ್ನು ರಕ್ಷಿಸಲು ಶಕ್ತರಾಗಿದ್ದರೆ ನೀವು ನೆರವಿಗೆ ಬನ್ನಿ ಎಂದನು.
ಪದಾರ್ಥ (ಕ.ಗ.ಪ)
ಅರೆಮುರಿದು-ಅರ್ಧಭಾಗ ತಿರುಗಿಕೊಂಡು, ಮೈಯಕೊಟ್ಟು-ಮೈತೆತ್ತು, ಮೋಹರ-ಸೇನೆ, ಅಂಬಿನಹೊರಳಿ-ಬಾಣ ಸಮೂಹ, ಹೊಳ್ಳಿಸುತ್ತಿದೆ-ಬಲಗುಂದಿಸುತ್ತಿದೆ, ಮದಂತಃಕರಣ-ನನ್ನ ಮನಸ್ಸು, ಕಾಯಲಾಪರೆ-ರಕ್ಷಿಸಲು ಶಕ್ತರಾಗಿದ್ದರೆ,
ಪಾಠಾನ್ತರ (ಕ.ಗ.ಪ)
ಕಾಯಲಾಪರೆ (ಭೀಷ್ಮಪರ್ವ ಸಂಗ್ರಹ )
ಮೂಲ ...{Loading}...
ನರನ ಸರಳಿಗೆ ಮೈಯ ಕೊಟ್ಟರೆ
ಮುರಿದು ರಥದಲಿ ನಿಂದು ನಿಜ ಮೋ
ಹರವ ನೋಡುತ ಶಲ್ಯ ಗುರು ಕೃಪ ಕೌರವಾನುಜರ
ಕರೆದು ನುಡಿದನು ಪಾರ್ಥನಂಬಿನ
ಹೊರಳಿ ಹೊಳ್ಳಿಸುತಿದೆ ಮದಂತಃ
ಕರಣ ಕುಂದಿತು ಕಾಯಲಾಪರೆ ಬನ್ನಿ ನೀವೆಂದ ॥4॥
೦೦೫ ಇವು ಶಿಖಣ್ಡಿಯ ...{Loading}...
ಇವು ಶಿಖಂಡಿಯ ಬಾಣವೆವಾ
ಸವನ ಮಗನಂಬುಗಳು ವಿಲಯದ
ಶಿವನ ಶೂಲದ ಗಾಯಕಿವು ಮಿಗಿಲೇನನುಸುರುವೆನು
ಇವನು ಸೈರಿಸಲಾರೆನಿಂದ್ರನ
ಪವಿಯ ಹೊಯ್ಲನು ಹೊರುವೆನಂತ್ಯದ
ಜವನ ದಂಡದ ಹತಿಗೆ ಹೆದರೆನು ಕೇಳಿ ನೀವೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವು ಶಿಖಂಡಿಯ ಬಾಣಗಳೇ ? (ಅಲ್ಲ) ಇಂದ್ರನ ಮಗನಾದ ಅರ್ಜುನನ ಬಾಣಗಳು. ಪ್ರಳಯಕಾಲದ ಶಿವನ ತ್ರಿಶೂಲದ ಪೆಟ್ಟಿಗಿಂತ ಮಿಗಿಲಾದ ಘಾತ ಉಂಟುಮಾಡುತ್ತಿವೆ. ಹೆಚ್ಚಿಗೆ ಏನೆಂದು ಹೇಳಲಿ ? ಈ ಅರ್ಜುನನ ಬಾಣಗಳ ಪೆಟ್ಟನ್ನು ಸಹಿಸಲಾರೆನು. ಬೇಕಿದ್ದರೆ ಇಂದ್ರನ ವಜ್ರಾಯುಧದ ಪೆಟ್ಟನ್ನು ತಾಳಬಲ್ಲೆ. ಸಾವಿನೊಡೆಯ ಯಮನ ದಂಡದ ಪೆಟ್ಟಿಗೂ ಹೆದರಲಾರೆ ಎಂದನು.
ಪದಾರ್ಥ (ಕ.ಗ.ಪ)
ವಾಸವ-ಇಂದ್ರ, ವಿಲಯಶಿವ-ಪ್ರಳಯರುದ್ರ, ಶೂಲ-ತ್ರಿಶೂಲ, ಇಂದ್ರನ ಪವಿ-ವಜ್ರಾಯುಧ, ಹೊಯ್ಲು-ಪೆಟ್ಟು, ಹೊರುವೆನು-ಸೈರಿಸುವೆನು, ಜವ- ಯಮ
ಮೂಲ ...{Loading}...
ಇವು ಶಿಖಂಡಿಯ ಬಾಣವೆವಾ
ಸವನ ಮಗನಂಬುಗಳು ವಿಲಯದ
ಶಿವನ ಶೂಲದ ಗಾಯಕಿವು ಮಿಗಿಲೇನನುಸುರುವೆನು
ಇವನು ಸೈರಿಸಲಾರೆನಿಂದ್ರನ
ಪವಿಯ ಹೊಯ್ಲನು ಹೊರುವೆನಂತ್ಯದ
ಜವನ ದಂಡದ ಹತಿಗೆ ಹೆದರೆನು ಕೇಳಿ ನೀವೆಂದ ॥5॥
೦೦೬ ಪರಶುರಾಮನ ಕೊಡಲಿ ...{Loading}...
ಪರಶುರಾಮನ ಕೊಡಲಿ ಕಡಿತವ
ಧರಿಸಲಾಪೆನು ವಿಲಯ ಭೈರವ
ನಿರಿದಡಂಜೆನು ಸಿಡಿಲು ಹೊಡೆದರೆ ರೋಮ ಕಂಪಿಸದು
ಹರನ ಪಾಶುಪತಾಸ್ತ್ರ ಬಾದಣ
ಗೊರೆದರೆಯು ಲೆಕ್ಕಿಸೆನು ಪಾರ್ಥನ
ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಶುರಾಮನ ಕೊಡಲಿಯ ಪ್ರಹಾರವನ್ನು ತಡೆದುಕೊಳ್ಳಬಲ್ಲೆನು. ಕಾಲಭೈರವ ಬಂದು ಶೂಲದಿಂದ ಇರಿದರೂ ಹೆದರೆನು. ಸಿಡಿಲು (ವಜ್ರಾಯುಧ) ಹೊಡೆದರೂ ನನ್ನದೊದು ಕೂದಲೂ ಅಲ್ಲಾಡದು. ಈಶ್ವರನ ಪಾಶುಪತಾಸ್ತ್ರ ಛಿದ್ರಛಿದ್ರವಾಗಿ ನನ್ನನ್ನು ಕೊರೆದರೂ (ಗಾಯಗೊಳಿಸದರೂ) ಲಕ್ಷ್ಯ ಮಾಡುವುದಿಲ್ಲ ಆದರೆ ಅರ್ಜುನನ ಬಾಣಗಳ ಮೊನೆಗೆ ಒಳಗಾದೆ. ನನ್ನನ್ನು ನೀವೆಲ್ಲರೂ ಸೇರಿ ಪಾರು ಮಾಡಿ ಎಂದು ಭೀಷ್ಮನು ಕೇಳಿಕೊಂಡನು.
ಪದಾರ್ಥ (ಕ.ಗ.ಪ)
ಬಾದಣ-ತೂತು, ಛಿದ್ರ, ರಂಧ್ರ, ಚೂಣಿ-ಮೊನೆ,
ಮೂಲ ...{Loading}...
ಪರಶುರಾಮನ ಕೊಡಲಿ ಕಡಿತವ
ಧರಿಸಲಾಪೆನು ವಿಲಯ ಭೈರವ
ನಿರಿದಡಂಜೆನು ಸಿಡಿಲು ಹೊಡೆದರೆ ರೋಮ ಕಂಪಿಸದು
ಹರನ ಪಾಶುಪತಾಸ್ತ್ರ ಬಾದಣ
ಗೊರೆದರೆಯು ಲೆಕ್ಕಿಸೆನು ಪಾರ್ಥನ
ಸರಳ ಚೂಣಿಗೆ ಸಿಲುಕಿದೆನು ಪರಿಹರಿಸಿ ನೀವೆಂದ ॥6॥
೦೦೭ ಹರಿಯ ಕೌಮೋದಕಿಯ ...{Loading}...
ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂಜುವೆನರ್ಜುನನ ಶರಕೆ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಷ್ಣುವಿನ ಕೌಮೋದಕಿ ಗದೆಯ ಹೊಡೆತವನ್ನು ಬೆರಳ ತುದಿಯಲ್ಲಿ ತಡೆಯುವೆನು, ಸಪ್ತಗಿರಿಗಳೆಲ್ಲವು ಸರಿದು ಮೇಲೆ ಬಿದ್ದರೂ ಉಗುರಿನ ತುದಿಯಲ್ಲಿ ಧರಿಸಬಲ್ಲೆ. ಆದಿ ವರಾಹನು ಕೋರೆಹಲ್ಲಿನಿಂದ ತಿವಿದರೂ ನರಸಿಂಹನು ತನ್ನ ಉಗುರಿನಿಂದ ಬಗೆದರೂ ಸಹಿಸಬಲ್ಲೆ ಆದರೆ ಅರ್ಜುನನ ಬಾಣಗಳಿಗೆ ಹೆದರುತ್ತೇನೆ ಎಂದನು.
ಮೂಲ ...{Loading}...
ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂಜುವೆನರ್ಜುನನ ಶರಕೆ ॥7॥
೦೦೮ ಒಡಲನೊಚ್ಚತಗೊಣ್ಡವಮ್ಬಿನ ...{Loading}...
ಒಡಲನೊಚ್ಚತಗೊಂಡವಂಬಿನ
ಕುಡಿಗೆ ನೆರೆಯದು ರಕ್ತಜಲ ಬಳಿ
ವಿಡಿದು ಕವಿವಂಬುಗಳು ಬಂಬಲ್ಗರುಳ ಸೇದಿದವು
ಉಡಿದವೆಲು ಬಾಣಂಗಳೆಲುವಾ
ಗಡಸಿದುವು ತನಿರಕುತ ಮಾಂಸವ
ನುಡುಗಿದವು ಶರವಿವು ಶಿಖಂಡಿಯ ಬಾಣವಲ್ಲೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣಗಳು ನನ್ನ ಮೈಯಲ್ಲಿ ಚೆನ್ನಾಗಿ ನಾಟಿವೆ. ಬಾಣಗಳೆಂಬ ಬಳ್ಳಿಗೆ ಮೈಯಲ್ಲಿರುವ ರಕ್ತದ ನೀರು ನೆನೆಸಲು ಸಾಕಾಗದು (ವಿಪರೀತ ಬಾಣಗಳು ನೆಟ್ಟಿವೆ). ಬೆನ್ನಟ್ಟಿ ಆವರಿಸಿದ ಬಾಣಗಳು ಎಳೆಯ ತೆಂಗಿನ ಕಾಯಿಯ ತಿರುಳಿನಂತಿರುವ ಕರುಳನ್ನು ಹೀರಿ ಹಿಂಡಿದವು. ಎಲುಬುಗಳು ಪುಡಿಪುಡಿಯಾದವು. ಆ ಜಾಗದಲ್ಲಿ ಬಾಣಗಳೇ ಮೂಳೆಗಳಾಗಿ ಆವರಿಸಿಕೊಂಡಿವೆ. ರಕುತ ಮಾಂಸಗಳನ್ನು ಆ ಬಾಣಗಳು ತೊಡೆದು ಹಾಕಿದವು. ಆದ್ದರಿಂದ ಈ ಬಾಣಗಳು ಖಂಡಿತ ಶಿಖಂಡಿ ಬಿಟ್ಟ ಬಾಣಗಳು ಅಲ್ಲ ಎಂದನು ಭೀಷ್ಮ.
ಪದಾರ್ಥ (ಕ.ಗ.ಪ)
ತನಿರಕ್ತ-ಬಿಸಿರಕ್ತ, ಉಡುಗಿದವು-ಗುಡಿಸಿ ಹಾಕಿದವು, ಅಡಸಿದವು-ಆವರಿಸಿದವು, ಸೇದಿಹೋದವು-ಹೀರಿ ಹಿಂಡಿತು, ಬಂಬಲ್ ಕರುಳ-ಕೋಮಲ ಕರುಳುಗಳನ್ನು
ಮೂಲ ...{Loading}...
ಒಡಲನೊಚ್ಚತಗೊಂಡವಂಬಿನ
ಕುಡಿಗೆ ನೆರೆಯದು ರಕ್ತಜಲ ಬಳಿ
ವಿಡಿದು ಕವಿವಂಬುಗಳು ಬಂಬಲ್ಗರುಳ ಸೇದಿದವು
ಉಡಿದವೆಲು ಬಾಣಂಗಳೆಲುವಾ
ಗಡಸಿದುವು ತನಿರಕುತ ಮಾಂಸವ
ನುಡುಗಿದವು ಶರವಿವು ಶಿಖಂಡಿಯ ಬಾಣವಲ್ಲೆಂದ ॥8॥
೦೦೯ ಚೇಳ ಬೆನ್ನಿನೊಳೊಡೆದು ...{Loading}...
ಚೇಳ ಬೆನ್ನಿನೊಳೊಡೆದು ಮೂಡುವ
ಬಾಲ ವೃಶ್ಚಿಕದಂತೆ ಮಸೆದಿಹ
ಬೋಳೆಯಂಬುಗಳೊಡೆದು ಮೊನೆದೋರಿದವು ಬೆನ್ನಿನೊಳು
ಕೋಲು ಪಾರ್ಥನವಿವು ಶಿಖಂಡಿಯ
ಕೋಲುಗಳು ತಾನಲ್ಲ ನಿಂದುದು
ಕಾಳೆಗವು ನಮಗೆನುತ ಮೆಲ್ಲನೆ ಮಲಗಿದನು ಭೀಷ್ಮ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಣ್ಣು ಚೇಳಿನ ಬೆನ್ನನ್ನು ಸೀಳಿಕೊಂಡು ಹುಟ್ಟುವ ಚೇಳಿನ ಮರಿಗಳಂತೆ ಸಾಣೆ ಹಿಡಿದ (ಚೂಪಾದ) ಕವಲು ಬಾಣಗಳು ಬೆನ್ನನ್ನು ಸೀಳಿ ಅಲಗನ್ನು ಹೊರಗೆ ಕಾಣಿಸಿದವು. ಈ ಬಾಣಗಳು ನಿಜಕ್ಕೂ ಅರ್ಜುನನವೇ ಆಗಿವೆ. ಶಿಖಂಡಿ ಬಿಟ್ಟ ಬಾಣಗಳು ಇವಲ್ಲ. ಇನ್ನು ನನ್ನ ಯುದ್ಧ ಕಾರ್ಯ ಮುಗಿಯಿತು ಎಂದು ಹೇಳುತ್ತ ಭೀಷ್ಮನು ನಿಧಾನವಾಗಿ ತೇರಿನಲ್ಲಿಯೇ ಮಲಗಿದನು.
ಪದಾರ್ಥ (ಕ.ಗ.ಪ)
ಮಸೆದಿಹ-ಸಾಣೆಹಿಡಿದ, ಬೋಳೆಯಂಬುಗಳು-ಕವಲು ಬಾಣಗಳು, ಮೊನೆದೋರು-ಅಲಗನ್ನು ಕಾಣಿಸು
ಮೂಲ ...{Loading}...
ಚೇಳ ಬೆನ್ನಿನೊಳೊಡೆದು ಮೂಡುವ
ಬಾಲ ವೃಶ್ಚಿಕದಂತೆ ಮಸೆದಿಹ
ಬೋಳೆಯಂಬುಗಳೊಡೆದು ಮೊನೆದೋರಿದವು ಬೆನ್ನಿನೊಳು
ಕೋಲು ಪಾರ್ಥನವಿವು ಶಿಖಂಡಿಯ
ಕೋಲುಗಳು ತಾನಲ್ಲ ನಿಂದುದು
ಕಾಳೆಗವು ನಮಗೆನುತ ಮೆಲ್ಲನೆ ಮಲಗಿದನು ಭೀಷ್ಮ ॥9॥
೦೧೦ ವೀರಭಟ ಭಾಳಾಕ್ಷ ...{Loading}...
ವೀರಭಟ ಭಾಳಾಕ್ಷ ಭೀಷ್ಮನು
ಸಾರಿದನು ಧಾರುಣಿಯನಕಟಾ
ಕೌರವನ ಸಿರಿ ಸೂರೆಯೋದುದೆ ಹಗೆಗೆ ಗೆಲವಾಯ್ತೆ
ಆರನಾವಂಗದಲಿ ಬರಿಸದು
ಘೋರ ವಿಧಿ ಶಿವಶಿವ ಎನುತ್ತಾ
ಸಾರಥಿಯು ಕಡುಖೇದದಲಿ ತುಂಬಿದನು ಕಂಬನಿಯ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶೂರರಲ್ಲಿ ಶಿವನಂತಿರುವ ಭೀಷ್ಮನು ನೆಲಕಚ್ಚಿದನು. ದುರ್ಯೋಧನನ ಸಂಪತ್ತು ಹಗೆಗಳಿಗೆ ಕೊಳ್ಳೆ ಆಯಿತೇ. ಪಾಂಡವರಿಗೆ ಇನ್ನು ಜಯವು ಖಚಿತವಾಯಿತಲ್ಲವೇ ? ಅಯ್ಯೋ ! ಅಕ್ಕಟಾ ! ಕ್ರೂರವಾದ ಹಣೆ ಬರಹವು (ಅದೃಷ್ಟವು) ಎಂಥ ಶ್ರೇಷ್ಠನನ್ನೂ ಯಾವ ರೀತಿಯಲ್ಲಾಗಲಿ ಹೀನ ಸ್ಥಿತಿಗೆ ಬರುವಂತೆ ಮಾಡುತ್ತದೆ. ಅಲ್ಲವೇ ? ಎಂದು ತನ್ನಲ್ಲಿ ತಾನೇ ಹೇಳಿಕೊಳ್ಳುತ್ತಾ ಭೀಷ್ಮನ ಸಾರಥಿ ಅತೀವ ದುಃಖದಲ್ಲಿ ಕಣ್ಣೀರನ್ನು ಸುರಿಸಿದನು.
ಪದಾರ್ಥ (ಕ.ಗ.ಪ)
ಭಾಳಾಕ್ಷ-ಶಿವ, ಧಾರಿಣಿಯನ್ನು
ಮೂಲ ...{Loading}...
ವೀರಭಟ ಭಾಳಾಕ್ಷ ಭೀಷ್ಮನು
ಸಾರಿದನು ಧಾರುಣಿಯನಕಟಾ
ಕೌರವನ ಸಿರಿ ಸೂರೆಯೋದುದೆ ಹಗೆಗೆ ಗೆಲವಾಯ್ತೆ
ಆರನಾವಂಗದಲಿ ಬರಿಸದು
ಘೋರ ವಿಧಿ ಶಿವಶಿವ ಎನುತ್ತಾ
ಸಾರಥಿಯು ಕಡುಖೇದದಲಿ ತುಂಬಿದನು ಕಂಬನಿಯ ॥10॥
೦೧೧ ಹೂಳಿ ಹೋಯಿತು ...{Loading}...
ಹೂಳಿ ಹೋಯಿತು ಬಾಣದಲಿ ಮೈ
ತೋಳು ತೊಡೆ ಜೊಂಡೆದ್ದು ರಕುತದ
ಸಾಲುಗೊಳಚೆಯ ಕರುಳ ಕುಸುರಿಯ ಬಸಿವ ನೆಣವಸೆಯ
ಮೂಳೆಯೊಟ್ಟಿಲ ನೆಲನ ಮುಟ್ಟದ
ಜಾಳಿಗೆಯ ಹೊಗರೊಗುವ ಕೆಂಗರಿ
ಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ಮೈ ತೋಳು ತೊಡೆಗಳಿಂದ ರಕ್ತಧಾರೆ ಹರಿದು ಅದರಲ್ಲಿ ಕರುಳಿನ ಚೂರುಗಳು, ಜಿಡ್ಡಾಗಿ ಹರಿಯುತ್ತಿದ್ದ ನೆಣ ಪಸೆಗಳು, ಮೂಳೆ ರಾಶಿಗಳು ಸೇರಿಕೊಂಡು ಕೆಸರಾಗಿತ್ತು. ಆ ಕೆಸರಿನ ನೆಲತಾಗದೆ ಕಾಂತಿಯುಕ್ತ ದೇಹವನ್ನು ಕೆಂಪಾದಗರಿಗಳ ಬಾಣದ ಮಂಚದ ಮೇಲೆ ಒರಗಿಸಿ ರಣದಲ್ಲಿ ಭೀಷ್ಮ ಮಲಗಿದನು.
ಪದಾರ್ಥ (ಕ.ಗ.ಪ)
ಜೊಂಡೆದ್ದು-ಕೆಸರಾದ, ಸಾಲಕೊಳಚೆ-ಕೆಸರಾದ ರಕ್ತ, ಬಸಿವ-ಸೋರುತ್ತಿರುವ, ಒಟ್ಟಿಲ-ರಾಶಿಯಾಗಿ ಬಿದ್ದಿದ್ದು, ಜಾಳಿಗೆ-ಚೀಲ, ದೇಹ, ಪವಡಿಸಿದ-ಮಲಗಿದ, ಕೆಂಗರಿಗೋಲ-ಕೆಂಪಾದ ಗರಿಗಳಿಂದ ಕೂಡಿದ ಬಾಣ
ಮೂಲ ...{Loading}...
ಹೂಳಿ ಹೋಯಿತು ಬಾಣದಲಿ ಮೈ
ತೋಳು ತೊಡೆ ಜೊಂಡೆದ್ದು ರಕುತದ
ಸಾಲುಗೊಳಚೆಯ ಕರುಳ ಕುಸುರಿಯ ಬಸಿವ ನೆಣವಸೆಯ
ಮೂಳೆಯೊಟ್ಟಿಲ ನೆಲನ ಮುಟ್ಟದ
ಜಾಳಿಗೆಯ ಹೊಗರೊಗುವ ಕೆಂಗರಿ
ಗೋಲ ಮಂಚದ ಮೇಲೆ ರಣದಲಿ ಭೀಷ್ಮ ಪವಡಿಸಿದ ॥11॥
೦೧೨ ಒರಲಿ ಕೆಡೆದರು ...{Loading}...
ಒರಲಿ ಕೆಡೆದರು ಹಡಪಿಗರು ಸೀ
ಗುರಿಯವರು ಸತ್ತಿಗೆಯವರು ತ
ನ್ನರಮನೆಯ ವಿಶ್ವಾಸಿಗಳು ಬಿಲುಸರಳ ನೀಡುವರು
ಗುರುವಲಾ ಮುತ್ತಯ್ಯ ನಮ್ಮನು
ಹೊರೆದ ತಂದೆಗೆ ತಪ್ಪಿದರು ಕಡು
ನರಕಿಗಳು ಪಾಂಡವರು ಸುಡುಸುಡೆನುತ್ತ ಹೊರಳಿದರು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಚಿಯವರು , ಚಾಮರ ಹಾಕುವವರು, ಬೆಳ್ಗೊಡೆ ಹಿಡಿಯವವರು, ಅರಮನೆಯ ಆಪ್ತರು, ಬಿಲ್ಲು ಬಾಣಗಳನ್ನು ಕೊಡುವವರು, ಎಲ್ಲರೂ ಗೋಳಾಡಿ ನೆಲಕ್ಕೆ ಬಿದ್ದು ಹೊರಳಾಡಿದರು. ಅಜ್ಜನಾದ ಭೀಷ್ಮನು ನಮಗೆ ಗುರುವಲ್ಲವೇ ? ನಮ್ಮನ್ನು ಕಾಪಾಡಿದ ತಂದೆಗೆ ಪಾಂಡವರು ತಪ್ಪಿ ನಡೆದಿದ್ದಾರೆ. ನಿಜಕ್ಕೂ ಅವರು ಘೋರಪಾಪಿಗಳು. ಸುಡಲಿ ಅವರನ್ನು ಎಂದು ಶಪಿಸುತ್ತ ನೆಲಕ್ಕೆ ಬಿದ್ದು ಹೊರಳಾಡಿದರು.
ಮೂಲ ...{Loading}...
ಒರಲಿ ಕೆಡೆದರು ಹಡಪಿಗರು ಸೀ
ಗುರಿಯವರು ಸತ್ತಿಗೆಯವರು ತ
ನ್ನರಮನೆಯ ವಿಶ್ವಾಸಿಗಳು ಬಿಲುಸರಳ ನೀಡುವರು
ಗುರುವಲಾ ಮುತ್ತಯ್ಯ ನಮ್ಮನು
ಹೊರೆದ ತಂದೆಗೆ ತಪ್ಪಿದರು ಕಡು
ನರಕಿಗಳು ಪಾಂಡವರು ಸುಡುಸುಡೆನುತ್ತ ಹೊರಳಿದರು ॥12॥
೦೧೩ ಬೆದರು ತವನಿಧಿಯಾಯ್ತು ...{Loading}...
ಬೆದರು ತವನಿಧಿಯಾಯ್ತು ಪಟು ಭಟ
ರೆದೆಗಳಿಬ್ಬಗಿಯಾಯ್ತು ವೀರಾ
ಭ್ಯುದಯ ಕೈಸೆರೆಯೋಯ್ತು ಸುಕ್ಕಿತು ಮನದ ಸುಮ್ಮಾನ
ಹೊದರೊಡೆದು ಕುರುಸೇನೆ ತೆಗೆದೋ
ಡಿದುದು ಭಯಜಲಧಿಯಲಿ ತೇಕಾ
ಡಿದರು ಕೌರವ ಜನಪರೀ ಭೀಷ್ಮಾವಸಾನದಲಿ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನಿಗೆ ಈ ಸ್ಥಿತಿಯೊದಗಿದಾಗ ಬೆದರಿಕೆಯೇ ಮಹಾನಿಧಿ ಆಯಿತು. ವೀರಾಧಿವೀರರ ಎದೆಗಳು ಬಿರಿದವು (ದಿಕ್ಕೆಟ್ಟರು), ವೀರರ ಗೆಲುವು ಎಂಬುದು ಶತ್ರುಗಳ ಪಾಲಾಯಿತು. ಉತ್ಸಾಹ ಉಡುಗಿತು (ಸಂತೋಷ ಕುಗ್ಗಿತು). ಕೌರವ ಸೇನೆ ಒಗ್ಗೊಡೆದು (ಒಗ್ಗಟ್ಟು ಮುರಿದು) ಚೆದುರಿ ಓಡಿತು. ಭೀಷ್ಮನಿಗೆ ಒದಗಿದ ಅವಸಾನ ಕಾಲದಲ್ಲಿ ಹೀಗೆ ಕೌರವ ಅರಸರು ಭಯ ಸಾಗರದಲ್ಲಿ ತೇಲಾಡಿದರು.
ಪದಾರ್ಥ (ಕ.ಗ.ಪ)
ಇಬ್ಬಗಿಯಾದವು-ಬಿರಿದವು, ಬೆದರು-ಬೆದರಿಕೆ, ತವನಿಧಿ-ಮಹಾನಿಧಿ, ಕೈಸೆರೆಹೋಯ್ತು-ಶತ್ರುಗಳ ಪಾಲಾಯಿತು. ಹೊದರೊಡೆದು-ಒಗ್ಗಟ್ಟು ಮುರಿದು, ತೇಂಕಾಡು-ತೇಲಾಡು
ಮೂಲ ...{Loading}...
ಬೆದರು ತವನಿಧಿಯಾಯ್ತು ಪಟು ಭಟ
ರೆದೆಗಳಿಬ್ಬಗಿಯಾಯ್ತು ವೀರಾ
ಭ್ಯುದಯ ಕೈಸೆರೆಯೋಯ್ತು ಸುಕ್ಕಿತು ಮನದ ಸುಮ್ಮಾನ
ಹೊದರೊಡೆದು ಕುರುಸೇನೆ ತೆಗೆದೋ
ಡಿದುದು ಭಯಜಲಧಿಯಲಿ ತೇಕಾ
ಡಿದರು ಕೌರವ ಜನಪರೀ ಭೀಷ್ಮಾವಸಾನದಲಿ ॥13॥
೦೧೪ ಭೀತಿ ಬೀತುದು ...{Loading}...
ಭೀತಿ ಬೀತುದು ಹರುಷವಲ್ಲರಿ
ಹೂತುದವರಿಗೆ ವಿಜಯ ಕಾಮಿನಿ
ದೂತಿಯರ ಕಳುಹಿದನು ತನಿ ಹೊಗರೇರಿತುತ್ಸಾಹ
ಸೋತುದಾಹವ ಚಿಂತೆ ಜರಿದುದು
ಕಾತರತೆ ನುಡಿಗೆಡೆಗುಡದೆ ಭಾ
ವಾತಿಶಯವೊಂದಾಯ್ತು ಪಾಂಡವ ಬಲದ ಸುಭಟರಿಗೆ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ತಕಡೆ ಪಾಂಡವರಿಗೆ ಅಂಜಿಕೆ ದೂರವಾಯಿತು. ಹರುಷದ ಬಳ್ಳಿ ಹೂ ಬಿಟ್ಟಿತು. ವಿಜಯ ದೇವತೆ ಪಾಂಡವರ ಬಳಿಗೆ ತನ್ನ ದೂತಿಯರನ್ನು ಕಳಿಸಿದಳು. ಉತ್ಸಾಹ ಹೆಚ್ಚಿತು. ಯುದ್ಧದ ಚಿಂತೆ ಸೋತು ಸಣ್ಣಾಯಿತು. ಆತಂಕ ಪಕ್ಕಕ್ಕೆ ಸರಿಯಿತು ಪಾಂಡವರ ಸೇನೆಯ ವೀರರಿಗೆಲ್ಲ ಮಾತಿಗೆ ಮೀರಿದ ವಿಶೇಷ ಉತ್ಸಾಹ ಉಂಟಾಯಿತು.
ಪದಾರ್ಥ (ಕ.ಗ.ಪ)
ಭೀತಿ ಬೀತುದು-ಅಂಜಿಕೆ ದೂರವಾಯಿತು, ಹೂತುದು-ಹೂ ಬಿಟ್ಟಿತು, ತನಿ-ಅಧಿಕವಾಗಿ, ಹೊಗರೇರಿತು-ಕಳೆಯೇರಿತು, ಜರಿದುದು (ಸರಿದುದು)-ದೂರಾಯಿತು, ನುಡಿಗೆ ಎಡೆ ಕುಡದೆ-ಮಾತಿಗೆ ಮೀರಿದ,
ಮೂಲ ...{Loading}...
ಭೀತಿ ಬೀತುದು ಹರುಷವಲ್ಲರಿ
ಹೂತುದವರಿಗೆ ವಿಜಯ ಕಾಮಿನಿ
ದೂತಿಯರ ಕಳುಹಿದನು ತನಿ ಹೊಗರೇರಿತುತ್ಸಾಹ
ಸೋತುದಾಹವ ಚಿಂತೆ ಜರಿದುದು
ಕಾತರತೆ ನುಡಿಗೆಡೆಗುಡದೆ ಭಾ
ವಾತಿಶಯವೊಂದಾಯ್ತು ಪಾಂಡವ ಬಲದ ಸುಭಟರಿಗೆ ॥14॥
೦೧೫ ಮಲಗಿದನು ಕಲಿಭೀಷ್ಮನೆನೆ ...{Loading}...
ಮಲಗಿದನು ಕಲಿಭೀಷ್ಮನೆನೆ ತ
ಲ್ಲಳಿಸಿದನು ಕುರು ರಾಯನುದರದೊ
ಳಿಳಿದುದಾಯಧವೆಂಬ ತೆರದಲಿ ತಳ್ಳುವಾರಿದನು
ಬಲಿದುಸುರ ಬಿಸುಸುಯಿಲ ಹಬ್ಬಿದ
ಕಳಕಳದ ಕಂಬನಿಯ ಕಿಬ್ಬೊನ
ಲಿಳಿವ ಕದಪಿನ ಹೊತ್ತ ದುಗುಡದ ಮುಖದೊಳೈತಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರಭೀಷ್ಮನು ಯುದ್ಧ ರಂಗದಲ್ಲಿ ನೆಲಹಿಡಿದನು ಎಂದು ತಿಳಿದ ಕೂಡಲೆ ದುರ್ಯೋಧನನು ಭಯಭೀತನಾದನು. ಹೊಟ್ಟೆಯಲ್ಲಿ ಶೂಲ ನಾಟಿತು ಎಂಬಂತೆ ತತ್ತರಿಸಿ ಹೋದನು. ನಿಟ್ಟುಸಿರಿಂದ ಬಿಸಿ ಉಸಿರು ಬಿಡುತ್ತಾ, ಹೆಚ್ಚಿದ ಕಳವಳದಿಂದ ಕೂಡಿ, ಕಣ್ಣೀರಿನ ಹೊಳೆ ಕೆನ್ನೆ ಮೇಲೆ ಹರಿಯುತ್ತಿದ್ದು, ಚಿಂತಾ ಭಾರದಿಂದ ಕೂಡಿದ ಮುಖದಿಂದ ಭೀಷ್ಮನ ಬಳಿಗೆ ಬಂದನು.
ಪದಾರ್ಥ (ಕ.ಗ.ಪ)
ತಳ್ಳುವಾರಿದನು-ತತ್ತರಿಸಿ ಹೋದನು, ಬಲಿದುಸುರು-ನಿಟ್ಟುಸಿರು, ಬಿಸುಸುಯಿಲು-ಬಿಸಿ ಉಸಿರು, ಕಬ್ಬೊನಲು-ಕೆಳಗೆ ಹರಿವ ಪ್ರವಾಹ,
ಮೂಲ ...{Loading}...
ಮಲಗಿದನು ಕಲಿಭೀಷ್ಮನೆನೆ ತ
ಲ್ಲಳಿಸಿದನು ಕುರು ರಾಯನುದರದೊ
ಳಿಳಿದುದಾಯಧವೆಂಬ ತೆರದಲಿ ತಳ್ಳುವಾರಿದನು
ಬಲಿದುಸುರ ಬಿಸುಸುಯಿಲ ಹಬ್ಬಿದ
ಕಳಕಳದ ಕಂಬನಿಯ ಕಿಬ್ಬೊನ
ಲಿಳಿವ ಕದಪಿನ ಹೊತ್ತ ದುಗುಡದ ಮುಖದೊಳೈತಂದ ॥15॥
೦೧೬ ಎಡೆ ಮುರಿದುದೈಶ್ವರ್ಯವಿನ್ನೇ ...{Loading}...
ಎಡೆ ಮುರಿದುದೈಶ್ವರ್ಯವಿನ್ನೇ
ನೊಡೆಯ ಭಿತ್ತಿಯ ಚಿತ್ರವಾದನು
ಕಡೆಗೆ ಬಂದುದೆ ಕೌರವಾನ್ವಯ ಶಿವಶಿವಾ ಎನುತ
ಹಿಡಿದ ದುಗುಡದ ಕವಿದ ಮುಸುಕಿನ
ಗಡಣದಲಿ ಗುರು ಕೃಪ ಜಯದ್ರಥ
ರೊಡನೊಡನೆ ಬರುತಿರ್ದುದಖಿಲ ಮಹೀಶ ಪರಿವಾರ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಕೌರವನ ಸೇನೆಯ ಸಿರಿಯೆಲ್ಲ ಮಧ್ಯದಲ್ಲೇ ಹಾಳಾಯಿತೇ ! ಇನ್ನೇನು ಹೇಳಲು ಇದೆ ? ದೊರೆ ದುರ್ಯೋಧನ ಗೋಡೆಯ ಚಿತ್ರದಂತೆ ನಿಸ್ತೇಜನಾದನು. ಕೌರವ ವಂಶಕ್ಕೆ ಕೊನೆ ಬಂದಿತೆ ಶಿವಶಿವಾ ಎನ್ನುತ್ತ ಮುಖದಲ್ಲಿ ಆವರಿಸಿದ ದುಃಖದಿಂದ ಚಿಂತೆಯನ್ನೇ ಹೊದ್ದುಕೊಂಡ, ದ್ರೋಣ, ಕೃಪ, ಜಯದ್ರಥ ಮೊದಲಾದವರೊಡನೆ ಬೇಗಬೇಗನೆ ಸಮಸ್ತ ರಾಜಪರಿವಾರವೂ ಭೀಷ್ಮನು ಮಲಗಿದ್ದೆಡೆಗೆ ಬರುತ್ತಿತ್ತು.
ಪದಾರ್ಥ (ಕ.ಗ.ಪ)
ಭಿತ್ತಿಯ ಚಿತ್ರ-ಗೋಡೆಯ ಮೇಲೆ ಬರೆದ ಚಿತ್ರ.
ಮೂಲ ...{Loading}...
ಎಡೆ ಮುರಿದುದೈಶ್ವರ್ಯವಿನ್ನೇ
ನೊಡೆಯ ಭಿತ್ತಿಯ ಚಿತ್ರವಾದನು
ಕಡೆಗೆ ಬಂದುದೆ ಕೌರವಾನ್ವಯ ಶಿವಶಿವಾ ಎನುತ
ಹಿಡಿದ ದುಗುಡದ ಕವಿದ ಮುಸುಕಿನ
ಗಡಣದಲಿ ಗುರು ಕೃಪ ಜಯದ್ರಥ
ರೊಡನೊಡನೆ ಬರುತಿರ್ದುದಖಿಲ ಮಹೀಶ ಪರಿವಾರ ॥16॥
೦೧೭ ಕುದುರೆ ಕಮ್ಬನಿಯಿಕ್ಕಿದವು ...{Loading}...
ಕುದುರೆ ಕಂಬನಿಯಿಕ್ಕಿದವು ಮೈ
ಬಿದಿರಿದವು ದಂತಿಗಳು ಕಾಲಾ
ಳೊದರಿ ಕೆಡೆದವು ಕುಂದಿದವು ಕೈಮನದ ಕಡುಹುಗಳು
ಬೆದರಿ ಬಂದಿಗೆ ಸಿಲುಕಿತವನಿಪ
ನದಟು ವಿಕ್ರಮವಹ್ನಿ ತಂಪೇ
ರಿದುದು ಕಡುದುಮ್ಮಾನ ಕೇಣಿಯ ಹಿಡಿದುದುಭಯಬಲ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರ ಈ ಸ್ಥಿತಿಯನ್ನು ಕಂಡು ಕುದುರೆಗಳು ಕಣ್ಣೀರಿಟ್ಟವು. ಆನೆಗಳು ಮೈ ಕೊಡಹಿದವು, ಕಾಲಾಳುಗಳು ಚೀರಿ ಬಿದ್ದರು. ಸೈನ್ಯದ ಮೈ ಮನದ ಸಾಹಸ ಸ್ಥೈರ್ಯಗಳು ಕುಂದಿದವು. ದೊರೆಯ ಶೌರ್ಯ ಅಂಜಿಕೆಗೆ ಸೆರೆಸಿಕ್ಕಿ ಪರಾಕ್ರಮವೆಂಬ ಬೆಂಕಿ ತಣ್ಣಗಾಯಿತು. ಎರಡೂ ಬಲಗಳಲ್ಲಿ ತೀವ್ರ ಶೋಕ ಗುತ್ತಿಗೆ ಹಿಡಿಯಿತು (ಆವರಿಸಿತು)
ಪದಾರ್ಥ (ಕ.ಗ.ಪ)
ಮೈಬಿದಿರಿದವು-ಮೈಕೊಡಹಿದವು, ಕಡುಹುಗಳು-ಸ್ಥೈರ್ಯಗಳು, ವಿಕ್ರಮ ವಹ್ನಿ-ಸಾಹಸಾಗ್ನಿ,
ಮೂಲ ...{Loading}...
ಕುದುರೆ ಕಂಬನಿಯಿಕ್ಕಿದವು ಮೈ
ಬಿದಿರಿದವು ದಂತಿಗಳು ಕಾಲಾ
ಳೊದರಿ ಕೆಡೆದವು ಕುಂದಿದವು ಕೈಮನದ ಕಡುಹುಗಳು
ಬೆದರಿ ಬಂದಿಗೆ ಸಿಲುಕಿತವನಿಪ
ನದಟು ವಿಕ್ರಮವಹ್ನಿ ತಂಪೇ
ರಿದುದು ಕಡುದುಮ್ಮಾನ ಕೇಣಿಯ ಹಿಡಿದುದುಭಯಬಲ ॥17॥
೦೧೮ ಬನ್ದು ಭೀಷ್ಮನ ...{Loading}...
ಬಂದು ಭೀಷ್ಮನ ಚರಣ ಸೀಮೆಯ
ಲಂದು ಕಾಯವ ಕೆಡಹಿ ವಿಗತಾ
ನಂದ ಭೂಪತಿ ಹೊರಳಿದನು ಹೇರಾಳ ಶೋಕದಲಿ
ಒಂದು ಮಗ್ಗುಲ ಕೆಲದೊಳಿವರೈ
ತಂದು ನಂದರು ಗುರು ಕೃಪಾದಿಗ
ಳೊಂದು ಮಗ್ಗುಲ ಸಾರಿ ನಿಂದರು ಕೃಷ್ಣ ಪಾಂಡವರು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂತೋಷ ಕುಂದಿದ ದುರ್ಯೋಧನನು ಆಗಮಿಸಿ ಭೀಷ್ಮನ ಚರಣದ ಬಳಿ ಮೈಯನ್ನು ಕೆಡವಿ, ಬಹಳ ದುಃಖದಿಂದ ಗೋಳಿಡುತ್ತಾ ಹೊರಳಾಡಿದನು. ಒಂದು ಪಕ್ಕದಲ್ಲಿ ದ್ರೋಣ, ಕೃಪ ಮೊದಲಾದವರು ಬಂದು ನಿಂತರು, ಇನ್ನೊಂದು ಮಗ್ಗುಲಲ್ಲಿ ಕೃಷ್ಣನೂ ಪಾಂಡವರೂ ಬಂದು ನಿಂತರು.
ಪದಾರ್ಥ (ಕ.ಗ.ಪ)
ವಿಗತಾನಂದ-ಸಂತೋಷ ಕುಂದಿದ, ಕಾಯವ ಕೆಡಹಿ-ದೇಹವನ್ನು ಇಟ್ಟು, ಹೇರಾಳ ಶೋಕ-ಅಧಿಕ ದುಃಖ,
ಮೂಲ ...{Loading}...
ಬಂದು ಭೀಷ್ಮನ ಚರಣ ಸೀಮೆಯ
ಲಂದು ಕಾಯವ ಕೆಡಹಿ ವಿಗತಾ
ನಂದ ಭೂಪತಿ ಹೊರಳಿದನು ಹೇರಾಳ ಶೋಕದಲಿ
ಒಂದು ಮಗ್ಗುಲ ಕೆಲದೊಳಿವರೈ
ತಂದು ನಂದರು ಗುರು ಕೃಪಾದಿಗ
ಳೊಂದು ಮಗ್ಗುಲ ಸಾರಿ ನಿಂದರು ಕೃಷ್ಣ ಪಾಂಡವರು ॥18॥
೦೧೯ ಕವಿದ ಮುಸುಕಿನ ...{Loading}...
ಕವಿದ ಮುಸುಕಿನ ಕಂದಿದಾನನ
ದವನಿಪತಿ ಯಮಸೂನು ಗಂಗಾ
ಭವನ ಮಗ್ಗುಲ ಸಾರಿದನು ಕೈಚಾಚಿ ಕದಪಿನಲಿ
ಪವನಸುತ ಸಹದೇವ ಸಾತ್ಯಕಿ
ದಿವಿಜಪತಿಸುತರಾದಿ ಯಾದವ
ರವಿರಳದ ಶೋಕಾಗ್ನಿ ತಪ್ತರು ಪಂತಿಗಟ್ಟಿದರು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಃಖದಿಂದ ಮುಖ ಮುಚ್ಚಿಕೊಂಡವರಾಗಿ, ಬಾಡಿದ ಮುಖದಿಂದ ಕೂಡಿದ ಅರಸ ಧರ್ಮರಾಯನು ಕೆನ್ನೆಯಲ್ಲಿ ಕೈಯಿಟ್ಟುಕೊಂಡು (ಚಿಂತಾಕ್ರಾಂತನಾಗಿ) ಭೀಷ್ಮನ ಹತ್ತಿರಕ್ಕೆ ಹೋದನು. ಭೀಮ, ಸಹದೇವ, ಸಾತ್ಯಕಿ ಅರ್ಜುನನೇ ಮೊದಲಾದ ಪಾಂಡವರ ಕಡೆಯವರು, ದಟ್ಟವಾದ ದುಃಖವೆಂಬ ಬೆಂಕಿಯಿಂದ ಬೆಂದವರಾಗಿ ಸಾಲುಗಟ್ಟಿ ನಿಂದರು.
ಪದಾರ್ಥ (ಕ.ಗ.ಪ)
ಕದಪು - ಕೆನ್ನೆ
ಮೂಲ ...{Loading}...
ಕವಿದ ಮುಸುಕಿನ ಕಂದಿದಾನನ
ದವನಿಪತಿ ಯಮಸೂನು ಗಂಗಾ
ಭವನ ಮಗ್ಗುಲ ಸಾರಿದನು ಕೈಚಾಚಿ ಕದಪಿನಲಿ
ಪವನಸುತ ಸಹದೇವ ಸಾತ್ಯಕಿ
ದಿವಿಜಪತಿಸುತರಾದಿ ಯಾದವ
ರವಿರಳದ ಶೋಕಾಗ್ನಿ ತಪ್ತರು ಪಂತಿಗಟ್ಟಿದರು ॥19॥
೦೨೦ ಏನ ನೆನೆದಾವುದನೊಡರ್ಚಿದೆ ...{Loading}...
ಏನ ನೆನೆದಾವುದನೊಡರ್ಚಿದೆ
ನೇನ ಹೇಳುವೆನೆನ್ನ ಪುಣ್ಯದ
ಹಾನಿಯನು ಕೈತಪ್ಪ ನೆನೆದೆನು ನಿಮ್ಮ ಸಿರಿಪದಕೆ
ನಾನದಾವುದು ಧರ್ಮತತ್ವ ನಿ
ಧಾನವೆಂದರಿಯದೆ ಕೃತಾಂತಂ
ಗಾನು ಹಂಗಿಗನಾದೆನೆಂದೊರಲಿದನು ಯಮಸೂನು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಭೀಷ್ಮನನ್ನು ಕುರಿತು) ಧರ್ಮರಾಯನು ಏನನ್ನೋ (ರಾಜ್ಯ ಸಂಪಾದನೆಯನ್ನು) ಯೋಚಿಸಿ ಎಂತಹ ಅಕಾರ್ಯವನ್ನು ಮಾಡಿ ಬಿಟ್ಟೆನಲ್ಲಾ ! ನನಗಾದ ಪುಣ್ಯದ ನಾಶ ಎಷ್ಟೆಂದು ಹೇಳಲಿ. ನಿಮ್ಮ ಪಾದಾರವಿಂದದಲ್ಲಿ ಮಾಡಬಾರದ ಕೆಲಸವನ್ನು ಮಾಡಿದೆನು. ಧರ್ಮದ ನಿಜವಾದ ಸ್ಥಿತಿ ಯಾವುದು ಎಂದು ತಿಳಿಯದೆ (ರಾಜ್ಯ ಗಳಿಸು) ಯುದ್ಧ ಮಾಡುವ ಕ್ಷತ್ರಿಯ ಧರ್ಮಕ್ಕಿಂತ ಗುರುವೂ ಆಶ್ರಯದಾತನಾದ ಅಜ್ಜನನ್ನು ಕೊಲ್ಲದಿರುವುದು ಮೇಲೆಂಬ ಧರ್ಮದ ನಿಜದ ನೆಲೆಯನ್ನು ತಿಳಿಯದೆ ಯಮನ ಮೂದಲೆಗೆ ಸಿಲುಕಿದೆ. (ಪಾಪ ಕಾರ್ಯದಿಂದ ನಿಂದೆಗೆ ಒಳಗಾದೆನು) ಎಂದು ಧರ್ಮರಾಜನು ಪ್ರಲಾಪಿಸಿದನು.
ಪದಾರ್ಥ (ಕ.ಗ.ಪ)
ಒಡರ್ಚಿದೆನು-ಮಾಡಿದೆನು, ಪುಣ್ಯದ ಹಾನಿ-ಅಕಾರ್ಯ, ಕೈತಪ್ಪು- ಮಾಡಬಾರದ ಕೆಲಸ ಧರ್ಮ ತತ್ವನಿಧಾನ-ಧರ್ಮ ಸೂಕ್ಷ್ಮ, ಕೃತಾಂತ-ಯಮ,
ಮೂಲ ...{Loading}...
ಏನ ನೆನೆದಾವುದನೊಡರ್ಚಿದೆ
ನೇನ ಹೇಳುವೆನೆನ್ನ ಪುಣ್ಯದ
ಹಾನಿಯನು ಕೈತಪ್ಪ ನೆನೆದೆನು ನಿಮ್ಮ ಸಿರಿಪದಕೆ
ನಾನದಾವುದು ಧರ್ಮತತ್ವ ನಿ
ಧಾನವೆಂದರಿಯದೆ ಕೃತಾಂತಂ
ಗಾನು ಹಂಗಿಗನಾದೆನೆಂದೊರಲಿದನು ಯಮಸೂನು ॥20॥
೦೨೧ ಖೇದವೇಕೆಲೆ ಮಗನೆ ...{Loading}...
ಖೇದವೇಕೆಲೆ ಮಗನೆ ನಿನ್ನೋ
ಪಾದಿಯಲಿ ಸುಚರಿತ್ರನಾವನು
ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ್ಮವನು
ಆದರಿಸುವುದೆ ಧರ್ಮ ನಿನಗಪ
ವಾದ ಪಾತಕವಿಲ್ಲ ಸುಕೃತ
ಕ್ಕೀ ದಯಾಂಬುಧಿ ಕೃಷ್ಣ ಹೊಣೆ ನಿನಗಂಜಲೇಕೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ಮಗನೆ ಏಕೆ ದುಃಖಿಸುವೆ ? ಈ ಭೂಮಿಯಲ್ಲಿ ನಿನ್ನಂತೆ ಪುಣ್ಯ ಕಾರ್ಯ ಮಾಡುವ ಸಚ್ಚರಿತನು ಇನ್ನಾರಿದ್ದಾರೆ ? ಆ ಮಾತು ಹಾಗಿರಲಿ. ಕ್ಷತ್ರಿಯ ಧರ್ಮವನ್ನು (ಯುದ್ಧ ಮಾಡುವುದು) ಅನುಸರಿಸುವುದು ನಿನಗೆ ಕರ್ತವ್ಯ. ಜನಗಳ ನಿಂದೆಯ ಪಾಪವು ನಿನಗಿಲ್ಲ. ನಿನ್ನ ಪುಣ್ಯಕ್ಕೆ ಕರುಣಾ ಸಾಗರ ಕೃಷ್ಣನೇ ನಿನಗೆ ಜವಾಬುದಾರ (ಹೊಣೆಗಾರ). ನೀನೇಕೆ ಹೆದರಬೇಕು ? ಎಂದು ಭೀಷ್ಮನು ಸಮಾಧಾನ ಹೇಳಿದನು.
ಪದಾರ್ಥ (ಕ.ಗ.ಪ)
ಮೇದಿನಿ-ಭೂಮಿ,
ಮೂಲ ...{Loading}...
ಖೇದವೇಕೆಲೆ ಮಗನೆ ನಿನ್ನೋ
ಪಾದಿಯಲಿ ಸುಚರಿತ್ರನಾವನು
ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ್ಮವನು
ಆದರಿಸುವುದೆ ಧರ್ಮ ನಿನಗಪ
ವಾದ ಪಾತಕವಿಲ್ಲ ಸುಕೃತ
ಕ್ಕೀ ದಯಾಂಬುಧಿ ಕೃಷ್ಣ ಹೊಣೆ ನಿನಗಂಜಲೇಕೆಂದ ॥21॥
೦೨೨ ಮಗನೆ ಕೇಳೈ ...{Loading}...
ಮಗನೆ ಕೇಳೈ ಪಾರ್ಥ ಕೂರಂ
ಬುಗಳ ಹಾಸಿಕೆ ಚೆಂದವಾಯಿತು
ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು
ಬಿಗಿದ ಬಿಲುಗೊಂಡೆದ್ದು ಮಂಡಿಸಿ
ಹೊಗರ ಕವಲಂಬೈದನೆಚ್ಚನು
ನೆಗಹಿದನು ಮಸ್ತಕವನಾ ಗಂಗಾಕುಮಾರಕನ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನೇ ಆಲಿಸು, ನೀನು ನಿರ್ಮಿಸಿದ ಹರಿತವಾದ ಬಾಣಗಳಿಂದ ಹಾಸಿಗೆ ಸೊಗಸಾಗಿದೆ. (ಆದರೆ ದಿಂಬಿಲ್ಲ) ಹೊಳೆಯುತ್ತಿರುವ ಬಾಣಗಳ ತಲೆದಿಂಬನ್ನು ಸಿದ್ಧಪಡಿಸು ಎನ್ನಲಾಗಿ, ಅರ್ಜುನನು ಆ ಮಾತನ್ನು ಶಿರಸಾವಹಿಸಿ ಹುರಿಯನ್ನು ಸೇರಿಸಿ ಕಟ್ಟಿದ್ದ ಬಿಲ್ಲನ್ನು ತೆಗೆದುಕೊಂಡು ಎದ್ದು ಮಂಡಿಯೂರಿ ನಿಂತು, ಎರಡೆರಡು ಮೊನೆಯುಳ್ಳ ಐದು ಕವಲು ಬಾಣಗಳನ್ನು ಪ್ರಯೋಗಿಸಿ. ಭೀಷ್ಮನ ಜೋಲುತ್ತಿದ್ದ ತಲೆಯನ್ನು ಮೇಲಕ್ಕೆ ಎತ್ತಿದನು.
ಪದಾರ್ಥ (ಕ.ಗ.ಪ)
ಕೂರಂಬು-ಹರಿತ ಬಾಣ, ತಲೆಗಿಂಬ-ತಲೆದಿಂಬು, ಕವಲಂಬು-ಎರಡು ಮೊನೆಗಳುಳ್ಳ ಬಾಣ,
ಮೂಲ ...{Loading}...
ಮಗನೆ ಕೇಳೈ ಪಾರ್ಥ ಕೂರಂ
ಬುಗಳ ಹಾಸಿಕೆ ಚೆಂದವಾಯಿತು
ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು
ಬಿಗಿದ ಬಿಲುಗೊಂಡೆದ್ದು ಮಂಡಿಸಿ
ಹೊಗರ ಕವಲಂಬೈದನೆಚ್ಚನು
ನೆಗಹಿದನು ಮಸ್ತಕವನಾ ಗಂಗಾಕುಮಾರಕನ ॥22॥
೦೨೩ ಹೊಳೆವ ಕಣೆಗಳ ...{Loading}...
ಹೊಳೆವ ಕಣೆಗಳ ಮಂಚ ತಲೆಗಿಂ
ಬಳವಡಿಕೆಯಲಿ ಭೀಷ್ಮ ಸುಖದಲಿ
ಮಲಗಿದನು ಬಹಿರಂಗಭುವನವ್ಯಾಪ್ತಿಗಳ ಮರೆದು
ನಳಿನನಾಭನ ದಿವ್ಯರೂಪನು
ಬಲಿದು ಮನದಲಿ ಹಿಡಿದು ನೋವಿನ
ಕಳಕಳಕೆ ಧೃತಿಗೆಡದೆ ಮೆರೆದನು ಬಾಣಶಯನದಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು, ಆಗ ಥಳಿಥಳಿಸುತ್ತಿರುವ ಬಾಣಗಳ ಮಂಚ, ಮತ್ತು ತಲೆದಿಂಬಿನ ಜೋಡಣೆಯಿಂದ ಸುತ್ತ ಮುತ್ತಿನ ಪ್ರಾಪಂಚಿಕ ವ್ಯವಹಾರಗಳನ್ನೆಲ್ಲಾ ಮರೆತು ನೆಮ್ಮದಿಯಿಂದ ಮಲಗಿದನು. ತನ್ನ ಮನಸ್ಸಿನಲ್ಲಿ ಶ್ರೀ ನಾರಾಯಣನ ದಿವ್ಯರೂಪವನ್ನು ಬಲವಾಗಿ ತಂದುಕೊಂಡು ಅತಿಶಯದ ಬಾಣಗಳಿಂದಾದ ನೋವಿನ ವೇದನೆಗೆ ಧೈರ್ಯಗೆಡದೆ ಬಾಣದ ಹಾಸುಗೆಯಲ್ಲಿ ಕಂಗೊಳಿಸಿದನು.
ಮೂಲ ...{Loading}...
ಹೊಳೆವ ಕಣೆಗಳ ಮಂಚ ತಲೆಗಿಂ
ಬಳವಡಿಕೆಯಲಿ ಭೀಷ್ಮ ಸುಖದಲಿ
ಮಲಗಿದನು ಬಹಿರಂಗಭುವನವ್ಯಾಪ್ತಿಗಳ ಮರೆದು
ನಳಿನನಾಭನ ದಿವ್ಯರೂಪನು
ಬಲಿದು ಮನದಲಿ ಹಿಡಿದು ನೋವಿನ
ಕಳಕಳಕೆ ಧೃತಿಗೆಡದೆ ಮೆರೆದನು ಬಾಣಶಯನದಲಿ ॥23॥
೦೨೪ ಒಡಲ ಜಡಿದವು ...{Loading}...
ಒಡಲ ಜಡಿದವು ರೋಮ ರೋಮದೊ
ಳಡಸಿದಂಬುಗಳಂಗ ವೇದನೆ
ತೊಡಕಿತುಬ್ಬರಿಸಿದುದು ಢಗೆ ಗೋನಾಳಿ ನೀರ್ದೆಗೆಯೆ
ನುಡಿಯಲಾರೆನು ಮಕ್ಕಳಿರ ನೀ
ರಡಸಿದೆನು ಹಿರಿದಾಗಿಯೆನೆ ನಡ
ನಡುಗಿ ದುರ್ಯೋಧನನು ದೂತರ ಕರೆದು ನೇಮಿಸಿದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರತಿಯೊಂದು ಕೂದಲಿನ ಬುಡದಲ್ಲೂ ವ್ಯಾಪಿಸಿದ ಬಾಣಗಳು ಮೈಯನ್ನು ಸೆಳೆಯಿತು. ಮೈಯಲ್ಲಿ ನೋವು ಕಾಣಲಾರಂಭಿಸಿತು. ಮಕ್ಕಳೇ, ಗಂಟಲು ಒಣಗಿ ಬಾಯಾರಿಕೆ ಹೆಚ್ಚಾಗಿ ಮಾತನಾಡಲು ಆಗುತ್ತಿಲ್ಲ ಎನ್ನಲು, ಕೌರವನು ಗಡಗಡನೆ ನಡುಗಿ ಸೇವಕರನ್ನು ಕರೆದು ಅಗತ್ಯ ಪರಿಕರಗಳನ್ನು ತರಲು ಅಪ್ಪಣೆ ಮಾಡಿದನು.
ಪದಾರ್ಥ (ಕ.ಗ.ಪ)
ಗೋನಾಳಿ-ಗಂಟಲು, ನೀರ್ದೆಗೆಯೆ-ಬಾಯಾರಲು, ಢಗೆ ಉಬ್ಬರಿಸಿತು-ದಾಹ ಹೆಚ್ಚಾಯಿತು,
ಮೂಲ ...{Loading}...
ಒಡಲ ಜಡಿದವು ರೋಮ ರೋಮದೊ
ಳಡಸಿದಂಬುಗಳಂಗ ವೇದನೆ
ತೊಡಕಿತುಬ್ಬರಿಸಿದುದು ಢಗೆ ಗೋನಾಳಿ ನೀರ್ದೆಗೆಯೆ
ನುಡಿಯಲಾರೆನು ಮಕ್ಕಳಿರ ನೀ
ರಡಸಿದೆನು ಹಿರಿದಾಗಿಯೆನೆ ನಡ
ನಡುಗಿ ದುರ್ಯೋಧನನು ದೂತರ ಕರೆದು ನೇಮಿಸಿದ ॥24॥
೦೨೫ ತರಿಸಿದನು ಹಿಮರುಚಿಯ ...{Loading}...
ತರಿಸಿದನು ಹಿಮರುಚಿಯ ಹಿಂಡಿದ
ಪರಮ ಶೀತೋದಕವೊ ತಾನೆನೆ
ಸುರಭಿ ಪರಿಮಳ ಪಾನವನು ಪರಿಪರಿಯ ಕುಡಿನೀರ
ಸರಸ ಬಹುವಿಧ ಭಕ್ಷ್ಯ ಭೋಜ್ಯವ
ನೆರಹಿದನು ಕುಡಿನೀರ ಗಿಂಡಿಯ
ನರಸ ನೀಡಲು ಕಂಡು ನಕ್ಕನು ಭೀಷ್ಮನಿಂತೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನ ತಾನೇ ನಿಂತು ಖುದ್ದಾಗಿ ಅಮೃತಮಯವೂ ತಂಪಾದುದೂ ಆದ ಚಂದ್ರ ಬಿಂಬವನ್ನೇ ಹಿಂಡಿ ತೆಗೆದಂತಿದ್ದ ತುಂಬಾ ತಣ್ಣಗಿರುವ ನೀರೋ ಎಂಬಂತಿದ್ದ ಸುವಾಸನೆಯಿಂದ ಕೂಡಿದ ಪಾನಕ ಮೊದಲಾದ ಪಾನೀಯಗಳನ್ನು, ರಸವತ್ತಾದ ನಾನಾ ಬಗೆಯ ಭಕ್ಷ್ಯ, ಭೋಜ್ಯಗಳನ್ನು ತರಿಸಿಟ್ಟನು. ಕುಡಿಯುವ ನೀರಿನ ಗಿಂಡಿಯನ್ನು ದುರ್ಯೋಧನ ಭೀಷ್ಮನಿಗೆ ಕೊಡಲು ಅದನ್ನು ಕಂಡು ಭೀಷ್ಮನು ನಕ್ಕು ಹೀಗೆ ಹೇಳಿದನು.
ಮೂಲ ...{Loading}...
ತರಿಸಿದನು ಹಿಮರುಚಿಯ ಹಿಂಡಿದ
ಪರಮ ಶೀತೋದಕವೊ ತಾನೆನೆ
ಸುರಭಿ ಪರಿಮಳ ಪಾನವನು ಪರಿಪರಿಯ ಕುಡಿನೀರ
ಸರಸ ಬಹುವಿಧ ಭಕ್ಷ್ಯ ಭೋಜ್ಯವ
ನೆರಹಿದನು ಕುಡಿನೀರ ಗಿಂಡಿಯ
ನರಸ ನೀಡಲು ಕಂಡು ನಕ್ಕನು ಭೀಷ್ಮನಿಂತೆಂದ ॥25॥
೦೨೬ ಏರ ನೋವಿನೊಳಾದ ...{Loading}...
ಏರ ನೋವಿನೊಳಾದ ತೃಷ್ಣೆಯ
ನಾರಿಸುವರಿವರಳವೆ ಸಾಕಿವ
ತೋರದಿರು ತೆಗೆ ತೊಲಗು ಮೂಢರ ಪರಮಗುರು ನೀನು
ಆರಿತೈ ಗೋನಾಳಿ ಫಲುಗುಣ
ತೋರು ನಿನ್ನರಿತವನು ಸಲಿಲವ
ಬೀರು ಬೇಗದಿನೆನಲು ಬಿಲುಗೊಂಡೆದ್ದನಾ ಪಾರ್ಥ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗಾಯದ ನೋವಿನಿಂದ ಉಂಟಾದ ಬಾಯಾರಿಕೆಯನ್ನು ಹೋಗಲಾಡಿಸಲು ಈಗ ನೀನು ತರಿಸಿರುವ ಪಾನೀಯಗಳಿಂದ ಆಹಾರ ವಸ್ತುಗಳಿಂದ ಸಾಧ್ಯವೇ ? ಸಾಕು ಇವುಗಳನ್ನು ನನಗೆ ತೋರಿಸಬೇಡ, ತೆಗೆದುಕೊಂಡು ಹೋಗು ನನ್ನಿಂದ ದೂರ ಸರಿ, ದಡ್ಡ ಶಿಖಾಮಣಿ ನೀನು, ಎಲೈ ಅರ್ಜುನನೇ ಗಂಟಲು ಒಣಗಿ ಹೋಗಿದೆ. ಈ ದಾಹ ಹೋಗಲಾಡಿಸಲು ನಿನ್ನ ಜಾಣ್ಮೆಯನ್ನು ತೋರಿಸು. ನೀರನ್ನು ಬೇಗನೆ ನೀಡು ಎಂದಾಗ ಅರ್ಜುನನು ಬಿಲ್ಲನ್ನು ಸಿದ್ಧಪಡಿಸಿಕೊಂಡು ಎದ್ದನು.
ಪದಾರ್ಥ (ಕ.ಗ.ಪ)
ಮೂಢರ ಪರಮಗುರು-ದಡ್ಡ ಶಿಖಾಮಣಿ, ಗೋನಾಳಿ -ಗಂಟಲು, ಅರಿತ-ಜಾಣ್ಮೆ
ಮೂಲ ...{Loading}...
ಏರ ನೋವಿನೊಳಾದ ತೃಷ್ಣೆಯ
ನಾರಿಸುವರಿವರಳವೆ ಸಾಕಿವ
ತೋರದಿರು ತೆಗೆ ತೊಲಗು ಮೂಢರ ಪರಮಗುರು ನೀನು
ಆರಿತೈ ಗೋನಾಳಿ ಫಲುಗುಣ
ತೋರು ನಿನ್ನರಿತವನು ಸಲಿಲವ
ಬೀರು ಬೇಗದಿನೆನಲು ಬಿಲುಗೊಂಡೆದ್ದನಾ ಪಾರ್ಥ ॥26॥
೦೨೭ ಸಲಿಲ ಬಾಣದಲಮಲ ...{Loading}...
ಸಲಿಲ ಬಾಣದಲಮಲ ಗಂಗಾ
ಜಲವ ತೆಗೆದನು ತಪ್ತ ಲೋಹದ
ಜಲದವೊಲು ತನಿಹೊಳೆವ ಸಲಿಲದ ಬಹಳ ಧಾರೆಗಳ
ಇಳುಹಿದನು ಸರಳಿಂದ ವದನದ
ಬಳಿಗೆ ಬಿಡೆ ಬಹಳಾರ್ತ ಭೀಷ್ಮನು
ಗೆಲಿದನಂತಸ್ತಾಪವನು ನರನಾಥ ಕೇಳ್ ಎಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಾರುಣಾಸ್ತ್ರದಿಂದ ನಿರ್ಮಲವಾದ ಗಂಗಾ ಜಲªನ್ನು ಮೇಲೆ ತರಿಸಿದನು. ಕುದಿಯುವ ಕಬ್ಬಿಣದ ದ್ರವದಂತೆ ಚೆನ್ನಾಗಿ ಹೊಳೆಯುತ್ತಿರುವ (?)ಗಂಗಾಜಲದ ಧಾರೆಯನ್ನು ಮತ್ತೊಂದು ಬಾಣದಿಂದ ಭೀಷ್ಮನ ಬಾಯಿ ಹತ್ತಿರಕ್ಕೆ ಬೀಳುವಂತೆ ಮಾಡಲು ಬಹಳ ಬಾಯಾರಿದ ಭೀಷ್ಮನು ತನ್ನ ಶರೀರ ತಾಪವನ್ನು ಹೋಗಲಾಡಿಸಿಕೊಂಡನು.
ಪದಾರ್ಥ (ಕ.ಗ.ಪ)
ಸಲಿಲ ಬಾಣದಲಿ-ವಾರುಣಾಸ್ತ್ರದಲ್ಲಿ (ನೀರಿನ ಬಾಣದಿಂದ) ತಪ್ತ ಲೋಹದ ಜಲದವೊಲು-ಲೋಹದ ಪಾತ್ರೆಯಲ್ಲಿ ಕುದಿಸಿದ ನೀರು ತನಿಹೊಳೆವ-ಚೆನ್ನಾಗಿ ಥಳಥಳಿಸುತ್ತಿದ್ದ, ಬಹಳ ಆರ್ತ-ಬಹಳ ಬಾಯಾರಿದ, ಅಂತಸ್ತಾಪವನು-ಶರೀರದ ತಾಪವನ್ನು, ಗೆಲಿದನು-ಹೋಗಲಾಡಿಸಿಕೊಂಡನು,
ಮೂಲ ...{Loading}...
ಸಲಿಲ ಬಾಣದಲಮಲ ಗಂಗಾ
ಜಲವ ತೆಗೆದನು ತಪ್ತ ಲೋಹದ
ಜಲದವೊಲು ತನಿಹೊಳೆವ ಸಲಿಲದ ಬಹಳ ಧಾರೆಗಳ
ಇಳುಹಿದನು ಸರಳಿಂದ ವದನದ
ಬಳಿಗೆ ಬಿಡೆ ಬಹಳಾರ್ತ ಭೀಷ್ಮನು
ಗೆಲಿದನಂತಸ್ತಾಪವನು ನರನಾಥ ಕೇಳೆಂದ ॥27॥
೦೨೮ ಸಾಕು ಸಾಕೈ ...{Loading}...
ಸಾಕು ಸಾಕೈ ತಂದೆ ನನ್ನನು
ಸಾಕಿಕೊಂಡೈ ಪಾರ್ಥ ಘನ ತೃ
ಷ್ಣಾಕುಲತೆ ಬೀಳ್ಕೊಂಡುದತಿಶಯ ತೃಪ್ತಿ ನನಗಾಯ್ತು
ಸಾಕೆನುತ ಫಲುಗುಣನ ಪರಮ ವಿ
ವೇಕವನು ಪತಿಕರಿಸಿ ನೆರೆ ಚಿಂ
ತಾಕುಳನ ಮಾಡಿದನು ಕೌರವರಾಯನನು ಭೀಷ್ಮ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಆಗ ಭೀಷ್ಮನು ಅರ್ಜುನನನ್ನು ನೋಡಿ ಪ್ರೀತಿಯಿಂದ) ಅಪ್ಪಾ, ಪಾರ್ಥನೇ, ನೀರು ಸಾಕು ಸಾಕಾಯಿತು. ನೀನು ನನ್ನನ್ನು ಸಲಹಿದೆ. ನನ್ನ ಅಧಿಕ ಬಾಯಾರಿಕೆಯ ಪೀಡೆ ಇಂಗಿತು. ಇನ್ನು ಜಲಧಾರೆ ಸಾಕು ಎನ್ನುತ್ತ ಅರ್ಜುನನ ಬುದ್ಧಿಯ ಚತುರತೆಯನ್ನು ಹೊಗಳಿ ದುರ್ಯೋಧನನನ್ನು ಅಧಿಕ ಚಿಂತಾಕ್ರಾಂತನನ್ನಾಗಿ ಮಾಡಿದನು.
ಪದಾರ್ಥ (ಕ.ಗ.ಪ)
ಸಾಕಿಕೊಂಡೈ-ಸಲಹಿದೆ, ಘನತೃಷ್ಣಾಕುಲತೆ-ಅಧಿಕ ಬಾಯಾರಿಕೆಯ ಚಿಂತೆ, ಬೀಳ್ಕೊಂಡುದು-ಇಂಗಿತು, ಪತಿಕರಿಸಿ-ಹೊಗಳಿ, ಚಿಂತಾಕುಲ -ಚಿಂತಾಕ್ರಾಂತ
ಮೂಲ ...{Loading}...
ಸಾಕು ಸಾಕೈ ತಂದೆ ನನ್ನನು
ಸಾಕಿಕೊಂಡೈ ಪಾರ್ಥ ಘನ ತೃ
ಷ್ಣಾಕುಲತೆ ಬೀಳ್ಕೊಂಡುದತಿಶಯ ತೃಪ್ತಿ ನನಗಾಯ್ತು
ಸಾಕೆನುತ ಫಲುಗುಣನ ಪರಮ ವಿ
ವೇಕವನು ಪತಿಕರಿಸಿ ನೆರೆ ಚಿಂ
ತಾಕುಳನ ಮಾಡಿದನು ಕೌರವರಾಯನನು ಭೀಷ್ಮ ॥28॥
೦೨೯ ತನ್ದೆ ಕಣ್ಡೈ ...{Loading}...
ತಂದೆ ಕಂಡೈ ಕೌರವೇಶ ಪು
ರಂದರಾತ್ಮಜನತಿ ಬಳವ ನೀ
ನಿಂದೆ ಕಾಣಲುಬೇಹುದೈ ಹಲವಂಗದಲಿ ನರನ
ಹಿಂದೆ ಬಲ್ಲರು ದ್ರೋಣ ಕೃಪ ಗುರು
ನಂದನಾದಿಗಳೆಲ್ಲ ಕೇಳೈ
ಮಂದಮತಿತನ ಬೇಡವಿನ್ನು ಕೃಪಾಳುವಾಗೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಪ್ಪಾ ಕೌರವರಾಯ, ಇಂದ್ರನ ಮಗನಾದ ಅರ್ಜುನನ ಅತಿಶಯ ಸಾಹಸವನ್ನು ಕಣ್ಣಾರೆ ನೋಡಿದೆಯಾ ? ಈ ಸಾಹಸವನ್ನು ನೀನು ಯಾವಾಗ ಕಾಣಲು ಸಾಧ್ಯವಾಗುತ್ತಿತ್ತು ? ದ್ರೋಣ, ಕೃಪ, ಅಶ್ವತ್ಥಾಮ ಮೊದಲಾದವರಲ್ಲಿ ಹಿಂದೆ ಹಲವು ಸಂದರ್ಭಗಳಲ್ಲಿ ಅರ್ಜುನನ ಪರಾಕ್ರಮವನ್ನು ತಿಳಿದಿರುವರು ಯುದ್ಧದಲ್ಲಿ ಅರ್ಜುನನ್ನು ಗೆಲ್ಲಬಲ್ಲೆನೆಂಬ ಭ್ರಾಂತಿಯನ್ನು ಇನ್ನಾದರು ಬಿಡು, ಉದಾರ ಬುದ್ಧಿಯವನಾಗಿ ವರ್ತಿಸು ಎಂದನು.
ಪದಾರ್ಥ (ಕ.ಗ.ಪ)
ಪುರಂದರಾತ್ಮಜ-ಅರ್ಜುನ,
ಮೂಲ ...{Loading}...
ತಂದೆ ಕಂಡೈ ಕೌರವೇಶ ಪು
ರಂದರಾತ್ಮಜನತಿ ಬಳವ ನೀ
ನಿಂದೆ ಕಾಣಲುಬೇಹುದೈ ಹಲವಂಗದಲಿ ನರನ
ಹಿಂದೆ ಬಲ್ಲರು ದ್ರೋಣ ಕೃಪ ಗುರು
ನಂದನಾದಿಗಳೆಲ್ಲ ಕೇಳೈ
ಮಂದಮತಿತನ ಬೇಡವಿನ್ನು ಕೃಪಾಳುವಾಗೆಂದ ॥29॥
೦೩೦ ಅಳಿದರೊಡಹುಟ್ಟಿದರು ಹಲಬರು ...{Loading}...
ಅಳಿದರೊಡಹುಟ್ಟಿದರು ಹಲಬರು
ನೆಲನ ರಾಯರು ಸವೆದರತಿ ಬಲ
ರಳುಕುವರು ನರನೆಂದಡೀ ದ್ರೋಣಾದಿ ನಾಯಕರು
ಅಲಗಿನಂಬಿನ ಹಕ್ಕೆ ನಮಗಾ
ಯ್ತೊಳಜಗಳ ಸಾಕಿನ್ನು ಸೋದರ
ರೊಳಗೆ ಸಂಪ್ರತಿಯಾಗಿ ಬದುಕುವದೆಂದನಾ ಭೀಷ್ಮ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ತಮ್ಮಂದಿರು ಹಲವು ಮಂದಿ ಈಗಾಗಲೇ ಸತ್ತಿದ್ದಾರೆ. ನಿನ್ನ ಕಡೆಗೆ ಸಹಾಯಕ್ಕೆ ಬಂದ ಹಲವಾರು ಅರಸರು ಮಡಿದಿದ್ದಾರೆ. ಅರ್ಜುನನ ಹೆಸರು ಹೇಳಿದ ಮಾತ್ರಕ್ಕೆ ಈ ದ್ರೋಣನೇ ಮೊದಲಾದ ನಾಯಕರೂ ಹೆದರುವರು. ಇನ್ನು ನಮಗೋ ? ಹರಿತವಾದ ಅಲಗಿನ ಬಾಣಗಳ ಹಾಸಿಗೆ ಲಭಿಸಿತು. ಆದ ಕಾರಣ, ನಿಮ್ಮ ಸೋದರರ ಅಂತಃಕಲಹವನ್ನು ಇನ್ನಾದರೂ ಸಾಕು ಮಾಡು. ಒಡಹುಟ್ಟಿದ ಪಾಂಡವರೊಡನೆ ಸಂಧಾನ ಮಾಡಿಕೊಂಡು ಬಾಳು ಎಂದು ಭೀಷ್ಮನು ದುರ್ಯೋಧನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹಕ್ಕೆ-ಇರುವ ಜಾಗ,
ಮೂಲ ...{Loading}...
ಅಳಿದರೊಡಹುಟ್ಟಿದರು ಹಲಬರು
ನೆಲನ ರಾಯರು ಸವೆದರತಿ ಬಲ
ರಳುಕುವರು ನರನೆಂದಡೀ ದ್ರೋಣಾದಿ ನಾಯಕರು
ಅಲಗಿನಂಬಿನ ಹಕ್ಕೆ ನಮಗಾ
ಯ್ತೊಳಜಗಳ ಸಾಕಿನ್ನು ಸೋದರ
ರೊಳಗೆ ಸಂಪ್ರತಿಯಾಗಿ ಬದುಕುವದೆಂದನಾ ಭೀಷ್ಮ ॥30॥
೦೩೧ ನಿನಗರೋಚಕವೆಮ್ಮ ಮಾತುಗ ...{Loading}...
ನಿನಗರೋಚಕವೆಮ್ಮ ಮಾತುಗ
ಳನಿಬರಿಗೆ ಸೊಗಸುವುದು ಪಾಂಡವ
ರನುಮತವು ಬೇರಿಲ್ಲ ನಮ್ಮನುಮತದೊಳಡಗಿಹರು
ತನುಜ ಕದನದ ಕಡ್ಡತನ ಬೇ
ಡೆನಗಿದುಪಕಾರವು ವೃಥಾ ಕುರು
ವನಕೆ ವಹ್ನಿಯ ಬಿತ್ತಬೇಡಕಟೆಂದನಾ ಭೀಷ್ಮ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಮಾತುಗಳು ನಿನಗೆ ರುಚಿಸುವುದಿಲ್ಲ ಉಳಿದ ಎಲ್ಲರಿಗೂ ರುಚಿಸುತ್ತದೆ. ಪಾಂಡವರು ನಮ್ಮ ಮಾತನ್ನು ಕೇಳುತ್ತಾರೆ. ನಮ್ಮ ಇಷ್ಟವನ್ನು ನಡೆಸಿಕೊಟ್ಟಿದ್ದಾರೆ. ಮಗನೇ, ಯುದ್ಧ ಮಾಡೇ ಮಾಡುವೆನು ಎಂಬ ಹಠಮಾರಿತನ ನಿನಗೆ ಬೇಡ. ನೀನು ಹಠ ತೊರೆದರೆ ನನಗೆ ನೀ ಮಾಡಿದ ಉಪಕಾರವಾಗುತ್ತದೆ. ವ್ಯರ್ಥವಾಗಿ ಕೌರವ ವಂಶವೆಂಬ ಕಾಡಿಗೆ ದ್ವೇಷದ ಬೆಂಕಿಯನ್ನು ಹಾಕಿ ಸುಡಬೇಡ, ಅಯ್ಯೋ ಎಂದು ಆ ಭೀಷ್ಮ ಮರುಗಿದನು.
ಪದಾರ್ಥ (ಕ.ಗ.ಪ)
ಅರೋಚಕವು-ಮನಸ್ಸಿಗೆ ಹಿಡಿಸುವುದಿಲ್ಲ, ಸೊಗಸುವುದು-ಮನಸ್ಸಿಗೆ ಹಿಡಿಸುತ್ತದೆ, ಅನುಮv-¸ಮ್ಮತಿ, ಕಡ್ಡತನ-ಹಠಮಾರಿತನ, ವಹ್ನಿ-ಬೆಂಕಿ
ಮೂಲ ...{Loading}...
ನಿನಗರೋಚಕವೆಮ್ಮ ಮಾತುಗ
ಳನಿಬರಿಗೆ ಸೊಗಸುವುದು ಪಾಂಡವ
ರನುಮತವು ಬೇರಿಲ್ಲ ನಮ್ಮನುಮತದೊಳಡಗಿಹರು
ತನುಜ ಕದನದ ಕಡ್ಡತನ ಬೇ
ಡೆನಗಿದುಪಕಾರವು ವೃಥಾ ಕುರು
ವನಕೆ ವಹ್ನಿಯ ಬಿತ್ತಬೇಡಕಟೆಂದನಾ ಭೀಷ್ಮ ॥31॥
೦೩೨ ಮಾತು ಕಿವಿಯೊಗದಾನು ...{Loading}...
ಮಾತು ಕಿವಿಯೊಗದಾನು ಸಮರಂ
ಗಾತುರನು ಛಲದಂಕನೆಂಬೀ
ಖ್ಯಾತಿಯನು ಮೆರೆದಾತನಲ್ಲದೆ ರಾಜ್ಯ ಪದವಿಯಲಿ
ಸೋತ ಮನದವನಲ್ಲ ಭುವನ
ಖ್ಯಾತನೆನಿಪೊಂದಾಶೆಯನು ದಿಟ
ನೀತಿಗಳೆದರೆ ಬಳಿಕ ನಿಮ್ಮಯ ಮೊಮ್ಮನಲ್ಲೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಸಂಧಿ ಮಾತನ್ನು ಎತ್ತಿದ ಭೀಷ್ಮನಿಗೆ ದುರ್ಯೋಧನ ಹೇಳುತ್ತಾನೆ : ನಿಮ್ಮ ಬುದ್ಧಿವಾದದ ಮಾತು ನನ್ನ ಕಿವಿಗೆ ಬೀಳುವುದಿಲ್ಲ . ನಾನು ಯುದ್ಧ ಮಾಡಲು ಸಡಗರ ಪಡುವವನಾಗಿದ್ದೇನೆ. ಛಲದಂಕಮಲ್ಲ ಎಂಬ ಬಿರುದನಿಂದ ವಿರಾಜಿಸಿದವನು ನಾನು. ಅದೂ ಅಲ್ಲದೆ ರಾಜ್ಯದಾಸೆಗೆ ಮನಸೋತವನೂ ಅಲ್ಲ. ಭೂಮಿಯಲ್ಲಿ ಪ್ರಖ್ಯಾತನೆಂದು ಎನಿಸಿಕೊಳ್ಳುವ ಆಸೆಯವನು ನಾನು ಎಂಬುದು ನಿಜ. ಈ ಮನೋನಿಶ್ಚಯವನ್ನು ಕೈಬಿಟ್ಟೆನಾದರೆ ಆಗ ನಾನು ನಿಮ್ಮ ಮೊಮ್ಮಗನೇ ಅಲ್ಲ ಎಂದು ತಿಳಿಯಿರಿ ಎಂದನು.
ಮೂಲ ...{Loading}...
ಮಾತು ಕಿವಿಯೊಗದಾನು ಸಮರಂ
ಗಾತುರನು ಛಲದಂಕನೆಂಬೀ
ಖ್ಯಾತಿಯನು ಮೆರೆದಾತನಲ್ಲದೆ ರಾಜ್ಯ ಪದವಿಯಲಿ
ಸೋತ ಮನದವನಲ್ಲ ಭುವನ
ಖ್ಯಾತನೆನಿಪೊಂದಾಶೆಯನು ದಿಟ
ನೀತಿಗಳೆದರೆ ಬಳಿಕ ನಿಮ್ಮಯ ಮೊಮ್ಮನಲ್ಲೆಂದ ॥32॥
೦೩೩ ಮೊದಲಲೆನ್ದಿರಿ ನೀವು ...{Loading}...
ಮೊದಲಲೆಂದಿರಿ ನೀವು ಬಳಿಕೀ
ಯದುಕುಲಾದಿಪ ಕೃಷ್ಣ ನೆರೆ ಹೇ
ಳಿದನು ಋಷಿಗಳು ಬೊಪ್ಪನವರೀ ಹದನ ಸಾರಿದರು
ವಿದುರ ಹೇಳಿದನೆಲ್ಲರಿಗೆ ತಾ
ನಿದುವೆ ಮತವೆನಗೊಬ್ಬಗೆಯು ಬಲು
ಗದನವೇ ಮತವೆಂದು ಹೇಳಿದೆ ಹಿಂದು ನಿಮಗೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಜ್ಜಾ ನೀವು ಈ ಸಂಧಿಯ ಮಾತನ್ನು ಮೊದಲು ಹೇಳಿದಿರಿ. ಬಳಿಕ ಈ ಯದುವಂಶದ ದೊರೆ ಕೃಷ್ಣನು ಪೂರ್ಣವಾಗಿ ಹೇಳಿದನು. ಅನಂತರ ವೇದವ್ಯಾಸರೇ ಮೊದಲಾದ ಋಷಿಗಳು ಮತ್ತು ತಂದೆಯಾದ ಧೃತರಾಷ್ಟ್ರ ಈ ವಿಷಯವನ್ನು ತಿಳಿಸಿದರು. ವಿದುರನೂ ಹೇಳಿದನು. ಈ ವಿಷಯ ಹೇಳಿದ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ. ಆದರೆ ನನ್ನೊಬ್ಬನ ಅಭಿಪ್ರಾಯ ಮಾತ್ರ ಬಲವಾಗಿ ಯುದ್ಧ ಮಾಡುವುದೇ ಆಗಿದೆ. ಈ ಮಾತನ್ನು ಹಿಂದೆಯೇ ನಿಮಗೆ ಹೇಳಿದ್ದೇನೆ (ಈಗಲೂ ನನ್ನ ಅಭಿಪ್ರಾಯ ಅದೇ ಆಗಿದೆ) ಎಂದನು.
ಮೂಲ ...{Loading}...
ಮೊದಲಲೆಂದಿರಿ ನೀವು ಬಳಿಕೀ
ಯದುಕುಲಾದಿಪ ಕೃಷ್ಣ ನೆರೆ ಹೇ
ಳಿದನು ಋಷಿಗಳು ಬೊಪ್ಪನವರೀ ಹದನ ಸಾರಿದರು
ವಿದುರ ಹೇಳಿದನೆಲ್ಲರಿಗೆ ತಾ
ನಿದುವೆ ಮತವೆನಗೊಬ್ಬಗೆಯು ಬಲು
ಗದನವೇ ಮತವೆಂದು ಹೇಳಿದೆ ಹಿಂದು ನಿಮಗೆಂದ ॥33॥
೦೩೪ ಒನ್ದು ಮತವೆನಗೊನ್ದು ...{Loading}...
ಒಂದು ಮತವೆನಗೊಂದು ನುಡಿ ಮನ
ವೊಂದು ಮತ್ತೊಂದಿಲ್ಲ ಸಾಕಿದ
ನೆಂದು ಫಲವೇನಿನ್ನು ಸಂಧಿಯೆ ಪಾಂಡುತನಯರಲಿ
ಇಂದು ನಿಮಗೀ ಹದನ ನಾನೇ
ತಂದು ಬಳಿಕೆನ್ನೊಡಲ ಸಲಹುವ
ಚೆಂದವೊಳ್ಳಿತು ತಪ್ಪನಾಡಿದಿರೆಂದನವನೀಶ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನಗೆ ಒಂದೇ ಅಭಿಪ್ರಾಯ, ಒಂದೇ ಮಾತು, ಒಂದೇ ಮನಸ್ಸು, ಬೇರೊಂದು ಇಲ್ಲ, ಸಾಕು ಇದನ್ನು ಮತ್ತೆ ಹೇಳಿಕೊಂಡು ಫಲವೇನು ? ಇಷ್ಟು ಹೇಳಿದ ಮೇಲೂ ಪಾಂಡವರೊಡನೆ ಸಂಧಿ ಮಾತೇಕೆ ? ಈಗ ನಿಮಗೆ ಈ ಪರಿಸ್ಥಿತಿಯನ್ನು ನಾನೇ ಉಂಟು ಮಾಡಿದ ಮೇಲೆ ಇನ್ನು ನಾನು ನನ್ನ ದೇಹವನ್ನು ರಕ್ಷಿಸಿಕೊಳ್ಳುವುದು ಒಳ್ಳೆಯದೇ ? ನೀವು ಸರಿಯಲ್ಲ್ಲದ ಮಾತನ್ನು ಹೇಳಿದಿರಿ ಎಂದು ದುರ್ಯೋಧನ ಹೇಳಿದನು.
ಮೂಲ ...{Loading}...
ಒಂದು ಮತವೆನಗೊಂದು ನುಡಿ ಮನ
ವೊಂದು ಮತ್ತೊಂದಿಲ್ಲ ಸಾಕಿದ
ನೆಂದು ಫಲವೇನಿನ್ನು ಸಂಧಿಯೆ ಪಾಂಡುತನಯರಲಿ
ಇಂದು ನಿಮಗೀ ಹದನ ನಾನೇ
ತಂದು ಬಳಿಕೆನ್ನೊಡಲ ಸಲಹುವ
ಚೆಂದವೊಳ್ಳಿತು ತಪ್ಪನಾಡಿದಿರೆಂದನವನೀಶ ॥34॥
೦೩೫ ಕಾಯದಲಿ ಕಕ್ಕುಲಿತೆ ...{Loading}...
ಕಾಯದಲಿ ಕಕ್ಕುಲಿತೆ ಯೇಕಿದ
ರಾಯಸವು ತಾನೇಸು ದಿನ ಕ
ಲ್ಪಾಯುಗಳಿಗೊಳಗಾಗಿ ಕಾಲನ ರಾಜಕಾರಿಯವು
ಹೇಯವೀ ಸಿರಿಯಿದರ ಮೈ ವಶ
ದಾಯತಿಕೆ ನಮಗಿಲ್ಲ ಪಾಂಡವ
ರಾಯ ಮಸ್ತಕಶೂಲನೆಂಬೀ ಬಿರುದ ಬಿಡೆನೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದೇಹದ ಮೇಲೆ ವ್ಯಾಮೋಹ ಏತಕ್ಕೆ ? ಈ ದೇಹದ ಆಯುಷ್ಯ ಎಷ್ಟು ದಿನ ಇದ್ದೀತು ? ಅಲ್ಪ ಜೀವಿತ ಕಾಲ. ಒಂದು ಗಳಿಗೆಯಲ್ಲಿ ಈ ದೇಹದ ಮೇಲೆ ಯಮನ ಅಧಿಕಾರ ಚಲಾಯಿಸಲ್ಪಡುವುದು. (ಸಾವು ಬರುತ್ತದೆ) ಈ ಸಂಪತ್ತೂ ತಿರಸ್ಕಾರ ಯೋಗ್ಯವಾದುದು. ಈ ಸಂಪತ್ತನ್ನು ಕೈವಶಮಾಡಿಕೊಳ್ಳುವ ಅತ್ಯಾಸೆ ಎಂಬ ಅತಿಶಯತೆ ನನಗಿಲ್ಲ. ಪಾಂಡವ ರಾಜರ ತಲೆಗೆ ಶೂಲಪ್ರಾಯನು ಎಂಬ ಖ್ಯಾತಿಯನ್ನು ಬಿಡುವುದಿಲ್ಲ ಎಂದನು.
ಪದಾರ್ಥ (ಕ.ಗ.ಪ)
ಆಯಸ-ಆಯುಷ್ಯ,
ಮೂಲ ...{Loading}...
ಕಾಯದಲಿ ಕಕ್ಕುಲಿತೆ ಯೇಕಿದ
ರಾಯಸವು ತಾನೇಸು ದಿನ ಕ
ಲ್ಪಾಯುಗಳಿಗೊಳಗಾಗಿ ಕಾಲನ ರಾಜಕಾರಿಯವು
ಹೇಯವೀ ಸಿರಿಯಿದರ ಮೈ ವಶ
ದಾಯತಿಕೆ ನಮಗಿಲ್ಲ ಪಾಂಡವ
ರಾಯ ಮಸ್ತಕಶೂಲನೆಂಬೀ ಬಿರುದ ಬಿಡೆನೆಂದ ॥35॥
೦೩೬ ಎಲವೊ ಭೀಷ್ಮರ ...{Loading}...
ಎಲವೊ ಭೀಷ್ಮರ ಮಾತುಗಳ ನೀ
ನೊಲಿವರೆಯು ಸಂಧಾನದಲಿ ನೀ
ನಿಲುವರೆಯು ದೇಹಾಭಿಲಾಷೆಗೆ ಬಲಿವರೆಯು ಮನವ
ಒಲಿದ ಭೀಮನೆ ನಿನ್ನ ಸಂಧಿಯ
ಕಳಚಿ ನಿನ್ನೊಡಹುಟ್ಟಿದೀತನ
ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ಕೌರವನೇ, ಭೀಷ್ಮರ ಮಾತುಗಳನ್ನು ನೀನು ಒಪ್ಪುವುದಾದರೂ, ಸಂಧಿಗೆ ನೀನು ನಿಶ್ಚಯ ಮಾಡಿದರೂ ದೇಹವುಳಿಸುಕೊಳ್ಳುವ ಆಸೆಗೆ ಮನಸ್ಸನ್ನು ದೃಢ ಸಂಕಲ್ಪಗೊಳಿಸಿದರೂ ನಿನ್ನ ಕಡೆಯೇ ದೃಷ್ಟಿಯನ್ನಿರಿಸಿರುವ ಭೀಮನು ನಿನ್ನ ಸಂಧಿ ಕೀಲುಗಳನ್ನು ಸಡಿಲುಗೊಳಿಸಿ, ನಿನ್ನ ಸೋದರನಾದ ಈ ದುಶ್ಶಾಸನನ ಹೊಸ ಬಿಸಿರಕುತವನ್ನು ‘ಸುರ್’ ಎಂದು ಕುಡಿಯುತ್ತಿಯೇನೆಯೇ ಹೊರತು ನಿನ್ನನ್ನು ಸುಮ್ಮನೆ ಬಿಡುವನಲ್ಲ ಎಂದು ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಸುರಿವೆನು-ಸುರ್ರೆಂದು ಕುಡಿಯುವೆನು
ಮೂಲ ...{Loading}...
ಎಲವೊ ಭೀಷ್ಮರ ಮಾತುಗಳ ನೀ
ನೊಲಿವರೆಯು ಸಂಧಾನದಲಿ ನೀ
ನಿಲುವರೆಯು ದೇಹಾಭಿಲಾಷೆಗೆ ಬಲಿವರೆಯು ಮನವ
ಒಲಿದ ಭೀಮನೆ ನಿನ್ನ ಸಂಧಿಯ
ಕಳಚಿ ನಿನ್ನೊಡಹುಟ್ಟಿದೀತನ
ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ ॥36॥
೦೩೭ ಹಾ ನುಡಿಯದಿರು ...{Loading}...
ಹಾ ನುಡಿಯದಿರು ನಿಲು ಪಿತಾಮಹ
ನೇನ ಬೆಸಸಿದುದಕೆ ಹಸಾದವು
ನೀನು ನಡೆ ಪಾಳಯಕೆ ಬಿಡುಗುರಿತನವ ಮಾಣೆಯಲ
ಮೌನಮುದ್ರೆಯ ಹಿಡಿಯೆನಲು ಪವ
ಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ ನೋಡಿ ಮೆಲ್ಲನೆ ಸರಿದನಲ್ಲಿಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಅವಿಧೇಯತೆಯಿಂದ ಮಾತಾಡಿದ ಭೀಮನಿಗೆ ಧರ್ಮರಾಜ ಹೇಳಿದನು. ಹಾ ! ಭೀಮಾ, ಸಾಕುಮಾಡು. ಮಾತಾಡಬೇಡ ನಿಲ್ಲಿಸು. ಅಜ್ಜನಾದ ಭೀಷ್ಮನು ಏನಪ್ಪಣೆ ಮಾಡುತ್ತಾನೋ ಅದೇ ಅನುಗ್ರಹ ನಮಗೆ. ನೀನು ಬಿಡಾರಕ್ಕೆ ಹಿಂದಿರುಗು. ಇನ್ನೂ ನೀನು ಒರಟುತನವನ್ನು ಬಿಟ್ಟಿಲ್ಲವಲ್ಲಾ. ಮಾತಾಡದೆ ಸುಮ್ಮನಾಗು ಎಂದು ಧರ್ಮಜ ಹೇಳಿದಾಗ ಭೀಮನು ಸಿಟ್ಟಿನಿಂದ ನಿಡುನೋಟ ಬೀರಿ, ಮೆಲ್ಲಗೆ ಅಲ್ಲಿಂದ ಹೊರಟನು.
ಪದಾರ್ಥ (ಕ.ಗ.ಪ)
ಬಿಡುಗುರಿತನವ-ಒರಟುತನವನ್ನು, ಬಿಡೆನೋಡಿ-ನಿಟ್ಟಿಸಿ ನೋಡಿ
ಮೂಲ ...{Loading}...
ಹಾ ನುಡಿಯದಿರು ನಿಲು ಪಿತಾಮಹ
ನೇನ ಬೆಸಸಿದುದಕೆ ಹಸಾದವು
ನೀನು ನಡೆ ಪಾಳಯಕೆ ಬಿಡುಗುರಿತನವ ಮಾಣೆಯಲ
ಮೌನಮುದ್ರೆಯ ಹಿಡಿಯೆನಲು ಪವ
ಮಾನನಂದನ ಖಾತಿಯಲಿ ಯಮ
ಸೂನುವನು ಬಿಡೆ ನೋಡಿ ಮೆಲ್ಲನೆ ಸರಿದನಲ್ಲಿಂದ ॥37॥
೦೩೮ ಬೀಳುಕೊಡಿರೇ ಸಾಕು ...{Loading}...
ಬೀಳುಕೊಡಿರೇ ಸಾಕು ಭೀಮನು
ಬಾಲಭಾಷಿತನಾದನೀ ಭೂ
ಪಾಲ ಕೌರವನೆಂಬೆನೇ ಮೊದಲಿಗನು ಮೂರ್ಖರಿಗೆ
ಕಾಳೆಗದೊಳೊಡೆಹಾಯ್ದು ಸಾಯಲಿ
ಬಾಳಲೊಲಿದಂತಾಗಿ ಹೋಗಲಿ
ಹೇಳಿದಿರಿ ನಿಮ್ಮಿಂದ ತಪ್ಪಿಲ್ಲೆಂದನಸುರಾರಿ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇನ್ನು ನಮ್ಮನ್ನು ಕಳಿಸಿಕೊಡಿ. . ಭೀಮಸೇನನು ಬಾಲಕರಂತೆ ವಿವೇಕರಹಿತ ನುಡಿಗಳನ್ನು ಆಡಿದನು. ಈ ಅರಸ ಕೌರವನನ್ನು ಕುರಿತು ಹೇಳಬೇಕೇ ? ದಡ್ಡರಲ್ಲಿ ಅಗ್ರಗಣ್ಯನು. ಯುದ್ಧದಲ್ಲಿ ಇವರು ನುಗ್ಗಿ ಹೋರಾಡಿ ಸಾಯಲಿ ಇಲ್ಲವೆ ಬದುಕಲಿ, ಅವರವರು ಇಷ್ಟಪಟ್ಟಂತೆ ವರ್ತಿಸಲಿ. ನೀವಂತೂ ಉಚಿತವಾದುದನ್ನು ಹೇಳಿದ್ದೀರಿ. ನಿಮ್ಮಿಂದ ಯಾವ ದೋಷವೂ ಉಂಟಾಗಿಲ್ಲ ಎಂದು ಕೃಷ್ಣನು ಭೀಷ್ಮರಿಗೆ ಹೇಳಿದನು.
ಮೂಲ ...{Loading}...
ಬೀಳುಕೊಡಿರೇ ಸಾಕು ಭೀಮನು
ಬಾಲಭಾಷಿತನಾದನೀ ಭೂ
ಪಾಲ ಕೌರವನೆಂಬೆನೇ ಮೊದಲಿಗನು ಮೂರ್ಖರಿಗೆ
ಕಾಳೆಗದೊಳೊಡೆಹಾಯ್ದು ಸಾಯಲಿ
ಬಾಳಲೊಲಿದಂತಾಗಿ ಹೋಗಲಿ
ಹೇಳಿದಿರಿ ನಿಮ್ಮಿಂದ ತಪ್ಪಿಲ್ಲೆಂದನಸುರಾರಿ ॥38॥
೦೩೯ ಮುರಹರನ ಮಾತಹುದು ...{Loading}...
ಮುರಹರನ ಮಾತಹುದು ಸಾಕಿ
ನ್ನರಸ ಧರ್ಮಜ ಹೋಗು ದ್ರುಪದಾ
ದ್ಯರಿಗೆ ನೇಮವು ಪಾರ್ಥ ಮರಳೈ ತಂದೆ ಪಾಳಯಕೆ
ಧರೆಯ ಲೋಲುಪ್ತಿಯಲಿ ಸಲೆ ಕಾ
ತರಿಸಿ ತಪ್ಪಿದೆವೆಮ್ಮೊಳೆಂಬೀ
ಧರಧುರವ ನೆನೆಯದಿರಿ ವಿಜಯಿಗಳಾಗಿ ನೀವೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೊರೆ ಧರ್ಮಜನೇ, ಮುರಾರಿಯ ಮಾತು ಯುಕ್ತವಾಗಿದೆ. ಇನ್ನು ಮಾತು ಸಾಕು. ಪಾಳೆಯಕ್ಕೆ ಹಿಂದಿರುಗು, ದ್ರುಪದನೇ ಮೊದಲಾದವರಿಗೆ ಅಪ್ಪಣೆ ನೀಡಿರುವೆನು, ಅಪ್ಪಾ ಪಾರ್ಥನೇ ಬೀಡಿಗೆ ಹಿಂದಿರುಗು. ರಾಜ್ಯದ ಆಸೆಯಲ್ಲಿ ಹೆಚ್ಚಾಗಿ ತಹತಹಿಸಿ ನಮ್ಮಲ್ಲಿ ತಪ್ಪು ಕೆಲಸ ಮಾಡಿದೆವು ಎಂಬ (ಮನಃಕ್ಲೇಶದ) ಅತಿಶಯವನ್ನು ನೆನೆಸಿಕೊಳ್ಳಬೇಡಿ, ಜಯಶೀಲರಾಗಿರಿ ನೀವು ಎಂದು ಹರಸಿದನು.
ಮೂಲ ...{Loading}...
ಮುರಹರನ ಮಾತಹುದು ಸಾಕಿ
ನ್ನರಸ ಧರ್ಮಜ ಹೋಗು ದ್ರುಪದಾ
ದ್ಯರಿಗೆ ನೇಮವು ಪಾರ್ಥ ಮರಳೈ ತಂದೆ ಪಾಳಯಕೆ
ಧರೆಯ ಲೋಲುಪ್ತಿಯಲಿ ಸಲೆ ಕಾ
ತರಿಸಿ ತಪ್ಪಿದೆವೆಮ್ಮೊಳೆಂಬೀ
ಧರಧುರವ ನೆನೆಯದಿರಿ ವಿಜಯಿಗಳಾಗಿ ನೀವೆಂದ ॥39॥
೦೪೦ ಇವರು ಕಳುಹಿಸಿಕೊಣ್ಡರಾ ...{Loading}...
ಇವರು ಕಳುಹಿಸಿಕೊಂಡರಾ ಮಾ
ಧವನ ಮೆಲ್ಲಡಿಗಳನು ಹೃದಯದೊ
ಳವಚಿ ಕಂಗಳು ತುಂಬಿ ದೇವನ ಮೂರ್ತಿಯನು ಹಿಡಿದು
ಸವೆಯದಮಳಾನಂದ ಬಹಳಾ
ರ್ಣವದೊಳಗೆ ಮುಳುಗಾಡಿ ಲಕ್ಷ್ಮೀ
ಧವನ ಕಳುಹಿದನಿತ್ತ ಬೀಳ್ಕೊಟ್ಟನು ಸುಯೋಧನನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಜಾದಿಗಳು ಭೀಷ್ಮನಿಂದ ಬೀಳ್ಕೊಂಡರು. ಭೀಷ್ಮನು ಆ ಲಕ್ಷ್ಮೀಪತಿಯ ಕೋಮಲ ಚರಣಗಳನ್ನು ಅಂತರಂಗದಲ್ಲಿ ಧ್ಯಾನಿಸುತ್ತಾ ಅವನ ಆಕಾರವನ್ನು ಮನಸ್ಸಿನಲ್ಲಿ ಅಪ್ಪಿಕೊಂಡು ಕಣ್ಣುಗಳಲ್ಲಿ ತುಂಬಿಕೊಂಡು ಅಕ್ಷಯ ರೂಪದ ಅಗಾಧ ಆನಂದ ಸಾಗರದಲಿ ಮುಳುಗೇಳುತ್ತಾ ಕೃಷ್ಣನನ್ನು ಬೀಳ್ಕೊಟ್ಟನು. ಆಮೇಲೆ ಈ ಕಡೆ ದುರ್ಯೋಧನನ್ನು ಕಳುಹಿಸಿಕೊಟ್ಟನು.
ಮೂಲ ...{Loading}...
ಇವರು ಕಳುಹಿಸಿಕೊಂಡರಾ ಮಾ
ಧವನ ಮೆಲ್ಲಡಿಗಳನು ಹೃದಯದೊ
ಳವಚಿ ಕಂಗಳು ತುಂಬಿ ದೇವನ ಮೂರ್ತಿಯನು ಹಿಡಿದು
ಸವೆಯದಮಳಾನಂದ ಬಹಳಾ
ರ್ಣವದೊಳಗೆ ಮುಳುಗಾಡಿ ಲಕ್ಷ್ಮೀ
ಧವನ ಕಳುಹಿದನಿತ್ತ ಬೀಳ್ಕೊಟ್ಟನು ಸುಯೋಧನನ ॥40॥
೦೪೧ ಬವರದೊಳಗೌಚಿತ್ಯ ಪರಿಪಾ ...{Loading}...
ಬವರದೊಳಗೌಚಿತ್ಯ ಪರಿಪಾ
ಕವನು ಬಲ್ಲಿರಿ ಕೌರವರ ಪಾಂ
ಡವರ ವೃತ್ತಾಂತದ ರಹಸ್ಯದ ನೆಲೆಯನರಿದಿಹಿರಿ
ನಿವಗೆ ಬೇರೊಂದಿಲ್ಲ ನಾವ್ ಹೇ
ಳುವುದು ಕೃಷ್ಣನ ನೇಮವನು ಮಾ
ಡುವುದೆನುತ ದ್ರೋಣಾದಿ ಸುಭಟರ ಕಳುಹಿದನು ಭೀಷ್ಮ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಉಚಿತ ಕ್ರಮವಾವುದು, ಪರಿಣಾಮವೇನು ಎಂಬುದು ನಿಮಗೆ ತಿಳಿದೇ ಇದೆ. ಕೌರವರ ಮತ್ತು ಪಾಂಡವರ ವೃತ್ತಾಂತದ ಗುಟ್ಟಿನ ನಿಜಸ್ಥಿತಿಯನ್ನು ತಿಳಿದಿದ್ದೀರಿ. ನಿಮಗೆ ನಾನು ಹೇಳುವುದು ಬೇರೇನೂ ಉಳಿದಿಲ್ಲ. ಕೃಷ್ಣನು ಹೇಳಿದಂತೆ ಕೇಳುವುದು ಅಷ್ಟೇ ಉಳಿದಿರುವುದು ಎನ್ನುತ್ತ ದ್ರೋಣಾದಿ ಸುಭಟರನ್ನು ಭೀಷ್ಮನು ಹಿಂದಕ್ಕೆ ಅವರವರ ಬೀಡುಗಳಿಗೆ ಕಳಿಸಿದನು.
ಮೂಲ ...{Loading}...
ಬವರದೊಳಗೌಚಿತ್ಯ ಪರಿಪಾ
ಕವನು ಬಲ್ಲಿರಿ ಕೌರವರ ಪಾಂ
ಡವರ ವೃತ್ತಾಂತದ ರಹಸ್ಯದ ನೆಲೆಯನರಿದಿಹಿರಿ
ನಿವಗೆ ಬೇರೊಂದಿಲ್ಲ ನಾವ್ ಹೇ
ಳುವುದು ಕೃಷ್ಣನ ನೇಮವನು ಮಾ
ಡುವುದೆನುತ ದ್ರೋಣಾದಿ ಸುಭಟರ ಕಳುಹಿದನು ಭೀಷ್ಮ ॥41॥
೦೪೨ ಬೀಳುಕೊಣ್ಡರು ರಾಯರಿಬ್ಬರು ...{Loading}...
ಬೀಳುಕೊಂಡರು ರಾಯರಿಬ್ಬರು
ಪಾಳಯಂಗಳಿಗಿತ್ತ ಪಡುವಣ
ಶೈಲ ವಿಪುಲ ಸ್ತಂಭದೀಪಿಕೆಯಂತೆ ರವಿ ಮೆರೆದ
ಮೇಲುಮುಸುಕಿನ ಮುಖದ ಚಿತ್ತದ
ಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ ಕೌರವರು ಹೊಕ್ಕರು ನಿಜಾಲಯವ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸರಾದ ಧರ್ಮಜನೂ ದುರ್ಯೋಧನನೂ ತಮ್ಮ ತಮ್ಮ ಪಾಳೆಯಗಳಿಗೆ ಹಿಂದಿರುಗಿದರು. ಈ ಕಡೆ ಸೂರ್ಯದೇವನು ಪಶ್ಚಿಮ ದಿಕ್ಕಿನ ಬೆಟ್ಟವೆಂಬ ಭವ್ಯವಾದ ಕಂಬದ ಮೇಲಿರುವ ದೀಪದಂತೆ ಶೋಭಿಸಿದನು (ಸೂರ್ಯ ಮುಳುಗಿದನು). ಕೌರವರು ಅವಮಾನದಿಂದ ಮುಖವನ್ನು ಮುಚ್ಚಿಕೊಂಡು ಮನಸ್ಸಿನಲ್ಲಿ ತುಂಬಿಕೊಂಡ ದುಃಖದ ಕಶ್ಮಲ ಸಾಗರದ ಕಾಲುವೆಗಳೋ ಎಂಬಂತೆ ತಂತಮ್ಮ ನಿವಾಸಗಳಿಗೆ ತೆರಳಿದರು.
ಮೂಲ ...{Loading}...
ಬೀಳುಕೊಂಡರು ರಾಯರಿಬ್ಬರು
ಪಾಳಯಂಗಳಿಗಿತ್ತ ಪಡುವಣ
ಶೈಲ ವಿಪುಲ ಸ್ತಂಭದೀಪಿಕೆಯಂತೆ ರವಿ ಮೆರೆದ
ಮೇಲುಮುಸುಕಿನ ಮುಖದ ಚಿತ್ತದ
ಕಾಳಿಕೆಯ ದುಮ್ಮಾನಜಲಧಿಯ
ಕಾಲುವೆಗಳೆನೆ ಕೌರವರು ಹೊಕ್ಕರು ನಿಜಾಲಯವ ॥42॥
೦೪೩ ಇವರು ಭೀಷ್ಮನ ...{Loading}...
ಇವರು ಭೀಷ್ಮನ ಬೀಳುಕೊಂಡು
ತ್ಸವದ ಹರುಷದಲೊಮ್ಮೆ ಗಂಗಾ
ಭವಗೆ ತಪ್ಪಿದ ದುಗುಡ ಭಾರದಲೊಮ್ಮೆ ಚಿಂತಿಸುತ
ಕವಲು ಮನದಲಿ ಕಂಪಿಸುತ ಶಿಬಿ
ರವನು ಹೊಕ್ಕರು ನಿಖಿಲ ಸೇನಾ
ನಿವಹ ಸಹಿತವೆ ವೀರ ನಾರಾಯಣನ ಕರುಣದಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತಕಡೆ ಪಾಂಡವರು ಭೀಷ್ಮನನ್ನು ಬಿಟ್ಟು ಹೊರಟು, ಒಂದು ಸಲ ಜಯವನ್ನು ಪಡೆದ ಸಂತೋಷದಲ್ಲಿ ಇನ್ನೊಂದು ಸಲ ಭೀಷ್ಮನಿಗೆ ಮರಣದೆಸೆ ತಂದ ಅವಕಾಶದ ದುಃಖದ ಆಧಿಕ್ಯದಲ್ಲಿ ಚಿಂತಿಸುತ್ತ, ಇಬ್ಬಗೆಯ ಮನಸ್ಸಿನಲ್ಲಿ ಚಂಚಲರಾಗುತ್ತ, ಸಮಸ್ತ ಸೇನಾ ಪರಿವಾರದಿಂದ ಕೂಡಿ ಗದುಗಿನ ವೀರನಾರಾಯಣನ ಅನುಗ್ರಹದಲ್ಲಿ ಪಾಳೆಯವನ್ನು ಪ್ರವೇಶಿಸಿದರು.
ಪದಾರ್ಥ (ಕ.ಗ.ಪ)
ನಿವಹ-ಪರಿವಾರ
ಮೂಲ ...{Loading}...
ಇವರು ಭೀಷ್ಮನ ಬೀಳುಕೊಂಡು
ತ್ಸವದ ಹರುಷದಲೊಮ್ಮೆ ಗಂಗಾ
ಭವಗೆ ತಪ್ಪಿದ ದುಗುಡ ಭಾರದಲೊಮ್ಮೆ ಚಿಂತಿಸುತ
ಕವಲು ಮನದಲಿ ಕಂಪಿಸುತ ಶಿಬಿ
ರವನು ಹೊಕ್ಕರು ನಿಖಿಲ ಸೇನಾ
ನಿವಹ ಸಹಿತವೆ ವೀರ ನಾರಾಯಣನ ಕರುಣದಲಿ ॥43॥
೦೪೪ ಇತಿ ಶ್ರೀಮದಚಿನ್ತ್ಯ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಭೀಷ್ಮಪರ್ವಂ ಸಮಾಪ್ತಮಾದುದು.
ಸರ್ವ-ಟೀಕೆಗಳು ...{Loading}...
ಮೂಲ ...{Loading}...
ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಭೀಷ್ಮಪರ್ವಂ ಸಮಾಪ್ತಮಾದುದು.