೦೦೦ ಸೂ ವೀರ ...{Loading}...
ಸೂ. ವೀರ ಭಾಗೀರಥಿಯ ತನಯನೊ
ಳಾ ರಿಪುವ್ರಜವಿಜಯ ಫಲುಗುಣ
ಹೋರಿದನು ಸರಿಸಮರದಲಿ ತ್ರೈಜಗವು ಕೊಂಡಾಡೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅರಿಗಳನ್ನು ಗೆಲ್ಲುವ ಸಾಹಸಿ ಅರ್ಜುನನು, ಯುದ್ಧದಲ್ಲಿ ಗಂಗಾಪುತ್ರನಾದ ವೀರ ಭೀಷ್ಮನೊಂದಿಗೆ ಸರಿಸಮಾನವಾಗಿ, ಮೂರು ಲೋಕಗಳು ಮೆಚ್ಚುವಂತೆ ಹೋರಾಡಿದನು.
ಮೂಲ ...{Loading}...
ಸೂ. ವೀರ ಭಾಗೀರಥಿಯ ತನಯನೊ
ಳಾ ರಿಪುವ್ರಜವಿಜಯ ಫಲುಗುಣ
ಹೋರಿದನು ಸರಿಸಮರದಲಿ ತ್ರೈಜಗವು ಕೊಂಡಾಡೆ
೦೦೧ ಜೀಯ ಚಿತ್ತೈಸಿದರೆ ...{Loading}...
ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾಮಿಯೇ, ಕೇಳಿದಿರಾ ಸೇನಾಧಿಪತಿಗಳು ಸೋಲಿನಿಂದಾದ ಅವಮಾನಕ್ಕೆ ಮುಖಕ್ಕೆ ಮುಸುಕುಗಳನ್ನು ಹಾಕಿಕೊಂಡ ಪರಿಯನ್ನು? ಈ ಮೊದಲು ತಮ್ಮ ಶೌರ್ಯದ ಪ್ರತೀಕದ ಬಿರುದುಗಳ ಅತಿಶಯವನ್ನು ಇಂದು ಅವರ ಗಮನಕ್ಕೆ ತಂದಿರಾ ? ಯುದ್ಧದಲ್ಲಿ ಗೆಲ್ಲಬೇಕು ಇಲ್ಲವೇ ಸಾಯಬೇಕು ಎಂಬ ಕ್ಷತ್ರಿಯ ಧರ್ಮವನ್ನು ಕಾಪಾಡಿಕೊಂಡರೆ ? ಹೊಟ್ಟೆ ಹೊರೆದುಕೊಳ್ಳುವ ಆಸಕ್ತಿಯ ಪರಿಪಾಕದಲ್ಲಿ ಉಂಟಾದ ಪಲಾಯನ ಮಾಡುವ ಆಧಿಕ್ಯವನ್ನು ಗಮನಿಸಿ ಎನ್ನಲು ಆಗ ಭೀಷ್ಮ ಹೀಗೆ ನುಡಿದನು.
ಪದಾರ್ಥ (ಕ.ಗ.ಪ)
ಉಬ್ಬಟೆ-ಅತಿಶಯ, ಜಠರ ಪರಾಯಣರು -ಹೊಟ್ಟೆ ಹೊರೆದುಕೊಳ್ಳುವವರು, ಹೆಬ್ಬೆಳಸು-ಹಿರಿದಾದ ಬೆಳೆ ಆಧಿಕ್ಯ, ಹೆಚ್ಚುಗೆಯನ್ನು, ಆಯತವನು-ಪರಿಯನ್ನು
ಮೂಲ ...{Loading}...
ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ ॥1॥
೦೦೨ ಅರಸ ಹೊಲ್ಲೆಹದೇನು ...{Loading}...
ಅರಸ ಹೊಲ್ಲೆಹದೇನು ಪಾರ್ಥನ
ಸರಿಸದಲಿ ನಿಲುವೆದೆಯ ಬಲುಹು
ಳ್ಳರನು ದೇವಾಸುರರೊಳರಿಯೆನು ಮನುಜರೇನಹರು
ತಿರುಗಬೇಕವಗಡಿಸಿದರೆ ಸಂ
ಗರವ ಹೊಗುವುದು ಸರಿದರಿದಿರುವ
ನರಿದು ಕಾದುವುದಿದರಲಾವುದು ಕೊರತೆ ಹೇಳೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸಾ (ಅವರು ಪಲಾಯನ ಮಾಡಿದ್ದರಲ್ಲಿ) ತಪ್ಪೇನಿದೆ ? ಪಾರ್ಥನಿಗೆ ಸರಿಸಮಾನವಾಗಿ ಇದುರಿನಲ್ಲಿ ನಿಲ್ಲುವ ಎದೆಗಾರಿಕೆ ಉಳ್ಳವರು ದೇವತೆಗಳಲ್ಲಾಗಲಿ ರಾಕ್ಷಸರಲ್ಲಾಗಲಿ ಇದ್ದಾರೋ ಏನೋ ನನಗೆ ಗೊತ್ತಿಲ್ಲ. ಇನ್ನು ಮನುಷ್ಯರು ಏನು ಮಾಡಬಲ್ಲರು ? ಎಷ್ಟರ ಮಟ್ಟಿಗೆ ಅವನಿಗೆ ಸಮನಾಗಬಲ್ಲರು ? ಯುದ್ಧಕ್ಕೆ ನುಗ್ಗಬೇಕು, ಶತ್ರು ಅತಿಪರಾಕ್ರಮ ತೋರಿದಾಗ (ಪ್ರತಿಭಟಸಿದರೆ ಹಿಂತಿರುಗಬೇಕು. ಹಗೆ ಹಿಂಜರಿದರೆ, ಹೋರಾಡುವ ಶತ್ರುವಿನ ಶಕ್ತಿಯ ಇತಿಮಿತಿ ತಿಳಿದು ಹೋರಾಡಬೇಕು. ಈ ವಿಷಯದಲ್ಲಿ ದೋಷವೇನಿದೆ ಹೇಳು ಎಂದ.
ಪದಾರ್ಥ (ಕ.ಗ.ಪ)
ಸರಿಸದಲಿ-ಇದಿರಿನಲಿ, ಎದೆಯ ಬಲುಹುವುಳ್ಳವನು-ಎದೆಗಾರಿಕೆಯುಳ್ಳವನು, ಸಂಗರ-ಸಮರ, ಸರಿದರೆ-ಹಗೆ ಹಿಂಜರಿದರೆ
ಮೂಲ ...{Loading}...
ಅರಸ ಹೊಲ್ಲೆಹದೇನು ಪಾರ್ಥನ
ಸರಿಸದಲಿ ನಿಲುವೆದೆಯ ಬಲುಹು
ಳ್ಳರನು ದೇವಾಸುರರೊಳರಿಯೆನು ಮನುಜರೇನಹರು
ತಿರುಗಬೇಕವಗಡಿಸಿದರೆ ಸಂ
ಗರವ ಹೊಗುವುದು ಸರಿದರಿದಿರುವ
ನರಿದು ಕಾದುವುದಿದರಲಾವುದು ಕೊರತೆ ಹೇಳೆಂದ ॥2॥
೦೦೩ ನುಡಿಯೆವಾವು ಸಮರ್ಥರೆನ್ದುದೆ ...{Loading}...
ನುಡಿಯೆವಾವು ಸಮರ್ಥರೆಂದುದೆ
ಕಡು ನಿಧಾನವು ಸುಭಟರೋಟವೆ
ಕಡೆಗೆ ಪರವಹ ಧರ್ಮ ಪಾರ್ಥನು ಜಗದೊಳಗ್ಗಳನು
ನಡುಹೊಳೆಯ ಹರಿಗೋಲ ಮೂಲೆಯ
ಕಡಿದಿರಾದರೆ ನಮ್ಮ ಪುಣ್ಯದ
ಬಿಡುಗಡೆಯ ಕಾಲವು ಶಿವಾಯೆಂದರಸ ಬಿಸುಸುಯಿದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ಮಾತನ್ನು ಕೇಳಿ ಅರಸನಾದ ದುರ್ಯೋಧನ ಹೇಳಿದನು ; ನಾವೇನೂ ಹೇಳುವುದಿಲ್ಲ ; ಶಕ್ತರಾದವರು ಹೇಳಿದ್ದೇ ದೃಢವಾದ ನಿರ್ಧಾರವು. ಸುಭಟರ ಪಲಾಯನವೆ ಕೊನೆಗೆ ಸರ್ವಶ್ರೇಷ್ಠವಾದ ಧರ್ಮವೆನಿಸುವುದು. ಅರ್ಜುನನು ಜಗತ್ತಿನಲ್ಲಿಯೇ ಶ್ರೇಷ್ಠನು. ಹೊಳೆಯ ಮಧ್ಯದಲ್ಲಿ ಬಂದಿರುವ ಹರಿಗೋಲಿನಲ್ಲಿ ನೀರು ನುಗ್ಗದಂತೆ ಬಿಗಿದಿರುವ ಚರ್ಮವನ್ನು ಹರಿದು (ಆಗ ನೀರು ನುಗ್ಗಿ ಹರಿ ಗೋಲು ಮುಳುಗುತ್ತೆ. ಜನನಾಶವಾಗುವರು) ಬಿಸಾಡಿದರೆ ನಮ್ಮ ಪಾಲಿನ ಪುಣ್ಯವು ನಮ್ಮಿಂದ ದೂರವಾಗುವ ಕಾಲವು ಬಂದಿತೆಂದೇ ತಿಳಿಯಬೇಕು. ಅಯ್ಯೋ ದೇವರೆ ಎಂಥ ಗತಿ ಬಂತಪ್ಪಾ ಎಂದು ದುರ್ಯೋಧನ ನಿಟ್ಟುಸಿರಿಟ್ಟನು.
ಪದಾರ್ಥ (ಕ.ಗ.ಪ)
ಕಡು ನಿಧಾನವು-ದೃಢನಿರ್ಧಾರ, ಓಟ-ಪಲಾಯನ, ಅಗ್ಗಳನು ಶ್ರೇಷ್ಠ, ಪರವಹ-ಶ್ರೇಷ್ಠವಾದ,
ಟಿಪ್ಪನೀ (ಕ.ಗ.ಪ)
ಹರಿಗೋಲು - ಬಿದಿರಿನಿಂದ ಮಾಡಿದ ದೊಡ್ಡ ಕುಕ್ಕೆ. ಇದರಲ್ಲಿ ನೀರೇರದಂತೆ ಮೇಲುಗಡೆ ಚರ್ಮವನ್ನು ಬಿಗಿದಿರುವರು. ಇದು ಹರಿದು ರಂಧ್ರವಾದರೆ ನೀರು ನುಗ್ಗಿ ಹರಿಗೋಲು ಮುಳುಗುತ್ತದೆ.
ಮೂಲ ...{Loading}...
ನುಡಿಯೆವಾವು ಸಮರ್ಥರೆಂದುದೆ
ಕಡು ನಿಧಾನವು ಸುಭಟರೋಟವೆ
ಕಡೆಗೆ ಪರವಹ ಧರ್ಮ ಪಾರ್ಥನು ಜಗದೊಳಗ್ಗಳನು
ನಡುಹೊಳೆಯ ಹರಿಗೋಲ ಮೂಲೆಯ
ಕಡಿದಿರಾದರೆ ನಮ್ಮ ಪುಣ್ಯದ
ಬಿಡುಗಡೆಯ ಕಾಲವು ಶಿವಾಯೆಂದರಸ ಬಿಸುಸುಯಿದ ॥3॥
೦೦೪ ಖತಿಯ ಮಾಡಿತೆ ...{Loading}...
ಖತಿಯ ಮಾಡಿತೆ ನಮ್ಮ ನುಡಿಯನು
ಚಿತಪರಾಯಣರೆಂದು ನಿನ್ನಯ
ಮತಿಗೆ ತೋರಿತು ಮಾಣಲದು ನೋಡಾದಡಾಹವವ
ಕ್ಷಿತಿಯ ಹೊರೆಕಾರರಿಗೆ ಸೌಖ್ಯ
ಸ್ಥಿತಿಯ ಮಾಡುವೆನಿನ್ನು ಕುರುಭೂ
ಪತಿ ವಿರೋಧಿಯ ವಿಧಿಯನೀಗಳೆ ತೋರಿಸುವೆನೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದಕ್ಕೆ ಭೀಷ್ಮನು ಹೇಳಿದನು ; ನಮ್ಮ ಮಾತು ನಿನಗೆ ಯೋಗ್ಯವಲ್ಲದ ಕಾರ್ಯದಲ್ಲಿ ನಿರತರು ಎಂದು ನಿನ್ನ ಮನಸ್ಸಿಗೆ ಬಂತೇ ? ಹೋಗಲಿ ಅದು ! ಇನ್ನು ಮುಂದೇನು ಮಾಡುವೆನು ನೋಡು, ಭೂಮಿಗೆ ಭಾರವಾದ ಈ ಅರಸರಿಗೆ ಸ್ವರ್ಗಸುಖವನ್ನು (ಸಾವನ್ನು) ಉಂಟುಮಾಡುವೆನು. ದುರ್ಯೋಧನನ್ನು ವಿರೋಧಿಸಿ ಹಗೆಯಾದವರ (ಪಾಂಡವರ) ಹಣೆಬರಹ (ದುರ್ಗತಿ) ಏನು ಎಂಬುದನ್ನು ಈಗಲೆ ತೋರಿಸುವೆನು ಎಂದನು.
ಪದಾರ್ಥ (ಕ.ಗ.ಪ)
ಅನುಚಿತ ಪರಾಯಣರು-ಯೋಗ್ಯವಲ್ಲದ ಕಾರ್ಯದಲ್ಲಿ ನಿಂತರು, ಮತಿ-ಬುದ್ಧಿ, ಆಹವ-ಯುದ್ಧ, ಕ್ಷಿತಿಯ ಹೊರೆಕಾರರು-ಭೂಮಿಗೆ ಭಾರವಾದವರು, ಸೌಖ್ಯಸ್ಥಿತಿ-ಸ್ವರ್ಗಸುಖ (ಸಾವು),.
ಮೂಲ ...{Loading}...
ಖತಿಯ ಮಾಡಿತೆ ನಮ್ಮ ನುಡಿಯನು
ಚಿತಪರಾಯಣರೆಂದು ನಿನ್ನಯ
ಮತಿಗೆ ತೋರಿತು ಮಾಣಲದು ನೋಡಾದಡಾಹವವ
ಕ್ಷಿತಿಯ ಹೊರೆಕಾರರಿಗೆ ಸೌಖ್ಯ
ಸ್ಥಿತಿಯ ಮಾಡುವೆನಿನ್ನು ಕುರುಭೂ
ಪತಿ ವಿರೋಧಿಯ ವಿಧಿಯನೀಗಳೆ ತೋರಿಸುವೆನೆಂದ ॥4॥
೦೦೫ ತರಿಸಿದನು ಹದಿನೆಣ್ಟು ...{Loading}...
ತರಿಸಿದನು ಹದಿನೆಂಟು ಸಾವಿರ
ಸರಳ ಹೊದೆಗಳ ಬಂಡಿಗಳ ಹ
ನ್ನೆರಡು ಸಾವಿರ ಧನುವನುರುತರದಖಿಳ ಕೈದುಗಳ
ಕರಸಿದನು ಸೈಂಧವನ ಶಲ್ಯನ
ಗುರುಸುತನ ಕೃತವರ್ಮ ಭಗದ
ತ್ತರ ಶಕುನಿ ದುಶ್ಯಾಸನ ದ್ರೋಣಾದಿ ನಾಯಕರ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಭೀಷ್ಮನು ಬಾಣಗಳಿರುವ ಬತ್ತಳಿಕೆಗಳನ್ನು ಹೇರಿದ ಹದಿನೆಂಟು ಸಾವಿರ ಬಂಡಿಗಳನ್ನು ತರಿಸಿದನು. ಹನ್ನೆರಡು ಸಾವಿರ ಬಿಲ್ಲುಗಳನ್ನೂ, ಶ್ರೇಷ್ಠತರವಾದ ಕತ್ತಿ ಈಟಿ ಭಲ್ಲೆ ಗುರಾಣಿ ಮೊದಲಾದ ಆಯುಧಗಳನ್ನೂ ತರಿಸಿದನು. ಸೈಂಧವ, ಶಲ್ಯ ಅಶ್ವತ್ಥಾಮ, ಕೃತವರ್ಮ, ಭಗದತ್ತ, ಶಕುನಿ, ದುಶ್ಶಾಸನ, ದ್ರೋಣರೇ ಮೊದಲಾದ ಮುಖ್ಯರಾದ ಶೂರರನ್ನು ಕರೆಸಿದನು.
ಪದಾರ್ಥ (ಕ.ಗ.ಪ)
ಹೊದೆಗಳ-ಬತ್ತಳಿಕೆ
ಮೂಲ ...{Loading}...
ತರಿಸಿದನು ಹದಿನೆಂಟು ಸಾವಿರ
ಸರಳ ಹೊದೆಗಳ ಬಂಡಿಗಳ ಹ
ನ್ನೆರಡು ಸಾವಿರ ಧನುವನುರುತರದಖಿಳ ಕೈದುಗಳ
ಕರಸಿದನು ಸೈಂಧವನ ಶಲ್ಯನ
ಗುರುಸುತನ ಕೃತವರ್ಮ ಭಗದ
ತ್ತರ ಶಕುನಿ ದುಶ್ಯಾಸನ ದ್ರೋಣಾದಿ ನಾಯಕರ ॥5॥
೦೦೬ ಒತ್ತುಗೊಡುವರೆ ಹಗೆಗೆ ...{Loading}...
ಒತ್ತುಗೊಡುವರೆ ಹಗೆಗೆ ಹಜ್ಜೆಯ
ನಿತ್ತು ತೆಗೆವರೆ ಪಾರ್ಥ ಪರಬಲ
ಮೃತ್ಯುವೇ ಸಾಕಿನ್ನು ಹೋಗಲಿಯೆಂದು ಫಲವೇನು
ಮತ್ತೆ ಕೆಣಕುವುದರ್ಜುನನ ನ
ಮ್ಮತ್ತ ಬಿಡದಿರೆ ವೈರಿಸೇನೆಯ
ಕಿತ್ತು ಬಿಸುಡುವೆ ಯಮಪುರಕೆ ಮೋಹರಿಸಿ ನೀವೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈಂಧವಾದಿ ಶೂರರೇ ಹಗೆಯಾದ ಅರ್ಜುನನಿಗೆ ಮುಂದಕ್ಕೆ ನುಗ್ಗಿ ಬರಲು ಅವಕಾಶ ಕೊಡಬಹುದೇ ? ಶೂರರಾದ ನೀವು ಹೆಜ್ಜೆ ಮುಂದಿಟ್ಟವರು ಹಿಂತೆಗೆದು ಬರುವಿರಾ ? ಇಷ್ಟಕ್ಕೂ ಅರ್ಜುನನೇನು ಶತ್ರುಗಳೆದುರಿನ ಯಮಧರ್ಮನೇ ? ಅಲ್ಲ. ಸಾಕು ಸಾಕು, ಆ ಮಾತು ಅತ್ತ ಇರಲಿ ನಡೆದು ಹೋದ ಸಂಗತಿಗಳನ್ನು ಚಿಂತಿಸಿ ಫಲವೇನು ? ಅರ್ಜುನನನ್ನು ಮತ್ತೆ ಯುದ್ಧಕ್ಕೆ ಕರೆಯಿರಿ. ಅವನನ್ನು ನಮ್ಮ ಕಡೆ ಬರದಂತೆ ನೀವು ತಡೆದರೆ, ಶತ್ರು ಸೇನೆಯನ್ನು ಯಮಲೋಕಕ್ಕೆ ಕಿತ್ತೆಸೆಯುತ್ತೇನೆ. ನೀವು ನಿಮ್ಮ ಸೇನೆಗಳನ್ನು ಮುನ್ನುಗ್ಗಿಸಿ ಎಂದನು.
ಪದಾರ್ಥ (ಕ.ಗ.ಪ)
ಹಜ್ಜೆಯನು ಇತ್ತು ತೆಗೆವರೆ = ಹೆಜ್ಜೆ ಮುಂದಿಟ್ಟು ಹಿಂದಕ್ಕೆ ಸರಿವರೆ, ಪರಬಲ ಮೃತ್ಯುವೆ = ಹಗೆಗಳಿಗೆ ಯಮನೇ ?
ಯಮಪುರಿ-ಯಮಲೋಕಕ್ಕೆ, ಮೋಹರಿಸಿ-ಗುಂಪುಗೂಡಿ.
ಮೂಲ ...{Loading}...
ಒತ್ತುಗೊಡುವರೆ ಹಗೆಗೆ ಹಜ್ಜೆಯ
ನಿತ್ತು ತೆಗೆವರೆ ಪಾರ್ಥ ಪರಬಲ
ಮೃತ್ಯುವೇ ಸಾಕಿನ್ನು ಹೋಗಲಿಯೆಂದು ಫಲವೇನು
ಮತ್ತೆ ಕೆಣಕುವುದರ್ಜುನನ ನ
ಮ್ಮತ್ತ ಬಿಡದಿರೆ ವೈರಿಸೇನೆಯ
ಕಿತ್ತು ಬಿಸುಡುವೆ ಯಮಪುರಕೆ ಮೋಹರಿಸಿ ನೀವೆಂದ ॥6॥
೦೦೭ ವಿಗಡರನಿಬರು ನೆರೆದು ...{Loading}...
ವಿಗಡರನಿಬರು ನೆರೆದು ಪಾರ್ಥನ
ತೆಗೆದರತ್ತಲು ಭೀಷ್ಮನಿತ್ತಲು
ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ
ಬಿಗಿದ ಹೊದೆಗಳ ಹರಿದು ಬಿಲ್ಲಿಂ
ದುಗುಳಿಸಿದನಂಬುಗಳನಳವಿಗೆ
ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ತಕಡೆ ಶಲ್ಯ ಸೈಂಧವ ಮೊದಲಾದವರೆಲ್ಲ ಶೂರರೂ ಒಂದಾಗಿ ಅರ್ಜುನನನ್ನು ಎದುರಿಸಿ ಅತ್ತಕಡೆಗೆ ಹೋಗುವಂತೆ ಮಾಡಿದರು. ಇತ್ತಕಡೆ ಭೀಷ್ಮನು ಪ್ರಳಯಕಾಲದ ರುದ್ರನ ಭಯಂಕರವಾದ ಕಣ್ಣಿನ ಬೆಂಕಿಯಂತೆ ಕ್ರೋಧದ ಹೊಗೆಯನ್ನು ಹೊಮ್ಮಿಸುತ್ತಿದ್ದನು. ಬಿಗಿದ ಬತ್ತಳಿಕೆಗಳನ್ನು ಬಿಚ್ಚಿ ಬಿಲ್ಲಿಗೆ ಬಾಣಗಳನ್ನು ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಹೂಡಿ ಪ್ರಯೋಗಿಸಿದನು. ಕ್ರೋಧಾವೇಶದಿಂದ ಪಾಂಡವಸೇನೆಯನ್ನು ಬೆನ್ನಟ್ಟಿದನು.
ಪದಾರ್ಥ (ಕ.ಗ.ಪ)
ವಿಗಡರು-ಶೂರರು, ನೆರೆದು-ಒಂದಾಗಿ, ತೆಗೆದರು-ದೂರಸರಿಸಿದರು, ರುದ್ರನ ಅಗ್ಗದ ಕಣ್ಣ ಶಿಖಿ-ಪ್ರಳಯಕಾಲದ ರುದ್ರನ ಭಯಂಕರ ಕಣ್ಣಿನ ಬೆಂಕಿ, ಹೊಗೆದನು-ಹೊಗೆಯಾಡಿದನು, ಹೊದೆ-ಬತ್ತಳಿಕೆ, ಉಗುಳಿಸಿದನು-ಪ್ರಯೋಗಿಸಿದನು.
ಮೂಲ ...{Loading}...
ವಿಗಡರನಿಬರು ನೆರೆದು ಪಾರ್ಥನ
ತೆಗೆದರತ್ತಲು ಭೀಷ್ಮನಿತ್ತಲು
ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ
ಬಿಗಿದ ಹೊದೆಗಳ ಹರಿದು ಬಿಲ್ಲಿಂ
ದುಗುಳಿಸಿದನಂಬುಗಳನಳವಿಗೆ
ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ ॥7॥
೦೦೮ ಕೊಣ್ಡುಬಹ ಬಲುನಾಯಕರ ...{Loading}...
ಕೊಂಡುಬಹ ಬಲುನಾಯಕರ ಖತಿ
ಗೊಂಡು ದಡಿಯಲಿ ಹೊಯ್ಸಿ ಸೇನೆಯ
ಹಿಂಡೊಡೆಯದೋಜೆಯಲಿ ಹುರಿಯೇರಿಸಿ ಮಹೀಶ್ವರರ
ಗಂಡುಗಲಿಯಭಿಮನ್ಯು ಸಾತ್ಯಕಿ
ಚಂಡಬಲ ಹೈಡಿಂಬರನು ಸಮ
ದಂಡಿಯಲಿ ಮೋಹರಿಸಿ ಸಮರಕೆ ನಡೆದನಾ ಭೀಷ್ಮ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಭೀಷ್ಮನು, ಯುದ್ಧಕ್ಕೆ ಹೋಗಿ ತನ್ನ ಎದುರು ಬರುತ್ತಿದ್ದ ಪಾಂಡವಸೇನಾ ನಾಯಕರನ್ನು, ಅವರ ತಪ್ಪಿಗಾಗಿ ಕೋಪದಿಂದ , ಬಾಣಪ್ರಯೋಗದಿದ ಅವರೆಲ್ಲಾ ಚದುರಿಹೋಗುವಂತೆ ಮಾಡಿ ಆಯಾ ಸೇನೆಯ ನಾಯಕರನ್ನು ಉತ್ಸಾಹಗೊಳಿಸಿ ಅತಿಶೂರನಾದ ಅಭಿಮನ್ಯು ಸಾತ್ಯಕಿ ಅತಿಶೂರನಾದ ಘಟೋದ್ಗಚನನ್ನು ಎದುರಿಸಲು ಸರಿಸಮಾನತೆಯಿಂದ ಭೀಷ್ಮನು ಹೋರಾಡಿದನು.
ಮೂಲ ...{Loading}...
ಕೊಂಡುಬಹ ಬಲುನಾಯಕರ ಖತಿ
ಗೊಂಡು ದಡಿಯಲಿ ಹೊಯ್ಸಿ ಸೇನೆಯ
ಹಿಂಡೊಡೆಯದೋಜೆಯಲಿ ಹುರಿಯೇರಿಸಿ ಮಹೀಶ್ವರರ
ಗಂಡುಗಲಿಯಭಿಮನ್ಯು ಸಾತ್ಯಕಿ
ಚಂಡಬಲ ಹೈಡಿಂಬರನು ಸಮ
ದಂಡಿಯಲಿ ಮೋಹರಿಸಿ ಸಮರಕೆ ನಡೆದನಾ ಭೀಷ್ಮ ॥8॥
೦೦೯ ತಳಿತ ಸೇನಾಜಲಧಿ ...{Loading}...
ತಳಿತ ಸೇನಾಜಲಧಿ ಲಗ್ಗೆಯ
ಮೊಳಗಿನಲಿ ಮೊನೆದೋರಿ ಭೀಷ್ಮನ
ಹಳಚಿದರು ಹರಹಿನಲಿ ಕವಿದರು ಕೋಡಕೈಗಳಲಿ
ಎಲೆಲೆ ಪಾಂಡವ ಸೈನ್ಯಸಾಗರ
ಮಲೆತುದೋ ಬರಹೇಳು ಮಾರಿಯ
ಬಳಗವನು ಹೆಣದಿನಿಹಿಕಾರರ ಕರೆಯಿ ರಕ್ಕಸರ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಕಡೆ ಒಗ್ಗೂಡಿದ ಸೇನಾ ಸಾಗರವು ರಣವಾದ್ಯಗಳ ಆರ್ಭಟದಿಂದ, ಶೌರ್ಯವನ್ನು ತೋರುತ್ತಾ ಭೀಷ್ಮನನ್ನು ತಾಗಿದರು. ಎತ್ತೆತ್ತಲೂ ಆವರಿಸಿಕೊಂಡು ಭಯಂಕರ ಆಯುಧ ಪಾಣಿಗಳಾಗಿ ಮೇಲೆ ಬಿದ್ದರು. ಆಗ ಭೀಷ್ಮನೂ “ಎಲೆಲೆ ಪಾಂಡವ ಸೇನಾ ಸಮೂಹ ಸೊಕ್ಕಿನಿಂತಿದೆಯಲ್ಲಾ ! ಮಾರಿದೇವತೆಯ ಬಳಗವನ್ನು ಕರೆಯಿರಿ. ಹೆಣ ತಿನ್ನತಕ್ಕ ಪಿಶಾಚಾದಿಗಳನ್ನು ಶಾಕಿನಿ ಡಾಕಿನಿ ಮೊದಲಾದ ರಾಕ್ಷಸರನ್ನೂ ಕೂಗಿರಿ” ಎಂದನು.
ಪದಾರ್ಥ (ಕ.ಗ.ಪ)
ಮೊನೆದೋರು -ಶೌರ್ಯವನ್ನು ಪ್ರದರ್ಶಿಸು. ಹಳಚಿದರು-ತಾಗಿದರು, ಹರಹಿನಲಿ-ಹರಡಿಕೊಂಡು,
ಮೂಲ ...{Loading}...
ತಳಿತ ಸೇನಾಜಲಧಿ ಲಗ್ಗೆಯ
ಮೊಳಗಿನಲಿ ಮೊನೆದೋರಿ ಭೀಷ್ಮನ
ಹಳಚಿದರು ಹರಹಿನಲಿ ಕವಿದರು ಕೋಡಕೈಗಳಲಿ
ಎಲೆಲೆ ಪಾಂಡವ ಸೈನ್ಯಸಾಗರ
ಮಲೆತುದೋ ಬರಹೇಳು ಮಾರಿಯ
ಬಳಗವನು ಹೆಣದಿನಿಹಿಕಾರರ ಕರೆಯಿ ರಕ್ಕಸರ ॥9॥
೦೧೦ ಸೂಸಿದರು ಸರಳುಗಳನಗಲಕೆ ...{Loading}...
ಸೂಸಿದರು ಸರಳುಗಳನಗಲಕೆ
ಹಾಸಿ ಹಬ್ಬಿದವಶ್ವ ನಿಕರವ
ಕೀಸಿದವು ಕೀಲಿಸಿದವಾನೆಗಳುದರದೆಲುವಿನಲಿ
ಬೀಸಿ ಬಿಸುಟವು ಪಾಯ್ದಳವ ರಥ
ರಾಸಿಗಳ ಜರುಹಿದವು ಬಲ ವಾ
ರಾಸಿಯಲಿ ತಾಯ್ಮಳಲ ಮೊಗೆದವು ಭೀಷ್ಮನಂಬುಗಳು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಪಾಂಡವ ಸೇನೆ ಮೇಲೆ ಬಾಣಗಳನ್ನು ಉದ್ದಗಲಕ್ಕೂ ಸುರಿಸಿದನು. ಭೀಷ್ಮನ ಬಾಣಗಳು, ಎಲ್ಲ ಕಡೆ ಹಾಸಿಗೆಯಂತೆ ಹರಡಿದವು. ಕುದುರೆಗಳ ಸಮೂಹಕ್ಕೆ ಚುಚ್ಚಿ ಹೊಕ್ಕವು. ಆನೆಗಳ ಹೊಟ್ಟೆಯ ಮೂಳೆಗಳಲ್ಲಿ ನಾಟಿಕೊಂಡವು. ಕಾಲಾಳುಗಳನ್ನು ಎತ್ತಿ ಎಸೆದವು. ರಥ ಸಮೂಹಗಳನ್ನು ಜಗ್ಗಿಸಿದವು. ಸೇನೆಯೆಂಬ ಸಮುದ್ರದಲ್ಲಿ ತಳದಲ್ಲಿರುವ ಮರಳನ್ನು ಬಾಚಿದವು.
ಪದಾರ್ಥ (ಕ.ಗ.ಪ)
ಕೀಸಿದವು-ಚುಚ್ಚಿ ಹೊಕ್ಕವು, ಕೀಲಿಸಿದವು-ನಾಟಿಕೊಂಡವು, ಪಾಯದಳ-ಕಾಲಾಳು, ಜರುಹು-ಜಗ್ಗು, ವಾರಾಸಿ-ಸಾಗರ, ತಾಯ್ಮಳಲ-ತಳದ ಮರಳು, ಮೊಗೆದವು-ಬಾಡಿದವು.
ಮೂಲ ...{Loading}...
ಸೂಸಿದರು ಸರಳುಗಳನಗಲಕೆ
ಹಾಸಿ ಹಬ್ಬಿದವಶ್ವ ನಿಕರವ
ಕೀಸಿದವು ಕೀಲಿಸಿದವಾನೆಗಳುದರದೆಲುವಿನಲಿ
ಬೀಸಿ ಬಿಸುಟವು ಪಾಯ್ದಳವ ರಥ
ರಾಸಿಗಳ ಜರುಹಿದವು ಬಲ ವಾ
ರಾಸಿಯಲಿ ತಾಯ್ಮಳಲ ಮೊಗೆದವು ಭೀಷ್ಮನಂಬುಗಳು ॥10॥
೦೧೧ ಅಡಸಿ ತುಮ್ಬಿತು ...{Loading}...
ಅಡಸಿ ತುಂಬಿತು ಗಗನ ತಲೆಗಳ
ಗಡಣದಲಿ ದೆಸೆಯೆಲ್ಲ ಬಾಣದ
ಕಡಿಯಮಯವಾಯಿತ್ತು ಹೆಣಮಯವಾಯ್ತು ರಣಭೂಮಿ
ಕಡುಗಲಿಯ ಕೈ ಚಳಕದಂಬಿಂ
ಗೊಡಲ ತೆತ್ತುದು ವೈರಿಬಲ ಬಿಡೆ
ಜಡಿದುದಂತಕನಗರವದ್ಭುತವಾಯ್ತು ಸಂಗ್ರಾಮ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಕಡೆ ಸತ್ತ ಶೂರರ ತಲೆಗಳ ರಾಶಿಯಿಂದ ಆಕಾಶವು ದಟ್ಟವಾಗಿ ತುಂಬಿತು. ದಿಕ್ಕುಗಳೆಲ್ಲ ಬಾಣಗಳ ತುದಿಗಳಿಂದ ಆವರಿಸಿತ್ತು. ರಣರಂಗವೆಲ್ಲ ಹೆಣಗಳಿಂದ ತುಂಬಿ ಹೋಯಿತು. ವೀರಾಧಿವೀರ ಭೀಷ್ಮನ ಹಸ್ತಕೌಶಲದಿಂದ ಬಿಟ್ಟ ಬಾಣಗಳಿಗೆ ಶತ್ರುಸೇನೆ ಬಲಿಯಾಯಿತು. ಯಮಲೋಕವು ಅತಿಶಯವಾಗಿ ತುಂಬಿ ತುಳುಕಿತು. ಈ ಬಗೆಯಲ್ಲಿ ಭೀಷ್ಮನ ಯುದ್ಧ ಅದ್ಭುತವಾಗಿತ್ತು.
ಪದಾರ್ಥ (ಕ.ಗ.ಪ)
ಕಡಿ-ತುಂಡು, ಹಿಳುಕು, ಜಡಿದುದು-ತುಂಬಿ ತುಳುಕಿತು
ಮೂಲ ...{Loading}...
ಅಡಸಿ ತುಂಬಿತು ಗಗನ ತಲೆಗಳ
ಗಡಣದಲಿ ದೆಸೆಯೆಲ್ಲ ಬಾಣದ
ಕಡಿಯಮಯವಾಯಿತ್ತು ಹೆಣಮಯವಾಯ್ತು ರಣಭೂಮಿ
ಕಡುಗಲಿಯ ಕೈ ಚಳಕದಂಬಿಂ
ಗೊಡಲ ತೆತ್ತುದು ವೈರಿಬಲ ಬಿಡೆ
ಜಡಿದುದಂತಕನಗರವದ್ಭುತವಾಯ್ತು ಸಂಗ್ರಾಮ ॥11॥
೦೧೨ ಹೊಡೆಗೆಡೆದವಾನೆಗಳು ಥಟ್ಟಿಗೆ ...{Loading}...
ಹೊಡೆಗೆಡೆದವಾನೆಗಳು ಥಟ್ಟಿಗೆ
ಕೆಡೆದವಗ್ಗದ ತುರಗದಳ ಮೈ
ಗಡಿತದಲಿ ಮುಂಕೊಂಡು ಹೊರಳಿತು ಕೂಡೆ ಪಾಯದಳ
ಮಡ ಮುರಿದು ನುಗ್ಗಾಯ್ತು ರಥ ಬೆಳು
ಗೊಡೆ ಪತಾಕಾದಂಡ ಚಮರಿಗ
ಳುಡಿದು ಬಿದ್ದವು ಕೇಣವಿಲ್ಲದೆ ತರಿದನರಿಬಲವ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳು ಉದ್ದಕ್ಕೆ ಉರುಳಿ ಬಿದ್ದವು. ಶ್ರೇಷ್ಠ ಅಶ್ವದಳ ಗುಂಪು ಗುಂಪಾಗಿ ನೆಲಕ್ಕೆ ಉರುಳಿದವು. ಜೊತೆಯಲ್ಲಿ ಕಾಲಾಳುದಳ ಮುನ್ನುಗ್ಗಿ ಎದುರಿಸಿ ಮೈಮೇಲೆ ಏಟುಬಿದ್ದು ಛಿದ್ರವಾಗಿ ಹಿಂದಕ್ಕೆ ಸರಿಯಿತು. ರಥಗಳ ಚೌಕಟ್ಟುಗಳು ಮುರಿದು ನುಚ್ಚು ನೂರಾದವು. ಬೆಳ್ಗೊಡೆಗಳ ಬಾವುಟದ ಕೋಲು, ಚಾಮರಗಳು (ರಾಜ ಮರ್ಯಾದೆಯ ಸಾಧನಗಳು) ತುಂಡು ತುಂಡಾಗಿ ಬಿದ್ದವು. ಭೀಷ್ಮನು ಶತ್ರು ಸೇನೆಯಾದ ಪಾಂಡವ ಬಲವನ್ನು ಸ್ವಲ್ಪವೂ ದಯಾದಾಕ್ಷಿಣ್ಯವಿಲ್ಲದೆ ನಾಶ ಮಾಡಿದನು.
ಪದಾರ್ಥ (ಕ.ಗ.ಪ)
ಹೊಡೆUಡೆದವು-ಉರುಳಿಬಿದ್ದವು, ಥಟ್ಟಿಗೆ ಕೆಡೆದವು-ಗುಂಪಾಗಿ ನೆಲಕ್ಕುರುಳಿದವು, ಹೊರಳಿತು-ಹಿಂದಕ್ಕೆ ಸರಿಯಿತು, ಮಡಮುರಿದು-ಚೌಕಟ್ಟು ಮುರಿದು, ಪತಾಕಾದಂಡ-ಬಾವುಟದ ಕೋಲು, ಉಡಿದು ಬಿದ್ದವು-ತುಂಡು ತುಂಡಾದವು, ಕೇಣವಿಲ್ಲದೆ-ದಯಾದಾಕ್ಷಿಣ್ಯವಿಲ್ಲದೆ
ಮೂಲ ...{Loading}...
ಹೊಡೆಗೆಡೆದವಾನೆಗಳು ಥಟ್ಟಿಗೆ
ಕೆಡೆದವಗ್ಗದ ತುರಗದಳ ಮೈ
ಗಡಿತದಲಿ ಮುಂಕೊಂಡು ಹೊರಳಿತು ಕೂಡೆ ಪಾಯದಳ
ಮಡ ಮುರಿದು ನುಗ್ಗಾಯ್ತು ರಥ ಬೆಳು
ಗೊಡೆ ಪತಾಕಾದಂಡ ಚಮರಿಗ
ಳುಡಿದು ಬಿದ್ದವು ಕೇಣವಿಲ್ಲದೆ ತರಿದನರಿಬಲವ ॥12॥
೦೧೩ ಮಣ್ಡಿಸಿತು ನೊರೆರಕುತ ...{Loading}...
ಮಂಡಿಸಿತು ನೊರೆರಕುತ ಕರುಳಿನ
ಜೊಂಡು ಮಸಗಿತು ಕಡಿದ ಖಂಡದ
ದಿಂಡು ತಳಿತುದು ತೊಗಲ ಕೊಯ್ಲಿನ ಮುರಿದ ಮೂಳೆಗಳ
ಜೊಂಡೆ ನರವಿನ ಜುರಿತ ಮಿದುಳಿನ
ಹೊಂಡೆಯದ ತೊರಳಿಗಳ ಕೊರಳಿನ
ತುಂಡುಗಳ ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೊರೆಯಿಂದ ಕೂಡಿದ ರಕ್ತ ನೆಲೆನಿಂತಿತು. ಕರುಳಿನ ಜೊಂಡೆಗಳು ಚೆಲ್ಲಾಡಿತು. ಕತ್ತರಿಸಿದ ಮಾಂಸಖಂಡಗಳ ಹೊರೆಗಳು ರಾಶಿರಾಶಿಯಾಗಿ ಬಿದ್ದಿತು. ಕತ್ತರಿಸಿದ ದೇಹದ ಭಾಗಗಳ, ಮುರಿದ ಮೂಳೆಗಳ, ನರಗಳ ಜೊಂಡೆಗಳಿಂದ, ಮಿದುಳುಗಳ ಜಿನುಗುಗಳಿಂದ, ಗುಲ್ಮಗಳ ಹೊಂಡಗಳಿಂದ ಕತ್ತುಗಳ ತುಂಡುಗಳಿಂದ ಯಮನ ಅಪಾರ ಬೆಳೆ ಫಲವತ್ತಾಗಿ ಸಮೃದ್ಧವಾಯಿತು.
ಪದಾರ್ಥ (ಕ.ಗ.ಪ)
ಮಸಗಿತು-ಚೆಲ್ಲಾಡಿತು, ದಿಂಡು-ಹೊರೆ, ತಳಿತುದು-ರಾಶಿ ಬಿದ್ದಿತು, ಜೊಂಡೆ-ಜೊಂಪೆ, ಜುರಿತ-ಜಿನುಗು, ತೊರಳಿ-ಗುಲ್ಮ, ಕಾಲಾಂತಕ-ಯಮ, ಹೆಬ್ಬೆಳಸು-ಸಮೃದ್ಧ ಬೆಳೆ
ಮೂಲ ...{Loading}...
ಮಂಡಿಸಿತು ನೊರೆರಕುತ ಕರುಳಿನ
ಜೊಂಡು ಮಸಗಿತು ಕಡಿದ ಖಂಡದ
ದಿಂಡು ತಳಿತುದು ತೊಗಲ ಕೊಯ್ಲಿನ ಮುರಿದ ಮೂಳೆಗಳ
ಜೊಂಡೆ ನರವಿನ ಜುರಿತ ಮಿದುಳಿನ
ಹೊಂಡೆಯದ ತೊರಳಿಗಳ ಕೊರಳಿನ
ತುಂಡುಗಳ ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು ॥13॥
೦೧೪ ಆಗ ಹೂಡಿದನಾಗ ...{Loading}...
ಆಗ ಹೂಡಿದನಾಗ ಬಾಣವ
ತೂಗಿ ಬರಸೆಳೆದೆಚ್ಚನಹಿತರ
ನಾಗ ತಾಗಿದವಂಬು ಬಲ್ಲವರಾರು ಕೈಲುಳಿಯ
ಬಾಗಿಹುದು ಬಲು ಬಿಲ್ಲು ಕಿವಿವರೆ
ಗಾಗಿ ರಿಪುಬಲ ನಿಮಿಷ ನಿಮಿಷಕೆ
ನೀಗಿಹುದು ನಿಟ್ಟುಸಿರನೆಲೆ ಭೂಪಾಲ ಕೇಳ್ ಎಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಷ್ಮಾಚಾರ್ಯರು ಬಾಣ ಹೂಡಿದರು. ಆಗಲೇ ಬಾಣವನ್ನು ಗುರಿಯಿಟ್ಟು ಕರ್ಣದವರೆಗೆ ಎಳೆದು ಹಗೆಗಳ ಮೇಲೆ ಬಿಟ್ಟನು. ಆಗ ಬಾಣಗಳು ಶತ್ರುಗಳಿಗೆ ನಾಟಿದವು. ಭೀಷ್ಮನ ಕೈಚಳಕದ ಸಾಮಥ್ರ್ಯವನ್ನು ತಿಳಿದವರಾರಿದ್ದಾರೆ ? ಭೀಷ್ಮನ ಬಿಲ್ಲು ಕಿವಿಯವರೆಗೆ ಪೂರಾ ಬಾಗಿದೆ (ಎಂದರೆ ಗುರಿಯಿಟ್ಟಿದ್ದಾನೆ). ಕ್ಷಣಕ್ಷಣಕೆ ಶತ್ರುಸೇನೆ ದೀರ್ಘಶ್ವಾಸ ಬಿಡುತ್ತ ಸಾಯುತ್ತಿದ್ದಾರೆ.
ಮೂಲ ...{Loading}...
ಆಗ ಹೂಡಿದನಾಗ ಬಾಣವ
ತೂಗಿ ಬರಸೆಳೆದೆಚ್ಚನಹಿತರ
ನಾಗ ತಾಗಿದವಂಬು ಬಲ್ಲವರಾರು ಕೈಲುಳಿಯ
ಬಾಗಿಹುದು ಬಲು ಬಿಲ್ಲು ಕಿವಿವರೆ
ಗಾಗಿ ರಿಪುಬಲ ನಿಮಿಷ ನಿಮಿಷಕೆ
ನೀಗಿಹುದು ನಿಟ್ಟುಸಿರನೆಲೆ ಭೂಪಾಲ ಕೇಳೆಂದ ॥14॥
೦೧೫ ಬೀಳುತಿರ್ದರು ಭಟರು ...{Loading}...
ಬೀಳುತಿರ್ದರು ಭಟರು ಮತ್ತೆ ಛ
ಡಾಳಿಸಿತು ತಲೆಮಾರಿಗಳು ಹೆಣ
ಸಾಲನೆಡಹಿದರರುಣವಾರಿಯ ತೊರೆಯನೀಸಿದರು
ಆಳು ಹೊಕ್ಕುದು ದಂತಿಘಟೆಗಳು
ತೂಳಿದವು ಕಡುಹೆದ್ದು ತುರಗದ
ಮೇಲೆ ರಾವುತರಳವಿಗೊಟ್ಟುದು ತೇರ ಬಾಹೆಯಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರು ನೆಲಕ್ಕೆ ಉರುಳುತ್ತಿದ್ದರು ಮತ್ತೆ ಮತ್ತೆ (ಹಣಕ್ಕಾಗಿ ಯುದ್ಧ ಮಾಡುವ ಸೈನಿಕರು) ತಲೆಗಡಿಕರು ನುಗ್ಗಿ ಬರುತ್ತಿದ್ದರು. ನುಗ್ಗಿ ಬರುತ್ತಿದ್ದ ಸೈನಿಕರು ಉದ್ದಕ್ಕೂ ಬಿದ್ದ ಹೆಣಗಳ ಸಾಲುಗಳನ್ನು ಎಡವುತ್ತಿದ್ದರು. (ಸೈನಿಕರು ಬರುತ್ತಿದ್ದರೆ ಅಡ್ಡವಾಗಿ ಹೆಣಗಳು ಬೀಳುತ್ತಿದ್ದವು) ಸತ್ತ ಸೈನಿಕರ ರಕ್ತಧಾರೆ ಪ್ರವಾಹವಾಗಿ ಹರಿದು ತೊರೆಯಾಗಿತ್ತು ಅದರಲ್ಲಿ ಈಸಿಕೊಂಡು ಸೈನಿಕರು ಮುನ್ನುಗ್ಗುತ್ತಿದ್ದರು. ಆನೆಗಳ ಸಮೂಹ ಮೇಲೆ ಬೀಳುತ್ತಿದ್ದವು. ಕೆಚ್ಚು ಹೆಚ್ಚಿ, ಕುದುರೆಗಳ ಮೇಲಿನ ರಾವುತರು, ರಥಗಳ ಬದಿಯಲ್ಲಿಯೇ ಕಾಳಗ ಕೊಟ್ಟರು.
ಮೂಲ ...{Loading}...
ಬೀಳುತಿರ್ದರು ಭಟರು ಮತ್ತೆ ಛ
ಡಾಳಿಸಿತು ತಲೆಮಾರಿಗಳು ಹೆಣ
ಸಾಲನೆಡಹಿದರರುಣವಾರಿಯ ತೊರೆಯನೀಸಿದರು
ಆಳು ಹೊಕ್ಕುದು ದಂತಿಘಟೆಗಳು
ತೂಳಿದವು ಕಡುಹೆದ್ದು ತುರಗದ
ಮೇಲೆ ರಾವುತರಳವಿಗೊಟ್ಟುದು ತೇರ ಬಾಹೆಯಲಿ ॥15॥
೦೧೬ ಆಳು ಕುದುರೆಯ ...{Loading}...
ಆಳು ಕುದುರೆಯ ಬೀಯಮಾಡಿ ನೃ
ಪಾಲ ಮಾಡುವುದೇನು ದೊರೆಗಳು
ಕಾಳೆಗಕೆ ಮೈದೋರಬಾರದೆ ಭೀಮ ಫಲುಗುಣರು
ಚಾಳ ನೂಕಿಸಿ ಹೊತ್ತುಗಳೆವರು
ಹೇಳಿ ಫಲವೇನಿನ್ನು ರಣ ಹೀ
ಹಾಳಿ ತಮಗಿಲ್ಲೆಂದು ಗಹಗಹಿಸಿದನು ಕಲಿಭೀಷ್ಮ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಾಮಾನ್ಯ ಶೂರರಾದ ಕಾಲಾಳುಗಳನ್ನು ರಾಹುತರನ್ನು ನಾಶಮಾಡಿ ಶೂರರಾಜರಾದ ಅವರು ಸಾಧಿಸುವುದೇನಿದೆ ? ಸಾಹಸಿಗಳಾದ ಭೀಮ ಫಲುಗುಣರು ಯುದ್ಧರಂಗಕ್ಕೆ ಬಂದು ಹೋರಾಡಲು ಕಾಣಿಸಿಕೊಳ್ಳಬಾರದೇ ? ಈ ಜಳ್ಳುಗಳನ್ನು ಮುಂದಕ್ಕೆ ತಳ್ಳಿ ಕಾಲಹರಣ ಮಾಡುತ್ತಿದ್ದಾರೆ. ಏನು ಹೇಳಿದರೂ ಪ್ರಯೋಜನವೇನಿದೆ ? ಇನ್ನು ರಣರಂಗದಲ್ಲಿ ತಮ್ಮನ್ನು ಯಾರೂ ನಿಂದಿಸಲಾರರು ಎಂದು ಹೇಳಿ ಕಲಿ ಭೀಷ್ಮ ಕೇಕೆ ಹಾಕಿ ನಕ್ಕನು.
ಮೂಲ ...{Loading}...
ಆಳು ಕುದುರೆಯ ಬೀಯಮಾಡಿ ನೃ
ಪಾಲ ಮಾಡುವುದೇನು ದೊರೆಗಳು
ಕಾಳೆಗಕೆ ಮೈದೋರಬಾರದೆ ಭೀಮ ಫಲುಗುಣರು
ಚಾಳ ನೂಕಿಸಿ ಹೊತ್ತುಗಳೆವರು
ಹೇಳಿ ಫಲವೇನಿನ್ನು ರಣ ಹೀ
ಹಾಳಿ ತಮಗಿಲ್ಲೆಂದು ಗಹಗಹಿಸಿದನು ಕಲಿಭೀಷ್ಮ ॥16॥
೦೧೭ ದಿವಿಜ ನಗರಿಯ ...{Loading}...
ದಿವಿಜ ನಗರಿಯ ಸೂಳೆಗೇರಿಗೆ
ಕವಿವ ಮನವೇ ಮುಂದು ಹಜ್ಜೆಗೆ
ತವಕಿಸುವರಳುಕುವರೆ ಮೇಣ್ ಕೈತಪ್ಪ ಮಾಡಿಸೆನು
ಕವಿಯಿರೈ ಕಾಲಾಳು ರಾವುತ
ರವಗಡಿಸಿರೈ ಜೋದರೆಸಿರೈ
ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಲೋಕದ ಗಣಿಕಾವಾಸಕ್ಕೆ ಹೋಗುವ ಮನಸ್ಸೇ ನಿಮ್ಮದು ? ಹಾಗಿದ್ದರೆ ಮುಂದಕ್ಕೆ ಉತ್ಸಾಹದಿಂದ ಹೆಜ್ಜೆ ಹಾಕಲು ಅಂಜಿಕೆ ಏಕೆ ? ಅಥವಾ ನನ್ನ ಕೈಯಿಂದ ತಪ್ಪಿಸಿಕೊಂಡು ನೀವು ದೇವಲೋಕಕ್ಕೆ ಹೋಗದಿರುವಂತೆ ಮಾಡುವುದಿಲ್ಲ. ವೀರಸ್ವರ್ಗ ಕೊಡಿಸುತ್ತೇನೆ). ಆದ್ದರಿಂದ ಪದಾತಿಗಳೇ ಬನ್ನಿ ಮುನ್ನುಗ್ಗಿ, ಕುದುರೆ ದಳದವರೇ ತಾಗಿರಿ, ಗಜಯೋಧರೇ ಮೊನೆ ಆಯುಧಗಳ ಎಸೆಯಿರಿ. ನವಮಹಾರಥಿಗಳೇ ಬಾಣದ ಮಳೆ ಸುರಿಸಿರಿ ಎಂದು ಕರೆ ನೀಡುತ್ತ ಭೀಷ್ಮನು ಬಾಣದ ಮಳೆ ಸುರಿಸತೊಡಗಿದನು.
ಪದಾರ್ಥ (ಕ.ಗ.ಪ)
ಕೈತಪ್ಪ ಮಾಡಿಸೆನು-ನನ್ನ ಕೈಯಿಂದ ತಪ್ಪಿಸಿಕೊಳ್ಳಲಾರಿರಿ, ಅವಗಡಿಸಿ-ತಾಗಿ, ಜೋದ-ಆನೆಸವಾರ,
ಮೂಲ ...{Loading}...
ದಿವಿಜ ನಗರಿಯ ಸೂಳೆಗೇರಿಗೆ
ಕವಿವ ಮನವೇ ಮುಂದು ಹಜ್ಜೆಗೆ
ತವಕಿಸುವರಳುಕುವರೆ ಮೇಣ್ ಕೈತಪ್ಪ ಮಾಡಿಸೆನು
ಕವಿಯಿರೈ ಕಾಲಾಳು ರಾವುತ
ರವಗಡಿಸಿರೈ ಜೋದರೆಸಿರೈ
ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ ॥17॥
೦೧೮ ಕಡಿದು ಬಿಸುಟನು ...{Loading}...
ಕಡಿದು ಬಿಸುಟನು ತುರಗ ದಳವನು
ಕೆಡಹಿದನು ಹೇರಾನೆಗಳ ತಡೆ
ಗಡಿದನೊಗ್ಗಿನ ರಥವನುರೆ ಕೊಚ್ಚಿದನು ಕಾಲಾಳ
ಹೊಡಕರಿಸಿ ಹೊದರೆದ್ದು ಮುಂದಕೆ
ನಡೆನಡೆದು ಕೈಮಾಡಿ ಕಾಯದ
ತೊಡಕನಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವದಳವನ್ನು ಕಡಿದು ಎಸೆದನು. ಭಾರಿಗಜದಳವನ್ನು ನೆಲಕ್ಕೆ ಕೆಡವಿದನು. ಸಾಲಾಗಿ ಬಂದ ರಥಗಳನ್ನು ಅಡ್ಡಗಟ್ಟಿದನು. ಕಾಲಾಳುಗಳನ್ನು ಚೆನ್ನಾಗಿ ತುಂಡರಿಸಿದನು. ಸ್ಫೂರ್ತಿಗೊಂಡು ಗುಂಪಾಗಿ ಬಂದು ಮುನ್ನುಗ್ಗಿ ಹೋರಾಡಿ ದೇಹದ ಬಂಧನವನ್ನು ಒಲ್ಲದೆ ವೀರಸೈನಿಕರು ಸ್ವರ್ಗದಲ್ಲಿ ಜತೆಗೂಡಿದರು.
ಪದಾರ್ಥ (ಕ.ಗ.ಪ)
ನಾಕ-ಸ್ವರ್ಗ, ತೆಕ್ಕೆಗಟ್ಟಿತು-ಜತೆಗೂಡಿದರು, ಕೈಮಾಡಿ-ಹೋರಾಡಿ, ಹೊಡಕರಿಸಿ-ಸ್ಫೂರ್ತಿಗೊಂಡು, ಹೊದರೆದ್ದು-ಗುಂಪಾಗಿ, ಒಗ್ಗಿನ-ಸಾಲಾಗಿ ಬಂದ
ಮೂಲ ...{Loading}...
ಕಡಿದು ಬಿಸುಟನು ತುರಗ ದಳವನು
ಕೆಡಹಿದನು ಹೇರಾನೆಗಳ ತಡೆ
ಗಡಿದನೊಗ್ಗಿನ ರಥವನುರೆ ಕೊಚ್ಚಿದನು ಕಾಲಾಳ
ಹೊಡಕರಿಸಿ ಹೊದರೆದ್ದು ಮುಂದಕೆ
ನಡೆನಡೆದು ಕೈಮಾಡಿ ಕಾಯದ
ತೊಡಕನಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ ॥18॥
೦೧೯ ಆಳು ಮುರಿದವು ...{Loading}...
ಆಳು ಮುರಿದವು ಮೇಲೆ ಹೊಕ್ಕು ನೃ
ಪಾಲಕರು ಬೊಬ್ಬಿರಿದು ಭೀಷ್ಮನ
ಕೋಲ ಕೊಳ್ಳದೆ ಕೊಂಡು ಹರಿದರು ರಥದ ಹೊರೆಗಾಗಿ
ಆಳುತನದಂಗವಣೆಯೊಳ್ಳಿತು
ಮೇಳವೇ ಬಳಿಕೇನು ಪೃಥ್ವೀ
ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಟರು ಹಿಮ್ಮೆಟ್ಟಿದರು ರಾಜರು ಆಮೇಲೆ ಪ್ರವೇಶಿಸಿ ಬೊಬ್ಬೆ ಹಾಕಿ (ಗರ್ಜಿಸಿ), ಭೀಷ್ಮರ ಬಾಣಗಳ ಹೊಡೆತವನ್ನು ತಾಳಲಾರದೆ ರಥದ ಹತ್ತಿರಕ್ಕೆ ಧಾವಿಸಿದರು. “ಆಹಾ ನಿಮ್ಮ ಶೌರ್ಯದ ರೀತಿ ಚೆನ್ನಾಗಿದೆ. ಇದು ಒಪ್ಪತಕ್ಕ ವಿಚಾರವೇ ಸರಿ. ಹೇಳಲಿಕ್ಕೆ ಇನ್ನೇನಿದೆ ? ನೀವೆಲ್ಲಾ ದೊರೆಗಳಲ್ಲವೇ. ಭಲೇ ! ಭೇಷ್ ! ಎನ್ನುತ್ತಾ ಭೀಷ್ಮನು ಅವರ ಮೇಲೆ ಬಾಣದ ಮಳೆ ಸುರಿಸಿದನು.
ಪದಾರ್ಥ (ಕ.ಗ.ಪ)
ಬೊಬ್ಬಿರಿದು-ಗರ್ಜಿಸಿ, ಎಚ್ಚನು-ಬಾಣದ ಮಳೆಗರೆದನು.
ಮೂಲ ...{Loading}...
ಆಳು ಮುರಿದವು ಮೇಲೆ ಹೊಕ್ಕು ನೃ
ಪಾಲಕರು ಬೊಬ್ಬಿರಿದು ಭೀಷ್ಮನ
ಕೋಲ ಕೊಳ್ಳದೆ ಕೊಂಡು ಹರಿದರು ರಥದ ಹೊರೆಗಾಗಿ
ಆಳುತನದಂಗವಣೆಯೊಳ್ಳಿತು
ಮೇಳವೇ ಬಳಿಕೇನು ಪೃಥ್ವೀ
ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ ॥19॥
೦೨೦ ಅಙ್ಗವಿಸಿ ಮರಿಹುಲ್ಲೆ ...{Loading}...
ಅಂಗವಿಸಿ ಮರಿಹುಲ್ಲೆ ಖುರದಲಿ
ಸಿಂಗವನು ಹೊಯ್ವಂತೆ ನೃಪರು
ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ
ಅಂಗವಣೆಯನು ಹೊಗಳುತಾ ದಿವಿ
ಜಾಂಗನಾ ಕಾಮುಕರ ಮಾಡಿಯ
ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮರಿಜಿಂಕೆ ಸಾಹಸ ಮಾಡಿ ತನ್ನ ಗೊರಸಿನಿಂದ ಹೊಯ್ಯುವ ಹಾಗೆ, ಅರಸರು ಅತ್ಯುನ್ನತ ವೀರನಾದ ಭೀಷ್ಮನ ಮೇಲೆ ಖಡ್ಗ ಬೀಸಿ ಹೋರಾಡಿದರು. ಆ ಅರಸರ ಸಾಹಸದ ವೈಖರಿಯನ್ನು ಹೊಗಳುತ್ತಲೇ, ಅವರನ್ನು ದೇವತಾ ಸ್ತ್ರೀಯರನ್ನು ಮೋಹಿಸುವಂತೆ ಮಾಡಿ ಎಂದರೆ ವೀರ ಸ್ವರ್ಗದ ನಿವಾಸಿಗಳನ್ನಾಗಿ ಮಾಡಿ ಅಜೇಯ ಭೀಷ್ಮನು ಶ್ರೇಷ್ಠವಾದ ತೋಳಬಲವನ್ನು ಪ್ರದರ್ಶಿಸಿದನು.
ಪದಾರ್ಥ (ಕ.ಗ.ಪ)
ಮರಿಜಿಂಕೆ-ಮರಿಹುಲ್ಲೆ, ಅಂಗವಿಸಿ-ಸಾಹಸಮಾಡಿ, ಖುರ-ಗೊರಸು, ಕೈಮಾಡಿದರು-ಹೋರಾಡಿದರು, ದಿವಿಜಾಂಗನಾ ಕಾಮುಕರ ಮಾಡಿ-ಕೊಂದು, ಅಭಂಗ-ಅಜೇಯ.
ಮೂಲ ...{Loading}...
ಅಂಗವಿಸಿ ಮರಿಹುಲ್ಲೆ ಖುರದಲಿ
ಸಿಂಗವನು ಹೊಯ್ವಂತೆ ನೃಪರು
ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ
ಅಂಗವಣೆಯನು ಹೊಗಳುತಾ ದಿವಿ
ಜಾಂಗನಾ ಕಾಮುಕರ ಮಾಡಿಯ
ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ ॥20॥
೦೨೧ ಧರಣಿಪತಿಗಳು ಹತ್ತು ...{Loading}...
ಧರಣಿಪತಿಗಳು ಹತ್ತು ಸಾವಿರ
ವುರುಳಿತಾ ದಿವಸದಲಿ ಹಿಂದಣ
ಕೊರತೆಯುಳಿಲೆಕ್ಕಕ್ಕೆ ಕೊಂದನು ಹತ್ತು ಸಾವಿರವ
ಮರಳಿ ಮೂಸಾವಿರವ ಮತ್ತಂ
ತೆರಡು ಸಾವಿರ ಮತ್ತೆ ಐಸಾ
ವಿರವ ಸವರಿದನಹಿತ ಬಲದಲಿ ಭೂಪ ಕೇಳ್ ಎಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಸೇನೆಯಲ್ಲಿದ್ದವರಲ್ಲಿ ಆ ದಿನ ಹತ್ತು ಸಾವಿರ ರಾಜರು ನೆಲಕ್ಕೆ ಉರುಳಿದರು. ಹಿಂದಿನ ದಿನಗಳ ನಷ್ಟದ ಬಾಕಿ ಲೆಕ್ಕದಲ್ಲಿ ಮತ್ತೆ ಹತ್ತು ಸಾವಿರ ಯೋಧರನ್ನು ಕೊಂದನು. ಅದಲ್ಲದೆ ಮತ್ತೆ ಮೂರು ಸಾವಿರ ಸೈನಿಕರನ್ನು ಅಲ್ಲದೆ ಇನ್ನೂ ಐದು ಸಾವಿರ ಯೋಧರನ್ನು ನಾಶ ಮಾಡಿದನು.
ಪದಾರ್ಥ (ಕ.ಗ.ಪ)
ಧರಣಿಪತಿ-ರಾಜ, ಹಿಂದಣ ಕೊರತೆಯ-ಹಿಂದಿನ ದಿನಗಳ ನಷ್ಟದ, ಉಳಿಲೆಕ್ಕಾ-ಬಾಕಿ ಲೆಕ್ಕದಲ್ಲಿ, ಸವರಿದನು-ನಾಶಮಾಡಿದನು.
ಮೂಲ ...{Loading}...
ಧರಣಿಪತಿಗಳು ಹತ್ತು ಸಾವಿರ
ವುರುಳಿತಾ ದಿವಸದಲಿ ಹಿಂದಣ
ಕೊರತೆಯುಳಿಲೆಕ್ಕಕ್ಕೆ ಕೊಂದನು ಹತ್ತು ಸಾವಿರವ
ಮರಳಿ ಮೂಸಾವಿರವ ಮತ್ತಂ
ತೆರಡು ಸಾವಿರ ಮತ್ತೆ ಐಸಾ
ವಿರವ ಸವರಿದನಹಿತ ಬಲದಲಿ ಭೂಪ ಕೇಳೆಂದ ॥21॥
೦೨೨ ಭುವನ ನೆರೆ ...{Loading}...
ಭುವನ ನೆರೆ ಹೊಗೆವಂದು ಹೆಚ್ಚಿದ
ಶಿವನ ಖತಿ ಮೈದೋರಿತೆನೆ ರಿಪು
ನಿವಹದಲಿ ನೆಲೆಗೊಂಡುದೀತನ ಖಾತಿ ಕೊಪ್ಪರಿಸಿ
ಜವನ ಪುರಿಗಿಂಬಿಲ್ಲ ಕೊಂಡೊ
ಯ್ವವರು ಕೈಗುಂದಿದರು ಗಂಗಾ
ಭವನು ಕೊಲುವುದ ಬಿಡನಿದೇನೆನುತಿರ್ದುದಮರಗಣ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜಗತ್ತೆಲ್ಲಾ ಚೆನ್ನಾಗಿ ಹೊಗೆ ಕಾರುವ (ಸುಡುವ) ಹಾಗೆ ಶಿವನ ಕೋಪ ಅತಿಯಾಗಿ ಕಾಣಿಸಿಕೊಂಡಿತೋ ಎಂಬಂತೆ ಭೀಷ್ಮಾಚಾರ್ಯರ ಕೋಪ ಪುಟಗೊಂಡು ಶತ್ರುಸೇನೆಯಲ್ಲಿ ನೆಲೆಗೊಂಡಿತು. ಇದರ ಪರಿಣಾಮ ಯಮನ ಪಟ್ಟಣದಲ್ಲಿ ಬರುವವರಿಗೆ ಸ್ಥಳವಿಲ್ಲವಾಯಿತು. ಯಮಲೋಕಕ್ಕೆ ಯೋಧರನ್ನು ತೆಗೆದುಕೊಂಡು ಹೋಗುವ ಯಮದೂತರು ಕೈ ಸೋತರು. ಆದರೂ ಸಹ ಭೀಷ್ಮನು ಅರಿ ಸೇನೆಯನ್ನು ಕೊಲ್ಲುವುದನ್ನು ಬಿಡಲಿಲ್ಲ ಅರೆ ! ಇದೇನಿದು ಎಂದು ದೇವತೆಗಳೆಲ್ಲ ಅಚ್ಚರಿ ಪಡುತ್ತಿದ್ದರು.
ಪದಾರ್ಥ (ಕ.ಗ.ಪ)
ಹೊಗೆವಂದು-ಹೊಗೆ ಕಾರುವ ಹಾಗೆ (ಸುಡುವ) ಖತಿ-ಕೋಪ, ಮೈದೋರಿತು-ಕಾಣಿಸಿಕೊಂಡಿತು, ಖಾತಿ-ಕೋಪ, ಕೊಪ್ಪರಿಸಿ-ಪುಟಗೊಂಡು, ಜವನಪುರಿ-ಯಮಲೋಕ, ಇಂಬಿಲ್ಲ-ಆಶ್ರಯವಿಲ್ಲ, ಕೈಗುಂದಿದರು-ಕೈಸೋತರು
ಮೂಲ ...{Loading}...
ಭುವನ ನೆರೆ ಹೊಗೆವಂದು ಹೆಚ್ಚಿದ
ಶಿವನ ಖತಿ ಮೈದೋರಿತೆನೆ ರಿಪು
ನಿವಹದಲಿ ನೆಲೆಗೊಂಡುದೀತನ ಖಾತಿ ಕೊಪ್ಪರಿಸಿ
ಜವನ ಪುರಿಗಿಂಬಿಲ್ಲ ಕೊಂಡೊ
ಯ್ವವರು ಕೈಗುಂದಿದರು ಗಂಗಾ
ಭವನು ಕೊಲುವುದ ಬಿಡನಿದೇನೆನುತಿರ್ದುದಮರಗಣ ॥22॥
೦೨೩ ಬಲವನದ ಹೊದರೆಲ್ಲಿ ...{Loading}...
ಬಲವನದ ಹೊದರೆಲ್ಲಿ ಸೇನಾ
ಜಲನಿಧಿಯ ಸುಳಿವೆಲ್ಲಿ ಸುಭಟರ
ಕಳಕಳದ ಕಡುಹೆಲ್ಲಿ ಖರೆಯದ ರಥಿಕರವರೆಲ್ಲಿ
ಹೊಳೆದು ಮೊಳಗಿದನಲ್ಲಿ ಬಾಣದ
ಬಲೆಯ ಬೀಸಿದನಲ್ಲಿ ರಕುತದ
ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯೆಂಬ ಕಾಡಿನ ಪೊದೆ ಎಲ್ಲಿ ಕಾಣುವುದೋ ಸೇನಾ ಸಾಗರದ ಸುಳಿವು ಎಲ್ಲಿ ಕಂಡು ಬರುವುದೋ, ಸುಭಟರ ಗರ್ಜನೆಯ ರಭಸ ಎಲ್ಲಿ ಕೇಳಿ ಬರುವುದೋ, ನಿಜವಾದ ರಥಿಕರು ಎಲ್ಲಿ ಸೇರುವರೋ ಅಲ್ಲೆಲ್ಲ ಭೀಷ್ಮನು ಕಾಣಿಸಿಕೊಂಡು ಮೆರೆದಾಡಿದನು. ಅಲ್ಲೆಲ್ಲ ಬಾಣಗಳ ಜಾಲ ಬೀಸಿದನು. ಆ ಎಲ್ಲ ಕಡೆಗಳಲ್ಲಿ ಕ್ರೋಧದಿಂದ ರಕ್ತದ ಹೊಳೆಯನ್ನೇ ಹರಿಸಿದನು.
ಪದಾರ್ಥ (ಕ.ಗ.ಪ)
ಬಲವನ-ಸೇನೆಯೆಂಬ ಕಾಡು, ಕಡುಹು-ರಭಸ, ಖರೆಯದ-ನಿಜವಾದ, ಖಾತಿಯಲಿ-ಕ್ರೋಧದಿಂದ
ಮೂಲ ...{Loading}...
ಬಲವನದ ಹೊದರೆಲ್ಲಿ ಸೇನಾ
ಜಲನಿಧಿಯ ಸುಳಿವೆಲ್ಲಿ ಸುಭಟರ
ಕಳಕಳದ ಕಡುಹೆಲ್ಲಿ ಖರೆಯದ ರಥಿಕರವರೆಲ್ಲಿ
ಹೊಳೆದು ಮೊಳಗಿದನಲ್ಲಿ ಬಾಣದ
ಬಲೆಯ ಬೀಸಿದನಲ್ಲಿ ರಕುತದ
ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ ॥23॥
೦೨೪ ಕಡುಹು ಹಿರಿದೋ ...{Loading}...
ಕಡುಹು ಹಿರಿದೋ ಕಾಲರುದ್ರನ
ಪಡೆಯಲಾಡುವನೀತನೋ ಮೈ
ಗೊಡದಿರೋ ಬಲಹೊರಳಿಯೊಡೆಯಲಿ ಹೋಗಿ ದೆಸೆದೆಸೆಗೆ
ತಡೆಯಲರಿದೋ ತಡವು ಮಾಡದಿ
ರೊಡಲ ಬದುಕಿಸಿಕೊಳ್ಳಿ ನೋಡುವ
ರೊಡೆಯರನು ಬಳಿಕೆನುತ ಮುರಿದುದು ಪಾಂಡುಸುತಸೇನೆ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನ ಸಾಮಥ್ರ್ಯ ಹಿರಿಯದೋ ? ಅಥವಾ ಪ್ರಳಯ ಕಾಲದ ರುದ್ರನ ಪರಿವಾರದಲ್ಲಿ ಇದ್ದು ಕೊಂಡು ವರ್ತಿಸುತ್ತಿರುವನು ಇವನೋ ? ಅವನ ಎದುರಿಗೆ ಹೋಗಿ ಬಲಿಯಾಗದಿರೋ ಸಮರ್ಥ ಸೇನಾ ಸಮೂಹ ದಿಕ್ಕಾ ಪಾಲಾಗಿ ಚೆದರಿ ಛಿದ್ರವಾಗಲಿ. ತಡೆಯಲು ಸಾಧ್ಯವಿಲ್ಲವೋ ! ತಡಮಾಡಬೇಡಿ ನಿಮ್ಮ ಜೀವವನ್ನು (ಪ್ರಾಣ) ಉಳಿಸಿಕೊಳ್ಳಿ. ಬಳಿಕ ಒಡೆಯರನ್ನು ನೋಡೋಣವಂತೆ ಎಂದು ಪಾಂಡವರ ಸೇನೆ ಒಬ್ಬರಿಗೊಬ್ಬರು ಕೂಗಿ ಹೇಳುತ್ತ ಹಿಂದಿರುಗಿತು.
ಪದಾರ್ಥ (ಕ.ಗ.ಪ)
ಮೈಗೊಡದಿರೊ-ಬಲಿಯಾಗದಿರೊ, ಬಲಹೊರಳಿ-ಬಲಶಾಲಿ ಸೇನಾ ಸಮೂಹ, ಮುರಿದುದು-ಹಿಂತಿರುಗಿತು.
ಮೂಲ ...{Loading}...
ಕಡುಹು ಹಿರಿದೋ ಕಾಲರುದ್ರನ
ಪಡೆಯಲಾಡುವನೀತನೋ ಮೈ
ಗೊಡದಿರೋ ಬಲಹೊರಳಿಯೊಡೆಯಲಿ ಹೋಗಿ ದೆಸೆದೆಸೆಗೆ
ತಡೆಯಲರಿದೋ ತಡವು ಮಾಡದಿ
ರೊಡಲ ಬದುಕಿಸಿಕೊಳ್ಳಿ ನೋಡುವ
ರೊಡೆಯರನು ಬಳಿಕೆನುತ ಮುರಿದುದು ಪಾಂಡುಸುತಸೇನೆ ॥24॥
೦೨೫ ಜರಿದುದಲ್ಲಿಯದಲ್ಲಿ ಭರದಲಿ ...{Loading}...
ಜರಿದುದಲ್ಲಿಯದಲ್ಲಿ ಭರದಲಿ
ತೆರಳಿತಲ್ಲಿಯದಲ್ಲಿ ಹಿಂದಕೆ
ಮರಳಿತಲ್ಲಿಯದಲ್ಲಿ ರಾಯರ ಕಣ್ಣ ಸನ್ನೆಯಲಿ
ತಿರುಗಿತಲ್ಲಿಯದಲ್ಲಿ ಭಟರೆದೆ
ಬಿರಿದುದಲ್ಲಿಯದಲ್ಲಿ ಭೀಷ್ಮನ
ಸರಳಗಾಳಿಗೆ ಬೆಸುಗೆಯೊಡೆದುದು ವೈರಿಬಲಮೇಘ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ಬಾಣಗಳಿಂದ ಪಾಂಡವ ಸೇನೆಯು ಆಯಾ ಸ್ಥಳದಲ್ಲಿದ್ದುದು ಆ ಸ್ಥಳದಲ್ಲಿಯೇ ಎಲ್ಲಿತ್ತೋ ಅಲ್ಲಿಯೆ ರಭಸದಿಂದ ಹಿಂದಕ್ಕೆ ಹೋಯಿತು. ಅಲ್ಲಲ್ಲಿ, ಧರ್ಮರಾಜನ ಕಣ್ಣಸನ್ನೆಯಿಂದ (ಭೀಷ್ಮನ ಎದುರಿಗೆ ನಿಲ್ಲಲು ಸಾಧ್ಯವಿಲ್ಲೆಂಬ ಸೂಚನೆಯಿಂದ) ಹಿಂತಿರುಗಿತು. ಅಲ್ಲಲ್ಲಿ ಶೂರರ ಧೈರ್ಯಗೆಟ್ಟಿತು (ಎದೆಯೊಡೆಯಿತು). ಭೀಷ್ಮನ ಬಾಣಗಳ ಗಾಳಿಗೆ ಶತ್ರುಬಲವೆಂಬ ಮೋಡ ಚೆದುರಿತು.
ಮೂಲ ...{Loading}...
ಜರಿದುದಲ್ಲಿಯದಲ್ಲಿ ಭರದಲಿ
ತೆರಳಿತಲ್ಲಿಯದಲ್ಲಿ ಹಿಂದಕೆ
ಮರಳಿತಲ್ಲಿಯದಲ್ಲಿ ರಾಯರ ಕಣ್ಣ ಸನ್ನೆಯಲಿ
ತಿರುಗಿತಲ್ಲಿಯದಲ್ಲಿ ಭಟರೆದೆ
ಬಿರಿದುದಲ್ಲಿಯದಲ್ಲಿ ಭೀಷ್ಮನ
ಸರಳಗಾಳಿಗೆ ಬೆಸುಗೆಯೊಡೆದುದು ವೈರಿಬಲಮೇಘ ॥25॥
೦೨೬ ಬಲವ ನಿಲಿಸಲು ...{Loading}...
ಬಲವ ನಿಲಿಸಲು ನೂಕದನಿಲಜ
ನಳುಕಿದನು ಸಹದೇವ ಹಿಂದಣಿ
ಗೊಲೆದ ಧೃಷ್ಟದ್ಯುಮ್ನ ನಕುಲರು ನೆನೆದರನುಚಿತವ
ಕಲಿ ಘಟೋತ್ಕಚನಧಮ ಧರ್ಮವ
ಬಳಸಿದನು ಪಾಂಚಾಲ ಮತ್ಸ್ಯರು
ಹಲರು ನಡೆದುದೆ ಮಾರ್ಗವೆಂದೇ ಮುರುಹಿದರು ಮುಖವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ಪರಾಕ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಭೀಮನು ಅಂಜಿದನು. ಸಹದೇವ ಹಿಂದಕ್ಕೆ ಸರಿದನು. ಧೃಷ್ಟದ್ಯುಮ್ನ ನಕುಲರು ರಣರಂಗದಿಂದ ಹೇಡಿಗಳಂತೆ ಹಿಂದಿರುಗುವ ಅಕಾರ್ಯವನ್ನು ಯೋಚಿಸತೊಡಗಿದರು. ವೀರನಾದ ಘಟೋತ್ಕಚನು ಮೋಸದಿಂದ ಹೀನಕೃತ್ಯ ಮಾಡಲು ತೊಡಗಿದನು. ಪಾಂಚಾಲ ದೇಶದ ದೊರೆ ದ್ರುಪದನೂ ಮತ್ಯದೇಶದ ಅರಸನಾದ ವಿರಾಟ ರಾಜನೂ ಮೊದಲಾದವರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಾ ಮುಖ ತಿರುಗಿಸಿದರು
ಮೂಲ ...{Loading}...
ಬಲವ ನಿಲಿಸಲು ನೂಕದನಿಲಜ
ನಳುಕಿದನು ಸಹದೇವ ಹಿಂದಣಿ
ಗೊಲೆದ ಧೃಷ್ಟದ್ಯುಮ್ನ ನಕುಲರು ನೆನೆದರನುಚಿತವ
ಕಲಿ ಘಟೋತ್ಕಚನಧಮ ಧರ್ಮವ
ಬಳಸಿದನು ಪಾಂಚಾಲ ಮತ್ಸ್ಯರು
ಹಲರು ನಡೆದುದೆ ಮಾರ್ಗವೆಂದೇ ಮುರುಹಿದರು ಮುಖವ ॥26॥
೦೨೭ ಹದುಳವಿಡುವವರಿಲ್ಲ ಸೇನೆಯ ...{Loading}...
ಹದುಳವಿಡುವವರಿಲ್ಲ ಸೇನೆಯ
ಮೊದಲಿಗರು ಮುನ್ನೋಟವಿಕ್ಕಿತು
ಕದನದಲಿ ಕೈಸೂರೆಗೊಟ್ಟರು ಜಯವ ತಮತಮಗೆ
ಎದೆಯ ನೀವಿದನಹಿತ ನೃಪನ
ಭ್ಯುದಯವೆರಡೆಲೆಯಾಯ್ತು ಸಾಹಸಿ
ಸದೆದನೋ ಕಲಿ ಭೀಷ್ಮನೆಂದುದು ಮೇಲೆ ಸುರಕಟಕ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರ ಸೇನೆಯನ್ನು ಸಂತೈಸುವವರೇ ಇರಲಿಲ್ಲ. ಮುಂದಾಳುಗಳು ಮೊದಲೇ ಓಟ ಕಿತ್ತಿದ್ದರು. ಯುದ್ಧದಲ್ಲಿ ಭೀಷ್ಮನಿಗೆ ಗೆಲುವಾಗಲು ತಾವಾಗಿಯೇ ಪ್ರತಿಯೊಬ್ಬರೂ ಹಗೆಗಳಿಗೆ ಕೈವಶವಾಗಲು ಅವಕಾಶ ಮಾಡಿಕೊಟ್ಟರು. ಸಾಹಸಿ ಭೀಷ್ಮನು ಹಗೆಗಳು ಎದೆಯನ್ನು ನೀವಿಕೊಳ್ಳುವಂತೆ ಮಾಡಿದನು. ಹಗೆಯರಸನಾದ ದುರ್ಯೋಧನನ ಏಳಿಗೆ ಚಿಗುರಿತು. ವೀರಾಧಿವೀರ ಭೀಷ್ಮನು ಸಕಲ ಸೈನ್ಯವನ್ನೂ ಸದೆಬಡಿದನು ಎಂದು ಮೇಲೆ ಸ್ವರ್ಗಲೋಕದಲ್ಲಿದ್ದ ದೇವತಾ ಸಮೂಹ ಘೋಷಿಸಿತು.
ಪದಾರ್ಥ (ಕ.ಗ.ಪ)
ಮುನ್ನೋಟವಿಕ್ಕಿತು-ಮೊದಲೇ ಓಟಕಿತ್ತರು, ಕೈಸೂರೆಗೊಟ್ಟರು-ಕೈವಶವಾಗಲು ಅವಕಾಶ ಮಾಡಿಕೊಟ್ಟರು, ಎದೆಯ ನೀವಿದನು-ಅಧೈರ್ಯ ಉಂಟು ಮಾಡಿದನು, ಎರಡೆಲೆ ಆಯ್ತು-ಚಿಗುರಿತು.
ಮೂಲ ...{Loading}...
ಹದುಳವಿಡುವವರಿಲ್ಲ ಸೇನೆಯ
ಮೊದಲಿಗರು ಮುನ್ನೋಟವಿಕ್ಕಿತು
ಕದನದಲಿ ಕೈಸೂರೆಗೊಟ್ಟರು ಜಯವ ತಮತಮಗೆ
ಎದೆಯ ನೀವಿದನಹಿತ ನೃಪನ
ಭ್ಯುದಯವೆರಡೆಲೆಯಾಯ್ತು ಸಾಹಸಿ
ಸದೆದನೋ ಕಲಿ ಭೀಷ್ಮನೆಂದುದು ಮೇಲೆ ಸುರಕಟಕ ॥27॥
೦೨೮ ಸಕಲ ದೆಸೆಯಲಿ ...{Loading}...
ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಎಲ್ಲ ದಿಕ್ಕಿನಿಂದಲೂ ಹಿಂದಿರುಗಿ ಬರುತ್ತಿದ್ದ ದಳಪತಿಗಳನ್ನು ನೋಡಿದನು ; ಕೃಷ್ಣನಿಗೆ ಅವರನ್ನು ತೋರಿಸಿದನು. ಅಯ್ಯೋ ದೇವರೇ ! ನಮ್ಮ ಕಡೆಯವರ ಹಣೆ ಬರಹ ನೋಡಿದಿರಾ ? ಎಂದನು. ನಕುಲನಾಗಲಿ ಭೀಮನಾಗಲಿ ಸಾತ್ಯಕಿ ಆಗಲಿ, ಸೇನಾಪತಿ ಆದ ಧೃಷ್ಟದ್ಯುಮ್ನನೇ ಆಗಲಿ ಯಾರೊಬ್ಬರೂ ಕಾಣಿಸುತ್ತಿಲ್ಲವಲ್ಲಾ ! ಅಯ್ಯಯ್ಯೋ ಚಿತ್ತಭ್ರಾಂತರಾದವರು ಓಡಿ ಹೋದರು. ಓಡಿಹೋಗಲಿ ಚಿಂತೆಯಿಲ್ಲ. ಭೀಷ್ಮನ ಮುಂದುಗಡೆಗೆ ನನ್ನ ರಥವನ್ನು ಮುನ್ನಡೆಸು ಎಂದು ಕೃಷ್ಣನಿಗೆ ಅರ್ಜುನ ಹೇಳಿದನು.
ಮೂಲ ...{Loading}...
ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ ॥28॥
೦೨೯ ಮಾತು ಹಿಞ್ಚಿತು ...{Loading}...
ಮಾತು ಹಿಂಚಿತು ತೇರು ಸೇನಾ
ವ್ರಾತವನು ಹಿಂದಿಕ್ಕಿ ಗಂಗಾ
ಜಾತನಿದಿರಲಿ ನಿಂದುದೇನೆಂಬೆನು ಮಹಾದ್ಭುತವ
ಸೋತು ಚೆಲ್ಲಿದ ಸೇನೆ ಹರ್ಷದೊ
ಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ ಕೇಳು ಜನಮೇಜಯ ಮಹೀಪಾಲ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಮಾತು ಮುಗಿಯಿತು ಎನ್ನುವಷ್ಟರಲ್ಲಿ, ಕೃಷ್ಣನು ಓಡಿಸುತ್ತಿದ್ದ ರಥವು ಸೇನಾ ಸಮೂಹವನ್ನು ದಾಟಿ ಭೀಷ್ಮನ ಎದುರಿಗೆ ಬಂದು ನಿಂತಿತು. ಆಗ ನಡೆದ ಅದ್ಭುತ ಸಂಗತಿಯನ್ನು ಏನೆಂದು ವರ್ಣಿಸಲಿ ? ಭೀಷ್ಮನಿಂದ ಸೋತು ಹೋಗಿ ದಿಕ್ಕಾ ಪಾಲಾಗಿ ಚೆದುರಿದ ಪಾಂಡವ ಸೇನೆ ಮತ್ತೆ ಇದಿರಿಸಿ ನಿಂತಿತು. ಇನ್ನು ಅರ್ಜುನ ಯುದ್ಧಕ್ಕೆ ಬಂದ ಮೇಲೆ ಸೋಲಿನ ಮಾತು ಇನ್ನೇಕೆ ಬೇಕು ? ಜನಮೇಜಯ ರಾಯನೇ ಕೇಳು ಎಂದು ವೈಶಂಪಾಯನ ಮುನಿ ಹೇಳಿದನು.
ಮೂಲ ...{Loading}...
ಮಾತು ಹಿಂಚಿತು ತೇರು ಸೇನಾ
ವ್ರಾತವನು ಹಿಂದಿಕ್ಕಿ ಗಂಗಾ
ಜಾತನಿದಿರಲಿ ನಿಂದುದೇನೆಂಬೆನು ಮಹಾದ್ಭುತವ
ಸೋತು ಚೆಲ್ಲಿದ ಸೇನೆ ಹರ್ಷದೊ
ಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ ಕೇಳು ಜನಮೇಜಯ ಮಹೀಪಾಲ ॥29॥
೦೩೦ ಬಲವನಾಯಕವೇ ವೃಥಾ ...{Loading}...
ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರಿ ಬಿರುದನೆನುತವೆ
ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಭೀಷ್ಮರಿಗೆ ಹೇಳಿದನು. ನಮ್ಮ ಸೇನೆ ನಾಯಕನಿಲ್ಲದುದೇ ? ವ್ಯರ್ಥವಾದ ಕ್ಷುಲ್ಲಕ ಸೇನೆಯೊಂದಿಗೆ ನಿಮ್ಮ ಪ್ರತಾಪವನ್ನು, ಬಾಣ ಪ್ರಯೋಗದ ಕೈ ಚಳಕವನ್ನು, ಮನಸ್ಥೈರ್ಯದ ಸಾಮಥ್ರ್ಯವನ್ನು ಬಿಲ್ಲು ವಿದ್ಯೆಯ ಪ್ರಚಂಡತನವನ್ನು ನಮ್ಮೊಡನೆ ತೋರಿಸಿದಿರಿ. ಶಹಭಾಷ್ ಎನಿಸಿಕೊಂಡು ಸಾಧಿಸಿ ತೋರಿರಿ. ಆಮೇಲೆ ಶೂರಾಗ್ರೇಸರರು ನಾವು ಎಂಬ ಬಿರುದನ್ನು ಗಳಿಸಿರಿ ಎಂದು ಹೇಳುತ್ತಾ ಅರ್ಜುನನು ಭೀಷ್ಮನ ಮೇಲೆ ಕೈಮಾಡಿದನು.
ಪದಾರ್ಥ (ಕ.ಗ.ಪ)
ಹುಲುದಳದೊಳಗೆ-ಕ್ಷುಲ್ಲಕ ಸೇನೆಯೊಂದಿಗೆ, ಕೈಯಳವ-ಬಾಣ ಪ್ರಯೋಗದ ಕೈ ಸಾಹಸ, ಮನಕಲಿತನ-ಮನಸ್ಥೈರ್ಯ, ಬಲಿಯಿರೇ-ಸಾಧಿಸಿ ತೋರಿರಿ, ಹಡೆಯಿರಿ-ಗಳಿಸಿರಿ, ಗಂಗಾಕುಮಾರ-ಭೀಷ್ಮ, ಕೈಯಿಕ್ಕಿದನು-ಕೈಮಾಡಿದನು.
ಮೂಲ ...{Loading}...
ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರಿ ಬಿರುದನೆನುತವೆ
ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ ॥30॥
೦೩೧ ನಾವು ವೃದ್ಧರು ...{Loading}...
ನಾವು ವೃದ್ಧರು ಬಿರುದು ಗಿರುದಿನ
ಲಾವಣಿಗೆ ನಮಗೇಕೆ ಹೇಳೈ
ನೀವಲೈ ಜವ್ವನದ ಭಂಟರು ರಣದ ಧುರಭರಕೆ
ನೀವಿರಲು ನಿರ್ನಾಯಕವೆ ಸೇ
ನಾವಳಿ ಮಹಾದೇವ ಮೂದಲೆ
ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಷ್ಮ ಅರ್ಜುನನಿಗೆ ಹೇಳಿದನು. ನಾವು ಮುದುಕರು, ಬಿರುದು ಬಾವಲಿಗಳ ಆಡಂಬರ ನಮ್ಮಂಥವರಿಗೆ ಏಕಪ್ಪಾ ? ನೀನೆ ಹೇಳು. ಯುದ್ಧರಂಗದ ನಿರ್ವಹಣೆಯ ಭಾರವನ್ನು ಹೊರುವ ಪ್ರಾಯದ ಶೂರರು ನೀವಲ್ಲವೇ. ನಿನ್ನಂಥವರು ಇರುವಾಗ ಸೇನಾಪಡೆ ಅನಾಥವೇ ಶಿವಶಿವಾ ! ನಿನ್ನ ದೂಷಣೆಗೆ ನಾವು ಗುರಿಯೇ ? ಅರ್ಜುನ ನೀನೇ ಹೇಳು ಎಂದನು ಭೀಷ್ಮ.
ಪದಾರ್ಥ (ಕ.ಗ.ಪ)
ಲಾವಣಿಗೆ-ಆಡಂಬರ ವೈಭವ, ಧುರಭರಕೆ-ನಿರ್ವಹಣೆಯ ಭಾರಹೊರುವಿಕೆ,
ಟಿಪ್ಪನೀ (ಕ.ಗ.ಪ)
ಬಿರುದುಗಿರುದಿಸು - ಗಿರುದು ಎಂಬ ಎರಡನೇ ಶಬ್ದಕ್ಕೆ ಪ್ರತ್ಯೇಕ ಅರ್ಥವಿಲ್ಲ. ಮೊದಲನೆ ಶಬ್ದದ ಆದ್ಯಕ್ಷರಕ್ಕೆ ಗಕಾರ ಬಂದು ಪುನರುಕ್ತಿ ಆಗಿದೆ. ಇಂಥ ಶಬ್ದಗಳನ್ನು ದ್ವಿರುಕ್ತಿ ಎನ್ನುತ್ತಾರೆ. ಅರಸು ಗಿರಸು, ಭತ್ತ ಗಿತ್ತ, ರಾಗಿ ಗೀಗಿ ಇತ್ಯಾದಿ.
ಮೂಲ ...{Loading}...
ನಾವು ವೃದ್ಧರು ಬಿರುದು ಗಿರುದಿನ
ಲಾವಣಿಗೆ ನಮಗೇಕೆ ಹೇಳೈ
ನೀವಲೈ ಜವ್ವನದ ಭಂಟರು ರಣದ ಧುರಭರಕೆ
ನೀವಿರಲು ನಿರ್ನಾಯಕವೆ ಸೇ
ನಾವಳಿ ಮಹಾದೇವ ಮೂದಲೆ
ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ ॥31॥
೦೩೨ ಕಟಕಿಯೇಕಿದು ಪರಶುರಾಮನ ...{Loading}...
ಕಟಕಿಯೇಕಿದು ಪರಶುರಾಮನ
ಪಟುತನಕೆ ಮದ್ದರೆದೆನೆಂಬೀ
ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು
ಕುಟಿಲ ಭಣಿತೆಯನರಿಯೆನಿದರೊಳು
ಭಟರು ನೀವಹುದೆನ್ನ ಶರ ಸಂ
ಘಟನವನು ಚಿತ್ತಯಿಸಿಯೆಂದನು ಪಾರ್ಥ ನಸುನಗುತ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ನಿಮ್ಮ ಕಟಿಕಿ ಏತಕ್ಕೆ ? ಪರಶುರಾಮನ ಸಾಮಥ್ರ್ಯಕ್ಕೆ ಪ್ರತೀಕಾರ ತೋರಿದವನು ಈ ಭೀಷ್ಮ ಎಂಬ ಈಶ್ವರನ ಭುಜಬಲಕ್ಕೆ ಸಮಜೋಡಿ ಆಗಿ ನಿಲ್ಲತಕ್ಕವರು ನೀವು ! ಈ ವಿಷಯದಲ್ಲಿ ಯಾವ ಸುಳ್ಳು ತಟವಟದ ಮಾತು ನನಗೆ ತಿಳಿಯದು. ನಿಜವಾದ ಶೂರರು ನೀವಾಗಿದ್ದೀರಿ. ನನ್ನ ಬಾಣ ಪ್ರಯೋಗದ ಸಾಮಥ್ರ್ಯವನ್ನು ಗಮನಿಸಿ ಎಂದು ನಗುನಗುತ್ತ ಪಾರ್ಥನು ಭೀಷ್ಮರಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಪಟುತನ-ಸಾಮಥ್ರ್ಯ, ನಿಟಿಲನೇತ್ರ-ಹಣೆಗಣ್ಣಿನ ಶಿವ, ಸಮಜೋಳಿ-ಸಮಜೋಡಿ, ಕುಟಿಲ ಭಣಿತೆ-ಸುಳ್ಳು ತಟವಟದ ಮಾತು,
ಮೂಲ ...{Loading}...
ಕಟಕಿಯೇಕಿದು ಪರಶುರಾಮನ
ಪಟುತನಕೆ ಮದ್ದರೆದೆನೆಂಬೀ
ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು
ಕುಟಿಲ ಭಣಿತೆಯನರಿಯೆನಿದರೊಳು
ಭಟರು ನೀವಹುದೆನ್ನ ಶರ ಸಂ
ಘಟನವನು ಚಿತ್ತಯಿಸಿಯೆಂದನು ಪಾರ್ಥ ನಸುನಗುತ ॥32॥
೦೩೩ ಅವರು ಪೂರ್ವರು ...{Loading}...
ಅವರು ಪೂರ್ವರು ಪರಶುರಾಮ
ಪ್ರವರರನು ಮೆಚ್ಚಿಸಿದೆವೀಗಳಿ
ನವರು ಕಡುಜಾಣಾಯ್ಲರೆಂದು ಸುರೇಖರೆಂದಿಹರು
ಅವರ ಮೆಚ್ಚಿಸಬಹುದು ನೀವಾ
ಹವಸುವಿದ್ಯಾ ದುರ್ವಿದಗ್ಧರು
ನಿವಗೆ ನಾವಿದಿರಾಗಬಲ್ಲೆವೆಯೆಂದನಾ ಭೀಷ್ಮ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಶುರಾಮರೂ ಹಿಂದಿನ ಕಾಲದವರು ನಿಜ, ಪರಶುರಾಮರಂಥ ಶ್ರೇಷ್ಠರನ್ನು ಪರಾಕ್ರಮ ವಿಷಯದಲ್ಲಿ ಮೆಚ್ಚುವಂತೆ ಮಾಡಿದೆವು. ಆದರೆ ಈ ಕಾಲದವರು ನೀವು, ಅತಿಕುಶಲರಾದವರು, ಅಂಗಸೌಷ್ಠವ ಹೊಂದಿದವರು. ಆ ಹಿಂದಿನವರನ್ನು ಮೆಚ್ಚಿಸಿಬಹುದು ಆದರೆ ನೀವಾದರೋ ಯುದ್ಧ ವಿದ್ಯೆಯಲ್ಲಿ ಹೆಚ್ಚು ಕುಶಲರಾದವರು ಎಂಬ ಗರ್ವಾತಿಶಯರು. ನಿಮ್ಮಂಥವರಿಗೆ ನಾವು ಎದುರಾಳಿಗಳು ಆಗಬಲ್ಲವೇ ? ಎಂದು ಭೀಷ್ಮ ಹೇಳಿದನು.
ಪದಾರ್ಥ (ಕ.ಗ.ಪ)
ಪೂರ್ವರು-ಹಿಂದಿನ ಕಾಲದವರು, ಪ್ರವರ-ಶ್ರೇಷ್ಠ, ಜಾಣಾಯ್ಲರು-ಜಾಣರಲ್ಲಿ ಸಮರ್ಥರಾದವರು, ಸುರೇಖರು-ಅಂಗಸೌಷ್ಠವವುಳ್ಳವರು (ಶಕ್ತರು), ದುರ್ವಿದಗ್ಧರು-ಗರ್ವಾತಿಶಯರು,
ಮೂಲ ...{Loading}...
ಅವರು ಪೂರ್ವರು ಪರಶುರಾಮ
ಪ್ರವರರನು ಮೆಚ್ಚಿಸಿದೆವೀಗಳಿ
ನವರು ಕಡುಜಾಣಾಯ್ಲರೆಂದು ಸುರೇಖರೆಂದಿಹರು
ಅವರ ಮೆಚ್ಚಿಸಬಹುದು ನೀವಾ
ಹವಸುವಿದ್ಯಾ ದುರ್ವಿದಗ್ಧರು
ನಿವಗೆ ನಾವಿದಿರಾಗಬಲ್ಲೆವೆಯೆಂದನಾ ಭೀಷ್ಮ ॥33॥
೦೩೪ ಬರಿಯ ಮಾತೋ ...{Loading}...
ಬರಿಯ ಮಾತೋ ಚಾಪ ವಿದ್ಯದೊ
ಳರಿತವುಂಟೋ ಹೊತ್ತುಗಳೆಯದೆ
ಹೆರಿಸಿರೇ ನಾರಿಯನು ನಿಮ್ಮಯ ಬಾಣಗರ್ಭಿಣಿಯ
ಅರಿಯಬಹುದೆನಲಹುದಹುದು ಕೈ
ಮರೆಯದಿರು ಕೈಕೊಳ್ಳೆನುತ ಬೊ
ಬ್ಬಿರಿದು ಪಾರ್ಥನನದ್ದಿದನು ಬಾಣಾಂಬುರಾಶಿಯಲಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬರಿಯ ಮಾತಾಡುವ ಅಭ್ಯಾಸವೇ ನಿಮ್ಮದು ? ಅಥವಾ ಬಿಲ್ವಿದ್ಯೆಯಲ್ಲಿ ತಿಳಿವು ಉಂಟೋ ? ಮಾತಿನಲ್ಲಿ ಕಾಲವ್ಯರ್ಥ ಮಾಡದೆ ಬಿಲ್ಲಿನ ಹೆದೆಯ ಮಧ್ಯಭಾಗದಲ್ಲಿ ಇರುವ ಬಾಣವನ್ನು ಹೆರುವಂತೆ (ಹೊರಬರುವಂತೆ) ಮಾಡಿರಿ. ಆಗ ನಿಮ್ಮ ಶಕ್ತಿಯನ್ನು ತಿಳಿಯಬಹುದು ಎಂದು ಅರ್ಜುನ ಹೇಳಿದಾಗ ಭೀಷ್ಮನು ನಿಜ ನಿಜ, ನಿನ್ನ ಸಾಮಥ್ರ್ಯವನ್ನು (ಎಷ್ಟಿದೆ ಎಂಬುದನ್ನು) ಜ್ಞಾಪಿಸಿಕೋ, ಇಗೋ ಸ್ವೀಕರಿಸು ಎಂದು ಹೇಳಿ ಗರ್ಜಿಸುತ್ತಾ ಪಾರ್ಥನನ್ನು ಬಾಣಗಳ ಸುರಿ ಮಳೆಯಲ್ಲಿ ಮುಳುಗಿಸಿದನು.
ಪದಾರ್ಥ (ಕ.ಗ.ಪ)
ಅರಿತ-ತಿಳಿವು, ಜ್ಞಾನ, ಕೈಕೊಳ್ಳು-ಸ್ವೀಕರಿಸು
ಮೂಲ ...{Loading}...
ಬರಿಯ ಮಾತೋ ಚಾಪ ವಿದ್ಯದೊ
ಳರಿತವುಂಟೋ ಹೊತ್ತುಗಳೆಯದೆ
ಹೆರಿಸಿರೇ ನಾರಿಯನು ನಿಮ್ಮಯ ಬಾಣಗರ್ಭಿಣಿಯ
ಅರಿಯಬಹುದೆನಲಹುದಹುದು ಕೈ
ಮರೆಯದಿರು ಕೈಕೊಳ್ಳೆನುತ ಬೊ
ಬ್ಬಿರಿದು ಪಾರ್ಥನನದ್ದಿದನು ಬಾಣಾಂಬುರಾಶಿಯಲಿ ॥34॥
೦೩೫ ಒಳ್ಳಿತೈ ಕೈ ...{Loading}...
ಒಳ್ಳಿತೈ ಕೈ ಚಳಕವಾವನ
ಲಿಲ್ಲ ಹರಹರ ಪರಶುರಾಮನ
ನಲ್ಲಿ ಮೆಚ್ಚಿಸಿದಂದವಿನಿತೋ ಮತ್ತೆ ಬೇರುಂಟೊ
ಒಳ್ಳೆಗರನೋಡಿಸಿದ ಸಹಸವ
ನಿಲ್ಲಿ ತೋರಲು ನೆನೆದಿರೇ ತ
ಪ್ಪಲ್ಲ ತಪ್ಪಲ್ಲೆನುತ ಕಣೆಗಳ ಕಡಿದನಾ ಪಾರ್ಥ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಮ್ಮ ಬಾಣ ಪ್ರಯೋಗ ಕೌಶಲ್ಯ ಚೆನ್ನಾಗಿದೆ. ಇಂಥ ಕೈಚಳಕ ಬೇರಾರಲ್ಲೂ ಇಲ್ಲ. ಶಿವ ಶಿವ ! ಹಿಂದೆ ಪರಶುರಾಮನಲ್ಲಿ ಪರಾಕ್ರಮ ತೋರಿಸಿ ಅವರನ್ನು ಮೆಚ್ಚಿಸಿದ ಸಾಹಸದ ರೀತಿ ಇಷ್ಟೇನಾ ? ಇದಲ್ಲದೆ ಇನ್ನೇನಾದರೂ ಇದೆಯೋ ? ನೀರು ಹಾವಿನಂತಹ ಸಾಮಾನ್ಯ ಜನರನ್ನು (ಅಲ್ಪರನ್ನು) ಸೋಲಿಸಲು ತೋರಿದ ಸಾಹಸವನ್ನು ಇಲ್ಲಿ ನನ್ನ ಮುಂದೆ ತೀರಿಸಲು ಯೋಚಿಸಿದಿರಲ್ಲಾ ! ಇದರಲ್ಲಿ ನಿಮ್ಮದೇನು ತಪ್ಪಿಲ್ಲ ತಪ್ಪಿಲ್ಲ (ನಿಮಗಿರುವ ಸಾಮಥ್ರ್ಯ ಇಷ್ಟೇ ತಾನೇ) ಎಂದು ಹೇಳುತ್ತಾ ಆಗ ಅರ್ಜುನನು ಭೀಷ್ಮನು ಬಿಟ್ಟ ಬಾಣಗಳನ್ನು ನಡುವೆಯೇ ಕತ್ತರಿಸಿದನು.
ಪದಾರ್ಥ (ಕ.ಗ.ಪ)
ಒಳ್ಳೆಗ-ನೀರು ಹಾವಿನಂತೆ ಕೀಳಾದವನು, (ಅಲ್ಪ, ಸಾಮಾನ್ಯ)
ಟಿಪ್ಪನೀ (ಕ.ಗ.ಪ)
ಒಳ್ಳೆಗರು- ಒಳ್ಳೆಯಂದರೆ ನೀರು ಹಾವು ಇದರಲ್ಲಿ ವಿಷವಿಲ್ಲ, ಕೇವಲ ಹಾವಿನ ಆಕಾರವಿದೆ. ಈ ಶಬ್ದದ ಮೇಲೆ ಗ ಪ್ರತ್ಯಯ ಹಚ್ಚುವುದು. ಸಾಧುವಿಲ್ಲ. ಒಂದು ಕೆಲಸದಲ್ಲಿ ವರ್ತಿಸುವನು. ಎಂಬರ್ಥದಲ್ಲಿ ‘ಗ’ ಪ್ರತ್ಯಯ ಬರುವುದು ಅಳ್ಳಗರ ಎಂದು ತಿದ್ದಿ ಭಯಪಡತಕ್ಕವನು (ಧೈರ್ಯವಿಲ್ಲದವರು) ಎಂದು ಅರ್ಥವನ್ನು ಹೇಳಬೇಕು. ಅಳ್ಳೆದೇಯ ಹೊರ……. ಇತ್ಯಾದಿ ಪ್ರಯೋಗಗಳಿವೆ.
ಮೂಲ ...{Loading}...
ಒಳ್ಳಿತೈ ಕೈ ಚಳಕವಾವನ
ಲಿಲ್ಲ ಹರಹರ ಪರಶುರಾಮನ
ನಲ್ಲಿ ಮೆಚ್ಚಿಸಿದಂದವಿನಿತೋ ಮತ್ತೆ ಬೇರುಂಟೊ
ಒಳ್ಳೆಗರನೋಡಿಸಿದ ಸಹಸವ
ನಿಲ್ಲಿ ತೋರಲು ನೆನೆದಿರೇ ತ
ಪ್ಪಲ್ಲ ತಪ್ಪಲ್ಲೆನುತ ಕಣೆಗಳ ಕಡಿದನಾ ಪಾರ್ಥ ॥35॥
೦೩೬ ಖೋಡಿ ಮಾಡದಿರೆಲೆ ...{Loading}...
ಖೋಡಿ ಮಾಡದಿರೆಲೆ ಕಿರೀಟಿ ವಿ
ಭಾಡಿಸುವುದರಿದೇ ದೊಠಾರಿಸಿ
ಯಾಡುವುದು ದೊರೆಗುಚಿತವೇ ಗರುವಾಯಿಗಂಗವಿದೆ
ನೋಡು ನೋಡಾದರೆ ಕಪರ್ದಿಯ
ಕೂಡೆ ನೀ ಹೊಯಿದಾಡಿ ಬಿಲ್ಲ ಸ
ಘಾಡನಹೆ ದಿಟ ಕಾದುಕೊಳ್ಳೆನುತೆಚ್ಚನಾ ಭೀಷ್ಮ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೈ ಅರ್ಜುನನೇ ನನ್ನ ಪರಾಕ್ರಮದ ಕೊರತೆಯನ್ನು ಭಾವಿಸಬೇಡ. ಬಾಯಿಮಾತಿನಲ್ಲಿ ಹೀಯಾಳಿಸುವುದು ಅಸಾಧ್ಯವೇನಲ್ಲ. ಹದ್ದು ಮೀರಿ ಮಾತಾಡುವುದು ದೊರೆಯಾದವನಿಗೆ ತಕ್ಕುದೇ ? ಮರ್ಯಾದೆವಂತನಿಗೆ ತಕ್ಕ ರೀತಿ ಇದೇನಾ ? ಹಾಗೆ ನೀನು ನನ್ನ ಪರಾಕ್ರಮವನ್ನು ಅಲ್ಲಗೆಳೆಯುವುದಾದರೆ ಇದೀಗ ನನ್ನ ಪರಾಕ್ರಮವನ್ನು ನೋಡು ಈಶ್ವರನ ಜತೆ ಯುದ್ಧ ಮಾಡಿ ಬಿಲ್ವಿದ್ಯೆಯಲ್ಲಿ ಗರ್ವಿಷ್ಠನಾಗಿರುವೆ ಎಂಬುದು ನಿಜವಾದರೆ ನನ್ನ ಬಾಣಗಳ ಪ್ರಹಾರದಿಂದ ರಕ್ಷಿಸಿಕೋ ಎನ್ನುತ್ತ ಭೀಷ್ಮನು ಬಾಣದ ಮಳೆ ಸುರಿಸಿದನು.
ಪದಾರ್ಥ (ಕ.ಗ.ಪ)
ಖೋಡಿ-ಕೊರತೆ, ವಿಭಾಡಿಸುವುದು-ಹೀಯಾಳಿಸುವುದು, ದೊಠಾರಿಸಿ-ಹದ್ದುಮೀರಿ, ಗರುವಾಯಿ-ಮರ್ಯಾದೆವಂತನೂ, ಕಿಪರ್ದಿ-ಶಿವ, ಹೊಯ್ದಾಡಿ-ಯುದ್ಧಮಾಡಿ, ಸಘಾಡನು-ಗರ್ವಿಷ್ಠನು, ಕಾದುಕೊಳ್ಳು-ರಕ್ಷಿಸಿಕೊ,
ಮೂಲ ...{Loading}...
ಖೋಡಿ ಮಾಡದಿರೆಲೆ ಕಿರೀಟಿ ವಿ
ಭಾಡಿಸುವುದರಿದೇ ದೊಠಾರಿಸಿ
ಯಾಡುವುದು ದೊರೆಗುಚಿತವೇ ಗರುವಾಯಿಗಂಗವಿದೆ
ನೋಡು ನೋಡಾದರೆ ಕಪರ್ದಿಯ
ಕೂಡೆ ನೀ ಹೊಯಿದಾಡಿ ಬಿಲ್ಲ ಸ
ಘಾಡನಹೆ ದಿಟ ಕಾದುಕೊಳ್ಳೆನುತೆಚ್ಚನಾ ಭೀಷ್ಮ ॥36॥
೦೩೭ ಇದು ಹೊಸತು ...{Loading}...
ಇದು ಹೊಸತು ಬಾಣಾಬ್ಧಿ ವೇಲೆಯ
ನೊದೆದು ಹಾಯ್ದುದೊ ಭುವನವಳಿವಂ
ದುದಯಿಸಿದ ಮಳೆಗಾಲವೋ ಮಾಮಾ ಶರಾವಳಿಯೊ
ಹೊದರಡಸಿ ಕಿಡಿಯೆದ್ದು ದೆಸೆಗಳ
ಹೊದಿಸಿದವು ಹೊಳೆದರ್ಜುನನ ಮು
ತ್ತಿದವು ಕೆತ್ತಿದವರಿಯ ಸೀಸಕ ಜೋಡು ಮೊಚ್ಚೆಯವ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ಬಾಣ ಪ್ರಯೋಗ ಹೊಸದು ! ಬಾಣ ಸಾಗರ ದಡವನ್ನು ಅಪ್ಪಳಿಸಿ ಮುಂದೆ ಸಾಗಿತೋ, ಲೋಕಗಳು ನಾಶವಾಗುವಂತೆ ಪ್ರಳಯಕಾಲದಲ್ಲಿ ಉದಯಿಸಿದ ಮಳೆಗಾಲವೋ ಅಥವಾ ಭಾರಿ ಭಾರಿ (ಮಹಾ ಮಹಾ) ಬಾಣಗಳ ಸಮೂಹವೋ ಎಂಬಂತಿದ್ದ ಆ ಬಾಣಗಳು ಗುಂಪು ಗುಂಪಾಗಿ ಸೇರಿ, ಕಿಡಿ ಹಾರಿಸುತ್ತಾ ದಿಕ್ಕುಗಳನ್ನು ಆವರಿಸಿದವು. ಹಾಗೆ ಪ್ರಜ್ವಲಿಸುತ್ತಲೇ ಅರ್ಜುನನನ್ನು ಮುತ್ತಿಕೊಂಡವು. ಹಗೆಯಾದ ಅರ್ಜುನನ ತಲೆಯ ರಕ್ಷಾ ಕವಚ (ಶೀರ್ಷಕ) ಮೈ ಕವಚ ಪಾದರಕ್ಷೆಗಳನ್ನು ಕಡಿದು ಬಿಸಾಡಿದವು.
ಪದಾರ್ಥ (ಕ.ಗ.ಪ)
ಬಾಣಾಬ್ಧಿ-ಬಾಣಸಾಗರ, ಮಾಮಾ-ಭಾರಿ ಭಾರಿ (ಮಹಾಮಹಾ), ಹೊದರಡಿಸಿ-ಗುಂಪಾಗಿ ಸೇರಿ, ಹೊದೆಸಿದವು-ಆವರಿಸಿದವು, ಸೀಸಕ-ತಲೆ ರಕ್ಷಾ ಕವಚ, ಜೋಡು-ಮೈ ಕವಚ, ಮೊಚ್ಚೆ-ಪಾದರಕ್ಷೆ
ಮೂಲ ...{Loading}...
ಇದು ಹೊಸತು ಬಾಣಾಬ್ಧಿ ವೇಲೆಯ
ನೊದೆದು ಹಾಯ್ದುದೊ ಭುವನವಳಿವಂ
ದುದಯಿಸಿದ ಮಳೆಗಾಲವೋ ಮಾಮಾ ಶರಾವಳಿಯೊ
ಹೊದರಡಸಿ ಕಿಡಿಯೆದ್ದು ದೆಸೆಗಳ
ಹೊದಿಸಿದವು ಹೊಳೆದರ್ಜುನನ ಮು
ತ್ತಿದವು ಕೆತ್ತಿದವರಿಯ ಸೀಸಕ ಜೋಡು ಮೊಚ್ಚೆಯವ ॥37॥
೦೩೮ ಹನುಮ ಮಸೆಗಣ್ಡನು ...{Loading}...
ಹನುಮ ಮಸೆಗಂಡನು ಮುರಾಂತಕ
ಕನಲಿದನು ಕಡುನೊಂದು ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ
ಮೊನೆಯಲಗು ಮುಕ್ಕುರುಕೆ ರಥವನು
ತನಿಗೊಡಹಿ ಮುಗ್ಗಿದವು ತೇಜಿಗ
ಳನುವರಕೆ ಮುಖದಿರುಹಿದವು ಕಲಿ ಭೀಷ್ಮನುಪಟಳಕೆ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೀರ ಭೀಷ್ಮನ ಬಾಣಗಳ ಹೊಡೆತಕ್ಕೆ ಧ್ವಜಸ್ತಂಭದಲ್ಲಿದ್ದ ಹನುಮಂತನು ಗಾಯಹೊಂದಿದನು. ಶ್ರೀಕೃಷ್ಣನು ಬಾಣದಿಂದ ಹೆಚ್ಚು ನೋವು ತಿಂದು ಕೆರಳಿದನು. ಪಾರ್ಥನ ಮೈ ಬಾಣಗಳೆಂಬ ಪ್ರಯಾಣಿಕರಿಗೆ ಹೆದ್ದಾರಿ ಆಯಿತು. ಬಾಣಗಳ ಚೂಪಾದ ತುದಿಗಳು ಬಲವಾಗಿ ನಾಟಿಕೊಳ್ಳಲು ಕುದುರೆಗಳು ರಥವನ್ನು ಚೆನ್ನಾಗಿ ಒದರಿ ಮೈಯನ್ನು ಬಗ್ಗಿ, ಯುದ್ಧಕ್ಕೆ ಮುಖ ತಿರುಗಿಸಿದವು.
ಪದಾರ್ಥ (ಕ.ಗ.ಪ)
ಮಸೆಗಂಡನು-ಗಾಯಗೊಂಡನು, ಕನಲಿದನು-ಕೆರಳಿದನು, ಬಾಣ ಪಥಿಕರಿಗೆ-ಬಾಣಗಳೆಂಬ ಪ್ರಯಾಣಿಕರಿಗೆ, ಹೆಬ್ಬಟ್ಟೆ-ಹೆದ್ದಾರಿ, ಮೊನೆಯಲಗು-ಬಾಣಗಳ ಚೂಪಾದ ತುದಿಗಳು, ಮುಕ್ಕುರಿಕೆ-ಬಲವಾಗಿ ನಾಟಿಕೊಳ್ಳಲು, ತನಿಗೊಡಹಿ-ಚೆನ್ನಾಗಿ ಒದರಿ, ಮುಗ್ಗಿದವು-ಮೈಯನ್ನು ಬಗ್ಗಿಸಿದವು, ಅನುವರಕೆ-ಯುದ್ಧದಿಂದ, ಮುಖ ತಿರುವಿದವು-ಹಿಂದಿರುಗಿದವು.
ಮೂಲ ...{Loading}...
ಹನುಮ ಮಸೆಗಂಡನು ಮುರಾಂತಕ
ಕನಲಿದನು ಕಡುನೊಂದು ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ
ಮೊನೆಯಲಗು ಮುಕ್ಕುರುಕೆ ರಥವನು
ತನಿಗೊಡಹಿ ಮುಗ್ಗಿದವು ತೇಜಿಗ
ಳನುವರಕೆ ಮುಖದಿರುಹಿದವು ಕಲಿ ಭೀಷ್ಮನುಪಟಳಕೆ ॥38॥
೦೩೯ ಬಸಿವ ರಕುತವ ...{Loading}...
ಬಸಿವ ರಕುತವ ಬಳಿದು ಖಾತಿಯ
ಮಸಕದಲಿ ಕೈಮರೆದು ಮಿಗೆ ದ
ಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು
ಹೊಸ ಮಸೆಯ ಬಾಯ್ಧಾರೆಗಳ ಶರ
ವಿಸರವನು ತೊಡಚಿದನು ಭೀಷ್ಮನ
ಮುಸುಕಿದನು ಮಗುಳೆಚ್ಚು ಪುನರಪಿ ಕರೆದನಂಬುಗಳ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನ ಬಾಣಗಳು ನಾಟಿ ಮೈಯಿಂದ ಜಿನುಗುತ್ತಿದ್ದ ರಕ್ತಧಾರೆಯನ್ನು ಅರ್ಜುನನು ಒರೆಸಿಕೊಂಡು, ಸಿಟ್ಟಿನ ಉರವಣೆಯಿಂದ ಶಕ್ತಿಗುಂದಿ, ಹೆಚ್ಚಾಗಿ ಜ್ವಲಿಸುತ್ತಾ (ಕಿಡಿಕಿಡಿಯಾಗಿ) ಕೋಪ ಜ್ವಾಲೆಯ ಕಾಂತಿಯನ್ನು ಬೀರುತ್ತಾ, ಕೆಳ ತುಟಿಕಚ್ಚುತ್ತಾ, ಹುಬ್ಬುಗಂಟಿಕ್ಕುತ್ತಾ, ಹೊಸದಾಗಿ ಸಾಣೆ ಹಿಡಿದ ಅಲಗುಗಳುಳ್ಳ ಬಾಣಸಮೂಹವನ್ನು ಬಿಲ್ಲಿಗೆ ಹೂಡಿ ಭೀಷ್ಮನನ್ನು ಬಾಣಗಳಿಂದ ಮುಚ್ಚಿದನು. ಮತ್ತೆ ಮತ್ತೆ ಬಾಣಗಳನ್ನು ಪ್ರಯೋಗಿಸಿ ಮತ್ತೆ ಬಾಣಗಳ ಮಳೆ ಸುರಿಸಿದನು.
ಪದಾರ್ಥ (ಕ.ಗ.ಪ)
ಖಾತಿ-ಸಿಟ್ಟು, ಬಸಿವ-ಜಿನುಗುತ್ತಿರುವ, ಬಳಿದು-ಒರಸಿಕೊಂಡು, ಖಾತಿಯ-ಕೋಪದ, ಮಸಕದಲಿ-ಉರವಣೆಯಲಿ, ಕೈಮರೆದು-ಶಕ್ತಿಗುಂದಿ, ದಳ್ಳಿಸುತ-ಜ್ವಲಿಸುತ್ತ, ಹೊಗರಿಡುತ್ತ-ಉರಿಬೀರುತ್ತಾ, ಶರವಿಸರ-ಬಾಣಗಳ ಸಮೂಹ.
ಮೂಲ ...{Loading}...
ಬಸಿವ ರಕುತವ ಬಳಿದು ಖಾತಿಯ
ಮಸಕದಲಿ ಕೈಮರೆದು ಮಿಗೆ ದ
ಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು
ಹೊಸ ಮಸೆಯ ಬಾಯ್ಧಾರೆಗಳ ಶರ
ವಿಸರವನು ತೊಡಚಿದನು ಭೀಷ್ಮನ
ಮುಸುಕಿದನು ಮಗುಳೆಚ್ಚು ಪುನರಪಿ ಕರೆದನಂಬುಗಳ ॥39॥
೦೪೦ ಮುತ್ತಿದವು ನರನಮ್ಬು ...{Loading}...
ಮುತ್ತಿದವು ನರನಂಬು ಫಣಿಗಳು
ಹುತ್ತ ಹೊಗುವಂದದಲಿ ಕಂಡವ
ಕುತ್ತಿ ಹಾಯ್ದವು ಕೆತ್ತಿ ಹರಿದವು ಕಿಬ್ಬರಿಗಳೆಲುವ
ಮೆತ್ತಿದವು ಕೈ ಮೈಗಳಲಿ ತಲೆ
ಯೊತ್ತಿದವು ವಜ್ರಾಂಗಿಯಲಿ ಭಟ
ನತ್ತಲಿತ್ತಲೆನಲ್ಕೆ ಬಳಸಿದವಾ ನದೀಸುತನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣಗಳು ಹಾವುಗಳು ಹುತ್ತವನ್ನು ಪ್ರವೇಶಿಸುವ ರೀತಿಯಲ್ಲಿ ಮುತ್ತಿದವು. ಮಾಂಸಖಂಡವನ್ನು ಕುಕ್ಕಿ ನುಗ್ಗಿದವು. ಕಿಬ್ಬದಿಯ ಎಲುಬುಗಳನ್ನು (ಪಕ್ಕೆಲುಬುಗಳನ್ನು) ಕೊರೆದು ಸಾಗಿದವು. ಕೈ ಮತ್ತು ಮೈಗಳಲ್ಲಿ ಕಚ್ಚಿಕೊಂಡವು. ತಲೆಯನ್ನು ಅಭೇದ್ಯವಾದ ಕವಚದಲ್ಲಿ ಅದುಮಿದವು. ಬಾಣಗಳು ಅತ್ತಲಿಂದ ಇತ್ತಲಿಂದ (ಎಲ್ಲಾ ಕಡೆಗಳಿಂದ) ಎನ್ನುವಂತೆ ಭೀಷ್ಮನನ್ನು ಸುತ್ತುವರಿದವು.
ಪದಾರ್ಥ (ಕ.ಗ.ಪ)
ಫಣಿ-ಹಾವು, ಕಂಡ-ಮಾಂಸಖಂಡ, ಕಿಬ್ಬರಿ-ಕಿಬ್ಬದಿ (ಪಕ್ಕೆ), ವಜ್ರಾಂಗಿ- ಅಭೇದ್ಯ ಕವಚ.
ಮೂಲ ...{Loading}...
ಮುತ್ತಿದವು ನರನಂಬು ಫಣಿಗಳು
ಹುತ್ತ ಹೊಗುವಂದದಲಿ ಕಂಡವ
ಕುತ್ತಿ ಹಾಯ್ದವು ಕೆತ್ತಿ ಹರಿದವು ಕಿಬ್ಬರಿಗಳೆಲುವ
ಮೆತ್ತಿದವು ಕೈ ಮೈಗಳಲಿ ತಲೆ
ಯೊತ್ತಿದವು ವಜ್ರಾಂಗಿಯಲಿ ಭಟ
ನತ್ತಲಿತ್ತಲೆನಲ್ಕೆ ಬಳಸಿದವಾ ನದೀಸುತನ ॥40॥
೦೪೧ ಜೋಡು ಹರಿದುದು ...{Loading}...
ಜೋಡು ಹರಿದುದು ತಾಳ ಹಳವಿಗೆ
ನೀಡಿ ಕೆಡೆದುದು ಸಾರಥಿಗಳಸು
ಹೂಡಿತಂತಕಪುರಿಗೆ ತೇಜಿಗಳಸುವ ಕಾರಿದವು
ಗೂಡುಗೊಂಡುದು ವಿಕ್ರಮಾನಳ
ನಾಡಬಾರದು ಭೀಷ್ಮನನು ಕೈ
ಗೂಡಿ ಕವಿಯಲಿ ದ್ರೋಣ ಗುರುಸುತರೆಂದುದಖಿಲಜನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಂಗರಕ್ಷೆ ಹರಿಯಿತು. ತಾಳಧ್ವಜ ಉದ್ದಕ್ಕೂ ಬಾಗಿ ಕೆಳಕ್ಕೆ ಬಿತ್ತು. ಸಾರಥಿಗಳು ಸತ್ತರು. ಕುದುರೆಗಳು ಪ್ರಾಣ ಬಿಟ್ಟವು. ಅದ್ಭುತ ಸಾಹಸಿಯಾದ ಭೀಷ್ಮನು ಮೂಲೆಗುಂಪಾದನು. ಯಾರಿಗೆ ಏನು ಹೇಳಲೂ ಆಗಲಿಲ್ಲ. ಆಗ ಭೀಷ್ಮನ ಜತೆಗೂಡಿ ದ್ರೋಣ ಅಶ್ವತ್ಥಾಮರು ಮುನ್ನುಗ್ಗಲಿ ಎಂದು ಸಮಸ್ತರು ಹೇಳಿದರು.
ಪದಾರ್ಥ (ಕ.ಗ.ಪ)
ತಾಳ ಹಳವಿಗೆ-ತಾಳ ವೃಕ್ಷವನ್ನು ಚಿಹ್ನೆಯಾಗುಳ್ಳ ಬಾವುಟ.
ಹೂಡಿತು-ನೆಲಸಿದವು,
ಗೂಡುಗೊಂಡುದು-ಮೂಲೆಗುಂಪಾದವು.
ಮೂಲ ...{Loading}...
ಜೋಡು ಹರಿದುದು ತಾಳ ಹಳವಿಗೆ
ನೀಡಿ ಕೆಡೆದುದು ಸಾರಥಿಗಳಸು
ಹೂಡಿತಂತಕಪುರಿಗೆ ತೇಜಿಗಳಸುವ ಕಾರಿದವು
ಗೂಡುಗೊಂಡುದು ವಿಕ್ರಮಾನಳ
ನಾಡಬಾರದು ಭೀಷ್ಮನನು ಕೈ
ಗೂಡಿ ಕವಿಯಲಿ ದ್ರೋಣ ಗುರುಸುತರೆಂದುದಖಿಲಜನ ॥41॥
೦೪೨ ಸಾರು ಫಡ ...{Loading}...
ಸಾರು ಫಡ ಕೆಲಬಲದ ಹಂಗಿನ
ವೀರನೇ ಕಲಿ ಭೀಷ್ಮ ಮುನಿದರೆ
ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು
ಮೇರೆಗಿದ್ದೆನು ಮಕ್ಕಳೆಂದೇ
ವೈರಬಂಧವ ಬಿಟ್ಟೆನಕಟ ವಿ
ಕಾರಿತನವೇ ನಮ್ಮೊಡನೆಯೆನುತೆಚ್ಚನಾ ಭೀಷ್ಮ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೋಗು ಅತ್ತ ಫಡ ! ಕಲಿಭೀಷ್ಮ ಅಲ್ಪ ಶಕ್ತಿಯ ಸೇನೆಯ ಋಣಕ್ಕಾಗಿ ಹೋರಾಡುವ ವೀರನೇ ? ಅವನು ಕ್ರೋಧಗೊಂಡರೆ ಈಶ್ವರನನ್ನೆ ಯುದ್ಧಕ್ಕೆ ಬಾ ಎಂದು ಕರೆಯುವಂಥವನು. ಇನ್ನು ಈ ಅರ್ಜುನ ಯಾವ ಲೆಕ್ಕ ? ಮಿತಿಮೀರಬಾರದೆಂದು ಸುಮ್ಮನಿದ್ದೆನು. ಇವರನ್ನು ಮಕ್ಕಳೆಂದು ಭಾವಿಸಿ ದ್ವೇಷ ಸಾಧಿಸುವುದನ್ನು ಬಿಟ್ಟೆ. ನನ್ನಂಥವನೊಡನೆ ವಿಕೃತಮನದಿಂದ ವರ್ತಿಸುವುದೇ ಎಂದು ಹೇಳುತ್ತಾ ಭೀಷ್ಮನು ಅರ್ಜುನನ ಮೇಲೆ ಬಾಣ ಬಿಟ್ಟನು.
ಪದಾರ್ಥ (ಕ.ಗ.ಪ)
ಕೆಲಬಲದ-ಅಕ್ಕಪಕ್ಕದ, ಹಂಗಿನ-ಋಣದ, ಹೋರಟೆ-ಯುದ್ಧ, ವೈರಬಂಧ-ದ್ವೇಷ ಸಾಧನೆ, ವಿಕಾರಿತನ-ವಿಕೃತಮನದಿಂದ ವರ್ತಿಸುವುದು.
ಮೂಲ ...{Loading}...
ಸಾರು ಫಡ ಕೆಲಬಲದ ಹಂಗಿನ
ವೀರನೇ ಕಲಿ ಭೀಷ್ಮ ಮುನಿದರೆ
ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು
ಮೇರೆಗಿದ್ದೆನು ಮಕ್ಕಳೆಂದೇ
ವೈರಬಂಧವ ಬಿಟ್ಟೆನಕಟ ವಿ
ಕಾರಿತನವೇ ನಮ್ಮೊಡನೆಯೆನುತೆಚ್ಚನಾ ಭೀಷ್ಮ ॥42॥
೦೪೩ ಎಸಲು ಕಡಿದನು ...{Loading}...
ಎಸಲು ಕಡಿದನು ಪಾರ್ಥನೀತನ
ವಿಶಿಖವನು ತರಿದವನು ಕಿಡಿ ದ
ಳ್ಳಿಸುವ ಧಾರೆಯ ಭೂರಿ ಬಾಣದ ಬಲೆಯ ಬೀಸಿದನು
ಕುಸುರಿದರಿದನು ಮತ್ತೆ ಜೋಡಿಸಿ
ನಿಶಿತ ಶರದಲಿ ಬಳಿಕಲವನಿಗೆ
ಹಸುಗೆ ಮಾಡಿದನಿತ್ತ ಸವೆದವು ಸರಳು ಸಮರದಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಬಾಣಗಳನ್ನು ಬಿಡಲು ಅರ್ಜುನನು ಅವುಗಳನ್ನು ಕತ್ತರಿಸಿ , ಅವನ ಮೇಲೆ ಕಿಡಿಕಾರಿ ಪ್ರಜ್ವಲಿಸುವ ದೊಡ್ಡ ಬಾಣಗಳ ಬಲೆಯನ್ನೆ ಹಾಸಿದನು. ಆಗ ಭೀಷ್ಮ ಮತ್ತೆ ಆ ಬಾಣಗಳನ್ನೆಲ್ಲ ಛಿದ್ರ ಛಿದ್ರಗೊಳಿಸಿದನು. ಆಗ ಅರ್ಜುನನು ಬೀಷ್ಮನ ಎಲ್ಲಾ ಭಾಣಗಳನ್ನು ಕತ್ತರಿಸಿ ಭೂಮಿಯಲ್ಲಿ ಬೀಳುವಂತೆ ಮಾಡಿದನು. ಮತ್ತೆ ತೀಕ್ಷ್ಣ ಬಾಣಗಳನ್ನು ಜೊತೆಗೂಡಿಸಿ ಬಿಟ್ಟನು. ಹೀಗೆ ಯುದ್ಧದಲ್ಲಿ ಇಬ್ಬರ ಸಾವಿರಾರು ಬಾಣಗಳು ನಶಿಸಿದವು.
ಪದಾರ್ಥ (ಕ.ಗ.ಪ)
ಭೂರಿಬಾಣ-ದೊಡ್ಡಬಾಣ, ಕುಸುರಿತರಿದನು-ಛಿದ್ರಛಿದ್ರಗೊಳಿಸಿದನು. ಅವನಿಗೆ ಹಸುಗೆ ಮಾಡಿದನು-ಭೂಮಿಗೆ ಕಾಣಿಕೆ ನೀಡಿದನು. ಸವೆದವು-ನಾಶವಾದವು.
ಮೂಲ ...{Loading}...
ಎಸಲು ಕಡಿದನು ಪಾರ್ಥನೀತನ
ವಿಶಿಖವನು ತರಿದವನು ಕಿಡಿ ದ
ಳ್ಳಿಸುವ ಧಾರೆಯ ಭೂರಿ ಬಾಣದ ಬಲೆಯ ಬೀಸಿದನು
ಕುಸುರಿದರಿದನು ಮತ್ತೆ ಜೋಡಿಸಿ
ನಿಶಿತ ಶರದಲಿ ಬಳಿಕಲವನಿಗೆ
ಹಸುಗೆ ಮಾಡಿದನಿತ್ತ ಸವೆದವು ಸರಳು ಸಮರದಲಿ ॥43॥
೦೪೪ ಉರಗ ಬಾಣವನಿವರು ...{Loading}...
ಉರಗ ಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ಸರ್ಪಾಸ್ತ್ರ ಬಿಟ್ಟರು. ಪಾರ್ಥ ಗರುಡಾಸ್ತ್ರ ಬಿಟ್ಟು ಅದನ್ನು ನಿವಾರಿಸಿದನು. ಭೀಷ್ಮರ ಮೇಲೆ ಅರ್ಜುನ ಆಗ್ನೇಯಾಸ್ತ್ರವನ್ನು ಬಿಡಲು. ಭೀಷ್ಮರು ಜಲಾಸ್ತ್ರ ಬಿಟ್ಟು ಅದನ್ನು ತಣ್ಣಗಾಗಿಸಿದರು. ಅರ್ಜುನ ಗಿರಿಬಾಣವನ್ನು ಬಿಡಲು ಭೀಷ್ಮರು ವಜ್ರಾಸ್ತ್ರ ಬಿಟ್ಟರು. ಅರ್ಜುನ ತಿಮಿರಾಸ್ತ್ರ ಬಿಟ್ಟಾಗ ಭೀಷ್ಮರು ಸೂರ್ಯಾಸ್ತ್ರದಿಂದ ಅತಿವೇಗದಲ್ಲಿ ನಾಶ ಮಾಡಿದರು.
ಪದಾರ್ಥ (ಕ.ಗ.ಪ)
ಗರುಡಶರ-ಗರುಡಾಸ್ತ್ರ, ಉರಗಬಾಣ-ಸರ್ಪಾಸ್ತ್ರ, ತವಿಸಿದನು-ನಿವಾರಿಸಿದನು, ಉರಿಯ ವಿಶಿಖ-ಆಗ್ನೇಯಾಸ್ತ್ರ, ತರಣಿಮಾರ್ಗಣ-ಸೂರ್ಯಾಸ್ತ್ರ, ವಹಿಲದಲ್ಲಿ-ಅತಿವೇಗದಲ್ಲಿ ತರಿದನು-ನಾಶಮಾಡಿದನು.
ಮೂಲ ...{Loading}...
ಉರಗ ಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ ॥44॥
೦೪೫ ಆವ ವಿಧದಲಿ ...{Loading}...
ಆವ ವಿಧದಲಿ ಪಾರ್ಥನೆಸುವನ
ದಾವ ಬೇಗದಿ ಮುರಿವನೀತನ
ದಾವ ಚಾಪ ರಹಸ್ಯ ವಿದ್ಯೆಗಳೊಳಗೆ ಬಳಸಿದನೊ
ಆ ವಿಧದಲಾ ಪರಿಯಲಾ ಸಂ
ಭಾವನೆಯಲಾ ಲುಳಿಯಲಾ ನಾ
ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಾವ ರೀತಿಯಲ್ಲಿ ಅರ್ಜುನನು ಬಾಣ ಬಿಡುವನೋ ಅದನ್ನು ಅಷ್ಟೇ ವೇಗದಲ್ಲಿ ಇವನು ಕತ್ತರಿಸುತ್ತಿದ್ದನು. ಅರ್ಜುನನು ಯಾವ ಯಾವ ಬಗೆಯ ಬಿಲ್ಲು ವಿದ್ಯಾ ರಹಸ್ಯಗಳನ್ನು, ತಿಳಿದು ಬಾಣಪ್ರಯೋಗಗಳನ್ನು ಮಾಡಿದನೋ ಅದಕ್ಕೆ ತಕ್ಕ ರೀತಿಯಲ್ಲಿ ತಕ್ಕ ತಂತ್ರದಿಂದ, ತಕ್ಕ ಪ್ರತಿವೇಗದಲ್ಲಿ ಬಾಣಗಳನ್ನು ಬಿಡುತ್ತಾ ಭೀಷ್ಮನು ನಾನಾ ರೀತಿಯಲ್ಲಿ ಸೆಣಸುತ್ತ ಅರ್ಜುನನಿಗೆ ಮಿಗಿಲಾದ ವೀರನೆನಿಸಿದನು.
ಪದಾರ್ಥ (ಕ.ಗ.ಪ)
ಚಾಪರಹಸ್ಯವಿದ್ಯೆ-ಬಿಲ್ಲು ವಿದ್ಯಾ ರಹಸ್ಯಗಳ, ಸಂಭಾವನೆಯಲಿ-ಆಲೋಚನೆಯಲ್ಲಿ, ಉಳಿಯಲ್ಲಿ-ಪ್ರತಿವೇಗದಲ್ಲಿ, ಸರಿಮಿಗಿಲು-ಸಮಾನತೆಗಿಂತ ಹೆಚ್ಚೆನಿಸಿ.
ಮೂಲ ...{Loading}...
ಆವ ವಿಧದಲಿ ಪಾರ್ಥನೆಸುವನ
ದಾವ ಬೇಗದಿ ಮುರಿವನೀತನ
ದಾವ ಚಾಪ ರಹಸ್ಯ ವಿದ್ಯೆಗಳೊಳಗೆ ಬಳಸಿದನೊ
ಆ ವಿಧದಲಾ ಪರಿಯಲಾ ಸಂ
ಭಾವನೆಯಲಾ ಲುಳಿಯಲಾ ನಾ
ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ ॥45॥
೦೪೬ ಎರಡು ಶರದಲಿ ...{Loading}...
ಎರಡು ಶರದಲಿ ನರನು ಭೀಷ್ಮನ
ಕರದ ಕಾರ್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಎರಡು ಬಾಣಗಳಿಂದ ಬಿಲ್ಲನ್ನು ಕತ್ತರಿಸಿದನು. ಕೂಡಲೇ ಭೀಷ್ಮನು ಹೊಸ ಬಿಲ್ಲನ್ನು ತೆಗೆದುಕೊಂಡನು. ಭೀಷ್ಮನು ಬಾಣಗಳ ಚಳಕವನ್ನು ತೋರಿಸಿದ ಕೂಡಲೇ ಅರ್ಜುನನು ಗರ್ಜಿಸುತ್ತಾ ಐದು ಬಾಣಗಳಿಂದ ಭೀಷ್ಮನ ಬಿಲ್ಲನ್ನು ಮೂರು ತುಂಡಾಗಿ ಕತ್ತರಿಸಿದನು.
ಪದಾರ್ಥ (ಕ.ಗ.ಪ)
ಕಾರ್ಮುಕದಂಡ-ಬಿಲ್ಲು, ಕೈಯೊಡನೆ-ಕೂಡಲೇ,
ಮೂಲ ...{Loading}...
ಎರಡು ಶರದಲಿ ನರನು ಭೀಷ್ಮನ
ಕರದ ಕಾರ್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ ॥46॥
೦೪೭ ಮತ್ತೆ ಹೊಸ ...{Loading}...
ಮತ್ತೆ ಹೊಸ ಚಾಪದಲಿ ಭೀಷ್ಮನು
ಮಿತ್ತು ಖತಿಗೊಂಡಂತೆ ಶರದಲಿ
ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ
ಮುತ್ತಯನ ಕರತಳದ ಧನುವನು
ಕತ್ತರಿಸಿದನು ಹಿಡಿಯಲೀಯದೆ
ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಮತ್ತೆ ಹೊಸ ಬಿಲ್ಲಿನಲ್ಲಿ ಮೃತ್ಯು ದೇವತೆಯೇ ಕೋಪಗೊಂಡ ಹಾಗೆ, ಕೋಪಾವೇಶದಲ್ಲಿ ಬಾಣಗಳಿಂದ ಆಕಾಶವೆಲ್ಲವನ್ನು ಮುಚ್ಚಿದನು. ಪಾರ್ಥನು ನಿಮಿಷ ಮಾತ್ರದಲ್ಲಿ ಆ ಬಿಲ್ಲನ್ನು ಕತ್ತರಿಸಿದನು, ಮತ್ತೆ ಮುತ್ತಜ್ಜನಾದ ಭೀಷ್ಮನು ಅಂಗೈಯಲ್ಲಿ ಬಿಲ್ಲನ್ನು ಹಿಡಿಯಲು ಅವಕಾಶ ಕೊಡದೆ (ಹಿಡಿಯುತ್ತಿರುವಾಗಲೇ) ಕಡಿದನು. (ಈ ರೀತಿಯಲ್ಲಿ) ಭೀಷ್ಮನ ಹತ್ತು ಸಾವಿರ ಬಿಲ್ಲುಗಳು ನಾಶವಾದವು.
ಪದಾರ್ಥ (ಕ.ಗ.ಪ)
ಚಾಪ-ಬಿಲ್ಲು, ಮಿತ್ತು-ಮೃತ್ಯುದೇವತೆ, ಕೆತ್ತನು-ಮುಚ್ಚಿದನು, ಮುತ್ತಯ-ಮುತ್ತಜ್ಜ,
ಮೂಲ ...{Loading}...
ಮತ್ತೆ ಹೊಸ ಚಾಪದಲಿ ಭೀಷ್ಮನು
ಮಿತ್ತು ಖತಿಗೊಂಡಂತೆ ಶರದಲಿ
ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ
ಮುತ್ತಯನ ಕರತಳದ ಧನುವನು
ಕತ್ತರಿಸಿದನು ಹಿಡಿಯಲೀಯದೆ
ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ ॥47॥
೦೪೮ ಉಲಿಯೆ ಕಿರುಘಣ್ಟೆಗಳು ...{Loading}...
ಉಲಿಯೆ ಕಿರುಘಂಟೆಗಳು ಹೊಳ ಹೊಳ
ಹೊಳೆವ ಶಕ್ತಿಯ ತುಡುಕಿ ಭೀಷ್ಮನು
ಫಲುಗುಣನನಿಡೆ ಕಡಿದು ಬಿಸುಟನು ನೂರು ಬಾಣದಲಿ
ಸೆಳೆದು ಫಲುಗುಣ ತಿರುಹಿ ಭೀಷ್ಮನ
ತಲೆಯ ಲಕ್ಷಿಸಿ ಹೊನ್ನ ಘಂಟೆಗ
ಳುಲಿಯೆ ಬಿಟ್ಟೇರಿಂದಲಿಡೆ ಖಂಡಿಸಿದನಾ ಭೀಷ್ಮ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಿರುಗಂಟೆಗಳು ಸದ್ದು ಮಾಡುವ, ಥಳಥಳ ಹೊಳೆ ಹೊಳೆಯುತ್ತಿದ್ದ ಶಕ್ತ್ಯಾಯುಧವನ್ನು ಹಿಡಿದು ಭೀಷ್ಮನು ಅರ್ಜುನನತ್ತ ಬಿಡಲು, ನೂರು ಬಾಣಗಳಿಂದ ಅರ್ಜುನನು ಆ ಶಕ್ತ್ಯಾಯುಧವನ್ನು ಕತ್ತರಿಸಿ ಎಸೆದನು. ಅನಂತರ ಅರ್ಜುನನು ಬಿಲ್ಲಿನ ಹಗ್ಗ ಸೆಳೆದು, ಬಾಣ ಹೂಡುತ್ತ, ಭೀಷ್ಮನ ತಲೆಗೆ ಗುರಿಯಿಟ್ಟು, ಚಿನ್ನದ ಗಂಟೆಗಳು ದನಿಮಾಡುತ್ತಿರಲು ಉದ್ದವಾದ ಬಾಣವನ್ನು ಬಿಡಲು ಭೀಷ್ಮನು ಅದನ್ನು ಕತ್ತರಿಸಿದನು.
ಪದಾರ್ಥ (ಕ.ಗ.ಪ)
ಉಲಿಯೆ-ಸದ್ದು ಮಾಡಲು, ತುಡುಕಿ-ಹಿಡಿದು, ತಿರುಹಿ-ಬಾಣಹೂಡಿ,
ಮೂಲ ...{Loading}...
ಉಲಿಯೆ ಕಿರುಘಂಟೆಗಳು ಹೊಳ ಹೊಳ
ಹೊಳೆವ ಶಕ್ತಿಯ ತುಡುಕಿ ಭೀಷ್ಮನು
ಫಲುಗುಣನನಿಡೆ ಕಡಿದು ಬಿಸುಟನು ನೂರು ಬಾಣದಲಿ
ಸೆಳೆದು ಫಲುಗುಣ ತಿರುಹಿ ಭೀಷ್ಮನ
ತಲೆಯ ಲಕ್ಷಿಸಿ ಹೊನ್ನ ಘಂಟೆಗ
ಳುಲಿಯೆ ಬಿಟ್ಟೇರಿಂದಲಿಡೆ ಖಂಡಿಸಿದನಾ ಭೀಷ್ಮ ॥48॥
೦೪೯ ಆವ ಚಾಪವ ...{Loading}...
ಆವ ಚಾಪವ ತುಡುಕಿ ಕೆನ್ನೆಗೆ
ತೀವಿ ತೆಗೆಯದ ಮುನ್ನ ಫಲುಗುಣ
ನೋವದೆಸುವನು ಕಡಿದು ಬಿಸುಡುವನಿವರ ಬಿಲ್ಲುಗಳ
ಆವ ದಿವ್ಯಾಸ್ತ್ರವನು ಕುಂತಿಯ
ಮಾವ ತೊಡುವನು ತೊಡದ ಮುನ್ನ ಶ
ರಾವಳಿಯ ಮುಂಕೊಂಡು ಖಂಡಿಸಿ ಪಾರ್ಥನೆಸುತಿರ್ದ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಯಾವ ಬಿಲ್ಲನ್ನೇ ಆಗಲಿ ಕೈಯಲ್ಲಿ ಹಿಡಿದು, ಕೆನ್ನೆವರೆಗೆ ಎಳೆದು ತಂದು, ಬಾಣ ಬಿಡುವ ಮೊದಲೆ ಅರ್ಜುನನು, ಭೀಷ್ಮನ ಸಿದ್ಧತೆ ಗಮನಿಸದೆ ಬಾಣ ಬಿಡುತ್ತಿದ್ದನು. ಭೀಷ್ಮರು ಮತ್ತೆ ಮತ್ತೆ ಹಿಡಿಯುತ್ತಿದ್ದ ಬಿಲ್ಲುಗಳನ್ನು ಬಿಡದೆ ಕತ್ತರಿಸಿ ಬೀಳಿಸುತ್ತಿದ್ದನು. ಯಾವ ರೀತಿಯ ದಿವ್ಯಾಸ್ತ್ರವನ್ನು ಭೀಷ್ಮ ಬಿಲ್ಲಿಗೆ ಹೂಡುತ್ತಿದ್ದನೋ ಅದನ್ನು ಹೂಡುವ ಮೊದಲೇ ಪಾರ್ಥನು ಬಾಣಗಳ ಮಳೆ ಸುರಿಸುತ್ತಿದ್ದನು.
ಪದಾರ್ಥ (ಕ.ಗ.ಪ)
ಮುಂಕೊಂಡು-ಶೀಘ್ರವಾಗಿ, ಮೊದಲೇ, ಓವದೆ-ಗಮನಿಸದೆ, ತೀವಿ-ಎಳೆದು, ತುಡುಕಿ-ಹಿಡಿದು, ಕುಂತಿಯ ಮಾವ-ಭೀಷ್ಮ
ಮೂಲ ...{Loading}...
ಆವ ಚಾಪವ ತುಡುಕಿ ಕೆನ್ನೆಗೆ
ತೀವಿ ತೆಗೆಯದ ಮುನ್ನ ಫಲುಗುಣ
ನೋವದೆಸುವನು ಕಡಿದು ಬಿಸುಡುವನಿವರ ಬಿಲ್ಲುಗಳ
ಆವ ದಿವ್ಯಾಸ್ತ್ರವನು ಕುಂತಿಯ
ಮಾವ ತೊಡುವನು ತೊಡದ ಮುನ್ನ ಶ
ರಾವಳಿಯ ಮುಂಕೊಂಡು ಖಂಡಿಸಿ ಪಾರ್ಥನೆಸುತಿರ್ದ ॥49॥
೦೫೦ ಮೇಲೆ ಹೇಳಿಕೆಯಾಯ್ತು ...{Loading}...
ಮೇಲೆ ಹೇಳಿಕೆಯಾಯ್ತು ಕೌರವ
ರಾಳಿನಲಿ ದುಶ್ಶಾಸನಂಗೆ ಕ
ರಾಳ ಭೂರಿಶ್ರವ ಜಯದ್ರಥ ಗುರು ಕೃಪಾದ್ಯರಿಗೆ
ಕೋಲ ಹೊದೆಗಳ ಬಂಡಿಯಲಿ ನಿ
ಸ್ಸಾಳ ಸೂಳಿನ ಲಗ್ಗೆಯಲಿ ಹೇ
ರಾಳದೊಡ್ಡವಣೆಯಲಿ ಪಡಿಬಲ ಕವಿದುದರವಣಿಸಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಕೌರವರ ಕಡೆಯ ಶೂರರಲ್ಲಿ ದುಶ್ಶಾಸನನಿಗೆ, ಭಯಂಕರ ಭೂರಿಶ್ರವನಿಗೆ, ಜಯದ್ರಥ, ಮೊದಲಾದವರಿಗೆ ಭೀಷ್ಮನ ನೆರವಿಗೆ ಹೋಗಲು ಅಪ್ಪಣೆಯಾಯಿತು. ಅರ್ಜುನನಿಗೆ ಪ್ರತಿಯಾದ ಈ ಸೇನೆ, ಬಾಣಗಳ ರಾಶಿ ತುಂಬಿದ ಬಂಡಿಗಳೊಂದಿಗೆ ರಣಭೇರಿ ಧ್ವನಿಗಳ ಮೊಳಗುಗಳ ಆಕ್ರಮಣದಿಂದ, ಅತ್ಯಧಿಕವಾದ ಸಿದ್ಧತೆಯಿಂದ ನುಗ್ಗುವ ಸೇನೆಯೊಡನೆ ಆವೇಶದಿಂದ ಅರ್ಜುನನ ಮೇಲೆ ಬಿದ್ದಿತು.
ಪದಾರ್ಥ (ಕ.ಗ.ಪ)
ಹೇಳಿಕೆ ಆಯ್ತು-ಅಪ್ಪಣೆ ಆಯಿತು, ನಿಸ್ಸಾಳದ ಸೂಳಿನ-ರಣಭೇರಿಗಳ ಧ್ವನಿಗಳಿಂದ, ಕೋಲ ಹೊದೆಗಳ ಬಂಡಿ-ಬಾಣಗಳ ರಾಶಿ ತುಂಬಿದ ಗಾಡಿ, ಪಡಿಬಲ-ಕೌರವ ಸೇನೆ, ಪ್ರತಿಸೇನೆ, ಒಡ್ಡವಣೆ-ಸನ್ನಾಹದಿಂದ, ಸಿದ್ಧತೆಯಿಂದ, ಉರವಣಿಸಿ-ಆವೇಶದಿಂದ
ಮೂಲ ...{Loading}...
ಮೇಲೆ ಹೇಳಿಕೆಯಾಯ್ತು ಕೌರವ
ರಾಳಿನಲಿ ದುಶ್ಶಾಸನಂಗೆ ಕ
ರಾಳ ಭೂರಿಶ್ರವ ಜಯದ್ರಥ ಗುರು ಕೃಪಾದ್ಯರಿಗೆ
ಕೋಲ ಹೊದೆಗಳ ಬಂಡಿಯಲಿ ನಿ
ಸ್ಸಾಳ ಸೂಳಿನ ಲಗ್ಗೆಯಲಿ ಹೇ
ರಾಳದೊಡ್ಡವಣೆಯಲಿ ಪಡಿಬಲ ಕವಿದುದರವಣಿಸಿ ॥50॥
೦೫೧ ನರನ ಬೆಮ್ಬಲವಾಗಿ ...{Loading}...
ನರನ ಬೆಂಬಲವಾಗಿ ಪಾಂಚಾ
ಲರನು ಮತ್ಸ್ಯನ ಭೀಮಸೇನನ
ವರ ನಕುಲ ಸಹದೇವ ಧೃಷ್ಟದ್ಯುಮ್ನ ಸಾತ್ಯಕಿಯ
ಅರಸನಟ್ಟಿದನಿತ್ತಲಂಬಿನ
ತಿರುಹುವೆರಳಿನ ಮೊರೆವ ಬಿಲ್ಲಿನ
ವರ ರಥದ ದುವ್ವಾಳಿ ಮೆರೆಯೆ ಶಿಖಂಡಿ ನಡೆತಂದ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು (ಭೀಷ್ಮನ ಸಹಾಯಕ್ಕೆ ದುಶ್ಶಾಸನಾದಿಗಳು ಬಂದುzನ್ನು ಕಂಡು) ಅರ್ಜುನನಿಗೆ ನೆರವಾಗಲು ಪಾಂಚಾಲ ದೇಶದ ರಾಜರನ್ನು ವಿರಾಟರಾಜನನ್ನು ಭೀಮಸೇನನನ್ನೂ ನಕುಲ ಸಹದೇವನನ್ನು ಧೃಷ್ಟದ್ಯುಮ್ನ ಸಾತ್ಯಕಿಯರನ್ನೂ ಕಳುಹಿಸಿದನು. ಇತ್ತಕಡೆ. ಬಾಣ ಬಿಡಲು ಸಿದ್ಧನಾಗಿದ್ದ ಶಿಖಂಡಿಯು (ಬಿಲ್ಲಿಗೆ ಬಾಣ ಹೂಡಿ) ತನ್ನ ಶ್ರೇಷ್ಠವಾದ ರಥವನ್ನು ವೇಗವಾಗಿ ಚಲಿಸುತ್ತ ಭೀಷ್ಮನ ಬಳಿಗೆ ಬಂದ.
ಪದಾರ್ಥ (ಕ.ಗ.ಪ)
ಶಿಖಂಡಿ-ಮೊದಲು ಸ್ತ್ರೀತ್ವ ಹೊಂದಿ ಆಮೇಲೆ ಪುರುಷತ್ವ ಪಡೆದಿರುವನು. ಹೆಣ್ಗಂಡು
ಮೂಲ ...{Loading}...
ನರನ ಬೆಂಬಲವಾಗಿ ಪಾಂಚಾ
ಲರನು ಮತ್ಸ್ಯನ ಭೀಮಸೇನನ
ವರ ನಕುಲ ಸಹದೇವ ಧೃಷ್ಟದ್ಯುಮ್ನ ಸಾತ್ಯಕಿಯ
ಅರಸನಟ್ಟಿದನಿತ್ತಲಂಬಿನ
ತಿರುಹುವೆರಳಿನ ಮೊರೆವ ಬಿಲ್ಲಿನ
ವರ ರಥದ ದುವ್ವಾಳಿ ಮೆರೆಯೆ ಶಿಖಂಡಿ ನಡೆತಂದ ॥51॥