೦೯

೦೦೦ ಸೂ ವೀರ ...{Loading}...

ಸೂ. ವೀರ ಭಾಗೀರಥಿಯ ತನಯನೊ
ಳಾ ರಿಪುವ್ರಜವಿಜಯ ಫಲುಗುಣ
ಹೋರಿದನು ಸರಿಸಮರದಲಿ ತ್ರೈಜಗವು ಕೊಂಡಾಡೆ

೦೦೧ ಜೀಯ ಚಿತ್ತೈಸಿದರೆ ...{Loading}...

ಜೀಯ ಚಿತ್ತೈಸಿದರೆ ಸೇನಾ
ನಾಯಕರ ಮೋರೆಗಳ ಮುಸುಕುಗ
ಳಾಯತವನೀ ಹೊತ್ತು ಮುನ್ನಿನ ಬಿರುದಿನುಬ್ಬಟೆಯ
ಕಾಯಿದಿರೆ ಧರ್ಮವನು ಜಠರ ಪ
ರಾಯಣರ ಪರಿಣತೆಯಲಾದ ಪ
ಲಾಯನದ ಹೆಬ್ಬೆಳಸ ನೋಡೆನೆ ಭೀಷ್ಮನಿಂತೆಂದ ॥1॥

೦೦೨ ಅರಸ ಹೊಲ್ಲೆಹದೇನು ...{Loading}...

ಅರಸ ಹೊಲ್ಲೆಹದೇನು ಪಾರ್ಥನ
ಸರಿಸದಲಿ ನಿಲುವೆದೆಯ ಬಲುಹು
ಳ್ಳರನು ದೇವಾಸುರರೊಳರಿಯೆನು ಮನುಜರೇನಹರು
ತಿರುಗಬೇಕವಗಡಿಸಿದರೆ ಸಂ
ಗರವ ಹೊಗುವುದು ಸರಿದರಿದಿರುವ
ನರಿದು ಕಾದುವುದಿದರಲಾವುದು ಕೊರತೆ ಹೇಳೆಂದ ॥2॥

೦೦೩ ನುಡಿಯೆವಾವು ಸಮರ್ಥರೆನ್ದುದೆ ...{Loading}...

ನುಡಿಯೆವಾವು ಸಮರ್ಥರೆಂದುದೆ
ಕಡು ನಿಧಾನವು ಸುಭಟರೋಟವೆ
ಕಡೆಗೆ ಪರವಹ ಧರ್ಮ ಪಾರ್ಥನು ಜಗದೊಳಗ್ಗಳನು
ನಡುಹೊಳೆಯ ಹರಿಗೋಲ ಮೂಲೆಯ
ಕಡಿದಿರಾದರೆ ನಮ್ಮ ಪುಣ್ಯದ
ಬಿಡುಗಡೆಯ ಕಾಲವು ಶಿವಾಯೆಂದರಸ ಬಿಸುಸುಯಿದ ॥3॥

೦೦೪ ಖತಿಯ ಮಾಡಿತೆ ...{Loading}...

ಖತಿಯ ಮಾಡಿತೆ ನಮ್ಮ ನುಡಿಯನು
ಚಿತಪರಾಯಣರೆಂದು ನಿನ್ನಯ
ಮತಿಗೆ ತೋರಿತು ಮಾಣಲದು ನೋಡಾದಡಾಹವವ
ಕ್ಷಿತಿಯ ಹೊರೆಕಾರರಿಗೆ ಸೌಖ್ಯ
ಸ್ಥಿತಿಯ ಮಾಡುವೆನಿನ್ನು ಕುರುಭೂ
ಪತಿ ವಿರೋಧಿಯ ವಿಧಿಯನೀಗಳೆ ತೋರಿಸುವೆನೆಂದ ॥4॥

೦೦೫ ತರಿಸಿದನು ಹದಿನೆಣ್ಟು ...{Loading}...

ತರಿಸಿದನು ಹದಿನೆಂಟು ಸಾವಿರ
ಸರಳ ಹೊದೆಗಳ ಬಂಡಿಗಳ ಹ
ನ್ನೆರಡು ಸಾವಿರ ಧನುವನುರುತರದಖಿಳ ಕೈದುಗಳ
ಕರಸಿದನು ಸೈಂಧವನ ಶಲ್ಯನ
ಗುರುಸುತನ ಕೃತವರ್ಮ ಭಗದ
ತ್ತರ ಶಕುನಿ ದುಶ್ಯಾಸನ ದ್ರೋಣಾದಿ ನಾಯಕರ ॥5॥

೦೦೬ ಒತ್ತುಗೊಡುವರೆ ಹಗೆಗೆ ...{Loading}...

ಒತ್ತುಗೊಡುವರೆ ಹಗೆಗೆ ಹಜ್ಜೆಯ
ನಿತ್ತು ತೆಗೆವರೆ ಪಾರ್ಥ ಪರಬಲ
ಮೃತ್ಯುವೇ ಸಾಕಿನ್ನು ಹೋಗಲಿಯೆಂದು ಫಲವೇನು
ಮತ್ತೆ ಕೆಣಕುವುದರ್ಜುನನ ನ
ಮ್ಮತ್ತ ಬಿಡದಿರೆ ವೈರಿಸೇನೆಯ
ಕಿತ್ತು ಬಿಸುಡುವೆ ಯಮಪುರಕೆ ಮೋಹರಿಸಿ ನೀವೆಂದ ॥6॥

೦೦೭ ವಿಗಡರನಿಬರು ನೆರೆದು ...{Loading}...

ವಿಗಡರನಿಬರು ನೆರೆದು ಪಾರ್ಥನ
ತೆಗೆದರತ್ತಲು ಭೀಷ್ಮನಿತ್ತಲು
ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ
ಬಿಗಿದ ಹೊದೆಗಳ ಹರಿದು ಬಿಲ್ಲಿಂ
ದುಗುಳಿಸಿದನಂಬುಗಳನಳವಿಗೆ
ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ ॥7॥

೦೦೮ ಕೊಣ್ಡುಬಹ ಬಲುನಾಯಕರ ...{Loading}...

ಕೊಂಡುಬಹ ಬಲುನಾಯಕರ ಖತಿ
ಗೊಂಡು ದಡಿಯಲಿ ಹೊಯ್ಸಿ ಸೇನೆಯ
ಹಿಂಡೊಡೆಯದೋಜೆಯಲಿ ಹುರಿಯೇರಿಸಿ ಮಹೀಶ್ವರರ
ಗಂಡುಗಲಿಯಭಿಮನ್ಯು ಸಾತ್ಯಕಿ
ಚಂಡಬಲ ಹೈಡಿಂಬರನು ಸಮ
ದಂಡಿಯಲಿ ಮೋಹರಿಸಿ ಸಮರಕೆ ನಡೆದನಾ ಭೀಷ್ಮ ॥8॥

೦೦೯ ತಳಿತ ಸೇನಾಜಲಧಿ ...{Loading}...

ತಳಿತ ಸೇನಾಜಲಧಿ ಲಗ್ಗೆಯ
ಮೊಳಗಿನಲಿ ಮೊನೆದೋರಿ ಭೀಷ್ಮನ
ಹಳಚಿದರು ಹರಹಿನಲಿ ಕವಿದರು ಕೋಡಕೈಗಳಲಿ
ಎಲೆಲೆ ಪಾಂಡವ ಸೈನ್ಯಸಾಗರ
ಮಲೆತುದೋ ಬರಹೇಳು ಮಾರಿಯ
ಬಳಗವನು ಹೆಣದಿನಿಹಿಕಾರರ ಕರೆಯಿ ರಕ್ಕಸರ ॥9॥

೦೧೦ ಸೂಸಿದರು ಸರಳುಗಳನಗಲಕೆ ...{Loading}...

ಸೂಸಿದರು ಸರಳುಗಳನಗಲಕೆ
ಹಾಸಿ ಹಬ್ಬಿದವಶ್ವ ನಿಕರವ
ಕೀಸಿದವು ಕೀಲಿಸಿದವಾನೆಗಳುದರದೆಲುವಿನಲಿ
ಬೀಸಿ ಬಿಸುಟವು ಪಾಯ್ದಳವ ರಥ
ರಾಸಿಗಳ ಜರುಹಿದವು ಬಲ ವಾ
ರಾಸಿಯಲಿ ತಾಯ್ಮಳಲ ಮೊಗೆದವು ಭೀಷ್ಮನಂಬುಗಳು ॥10॥

೦೧೧ ಅಡಸಿ ತುಮ್ಬಿತು ...{Loading}...

ಅಡಸಿ ತುಂಬಿತು ಗಗನ ತಲೆಗಳ
ಗಡಣದಲಿ ದೆಸೆಯೆಲ್ಲ ಬಾಣದ
ಕಡಿಯಮಯವಾಯಿತ್ತು ಹೆಣಮಯವಾಯ್ತು ರಣಭೂಮಿ
ಕಡುಗಲಿಯ ಕೈ ಚಳಕದಂಬಿಂ
ಗೊಡಲ ತೆತ್ತುದು ವೈರಿಬಲ ಬಿಡೆ
ಜಡಿದುದಂತಕನಗರವದ್ಭುತವಾಯ್ತು ಸಂಗ್ರಾಮ ॥11॥

೦೧೨ ಹೊಡೆಗೆಡೆದವಾನೆಗಳು ಥಟ್ಟಿಗೆ ...{Loading}...

ಹೊಡೆಗೆಡೆದವಾನೆಗಳು ಥಟ್ಟಿಗೆ
ಕೆಡೆದವಗ್ಗದ ತುರಗದಳ ಮೈ
ಗಡಿತದಲಿ ಮುಂಕೊಂಡು ಹೊರಳಿತು ಕೂಡೆ ಪಾಯದಳ
ಮಡ ಮುರಿದು ನುಗ್ಗಾಯ್ತು ರಥ ಬೆಳು
ಗೊಡೆ ಪತಾಕಾದಂಡ ಚಮರಿಗ
ಳುಡಿದು ಬಿದ್ದವು ಕೇಣವಿಲ್ಲದೆ ತರಿದನರಿಬಲವ ॥12॥

೦೧೩ ಮಣ್ಡಿಸಿತು ನೊರೆರಕುತ ...{Loading}...

ಮಂಡಿಸಿತು ನೊರೆರಕುತ ಕರುಳಿನ
ಜೊಂಡು ಮಸಗಿತು ಕಡಿದ ಖಂಡದ
ದಿಂಡು ತಳಿತುದು ತೊಗಲ ಕೊಯ್ಲಿನ ಮುರಿದ ಮೂಳೆಗಳ
ಜೊಂಡೆ ನರವಿನ ಜುರಿತ ಮಿದುಳಿನ
ಹೊಂಡೆಯದ ತೊರಳಿಗಳ ಕೊರಳಿನ
ತುಂಡುಗಳ ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು ॥13॥

೦೧೪ ಆಗ ಹೂಡಿದನಾಗ ...{Loading}...

ಆಗ ಹೂಡಿದನಾಗ ಬಾಣವ
ತೂಗಿ ಬರಸೆಳೆದೆಚ್ಚನಹಿತರ
ನಾಗ ತಾಗಿದವಂಬು ಬಲ್ಲವರಾರು ಕೈಲುಳಿಯ
ಬಾಗಿಹುದು ಬಲು ಬಿಲ್ಲು ಕಿವಿವರೆ
ಗಾಗಿ ರಿಪುಬಲ ನಿಮಿಷ ನಿಮಿಷಕೆ
ನೀಗಿಹುದು ನಿಟ್ಟುಸಿರನೆಲೆ ಭೂಪಾಲ ಕೇಳ್ ಎಂದ ॥14॥

೦೧೫ ಬೀಳುತಿರ್ದರು ಭಟರು ...{Loading}...

ಬೀಳುತಿರ್ದರು ಭಟರು ಮತ್ತೆ ಛ
ಡಾಳಿಸಿತು ತಲೆಮಾರಿಗಳು ಹೆಣ
ಸಾಲನೆಡಹಿದರರುಣವಾರಿಯ ತೊರೆಯನೀಸಿದರು
ಆಳು ಹೊಕ್ಕುದು ದಂತಿಘಟೆಗಳು
ತೂಳಿದವು ಕಡುಹೆದ್ದು ತುರಗದ
ಮೇಲೆ ರಾವುತರಳವಿಗೊಟ್ಟುದು ತೇರ ಬಾಹೆಯಲಿ ॥15॥

೦೧೬ ಆಳು ಕುದುರೆಯ ...{Loading}...

ಆಳು ಕುದುರೆಯ ಬೀಯಮಾಡಿ ನೃ
ಪಾಲ ಮಾಡುವುದೇನು ದೊರೆಗಳು
ಕಾಳೆಗಕೆ ಮೈದೋರಬಾರದೆ ಭೀಮ ಫಲುಗುಣರು
ಚಾಳ ನೂಕಿಸಿ ಹೊತ್ತುಗಳೆವರು
ಹೇಳಿ ಫಲವೇನಿನ್ನು ರಣ ಹೀ
ಹಾಳಿ ತಮಗಿಲ್ಲೆಂದು ಗಹಗಹಿಸಿದನು ಕಲಿಭೀಷ್ಮ ॥16॥

೦೧೭ ದಿವಿಜ ನಗರಿಯ ...{Loading}...

ದಿವಿಜ ನಗರಿಯ ಸೂಳೆಗೇರಿಗೆ
ಕವಿವ ಮನವೇ ಮುಂದು ಹಜ್ಜೆಗೆ
ತವಕಿಸುವರಳುಕುವರೆ ಮೇಣ್ ಕೈತಪ್ಪ ಮಾಡಿಸೆನು
ಕವಿಯಿರೈ ಕಾಲಾಳು ರಾವುತ
ರವಗಡಿಸಿರೈ ಜೋದರೆಸಿರೈ
ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ ॥17॥

೦೧೮ ಕಡಿದು ಬಿಸುಟನು ...{Loading}...

ಕಡಿದು ಬಿಸುಟನು ತುರಗ ದಳವನು
ಕೆಡಹಿದನು ಹೇರಾನೆಗಳ ತಡೆ
ಗಡಿದನೊಗ್ಗಿನ ರಥವನುರೆ ಕೊಚ್ಚಿದನು ಕಾಲಾಳ
ಹೊಡಕರಿಸಿ ಹೊದರೆದ್ದು ಮುಂದಕೆ
ನಡೆನಡೆದು ಕೈಮಾಡಿ ಕಾಯದ
ತೊಡಕನಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ ॥18॥

೦೧೯ ಆಳು ಮುರಿದವು ...{Loading}...

ಆಳು ಮುರಿದವು ಮೇಲೆ ಹೊಕ್ಕು ನೃ
ಪಾಲಕರು ಬೊಬ್ಬಿರಿದು ಭೀಷ್ಮನ
ಕೋಲ ಕೊಳ್ಳದೆ ಕೊಂಡು ಹರಿದರು ರಥದ ಹೊರೆಗಾಗಿ
ಆಳುತನದಂಗವಣೆಯೊಳ್ಳಿತು
ಮೇಳವೇ ಬಳಿಕೇನು ಪೃಥ್ವೀ
ಪಾಲರಲ್ಲಾ ಪೂತು ಮಝ ಎನುತೆಚ್ಚನಾ ಭೀಷ್ಮ ॥19॥

೦೨೦ ಅಙ್ಗವಿಸಿ ಮರಿಹುಲ್ಲೆ ...{Loading}...

ಅಂಗವಿಸಿ ಮರಿಹುಲ್ಲೆ ಖುರದಲಿ
ಸಿಂಗವನು ಹೊಯ್ವಂತೆ ನೃಪರು
ತ್ತುಂಗ ಸಹಸಿಯ ಮೇಲೆ ಕೈಮಾಡಿದರು ಖಡ್ಗದಲಿ
ಅಂಗವಣೆಯನು ಹೊಗಳುತಾ ದಿವಿ
ಜಾಂಗನಾ ಕಾಮುಕರ ಮಾಡಿಯ
ಭಂಗ ಭೀಷ್ಮನು ಮೆರೆದನುನ್ನತ ಬಾಹುವಿಕ್ರಮವ ॥20॥

೦೨೧ ಧರಣಿಪತಿಗಳು ಹತ್ತು ...{Loading}...

ಧರಣಿಪತಿಗಳು ಹತ್ತು ಸಾವಿರ
ವುರುಳಿತಾ ದಿವಸದಲಿ ಹಿಂದಣ
ಕೊರತೆಯುಳಿಲೆಕ್ಕಕ್ಕೆ ಕೊಂದನು ಹತ್ತು ಸಾವಿರವ
ಮರಳಿ ಮೂಸಾವಿರವ ಮತ್ತಂ
ತೆರಡು ಸಾವಿರ ಮತ್ತೆ ಐಸಾ
ವಿರವ ಸವರಿದನಹಿತ ಬಲದಲಿ ಭೂಪ ಕೇಳ್ ಎಂದ ॥21॥

೦೨೨ ಭುವನ ನೆರೆ ...{Loading}...

ಭುವನ ನೆರೆ ಹೊಗೆವಂದು ಹೆಚ್ಚಿದ
ಶಿವನ ಖತಿ ಮೈದೋರಿತೆನೆ ರಿಪು
ನಿವಹದಲಿ ನೆಲೆಗೊಂಡುದೀತನ ಖಾತಿ ಕೊಪ್ಪರಿಸಿ
ಜವನ ಪುರಿಗಿಂಬಿಲ್ಲ ಕೊಂಡೊ
ಯ್ವವರು ಕೈಗುಂದಿದರು ಗಂಗಾ
ಭವನು ಕೊಲುವುದ ಬಿಡನಿದೇನೆನುತಿರ್ದುದಮರಗಣ ॥22॥

೦೨೩ ಬಲವನದ ಹೊದರೆಲ್ಲಿ ...{Loading}...

ಬಲವನದ ಹೊದರೆಲ್ಲಿ ಸೇನಾ
ಜಲನಿಧಿಯ ಸುಳಿವೆಲ್ಲಿ ಸುಭಟರ
ಕಳಕಳದ ಕಡುಹೆಲ್ಲಿ ಖರೆಯದ ರಥಿಕರವರೆಲ್ಲಿ
ಹೊಳೆದು ಮೊಳಗಿದನಲ್ಲಿ ಬಾಣದ
ಬಲೆಯ ಬೀಸಿದನಲ್ಲಿ ರಕುತದ
ಹೊಳೆಯ ಹರಿಸಿದನಲ್ಲಿ ಗಂಗಾಸೂನು ಖಾತಿಯಲಿ ॥23॥

೦೨೪ ಕಡುಹು ಹಿರಿದೋ ...{Loading}...

ಕಡುಹು ಹಿರಿದೋ ಕಾಲರುದ್ರನ
ಪಡೆಯಲಾಡುವನೀತನೋ ಮೈ
ಗೊಡದಿರೋ ಬಲಹೊರಳಿಯೊಡೆಯಲಿ ಹೋಗಿ ದೆಸೆದೆಸೆಗೆ
ತಡೆಯಲರಿದೋ ತಡವು ಮಾಡದಿ
ರೊಡಲ ಬದುಕಿಸಿಕೊಳ್ಳಿ ನೋಡುವ
ರೊಡೆಯರನು ಬಳಿಕೆನುತ ಮುರಿದುದು ಪಾಂಡುಸುತಸೇನೆ ॥24॥

೦೨೫ ಜರಿದುದಲ್ಲಿಯದಲ್ಲಿ ಭರದಲಿ ...{Loading}...

ಜರಿದುದಲ್ಲಿಯದಲ್ಲಿ ಭರದಲಿ
ತೆರಳಿತಲ್ಲಿಯದಲ್ಲಿ ಹಿಂದಕೆ
ಮರಳಿತಲ್ಲಿಯದಲ್ಲಿ ರಾಯರ ಕಣ್ಣ ಸನ್ನೆಯಲಿ
ತಿರುಗಿತಲ್ಲಿಯದಲ್ಲಿ ಭಟರೆದೆ
ಬಿರಿದುದಲ್ಲಿಯದಲ್ಲಿ ಭೀಷ್ಮನ
ಸರಳಗಾಳಿಗೆ ಬೆಸುಗೆಯೊಡೆದುದು ವೈರಿಬಲಮೇಘ ॥25॥

೦೨೬ ಬಲವ ನಿಲಿಸಲು ...{Loading}...

ಬಲವ ನಿಲಿಸಲು ನೂಕದನಿಲಜ
ನಳುಕಿದನು ಸಹದೇವ ಹಿಂದಣಿ
ಗೊಲೆದ ಧೃಷ್ಟದ್ಯುಮ್ನ ನಕುಲರು ನೆನೆದರನುಚಿತವ
ಕಲಿ ಘಟೋತ್ಕಚನಧಮ ಧರ್ಮವ
ಬಳಸಿದನು ಪಾಂಚಾಲ ಮತ್ಸ್ಯರು
ಹಲರು ನಡೆದುದೆ ಮಾರ್ಗವೆಂದೇ ಮುರುಹಿದರು ಮುಖವ ॥26॥

೦೨೭ ಹದುಳವಿಡುವವರಿಲ್ಲ ಸೇನೆಯ ...{Loading}...

ಹದುಳವಿಡುವವರಿಲ್ಲ ಸೇನೆಯ
ಮೊದಲಿಗರು ಮುನ್ನೋಟವಿಕ್ಕಿತು
ಕದನದಲಿ ಕೈಸೂರೆಗೊಟ್ಟರು ಜಯವ ತಮತಮಗೆ
ಎದೆಯ ನೀವಿದನಹಿತ ನೃಪನ
ಭ್ಯುದಯವೆರಡೆಲೆಯಾಯ್ತು ಸಾಹಸಿ
ಸದೆದನೋ ಕಲಿ ಭೀಷ್ಮನೆಂದುದು ಮೇಲೆ ಸುರಕಟಕ ॥27॥

೦೨೮ ಸಕಲ ದೆಸೆಯಲಿ ...{Loading}...

ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ ॥28॥

೦೨೯ ಮಾತು ಹಿಞ್ಚಿತು ...{Loading}...

ಮಾತು ಹಿಂಚಿತು ತೇರು ಸೇನಾ
ವ್ರಾತವನು ಹಿಂದಿಕ್ಕಿ ಗಂಗಾ
ಜಾತನಿದಿರಲಿ ನಿಂದುದೇನೆಂಬೆನು ಮಹಾದ್ಭುತವ
ಸೋತು ಚೆಲ್ಲಿದ ಸೇನೆ ಹರ್ಷದೊ
ಳಾತು ನಿಂದುದು ಮತ್ತೆ ಭಂಗದ
ಮಾತದೇತಕೆ ಕೇಳು ಜನಮೇಜಯ ಮಹೀಪಾಲ ॥29॥

೦೩೦ ಬಲವನಾಯಕವೇ ವೃಥಾ ...{Loading}...

ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರಿ ಬಿರುದನೆನುತವೆ
ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ ॥30॥

೦೩೧ ನಾವು ವೃದ್ಧರು ...{Loading}...

ನಾವು ವೃದ್ಧರು ಬಿರುದು ಗಿರುದಿನ
ಲಾವಣಿಗೆ ನಮಗೇಕೆ ಹೇಳೈ
ನೀವಲೈ ಜವ್ವನದ ಭಂಟರು ರಣದ ಧುರಭರಕೆ
ನೀವಿರಲು ನಿರ್ನಾಯಕವೆ ಸೇ
ನಾವಳಿ ಮಹಾದೇವ ಮೂದಲೆ
ಗಾವು ಲಕ್ಷ್ಯವೆ ಹೇಳು ಫಲುಗುಣ ಎಂದನಾ ಭೀಷ್ಮ ॥31॥

೦೩೨ ಕಟಕಿಯೇಕಿದು ಪರಶುರಾಮನ ...{Loading}...

ಕಟಕಿಯೇಕಿದು ಪರಶುರಾಮನ
ಪಟುತನಕೆ ಮದ್ದರೆದೆನೆಂಬೀ
ನಿಟಿಲನೇತ್ರನ ಭುಜಬಲಕೆ ಸಮಜೋಳಿ ಗಡ ನೀವು
ಕುಟಿಲ ಭಣಿತೆಯನರಿಯೆನಿದರೊಳು
ಭಟರು ನೀವಹುದೆನ್ನ ಶರ ಸಂ
ಘಟನವನು ಚಿತ್ತಯಿಸಿಯೆಂದನು ಪಾರ್ಥ ನಸುನಗುತ ॥32॥

೦೩೩ ಅವರು ಪೂರ್ವರು ...{Loading}...

ಅವರು ಪೂರ್ವರು ಪರಶುರಾಮ
ಪ್ರವರರನು ಮೆಚ್ಚಿಸಿದೆವೀಗಳಿ
ನವರು ಕಡುಜಾಣಾಯ್ಲರೆಂದು ಸುರೇಖರೆಂದಿಹರು
ಅವರ ಮೆಚ್ಚಿಸಬಹುದು ನೀವಾ
ಹವಸುವಿದ್ಯಾ ದುರ್ವಿದಗ್ಧರು
ನಿವಗೆ ನಾವಿದಿರಾಗಬಲ್ಲೆವೆಯೆಂದನಾ ಭೀಷ್ಮ ॥33॥

೦೩೪ ಬರಿಯ ಮಾತೋ ...{Loading}...

ಬರಿಯ ಮಾತೋ ಚಾಪ ವಿದ್ಯದೊ
ಳರಿತವುಂಟೋ ಹೊತ್ತುಗಳೆಯದೆ
ಹೆರಿಸಿರೇ ನಾರಿಯನು ನಿಮ್ಮಯ ಬಾಣಗರ್ಭಿಣಿಯ
ಅರಿಯಬಹುದೆನಲಹುದಹುದು ಕೈ
ಮರೆಯದಿರು ಕೈಕೊಳ್ಳೆನುತ ಬೊ
ಬ್ಬಿರಿದು ಪಾರ್ಥನನದ್ದಿದನು ಬಾಣಾಂಬುರಾಶಿಯಲಿ ॥34॥

೦೩೫ ಒಳ್ಳಿತೈ ಕೈ ...{Loading}...

ಒಳ್ಳಿತೈ ಕೈ ಚಳಕವಾವನ
ಲಿಲ್ಲ ಹರಹರ ಪರಶುರಾಮನ
ನಲ್ಲಿ ಮೆಚ್ಚಿಸಿದಂದವಿನಿತೋ ಮತ್ತೆ ಬೇರುಂಟೊ
ಒಳ್ಳೆಗರನೋಡಿಸಿದ ಸಹಸವ
ನಿಲ್ಲಿ ತೋರಲು ನೆನೆದಿರೇ ತ
ಪ್ಪಲ್ಲ ತಪ್ಪಲ್ಲೆನುತ ಕಣೆಗಳ ಕಡಿದನಾ ಪಾರ್ಥ ॥35॥

೦೩೬ ಖೋಡಿ ಮಾಡದಿರೆಲೆ ...{Loading}...

ಖೋಡಿ ಮಾಡದಿರೆಲೆ ಕಿರೀಟಿ ವಿ
ಭಾಡಿಸುವುದರಿದೇ ದೊಠಾರಿಸಿ
ಯಾಡುವುದು ದೊರೆಗುಚಿತವೇ ಗರುವಾಯಿಗಂಗವಿದೆ
ನೋಡು ನೋಡಾದರೆ ಕಪರ್ದಿಯ
ಕೂಡೆ ನೀ ಹೊಯಿದಾಡಿ ಬಿಲ್ಲ ಸ
ಘಾಡನಹೆ ದಿಟ ಕಾದುಕೊಳ್ಳೆನುತೆಚ್ಚನಾ ಭೀಷ್ಮ ॥36॥

೦೩೭ ಇದು ಹೊಸತು ...{Loading}...

ಇದು ಹೊಸತು ಬಾಣಾಬ್ಧಿ ವೇಲೆಯ
ನೊದೆದು ಹಾಯ್ದುದೊ ಭುವನವಳಿವಂ
ದುದಯಿಸಿದ ಮಳೆಗಾಲವೋ ಮಾಮಾ ಶರಾವಳಿಯೊ
ಹೊದರಡಸಿ ಕಿಡಿಯೆದ್ದು ದೆಸೆಗಳ
ಹೊದಿಸಿದವು ಹೊಳೆದರ್ಜುನನ ಮು
ತ್ತಿದವು ಕೆತ್ತಿದವರಿಯ ಸೀಸಕ ಜೋಡು ಮೊಚ್ಚೆಯವ ॥37॥

೦೩೮ ಹನುಮ ಮಸೆಗಣ್ಡನು ...{Loading}...

ಹನುಮ ಮಸೆಗಂಡನು ಮುರಾಂತಕ
ಕನಲಿದನು ಕಡುನೊಂದು ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ
ಮೊನೆಯಲಗು ಮುಕ್ಕುರುಕೆ ರಥವನು
ತನಿಗೊಡಹಿ ಮುಗ್ಗಿದವು ತೇಜಿಗ
ಳನುವರಕೆ ಮುಖದಿರುಹಿದವು ಕಲಿ ಭೀಷ್ಮನುಪಟಳಕೆ ॥38॥

೦೩೯ ಬಸಿವ ರಕುತವ ...{Loading}...

ಬಸಿವ ರಕುತವ ಬಳಿದು ಖಾತಿಯ
ಮಸಕದಲಿ ಕೈಮರೆದು ಮಿಗೆ ದ
ಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು
ಹೊಸ ಮಸೆಯ ಬಾಯ್ಧಾರೆಗಳ ಶರ
ವಿಸರವನು ತೊಡಚಿದನು ಭೀಷ್ಮನ
ಮುಸುಕಿದನು ಮಗುಳೆಚ್ಚು ಪುನರಪಿ ಕರೆದನಂಬುಗಳ ॥39॥

೦೪೦ ಮುತ್ತಿದವು ನರನಮ್ಬು ...{Loading}...

ಮುತ್ತಿದವು ನರನಂಬು ಫಣಿಗಳು
ಹುತ್ತ ಹೊಗುವಂದದಲಿ ಕಂಡವ
ಕುತ್ತಿ ಹಾಯ್ದವು ಕೆತ್ತಿ ಹರಿದವು ಕಿಬ್ಬರಿಗಳೆಲುವ
ಮೆತ್ತಿದವು ಕೈ ಮೈಗಳಲಿ ತಲೆ
ಯೊತ್ತಿದವು ವಜ್ರಾಂಗಿಯಲಿ ಭಟ
ನತ್ತಲಿತ್ತಲೆನಲ್ಕೆ ಬಳಸಿದವಾ ನದೀಸುತನ ॥40॥

೦೪೧ ಜೋಡು ಹರಿದುದು ...{Loading}...

ಜೋಡು ಹರಿದುದು ತಾಳ ಹಳವಿಗೆ
ನೀಡಿ ಕೆಡೆದುದು ಸಾರಥಿಗಳಸು
ಹೂಡಿತಂತಕಪುರಿಗೆ ತೇಜಿಗಳಸುವ ಕಾರಿದವು
ಗೂಡುಗೊಂಡುದು ವಿಕ್ರಮಾನಳ
ನಾಡಬಾರದು ಭೀಷ್ಮನನು ಕೈ
ಗೂಡಿ ಕವಿಯಲಿ ದ್ರೋಣ ಗುರುಸುತರೆಂದುದಖಿಲಜನ ॥41॥

೦೪೨ ಸಾರು ಫಡ ...{Loading}...

ಸಾರು ಫಡ ಕೆಲಬಲದ ಹಂಗಿನ
ವೀರನೇ ಕಲಿ ಭೀಷ್ಮ ಮುನಿದರೆ
ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು
ಮೇರೆಗಿದ್ದೆನು ಮಕ್ಕಳೆಂದೇ
ವೈರಬಂಧವ ಬಿಟ್ಟೆನಕಟ ವಿ
ಕಾರಿತನವೇ ನಮ್ಮೊಡನೆಯೆನುತೆಚ್ಚನಾ ಭೀಷ್ಮ ॥42॥

೦೪೩ ಎಸಲು ಕಡಿದನು ...{Loading}...

ಎಸಲು ಕಡಿದನು ಪಾರ್ಥನೀತನ
ವಿಶಿಖವನು ತರಿದವನು ಕಿಡಿ ದ
ಳ್ಳಿಸುವ ಧಾರೆಯ ಭೂರಿ ಬಾಣದ ಬಲೆಯ ಬೀಸಿದನು
ಕುಸುರಿದರಿದನು ಮತ್ತೆ ಜೋಡಿಸಿ
ನಿಶಿತ ಶರದಲಿ ಬಳಿಕಲವನಿಗೆ
ಹಸುಗೆ ಮಾಡಿದನಿತ್ತ ಸವೆದವು ಸರಳು ಸಮರದಲಿ ॥43॥

೦೪೪ ಉರಗ ಬಾಣವನಿವರು ...{Loading}...

ಉರಗ ಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ ॥44॥

೦೪೫ ಆವ ವಿಧದಲಿ ...{Loading}...

ಆವ ವಿಧದಲಿ ಪಾರ್ಥನೆಸುವನ
ದಾವ ಬೇಗದಿ ಮುರಿವನೀತನ
ದಾವ ಚಾಪ ರಹಸ್ಯ ವಿದ್ಯೆಗಳೊಳಗೆ ಬಳಸಿದನೊ
ಆ ವಿಧದಲಾ ಪರಿಯಲಾ ಸಂ
ಭಾವನೆಯಲಾ ಲುಳಿಯಲಾ ನಾ
ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ ॥45॥

೦೪೬ ಎರಡು ಶರದಲಿ ...{Loading}...

ಎರಡು ಶರದಲಿ ನರನು ಭೀಷ್ಮನ
ಕರದ ಕಾರ್ಮುಕ ದಂಡವನು ಕ
ತ್ತರಿಸಿದನು ಕೈಯೊಡನೆ ಕೊಂಡನು ಭೀಷ್ಮ ಹೊಸ ಧನುವ
ಸರಳ ಸೂಟಿಯ ತೋರಿಸಿದಡ
ಬ್ಬರಿಸಿ ಫಲುಗುಣನೈದು ಬಾಣದ
ಲರಿ ಭಟನ ಚಾಪವನು ಕಡಿ ಮೂರಾಗಿ ಖಂಡಿಸಿದ ॥46॥

೦೪೭ ಮತ್ತೆ ಹೊಸ ...{Loading}...

ಮತ್ತೆ ಹೊಸ ಚಾಪದಲಿ ಭೀಷ್ಮನು
ಮಿತ್ತು ಖತಿಗೊಂಡಂತೆ ಶರದಲಿ
ಕೆತ್ತನಾಕಾಶವನು ಕಡಿದನು ಪಾರ್ಥ ನಿಮಿಷದಲಿ
ಮುತ್ತಯನ ಕರತಳದ ಧನುವನು
ಕತ್ತರಿಸಿದನು ಹಿಡಿಯಲೀಯದೆ
ಹತ್ತು ಸಾವಿರ ಬಿಲ್ಲು ಸವೆದವು ಕುರುಪಿತಾಮಹನ ॥47॥

೦೪೮ ಉಲಿಯೆ ಕಿರುಘಣ್ಟೆಗಳು ...{Loading}...

ಉಲಿಯೆ ಕಿರುಘಂಟೆಗಳು ಹೊಳ ಹೊಳ
ಹೊಳೆವ ಶಕ್ತಿಯ ತುಡುಕಿ ಭೀಷ್ಮನು
ಫಲುಗುಣನನಿಡೆ ಕಡಿದು ಬಿಸುಟನು ನೂರು ಬಾಣದಲಿ
ಸೆಳೆದು ಫಲುಗುಣ ತಿರುಹಿ ಭೀಷ್ಮನ
ತಲೆಯ ಲಕ್ಷಿಸಿ ಹೊನ್ನ ಘಂಟೆಗ
ಳುಲಿಯೆ ಬಿಟ್ಟೇರಿಂದಲಿಡೆ ಖಂಡಿಸಿದನಾ ಭೀಷ್ಮ ॥48॥

೦೪೯ ಆವ ಚಾಪವ ...{Loading}...

ಆವ ಚಾಪವ ತುಡುಕಿ ಕೆನ್ನೆಗೆ
ತೀವಿ ತೆಗೆಯದ ಮುನ್ನ ಫಲುಗುಣ
ನೋವದೆಸುವನು ಕಡಿದು ಬಿಸುಡುವನಿವರ ಬಿಲ್ಲುಗಳ
ಆವ ದಿವ್ಯಾಸ್ತ್ರವನು ಕುಂತಿಯ
ಮಾವ ತೊಡುವನು ತೊಡದ ಮುನ್ನ ಶ
ರಾವಳಿಯ ಮುಂಕೊಂಡು ಖಂಡಿಸಿ ಪಾರ್ಥನೆಸುತಿರ್ದ ॥49॥

೦೫೦ ಮೇಲೆ ಹೇಳಿಕೆಯಾಯ್ತು ...{Loading}...

ಮೇಲೆ ಹೇಳಿಕೆಯಾಯ್ತು ಕೌರವ
ರಾಳಿನಲಿ ದುಶ್ಶಾಸನಂಗೆ ಕ
ರಾಳ ಭೂರಿಶ್ರವ ಜಯದ್ರಥ ಗುರು ಕೃಪಾದ್ಯರಿಗೆ
ಕೋಲ ಹೊದೆಗಳ ಬಂಡಿಯಲಿ ನಿ
ಸ್ಸಾಳ ಸೂಳಿನ ಲಗ್ಗೆಯಲಿ ಹೇ
ರಾಳದೊಡ್ಡವಣೆಯಲಿ ಪಡಿಬಲ ಕವಿದುದರವಣಿಸಿ ॥50॥

೦೫೧ ನರನ ಬೆಮ್ಬಲವಾಗಿ ...{Loading}...

ನರನ ಬೆಂಬಲವಾಗಿ ಪಾಂಚಾ
ಲರನು ಮತ್ಸ್ಯನ ಭೀಮಸೇನನ
ವರ ನಕುಲ ಸಹದೇವ ಧೃಷ್ಟದ್ಯುಮ್ನ ಸಾತ್ಯಕಿಯ
ಅರಸನಟ್ಟಿದನಿತ್ತಲಂಬಿನ
ತಿರುಹುವೆರಳಿನ ಮೊರೆವ ಬಿಲ್ಲಿನ
ವರ ರಥದ ದುವ್ವಾಳಿ ಮೆರೆಯೆ ಶಿಖಂಡಿ ನಡೆತಂದ ॥51॥

+೦೯ ...{Loading}...