೦೦೦ ಸೂ ರಾಯಕಟಕದೊಳಿರುಳು ...{Loading}...
ಸೂ. ರಾಯಕಟಕದೊಳಿರುಳು ಭೀಷ್ಮರ
ಸಾಯಬೇಕೆಂದೊಡಬಡಿಸಿ ಕಮ
ಲಾಯತಾಂಬಕ ಸಹಿತ ಪಾಳಯಕರಸನೈತಂದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಧರ್ಮರಾಯನು ಕಮಲದಂತೆ ವಿಶಾಲಕಣ್ಣುಗಳುಳ್ಳ ಶ್ರೀಕೃಷ್ಣನ ಸಂಗಡ ಕೌರವನ ಸೇನಾ ಪಾಳೆಯದಲ್ಲಿ ರಾತ್ರಿಯ ಕಾಲದಲ್ಲಿ ಹೋಗಿ ಭೀಷ್ಮರನ್ನು ನೀನಾಗಿಯೇ ಸಾಯಬೇಕು ಇಲ್ಲದಿದ್ದಲ್ಲಿ ನಮಗೆ ಉಳಿಗಾಲವಿಲ್ಲ (ನೀವು ಬದುಕಿದ್ದರೆ ನಾವಾರೂ ಗೆಲ್ಲಲು ಸಾಧ್ಯವಿಲ್ಲ) ಎಂದು ಒಪ್ಪಿಸಿ ತನ್ನ ಪಾಳೆಯಕ್ಕೆ ಹಿಂದಿರುಗಿ ಬಂದನು.
ಪದಾರ್ಥ (ಕ.ಗ.ಪ)
ಕಮಲಾಯತಾಂಬಕ-ಕಮಲದಂತೆ ವಿಶಾಲವಾದ ಕಣ್ಣುಗಳುಳ್ಳವನು, ಶ್ರೀಕೃಷ್ಣ, ಇರುಳು-ರಾತ್ರಿ, ರಾಯಕಟಕ-ಇಲ್ಲಿ ದುರ್ಯೋಧನನ ಸೇನಾ ಪಾಳೆಯ, ಒಡಬಡಿಸಿ-ಒಪ್ಪಿಸಿ, ಐತಂದ-ಹಿಂದಿರುಗಿ ಬಂದನು
ಮೂಲ ...{Loading}...
ಸೂ. ರಾಯಕಟಕದೊಳಿರುಳು ಭೀಷ್ಮರ
ಸಾಯಬೇಕೆಂದೊಡಬಡಿಸಿ ಕಮ
ಲಾಯತಾಂಬಕ ಸಹಿತ ಪಾಳಯಕರಸನೈತಂದ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ದಿನ ಮೂರಾಯ್ತು ಭೀಷ್ಮನ
ಕಾಳೆಗದೊಳಲ್ಲಿಂದ ಮೇಲಣ ಕಥನಕೌತುಕವ
ಆಲಿಸುವದೈ ಮೂಡಣದ್ರಿಯ
ಮೇಲೆ ಕೆಂಪೆಸೆಯಿತ್ತು ಘನ ನಿ
ಸ್ಸಾಳವೊದರಿದವೈ ನೃಪಾಲರ ಕಟಕವೆರಡರಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ರಾಜನೇ ಆಲಿಸು. ಭೀಷ್ಮನೊಡನೆ ನಡೆಸಿದ ಯುದ್ಧದಲ್ಲಿ ಮೂರು ದಿನಗಳು ಕಳೆದವು. ಆ ಮೂರು ದಿನಗಳ ಅನಂತರದ ದಿನಗಳಲ್ಲಿ ನಡೆದ ಯುದ್ಧಾಶ್ಚರ್ಯ ಸಂಗತಿಗಳನ್ನು ಗಮನವಿಟ್ಟು ಕೇಳು. ಪೂರ್ವದಿಕ್ಕಿನ ಬೆಟ್ಟದ ತುದಿಯಲ್ಲಿ ಸೂರ್ಯನ ಹೊಂಬಣ್ಣವು ಬೆಳಗಿತು (ನಾಲ್ಕನೇ ದಿನ ಬೆಳಿಗ್ಗೆ ಸೂರ್ಯೋದಯವಾಯಿತು). ಅರಸರಾದ ಕೌರವರ ಪಾಂಡವರ ಎರಡೂ ಕಡೆಯ ದಂಡಿನಲ್ಲಿ ದೊಡ್ಡ ರಣಭೇರಿಗಳು ಮೊಳಗಿದವು.
ಪದಾರ್ಥ (ಕ.ಗ.ಪ)
ಧರಿತ್ರೀಪಾಲ-ದೊರೆ, ಮೇಲಣ-ಮರುದಿನ, ಕಥನಕೌತುಕ-ಯುದ್ಧಾಶ್ಚರ್ಯ ಸಂಗತಿಗಳು, ಅದ್ರಿ-ಬೆಟ್ಟ, ಕೆಂಪೆಸೆಯಿತು-ಸೂರ್ಯೋದಯವಾಯಿತು, ಕಟಕ-ದಂಡು, ಪಾಳೆಯ, ಘನನಿಸ್ಸಾಳ-ರಣಭೇರಿ, ಒದರಿದವೈ-ಮೊಳಗಿದವು.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ದಿನ ಮೂರಾಯ್ತು ಭೀಷ್ಮನ
ಕಾಳೆಗದೊಳಲ್ಲಿಂದ ಮೇಲಣ ಕಥನಕೌತುಕವ
ಆಲಿಸುವದೈ ಮೂಡಣದ್ರಿಯ
ಮೇಲೆ ಕೆಂಪೆಸೆಯಿತ್ತು ಘನ ನಿ
ಸ್ಸಾಳವೊದರಿದವೈ ನೃಪಾಲರ ಕಟಕವೆರಡರಲಿ ॥1॥
೦೦೨ ಹಲ್ಲಣಿಸಿ ಹರಿತನ್ದು ...{Loading}...
ಹಲ್ಲಣಿಸಿ ಹರಿತಂದು ಮೋಹರ
ವಲ್ಲಿಗಲ್ಲಿಗೆ ನಿಂದುದೆರಡರ
ಘಲ್ಲಣೆಯ ಘಾಯದ ಘಡಾವಣೆ ಮೀರಿ ಘಾತಿಸಿತು
ಕೆಲ್ಲೆಗೆಡೆದವು ಕರಿಗಳಸುಗಳ
ಚೆಲ್ಲಿದವು ತೇಜಿಗಳು ರಥಕುಳ
ವೆಲ್ಲ ಹುಡಿಹುಡಿ ಪಾಯದಳ ನಿರ್ನಾಮವಾಯ್ತೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚತುರಂಗ ಬಲದ (ಆನೆ, ಕುದುರೆ, ರಥ ಕಾಲಾಳ ಸೇನೆ) ದಂಡು ಯುದ್ಧೋಪಕರಣಗಳನ್ನು ಸಿದ್ಧಪಡಿಸಿ ಕೊಂಡು ಮುಂದೆ ಸಾಗಿಬಂದು, ಯುದ್ಧ ಮಾಡಲು ಅನುಕೂಲವಾಗುವ ಹಾಗೆ ಅಲ್ಲಲ್ಲಿ ನಿಂತವು. ಎರಡೂ ಕಡೆಯ ಸೇನೆಯ ಘೋಷಣೆಗಳ ವಿಜೃಂಭಣೆ, ಆಯುಧಗಳ ಪ್ರಹಾರದಿಂದ ಉಂಟಾದ ಗಾಯಗಳ ಆಧಿಕ್ಯಗಳು ಹೆಚ್ಚಿನ ಪ್ರಮಾಣದಲ್ಲಿ, ನಿರೀಕ್ಷೆ ಮೀರಿ ನೋವನ್ನುಂಟು ಮಾಡಿದವು. ಆನೆಗಳು ಕೆಕ್ಕಳಿಸಿ (ಬೆದರಿ) ಬಿದ್ದವು. ಕುದುರೆಗಳು ಪ್ರಾಣಗಳನ್ನು ಬಿಟ್ಟವು. ರಥಸಮೂಹಗಳು ಪುಡಿಪುಡಿ(ಯಾದವು). ಕಾಲಾಳು ಪಡೆ ಹೆಸರಿಲ್ಲದ ಹಾಗೆ ನಾಶವಾಯಿತು ಎಂದು ವೈಶಂಪಾಯನ ಋಷಿ ಜನಮೇಜಯರಾಯನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಮೋಹರ-ಸೇನೆ, ಹಲ್ಲಣಿಸಿ-ಯುದ್ಧ ಸಾಮಗ್ರಿ ಸಿದ್ಧಪಡಿಸಿ, ಹರಿತಂದು-ಮುಂದೆ ಸಾಗಿ, ಘಲ್ಲಣೆ-ಘೋಷಣೆ, ಘಡಾವಣೆ-ಅತಿಶಯ, ಆಧಿಕ್ಯ,
ಘಾತಿಸು-ನೋವು ಮಾಡು ಕೆಲ್ಲೆಗೆಡೆ-ಕೆಕ್ಕಳಿಸಿ (ಬೆದರಿ) ಬಿದ್ದವು, ನಿರ್ನಾಮ-ನಾಶ
ಮೂಲ ...{Loading}...
ಹಲ್ಲಣಿಸಿ ಹರಿತಂದು ಮೋಹರ
ವಲ್ಲಿಗಲ್ಲಿಗೆ ನಿಂದುದೆರಡರ
ಘಲ್ಲಣೆಯ ಘಾಯದ ಘಡಾವಣೆ ಮೀರಿ ಘಾತಿಸಿತು
ಕೆಲ್ಲೆಗೆಡೆದವು ಕರಿಗಳಸುಗಳ
ಚೆಲ್ಲಿದವು ತೇಜಿಗಳು ರಥಕುಳ
ವೆಲ್ಲ ಹುಡಿಹುಡಿ ಪಾಯದಳ ನಿರ್ನಾಮವಾಯ್ತೆಂದ ॥2॥
೦೦೩ ಅಳಿದುದಾ ದಿವಸದಲಿ ...{Loading}...
ಅಳಿದುದಾ ದಿವಸದಲಿ ಪಾಂಡವ
ಬಳದೊಳಗಣಿತಸೇನೆ ಭೀಷ್ಮನು
ಫಲುಗುಣನು ಕಾದಿದರು ದಿನಕರನಪರಜಲನಿಧಿಗೆ
ಇಳಿಯೆ ತೆಗೆದವು ಬಲವೆರಡು ಮೂ
ಡಲು ಮಗುಳೆ ಕೆಂಪೇರೆ ಕದನಕೆ
ಕಳನ ತುಂಬಿತು ಮತ್ತೆ ಕೌರವ ಪಾಂಡವರ ಸೇನೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾಲ್ಕನೆಯ ದಿವಸದಂದು ಪಾಂಡವರ ದಂಡಿನಲ್ಲಿ ಅಪಾರಜನ ಸತ್ತರು. ಭೀಷ್ಮ ಮತ್ತು ಅರ್ಜುನರು ನೇರವಾಗಿ ಹೋರಾಡಿದರು. ಸೂರ್ಯಾಸ್ತವಾಗಲು ಎರಡೂ ಕಡೆಯ ಸೇನೆ ಯುದ್ಧ ನಿಲ್ಲಿಸಿ ಹಿಂದೆಗೆದವು (ತಂತಮ್ಮ ಬೀಡಿಗೆ ತೆರಳಿದವು). ಮತ್ತೆ (ರಾತ್ರಿ ಕಳೆದು) ಸೂರ್ಯ ಕೆಂಪಾಗಲು (ಬೆಳಗಾಗಲು) ಮತ್ತೆ ಕೌರವ ಹಾಗೂ ಪಾಂಡವರ ಸೇನೆ ಯುದ್ಧಕ್ಕೆ ಸಜ್ಜಾಗಿ ರಣಬಯಲನ್ನು ಆವರಿಸಿತು.
ಪದಾರ್ಥ (ಕ.ಗ.ಪ)
ಅಪರಜಲನಿಧಿ-ಪಶ್ಚಿಮಸಾಗರ (ಪಶ್ಚಿಮದಿಕ್ಕು), ತೆಗೆದವು-ಹಿಂದಿರುಗಿದವು, ಮೂಡಲು ಕೆಂಪೇರೆ-ಬೆಳಗಾಗಲು, ಕಳ-ರಣಭೂಮಿ
ಮೂಲ ...{Loading}...
ಅಳಿದುದಾ ದಿವಸದಲಿ ಪಾಂಡವ
ಬಳದೊಳಗಣಿತಸೇನೆ ಭೀಷ್ಮನು
ಫಲುಗುಣನು ಕಾದಿದರು ದಿನಕರನಪರಜಲನಿಧಿಗೆ
ಇಳಿಯೆ ತೆಗೆದವು ಬಲವೆರಡು ಮೂ
ಡಲು ಮಗುಳೆ ಕೆಂಪೇರೆ ಕದನಕೆ
ಕಳನ ತುಂಬಿತು ಮತ್ತೆ ಕೌರವ ಪಾಂಡವರ ಸೇನೆ ॥3॥
೦೦೪ ಬಿದ್ದುದಗಣಿತ ಸೇನೆ ...{Loading}...
ಬಿದ್ದುದಗಣಿತ ಸೇನೆ ಪಡುವಲು
ಹೊದ್ದಿದನು ರವಿ ಮತ್ತೆ ಮೂಡಣ
ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ
ಎದ್ದುದದ್ಭುತರಣ ಕೃತಾಂತಗೆ
ಬಿದ್ದನಿಕ್ಕಿದನದಟನಬುಧಿಯೊ
ಳದ್ದ ಸೂರ್ಯನ ಬಿಂಬವೆದ್ದುದು ಮೂಡಣದ್ರಿಯಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಆ ಐದನೆಯ ದಿವಸ) ಅಪಾರ ಸೇನೆ ಮಡಿಯಿತು. ಸೂರ್ಯನು ಪಶ್ಚಿಮ ದಿಕ್ಕಿನಲ್ಲಿ ಸೇರಿದನು ಮತ್ತೆ ಕನ್ನೈದಿಲೆ ಹೂಗುಂಪು ಕೊರಗಿ ಸೊರಗಿದಾಗ ಸೂರ್ಯನು ಪೂರ್ವದ ಗದ್ದುಗೆಯಲ್ಲಿ ವಿರಾಜಿಸಿದನು. ಅದ್ಭುತ ಯುದ್ಧವು ಮತ್ತೆ ಸಂಭವಿಸಿತು. ಶೂರನಾದ ಭೀಷ್ಮನು ಯಮನಿಗೆ ಔತಣವನ್ನು ಬಡಿಸಿದನು (ಅಸಂಖ್ಯಾತರನ್ನು ಕೊಂದನು). ಪಶ್ಚಿಮ ಸಮುದ್ರದಲ್ಲಿ ಮುಳುಗಿದ ಸೂರ್ಯನ ಬಿಂಬ (ಮಂಡಲವು) ಮತ್ತೆ ಪೂರ್ವದಿಕ್ಕಿನ ಬೆಟ್ಟದಲ್ಲಿ ಶೋಭಿಸಿತು.
ಪದಾರ್ಥ (ಕ.ಗ.ಪ)
ಹೊದ್ದಿದನು-ಸೇರಿದನು, ಕಂಠಣಿಸೆ-ಕುಂದಿದಾಗ, ವೆಂಠಣಿಸು-ಸ್ಥಾನವನ್ನು ಪಡೆ. , ಎದ್ದುದು-ಸಂಭವಿಸಿತು, ಇಕ್ಕಿದನು-ಬಡಿಸಿದನು, ಕೃತಾಂತ-ಯಮ,
ಮೂಲ ...{Loading}...
ಬಿದ್ದುದಗಣಿತ ಸೇನೆ ಪಡುವಲು
ಹೊದ್ದಿದನು ರವಿ ಮತ್ತೆ ಮೂಡಣ
ಗದ್ದುಗೆಯ ವೆಂಠಣಿಸಿದನು ಕುಮುದಾಳಿ ಕಂಠಣಿಸೆ
ಎದ್ದುದದ್ಭುತರಣ ಕೃತಾಂತಗೆ
ಬಿದ್ದನಿಕ್ಕಿದನದಟನಬುಧಿಯೊ
ಳದ್ದ ಸೂರ್ಯನ ಬಿಂಬವೆದ್ದುದು ಮೂಡಣದ್ರಿಯಲಿ ॥4॥
೦೦೫ ಏಳನೆಯ ದಿವಸದ ...{Loading}...
ಏಳನೆಯ ದಿವಸದ ಮಹಾರಥ
ರೂಳಿಗವು ಹಿರಿದಾಯ್ತು ಕುರು ಭೂ
ಪಾಲಕನ ತಮ್ಮಂದಿರಳಿದುದು ದಿವಸವೆಂಟರಲಿ
ಕೋಲ ಮೊನೆಯಲಿ ಕೃಷ್ಣರಾಯನ
ನೋಲಗಿಸಿ ಮೆಚ್ಚಿಸಿದನಾ ಕ
ಟ್ಟಾಳು ಭೀಷ್ಮನ ದಿವಸವೊಂಬತ್ತಾಯ್ತು ಸಮರದಲಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಳನೆಯ ದಿವಸದ ಮಹಾಶೂರರ ಯುದ್ಧದ ಕಾರ್ಯ ಅಧಿಕವಾಯಿತು ಕೌರವನ ಹಲವು ತಮ್ಮಂದಿರು ಮಡಿದರು. ಎಂಟನೆಯ ದಿವಸದ ಯುದ್ಧದಲ್ಲಿ ಬಲುಶೂರನಾದ ಭೀಷ್ಮನು ತನ್ನ ಹರಿತ ಬಾಣಗಳಿಂದ ಶ್ರೀಕೃಷ್ಣನನ್ನು ಆರಾಧಿಸಿ ಸಂತೋಷಪಡಿಸಿದನು. ಭೀಷ್ಮನು ಸೇನಾಧಿಪತಿಯಾಗಿ ಹೋರಾಡಿದ ಯುದ್ಧದಲ್ಲಿ ಒಂಬತ್ತು ದಿನಗಳು ಕಳೆದವು.
ಪದಾರ್ಥ (ಕ.ಗ.ಪ)
ಓಲಗಿಸಿ-ಆರಾಧಿಸಿ, ಕೋಲಮೊನೆ-ಬಾಣದ ಹರಿತವಾದ ತುದಿ,
ಟಿಪ್ಪನೀ (ಕ.ಗ.ಪ)
ಮಹಾರಥ-ಶಸ್ತ್ರಾಸ್ತ್ರಗಳಲ್ಲಿ ಪ್ರವೀಣನಾಗಿ ತನ್ನನ್ನೂ, ತನ್ನ ತೇರು, ಕುದುರೆಯನ್ನು ರಕ್ಷಿಸಿಕೊಂಡು ಹತ್ತು ಸಾವಿರ ರಥಿಕರೊಡನೆ ಯುದ್ಧ ಮಾಡಬಲ್ಲ ವೀರಾಧಿವೀರ.
ಅತಿರಥ-ಹಲವು ಮಂದಿ ರಥಿಕರೊಡನೆ ಹೋರಾಡಬಲ್ಲವನು.
ಮೂಲ ...{Loading}...
ಏಳನೆಯ ದಿವಸದ ಮಹಾರಥ
ರೂಳಿಗವು ಹಿರಿದಾಯ್ತು ಕುರು ಭೂ
ಪಾಲಕನ ತಮ್ಮಂದಿರಳಿದುದು ದಿವಸವೆಂಟರಲಿ
ಕೋಲ ಮೊನೆಯಲಿ ಕೃಷ್ಣರಾಯನ
ನೋಲಗಿಸಿ ಮೆಚ್ಚಿಸಿದನಾ ಕ
ಟ್ಟಾಳು ಭೀಷ್ಮನ ದಿವಸವೊಂಬತ್ತಾಯ್ತು ಸಮರದಲಿ ॥5॥
೦೦೬ ಇರುಳು ಕೃಷ್ಣನ ...{Loading}...
ಇರುಳು ಕೃಷ್ಣನ ಹೊರೆಗೆ ಬಂದನು
ಧರಣಿಪತಿ ದುಗುಡದಲಿ ನಿಜಸೋ
ದರರು ಸಹಿತ ಮುರಾರಿಯಂಘ್ರಿಗೆ ನಮಿಸಿ ಕೈಮುಗಿದು
ಸುರನದೀಸುತನಖಿಲ ಸೇನೆಯ
ನೊರಸಿದನು ನಮ್ಮಲ್ಲಿ ಖಾತಿಯ
ಧರಿಸಿದನು ಜಯವಧುವ ವರಿಸಿದ ದೇವ ಕೇಳ್ ಎಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನಾದ ಧರ್ಮರಾಜನು ತನ್ನ ತಮ್ಮಂದಿರ ಜತೆಗೂಡಿ ದುಃಖಿತನಾಗಿ ಒಂಬತ್ತನೇ ದಿವಸದ ರಾತ್ರಿಯಲ್ಲಿ ಕೃಷ್ಣನ ಹತ್ತಿರಕ್ಕೆ ಬಂದನು. ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸಿ ಬದ್ಧಾಂಜಲಿಯಾಗಿ (ಬಿನ್ನವಿಸಿದನು). ಸ್ವಾಮಿ ಕೃಷ್ಣನೇ, ದೇವಗಂಗೆಯ ಮಗನಾದ ಭೀಷ್ಮನು ನಮ್ಮ ಎಲ್ಲ ಸೈನ್ಯವನ್ನು ನಾಶ ಮಾಡಿದನು. ನಮ್ಮ ಬಗ್ಗೆ ತುಂಬಾ ಸಿಟ್ಟಾಗಿದ್ದಾನೆ, ಪ್ರತಿದಿನವೂ ಜಯವನ್ನು ಪಡೆಯುತ್ತಿದ್ದಾನೆ.
ಪದಾರ್ಥ (ಕ.ಗ.ಪ)
ಇರುಳು-ರಾತ್ರಿ, ಹೊರೆಗೆ-ಬಳಿಗೆ, ಸುರನದೀಸುತ-ಗಂಗಾಪುತ್ರ ಭೀಷ್ಮ, ಒರಸಿದನು-ನಾಶಮಾಡಿದನು, ಖಾತಿ-ಸಿಟ್ಟು, ಜಯವಧು-ಗೆಲುವು, ಮುರಾರಿ-ಕೃಷ್ಣ, ದುಗುಡ-ಚಿಂತೆ, ಧರಣಿಪತಿ-ಧರ್ಮಜ
ಮೂಲ ...{Loading}...
ಇರುಳು ಕೃಷ್ಣನ ಹೊರೆಗೆ ಬಂದನು
ಧರಣಿಪತಿ ದುಗುಡದಲಿ ನಿಜಸೋ
ದರರು ಸಹಿತ ಮುರಾರಿಯಂಘ್ರಿಗೆ ನಮಿಸಿ ಕೈಮುಗಿದು
ಸುರನದೀಸುತನಖಿಲ ಸೇನೆಯ
ನೊರಸಿದನು ನಮ್ಮಲ್ಲಿ ಖಾತಿಯ
ಧರಿಸಿದನು ಜಯವಧುವ ವರಿಸಿದ ದೇವ ಕೇಳೆಂದ ॥6॥
೦೦೭ ನೆರೆವಣೆಗೆಗುನ್ದಿತ್ತು ಬಲ ...{Loading}...
ನೆರೆವಣೆಗೆಗುಂದಿತ್ತು ಬಲ ಕೈ
ಮರೆದರದಟರು ಬಿರುದಭಟರಿಗೆ
ಬೆರಗು ಬಲಿದುದು ಹೂಣೆಗರ ಹೋರಟೆಗಳಳುಕಿದವು
ನೆರೆ ಸುಗಿದ ಹುಲಿಯಂತೆ ಬರಿಕೈ
ಮುರಿದ ಮದಗಜದಂತೆ ಚಿತ್ರದ
ಲುರುವ ಕೇಸರಿಯಂತೆ ಮೆರೆದಿದೆ ನಮ್ಮ ಬಲವೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಸೇನೆಯು ಕಳೆಗುಂದಿತ್ತು (ಶಕ್ತಿಗುಂದಿತ್ತು). ವಿಸ್ಮಯಗೊಂq ಶೂರರ ದಿಗ್ಭ್ರಾಂತಿ ಅಧಿಕವಾಯಿತು (ದಿಕ್ಕೆಟ್ಟರು). ಶಪಥ ಶೂರರ ಹೋರಾಟಗಳಲ್ಲಿ ಹಿಂಜರಿಕೆ ಉಂಟಾಯಿತು. ನಮ್ಮ ಸೇನೆ ಹೆಚ್ಚಾಗಿ ಹೆದರಿದ ಹುಲಿಯಂತೆ ಸೊಂಡಿಲು ಕತ್ತರಿಸಿ ಹೋದ ಮದ್ದಾನೆಯಂತೆ ಚಿತ್ರಪಟದಲ್ಲಿ ಬರೆದಿರುವ ಸಿಂಹದಂತೆ ಕಾಣುತ್ತಿದೆ ಎಂದು ಧರ್ಮಜನು ಕೃಷ್ಣನಿಗೆ ನಿವೇದಿಸಿಕೊಂಡನು.
ಪದಾರ್ಥ (ಕ.ಗ.ಪ)
ನೆರೆವಣಿಗೆ-ಶಕ್ತಿ ಸಾಮಥ್ರ್ಯ, ಕೈಮರೆದರು-ವಿಸ್ಮಯಗೊಂಡರು. ಸುಗಿದ-ಅಂಜಿದ, ಬರಿಕೈ-ಸೊಂಡಿಲು, ಮದಗಜ-ಮದ್ದಾನೆ, ಕೇಸರಿ-ಸಿಂಹ, ಹೂಣಿಗ-ಶಪಥವೀರ, ಬೆರಗುಬಲಿ-ದಿಗ್ಭ್ರಾಂತನಾಗು
ಮೂಲ ...{Loading}...
ನೆರೆವಣೆಗೆಗುಂದಿತ್ತು ಬಲ ಕೈ
ಮರೆದರದಟರು ಬಿರುದಭಟರಿಗೆ
ಬೆರಗು ಬಲಿದುದು ಹೂಣೆಗರ ಹೋರಟೆಗಳಳುಕಿದವು
ನೆರೆ ಸುಗಿದ ಹುಲಿಯಂತೆ ಬರಿಕೈ
ಮುರಿದ ಮದಗಜದಂತೆ ಚಿತ್ರದ
ಲುರುವ ಕೇಸರಿಯಂತೆ ಮೆರೆದಿದೆ ನಮ್ಮ ಬಲವೆಂದ ॥7॥
೦೦೮ ಹಾರಿದವು ಹೆಸರುಗಳು ...{Loading}...
ಹಾರಿದವು ಹೆಸರುಗಳು ಭಂಗದ
ಸೂರೆಗಳ ಕಟ್ಟಿದರು ಮಿಗೆ ತಲೆ
ಮಾರಿಗಳು ಮರಳಿದರು ರಣಹೇಡಿಗಳ ಬಗೆಯಂತೆ
ದೂರಲರಿಯೆನು ಸುಭಟರಿಗೆ ಮನ
ಬೇರೆ ನುಡಿ ಬೇರಾಯ್ತು ಸಮರದೊ
ಳೇರತಿಂಗುರಿದಿಂದು ದಣಿದುದು ನಮ್ಮ ಬಲವೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಪಡೆಯ ವೀರರಿಗೆ ಸಾಹಸಿಗಳೆಂದು ಇದ್ದ ಕೀರ್ತಿ, (ಪ್ರಸಿದ್ಧಿ) ದೂರಸರಿದವು. ಸೋಲಿನ ಅವಮಾನದ ಗಂಟು ಮೂಟೆ ಕಟ್ಟಿದರು. ಸಂಬಳ ಪಡೆದು ಯುದ್ಧ ಮಾಡುತ್ತಿದ್ದ ವೀರರು ಅಂಜುಬುರುಕರ ರೀತಿಯಲ್ಲಿ ತಮ್ಮ ಕರ್ತವ್ಯ ತೊರೆದು ಹಿಂದಿರುಗಿ ಹೋದರು. ಹೀಗೆಂದು ನಮ್ಮ ಸೇನೆ ಮೇಲೆ ದೋಷಾರೋಪಣೆ ಮಾಡಲಾರೆನು. ಯುದ್ಧದಲ್ಲಿ ಗೆಲ್ಲುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದ ಅವರು ಪ್ರಾಣವನ್ನು ಉಳಿಸಿಕೊಂಡರೆ ಸಾಕು ಎನ್ನುತ್ತಿದ್ದಾರೆ. ನಮ್ಮ ಸೇನೆ ಯುದ್ಧದಲ್ಲಿ ಪೆಟ್ಟುಗಳನ್ನು ತಿಂದು ಸೋತಿದೆ.
ಪದಾರ್ಥ (ಕ.ಗ.ಪ)
ಹಾರಿದವು-ದೂರ ಸರಿದವು, ಭಂಗದ-ಸೋಲಿನ, ಸೂರೆಗಳ-ಗಂಟು ಮೂಟೆಗಳ, ತಲೆಮಾರಿಗಳು- ಸಂಬಳ ಪಡೆದು ಯುದ್ಧ ಮಾಡುವವರು, ರಣಹೇಡಿ-ಅಂಜುಬುರುಕ, ದೂರು-ದೋಷಾರೋಪಣೆ, ಏರ ತಿಂಗುರಿತಿಂದು-ಪೆಟ್ಟು ತಿಂದು
ಮೂಲ ...{Loading}...
ಹಾರಿದವು ಹೆಸರುಗಳು ಭಂಗದ
ಸೂರೆಗಳ ಕಟ್ಟಿದರು ಮಿಗೆ ತಲೆ
ಮಾರಿಗಳು ಮರಳಿದರು ರಣಹೇಡಿಗಳ ಬಗೆಯಂತೆ
ದೂರಲರಿಯೆನು ಸುಭಟರಿಗೆ ಮನ
ಬೇರೆ ನುಡಿ ಬೇರಾಯ್ತು ಸಮರದೊ
ಳೇರತಿಂಗುರಿದಿಂದು ದಣಿದುದು ನಮ್ಮ ಬಲವೆಂದ ॥8॥
೦೦೯ ಚಳಶಿಳೀಮುಖರವಕೆ ಪಟುಭಟ ...{Loading}...
ಚಳಶಿಳೀಮುಖರವಕೆ ಪಟುಭಟ
ರಳುಕಿದರು ವಿರಹಿಗಳವೊಲು ಸ
ಮ್ಮಿಳಿತ ಶಾಸ್ತ್ರಧ್ವನಿಗೆ ಸೆಡೆದರು ಮೂರ್ಖರಂದದಲಿ
ಕಲಿತ ಬಲ ಶತಕೋಟಿಗಿದಿರಾ
ಗಳಿದವದ್ರಿಗಳಂತೆ ಹರಿಪದ
ವಳಯ ವಿದಳಿತವಾಯ್ತು ಮೇಘವ್ರಾತದಂದದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಂಬಿಗಳ ಝೇಂಕಾರ ನಾದಕ್ಕೆ ಹೆದರುವ ವಿರಹಿಗಳಂತೆ ಅವಿದ್ಯಾವಂತರು ವೇದಾಂತ ತರ್ಕ ಮೊದಲಾದ ಶಾಸ್ತ್ರಗಳಿಗೆ ಹೆದರುವಂತೆ, ತಮಗೆ ಸರಿಸಾಟಿಯೇ ಇಲ್ಲವೆಂದು ಬೀಗುತ್ತಿದ್ದ ಬೆಟ್ಟಗಳು ಬಲಾಸುರನೆಂಬ ರಾಕ್ಷಸನನ್ನು ಕೊಂದ ಇಂದ್ರನ ಬಲಿಷ್ಠವಾದ ವಜ್ರಾಯುಧಕ್ಕೆ ಇದಿರಾಗಿ ನಾಶವಾದಂತೆ, ಆಕಾಶವಲಯದಲ್ಲಿ ಮೋಡಗಳ ಗುಂಪು ಚದರಿದಂತೆ ಶೂರರು ವೇಗವಾಗಿ ಬರುತ್ತಿರುವ ಭೀಷ್ಮರ ಬಾಣಗಳ ಸದ್ದಿಗೆ ಹೆದರಿರುವರು. ಸಂದಣಿಸಿದ ದಂಡಾಳುಗಳ ನೂರಾರು ಕೋಟಿ ಮಂದಿ ಪ್ರತಿಭಟಿಸಿ ನಾಶವಾದರು. ಕುದುರೆಗಳ ಸೇನೆ ಚೆದರಿಹೋಯಿತು.
ಪದಾರ್ಥ (ಕ.ಗ.ಪ)
ಚಲಶಿಳೀಮುಖ-1. ಸುತ್ತುತ್ತಿರುವ ದುಂಬಿಗಳು, ವೇಗದಿಂದ ಬರುತ್ತಿರುವ ಬಾಣ,
ಶಾಸ್ತ್ರ ಧ್ವನಿ- ಶಸ್ತ್ರಗಳಿಗೆ ಸಂಬಂಧಿಸಿದ ಧ್ವನಿ, ವೇದಾಂತ, ತರ್ಕಮೊದಲಾದ ಶಾಸ್ತ್ರಗಳ ಧ್ವನಿ.
ಟಿಪ್ಪನೀ (ಕ.ಗ.ಪ)
ಇದು ಶ್ಲೇಷಾರ್ಥ ಪದ್ಯ ಒಂದೇ ಪದ ಬೇರೆ ಬೇರೆ ಅರ್ಥಕೊಡುವುದನ್ನು ಬಳಸಿ ರಚಿಸಿದ ಪದ್ಯ. ದ್ವಂದ್ವಾರ್ಥ ಪದ್ಯ. ಪದ್ಯ ಒಂದೇ, ಅರ್ಥ ಎರಡು.
ಮೂಲ ...{Loading}...
ಚಳಶಿಳೀಮುಖರವಕೆ ಪಟುಭಟ
ರಳುಕಿದರು ವಿರಹಿಗಳವೊಲು ಸ
ಮ್ಮಿಳಿತ ಶಾಸ್ತ್ರಧ್ವನಿಗೆ ಸೆಡೆದರು ಮೂರ್ಖರಂದದಲಿ
ಕಲಿತ ಬಲ ಶತಕೋಟಿಗಿದಿರಾ
ಗಳಿದವದ್ರಿಗಳಂತೆ ಹರಿಪದ
ವಳಯ ವಿದಳಿತವಾಯ್ತು ಮೇಘವ್ರಾತದಂದದಲಿ ॥9॥
೦೧೦ ರಣರಹಸ್ಯ ಜ್ಞಾನಿಗಳು ...{Loading}...
ರಣರಹಸ್ಯ ಜ್ಞಾನಿಗಳು ಮಿಗೆ
ಮಣಿದರಿಂದ್ರಯವಶಕೆ ರಿಪುಭಟ
ಗಣವಿದಾರಣ ತರ್ಕ ವಿದ್ಯಾವೀತರಾಗಿಗಳು
ಸೆಣಸಿನಲಿ ಸಮದರ್ಶಿಗಳು ಧಾ
ರುಣಿಯ ಪತಿಗಳು ರಾಜಸೇವಾ
ಪ್ರಣಯಮೀಮಾಂಸದಿ ಮೂಢರು ನಮ್ಮ ಭಟರೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧ ವಿದ್ಯೆಯಲ್ಲಿ ಪರಿಣತರಾದರೂ, ನಮ್ಮ ಭಟರು ಇಂದ್ರಿಯಗಳಿಗೆ ವಶವಾದ ಅಜ್ಞಾನಿಗಳ ರೀತಿಯಲ್ಲಿ ಸೋತು ಹೋದರು. ಬೇಕೆಂಬ ತರ್ಕ ವಿದ್ಯೆಯಲ್ಲಿ ಆಸಕ್ತಿಯಿಲ್ಲದ ಪಂಡಿತರ ರೀತಿಯಲ್ಲಿ ಶತ್ರುಗಳ ಸಮೂಹವನ್ನು ನಾಶ ಮಾಡಬಲ್ಲ ನಮ್ಮ ಪಟುಭಟರು ಸೋತು ಹೋದರು. ರಾಜಸೇವೆಯಲ್ಲಿ ನಮ್ಮ ಮೂಢಭಟರು ಆಸಕ್ತಿಯನ್ನು ಕಳೆದುಕೊಂಡಿದ್ದಾರೆ.
ಮೂಲ ...{Loading}...
ರಣರಹಸ್ಯ ಜ್ಞಾನಿಗಳು ಮಿಗೆ
ಮಣಿದರಿಂದ್ರಯವಶಕೆ ರಿಪುಭಟ
ಗಣವಿದಾರಣ ತರ್ಕ ವಿದ್ಯಾವೀತರಾಗಿಗಳು
ಸೆಣಸಿನಲಿ ಸಮದರ್ಶಿಗಳು ಧಾ
ರುಣಿಯ ಪತಿಗಳು ರಾಜಸೇವಾ
ಪ್ರಣಯಮೀಮಾಂಸದಿ ಮೂಢರು ನಮ್ಮ ಭಟರೆಂದ ॥10॥
೦೧೧ ಹರಿದುದಿನ್ದಿನ ದಿನಕೆ ...{Loading}...
ಹರಿದುದಿಂದಿನ ದಿನಕೆ ಶತ ಸಾ
ವಿರ ಮಹೀಶರು ಯವನ ನಗರಿಗೆ
ಸರಿದುದುಳಿದರ ದಿಟ್ಟತನ ಗಾಂಗೇಯನುಪಟಳಕೆ
ಅರಿಪಯೋನಿಧಿ ಬಡಬನನು ಗೆಲ
ಲರಿದು ಜೀಯ ಮುಕುಂದ ನೀನೇ
ಕರುಣಿಸೈ ವನವಾಸವೋ ನಮಗೇನು ಗತಿಯೆಂದ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದಿವಸದವರೆಗೆ ಭೀಷ್ಮನ ಹೊಡೆತಕ್ಕೆ ನೂರು ಸಾವಿರ ಮಂದಿ ರಾಜರುಗಳು ಯಮಲೋಕಕ್ಕೆ ಸಾಗಿದರು . ಕಳೆದುಳಿದ ಅರಸರ ಸಾಹಸವೂ ನಾಶವಾಯಿತು. ಸ್ವಾಮಿ, ಕೃಷ್ಣರಾಯನೇ, ಶತ್ರು ಸಾಗರಕ್ಕೆ ಬಡಬಾಗ್ನಿಯಂತಿರುವ ಭೀಷ್ಮನನ್ನು ನಮ್ಮಿಂದ ಗೆಲ್ಲಲು ಅಸಾಧ್ಯವಾಗಿದೆ. ಮತ್ತೆ ಕಾಡಿಗೆ ಹೋಗುವುದೊಂದೇ ದಾರಿಯೇನು ? ಮತ್ತೇನು ಮಾರ್ಗ ? ನೀನೆ ಪರಿಹಾರ ತೋರಿಸಬೇಕು ಎಂದು ದೈನ್ಯಭಾವದಿಂದ ಧರ್ಮಜನು, ಕೃಷ್ಣನಿಗೆ ಬಿನ್ನವಿಸಿಕೊಂಡನು.
ಪದಾರ್ಥ (ಕ.ಗ.ಪ)
ಅರಿಪಯೋನಿಧಿ-ಶತ್ರುಸಾಗರ, ಅರಿದು-ಅಸಾಧ್ಯ, ಸಾಧ್ಯವಿಲ್ಲ, ಶತಸಾವಿರ ಮಹೀಶರು-ಅಸಂಖ್ಯಾತ ರಾಜರು, ಉಪಟಳ-ತೊಂದರೆ
ಟಿಪ್ಪನೀ (ಕ.ಗ.ಪ)
ಬಡಬೆ -ಹೆಣ್ಣು ಕುದುರೆಗೆ ಬಡಬೆ ಎಂದು ಹೆಸರು, ಹೆಣ್ಣು ಕುದುರೆ ಮುಖದ ಆಕಾರವುಳ್ಳ ಒಂದು ಬಗೆಯಾದ ಬೆಂಕಿಯು ಸಮುದ್ರದ ನೀರೊಳಿದ್ದುಕೊಂಡು ಹೆಚ್ಚಿದ ಸಮುದ್ರದ ನೀರನ್ನೆಲ್ಲಾ ಕುಡಿವುದು ಎಂದು ಧರ್ಮಗ್ರಂಥಗಳಲ್ಲಿ ಹೇಳಿದೆ.
ಮೂಲ ...{Loading}...
ಹರಿದುದಿಂದಿನ ದಿನಕೆ ಶತ ಸಾ
ವಿರ ಮಹೀಶರು ಯವನ ನಗರಿಗೆ
ಸರಿದುದುಳಿದರ ದಿಟ್ಟತನ ಗಾಂಗೇಯನುಪಟಳಕೆ
ಅರಿಪಯೋನಿಧಿ ಬಡಬನನು ಗೆಲ
ಲರಿದು ಜೀಯ ಮುಕುಂದ ನೀನೇ
ಕರುಣಿಸೈ ವನವಾಸವೋ ನಮಗೇನು ಗತಿಯೆಂದ ॥11॥
೦೧೨ ಮುಗುಳುನಗೆ ನಸು ...{Loading}...
ಮುಗುಳುನಗೆ ನಸು ಮೊಳೆಯೆ ಭೀಮಾ
ದಿಗಳಿಗೆಂದನು ಕೃಷ್ಣನರಸಗೆ
ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ
ವಿಗಡತನವಂತಿರಲಿ ಭೀಷ್ಮನ
ಬೆಗಡುಗೊಳಿಸಲು ಹರನ ಹವಣ
ಲ್ಲಗಣಿತನ ಸಾಮದಲಿ ಮುರಿಯಲುಬೇಕು ನಾವೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಾತನ್ನು ಕೇಳಿ ಕೃಷ್ಣನ ಮುಖದಲ್ಲಿ ಮಂದಸ್ಮಿತ ಸುಳಿಯಲು, ಧರ್ಮರಾಯನ ಜತೆಯಲ್ಲಿ ಬಂದಿದ್ದ ಭೀಮ ಮೊದಲಾದವರಿಗೆ ಕೃಷ್ಣನು ಹೇಳಿದನು. ಧರ್ಮರಾಯನಿಗೆ ಕಾಡಿನವಾಸವೇ ಸೊಗಸುತ್ತದೆ. ಈ ಯುದ್ಧ ಕ್ರೀಡೆಯಲ್ಲಿ ಬರಿಯ ಮನಸ್ಸಿದೆಯಷ್ಟೆ. (ಅಶ್ರದ್ಧೆ). ಈ ವಿಷಯ ಹಾಗಿರಲಿ, ಭೀಷ್ಮನ ಸಾಹಸವನ್ನು ಗೆಲ್ಲಲು ಶಿವನಿಗೂ ಶಕ್ಯವಿಲ್ಲ. ಅಪಾರ ಪರಾಕ್ರಮಿಯಾದ ಭೀಷ್ಮನನ್ನು ಈಗ ನಾವು ಉಪಾಯದಲ್ಲಿ ಗೆಲ್ಲಬೇಕು ಎಂದನು.
ಪದಾರ್ಥ (ಕ.ಗ.ಪ)
ಮೊಳೆಯೆ-ಸುಳಿಯಲು, ಬೆಗಡುಗೊಳಿಸು-ಭಯಗೊಳಿಸು , ವಿಗಡತನ-ಶೌರ್ಯ, ಹವಣಲ್ಲ-ಕೈವಶವಲ್ಲ, ಅಗಣಿತನು-ಅಪಾರಶಕ್ತನು ಸಾಮ-ಸಾಮೋಪಾಯ
ಮೂಲ ...{Loading}...
ಮುಗುಳುನಗೆ ನಸು ಮೊಳೆಯೆ ಭೀಮಾ
ದಿಗಳಿಗೆಂದನು ಕೃಷ್ಣನರಸಗೆ
ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ
ವಿಗಡತನವಂತಿರಲಿ ಭೀಷ್ಮನ
ಬೆಗಡುಗೊಳಿಸಲು ಹರನ ಹವಣ
ಲ್ಲಗಣಿತನ ಸಾಮದಲಿ ಮುರಿಯಲುಬೇಕು ನಾವೆಂದ ॥12॥
೦೧೩ ದಣ್ಡನಯ ತರುಬಿದರೆ ...{Loading}...
ದಂಡನಯ ತರುಬಿದರೆ ಗುಣದಲಿ
ಖಂಡಿಸುವುದಿದಿರಾದ ತರುಗಳು
ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು
ಚಂಡಬಲನೀ ಭೀಷ್ಮ ಮುಳಿದರೆ
ಖಂಡಪರಶುವ ಗಣಿಸನೆನೆ ಖರ
ದಂಡನಾಭನ ಮತಕೆ ನೃಪತಿ ಹಸಾದವೆನುತಿರ್ದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಕ್ತಿ ಪ್ರಯೋಗದಿಂದ ಹಿಂದಕ್ಕಟ್ಟಿದರೆ ಒಳ್ಳೆಯತನದಿಂದ ಗೆಲ್ಲಬೇಕು. ಪ್ರವಾಹಕ್ಕೆ ಎದುರಾಗುವ ಮರಗಳು ಬುಡಸಹಿತ ಉರುಳುವುವು. ತಲೆಬಾಗಿಸಿದಾಗ ಜೊಂಡುಹುಲ್ಲು ಅಪಾಯಕ್ಕೆ ಗುರಿಯಾಗದೆ ಉಳಿದುಕೊಳ್ಳುತ್ತವೆ. ಈ ಭೀಷ್ಮ ಅತುಳ ಪರಾಕ್ರಮಿ. ಇವನು ಸಿಟ್ಟುಗೊಂಡರೆ ಶಿವನನ್ನೂ ಲೆಕ್ಕಿಸುವುದಿಲ್ಲ ಎಂದು ಹೇಳಲು. ಕಮಲವನ್ನು ಹೊಕ್ಕುಳಲ್ಲಿ ಉಳ್ಳ ವಿಷ್ಣುವಾದ ಶ್ರೀಕೃಷ್ಣನ ಮಾತಿಗೆ ಧರ್ಮಜ ಅನುಗ್ರಹ (ಒಪ್ಪಿಗೆ) ಎಂದನು.
ಪದಾರ್ಥ (ಕ.ಗ.ಪ)
ದಿಂಡುಗೆಡೆದವು-ಬುಡಸಹಿತ ಉರುಳುವುವು, ಗೇಕು-ಜೊಂಡುಹುಲ್ಲು, ಚಂಡಬಲ-ಪರಾಕ್ರಮಿ, ಖಂಡಪರಶು-ಶಿವ, ಖರದಂಡನಾಭ-ವಿಷ್ಣು, ಹಸಾದ-ಅನುಗ್ರಹ (ಒಪ್ಪಿಗೆ)
ಮೂಲ ...{Loading}...
ದಂಡನಯ ತರುಬಿದರೆ ಗುಣದಲಿ
ಖಂಡಿಸುವುದಿದಿರಾದ ತರುಗಳು
ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು
ಚಂಡಬಲನೀ ಭೀಷ್ಮ ಮುಳಿದರೆ
ಖಂಡಪರಶುವ ಗಣಿಸನೆನೆ ಖರ
ದಂಡನಾಭನ ಮತಕೆ ನೃಪತಿ ಹಸಾದವೆನುತಿರ್ದ ॥13॥
೦೧೪ ಇರುಳು ಗುಪಿತದಲವನಿಪತಿ ...{Loading}...
ಇರುಳು ಗುಪಿತದಲವನಿಪತಿ ಸೋ
ದರರು ಮುರರಿಪು ಸಹಿತ ಬಂದನು
ಸುರನದೀನಂದನನ ಮಂದಿರಕಾಗಿ ವಹಿಲದಲಿ
ಕರೆದು ಪಡಿಹಾರರಿಗೆ ಬಂದುದ
ನರುಹಲವದಿರು ಹೊಕ್ಕು ಸಮಯವ
ನರಿದು ಭೀಷ್ಮಂಗೀ ಹದನ ಬಿನ್ನಹವ ಮಾಡಿದರು ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ರಾತ್ರಿ ಧರ್ಮರಾಜನು ರಹಸ್ಯವಾಗಿ ತಮ್ಮಂದಿರನ್ನು ಕರೆದುಕೊಂಡು ಶ್ರೀಕೃಷ್ಣನ ಜತೆಯಲ್ಲಿ ಭೀಷ್ಮನ ನಿವಾಸಕ್ಕೆ ಬೇಗನೆ ಬಂದನು. ಅಲ್ಲಿ ದ್ವಾರಪಾಲಕರಿಗೆ ತಾವು ಬಂದ ಸುದ್ದಿಯನ್ನು ಭೀಷ್ಮನಿಗೆ ತಿಳಿಸುವಂತೆ ಹೇಳಲು, ದ್ವಾರಪಾಲಕರು ಒಳಗೆ ಹೋಗಿ ಭೀಷ್ಮನಿಗೆ ಅವನ ಸಮಯಾನುಸಾರ ಪಾಂಡವರು ಬಂದಿದ್ದ ಸಂಗತಿಯನ್ನು ನಿವೇದಿಸಿಕೊಂಡರು.
ಪದಾರ್ಥ (ಕ.ಗ.ಪ)
ಸುರನದೀನಂದನ-ಭೀಷ್ಮ, ಮುರರಿಪು-ಕೃಷ್ಣ, ಅವನಿಪತಿ-ಧರ್ಮಜ, ವಹಿಲದಲ್ಲಿ-ಬೇಗನೆ, ಪಡಿಹಾರ (ಪ್ರತೀಹಾರಿ)-ದ್ವಾgಪಾಲಕ, ಅರುಹು-ತಿಳಿಸು, ಹದನ-ಸಂಗತಿ.
ಮೂಲ ...{Loading}...
ಇರುಳು ಗುಪಿತದಲವನಿಪತಿ ಸೋ
ದರರು ಮುರರಿಪು ಸಹಿತ ಬಂದನು
ಸುರನದೀನಂದನನ ಮಂದಿರಕಾಗಿ ವಹಿಲದಲಿ
ಕರೆದು ಪಡಿಹಾರರಿಗೆ ಬಂದುದ
ನರುಹಲವದಿರು ಹೊಕ್ಕು ಸಮಯವ
ನರಿದು ಭೀಷ್ಮಂಗೀ ಹದನ ಬಿನ್ನಹವ ಮಾಡಿದರು ॥14॥
೦೧೫ ಬನ್ದನೇ ಧರ್ಮಜನು ...{Loading}...
ಬಂದನೇ ಧರ್ಮಜನು ಮುರರಿಪು
ತಂದನೇ ಕೌರವರನಕಟಾ
ಕೊಂದನೇ ಶಿವಶಿವಯೆನುತ ಮೌನದಲಿ ಮುಳುಗಿರ್ದು
ಮಂದಿಯನು ಹೊರಗಿರಿಸಿ ಬರಹೇ
ಳೆಂದರಾಗಲೆ ಕೃಷ್ಣ ಕೊಂತೀ
ನಂದನರು ಬರಲಿದಿರುವಂದನು ಭೀಷ್ಮ ವಿನಯದಲಿ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- (ಪಾಂಡವರು ಕೃಷ್ಣನೊಡನೆ ಬಂದ ಸಂಗತಿ ಕೇಳಿ) ಧರ್ಮರಾಜ ಬಂದನಲ್ಲಾ, ಕೃಷ್ಣನನ್ನು ಅವನನ್ನು ಜತೆಗೆ ಕರೆತಂದನಲ್ಲಾ ಅಯ್ಯೋ ! ಇನ್ನು ಕೌರವನನ್ನು ಕೊಂದಂತೆಯೇ ಸರಿ. ಶಿವಶಿವಾ ಎಂಥಾ ಕೆಲಸವಾಯಿತು ಎಂದು ಚಿಂತಾಕ್ರಾಂತನಾಗಿ, ತನ್ನ ಪರಿವಾರದವರನ್ನು ದೂರವಿರಿಸಿ ಪಾಂಡವರನ್ನು ಬರುವಂತೆ ಹೇಳು ಎಂದು ದ್ವಾರಪಾಲಕರಿಗೆ ಹೇಳಲು, ಕೂಡಲೆ ಪಾಂಡವರು ಕೃಷ್ಣನೊಡನೆ ಒಳಗೆ ಬರಲು, ಭೀಷ್ಮನು ಆದರದಿಂದ ಅವರನ್ನು ಬರಮಾಡಿಕೊಂಡನು.
ಪದಾರ್ಥ (ಕ.ಗ.ಪ)
ಹೊರಗಿರಿಸಿ-ಅಲ್ಲೇ ಇರಿಸಿ, ಇದಿರುವಂದನು-ಬರಮಾಡಿಕೊಂಡನು, ಸ್ವಾಗತಿಸಿದನು.
ಮೂಲ ...{Loading}...
ಬಂದನೇ ಧರ್ಮಜನು ಮುರರಿಪು
ತಂದನೇ ಕೌರವರನಕಟಾ
ಕೊಂದನೇ ಶಿವಶಿವಯೆನುತ ಮೌನದಲಿ ಮುಳುಗಿರ್ದು
ಮಂದಿಯನು ಹೊರಗಿರಿಸಿ ಬರಹೇ
ಳೆಂದರಾಗಲೆ ಕೃಷ್ಣ ಕೊಂತೀ
ನಂದನರು ಬರಲಿದಿರುವಂದನು ಭೀಷ್ಮ ವಿನಯದಲಿ ॥15॥
೦೧೬ ಅರಸಿ ಹೊಗಲಾಮ್ನಾಯನಿಕರಕೆ ...{Loading}...
ಅರಸಿ ಹೊಗಲಾಮ್ನಾಯನಿಕರಕೆ
ತೆರಹುಗುಡದ ಪರಸ್ವರೂಪನು
ಕುರುಹುಗೊಂಡರೆ ಮಂದಿವಾಳವೆ ದೇವ ನೀನೊಲಿದು
ಅರಸಿಕೊಂಡೈತರಲು ತಾನೈ
ಸರವನಾಗಲಿ ನಿನ್ನ ಭೃತ್ಯನ
ಹೊರೆವ ಪರಿಯಿದು ಕೃಷ್ಣ ಜಯಜಯಯೆನುತ ನಿಡುಗೆಡೆದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹುಡಿಕಿಕೊಂಡು ಹೋದರೆ ವೇದಸಮೂಹಕ್ಕೆ ಎಟುಕದಿರುವ ಉತ್ಕೃಷ್ಟ ರೂಪನು (ಅವ್ಯಕ್ತ ಚೇತನನು) ನೀನು ಪ್ರತ್ಯಕ್ಷನಾದರೆ (ಸಾಕಾರನಾದರೆ) ಅವರು ಸಾಮಾನ್ಯ ಮಂದಿಯೆ? ಕೃಷ್ಣ ನೀನು ಮನಸ್ಸು ಮಾಡಿ ಹುಡುಕಿಕೊಂಡು ಬರಲು ನಾನು ಎಷ್ಟರಮಟ್ಟಿನವನು ? ಆ ವಿಷಯ ಹಾಗಿರಲಿ. ಅದರೆ ನಿನ್ನ ಈ ಆಗಮನ ನಿನ್ನ ಭಕ್ತರನ್ನು ರಕ್ಷಿಸುವ ವಿಧಾನವಾಗಿದೆ. ಕೃಷ್ಣನೇ ನಿನಗೆ ಜಯ ಜಯ, ಎನ್ನುತ್ತ (ಭೀಷ್ಮ) ಸಾಷ್ಟಾಂಗ ನಮಸ್ಕಾರ ಮಾಡಿದನು.
ಪದಾರ್ಥ (ಕ.ಗ.ಪ)
ಕುರುಹುಗೊಂಡರೆ-ಸಾಕಾರನಾದರೆ, ಪರಸ್ವರೂಪ-ಅವ್ಯಕ್ತ ಚೇತನನು, ತೆರಹುಗುಡದ-ಎಟುಕದ, ಆಮ್ನಾಯನಿಕರ-ವೇದೋಪನಿಷತ್ತಿನ ಸಮೂಹ, ಮಂದಿವಾಳವೆ-ಸಾಮಾನ್ಯರೆ? ನಿಡುಗೆಡೆದ-ಸಾಷ್ಟಾಂಗ ನಮಸ್ಕಾರ ಮಾಡಿದ, ಭೃತ್ಯ-ಭಕ್ತ, ಸೇವಕ, ಹೊರೆವ-ರಕ್ಷಿಸುವ, ಏಸರವನು-ಎಷ್ಟರವನು
ಮೂಲ ...{Loading}...
ಅರಸಿ ಹೊಗಲಾಮ್ನಾಯನಿಕರಕೆ
ತೆರಹುಗುಡದ ಪರಸ್ವರೂಪನು
ಕುರುಹುಗೊಂಡರೆ ಮಂದಿವಾಳವೆ ದೇವ ನೀನೊಲಿದು
ಅರಸಿಕೊಂಡೈತರಲು ತಾನೈ
ಸರವನಾಗಲಿ ನಿನ್ನ ಭೃತ್ಯನ
ಹೊರೆವ ಪರಿಯಿದು ಕೃಷ್ಣ ಜಯಜಯಯೆನುತ ನಿಡುಗೆಡೆದ ॥16॥
೦೧೭ ನಗುತ ಹರಿ ...{Loading}...
ನಗುತ ಹರಿ ಗಂಗಾಕುಮಾರನ
ನೆಗಹಿದನು ಬಳಿಕಿವರು ರತುನಾ
ಳಿಗಳ ಕಾಣಿಕೆಯಿತ್ತು ಮೈಯಿಕ್ಕಿದರು ಭಕುತಿಯಲಿ
ತೆಗೆದು ಬಿಗಿಯಪ್ಪಿದನು ಯಮಜಾ
ದಿಗಳ ಮನ್ನಿಸಿ ವೀಳೆಯವನಿ
ತ್ತೊಗುಮಿಗೆಯ ಹರುಷದಲಿ ಹೊಂಪುಳಿಯೋದನಾ ಭೀಷ್ಮ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ನಗುತ್ತಾ ನಮಸ್ಕರಿಸಿದ ಭೀಷ್ಮನನ್ನು ಹಿಡಿದು ಮೇಲೆತ್ತಿದನು. ಅನಂತರ ಧರ್ಮಾದಿಗಳು ಭೀಷ್ಮನಿಗೆ ರತ್ನಾದಿಗಳ ಉಡುಗೊರೆಯಿತ್ತು ಭಕ್ತಿಯಿಂದ ನಮಸ್ಕರಿಸಿದರು. ಹೀಗೆ ನಮಿಸಿದ ಧರ್ಮರಾಜ ಮೊದಲಾದವರನ್ನು ಭೀಷ್ಮನು ಮೇಲಕ್ಕೆತ್ತಿ ಆಲಿಂಗಿಸಿದನು. ಅವರನ್ನು ಗೌರವಿಸಿ, ತಾಂಬೂಲ ನೀಡಿ ಅಧಿಕ ಸಂತೋಷದಿಂದ ಭೀಷ್ಮನು ರೋಮಾಂಚನ ಹೊಂದಿದನು.
ಪದಾರ್ಥ (ಕ.ಗ.ಪ)
ನೆಗಹಿದನು-ಹಿಡಿದು ಮೇಲೆತ್ತಿದನು, ಮೈಯಿಕ್ಕಿದನು-ಅಡ್ಡಬಿದ್ದನು, ಬಿಗಿದಪ್ಪಿದನು-ಆಲಿಂಗಿಸಿದನು, ಒಗುಮಿಗೆಯ-ಅಧಿಕವಾದ, ಹೊಂಪುಳಿಯೋದನು-ರೋಮಾಂಚಗೊಂಡನು.
ಮೂಲ ...{Loading}...
ನಗುತ ಹರಿ ಗಂಗಾಕುಮಾರನ
ನೆಗಹಿದನು ಬಳಿಕಿವರು ರತುನಾ
ಳಿಗಳ ಕಾಣಿಕೆಯಿತ್ತು ಮೈಯಿಕ್ಕಿದರು ಭಕುತಿಯಲಿ
ತೆಗೆದು ಬಿಗಿಯಪ್ಪಿದನು ಯಮಜಾ
ದಿಗಳ ಮನ್ನಿಸಿ ವೀಳೆಯವನಿ
ತ್ತೊಗುಮಿಗೆಯ ಹರುಷದಲಿ ಹೊಂಪುಳಿಯೋದನಾ ಭೀಷ್ಮ ॥17॥
೦೧೮ ಅರಿಯ ಬೀಡಿದು ...{Loading}...
ಅರಿಯ ಬೀಡಿದು ರಾಯನನುಜರು
ದುರುಳರುಚಿತಾನುಚಿತಗೇಡಿಗ
ಳಿರುಳು ದೊರೆಗಳು ನೀವನಾಲೋಚಿತದಲೈತಹರೆ
ಹರಿಯ ಬಲುಹುಂಟಾದಡೆಯು ಧಿ
ಕ್ಕರಿಸಬಾರದು ರಾಜಮಂತ್ರವ
ನರಸ ಸಾಕಿನ್ನೇನು ಬಂದುದು ಹೇಳು ನೀನೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನೇ ಈ ನನ್ನ ಮನೆ ನಿನಗೆ ಶತ್ರುನಿವಾಸ. ಕೌರವನ ತಮ್ಮಂದಿರು ದುಷ್ಟರು. ನ್ಯಾಯ ಅನ್ಯಾಯಗಳನ್ನು ವಿಚಾರ ಮಾಡತಕ್ಕವರು ಅಲ್ಲ. ದೊರೆಗಳಾದ ನೀವು ಅಪಾಯಕಾರಿಯಾದ ಈ ರಾತ್ರಿಯಲ್ಲಿ ಹಿಂದೆ ಮುಂದೆ ಯೋಚಿಸದೆ ಬರಬಹುದೇ ? ಶ್ರೀಕೃಷ್ಣನ ಒತ್ತಾಸೆ (ಬಲವು) ನಿಮಗೆ ಇದ್ದರೂ, ರಾಜ ನೀತಿಯನ್ನು ಅಲಕ್ಷಿಸಬಾರದು. ಆ ಮಾತು ಹಾಗಿರಲಿ, ನೀನು ಇಲ್ಲಿಗೆ ಏಕೆ ಬಂದೆ ಏನು ವಿಷಯ ಹೇಳು ಎಂದ.
ಪದಾರ್ಥ (ಕ.ಗ.ಪ)
ಅರಿಯ ಬೀಡು-ಶತ್ರು ಪಾಳೆಯ, ರಾಯನ ಅನುಜರು-ಕೌರವನ ತಮ್ಮಂದಿರು, ಉಚಿತಾನುಚಿತಕೇಡಿಗಳು-ನ್ಯಾಯನ್ಯಾಯ ಅರಿಯತಕ್ಕವರಲ್ಲ, ಅನಾಲೋಚಿತದಲ್ಲಿ-ವಿಚಾರ ಹೀನರಾಗಿ, ರಾಜಮಂತ್ರ-ರಾಜನೀತಿ.
ಮೂಲ ...{Loading}...
ಅರಿಯ ಬೀಡಿದು ರಾಯನನುಜರು
ದುರುಳರುಚಿತಾನುಚಿತಗೇಡಿಗ
ಳಿರುಳು ದೊರೆಗಳು ನೀವನಾಲೋಚಿತದಲೈತಹರೆ
ಹರಿಯ ಬಲುಹುಂಟಾದಡೆಯು ಧಿ
ಕ್ಕರಿಸಬಾರದು ರಾಜಮಂತ್ರವ
ನರಸ ಸಾಕಿನ್ನೇನು ಬಂದುದು ಹೇಳು ನೀನೆಂದ ॥18॥
೦೧೯ ಅರಿಯೆನುಚಿತವನೆಮ್ಮ ಭಾರದ ...{Loading}...
ಅರಿಯೆನುಚಿತವನೆಮ್ಮ ಭಾರದ
ಹೊರಿಗೆ ನಿಮ್ಮದು ಕೃಷ್ಣನದು ನಾ
ವರಿದರೆಯು ಮೇಣ್ ಮರೆದರೆಯು ರಕ್ಷಕರು ನೀವೆಮಗೆ
ಅರಿಯನೇನುವನೆಂದು ಸಲಹಲು
ಮರೆವಳೇ ಬಾಲಕನ ತಾಯ್ ನೀ
ನುರುವ ವಜ್ರದ ಜೋಡು ನಮಗಿರೆ ಭೀತಿಯೇಕೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಜ್ಜ ತಕ್ಕುದು ಯಾವುದು ಎಂಬುದನ್ನು ತಿಳಿಯಲಿಲ್ಲ. ನಮ್ಮನ್ನು ಕಾಪಾಡುವ ಹೊಣೆ ನಿಮಗೂ ಕೃಷ್ಣನಿಗೂ ಸೇರಿದ್ದು. ನಾವು ಎಚ್ಚರಿಕೆಯಿಂದ ಇದ್ದರೂ ಅಥವಾ ಮೈಮರೆತವರಾಗಿದ್ದರೂ ನಮ್ಮನ್ನು ಕಾಪಿಡುವವರು ನೀವೇ ಆಗಿದ್ದೀರಿ. ಯಾವುದನ್ನೂ ತಿಳಿಯದ ಮಗು ಎಂಬುದಾಗಿ ಮಗುವನ್ನು ಆ ಮಗುವಿನ ತಾಯಿ ಕಾಪಾಡಲು ಮರೆತು ಬಿಡುವಳೇ ? (ಇಲ್ಲ) ಶ್ರೇಷ್ಠವಾದ ವಜ್ರದ ಕವಚದಂತೆ ನೀವು ನಮ್ಮ ಪಾಲಿಗಿರಲು ನಮಗೆ ಇನ್ನೇತಕೆ ಅಂಜಿಕೆ ? ಎಂದನು.
ಪದಾರ್ಥ (ಕ.ಗ.ಪ)
ಭಾರದ ಹೊರಿಗೆ-ಕಾಪಾಡುವ ಹೊಣೆ, ಅರಿದರೆಯು-ಎಚ್ಚರಿಕೆಯಿಂದಿದ್ದರೂ, ಉರುವ-ಶ್ರೇಷ್ಠವಾದ, ವಜ್ರದ ಜೋಡು-ವಜ್ರಕವಚ.
ಮೂಲ ...{Loading}...
ಅರಿಯೆನುಚಿತವನೆಮ್ಮ ಭಾರದ
ಹೊರಿಗೆ ನಿಮ್ಮದು ಕೃಷ್ಣನದು ನಾ
ವರಿದರೆಯು ಮೇಣ್ ಮರೆದರೆಯು ರಕ್ಷಕರು ನೀವೆಮಗೆ
ಅರಿಯನೇನುವನೆಂದು ಸಲಹಲು
ಮರೆವಳೇ ಬಾಲಕನ ತಾಯ್ ನೀ
ನುರುವ ವಜ್ರದ ಜೋಡು ನಮಗಿರೆ ಭೀತಿಯೇಕೆಂದ ॥19॥
೦೨೦ ಎಮಗೆ ಜಯವೆನ್ತಹುದು ...{Loading}...
ಎಮಗೆ ಜಯವೆಂತಹುದು ರಾಜ್ಯ
ಭ್ರಮೆಯ ರಾಜಸಬುದ್ಧಿಗಳು ವಿ
ಕ್ರಮವಿಹೀನರು ನಾವು ನೀವ್ ತ್ರೈಲೋಕ್ಯವಿಜಯಿಗಳು
ಸಮರ ಸೋತುದು ನಮ್ಮ ಸುಭಟರು
ಯಮನ ಸೇವಕರಾಯ್ತು ಕೃಪೆಯಿಂ
ದೆಮಗೆ ನಿಮ್ಮಭಿಮತವ ಬೆಸಸುವುದೆಂದನಾ ಭೂಪ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಜ್ಜಾ, ನಮಗೆ ಗೆಲುವು ಹೇಗೆ ತಾನೇ ಲಭಿಸೀತು ? ರಾಜ್ಯವನ್ನು ಸಂಪಾದಿಸಬೇಕೆಂಬ ತದೇಕ ಧ್ಯಾನದಲ್ಲಿರುವ ರಾಜಸ ಬುದ್ಧಿಯವರು, ಆದರೆ ಶಕ್ತಿ ವಿಹೀನರು. ನೀವಾದರೋ ಮೂರು ಲೋಕಗಳನ್ನು ಗೆಲ್ಲಬಲ್ಲವರು. ನಮ್ಮ ಕಡೆಗೆ ಯುದ್ಧದಲ್ಲಿ ಸೋಲಾಗಿದೆ. ನಮ್ಮ ಕಡೆಯ ಸೈನಿಕರೆಲ್ಲ ಯಮಲೋಕದ ಆಳುಗಳಾದರು. ದಯೆಮಾಡಿ ನಮಗೆ ನಿಮ್ಮ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು (ಸಂಕಲ್ಪವನ್ನು) ತಿಳಿಸಬೇಕು ಎಂದು ಧರ್ಮರಾಯನು ಭೀಷ್ಮನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಭ್ರಮೆ-ಒಂದು ವಸ್ತುವಿನಲ್ಲಿ ಉಂಟಾಗುವ ತದೇಕ ಧ್ಯಾನ ಅಥವಾ ಅತ್ಯಾಸೆ, (ಸಿಗದಿರುವ ವಸ್ತುವಿಗೆ ಸಿಗುವವರೆಗೆ ಪರಿತಪಿಸುವ ಭಾವಕ್ಕೆ ಹೆಸರು), ವಿಕ್ರಮ ಹೀನರು-ಶೌರ್ಯವಿಲ್ಲದವರು, ತ್ರೈಲೋಕ್ಯ ವಿಜಯಿಗಳು-ಮೂರೂಲೋಕ ಗೆದ್ದವರು, ಅಭಿಮತ-ಸಂಕಲ್ಪ, ಅಭಿಪ್ರಾಯ, ಬೆಸಸುವುದು-ಹೇಳುವುದು.
ಮೂಲ ...{Loading}...
ಎಮಗೆ ಜಯವೆಂತಹುದು ರಾಜ್ಯ
ಭ್ರಮೆಯ ರಾಜಸಬುದ್ಧಿಗಳು ವಿ
ಕ್ರಮವಿಹೀನರು ನಾವು ನೀವ್ ತ್ರೈಲೋಕ್ಯವಿಜಯಿಗಳು
ಸಮರ ಸೋತುದು ನಮ್ಮ ಸುಭಟರು
ಯಮನ ಸೇವಕರಾಯ್ತು ಕೃಪೆಯಿಂ
ದೆಮಗೆ ನಿಮ್ಮಭಿಮತವ ಬೆಸಸುವುದೆಂದನಾ ಭೂಪ ॥20॥
೦೨೧ ಆಕೆವಾಳರು ಭೀಮ ...{Loading}...
ಆಕೆವಾಳರು ಭೀಮ ಪಾರ್ಥರು
ನೂಕದಾಹವವುಳಿದ ಸೇನಾ
ನೀಕವೇ ನಿಮ್ಮಿಂದ ಸವೆದುದು ಹಲವು ಮಾತೇನು
ಸಾಕುವರೆ ಮೇಣ್ ಮುನಿದು ಕೊಲುವರೆ
ಬೇಕು ಬೇಡೆಂಬವರ ಕಾಣೆನು
ಕಾಕನಾಡೆನು ಬೆಸಸಿ ನಿಮ್ಮಭಿಮತವನೆನಗೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಸೇನೆಯಲ್ಲಿ ಭೀಮಾರ್ಜುನರು ಎಲ್ಲರಿಗಿಂತ ಶೂರರು (ಅವರಿಗೂ ನಿಮ್ಮೊಡನೆ) ಯುದ್ಧ ಮಾಡಲು ಆಗದು. ಹೆಚ್ಚಿಗೆ ಹೇಳುವುದೇನಿದೆ ? ಭೀಮಾರ್ಜುನರನ್ನು ಬಿಟ್ಟು ಉಳಿದೆಲ್ಲ ಸೇನಾ ಪಡೆಗಳು ನಿಮ್ಮಿಂದ ನಾಶವಾದುವು. ನಮ್ಮನ್ನು ರಕ್ಷಿಸುವುದಕ್ಕಾಗಲೀ ಅಥವಾ ಕೋಪಗೊಂಡು ಕೊಲ್ಲುವುದಕ್ಕಾಗಲೀ (ನೀವು ಇಚ್ಛಿಸಿದರೆ) ನೀವು ಹೀಗೆ ಮಾಡಬೇಕು ಅಥವಾ ಮಾಡಬಾರದು ಎಂದು ಹೇಳುವ ಶಕ್ತರನ್ನು ನಾನು ಕಾಣೆನು. ಮೋಸದ ಮಾತನ್ನು ಆಡುತ್ತಿಲ್ಲ (ಸತ್ಯವಾಗಿ ಹೇಳುತ್ತಿದ್ದೇನೆ) ನಿಮ್ಮ ಮನಸ್ಸಿನಲ್ಲಿರುವ ನಿರ್ಧಾರವನ್ನು ನನಗೆ ದಯಮಾಡಿ ತಿಳಿಸಿ ಎಂದು ಧರ್ಮರಾಜನು ಭೀಷ್ಮನನ್ನು ಬೇಡಿಕೊಂಡನು.
ಪದಾರ್ಥ (ಕ.ಗ.ಪ)
ಆಕೆವಾಳರು-ಶೂರರು, ಸೇನಾನಿಕರ-ಸೇನಾಪಡೆ, ಕಾಕು-ಮೋಸ, ಆಹವ-ಸಮರ, ಸವೆದುದು-ನಾಶವಾಯಿತು, ಅಭಿಮತ-ಮನೋನಿರ್ಧಾರ
ಮೂಲ ...{Loading}...
ಆಕೆವಾಳರು ಭೀಮ ಪಾರ್ಥರು
ನೂಕದಾಹವವುಳಿದ ಸೇನಾ
ನೀಕವೇ ನಿಮ್ಮಿಂದ ಸವೆದುದು ಹಲವು ಮಾತೇನು
ಸಾಕುವರೆ ಮೇಣ್ ಮುನಿದು ಕೊಲುವರೆ
ಬೇಕು ಬೇಡೆಂಬವರ ಕಾಣೆನು
ಕಾಕನಾಡೆನು ಬೆಸಸಿ ನಿಮ್ಮಭಿಮತವನೆನಗೆಂದ ॥21॥
೦೨೨ ತೀದುದೆಮ್ಮಯ ಸೇನೆ ...{Loading}...
ತೀದುದೆಮ್ಮಯ ಸೇನೆ ನಸು ಸೊ
ಪ್ಪಾದುದಿಲ್ಲರಿಸೇನೆ ನಿಮ್ಮನು
ಕಾದಿ ಗೆಲುವರೆ ಮೊಲೆಯನೂಡಿದ ತಾಯಿ ಜಾಹ್ನವಿಯೆ
ಕಾದಿದೆವು ಕಟ್ಟಿದೆವು ಗೆಲಿದೆವು
ಮೇದಿನಿಯ ನಾವಿನ್ನು ಮುನ್ನಿನ
ತೀದ ವನವಾಸಕ್ಕೆ ನೇಮವ ಕೊಟ್ಟು ಕಳುಹೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ಸೇನೆಯೆಲ್ಲ ಸಾವನ್ನಪ್ಪಿತು. ಹಗೆಯಾದ ಕೌರವನ ಸೇನೆ ಸ್ವಲ್ಪವಾದರೂ ಬಲಗುಂದಿರುವುದಿಲ್ಲ. ನಿಮಗೆ ಎದೆ ಹಾಲು ಕುಡಿಸಿ ಸಾಕಿ ಬೆಳಸಿದ ತಾಯಿಯಾದವಳು ಬೇರಾರೂ ಅಲ್ಲ, ಗಂಗಾಮಾತೆ. ಆದ ಕಾರಣ ನಿಮ್ಮನ್ನು ಯಾರು ತಾನೆ ಹೋರಾಡಿ ಗೆಲ್ಲಲು ಸಾಧ್ಯ ? (ಯಾರೂ ಇಲ್ಲ) ಹೀಗಿರುವಾಗ ನಾವು ಇನ್ನು ಹೇಗೆ ತಾನೆ ರಾಜ್ಯಕ್ಕಾಗಿ ಹೋರಾಡುತ್ತೇವೆ ? ಶತ್ರುಗಳನ್ನು ಸೆರೆಹಿಡಿದು ಕಟ್ಟುತ್ತೇವೆ ? ರಾಜ್ಯವನ್ನು ಗೆಲ್ಲುತ್ತೇವೆ ? ಆದುದರಿಂದ ನಾವು ಮುಗಿಸಿದ ಅರಣ್ಯವಾಸಕ್ಕೆ ಮತ್ತೆ ತೆರಳಲು ಅಪ್ಪಣೆ ನೀಡಿ ಕಳಿಸಿಕೊಡಿ ಎಂದು ಧರ್ಮಜನು ಭೀಷ್ಮನಿಗೆ ಬಿನ್ನವಿಸಿಕೊಂಡನು.
ಪದಾರ್ಥ (ಕ.ಗ.ಪ)
ತೀದುದು-ಸಾವನ್ನಪ್ಪಿತು, ನಸುಸೊಪ್ಪಾದುದು-ಬಲಗುಂದುವುದು, ಊಡು-ಹಾಲು ಕುಡಿಸು, ಜಾಹ್ನವಿ-ಗಂಗಾಮಾತೆ, ನೇಮ-ಅಪ್ಪಣೆ, ತೀದ-ಮುಗಿಸಿದ
ಮೂಲ ...{Loading}...
ತೀದುದೆಮ್ಮಯ ಸೇನೆ ನಸು ಸೊ
ಪ್ಪಾದುದಿಲ್ಲರಿಸೇನೆ ನಿಮ್ಮನು
ಕಾದಿ ಗೆಲುವರೆ ಮೊಲೆಯನೂಡಿದ ತಾಯಿ ಜಾಹ್ನವಿಯೆ
ಕಾದಿದೆವು ಕಟ್ಟಿದೆವು ಗೆಲಿದೆವು
ಮೇದಿನಿಯ ನಾವಿನ್ನು ಮುನ್ನಿನ
ತೀದ ವನವಾಸಕ್ಕೆ ನೇಮವ ಕೊಟ್ಟು ಕಳುಹೆಂದ ॥22॥
೦೨೩ ಮನ್ನಿಸುವಡೀ ಉಭಯರಾಯರು ...{Loading}...
ಮನ್ನಿಸುವಡೀ ಉಭಯರಾಯರು
ನಿನ್ನ ಮೊಮ್ಮಂದಿರುಗಳದರೊಳು
ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು
ನಿನ್ನನೇ ನಂಬಿಹರು ನೀನೇ
ಮುನ್ನ ಶಿಶುತನದಲ್ಲಿ ಸಲಹಿದೆ
ಮನ್ನಣೆಯ ನೀ ಬಲ್ಲೆಯೆಂದನು ದಾನವಧ್ವಂಸಿ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿನಗೇ ತಿಳಿದಂತೆ ಉಭಯ ಅರಸರೂ (ಧರ್ಮಜ-ಕೌರವ) ನಿನ್ನ ಮೊಮ್ಮಕ್ಕಳು. ಈ ಪೈಕಿ ಕುಂತೀ ಮಕ್ಕಳಾದ ಪಾಂಡವರ ಬದುಕು, ಜೀವಿತ, ನಿನ್ನ ಅಧೀನದಲ್ಲಿ ಇರುವುದು. ಇವರು ನೀನೇ ತಮಗೆ ಗತಿಯೆಂದು ನಂಬಿದ್ದಾರೆ. ನೀನೇ ಇವರನ್ನು ಬಾಲ್ಯದಲ್ಲಿ ಸಾಕಿರುವೆ. ಇವರನ್ನು ಹೇಗೆ ಕಾಪಾಡಬೇಕು (ನಲ್ಮೆಯನ್ನು ಮನ್ನಿಸಬೇಕು) ಎಂಬುದನ್ನು ನೀನು ತಿಳಿದಿರುವೆ (ನಿನಗೆ ಬಿಟ್ಟ ವಿಚಾರ) ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಉಭಯರಾಯರು-ಕೌರವ-ಧರ್ಮರಾಯ ಇಬ್ಬರು, ಮೊಮ್ಮಂದಿರುಗಳು-ಮೊಮ್ಮಕ್ಕಳು, ಕುಣಿಕೆಯೊಳಿಹುದು-ಅಧೀನದೊಳಗಿರುವುದು, ಕುಂತೀಸುತರು-ಪಾಂಡವರು, ಶಿಶುತನ-ಬಾಲ್ಯ, ದಾನವಧ್ವಂಸಿ-ಶ್ರೀಕೃಷ್ಣ
ಮೂಲ ...{Loading}...
ಮನ್ನಿಸುವಡೀ ಉಭಯರಾಯರು
ನಿನ್ನ ಮೊಮ್ಮಂದಿರುಗಳದರೊಳು
ನಿನ್ನ ಕುಣಿಕೆಯೊಳಿಹುದು ಕುಂತೀಸುತರ ಜೀವನವು
ನಿನ್ನನೇ ನಂಬಿಹರು ನೀನೇ
ಮುನ್ನ ಶಿಶುತನದಲ್ಲಿ ಸಲಹಿದೆ
ಮನ್ನಣೆಯ ನೀ ಬಲ್ಲೆಯೆಂದನು ದಾನವಧ್ವಂಸಿ ॥23॥
೦೨೪ ಎನಲು ಮೊಮ್ಮನ್ದಿರುಗಳಳಲಿನ ...{Loading}...
ಎನಲು ಮೊಮ್ಮಂದಿರುಗಳಳಲಿನ
ಘನತೆಯನು ಕಿವಿಗೊಟ್ಟು ಕೇಳಿದು
ನನೆದುದಂತಃಕರಣ ಕಂಬನಿದುಂಬಿದನು ಭೀಷ್ಮ
ಎನಗೆ ಕಾಲ ಸಮೀಪ ಮಗನೇ
ನಿನಗೆ ಭಯ ಬೇಡಿನ್ನು ಕುರುಪತಿ
ದನುಜವೈರಿಗೆ ತಪ್ಪಿದಾಗಳೆ ನಿಮಗೆ ಜಯವೆಂದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಭೀಷ್ಮನಿಗೆ ಹೇಳಿದಾಗ ಆ ಮಾತುಗಳಲ್ಲಿದ್ದ ದುಃಖದ ಆಧಿಕ್ಯವು ಮನಮುಟ್ಟಿ ಮನಸ್ಸು ಕರಗಿತು. ಕಣ್ಣಲ್ಲಿ ನೀರು ತುಂಬಿಕೊಂಡಿತು. ಭೀಷ್ಮನ ಅಪ್ಪಾ ಮಗನೆ, ನನಗೆ ಮರಣ ಕಾಲ ಹತ್ತಿರಕ್ಕೆ ಬಂದಿದೆ. ಆದ ಕಾರಣ ಇನ್ನು ಮೇಲೆ ನಿನಗೆ ನನ್ನ ಹೆದರಿಕೆ ಬೇಡ. ಕೌರವನು ಶ್ರೀಕೃಷ್ಣನಿಗೆ ವಿರೋಧವಾಗಿ ನಡೆದುಕೊಂಡಾಗಲೇ ನಿಮಗೆ ಜಯವು ಕಟ್ಟಿಟ್ಟ ಬುತ್ತಿ ಆಯಿತು ಎಂದನು.
ಪದಾರ್ಥ (ಕ.ಗ.ಪ)
ಅಳಲಿನ ಘನತೆ-ದುಃಖದ ಆಧಿಕ್ಯ, ಕಿವಿಗೊಟ್ಟು ಕೇಳಿದು-ಸಾವಧಾನವಾಗಿ ಆಲಿಸಿ, ನನೆದುದು-ಕರಗಿತು, ಕಾಲಸಮೀಪ-ಮರಣಕಾಲ ಹತ್ತಿರವಾಯಿತು,
ಮೂಲ ...{Loading}...
ಎನಲು ಮೊಮ್ಮಂದಿರುಗಳಳಲಿನ
ಘನತೆಯನು ಕಿವಿಗೊಟ್ಟು ಕೇಳಿದು
ನನೆದುದಂತಃಕರಣ ಕಂಬನಿದುಂಬಿದನು ಭೀಷ್ಮ
ಎನಗೆ ಕಾಲ ಸಮೀಪ ಮಗನೇ
ನಿನಗೆ ಭಯ ಬೇಡಿನ್ನು ಕುರುಪತಿ
ದನುಜವೈರಿಗೆ ತಪ್ಪಿದಾಗಳೆ ನಿಮಗೆ ಜಯವೆಂದ ॥24॥
೦೨೫ ಕೊನ್ದೆನಗಣಿತ ರಾಯರನು ...{Loading}...
ಕೊಂದೆನಗಣಿತ ರಾಯರನು ತಾ
ಮಂದಿಯನು ನಿನಗಾನು ಮುನಿಯೆನು
ಬಂದು ಪಾರ್ಥನ ರಥವ ತಡೆದರೆ ನೀವು ಧೃತಿಗೆಡದೆ
ಇಂದಿನುದಯದಲಾ ಶಿಖಂಡಿಯ
ತಂದು ನಿಲಿಸಿದಡೆನ್ನ ತನುವನು
ಹಿಂದುಗಳೆಯದೆ ನಿಮಗೆ ತೆರುವೆನು ಮಗನೆ ಕೇಳ್ ಎಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾನು ಇದುವರೆಗೆ ಅಸಂಖ್ಯಾತ ರಾಜರನ್ನು ಮತ್ತು ಅಸಂಖ್ಯಾತ ಸೈನಿಕ ಶೂರರನ್ನು ಕೊಂದಿರುವೆನು. ನೀನು ನಿಮ್ಮವರೊಂದಿಗೆ ನನ್ನ ವಿರುದ್ಧ ಹೋರಾಡಿದ್ದಕ್ಕೆ ನಾನು ಸಿಟ್ಟುಗೊಳ್ಳುವುದಿಲ್ಲ. ಈ ದಿವಸದ ಬೆಳಿಗ್ಗೆ ರಣರಂಗಕ್ಕೆ ಬಂದು ಅರ್ಜುನನ ತೇರನ್ನು ಅಡ್ಡಗಟ್ಟಿದರೆ, ನೀವು ಹೆದರದೆ, ಶಿಖಂಡಿಯೆಂಬ ನಿಮ್ಮ ಕಡೆಯ ಅರಸನನ್ನು ತಂದು ನನ್ನ ಎದುರಿನಲ್ಲಿ ನಿಲ್ಲಿಸಿದರೆ, ನಾನು ನನ್ನ ಈ ಶರೀರವನ್ನು ಹಿಂಜರಿಯದೆ ನಿಮಗೆ ಒಪ್ಪಿಸುವೆನು. ಕಂದ, ಕೇಳು ಇದೇ ನನ್ನನ್ನು ಗೆಲ್ಲುವ ಉಪಾಯವು ಎಂದು ಭೀಷ್ಮ ಹೇಳಿದನು.
ಪದಾರ್ಥ (ಕ.ಗ.ಪ)
ಅಗಣಿತರಾಯರು-ಅಸಂಖ್ಯಾತರಾಜರು, ಮುನಿಯೆನು-ಕೋಪಗೊಳ್ಳೆನು, ಧೃತಿಗೆಡದೆ-ಹಿಂದುಗಳೆಯದೆ-ಅಂಜದೆ, ತನುವೆನು ತೆರುವೆನು-ಪ್ರಾಣ ಬಿಡುವೆನು (ಶರೀರತ್ಯಾಗ ಮಾಡುವೆ)
ಟಿಪ್ಪನೀ (ಕ.ಗ.ಪ)
ಶಿಖಂಡಿ : ಗಂಡುವೇಷದ ಹೆಣ್ಣು ವ್ಯಕ್ತಿ ನಪುಂಸಕ. ದೊರೆ ಕಾಶಿರಾಜನ ಹಿರಿಯ ಮಗಳು, ಭೀಷ್ಮನನ್ನು ವರಿಸೆಂದು ಕೇಳಿದಾಗ ಅವನು ತಿರಸ್ಕರಿಸಿದ ಅವನಿಗೆ ಪ್ರತೀಕಾರ ಮಾಡಲು ತಪಸ್ಸು ಮಾಡಿ, ದ್ರುಪದನಲ್ಲಿ ಕನ್ಯಾ ರೂಪದಲ್ಲಿ ಶಿಖಂಡಿಯಾಗಿ ಜನಿಸಿದಳು. ಅನಂತರ ಪುತ್ರ ರೂಪದಲ್ಲಿ ಪರಿವರ್ತಿತನಾಗಿದ್ದನು. ಯುದ್ಧದ ವೇಳೆಗೆ ಮತ್ತೆ ಸ್ತ್ರೀ ಆಗಿದ್ದನು. ಭೀಷ್ಮನೆದುರಿಗೆ ಶಿಖಂಡಿ ಯುದ್ಧಕ್ಕೆ ಬಂದಾಗ ಮೂಲತಃ ಹೆಣ್ಣಾದ ಇವನ ಮೇಲೆ ಭೀಷ್ಮ ಯುದ್ಧ ಮಾಡಲಿಲ್ಲ.
ಮೂಲ ...{Loading}...
ಕೊಂದೆನಗಣಿತ ರಾಯರನು ತಾ
ಮಂದಿಯನು ನಿನಗಾನು ಮುನಿಯೆನು
ಬಂದು ಪಾರ್ಥನ ರಥವ ತಡೆದರೆ ನೀವು ಧೃತಿಗೆಡದೆ
ಇಂದಿನುದಯದಲಾ ಶಿಖಂಡಿಯ
ತಂದು ನಿಲಿಸಿದಡೆನ್ನ ತನುವನು
ಹಿಂದುಗಳೆಯದೆ ನಿಮಗೆ ತೆರುವೆನು ಮಗನೆ ಕೇಳೆಂದ ॥25॥
೦೨೬ ಗಣ್ಡುತನ ತಾ ...{Loading}...
ಗಂಡುತನ ತಾ ನೆರವು ನಿಮ್ಮ ಶಿ
ಖಂಡಿಯನು ಮುಂದಿರಿಸಲಾತನ
ಕಂಡು ನಾವ್ ಕಾಳೆಗವ ಮಾಡೆವು ಕೈದುಗಳ ಬಿಸುಟು
ಚಂಡಿತನವನು ಮಾದು[ಣ್ದು] ಮಿಗೆ ಕೈ
ಕೊಂಡು ಫಲುಗುಣನೆಸಲಿ ತನುವನು
ದಿಂಡುಗೆಡಹಲಿ ಬಳಿಕ ಗೆಲುವಿರಿ ಕೌರವೇಶ್ವರನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನಗೆ ಶೂರನ ಪರಾಕ್ರಮವು ಇಷ್ಟವಾದುದು (ಇವನಲ್ಲಿ ಗಂಡಸುತನ ಸಹಜವಾದುದಲ್ಲ). ನಿಮ್ಮ ಕಡೆಯ ನಪುಂಸಕ ಶಿಖಂಡಿಯನ್ನು ಕರತಂದು ನನ್ನ ಮುಂದೆ ನಿಲ್ಲಿಸಿದರೆ ನಾನು ಅವನನ್ನು ಕಂಡೊಡನೆ ಆಯುಧಗಳನ್ನು ತೊರೆದು ಯುದ್ಧವನ್ನು ನಿಲ್ಲಿಸುತ್ತೇನೆ (ಏಕೆಂದರೆ ಪರಾಕ್ರಮದ ಗಂಡಸಲ್ಲ ಅವನು). ಅನಂತರ ಅರ್ಜುನನು ಬಲವಾಗಿ ಯುದ್ಧವನ್ನು ಮುಂದುವರೆಸಿ ನನ್ನ ಮೇಲೆ ಬಾಣ ಪ್ರಯೋಗ ಮಾಡಲಿ. ಅಸತ್ಯದಲ್ಲಿ ವರ್ತಿಸುವುದಿಲ್ಲವೆಂಬ ಹಠತೊರೆದು ನನ್ನ ದೇಹವನ್ನು ಕೆಳಗೆ ಉರುಳಿಸಲಿ. ಅನಂತರ ದುರ್ಯೋಧನನನ್ನು ಗೆಲ್ಲುವಿರಿ (ಸಂಪೂರ್ಣ ಜಯ ನಿಮಗೆ ಲಭಿಸುವುದು)
ಪದಾರ್ಥ (ಕ.ಗ.ಪ)
ಗಂಡುತನ-ಶೂರರ ಪರಾಕ್ರಮ, ಕೈದುಗಳ ಬಿಸುಟು-ಶಸ್ತ್ರ ತ್ಯಾಗಮಾಡಿ, ಚಂಡಿತನ-ಅಸತ್ಯದಲ್ಲಿ ವರ್ತಿಸುವುದಿಲ್ಲ (ನಿರಾಯುಧರ ಮೇಲೆ ಅಸ್ತ್ರ ತೊಡುವುದಿಲ್ಲವೆಂಬ ಪ್ರತಿಜ್ಞೆ ್ಟ) ಎಂಬ ಹಠ
ಮೂಲ ...{Loading}...
ಗಂಡುತನ ತಾ ನೆರವು ನಿಮ್ಮ ಶಿ
ಖಂಡಿಯನು ಮುಂದಿರಿಸಲಾತನ
ಕಂಡು ನಾವ್ ಕಾಳೆಗವ ಮಾಡೆವು ಕೈದುಗಳ ಬಿಸುಟು
ಚಂಡಿತನವನು ಮಾದು[ಣ್ದು] ಮಿಗೆ ಕೈ
ಕೊಂಡು ಫಲುಗುಣನೆಸಲಿ ತನುವನು
ದಿಂಡುಗೆಡಹಲಿ ಬಳಿಕ ಗೆಲುವಿರಿ ಕೌರವೇಶ್ವರನ ॥26॥
೦೨೭ ಎನಲು ಶಿವಶಿವ ...{Loading}...
ಎನಲು ಶಿವಶಿವ ಶಿವಮಹಾದೇ
ವೆನುತ ಕಿವಿಗಳ ಮುಚ್ಚಿದನು ಕಂ
ಬನಿಯನುಗುರಲಿ ಮಿಡಿದು ನೊಂದನು ಪಾರ್ಥ ಹೃದಯದಲಿ
ಎನಗೆ ಗೆಲವಾಯ್ತದು ಕೃತಾರ್ಥರು
ಜನದೊಳೆನ್ನವೊಲಾರು ಬಳಿಕೇ
ನೆನಗೆ ನಿಮ್ಮವೊಲಾರು ಹಗೆಗಳು ಜಗದೊಳುಂಟೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಹೇಳಲು ಅವನ ಅಧರ್ಮದ ನುಡಿಗಳನ್ನು ಪಾರ್ಥನು ಕೇಳಿ ಶಿವ ಶಿವ ಶಿವ ಮಹಾದೇವಾ ಎನ್ನುತ್ತಾ ತನ್ನೆರಡು ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡನು. ಕಣ್ಣೀರನ್ನು ತನ್ನ ಬೆರಳ ತುದಿಯಿಂದ ಒರೆಸಿ-ಮನಸ್ಸಿನಲ್ಲಿ ಸಂಕಟಪಟ್ಟನು. ಈ ನಿಮ್ಮ ಮಾತಿನಿಂದ ನಡೆದುಕೊಂಡರೆ ನಮಗೆ ಜಯವಾದಂತೆಯೇ. ಇನ್ನು ಜಗತ್ತಿನಲ್ಲಿ ನಮ್ಮಂಥ ಅತಿ ಧನ್ಯರು ಯಾರಿದ್ದಾರೆ ? ಇನ್ನು ನಮಗೆ ಕೊರತೆ ಏನಿದೆ ? ನನಗೆ ನಿಮ್ಮಂಥ ಶತ್ರುಗಳು ಜಗತ್ತಿನಲ್ಲಿ ಯಾರು ತಾನೇ ಇದ್ದಾರು ? ಎಂದು ವ್ಯಂಗ್ಯವಾಗಿ ಕಾಕುನುಡಿಯಾಡಿದ.
ಪದಾರ್ಥ (ಕ.ಗ.ಪ)
ಉಗುರಲಿ ಮಿಡಿದು-ಬೆರಳತುದಿಯಲಿ ಒರೆಸಿ, ಉರುಕೃತಾರ್ಥರು-ಅತಿಧನ್ಯರು.
ಮೂಲ ...{Loading}...
ಎನಲು ಶಿವಶಿವ ಶಿವಮಹಾದೇ
ವೆನುತ ಕಿವಿಗಳ ಮುಚ್ಚಿದನು ಕಂ
ಬನಿಯನುಗುರಲಿ ಮಿಡಿದು ನೊಂದನು ಪಾರ್ಥ ಹೃದಯದಲಿ
ಎನಗೆ ಗೆಲವಾಯ್ತದು ಕೃತಾರ್ಥರು
ಜನದೊಳೆನ್ನವೊಲಾರು ಬಳಿಕೇ
ನೆನಗೆ ನಿಮ್ಮವೊಲಾರು ಹಗೆಗಳು ಜಗದೊಳುಂಟೆಂದ ॥27॥
೦೨೮ ಕಳಿದನಡವಿಯೊಳಯ್ಯನಲ್ಲಿಂ ...{Loading}...
ಕಳಿದನಡವಿಯೊಳಯ್ಯನಲ್ಲಿಂ
ಬಳಿಕ ಭೀಷ್ಮನ ತೋಳ ತೊಟ್ಟಿಲಿ
ನೊಳಗೆ ಬೆಳೆದೆವು ಸಲಹಿದನು ಧೂಳಾಟ ಮೊದಲಾಗಿ
ಬಲಿಯಲೆರಕೆಗಳೆಮಗೆ ಭಾಗಿಸಿ
ನೆಲನ ಕೊಟ್ಟನು ಭೀಷ್ಮನೀತನ
ಕೊಲೆಗೆ ಬಯಸುವ ಮನವದೆಂತುಟೊ ಕೃಷ್ಣ ಹೇಳೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮ್ಮ ತಂದೆ ಕಾಡಿನಲ್ಲಿ (ಎಳೆಯ ಮಕ್ಕಳಾದ ನಮ್ಮನ್ನು ಬಿಟ್ಟು) ಸತ್ತನು. ಆ ತರುವಾಯ ನಾವು ಭೀಷ್ಮನ ತೋಳೆಂಬ ತೊಟ್ಟಿಲಲ್ಲಿ (ಆಶ್ರಯದಲ್ಲಿ) ಬೆಳೆದವು. ಬೀದಿ ಧೂಳಿನಲ್ಲಿ ಬಿದ್ದು ಆಡುವ ವಯಸ್ಸಿನಿಂದಲೂ ನಮ್ಮನ್ನು ಸಾಕಿದನು. ನಮಗೆ ರೆಕ್ಕೆಗಳು ಬಲಿತ ಮೇಲೆ (ಲೋಕವ್ಯವಹಾರಕ್ಕೆ ತಕ್ಕ ವಯಸ್ಸು ಬರಲು) ನಮಗೂ ಕೌರವನಿಗೂ ರಾಜ್ಯವನ್ನು ಪಾಲು ಮಾಡಿ ಕೊಟ್ಟನು. ಈ ಬಗೆಯಲ್ಲಿ ನಮ್ಮನ್ನು ಸಾಕಿ ಸಲಹಿದ ಭೀಷ್ಮನನ್ನು ಕೊಲ್ಲಲು ನಮಗೆ ಮನಸ್ಸು ಬರುವುದು ಹೇಗೆ ಸಾಧ್ಯ, ನೀನೇ ಹೇಳು ಕೃಷ್ಣಾ ಎಂದನು.
ಪದಾರ್ಥ (ಕ.ಗ.ಪ)
ಎರಕೆಗಳು ಬಲಿಯಲು-ಪ್ರಾಯ ಬರಲು, (ರೆಕ್ಕೆಗಳು ಬಲಿಷ್ಠವಾಗಲು) (ಲೋಕವ್ಯವಹಾರಕ್ಕೆ ತಕ್ಕ ವಯಸ್ಸು ಬರಲು) ಭಾಗಿಸಿ-ಪಾಲುಮಾಡಿ, ಕಳಿದನು-ಸತ್ತನು, ನೆಲನಕೊಟ್ಟನು-ರಾಜ್ಯ ಕೊಟ್ಟನು.
ಮೂಲ ...{Loading}...
ಕಳಿದನಡವಿಯೊಳಯ್ಯನಲ್ಲಿಂ
ಬಳಿಕ ಭೀಷ್ಮನ ತೋಳ ತೊಟ್ಟಿಲಿ
ನೊಳಗೆ ಬೆಳೆದೆವು ಸಲಹಿದನು ಧೂಳಾಟ ಮೊದಲಾಗಿ
ಬಲಿಯಲೆರಕೆಗಳೆಮಗೆ ಭಾಗಿಸಿ
ನೆಲನ ಕೊಟ್ಟನು ಭೀಷ್ಮನೀತನ
ಕೊಲೆಗೆ ಬಯಸುವ ಮನವದೆಂತುಟೊ ಕೃಷ್ಣ ಹೇಳೆಂದ ॥28॥
೦೨೯ ಈತನನು ನಾವ್ ...{Loading}...
ಈತನನು ನಾವ್ ಕೊಲಲು ಭುವನ
ಖ್ಯಾತರಹೆವೈ ಸುಡಲಿ ಬಯಸುವ
ಭೂತಳವನೀ ಬೊಡ್ಡಿಗೋಸುಗ ಸುಟ್ಟು ಸುಕೃತವನು
ಘಾತಕರು ಪಾತಕರು ತೆಗೆ ತೆಗೆ
ಏತರವದಿರು ಪಾಂಡುತನಯರ
ಮಾತನಾಡದಿರೆಂಬ ಕೀರ್ತಿಗೆ ನೋತುದಿಲ್ಲೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಭೀಷ್ಮನನ್ನು ಕೊಂದರೆ ಈ ಭೂಮಿಯಲ್ಲಿ ಕೀರ್ತಿವಂತರು ಆಗುತ್ತೇವೆ. ಅಲ್ಲವೇ ? (ಕೆಟ್ಟ ಕೆಲಸದಿಂದ ಅಪಕೀರ್ತಿ ಹೊಂದುತ್ತೇವೆ) ಇಂತಹ ಅಕಾರ್ಯ ಮಾಡಿ ಪಡೆಯುವ ಈ ರಾಜ್ಯ ಯಾರಿಗೆ ಬೇಕಾಗಿದೆ ಬೆಂಕಿ ಬೀಳಲಿ ! ಈ ವಾರಾಂಗನಾ ಧಾರಿಣಿಗಾಗಿ ಪಾಂಡವರು ತಮ್ಮ ಶಾಶ್ವತವಾದ ಪುಣ್ಯವನ್ನು ನಾಶ ಮಾಡಿಕೊಂಡು, ಕೊಲೆಗಾರರೂ ಪಾಪಿಗಳೂ ಆದರು. ಇನ್ನವರ ಸುದ್ದಿಯನ್ನು ಬಿಡು ಬಿಡು (ಆಡಬೇಡ) ಅವರೆಂಥ ಮನುಷ್ಯರು ! (ಮನುಷ್ಯರೇ ಅಲ್ಲ ರಾಕ್ಷಸರು) ಆ ಪಾಂಡು ಮಕ್ಕಳ ಸುದ್ದಿಯನ್ನೇ ಎತ್ತಬೇಡ ಎಂದು ಜನರು ಆಡಿ ಕೊಳ್ಳುವಂಥ ಅಪಕೀರ್ತಿಗೆ ಬದ್ದನಾಗಲು ಸಿದ್ಧನಿಲ್ಲ ಎಂದು ಅರ್ಜುನ ಕೃಷ್ಣನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಬೊಡ್ಡಿ-ವೇಶ್ಯೆ, ಸುಕೃತ-ಪುಣ್ಯ, ಏತರವದಿರು-ಅವರೆಂಥ ಜನ, ಅಕೀರ್ತಿ-ಅಪಕೀರ್ತಿ, ನೋತುದು-ಬದ್ಧನಾಗುವುದು, ವ್ರತಧಾರಿಯಾಗುವುದು, ಘಾತಕರು-ಕೊಲೆಗಾರರು, ಪಾತಕರು-ಪಾಪಿಗಳು
ಮೂಲ ...{Loading}...
ಈತನನು ನಾವ್ ಕೊಲಲು ಭುವನ
ಖ್ಯಾತರಹೆವೈ ಸುಡಲಿ ಬಯಸುವ
ಭೂತಳವನೀ ಬೊಡ್ಡಿಗೋಸುಗ ಸುಟ್ಟು ಸುಕೃತವನು
ಘಾತಕರು ಪಾತಕರು ತೆಗೆ ತೆಗೆ
ಏತರವದಿರು ಪಾಂಡುತನಯರ
ಮಾತನಾಡದಿರೆಂಬ ಕೀರ್ತಿಗೆ ನೋತುದಿಲ್ಲೆಂದ ॥29॥
೦೩೦ ನಿಲ್ಲು ಫಲುಗುಣ ...{Loading}...
ನಿಲ್ಲು ಫಲುಗುಣ ಕೇಳು ಹೊಲ್ಲೆಹ
ವಲ್ಲ ಸಕಲ ಕ್ಷತ್ರಧರ್ಮವ
ಬಲ್ಲೆ ನೀನೆಮಗಹಿತನೇ ನೃಪನೀತಿಬಾಹಿರನೆ
ಎಲ್ಲಿಯಪಕೀರ್ತಿಗಳು ಕೀರ್ತಿಗ
ಳೆಲ್ಲ ವಿಧಿಯವು ನಿನ್ನ ಕಾರಣ
ವಲ್ಲ ನೀ ಕೊಲಲೈಸರವನೈ ಪಾರ್ಥ ಹೇಳೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನೇ ನಿರಾಯಧನಾದ ನನ್ನನ್ನು ಕೊಲ್ಲುವುದು ಅಧರ್ಮ ಎಂಬ ನಿನ್ನ ಮಾತನ್ನು ನಿಲ್ಲಿಸು. ನನ್ನ ಮಾತನ್ನು ಕೇಳು. ಇದರಲ್ಲಿ ಅಧರ್ಮವಾದುದು ಏನೂ ಇಲ್ಲ. ನೀನು ಕ್ಷತ್ರಿಯ ಧರ್ಮವನ್ನು ಎಲ್ಲವನ್ನು ಚೆನ್ನಾಗಿ ತಿಳಿದಿರುವೆ. ನೀನು ನನಗೆ ಶತ್ರುವೇ ? ರಾಜಧರ್ಮ ಬಿಟ್ಟು ನಡೆಯುವ ವ್ಯಕ್ತಿಯೇ ನೀನು ? ಅಲ್ಲ ಕೆಟ್ಟ ಹೆಸರೂ ಒಳ್ಳೆಯ ಹೆಸರೂ ಎಲ್ಲಿಂದ ಬಂದವು ? ಎಲ್ಲವೂ ಅವರವರ ಅದೃಷ್ಟಕ್ಕೆ ಸೇರಿದವು. ನೀನು ಅಕೀರ್ತಿ ಸುಕೀರ್ತಿಗಳಿಗೆ ಕಾರಣ ಕರ್ತನು ಅಲ್ಲ. ನೀನು ನನ್ನನ್ನು ಕೊಲ್ಲಲು ಎಷ್ಟರವನಯ್ಯಾ ? ಇದಕ್ಕೆ ಏನು ಹೇಳುವೆಯೋ ಹೇಳು ಪಾರ್ಥ ಎಂದು ಭೀಷ್ಮನು ಅರ್ಜುನನ್ನು ತನ್ನ ಮಾತಿಗೆ ಒಪ್ಪುವಂತೆ ಮಾಡಿದನು.
ಪದಾರ್ಥ (ಕ.ಗ.ಪ)
ಪ್ರಸರವನೈ-ಎಷ್ಟರವನಯ್ಯಾ, ನೃಪನೀತಿ-ರಾಜನೀತಿ, ಹೊಲ್ಲೆಹವು-ಅಧರ್ಮವಾದುದು, ಅಹಿತನೆ-ಶತ್ರುವೇ
ಮೂಲ ...{Loading}...
ನಿಲ್ಲು ಫಲುಗುಣ ಕೇಳು ಹೊಲ್ಲೆಹ
ವಲ್ಲ ಸಕಲ ಕ್ಷತ್ರಧರ್ಮವ
ಬಲ್ಲೆ ನೀನೆಮಗಹಿತನೇ ನೃಪನೀತಿಬಾಹಿರನೆ
ಎಲ್ಲಿಯಪಕೀರ್ತಿಗಳು ಕೀರ್ತಿಗ
ಳೆಲ್ಲ ವಿಧಿಯವು ನಿನ್ನ ಕಾರಣ
ವಲ್ಲ ನೀ ಕೊಲಲೈಸರವನೈ ಪಾರ್ಥ ಹೇಳೆಂದ ॥30॥
೦೩೧ ಯನ್ತ್ರಿ ಮಿಡಿದರೆ ...{Loading}...
ಯಂತ್ರಿ ಮಿಡಿದರೆ ಕಾದಿ ಬೀಳ್ವವು
ಯಂತ್ರಮಯ ಹಾಹೆಗಳು ವಧೆಯಾ
ಯಂತ್ರಿಗೋ ಹಾಹೆಗಳಿಗೋ ಹೇಳಾರ ನೆಮ್ಮುವದು
ಯಂತ್ರಿ ಕೃಷ್ಣನು ನಾವು ನೀವೀ
ತಂತ್ರವಖಿಲ ಚರಾಚರಂಗಳು
ಯಂತ್ರ ರೂಪುಗಳೆಲ್ಲ ಕಾರಣವಿಲ್ಲ ನಿನಗೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೊಂಬೆಗಳನ್ನು ಸೂತ್ರದಿಂದ ಆಡಿಸುವನು, ಆಯಾ ಬೊಂಬೆಗಳನ್ನು ದಾರದಿಂದ ಚಿಮ್ಮಿಸಿದರೆ, ಆ ಸೂತ್ರದಿಂದ ಬಂಧಿಸಲ್ಪಟ್ಟ ಬೊಂಬೆಗಳು ಕಾದಾಡಿ ಕೆಳಗೆ ಬಿದ್ದು ಸಾಯುವುವು ಆ ಬೊಂಬೆಗಳ (ಪಾತ್ರಗಳ ಸಾವು) ಸಾವು ಆ ಸೂತ್ರಧಾರನಿಗೋ ಅಥವಾ ಆ ಬೊಂಬೆಗಳಿಗೋ (ಪಾತ್ರಧಾರಿಗಳಿಗೋ) ಯಾರಿಗೆ ಆ ಕೊಲೆಯ ಹೊಣೆ ಸೇರುವುದು ? ಹೇಳು.
ಕೃಷ್ಣನು ಜಗತ್ತನ್ನು ಕರ್ಮವಶದಿಂದ ಆಡಿಸುವ ಸೂತ್ರಧಾರಿ. ನಾವು ನೀವು ಎಲ್ಲ ಸಮಸ್ತರು. ಈ ಸೈನ್ಯಗಳು ಲೋಕದ ಸಮಸ್ತ ಚರಾಚರ ಜೀವಿಗಳು (ಚಲಿಸಿದ ಮರ, ಹಾರುವ ಹಕ್ಕಿ ಇತ್ಯಾದಿ) ಎಲ್ಲ ಅಧೀನ ಬೊಂಬೆಗಳು ಆದ್ದರಿಂದ ನೀನು ಈ ಕೊಲೆಗೆ ಕಾರಣನು ಅಲ್ಲ ಎಂದು ಭೀಷ್ಮನು ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಯಂತ್ರಿ-ಸೂತ್ರಧಾರ (ಬೊಂಬೆಯಾಟದವನು) ಹಾಹೆ-ಬೊಂಬೆ, ನೆಮ್ಮುವುದು-ನಂಬುವುದು, ಚರಾಚರ-ಚಲಿಸುವ ಚಲಿಸದ, ಯಂತ್ರರೂಪುಗಳು-ಅಧೀನ ಬೊಂಬೆಗಳು (ಜೀವಿಗಳು)
ಟಿಪ್ಪನೀ (ಕ.ಗ.ಪ)
ಸೂತ್ರದ ಗೊಂಬೆಯಾಟವನ್ನು ಇಲ್ಲಿ ಪ್ರಸ್ತಾಪಿಸಿದ್ದಾನೆ.
ಮೂಲ ...{Loading}...
ಯಂತ್ರಿ ಮಿಡಿದರೆ ಕಾದಿ ಬೀಳ್ವವು
ಯಂತ್ರಮಯ ಹಾಹೆಗಳು ವಧೆಯಾ
ಯಂತ್ರಿಗೋ ಹಾಹೆಗಳಿಗೋ ಹೇಳಾರ ನೆಮ್ಮುವದು
ಯಂತ್ರಿ ಕೃಷ್ಣನು ನಾವು ನೀವೀ
ತಂತ್ರವಖಿಲ ಚರಾಚರಂಗಳು
ಯಂತ್ರ ರೂಪುಗಳೆಲ್ಲ ಕಾರಣವಿಲ್ಲ ನಿನಗೆಂದ ॥31॥
೦೩೨ ಒನ್ದು ಮುಖದಲಿ ...{Loading}...
ಒಂದು ಮುಖದಲಿ ಜಗವ ಹೂಡುವ
ನೊಂದು ಮುಖದಲಿ ಜಗವ ಸಲಹುವ
ನೊಂದು ಮುಖದಲಿ ಬೇಳುವನು ನಯನಾಗ್ನಿಯಲಿ ಜಗವ
ಕೊಂದು ಹಗೆಯಲ್ಲೀತ ಸಲಹಿದ
ನೆಂದು ಮೋಹಿತನಲ್ಲ ಪರಮಾ
ನಂದಮಯ ಹರಿಯಿದಕೆ ಕಾರಣವಿಲ್ಲ ನಿನಗೆಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಒಂದು ಕಡೆ ಬ್ರಹ್ಮನೆನಿಸಿಕೊಂಡು ಇಳೆಯನ್ನು ಸೃಷ್ಟಿಸುತ್ತಾನೆ. ಇನ್ನೊಂದು ರೂಪದಿಂದ ವಿಷ್ಣುವಾಗಿ ಜಗತ್ತನ್ನು ರಕ್ಷಿಸುತ್ತಾನೆ, ಮತ್ತೊಂದು ರೂಪದಿಂದ ಶಿವನಾಗಿ ಪ್ರಪಂಚವನ್ನು ಹಣೆಗಣ್ಣಿನ ಬೆಂಕಿಯಿಂದ ಲೋಕಗಳನ್ನು ಆಹುತಿ ತೆಗೆದುಕೊಳ್ಳುವನು. ಇವನು ಹೀಗೆ ಜಗತ್ತನ್ನು ಜನರನ್ನು ಕೊಂದರೂ (ದ್ವೇಷಿಯಲ್ಲ) ಶತ್ರುವಲ್ಲ. ಲೋಕ ರಕ್ಷಣೆ ಮಾಡಿದರೂ ಲೋಕದಲ್ಲಿ ಆಸಕ್ತನಾದವನಲ್ಲ. ಉತ್ಕೃಷ್ಟವೂ ಅಪಾರವೂ ಆದ ಆನಂದ ಸ್ವರೂಪಿ ವಿಷ್ಣುವು ಕಾರಣ ಕರ್ತನಾದುದರಿಂದ ನೀನು ಯಾವುದಕ್ಕೂ ಹೊಣೆಗಾರನಲ್ಲ ಚಿಂತಿಸಬೇಡ, ಕೃಷ್ಣ ಹೇಳಿದಂತೆ ನಡೆ ಎಂದು ಭೀಷ್ಮ ಅರ್ಜುನನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹಗೆ-ಶತ್ರು, ಬೇಳುವನು-ಆಹುತಿ ಸ್ವೀಕರಿಸುವನು, ನಯನಾಗ್ನಿ-ಅಗ್ನಿ ನಯನ, ಬೆಂಕಿ ಕಣ್ಣವನು-ಶಿವ, ಹೂಡುವನು-ಸೃಷ್ಟಿಸುವನು, ಸಲಹುವನು-ಸಂರಕ್ಷಿಸುವನು, ಮೋಹಿತನಲ್ಲ-ಆಸಕ್ತನಲ್ಲ, ಕಾರಣವು ಇಲ್ಲ-ಹೊಣೆಗಾರ ನೀನಲ್ಲ.
ಮೂಲ ...{Loading}...
ಒಂದು ಮುಖದಲಿ ಜಗವ ಹೂಡುವ
ನೊಂದು ಮುಖದಲಿ ಜಗವ ಸಲಹುವ
ನೊಂದು ಮುಖದಲಿ ಬೇಳುವನು ನಯನಾಗ್ನಿಯಲಿ ಜಗವ
ಕೊಂದು ಹಗೆಯಲ್ಲೀತ ಸಲಹಿದ
ನೆಂದು ಮೋಹಿತನಲ್ಲ ಪರಮಾ
ನಂದಮಯ ಹರಿಯಿದಕೆ ಕಾರಣವಿಲ್ಲ ನಿನಗೆಂದ ॥32॥
೦೩೩ ಕಾವುದೀತನ ಕರುಣ ...{Loading}...
ಕಾವುದೀತನ ಕರುಣ ಮುನಿದರೆ
ಸಾವೆನೀತನ ಕಯ್ಯ ಬಾಯಲಿ
ನೀವು ತಾವ್ ನೆರೆ ಮತ್ತೆ ಕೆಲಬರು ಮುನಿದಡಂಜುವೆನೆ
ನಾವು ಬೆಸಸಿದ ಮಾಡಿ ಸಾಕಿ
ನ್ನಾವಭಯ ನಿಮಗಿಲ್ಲ ಚಿತ್ತದ
ಭಾವಶುದ್ಧಿಯಲೆಮ್ಮ ನಂಬಿರಿ ಹೋಗಿ ನೀವೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣ ದಯೆ ನಮ್ಮನ್ನು ರಕ್ಷಿಸುತ್ತದೆ. ಇವನು ಸಿಟ್ಟಾದರೆ ನಾನು ಸಾಯವೆನು ನೀವು ನಾವು ಈತನ ಕೈಯಲ್ಲಿ (ಬದುಕಿರುವುದಕ್ಕೂ) ಬಾಯಲ್ಲಿ (ಸಾಯುವುದಕ್ಕೆ) ಇರುವೆವು. ನಮ್ಮ ಅಳಿವಿಗೂ ಉಳಿವಿಗೂ ನಾವು ಸ್ವತಂತ್ರರಲ್ಲ. ಈತನಲ್ಲದೆ ಬೇರೆ ಯಾರೇ ಶೂರರು ಸಿಟ್ಟುಗೊಂಡರೂ ನಾನು ಸ್ವಲ್ಪವೂ ಹೆದರುವುದಿಲ್ಲ ಇನ್ನು ಸಾಕು, ನಾವು ಹೇಳಿದಷ್ಟನ್ನು ಮಾಡಿ ನಿಮಗೆ ಇನ್ನಾವ ಪಾಪದ ಭಯವೂ ಇಲ್ಲ. ಮನಸ್ಸಿನ ನಿಷ್ಕಲ್ಮಷ ಭಾವದಲ್ಲಿ (ಏನನ್ನೂ ಚಿಂತಿಸದೆ) ನನ್ನನ್ನು ನಂಬಿ ನೀವು ಹೊರಡಿರಿ ಎಂದು ಭೀಷ್ಮನು ಧರ್ಮರಾಜಾದಿಗಳಿಗೆ ಸಮಾಧಾನ ಹೇಳಿದನು.
ಪಾಠಾನ್ತರ (ಕ.ಗ.ಪ)
ಮುನಿದಡಂಜುವೆನು-ಮುನಿದಡಂಜುವೆನೆ
ಮೂಲ ...{Loading}...
ಕಾವುದೀತನ ಕರುಣ ಮುನಿದರೆ
ಸಾವೆನೀತನ ಕಯ್ಯ ಬಾಯಲಿ
ನೀವು ತಾವ್ ನೆರೆ ಮತ್ತೆ ಕೆಲಬರು ಮುನಿದಡಂಜುವೆನೆ
ನಾವು ಬೆಸಸಿದ ಮಾಡಿ ಸಾಕಿ
ನ್ನಾವಭಯ ನಿಮಗಿಲ್ಲ ಚಿತ್ತದ
ಭಾವಶುದ್ಧಿಯಲೆಮ್ಮ ನಂಬಿರಿ ಹೋಗಿ ನೀವೆಂದ ॥33॥
೦೩೪ ಹರುಷ ಬಲಿದುದು ...{Loading}...
ಹರುಷ ಬಲಿದುದು ಮನದ ಸಂಶಯ
ಹರಿದುದಾಹವ ವಿಜಯವಾರ್ತೆಯ
ಹರಹಿನಲಿ ಹೊರೆಯೇರಿ ಹೋಂಪುಳಿಯೋದರಡಿಗಡಿಗೆ
ಸುರನದೀನಂದನನ ಹರಹಿನ
ಹರಕೆಗಳ ಕೈಕೊಂಡು ಬೀಳ್ಕೊಂ
ಡರಸ ಮುರರಿಪು ಸಹಿತ ಬಂದನು ತನ್ನ ಪಾಳಯಕೆ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನಿಗೆ ಸಂತಸ ಹೆಚ್ಚಿತು. ಭೀಷ್ಮನನ್ನು ಸಂಹರಿಸುವುದು ಸಾಧ್ಯವೇ ? ಎಂಬ ಸಂದೇಹ ನಿವಾರಣೆ ಆಯಿತು. ಯುದ್ಧದ ಗೆಲುವಿನ ಮಾತನ್ನು ಕೇಳಿ ಉಬ್ಬಿ . ಬಾರಿಬಾರಿಗೂ ರೋಮಾಂಚಿತನಾದನು. ಭೀಷ್ಮನಿಂದ ವಿಶೇಷವಾದ ಆಶೀರ್ವಾದವನ್ನು ಪಡೆದು, ಆತನಿಂದ ಕಳುಹಿಸಿಕೊಂಡು, ಕೃಷ್ಣನೊಡನೆ ತನ್ನ ಬಿಡಾರಕ್ಕೆ ಧರ್ಮಜನು ಬಂದನು.
ಪದಾರ್ಥ (ಕ.ಗ.ಪ)
ಹರಹಿನ-ಅತಿಶಯವಾದ, ಮುರರಿಪು-ಕೃಷ್ಣ, ಬಲಿದುದು-ಹೆಚ್ಚಿತು, ಹರೆದುದು-ನಿವಾರಣೆ ಆಯಿತು, ಹೊರೆಯೇರಿ-ಉಬ್ಬಿ, ಹೋಂಪುಳಿ-ರೋಮಾಂಚನ, ಹರಹು-ಅತಿಶಯ, ಬೀಳ್ಕೊಂಡು-ಕಳಿಸಿಕೊಂಡು
ಮೂಲ ...{Loading}...
ಹರುಷ ಬಲಿದುದು ಮನದ ಸಂಶಯ
ಹರಿದುದಾಹವ ವಿಜಯವಾರ್ತೆಯ
ಹರಹಿನಲಿ ಹೊರೆಯೇರಿ ಹೋಂಪುಳಿಯೋದರಡಿಗಡಿಗೆ
ಸುರನದೀನಂದನನ ಹರಹಿನ
ಹರಕೆಗಳ ಕೈಕೊಂಡು ಬೀಳ್ಕೊಂ
ಡರಸ ಮುರರಿಪು ಸಹಿತ ಬಂದನು ತನ್ನ ಪಾಳಯಕೆ ॥34॥