೦೪

೦೦೦ ಕವಿದು ಹಳಚಿದುದುಭಯಬಲ ...{Loading}...

ಕವಿದು ಹಳಚಿದುದುಭಯಬಲ ಶಿವ
ಶಿವ ಮಹಾದೇವಮಮ ಪದರಜ
ರವಿಯ ತಿವಿದುದು ದಿನವನಳಿದುದು ನಳಿದನಹಿರಾಯ

೦೦೧ ಅವಧರಿಸು ಧೃತರಾಷ್ಟ್ರ ...{Loading}...

ಅವಧರಿಸು ಧೃತರಾಷ್ಟ್ರ ಗಂಗಾ
ಭವನ ಸುಯಿಧಾನದಲಿ ಕುರುಬಲ
ನಿವಹ ಧೃಷ್ಟದ್ಯುಮ್ನನಾರೈಕೆಯಲಿ ರಿಪುಸೇನೆ
ತವಕ ಮಿಗೆ ಮೋಹರಿಸಿ ಕೈವೀ
ಸುವ ಮಹೀಶರನೀಕ್ಷಿಸುತಲಾ
ಹವ ಮಹೋದ್ಯೋಗಕ್ಕೆ ಬೆರಗಾಯಿತ್ತು ಸುರಕಟಕ ॥1॥

೦೦೨ ಎರಡು ಬಲ ...{Loading}...

ಎರಡು ಬಲ ಕೈಲಾಗನೀಕ್ಷಿಸು
ತಿರೆ ಕೃತಾಂತಾಲಯಕೆ ವಾಹಿನಿ
ಸರಿವುದೆಂಬಂದದಲಿ ಕೈವೀಸಿದರು ಭೂಭುಜರು
ಅರರೆ ಮೂಡಣ ಶರಧಿ ಪಡುವಣ
ಶರಧಿಗಾಂತುದೊ ರಣಚಮತ್ಕೃತಿ
ಸುರರ ನಯನಾಂಗಣಕೆ ಕವಿಸಿತು ಕೌತುಕಾಂಬುಧಿಯ ॥2॥

೦೦೩ ಎಲೆಲೆ ಕವಿಕವಿ ...{Loading}...

ಎಲೆಲೆ ಕವಿಕವಿ ಬೆರಸುಬೆರಸಿ
ಟ್ಟಳಿಸು ತಿವಿತಿವಿ ಭಲರೆ ಭಲರತಿ
ಬಲರೆ ಹಿಂಚದಿರಿನ್ನು ಹೊಯ್ ಹೊಯ್ ಚೂಣಿಗರನೆನುತ
ಬಲಜಲಧಿ ಮುಕ್ಕುಳಿಸಿ ಮಿಗೆ ಹೆ
ಕ್ಕಳಿಸಿ ಕವಿದುದು ಗಿರಿ ಬೆಸುಗೆಯು
ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ ಬಿರಿದ ॥3॥

೦೦೪ ಒದರಿ ಬಲನೊಡನೊಡನೆ ...{Loading}...

ಒದರಿ ಬಲನೊಡನೊಡನೆ ಹಳಚಿದೊ
ಡದಿರೆ ನೆಲನವ್ವಳಿಸಿ ದಿಕ್ಕರಿ
ಮದವಡಗಿದವು ಕುಣಿದು ಮೆಟ್ಟಿದರಹಿಪನೊಡಲೊಳಗೆ
ಹೊದರುದಲೆ ಹೊಕ್ಕಾಳೆ ಬೆರಳಿನ
ತುದಿಯ ತುಟಿಯಲಿ ಬೊಬ್ಬಿರಿದಡಿನ
ನದಿರೆ ದಳವುಳಿಸಿದುದು ಕೌರವಪಾಂಡವರ ಸೇನೆ ॥4॥

೦೦೫ ರಣದೊಳಾದುದು ಬೋನವಾರೋ ...{Loading}...

ರಣದೊಳಾದುದು ಬೋನವಾರೋ
ಗಣೆಗೆ ಬಿಜಯಂಗೈವುದನುಚರ
ಗಣಸಹಿತವೆಂದತಿಬಲರು ಕಾಲಂಗೆ ದೂತರನು
ಅಣಿಯೊಳಟ್ಟಿದರೆನಲು ಪಡೆಯುರ
ವಣೆಯ ಪದಹತಧೂಳಿ ಗಗನಾಂ
ಗಣಕೆ ಕವಿದುದು ಬಳಿಕಲಬುಜಭವಾಂಡಮಂಡಲವ ॥5॥

೦೦೬ ಚಲನದಿನ್ದುದಯಿಸಿದ ಶೂದ್ರತೆ ...{Loading}...

ಚಲನದಿಂದುದಯಿಸಿದ ಶೂದ್ರತೆ
ಗಲಸಿ ಸುರಗಂಗೆಯಲಿ ಮಿಂದು
ಚ್ಚಳಿಸಿ ರಜತಾದ್ರಿಯಲಿ ಶೂಲಿಯ ಪದಯುಗವ ಭಜಿಸಿ
ಬಳಿಕ ನಾಕವನೈದಿ ಸುಮನೋ
ಲಲನೆಯರ ಕುಂತಳಕೆ ಹಾಯ್ದುದು
ಬಲದ ಪದಹತಧೂಳಿ ಗೆಲಿದುದು ವಾಜಪೇಯಿಗಳ ॥6॥

೦೦೭ ಹರಿಗೆ ಕೆಮ್ಪಿನ ...{Loading}...

ಹರಿಗೆ ಕೆಂಪಿನ ಝಗೆ ಸುರಾಂಗನೆ
ಯರಿಗೆ ಸುಭಟವ್ರಜಕೆ ಕುಂಟಣಿ
ವರ ದಿಗಂಗನೆಯರಿಗೆ ಬೈತಲೆಗೆಸೆವ ಸಿಂಧೂರ
ಸುರಪನನಿಮಿಷತನಕೆ ರಿಪುವೆನ
ಲುರವಣಿಸಿ ಕೆಂದೂಳಿ ನಭಕು
ಪ್ಪರಿಸೆ ಹೊಯ್ದಾಡಿದರುಭಯ ಚತುರಂಗಬಲ ಹಳಚಿ ॥7॥

೦೦೮ ಝಡಿವ ಕೈದುಗಳುರಿಯ ...{Loading}...

ಝಡಿವ ಕೈದುಗಳುರಿಯ ಕೆಚ್ಚುವ
ನಡಸಿ ಕಾರಿದವಲಗು ಖಣಿಖಟೆ
ವಿಡುವ ದನಿ ಮಿಗೆ ತುಂಬಿತಂಬುಜಬಂಧುವಾಲಯವ
ಕಡುಗಿ ಹೊಯಿದಾಡಿದರು ಡಾವಣೆ
ವಿಡಿದು ಜೋಲುವ ಕರುಳ ಹಿಣಿಳೊಳು
ತೊಡಕಿ ತೋಟಿಯ ಭಟರು ತುಱುಬಿದರಂತಕನ ಪುರಿಗೆ ॥8॥

೦೦೯ ಬಿಡದೆ ಕಡಿದಾಡಿದರು ...{Loading}...

ಬಿಡದೆ ಕಡಿದಾಡಿದರು ಸೇನಾ
ಗಡಲು ರಕುತದ ಕಡಲನುಗುಳಿತು
ಬಿಡದೆ ಸುಂಟರುಗಾಳಿ ವಿಲಯದ ಮಳೆಯ ಪಡೆದಂತೆ
ಒಡೆದು ನಾನಾ ಥಟ್ಟುಗಳ ಮೈ
ವಿಡಿದು ವಾರಿಡುವರುಣಜಲದಲಿ
ಕಡಿಕುಗಳು ಬೆಂಡೇಳೆ ದಂತಿಗಳಟ್ಟೆ ಕೊಡೆನೆಗೆಯೆ ॥9॥

೦೧೦ ಲಗ್ಗೆ ಮಸಗಿತು ...{Loading}...

ಲಗ್ಗೆ ಮಸಗಿತು ಸೂಳುವೊಯಿಲಿನ
ಬೊಗ್ಗಿನಲಿ ಮುಂಕೊಂಡು ಮೋಹರ
ವೊಗ್ಗೊಡೆದು ಹೆಣಗಿದುದು ಕೇಶಾಕೇಶಿ ಯುದ್ಧದಲಿ
ಮೊಗ್ಗರವ ಕೆದರಿದರು ಹೊಯ್ದುರೆ
ಮಗ್ಗಿದರು ಕಡಲಿಡುವ ರಕುತದ
ಸುಗ್ಗಿ ಶಾಕಿನಿಯರಿಗೆ ಸೇರಿತು ಭೂಪ ಕೇಳ್ ಎಂದ ॥10॥

೦೧೧ ತೆಗೆದುದುಬ್ಬಿದ ಧೂಳಿ ...{Loading}...

ತೆಗೆದುದುಬ್ಬಿದ ಧೂಳಿ ಹೆಣಸಾ
ಲುಗಳು ಹರೆದವು ರಕುತದರೆವೊನ
ಲುಗಳು ಹರಿದವು ಹೊರೆದನಂತಕನುರುಪರಿಗ್ರಹವ
ಅಗಿದು ಮಗ್ಗಿತು ಚೂಣಿ ಬಲುಕಾ
ಳೆಗವನೊಯ್ಯಾರಿಸುತ ರಾಯರು
ತೆಗೆಸಿದರು ಸೇನೆಯನು ನೂಕಿದರಂದು ಬಿಲ್ಲವರ ॥11॥

೦೧೨ ಪುಲಿದೊಗಲ ಸೀಸಕದ ...{Loading}...

ಪುಲಿದೊಗಲ ಸೀಸಕದ ಕಿಗ್ಗ
ಟ್ಟೊಲೆವ ಸುರಗಿಯ ಕಾಂಚದೊಳರೆ
ಬಲಿದ ಬಿಲ್ಲಿಂ ಬಿಗಿದ ತಿರುವಿನ ಬೆರಳ ಕೋಲುಗಳ
ಬಲಿದ ಮುಂಗೈಹೊದೆಯ ಬಿರುದಿನೊ
ಳುಲಿವ ಘಂಟೆಯ ಬೆನ್ನಲೆವ ಬ
ತ್ತಳಿಕೆಗಳಲೈದಿತ್ತು ಬಿಲ್ಲಾಳುಭಯಸೇನೆಯಲಿ ॥12॥

೦೧೩ ಬೊಬ್ಬಿರಿದು ಮೊಳಕಾಲನೂರಿದ ...{Loading}...

ಬೊಬ್ಬಿರಿದು ಮೊಳಕಾಲನೂರಿದ
ರುಬ್ಬಟೆಯಲಿದಿರಾಂತು ಕಾಲನ
ಹೆಬ್ಬೆಳಸು ಹುಲಿಸಾಯ್ತು ಬರಹೇಳೆಂಬವೋಲೊದರಿ
ಹಬ್ಬುಗೆಯ ಜೇವೊಡೆಯ ಝಾಡಿಯ
ತೆಬ್ಬುಗಳ ತೆಗೆವೆರಳುಗೋಲಿನ
ಕೊಬ್ಬಿನಾಳೆಚ್ಚಾಡಿತಿಕ್ಕಿದ ಮಂಡಿ ಚಂಡಿಸದೆ ॥13॥

೦೧೪ ಬೆರಳ ಶರಸನ್ಧಾನ ...{Loading}...

ಬೆರಳ ಶರಸಂಧಾನ ದೃಷ್ಟಿಯ
ಮುರಿದ ಮುಷ್ಟಿಯ ಕುಂಡಲಿತ ಕಿವಿ
ವರೆಯ ತೆಗೆಹಿನ ತೋಳ ವೀರರು ತೂಳಿದರು ಕಣೆಯ
ಅರರೆ ಕವಿಕವಿದಂಬು ಕಡಿದವು
ಕೊರಳನುಗಿದವು ಜೋಡನೊಡಲೊಳು
ಹೊರಳಿದವು ಹೊಡೆಗೆಡಹಿದವು ಹೊಕ್ಕೆಸೆವ ಹೂಣಿಗರ ॥14॥

೦೧೫ ಕಣೆ ಕಣೆಯ ...{Loading}...

ಕಣೆ ಕಣೆಯ ಹಳಚಿದವು ಮಾರ್ಗಣೆ
ಕಣೆಯ ಕಡಿದವು ಕವಿವ ಕಣೆ ಕಿರು
ಗಣೆಯ ಮುಕ್ಕುಳಿಸಿದವು ಹೆಕ್ಕಳಿಸಿದವು ಹಂದೆಗರ
ಖಣಿಖಟಿಲು ನಿರಿನಿಳಿಲು ಘರಿಘರಿ
ಘಣಿಲು ದೊಪ್ಪನೆ ಕೊಯ್ವ ಸೀಳುವ
ಹೆಣಗೆಡಹುವಬ್ಬರಕೆ ಮಿಗಿಲೊದಗಿದರು ಬಿಲ್ಲವರು ॥15॥

೦೧೬ ಉರಗಬಲದುರವಣೆಯೊ ವಾರಿದ ...{Loading}...

ಉರಗಬಲದುರವಣೆಯೊ ವಾರಿದ
ತರುಗಳುಪಶಾಖೆಗಳೊ ಕಾಲನ
ಹರವರಿಯೊ ಹೆಬ್ಬೆಳೆಸ ಮುತ್ತುವ ವಿಹಗಸಂತತಿಯೊ
ತರಣಿ ತಲ್ಲಣಿಸಿದನು ಹೊಗರಲ
ಗುರವಣಿಸಿ ಹೊದರೆದ್ದು ಹಿಳುಕ
ಬ್ಬರಿಸಿ ಗಬ್ಬರಿಸಿದುವು ದಿಗುತಟವನು ಶರವ್ರಾತ ॥16॥

೦೧೭ ಹೆಣಗಿ ಹಿಣಿಲಿರಿದಭ್ರದಲಿ ...{Loading}...

ಹೆಣಗಿ ಹಿಣಿಲಿರಿದಭ್ರದಲಿ ಸಂ
ದಣಿಸಿ ಕಣೆ ಕೈಕೊಂಡವಂಬರ
ಮಣೆಗೆ ನಡೆದುದೊ ತಿಮಿರರಾಜನ ದಂಡು ಮಂಡಳಿಸಿ
ಮಣಿಮಕುಟದಿಳೆಗೊಯ್ಲ ನೆಲದಾ
ವಣಿಯೊ ಗಗನಾರ್ಣವದ ವಾಡಬ
ಗಣವೊ ಕೌತುಕವೆನಿಸಲೆಚ್ಚಾಡಿದರು ಬಿಲ್ಲವರು ॥17॥

೦೧೮ ರೇಣು ಹತ್ತಿದ ...{Loading}...

ರೇಣು ಹತ್ತಿದ ರವಿಯ ಮಸೆಯಲು
ಸಾಣೆಗಿಕ್ಕಿತೊ ಭಗಣರತ್ನವ
ನಾಣಿಗಳೆಯಲು ಕಮಲಭವ ಸೃಜಿಸಿದ ಸಲಾಕೆಗಳೊ
ಕಾಣೆನಭ್ರವನಮಮ ದಿಕ್ಕುಗ
ಳೇಣು ಮುರಿಯಲು ಹೊಕ್ಕೆಸುವ ಬಿಲು
ಜಾಣರುರವಣೆ ಲಜ್ಜಿಸಿತು ಲೋಕದ ಧನುರ್ಧರರ ॥18॥

೦೧೯ ವೀರ ಧಣುಧಣು ...{Loading}...

ವೀರ ಧಣುಧಣು ಪೂತುರೇ ಬಿಲು
ಗಾರ ಮಝರೇ ಚಾಪತಂತ್ರವಿ
ಶಾರದಾ ಎನುತೊಬ್ಬರೊಬ್ಬರ ಬಿರುದ ಮೂದಲಿಸಿ
ಓರಣದ ಕಣೆಗಳಲಿ ತಲೆಗಳ
ತೋರಣವ ಕಟ್ಟಿದರು ಸೇನಾ
ಮಾರಣಾಧ್ವರವೆಸೆದುದರುಣಜಲಾಜ್ಯಧಾರೆಯಲಿ ॥19॥

೦೨೦ ಪ್ರಳಯದಿವಸದ ಪಟುಪವನನೀ ...{Loading}...

ಪ್ರಳಯದಿವಸದ ಪಟುಪವನನೀ
ಹಿಳುಕುಗಾಳಿಯೊಳುದಿಸಿದುದೊ ಮಿಗೆ
ಮೊಳಗಿ ಮೋದುವ ಸಿಡಿಲ್ಗಳಂಬಿನ ಮೊನೆಯೊಳುದಿಸಿದುದೊ
ಜಲಧಿಯಲಿ ಜಂಗುಳಿಸಿ ಕುಧರಕೆ
ಕುಲಿಶಭೀತಿಯ ಬೀರಿ ಕಣೆ ಬಳಿ
ಸಲಿಸಿ ಹರಿದಾಡಿದವು ಸುಭಟರ ಗೋಣ ಗುರಿಮಾಡಿ ॥20॥

೦೨೧ ಕುಣಿದೆಸುವ ಕುಕಿಲಿರಿವ ...{Loading}...

ಕುಣಿದೆಸುವ ಕುಕಿಲಿರಿವ ಬಿರುದರ
ನಣಕಿಸುವ ಬಲುಬಿಲ್ಲನೊದರಿಸಿ
ಹಣುಗಿ ಕಣು ನಟ್ಟಾಲಿಗೊಳೆ ತಳಮಂಡಿ ಮರನಾಗೆ
ಹೊಣಕಿಗರು ರಣದವಕಿಗರು ಬಿರು
ಗಣೆ ಸವೆಯಲೆಚ್ಚಾಡಿದರು ಮಿಗೆ
ಮಣಿಯದದಟರು ಸುರಗಿಗಳನುಗಿದೊಡನೆ ಹಳಚಿದರು ॥21॥

೦೨೨ ಅಹಿಯ ನಾಲಗೆ ...{Loading}...

ಅಹಿಯ ನಾಲಗೆ ಮೃತ್ಯುವಿನ ಹಲು
ಗುಹೆಗಳನು ಕಳೆದಂತೆ ಸಿಡಿಲಿನ
ಬಹಳ ಧೃತಿಗೆಡೆದಂತೆ ಕುಲಿಶದ ತಿರುಳ ಮಸೆದಂತೆ
ಮಹಿಯದಿರಲಿದಿರಾಂತು ಸುರಗಿಯೊ
ಳಹಮಿನದಟರು ಬಿರುದುಗೆದರು
ತ್ತಹಿತರಿರಿದಾಡಿದರು ಪಡೆದರು ರೌದ್ರರಂಜನೆಯ ॥22॥

೦೨೩ ಮೀರಿ ತಳಸಞ್ಚದೊಳು ...{Loading}...

ಮೀರಿ ತಳಸಂಚದೊಳು ಮೊನೆಯನು
ತೋರಿ ತಿರುಪಿನೊಳಣೆದು ಕಳಚುವ
ರೇರುಗಾಣದೆ ಮಧ್ಯಸಂಚಕೆ ಸಿಲುಕಿ ಕೈಮಾಡಿ
ಜಾರಿ ಸುರಗಿಯೊಳಣೆವರಳುಕದೆ
ಮೀರಿದುಪ್ಪರಸಂಚದಲಿ ಕೈ
ದೋರಿ ದಂಡೆಯನೆತ್ತಿ ಕಾದಿತು ಸುರಗಿಯತಿಬಲರು ॥23॥

೦೨೪ ಅಣೆದರೌಕುವ ಸೋಙ್ಕಿ ...{Loading}...

ಅಣೆದರೌಕುವ ಸೋಂಕಿ ತಿವಿದರೆ
ಹೆಣನ ತೋರುವ ಹಜ್ಜೆದೆಗೆದರೆ
ಜುಣಗಲೀಯದೆ ಮೇಲೆ ಕವಿಸುವ ಮೀರಿ ಕೈಮಾಡಿ
ಕೆಣಕಿದರೆ ಝಂಕಿಸುವ ನಿಟ್ಟಿಸಿ
ಹಣುಗಿ ಮೊನೆಗೊಡೆ ದಂಡೆಯೊಳು ಖಣಿ
ಖಣಿಲು ರವವೆಸೆಯಲ್ಕೆ ಕಾದಿತು ಸುರಗಿಯತಿಬಲರು ॥24॥

೦೨೫ ಬೀಯವಾದರು ಬಿಲ್ಲವರು ...{Loading}...

ಬೀಯವಾದರು ಬಿಲ್ಲವರು ಖ
ಳ್ಗಾಯುಧರು ಕೈಕೊಳಲಿ ದಿವಿಜ
ಶ್ರೀಯು ತಪ್ಪದು ಸಮರಮುಖದಲಿ ಮಡಿದ ವೀರರಿಗೆ
ರಾಯ ಮೆಚ್ಚಲು ರಣದೊಳೊದಗುವ
ರಾಯತಿಕೆಯಂತೆನುತ ಸೇನಾ
ನಾಯಕರು ನೂಕಿದರು ಖಂಡೆಯಕಾರ ಮೋಹರವ ॥25॥

೦೨೬ ತಾಟಿಸಿದರೊಡನೊಡನೆ ಕುಲಗಿರಿ ...{Loading}...

ತಾಟಿಸಿದರೊಡನೊಡನೆ ಕುಲಗಿರಿ
ದೂಟಿ ಬಿದ್ದವು ಚಿತ್ರದಲಿ ನಡೆ
ಗೋಟೆಯೆನೆ ಮಂಡಳಿಸಿ ಬಲಿದರು ತೆಕ್ಕೆವರಿಗೆಗಳ
ನೋಟದಮರರ ನಯನಗಳಿಗ
ಲ್ಲಾಟವೆನೆ ಪಯಚಕ್ರಗತಿಗಳ
ತೋಟಿಕಾರರು ಹೊಕ್ಕು ತಾಗಿದರುಭಯ ಸೇನೆಯಲಿ ॥26॥

೦೨೭ ಬಲಸಮುದ್ರದ ಬುದ್ಬದಙ್ಗಳೊ ...{Loading}...

ಬಲಸಮುದ್ರದ ಬುದ್ಬದಂಗಳೊ
ತಿಳಿಯಲರಿದೆನೆ ಹರಿಗೆ ಮುಸುಕಿತು
ಬಿಳಿಯ ಚೌರಿಗಳುಲಿವ ಘಂಟೆಯ ಬಿರುದಿನುಬ್ಬಟೆಯ
ತಲಪಟದೊಳೌಕಿದರು ತೊಡೆಸಂ
ಕಲೆಯ ತೊಲಗದ ಕಂಭದಪ್ರತಿ
ಬಲರು ಹಾಣಾಹಾಣಿಯಲಿ ಹೊಯಿದಾಡಿದರು ಕಡುಗಿ ॥27॥

೦೨೮ ಸಿಡಿಲ ಹೆತ್ತುದೊ ...{Loading}...

ಸಿಡಿಲ ಹೆತ್ತುದೊ ಜಡಿವ ನಿಸ್ವನ
ಕಡುಹೊಗರು ಬೆಸಲಾಯ್ತೊ ನಭವನು
ಹೊಡೆಗೊಳಿಸಲುಚ್ಚಳಿಪ ಕಿಡಿ ವಡಬಂಗೆ ಪಿತನೆನಲು
ಕುಡಿಮೊನೆಯೊಳಹಿಪತಿಯ ನಾಲಗೆ
ಗಡಣವುದಿಸಿದವೆನೆ ಕೃಪಾಣದ
ಕಡುಹು ಕೌತುಕವಾಯ್ತು ಖಂಡೆಯಕಾರ ಮೋಹರದ ॥28॥

೦೨೯ ಕರೆಕರೆದು ಮೂದಲಿಸಿ ...{Loading}...

ಕರೆಕರೆದು ಮೂದಲಿಸಿ ಕಡುಹಿನ
ದುರುಳರುಬ್ಬಿನ ಮೇಲೆ ಹೊಕ್ಕ
ಬ್ಬರಿಸಿ ಹೊಯಿದರು ಕಾದಿ ಕೊಂಡರು ಕಾಲನರಮನೆಯ
ಕರುಳುಗಿಯೆ ತಲೆ ಸಿಡಿಯೆ ನಿಟ್ಟೆಲು
ಮುರಿಯೆ ಮೂಳೆಗಳುದಿರೆ ಶೋಣಿತ
ಸುರಿಯೆ ಕಾಳಿಜ ಕೆದರೆ ತುಂಡಿಸಿ ಖಂಡ ಬೆಂಡೇಳೆ ॥29॥

೦೩೦ ಅಡಸಿ ಕಿಡಿಗಳ ...{Loading}...

ಅಡಸಿ ಕಿಡಿಗಳ ಕಾರೆ ಲೋಹದ
ಕಡಿಕು ಸಿಡಿಲುಗ್ಗಡದಲಡ್ಡಣ
ವೊಡೆದು ಕೈಬಂದಿಗೆಯನೆತ್ತಿದಡಿಕ್ಕಲಿಸಿ ಬೀಳೆ
ಫಡ ಸುಖಾಯವ ಬಿಡದಿರಿಮ್ಮೊನೆ
ಗೊಡದಿರುಪ್ಪರದಲ್ಲಿ ಕೈಯನು
ಕೊಡದಿರಾ ಮಿಡುಕದಿರು ಮಂಡಿಯನೆನುತ ಹಳಚಿದರು ॥30॥

೦೩೧ ಕಾಲು ಖಣ್ಡಿಸಿ ...{Loading}...

ಕಾಲು ಖಂಡಿಸಿ ಬೀಳೆ ಕರುಳಿನ
ಮಾಲೆಯೊಳು ತೊಡಕಿದುವು ಹಣಿದದ
ಬಾಳೆಯಂದದೊಳುಡಿಯೆ ತೊಡೆ ನಡು ಮುರಿಯೆ ಕಟಿ ಕೆದರೆ
ತೋಳ ಕೊರೆದರು ನೆಲಕೆ ತಲೆಯನು
ಬೀಳಿಕಿದರೆರಡಾಗಿ ತನುವನು
ಸೀಳುಹೊಯಿದರು ಬೈದು ತಾಗಿತು ಹರಿಗೆಯತಿಬಲರು ॥31॥

೦೩೨ ನಿಲುಕಲಿಟ್ಟೆಡೆಯಾದ ಹೆಣನನು ...{Loading}...

ನಿಲುಕಲಿಟ್ಟೆಡೆಯಾದ ಹೆಣನನು
ತುಳಿದು ರಣದಲಿ ಕುಣಿವ ಮುಂಡವ
ನೆಳೆದು ರುಧಿರದೊಳೌಕಿ ಮೆಟ್ಟುವ ಮುಂದೆ ನಡೆನಡೆದು
ತಲೆಮಿದುಳ ಜೊಂಡಿನಲಿ ಜಾರುವ
ಕಲಹಕಾತರರಿಪುಭಟರನ
ಪ್ಪಳಿಸಿ ಘಾಯಂಬಡೆದು ಮಗ್ಗಿದರುಭಯಸೇನೆಯಲಿ ॥32॥

೦೩೩ ಉರುಳಿ ಬೀಳುವ ...{Loading}...

ಉರುಳಿ ಬೀಳುವ ತಮ್ಮ ತಲೆಗಳ
ತಿರುಹಿ ರಿಪುಗಳನಿಡುವ ಸಡಿಲಿದ
ಶಿರವನರಿಯದೆ ಮುಂಡದಿದಿರಲಿ ಬೀದಿವರಿವರಿವ
ಹರಿಗೆ ಹೊಳ್ಳಿಸೆ ಖಡುಗ ಖಂಡಿಸೆ
ಕೊರಳರಿಯೆ ದೆಸೆದೆಸೆಯ ಸೇನೆಯೊ
ಳುರವಣಿಸಿ ತಿವಿದರು ಕಬಂಧದೊಳತುಳಭುಜಬಲರು ॥33॥

೦೩೪ ನೆಲಕೆ ನಿಗುರುವ ...{Loading}...

ನೆಲಕೆ ನಿಗುರುವ ಗಂಗೆವಾಳದ
ಬಿಳಿಯ ಚೌರಿಗಳುಲಿವ ಗಂಟೆಯ
ತೊಳಪ ಬದ್ದುಗೆ ದಾರ ಕಾಂಚನಮಯದ ಗೊಂಡೆಯದ
ಉಲಿವ ಗೆಜ್ಜೆಯ ಚೆಲ್ಲಣದ ಹೊಂ
ಬಳಿದ ಹರಿಗೆಯ ಹೊಳೆವ ಕಡಿತಲೆ
ಗಳ ವಿಲಾಸದೊಳಂದು ಹೊಕ್ಕುದು ತುಳುವ ಪಡೆ ಕಡುಗಿ ॥34॥

೦೩೫ ಉರುಬಿದರೆ ವಡಬಾನಲನ ...{Loading}...

ಉರುಬಿದರೆ ವಡಬಾನಲನ ಮುಖ
ದಿರವು ಮೊನೆದೋರಿದರೆ ಭುಜಗನ
ಬಿರುಬು ಸಾಲಗೆ ಹಲಗೆಯಣೆದರೆ ಸಿಡಿಲ ಸಡಗರಣೆ
ಮೆರೆವ ಹಜ್ಜೆಯ ದಂಡೆವಲಗೆಯ
ಮರೆಯ ಕೈದಂಡೆಗಳ ಜುಣುಗಿಸಿ
ತರುಬಿ ನಿಂದರು ಸಂದ ಕಡಿತಲೆಗಾರರುಭಯದಲಿ ॥35॥

೦೩೬ ಹಳಚಿದರು ತಗರನ್ತೆ ...{Loading}...

ಹಳಚಿದರು ತಗರಂತೆ ಗಜದವೊ
ಲೊಲೆದು ನಿಂದರು ಹಾವಿನಂತಿರೆ
ನಿಲುಕಿದರು ಸೂಕರನವೊಲು ಕೋಡೆತ್ತಿ ಹಾಯ್ಕಿದರು
ಬಲಿದ ಚರಣಾಯುಧದವೊಲು ಪರ
ರಳವನೀಕ್ಷಿಸಿ ಕಪಿಯವೊಲು ಮೈ
ವಳಿಯ ಹತ್ತಿದರಂದು ಕಡಿತಲೆಗಾರರುಭಯದಲಿ ॥36॥

೦೩೭ ಕಡಿತಲೆಯ ಮಿಞ್ಚುಗಳ ...{Loading}...

ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ
ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ
ಬಿಡುಮಿದುಳ ಹೊರಳಿಗಳ ಹಂಸೆಯ
ನಡಹುಗಳ ನವಖಂಡದೊಳು ಹೆಣ
ನಡವಿ ತಳಿತಿರೆ ಮೆರೆದುದೈ ಸಂಗ್ರಾಮಕಾರ್ಗಾಲ ॥37॥

೦೩೮ ಪಡಿತಳವ ಬೀಸಿದರೆ ...{Loading}...

ಪಡಿತಳವ ಬೀಸಿದರೆ ಕಾಲಿ
ಕ್ಕಡಿ ನಡುವ ತಾಗಿದರೆ ಮಂಡಲ
ವುಡಿದು ಬಿದ್ದುದು ನಿಲುಕಿನುಪ್ಪರ ಶಿರವ ಮನ್ನಿಸದು
ಮಡವ ಮೀರುವ ಕಚ್ಚಿಮಂಡಿಯ
ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ ॥38॥

೦೩೯ ಖಡುಗ ತೋಮರ ...{Loading}...

ಖಡುಗ ತೋಮರ ಪರಶುಗಳ ಕ
ಕ್ಕಡೆಯ ಕುಂತದ ಪಿಂಡಿವಾಳದ
ಕಡುಗಲಿಗಳುರೆ ಮಗ್ಗಿದರು ತಗ್ಗಿದುದು ಯಮಲೋಕ
ಬಿಡದೆ ನಾಯಕವಾಡಿ ಚೂಣಿಯ
ಹಿಡಿದು ಕಾದಿತ್ತುಭಯರಾಯರು
ದಡಿಯಕೈಯವರಿಂದ ಕವಿಸಿದರಂದು ಸಬಳಿಗರ ॥39॥

೦೪೦ ಕುಣಿವ ತೊಡರಿನ ...{Loading}...

ಕುಣಿವ ತೊಡರಿನ ಪೆಂಡೆಯದ ಡೊಂ
ಕಣಿಯ ಬಿರುದರ ನೂಕುನೂಕೆನೆ
ಹಿಣಿಲ ಬಾವುಲಿಗಾರರಾವೆಡೆ ಭಾಷೆಯತಿಬಳರು
ಹೊಣಕೆಯಿದಲೇ ಹಿಂದ ಹಾರದಿ
ರಣಕಿಸುವ ಮಾತಿಲ್ಲ ದಿವಿಜರ
ಗಣಿಕೆಯರು ಬಯಸುವರು ನೂಕುವದೆಂದು ಸಾರಿದರು ॥40॥

೦೪೧ ತಲೆಯ ಖಡ್ಡಣಿಗೆಯ ...{Loading}...

ತಲೆಯ ಖಡ್ಡಣಿಗೆಯ ಸುರಂಗದ
ಪಳಿಯ ಸೀರೆಯ ಭಾಳಭೂತಿಯ
ಬಿಳಿಯ ಚೌರಿಯ ಝಗೆಯ ಸಬಳದ ಕಾಲ ತೊಡರುಗಳ
ಉಲಿವ ಬಿರುದಿನ ಕಹಳೆಗಳ ಕಳ
ಕಳಿಕೆ ಮಿಗೆ ನಿಶ್ಶಂಕಮಲ್ಲರು
ಕಳನೊಳಗೆ ತಲೆದೋರಿದರು ಡೊಂಕಣಿಯ ಪಟುಭಟರು ॥41॥

೦೪೨ ನಡೆವಡವಿಯೋ ಬಲುಭುಜರ ...{Loading}...

ನಡೆವಡವಿಯೋ ಬಲುಭುಜರ ಪಂ
ಗಡವೊ ಸಬಳವೊ ನಭದ ಕಾಲ್ಗಳೊ
ಬಡಬವಹ್ನಿ ಜ್ಜಾಲೆಯೋ ಸೇನಾಮಹಾಂಬುಧಿಯೊ
ಪಡೆಯ ಪದಹತಧೂಳಿ ಸವೆಯಲು
ಪೊಡವಿಪಾತಾಳದ ಫಣಿವ್ರಜ
ವಡರಿದವೊ ರವಿಬಿಂಬಕೆನಲಾದುದು ಕುತೂಹಲಿಕೆ ॥42॥

೦೪೩ ಮಿಕ್ಕು ಚೂರಿಸಲಹಿಯ ...{Loading}...

ಮಿಕ್ಕು ಚೂರಿಸಲಹಿಯ ನಾಲಗೆ
ಜಕ್ಕುಲಿಸಿದಂತಾಯ್ತು ಮೊನೆಗಳ
ತೆಕ್ಕೆಯಲಿ ಕುದಿಗೊಂಡು ಸುರಿದವು ರಕ್ತಧಾರೆಗಳು
ಹೊಕ್ಕವರು ಹೆಣಗಿದರೆ ನಿರಿಗರು
ಳೊಕ್ಕವಡಗುದಿರಿದವು ಮೋಹರ
ಹಕ್ಕಲಾಗಲು ಹರಿದು ಸಬಳಿಗರಿರಿದು ತೋರಿದರು ॥43॥

೦೪೪ ನೆಲನ ಗೆಲಿದಬ್ಬರಿಸಿ ...{Loading}...

ನೆಲನ ಗೆಲಿದಬ್ಬರಿಸಿ ಚಾಚಿದ
ತಲೆವರಿಗೆ ತೆರಳದೆ ಸುಘಾಯದ
ಬಲದ ಬೆಳೆಸಿರಿವಂತರನು ಕರೆಕರೆದು ಮೂದಲಿಸಿ
ಥಳಿಥಳಿಲು ಛಟಛಟಿಲು ಖಣಿಕಟಿ
ಲುಲುಹು ಮಿಗೆ ದನಿ ಮೆರೆಯೆ ರಿಪುಗಳ
ಗೆಲುವೆವೆಂದುರವಣಿಸಿ ಹೊಯ್ದಾಡಿದರು ರಣದೊಳಗೆ ॥44॥

೦೪೫ ಹಲಗೆ ಸೀಸಕ ...{Loading}...

ಹಲಗೆ ಸೀಸಕ ಸಹಿತಲಿಖ್ಖಡಿ
ಗಳೆದರೊಡಲುಪ್ಪರದ ಘಾಯವ
ಕಳಚಿ ಕೈಮಾಡಿದರು ಕೊಂದು ಮುಂದುವರಿವರಿದು
ಹೊಳೆದು ಹೊಯ್ದರು ಮಿಂಚಿನಂತಿರೆ
ಬಲುಹು ಮಿಗೆ ಜವನಂತೆ ಬವರಿಯ
ಲುಳಿಯ ಚೌಪಟ ಮಲ್ಲರೊದಗಿದರುಭಯಸೇನೆಯಲಿ ॥45॥

೦೪೬ ಬವರಿಯಲಿ ಪೈಸರಿಸಿ ...{Loading}...

ಬವರಿಯಲಿ ಪೈಸರಿಸಿ ಪರಘಾ
ಯವನು ವಂಚಿಸಿ ಭಟರ ಕೊರೆದೆ
ತ್ತುವರು ಕೈಮಾಡಿದರೆ ತಿವಿವರು ಕೋಡಕೈಯವರ
ಕವಿಯಲೌಕುವರೌಕಿದರೆ ತ
ಗ್ಗುವರು ತಗ್ಗಿದರೊಡನೊಡನೆ ಜಾ
ರುವರು ಜುಣುಗುವರೈದೆ ತಿವಿದಾಡಿದರು ಸಬಳಿಗರು ॥46॥

೦೪೭ ಹೆಣನ ಹೋಳಿನ ...{Loading}...

ಹೆಣನ ಹೋಳಿನ ಸಿಡಿದಡಗು ಡೊಂ
ಕಣಿಯೊಳೆಸೆದುವು ಕಾಲನಾರೋ
ಗಣೆಗೆ ಮಿಗೆ ಪಡಿಸಣವ ನೋಡದೆ ಮಾಣವೆಂಬಂತೆ
ಕುಣಿವ ಕುಂತಾಗ್ರದಲಿ ಜೋಲುವ
ಹಿಣಿಲುಗರುಳೊಪ್ಪಿದವು ಜವನೀ
ರಣಕೆ ಬರೆ ಕಟ್ಟಿದವು ಗುಡಿ ತೋರಣವನೆಂಬಂತೆ ॥47॥

೦೪೮ ದೆಸೆದೆಸೆಗೆ ಹರಿಹರಿದು ...{Loading}...

ದೆಸೆದೆಸೆಗೆ ಹರಿಹರಿದು ಮಾಮಸ
ಮಸಗಿ ಬಾದಣಗೊರೆದು ಕೆಡಹುವ
ವಿಷಮವೀರರು ಘಾಡಿಸಿತು ಡೊಂಕಣಿಯ ತುದಿಗಳಲಿ
ಬಸಿವ ಹೊಸ ರುಧಿರಕ್ಕೆ ಜೋಲುವ
ಕುಸುರಿಗರುಳಿಂದುದಿರುವಡಗಿನ
ಬಸೆಗೆ ಬಂದೆರಗಿದವುಲೂಕಧ್ವಾಂಕ್ಷ ಸಂದೋಹ ॥48॥

೦೪೯ ಧುರದೊಳಗೆ ಬಿಲುಗಾರರೊಗ್ಗಿನ ...{Loading}...

ಧುರದೊಳಗೆ ಬಿಲುಗಾರರೊಗ್ಗಿನ
ಹರಿಗೆಕಾರರು ಹಲಗೆಯವರು
ಬ್ಬರದ ಡೊಂಕಣಿಕಾರರಾಂತು ಕೃತಾಂತನಾಲಯವ
ಥರಥರದಿ ತೀವಿದರು ರುಧಿರದ
ಹರಹು ಹೇರಾಳಿಸಿತು ಚೂಣಿಯೊ
ಳೆರಡು ಬಲದ ಪದಾತಿ ಸವೆದುದು ಕೇಳು ಧೃತರಾಷ್ಪ್ರ ॥49॥

೦೫೦ ಧುರವನವ ಸಾಗಿಸದಿರೇರಲಿ ...{Loading}...

ಧುರವನವ ಸಾಗಿಸದಿರೇರಲಿ
ತುರಗವಾವೆಡೆ ಪಟ್ಟಸಹಣದ
ಹಿರಿಯ ಸಹಣದ ವಿಮಲಸಹಣಿಗಳವರ ಕರೆಯೆನುತ
ಧುರಧುರಂಧರರೊರಲಿದರು ಮೋ
ಹರಮಹಾಂಭೋನಿಧಿಯ ತೆರೆಯವೊ
ಲುರವಣಿಸಿದವು ಕುದುರೆ ತಾರೆಗಳುದಿರೆ ನೆಲನದಿರೆ ॥50॥

೦೫೧ ಬರಿಗಡಗ ಕೀಳ್ಕಮ್ಬಿ ...{Loading}...

ಬರಿಗಡಗ ಕೀಳ್ಕಂಬಿ ದುಕ್ಕುಡಿ
ಯುರುಗುಗಡಿಯಣ ಮೊಗವಡಂಗಳು
ತುರಗವದನದಲೊಪ್ಪಿರಲು ತಾ ಪಣೆಯನಳವಡಿಸಿ
ಕೊರಳ ಕೊಡಕೆಯ ಪಾಶ್ರ್ವಪೇಚಕ
ದೆರಡು ಕಡೆಯಲಿ ಸುತ್ತು ಝಲ್ಲಿಯ
ಪರಿಪರಿಯ ಹಕ್ಕರಿಕೆಯಲಿ ಬೀಸಿದರು ಚೌರಿಗಳ ॥51॥

೦೫೨ ಹಳದಿ ಪಾರಿಯ ...{Loading}...

ಹಳದಿ ಪಾರಿಯ ಪಚ್ಚೆ ಜೋನೆಗ
ಪಳಿ ಸುವರ್ಣಾವಳಿಯ ಸಂಧ್ಯಾ
ವಳಿಯುದಯರಾಗದಲಿ ರಚಿಸಿದ ಹಕ್ಕರಿಕ್ಕೆಗಳ
ಕೆಲಬಲದ ಕುಣಿಕೆಗಳ ರಚಿಸಿದ
ರುಲಿವ ಘಂಟೆಯ ಮೊಗದ ಕನ್ನಡಿ
ಗಳ ವಿಲಾಸದಲಂದಲಂಕರಿಸಿದರು ತೇಜಿಗಳ ॥52॥

೦೫೩ ಸವಗ ಮೊಚ್ಚೆಯ ...{Loading}...

ಸವಗ ಮೊಚ್ಚೆಯ ಬಾಹುರಕ್ಕೆಯ
ವಿವಿಧವಜ್ರಾಂಗಿಗಳ ಸೀಸಕ
ಕವಚಗಳ ತೊಟ್ಟತುಳಬಲರೇರಿದರು ತೇಜಿಗಳ
ಹವಣಿಸಿದ ವಾಘೆಗಳ ರಾಘೆಯ
ಸವಸರಿಯ ಭಾರಾಂಕಲವುಡಿಯ
ಗವಿಯ ಗರುವರು ನೂಕಿದರು ತೇಜಿಗಳನೋಜೆಯಲಿ ॥53॥

೦೫೪ ತರುಣಿಯರ ನೊಸಲನ್ತೆ ...{Loading}...

ತರುಣಿಯರ ನೊಸಲಂತೆ ತಿಲಕದ
ಸರಿಸವದು ವೈವಾಹಗೇಹದ
ಸಿರಿಯವೊಲು ಮಂಗಳಮಯವು ಮಲೆಯಾಳ ಜನಪದದ
ಅರಸಿನಂತಿರೆ ಚೇರಮಯವೆನ
ಲುರವಣಿಸಿ ನೂಕಿದರು ನಿಡುವ
ಕ್ಕರಿಕೆಗಳ ಗರುವಾಯಿಗಳ ಘನಮದದ ತೇಜಿಗಳ ॥54॥

೦೫೫ ನಿಲುಕಿ ಹೊಳೆದವು ...{Loading}...

ನಿಲುಕಿ ಹೊಳೆದವು ನೇಣ ಸಡಿಲಿಸೆ
ಕುಲಗಿರಿಯ ಹೆಡತಲೆಯನಡರಿದ
ವಳುಕಿ ಪಯಸನ್ನೆಗಳೊಳಭ್ರದ ಕುಡಿಯನಡರಿಸುತ
ದಳವುಳಿಸಿದವು ತಾಟಿಸಿದರೊಡೆ
ದುಳಿದವಖಿಳಾವನಿಯನೆನೆ ಮೈ
ಲುಳಿಯ ಮನವೇಗಾಯ್ಲ ವಾಜಿಯ ಥಟ್ಟ ನೂಕಿದರು ॥55॥

೦೫೬ ಖುರಪುಟದ ಕೆನ್ಧೂಳಿ ...{Loading}...

ಖುರಪುಟದ ಕೆಂಧೂಳಿ ಬಂಧಿಸೆ
ತರಣಿಯನು ಪವಮಾನಮಾರ್ಗವ
ನರರೆ ಕಟ್ಟಿತು ತುಳಿದುದಿಂದ್ರನ ಸಾವಿರಾಲಿಗಳ
ಹರಿಸಬುದ ತನ್ನಗಿಲ್ಲದಿನ್ನೀ
ತರಣಿವಾಯುಸುರೇಂದ್ರರಿಗೆ ಸಂ
ಚರಿಸಲೇಕೆಂಬಂತೆ ನಡೆದವು ಘೋಟಕವ್ರಾತ ॥56॥

೦೫೭ ಖುರದ ಹೊಯಿಲಲಿ ...{Loading}...

ಖುರದ ಹೊಯಿಲಲಿ ನಡುಗಿತಿಳೆ ಫಣಿ
ವರನ ಹೆಡೆಗಳು ನೊಂದವಂಬುಧಿ
ಹೊರಳಿದವು ಹೋಗಾಡಿದವು ಕುಲಗಿರಿಗಳಚಲತೆಯ
ಅರರೆ ಸೂಟಿಯೊಳಟ್ಟಿದರೆ ದಿ
ಕ್ಕರಿಯ ಸೊಕ್ಕಡಗಿದವು ನಿಗುರುವ
ತುರಗದಳವೊಡವೆರಸಿದವು ಕುರುಪಾಂಡುಸೈನ್ಯದಲಿ ॥57॥

೦೫೮ ಹಿಡಿಯೆ ಜವನಿಕೆ ...{Loading}...

ಹಿಡಿಯೆ ಜವನಿಕೆ ಸಮರ ಮೋನದ
ಬಿಡುದಲೆಯ ಬಿರುದಾವಳಿಯಲು
ಗ್ಗಡಣೆಗಳ ಸೋಲಿಸುತ ತಮ್ಮನ್ವಯವ ಪಾಲಿಸುತ
ಝಡಿವ ದೂಹತ್ತಿಗಳ ಹಾಯಿಕಿ
ಹಿಡಿದ ಲೌಡಿಯ ಹತ್ತಳದ ತನಿ
ಗಡಣಿಗರು ಮೂದಲಿಸಿ ಕವಿದುದು ರಾಯರಾವುತರು ॥58॥

೦೫೯ ನೂಲ ಹರಿಗೆಯ ...{Loading}...

ನೂಲ ಹರಿಗೆಯ ಹೆಗಲ ಬಾರಿಯ
ತೋಳ ತೋರಿಯ ಲೌಡಿಗಳ ಕರ
ವಾಳತಳಪದ ಮಿಂಚುಗಳ ತನುಮನದ ಕೆಚ್ಚುಗಳ
ಸಾಲದಾವಣಿದಲೆಯ ಗಂಟಲ
ಗಾಳಗತ್ತರಿಗರಗಸದ ಬಿರು
ದಾಳಿಗಳ ಛಲದಂಕರಾವುತರೊತ್ತಿ ನೂಕಿದರು ॥59॥

೦೬೦ ಹೊಡೆದು ಚಮ್ಮಟಿಗೆಯೊಳು ...{Loading}...

ಹೊಡೆದು ಚಮ್ಮಟಿಗೆಯೊಳು ದೊರೆಗಳ
ಹಿಡಿವ ಸಮ್ಮುಖದಲಿ ಕಠಾರಿಯ
ನಡಸಿ ತಿವಿವ ಕೃಪಾಣದಲಿ ಕಡಿನಾಲ್ಕ ತೋರಿಸುವ
ಅಡತರದಲವನಿಪರ ಹಯಮುಂ
ಗುಡಿಯ ಮುರಿದು ವಿಘಾತಿಯಲಿ ಥ
ಟ್ಟೊಡೆದು ಹಾಯ್ವತಿಭಾಷೆಗಳ ಬಿರುದಂಕರೇರಿದರು ॥60॥

೦೬೧ ಉಲಿವ ಕೈವಾರಿಗಳ ...{Loading}...

ಉಲಿವ ಕೈವಾರಿಗಳ ಲಗ್ಗೆಯ
ಬಲಿವ ತಂಬಟ ಕೋಟಿಗಳ ಭುಜ
ಬಲದ ಬಿರುದರ ಹೊಯ್ಲುಗಳ ನಿಸ್ಸಾಳ ನಿಸ್ವನದ
ಘುಳುಘುಳಿಪ ಬೊಗ್ಗುಗಳ ರಿಪುಗಳ
ಮುಳಿಯಿಸುವ ಕಹಳೆಗಳ ತುರಗಾ
ವಳಿಯ ಗಜರಬ್ಬರಣೆ ಮಿಗೆ ಕೈಕೊಂಡರತಿಬಳರು ॥61॥

೦೬೨ ಹೊಡೆವ ದೂಹತ್ತಿಗಳ ...{Loading}...

ಹೊಡೆವ ದೂಹತ್ತಿಗಳ ಘಾಯದ
ಲೊಡೆದು ಸಿಡಿದುವು ಲೋಹ ಸೀಸಕ
ವಡಸಿ ಬಲ್ಲೆಹ ಬಗಿದು ನಟ್ಟುದು ಸರಪಣಿಯ ಝಗೆಯ
ಹೊಡೆವ ಲೌಡಿಗಳೊತ್ತಿ ನೆತ್ತಿಯ
ಬಿಡುಮಿದುಳ ಕೆದರಿದವು ರಕುತದ
ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು ॥62॥

೦೬೩ ಜರೆದು ಸರಿಸದಲೇರಿದರೆ ...{Loading}...

ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದರು ತಳಕಮಠನೆನೆ ತ
ತ್ತರದರಿದು ಹೊಯ್ದಾಡಿದರು ಗುಜ್ಜರದ ರಾವುತರು ॥63॥

೦೬೪ ಎಡನ ಹೊಯಿದರು ...{Loading}...

ಎಡನ ಹೊಯಿದರು ಬಲದವರನಡ
ಗೆಡಹಿದರು ಸಮ್ಮುಖದ ನೃಪರನು
ಸಿಡಿಲ ಹರೆಯವೊಲೆರಗಿದರು ಸೂಟಿಯಲಿ ಸೈವರಿದು
ಅಡುಗುದುಳಿದರು ಮೋಹರವನೊ
ಗ್ಗೊಡೆದು ಚೂಣಿಯ ಗೋಣ ಬನದಲಿ
ಖಡುಗ ನರ್ತಿಸಲೊದಗಿದರು ಮಾಳವದ ರಾವುತರು ॥64॥

೦೬೫ ಬೀಸುನೇಣಿನ ಸೆಳೆವ ...{Loading}...

ಬೀಸುನೇಣಿನ ಸೆಳೆವ ನೇಗಿಲ
ಸೂಸುಗಣೆಗಳ ಕಡಿವ ಕೊಡಲಿಯ
ಕೈಸುರಗಿ ಸೂನಗೆಯ ನಾನಾಯುಧದ ಗಡಣೆಗಳ
ಓಸರಣೆಗೊಡದತಿಬಳರು ದಿವ
ದಾಸೆಗಾರರು ವೈರಿಬಲವನು
ಘಾಸಿಮಾಡಿದರೊಗ್ಗಿನಲಿ ಹಮ್ಮೀರರಾವುತರು ॥65॥

೦೬೬ ಅರರೆ ಕವಿದರು ...{Loading}...

ಅರರೆ ಕವಿದರು ಕದಳಿಯನು ಮದ
ಕರಿಯ ತೊತ್ತಳದುಳಿದವೊಲು ದಿಂ
ಡುರುಳಿಚಿದರಗಕೋಟಿಯನು ಶತಮನ್ಯುವಂದದಲಿ
ಶಿರವೊಡೆಯೆ ತೊಡೆಯುಡಿಯೆ ಕೈ ಕ
ತ್ತರಿಸೆ ಕೋಳಾಹಳ ಮಹಾಸಂ
ಗರದೊಳಗೆ ಹೊಯ್ದಾಡಿದರು ಕಾಶ್ಮೀರರಾವುತರು ॥66॥

೦೬೭ ಕವಿದು ಮುನ್ದಲೆವಿಡಿದು ...{Loading}...

ಕವಿದು ಮುಂದಲೆವಿಡಿದು ರಾವ್ತರ
ತಿವಿದು ಜೀವವ ಕಳಚಿ ಕೆಲಬಲ
ದವರ ಕೆಡೆಹೊಯ್ದಹಿತಘಾಯವ ನೋಟದೊಡೆಹೊಯ್ದು
ಸವಗ ತುಂಡಿಸೆ ಜೋಡು ಖಂಡಿಸೆ
ನವರುಧಿರದೊರೆವೇಳೆ ಮಹದಾ
ಹವದೊಳೋರಂತೊದಗಿದರು ಗೌಳವದ ರಾವುತರು ॥67॥

೦೬೮ ಅಳವನರಿಯದೆ ಕೆಣಕಿತಹ ...{Loading}...

ಅಳವನರಿಯದೆ ಕೆಣಕಿತಹ ಮುಂ
ಕೊಳಿಸಿ ಕದನವ ಕೋಡ ಕೈಯವ
ರಳವಿಗೊಟ್ಟರೆ ನೋಡಿ ಸಿಡಿಮಿಡಿಗೊಂಡು ಕೆಲಸಿಡಿವ
ಗೆಲಿದರುತ್ಸಾಹಿಸುವ ಸಿಲುಕಿದ
ರಳುವ ಕೆಟ್ಟೋಡಿದರೆ ಪುರದಲಿ
ನಿಲುವ ನಿರುಪಮವೀರರೊದಗಿತು ತಿಗುಳರಾವುತರು ॥68॥

೦೬೯ ಬವರ ಸವೆಯದೆ ...{Loading}...

ಬವರ ಸವೆಯದೆ ತೇಜಿಗಳ ಬಲು
ಜವವು ಜಾರದೆ ಬಿಡುವ ತಿವಿದರೆ
ಸವಗವುಚ್ಚಳಿಸುವವು ಕವಿದರೆ ಕಾಲಯಮನಂತೆ
ಕವಿವರವಗಡಿಸಿದರೆ ಹಿಮ್ಮೆ
ಟ್ಟುವರು ಭೂಮಾನದೊಳುಪಾಯದ
ಬವರದೋಜೆಯಲೊದಗಿದರು ಕರ್ಣಾಟರಾವುತರು ॥69॥

೦೭೦ ಉರುಬಿ ಹೊಯಿದರು ...{Loading}...

ಉರುಬಿ ಹೊಯಿದರು ಕೈದಣಿಯೆ ಹೊ
ಕ್ಕೆರಗಿದರು ನಿಪ್ಪಸರದಲಿ ಮು
ಕ್ಕುರಿಕಿದರು ತಲೆಮಿದುಳ ಜೊಂಡಿನ ಜುರಿತ ಜೋಡುಗಳ
ತರಿದು ಬಿಸುಟರು ಖಗನಿಕರಕಾ
ರ್ದಿರಿದು ಕಾಲನ ಬನಕೆ ರಕುತದ
ಕೆರೆಯ ತೂಬೆತ್ತಿದರು ಸೇವಣ ರಾಯ ರಾವುತರು ॥70॥

೦೭೧ ರಾವುತೋ ಮಝ ...{Loading}...

ರಾವುತೋ ಮಝ ಭಾಪು ರಾವುತು
ದೇವು ರಾವುತು ಭಲರೆ ರಾವುತು
ರಾವುತೋ ನಿಶ್ಶಂಕರಾವುತು ರಾವುತೆಂದೆನುತ
ರಾವು ರಾವುತು ಪೂತುರಾವುತು
ಭಾಪು ರಾವುತು ರಾವುತೋ ಎಂ
ದೋವಿ ಹೊಯಿದಾಡಿದರು ರಣದಲಿ ಲಾಳ ರಾವುತರು ॥71॥

೦೭೨ ಗೌಳ ಕೊಙ್ಕ ...{Loading}...

ಗೌಳ ಕೊಂಕ ಕಳಿಂಗ ವರ ನೇ
ಪಾಳಕದ ರಾವುತರು ರಣಭೇ
ತಾಳರಣಲೊಳಗಡಗಿದರು ಕುರುಪಾಂಡು ಸೈನ್ಯದೊಳು
ಹೇಳಲಳವಲ್ಲುಭಯದಲಿ ಹೇ
ರಾಳ ಕಾಳೆಗ ಹಿರಿದು ಕಿರಿದೆನೆ
ಹೇಳುವೆನು ಬವರಕ್ಕೆ ಬಂದುದು ಮತ್ತಗಜಸೇನೆ ॥72॥

೦೭೩ ಕನಕಗಿರಿಯಲಿ ವಿನ್ಧ್ಯಗಿರಿಯಂ ...{Loading}...

ಕನಕಗಿರಿಯಲಿ ವಿಂಧ್ಯಗಿರಿಯಂ
ಜನಗಿರಿಯ ಮಲಯಾದ್ರಿಯಲಿ ಸಂ
ಜನಿಸಿದಾನೆಯ ಸೇನೆಯಲಿ ಬೀಸಿದರು ಚೌರಿಗಳ
ಕನಕಘಂಟೆಗಳುಲಿಯೆ ಹೊರಜೆಯ
ತನತನಗೆ ಹಿಡಿದಡರಿ ಪೂರ್ವಾ
ಸನವ ವೆಂಠಣಿಸಿದರು ರಾಜಾರೋಹಕವ್ರಾತ ॥73॥

೦೭೪ ಬಾರ ಸಙ್ಕಲೆ ...{Loading}...

ಬಾರ ಸಂಕಲೆ ಪಕ್ಕ ಘಂಟೆಯ
ಚಾರು ಚಮರದ ಕೊಡತಿಗಳ ಕೈ
ಹಾರೆ ಕೂರಂಕುಶದ ಬಿರುದರು ಹೊದ್ದಿದರು ಗಜವ
ಬಾರ ದೂಹತ್ತಿಗಳ ಗುಂಡನು
ತೋರ ಲೌಡಿಯ ತೊಟ್ಟು ಕೈಯಲಿ
ವಾರಣದ ದೋಹರವ ನೂಕಿದರುಭಯಸೇನೆಯಲಿ ॥74॥

೦೭೫ ಕಾಲನುಬ್ಬೆಗೆ ಶೀತಳಙ್ಗೊಡು ...{Loading}...

ಕಾಲನುಬ್ಬೆಗೆ ಶೀತಳಂಗೊಡು
ವಾಲವಟ್ಟವೊ ವಿಲಯಕಾಲದ
ಗಾಳಿಯೋ ಮೇಣ್ ಕರ್ಣತಾಳವೊ ಕಿವಿಗೆ ಕೌತುಕವೊ
ಕಾಲುವೆರಸಿದ ನೀಲಗಿರಿಗಳ
ಧಾಳಿಯೋ ಮೇಣಂಜನಾದ್ರಿಯ
ಬೀಳಲೋ ಬರಿಕೈಗಳೋ ನಾವರಿಯೆವಿದನೆಂದ ॥75॥

೦೭೬ ಪಡೆಯೊ ಹೀನೇನ್ದುವಿನಿರುಳ ...{Loading}...

ಪಡೆಯೊ ಹೀನೇಂದುವಿನಿರುಳ ಮುಂ
ಗುಡಿಯೊ ಮುಗಿಲೋ ಮದದ ತುಂಬಿಯೊ
ಬಿಡುಮದದ ವಾರಿಗಳೊ ಹೊಸ ವಾರಾಶಿಯೋ ಮೇಣು
ಅಡಸಿ ಪದಹತಧೂಳಿ ಮದವನು
ಕುಡಿದುದಾ ಮದಧಾರೆ ರೇಣುವ
ನಡಗಿಸಲು ಮದಧೂಳಿಗಳು ಹೆಣಗಿದುವು ತಮ್ಮೊಳಗೆ ॥76॥

೦೭೭ ಕುಲಗಿರಿಗಳಗ್ರದೊಳು ಕೈಗಳ ...{Loading}...

ಕುಲಗಿರಿಗಳಗ್ರದೊಳು ಕೈಗಳ
ನಿಳುಹಿದನೊ ರವಿಯೆನಲು ಮಿಗೆ ಹೊಳೆ
ಹೊಳೆವ ಕೂರಂಕುಶವನಿಕ್ಕಿದರಿಭದ ಮಸ್ತಕಕೆ
ಉಲಿದವಿದಿರೊಳು ಡೌಡೆ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರಲೊದರಿದವು ನಿಸ್ಸಾಳಕೋಟಿಗಳು ॥77॥

೦೭೮ ಹೊಕ್ಕವಾನೆಗಳೆರಡು ಸೇನೆಯೊ ...{Loading}...

ಹೊಕ್ಕವಾನೆಗಳೆರಡು ಸೇನೆಯೊ
ಳೊಕ್ಕಲಿಕ್ಕಿದವೆಸುವ ಜೋದರ
ತೆಕ್ಕೆಗೋಲಿನ ಮಾಲೆ ಮುಕ್ಕುಳಿಸಿದವು ದಿಗುತಟವ
ಉಕ್ಕಿನುರುಳಿಯೊಳಿಡುವ ಖಂಡೆಯ
ದಿಕ್ಕಡಿಯ ಘಾಯಗಳ ಪಟ್ಟೆಯ
ದಕ್ಕಜದ ಹೊಯಿಲೆಸೆಯೆ ಕಾದಿದವಾನೆಯಾನೆಯೊಳು ॥78॥

೦೭೯ ತಿವಿಯೆ ಕಳಚುವ ...{Loading}...

ತಿವಿಯೆ ಕಳಚುವ ಕಳಚಲೊತ್ತುವ
ಕವಿದಡಾನುವ ನಿಂದಡೆತ್ತುವ
ಸವೆಯೆ ತುಡುಕುವ ತುಡುಕಿ ಮಿಗೆ ಕೈಕೈಯ ಜೋಡಿಸುವ
ಭುವನ ಭಯಗೊಳಲೊದರುತುರವಣಿ
ಸುವ ವಿಘಾತಿಸಿ ತುಳಿವ ಸೀಳುವ
ನವಮದೇಭದ ಸಮರ ಸೋಲಿಸಿತಮರರಾಲಿಗಳ ॥79॥

೦೮೦ ತಿರುಹಿ ಬಿಸುಟುವು ...{Loading}...

ತಿರುಹಿ ಬಿಸುಟುವು ಕಾಲುಗಾಹಿನ
ತುರಗವನು ಮುಂಬಾರೆಕಾರರ
ಶಿರವನೈದಾರೇಳನಡಸಿದವಣಲ ಹೊಳಲಿನೊಳು
ಅರರೆ ಪಟ್ಟೆಯ ಲೌಡಿ ಖಂಡೆಯ
ದುರವಣೆಯ ಹೊಯಿಲಿನೊಳು ರಿಪುಗಜ
ವುರುಳಿದವು ತೆರಳಿದವು ಜೋದರ ಜೀವವಂಬರಕೆ ॥80॥

೦೮೧ ಮೆಟ್ಟಿ ಸೀಳಿದುಹಾಯ್ಕಿ ...{Loading}...

ಮೆಟ್ಟಿ ಸೀಳಿದುಹಾಯ್ಕಿ ದಾಡೆಯ
ಕೊಟ್ಟು ಮೋರೆಯನೊಲೆದು ಹರಿದರೆ
ಯಟ್ಟಿ ಹಿಡಿದಪ್ಪಳಿಸಿ ಜೋದರನಂಘ್ರಿಯಿಂದರೆದು
ಇಟ್ಟು ಕೆಡಹಲು ಹೆಣನ ಲೊಟ್ಟಾ
ಲೊಟ್ಟಿ ಮಸಗಿತು ತುರಗ ನರ ರಥ
ವಿಟ್ಟಣಿಸೆ ಸವರಿದವು ದಂತಿವ್ರಾತವುಭಯದೊಳು ॥81॥

೦೮೨ ಕುತ್ತಿ ಹಿಙ್ಗುವ ...{Loading}...

ಕುತ್ತಿ ಹಿಂಗುವ ಭಟರ ದಾಡೆಯೊ
ಳೊತ್ತಿ ನೆಗಹಿದಡೊಗುವ ರಕುತಕೆ
ಮುತ್ತಿ ಬಾಯ್ಗಳನೊಡ್ಡಿ ಕುಡಿದುದು ಶಾಕಿನೀನಿವಹ
ಮಿತ್ತುವಿನ ಗಣವಿಭದ ದಾಡೆಯ
ಸುತ್ತಿ ಜೋಲುವ ಕರುಳ ಹಿಣಿಲನು
ಕುತ್ತಿದವು ತಮ್ಮೊಳಗೆ ಹೆಣಗಿದವಸಮಸಮರದಲಿ ॥82॥

೦೮೩ ಅರರೆ ಮತ್ಯುವಿನರಕೆಗೌಷಧ ...{Loading}...

ಅರರೆ ಮತ್ಯುವಿನರಕೆಗೌಷಧ
ವರೆವವೊಲು ರಿಪುಬಲವನಸಿಯಿ
ಟ್ಟರೆದವಿಭ ಬರಿಕೈಯ ಭಾರಿಯ ಲಾಳವುಂಡಿಗೆಯ
ಸರಿಸಗುಂಡಿನೊಳೊಂದನೊಂದಿ
ಟ್ಟೊರಸಿದವು ಕೊಡಹಿದವು ಸೀಳಿದು
ಹೊರಳಿಚಿದವೆರಗಿದವು ನಾನಾ ವಿಧದ ಕೊಲೆಗಳಲಿ ॥83॥

೦೮೪ ವ್ರಣದ ಬನ್ಧದ ...{Loading}...

ವ್ರಣದ ಬಂಧದ ಜಿಗಿಯ ದಾಡೆಗೆ
ಕುಣಿದು ಕವಿವ ವಿಹಂಗ ತತಿಗಳಿ
ನಣಲೊಳಡಸಿದ ತಲೆಗೆ ಕೈಗುತ್ತುವ ನಿಶಾಟರಲಿ
ಹೆಣನ ಬೀಸುವ ಕೈಗಳಲಿ ಸಂ
ದಣಿಸುವಸುರರಿನುರು ಕಪಾಲವ
ಕೆಣಕುವಳಿಯಂ ಚಂಡಿಯಾದುವು ಸೊಕ್ಕಿದಾನೆಗಳು ॥84॥

೦೮೫ ಅಡಸಿ ತಲೆಗಳ ...{Loading}...

ಅಡಸಿ ತಲೆಗಳ ಕಿತ್ತು ಸೇನೆಯ
ನಿಡುವ ಬಸುರನು ಬಗಿದು ಕರುಳನು
ಕೊಡಹಿ ಸೂಸುವ ಮಿದುಳ ಮೊಗೆದೆಣ್ದೆಸೆಗೆ ಸಾಲಿಡುವ
ಅಡಗನಾಯಿದು ಕೆದರಿ ರಕುತವ
ತುಡುಕಿ ಚೆಲ್ಲುವ ಕರಿಯ ಬರಿಕೈ
ಬಿಡಿಸಿದವು ಹುಟ್ಟಾಗಿ ಯಮರಾಜನ ಪರಿಗ್ರಹಕೆ ॥85॥

೦೮೬ ಕಾಲುಗಳಲೊಡೆತುಳಿವ ಮೋರೆಯ ...{Loading}...

ಕಾಲುಗಳಲೊಡೆತುಳಿವ ಮೋರೆಯ
ತೋಳಿನೊಳು ಬೀಸಿಡುವ ರದನದಿ
ಹೋಳಿಸುವ ಖಾತಿಯಲಿ ನಾನಾವಿಧದ ಕೊಲೆಗಳಲಿ
ಕಾಲನೊಗಡಿಸೆ ಕೊಲುವ ಮದಗಜ
ಜಾಲಗಳೊಳಾರೋಹಕರು ಕೆಂ
ಗೋಲ ಮಳೆಗರೆದಾರಿದರು ನೃಪಸೇನೆಯೆರಡರಲಿ ॥86॥

೦೮೭ ನೀಲಗಿರಿಗಳ ನೆಮ್ಮಿ ...{Loading}...

ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವೊ ಮಳೆಯನೆನೆ ಬಿರು
ಗೋಲ ಸೈವಳೆಗರೆದರುಭಯದ ಜೋದರವಗಡಿಸಿ
ಮೇಲೆ ತೊಳಲುವ ಖಚರ ನಿಚಯಗ
ಳಾಲಿಯೊಲೆದವು ಧರೆಗೆ ಗಗನಕೆ
ಕಾಳಿಕೆಯ ಪಸರಿಸಿತು ಜೋದರ ಕೋದ ಶರಜಾಲ ॥87॥

೦೮೮ ಎಲೆಲೆ ವಿನ್ಧ್ಯಾಚಲದ ...{Loading}...

ಎಲೆಲೆ ವಿಂಧ್ಯಾಚಲದ ಹರಿಬಕೆ
ಕಳನ ಹೊಕ್ಕವೊ ಕಣೆಗಳೆನುತಾ
ನಳಿನಸಖನಂಜಿದನು ಕೋಪಾಟೋಪಕಭ್ರದಲಿ
ಅಲಗುಗಣೆಗಳೊ ಮೇಘತರುವಿನ
ತಳಿತ ತುದಿಗೊಂಬುಗಳೊ ಬೀಳುವ
ತಲೆಗಳೋ ತತ್ಫಲಸಮೂಹವೊ ಚಿತ್ರವಾಯ್ತೆಂದ ॥88॥

೦೮೯ ಸರಳ ಸರಳೊಳು ...{Loading}...

ಸರಳ ಸರಳೊಳು ಕಡಿವ ಕರಿಗಳ
ಕೊರಳ ಮುರಿಯೆಸುವೋರಣದ ಮೊಗ
ವರಿಗೆಗಳ ಖಂಡಿಸುವ ಮೋರೆಯ ಕರವ ತುಂಡಿಸುವ
ಸರಳು ವದನವ ತಾಗಿ ಪೇಚಕ
ಕುರವಣಿಸೆ ತೆಗೆದೆಸುವ ಜೋದರ
ಧುರಚಮತ್ಕೃತಿ ಬೆರಗನಿತ್ತುದು ದೇವಸಂತತಿಗೆ ॥89॥

೦೯೦ ಶೂರ ಜೋದರ ...{Loading}...

ಶೂರ ಜೋದರ ಮೇಲುವಾಯಿದು
ವೀರಸಿರಿ ಬಿಗಿಯಪ್ಪೆ ಮುತ್ತಿನ
ಹಾರ ಹರಿಯಲು ಕೆದರಿದವು ದೆಸೆದೆಸೆಗೆ ಮುತ್ತುಗಳು
ವಾರಣದ ಕುಂಭಸ್ಥಳಂಗಳ
ಚಾರುಮೌಕ್ತಿಕನಿಕರವೋ ಮೇಣ್
ಭಾರತಾಹವ ಕೌತುಕೋದಯರಸಕೆ ನೆಲೆಯಾಯ್ತೊ ॥90॥

೦೯೧ ಅರರೆ ಶರಸಾಗರದ ...{Loading}...

ಅರರೆ ಶರಸಾಗರದ ಜೋದರ
ಸರಳಹತಿಯಲಿ ಮಂದರಾಚಲ
ಕರಿಯ ಮಸ್ತಕವೊಡೆದು ಕೆದರಿತು ಮೌಕ್ತಿಕವ್ರಾತ
ಹರೆದು ತಾರೆಗೆಯಾದವಭ್ರದೊ
ಳುರುಳೆ ರತ್ನಾಕರನೆನಿಪ್ಪಾ
ಬಿರುದು ಸಂದುದು ಶರನಿಧಿಗೆ ಭೂಪಾಲ ಕೇಳ್ ಎಂದ ॥91॥

೦೯೨ ಧುರದ ಜಯಸಿರಿ ...{Loading}...

ಧುರದ ಜಯಸಿರಿ ವೀರ ಭಟರಿಗೆ
ಸುರಿವ ಲಾಜಾವರುಷದಂತಿರೆ
ಸುರಿದ ಮುತ್ತುಗಳೆಸೆದವಭ್ರವಿಮಾನ ಭಾಗದಲಿ
ಕರಿಶಿರದ ಮುಕ್ತಾಳಿಯೊಪ್ಪಿದ
ವರ ವಿಜಯರೊಡಗೂಡಿ ಜಯವಧು
ವಿರದೆ ಪುಳಕಿತೆಯಾದಳೆನೆ ಚೆಲುವಾಯ್ತು ನಿಮಿಷದಲಿ ॥92॥

೦೯೩ ವಿಗ್ರಹದೊಳಿದಿರಾನ್ತ ಕರಿಗಳ ...{Loading}...

ವಿಗ್ರಹದೊಳಿದಿರಾಂತ ಕರಿಗಳ
ವಿಗ್ರಹಂಗಳು ಕೆಡೆಯೆ ಕಾದಿ ಸ
ಮಗ್ರಬಲ ಜೋದಾಳಿ ಕೊಂಡುದು ಸುರರ ಕೋಟೆಗಳ
ಉಗ್ರದಾಹವಭೂತಗಣಕೆ ಸ
ಮಗ್ರಭೋಜನವಾಯ್ತು ಸಂಗರ
ದಗ್ರಿಯರು ಕೈವೀಸಿದರು ತೇರುಗಳ ತಿಂತಿಣಿಯ ॥93॥

೦೯೪ ನೊಗನ ಬಿಗುಹಿನ ...{Loading}...

ನೊಗನ ಬಿಗುಹಿನ ಕಂಧದುರು ವಾ
ಜಿಗಳು ಕುಣಿದವು ಪಲ್ಲವದ ಸೆರ
ಗಗಿಯೆ ಟೆಕ್ಕೆಯವೆತ್ತಿದವು ಮುಮ್ಮೊನೆಯ ಸೂನಗೆಯ
ಹೊಗರುಗಳ ತೀಡಿದರು ಕೀಲ
ಚ್ಚುಗಳ ಮೇಳೈಸಿದರು ಬಲು ನಂ
ಬುಗೆಯ ಬದ್ಧರದೊಳಗೆ ತುಂಬಿದರಸ್ತ್ರ ಶಸ್ತ್ರಗಳ ॥94॥

೦೯೫ ಹಯನಿಕರ ಖುರಕಡಿಯ ...{Loading}...

ಹಯನಿಕರ ಖುರಕಡಿಯ ವಜ್ರಾಂ
ಗಿಯನು ಹೊತ್ತುವು ಝಡಿವ ಹೊಂಗಂ
ಟೆಯ ವಿಡಾಯ ವರೂಥವನು ಕರೆಸಿದವು ಚೀತ್ಕೃತಿಯ
ಜಯನಿನದವಳ್ಳಿರಿಯೆ ಸೂತಾ
ಶ್ರಯದಲತಿರಥನಿಕರ ರಥ ಸಂ
ಚಯವ ವೆಂಠಣಿಸಿದರು ತುಳುಕಿದರತುಳ ತೋಮರವ ॥95॥

೦೯೬ ಪೂತು ಸಾರಥಿ ...{Loading}...

ಪೂತು ಸಾರಥಿ ಭಾಪು ಮಝರೇ
ಸೂತ ಧಿರುಧಿರು ಎನುತ ರಥಿಕ
ವ್ರಾತ ಮಿಗೆ ಬೋಳೈಸಿ ಕೊಂಡರು ಹಯದ ವಾಘೆಗಳ
ಆ ತುರಂಗದ ಖುರಪುಟದ ನವ
ಶಾತಕುಂಭದ ಗಾಲಿಯುರುಬೆಯ
ನಾ ತತುಕ್ಷಣವಾಂಪರಾರೆನೆ ಕವಿದುದುಭಯದೊಳು ॥96॥

೦೯೭ ಹರಿವ ರಥದುರವಣೆಗೆ ...{Loading}...

ಹರಿವ ರಥದುರವಣೆಗೆ ನೆರೆಯದು
ಧರಣಿಯೆಂದಂಭೋಜಭವನೀ
ಧರೆಯನಿಮ್ಮಡಿಸಿದನೊ ಎನಲಾ ಬಹಳ ಸಮರದೊಳು
ಹರಿವ ರಥಪದಧೂಳಿ ಮಕರಾ
ಕರವ ಕುಡಿದುದು ಚೀತ್ಕೃತಿಯ ಚ
ಪ್ಪರಣೆ ಮಿಗಲುರುಬಿದರು ರಥಿಕರು ಸರಿಸ ವಾಘೆಯಲಿ ॥97॥

೦೯೮ ಘನರಥದ ಚೀತ್ಕಾರ ...{Loading}...

ಘನರಥದ ಚೀತ್ಕಾರ ಗಜರುವ
ಧನುವಿನಬ್ಬರ ಹಯದ ಹೇಷಾ
ನಿನದ ರಥಿಕರ ಬೊಬ್ಬೆ ಸೂತರ ಬಹಳ ಚಪ್ಪರಣೆ
ಅನುವರದೊಳೊದಗಿತ್ತು ವಿಲಯದ
ವಿನುತ ಮೇಘಧ್ವಾನವನು ಸಂ
ಜನಿಸಿತೆನೆ ಹಳಚಿದವು ರಥರಥವೆರಡು ಸೇನೆಯಲಿ ॥98॥

೦೯೯ ತೆಗೆತೆಗೆದು ತಲೆಮಟ್ಟು ...{Loading}...

ತೆಗೆತೆಗೆದು ತಲೆಮಟ್ಟು ಕರೆದರು
ಬಿಗಿದ ಬಿಲುಗಳಲತಿರಥರು ಕಂ
ಬುಗೆಯ ಮುರಿದರು ಹಯವ ತರಿದರು ಸಾರಥಿಯ ಕೆಡಹಿ
ಹಗಲ ಹೂಳಿದರಮಮ ಬಾಣಾ
ಳಿಗಳಲಸಮ ಮಹಾರಥರು ಕಾ
ಳೆಗದೊಳಹುದೆನಿಸಿದರು ರಣದೊಳು ಸುಳಿವ ಯಮನವರ ॥99॥

೧೦೦ ತಿರುಗೆ ...{Loading}...

ತಿರುಗೆ ತಿರುಗಿದರೆಚ್ಚರೆಚ್ಚರು
ಮರಳೆ ಮರಳಿದರೌಕಲೌಕಿದ
ರುರವಣಿಸಲುರವಣಿಸಿದರು ಮಾರ್ತಾಗೆ ತಾಗಿದರು
ಸರಳಿಗಂಬನು ಸೂತ ವಾಜಿಯ
ಶಿರಕೆ ಶಿರವನು ರಥಕೆ ರಥವನು
ಸರಿಗಡಿದು ಕಾದಿದರು ಸಮರಥರಾಹವಾಗ್ರದಲಿ ॥100॥

೧೦೧ ರಥವದೊನ್ದೆಸೆ ಹಯವದೊನ್ದೆಸೆ ...{Loading}...

ರಥವದೊಂದೆಸೆ ಹಯವದೊಂದೆಸೆ
ರಥಿಕರೊಂದೆಸೆ ಚಾಪ ಶರ ಸಾ
ರಥಿಗಳೊಂದೆಸೆಯಾಗೆ ಕೊಂದರು ಬಲದೊಳತಿರಥರು
ರಥಿಕರುರವಣೆಯುಭಯ ಬಲದಲಿ
ಕಥೆಯ ಕಡೆಯಾಯಿತ್ತು ಬಳಿಕತಿ
ರಥರು ಹೊಕ್ಕರು ಕೇಳು ಧೃತರಾಷ್ಟ್ರಾವನೀಪಾಲ ॥101॥

+೦೪ ...{Loading}...