೦೦೦ ಸೂ ಸಾಮದಲಿ ...{Loading}...
ಸೂ. ಸಾಮದಲಿ ಪರಬಲದ ಸುಭಟ
ಸ್ತೋಮವನು ತನ್ನೊಳಗು ಮಾಡಿಯೆ
ಭೂಮಿಪತಿ ಯಮನಂದನನು ಸಂಗ್ರಾಮಕನುವಾದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅರಸಾದ ಧರ್ಮರಾಜನು ಸಾಮೋಪಾಯದಲ್ಲಿ ಶತ್ರುಸೇನೆಯ ಶೂರರಾದ ಭೀಷ್ಮದ್ರೋಣಾದಿಗಳ ಸಮೂಹವನ್ನು ವಿನಯದಿಂದ ತನ್ನವರನ್ನಾಗಿ ಮಾಡಿಕೊಂಡು ಯುದ್ಧಕ್ಕೆ ಸಿದ್ಧನಾದನು.
ಪದಾರ್ಥ (ಕ.ಗ.ಪ)
ಒಳಗುಮಾಡು-ವಶಮಾಡಿಕೊ, ತನ್ನವರನ್ನಾಗಿ ಮಾಡಿಕೊ,
ಮೂಲ ...{Loading}...
ಸೂ. ಸಾಮದಲಿ ಪರಬಲದ ಸುಭಟ
ಸ್ತೋಮವನು ತನ್ನೊಳಗು ಮಾಡಿಯೆ
ಭೂಮಿಪತಿ ಯಮನಂದನನು ಸಂಗ್ರಾಮಕನುವಾದ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಧೃಷ್ಟದ್ಯುಮ್ನ ಭೀಷ್ಮರ
ಪಾಳಯದೊಳಂದಮಮ ಕೈಗೈದಿಳೆಗೆ ಹೊಸತೆನಿಸಿ
ಕಾಳೆಗಕ್ಕನುವಾಗಿ ರಥತುರ
ಗಾಳಿ ಕರಿ ಕಾಲಾಳು ದೊರೆಗಳ
ಮೇಲುಗೈಚಮರಿಗಳನೀಕ್ಷಿಸುತಿದ್ದುದುಭಯಬಲ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ದೊರೆಯೇ ಆಲಿಸುವಂಥವನಾಗು ಎಂದು ವೈಶಂಪಾಯನ ಕಥೆಯನ್ನು ಮುಂದುವರೆಸುತ್ತಿದ್ದಾನೆ. ಪಾಂಡವರ ಕಡೆ ಧೃಷ್ಟದ್ಯುಮ್ನ ಮತ್ತು ಕೌರವರ ಕಡೆ ಭೀಷ್ಮರ ದಂಡು ಯುದ್ಧಕ್ಕೆ ಸಿದ್ಧವಾಗಿರುವಾಗ ತೇರುಗಳು, ಕುದುರೆಗಳ ಸಮೂಹ, ಆನೆಗಳು ಮತ್ತು ಕಾಲಾಳುಗಳ ಸೇನೆಗಳನ್ನೊಳಗೊಂಡ ಎರಡೂ ಕಡೆಯ ಸೇನೆಗಳು ಸಿಂಗರಿಸಿಕೊಂಡು ಭೂಮಿಯಲ್ಲಿ ನವೀನ ಎನಿಸಿ ಯುದ್ಧಕ್ಕೆ ಸಿದ್ಧವಾಗಿ ತಂತಮ್ಮ ಒಡೆಯರಾದ ರಾಜರು ಕೈಯನ್ನು ಮೇಲಕ್ಕೆತ್ತಿ ಅಪ್ಪಣೆ ಸೂಚಿಸಲು ಚಾಮರಗಳ ಬೀಸುವಿಕೆಯನ್ನು ನಿರೀಕ್ಷಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ಕೈಗೈದು-ಸಿಂಗರಿಸಿಕೊಂಡು,
ಟಿಪ್ಪನೀ (ಕ.ಗ.ಪ)
ಮೇಲುಗೈ ಚಮರಿ-ಯುದ್ಧವನ್ನು ಪ್ರಾರಂಭಿಸಿ ಎಂದು ಅಪ್ಪಣೆ ಮಾಡಲು ನಾಯಕರು ಕೈಯನ್ನು ಮೇಲಕ್ಕೆತ್ತಿ ಕೈಯಲ್ಲಿರುವ ಚಾಮರವನ್ನು ಬೀಸುವ ಆ ಕಾಲದ ಯುದ್ಧದ ಪದ್ಧತಿಯನ್ನು ಕುಮಾರ ವ್ಯಾಸ ಇಲ್ಲಿ ಸೂಚಿಸಿದ್ದಾನೆ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಧೃಷ್ಟದ್ಯುಮ್ನ ಭೀಷ್ಮರ
ಪಾಳಯದೊಳಂದಮಮ ಕೈಗೈದಿಳೆಗೆ ಹೊಸತೆನಿಸಿ
ಕಾಳೆಗಕ್ಕನುವಾಗಿ ರಥತುರ
ಗಾಳಿ ಕರಿ ಕಾಲಾಳು ದೊರೆಗಳ
ಮೇಲುಗೈಚಮರಿಗಳನೀಕ್ಷಿಸುತಿದ್ದುದುಭಯಬಲ ॥1॥
೦೦೨ ಮಡದ ಸೋಙ್ಕಿಮ್ ...{Loading}...
ಮಡದ ಸೋಂಕಿಂ ಮುನ್ನ ಗಗನವ
ತುಡುಕ ಬಗೆದವು ತೇಜಿಗಳು ನಸು
ಸಡಿಲಬಿಡೆ ವಾಘೆಯಲಿ ಚಿಗಿದುವು ರಥದ ವಾಜಿಗಳು
ತುಡುಕುವಂಕುಶದಿಂದ ಮುನ್ನಿಳೆ
ಯೊಡೆಯೆ ಗಜ ಗಾಢಿಸಿದವರಸರ
ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುದುರೆಗಳು ಸವಾರನ ಹಿಮ್ಮಡಿ ತಾಗುವ ಮೊದಲೇ ಆಕಾಶಕ್ಕೆ ನುಗ್ಗಬಯಸಿದವು. ರಥದ ಕುದುರೆಗಳು ಕಡಿವಾಣವನ್ನು ಸ್ಪಲ್ಪ ಸಡಿಲಮಾಡಿದೊಡನೆ ಮುಂದಕ್ಕೆ ಜಿಗಿಯುತ್ತಿದ್ದವು. ಆನೆಗಳನ್ನು ನಿಯಂತ್ರಿಸುವ ಅಂಕುಶದಿಂದ ತಿವಿಯುವ ಮೊದಲೆ ಭೂಮಿ ಬಿರಿಯುವಂತೆ ಆನೆಗಳು ಮುನ್ನಡೆದವು. ಅರಸರ ದಾಳಿಯ ಅಪ್ಪಣೆಗೂ ಕಾಯದೆ ಶೂರ ಸೈನಿಕದಳ ಮುನ್ನುಗ್ಗುವ ತವಕದಿಂದ ಕೂಡಿತ್ತು.
ಪದಾರ್ಥ (ಕ.ಗ.ಪ)
ಎಡಗಲಸು- ಅಕ್ಕ ಪಕ್ಕ ಸರಿದಾಡು
ಮೂಲ ...{Loading}...
ಮಡದ ಸೋಂಕಿಂ ಮುನ್ನ ಗಗನವ
ತುಡುಕ ಬಗೆದವು ತೇಜಿಗಳು ನಸು
ಸಡಿಲಬಿಡೆ ವಾಘೆಯಲಿ ಚಿಗಿದುವು ರಥದ ವಾಜಿಗಳು
ತುಡುಕುವಂಕುಶದಿಂದ ಮುನ್ನಿಳೆ
ಯೊಡೆಯೆ ಗಜ ಗಾಢಿಸಿದವರಸರ
ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ ॥2॥
೦೦೩ ಗಜದ ಬಲುಗರ್ಜನೆಯ ...{Loading}...
ಗಜದ ಬಲುಗರ್ಜನೆಯ ವಾಜಿ
ವ್ರಜದ ಹೇಷಿತರವದ ತೇರಿನ
ಗಜಬಜದ ಕಾಲಾಳು ಕಡುಹಿನ ಬೊಬ್ಬೆಯಬ್ಬರದ
ಗಜರುವಗ್ಗದ ಬೊಗ್ಗುಗಳ ದಿ
ಗ್ವ್ರಜವ ನುಡಿಸುವ ರಾಯಗಿಡಿಗನ
ವಿಜಯಬಲ ತೊಡರಿಕ್ಕಿತೈ ಕಲ್ಪಾಂತಸಾಗರಕೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಾರಿ ಸದ್ದಿನಿಂದ ಘೀಳಿಡುವ ಗಜಗಳಿಂದ, ಕೆನೆಯುವ ಹಯ ಸಮೂಹದಿಂದ, ರಭಸದಿಂದ ಚಲಿಸುವ ರಥಗಳ, ಶೌರ್ಯದ ಘೋಷಣೆಯ ಸೈನಿಕರ, ರಭಸದಿಂದ ಮೊಳಗುವ ಉನ್ನತವಾದ ಬಾಗಿದ ಕಹಳೆಗಳಿಂದ ದಿಗ್ತಟಗಳು ಪ್ರತಿಧ್ವನಿಸುವಂತೆ ಮಾಡುವ ರಾಯಭೇರಿಗಳ ವಿಜಯಶಾಲಿಸೇನೆ ಪ್ರಳಯ ಸಾಗರಕ್ಕೆ ಭೂಷಣ ಪ್ರಾಯವಾಗಿ ಶೋಭಿಸಿತು.
ಪದಾರ್ಥ (ಕ.ಗ.ಪ)
ಹೇಷಿತರವ-ಕುದುರೆಗಳು ಕೆನೆಯುವ ಸದ್ದು, ಕಡುಹು-ಶೌರ್ಯ, ಗಜರುವ-ಗರ್ಜಿಸುವ, ರಾಯಗಿಡಿಗ-ರಾಯಭೇರಿ, ಕಲ್ಪಾಂತಸಾಗರ-ಪ್ರಳಯಸಾಗರ, ತೊಡರು-ಭೂಷಣ
ಮೂಲ ...{Loading}...
ಗಜದ ಬಲುಗರ್ಜನೆಯ ವಾಜಿ
ವ್ರಜದ ಹೇಷಿತರವದ ತೇರಿನ
ಗಜಬಜದ ಕಾಲಾಳು ಕಡುಹಿನ ಬೊಬ್ಬೆಯಬ್ಬರದ
ಗಜರುವಗ್ಗದ ಬೊಗ್ಗುಗಳ ದಿ
ಗ್ವ್ರಜವ ನುಡಿಸುವ ರಾಯಗಿಡಿಗನ
ವಿಜಯಬಲ ತೊಡರಿಕ್ಕಿತೈ ಕಲ್ಪಾಂತಸಾಗರಕೆ ॥3॥
೦೦೪ ತಿಗಡಲೊದರುವ ಹರಿಗೆಗಳ ...{Loading}...
ತಿಗಡಲೊದರುವ ಹರಿಗೆಗಳ ಗೌ
ರಗಿವ ಹೆಗ್ಗಹಳೆಗಳ ಹೊನ್ನಾ
ಯುಗದ ಖಡುಗದ ಗಜರು ಡೊಂಕಣಿಗಳ ಝಣತ್ಕೃತಿಯ
ಬಿಗಿದ ಬಿಲು ಬೊಬ್ಬೆಗಳ ಬಿರುದರ
ವಿಗಡ ಮೂದಲೆಗಳ ಮಹಾಧ್ವನಿ
ಬಗಿದುದೈ ತಾವರೆಯ ತನಯನ ಕರ್ಣಕೋಟರವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತೀಡಿದ ಮಾತ್ರಕ್ಕೆ ಧ್ವನಿಗೈಯುವ ಡೋಲುಗಳು, ಅಬ್ಬರಿಸುವ ದೊಡ್ಡ ಕಹಳೆಗಳು, ಹೊನ್ನಿನ ಹಿಡಿಯುಳ್ಳ ಕತ್ತಿಗಳ ಖಣಿಲ್ಖಣಿಲಾಟ, ಈಟಿಗಳ ಝಣತ್ಕಾರಗಳು, ಹೆದೆಯೇರಿಸಿದ ಬಿಲ್ಲುಗಳ ಠೇಂಕಾರ, ಬಿರುದುಳ್ಳ ವೀರರ ವಿಕಟ ನಿಂದೆಗಳ ಘನಗರ್ಜನೆ ಬ್ರಹ್ಮನ ಕಿವಿ ಪಟಲವನ್ನು ಭೇದಿಸಿತು.
ಪದಾರ್ಥ (ಕ.ಗ.ಪ)
ತಿಗಡಲು-ತೀಡಲು, ಒದರುವ-ಧ್ವನಿಗೈಯುವ, ಹರಿಗೆ-ಡೋಲು , ಗೌರಗಿವ-ಅಬ್ಬರದ, ಹೆಗ್ಗಹಳೆಗಳು-ದೊಡ್ಡ ಕಹಳೆಗಳು, ಡೊಂಕಣಿ-ಈಟಿ, ಬಿಗಿದ-ಹೆದೆಯೇರಿಸಿದ, ಬಿರುದರ-ಸಾಹಸಿಗಳ, ತಾವರೆ ತನಯ-ಬ್ರಹ್ಮ, ಕರ್ಣಕೋಟರ-ಕಿವಿ ಪಟಲ
ಮೂಲ ...{Loading}...
ತಿಗಡಲೊದರುವ ಹರಿಗೆಗಳ ಗೌ
ರಗಿವ ಹೆಗ್ಗಹಳೆಗಳ ಹೊನ್ನಾ
ಯುಗದ ಖಡುಗದ ಗಜರು ಡೊಂಕಣಿಗಳ ಝಣತ್ಕೃತಿಯ
ಬಿಗಿದ ಬಿಲು ಬೊಬ್ಬೆಗಳ ಬಿರುದರ
ವಿಗಡ ಮೂದಲೆಗಳ ಮಹಾಧ್ವನಿ
ಬಗಿದುದೈ ತಾವರೆಯ ತನಯನ ಕರ್ಣಕೋಟರವ ॥4॥
೦೦೫ ಕುಣಿವ ಕುದುರೆಯ ...{Loading}...
ಕುಣಿವ ಕುದುರೆಯ ಮದದ ಬಲುಭಾ
ರಣೆಯಲೊಲೆವಾನೆಗಳ ತುರಗವ
ಕೆಣಕಿ ಸರಳಿಸಿ ಹಿಡಿವ ತೇರಿನ ಸೂತರೋಜೆಗಳ
ಅಣೆವ ಹರಿಗೆಯನೊಬ್ಬನೊಬ್ಬರ
ನಣಸಿನಲಿ ತಿವಿದಗಿವ ಭಟರೊ
ಡ್ತ್ಡಣೆ ಸಘಾಡಿಸಿತೆರೆಡುಬಲದಲಿ ಭೂಪ ಕೇಳ್ ಎಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುಣಿಯುವ ಕುದುರೆಗಳ, ಮದ ಜಲದ ಅತಿರೇಕದಿಂದ ತೂರಾಡುವ ಆನೆಗಳ, ಕುದುರೆಗಳನ್ನು ಲಗಾಮನ್ನು ಸಡಿಲಗೊಳಿಸಿ ಕೆಣಕಿ ಓಡಿಸಿ ಹಿಡಿವ ಸಾಲುಸಾಲು ತೇರಿನ ಸಾರಥಿಗಳ ಸಮೂಹ ವಿದ್ಯಾ ಚಮತ್ಕಾರಗಳು, ಒಬ್ಬರಿಗೊಬ್ಬರು ಢಾಲುಗಳಲ್ಲಿ ಸೆಣಸಾಡುವ, ಈಟಿ ಇತ್ಯಾದಿ ಆಯುಧಗಳ ಮೊನೆಗಳಲ್ಲಿ ತಿವಿದು ಕಚ್ಚಾಡುವ ವೀರರ ಸಮೂಹ, ಪಾಂಡವ ಕೌರವ ಸೇನೆಗಳಲ್ಲಿ ಅತಿಶಯವಾಗಿದ್ದಿತು, ಜನಮೇಜಯ ಕೇಳೆಂದ.
ಪದಾರ್ಥ (ಕ.ಗ.ಪ)
ಸೂತರ ಓಜೆಗಳು-ಸಾರಥಿಗಳ ಸಮೂಹ, ಅಣೆವ ಹರಿಗೆ -ಸೆಣಸಾಡುವ ಢಾಲುಗಳ, ಅಣಿಸಿನಲಿ-ಚೂಪಾದ ಆಯುಧಗಳಿಂದ, ಸಘಾಡಿಸಿತು-ಒಟ್ಟಾಯಿತು
ಮೂಲ ...{Loading}...
ಕುಣಿವ ಕುದುರೆಯ ಮದದ ಬಲುಭಾ
ರಣೆಯಲೊಲೆವಾನೆಗಳ ತುರಗವ
ಕೆಣಕಿ ಸರಳಿಸಿ ಹಿಡಿವ ತೇರಿನ ಸೂತರೋಜೆಗಳ
ಅಣೆವ ಹರಿಗೆಯನೊಬ್ಬನೊಬ್ಬರ
ನಣಸಿನಲಿ ತಿವಿದಗಿವ ಭಟರೊ
ಡ್ತ್ಡಣೆ ಸಘಾಡಿಸಿತೆರೆಡುಬಲದಲಿ ಭೂಪ ಕೇಳೆಂದ ॥5॥
೦೦೬ ಝಳಪದಲಿ ಬೊಬ್ಬಿಡುವಡಾಯುಧ ...{Loading}...
ಝಳಪದಲಿ ಬೊಬ್ಬಿಡುವಡಾಯುಧ
ಹೊಳವುಗಳ ಡೊಂಕಣಿಯ ತಳಪದ
ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ
ಅಲಗಿನುಬ್ಬರಗಿಡಿಯ ಹಬ್ಬುಗೆ
ಥಳಥಳಸಿ ಸೈಗರೆದುದೈ ಹೆ
ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀಸಿದಾಗ ಕಿಡಿಕಾರಿ ಸದ್ದೆಸಗುವ ಉದ್ದನೆ ಕತ್ತಿಗಳ ಕಾಂತಿ, ಈಟಿಗಳ ಥಳಿಥಳಿಸುವ ಪ್ರಕಾಶ, ಬಳ್ಳಿ ಮಿಂಚಿನಂತೆ ಮಿರುಗುವ ಕುಂತಗಳ ಕಾಂತಿ, ಚೂಪಾದ ಆಯುಧಗಳ ತುದಿಗಳಿಂದ ಹೊರಸೂಸುವ ಕಿಡಿಗಳ ಹಬ್ಬುವಿಕೆ ಇವೆಲ್ಲ ನೂರು ಸೂರ್ಯರ ಪ್ರಕಾಶವು ಒಟ್ಟುಗೂಡಿ ದಟ್ಟೈಸಿತೋ ಎನ್ನುವಂತಿದ್ದ ಉಜ್ವಲ ಪ್ರಕಾಶವನ್ನು ಏನೆಂದು ತಾನೆ, ಹೆಸರಿಸಲು ಸಾಧ್ಯ ?
ಟಿಪ್ಪನೀ (ಕ.ಗ.ಪ)
ಕೊಂತ-ಈಟಿಗಳಲ್ಲಿ ಒಂದು ವಿಧ, 5 ಹಸ್ತ ಉದ್ದವಿರುತ್ತದೆ. ಅಶ್ವಾರೋಹಿಗಳು ಹಿಡಿದಿರುತ್ತಾರೆ. ಇದರ ಕೊನೆಗೆ ಬಾವುಟ ಇರುತ್ತದೆ.
ಡೊಂಕಣಿ ಕೊಂತಂ-ಸಬಳಂ, ಪ್ರಾಸ ಕುಂತಮೆನಲು ಸಬಳಂ ಎಂದು ನಿಘಂಟಿನ ಅರ್ಥ, ಒಗೊರೆಯೆಂಬುದು ತಿವಿಯುವ ಆಯುಧ, ಕೊಂತದ ಮೊನೆ ಕುಂತಾಗ್ರ, ಭಿಂಡಿವಾಳ ಕೊಂತ ಡೊಂಕಣಿ ಸಬಳಗಳೆಲ್ಲ ಬೇರೆ ಬೇರೆ ಆಕಾರಗಳಲ್ಲಿ ಇರುವ ಚೂಪಾದ ಮೊನೆಯ ಚುಚ್ಚು ಆಯುಧಗಳು (ಕನ್ನಡ ಮಹಾಭಾರತ ಶಿಲ್ಪ -ಪು 335)
ಮೂಲ ...{Loading}...
ಝಳಪದಲಿ ಬೊಬ್ಬಿಡುವಡಾಯುಧ
ಹೊಳವುಗಳ ಡೊಂಕಣಿಯ ತಳಪದ
ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ
ಅಲಗಿನುಬ್ಬರಗಿಡಿಯ ಹಬ್ಬುಗೆ
ಥಳಥಳಸಿ ಸೈಗರೆದುದೈ ಹೆ
ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ ॥6॥
೦೦೭ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಭೀಷ್ಮನ ಹೊರೆಗೆ ಕುರುಭೂ
ಪಾಲ ಬಂದನು ಬಿನ್ನವಿಸಿದನು ಮುಕುಳಕರನಾಗಿ
ಮೇಳದಲಿ ಮಂಡಳಿಸಿದರಿನೃಪ
ಜಾಲದಲಿ ಯಮಸೂನುವಾವನು
ಮೇಲೆ ಭೀಮಾರ್ಜುನರ ವಿವರಿಸಿ ತೋರಬೇಕೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯರಾಯನೇ ಕೇಳು, ದುರ್ಯೋಧನ ಭೀಷ್ಮನ ಬಳಿಗೆ ಆಗಮಿಸಿ. ಕೈ ಮುಗಿದು ಬಿನ್ನಹ ಮಾಡಿದನು. ಇಲ್ಲಿ ಒಗ್ಗೂಡಿರುವ ಗುಂಪುಗಳ ಶತ್ರುಸೇನಾ ಸಮೂಹದಲ್ಲಿ ಧರ್ಮರಾಜನು ಯಾರು ? ಅನಂತರ ಭೀಮ ಅರ್ಜುನರು ಎಲ್ಲಿದ್ದಾರೆ ವಿವರಿಸಿ ತಿಳಿಸಬೇಕು ಎಂದು ಕೇಳಿಕೊಂಡನು.
ಪದಾರ್ಥ (ಕ.ಗ.ಪ)
ಮುಕುಳಕರನಾಗಿ-(ಮೊಗ್ಗಿನಾಕಾರದಲ್ಲಿ) ಕೈ ಮುಗಿದುಕೊಂಡು, ಮೇಳದಲಿ ಮಂಡಳಿಸಿದ-ಒಗ್ಗೂಡಿರುವ ಗುಂಪುಗಳ,
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಭೀಷ್ಮನ ಹೊರೆಗೆ ಕುರುಭೂ
ಪಾಲ ಬಂದನು ಬಿನ್ನವಿಸಿದನು ಮುಕುಳಕರನಾಗಿ
ಮೇಳದಲಿ ಮಂಡಳಿಸಿದರಿನೃಪ
ಜಾಲದಲಿ ಯಮಸೂನುವಾವನು
ಮೇಲೆ ಭೀಮಾರ್ಜುನರ ವಿವರಿಸಿ ತೋರಬೇಕೆಂದ ॥7॥
೦೦೮ ನಸುನಗೆಯ ಚೂಣಿಯಲಿ ...{Loading}...
ನಸುನಗೆಯ ಚೂಣಿಯಲಿ ವದನದ
ರಸುಮೆ ಝಳಪಿಸೆ ಕೌರವೇಂದ್ರಂ
ಗುಸುರಿದನು ಕಲಿ ಭೀಷ್ಮನವಧರಿಸೈ ಮಹೀಪತಿಯೆ
ಪಸರಿಸಿದ ಮುಗಿಲೊಡ್ಡಿನಲಿ ಮಿಂ
ಚೆಸೆವವೊಲು ಗಜದಳದ ಮಧ್ಯದೊ
ಳೆಸೆವನಾತನು ವೀರಧೃಷ್ಟದ್ಯುಮ್ನ ನೋಡೆಂದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನ್ಯದ ಮುಂಭಾಗದಲ್ಲಿ ನಿಂತ ಭೀಷ್ಮನ ಮುಖದಲ್ಲಿ ಮಂದಸ್ಮಿತದ ಕಾಂತಿ ಕಿರಣಗಳು ಬೆಳಗಿ ಕಲಿಭೀಷ್ಮನು ದುರ್ಯೋಧನನಿಗೆ ಹೇಳಿದನು : ಕೌರವೇಂದ್ರನೇ ಕೇಳು, ಹಬ್ಬಿರುವ ಸೈನ್ಯವೆಂಬ ಮೋಡಗಳ ಸಮೂಹದ ನಡುವೆ ಮಿಂಚು ಮೊಳಗುವ ಹಾಗೆ ಗಜದಳದ ನಡುವೆ ವಿರಾಜಮಾನನಾಗಿರುವವನೇ ವೀರ ಧೃಷ್ಟದ್ಯುಮ್ನ ಗಮನಿಸು ಎಂದನು.
ಪದಾರ್ಥ (ಕ.ಗ.ಪ)
ರಸುಮೆ-ಕಿರಣ, ಕಾಂತಿ, ಚೂಣಿ-ಮುಂಭಾಗ, ಝಳಪಿಸೆ-ಕಂಗೊಳಿಸಲು, ಒಡ್ಡು-ಸಮೂಹ, ಎಸೆವನು-ಕಂಗೊಳಿಸುವನು.
ಮೂಲ ...{Loading}...
ನಸುನಗೆಯ ಚೂಣಿಯಲಿ ವದನದ
ರಸುಮೆ ಝಳಪಿಸೆ ಕೌರವೇಂದ್ರಂ
ಗುಸುರಿದನು ಕಲಿ ಭೀಷ್ಮನವಧರಿಸೈ ಮಹೀಪತಿಯೆ
ಪಸರಿಸಿದ ಮುಗಿಲೊಡ್ಡಿನಲಿ ಮಿಂ
ಚೆಸೆವವೊಲು ಗಜದಳದ ಮಧ್ಯದೊ
ಳೆಸೆವನಾತನು ವೀರಧೃಷ್ಟದ್ಯುಮ್ನ ನೋಡೆಂದ ॥8॥
೦೦೯ ಇವ ಕಣಾ ...{Loading}...
ಇವ ಕಣಾ ಪಾಂಡವರ ಸೇನಾ
ರ್ಣವಕೆ ನಾಯಕನಿವನ ಕೆಲಬಲ
ದವರು ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ
ಬವರಿಗರು ಪಾಂಚಾಲಕುಲ ಸಂ
ಭವರು ದ್ರುಪದ ಸಹೋದರರು ಮ
ತ್ತಿವರು ಸೃಂಜಯ ವರ ಯುಧಾಮನ್ಯೂತ್ತಮೌಂಜಸರು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನೇ ಪಾಂಡವರ ಸೇನಾ ಸಾಗರಕ್ಕೆ ನಾಯಕನಾದವನು. ಇವನ ಎಡಬಲಗಳಲ್ಲಿರುವವರು ರಥಸಮೂಹ ಮತ್ತು ಅಶ್ವಸಮೂಹಗಳಲ್ಲಿ ಅತಿಶ್ರೇಷ್ಠರಾದ ಯುದ್ಧ ವೀರರು; ಇವರೆಲ್ಲ ಪಾಂಚಾಲ ಕುಲದಲ್ಲಿ ಜನಿಸಿದ ದ್ರುಪದ ಸಹೋದರರು. ಇದಲ್ಲದೆ ಸೃಂಜಯ ಯುಧಾಮನ್ಯು ಉತ್ತಮೌಂಜಸ ಮೊದಲಾದವರು ಇದ್ದಾರೆ.
ಪದಾರ್ಥ (ಕ.ಗ.ಪ)
ಆರ್ಣವ-ಸಾಗರ, ತೆಕ್ಕೆಯ-ಸಮೂಹ, ಥಟ್ಟು-ಗುಂಪು, ಬವರಿಗ-ಯುದ್ಧವೀರ
ಟಿಪ್ಪನೀ (ಕ.ಗ.ಪ)
ಸೃಂಜಯ-ಒಬ್ಬ ಅರಸ, ಶೈಬ್ಯರಾಜನ ಮಗ, ಯುಧಾಮನ್ಯು-ಪಾಂಚಾಲದ ಕ್ಷತ್ರಿಯ, ಉತ್ತಮೌಂಜಸ-ಪಾಂಚಾಲದ ದ್ರುಪದನ ಮಗ.
ಮೂಲ ...{Loading}...
ಇವ ಕಣಾ ಪಾಂಡವರ ಸೇನಾ
ರ್ಣವಕೆ ನಾಯಕನಿವನ ಕೆಲಬಲ
ದವರು ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ
ಬವರಿಗರು ಪಾಂಚಾಲಕುಲ ಸಂ
ಭವರು ದ್ರುಪದ ಸಹೋದರರು ಮ
ತ್ತಿವರು ಸೃಂಜಯ ವರ ಯುಧಾಮನ್ಯೂತ್ತಮೌಂಜಸರು ॥9॥
೦೧೦ ಡೊಙ್ಕಣಿಯ ಹೊದರುಗಳಲೆಡಬಲ ...{Loading}...
ಡೊಂಕಣಿಯ ಹೊದರುಗಳಲೆಡಬಲ
ವಂಕದಾನೆಯ ಥಟ್ಟುಗಳ ನಿ
ಶ್ಶಂಕಮಲ್ಲನು ದ್ರುಪದನೀತ ವಿರಾಟನೃಪನೀತ
ಮುಂಕುಡಿಯ ನಾಯಕರಿವರು ಪತಿ
ಯಂಕಕಾರರು ಇವರ ಬಳಿಯಲಿ
ಬಿಂಕದೆರಡಕ್ಷೋಣಿ ಬಲವದೆ ರಾಯ ನೋಡೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಬಳಗಳ ಸಮೂಹದಿಂದ ಕಂಗೊಳಿಸುತ್ತಿರುವ, ಎಡಬಲಗಳಲ್ಲಿ ಸಮರದ ಗಜದಳದ ನಡುವೆ ಇರುವ ನಿಶ್ಶಂಕಮಲ್ಲನೆನಿಸಿದ ದ್ರುಪದನು ಈತನು. ಇವರು ಮುಂಭಾಗದ ಪಡೆಯ ನಾಯಕರು, ಯುದ್ಧವೀರರು, ಇವರ ಹತ್ತಿರ ಶೌರ್ಯಯುಕ್ತ ಗರ್ವದ ಎರಡು ಅಕ್ಷೋಹಿಣಿ ಸೈನ್ಯವಿದೆ. ದುರ್ಯೋಧನನೇ ವೀಕ್ಷಿಸು’ ಎಂದು ಭೀಷ್ಮನು ಹೇಳಿದನು.
ಪದಾರ್ಥ (ಕ.ಗ.ಪ)
ಮುಂಕುಡಿ-ಮುಂಭಾಗದ ಸೇನೆ, ಪತಿಯಂಕದವರು-ಯುದ್ಧವೀರರು, ಬಿಂಕ-ಶೌರ್ಯಯುಕ್ತ ಗರ್ವ, ಥಟ್ಟು-ಸೇನೆ, ಡೊಂಕಣಿ-ಸಬಳ
ಟಿಪ್ಪನೀ (ಕ.ಗ.ಪ)
ಅಕ್ಷೋಹಿಣಿ : ಚತುರಂಗ ಸೇನೆಯ ಒಂದು ಪರಿಮಾಣ ಅಥವಾ ವಿಭಾಗ 21870 ಆನೆ 21870 ರಥ 65610 ಕುದುರೆ 109350 ಕಾಲಾಳುಗಳಿರುವ ಸೇನೆ
ಕೋಷ್ಟಕ : 1 ರಥ 1 ಆನೆ 3 ಕುದುರೆ 5 ಕಾಲಾಳು - 1 ಪತ್ತಿ
3 ಪತ್ತಿ - 1 ಸೇನಾ ಮುಖ
3 ಸೇನಾಮುಖ - 1 ಗುಲ್ಮ
3 ಗುಲ್ಮ - 1 ಗಣ
3 ಗಣ - 1 ವಾಹಿನಿ
3 ವಾಹಿನಿ - 1 ಪೃತನಾ
3 ಪೃತನಾ - 1 ಚಮೂ
3 ಚಮೂ - 1 ಅನೀಕಿನಿ
10 ಅನೀಕಿನಿ - 1 ಅಕ್ಷೋಹಿಣಿ
ಮೂಲ ...{Loading}...
ಡೊಂಕಣಿಯ ಹೊದರುಗಳಲೆಡಬಲ
ವಂಕದಾನೆಯ ಥಟ್ಟುಗಳ ನಿ
ಶ್ಶಂಕಮಲ್ಲನು ದ್ರುಪದನೀತ ವಿರಾಟನೃಪನೀತ
ಮುಂಕುಡಿಯ ನಾಯಕರಿವರು ಪತಿ
ಯಂಕಕಾರರು ಇವರ ಬಳಿಯಲಿ
ಬಿಂಕದೆರಡಕ್ಷೋಣಿ ಬಲವದೆ ರಾಯ ನೋಡೆಂದ ॥10॥
೦೧೧ ಅವರ ಮೋಹರದಾಚೆಯಲಿ ...{Loading}...
ಅವರ ಮೋಹರದಾಚೆಯಲಿ ನಿಂ
ತವರು ಕೊಂತೀಭೋಜ ಕೇಕಯ
ರವರ ಬಳಿಯಲಿ ತಳಿತುದೆರಡಕ್ಷೋಹಿಣೀಸೇನೆ
ಅವರ ಹತ್ತಿರೆ ಮೋಹರಿಸಿ ನಿಂ
ದವರು ಪಾಂಡ್ಯ ಶಿಖಂಡಿ ಸೋಮಕ
ರವರ ಮೋಹರದೊಳಗೆ ನೋಡಕ್ಷೋಹಿಣೀ ಸೇನೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರ ಸೇನೆಯ ಆಚೆ ಕಡೆ ನಿಂತವರು ಕುಂತೀಭೋಜ, ಕೇಕಯರು. ಅವರ ಹತ್ತಿರ ಎರಡು ಅಕ್ಷೋಹಿಣಿ ಸೇನೆ ಕೂಡಿದೆ. ಅವರ ಹತ್ತಿರ ಗುಂಪು ಗೂಡಿ ನಿಂತಿರುವವರೇ ಪಾಂಡ್ಯ, ಶಿಖಂಡಿ, ಸೋಮಕರು, ಅವರ ಸೇನೆ ಅಕ್ಷೋಹಿಣಿ ಬಲವನ್ನು ಹೊಂದಿದೆ.
ಟಿಪ್ಪನೀ (ಕ.ಗ.ಪ)
ಕೊಂತಿಭೋಜ - ಕುಂತಿದೇಶದ ರಾಜನಿಗೆ ಕುಂತೀಭೋಜ ಎಂದು ಹೆಸರು. ಇವನು ಯದುವಂಶದ ಶೂರರಾಜನ ಸೋದರತ್ತೆಯ ಮಗ. ಇವನ ಸಾಕು ಮಗಳು ಕುಂತಿ.
ಕೇಕಯ-ಸೂತ ರಾಜ್ಯಾಧಿಪ, ಪಾಂಡವ ಪಕ್ಷೀಯ ರಾಜ.
ಪಾಂಡ್ಯ-ಚಿತ್ರಾಂಗದೆಯ ತಂದೆ. ಪಾಂಡವರ ಪರ ಹೋರಾಡಿ 17ನೇ ದಿನ ಅಶ್ವತ್ಥಾಮನಿಂದ ಹತನಾದನು.
ಸೋಮಕ - ಚಂದ್ರವಂಶದ ಪಾಂಚಾಲ ರಾಜನಾದ ಸಹದೇವನ ಮಗ.
ಮೂಲ ...{Loading}...
ಅವರ ಮೋಹರದಾಚೆಯಲಿ ನಿಂ
ತವರು ಕೊಂತೀಭೋಜ ಕೇಕಯ
ರವರ ಬಳಿಯಲಿ ತಳಿತುದೆರಡಕ್ಷೋಹಿಣೀಸೇನೆ
ಅವರ ಹತ್ತಿರೆ ಮೋಹರಿಸಿ ನಿಂ
ದವರು ಪಾಂಡ್ಯ ಶಿಖಂಡಿ ಸೋಮಕ
ರವರ ಮೋಹರದೊಳಗೆ ನೋಡಕ್ಷೋಹಿಣೀ ಸೇನೆ ॥11॥
೦೧೨ ಅರೆನೆಲೆಯ ದಳದತ್ತ ...{Loading}...
ಅರೆನೆಲೆಯ ದಳದತ್ತ ದೃಷ್ಟಿಯ
ಹರಿಯಬಿಡು ನೋಡಲ್ಲಿ ಕೌಂತೇ
ಯರ ಕುಮಾರರನಮಲ ಪಂಚ ದ್ರೌಪದೀಸುತರ
ಉರಿಯ ಕರುವಿಟ್ಟಂತೆ ವಿಲಯದ
ಹರನ ಖತಿ ಹೊಗೆವಂತೆ ಸಿಡಿಲಿನ
ಹೊರಳಿ ಹೊದರೆದ್ದಂತೆ ನಿಂದವನವ ಘಟೋತ್ಕಚನು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ನಿಂತ ಸೈನ್ಯದ ಪಡೆಯ ಕಡೆ ನಿನ್ನ ನೋಟವನ್ನು ತಿರುಗಿಸಿ ನೋಡು. ದ್ರೌಪದಿಯ 5 ಜನ ಮಕ್ಕಳು ಪಾಂಡವ ಪುತ್ರರು ಇದ್ದಾರೆ ನೋಡಲ್ಲಿ. ಬೆಂಕಿಯ ಉರಿಯನ್ನು ಎರಕ ಹೊಯ್ದಂತೆ, ಪ್ರಳಯ ಕಾಲದ ಶಿವನ ಕ್ರೋಧಾಗ್ನಿ ಹೊಗೆಯಾಡುವಂತೆ, ಸಿಡಿಲಿನ ಸಮೂಹ ಒಗ್ಗೂಡಿದಂತೆ ನಿಂತಿರುವವನೇ ಘಟೋತ್ಕಚನು.
ಪದಾರ್ಥ (ಕ.ಗ.ಪ)
ಹೊರಳಿ ಹೊದರು-ಸಮೂಹ ಒಗ್ಗೂಡು, ಕರುವಿಡು-ಎರಕ ಹೊಯ್ಯಿ, ಅರನೆಲೆ-ಸೈನ್ಯದಲ್ಲಿ ಅರಸುಗಳಿರುವ ಸ್ಥಳ
ಮೂಲ ...{Loading}...
ಅರೆನೆಲೆಯ ದಳದತ್ತ ದೃಷ್ಟಿಯ
ಹರಿಯಬಿಡು ನೋಡಲ್ಲಿ ಕೌಂತೇ
ಯರ ಕುಮಾರರನಮಲ ಪಂಚ ದ್ರೌಪದೀಸುತರ
ಉರಿಯ ಕರುವಿಟ್ಟಂತೆ ವಿಲಯದ
ಹರನ ಖತಿ ಹೊಗೆವಂತೆ ಸಿಡಿಲಿನ
ಹೊರಳಿ ಹೊದರೆದ್ದಂತೆ ನಿಂದವನವ ಘಟೋತ್ಕಚನು ॥12॥
೦೧೩ ಭೀಮಸೇನನ ಮಗನವನು ...{Loading}...
ಭೀಮಸೇನನ ಮಗನವನು ಸಂ
ಗ್ರಾಮಚೌಪಟನವನ ಬಳಿಯಲಿ
ತಾಮಸದ ಬಲುಮೊಗದ ಹೊಗರಿನ ಹೊಳೆವ ದಾಡೆಗಳ
ಕಾಮರೂಪಿಗಳೊಂದು ಕೋಟಿ ಸ
ನಾಮದೈತ್ಯರು ಕುಂಭಕರ್ಣ
ಸ್ತೋಮವೆನಲದೆ ಲಯಕೃತಾಂತನ ಕ್ರೂರ ಪರಿವಾರ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಘಟೋತ್ಕಚನು ಭೀಮಸೇನನ ಮಗನು. ಯುದ್ಧದಲ್ಲಿ ನಾಲ್ಕು ದಿಕ್ಕುಗಳಲ್ಲೂ ಹೋರಾಡಬಲ್ಲ ಜಟ್ಟಿ, ಧೀರನಾಗಿದ್ದಾನೆ. ಅವನ ಹತ್ತಿರ, ತಮೋ ಗುಣದ ಕಪ್ಪು ಬಣ್ಣದ ಬಹು ಮುಖದ, ಹೊಳೆವ ಕಾಂತಿಯ ದವಡೆಗಳುಳ್ಳ ಇಚ್ಛಾ ರೂಪಿಗಳಾದ ಒಂದು ಕೋಟಿ ಪ್ರಸಿದ್ಧ ರಾಕ್ಷಸರು ಇದ್ದಾರೆ. ಕುಂಭಕರ್ಣನ ಸೇನೆ,ಪ್ರಳಯ ಕಾಲದ ಯಮನ ಉಗ್ರಪರಿವಾರ ಎನ್ನುವ ಹಾಗೆ ಈ ಸೇನೆ ಇದೆ.
ಪದಾರ್ಥ (ಕ.ಗ.ಪ)
ಕಾಮರೂಪಿ-ಇಚ್ಛಾರೂಪಿಗಳು, ಲಯಕೃತಾಂತ-ಪ್ರಳಯಕಾಲದ ಯಮ
ಮೂಲ ...{Loading}...
ಭೀಮಸೇನನ ಮಗನವನು ಸಂ
ಗ್ರಾಮಚೌಪಟನವನ ಬಳಿಯಲಿ
ತಾಮಸದ ಬಲುಮೊಗದ ಹೊಗರಿನ ಹೊಳೆವ ದಾಡೆಗಳ
ಕಾಮರೂಪಿಗಳೊಂದು ಕೋಟಿ ಸ
ನಾಮದೈತ್ಯರು ಕುಂಭಕರ್ಣ
ಸ್ತೋಮವೆನಲದೆ ಲಯಕೃತಾಂತನ ಕ್ರೂರ ಪರಿವಾರ ॥13॥
೦೧೪ ಅವರ ಹೊರೆಯಲಿ ...{Loading}...
ಅವರ ಹೊರೆಯಲಿ ಫಲುಗುಣಗೆ ಮಲೆ
ವವರ ಗಂಡನು ರಿಪುಕುಮಾರಕ
ನಿವಹ ಕಾಳಾನಳನು ನೋಡಭಿಮನ್ಯುವರ್ಜುನನ
ಕುವರನಿವ ಮಗುವಲ್ಲ ಬಲುಗೆ
ಯ್ಯವನ ಮೋಹರದೊತ್ತಿನಲಿ ನಿಂ
ದವರು ಸಾತ್ಯಕಿ ಚೇಕಿತಾನ ಪ್ರಮುಖ ನಾಯಕರು ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಇಚ್ಛಾರೂಪಿ ರಾಕ್ಷಸ ಪರಿವಾರದ ಹತ್ತಿರದಲ್ಲಿ, ಅರ್ಜುನನೊಡನೆ ದರ್ಪದಿಂದ ವರ್ತಿಸುವವವರಿಗೆ ಗಂಡಾಂತರ ಎನಿಸಿದ, ಶತ್ರು ಮಕ್ಕಳ ಸಮೂಹಕ್ಕೆ ಪ್ರಳಯಾಗ್ನಿ ಎನಿಸಿದ, ಅರ್ಜುನನ ಮಗನಾದ ಅಭಿಮನ್ಯು ಇದ್ದಾನೆ ನೋಡು. ಇವನು ಹುಡುಗನಾದರೂ ಬಲುಪರಾಕ್ರಮಿ. ಅವನ ಸೇನೆಯ ಪಕ್ಕದಲ್ಲಿ. ನಿಂತಿರುವವರು ಸಾತ್ಯಕಿ ಚೇಕಿತಾನ ಮೊದಲಾದ ಪ್ರಮುಖ ನಾಯಕರು.
ಪದಾರ್ಥ (ಕ.ಗ.ಪ)
ನಿವಹ-ಸಮೂಹ, ಮಲೆವವರ ಗಂಡನು-ದರ್ಪದಿಂದ ಹೋರಾಡುವವರ ಪಾಲಿಗೆ ಗಂಡಾಂತರವೆನಿಸಿದವನು, ಕಾಳಾನಲನು-ಪ್ರಳಯಾಗ್ನಿ, ಬಲುಗೈ-ಬಲುಪರಾಕ್ರಮಿ, ಒತ್ತಿನಲ್ಲಿ-ಪಕ್ಕದಲ್ಲಿ.
ಟಿಪ್ಪನೀ (ಕ.ಗ.ಪ)
ಚೇಕಿತಾನ - ವೃಷ್ಣಿ ವಂಶದ ಕ್ಷತ್ರಿಯ. ಪಾಂಡವರ ಕಡೆ ಹೋರಾಡಿದವನು,
ಸಾತ್ಯಕಿ-ಈತನಿಗೆ ಯುಧಾಮ ಎಂಬುದು ಇನ್ನೊಂದು ಹೆಸರು ಸತ್ಯಕನ ಮಗ. ಯದುವಂಶದವನಾದ ಇವನು ಪಾಂಡವರ ಕಡೆ ಹೋರಾಡಿದವನು.
ಮೂಲ ...{Loading}...
ಅವರ ಹೊರೆಯಲಿ ಫಲುಗುಣಗೆ ಮಲೆ
ವವರ ಗಂಡನು ರಿಪುಕುಮಾರಕ
ನಿವಹ ಕಾಳಾನಳನು ನೋಡಭಿಮನ್ಯುವರ್ಜುನನ
ಕುವರನಿವ ಮಗುವಲ್ಲ ಬಲುಗೆ
ಯ್ಯವನ ಮೋಹರದೊತ್ತಿನಲಿ ನಿಂ
ದವರು ಸಾತ್ಯಕಿ ಚೇಕಿತಾನ ಪ್ರಮುಖ ನಾಯಕರು ॥14॥
೦೧೫ ಅವರೊಳೊನ್ದಕ್ಷೋಣಿಯದು ಮಾ ...{Loading}...
ಅವರೊಳೊಂದಕ್ಷೋಣಿಯದು ಮಾ
ಧವನ ಮನೆಯದು ಧೃಷ್ಟಕೇತು
ಪ್ರವರನಾತನು ಚೈದ್ಯನಂದನನವರ ಕೂಡಿಹನು
ಅವರ ಹೊರೆಯಲಿ ವೀರಸೇನಾ
ನಿವಹದೊಳು ಸಹದೇವನಾತನ
ಸವಹರೆಯ ನಕುಲಾಂಕನಿವರಾಹವ ಧುರಂಧರರು ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವರಲ್ಲಿ ಒಂದು ಅಕ್ಷೋಹಿಣಿ ಸೇನೆಯು ಮಾಧವನ ನೆಲೆಯಾದುದು. ಇಲ್ಲಿಯ ಶ್ರೇಷ್ಠನಾದ ಧೃಷ್ಟಕೇತು ಶಿಶುಪಾಲನ ಮಗನು, ಪಾಂಡವರ ಜತೆ ಸೇರಿದ್ದಾನೆ. ಅವರ ಪಕ್ಕದಲ್ಲಿ ಶೂರರ ಸೇನಾ ಪಡೆಯಲ್ಲಿ ಇರುವವನೇ ಸಹದೇವನು. ಆತನಿಗೆ ಸಮ ವಯಸ್ಕನಾದವನು ವೀರ ನಕುಲನು. ಇವರೆಲ್ಲರೂ ಯುದ್ಧದಲ್ಲಿ ವೀರಾಗ್ರಣಿಗಳು.
ಪಾಠಾನ್ತರ (ಕ.ಗ.ಪ)
(ಪಾ) ಚೈತ್ಯ ನಂದನನು ಅವರ ಕೂಡಿಹನು ಎಂಬ ಮಹಾ ಪಾಠಾಂತರ ಸಮಂಜಸವೆಂದು ತಿಳಿದು ಸ್ವೀಕರಿಸಿದೆ (ಕಂಡಿಹನು) ….
ಶ್ರೀ ಶೇಷಯ್ಯಂಗಾರ್ ಅವರ ಪರಿಷ್ಕರಣ
ಮೂಲ ...{Loading}...
ಅವರೊಳೊಂದಕ್ಷೋಣಿಯದು ಮಾ
ಧವನ ಮನೆಯದು ಧೃಷ್ಟಕೇತು
ಪ್ರವರನಾತನು ಚೈದ್ಯನಂದನನವರ ಕೂಡಿಹನು
ಅವರ ಹೊರೆಯಲಿ ವೀರಸೇನಾ
ನಿವಹದೊಳು ಸಹದೇವನಾತನ
ಸವಹರೆಯ ನಕುಲಾಂಕನಿವರಾಹವ ಧುರಂಧರರು ॥15॥
೦೧೬ ಇತ್ತಲಿದು ಕಲ್ಪಾನ್ತರುದ್ರನ ...{Loading}...
ಇತ್ತಲಿದು ಕಲ್ಪಾಂತರುದ್ರನ
ಮೊತ್ತ ಕಾಳೋರಗನ ಜಂಗುಳಿ
ಮೃತ್ಯುವಿನ ಮೋಹರ ಕೃತಾಂತನ ಥಟ್ಟು ಭೈರವನ
ತೆತ್ತಿಗರ ದಾವಣಿಯೊಳಣ್ಣನ
ಮತ್ತವಾರಣ ಭೀಮಸೇನನ
ನಿತ್ತ ನೋಡೈ ಮಗನೆ ಕುರುಕುಲ ಕೇಣಿಕಾರನನು ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನೇ, ಇತ್ತಕಡೆ ನೋಡು. ಪ್ರಳಯ ಕಾಲದ ರುದ್ರರು ಒಟ್ಟಿಗೆ ಸೇರಿದಂತಿರುವವನು, ಕಾಳ ಸರ್ಪಗಳ ಸಮೂಹದಂತಿರುವವನು, ಮೃತ್ಯು ಮಾಲೆಯಂತಿರುವವನು, ಯಮರಾಜರ ಪಡೆಯಂತಿರುವವನು, ಭೈರವನ ಸೇವಕರ ಗುಂಪಿಗೆ ನಾಯಕನಾಗಿರುವ, ಮದಗಜರೂಪಿ ಭೀಮಸೇನನು, ಕುರುವಂಶ ನಾಶಕಾರನಾದವನು ಈ ಕಡೆ ಇದ್ದಾನೆ.
ಪದಾರ್ಥ (ಕ.ಗ.ಪ)
ಕೇಣಿಕಾರ-ನಾಶಕಾರ, ದ್ವೇಷಿ, ಮತ್ತವಾರಣ-ಮದಗಜ, ಕಲ್ಪಾಂತರುದ್ರ-ಪ್ರಳಯಕಾಲದ ಶಿವ, ಕಾಳೋರಗ-ಕಾಳಸರ್ಪ, ಕೃತಾಂತ-ವಾಮನ, ತೆತ್ತಿಗ-ಸೇವಕ, ದಾವಣಿ-ಹಗ್ಗ
ಮೂಲ ...{Loading}...
ಇತ್ತಲಿದು ಕಲ್ಪಾಂತರುದ್ರನ
ಮೊತ್ತ ಕಾಳೋರಗನ ಜಂಗುಳಿ
ಮೃತ್ಯುವಿನ ಮೋಹರ ಕೃತಾಂತನ ಥಟ್ಟು ಭೈರವನ
ತೆತ್ತಿಗರ ದಾವಣಿಯೊಳಣ್ಣನ
ಮತ್ತವಾರಣ ಭೀಮಸೇನನ
ನಿತ್ತ ನೋಡೈ ಮಗನೆ ಕುರುಕುಲ ಕೇಣಿಕಾರನನು ॥16॥
೦೧೭ ಕೆಲದಲಾ ತರುವಾಯಲಾಹವ ...{Loading}...
ಕೆಲದಲಾ ತರುವಾಯಲಾಹವ
ದಳಲಿಗರ ಮೇಳದಲಿ ಮಕುಟದ
ಲಲಿತರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಲು
ಚಲತುರಂಗದ ಭಾರಿಯಾನೆಯ
ದಳದ ರಥದ ಪದಾತಿಮಧ್ಯದ
ಹೊಳಹಿನಲಿ ನಿಂದಾತನಾತ ಮಹೀಶ ಧರ್ಮಜನು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ತರುವಾಯ ಅಲ್ಲೇ ಪಕ್ಕದಲ್ಲಿ ಸಮರೋತ್ಸಾಹಿಗಳ ಸಮೂಹದಲ್ಲಿ, ಕಿರೀಟಗಳ ಸುಂದರ ರತ್ನಗಳ ಕಾಂತಿಯ ಪ್ರವಾಹ ಧಾರೆ ಅತಿಶಯಗೊಳ್ಳಲು, ಚಲಿಸುವ ಅಶ್ವಸೇನೆಯ, ಭಾರೀ ಗಜಸೇನೆಯ ರಥಾವಳಿಗಳ, ಕಾಲಾಳುಗಳ ಚತುರಂಗಬಲದ ನಡುವೆ ಪ್ರಕಾಶಮಾನವಾಗಿ ನಿಂತಿರುವವನೇ ದೊರೆ ಧರ್ಮರಾಜನು.
ಪದಾರ್ಥ (ಕ.ಗ.ಪ)
ಲಾವಣಿಗೆ-ಧಾರೆ,
ಮೂಲ ...{Loading}...
ಕೆಲದಲಾ ತರುವಾಯಲಾಹವ
ದಳಲಿಗರ ಮೇಳದಲಿ ಮಕುಟದ
ಲಲಿತರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಲು
ಚಲತುರಂಗದ ಭಾರಿಯಾನೆಯ
ದಳದ ರಥದ ಪದಾತಿಮಧ್ಯದ
ಹೊಳಹಿನಲಿ ನಿಂದಾತನಾತ ಮಹೀಶ ಧರ್ಮಜನು ॥17॥
೦೧೮ ಆತನೆಡವಙ್ಕದಲಿ ಹನುಮನ ...{Loading}...
ಆತನೆಡವಂಕದಲಿ ಹನುಮನ
ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ
ನೂತನಾಶ್ವ ನಿಕಾಯ ಖುರಪುಟ
ಧೂತಧೂಳೀಪಟಲವಿಹಿತ ನಿ
ಶಾತಘನ ಜಯಯುವತಿವಿಟನರ್ಜುನನ ನೋಡೆಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನ ಎಡಭಾಗದಲ್ಲಿ ಹನುಮದ್ಗಜದ ಗರ್ವಾತಿಶಯದಲ್ಲಿ, ಅಸ್ತ್ರಗಳಿಂದ ಸಜ್ಜಾಗಿರುವ, ಗೊರಸುಗಳಿಂದ ಮೇಲೆದ್ದ ಧೂಳಿನ ರಾಶಿಗಳಿಂದ ದಿಕ್ಕುಗಳನ್ನು ಕತ್ತಲೆಗೊಳಿಸುತ್ತಿರುವ ನೂತನವಾದ ಅಶ್ವ ಸಮೂಹದಿಂದ ಕೂಡಿರುವ, ನವೀನ ಚಿನ್ನದ ರಥದಲ್ಲಿ ವಿಜಯನಾರಿಯ ಮೋಹಿಯಾದ ಅರ್ಜುನನು ಅಲ್ಲಿದ್ದಾನೆ ನೋಡು ಎಂದ.
ಪದಾರ್ಥ (ಕ.ಗ.ಪ)
ಎಡವಂಕ-ಎಡಭಾಗ, ಗರುವಾಯಿ-ಗರ್ವ್ಪಾತಿಶಯ, ನವಶಾತಕುಂಭ-ನವೀನ ಚಿನ್ನದ, ವರೂಥ-ರಥ, ನೆರೆತೀವಿದ-ತುಂಬಿದ
ಮೂಲ ...{Loading}...
ಆತನೆಡವಂಕದಲಿ ಹನುಮನ
ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ
ನೂತನಾಶ್ವ ನಿಕಾಯ ಖುರಪುಟ
ಧೂತಧೂಳೀಪಟಲವಿಹಿತ ನಿ
ಶಾತಘನ ಜಯಯುವತಿವಿಟನರ್ಜುನನ ನೋಡೆಂದ ॥18॥
೦೧೯ ತಿಳಿಯಲೊಬ್ಬನ ರೋಮರೋಮದ ...{Loading}...
ತಿಳಿಯಲೊಬ್ಬನ ರೋಮರೋಮದ
ಕುಳಿಯೊಳಗೆ ಬ್ರಹ್ಮಾಂಡಕೋಟಿಯ
ಸುಳಿವು ಗಡ ಶ್ರುತಿನಿಕರವೊರಲಿದರೊಳಗುದೋರ ಗಡ
ಹಲವು ಮಾತೇನಾತನೀತನ
ಬಳಿಯ ಬಂಡಿಯ ಬೋವನಾಗಿಯೆ
ಸುಳಿವನಾತನ ನೋಡು ಮಗನೇ ವೀರನರಯಣನ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿಚಾರ ಮಾಡಿದರೆ ಯಾರ ಪ್ರತಿ ಕೂದಲಿನ ಬುಡದಲ್ಲಿ ಕೋಟಿ ಬ್ರಹ್ಮಾಂಡಗಳೇ ಕಾಣಿಸುತ್ತವೆಯೋ ! ವೇದ ಸಮೂಹಗಳು ಎಷ್ಟೇ ಮೊರೆಯಿಟ್ಟರೂ ಯಾರನ್ನು ಕಾಣಲಾಗುವುದಿಲ್ಲವೋ ಅಂತಹ ವೀರನಾರಾಯಣನಾದ ಶ್ರೀ ಕೃಷ್ಣನು ಈ ಅರ್ಜುನನ ರಥದ ಸಾರಥಿಯಾಗಿದ್ದಾನೆ.
ಪದಾರ್ಥ (ಕ.ಗ.ಪ)
ಬೋವ-ಸಾರಥಿ,
ಮೂಲ ...{Loading}...
ತಿಳಿಯಲೊಬ್ಬನ ರೋಮರೋಮದ
ಕುಳಿಯೊಳಗೆ ಬ್ರಹ್ಮಾಂಡಕೋಟಿಯ
ಸುಳಿವು ಗಡ ಶ್ರುತಿನಿಕರವೊರಲಿದರೊಳಗುದೋರ ಗಡ
ಹಲವು ಮಾತೇನಾತನೀತನ
ಬಳಿಯ ಬಂಡಿಯ ಬೋವನಾಗಿಯೆ
ಸುಳಿವನಾತನ ನೋಡು ಮಗನೇ ವೀರನರಯಣನ ॥19॥
೦೨೦ ಅದೆ ದುರನ್ತದ ...{Loading}...
ಅದೆ ದುರಂತದ ದುರುಳ ದೊದ್ದೆಯ
ಹದನ ಬಣ್ಣಿಸಲೆನಗೆ ನೂಕದು
ತುದಿಯಲರಿವೆನು ದಳದ ಮನ್ನೆಯ ಮಂಡಲೀಕರಲಿ
ಕದನವಿದು ಭಾರಂಕವಾರ
ಭ್ಯುದಯ ತಲೆದೋರುವುದೊ ನಮಗೇ
ಕಿದರ ಚಿಂತೆ ಮುರಾರಿ ಬಲ್ಲನು ಕಂದ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದಲ್ಲದೆ ದುರಂತಕ್ಕೆ ಒಳಗಾಗಲಿರುವ ಪರಾಕ್ರಮಶಾಲಿಗಳ ಈ ಸೈನ್ಯವನ್ನು ಬಣ್ಣಿಸಲು ನನಗೆ ಸಾಧ್ಯವಿಲ್ಲ. ಸೇನೆಯಲ್ಲಿ ಮುಖ್ಯರಾದ ಸಾಮಂತರು ಮಾಂಡಲೀಕರು ಮೊದಲಾದ ರಾಜರ ಬಗ್ಗೆ ತಿಳಿಸುವೆನು. ಕೊನೆಯಲ್ಲಿ ಈ ಸಮರವು ಘೋರಸಮರವಾಗಿದೆ. ಯಾರಿಗೆ ಗೆಲವು ದೊರಕುವುದು ಎಂಬುದರ ಬಗ್ಗೆ ನಮಗೇಕೆ ಚಿಂತೆ? ಈ ವಿಷಯವನ್ನು ಶ್ರೀಕೃಷ್ಣ ತಿಳಿದಿದ್ದಾನೆ. ಮಗನೇ ತಿಳಿದುಕೋ ಎಂದನು ಭೀಷ್ಮ.
ಪದಾರ್ಥ (ಕ.ಗ.ಪ)
ಎನಗೆ ನೂಕದು-ಎನಗೆ ಸಾಧ್ಯವಿಲ್ಲ, ಮುರಾರಿ-ಕೃಷ್ಣ, ಭಾರಂಕ-ಘೋರ ಸಮರ, ದೊದ್ದೆ-ಸೈನ್ಯ
ಮೂಲ ...{Loading}...
ಅದೆ ದುರಂತದ ದುರುಳ ದೊದ್ದೆಯ
ಹದನ ಬಣ್ಣಿಸಲೆನಗೆ ನೂಕದು
ತುದಿಯಲರಿವೆನು ದಳದ ಮನ್ನೆಯ ಮಂಡಲೀಕರಲಿ
ಕದನವಿದು ಭಾರಂಕವಾರ
ಭ್ಯುದಯ ತಲೆದೋರುವುದೊ ನಮಗೇ
ಕಿದರ ಚಿಂತೆ ಮುರಾರಿ ಬಲ್ಲನು ಕಂದ ಕೇಳೆಂದ ॥20॥
೦೨೧ ಅವರೊಳೇಳಕ್ಷೋಣಿಬಲ ನ ...{Loading}...
ಅವರೊಳೇಳಕ್ಷೋಣಿಬಲ ನ
ಮ್ಮವರೊಳಗೆ ಹನ್ನೊಂದು ಮತ್ತವ
ರಿವರ ಸಖ್ಯಕೆ ನೆರೆದುದೇಕಾದಶಶತಕ್ಷೋಣಿ
ತವಿಸುವರೆ ನನಗೊಂದು ದಿನ ಮೂ
ದಿವಸದಲಿ ಗುರುವೈದು ದಿವಸಕೆ
ರವಿಜ ನಿಮಿಷಕೆ ದ್ರೌಣಿ ನಿಮಿಷಾರ್ಧಕೆ ಧನಂಜಯನು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನೇ ಕೇಳು ಎಂದು ಭೀಷ್ಮನು ಹೇಳತೊಡಗಿದನು. ಪಾಂಡವರಲ್ಲಿ ಏಳು ಅಕ್ಷೋಹಿಣಿ ಸೇನೆ ಇದೆ. ನಮ್ಮಲ್ಲಿ 11 ಅಕ್ಷೋಹಿಣಿ ಸೇನೆ ಇದೆ. ಮತ್ತೆ ಆ ಕಡೆ ಮತ್ತು ಈ ಕಡೆ ಸ್ನೇಹದಿಂದ ಬಂದಿರುವ ಸೇನೆಯ ಲೆಕ್ಕವೆಂದರೆ ಹನ್ನೊಂದು ನೂರು ಕ್ಷೋಣಿಗಳು (ಕ್ಷೋಣಿ ಎಂದರೆ 17 ಅಂಕಿಗಳಷ್ಟು ಸಂಖ್ಯೆಯ ಸೇನೆ)? ಈ ಸೇನೆಯನ್ನು ನಾಶಮಾಡಲು ನನಗೆ ಒಂದು ದಿನ ಸಾಕು, ಗುರು ದ್ರೋಣನಾದರೋ, ಮೂರು ದಿವಸದಲ್ಲಿ ಸಂಹರಿಸಬಲ್ಲ, ಕರ್ಣನಾದರೋ ಐದು ದಿವಸಕ್ಕೆ ನಿರ್ನಾಮ ಮಾಡಬಲ್ಲ, ಅಶ್ವತ್ಥಾಮನಿಗೆ (ದ್ರೌಣಿ) ನಿಮಿಷ ಕಾಲವೇ ಸಾಕು. ಅರ್ಜುನನಾದರೇ ನಿಮಿಷಾರ್ಧದಲ್ಲಿ ಸೇನೆಯನ್ನು ಸಂಹರಿಸಬಲ್ಲ.
ಪದಾರ್ಥ (ಕ.ಗ.ಪ)
ತವಿಸುವರೆ-ನಾಶಮಾಡಲು, ದ್ರೌಣಿ-ಅಶ್ವತ್ಥಾಮ, ಅಕ್ಷೋಹಿಣಿ-ಕ್ಷೋಣಿ 17 ಅಂಕಿಗಳನ್ನೊಳಗೊಂಡ ಸಂಖ್ಯೆಯ (ಸೇನೆ)?
ಮೂಲ ...{Loading}...
ಅವರೊಳೇಳಕ್ಷೋಣಿಬಲ ನ
ಮ್ಮವರೊಳಗೆ ಹನ್ನೊಂದು ಮತ್ತವ
ರಿವರ ಸಖ್ಯಕೆ ನೆರೆದುದೇಕಾದಶಶತಕ್ಷೋಣಿ
ತವಿಸುವರೆ ನನಗೊಂದು ದಿನ ಮೂ
ದಿವಸದಲಿ ಗುರುವೈದು ದಿವಸಕೆ
ರವಿಜ ನಿಮಿಷಕೆ ದ್ರೌಣಿ ನಿಮಿಷಾರ್ಧಕೆ ಧನಂಜಯನು ॥21॥
೦೨೨ ಎನಲು ಗುರುತನಯನ ...{Loading}...
ಎನಲು ಗುರುತನಯನ ಸಘಾಟಕೆ
ಕೊನರಿತಾತನ ಮನವಜಾಂಡಕೆ
ತನುಪುಲಕದುಬ್ಬಿನಲಿ ಪಾರ್ಥನ ಪಟುಪರಾಕ್ರಮಕೆ
ಮೊನೆಗಣೆಯ ನುಡಿ ಸೋಂಕೆ ಕರ್ಣವ
ನಿನಿತು ಕುಸಿದ ರಸಾತಳಕೆ ಕುರು
ಜನಪನ ನಿಬದ್ಧಪ್ರಲಾಪವ ಬಿಡಿಸಿದನು ಭೀಷ್ಮ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಹೀಗೆಂದಾಗ ಕೌರವೇಶ್ವರನ ಮನದ ಹರ್ಷವು ಅಶ್ವತ್ಥಾಮನ ಪರಾಕ್ರಮಾಧಿಕ್ಯಕ್ಕೆ ಬ್ರಹ್ಮಾಂಡದವರೆಗೂ ಹಬ್ಬಿತು. ಆತನ ಶರೀರ ರೋಮಾಂಚನಗೊಂಡು ಉಬ್ಬಿತು. ಆದರೆ ಅರ್ಜುನನ ತೀಕ್ಷ್ಣ ಪರಾಕ್ರಮವನ್ನು ಕೇಳಿದೊಡನೆಯೆ ಮೊನಚಾದ ಬಾಣದಂತಹ ತೀವ್ರಾಘಾತದಿಂದ ರಸಾತಳಕ್ಕೆ ಕುಸಿದನು. ಆಗ ಭೀಷ್ಮನು ಕೌರವನನ್ನು ಆವರಿಸಿದ ದುಗುಡವನ್ನು ಹೋಗಲಾಡಿಸಿದನು.
ಪದಾರ್ಥ (ಕ.ಗ.ಪ)
ಸಘಾಟ-ಪರಾಕ್ರಮ, ಅಜಾಂಡ-ಬ್ರಹ್ಮಾಂಡ, ರಸಾತಳ-ಭೂಮಿಯ ಕೆಳಗಿರುವ ಏಳು ಲೋಕಗಳಲ್ಲಿ ನಾಲ್ಕನೆಯದು (ಅತಲ, ವಿತಲ, ಸುತಲ, ರಸಾತಲ, ತಲಾತಲ, ಮಹಾತಲ, ಪಾತಾಲ), ನಿಬದ್ಧ ಪ್ರಲಾಪ-ಆವರಿಸಿದ ದುಃಖ
ಮೂಲ ...{Loading}...
ಎನಲು ಗುರುತನಯನ ಸಘಾಟಕೆ
ಕೊನರಿತಾತನ ಮನವಜಾಂಡಕೆ
ತನುಪುಲಕದುಬ್ಬಿನಲಿ ಪಾರ್ಥನ ಪಟುಪರಾಕ್ರಮಕೆ
ಮೊನೆಗಣೆಯ ನುಡಿ ಸೋಂಕೆ ಕರ್ಣವ
ನಿನಿತು ಕುಸಿದ ರಸಾತಳಕೆ ಕುರು
ಜನಪನ ನಿಬದ್ಧಪ್ರಲಾಪವ ಬಿಡಿಸಿದನು ಭೀಷ್ಮ ॥22॥
೦೨೩ ತಾಗಲನುಗೈದುಭಯಬಲ ಕೈ ...{Loading}...
ತಾಗಲನುಗೈದುಭಯಬಲ ಕೈ
ಲಾಗನೀಕ್ಷಿಸುತಿರಲು ರಿಪುಬಲ
ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು
ತೂಗಿದನು ಶಿರವನು ಮಹಾಹವ
ವೀಗಲಾಗದ ಮುನ್ನ ಭೇದದ
ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡೂ ಕಡೆಯ ಸೇನೆ ಒಂದನ್ನೊಂದು ಸಂಧಿಸಿ ಹೋರಾಡಲು ಸಿದ್ಧವಾಗಿ ತಮ್ಮ ನಾಯಕರ ಕೈಸನ್ನೆಯನ್ನು ನಿರಿಕ್ಷಿಸುತ್ತಿರಲು, ಧರ್ಮರಾಯನು ಶತ್ರುಸೇನಾ ಸಾಗರದ ಸಡಗರ ಸಂಭ್ರಮಗಳನ್ನು ಚೆನ್ನಾಗಿ ಗಮನಿಸಿ ತಲೆದೂಗಿದನು. ಈಗಲಾದರೂ ಘೋರ ಮಹಾಯುದ್ಧವು ಸಂಭವಿಸುವ ಮೊದಲು ಭೇದೋಪಾಯ ಕೌಶಲದಿಂದ ಭೀಷ್ಮಾಚಾರ್ಯರೇ ಮೊದಲಾದ ಹಿರಿಯರ ಮನಸ್ಸನ್ನು ಒಲಿಸಿಕೊಳ್ಳಬೇಕೆಂದು ತನ್ನಲ್ಲಿಯೇ ಅಂದುಕೊಂಡನು.
ಪದಾರ್ಥ (ಕ.ಗ.ಪ)
ಲಾಗು-ಚಾತುರ್ಯ, ಕೌಶಲ್ಯ,
ಸೌರಂಭ-ಸಡಗರ ಸಂಭ್ರಮ
ಮೂಲ ...{Loading}...
ತಾಗಲನುಗೈದುಭಯಬಲ ಕೈ
ಲಾಗನೀಕ್ಷಿಸುತಿರಲು ರಿಪುಬಲ
ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು
ತೂಗಿದನು ಶಿರವನು ಮಹಾಹವ
ವೀಗಲಾಗದ ಮುನ್ನ ಭೇದದ
ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ ॥23॥
೦೨೪ ಬನ್ದು ಭೀಷ್ಮನ ...{Loading}...
ಬಂದು ಭೀಷ್ಮನ ಚರಣಕಮಲ
ದ್ವಂದ್ವದಲಿ ಚಾಚಿದನು ಮಕುಟವ
ನಿಂದಿನಾಹವದೊಳಗೆ ನಮಗಿನ್ನೇನು ನಿರ್ವಾಹ
ನಿಂದು ನೀವ್ ಕಾದುವರೆ ನಮಗಿ
ನ್ನೆಂದು ಹರಿವುದು ಬವರವೆಮಗೇ
ನೆಂದು ಬೆಸಸಿದಿರೆನುತ ಕರುಣವ ತೋರಿದನು ಭೂಪ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಧರ್ಮಜನು ತನ್ನ ಸೇನಾಮಧ್ಯದಿಂದ ಹೊರಟು ಭೀಷ್ಮನ ಬಳಿಗೆ ಬಂದು ಆತನ ಪಾದಕಮಲದ್ವಯದಲ್ಲಿ ನಮಿಸಿದನು. ತಾತ, ಈ ದಿವಸದ ಯುದ್ಧದಲ್ಲಿ ನಮಗೆ ನಿರ್ವಹಿಸಬೇಕಾದ ಕಾರ್ಯ ಏನಿದೆ ? ನೀವೇ ಸ್ವತಃ ನಿರ್ಧರಿಸಿ. ಯುದ್ಧ ಮಾಡುವುದಾದರೆ ನಮ್ಮ ಸಾಲಿಗೆ ಯಾವ ಕಾಲಕ್ಕೆ ಯುದ್ಧವು ಮುಗಿಯುತ್ತದೆ ? ನಮಗೆ ಏನು ಮಾಡಬೇಕೆಂದು ಅಪ್ಪಣೆ ಕೊಡುವಿರಿ ಎಂದು ಧರ್ಮಜ ಭೀಷ್ಮನಲ್ಲಿ ಧೈನ್ಯಭಾವ ತೋರಿದನು.
ಮೂಲ ...{Loading}...
ಬಂದು ಭೀಷ್ಮನ ಚರಣಕಮಲ
ದ್ವಂದ್ವದಲಿ ಚಾಚಿದನು ಮಕುಟವ
ನಿಂದಿನಾಹವದೊಳಗೆ ನಮಗಿನ್ನೇನು ನಿರ್ವಾಹ
ನಿಂದು ನೀವ್ ಕಾದುವರೆ ನಮಗಿ
ನ್ನೆಂದು ಹರಿವುದು ಬವರವೆಮಗೇ
ನೆಂದು ಬೆಸಸಿದಿರೆನುತ ಕರುಣವ ತೋರಿದನು ಭೂಪ ॥24॥
೦೨೫ ನೀವರಿಯಲಾವುತ್ತರಾಯಿಗ ಳಾವ ...{Loading}...
ನೀವರಿಯಲಾವುತ್ತರಾಯಿಗ
ಳಾವ ಪರಿಯಲು ಕೌರವರು ಬಹ
ಳಾವಮಾನವನೆಮಗೆ ನೆಗಳಿದರೆಮ್ಮ ಸತ್ಯವನು
ನೀವು ಮೆಚ್ಚಲು ನಡಸಿದೆವು ತಲೆ
ಗಾವುದುಂಟೇ ಕರುಣಿಸಲ್ಲದ
ಡಾವ ಹದನೆಂದೆವಗೆ ನೇಮವ ಕೊಟ್ಟು ಕಳುಹೆಂದ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ತಿಳಿದಿರುವ ಹಾಗೆ ನಾವು ರಾಜ್ಯಕ್ಕೆ ಉತ್ತರಾಧಿಕಾರಿಗಳು. ಕೌರವರು ಎಲ್ಲಾ ಬಗೆಯಲ್ಲೂ ಅಧಿಕ ಅವಮಾನವನ್ನು ಮಾಡಿದರು. ನೀವು ಒಪ್ಪುವಂತೆ ನಾವು ಸತ್ಯಮಾರ್ಗದಲ್ಲಿ ನಡೆದೆವು. ನಮ್ಮ ಪ್ರಾಣಗಳನ್ನು ಉಳಿಸುವ ಉದ್ದೇಶ ನಿಮಗಿದೆಯೆ ? ಹಾಗಾದರೆ ನಮ್ಮ ಮೇಲೆ ದಯೆ ತೋರಿ. ಹಾಗಿಲ್ಲದಿದ್ದರೆ ನಮಗೆ ಯಾವ ದಾರಿ (ಮಾಡಬೇಕಾದ ಕೆಲಸವೇನು?) ಎಂಬುದಾಗಿ ಅಪ್ಪಣೆ ಮಾಡಿ ಕಳಿಸಿಕೊಡಿ ಎಂದನು.
ಪದಾರ್ಥ (ಕ.ಗ.ಪ)
ಉತ್ತರಾಯಿ-ಉತ್ತರಾಧಿಕಾರಿ, ನೆಗಳಿದರು-ಮಾಡಿದರು, ತಲೆಕಾವುದು-ಪ್ರಾಣ ಉಳಿಸುವುದು,
ಮೂಲ ...{Loading}...
ನೀವರಿಯಲಾವುತ್ತರಾಯಿಗ
ಳಾವ ಪರಿಯಲು ಕೌರವರು ಬಹ
ಳಾವಮಾನವನೆಮಗೆ ನೆಗಳಿದರೆಮ್ಮ ಸತ್ಯವನು
ನೀವು ಮೆಚ್ಚಲು ನಡಸಿದೆವು ತಲೆ
ಗಾವುದುಂಟೇ ಕರುಣಿಸಲ್ಲದ
ಡಾವ ಹದನೆಂದೆವಗೆ ನೇಮವ ಕೊಟ್ಟು ಕಳುಹೆಂದ ॥25॥
೦೨೬ ಏಳು ಮಗನೇ ...{Loading}...
ಏಳು ಮಗನೇ ನಮ್ಮ ಮತಿಯನು
ಕೇಳೆನುತ ಭೂಪಾಲ ತಿಲಕನ
ಮೌಳಿಯನು ನೆಗಹಿದನು ಗಂಗಾಸೂನು ನಸುನಗುತ
ಆಳುಗೊಂಡನು ಕೌರವನು ಪರ
ರಾಳುತನವೆಮಗಾಯ್ತು ಪರಸೇ
ವಾ ಲಘುಸ್ಥಿತರೆಮ್ಮನೇತಕೆ ನುಡಿಸಿದಪೆಯೆಂದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಷ್ಮನು ಧರ್ಮರಾಜನನ್ನು ನೋಡಿ ಮುಗುಳ್ನಗೆಯಿಂದ, ಕಾಲಿಗೆ ಬಿದ್ದ ಧರ್ಮಜನನ್ನು ಮಗನೇ ಏಳು ಎಂದು ಧರ್ಮಜನ ತಲೆಯನ್ನು ಮೇಲೆತ್ತಿದ್ದನು. ದುರ್ಯೋಧನನು ನಮ್ಮನ್ನು ಪೋಷಿಸಿ ಅಧೀನನನ್ನಾಗಿ ಮಾಡಿಕೊಂಡನು. ಪರಾಧೀನತೆ ನಮಗೆ ಉಂಟಾಯಿತು. ಪರರ ಸೇವೆಯಿಂದ ಸಣ್ಣವರಾಗಿದ್ದೇವೆ ನಾವು. ನಮ್ಮನ್ನು ಏತಕ್ಕೆ ಕೇಳಿಕೊಳ್ಳುವೆ ಎಂದು ಭೀಷ್ಮನು ಹೇಳಿದನು.
ಪದಾರ್ಥ (ಕ.ಗ.ಪ)
ನೆಗಹಿದನು-ಮೇಲಕ್ಕೆತ್ತಿದನು, ಪರಸೇವಾ ಲಘುಸ್ಥಿತರು-ಅನ್ಯರ ಸೇವೆಯಲ್ಲಿ ಅಲ್ಪರಾಗಿರುವವರು, ಏತಕೆ ನುಡಿಸಿದಪೆ-ಏತಕ್ಕೆ ನಮ್ಮನ್ನು ಕೇಳಿಕೊಳ್ಳುವೆ,
ಮೂಲ ...{Loading}...
ಏಳು ಮಗನೇ ನಮ್ಮ ಮತಿಯನು
ಕೇಳೆನುತ ಭೂಪಾಲ ತಿಲಕನ
ಮೌಳಿಯನು ನೆಗಹಿದನು ಗಂಗಾಸೂನು ನಸುನಗುತ
ಆಳುಗೊಂಡನು ಕೌರವನು ಪರ
ರಾಳುತನವೆಮಗಾಯ್ತು ಪರಸೇ
ವಾ ಲಘುಸ್ಥಿತರೆಮ್ಮನೇತಕೆ ನುಡಿಸಿದಪೆಯೆಂದ ॥26॥
೦೨೭ ಹಿರಿಯನಾಗಲಿ ಸುಜನನಾಗಲಿ ...{Loading}...
ಹಿರಿಯನಾಗಲಿ ಸುಜನನಾಗಲಿ
ಗರುವನಾಗಲಿ ಅರ್ಥವುಳ್ಳನ
ಚರಣಸೇವಾಪರರು ಜಗದಲಿ ವರ್ತಮಾನವಿದು
ಪರರ ಭಜಕರೊಳಾವಗುಣವಾ
ವಿರವದಾವಗ್ಗಳಿಕೆ ಯಾವುದು
ಗರುವತನವೈ ತಂದೆ ಪುರುಷಾಧಮನು ತಾನೆಂದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಪ್ಪಾ ಮಗನೆ, ಲೋಕದಲ್ಲಿ ಮನುಷ್ಯ ಎಷ್ಟೇ ದೊಡ್ಡ ವ್ಯಕ್ತಿ ಆಗಿರಲಿ, ಸಜ್ಜನನೇ ಆಗಿರಲಿ ಗೌರವಶಾಲಿಯೇ ಆಗಿರಲಿ ಹಣವುಳ್ಳವನ ಸೇವೆ ಮಾಡುವುದು ಜಗತ್ತಿನ ವಸ್ತುಸ್ಥಿತಿ ಆಗಿದೆ. ಪರರ ಸೇವೆಯಲ್ಲಿರುವವರಲ್ಲಿ ಆವ ಸದ್ಗುಣವಿರುತ್ತದೆ ? ನಾವು ಇರುವ ರೀತಿಯಲ್ಲಿ ಏನು ಘನತೆಯಿದೆ ? ಯಾವ ಗೌರವವಿದೆ ನಮ್ಮಲ್ಲಿ, ಅಪ್ಪಾ, ನಾನು ಪುರುಷರಲ್ಲಿ ಅಧಮನಾಗಿದ್ದೇನೆ. ನನ್ನಿಂದ ಏನು ನೆರವು ದೊರಕೀತು ಎಂದು ಧರ್ಮಜನಿಗೆ ಭೀಷ್ಮನು ಹೇಳಿದನು.
ಮೂಲ ...{Loading}...
ಹಿರಿಯನಾಗಲಿ ಸುಜನನಾಗಲಿ
ಗರುವನಾಗಲಿ ಅರ್ಥವುಳ್ಳನ
ಚರಣಸೇವಾಪರರು ಜಗದಲಿ ವರ್ತಮಾನವಿದು
ಪರರ ಭಜಕರೊಳಾವಗುಣವಾ
ವಿರವದಾವಗ್ಗಳಿಕೆ ಯಾವುದು
ಗರುವತನವೈ ತಂದೆ ಪುರುಷಾಧಮನು ತಾನೆಂದ ॥27॥
೦೨೮ ಕೌರವನ ಧನವೆಮ್ಬ ...{Loading}...
ಕೌರವನ ಧನವೆಂಬ ಘನಸಂ
ಸಾರಗುಣದೊಳು ಬದ್ಧನಾದೆನು
ಧೀರ ನಾನೇಗೈವೆನೆನೆ ಯಮಸೂನು ಕೈಮುಗಿದು
ವೈರವೃತ್ತಿಯ ರಣದೊಳೆಮಗಿ
ನ್ನಾರು ಗತಿ ನೀನುಭಯನೃಪರಿಗೆ
ಕಾರಣಿಕ ನೀ ಮುನಿದಡೆಮಗಿನ್ನಾಸೆಯಿಲ್ಲೆಂದ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸಂಸಾರದಲ್ಲಿ ಕೌರವನ ಹಣವೆಂಬ ಗಟ್ಟಿಯಾದ ಹಗ್ಗದಲ್ಲಿ ಬಂಧಿತನಾಗಿದ್ದೇನೆ. ಧೀರ ಧರ್ಮಜನೆ ನಾನೇನು ಮಾಡಬಲ್ಲೆ ಎನ್ನಲಾಗಿ ಧರ್ಮರಾಯನು ಕೈಮುಗಿದು ಭೀಷ್ಮನಿಗೆ ಹೇಳಿದನು. ರಣದೊಳಗೆ ದ್ವೇಷ ಸಾಧಿಸಲು ಸೇರಿರುವ ಕೌರವರ ನಡುವೆ ರಣರಂಗದಲ್ಲಿ ನಮಗೆ ಬೇರೆ ಯಾರು ದಿಕ್ಕಿದ್ದಾರೆ ? ನೀವು ಕೌರವರಿಗೂ ನಮಗೂ ಕಾರಣಪುರುಷರಾದವರು. ನೀವು ಕೋಪಿಸಿಕೊಂಡರೆ ನಮಗೆ ಇನ್ನು ಬದುಕುವ ಆಸೆ ಇಲ್ಲ ಎಂದನು.
ಪದಾರ್ಥ (ಕ.ಗ.ಪ)
ಗುಣ-ಹಗ್ಗ, ಬಂಧನ, ಕಾರಣಿಕ-ಕಾರಣಪುರುಷ
ಮೂಲ ...{Loading}...
ಕೌರವನ ಧನವೆಂಬ ಘನಸಂ
ಸಾರಗುಣದೊಳು ಬದ್ಧನಾದೆನು
ಧೀರ ನಾನೇಗೈವೆನೆನೆ ಯಮಸೂನು ಕೈಮುಗಿದು
ವೈರವೃತ್ತಿಯ ರಣದೊಳೆಮಗಿ
ನ್ನಾರು ಗತಿ ನೀನುಭಯನೃಪರಿಗೆ
ಕಾರಣಿಕ ನೀ ಮುನಿದಡೆಮಗಿನ್ನಾಸೆಯಿಲ್ಲೆಂದ ॥28॥
೦೨೯ ಮಾನನಿಧಿ ಕೇಳ್ ...{Loading}...
ಮಾನನಿಧಿ ಕೇಳ್ ಕೌರವಂಗಾ
ಧೀನವೆನ್ನಯ ತನು ವಿಧಾತ್ರಾ
ಧೀನವೆನ್ನಯ ಜೀವವದು ಕಾರಣದಿನಾಹವಕೆ
ನೀನು ಚಿಂತಿಸಬೇಡ ನನ್ನವ
ಸಾನಕಾಲಕೆ ಮತ್ತೆ ಬರಲು ನಿ
ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾನನಿಧಿ ಧರ್ಮಜನೇ ಕೇಳು ಕೌರವನ ಹಣದಿಂದ ಪೋಷಿತವಾದ ಈ ಎನ್ನ ಶರೀರವು ಕೌರವನಿಗೆ ವಶವಾಗಿರುವುದು. ನನ್ನ ಪ್ರಾಣ ಬ್ರಹ್ಮನ ಅಧೀನವಾಗಿದೆ. ಆದಕಾರಣ ಯುದ್ಧದ ವಿಷಯದಲ್ಲಿ ನೀನು ಕಳವಳ ಪಡಬೇಡ. ನನ್ನ ಕೊನೆಗಾಲಕ್ಕೆ ನೀನು ಮತ್ತೆ ಬಂದರೆ ಸೂಕ್ತ ಸಲಹೆಯನ್ನು ನೀಡುತ್ತೇನೆ ಎಂದು ಧರ್ಮಜನನ್ನು ಸಮಾಧಾನ ಪಡಿಸಿದನು.
ಪದಾರ್ಥ (ಕ.ಗ.ಪ)
ವಿಧಾತ್ರ-ಬ್ರಹ್ಮ, ಆಹವ-ಯುದ್ಧ, ಅವಸಾನಕಾಲ-ಕೊನೆಗಾಲ, ನಿದಾನ-ಸೂಕ್ತ ಸಲಹೆ, ನೆರೆ-ಚೆನ್ನಾಗಿ, ಬುದ್ಧಿ ಕಲಿಸುವೆನು-ಹೇಳಿಕೊಡುತ್ತೇನೆ.
ಮೂಲ ...{Loading}...
ಮಾನನಿಧಿ ಕೇಳ್ ಕೌರವಂಗಾ
ಧೀನವೆನ್ನಯ ತನು ವಿಧಾತ್ರಾ
ಧೀನವೆನ್ನಯ ಜೀವವದು ಕಾರಣದಿನಾಹವಕೆ
ನೀನು ಚಿಂತಿಸಬೇಡ ನನ್ನವ
ಸಾನಕಾಲಕೆ ಮತ್ತೆ ಬರಲು ನಿ
ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ ॥29॥
೦೩೦ ಎನೆ ಹಸಾದವೆನುತ್ತ ...{Loading}...
ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜನುಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣ ಕಮಲದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆಂದು ಭೀಷ್ಮನು ಧರ್ಮರಾಜನಿಗೆ ತಿಳಿಸಲು ‘ನಿಮ್ಮದಯೆ ಇದ್ದಂತಾಗಲಿ’ ಎಂದು ಹೇಳಿ ಶ್ರೇಷ್ಠಮತಿ ಧರ್ಮರಾಜನು ಅವನಿಂದ ಬೀಳ್ಕೊಂಡು ಭೀಷ್ಮನ ಸೂಕ್ತ ಮಾತುಗಳನ್ನು ಮತ್ತೆ ಮತ್ತೆ ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತಾ ರೋಮಾಂಚನ ಹೊಂದಿ ಮುಂದೆ ಬರುತ್ತಿರಲು, ಜತೆಯಲ್ಲಿದ್ದ ಶೂರ ಭಟರು ತಾವುತಾವೇ ದೂರ ಸರಿದರು. ಪಾಂಡುಪುತ್ರ ಧರ್ಮರಾಯನು ದ್ರೋಣನ ಪಾದಕಮಲಗಳಲ್ಲಿ ಮೈಚಾಚಿದನು.
ಮೂಲ ...{Loading}...
ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜನುಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣ ಕಮಲದಲಿ ॥30॥
೦೩೧ ಅರಸ ಬನ್ದನಪೂರ್ವವಾಯಿತು ...{Loading}...
ಅರಸ ಬಂದನಪೂರ್ವವಾಯಿತು
ದರುಶನವು ತನಗೆನುತ ಗರುಡಿಯ
ಗುರು ಮಹೀಪಾಲಕನ ಮಕುಟವನೆತ್ತಿದನು ಬಳಿಕ
ಬರಸೆಳೆದು ಬಿಗಿಯಪ್ಪಿದನು ಸಂ
ಗರದ ಸಮಯದಲೇಕೆ ಬಂದಿರಿ
ಭರವಸದ ಬಗೆಯೇನು ಬಿನ್ನಹಮಾಡು ಸಾಕೆಂದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಓಹೋ ! ಧರ್ಮರಾಜ ದೊರೆ ಬಂದನು. ನನಗೆ ನಿನ್ನ ದರುಶನವು ಅಪೂರ್ವ ಭಾಗ್ಯವಾಯಿತು ಎಂದು ಹೇಳುತ್ತಾ ಗರುಡಿ ಆಚಾರ್ಯನಾದ (ಶಿಕ್ಷಾಗುರುವಾದ) ದ್ರೋಣಚಾರ್ಯರು ಅರಸಾದ ಧರ್ಮರಾಯನ ತಲೆಯನ್ನೆತ್ತಿದನು. ಅನಂತರ ಬಳಿಗೆ ಸೆಳೆದುಕೊಂಡು ಬಲವಾಗಿ ಆಲಿಂಗಿಸಿಕೊಂಡನು. ಯುದ್ಧಕಾಲದಲ್ಲಿ ಶತ್ರು ಪಕ್ಷದಲ್ಲಿರುವ ನನ್ನನ್ನು ನೋಡಲು ಏಕೆ ಬಂದಿರಿ ? ಯಾವ ಭರವಸೆಯನ್ನು ನಿರೀಕ್ಷಿಸಿ ಬಂದೆ ? ಅದರ ವಿಚಾರವೇನು ತಿಳಿಸು ಸಾಕು ; ಬೇರೆ ವಿಷಯ ಹಾಗಿರಲಿ ಎಂದನು.
ಪದಾರ್ಥ (ಕ.ಗ.ಪ)
ಗರುಡಿಯ ಗುರು-ಶಿಕ್ಷಾಚಾರ್ಯ (ದ್ರೋಣ), ಮಹೀಪಾಲಕ - ದೊರೆ (ಧರ್ಮರಾಜ),
ಮೂಲ ...{Loading}...
ಅರಸ ಬಂದನಪೂರ್ವವಾಯಿತು
ದರುಶನವು ತನಗೆನುತ ಗರುಡಿಯ
ಗುರು ಮಹೀಪಾಲಕನ ಮಕುಟವನೆತ್ತಿದನು ಬಳಿಕ
ಬರಸೆಳೆದು ಬಿಗಿಯಪ್ಪಿದನು ಸಂ
ಗರದ ಸಮಯದಲೇಕೆ ಬಂದಿರಿ
ಭರವಸದ ಬಗೆಯೇನು ಬಿನ್ನಹಮಾಡು ಸಾಕೆಂದ ॥31॥
೦೩೨ ಎವಗೆ ದೈವವು ...{Loading}...
ಎವಗೆ ದೈವವು ನೀನು ಗುರು ನೀ
ನೆವಗೆ ತಾತನು ನೀನು ಮಹದಾ
ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ
ಅವನಿಯಭಿಲಾಷೆಯಲಿ ತೆತ್ತುದು
ಬವರವೆಮಗಿನ್ನೇನು ಗತಿ ಕೌ
ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ನಮ್ಮ ಪಾಲಿಗೆ ದೇವರು. ನೀನು ಗುರು, ನೀನು ನಮಗೆ ತಂದೆ. ಈ ಮಹಾಯುದ್ಧದಲ್ಲಿ ದಯೆತೋರಿ ಕಾಪಾಡುವ ಧಣಿ ನೀನು. ರಾಜ್ಯದ ಆಸೆಯಿಂದ ಕೌರವರಿಗೂ ನಮಗೂ ಯುದ್ಧ ಒದಗಿತು (ಸೇರಿತು). ನಮಗೆ ಇನ್ನೇನು ದಾರಿ ಮುಂದಕ್ಕೆ ? ಕೌರವರನ್ನು ಜಯಿಸುವ ಬಗೆ ಏನು ? ಎಂಬುದಾಗಿ ಧರ್ಮರಾಯ ದ್ರೋಣನಲ್ಲಿ ಕೇಳಿದನು.
ಪದಾರ್ಥ (ಕ.ಗ.ಪ)
ತಾತ (ತ್ರಾತ)-ತಂದೆ, ಪತಿಕರಿಸಿ-ದಯೆತೋರಿ, ತೆತ್ತುದು (ತತ್ತುದು)-ಉಂಟಾಯಿತು, ಒದಗಿತು
ಟಿಪ್ಪನೀ (ಕ.ಗ.ಪ)
ಮಹದಾಹವ ಎಂಬುದು ಸಂಸ್ಕೃತ ಸಮಾಸ ಪದ, ಕರ್ಮಧಾರಯ ಸಮಾಸ. ಮಹಾಹವ ಎಂಬುದು ಸಾಧು ರೂಪ. ಆದರೆ ಇಲ್ಲಿ ಮಹಾಹವ ಶಬ್ದ ಬಳಸಿದರೆ 1 ಮಾತ್ರೆ ಕಡಿಮೆ ಆಗುತ್ತದೆ 2ನೇ ಸಾಲಿನಲ್ಲಿ. ಮಹಾಂತರ + ಆಹವ (ದೊಡ್ಡವರ ಯುದ್ಧ) ಎಂದು ವಿಗ್ರಹ ವಾಕ್ಯ ಮಾಡಿ ಷ, ತ, ಸ ಮಾಡಿದರೆ ಮಹದಾಹವ ಎಂದಾಗುತ್ತದೆ (ಆದರೆ ಅರ್ಥ ಸುರಸವಲ್ಲ) ಎಚ್. ಶೇಷಯ್ಯಂಗಾರ್ ಟಿಪ್ಪಣಿ.
ಮೂಲ ...{Loading}...
ಎವಗೆ ದೈವವು ನೀನು ಗುರು ನೀ
ನೆವಗೆ ತಾತನು ನೀನು ಮಹದಾ
ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ
ಅವನಿಯಭಿಲಾಷೆಯಲಿ ತೆತ್ತುದು
ಬವರವೆಮಗಿನ್ನೇನು ಗತಿ ಕೌ
ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ ॥32॥
೦೩೩ ಅರಸ ಕೇಳರ್ಥಕ್ಕೆ ...{Loading}...
ಅರಸ ಕೇಳರ್ಥಕ್ಕೆ ಧರಣೀ
ಶ್ವರರು ಕಿಂಕರರರ್ಥ ತಾ ಕಿಂ
ಕರತೆಯನು ಮಾಡುವುದು ಜಗದಲಿ ವರ್ತಮಾನವಿದು
ನಿರುತ ಕೌರವನರ್ಥದಲಿ ಕಿಂ
ಕರತೆಮಗಾಯಿತ್ತು ರಾಜ್ಯೈ
ಶ್ವರಿಯ ಸೇವಾಪರರಿಗೀ ಸ್ವಾತಂತ್ರ ್ಯವಿಲ್ಲೆಂದ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮಜನೇ ಕೇಳು, ಲೋಕದಲ್ಲಿ ರಾಜರು ಹಣಕ್ಕೆ ದಾಸರು. ಜಗತ್ತಿನಲ್ಲಿ ಸಿರಿಯು ತಾನು ದಾಸ್ಯವನ್ನು ಉಂಟುಮಾಡುತ್ತದೆ. ಇದು ಲೋಕದ ವಸ್ತು ಸ್ಥಿತಿ. ದುರ್ಯೋಧನನ ಧನದಿಂದ ನಮಗೆ ಆಳುತನ ನಿಜಕ್ಕೂ ಉಂಟಾಗಿದೆ. ಆಳತಕ್ಕ ರಾಜರ ಐಶ್ವರ್ಯಕ್ಕಾಗಿ ಅವರಿಗೆ ಸೇವಕರಾದವರಿಗೆ ಸ್ವತಂತ್ರವಾಗಿ ವರ್ತಿಸುವ ಅಧಿಕಾರವಿಲ್ಲ ಎಂದು ದ್ರೋಣ ಹೇಳಿದನು.
ಮೂಲ ...{Loading}...
ಅರಸ ಕೇಳರ್ಥಕ್ಕೆ ಧರಣೀ
ಶ್ವರರು ಕಿಂಕರರರ್ಥ ತಾ ಕಿಂ
ಕರತೆಯನು ಮಾಡುವುದು ಜಗದಲಿ ವರ್ತಮಾನವಿದು
ನಿರುತ ಕೌರವನರ್ಥದಲಿ ಕಿಂ
ಕರತೆಮಗಾಯಿತ್ತು ರಾಜ್ಯೈ
ಶ್ವರಿಯ ಸೇವಾಪರರಿಗೀ ಸ್ವಾತಂತ್ರ ್ಯವಿಲ್ಲೆಂದ ॥33॥
೦೩೪ ಆದರೆಮಗಿನ್ನೇನು ಗತಿ ...{Loading}...
ಆದರೆಮಗಿನ್ನೇನು ಗತಿ ರಣ
ವಾದಸಿದ್ಧಿಯದೆಂತು ಜಯಸಂ
ಪಾದಕರು ನಮಗಾರೆನಲು ಗುರು ಕೇಳಿ ನಸುನಗುತ
ಕಾದುವಾ ಸಮಯದೊಳಗಪ್ರಿಯ
ವಾದ ನುಡಿಗಳ ಕೇಳಿದಾಕ್ಷಣ
ಮೇದಿನಿಯೊಳಾವಿರೆವು ಚಿಂತಿಸಬೇಡ ಹೋಗೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ನೀವು ಕೌರವನ ಮಾತಿನಂತೆ ನಡೆಯುವುದಾದರೆ ನಮಗೆ ಮತ್ತೇನು ದಾರಿ ? ಯುದ್ಧದಲ್ಲಿ ಜಯಸಿದ್ಧಿ ನಮಗೆ ಹೇಗೆ ಸಾಧ್ಯವಾದೀತು ? ನಮಗೆ ಯುದ್ಧದಲ್ಲಿ ಮುಂದೆ ನಿಂತು ಗೆಲುವನ್ನು ತಂದುಕೊಡುವರು ಇನ್ನಾರಿದ್ದಾರೆ ? ಎಂಬುದಾಗಿ ಕೇಳಿದಾಗ. ದ್ರೋಣ ನಸು ನಕ್ಕು ಹೇಳಿದ. ಯುದ್ಧದ ಸಮಯದಲ್ಲಿ ಅಹಿತವಾದ ಸುದ್ದಿಯನ್ನು ಕೇಳಿದ ಕೂಡಲೇ ಈ ಭೂಮಿಯ ಮೇಲೆ ನಾವು ಇರುವುದಿಲ್ಲ ಯೋಚಿಸಬೇಡ. ನೀನು ತೆರಳು ಎಂದು ಧರ್ಮಜನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ರಣವಾದ ಸಿದ್ಧಿ-ಯುದ್ಧದಲ್ಲಿ ಗೆಲುವಾಗುವ ಬಗೆ,
ಮೂಲ ...{Loading}...
ಆದರೆಮಗಿನ್ನೇನು ಗತಿ ರಣ
ವಾದಸಿದ್ಧಿಯದೆಂತು ಜಯಸಂ
ಪಾದಕರು ನಮಗಾರೆನಲು ಗುರು ಕೇಳಿ ನಸುನಗುತ
ಕಾದುವಾ ಸಮಯದೊಳಗಪ್ರಿಯ
ವಾದ ನುಡಿಗಳ ಕೇಳಿದಾಕ್ಷಣ
ಮೇದಿನಿಯೊಳಾವಿರೆವು ಚಿಂತಿಸಬೇಡ ಹೋಗೆಂದ ॥34॥
೦೩೫ ಎನಲು ಪರಿತೋಷದಲಿ ...{Loading}...
ಎನಲು ಪರಿತೋಷದಲಿ ಯಮನಂದ
ನನು ಕಳುಹಿಸಿಕೊಂಡು ನಡೆತಂ
ದನು ಮಹಾಹವರಂಗಮಧ್ಯದ ಕೃಪನ ಹೊರೆಗಾಗಿ
ವಿನಯದಲಿ ಬಿನ್ನಯಿಸೆ ಕೃಪನೆಂ
ದನು ನಿಧಾನಿಸಲಾವವಧ್ಯರು
ಜನಪ ನಿನ್ನನು ನಾವು ಕೊಲ್ಲೆವು ಮರಳು ನೀನೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರೀತಿ ಗುರುದ್ರೋಣನು ಧರ್ಮಜನಿಗೆ ಹೇಳಿದಾಗ ದ್ರೋಣನಿಂದ ಸಂತೋಷದಿಂದ ಬೀಳ್ಕೊಂಡು ಆ ದೊಡ್ಡ ಯುದ್ಧರಂಗದ ನಡುವೆ ಇದ್ದ ಕೃಪಾಚಾರ್ಯನ ಬಳಿಗೆ ಬಂದು. ನಮ್ರತೆಯಿಂದ ಹೇಳಿಕೊಂಡಾಗ ಕೃಪಾಚಾರ್ಯರು ವಿಚಾರ ಮಾಡಿದರೆ ನಾನು ಚಿರಂಜೀವಿ. ಆದರೆ ಧರ್ಮಜನೇ ನಿನ್ನನ್ನು ನಾನು ಕೊಲ್ಲುವುದಿಲ್ಲ. ನೀನು ಹಿಂದಿರುಗು ಎಂದು ಸಮಾಧಾನ ಹೇಳಿದನು.
ಪದಾರ್ಥ (ಕ.ಗ.ಪ)
ಪರಿತೋಷದಲಿ-ಸಂತೋಷದಿಂದ, ಮಹಾ ಆಹವ-ಘೋರ ಯುದ್ಧ,
ಮೂಲ ...{Loading}...
ಎನಲು ಪರಿತೋಷದಲಿ ಯಮನಂದ
ನನು ಕಳುಹಿಸಿಕೊಂಡು ನಡೆತಂ
ದನು ಮಹಾಹವರಂಗಮಧ್ಯದ ಕೃಪನ ಹೊರೆಗಾಗಿ
ವಿನಯದಲಿ ಬಿನ್ನಯಿಸೆ ಕೃಪನೆಂ
ದನು ನಿಧಾನಿಸಲಾವವಧ್ಯರು
ಜನಪ ನಿನ್ನನು ನಾವು ಕೊಲ್ಲೆವು ಮರಳು ನೀನೆಂದ ॥35॥
೦೩೬ ಕೃಪನ ಬೀಳ್ಕೊಣ್ಡತುಳಜಯಲೋ ...{Loading}...
ಕೃಪನ ಬೀಳ್ಕೊಂಡತುಳಜಯಲೋ
ಲುಪನು ಶಲ್ಯನ ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜರಾಜಕಾರಿಯವ
ಕೃಪೆಯ ಮಾಡುವುದೆವಗೆ ರಣದಲಿ
ತಪನತನಯನ ತೇಜವನು ನಿ
ಷ್ಕೃಪೆಯೊಳವಗಡಿಸೆಂದು ಶಲ್ಯನೊಳಭಯವನು ಪಡೆದ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಸದೃಶವಾದ ಜಯದಲ್ಲಿ ಅತ್ಯಾಸಕ್ತನಾದ ಧರ್ಮಜನು ಕೃಪಾಚಾರ್ಯನಿಂದ ಕಳುಹಿಸಿಕೊಂಡವನಾಗಿ ಬಂದು ಶಲ್ಯನನ್ನು ನೋಡಿದನು. ಬುದ್ಧಿಶಾಲಿ ಧರ್ಮರಾಯನು ತನ್ನ ರಾಜಕಾರ್ಯದ ಬಗ್ಗೆ ಮಾತಾಡಿದನು. ನಮ್ಮ ಮೇಲೆ ದಯೆ ತೋರಬೇಕು. ಸೂರ್ಯಪುತ್ರನಾದ ಕರ್ಣನ ಪರಾಕ್ರಮವನ್ನು ನಿರ್ದಾಕ್ಷಿಣ್ಯವಾಗಿ ಹೀಯಾಳಿಸು ಎಂದು ಹೇಳಿ ಶಲ್ಯನಿಂದ ಭರವಸೆಯನ್ನು ಪಡೆದು ಹಿಂದಿರುಗಿದನು.
ಪದಾರ್ಥ (ಕ.ಗ.ಪ)
ಅವಗಡಿಸು-ಹೀಯಾಳಿಸು
ಮೂಲ ...{Loading}...
ಕೃಪನ ಬೀಳ್ಕೊಂಡತುಳಜಯಲೋ
ಲುಪನು ಶಲ್ಯನ ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜರಾಜಕಾರಿಯವ
ಕೃಪೆಯ ಮಾಡುವುದೆವಗೆ ರಣದಲಿ
ತಪನತನಯನ ತೇಜವನು ನಿ
ಷ್ಕೃಪೆಯೊಳವಗಡಿಸೆಂದು ಶಲ್ಯನೊಳಭಯವನು ಪಡೆದ ॥36॥
೦೩೭ ಬಲದೊಳಗೆ ಬೇಹವರ ...{Loading}...
ಬಲದೊಳಗೆ ಬೇಹವರ ನಾಲ್ವರ
ನೊಳಗುಮಾಡಿ ಧರಾಧಿಪನು ಮನ
ಗೆಲವಿನಲಿ ಮರಳಿದನು ಕೌರವ ಮೋಹರವನುಳಿದು
ತಿಳಿದು ತನ್ನೊಳು ಭೀಮಸೇನನ
ಬಲು ಗದಾಘಾತದಲಿ ಕುರುಕುಲ
ವಳಿವುದೆಂದು ಯುಯುತ್ಸು ರಥದಿಂದಿಳಿದು ನಡೆತಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ದಂಡಿನಲ್ಲಿ ತನಗೆ ಹಿತರಾಗಿದ್ದ ನಾಲ್ಕು ಜನರನ್ನು (ಭೀಷ್ಮ ದ್ರೋಣ ಕೃಪ ಶಲ್ಯ) ತನ್ನ ಕಡೆಯವರನ್ನಾಗಿ ಮಾಡಿಕೊಂಡು ಉತ್ಸಾಹದಿಂದ ಕೌರವ ಸೇನೆಯ ಬೀಡನ್ನು ತೊರೆದು ಹಿಂದಿರುಗಿದನು. ಆ ಸಂದರ್ಭದಲ್ಲಿ ಭೀಮನ ಬಲವಾದ ಗದೆಯ ಪೆಟ್ಟಿನಿಂದ ಕುರುವಂಶ ನಾಶವಾಗುತ್ತದೆ ಎಂದು ಯುಯುತ್ಸು ಎಂಬ ಕೌರವನ ತಮ್ಮನೊಬ್ಬನು ತನ್ನ ಮನಸ್ಸಿನಲ್ಲಿ ಚಿಂತಿಸಿ ರಥದಿಂದ ಇಳಿದು ಧರ್ಮರಾಜನನ್ನು ಕಂಡು ಬಳಿಗೆ ಬಂದನು.
ಮೂಲ ...{Loading}...
ಬಲದೊಳಗೆ ಬೇಹವರ ನಾಲ್ವರ
ನೊಳಗುಮಾಡಿ ಧರಾಧಿಪನು ಮನ
ಗೆಲವಿನಲಿ ಮರಳಿದನು ಕೌರವ ಮೋಹರವನುಳಿದು
ತಿಳಿದು ತನ್ನೊಳು ಭೀಮಸೇನನ
ಬಲು ಗದಾಘಾತದಲಿ ಕುರುಕುಲ
ವಳಿವುದೆಂದು ಯುಯುತ್ಸು ರಥದಿಂದಿಳಿದು ನಡೆತಂದ ॥37॥
೦೩೮ ಎರಡು ಬಲ ...{Loading}...
ಎರಡು ಬಲ ಬೆರಗಾಗಿ ನೋಡು
ತ್ತಿರೆ ಯುಯುತ್ಸು ಮಹೀಶನಂಘ್ರಿಗೆ
ಕರವ ಮುಗಿದೆರಗಿದರೆ ಹಿಡಿದೆತ್ತಿದನು ಕರುಣದಲಿ
ಧರಣಿಪತಿ ನೀನಾರೆನಲು ಕೇ
ಳರಸ ಕೌರವನನುಜ ನಿಮ್ಮನು
ಶರಣುವೊಗಲೈತಂದೆಯಭಯವನಿತ್ತು ಸಲಹೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವರ ಮತ್ತು ಪಾಂಡವರ ಸೇನೆಗಳು ಅಚ್ಚರಿಯಿಂದ ನೋಡುತ್ತಿದ್ದಂತೆ ಯುಯುತ್ಸು ಧರ್ಮರಾಜನ ಪಾದಗಳಿಗೆ ಕೈಮುಗಿದು ನಮಸ್ಕರಿಸಲು ಧರ್ಮರಾಯನು ಆತನನ್ನು ದಯಾದೃಷ್ಟಿಯಿಂದ ನೋಡಿ ಶಿರ ಹಿಡಿದು ಮೇಲೆತ್ತಿದನು. ನೀನು ಯಾರು ? ಏಕೆ ಬಂದೆ ಎಂದು ಕೇಳಿದನು. ನಾನು ಕೌರವನ ತಮ್ಮ, ನಿಮಗೆ ಶರಣಾಗಲು ಬಂದಿದ್ದೇನೆ. ಪ್ರಾಣ ರಕ್ಷೆಗೆ ಭರವಸೆಯಿತ್ತು ಕಾಪಾಡಬೇಕು ಎಂದನು.
ಮೂಲ ...{Loading}...
ಎರಡು ಬಲ ಬೆರಗಾಗಿ ನೋಡು
ತ್ತಿರೆ ಯುಯುತ್ಸು ಮಹೀಶನಂಘ್ರಿಗೆ
ಕರವ ಮುಗಿದೆರಗಿದರೆ ಹಿಡಿದೆತ್ತಿದನು ಕರುಣದಲಿ
ಧರಣಿಪತಿ ನೀನಾರೆನಲು ಕೇ
ಳರಸ ಕೌರವನನುಜ ನಿಮ್ಮನು
ಶರಣುವೊಗಲೈತಂದೆಯಭಯವನಿತ್ತು ಸಲಹೆಂದ ॥38॥
೦೩೯ ಹಿನ್ದೆ ರಾವಣನನುಜನಿರದೈ ...{Loading}...
ಹಿಂದೆ ರಾವಣನನುಜನಿರದೈ
ತಂದು ಶರಣಾಗತರ ರಕ್ಷಿಪ
ನೆಂದು ರಾಘವನಂಘ್ರಿ ಕಮಲವ ಕಂಡು ಬದುಕಿದನು
ಇಂದು ನಿಮ್ಮಂಘ್ರಿಗಳ ಮರೆವೊಗ
ಬಂದೆನೆನ್ನನು ಪತಿಕರಿಸಬೇ
ಕೆಂದು ಕೌರವನನುಜ ಬಿನ್ನಯಿಸಿದನು ಭೂಪತಿಗೆ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ತ್ರೇತಾಯುಗದಲ್ಲಿ ರಾವಣನ ತಮ್ಮನಾದ ವಿಭೀಷಣನು ರಾವಣನ ಪಕ್ಷದಲ್ಲಿ ಇರಲಾರದೆ ಮರೆಹೊಕ್ಕವರನ್ನು ಕಾಪಾಡುವಂಥವನು ಎಂದು ಅರಿತು ಶ್ರೀರಾಮಚಂದ್ರನ ಪಾದಕಮಲಗಳನ್ನು ಮರೆಹೋಗಿ ಬದುಕಿಕೊಂಡನು. ಹಾಗೆಯೇ ಈಗ ನಿಮ್ಮ ಪಾದಗಳಲ್ಲಿ ಶರಣಾಗಲು ಬಂದಿದ್ದೇನೆ. ನನ್ನನ್ನು ಕಾಪಾಡಬೇಕು. ಎಂಬುದಾಗಿ ಧರ್ಮಜನನ್ನು ಯುಯುತ್ಸು ಕೇಳಿಕೊಂಡನು.
ಮೂಲ ...{Loading}...
ಹಿಂದೆ ರಾವಣನನುಜನಿರದೈ
ತಂದು ಶರಣಾಗತರ ರಕ್ಷಿಪ
ನೆಂದು ರಾಘವನಂಘ್ರಿ ಕಮಲವ ಕಂಡು ಬದುಕಿದನು
ಇಂದು ನಿಮ್ಮಂಘ್ರಿಗಳ ಮರೆವೊಗ
ಬಂದೆನೆನ್ನನು ಪತಿಕರಿಸಬೇ
ಕೆಂದು ಕೌರವನನುಜ ಬಿನ್ನಯಿಸಿದನು ಭೂಪತಿಗೆ ॥39॥
೦೪೦ ಎನಗೆ ಭೀಮಾರ್ಜುನರವೊಲು ...{Loading}...
ಎನಗೆ ಭೀಮಾರ್ಜುನರವೊಲು ನೀ
ನನುಜನಲ್ಲದೆ ಬೇರೆ ನಿನ್ನಲಿ
ಮನವಿಭೇದವ ಬಲ್ಲೆನೇ ಬಾಯೆನುತ ಕೈವಿಡಿದು
ಜನಪನಭಯವನಿತ್ತು ಕೌರವ
ನನುಜನನು ಕೊಂಡೊಯ್ದನಾಹವ
ದನುಕರಣೆಯಲಿ ಸೇನೆ ಗಜಬಜಿಸಿತ್ತು ಬೊಬ್ಬೆಯಲಿ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನಗೆ ನೀನು ಭೀಮ ಅರ್ಜುನರಂತೆ ನನ್ನ ತಮ್ಮನಲ್ಲದೆ ಬೇರೆಯಲ್ಲ ನಿನ್ನ ಬಗ್ಗೆ ಮನಸ್ಸಿನಲ್ಲಿ ಅವರಿಗೂ ನಿನಗೂ ಭೇದ ಭಾವನೆ ಇಟ್ಟಿಲ್ಲ. ಬಾ ಬಳಿಗೆ ಎನ್ನುತ್ತ ಕೈ ಹಿಡಿದುಕೊಂಡು ಧೈರ್ಯವನ್ನು ಹೇಳಿ ಧರ್ಮರಾಜನು ಯುಯುತ್ಸುವನ್ನು ಕರೆದುಕೊಂಡು ಹೋದನು. ಇತ್ತ ಸೇನೆ ಯುದ್ಧದ ಸನ್ನಾಹದ ಆರ್ಭಟದಿಂದ ಕೋಲಾಹಲ ಮಾಡಿತು.
ಮೂಲ ...{Loading}...
ಎನಗೆ ಭೀಮಾರ್ಜುನರವೊಲು ನೀ
ನನುಜನಲ್ಲದೆ ಬೇರೆ ನಿನ್ನಲಿ
ಮನವಿಭೇದವ ಬಲ್ಲೆನೇ ಬಾಯೆನುತ ಕೈವಿಡಿದು
ಜನಪನಭಯವನಿತ್ತು ಕೌರವ
ನನುಜನನು ಕೊಂಡೊಯ್ದನಾಹವ
ದನುಕರಣೆಯಲಿ ಸೇನೆ ಗಜಬಜಿಸಿತ್ತು ಬೊಬ್ಬೆಯಲಿ ॥40॥