೦೨

೦೦೦ ಸೂ ಸಾಮದಲಿ ...{Loading}...

ಸೂ. ಸಾಮದಲಿ ಪರಬಲದ ಸುಭಟ
ಸ್ತೋಮವನು ತನ್ನೊಳಗು ಮಾಡಿಯೆ
ಭೂಮಿಪತಿ ಯಮನಂದನನು ಸಂಗ್ರಾಮಕನುವಾದ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಧೃಷ್ಟದ್ಯುಮ್ನ ಭೀಷ್ಮರ
ಪಾಳಯದೊಳಂದಮಮ ಕೈಗೈದಿಳೆಗೆ ಹೊಸತೆನಿಸಿ
ಕಾಳೆಗಕ್ಕನುವಾಗಿ ರಥತುರ
ಗಾಳಿ ಕರಿ ಕಾಲಾಳು ದೊರೆಗಳ
ಮೇಲುಗೈಚಮರಿಗಳನೀಕ್ಷಿಸುತಿದ್ದುದುಭಯಬಲ ॥1॥

೦೦೨ ಮಡದ ಸೋಙ್ಕಿಮ್ ...{Loading}...

ಮಡದ ಸೋಂಕಿಂ ಮುನ್ನ ಗಗನವ
ತುಡುಕ ಬಗೆದವು ತೇಜಿಗಳು ನಸು
ಸಡಿಲಬಿಡೆ ವಾಘೆಯಲಿ ಚಿಗಿದುವು ರಥದ ವಾಜಿಗಳು
ತುಡುಕುವಂಕುಶದಿಂದ ಮುನ್ನಿಳೆ
ಯೊಡೆಯೆ ಗಜ ಗಾಢಿಸಿದವರಸರ
ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ ॥2॥

೦೦೩ ಗಜದ ಬಲುಗರ್ಜನೆಯ ...{Loading}...

ಗಜದ ಬಲುಗರ್ಜನೆಯ ವಾಜಿ
ವ್ರಜದ ಹೇಷಿತರವದ ತೇರಿನ
ಗಜಬಜದ ಕಾಲಾಳು ಕಡುಹಿನ ಬೊಬ್ಬೆಯಬ್ಬರದ
ಗಜರುವಗ್ಗದ ಬೊಗ್ಗುಗಳ ದಿ
ಗ್ವ್ರಜವ ನುಡಿಸುವ ರಾಯಗಿಡಿಗನ
ವಿಜಯಬಲ ತೊಡರಿಕ್ಕಿತೈ ಕಲ್ಪಾಂತಸಾಗರಕೆ ॥3॥

೦೦೪ ತಿಗಡಲೊದರುವ ಹರಿಗೆಗಳ ...{Loading}...

ತಿಗಡಲೊದರುವ ಹರಿಗೆಗಳ ಗೌ
ರಗಿವ ಹೆಗ್ಗಹಳೆಗಳ ಹೊನ್ನಾ
ಯುಗದ ಖಡುಗದ ಗಜರು ಡೊಂಕಣಿಗಳ ಝಣತ್ಕೃತಿಯ
ಬಿಗಿದ ಬಿಲು ಬೊಬ್ಬೆಗಳ ಬಿರುದರ
ವಿಗಡ ಮೂದಲೆಗಳ ಮಹಾಧ್ವನಿ
ಬಗಿದುದೈ ತಾವರೆಯ ತನಯನ ಕರ್ಣಕೋಟರವ ॥4॥

೦೦೫ ಕುಣಿವ ಕುದುರೆಯ ...{Loading}...

ಕುಣಿವ ಕುದುರೆಯ ಮದದ ಬಲುಭಾ
ರಣೆಯಲೊಲೆವಾನೆಗಳ ತುರಗವ
ಕೆಣಕಿ ಸರಳಿಸಿ ಹಿಡಿವ ತೇರಿನ ಸೂತರೋಜೆಗಳ
ಅಣೆವ ಹರಿಗೆಯನೊಬ್ಬನೊಬ್ಬರ
ನಣಸಿನಲಿ ತಿವಿದಗಿವ ಭಟರೊ
ಡ್ತ್ಡಣೆ ಸಘಾಡಿಸಿತೆರೆಡುಬಲದಲಿ ಭೂಪ ಕೇಳ್ ಎಂದ ॥5॥

೦೦೬ ಝಳಪದಲಿ ಬೊಬ್ಬಿಡುವಡಾಯುಧ ...{Loading}...

ಝಳಪದಲಿ ಬೊಬ್ಬಿಡುವಡಾಯುಧ
ಹೊಳವುಗಳ ಡೊಂಕಣಿಯ ತಳಪದ
ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ
ಅಲಗಿನುಬ್ಬರಗಿಡಿಯ ಹಬ್ಬುಗೆ
ಥಳಥಳಸಿ ಸೈಗರೆದುದೈ ಹೆ
ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ ॥6॥

೦೦೭ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಭೀಷ್ಮನ ಹೊರೆಗೆ ಕುರುಭೂ
ಪಾಲ ಬಂದನು ಬಿನ್ನವಿಸಿದನು ಮುಕುಳಕರನಾಗಿ
ಮೇಳದಲಿ ಮಂಡಳಿಸಿದರಿನೃಪ
ಜಾಲದಲಿ ಯಮಸೂನುವಾವನು
ಮೇಲೆ ಭೀಮಾರ್ಜುನರ ವಿವರಿಸಿ ತೋರಬೇಕೆಂದ ॥7॥

೦೦೮ ನಸುನಗೆಯ ಚೂಣಿಯಲಿ ...{Loading}...

ನಸುನಗೆಯ ಚೂಣಿಯಲಿ ವದನದ
ರಸುಮೆ ಝಳಪಿಸೆ ಕೌರವೇಂದ್ರಂ
ಗುಸುರಿದನು ಕಲಿ ಭೀಷ್ಮನವಧರಿಸೈ ಮಹೀಪತಿಯೆ
ಪಸರಿಸಿದ ಮುಗಿಲೊಡ್ಡಿನಲಿ ಮಿಂ
ಚೆಸೆವವೊಲು ಗಜದಳದ ಮಧ್ಯದೊ
ಳೆಸೆವನಾತನು ವೀರಧೃಷ್ಟದ್ಯುಮ್ನ ನೋಡೆಂದ ॥8॥

೦೦೯ ಇವ ಕಣಾ ...{Loading}...

ಇವ ಕಣಾ ಪಾಂಡವರ ಸೇನಾ
ರ್ಣವಕೆ ನಾಯಕನಿವನ ಕೆಲಬಲ
ದವರು ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ
ಬವರಿಗರು ಪಾಂಚಾಲಕುಲ ಸಂ
ಭವರು ದ್ರುಪದ ಸಹೋದರರು ಮ
ತ್ತಿವರು ಸೃಂಜಯ ವರ ಯುಧಾಮನ್ಯೂತ್ತಮೌಂಜಸರು ॥9॥

೦೧೦ ಡೊಙ್ಕಣಿಯ ಹೊದರುಗಳಲೆಡಬಲ ...{Loading}...

ಡೊಂಕಣಿಯ ಹೊದರುಗಳಲೆಡಬಲ
ವಂಕದಾನೆಯ ಥಟ್ಟುಗಳ ನಿ
ಶ್ಶಂಕಮಲ್ಲನು ದ್ರುಪದನೀತ ವಿರಾಟನೃಪನೀತ
ಮುಂಕುಡಿಯ ನಾಯಕರಿವರು ಪತಿ
ಯಂಕಕಾರರು ಇವರ ಬಳಿಯಲಿ
ಬಿಂಕದೆರಡಕ್ಷೋಣಿ ಬಲವದೆ ರಾಯ ನೋಡೆಂದ ॥10॥

೦೧೧ ಅವರ ಮೋಹರದಾಚೆಯಲಿ ...{Loading}...

ಅವರ ಮೋಹರದಾಚೆಯಲಿ ನಿಂ
ತವರು ಕೊಂತೀಭೋಜ ಕೇಕಯ
ರವರ ಬಳಿಯಲಿ ತಳಿತುದೆರಡಕ್ಷೋಹಿಣೀಸೇನೆ
ಅವರ ಹತ್ತಿರೆ ಮೋಹರಿಸಿ ನಿಂ
ದವರು ಪಾಂಡ್ಯ ಶಿಖಂಡಿ ಸೋಮಕ
ರವರ ಮೋಹರದೊಳಗೆ ನೋಡಕ್ಷೋಹಿಣೀ ಸೇನೆ ॥11॥

೦೧೨ ಅರೆನೆಲೆಯ ದಳದತ್ತ ...{Loading}...

ಅರೆನೆಲೆಯ ದಳದತ್ತ ದೃಷ್ಟಿಯ
ಹರಿಯಬಿಡು ನೋಡಲ್ಲಿ ಕೌಂತೇ
ಯರ ಕುಮಾರರನಮಲ ಪಂಚ ದ್ರೌಪದೀಸುತರ
ಉರಿಯ ಕರುವಿಟ್ಟಂತೆ ವಿಲಯದ
ಹರನ ಖತಿ ಹೊಗೆವಂತೆ ಸಿಡಿಲಿನ
ಹೊರಳಿ ಹೊದರೆದ್ದಂತೆ ನಿಂದವನವ ಘಟೋತ್ಕಚನು ॥12॥

೦೧೩ ಭೀಮಸೇನನ ಮಗನವನು ...{Loading}...

ಭೀಮಸೇನನ ಮಗನವನು ಸಂ
ಗ್ರಾಮಚೌಪಟನವನ ಬಳಿಯಲಿ
ತಾಮಸದ ಬಲುಮೊಗದ ಹೊಗರಿನ ಹೊಳೆವ ದಾಡೆಗಳ
ಕಾಮರೂಪಿಗಳೊಂದು ಕೋಟಿ ಸ
ನಾಮದೈತ್ಯರು ಕುಂಭಕರ್ಣ
ಸ್ತೋಮವೆನಲದೆ ಲಯಕೃತಾಂತನ ಕ್ರೂರ ಪರಿವಾರ ॥13॥

೦೧೪ ಅವರ ಹೊರೆಯಲಿ ...{Loading}...

ಅವರ ಹೊರೆಯಲಿ ಫಲುಗುಣಗೆ ಮಲೆ
ವವರ ಗಂಡನು ರಿಪುಕುಮಾರಕ
ನಿವಹ ಕಾಳಾನಳನು ನೋಡಭಿಮನ್ಯುವರ್ಜುನನ
ಕುವರನಿವ ಮಗುವಲ್ಲ ಬಲುಗೆ
ಯ್ಯವನ ಮೋಹರದೊತ್ತಿನಲಿ ನಿಂ
ದವರು ಸಾತ್ಯಕಿ ಚೇಕಿತಾನ ಪ್ರಮುಖ ನಾಯಕರು ॥14॥

೦೧೫ ಅವರೊಳೊನ್ದಕ್ಷೋಣಿಯದು ಮಾ ...{Loading}...

ಅವರೊಳೊಂದಕ್ಷೋಣಿಯದು ಮಾ
ಧವನ ಮನೆಯದು ಧೃಷ್ಟಕೇತು
ಪ್ರವರನಾತನು ಚೈದ್ಯನಂದನನವರ ಕೂಡಿಹನು
ಅವರ ಹೊರೆಯಲಿ ವೀರಸೇನಾ
ನಿವಹದೊಳು ಸಹದೇವನಾತನ
ಸವಹರೆಯ ನಕುಲಾಂಕನಿವರಾಹವ ಧುರಂಧರರು ॥15॥

೦೧೬ ಇತ್ತಲಿದು ಕಲ್ಪಾನ್ತರುದ್ರನ ...{Loading}...

ಇತ್ತಲಿದು ಕಲ್ಪಾಂತರುದ್ರನ
ಮೊತ್ತ ಕಾಳೋರಗನ ಜಂಗುಳಿ
ಮೃತ್ಯುವಿನ ಮೋಹರ ಕೃತಾಂತನ ಥಟ್ಟು ಭೈರವನ
ತೆತ್ತಿಗರ ದಾವಣಿಯೊಳಣ್ಣನ
ಮತ್ತವಾರಣ ಭೀಮಸೇನನ
ನಿತ್ತ ನೋಡೈ ಮಗನೆ ಕುರುಕುಲ ಕೇಣಿಕಾರನನು ॥16॥

೦೧೭ ಕೆಲದಲಾ ತರುವಾಯಲಾಹವ ...{Loading}...

ಕೆಲದಲಾ ತರುವಾಯಲಾಹವ
ದಳಲಿಗರ ಮೇಳದಲಿ ಮಕುಟದ
ಲಲಿತರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಲು
ಚಲತುರಂಗದ ಭಾರಿಯಾನೆಯ
ದಳದ ರಥದ ಪದಾತಿಮಧ್ಯದ
ಹೊಳಹಿನಲಿ ನಿಂದಾತನಾತ ಮಹೀಶ ಧರ್ಮಜನು ॥17॥

೦೧೮ ಆತನೆಡವಙ್ಕದಲಿ ಹನುಮನ ...{Loading}...

ಆತನೆಡವಂಕದಲಿ ಹನುಮನ
ಕೇತನದ ಗರುವಾಯಿಯಲಿ ನವ
ಶಾತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ
ನೂತನಾಶ್ವ ನಿಕಾಯ ಖುರಪುಟ
ಧೂತಧೂಳೀಪಟಲವಿಹಿತ ನಿ
ಶಾತಘನ ಜಯಯುವತಿವಿಟನರ್ಜುನನ ನೋಡೆಂದ ॥18॥

೦೧೯ ತಿಳಿಯಲೊಬ್ಬನ ರೋಮರೋಮದ ...{Loading}...

ತಿಳಿಯಲೊಬ್ಬನ ರೋಮರೋಮದ
ಕುಳಿಯೊಳಗೆ ಬ್ರಹ್ಮಾಂಡಕೋಟಿಯ
ಸುಳಿವು ಗಡ ಶ್ರುತಿನಿಕರವೊರಲಿದರೊಳಗುದೋರ ಗಡ
ಹಲವು ಮಾತೇನಾತನೀತನ
ಬಳಿಯ ಬಂಡಿಯ ಬೋವನಾಗಿಯೆ
ಸುಳಿವನಾತನ ನೋಡು ಮಗನೇ ವೀರನರಯಣನ ॥19॥

೦೨೦ ಅದೆ ದುರನ್ತದ ...{Loading}...

ಅದೆ ದುರಂತದ ದುರುಳ ದೊದ್ದೆಯ
ಹದನ ಬಣ್ಣಿಸಲೆನಗೆ ನೂಕದು
ತುದಿಯಲರಿವೆನು ದಳದ ಮನ್ನೆಯ ಮಂಡಲೀಕರಲಿ
ಕದನವಿದು ಭಾರಂಕವಾರ
ಭ್ಯುದಯ ತಲೆದೋರುವುದೊ ನಮಗೇ
ಕಿದರ ಚಿಂತೆ ಮುರಾರಿ ಬಲ್ಲನು ಕಂದ ಕೇಳ್ ಎಂದ ॥20॥

೦೨೧ ಅವರೊಳೇಳಕ್ಷೋಣಿಬಲ ನ ...{Loading}...

ಅವರೊಳೇಳಕ್ಷೋಣಿಬಲ ನ
ಮ್ಮವರೊಳಗೆ ಹನ್ನೊಂದು ಮತ್ತವ
ರಿವರ ಸಖ್ಯಕೆ ನೆರೆದುದೇಕಾದಶಶತಕ್ಷೋಣಿ
ತವಿಸುವರೆ ನನಗೊಂದು ದಿನ ಮೂ
ದಿವಸದಲಿ ಗುರುವೈದು ದಿವಸಕೆ
ರವಿಜ ನಿಮಿಷಕೆ ದ್ರೌಣಿ ನಿಮಿಷಾರ್ಧಕೆ ಧನಂಜಯನು ॥21॥

೦೨೨ ಎನಲು ಗುರುತನಯನ ...{Loading}...

ಎನಲು ಗುರುತನಯನ ಸಘಾಟಕೆ
ಕೊನರಿತಾತನ ಮನವಜಾಂಡಕೆ
ತನುಪುಲಕದುಬ್ಬಿನಲಿ ಪಾರ್ಥನ ಪಟುಪರಾಕ್ರಮಕೆ
ಮೊನೆಗಣೆಯ ನುಡಿ ಸೋಂಕೆ ಕರ್ಣವ
ನಿನಿತು ಕುಸಿದ ರಸಾತಳಕೆ ಕುರು
ಜನಪನ ನಿಬದ್ಧಪ್ರಲಾಪವ ಬಿಡಿಸಿದನು ಭೀಷ್ಮ ॥22॥

೦೨೩ ತಾಗಲನುಗೈದುಭಯಬಲ ಕೈ ...{Loading}...

ತಾಗಲನುಗೈದುಭಯಬಲ ಕೈ
ಲಾಗನೀಕ್ಷಿಸುತಿರಲು ರಿಪುಬಲ
ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು
ತೂಗಿದನು ಶಿರವನು ಮಹಾಹವ
ವೀಗಲಾಗದ ಮುನ್ನ ಭೇದದ
ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ ॥23॥

೦೨೪ ಬನ್ದು ಭೀಷ್ಮನ ...{Loading}...

ಬಂದು ಭೀಷ್ಮನ ಚರಣಕಮಲ
ದ್ವಂದ್ವದಲಿ ಚಾಚಿದನು ಮಕುಟವ
ನಿಂದಿನಾಹವದೊಳಗೆ ನಮಗಿನ್ನೇನು ನಿರ್ವಾಹ
ನಿಂದು ನೀವ್ ಕಾದುವರೆ ನಮಗಿ
ನ್ನೆಂದು ಹರಿವುದು ಬವರವೆಮಗೇ
ನೆಂದು ಬೆಸಸಿದಿರೆನುತ ಕರುಣವ ತೋರಿದನು ಭೂಪ ॥24॥

೦೨೫ ನೀವರಿಯಲಾವುತ್ತರಾಯಿಗ ಳಾವ ...{Loading}...

ನೀವರಿಯಲಾವುತ್ತರಾಯಿಗ
ಳಾವ ಪರಿಯಲು ಕೌರವರು ಬಹ
ಳಾವಮಾನವನೆಮಗೆ ನೆಗಳಿದರೆಮ್ಮ ಸತ್ಯವನು
ನೀವು ಮೆಚ್ಚಲು ನಡಸಿದೆವು ತಲೆ
ಗಾವುದುಂಟೇ ಕರುಣಿಸಲ್ಲದ
ಡಾವ ಹದನೆಂದೆವಗೆ ನೇಮವ ಕೊಟ್ಟು ಕಳುಹೆಂದ ॥25॥

೦೨೬ ಏಳು ಮಗನೇ ...{Loading}...

ಏಳು ಮಗನೇ ನಮ್ಮ ಮತಿಯನು
ಕೇಳೆನುತ ಭೂಪಾಲ ತಿಲಕನ
ಮೌಳಿಯನು ನೆಗಹಿದನು ಗಂಗಾಸೂನು ನಸುನಗುತ
ಆಳುಗೊಂಡನು ಕೌರವನು ಪರ
ರಾಳುತನವೆಮಗಾಯ್ತು ಪರಸೇ
ವಾ ಲಘುಸ್ಥಿತರೆಮ್ಮನೇತಕೆ ನುಡಿಸಿದಪೆಯೆಂದ ॥26॥

೦೨೭ ಹಿರಿಯನಾಗಲಿ ಸುಜನನಾಗಲಿ ...{Loading}...

ಹಿರಿಯನಾಗಲಿ ಸುಜನನಾಗಲಿ
ಗರುವನಾಗಲಿ ಅರ್ಥವುಳ್ಳನ
ಚರಣಸೇವಾಪರರು ಜಗದಲಿ ವರ್ತಮಾನವಿದು
ಪರರ ಭಜಕರೊಳಾವಗುಣವಾ
ವಿರವದಾವಗ್ಗಳಿಕೆ ಯಾವುದು
ಗರುವತನವೈ ತಂದೆ ಪುರುಷಾಧಮನು ತಾನೆಂದ ॥27॥

೦೨೮ ಕೌರವನ ಧನವೆಮ್ಬ ...{Loading}...

ಕೌರವನ ಧನವೆಂಬ ಘನಸಂ
ಸಾರಗುಣದೊಳು ಬದ್ಧನಾದೆನು
ಧೀರ ನಾನೇಗೈವೆನೆನೆ ಯಮಸೂನು ಕೈಮುಗಿದು
ವೈರವೃತ್ತಿಯ ರಣದೊಳೆಮಗಿ
ನ್ನಾರು ಗತಿ ನೀನುಭಯನೃಪರಿಗೆ
ಕಾರಣಿಕ ನೀ ಮುನಿದಡೆಮಗಿನ್ನಾಸೆಯಿಲ್ಲೆಂದ ॥28॥

೦೨೯ ಮಾನನಿಧಿ ಕೇಳ್ ...{Loading}...

ಮಾನನಿಧಿ ಕೇಳ್ ಕೌರವಂಗಾ
ಧೀನವೆನ್ನಯ ತನು ವಿಧಾತ್ರಾ
ಧೀನವೆನ್ನಯ ಜೀವವದು ಕಾರಣದಿನಾಹವಕೆ
ನೀನು ಚಿಂತಿಸಬೇಡ ನನ್ನವ
ಸಾನಕಾಲಕೆ ಮತ್ತೆ ಬರಲು ನಿ
ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ ॥29॥

೦೩೦ ಎನೆ ಹಸಾದವೆನುತ್ತ ...{Loading}...

ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜನುಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣ ಕಮಲದಲಿ ॥30॥

೦೩೧ ಅರಸ ಬನ್ದನಪೂರ್ವವಾಯಿತು ...{Loading}...

ಅರಸ ಬಂದನಪೂರ್ವವಾಯಿತು
ದರುಶನವು ತನಗೆನುತ ಗರುಡಿಯ
ಗುರು ಮಹೀಪಾಲಕನ ಮಕುಟವನೆತ್ತಿದನು ಬಳಿಕ
ಬರಸೆಳೆದು ಬಿಗಿಯಪ್ಪಿದನು ಸಂ
ಗರದ ಸಮಯದಲೇಕೆ ಬಂದಿರಿ
ಭರವಸದ ಬಗೆಯೇನು ಬಿನ್ನಹಮಾಡು ಸಾಕೆಂದ ॥31॥

೦೩೨ ಎವಗೆ ದೈವವು ...{Loading}...

ಎವಗೆ ದೈವವು ನೀನು ಗುರು ನೀ
ನೆವಗೆ ತಾತನು ನೀನು ಮಹದಾ
ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ
ಅವನಿಯಭಿಲಾಷೆಯಲಿ ತೆತ್ತುದು
ಬವರವೆಮಗಿನ್ನೇನು ಗತಿ ಕೌ
ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ ॥32॥

೦೩೩ ಅರಸ ಕೇಳರ್ಥಕ್ಕೆ ...{Loading}...

ಅರಸ ಕೇಳರ್ಥಕ್ಕೆ ಧರಣೀ
ಶ್ವರರು ಕಿಂಕರರರ್ಥ ತಾ ಕಿಂ
ಕರತೆಯನು ಮಾಡುವುದು ಜಗದಲಿ ವರ್ತಮಾನವಿದು
ನಿರುತ ಕೌರವನರ್ಥದಲಿ ಕಿಂ
ಕರತೆಮಗಾಯಿತ್ತು ರಾಜ್ಯೈ
ಶ್ವರಿಯ ಸೇವಾಪರರಿಗೀ ಸ್ವಾತಂತ್ರ ್ಯವಿಲ್ಲೆಂದ ॥33॥

೦೩೪ ಆದರೆಮಗಿನ್ನೇನು ಗತಿ ...{Loading}...

ಆದರೆಮಗಿನ್ನೇನು ಗತಿ ರಣ
ವಾದಸಿದ್ಧಿಯದೆಂತು ಜಯಸಂ
ಪಾದಕರು ನಮಗಾರೆನಲು ಗುರು ಕೇಳಿ ನಸುನಗುತ
ಕಾದುವಾ ಸಮಯದೊಳಗಪ್ರಿಯ
ವಾದ ನುಡಿಗಳ ಕೇಳಿದಾಕ್ಷಣ
ಮೇದಿನಿಯೊಳಾವಿರೆವು ಚಿಂತಿಸಬೇಡ ಹೋಗೆಂದ ॥34॥

೦೩೫ ಎನಲು ಪರಿತೋಷದಲಿ ...{Loading}...

ಎನಲು ಪರಿತೋಷದಲಿ ಯಮನಂದ
ನನು ಕಳುಹಿಸಿಕೊಂಡು ನಡೆತಂ
ದನು ಮಹಾಹವರಂಗಮಧ್ಯದ ಕೃಪನ ಹೊರೆಗಾಗಿ
ವಿನಯದಲಿ ಬಿನ್ನಯಿಸೆ ಕೃಪನೆಂ
ದನು ನಿಧಾನಿಸಲಾವವಧ್ಯರು
ಜನಪ ನಿನ್ನನು ನಾವು ಕೊಲ್ಲೆವು ಮರಳು ನೀನೆಂದ ॥35॥

೦೩೬ ಕೃಪನ ಬೀಳ್ಕೊಣ್ಡತುಳಜಯಲೋ ...{Loading}...

ಕೃಪನ ಬೀಳ್ಕೊಂಡತುಳಜಯಲೋ
ಲುಪನು ಶಲ್ಯನ ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜರಾಜಕಾರಿಯವ
ಕೃಪೆಯ ಮಾಡುವುದೆವಗೆ ರಣದಲಿ
ತಪನತನಯನ ತೇಜವನು ನಿ
ಷ್ಕೃಪೆಯೊಳವಗಡಿಸೆಂದು ಶಲ್ಯನೊಳಭಯವನು ಪಡೆದ ॥36॥

೦೩೭ ಬಲದೊಳಗೆ ಬೇಹವರ ...{Loading}...

ಬಲದೊಳಗೆ ಬೇಹವರ ನಾಲ್ವರ
ನೊಳಗುಮಾಡಿ ಧರಾಧಿಪನು ಮನ
ಗೆಲವಿನಲಿ ಮರಳಿದನು ಕೌರವ ಮೋಹರವನುಳಿದು
ತಿಳಿದು ತನ್ನೊಳು ಭೀಮಸೇನನ
ಬಲು ಗದಾಘಾತದಲಿ ಕುರುಕುಲ
ವಳಿವುದೆಂದು ಯುಯುತ್ಸು ರಥದಿಂದಿಳಿದು ನಡೆತಂದ ॥37॥

೦೩೮ ಎರಡು ಬಲ ...{Loading}...

ಎರಡು ಬಲ ಬೆರಗಾಗಿ ನೋಡು
ತ್ತಿರೆ ಯುಯುತ್ಸು ಮಹೀಶನಂಘ್ರಿಗೆ
ಕರವ ಮುಗಿದೆರಗಿದರೆ ಹಿಡಿದೆತ್ತಿದನು ಕರುಣದಲಿ
ಧರಣಿಪತಿ ನೀನಾರೆನಲು ಕೇ
ಳರಸ ಕೌರವನನುಜ ನಿಮ್ಮನು
ಶರಣುವೊಗಲೈತಂದೆಯಭಯವನಿತ್ತು ಸಲಹೆಂದ ॥38॥

೦೩೯ ಹಿನ್ದೆ ರಾವಣನನುಜನಿರದೈ ...{Loading}...

ಹಿಂದೆ ರಾವಣನನುಜನಿರದೈ
ತಂದು ಶರಣಾಗತರ ರಕ್ಷಿಪ
ನೆಂದು ರಾಘವನಂಘ್ರಿ ಕಮಲವ ಕಂಡು ಬದುಕಿದನು
ಇಂದು ನಿಮ್ಮಂಘ್ರಿಗಳ ಮರೆವೊಗ
ಬಂದೆನೆನ್ನನು ಪತಿಕರಿಸಬೇ
ಕೆಂದು ಕೌರವನನುಜ ಬಿನ್ನಯಿಸಿದನು ಭೂಪತಿಗೆ ॥39॥

೦೪೦ ಎನಗೆ ಭೀಮಾರ್ಜುನರವೊಲು ...{Loading}...

ಎನಗೆ ಭೀಮಾರ್ಜುನರವೊಲು ನೀ
ನನುಜನಲ್ಲದೆ ಬೇರೆ ನಿನ್ನಲಿ
ಮನವಿಭೇದವ ಬಲ್ಲೆನೇ ಬಾಯೆನುತ ಕೈವಿಡಿದು
ಜನಪನಭಯವನಿತ್ತು ಕೌರವ
ನನುಜನನು ಕೊಂಡೊಯ್ದನಾಹವ
ದನುಕರಣೆಯಲಿ ಸೇನೆ ಗಜಬಜಿಸಿತ್ತು ಬೊಬ್ಬೆಯಲಿ ॥40॥

+೦೨ ...{Loading}...