೧೧

೦೦೦ ಸೂ ಅವನಿಯದಿರಿತು ...{Loading}...

ಸೂ. ಅವನಿಯದಿರಿತು ಗಗನ ತಾರಾ
ನಿವಹವನು ಬಿದಿರಿತ್ತು ವರ ಪಾಂ
ಡವರು ಕಣನೊಳು ವೆಂಠಣಿಸಿದರು ಕಮಠ ಟೆಂಠಣಿಸೆ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷಿ ್ಮೀ
ಲೋಲನೈತರುತಿವರ ಹೊರೆಗಟ್ಟಿದನು ಸಾತ್ಯಕಿಯ
ಕೇಳಿದನು ಮುರಹರನ ಬರವನು
ಮೌಳಿಮಸ್ತಕದಖಿಳ ಧರಣೀ
ಪಾಲರೊಡನಿದಿರಾಗಿ ಬಂದನು ಧರ್ಮನಂದನನು ॥1॥

೦೦೨ ದೂರದಲಿ ದುಮಾ್ಮನಿಸಿದ ...{Loading}...

ದೂರದಲಿ ದುಮಾ್ಮನಿಸಿದ ವದ
ನಾರವಿಂದವ ಕಂಡು ಸಂಧಿಗೆ
ಸೇರರವದಿರು ಬಲಿದುದಾಹವವೀತನಂಗದಲಿ
ಶೌರಿಗಾಯ್ತವಮಾನವಿದೆಲೇ
ಮಾರಿಗುತ್ಸವವೆನುತ ಬಂದನು
ಮಾರುತನ ಮಗನಸುರಮರ್ದನನಿಂಗಿತವನರಿದು ॥2॥

೦೦೩ ದರುಶನವ ನೀಡಿದರು ...{Loading}...

ದರುಶನವ ನೀಡಿದರು ಕೃಷ್ಣನ
ಚರಣದಲಿ ಮೈಯಿಕ್ಕಿದರು ಮಿ
ಕ್ಕರಸುಗಳು ದ್ರುಪದಾದಿ ನಾಯಕರೆರಗಿದರು ಪದಕೆ
ಪರಮಬಾಂಧವರೆಲ್ಲ ಜೀವಂ
ತರೆ ನದೀಸುತ ವಿದುರ ಗುರು ನೃಪ
ಗುರುತನುಜ ಧೃತರಾಷ್ಟ್ರಯೆಂದನು ಧರ್ಮನಂದನನು ॥3॥

೦೦೪ ಭೂಮಿಪತಿ ನಿಜಬಾನ್ಧವರು ...{Loading}...

ಭೂಮಿಪತಿ ನಿಜಬಾಂಧವರು ಸು
ಕ್ಷೇಮಿಗಳು ತಾವೆಲ್ಲ ನಿಮ್ಮೀ
ಕ್ಷೇಮ ಕುಶಲವ ಕೇಳಿದರು ಕಳುಹಿದರು ಹರಕೆಗಳ
ಆ ಮಹಾ ಸಂಗ್ರಾಮ ಮುಖದಲಿ
ತೋಮರದ ಕಾಣಿಕೆಗಳಲಿ ಸು
ಪ್ರೇಮವನು ಬೆಸಸುವುದು ದುರಿಯೋಧನನ ಮತವೆಂದ ॥4॥

೦೦೫ ಭೂಮಿಯೊಳಗರ್ಧವನು ಬೇಡಿದೊ ...{Loading}...

ಭೂಮಿಯೊಳಗರ್ಧವನು ಬೇಡಿದೊ
ಡಾ ಮಹೀಪತಿಯೈವರಿಗೆ ಸಂ
ಗ್ರಾಮಭೂಮಿಯನೈದೆ ಕೊಟ್ಟನು ನಿಮ್ಮೊಳಪ್ರಿಯನು
ಸಾಮದಲಿ ಸೊಗಸಿಲ್ಲ ನೀವ್ ನಿ
ಸ್ಸೀಮರಾದೊಡೆ ಜೋಡಿಸುವುದು
ದ್ದಾಮ ಕುರುಭೂಮಿಯಲಿ ಕುಳವರಿದವರ ಪತಿಕರಿಸಿ ॥5॥

೦೦೬ ಮುನಿದೊಡೆಯು ನಿಮ್ಮೊಳಗೆ ...{Loading}...

ಮುನಿದೊಡೆಯು ನಿಮ್ಮೊಳಗೆ ನೀವೇ
ಮನಕತವ ಮಾಡುವಿರಿಯಗ್ರಜ
ರನುಜರಲಿ ಕದಡಾದೊಡುಪಶಮಿಸುವಿರಿ ನಿಮ್ಮೊಳಗೆ
ಎನಗೆ ನಿಮ್ಮಯ ದೂಸರಿಂದಾ
ಯ್ತಿನಿತು ಸಭೆಯಲಿ ಮಾನ ಹಾನಿಗ
ಳೆನಲು ನೊಂದನು ಧರ್ಮಸುತನಿಂತೆಂದ ನಸುಗುತ ॥6॥

೦೦೭ ಮುಳಿದು ಸುರಗಿಯನುಗಿದು ...{Loading}...

ಮುಳಿದು ಸುರಗಿಯನುಗಿದು ಗಗನಕೆ
ನಿಲುಕಿ ಮಾಡುವದೇನು ನಿಮ್ಮಡಿ
ಗಳಿಗೆ ತಪ್ಪಿದ ತರಳರಖಿಳ ವ್ಯಾಪ್ತಿಗೇಗುವರು
ಖಳರು ಮಾಡಿದ ಖತಿಯನೆನ್ನೊಳು
ತಿಳಿದು ಮರೆಯಲುಬೇಕು ಕರುಣಾ
ಜಲಧಿ ನೀನೆಂದಂಘ್ರಿಗಳ ಹಿಡಿದನು ಯುಧಿಷ್ಠಿರನು ॥7॥

೦೦೮ ಬರಿದೆ ಕಾಡದಿರೇಳು ...{Loading}...

ಬರಿದೆ ಕಾಡದಿರೇಳು ಮನದಲಿ
ಮರೆದೆವಾಗಳೆ ಕೌರವನು ಮುಂ
ದರಿಯದವಗಡಿಸಿದನು ಹೋಗಲಿ ನಿಮ್ಮ ದೂರೇಕೆ
ನೆರವಣಿಗೆಯುಂಟಾದಡಿಂದಿನ
ಮರುದಿವಸ ಸಂಗ್ರಾಮ ಸೈರಿಸ
ಲರಿಯರವದಿರು ನಡೆ ಕುರುಕ್ಷೇತ್ರಕ್ಕೆ ಬೇಗದಲಿ ॥8॥

೦೦೯ ಹಾನಿಯನು ನೀ ...{Loading}...

ಹಾನಿಯನು ನೀ ಹೊತ್ತು ಭೃತ್ಯರ
ಮಾನವನು ಪತಿಕರಿಸಬೇಹುದು
ತಾನೊಡೆಯನಾದಂಗೆ ಗುಣವೆಮ್ಮೊಡೆಯ ನೀನಾಗಿ
ಮಾನಭಂಗವ ಧರಿಸಿಯೆಮ್ಮಭಿ
ಮಾನವನು ನೀನುಳುಹಿದೈ ಸಂ
ಧಾನವನು ಸೇರಿಸದೆ ಸಲಹಿದೆಯೆಂದನಾ ಭೀಮ ॥9॥

೦೧೦ ಮಾರಿಯರಕೆಗಳಡಗದನ್ತಕ ನೂರು ...{Loading}...

ಮಾರಿಯರಕೆಗಳಡಗದಂತಕ
ನೂರು ತುಂಬದೆ ಶಾಕಿನಿಯರೊಡ
ಲೋರೆ ನನೆಯದೆ ಡಾಕಿನಿಯರಿಗೆ ಡೊಳ್ಳು ಸಾಲಿಡದೆ
ಕೌರವನ ತನಿಗರುಳ ದಂಡೆಯ
ತೋರಣದ ಬಾಗಿಲಿನ ವಿಭವದಿ
ವಾರಣಾಹ್ವಯನಗರಿಯನು ಹೊಗದಿಹೆನೆ ಹೇಳೆಂದ ॥10॥

೦೧೧ ತೋರು ನಡೆ ...{Loading}...

ತೋರು ನಡೆ ಗಜಬಜಿಸಲೇಕಿ
ನ್ನಾರು ತಿಂಗಳೆ ನಾಳೆ ಪಯಣಕೆ
ಸಾರಿಸೇಳೆಂದವರುಪಪ್ಲವ್ಯಕ್ಕೆ ನಡೆತಂದು
ಬೇರೆ ಬೇರವನೀಶರಿಗೆ ಪಡಿ
ಹಾರವನು ಕಳುಹಿದರು ಕೃಷ್ಣನ
ದೂರು ಬರಲಳವಡಿಸಿದರು ಸಂಗ್ರಾಮ ಸಾಧನವ ॥11॥

೦೧೨ ಗುಡಿಯ ಮಣ್ಡವಿಗೆಗಳ ...{Loading}...

ಗುಡಿಯ ಮಂಡವಿಗೆಗಳ ಹೊರಿಗೆಗ
ಳೊಡನೊಡನೆ ಸಂಭ್ರಮಿಸಿದವು ಬರ
ಸಿಡಿಲು ಬೊಬ್ಬಿಡುವಂತೆ ಮಸೆದವು ಕೂಡೆ ಕೈದುಗಳು
ದಡಿಯ ಬಲಿಸುವ ಗುಳವ ರೆಂಚೆಯ
ಗಡಣಿಸುವ ಬಲುಗೀಲಗಾಲಿಯ
ತೊಡಿಸುವುತ್ಸಹವಾಯ್ತವರ ಪಾಂಡವರ ಬೀಡಿನಲಿ ॥12॥

೦೧೩ ಹಿಳುಕ ತಿದ್ದುವ ...{Loading}...

ಹಿಳುಕ ತಿದ್ದುವ ಬಿಲ್ಲ ಬಾಗಿನ
ಹೊಳಹನೊಯಾ್ಯರಿಸುವ ಮಾರ್ತಿರು
ಗಳನು ಜೋಡಿಸುವಖಿಳ ಕೈದುವ ಮಸೆವ ಮಂಡಲಿಯ
ಕಳಕಳಿಕೆ ಬಲುಹಾಯ್ತು ರಾವುತ
ರಲಿ ಗಜಾರೋಹಕರ ರಥಿಕಾ
ವಳಿಯಲವರವರಂಗದಲಿ ಸಂವರಣೆಯೊಪ್ಪಿದವು ॥13॥

೦೧೪ ಜೋಳಿ ಹರಿದುದು ...{Loading}...

ಜೋಳಿ ಹರಿದುದು ದೆಸೆದೆಸೆಗೆ ಭೂ
ಪಾಲರಿಗೆ ರಾಯಸದ ಹದನನು
ಕೇಳಿದಾಗಳೆ ಕವಿದು ಬಂದರು ತಮ್ಮ ದಳಸಹಿತ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳವಂದಿನ ಮರುದಿವಸ ವೈ
ಹಾಳಿಯನು ಹೊರವಂಟರನಿಬರು ದೈತ್ಯರಿಪು ಸಹಿತ ॥14॥

೦೧೫ ಎಲೆಲೆ ನೆಲ ...{Loading}...

ಎಲೆಲೆ ನೆಲ ಬೆಸಲಾದುದೋ ಬಲು
ದಳದ ತೆರಳಿಕೆ ತೀವಿತವನಿಯ
ತಳಪಟದ ಹಬ್ಬುಗೆಯೊಳಬ್ಬರಿಸಿದವು ಬೊಬ್ಬೆಗಳು
ತಲೆವೊರೆಯ ತೂಕದಲಿ ಫಣಿಪತಿ
ಬಳುಕತೊಡಗಿದ ತರಣಿ ಸೇನೋ
ಚ್ಚಲಿತ ಧೂಳಿಯ ಝಗೆಯಲದ್ಭುತವಾಯ್ತು ದೆಖ್ಖಾಳ ॥15॥

೦೧೬ ಹಿಣಿಲ ಹಾಹೆಯ ...{Loading}...

ಹಿಣಿಲ ಹಾಹೆಯ ಬಿರುದುಗಳ ಡಾ
ವಣಿಯ ನಾಯಕವಾಡಿಗಳ ಸಂ
ದಣಿಯ ಸುಕರದ ಕೈದುಗಳ ವರ ವೀರ ನೂಪುರದ
ಕುಣಿವ ಸುರಗಿಯ ಪಳಹರದ ಡೊಂ
ಕಣಿಯ ಭೇದಿಪ ಖಡ್ಗ ಬಿಲು ಬಲು
ಗಣೆಯ ಸಂಖ್ಯೆಯ ಕೈದುಗಳ ಕಾಲಾಳ ನೋಡಿದರು ॥16॥

೦೧೭ ಥಳಥಳಿಪ ಸೂನಿಗೆಯ ...{Loading}...

ಥಳಥಳಿಪ ಸೂನಿಗೆಯ ಮುಮ್ಮೊನೆ
ಗಳ ರಥಾಂಗದ ಮೇಲು ಪಸರದ
ಪಳಹರದ ಖುರಗತಿಯ ಜೋಡ ಜವಾಯ್ಲ ಕುದುರೆಗಳ
ಬಲದ ಬದ್ದರದೊಟ್ಟಿದಂಬಿನ
ಹೊಳೆವ ಹೊದೆಗಳ ಸೂತರುರವಣೆ
ಗಳ ಸುರೇಖೆಯ ಗತಿಯ ವಾಜಿಯ ರಥವ ನೋಡಿದರು ॥17॥

೦೧೮ ಅಳವಿಗೊಟ್ಟೊಡೆ ರವಿಯ ...{Loading}...

ಅಳವಿಗೊಟ್ಟೊಡೆ ರವಿಯ ತುರಗವ
ನುಳುಹಿ ಮುಂಚುವ ಗತಿಯ ನೊಸಲಲಿ
ಹೊಳೆವ ಕನ್ನಡಿಗಳ ಖುರಾಂತದ ಜೋಡು ಚೆಲುವುಗಳ
ಬಿಳಿಯ ಚೌರಿಯ ಝಲ್ಲರಿಯ ಹ
ತ್ತಳದ ರಾವ್ತರ ಸರಿಸದಲಿ ನೆಲ
ನಲುಗೆ ನಿಗುರುವ ನಿಲುವ ನಿರುತದ ಹಯವ ನೋಡಿದರು ॥18॥

೦೧೯ ಶೈಲದೆಡಬಲದೊರತೆಯೆನೆ ಸುಕ ...{Loading}...

ಶೈಲದೆಡಬಲದೊರತೆಯೆನೆ ಸುಕ
ಪೋಲದಲಿ ದಾರಿಡುವ ಮದಜಲ
ಧಾರೆಗಳ ಬರಿಕೈಯ ಲೌಡಿಯ ವಜ್ರಮುಷ್ಟಿಗಳ
ನಾಳಿವಿಲುಗಳ ರಾಯ ಜೋಧರ
ಮೇಳವಣೆಗಳ ಚಿತ್ರಗತಿ ಶುಂ
ಡಾಲವನು ನೋಡಿದರು ಗಜಸೇನಾಸಮುದ್ರದಲಿ ॥19॥

೦೨೦ ಅವನಿಪಾಲರ ಮಕುಟ ...{Loading}...

ಅವನಿಪಾಲರ ಮಕುಟ ಮಣಿಗಣ
ನಿವಹವೆತ್ತಿದ ಖಡ್ಗ ಪರಶುಗ
ಳವಿರಳದ ತೆರೆಗಳ ಪತಾಕಾವಳಿಯ ಬೆಳುನೊರೆಯ
ವಿವಿಧ ಗಜ ಹಯ ಜಲಚರೌಘದ
ಪವನಜನ ಕೈಸನ್ನೆಗಳ ಘನ
ಪವನ ಹತಿಯಲಿ ಲಹರಿ ಮಸಗಿತು ಬಹಳ ಬಲಜಲಧಿ ॥20॥

೦೨೧ ಹರಿ ಯುಧಿಷ್ಠಿರರೊನ್ದು ...{Loading}...

ಹರಿ ಯುಧಿಷ್ಠಿರರೊಂದು ಗಜ ಕಂ
ಧರದೊಳಿರ್ದರು ನಿಖಿಳ ಸೇನೆಯ
ತೆರಳಿಕೆಯ ತೋರಿಸುತ ಬಂದರು ಭೀಮ ಫಲುಗುಣರು
ಬಿರುದ ಧೃಷ್ಟದ್ಯುಮ್ನ ಮೊದಲಾ
ಗಿರೆ ಶಿಖಂಡಿಯು ಸಹಿತ ದ್ರುಪದನು
ಭರ ಮಿಗಿಲು ತೋರಿದನು ಮೂರಕ್ಷೋಣಿ ಸೇನೆಯನು ॥21॥

೦೨೨ ವರ ಯುಧಾಮನ್ಯುತ್ತಮೌಞ್ಜಸ ...{Loading}...

ವರ ಯುಧಾಮನ್ಯುತ್ತಮೌಂಜಸ
ನುರು ಶಿಖಂಡಿ ಸುಚೇಕಿತಾನರು
ಧುರಧುರಂಧರ ವೀರ ಪಾಂಚಾಲಕ್ಷಿತೀಶ್ವರರು
ತುರುಕರನು ಸಾಹಣ ಸಮುದ್ರರ
ಮರುಯವನ ಖುರಸಾಣ ಕಾಶೀ
ಶ್ವರರ ಥಟ್ಟನು ತೋರಿದನು ಪಾಂಚಾಲ ಭೂಪಾಲ ॥22॥

೦೨೩ ವರ ವಿರಾಟನು ...{Loading}...

ವರ ವಿರಾಟನು ಶಂಖ ನೃಪನು
ತ್ತರ ಶತದ್ಯುಮ್ನಕನು ಶತಚಂ
ದ್ರರು ಶತಾನೀಕರು ಶತಾಯುಧರೆನಿಪ ನೃಪವರರು
ತುರಗ ಗಜರಥ ಪಾಯದಳ ಸಾ
ಗರದ ಸೌರಂಭದಲಿ ನಿಜ ಸಂ
ವರಣೆಯನು ತೋರಿದರು ತಮ್ಮಕ್ಷೋಹಿಣೀ ದಳವ ॥23॥

೦೨೪ ಜಯಸಮರ ಸಾಮಗ್ರಬಲ ...{Loading}...

ಜಯಸಮರ ಸಾಮಗ್ರಬಲ ಕೈ
ಕೆಯ ನೃಪಾಲರು ತಮ್ಮೊಳಕ್ಷೋ
ಣಿಯನು ತೋರಿದರೈವರಿಭಕಂದರದ ಭೂಪತಿಗೆ
ಭಯವಿಹೀನನು ಪಾಂಡ್ಯ ನೃಪ ಸೃಂ
ಜಯರು ಸೋಮಕ ಭೂಪರಕ್ಷೋ
ಣಿಯನು ತೋರಿದರವನಿ ಕುಸಿದುದು ದಳದ ಪದಹತಿಗೆ ॥24॥

೦೨೫ ಚೈದ್ಯ ದೇಶದ ...{Loading}...

ಚೈದ್ಯ ದೇಶದ ಧೃಷ್ಟಕೇತು ಬ
ಲೋದಧಿಯನಕ್ಷೋಹಿಣಿಯ ಮೊದ
ಲಾದುದೆನೆ ತೋರಿದನು ಕುಂತೀಭೋಜನಕ್ಷೋಣಿ
ಆದವೇಳಕ್ಷೋಣಿ ಬಲ ಬೇ
ರಾದ ನಾಯಕವಾಡಿಯಲಿ ಹಿರಿ
ದಾದುದಾಹವ ಸೇನೆ ಗೋಚರವಲ್ಲ ಗಣನೆಯಲಿ ॥25॥

೦೨೬ ಕ್ಷತ್ರಧರ್ಮನು ನೀಲನು ...{Loading}...

ಕ್ಷತ್ರಧರ್ಮನು ನೀಲನು ಬೃಹ
ತ್ಕ ್ಷತ್ರ ಶೌರಿಯ ತನುಜ ವತ್ಸಜ
ಚಿತ್ರವರ್ಮ ಹಿರಣ್ಯವರ್ಮನು ಚಾರು ಚೇಷ್ಟಕನು
ಶತ್ರುಮಥನನು ವಿಂಧ್ಯಗಿರಿಯ ಸು
ಹೋತ್ರರನ್ವಯದವರು ಪಾಂಡವ
ಮಿತ್ರರೊದಗಿತು ಕೇಳು ಜನಮೇಜಯ ಮಹೀಪಾಲ ॥26॥

೦೨೭ ವೀರ ಪಾರ್ಥನಿಗಿರುಳು ...{Loading}...

ವೀರ ಪಾರ್ಥನಿಗಿರುಳು ಸೋತಂ
ಗಾರವರ್ಮನು ಗಗನಚರ ಪರಿ
ವಾರ ಬಹಳದಿ ಬಂದು ಕಂಡನು ಕಲಿಯುಧಿಷ್ಠಿರನ
ಕೌರವೇಂದ್ರನ ನೋಯಿಸಿದ ಧುರ
ಧೀರ ಸಾಹಸ ಚಿತ್ರಸೇನನು
ದಾರ ಗುಣನಿಧಿ ಬಂದು ಕಂಡನು ಮಿತ್ರ ಭಾವದಲಿ ॥27॥

೦೨೮ ಕಾರಿರುಳ ಪಟ್ಟಣಕೆ ...{Loading}...

ಕಾರಿರುಳ ಪಟ್ಟಣಕೆ ಚಂದ್ರನ
ತೋರಣವ ಬಿಗಿದಂತೆ ದಾಡೆಗ
ಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ
ಭಾರಿ ದೇಹನು ಭಟಭಯಂಕರ
ತೋರಹತ್ತನು ದೈತ್ಯಕುಲ ಪರಿ
ವಾರ ಬಹಳದಿ ಬಂದು ಕಂಡನು ಕಲಿಘಟೋತ್ಕಚನು ॥28॥

೦೨೯ ಬಲದ ದೆಖ್ಖಾಳವನು ...{Loading}...

ಬಲದ ದೆಖ್ಖಾಳವನು ನೋಡಿದ
ರೊಲವಿನಲಿ ನಿಜಸೇನೆ ಸಹಿತತಿ
ಬಲರುಪಪ್ಲವ್ಯಕ್ಕೆ ಬಂದರು ಹೊಕ್ಕರಾಲಯವ
ಬಳಿಕ ಸುಮುಹೂರ್ತದಲಿ ಹೊರಗುಡಿ
ಗಳನು ಹಾಯ್ಕಿದರಂದು ಯದುಕುಲ
ತಿಲಕ ಗದುಗಿನ ವೀರ ನಾರಾಯಣನ ನೇಮದಲಿ ॥29॥

೦೩೦ ಪರಿಮಿತಕೆ ತನ್ನಾಪ್ತ ...{Loading}...

ಪರಿಮಿತಕೆ ತನ್ನಾಪ್ತ ಸಚಿವರ
ಕರೆಸಿಕೊಂಡನು ಕೃಷ್ಣರಾಯಂ
ಗರಸ ಬಿನ್ನಹ ಮಾಡಿದನು ನೃಪಕಾರ್ಯ ಸಂಗತಿಯ
ಧುರಕೆ ಸೇನಾನಾಥರಿಲ್ಲದೆ
ನೆರೆದ ಬಲ ಸಾಲಿರುಹೆ ಮುರಿದೊಡೆ
ಹರೆವವೊಲು ಹುರುಳಿಲ್ಲ ದಳಪತಿ ಯಾವನಹನೆಂದ ॥30॥

೦೩೧ ದ್ರುಪದನಾಗಲಿಯೆನ್ದು ...{Loading}...

ದ್ರುಪದನಾಗಲಿಯೆಂದು ಕೆಲಬರು
ವಿಪುಳ ಬಲದ ವಿರಾಟನಾಗಲಿ
ನೃಪ ಶಿಖಂಡಿಯೆಯೆಂದು ಕೆಲಬರು ಭೀಮಸುತನೆಂದು
ಅಪರಿಮಿತ ಮತವಾಗೆ ಸಮರ
ವ್ಯಪಗತಾರಿ ಸುರೇಂದ್ರಸುತನೀ
ದ್ರುಪದಸುತ ಸೇನಾಧಿಪತಿಯಹುದೆಮ್ಮ ಮತವೆಂದ ॥31॥

೦೩೨ ಬಿಮ್ಬವನು ಬೇರಿರಿಸಿ ...{Loading}...

ಬಿಂಬವನು ಬೇರಿರಿಸಿ ಬಹುಮತ
ವೆಂಬ ಬಿಸಿಲಲಿ ರಾಜ ನಯವೆಂ
ದೆಂಬ ನೈದಿಲು ನಲವುಗೆಟ್ಟುದು ಕೃಷ್ಣ ಹೇಳೆನಲು
ಎಂಬುದೇನಿನ್ನಿಲ್ಲಿ ಸುಭಟ ಕ
ದಂಬದಧಿಪತಿತನಕೆ ಫಲುಗುಣ
ನೆಂಬ ಮಾತೆಮ್ಮಭಿಮತವು ಭೂಪಾಲ ಕೇಳ್ ಎಂದ ॥32॥

೦೩೩ ಕರೆಸಿ ಧೃಷ್ಟದ್ಯುಮ್ನನನು ...{Loading}...

ಕರೆಸಿ ಧೃಷ್ಟದ್ಯುಮ್ನನನು ಸಂ
ಗರದ ಸೇನಾಪತ್ಯವನು ವಿ
ಸ್ತರಿಸಲಳವಡಿಸಿದರು ಸುಮುಹೂರ್ತದ ಸರಾಗದಲಿ
ಪುರದೊಳಗೆ ಗುಡಿ ನೆಗಹಿದವು ಭೂ
ಸುರರ ವಿಮಳಾಮಾ್ನಯ ರವ ವಿ
ಸ್ತರಿಸಲಳವಡಿಸಿದರು ಮಂಗಳ ವಿಹಿತ ವಸ್ತುಗಳ ॥33॥

೦೩೪ ಸೂಳವಿಸಿದವು ಕಟಕದಲಿ ...{Loading}...

ಸೂಳವಿಸಿದವು ಕಟಕದಲಿ ನಿ
ಸ್ಸಾಳ ಕೋಟಿಗಳಳ್ಳಿರಿಯೆ ಹೆ
ಗ್ಗಾಳೆಗಳು ಸಾರಿದವು ಭಟರುಬ್ಬಟೆಯ ಬಿರುದುಗಳ
ಲೋಲನಯನೆಯರಾರತಿಯ ಸಮ
ಸಾಲು ಸಂದಣಿಸಿದವು ವರ ಪಾಂ
ಚಾಲತನಯಂಗೆಸಗಿದರು ಮೂರ್ಧಾಭಿಷೇಚನವ ॥34॥

೦೩೫ ದರುಶನವನಿತ್ತಖಿಳ ಧರಣೀ ...{Loading}...

ದರುಶನವನಿತ್ತಖಿಳ ಧರಣೀ
ಶ್ವರರು ಕಂಡರು ಸೂತ ಮಾಗಧ
ವರ ವಿಬುಧ ವೈತಾಳಿಕರ ಕಾರ್ಪಣ್ಯವಡಗಿದವು
ಧುರಕೆ ಧೃಷ್ಟದ್ಯುಮ್ನನಾಜ್ಞೆಯೊ
ಳಿರವು ನಿಮಗೆಂದೈದೆ ಭೂಪಾ
ಲರ ನಿವಾಸಂಗಳಲಿ ಹೊಯಿದರು ಚರರು ಡಂಗುರವ ॥35॥

೦೩೬ ರೂಢಿಸಿದ ಸುಮುಹೂರ್ತದಲಿ ...{Loading}...

ರೂಢಿಸಿದ ಸುಮುಹೂರ್ತದಲಿ ಹೊರ
ಬೀಡಬಿಟ್ಟರು ರಣಕೆ ಪಯಣವ
ಮಾಡಲೋಸುಗ ಸಾರಿದರು ನೃಪ ಪಾಳಯಂಗಳಲಿ
ಕೂಡಿತಾಹವ ಸೈನ್ಯ ಸಾಗರ
ವೀಡಿರಿದು ನಡೆಗೊಂಡುದಭ್ರದ
ರೂಢಿಗಳ ಜೋಡಿಗಳ ಜೋಕೆಯ ಘನ ತರಂಗದಲಿ ॥36॥

೦೩೭ ಹರಿಯ ಚರಣಕ್ಕೆರಗಿ ...{Loading}...

ಹರಿಯ ಚರಣಕ್ಕೆರಗಿ ವಿಜಯದ
ಹರಕೆಗಳ ಕೈಕೊಂಡು ರಥವನು
ತುರಗ ಗಜವನು ಗಡಣ ಮಿಗಲಡರಿದರು ಪಾಂಡವರು
ಗರುಡ ಸಿಂಧವ ನೆಗಹಿ ದಾರುಕ
ನಿರದೆ ರಥವನು ಸುಳಿಸೆ ಘನ ಮೋ
ಹರದ ಮಧ್ಯದೊಳಸುರಧೂಳೀಪಟನು ಹೊರವಂಟ ॥37॥

೦೩೮ ಮುನ್ದೆ ಹರಿರಥ ...{Loading}...

ಮುಂದೆ ಹರಿರಥ ನಡೆಯಲಾತನ
ಹಿಂದೆ ಧರ್ಮಜನೆಡ ಬಲದಲಾ
ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು
ಸಂದಣಿಸಿದುದು ಸೇನೆ ಸೈರಿಸಿ
ನಿಂದನಾದೊಡೆ ಫಣಿಗೆ ಸರಿಯಿ
ಲ್ಲೆಂದು ಸುರಕುಲವುಲಿಯೆ ನಡೆದುದು ಪಾಂಡುಸುತಸೇನೆ ॥38॥

೦೩೯ ಸಿಡಿಲು ಸಿಗುರೆದ್ದನ್ತೆ ...{Loading}...

ಸಿಡಿಲು ಸಿಗುರೆದ್ದಂತೆ ಭಾರಿಸಿ
ಜಡಿವ ಕೈದುಗಳುಗಿದವಬುಧಿಯ
ಕೆಡುದೆರೆಯ ಲಹರಿಯವೊಲುರವಣಿಸಿದವು ಬೊಬ್ಬೆಗಳು
ನಡುಗಿತವನಿಯಜಾಂಡ ಖರ್ಪರ
ವೊಡೆಯಲವನಿಯ ಲಗ್ಗೆ ಸೂಳಿನ
ಹೊಡೆಗುಳಿನೊಳಬ್ಬರಿಸಿದವು ನಿಸ್ಸಾಳ ಕೋಟಿಗಳು ॥39॥

೦೪೦ ಪ್ರಳಯ ಜಲನಿಧಿಯನ್ತೆ ...{Loading}...

ಪ್ರಳಯ ಜಲನಿಧಿಯಂತೆ ದಳ ಬರ
ಲಿಳೆ ಕುಸಿಯೆ ಕಮಠಂಗೆ ಮೇಲುಸು
ರುಲಿಯೆ ದಿಗುದಂತಿಗಳು ಮೊಣಕಾಲೂರಿ ಮನಗುಂದೆ
ಬಲಮಹಾಂಬುಧಿ ಬಲುಗಡಲ ಮು
ಕ್ಕುಳಿಸಿ ನಡೆದುದು ಕಡು ಭರದ ಕಾ
ಲ್ದುಳಿಯ ಕದನಾಳಾಪಕರ ಕಾಹುರತೆ ಹೊಸತಾಯ್ತು ॥40॥

೦೪೧ ಗಜದ ಬೃಂಹಿತರವದ ...{Loading}...

ಗಜದ ಬೃಂಹಿತರವದ ವಾಜಿ
ವ್ರಜದ ಹೇಷಧ್ವನಿಯ ತೇರಿನ
ವಿಜಯ ಚೀತ್ಕೃತಿ ರವದ ಬಿಲು ಟಂಕಾರ ಕಳಕಳದ
ಗಜಬಜಿಕೆ ಗಾಢಿಸಿತು ಬೊಬ್ಬೆಯ
ಗಜರುಗಳ ಗರ್ಜನೆಗೆ ನಡುಗಿತು
ತ್ರಿಜಗವೆನಲೈದಿದರು ಪಯಣದ ಮೇಲೆ ಪಯಣದಲಿ ॥41॥

೦೪೨ ಅರರೆ ನಡೆದುದು ...{Loading}...

ಅರರೆ ನಡೆದುದು ರಾಯ ಕಟಕದ
ತೆರಳಿಕೆಯ ಸೌರಂಭವಿಳೆಗ
ಚ್ಚರಿಯ ಬೀರಿತು ವರ ಕುರುಕ್ಷೇತ್ರಕ್ಕೆ ಗಮಿಸಿದರು
ಅರಿವಿಜಯಿಗಳು ನೆಲನ ಗೆಲಿದರು
ಹರಿಯ ನೇಮದಲೆಡೆಯರಿದು ಬಲ
ಶರಧಿ ಬಿಟ್ಟುದು ಕಳನ ಪಶ್ಚಿಮ ದೆಸೆಯ ಪಸರದಲಿ ॥42॥

೦೪೩ ಸೂಳವಿಸಿದವು ಸನ್ನೆಯಲಿ ...{Loading}...

ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ಲಗ್ಗೆಗಳಡಗಿದವು ಕಿರು
ಗಾಳೆ ಸನ್ನೆಯಲೂದಿದವು ಮಾಣಿಸಿದವಬ್ಬರವ
ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಗಶ್ರಮದ ಸೇನಾ
ಜಾಲ ಸೈವೆರಗಾಗಿ ನಿಂದುದು ಕಳನ ಮಧ್ಯದಲಿ ॥43॥

೦೪೪ ಮೇಲುಗುಡಿಗಳ ಭದ್ರದುಪ್ಪರ ...{Loading}...

ಮೇಲುಗುಡಿಗಳ ಭದ್ರದುಪ್ಪರ
ಶಾಲೆಗಳ ಮಂಡವಿಗೆಗಳ ಬ
ಲ್ಲಾಳದಡ್ಡಿಯ ಚಂಪೆಯದ ಗೂಡಾರದೋವರಿಯ
ಸಾಲು ಕಳಸದ ಮೇಲುಗಟ್ಟಿನ
ಕೀಲಣದ ಹೊಂಗೆಲಸದಲಿ ರಾ
ಜಾಲಯವನನುಕರಿಸಿದರು ಕುಂತೀ ಕುಮಾರರಿಗೆ ॥44॥

೦೪೫ ಅರಮನೆಯ ಕೆಲದಲಿ ...{Loading}...

ಅರಮನೆಯ ಕೆಲದಲಿ ಮುರಾಂತಕ
ನರಮನೆಗಳಾ ಕೆಲದೊಳರ್ಜುನ
ನಿರವು ಹಿಂದಣ ಭಾಗದಲಿ ನಕುಲಂಗೆ ಗೂಡಾರ
ಅರಿಭಯಂಕರ ಭೀಮಸೇನನ
ನಿರುಪಮಾಲಯವೆಡದ ಕಡೆಯಲಿ
ಸರಿಸದಲಿ ಸೂತ್ರಿಸಿತು ಸಹದೇವಂಗೆ ನೃಪಭವನ ॥45॥

೦೪೬ ವೀರ ಪಾಣ್ಡವರೈವರರಸು ...{Loading}...

ವೀರ ಪಾಂಡವರೈವರರಸು ಕು
ಮಾರ ವರ್ಗದ ಮಂಡವಿಗೆ ಗೂ
ಡಾರಗಳನೊಳಕೊಂಡು ಬಿಗಿದವು ತಳಿಯ ಕಟ್ಟುಗಳು
ವಾರಣದ ಸಾಲುಗಳ ಸುತ್ತಲು
ಭಾರಿಸಿತು ಪಾಂಚಾಲ ಮತ್ಸ ್ಯರ
ಭೂರಿ ಬಲಬಿಟ್ಟುದು ಮಹೀಶನ ಗುಡಿಯ ಬಳಸಿನಲಿ ॥46॥

೦೪೭ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಬೀಡಿನ ತೆಕ್ಕೆ ಬಿಗಿದುದು
ಪಾಳೆಯದ ಬಲುಹೊದಕೆ ಹೊರವಳಯದಲಿ ಕಲುಗೋಟೆ
ಮೇಲೆ ಪಡಿಯಗಳಾಶ್ರಯಿಕೆ ಮುಳು
ವೇಲಿ ದೀಹದ ಸಿಂಹ ಶರಭ
ವ್ಯಾಳ ಶಾರ್ದೂಲಾವಳಿಯ ಸುಯಿಧಾನವೊಪ್ಪಿದವು ॥47॥

೦೪೮ ಎರಡು ಬಾಗಿಲ ...{Loading}...

ಎರಡು ಬಾಗಿಲ ಸೂತ್ರದಲಿ ವಿ
ಸ್ತರಿಸಿದಂಗಡಿ ಸೋಮವೀಧಿಯ
ತರಣಿವೀಧಿಯಲವರವರ ಪಾಳೆಯಕೆ ಮುರಿವುಗಳ
ಸುರರು ಸೃಷ್ಟಿಸಬಾರದಿನ್ನೀ
ನರರುಗಳ ಪಾಡೇನು ಕೌಂತೇ
ಯರ ಸಮಗ್ರದ ಬೀಡು ಕುರುಭೂಮಿಯಲಿ ರಂಜಿಸಿತು ॥48॥

೦೪೯ ಬಲದ ಮುಙ್ಗುಡಿ ...{Loading}...

ಬಲದ ಮುಂಗುಡಿ ಭೀಮನದು ಪಿಂ
ಗಳಿಯಲಾತನ ಕಾಹು ಬೀಡಿನ
ವಳಯದಾರೈಕೆಗಳು ಸಾತ್ಯಕಿ ಪಾರ್ಥ ನಕುಲರಿಗೆ
ಬಲಮಹಾಂಬುಧಿಯೊಳಗಿರುಳ ತರ
ವಳಿಕೆ ಹೈಡಿಂಬಂಗೆ ಪಾಂಡವ
ರುಳಿವು ಗದುಗಿನ ವೀರನಾರಾಯಣನ ಸುಯಿದಾನ ॥49॥

೦೫೦ ಇತಿ ಶ್ರೀಮದಚಿನ್ತ್ಯ ...{Loading}...

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ಉದ್ಯೋಗಪರ್ವಂ ಸಮಾಪ್ತಮಾದುದು.

+೧೧ ...{Loading}...