೦೦೦ ಸೂ ದುರಿತ ...{Loading}...
ಸೂ. ದುರಿತ ವಿಪಿನಕೃಶಾನು ಯದುಕುಲ
ವರ ಕುಶೇಶಯ ಭಾನು ನಿಜಪದ
ಶರಣಜನ ಸುರಧೇನು ಹೊಕ್ಕನು ಹಸ್ತಿನಾಪುರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪಾಪವೆಂಬ ಕಾಡನ್ನು ಸುಡುವ ಬೆಂಕಿ, ಯದುಕುಲಕ್ಕೆ ಶ್ರೇಷ್ಠನಾದ ವಿಷ್ಣು (ಯದುಕುಲವೆಂಬ ಕಮಲಕ್ಕೆ ಸೂರ್ಯನಂತಿರುವ) ತನ್ನ ಪಾದಗಳಲ್ಲಿ ಶರಣಾದವರಿಗೆ ಕಾಮಧೇನುವಾದ ಶ್ರೀಕೃಷ್ಣನು ಹಸ್ತಿನಾಪುರವನ್ನು ಪ್ರವೇಶಿಸಿದನು.
ಪದಾರ್ಥ (ಕ.ಗ.ಪ)
ದುರಿತ-ಪಾಪ, ವಿಪಿನ-ಕಾಡು, ಕೃಶಾನು-ಬೆಂಕಿ, ಕುಶೇಶಯ-ಕಮಲ/ವಿಷ್ಣು.
ಮೂಲ ...{Loading}...
ಸೂ. ದುರಿತ ವಿಪಿನಕೃಶಾನು ಯದುಕುಲ
ವರ ಕುಶೇಶಯ ಭಾನು ನಿಜಪದ
ಶರಣಜನ ಸುರಧೇನು ಹೊಕ್ಕನು ಹಸ್ತಿನಾಪುರವ
೦೦೧ ದೇವ ಸನ್ಧಿಯನೊಲಿದು ...{Loading}...
ದೇವ ಸಂಧಿಯನೊಲಿದು ಮಾಡುವು
ದಾವು ಮುಖದಿರುಹಿದೆವುಯೀ ಸಹ
ದೇವನೀ ಸಾತ್ಯಕಿ ಯುಧಾಮನ್ಯುತ್ತಮೌಜಸರ
ಭಾವವೆಮ್ಮದು ಬಳಿಕಲರ್ಜುನ
ದೇವ ಧರ್ಮಜ ನಕುಲರೆಂಬುದ
ನಾವು ಮಿಸುಕುವರಲ್ಲ ಚಿತ್ತೈಸೆಂದನಾ ಭೀಮ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವ ! ಗಮನವಿಟ್ಟು ಕೇಳು ! ಪ್ರೀತಿಯಿಂದ ಸಂಧಿಯನ್ನು ಮಾಡಬಹುದು. ಆದರೆ ನನಗದು ಒಪ್ಪಿಗೆಯಿಲ್ಲ. ಈ ಸಹದೇವ, ಸಾತ್ಯಕಿ, ಯುಧಾಮನ್ಯು ಉತ್ತಮೌಜಸರ ಅಭಿಪ್ರಾಯವೇ ನಮ್ಮದು. ಮುಂದೆ ಅರ್ಜುನ, ಧರ್ಮರಾಯ, ನಕುಲರು ಹೇಳಿದುದಕ್ಕೆ ನಾವು ಸ್ಪಂದಿಸುವವರಲ್ಲ ಎಂದನು ಭೀಮಸೇನ.
ಪದಾರ್ಥ (ಕ.ಗ.ಪ)
ಮಿಸುಕು-ಅಲ್ಲಾಡು
ಮೂಲ ...{Loading}...
ದೇವ ಸಂಧಿಯನೊಲಿದು ಮಾಡುವು
ದಾವು ಮುಖದಿರುಹಿದೆವುಯೀ ಸಹ
ದೇವನೀ ಸಾತ್ಯಕಿ ಯುಧಾಮನ್ಯುತ್ತಮೌಜಸರ
ಭಾವವೆಮ್ಮದು ಬಳಿಕಲರ್ಜುನ
ದೇವ ಧರ್ಮಜ ನಕುಲರೆಂಬುದ
ನಾವು ಮಿಸುಕುವರಲ್ಲ ಚಿತ್ತೈಸೆಂದನಾ ಭೀಮ ॥1॥
೦೦೨ ಕೆಲರು ...{Loading}...
ಕೆಲರು ಸಂಪ್ರತಿಗೊಲಿವರಿತ್ತಲು
ಕೆಲರು ವಿಗ್ರಹಕೆಳಸುವವರಿದ
ರೊಳಗೆ ನಿಶ್ಚಯವಿಲ್ಲದಿರೆ ನೃಪ ಕಾರ್ಯವೆಂತಹುದು
ತಿಳಿಯ ಹೇಳವನೀಶ ಪರಮಂ
ಡಲಕೆ ಪಯಣವ ಮಾಡುವೆವು ನಾ
ವಳುಕಿದವರಲ್ಲೆನಲು ಕೃಷ್ಣಂಗರಸನಿಂತೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರು ಇತ್ತಕಡೆ ಸಂಧಾನಕ್ಕೆ ಒಲವು ತೋರಿಸುತ್ತಾರೆ. ಕೆಲವರು ಯುದ್ಧವನ್ನು ಬಯಸುತ್ತಾರೆ. ಇದರೊಳಗೆ ಒಂದು ನಿರ್ಣಯವಿಲ್ಲದಿದ್ದರೆ ರಾಜ ಕಾರ್ಯವನ್ನು ಹೇಗೆ ಮಾಡಬೇಕು. ರಾಜನೇ ! ತಿಳಿಸಿ ಹೇಳು ನಾವು ಶತ್ರುವಿನ ರಾಜ್ಯಕ್ಕೆ ಹೋಗುತ್ತೇವೆ. ಅದಕ್ಕೆ ನಾವು ಭಯ ಪಡುವವರಲ್ಲ, ಎಂದು ಹೇಳಲು ಶ್ರೀಕೃಷ್ಣನಿಗೆ ಧರ್ಮರಾಯನು ಹೀಗೆ ಹೇಳುತ್ತಾನೆ.
ಪದಾರ್ಥ (ಕ.ಗ.ಪ)
ನಿಶ್ಚಯ - ನಿರ್ಣಯ, ಎಳಸು - ಬಯಸು.
ಮೂಲ ...{Loading}...
ಕೆಲರು ಸಂಪ್ರತಿಗೊಲಿವರಿತ್ತಲು
ಕೆಲರು ವಿಗ್ರಹಕೆಳಸುವವರಿದ
ರೊಳಗೆ ನಿಶ್ಚಯವಿಲ್ಲದಿರೆ ನೃಪ ಕಾರ್ಯವೆಂತಹುದು
ತಿಳಿಯ ಹೇಳವನೀಶ ಪರಮಂ
ಡಲಕೆ ಪಯಣವ ಮಾಡುವೆವು ನಾ
ವಳುಕಿದವರಲ್ಲೆನಲು ಕೃಷ್ಣಂಗರಸನಿಂತೆಂದ ॥2॥
೦೦೩ ವಿದಿತವೈದೂರುಗಳ ಕೊಟ್ಟೊಡೆ ...{Loading}...
ವಿದಿತವೈದೂರುಗಳ ಕೊಟ್ಟೊಡೆ
ಹದುಳವಿಡುವುದು ಮುನಿದರಾದೊಡೆ
ಕದನವನೆ ಕೈಕೊಳ್ಳುವುದುಚಿತಾನುಚಿತದನುವರಿದು
ಹದನ ನೀನೇ ಬಲ್ಲೆ ಸಾಕಿ
ನ್ನಿದು ನಿಧಾನವು ಬಗೆಯಲೆಮ್ಮ
ಭ್ಯುದಯ ನಿಮಾ್ಮಧೀನವೆಂದನು ಧರ್ಮನಂದನನು ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿರ್ಧರಿಸಿದಂತೆ ಐದೂರುಗಳನ್ನು ಕೊಟ್ಟರೆ ನೆಮ್ಮದಿಯಿಂದಿರುವುದು ಕೋಪಿಸಿಕೊಂಡರೆ ಯುದ್ಧವನ್ನೇ ನಿರ್ಣಯಿಸುವುದು. ಯೋಗ್ಯವಾದುದು ಯಾವುದು ಯೋಗ್ಯವಲ್ಲದ್ದು ಯಾವುದೆಂದು ಸಂದರ್ಭಾನುಸಾರ ತಿಳಿದು ಮಾಡುವುದು. ಅದರ ರೀತಿಯನ್ನು ನೀನೇ ತಿಳಿದಿರುವೆ. ಇನ್ನು ಸಾಕು; ಇದು ನನ್ನ ಅಭಿಪ್ರಾಯ. ತಿಳಿದು ನೋಡಿದರೆ ನಮ್ಮ ಅಭಿವೃದ್ಧಿ, ಏಳಿಗೆಗಳು ನಿಮ್ಮ ಅಧೀನದಲ್ಲಿದೆ ಎಂದನು ಧರ್ಮರಾಯ.
ಪದಾರ್ಥ (ಕ.ಗ.ಪ)
ಹದುಳ-ನೆಮ್ಮದಿ, ನಿಧಾನ-ಅಭಿಪ್ರಾಯ ಅಲೋಚನೆ.
ಅಭ್ಯುಧಯ-ಏಳಿಗೆ.
ಮೂಲ ...{Loading}...
ವಿದಿತವೈದೂರುಗಳ ಕೊಟ್ಟೊಡೆ
ಹದುಳವಿಡುವುದು ಮುನಿದರಾದೊಡೆ
ಕದನವನೆ ಕೈಕೊಳ್ಳುವುದುಚಿತಾನುಚಿತದನುವರಿದು
ಹದನ ನೀನೇ ಬಲ್ಲೆ ಸಾಕಿ
ನ್ನಿದು ನಿಧಾನವು ಬಗೆಯಲೆಮ್ಮ
ಭ್ಯುದಯ ನಿಮಾ್ಮಧೀನವೆಂದನು ಧರ್ಮನಂದನನು ॥3॥
೦೦೪ ಪಯಣವನು ನಿಶ್ಚೈಸಿ ...{Loading}...
ಪಯಣವನು ನಿಶ್ಚೈಸಿ ದನುಜಾ
ರಿಯನು ಬೀಳ್ಕೊಂಡವನಿಪತಿ ಪಾ
ಳಯದೊಳಗೆ ಸಾರಿಸಿದನಗ್ಗದ ಮಂಡಲೀಕರಿಗೆ
ನಯದೊಳಾ ಮರುದಿವಸ ಮಂಗಳ
ಮಯ ಮುಹೂರ್ತದ ಜೋಯಿಸರ ಜೋ
ಕೆಯಲಿ ನಿರ್ಗಮ ನಿರತನಾದನು ಕೃಷ್ಣನೊಲವಿನಲಿ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಯಾಣ ಮಾಡುವುದನ್ನು ನಿರ್ಧರಿಸಿ ಕೃಷ್ಣನನ್ನು ಬೀಳ್ಕೊಂಡು ಧರ್ಮರಾಜನು ಪಾಳೆಯದೊಳಗೆ ಹಿರಿಯ ಮಂಡಲಿಕರಿಗೆ ಡಂಗುರವನ್ನು ಹೊಡೆಸಿ ತಿಳಿಸಿದನು. ಮಾರನೆಯ ದಿನ ಮಂಗಳ ಮುಹೂರ್ತದಲ್ಲಿ ವಿನಯದಿಂದ ಜೋಯಿಸರ ರಕ್ಷಣೆಯಲ್ಲಿ ಕೃಷ್ಣನು ಹೊರಡಲು ತೊಡಗಿದನು.
ಪದಾರ್ಥ (ಕ.ಗ.ಪ)
ಪಾಳಯ-ಬೀಡಾರ
ಮೂಲ ...{Loading}...
ಪಯಣವನು ನಿಶ್ಚೈಸಿ ದನುಜಾ
ರಿಯನು ಬೀಳ್ಕೊಂಡವನಿಪತಿ ಪಾ
ಳಯದೊಳಗೆ ಸಾರಿಸಿದನಗ್ಗದ ಮಂಡಲೀಕರಿಗೆ
ನಯದೊಳಾ ಮರುದಿವಸ ಮಂಗಳ
ಮಯ ಮುಹೂರ್ತದ ಜೋಯಿಸರ ಜೋ
ಕೆಯಲಿ ನಿರ್ಗಮ ನಿರತನಾದನು ಕೃಷ್ಣನೊಲವಿನಲಿ ॥4॥
೦೦೫ ಮೊರೆಯೆ ದುನ್ದುಭಿ ...{Loading}...
ಮೊರೆಯೆ ದುಂದುಭಿ ಶಂಖ ಕಹಳಾ
ವರ ಮೃದಂಗಾದಿಗಳು ಭೂಸುರ
ಸುರಭಿಗಳ ಬಲವಂದು ದಧಿ ದೂರ್ವಾಕ್ಷತಾವಳಿಯ
ಧರಿಸಿ ಧರಣೀ ದೇವರನು ಸ
ತ್ಕರಿಸಿ ಕರತಳದಿಂದ ನಾಸಿಕ
ದೆರಲ ಚಂದ್ರೋದಯವನೀಕ್ಷಿಸಿ ದೇವ ಹೊರವಂಟ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಗಾರಿ, ಕಹಳೆ, ಶಂಖ, ಮೃದಂಗ ಮೊದಲಾದವುಗಳು ಅಬ್ಬರವನ್ನು ಮಾಡುತ್ತಿರಲು, ಬ್ರಾಹ್ಮಣರು ಮತ್ತು ಗೋವುಗಳಿಗೆ ಪ್ರದಕ್ಷಿಣೆಯನ್ನು ಮಾಡಿ ಮೊಸರು, ದರ್ಭೆ, ಅಕ್ಷತೆಗಳನ್ನು ಇಟ್ಟುಕೊಂಡು ಬ್ರಾಹ್ಮಣರನ್ನು ಸತ್ಕರಿಸಿ ಅಂಗೈ ಮೂಲಕ ಮೂಗಿನಲ್ಲಿ ಗಾಳಿಯನ್ನು ಪರೀಕ್ಷಿಸಿ ಚಂದ್ರನಾಡಿಯಿಂದ ಉಸಿರಾಟವಾಗುತ್ತಿರುವುದನ್ನು ಖಚಿತಪಡಿಸಿಕೊಂಡು ( ಇದು ಪ್ರಯಾಣಕ್ಕೆ ಶುಭ ಸಮಯ) ಕೃಷ್ಣನು ಹೊರಟನು.
ಪದಾರ್ಥ (ಕ.ಗ.ಪ)
ಮೊರೆ-ಅಬ್ಬರ, ಸುರಭಿ-ಧೇನು/ಹಸು, ಎರಲ-ಗಾಳಿ.
ಮೂಲ ...{Loading}...
ಮೊರೆಯೆ ದುಂದುಭಿ ಶಂಖ ಕಹಳಾ
ವರ ಮೃದಂಗಾದಿಗಳು ಭೂಸುರ
ಸುರಭಿಗಳ ಬಲವಂದು ದಧಿ ದೂರ್ವಾಕ್ಷತಾವಳಿಯ
ಧರಿಸಿ ಧರಣೀ ದೇವರನು ಸ
ತ್ಕರಿಸಿ ಕರತಳದಿಂದ ನಾಸಿಕ
ದೆರಲ ಚಂದ್ರೋದಯವನೀಕ್ಷಿಸಿ ದೇವ ಹೊರವಂಟ ॥5॥
೦೦೬ ಘನ ಬಳಾಹಕ ...{Loading}...
ಘನ ಬಳಾಹಕ ಸೈನ್ಯ ಸುಗ್ರೀ
ವನನು ನಿರ್ಮಳ ಮೇಘಪುಷ್ಪನ
ನನುವಿನಲಿ ಹೂಡಿದನು ದಾರುಕ ಹೇಮಮಯ ರಥವ
ಧನುವ ಶಸ್ತ್ರಾಸ್ತ್ರವ ಸುದರ್ಶನ
ಕನಕ ಕವಚ ಕೃಪಾಣವನು ಸ್ಯಂ
ದನದೊಳಿಳುಹೆಂದಸುರರಿವು ಸಾತ್ಯಕಿಗೆ ನೇಮಿಸಿದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನ ಸಾರಥಿಯಾದ ದಾರುಕನು ಹಿರಿದಾದ ಬಳಾಹಕ, ಶೈಬ್ಯ, ಸುಗ್ರೀವ ಮತ್ತು ಮೇಘ ಪುಷ್ಪ ಎಂಬ ಕುದುರೆಗಳನ್ನು ಕ್ರಮವಾಗಿ ಬಂಗಾರದ ರಥಕ್ಕೆ ಕಟ್ಟಿದನು, ‘ಬಿಲ್ಲುಗಳು, ಶಸ್ತ್ರಾಸ್ತ್ರಗಳು, ಸುದರ್ಶನ ಚಕ್ರ, ಚಿನ್ನದ ಕವಚ, ಕತ್ತಿಗಳನ್ನು ರಥದಲ್ಲಿಡು’ ಎಂದು ಕೃಷ್ಣನು ಸಾತ್ಯಕಿಗೆ ನಿಯಮಿಸಿದನು.
ಪದಾರ್ಥ (ಕ.ಗ.ಪ)
ಅನು-ಕ್ರಮ, ಹೂಡು-ಕಟ್ಟು, ಕೃಪಾಣ-ಕತ್ತಿ , ಸ್ಯಂದನ-ರಥ
ಮೂಲ ...{Loading}...
ಘನ ಬಳಾಹಕ ಸೈನ್ಯ ಸುಗ್ರೀ
ವನನು ನಿರ್ಮಳ ಮೇಘಪುಷ್ಪನ
ನನುವಿನಲಿ ಹೂಡಿದನು ದಾರುಕ ಹೇಮಮಯ ರಥವ
ಧನುವ ಶಸ್ತ್ರಾಸ್ತ್ರವ ಸುದರ್ಶನ
ಕನಕ ಕವಚ ಕೃಪಾಣವನು ಸ್ಯಂ
ದನದೊಳಿಳುಹೆಂದಸುರರಿವು ಸಾತ್ಯಕಿಗೆ ನೇಮಿಸಿದ ॥6॥
೦೦೭ ಇವರಿಗವದಿರು ನೆಟ್ಟನೇ ...{Loading}...
ಇವರಿಗವದಿರು ನೆಟ್ಟನೇ ಮುನಿ
ವವರು ನಾವಿವರವರು ಮತ್ತಂ
ತಿವರಿಗವನಿಯನೀಸಿ ಕೊಡುವುದು ನಮ್ಮ ಭರವಸಿಕೆ
ಅವಗಡಿಸಿದೊಡೆ ಕಾದುವುದು ಕೌ
ರವರು ಖುಲ್ಲರು ರಥದೊಳಗೆ ಕೈ
ದುವನು ತುಂಬೆಂದಸುರರಿಪು ಸಾತ್ಯಕಿಗೆ ನೇಮಿಸಿದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಪಾಂಡವರಿಗೆ ಆ ಕೌರವರು ನೇರವಾಗಿ ಕೋಪಿಸಿಕೊಳ್ಳುವವರು, ನಾವು ಇವರ ಕಡೆಯವರು, ಮತ್ತು ಇವರಿಗೆ ಭೂಮಿಯನ್ನು ಕೊಡಿಸುವ ಭರವಸೆಯನ್ನು ಉಳ್ಳವರು. ತೊಂದರೆಯಾದರೆ ಕಾದಾಡಬೇಕು. ಕೌರವರು ದುಷ್ಟರು. ಆದಕಾರಣ ರಥದೊಳಗೆ ಆಯುಧವನ್ನು ತುಂಬು ಎಂದು ಕೃಷ್ಣನು ಸಾತ್ಯಕಿಗೆ ನಿಯಮಿಸಿದನು.
ಪದಾರ್ಥ (ಕ.ಗ.ಪ)
ಕೈದು-ಆಯುಧ, ನೇಮಿಸು-ನಿಯಮಿಸು, ಅವಗಡಿಸು-ತೊಂದರೆಮಾಡು
ಮೂಲ ...{Loading}...
ಇವರಿಗವದಿರು ನೆಟ್ಟನೇ ಮುನಿ
ವವರು ನಾವಿವರವರು ಮತ್ತಂ
ತಿವರಿಗವನಿಯನೀಸಿ ಕೊಡುವುದು ನಮ್ಮ ಭರವಸಿಕೆ
ಅವಗಡಿಸಿದೊಡೆ ಕಾದುವುದು ಕೌ
ರವರು ಖುಲ್ಲರು ರಥದೊಳಗೆ ಕೈ
ದುವನು ತುಂಬೆಂದಸುರರಿಪು ಸಾತ್ಯಕಿಗೆ ನೇಮಿಸಿದ ॥7॥
೦೦೮ ಕಲಿತ ಸನ್ನಾಹದಲಿ ...{Loading}...
ಕಲಿತ ಸನ್ನಾಹದಲಿ ಸಾರಥಿ
ಸುಳಿಸಿದನು ಹೊಂದೇರನಭ್ರಕೆ
ತಳಿತವಮಳಚ್ಛತ್ರ ಚಾಮರ ಸಿತಪತಾಕೆಗಳು
ಅಳುಕೆ ನೆಲನಕ್ಷೋಣಿ ಬಲವಿ
ಟ್ಟಳಿಸಿ ನಡೆದುದು ರಥಕೆ ದಾನವ
ಕುಲದಿಶಾಪಟ ಕೃಷ್ಣ ಬಿಜಯಂಗೈದನೊಲವಿನಲಿ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ವಿದ್ಯಾಪರಿಣತಿಯಿಂದ ಸಾರಥಿ ದಾರುಕನು ಚಿನ್ನದ ರಥವನ್ನು ಆಕಾಶಕ್ಕೆ ಹಾರುತ್ತಿದೆಯೋ ಎಂಬಂತೆ ಓಡಸಿಕೊಂಡು ಬಂದನು. ಆಕಾಶದಲ್ಲಿ ಬಿಳಿಯ ಧ್ವಜಗಳು ಹಾರಾಡಿದವು, ಛತ್ರ, ಚಮರಗಳು ಸಹಿತ, ನೆಲವು ನಡುಗುವಂತೆ ಅಕ್ಷೋಹಿಣಿ ಸೈನ್ಯವು ರಥಕ್ಕೆ ಕೂಡಿಕೊಂಡು ನಡೆಯಿತು. ರಾಕ್ಷಸ ಕುಲವನ್ನು ದಿಕ್ಕಾಪಾಲು ಮಾಡುವ ಕೃಷ್ಣನು ಆಸಕ್ತಿಯಿಂದ ಹೊರಟನು.
ಪದಾರ್ಥ (ಕ.ಗ.ಪ)
ಅಭ್ರ-ಆಕಾಶ, ಸಿತಪತಾಕೆ-ಬಿಳಿಯಧ್ವಜ, ಒಲವಿನಲ್ಲಿ-ಆಸಕ್ತಿಯಿಂದ
ಮೂಲ ...{Loading}...
ಕಲಿತ ಸನ್ನಾಹದಲಿ ಸಾರಥಿ
ಸುಳಿಸಿದನು ಹೊಂದೇರನಭ್ರಕೆ
ತಳಿತವಮಳಚ್ಛತ್ರ ಚಾಮರ ಸಿತಪತಾಕೆಗಳು
ಅಳುಕೆ ನೆಲನಕ್ಷೋಣಿ ಬಲವಿ
ಟ್ಟಳಿಸಿ ನಡೆದುದು ರಥಕೆ ದಾನವ
ಕುಲದಿಶಾಪಟ ಕೃಷ್ಣ ಬಿಜಯಂಗೈದನೊಲವಿನಲಿ ॥8॥
೦೦೯ ಕಳುಹುತೈತನ್ದಖಿಳ ಪಾಣ್ಡವ ...{Loading}...
ಕಳುಹುತೈತಂದಖಿಳ ಪಾಂಡವ
ಬಲಕೆ ನೇಮವ ಕೊಟ್ಟು ಧರ್ಮಜ
ಫಲುಗುಣರ ನಿಲಿಸಿದನು ಸಹದೇವನನು ನಕುಲನನು
ಕಳುಹಿದನು ನೀ ಮರಳೆನಲು ಬೆಂ
ಬಳಿಯಲನಿಲಜನೈದಿ ಹಗೆಯಲಿ
ಕಲಹವನು ಮಸೆಯೆಂದು ನಂಬುಗೆಗೊಂಡು ಮರಳಿದನು ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನನ್ನು ಕಳುಹಿಸಲು ಬಂದ ಪಾಂಡವರ ಸೈನ್ಯಕ್ಕೆ ಹಿಂದಿರುಗಲು ಆಜ್ಞೆ ಮಾಡಿ , ಧರ್ಮರಾಜ ಅರ್ಜುನರನ್ನು ನಿಲ್ಲಿಸಿದನು. ಸಹದೇವ, ನಕುಲರನ್ನು ಕಳುಹಿಸಿದನು. ನೀನು ಹಿಂತಿರುಗು ಎಂದು ಹೇಳುತ್ತಿದ್ದರೂ ಭೀಮಸೇನನು ಕೃಷ್ಣನ ಹಿಂದೆಯೇ ಬರುತ್ತ ಶತ್ರುಗಳೊಡನೆ ಯುದ್ಧವನ್ನೇ ನಿರ್ಣಯ ಮಾಡಬೇಕೆಂದು ಹೇಳಿ ಭರವಸೆಗೊಂಡು ಹಿಂತಿರುಗಿದನು.
ಪದಾರ್ಥ (ಕ.ಗ.ಪ)
ಬೆಂಬಳಿಯಲಿ-ಬೆನ್ನಹಿಂದೆ
ಮೂಲ ...{Loading}...
ಕಳುಹುತೈತಂದಖಿಳ ಪಾಂಡವ
ಬಲಕೆ ನೇಮವ ಕೊಟ್ಟು ಧರ್ಮಜ
ಫಲುಗುಣರ ನಿಲಿಸಿದನು ಸಹದೇವನನು ನಕುಲನನು
ಕಳುಹಿದನು ನೀ ಮರಳೆನಲು ಬೆಂ
ಬಳಿಯಲನಿಲಜನೈದಿ ಹಗೆಯಲಿ
ಕಲಹವನು ಮಸೆಯೆಂದು ನಂಬುಗೆಗೊಂಡು ಮರಳಿದನು ॥9॥
೦೧೦ ದೇವಿಯರು ನೀವ್ ...{Loading}...
ದೇವಿಯರು ನೀವ್ ಮರಳಿಯೆನೆ ರಾ
ಜೀವನಾಭನ ಹೊರೆಗೆ ದ್ರೌಪದಿ
ದೇವಿ ಬಂದಳು ನೊಸಲ ಚಾಚಿದಳಂಘ್ರಿ ಕಮಲದಲಿ
ಸ್ಥಾವರಕೆ ಜಂಗಮಕೆ ನೀನೇ
ಜೀವಚೇಷ್ಟಕನವದಿರಂತ
ರ್ಭಾವವನು ನೆರೆ ಬಲಿಯಲಾಗದು ಸಂಧಿ ಕಾರ್ಯದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ದೇವಿಯರೇ ನೀವು ಹಿಂತಿರುಗಿರಿ’ ಎನ್ನಲು ದ್ರೌಪದೀದೇವಿಯು ಕೃಷ್ಣನ ಬಳಿಗೆ ಬಂದಳು. ಅವನ ಪಾದಕಮಲದಲ್ಲಿ ತನ್ನ ಹಣೆಯನ್ನು ಮುಂದಿಟ್ಟಳು. ಜಡ-ಚೇತನಗಳಿಗೆ ನೀನೇ ಜೀವ ಪ್ರೇರಕನು. ಅವರ ಅಂತರಂಗದ ಅಭಿಪ್ರಾಯವನ್ನು ತಿಳಿದು ಸಂಧಿಯಕಾರ್ಯಕ್ಕೆ ಮನಸ್ಸು ಮಾಡಬಾರದೆಂದಳು.
ಪದಾರ್ಥ (ಕ.ಗ.ಪ)
ಚೇಷ್ಟಕ-ಪ್ರೇರಕ.
ಮೂಲ ...{Loading}...
ದೇವಿಯರು ನೀವ್ ಮರಳಿಯೆನೆ ರಾ
ಜೀವನಾಭನ ಹೊರೆಗೆ ದ್ರೌಪದಿ
ದೇವಿ ಬಂದಳು ನೊಸಲ ಚಾಚಿದಳಂಘ್ರಿ ಕಮಲದಲಿ
ಸ್ಥಾವರಕೆ ಜಂಗಮಕೆ ನೀನೇ
ಜೀವಚೇಷ್ಟಕನವದಿರಂತ
ರ್ಭಾವವನು ನೆರೆ ಬಲಿಯಲಾಗದು ಸಂಧಿ ಕಾರ್ಯದಲಿ ॥10॥
೦೧೧ ಖಳರು ತಮ್ಮುನ್ನತಿಯ ...{Loading}...
ಖಳರು ತಮ್ಮುನ್ನತಿಯ ಕೀಲನು
ಕಳಚಿ ಕಳೆದರು ಮರಳಿ ಮಾಡುವ
ಡಳುಕಿದರು ತನ್ನವರು ಪತಿಗಳೆ ಪರಮ ವೈರಿಗಳು
ಹಳಿವ ನೀನೇ ಬಲ್ಲೆಯಿನ್ನೆ
ನ್ನುಳಿವ ನೀನೇ ಬಲ್ಲೆ ಹಿರಿದಾ
ಗಳಲಿದೆನು ಸಲಹೆಂದು ಕಂಬನಿದುಂಬಿದಳು ತರಳೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುಷ್ಟರು ನಮ್ಮ ಏಳಿಗೆಯ ರಥದ ಕಡಾಣಿಯನ್ನು ಕಿತ್ತು ಹಾಕಿದರು. ಅದನ್ನು ಪುನಃ ಸರಿಪಡಿಸಿ ಆರಥವನ್ನು ಓಡಿಸಲು ಇವರು ಭಯಪಟ್ಟು ಹಿಂತೆಗೆದರು. ನನಗೆ ನನ್ನ ಗಂಡಂದಿರೇ ಪರಮ ವೈರಿಗಳು. ನನ್ನ ಕಷ್ಟವನ್ನು ನೀನೇ ತಿಳಿದಿರುವಿ. ನನ್ನ ಉಳಿವನ್ನೂ ನೀನೇ ಬಲ್ಲೆ. ಬಹಳವಾಗಿ ನೊಂದಿರುವೆನು ಕಾಪಾಡೆಂದು ದ್ರೌಪದಿ ಕಣ್ಣೀರನ್ನು ಸುರಿಸಿದಳು.
ಪದಾರ್ಥ (ಕ.ಗ.ಪ)
ಉನ್ನತಿ-ಏಳಿಗೆ,
ಹಳಿವ-ಕಷ್ಟ.
ಮೂಲ ...{Loading}...
ಖಳರು ತಮ್ಮುನ್ನತಿಯ ಕೀಲನು
ಕಳಚಿ ಕಳೆದರು ಮರಳಿ ಮಾಡುವ
ಡಳುಕಿದರು ತನ್ನವರು ಪತಿಗಳೆ ಪರಮ ವೈರಿಗಳು
ಹಳಿವ ನೀನೇ ಬಲ್ಲೆಯಿನ್ನೆ
ನ್ನುಳಿವ ನೀನೇ ಬಲ್ಲೆ ಹಿರಿದಾ
ಗಳಲಿದೆನು ಸಲಹೆಂದು ಕಂಬನಿದುಂಬಿದಳು ತರಳೆ ॥11॥
೦೧೨ ಏಳು ತಾಯೆ ...{Loading}...
ಏಳು ತಾಯೆ ಸರೋಜಮುಖಿ ವಿಪಿ
ನಾಲಯದೊಳತಿ ನವೆದೆ ನಿನ್ನವ
ರಾಳಿಗೊಂಡಂದವನು ಬಲ್ಲೆನು ನಿನ್ನ ಹರಿಬದಲಿ
ಕಾಳಗವನೇ ಬಲಿದು ತಹೆನಿವ
ರೇಳಿಲವ ಮಾಡಿದೊಡೆ ರಿಪುಗಳ
ಸೀಳಿ ಕರುಳನು ಮುಡಿಸದಿಹೆನೇ ನಿನ್ನ ಕಬರಿಯಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತಾಯಿಯೇ ಏಳು ! ಕಮಲ ಮುಖಿ, ನೀನು ಕಾಡಿನಲ್ಲಿ ಅತಿಯಾಗಿ ನೊಂದೆ. ನಿನ್ನವರು ನಡೆಸಿಕೊಂಡ ರೀತಿಯನ್ನು ನಾನು ಬಲ್ಲೆನು. ನಿನ್ನ ಕಾರ್ಯದಲ್ಲಿ ಯುದ್ಧವನ್ನೇ ಗಟ್ಟಿಮಾಡಿಕೊಂಡು ತರುತ್ತೇನೆ. ನಿನ್ನವರು ತಿರಸ್ಕಾರ ಮಾಡಿದರೆ ನಾನೇ ಶತ್ರುಗಳನ್ನು ಸೀಳಿ ನಿನ್ನ ಮುಡಿಗೆ ಕರುಳನ್ನು ಮುಡಿಸದೆ ಇರುವೆನೇ ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಆಳಿಗೊಂಡಂದವನು - ನಡೆಸಿಕೊಂಡ ರೀತಿ, ಏಳಿಲ - ತಿರಸ್ಕಾರ, ಕಬರಿ - ಮುಡಿ.
ಮೂಲ ...{Loading}...
ಏಳು ತಾಯೆ ಸರೋಜಮುಖಿ ವಿಪಿ
ನಾಲಯದೊಳತಿ ನವೆದೆ ನಿನ್ನವ
ರಾಳಿಗೊಂಡಂದವನು ಬಲ್ಲೆನು ನಿನ್ನ ಹರಿಬದಲಿ
ಕಾಳಗವನೇ ಬಲಿದು ತಹೆನಿವ
ರೇಳಿಲವ ಮಾಡಿದೊಡೆ ರಿಪುಗಳ
ಸೀಳಿ ಕರುಳನು ಮುಡಿಸದಿಹೆನೇ ನಿನ್ನ ಕಬರಿಯಲಿ ॥12॥
೦೧೩ ದೇವಕಿಯ ಮೇಲಾಣೆ ...{Loading}...
ದೇವಕಿಯ ಮೇಲಾಣೆ ವರ ವಸು
ದೇವನಂಘ್ರಿಗಳಾಣೆ ಮನುಮಥ
ದೇವನಾಣೆ ನಿಧಾನವನು ಕೇಳಬಲೆ ನಿನ್ನಾಣೆ
ನಾವು ಸಂಧಿಯ ನೆವದಲವದಿರ
ಭಾವವನು ಕಲಿಮಾಡಿ ಕೋಪವ
ತೀವಿ ಸಂಧಿಯ ಮುರಿದು ಬಹೆವಿದ ನಂಬು ನೀನೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವಕಿಯ ಮೇಲಾಣೆ, ವಸುದೇವನ ಪಾದಗಳ ಮೇಲಾಣೆ, ಪ್ರದ್ಯುಮ್ನನ ಆಣೆ, ದ್ರೌಪದಿಯೆ ನಿನ್ನಾಣೆ, ನನ್ನ ಅಭಿಪ್ರಾಯವನ್ನು ಕೇಳು. ನಾವು ಸಂಧಿಯ ನೆವದಿಂದ ಕೌರವರ ಮನಸ್ಸನ್ನು ಗಟ್ಟಿಮಾಡಿ, ರೋಷವನ್ನು ತುಂಬಿ, ಸಂಧಿಯನ್ನು ಮುರಿದು ಬರುತ್ತೇವೆ. ಇದನ್ನು ನೀನು ನಂಬು ಎಂದು ಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ನಿಧಾನ-ಉಪಾಯ, ಕಲಿಮಾಡು-ಗಟ್ಟಿಮಾಡು, ತೀವಿ-ತುಂಬಿ
ಮೂಲ ...{Loading}...
ದೇವಕಿಯ ಮೇಲಾಣೆ ವರ ವಸು
ದೇವನಂಘ್ರಿಗಳಾಣೆ ಮನುಮಥ
ದೇವನಾಣೆ ನಿಧಾನವನು ಕೇಳಬಲೆ ನಿನ್ನಾಣೆ
ನಾವು ಸಂಧಿಯ ನೆವದಲವದಿರ
ಭಾವವನು ಕಲಿಮಾಡಿ ಕೋಪವ
ತೀವಿ ಸಂಧಿಯ ಮುರಿದು ಬಹೆವಿದ ನಂಬು ನೀನೆಂದ ॥13॥
೦೧೪ ಮರಳಿದಳು ತರಳಾಕ್ಷಿ ...{Loading}...
ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾಗ್ರ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ಹಿಂತಿರುಗಿದಳು. ಕೃಷ್ಣನು ದಾರಿಯಲ್ಲಿ ಬರುತ್ತ, ಭಾರದ್ವಾಜ ಗೌತಮ, ಕಣ್ವಮುನಿ ಶ್ರೇಷ್ಠರು, ಉರಗಮಾಲಿ, ಮತಂಗ, ಗಾಗ್ರ್ಯ, ಅಂಗೀರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು ಮೊದಲಾದ ಪ್ರಮುಖ ಮುನಿ ಶ್ರೇಷ್ಠರನ್ನು ನೋಡಿದನು.
ಪದಾರ್ಥ (ಕ.ಗ.ಪ)
ಬಟ್ಟೆ-ದಾರಿ
ಟಿಪ್ಪನೀ (ಕ.ಗ.ಪ)
ಶ್ವೇತಕೇತು - ಈ ಹೆಸರಿನವನು ಮಹಾಭಾರತದಲ್ಲಿ ಹಲವರಿದ್ದಾರೆ. ಆದರೆ ಮಹಾಭಾರತದ ಶಾಂತಿಪರ್ವದಲ್ಲಿ ಉಕ್ತನಾಗಿರುವ ಉದ್ಧಾಲಕ ಮುನಿಯ ಮಗನಾದ ಶ್ವೇತಕೇತು ಇವರೆಲ್ಲ ಪ್ರಮುಖನಾದವನು. ಮಾನವ ಸಮಾಜದಲ್ಲಿ ಮನುಷ್ಯರ ನಡವಳಿಕೆಗಳ ಸದಾಚಾರ ಸಂಹಿತೆಯನ್ನು ರೂಪಿಸಿಕೊಟ್ಟವನೆಂಬ ಕಾರಣಕ್ಕಾಗಿ ಈತ ಪ್ರಸಿದ್ಧನಾಗಿದ್ದಾನೆ. ಮುಖ್ಯವಾಗಿ ಗಂಡುಹೆಣ್ಣುಗಳ ಸ್ವಚ್ಛಂದ ಲೈಂಗಿಕ ಪ್ರವೃತ್ತಿಗೆ ಒಂದು ನೀತಿಯ ಕಡಿವಾಣವನ್ನು ಹಾಕಿದ್ದು ಇವನ ಸಾಧನೆ ಎನ್ನಬಹುದು. ಮದುವೆಯಾದ ಹೆಣ್ಣುಗಂಡುಗಳು ಹೇಗೆ ಒಂದು ಶೀಲಸಂಹಿತೆಗೆ ಒಳಗಾಗಬೇಕೆಂಬ ನಿಯಾಮಕವನ್ನು ಮಡಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಅಷ್ಟಾವಕ್ರ : ಅಷ್ಟಾವಕ್ರಯೋಗಿಯು ಉದ್ಧಾಲಕನ ಮಗಳ ಮಗ. ಶ್ವೇತಕೇತು ಇವನ ಗೆಳೆಯನಾಗಿದ್ದ. ಈತ ಅಷ್ಟಾವಕ್ರನ ಬಳಿ ‘ಉದ್ಧಾಲಕನು ತನ್ನ ತಂದೆಯಲ್ಲ’ ಎಂದು ಹೇಳುತ್ತಾನೆ. ಉದ್ದಾಲಕನು ತನ್ನ ಶಿಷ್ಯರಲ್ಲಿ ಒಬ್ಬನನ್ನು ತನ್ನ ಹೆಂಡತಿಯ ಸಂಗ ಮಾಡುವಂತೆ ಮಾಡಿ ಮಗನನ್ನು ಪಡೆದನೆಂದು ಹೇಳಲಾಗಿದೆ. ಮೊದಲೇ ತಂದೆಯ ನಡತೆಯಿಂದ ಬೇಸತ್ತಿದ್ದ ಶ್ವೇತಕೇತುವಿಗೆ ಮುಂದೆ ನಡೆದ ಇನ್ನೊಂದು ಘಟನೆ ನಮ್ಮ ಸಮಾಜದ ಕುಟುಂಬ ಪದ್ಧತಿಯಲ್ಲಿ ಕೆಲವು ಕಟ್ಟುಪಾಡುಗಳನ್ನು ತರಬೇಕೆಂಬ ಬಯಕೆಯನ್ನು ಉಂಟುಮಾಡಿತು.
ನಡೆದದ್ದು ಇಷ್ಟೆ. ಶ್ವೇತಕೇತು ಅಂದು ಮನೆಯಲ್ಲೇ ಇದ್ದ. ಅಪ್ಪ ಉದ್ದಾಲಕನೂ ಇದ್ದಯ. ಇವರ ಬಳಿಗೆ ಒಬ್ಬ ಬ್ರಾಹ್ಮಣ ಬಂದ. ಉದ್ಧಾಲಕನ ಹೆಂಡತಿ, ಕೈಯನ್ನು ಭದ್ರವಾಗಿ ಹಿಡಿದುಕೊಂಡು ‘ನಡಿ ಹೋಗೋಣ’ ಎಂದು ಕರೆದುಕೊಂಡು ಹೊರಟ. ಉದ್ದಾಲಕ ಈ ದೃಶ್ಯವನ್ನು ನೋಡುತ್ತ ಸುಮ್ಮನಿದ್ದ. ಶ್ವೇತಕೇತುವಿಗೆ ಮಾತ್ರ ಈ ದೃಶ್ಯ ಸಿಟ್ಟು ತರಿಸಿತ್ತು. ಕೆರಳಿದ ಮಗನನ್ನು ಕಂಡು ಉದ್ದಾಲಕ ಹೇಳಿದ.
‘‘ಮಗು, ಕೋಪ ಮಾಡಿಕೊಳ್ಳಬೇಡ. ಇದು ಆರ್ಯಧರ್ಮದಲ್ಲಿ ಅಂಗೀಕೃತವಾದ ಒಂದು ಪದ್ಧತಿಯಾಗಿದೆ. ಸ್ತ್ರೀಯರು ಸ್ವತಂತ್ರರು, ಯಾವ ಅಡ್ಡಿಯೂ ಇಲ್ಲದವರು.’’ ಮಗನಿಗೆ ಸಹಿಸಲಾಗಲಿಲ್ಲ. ‘ಮಾ ತಾತ ಕೋಪಂ ಕಾರ್ಷಿತ್ವಂ ಏಷ ಧರ್ಮಃ ಸನಾತನಃ’ (ಮಗನೇ, ಕೋಪಿಸಿಕೊಳ್ಳಬೇಡ. ಇದು ಸನಾತನ ಕಾಲದಿಂದ ಬಂದಿರುವ ಧಮ್) ಎಂಬ ಅಪ್ಪನ ಮಾತಿಗೆ ಮಗ ಒಪ್ಪಲಿಲ್ಲ. ಕುಟುಂಬ ವ್ಯವಸ್ಥೆಯನ್ನೇ ಹಾಳು ಮಾಡುವ ಈ ದುಷ್ಟಪದ್ಧತಿ ಪಾಣಿ ಲೋಕದ್ದು ಎಂದು ಅವನಿಗನ್ನಿಸಿತು. ಹಾಗಾಗಿ ಅವನು ಕುಟುಂಬದಲ್ಲಿ ಸತಿ-ಪತಿಯರು ನಡೆದುಕೊಳ್ಳಬೇಕಾದ ವಿಧಿವಿಧಾನಗಳನ್ನು ವಿವರವಾಗಿ ಬರೆದಿಟ್ಟ. ಅಲ್ಲಿಯ ತನಕ ವಿವಾಹಿತ ಗಂಡು-ಹೆಣ್ಣುಗಳು ಪರಪುರುಷ-ಪರಸ್ತೀಯರೊಂದಿಗೆ ನಡೆಸುತ್ತಿದ್ದ ಲೈಂಗಿಕ ವ್ಯವಹಾರಗಳಿಗೆ ಕಡಿವಾಣ ಹಾಕಿದ. ಇವನಿಂದಾಗಿ ಎಲ್ಲ ಹಳೆಯ ಕಂದಾಚಾರದ ಕುಟುಂಬ ಪದ್ಧತಿ ಮಾಯವಾಗಿ ಒಂದು ಹೊಸ ನಡವಳಿಕೆಯ ಸೂತ್ರ ಸ್ಥಾಪಿತವಾಯಿತು.ಈ ಹೆಸರಿನವನು ಮಹಾಭಾರತದಲ್ಲಿ ಹಲವರಿದ್ದಾರೆ. ಆದರೆ ಮಹಾಭಾರತದ ಶಾಚಿತಿಪರ್ವದಲ್ಲಿ ಉಕ್ತನಾಗಿರುವ ಉದ್ಧಾಲಕ ಮುನಿಯ ಮಗನಾದ ಶ್ವೇತಕೇತು ಇವರೆಲ್ಲ ಪ್ರಮುಖನಾದವನು. ಮಾನವ ಸಮಾಜದಲ್ಲಿ ಮನುಷ್ಯರ ನಡವಳಿಕೆಗಳ ಸದಾಚಾರ ಸಂಹಿತೆಯನ್ನು ರೂಪಿಸಿಕೊಟ್ಟವನೆಂಬ ಕಾರಣಕ್ಕಾಗಿ ಈತ ಪ್ರಸಿದ್ಧನಾಗಿದ್ದಾನೆ. ಮುಖ್ಯವಾಗಿ ಗಂಡುಹೆಣ್ಣುಗಳ ಸ್ವಚ್ಛಂದ ಲೈಂಗಿಕ ಪ್ರವೃತ್ತಿಗೆ ಒಂದು ನೀತಿಯ ಕಡಿವಾಣವನ್ನು ಹಾಕಿದ್ದು ಇವನ ಸಾಧನೆ ಎನ್ನಬಹುದು. ಮದುವೆಯಾದ ಹೆಣ್ಣುಗಂಡುಗಳು ಹೇಗೆ ಒಂದು ಶೀಲಸಂಹಿತೆಗೆ ಒಳಗಾಗಬೇಕೆಂಬ ನಿಯಾಮಕವನ್ನು ಮಡಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಅಷ್ಟಾವಕ್ರಯೋಗಿಯು ಉದ್ಧಾಲಕನ ಮಗಳ ಮಗ. ಶ್ವೇತಕೇತು ಇವನ ಗೆಳೆಯನಾಗಿದ್ದ. ಈತ ಅಷ್ಟಾವಕ್ರನ ಬಳಿ ‘ಉದ್ಧಾಲಕನು ತನ್ನ ತಂದೆಯಲ್ಲ’ ಎಂದು ಹೇಳುತ್ತಾನೆ. ಉದ್ದಾಲಕನು ತನ್ನ ಶಿಷ್ಯರಲ್ಲಿ ಒಬ್ಬನನ್ನು ತನ್ನ ಹೆಂಡತಿಯ ಸಂಗ ಮಾಡುವಂತೆ ಮಾಡಿ ಮಗನನ್ನು ಪಡೆದನೆಂದು ಹೇಳಲಾಗಿದೆ. ಮೊದಲೇ ತಂದೆಯ ನಡತೆಯಿಂದ ಬೇಸತ್ತಿದ್ದ ಶ್ವೇತಕೇತುವಿಗೆ ಮುಂದೆ ನಡೆದ ಇನ್ನೊಂದು ಘಟನೆ ನಮ್ಮ ಸಮಾಜದ ಕುಟುಂಬ ಪದ್ಧತಿಯಲ್ಲಿ ಕೆಲವು ಕಟ್ಟುಪಾಡುಗಳನ್ನು ತರಬೇಕೆಂಬ ಬಯಕೆಯನ್ನು ಉಂಟುಮಾಡಿತು.
ನಡೆದದ್ದು ಇಷ್ಟೆ. ಶ್ವೇತಕೇತು ಅಂದು ಮನೆಯಲ್ಲೇ ಇದ್ದ. ಅಪ್ಪ ಉದ್ದಾಲಕನೂ ಇದ್ದ. ಇವರ ಬಳಿಗೆ ಒಬ್ಬ ಬ್ರಾಹ್ಮಣ ಬಂದ. ಉದ್ಧಾಲಕನ ಹೆಂಡತಿ, ಕೈಯನ್ನು ಭದ್ರವಾಗಿ ಹಿಡಿದುಕೊಂಡು ‘ನಡಿ ಹೋಗೋಣ’ ಎಂದು ಕರೆದುಕೊಂಡು ಹೊರಟ. ಉದ್ದಾಲಕ ಈ ದೃಶ್ಯವನ್ನು ನೋಡುತ್ತ ಸುಮ್ಮನಿದ್ದ. ಶ್ವೇತಕೇತುವಿಗೆ ಮಾತ್ರ ಈ ದೃಶ್ಯ ಸಿಟ್ಟು ತರಿಸಿತ್ತು. ಕೆರಳಿದ ಮಗನನ್ನು ಕಂಡು ಉದ್ದಾಲಕ ಹೇಳಿದ.
‘‘ಮಗು, ಕೋಪ ಮಾಡಿಕೊಳ್ಳಬೇಡ. ಇದು ಆರ್ಯಧರ್ಮದಲ್ಲಿ ಅಂಗೀಕೃತವಾದ ಒಂದು ಪದ್ಧತಿಯಾಗಿದೆ. ಸ್ತ್ರೀಯರು ಸ್ವತಂತ್ರರು, ಯಾವ ಅಡ್ಡಿಯೂ ಇಲ್ಲದವರು.’’ ಮಗನಿಗೆ ಸಹಿಸಲಾಗಲಿಲ್ಲ. ‘ಮಾ ತಾತ ಕೋಪಂ ಕಾರ್ಷಿತ್ವಂ ಏಷ ಧರ್ಮಃ ಸನಾತನಃ’ (ಮಗನೇ, ಕೋಪಿಸಿಕೊಳ್ಳಬೇಡ. ಇದು ಸನಾತನ ಕಾಲದಿಂದ ಬಂದಿರುವ ಧಮ್) ಎಂಬ ಅಪ್ಪನ ಮಾತಿಗೆ ಮಗ ಒಪ್ಪಲಿಲ್ಲ. ಕುಟುಂಬ ವ್ಯವಸ್ಥೆಯನ್ನೇ ಹಾಳು ಮಾಡುವ ಈ ದುಷ್ಟಪದ್ಧತಿ ಪಾಣಿ ಲೋಕದ್ದು ಎಂದು ಅವನಿಗನ್ನಿಸಿತು. ಹಾಗಾಗಿ ಅವನು ಕುಟುಂಬದಲ್ಲಿ ಸತಿ-ಪತಿಯರು ನಡೆದುಕೊಳ್ಳಬೇಕಾದ ವಿಧಿವಿಧಾನಗಳನ್ನು ವಿವರವಾಗಿ ಬರೆದಿಟ್ಟ. ಅಲ್ಲಿಯ ತನಕ ವಿವಾಹಿತ ಗಂಡು-ಹೆಣ್ಣುಗಳು ಪರಪುರುಷ-ಪರಸ್ತೀಯರೊಂದಿಗೆ ನಡೆಸುತ್ತಿದ್ದ ಲೈಂಗಿಕ ವ್ಯವಹಾರಗಳಿಗೆ ಕಡಿವಾಣ ಹಾಕಿದ. ಇವನಿಂದಾಗಿ ಎಲ್ಲ ಹಳೆಯ ಕಂದಾಚಾರದ ಕುಟುಂಬ ಪದ್ಧತಿ ಮಾಯವಾಗಿ ಒಂದು ಹೊಸ ನಡವಳಿಕೆಯ ಸೂತ್ರ ಸ್ಥಾಪಿತವಾಯಿತು.
ಮೂಲ ...{Loading}...
ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾಗ್ರ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ ॥14॥
೦೧೫ ಮುನಿವರರನುಪಚರಿಸಿದನು ಹ ...{Loading}...
ಮುನಿವರರನುಪಚರಿಸಿದನು ಹ
ಸ್ತಿನಪುರಿಗೆ ಸಂಗಾತ ಬಹೆವೆಂ
ದೆನಲು ಬರಹೇಳಿದನು ಸಕಲ ಮಹಾತಪೋಧನರ
ಘನ ಕುಶಸ್ಥಳಪುರದಲೆಡೆಗೈ
ದನು ಸುಯೋಧನನಲ್ಲಿಗಟ್ಟಿದ
ವಿನುತ ದೂತರು ಬಿನ್ನವಿಸಿದರು ಮುರಹರನ ಬರವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣನು ಮುನಿಶ್ರೇಷ್ಠರನ್ನು ಸತ್ಕರಿಸಿದನು. ಹಸ್ತಿನಾವತಿಗೆ ಜೊತೆಯಲ್ಲಿ ಬರುವೆವು ಎಂದು ಹೇಳಲು ಎಲ್ಲ ಮಹಾಋಷಿಗಳನ್ನೂ ತನ್ನೊಡನೆ ಬರಹೇಳಿದನು ಕುಶಸ್ಥಳ ನಗರದಲ್ಲಿ ಬೀಡಾರದ ಏರ್ಪಾಟು ಮಾಡಿದನು. ದುರ್ಯೋಧನನ ಬಳಿಗೆ ಕಳುಹಿಸಿದ ಸದ್ಗುಣವಂತರಾದ ದೂತರು ಕೃಷ್ಣನ ಆಗಮನವನ್ನು ವಿಜ್ಞಾಪಿಸಿದರು.
ಪದಾರ್ಥ (ಕ.ಗ.ಪ)
ಉಪಚರಿಸು-ಸತ್ಕರಿಸು, ಸಂಗಾತ-ಜೊತೆಯಲ್ಲಿ, ಬಿನ್ನವಿಸು-ವಿಜ್ಞಾಪಿಸು.
ಮೂಲ ...{Loading}...
ಮುನಿವರರನುಪಚರಿಸಿದನು ಹ
ಸ್ತಿನಪುರಿಗೆ ಸಂಗಾತ ಬಹೆವೆಂ
ದೆನಲು ಬರಹೇಳಿದನು ಸಕಲ ಮಹಾತಪೋಧನರ
ಘನ ಕುಶಸ್ಥಳಪುರದಲೆಡೆಗೈ
ದನು ಸುಯೋಧನನಲ್ಲಿಗಟ್ಟಿದ
ವಿನುತ ದೂತರು ಬಿನ್ನವಿಸಿದರು ಮುರಹರನ ಬರವ ॥15॥
೦೧೬ ಕೇಳಿದನು ಧೃತರಾಷ್ಟ್ರನಾಗ ...{Loading}...
ಕೇಳಿದನು ಧೃತರಾಷ್ಟ್ರನಾಗ ಕೃ
ಪಾಳುವಿನ ಗಮನವನು ಚಿತ್ತವ
ಹೂಳಿ ಹೆಚ್ಚಿದ ಹರುಷದಲಿ ಉಬ್ಬೆದ್ದನಡಿಗಡಿಗೆ
ಹೇಳಿದನು ವಿದುರಂಗೆ ಭಂಡಾ
ರಾಲಯದೊಳುಳ್ಳಮಳ ಮೌಕ್ತಿಕ
ಜಾಳಿಗೆಯ ಪೆಟ್ಟಿಗೆಯೊಳಾಯಿಸು ವರ ಸುರತ್ನಗಳ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಧೃತರಾಷ್ಟ್ರನು ಕರುಣಾಮಯಿಯಾದ ಕೃಷ್ಣನ ಆಗಮನವನ್ನು ಕೇಳಿದನು; ಮನತುಂಬಿ ಹೆಚ್ಚಿದ ಹರ್ಷದಲ್ಲಿ ಮೇಲಿಂದ ಮೇಲೆ ಹಿಗ್ಗಿದನು. ತನ್ನ ಭಂಡಾರದಲ್ಲಿರುವ ಶ್ರೇಷ್ಠ ಮುತ್ತುಗಳ ಚೀಲವನ್ನು, ಪೆಟ್ಟಿಗೆಯಿಂದ ಶ್ರೇಷ್ಠರತ್ನಗಳನ್ನು ಆರಿಸೆಂದು ವಿದುರನಿಗೆ ಹೇಳಿದನು.
ಪದಾರ್ಥ (ಕ.ಗ.ಪ)
ಹೂಳಿ-ತುಂಬಿದ, ಉಬ್ಬೆದ್ದು-ಹಿಗ್ಗುತ್ತ, ಕೃಪಾಳು-ಕರುಣೆ, ಮೌಕ್ತಿಕ-ಮುತ್ತು, ಜಾಡಿಗೆ-ಚೀಲ.
ಮೂಲ ...{Loading}...
ಕೇಳಿದನು ಧೃತರಾಷ್ಟ್ರನಾಗ ಕೃ
ಪಾಳುವಿನ ಗಮನವನು ಚಿತ್ತವ
ಹೂಳಿ ಹೆಚ್ಚಿದ ಹರುಷದಲಿ ಉಬ್ಬೆದ್ದನಡಿಗಡಿಗೆ
ಹೇಳಿದನು ವಿದುರಂಗೆ ಭಂಡಾ
ರಾಲಯದೊಳುಳ್ಳಮಳ ಮೌಕ್ತಿಕ
ಜಾಳಿಗೆಯ ಪೆಟ್ಟಿಗೆಯೊಳಾಯಿಸು ವರ ಸುರತ್ನಗಳ ॥16॥
೦೧೭ ಎಲೆ ವಿದುರ ...{Loading}...
ಎಲೆ ವಿದುರ ಕೇಳೈ ಸುಯೋಧನ
ನುಳಿಯೆ ಸಕಲ ಮಹಾ ಪ್ರಧಾನರು
ನಳಿನನಾಭನನಿದಿರುಗೊಳಲಿ ಕೃತಾರ್ಥರಾದವರು
ಹೊಳಲು ಗುಡಿ ತೋರಣದಲೆಸೆಯಲಿ
ಕಳಸ ಕನ್ನಡಿ ಸಹಿತ ನಡೆಯಲಿ
ನಳಿನವದನೆಯರೆಂದು ನೇಮಿಸಿದನು ಮಹೀಪಾಲ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ವಿದುರ ಕೇಳು, ದುರ್ಯೋಧನನನ್ನು ಬಿಟ್ಟು ಧನ್ಯರಾದ ಎಲ್ಲ ಮಹಾಪ್ರಧಾನರೂ ಕೃಷ್ಣನನ್ನು ಎದುರುಗೊಳ್ಳಲಿ, ನಗರವು ಬಾವುಟ, ತೋರಣಗಳಿಂದ ಶೋಭಿಸಲಿ, ಹೆಂಗಸರು ಕಳಸ ಕನ್ನಡಿಗಳೊಡನೆ ಎದುರುಗೊಳ್ಳಲು ನಡಯಲಿ ಎಂದು ಧೃತರಾಷ್ಟ್ರನು ಆಜ್ಞಾಪಿಸಿದನು.
ಪದಾರ್ಥ (ಕ.ಗ.ಪ)
ಕೃತಾರ್ಥರು-ಧನ್ಯರು, ಹೊಳಲು-ನಗರ, ಗುಡಿ-ಬಾವುಟ.
ಮೂಲ ...{Loading}...
ಎಲೆ ವಿದುರ ಕೇಳೈ ಸುಯೋಧನ
ನುಳಿಯೆ ಸಕಲ ಮಹಾ ಪ್ರಧಾನರು
ನಳಿನನಾಭನನಿದಿರುಗೊಳಲಿ ಕೃತಾರ್ಥರಾದವರು
ಹೊಳಲು ಗುಡಿ ತೋರಣದಲೆಸೆಯಲಿ
ಕಳಸ ಕನ್ನಡಿ ಸಹಿತ ನಡೆಯಲಿ
ನಳಿನವದನೆಯರೆಂದು ನೇಮಿಸಿದನು ಮಹೀಪಾಲ ॥17॥
೦೧೮ ತೆಗೆ ಸುವಸ್ತು ...{Loading}...
ತೆಗೆ ಸುವಸ್ತು ವನೀಯದಿರು ಹರಿ
ಹಗೆ ಕಣಾ ಕುಂತೀಕುಮಾರರು
ಹಗೆಗಳೇ ಮನ್ನಿಸಿದರೆಂದುಳುಹುವನೆ ಮುರವೈರಿ
ನಗರಿಗಾತನು ಬರಲಿ ಯಾದವ
ನಗಡುತನಕೌಷಧಿಯ ಬಲ್ಲೆನು
ಬಿಗಿದು ಕೆಡಹುವೆನೆಂದು ನುಡಿದನು ಕೌರವರ ರಾಯ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅತ್ತ ತೆಗೆದಿಡು ಒಳ್ಳೆಯ ಒಡವೆ ವಸ್ತುಗಳನ್ನು ಕೊಡದಿರು, ನಮಗೆ ಶ್ರೀ ಕೃಷ್ಣನು ಶತ್ರು ಪಾಂಡವರು ಶತ್ರುಗಳೇ ? ಗೌರವಿಸಿದೆವೆಂದು ನಮ್ಮನ್ನು ಶ್ರೀಕೃಷ್ಣನು ಉಳಿಸುವನೇ ? ಅವನು ನಗರಕ್ಕೆ ಬರಲಿ. ಯಾದವನ ಉದ್ಧಟತನಕ್ಕೆ ಔಷಧಿಯು ನನಗೆ ತಿಳಿದಿದೆ. ಅವನನ್ನು ಬಿಗಿದು ಕೆಡವುತ್ತೇನೆ ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಮನ್ನಿಸು-ಗೌರವಿಸು.
ಮೂಲ ...{Loading}...
ತೆಗೆ ಸುವಸ್ತು ವನೀಯದಿರು ಹರಿ
ಹಗೆ ಕಣಾ ಕುಂತೀಕುಮಾರರು
ಹಗೆಗಳೇ ಮನ್ನಿಸಿದರೆಂದುಳುಹುವನೆ ಮುರವೈರಿ
ನಗರಿಗಾತನು ಬರಲಿ ಯಾದವ
ನಗಡುತನಕೌಷಧಿಯ ಬಲ್ಲೆನು
ಬಿಗಿದು ಕೆಡಹುವೆನೆಂದು ನುಡಿದನು ಕೌರವರ ರಾಯ ॥18॥
೦೧೯ ಖಾತಿಗೊಣ್ಡನು ಭೀಷ್ಮನೆಲೆ ...{Loading}...
ಖಾತಿಗೊಂಡನು ಭೀಷ್ಮನೆಲೆ ಕಡು
ಪಾತಕನೆ ನೀ ಕೃಷ್ಣನನು ಬಿಗಿ
ವಾತನೇ ಬಳಿಕೇನು ಬಲ್ಲೆನು ನಿನ್ನ ಸಾಹಸವ
ಈತ ನುಡಿದೀ ಮಾತ ಕೇಳಲು
ಪಾತಕವು ಬಹುದೆಂದು ಗಂಗಾ
ಜಾತನೋಲಗದಿಂದ ಸರಿದನು ತನ್ನ ಮಂದಿರಕೆ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮನು ಕೋಪಗೊಂಡನು, ಎಲೆ ಕಡುಪಾಪಿಯೇ ! ನೀನು ಕೃಷ್ಣನನ್ನು ಕಟ್ಟಿ ಹಾಕುವವನೆ ? ಮುಂದೇನು ? ನಿನ್ನ ಸಾಹಸವನ್ನು ನಾನು ತಿಳಿದಿರುವೆ. ಇವನು ಹೇಳಿದ ಈ ಮಾತುಗಳನ್ನು ಕೇಳಿದರೆ ಪಾಪವು ಬರುವುದು, ಎಂದು ಭೀಷ್ಮನು ಸಭೆಯಿಂದೆದ್ದು ತನ್ನ ಮನೆಗೆ ನಡೆದನು.
ಪದಾರ್ಥ (ಕ.ಗ.ಪ)
ಖಾತಿ-ಕೋಪ/ಸಿಟ್ಟು, ಪಾತಕ-ಪಾಪ
ಮೂಲ ...{Loading}...
ಖಾತಿಗೊಂಡನು ಭೀಷ್ಮನೆಲೆ ಕಡು
ಪಾತಕನೆ ನೀ ಕೃಷ್ಣನನು ಬಿಗಿ
ವಾತನೇ ಬಳಿಕೇನು ಬಲ್ಲೆನು ನಿನ್ನ ಸಾಹಸವ
ಈತ ನುಡಿದೀ ಮಾತ ಕೇಳಲು
ಪಾತಕವು ಬಹುದೆಂದು ಗಂಗಾ
ಜಾತನೋಲಗದಿಂದ ಸರಿದನು ತನ್ನ ಮಂದಿರಕೆ ॥19॥
೦೨೦ ಪುರವ ರಚಿಸಿದರುದಯದಲಿ ...{Loading}...
ಪುರವ ರಚಿಸಿದರುದಯದಲಿ ಬಿ
ತ್ತರ ಮಿಗಲು ಗಾಂಗೇಯ ಗೌತಮ
ಗುರು ವಿದುರ ಶಲ್ಯಾದಿ ಸುಜನರು ಬಂದರಿದಿರಾಗಿ
ತರುಣಿಯರು ಕೆಂದಳಿರ ಕಲಶದ
ಕರತಳದ ಗರುವಾಯಿಯಲಿ ಪಂ
ಕರುಹನಾಭನನಿದಿರುಗೊಂಡರು ವಿವಿಧ ವಿಭವದಲಿ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೆಳಗಿನಲ್ಲಿಯೆ ನಗರವನ್ನು ಶೃಂಗರಿಸಿದರು, ಬೆಳಗು ಹೆಚ್ಚಿದಂತೆ ಭೀಷ್ಮ, ಕೃಪ, ಗುರುದ್ರೋಣರು, ವಿದುರ, ಶಲ್ಯ, ಮೊದಲಾದ ಸಭ್ಯರು ಎದುರಾಗಿ ಬಂದರು. ಹೆಂಗಸರು ಕೈಗಳಲ್ಲಿ ಕೆಂಪಾದ ಚಿಗುರುಗಳ ಕಲಶಗಳನ್ನು ಹಿಡಿದುಕೊಂಡು ಠೀವಿಯಿಂದ ನಾನಾ ಬಗೆಯ ಆಡಂಬರದಲ್ಲಿ ಕಮಲನಾಭನಾದ ಕೃಷ್ಣನನ್ನು ಎದುರುಗೊಂಡರು.
ಪದಾರ್ಥ (ಕ.ಗ.ಪ)
ವಿವಿಧವಿಭವ-ನಾನಾ ಬಗೆಯ ಆಡಂಬರ, ಕೆಂದಳಿರು-ಕೆಂಪಾದ ಚಿಗುರು, ಗರುವಾಯಿ-ಠೀವಿ/ದೊಡ್ಡತನ.
ಮೂಲ ...{Loading}...
ಪುರವ ರಚಿಸಿದರುದಯದಲಿ ಬಿ
ತ್ತರ ಮಿಗಲು ಗಾಂಗೇಯ ಗೌತಮ
ಗುರು ವಿದುರ ಶಲ್ಯಾದಿ ಸುಜನರು ಬಂದರಿದಿರಾಗಿ
ತರುಣಿಯರು ಕೆಂದಳಿರ ಕಲಶದ
ಕರತಳದ ಗರುವಾಯಿಯಲಿ ಪಂ
ಕರುಹನಾಭನನಿದಿರುಗೊಂಡರು ವಿವಿಧ ವಿಭವದಲಿ ॥20॥
೦೨೧ ಹೊಳಹು ಮಿಗೆ ...{Loading}...
ಹೊಳಹು ಮಿಗೆ ದೂರದಲಿ ಗರುಡನ
ಹಳವಿಗೆಯ ಕಂಡಖಿಳ ಜನವಂ
ಜುಳಿಯನಿಟ್ಟುದು ಭಾಳದಲಿ ಪರಿಶುದ್ಧಭಾವದಲಿ
ನಳಿನನಾಭನ ದಿವ್ಯಮೂರ್ತಿಯ
ಲಲಿತ ಕಾಂತಿಯ ಕಡಲೊಳಗೆ ನೆರೆ
ಮುಳುಗಿದುದು ಪುರಜನದ ಕಣುಮನವೊಂದು ನಿಮಿಷದಲಿ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಕಾಶವು ಅಧಿಕವಾಗಿ ದೂರದಿಂದಲೇ ಗರುಡನ ಬಾವುಟವನ್ನು ಕಂಡು ಸಮಸ್ತ ಜನರು ಪರಿಶುದ್ಧ ಭಾವದಿಂದ ತಮ್ಮ ಕೈಗಳೆರಡನ್ನೂ ಜೋಡಿಸಿ ಹಣೆಯ ಮೇಲಿಟ್ಟುಕೊಂಡರು; ಪದ್ಮನಾಭನಾದ ಶ್ರೀಕೃಷ್ಣನ ಸುಂದರ ಮೂರ್ತಿಯ ಮನೋಹರ ಕಾಂತಿಯ ಕಡಲಿನಲ್ಲಿ ನಾಗರಿಕರ ಕಣ್ಮನಗಳು ಒಂದು ನಿಮಿಷದಲ್ಲಿ ತುಂಬಿ ಮುಳುಗಿತು.
ಪದಾರ್ಥ (ಕ.ಗ.ಪ)
ಮಿಗೆ-ಅಧಿಕವಾಗಿ, ಹೊಳಹು-ಪ್ರಕಾಶ, ಹಳವಿಗೆ-ಬಾವುಟ, ದಿವ್ಯ-ಸುಂದರ.
ಮೂಲ ...{Loading}...
ಹೊಳಹು ಮಿಗೆ ದೂರದಲಿ ಗರುಡನ
ಹಳವಿಗೆಯ ಕಂಡಖಿಳ ಜನವಂ
ಜುಳಿಯನಿಟ್ಟುದು ಭಾಳದಲಿ ಪರಿಶುದ್ಧಭಾವದಲಿ
ನಳಿನನಾಭನ ದಿವ್ಯಮೂರ್ತಿಯ
ಲಲಿತ ಕಾಂತಿಯ ಕಡಲೊಳಗೆ ನೆರೆ
ಮುಳುಗಿದುದು ಪುರಜನದ ಕಣುಮನವೊಂದು ನಿಮಿಷದಲಿ ॥21॥
೦೨೨ ಮನ್ದಿ ಮೈಯಿಕ್ಕಿತು ...{Loading}...
ಮಂದಿ ಮೈಯಿಕ್ಕಿತು ಮುರಾಂತಕ
ನಿಂದು ಮನದೊಲವಿನಲಿ ಗಂಗಾ
ನಂದನ ದ್ರೋಣಾದಿಗಳನೆತ್ತಿದನು ಕರುಣದಲಿ
ಮಂದಿರದ ಸುಕ್ಷೇಮ ಕುಶಲವ
ನಂದು ಕೇಳಿದು ವೀಳಯವನಾ
ಮಂದಿಗಿತ್ತನು ದೇವ ಬಂದನು ಹಸ್ತಿನಾಪುರಿಗೆ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನರು ಕೃಷ್ಣನಿಗೆ ಅಡ್ಡ ಬಿದ್ದರು ; ಕೃಷ್ಣನು ನಿಂತು ಮನಃಪೂರ್ವಕ ಪ್ರೀತಿಯಿಂದ ಭೀಷ್ಮ, ದ್ರೋಣ ಮೊದಲಾದವರನ್ನು ಕರುಣೆಯಿಂದ ಎತ್ತಿದನು. ಮನೆಮಂದಿಗಳ ಕುಶಲ ಸಮಾಚಾರಗಳನ್ನು ಕೇಳಿ, ಆ ಜನರಿಗೆ ವೀಳೆಯವನು ಕೊಟ್ಟನು. ಹಸ್ತಿನ ಪುರಕ್ಕೆ ಬಂದನು.
ಪದಾರ್ಥ (ಕ.ಗ.ಪ)
ಮುರಾಂತಕ-ಮುರನನ್ನು ನಾಶಮಾಡಿದವ (ಕೃಷ್ಣ), ಮೈಯಿಕ್ಕು-ನಮಸ್ಕರಿಸು
ಮೂಲ ...{Loading}...
ಮಂದಿ ಮೈಯಿಕ್ಕಿತು ಮುರಾಂತಕ
ನಿಂದು ಮನದೊಲವಿನಲಿ ಗಂಗಾ
ನಂದನ ದ್ರೋಣಾದಿಗಳನೆತ್ತಿದನು ಕರುಣದಲಿ
ಮಂದಿರದ ಸುಕ್ಷೇಮ ಕುಶಲವ
ನಂದು ಕೇಳಿದು ವೀಳಯವನಾ
ಮಂದಿಗಿತ್ತನು ದೇವ ಬಂದನು ಹಸ್ತಿನಾಪುರಿಗೆ ॥22॥
೦೨೩ ಗಿಳಿಯ ತುಮ್ಬಿಯ ...{Loading}...
ಗಿಳಿಯ ತುಂಬಿಯ ಹಂಸೆಗಳ ಕೋ
ಗಿಲೆಯ ಕೊಳರ್ವಕ್ಕಿಗಳ ಕೊಂಚೆಯ
ಕೊಳಲುವಕ್ಕಿಯ ಜಕ್ಕವಕ್ಕಿಯ ನವಿಲು ಪಾರಿವದ
ಕಲರುಚಿಯ ಕರ್ಣಾಮೃತದ ತನಿ
ವಳೆಯ ಕರೆದುದು ಯಾದವೇಂದ್ರನ
ಬಲದ ಕಿವಿಗಳಲಿಭಪುರಿಯ ಹೊರವಳಯದುದ್ಯಾನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಸ್ತಿನಾಪುರದ ಹೊರಭಾಗದಲ್ಲಿದ್ದ ಉದ್ಯಾನವನದಲ್ಲಿ ಗಿಳಿ, ದುಂಬಿ, ಹಂಸ, ಕೋಗಿಲೆ, ಕೊಕ್ಕರೆ, ಕ್ರೌಂಚಪಕ್ಷಿ, ಕೊಳಲಿನ ಧ್ವನಿಯ ಹಕ್ಕಿ, ಚಕ್ರವಾಕ ಪಕ್ಷಿ ನವಿಲು ಪಾರಿವಾಳ ಇವುಗಳ ಇಂಪಿನ ಧ್ವನಿಯು ಕಿವಿಗೆ ಅಮೃತದ ತಂಪು ಮಳೆಯಂತೆ ಕೃಷ್ಣನ ಬಲಭಾಗದ ಕಿವಿಯಲ್ಲಿ ತುಂಬಿತು/ಸುರಿಯಿತು.
ಪದಾರ್ಥ (ಕ.ಗ.ಪ)
ಕೊಂಚೆ-ಕ್ರೌಂಚ, ಕೊಳಲುಕ್ಕಿ-ಕೊಳಲಿನ ಧ್ವನಿಯ ಹಕ್ಕಿ, ಚಕ್ಕವಕ್ಕಿ-ಚಕ್ರವಾಕ, ತನಿವಳೆ-ತಂಪುಮಳೆ, ಇಭಪುರಿ-ಹಸ್ತಿನಾವತಿ.
ಮೂಲ ...{Loading}...
ಗಿಳಿಯ ತುಂಬಿಯ ಹಂಸೆಗಳ ಕೋ
ಗಿಲೆಯ ಕೊಳರ್ವಕ್ಕಿಗಳ ಕೊಂಚೆಯ
ಕೊಳಲುವಕ್ಕಿಯ ಜಕ್ಕವಕ್ಕಿಯ ನವಿಲು ಪಾರಿವದ
ಕಲರುಚಿಯ ಕರ್ಣಾಮೃತದ ತನಿ
ವಳೆಯ ಕರೆದುದು ಯಾದವೇಂದ್ರನ
ಬಲದ ಕಿವಿಗಳಲಿಭಪುರಿಯ ಹೊರವಳಯದುದ್ಯಾನ ॥23॥
೦೨೪ ನಸು ಬಿರಿದ ...{Loading}...
ನಸು ಬಿರಿದ ಪರಿಪಕ್ವದಾಡಿಮ
ವಸರದೊಳಗರವಟ್ಟಿಗೆಯ ದರ
ಹಸಿತ ಪಂಕಜಗಳಿತ ಮಕರಂದದ ತಟಾಕದಲಿ
ರಸಭರಿತ ಖರ್ಜೂರ ಫಲ ಸಂ
ಪ್ರಸರ ಛತ್ರವನೆಸಗಿಯುಪವನ
ವೆಸೆದುದೈ ಧಾರ್ಮಿಕನವೊಲು ಯದುರಾಯನಿದಿರಿನಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಲ್ಪ ಬಿರಿದ ಪೂರ್ಣವಾಗಿ ಹಣ್ಣಾದ ದಾಳಿಂಬೆ, ಅಂಗಳದಲ್ಲಿ ಅರವಟ್ಟಿಗೆಯ ಮುಗುಳ ನಗೆಯ ಕಮಲದಿಂದ ಬಿದ್ದ ಹೂವಿನ ರಸದ ಜಲಾಶಯದಲ್ಲಿ, ರಸ ತುಂಬಿದ ಖರ್ಜೂರ ಫಳಗಳ ರಾಶಿಯ ಗುಂಪು ಕೊಡೆಯನ್ನು ನಿರ್ಮಿಸಿ ಉಪವನವು ಧಾರ್ಮಿಕನಂತೆ ಯದುರಾಯನಾದ ಕೃಷ್ಣನ ಎದುರಿನಲ್ಲಿ ಶೋಭಿಸಿತು.
ಪದಾರ್ಥ (ಕ.ಗ.ಪ)
ಪರಿಪಕ್ವ-ಪೂರ್ಣವಾದ ಹಣ್ಣು, ಪಸರ-ಅಂಗಳ, ತಟಾಕ-ಜಲಾಶಯ, ಸಂಪ್ರಸರ-ರಾಶಿ, ದರಹಸಿತ-ಮುಗುಳು ನಗೆಯ
ಮೂಲ ...{Loading}...
ನಸು ಬಿರಿದ ಪರಿಪಕ್ವದಾಡಿಮ
ವಸರದೊಳಗರವಟ್ಟಿಗೆಯ ದರ
ಹಸಿತ ಪಂಕಜಗಳಿತ ಮಕರಂದದ ತಟಾಕದಲಿ
ರಸಭರಿತ ಖರ್ಜೂರ ಫಲ ಸಂ
ಪ್ರಸರ ಛತ್ರವನೆಸಗಿಯುಪವನ
ವೆಸೆದುದೈ ಧಾರ್ಮಿಕನವೊಲು ಯದುರಾಯನಿದಿರಿನಲಿ ॥24॥
೦೨೫ ಎಳಲತೆಯನೆರಗಿಸುತ ಮಲೆತರೆ ...{Loading}...
ಎಳಲತೆಯನೆರಗಿಸುತ ಮಲೆತರೆ
ತಳಿರುಗಳನಲ್ಲಾಡಿ ವರ ಪರಿ
ಮಳದ ಕಪ್ಪವ ಕೊಂಡು ಮರಿದುಂಬಿಗಳ ಗೀತವನು
ಸಲೆ ಸೊಗಸಿ ಮಕರಂದ ನದಿಯಲಿ
ತಳಿತು ಬೀಡನು ಬಿಡುತ ವನದಲಿ
ಸುಳಿದುದೈ ತಂಗಾಳಿ ಭೂಮೀಪಾಲನಂದದಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಳೆಬಳ್ಳಿಯನ್ನು ಬಗ್ಗಿಸುತ್ತ ತಡೆದರೆ ಚಿಗುರೆಲೆಗಳನ್ನು ಅಲ್ಲಾಡಿಸುತ್ತ. ಹೆಚ್ಚಿನ ಕಂಪಿನ ಕಾಣಿಕೆಯನ್ನು ಕೊಂಡು. ಮರಿದುಂಬಿಗಳ ಹಾಡನ್ನು ಕೇಳುತ್ತ ಸೊಗಸಿನಿಂದ ಹಿಗ್ಗುತ್ತ, ಹೂವಿನ ರಸದ ನದಿಯಲ್ಲಿ ಈಜಾಡುತ್ತ ತಂಗಾಳಿಯು ರಾಜನಂತೆ ವನದಲ್ಲಿ ಸುಳಿಯಿತು.
ಪದಾರ್ಥ (ಕ.ಗ.ಪ)
ಮಲೆ-ತಡೆ, ತಳಿರು-ಚಿಗುರು, ಪರಿಮಳ-ಕಂಪು, ತಳಿತ-ಚಿಗಿತ
ಮೂಲ ...{Loading}...
ಎಳಲತೆಯನೆರಗಿಸುತ ಮಲೆತರೆ
ತಳಿರುಗಳನಲ್ಲಾಡಿ ವರ ಪರಿ
ಮಳದ ಕಪ್ಪವ ಕೊಂಡು ಮರಿದುಂಬಿಗಳ ಗೀತವನು
ಸಲೆ ಸೊಗಸಿ ಮಕರಂದ ನದಿಯಲಿ
ತಳಿತು ಬೀಡನು ಬಿಡುತ ವನದಲಿ
ಸುಳಿದುದೈ ತಂಗಾಳಿ ಭೂಮೀಪಾಲನಂದದಲಿ ॥25॥
೦೨೬ ಮಘಮಘಿಪ ಹೊಮ್ಬಾಳೆಗಳ ...{Loading}...
ಮಘಮಘಿಪ ಹೊಂಬಾಳೆಗಳ ರಸ
ವೊಗುವ ಮಧುರದ್ರಾಕ್ಷÉಗಳ ನಿಡು
ಮುಗಿಲ ತುಡುಕುವ ತೆಂಗುಗಳ ನೆರೆ ಕಾತ ಪನಸುಗಳ
ಬಿಗಿದ ಪಣ್ಗೊನೆವಾಳೆಗಳ ಸೊಂ
ಪೊಗುವ ಕರ್ಪೂರ ದ್ರುಮೌಘದ
ಸೊಗಸು ಸೆಳೆದುದು ಮನವನಾ ಗಜನಗರದುಪವನದ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಸ್ತಿನಾನಗರದ ಉಪವನದಲ್ಲಿ ಸುವಾಸನಾಯುಕ್ತವಾದ ಹೊಂಬಾಳೆಗಳ ರಸಹರಿಯುವ ಮಧುರವಾದ ದ್ರಾಕ್ಷಿಗಳು, ಆಕಾಶವನ್ನು ಮುಟ್ಟುವ ಎತ್ತರಕ್ಕೆ ಏರಿರುವ ತೆಂಗಿನ ಗುಂಪು, ಹಣ್ಣಾದ ಹಲಸಿನ . ಹಣ್ಣು ಗೊನೆಗಳಿಂದ ಬಿಗಿದ ಬಾಳೆಗಳು ಸಮೃದ್ಧಿಯಾಗಿರುವ ಕರ್ಪೂರದ ಗಿಡಗಳ ಗುಂಪಿನ ಸೊಗಸು ಮನಸ್ಸನ್ನು ಸೆಳೆಯಿತು.
ಪದಾರ್ಥ (ಕ.ಗ.ಪ)
ಕಾತಪಲಸು-ಹಣ್ಣದ ಹಲಸು, ದ್ರುಮ-ಗಿಡ, ನೆರೆ-ಗುಂಪು, ಓಘ-ಗುಂಪು, ಸೊಂಪು-ಸಮೃದ್ಧಿ.
ಮೂಲ ...{Loading}...
ಮಘಮಘಿಪ ಹೊಂಬಾಳೆಗಳ ರಸ
ವೊಗುವ ಮಧುರದ್ರಾಕ್ಷÉಗಳ ನಿಡು
ಮುಗಿಲ ತುಡುಕುವ ತೆಂಗುಗಳ ನೆರೆ ಕಾತ ಪನಸುಗಳ
ಬಿಗಿದ ಪಣ್ಗೊನೆವಾಳೆಗಳ ಸೊಂ
ಪೊಗುವ ಕರ್ಪೂರ ದ್ರುಮೌಘದ
ಸೊಗಸು ಸೆಳೆದುದು ಮನವನಾ ಗಜನಗರದುಪವನದ ॥26॥
೦೨೭ ಲಲಿತ ಶುಕಚಯ ...{Loading}...
ಲಲಿತ ಶುಕಚಯ ಚಂಚು ಪುಟದಿಂ
ದಳಿತ ಜಂಬೂ ಪಕ್ವ ಫಲ ರಸ
ಲುಳಿತ ನವಮಕರಂದ ಮಧುರೋರ್ಝರನಿವಾತದಲಿ
ತಳಿತ ಕಿನ್ನರ ಮಿಥುನ ಸುಖ ಪರಿ
ಮಿಳಿತ ಗೀತಶ್ರವಣ ಸನ್ನುತ
ಪುಳಿನ ಸುಪ್ತ ಮರಾಳವೆಸೆದುದು ಗಜಪುರೋದ್ಯಾನ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಂದರವಾದ ಗಿಳಿಗಳ ಹಿಂಡಿನ ಕೊಕ್ಕಿನಿಂದ ತೊಟ್ಟಿಕ್ಕಿದ ನೇರಳೆ ಹಣ್ಣಿನ ರಸದ, ಹೊಸ ಮಕರಂದ ಸವಿಯ ರಭಸದ ಜಲಪಾತದ ಮೇಲೆ ಬೀಸಿಬಂದ ಗಾಳಿಯಲ್ಲಿ, ಸಂತೋಷದಿಂದ ಕಿನ್ನರ ಜೋಡಿಯ ಇಂಪುಗೂಡಿದ ಗೀತಶ್ರವಣ ಮಾಡುತ್ತ, ಮಧುರ ಧ್ವನಿಗಳ ಉಲಿತದಲ್ಲಿ ಮಲಗಿದ ಹಂಸ ಹಸ್ತಿನಾವತಿಯ ಉದ್ಯಾನವನದಲ್ಲಿ ಶೋಭಿಸಿತು.
ಪದಾರ್ಥ (ಕ.ಗ.ಪ)
ಶುಕಚಯ-ಗಿಳಿಯಹಿಂಡು, ಚಂಚುಪುಟ-ಕೊಕ್ಕು, ದಳಿತ-ಬಿದ್ದ, ಲುಳಿತ-ತೊಟ್ಟಿಕ್ಕಿದ , ನಿವಾತ-ಬಿರುಗಾಳಿ, ಸನ್ನುತ-ಒಳ್ಳೆಯ, ಮರಾಳ-ಹಂಸ.
ಮೂಲ ...{Loading}...
ಲಲಿತ ಶುಕಚಯ ಚಂಚು ಪುಟದಿಂ
ದಳಿತ ಜಂಬೂ ಪಕ್ವ ಫಲ ರಸ
ಲುಳಿತ ನವಮಕರಂದ ಮಧುರೋರ್ಝರನಿವಾತದಲಿ
ತಳಿತ ಕಿನ್ನರ ಮಿಥುನ ಸುಖ ಪರಿ
ಮಿಳಿತ ಗೀತಶ್ರವಣ ಸನ್ನುತ
ಪುಳಿನ ಸುಪ್ತ ಮರಾಳವೆಸೆದುದು ಗಜಪುರೋದ್ಯಾನ ॥27॥
೦೨೮ ಅರರೆ ಪಾತಾಳದ ...{Loading}...
ಅರರೆ ಪಾತಾಳದ ವಿಳಾಸಿನಿ
ಯರಿಗೆ ಚೌಕಿಗೆಯೋ ಸುದುರ್ಗದ
ಹಿರಿಯಗಳೊ ಬಲುಗೋಟೆಯೋ ನಿಚ್ಚಣಿಕೆಯೋ ದಿವದ
ಮುರಿಮುರಿದ ಹುಲಿಮುಖದ ಹೇಮದ
ತರದ ತೆನೆಗಳ ವಜ್ರಮಯ ಬಂ
ಧುರ ಕವಾಟಸ್ಫುಟದಲೆಸೆದುದು ಹಸ್ತಿನಾನಗರ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರರೆ ! ಪಾತಾಳದ ಬೆಡಗಿಯರಿಗೆ ನಡು ಮನೆಯೋ, ಅಥವಾ ಒಳ್ಳೆಯ ದುರ್ಗದ ದೊಡ್ಡ ಕಂದಕವೋ, ದೊಡ್ಡ ಕೋಟೆಯೋ, ಅಥವಾ ತಿರುಗಿ ನೋಡುತ್ತಿರುವ ಹುಲಿಯ ಮುಖದ ಚಿನ್ನದ ತೆನೆಗಳ, ವಜ್ರದಿಂದ ತಯಾರಿಸಿದ ಗಟ್ಟಿಯಾದ ಅಗಣಿಗಳಿಂದ ಕೂಡಿದ ಬಾಗಿಲುಗಳಿಂದ ಹಸ್ತಿನಾನಗರ ಶೋಭಿಸುತ್ತಿತ್ತು.
ಪದಾರ್ಥ (ಕ.ಗ.ಪ)
ವಿಲಾಸಿನಿಯರು - ಬೆಡಗಿಯರು (ಚೆಲುವೆಯರು), ಚೌಕಿ-ನಡುಮನೆ, ನಿಚ್ಛಣಿಕೆ-ಏಣಿ, ಕವಾಟ-ಬಾಗಿಲು, ಸ್ಫುಟ-ವ್ಯಕ್ತ, ಅಗಳು-ಕಂದಕ.
ಮೂಲ ...{Loading}...
ಅರರೆ ಪಾತಾಳದ ವಿಳಾಸಿನಿ
ಯರಿಗೆ ಚೌಕಿಗೆಯೋ ಸುದುರ್ಗದ
ಹಿರಿಯಗಳೊ ಬಲುಗೋಟೆಯೋ ನಿಚ್ಚಣಿಕೆಯೋ ದಿವದ
ಮುರಿಮುರಿದ ಹುಲಿಮುಖದ ಹೇಮದ
ತರದ ತೆನೆಗಳ ವಜ್ರಮಯ ಬಂ
ಧುರ ಕವಾಟಸ್ಫುಟದಲೆಸೆದುದು ಹಸ್ತಿನಾನಗರ ॥28॥
೦೨೯ ಹೊಗಳುತೈತನ್ದಸುರರಿಪು ಗಜ ...{Loading}...
ಹೊಗಳುತೈತಂದಸುರರಿಪು ಗಜ
ನಗರವನು ಹೊಕ್ಕನು ಸುಯೋಧನ
ನಗಣಿತೈಶ್ವರ್ಯವ ಮಹಾದೇವೆನುತ ನಲವಿನಲಿ
ಬಿಗಿದ ಬೀದಿಯ ನಯದ ನೆಲೆಗ
ಟ್ಟುಗಳ ಮಣಿಮಯ ಹೇಮದುಪ್ಪರಿ
ಗೆಗಳ ಕೇರಿಗಳೊಳಗೆ ಬರುತಿರ್ದನು ಮುರಧ್ವಂಸಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಲೆಕ್ಕವಿಲ್ಲದ ಸಂಪತ್ತನ್ನು ಹೊಗಳುತ್ತ ಮಹಾದೇವ ಎನ್ನುತ್ತ ಸಂತೋಷದಲ್ಲಿ ಕೃಷ್ಣನು ಹಸ್ತಿನಾವತಿಯನ್ನು ಪ್ರವೇಶಿಸಿದನು. ಕಟ್ಟಿದ ಬೀದಿಯ ನಯವಾದ ನೆಲೆಗಟ್ಟುಗಳ ರತ್ನಮಯವಾದ ಚಿನ್ನದ ಸೌಧಗಳ ಕೇರಿಗಳಲ್ಲಿ ಕೃಷ್ಣನು ಬರುತ್ತಿದ್ದನು.
ಪದಾರ್ಥ (ಕ.ಗ.ಪ)
ಅಗಣಿತ-ಲೆಕ್ಕವಿಲ್ಲದ, ಉಪ್ಪರಿಗೆ-ಸೌಧ
ಮೂಲ ...{Loading}...
ಹೊಗಳುತೈತಂದಸುರರಿಪು ಗಜ
ನಗರವನು ಹೊಕ್ಕನು ಸುಯೋಧನ
ನಗಣಿತೈಶ್ವರ್ಯವ ಮಹಾದೇವೆನುತ ನಲವಿನಲಿ
ಬಿಗಿದ ಬೀದಿಯ ನಯದ ನೆಲೆಗ
ಟ್ಟುಗಳ ಮಣಿಮಯ ಹೇಮದುಪ್ಪರಿ
ಗೆಗಳ ಕೇರಿಗಳೊಳಗೆ ಬರುತಿರ್ದನು ಮುರಧ್ವಂಸಿ ॥29॥
೦೩೦ ಮನ್ದದಲಿ ಸುಳಿವಾನೆ ...{Loading}...
ಮಂದದಲಿ ಸುಳಿವಾನೆ ಕುದುರೆಯ
ಸಂದಣಿಯ ಕೀಲಿಸಿದ ಭೂಮಿಪ
ರಂದಣದ ಸಾಲುಗಳ ತೆಕ್ಕೆಯ ಹಳಿಯದಾಳುಗಳ
ಮಂದಿಯಲಿ ಹೊಗಲನಿಲಗುಬ್ಬಸ
ವೆಂದರುಳಿದವರಳವೆಯೆನಲರ
ವಿಂದನಾಭನು ಬಂದನಾ ಧೃತರಾಷ್ಟ್ರನರಮನೆಗೆ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೆಲ್ಲನೆ ಚಲಿಸುವ ಆನೆ-ಕುದುರೆಗಳ ಹಿಂಡು, ಜೋಡಿಸಿದ ರಾಜರ ಪಲ್ಲಕ್ಕಿಗಳು, ಸಾಲು ಸಾಲಾಗಿ, ಕೋಲು ಹಿಡಿದ ಗುಂಪು ಕೆಡದಂತೆ ಬರುತ್ತಿರುವ ಭಂಟರು ಇವುಗಳ ನಡುವೆ ಒಳಗೆ ಹೋಗಲು ಗಾಳಿಗೂ ಸಂಕಟವೆಂದ ಮೇಲೆ ಉಳಿದವರಿಗೆ ಸಾಧ್ಯವೆ? ಎನ್ನಲು ಕೃಷ್ಣನು ಧೃತರಾಷ್ಟ್ರನ ಮನೆಗೆ ಬಂದನು.
ಪದಾರ್ಥ (ಕ.ಗ.ಪ)
ಉಬ್ಬಸ-ಸಂಕಟ, ಅಂದಣ-ಪಲ್ಲಕ್ಕಿ, ತೆಕ್ಕೆ-ಗುಂಪು, ಅನಿಲ-ಗಾಳಿ, ಸಂದಣಿ-ಹಿಂಡು, ಕೀಲಿಸು-ಜೋಡಿಸು
ಮೂಲ ...{Loading}...
ಮಂದದಲಿ ಸುಳಿವಾನೆ ಕುದುರೆಯ
ಸಂದಣಿಯ ಕೀಲಿಸಿದ ಭೂಮಿಪ
ರಂದಣದ ಸಾಲುಗಳ ತೆಕ್ಕೆಯ ಹಳಿಯದಾಳುಗಳ
ಮಂದಿಯಲಿ ಹೊಗಲನಿಲಗುಬ್ಬಸ
ವೆಂದರುಳಿದವರಳವೆಯೆನಲರ
ವಿಂದನಾಭನು ಬಂದನಾ ಧೃತರಾಷ್ಟ್ರನರಮನೆಗೆ ॥30॥
೦೩೧ ಇದಿರುಗೊಣ್ಡನು ಕಾಣಿಕೆಯನಿ ...{Loading}...
ಇದಿರುಗೊಂಡನು ಕಾಣಿಕೆಯನಿ
ಕ್ಕಿದನು ಕುಶಲ ಕ್ಷೇಮವನು ಕೇ
ಳಿದನು ಬಕುತಿಯಲೆರಗಿದನು ಚರಣದಲಿ ಧೃತರಾಷ್ಟ್ರ
ಸದನವನು ಹೊಕ್ಕಂತೆ ನಿಮಿಷಾ
ರ್ಧದಲಿ ಕುಳ್ಳಿರ್ದನಿಬರನು ಕಳು
ಹಿದನು ಕಾರುಣ್ಯದಲಿ ಗದುಗಿನ ವೀರ ನಾರಯಣ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರನು ಕೃಷ್ಣನನ್ನು ಇದಿರುಗೊಂಡು ಕಾಣಿಕೆಯನ್ನು ನೀಡಿದನು. ಕುಶಲ ಸಮಾಚಾರವನ್ನು ಕೇಳಿದನು. ಭಕ್ತಿಯಿಂದ ಕೃಷ್ಣನ ಪಾದಗಳಿಗೆ ನಮಸ್ಕರಿಸಿದನು. ಮನೆಯೊಳಗೆ ಪ್ರವೇಶಿಸಿದ ನಂತರ ಅರ್ಧ ನಿಮಿಷದಲ್ಲಿ ಕುಳಿತಿದ್ದವರೆಲ್ಲರನ್ನೂ ಕರುಣೆಯಿಂದ ಗದುಗಿನ ವೀರನಾರಾಯಣ ಸ್ವರೂಪಿಯಾದ ಕೃಷ್ಣನು ಕಳುಹಿಸಿಕೊಟ್ಟನು.
ಪದಾರ್ಥ (ಕ.ಗ.ಪ)
ಸದನ-ಮನೆ-
ಕಾರುಣ್ಯ-ಕರುಣೆ
ಮೂಲ ...{Loading}...
ಇದಿರುಗೊಂಡನು ಕಾಣಿಕೆಯನಿ
ಕ್ಕಿದನು ಕುಶಲ ಕ್ಷೇಮವನು ಕೇ
ಳಿದನು ಬಕುತಿಯಲೆರಗಿದನು ಚರಣದಲಿ ಧೃತರಾಷ್ಟ್ರ
ಸದನವನು ಹೊಕ್ಕಂತೆ ನಿಮಿಷಾ
ರ್ಧದಲಿ ಕುಳ್ಳಿರ್ದನಿಬರನು ಕಳು
ಹಿದನು ಕಾರುಣ್ಯದಲಿ ಗದುಗಿನ ವೀರ ನಾರಯಣ ॥31॥