೦೭

೦೦೦ ಸೂ ದುರಿತ ...{Loading}...

ಸೂ. ದುರಿತ ವಿಪಿನಕೃಶಾನು ಯದುಕುಲ
ವರ ಕುಶೇಶಯ ಭಾನು ನಿಜಪದ
ಶರಣಜನ ಸುರಧೇನು ಹೊಕ್ಕನು ಹಸ್ತಿನಾಪುರವ

೦೦೧ ದೇವ ಸನ್ಧಿಯನೊಲಿದು ...{Loading}...

ದೇವ ಸಂಧಿಯನೊಲಿದು ಮಾಡುವು
ದಾವು ಮುಖದಿರುಹಿದೆವುಯೀ ಸಹ
ದೇವನೀ ಸಾತ್ಯಕಿ ಯುಧಾಮನ್ಯುತ್ತಮೌಜಸರ
ಭಾವವೆಮ್ಮದು ಬಳಿಕಲರ್ಜುನ
ದೇವ ಧರ್ಮಜ ನಕುಲರೆಂಬುದ
ನಾವು ಮಿಸುಕುವರಲ್ಲ ಚಿತ್ತೈಸೆಂದನಾ ಭೀಮ ॥1॥

೦೦೨ ಕೆಲರು ...{Loading}...

ಕೆಲರು ಸಂಪ್ರತಿಗೊಲಿವರಿತ್ತಲು
ಕೆಲರು ವಿಗ್ರಹಕೆಳಸುವವರಿದ
ರೊಳಗೆ ನಿಶ್ಚಯವಿಲ್ಲದಿರೆ ನೃಪ ಕಾರ್ಯವೆಂತಹುದು
ತಿಳಿಯ ಹೇಳವನೀಶ ಪರಮಂ
ಡಲಕೆ ಪಯಣವ ಮಾಡುವೆವು ನಾ
ವಳುಕಿದವರಲ್ಲೆನಲು ಕೃಷ್ಣಂಗರಸನಿಂತೆಂದ ॥2॥

೦೦೩ ವಿದಿತವೈದೂರುಗಳ ಕೊಟ್ಟೊಡೆ ...{Loading}...

ವಿದಿತವೈದೂರುಗಳ ಕೊಟ್ಟೊಡೆ
ಹದುಳವಿಡುವುದು ಮುನಿದರಾದೊಡೆ
ಕದನವನೆ ಕೈಕೊಳ್ಳುವುದುಚಿತಾನುಚಿತದನುವರಿದು
ಹದನ ನೀನೇ ಬಲ್ಲೆ ಸಾಕಿ
ನ್ನಿದು ನಿಧಾನವು ಬಗೆಯಲೆಮ್ಮ
ಭ್ಯುದಯ ನಿಮಾ್ಮಧೀನವೆಂದನು ಧರ್ಮನಂದನನು ॥3॥

೦೦೪ ಪಯಣವನು ನಿಶ್ಚೈಸಿ ...{Loading}...

ಪಯಣವನು ನಿಶ್ಚೈಸಿ ದನುಜಾ
ರಿಯನು ಬೀಳ್ಕೊಂಡವನಿಪತಿ ಪಾ
ಳಯದೊಳಗೆ ಸಾರಿಸಿದನಗ್ಗದ ಮಂಡಲೀಕರಿಗೆ
ನಯದೊಳಾ ಮರುದಿವಸ ಮಂಗಳ
ಮಯ ಮುಹೂರ್ತದ ಜೋಯಿಸರ ಜೋ
ಕೆಯಲಿ ನಿರ್ಗಮ ನಿರತನಾದನು ಕೃಷ್ಣನೊಲವಿನಲಿ ॥4॥

೦೦೫ ಮೊರೆಯೆ ದುನ್ದುಭಿ ...{Loading}...

ಮೊರೆಯೆ ದುಂದುಭಿ ಶಂಖ ಕಹಳಾ
ವರ ಮೃದಂಗಾದಿಗಳು ಭೂಸುರ
ಸುರಭಿಗಳ ಬಲವಂದು ದಧಿ ದೂರ್ವಾಕ್ಷತಾವಳಿಯ
ಧರಿಸಿ ಧರಣೀ ದೇವರನು ಸ
ತ್ಕರಿಸಿ ಕರತಳದಿಂದ ನಾಸಿಕ
ದೆರಲ ಚಂದ್ರೋದಯವನೀಕ್ಷಿಸಿ ದೇವ ಹೊರವಂಟ ॥5॥

೦೦೬ ಘನ ಬಳಾಹಕ ...{Loading}...

ಘನ ಬಳಾಹಕ ಸೈನ್ಯ ಸುಗ್ರೀ
ವನನು ನಿರ್ಮಳ ಮೇಘಪುಷ್ಪನ
ನನುವಿನಲಿ ಹೂಡಿದನು ದಾರುಕ ಹೇಮಮಯ ರಥವ
ಧನುವ ಶಸ್ತ್ರಾಸ್ತ್ರವ ಸುದರ್ಶನ
ಕನಕ ಕವಚ ಕೃಪಾಣವನು ಸ್ಯಂ
ದನದೊಳಿಳುಹೆಂದಸುರರಿವು ಸಾತ್ಯಕಿಗೆ ನೇಮಿಸಿದ ॥6॥

೦೦೭ ಇವರಿಗವದಿರು ನೆಟ್ಟನೇ ...{Loading}...

ಇವರಿಗವದಿರು ನೆಟ್ಟನೇ ಮುನಿ
ವವರು ನಾವಿವರವರು ಮತ್ತಂ
ತಿವರಿಗವನಿಯನೀಸಿ ಕೊಡುವುದು ನಮ್ಮ ಭರವಸಿಕೆ
ಅವಗಡಿಸಿದೊಡೆ ಕಾದುವುದು ಕೌ
ರವರು ಖುಲ್ಲರು ರಥದೊಳಗೆ ಕೈ
ದುವನು ತುಂಬೆಂದಸುರರಿಪು ಸಾತ್ಯಕಿಗೆ ನೇಮಿಸಿದ ॥7॥

೦೦೮ ಕಲಿತ ಸನ್ನಾಹದಲಿ ...{Loading}...

ಕಲಿತ ಸನ್ನಾಹದಲಿ ಸಾರಥಿ
ಸುಳಿಸಿದನು ಹೊಂದೇರನಭ್ರಕೆ
ತಳಿತವಮಳಚ್ಛತ್ರ ಚಾಮರ ಸಿತಪತಾಕೆಗಳು
ಅಳುಕೆ ನೆಲನಕ್ಷೋಣಿ ಬಲವಿ
ಟ್ಟಳಿಸಿ ನಡೆದುದು ರಥಕೆ ದಾನವ
ಕುಲದಿಶಾಪಟ ಕೃಷ್ಣ ಬಿಜಯಂಗೈದನೊಲವಿನಲಿ ॥8॥

೦೦೯ ಕಳುಹುತೈತನ್ದಖಿಳ ಪಾಣ್ಡವ ...{Loading}...

ಕಳುಹುತೈತಂದಖಿಳ ಪಾಂಡವ
ಬಲಕೆ ನೇಮವ ಕೊಟ್ಟು ಧರ್ಮಜ
ಫಲುಗುಣರ ನಿಲಿಸಿದನು ಸಹದೇವನನು ನಕುಲನನು
ಕಳುಹಿದನು ನೀ ಮರಳೆನಲು ಬೆಂ
ಬಳಿಯಲನಿಲಜನೈದಿ ಹಗೆಯಲಿ
ಕಲಹವನು ಮಸೆಯೆಂದು ನಂಬುಗೆಗೊಂಡು ಮರಳಿದನು ॥9॥

೦೧೦ ದೇವಿಯರು ನೀವ್ ...{Loading}...

ದೇವಿಯರು ನೀವ್ ಮರಳಿಯೆನೆ ರಾ
ಜೀವನಾಭನ ಹೊರೆಗೆ ದ್ರೌಪದಿ
ದೇವಿ ಬಂದಳು ನೊಸಲ ಚಾಚಿದಳಂಘ್ರಿ ಕಮಲದಲಿ
ಸ್ಥಾವರಕೆ ಜಂಗಮಕೆ ನೀನೇ
ಜೀವಚೇಷ್ಟಕನವದಿರಂತ
ರ್ಭಾವವನು ನೆರೆ ಬಲಿಯಲಾಗದು ಸಂಧಿ ಕಾರ್ಯದಲಿ ॥10॥

೦೧೧ ಖಳರು ತಮ್ಮುನ್ನತಿಯ ...{Loading}...

ಖಳರು ತಮ್ಮುನ್ನತಿಯ ಕೀಲನು
ಕಳಚಿ ಕಳೆದರು ಮರಳಿ ಮಾಡುವ
ಡಳುಕಿದರು ತನ್ನವರು ಪತಿಗಳೆ ಪರಮ ವೈರಿಗಳು
ಹಳಿವ ನೀನೇ ಬಲ್ಲೆಯಿನ್ನೆ
ನ್ನುಳಿವ ನೀನೇ ಬಲ್ಲೆ ಹಿರಿದಾ
ಗಳಲಿದೆನು ಸಲಹೆಂದು ಕಂಬನಿದುಂಬಿದಳು ತರಳೆ ॥11॥

೦೧೨ ಏಳು ತಾಯೆ ...{Loading}...

ಏಳು ತಾಯೆ ಸರೋಜಮುಖಿ ವಿಪಿ
ನಾಲಯದೊಳತಿ ನವೆದೆ ನಿನ್ನವ
ರಾಳಿಗೊಂಡಂದವನು ಬಲ್ಲೆನು ನಿನ್ನ ಹರಿಬದಲಿ
ಕಾಳಗವನೇ ಬಲಿದು ತಹೆನಿವ
ರೇಳಿಲವ ಮಾಡಿದೊಡೆ ರಿಪುಗಳ
ಸೀಳಿ ಕರುಳನು ಮುಡಿಸದಿಹೆನೇ ನಿನ್ನ ಕಬರಿಯಲಿ ॥12॥

೦೧೩ ದೇವಕಿಯ ಮೇಲಾಣೆ ...{Loading}...

ದೇವಕಿಯ ಮೇಲಾಣೆ ವರ ವಸು
ದೇವನಂಘ್ರಿಗಳಾಣೆ ಮನುಮಥ
ದೇವನಾಣೆ ನಿಧಾನವನು ಕೇಳಬಲೆ ನಿನ್ನಾಣೆ
ನಾವು ಸಂಧಿಯ ನೆವದಲವದಿರ
ಭಾವವನು ಕಲಿಮಾಡಿ ಕೋಪವ
ತೀವಿ ಸಂಧಿಯ ಮುರಿದು ಬಹೆವಿದ ನಂಬು ನೀನೆಂದ ॥13॥

೦೧೪ ಮರಳಿದಳು ತರಳಾಕ್ಷಿ ...{Loading}...

ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾಗ್ರ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ ॥14॥

೦೧೫ ಮುನಿವರರನುಪಚರಿಸಿದನು ಹ ...{Loading}...

ಮುನಿವರರನುಪಚರಿಸಿದನು ಹ
ಸ್ತಿನಪುರಿಗೆ ಸಂಗಾತ ಬಹೆವೆಂ
ದೆನಲು ಬರಹೇಳಿದನು ಸಕಲ ಮಹಾತಪೋಧನರ
ಘನ ಕುಶಸ್ಥಳಪುರದಲೆಡೆಗೈ
ದನು ಸುಯೋಧನನಲ್ಲಿಗಟ್ಟಿದ
ವಿನುತ ದೂತರು ಬಿನ್ನವಿಸಿದರು ಮುರಹರನ ಬರವ ॥15॥

೦೧೬ ಕೇಳಿದನು ಧೃತರಾಷ್ಟ್ರನಾಗ ...{Loading}...

ಕೇಳಿದನು ಧೃತರಾಷ್ಟ್ರನಾಗ ಕೃ
ಪಾಳುವಿನ ಗಮನವನು ಚಿತ್ತವ
ಹೂಳಿ ಹೆಚ್ಚಿದ ಹರುಷದಲಿ ಉಬ್ಬೆದ್ದನಡಿಗಡಿಗೆ
ಹೇಳಿದನು ವಿದುರಂಗೆ ಭಂಡಾ
ರಾಲಯದೊಳುಳ್ಳಮಳ ಮೌಕ್ತಿಕ
ಜಾಳಿಗೆಯ ಪೆಟ್ಟಿಗೆಯೊಳಾಯಿಸು ವರ ಸುರತ್ನಗಳ ॥16॥

೦೧೭ ಎಲೆ ವಿದುರ ...{Loading}...

ಎಲೆ ವಿದುರ ಕೇಳೈ ಸುಯೋಧನ
ನುಳಿಯೆ ಸಕಲ ಮಹಾ ಪ್ರಧಾನರು
ನಳಿನನಾಭನನಿದಿರುಗೊಳಲಿ ಕೃತಾರ್ಥರಾದವರು
ಹೊಳಲು ಗುಡಿ ತೋರಣದಲೆಸೆಯಲಿ
ಕಳಸ ಕನ್ನಡಿ ಸಹಿತ ನಡೆಯಲಿ
ನಳಿನವದನೆಯರೆಂದು ನೇಮಿಸಿದನು ಮಹೀಪಾಲ ॥17॥

೦೧೮ ತೆಗೆ ಸುವಸ್ತು ...{Loading}...

ತೆಗೆ ಸುವಸ್ತು ವನೀಯದಿರು ಹರಿ
ಹಗೆ ಕಣಾ ಕುಂತೀಕುಮಾರರು
ಹಗೆಗಳೇ ಮನ್ನಿಸಿದರೆಂದುಳುಹುವನೆ ಮುರವೈರಿ
ನಗರಿಗಾತನು ಬರಲಿ ಯಾದವ
ನಗಡುತನಕೌಷಧಿಯ ಬಲ್ಲೆನು
ಬಿಗಿದು ಕೆಡಹುವೆನೆಂದು ನುಡಿದನು ಕೌರವರ ರಾಯ ॥18॥

೦೧೯ ಖಾತಿಗೊಣ್ಡನು ಭೀಷ್ಮನೆಲೆ ...{Loading}...

ಖಾತಿಗೊಂಡನು ಭೀಷ್ಮನೆಲೆ ಕಡು
ಪಾತಕನೆ ನೀ ಕೃಷ್ಣನನು ಬಿಗಿ
ವಾತನೇ ಬಳಿಕೇನು ಬಲ್ಲೆನು ನಿನ್ನ ಸಾಹಸವ
ಈತ ನುಡಿದೀ ಮಾತ ಕೇಳಲು
ಪಾತಕವು ಬಹುದೆಂದು ಗಂಗಾ
ಜಾತನೋಲಗದಿಂದ ಸರಿದನು ತನ್ನ ಮಂದಿರಕೆ ॥19॥

೦೨೦ ಪುರವ ರಚಿಸಿದರುದಯದಲಿ ...{Loading}...

ಪುರವ ರಚಿಸಿದರುದಯದಲಿ ಬಿ
ತ್ತರ ಮಿಗಲು ಗಾಂಗೇಯ ಗೌತಮ
ಗುರು ವಿದುರ ಶಲ್ಯಾದಿ ಸುಜನರು ಬಂದರಿದಿರಾಗಿ
ತರುಣಿಯರು ಕೆಂದಳಿರ ಕಲಶದ
ಕರತಳದ ಗರುವಾಯಿಯಲಿ ಪಂ
ಕರುಹನಾಭನನಿದಿರುಗೊಂಡರು ವಿವಿಧ ವಿಭವದಲಿ ॥20॥

೦೨೧ ಹೊಳಹು ಮಿಗೆ ...{Loading}...

ಹೊಳಹು ಮಿಗೆ ದೂರದಲಿ ಗರುಡನ
ಹಳವಿಗೆಯ ಕಂಡಖಿಳ ಜನವಂ
ಜುಳಿಯನಿಟ್ಟುದು ಭಾಳದಲಿ ಪರಿಶುದ್ಧಭಾವದಲಿ
ನಳಿನನಾಭನ ದಿವ್ಯಮೂರ್ತಿಯ
ಲಲಿತ ಕಾಂತಿಯ ಕಡಲೊಳಗೆ ನೆರೆ
ಮುಳುಗಿದುದು ಪುರಜನದ ಕಣುಮನವೊಂದು ನಿಮಿಷದಲಿ ॥21॥

೦೨೨ ಮನ್ದಿ ಮೈಯಿಕ್ಕಿತು ...{Loading}...

ಮಂದಿ ಮೈಯಿಕ್ಕಿತು ಮುರಾಂತಕ
ನಿಂದು ಮನದೊಲವಿನಲಿ ಗಂಗಾ
ನಂದನ ದ್ರೋಣಾದಿಗಳನೆತ್ತಿದನು ಕರುಣದಲಿ
ಮಂದಿರದ ಸುಕ್ಷೇಮ ಕುಶಲವ
ನಂದು ಕೇಳಿದು ವೀಳಯವನಾ
ಮಂದಿಗಿತ್ತನು ದೇವ ಬಂದನು ಹಸ್ತಿನಾಪುರಿಗೆ ॥22॥

೦೨೩ ಗಿಳಿಯ ತುಮ್ಬಿಯ ...{Loading}...

ಗಿಳಿಯ ತುಂಬಿಯ ಹಂಸೆಗಳ ಕೋ
ಗಿಲೆಯ ಕೊಳರ್ವಕ್ಕಿಗಳ ಕೊಂಚೆಯ
ಕೊಳಲುವಕ್ಕಿಯ ಜಕ್ಕವಕ್ಕಿಯ ನವಿಲು ಪಾರಿವದ
ಕಲರುಚಿಯ ಕರ್ಣಾಮೃತದ ತನಿ
ವಳೆಯ ಕರೆದುದು ಯಾದವೇಂದ್ರನ
ಬಲದ ಕಿವಿಗಳಲಿಭಪುರಿಯ ಹೊರವಳಯದುದ್ಯಾನ ॥23॥

೦೨೪ ನಸು ಬಿರಿದ ...{Loading}...

ನಸು ಬಿರಿದ ಪರಿಪಕ್ವದಾಡಿಮ
ವಸರದೊಳಗರವಟ್ಟಿಗೆಯ ದರ
ಹಸಿತ ಪಂಕಜಗಳಿತ ಮಕರಂದದ ತಟಾಕದಲಿ
ರಸಭರಿತ ಖರ್ಜೂರ ಫಲ ಸಂ
ಪ್ರಸರ ಛತ್ರವನೆಸಗಿಯುಪವನ
ವೆಸೆದುದೈ ಧಾರ್ಮಿಕನವೊಲು ಯದುರಾಯನಿದಿರಿನಲಿ ॥24॥

೦೨೫ ಎಳಲತೆಯನೆರಗಿಸುತ ಮಲೆತರೆ ...{Loading}...

ಎಳಲತೆಯನೆರಗಿಸುತ ಮಲೆತರೆ
ತಳಿರುಗಳನಲ್ಲಾಡಿ ವರ ಪರಿ
ಮಳದ ಕಪ್ಪವ ಕೊಂಡು ಮರಿದುಂಬಿಗಳ ಗೀತವನು
ಸಲೆ ಸೊಗಸಿ ಮಕರಂದ ನದಿಯಲಿ
ತಳಿತು ಬೀಡನು ಬಿಡುತ ವನದಲಿ
ಸುಳಿದುದೈ ತಂಗಾಳಿ ಭೂಮೀಪಾಲನಂದದಲಿ ॥25॥

೦೨೬ ಮಘಮಘಿಪ ಹೊಮ್ಬಾಳೆಗಳ ...{Loading}...

ಮಘಮಘಿಪ ಹೊಂಬಾಳೆಗಳ ರಸ
ವೊಗುವ ಮಧುರದ್ರಾಕ್ಷÉಗಳ ನಿಡು
ಮುಗಿಲ ತುಡುಕುವ ತೆಂಗುಗಳ ನೆರೆ ಕಾತ ಪನಸುಗಳ
ಬಿಗಿದ ಪಣ್ಗೊನೆವಾಳೆಗಳ ಸೊಂ
ಪೊಗುವ ಕರ್ಪೂರ ದ್ರುಮೌಘದ
ಸೊಗಸು ಸೆಳೆದುದು ಮನವನಾ ಗಜನಗರದುಪವನದ ॥26॥

೦೨೭ ಲಲಿತ ಶುಕಚಯ ...{Loading}...

ಲಲಿತ ಶುಕಚಯ ಚಂಚು ಪುಟದಿಂ
ದಳಿತ ಜಂಬೂ ಪಕ್ವ ಫಲ ರಸ
ಲುಳಿತ ನವಮಕರಂದ ಮಧುರೋರ್ಝರನಿವಾತದಲಿ
ತಳಿತ ಕಿನ್ನರ ಮಿಥುನ ಸುಖ ಪರಿ
ಮಿಳಿತ ಗೀತಶ್ರವಣ ಸನ್ನುತ
ಪುಳಿನ ಸುಪ್ತ ಮರಾಳವೆಸೆದುದು ಗಜಪುರೋದ್ಯಾನ ॥27॥

೦೨೮ ಅರರೆ ಪಾತಾಳದ ...{Loading}...

ಅರರೆ ಪಾತಾಳದ ವಿಳಾಸಿನಿ
ಯರಿಗೆ ಚೌಕಿಗೆಯೋ ಸುದುರ್ಗದ
ಹಿರಿಯಗಳೊ ಬಲುಗೋಟೆಯೋ ನಿಚ್ಚಣಿಕೆಯೋ ದಿವದ
ಮುರಿಮುರಿದ ಹುಲಿಮುಖದ ಹೇಮದ
ತರದ ತೆನೆಗಳ ವಜ್ರಮಯ ಬಂ
ಧುರ ಕವಾಟಸ್ಫುಟದಲೆಸೆದುದು ಹಸ್ತಿನಾನಗರ ॥28॥

೦೨೯ ಹೊಗಳುತೈತನ್ದಸುರರಿಪು ಗಜ ...{Loading}...

ಹೊಗಳುತೈತಂದಸುರರಿಪು ಗಜ
ನಗರವನು ಹೊಕ್ಕನು ಸುಯೋಧನ
ನಗಣಿತೈಶ್ವರ್ಯವ ಮಹಾದೇವೆನುತ ನಲವಿನಲಿ
ಬಿಗಿದ ಬೀದಿಯ ನಯದ ನೆಲೆಗ
ಟ್ಟುಗಳ ಮಣಿಮಯ ಹೇಮದುಪ್ಪರಿ
ಗೆಗಳ ಕೇರಿಗಳೊಳಗೆ ಬರುತಿರ್ದನು ಮುರಧ್ವಂಸಿ ॥29॥

೦೩೦ ಮನ್ದದಲಿ ಸುಳಿವಾನೆ ...{Loading}...

ಮಂದದಲಿ ಸುಳಿವಾನೆ ಕುದುರೆಯ
ಸಂದಣಿಯ ಕೀಲಿಸಿದ ಭೂಮಿಪ
ರಂದಣದ ಸಾಲುಗಳ ತೆಕ್ಕೆಯ ಹಳಿಯದಾಳುಗಳ
ಮಂದಿಯಲಿ ಹೊಗಲನಿಲಗುಬ್ಬಸ
ವೆಂದರುಳಿದವರಳವೆಯೆನಲರ
ವಿಂದನಾಭನು ಬಂದನಾ ಧೃತರಾಷ್ಟ್ರನರಮನೆಗೆ ॥30॥

೦೩೧ ಇದಿರುಗೊಣ್ಡನು ಕಾಣಿಕೆಯನಿ ...{Loading}...

ಇದಿರುಗೊಂಡನು ಕಾಣಿಕೆಯನಿ
ಕ್ಕಿದನು ಕುಶಲ ಕ್ಷೇಮವನು ಕೇ
ಳಿದನು ಬಕುತಿಯಲೆರಗಿದನು ಚರಣದಲಿ ಧೃತರಾಷ್ಟ್ರ
ಸದನವನು ಹೊಕ್ಕಂತೆ ನಿಮಿಷಾ
ರ್ಧದಲಿ ಕುಳ್ಳಿರ್ದನಿಬರನು ಕಳು
ಹಿದನು ಕಾರುಣ್ಯದಲಿ ಗದುಗಿನ ವೀರ ನಾರಯಣ ॥31॥

+೦೭ ...{Loading}...