೦೦೦ ಸೂ ವೀರ ...{Loading}...
ಸೂ. ವೀರ ಪಾಂಡವರದಟನಾ ಧನು
ಜಾರಿ ಹೇಳಿದ ವಚನರಚನೆಯ
ಕೌರವಗೆ ಬಂದರುಹೆ ಕೋಪಿಸಿ ಸಂಜಯನ ಜರೆದ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವೀರ ಪಾಂಡವರ ಶೌರ್ಯವನ್ನು ಶ್ರೀಕೃಷ್ಣನ ಮಾತಿನ ರೀತಿಯನ್ನು ಸಂಜಯನು ಬಂದು ದುರ್ಯೋಧನನಿಗೆ ತಿಳಿಸಲು ಅವನನ್ನು ನಿಂದಿಸಿದನು.
ಪದಾರ್ಥ (ಕ.ಗ.ಪ)
ಅದಟು-ಶೌರ್ಯ, ದನುಜಾರಿ-ಕೃಷ್ಣ, ಜರೆದ-ನಿಂದಿಸಿದ
ಮೂಲ ...{Loading}...
ಸೂ. ವೀರ ಪಾಂಡವರದಟನಾ ಧನು
ಜಾರಿ ಹೇಳಿದ ವಚನರಚನೆಯ
ಕೌರವಗೆ ಬಂದರುಹೆ ಕೋಪಿಸಿ ಸಂಜಯನ ಜರೆದ
೦೦೧ ಬೀಳಿಕೊಣ್ಡುದು ರಜನಿ ...{Loading}...
ಬೀಳಿಕೊಂಡುದು ರಜನಿ ಕುರು ಭೂ
ಪಾಲನುಪ್ಪವಡಿಸಿದನೋಲಗ
ಶಾಲೆಯಲಿ ನೆರಹಿದನು ಸಭ್ಯರನಾಪ್ತ ಮಂತ್ರಿಗಳ
ಕೇಳುವೆವು ಕರೆ ಸಂಜಯನನವ
ರೋಲಗದ ಮೈಸಿರಿಯನೆಂದು ನೃ
ಪಾಲನಟ್ಟಿದ ದೂತರೊಡನೈತಂದರೋಲಗಕೆ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾತ್ರಿಯು ಕಳೆಯಿತು. ಕುರುರಾಜನು ನಿದ್ರೆಯಿಂದೆದ್ದನು. ಸಭಾಭವನದಲ್ಲಿ ಶಿಷ್ಟರನ್ನು, ಆಪ್ತಮಂತ್ರಿಗಳನ್ನು ಕೂಡಿಸಿದನು. ‘ಸಂಜಯನನ್ನು ಕರೆ, ಪಾಂಡವರ ಓಲಗದ ಸಂಪದ್ಯುಕ್ತತೆಯನ್ನು ಕೇಳುವೆವು’ ಎಂದು ರಾಜನು ಕಳುಹಿಸಿದ ದೂತರೊಡನೆ ಸಂಜಯನು ಸಭೆಗೆ ಬಂದನು.
ಪದಾರ್ಥ (ಕ.ಗ.ಪ)
ರಜನಿ-ರಾತ್ರಿ, ಉಪ್ಪವಡಿಸು-ನಿದ್ರೆಯಿಂದ ಏಳು, ಮೈಸಿರಿ-ತುಂಬಿದ ಸಂಪತ್ತು.
ಮೂಲ ...{Loading}...
ಬೀಳಿಕೊಂಡುದು ರಜನಿ ಕುರು ಭೂ
ಪಾಲನುಪ್ಪವಡಿಸಿದನೋಲಗ
ಶಾಲೆಯಲಿ ನೆರಹಿದನು ಸಭ್ಯರನಾಪ್ತ ಮಂತ್ರಿಗಳ
ಕೇಳುವೆವು ಕರೆ ಸಂಜಯನನವ
ರೋಲಗದ ಮೈಸಿರಿಯನೆಂದು ನೃ
ಪಾಲನಟ್ಟಿದ ದೂತರೊಡನೈತಂದರೋಲಗಕೆ ॥1॥
೦೦೨ ಬನ್ದು ಮೈಯಿಕ್ಕಿದನು ...{Loading}...
ಬಂದು ಮೈಯಿಕ್ಕಿದನು ಕುರು ನೃಪ
ವೃಂದವನು ಗಾಂಧಾರಿಯನು ಯಮ
ನಂದನನು ಬೆಸಗೊಂಡು ಕಳುಹಿದನುಚಿತ ವಚನದಲಿ
ಎಂದು ಬಳಿಕಿನ ರಾಜ ಕಾರ್ಯವ
ನಂದು ಬಿನ್ನೆ ೈಸಿದನು ಚಿತ್ತೈ
ಸೆಂದು ಧೃತರಾಷ್ಟ್ರಂಗೆ ದುರ್ಯೋಧನಗೆ ಕೈಮುಗಿದು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು ಬಂದು, ಧೃತರಾಷ್ಟ್ರ ಮಹಾರಾಜ, ಗಾಂಧಾರಿ ಮತ್ತು ಕೌರವ ಸಮೂಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದನು. ‘ಧರ್ಮರಾಜನು ನನ್ನ ಮಾತುಗಳನ್ನು ಕೇಳಿ ಸಂದರ್ಭದ ಅನುಸಾರ ಮಾತನಾಡಿ ಕಳುಹಿಸಿದನು’ ಎಂದು ಹೇಳಿ ನಂತರ ಧೃತರಾಷ್ಟ್ರನಿಗೆ ಮತ್ತು ದುರ್ಯೋಧನನಿಗೆ ರಾಜಕಾರ್ಯವನ್ನು ಕೇಳಿರೆಂದು ಕೈ ಮುಗಿದನು.
ಪದಾರ್ಥ (ಕ.ಗ.ಪ)
ವೃಂದ-ಬಳಗ, ಮೈಯಿಕ್ಕು-ನಮಸ್ಕರಿಸು
ಮೂಲ ...{Loading}...
ಬಂದು ಮೈಯಿಕ್ಕಿದನು ಕುರು ನೃಪ
ವೃಂದವನು ಗಾಂಧಾರಿಯನು ಯಮ
ನಂದನನು ಬೆಸಗೊಂಡು ಕಳುಹಿದನುಚಿತ ವಚನದಲಿ
ಎಂದು ಬಳಿಕಿನ ರಾಜ ಕಾರ್ಯವ
ನಂದು ಬಿನ್ನೈಸಿದನು ಚಿತ್ತೈ
ಸೆಂದು ಧೃತರಾಷ್ಟ್ರಂಗೆ ದುರ್ಯೋಧನಗೆ ಕೈಮುಗಿದು ॥2॥
೦೦೩ ಜೀಯ ಬಿನ್ನಹವಿನ್ದು ...{Loading}...
ಜೀಯ ಬಿನ್ನಹವಿಂದು ಪಾಂಡವ
ರಾಯನೈಶ್ವರ್ಯವನು ಸಾವಿರ
ಬಾಯ ಸರ್ಪನು ಹೊಗಳಲಳವಲ್ಲೆನ್ನ ಪಾಡೇನು
ನಾಯಕರ ಕಡುಹುಗಳನವರವ
ರಾಯತವನನಿಬರಿಗೆ ಕಮಲದ
ಳಾಯತಾಕ್ಷನ ಕರುಣದಳತೆ ವಿಚಿತ್ರ ತರವೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- sಸ್ವಾಮಿ ! ವಿಜ್ಞಾಪನೆ ! ಧರ್ಮರಾಯನ ಐಶ್ವರ್ಯವನ್ನು ಸಾವಿರ ಹೆಡೆಯ ಸರ್ಪನು (ಆದಿಶೇಷನು) ಹೊಗಳಲು ಸಮರ್ಧನಲ್ಲ. ಇನ್ನು ನನ್ನ ಪಾಡೇನು ? ನಾಯಕರ ಪರಾಕ್ರಮವನ್ನು ಅವರವರ ಸಿದ್ಧತೆಗಳನ್ನು, ಅವರೆಲ್ಲರಿಗೂ ಶ್ರೀ ಕೃಷ್ಣನ ಕರುಣೆಯ ಪರಿಮಾಣವು ಆಶ್ಚರ್ಯಕರವಾದುದೆಂದನು.
ಪದಾರ್ಥ (ಕ.ಗ.ಪ)
ಜೀಯ-ಸ್ವಾಮಿ, ಬಿನ್ನಹ-ವಿಜ್ಞಾಪನೆ, ಅಳವು-ಶಕ್ತಿ, ಆಯತ-ಸಿದ್ಧತೆ, ಅಳತೆ-ಪರಿಮಾಣ, ವಿಚಿತ್ರ-ಆಶ್ಚರ್ಯ
ಮೂಲ ...{Loading}...
ಜೀಯ ಬಿನ್ನಹವಿಂದು ಪಾಂಡವ
ರಾಯನೈಶ್ವರ್ಯವನು ಸಾವಿರ
ಬಾಯ ಸರ್ಪನು ಹೊಗಳಲಳವಲ್ಲೆನ್ನ ಪಾಡೇನು
ನಾಯಕರ ಕಡುಹುಗಳನವರವ
ರಾಯತವನನಿಬರಿಗೆ ಕಮಲದ
ಳಾಯತಾಕ್ಷನ ಕರುಣದಳತೆ ವಿಚಿತ್ರ ತರವೆಂದ ॥3॥
೦೦೪ ಓಲಗದೊಳುಬ್ಬೆದ್ದು ನುಡಿಯಲಿ ...{Loading}...
ಓಲಗದೊಳುಬ್ಬೆದ್ದು ನುಡಿಯಲಿ
ಹೂಳಿ ತಮತಮಗೆನ್ನ ಜರೆದರು
ಕಾಳಗಕೆ ಕೈಗಟ್ಟಿ ಹಿಂಡೆದ್ದೊದರಿತವನಿಪರು
ಮೇಲೆ ಸಂತೈಸಿದನು ಧರ್ಮನೃ
ಪಾಲನಲ್ಲಿಂ ಬಳಿಕ ಮುರಹರ
ನಾಲಯಕೆ ಪರಿಮಿತದೊಳರ್ಜುನನೆನ್ನ ಕರೆಸಿದನು ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಭೆಯಲ್ಲಿದ್ದ ನಾಯಕರು ತಮ್ಮ ತಮ್ಮ ಅಬ್ಬರದ ಮಾತಿನಲ್ಲಿ ತುಂಬಿ ನನ್ನನ್ನು ನಿಂದಿಸಿದರು. ಕಾಳಗಕ್ಕೆ ಸಿದ್ಧರಾಗಿ ಅರಸರ ಗುಂಪು ಎದ್ದು ಗರ್ಜಿಸಿತು. ಆ ಬಳಿಕ ಧರ್ಮರಾಜನು ಅವರನ್ನು ಸಮಾಧಾನಿಸಿದನು. ಅಲ್ಲಿಂದ ತರುವಾಯ ಅರ್ಜುನನು ಕೆಲವೇ ಪ್ರಮುಖರೊಂದಿಗೆ ಶ್ರೀ ಕೃಷ್ಣನ ಮನೆಗೆ ಕರೆಯಿಸಿದನು.
ಪದಾರ್ಥ (ಕ.ಗ.ಪ)
ಉಬ್ಬೆದ್ದು - ಬೀಗುತ ಎದ್ದು, ಹೂಳಿ-ತುಂಬಿ, ಒದರಿತು-ಕಿರುಚಿತು.
ಮೂಲ ...{Loading}...
ಓಲಗದೊಳುಬ್ಬೆದ್ದು ನುಡಿಯಲಿ
ಹೂಳಿ ತಮತಮಗೆನ್ನ ಜರೆದರು
ಕಾಳಗಕೆ ಕೈಗಟ್ಟಿ ಹಿಂಡೆದ್ದೊದರಿತವನಿಪರು
ಮೇಲೆ ಸಂತೈಸಿದನು ಧರ್ಮನೃ
ಪಾಲನಲ್ಲಿಂ ಬಳಿಕ ಮುರಹರ
ನಾಲಯಕೆ ಪರಿಮಿತದೊಳರ್ಜುನನೆನ್ನ ಕರೆಸಿದನು ॥4॥
೦೦೫ ದೇವನಿದ್ದನು ಸತ್ಯಭಾಮಾ ...{Loading}...
ದೇವನಿದ್ದನು ಸತ್ಯಭಾಮಾ
ದೇವಿಯರ ನಸುಮಲಗಿಯರ್ಜುನ
ದೇವನಂಕದ ಮೇಲೆ ಸಿರಿಪದಪಂಕಜವ ನೀಡಿ
ನಾವು ಬರಲೆಮಗುಚಿತದಲಿ ಸಂ
ಭಾವನೆಯ ಮಾಡಿದರು ನಮಗಿ
ನ್ನಾವುದನು ನೇಮಿಸಿದಿರೆನಲಿಂತೆಂದನಸುರಾರಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೀಕೃಷ್ಣನು ಸತ್ಯಭಾಮೆಗೆ ಒರಗಿ ಅರ್ಜುನನ ತೊಡೆಯ ಮೇಲೆ ಕಾಲಿಟ್ಟು ಮಲಗಿದ್ದನು. ನಾನು ಬರಲು ನನಗೆ ಯೋಗ್ಯ ರೀತಿಯಲ್ಲಿ ಗೌರವವನ್ನು ತೋರಿಸಿದರು. ನಮಗೆ ಏನು ಅಪ್ಪಣೆಯನ್ನು ನೇಮಿಸಿದಿರಿ ಎಂದು ಕೇಳಲು ಶ್ರೀಕೃಷ್ಣನು ಹೀಗೆ ಹೇಳಿದನು.
ಪದಾರ್ಥ (ಕ.ಗ.ಪ)
ಅಂಕ-ತೊಡೆ, ಅಸುರಾರಿ-ಅಸುರರ ಶತ್ರು-ಶ್ರೀಕೃಷ್ಣ
ಮೂಲ ...{Loading}...
ದೇವನಿದ್ದನು ಸತ್ಯಭಾಮಾ
ದೇವಿಯರ ನಸುಮಲಗಿಯರ್ಜುನ
ದೇವನಂಕದ ಮೇಲೆ ಸಿರಿಪದಪಂಕಜವ ನೀಡಿ
ನಾವು ಬರಲೆಮಗುಚಿತದಲಿ ಸಂ
ಭಾವನೆಯ ಮಾಡಿದರು ನಮಗಿ
ನ್ನಾವುದನು ನೇಮಿಸಿದಿರೆನಲಿಂತೆಂದನಸುರಾರಿ ॥5॥
೦೦೬ ಎಮಗೆ ಸರಿಯಿತ್ತಣ್ಡದಲ್ಲಿಯ ...{Loading}...
ಎಮಗೆ ಸರಿಯಿತ್ತಂಡದಲ್ಲಿಯ
ಮಮತೆ ಬೇರೊಬ್ಬರಲಿ ಪಕ್ಷ
ಭ್ರಮೆಯ ಮಾಡೆವು ಹಿತವ ಬಯಸುವೆವೆರಡು ಸಂತತಿಗೆ
ಕಮಲಮುಖಿ ಸುಲಿವಡೆದು ಲಕ್ಷಿ ್ಮೀ
ರಮಣ ಲಕ್ಷಿ ್ಮೀ ರಮಣ ಲಕ್ಷಿ ್ಮೀ
ರಮಣಯೆಂದೊರಲಿದೊಡೆ ಸಂಜಯ ನೊಂದೆ ನಾನೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಮಗೆ ಎರಡು ಬಣಗಳಲ್ಲಿಯೂ ಮಮತೆಯಿದೆ. ಮತ್ತೊಬ್ಬರಲ್ಲಿ ಪಕ್ಷಪಾತದ ಭ್ರಾಂತಿ ನಮಗಿಲ್ಲ. ಎರಡೂ ವಂಶಗಳಿಗೆ ಹಿತವನ್ನು ಬಯಸುವೆವು. ಆದರೆ ದ್ರೌಪದಿಯು ಸೀರೆಯ ಸುಲಿತಕ್ಕೆ ಒಳಗಾಗಿ ‘ಲಕ್ಷ್ಮೀರಮಣ ಲಕ್ಷ್ಮೀರಮಣ ಲಕ್ಷ್ಮೀರಮಣ’ ಎಂದು ಒರಲಿದಾಗ ಸಂಜಯ ನಾನು ಬಹಳ ನೊಂದೆನು ಎಂದನು ಶ್ರೀಕೃಷ್ಣ.
ಪದಾರ್ಥ (ಕ.ಗ.ಪ)
ಇತ್ತಂಡ-ಎರಡು ಗುಂಪು/ಬಣ, ಸುಲಿ-ಸೆಳೆ/ಎಳೆ, ಒರಲು-ಕೂಗು/ಕಿರಿಚು
ಮೂಲ ...{Loading}...
ಎಮಗೆ ಸರಿಯಿತ್ತಂಡದಲ್ಲಿಯ
ಮಮತೆ ಬೇರೊಬ್ಬರಲಿ ಪಕ್ಷ
ಭ್ರಮೆಯ ಮಾಡೆವು ಹಿತವ ಬಯಸುವೆವೆರಡು ಸಂತತಿಗೆ
ಕಮಲಮುಖಿ ಸುಲಿವಡೆದು ಲಕ್ಷಿ ್ಮೀ
ರಮಣ ಲಕ್ಷಿ ್ಮೀ ರಮಣ ಲಕ್ಷಿ ್ಮೀ
ರಮಣಯೆಂದೊರಲಿದೊಡೆ ಸಂಜಯ ನೊಂದೆ ನಾನೆಂದ ॥6॥
೦೦೭ ಕಾವುದೈ ಗೋವಿನ್ದ ...{Loading}...
ಕಾವುದೈ ಗೋವಿಂದ ಸಲಹೈ
ದೇವಕೀಸುತ ಗಂಡರೈವರ
ಭಾವ ಬೆಟ್ಟಿತು ನೀನಲೈ ದೇಸಿಗರ ದೈವವಲೈ
ದೇವ ಕೆಟ್ಟೆನು ಕೆಟ್ಟೆನೈ ಕರು
ಣಾವಲಂಬನದಿಂದ ತಡೆಯೈ
ಜೀವನವನೆಂದೊರಲಿದಳು ಹಂಗಿಗನು ತಾನೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗೋವಿಂದ ಕಾಯುವುದು, ದೇವಕಿಯ ಮಗನೇ ರಕ್ಷಿಸು; ನನ್ನ ಐದು ಜನ ಗಂಡಂದಿರ ಸ್ಥಿತಿ ಉಗ್ರವಾಯಿತು. ಅನಾಥರಿಗೆ ನೀನು ದೈವವಲ್ಲವೆ ? ದೇವ ! ಕೆಟ್ಟೆನು ಕೆಟ್ಟೆನು. ನಿನ್ನ ಕರುಣೆಯ ಆಶ್ರಯದಿಂದ ನನ್ನ ಬಾಳನು ನಿಲ್ಲಿಸು ಎಂದು ಒರಲಿದಳು. ಅದರಿಂದಾಗಿ ಅವಳ ದಾಕ್ಷಿಣ್ಯಕ್ಕೊಳಗಾದೆನು.
ಪದಾರ್ಥ (ಕ.ಗ.ಪ)
ಭಾವ-ಸ್ಥಿತಿ, ದೇಸಿಗರು-ಪರದೇಶಿಗಳು (ಅನಾಥರು), ಬೆಟ್ಟಿತು-ಉಗ್ರವಾಯಿತು, ಅವಲಂಬನ-ಆಶ್ರಯ, ಹಂಗು-ದಾಕ್ಷಿಣ್ಯ.
ಮೂಲ ...{Loading}...
ಕಾವುದೈ ಗೋವಿಂದ ಸಲಹೈ
ದೇವಕೀಸುತ ಗಂಡರೈವರ
ಭಾವ ಬೆಟ್ಟಿತು ನೀನಲೈ ದೇಸಿಗರ ದೈವವಲೈ
ದೇವ ಕೆಟ್ಟೆನು ಕೆಟ್ಟೆನೈ ಕರು
ಣಾವಲಂಬನದಿಂದ ತಡೆಯೈ
ಜೀವನವನೆಂದೊರಲಿದಳು ಹಂಗಿಗನು ತಾನೆಂದ ॥7॥
೦೦೮ ಭಣ್ಟನಹೆ ಬಕುತರಿಗೆ ...{Loading}...
ಭಂಟನಹೆ ಬಕುತರಿಗೆ ನೆನೆವರು
ನಂಟರೆಮಗೊಲಿದಂತೆ ಹೊಗಳಿದ
ರೆಂಟು ಮಡಿ ಹಿಗ್ಗುವೆವು ಮೆಚ್ಚೆವು ತರ್ಕ ಸಾಧಕರ
ಉಂಟು ಪಾಂಡವರೈವರಲಿ ಬಲು
ನಂಟತನ ಮರೆಯೇತಕೈವರ
ಕಂಟಕರು ನಮಗಾದ ಕಂಟಕರೆಂದು ಹರಿ ನುಡಿದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಕ್ತರ ಸೇವಕನು ನಾನಾಗಿದ್ದೇನೆ. ನಮ್ಮನ್ನು ನೆನೆಯುವವರು ನನಗೆ ನೆಂಟರು. ನಾವು ಮೆಚ್ಚುವಂತೆ ನಮ್ಮನ್ನು ಹೊಗಳಿದರೆ ಎಂಟರಷ್ಟು ಸಂತೋಷ ಪಡುತ್ತೇವೆ. ತರ್ಕ ಸಾಧನೆಗಳನ್ನು ನಾವು ಮೆಚ್ಚುವುದಿಲ್ಲ. ಪಾಂಡವರು ಐವರಲ್ಲಿಯೂ ನಮಗೆ ಅತೀವವಾದ ನಂಟುತನವಿದೆ. ಇದರಲ್ಲಿ ಮುಚ್ಚು ಮರೆಯೇತಕ್ಕೆ ? ಅವರಿಗೆ ಕಂಟಕರಾದವರು ನಮಗೂ ಕಂಟಕರು ಎಂದು ಶ್ರೀಕೃಷ್ಣನು ಹೇಳಿದನು.
ಪದಾರ್ಥ (ಕ.ಗ.ಪ)
ಕಂಟಕರು-ತೊಂದರೆಯುಂಟು ಮಾಡುವರು
ಮೂಲ ...{Loading}...
ಭಂಟನಹೆ ಬಕುತರಿಗೆ ನೆನೆವರು
ನಂಟರೆಮಗೊಲಿದಂತೆ ಹೊಗಳಿದ
ರೆಂಟು ಮಡಿ ಹಿಗ್ಗುವೆವು ಮೆಚ್ಚೆವು ತರ್ಕ ಸಾಧಕರ
ಉಂಟು ಪಾಂಡವರೈವರಲಿ ಬಲು
ನಂಟತನ ಮರೆಯೇತಕೈವರ
ಕಂಟಕರು ನಮಗಾದ ಕಂಟಕರೆಂದು ಹರಿ ನುಡಿದ ॥8॥
೦೦೯ ನೆನೆವುದೆನ್ದನು ಪಾರ್ಥನಾ ...{Loading}...
ನೆನೆವುದೆಂದನು ಪಾರ್ಥನಾ ಕಾ
ನನದೊಳಗೆ ಗಂಧರ್ವರಲಿ ಬಂ
ಧನವನೀ ಗೋಗ್ರಹಣದಲಿ ಮಾಡಿದ ಪಲಾಯನವ
ವನಜವದನೆಯ ಬಯಸಿದೊಡೆ ಬಿ
ಲ್ಲಿನಲಿ ಬಲಿವಡೆದುದನು ಕೌರವ
ಜನಪ ಮರೆದಿರಲಾಗದೆಂದರಸಂಗೆ ಹೇಳೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನಲ್ಲಿ ಗಂಧರ್ವರ ಸೆರೆಯಲ್ಲಿದ್ದುದನ್ನೂ ಗೋವುಗಳನ್ನು ಸೆರೆ ಹಿಡಿದಾಗ ಮಾಡಿದ ಪಲಾಯನವನ್ನು ಸ್ವಯಂವರದಲ್ಲಿ ದ್ರೌಪದಿಯನ್ನು ಬಯಸಿದಾಗ ಬಿಲ್ಲಿನಿಂದಾದ ಬವಣೆಯನ್ನು ನೆನೆಸಿಕೊಳ್ಳಲಿ. ಇದನ್ನು ದುರ್ಯೋಧನನು ಎಂದಿಗೂ ಮರೆಯಬಾರದೆಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಕಾನನ-ಕಾಡು
ಮೂಲ ...{Loading}...
ನೆನೆವುದೆಂದನು ಪಾರ್ಥನಾ ಕಾ
ನನದೊಳಗೆ ಗಂಧರ್ವರಲಿ ಬಂ
ಧನವನೀ ಗೋಗ್ರಹಣದಲಿ ಮಾಡಿದ ಪಲಾಯನವ
ವನಜವದನೆಯ ಬಯಸಿದೊಡೆ ಬಿ
ಲ್ಲಿನಲಿ ಬಲಿವಡೆದುದನು ಕೌರವ
ಜನಪ ಮರೆದಿರಲಾಗದೆಂದರಸಂಗೆ ಹೇಳೆಂದ ॥9॥
೦೧೦ ಧೀರಭೀಮನ ಗದೆಯ ...{Loading}...
ಧೀರಭೀಮನ ಗದೆಯ ಹೊಯ್ಲಿನ
ಭಾರಣೆಯ ನಮ್ಮತುಳ ಚಾಪದ
ಸಾರ ಶಸ್ತ್ರಾವಳಿಯ ಮಳೆಗಾಲದ ಮಹಾದ್ಭುತವ
ವೀರ ನಕುಲನ ಸಾತ್ಯಕಿಯ ಬಲು
ಕೂರಸಿಯ ಸಹದೇವ ಮತ್ಸ ್ಯರು
ದಾರತೆಯ ನಿಮ್ಮರಸ ನೆನೆದಿಹುದೆಂದನಾ ಪಾರ್ಥ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೀರ ಭೀಮಸೇನನ ಗದೆಯ ಹೊಡೆತದ ಘನತೆಯನ್ನೂ, ನಮ್ಮ ಅಸಾಮಾನ್ಯವಾದ ಬಿಲ್ಲಿನಿಂದ ಮಳೆಗಾಲದಲ್ಲಿ ಸುರಿದ ಮಳೆಯಂತೆ ಹರಿವ ಶಸ್ತ್ರಗಳ ರಾಶಿಯನ್ನೂ ವೀರ ನಕುಲ, ಸಾತ್ಯಕಿಯರ ಹರಿತವಾದ ಕತ್ತಿಯನ್ನು ಸಹದೇವ ಮತ್ತು ವಿರಾಟರ ಉದಾರತೆಯನ್ನು ನಿಮ್ಮ ಅರಸನು ನೆನೆಯುತ್ತಿರಲಿ ಎಂದು ಅರ್ಜುನನು ಹೇಳಿದನು.
ಪದಾರ್ಥ (ಕ.ಗ.ಪ)
ಅತುಳ-ಹೆಚ್ಚಿನ, ಹೊಯ್ಲು-ಹೊಡೆತ, ಕೂರಸಿ-ಹರಿತವಾದ ಕತ್ತಿ
ಮೂಲ ...{Loading}...
ಧೀರಭೀಮನ ಗದೆಯ ಹೊಯ್ಲಿನ
ಭಾರಣೆಯ ನಮ್ಮತುಳ ಚಾಪದ
ಸಾರ ಶಸ್ತ್ರಾವಳಿಯ ಮಳೆಗಾಲದ ಮಹಾದ್ಭುತವ
ವೀರ ನಕುಲನ ಸಾತ್ಯಕಿಯ ಬಲು
ಕೂರಸಿಯ ಸಹದೇವ ಮತ್ಸ ್ಯರು
ದಾರತೆಯ ನಿಮ್ಮರಸ ನೆನೆದಿಹುದೆಂದನಾ ಪಾರ್ಥ ॥10॥
೦೧೧ ಹಿನ್ದೆ ಜೂಜಿನ ...{Loading}...
ಹಿಂದೆ ಜೂಜಿನ ಸಭೆಯೊಳಗೆ ನಾ
ವೆಂದ ಮಾತುಗಳುಂಟು ತಾವದ
ಮುಂದೆ ನೋಡಲಿ ಕರ್ಣ ಶಕುನಿ ಸುಯೋಧನಾದಿಗಳು
ಇಂದು ನೆನೆವುದು ದೇಶ ಕಾಲವ
ಹಿಂದುಗಳೆಯದೆ ಬೇಗ ಮಾಡುವು
ದೆಂದು ಬಿನ್ನಹ ಮಾಡಹೇಳಿದನರ್ಜುನನು ನಿಮಗೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಜೂಜಿನ ಸಭೆಯಲ್ಲಿ ನಾವು ಮಾಡಿದ ಪ್ರತಿಜ್ಞೆಗಳು ಇಂದಿಗೂ ಇರುತ್ತವೆ. ಕರ್ಣ, ಶಕುನಿ, ದುರ್ಯೋಧನರು ಅವುಗಳು ಈಡೇರುವುದನ್ನು ಮುಂದೆ ನೋಡಲಿ. ಇಂದು ಅದನ್ನು ನೆನೆಯುವುದು. ದೇಶ, ಕಾಲಗಳನ್ನು ನಿರ್ಲಕ್ಷಿಸದೆ ಬೇಗ ಸಿದ್ಧತೆಯನ್ನು ಮಾಡಬೇಕೆಂದು ಅರ್ಜುನನು ಬಿನ್ನಹ ಮಾಡಿಕೊಂಡನು.
ಪದಾರ್ಥ (ಕ.ಗ.ಪ)
ಹಿಂದುಗಳೆಯದೆ-ನಿರ್ಲಕ್ಷಿಸದೆ
ಮೂಲ ...{Loading}...
ಹಿಂದೆ ಜೂಜಿನ ಸಭೆಯೊಳಗೆ ನಾ
ವೆಂದ ಮಾತುಗಳುಂಟು ತಾವದ
ಮುಂದೆ ನೋಡಲಿ ಕರ್ಣ ಶಕುನಿ ಸುಯೋಧನಾದಿಗಳು
ಇಂದು ನೆನೆವುದು ದೇಶ ಕಾಲವ
ಹಿಂದುಗಳೆಯದೆ ಬೇಗ ಮಾಡುವು
ದೆಂದು ಬಿನ್ನಹ ಮಾಡಹೇಳಿದನರ್ಜುನನು ನಿಮಗೆ ॥11॥
೦೧೨ ತೊಡೆಗಳಿಗೆ ಸುಕ್ಷೇಮವೇ ...{Loading}...
ತೊಡೆಗಳಿಗೆ ಸುಕ್ಷೇಮವೇ ನಿ
ನ್ನೊಡೆಯನವನೊಡಹುಟ್ಟಿದನ ಮೈ
ಜಡಿದುದೇ ಪಾಲಿಸದಡನಿಬರಿಗಹುದು ರಕ್ತ ಜಲ
ಒಡನೆ ಹುಟ್ಟಿದ ನೂರ್ವರು ಮೈ
ಗೆಡರಲೇ ಬೆಸಗೊಂಬುದಂಜದಿ
ರೊಡೆಯರಿಗೆ ಹೊಣೆಗೊಂಡೆ ಹೇಳೆಂದಟ್ಟಿದನು ಭೀಮ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ಒಡೆಯನ ತೊಡೆಗಳು ಕ್ಷೇಮವೆ ? ಅವನ ಒಡಹುಟ್ಟಿದವನಾದ ದುಶ್ಯಾಸನನ ಮೈ ಭದ್ರವೆ ? ದೇಹವನ್ನು ಪೋಷಿಸಿಕೊಂಡಿದ್ದರೆ ಅಷ್ಟು ಮಂದಿಗೂ ರಕ್ತ ಜಲವು ಹರಿಯುತ್ತದೆ. ಅವನ ಒಡಹುಟ್ಟಿದ ನೂರು ಜನರ ಮೈ ಕೆಟ್ಟಿಲ್ಲ ತಾನೆ? ಇವೆಲ್ಲಕ್ಕೂ ನಾನೇ ಜವಾಬ್ದಾರಿಯುತನೆಂದು ನಿನ್ನ ಒಡೆಯನಿಗೆ ಹೇಳು, ಭಯ ಪಡಬೇಡ’ ಎಂದು ಭೀಮನು ನನ್ನನ್ನು ಕಳಿಸಿದನು.
ಪದಾರ್ಥ (ಕ.ಗ.ಪ)
ಜಡಿ-ಭದ್ರ, ಪಾಲಿಸದಡೆ-ಅನುಸರಿಸದಿದ್ದರೆ, ಅನಿಬರಿಗೆ-ಅಷ್ಟುಮಂದಿಗೆ, ಹೊಣೆ-ಜವಾಬ್ದಾರಿ, ಅಟ್ಟು-ಓಡಿಸು.
ಮೂಲ ...{Loading}...
ತೊಡೆಗಳಿಗೆ ಸುಕ್ಷೇಮವೇ ನಿ
ನ್ನೊಡೆಯನವನೊಡಹುಟ್ಟಿದನ ಮೈ
ಜಡಿದುದೇ ಪಾಲಿಸದಡನಿಬರಿಗಹುದು ರಕ್ತ ಜಲ
ಒಡನೆ ಹುಟ್ಟಿದ ನೂರ್ವರು ಮೈ
ಗೆಡರಲೇ ಬೆಸಗೊಂಬುದಂಜದಿ
ರೊಡೆಯರಿಗೆ ಹೊಣೆಗೊಂಡೆ ಹೇಳೆಂದಟ್ಟಿದನು ಭೀಮ ॥12॥
೦೧೩ ಸಾಕು ಸಞ್ಜಯ ...{Loading}...
ಸಾಕು ಸಂಜಯ ಗಳಹದಿರು ಫಡ
ನೂಕಿವನನಾರಲ್ಲಿಗಟ್ಟಿದ
ರಾ ಕುಠಾರರ ಬಯಲ ಗೃಹ ಗರ್ಜನೆಯ ಗರ ಹೊಡೆದು
ತೇಕಿ ತಲೆಕೆಳಕಾದನೀಯವಿ
ವೇಕಸಾಗರನೆಲೆ ನೃಪತಿ ಜಗ
ದೇಕ ವೀರನು ಕರ್ಣ ತಾನಿರೆ ಸಂಧಿಯೇಕೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯ ! ನಿಲ್ಲಿಸು ಬೊಗಳದಿರು, ಫಡ ! ಇವನನ್ನು ಹೊರಗೆ ತಳ್ಳಿ ಇವನನ್ನು ಅಲ್ಲಿಗೆ ಕಳುಹಿಸಿದವರು ಯಾರು ? ಆ ನೀಚರ ವ್ಯರ್ಥ ಗರ್ಜನೆಯ ಗ್ರಹ ಬಡಿದು ಇವನು ಬಳಲಿದ್ದಾನೆ. ಇವನು ಅವಿವೇಕ ಸಾಗರ. ಮಹಾರಾಜ ! ಜಗದೇಕ ವೀರನಾದ ಕರ್ಣ ನಾನಿರುವಾಗ ಸಂಧಿಯೇಕೆ ಎಂದನು ಕರ್ಣ.
ಪದಾರ್ಥ (ಕ.ಗ.ಪ)
ಗಳಹದಿರು-ಬೊಗಳದಿರು, ಬಯಲು-ವ್ಯರ್ಥ, ಗರ-ಗ್ರಹ , ತೇಕಿ-ಬಳಲಿ.
ಮೂಲ ...{Loading}...
ಸಾಕು ಸಂಜಯ ಗಳಹದಿರು ಫಡ
ನೂಕಿವನನಾರಲ್ಲಿಗಟ್ಟಿದ
ರಾ ಕುಠಾರರ ಬಯಲ ಗೃಹ ಗರ್ಜನೆಯ ಗರ ಹೊಡೆದು
ತೇಕಿ ತಲೆಕೆಳಕಾದನೀಯವಿ
ವೇಕಸಾಗರನೆಲೆ ನೃಪತಿ ಜಗ
ದೇಕ ವೀರನು ಕರ್ಣ ತಾನಿರೆ ಸಂಧಿಯೇಕೆಂದ ॥13॥
೦೧೪ ಮನ್ದಿಯಲಿ ಮೈಮರೆದು ...{Loading}...
ಮಂದಿಯಲಿ ಮೈಮರೆದು ಬಾಹಿರ
ನೆಂದ ಮಾತನು ರಾಜಸಭೆಯಲಿ
ತಂದು ಹರಹುವನಿವನು ಶಿಷ್ಟನೆ ಜಗದ ಭಂಡನಲ
ಇಂದುಮೌಳಿಯನೊಂದು ಬಾರಿಗೆ
ಹಿಂದು ಮುಂದನು ಮಾಡುವೆನು ತಾ
ಮಂದಿ ಕುಂತೀ ಮಕ್ಕಳಿದಿರೇ ತನಗೆ ಹೇಳೆಂದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ತನ್ನ ಜನರ ಗುಂಪಿನಲ್ಲಿ ಮೈ ಮರೆತು ಹೀನ ವ್ಯಕ್ತಿಗಳು ಆಡಿದ ಮಾತನ್ನು ರಾಜಸಭೆಯಲ್ಲಿ ತಂದು ಹರಡುವ ಇವನು ಸಭ್ಯವೆ? ಜಗತ್ತಿನ ನಾಚಿಕೆಗೇಡಿಯಲ್ಲವೆ ? ಚಂದ್ರಶೇಖರನಾದ ಶಿವನನ್ನೂ ಹಿಂದು ಮುಂದಕ್ಕೆ ಓಡಿಸುವೆನು. ಸಾಮಾನ್ಯರಾದ ಈ ಕುಂತಿಯ ಮಕ್ಕಳು ನನಗೆ ಸರಿಸಮಾನರೇ ? ಹೇಳು’ ಎಂದನು ಕರ್ಣ.
ಪದಾರ್ಥ (ಕ.ಗ.ಪ)
ಬಾಹಿರ-ಹೀನ, ಹರಹು-ಹರಡು, ಶಿಷ್ಟ-ಸಭ್ಯ, ಭಂಡ-ನಾಚಿಕೆಗೇಡಿ
ಮೂಲ ...{Loading}...
ಮಂದಿಯಲಿ ಮೈಮರೆದು ಬಾಹಿರ
ನೆಂದ ಮಾತನು ರಾಜಸಭೆಯಲಿ
ತಂದು ಹರಹುವನಿವನು ಶಿಷ್ಟನೆ ಜಗದ ಭಂಡನಲ
ಇಂದುಮೌಳಿಯನೊಂದು ಬಾರಿಗೆ
ಹಿಂದು ಮುಂದನು ಮಾಡುವೆನು ತಾ
ಮಂದಿ ಕುಂತೀ ಮಕ್ಕಳಿದಿರೇ ತನಗೆ ಹೇಳೆಂದ ॥14॥
೦೧೫ ಭಣ್ಡನೇ ಸಞ್ಜಯನು ...{Loading}...
ಭಂಡನೇ ಸಂಜಯನು ಲೋಕದ
ಭಂಡ ನೀನೆಲೆ ಕರ್ಣ ನಿನಗಾ
ಪಾಂಡವರ ಪರಿಯಂತವೇ ನಿನಗವರ ಸೇನೆಯಲಿ
ಗಂಡನೊಬ್ಬನು ಸಾಕು ಕೆದರುವೆ
ಗಂಡು ಗರ್ವದ ಮಾತ ನಿನ್ನನು
ದಿಂಡುದರಿವನು ಮುನಿದಡರ್ಜುನನೆಂದನಾ ಭೀಷ್ಮ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಎಲೆ ಕರ್ಣ ! ಸಂಜಯನು ನಾಚಿಕೆಗೇಡಿಯೆ ? ನೀನು ಲೋಕದ ಭಂಡ ! ನಿನಗೂ ಆ ಪಾಂಡವರಿಗೂ ಸರಿಸಮಾನವೆ ? ನಿನಗೆ ಅವರ ಸೇನೆಯಲ್ಲಿ ಒಬ್ಬ ಶೂರನು ಸಾಕು. ಬರಿಯ ಸೊಕ್ಕಿನ ಮಾತುಗಳಾನ್ನುಡುತ್ತಿರುವೆ. ರೋಷಗೊಂಡರೆ ಅರ್ಜುನನು ನಿನ್ನನ್ನು ಕತ್ತರಿಸಿ ಹಾಕುವನು ಎಂದು ಭೀಷ್ಮರು ಹೇಳಿದರು.
ಪದಾರ್ಥ (ಕ.ಗ.ಪ)
ಪರಿಯಂತವೆ-ಅಲ್ಲಿಯವರೆಗೆ ಗಂಡು-ಶೂರ, ಗರ್ವ-ಸೊಕ್ಕು, ದಿಂಡುದರಿ-ಕೊಚ್ಚುಹಾಕು
ಮೂಲ ...{Loading}...
ಭಂಡನೇ ಸಂಜಯನು ಲೋಕದ
ಭಂಡ ನೀನೆಲೆ ಕರ್ಣ ನಿನಗಾ
ಪಾಂಡವರ ಪರಿಯಂತವೇ ನಿನಗವರ ಸೇನೆಯಲಿ
ಗಂಡನೊಬ್ಬನು ಸಾಕು ಕೆದರುವೆ
ಗಂಡು ಗರ್ವದ ಮಾತ ನಿನ್ನನು
ದಿಂಡುದರಿವನು ಮುನಿದಡರ್ಜುನನೆಂದನಾ ಭೀಷ್ಮ ॥15॥
೦೧೬ ಖುಲ್ಲನಿವನೀ ಕರ್ಣನವರಲಿ ...{Loading}...
ಖುಲ್ಲನಿವನೀ ಕರ್ಣನವರಲಿ
ಬಲ್ಲಿದನು ತಾನೆಂದು ದಿಟವಿವ
ನಲ್ಲಿ ನಂಬುಗೆ ಮಾಡದಿರು ಮರುಳೇ ಮಹೀಪತಿಯೆ
ಇಲ್ಲ ನೋಡರ್ಜುನಗೆ ಪಡಿ ನರ
ರಲ್ಲಿ ನಿರ್ಜರರಲ್ಲಿ ಪನ್ನಗ
ರಲ್ಲಿ ಕೈವಾರಿಗಳೆ ನಾವಿನ್ನೆಂದನಾ ಭೀಷ್ಮ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕರ್ಣನು ಕ್ಷುದ್ರ (ಅಲ್ಪ) ನು; ಅವರಿಗಿಂತ ಇವನು ಬಲಿಷ್ಠನೆಂದು ಹೇಳುವವನೇ. ಇವನ ಮಾತನ್ನು ನಂಬದಿರು. ಮರುಳೇ ! ರಾಜ ! ಮಾನವರು, ದೇವತೆಗಳು ನಾಗರು ಇವರಲ್ಲಿ ಅರ್ಜುನನಿಗೆ ಪ್ರತಿಯಾಗಿ ಯಾರೂ ಇದಿರಿಲ್ಲ. ನಾವೇನು ಪಾಂಡವರ ಹೊಗಳು ಭಟ್ಟರೆ ? ಎಂದರು ಭೀಷ್ಮರು.
ಪದಾರ್ಥ (ಕ.ಗ.ಪ)
ಖುಲ್ಲ-ಕ್ಷುದ್ರ (ಅಲ್ಪ), ಬಲ್ಲಿದ-ಬಲಿಷ್ಠ, ಪಡಿ-ಪ್ರತಿ, ಕೈವಾರ/ಕೈವಾರಿ-ಹೊಗಳುವವ, ಪನ್ನಗ-ಹಾವು
ಮೂಲ ...{Loading}...
ಖುಲ್ಲನಿವನೀ ಕರ್ಣನವರಲಿ
ಬಲ್ಲಿದನು ತಾನೆಂದು ದಿಟವಿವ
ನಲ್ಲಿ ನಂಬುಗೆ ಮಾಡದಿರು ಮರುಳೇ ಮಹೀಪತಿಯೆ
ಇಲ್ಲ ನೋಡರ್ಜುನಗೆ ಪಡಿ ನರ
ರಲ್ಲಿ ನಿರ್ಜರರಲ್ಲಿ ಪನ್ನಗ
ರಲ್ಲಿ ಕೈವಾರಿಗಳೆ ನಾವಿನ್ನೆಂದನಾ ಭೀಷ್ಮ ॥16॥
೦೧೭ ಮುರಿಯದಿರು ...{Loading}...
ಮುರಿಯದಿರು ಗಾಂಗೇಯನೆಂದುದೆ
ಪರಮ ಮಂತ್ರವು ಪಾರ್ಥನನು ಸಂ
ಗರದೊಳಾನುವರಿಲ್ಲ ಕೇಳಮರಾಸುರಾಳಿಯಲಿ
ದುರುಳರಾಡುವ ಹೊಳ್ಳುನುಡಿಗಳು
ಗರುವರಭಿಮತವಲ್ಲ ಸಂಧಿಗೆ
ಕೊರಳುಗೊಳಿಸುವುದುಚಿತವೆಂದನು ದ್ರೋಣನರಸಂಗೆ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ಆಡಿದ ಮಾತನ್ನು ತಿರಸ್ಕರಿಸಬೇಡ. ಅದು ಶ್ರೇಷ್ಠ ಮಂತ್ರ, ದೊರೆಯೇ ಕೇಳು ! ದೇವತೆಗಳು, ದೈತ್ಯರ ಸಮೂಹದಲ್ಲಿ ಸಂಗರದಲ್ಲಿ (ಯುದ್ಧದಲ್ಲಿ) ಅರ್ಜುನನಿಗೆ ಎದುರಾಗುವರು ಇಲ್ಲ. ದುಷ್ಟರಾಡುವ ಪೊಳ್ಳು ಮಾತುಗಳು ಹಿರಿಯರ ಅಭಿಪ್ರಾಯವಲ್ಲ ! ಸಂಧಿಗೆ ಒಪ್ಪುವುದು ಯೋಗ್ಯವಾದುದು ಎಂದು ದ್ರೋಣರು ದುರ್ಯೋಧನನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಅಮರ-ದೇವತೆ, ಅಸುರ-ರಾಕ್ಷಸ, ಅಳಿ-ಹಿಂಡು
ಮೂಲ ...{Loading}...
ಮುರಿಯದಿರು ಗಾಂಗೇಯನೆಂದುದೆ
ಪರಮ ಮಂತ್ರವು ಪಾರ್ಥನನು ಸಂ
ಗರದೊಳಾನುವರಿಲ್ಲ ಕೇಳಮರಾಸುರಾಳಿಯಲಿ
ದುರುಳರಾಡುವ ಹೊಳ್ಳುನುಡಿಗಳು
ಗರುವರಭಿಮತವಲ್ಲ ಸಂಧಿಗೆ
ಕೊರಳುಗೊಳಿಸುವುದುಚಿತವೆಂದನು ದ್ರೋಣನರಸಂಗೆ ॥17॥
೦೧೮ ಹುರುಳುಗೆಡಿಸುವಿರಾವು ...{Loading}...
ಹುರುಳುಗೆಡಿಸುವಿರಾವು ನುಡಿದೊಡೆ
ಕರಗಿ ಕುಂತೀ ಮಕ್ಕಳೆಂದೊಡೆ
ಹರಹಿ ಕೊಂಬಿರಿ ಡಿಂಬವೆಮ್ಮಲಿ ಜೀವವವದಿರಲಿ
ಭರತ ಸಂತತಿಯಲ್ಲಿ ಕೆಲಬರು
ಸುರರು ಕೆಲಬರು ನರರೆ ಸಾಕಂ
ತಿರಲಿ ಸಮರದೊಳೆಮ್ಮ ನೋಡೆಂದನು ಸುಯೋಧನನು ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ಮಾತನಾಡಿದರೆ ನಮ್ಮ ಸತ್ವ ಬಲವನ್ನೇ ಕೆಡಿಸುವಿರಿ. ಕುಂತೀಮಕ್ಕಳು ಎಂದೊಡನೆ ಕರಗಿ ಹರಡಿ ಕೊಳ್ಳುತ್ತೀರಿ. ಶರೀರವು ನಮ್ಮಲ್ಲಿ ಜೀವವು ಅವರಲ್ಲಿ. ಭರತ ವಂಶದಲ್ಲಿ ಕೆಲವರು ದೇವತೆಗಳು ಕೆಲವರು ಮನುಷ್ಯರೆ ? ಸಾಕು. ಅದು ಹಾಗಿರಲಿ, ಯುದ್ಧದಲ್ಲಿ ನಮ್ಮನ್ನು ನೋಡಿರಿ ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಹುರುಳು-ಸತ್ವ, ಡಿಂಬ-ದೇಹ
ಮೂಲ ...{Loading}...
ಹುರುಳುಗೆಡಿಸುವಿರಾವು ನುಡಿದೊಡೆ
ಕರಗಿ ಕುಂತೀ ಮಕ್ಕಳೆಂದೊಡೆ
ಹರಹಿ ಕೊಂಬಿರಿ ಡಿಂಬವೆಮ್ಮಲಿ ಜೀವವವದಿರಲಿ
ಭರತ ಸಂತತಿಯಲ್ಲಿ ಕೆಲಬರು
ಸುರರು ಕೆಲಬರು ನರರೆ ಸಾಕಂ
ತಿರಲಿ ಸಮರದೊಳೆಮ್ಮ ನೋಡೆಂದನು ಸುಯೋಧನನು ॥18॥
೦೧೯ ಬೇಡ ಮಗನೇ ...{Loading}...
ಬೇಡ ಮಗನೇ ಕೃಷ್ಣರಾಯನು
ರೂಢಿಸಿದ ಕಟ್ಟಾಳು ಕೆಲ ಕೆಲ
ರಾಡುವರು ಸಾಕ್ಷಾತು ಲಕ್ಷಿ ್ಮೀಕಾಂತ ಹರಿಯೆಂದು
ಕೂಡಿಕೊಂಡಿಹನವರನಾತನು
ಕೇಡನವರಿಗೆ ಹೊದ್ದಲೀಯನು
ನಾಡನೊಪ್ಪಿಸು ಮಗನೆಯೆಂದನು ಬೆದರಿ ಧೃತರಾಷ್ಟ್ರ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಗನೇ ಬೇಡ ! ಶ್ರೀ ಕೃಷ್ಣನು ಪ್ರಸಿದ್ಧನಾದ ಶೂರ ವ್ಯಕ್ತಿ (ಕಟ್ಟು ನಿಟ್ಟಿನ) ಅವನು ಸಾಕ್ಷಾತ್ ಲಕ್ಷ್ಮೀಕಾಂತ, ಹರಿಯೆಂದು, ಕೆಲವರು ಆಡುತ್ತಾರೆ. ಅವನು ಪಾಂಡವರನ್ನು ಕೂಡಿಕೊಂಡಿದ್ದಾನೆ, ಅವರಿಗೆ ಕೇಡುಂಟಾಗಲು ಅವಕಾಶವನ್ನು ನೀಡುವುದಿಲ್ಲ. ಮಗನೇ ಅವರಿಗೆ ರಾಜ್ಯವನ್ನು ಒಪ್ಪಿಸು ಎಂದು ಹೆದರಿ ಧೃತರಾಷ್ಟ್ರನು ಹೇಳಿದನು.
ಪದಾರ್ಥ (ಕ.ಗ.ಪ)
ಕಟ್ಟಾಳು-ವೀರ
ಮೂಲ ...{Loading}...
ಬೇಡ ಮಗನೇ ಕೃಷ್ಣರಾಯನು
ರೂಢಿಸಿದ ಕಟ್ಟಾಳು ಕೆಲ ಕೆಲ
ರಾಡುವರು ಸಾಕ್ಷಾತು ಲಕ್ಷಿ ್ಮೀಕಾಂತ ಹರಿಯೆಂದು
ಕೂಡಿಕೊಂಡಿಹನವರನಾತನು
ಕೇಡನವರಿಗೆ ಹೊದ್ದಲೀಯನು
ನಾಡನೊಪ್ಪಿಸು ಮಗನೆಯೆಂದನು ಬೆದರಿ ಧೃತರಾಷ್ಟ್ರ ॥19॥
೦೨೦ ಮರುಳುಗಳಲಾ ಬೊಪ್ಪನವರೀ ...{Loading}...
ಮರುಳುಗಳಲಾ ಬೊಪ್ಪನವರೀ
ಮುರಹರನು ಹರಿಯೆಂದು ಮುನ್ನದ
ನರಿದಿಹೆನು ನೀವಂಜದಿರಿ ನಿಮಗಾಗದವಸಾನ
ಗುರು ನದೀಸುತ ಮುಖ್ಯರಿರಲೀ
ಕುರುಕುಲಕೆ ಕೇಡಹುದೆ ಕೊಲುವೊಡೆ
ಸುರಪತಿಯ ಸುತನಳವೆಯೆಂದನು ಕೌರವರರಾಯ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಂದೆಯವರೇ ! ಹುಚ್ಚರಾದಿರಲ್ಲ. ! ಈ ಮುರಹರನು (ಕೃಷ್ಣನು) ಹರಿ ಎಂಬುದನ್ನು ಮೊದಲಿನಿಂದಲೂ ತಿಳಿದಿರುವೆನು. ನೀವು ಭಯ ಪಡಬೇಡಿ ನಿಮಗೆ ಸಾವು ಬರದು, ಗುರು ದ್ರೋಣರು ಭೀಷ್ಮರು ಮೊದಲಾದ ಮುಖ್ಯರಿರಲು ಈ ಕುರುಕುಲಕ್ಕೆ ಆಪತ್ತುಂಟಿ ? ಕೊಲ್ಲಲು ಅರ್ಜುನನು ಸಮರ್ಥನೆ ? ಎಂದು ದುರ್ಯೋಧನನು ಹೇಳಿದನು.
ಪದಾರ್ಥ (ಕ.ಗ.ಪ)
ಅವಸಾನ-ಸಾವು/ಕೊನೆ, ಅಳವು-ಶಕ್ತಿ.
ಮೂಲ ...{Loading}...
ಮರುಳುಗಳಲಾ ಬೊಪ್ಪನವರೀ
ಮುರಹರನು ಹರಿಯೆಂದು ಮುನ್ನದ
ನರಿದಿಹೆನು ನೀವಂಜದಿರಿ ನಿಮಗಾಗದವಸಾನ
ಗುರು ನದೀಸುತ ಮುಖ್ಯರಿರಲೀ
ಕುರುಕುಲಕೆ ಕೇಡಹುದೆ ಕೊಲುವೊಡೆ
ಸುರಪತಿಯ ಸುತನಳವೆಯೆಂದನು ಕೌರವರರಾಯ ॥20॥
೦೨೧ ಭಾರ ಹೆಚ್ಚಿದೊಡರಲಿ ...{Loading}...
ಭಾರ ಹೆಚ್ಚಿದೊಡರಲಿ ಭೂಮಿ
ನಾರಿ ಬಿನ್ನಹ ಮಾಡಿದೊಡೆ ದೈ
ತ್ಯಾರಿ ಬಿಜಯಂಗೈದನವನಿಗೆ ಮನುಜ ವೇಷದಲಿ
ಭೂರಿ ದನುಜರನೊರಸಿದನು ಕೈ
ಯಾರ ಬಳಿಕರ್ಜುನನ ಕೈಯಲಿ
ಕೌರವರ ಕೊಲಿಸುವನು ನಾವಿನ್ನಂಜಲೇಕೆಂದ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಾರ ಹೆಚ್ಚಿದಾಗ ಭೂದೇವಿ ಒರಲಿ ವಿಜ್ಞಾಪಿಸಿಕೊಳ್ಳಲು ವಿಷ್ಣುವು ಮಾನವ ರೂಪದಿಂದ ಭೂಮಿಗೆ ಇಳಿದು ಬಂದನು. ತನ್ನ ಕೈಯಿಂದಲೆ ಅಧಿಕವಾದ ರಾಕ್ಷಸರನ್ನು ಅಳಿಸಿ ಹಾಕಿದನು. ಆಮೇಲೆ ಅರ್ಜುನನ ಮೂಲಕ ಕೌರವರನ್ನು ಕೊಲ್ಲಿಸುವನು. ನಾವು ಇನ್ನೇಕೆ ಭಯ ಪಡಬೇಕು ಎಂದನು ದುರ್ಯೋಧನ.
ಪದಾರ್ಥ (ಕ.ಗ.ಪ)
ಅವನಿ-ಭೂಮಿ, ಒರಲಿ-ಅರಚಿ, ಬೂರಿ-ಅಧಿಕವಾದ, ಒರೆಸು-ಅಳಿಸು.
ಮೂಲ ...{Loading}...
ಭಾರ ಹೆಚ್ಚಿದೊಡರಲಿ ಭೂಮಿ
ನಾರಿ ಬಿನ್ನಹ ಮಾಡಿದೊಡೆ ದೈ
ತ್ಯಾರಿ ಬಿಜಯಂಗೈದನವನಿಗೆ ಮನುಜ ವೇಷದಲಿ
ಭೂರಿ ದನುಜರನೊರಸಿದನು ಕೈ
ಯಾರ ಬಳಿಕರ್ಜುನನ ಕೈಯಲಿ
ಕೌರವರ ಕೊಲಿಸುವನು ನಾವಿನ್ನಂಜಲೇಕೆಂದ ॥21॥
೦೨೨ ಕಾವನಾತನೆ ಕೊಲುವನಾತನೆ ...{Loading}...
ಕಾವನಾತನೆ ಕೊಲುವನಾತನೆ
ಸಾವೆನಾತನ ಕೈಯ ಬಾಯಲಿ
ನೀವು ಪಾಂಡವರೊಡನೆ ಸುಖದಲಿ ರಾಜ್ಯವಾಳುವುದು
ಸಾವ ನಾನಂಜದೊಡೆ ಬದುಕುವ
ನೀವು ಚಿಂತಿಸಲೇಕೆ ನಿಮ್ಮನು
ಕಾವನೈ ಕರುಣದಲಿ ಗದುಗಿನ ವೀರನಾರಯಣ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಯುವನು ಅವನೇ, ಕೊಲ್ಲುವವನೂ ಅವನೇ, ಅವನ ಕೈಬಾಯಿಗಳಲ್ಲಿಯೇ ಸಾಯುತ್ತೇನೆ. ನೀವು ಪಾಂಡವರೊಡನೆ ಸುಖದಿಂದ ರಾಜ್ಯವನ್ನು ಆಳಿರಿ. ಸಾಯುವ ನಾನೆ ಭಯಪಡದಿರಲು ಬದುಕುವ ನೀವು ಏಕೆ ಚಿಂತಿಸಬೇಕು ? ನಿಮ್ಮನ್ನು ಗದುಗಿನ ವೀರನಾರಾಯಣ ಸ್ವರೂಪಿಯಾದ ಶ್ರೀಕೃಷ್ಣನು ಕರುಣೆಯಿಂದ ಕಾಯುತ್ತಾನೆಂದು ದುರ್ಯೋಧನನು ಹೇಳಿದನು.
ಮೂಲ ...{Loading}...
ಕಾವನಾತನೆ ಕೊಲುವನಾತನೆ
ಸಾವೆನಾತನ ಕೈಯ ಬಾಯಲಿ
ನೀವು ಪಾಂಡವರೊಡನೆ ಸುಖದಲಿ ರಾಜ್ಯವಾಳುವುದು
ಸಾವ ನಾನಂಜದೊಡೆ ಬದುಕುವ
ನೀವು ಚಿಂತಿಸಲೇಕೆ ನಿಮ್ಮನು
ಕಾವನೈ ಕರುಣದಲಿ ಗದುಗಿನ ವೀರನಾರಯಣ ॥22॥