೦೦೦ ಸೂ ಬನ್ದು ...{Loading}...
ಸೂ. ಬಂದು ಕಂಡನು ಸಂಜಯನು ಯಮ
ನಂದನನನಲ್ಲಿಂದ ಮರಳಿದು
ಬಂದು ಕೌರವ ನೃಪತಿಗರುಹಿದನವರ ಮಾತುಗಳ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಸಂಜಯನು ಧರ್ಮರಾಯನನ್ನು ಕಂಡು ಅಲ್ಲಿಂದ ಹಿಂತಿರುಗಿ ಬಂದು ದುರ್ಯೋಧನನಿಗೆ ಅವರ ಮಾತುಗಳನ್ನು ತಿಳಿಸಿದನು.
ಮೂಲ ...{Loading}...
ಸೂ. ಬಂದು ಕಂಡನು ಸಂಜಯನು ಯಮ
ನಂದನನನಲ್ಲಿಂದ ಮರಳಿದು
ಬಂದು ಕೌರವ ನೃಪತಿಗರುಹಿದನವರ ಮಾತುಗಳ
೦೦೧ ಎಲೆ ಪರೀಕ್ಷಿತ ...{Loading}...
ಎಲೆ ಪರೀಕ್ಷಿತ ತನಯ ಕೇಳು
ಮ್ಮಳಿಸಿದನು ಯಮಸೂನು ಮುರರಿಪು
ಫಲುಗುಣಗೆ ಮೈಗೊಡುವನೋ ಕೌರವರಿಗೊಳಗಹನೊ
ತಿಳಿಯಲರಿದೆನುತಿರಲು ಬಲಗ
ಣ್ಣಲುಗಿತಿದಿರೊಳು ಕೈಯಗುಡಿಯಲಿ
ಸುಳಿದನೊಬ್ಬನು ಬಹಳ ಮಾರ್ಗಶ್ರಮದ ಭಾರದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆ ಪರೀಕ್ಷಿತನ ಮಗನೇ ಕೇಳು ಧರ್ಮರಾಯನು, ಶ್ರೀಕೃಷ್ಣನು ಅರ್ಜುನನಿಗೆ ಒಲಿಯುತ್ತಾನೋ ಅಥವಾ ದುರ್ಯೋಧನನಿಗೆ ಒಳಗಾಗುತ್ತಾನೋ ಎಂದು ತಿಳಿಯದೇ ವ್ಯಥೆಪಡುತ್ತಿರಲು ಅವನಿಗೆ (ಶುಭಸೂಚಕವಾಗಿ) ಬಲಗಣ್ಣು ಅದುರಿತು. ಎದುರಿಗೆ ಕೈಲಿ ಪ್ರಯಾಣದಿಂದ ಬಳಲಿದ ಒಬ್ಬನು ಕೈಗಳನ್ನು ಮುಗಿದುಕೊಂಡು ಬಂದನು.
ಮೂಲ ...{Loading}...
ಎಲೆ ಪರೀಕ್ಷಿತ ತನಯ ಕೇಳು
ಮ್ಮಳಿಸಿದನು ಯಮಸೂನು ಮುರರಿಪು
ಫಲುಗುಣಗೆ ಮೈಗೊಡುವನೋ ಕೌರವರಿಗೊಳಗಹನೊ
ತಿಳಿಯಲರಿದೆನುತಿರಲು ಬಲಗ
ಣ್ಣಲುಗಿತಿದಿರೊಳು ಕೈಯಗುಡಿಯಲಿ
ಸುಳಿದನೊಬ್ಬನು ಬಹಳ ಮಾರ್ಗಶ್ರಮದ ಭಾರದಲಿ ॥1॥
೦೦೨ ಇದಿರುಗೊಳ್ಳೇಳರಸ ಕಟ್ಟಿಸು ...{Loading}...
ಇದಿರುಗೊಳ್ಳೇಳರಸ ಕಟ್ಟಿಸು
ಮುದದಿ ಗುಡಿಯನು ರಣದೊಳಹಿತರ
ಸದೆದೆ ಹೋಗಿನ್ನೇನು ಸರಿಯೇ ಸುರರು ಗಿರರುಗಳು
ಪದವನರಸಿದರಾಳಿಗೊಂಡನು
ಸದಮಲಶ್ರುತಿ ತತಿಯನೆಂಬ
ಗ್ಗದ ಮಹಾ ಪರದೈವ ಬಿಜಯಂಗೈವುತಿದೆಯೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸ ! ಎಳು, ಎದುರುಗೊಳ್ಳು, ಬಾವುಟವನ್ನು ಕಟ್ಟಿಸು. ಯುದ್ಧದಲ್ಲಿ ಶತ್ರುಗಳನ್ನು ಬಡಿದೆ. ಹೋಗು. ಇನ್ನೇನು ದೇವತೆಗಳು - ಗೀವತೆಗಳು ನಿನಗೆ ಸರಿಯೆ ? ಪಾದವನ್ನು ಹುಡುಕುತ್ತಿದ್ದ ವೇದಗಳನ್ನೆ ಉಪೇಕ್ಷಿಸಿದ ಶ್ರೇಷ್ಠ ಮಹಾದೈವ ಕೃಷ್ಣನು ದಯ ಮಾಡುತ್ತಿದ್ದಾನೆಂದನು.
ಪದಾರ್ಥ (ಕ.ಗ.ಪ)
ಗುಡಿ-ಬಾವುಟ, ತತಿ-ಸಮೂಹ, ಅಗ್ಗ-ಶ್ರೇಷ್ಠ
ಮೂಲ ...{Loading}...
ಇದಿರುಗೊಳ್ಳೇಳರಸ ಕಟ್ಟಿಸು
ಮುದದಿ ಗುಡಿಯನು ರಣದೊಳಹಿತರ
ಸದೆದೆ ಹೋಗಿನ್ನೇನು ಸರಿಯೇ ಸುರರು ಗಿರರುಗಳು
ಪದವನರಸಿದರಾಳಿಗೊಂಡನು
ಸದಮಲಶ್ರುತಿ ತತಿಯನೆಂಬ
ಗ್ಗದ ಮಹಾ ಪರದೈವ ಬಿಜಯಂಗೈವುತಿದೆಯೆಂದ ॥2॥
೦೦೩ ಕಥೆಯೆ ನಿನ್ನೊಡ ...{Loading}...
ಕಥೆಯೆ ನಿನ್ನೊಡ ಹುಟ್ಟಿದನ ಸಾ
ರಥಿತನವ ಕೈಕೊಂಡನಿನ್ನೀ
ಪೃಥಿವಿ ನಿನ್ನಯ ರಾಣಿವಾಸವು ಚಿಂತೆ ಬೇಡಿದಕೆ
ವ್ಯಥಿತವಾಯಿತು ವೈರಿಬಲ ಸಂ
ಪ್ರಥಿತ ಸಾಹಸನಾದೆ ನೀನೆನೆ
ಶಿಥಿಲ ಸಂಶಯನಂಗಚಿತ್ತವನಿತ್ತನಾತಂಗೆ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದು ಕಥೆಯೇ? ಕೃಷ್ಣನು ನಿನ್ನ ತಮ್ಮನ ಸಾರಥಿತನವನ್ನು ಕೈಗೊಂಡನು. ಇನ್ನು ಈ ಭೂಮಿ ನಿನ್ನ ರಾಣೀವಾಸವಾಯಿತು. ಇದಕ್ಕೆ ಚಿಂತೆ ಬೇಡ. ಶತ್ರುಗಳ ಬಲವು ದುಃಖಿತವಾಯಿತು. ನೀನು ಸಾಹಸಿಯಾದೆ ಎಂದು ಹೇಳಲು, ಸಂಶಯದಿಂದ ಬಲಹೀನನಾಗಿದ್ದ ಧರ್ಮರಾಯನು ಆ ಚಾರನಿಗೆ ತನ್ನ ಅಂಗವಸ್ತ್ರವನ್ನು ಉಡುಗೊರೆಯಾಗಿ ನೀಡಿದನು.
ಪದಾರ್ಥ (ಕ.ಗ.ಪ)
ಸಂಪ್ರಥಿತ-ಸದ್ಯದ ಪರಿಸ್ಥಿತಿ/ಪ್ರಕೃತ, ಶಿಥಿಲ-ಕೃಶವಾದ
ಮೂಲ ...{Loading}...
ಕಥೆಯೆ ನಿನ್ನೊಡ ಹುಟ್ಟಿದನ ಸಾ
ರಥಿತನವ ಕೈಕೊಂಡನಿನ್ನೀ
ಪೃಥಿವಿ ನಿನ್ನಯ ರಾಣಿವಾಸವು ಚಿಂತೆ ಬೇಡಿದಕೆ
ವ್ಯಥಿತವಾಯಿತು ವೈರಿಬಲ ಸಂ
ಪ್ರಥಿತ ಸಾಹಸನಾದೆ ನೀನೆನೆ
ಶಿಥಿಲ ಸಂಶಯನಂಗಚಿತ್ತವನಿತ್ತನಾತಂಗೆ ॥3॥
೦೦೪ ಉಕ್ಕಿ ವಿಸಟಮ್ಬರಿವ ...{Loading}...
ಉಕ್ಕಿ ವಿಸಟಂಬರಿವ ಹರುಷದ
ತೆಕ್ಕೆಯಲಿ ಕೈಗೊಡುವ ನೃಪತಿಗ
ಳಿಕ್ಕಲಿಸೆ ಹೊರವಂಟನರಸನು ಸಕಲದಳ ಸಹಿತ
ಮಿಕ್ಕು ಬರೆ ಬರೆ ಕೃಷ್ಣನನು ಕಂ
ಡೊಕ್ಕನೊಡಲನು ಚರಣದಲಿ ಸಾ
ಕಕ್ಕಜವಿದೇನೆನುತ ನೆಗಹಿದನಂದು ಧರ್ಮಜನ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉಕ್ಕಿ ಹರಿಯುವ ಸಂತೋಷದಿಂದ ಅಪ್ಪಿಕೊಂಡು ಧರ್ಮಜನಿಗೆ ಹಸ್ತಲಾಘವವನ್ನು ಕೊಡುತ್ತಿರುವ ರಾಜರುಗಳು ಎರಡೂ ಕಡೆಗಳಲ್ಲಿರಲು, ಎಲ್ಲ ಸೈನ್ಯಗಳ ಕೂಡೆ ಧರ್ಮರಾಯನು ಹೊರಗೆ ಹೊರಟನು. ಹಾಗೆ ಮುಂದೆ ಬಂದು ಕೃಷ್ಣನನ್ನು ಕಂಡು, ತನ್ನ ಶರೀರವನ್ನು ಅವನ ಪಾದಗಳಲ್ಲಿ ಚಾಚಲು, ಸಾಕು ! ಇದರಲ್ಲೇನು ಆಶ್ಚರ್ಯವೆಂದು ಕೃಷ್ಣನು ಧರ್ಮರಾಯನನ್ನು ಮೇಲಕ್ಕೆತ್ತಿದನು.
ಪದಾರ್ಥ (ಕ.ಗ.ಪ)
- ವಿಸಂಟಬರಿವ-ಹರಡುವ/ಉಬ್ಬುವ, ಅಕ್ಕಜ-ಆಶ್ಚರ್ಯ
ಮೂಲ ...{Loading}...
ಉಕ್ಕಿ ವಿಸಟಂಬರಿವ ಹರುಷದ
ತೆಕ್ಕೆಯಲಿ ಕೈಗೊಡುವ ನೃಪತಿಗ
ಳಿಕ್ಕಲಿಸೆ ಹೊರವಂಟನರಸನು ಸಕಲದಳ ಸಹಿತ
ಮಿಕ್ಕು ಬರೆ ಬರೆ ಕೃಷ್ಣನನು ಕಂ
ಡೊಕ್ಕನೊಡಲನು ಚರಣದಲಿ ಸಾ
ಕಕ್ಕಜವಿದೇನೆನುತ ನೆಗಹಿದನಂದು ಧರ್ಮಜನ ॥4॥
೦೦೫ ಪರಕೆ ಪರತರ ...{Loading}...
ಪರಕೆ ಪರತರ ವಸ್ತುವನು ಗೋ
ಚರಿಸಿದೆವಲೈ ಮುನಿಜನಂಗಳ
ವರ ಸಮಾಧಿಗೆ ಸಮಯವಿಲ್ಲದ ದೇವ ನಮಗೊಲಿದೈ
ಕರುಣಿ ಬಿಜಯಂಗೈದೆಯೆನೆ ಮುರ
ಹರನು ನಗುತಿಂತೆಂದ ನಾವೀ
ನರನ ಸಾರಥಿಯಲ್ಲದೆಲ್ಲಿಯ ವಸ್ತು ತಾನೆಂದ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ‘ಕೈವಲ್ಯಕ್ಕೆ ಕಾರಣವಾದ ಶ್ರೇಷ್ಠವಾದ ಸತ್ವವನ್ನು ನಾವಿಂದು ಕಂಡೆವು. ಮುನಿಜನಗಳ ಸಮಾಧಿ ಸ್ಥಿತಿಗೆ ಒಲಿಯದ ದೇವ ನಮಗಿಂದು ಒಲಿದೆ. ಕರುಣಿ, ದಯಮಾಡಿಸಬೇಕು’ ಎನ್ನಲು, ‘ನಾವೀಗ ಈ ಅರ್ಜುನನ ಸಾರಥಿಯಲ್ಲದೇ ಬೇರೇನೂ ಅಲ್ಲ ’ ಎಂದನು ಕೃಷ್ಣ.
ಮೂಲ ...{Loading}...
ಪರಕೆ ಪರತರ ವಸ್ತುವನು ಗೋ
ಚರಿಸಿದೆವಲೈ ಮುನಿಜನಂಗಳ
ವರ ಸಮಾಧಿಗೆ ಸಮಯವಿಲ್ಲದ ದೇವ ನಮಗೊಲಿದೈ
ಕರುಣಿ ಬಿಜಯಂಗೈದೆಯೆನೆ ಮುರ
ಹರನು ನಗುತಿಂತೆಂದ ನಾವೀ
ನರನ ಸಾರಥಿಯಲ್ಲದೆಲ್ಲಿಯ ವಸ್ತು ತಾನೆಂದ ॥5॥
೦೦೬ ಬಯಲಿಗೆಮ್ಮನು ನಾಚಿಸದೆ ...{Loading}...
ಬಯಲಿಗೆಮ್ಮನು ನಾಚಿಸದೆ ಪಾ
ಳೆಯಕೆ ನಡೆಯೆಂದಸುರರಿಪು ಸೇ
ನೆಯನು ಕೈವೀಸಿದನು ಬಂದನು ರಾಜಮಂದಿರಕೆ
ನಿಯತವಿತ್ತಲು ಕೇಳು ಜನಮೇ
ಜಯ ಮಹೀಪತಿ ಧರ್ಮಸುತನೋ
ಲೆಯ ಹದನನರಿದಂತೆ ಶಲ್ಯ ನೃಪಾಲ ಹೊರವಂಟ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಹಿರಂಗವಾಗಿ ತನಗೆ ನಾಚಿಕೆ ಉಂಟುಮಾಡದೆ ಪಾಳೆಯಕ್ಕೆ ನಡೆಯೆಂದ ಕೃಷ್ಣ, ಸೇನೆಗೆ ಕೈ ಬೀಸಿ ರಾಜಮಂದಿರಕ್ಕೆ ಬಂದನು. ಜನಮೇಜಯ ಮಹಾರಾಜ ! ಇತ್ತ ಕಡೆ ಶಲ್ಯಮಹಾರಾಜನು ಧರ್ಮರಾಯನ ಪತ್ರದಿಂದ ವಿಷಯ ತಿಳಿದ ಕೂಡಲೇ ಹೊರಟನು.
ಪದಾರ್ಥ (ಕ.ಗ.ಪ)
ನಿಯತ-ಗೊತ್ತುಪಡಿಸಿದ, ಹದನ-ವಿಷಯ
ಮೂಲ ...{Loading}...
ಬಯಲಿಗೆಮ್ಮನು ನಾಚಿಸದೆ ಪಾ
ಳೆಯಕೆ ನಡೆಯೆಂದಸುರರಿಪು ಸೇ
ನೆಯನು ಕೈವೀಸಿದನು ಬಂದನು ರಾಜಮಂದಿರಕೆ
ನಿಯತವಿತ್ತಲು ಕೇಳು ಜನಮೇ
ಜಯ ಮಹೀಪತಿ ಧರ್ಮಸುತನೋ
ಲೆಯ ಹದನನರಿದಂತೆ ಶಲ್ಯ ನೃಪಾಲ ಹೊರವಂಟ ॥6॥
೦೦೭ ಮೇಳವಿಸಿ ಹೊರವಣ್ಟನಗಣಿತ ...{Loading}...
ಮೇಳವಿಸಿ ಹೊರವಂಟನಗಣಿತ
ದಾಳು ಕುದುರೆಯ ಕೂಡಿ ಬರುತಿರೆ
ಕೇಳಿದನು ಕುರುರಾಯನಾ ಮಾದ್ರಾಧಿಪನ ಬರವ
ಆಳೊಳಗ್ಗಳನದಟ ಶಲ್ಯ ನೃ
ಪಾಲಕನ ತಿರುಹಿದೊಡೆ ಗೆಲುವುದು
ಕಾಳಗವು ನಮಗೆಂದು ನಿಶ್ಚೈಸಿದನು ಮಂತ್ರದಲಿ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಾದ್ರ ದೇಶದ ಶಲ್ಯನು, ಅಸಂಖ್ಯಾತ ಸೈನ್ಯ ಕುದುರೆಗಳನ್ನು ಕೂಡಿಸಿಕೊಂಡು ಬರುತ್ತಿರುವುದನ್ನು ದುರ್ಯೋಧನನು ಕೇಳಿದನು. ಪರಾಕ್ರಮಿಗಳಲ್ಲಿ ಶ್ರೇಷ್ಠನಾದ ಶಲ್ಯನನ್ನು ತಮ್ಮತ್ತ ತಿರುಗಿಸಿಕೊಂಡರೆ ಯುದ್ಧದಲ್ಲಿ ನಮಗೆ ಗೆಲವು ಎಂದು ದುರ್ಯೋಧನನು ಉಪಾಯವೊಂದನ್ನು ನಿರ್ಧರಿಸಿದನು.
ಪದಾರ್ಥ (ಕ.ಗ.ಪ)
ಅಗ್ಗಳ-ಶ್ರೇಷ್ಠ, ಅದಟ-ಶೂರ/ಪರಾಕ್ರಮಿ
ಮಂತ್ರ- ಉಪಾಯ
ಮೂಲ ...{Loading}...
ಮೇಳವಿಸಿ ಹೊರವಂಟನಗಣಿತ
ದಾಳು ಕುದುರೆಯ ಕೂಡಿ ಬರುತಿರೆ
ಕೇಳಿದನು ಕುರುರಾಯನಾ ಮಾದ್ರಾಧಿಪನ ಬರವ
ಆಳೊಳಗ್ಗಳನದಟ ಶಲ್ಯ ನೃ
ಪಾಲಕನ ತಿರುಹಿದೊಡೆ ಗೆಲುವುದು
ಕಾಳಗವು ನಮಗೆಂದು ನಿಶ್ಚೈಸಿದನು ಮಂತ್ರದಲಿ ॥7॥
೦೦೮ ಎನ್ದಖಿಳ ವಸ್ತುಗಳ ...{Loading}...
ಎಂದಖಿಳ ವಸ್ತುಗಳ ಜೋಡಿಸಿ
ಮುಂದೆ ಪಾಳೆಯ ಬಿಡುವ ಠಾವಿನೊ
ಳಂದ ಮಿಗೆ ಮಾಡಿದನು ಗುಡಿ ಗೂಡಾರ ಚೌಕಿಗೆಯ
ಒಂದು ಯೋಜನದಗಲದಲಿ ಹಯ
ವೃಂದ ಗಜಶಾಲೆಗಳ ಪರುಠವ
ದಿಂದ ರಚಿಸಿದ ಕೂಳು ಖಾಣವನಖಿಳ ಮೋಹರಕೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿರ್ಧರಿಸಿದಂತೆ ಎಲ್ಲ ವಸ್ತುಗಳನ್ನು ಸೇರಿಸಿ, ಬೀಡಾರಗಳನ್ನು ಬಿಡುವ ಸ್ಥಳಗಳಲ್ಲಿ ಕುಟೀರ, ವಸತಿ, ಕೈಸಾಲೆಗಳನ್ನು ಮಾಡಿದನು. ಒಂದು ಯೋಜನದವರೆಗೂ ಕುದುರೆ, ಆನೆಗಳಿಗಾಗಿ ಆಶ್ರಯದಾಣವನ್ನು ವಿಸ್ತಾರವಾಗಿ ನಿರ್ಮಿಸಿ, ಸೈನ್ಯಕ್ಕೆ ಆಹಾರವನ್ನು, ಪಶುಗಳಿಗೆ ಮೇವನ್ನೂ ಏರ್ಪಡಿಸಿದನು.
ಪದಾರ್ಥ (ಕ.ಗ.ಪ)
ಗೂಡಾರ-ಡೇರೆ/ಬಟ್ಟಿಯಮನೆ, ಚೌಕಿ-ತೊಟ್ಟಿ, ಖಾಣ-ಮೇವು, ಕೂಳು-ಆಹಾರ
ಮೂಲ ...{Loading}...
ಎಂದಖಿಳ ವಸ್ತುಗಳ ಜೋಡಿಸಿ
ಮುಂದೆ ಪಾಳೆಯ ಬಿಡುವ ಠಾವಿನೊ
ಳಂದ ಮಿಗೆ ಮಾಡಿದನು ಗುಡಿ ಗೂಡಾರ ಚೌಕಿಗೆಯ
ಒಂದು ಯೋಜನದಗಲದಲಿ ಹಯ
ವೃಂದ ಗಜಶಾಲೆಗಳ ಪರುಠವ
ದಿಂದ ರಚಿಸಿದ ಕೂಳು ಖಾಣವನಖಿಳ ಮೋಹರಕೆ ॥8॥
೦೦೯ ಬನ್ದು ಬಿಡುವನ್ನೆಬರ ...{Loading}...
ಬಂದು ಬಿಡುವನ್ನೆಬರ ಮುನ್ನಿನ
ಮಂದಿರವ ಹೊಗುವಂತೆ ಶಲ್ಯನ
ಮಂದಿ ಸಂತೋಷದ ಸಮುದ್ರದಿ ಮೂಡಿ ಮುಳುಗಾಡಿ
ಮುಂದೆ ನಡೆಯಲು ಮತ್ತೆ ಮುನ್ನಿನ
ಚಂದದಿಂ ಮನೆ ಮನೆಗಳನು ಸುಖ
ದಿಂದಿರಲು ರಚಿಸಿದನು ಕುರುಪತಿ ಪಯಣ ಪಯಣದಲಿ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನ ಸೈನ್ಯವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವವರೆಗೆ ಸಂತೋಷದಿಂದಿರುವಂತೆ, ಮತ್ತೆ ಮುಂದೆ ನಡೆದಾಗ ಸುಖದಿಂದಿರುವಂತೆ ದುರ್ಯೋಧನನು ಪ್ರಯಾಣ ಮಾರ್ಗದಲ್ಲಿ ಸೌಕರ್ಯವನ್ನೇರ್ಪಡಿಸಿದ್ದನು.
ಮೂಲ ...{Loading}...
ಬಂದು ಬಿಡುವನ್ನೆಬರ ಮುನ್ನಿನ
ಮಂದಿರವ ಹೊಗುವಂತೆ ಶಲ್ಯನ
ಮಂದಿ ಸಂತೋಷದ ಸಮುದ್ರದಿ ಮೂಡಿ ಮುಳುಗಾಡಿ
ಮುಂದೆ ನಡೆಯಲು ಮತ್ತೆ ಮುನ್ನಿನ
ಚಂದದಿಂ ಮನೆ ಮನೆಗಳನು ಸುಖ
ದಿಂದಿರಲು ರಚಿಸಿದನು ಕುರುಪತಿ ಪಯಣ ಪಯಣದಲಿ ॥9॥
೦೧೦ ಆರು ನಯದಲಿ ...{Loading}...
ಆರು ನಯದಲಿ ನಮ್ಮಖಿಳ ದಳ
ಭಾರವನು ಸಲೆ ತಡೆದವನು ಕುರು
ವೀರನೋ ಯಮನಂದನನೊ ಮಿಗಲಾಗಿ ಮೆಚ್ಚಿದೆನು
ಆರು ಮಾಡಲಿಯವರು ಬಂದರೆ
ಹಾರಲೇಕೆನ್ನೊಡಲ ತೆರುವೆನು
ವೀರ ಮೈದೋರಲಿಯೆನುತ ಹೊಯಿಸಿದನು ಡಂಗುರವ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದನ್ನು ಕಂಡ ಶಲ್ಯನು, ನಮಗೆ ಈ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದವರು ಯಾರು? ದುರ್ಯೋಧನನೊ? ಧರ್ಮರಾಯನೋ? ಹೆಚ್ಚಾಗಿ ಮೆಚ್ಚಿದ್ದೇನೆ. ಇದನ್ನು ಯಾರು ಮಾಡಿದ್ದಾರೆಯೋ ಅವರು ಬಂದು ಕಾಣಿಸಿಕೊಳ್ಳಲಿ. ನನ್ನ ಪ್ರಾಣವನ್ನೇ ಬೇಕಾದರೂ ನೀಡುವನೆಂದು ಡಂಗುರವನ್ನು ಸಾರಿಸಿದನು.
ಪದಾರ್ಥ (ಕ.ಗ.ಪ)
ಹಾರಲೇಕೆ-ನಿರೀಕ್ಷಿಸುವುದೇಕೆ
ಮೂಲ ...{Loading}...
ಆರು ನಯದಲಿ ನಮ್ಮಖಿಳ ದಳ
ಭಾರವನು ಸಲೆ ತಡೆದವನು ಕುರು
ವೀರನೋ ಯಮನಂದನನೊ ಮಿಗಲಾಗಿ ಮೆಚ್ಚಿದೆನು
ಆರು ಮಾಡಲಿಯವರು ಬಂದರೆ
ಹಾರಲೇಕೆನ್ನೊಡಲ ತೆರುವೆನು
ವೀರ ಮೈದೋರಲಿಯೆನುತ ಹೊಯಿಸಿದನು ಡಂಗುರವ ॥10॥
೦೧೧ ನಗುತ ಕೌರವ ...{Loading}...
ನಗುತ ಕೌರವ ರಾಯನಿವರೋ
ಲಗಕೆ ಬರಲಿದಿರೆದ್ದು ಮುದದಲಿ
ತೆಗೆದು ಬಿಗಿಯಪ್ಪಿದನು ಕುಶಲವನೈಯÉ್ದು ಬೆಸಗೊಂಡ
ಮಗನೆ ನೀನೇ ರಚಿಸಿದಾತನು
ಬಗೆ ದಣಿಯೆ ಬೇಡುವುದು ತಾ ಹಂ
ಗಿಗನು ನಿನಗೆನೆ ಮಾವ ಬಿನ್ನಹ ಮರಳಿ ನೀವೆಂದ 11
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನು ನಗುತ್ತ ಶಲ್ಯನ ಸಭೆಗೆ ಬರಲು, ಶಲ್ಯನು ಸಂತೋಷದಿಂದ ಎದುರುಗೊಂಡು, ಬಿಗಿದಪ್ಪಿ, ಕುಶಲವನ್ನು ಕೇಳಿದನು. ಮಗನೇ ! ಇದೆಲ್ಲವನ್ನೂ ಮಾಡಿದವನು ನೀನೆ ? ‘ಮನ’ತೃಪ್ತಿಯಾಗುವಂತೆ ಬೇಡು. ನಾನು ನಿನ್ನ ದಾಕ್ಷಿಣ್ಯದಲ್ಲಿದ್ದೇನೆ ಎಂದು ಹೇಳಲು ಮಾವ ನೀವು ಹಿಂತಿರುಗಿ ಎಂದನು
ಪದಾರ್ಥ (ಕ.ಗ.ಪ)
ಹಂಗು-ದಾಕ್ಷಿಣ್ಯ
ಮೂಲ ...{Loading}...
ನಗುತ ಕೌರವ ರಾಯನಿವರೋ
ಲಗಕೆ ಬರಲಿದಿರೆದ್ದು ಮುದದಲಿ
ತೆಗೆದು ಬಿಗಿಯಪ್ಪಿದನು ಕುಶಲವನೈಯÉ್ದು ಬೆಸಗೊಂಡ
ಮಗನೆ ನೀನೇ ರಚಿಸಿದಾತನು
ಬಗೆ ದಣಿಯೆ ಬೇಡುವುದು ತಾ ಹಂ
ಗಿಗನು ನಿನಗೆನೆ ಮಾವ ಬಿನ್ನಹ ಮರಳಿ ನೀವೆಂದ 11
೦೧೨ ಎನಗೆ ಬೆಮ್ಬಲವಾಗಿ ...{Loading}...
ಎನಗೆ ಬೆಂಬಲವಾಗಿ ಕುಂತೀ
ತನಯರನು ಬಿಡಿ ಮರಳಿ ನೀವ್ ಹ
ಸ್ತಿನಪುರಿಗೆ ತನಗಿತ್ತ ವರವೆನೆ ಶಲ್ಯ ಮನವಳುಕಿ
ತನಯ ಕೈಕೊಂಡೆನು ಯುಧಿಷ್ಠಿರ
ಜನಪನಳಿಯನು ನೀನು ಲೋಗನೆ
ಯೆನಗೆ ನೀವಿತ್ತಂಡ ಸರಿ ನಿಮ್ಮತ್ತ ಬಹೆನೆಂದ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀವು ನನಗೆ ಬೆಂಬಲವಾಗಿ ಪಾಂಡವರನ್ನು ಬಿಡಿ. ನೀವು ಹಸ್ತಿನಾಪುರಕ್ಕೆ ಆಗಮಿಸಿ. ಅದೇ ನೀವು ನನಗೆ ನೀಡುವ ವರ, ಎನ್ನಲು, ಶಲ್ಯನು ಮನಸ್ಸಿನಲ್ಲಿ ಅಳುಕಿ, ಮಗನೇ ಒಪ್ಪಿದೆ. ಯುಧಿಷ್ಠಿರನು ಅಳಿಯನು. ನೀನು ಬೇರೆಯವನೆ ? ನೀವಿಬ್ಬರು ಸಮವೆ, ನಿಮ್ಮ ಕಡೆಗೆ ಬರುವೆನೆಂದನು.
ಪದಾರ್ಥ (ಕ.ಗ.ಪ)
ಲೋಗನೆ-ಬೇರೆಯವನೆ
ಮೂಲ ...{Loading}...
ಎನಗೆ ಬೆಂಬಲವಾಗಿ ಕುಂತೀ
ತನಯರನು ಬಿಡಿ ಮರಳಿ ನೀವ್ ಹ
ಸ್ತಿನಪುರಿಗೆ ತನಗಿತ್ತ ವರವೆನೆ ಶಲ್ಯ ಮನವಳುಕಿ
ತನಯ ಕೈಕೊಂಡೆನು ಯುಧಿಷ್ಠಿರ
ಜನಪನಳಿಯನು ನೀನು ಲೋಗನೆ
ಯೆನಗೆ ನೀವಿತ್ತಂಡ ಸರಿ ನಿಮ್ಮತ್ತ ಬಹೆನೆಂದ ॥12॥
೦೧೩ ಅಗಲಿದೆನು ಹಲಕಾಲವೈವರ ...{Loading}...
ಅಗಲಿದೆನು ಹಲಕಾಲವೈವರ
ಮೊಗವನೀಕ್ಷಿಸಿ ಮರಳುವೆನು ಬಂ
ಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ
ಮಗನೆ ಸೇನೆಯ ಕೊಂಡು ವಾರಣ
ನಗರಿಗೈದುವುದೆಂದು ಭೂಪನ
ಮಗುಳಿಚಿದನಾ ಶಲ್ಯ ಬಂದನು ಪಾಂಡವರ ಹೊರೆಗೆ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲವು ಕಾಲದಿಂದ ಐವರನ್ನೂ ಅಗಲಿದ್ದೇನೆ. ಅವರ ಮುಖ ನೋಡಿ ಹಿಂತಿರುಗುತ್ತೇನೆ. ಸಂಸಾರವೆಂಬ ಮರಕ್ಕೆ ಬಂಧುಗಳ ದರ್ಶನವೇ ಫಲವಲ್ಲವೇ? ನನ್ನ ಸೈನ್ಯವನ್ನು ಕರೆದುಕೊಂಡು ಹಸ್ತಿನಾಪುರಕ್ಕೆ ಹೋಗೆಂದು ದುರ್ಯೋಧನನನ್ನು ಕಳುಹಿಸಿ, ಶಲ್ಯನು ಪಾಂಡವರ ಬಳಿಗೆ ಬಂದನು.
ಪದಾರ್ಥ (ಕ.ಗ.ಪ)
ಮಗುಳಿಚು-ಕಳುಹಿಸು
ಮೂಲ ...{Loading}...
ಅಗಲಿದೆನು ಹಲಕಾಲವೈವರ
ಮೊಗವನೀಕ್ಷಿಸಿ ಮರಳುವೆನು ಬಂ
ಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ
ಮಗನೆ ಸೇನೆಯ ಕೊಂಡು ವಾರಣ
ನಗರಿಗೈದುವುದೆಂದು ಭೂಪನ
ಮಗುಳಿಚಿದನಾ ಶಲ್ಯ ಬಂದನು ಪಾಂಡವರ ಹೊರೆಗೆ ॥13॥
೦೧೪ ಇದಿರುಗೊಣ್ಡರು ಕಾಣಿಕೆಯನಿ ...{Loading}...
ಇದಿರುಗೊಂಡರು ಕಾಣಿಕೆಯನಿ
ಕ್ಕಿದರು ತೆಗೆದಪ್ಪಿದರು ಹಲ ಕಾ
ಲದಲಿ ಹೂಳಿದ ಹರುಷವನು ಕೈಗೊಳಗು ಮಾಡಿದರು
ಮುದದಿನೆಲ್ಲರ ಕುಶಲವನು ಕೇ
ಳಿದನು ದುರಿಯೋಧನಗೆ ಸಿಲುಕಿದ
ಹದನನೆಲ್ಲವ ಹೇಳಿದನು ನಿರ್ವಿಣ್ಣಮನನಾಗಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರು ಶಲ್ಯನನ್ನು ಎದುರುಗೊಂಡರು ಕಾಣಿಕೆಯನ್ನು ಕೊಟ್ಟರು ಅಪ್ಪಿದರು. ಹಲವು ಕಾಲ ಹುದುಗಿದ್ದ ಸಂತೋಷವನ್ನು ಪರಸ್ಪರ ವ್ಯಕ್ತಪಡಿಸಿದರು. ಸಂತೋಷದಿಂದ ಶಲ್ಯನು ಎಲ್ಲರ ಕುಶಲವನ್ನು ಕೇಳಿದನು. ದುರ್ಯೋಧನನ ಬಳಿ ತಾನು ಸಿಲುಕಿಕೊಂಡ ಎಲ್ಲ ವಿಷಯವನ್ನೂ ದುಃಖಿತ ಮನದಿಂದ ತಿಳಿಸಿದನು.
ಪದಾರ್ಥ (ಕ.ಗ.ಪ)
ಹೂಳಿದ-ತುಂಬಿದ, ಹುದುಗಿದ್ದ
ಮೂಲ ...{Loading}...
ಇದಿರುಗೊಂಡರು ಕಾಣಿಕೆಯನಿ
ಕ್ಕಿದರು ತೆಗೆದಪ್ಪಿದರು ಹಲ ಕಾ
ಲದಲಿ ಹೂಳಿದ ಹರುಷವನು ಕೈಗೊಳಗು ಮಾಡಿದರು
ಮುದದಿನೆಲ್ಲರ ಕುಶಲವನು ಕೇ
ಳಿದನು ದುರಿಯೋಧನಗೆ ಸಿಲುಕಿದ
ಹದನನೆಲ್ಲವ ಹೇಳಿದನು ನಿರ್ವಿಣ್ಣಮನನಾಗಿ ॥14॥
೦೧೫ ಆದಡೇನೆಲೆ ಕನ್ದ ...{Loading}...
ಆದಡೇನೆಲೆ ಕಂದ ತಪ್ಪದು
ಮೇದಿನಿಯ ಸಿರಿ ನಿನಗೆ ಸತ್ಯವ
ಕಾದು ಹದಿಮೂರಬುದ ನವೆದಿರಿ ಮುಂದೆ ಲೇಸಹುದು
ಕಾದಿ ವೃತ್ರಾಸುರನ ಮುರಿದಪ
ವಾದದಲಿ ಸಿರಿ ಹೋಗಿ ದುಃಖಿತ
ನಾದನಿಂದ್ರನು ಮತ್ತೆ ಬದುಕಿದ ಶಚಿಯ ದೆಸೆಯಿಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಂದ! ಆದರೇನಂತೆ? ಭೂಮಿಯ ಸಂಪತ್ತು ನಿನಗೆ ತಪ್ಪದು, ಸತ್ಯವನ್ನು ಕಾದು ಹದಿಮೂರುವರ್ಷ ನೊಂದಿದ್ದೀರಿ. ಮುಂದೆ ಒಳ್ಳೆಯದಾಗುವುದು. ಯುದ್ಧದಲ್ಲಿ ವೃತ್ರಾಸುರನನ್ನು ಕೊಂದ ಅಪವಾದದಲ್ಲಿ ತನ್ನ ಸಂಪತ್ತನ್ನು ಕಳೆದುಕೊಂಡಿದ್ದು ದುಃಖಿತನಾದ ಇಂದ್ರನು ಶಚಿದೇವಿಯಿಂದ ಅದನ್ನು ಮತ್ತೆ ಪಡೆದನು.
ಟಿಪ್ಪನೀ (ಕ.ಗ.ಪ)
ತೃಷ್ಟೃವಿನಿಂದ ಇಂದ್ರನನ್ನು ಕೊಲ್ಲುವುದಕ್ಕಾಗಿ ಸೃಷ್ಟಿಸಲ್ಪಟ್ಟ ವೃತ್ರಾಸುರನನ್ನು ಇಂದ್ರ ಕೊಂದದ್ದರಿಂದ ಬ್ರಹ್ಮ ಹತ್ಯೆಯ ದೋಷದಿಂದ ತನ್ನ ಸಂಪತ್ತನ್ನು ಕಳೆದುಕೊಂಡಿದ್ದ.
ಮೂಲ ...{Loading}...
ಆದಡೇನೆಲೆ ಕಂದ ತಪ್ಪದು
ಮೇದಿನಿಯ ಸಿರಿ ನಿನಗೆ ಸತ್ಯವ
ಕಾದು ಹದಿಮೂರಬುದ ನವೆದಿರಿ ಮುಂದೆ ಲೇಸಹುದು
ಕಾದಿ ವೃತ್ರಾಸುರನ ಮುರಿದಪ
ವಾದದಲಿ ಸಿರಿ ಹೋಗಿ ದುಃಖಿತ
ನಾದನಿಂದ್ರನು ಮತ್ತೆ ಬದುಕಿದ ಶಚಿಯ ದೆಸೆಯಿಂದ ॥15॥
೦೧೬ ನಹುಷನನು ಕೆಡೆನೂಕಿ ...{Loading}...
ನಹುಷನನು ಕೆಡೆನೂಕಿ ಋಷಿಗಳ
ಮಹಿಮೆಯಲಿ ಸಾಮಾ್ರಜ್ಯದಲಿ ಸ
ನ್ನಿಹಿತನಾದನು ಮತ್ತೆ ದಿವಿಜರ ರಾಯನೊಳಗಾಗಿ
ಅಹಿತರವಗಡಿಸಿದೊಡೆ ಕುಸಿದನು
ಬಹಳ ಲೇಸನು ಬಳಿಕ ಕಂಡನು
ಮಹಿ ನಿನಗೆ ಬೆಸಕೈದು ಬದುಕುವಿರೆಂದನಾ ಶಲ್ಯ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಋಷಿಗಳ ಮಹಿಮೆಯಿಂದ ನಹುಷನನ್ನು ಸ್ವರ್ಗದಿಂದ ನೂಕಿ, ಬೀಳಿಸಿ, ದೇವತೆಗಳ ಒಡೆಯನಾದ ಇಂದ್ರನು ಮತ್ತೆ ಸಾರ್ವಭೌಮಾಧಿಕಾರದಲ್ಲಿ ಸಿದ್ಧನಾದನು. ಶತ್ರುಗಳು ತೊಂದರೆ ಪಡಿಸಿದಾಗ ಕುಗ್ಗಿದವನು, ನಂತರ ಒಳ್ಳೆಯ ಫಲವನ್ನು ಕಂಡನು. ಹಾಗೆಯೇ ಭೂಮಿಯು ನಿನಗೆ ಕೂಡಿಬಂದು ಬದುಕುವಿರಿ ಎಂದನು ಶಲ್ಯ.
ಪದಾರ್ಥ (ಕ.ಗ.ಪ)
ಅವಗಡಿಸು-ತೊಂದರೆಮಾಡು
ಮೂಲ ...{Loading}...
ನಹುಷನನು ಕೆಡೆನೂಕಿ ಋಷಿಗಳ
ಮಹಿಮೆಯಲಿ ಸಾಮಾ್ರಜ್ಯದಲಿ ಸ
ನ್ನಿಹಿತನಾದನು ಮತ್ತೆ ದಿವಿಜರ ರಾಯನೊಳಗಾಗಿ
ಅಹಿತರವಗಡಿಸಿದೊಡೆ ಕುಸಿದನು
ಬಹಳ ಲೇಸನು ಬಳಿಕ ಕಂಡನು
ಮಹಿ ನಿನಗೆ ಬೆಸಕೈದು ಬದುಕುವಿರೆಂದನಾ ಶಲ್ಯ ॥16॥
೦೧೭ ಆದೊಡಾ ಕರ್ಣಙ್ಗೆ ...{Loading}...
ಆದೊಡಾ ಕರ್ಣಂಗೆ ಸಾರಥಿ
ಯಾದಿರಾದೊಡೆ ಸಮರ ಮುಖದಲಿ
ವಾದ ತೇಜೋವಧೆಯ ಮಾಡುವುದವನನವಗಡಿಸಿ
ಕಾದಿ ಕೊಡುವುದು ನಾವು ಗೆಲುವವೊ
ಲಾದರಿಸುವುದು ನಮ್ಮನೆಂದಾ
ಮೇದಿನೀಪತಿ ಶಲ್ಯನನು ಸತ್ಕರಿಸಿ ಕಳುಹಿದನು ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ವೇಳೆ ನೀವು ಕರ್ಣನಿಗೆ ಸಾರಥಿಯಾದರೆ ಸಮರದಲ್ಲಿ ವಾದಿಸಿ, ಅವನ ಗೌರವಕ್ಕೆ ಧಕ್ಕೆ ತಂದು, ತೊಂದರೆಯನ್ನುಂಟು ಮಾಡಿ, ನಾವು ಗೆಲುವಂತೆ ಮಾಡುವುದು ಎಂದು ಭೂಪಾಲಕ ಶಲ್ಯನನ್ನು ಗೌರವಿಸಿ ಕಳುಹಿಸಿದರು.
ಮೂಲ ...{Loading}...
ಆದೊಡಾ ಕರ್ಣಂಗೆ ಸಾರಥಿ
ಯಾದಿರಾದೊಡೆ ಸಮರ ಮುಖದಲಿ
ವಾದ ತೇಜೋವಧೆಯ ಮಾಡುವುದವನನವಗಡಿಸಿ
ಕಾದಿ ಕೊಡುವುದು ನಾವು ಗೆಲುವವೊ
ಲಾದರಿಸುವುದು ನಮ್ಮನೆಂದಾ
ಮೇದಿನೀಪತಿ ಶಲ್ಯನನು ಸತ್ಕರಿಸಿ ಕಳುಹಿದನು ॥17॥
೦೧೮ ಬೀಳುಗೊಣ್ಡನು ಶಲ್ಯನಿತ್ತಲು ...{Loading}...
ಬೀಳುಗೊಂಡನು ಶಲ್ಯನಿತ್ತಲು
ಹೇಳುವರ ಮತಿ ಮುರಿಯೆ ನೋಟಕ
ರಾಲಿ ಝೊಮ್ಮಿಡೆ ಕಾದುವರ ಮನ ಮೂರು ಕವಲಾಗೆ
ಜಾಳಿಗೆಯ ಹೊಗರಲಗಿನುರಿಯ ಚ
ಡಾಳ ನಭದಲಿ ಝಗಝಗಿಸೆ ಹೇ
ರಾಳದೊಡ್ಡವಣೆಯಲಿ ಬರುತಿರ್ದುದು ನೃಪವ್ರಾತ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶಲ್ಯನು ಬೀಳ್ಕೊಂಡ ನಂತರ ಇತ್ತ ಕಡೆ, ಹೇಳುವವರ ಬುದ್ಧಿ ತಿರುಗುವಂತೆ, ನೋಡುವವರ ಕಣ್ಣು ಮೈ ಮರೆಯುವಂತೆ. ಹೋರಾಡುವವರ ಮನಸ್ಸು ಮೂರು ಕವಲಾಗುವಂತೆ ವಸ್ತ್ರಗಳ ಕಾಂತಿಯಿಂದ, ಆಯುಧದ ಅಲಗಿನ ಕಾಂತಿಯು ಆಕಾಶದಲ್ಲಿ ಝಗಝಗಿಸಲು ರಾಜಸಮೂಹ ಅಧಿಕವಾದ ಗುಂಪುಗಳಾಗಿ ಬರುತ್ತಿದ್ದವು.
ಪದಾರ್ಥ (ಕ.ಗ.ಪ)
ಆಲಿ-ಕಣ್ಣು, ಝೆಮ್ಮ-ಮೈಮರೆ, ಹೇರಾಳ-ಅಧಿಕವಾದ, ಒಡ್ಡವಣೆ-ಸೈನ್ಯ
ಮೂಲ ...{Loading}...
ಬೀಳುಗೊಂಡನು ಶಲ್ಯನಿತ್ತಲು
ಹೇಳುವರ ಮತಿ ಮುರಿಯೆ ನೋಟಕ
ರಾಲಿ ಝೊಮ್ಮಿಡೆ ಕಾದುವರ ಮನ ಮೂರು ಕವಲಾಗೆ
ಜಾಳಿಗೆಯ ಹೊಗರಲಗಿನುರಿಯ ಚ
ಡಾಳ ನಭದಲಿ ಝಗಝಗಿಸೆ ಹೇ
ರಾಳದೊಡ್ಡವಣೆಯಲಿ ಬರುತಿರ್ದುದು ನೃಪವ್ರಾತ ॥18॥
೦೧೯ ದೆಸೆಗಳೆಣ್ಟರ ಮೂಲೆ ...{Loading}...
ದೆಸೆಗಳೆಂಟರ ಮೂಲೆ ಬಿರಿಯಲು
ಪಸರಿಸಿತು ಹಳೆ ಬೊಮ್ಮಗಹುದೇ
ಹೊಸ ವಿಧಾತ್ರನ ಸೃಷ್ಟಿಯಿದು ಹೆಸರೇನು ಹೊಗಳುವರೆ
ಕುಸಿಯನೇ ಕೂರುಮನು ಭಾರಕೆ
ನಸಿಯನೇ ನಾಗೇಂದ್ರನಾನೆಗ
ಳುಸುರು ಹದುಳವೆ ನೋಡೆನಲು ಬಂದುದು ನೃಪವ್ರಾತ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂಟೂ ದಿಕ್ಕುಗಳ ಮೂಲೆ ಬಿರುಕಾಗುವಂತೆ ಗುಂಪು ಹರಡಿತು. ಹಳೆಯ ಬ್ರಹ್ಮನ ಸೃಷ್ಟಿ ಇದಲ್ಲ. ಹೊಸ ಬ್ರಹ್ಮನ ಸೃಷ್ಟಿಯಿದು. ಹೊಗಳಲು ಹೆಸರೇನು ? ಈ ಸೈನ್ಯ ಭಾರಕ್ಕೆ ಕೂರ್ಮನು ಕುಗ್ಗುವುದಿಲ್ಲವೆ ? ಆನೆಗಳು ಸೊರಗವೆ ? ಆದಿಶೇಷನು ಕುಗ್ಗುವುದಿಲ್ಲವೆ? ಅಷ್ಟ ದಿಗ್ಗಜಗಳ ಏದುಸಿರು ಬಿಡುವುದಿಲ್ಲವೆ? ನೋಡು ಎನ್ನುವಂತೆ ರಾಜ ಸಮೂಹ ಬಂದಿತು.
ಮೂಲ ...{Loading}...
ದೆಸೆಗಳೆಂಟರ ಮೂಲೆ ಬಿರಿಯಲು
ಪಸರಿಸಿತು ಹಳೆ ಬೊಮ್ಮಗಹುದೇ
ಹೊಸ ವಿಧಾತ್ರನ ಸೃಷ್ಟಿಯಿದು ಹೆಸರೇನು ಹೊಗಳುವರೆ
ಕುಸಿಯನೇ ಕೂರುಮನು ಭಾರಕೆ
ನಸಿಯನೇ ನಾಗೇಂದ್ರನಾನೆಗ
ಳುಸುರು ಹದುಳವೆ ನೋಡೆನಲು ಬಂದುದು ನೃಪವ್ರಾತ ॥19॥
೦೨೦ ಚೋಳ ಪಾಣ್ಡ್ಯರು ...{Loading}...
ಚೋಳ ಪಾಂಡ್ಯರು ಕೇರಳರು ಶಿಶು
ಪಾಲ ನಂದನ ಧೃಷ್ಟಕೇತು ಕ
ರಾಳ ಮಾಗಧ ಚೀನ ಭೋಟಕ ಕರ್ಪರಾದಿಗಳು
ಮೇಲೆ ಮೇಲೈತಂದು ಭೀಮಂ
ಗಾಳುದೋರಿದರಿತ್ತ ಕುರು ಭೂ
ಪಾಲಕನ ಕೂಡಿದರು ಭಗದತ್ತಾದಿ ಭೂಭುಜರು ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಚೋಳ-ಪಾಂಡ್ಯರು, ಕೇರಳರು, ಶಿಶುಪಾಲನ ಮಗ, ದೃಷ್ಟಕೇತು, ಪ್ರಚಂಡರಾದ ಮಾಗಧರು, ಚೀನ, ಬೋಟಕ, ಬರ್ಬರ ಮೊದಲಾದವರು ಮೇಲೆ ಮೇಲೆ ಬಂದು, ಭೀಮಸೇನನಿಗೆ ತಮ್ಮ ಸೈನ್ಯವನ್ನು ತೋರುತ್ತಿರಲು, ಇತ್ತ ಕಡೆ ಭಗದತ್ತನೇ ಮೊದಲಾದ ರಾಜರು ದುರ್ಯೋಧನನ್ನು ಸೇರಿಕೊಂಡರು.
ಮೂಲ ...{Loading}...
ಚೋಳ ಪಾಂಡ್ಯರು ಕೇರಳರು ಶಿಶು
ಪಾಲ ನಂದನ ಧೃಷ್ಟಕೇತು ಕ
ರಾಳ ಮಾಗಧ ಚೀನ ಭೋಟಕ ಕರ್ಪರಾದಿಗಳು
ಮೇಲೆ ಮೇಲೈತಂದು ಭೀಮಂ
ಗಾಳುದೋರಿದರಿತ್ತ ಕುರು ಭೂ
ಪಾಲಕನ ಕೂಡಿದರು ಭಗದತ್ತಾದಿ ಭೂಭುಜರು ॥20॥
೦೨೧ ದ್ರುಪದ ರಾಜ ...{Loading}...
ದ್ರುಪದ ರಾಜ ಪುರೋಹಿತನು ಕುರು
ನೃಪನನಿತ್ತಲು ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ
ಕೃಪಣತನದಲಿ ಕೌರವನು ಗುರು
ಕೃಪನ ಭೀಷ್ಮನ ಮತವನೊಲ್ಲದೆ
ಚಪಳ ಕರ್ಣನ ಕೂಡಿ ನಿಶ್ಚೈಸಿದನು ಕಾಳಗವ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ದ್ರುಪದನ ಪುರೋಹಿತನು ಬಂದು ದುರ್ಯೋಧನನನ್ನು ಕಂಡನು. ಬಹಳ ಬುದ್ಧಿವಂತಿಕೆಯಿಂದ ತನ್ನ ರಾಜ ಕಾರ್ಯವನ್ನು ಮಾತನಾಡಿದನು. ಆದರೆ ಸಂಧಾನದ ಅವನ ಮಾತನ್ನು ಕೇಳದೆ ಅಲ್ಪತನದಿಂದ ಕೌರವನು. ದ್ರೋಣ, ಭೀಷ್ಮ, ಕೃಪಾಚಾರ್ಯರ ಅಭಿಪ್ರಾಯಗಳನ್ನು ಒಪ್ಪದೇ, ದುಡುಕುತನದ ಕರ್ಣನನ್ನು ಕೂಡಿಕೊಂಡು ಯುದ್ಧವನ್ನು ನಿರ್ಧರಿಸಿದನು.
ಮೂಲ ...{Loading}...
ದ್ರುಪದ ರಾಜ ಪುರೋಹಿತನು ಕುರು
ನೃಪನನಿತ್ತಲು ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜ ರಾಜಕಾರಿಯವ
ಕೃಪಣತನದಲಿ ಕೌರವನು ಗುರು
ಕೃಪನ ಭೀಷ್ಮನ ಮತವನೊಲ್ಲದೆ
ಚಪಳ ಕರ್ಣನ ಕೂಡಿ ನಿಶ್ಚೈಸಿದನು ಕಾಳಗವ ॥21॥
೦೨೨ ನೆನೆದ ಮತವನು ...{Loading}...
ನೆನೆದ ಮತವನು ತನ್ನ ತಂದೆಯ
ಮನದ ಮಚ್ಚದೊಳೊರೆದು ಕರ್ಣನ
ನೆನಹಿನಲಿ ಪುಟವಿಟ್ಟು ಶಕುನಿಯ ನೀತಿಯಲಿ ನಿಗುಚಿ
ಅನುಜ ಮತದಲಿ ವಿಸ್ತರಿಸಿ ಮೈ
ದುನನ ನುಡಿಯಲಿ ಬಣ್ಣವಿಟ್ಟನು
ಜನಪನಪಕೀರ್ತ್ಯಂಗನೆಗೆ ತೊಡಿಸಿದನು ಭೂಷಣವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಮನಸ್ಸಿನ ಅಭಿಪ್ರಾಯವನ್ನು ಧೃತರಾಷ್ಟ್ರನ ಮನಸ್ಸಿನ ಒರೆಗಲ್ಲಿನಲ್ಲಿ ತಿಕ್ಕಿ, ಕರ್ಣನ ಆಲೋಚನೆಯ ಬೆಂಕಿಯಲ್ಲಿ ಪುಟವಿಟ್ಟು, ಶಕುನಿಯ ನೀತಿಯಲ್ಲಿ ಎಳೆದು, ದುಶ್ಯಾಸನನ ಅಭಿಪ್ರಾಯದಲ್ಲಿ ವಿಸ್ತರಿಸಿ. ಸೈಂಧವನ ಮನದಲ್ಲಿ ಬಣ್ಣವಿತ್ತು , ಅಪಕೀರ್ತಿಯೆಂಬ ಹೆಣ್ಣಿಗೆ ದುರ್ಯೋಧನನು ಭೂಷಣವನ್ನು ತೊಡಿಸಿದನು.
ಪದಾರ್ಥ (ಕ.ಗ.ಪ)
ಮಚ್ಚ - ಒರೆಗಲ್ಲು, ನಿಗುಚಿ - ಎಳೆದು, ಯುದ್ಧಮಾಡಿ
ಮೂಲ ...{Loading}...
ನೆನೆದ ಮತವನು ತನ್ನ ತಂದೆಯ
ಮನದ ಮಚ್ಚದೊಳೊರೆದು ಕರ್ಣನ
ನೆನಹಿನಲಿ ಪುಟವಿಟ್ಟು ಶಕುನಿಯ ನೀತಿಯಲಿ ನಿಗುಚಿ
ಅನುಜ ಮತದಲಿ ವಿಸ್ತರಿಸಿ ಮೈ
ದುನನ ನುಡಿಯಲಿ ಬಣ್ಣವಿಟ್ಟನು
ಜನಪನಪಕೀರ್ತ್ಯಂಗನೆಗೆ ತೊಡಿಸಿದನು ಭೂಷಣವ ॥22॥
೦೨೩ ಹರುಷದಲಿ ಸಞ್ಜಯನನಾಗಳೆ ...{Loading}...
ಹರುಷದಲಿ ಸಂಜಯನನಾಗಳೆ
ಕರೆಸಿ ಕುರುಪತಿ ಬುದ್ಧಿಗಲಿಸಿದ
ನರಿನೃಪರ ಪಾಳಯಕೆ ಹೋಹುದು ನುಡಿವುದುರವಣಿಸಿ
ಧರೆಯ ಬೇಡಿಸಿ ಕಳುಹಿದಿರಿ ಸಂ
ಗರದೊಳಸಿ ಧಾರೆಯಲಿ ಕೊಡುವೆವು
ಬರಿದೆ ಕೊಟ್ಟೊಡಧರ್ಮವೆಂಬುದು ಧರ್ಮಪುತ್ರಂಗೆ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂತೋಷದಿಂದ ಆಗಲೆ ಸಂಜಯನನ್ನು ಕರೆಸಿ, ಶತ್ರುರಾಜರ ಪಾಳೆಯಕ್ಕೆ ಹೋಗಿ, ಹೇಳುವುದನ್ನು ಕೋಪದಿಂzಲೇ ತಿಳಿಸಬೇಕೆಂದು ಬುದ್ಧಿ ಹೇಳಿ ಕಳುಹಿಸಿದನು.’ ನೀವು ಭೂಮಿಯನ್ನು ಬೇಡಿ ಕಳುಹಿಸಿದಿರಿ. ಯುದ್ಧದಲ್ಲಿ ಕತ್ತಿಯ ಅಲಗಿನಲ್ಲಿ ಕೊಡುವೆವು, ಹಾಗೆಯೇ ಕೊಟ್ಟರೆ ಅಧರ್ಮವೆಂದು’ ಧರ್ಮರಾಯನಿಗೆ ಹೇಳೆಂದನು.
ಪದಾರ್ಥ (ಕ.ಗ.ಪ)
ಸಂಗರ-ಯುದ್ಧ, ಅಸಿ-ಕತ್ತಿ
ಮೂಲ ...{Loading}...
ಹರುಷದಲಿ ಸಂಜಯನನಾಗಳೆ
ಕರೆಸಿ ಕುರುಪತಿ ಬುದ್ಧಿಗಲಿಸಿದ
ನರಿನೃಪರ ಪಾಳಯಕೆ ಹೋಹುದು ನುಡಿವುದುರವಣಿಸಿ
ಧರೆಯ ಬೇಡಿಸಿ ಕಳುಹಿದಿರಿ ಸಂ
ಗರದೊಳಸಿ ಧಾರೆಯಲಿ ಕೊಡುವೆವು
ಬರಿದೆ ಕೊಟ್ಟೊಡಧರ್ಮವೆಂಬುದು ಧರ್ಮಪುತ್ರಂಗೆ ॥23॥
೦೨೪ ಬೀಳುಕೊಣ್ಡನು ಮನ್ತ್ರಿ ...{Loading}...
ಬೀಳುಕೊಂಡನು ಮಂತ್ರಿ ಪಯಣದ
ಮೇಲೆ ಪಯಣವನೆಯ್ದಿ ಪಾಂಡು ನೃ
ಪಾಲಕರ ಪಾಳೆಯಕೆ ಬಂದನು ರಾಯಗರುಹಿಸಲು
ಕೇಳಿ ಬೀಡಾರವನು ಬೀಯವ
ಹೇಳಿಸಿದನಾ ಮರುದಿವಸದೊ
ಡ್ಡೋಲಗವ ರಚಿಸಿದನು ಕುಂತೀಸುತನು ಠೀವಿಯಲಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂತ್ರಿ ಸಂಜಯನು ಹಸ್ತಿನಾವತಿಯಿಂದ ಬೀಳ್ಕೊಂಡು ಪ್ರಯಾಣವನ್ನು ಮಾಡಿ ಪಾಂಡವರ ಬೀಡಾರಕ್ಕೆ ಬಂದನು, ಧರ್ಮರಾಯನಿಗೆ ಹೇಳಿ ಕಳುಹಿಸಲು ಅವನು ಸಂಜಯನಿಗೆ ವಸತಿ, ಭೋಜನಗಳಿಗೆ ಏರ್ಪಾಡು ಮಾಡಿದನು. ಮಾರನೆ ದಿನ ಧರ್ಮರಾಯನು ಸಂಭ್ರಮದಿಂದ ಸಭೆಯನ್ನು ಏರ್ಪಡಿಸಿದನು.
ಮೂಲ ...{Loading}...
ಬೀಳುಕೊಂಡನು ಮಂತ್ರಿ ಪಯಣದ
ಮೇಲೆ ಪಯಣವನೆಯ್ದಿ ಪಾಂಡು ನೃ
ಪಾಲಕರ ಪಾಳೆಯಕೆ ಬಂದನು ರಾಯಗರುಹಿಸಲು
ಕೇಳಿ ಬೀಡಾರವನು ಬೀಯವ
ಹೇಳಿಸಿದನಾ ಮರುದಿವಸದೊ
ಡ್ಡೋಲಗವ ರಚಿಸಿದನು ಕುಂತೀಸುತನು ಠೀವಿಯಲಿ ॥24॥
೦೨೫ ಹರಿ ವಿರಾಟ ...{Loading}...
ಹರಿ ವಿರಾಟ ದ್ರುಪದ ಕೈಕೆಯ
ರಿರವು ಬಲವಂಕದಲಿ ವಾಮದ
ಲಿರೆ ವೃಕೋದರ ಫಲುಗುಣಾದಿಗಳಖಿಳ ಮಂತ್ರಿಗಳು
ತರುಣಿಯರು ಪರಿಮಳದ ಜಂಗಮ
ಭರಣಿಯರು ಮನುಮಥ ವಿರಿಂಚನ
ತರುಣಿಯರು ಕುಳ್ಳಿರ್ದರರಸನ ಹಿಂದೆ ಮೋಹರಿಸಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ, ವಿರಾಟ, ದ್ರುಪದ ಮತ್ತು ಕೇಕೇಯ ರಾಜರು ಧರ್ಮರಾಯನ ಬಲಭಾಗದಲ್ಲಿರಲು, ಭೀಮಸೇನ, ಅರ್ಜುನರೇ ಮೊದಲಾದವರು ಮತ್ತು ಎಲ್ಲ ಮಂತ್ರಿಗಳೂ ಎಡಭಾಗದಲ್ಲಿದ್ದರು. ಪರಿಮಳದ ಚಲಿಸುವ ಕರಂಡಗಳಂತಿದ್ದ ಹಾಗೂ ಮತ್ತು ಮನ್ಮಥ ಸೃಷ್ಟಿಸಿದ ಸ್ತ್ರೀಯರಂತೆ ಇದ್ದ ಸುವಾಸಿನಿಯರು ಅರಸನ ಹಿಂದೆ ಗುಂಪಾಗಿ ಕುಳಿತಿದ್ದರು.
ಮೂಲ ...{Loading}...
ಹರಿ ವಿರಾಟ ದ್ರುಪದ ಕೈಕೆಯ
ರಿರವು ಬಲವಂಕದಲಿ ವಾಮದ
ಲಿರೆ ವೃಕೋದರ ಫಲುಗುಣಾದಿಗಳಖಿಳ ಮಂತ್ರಿಗಳು
ತರುಣಿಯರು ಪರಿಮಳದ ಜಂಗಮ
ಭರಣಿಯರು ಮನುಮಥ ವಿರಿಂಚನ
ತರುಣಿಯರು ಕುಳ್ಳಿರ್ದರರಸನ ಹಿಂದೆ ಮೋಹರಿಸಿ ॥25॥
೦೨೬ ಕರಣಿಕರು ಮಾನ್ತ್ರಿಕರು ...{Loading}...
ಕರಣಿಕರು ಮಾಂತ್ರಿಕರು ವೈದ್ಯರು
ಸರಸ ಕವಿಗಳು ತಾರ್ಕಿಕರು ವರ
ಭರತ ನಿಪುಣರು ಗಾಯಕರು ಪಾಠಕರು ವಾಗ್ಮಿಗಳು
ಕರಿತುರಗ ಶಿಕ್ಷಕರು ಲಕ್ಷಣ
ಪರಿಣತರು ಕೋವಿದರು ಸಾವಂ
ತರರು ಪರಿಹಾಸಕರು ವೈತಾಳಿಕರು ರಂಜಿಸಿತು ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೆಕ್ಕಿಗರು, ಮಾಂತ್ರಿಕರು, ವಿನೋದ ಕವಿಗಳು, ವಿಚಾರವಂತರು, ವಾದಿಗಳು, ನಾಟ್ಯನಿಪುಣರು, ಸಂಗೀತಗಾರರು, ಹೊಗಳುಭಟರು, ಮಾತುಗಾರರು, ಗಜ ಹಯ ಶಿಕ್ಷಕರು, ಕಾವ್ಯಪ್ರೌಢರು, ಪಂಡಿತರು, ವಿದ್ವಾಂಸರು, ಸಾಮಂತರು ವಿನೋದ ಪ್ರಿಯರು ಮಂಗಳ ಪಾಠಕರು ಮೊದಲಾದವರಿಂದ ಸಭೆ ಶೋಭಿಸಿತ್ತು.
ಮೂಲ ...{Loading}...
ಕರಣಿಕರು ಮಾಂತ್ರಿಕರು ವೈದ್ಯರು
ಸರಸ ಕವಿಗಳು ತಾರ್ಕಿಕರು ವರ
ಭರತ ನಿಪುಣರು ಗಾಯಕರು ಪಾಠಕರು ವಾಗ್ಮಿಗಳು
ಕರಿತುರಗ ಶಿಕ್ಷಕರು ಲಕ್ಷಣ
ಪರಿಣತರು ಕೋವಿದರು ಸಾವಂ
ತರರು ಪರಿಹಾಸಕರು ವೈತಾಳಿಕರು ರಂಜಿಸಿತು ॥26॥
೦೨೭ ಮಾವುತರು ಚಿತ್ರಕರು ...{Loading}...
ಮಾವುತರು ಚಿತ್ರಕರು ಮಲ್ಲರು
ರಾವುತರು ಶಿಲ್ಪಿಗರು ಮಾಯಾ
ಕೋವಿದರು ಕರ್ಣಾಂಘ್ರಿವಿಕಳರು ಮೂಕ ವಾಮನರು
ದ್ರಾವಕರು ಜೂಜಾಳಿಗಳು ವರ
ದಾವಣಿಯರು ವಿದೇಶಿಗಳು ಮೃಗ
ಜೀವಿಗಳು ಶಾಕುನಿಕರೆಸೆದರು ರಾಜ ಸಭೆಯೊಳಗೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಯನ್ನು ನಡೆಸುವವರು, ಚಿತ್ರಗಾರರು, ಜಟ್ಟಿಗಳು, ಕುದುರೆ ಸವಾರರು, ಶಿಲ್ಪಿಗಳು, ಐಂದ್ರಜಾಲಿಕರು, ವಿಕಾರವಾದ ಮೂಗು,ಕಣ್ಣುಳ್ಳವರು, ಮೂಕರು, ಕುಬ್ಜರು , ಪಂದ್ಯಗಾರರು, ಶಕುನವನ್ನು ತಿಳಿಸುವವರು, ಕಿವಿ ಕಾಲುಗಳಿಲ್ಲದವರು, ಮೂಕರು, ಚತುರರು, ಜೂಜುಕೋರರು, ಪಶುಪಾಲಕರು, ವಿದೇಶೀಯರು, ಬೇಟೆಗಾರರು, ಶಕುನವನ್ನು ತಿಳಿಸುವವರು, ಕುಳ್ಳರು ರಾಜಸಭೆಯೊಳಗೆ ಶೋಭಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ದ್ರಾವಕ - ಚತುರ
ದಾವಣಿಯರು - ಪಶುಪಾಲಕರು
ಮೃಗಜೀವಿಗಳು - ಬೇಟೆಗಾರರು
ಶಾಕುನಿಕರು - ಶಕುನಗಳನ್ನು ತಿಳಿಸುವವರು
ಮೂಲ ...{Loading}...
ಮಾವುತರು ಚಿತ್ರಕರು ಮಲ್ಲರು
ರಾವುತರು ಶಿಲ್ಪಿಗರು ಮಾಯಾ
ಕೋವಿದರು ಕರ್ಣಾಂಘ್ರಿವಿಕಳರು ಮೂಕ ವಾಮನರು
ದ್ರಾವಕರು ಜೂಜಾಳಿಗಳು ವರ
ದಾವಣಿಯರು ವಿದೇಶಿಗಳು ಮೃಗ
ಜೀವಿಗಳು ಶಾಕುನಿಕರೆಸೆದರು ರಾಜ ಸಭೆಯೊಳಗೆ ॥27॥
೦೨೮ ಸಾಲ ಮಕುಟದ ...{Loading}...
ಸಾಲ ಮಕುಟದ ರತ್ನ ರಶ್ಮಿಯ
ದಾಳಿಗೊಂಡುದು ತಮವನಿನ್ನಾ
ಮೇಲುಪೋಗಿನ ಕಿತ್ತ ಖಡ್ಗಕೆ ಪ್ರಭೆಯ ಹಂಗೇಕೆ
ಮೇಲೆ ಕೈದೀವಿಗೆಗಳಧಿಕ
ಜ್ವಾಲೆಯದು ಪುನರುಕ್ತವೆನೆ ಭೂ
ಪಾಲನೋಲಗವೆಸೆದುದಿಂದ್ರನ ಸಭೆಗೆ ವೆಗ್ಗಳಿಸಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಾಜರು ಧರಿಸಿದ ಕಿರೀಟಗಳ ಮಣಿ ಕಾಂತಿಯು ಕತ್ತಲೆಯನ್ನು ಹೋಗಿಸಿತ್ತು, ಅದರ ಮೇಲೆ ಒರೆಯಿಂದ ಹಿರಿದಿದ್ದ ಖಡ್ಗಗಳಿಗೆ ಬೇರೆಯ ಬೆಳಕಿನ ಹಂಗು ಏಕೆ? ಅಧಿಕ ಜ್ವಾಲೆಯ ಕೈ ದೀವಿಗೆಗಳು ಈ ಖಡ್ಗಗಳ ಪ್ರಭೆಗೆ ಪುನರುಕ್ತಿ ಎಂಬಂತೆ ಇರಲು ಧರ್ಮರಾಜನ ಸಭೆಯು ದೇವೇಂದ್ರನ ಸಭೆಗಿಂತಲೂ ಅತಿಶಯವಾಗಿತ್ತು.
ಮೂಲ ...{Loading}...
ಸಾಲ ಮಕುಟದ ರತ್ನ ರಶ್ಮಿಯ
ದಾಳಿಗೊಂಡುದು ತಮವನಿನ್ನಾ
ಮೇಲುಪೋಗಿನ ಕಿತ್ತ ಖಡ್ಗಕೆ ಪ್ರಭೆಯ ಹಂಗೇಕೆ
ಮೇಲೆ ಕೈದೀವಿಗೆಗಳಧಿಕ
ಜ್ವಾಲೆಯದು ಪುನರುಕ್ತವೆನೆ ಭೂ
ಪಾಲನೋಲಗವೆಸೆದುದಿಂದ್ರನ ಸಭೆಗೆ ವೆಗ್ಗಳಿಸಿ ॥28॥
೦೨೯ ಕಳಕಳವೆ ಫಡ ...{Loading}...
ಕಳಕಳವೆ ಫಡ ಮಾಣು ಮಾಣೆಂ
ದುಲಿಯೆ ಕಂಚುಕಿ ನಿಕರವಂಗೈ
ತಳದ ಬಾಯಲಿ ರಾಯರಿರ್ದರು ಮಣಿದ ಮಕುಟದಲಿ
ನಳಿನನಾಭನು ನಗುತ ಪರ ಮಂ
ಡಲದ ಶಿಷ್ಟನು ಬರಲಿಯೆನೆ ಬಾ
ಗಿಲಲಿ ಕೈದುವ ಕೊಂಡು ಹೊಗಿಸಿದರಂದು ಸಂಜಯನ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಚ್ಚರ ! ನಿಲ್ಲಿ ! ನಿಲ್ಲಿ ! ಎಂದು ದ್ವಾರಪಾಲಕರು ಹೇಳುತ್ತಿರಲು, ತಲೆ ಬಾಗಿದ್ದ ರಾಜರು ಬಾಯಿಯ ಮೇಲೆ ಕೈಯಿಟ್ಟು, ಕುಳಿತಿದ್ದರು. ಕೃಷ್ಣನು ನಗುತ್ತ, ಶತ್ರುವಾದ ಕೌರವ ರಾಯಭಾರಿ ಬರಲಿ ಎಂದು ಹೇಳಲು ಅವನ ಬಳಿ ಇದ್ದ ಆಯುಧಗಳನ್ನು ಬಾಗಿಲಿನಲ್ಲಿ ಇರಿಸಿಕೊಂಡು ಸಂಜಯನನ್ನು ಒಳಗೆ ಕಳುಹಿಸಿದರು.
ಪದಾರ್ಥ (ಕ.ಗ.ಪ)
ಪರಮಂಡಲ-ಶತ್ರುಪಕ್ಷ
ಮೂಲ ...{Loading}...
ಕಳಕಳವೆ ಫಡ ಮಾಣು ಮಾಣೆಂ
ದುಲಿಯೆ ಕಂಚುಕಿ ನಿಕರವಂಗೈ
ತಳದ ಬಾಯಲಿ ರಾಯರಿರ್ದರು ಮಣಿದ ಮಕುಟದಲಿ
ನಳಿನನಾಭನು ನಗುತ ಪರ ಮಂ
ಡಲದ ಶಿಷ್ಟನು ಬರಲಿಯೆನೆ ಬಾ
ಗಿಲಲಿ ಕೈದುವ ಕೊಂಡು ಹೊಗಿಸಿದರಂದು ಸಂಜಯನ ॥29॥
೦೩೦ ಬನ್ದು ಕಾಣಿಕೆಗೊಟ್ಟು ...{Loading}...
ಬಂದು ಕಾಣಿಕೆಗೊಟ್ಟು ಹರುಷದ
ಲಂದು ಮೈಯಿಕ್ಕಿದನು ಭಯದಲಿ
ನಿಂದು ನೋಡಿದನೆಡದಬಲದ ಮಹಾ ಮಹೀಶ್ವರರ
ಸಂದ ಯಮನೋ ನಿರುತಿಯೋ ಪೌ
ರಂದರನೊ ಪಾವಕನೊ ವರುಣನೊ
ಮಂದಿಯಿದು ಮಾನಸರೆ ಮಾಮಾಯೆನುತ ಬೆರಗಾದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು ಒಳಗೆ ಬಂದು ಕಾಣಿಕೆಯನ್ನು ಕೊಟ್ಟು, ಸಂತೋಷದಿಂದ ನಮಸ್ಕರಿಸಿದನು, ಭಯದಿಂದ ಎಡ-ಬಲಗಳಲ್ಲಿದ್ದ ಮಹಾಮಹೀಶ್ವರರನ್ನು ಭಯದಿಂದ ನೋಡಿದನು. ಯಮನೋ, ನಿರುತಿಯೋ, ಇಂದ್ರನೋ, ಅಗ್ನಿಯೋ, ವರುಣನೋ, ಇಲ್ಲಿ ಸೇರಿರುವವರು ಮನುಷ್ಯರೆ ? ಹಾ ! ಹಾ ! ಎನ್ನುತ್ತ ಸಂಜಯನು ಬೆರಗಾದನು.
ಪದಾರ್ಥ (ಕ.ಗ.ಪ)
ಪೌರಂದರ-ಪುರಂದರ (ಇಂದ್ರ)
ಮೂಲ ...{Loading}...
ಬಂದು ಕಾಣಿಕೆಗೊಟ್ಟು ಹರುಷದ
ಲಂದು ಮೈಯಿಕ್ಕಿದನು ಭಯದಲಿ
ನಿಂದು ನೋಡಿದನೆಡದಬಲದ ಮಹಾ ಮಹೀಶ್ವರರ
ಸಂದ ಯಮನೋ ನಿರುತಿಯೋ ಪೌ
ರಂದರನೊ ಪಾವಕನೊ ವರುಣನೊ
ಮಂದಿಯಿದು ಮಾನಸರೆ ಮಾಮಾಯೆನುತ ಬೆರಗಾದ ॥30॥
೦೩೧ ಸುಳಿದಲೆಯ ಕೆಮ್ಮೀಸೆಗಳ ...{Loading}...
ಸುಳಿದಲೆಯ ಕೆಮ್ಮೀಸೆಗಳ ಮಿಗೆ
ಬೆಳೆದ ಮುಡುಹುಗಳೊಡ್ಡಿದುರದು
ಚ್ಚಳಿತ ರೋಮದ ನೊಸಲ ಡೋರಿಯ ತಲೆಯ ಕಲಿ ಮುಖದ
ಬಲಿದ ಹುಬ್ಬಿನ ತೋರ ತೋಳಿನ
ಹೊಳೆವಡಾಯುಧ ಮೊಗದ ಹೊಗರಿನ
ಕಲಿಮನದ ಕದನ ಪ್ರಚಂಡರ ಕಂಡು ಬೆರಗಾದ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಳಿತಲೆಗಳಿಂದ ಕೂಡಿದ, ಕೆಮ್ಮೀಸೆಗಳನ್ನುಳ್ಳ, ಹೆಚ್ಚಾಗಿ ಬೆಳೆದ ಭುಜಗಳ, ನೆಟ್ಟಗೆ ನಿಂತಿರುವ ರೋಮಗಳಿಂದ ಕೂಡಿದ ವಿಸ್ತಾರವಾದ ಎದೆಯ, ಗುಳಿ ಬಿದ್ದ ಹಣೆಗಳಿದ್ದ ವೀರ ಮುಖದ, ದಪ್ಪ ಹುಬ್ಬುಗಳನ್ನುಳ್ಳ, ಬಲವಾದ ತೋಳಿನ, ಕತ್ತಿಯಂತೆ ಹೊಳೆವ ಖಡ್ಗಗಳನ್ನು ಹಿಡಿದ ಕಾಂತಿಯ ಮುಖದ, ಸ್ಥೈರ್ಯವುಳ್ಳ, ಯುದ್ಧ ವೀರರನ್ನು ಕಂಡು ಸಂಜಯನು ಬೆರಗಾದನು.
ಪದಾರ್ಥ (ಕ.ಗ.ಪ)
ಡೋರಿ-ಕುಳಿ,
ಉಚ್ಚಳಿತ-ನೆಟ್ಟಗೆ ನಿಂತಿರುವ
ಮುಡುಹು - ಭುಜ
ಮೂಲ ...{Loading}...
ಸುಳಿದಲೆಯ ಕೆಮ್ಮೀಸೆಗಳ ಮಿಗೆ
ಬೆಳೆದ ಮುಡುಹುಗಳೊಡ್ಡಿದುರದು
ಚ್ಚಳಿತ ರೋಮದ ನೊಸಲ ಡೋರಿಯ ತಲೆಯ ಕಲಿ ಮುಖದ
ಬಲಿದ ಹುಬ್ಬಿನ ತೋರ ತೋಳಿನ
ಹೊಳೆವಡಾಯುಧ ಮೊಗದ ಹೊಗರಿನ
ಕಲಿಮನದ ಕದನ ಪ್ರಚಂಡರ ಕಂಡು ಬೆರಗಾದ ॥31॥
೦೩೨ ಹಳುವದಲಿ ಹನ್ನೆರಡು ...{Loading}...
ಹಳುವದಲಿ ಹನ್ನೆರಡು ವರುಷವು
ತೊಳಲಿದರು ಸಿರಿ ಹೋಗಿ ನಿಮಿಷಕೆ
ನೆಲದ ರಾಯರು ನೆರೆದು ಜೀಯೆನುತಿದೆ ಮಹಾದೇವ
ನಳಿನನಾಭನ ಕರುಣದಳತೆಗೆ
ನಿಲುಕದಿಹುದೇನುಂಟು ಮುರರಿಪು
ಮುನಿದೊಡಾವನ ಮುರಿಯನೆಂದನು ತನ್ನ ಮನದೊಳಗೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹನ್ನೆರಡು ವರ್ಷ ಕಾಡಿನಲ್ಲಿ ಬಳಲಿದರು, ಸಂಪತ್ತೆಲ್ಲ ಹೋಗಿತ್ತು . ಅಂತಹ ಈ ಧರ್ಮರಾಯನ ಬಳಿ ಕ್ಷಣಮಾತ್ರದಲ್ಲಿ, ಭೂಮಿಯ ರಾಜರೆಲ್ಲರೂ ಸೇರಿ ಜೀಯಾ (ಪ್ರಭೂ!) ಒಡೆಯಾ ! ಎನ್ನುತ್ತಿದ್ದಾರೆ. ಪದ್ಮನಾಭನ ಕರುಣೆಯ ಅಳತೆಗೆ ನಿಲುಕದಿರುವುದು ಯಾವುದು? ಕೃಷ್ಣನು ಮುನಿದರೆ ಯಾರನ್ನು ತಾನೆ ಮುಗಿಸದೇ ಇರುವವನು ಎಂದು ತನ್ನ ಮನದೊಳಗೆ ಅಂದುಕೊಂಡನು.
ಪದಾರ್ಥ (ಕ.ಗ.ಪ)
ಹಳುವ-ಕಾಡು
ಮೂಲ ...{Loading}...
ಹಳುವದಲಿ ಹನ್ನೆರಡು ವರುಷವು
ತೊಳಲಿದರು ಸಿರಿ ಹೋಗಿ ನಿಮಿಷಕೆ
ನೆಲದ ರಾಯರು ನೆರೆದು ಜೀಯೆನುತಿದೆ ಮಹಾದೇವ
ನಳಿನನಾಭನ ಕರುಣದಳತೆಗೆ
ನಿಲುಕದಿಹುದೇನುಂಟು ಮುರರಿಪು
ಮುನಿದೊಡಾವನ ಮುರಿಯನೆಂದನು ತನ್ನ ಮನದೊಳಗೆ ॥32॥
೦೩೩ ಇಳುಹಿದನು ಮಹಿಯಲಿ ...{Loading}...
ಇಳುಹಿದನು ಮಹಿಯಲಿ ಮಹೀಪತಿ
ಕಳುಹಿದುಡುಗೊರೆಗಳನು ಭೂಪತಿ
ತಿಲಕ ಧರ್ಮಜನೊಪ್ಪುಗೊಂಡನು ನೃಪನ ಪಾವುಡವ
ಒಲವು ಬೊಪ್ಪನಲುಂಟಲಾ ಮ
ಕ್ಕಳನು ಮರೆಯನು ಲೇಸು ಸಂಜಯ
ತಿಳುಹು ತಾತನ ಕುಶಲವನು ಗಾಂಧಾರಿ ದೇವಿಯರ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಂಜಯನು ಕೌರವನು ಕಳುಹಿಸಿದ ವಸ್ತ್ರ, ಉಡುಗೊರೆಗಳನ್ನು ನೀಡಿದನು. ಧರ್ಮರಾಯನು ಅವುಗಳನ್ನು ಸ್ವೀಕರಿಸಿದನು, ‘ದೊಡ್ಡಪ್ಪನವರಲ್ಲಿ ಒಲವುಂಟಲ್ಲವೆ ? ಮಕ್ಕಳನ್ನು ಮರೆತಿಲ್ಲ ! ಒಳ್ಳೆಯದು ಸಂಜಯ, ದೊಡ್ಡಪ್ಪ, ದೊಡ್ಡಮ್ಮರ ಕ್ಷೇಮವನ್ನು ತಿಳಿಸು’ ಎಂದ.
ಮೂಲ ...{Loading}...
ಇಳುಹಿದನು ಮಹಿಯಲಿ ಮಹೀಪತಿ
ಕಳುಹಿದುಡುಗೊರೆಗಳನು ಭೂಪತಿ
ತಿಲಕ ಧರ್ಮಜನೊಪ್ಪುಗೊಂಡನು ನೃಪನ ಪಾವುಡವ
ಒಲವು ಬೊಪ್ಪನಲುಂಟಲಾ ಮ
ಕ್ಕಳನು ಮರೆಯನು ಲೇಸು ಸಂಜಯ
ತಿಳುಹು ತಾತನ ಕುಶಲವನು ಗಾಂಧಾರಿ ದೇವಿಯರ ॥33॥
೦೩೪ ಗುರು ಪಿತಾಮಹ ...{Loading}...
ಗುರು ಪಿತಾಮಹ ಗೌತಮರ ಸ
ಚ್ಚರಣಕಮಲಂಗಳಿಗೆ ಕುಶಲವೆ
ಗುರುಸುತನು ಸುಕ್ಷೇಮಿಯೇ ಕುರುರಾಯನಿರವೆಂತು
ಕುರುಪತಿಯ ಸೋದರರು ಮಕ್ಕಳು
ಸರಸಿಜಾನನೆ ಭಾನುಮತಿ ಮಿ
ಕ್ಕರಸಿಯರು ಕರ್ಣಾದಿಗಳು ನಿರ್ವೃತರೆ ಹೇಳೆಂದ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಗುರುಗಳಾದ ದ್ರೋಣರು, ತಾತ ಭೀಷ್ಮ, ಕೃಪಾಚಾರ್ಯರ ಪಾದ ಸಂಪದಗಳು ಕ್ಷೇಮವೆ ? ಅಶ್ವತ್ಥಾಮನು ಕುಶಲವೆ ? ದುರ್ಯೋಧನನು ಹೇಗಿದ್ದಾನೆ ? ಅವನ ಸೋದರರು, ಮಕ್ಕಳು, ಕಮಲಮುಖಿ ಭಾನುಮತಿ ಮತ್ತು ಉಳಿದ ಅರಸಿಯರು ಹಾಗೂ ಕರ್ಣನೇ ಮೊದಲಾದವರು ಸುಖಿಗಳಾಗಿದ್ದಾರೆಯೆ ? ಹೇಳು ಎಂದನು ಧರ್ಮರಾಯ.
ಪದಾರ್ಥ (ಕ.ಗ.ಪ)
ನಿರ್ವೃತ - ಸಂತೋಷದಿಂದಿರುವ
ಮೂಲ ...{Loading}...
ಗುರು ಪಿತಾಮಹ ಗೌತಮರ ಸ
ಚ್ಚರಣಕಮಲಂಗಳಿಗೆ ಕುಶಲವೆ
ಗುರುಸುತನು ಸುಕ್ಷೇಮಿಯೇ ಕುರುರಾಯನಿರವೆಂತು
ಕುರುಪತಿಯ ಸೋದರರು ಮಕ್ಕಳು
ಸರಸಿಜಾನನೆ ಭಾನುಮತಿ ಮಿ
ಕ್ಕರಸಿಯರು ಕರ್ಣಾದಿಗಳು ನಿರ್ವೃತರೆ ಹೇಳೆಂದ ॥34॥
೦೩೫ ಸುಖಿಗಳಿನಿಬರು ಜೀಯ ...{Loading}...
ಸುಖಿಗಳಿನಿಬರು ಜೀಯ ನಿಮ್ಮಯ
ನಿಖಿಳ ಬಾಂಧವರನು ಸಹೋದರ
ಸಖ ಸುತಾದಿಗಳನು ಪುರೋಹಿತ ಪೌರ ಪುರಜನದ
ಮಖ ಸಮುದ್ಭವೆ ಮೊದಲು ಪಂಕಜ
ಮುಖಿಯರನು ಬೆಸಗೊಂಡು ಕಳುಹಿದ
ರಖಿಳ ಕುರು ನಂದನರು ಭೀಷ್ಮ ದ್ರೋಣ ಕೃಪರೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸ್ವಾಮಿ ! ಎಲ್ಲರೂ ಸುಖವಾಗಿದ್ದಾರೆ; ನಿಮ್ಮ ಸಮಸ್ತ ಬಾಂಧವರು, ಸ್ನೇಹಿತರು, ಮಕ್ಕಳು, ಪುರೋಹಿತರು, ಪ್ರಜೆಗಳು, ನಾಗರಿಕರು, ಯಜ್ಞದಿಂದ ಉದ್ಭವಿಸಿದ ದ್ರೌಪದಿ ಮೊದಲ್ಗೊಂಡು ಎಲ್ಲರ ಕ್ಷೇಮವನ್ನು ಕೇಳಬೇಕೆಂದು ಕೌರವರು, ಭೀಷ್ಮ, ದ್ರೋಣ, ಕೃಪರು ನನ್ನನ್ನು ಕಳುಹಿಸಿದ್ದಾರೆ ಎಂದನು.
ಪದಾರ್ಥ (ಕ.ಗ.ಪ)
ಮಖಸಮುದ್ಬವೆ-ಯಜ್ಞದಿಂದ ಉದ್ಭವಿಸಿದವಳು-ದ್ರೌಪದಿ.
ಮೂಲ ...{Loading}...
ಸುಖಿಗಳಿನಿಬರು ಜೀಯ ನಿಮ್ಮಯ
ನಿಖಿಳ ಬಾಂಧವರನು ಸಹೋದರ
ಸಖ ಸುತಾದಿಗಳನು ಪುರೋಹಿತ ಪೌರ ಪುರಜನದ
ಮಖ ಸಮುದ್ಭವೆ ಮೊದಲು ಪಂಕಜ
ಮುಖಿಯರನು ಬೆಸಗೊಂಡು ಕಳುಹಿದ
ರಖಿಳ ಕುರು ನಂದನರು ಭೀಷ್ಮ ದ್ರೋಣ ಕೃಪರೆಂದ ॥35॥
೦೩೬ ಮುನ್ನ ಭೀಷ್ಮ ...{Loading}...
ಮುನ್ನ ಭೀಷ್ಮ ದ್ರೋಣ ಗೌತಮ
ರುನ್ನತದ ಕಾರುಣ್ಯದಲಿ ಸಂ
ಪನ್ನ ಸಾಹಸರಾದೆವಾಚರಿಸಿದೆವು ಧರ್ಮವನು
ಇನ್ನು ಧೃತರಾಷ್ಟ್ರಾವನೀಶನು
ತನ್ನ ಮಕ್ಕಳ ಬಾಂಧವ ಪ್ರತಿ
ಪನ್ನತೆಯ ನೆರೆ ಕಾಬನೆಂದನು ಧರ್ಮಸುತ ನಗುತ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲು ಭೀಷ್ಮ, ದ್ರೋಣ, ಕೃಪಾಚಾರ್ಯರ ಹಿರಿತನದ ಕಾರುಣ್ಯದ ದಯೆಯಿಂದ ಧರ್ಮವನ್ನು ಆಚರಿಸಿ ಎಲ್ಲ ಕಷ್ಟಗಳನ್ನು ಎದುರಿಸುವಲ್ಲಿ ಯಶಸ್ವಿಯಾದೆವು. ಇನ್ನು ಮುಂದೆ ಧೃತರಾಷ್ಟ್ರ ದೊರೆಯು ತನ್ನ ಮಕ್ಕಳು ಮತ್ತು ಪರಿವಾರದವರ ವಿವೇಕದ ಪರಿಣಾಮವನ್ನು ಕಾಣಬಹುದು ಎಂದು ನಗುತ್ತ ಧರ್ಮರಾಯನು ಹೇಳಿದನು.
ಪದಾರ್ಥ (ಕ.ಗ.ಪ)
ಪ್ರತಿಪನ್ನತೆ - ವಿವೇಕ, ವಿವೇಚನೆ
ಮೂಲ ...{Loading}...
ಮುನ್ನ ಭೀಷ್ಮ ದ್ರೋಣ ಗೌತಮ
ರುನ್ನತದ ಕಾರುಣ್ಯದಲಿ ಸಂ
ಪನ್ನ ಸಾಹಸರಾದೆವಾಚರಿಸಿದೆವು ಧರ್ಮವನು
ಇನ್ನು ಧೃತರಾಷ್ಟ್ರಾವನೀಶನು
ತನ್ನ ಮಕ್ಕಳ ಬಾಂಧವ ಪ್ರತಿ
ಪನ್ನತೆಯ ನೆರೆ ಕಾಬನೆಂದನು ಧರ್ಮಸುತ ನಗುತ ॥36॥
೦೩೭ ಏನು ಬನ್ದಿಹ ...{Loading}...
ಏನು ಬಂದಿಹ ಹದನು ನಿಮ್ಮವ
ರೇನನೆಂದರು ಕುರುಕುಲೇಶ್ವರ
ನೇನನೆಕ್ಕಟಿ ಬುದ್ಧಿಗಲಿಸಿದನವರ ಮಾತುಗಳ
ಏನುವನು ನೀನುಳುಹದಿರು ವಿನ
ಯಾನುಗತವಾಗಿರಲಿ ಮೇಣ್ ಶೌ
ರ್ಯಾನುಗತವಾಗಿರಲಿ ಬಿನ್ನವಿಸೆಂದನಸುರಾರಿ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂದಿರುವ ವಿಷಯವೇನು ? ನಿಮ್ಮವರು ಏನು ಹೇಳಿದ್ದಾರೆ ? ದುರ್ಯೋಧನನು ರಹಸ್ಯವಾಗಿ ಹೇಳಿ ಕಳುಹಿಸಿರುವುದೇನನ್ನು ? ವಿನಯದ ಮಾತಿರಲಿ ಇಲ್ಲವೇ ಶೌರ್ಯದ ಮಾತಿರಲಿ ಏನನ್ನೂ ಉಳಿಸಿಕೊಳ್ಳದೇ ಅದೆಲ್ಲವನ್ನೂ ಹೇಳು ಎಂದು ಕೃಷ್ಣನೆಂದನು.
ಮೂಲ ...{Loading}...
ಏನು ಬಂದಿಹ ಹದನು ನಿಮ್ಮವ
ರೇನನೆಂದರು ಕುರುಕುಲೇಶ್ವರ
ನೇನನೆಕ್ಕಟಿ ಬುದ್ಧಿಗಲಿಸಿದನವರ ಮಾತುಗಳ
ಏನುವನು ನೀನುಳುಹದಿರು ವಿನ
ಯಾನುಗತವಾಗಿರಲಿ ಮೇಣ್ ಶೌ
ರ್ಯಾನುಗತವಾಗಿರಲಿ ಬಿನ್ನವಿಸೆಂದನಸುರಾರಿ ॥37॥
೦೩೮ ನಾಡ ಬೇಡುವರೆಮ್ಮೊಡನೆ ...{Loading}...
ನಾಡ ಬೇಡುವರೆಮ್ಮೊಡನೆ ಹೊ
ಯಾ್ದಡುವದು ಸಂಪ್ರತಿಗೆ ಚಿತ್ತವ
ಮಾಡಲಾಗದು ಸಂಧಿ ವೀರ ಕ್ಷತ್ರಿಯರ ಮತವೆ
ಬೇಡುವರೆ ಪಾರ್ಥಿವರು ತಾವದ
ನಾಡಬಾರದು ತಮ್ಮ ಜನನವ
ನೋಡಿ ನುಡಿವರು ಪಾಂಡುಸುತರಲ್ಲೆಂದು ಹೇಳೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
38." ರಾಜ್ಯವನ್ನು ಬೇಡುವವರು ನಮ್ಮೊಡನೆ ಹೋರಾಡುವುದು. ಸಂಧಾನಕ್ಕೆ ಮನಸ್ಸು ಮಾಡಬಾರದು, ಒಡಂಬಡಿಕೆಯು ವೀರಕ್ಷತ್ರಿಯರ ಅಭಿಪ್ರಾಯವೆ ? ಭೂಮಿಯನ್ನು ಆಳುವವರು ಬೇಡುವರೆ ? ತಾವು ಆ ಮಾತನ್ನಾಡಬಾರದು. ತಮ್ಮ ಜನನಕ್ಕೆ ತಕ್ಕಂತೆ ಮಾತನಾಡದವರು ಪಾಂಡುವಿನ ಮಕ್ಕಳಲ್ಲ ’ ಹೀಗೆ ಹೇಳಲು ದುರ್ಯೋಧನನು ಹೇಳಿದ್ದಾನೆ." ಎಂದು ಸಂಜಯನು ಹೇಳಿದನು.
ಪದಾರ್ಥ (ಕ.ಗ.ಪ)
ಸಂಪ್ರತಿ-ಸಂಧಾನ
ಮೂಲ ...{Loading}...
ನಾಡ ಬೇಡುವರೆಮ್ಮೊಡನೆ ಹೊ
ಯಾ್ದಡುವದು ಸಂಪ್ರತಿಗೆ ಚಿತ್ತವ
ಮಾಡಲಾಗದು ಸಂಧಿ ವೀರ ಕ್ಷತ್ರಿಯರ ಮತವೆ
ಬೇಡುವರೆ ಪಾರ್ಥಿವರು ತಾವದ
ನಾಡಬಾರದು ತಮ್ಮ ಜನನವ
ನೋಡಿ ನುಡಿವರು ಪಾಂಡುಸುತರಲ್ಲೆಂದು ಹೇಳೆಂದ ॥38॥
೦೩೯ ಮೊದಲಲಮಳ ಬ್ರಹ್ಮಚರ್ಯವು ...{Loading}...
ಮೊದಲಲಮಳ ಬ್ರಹ್ಮಚರ್ಯವು
ಮದುವೆಯಾದುದು ಬಳಿಕ ವನವಾ
ಸದಲಿ ವಾನಪ್ರಸ್ಥವೆಂಬಾಶ್ರಮವನಳವಡಿಸಿ
ತುದಿಗೆ ತಾ ಸನ್ಯಾಸವನು ಮಾ
ಡಿದನು ಮಗುಳಳುಪಿದೊಡೆ ರಾಜ್ಯದ
ಪದವಿಗನುಚಿತವಾಯ್ತು ಯಮಜಂಗೆಂದು ಹೇಳೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ‘ಮೊದಲು ನಿರ್ಮಲವಾದ ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ಥಾಶ್ರಮಗಳನ್ನು ಆಚರಿಸಿ ಕೊನೆಗೆ ರಾಜ್ಯ ಪದವಿಗೆ ಹಿಂತಿರುಗಿದರೆ ಅದು ಯೋಗ್ಯವಲ್ಲವೆಂದು ಧರ್ಮರಾಯನಿಗೆ ಹೇಳಲು ದುರ್ಯೋಧನನು ಹೆಳಿದ್ದಾನೆ.’ ಎಂದು ಸಂಜಯನು ಹೇಳಿದನು.".
ಪದಾರ್ಥ (ಕ.ಗ.ಪ)
ಯಮಜ-ಯಮನಿಂದ ಜನಿಸಿದವ - ಧರ್ಮರಾಯ
ಮೂಲ ...{Loading}...
ಮೊದಲಲಮಳ ಬ್ರಹ್ಮಚರ್ಯವು
ಮದುವೆಯಾದುದು ಬಳಿಕ ವನವಾ
ಸದಲಿ ವಾನಪ್ರಸ್ಥವೆಂಬಾಶ್ರಮವನಳವಡಿಸಿ
ತುದಿಗೆ ತಾ ಸನ್ಯಾಸವನು ಮಾ
ಡಿದನು ಮಗುಳಳುಪಿದೊಡೆ ರಾಜ್ಯದ
ಪದವಿಗನುಚಿತವಾಯ್ತು ಯಮಜಂಗೆಂದು ಹೇಳೆಂದ ॥39॥
೦೪೦ ತಳಿತ ಜವ್ವನದುಬ್ಬುಗಳ ...{Loading}...
ತಳಿತ ಜವ್ವನದುಬ್ಬುಗಳ ಕಳ
ವಳಿಗರರ್ಜುನ ಭೀಮರೆಂಬವ
ರೊಳಗೆ ವೈರವ ಬಿತ್ತಿ ಬೆಳಸುವ ಕೃಷ್ಣ ಹಗೆ ತಮಗೆ
ಉಳಿದ ದ್ರುಪದ ವಿರಾಟರೆಂಬೀ
ಹುಳುಗಳವರಂತೋರೆಗೆಡೆದರು
ತಿಳಿಯೆ ತಾನೇ ಕಡೆಗೆ ಕೆಡದಿರನೆಂದು ಹೇಳೆಂದ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ, ಭೀಮರು ತುಂಬಿದ ಯೌವ್ವನದ ಮದದಲ್ಲಿ ಶೂರರೆಂಬ ಭ್ರಾಂತಿಗೀಡಾಗಿರುವವರು. ಅವರೊಳಗೆ ವೈರವೆಂಬ ಬೀಜವನ್ನು ಬಿತ್ತಿ ಬೆಳೆಸುವ ಕೃಷ್ಣನೇ ನಮಗೆ ಶತ್ರು. ಉಳಿದ ದ್ರುಪದ ವಿರಾಟರೆಂಬ ಹುಳುಗಳು ಪಕ್ಕಕ್ಕೆ ಸರಿಯುವರು. ಎಚ್ಚರಗೊಳ್ಳದಿದ್ದರೆ ಧರ್ಮರಾಯನು ತಾನೆ ಕೆಡದಿರನೆಂದು ಎಂದು ಹೇಳು ಎಂದು ದುರ್ಯೋಧನನು ಹೇಳಿದ್ದಾನೆ
ಮೂಲ ...{Loading}...
ತಳಿತ ಜವ್ವನದುಬ್ಬುಗಳ ಕಳ
ವಳಿಗರರ್ಜುನ ಭೀಮರೆಂಬವ
ರೊಳಗೆ ವೈರವ ಬಿತ್ತಿ ಬೆಳಸುವ ಕೃಷ್ಣ ಹಗೆ ತಮಗೆ
ಉಳಿದ ದ್ರುಪದ ವಿರಾಟರೆಂಬೀ
ಹುಳುಗಳವರಂತೋರೆಗೆಡೆದರು
ತಿಳಿಯೆ ತಾನೇ ಕಡೆಗೆ ಕೆಡದಿರನೆಂದು ಹೇಳೆಂದ ॥40॥
೦೪೧ ಸಾಕು ಕೌರವ ...{Loading}...
ಸಾಕು ಕೌರವ ನಾಯ ಮಾತನ
ದೇಕೆ ಚಿತ್ತೈಸುವಿರಿ ದೂತನ
ನೂಕು ನೂಕು ಕುಠಾರ ದುರ್ಯೋಧನನನೊಡೆ ಹೊಯಿದು
ಶಾಕಿನಿಯರನು ರಕುತ ವಾರಿಯೊ
ಳೋಕುಳಿಯನಾಡಿಸುವೆ ನಿಲು ತಡ
ವೇಕೆನುತ ಘುಡುಘುಡಿಸಿ ಕಿಡಿಕಿಡಿಯಾದನಾ ಭೀಮ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನಾಯಿಯ ಮಾತುಗಳು ಸಾಕು, ಏಕೆ ಕೇಳುವಿರಿ ? ದೂತನನ್ನು ತಳ್ಳಿ. ಕುಲನಾಶಕನಾದ ದುರ್ಯೋಧನನನ್ನು ಹೊಡೆದು ಹಾಕಿ ಶಾಕಿನಿ - ಡಾಕಿನಿಯರಿಗೆ ರಕ್ತ ಸಮುದ್ರದಲ್ಲಿ ಓಕಳಿಯನ್ನಾಡಿಸುವೆ, ನಿಲ್ಲು ತಡವೇಕೆನ್ನುತ ರೋಷದಿಂದ ಕೂಗಾಡುತ್ತ ಭೀಮಸೇನನು ಕಿಡಿ ಕಿಡಿಯಾದನು.
ಪದಾರ್ಥ (ಕ.ಗ.ಪ)
ಕುಠಾರ-ಕೊಡಲಿ, ವಿಶೇಷ : ಓಕುಳಿ : ಬಣ್ಣದ ನೀರಿನ ಎರಚಾಟ
ಮೂಲ ...{Loading}...
ಸಾಕು ಕೌರವ ನಾಯ ಮಾತನ
ದೇಕೆ ಚಿತ್ತೈಸುವಿರಿ ದೂತನ
ನೂಕು ನೂಕು ಕುಠಾರ ದುರ್ಯೋಧನನನೊಡೆ ಹೊಯಿದು
ಶಾಕಿನಿಯರನು ರಕುತ ವಾರಿಯೊ
ಳೋಕುಳಿಯನಾಡಿಸುವೆ ನಿಲು ತಡ
ವೇಕೆನುತ ಘುಡುಘುಡಿಸಿ ಕಿಡಿಕಿಡಿಯಾದನಾ ಭೀಮ ॥41॥
೦೪೨ ಬೆಸಸುವುದು ಹಿನ್ದಾದ ...{Loading}...
ಬೆಸಸುವುದು ಹಿಂದಾದ ಜೂಜಿನೊ
ಳೆಸೆವ ಜಾಡ್ಯವೆ ಸಾಕು ಧರ್ಮದ
ದೆಸೆಗೆ ನೀವಿನ್ನುತ್ತರಾಯಿ ಸುಯೋಧನನ ಕುಲವ
ದೆಸೆದೆಸೆಯ ದೈವಂಗಳಿಗೆ ಹೆಸ
ರಿಸುವರೆಮ್ಮನು ಕಳುಹೆನುತ ಗ
ರ್ಜಿಸಿದರಂದಭಿಮನ್ಯು ಸಾತ್ಯಕಿ ಭೀಮ ನಂದನರು ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಜೂಜಿನಿಂದಾದ ನೋವೆ ಸಾಕು, ಧರ್ಮಸ್ಥಿತಿಗೆ ನೀವೆ ಹಕ್ಕುದಾರರು, ದುರ್ಯೋಧನನ ಕುಲವನ್ನು ದಿಗ್ದೇವತೆಗಳಿಗೆ ಬಲಿಕೊಡುತ್ತೇವೆ. ಆಜ್ಞಾಪಿಸಿ ನಮ್ಮನ್ನು ಕಳುಹಿಸುವುದೆಂದು ಅಭಿಮನ್ಯು, ಸಾತ್ಯಕಿ ಮತ್ತು ಭೀಮನ ಮಕ್ಕಳು ಗರ್ಜಿಸಿದರು
ಮೂಲ ...{Loading}...
ಬೆಸಸುವುದು ಹಿಂದಾದ ಜೂಜಿನೊ
ಳೆಸೆವ ಜಾಡ್ಯವೆ ಸಾಕು ಧರ್ಮದ
ದೆಸೆಗೆ ನೀವಿನ್ನುತ್ತರಾಯಿ ಸುಯೋಧನನ ಕುಲವ
ದೆಸೆದೆಸೆಯ ದೈವಂಗಳಿಗೆ ಹೆಸ
ರಿಸುವರೆಮ್ಮನು ಕಳುಹೆನುತ ಗ
ರ್ಜಿಸಿದರಂದಭಿಮನ್ಯು ಸಾತ್ಯಕಿ ಭೀಮ ನಂದನರು ॥42॥
೦೪೩ ಕದಡಿತಾಯಾಸ್ಥಾನ ಕಲ್ಪಾಂ ...{Loading}...
ಕದಡಿತಾಯಾಸ್ಥಾನ ಕಲ್ಪಾಂ
ತದ ಮಹಾಸಿಡಿಲಂತೆ ವೀರರು
ಕೆದರಿ ತಮತಮಗೆದ್ದು ನುಡಿದರು ಕಂಡೆಯವ ಜಡಿದು
ಉದಿರಹೊಯÉ್ವುವು ಹಲುಗಳನು ಕಿ
ಬ್ಬದಿಯಲುಗಿವೆವು ಕರುಳನಹಿತರ
ತಿದಿಯ ಸುಲಿವೆವು ಬೆಸಸು ನೇಮವನೆಂದರತಿರಥರು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಸ್ಥಾನವು ಕ್ಷೋಭೆಗೊಂಡಿತು. ಪ್ರಳಯ ಕಾಲದ ಮಹಾಸಿಡಿಲಿನಂತೆ ವೀರರು ಚೆದುರಿ ತಮತಮಗೆ ಎದ್ದು ಕತ್ತಿಗಳನ್ನು ಝಳುಪಿಸುತ್ತ ಹೇಳಿದರು. ಹಲ್ಲುಗಳನ್ನು ಉದುರಿಸುವಂತೆ ಹೊಡೆಯುವೆವು, ಕರಳುಗಳನ್ನು ಕೆಳಗೆ ಚೆಲ್ಲುವೆವು. ಶತ್ರುಗಳ ಚರ್ಮವನ್ನು ಸುಲಿಯುವೆವು. ನೇಮವನ್ನು ನೀಡು ಎಂದು ಅತಿರಥಮಹಾರಥರು ಧರ್ಮರಾಯನನ್ನು ಕೇಳಿದರು.
ಪದಾರ್ಥ (ಕ.ಗ.ಪ)
ಕಂಡೆಯ-ಕತ್ತಿ,
ತಿದಿ-ಧರ್ಮ
ಮೂಲ ...{Loading}...
ಕದಡಿತಾಯಾಸ್ಥಾನ ಕಲ್ಪಾಂ
ತದ ಮಹಾಸಿಡಿಲಂತೆ ವೀರರು
ಕೆದರಿ ತಮತಮಗೆದ್ದು ನುಡಿದರು ಕಂಡೆಯವ ಜಡಿದು
ಉದಿರಹೊಯÉ್ವುವು ಹಲುಗಳನು ಕಿ
ಬ್ಬದಿಯಲುಗಿವೆವು ಕರುಳನಹಿತರ
ತಿದಿಯ ಸುಲಿವೆವು ಬೆಸಸು ನೇಮವನೆಂದರತಿರಥರು ॥43॥
೦೪೪ ಆತನಿನ್ದೇನಹುದು ಹೊಲ್ಲೆಹ ...{Loading}...
ಆತನಿಂದೇನಹುದು ಹೊಲ್ಲೆಹ
ವಾತನಿಂದೇನಹುದು ಲೇಸುಗ
ಳಾತನಿಂದೇ ಬರಲಿ ಹಿಂದಣ ಕಾನನಾಯಸದ
ಯಾತನೆಯ ಸೈರಿಸಿದ ನಮಗಿ
ನ್ನಾತ ನುಡಿದೊಡೆ ಹಾನಿಯೇ ನೀವ್
ಕಾತರಿಸದಿರಿಯೆಂದು ಸಂತೈಸಿದನು ಯಮಸೂನು ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆತನಿಂದ ಕೆಟ್ಟದ್ದೇನಾಗಬಹುದು? ಒಳ್ಳೆಯದು ಏನಾಗಬಹುದು? ಒಳ್ಳೆಯದು ಕೆಟ್ಟದ್ದು ಏನೇ ಆಗಲಿ, ಕಾಡಿನ ಯಾತನೆಯನ್ನೇ ಸೈರಿಸಿದವರಿಗೆ ಆತನು ಮಾತನಾಡಿದರೆ ನಷ್ಟವೆ? ನೀವು ಆತುರಪಡಬೇಡಿರೆಂದು ಧರ್ಮರಾಯನು ಸಮಾಧಾನಿಸಿದನು.
ಪದಾರ್ಥ (ಕ.ಗ.ಪ)
ಹೊಲ್ಲೆಹ-ಕೆಡುಕು
ಮೂಲ ...{Loading}...
ಆತನಿಂದೇನಹುದು ಹೊಲ್ಲೆಹ
ವಾತನಿಂದೇನಹುದು ಲೇಸುಗ
ಳಾತನಿಂದೇ ಬರಲಿ ಹಿಂದಣ ಕಾನನಾಯಸದ
ಯಾತನೆಯ ಸೈರಿಸಿದ ನಮಗಿ
ನ್ನಾತ ನುಡಿದೊಡೆ ಹಾನಿಯೇ ನೀವ್
ಕಾತರಿಸದಿರಿಯೆಂದು ಸಂತೈಸಿದನು ಯಮಸೂನು ॥44॥
೦೪೫ ಕಳುಹಿದನು ಬೀಡಾರಕವನಿಪ ...{Loading}...
ಕಳುಹಿದನು ಬೀಡಾರಕವನಿಪ
ತಿಲಕನಾ ಸಂಜಯನನಲ್ಲಿಂ
ಬಳಿಕ ಮರುದಿನ ಕೃಷ್ಣ ಪಾರ್ಥರು ಸಂಜಯನ ಕರೆಸಿ
ಬಲುಹು ಮೆಲುಹಿನ ನುಡಿಗಳಿಂದವೆ
ತಿಳುಹಿದರು ಬಳಿಕಿತ್ತಲೋಲಗ
ದೊಳಗೆ ದೂತನ ಕರೆಸಿ ಬೀಳ್ಕೊಟ್ಟನು ಯುಧಿಷ್ಠಿರನು ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಸಂಜಯನನ್ನು ಬೀಡಾರಕ್ಕೆ ಕಳುಹಿಸಿಕೊಟ್ಟನು. ಮಾರನೆ ದಿನ ಕೃಷ್ಣ, ಅರ್ಜುನರು ಸಂಜಯನನ್ನು ಕರೆಸಿ ದೃಢವಾದ , ಮೃದುವಾದ ಮಾತುಗಳಿಂದಲೇ ಅವನಿಗೆ ತಿಳಿಸಿದರು. ಬಳಿಕ ಸಭೆಗೆ ದೂತನನ್ನು ಕರೆಸಿ ಧರ್ಮರಾಯನು ಅವನನ್ನು ಬೀಳ್ಕೊಟ್ಟನು.
ಪದಾರ್ಥ (ಕ.ಗ.ಪ)
ಬಲುಹು - ದೃಢತೆ
ಮೆಲುಹು - ಮೃದು
ಮೂಲ ...{Loading}...
ಕಳುಹಿದನು ಬೀಡಾರಕವನಿಪ
ತಿಲಕನಾ ಸಂಜಯನನಲ್ಲಿಂ
ಬಳಿಕ ಮರುದಿನ ಕೃಷ್ಣ ಪಾರ್ಥರು ಸಂಜಯನ ಕರೆಸಿ
ಬಲುಹು ಮೆಲುಹಿನ ನುಡಿಗಳಿಂದವೆ
ತಿಳುಹಿದರು ಬಳಿಕಿತ್ತಲೋಲಗ
ದೊಳಗೆ ದೂತನ ಕರೆಸಿ ಬೀಳ್ಕೊಟ್ಟನು ಯುಧಿಷ್ಠಿರನು ॥45॥
೦೪೬ ಜನಕನನು ಗಾನ್ಧಾರಿ ...{Loading}...
ಜನಕನನು ಗಾಂಧಾರಿ ದುರಿಯೋ
ಧನನನವರೊಡಹುಟ್ಟಿದರನಂ
ಗನೆಯರನು ದುಸ್ಸಳೆಯ ಸೈಂಧವ ಕರ್ಣ ಶಕುನಿಗಳ
ವಿನುತ ಬಾಹ್ಲಿಕ ಶಲ್ಯ ಭಗದ
ತ್ತನ ನದೀಸುತ ಗುರು ಕೃಪರ ಗುರು
ತನುಜರನು ವಂದಿಸಿದರುಚಿತದಲೆಂದು ಹೇಳೆಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧೃತರಾಷ್ಟ್ರ, ಗಾಂಧಾರಿ, ದುರ್ಯೋಧನ ಮತ್ತು ಅವನ ಒಡಹುಟ್ಟಿದವರನ್ನು, ಅವರ ಪತ್ನಿಯರನ್ನು, ಸೋದರಿ ದುಶ್ಯಲೆ ಮತ್ತು ಸೈಂಧವರನ್ನು, ಕರ್ಣ, ಶಕುನಿ ಹಾಗೂ ಸ್ತುತ್ಯನಾದ ಬಾಹ್ಲೀಕನನ್ನು ಶಲ್ಯ, ಭಗದತ್ತ, ಭೀಷ್ಮ, ದ್ರೋಣ, ಕೃಪಾಚಾರ್ಯ ಹಾಗೂ ಅಶ್ವತ್ಥಾಮರಿಗೆ ಗೌರವದಿಂದ ವಂದಿಸಿದೆನೆಂದು ತಿಳಿಸೆಂದನು.
ಮೂಲ ...{Loading}...
ಜನಕನನು ಗಾಂಧಾರಿ ದುರಿಯೋ
ಧನನನವರೊಡಹುಟ್ಟಿದರನಂ
ಗನೆಯರನು ದುಸ್ಸಳೆಯ ಸೈಂಧವ ಕರ್ಣ ಶಕುನಿಗಳ
ವಿನುತ ಬಾಹ್ಲಿಕ ಶಲ್ಯ ಭಗದ
ತ್ತನ ನದೀಸುತ ಗುರು ಕೃಪರ ಗುರು
ತನುಜರನು ವಂದಿಸಿದರುಚಿತದಲೆಂದು ಹೇಳೆಂದ ॥46॥
೦೪೭ ವರ ಪುರೋಹಿತರನು ...{Loading}...
ವರ ಪುರೋಹಿತರನು ಸುಸಾವಂ
ತರನು ವೈದ್ಯರ ವಿದುರನನು ಮ
ತ್ತರಮನೆಯ ವಿಶ್ವಾಸಿಗಳನೋಲಗದ ಗಣಿಕೆಯರ
ಕರಿಹಯಾಧ್ಯಕ್ಷರನು ಪಡಿಹಾ
ರರನು ಬಾಹತ್ತರ ನಿಯೋಗದ
ಪರಿಜನದ ಕುಶಲವನು ಕೇಳಿದನೆಂದು ಹೇಳೆಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶ್ರೇಷ್ಠ ಪುರೋಹಿತರು, ಸಾಮಂತರು , ವೈದ್ಯರು , ವಿದುರ ಮತ್ತು ಅರಮನೆಯ ವಿಶ್ವಾಸನೀಯರು , ಸ್ತ್ರೀಯರನ್ನು, ಆನೆ-ಕುದುರೆಗಳ ಮೇಲ್ವಿಚಾರಕರು, ದ್ವಾರಪಾಲಕರು ಮತ್ತು ಎಪ್ಪತ್ತೆರಡು ವಿಶೇಷಾಧಿಕಾರಿಗಳ ಪರಿವಾರದ ಕುಶಲವನ್ನು ಕೇಳಿದೆನೆಂದು ಹೇಳು ಎಂದನು.
ಪದಾರ್ಥ (ಕ.ಗ.ಪ)
ಪಡಿಹಾರಿ - ಪ್ರತಿಹಾರಿ
ಮೂಲ ...{Loading}...
ವರ ಪುರೋಹಿತರನು ಸುಸಾವಂ
ತರನು ವೈದ್ಯರ ವಿದುರನನು ಮ
ತ್ತರಮನೆಯ ವಿಶ್ವಾಸಿಗಳನೋಲಗದ ಗಣಿಕೆಯರ
ಕರಿಹಯಾಧ್ಯಕ್ಷರನು ಪಡಿಹಾ
ರರನು ಬಾಹತ್ತರ ನಿಯೋಗದ
ಪರಿಜನದ ಕುಶಲವನು ಕೇಳಿದನೆಂದು ಹೇಳೆಂದ ॥47॥
೦೪೮ ಹೊನ್ನಿನಲಿ ಮಧುರೋಕ್ತಿಯಲಿ ...{Loading}...
ಹೊನ್ನಿನಲಿ ಮಧುರೋಕ್ತಿಯಲಿ ವಿವಿ
ಧಾನ್ನವುಡುಗೊರೆಗಳಲಿ ದೂತನ
ಮನ್ನಿಸಿದನವನೀಶನುಚಿತದಲವನ ಬೀಳ್ಕೊಟ್ಟು
ಪನ್ನಗನ ಸಿರಿಮಂಚದಾತನು
ಬೆನ್ನಲಿರಲೀ ಪಾಂಡುತನಯರಿ
ಗಿನ್ನು ಮಂಗಳವೆನುತ ಸಂಜಯ ಬಂದನಿಭಪುರಿಗೆ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಂಗಾರವನ್ನಿತ್ತು, ಮಧುರವಾದ ಮಾತುಗಳಿಂದ ವಿವಿಧ ಉಡುಗೊರೆಗಳನ್ನಿತ್ತು ಧರ್ಮರಾಯನು ದೂತನಾದ ಸಂಜಯನನ್ನು ಗೌರವಿಸಿ, ಬೀಳ್ಕೊಟ್ಟನು; ಆದಿಶೇಷನ ಸಿರಿ ಮಂಚದಲ್ಲಿ ಮಲಗಿರುವ ಕೃಷ್ಣನು ಪಾಂಡವರ ಬೆನ್ನಿಗಿರಲು (ರಕ್ಷಣೆಗೆ ಇರಲು) ಇನ್ನು ಅವರಿಗೆ ಮಂಗಳವೇ ಎಂದುಕೊಳ್ಳುತ್ತ ಸಂಜಯನು ಹಸ್ತಿನಾಪುರಕ್ಕೆ ಬಂದನು.
ಮೂಲ ...{Loading}...
ಹೊನ್ನಿನಲಿ ಮಧುರೋಕ್ತಿಯಲಿ ವಿವಿ
ಧಾನ್ನವುಡುಗೊರೆಗಳಲಿ ದೂತನ
ಮನ್ನಿಸಿದನವನೀಶನುಚಿತದಲವನ ಬೀಳ್ಕೊಟ್ಟು
ಪನ್ನಗನ ಸಿರಿಮಂಚದಾತನು
ಬೆನ್ನಲಿರಲೀ ಪಾಂಡುತನಯರಿ
ಗಿನ್ನು ಮಂಗಳವೆನುತ ಸಂಜಯ ಬಂದನಿಭಪುರಿಗೆ ॥48॥