೧೦

೦೦೦ ಸೂ ರಾಯ ...{Loading}...

ಸೂ. ರಾಯ ಪಾಂಡವ ಜೀವ ಭಕ್ತ ನಿ
ಕಾಯ ಲಂಪಟನಮಲ ಯಾದವ
ರಾಯ ಬಿಜಯಂಗೈದನಭಿಮನ್ಯುವಿನ ಪರಿಣಯಕೆ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಚರಿತಜ್ಞಾತವಾಸವ
ಬೀಳುಕೊಟ್ಟರು ಬಹಳ ಹರುಷದಲಿರುಳ ನೂಕಿದರು
ಮೇಲಣವರಭ್ಯುದಯವನು ಕೈ
ಮೇಳವಿಸಿ ಕೊಡುವಂತೆ ಮೂಡಣ
ಶೈಲ ಮುಖದಲಿ ಕೆಂಪು ಸುಳಿದುದು ಭಾನು ಮಂಡಲದ ॥1॥

೦೦೨ ಏಳು ಕುದುರೆಯ ...{Loading}...

ಏಳು ಕುದುರೆಯ ಖುರಪುಟದ ಕೆಂ
ದೂಳಿಯೋ ಕುಂತೀ ಕುಮಾರಕ
ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ
ಹೇಳಲೇನು ಮಹೇಂದ್ರ ವರ ದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು ॥2॥

೦೦೩ ಸರಸಿಜದ ಪರಿಮಳಕೆ ...{Loading}...

ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು
ಕೆರಳಿ ನೈದಿಲ ಸಿರಿಯ ಸೂರೆಯ
ತರಿಸಿದನು ರಿಪುರಾಯ ರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ ॥3॥

೦೦೪ ಹರ ಹರ ...{Loading}...

ಹರ ಹರ ಶ್ರೀಕಾಂತನೆನುತೈ
ವರು ಕುಮಾರಕರುಪ್ಪವಡಿಸಿದ
ರರಿ ವಿದಾರರು ಮಾಡಿದರು ಮಾಂಗಲ್ಯ ಮಜ್ಜನವ
ವರ ವಿಭೂಷಣ ಗಂಧ ಮಾಲ್ಯಾಂ
ಬರದಿ ಪರಿವೃತರಾದರವನೀ
ಸುರರಿಗಿತ್ತರು ಧೇನು ಮಣಿ ಕನಕಾದಿ ವಸ್ತುಗಳ ॥4॥

೦೦೫ ತಮದ ಗಣ್ಟಲನೊಡೆದ ...{Loading}...

ತಮದ ಗಂಟಲನೊಡೆದ ಹರುಷ
ದ್ಯುಮಣಿ ಮಂಡಲದಂತೆ ಜೀವ
ಭ್ರಮೆಯ ಕವಚವ ಕಳೆದು ಹೊಳೆ ಹೊಳೆವಾತ್ಮನಂದದಲಿ
ವಿಮಲ ಬಹಳ ಕ್ಷತ್ರ ರಶ್ಮಿಗ
ಳಮರಿ ದೆಸೆಗಳ ಬೆಳಗೆ ರಾಜೋ
ತ್ತಮ ಯುಧಿಷ್ಠಿರ ದೇವನೆಸೆದನು ರಾಜ ತೇಜದಲಿ ॥5॥

೦೦೬ ಪರಮ ಸತ್ಯವ್ರತ ...{Loading}...

ಪರಮ ಸತ್ಯವ್ರತ ಮಹಾಕ್ರತು
ವರದಲವಭೃತ ಮಜ್ಜನವ ವಿ
ಸ್ತರಿಸಿ ಭೀಮಾದಿಗಳು ಸಹಿತ ವಿರಾಟನರಮನೆಗೆ
ಅರಸ ಬಂದನು ಮಣಿಖಚಿತ ಕೇ
ಸರಿಯ ಪೀಠವನಡರಿದನು ನಿಜ
ಚರಣ ಸೇವೆಯಲೆಸೆದರೊಡ ಹುಟ್ಟಿದರು ಪರುಟವಿಸಿ ॥6॥

೦೦೭ ಅವನಿಪನ ಸಿಂಹಾಸನವನೇ ...{Loading}...

ಅವನಿಪನ ಸಿಂಹಾಸನವನೇ
ರುವ ಸಗರ್ವಿತರಾರು ನೋಡಿದ
ಡೆವೆಗಳುರಿವುದು ಹಾಯೆನುತ ಕಂಚುಕಿಗಳೈತಂದು
ಇವರನೀಕ್ಷಿಸಿ ಕ್ಷಾತ್ರ ತೇಜವ
ನವಗಡಿಸಲಂಜಿದರು ಹರಿ ತಂ
ದವದಿರೆಬ್ಬಿಸಿ ಬಿನ್ನವಿಸಿದರು ಮತ್ಸ್ಯಭೂಪತಿಗೆ ॥7॥

೦೦೮ ಜೀಯ ಸಿಂಹಾಸನಕೆ ...{Loading}...

ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾ
ರಾಯಣನೊ ನರರಲ್ಲ ದೇವರು ಬಂದು ನೋಡುವುದು
ಕಾಯಲಸದಳವೆಮಗೆನಲು ನಿ
ರ್ದಾಯದಲಿ ನೆಲೆಗೊಂಡ ನಿರ್ಜರ
ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ ॥8॥

೦೦೯ ಕರೆಸಿಕೊಣ್ಡು ಪುರೋಹಿತನನು ...{Loading}...

ಕರೆಸಿಕೊಂಡು ಪುರೋಹಿತನನು
ತ್ತರನನಖಿಳ ಮಹಾಪ್ರಧಾನರ
ನರಮನೆಯ ಹೊರವಂಟು ವೋಲಗಶಾಲೆಗೈತರುತ
ಕರಗಿ ಸೂಸಿದ ಚಂದ್ರ ಬಿಂಬದ
ಕಿರಣ ಲಹರಿಗಳೆನಲು ವಿವಿಧಾ
ಭರಣ ಮುಕ್ತಾ ಪ್ರಭೆಯ ಕಂಡನು ನೃಪತಿ ದೂರದಲಿ ॥9॥

೦೧೦ ಹರನ ನಾಲುಕು ...{Loading}...

ಹರನ ನಾಲುಕು ಮುಖದ ಮಧ್ಯ
ಸ್ಫುರಿತದೀಶಾನದ ವೊಲಾ ಸೋ
ದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ
ಅರಸಿಯನು ವಾಮದಲಿ ವಿವಿಧಾ
ಭರಣ ಮಣಿ ರಶ್ಮಿಗಳ ಹೊದರಿನ
ಹೊರಳಿಯಲಿ ಕಣ್ಣಾಲಿ ಕೋರೈಸಿದವು ನಿಮಿಷದಲಿ ॥10॥

೦೧೧ ಮೇಳವೇ ಫಡ ...{Loading}...

ಮೇಳವೇ ಫಡ ಮನದ ಮತ್ಸರ
ಕಾಲಿಡಲು ತೆರಹಿಲ್ಲ ಮನುಜರ
ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು
ಆಲಿಗಳು ಮೇಲಿಕ್ಕಲಮ್ಮವು
ಶೂಲಪಾಣಿಯ ಪರಮ ತೇಜದ
ಚೂಳಿಯೋ ಶಿವ ಶಿವ ಎನುತ್ತ ವಿರಾಟ ಬೆರಗಾದ ॥11॥

೦೧೨ ವಲಲ ಕಙ್ಕ ...{Loading}...

ವಲಲ ಕಂಕ ಬೃಹನ್ನಳೆಯ ಮೈ
ಸುಳಿವ ಹೋಲುವರೆಂದು ಕೆಲಬರು
ಕೆಲರಿದೆತ್ತಣ ನರರು ತೆಗೆ ಸುರಲೋಕ ಪಾಲಕರು
ತಿಳಿಯಲರಿದೆಮಗೆಂದು ಕೆಲಬರು
ತಳವೆಳಗುಗೊಳುತಿರಲು ಮಂದಿಯ
ಕೆಲಕೆ ನೂಕಿಯೆ ತಂದೆಗುತ್ತರ ನಗುತ ಕೈಮುಗಿದ ॥12॥

೦೧೩ ತಾತ ಬಿನ್ನಹ ...{Loading}...

ತಾತ ಬಿನ್ನಹ ನಿನ್ನೆ ವೈರಿ
ವ್ರಾತವನು ಗೆಲಿದಾತನೀ ತೋ
ರ್ಪಾತನೀತನ ಮುಂದೆ ಮೆರೆವವ ಕೀಚಕಾಂತಕನು
ಈತ ನಕುಲನು ವಾಮದಲಿ ನಿಂ
ದಾತ ಸಹದೇವಾಂಕನನಿಬರಿ
ಗೀತ ಹಿರಿಯನು ಧರ್ಮನಂದನನೆಂದು ತೋರಿಸಿದ ॥13॥

೦೧೪ ರಮಣಿಯೈವರಿಗೀಕೆ ಕೆಲದಲಿ ...{Loading}...

ರಮಣಿಯೈವರಿಗೀಕೆ ಕೆಲದಲಿ
ಕಮಲಮುಖಿಯನು ನೋಡು ತಾವಿವ
ರಮಳ ಗುಣ ಗಂಭೀರ ರಾಯರು ಪಾಂಡು ನಂದನರು
ನಮಗೆ ಭಾರಿಯ ಭಾಗ್ಯಲಕ್ಷ್ಮಿಯ
ಮಮತೆಯಾಯ್ತಿನ್ನೇನು ನೃಪಪದ
ಕಮಲದಲಿ ಬೀಳುವೆವು ನಡೆ ನಡೆ ಧನ್ಯರಹೆವೆಂದ ॥14॥

೦೧೫ ಈತನೇ ಧರ್ಮಜನು ...{Loading}...

ಈತನೇ ಧರ್ಮಜನು ದಿಟ ತಾ
ನೀತನೇ ಪವನಜನು ನಿಶ್ಚಯ
ವೀತನೇ ಫಲುಗುಣನು ಮಾದ್ರೀತನುಜರೇ ಇವರು
ಈ ತಳೋದರಿ ದ್ರುಪದ ಸುತೆಯೇ
ಕೌತುಕವಲೇ ಭುವನಜನ ವಿ
ಖ್ಯಾತರೆಲ್ಲಿಂದೆಲ್ಲಿ ಮೂಡಿದರೆನುತ ಬೆರಗಾದ ॥15॥

೦೧೬ ವರುಷವೊನ್ದಜ್ಞಾತ ವಾಸವ ...{Loading}...

ವರುಷವೊಂದಜ್ಞಾತ ವಾಸವ
ನಿರದೆ ನೂಕಿದರಿಲ್ಲಿ ಬಳಕೆಯ
ಹೊರೆಯ ಹೆಸರವು ಬೇರೆ ನಡವಳಿಯಂಗವದು ಬೇರೆ
ಮರುಳನಂತಿರೆ ಜಗಕೆ ತೋರನೆ
ಪರಮ ತತ್ವಜ್ಞಾನಿ ನಮ್ಮೀ
ಯರಸುತನ ಫಲವಾಯ್ತು ನಡೆಯೆಂದನು ಕುಮಾರಕನು ॥16॥

೦೧೭ ದರುಶನಕೆ ಮಣಿ ...{Loading}...

ದರುಶನಕೆ ಮಣಿ ರತುನ ಕನಕವ
ತರಿಸಿ ಮುದದಲಿ ಮುಳುಗಿ ನಿಜಪರಿ
ಕರ ಸಹಿತ ಮೈಯಿಕ್ಕಿದನು ಕಾಣಿಕೆಯನೊಪ್ಪಿಸಿದ
ವರನೃಪಾಲ ತ್ರಾಹಿ ಭುವನೇ
ಶ್ವರ ಪರಿತ್ರಾಯಸ್ವ ಕರುಣಿಸು
ಕರುಣಿಸೆಂದಂಘ್ರಿಗಳ ಹಿಡಿದನು ಮತ್ಸ್ಯ ಭೂಪಾಲ ॥17॥

೦೧೮ ಬಗೆದೆನಪರಾಧವನು ಕರುಣಾ ...{Loading}...

ಬಗೆದೆನಪರಾಧವನು ಕರುಣಾ
ಳುಗಳ ಬಲ್ಲಹ ನೀನು ನಿನ್ನಂ
ಘ್ರಿಗಳಿಗೀ ತಲೆ ಬಂಟ ನೀನಿದ ಕಾಯಬೇಕೆನುತ
ಮಿಗೆ ಭಕುತಿ ಭಾವದಲಿ ನಿಜ ಮಂ
ತ್ರಿಗಳು ಮಕ್ಕಳು ಸಹಿತ ಮನ ನಂ
ಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರಿದಿರಿನಲಿ ॥18॥

೦೧೯ ಆ ಸುದೇಷ್ಣೆ ...{Loading}...

ಆ ಸುದೇಷ್ಣೆ ಕುಮಾರಿಯೊಡನೆ ವಿ
ಳಾಸಿನೀಜನ ಸಹಿತ ರಾಣೀ
ವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು
ಆ ಸಕಲ ಪರಿವಾರ ಪುರಜನ
ದೇಶಜನ ಕಾಣಿಕೆಯನಿತ್ತು ಮ
ಹೀಶನಿಗೆ ಮೈಯಿಕ್ಕಿ ಕಂಡುದು ಬಹಳ ಹರುಷದಲಿ ॥19॥

೦೨೦ ಮುಗುಳು ನಗೆಯಲಿ ...{Loading}...

ಮುಗುಳು ನಗೆಯಲಿ ಭೀಮ ಪಾರ್ಥರ
ಮೊಗವ ನೋಡಿದನವನಿಪತಿ ಕೈ ಮು
ಗಿದು ತಲೆವಾಗಿದರು ತಮ್ಮಂದಿರು ಮಹೀಪತಿಗೆ
ತೆಗೆಸಿದರು ಕಾಣಿಕೆಯನಾ ಮಂ
ತ್ರಿಗಳನಾ ಪರಿವಾರವನು ದೃಗು
ಯುಗದ ಕರುಣಾರಸದಲನಿಬರ ಹೊರೆದು ಮನ್ನಿಸಿದ ॥20॥

೦೨೧ ಶಿರವನೆತ್ತಿ ವಿರಾಟ ...{Loading}...

ಶಿರವನೆತ್ತಿ ವಿರಾಟ ಭೂಪನ
ಕರೆದು ಹತ್ತಿರ ಪೀಠದಲಿ ಕು
ಳ್ಳಿರಿಸಲೊಡೆ ಮುರಿಚಿದನು ಕೆಲದಲಿ ಗದ್ದುಗೆಯ ಸರಿದು
ಪರಮ ಸುಕೃತವಲಾ ಧರಾಧೀ
ಶ್ವರನ ದರುಶನವಾಯ್ತು ಧನ್ಯರು
ಧರೆಯೊಳೆಮಗಿನ್ನಾರು ಸರಿಯೆಂದನು ವಿರಾಟ ನೃಪ ॥21॥

೦೨೨ ದೇಶ ನಿಮ್ಮದು ...{Loading}...

ದೇಶ ನಿಮ್ಮದು ನಗರ ಹೆಚ್ಚಿದ
ಕೋಶ ನಿಮ್ಮದು ನನ್ನ ಜೀವ ವಿ
ಳಾಸ ನಿಮ್ಮದು ಸಲಹಬೇಹುದು ಬಿನ್ನಹದ ಹದನ
ಈ ಸಮಂಜಸ ದಿವಸದಲಿ ಸಿಂ
ಹಾಸನದಲಭಿಷೇಕವನು ಭೂ
ಮೀಶ ವಿಸ್ತರಿಸುವೆನು ಚಿತ್ತೈಸೆಂದನಾ ಭೂಪ ॥22॥

೦೨೩ ಎನಲು ನಗುತೆನ್ದನು ...{Loading}...

ಎನಲು ನಗುತೆಂದನು ಮಹೀಪತಿ
ವಿನಯ ಮಧುರ ರಸಾಭಿಷೇಕವ
ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಕವದು
ಜನವಿದೆಮ್ಮದು ನೀನು ನಮ್ಮಾ
ತನು ಧರಿತ್ರಿಯಿದೆಮ್ಮದೆಂಬೀ
ನೆನಹು ತಾನುಪಚಾರ ನಮಗೇಕೆಂದನಾ ಭೂಪ ॥23॥

೦೨೪ ನೊನ್ದವರು ಭೀಮಾರ್ಜುನರು ...{Loading}...

ನೊಂದವರು ಭೀಮಾರ್ಜುನರು ಹಗೆ
ಯಿಂದ ಹಳುವವ ಹೊಕ್ಕು ಮನಸಿನ
ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ
ಕೊಂದು ಕಳದಲಿ ಮತ್ತೆ ಗಜ ಪುರಿ
ಗೆಂದು ಗಮಿಸುವೆವೆಂಬ ತವಕಿಗ
ರಿಂದು ತಾನೇ ಬಲ್ಲರೆಂದನು ಧರ್ಮನಂದನನು ॥24॥

೦೨೫ ಎನ್ದನುತ್ತರನರಸನಙ್ಘ್ರಿಯೊ ...{Loading}...

ಎಂದನುತ್ತರನರಸನಂಘ್ರಿಯೊ
ಳಂದು ಮಕುಟವ ಚಾಚಿ ಬಿನ್ನಹ
ವಿಂದು ನೇಮವ ಕೊಡಿ ಕುಮಾರಿಯನೀವೆನರ್ಜುನಗೆ
ಎಂದಡೇಳೇಳೆಂದು ನಸು ನಗೆ
ಯಿಂದ ಪಾರ್ಥನ ನೋಡೆ ಕೈ ಮುಗಿ
ದೆಂದನಾತನು ಮನದ ನಿಶ್ಚಯವನು ಯುಧಿಷ್ಠಿರಗೆ ॥25॥

೦೨೬ ವರುಷವಿವಳಲಿ ನಾಟ್ಯವಿದ್ಯೆಯ ...{Loading}...

ವರುಷವಿವಳಲಿ ನಾಟ್ಯವಿದ್ಯೆಯ
ಪರುಟವಿಸಿದೆನು ತಂದೆಯಂತೀ
ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ
ಗುರುತನದ ಗರುವಾಯಿಯೆತ್ತಲು
ಅರಸಿಯೆಂಬುದಿದಾವ ಮತವೀ
ವರ ಕುಮಾರಿಯನೀವಡಭಿಮನ್ಯುವಿಗೆ ಕೊಡಲೆಂದ ॥26॥

೦೨೭ ಎವಗೆ ನೀವೇನಾತನೇನು ...{Loading}...

ಎವಗೆ ನೀವೇನಾತನೇನು
ತ್ಸವದೊಳಾಗಲಿಯೆನೆ ವಿರಾಟನ
ನವನಿಪತಿ ಮನ್ನಿಸಿದನಿತ್ತನು ನಗುತ ವೀಳೆಯವ
ಯೆವಗೆ ಪರಮಸ್ವಾಮಿಯೆಮ್ಮು
ತ್ಸವದ ನೆಲೆಯೆಮ್ಮೈವರಸು ಯಾ
ದವ ಶಿರೋಮಣಿ ಕೃಷ್ಣನಭಿಮತವೆಮ್ಮ ಮತವೆಂದ ॥27॥

೦೨೮ ಪೊಡವಿಯೊಡೆತನವೆಮಗೆಯತಿ ಕ ...{Loading}...

ಪೊಡವಿಯೊಡೆತನವೆಮಗೆಯತಿ ಕ
ಟ್ಟೊಡೆಯ ಕೃಷ್ಣನು ಕೃಷ್ಣನೊಡಬ
ಟ್ಟೊಡೆ ವಿವಾಹ ನಿರಂತರಾಯವು ಚಿಂತೆ ಬೇಡೆನಲು
ಒಡಬಡಲಿ ಮೇಣಿರಲಿ ಗುರು ನಿ
ಮ್ಮಡಿ ಮುರಾರಿಯ ತೋರಿಸುವಿರಾ
ದೊಡೆ ಕೃತಾರ್ಥನು ತಾನೆನುತ ಹಿಗ್ಗಿದನು ಮತ್ಸ್ಯ ನೃಪ ॥28॥

೦೨೯ ಪರಿಪರಿಯ ಪಾವುಡವ ...{Loading}...

ಪರಿಪರಿಯ ಪಾವುಡವ ಕಟ್ಟಿಸಿ
ಹರುಷದಲಿ ಬಿನ್ನಹದ ವೋಲೆಯ
ಬರೆಸಿದನು ವೇಗಾಯ್ಲ ದೂತರನಟ್ಟಿದನು ಭೂಪ
ಚರರು ಪಯಣದ ಮೇಲೆ ಪಯಣದ
ಭರದಿ ಬಂದರು ಕೃಷ್ಣರಾಯನ
ಪುರಕೆ ಪರಿತೋಷದಲಿ ಹೊಕ್ಕರು ರಾಜ ಮಂದಿರವ ॥29॥

೦೩೦ ಬರವ ಬಿನ್ನಹ ...{Loading}...

ಬರವ ಬಿನ್ನಹ ಮಾಡೆ ಪಡಿಹಾ
ರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಹೊರೆಯಲಿಳುಹಿದರಿವರು ಕಳುಹಿದ ಬಿನ್ನವತ್ತಳೆಯ ॥30॥

೦೩೧ ನಸುನಗುತ ಮುರವೈರಿ ...{Loading}...

ನಸುನಗುತ ಮುರವೈರಿ ಮಿಗೆ ಮ
ನ್ನಿಸಿದನವರನು ಪಾಂಡುತನಯರ
ಕುಶಲವನು ದುರುಪದಿಯ ಸುಕ್ಷೇಮವನು ಬೆಸಗೊಳಲು
ಕುಶಲರನಿಬರು ಜೀಯ ಭಕ್ತ
ವ್ಯಸನ ಭಾರವು ನಿಮ್ಮಲಿರೆ ಜೀ
ವಿಸುವುದರಿದೇ ಪಾಂಡುನಂದನರೆಂದರಾ ಚರರು ॥31॥

೦೩೨ ಕಳುಹಿದುಡುಗೊರೆ ಜೀಯ ...{Loading}...

ಕಳುಹಿದುಡುಗೊರೆ ಜೀಯ ನಿಮ್ಮಡಿ
ಗಳಿಗೆ ರಾಣೀವಾಸ ವರ್ಗಕೆ
ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ
ಕುಲ ಗುರುಗಳಕ್ರೂರನುದ್ಧವ
ಬಲುಭುಜನು ಕೃತವರ್ಮ ಸಾತ್ಯಕಿ
ಲಲಿತ ಸಾಂಬಕುಮಾರ ಕಂದರ್ಪಾನಿರುದ್ಧರಿಗೆ ॥32॥

೦೩೩ ಎನಲು ನಸುನಗೆಯಿನ್ದ ...{Loading}...

ಎನಲು ನಸುನಗೆಯಿಂದ ಕುಂತಿಯ
ತನುಜರಟ್ಟಿದ ಪಾವುಡಂಗಳ
ನನಿತುವನು ತೆಗೆಸಿದನು ಕೆಲದಲಿ ಸಂಧಿ ವಿಗ್ರಹಿಯ
ದನುಜಹರನೀಕ್ಷಿಸಲು ಲಿಖಿತವ
ನನುನಯದೊಳಳವಡಿಸಿ ಬಿನ್ನಹ
ವೆನುತ ನೇಮವ ಕೊಂಡು ಕಳಕಳವಡಗೆ ವಾಚಿಸಿದ ॥33॥

೦೩೪ ಸ್ವಸ್ತಿ ದಾನವ ...{Loading}...

ಸ್ವಸ್ತಿ ದಾನವ ರಾಯ ಕುಂಜರ
ಮಸ್ತಕಾಂಕುಶ ಖೇಲನಾ ಪರಿ
ಯಸ್ತ ಯದುಕುಲ ಸಿಂಹ ಸಂಹೃತ ಜನ್ಮದುರಿತಭಯ
ಹಸ್ತಕಲಿತ ಸುದರುಶನೋಧ್ರ್ವಗ
ಭಸ್ತಿಲವಶಮಿತಾರ್ಕ ಪರಿವೃಢ
ವಿಸ್ತರಣ ಚಿತ್ತೈಸು ಕುಂತಿಯ ಸುತರ ಬಿನ್ನಪವ ॥34॥

೦೩೫ ದೇವ ನಿಮ್ಮಡಿಗಳ ...{Loading}...

ದೇವ ನಿಮ್ಮಡಿಗಳ ಕೃಪಾಸಂ
ಜೀವನಿಯಲೆಮ್ಮಸುಗಳೊಡಲಿನ
ಠಾವ ಮೆಚ್ಚಿದವೊದೆದು ಹಾಯ್ದವು ವಿಪಿನ ಮಂದಿರವ
ಈ ವರುಷದಜ್ಞಾತವಾಸ ಗ
ತಾವಶೇಷಣವಾಯ್ತು ಕಂಗಳಿ
ಗೀವುದವಯವ ದರುಶನಾಮೃತಪಾನ ಸಂಪದವ ॥35॥

೦೩೬ ದಾಟಿದೆವು ನುಡಿದವಧಿಯನು ...{Loading}...

ದಾಟಿದೆವು ನುಡಿದವಧಿಯನು ವೈ
ರಾಟ ಪುರದಲಿ ತುರುವಿಡಿದು ಮೈ
ನೋಟಕೋಸುಗ ಬಂದು ನುಗ್ಗಾಯಿತ್ತು ಕುರುಸೇನೆ
ತೋಟಿ ಜಯಿಸಿದೊಡೆಮ್ಮನರಿದು ವಿ
ರಾಟ ಮನ್ನಿಸಿ ತನ್ನ ಮಗಳ ಕಿ
ರೀಟಿ ತನಯಂಗೀವ ಭರವಿದ ದೇವರವಧರಿಸಿ ॥36॥

೦೩೭ ಮೊಳಗುತ್ತಿರುವ ...{Loading}...

ಮೊಳಗುತ್ತಿರುವ ವಾದ್ಯಘೋಷದಿಂದಾಗಿ ಸೈನ್ಯವು ಸಾಲುಗೆಡದೆ ನಡೆಯುತ್ತ ಹೆಣಗಳನ್ನು ತುಳಿಯಲು ಕೌರವೇಂದ್ರನ ಮೊಗಸನ್ನೆಯಿಂದ ಒಟ್ಟಾಗಿ ಶತ್ರುಗಳ ಮೇಲೆ ಬಿದ್ದಿತು. ಆಗ ಅರ್ಜುನನು ಹುಗ್ಗಿಗರ (ಅಹಂಕಾರಿಗಳ) ಶಕ್ತಿಯನ್ನು ನಿಗುಚುತ್ತೇನೆ ಎನ್ನುತ್ತ ಅಗಣಿತವಾದ ಬಾಣಗಳಿಂದ ಕರೆz ಕುರುಸೇನೆಯನ್ನು ಅಗ್ಗಡಲಿನಲ್ಲಿ (ರಕ್ತ ಸಮುದ್ರದಲ್ಲಿ) ಮುಳುಗಿಸಿದನು.

೦೩೮ ಕರುಣಿ ಬಿಜಯಙ್ಗೈದು ...{Loading}...

ಕರುಣಿ ಬಿಜಯಂಗೈದು ಭಕ್ತರ
ಹೊರೆಯ ಬೇಹುದು ಬೇಡಿಕೊಂಬೆನು
ಅರಸಲೇಕೆಳೆಗಂದಿ ತಾಯ್ತಾನರಸುವಂದದಲಿ
ಚರಣಭಜಕ ಕುಟುಂಬನೆಂಬೀ
ಬಿರುದ ಪಾಲಿಸಿ ಬಿನ್ನಹವನವ
ಧರಿಸಿ ಕಾಣಿಸಿ ಕೊಡುವುದೆಮಗೆ ಮಹಾ ಪ್ರಸಾದವನು ॥38॥

೦೩೯ ಕೇಳಿ ಹರುಷಿತನಾಗಿ ...{Loading}...

ಕೇಳಿ ಹರುಷಿತನಾಗಿ ಕಡು ಕರು
ಣಾಳು ಹೊಂಪುಳಿಯೋಗಿ ಭಕ್ತರ
ಮೇಲಣೊಲವಿನ ಬಹಳ ಪರಮ ಸ್ನೇಹ ಪಸರಿಸಿತು
ಕೇಳಿದೆವೆ ಹರ ಹರ ಯುಧಿಷ್ಠಿರ
ನೇಳಿಗೆಯನಾ ಕೌರವೇಶ್ವರ
ನೂಳಿಗವನೆನುತಸುರರಿಪು ನೋಡಿದನು ಕೆಲಬಲನ ॥39॥

೦೪೦ ಚಿನ್ತೆ ಬೀತುದು ...{Loading}...

ಚಿಂತೆ ಬೀತುದು ಪಾಂಡು ಮಾವನ
ಸಂತತಿಗಳಜ್ಞಾತ ವಾಸವ
ನೆಂತು ಪಂಥದ ಮೇಲೆ ಕಳೆದರೊ ನಮ್ಮ ಪುಣ್ಯವಿದು
ಕುಂತಿ ದೇವಿಯರುಮ್ಮಳಿಸೆ ನಾ
ವೆಂತು ಬದುಕುವೆವಕಟೆನುತ್ತ ನಿ
ರಂತರವು ಮರುಗುವನು ಬೊಪ್ಪನು ಶಿವ ಶಿವಾಯೆಂದ ॥40॥

೦೪೧ ಭವಣಿಗೆಯ ಬನ್ದಡವಿಯಲಿ ...{Loading}...

ಭವಣಿಗೆಯ ಬಂದಡವಿಯಲಿ ಪಾಂ
ಡವರು ನವೆದರು ರಾಜ್ಯವನು ಯಾ
ದವರು ನಾವನುಭವಿಸುತಿದ್ದೆವು ನವೆದರಿನ್ನೆಬರ
ಅವರ ಸೊಗಸೇ ನಮ್ಮ ಸೊಗಸುಗ
ಳವರ ದುಗುಡವೆ ನಮ್ಮದದರಿಂ
ದವರ ವಿಮಳಾಭ್ಯುದಯ ನಮಗೆಂದಸುರರಿಪು ನುಡಿದ ॥41॥

೦೪೨ ಕಾಲ ಕೈಗೂಡುವೊಡೆ ...{Loading}...

ಕಾಲ ಕೈಗೂಡುವೊಡೆ ಲೇಸಿನ
ಮೇಲೆ ಲೇಸುಗಳೊದಗುವವು ಭೂ
ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು
ಮೇಲೆ ತಂಗಿಯ ಮಗನ ಮದುವೆ ವಿ
ಶಾಲ ಸುಖವದು ನಿಖಿಳ ಯಾದವ
ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ ॥42॥

೦೪೩ ಚರರಿಗುಡುಗೊರೆ ಗನ್ಧ ...{Loading}...

ಚರರಿಗುಡುಗೊರೆ ಗಂಧ ನಿಖಿಲಾ
ಭರಣ ಕತ್ತುರಿ ಕರ್ಪುರವನಿ
ತ್ತರಿದಿಶಾಪಟ ಬೀಳುಗೊಟ್ಟನು ರಾಯಸವ ಬರೆಸಿ
ಮರಳಿ ದೂತರು ಬಂದು ಮತ್ಸ್ಯನ
ಪುರವ ಹೊಕ್ಕರು ಕೃಷ್ಣರಾಯನ
ಕರುಣದಳತೆಯ ಬಿನ್ನವಿಸಿದರು ಪಾಂಡುತನಯರಿಗೆ ॥43॥

೦೪೪ ಬಳಿಕ ಸುಮುಹೂರ್ತದಲಿ ...{Loading}...

ಬಳಿಕ ಸುಮುಹೂರ್ತದಲಿ ಮತ್ಸ್ಯನ
ಹೊಳಲ ಹೊರವಂಟುತ್ತರ ದಿಶಾ
ವಳಯದಲಿ ರಚಿಸಿದರುಪಪ್ಲವ್ಯಾಖ್ಯಪುರವರವ
ನೆಲನಗಲದಲಿ ಕಟ್ಟಿ ಕೇರಿಯ
ನಳವಡಿಸಿದರು ನಿಖಿಳ ನೃಪರಿಗೆ
ಬಳಿಯನಟ್ಟಿದನುತ್ತರೋತ್ತರವಾದುದಿವರುದಯ ॥44॥

೦೪೫ ಜೋಳಿ ಹರಿದವು ...{Loading}...

ಜೋಳಿ ಹರಿದವು ನಿಖಿಳ ರಾಯರಿ
ಗೋಲೆಯುಡುಗೊರೆಯಿಕ್ಕಿದವು ಪಾಂ
ಚಾಲಪತಿ ಹೊರವಂಟ ಮೂರಕ್ಷೋಣಿ ಬಲ ಸಹಿತ
ನೀಲನು ಯುಧಾಮನ್ಯು ಸಮರ ಕ
ರಾಳ ಧೃಷ್ಟದ್ಯುಮ್ನ ಕೀರ್ತಿ ವಿ
ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ ॥45॥

೦೪೬ ಇದಿರುಗೊಣ್ಡರು ಹರುಷದಲಿ ...{Loading}...

ಇದಿರುಗೊಂಡರು ಹರುಷದಲಿ ದುರು
ಪದಿಯ ಬಾಂಧವ ಪೈಕವನು ಮಿಗೆ
ಮುದದಿ ಕಾಣಿಸಿಕೊಂಡರಖಿಳ ಮಹಾ ಮಹೀಶ್ವರರ
ಒದಗಿತಖಿಳಕ್ಷೋಣಿ ಬಲ ಸಂ
ಪದವನುನ್ನತ ವಸ್ತುಗಳ ಸೊಂ
ಪೊದವಿದವು ಕೈಗೈದು ಮದುವೆಯ ಮಂಗಳಾಭ್ಯುದಯ ॥46॥

೦೪೭ ದೇವನೀ ಬಹನೆನ್ದು ...{Loading}...

ದೇವನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾ ವಿಳಾಸದಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿ ಕೇರಿಗಳು ॥47॥

೦೪೮ ಚಾರುತರ ಕತ್ತುರಿಯ ...{Loading}...

ಚಾರುತರ ಕತ್ತುರಿಯ ಸಾದಿನ
ಸಾರಣೆಯ ಕುಂಕುಮದ ರಸಗಳ
ಕಾರಣೆಯ ನವ ಚಿತ್ರಪತ್ರದ ಬಹಳ ಭಿತ್ತಿಗಳ
ಓರಣದ ಬೀದಿಗಳ ತಳಿಗೆಯ
ತೋರಣದ ಹೊಂಜಗುಲಿಗಳ ಪ
ನ್ನೀರ ಚಳೆಯದ ರಚನೆಯಲಿ ಮನೆ ಮನೆಗಳೊಪ್ಪಿದವು ॥48॥

೦೪೯ ಕಟ್ಟಿದವು ಗುಡಿ ...{Loading}...

ಕಟ್ಟಿದವು ಗುಡಿ ಮನೆಗಳಲಿ ಮೇ
ಲ್ಕಟ್ಟು ಬಿಗಿದವು ಪುರದ ನಾರಿಯ
ರುಟ್ಟು ತೊಟ್ಟರು ಕಳಶ ಕನ್ನಡಿ ಸಹಿತ ದೇಶಿಯಲಿ
ಇಟ್ಟಣಿಸಿ ಗಜ ವಾಜಿ ರಥ ಸಾ
ಲಿಟ್ಟು ತೋರುವ ದನುಜರಾಯ ಘ
ರಟ್ಟನನು ನಡೆದಿದಿರುಗೊಂಡರು ಪಾಂಡು ನಂದನರು ॥49॥

೦೫೦ ಕಳಶ ಕನ್ನಡಿ ...{Loading}...

ಕಳಶ ಕನ್ನಡಿ ವಾದ್ಯರವ ಮಂ
ಗಳ ಮಹಾಂಬುಧಿ ಮಸಗಿದವೊಲು
ಜ್ವಲ ಪತಾಕಾವಳಿಯ ವಿಮಳಚ್ಛತ್ರ ಚಾಮರದ
ಹೊಳೆವ ಕಂಗಳ ಮುಖದ ಕಾಂತಿಯ
ಮೊಲೆಗಳೊಡ್ಡಿನ ಮಂದ ಗಮನದ
ತಳಿದ ಮುಸುಕಿನ ಮೌಳಿಕಾತಿಯರೈದಿತೊಗ್ಗಿನಲಿ ॥50॥

೦೫೧ ಹೊಳಹು ಮಿಗೆ ...{Loading}...

ಹೊಳಹು ಮಿಗೆ ದೂರದಲಿ ಗರುಡನ
ಹಳವಿಗೆಯ ಕಂಡಂದಣಂಗಳ
ನಿಳಿದು ಮೈಯಿಕ್ಕಿದರು ದ್ರುಪದ ವಿರಾಟ ಪಾಂಡವರು
ಬಳಿಕ ಭೂಪರು ಕಾಲು ನಡೆಯಲಿ
ನಲಿದು ಬರುತಿರಲಾನೆಯಿಂದಿಳೆ
ಗಿಳಿದು ಬಿಜಯಂಗೈದನಸುರಾರಾತಿ ಕರುಣದಲಿ ॥51॥

೦೫೨ ಇತ್ತನವರಿಗೆ ಸಮಯವನು ...{Loading}...

ಇತ್ತನವರಿಗೆ ಸಮಯವನು ದೇ
ವೋತ್ತಮನು ನಿಗಮೌಘವರಸಿದ
ಡತ್ತಲಿತ್ತಲು ಸರಿವ ಮುನಿಗಳ ಮನಕೆ ಮೈಗೊಡದ
ಹೆತ್ತ ಮಕ್ಕಳು ನಿಲಲಿ ಭಕ್ತರ
ನಿತ್ತ ಕರೆ ನೆನೆವರಿಗೆ ತನ್ನನು
ತೆತ್ತು ಬದುಕುವೆನೆಂಬ ಬೋಳೆಯರರಸ ನಡೆತಂದ ॥52॥

೦೫೩ ಬಲದ ಪದಘಟ್ಟಣೆಯ ...{Loading}...

ಬಲದ ಪದಘಟ್ಟಣೆಯ ರಜದಿಂ
ಬೆಳುಪಡಗಿದಂಬರದ ಮಾರ್ಗದ
ಝಳದ ಕಿರುಬೆಮರುಗಳ ಲಲಿತ ಕಪೋಲ ಮಂಡಲವ
ಕೆಲದ ಪಾಯವಧಾರುಗಳ ಕಳ
ಕಳದ ಕರುಣಾರಸವ ಸೂಸುವ
ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ ॥53॥

೦೫೪ ಬಾಗಿದವು ಬರಿಕೈಗಳನು ...{Loading}...

ಬಾಗಿದವು ಬರಿಕೈಗಳನು ಹಣೆ
ಗಾಗಿ ಮುರುಹಿದವಾನೆಗಳು ತಲೆ
ವಾಗಿ ಗುಡಿಗಟ್ಟಿದವು ಹೇಷಾರವದ ತೇಜಿಗಳು
ತೂಗಿ ತನುವನು ಪುಳಕದಲಿ ಮನ
ಲಾಗು ಮಿಗೆ ಮೈಮರೆದು ಹರುಷದ
ಸಾಗರದಲೋಲಾಡುತಿರ್ದುದು ಕೂಡೆ ತಳತಂತ್ರ ॥54॥

೦೫೫ ಅಙ್ಗನೆಯರರವಿನ್ದನಾಭನ ಮಙ್ಗಳ ...{Loading}...

ಅಂಗನೆಯರರವಿಂದನಾಭನ
ಮಂಗಳ ಶ್ರೀಮೂರ್ತಿ ಸುಧೆಯನು
ಕಂಗಳಲಿ ಕುಡಿಕುಡಿದು ಪಡೆಯರು ಮತ್ತೆ ದಣಿವುಗಳ
ಅಂಗಜನ ಪೆತ್ತಯ್ಯ ನೀ ರೂ
ಹಿಂಗೆ ಬಡವನೆಯೆನುತ ಮುರಹರ
ನಂಗಶೋಭೆಯ ಬಂದಿಯಲಿ ಸಿಲುಕಿತ್ತು ಸತಿನಿವಹ ॥55॥

೦೫೬ ಎರಡು ಸೇರೆಯ ...{Loading}...

ಎರಡು ಸೇರೆಯ ತುಂಬಿ ರತ್ನವ
ಸುರಿದು ಮೈಯಿಕ್ಕಿದನು ಭೂಪತಿ
ಚರಣದಲಿ ಚತುರಾಸ್ಯಜನಕನ ವಿಮಳಭಕ್ತಿಯಲಿ
ನರ ವೃಕೋದರ ನಕುಲ ಸಹದೇ
ವರು ವಿರಾಟ ದ್ರುಪದ ಮೊದಲಾ
ಗಿರೆ ಸಮಸ್ತ ನೃಪಾಲಕರು ಮೈಯಿಕ್ಕಿತೊಗ್ಗಿನಲಿ ॥56॥

೦೫೭ ಶಿರವ ನೆಗಹಿ ...{Loading}...

ಶಿರವ ನೆಗಹಿ ಯುಧಿಷ್ಠಿರನ ಮೈ
ಮುರಿಯಲೀಯದೆ ಕೃಷ್ಣನಪ್ಪಿದ
ನುರುತರ ಪ್ರೇಮದಲಿ ಭೀಮಾರ್ಜುನರ ಯಮಳರನು
ಹರುಷದಲಿ ತೆಗೆದಪ್ಪಿ ಭೂಮೀ
ಶ್ವರರ ಮನ್ನಿಸಿದನು ವಿಳಾಸಿನಿ
ಯರ ವಿಡಾಯಿಯಲರಸಿ ಕಂಡಳು ಬಂದು ಮುರಹರನ ॥57॥

೦೫೮ ಕಾಣಿಕೆಯ ಕೈಕೊಣ್ಡು ...{Loading}...

ಕಾಣಿಕೆಯ ಕೈಕೊಂಡು ರಾಯನ
ರಾಣಿಯನು ಮನ್ನಿಸಿದ ತನ್ನಯ
ರಾಣಿವಾಸದ ಹೊರೆಗೆ ನೇಮವ ಕೊಟ್ಟು ಕಳುಹಿದನು
ರಾಣಿ ರುಕುಮಿಣಿಯಾದಿಯಾದ
ಕ್ಷೋಣಿಧರನರಸಿಯರನನಿಬರ
ಕಾಣಿಕೆಯ ಕೊಟ್ಟೆರಗಿ ದುರುಪದಿ ಕಂಡಳೊಲವಿನಲಿ ॥58॥

೦೫೯ ದರುಶನವನೊಲಿದಿತ್ತು ವಸುದೇ ...{Loading}...

ದರುಶನವನೊಲಿದಿತ್ತು ವಸುದೇ
ವರನು ದೇವಕಿ ದೇವಕಿಯರ ಸಂ
ಕರುಷಣನ ಮಹದುಗ್ರಸೇನನ ಕಂಡನವನೀಶ
ವರ ಸುಭದ್ರಾದೇವಿ ಭಾವಂ
ದಿರಿಗೆ ವಂದಿಸಿದಳು ಕುಮಾರನು
ಹರುಷದಲಿ ಬಿಗಿಯಪ್ಪಿದನು ಅಭಿಮನ್ಯು ಪಾಂಡವರ ॥59॥

೦೬೦ ಕೈದಣಿಯೆ ವಸುದೇವನಳಿಯನ ...{Loading}...

ಕೈದಣಿಯೆ ವಸುದೇವನಳಿಯನ
ಮೈದಡವಿದನು ಮಗನೆ ಬನದೊಳ
ಗೊಯ್ದು ವಿಧಿ ಬಂಧಿಸಿತಲಾ ಸಾಕಿನ್ನು ದೈವವನು
ಬೈದು ಮಾಡುವುದೇನು ದುರುಪದಿ
ಯೈದೆತನುವುಂಟಾಗಿ ದುರಿತವ
ಕೊಯ್ದು ನರಲೋಕಕ್ಕೆ ಬಂದಿರಿ ನಮ್ಮ ಪುಣ್ಯದಲಿ ॥60॥

೦೬೧ ಅರಸಿಯೈದೆತನಕ್ಕೆ ನಮ್ಮೈ ...{Loading}...

ಅರಸಿಯೈದೆತನಕ್ಕೆ ನಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆ ನಮಗೆ
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯವೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯಲಿ ಮನ್ನಿಸಿದ ॥61॥

೦೬೨ ತನ್ದೆ ಬೇಡೆಮಗವ್ವೆ ...{Loading}...

ತಂದೆ ಬೇಡೆಮಗವ್ವೆ ಬೇಡೆಮ
ಗಿಂದುಮುಖಿಯರನೊಲ್ಲೆವಾವ್ ಮನ
ಸಂದು ಮೆಚ್ಚಿಹೆವೆಮ್ಮ ಭಕ್ತರಿಗೆಂಬನನವರತ
ನೊಂದೆನೆಂಬನು ತನ್ನವರು ಮನ
ನೊಂದರಾದೊಡೆ ತನ್ನವರ ಸುಖ
ವಿಂದು ತನ್ನದದೆಂಬುದೇ ಸಿರಿಕೃಷ್ಣ ಮತವೆಂದ ॥62॥

೦೬೩ ಅರಸಿಯರ ಬಗೆಗೊಳ್ಳ ...{Loading}...

ಅರಸಿಯರ ಬಗೆಗೊಳ್ಳ ಮಕ್ಕಳ
ಸರಕು ಮಾಡನು ದೇಶ ಕೋಶದ
ಸಿರಿಯ ಗಣಿಸನು ಖಡ್ಡಿಗೊಳ್ಳನು ಸಕಲ ಸಂಪದವ
ಹರಿ ಪರಾಯಣರೆಂದೊಡವರಿಗೆ
ಹರಹಿಕೊಂಬನು ಮಗನ ಶೀಲವು
ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ ॥63॥

೦೬೪ ಲೋಗರೇ ನೀವೆಮಗೆ ...{Loading}...

ಲೋಗರೇ ನೀವೆಮಗೆ ನಿವಗರ
ಗಾಗಿ ಕರಗುವನದು ನಿಲಲಿ ತನ
ಗಾಗದವರಿಗೆ ತನ್ನ ತೆರುವನು ಕೊಲುವ ಹಗೆಗೊಲಿವ
ಲೋಗರೆನ್ನವರೆಂದು ಲೋಗರಿ
ಗಾಗಿ ಬದುಕುವೆನೆಂಬ ಬಿರುದಿನ
ಚಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ ॥64॥

೦೬೫ ಬೊಪ್ಪನವರೇಯೆಮ್ಮ ದೂರದೆ ...{Loading}...

ಬೊಪ್ಪನವರೇಯೆಮ್ಮ ದೂರದೆ
ಯಿಪ್ಪವರು ತಾವಲ್ಲ ಸಾಕಿ
ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ
ತಪ್ಪಿಸಿದುದೇನಾಯ್ತು ಪಾರ್ಥನ
ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ ॥65॥

೦೬೬ ಹೂಹೆಗೆಲ್ಲಿಯ ದರ್ಪ ...{Loading}...

ಹೂಹೆಗೆಲ್ಲಿಯ ದರ್ಪ ಮನುಜನ
ಸಾಹಸವು ಬೇರೇನು ಯಂತ್ರದ
ಹಾಹೆ ಯಂತ್ರವನುಳಿದು ಜೀವಿಸಲರಿವುದೇ ಬೇರೆ
ದೇಹಿ ನೀ ನಾವೆಲ್ಲ ನಿನ್ನಯ
ದೇಹವಿದರೊಳಗೆಮಗೆ ಗರ್ವದ
ಗಾಹಿದೆಲ್ಲಿಯದೆಂದು ಬಿನ್ನವಿಸಿದನು ಯಮಸೂನು ॥66॥

೦೬೭ ಎಸಳು ಮೊನೆಯೊನ್ದಾಗಿ ...{Loading}...

ಎಸಳು ಮೊನೆಯೊಂದಾಗಿ ತಾವರೆ
ಮುಸುಕುತಿದೆ ನೈದಿಲೆಯ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಸಂಧ್ಯಾ ಸಮಯವಾಯ್ತೆಂದ ॥67॥

೦೬೮ ನಗುತ ಹರಿ ...{Loading}...

ನಗುತ ಹರಿ ನಿಂದಿರಲು ಕೈ ದಂ
ಡಿಗೆಯವರು ಹೊದ್ದಿದರು ರೂವಾ
ರಿಗೆಗೆ ಬಿಜಯಂಗೈದನುಘೆಯೆಂದುದು ಸುರಸ್ತೋಮ
ಬಿಗಿದ ದಡ್ಡಿಯ ಬದ್ದರದ ಬೀ
ಯಗದ ರಾಣೀವಾಸದಂದಣ
ತೆಗೆದು ನಡೆದುದು ಮುಂದೆ ಸಂತೋಷದಲಿ ಯದುಸೇನೆ ॥68॥

೦೬೯ ಹೊಕ್ಕನಸುರಾರಾತಿ ಪಾಣ್ಡವ ...{Loading}...

ಹೊಕ್ಕನಸುರಾರಾತಿ ಪಾಂಡವ
ರಿಕ್ಕೆಲದಿ ಬರೆ ನಗರ ಜನ ಮೈ
ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ
ಹೊಕ್ಕು ಹೊಗಳುವ ಸುತಿಗಳಿಗೆ ಕೈ
ಮಿಕ್ಕ ಕಳ್ಳನು ಪಾಂಡು ಸುತರಿಗೆ
ಸಿಕ್ಕಿದನು ಶಿವಯೆನುತಲಿರ್ದುದು ಸೂರಿ ಸಂದೋಹ ॥69॥

೦೭೦ ಮೇಲೆ ಬೀಳುವ ...{Loading}...

ಮೇಲೆ ಬೀಳುವ ಮಂದಿಯನು ಕೈ
ಗೋಲಿನವರಪ್ಪಳಿಸೆ ಲಕ್ಷ್ಮೀ
ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ
ಮೇಲು ನೆಲೆಯುಪ್ಪರಿಗೆಗಳ ವರ
ಬಾಲೆಯರ ಕಡೆಗಂಗಳೆಸೆವ ನಿ
ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ ॥70॥

೦೭೧ ಹಿಡಿದರಾರತಿಗಳನು ಬಣ್ಣದ ...{Loading}...

ಹಿಡಿದರಾರತಿಗಳನು ಬಣ್ಣದ
ಸೊಡರು ಸುಳಿದವು ಮುಂದೆ ನೆಲನು
ಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ
ಹಿಡಿದ ಕೈದೀವಿಗೆಗಳನು ಕೈ
ದುಡುಕಿ ತಿವಿದಾಡುತ್ತ ಕಾಂತಿಯ
ಕಡಲ ಮಣಿಮಯ ಪೀಠದಲಿ ಮಂಡಿಸಿದನಸುರಾರಿ ॥71॥

೦೭೨ ಬೀಳುಗೊಟ್ಟನು ಸಕಲ ...{Loading}...

ಬೀಳುಗೊಟ್ಟನು ಸಕಲ ಭೂಮೀ
ಪಾಲರನು ಕುಂತಿಯ ಕುಮಾರರ
ಮೇಳದಲಿ ಪರಿಮಿತದಲಸುರಾರಾತಿ ನಸು ನಗುತ
ಸೋಲದಲಿ ಮೈದಣಿದು ಕುರು ಭೂ
ಪಾಲನುಚಿತವ ಮಾಡಿ ರಾಜ್ಯವ
ನಾಳಿಸುವ ಹದನುಂಟೆ ನಿಮ್ಮಾಳಾಪವೇನೆಂದ ॥72॥

೦೭೩ ಮರಳಿದವು ತುರುವಿತ್ತಲಹಿತರು ...{Loading}...

ಮರಳಿದವು ತುರುವಿತ್ತಲಹಿತರು
ಸರಿದರತ್ತಲು ಮತ್ಸ್ಯನೆಮ್ಮೈ
ವರನು ನಾವೆಂದರಿದು ಕೊಂಡಾಡಿದನು ವಿನಯದಲಿ
ವರ ಸುಭದ್ರಾ ನಂದನಂಗು
ತ್ತರೆಯನೀವರ್ಥಿಯಲಿಯಿರಲಾ
ಕರೆಯಲಟ್ಟಿದೆವೆಂದು ಬಿನ್ನವಿಸಿದನು ಭೂಪಾಲ ॥73॥

೦೭೪ ಕೊಳುಗೊಡೆಗೆ ಸೇರುವರೆ ...{Loading}...

ಕೊಳುಗೊಡೆಗೆ ಸೇರುವರೆ ಮದುವೆಯ
ನೊಲಿದು ದೇವರು ಮಾಡುವುದು ಮೇ
ಲಿಳೆಯ ಕಾರ್ಯವ ಬುದ್ಧಿಗಲಿಸುವದೆಮ್ಮನುದ್ಧರಿಸಿ
ಬಳಿಕ ಬಿಜಯಂಗೈವುದಿದು ಹದ
ನೆಲೆ ದಯಾಂಬುಧಿ ಕೇಳೆನಲು ನೃಪ
ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ ॥74॥

೦೭೫ ಕೊಳುಗೊಡೆಗೆ ತಪ್ಪೇನು ...{Loading}...

ಕೊಳುಗೊಡೆಗೆ ತಪ್ಪೇನು ವಸುವಿನ
ಕುಲ ವಿರಾಟನು ಇಂದು ವಂಶಾ
ವಳಿಯವರು ನೀವಾಭಿಜಾತ್ಯದೊಳಿಲ್ಲ ಹಳಿವುಗಳು
ಒಳುನುಡಿಗಳಲಿ ದೈವ ಶಕುನಾ
ವಳಿಗಳಾದೊಡೆ ಹರುಷದಲಿ ಮಂ
ಗಳ ಮುಹೂರ್ತವ ಮಾಡಿಯೆಂದನು ಕೃಷ್ಣ ನಸುನಗುತ ॥75॥

೦೭೬ ಒಸಗೆಯಲಿ ನಿಸ್ಸಾಳ ...{Loading}...

ಒಸಗೆಯಲಿ ನಿಸ್ಸಾಳ ತತಿ ಗ
ರ್ಜಿಸಿದವಖಿಳ ಜನಂಗಳುತ್ಸಾ
ಹಿಸಿತು ಕನ್ಯಾವರಣವಾಯಿತು ವೈದಿಕೋಕ್ತಿಯಲಿ
ಎಸೆಯಲಭಿಮನ್ಯುವನು ಸಿಂಗಾ
ರಿಸಿತು ಯದು ಪಾಂಚಾಲ ಮತ್ಸ್ಯ
ಪ್ರಸರದಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲವನುವಾಯ್ತು ॥76॥

೦೭೭ ವರ ಮುಹೂರ್ತದ ...{Loading}...

ವರ ಮುಹೂರ್ತದ ಘಳಿಗೆವಟ್ಟಲ
ಭರಿತದೊಳು ಪುಣ್ಯಾಹವದ ವಿ
ಸ್ತರದಲಕ್ಷತೆ ತಳಿದು ತಂದರು ವಿಮಲ ಮಂಟಪಕೆ
ಪರಮ ಋಷಿಗಳ ಹೋಮದಲಿ ಶಿಖಿ
ವರನ ಬಲಗೊಂಡರು ಕುಮಾರಿಯ
ವರಿಸೆ ವೈದಿಕದಿಂದ ಬಂದಳು ವರನ ವಾಮದಲಿ ॥77॥

೦೭೮ ವಿಭವವೈವಡಿಯಾಗೆ ಸದ್ವಿಜ ...{Loading}...

ವಿಭವವೈವಡಿಯಾಗೆ ಸದ್ವಿಜ
ಸಭೆಯನಾರಾಧಿಸಿದನವನೀ
ವಿಭುಗಳಿತ್ತರು ಮುಯ್ಗಳುಡುಗೊರೆ ರತ್ನ ಭೂಷಣವ
ಅಭವ ಸನ್ನಿಭ ವೀರನಾಗೆಂ
ದಿಭಗಮನೆಯರು ಕೃಷ್ಣನರಸಿಯ
ರಭಿಜನಾಮಲ ತಿಲಕನನು ಹರಸಿದರು ಹರುಷದಲಿ ॥78॥

೦೭೯ ಇದು ಶುಭೌಘದ ...{Loading}...

ಇದು ಶುಭೌಘದ ಗರುಡಿ ಬಹು ಸಂ
ಪದದ ನೆಲೆಮನೆ ಸೊಂಪಿನಾಗರ
ವಿದು ಪರಾನಂದ ಪ್ರವಾಹದ ಜನ್ಮಭೂಮಿಯಿದು
ಮುದದ ಕೇಳೀಸ್ಥಾನ ವಿಮಲಾ
ಭ್ಯುದಯದೋಲಗಶಾಲೆ ಲಕ್ಷ್ಮೀ
ಸದನವೆನೆ ರಂಜಿಸಿದುದಭಿಮನ್ಯುವಿನ ವೈವಾಹ ॥79॥

೦೮೦ ಯಾದವರು ಪಾಞ್ಚಾಲ ...{Loading}...

ಯಾದವರು ಪಾಂಚಾಲ ಮತ್ಸ್ಯರು
ಮೇದಿನೀಪತಿ ಪಾಂಡು ಸೋಮಕ
ರಾದಿಯಾದನ್ವಯವನಗಣಿತ ಬಂಧು ಬಳಗವನು
ಆದರಿಸಿದನು ವಿನಯದಲಿ ವಿ
ತ್ತಾದಿ ಸತ್ಕಾರದಲಿ ದಣಿದುದು
ಮೇದಿನೀಜನವವನಿಪನ ಸನ್ಮಾನ ದಾನದಲಿ ॥80॥

೦೮೧ ವರ ಚತುರ್ಥಿಯೊಳಿರುಳು ...{Loading}...

ವರ ಚತುರ್ಥಿಯೊಳಿರುಳು ಮೆರೆದರು
ಪುರದಲುತ್ಸಾಹದಲಿ ದಂಪತಿ
ವರರು ಭೂಮೀಚಾರ ಚಮರದ ಚಾತುರಂಗದಲಿ
ಮರುದಿವಸವವಭೃತವ ನೆರೆ ವಿ
ಸ್ತರಿಸಿದರು ಪನ್ನೀರ ಹೊಂಗೊ
ಪ್ಪರಿಗೆಗಳ ಕುಂಕುಮದ ಘಟವಾಸಕದ ರಚನೆಯಲಿ ॥81॥

೦೮೨ ಕನಕ ಮಣಿಗಳ ...{Loading}...

ಕನಕ ಮಣಿಗಳ ತೊಟ್ಟು ಜಾಜಿಯ
ನನೆಯ ಆದಳಿಕೆಯಲಿ ಮದನನ
ಮೊನೆಯ ಖಾಡಾಖಾಡಿ ಖಾತಿಯರೈದೆ ಹೊಯ್ ಹೊಯ್ದು
ದನುಜಹರನರಸಿಯರು ಕುಂತಿಯ
ತನಯರರಸಿಯರೊಡನೆ ಮತ್ಸ್ಯನ
ವನಿತೆಯರು ಪಾಂಚಾಲಿನಿಯರೋಕುಳಿಯನಾಡಿದರು ॥82॥

೦೮೩ ಧರಣಿ ನೆನೆದುದು ...{Loading}...

ಧರಣಿ ನೆನೆದುದು ಗಂಧ ರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನದ
ಪರಮ ಸೌರಭ ಕಲಸಿಕೊಂಡುದು ಸಕಲ ಸುರಕುಲವ ॥83॥

೦೮೪ ಬಳುವಳಿಯ ನಿಖಿಳಾವನೀ ...{Loading}...

ಬಳುವಳಿಯ ನಿಖಿಳಾವನೀ ಮಂ
ಡಲವನನುಪಮ ಕೋಶ ವರ್ಗದ
ಲಲನೆಯರ ಗಜ ವಾಜಿ ರಥ ಪಾದಾತಿ ಗೋವ್ರಜವ
ಅಳಿಯಗಿತ್ತು ವಿರಾಟನೃಪ ಯದು
ಕುಲವನಾ ಪಾಂಚಾಲ ಚೈದ್ಯಾ
ವಳಿಯನುತ್ತಮ ವಸ್ತು ವಾಹನದಿಂದ ಮನ್ನಿಸಿದ ॥84॥

೦೮೫ ಆದುದಭಿಮನ್ಯುವಿನ ಮದುವೆ ...{Loading}...

ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣ ರಾಯನ
ಪಾದ ದರುಶವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದುದನು ನೀ ಕರುಣಿಸೆಂದರು ವೀರ ನರಯಣನ ॥85॥

೦೮೬ ಇತಿ ಶ್ರೀಮದಚಿನ್ತ್ಯ ...{Loading}...

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ
ವೀರನಾರಾಯಣ ಚರಣಾರವಿಂದ ಮಕರಂದ
ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ವಿರಾಟಪರ್ವಂ ಸಮಾಪ್ತಮಾದುದು.

+೧೦ ...{Loading}...