೦೦೦ ಸೂ ರಾಯ ...{Loading}...
ಸೂ. ರಾಯ ಕೌರವ ಸೈನ್ಯ ಕದಳೀ
ವಾಯುವುತ್ತರ ಸಹಿತ ನಿರ್ಜರ
ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವನ ಸೇನೆ ಎಂಬ ಬಾಳೆಯ ತೋಟಕ್ಕೆ ಬಿರುಗಾಳಿಯಂತಿದ್ದ ಅರ್ಜುನನು ಉತ್ತರನೊಂದಿಗೆ ವಿರಾಟನಗರಕ್ಕೆ ಹಿಂದಿರುಗಿದ.
ಪದಾರ್ಥ (ಕ.ಗ.ಪ)
ನಿರ್ಜರ ರಾಯ-ದೇವೇಂದ್ರ, ನಂದನ-ಮಗ, ಕದಳಿ=ಬಾಳೆ, ವಾಯು=ಗಾಳಿ
ಮೂಲ ...{Loading}...
ಸೂ. ರಾಯ ಕೌರವ ಸೈನ್ಯ ಕದಳೀ
ವಾಯುವುತ್ತರ ಸಹಿತ ನಿರ್ಜರ
ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೋನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯ ಕೇಳು ! ಸೋಲುಂಡ ಕೌರವ ಸಮೂಹ ದುಃಖಪಡುತ್ತ ಗಜಪುರಕ್ಕೆ ಹಿಂದಿರುಗಿತು. ಎಲ್ಲರ ಮುಖಗಳ ಮೇಲೆ ಮುಸುಕು. ವಾದ್ಯ ಮೇಳಗಳನ್ನು ಬಹಿಷ್ಕರಿಸಿ ಮೌನದಿಂದಲೆ ರಾಜರುಗಳು ತಮ್ಮ ತಮ್ಮ ಮನೆಗಳನ್ನು ಹೊಕ್ಕರು.
ಪದಾರ್ಥ (ಕ.ಗ.ಪ)
ಭಂಗ-ಸೋಲು, ಜಾಲ-ಸಮೂಹ, ದುಗುಡ-ದುಃಖ, ಮೋನ-ಮೌನ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೋನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ ॥1॥
೦೦೨ ಬಳಿಕ ಫಲುಗುಣನತ್ತಲಾ ...{Loading}...
ಬಳಿಕ ಫಲುಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲುರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥನ ಮೈದಡವಿ ಕಪಿ
ಕುಲಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಅರ್ಜುನನು ಬನ್ನಿಯ ಮರದ ಬಳಿಗೆ ಬಂದು ಆ ಮರದಲ್ಲಿ ಆಯುಧಗಳನ್ನು ಇರಿಸಿ ಮೊದಲಿನ ಸಾಮಾನ್ಯ ರಥವನ್ನು ಏರಿ ಸಾರಥಿತನವನ್ನು ಕೈಕೊಂಡ. ಆಗ ಹನುಮಂತನು ರಥದಿಂದ ಇಳಿದು ಅರ್ಜುನನ ಮೈದಡವಿ ವನಕ್ಕೆ ತೆರಳಿದ. ಅರ್ಜುನನು ನಗರದ ಹೊರಭಾಗದಲ್ಲಿ ನಿಂತು ನಗುತ್ತ ಉತ್ತರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಕೈದು-ಆಯುಧ, ಹುಲುರಥ-ಸಾಮಾನ್ಯ ರಥ, ಹೊರೆ- ಸಮೀಪ
ಟಿಪ್ಪನೀ (ಕ.ಗ.ಪ)
ರಥದ ಬದಲಾವಣೆಯ ಸಂಗತಿ ಎರಡು ಬಾರಿ ಬರುತ್ತದೆ. ಆದರೆ ಅರ್ಜುನನು ಮತ್ಸ್ಯನ ರಥವನ್ನು ಬಿಟ್ಟು ತನ್ನ ರಥವನ್ನೇರಿ ಮತ್ತೆ ಆ ರಥವನ್ನು ಬಿಟ್ಟು ಮತ್ಸ್ಯನ ರಥವನ್ನೇರಿ ಊರಿಗೆ ಬಂದ ಎಂಬ ಸಂಗತಿ ಕುಮಾರವ್ಯಾಸನ ಕಲ್ಪನೆಯೇ ಆಗಿದೆ. ಮೂಲ ಭಾರತದಲ್ಲಿ ಅರ್ಜುನನು ಮತ್ಸ್ಯನ ರಥವನ್ನೇರಿ “ನಾನು ಕೂರುವ ಈ ರಥವು ಶತ್ರುಗಳಿಗೆ ದುರ್ಭೇದ್ಯವಾಗಿದೆ” ಎನ್ನುತ್ತಾನೆ.
ಮೂಲ ...{Loading}...
ಬಳಿಕ ಫಲುಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲುರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥನ ಮೈದಡವಿ ಕಪಿ
ಕುಲಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ॥2॥
೦೦೩ ಕರೆದು ದೂತರಿಗರುಹು ...{Loading}...
ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರ ! ದೂತರನ್ನು ಕರೆ. ಅವರಿಗೆಲ್ಲ ನೀನೇ ಯುದ್ಧದಲ್ಲಿ ಜಯಿಸಿದುದಾಗಿ ಹೇಳು. ನಮ್ಮ ನೈಜಸಂಗತಿಯನ್ನು ಯಾರಿಗೂ ಹೇಳಬೇಡ. ಇಂದು ನಿನ್ನ ಪರಾಕ್ರಮವನ್ನೇ ಹರಡು. ರಾಜನು ನಿನ್ನನ್ನೇ ಗೌರವಿಸಲಿ. ಪುರಜನಗಳೂ ಅಷ್ಟೇ. ನಿನಗೆ ವಿಜಯವಾದುದಕ್ಕೆ ಸಂಭ್ರಮಪಡಲಿ. ಇಂದು ಮಾತ್ರ ನಾನು ಹೇಳಿದಂತೆ ಮಾಡು ಎಂದು ಅರ್ಜುನ ಆಜ್ಞೆ ಮಾಡಿದ.
ಪದಾರ್ಥ (ಕ.ಗ.ಪ)
ಧುರ-ಯುದ್ಧ, ಇದ್ದ ಇರವನು ಅರುಹದಿರು-ನಿಜವಾಗಿ ನಾನು ಯಾರೆಂಬುದನ್ನು, ನೀನು ಸಾರಥಿ ಎಂಬುದನ್ನು ಹೇಳಬೇಡ, ವಿಕ್ರಮ-ಪರಾಕ್ರಮ
ಮೂಲ ...{Loading}...
ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ ॥3॥
೦೦೪ ಎನಲು ನೀನೇ ...{Loading}...
ಎನಲು ನೀನೇ ಬಲ್ಲೆ ಕರ ಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಾಮಿಸುತಿರ್ದನತ್ತಲು
ಜನಪ ಕುಂತೀಸುತನು ಸಹಿತೈತಂದನರಮನೆಗೆ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಉತ್ತರನು ಎಲ್ಲ ನಿನಗೆ ಗೊತ್ತಿದೆ. ಇರಲಿ, ಹಾಗೆಯೇ ಮಾಡುತ್ತೇನೆ ಎಂದು ಹೇಳಿ ದೂತರನ್ನು ಕರೆದು ಅರ್ಜುನನು ಹೇಳಿದಂತೆ ಆಜ್ಞೆ ಮಾಡಿ ಕಳಿಸಿದ. “ಉತ್ತರನು ಕೌರವ ಬಲದ ಮೇಲೆ ವಿಜಯಸಾಧಿಸಿದ್ದಾನೆ ಎಂದು ಹೇಳಿ” ಎನ್ನುತ್ತ ದೂತರನ್ನು ಕಳಿಸಿಕೊಟ್ಟ. ಆ ಕಡೆ ವಿರಾಟನು ಧರ್ಮರಾಯನೊಂದಿಗೆ ಅರಮನೆಗೆ ಬಂದ.
ಪದಾರ್ಥ (ಕ.ಗ.ಪ)
ನಿಯಾಮಿಸು-ನೇಮಿಸು, ಆಜ್ಞೆ ಮಾಡು, ಜನಪ-(ವಿರಾಟ) ದೊರೆ
ಮೂಲ ...{Loading}...
ಎನಲು ನೀನೇ ಬಲ್ಲೆ ಕರ ಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಾಮಿಸುತಿರ್ದನತ್ತಲು
ಜನಪ ಕುಂತೀಸುತನು ಸಹಿತೈತಂದನರಮನೆಗೆ ॥4॥
೦೦೫ ಅರಮನೆಯ ಹೊಕ್ಕವನಿಪತಿಯು ...{Loading}...
ಅರಮನೆಯ ಹೊಕ್ಕವನಿಪತಿಯು
ತ್ತರನ ಕಾಣದೆ ಕಂದನೆತ್ತಲು
ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ
ಕುರು ಬಲವನಂಗೈಸೆ ಮಿಗೆಯು
ತ್ತರೆಯ ಗುರು ಸಾರಥಿತನವನನು
ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಮನೆಗೆ ಬಂದರೆ ಅಲ್ಲಿ ಉತ್ತರ ಇಲ್ಲ. ಮಗ ಉತ್ತರ ಎಲ್ಲಿ ? ಎಂದು ಕೇಳಿದರೆ ರಾಣಿಯರು ಹೇಳಿದರು.
“ಕೌರವ ಸೇನೆಯನ್ನು ಎದುರಿಸಲು ಉತ್ತರ ಕುಮಾರನು ಉತ್ತರೆಯ ಗುರುವಾದ ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ಯಾರ ಸಹಾಯವನ್ನು ಅಪೇಕ್ಷಿಸದೆ ಯುದ್ಧಕ್ಕೆ ಹೋದ”
ಪದಾರ್ಥ (ಕ.ಗ.ಪ)
ಅವನಿಪತಿ-ಅರಸ, ವಿರಾಟ, ಅಂಗೈಸು-ಮುತ್ತಿಗೆಹಾಕು, ಮೇಲೆ ಬೀಳು, ಹಾರು-ನಿರೀಕ್ಷಿಸು
ಮೂಲ ...{Loading}...
ಅರಮನೆಯ ಹೊಕ್ಕವನಿಪತಿಯು
ತ್ತರನ ಕಾಣದೆ ಕಂದನೆತ್ತಲು
ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ
ಕುರು ಬಲವನಂಗೈಸೆ ಮಿಗೆಯು
ತ್ತರೆಯ ಗುರು ಸಾರಥಿತನವನನು
ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ॥5॥
೦೦೬ ಎನ್ದರೊಡಲೊಳು ಕೂರಲಗು ...{Loading}...
ಎಂದರೊಡಲೊಳು ಕೂರಲಗು ಮುರಿ
ದಂದದಲಿ ಕಳವಳಿಸಿದನು ಮನ
ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ
ಬಂದವರು ಭೀಷ್ಮಾದಿಗಳು ತಾ
ನಿಂದು ತರಹರಿಸುವೊಡೆ ತಾನೇ
ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ವಿರಾಟ ಎದೆಯಲ್ಲಿ ಹರಿತವಾದ ಆಯುಧವು ಮುರಿದುಕೊಂಡಂತಾಗಿ ತುಂಬ ಸಂಕಟಪಟ್ಟ, ಮನಸ್ಸಿನಲ್ಲಿ ನೊಂದ. “ಅಯ್ಯೊ ! ಕುಮಾರ ಎಲ್ಲಿ ? ಕೌರವ ಸೇನೆ ಎಲ್ಲಿ ? ಬಂದಿರುವವರೋ ಭೀಷ್ಮ ಮೊದಲಾದ ವೀರರು. ಅವರನ್ನೆಲ್ಲ ಎದುರಿಸಿ ಹೋರಾಡಲು ಉತ್ತರನು ತಾನೇನು ಶಿವನೇನು ? ಅಯ್ಯೋ ! ಅವನಿಗೆಲ್ಲೋ ಮರುಳು” ಎಂದು ಚಿಂತಿಸಿದ.
ಪದಾರ್ಥ (ಕ.ಗ.ಪ)
ಒಡಲೊಳು-ಎದೆಯಲ್ಲಿ, ಕೂರಲಗು-ಹರಿತವಾದ ಆಯುಧ, ಮುರಿದಂದದಲಿ-ಚುಚ್ಚಿಕೊಂಡ ಹಾಗೆ, ತರಹರಿಸು-ಸಹಿಸಿಕೊಳ್ಳು, ಎದುರಿಸಿ ನಿಲ್ಲು ಇಂದುಧರ-ರುದ್ರ, ಶಿವ (ಚಂದ್ರಶೇಖರ)
ಮೂಲ ...{Loading}...
ಎಂದರೊಡಲೊಳು ಕೂರಲಗು ಮುರಿ
ದಂದದಲಿ ಕಳವಳಿಸಿದನು ಮನ
ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ
ಬಂದವರು ಭೀಷ್ಮಾದಿಗಳು ತಾ
ನಿಂದು ತರಹರಿಸುವೊಡೆ ತಾನೇ
ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ ॥6॥
೦೦೭ ಮಗಗೆ ಪಡಿಬಲವಾಗಿ ...{Loading}...
ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ವಿರಾಟನು ಮಗನಿಗೆ ಸಹಾಯಕ್ಕೆಂದು ಸೇನೆಯನ್ನು ಮಂತ್ರಿಗಳೊಂದಿಗೆ ಕಳುಹಿಸಿದ. ಆದರೂ ಅವನ ಮನಸ್ಸಿಗೆ ತುಂಬ ವೇದನೆಯಾಗಿತ್ತು. ಅಷ್ಟರಲ್ಲಿ ನಗರದಲ್ಲೆಲ್ಲ ಗದ್ದಲ ಎಬ್ಬಿಸುತ್ತ ಸಿಕ್ಕಿದುದನ್ನು ದೋಚುತ್ತ ಸಂಭ್ರಮದಿಂದ ಸಂತೋಷದಿಂದ ದೂತರುಗಳು ಅಲ್ಲಿಗೆ ಬಂದರು. ವಿರಾಟನಿಗೆ “ಪ್ರಭು ನಗರದಲ್ಲೆಲ್ಲ ಧ್ವಜಗಳು ಹಾರಾಡಲಿ ! ಕುಮಾರಕನನ್ನು ಸ್ವಾಗತಿಸಲು ಸಿದ್ಧತೆಯಾಗಲಿ” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಪಡಿಬಲ-ಪ್ರತಿಬಲ, ಹೊಳಲು-ನಗರ, ಗುಡಿ-ಧ್ವಜ
ಟಿಪ್ಪನೀ (ಕ.ಗ.ಪ)
ಒಳ್ಳೆಯ ವಿಜಯ ವಾರ್ತೆಯನ್ನು ತರುವ ದೂತರು ನಗರದಲ್ಲಿ ಏನು ಬೇಕಾದರೂ ಮಾಡಬಹುದಾಗಿತ್ತು. ಅಂಗಡಿಗಳನ್ನು ಕೊಳ್ಳೆ ಹೊಡೆದರೂ ಅಂದು ಅವರಿಗೆ ಕ್ಷಮೆ ಸಿಗುತ್ತಿತ್ತು. ಹನುಮಂತನು ಸೀತೆಯನ್ನು ಕಂಡು ಹಿಂದಕ್ಕೆ ಬಂದಾಗ ಕಪಿಗಳು ಮಧುವನವನ್ನು ಲೂಟಿ ಮಾಡಿದ ಪ್ರಸಂಗವನ್ನು ಜ್ಞಾಪಿಸಿಕೊಳ್ಳಬಹುದು.
ಮೂಲ ...{Loading}...
ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ॥7॥
೦೦೮ ರಾಯಕುವರ ಪಿತಾಮಹನು ...{Loading}...
ರಾಯಕುವರ ಪಿತಾಮಹನು ರಿಪು
ರಾಯ ಕುವರ ಕುಠಾರ ಕೌರವ
ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಭು ನಮ್ಮ ರಾಜಕುಮಾರನು ಮಹಾವೀರನಾಗಿದ್ದಾನೆ. ಶತ್ರುರಾಯರುಗಳಿಗೆ ಕುಠಾರ ಪ್ರಾಯನಾಗಿದ್ದಾನೆ ! ಕೌರವರಾಯ ಸೇನೆಯನ್ನು ಮುರಿದವನಾಗಿದ್ದಾನೆ, ಕುರುಕುಲ ಎಂಬ ಆನೆಯ ಪಾಲಿಗೆ ಸಿಂಹನಾಗಿದ್ದಾನೆ. ಜೀಯ ಕೇಳು. ಕರ್ಣ ದ್ರೋಣ ಭೀಷ್ಮ ಮೊದಲಾದ ಅಖಿಳ ಕೌರವ ರಾಯದಳವನ್ನು ಗೆದ್ದು ಉತ್ತರ ಗೋಗ್ರಹಣದ ದನಕರುಗಳನ್ನು ಹಿಂದಕ್ಕೆ ಕರೆತಂದಿದ್ದಾನೆ…"
ಪದಾರ್ಥ (ಕ.ಗ.ಪ)
ಕುಠಾರ-ಕತ್ತಿ, ರಿಪುರಾಯ-ಶತ್ರುರಾಜ, ಥಟ್ಟು-ಸೇನೆ, ಪಂಚಾಸ್ಯ-ಸಿಂಹ, ತುರು-ದನ, ಮರಳಿಚು-ಮರಳಿಸು (ಇಚು-ಪ್ರತ್ಯಯ)
ಟಿಪ್ಪನೀ (ಕ.ಗ.ಪ)
(ಇಲ್ಲಿ ರಾಯಕುವರ ‘ಪಿತಾಮಹ’ ಎಂಬ ಶಬ್ದಕ್ಕೆ ಅರ್ಥ ಹೇಳುವುದು ಕಷ್ಟ ! ‘ರಾಯಕುವರ ಪಿತಾಮಹ’ ಎಂದರೆ ವಿರಾಟವಂಶದ ಪಾಲಿಗೆ ತುಂಬ ದೊಡ್ಡವನು, ಹಿರಿಯ, ದುರ್ಭೇದ್ಯ ಎಂದು ಅರ್ಥ ಮಾಡಬಹುದಾಗಿದೆ)
ಮೊದಲ ಮೂರು ಸಾಲುಗಳು ಬಿರುದಿನ ಘೋಷಣೆಯ ರೂಪದಲ್ಲಿವೆ.
ಮೂಲ ...{Loading}...
ರಾಯಕುವರ ಪಿತಾಮಹನು ರಿಪು
ರಾಯ ಕುವರ ಕುಠಾರ ಕೌರವ
ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ ॥8॥
೦೦೯ ಕೇಳಿ ಮಿಗೆ ...{Loading}...
ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸುದ್ದಿ ಬಂದ ಕೂಡಲೆ ವಿರಾಟ ಹಿಗ್ಗಿದ. ದೇಹದಲ್ಲೆಲ್ಲ ರೋಮಾಂಚವಾಯಿತು. ಹರ್ಷದ ಒತ್ತಡದಲ್ಲಿ ಮನಸ್ಸಿಗೆ ದಿಕ್ಕು ತೋಚದಂತಾಗಿತ್ತು. ಕಣ್ಣುಗಳು ಅರಳಿಕೊಂಡವು. ಕೇಳುತ್ತ ಕೇಳುತ್ತ ಸರ್ವಾಂಗದಲ್ಲೂ ಆನಂದವಾಗಿತ್ತು. ಕೂಡಲೇ ಆ ಸುದ್ದಿ ತಂದ ದೂತರಿಗೆಲ್ಲ ಮೆಚ್ಚು ಕಾಣಿಕೆಗಳನ್ನು ಕೊಟ್ಟ. ಅವರೆಲ್ಲ ಸಭೆಯಲ್ಲಿದ್ದವರಿಂದಲೂ ಕಾಣಿಕೆಗಳನ್ನು ಸುಲಿದರು.
ಪದಾರ್ಥ (ಕ.ಗ.ಪ)
ಪುಳಕಾಳಿ-ರೋಮಾಂಚನ, ಮುಂದುಗೆಡು-ಏನು ಮಾಡಬೇಕೆಂಬುದೂ ತೋಚದ ಸ್ಥಿತಿ, ಪಸಾಯಿತ-ಉಡುಗೊರೆ, ಮೆಚ್ಚುಕಾಣಿಕೆ, ಸುಲಿ-ವಸೂಲು ಮಾಡು, ಓಲಗ-ಸಭೆ,
ಟಿಪ್ಪನೀ (ಕ.ಗ.ಪ)
(ಸುಲಿ ಶಬ್ದಕ್ಕೆ ದೋಚು, ಕಿತ್ತುಕೊ ಉಜ್ಜು ಮುಂತಾದ (ಉದಾ ಹಲ್ಲು ಸುಲಿ) ಅರ್ಥಗಳು ಇವೆ. ರಾಜಸಭೆಯಲ್ಲೂ ತಮ್ಮದೋಚುವ ಕಾರ್ಯ ಮುಂದುವರಿಸಿದರು ಎಂಬರ್ಥ ಆಲಂಕಾರಿಕವಾಗಿ ಘಟಿಸುತ್ತದೆ
ಮೂಲ ...{Loading}...
ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ ॥9॥
೦೧೦ ಇದಿರುಗೊಳ ಹೇಳೆನಲು ...{Loading}...
ಇದಿರುಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೆ ವಿರಾಟನು ಹೆಂಗಸರಿಗೆ ಉತ್ತರನನ್ನು ವಿಜೃಂಭಣೆಯಿಂದ ಸ್ವಾಗತಿಸುವಂತೆ ಅಪ್ಪಣೆ ಮಾಡಿದ. ಅವರೆಲ್ಲರೂ ಕೂಡಲೇ ಸರ್ವಾಂಗ ಶೃಂಗಾರ ಮಾಡಿಕೊಂಡು ಮುತ್ತು ರತ್ನಗಳ ಆಭರಣ ಧರಿಸಿ ಸೊಗಸಾದ ಕಸೂತಿಯ ಮುಖ ಪರದೆಗಳನ್ನು ಹಾಕಿಕೊಂಡು ಕುಮಾರನ ಸ್ವಾಗತಕ್ಕೆ ತೆರಳಿದರು. ಜೊತೆಗೆ ಮೃದಂಗ, ಕಹಳೆ ಮೊದಲಾದ ವಾದ್ಯಗಳು ಮೊಳಗಿದವು. ರಾಜಾಂಗನೆಯರೂ ಸ್ವಾಗತಿಸಲು ತೆರಳಿದರು.
ಪದಾರ್ಥ (ಕ.ಗ.ಪ)
ಮೌಕ್ತಿಕ-ಮುತ್ತು, ಚಿತ್ರಾವಳಿ-ಬಗೆಬಗೆಯ ಚಿತ್ರ ರಚನೆಯ ವಸ್ತ್ರ,
ಮೂಲ ...{Loading}...
ಇದಿರುಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ॥10॥
೦೧೧ ಕವಿದು ನೂಕುವ ...{Loading}...
ಕವಿದು ನೂಕುವ ಹರುಷವನು ಸಂ
ತವಿಸಲರಿಯೆನು ಕಂಕ ನಿನ್ನೊಡ
ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು
ಅವನಿಪತಿ ಕೇಳ್ ಜೂಜಿನಲಿ ಪಾಂ
ಡವರು ಸಿಲುಕಿದರವರ ವಿಧಿಯನು
ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇತ್ತ ವಿರಾಟನಿಗೆ ಸಂತೋಷವನ್ನು ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎನ್ನಿಸಿತ್ತು. ಅದನ್ನೇ ಕಂಕನಿಗೂ ಹೇಳಿದ.
“ಕಂಕ ! ಒತ್ತಿ ಬರುವ ಸಂತಸವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಈಗ ನಿನ್ನ ಜೊತೆಗೆ ಪಗಡೆಯಾಡಬೇಕೆನಿಸಿದೆ” ಎಂದ. ಆದರೆ ಧರ್ಮರಾಯನು “ಪ್ರಭು ! ದ್ಯೂತ ಕೇಳಿ ಒಳ್ಳೆಯದಲ್ಲ. ಪಾಂಡವರು ಜೂಜಿನಲ್ಲಿ ಸಿಕ್ಕಿ ಪಟ್ಟ ಪಾಡು ಗೊತ್ತಲ್ಲವೆ ? ಪಾಪ ಅವರೀಗ ಯಾವ ಸ್ಥಿತಿಯಲ್ಲಿ ಇದ್ದಾರೊ ಯಾರಿಗೆ ಗೊತ್ತು ?” ಎಂದ.
ಪದಾರ್ಥ (ಕ.ಗ.ಪ)
ಸಂತವಿಸು-ತಡೆದುಕೋ, ದ್ಯೂತಕೇಳಿ-ಜೂಜಾಟ ಅವನಿಪತಿ-ರಾಜ
ಟಿಪ್ಪನೀ (ಕ.ಗ.ಪ)
ಜೂಜು ತುಂಬ ಕೆಟ್ಟದ್ದು ಎಂಬ ಭಾವವು ಈಗ ಧರ್ಮರಾಯನಿಗೆ ಕಹಿ ಅನುಭವದಿಂದ ಬಂದಿದೆ “ಮಹಾರಾಜ ! ತುಂಬ ಕೆಡುಕಿನದಾದ ಈ ದ್ಯೂತ ನಿನಗೇಕೆ ? ಜೂಜಿನಲ್ಲಿ ಅನೇಕ ದೋಷಗಳಿವೆ. ಅದನ್ನು ತ್ಯಜಿಸುವುದು ಒಳ್ಳೆಯದು” ಎನ್ನುತ್ತಾನೆ.
(“ಕಿಂ ತೇ ದ್ಯೂತೇನ ರಾಜೇಂದ್ರ ಬಹುದೋಷೇಣ ಮಾನದ
ದೇವನೇ ಬಹವೋ ದೋಷಾಸ್ತಸ್ಮಾತ್ ತತ್ ಪರಿವರ್ಜಯೇತ್”)
ಮೂಲ ...{Loading}...
ಕವಿದು ನೂಕುವ ಹರುಷವನು ಸಂ
ತವಿಸಲರಿಯೆನು ಕಂಕ ನಿನ್ನೊಡ
ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು
ಅವನಿಪತಿ ಕೇಳ್ ಜೂಜಿನಲಿ ಪಾಂ
ಡವರು ಸಿಲುಕಿದರವರ ವಿಧಿಯನು
ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ॥11॥
೦೧೨ ಅವರು ರಾಜ್ಯವನೊಡ್ಡಿ ...{Loading}...
ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ॥12|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಪಾಂಡವರು ರಾಜ್ಯವನ್ನು ಪಣವಾಗಿ ಒಡ್ಡಿ ಸೋತರು. ನಮಗೆ ಹಾಗೆ ಪಣವೇನೂ ಇಲ್ಲವಲ್ಲ ! ಸಂತೋಷವೇ ಆಡಲು ಕಾರಣ. ಕುಮಾರನು ಗೆದ್ದ ಮಂಗಳವಾರ್ತೆಯ ಸುಖವು ಹೆಚ್ಚಾಗಿರುವುದರಿಂದ ನಮಗೆ ಜೂಜಾಡಲು ಮನಸ್ಸಾಗಿದೆ. ಹಾಸು ಸಿದ್ಧಪಡಿಸು. ಕಾಯಿಗಳನ್ನು ಹೂಡು” ಎಂದು ಹೇಳಿದ. ಧರ್ಮರಾಯನು ನಗುತ್ತ ಹಾಸಂಗಿಯನ್ನು ಹಾಕಿದ.
ಪದಾರ್ಥ (ಕ.ಗ.ಪ)
ಪಣ-ಜೂಜಿನಲ್ಲಿ ಸೋತರೆ ಕೊಡಬೇಕಾದ ಪೂರ್ವನಿಶ್ಚಿತ ಮೊತ್ತ ವಸ್ತು ಇತ್ಯಾದಿ, ಸಾರಿಯ ನಿವಹ-ಪಗಡೆಗಳು, ಹಾಸಂಗಿ-ಪಗಡೆಯ ಹಾಸು
ಮೂಲ ...{Loading}...
ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ॥12|
೦೧೩ ಕೇಳಿ ಸಮತಳಿಸಿತ್ತು ...{Loading}...
ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನ ಹೇಳೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಟವು (ಕೇಳಿ) ಸಮಾನವಾಗಿ ಸಾಗಿತ್ತು. ಆಗ ಮಧ್ಯೆ ವಿರಾಟ ಹೇಳಿದ. “ಕಂಕ ನೋಡು ! ಕೌರವ ಸೈನ್ಯದ ಮೇಲೆ ನಮ್ಮ ಉತ್ತರನು ಯುದ್ಧ ಮಾಡಿ ಗೆದ್ದಿದ್ದಾನೆ. ರುದ್ರನಿಗೂ ಹೆದರದ ಆ ಶತ್ರು ಸೇನೆ ಕುಮಾರನಿಗೆ ಸೋತುಹೋಗಿದೆ. ಈಗ ಹೇಳು. ನಮ್ಮ ಕುಮಾರನಿಗೆ ಸಮನಾದವರು ದೇವತೆಗಳಲ್ಲಾಗಲಿ ಮನುಷ್ಯವರ್ಗದಲ್ಲಾಗಲೀ ಇದ್ದಾರೆಯೆ ?” ಎಂದ.
ಪದಾರ್ಥ (ಕ.ಗ.ಪ)
ಸಮತಳಿಸು-ಅಣಿಗೊಳ್ಳು, ಸಮಾನವಾಗಿ ಸಾಗು, ಥಟ್ಟು-ಸೇನೆ, ಅಹಿತಭಟಾಳಿ-ಶತ್ರು ಸೇನಾ ಸಮೂಹ, ದಿವಿಜ-ದೇವತೆ
ಮೂಲ ...{Loading}...
ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನ ಹೇಳೆಂದ ॥13॥
೦೧೪ ಸೋತುದುಣ್ಟರಿ ಸೇನೆ ...{Loading}...
ಸೋತುದುಂಟರಿ ಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗ ವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಂಕ ಭಟ್ಟನ ಉತ್ತರ ಮಾರ್ಮಿಕವಾಗಿತ್ತು. “ಹೌದು ಪ್ರಭು ? ಶತ್ರುಸೇನೆ ಸೋತಿದೆ. ಅದು ನಿಜ. ದನಕರುಗಳು ಹಿಂದಿರುಗಿವೆ. ಈ ವಿಜಯ ನಿಜವಾಗಿ ಆಶ್ಚರ್ಯಕರವಾದದ್ದು. ನಮಗಂತೂ ತುಂಬ ಅದ್ಭುತ ಎನ್ನಿಸುತ್ತಿದೆ. ಈಗ ಹೋಲಿಕೆಯ ಮಾತು ಹೇಳುತ್ತಿದ್ದೀಯೆ. ಲೋಕ ಪ್ರಸಿದ್ಧನಾದ ಸಾರಥಿಯಿದ್ದ ಮೇಲೆ ಕುಮಾರನಿಗೆ ಭಯ ಎಲ್ಲಿಯದು ? ಅವನು ಗೆದ್ದಿರುವುದರಲ್ಲಿ ತಪ್ಪೇನು?” ಎಂದ.
ಪದಾರ್ಥ (ಕ.ಗ.ಪ)
ಅರಿಸೇನೆ-ಶತ್ರುಸೇನೆ, ಸುರಭಿವ್ರಾತ- ಸುರಭಿ-ದನಗಳ ವ್ರಾತ-ಸಮೂಹ
ಮೂಲ ...{Loading}...
ಸೋತುದುಂಟರಿ ಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗ ವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ ॥14॥
೦೧೫ ಎಲೆ ಮರುಳೆ ...{Loading}...
ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಯೆಂದು ವಿರಾಟ ಖತಿಗೊಂಡ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಕಂಕ ! ನಿನ್ನದು ಹೊಟ್ಟೆ ಉರಿಯಲ್ಲಿ ಮುಳುಗಿದ ಮನಸ್ಸು. ನನ್ನ ಮಗ ಗೆದ್ದದ್ದು ನಿಜತಾನೇ ! ಇದರಲ್ಲಿ ಅನುಮಾನವೆಲ್ಲಿ ? ನನ್ನ ಮಗ ಹಿಂಜರಿಯುವಾತನೇನು ? ನೀನು ಹೇಳುವ ಸಾರಥಿ ಮಹಾ ಬಲಶಾಲಿಯೇನು ? ಹೇಳಿ ಕೇಳಿ ಅವನು ನಪುಂಸಕ ! ಅವನ ಪಕ್ಷ ವಹಿಸಿ ಮಾತಾಡುತ್ತಿದ್ದೀಯಲ್ಲ" ಎಂದು ವಿರಾಟ ಕೆರಳಿದ.
ಪದಾರ್ಥ (ಕ.ಗ.ಪ)
ಮತ್ಸರ-ಮಾತ್ಸರ್ಯ, ಹೊಟ್ಟೆಯುರಿ, ಅಳುಕು-ಭಯಪಡು, ಬಲುಹು-ಶಕ್ತಿ, ಪಕ್ಷ-ಪಕ್ಷಪಾತ ವಹಿಸಿಕೊಂಡು ಮಾತಾಡುವಿಕೆ,
ಟಿಪ್ಪನೀ (ಕ.ಗ.ಪ)
ಸನ್ಯಾಸಿಯಾದವನಿಗೆ ಮಾತ್ಸರ್ಯ ಇರಬಾರದು. ಆದರೆ ವಿರಾಟನು ಕಂಕನಲ್ಲಿ ಈ ವಿರೋಧಾಭಾಸವನ್ನು ಕಾಣುತ್ತಿದ್ದಾನೆ !
ಮೂಲ ...{Loading}...
ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಯೆಂದು ವಿರಾಟ ಖತಿಗೊಂಡ ॥15॥
೦೧೬ ನಾರಿಯರ ಮೈಗುರುಹು ...{Loading}...
ನಾರಿಯರ ಮೈಗುರುಹು ಪುರುಷರ
ಚಾರು ಚಿಹ್ನವ ಕೂಡಿಕೊಂಡಿಹ
ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು
ಸೈರಿಸಿದೆ ನಾನಿನ್ನೆವರ ಮ
ತ್ತಾರೊಡನೆ ಮಾತಾಡದಿರು ನಿ
ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಲ್ಲ ಕಂಕ ! ಬೃಹನ್ನಳೆ ಹೆಂಗಸರ ಮೈಕುರುಹನ್ನೂ ಪುರುಷ ಚಿಹ್ನೆಯನ್ನೂ ಕೂಡಿಕೊಂಡಿರುವಾತ. ಅವನ ಸಹಾಯದಿಂದ ಕುಮಾರನು ಶತ್ರುಗಳನ್ನು ಗೆದ್ದ ಎಂದು ಹೇಳುತ್ತಿದ್ದೀಯಲ್ಲ ! ನಾನು ಈ ಮಾತನ್ನು ಇಲ್ಲಿಯವರೆಗೆ ಸಹಿಸಿಕೊಂಡಿದ್ದೇನೆ. ಬೇರೆ ಯಾರೊಂದಿಗೂ ಈ ರೀತಿಯ ಮಾತಾಡಬೇಡ. ನಿನ್ನ ಹೃದಯ ಸಾರಹೀನವಾದ್ದು. ಬರಡು ! ನೀನು ದುಷ್ಟಾತ್ಮ…” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಮೈಗುರುಹು-ಕುರುಹು-ಗುರುತು, ಚಾರು-ಸೊಗಸಾದ, ಚಿಹ್ನ-ಗುರುತು, ಇನ್ನೆವರ-ಇಲ್ಲಿಯ ತನಕ
ಮೂಲ ...{Loading}...
ನಾರಿಯರ ಮೈಗುರುಹು ಪುರುಷರ
ಚಾರು ಚಿಹ್ನವ ಕೂಡಿಕೊಂಡಿಹ
ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು
ಸೈರಿಸಿದೆ ನಾನಿನ್ನೆವರ ಮ
ತ್ತಾರೊಡನೆ ಮಾತಾಡದಿರು ನಿ
ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ॥16॥
೦೧೭ ಖತಿಯ ಹಿಡಿಯದಿರರಸ ...{Loading}...
ಖತಿಯ ಹಿಡಿಯದಿರರಸ ದಿಟ ನೀ
ನತಿಶಯವ ಬಯಸುವರೆ ಜನ ಸ
ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ
ಸುತನು ಸಾರಥಿಯೆಂದು ಸಾರಿಸು
ವಿತಥವಲ್ಲಿದು ಪಕ್ಷಪಾತ
ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ಹೇಳಿದ. “ರಾಜ ! ಇದಕ್ಕೆಲ್ಲ ಕೋಪ ಮಾಡಿಕೊಳ್ಳಬೇಡ. ಆಗಲಿ ಅದ್ಭುತವಾದದ್ದನ್ನೆ ನೀನು ಆಶಿಸುವುದಾದರೆ ಅದೇ ಜನರಿಗೆ ಸಮ್ಮತ ! ಸಾರಥಿ ಗೆದ್ದ ಎಂದೇ ಡಂಗುರ ಹೊಡೆಸು. ನಿನ್ನ ಮಗನು ಸಾರಥಿಯಾಗಿದ್ದ ಎಂದು ಸಾರಿಸು. ಇದು ಸುಳ್ಳಲ್ಲ. ನಾವು ಪಕ್ಷಪಾತದ ಬುದ್ಧಿಯವರಲ್ಲ. ನಮ್ಮ ನಾಲಗೆಯಲ್ಲಿ ಕವಲಿಲ್ಲ ! ಎಂದ.
ಪದಾರ್ಥ (ಕ.ಗ.ಪ)
ಖತಿ-ಕೋಪ, ವಿತಥ-ಸತ್ಯ, ಕವಲುನಾಲಗೆಯಿಲ್ಲ ತನಗೆಂದ-ನನ್ನ ನಾಲಗೆಯಲ್ಲಿ ಕವಲಿಲ್ಲ. ಅಂದರೆ ನಾನು “ಎರಡೆರಡು ರೀತಿಯ ಮಾತುಗಳನ್ನು ಹೇಳುವವನಲ್ಲ”
ಮೂಲ ...{Loading}...
ಖತಿಯ ಹಿಡಿಯದಿರರಸ ದಿಟ ನೀ
ನತಿಶಯವ ಬಯಸುವರೆ ಜನ ಸ
ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ
ಸುತನು ಸಾರಥಿಯೆಂದು ಸಾರಿಸು
ವಿತಥವಲ್ಲಿದು ಪಕ್ಷಪಾತ
ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ ॥17॥
೦೧೮ ನಿನ್ನ ಮೋಹದ ...{Loading}...
ನಿನ್ನ ಮೋಹದ ಕಂಗಳಿಗೆ ಮಗ
ನುನ್ನತೋನ್ನತ ಸತ್ವನೆಂದೇ
ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ
ಇನ್ನು ಗೆಲಿದವನಾ ಬೃಹನ್ನಳೆ
ನಿನ್ನ ಮಗಗಳುಕುವರೆ ಭೀಷ್ಮನು
ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಯ್ತು ದೊರೆ ! ನಿನ್ನ ಮೋಹ ತುಂಬಿದ ಕಣ್ಣಿಗೆ ನಿನ್ನ ಮಗನೇ ಮಹಾ ಸತ್ವಶಾಲಿ ಎಂದು ತೋರಿದೆ. ಇರಲಿ ಅದೇನೂ ತಪ್ಪಲ್ಲ. ಅದು ಸಂಸಾರಿಕ ಭ್ರಮೆ ಅಷ್ಟೆ ! ನಿಜ ಹೇಳುತ್ತೇನೆ ಕೇಳು ! ಯುದ್ಧದಲ್ಲಿ ಗೆದ್ದವನೆಂದರೆ ಬೃಹನ್ನಳೆ ! ಅಲ್ಲ ಆ ವೀರರಾದ ಭೀಷ್ಮ, ದ್ರೋಣ, ಕರ್ಣ, ಅಶ್ವತ್ಥಾಮ ಮುಂತಾದವರು ನಿನ್ನ ಮಗನಿಗೆ ಹೆದರುತ್ತಾರೇನು ?” ಎಂದು ಕಂಕ ಹೇಳಿದ.
ಪದಾರ್ಥ (ಕ.ಗ.ಪ)
ಹೊಲ್ಲೆಹವೆ-ತಪ್ಪೆ ? ತನೂಭವ-ಮಗ
ಮೂಲ ...{Loading}...
ನಿನ್ನ ಮೋಹದ ಕಂಗಳಿಗೆ ಮಗ
ನುನ್ನತೋನ್ನತ ಸತ್ವನೆಂದೇ
ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ
ಇನ್ನು ಗೆಲಿದವನಾ ಬೃಹನ್ನಳೆ
ನಿನ್ನ ಮಗಗಳುಕುವರೆ ಭೀಷ್ಮನು
ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ ॥18॥
೦೧೯ ಎನಲು ಖತಿ ...{Loading}...
ಎನಲು ಖತಿ ಬಿಗುಹೇರಿ ಹಲು ಹಲು
ದಿನುತೆ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಜರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಮಾತು ಕೇಳಿ ವಿರಾಟನಿಗೆ ಮೈಯೆಲ್ಲ ಉರಿದು ಹೋಯಿತು. ಹಲ್ಲುಗಳನ್ನು ಕಡಿಯುತ್ತ ಕಣ್ಣಿನಲ್ಲಿ ಕೆಂಡ ಕಾರುತ್ತ ಸಿಟ್ಟಿನಿಂದ ತುಟಿಗಳನ್ನು ಕಡಿಯುತ್ತ ಚಿನ್ನದ ದಾಳವನ್ನು ಎತ್ತಿ ಬೀಸಿದ. ಕಂಕನ ಹಣೆ ಒಡೆಯಿತು. ಕೆಮ್ಮಣ್ಣಿನ ಬೆಟ್ಟದ ಜಲಪಾತದಂತೆ ಸೆಲೆಯೊಡೆದ ಹಣೆಯಿಂದ ರಕ್ತ ಸುರಿಯಿತು.
ಪದಾರ್ಥ (ಕ.ಗ.ಪ)
ಖತಿ-ಸಿಟ್ಟು, ಬಿಗುಹುಏರಿ-ರಭಸ ಏರಿ, ಕನಲು-ಕೆರಳು, ಸಾರಿ-ದಾಳ (ಪಗಡೆಯಾಡುವಾಗ ಬಳಸುವ ದಾಳ), ಜಾಜಿನಗಿರಿ-ಕೆಮ್ಮಣ್ಣಿನ ಪರ್ವತ ಬೆಟ್ಟ, ನಿರ್ಜರ < ನಿರ್ಝರ - ಜಲಪಾತ, ನದಿ, ರುಧಿರ-ರಕ್ತ.
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಧರ್ಮರಾಯನ ಮೂಗಿಗೆ ಏಟು ಬಿದ್ದು ರಕ್ತ ಸುರಿಯುತ್ತದೆ.
ಮೂಲ ...{Loading}...
ಎನಲು ಖತಿ ಬಿಗುಹೇರಿ ಹಲು ಹಲು
ದಿನುತೆ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಜರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ॥19॥
೦೨೦ ಸೈರಿಸುತ ಕೈಯೊಡ್ಡಿ ...{Loading}...
ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ
ನಾರಿ ಹರಿತಂದಕಟ ನೊಂದನು
ಕಾರುಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ನೋವನ್ನು ಸಹಿಸಿಕೊಂಡ ಕಂಕನು ತನ್ನ ಕೈಯನ್ನು ಒಡ್ಡಿ ರಕ್ತಧಾರೆಯನ್ನು ಬೊಗಸೆಯಿಂದ ಹಿಡಿದು ಓರೆನೋಟದಿಂದ ಸೈರಂಧ್ರಿಯನ್ನು ನೋಡಿದ. ಕೂಡಲೇ ಅವಳು ಓಡಿ ಬಂದು (ಗೊಂದಲಗೊಳ್ಳದೆ) “ಅಯ್ಯೊ ! ಕಾರುಣಿಕ ಸನ್ಯಾಸಿಗೆ ಏಟು ಬಿತ್ತು” ಎನ್ನುತ್ತ ಮನಸ್ಸನ್ನು ವಿಕಾರ ಮಾಡಿಕೊಳ್ಳದೆ, ರಕ್ತ ಕೆಳಗೆ ಬೀಳದಂತೆ ಸೆರಗಿನಲ್ಲಿ ಅದನ್ನೆಲ್ಲ ಒರಸಿದಳು.
ಪದಾರ್ಥ (ಕ.ಗ.ಪ)
ಹರಿತಂದು-ಓಡಿಬಂದು, ಕಾರುಣಿಕ-ಕರುಣಾಶಾಲಿ, ಶೋಣಿತ-ರಕ್ತ
ಟಿಪ್ಪನೀ (ಕ.ಗ.ಪ)
ಧರ್ಮರಾಯ - ಮಹಾಭಾರತದ ಮಹತ್ವಪೂರ್ಣ ಪಾತ್ರಗಳಲ್ಲಿ ಒಬ್ಬನಾದ ಧರ್ಮರಾಯನು ಯಮಧರ್ಮರಾಯನು ಕುಂತಿಯರ ಮಗ. ಬಾಲ್ಯವನ್ನೆಲ್ಲ ಶತಶೃಂಗಪರ್ವತದಲ್ಲಿ ಕಳೆದು ತಂದೆ ಪಾಂಡುವಿನ ಮರಣಾನಂತರ ಹಸ್ತಿನಾವತಿಗೆ ತಮ್ಮಂದಿರು ಮತ್ತು ತಾಯಿಯ ಸಮೇತ ಬಂದ ಸೇರಿದವನು. ಹೆಸರಿಗೆ ತಕ್ಕಂತೆ ಧರ್ಮಜ್ಞ, ನೀತಿವಂತ, ವಿಚಾರಶೀಲ, ಸೋದರಪ್ರೇಮಿ, ಶಾಚಿತಿಪ್ರಯ. ಅಜಾತಶತ್ರು ಎಂಬ ಹೆಸರೂ ಇವನಿಗಿದ್ದು ಶತ್ರುತ್ವವನ್ನೇ ಬೆಳೆಸಿಕೊಳ್ಳದೆ ಬಾಳಿದವನು. ತತ್ವಜ್ಞಾನಿಯೂ ‘ಯುಧಿಷ್ಠಿರ’ನಾಗಿ ವೀರನೆನಿಸಿದವನು. ತನ್ನ ಸ್ವಂತ ಹುಚ್ಚಾದ ಜೂಜಿನ ಪ್ರವೃತ್ತಿಗೆ ಸಮಸ್ತ ರಾಜ್ಯವನ್ನೇ ಮಾರಿಕೊಂಡುದೂ ಅಲ್ಲದೆ ತಮ್ಮಂದಿರು ಪತ್ನಿ ಎಲ್ಲರಿಗೂ ಮುಜುಗರವುಂಟು ಮಾಡಿದವನು. ಆದರೆ ಸೋದರರೆಲ್ಲ ಬೆಸೆದ ಹಗ್ಗದಂತ ಎಂಥ ವಿಷಮಗಳಿಗೆಯಲ್ಲೂ ಇವನಿಗೆ ಅಚಿಟಿ ನಿಂತದ್ದು ಈತನ ಕೇಂದ್ರ ವ್ಯಕ್ತಿತ್ವದ ಹಿರಿಮೆಯನ್ನು ಸೂಚಿಸುತ್ತದೆ.
ಶಕುನಿ ಧರ್ಮರಾಯನ ಮನಸಸನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾನೆ
ದ್ಯೂತಪ್ರಿಯಶ್ಚ ಕೌಂತೇಯೋ ನ ಸಜಾನಾತಿ ದೇವಿತುಂ
ಸಮಾಹೂತಶ್ಚ ರಾಜೇಂದ್ರೋನ ಶಕ್ಷ್ಯತಿ ನಿವರ್ತಿತುಂ
(ಧರ್ಮರಾಯ ದ್ಯೂತಪ್ರಿಯ ಗೆಲ್ಲುವುದು ಮಾತ್ರ ಗೊತ್ತಿಲ್ಲ. ಆದರೆ ಆಹ್ವಾನಿಸಿದರೆ ಒಪ್ಪುವ ದಾಕ್ಷಿಣ್ಯದವನು)
ಈತ ಬದುಕಿನ ಉದ್ದಕ್ಕೂ ಹಿರಿಯರ ಅನುಭವಗಳ ಹಿತೋಕ್ತಿಗಳನ್ನು ಅನುಸರಿಸಿಕೊಂಡು ಬಂದವನು. ಅgಣ್ಯವಾಸವಂತೂ ಅವನ ಪಾಲಿಗೆ ಬೌದ್ಧಿಕ ವಿಕಾಸ ಏಣಿ ಎಂದು ಹೇಳಬಹುದು. ತಮ್ಮನ್ನು ಅವಮಾನಿಸಲು ಬಂದ ಕೌರವನೇ ಗಂಧರ್ವನಿಂದ ಅವಮಾನಿತವಾದಾಗ ಪೂರ್ವವೈರವನನು ಮರೆತು ಕೌರವನನ್ನು ಬಿಡಿಸಿಕೊಂಡು ಬರುವಂತೆ ತಮ್ಮಂದಿರನ್ನು ಕಳಿಸುವಷ್ಟು ಉದಾರಿ ಅವನು. ಹೆಂಡತಿಯನ್ನು ಹೊತ್ತುಕೊಂಡು ಹೋಗಿದ್ದ ಜಯದ್ರಥನಿಗೆ ಕೂಡ ಮತ್ತು ಜಟಾಸುರನಿಗೆ ಕೂಡ ಒಳ್ಳೆಯ ಹಿತೋಕ್ತಿ ಹೇಳುವಷ್ಟು ಶಾಂತಚಿತ್ತ. ಯಕ್ಷಪ್ರಶ್ನೆ, ನಹುಷ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಕೊಡುವ ಜಾÐನ ಸಂಪತ್ತು ಅವನಲ್ಲಿತ್ತು. ಪ್ರಶ್ನೆಗಳಿಗೆ ಧರ್ಮರಾಯನು ಕೊಟ ಉತ್ತರಗಳಿಂದ ಪ್ರಸನ್ನನಾದ ಸಂಪತ್ತು ಅವನಲ್ಲಿತ್ತು. ಪ್ರಶ್ನೆಗಳಿಗೆ ಧರ್ಮರಾಯನು ಕೊಟ್ಟ ಉತ್ತರಗಳಿಂದ ಪ್ರಸನ್ನನಾದ ಯಕ್ಷನು ‘‘ನಿನ್ನ ನಾಲ್ವರು ತಮ್ಮಂದಿರಲ್ಲಿ ಒಬ್ಬನನ್ನು ಮಾತ್ರ ಬದುಕಿಸಿಕೊಡುತ್ತೇನೆ ಯಾರು ಬೇಕು ಹೇಳು’’ ಎಂದಾಗ ‘‘ನಕುಲನನ್ನು ಬದುಕಿಸು’’ ಎನ್ನುವಲ್ಲಿ ಅವನ ನಿಷ್ಪಕ್ಷಪಾತ ಬುದ್ದಿ ಮೆಚ್ಚಬೇಕಾದದ್ದು.ಅಗ್ನಿಕನ್ಯೆಯಾದ ದ್ರೌಪದಿಯ ಸಿಟ್ಟನ್ನೂ ಭೀಮನ ಉಗ್ರಕೋಪವನ್ನೂ ಸಮಯೋಚಿತ ಮಾತುಗಳಿಂದ ಸಮಾಧಾನಗೊಳಿಸಬಲ್ಲ ಸತ್ವಶಾಲಿ, ಐದು U್ಫ್ರಮಗಳನ್ನು ಕೊಟ್ಟರೆ ಸಾಕು. ಆನಕ್ಷಯಕಾರಕವಾದ ಯುದ್ಧಬೇಡ ಎಂಬ ಸಂಧಿಯ ಪ್ರಯತ್ನಕ್ಕೆ ನಾಂದಿ ಹಾಡಿದವರು. ತಮ್ಮಂದಿರೆಲ್ಲರ ಬಗೆಗೆ ಅಪಾರ ಮಮತೆಯುಳ್ಳವನು. ಮಾದ್ರೇಯರು, ಕೌಂತೇಯರು ಎಂಬ ಒಡಕು ಬರದಂತೆ ನೋಡಿಕೊಂಡವನು. ದ್ರೌಪದಿಯನ್ನು ತುಂಬ ವಿಶ್ವಾಸ ಗೌರವಗಳಿಂದ ನಡೆಸಿಕೊಂಡವನು. ಮಾತೃವಾತ್ಸಲ್ಯಪರನಾದವನು. ವಯಸ್ಸಿನಲ್ಲಿ ತನಗಿಂತ ಚಿಕ್ಕವನಾದ ಶ್ರೀಕೃಷ್ಣನಿಗೆ ಪರಮೋಚ್ಚಸ್ಥಾನವನ್ನು ಕೊಟ್ಟುದ್ದೂ ಅಲ್ಲದೆ ಅವನ ಅಭಯದ ನೆರಳಿನಲ್ಲೇ ಶ್ರದ್ಧೆಯಿಂದ ನಡೆದವನು. ಅಜ್ಞಾತವಾಸದಲ್ಲಿ ವಿರಾಟನಗರದಲ್ಲಿದ್ದಾಗ ತಮ್ಮಂದಿರನ್ನೂ, ದ್ರೌಪದಿಯನ್ನೂ ಎಚ್ಚರಿಕೆಯಿಂದ ಇರುವಂತೆ ಆಗಿಂದಾಗ ಸೂಚಿಸುತ್ತಿದ್ದವನು. ಕೌರವನನ್ನು ಸೋಲಿಸಿದ ಮೇಲೆ ಭೀಮನು ಭಂಗಿಸಿದ ರೀತಿಯನ್ನು ಅಕ್ಷೇಪಿಸುವಷ್ಟು ವಿವೇಚನಾಶೀಲನಾದವನು. ಕೊನೆಗೆ ರಾಜ್ಯವನ್ನು ಹಿಂದಕ್ಕೆ ಪಡೆದ ಮೇಲೆ ಧೃತರಾಷ್ಟ್ರ ಗಾಂಧಾರಿಯನ್ನು ಪ್ರೀತಿಯಿಂದ ನೋಡಿಕೊಂಡವನು. Wಥಿ ಮಾಡಲು ಹಣ ಕೇಳಿದಾಗ ಭೀಮನು ಧೃತರಾಷ್ಟ್ರನಿಗೆ ಹಣಕೊಡಲು ನಿರಾಕರಿಸಿದಾಗ ಅರ್ಜುನ ಧರ್ಮರಾಯರೇ ತಮ್ಮ ಸ್ವಂತದ ಹಣವನ್ನು ಕೊಟ್ಟು ಧೃತರಾಷ್ಟ್ರನನ್ನು ತೃಪ್ತಿಪಡಿಸುತ್ತಾರೆ. ಸ್ವರ್ಗಾರೋಹಣಪರ್ವದಲ್ಲಿ ಕೂಡ ತಮ್ಮಂದಿರು ಜತೆಯಲ್ಲಿ ಇಲ್ಲದ ಸ್ವರ್ಗ ನನಗೆ ಬೇಡ ಎಂದು ನಿರಾಕರಿಸುವಷ್ಟು ನಿಷ್ಠಾವಂತನಾಗಿದ್ದವನು. ಕರ್ಣನನ್ನು ಹೊಗಳಿ ಅರ್ಜುನನನ್ನು ನಿಂದಿಸಿದ್ದು ಕೂಡ ಅರ್ಜುನನನ್ನು ಕೆರಳಿಸುವ ಉದ್ದೇಶದಿಂದಲೇ ಹೊರತು ಬೇರೆಯಲ್ಲ. ಅಶ್ವತ್ತಾಮ ಸತ್ತ ಎಂದು ಸುಳ್ಳು ಹೇಳಬೇಕಾಗಿ ಬಂದುದರಿಂದ ಅವನಿಗಾದ ಮನೋವ್ಯಥೆ ಅಷ್ಟಿಷ್ಟಲ್ಲ.
ತೆಲುಗು ಭಾರತದಲ್ಲಿ (ತಿಕ್ಕನ ಕವಿ) ಸೈರಂಧ್ರಿಯ ಮಾತುಗಳನ್ನು U್ಪಮನಿಸಿ, “ನಿರ್ಮಲವಾದ ವಂಶದ ಪುಣ್ಯ ಚರಿತ್ರನ (ಧರ್ಮರಾಯನ) ರಕ್ತ ಬಿಂದುಗಳು ಇವು. ಎಷ್ಟು ಬಿಂದುಗಳು ನೆಲಕ್ಕೆ ಬೀಳುತ್ತವೋ ಅಷ್ಟು ವರ್ಷ ನಿನ್ನ ರಾಜ್ಯದಲ್ಲಿ ಮಳೆ ಬೀಳುವುದಿಲ್ಲ”. (ವ್ಯಾಸಭಾರತದಲ್ಲಿ ವಿರಾಟನು ದಾಳ ಎಸೆದು ಕಂಕನ ಮೂಗಿನಿಂದ ರಕ್ತ ಸುರಿಯುತ್ತದೆ ಎಂದಿದೆ.)
ಮೂಲಭಾರತದಲ್ಲಿ ರಕ್ತವು ನೆಲಕ್ಕೆ ಬಿದ್ದರೆ ಆಗಬಹುದಾದ ಅನಾಹುತವನ್ನು ಧರ್ಮರಾಯನೇ ವಿರಾಟನಿಗೆ ಹೇಳುತ್ತಾನೆ. ಆದರೆ ಕುಮಾರವ್ಯಾಸನು ಈ ಸನ್ನಿವೇಶವನ್ನು ನಾಟಕೀಯವಾಗಿ ಬೆಳೆಸಿದ್ದಾನೆ.
ಮೂಲ ...{Loading}...
ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ
ನಾರಿ ಹರಿತಂದಕಟ ನೊಂದನು
ಕಾರುಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ ॥20॥
೦೨೧ ಮಡದಿ ಕರಪಲ್ಲವದಲೊರೆಸಿದ ...{Loading}...
ಮಡದಿ ಕರಪಲ್ಲವದಲೊರೆಸಿದ
ಳಡಿಗಡಿಗೆ ಹಣೆಯನು ಕಪೋಲವ
ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ
ಹಿಡಿದೆ ರಕುತವನೇಕೆ ಕಾಮಿನಿ
ನುಡಿ ನಿಧಾನವನಿವರು ನೊಂದರೆ
ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈರಂಧ್ರಿಯು ಮತ್ತೆ ಮತ್ತೆ ವಸ್ತ್ರದಿಂದ ಕಂಕನ ಹಣೆಯನ್ನು ಒರೆಸಿದಳು. ಅವನ ಮುಖವನ್ನು ತೊಳೆದಳು. ಇದನ್ನೆಲ್ಲ ನೋಡುತ್ತಿದ್ದ ವಿರಾಟನಿಗೆ ಬೆರಗು ! ಅಲ್ಲ ಸೈರಂಧ್ರಿ ! ನೀನೇಕೆ ರಕ್ತವನ್ನು ಹಿಡಿದೆ ? ಇದಕ್ಕೆ ಕಾರಣವೇನು ಹೇಳು, ಅದಿರಲಿ ಇವರಿಗೆ ನೋವಾದರೆ ನೀನೇಕೆ ಹೀಗೆ ಗೊಂದಲಗೊಳ್ಳಬೇಕು ?” ಎಂದು ಅವಳನ್ನು ಕೇಳಿದ.
ಪದಾರ್ಥ (ಕ.ಗ.ಪ)
ಕರಪಲ್ಲವ=(ಚಿಗುರಿನಂಥ) ಕೈ, ನಿಧಾನ-ಕಾರಣ, ಹಿನ್ನೆಲೆ, ದುರುಪದಿ-ದ್ರೌಪದಿ
ಮೂಲ ...{Loading}...
ಮಡದಿ ಕರಪಲ್ಲವದಲೊರೆಸಿದ
ಳಡಿಗಡಿಗೆ ಹಣೆಯನು ಕಪೋಲವ
ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ
ಹಿಡಿದೆ ರಕುತವನೇಕೆ ಕಾಮಿನಿ
ನುಡಿ ನಿಧಾನವನಿವರು ನೊಂದರೆ
ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ ॥21॥
೦೨೨ ಉರಿದು ಹೋಹುದು ...{Loading}...
ಉರಿದು ಹೋಹುದು ನಿನ್ನ ರಾಜ್ಯದ
ಸಿರಿಯು ಬದುಕಿದೆಯೊಂದು ಕಣೆಯಕೆ
ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ
ಅರಸ ಕೇಳೀ ಮುನಿಯ ನೆತ್ತರು
ಧರೆಯೊಳೊಕ್ಕೊಡೆಯಾ ಪ್ರದೇಶವ
ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಿನ್ನ ರಾಜ್ಯದ ಸಂಪತ್ತೆಲ್ಲ ಸುಟ್ಟು ಭಸ್ಮವಾಗುತ್ತಿತ್ತು. ಈ ಕ್ಷಣದಲ್ಲಿ ನೀನು ಬದುಕಿಕೊಂಡೆ. ಆ ಪರಮಯತಿಯ ಹಣೆಯಿಂದ ರಕ್ತ ಸುರಿಯಿತಲ್ಲ. ಅದನ್ನು ಕೈಯಲ್ಲಿ ತುಂಬಿಕೊಂಡು ನೆಲಕ್ಕೆ ಬೀಳದಂತೆ ಕಾಪಾಡಿದ. ರಾಜ ಕೇಳು ಈ ಮುನಿಯ ರಕ್ತದ ಒಂದು ಹನಿ ನೆಲಕ್ಕೆ ಬಿದ್ದರೂ ಆ ಪ್ರದೇಶವನ್ನೆಲ್ಲ ಧೂಳೀಪಟಮಾಡುವ ಪ್ರತಿಜ್ಞೆ ಬೃಹನ್ನಳೆಯದು”.
ಪದಾರ್ಥ (ಕ.ಗ.ಪ)
ಕಣೆಯ-ಕ್ಷಣ, ಶೋಣಿತ-ರಕ್ತ, ಒಕ್ಕೊಡೆ-ಚೆಲ್ಲಿದರೆ, ಸುರಿದರೆ, ಬಿರುದು-ಅಗ್ಗಳಿಕೆ
ಮೂಲ ...{Loading}...
ಉರಿದು ಹೋಹುದು ನಿನ್ನ ರಾಜ್ಯದ
ಸಿರಿಯು ಬದುಕಿದೆಯೊಂದು ಕಣೆಯಕೆ
ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ
ಅರಸ ಕೇಳೀ ಮುನಿಯ ನೆತ್ತರು
ಧರೆಯೊಳೊಕ್ಕೊಡೆಯಾ ಪ್ರದೇಶವ
ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ॥22॥
೦೨೩ ಈಕೆ ಯಾರಿವರಾರು ...{Loading}...
ಈಕೆ ಯಾರಿವರಾರು ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ
ಏಕೆ ನನಗದರರಿತವೆಂದವಿ
ವೇಕಿಯಿರೆ ಬಳಿಕಿತ್ತ ಪುರದಲಿ
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಲ್ಲ ? ಈಕೆ ಯಾರು ? ಇವರು ಯಾರು ? ಆ ನಾಟ್ಯ ವ್ಯಾಕರಣ ಪಂಡಿತನಾದ ಬೃಹನ್ನಳೆ ಇವರಿಗೆ ಏನಾಗಬೇಕು ? ನನಗೇಕೋ ಇದರ ಕಾಲು, ಕೀಲು ಒಂದೂ ಗೊತ್ತಾಗುತ್ತಿಲ್ಲ. ಹೋಗಲಿ ಅದನ್ನು ತಿಳಿದು ನಾನೇನು ಮಾಡಬೇಕಾಗಿದೆ” ಎಂದುಕೊಂಡು ಆ ಅವಿವೇಕಿ ಸುಮ್ಮನಾಗಿ ಬಿಟ್ಟ. ಈ ಕಡೆ ಊರಿನಲ್ಲಿ ಭಾರಿಯ ನೂಕುನುಗ್ಗಲು ಜನ ಕಿಕ್ಕಿರಿದು ಸೇರಿ ಉತ್ತರನನ್ನು ನೋಡುವ ಸಂಭ್ರಮದಲ್ಲಿದ್ದರು.
ಪದಾರ್ಥ (ಕ.ಗ.ಪ)
ನಾಟ್ಯ ವ್ಯಾಕರಣ ಪಂಡಿತ-ಅಂದರೆ ನಾಟ್ಯದ ನಿಯಮಾವಳಿಯನ್ನು ಬಲ್ಲ ವಿದ್ವಾಂಸ. ಕಾಲು-ಕೀಲು-ತಲೆಬುಡ , ಅರಿತ-ತಿಳಿವಳಿಕೆ, ನೆರವಿ-ಜನರ ಗುಂಪು.
ಟಿಪ್ಪನೀ (ಕ.ಗ.ಪ)
ಅರಿಯ ಬಾರದು ಕಾಲು-ಕೀಲುಗಳ ಇದೊಂದು ಸಾಮತಿ. “ತಲೆ ಬಾಲ ಒಂದೂ ಗೊತ್ತಾಗೊಲ್ಲ” ಎಂಬ ನುಡಿಗಟ್ಟಿನೊಂದಿಗೆ ಹೋಲಿಸಿ. ಕಂಕಭಟ್ಟ ಯಾರು ಎಂಬುದು ವಿರಾಟನಿಗೆ ತಿಳಿಯದು. ಅವನಿಗೆ ಏಟು ಬಿದ್ದು ರಕ್ತ ಸುರಿದರೆ ಅದನ್ನು ನೆಲಕ್ಕೆ ಬೀಳದಂತೆ ಸೈರಂಧ್ರಿ ಏಕೆ ಮಧ್ಯೆ ಬಂದಳು ಎಂಬುದೂ ಅವನಿಗೆ ಸಮಸ್ಯೆಯೇ. ಸೈರಂಧ್ರಿ ವಿರಾಟನ ಗೊಂದಲವನ್ನು ಹೆಚ್ಚಿಸುವಂತೆ ಈಗ ಬೃಹನ್ನಳೆ ಇದನ್ನೆಲ್ಲ ಸೈರಿಸುವುದಿಲ್ಲ ಎಂದಾಗ ವಿರಾಟನು ಇನ್ನಷ್ಟು ಗೊಂದಲಗೊಂಡಿದ್ದಾನೆ.
ಇವರೆಲ್ಲ ಪಾಂಡವರು-ದ್ರೌಪದಿ ಎಂದು ಗುರುತಿಸುವುದಕ್ಕೆ ಉದ್ದಕ್ಕೂ ಹಲವಾರು ಸಾಕ್ಷ್ಯಗಳು ದೊರಕುತ್ತವೆ. ಈಗಲಂತೂ ವಿರಾಟರಾಯನಿಗೆ ಸುಳಿವು ಸಿಕ್ಕಿತ್ತು. ಆದರೆ ಯಾವ ಸಂದರ್ಭದಲ್ಲೂ ಈ ರಹಸ್ಯವನ್ನು ಯಾರೂ ಭೇದಿಸಲಿಲ್ಲ.
ಮೂಲ ...{Loading}...
ಈಕೆ ಯಾರಿವರಾರು ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ
ಏಕೆ ನನಗದರರಿತವೆಂದವಿ
ವೇಕಿಯಿರೆ ಬಳಿಕಿತ್ತ ಪುರದಲಿ
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ॥23॥
೦೨೪ ಇದಿರು ಬನ್ದರು ...{Loading}...
ಇದಿರು ಬಂದರು ಮಂತ್ರಿಗಳು ವರ
ಸುದತಿಯರು ಸೂಸಿದರು ಸೇಸೆಯ
ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ
ವದನವಿದೆ ಕಳೆಗುಂದಿ ಜಯದ
ಭ್ಯುದಯ ತಾನೆಂತೆನುತ ವರ ಕೋ
ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂತ್ರಿಗಳೆಲ್ಲ ಎದುರಿಗೆ ಬಂದರು. ಸುಮಂಗಲಿಯರು ಅಕ್ಷತೆ ಎರಚಿದರು. ಮಂಗಳ ವಾದ್ಯಗಳ ಘೋಷಣ ರಭಸ ಕೇಳಿಬಂದಿತು. ಇಷ್ಟಾದರೂ ಜನಕ್ಕೆ ಏನೊ ಅನುಮಾನ. ಯುದ್ಧವೀರ ಉತ್ತರನ ಮುಖ ಏಕೆ ಕಳಾಹೀನವಾಗಿದೆ ? ಇವನು ಗೆದ್ದಿರುವುದು ತಾನೇ ಹೇಗೆ ? ಎಂದು ಜನ ತಮ್ಮ ತಮ್ಮೊಳಗೇ ಗುಸುಗುಟ್ಟಿಕೊಳ್ಳುತ್ತಿದ್ದರು.
ಪದಾರ್ಥ (ಕ.ಗ.ಪ)
ಸುದತಿ-ಹೆಂಗಸು, ಸೇಸೆ-ಮಂತ್ರಾಕ್ಷತೆ, ವಾದ್ಯವಿತಾನ-ವಾದ್ಯ ಸಮೂಹ, ವದನ-ಮುಖ, ಕೋವಿದ-ತಿಳಿದವರು, ಜ್ಞಾನಿಗಳು, ಗುಜುಗುಜಿಸು-ಪಿಸುಮಾತಾಡು
ಮೂಲ ...{Loading}...
ಇದಿರು ಬಂದರು ಮಂತ್ರಿಗಳು ವರ
ಸುದತಿಯರು ಸೂಸಿದರು ಸೇಸೆಯ
ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ
ವದನವಿದೆ ಕಳೆಗುಂದಿ ಜಯದ
ಭ್ಯುದಯ ತಾನೆಂತೆನುತ ವರ ಕೋ
ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ ॥24॥
೦೨೫ ಎನ್ದಿನವನುತ್ತರನು ಗಙ್ಗಾ ...{Loading}...
ಎಂದಿನವನುತ್ತರನು ಗಂಗಾ
ನಂದನನೀ ಹೂಹೆ ಗೆಲಿದನು
ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ
ಎಂದು ಕೆಲಬರು ಕೆಲಬರಿವ ಗೆಲಿ
ದಂದವಾಗಿರದೀ ಬೃಹನ್ನಳೆ
ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಲ್ಲ ಈ ಉತ್ತರ ಹಿಂದಣ ಉತ್ತರನಂತೆಯೇ ಕಾಣುತ್ತಿದ್ದಾನೆ. ಈ ಭೂಪ ಭೀಷ್ಮನನ್ನು ಗೆದ್ದನಂತೆ ! ಪ್ರಸಿದ್ಧ ವೀರರಾದ ದ್ರೋಣ, ಕರ್ಣ ಮೊದಲಾದವರನ್ನು ಓಡಿಸಿದನಂತೆ ! ಎಂದು ಕೆಲವರು ಆಡಿಕೊಂಡರು. ಇನ್ನು ಕೆಲವರು ಇವನು ಗೆದ್ದ ಹಾಗೆ ಕಾಣುವುದಿಲ್ಲ. ಬಹುಶಃ ಈ ಬೃಹನ್ನಳೆಯಿಂದ ವಿಜಯ ಬಂದಿರಲಿಕ್ಕೆ ಬೇಕು” ಎಂದುಕೊಂಡರು.
ಪದಾರ್ಥ (ಕ.ಗ.ಪ)
ಎಂದಿನವನು-ಮೊದಲು ಹೇಗಿದ್ದನೊ ಹಾಗೇ ಇದ್ದಾನೆ, ಹೂಹೆ-ಆಕಾರ, ಸಂದ-ಪ್ರಸಿದ್ಧ, ಸಂಭಾವಿಸುವುದು-ಬಂದಿರುತ್ತದೆ ಸಂಭವಿಸಿರುತ್ತದೆ.
ಎಂದಿನವನು ಎಂಬ ಹೇಳಿಕೆಯನ್ನು ಗಮನಿಸಿ. ಅಂದರೆ ಉತ್ತರನು ಹೇಡಿ ಎಂದು ಎಲ್ಲರಿಗೂ ತಿಳಿದಿತ್ತೆಂದು ಕವಿ ಸೂಚಿಸಿದ್ದಾನೆ.
ಮೂಲ ...{Loading}...
ಎಂದಿನವನುತ್ತರನು ಗಂಗಾ
ನಂದನನೀ ಹೂಹೆ ಗೆಲಿದನು
ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ
ಎಂದು ಕೆಲಬರು ಕೆಲಬರಿವ ಗೆಲಿ
ದಂದವಾಗಿರದೀ ಬೃಹನ್ನಳೆ
ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ ॥25॥
೦೨೬ ಲೀಲೆ ಮಿಗಲುತ್ತರನು ...{Loading}...
ಲೀಲೆ ಮಿಗಲುತ್ತರನು ಪುರಜನ
ಜಾಲ ಜೀಯೆನಲಿದಿರು ಬಂದ ನಿ
ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ
ಆಲಿಯವನಿಯ ಬರೆಯೆ ಮುಸುಕಿನ
ಮೇಲು ದುಗುಡದ ಭಾರದಲಿ ರಾ
ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರ ಬರುತ್ತಿದ್ದ ದಾರಿಯಲ್ಲಿ ಪುರಜನ ಸಮೂಹ ಜಯವಾಗಲಿ ಎಂದು ಕೂಗು ಹಾಕಿದರು. ಉತ್ತರನು ಎದುರಿಗೆ ಬಂದ ಆರತಕ್ಷತೆಯವರನ್ನು ನೂಕಿ ಅವರ ಮೇಲೆ ರೇಗಿದ. ಅವನ ಕಣ್ಣು ನೆಲವನ್ನು ಬರೆಯುತ್ತಿತ್ತು. ಒಳಗೆ ತುಂಬ ದುಃಖ ತುಂಬಿಕೊಂಡು ಅದನ್ನು ಮರೆ ಮಾಚಿದ್ದ. ಭಾರವಾದ ದುಗುಡದಿಂದಲೇ ಅರಮನೆಗೆ ಬಂದ. ಆಗ ವಿರಾಟನು ಬಂದು ಸಂತಸದಿಂದ ಮಗನನ್ನು ತಬ್ಬಿಕೊಂಡ.
ಪದಾರ್ಥ (ಕ.ಗ.ಪ)
ಜೀ ಯೆನಲ್=1. ಪ್ರಭು ಎಂದು ಹೇಳಿದಾಗ, ನಿವಾಳಿ-ದೃಷ್ಟಿಕಳೆ, ಇಳಿತೆಗೆ, ಆಲಿ-ಕಣ್ಣು, ಆಲಿ ಅವನಿಯ ಬರೆಯೆ-ಕಣ್ಣು ನೆಲವನ್ನು ಬರೆಯ ಎಂದರೆ ಕೆಳಗೆ ಮುಖ ಮಾಡಿಕೊಂಡಿದ್ದ, ಪೆಚ್ಚಾಗಿದ್ದ ಎಂದರ್ಥ.
ಮೂಲ ...{Loading}...
ಲೀಲೆ ಮಿಗಲುತ್ತರನು ಪುರಜನ
ಜಾಲ ಜೀಯೆನಲಿದಿರು ಬಂದ ನಿ
ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ
ಆಲಿಯವನಿಯ ಬರೆಯೆ ಮುಸುಕಿನ
ಮೇಲು ದುಗುಡದ ಭಾರದಲಿ ರಾ
ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ ॥26॥
೦೨೭ ಬಾ ಮಗನೆ ...{Loading}...
ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮ ವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನೇ ! ಬಾ ! ವಸುವಂಶದ ರಾಜ ರತ್ನವೆ ಬಾ ! ಕುರುರಾಯನ ಸೇನೆಯ ಪಾಲಿಗೆ ಧೂಮಕೇತುವೆ ಬಾ ! ಕಂದ ! ಬಾ ಎಂದು ಅಪ್ಪಿಕೊಂಡು ಕುಳ್ಳಿರಿಸಿದ. ಸುಮಂಗಲಿಯರು ಉಪ್ಪಿನ ಆರತಿ ಎತ್ತಿದರು. ಮನೋಹರ ವಸ್ತ್ರಗಳನ್ನು ನೀಡಿದರು. ನಿವಾಳಿ ತೆಗೆದರು. ರತ್ನಗಳು, ಬಣ್ಣದ ಸೊಡರುಗಳು ಅವನೆದುರಿಗೆ ಸುಳಿದವು. ಎಲ್ಲರಿಗೂ ಆನಂದವಾಗಿತ್ತು.
ಪದಾರ್ಥ (ಕ.ಗ.ಪ)
ಚಿಂತಾಮಣಿ-ಒಂದು ಬಗೆಯ ರತ್ನ, ಮೋಹರ-ಸೇನೆ, ಉಪ್ಪಾರತಿ-ಉಪ್ಪಿನ ಆರತಿ, ಅಭಿರಾಮ-ಮನೋಹರ, ಸ್ತೋಮ-ಸಮೂಹ
ಟಿಪ್ಪನೀ (ಕ.ಗ.ಪ)
ಉಪರಿಚರ ವಸು - ಇವನೂ ವಸುಗಳಲ್ಲಿ ಒಬ್ಬ. ಆದರೆ ಸದಾ ಆಕಾಶಗಾಮಿಯಾಗಿ ಸಾಗುವ ವಿಶೇಷ ಸೌಲಭ್ಯ ಇವನಿಗಿದ್ದುದರಿಂದ ಉಪರಿ (ಮೇಲೆ) ಚರ (ಚಲಿಸುವ) ವಸು ಎಂಬ ಹೆಸರು ಬಂದಿದೆ. ಮಹಾರಾಜನಾಗಿದ್ದು ಎಲ್ಲವನ್ನೂ ತ್ಯಜಿಸಿ ತಪಸ್ಸು ಮಾಡುತ್ತಿದ್ದ ಈತನ ಬಳಿಗೆ ದೇವೇಂದ್ರ ಸಮಸ್ತ ದೇವತಾಗಣದೊಂದಿಗೆ ಬಂದು ‘‘ವಸುರಾಜ, ನಿನ್ನ ತಪಸ್ಸಿಗೆ ಮೆಚ್ಚಿದೆ. ನನ್ನ ಸ್ನೇಹಿತನಾಗಿ ನೀನು ಇಷ್ಟ ಬಂದಾಗ ನನ್ನ ರಾಜ್ಯಕ್ಕೆ ಬಂದು ಹೋಗುತ್ತಿರಬಹುದು. ಇತ್ತ ಮೊದಲಿನಂತೆ ಧರ್ಮದಿಂದ ರಾಜ್ಯವಾಳಿಕೊಂಡಿರು’’ ಎಂದು ಹೇಳಿ ಅವನಿಗೆ ದೇವತ್ವವನ್ನು ಕೊಟ್ಟ. ಸುವರ್ಣ ಮಣಿಗಣದಿಂದ ಕೂಡಿದ ದಿವ್ಯ ವಿಮಾನವನ್ನೂ ಆಯುಧಗಳನ್ನೂ, ದೇಹವನ್ನು ಕಾಪಾಡುವ ಎಂದಿಗೂ ಬಾಡದ ಇಂದ್ರಮಾಲೆ ಎಂಬ ಪದ್ಮಮಾಲೆಯನ್ನೂ, ಶಿಕ್ಷೆ-ರಕ್ಷೆಗಳಿಗೆ ಸಹಾಯಕವಾದ ಒಂದು ಬಿದಿರ ಬೆತ್ತವನ್ನೂ ದಯಪಾಲಿಸಿದ. ಈ ಉಪಕಾರಕ್ಕೆ ಪ್ರತಿಯಾಗಿ ವಸುರಾಜನು ಭೂಮಿಯಲ್ಲೆಲ್ಲ ವರ್ಷಕ್ಕೊಮ್ಮೆ ಇಂದ್ರೋತ್ಸವವು ವೈಭವದಿಂದ ಜರುಗುವಂತೆ ಏರ್ಪಾಡು ಮಾಡಿದ. ಇಂದ್ರೋತ್ಸವದಿಂದ ರಾಜರ ಆಯುಸ್ಸು ವರ್ಧಿಸುತ್ತದೆ. ಸಂತಾನ ವೃದ್ಧಿಯಾಗುತ್ತದೆ, ಪ್ರಜೆಗಳ ಸಂತೋಷ ಹೆಚ್ಚುತ್ತದೆ ಎಂದು ಪ್ರಚಾರ ಮಾಡಿ ಈ ಉತ್ಸವವನ್ನು ಲೋಕಪ್ರಿಯಗೊಳಿಸಿದ. ದೇವೇಂದ್ರನ ವರದಿಂದ ವಸುರಾಜನಿಗೆ ಬೃಹದ್ವಥ, ಮಣಿವಾಹನ, ಸೌಬಲ, ಯದು ರಾಜನ್ಯ ಎಂಬ ಐವರು ಮಕ್ಕಳಾದರು. ಅವರನ್ನೆಲ್ಲ ಬೇರೆಬೇರೆ ರಾಜರನ್ನಾಗಿ ವಸುರಾಜನು ಪ್ರತಿಷ್ಠಾಪಿಸಿದ. ತಾನು ರಾಜರ್ಷಿ ಎಂದು ಖ್ಯಾತಿ ಪಡೆದು ರಾಜ್ಯವಾಳುತ್ತಿದ್ದ.
ಒಂದು ದಿನ ಒಂದು ಘಟನೆ ನಡೆಯಿತು. ಅವನ ರಾಜಧಾನಿಯ ಸಮೀಪದಲ್ಲಿ ಶುಕ್ತಿಮತಿ ಎಂಬ ನದಿ. ಕೋಲಾಹಲ ಎಂಬ ಪರ್ವತವು ಈ ನದಿಯಲ್ಲಿ ಮೋಹಗೊಂಡಿತು. ಈ ನದಿ ಪರ್ವತಗಳ ಸಮಾಗಮದ ಪರಿಣಾಮವಾಗಿ ಒಬ್ಬ ಕುಮಾರ ಮತ್ತು ಒಬ್ಬಳು ಮಗಳು ಜನಿಸಿದರು. ಆದರೆ ಈ ಪರ್ವತವು ನದಿಯ ಮೇಲೆ ಬೀಳಲು ಬಂದಾಗ ವಸುರಾಜನು ಅದನ್ನು ತಡೆದು ನದಿಯನ್ನು ಉಳಿಸಿದ್ದನೆಂಬ ಉಪಕಾರದ ಸ್ಮರಣೆಗಾಗಿ ಶುಕ್ತಿಮತಿಯ ತನ್ನ ಮಗನಿಗೆ ‘ವಸುಪಾದ’ ಎಂಬ ಹೆಸರಿಟ್ಟ ರಾಜನಿಗೆ ಕಾಣಿಕೆಯಾಗಿ ಕೊಟ್ಟಳು. ಅವನು ಮುಂದೆ ವಸುರಾಜನ ಸೇನಾಧಿಪತಿಯಾದ. ಹಾಗೆಯೇ ಶುಕ್ತಿಮತಿಯು ತನ್ನ ಮಗಳಾದ ಗಿರಿಕೆಯನ್ನು ರಾಜನಿಗೆ ಅರ್ಪಿಸಿದಳು. ಅವಳನ್ನು ರಾಜನು ಧರ್ಮಪತ್ನಿಯಾಗಿ ಸ್ವೀಕರಿಸಿದ.
ಗಿರಿಕೆ ಋತುಮತಿಯಾದಾಗ ಅವಳಿಗೆ ಜಿಂಕೆಯ ಮಾಂಸವನ್ನು ತರಲು ವಸುರಾಜ ಕಾಡಿಗೆ ಹೋದ. ಆದರೆ ಅವನ ಮನಸ್ಸಿನ ತುಂಬ ಗಿರಿಕೆ ತುಂಬಿದ್ದಳು. ಹೀಗೆ ಮೋಹದಲ್ಲಿ ಅವನ ವೀರ್ಯ ಸ್ಖಲನವಾದಾಗ ಅದನ್ನು ಒಂದ ಎಲೆಯ ದೊನ್ನೆಯಲ್ಲಿರಿಸಿ ಒಂದು ಹದ್ದಿನ ಸಂಗಡ ಹೆಂಡತಿಗೆ ಕಳಿಸಿದ. ಇನ್ನೊಂದೆಡೆಗೆ ಆ ದೊನ್ನೆಯನ್ನು ಮಾಂಸವೆಂದು ತಿಳಿದು ಮತ್ತೊಂದು ಹದ್ದು ಆಕ್ರಮಣ ಮಾಡಿದಾಗ ಆ ದೊನ್ನೆ ಕೆಳಗೆ ಯಮುನಾ ನದಿಗೆ ಬಿದ್ದಿತು. ಆ ನೀರಿನಲ್ಲಿ ಅಧ್ರ್ರಿಕ ಎಂಬ ಶಾಪಗ್ರಸ್ಥ ಅಪ್ಸರೆ ಹೆಣ್ಣು ಮೀನಾಗಿದ್ದಳು. ಆ ಮೀನು ವೀರ್ಯವನ್ನು ನುಂಗಿ ಗರ್ಭಿಣಿಯಾಯಿತು. ಆ ಮೀನನ್ನು ಹಿಡಿದ ಬೆಸ್ತರ ಮುಖಂಡ ದಾಶರಾಜನು ಆ ಮಕ್ಕಳಿಗೆ ಮತ್ಸ್ಯರಾಜ, ಮತ್ಸ್ಯಗಂದಿ ಎಂಬ ಹೆಸರಿಟ್ಟಿತು. ಈ ಮತ್ಸ್ಯರಾಜನೇ ಮುಂದೆ ಮತ್ಸ್ಯದೇಶಕ್ಕೆ ಅಧಿಪತಿಯಾದ. ಮತ್ಸ್ಯಗಂಧಿಯು ವೇದವ್ಯಾಸ, ಚಿತ್ರಾಂಗದ ವಿಚಿತ್ರವೀರ್ಯ ಎಂಬ ಮಕ್ಕಳನ್ನು ಪಡೆದ್ದು ಮಹಾಭಾರತದಲ್ಲಿ ಮಹತ್ವದ ಸಂಗತಿಯಾಗಿದೆ.
(ವಸುಕುಲದ ನೃಪಚಿಂತಾಮಣಿ : ಉಪರಿಚರ ವಸುವಿನ ವೀರ್ಯವನ್ನು ಒಂದು ಮೀನು ನುಂಗಿ ಅದರ ಗರ್ಭದಲ್ಲಿ ಮತ್ಸ್ಯಗಂಧಿ, ಮತ್ಸ್ಯಗಂಧರು ಹುಟ್ಟಿದರಷ್ಟೆ. ಆ ಮೀನಪುತ್ರ-ಪುತ್ರಿಯನ್ನು ದಾಶರಾಜನು ಸಾಕಿದ. ಮತ್ಸ್ಯಗಂಧಿ ಸತ್ಯವತಿಯನ್ನು ತಾನೇ ಸಾಕಿದ. ಮತ್ಸ್ಯಗಂಧನನ್ನು ವಿರಾಟರಾಜ್ಯದ ಅರಸನಿಗೆ ದತ್ತಕವಾಗಿ ಕೊಟ್ಟ. ಈ ವಿರಾಟನೇ ಅವನಿರಬೇಕು ಅಥವಾ ಅವನ ವಂಶದವನಿರಬೇಕು)
ಮೂಲ ...{Loading}...
ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮ ವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ ॥27॥
೦೨೮ ಬೊಪ್ಪ ಸಾಕೀ ...{Loading}...
ಬೊಪ್ಪ ಸಾಕೀ ಬಯಲ ಡೊಂಬೆನ
ಗೊಪ್ಪುವುದೆ ವೀರೋಪಚಾರವಿ
ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ
ದರ್ಪವುಳ್ಳಂಗೀಸು ಮಂಗಳ
ವೊಪ್ಪದೇನೈ ಜಗದೊಳಾವಂ
ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಉತ್ತರ ಹೇಳಿದ. “ಅಪ್ಪ ! ಸಾಕು ! ಈ ಬಯಲ ಆಡಂಬರಕ್ಕೆ ನಾನು ಅರ್ಹನೆ ? ಇಂಥ ವೀರೋಪಚಾರ ಯೋಗ್ಯರಿಗೆ ಮಾತ್ರ ಒಪ್ಪುತ್ತದೆ. ಎಲ್ಲಾ ತೆಗೆಸಿಹಾಕು” ಎಂದ. ವಿರಾಟ ಅದನ್ನು ವಿನಯವೆಂದೇ ಭಾವಿಸಿ ನಗುತ್ತ. “ಇಂಥ ವೀರನಿಗೆ ಈ ಮಂಗಳ ಕಾರ್ಯ ಶೋಭಿಸುವುದಿಲ್ಲವೆ ? ನಿನ್ನನ್ನು ಬಿಟ್ಟರೆ ಲೋಕದಲ್ಲಿ ಈ ನಿಗರ್ವಿತೆ ಬೇರೆ ಯಾರಿಗಿದೆ ?” ಎಂದ.
ಪದಾರ್ಥ (ಕ.ಗ.ಪ)
ಬೊಪ್ಪ-ಅಪ್ಪ, ಬಯಲಡೊಂಬು-ಬರಿಯ ಆಡಂಬರ, ನಿ-ಗರ್ವಿತೆ-ವಿನಯ, ಜಂಬವಿಲ್ಲದಿರುವಿಕೆ
ಮೂಲ ...{Loading}...
ಬೊಪ್ಪ ಸಾಕೀ ಬಯಲ ಡೊಂಬೆನ
ಗೊಪ್ಪುವುದೆ ವೀರೋಪಚಾರವಿ
ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ
ದರ್ಪವುಳ್ಳಂಗೀಸು ಮಂಗಳ
ವೊಪ್ಪದೇನೈ ಜಗದೊಳಾವಂ
ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ ॥28॥
೦೨೯ ಮಗನೆ ಕರ್ಣ ...{Loading}...
ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರುಷವ ತಂದೆಲಾ ಹಂ
ಗಿಗನೆ ತಲೆಗುತ್ತಲೇಕೆಂದೆತ್ತಿನು ಮುಖವ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಗನೆ, ಕರ್ಣ ದ್ರೋಣ, ಭೀಷ್ಮ ಮೊದಲಾದವರನ್ನೆಲ್ಲ ಒಬ್ಬನೇ ಗೆದ್ದಿದ್ದೀಯೆ. ಪೂರ್ವಜರಲ್ಲಿ ಯಾರಲ್ಲಿಯೂ ಈ ಯುದ್ಧ ಪರಾಕ್ರಮ ಎಂಬುದು ಇರಲಿಲ್ಲ. ಮಗು ! ಹೆತ್ತವರ ಮನಸ್ಸಿಗೆ ಸಂತೋಷವನ್ನು ತಂದಿದ್ದೀಯೆ. ನೀನು ಯಾರ ದಾಕ್ಷಿಣ್ಯಕ್ಕೂ ಸಿಕ್ಕಿದವನಲ್ಲ. ಇದಕ್ಕೆ ತಲೆ ಬಗ್ಗಿಸಬೇಕೇಕೆ ?” ಎನ್ನುತ್ತಾ ವಿರಾಟನು ಮಗನ ಮುಖವನ್ನು ಮೇಲಕ್ಕೆ ಎತ್ತಿದ.
ಪದಾರ್ಥ (ಕ.ಗ.ಪ)
ಪೂರ್ವಪುರುಷ-ಹಿಂದಿನ ರಾಜರು, ಹಂಗಿಗ-ದಾಕ್ಷಿಣ್ಯಕ್ಕೆ ಒಳಗಾದವನು, ತಲೆಗುತ್ತು-ತಲೆ+ಕುತ್ತು-ತಲೆ ತಗ್ಗಿಸು
ಟಿಪ್ಪನೀ (ಕ.ಗ.ಪ)
ಗೆದ್ದು ಬಂದಿದ್ದರೂ ಉತ್ತರನ ಮುಖ ತುಂಬ ನಿಸ್ತೇಜವಾಗಿರುವುದನ್ನು ಗಮನಿಸಿದ ವಿರಾಟ ಅದು ಉತ್ತರನ ವಿನಯಭಂಗಿ ಎಂದು ಭಾವಿಸುತ್ತಿದ್ದಾನೆ. ಉತ್ತರನ ದ್ವಂದ್ವ ಇಲ್ಲಿ ಅರ್ಥಪೂರ್ಣವಾಗಿದೆ. ಮೊದಲಿನ ವಾಕ್ ಪೌರುಷ ಅವನಲ್ಲಿ ಈಗ ಉಳಿದಿಲ್ಲ. ಗೆದ್ದವನು ತಾನಲ್ಲ ಎಂದು ಸತ್ಯ ಹೇಳುವ ಆತುರ ಅವನಿಗೆ. ಆದರೆ ಸದ್ಯಕ್ಕೆ ಏನೂ ಹೇಳಬೇಡ ಎಂದು ಅರ್ಜುನ ಎಚ್ಚರಿಸಿದ್ದಾನೆ. ಇದೇ ಅವನ ದ್ವಂದ್ವ. ಉತ್ತರನಲ್ಲಿ ಆಗಿರುವ ಈ ಬದಲಾವಣೆ ಮೆಚ್ಚಬೇಕಾದದ್ದು.
ಮೂಲ ...{Loading}...
ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರುಷವ ತಂದೆಲಾ ಹಂ
ಗಿಗನೆ ತಲೆಗುತ್ತಲೇಕೆಂದೆತ್ತಿನು ಮುಖವ ॥29॥
೦೩೦ ಕಾದಿ ಗೆಲಿದವ ...{Loading}...
ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮಡಿ
ಯಾದರಿಸಲೊಡೆಮುರಿಚ ಬಲ್ಲೆನೆ ನಾಚಿಸದಿರೆನಲು
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಉತ್ತರ “ಅಪ್ಪ ! ಹೋರಾಡಿ ಗೆದ್ದವನೇ ಬೇರೆ. ನಾನು ಸಾರಥಿಯಾಗಿದ್ದೆ ಅಷ್ಟೆ. ಸಾರಥಿಗೆ ನೀವೆಲ್ಲ ಇಷ್ಟೊಂದು ಆದರ ತೋರುವಿರೇಕೆ ? ನೀವು ಹೀಗೆ ಗೌರವಿಸಿದರೆ ನಾನು ಒಡೆಮುರಿಚಬಲ್ಲೆನೆ (ಒಡನೆಯೇ ಹಿಂದಿರುಗಿಸಬಲ್ಲೆನೆ) ನನಗೆ ನಾಚಿಕೆ ತರಬೇಡ” ಎಂದ. ಆಗ ವಿರಾಟನು “ಹಾಗಲ, ಕಾದಿದವನು ನೀನು. ಸಾರಥಿಯಾಗಿದ್ದವನು ಬೃಹನ್ನಳೆ ! ನಮ್ಮೊಡನೆ ವಾದ ಮಾಡಬೇಡ. ನಿನ್ನ ಪರಾಕ್ರಮ ನನಗೆ ಗೊತ್ತು” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಈಸು-ಇಷ್ಟೊಂದು, ವಿಕ್ರಮ-ಪರಾಕ್ರಮ ಬಲ ಒಡೆಮುರಿಚು… ಈ ಶಬ್ದಕ್ಕೆ ಒಡೆಯುವಂತೆ ಹಿಂದಿರುಗಿಸು ಎಂಬ ಅರ್ಥವನ್ನು ಕನ್ನಡ ಕನ್ನಡ ನಿಘಂಟಿನಲ್ಲಿ ಮತ್ತು ಕೃಷ್ಣಜೋಯಿಸರ ವಿರಾಟ ಪರ್ವ 10-30ರಲ್ಲಿ ಹೇಳಲಾಗಿದೆ. ದನಗಳನ್ನು ಹಿಂದಕ್ಕೆ ತರಬಲ್ಲೆನೆ ? ಆ ವೀರರನ್ನು ಸೋಲಿಸಬಲ್ಲೆನೆ ? ಎಂದು ಅನ್ವಯಿಸಿಕೊಳ್ಳಬೇಕಾಗಿದೆ.
ಮೂಲ ...{Loading}...
ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮಡಿ
ಯಾದರಿಸಲೊಡೆಮುರಿಚ ಬಲ್ಲೆನೆ ನಾಚಿಸದಿರೆನಲು
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ ॥30॥
೦೩೧ ಅದಟುತನವೆನಗುಣ್ಟೆ ಬೆನ್ದುದ ...{Loading}...
ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಉತ್ತರ “ಅಯ್ಯೋ ! ನನಗೆ ಆ ಪರಾಕ್ರಮ ಎಂಬುದು ಇದೆಯೆ ? ಮೊದಲೇ ಬೆಂದಿದ್ದೇನೆ. ಈಗ ಅದನ್ನು ಮತ್ತೆ ಚುಚ್ಚಿ ನೋಯಿಸಬೇಡ. ಹಗಲಿನ ಕದನದಲ್ಲಿ ಗೆದ್ದಾತ ಬೇರೆಯವನು. ಅಪ್ಪ ಮಾತಾಡಬೇಡ. ನಾಳೆ ಬೆಳಗ್ಗೆ ಆ ವಿಜಯಶೀಲನನ್ನು ನಿಮ್ಮೆದುರಿಗೆ ತೋರಿಸುತ್ತೇನೆ. ಈಗ ನನ್ನನ್ನು ಮನೆಗೆ ಕಳಿಸಿ ಸಾಕು” ಎಂದು ಹೇಳಿ ಹೊರಟು ಹೋದ.
ಪದಾರ್ಥ (ಕ.ಗ.ಪ)
ಅದಟುತನ-ಪರಾಕ್ರಮ, ಬೆಂದುದ ಬೆದಕಿ ನೋಯಿಸಬೇಡ-ಇದೊಂದು ಪಡೆನುಡಿ. ಮೊದಲೇ ಮೈಯೆಲ್ಲ ಬೆಂದು ವ್ಯಕ್ತಿ ಗೋಳಾಡುತ್ತಿದ್ದರೆ ಕೆಲವರು ಅದನ್ನು ಕೆದಕಲು ಹೋಗುತ್ತಾರೆ ಆಗ ಇನ್ನಷ್ಟು ಯಾತನೆ. “ಬೆಂದುದನು ಕೀಸುವರೆ ಕಂಬಿಯಲಿ” - ಚಾಮರಸ.
ಟಿಪ್ಪನೀ (ಕ.ಗ.ಪ)
ಮೂಲಭಾರತದ ಉತ್ತರನು ತನ್ನನ್ನು ಕಾಪಾಡಿದವನು, ಯುದ್ಧದಲ್ಲಿ ಗೆದ್ದವನು ಒಬ್ಬ ದೇವಪುತ್ರನೆಂದೂ ಈಗ ಅಂತರ್ಧಾನನಾಗಿದ್ದಾನೆಂದೂ ಮರುದಿವಸ ಕಾಣಬಹುದೆಂದೂ ವಿರಾಟನಿಗೆ ಹೇಳುತ್ತಾನೆ.
ಮೂಲ ...{Loading}...
ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ ॥31॥
೦೩೨ ಇತ್ತಲರ್ಜುನ ದೇವ ...{Loading}...
ಇತ್ತಲರ್ಜುನ ದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಅರ್ಜುನದೇವನು ಉತ್ತರೆಯ ಬಳಿಗೆ ಹೋದ. ತಾನು ಯುದ್ಧ ಭೂಮಿಯಿಂದ ತಂದಿದ್ದ ಉತ್ತಮ ವಸ್ತ್ರ, ರತ್ನಾಭರಣವಸ್ತುಗಳು ಎಲ್ಲವನ್ನು ಅವಳಿಗೆ ನೀಡಿದ. ಅನಂತರ ಸಂತಸದಿಂದ ಆ ಚಂದ್ರವಂಶದ ಮದಿಸಿದ ಆನೆಯಂತಿದ್ದ ಅರ್ಜುನನು ಭೀಮಾಗ್ರಜನಾದ ಧರ್ಮರಾಯನ ಬಳಿಗೆ ಬಂದ.
ಪದಾರ್ಥ (ಕ.ಗ.ಪ)
ಅಂಬರ-ವಸ್ತ್ರ, ಸಾರು-ಸಮೀಪಿಸು, ಮುದಮಿಗು-ಸಂತೋಷ ಹೆಚ್ಚಾಗು, ಶಶಿಕುಲ ಮತ್ತವಾರಣ-ಶಶಿಕುಲ ಪಾಂಡವರ ಚಂದ್ರವಂಶದ ಮತ್ತವಾರಣ-ಮದಿಸಿದ ಆನೆ-ಅರ್ಜುನ, ಹೊರೆಗೆ-ಬಳಿಗೆ
ಮೂಲ ...{Loading}...
ಇತ್ತಲರ್ಜುನ ದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ ॥32॥
೦೩೩ ಬಳಿಕ ಸಙ್ಕೇತದಲಿ ...{Loading}...
ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ
ಫಲುಗುಣನು ಹೊಡವಂಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಗುಟ್ಟಾಗಿ ಭೀಮನೂ ಅಲ್ಲಿಗೆ ಬಂದ. ದ್ರೌಪದಿ ಸಹದೇವ ನಕುಲರೂ ಅಲ್ಲಿಗೆ ಬಂದರು. ಅರ್ಜುನನು ಭೀಮ ಧರ್ಮರಾಯರಿಗೆ ನಮಸ್ಕರಿಸಿದ. ಉಳಿದವರು ಅವನಿಗೆ ನಮಸ್ಕರಿಸಿದರು. ಸಮಬಲರಾದ ತಮ್ಮಂದಿರನ್ನು ಅರ್ಜುನನು ಪ್ರೀತಿಯಿಂದ ತಬ್ಬಿಕೊಂಡ.
ಪದಾರ್ಥ (ಕ.ಗ.ಪ)
ಸಂಕೇತ-ಸನ್ನೆ , ನಳಿನಮುಖಿ-ಕಮಲಮುಖಿ(ದ್ರೌಪದಿ), ಹೊಡವಂಡು-ನಮಸ್ಕರಿಸು, ಪರಿತೋಷ-ಸಂತಸ
ಮೂಲ ...{Loading}...
ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ
ಫಲುಗುಣನು ಹೊಡವಂಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ ॥33॥
೦೩೪ ಉಳಿದ ನಾಲ್ವರು ...{Loading}...
ಉಳಿದ ನಾಲ್ವರು ಕಲಿ ತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನನ್ನು ಬಿಟ್ಟು ಉಳಿದವರು ಗೋಗ್ರಹಣ ಮಾಡಿ ವಿರಾಟನನ್ನು ಸೆರೆಹಿಡಿದ ವೀರ ತ್ರಿಗರ್ತರ ಮೇಲೆ ಯುದ್ಧ ಮಾಡಿ ಗೆದ್ದ ಬಗೆಯನ್ನು ಹೇಳಿಕೊಂಡರು. ಅರ್ಜುನನು ಗೋಗ್ರಹಣದಲ್ಲಿ ಕೌರವ ಸೇನೆಗೆ ಭಂಗ ತಂದ ಬಗೆಯನ್ನು ವಿವರಿಸಿದ. ಹೀಗೆ ಮಾತುಕತೆ ನಡೆಯುತ್ತಿರುವಾಗ ಅರ್ಜುನನಿಗೆ ಅಣ್ಣ ಧರ್ಮರಾಯನ ಹಣೆಯಲ್ಲಾದ ಗಾಯ ಕಣ್ಣಿಗೆ ಬಿತ್ತು. “ಏನಿದು ? ಅಣ್ಣನ ಹಣೆಯಿಂದ ರಕ್ತ ತೊಟ್ಟಿಕ್ಕುತ್ತಿದೆಯಲ್ಲ” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ನೊಸಲು-ಹಣೆ, ನಿಲುಕು- ಕಾಣಿಸು
ಮೂಲ ...{Loading}...
ಉಳಿದ ನಾಲ್ವರು ಕಲಿ ತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ ॥34॥
೦೩೫ ಅನವಧಾನದೊಳಾಯ್ತು ಸಾಕದ ...{Loading}...
ಅನವಧಾನದೊಳಾಯ್ತು ಸಾಕದ
ನೆನೆಯಲೇತಕೆ ಮಾಣೆನಲು ಮಿಗೆ
ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ
ಮನದಲುರಿದೆದ್ದನು ವಿರಾಟನ
ತನುವ ಹೊಳ್ಳಿಸಿ ರಕುತವನು ಶಾ
ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಧರ್ಮರಾಯನು “ಸ್ವಲ್ಪ ಎಚ್ಚರಿಕೆ ತಪ್ಪಿ ಹೀಗಾಯಿತು. ಅಲ್ಲಿಗೆ ಸಾಕು. ಮತ್ತೆ ಅದನ್ನು ನೆನಪಿಸಿಕೊಳ್ಳುವುದು ಬೇಡ” ಎಂದು ಜಾರಿಕೆಯ ಮಾತಾಡಿದ. ಆದರೆ ಅರ್ಜುನನು ಕೆರಳಿ ದ್ರೌಪದಿಯ ಬಳಿ ಹೋಗಿ ಆಣೆ ಪ್ರಮಾಣ ಮಾಡಿಸಿ ನಿಜವಾಗಿ ನಡೆದದ್ದೇನು ಎಂಬುದನ್ನು ಅವಳಿಂದ ತಿಳಿದ. ಕೂಡಲೇ ಕೆರಳಿ ನಿಂತು, “ನಾನು ಈಗಲೇ ಹೋಗಿ ಆ ವಿರಾಟನ ದೇಹವನ್ನು ಹೊಳ್ಳಿಸಿ ಅವನ ಮೈಯ ರಕ್ತವನ್ನು ಶಾಕಿನಿಯರಿಗೆ ಹೊಯ್ಯಿಸುತ್ತೇನೆ ಇದರಲ್ಲೇನು ತಪ್ಪು ?” ಎಂದು ಗರ್ಜಿಸಿದ.
ಪದಾರ್ಥ (ಕ.ಗ.ಪ)
ಅನವಧಾನ-ಎಚ್ಚರಿಕೆ ತಪ್ಪುವಿಕೆ (ಅವಧಾನ=ಎಚ್ಚರ), ಮಾಣ್-ನಿಲ್ಲಿಸು, ಕವಲು-ಕೆರಳು, ಸೂರುಳಿಸು-ಸೂರುಳ್ ಪ್ರತಿಜ್ಞೆ ಮಾಡು, ಪ್ರತಿಜ್ಞೆ ಮಾಡಿಸು ಹೊಳ್ಳಿಸು-ಹೊರಳಿಸು-ಪೊಳ್ಳು (ಜೊಳ್ಳು) ಮಾಡು, ಶಾಕಿನಿ-ಕ್ಷುದ್ರ ರಾಕ್ಷಸಿ, ಹೊಲ್ಲೆಹ-ತಪ್ಪು,
ಟಿಪ್ಪನೀ (ಕ.ಗ.ಪ)
ಧರ್ಮರಾಯನ ಬಗೆಗೆ ಉಳಿದ ತಮ್ಮಂದಿರಿಗೆ ಇದ್ದ ಪ್ರೀತಿ ಮತ್ತು ಅವನಿಗೆ ಏನೂ ಆಪತ್ತಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯ ಸಂಗತಿ ಇಲ್ಲಿ ಬೆಳಕಿಗೆ ಬರುತ್ತದೆ. ಅಣ್ಣ ಧರ್ಮರಾಯನ ಮೈಯಿಂದ ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದರೆ ಅದಕ್ಕೆ ಕಾರಣರಾದವರನ್ನು ಕೊಲ್ಲುವ ಪ್ರತಿಜ್ಞೆ ಅವರದು. ಅದಕ್ಕೇ ವಿರಾಟನು ಎಸೆದ ದಾಳದಿಂದ ಹಣೆಗೆ ಪೆಟ್ಟಾಗಿ ರಕ್ತ ಸುರಿದಾಗ ಅದು ನೆಲಕ್ಕೆ ಬೀಳದಂತೆ ಧರ್ಮರಾಯನು ಬೊಗಸೆಯಲ್ಲಿ ಹಿಡಿದದ್ದು, ದ್ರೌಪದಿಯ ಕಡೆ ನೋಡಿದ್ದು, ಅವಳು ಓಡಿ ಬಂದು ತನ್ನ ಸೆರಗಿನಿಂದ ಹಣೆಯನ್ನು ಒರೆಸಿದ್ದು, ರಕ್ತವನ್ನೆಲ್ಲ ಸೆರಗಿನಲ್ಲಿ ನೆನೆಸಿದ್ದು ಇತ್ಯಾದಿ.
ಮೂಲ ...{Loading}...
ಅನವಧಾನದೊಳಾಯ್ತು ಸಾಕದ
ನೆನೆಯಲೇತಕೆ ಮಾಣೆನಲು ಮಿಗೆ
ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ
ಮನದಲುರಿದೆದ್ದನು ವಿರಾಟನ
ತನುವ ಹೊಳ್ಳಿಸಿ ರಕುತವನು ಶಾ
ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ ॥35॥
೦೩೬ ಕಳುಹಬೇಕೇ ಕೀಚಕೇನ್ದ್ರನ ...{Loading}...
ಕಳುಹಬೇಕೇ ಕೀಚಕೇಂದ್ರನ
ಬಳಗವಿದ್ದಲ್ಲಿಗೆ ವಿರಾಟನ
ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ
ನೆಲದೊಳೊಕ್ಕುದೆ ರಕ್ತವವದಿರ
ಕುಲವ ಸವರುವೆನಿವನ ಸೀಳಿದು
ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಓಹೋ ! ಈಗ ವಿರಾಟನ ತಲೆಯನ್ನು ಕೀಚಕ ಮಹಾನುಭಾವನ ಬಳಗದ ಬಳಿಗೆ ಕಳಿಸಬೇಕೇನು ? ಆ ವಿರಾಟನು ತನ್ನ ತಲೆಯನ್ನು ಒಪ್ಪಿಸುವ ಋಣಗಾರನಾಗಿದ್ದಾನೇನು ? “ರಕ್ತ ನೆಲಕ್ಕೆ ಬಿತ್ತೇನು ? ಹಾಗೆ ಬಿದ್ದಿದ್ದರೆ ಆ ವಿರಾಟನ ಕುಲದವರನ್ನೆಲ್ಲ ಸವರಿ ಹಾಕುತ್ತೇನೆ. ಈ ವಿರಾಟನನ್ನು ಸೀಳಿ ಭೂತಗಳಿಗೆ ಬಲಿ ಕೊಡುತ್ತೇನೆ” ಎನ್ನುತ್ತ ಭೀಮ ಎದ್ದು ನಿಂತ.
ಪದಾರ್ಥ (ಕ.ಗ.ಪ)
ಕೀಚಕೇಂದ್ರ-ಇದು ವ್ಯಂಗ್ಯದ ಗೌರವ ಸಂಬೋಧನೆ, ಋಣಸಾಲಿಗ-ಋಣದ ಸಾಲವನ್ನು ತೀರಿಸಬೇಕಾದವನು, ಒಕ್ಕು-ಸುರಿ, ಸೀಳಿದು-ಸೀಳಿ
ಮೂಲ ...{Loading}...
ಕಳುಹಬೇಕೇ ಕೀಚಕೇಂದ್ರನ
ಬಳಗವಿದ್ದಲ್ಲಿಗೆ ವಿರಾಟನ
ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ
ನೆಲದೊಳೊಕ್ಕುದೆ ರಕ್ತವವದಿರ
ಕುಲವ ಸವರುವೆನಿವನ ಸೀಳಿದು
ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ ॥36॥
೦೩೭ ಕಾಕ ಬಳಸಲು ...{Loading}...
ಕಾಕ ಬಳಸಲು ಬೇಡ ಹೋ ಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಭೀಮ ! ಸಾಕು ! ಸಿಟ್ಟು ಮಾಡಿಕೊಳ್ಳಬೇಡ. ನನ್ನ ಹಣೆಯ ರಕ್ತ ನೆಲಕ್ಕೆ ಬಿದ್ದಿಲ್ಲ. ನಾಶಮಾಡುವುದರ ಬಗ್ಗೆ ಮಾತಾಡಬೇಡ. ನಿನ್ನ ಆಣೆಗೂ ಹೇಳುತ್ತಿದ್ದೇನೆ. ಏನಿಲ್ಲ. ರಕ್ತ ಇಳಿದದ್ದು ನಿಜ. ಆದರೆ ಅದು ದ್ರೌಪದಿಯ ಸೆರಗಿಗೆ ಸುರಿಯಿತು ಅಷ್ಟೆ. ಈ ಬಗೆಗೆ ತುಂಬ ಹಚ್ಚಿಕೊಳ್ಳಲು ಹೋಗಬೇಡ” ಎಂದು ಹೇಳಿದ್ದೇ ಅಲ್ಲದೆ ಧರ್ಮರಾಯ ಭೀಮನ ಗಲ್ಲವನ್ನು ಸವರಿ ಸಮಾಧಾನ ಮಾಡಿದ.
ಪದಾರ್ಥ (ಕ.ಗ.ಪ)
ಕಾಕು-ನಾಶ, ಕೇಡು, ಮಾಣು-ನಿಲ್ಲಿಸು, ಉದ್ರೇಕ-ಕೋಪ, ಕಮಲಲೋಚನೆ-ಕಮಲಾಕ್ಷಿ (ದ್ರೌಪದಿ) ಅನಿಲಜ-ಭೀಮ (ವಾಯುಪುತ್ರ)
ಮೂಲ ...{Loading}...
ಕಾಕ ಬಳಸಲು ಬೇಡ ಹೋ ಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ ॥37॥
೦೩೮ ಕೊಮ್ಬೆನಾತನ ಜೀವವನು ...{Loading}...
ಕೊಂಬೆನಾತನ ಜೀವವನು ಪತಿ
ಯೆಂಬ ಗರ್ವವನವನ ನೆತ್ತಿಯ
ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಯ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನಾನು ಆ ವಿರಾಟನ ಜೀವವನ್ನು ತೆಗೆದುಕೊಳ್ಳುತ್ತೇನೆ. ಅವನಿಗೆ ತಾನು ಯಜಮಾನ ಎಂಬ ಗರ್ವ ತಲೆಯಲ್ಲಿ ತುಂಬಿ ಕೊಂಡಿದೆಯಲ್ಲ ! ಅದು ನಿರ್ನಾಮವಾಗುವಂತೆ ಬಡಿಯುತ್ತೇನೆ. ವಿರಾಟ ಸಂತತಿಯನ್ನೇ ನಿರ್ಮೂಲ ಮಾಡುತ್ತೇನೆ. ಕೀಚಕನು ದ್ರೌಪದಿಯ ತಂಟೆಗೆ ಹೋದುದಕ್ಕೂ ಈತನೇ ಕಾರಣ ! ಇವನನ್ನು ಕೊಂದು ಭೂತಗಣಕ್ಕೆ ಸಮಾಧಾನ ಮಾಡಬೇಕಾಗಿದೆ. ನನ್ನನ್ನು ತಡೆಯಬೇಡಿ” ಎಂದು ಕೂಗಾಡಿದ.
ಪದಾರ್ಥ (ಕ.ಗ.ಪ)
ತರಿ-ಕತ್ತರಿಸು, ಬೇಳಂಬ-ವಂಚನೆ, ಭೂತ ಕದಂಬ-ಭೂತ ಸಮೂಹ, ತುಷ್ಟಿ-ತೃಪ್ತಿ, ಸೆರಗಬಿಡಿ-ನನ್ನನ್ನು ಬಿಟ್ಟು ಬಿಡಿ ಎಂಬ ಭಾವ (ಸ್ವತಂತ್ರವಾಗಿರಲು ಬಿಡಿ) ಬೇಹುದು-ಬೇಳ್ಪುದು=ಮಾಡಬೇಕಾಗಿದೆ.
ಮೂಲ ...{Loading}...
ಕೊಂಬೆನಾತನ ಜೀವವನು ಪತಿ
ಯೆಂಬ ಗರ್ವವನವನ ನೆತ್ತಿಯ
ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಯ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ ॥38॥
೦೩೯ ಇವನ ನಾವೋಲೈಸಿ ...{Loading}...
ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನ ಜನವುಭ್ರಮಿಸದಿರು ಸೈರಣೆಗೆ ಮನ ಮಾಡು
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ತಮ್ಮನಿಗೆ ಹೇಳಿದ. " ಭೀಮ ! ನಾವು ಇಷ್ಟು ದಿನ ಈ ವಿರಾಟರಾಯನ ಆಶ್ರಯದಲ್ಲಿದ್ದು, ಕೂಡಲೇ ಅವನ ಮೇಲೆ ಕೆರಳಿ ನಿಂತರೆ ಲೋಕದ ಜನ ಏನೆಂದಾರು ? ನೀನು ಉಭ್ರಮಿಸಬೇಡ. ಕೆರಳಬೇಡ. ಸ್ವಲ್ಪ ಸಹನೆ ಇರಲಿ. ಇದು ನಮಗೆ ಸಕಾಲವಲ್ಲ, ನೋವಿನ ಕಾಲ. ವಿಧಿ ನಮ್ಮನ್ನು ಅಣಕಿಸುತ್ತಿರುವ ಕಾಲ ಇದು. ಇದಕ್ಕೆ ಜನರನ್ನು ಹಿಂಸೆಪಡಿಸಿದರೆ ನಮಗೇ ಹಾನಿಯಾದೀತು." ಆಗ ಭೀಮ ಹೇಳಿದ.
ಪದಾರ್ಥ (ಕ.ಗ.ಪ)
ಓಲೈಸು-ಸೇವೆಮಾಡು, ಕೈಯೊಡನೆ-ತತ್ಕ್ಷಣ, ಲೋಗರು-ಜನ, ಭುವನ-ಲೋಕ, ಅವಗಡಿಸು-ಅವಹೇಳನ ಮಾಡು, ನಿಂದಿಸು, ಉಭ್ರಮಿಸದಿರು… ಉದ್ಭ್ರಮಿಸದಿರು, ಸಿಡುಕಬೇಡ. [ನೋಡಿ: ಅನಿಲಸುತನುಭ್ರಮಿತನವ ಸೈರಿಸುವುದೈ ಕಾರುಣ್ಯನಿಧಿ ನೀನು.
ಅರಣ್ಯ ಪರ್ವ 20-19] (ಉಬ್ಬೆಮೆ-ಅಧಿಕವಾದ ಭ್ರಮೆ, ಆವೇಗ, ತವಕ)
ಮೂಲ ...{Loading}...
ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನ ಜನವುಭ್ರಮಿಸದಿರು ಸೈರಣೆಗೆ ಮನ ಮಾಡು
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ ॥39॥
೦೪೦ ಬರಿಯ ಧರ್ಮದ ...{Loading}...
ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇರು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ
ಉರುಕುಗೊಂಡೊಡೆ ರಾಜ ತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಲ್ಲ ನಾವು ಸುಮ್ಮನೆ ಧರ್ಮ ಧರ್ಮ ಎಂಬ ರೋಗದಿಂದ ನರಳುತ್ತ ಮೈಮರೆತು ಕಾಡಿನಲ್ಲಿ ಬೇವು ಭಿಕ್ಕೆಗಳನ್ನು ಪಡೆಯಲು ಈ ಹದಿಮೂರು ವರ್ಷ ಓಡಾಡಿದ್ದು ಸಾಲದೇನು ? ನಾವು ಉರುಕುಗೊಂಡರೆ ಕ್ಷಾತ್ರ ತೇಜವನ್ನು ಮೆರೆಯುವ ದಿನ ಎಂದಿಗೆ ಬರುತ್ತದೆ ? ನಿಮಗೆ ಗೊತ್ತಿಲ್ಲ. ದಯವಿಟ್ಟು ನಮ್ಮನ್ನು ಮುನ್ನುಗ್ಗಲು ಬಿಡಿ” ಎಂದು ಭೀಮನು ಹೇಳಿದನು.
ಪದಾರ್ಥ (ಕ.ಗ.ಪ)
ಜಾಡ್ಯ-ರೋಗ, ತೊಳಲಿದು-ಸಂಚರಿಸಿ, ವತ್ಸರ-ವರ್ಷ, ಉರುಕುಗೊಳ್-ಹಿಂದಕ್ಕೆ ಸರಿ, ಉಱುಕು-ಭಯ, ಹರಿಯಬಿಡು-ಮುಂದೆ ನುಗ್ಗಲು ಬಿಡು. ಬೇವು ಬಿಕ್ಕೆ- ಬಿಕ್ಕೆ ಶಬ್ದ ಹಳಗನ್ನಡದ ‘ಬಿೞೆ್ಕ’. ಬಿೞೆ್ಕ ಎಂಬುದು ಕಾಡಿನ ಮರಂ ಎನ್ನುತ್ತಾನೆ ಕೇಶಿರಾಜ.
ಪಾಠಾನ್ತರ (ಕ.ಗ.ಪ)
ಬೇವು ಬಿಕ್ಕೆ…. ಈ ಸಾಲನ್ನು ಬೇರು ಬಿಕ್ಕೆಯನರಸಿ… ಎಂದು ಮಾಡಿಕೊಂಡಿದೆ.
ವಿರಾಟಪರ್ವ, ಮೈ.ವಿ.ವಿ.
ಏಕೆಂದರೆ ಪಂಪಭಾರತ ನೇಮಿನಾಥ ಪುರಾಣ, ಕಾದಂಬರಿ, ಕುವೆಂಪು ಅವರ ಚಿತ್ರಾಂಗದಾಗಳಲ್ಲಿ ಬೇರು ಬಿಕ್ಕೆ (ಬಿೞೆ್ಕ) ಎಂಬ ಪದ ಪ್ರಯೋಗಗಳೇ ಇವೆ ಬಿಕ್ಕೆ ಒಂದು ಮರ, ಅದರ ಹಣ್ಣು. ತುಮಕೂರಿನ ಪ್ರದೇಶದಲ್ಲಿ ಬಿಕ್ಕೆ ಎಂದರೆ ಕಾಡು ಸೀಬೆಹಣ್ಣು.
ಮೂಲ ...{Loading}...
ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇರು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ
ಉರುಕುಗೊಂಡೊಡೆ ರಾಜ ತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ ॥40॥
೦೪೧ ಉದಯದಲಿ ನಾವಿನಿಬರಾತನ ...{Loading}...
ಉದಯದಲಿ ನಾವಿನಿಬರಾತನ
ಸದನದಲಿ ನೃಪಪೀಠವನು ಗ
ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ
ಮದಮುಖನನೊರಸುವೆವು ಹರುಷದ
ಲಿದಿರುಗೊಂಡೊಡೆ ಮನ್ನಿಸುವ ಮಾ
ತಿದುವೆ ಸನ್ಮತವೆಂದು ಸಂತೈಸಿದನು ಪವನಜನ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
41." ನಾಳೆ ಬೆಳಗ್ಗೆ ನಾವು ಐವರೂ ವಿರಾಟನ ರಾಜಸಭೆಯಲ್ಲಿ ರಾಜಪೀಠಗಳ ಮೇಲೆ ಠೀವಿಯಿಂದ ಕುಳಿತುಕೊಳ್ಳೋಣ. ಆ ವಿರಾಟ ನಮ್ಮಲ್ಲಿ ತಪ್ಪು ಕಾಣುವುದಿಲ್ಲ. ಒಂದು ವೇಳೆ ಅವನು ಕೋಪಿಸಿಕೊಂಡರೆ ಆ ಗರ್ವಿಷ್ಠನನ್ನು ಒರೆಸಿಹಾಕೋಣ. ಅಥವಾ ಸಂತೋಷದಿಂದ ನಮ್ಮನ್ನು ಸ್ವಾಗತಿಸಿದರೆ ಅವನನ್ನು ಮನ್ನಿಸೋಣ" ಹೀಗೆ ಹೇಳಿ ಧರ್ಮರಾಯನು ಭೀಮನನ್ನು ಸಮಾಧಾನ ಪಡಿಸಿದ.
ಪದಾರ್ಥ (ಕ.ಗ.ಪ)
ಉದಯ- ಬೆಳಗ್ಗೆ, ಇನಿಬರು- ಇಷ್ಟು ಜನ, ಸದನ-ಮನೆ, ನೃಪಪೀಠ-ಸಿಂಹಾಸನ, ಖೋಡಿ-ಕೇಡು, ಮದಮುಖ-ಗರ್ವಿಷ್ಠ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಉತ್ತರ ಕುಮಾರನೊಂದಿಗೆ ಸಮಾಲೋಚಿಸಿ ಪಾಂಡವರು ಮರು ದಿವಸ ಕ್ಷಾತ್ರ ವೇಷದಲ್ಲಿ ಬಂದರೆಂದು ಹೇಳಲಾಗಿದೆ.
ಮೂಲ ...{Loading}...
ಉದಯದಲಿ ನಾವಿನಿಬರಾತನ
ಸದನದಲಿ ನೃಪಪೀಠವನು ಗ
ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ
ಮದಮುಖನನೊರಸುವೆವು ಹರುಷದ
ಲಿದಿರುಗೊಂಡೊಡೆ ಮನ್ನಿಸುವ ಮಾ
ತಿದುವೆ ಸನ್ಮತವೆಂದು ಸಂತೈಸಿದನು ಪವನಜನ ॥41॥