೦೦೦ ಸೂ ರಾಯ ...{Loading}...
ಸೂ. ರಾಯ ರಿಪುಬಲಜಲಧಿ ವಡಬನ
ಜೇಯನರ್ಜುನನಖಿಳ ಕೌರವ
ರಾಯ ದಳವನು ಜಯಿಸಿದನು ಸಮ್ಮೋಹನಾಸ್ತ್ರದಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕೌರವರೆಂಬ ಶತ್ರುಗಳ ಸಮುದ್ರದ ಪಾಲಿಗೆ ವಡಬಾಗ್ನಿಯಾಗಿದ್ದ, ಅಜೇಯನಾದ ಅರ್ಜುನನು ಸಮ್ಮೋಹನಾಸ್ತ್ರದಿಂದ ಸಮಸ್ತ ಕೌರವ ಸೇನೆಯನ್ನು ಜಯಿಸಿದ.
ಪದಾರ್ಥ (ಕ.ಗ.ಪ)
ಸಮ್ಮೋಹನಾಸ್ತ್ರ-ಇದು ರಸಾಯನ ಯುದ್ಧಕ್ಕೆ ಸಂವಾದಿಯಾದ ಒಂದು ಮಹಾಸ್ತ್ರ. ಇದರ ಪ್ರಭಾವದಿಂದ ಎಲ್ಲರೂ ತಾತ್ಕಾಲಿಕವಾಗಿ ಮೂರ್ಛೆಗೆ ಒಳಗಾಗುತ್ತಾರೆ. ಒಂದು ಪೌರಾಣಿಕ ಅಸ್ತ್ರ. ಮನ್ಮಥನ ಪಂಚಬಾಣಗಳಲ್ಲಿ ಒಂದರ ಹೆಸರು. ಒಂದು ವಶೀಕರಣ ತಂತ್ರಕ್ಕೆ ಸಂಬಂಧಿಸಿದ ಶಬ್ದ,
ವಡಬನು = ಸಮುದ್ರದೊಳಗಿನ ಬೆಂಕಿ
ಮೂಲ ...{Loading}...
ಸೂ. ರಾಯ ರಿಪುಬಲಜಲಧಿ ವಡಬನ
ಜೇಯನರ್ಜುನನಖಿಳ ಕೌರವ
ರಾಯ ದಳವನು ಜಯಿಸಿದನು ಸಮ್ಮೋಹನಾಸ್ತ್ರದಲಿ
೦೦೧ ಮರಳಿದವು ತುರು ...{Loading}...
ಮರಳಿದವು ತುರು ಮಾರಿಗೌತಣ
ಮರಳಿ ಹೇಳಿತು ಹಸಿದ ಹೆಬ್ಬುಲಿ
ಮೊರೆಯೆ ದನಿದೋರಿದವು ಹುಲು ಮೃಗವೇನನುಸುರುವೆನು
ಧರಣಿಪನ ಹಿಂದಿಕ್ಕಿ ಸೌಬಲ
ದುರುಳ ದುಶ್ಶಾಸನ ಜಯದ್ರಥ
ರುರುಬಿದರು ತರುಬಿದರು ಪರಬಲ ಕಾಲಭೈರವನ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದನಕರುಗಳು ಊರಿಗೆ ಹಿಂದಿರುಗಿದವು. ಮತ್ತೆ ಮಾರಿಗೆ ಔತಣಕ್ಕೆ (ಯುದ್ಧ ) ಪುನಃ ಕರೆ ನೀಡಲಾಯಿತು. ಹಸಿದ ಹೆಬ್ಬುಲಿ ಗರ್ಜಿಸಲು, ಕ್ಷುದ್ರ ಮೃಗಗಳು ತಾವೂ ಧ್ವನಿಮಾಡಿದವು. ಏನು ಹೇಳಲಿ ! ಕೌರವನನ್ನು ಹಿಂದೆ ಕಳಿಸಿ ಶಕುನಿ ದುಶ್ಶಾಸನ ಜಯದ್ರಥ ಮೊದಲಾದವರು ರಭಸದಿಂದ ಮುನ್ನುಗ್ಗಿ ಅರ್ಜುನನೆಂಬ ಪರಕಾಲ (ಶತ್ರುಸೇನೆಯ) ಭೈರವನನ್ನು ಅಡ್ಡಗಟ್ಟಿದರು.
ಪದಾರ್ಥ (ಕ.ಗ.ಪ)
ಹುಲುಮೃಗ-ಕ್ಷುಲ್ಲಕ ಜಿಂಕೆ, ಉರುಬು-ರಭಸದಿಂದ ಮುನ್ನುಗ್ಗು, ತರುಬು-ಅಡ್ಡಗಟ್ಟು
ಹಸಿದ ಹೆಬ್ಬುಲಿ ಅಂದರೆ ಅರ್ಜುನ. ಅವನು ಗರ್ಜಿಸಿದಾಗ ಸಾಧಾರಣ ಜಿಂಕೆಗಳು ಅಂದರೆ ಕೌರವರು ತಾವೂ ಸದ್ದು ಮಾಡಿದರು ಎಂಬ ವ್ಯಂಗ್ಯ ಇಲ್ಲಿಗೆ (ಹಸಿದ ಹೆಬ್ಬುಲಿ ಮೊರೆ’ಯೆ’ ಎಂಬ ಪಾಠವೂ ಇದೆ. ಅದಕ್ಕೂ ಇದೇ ಅರ್ಥ)
ಪಾಠಾನ್ತರ (ಕ.ಗ.ಪ)
ಹಸಿದ ಹೆಬ್ಬುಲಿ
ಮೊರೆಯ ದನಿದೋರಿದವು ಹುಲು ಮೃಗವೇನನುಸುರುವೆನು
ಹಸಿದ ಹೆಬ್ಬುಲಿ
ಮೊರೆಯೆ ದನಿದೋರಿದವು ಹುಲು ಮೃಗವೇನನುಸುರುವೆನು - ವಿರಾಟ ಪರ್ವ, ಮೈ.ವಿ.ವಿ.
ಮೂಲ ...{Loading}...
ಮರಳಿದವು ತುರು ಮಾರಿಗೌತಣ
ಮರಳಿ ಹೇಳಿತು ಹಸಿದ ಹೆಬ್ಬುಲಿ
ಮೊರೆಯೆ ದನಿದೋರಿದವು ಹುಲು ಮೃಗವೇನನುಸುರುವೆನು
ಧರಣಿಪನ ಹಿಂದಿಕ್ಕಿ ಸೌಬಲ
ದುರುಳ ದುಶ್ಶಾಸನ ಜಯದ್ರಥ
ರುರುಬಿದರು ತರುಬಿದರು ಪರಬಲ ಕಾಲಭೈರವನ ॥1॥
೦೦೨ ಹತ್ತು ಸಾವಿರ ...{Loading}...
ಹತ್ತು ಸಾವಿರ ರಥ ಸಹಿತ ಭಟ
ರೊತ್ತಿ ಕವಿದರು ಲಗ್ಗೆವರೆಯಲಿ
ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ
ಸತ್ತಿಗೆಯ ಸಾಲುಗಳೊಳಂಬರ
ಕೆತ್ತುದೆನೆ ಕುಲಶೈಲ ನಿಚಯದ
ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹತ್ತು ಸಾವಿರ ರಥಗಳಲ್ಲಿ ವೀರರು ಸುತ್ತ ಕವಿದು ನಿಂತರು. ಯುದ್ಧ ಭೇರಿಗಳನ್ನು ಉಗ್ರವಾಗಿ ಹೊಯ್ದು ಶತ್ರು ಅರ್ಜುನನನ್ನು ಬೈಯುವಂತೆ ರಣಕಹಳೆಗಳನ್ನು ಬಾರಿಸಿದರು. ಛತ್ರಿಗಳ ಸಾಲುಗಳನ್ನು ಮೆರೆಸಿದರು. ಆಗ ಆಕಾಶವೇ ನಡುಗುತ್ತಿದೆಯೊ ಎಂಬಂತೆ ಅನಿಸಿತು. ಕುಲಪರ್ವತಗಳ ನೆತ್ತಿ ಬಿರಿದಂತೆ ವಾದ್ಯಕೋಟಿಗಳು ಮೊಳಗಿದವು.
ಪದಾರ್ಥ (ಕ.ಗ.ಪ)
ಲಗ್ಗೆವರೆ-ಯುದ್ಧಭೇರಿ, ಗೌರುಗಹಳೆ-ರಣಕಹಳೆ, ನಿಚಯ-ಗುಂಪು, ನಿಸ್ಸಾಳ-ವಾದ್ಯ
ಮೂಲ ...{Loading}...
ಹತ್ತು ಸಾವಿರ ರಥ ಸಹಿತ ಭಟ
ರೊತ್ತಿ ಕವಿದರು ಲಗ್ಗೆವರೆಯಲಿ
ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ
ಸತ್ತಿಗೆಯ ಸಾಲುಗಳೊಳಂಬರ
ಕೆತ್ತುದೆನೆ ಕುಲಶೈಲ ನಿಚಯದ
ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು ॥2॥
೦೦೩ ಚಮ್ಬಕನ ಹರೆ ...{Loading}...
ಚಂಬಕನ ಹರೆ ಡಕ್ಕೆ ಡಮರುಗ
ಬೊಂಬುಳಿಯ ಗೋಮುಖದ ಡೌಡೆಯ
ಕೊಂಬು ಕಹಳೆಯ ರಾಯ ಗಿಡಿಮಿಡಿ ಪಟಹ ಡಿಂಡಿಮದ
ತಂಬಟದ ನಿಸ್ಸಾಳವಂಬರ
ತುಂಬಿದುದು ನೆಲ ಕುಸಿಯೆ ಬಲವಾ
ಡಂಬರದಲರ್ಜುನನ ಮುಸುಕಿತು ದೊರೆಯ ಸನ್ನೆಯಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಸೇನೆಗೆ ಸನ್ನೆ ಮಾಡಿದ ಕೂಡಲೇ ಸೈನ್ಯವು ಆಡಂಬರದಿಂದ ಅರ್ಜುನನನ್ನು ಆವರಿಸಿತು. ಚಂಬಕ ಹರೆ ಡಕ್ಕೆ ಡಮರು ಬೊಂಬುಳಿ ಗೋಮುಖ ಡೌಡೆ ಕೊಂಬು ಕಹಳೆ ರಾಯ ಗಿಡಿಮಿಡಿ ಪಟಹ ಡಿಂಡಿಮ ತಂಬಟ ನಿಸ್ಸಾಳ ಮೊದಲಾದ ವಾದ್ಯಗಳ ಶಬ್ದ ಆಕಾಶವನ್ನೆಲ್ಲ ತುಂಬಿಕೊಂಡಿತು.
ಪದಾರ್ಥ (ಕ.ಗ.ಪ)
ಚಂಬಕ-ಒಂದು ಬಗೆಯ ತಮಟೆ, ಹರೆ-ವಾದ್ಯ, ಬೊಂಬುಳಿ-ಒಂದು ಬಗೆಯ ತಮಟೆ, ಗೋಮುಖ-ಒಂದು ಬಗೆಯ ವಾದ್ಯ, ಡೌಡೆ-ಡವುಡೆ, ಒಂದು ಬಗೆಯ ಚರ್ಮವಾದ್ಯ, ರಾಯಗಿಡಿಮಿಡಿ-ಇದು ರಾಯಗಿಡಿಗ ಇರಬಹುದು, ರಾಯಗಿಡಿಗ ಒಂದು ದೊಡ್ಡ ರಣವಾದ್ಯ, ಪಟಹ-ಒಂದು ಚರ್ಮವಾದ್ಯ ನಗಾರಿ, ಡಿಂಡಿಮ-ಒಂದು ಚರ್ಮವಾದ್ಯ, ನಿಸ್ಸಾಳ-ಒಂದು ಬಗೆಯ ಚರ್ಮವಾದ್ಯ
ಇವೆಲ್ಲ ರಣಭೂಮಿಯಲ್ಲಿ ಸೈನಿಕರು ಬಳಸುತ್ತಿದ್ದ ವಾದ್ಯಗಳು
(
ಪಾಠಾನ್ತರ (ಕ.ಗ.ಪ)
ಪಾಠಾಂತರ ರಾಯಗಿಡಿಮಿಡಿಗೆ ಬದಲಾಗಿ ರಾಯಗಿಡುಗನ (ಕೃಷ್ಣಜೋಯಿಸ್) ರಾಯಗಿಡಿಗ ಇರಬಹುದು)
ಕುಮಾರವ್ಯಾಸನು ತನ್ನ ಕಾಲದಲ್ಲಿ ಬಳಕೆಯಲ್ಲಿದ್ದ ವಾದ್ಯಗಳ ಪಟ್ಟಿಯನ್ನು ಕೊಟ್ಟಿರುವುದನ್ನು ನೋಡಿದರೆ ಅವನ ಶಬ್ದ ಭಂಡಾರದ ಪರಿಚಯ ನಮಗಾಗುತ್ತದೆ.
ಮೂಲ ...{Loading}...
ಚಂಬಕನ ಹರೆ ಡಕ್ಕೆ ಡಮರುಗ
ಬೊಂಬುಳಿಯ ಗೋಮುಖದ ಡೌಡೆಯ
ಕೊಂಬು ಕಹಳೆಯ ರಾಯ ಗಿಡಿಮಿಡಿ ಪಟಹ ಡಿಂಡಿಮದ
ತಂಬಟದ ನಿಸ್ಸಾಳವಂಬರ
ತುಂಬಿದುದು ನೆಲ ಕುಸಿಯೆ ಬಲವಾ
ಡಂಬರದಲರ್ಜುನನ ಮುಸುಕಿತು ದೊರೆಯ ಸನ್ನೆಯಲಿ ॥3॥
೦೦೪ ಮರಳಿದವು ತುರುವೆಮ್ಬ ...{Loading}...
ಮರಳಿದವು ತುರುವೆಂಬ ಗರ್ವದ
ಗಿರಿಗೆ ಕೋ ಕುಲಿಶವನು ಸೇನೆಯ
ನೊರೆಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ
ಅರಸನಲುಕಿದನೆಂಬ ಜಯದು
ಬ್ಬರದ ಬೆಳೆಸಿರಿಗಿದೆ ನಿದಾಘದ
ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನಿಗೆ “ಆಹಾ ? ದನಕರುಗಳು ಊರಿಗೆ ಮರಳಿದುವು ಎಂಬ ನಿನ್ನ ಜಂಬದ ಬೆಟ್ಟಕ್ಕೆ ಈ ನಮ್ಮ ಕುಲಿಶ (ವಜ್ರದಂಡ)ವನ್ನು ಸಹಿಸಿಕೋ ! ನಮ್ಮ ಸೇನೆಯನ್ನು ಒರೆಸಿಹಾಕಿದೆನೆಂಬ ನಿನ್ನ ಉತ್ಸಾಹ ಸಂಭ್ರಮಗಳ ಸಮುದ್ರಕ್ಕೆ ಇದುಕೋ ನಮ್ಮ ಬಡಬಾಗ್ನಿ ! ಕೌರವನು ಹಿಂಜರಿದನೆಂಬ ನಿನ್ನ ಜಯದ ಭಾವನೆಯ ಅತಿಶಯವಾದ ಬೆಳೆಯ ಸಂಪತ್ತಿಗೆ ಇದುಕೋ ಬೇಸಗೆಯ ಉಗ್ರ ಬಿಸಿಲು. ನಮ್ಮ ಏಟುಗಳನ್ನು ಸಹಿಸಿಕೋ” ಎನ್ನುತ್ತ ಮಹಾವೀರರೆಲ್ಲ ಬಾಣಗಳನ್ನು ಸುರಿಯಲಾರಂಭಿಸಿದರು.
ಪದಾರ್ಥ (ಕ.ಗ.ಪ)
ಕುಲಿಶ-ವಜ್ರಾಯುಧ (ಇಂದ್ರನದು), ವಾಡಬಾನಲ-ಬಾಡಬಾಗ್ನಿ, ನಿದಾಘ-ಬೇಸಗೆ, ತಾಪ, ಎಚ್ಚರು-ಎಸು ಬಾಣ ಬಿಡು, ಬಾಣ ಬಿಟ್ಟರು
ಮೂಲ ...{Loading}...
ಮರಳಿದವು ತುರುವೆಂಬ ಗರ್ವದ
ಗಿರಿಗೆ ಕೋ ಕುಲಿಶವನು ಸೇನೆಯ
ನೊರೆಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ
ಅರಸನಲುಕಿದನೆಂಬ ಜಯದು
ಬ್ಬರದ ಬೆಳೆಸಿರಿಗಿದೆ ನಿದಾಘದ
ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು ॥4॥
೦೦೫ ಮೊಗಕೆ ಹರಿಗೆಯನೊಡ್ಡಿ ...{Loading}...
ಮೊಗಕೆ ಹರಿಗೆಯನೊಡ್ಡಿ ಕಾಲಾ
ಳಗಿದು ಕವಿದುದು ಸರಳ ಪರಿಯಲಿ
ಬಿಗಿದು ಬಿಲ್ಲಾಳೌಕಿತುರವಣಿಸಿದರು ಸಬಳಿಗರು
ಉಗಿದಡಾಯುಧದಲಿರಿದರು ಭಾ
ಷೆಗಳ ರಾವ್ತರು ಕೆಂಗರಿಯ ಕೋ
ಲುಗಳ ಹೆಮ್ಮಳೆಗರೆದು ಕವಿದರು ಜೋದರುರವಣಿಸಿ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಖಕ್ಕೆ ಗುರಾಣಿ ಹಿಡಿದ ಕಾಲಾಳುಗಳು ಅರ್ಜುನನನ್ನು ಮುತ್ತಿಕೊಂಡರು. ಬಿಲ್ಲಾಳುಗಳು ಬಾಣಗಳ ಮಳೆ ಸುರಿಸಿದರು. ಕೈಯಲ್ಲಿ ಈಟಿಗಳನ್ನು ಹಿಡಿದ ಯೋಧರು ಮುನ್ನುಗ್ಗಿದರು. ಪ್ರತಿಜ್ಞೆಯ ಘೋಷಗಳನ್ನು ಮಾಡುತ್ತ ರಾವುತರು ಬಿಚ್ಚುಗತ್ತಿಯಲ್ಲಿ ಇರಿಯಲು ನುಗ್ಗಿದರು. ಆನೆಯ ಮೀಲಿದ್ದ ಯೋಧರು ಬಾಣಗಳನ್ನು ಸುರಿಸುತ್ತ ಮುಂದೆ ನುಗ್ಗಿದರು.
ಪದಾರ್ಥ (ಕ.ಗ.ಪ)
ಹರಿಗೆ-ಗುರಾಣಿ, ಹಲಗೆ, ಸರಳು-ಬಾಣ, ಸಬಳಿಗ-ಈಟಿ ಹಿಡಿದವನು, ಉಗಿದ-ಬಿಚ್ಚಿದ, ತೆರೆದ, ಜೋದ-ಯೋಧ
ಮೂಲ ...{Loading}...
ಮೊಗಕೆ ಹರಿಗೆಯನೊಡ್ಡಿ ಕಾಲಾ
ಳಗಿದು ಕವಿದುದು ಸರಳ ಪರಿಯಲಿ
ಬಿಗಿದು ಬಿಲ್ಲಾಳೌಕಿತುರವಣಿಸಿದರು ಸಬಳಿಗರು
ಉಗಿದಡಾಯುಧದಲಿರಿದರು ಭಾ
ಷೆಗಳ ರಾವ್ತರು ಕೆಂಗರಿಯ ಕೋ
ಲುಗಳ ಹೆಮ್ಮಳೆಗರೆದು ಕವಿದರು ಜೋದರುರವಣಿಸಿ ॥5॥
೦೦೬ ಅರರೆ ರಾವುತು ...{Loading}...
ಅರರೆ ರಾವುತು ರಾವುತೆಂಬ
ಬ್ಬರಣೆ ಮಸಗಿದುದೊಂದು ದೆಸೆಯಲಿ
ಸರಿಸ ಸಬಳಿಗ ಪೂತು ಪಾಯಕುಯೆಂಬ ಕಳಕಳಿಕೆ
ಧಿರುರೆ ಸಾರಥಿ ಹಳು ಹಳೆಂಬ
ಬ್ಬರಣೆ ಮಸಗಿದುದೊಂದು ಕಡೆಯಲಿ
ಕರಿಘಟೆಯ ಕಡುಹೊಂದು ಕಡೆಯಲಿ ಮುಸುಕಿತರ್ಜುನನ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಒಂದು ಕಡೆ ರಾವುತು ರಾವುತು ಎಂಬ ಅಬ್ಬರ ಕೇಳಿಬಂದಿತು. . ಇನ್ನೊಂದು ಕಡೆ ಸರಿಸ ಸಬಳಿU ಪೂತು ಪಯಿಕು ಎಂಬ ಶಬ್ದ ಮತ್ತೊಂದೆಡೆಯಲ್ಲಿಂದ ಕೇಳಿತು. ಇನ್ನೊಂದು ಪಕ್ಕದಿಂದ ಧಿರುರೆ ! ಸಾರಥಿ ಹಳು ಹಳು ಎಂಬ ಕೂಗು ಕೇಳಿ ಬಂದಿತು. ಇನ್ನೊಂದು ಕಡೆ ಆನೆಯ ಮಾವಟಿಗರು ನುಗ್ಗಿದರು. ಎಲ್ಲರೂ ಅರ್ಜುನನ ಮೇಲೆ ನುಗ್ಗಿ ಬಂದರು.
ಪದಾರ್ಥ (ಕ.ಗ.ಪ)
ರಾವುತ-ಕುದುರೆಯ ಮೇಲೆ ಬಂದ ಯೋಧ, ರಾವುತು -ಒಂದು ಉದ್ಗಾರ, ಸರಿಸ-ಸಮೀಪದ, ಸಬಳಿಗ-ಈಟಿ ಹಿಡಿದ ಪೂತು ಪಾಯುಕು-ಭಲಾ ಭಲಾ ಎಂಬ ಉದ್ಗಾರ (ಮರಾಠಿ ಶಬ್ದ)
ಧಿರುರೆ ಹಳು ಹಳು-ಅನುಕರಣವಾಚಿಯಾದ ಶಬ್ದಗಳು, ಕಡುಹು-ಸಂಭ್ರಮ, ಉತ್ಸಾಹ. ನುಗ್ಗಿದ ಸೈನ್ಯದ ರಭಸವನ್ನು ಶಬ್ದ ರಭಸದಿಂದ ಪರಿಚಯ ಮಾಡಿಕೊಡುತ್ತಾನೆ ಕವಿ !
ಮೂಲ ...{Loading}...
ಅರರೆ ರಾವುತು ರಾವುತೆಂಬ
ಬ್ಬರಣೆ ಮಸಗಿದುದೊಂದು ದೆಸೆಯಲಿ
ಸರಿಸ ಸಬಳಿಗ ಪೂತು ಪಾಯಕುಯೆಂಬ ಕಳಕಳಿಕೆ
ಧಿರುರೆ ಸಾರಥಿ ಹಳು ಹಳೆಂಬ
ಬ್ಬರಣೆ ಮಸಗಿದುದೊಂದು ಕಡೆಯಲಿ
ಕರಿಘಟೆಯ ಕಡುಹೊಂದು ಕಡೆಯಲಿ ಮುಸುಕಿತರ್ಜುನನ ॥6॥
೦೦೭ ಸುರಪನಡವಿಯ ಚುಚ್ಚಿದೊಡೆ ...{Loading}...
ಸುರಪನಡವಿಯ ಚುಚ್ಚಿದೊಡೆ ಸುರ
ರರಮನೆಯ ಗಾಯಕರ ಗೆಲಿದೊಡೆ
ಜರಡು ತಂತ್ರದ ಮೀನನೆಚ್ಚೊಡೆ ರಾಯ ಕಟಕದಲಿ
ಗೊರವನೊಳು ಕಾದಿದೊಡೆ ಹೆಂಗುಸ
ನಿರುಳು ಕದ್ದೋಡಿದೊಡೆ ದಿಟ
ನೀ ಧುರಕೆ ಧೀರನೆ ಪಾರ್ಥ ಫಡಯೆನುತೆಚ್ಚರತಿರಥರು ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ , ನೀನು ಖಾಂಡವ ವನವನ್ನು ಸುಟ್ಟಿದುದಕ್ಕೆ ; ಇಂದ್ರನ ಅರಮನೆಯ ಗಾಯಕನಾದ ಚಿತ್ರಾಂಗದನನ್ನು ಗೆದ್ದುದಕ್ಕೆ ; ಕೆಲಸಕ್ಕೆ ಬಾರದ ಜೊಳ್ಳು ಯಂತ್ರದ ಮತ್ಸ್ಯವನ್ನು ಬಾಣದಿಂದ ಹೊಡೆದುದಕ್ಕೆ ; ಶಿವನಲ್ಲಿ ಕಾದಿದ್ದಕ್ಕೆ ; ಹೆಣ್ಣನ್ನು ರಾತ್ರಿಯಲ್ಲಿ ಅಪಹರಿಸಿಕೊಂಡು ಓಡಿದುದಕ್ಕೆ-ವೀರನೆಂದು ತಿಳಿದಿದ್ದೀಯೇನು? ಇಗೋ ಈ ಬಾಣಗಳನ್ನು ಸ್ವೀಕರಿಸು” ಎನ್ನುತ್ತಾ ಅವರು ಶರವರ್ಷವನ್ನು ಕರೆದರು.
ಟಿಪ್ಪನೀ (ಕ.ಗ.ಪ)
ಸುರಪ-ಇಂದ್ರ, (ಇಂದ್ರನ) ಅರಮನೆಯ ಗಾಯಕ-ಚಿತ್ರಸೇನ ಎಂಬ ಗಂಧರ್ವ ಅವನು ಘೋಷಯಾತ್ರೆಯ ಸಂದರ್ಭದಲ್ಲಿ ಕೌರವಾದಿಗಳನ್ನು ಬಂಧಿಸಿ ಕರೆದೊಯ್ದಾಗ ಅಣ್ಣನ ಆಜ್ಞೆಯಂತೆ ಅರ್ಜುನ ಬಂದು ಗಂಧರ್ವನನ್ನು ಸೋಲಿಸಿ ಕೌರವನನ್ನು ಬಿಡಿಸಿಕೊಂಡು ಬಂದ ಪ್ರಸಂಗ.
ಜರಡು(ಜಂತ್ರದ) ಮೀನನೆಚ್ಚೊಡೆ ರಾಯ ಕಟಕದಲ್ಲಿ ದ್ರೌಪದಿಯ ಸ್ವಯಂವರ ಸಂದರ್ಭ ರಾಜರುಗಳೆಲ್ಲರ ಮುಂದೆ ಮತ್ಸ್ಯ ಯಂತ್ರವನ್ನು ಭೇದಿಸಿದ ಪ್ರಸಂಗ. ಗೊರವನೊಳು ಕಾದಿದೊಡೆ-ಪಾಶುಪತಲಾಭ ಪ್ರಸಂಗ. ಗೊರವ (ಶಿವ)ನನ್ನು ಎದುರಿಸಿ ಹೋರಾಡಿದ ಘಟನೆ (ಗೊರವ-ತಿರುಕ), ಹೆಂಗುಸನ್ನು ಇರುಳು ಕದ್ದೋಡಿದ… ಸುಭದ್ರಾ ಪರಿಣಯದ ಪ್ರಸಂಗ
ಮೂಲ ...{Loading}...
ಸುರಪನಡವಿಯ ಚುಚ್ಚಿದೊಡೆ ಸುರ
ರರಮನೆಯ ಗಾಯಕರ ಗೆಲಿದೊಡೆ
ಜರಡು ತಂತ್ರದ ಮೀನನೆಚ್ಚೊಡೆ ರಾಯ ಕಟಕದಲಿ
ಗೊರವನೊಳು ಕಾದಿದೊಡೆ ಹೆಂಗುಸ
ನಿರುಳು ಕದ್ದೋಡಿದೊಡೆ ದಿಟ
ನೀ ಧುರಕೆ ಧೀರನೆ ಪಾರ್ಥ ಫಡಯೆನುತೆಚ್ಚರತಿರಥರು ॥7॥
೦೦೮ ಭಣ್ಡರುಲಿದೊಡೆ ಗರುವರದ ...{Loading}...
ಭಂಡರುಲಿದೊಡೆ ಗರುವರದ ಮಾ
ರ್ಕೊಂಡು ನುಡಿವರೆ ಸಾಕಿದೇತಕೆ
ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ
ಕೊಂಡ ಹಜ್ಜೆಗೆ ಹಂಗಿಗರು ಮಿಗೆ
ಗಂಡುಗೆಡದಿರಿ ನಿಮ್ಮ ಬಗೆಗಳ
ಕಂಡು ಬಲ್ಲೆನೆನುತ್ತ ಫಲುಗುಣನೆಚ್ಚನತಿ ರಥರ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ಭಂಡರು ಆಡಿದರೆಂದು ಮಾನ್ಯರು ಅದಕ್ಕೆಲ್ಲ ಎದುರುತ್ತರ ಕೊಡುತ್ತಾರೆಯೇ?. ಸಾಕು ಈ ಮಾತೇಕೆ ? ನಿಮ್ಮನ್ನೆಲ್ಲ ಸಾಮೂಹಿಕವಾಗಿ ಕೊಚ್ಚಿ ಹಾಕುತ್ತೇನೆ. ಒಂದು ನಿಮಿಷ ಸೈರಿಸಿ. ಹೇಡಿಗಳಾಗಬೇಡಿ. ನಿಮ್ಮ ನಡವಳಿಕೆಯೆಲ್ಲ ನನಗೆ ಚೆನ್ನಾಗಿ ಗೊತ್ತು. ಹೆಜ್ಜೆ ಮುಂದಿಟ್ಟ ಮೇಲೆ ದಾಕ್ಷಿಣ್ಯಕ್ಕೆ ಒಳಗಾಗಬೇಡಿ” ಎಂದು ಹೇಳುತ್ತ ಅರ್ಜುನನು ಆ ಅತಿರಥರ ಮೇಲೆ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಉಲಿ-ಹೇಳು, ಗರುವರು-ಮಾನ್ಯರು, ದಿಂಡುದರಿ-ಇಡೀ ಗುಂಪನ್ನು ಕೊಚ್ಚಿ ಹಾಕು, ಹಂಗಿಗರು-ಋಣಿಗಳು, ಗಂಡುಗೆಡದಿರಿ-ಹೇಡಿಯಾಗುವುದು ಬೇಡಿ.
ಪಾಠಾನ್ತರ (ಕ.ಗ.ಪ)
ಐದನೆಯ ಸಾಲಿನ ಗಂಡುಗೆಡದಿರಿ ಎಂಬುದಕ್ಕೆ ಬದಲಾಗಿ ಓರಿಯೆಂಟಲ್ ಲೈಬ್ರರಿಯ ಮುದ್ರಿತ ಕುಮಾರವ್ಯಾಸ ಭಾರತದ ಅಡಿಟಿಪ್ಪಣಿಯಲ್ಲಿ ತೊಂಡುಗೆಡೆದೊಡೆ ಎಂಬ ಊಹಾ ಪಾಠವನ್ನು ಕೊಡಲಾಗಿದೆ. ಇದನ್ನು ಡಿ.ಎಲ್. ನರಸಿಂಹಾಚಾರ್ಯರು ಒಪ್ಪಿದ್ದಾರೆ ಪೀಠಿಕೆಗಳು ಲೇಖನಗಳು ಪು ! 139, ತೊಂಡುಗೆಡೆ-ಅರಚಿಕೋ, ಕೂಗಾಡು
ಮೂಲ ...{Loading}...
ಭಂಡರುಲಿದೊಡೆ ಗರುವರದ ಮಾ
ರ್ಕೊಂಡು ನುಡಿವರೆ ಸಾಕಿದೇತಕೆ
ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ
ಕೊಂಡ ಹಜ್ಜೆಗೆ ಹಂಗಿಗರು ಮಿಗೆ
ಗಂಡುಗೆಡದಿರಿ ನಿಮ್ಮ ಬಗೆಗಳ
ಕಂಡು ಬಲ್ಲೆನೆನುತ್ತ ಫಲುಗುಣನೆಚ್ಚನತಿ ರಥರ ॥8॥
೦೦೯ ಗುರುಸುತನ ಬಳಿ ...{Loading}...
ಗುರುಸುತನ ಬಳಿ ರಥವನೈಸಾ
ವಿರವ ಕೊಂದನು ಕರ್ಣನೊಡನೆಯ
ವರ ಮಹಾರಥರೆಂಟು ಸಾವಿರವನು ರಣಾಗ್ರದಲಿ
ಗುರು ನದೀಜರ ಬಳಿ ರಥವ ಸಾ
ವಿರವ ಕೃಪ ಸೈಂಧವ ಸುಯೋಧನ
ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನ ಪಡೆಯಲ್ಲಿದ್ದ ಐದು ಸಾವಿರ ರಥಗಳನ್ನು ನುಚ್ಚುನುರಿ ಮಾಡಿದ. ಕರ್ಣನ ಬಳಿಯ ಎಂಟು ಸಾವಿರ ಮಹಾರಥರು ಯುದ್ಧದಲ್ಲಿ ಅರ್ಜುನನ ಬಾಣಗಳಿಗೆ ಸಿಕ್ಕಿ ಸತ್ತರು. ದ್ರೋಣ ಭೀಷ್ಮರ ಬಳಿಯ ಸಾವಿರ ರಥ, ಕೃಪ ಜಯದ್ರಥ ಕೌರವರ ಗುಂಪಿನ ಹತ್ತು ಸಾವಿರ ರಥಗಳು ಆಹುತಿಯಾದುವು.
ಪದಾರ್ಥ (ಕ.ಗ.ಪ)
ಗುರುಸುತ-ಅಶ್ವತ್ಥಾಮ, ಐ ಸಾವಿರ-ಐದು ಸಾವಿರ, ರಣಾಗ್ರ-ಯುದ್ಧಭೂಮಿ, ನದೀಜ-ಭೀಷ್ಮ, ಥಟ್ಟು-ಗುಂಪು
ಮೂಲ ...{Loading}...
ಗುರುಸುತನ ಬಳಿ ರಥವನೈಸಾ
ವಿರವ ಕೊಂದನು ಕರ್ಣನೊಡನೆಯ
ವರ ಮಹಾರಥರೆಂಟು ಸಾವಿರವನು ರಣಾಗ್ರದಲಿ
ಗುರು ನದೀಜರ ಬಳಿ ರಥವ ಸಾ
ವಿರವ ಕೃಪ ಸೈಂಧವ ಸುಯೋಧನ
ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ॥9॥
೦೧೦ ತುರಗ ದಳವೆಮ್ಬತ್ತು ...{Loading}...
ತುರಗ ದಳವೆಂಬತ್ತು ಸಾವಿರ
ಕರಿಘಟೆಯನೈವತ್ತು ಸಾವಿರ
ವರರಥವ ಹುಡಿಮಾಡಿದನು ಹನ್ನೆರಡು ಸಾವಿರವ
ಧುರಕೆ ವೆಗ್ಗಳವಾದ ರಥಿಕರ
ಶಿರವ ತರಿದನು ಮೂರು ಕೋಟಿಯ
ನರಸು ಕಾಲಾಳುಗಳ ಗಣನೆಯನರಿಯೆ ನಾನೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಅರ್ಜುನನು ಕುದುರೆಯ ದಳದಲ್ಲಿ ಎಂಬತ್ತು ಸಾವಿರ ಕುದುರೆಗಳನ್ನು ಐವತ್ತು ಸಾವಿರ ಆನೆಗಳನ್ನು ಹನ್ನೆರಡು ಸಾವಿರ ರಥಗಳನ್ನು ಹುಡಿ ಮಾಡಿದ. ಯುದ್ಧವೀರರಾದ ಮೂರು ಕೋಟಿ ರಥಿಕರ ತಲೆಗಳನ್ನು ಕೊಚ್ಚಿ ಹಾಕಿದ. ಇನ್ನು ಅರ್ಜುನನ ಏಟಿಗೆ ಸಿಕ್ಕಿ ಸತ್ತ ಅರಸರ, ಕಾಲಾಳುಗಳ ಲೆಕ್ಕವನ್ನು ನಾನರಿಯೆ !
ಪದಾರ್ಥ (ಕ.ಗ.ಪ)
ತುರಗ-ಕುದುರೆ, ಕರಿಘಟೆ-ಆನೆ, ಧುರ-ಯುದ್ಧ, ವೆಗ್ಗಳ-ಶ್ರೇಷ್ಠ, ಗಣನೆ-ಸಂಖ್ಯೆ (ಎಣಿಕೆ)
ಮೂಲ ...{Loading}...
ತುರಗ ದಳವೆಂಬತ್ತು ಸಾವಿರ
ಕರಿಘಟೆಯನೈವತ್ತು ಸಾವಿರ
ವರರಥವ ಹುಡಿಮಾಡಿದನು ಹನ್ನೆರಡು ಸಾವಿರವ
ಧುರಕೆ ವೆಗ್ಗಳವಾದ ರಥಿಕರ
ಶಿರವ ತರಿದನು ಮೂರು ಕೋಟಿಯ
ನರಸು ಕಾಲಾಳುಗಳ ಗಣನೆಯನರಿಯೆ ನಾನೆಂದ ॥10॥
೦೧೧ ಸವಗ ಸೀಳಿತು ...{Loading}...
ಸವಗ ಸೀಳಿತು ಕೃಪನ ಭೀಷ್ಮನ
ಕವಚ ಹರಿದುದು ದ್ರೋಣ ನೊಂದನು
ರವಿಯ ಮಗ ಮಸೆಗಂಡನಶ್ವತ್ಥಾಮ ಮೈಮರೆದ
ಅವನಿಪತಿಗೇರಾಯ್ತು ಸಲೆ ಸೈಂ
ಧವ ಶಕುನಿ ದುಶ್ಶಾಸನಾದಿಗ
ಳವಯವದಲಂಬುಗಳನಾಯ್ದರು ತೋದ ರಕುತದಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಕೃಪರ ಕವಚ ಮತ್ತು ಭೀಷ್ಮರ ಕವಚಗಳು ಹರಿದು ಹೋದುವು. ದ್ರೋಣರಿಗೆ ಪೆಟ್ಟಾಯಿತು. ಕರ್ಣನು ಗಾಯ ಹೊಂದಿದ. ಅಶ್ವತ್ಥಾಮ ಮೂರ್ಛೆ ಹೋದ. ಕೌರವನಿಗೆ ಗಾಯವಾಯಿತು. ಇನ್ನು ಶಕುನಿ, ಸೈಂಧವ ದುಶ್ಶಾಸನ ಮೊದಲಾದವರು ರಕ್ತ ಸುರಿಸುತ್ತ ತಮ್ಮ ದೇಹಗಳಿಗೆ ಅಂಟಿದ್ದ ಬಾಣಗಳನ್ನು ಕೀಳುವುದರಲ್ಲಿ ಉದ್ಯುಕ್ತರಾದರು.
ಪದಾರ್ಥ (ಕ.ಗ.ಪ)
ಸವಗ < ಸವಂಗ=ಕವಚ, ರವಿಯ ಮಗ-ಕರ್ಣ, ಅವನಿಪತಿ-ರಾಜ (ಕೌರವ) ಮಸೆಗಾಣ್-ಗಾಯ ಹೊಂದು
ಮೂಲ ...{Loading}...
ಸವಗ ಸೀಳಿತು ಕೃಪನ ಭೀಷ್ಮನ
ಕವಚ ಹರಿದುದು ದ್ರೋಣ ನೊಂದನು
ರವಿಯ ಮಗ ಮಸೆಗಂಡನಶ್ವತ್ಥಾಮ ಮೈಮರೆದ
ಅವನಿಪತಿಗೇರಾಯ್ತು ಸಲೆ ಸೈಂ
ಧವ ಶಕುನಿ ದುಶ್ಶಾಸನಾದಿಗ
ಳವಯವದಲಂಬುಗಳನಾಯ್ದರು ತೋದ ರಕುತದಲಿ ॥11॥
೦೧೨ ಕಡಿವಡೆದುದಾ ಚೂಣಿಬಲ ...{Loading}...
ಕಡಿವಡೆದುದಾ ಚೂಣಿಬಲ ಬೆಂ
ಗೊಡದ ನಾಯಕರಾಂತು ತಮಗಿ
ನ್ನೊಡಲುಗಳ ಮೇಲಾಶೆಯೇಕಿನ್ನೆನುತ ಮಿಗೆ ಮಸಗಿ
ಸೆಡೆದು ಸೊಪ್ಪಾದಖಿಳ ಸುಭಟರ
ಗಡಣವನು ಮೇಳೈಸಿ ಮಗುಳವ
ಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರಾಜ್ಞೆಯಲಿ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಸೇನೆಯ ಚೂಣಿ ಬಲವು ಕತ್ತರಿಸಿತ್ತು. (ಮಿಕ್ಕ ಸೇನೆಯೊಂದಿಗೆ ಸಂಪರ್ಕ ಕಳೆದುಕೊಂಡಿತು) ಆದರೂ ಓಡಿ ಹೋಗದ ವೀರರು ತಮಗೆ ಇನ್ನು ದೇಹದ ಮೇಲೆ ಆಸೆ ಏಕೆ ಎಂದುಕೊಂಡು ಉಗ್ರವಾಗಿ ಎದುರಿಸಿ ಸೆಡೆದು ಸೊಪ್ಪಾದರು. ಉಳಿದ ವೀರ ಸೈನಿಕರ ಗುಂಪನ್ನು ಕೂಡಿಸಿ ಭೀಷ್ಮ ದ್ರೋಣರು ಮತ್ತೆ ಅರ್ಜುನನನ್ನು ಎದುರಿಸಲು ಆಜ್ಞೆ ಮಾಡಿದರು. ಸೇನೆ ಪ್ರತಿಭಟಿಸಿ ಮುನ್ನೂಕಿತು.
ಪದಾರ್ಥ (ಕ.ಗ.ಪ)
ಕಡಿವಡೆ-ತುಂಡಾಗು, ಚೂಣಿಬಲ-ಅಗ್ರಭಾಗದ ಸೇನೆ, ಬೆಂಗೊಡು-ಬೆನ್ನು ತೋರಿಸು, ಮಗುಳೆ-ಮತ್ತೆ, ಅವಗಡಿಸು- ಪ್ರತಿಭಟಿಸು
ಮೂಲ ...{Loading}...
ಕಡಿವಡೆದುದಾ ಚೂಣಿಬಲ ಬೆಂ
ಗೊಡದ ನಾಯಕರಾಂತು ತಮಗಿ
ನ್ನೊಡಲುಗಳ ಮೇಲಾಶೆಯೇಕಿನ್ನೆನುತ ಮಿಗೆ ಮಸಗಿ
ಸೆಡೆದು ಸೊಪ್ಪಾದಖಿಳ ಸುಭಟರ
ಗಡಣವನು ಮೇಳೈಸಿ ಮಗುಳವ
ಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರಾಜ್ಞೆಯಲಿ ॥12॥
೦೧೩ ಖತಿಯಲಶ್ವತ್ಥಾಮನೀ ರವಿ ...{Loading}...
ಖತಿಯಲಶ್ವತ್ಥಾಮನೀ ರವಿ
ಸುತನ ಜರೆದನು ಗಾಯವಡೆದೈ
ಪ್ರತಿಭಟನ ಭಾರವಣೆ ಲೇಸೇ ಕರ್ಣ ನೀನರಿವೈ
ಅತಿಬಲನು ನೀನಹಿತ ಬಲ ವನ
ಹುತವಹನು ನೀನಿರಲು ಕುರು ಭೂ
ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೋಪದಿಂದ ಅಶ್ವತ್ಥಾಮನು ಕರ್ಣನನ್ನು ನಿಂದಿಸಿದ : “ಅಯ್ಯಾ ಕರ್ಣ ! ಗಾಯವಾಯಿತೆ ? ಶತ್ರುವಿನ ಭಾರಿಯ ಹೊಡೆತ ಬಿದ್ದಿದೆ. ಚೆನ್ನಾಗಿದ್ದೀಯಾ ? ಈಗಲಾದರೂ ನಿನಗೆ ಅರ್ಥವಾಗಿರಬೇಕಲ್ಲ ! ಅರ್ಜುನನು ಮಹಾಬಲ. ನೀನು ಶತ್ರುಬಲವೆಂಬ ಕಾಡಿಗೆ ಬೆಂಕಿಯಂತಿರುವವನು. ನಿನ್ನಂಥವನು ಇರುವಾಗ ಕುರುಪತಿಯ ಸೇನೆ ಭಂಗಪಡೆಯಿತಲ್ಲ. ಛೀ ? ನೀನು ನಿಷ್ಕರುಣಿ ! ಎಂಬುದು ಅವನ ಆಕ್ಷೇಪಣೆ.
ಪದಾರ್ಥ (ಕ.ಗ.ಪ)
ಖತಿ-ಕೋಪ, ಪ್ರತಿಭಟ-ಎದುರುಬಿದ್ದ ಯೋಧ (ಅರ್ಜುನ) ಭಾರಣೆ-ಆಧಿಕ್ಯ, ಅಹಿತಬಲ ವನ ಹುತವಹ, ಅಹಿತಬಲ-ಶತ್ರುಸೇನೆ ಎಂಬ ವನ ಕಾಡಿಗೆ. ಹುತವಹ-ಅಗ್ನಿ, ನುಗ್ಗಾಗು-ನಿತ್ರಾಣಗೊಳ್ಳು
ಮೂಲ ...{Loading}...
ಖತಿಯಲಶ್ವತ್ಥಾಮನೀ ರವಿ
ಸುತನ ಜರೆದನು ಗಾಯವಡೆದೈ
ಪ್ರತಿಭಟನ ಭಾರವಣೆ ಲೇಸೇ ಕರ್ಣ ನೀನರಿವೈ
ಅತಿಬಲನು ನೀನಹಿತ ಬಲ ವನ
ಹುತವಹನು ನೀನಿರಲು ಕುರು ಭೂ
ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ ॥13॥
೦೧೪ ಭಟನು ನಾನಿರಲುಭಯ ...{Loading}...
ಭಟನು ನಾನಿರಲುಭಯ ರಾಯರ
ಕಟಕದೊಳಗಿನ್ನಾವನೆಂದು
ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ
ಭಟನು ಫಲುಗುಣನಹನು ತೋರಾ
ಪಟುತನವನೆಲೆಯಪಜಯ ಸ್ತ್ರೀ
ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಕರ್ಣ ! ನನ್ನಂಥ ವೀರನು ಇರುವಾಗ ಕುರುಸೇನೆಯಲ್ಲಿ ಪಾಂಡು ಸೇನೆಯಲ್ಲಿ ಬೇರೆ ಯಾರಿದ್ದಾರೆ ನನಗೆ ಸಮನಾದವರು ಎಂದು ಅಬ್ಬರದ ಮಾತುಗಳನ್ನು ಹೇಳಿ ಹೇಳಿ ಕೌರವನ ಸಂಪತ್ತನ್ನು ಬಾಚಿಕೊಂಡೆಯಲ್ಲವೆ ? ಈಗ ಅರ್ಜುನ ನಿನ್ನನ್ನು ಪ್ರತಿಭಟಿಸುವ ವೀರ. ಅರ್ಜುನ ಎದುರಿಗೇ ಇದ್ದಾನೆ. ಅವನೆದುರಿಗೆ ನಿನ್ನ ಪರಾಕ್ರಮವನ್ನು ತೋರಿಸು, ಸೋಲು ಎಂಬ ಹೆಣ್ಣಿನ ವಿಟನೆ, ವಿಹ್ವಲನಾದೆಯಾ ?” ಎಂದು ಹೇಳಿ ನಕ್ಕ.
ಪದಾರ್ಥ (ಕ.ಗ.ಪ)
ಭಟ-ವೀರ, ಉಭಯರಾಯರ ಕಟಕ-ಕುರುಪಾಂಡವ ಸೇನೆ, ಅಪಜಯಸ್ತ್ರೀ ವಿಟ-ವಿಟ ಎಂದರೆ ಶೃಂಗರಿಸಿಕೊಂಡು ವಿಲಾಸಿನಿಯರನ್ನು ಕೂಡಬಯಸುವವನು ಇಲ್ಲಿ ಅಪಜಯ ಎಂಬ ಸುಂದರಿಯನ್ನು ಹಿಂಬಾಲಿಸುವ ವಿಟ ಎಂದು ಕರ್ಣನನ್ನು ಅಶ್ವತ್ಥಾಮ ಆಡಿಕೊಳ್ಳುತ್ತಿದ್ದಾನೆ ! ಕಟಕ-ಸೇನೆ, ಅಹನು-ಆಗಿದ್ದಾನೆ, ಪಟುತನ-ಪರಾಕ್ರಮ, ವಿಹ್ವಲ-ದುಃಖಿತ
ಮೂಲ ...{Loading}...
ಭಟನು ನಾನಿರಲುಭಯ ರಾಯರ
ಕಟಕದೊಳಗಿನ್ನಾವನೆಂದು
ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ
ಭಟನು ಫಲುಗುಣನಹನು ತೋರಾ
ಪಟುತನವನೆಲೆಯಪಜಯ ಸ್ತ್ರೀ
ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ ॥14॥
೦೧೫ ಆಗಲೇರಿಸಿ ನುಡಿದ ...{Loading}...
ಆಗಲೇರಿಸಿ ನುಡಿದ ನುಡಿ ತಾ
ನೀಗಳೇನಾಯಿತ್ತು ನುಡಿಗಳ
ತಾಗನರಿಯದೆ ತರಿಚುಗೆಡೆವರೆ ಗರುವರಾದವರು
ಈಗಳಾವ್ ಹಾರುವರು ಕ್ಷತ್ರಿಯ
ನಾಗಿ ನೀನರ್ಜುನನ ತುರುಗಳ
ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಗ ನಿನ್ನ ಪರಾಕ್ರಮವನ್ನು ಕೊಚ್ಚಿಕೊಂಡೆಯಲ್ಲ ! ಆ ಮಾತು ಈಗ ಏನಾಯಿತು ? ಮಾನ್ಯರಾದವರು ತಾವು ಆಡುವ ಮಾತಿನ ಪರಿಣಾಮವನ್ನೇ ಲೆಕ್ಕಿಸದೆ ಸುಮ್ಮನೆ ಮಾತನಾಡಿ ನಿಂದೆಗೆ ಒಳಗಾಗಬಾರದು. ನಾವೋ ಬ್ರಾಹ್ಮಣರು. ನೀನು ಕ್ಷತ್ರಿಯನಲ್ಲವೆ ? ಈಗ ನೀನು ಅರ್ಜುನನು ಬಿಡಿಸಿದ ದನಕರುಗಳನ್ನು ಮತ್ತೆ ಹಿಂದಕ್ಕೆ ತಂದು ನಮಗೆಲ್ಲ ತೋರಿಸದೆ ಇರುವುದಿಲ್ಲ ಅಲ್ಲವೆ !” ಎಂದು ಅಶ್ವತ್ಥಾಮ ಕರ್ಣನಿಗೆ ವ್ಯಂಗ್ಯೋಕ್ತಿಯಲ್ಲಿ ಹೇಳಿದ.
ಪದಾರ್ಥ (ಕ.ಗ.ಪ)
ಏರಿಸಿ ನುಡಿ-ಅಬ್ಬರದ ಮಾತುಗಳನ್ನಾಡು, ತರಿಚುಗೆಡೆ-ನಿಂದೆಗೆ ಒಳಗಾಗು, ಹಾರುವ-ಬ್ರಾಹ್ಮಣ, ತಾಗು-ಪರಿಣಾಮ
ಪಾಠಾನ್ತರ (ಕ.ಗ.ಪ)
ಕೃಷ್ಣ ಜೋಯಿಸ್ರ ಪಾಠ : ನುಡಿಗಳ ತಾಗಲರಿಯದೆ ಎಂಬುದಕ್ಕೆ ಬದಲಾಗಿ ಬಂಜೆವಾತಿನ ತಾಗನರಿಯದೆ
ಮೂಲ ...{Loading}...
ಆಗಲೇರಿಸಿ ನುಡಿದ ನುಡಿ ತಾ
ನೀಗಳೇನಾಯಿತ್ತು ನುಡಿಗಳ
ತಾಗನರಿಯದೆ ತರಿಚುಗೆಡೆವರೆ ಗರುವರಾದವರು
ಈಗಳಾವ್ ಹಾರುವರು ಕ್ಷತ್ರಿಯ
ನಾಗಿ ನೀನರ್ಜುನನ ತುರುಗಳ
ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ ॥15॥
೦೧೬ ಎಲವೊ ಗರುಡಿಯ ...{Loading}...
ಎಲವೊ ಗರುಡಿಯ ಕಟ್ಟಿ ಸಾಮವ
ಕಲಿಸಿ ಬಳಿಕಾ ಕೋಲ ಮಕ್ಕಳ
ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ
ಕಲಹವೇತಕೆ ಕಾಣ ಬಹುದೆಂ
ದಲಘು ಭುಜಬಲ ಭಾನುಸುತ ಕಡು
ಮುಳಿದು ಫಡ ಫಡ ಪಾರ್ಥ ಮೈದೋರೆನುತ ಮಾರಾಂತ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ಈ ಮಾತು ಕೇಳಿ ಕೆರಳಿ : “ಎಲವೋ ! ಧನುರ್ವಿದ್ಯೆಯ ಗೃಹವನ್ನು ಕಟ್ಟಿ ಸಾಮನ್ನು ಕಲಿಸಿ ಅನಂತರ ಆ ಧನುರ್ವಿದ್ಯೆಯನ್ನು ಕಲಿತ ಶಿಷ್ಯರ ಹಣದ ಬಲದಿಂದ ಬದುಕುವ ಕೃಪಣ ವೃತ್ತಿಯ ನಿಮ್ಮಂತಹವರ ಜೊತೆ ನಮಗೆ ಜಗಳವೇತಕ್ಕೆ ? ಈಗ ನೋಡುವಿಯಂತೆ” ಎಂದು ಹೇಳಿದ ನಂತರ ಆ ಮಹಾವೀರನಾದ ಕರ್ಣನು ಸಿಟ್ಟಿನಿಂದ “ಎಲೈ ಅರ್ಜುನ ! ನನ್ನೆದುರಿಗೆ ನಿಲ್ಲು” ಎಂದು ಆಹ್ವಾನಿಸಿದ.
ಪದಾರ್ಥ (ಕ.ಗ.ಪ)
ಗರುಡಿ-ಗರುಡಿ ಎಂದರೆ ಮಲ್ಲಯುದ್ಧ ಅಥವಾ ಸಾಮುಕಲಿಯುವ ಜಾಗ, ಸಾಮವ-ಶಿಕ್ಷಣ (ಸಾಮು-ಅಭ್ಯಾಸ) ಅಂಗಸಾಧನೆ ಕೃಪಣ ವೃತ್ತಿ-ದೀನ ಜೀವನ, ಅಲಘು ಭುಜಬಲ-ಅಲಘು-ಲಘುವಲ್ಲದ, ಮಹಾ ಭುಜಬಲ ಉಳ್ಳವನು, ಕರ್ಣ
ಮೂಲ ...{Loading}...
ಎಲವೊ ಗರುಡಿಯ ಕಟ್ಟಿ ಸಾಮವ
ಕಲಿಸಿ ಬಳಿಕಾ ಕೋಲ ಮಕ್ಕಳ
ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ
ಕಲಹವೇತಕೆ ಕಾಣ ಬಹುದೆಂ
ದಲಘು ಭುಜಬಲ ಭಾನುಸುತ ಕಡು
ಮುಳಿದು ಫಡ ಫಡ ಪಾರ್ಥ ಮೈದೋರೆನುತ ಮಾರಾಂತ ॥16॥
೦೧೭ ಇತ್ತಲಿತ್ತಲು ಪಾರ್ಥ ...{Loading}...
ಇತ್ತಲಿತ್ತಲು ಪಾರ್ಥ ನಿಲು ನಿಲು
ಮುತ್ತಯನ ಹಾರುವರನಂಜಿಸಿ
ಹೊತ್ತುಗಳೆದೊಡೆ ಹೋಹುದೇ ಕೈದೋರು ಮೈದೋರು
ತೆತ್ತಿಗರ ಕರೆ ನಿನ್ನ ಬೇರನು
ಕಿತ್ತು ಕಡಲೊಳು ತೊಳೆವ ರಿಪುಭಟ
ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ಅರ್ಜುನನನ್ನು ಕರೆದ. “ಪಾರ್ಥ ! ಈ ಕಡೆ ! ಈ ಕಡೆ ! ನಿಲ್ಲು. ನೀನು ಮುದುಕರಾದ ಭೀಷ್ಮರನ್ನು ಹಾರುವ ದ್ರೋಣರನ್ನು ಹೆದರಿಸಿ ಹೊತ್ತು ಕಳೆದು ಬಿಟ್ಟರೆ ಆಯಿತೆ ? ಈಗ ಎದುರಿಗೆ ನಿಲ್ಲು ನಿನ್ನ ಸೇವಕರನ್ನು ಕರೆ ! ನಾನೀಗ ನಿನ್ನ ಬೇರನ್ನು ಕಿತ್ತು ಸಮುದ್ರದ ನೀರಿನಲ್ಲಿ ತೊಳೆಯುವ ಮೃತ್ಯುವಾಗಿದ್ದೇನೆ ಗೊತ್ತೆ ? ನಾನು ಕರ್ಣ” ಎನ್ನುತ್ತ ಎದುರಿಗೆ ಬಂದ.
ಪದಾರ್ಥ (ಕ.ಗ.ಪ)
ತೆತ್ತಿಗ-ಸೇವಕ, ನಿನ್ನ ಬೇರನು ಕಿತ್ತು-ಕೊಂದು (ಸಮೂಲವಾಗಿ ಉತ್ಪಾಟಿಸುವುದು) ವಂಶವನ್ನು ಕಿತ್ತು.
ಪಾಠಾನ್ತರ (ಕ.ಗ.ಪ)
(ಮೃತ್ಯುವಿಗೆ ಬದಲಾಗಿ ‘ಮಿತ್ತು’ ಎಂದು ತಿದ್ದಿದರೆ ಛಂದಸ್ಸಿನ ದೃಷ್ಟಿಯಿಂದ ಅನುಕೂಲ) ವಿರಾಟಪರ್ವ, ಮೈಸೂರು ವಿ.ವಿ.
ಮೂಲ ...{Loading}...
ಇತ್ತಲಿತ್ತಲು ಪಾರ್ಥ ನಿಲು ನಿಲು
ಮುತ್ತಯನ ಹಾರುವರನಂಜಿಸಿ
ಹೊತ್ತುಗಳೆದೊಡೆ ಹೋಹುದೇ ಕೈದೋರು ಮೈದೋರು
ತೆತ್ತಿಗರ ಕರೆ ನಿನ್ನ ಬೇರನು
ಕಿತ್ತು ಕಡಲೊಳು ತೊಳೆವ ರಿಪುಭಟ
ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ ॥17॥
೦೧೮ ಉಣ್ಟು ನೀನಾಹವದೊಳಗೆ ...{Loading}...
ಉಂಟು ನೀನಾಹವದೊಳಗೆ ಗೆಲ
ಲೆಂಟೆದೆಯಲಾ ನಿನ್ನ ಹೋಲುವ
ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ
ಟೆಂಟಣಿಸದಿದಿರಾಗು ನಿನ್ನಯ
ಸುಂಟಿಗೆಯನಿತ್ತಖಿಳ ಭೂತದ
ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳ್ ಎಂದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಹೇಳಿದ : “ಹೌದು ಹೌದು ಕರ್ಣ. ನೀನಿದ್ದೀಯಲ್ಲ ! ಯುದ್ಧದಲ್ಲಿ ನಿನ್ನನ್ನು ಗೆಲ್ಲುವವರಿಗೆ ಎಂಟೆದೆ ಇರಬೇಕು. ಕೌರವನ ದೊಡ್ಡ ಸೇನೆಯಲ್ಲಿ ನಿನ್ನ ಸಮಾನರಾದ ವೀರರು ಯಾರಿದ್ದಾರೆ ? ಧೈರ್ಯವಾಗಿ ನನ್ನೊಡನೆ ಯುದ್ಧಕ್ಕೆ ನಿಲ್ಲು. ನಿನ್ನ ಮೈಯ ಮಾಂಸವನ್ನು ಭೂತಗಳಿಗೆ ಕೊಟ್ಟು ಆ ಭೂತಗಳ ನಂಟ ಈ ಅರ್ಜುನ ಎನ್ನಿಸಿಕೊಳ್ಳುತ್ತೇನೆ”
ಪದಾರ್ಥ (ಕ.ಗ.ಪ)
ಆಹವ-ಯುದ್ಧ, ಕಟಕ-ಸೇನೆ, ಟೆಂಟಣಿಸು-ಕೆರಳು, ಉದ್ವೇಗಗೊಳ್ಳು, ಸುಂಟಿಗೆ-ಮಾಂಸ
ಮೂಲ ...{Loading}...
ಉಂಟು ನೀನಾಹವದೊಳಗೆ ಗೆಲ
ಲೆಂಟೆದೆಯಲಾ ನಿನ್ನ ಹೋಲುವ
ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ
ಟೆಂಟಣಿಸದಿದಿರಾಗು ನಿನ್ನಯ
ಸುಂಟಿಗೆಯನಿತ್ತಖಿಳ ಭೂತದ
ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳೆಂದ ॥18॥
೦೧೯ ಚಕಿತ ಚಾಪರು ...{Loading}...
ಚಕಿತ ಚಾಪರು ಗಾಢ ಬದ್ಧ
ಭ್ರುಕುಟಿ ಭೀಷಣಮುಖರು ರೋಷ
ಪ್ರಕಟಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ
ವಿಕಟ ಶೌರ್ಯೋತ್ಕಟ ಮಹಾ ನಾ
ಯಕರು ನಿಷ್ಠುರ ಸಿಂಹ ಗರ್ಜನೆ
ವಿಕಳಿತಾಚಲ ಸನ್ನಿವೇಶರು ಹೊಕ್ಕು ತರುಬಿದರು ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಬ್ಬರೂ ಸಮಾನ ವೀರರು. ಇಬ್ಬರ ಕೈಯ ಬಿಲ್ಲುಗಳೂ ಒಂದೇ ಸಮನೆ ಒಲೆದಾಡುತ್ತಿವೆ. ಇಬ್ಬರೂ ಹುಬ್ಬುಗಂಟಿಕ್ಕಿದ ಭಯಾನಕ ಮುಖಿಗಳು. ರೋಷವೆಂಬುದು ಸ್ಪಷ್ಟವಾಗಿ ಕಾಣುವ ಬೆಂಕಿಯ ಕಿಡಿಯಂತೆ ಬೆಳಗುತ್ತಿದ್ದವರು. ಭಯಂಕರ ಶೌರ್ಯದ ಮಹಾನಾಯಕರು. ಸಮಾನವಾಗಿ ಬೆಳಗಿದರು. ತಮ್ಮ ಭಯಂಕರ ಸಿಂಹ ಗರ್ಜನೆಯಿಂದ ಪರ್ವತವೂ ಕ್ಷೋಭೆಗೊಳ್ಳುವಂತೆ ಮಾಡಬಲ್ಲವರು. ಹೀಗೆ ಇಬ್ಬರೂ ಹೊಕ್ಕು ಹೋರಾಡಿದರು.
ಪದಾರ್ಥ (ಕ.ಗ.ಪ)
ಚಕಿತ ಚಾಪ-ಚಟುವಟಿಕೆಯ ಬಿಲ್ಲು (ಹಿಡಿದವರು). ಗಾಢ ಬದ್ಧ ಭ್ರುಕುಟಿ ಭೀಷಣ ಮುಖ-ಉಗ್ರವಾಗಿ ಹುಬ್ಬುಗಂಟು ಹಾಕಿಕೊಂಡು ಭಯಂಕರವಾದ ಮುಖವುಳ್ಳವರು, ರೋಷ ಪ್ರಕಟ ಪಾವಕ ವಿಸ್ಫುಲಿಂಗರು-ರೋಷವನ್ನು ಹೊರಸೂಸುವ ಬೆಂಕಿಯ ಕಿಡಿಯಂತೆ ಹೊಳೆಯುತ್ತಿದ್ದವರು, ಸಮತಳಿಸಿ-ಸಮಾನರಾಗಿ. ವಿಕಳಿತಾಚಲ ಸನ್ನಿವೇಶರು-ಪರ್ವತವು ಕ್ಷೋಭೆಗೊಳ್ಳುವಂತೆ ಮಾಡುವವರು
ಮೂಲ ...{Loading}...
ಚಕಿತ ಚಾಪರು ಗಾಢ ಬದ್ಧ
ಭ್ರುಕುಟಿ ಭೀಷಣಮುಖರು ರೋಷ
ಪ್ರಕಟಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ
ವಿಕಟ ಶೌರ್ಯೋತ್ಕಟ ಮಹಾ ನಾ
ಯಕರು ನಿಷ್ಠುರ ಸಿಂಹ ಗರ್ಜನೆ
ವಿಕಳಿತಾಚಲ ಸನ್ನಿವೇಶರು ಹೊಕ್ಕು ತರುಬಿದರು ॥19॥
೦೨೦ ಪೂತುರೇ ಬಿಲುಗಾರ ...{Loading}...
ಪೂತುರೇ ಬಿಲುಗಾರ ಮಝರೇ
ಸೂತನಂದನ ಬಾಣ ರಚನಾ
ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ
ಆತುಕೊಳ್ಳೈ ನಮ್ಮ ಬಲುಮೆಗ
ಳೇತರತಿಶಯವೆನುತ ಸರಳಿನ
ಸೇತುವನು ಕಟ್ಟಿದನು ಗಗನಾಂಗಣಕೆ ಕಲಿಪಾರ್ಥ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೇಷ್ ! ಕರ್ಣ ! ನೀನು ದೊಡ್ಡ ಬಿಲ್ಲುಗಾರ. ಸೂತಪುತ್ರನಾದ ನಿನ್ನ ಬಾಣರಚನಾ ವಿದ್ಯೆಯು ಪರಶುರಾಮ ಸಂಪ್ರದಾಯಕ್ಕೆ ಸೇರಿದುದಲ್ಲವೆ? ನಮ್ಮದು ಅಂಥ ಅತಿಶಯದ ವಿದ್ಯೆಯಲ್ಲ. ಆದರೂ ಈ ಹೊಡೆತಗಳನ್ನು ತಡೆದುಕೋ” ಹೀಗೆ ಹೇಳಿ ಅರ್ಜುನನು ಬಾಣಗಳ ಸೇತುವೆಯನ್ನು ಆಕಾಶದ ಅಂಗಳದಲ್ಲಿ ಹರಡಿದ.
ಪದಾರ್ಥ (ಕ.ಗ.ಪ)
ಪೂತುರೆ-ಭಲಾ ! ಆತುಕೊಳ್ಳೈ-ಆನು-ಧರಿಸು, ಸರಳು-ಬಾಣ,
ಟಿಪ್ಪನೀ (ಕ.ಗ.ಪ)
ಪರಶುರಾಮರ ಸಂಪ್ರದಾಯ, ಹಳೆಯದು ಎಂದು ಹೇಳುವ ಮಾತು ವ್ಯಂಗ್ಯದ್ದಾಗಿದೆ. ಮುಂದಿನ ಪದ್ಯದಲ್ಲಿದೆ ದ್ರೋಣರ ಬಳಿ ಕಲಿತ ಅರ್ಜುನನೇ ವೀರ ! ತಾನು ಅವನಿಗೆ ಸಮನಲ್ಲ ಎಂಬ ಕಟಕಿ.
ಮೂಲ ...{Loading}...
ಪೂತುರೇ ಬಿಲುಗಾರ ಮಝರೇ
ಸೂತನಂದನ ಬಾಣ ರಚನಾ
ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ
ಆತುಕೊಳ್ಳೈ ನಮ್ಮ ಬಲುಮೆಗ
ಳೇತರತಿಶಯವೆನುತ ಸರಳಿನ
ಸೇತುವನು ಕಟ್ಟಿದನು ಗಗನಾಂಗಣಕೆ ಕಲಿಪಾರ್ಥ ॥20॥
೦೨೧ ಮೇಲುಗೈಯಹೆ ಬಿರುದರೊಳು ...{Loading}...
ಮೇಲುಗೈಯಹೆ ಬಿರುದರೊಳು ಬಿ
ಲ್ಲಾಳು ನೀನಹೆ ಚಾಪ ವಿದ್ಯಾ
ಭಾಳನೇತ್ರನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಕೋಲು ನಮ್ಮವು ಕೆಲವು ಸಮಗೈ
ಯಾಳೆ ನಿಮಗಾವೆನುತ ನೋಟಕ
ರಾಲಿ ಝೋಂಮಿಡೆ ಕರ್ಣ ತುಳುಕಿದನಂಬಿನಂಬುಧಿಯ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ ! ನೀನು ಮೇಲುಗೈಯಾಗಿದ್ದೀಯೆ. ವೀರರ ಪೈಕಿ ಮಹಾ ಬಿಲ್ಲಾಳು ಎಂದರೆ ನೀನೇ. ಏಕೆಂದರೆ ನೀನು ಕಲಿತ ಮನೆ ಬಿಲ್ವಿದ್ಯೆಯಲ್ಲಿ ರುದ್ರನೆನಿಸಿದ ದ್ರೋಣರ ಗರುಡಿಯಲ್ಲವೆ ? ಈಗ ನಮ್ಮ ಕೆಲವು ಬಾಣಗಳ ರುಚಿನೋಡು. ನಾವೇನೂ ನಿನಗೆ ಸಮಾನರಲ್ಲ” ಎನ್ನುತ್ತ ನೋಡುತ್ತಿದ್ದವರ ಕಣ್ಣು ಜೋಮಿಡುವಂತೆ ಕರ್ಣನು ಬಾಣಗಳ ಸಮುದ್ರವನ್ನು ಕಲಕಿದ.
ಪದಾರ್ಥ (ಕ.ಗ.ಪ)
ಮೇಲುಗೈ-ಅಧಿಕ, ಬಿರುದ-ವೀರ, ಭಾಳನೇತ್ರ-ರುದ್ರ (ಹಣೆಗಣ್ಣಿನವ) ನೋಟಕ-ನೋಡುವವರು, ಆಲಿ-ಕಣ್ಣು, ಝೋಮಿಡೆ-ಮರಗಟ್ಟಲು
ಮೂಲ ...{Loading}...
ಮೇಲುಗೈಯಹೆ ಬಿರುದರೊಳು ಬಿ
ಲ್ಲಾಳು ನೀನಹೆ ಚಾಪ ವಿದ್ಯಾ
ಭಾಳನೇತ್ರನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಕೋಲು ನಮ್ಮವು ಕೆಲವು ಸಮಗೈ
ಯಾಳೆ ನಿಮಗಾವೆನುತ ನೋಟಕ
ರಾಲಿ ಝೋಂಮಿಡೆ ಕರ್ಣ ತುಳುಕಿದನಂಬಿನಂಬುಧಿಯ ॥21॥
೦೨೨ ಅಹಹ ಫಲುಗುಣ ...{Loading}...
ಅಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣ ಪಂಜರವ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಉತ್ತರನು ಅರ್ಜುನನಿಗೆ ಹೇಳಿದ. “ಆಹಾ ! ಅರ್ಜುನ ! ನಾನು ನೋಡಲಾರೆ ! ಅಸಂಖ್ಯ ಬಾಣಗಳು ಭೂಮಿಯನ್ನು ಮುಚ್ಚಿವೆ. ಮಹಾದೇವ !” ಹೀಗೆ ಹೇಳುತ್ತ ಸಾರಥಿ ಉತ್ತರನು ಮುಖ ಮುಚ್ಚಿಕೊಂಡ. ಆಗ “ಅಯ್ಯಾ ಉತ್ತರ ನೀನು ಇದಕ್ಕೆಲ್ಲ ಆಶ್ಚರ್ಯಪಡಬೇಡ. ನನಗಂತೂ ಇದೇನು ದೊಡ್ಡದಲ್ಲ. ಈಗ ನನ್ನ ಕೌಶಲವನ್ನಷ್ಟು ನೋಡು” ಎನ್ನುತ್ತ ಅರ್ಜುನನು ಸಾಹಸದಿಂದ ಬಾಣ ಪಂಜರವನ್ನು ಕೆದಕಿದ.
ಪದಾರ್ಥ (ಕ.ಗ.ಪ)
ಅಮ್ಮು-ಸಮರ್ಥನಾಗು, ಬಾಣಾದ್ವೈತ - ಬಾಣಗಳೆಲ್ಲವೂ ಭೂಮಿಯನ್ನು ಆವರಿಸಿವೆ ಎಂಬರ್ಥ, ರಹ-ಅಚ್ಚರಿಪಡು, ಗಹನ-ಮಹತ್ತ್ವ, ಸಹಸ-ಸಾಹಸ
ಮೂಲ ...{Loading}...
ಅಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣ ಪಂಜರವ ॥22॥
೦೨೩ ವೀರನಲ್ಲಾ ಬನದ ...{Loading}...
ವೀರನಲ್ಲಾ ಬನದ ರಾಜ ಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದಿರೈ ದಿಟವೇಕಚಕ್ರದಲಿ
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೆಂತೆನುತ ತೆಗೆದೆಚ್ಚನಾ ಕರ್ಣ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಕರ್ಣನು “ಆಹಾ ? ನೀನು ವೀರನಲ್ಲವೆ ? ವನವಾಸಿಯಾದ ರಾಜಪುತ್ರನಲ್ಲವೆ ? ಕೌರವನ ಬಡಿ ಹೋರಿಯಲ್ಲವೆ( ಬಲಿಪಶುವಲ್ಲವೆ?) ನೀವು ನಿಜವಾಗಿ ಏಕಚಕ್ರನಗರದಲ್ಲಿ ಭಿಕ್ಷೆ ಬೇಡಿದವರಲ್ಲವೆ ? ನಿನ್ನ ಬೃಹನ್ನಳೆಯ ನಾಟಕದ ವೇಷವನ್ನು ತೆಗೆದುಹಾಕಿದವರು ಯಾರು ? ನಿನಗೆ ಈ ಪರಾಕ್ರಮದ ಸಿರಿ ಹೇಗೆ ಬಂತು ?” ಎನ್ನುತ್ತ ಬಾಣಗಳನ್ನು ಸುರಿಸಿದ.
ಪದಾರ್ಥ (ಕ.ಗ.ಪ)
ಬನದ ರಾಜಕುಮಾರ-ವನವಾಸ ಕಾಲದಲ್ಲಿ ಕಾಡಿನ ರಾಜಕುಮಾರ, ಚೋಹ-ವೇಷ, ಏಕಚಕ್ರ-ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ಹೋಗಿ ವೇಷ ಮರೆಸಿಕೊಂಡು ಭಿಕ್ಷೆ ಬೇಡಿ ವಾಸಮಾಡುತ್ತಿದ್ದ ಒಂದು ನಗರ.
ಮೂಲ ...{Loading}...
ವೀರನಲ್ಲಾ ಬನದ ರಾಜ ಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದಿರೈ ದಿಟವೇಕಚಕ್ರದಲಿ
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೆಂತೆನುತ ತೆಗೆದೆಚ್ಚನಾ ಕರ್ಣ ॥23॥
೦೨೪ ಬಲುಗಡಿಯನಹೆ ಬೇಟೆಗಾರರ ...{Loading}...
ಬಲುಗಡಿಯನಹೆ ಬೇಟೆಗಾರರ
ಬಳಗವುಳ್ಳವನಹೆ ವಿರೋಧಿಯ
ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿ ಕಾರ್ಯದಲಿ
ತಲೆಯ ತೆರುವವನಹೆ ಕುಭಾಷೆಗೆ
ಮುಳಿವವರು ನಾವಲ್ಲ ಸೈರಿಸು
ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸರಿವಳೆಯ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು : ಕರ್ಣ ! ನೀನು ಮಹಾ ಪರಾಕ್ರಮಿ ! ಬೇಟೆಗಾರರ ಬಳಗವನ್ನು ಉಳ್ಳವನು ! ಶತ್ರುಗಳ ಪಾಳಯದಲ್ಲಿ ಮಹಾಶಕ್ತಿಶಾಲಿ ಯೋಧನಾಗಿದ್ದೀಯೆ. ಒಡೆಯನಿಗಾಗಿ ತಲೆಯನ್ನು ತೆರುವವನಾಗಿದ್ದೀಯೆ ? ನಿನ್ನ ದುರ್ಭಾಷೆಗೆ ನಾವೇನೂ ಕೋಪಿಸಿಕೊಳ್ಳುವುದಿಲ್ಲ. ಈಗ ನನ್ನ ಹೊಡೆತಗಳನ್ನು ಸಹಿಸಿಕೋ" ಎಂದು ಬಾಣಗಳ ಭಾರಿಯ ಮಳೆಯನ್ನು ಕರೆದ.
ಪದಾರ್ಥ (ಕ.ಗ.ಪ)
ಬಲುಗಡಿಯ-ವೀರ, ಬೇಟೆಗಾರರ ಬಳಗವುಳ್ಳವನಹೆ- ಸೂತರು ರಥ ನಿರ್ಮಾಣ ಮಾಡುವ, ಬೇಟೆಯಾಡುವ ಕಾರ್ಯದಲ್ಲಿ ಮಗ್ನರು. ಅದನ್ನು ಅರ್ಜುನ ಆಡಿಕೊಳ್ಳುತ್ತಿದ್ದಾನೆ, ಸರಳ-ಬಾಣದ, ಸರಿವಳೆ-ಭಾರಿಯ ಮಳೆ
ಟಿಪ್ಪನೀ (ಕ.ಗ.ಪ)
ಸುರಿದನು ಸರಳ ಸರಿವಳೆಯ-ಕುಮಾರವ್ಯಾಸನಲ್ಲಿ ಇಂಥ ನುಡಿಗುಣಿತಗಳು ಅಪಾರ ಸಂಖ್ಯೆಯಲ್ಲಿವೆ.
ಮೂಲ ...{Loading}...
ಬಲುಗಡಿಯನಹೆ ಬೇಟೆಗಾರರ
ಬಳಗವುಳ್ಳವನಹೆ ವಿರೋಧಿಯ
ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿ ಕಾರ್ಯದಲಿ
ತಲೆಯ ತೆರುವವನಹೆ ಕುಭಾಷೆಗೆ
ಮುಳಿವವರು ನಾವಲ್ಲ ಸೈರಿಸು
ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸರಿವಳೆಯ ॥24॥
೦೨೫ ಅದ್ದನೋ ಬಾಣಾಮ್ಬುಧಿಯಲೊಡೆ ...{Loading}...
ಅದ್ದನೋ ಬಾಣಾಂಬುಧಿಯಲೊಡೆ
ಬಿದ್ದನೋ ವಿತಳದಲಿ ಮೇಣ್ವಿಧಿ
ಕದ್ದನೋ ಕೈವಾರವೇತಕೆ ಕಾಣೆನಿನಸುತನ
ತಿದ್ದಿತಾತನ ದೆಸೆ ನದೀಸುತ
ನಿದ್ದನಾದೊಡೆ ಕೌರವೇಂದ್ರನ
ಹೊದ್ದ ಹೇಳೆಂದೊದರುತಿರ್ದುದು ಕೂಡೆ ಕುರುಸೇನೆ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕರ್ಣನು ಅರ್ಜುನನ ಬಾಣಗಳ ಸಮುದ್ರದಲ್ಲಿ ಮುಳುಗಿ ಬಿದ್ದ, ಅಥವಾ ಪಾತಾಳಕ್ಕೆ ಬಿದ್ದ. ಅಥವಾ ವಿಧಿಯ (ಮೃತ್ಯು) ಪಾಲಾದ. ಅರ್ಜುನನನ್ನು ಏನೆಂದು ಹೊಗಳಲಿ! ಕರ್ಣ (ಇನಸುತ = ಸೂರ್ಯನ ಮಗ,) ಹಗಲಲ್ಲೇ ಕಾಣೆಯಾದ ! ಅವನ ಗತಿ ಮುಗಿದಂತಾಯಿತು. ಅನಂತರ ಸೈನಿಕರು” ಅಲ್ಲಿ ಎಲ್ಲಾದರೂ ಭೀಷ್ಮ ಇದ್ದರೆ ಬರಹೇಳಿ. ಕೌರವೇಂದ್ರನ ಸಮೀಪ ಹೋಗುವಂತೆ ಹೇಳಿ" ಎಂದು ಕೂಗುತ್ತಿದ್ದರು.
ಪದಾರ್ಥ (ಕ.ಗ.ಪ)
ಅದ್ದು-ಮುಳುಗು (ಅೞ್ದು-ಮುಳುಗು) ಅಂಬುಧಿ-ಸಮುದ್ರ, ವಿತಳ-ಪಾತಾಳ, ಕೈವಾರ-ಸ್ತುತಿ, ಇನಸುತ-ಸೂರ್ಯಪುತ್ರ-ಕರ್ಣ ! ತಿದ್ದಿತು-ಮುಗಿಯಿತು, ಹೊದ್ದು-ಸಮೀಪ ಹೋಗು.
ಟಿಪ್ಪನೀ (ಕ.ಗ.ಪ)
ಕುರುಧರೆಯೊಳರಸಿದರ್ ಕುರುಸುತನಂ ಎಂದು ರನ್ನ ಹೇಳುವುದನ್ನು ಗಮನಿಸಬೇಕು. ಕುರುವಂಶದ ಚಕ್ರವರ್ತಿಯಾದ ಕೌರವನನ್ನು ಕೌರವನ ರಾಜ್ಯದಲ್ಲಿ ಯುದ್ಧ ಭೂಮಿಯಲ್ಲಿ ಹುಡುಕಿದರಂತೆ. ಹಾಗೆಯೇ ಸೂರ್ಯಪುತ್ರ ಎಂದರೆ ಪ್ರಕಾಶಮಾನನಾದ ಕರ್ಣ. ಯುದ್ಧ ಭೂಮಿಯಲ್ಲಿ ಕಣ್ಣಿಗೇ ಬೀಳದಂತೆ ಮಾಯವಾದ. ಆದರೆ ಕರ್ಣನು ಸೂರ್ಯನ ಮಗ ಎಂಬುದು ಅವರಿಗೆ ಹೇಗೆ ತಿಳಿದಿತ್ತು ? ಎಂಬ ಪ್ರಶ್ನೆ ಏಳುತ್ತದೆ.
ಮೂಲ ...{Loading}...
ಅದ್ದನೋ ಬಾಣಾಂಬುಧಿಯಲೊಡೆ
ಬಿದ್ದನೋ ವಿತಳದಲಿ ಮೇಣ್ವಿಧಿ
ಕದ್ದನೋ ಕೈವಾರವೇತಕೆ ಕಾಣೆನಿನಸುತನ
ತಿದ್ದಿತಾತನ ದೆಸೆ ನದೀಸುತ
ನಿದ್ದನಾದೊಡೆ ಕೌರವೇಂದ್ರನ
ಹೊದ್ದ ಹೇಳೆಂದೊದರುತಿರ್ದುದು ಕೂಡೆ ಕುರುಸೇನೆ ॥25॥
೦೨೬ ಇಡಿದ ಮೋಡದ ...{Loading}...
ಇಡಿದ ಮೋಡದ ಮುತ್ತಿಗೆಯ ಮೇ
ಲೊಡೆದು ಮೂಡುವ ರವಿಯವೋಲ್ ನೆರೆ
ಕಡಿದು ಶರ ಪಂಜರವ ಮುಸುಕಿದನರ್ಜುನನ ರಥವ
ನಡುಗಿದನು ವೈರಾಟ ಹಯವಡಿ
ಗಡಿಗೆ ನೊಂದವು ಹನುಮನಂಬರ
ವೊಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆವರಿಸಿದ ಮೋಡದ ಆಕ್ರಮಣವನ್ನು ಒಡೆದು ಮೂಡುವ ಸೂರ್ಯನಂತೆ ಕರ್ಣನು ಮತ್ತೆ ಕಾಣಿಸಿಕೊಂಡ. ತನ್ನ ಸುತ್ತ ಕವಿದಿದ್ದ ಶರಪಂಜರವನ್ನು ಕಡಿದು ಅನಂತರ ಅರ್ಜುನನ ರಥವನ್ನು ಮುಚ್ಚಿ ಹಾಕಿದ. ಆಗ ವಿರಾಟಪುತ್ರ ಉತ್ತರನು ನಡುಗಿದ. ಕುದುರೆಗಳಿಗೆ ತುಂಬ ನೋವಾಯಿತು. ಹನುಮಂತನು ಆಕಾಶವೇ ಬಿರಿಯುವಂತೆ ಸಂಕಟದಿಂದ ಕಿರುಚಾಡಿದ. ಒಂದು ನಿಮಿಷದಲ್ಲಿ ಬೇರೊಂದು ಅದ್ಭುತ ದೃಶ್ಯ ಮೂಡಿ ಬಂದಿತ್ತು.
ಪದಾರ್ಥ (ಕ.ಗ.ಪ)
ಇಡಿದ-ಆವರಿಸಿದ, ವೈರಾಟ-ವಿರಾಟನ ಮಗ, ಉತ್ತರ, ಅಂಬರ-ಆಕಾಶ
ಮೂಲ ...{Loading}...
ಇಡಿದ ಮೋಡದ ಮುತ್ತಿಗೆಯ ಮೇ
ಲೊಡೆದು ಮೂಡುವ ರವಿಯವೋಲ್ ನೆರೆ
ಕಡಿದು ಶರ ಪಂಜರವ ಮುಸುಕಿದನರ್ಜುನನ ರಥವ
ನಡುಗಿದನು ವೈರಾಟ ಹಯವಡಿ
ಗಡಿಗೆ ನೊಂದವು ಹನುಮನಂಬರ
ವೊಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ ॥26॥
೦೨೭ ಸೋಲವಾಯಿತು ಕರ್ಣಗೆಮ್ಬರ ...{Loading}...
ಸೋಲವಾಯಿತು ಕರ್ಣಗೆಂಬರ
ನಾಲಗೆಯ ಕೊಯ್ಯೆಲವೊ ಬಿಡು ಬಿ
ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಭೂಪತಿಯ
ಭಾಳದಕ್ಕರ ತೊಡೆಯಿತೋ ತೆಗೆ
ಕಾಳಗವನೆಂದಖಿಳ ಕುರುಬಲ
ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಯಲಿ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ಕಾಣಿಸಿಕೊಂಡ. “ಕರ್ಣನಿಗೆ ಸೋಲಾಯಿತು ಎಂದು ಹೇಳುವವರ ನಾಲಗೆಯನ್ನು ಕೊಯ್ಯಿರಿ ! ಈತನು ಕೌರವ ರಾಜನ ಪಟ್ಟದಾನೆ ಎನ್ನಿಸಿದ ಕರ್ಣ ! ಅರ್ಜುನನ ಹಣೆಯ ಬರಹ ಈಗ ತೊಡೆದು ಹೋಗುತ್ತದೆ. ಇನ್ನೇತರ ಯುದ್ಧ! " ಎಂದು ಕುರುಸೇನೆ ಆರ್ಭಟಿಸಿತು. ಹಾಗೆ ಹೇಳಿದಾಗ ಕರ್ಣ ವಿಜೃಂಭಿಸಿದ.
ಪದಾರ್ಥ (ಕ.ಗ.ಪ)
ಸೋಲ-ಅಪಜಯ, ಭಾಳದಕ್ಕರ-ಹಣೆಯ ಬರಹ
ಮೂಲ ...{Loading}...
ಸೋಲವಾಯಿತು ಕರ್ಣಗೆಂಬರ
ನಾಲಗೆಯ ಕೊಯ್ಯೆಲವೊ ಬಿಡು ಬಿ
ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಭೂಪತಿಯ
ಭಾಳದಕ್ಕರ ತೊಡೆಯಿತೋ ತೆಗೆ
ಕಾಳಗವನೆಂದಖಿಳ ಕುರುಬಲ
ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಯಲಿ ॥27॥
೦೨೮ ಅರಿಭಟನ ಶರಜಾಲವನು ...{Loading}...
ಅರಿಭಟನ ಶರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ
ಶರ ಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಅರ್ಜುನ ಕೂಡಲೇ ಕರ್ಣನ ಶರಜಾಲವನ್ನು ಸಂಹರಿಸಿದ. ಅನಂತರ ಎರಡು ಬಾಣಗಳಿಂದ, ಕರ್ಣನ ಸಾರಥಿಯನ್ನು ಐದು ಬಾಣಗಳಿಂದ ಕುದುರೆಯನ್ನು ಘಾತಿಸಿದ, ಕರ್ಣನ ಕೈಯಲ್ಲಿದ್ದ ಧನುಸ್ಸನ್ನು ನಾಲ್ಕು ಬಾಣಗಳಿಂದ ಕತ್ತರಿಸಿದ. ಆಗ ಉತ್ಸಾಹಕುಂದಿದ ಕರ್ಣನು ಭಗ್ನ ಮನೋರಥನಾಗಿ ಮಾತೇ ಆಡದೆ ಹಿಂದಿರುಗಿದ.
ಪದಾರ್ಥ (ಕ.ಗ.ಪ)
ಅರಿಭಟ-ಶತ್ರುವೀರ (ಕರ್ಣ), ಹಯ-ಕುದುರೆ, ಭಗ್ನೋತ್ಕರುಷ ಹರುಷಿತ-ಸಂತೋಷ ಸಂಭ್ರಮಗಳ ಭಾವ ಭಂಗಗೊಂಡ
ಮೂಲ ...{Loading}...
ಅರಿಭಟನ ಶರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ
ಶರ ಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ ॥28॥
೦೨೯ ಓಟವೇ ಅಪಜಯದ ...{Loading}...
ಓಟವೇ ಅಪಜಯದ ಬೊಡ್ಡಿಯ
ಬೇಟವೇ ಬೆಸಗೊಳ್ಳಿರೈ ಒಳ
ತೋಟಿಗೊತ್ತಾಳಹುದು ನಾಲಗೆಯೀಗಳೇನಾಯ್ತು
ಆಟವಿಕ ಭೂಪತಿಯ ಕೀರ್ತಿಯ
ಕೂಟಣಿಗರೊಗ್ಗಾಯ್ತು ತೆಗೆ ಮರು
ಳಾಟವಿನ್ನೇಕೆನುತ ಪಾರ್ಥನ ತಾಗಿದನು ದ್ರೋಣ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ! ಕರ್ಣ ಓಡಿದನೆ ? ಸೋಲು ಎಂಬ ಮಹಿಳೆಯೊಂದಿಗೆ ಪ್ರೇಮಸಲ್ಲಾಪವೆ ? ಅವರನ್ನೆಲ್ಲಕೇಳಿ ! ಅವರೆಲ್ಲ ಈಗ ಸಂಕಟಕ್ಕೆ ಸಿಕ್ಕಿದ್ದಾರೆ. ಉದ್ದಕ್ಕೂ ಬಾಯಿ ಮಾಡುತ್ತಿದ್ದರಲ್ಲ ಏನಾಯಿತು ಕೇಳಿ ! ಇವರುಗಳೆಲ್ಲ ಧೂರ್ತ ಕೌರವನ ಕೀರ್ತಿಯ ಜೊತೆಗಾರರು. ಈಗ ಸೋತಿದ್ದಾರೆ. ಇವನು ಕೊಚ್ಚಿಕೊಂಡ ವಿಷಯ ಏನಾಯಿತು ? ತೆಗೆ ಇನ್ನು ಮರುಳಾಟವೇಕೆ ? ಎನ್ನುತ್ತ ದ್ರೋಣರು ಅರ್ಜುನನ ಮೇಲೆ ಬಿದ್ದರು.
ಪದಾರ್ಥ (ಕ.ಗ.ಪ)
ಬೊಡ್ಡಿ-ಸೂಳೆ, ಬೇಟ-ಪ್ರೇಮ, ಬೆಸಗೊಳ್ಳಿ-ಕೇಳಿ,
ಕೂಟಣಿಗ-ಸಹಬಾಂಧವ, ಜತೆಯಲ್ಲೇ ಇರುವವ,
ಒಗ್ಗಾಗು-ಒಂದು ಗೂಡು,
ಆಟವಿಕ-ಅನಾಗರಿಕ, ಧೂರ್ತ.
ಟಿಪ್ಪನೀ (ಕ.ಗ.ಪ)
(ಒಳತೋಟಿಗೊತ್ತಾಳಹುದು-ಇದಕ್ಕೆ ಕೃಷ್ಣ ಜೋಯಿಸ್ (ವಿರಾಟ ಪರ್ವ 9-28) ಒಳ ತೋಟಿಗೊತ್ತೋಳಹುದು ಎಂಬ ಪಾಠವನ್ನು ಕೊಟ್ಟಿದ್ದಾರೆ ಎರಡರ ಅರ್ಥವೂ ಅಸ್ಪಷ್ಟ)
ಆಟವಿಕ ಭೂಪತಿಯ ಬದಲು ಅವರು ಆಟಕಿಹ ಭೂಪತಿಯ ಕೀರ್ತಿಯ ಕೂಟಣಿಗರೊಗ್ಗಾಯ್ತು… ಎಂಬ ಪಾಠ ಸೂಚಿಸಿದ್ದಾರೆ ಇವರೆಲ್ಲ ವಿನೋದದ ಸಮಯಕ್ಕೆ ಆಟಕ್ಕೆ ಇರುವ ಕೌರವನ ಕೀರ್ತಿಯಲ್ಲಿ ಒಂದಾಗುವ ಸ್ವಭಾವದವರು, (ಕಷ್ಟ ಸಮಯದಲ್ಲಿ ಕೈಬಿಡುತ್ತಾರೆಂಬ ಸೂಚನೆ ಇಲ್ಲಿದೆ)
ಮೂಲ ...{Loading}...
ಓಟವೇ ಅಪಜಯದ ಬೊಡ್ಡಿಯ
ಬೇಟವೇ ಬೆಸಗೊಳ್ಳಿರೈ ಒಳ
ತೋಟಿಗೊತ್ತಾಳಹುದು ನಾಲಗೆಯೀಗಳೇನಾಯ್ತು
ಆಟವಿಕ ಭೂಪತಿಯ ಕೀರ್ತಿಯ
ಕೂಟಣಿಗರೊಗ್ಗಾಯ್ತು ತೆಗೆ ಮರು
ಳಾಟವಿನ್ನೇಕೆನುತ ಪಾರ್ಥನ ತಾಗಿದನು ದ್ರೋಣ ॥29॥
೦೩೦ ಇದಿರುಗೊಳ್ಳೈ ಪಾರ್ಥ ...{Loading}...
ಇದಿರುಗೊಳ್ಳೈ ಪಾರ್ಥ ವಿಪ್ರರಿ
ಗದಟುತನವೆಲ್ಲಿಯದು ಕರ್ಣನ
ಸದೆಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ
ಕದನದಲಿ ನೀ ನೋಡು ಕೈ ಸಾ
ರಿದವು ಗಡ ಕಾಮಾರಿ ಹಿಡಿವ
ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಆ ದ್ರೋಣರು “ಪಾರ್ಥ ! ಎದುರು ನಿಲ್ಲು. ನಾವು ಬ್ರಾಹ್ಮಣರು. ನಮಗೆ ಪರಾಕ್ರಮ ಎಲ್ಲಿ ಬಂತು ? ಕರ್ಣನನ್ನು ಸೋಲಿಸಿದ ಸಾಹಸಕ್ಕೆ ಹಿಗ್ಗಬೇಡ. ಈಗ ಯುದ್ಧದಲ್ಲಿ ನಮ್ಮ ಕೈಗುಣವನ್ನು ಸ್ವಲ್ಪ ನೋಡು. ನಿನಗೆ ಈಶ್ವರನ ಪಾಶುಪತಾಸ್ತ್ರ ಕೈ ಸೇರಿದೆಯಲ್ಲವೆ ? ಅದರ ಪರಿಚಯವನ್ನಷ್ಟು ಮಾಡಿಕೊಡು” ಎಂದು ಕೇಳಿದರು.
ಪದಾರ್ಥ (ಕ.ಗ.ಪ)
ಇದಿರುಗೊಳ್ಳೈ-ಎದುರಿಸಿ ನಿಲ್ಲು, ಅದಟುತನ-ಪರಾಕ್ರಮ, ಕಾಮಾರಿ ಹಿಡಿವ ಅಗ್ಗಳದ ಶರಾವಳಿ-ಈಶ್ವರನ ಬಾಣಗಳು (ಪಾಶುಪತಾಸ್ತ್ರವೂ ಸೇರಿದಂತೆ)
ಮೂಲ ...{Loading}...
ಇದಿರುಗೊಳ್ಳೈ ಪಾರ್ಥ ವಿಪ್ರರಿ
ಗದಟುತನವೆಲ್ಲಿಯದು ಕರ್ಣನ
ಸದೆಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ
ಕದನದಲಿ ನೀ ನೋಡು ಕೈ ಸಾ
ರಿದವು ಗಡ ಕಾಮಾರಿ ಹಿಡಿವ
ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ ॥30॥
೦೩೧ ಇದಿರುಗೊಣ್ಡೆನು ...{Loading}...
ಇದಿರುಗೊಂಡೆನು ವಂದಿಸಿದೆನೆ
ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ
ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ
ಹೃದಯ ನಿಮ್ಮದು ಕಾಳಗಕೆ ನಿ
ಮ್ಮಿದಿರೊಳಾಳೇ ತಾನು ಕರುಣಾ
ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ದ್ರೋಣರ ಪಾದಗಳಿಗೆ ಒಂದು ಬಾಣವನ್ನು ಅರ್ಪಿಸುತ್ತ, “ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ. ವಂದನೆಗಳು. ನಮ್ಮ ಭಾಗ್ಯ ನಿಮ್ಮ ಕೈಯಲ್ಲಿದೆ. ತಮ್ಮ ಕೃಪೆಯಿಂದ ನನಗೆ ಬಿಲ್ಲವಿದ್ಯೆ ಕರಗತವಾಗಿದೆ. ನನಗೆ ನೀವೇ ರುದ್ರ, ವಿಷ್ಣು. ನನ್ನ ಹೃದಯ ನಿಮ್ಮದು. ಯುದ್ಧದಲ್ಲಿ ನಾನು ನಿಮ್ಮ ಎದುರಿಗೆ ವೀರನೇನು ? ನೀವು ಕರುಣಾಶಾಲಿಗಳು” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ವಿದಿತ-ತಿಳಿದಿದೆ, ಕೈವಶವಾಗಿದೆ, ಕಾಮಾರಿ-ಶಿವ
ಮೂಲ ...{Loading}...
ಇದಿರುಗೊಂಡೆನು ವಂದಿಸಿದೆನೆ
ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ
ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ
ಹೃದಯ ನಿಮ್ಮದು ಕಾಳಗಕೆ ನಿ
ಮ್ಮಿದಿರೊಳಾಳೇ ತಾನು ಕರುಣಾ
ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ ॥31॥
೦೩೨ ವಿನಯವುಚಿತವೆ ತತ್ತ ...{Loading}...
ವಿನಯವುಚಿತವೆ ತತ್ತ ಸಮರದ
ಮೊನೆಯೊಳಾರಿದಿರಾದಡಿರಿವುದು
ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು
ತನುಜ ಸೈರಿಸು ಸೈರಿಸೆಂದೆ
ಚ್ಚನು ನಿರಂತರ ಬಾಣ ವರುಷವ
ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಈ ವಿನಯ ಉಚಿತವೆ?. ಯುದ್ಧದ ನೀತಿ ಏನು ಗೊತ್ತೆ ? ಕದನದಲ್ಲಿ ಯಾರು ಇದಿರು ಬಂದರೂ ಅವರೊಡನೆ ಹೋರಾಡುವುದು ಕ್ಷತ್ರಿಯರ ಕರ್ತವ್ಯ. ಉಳಿದ ಮಾತೇಕೆ ಮಗು ! ಈ ಬಾಣಗಳ ಹೊಡೆತವನ್ನು ಸಹಿಸಿಕೊ” ಹೀಗೆ ಹೇಳಿ ದೇವತೆಗಳೂ ಮೆಚ್ಚುವಂತೆ ನಿರಂತರ ಬಾಣಗಳ ಮಳೆ ಕರೆಯುತ್ತ ದ್ರೋಣರು ಕಾಣಿಸಿಕೊಂಡರು.
ಪದಾರ್ಥ (ಕ.ಗ.ಪ)
ಮೊನೆ-ಯುದ್ಧ, ಆರು ಇದಿರಾದೊಡೆ ಇರಿವುದು-ಯಾರೇ ಎದುರು ನಿಂತರೂ ಹೋರಾಡಬೇಕು. ತನುಜ-ಮಗ, ಅನಿಮಿಷಾವಳಿ-ದೇವತೆಗಳ ಗುಂಪು, ಕೈದೋರು-ಕಾಣಿಸಿಕೊ, ಪೂತುರೇ-ಭಲಾಭೇಷ್ ಎಂಬ ಉದ್ಗಾರ.
ಟಿಪ್ಪನೀ (ಕ.ಗ.ಪ)
ವ್ಯಾಸಭಾರತದಲ್ಲಿ ದ್ರೋಣರು ಎದುರಾದಾಗ ಅರ್ಜುನನು “ಮಹಾತ್ಮರೆ ! ನೀವು ಮೊದಲು ನನ್ನ ಮೇಲೆ ಬಾಣ ಬಿಡುವ ತನಕ ನಾನು ನಿಮ್ಮ ಮೇಲೆ ಕೈಮಾಡುವುದಿಲ್ಲ. ಇದು ನನ್ನ ನಿಧಾರ್ರ” ಎಂದು ಹೇಳುತ್ತಾನೆ.
“ಅಹಂತು ಪ್ರಹೃತೇ ಪೂರ್ವಂ ಪ್ರಹರಿಷ್ಯಾಮಿ ತೇ„ನಘ:
ಇತಿಮೇ ವರ್ತತೇ ಬುದ್ಧಿಃ ತದ್ಭವಾನ್ ಕರ್ತುಮರ್ಹತಿ”
ವಿರಾಟಪರ್ವ 88-19
ಮೂಲ ...{Loading}...
ವಿನಯವುಚಿತವೆ ತತ್ತ ಸಮರದ
ಮೊನೆಯೊಳಾರಿದಿರಾದಡಿರಿವುದು
ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು
ತನುಜ ಸೈರಿಸು ಸೈರಿಸೆಂದೆ
ಚ್ಚನು ನಿರಂತರ ಬಾಣ ವರುಷವ
ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ ॥32॥
೦೩೩ ಭಾವಿಸಲು ಪ್ರತಿಬಿಮ್ಬದಲಿ ...{Loading}...
ಭಾವಿಸಲು ಪ್ರತಿಬಿಂಬದಲಿ ಬೇ
ರಾವುದತಿಶಯವುಂಟು ನೀವೆನ
ಗಾವ ಪರಿಯಲಿ ಕಲಿಸಿದಿರಿ ನಿಮಗೊಪ್ಪಿಸುವೆನವನು
ನೀವು ನೋಡುವುದೆನುತ ನರನೆಸ
ಲಾವುದಂಬರವಾವುದವನಿಯ
ದಾವುದರಿ ಬಲವೆನಲು ಹಬ್ಬಿತು ಪಾರ್ಥ ಶರಜಾಲ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಗುರುಗಳೇ ನೀವೇ ಬಿಂಬವಾಗಿರುವಾಗ ನಿಮ್ಮ ಎದುರಿಗೆ ಪ್ರತಿಬಿಂಬದಲ್ಲಿ ಮಹತ್ತ್ವದ್ದೇನಿದೆ ? ನನಗೆ ನೀವು ಏನೇನನ್ನು ಕಲಿಸಿದ್ದೀರೋ ಅವನ್ನೆಲ್ಲ ನಿಮಗೆ ಒಪ್ಪಿಸುತ್ತೇನೆ. ತಾವು ನೋಡುತ್ತಿರಿ” ಎನ್ನುತ್ತ ಅರ್ಜುನ ಬಾಣ ಪ್ರಯೋಗ ಮಾಡಿದಾಗ ನೋಡಿದವರಿಗೆ ನೆಲ ಆಕಾಶ ಮತ್ತು ಕುರುಸೇನೆಗಳ ನಡುವೆ ಅಂತರವೇ ಕಾಣದಂತಿತ್ತು ಅವನ ಶರಜಾಲ !
ಪದಾರ್ಥ (ಕ.ಗ.ಪ)
ಎಸು-ಬಾಣ ಪ್ರಯೋಗ ಮಾಡು, ಅವನಿ-ಭೂಮಿ, ಶರಜಾಲ-ಬಾಣದ ಬಲೆ, ಸಮೂಹ, ಅರಿಬಲ-ಶತ್ರುಸೇನೆ
ಮೂಲ ...{Loading}...
ಭಾವಿಸಲು ಪ್ರತಿಬಿಂಬದಲಿ ಬೇ
ರಾವುದತಿಶಯವುಂಟು ನೀವೆನ
ಗಾವ ಪರಿಯಲಿ ಕಲಿಸಿದಿರಿ ನಿಮಗೊಪ್ಪಿಸುವೆನವನು
ನೀವು ನೋಡುವುದೆನುತ ನರನೆಸ
ಲಾವುದಂಬರವಾವುದವನಿಯ
ದಾವುದರಿ ಬಲವೆನಲು ಹಬ್ಬಿತು ಪಾರ್ಥ ಶರಜಾಲ ॥33॥
೦೩೪ ವಿಷಯ ಲಮ್ಪಟತನದಲಾವ್ ...{Loading}...
ವಿಷಯ ಲಂಪಟತನದಲಾವ್ ನಿ
ರ್ಮಿಸಿದೆವಶ್ವತ್ಥಾಮನನು ನ
ಮ್ಮೆಸೆವ ಮೋಹದ ಕಂದನೈಯೆಲೆಪಾರ್ಥ ನೀನೆಮಗೆ
ಎಸುಗೆಗಾರರದಾರಿಗೀ ಶರ
ವಿಸರ ಸಂಭವಿಸುವುದಿದಾರಿಗೆ
ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೊ ! ನಾವು ಮೋಹದ ಮೈಮರೆವಿನಲ್ಲಿ ಮಗ ಅಶ್ವತ್ಥಾಮನನ್ನು ಹುಟ್ಟಿಸಿದೆವು. ನಿಜವಾಗಿ ನನ್ನ ಮೋಹದ ಮಗ ಎಂದರೆ ನೀನೇ. ಬಾಣ ಬಿಡುವವರಲ್ಲಿ ನಿನ್ನ ಹಾಗೆ ಬೇರೆ ಯಾರಿಗೆ ಶರವ್ಯಾಪ್ತಿ ಸಂಭವಿಸುತ್ತದೆ ? ನಿನ್ನ ವೀರಗೈಯ ಚಳಕ ಬೇರೆ ಯಾರಿಗೆ ಇದೆ ಹೇಳು” ಎಂದರು.
ಪದಾರ್ಥ (ಕ.ಗ.ಪ)
ವಿಷಯಲಂಪಟ ತನದಲ್ಲಿ-ಮೋಹದ ಮೈಮರೆವಿನಲ್ಲಿ, ಆವ್-ನಾವು, ಸೃಜಿಸಿದೆವು-ಹುಟ್ಟಿಸಿದೆವು, ಎಸುಗೆಗಾರ-ಬಾಣ ಬಿಡುವವರು, ವಿಸರ-ವಿಸ್ತಾರ, ವ್ಯಾಪ್ತಿ
ಟಿಪ್ಪನೀ (ಕ.ಗ.ಪ)
ಅಶ್ವತ್ಥಾಮನ ಭಾಷೆ ಸಭ್ಯ ಭಾಷೆ ಎಂದು ಕರೆದುಕೊಳ್ಳುವ ಜನ ಮೂಗುಮುರಿಯುವಂತೆ ಮಾಡುವಂಥ ಭಾಷೆ ! ಆದರೆ ದ್ರೋಣರ ಬಾಯಲ್ಲಿ ಇಂಥ ಭಾಷೆ ಬರಬಹುದೆ ? ಎಂದು ನಮಗೆ ಗಾಬರಿಯಾಗುವಷ್ಟು ಉಗ್ರ ಗ್ರಾಮೀಣ ಭಾಷೆ. ಆಶೋತ್ತರಗಳಿಗೆ ಸರಿಯಾಗಿ ಸ್ಪಂದಿಸಿ ಹೆಮ್ಮೆಯನ್ನು ತರುವವನೇ ನಿಜವಾದ ಮಗ ಎಂಬುದು ಕವಿಯ ಅಭಿಪ್ರಾಯ. ಇದು ಕುಮಾರವ್ಯಾಸನ ಸ್ವತಂತ್ರ ಚಿಂತನೆಯಾಗಿದೆ. ಮೂಲದಲ್ಲಿ ಈ ಮಾತಿಲ್ಲ.
ಮೂಲ ...{Loading}...
ವಿಷಯ ಲಂಪಟತನದಲಾವ್ ನಿ
ರ್ಮಿಸಿದೆವಶ್ವತ್ಥಾಮನನು ನ
ಮ್ಮೆಸೆವ ಮೋಹದ ಕಂದನೈಯೆಲೆಪಾರ್ಥ ನೀನೆಮಗೆ
ಎಸುಗೆಗಾರರದಾರಿಗೀ ಶರ
ವಿಸರ ಸಂಭವಿಸುವುದಿದಾರಿಗೆ
ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ ॥34॥
೦೩೫ ಎನುತ ಸುರಿದನು ...{Loading}...
ಎನುತ ಸುರಿದನು ಸರಳ ಸಾರವ
ನನಲ ಗರ್ಭದ ಬಾಯ ಧಾರೆಗ
ಳನಿಲ ಗರ್ಭದ ಗರಿಗಳಶನಿಯ ಗರ್ಭ ಮಿಂಟೆಗಳ
ಮೊನೆಯ ಬಂಬಲುಗಿಡಿಯ ಹೊರಗಿನ
ತನಿಹೊಗೆಯ ಹೊದರುಗಳ ಪುಂಖ
ಧ್ವನಿಯ ದಟ್ಟಣೆ ಮಿಗಲು ಕವಿದವು ದ್ರೋಣನಂಬುಗಳು ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳುತ್ತ ದ್ರೋಣರು ಬಾಣಗಳನ್ನು ಸುರಿಸಿದರು. ಅವು ಅಗ್ನಿ ಗರ್ಭದ ಬಾಯಧಾರೆಗಳಂತೆ, ವಾಯುಗರ್ಭದ ಗರಿಗಳಂತೆ, ಸಿಡಿಲಿನ ಗರ್ಭದಿಂದ ಜಿಗಿದ ಗುಂಡುಗಳಂತೆ ಇದ್ದುವು. ಕಿಡಿ ಸುರಿಸಿ ಹೊಗೆ ಕಾರಿ ಅಬ್ಬರದ ಧ್ವನಿ ಮಾಡುತ್ತ ಆ ಬಾಣಗಳು ಅರ್ಜುನನನ್ನು ಮುತ್ತಿದುವು.
ಪದಾರ್ಥ (ಕ.ಗ.ಪ)
ಸರಳ ಸಾರ-ಬಾಣಗಳ ಸಮೂಹ, ಅನಲ-ಅಗ್ನಿ, ಅನಿಲ-ವಾಯು, ಅಶನಿ-ಸಿಡಿಲು, ಮಿಂಟೆ- ಗುಂಡುÉ, ಪಿಂಡ, ಮೊನೆ-ಯುದ್ಧ, ಬಂಬಲು-ಸಮೂಹ, ರಾಶಿ, ಹೊದರು-ಗುಂಪು,
(ಪುಂಖ ಧ್ವನಿಯ-ಪುಂಖಕ್ಕೆ ಬಾಣದ ಹಿಂತುದಿಯ ಗರಿ ಎಂಬರ್ಥ ಇಲ್ಲಿ ಅನ್ವಯಗೊಳ್ಳುವುದಿಲ್ಲ. ಕೃಷ್ಣ ಜೋಯಿಸರ ಶಂಖ ಧ್ವನಿಯ ಎಂಬ ಪಾಠವನ್ನು ಸ್ವೀಕರಿಸಬಹುದು)
ಮೂಲ ...{Loading}...
ಎನುತ ಸುರಿದನು ಸರಳ ಸಾರವ
ನನಲ ಗರ್ಭದ ಬಾಯ ಧಾರೆಗ
ಳನಿಲ ಗರ್ಭದ ಗರಿಗಳಶನಿಯ ಗರ್ಭ ಮಿಂಟೆಗಳ
ಮೊನೆಯ ಬಂಬಲುಗಿಡಿಯ ಹೊರಗಿನ
ತನಿಹೊಗೆಯ ಹೊದರುಗಳ ಪುಂಖ
ಧ್ವನಿಯ ದಟ್ಟಣೆ ಮಿಗಲು ಕವಿದವು ದ್ರೋಣನಂಬುಗಳು ॥35॥
೦೩೬ ದೇವ ಭಾರದ್ವಾಜ ...{Loading}...
ದೇವ ಭಾರದ್ವಾಜ ಬಿಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
ಕೋವಿದನ ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅರ್ಜುನನು ಅವರನ್ನು ಪ್ರಶಂಸಿಸುತ್ತಲೇ “ದೇವ ಭಾರದ್ವಾಜನೆ ! ಬಿಲ್ವಿದ್ಯೆಯಲ್ಲಿ ನವೀನ ರುದ್ರನೇ ! ಶ್ರೇಷ್ಠ ಬಾಣಗಳ ನಿರ್ಮಾಣದಲ್ಲಿ ಬ್ರಹ್ಮನೇ” ಎನ್ನುತ್ತ ದ್ರೋಣರು ಬಿಟ್ಟ ಬಾಣಗಳೆಂಬ ಕತ್ತಲೆಯ ರಾಶಿಯನ್ನು ನಗು ನಗುತ್ತ ತನ್ನ ಬಾಣಗಳ ಸೂರ್ಯಕಾಂತಿಯಿಂದ ಹೋಗಲಾಡಿಸಿದನು.
ಪದಾರ್ಥ (ಕ.ಗ.ಪ)
ಭಾರದ್ವಾಜ-ಭರದ್ವಾಜ ಋಷಿಯ ಮಗ, ದ್ರೋಣ, ಶಸ್ತ್ರಾವಳಿ-ಅಸ್ತ್ರ ಸಮೂಹ, ಕಮಲಭವ-ಬ್ರಹ್ಮ, ಕೋವಿದ-ಜ್ಞಾನಿ, ಶರತಿಮಿರ-ಬಾಣ ಎಂಬ ಅಂಧಕಾರ, ಶಸ್ತ್ರಾವಳಿ-ಶಸ್ತ್ರ ಸಮೂಹ, ಕರಾವಳಿ-ಕಿರಣಗಳ ಸಮೂಹ, ಸುರರಾಜಸುತ-ಅರ್ಜುನ (ಇಂದ್ರನ ಮಗ)
(ಕತ್ತಲಿನಂತೆ ಗಾಢವಾಗಿ ಕವಿದ ದ್ರೋಣರ ಬಾಣಗಳನ್ನು ಅರ್ಜುನನು ತನ್ನ ಬಾಣಗಳೆಂಬ ಸೂರ್ಯಕಿರಣಗಳ ಸಮೂಹದಿಂದ ನಾಶಮಾಡಿದ ಎಂಬ ಭಾವ)
ಮೂಲ ...{Loading}...
ದೇವ ಭಾರದ್ವಾಜ ಬಿಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
ಕೋವಿದನ ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ ॥36॥
೦೩೭ ಹಿಳುಕನೀದುದೊ ಗಗನವಮ್ಬಿನ ...{Loading}...
ಹಿಳುಕನೀದುದೊ ಗಗನವಂಬಿನ
ಜಲಧಿ ಜರಿದುದೊ ಪಾರ್ಥನೆಂಬ
ಗ್ಗಳ ವಿರಿಂಚನ ಬಾಣ ಸೃಷ್ಟಿಯೊ ಬಲ್ಲನಾವವನು
ಇಳೆಯ ಮತ್ರ್ಯರು ಶಿವ ಶಿವಾ ತೆಗೆ
ಫಲುಗುಣಗೆ ಸರಿಯೆಂಬವರ ಬಾಯ್
ಹುಳಿವುದೋ ಗುಣಕೇಕೆ ಮತ್ಸರವೆಂದುದಮರಗಣ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಕಾಶವೇ ಬಾಣಗಳ ಗರಿಯನ್ನು ಹೆತ್ತಿತೋ ! ಅಥವಾ ಬಾಣಗಳ ಸಮುದ್ರ ಮೈಮೇಲೆ ಬಂದಿತೋ ? ಅಥವಾ ಪಾರ್ಥ ಎಂಬ ಹೆಸರಿನ ವೀರ ಬ್ರಹ್ಮನ ಬಾಣ ಸೃಷ್ಟಿಯೊ ? ಯಾರು ಬಲ್ಲರು ? ಈ ಲೋಕದಲ್ಲಿ ಯಾರೂ ಅರ್ಜುನನಿಗೆ ಸರಿಸಮರಿಲ್ಲ. ಇದ್ದಾರೆ ಎಂದು ಯಾರಾದರೂ ಹೇಳಿದರೆ ಅವರ ಬಾಯಲ್ಲಿ ಹುಳ ಸುರಿಯುತ್ತದೆ. ಗುಣಕ್ಕೆ ಮತ್ಸರ ಏಕೆ ? ಎಂದು ದೇವತೆಗಳು ಹೊಗಳಿದರು. (‘ಹುಳಿಯುತ್ತದೆ’ ಎಂದೂ ಅರ್ಥ ಹೇಳಬಹುದು)
ಪದಾರ್ಥ (ಕ.ಗ.ಪ)
ಹಿಳುಕು-ಬಾಣಗಳ ಹಿಂತುದಿಯ ಗರಿ, ಈ=ಹೆರು ಈದುದೋ-ಹೆತ್ತಿತೋ, ಜಲಧಿ-ಸಮುದ್ರ, ಅಗ್ಗಳ-ಶ್ರೇಷ್ಠ, ವಿರಿಂಚ-ಬ್ರಹ್ಮ, ಅಮರಗಣ-ದೇವ ಸಮೂಹ
ಮೂಲ ...{Loading}...
ಹಿಳುಕನೀದುದೊ ಗಗನವಂಬಿನ
ಜಲಧಿ ಜರಿದುದೊ ಪಾರ್ಥನೆಂಬ
ಗ್ಗಳ ವಿರಿಂಚನ ಬಾಣ ಸೃಷ್ಟಿಯೊ ಬಲ್ಲನಾವವನು
ಇಳೆಯ ಮತ್ರ್ಯರು ಶಿವ ಶಿವಾ ತೆಗೆ
ಫಲುಗುಣಗೆ ಸರಿಯೆಂಬವರ ಬಾಯ್
ಹುಳಿವುದೋ ಗುಣಕೇಕೆ ಮತ್ಸರವೆಂದುದಮರಗಣ ॥37॥
೦೩೮ ಬಳಿಕ ಪಾರ್ಥನ ...{Loading}...
ಬಳಿಕ ಪಾರ್ಥನ ಬಾಣದಲಿ ಬಸ
ವಳಿಯೆ ಸಾರಥಿ ಮೆಲ್ಲ ಮೆಲ್ಲನೆ
ತೊಲಗಿಸಿದನಾ ರಥವನಿತ್ತಲು ಕರ್ಣನೀಕ್ಷಿಸಿದ
ಎಲೆಲೆ ಕಟಕಾಚಾರ್ಯ ಗೆಲಿದನು
ಫಲುಗುಣನನಿನ್ನೇನು ಕೌರವ
ಬಲದ ಹಗೆ ಹರಿವಾಯ್ತು ರಾಜಾಭ್ಯುದಯವಿನ್ನೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ದ್ರೋಣರು ಅರ್ಜುನನ ಬಾಣದಿಂದ ಮೂರ್ಛೆ ಹೋದರು. ಸಾರಥಿ ಮೆಲ್ಲಮೆಲ್ಲನೆ ಅವರ ರಥವನ್ನು ಬೇರೊಂದೆಡೆಗೆ ತಿರುಗಿಸಿದ. ಈ ಕಡೆ ಎಚ್ಚತ್ತು ಇದನ್ನೆಲ್ಲ ನೋಡುತ್ತಿದ್ದ ಕರ್ಣನು. “ಆಹಾ ! ದ್ರೋಣರು ಅರ್ಜುನನ ಮೇಲೆ ಜಯ ಪಡೆದರಲ್ಲ ! ಇನ್ನೇನು ? ಕೌರವನ ಪಕ್ಷದ ಶತ್ರುಗಳು ನಿರ್ನಾಮ ಹೊಂದಿದರು. ರಾಜ್ಯಾಭ್ಯುದಯಕ್ಕೆ ಆರಂಭ ! ಎಂದು ಹಾಸ್ಯ ಮಾಡಿದ.
ಪದಾರ್ಥ (ಕ.ಗ.ಪ)
ಬಸವಳಿ-ಪ್ರಜ್ಞೆತಪ್ಪು, ತೊಲಗಿಸು-(ಬೇರೆ ಕಡೆ) ಓಡಿಸು, ಈಕ್ಷಿಸು-ನೋಡು, ಹರಿವಾಯ್ತು-ಮುಗಿಯಿತು, ಹರಿವಾಗು-ಮುಗಿ, ನಾಶವಾಗು, ಕಟಕ-ಸೇನೆ, ಕಟಕಾಚಾರ್ಯ-ಸೇನಾಧಿಪತಿ
ಮೂಲ ...{Loading}...
ಬಳಿಕ ಪಾರ್ಥನ ಬಾಣದಲಿ ಬಸ
ವಳಿಯೆ ಸಾರಥಿ ಮೆಲ್ಲ ಮೆಲ್ಲನೆ
ತೊಲಗಿಸಿದನಾ ರಥವನಿತ್ತಲು ಕರ್ಣನೀಕ್ಷಿಸಿದ
ಎಲೆಲೆ ಕಟಕಾಚಾರ್ಯ ಗೆಲಿದನು
ಫಲುಗುಣನನಿನ್ನೇನು ಕೌರವ
ಬಲದ ಹಗೆ ಹರಿವಾಯ್ತು ರಾಜಾಭ್ಯುದಯವಿನ್ನೆಂದ ॥38॥
೦೩೯ ಫಡ ಫಡೆಲವೋ ...{Loading}...
ಫಡ ಫಡೆಲವೋ ಕರ್ಣ ಸಾರಥಿ
ಮಡಿದರೇನದು ಸೋಲವೇ ಕಾ
ಳ್ಗೆಡೆಯದಿರು ನೋಡಾದಡಯ್ಯನ ಹರಿಬದಾಹವವ
ನುಡಿಗೆ ತೆರನಾಯ್ತೆಂಬ ಖುಲ್ಲರ
ಬೆಡಗ ನೋಡೆನುತುಗ್ರ ಚಾಪವ
ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಹ ! ಕರ್ಣ ! ಯುದ್ಧದಲ್ಲಿ ಸಾರಥಿ ಮಡಿದರೇನೀಗ ? ಅದನ್ನು ದ್ರೋಣರ ಸೋಲು ಎನ್ನಲಾದೀತೆ ? ಕೆಟ್ಟ ಮಾತುಗಳನ್ನು ಆಡಬೇಡ. ಅಪ್ಪನ ಯುದ್ಧ ಕೌಶಲವನ್ನು ನೋಡುತ್ತಿರು. ಆಹಾ ! ಆಡಿಕೊಳ್ಳಲು ಅವಕಾಶವಾಯಿತು ಎಂದು ಉಬ್ಬುತ್ತಿರುವ ದುಷ್ಟನಾದ ನಿನ್ನ ಮಾತಿನ ಚಮತ್ಕಾರಕ್ಕೆ ಏನೆನ್ನಲಿ ?” ಎನ್ನುತ್ತ ಬಿಲ್ಲನ್ನು ಮಿಡಿದು ಶಿವನಿಗೆ ಸಮಾನನಾದ ವೀರ ಅಶ್ವತ್ಥಾಮ ಅರ್ಜುನನ ಎದುರಿಗೆ ನಿಂತ.
ಪದಾರ್ಥ (ಕ.ಗ.ಪ)
ಕಾಳ್ಗೆಡೆ-ನಿಂದಿಸು, ಕೆಟ್ಟ ಮಾತಾಡು, ಅಯ್ಯ-ಅಪ್ಪ, ದ್ರೋಣ, ಹರನ ಹೋಲುವ ಸುಭಟ-ಅಶ್ವತ್ಥಾಮ, ಅಪರಶಂಕರ ಎಂದು ಪ್ರಖ್ಯಾತಿ ಹೊಂದಿದ ವೀರ, ಶಿವನನ್ನು ಹೋಲುವ ವೀರ, ಮಾರಾಂತ- ಪ್ರತಿಭಟಿಸಿ ನಿಂತ (ಮಾರಾನು-ಎದುರು ನಿಲ್ಲು)
ಮೂಲ ...{Loading}...
ಫಡ ಫಡೆಲವೋ ಕರ್ಣ ಸಾರಥಿ
ಮಡಿದರೇನದು ಸೋಲವೇ ಕಾ
ಳ್ಗೆಡೆಯದಿರು ನೋಡಾದಡಯ್ಯನ ಹರಿಬದಾಹವವ
ನುಡಿಗೆ ತೆರನಾಯ್ತೆಂಬ ಖುಲ್ಲರ
ಬೆಡಗ ನೋಡೆನುತುಗ್ರ ಚಾಪವ
ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ ॥39॥
೦೪೦ ಆವುದೈ ನೀನರಿದ ...{Loading}...
ಆವುದೈ ನೀನರಿದ ಬಿಲು ವಿ
ದ್ಯಾ ವಿಷಯ ಘನ ಚಾಪ ವೇದಾ
ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು
ಕೋವಿದರ ಭೂಸುರರ ಯುಕ್ತಿಯ
ನೀವು ಕೊಂಡಿರೆ ಶಸ್ತ್ರ ವಿದ್ಯಾ
ಭಾವ ಗೋಷ್ಠಿಯ ಬಲ್ಲಡರಿಯೆಂದೆಚ್ಚನರ್ಜುನನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ನೀನು ತಿಳಿದ ಬಿಲ್ಲವಿದ್ಯೆಯ ವಿಷಯ ಏನು ? ಘನವಾದ ಧನುರ್ವೇದದ ಅರ್ಥ ಏನು ಹೇಳು, ನಿನ್ನ ಬಾಣ ಎಂಬ ಮುತ್ತಿನ ಮಣಿ ಏನು ಮಾತಾಡುತ್ತದೆ. ಹೇಳು ! ವಿದ್ವಾಂಸರ ಬ್ರಾಹ್ಮಣರ ಯುಕ್ತಿಯನ್ನು ಅನುಕರಿಸಬೇಡ. ನಿನಗೆ ನಿಜವಾಗಿ ಶಸ್ತ್ರ ವಿದ್ಯೆಯ ಚಿಂತನ ತಿಳಿದಿದ್ದರೆ ಈ ಬಾಣವನ್ನು ಅರ್ಥಮಾಡಿಕೊ” ಹೀಗೆ ಹೇಳಿ ಅಶ್ವತ್ಥಾಮ ಮುಂದೆ ನಿಂತು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟ.
ಪದಾರ್ಥ (ಕ.ಗ.ಪ)
ಚಾಪವೇದ-ಧನುರ್ವೇದ, ಮೌಕ್ತಿಕ-ಮುತ್ತು, ಕೋವಿದ-ಜ್ಞಾನಿ, ಭೂಸುರ-ಬ್ರಾಹ್ಮಣ
ಮೂಲ ...{Loading}...
ಆವುದೈ ನೀನರಿದ ಬಿಲು ವಿ
ದ್ಯಾ ವಿಷಯ ಘನ ಚಾಪ ವೇದಾ
ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು
ಕೋವಿದರ ಭೂಸುರರ ಯುಕ್ತಿಯ
ನೀವು ಕೊಂಡಿರೆ ಶಸ್ತ್ರ ವಿದ್ಯಾ
ಭಾವ ಗೋಷ್ಠಿಯ ಬಲ್ಲಡರಿಯೆಂದೆಚ್ಚನರ್ಜುನನ ॥40॥
೦೪೧ ಅಕ್ರಮವ ತಿರಿಭುವನ ...{Loading}...
ಅಕ್ರಮವ ತಿರಿಭುವನ ವಿದ್ಯಾ
ಚಕ್ರವರ್ತಿಗಳೆಂದು ನೀವೀ
ವಿಕ್ರಮದ ಮಾತಿನಲಿ ಮೇಗರೆ ಮೆರೆವ ಭಟರುಗಳೆ
ಶಕ್ರನಳುಕುವ ಬಾಹುಬಲ ರಿಪು
ಚಕ್ರದೊಳಗಿನ್ನಾರಿಗುಂಟದು
ವಕ್ರ ಭಣಿತೆಗೆ ಸಲುವುದಶ್ವತ್ಥಾಮನೆನುತೆಚ್ಚ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅರ್ಜುನನು ಅಶ್ವತ್ಥಾಮನಿಗೆ “ಏನು ? ಇದು ಅಕ್ರಮವೆ ? ಮೂರು ಲೋಕಗಳಲ್ಲೂ ವಿದ್ಯೆಯ ಚಕ್ರವರ್ತಿಗಳೆಂದು ಹೇಳಿಕೊಳ್ಳುತ್ತ ಈ ಪರಾಕ್ರಮದ ಆಳಕ್ಕೆ ಇಳಿಯಲಾರದೆ ದೂರದಲ್ಲಿ ನಿಂದು ಮಾತನಾಡುವ ನೀವು ವೀರರಲ್ಲವೆ ? ದೇವೇಂದ್ರನೇ ಹೆದರುವಂಥ ಬಾಹುಬಲವು ನಿಮ್ಮಲ್ಲಿ ಅಂದರೆ ಶತ್ರುವರ್ಗದಲ್ಲಿ ಬೇರೆ ಯಾರಿಗಿದೆ ? ನಿಮ್ಮದೆಲ್ಲ ವಕ್ರ ಭಣಿತೆಗೆ ಅಂದರೆ ಕಪಟ ಕೈಚಳಕಕ್ಕೇ ಸರಿ ಅಷ್ಟೆ " ಎಂದು ಹೇಳುತ್ತ ಬಾಣಗಳನ್ನು ಬಿಟ್ಟ.
ಪದಾರ್ಥ (ಕ.ಗ.ಪ)
ತಿರಿಭುವನ-ಮೂರು ಲೋಕ ತ್ರೈಭುವನ, ತಿರಿಭುವನ ವಿದ್ಯಾ ಚಕ್ರವರ್ತಿ-ಮೂರುಲೋಕದ ವಿದ್ಯಾ ಸಾರ್ವಭೌಮ. ಅಂದರೆ ಮೂರು ಲೋಕಗಳಲ್ಲೂ ವಿದ್ಯಾ ಪರಿಣತಿ ಉಳ್ಳವರು. ಮೇಗರೆ ಮೆರೆವ-ಮೇಲು ಮೇಲೆ ಶೋಭಿಸುವ ಮೇಗರೆ ಎಂದರೆ ದಡದ ಭಾಗ-ಕೊಳದ ಒಳಗೆ ಈಜಾಡಲಾರದವರು ಮೇಲಿನ ದಡದಲ್ಲಿ ನಿಲ್ಲುತ್ತಾರಲ್ಲವೆ ? ಹಾಗೆ ಪೂರ್ಣಜ್ಞಾನ ಇಲ್ಲದ ಅರೆಬರೆ ಜ್ಞಾನದವರು ಎಂದರ್ಥ. “ಮೇಗರೆಯರಿತದವರು” (ಅಲ್ಪಜ್ಞಾನಿಗಳು) ಎಂದು ಕುಮಾರವ್ಯಾಸ ಇನ್ನೊಂದೆಡೆ ಹೇಳಿದ್ದಾನೆ. ಶಕ್ರ-ಇಂದ್ರ,
ವಕ್ರಭಣಿತೆ-ಕಪಟ ಕೈಚಳಕ, ವಾಸ್ತವವಲ್ಲದ ಪೌರುಷ.
ಪಾಠಾನ್ತರ (ಕ.ಗ.ಪ)
ಮೊದಲ ಸಾಲಿಗೆ ಕೃಷ್ಣ ಜೋಯಿಸ್ ಅವರ ಪಾಠ ಸೂಕ್ತವೆನಿಸುತ್ತದೆ. ಅಕ್ರಮವೆ ತ್ರೈಭುವನ ವಿದ್ಯಾ (ಚಕ್ರವರ್ತಿಗಳೆಂದು ನೀವೀ)…
ಮೂಲ ...{Loading}...
ಅಕ್ರಮವ ತಿರಿಭುವನ ವಿದ್ಯಾ
ಚಕ್ರವರ್ತಿಗಳೆಂದು ನೀವೀ
ವಿಕ್ರಮದ ಮಾತಿನಲಿ ಮೇಗರೆ ಮೆರೆವ ಭಟರುಗಳೆ
ಶಕ್ರನಳುಕುವ ಬಾಹುಬಲ ರಿಪು
ಚಕ್ರದೊಳಗಿನ್ನಾರಿಗುಂಟದು
ವಕ್ರ ಭಣಿತೆಗೆ ಸಲುವುದಶ್ವತ್ಥಾಮನೆನುತೆಚ್ಚ ॥41॥
೦೪೨ ಅರ್ಜುನನ ಶರವಿದ್ಯೆ ...{Loading}...
ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದಲಿ
ಗರ್ಜಿಸಿದೊಡೇನಹುದೆನುತ ಗುರುಸೂನು ಹರುಷದಲಿ
ನಿರ್ಜರರು ಮಝ ಭಾಪುರೆನಲಾ
ವರ್ಜಿಸಿದ ತಿರುವಿನಲಿ ಸಂಗರ
ನಿರ್ಜಿತಾರಿಯನೆಸಲು ಕಣೆಗಳು ಕವಿದವಂಬರಕೆ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಿಲ್ಲ ವಿದ್ಯೆಯನ್ನು ವಿವರಿಸುವುದಾದರೆ ಅದು ದುರ್ಜಯವಾದದ್ದು. ಅಂದರೆ ಯಾರೂ ಗೆಲ್ಲಲಾಗದಂಥ ಮಹಿಮೆಯುಳ್ಳದ್ದು. ಅದನ್ನು ಗೆಲ್ಲದೆ ಸುಮ್ಮನೆ ಒಣ ಜಂಬದಿಂದ ಗರ್ಜಿಸಿದರೆ ಏನು ಪ್ರಯೋಜನ ! ಎನ್ನುತ್ತ ಅಶ್ವತ್ಥಾಮನು ಹರ್ಷದಿಂದ ಬಿಲ್ಲ ಹೆದೆಯನ್ನು ಒಲಿಸಿಕೊಂಡು ಯುದ್ಧದಲ್ಲಿ ಸೋಲು ಕಾಣದ ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟ. ಅದನ್ನು ಕಂಡು ಆಕಾಶದಲ್ಲಿ ದೇವತೆಗಳು ಅಶ್ವತ್ಥಾಮನನ್ನು ಕೊಂಡಾಡಿದರು.
ಪದಾರ್ಥ (ಕ.ಗ.ಪ)
ಆವರ್ಜಿಸು-ಒಲಿಸಿಕೊ, ಪಡೆ, ಬಾಗಿಸು, ತಿರು-ಹಗ್ಗ (ಬಿಲ್ಲಹಗ್ಗ), ದುರ್ಜಯ-ಸೋಲು ಇಲ್ಲದ್ದು, ಗುರುಸೂನು-ದ್ರೋಣ ಪುತ್ರ, ಅಶ್ವತ್ಥಾಮ,
ಪಾಠಾನ್ತರ (ಕ.ಗ.ಪ)
ಸಂಗರನಿರ್ಜಿತೇಂದ್ರಿಯ ಅಂದರೆ ಯುದ್ಧದಲ್ಲಿ ಇಂದ್ರಿಯಗಳನ್ನು ಗೆದ್ದವನು ಎಂದರೆ ಅಶ್ವತ್ಥಾಮನು ಈಶ್ವರ ಸ್ವರೂಪಿ ಎಂಬ ಅರ್ಥ ಮಾಡಬಹುದಾದರೂ ‘ಸಂಗರ ನಿರ್ಜಿತಾರಿಯ’ ಎಂಬ ಪಾಠ ಅರ್ಜುನನನ್ನು ಎಂಬರ್ಥ ಕೊಡುವುದರಿಂದ ಸೂಕ್ತವಾಗಿದೆ. (ಯುದ್ಧದಲ್ಲಿ ಸೋಲನ್ನೇ ಕಾಣದ…. ಅರ್ಜುನ) ವಿರಾಟಪರ್ವ, ಮೈ.ವಿ.ವಿ.
ಮೂಲ ...{Loading}...
ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದಲಿ
ಗರ್ಜಿಸಿದೊಡೇನಹುದೆನುತ ಗುರುಸೂನು ಹರುಷದಲಿ
ನಿರ್ಜರರು ಮಝ ಭಾಪುರೆನಲಾ
ವರ್ಜಿಸಿದ ತಿರುವಿನಲಿ ಸಂಗರ
ನಿರ್ಜಿತಾರಿಯನೆಸಲು ಕಣೆಗಳು ಕವಿದವಂಬರಕೆ ॥42॥
೦೪೩ ಗುರುತನೂಜನಲಾ ವಿಭಾಡಿಸಿ ...{Loading}...
ಗುರುತನೂಜನಲಾ ವಿಭಾಡಿಸಿ
ಹುರುಳುಗೆಡಿಸಲು ಬಹುದೆ ನೋಡು
ತ್ತರ ಸುಯೋಧನ ಸೈನ್ಯಶರಧಿಯ ಗುಂಪಿನತಿಬಲರ
ಹರನ ಸರಿದೊರೆಯಸ್ತ್ರ ವಿದ್ಯಾ
ಧರರು ಮತ್ರ್ಯರೊಳಾರು ಲೇಸೆಂ
ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಅಶ್ವತ್ಥಾಮನಲ್ಲವೆ ? ಅವನನ್ನು (ವಿಭಾಡಿಸಿ) ಬಡಿದು ಸತ್ವ ಕೆಡಿಸಲಾಗುತ್ತದೆಯೆ ? ಉತ್ತರ ! ನೋಡು ! ಕೌರವನ ಸೇನಾ ಸಮುದ್ರದ ಗುಂಪಿನ ಮಹಾವೀರರನ್ನು ನೋಡು ! ಈಶ್ವರನಿಗೆ ಹೆಗಲೆಣೆಯಾದ ಅಸ್ತ್ರ ವಿದ್ಯಾಧರರಾದ ಇವನನ್ನು ಸರಿಹೋಲುವ ವೀರರು ಯಾರಿದ್ದಾರೆ ?” ಎಂದು ಉತ್ತರನಿಗೆ ಹೇಳುತ್ತ ಅರ್ಜುನನು ಅಶ್ವತ್ಥಾಮನ ಬಾಣಗಳನ್ನು ಕಡಿದು ಉರುಳಿಸಿದ.
ಪದಾರ್ಥ (ಕ.ಗ.ಪ)
ವಿಭಾಡಿಸು-ಬಡಿ, ಗುರುತನುಜ-ಅಶ್ವತ್ಥಾಮ (ದ್ರೋಣಪುತ್ರ), ಹುರುಳುಗೆಡಿಸು-ಸತ್ವ ಕೆಡಿಸು, ಶರಧಿ-ಸಮುದ್ರ, ಸರಿದೊರೆ-ಸಮಾನ, ಉರುಳೆಗಡಿ-ಕಡಿದುರುಳಿಸು
ಮೂಲ ...{Loading}...
ಗುರುತನೂಜನಲಾ ವಿಭಾಡಿಸಿ
ಹುರುಳುಗೆಡಿಸಲು ಬಹುದೆ ನೋಡು
ತ್ತರ ಸುಯೋಧನ ಸೈನ್ಯಶರಧಿಯ ಗುಂಪಿನತಿಬಲರ
ಹರನ ಸರಿದೊರೆಯಸ್ತ್ರ ವಿದ್ಯಾ
ಧರರು ಮತ್ರ್ಯರೊಳಾರು ಲೇಸೆಂ
ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ ॥43॥
೦೪೪ ಗುರುಸುತನ ಶರಜಾಲವನು ...{Loading}...
ಗುರುಸುತನ ಶರಜಾಲವನು ಸಂ
ಹರಿಸಿ ಮಗುಳಸ್ತ್ರೌಘವನು ವಿ
ಸ್ತರಿಸಿದನು ಕಲಿಪಾರ್ಥನೀತನ ಸರಳುಗಳ ಸವರಿ
ತರಣಿ ಬಿಂಬವ ನಭವ ಹೂಳ್ದುದು
ಗುರುಸುತನ ಸಾಮಥ್ರ್ಯವಿಂತಿ
ಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಶ್ವತ್ಥಾಮನು ಬಿಟ್ಟ ಬಾಣಗಳನ್ನೆಲ್ಲ ಕತ್ತರಿಸಿ ಅರ್ಜುನನು ಮತ್ತೆ ಬಾಣಾವಳಿಯನ್ನು ಅಶ್ವತ್ತಾಮನ ಮೇಲೆ ಹರಡಿದ. ಆದರೆ ಅಶ್ವತ್ಥಾಮನು ಅರ್ಜುನನ ಬಾಣಗಳನ್ನು ಸವರಿಹಾಕಿದ. ಅವನ ಸಾಮಥ್ರ್ಯವೇನು ಕಡಿಮೆಯದೆ ? ಸೂರ್ಯ ಬಿಂಬವನ್ನೂ ಆಕಾಶವನ್ನೂ ಮುಳುಗಿಸುವ ಬಾಣ ಕೌಶಲ ಅವನದು. ಹೀಗೆ ಇಬ್ಬರೂ ಸಮಬಲರಾಗಿ ಬಹುಕಾಲ ಕಾದಾಡಿದರು.
ಪದಾರ್ಥ (ಕ.ಗ.ಪ)
ಗುರುಸುತ-ಅಶ್ವತ್ಥಾಮ, ಮಗುಳೆ-ಮತ್ತೆ, ಅಸ್ತ್ರೌಘ-ಬಾಣ ಸಮೂಹ, ಸರಳು-ಬಾಣ, ಸಮತಳಿಸು-ಸಜ್ಜಾಗು, ರಣಕೇಳಿ-ಯುದ್ಧ ಕ್ರೀಡೆ
ಮೂಲ ...{Loading}...
ಗುರುಸುತನ ಶರಜಾಲವನು ಸಂ
ಹರಿಸಿ ಮಗುಳಸ್ತ್ರೌಘವನು ವಿ
ಸ್ತರಿಸಿದನು ಕಲಿಪಾರ್ಥನೀತನ ಸರಳುಗಳ ಸವರಿ
ತರಣಿ ಬಿಂಬವ ನಭವ ಹೂಳ್ದುದು
ಗುರುಸುತನ ಸಾಮಥ್ರ್ಯವಿಂತಿ
ಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ ॥44॥
೦೪೫ ತೀರವರ್ಜುನನಮ್ಬು ರಣದಲಿ ...{Loading}...
ತೀರವರ್ಜುನನಂಬು ರಣದಲಿ
ತೀರಿದವು ಗುರುಸುತನ ಶರ ಕೈ
ವಾರವೇ ಕೈ ಗುಂದಿ ನಿಂದನು ದ್ರೋಣನಂದನನು
ಮೇರು ಮೊಗದಿರುಹಿತ್ತಲಾ ರಣ
ಧೀರನಶ್ವತ್ಥಾಮ ಸೋತನು
ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣಗಳೆಂದರೆ ಅಕ್ಷಯ ನಿಧಿ. ಆದರೆ ಅಶ್ವತ್ಥಾಮನ ಬಾಣಗಳು ಮುಗಿದು ಹೋಗಿ ಅವನ ಕೈ ಚಳಕ ಮಂಕಾಯಿತು. ಕೊನೆಗೆ ಅಶ್ವತ್ಥಾಮನು ತನ್ನ ಮುಖವನ್ನು ತಿರುಗಿಸಿಕೊಂಡು ಹೋದ. ಅದು ಮೇರುಪರ್ವತವೇ ಮುಖ ತಿರುಗಿಸಿಕೊಂಡಂತಾಗಿತ್ತು ಎಂದು ಅರ್ಥ. ಕೂಡಲೇ ರಣಧೀರ ಅಶ್ವತ್ಥಾಮ ಸೋತನಲ್ಲ ! ನಡೆ ನಡೆ ಎಂದು ಸಾರಥಿಗೆ ಹೇಳುತ್ತ ಕೃಪನು ಅರ್ಜುನನನ್ನು ತಡೆದನು.
ಪದಾರ್ಥ (ಕ.ಗ.ಪ)
ಕೈವಾರ-ಆಯುಧ, ಶಸ್ತ್ರಾಸ್ತ್ರ,
ಮೇರು ಮೊಗದಿರುಹಿತ್ತಲಾ-(ಅಚಲವಾದ ಮೇರುಪರ್ವತದಂತೆ ಇದ್ದ ಅಶ್ವತ್ಥಾಮ ಹಿಂದಿರುಗಿದ)
ಸಾರು-ನಡೆ, ತರುಬು-ಅಡ್ಡಗಟ್ಟು
ಮೂಲ ...{Loading}...
ತೀರವರ್ಜುನನಂಬು ರಣದಲಿ
ತೀರಿದವು ಗುರುಸುತನ ಶರ ಕೈ
ವಾರವೇ ಕೈ ಗುಂದಿ ನಿಂದನು ದ್ರೋಣನಂದನನು
ಮೇರು ಮೊಗದಿರುಹಿತ್ತಲಾ ರಣ
ಧೀರನಶ್ವತ್ಥಾಮ ಸೋತನು
ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ ॥45॥
೦೪೬ ತನ್ದೆ ಮಕ್ಕಳು ...{Loading}...
ತಂದೆ ಮಕ್ಕಳು ಸೋತರಿನ್ನೇ
ನೆಂದು ಮುಯ್ಯಾನದಿರು ನಿಲು ನಿ
ಲ್ಲೆಂದು ಕೃಪನಡ ಹಾಯ್ದು ಪಾರ್ಥನ ರಥವ ತರುಬಿದನು
ಬಂದ ಪರಿ ಲೇಸೆನುತ ಫಲುಗುಣ
ನೊಂದು ಕವಲಂಬಿನಲಿ ಗುರುಗಳಿ
ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಪ್ಪ ಮಕ್ಕಳಿಬ್ಬರು (ದ್ರೋಣ, ಅಶ್ವತ್ಥಾಮ) ಸೋತರು ಇನ್ನೇನು ಎಂದು ನೀನು ಹಿಗ್ಗಬೇಡ. ನಿಲ್ಲು ನಿಲ್ಲು ! ಎನ್ನುತ್ತ ಕೃಪನು ಅರ್ಜುನನ ರಥವನ್ನು ತಡೆದ. “ಓಹೋ ! ನೀವು ಬಂದಿರಾ ! ಲೇಸು ! ಎನ್ನುತ್ತಾ ಅರ್ಜುನನು ಜೋಡಿ ಬಾಣಗಳಿಂದ ಗುರುವಿಗೆ ನಮಸ್ಕರಿಸಬೇಕು ಎಂದುಕೊಂಡು ಎರಡು ಬಾಣಗಳನ್ನು ಅವರ ರಥಕ್ಕೆ ನೆಟ್ಟನು.
ಪದಾರ್ಥ (ಕ.ಗ.ಪ)
ಮುಯ್ಯಾನು-ಸದರದಿಂದಿರು, ಗರ್ವಿಸು, ಕವಲಂಬು-ಜೋಡಿ ಬಾಣ, ತರುಬು-ಅಡ್ಡಗಟ್ಟು, ಕೀಲಿಸು=ಸ್ತಂಭಿಸು
ಮೂಲ ...{Loading}...
ತಂದೆ ಮಕ್ಕಳು ಸೋತರಿನ್ನೇ
ನೆಂದು ಮುಯ್ಯಾನದಿರು ನಿಲು ನಿ
ಲ್ಲೆಂದು ಕೃಪನಡ ಹಾಯ್ದು ಪಾರ್ಥನ ರಥವ ತರುಬಿದನು
ಬಂದ ಪರಿ ಲೇಸೆನುತ ಫಲುಗುಣ
ನೊಂದು ಕವಲಂಬಿನಲಿ ಗುರುಗಳಿ
ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ॥46॥
೦೪೭ ತರಹರಿಸಿ ಶರವೈದರಲಿ ...{Loading}...
ತರಹರಿಸಿ ಶರವೈದರಲಿ ಸಂ
ವರಿಸಿಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು
ಕೆರಳಿ ಫಲುಗುಣನರ್ಧಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಈ ಬಾಣಗಳ ಹೊಡೆತವನ್ನು ತಡೆದುಕೋ ನೋಡೋಣ” ಎನ್ನುತ್ತ ಕೃಪನು ಐದು ಬಾಣಗಳನ್ನು ಬಿಟ್ಟಾಗ ಅವು ಉತ್ತರನ ಕುದುರೆಗಳನ್ನು ತಾಕಿ ರಥದ ಕುದುರೆಗಳು ನೊಂದವು. ಆಗ ಅರ್ಜುನನು ಕೆರಳಿ ಅರ್ಧಚಂದ್ರಾಕಾರದ ಬಾಣದಿಂದ ಕೃಪನ ಸಾರಥಿಯನ್ನೂ ಕುದುರೆಗಳನ್ನೂ ಕೃಪನ ಕೈಯಲ್ಲಿದ್ದ ಬಿಲ್ಲನ್ನೂ ತುಂಡರಿಸಿದ. ಆಗ ಕೃಪ ಯುದ್ಧ ಭೂಮಿಯಿಂದ ಪಕ್ಕಕ್ಕೆ ಸರಿದ.
ಪದಾರ್ಥ (ಕ.ಗ.ಪ)
ತರಹರಿಸು-ಸಹಿಸಿಕೊ, ಸಂವರಿಸು, -ತಡೆದುಕೋ, ಸಾವರಿಸಿಕೊ, ವಾಜಿ-ಕುದುರೆ, ಅರ್ಧಚಂದ್ರದ ಸರಳು-ಅರ್ಧಚಂದ್ರಾಕಾರದ ಬಾಣ, ತೊಲಗು-ಹೋಗು
ಪಾಠಾನ್ತರ (ಕ.ಗ.ಪ)
ಸಂಹರಿಸಿಕೊಳ್-ಈ ಪಾಠಕ್ಕೆ ಬದಲಾಗಿ ಸಂವರಿಸಿಕೊಳ್ ಎಂಬ ಪಾಠ ಸ್ವೀಕರಿಸಿದೆ.
ವಿರಾಟಪರ್ವ - ಮೈ.ವಿ.ವಿ.
ಮೂಲ ...{Loading}...
ತರಹರಿಸಿ ಶರವೈದರಲಿ ಸಂ
ವರಿಸಿಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು
ಕೆರಳಿ ಫಲುಗುಣನರ್ಧಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ ॥47॥
೦೪೮ ಎಲೆಲೆ ಕರ್ಣ ...{Loading}...
ಎಲೆಲೆ ಕರ್ಣ ದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಸೇನೆಯವರು “ಎಲೆಲೆ, ಕರ್ಣ, ದ್ರೋಣ, ಅಶ್ವತ್ಥಾಮ, ಮಹಾವೀರ ಕೃಪ ಇವರೆಲ್ಲ ಯುದ್ಧ ರಂಗವನ್ನು ಹೊಕ್ಕು ಹೋರಾಡಿ ಹಿಂದಕ್ಕೆ ಸರಿದರು. ಭಲಾ ಭೇಷ್ ! ಅರ್ಜುನನ ಪರಾಕ್ರಮವನ್ನು ಏನೆಂದು ಹೇಳೋಣ ? ಅವನೊಬ್ಬನೇ ನಿಂತು ಗೆಲ್ಲುತ್ತಿದ್ದಾನೆ. ಹೋರಾಡಿ ಹಿಂದಕ್ಕೆ ಸಾಗುತ್ತಿದ್ದಾರೆ ನಮ್ಮ ಮಹಾವೀರರೆಲ್ಲ ! ನಮಗಾದರೋ ಸುಲಭವಾಗಿ ಸೋಲಾಗುತ್ತಿದೆ” ಎಂದರು.
ಪದಾರ್ಥ (ಕ.ಗ.ಪ)
ಅಲಘು-ಮಹಾ, ಎಂತುಟೊ-ಎಷ್ಟಿದೆಯೊ , ನಿಲುಕು- ಯುದ್ಧದಲ್ಲಿ ಪಾಲ್ಗೊಳ್ಳು ,ಹಿಂಗು- ಹಿಂದೆ ಸರಿ, ಇನಿಬರು-ಇಷ್ಟು ಜನ
ಮೂಲ ...{Loading}...
ಎಲೆಲೆ ಕರ್ಣ ದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ ॥48॥
೦೪೯ ಬಾಯ ಬಿಟ್ಟುದು ...{Loading}...
ಬಾಯ ಬಿಟ್ಟುದು ಸಕಲ ಕೌರವ
ರಾಯದಳ ವಡಮುಖದಲದಟರು
ಹಾಯಿದರು ತಡವೇನು ತೆರದೆರಸಾಯ್ತು ಕುರುಸೇನೆ
ಕಾಯಬೇಕೆಂದೆನುತ ವರ ಗಾಂ
ಗೇಯ ಚಾಪವ ಮಿಡಿದು ಬೆರಳಲಿ
ಸಾಯಕವ ತೂಗುತ್ತ ತಡೆದನು ಪಾರ್ಥನುರವಣೆಯ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮಸ್ತ ಕೌರವರಾಯ ಸೇನೆ ಬಾಯಿ ಬಾಯಿ ಬಿಟ್ಟಿತು. ವೀರರೆಲ್ಲ ಉತ್ತರಕ್ಕೆ ಸರಿದರು. ಸ್ವಲ್ಪ ಹೊತ್ತಿನಲ್ಲಿಯೇ ಕುರುಸೇನೆ ತೆರೆದ ಅರಸಾಯಿತು. ಅಂದರೆ ಅನಾಯಕವಾಯಿತು. ಇಂಥ ಸಮಯದಲ್ಲಿ ಈ ಸೇನೆಯನ್ನು ಕಾಪಾಡಬೇಕು. ಎನ್ನುತ್ತ ಭೀಷ್ಮರು ಬಿಲ್ಲನ್ನು ಮಿಡಿದು ಬೆರಳಲ್ಲಿ ಬಾಣವನ್ನು ತೂಗುತ್ತ ಯುದ್ಧಕ್ಕೆ ಬಂದು ಅರ್ಜುನನ ಅಬ್ಬರವನ್ನು ತಡೆದರು.
ಪದಾರ್ಥ (ಕ.ಗ.ಪ)
ರಾಯದಳ-ರಾಜಸೇನೆ, ವಡಮುಖ-ಉತ್ತರ ದಿಕ್ಕಿನ ಕಡೆಗೆ ಮುಖ, ತೆರೆದೆರಸು - ? ಚಾಪ-ಬಿಲ್ಲು, ಉರವಣೆ-ಆಧಿಕ್ಯ, ಅಬ್ಬರ
ಪಾಠಾನ್ತರ (ಕ.ಗ.ಪ)
ತೆರೆದರಸಾಯ್ತು ಕುರುಸೇನೆ, ಇದರ ಅರ್ಥಗ್ರಹಣ ಕಷ್ಟ. ಕೃಷ್ಣಜೋಯಿಸ್ ತೆಱದ್ ಎಱಸಾಯ್ತು ಕುರುಸೇನೆ ಎಂಬ ಪಾಠವನ್ನು ಸ್ವೀಕರಿಸಿದ್ದಾರೆ. ಇದರ ಅರ್ಥವೂ ಸ್ಫುಟವಾಗಿಲ್ಲ.
ಮೂಲ ...{Loading}...
ಬಾಯ ಬಿಟ್ಟುದು ಸಕಲ ಕೌರವ
ರಾಯದಳ ವಡಮುಖದಲದಟರು
ಹಾಯಿದರು ತಡವೇನು ತೆರದೆರಸಾಯ್ತು ಕುರುಸೇನೆ
ಕಾಯಬೇಕೆಂದೆನುತ ವರ ಗಾಂ
ಗೇಯ ಚಾಪವ ಮಿಡಿದು ಬೆರಳಲಿ
ಸಾಯಕವ ತೂಗುತ್ತ ತಡೆದನು ಪಾರ್ಥನುರವಣೆಯ ॥49॥
೦೫೦ ಓಡಿದವರಲ್ಲಲ್ಲಿ ಧೈರ್ಯವ ...{Loading}...
ಓಡಿದವರಲ್ಲಲ್ಲಿ ಧೈರ್ಯವ
ಮಾಡಿತಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಓಡಿದ್ದವರೆಲ್ಲ ಅಲ್ಲಲ್ಲಿಯೇ ಧೈರ್ಯ ತಂದುಕೊಂಡರು. ಆ ವೀರರೆಲ್ಲ ಒಟ್ಟಾಗಿ ಉತ್ಸಾಹಗೊಂಡು ನಿಂತರು. ಕೂಡಲೇ ಮತ್ತೆ ಅವರ ಅತಿಶಯದ ಗರ್ಜನೆ ಕೇಳಿಬಂತು. ಚತುರ್ಬಲ ಸೇನೆ ಗರಿಗಟ್ಟಿ ನಿಂತಿತು. ಭೇರಿಗಳನ್ನು ರಭಸದಿಂದ ಬಾರಿಸುತ್ತಿರುವಾಗ ಅವರೆಲ್ಲ ಭೀಷ್ಮರ ಸುತ್ತಲೂ ಸೇರಿಕೊಂಡರು.
ಪದಾರ್ಥ (ಕ.ಗ.ಪ)
ಅಚ್ಚಾಳು-ವೀರಯೋಧ, ಮೂಲಬಲದ ಸೈನಿಕ ? ಗರಿಗಟ್ಟು-ಉತ್ಸಾಹಿತನಾಗು, ಜೋಡುಮಾಡು-ಗುಂಪುಗೂಡು, ನಿಬ್ಬರ -ಅತಿಶಯÉ
ಮೂಲ ...{Loading}...
ಓಡಿದವರಲ್ಲಲ್ಲಿ ಧೈರ್ಯವ
ಮಾಡಿತಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ ॥50॥
೦೫೧ ತೊಲಗು ರಾಯ ...{Loading}...
ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರು ಸಾರೆನುತ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೈನಿಕರು ಬೊಬ್ಬೆ ಮಾಡುತ್ತ ಅರ್ಜುನನ ಮೆಲೆ ನುಗ್ಗಿದರು " ಅರ್ಜುನ! ತೊಲಗು ! ಭೀಷ್ಮರಿಗೆ ತುಂಬ ಕೋಪ ಬರುತ್ತದೆ. ರಕ್ಷಿಸುವರಾದರೆ, ಶಿವ, ಕೃಷ್ಣರನ್ನೇ ಇಲ್ಲಿ ಯುದ್ಧಕ್ಕೆ ಕರೆಸು. ಏಕೆಂದರೆ ನೀನಿನ್ನೂ ಮಗು ! ಸಾರು ! ಸಾರು” ಹೀಗೆ ಕೂಗುತ್ತಿದ್ದ ಮಹಾರಥರ ಗಲಭೆ, ಕಹಳೆಯ ಸದ್ದುಗಳೊಂದಿಗೆ ಭೀಷ್ಮರು ಯುದ್ಧರಂಗಕ್ಕೆ ಬಂದರು. ವಂದಿ ಮಾಗಧರು ಭೀಷ್ಮರ ಬಿರುದಾವಳಿಗಳನ್ನು ಘೋಷಿಸುತ್ತಿದ್ದರು.
ಪದಾರ್ಥ (ಕ.ಗ.ಪ)
ತೊಲಗು-ಹೋಗು, ಖತಿ-ಕೋಪ, ತೆತ್ತಿಗ-ರಕ್ಷಕ, ನಂಟ ಸಹಾಯಕ, ನಳಿನನಾಭ-ಕೃಷ್ಣ, ಸಾರು-ಹೋಗು, ಗಾವಳಿ-ಗುಂಪು, ಗದ್ದಲ
ಮೂಲ ...{Loading}...
ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರು ಸಾರೆನುತ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ॥51॥
೦೫೨ ಪೂತುರೇ ಕಲಿಪಾರ್ಥ ...{Loading}...
ಪೂತುರೇ ಕಲಿಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಭಲಾ ! ವೀರ ಪಾರ್ಥ ! ಲೋಕ ಪ್ರಸಿದ್ಧನಾಗಿ ಬಿಟ್ಟೆಯಾ ? ಮಗು ! ದ್ರೋಣ ಕರ್ಣ ಕೃಪ ಅಶ್ವತ್ಥಾಮರನ್ನೆಲ್ಲ ಗೆದ್ದಮೇಲೆ ಇನ್ನೇನು ? ಇರಲಿ ನಿಮ್ಮ ವನವಾಸ ಅಜ್ಞಾತವಾಸಗಳ ಅವಧಿ ಮುಗಿದವೇ ? ಕೌರವ ಸಮಸ್ತರನ್ನು ಕೊಚ್ಚಿ ಹಾಕಿ ನೀವು ರಾಜ್ಯವಾಳವಿರೇನು ?” ಎನ್ನುತ್ತ ಭೀಷ್ಮರು ಬಾಣಗಳನ್ನು ಬಿಟ್ಟರು.
ಪದಾರ್ಥ (ಕ.ಗ.ಪ)
ಪೂತುರೇ-ಭಲಾ !, ಭುವನಖ್ಯಾತಿ-ಲೋಕಪ್ರಸಿದ್ಧಿ, ಬೀತುದೇ-ಬೀ-ವ್ಯಯವಾಗು, ಕಳೆ. ಕುರುಕುಲಜಾತ-ಕೌರವರು, ಹರೆಗಡಿ-ಕೊಚ್ಚಿಹಾಕು…. ಭೂತಳ-ರಾಜ್ಯ
ಮೂಲ ...{Loading}...
ಪೂತುರೇ ಕಲಿಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ ॥52॥
೦೫೩ ನಿಮ್ಮ ಕಾರುಣ್ಯಾವಲೋಕನ ...{Loading}...
ನಿಮ್ಮ ಕಾರುಣ್ಯಾವಲೋಕನ
ವೆಮ್ಮ ಸಿರಿ ಬೇರೆಮಗೆ ಕಾಳಗ
ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ
ಬಿಮ್ಮು ಬೀಸರವಹುದೆ ನಿಮ್ಮಯ
ಸೊಮ್ಮಿನವರಿಗೆ ಬೇರೆ ರಾಜ್ಯದ
ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭೀಷ್ಮರೆ ! ನಿಮ್ಮ ಕರುಣೆಯ ಅವಲೋಕನ ನಮ್ಮ ಮೇಲಿದ್ದರೆ ಅದೇ ನಮ್ಮ ಭಾಗ್ಯ ಎಂದು ಭಾವಿಸುತ್ತೇವೆ. ಅದಿಲ್ಲದೆ ನಮಗೆ ಕಾಳಗದ ಸಾಹಸ ವಿಕ್ರಮಗಳನ್ನು ತೋರುವ ವಿದ್ಯೆ ಫಲಿಸುತ್ತದೆಯೆ ? ನಾವೆಲ್ಲ ನಿಮ್ಮ ಅಧೀನರೇ ಅಲ್ಲವೆ ? ನಮಗೇಕೆ ರಾಜ್ಯದ ಹೆಮ್ಮೆ? ಎನ್ನುತ್ತ ಕೂಡಲೇ ಶರ ವರ್ಷವನ್ನು ಕರೆದ.
ಪದಾರ್ಥ (ಕ.ಗ.ಪ)
ಅಮ್ಮುಗೆ-ಸಾಹಸ, ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ-ಪರಾಕ್ರಮ ತೋರುವ ವಿದ್ಯೆ ಫಲಿಸುವದೆಎ, ಬಿಮ್ಮು-ಬಿಂಕ ಘನತೆ, ಬೀಸರ-ವ್ಯರ್ಥ, ನಿಮ್ಮ ಸೊಮ್ಮಿನವರು-ಹಿಂದೆ ಶ್ರೀಮಂತರು ಹಣವನ್ನು ಕೊಟ್ಟು ಜೀತಕ್ಕೆ ಇಟ್ಟುಕೊಳ್ಳುತ್ತಿದ್ದರು. ಅವರನ್ನು ಸೊಮ್ಮಿನವರು ಎನ್ನಲಾಗುತ್ತಿತ್ತು ?, ಕೈಯೊಡನೆ-ಕೂಡಲೇ
ಮೂಲ ...{Loading}...
ನಿಮ್ಮ ಕಾರುಣ್ಯಾವಲೋಕನ
ವೆಮ್ಮ ಸಿರಿ ಬೇರೆಮಗೆ ಕಾಳಗ
ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ
ಬಿಮ್ಮು ಬೀಸರವಹುದೆ ನಿಮ್ಮಯ
ಸೊಮ್ಮಿನವರಿಗೆ ಬೇರೆ ರಾಜ್ಯದ
ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ ॥53॥
೦೫೪ ಎಸಲು ಪಾರ್ಥನ ...{Loading}...
ಎಸಲು ಪಾರ್ಥನ ಬಾಣವನು ಖಂ
ಡಿಸುತ ಸೂತನನೆರಡರಲಿ ಕೀ
ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ
ನಿಶಿತ ಶರವೆಂಟರಲಿ ಕವಚವ
ಕುಸುರಿದರಿದನು ನರನ ವಕ್ಷದ
ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಷ್ಮರು ಪಾರ್ಥನ ಬಾಣವನ್ನು ಕತ್ತರಿಸುತ್ತ, ಎರಡು ಬಾಣದಿಂದ ಸಾರಥಿ ಉತ್ತರನನ್ನು ಐದು ಬಾಣದಿಂದ ಧ್ವಜಾಗ್ರದಲ್ಲಿದ್ದ ಹನುಮಂತನ ಹಣೆ ಒಡೆಯುವಂತೆ ಘಾಸಿಗೊಳಿಸಿದರು. ಅನಂತರ ಎಂಟು ಹರಿತವಾದ ಬಾಣಗಳಿಂದ ಅರ್ಜುನನ ಕವಚವನ್ನು ತುಂಡು ತುಂಡಾಗಿ ಮಾಡಿದರು. ಅರ್ಜುನನ ಎದೆಯ ಬೆಸುಗೆ ಬಿಡುವ ಹಾಗೆ ಮೂರು ಬಾಣಗಳನ್ನು ಬಿಟ್ಟು ಗರ್ಜಿಸಿದರು !
ಪದಾರ್ಥ (ಕ.ಗ.ಪ)
ಎಸು-ಬಾಣ-ಬಿಡು, ಖಂಡಿಸು-ಕತ್ತರಿಸು, ಕೀಲಿಸು-ನೆಡು, ನಿಶಿತ-ಹರಿತ, ಕುಸುರಿದರಿ-ತುಂಡು ತುಂಡಾಗಿ ಕೊಚ್ಚು
ಮೂಲ ...{Loading}...
ಎಸಲು ಪಾರ್ಥನ ಬಾಣವನು ಖಂ
ಡಿಸುತ ಸೂತನನೆರಡರಲಿ ಕೀ
ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ
ನಿಶಿತ ಶರವೆಂಟರಲಿ ಕವಚವ
ಕುಸುರಿದರಿದನು ನರನ ವಕ್ಷದ
ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ ॥54॥
೦೫೫ ಅರಿಯ ಶರಹತಿಗುತ್ತರನ ...{Loading}...
ಅರಿಯ ಶರಹತಿಗುತ್ತರನ ತನು
ಬಿರಿಯೆ ಬಸವಳಿದನು ಕಪೀಶ್ವರ
ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ
ಮರೆದು ಮಲಗಿದ ಸೂತನನು ನಾ
ಲ್ಕೆರಡು ಗಳಿಗೆಯು ಬೀಸಿ ಮೂಗಿನೊ
ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರು ಭೀಷ್ಮರ ಬಾಣದ ಹೊಡೆತಕ್ಕೆ ಉತ್ತರನ ದೇಹ ಬಿರಿದಂತಾಯಿತು. ಅವನು ಮೂರ್ಛೆ ಹೋದ. ಹನುಮಂತನು ರಾವಣನಿಂದಾದ ಗಾಯಗಳನ್ನು ಮತ್ತೆ ಮತ್ತೆ ನೆನೆಯುತ್ತ ಕಿರುಚಿಕೊಂಡ. ಅರ್ಜುನನು ಮೈಮರೆತು ಮಲಗಿದ್ದ ಸಾರಥಿಯನ್ನು ಸ್ವಲ್ಪ ಗಾಳಿ ಬೀಸಿ ಎಬ್ಬಿಸಲು ನೋಡಿದ. ಸದ್ಯ ಮೂಗಿನಲ್ಲಿ ಉಸಿರು ಆಡುತ್ತಿತ್ತು. ಹೆದರಿದ ಉತ್ತರನನ್ನು ಅರ್ಜುನ ಎತ್ತಿದ.
ಪದಾರ್ಥ (ಕ.ಗ.ಪ)
ಅರಿ-ಶತ್ರು, ಶರಹತಿ-ಬಾಣದ ಹೊಡೆತ, ತನು-ದೇಹ, ಬಸವಳಿ-ಮೈಮg, ಮರೆ-ಮೈಮರೆ, ಎರಲ-ಗಾಳಿ(ಉಸಿರು), ಎಲರು, ಎರಲ್ ಎರಡೂ ಒಂದೇ ಅರ್ಥ ಇವಕ್ಕೆ ವರ್ಣಪಲ್ಲಟ (ಮೆಟಾಥೀಸಿಸ್) ಎನ್ನುತ್ತಾರೆ. ಉದಾ: ಅಗಸ ಅಸಗ
ಮೂಲ ...{Loading}...
ಅರಿಯ ಶರಹತಿಗುತ್ತರನ ತನು
ಬಿರಿಯೆ ಬಸವಳಿದನು ಕಪೀಶ್ವರ
ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ
ಮರೆದು ಮಲಗಿದ ಸೂತನನು ನಾ
ಲ್ಕೆರಡು ಗಳಿಗೆಯು ಬೀಸಿ ಮೂಗಿನೊ
ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ ॥55॥
೦೫೬ ಕವಳವಿದ ಕೋ ...{Loading}...
ಕವಳವಿದ ಕೋ ಬಾಣ ಶಸ್ತ್ರಾ
ನಿವಹ ಧಾರಾಸ್ತಂಭವಿನ್ನಾ
ಹವದೊಳಂಜದಿರೆನುತೆ ಕೊಡಲುತ್ತರನು ದುಗುಡದಲಿ
ಬವರದಾದಿಯನರಿಯದನ ಕೊಂ
ದವನು ನೀನೋ ಭೀಷ್ಮನೋಯೆನ
ಲವನ ನುಡಿಗರ್ಜುನನು ನಗುತಪರಾಧವುಂಟೆಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ತಾಂಬೂಲವಿಲ್ಲಿದೆ ತೆಗೆದುಕೋ ! ಬಾಣ ಕತ್ತಿಗಳ ಹೊಡೆತದ ಧಾರೆ ಇನ್ನೇನು ಸ್ತಂಭಿತವಾಗುತ್ತದೆ, ಹೆದರಬೇಡ” ಎಂದ. ಆಗ ಉತ್ತರನು.“ಅಲ್ಲ ಯುದ್ಧ ಎಂದರೆ ಏನೆಂಬುದೇ ಗೊತ್ತಿಲ್ಲದ ನನ್ನನ್ನು ಕೊಂದವನು ನೀನೋ ? ಭೀಷ್ಮನೋ ? ಹೇಳು” ಎಂದಾಗ ಆ ಮಾತಿಗೆ ಅರ್ಜುನನು “ಹೌದು. ನನ್ನ ಅಪರಾಧವೂ ಇದೆ” ಎಂದು ನಗುತ್ತ ಹೇಳಿದ.
ಪದಾರ್ಥ (ಕ.ಗ.ಪ)
ಕವಳ-ತಾಂಬೂಲ, ಶಸ್ತ್ರ ನಿವಹ (ಛಂದಸ್ಸಿನ ಅನುಕೂಲಕ್ಕೆ ಶಸ್ತ್ರಾನಿವಹ ಎಂದಾಗಿದೆ), ನಿವಹ-ಸಮೂಹ, ಶಸ್ತ್ರ ನಿವಹ ಧಾರಾಸ್ತಂಭವು ಇನ್ನು ಆಹವದೊಳಗೆ… ಇನ್ನು ಸ್ವಲ್ಪ ಹೊತ್ತಿನಲ್ಲೇ ಬಾಣಗಳು ಬೀಳುವುದು ನಿಲ್ಲುತ್ತದೆ. ಬವರ-ಯುದ್ಧ
ಮೂಲ ...{Loading}...
ಕವಳವಿದ ಕೋ ಬಾಣ ಶಸ್ತ್ರಾ
ನಿವಹ ಧಾರಾಸ್ತಂಭವಿನ್ನಾ
ಹವದೊಳಂಜದಿರೆನುತೆ ಕೊಡಲುತ್ತರನು ದುಗುಡದಲಿ
ಬವರದಾದಿಯನರಿಯದನ ಕೊಂ
ದವನು ನೀನೋ ಭೀಷ್ಮನೋಯೆನ
ಲವನ ನುಡಿಗರ್ಜುನನು ನಗುತಪರಾಧವುಂಟೆಂದ ॥56॥
೦೫೭ ಹದುಳಿಸಿನ್ನಞ್ಜದಿರು ಬಾಣೌ ...{Loading}...
ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು
ಒದೆದು ಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉತ್ತರ ! ಸಮಾಧಾನ ತಂದುಕೋ ! ಇನ್ನು ಹೆದರಬೇಡ. ಬಾಣ ಸಮೂಹದ ಗಾಯ ಇದು. ಹಾಗೆ ನೋಡುವುದಾದರೆ ನೋಡು ನನಗಾಗಿರುವ ಗಾಯವನ್ನು. ಭೀಷ್ಮರ ಬಾಣದಿಂದ ನನ್ನ ಎದೆ ಬಿರಿದಿದೆ. ಹಾಗೆಯೇ ಧ್ವಜದ ಮೇಲಿರುವ ಹನುಮಂತ ಕೂಡ ಕಿರುಚುತ್ತಿದ್ದಾನೆ. ಏಕೆ ಗೊತ್ತೆ ? ಭೀಷ್ಮರ ಬಾಣಗಳು ಅವನ ವಜ್ರಮಯ ದೇಹದಲ್ಲೇ ನಟ್ಟುಕೊಂಡಿವೆ. ಈ ಭೀಷ್ಮರು ಮುನಿದರೆ ಸಾಕ್ಷಾತ್ ರುದ್ರನೇ ಬೇರೆಯಲ್ಲ !” ಎಂದು ಅರ್ಜುನ ಹೇಳಿದ.
ಪದಾರ್ಥ (ಕ.ಗ.ಪ)
ಹದುಳ-ಕ್ಷೇಮ, (ಗೆಲುವಾಗು, ಸಮಾಧಾನದಿಂದಿರು), ಬಾಣೌಘ-ಬಾಣ+ಓಘ=ಬಾಣ ಸಮೂಹ, ವಿದಾರಣ-ಸೀಳುವಿಕೆ (ನಿವಾರಣವಿದು ಎಂಬ ಪಾಠವೂ ಇದೆ), ಐದಾನೆ-ಇದ್ದಾನೆ ಎಂಬುದರ ನಡುಗನ್ನಡ ರೂಪ, ಒದೆದುಕೋ-ಸಂಕಟ ಪಡು (ಜಾನಪದ ಶಬ್ದ ಪ್ರಯೋಗ) ಒದ್ದುಕೊಳ್ಳುವಿಕೆ ಎಂದರೆ ಒಳಗೊಳಗೇ ಯಾತನೆ ಅನುಭವಿಸುವಿಕೆ, ಸಿಂಧ - ಧ್ವಜ
ಮೂಲ ...{Loading}...
ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು
ಒದೆದು ಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ ॥57॥
೦೫೮ ಎನ್ದು ಮೂರಮ್ಬಿನಲಿ ...{Loading}...
ಎಂದು ಮೂರಂಬಿನಲಿ ಗಂಗಾ
ನಂದನನ ಮುಸುಕಿದನು ಸಾರಥಿ
ನೊಂದನಾ ಧ್ವಜ ದಂಡವುಡಿದುದು ರಥ ವಿಸಂಚಿಸಿತು
ಮುಂದುಗೆಟ್ಟನು ಭೀಷ್ಮನಹುದೋ
ತಂದೆಯೆನುತಾರಂಬಿನಲಿ ಖತಿ
ಯಿಂದ ಪಾರ್ಥನನೆಸಲು ಥಟ್ಟುಗಿದಂಬು ಹಾರಿದವು ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೇಳಿ ಅರ್ಜುನನು ಮೂರು ಬಾಣಗಳಿಂದ ಭೀಷ್ಮರನ್ನು ಮುಸುಕಿದ. ಭೀಷ್ಮರ ಸಾರಥಿಗೆ ಏಟು ಬಿದ್ದು ನೋವಾಯಿತು. ಧ್ವಜಸ್ತಂಭ ಮುರಿಯಿತು. ರಥ ಪುಡಿಯಾಯಿತು. ಭೀಷ್ಮರಿಗೆ ಏನು ಮಾಡುವುದಕ್ಕೂ ತೋಚಲಿಲ್ಲ. ಅರ್ಜುನನ ಪರಾಕ್ರಮವನ್ನು ಮೆಚ್ಚಿದರು. ಅವರು ಸಾವರಿಸಿಕೊಂಡು ಕೋಪದಿಂದ ಆರು ಬಾಣಗಳನ್ನು ಅರ್ಜುನನ ಮೇಲೆ ಬಿಟ್ಟರು. ಅವರ ಬಾಣಗಳು ಗುಂಪಿನಿಂದ ಹಾರಿ ಅರ್ಜುನನ ಮೇಲೆ ಬಂದವು.
ಪದಾರ್ಥ (ಕ.ಗ.ಪ)
ವಿಸಂಚಿಸು-ಪುಡಿ ಮಾಡು, ಧ್ವಂಸ ಮಾಡು, ಮುಂದುಗೆಡು-ಏನು ತೋಚದಂತಾಗುವಿಕೆ, ಖತಿ-ಕೋಪ, ಥಟ್ಟುಗಿದು-ಗುಂಪಿನಿಂದ ಹಾರಿ,
ಮೂಲ ...{Loading}...
ಎಂದು ಮೂರಂಬಿನಲಿ ಗಂಗಾ
ನಂದನನ ಮುಸುಕಿದನು ಸಾರಥಿ
ನೊಂದನಾ ಧ್ವಜ ದಂಡವುಡಿದುದು ರಥ ವಿಸಂಚಿಸಿತು
ಮುಂದುಗೆಟ್ಟನು ಭೀಷ್ಮನಹುದೋ
ತಂದೆಯೆನುತಾರಂಬಿನಲಿ ಖತಿ
ಯಿಂದ ಪಾರ್ಥನನೆಸಲು ಥಟ್ಟುಗಿದಂಬು ಹಾರಿದವು ॥58॥
೦೫೯ ಒರತುದರ್ಜುನನೊಡಲಿನಲಿ ದುರು ...{Loading}...
ಒರತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಬಾಣಗಳಿಂದ ಅರ್ಜುನ ಒಡಲಿನಲ್ಲಿ ಒರತೆಯಾಯಿತು. ಕೂಡಲೇ ರಕ್ತ ಧಾರಾಕಾರವಾಗಿ ಸುರಿಯಿತು. ಬಲವನ್ನೆಲ್ಲ ಪ್ರಯೋಗಿಸಿ ಅರ್ಜುನನು ಮಹಾಶರವನ್ನು ತೊಟ್ಟರೆ ಅದನ್ನು ಭೀಷ್ಮರು ಮಧ್ಯದಲ್ಲೇ ಕತ್ತರಿಸಿದರು. ಕತ್ತರಿಸಿದಾಗ ಅರ್ಜುನನು ಗರ್ಜಿಸುತ್ತ ಆಗ್ನೇಯಾಸ್ತ್ರವನ್ನು ಹೂಡಿ ಕುರುಸೇನೆ ಕಳವಳಗೊಳ್ಳುವಂತೆ ಮಾಡಿದ.
ಪದಾರ್ಥ (ಕ.ಗ.ಪ)
ಒರತುದು (ರಕ್ತ) ಸೋರಲು ಆರಂಭವಾಯಿತು, ದುರುದುರಿಸು-ದಳದಳನೆ (ಸುರಿ), ಅರುಣಮಯ ಜಲ-ರಕ್ತ, ನೆರವಣಿಗೆ-ಶಕ್ತಿ ಪೂರ್ವಕ, ತರಿ-ಕತ್ತರಿಸು
ಮೂಲ ...{Loading}...
ಒರತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ ॥59॥
೦೬೦ ವರುಣ ಬಾಣದಲಸ್ತ್ರವನು ...{Loading}...
ವರುಣ ಬಾಣದಲಸ್ತ್ರವನು ಸಂ
ಹರಿಸಿದನು ಕಲಿ ಭೀಷ್ಮನೊಬ್ಬೊ
ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು
ಹರಿಸಿದರು ಕೌಬೇರ ಮಾರುತ
ನಿರುತಿ ಯಮ ಪುರುಹೂತ ಶಂಕರ
ಪರಿ ಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ಅರ್ಜುನನ ಆಗ್ನೇಯಾಸ್ತ್ರವನ್ನು ವರುಣಾಸ್ತ್ರದಿಂದ ನಾಶಪಡಿಸಿದರು. ಹೀಗೆ ಅರ್ಜುನ ಭೀಷ್ಮರಿಬ್ಬರೂ ಸೋತಾಗ ರೋಷಾಗ್ನಿಯಿಂದ ಬೆಳಗಿದರು. ಮುಂದೆ ಕುಬೇರ ಮಾರುತ ನಿರುತಿ ಯಮ ಇಂದ್ರ ಶಂಕರಾಸ್ತ್ರ ಮೊದಲಾದ ಬಗೆಬಗೆಯ ಅಸ್ತ್ರ ಪ್ರತ್ಯಸ್ತ್ರಗಳನ್ನು ಹೂಡಿ ಹೋರಾಡಿದರು.
ಪದಾರ್ಥ (ಕ.ಗ.ಪ)
ಪರಾಜಯ ರೋಷ ಪಾವಕ ವಿಸ್ಫುಲಿಂಗಿತ- ಇಬ್ಬರೂ ಸೋಲು ತಂದ ರೋಷ ಎಂಬ ಬೆಂಕಿಯಿಂದ ಕಿಡಿಕಾರುತ್ತಿದ್ದರು, ನಿರುತಿ-ನೈರುತ್ಯಾಸ್ತ್ರ, ಪುರುಹೂತ-ಇಂದ್ರ
ಮೂಲ ...{Loading}...
ವರುಣ ಬಾಣದಲಸ್ತ್ರವನು ಸಂ
ಹರಿಸಿದನು ಕಲಿ ಭೀಷ್ಮನೊಬ್ಬೊ
ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು
ಹರಿಸಿದರು ಕೌಬೇರ ಮಾರುತ
ನಿರುತಿ ಯಮ ಪುರುಹೂತ ಶಂಕರ
ಪರಿ ಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು ॥60॥
೦೬೧ ಮಲೆತು ನಿಲುವೊಡೆ ...{Loading}...
ಮಲೆತು ನಿಲುವೊಡೆ ಭೀಷ್ಮನಲ್ಲದೆ
ಕೆಲರು ಪಾರ್ಥನ ದಿವ್ಯ ಬಾಣಾ
ವಳಿಯ ಗಾರಾಗಾರಿಗಿದಿರೇ ಭೀಷ್ಮನುರುವಣೆಗೆ
ಕಲಿಧನಂಜಯನಲ್ಲದಿದಿರಲಿ
ನಿಲುವರುಂಟೇ ಭುಜಗ ಸುರ ನರ
ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರನ್ನು ಬಿಟ್ಟು ಬೇರೆ ಯಾರಿಗೂ ಪಾರ್ಥನ ಬಾಣಾವಳಿಯ ಗಾರಾಗಾರಿನ ಎದುರು ನಿಲ್ಲಲಾಗುತ್ತಿರಲಿಲ್ಲ. ಭೀಷ್ಮರ ಪರಾಕ್ರಮವೇ ಅಂಥದು. ಅವರ ಅಬ್ಬರಕ್ಕೆ ಅರ್ಜುನನಲ್ಲದೆ ಎದುರು ನಿಲ್ಲುವವರು ಪಾತಾಳ, ದೇವ, ಮತ್ರ್ಯಲೋಕಗಳಲ್ಲಿ ಯಾರಾದರೂ ಇದ್ದಾರೆಯೆ ? ಎಂದು ಹೇಳುತ್ತ ದೇವೇಂದ್ರನು ಮೆಚ್ಚಿ ಬೆರಳಾಡಿಸಿದ.
ಪದಾರ್ಥ (ಕ.ಗ.ಪ)
ಮಲೆತು-ಸೆಟೆದು, ಎದುರಿಸಿ, ಗಾರಾಗಾರು-ಘಾರಾಘಾರಿ, ರಭಸ, ಆವೇಶ, ಉರವಣೆ-ಉಪದ್ರವ, ಕಾಟ, ಭುಜಗ-ಸರ್ಪ (ಲೋಕ)
ಮೂಲ ...{Loading}...
ಮಲೆತು ನಿಲುವೊಡೆ ಭೀಷ್ಮನಲ್ಲದೆ
ಕೆಲರು ಪಾರ್ಥನ ದಿವ್ಯ ಬಾಣಾ
ವಳಿಯ ಗಾರಾಗಾರಿಗಿದಿರೇ ಭೀಷ್ಮನುರುವಣೆಗೆ
ಕಲಿಧನಂಜಯನಲ್ಲದಿದಿರಲಿ
ನಿಲುವರುಂಟೇ ಭುಜಗ ಸುರ ನರ
ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು ॥61॥
೦೬೨ ಪೂತು ಪಾಯಕು ...{Loading}...
ಪೂತು ಪಾಯಕು ಪಾರ್ಥ ಬಿಲುವಿ
ದ್ಯಾತಿಶಯದಲಿ ಭೀಷ್ಮನೀ ಪುರು
ಹೂತನಮರಾರಿಗಳ ಮಿಕ್ಕರಲಾ ಮಹಾದೇವ
ಈತಗಳು ಜನಿಸಿದೊಡೆ ಹಿಂದೆ ಮ
ಹೀತಳವ ಕದ್ದೊಯ್ವನೇ ಖಳ
ಸೀತೆ ಬನದಲಿ ನವೆವಳೇಯೆನುತಿರ್ದುದಮರಗಣ ॥62॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಭಲಾ! ಭೇಷ್, ಪಾರ್ಥ ಮತ್ತು ಭೀಷ್ಮರು ಹೀಗೆ ಬಿಲ್ಲ ವಿದ್ಯೆಯಲ್ಲಿ ಇಂದ್ರ ಮೊದಲಾದವರನ್ನು ಮೀರಿಸಿದರು. ಅದನ್ನು ನೋಡಿದ ದೇವತೆಗಳು “ಅಯ್ಯೋ ! ಇವರು ಹಿಂದೆ ಹುಟ್ಟಿದ್ದಿದ್ದರೆ ಹಿರಣ್ಯಾಕ್ಷನು ಭೂಮಿಯನ್ನು ಕದ್ದೊಯ್ಯುತ್ತಿದ್ದನೇನು ? ಸೀತೆ ಅಶೋಕವನದಲ್ಲಿ ಸಂಕಟ ಪಡುತ್ತಿದ್ದಳೇನು ?” ಎಂದು ಹೇಳಿಕೊಂಡರು.
ಪದಾರ್ಥ (ಕ.ಗ.ಪ)
ಪೂತು ಪಾಯಕು-ಭಲಾ, ಭೇಷ್ ಎಂಬ ಉದ್ಗಾರ ವಾಚಿಗಳು, ಪುರುಹೂತ-ಇಂದ್ರ, ಹಿಂದೆ ಮಹೀತಳವ ಕದ್ದೊಯ್ದನೇ ಖಳ-ಇದು ಹಿರಣ್ಯಾಕ್ಷನು ಭೂಮಿಯನ್ನು ಎತ್ತಿಕೊಂಡು ಹೋದ ಪ್ರಕರಣವನ್ನು ಉಲ್ಲೇಖಿಸುತ್ತದೆ. ಹಿರಣ್ಯ ಕಶಿಪುವಿನ ತಮ್ಮನಾದ ಹಿರಣ್ಯಾಕ್ಷ ಎಂಬ ರಾಕ್ಷಸನು ಭೂಮಿಯನ್ನು ಚಾಪೆ ಸುತ್ತುವಂತೆ ಸುತ್ತಿ ಪಾತಾಳಕ್ಕೆ ಎಸೆದಿದ್ದ. ವಿಷ್ಣುವು ವರಾಹ ರೂಪವನ್ನು ತಾಳಿ ಭೂಮಿಯನ್ನು ಎತ್ತಿ ತರಬೇಕಾಯಿತು.
ಮೂಲ ...{Loading}...
ಪೂತು ಪಾಯಕು ಪಾರ್ಥ ಬಿಲುವಿ
ದ್ಯಾತಿಶಯದಲಿ ಭೀಷ್ಮನೀ ಪುರು
ಹೂತನಮರಾರಿಗಳ ಮಿಕ್ಕರಲಾ ಮಹಾದೇವ
ಈತಗಳು ಜನಿಸಿದೊಡೆ ಹಿಂದೆ ಮ
ಹೀತಳವ ಕದ್ದೊಯ್ವನೇ ಖಳ
ಸೀತೆ ಬನದಲಿ ನವೆವಳೇಯೆನುತಿರ್ದುದಮರಗಣ ॥62॥
೦೬೩ ಹಿನ್ದೆ ಕರ್ಣನ ...{Loading}...
ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮ ಧೈರ್ಯವಾಚಾರಿಯನ ಪರಿಣತೆಯ
ಇಂದು ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ ॥63॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮುಂಚೆ ಕರ್ಣನ ಕೌಶಲವನ್ನು ಅಶ್ವತ್ಥಾಮನ ಬಿಲ್ಗಾರತನವನ್ನು ಮತ್ತು ಮಂದರ ಪರ್ವತಕ್ಕೆ ಸಮನಾದ ಧೈರ್ಯವನ್ನು ಆಚಾರ್ಯ ದ್ರೋಣರ ಪರಿಣತಿಯನ್ನು ಹಾಗೂ ಈಗ ಕೃಪಾಚಾರ್ಯನ ಹಿರಿಮೆಯನ್ನು ಮೆಚ್ಚುತ್ತ ನೋಡಿದ್ದೇನೆ. ಆದರೆ ಈ ಭೀಷ್ಮರ ಯುದ್ಧದ ರಭಸ ಈ ಯಾರಿಗೂ ಸಮನಲ್ಲ. " ಎಂದು ಉತ್ತರ ಅರ್ಜುನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಕೈಮೆ-ಕೈಚಳಕ, ಗುರುನಂದನ-ಅಶ್ವತ್ಥಾಮ, ಅಗ್ಗಳಿಕೆ-ಹಿರಿಮೆ, ಉರವಣೆ-ರಭಸ
ಮೂಲ ...{Loading}...
ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮ ಧೈರ್ಯವಾಚಾರಿಯನ ಪರಿಣತೆಯ
ಇಂದು ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ ॥63॥
೦೬೪ ಎನೆ ಕುಮಾರಕ ...{Loading}...
ಎನೆ ಕುಮಾರಕ ಕಾರ್ತವೀರ್ಯಾ
ರ್ಜುನನಾತನ ತೋರ ತೋಳಿವ
ಬನವ ಕಡಿದನು ವೀರಭಾರ್ಗವ ರಾಮನತಿ ಬಲನು
ಮುನಿದು ಮಲೆತೊಡೆ ಭೀಷ್ಮನಾತನ
ಮನಕೆ ಭೀತಿಯನಿತ್ತನೀತನೊ
ಳೆನಗೆ ಸರಿನೂಕುವುದೆ ಕಾಳಗವೆಂದನಾ ಪಾರ್ಥ ॥64॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಉತ್ತgನು ಹೀಗೆ ಹೇಳಲು ಸಾವಿರ ತೋಳಿನ ವೀರ ಕಾರ್ತವೀರ್ಯಾರ್ಜುನ ಎಂಬ ರಾಜನಿದ್ದ. ಅವನ ಸಾವಿರ ತೋಳು ಎಂಬ ಕಾಡನ್ನು ಕಡಿದ ಭಾರ್ಗವ ರಾಮನು ಮಹಾ ಬಲಶಾಲಿ. ಕೆರಳಿದಾಗ ಭೀಷ್ಮರು ಆ ಭಾರ್ಗವ ರಾಮನಿಗೂ ಭೀತಿಯುಂಟಾಗುವಂತೆ ಹೋರಾಡಿದವರು. ಇಂಥ ಭೀಷ್ಮರಿಗೆ ನಾನು ಸಮನೆ ? ಅವರೊಂದಿಗೆ ನನಗೆ ಕಾಳಗ ಸಾಧ್ಯವೆ ?” ಎಂದು ಅರ್ಜುನ ಹೇಳಿದ.
ಪದಾರ್ಥ (ಕ.ಗ.ಪ)
ಮಲೆ-ಪ್ರತಿಭಟಿಸು
ಟಿಪ್ಪನೀ (ಕ.ಗ.ಪ)
ಕಾರ್ತವೀರ್ಯಾರ್ಜುನ - ಹೈಹಯ ವಂಶದ ಕೃತವೀರನ ಮಗ. ಮಾಹಿಷ್ಮತಿ ನಗರದಲ್ಲಿದ್ದ ದೊರೆ. ರಾವಣ ಇಂದ್ರರನ್ನು ಮಣಿಸಿದವನು. ಅಂಥ ಬಲಶಾಲಿಯ ಸಾವಿರ ತೋಳುಗಳನ್ನೂ 76 ಮಕ್ಕಳನ್ನೂ ಭಾರ್ಗವ ರಾಮನು ಕತ್ತರಿಸಿ ಹಾಕಿದ.
ಮೂಲ ...{Loading}...
ಎನೆ ಕುಮಾರಕ ಕಾರ್ತವೀರ್ಯಾ
ರ್ಜುನನಾತನ ತೋರ ತೋಳಿವ
ಬನವ ಕಡಿದನು ವೀರಭಾರ್ಗವ ರಾಮನತಿ ಬಲನು
ಮುನಿದು ಮಲೆತೊಡೆ ಭೀಷ್ಮನಾತನ
ಮನಕೆ ಭೀತಿಯನಿತ್ತನೀತನೊ
ಳೆನಗೆ ಸರಿನೂಕುವುದೆ ಕಾಳಗವೆಂದನಾ ಪಾರ್ಥ ॥64॥
೦೬೫ ಮತ್ತೆ ಗಙ್ಗಾಸೂನು ...{Loading}...
ಮತ್ತೆ ಗಂಗಾಸೂನು ಪಾರ್ಥನ
ತೆತ್ತಿಸಿದನೈದಂಬಿನಲಿ ರಥ
ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ
ಹುತ್ತಕುರಗನು ಬಗಿದು ಹೊಗುವವೊ
ಲುತ್ತರಿಸಿದುವು ಸರಳು ಮಿಗೆ ಧೃತಿ
ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ ॥65॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಭೀಷ್ಮರು ಅರ್ಜುನನ ಮೈಗೆ ಐದು ಬಾಣಗಳನ್ನು ಕೀಲಿಸಿದರು. ಮೂರು ವಜ್ರಾಸ್ತ್ರಗಳಿಂದ ಅರ್ಜುನನ ರಥ ಕಿತ್ತು ಮಗುಚಿಕೊಳ್ಳುವಂತೆ ಮಾಡಿದರು. ಹಾವು ಹುತ್ತವನ್ನು ಬಗಿದು ಒಳಹೋಗುವಂತೆ ಭೀಷ್ಮರ ಬಾಣಗಳು ಅರ್ಜುನನ ಮೈಯೊಳಗೆ ಹೊಕ್ಕವು. ಆಗ ಧೈರ್ಯಗೊಂಡು ಅರ್ಜುನ ಹತ್ತು ಬಾಣಗಳಿಂದ ಭೀಷ್ಮರನ್ನು ಹೊಡೆದ.
ಪದಾರ್ಥ (ಕ.ಗ.ಪ)
ತೆತ್ತಿಸು-ಅಂಟಿಸು, ಹುತ್ತಕೆ+ಉರಗನು -ಹುತ್ತದೊಳಗೆ ಹಾವು ಪ್ರವೇಶಿಸುವಂತೆ, ಉತ್ತರಿಸು-ದಾಟು
ಮೂಲ ...{Loading}...
ಮತ್ತೆ ಗಂಗಾಸೂನು ಪಾರ್ಥನ
ತೆತ್ತಿಸಿದನೈದಂಬಿನಲಿ ರಥ
ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ
ಹುತ್ತಕುರಗನು ಬಗಿದು ಹೊಗುವವೊ
ಲುತ್ತರಿಸಿದುವು ಸರಳು ಮಿಗೆ ಧೃತಿ
ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ ॥65॥
೦೬೬ ನರನ ಶರದಲಿ ...{Loading}...
ನರನ ಶರದಲಿ ಭೀಷ್ಮನೆದೆ ತನು
ಬಿರಿಯೆ ಮೈ ಝೋಂಪಿಸಿತು ಸಲೆ ತರ
ಹರಿಸಲರಿಯದೆ ಮಲಗಿ ನಿಂದನು ರಥದ ಕಂಬುಗೆಯ
ಅರರೆ ಸೋತನು ಭೀಷ್ಮನಿನ್ನೇ
ನುರಿದುದೋ ಕುರುಸೇನೆ ಯಾವೆಡೆ
ದೊರೆಯೆನುತ ಬಾಯ್ಬಿಡಲು ಕೌರವರಾಯ ಮಾರಾಂತ ॥66॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನ ಬಾಣದಿಂದ ಭೀಷ್ಮರ ಎದೆ ಬಿರಿಯಿತು. ಮೈ ಝೋಂಪಿಸಿತು. ಭೀಷ್ಮರು ಸುಧಾರಿಸಿಕೊಳ್ಳಲಾರದೆ ರxದ ಕಂಬುಗೆಯನ್ನು ಒರಗಿ ನಿಂತರು. ಆಗ ಅದನ್ನು ನೋಡುತ್ತಿದ್ದ ಕೌರವನ ಸೈನಿಕರು ಅರರೆ ಭೀಷ್ಮ ಸೋತ. ಇನ್ನೇನು ! ಕುರುಸೇನೆ ಉರಿಯುತ್ತಿದೆ. ದೊರೆ ಕೌರವ ಎಲ್ಲಿ ? ಎಂದು ಕೂಗುತ್ತಿದ್ದಾಗ ಕೌರವ ಎದುರಾದ.
ಪದಾರ್ಥ (ಕ.ಗ.ಪ)
ತರಹರಿಸು-ತಾಳಿಕೋ, ಮಾರಾನು-ಎದುರು ನಿಲ್ಲು, ಕಂಬುಗೆ-ರಥದಲ್ಲಿ ಆಯುಧಗಳನ್ನು ಇರಿಸಲು ವ್ಯವಸ್ಥೆ ಮಾಡಿರುವ ಸ್ಥಳ
ಮೂಲ ...{Loading}...
ನರನ ಶರದಲಿ ಭೀಷ್ಮನೆದೆ ತನು
ಬಿರಿಯೆ ಮೈ ಝೋಂಪಿಸಿತು ಸಲೆ ತರ
ಹರಿಸಲರಿಯದೆ ಮಲಗಿ ನಿಂದನು ರಥದ ಕಂಬುಗೆಯ
ಅರರೆ ಸೋತನು ಭೀಷ್ಮನಿನ್ನೇ
ನುರಿದುದೋ ಕುರುಸೇನೆ ಯಾವೆಡೆ
ದೊರೆಯೆನುತ ಬಾಯ್ಬಿಡಲು ಕೌರವರಾಯ ಮಾರಾಂತ ॥66॥
೦೬೭ ಸೀಳು ನಾಯ್ಗಳ ...{Loading}...
ಸೀಳು ನಾಯ್ಗಳ ಬಾಯ ಕೆಲಬಲ
ದಾಳ ಹಂಗಿನ ದೊರೆಯೆ ಸುಭಟರ
ಸೋಲವದು ರಾಯರಿಗೆ ಸೋಲವೆ ನೂಕು ನೂಕೆನುತ
ಕೋಲ ಹೊದೆಗಳ ಕೆದರಿ ಸಿಂಧದ
ಮೇಲೆ ಹಾವನು ಹಾಯ್ಕಿ ಸಾರಥಿ
ಮೇಳವಿಸಲವನಿಪನ ರಥವನು ನೆರೆದುದತಿ ರಥರು ॥67॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೌರವನ ಬಗೆಗೆ ಹಾಗೆ ಹೇಳುವ ನಾಯಿಗಳ ಬಾಯಿ ಸೀಳಬೇಕು. ಕೌರವನು ಅಕ್ಕಪಕ್ಕದ ಸೇನೆಯ ಸಹಾಯ ಪಡೆಯುವಂಥವನೇನು ? ವೀರ ಸೈನಿಕರ ಸೋಲು ಎಂದರೆ ಕೌರವನೇ ಸೋತಂತಾಯಿತೇನು ? ಬಿಡು ಬಿಡು” ಎನ್ನುತ್ತ ಬಾಣ ಗಳ ಬತ್ತಳಿಕೆಗ¼ನ್ನು ಕೆದರುತ್ತ ಸರ್ಪಧ್ವಜವನ್ನು ಏರಿಸಿ ಸಿದ್ಧಪಡಿಸಿದ ರಥವನ್ನು ಸಾರಥಿ ತಂದ. ಕೌರವನ ಸಹಾಯಕ್ಕೆ ಅತಿರಥರೆಲ್ಲ ಸೇರಿಕೊಂಡರು.
ಪದಾರ್ಥ (ಕ.ಗ.ಪ)
ಆಳ್-ವೀರ, ಕೋಲಹೊದೆ-ಬಾಣ ಸಮೂಹ, ಸಿಂಧ-ಧ್ವಜ, ಮೇಳವಿಸು-ಹೊಂದಿಸು, ನೆರೆ-ಸೇರು
ಮೂಲ ...{Loading}...
ಸೀಳು ನಾಯ್ಗಳ ಬಾಯ ಕೆಲಬಲ
ದಾಳ ಹಂಗಿನ ದೊರೆಯೆ ಸುಭಟರ
ಸೋಲವದು ರಾಯರಿಗೆ ಸೋಲವೆ ನೂಕು ನೂಕೆನುತ
ಕೋಲ ಹೊದೆಗಳ ಕೆದರಿ ಸಿಂಧದ
ಮೇಲೆ ಹಾವನು ಹಾಯ್ಕಿ ಸಾರಥಿ
ಮೇಳವಿಸಲವನಿಪನ ರಥವನು ನೆರೆದುದತಿ ರಥರು ॥67॥
೦೬೮ ಕಲಕಿ ಕೆದರಿದ ...{Loading}...
ಕಲಕಿ ಕೆದರಿದ ಬಲಜಲಧಿಯೊ
ಬ್ಬುಳಿಗೆ ಬಂದುದು ತಳಿತ ಸತ್ತಿಗೆ
ಗಳ ವಿಡಾಯಿಯಲಳ್ಳಿರಿವ ನಿಸ್ಸಾಳ ಕೋಟಿಗಳ
ಉಲಿವ ಕಹಳೆಯ ಬೈಗುಳೆಡಗೈ
ತಳದ ಬಾಯ್ಬಲಗೈಯನೊಲವುತ
ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ ॥68॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಕಿದಂತಾಗಿದ್ದ ಕೌರವ ಸೇನಾ ಸಾಗರ ಮತ್ತೆ ಒಂದಾಗಿ ಬಂದಿತು. ಅರಳಿದ ಛತ್ರಿಗಳ ಸಾಲಿನ ವೈಭವ. ವಾದ್ಯ ಕೋಟಿಗಳ ಶಬ್ದ ಕಹಳೆಗಳ ಶಬ್ದಗಳೊಡನೆ, ಎಡಗೈಯನ್ನು ಬಾಯಮೇಲೆ ಇಡುತ್ತ, ಶತ್ರುಗಳನ್ನು ಬೈಯುತ್ತ ಬೊಬ್ಬೆ ಹೊಯ್ಯುತ್ತ ಬಲಗೈಯನ್ನು ತೂಗುತ್ತ ಬಂದ ವಂದಿ ಮಾಗಧರು ಕೌರವನ್ನು ಹೊಗಳಿದರು.
ಪದಾರ್ಥ (ಕ.ಗ.ಪ)
ಜಲಧಿ-ಸಮುದ್ರ (ಬಲ ಜಲಧಿ-ಸೇನಾಸಮುದ್ರ), ವಿಡಾಯಿ-ವೈಭವ, ನಿಸ್ಸಾಳ-ಒಂದು ಬಗೆಯ ವಾದ್ಯ,
ಎಡಗೈ ತಳದ ಬಾಯಿ… ವಂದಿ ಮಾಗಧರು ರಾಜನನ್ನು ಹೊಗಳುತ್ತ, ಶತ್ರುಗಳನ್ನು ಬೈಯುತ್ತ ಬಲಗೈಯನ್ನು ಒಲೆಯುತ್ತ ಎಡಗೈ ಅಂಗೈಯನ್ನು ಬಾಯಮೇಲಿಡುತ್ತಾ ! ಬಂದರಂತೆ, ಒಬ್ಬುಳಿ < ಒರ್ವುೞ, ಒರ್ಬುಳಿ-ಗುಂಪಾಗಿ ಸೇರು, ಒಂದೆಡೆಸೇರು, ಗುಂಪುಗೂಡು.
ಮೂಲ ...{Loading}...
ಕಲಕಿ ಕೆದರಿದ ಬಲಜಲಧಿಯೊ
ಬ್ಬುಳಿಗೆ ಬಂದುದು ತಳಿತ ಸತ್ತಿಗೆ
ಗಳ ವಿಡಾಯಿಯಲಳ್ಳಿರಿವ ನಿಸ್ಸಾಳ ಕೋಟಿಗಳ
ಉಲಿವ ಕಹಳೆಯ ಬೈಗುಳೆಡಗೈ
ತಳದ ಬಾಯ್ಬಲಗೈಯನೊಲವುತ
ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ ॥68॥
೦೬೯ ಒಗ್ಗು ಮುರಿಯದೆ ...{Loading}...
ಒಗ್ಗು ಮುರಿಯದೆ ಸೇನೆ ಮೊಳಗುವ
ಲಗ್ಗೆವರೆಯಲಿ ಹೆಣನ ತುಳಿದೊಡೆ
ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ
ಹುಗ್ಗಿಗರ ಬಲುಹುರಿಯ ನಿಗುಚುವೆ
ನಿಗ್ಗುವೆನು ನಿಲ್ಲೆನುತ ಸೇನೆಯ
ನಗ್ಗಡಲೊಳಿಕ್ಕಿದನು ಫಲಗುಣನಗಣಿತಾಸ್ತ್ರದಲಿ ॥69॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನ ಮುಖದ ಸನ್ನೆಯಿಂದ ಸಾಲುಗೆಡದೆ ಸೇನೆ ಮೊಳಗುತ್ತಿರುವ ವಾದ್ಯಘೋಷದಿಂದ ಕೂಡಿ ಹೆಣಗಳನ್ನು ತುಳಿದುಕೊಂಡು ಒಡೆದು ಬೀಳುವಂತೆ (ಭೇದಿಸಿಕೊಂಡು) ಶತ್ರುಗಳ ಮೇಲೆ ಮುತ್ತಿತು. ಆಗ ಅರ್ಜುನನು ಹುಗ್ಗಿಗರ (ಅಹಂಕಾರಿಗಳ) ಶಕ್ತಿಯನ್ನು ನಿಗುಚುತ್ತೇನೆ ಎನ್ನುತ್ತ ಅಗಣಿತವಾದ ಬಾಣಗಳಿಂದ ಕರೆದು ಕುರುಸೇನೆಯನ್ನು ಅಗ್ಗಡಲಿನಲ್ಲಿ (ರಕ್ತ ಸಮುದ್ರದಲ್ಲಿ) ಮುಳುಗಿಸಿದನು.
ಪದಾರ್ಥ (ಕ.ಗ.ಪ)
ಒಗ್ಗು-ಗುಂಪು, ಲಗ್ಗೆವರೆ-ವಾದ್ಯಘೋಷ, ಹುಗ್ಗಿಗ-ಗರ್ವಿಷ್ಠ, ನಿಗುಚು-ನೆಟ್ಟಗೆ ಮಾಡು, ಬಲುಹುರಿ-ಸತ್ವ, ಶಕ್ತಿ, ನಿಗ್ಗು-ನಿಗ್ಗುವೆನು ನಿರ್ವಹಿಸುತ್ತೇನೆ, ಅಗ್ಗಡಲು-ರಕ್ತ ಸಮುದ್ರ (ತ.ಸು.ಶಾಮರಾಯರ ನಿಘಂಟು) ಅಗಣಿತ-ಲೆಕ್ಕವಿಲ್ಲದಷ್ಟು
ಮೂಲ ...{Loading}...
ಒಗ್ಗು ಮುರಿಯದೆ ಸೇನೆ ಮೊಳಗುವ
ಲಗ್ಗೆವರೆಯಲಿ ಹೆಣನ ತುಳಿದೊಡೆ
ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ
ಹುಗ್ಗಿಗರ ಬಲುಹುರಿಯ ನಿಗುಚುವೆ
ನಿಗ್ಗುವೆನು ನಿಲ್ಲೆನುತ ಸೇನೆಯ
ನಗ್ಗಡಲೊಳಿಕ್ಕಿದನು ಫಲಗುಣನಗಣಿತಾಸ್ತ್ರದಲಿ ॥69॥
೦೭೦ ವೀರರಿದಿರಹ ಹೊತ್ತು ...{Loading}...
ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಫೂತು ಮಝರೆನುತ
ಕೌರವನು ಕರ್ಣಾದಿಗಳ ನುಡಿ
ಯೋರೆ ಹದರಿನೊಳವಗಡಿಸಿ ಹೊಂ
ದೇರ ದುವ್ವಾಳಿಸುತ ಮೂದಲಿಸಿದನು ಫಲುಗುಣನ ॥70॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ವೀರರು ಅರ್ಜುನನನ್ನು ಎದುರಿಸುವ ಸಮಯಕ್ಕೆ ರಣ ಮೈಲಾರರಾದರು. ಹಿಂದಕ್ಕೆ ಓಡುತ್ತ ಭೈರವ ಸಮಾನರಾದರು. ಭಲಾ ಭೇಷ್ ಎನ್ನುತ್ತ ಕೌರವನು ಕರ್ಣ ಮೊದಲಾದವರ ಪರಾಕ್ರಮವನ್ನು ಚಮತ್ಕಾರವಾಗಿ ಟೀಕಿಸಿದ. ಅನಂತರ ಚಿನ್ನದ ರಥವನ್ನೇರಿ ನುಗ್ಗುತ್ತ ಅರ್ಜುನನನ್ನು ಮೂದಲಿಸುತ್ತ ಬಂದ.
ಪದಾರ್ಥ (ಕ.ಗ.ಪ)
ರಣಮೈಲಾರರಾದರು… ಮೈಲಾರ ಒಂದು ಕ್ಷುದ್ರ ದೇವತೆ ಶಿವನು ಗೊರವನ ವೇಷ ತಾಳಿ ಬಂದನೆಂದು ಪ್ರತೀತಿಯಿದೆ. ಇಲ್ಲಿ ಕರ್ಣ ಭೀಷ್ಮ ಮೊದಲಾದವರು ಯುದ್ಧದಲ್ಲಿ ಸೋತರು ಅನಂತರ ಹೆದರಿ ಓಡಿದರು ಎಂದರ್ಥ, ಓರೆ ಹದರು-ಚಮತ್ಕಾರದ ಮಾತು, ಅವಗಡಿಸು-ಹೀನಾಯವಾಗಿ ಕಾಣು, ದುವ್ವಾಳಿಸು-ಮುಂದೆ ಸಾಗಿಸು
ಟಿಪ್ಪನೀ (ಕ.ಗ.ಪ)
ದುರ್ಯೋಧನನಿಗೆ ಭೀಷ್ಮಾದಿಗಳು ಯಾರೂ ಯುದ್ಧದಲ್ಲಿ ಅರ್ಜುನನನ್ನು ಗೆಲ್ಲಲಿಲ್ಲವಲ್ಲ ಎಂಬ ಸಂಕಟ ಇದ್ದೇ ಇದೆ. ಇಂಥ ವೀರರೆಲ್ಲರ ಸ್ಥಿತಿ ಏನಾಯಿತೆಂದು ಕಣ್ಣಾರೆ ನೋಡಿದ್ದರಿಂದ ಹೀಗೆ ಅಪಹಾಸ್ಯ ಮಾಡುತ್ತಿದಾನೆ. ಅಂಥ ವೀರರೆಲ್ಲ ಮೈಲಾರನಂತೆ ಕ್ಷುದ್ರ ದೈವಗಳಾದವಲ್ಲ, ಓಡಿ ಹೋಗುವುದರಲ್ಲ ರುದ್ರ ವೇಗ ಹೊಂದಿದರಲ್ಲ ಎಂಬ ಸಂಕಟ ಅವನದು.
ಮೂಲ ...{Loading}...
ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಫೂತು ಮಝರೆನುತ
ಕೌರವನು ಕರ್ಣಾದಿಗಳ ನುಡಿ
ಯೋರೆ ಹದರಿನೊಳವಗಡಿಸಿ ಹೊಂ
ದೇರ ದುವ್ವಾಳಿಸುತ ಮೂದಲಿಸಿದನು ಫಲುಗುಣನ ॥70॥
೦೭೧ ಬಾಲ ವೃದ್ಧರ ...{Loading}...
ಬಾಲ ವೃದ್ಧರ ವಿಪ್ರರನು ನೀ
ಕಾಳಗದೊಳೋಡಿಸಿದೆನೆಂದೇ
ಮೇಲು ಪೋಗಿನಲಿರಲು ಬೇಡೆಲೆ ಪಾರ್ಥ ಮರುಳಾದೈ
ಆಳಿದಡವಿಯ ರಾಜ್ಯವಲ್ಲದೆ
ಮೇಲೆ ಧರಣಿಯ ಬಯಸಿದೊಡೆ ನಿಮ
ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ ॥71॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
É71. " ಹುಡುಗರನ್ನು, ಬ್ರಾಹ್ಮಣರನ್ನು ಮುದುಕರನ್ನು ಯುದ್ಧದಲ್ಲಿ ಓಡಿಸಿದೆನೆಂದು ಉಬ್ಬಿ ಬೀಗ ಬೇಡ. ಎಲೆ ಪಾರ್ಥ ! ನಿನಗೆಲ್ಲೋ ಮರುಳು ! ನೀವು ಕಾಡಿನಲ್ಲಿ ಆಳಿದ ರಾಜ್ಯವನ್ನು ಬಿಟ್ಟು ಈಗ ರಾಜ್ಯವನ್ನು ಬಯಸಿದರೆ ನಾನು ಕೊಡುತ್ತೇನೆಯೆ ? ಹೋಗು ! ಮತ್ತೆ ಕಾಡಿಗೇ ಹೋಗು” ಎನ್ನುತ್ತ ಕೌರವ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಮೇಲುಪೋಗು-ಉಬ್ಬು, ಗರ್ವ
ಮೂಲ ...{Loading}...
ಬಾಲ ವೃದ್ಧರ ವಿಪ್ರರನು ನೀ
ಕಾಳಗದೊಳೋಡಿಸಿದೆನೆಂದೇ
ಮೇಲು ಪೋಗಿನಲಿರಲು ಬೇಡೆಲೆ ಪಾರ್ಥ ಮರುಳಾದೈ
ಆಳಿದಡವಿಯ ರಾಜ್ಯವಲ್ಲದೆ
ಮೇಲೆ ಧರಣಿಯ ಬಯಸಿದೊಡೆ ನಿಮ
ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ ॥71॥
೦೭೨ ಗಾರುಗೆಡೆಯದಿರೆಲವೊ ಸತ್ಯವ ...{Loading}...
ಗಾರುಗೆಡೆಯದಿರೆಲವೊ ಸತ್ಯವ
ಮೀರಲಮ್ಮದೆ ಲೋಕ ನಿನ್ನನು
ದೂರ ಬೇಕೆಂದಡವಿಯೊಕ್ಕೆವು ಹೊಲ್ಲೆಯೇನಿದಕೆ
ಜಾರಿ ಹೋಯಿತ್ತವಧಿಯಿನ್ನೀ
ಮೀರಿ ಗಳಹುವ ನಿನ್ನ ಗಂಟಲ
ನೂರಿ ರಾಜ್ಯವ ತೆಗೆವೆ ಸೈರಿಸೆನುತ್ತ ನರನೆಚ್ಚ ॥72॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ! ಕೌರವ ! ನನ್ನನ್ನು ಆಕ್ಷೇಪಿಸಿ ಮಾತಾಡಬೇಡ. ಲೋಕವು ನಿನ್ನನ್ನು ದೂರಲಿ, ನಾವು ಮಾತ್ರ ಎಂದಿಗೂ ಸತ್ಯ ಮೀರಬಾರದು ಎಂದುಕೊಂಡೇ ನಾವು ಕಾಡಿಗೆ ಹೋದೆವಲ್ಲವೆ ? ಇದರಲ್ಲಿ ಏನು ತಪ್ಪಿದೆ? ನಮ್ಮ ವನವಾಸ ಅಜ್ಞಾತವಾಸದ ಅವಧಿ ಮುಗಿಯಿತಲ್ಲವೆ ? ಈಗ ನೀನು ಅತಿಶಯವಾಗಿ ಹರಟಿದರೆ ನಿನ್ನ ಗಂಟಲಿಗೆ ಕತ್ತಿಯನ್ನು ಊರಿ ರಾಜ್ಯವನ್ನು ಕಿತ್ತುಕೊಳ್ಳುತ್ತೇವೆ. ಸ್ವಲ್ಪಕಾಲ ಸಹಿಸಿಕೋ" ಎಂದು ಅರ್ಜುನ ಬಾಣ ಪ್ರಯೋಗ ಮಾಡಿದ.
ಪದಾರ್ಥ (ಕ.ಗ.ಪ)
ಗಾರುಗೆಡೆ-ನಿಂದಿಸು, ಆಕ್ಷೇಪಿಸು, ಅಮ್ಮದೆ=ಆರದೆ ಸಾಧ್ಯವಾಗದೆ, ಹೊಲ್ಲೆ-ತಪ್ಪು, ಗಳಹು-ಹರಟು
ಮೂಲ ...{Loading}...
ಗಾರುಗೆಡೆಯದಿರೆಲವೊ ಸತ್ಯವ
ಮೀರಲಮ್ಮದೆ ಲೋಕ ನಿನ್ನನು
ದೂರ ಬೇಕೆಂದಡವಿಯೊಕ್ಕೆವು ಹೊಲ್ಲೆಯೇನಿದಕೆ
ಜಾರಿ ಹೋಯಿತ್ತವಧಿಯಿನ್ನೀ
ಮೀರಿ ಗಳಹುವ ನಿನ್ನ ಗಂಟಲ
ನೂರಿ ರಾಜ್ಯವ ತೆಗೆವೆ ಸೈರಿಸೆನುತ್ತ ನರನೆಚ್ಚ ॥72॥
೦೭೩ ಅರಿಯೆ ನೀನೆಲೆ ...{Loading}...
ಅರಿಯೆ ನೀನೆಲೆ ಮರುಳೆ ಗರುಡನ
ತರವಳಿಕೆಯಲಿ ಹಾವು ಕನ್ನವ
ಕೊರೆದು ಬದುಕುವುದೇ ವೃಥಾ ಕಕ್ಕುಲಿತೆ ನಿನಗೇಕೆ
ತರಿದು ತಿರಿಕಲ್ಲಾಡುವೆನು ನಿ
ಮ್ಮುರುವರೈವರ ಶಿರವನರ್ಜುನ
ಬರಿದೆ ಗಳಹದಿರೆನುತ ಕೌರವ ರಾಯ ತೆಗೆದೆಚ್ಚ ॥73॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹುಚ್ಚು ಅರ್ಜುನ ! ಗರುಡನ ಮೇಲ್ವಿಚಾರಣೆಯಲ್ಲಿ ಹಾವು ಕನ್ನವನ್ನು ಕೊರೆದು ಬದುಕುತ್ತದೇನು ? ನಿನಗೆ ಸುಮ್ಮಸುಮ್ಮನೆ ಅಂಥ ಮೋಹವೇಕೆ ? ನಾನು ಪಾಂಡವರೈವರ ತಲೆಗಳನ್ನು ತುಂಡರಿಸಿ ತಿರಿಗಲ್ಲಾಡುತ್ತೇನೆ. ಸುಮ್ಮನೆ ಹರಟಬೇಡ” ಎನ್ನುತ್ತ ಕೌರವ ಬಾಣಗಳನ್ನು ಬಿಟ್ಟ.
ಪದಾರ್ಥ (ಕ.ಗ.ಪ)
ತರವಳಿಕೆ-ಮೇಲು ವಿಚಾರಣೆ,ತಳವಾರನ ಕೆಲಸ ಕಕ್ಕುಲಿತೆ-(ರಾಜ್ಯ ಮೋಹ) ತರಿ-ತುಂಡುಮಾಡು, ತಿರಿಕಲ್ಲು<ತಿಱಿಕಲ್, ಅಣ್ಣೆಕಲ್ಲು, ಒಂದು ಆಟ, ಗಳಹು-ಹರಟು, ಉರುವ-ಶ್ರೇಷ್ಠ
ಟಿಪ್ಪನೀ (ಕ.ಗ.ಪ)
ತರವಳಿಕೆ-ಮೇಲು ವಿಚಾರಣೆ,ತಳವಾರನ ಕೆಲಸ
ಇಲ್ಲಿ ತಳವಾರ ಎಂಬ ಪದದಲ್ಲಿ ಅಕ್ಷರ ಪಲ್ಲಟವಾಗಿ ತರವಳ ಅಗಿದೆ.
ಮೂಲ ...{Loading}...
ಅರಿಯೆ ನೀನೆಲೆ ಮರುಳೆ ಗರುಡನ
ತರವಳಿಕೆಯಲಿ ಹಾವು ಕನ್ನವ
ಕೊರೆದು ಬದುಕುವುದೇ ವೃಥಾ ಕಕ್ಕುಲಿತೆ ನಿನಗೇಕೆ
ತರಿದು ತಿರಿಕಲ್ಲಾಡುವೆನು ನಿ
ಮ್ಮುರುವರೈವರ ಶಿರವನರ್ಜುನ
ಬರಿದೆ ಗಳಹದಿರೆನುತ ಕೌರವ ರಾಯ ತೆಗೆದೆಚ್ಚ ॥73॥
೦೭೪ ಗರುಡ ನೀನಹೆ ...{Loading}...
ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನೆಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರೆತೆಗಳ ಕಾಣಿಸಿದ ॥74॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನು ಗರುಡ ಎಂದು ಭಾವಿಸಿಕೋ ಆದರೆ ನಿನ್ನ ಕುತ್ತಿಗೆ ಏರಿ ಬೆನ್ನ ಎಲುಬನ್ನು ಮುರಿಯಲು ಧಾವಿಸುವ ಮುರಾರಿ ನಾನು ಗೊತ್ತೆ. ಅದು ನಿನಗೆ ಗೊತ್ತಿಲ್ಲವೆ ? ನೀವೀಗ ನನ್ನ ಏಟುಗಳನ್ನು ತಡೆದುಕೊಳ್ಳಿ ! ವೀರರಾಗಿ” ಎಂದು ಗರ್ಜಿಸಿ ಅರ್ಜುನನು ಎರಡು ಬಾಣಗಳಿಂದ ಕೌರವನ ಎದೆ ಸೀಳಿ ರಕ್ತ ಪ್ರವಾಹ ಬರುವಂತೆ ಮಾಡಿದ.
ಪದಾರ್ಥ (ಕ.ಗ.ಪ)
ಪಕ್ಕ-ಪಕ್ಕೆ, ಹೊಟ್ಟೆಯ ಎಡಬಲಭಾಗ, ಹೆಡತಲೆ-ಹಿಂದಲೆ, ಅಡರು-ಏರು, ಹತ್ತು, ದುವ್ವಾಳಿಸು-ಧಾವಿಸು, ಮುರರಿಪು-ಕೃಷ್ಣ, ತರಹರಿಸು-ಸೈರಿಸು, ಅರುಣಜಲ-ರಕ್ತ, ಒರತೆ-ಬುಗ್ಗೆ
ಮೂಲ ...{Loading}...
ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನೆಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರೆತೆಗಳ ಕಾಣಿಸಿದ ॥74॥
೦೭೫ ನವ ನಿಕಾರಿಯ ...{Loading}...
ನವ ನಿಕಾರಿಯ ವಲ್ಲಿ ಸೀರೆಗ
ಳವಯವದ ರಕುತದಲಿ ತೋದವು
ಜವವಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ
ಕವಿದನರ್ಜುನನೋಡದಿರು ಕೌ
ರವ ಪಲಾಯನವಕಟಕಟ ಪಾ
ರ್ಥಿವರ ಪಂಥವೆ ಮರಳಿ ನಿಂದಿರು ಕೊಲುವುದಿಲ್ಲೆಂದ ॥75॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಕೌರವನ ಮೈಯಿಂದ ಸೋರಿದ ರಕ್ತದಲ್ಲಿ ವಲ್ಲಿ ಮತ್ತು ವಸ್ತ್ರಗಳು ತೊಯ್ದು ಹೋದವು. ಕೌರವ ಶಕ್ತಿ ಗುಂದಿ ಸಾರಥಿಗೆ ಸನ್ನೆ ಮಾಡಿದ. ಆ ಸಾರಥಿ ಸೂಚನೆಯನ್ನರಿತು ರಥವನ್ನು ಬೇರೆಡೆಗೆ ಹೊರಳಿಸಿದ. ಅರ್ಜುನ ಅವನನ್ನು ಅಟ್ಟಿ " ಕೌರವ ! ಓಡಬೇಡ. ಓಡುವುದು ವೀರರ ದಾರಿಯಲ್ಲ ! ಮತ್ತೆ ಯುದ್ಧಕ್ಕೆ ನಿಲ್ಲು ನಾನು ನಿನ್ನನ್ನು ಕೊಲ್ಲುವುದಿಲ್ಲ ಎಂದು ಹೇಳಿದ.
ಪದಾರ್ಥ (ಕ.ಗ.ಪ)
ನಿಕಾರಿ < ನಿಖಾರಿ, ಸ್ವಚ್ಛ ವಸ್ತ್ರ (<ಮರಾಠಿ ನಿಖಾರ್), ಸೀರೆ-ವಸ್ತ್ರ, ಜವವಳಿದು (ಜವ=ಸತ್ವ ಅಳಿದು=ಕುಂದಿ) ಪಾರ್ಥಿವ-ಕ್ಷತ್ರಿಯ
ಮೂಲ ...{Loading}...
ನವ ನಿಕಾರಿಯ ವಲ್ಲಿ ಸೀರೆಗ
ಳವಯವದ ರಕುತದಲಿ ತೋದವು
ಜವವಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ
ಕವಿದನರ್ಜುನನೋಡದಿರು ಕೌ
ರವ ಪಲಾಯನವಕಟಕಟ ಪಾ
ರ್ಥಿವರ ಪಂಥವೆ ಮರಳಿ ನಿಂದಿರು ಕೊಲುವುದಿಲ್ಲೆಂದ ॥75॥
೦೭೬ ಮಾತು ಹಳಸದ ...{Loading}...
ಮಾತು ಹಳಸದ ಮುನ್ನ ಕೈಗಳು
ಸೋತು ತೆಗೆದವೆ ಹೊಳ್ಳುವಾತಿದು
ನೀತಿಯೇ ನರಪತಿಗಳಿಗೆ ಬಹು ಭಂಗವನ್ವಯಕೆ
ಭೀತನಲ್ಲದೆ ಕಾದಿ ಮಡಿದನ
ಮಾತುಗಳಲಾ ಪುಣ್ಯಕಥನವು
ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ ॥76॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- " ಮಾತು ಹಳಸುವುದಕ್ಕೆ ಮೊದಲೇ ನಿನ್ನ ಕೈಗಳು ಸೋತು ಹೋದವೇನು ? ಹೀಗೆ ಪೊಳ್ಳು ಮಾತುಗಳನ್ನು ಆಡಬಹುದೆ ? ಇದು ಕ್ಷತ್ರಿಯರಿಗೆ ಯೋಗ್ಯವಲ್ಲ. ವಂಶದ ಕೀರ್ತಿಗೂ ಒಳ್ಳೆಯದಲ್ಲ. ಹೆದರಿದವನಿಗಿಂತ ಹೋರಾಡಿ ಮಡಿದವನ ಬಗ್ಗೆ ಮಾತಾಡುವುದೇ ಪುಣ್ಯ ಕಥನವಾಗುತ್ತದಲ್ಲವೆ ? ಅಯ್ಯಾ ಚಕ್ರವರ್ತಿ ! ನನ್ನಾಣೆ ! ಹಿಂದಕ್ಕೆ ಬಂದು ಹೋರಾಡು ಎಂದು ಅರ್ಜುನ ಕೌರವನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಮಾತು ಹಳಸದ ಮುನ್ನ (ಈಗ ತಾನೇ ಪೌರುಷದ ಮಾತಾಡಿದ್ದೀಯೆ ! ಅವು ಹಳಸುವುದಕ್ಕೆ ಮುನ್ನವೇ) ಹೊಳ್ಳು ವಾತು-ಪೊಳ್ಳು ನುಡಿ, ಬಹುಭಂಗ ಅನ್ವಯಕೆ-ಅನ್ವಯ-ವಂಶಕ್ಕೆ ಬಹುಭಂಗ, ಭೀತ-ಹೆದರಿದವ, ಭೂತಳಾಧಿಪ-ಮಹಾರಾಜ ! (ವ್ಯಂಗ್ಯವನ್ನು ಗಮನಿಸಿ)
ಮೂಲ ...{Loading}...
ಮಾತು ಹಳಸದ ಮುನ್ನ ಕೈಗಳು
ಸೋತು ತೆಗೆದವೆ ಹೊಳ್ಳುವಾತಿದು
ನೀತಿಯೇ ನರಪತಿಗಳಿಗೆ ಬಹು ಭಂಗವನ್ವಯಕೆ
ಭೀತನಲ್ಲದೆ ಕಾದಿ ಮಡಿದನ
ಮಾತುಗಳಲಾ ಪುಣ್ಯಕಥನವು
ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ ॥76॥
೦೭೭ ಹುರುಳುಗೆಟ್ಟುದು ಗರುವತನವೆಂ ...{Loading}...
ಹುರುಳುಗೆಟ್ಟುದು ಗರುವತನವೆಂ
ದರಸ ನಾಚಿದನಧಿಕ ಶೌರ್ಯೋ
ತ್ಕರುಷೆಯಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮ ತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟರಳಿವ ನಿಶ್ಚಯಿಸಿ ॥77॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನ್ನ ಅಹಂಕಾರವು ಸತ್ವಗೆಟ್ಟಿತಲ್ಲ ಎಂದು ಕೌರವ ನಾಚಿಕೊಂಡ. ಅನಂತರ ಶೌರ್ಯ ಮೆರೆಯುವ ಉತ್ಕಟ ಭಾವದಿಂದ ಕಲಿಯಾಗಿ ಮತ್ತೆ ಯುದ್ಧಕ್ಕೆ ನಿಂತ. ದೊರೆಯ ದುಗುಡವನ್ನು ಕಂಡು ಸಕಲ ಸೈನಿಕರು ತಾವಾಗಿ ಯುದ್ಧಕ್ಕೆ, ಸಹಾಯಕ್ಕೆ, ನಿಂತರು. ಸೇನೆ ಒಗ್ಗೂಡಿತು. ಶೂರರೆಲ್ಲ ಸಾಯುವುದನ್ನು ನಿಶ್ಚಯಮಾಡಿಕೊಂಡೇ ಯುದ್ಧಕ್ಕೆ ಸಿದ್ಧರಾಗಿ ನಿಂತರು.
ಪದಾರ್ಥ (ಕ.ಗ.ಪ)
ಹುರುಳು-ಸತ್ವ, ದುಗುಡ-ಸಂಕಟ, ಉರವಣಿಸು-ಸಂಭ್ರಮದಿಂದ ಮುಂದೆ ಬಾ, ಹೊರಳಿ-ಸಮೂಹ, ಗುಂಪು, ನಿಚ್ಚಟರು-ನಿಶ್ಚಲ ಪರಾಕ್ರಮಿಗಳು < ನಿಶ್ಚಟ-ಸ್ಥಿರ, ದೃಢ,, ಅಳಿವ-ಸಾವನ್ನು
ಮೂಲ ...{Loading}...
ಹುರುಳುಗೆಟ್ಟುದು ಗರುವತನವೆಂ
ದರಸ ನಾಚಿದನಧಿಕ ಶೌರ್ಯೋ
ತ್ಕರುಷೆಯಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮ ತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟರಳಿವ ನಿಶ್ಚಯಿಸಿ ॥77॥
೦೭೮ ನೊನ್ದನವನಿಪ ನಿನ್ದು ...{Loading}...
ನೊಂದನವನಿಪ ನಿಂದು ಪಾರ್ಥನ
ಕೊಂದು ತೋರುವೆನೆಂದು ರವಿಸುತ
ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು
ಒಂದು ಕಡೆಯಲಿ ಮಸಗಿದರು ಗುರು
ನಂದನನು ವೃಷಸೇನ ಸೈಂಧವ
ರೊಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು ॥78॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
É78. ಕೌರವನು ನೊಂದ. ಆದ್ದರಿಂದ ಈ ಪಾರ್ಥನನ್ನು ಕೊಂದು ಕೌರವನಿಗೆ ತೋರಿಸಿ ಸಮಾಧಾನ ಮಾಡುತ್ತೇನೆ ಎಂದುಕೊಳ್ಳುತ್ತ ಕರ್ಣನು ಒಂದು ಕಡೆಯಿಂದ ಗರ್ಜಿಸುತ್ತ ಬಿಲ್ಲನ್ನು ಝೇಂಕರಿಸಿ ಯುದ್ಧಕ್ಕೆ ಬಂದ. ಇನ್ನೊಂದು ಕಡೆಯಿಂದ ಅಶ್ವತ್ಥಾಮ, ವೃಷಸೇನ (ಕರ್ಣಪುತ್ರ) ಜಯದ್ರಥರುಗಳೂ ಮಗುದೊಂದು ಕಡೆಯಿಂದ ಭೀಷ್ಮ ದ್ರೋಣ ಕೃಪ ದುಶ್ಶಾಸನಾದಿಗಳೂ ಯುದ್ಧ ರಂಗಕ್ಕೆ ಬಂದರು.
ಪದಾರ್ಥ (ಕ.ಗ.ಪ)
ಅವನಿಪ-ದೊರೆ, ಜೇವೊಡೆದು-ಧನುಸ್ಸನ್ನು ಮಿಡಿದು, ಮಸಗು-ಮೇಲೆ ಬೀಳು, ಆಕ್ರಮಣ ಮಾಡು
ಮೂಲ ...{Loading}...
ನೊಂದನವನಿಪ ನಿಂದು ಪಾರ್ಥನ
ಕೊಂದು ತೋರುವೆನೆಂದು ರವಿಸುತ
ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು
ಒಂದು ಕಡೆಯಲಿ ಮಸಗಿದರು ಗುರು
ನಂದನನು ವೃಷಸೇನ ಸೈಂಧವ
ರೊಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು ॥78॥
೦೭೯ ಗುರು ಚಡಾಳಿಸಿ ...{Loading}...
ಗುರು ಚಡಾಳಿಸಿ ಹೊಕ್ಕನೊಮ್ಮಿಂ
ಗುರವಣಿಸಿದನು ಬಾಹ್ಲಿಕನು ಭಾ
ಸುರ ಕಳಿಂಗ ಸುಕೇತು ಭೂರಿಶ್ರವನು ದುಸ್ಸಹನು
ನರನ ಮುತ್ತಿದರೊಂದು ಕಡೆಯಲಿ
ತೆರಳಿಕೆಯ ತೇರಿನಲಿ ಬಲ ಮೋ
ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ ॥79॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೋಣರೂ ಒಂದು ಕಡೆಯಿಂದ ಅರ್ಜುನನ ಮೇಲೆ ಏರಿ ಬಂದರು. ಬಾಹ್ಲಿಕನೂ ವಿಜೃಂಭಿಸುತ್ತ ಬಂದ. ಕಳಿಂಗ (ಶಕುನಿ) ಸುಕೇತು ಭೂರಿಶ್ರವ ದುಸ್ಸಹರೂ ಬಂದು ಅರ್ಜುನನನ್ನು ಮುತ್ತಿಕೊಂಡರು. ವೇಗದ ತೇರುಗಳಲ್ಲಿ ಸೈನ್ಯ ಗುಂಪುಗುಂಪಾಗಿ ಬಂದು ಧನಂಜಯನನ್ನು ಮುತ್ತಿಕೊಂಡಿತು.
ಪದಾರ್ಥ (ಕ.ಗ.ಪ)
ಚಡಾಳಿಸು-ಏರು, ಕಳಿಂಗ-ಶಕುನಿ, ಸುಕೇತು ಇವರೆಲ್ಲ ಕೌರವರ ಕಡೆಯ ವೀರರು, ತೆರಳಿಕೆ-ವೇಗ , ಗುಂಪು, ಮೋಹರಿಸು-ಗುಂಪು ಕೂಡು
ಮೂಲ ...{Loading}...
ಗುರು ಚಡಾಳಿಸಿ ಹೊಕ್ಕನೊಮ್ಮಿಂ
ಗುರವಣಿಸಿದನು ಬಾಹ್ಲಿಕನು ಭಾ
ಸುರ ಕಳಿಂಗ ಸುಕೇತು ಭೂರಿಶ್ರವನು ದುಸ್ಸಹನು
ನರನ ಮುತ್ತಿದರೊಂದು ಕಡೆಯಲಿ
ತೆರಳಿಕೆಯ ತೇರಿನಲಿ ಬಲ ಮೋ
ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ ॥79॥
೦೮೦ ಅಙ್ಗವಿಸಿತರಿ ಸೇನೆ ...{Loading}...
ಅಂಗವಿಸಿತರಿ ಸೇನೆ ಲೋಕವ
ನುಂಗಿ ಕುಣಿಯಲು ಬಗೆವ ಭರ್ಗನ
ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದಲಿ
ಭಂಗಿತರ ಮರುವಲಗೆಯಲಿ ಸ
ರ್ವಾಂಗಬಲ ಜೋಡಿಸಿತು ನಮ್ಮುಳಿ
ವಿಂಗೆ ಹದನೇನೆನುತ ಮತ್ಸ್ಯನ ಸೂನು ಚಿಂತಿಸಿದ ॥80॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕವನ್ನು ನುಂಗಿ ಕುಣಿಯಲು ಬಗೆದ ರುದ್ರನಿಗೆ ರಂಗಭೂಮಿಯನ್ನು ತೊಳೆದು ಸಿದ್ಧ ಪಡಿಸುವ ಸಮುದ್ರದ ಪೂರ್ವ ಸಿದ್ಧತೆಯಂತೆ ಶತ್ರು ಸೇನೆ ಮುನ್ನುಗ್ಗಿತು. ಭಂಗಿತರಾಗಿ ಹಿಮ್ಮೆಟ್ಟಿದ್ದ ವೀರರುಗಳು ಮಾಡಿದ ಮರುಯುದ್ಧದಲ್ಲಿ ಸರ್ವಾಂಗ ಬಲ ಸಿದ್ಧವಾಗಿತ್ತು. ಇದನ್ನು ಕಂಡು “ಅಯ್ಯೊ ! ನಮ್ಮ ಗತಿಯೇನು ?” ಎಂದು ಉತ್ತರಕುಮಾರ ಚಿಂತಿಸಿದ.
ಪದಾರ್ಥ (ಕ.ಗ.ಪ)
ಅಂಗವಿಸು-ಸಿದ್ಧವಾಗು, ಒದಗು, ಅರಿಸೇನೆ-ಶತ್ರುಸೇನೆ, ಭರ್ಗ-ರುದ್ರ, ಜಲಧಿ-ಸಮುದ್ರ, ಮರುವಲಗೆ-ಪುನರ್ಯುದ್ಧ (ಆಲಂಕಾರಿಕ ಅರ್ಥ ಎರಡನೆಯ ಸುತ್ತಿನ ಯುದ್ಧ) ಹದ-ಗತಿ, ಮತ್ಸ್ಯನ ಸೂನು (ಮತ್ಸ್ಯನ-ವಿರಾಟನ ಸೂನು-ಮಗ, ಉತ್ತರ)
ಮೂಲ ...{Loading}...
ಅಂಗವಿಸಿತರಿ ಸೇನೆ ಲೋಕವ
ನುಂಗಿ ಕುಣಿಯಲು ಬಗೆವ ಭರ್ಗನ
ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದಲಿ
ಭಂಗಿತರ ಮರುವಲಗೆಯಲಿ ಸ
ರ್ವಾಂಗಬಲ ಜೋಡಿಸಿತು ನಮ್ಮುಳಿ
ವಿಂಗೆ ಹದನೇನೆನುತ ಮತ್ಸ್ಯನ ಸೂನು ಚಿಂತಿಸಿದ ॥80॥
೦೮೧ ನೆರೆದ ತಿಮಿರದ ...{Loading}...
ನೆರೆದ ತಿಮಿರದ ಥಟ್ಟು ಸೂರ್ಯನ
ತೆರಳಿಚುವವೊಲ್ ಮೇಘ ಘಟೆಗಳು
ಮುರಿದು ಮೋಹರವೌಕಿ ಪವನನ ಸೆರಗ ಹಿಡಿವಂತೆ
ತೆರಳದೊತ್ತಂಬರಿಸಿ ಕುರುಬಲ
ವೊರಲಿ ಹೆಣನನು ತುಳಿದು ಮೇಲ
ಬ್ಬರಿಸಿ ಬರೆ ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ ॥81॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಲೆಯ ಸಮೂಹ ಸೂರ್ಯನನ್ನು ಹಿಂದಕ್ಕೆ ಕಳಿಸುವುದಕ್ಕಾಗಿ ಬಂದಂತೆ, ಮೋಡಗಳು ಗುಂಪುಗುಂಪಾಗಿ ಬಂದು ಗಾಳಿಯ ಸೆರಗನ್ನು ಹಿಡಿದಂತೆ ಹಿಂದಿರುಗದೆ ಅಬ್ಬರಿಸುತ್ತಾ ಕೌರವನ ಸೇನೆ ದಾರಿಯ ಹೆಣಗಳನ್ನು ತುಳಿಯುತ್ತಾ ಅರ್ಜುನನ ಮೇಲೆ ಬೀಳಲು ಬಂದಾಗ ಅರ್ಜುನನು ಸಮ್ಮೋಹನಾಸ್ತ್ರವನ್ನು ಹೂಡಿದನು.
ಪದಾರ್ಥ (ಕ.ಗ.ಪ)
ತಿಮಿರ-ಕತ್ತಲೆ, ಥಟ್ಟು-ಸಮೂಹ, ಮೋಹರ-ಗುಂಪಾಗಿ, ಒತ್ತಂಬರಿಸಿ-ಒತ್ತಿಕೊಂಡು ಸಮ್ಮೋಹನಾಸ್ತ್ರ- ಸಮ್ಮೋಹನಾಸ್ತ್ರ ಎಂದರೆ ಹೆಸರೇ ಹೇಳುವಂತೆ ಜನರು ಮೋಹದಿಂದ ಮೈ ಮರೆಯುವಂತೆ ಮಾಡುವ ಒಂದು ಅಸ್ತ್ರ. ಇದು ಮನ್ಮಥನ ಪಂಚ ಬಾಣಗಳಲ್ಲಿ ಒಂದರ ಹೆಸರೂ ಆಗಿದೆ ಈ ಅಸ್ತ್ರದ ಹೊಡೆತಕ್ಕೆ ಸಿಕ್ಕವರು ಮೈಮರೆಯುತ್ತಾರೆ. ನಿಶ್ಚೇಷ್ಟಿತರಾಗುತ್ತಾರೆ. ಎಚ್ಚರವಿಲ್ಲದ ನಿದ್ರಾವಸ್ಥೆಯಲ್ಲಿರುತ್ತಾರೆ.
ಟಿಪ್ಪನೀ (ಕ.ಗ.ಪ)
ವಿರೋಧಾಲಂಕಾರ
ಮೂಲ ...{Loading}...
ನೆರೆದ ತಿಮಿರದ ಥಟ್ಟು ಸೂರ್ಯನ
ತೆರಳಿಚುವವೊಲ್ ಮೇಘ ಘಟೆಗಳು
ಮುರಿದು ಮೋಹರವೌಕಿ ಪವನನ ಸೆರಗ ಹಿಡಿವಂತೆ
ತೆರಳದೊತ್ತಂಬರಿಸಿ ಕುರುಬಲ
ವೊರಲಿ ಹೆಣನನು ತುಳಿದು ಮೇಲ
ಬ್ಬರಿಸಿ ಬರೆ ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ ॥81॥
೦೮೨ ಎಸಲು ಸನ್ಮೋಹನದ ...{Loading}...
ಎಸಲು ಸನ್ಮೋಹನದ ಶರ ಪಸ
ರಿಸಿತು ಬಲದಲಿ ಬಹಳ ನಿದ್ರಾ
ವ್ಯಸನ ವಿಹ್ವಲಿತಾಂತರಂಗರು ಮೈಯ್ಯನೊಲೆದೊಲೆದು
ಉಸುರ ಸಂಚದ ನಾಡಿಯವಗಾ
ಹಿಸಲು ಕೊರೆದರು ಗುರುಕಿಡುತ ತಲೆ
ಮುಸುಕಿನಲಿ ನೆರೆ ತೆಕ್ಕೆಗೆಡೆದುದು ನಿಖಿಳ ಕುರುಸೇನೆ ॥82॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಪ್ರಯೋಗಿಸಿದ ಸಮ್ಮೋಹನಾಸ್ತ್ರವು ಸೇನೆಯನ್ನೆಲ್ಲ ಆವರಿಸಿತು. ಅದರ ಪ್ರಭಾವಕ್ಕೆ ಸಿಕ್ಕಿದ ಸೈನಿಕರೆಲ್ಲ ಭಾರಿಯ ನಿದ್ರಾವಸ್ಥೆಗೆ ಸಿಕ್ಕಿ ಮೈಯನ್ನು ಅತ್ತಿತ್ತ ತೂಗಿ ಮನಸ್ಸಿನ ಆಂದೋಳನಕ್ಕೆ ಒಳಗಾದರು. ಉಸಿರನ್ನು ಸಂಪರ್ಕಿಸುವ ನಾಡಿ ಆಳಕ್ಕೆ ಮುಳುಗಲಾಗಿ ತಲೆಗೆ ಮುಸುಕಿಟ್ಟು ಗುಂಪು ಗುಂಪಾಗಿ ಹಾಗೇ ಉರುಳಿಕೊಂಡು ಗೊರಕೆ ಹೊಡೆದರು.
ಪದಾರ್ಥ (ಕ.ಗ.ಪ)
ಎಸು-ಬಾಣವನ್ನು ಪ್ರಯೋಗಿಸು, ಪಸರಿಸು-ಹರಡು, ಬಹಳ ನಿದ್ರಾವ್ಯಸನ ವಿಹ್ವಲಿತಾಂತರಂಗರು, ಬಹಳ-ದೊಡ್ಡ ಪ್ರಮಾಣದ, ನಿದ್ರಾ ವ್ಯಸನ-ನಿದ್ರಾಭಾರದಿಂದ, ವಿಹ್ವಿಲಿತ-ಗೊಂದಲಗೊಂಡ, ಅಂತರಂಗರು-ಮನಸ್ಸು ಉಳ್ಳವರಾದರು, ಸಂಚದ-ಸಂಪರ್ಕ, ಪ್ರಮಾಣ, ಗುರುಕಿಡು-ಗೊರಕೆ ಹೊಡೆ, ತೆಕ್ಕೆಗೆಡೆ-ಗುಂಪಾಗಿ ಬೀಳು, ಅವಗಾಹಿಸು- ಮುಳುಗು,
ಉಸುರ ಸಂಚದ ನಾಡಿಯವಗಾಹಿಸಲು. ಉಸುರ ಸಂಚದ ನಾಡಿಯನ್ನು (ಅವಗಾಹಿಸಲು ಅವಗಾಹಿಸು ಎಂಬ ಮಾತಿಗೆ ಸ್ವಾಧೀನ ಪಡಿಸಿಕೊಳ್ಳಲು ಎಂಬರ್ಥವೂ ಆದೀತು) ಸಂಚಕ್ಕೆ ಪ್ರಮಾಣ ಎಂಬರ್ಥವೂ ಇದೆ. ಉಸುರಿನ ಪ್ರಮಾಣದ ನಾಡಿಯನ್ನು ಪಳಗಿಸಿಕೊಳ್ಳಲು. (ಸಂಚು (=ಸಂಚ?) ನಾಡಿ, ಸಂಚಲನಾಡಿ ಎಂದು ಎರಡು ನಾಡಿಗಳ ಹೆಸರನ್ನು ವೈದ್ಯ ಸಂಗಣ್ಣ ತನ್ನ ಒಂದು ವಚನದಲ್ಲಿ ಹೇಳಿದ್ದಾನೆ)
ಮೂಲ ...{Loading}...
ಎಸಲು ಸನ್ಮೋಹನದ ಶರ ಪಸ
ರಿಸಿತು ಬಲದಲಿ ಬಹಳ ನಿದ್ರಾ
ವ್ಯಸನ ವಿಹ್ವಲಿತಾಂತರಂಗರು ಮೈಯ್ಯನೊಲೆದೊಲೆದು
ಉಸುರ ಸಂಚದ ನಾಡಿಯವಗಾ
ಹಿಸಲು ಕೊರೆದರು ಗುರುಕಿಡುತ ತಲೆ
ಮುಸುಕಿನಲಿ ನೆರೆ ತೆಕ್ಕೆಗೆಡೆದುದು ನಿಖಿಳ ಕುರುಸೇನೆ ॥82॥
೦೮೩ ತನುವನೊಲೆದವು ದಡದಡಿಸಿ ...{Loading}...
ತನುವನೊಲೆದವು ದಡದಡಿಸಿ ಕಿವಿ
ಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯ್ಯನೊಳಗಿಟ್ಟು
ತೊನೆದು ಕೆಡೆದವು ಜೋಧರಾಗಳು
ಕನಲಿ ಕೆಡೆದರು ಗುರು ನದೀಜರ
ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು ॥83॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಆನೆಗಳ ದೇಹಗಳು ತೂಗಾಡಿದವು. ದಡದಡಿಸಿ ಕಿವಿಗಳನ್ನು ಜೋಲಿಸಿದವು. ಕಾಲು ಮಡಿಚಿ ಕುಸಿದು ಕೊರಳನ್ನು ಹಿಂದಕ್ಕೆ ಇರಿಸಿ ಸಂಡಿಲನ್ನು ಒಳಗಿಟ್ಟುವು. ಎಲ್ಲ ಮಾವುತರೂ ಪರಿತಪಿಸಿ ಕೆಳಗೆ ಬಿದ್ದರು. ದ್ರೋಣ ಅಶ್ವತ್ಥಾಮರ ಸೇನೆಗಳಲ್ಲಿ (ಅಯುತ) ಹತ್ತು ಸಾವಿರ, ಕೋಟಿ ಆನೆಗಳು ಕೆಳಕ್ಕೆ ಉರುಳಿದವು.
ಪದಾರ್ಥ (ಕ.ಗ.ಪ)
ಮಡಿಗಾಲು-ಕಾಲುಮಡಿಸುವಿಕೆ, ತೊನೆ-ತೂಗು, ಜೋಧ-ಆನೆಯ ಸವಾರ, ಕನಲು-ಪರಿತಪಿಸು, ಬಾಡು, ಮಂಕಾಗು,
ಮೂಲ ...{Loading}...
ತನುವನೊಲೆದವು ದಡದಡಿಸಿ ಕಿವಿ
ಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯ್ಯನೊಳಗಿಟ್ಟು
ತೊನೆದು ಕೆಡೆದವು ಜೋಧರಾಗಳು
ಕನಲಿ ಕೆಡೆದರು ಗುರು ನದೀಜರ
ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು ॥83॥
೦೮೪ ದೃಗುಯುಗಳವರೆದೆರೆಯೆ ರೋಮಾ ...{Loading}...
ದೃಗುಯುಗಳವರೆದೆರೆಯೆ ರೋಮಾ
ಳಿಗಳು ತೆಕ್ಕೆಯ ಸಾರೆ ಕೊರಳರೆ
ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು
ಬಿಗುಹು ಸಹಿತವೆ ಹೊನ್ನ ಮರಗೋ
ಡುಗಳ ಮೇಲಡಗೆಡೆದು ನಿದ್ರಾ
ಮುಗುದರಾದರು ರಾವುತರು ತೂಕಡಿಸಿದವು ತುರಗ ॥84॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಧ ತೆರೆದ ಕಣ್ಣು, ರೋಮಗಳೆಲ್ಲ ತೆಕ್ಕೆ ಹಾಕಿಕೊಂಡಿವೆ, ಕೊರಳು ಪಕ್ಕಕ್ಕೆ ಬಾಗಿವೆ. ಹಿಂಗಾಲಿನಲ್ಲಿ ನಿಂತು ತಮ್ಮ ಗೊರಸುಗಳನ್ನು ತೂಗಿ ಆಕಡೆ ಈ ಕಡೆ ಒಲೆದು ಕುದುರೆಗಳು ತೂಕಡಿಸಿದುವು. ಬಿಗಿಯಾಗಿ ಅಂಟಿಕೊಂಡು ಚಿನ್ನದ ಮರಗೋಡುಗಳ ಮೇಲೆ ಒರಗಿ. ರಾವುತರು ನಿದ್ರಾ ಮುಗ್ಧರಾಗಿದ್ದರು.
ಪದಾರ್ಥ (ಕ.ಗ.ಪ)
ದೃಗು ಯುಗಳ-(ದೃಗು-ಕಣ್ಣು, ಯುಗಳ-ಜೋಡಿ) ಎರಡು ಕಣ್ಣು, ಅರೆದೆರೆಯೆ-ಅರೆ+ತೆರೆಯೆ=ಅರ್ಧ ತೆರೆದಿರಲು, ಬಿಗುವು ಸಹಿತ-ಬಿಗಿಯಾಗಿ, ಮರಗೋಡು-ಮರಗೊಂಬು ಕುದುರೆಯ ಜೀನಿನ ಮುಂಭಾಗದಲ್ಲಿ ಮರದಿಂದ ಮಾಡಿದ ಕೊಂಬಿನ ಆಕಾರದ, ಎತ್ತರಿಸಿರುವ ಭಾಗ (ಅವು ಚಿನ್ನದ ಲೇಪನ ಹೊಂದಿದ್ದವಂತೆ)
ಮೂಲ ...{Loading}...
ದೃಗುಯುಗಳವರೆದೆರೆಯೆ ರೋಮಾ
ಳಿಗಳು ತೆಕ್ಕೆಯ ಸಾರೆ ಕೊರಳರೆ
ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು
ಬಿಗುಹು ಸಹಿತವೆ ಹೊನ್ನ ಮರಗೋ
ಡುಗಳ ಮೇಲಡಗೆಡೆದು ನಿದ್ರಾ
ಮುಗುದರಾದರು ರಾವುತರು ತೂಕಡಿಸಿದವು ತುರಗ ॥84॥
೦೮೫ ಬಿಲು ಸೆಳೆಯೆ ...{Loading}...
ಬಿಲು ಸೆಳೆಯೆ ಕೈದುಗಳು ಕೈಯಿಂ
ಚಲಿಸಲೊಬ್ಬರನೊಬ್ಬರತ್ತಲು
ಮಲಗಿ ಬೆಂಬತ್ತಳಿಕೆ ಬದಿಯೊಳಗಡಸಿ ತೋಳುಗಳ
ತಲೆಯೊಳಾನಿಸಿ ಗುರುಗುರಿಸಿ ರಥ
ದೊಳಗೆ ಸಾರಥಿವೆರಸಿ ನಿದ್ರಾ
ಕುಳರು ಜೊಮ್ಮಿನ ಮೇಲೆ ಮೈಮರೆದಿರ್ದರತಿರಥರು ॥85॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಲ್ಲು ಮತ್ತು ಕತ್ತಿಗಳು ಕೈಯಿಂದ ಜಾರಲು, ಒಬ್ಬರಮೇಲೊಬ್ಬರು ಮಲಗಿ ಬೆನ್ನಿನ ಬತ್ತಳಿಕೆಯನ್ನು ಪಕ್ಕಕ್ಕೆ ಸರಿದಿರಲು, ತೋಳುಗಳನ್ನು ತಲೆದಿಂಬಾಗಿ ಮಾಡಿಕೊಂಡು ಗುರುಗುರು ಶಬ್ದ ಮಾಡುತ್ತ ರಥದೊಳಗೆ ಸಾರಥಿ ಸಮೇತ ನಿದ್ರಾವಸ್ಥೆಗೆ ಸಿಕ್ಕಿ ಝೋಂಪು ಹಿಡಿದು ಅತಿರಥರುಗಳು ಮೈಮರೆತು ಮಲಗಿದ್ದರು.
ಪದಾರ್ಥ (ಕ.ಗ.ಪ)
ಬಿಲು ಸೆಳೆಯೆ ಕೈದುಗಳು ಕೈಯಿಂ ಚಲಿಸಲು-(ಆ ಅತಿರಥ ವೀರರ ಸ್ಥಿತಿ ಇದು. ಎಚ್ಚರವಿಲ್ಲ. ಆದರೆ ನಿದ್ರಾವಸ್ಥೆಯಲ್ಲೂ ಅವರ ಕೈ ಬಿಲ್ಲನ್ನು ಸೆಳೆಯುತ್ತಿವೆ. ಕತ್ತಿಗಳ ಮೇಲೆ ಕೈ ಆಡುತ್ತಿವೆ), ಬೆಂಬತ್ತಳಿಕೆ-ಬೆನ್ನಿಗೆ ಕಟ್ಟಿಕೊಂಡಿದ್ದ ಮೂಡಿಗೆ, ಶರಕೋಶ, ಅಡಸು-ಒತ್ತಿಕೋ, ಆನಿಸು-ಚಾಚು, ಒರಗಿಸು, ಗುರುಗುರಿಸು-ಗುರುಗುರು ಶಬ್ದ ಮಾಡು, ಜೊಮ್ಮು-ಝೋಂಪು
ಪಾಠಾನ್ತರ (ಕ.ಗ.ಪ)
ತೋಳುಗಳ ತಲೆಯೊಳಾನಿಸಿ - ತೋಳ್ಗಳಲಿ ತಲೆಯನಾನಿಸಿ ?
ಮೂಲ ...{Loading}...
ಬಿಲು ಸೆಳೆಯೆ ಕೈದುಗಳು ಕೈಯಿಂ
ಚಲಿಸಲೊಬ್ಬರನೊಬ್ಬರತ್ತಲು
ಮಲಗಿ ಬೆಂಬತ್ತಳಿಕೆ ಬದಿಯೊಳಗಡಸಿ ತೋಳುಗಳ
ತಲೆಯೊಳಾನಿಸಿ ಗುರುಗುರಿಸಿ ರಥ
ದೊಳಗೆ ಸಾರಥಿವೆರಸಿ ನಿದ್ರಾ
ಕುಳರು ಜೊಮ್ಮಿನ ಮೇಲೆ ಮೈಮರೆದಿರ್ದರತಿರಥರು ॥85॥
೦೮೬ ಸರಳ ಸೊಕ್ಕವಗಡಿಸಿ ...{Loading}...
ಸರಳ ಸೊಕ್ಕವಗಡಿಸಿ ಸಲೆ ಮೈ
ಮರೆದನಿತ್ತಲು ದ್ರೋಣ ರಥದಲಿ
ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ
ಕರದ ಬಿಲು ಶರ ಸರಿಯೆ ಕಂಗಳು
ಮುರಿಯೆ ಕರ್ಣನು ಕೆನ್ನೆಗೆದೆಯೊಳು
ದುರುಳ ದುರ್ಯೋಧನ ಸಹಿತ ಮೈಮರೆದುದರಿಸೇನೆ ॥86॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಮ್ಮೋಹನಾಸ್ತ್ರದ ಸೊಕ್ಕು ಆವರಿಸಿ ದ್ರೋಣರು ಮೈಮರೆತರು. ತಮ್ಮ ಮಗನ ಸಮೇತ ರಥದಲ್ಲಿಯೇ ನಿದ್ರೆಯ ಸುಳಿಗೆ ಸಿಕ್ಕಿಕೊಂಡರು. ಕರ್ಣನ ಕೈಯ ಬಿಲ್ಲು ಬಾಣ ಪಕ್ಕಕ್ಕೆ ಸರಿದಿತ್ತು. ಕಣ್ಣುಗಳು ಮುಚ್ಚಿದ್ದುವು. ಕೌರವನ ಸಮೇತ ಸೇನೆ ಮೈಮರೆದು ಮಲಗಿತ್ತು. ಕೌರವ ಎದೆ ಕೆನ್ನೆಗೆ ತಾಕುವಂತೆ ಮಲಗಿದ್ದ.
ಪದಾರ್ಥ (ಕ.ಗ.ಪ)
ಸರಳ ಸೊಕ್ಕು-ಸಮ್ಮೋಹನಾಸ್ತ್ರದ ಮತ್ತು, ಪರಮನಿದ್ರಾಗುಪ್ತ-ನಿದ್ದೆಯ ಗುಪ್ತ ಶಕ್ತಿಗೆ ಒಳಗಾಗು, ಕನ್ನೆಗೆದೆ= ? [ಕೆನ್ನೆಗದೆ ಇರಬಹುದೆ ಕೌರವನು ಗದೆಗೆ ಕೆನ್ನೆ ತಗುಲಿಸಿಕೊಂಡು ಮಲಗಿರಬಹುದು], ಕೆನ್ನೆಗೆದೆ ಎಂದರೆ ಮುಖ ತಗ್ಗಿಸಿ ಎದೆ ಕೆನ್ನೆಗೆ ತಾಗುವಂತೆ ಮಲಗಿದ್ದರು ಎಂದು ಅರ್ಥವಿಸಬಹುದು.
ಮೂಲ ...{Loading}...
ಸರಳ ಸೊಕ್ಕವಗಡಿಸಿ ಸಲೆ ಮೈ
ಮರೆದನಿತ್ತಲು ದ್ರೋಣ ರಥದಲಿ
ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ
ಕರದ ಬಿಲು ಶರ ಸರಿಯೆ ಕಂಗಳು
ಮುರಿಯೆ ಕರ್ಣನು ಕೆನ್ನೆಗೆದೆಯೊಳು
ದುರುಳ ದುರ್ಯೋಧನ ಸಹಿತ ಮೈಮರೆದುದರಿಸೇನೆ ॥86॥
೦೮೭ ಸೇನೆ ಮೈಮರೆದೊರಗಿದದಟ ...{Loading}...
ಸೇನೆ ಮೈಮರೆದೊರಗಿದದಟ ನಿ
ಧಾನವೊಗೆದರುಹಿತ್ತು ನಿದ್ರಾ
ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ
ಏನ ಹೇಳುವೆನದನು ಕದನದ
ಕಾನನದೊಳತಿರಥರು ವಿಜಯ ವಿ
ಹೀನ ಬಲ ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು ॥87॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕುರುಸೇನೆ ಮೈಮರೆತು ಒರಗಿತ್ತು. ಅದಟರ (ವೀರರ) ದೃಢ ಸಂಕಲ್ಪವು ಕಿತ್ತುಕೊಂಡು ಹೋಗಿತ್ತು. ಸಂಸಾರದ ಮಾಯೆಯಿಂದ ್ಲಆಗುವ ಹಾಗೆ ನಿದ್ರೆ ವಿಜೃಂಭಿಸಿತ್ತು. ಅದನ್ನು ಏನೆಂದು ಹೇಳಲಿ ? ಯುದ್ಧರಂಗ ಎಂಬ ಕಾಡಿನಲ್ಲಿ ಮೊದಲೇ ಪರಾಜಿತರಾಗಿದ್ದ ಕುರುಪಡೆಯ ಅತಿರಥರು ಸಮ್ಮೋಹನಾಸ್ತ್ರದ ಬಾಧೆಗೆ ಸಿಲುಕಿದ್ದರು.
ಪದಾರ್ಥ (ಕ.ಗ.ಪ)
ಅದಟ-ವೀರ, ಅದಟ ನಿಧಾನ-ವೀರರ ದೃಢಸಂಕಲ್ಪ, ನಿರ್ಧಾರ, ನಿದ್ರಾಮಾನ-ನಿದ್ರೆ ಎಂಬ ಅಳತೆ (ಮೌಲ್ಯ), ಒಗೆದರು ಕಿತ್ತು-ಚೆಲ್ಲಾಪಿಲ್ಲಿಯಾಗಿತ್ತು
ಟಿಪ್ಪನೀ (ಕ.ಗ.ಪ)
ಸೇನೆ ಅರಿವಳಿದು ಬಿದ್ದುದನ್ನು ಕುಮಾರವ್ಯಾಸನು ಸಂಸಾರ ಜೀವನದ ಸ್ಥಿತಿಗೆ ಹೋಲಿಸಿರುವುದು ತುಂಬ ಸೂಕ್ತವಾಗಿದೆ.
ಸಮಸಾರವನ್ನು ಮಾಯೆಯ ಎಂಬ ಕತ್ತಲೆಯು ಮುಸುಕಿರುವಂತೆ ಸಮ್ಮೋಹನಸ್ತ್ರದಿಂದ ಕುರುಸೇನೆ ನಿದ್ರಾವಶವಾಗಿದೆ.
ಸಮ್ಮೋಹನಾಸ್ತ್ರದ ಪ್ರಭಾವದ ಜೊತೆಗೆ ಅರ್ಜುನನು ತನ್ನ ಎರಡು ಕೈಗಳಲ್ಲೂ ಮಹಾಶಂಖವನ್ನು ಹಿಡಿದು ದಿಕ್ಕುಗಳು ಆಕಾಶ ತತ್ತರಿಸುವಂತೆ ಶಂಖವನ್ನು ಊದಿ ಭಯಂಕರ ನಾದವನ್ನು ಹೊರಡಿಸಿದ್ದುದರ ಪ್ರಭಾವವೂ ಸೇರಿತ್ತು ಎಂದು ವ್ಯಾಸರು ಹೇಳುತ್ತಾರೆ.
ತತಃ ಪುನಶ್ಶಂಖರವಂ ಪ್ರಗೃಹೃ
ದೋಭ್ರ್ಯಾಂ ಮಹಾಶಂಖಮುದಾರ ಘೋಷಂ
ವ್ಯಸಾದಯತ್ ಸ ಪ್ರತಿಶೋ ದಿಶಃಖಂ
ಭುವಂಚ ಪಾರ್ಥೋ ದ್ವಿಷತಾಂ ನಿಹನ್ತಾ
ಮೂಲ ...{Loading}...
ಸೇನೆ ಮೈಮರೆದೊರಗಿದದಟ ನಿ
ಧಾನವೊಗೆದರುಹಿತ್ತು ನಿದ್ರಾ
ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ
ಏನ ಹೇಳುವೆನದನು ಕದನದ
ಕಾನನದೊಳತಿರಥರು ವಿಜಯ ವಿ
ಹೀನ ಬಲ ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು ॥87॥
೦೮೮ ಕನಸು ಮೇಣೆಚ್ಚರು ...{Loading}...
ಕನಸು ಮೇಣೆಚ್ಚರು ಸುಷುಪ್ತಿಗ
ಳೆನಿಪವಸ್ಥಾ ತ್ರಿತಯದಲಿ ಜೀ
ವನು ವಿಸಂಚಿಸಿ ಬೀಳ್ವನಲ್ಲದೆ ಸೂರ್ಯ ಸಿಲುಕುವನೆ
ಇನಿತು ಬಲ ತೂಕಡಿಸಿ ಝೋಂಪಿಸಿ
ತನಿಗೆಡೆಯೆ ಭಾಗೀರಥೀ ನಂ
ದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ ॥88॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಿಜವಾಗಿ ಹೇಳಬೇಕೆಂದರೆ ಪ್ರತಿಯೊಂದು ಜೀವನೂ ಕನಸು, ಎಚ್ಚರ, ಗಾಢ ನಿದ್ದೆ ಎಂಬ ಮೂರು ಅವಸ್ಥೆಗಳಲ್ಲಿ ಸಿಕ್ಕಿ ಬೀಳುತ್ತಾನೆಯೇ ಹೊರತು ಸೂರ್ಯನು ಸಿಕ್ಕಿ ಬೀಳುತ್ತಾನೆಯೆ ? ಕೌರವನ ಸೇನಾ ಸಮಸ್ತವೂ ತೂಕಡಿಸಿ ಝೋಂಪಿಸಿ ಉರುಳಿ ಬಿದ್ದರೂ ಭೀಷ್ಮರು ಮಾತ್ರ(ಸೂರ್ಯನ) ಹಾಗೆ ಮೂರ್ಛೆಗೆ ಸಲ್ಲದೆ ರಥದಲ್ಲಿಯೆ ನಿರ್ಮಲ ತೇಜಸ್ಸಿನಿಂದ ಬೆಳಗುತ್ತಿದ್ದರು.
ಪದಾರ್ಥ (ಕ.ಗ.ಪ)
ಅವಸ್ಥಾ ತ್ರಿತಯ-ಪ್ರತಿಜೀವವೂ ಅನುಭವಿಸುವ, ನಿದ್ರಾ, ಜಾಗರ, ಸುಷುಪ್ತಿ ಎಂಬ ಮೂರು ಅವಸ್ಥೆಗಳು, ವಿಸಂಚಿಸು-ಚೂರುಚೂರಾಗು, ಶಕ್ತಿಗುಂದು, ತನಿಗೆಡೆ-ಒಬ್ಬೊಬ್ಬರಾಗಿ ಬೀಳು, ಭಾಗೀರಥೀ ನಂದನ-ಭೀಷ್ಮ, ತುರೀಯಾವಸ್ಥೆಯನ್ನೂ ಸೇರಿಸಿಕೊಂಡರೆ
ಪಾಠಾನ್ತರ (ಕ.ಗ.ಪ)
ಶರಕೆ- ಸೂರ್ಯ
ವಿರಾಟಪರ್ವ, ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಅವಸ್ಥೆಗಳು ನಾಲ್ಕು ಬಗೆಯವು 1. ಜಾಗೃತಾವಸ್ಥೆ, 2. ಸ್ವಪ್ನಾವಸ್ಥೆ, 3. ಸುಷುಪ್ತಾವಸ್ಥೆ, 4. ತುರೀಯಾವಸ್ಥೆ
- ಮೊದಲನೆಯ ಪಾದ ಜಾಗೃತಾವಸ್ಥೆ ಅಂದರೆ ಎಚ್ಚರದ ಸ್ಥಿತಿ. ಎಲ್ಲ ವಸ್ತುಗಳೂ ಕಣ್ಣಿಗೆ ಬೀಳುತ್ತವೆ. ಶಬ್ದ ರುಚಿ ವಾಸನೆ ಗಂಧ ಸ್ಪರ್ಶಗಳ ಅನುಭವವು ಇಂದ್ರಿಯ ಗಳಿಗಾಗುತ್ತದೆ. ಸಮಷ್ಟಿ ಜೀವನದಲ್ಲಿ ಕರ್ಮೇಂದ್ರಿಯ ಜ್ಞಾನೇಂದ್ರಿಯ ಪಂಚ ಪ್ರಾಣ, ಮನಸ್ಸು ಬುದ್ಧಿ ಚಿತ್ತ ಅಹಂಕಾರ ಒಟ್ಟು ಹತ್ತೊಂಬತ್ತರ ಅನುಭವ ಜೀವನಿಗೆ ಆಗುತ್ತದೆ. ಇವುಗಳಿಂದಾಗಿ ಅವನು ಸುಖದುಃಖ ಲಾಭ ಅಲಾಭಗಳಲ್ಲಿ ಪಾಲುಗೊಳ್ಳುತ್ತಾನೆ.
- ಸ್ವಪ್ನಾವಸ್ಥೆ : ಆತ್ಮ ಅಂತರ್ಮುಖವಾಗಿರುತ್ತದೆ. ಅವರವರ ಕನಸು ಅವರದೇ. ಈ ಸ್ಥಿತಿಯಲ್ಲಿ ಬಾಹ್ಯ ಜಗತ್ತೇ ಇಲ್ಲ. ವಸ್ತು ಕಲ್ಪಿತವಾದರೂ ಆನಂದಾವಸ್ಥೆಯಲ್ಲಿ ಭೇದ ಇರುವುದಿಲ್ಲ. ಮನಸ್ಸು ಮಾನಸಿಕ ನೆಲೆಯಲ್ಲಿ ಚಟುವಟಿಕೆ ತೋರುತ್ತದೆ. ಇನದನು “ತೈಜಸ” ಎನ್ನುತ್ತಾರೆ. ಈ ತೇಜೋಮಯ ಜಗತ್ತಿನಲ್ಲಿ ವ್ಯಕ್ತಿ ತನಗೆ ತೋರಿದ ರೂಪಶಬ್ದರಸಾದಿಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.
- ಸುಷುಪ್ತಾವಸ್ಥೆ ಅಂದರೆ ಗಾಢನಿದ್ರೆಯ ಸ್ಥಿತಿ. ಕನಸುಗಳು ಇರುವುದಿಲ್ಲ. ಈ ಸ್ಥಿತಿಯಲ್ಲಿ ಮನುಷ್ಯನಿಗೆ ಅವಯವಗಳಾಗಲಿ ಶಬ್ದ ರಸಾದಿಗಳಾಗಲಿ ಕಾಣವು. ಅವು ಪ್ರಜ್ಞಾನುರೂಪವಾಗಿ ಇರುತ್ತವೆ. ವ್ಯಕ್ತಿ ಇಲ್ಲಿ ವ್ಯಷ್ಟಿಯೂ ಅಲ್ಲ, ಸಮಷ್ಟಿಯೂ ಅಲ್ಲ.
- ತುರೀಯ ಇದು ಪೂರ್ಣವಾಗಿ ಆತ್ಮಮಯ. ಸಕಲ ಜೀವ ಜಗತ್ತುಗಳಿಗೆ ಮೂಲಾಧಾರವಾದ ಸರ್ವಾತ್ಮವು ಕಲ್ಪಿಸಿಕೊಳ್ಳುವ ಸಾಮ್ರಾಜ್ಯ ಇದು. ಈ ಸ್ಥಿತಿಗೇರಿದ ಆತ್ಮವು ಜೀವವನ್ನು ಕುರಿತು ಚಿಂತಿಸುವುದಿಲ್ಲ. ಆತ್ಮಕ್ಕೆ, ಸ್ಪರ್ಶಕ್ಕೆ ಕಾಣುವುದಿಲ್ಲ. ಪ್ರಾಪಂಚಿಕ ವಾಸನೆಗಳೆಲ್ಲ ಹೋಗಿ ಆತ್ಮ ಪ್ರತ್ಯಯ ಉಂಟಾಗುತ್ತದೆ. ಆತ್ಮದ ಈ ನಾಲ್ಕು ಪಾದಗಳು ವೇದದ ನಾಲ್ಕು ಪ್ರಣವ ಮಾತ್ರೆಗಳೇ ಆಗಿ ಭಗವಂತನ ನಾಲ್ಕು ಪಾದಗಳಾಗಿವೆ.
ಚಿಮ್ಮ ಪೂಡಿ ಶ್ರೀರಾಮಮೂರ್ತಿ
ಈ ನಾಡು ಪತ್ರಿಕೆ 5-12- 2006
ಭಾಗೀರಥೀ ನಂದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ
ಈ ಸಮ್ಮೋಹನಾಸ್ತ್ರವು ಭೀಷ್ಮರಿಗೆ ಏನೂ ಮಾಡಲಿಲ್ಲ. ಆದ್ದರಿಂದ ಕೌರವರ ನಾಯಕರ ಬಳಿಗೆ ಹೋಗುವಾಗ ನಮ್ಮ ಕುದುರೆಗಳನ್ನು ಭೀಷ್ಮರ ಎಡಭಾಗದಿಂದ ತೆಗೆದುಕೊಂಡು ಹೋಗು ಎನ್ನುತ್ತಾನೆ ಅರ್ಜುನ. ಸ್ಮೃತಿ ತಪ್ಪದೆ ಇರುವವರ ಎಡಭಾಗದಿಂದ ಹೋಗಬೇಕೆಂಬ ನಿಯಮವಿದೆ.
ಮೂಲ ...{Loading}...
ಕನಸು ಮೇಣೆಚ್ಚರು ಸುಷುಪ್ತಿಗ
ಳೆನಿಪವಸ್ಥಾ ತ್ರಿತಯದಲಿ ಜೀ
ವನು ವಿಸಂಚಿಸಿ ಬೀಳ್ವನಲ್ಲದೆ ಸೂರ್ಯ ಸಿಲುಕುವನೆ
ಇನಿತು ಬಲ ತೂಕಡಿಸಿ ಝೋಂಪಿಸಿ
ತನಿಗೆಡೆಯೆ ಭಾಗೀರಥೀ ನಂ
ದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ ॥88॥
೦೮೯ ಎಣಿಸುವರೆ ಏಕಾದಶಾಕ್ಷೋ ...{Loading}...
ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಡಗೆಡಹಿದನು ಮೋಹನ ಮಂತ್ರಬಾಣದಲಿ
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ ॥89॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ನೋಡಿದರೆ ಸುಮಾರು ಹನ್ನೊಂದು ಅಕ್ಷೋಹಿಣೀ ಸೇನೆಯನ್ನು ಪಾರ್ಥನು ಒಬ್ಬನೇ ಯುದ್ಧಭೂಮಿಯಲ್ಲಿ ಮೋಹನ ಮಂತ್ರ ಬಾಣದಿಂದ ಕೆಳಗೆ ಬೀಳಿಸಿದ. ಆಕಾಶದಲ್ಲಿ ಇದನ್ನು ನೋಡುತ್ತಿದ್ದ ದೇವತೆಗಳು ಸಂಭ್ರಮದಿಂದ ಕುಣಿದಾಡಿ ಹೂವಿನ ಮಳೆಗರೆದರು. ಅನಂತರ ಅರ್ಜುನನು ರಥವನ್ನು ಕೌರವ ಸೇನೆಯ ರಾಜರುಗಳ ಬಳಿಗೆ ತೆಗೆದುಕೊಂಡು ಹೋದ.
ಪದಾರ್ಥ (ಕ.ಗ.ಪ)
ಎಣಿಸು-ಲೆಕ್ಕಮಾಡು (ಎಣಿಸುವರೆ-ಲೆಕ್ಕ ಹಿಡಿಯುವುದಾದರೆ), ಅಡಗೆಡಹು-ಬೀಳಿಸು, ಸರಿವು-ಮಳೆ, ಮಹಿಪ- ರಾಜ
ಟಿಪ್ಪನೀ (ಕ.ಗ.ಪ)
ಹನ್ನೊಂದು ಅಕ್ಷೋಹಿಣಿಯ ಸೇನೆ ದನ ಹಿಡಿಯಲು ಬಂದಿತ್ತು ಎಂಬುದು ತುಂಬ ಉತ್ಪ್ರೇಕ್ಷಿತ ಸಂಖ್ಯೆ. ಮಹಾಭಾರತಯುದ್ಧದಲ್ಲಿ ಕೌರವನ ಕಡೆ 11 ಅಕ್ಷೋಹಿಣೀ ಸೇನೆಯಿತ್ತಲ್ಲವೆ ? ಅದೇ ಸಂಖ್ಯೆಯನ್ನೇ ಕವಿ ಕೊಟ್ಟಿದ್ದಾನೆ
ಮೂಲ ...{Loading}...
ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಡಗೆಡಹಿದನು ಮೋಹನ ಮಂತ್ರಬಾಣದಲಿ
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ ॥89॥
೦೯೦ ಇಳಿದು ದ್ರೋಣನ ...{Loading}...
ಇಳಿದು ದ್ರೋಣನ ಚರಣ ಕಮಲಂ
ಗಳಿಗೆ ತನ್ನಯ ನೊಸಲ ಚಾಚಿದ
ನಳವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ
ಸುಲಿದು ಕರ್ಣನ ಮಕುಟ ಪಟ್ಟೆಯ
ಸೆಳೆದು ದುರ್ಯೋಧನನ ವಸ್ತ್ರವ
ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ ॥90॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ಸೋತು ಸಮ್ಮೋಹನಾಸ್ತ್ರದಿಂದಾಗಿ ಮೈಮರೆತು ಒರಗಿದ್ದವರ ಬಳಿಗೆ ಅರ್ಜುನನು ಬಂದ. ಮೊದಲು ದ್ರೋಣರ ಪಾದ ಕಮಲಗಳಿಗೆ ತನ್ನ ಹಣೆಯನ್ನು ಚಾಚಿದ. ಅನಂತರ ಹತ್ತಿರದಿಂದ ಭೀಷ್ಮರಿಗೆ ರಥದಲ್ಲಿ ಕುಳಿತಿದ್ದಂತೆಯೇ ನಮಸ್ಕರಿಸಿದ. ಮುಂದೆ ಉತ್ತರನಿಗೆ ಕರ್ಣನ ಬಳಿಗೆ ಹೋಗಿ ಅವನ ಮಕುಟವನ್ನು ರೇಷ್ಮೆ ವಸ್ತ್ರವನ್ನು ಸೆಳೆದುಕೊಂಡು, ದುರ್ಯೋಧನನ ವಸ್ತ್ರಗಳನ್ನು ಆಭರಣಗಳನ್ನು ತೆಗೆದುಕೊಂಡು ಬಾ ಎಂದು ಅರ್ಜುನನು ಹೇಳಿದ.
ಪದಾರ್ಥ (ಕ.ಗ.ಪ)
ಅಳವಿ-ಹತ್ತಿರ, ಸಮೀಪ, ಮೈಯಿಕ್ಕು-ನಮಸ್ಕರಿಸು, ಪಟ್ಟೆ-ರೇಷ್ಮೆ, ಮಕುಟ-ಕಿರೀಟ.
ಮೂಲ ...{Loading}...
ಇಳಿದು ದ್ರೋಣನ ಚರಣ ಕಮಲಂ
ಗಳಿಗೆ ತನ್ನಯ ನೊಸಲ ಚಾಚಿದ
ನಳವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ
ಸುಲಿದು ಕರ್ಣನ ಮಕುಟ ಪಟ್ಟೆಯ
ಸೆಳೆದು ದುರ್ಯೋಧನನ ವಸ್ತ್ರವ
ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ ॥90॥
೦೯೧ ಧರಣಿಪಾಲರ ಮಕುಟವನು ...{Loading}...
ಧರಣಿಪಾಲರ ಮಕುಟವನು ಕ
ತ್ತರಿಸಿ ದುಶ್ಶಾಸನನ ಘನ ಶಿರ
ವರದ ರತ್ನವನುಡಿದು ಭೂರಿಶ್ರವ ಜಯದ್ರಥರ
ಹೊರಳಿಚಿದನು ವಿಶೋಕ ಕುವರರ
ಹುರುಳುಗೆಡಿಸಿದನಖಿಳ ರಾಯರ
ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ ॥91॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ರಾಜರುಗಳ ಕಿರೀಟಗಳನ್ನು ಕತ್ತರಿಸಿ , ದುಶ್ಶಾಸನನ ಕಿರೀಟದ ರತ್ನವನ್ನು ಒಡೆದು, ಭೂರಿಶ್ರವ ಜಯದ್ರಥರುಗಳನ್ನು ಪಕ್ಕಕ್ಕೆ ಹೊರಳಿಸಿದ. ವಿಶೋಕದ ಆ ರಾಜರುಗಳನ್ನು ಸತ್ವಹೀನರನ್ನಾಗಿ ಮಾಡಿದ. ಹೀಗೆ ಎಲ್ಲ ರಾಜರುಗಳ ಶಿರಕ್ಕೆ ಭಂಗವನ್ನು ಮಾಡಿ ಅರ್ಜುನನು ರಥವನ್ನು ಏರಿದ.
ಪದಾರ್ಥ (ಕ.ಗ.ಪ)
ಧರಣಿಪಾಲ-ರಾಜ, ಮಕುಟ-ಕಿರೀಟ, ಹೊರಳಿಚು-ಮಗ್ಗುಲು ಸರಿಸು, ಹುರುಳುಗೆಡಿಸು-ಸತ್ವಗುಂದಿಸು, ಅಡದು-ಹತ್ತು, ಏರು, ಉಡಿ-ಮುರಿ
ಮೂಲ ...{Loading}...
ಧರಣಿಪಾಲರ ಮಕುಟವನು ಕ
ತ್ತರಿಸಿ ದುಶ್ಶಾಸನನ ಘನ ಶಿರ
ವರದ ರತ್ನವನುಡಿದು ಭೂರಿಶ್ರವ ಜಯದ್ರಥರ
ಹೊರಳಿಚಿದನು ವಿಶೋಕ ಕುವರರ
ಹುರುಳುಗೆಡಿಸಿದನಖಿಳ ರಾಯರ
ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ ॥91॥
೦೯೨ ಫಲುಗುಣನ ನೇಮದಲಿ ...{Loading}...
ಫಲುಗುಣನ ನೇಮದಲಿ ರಥದಿಂ
ದಿಳಿದನುತ್ತರನವನಿಪನ ಕೋ
ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ
ಸುಲಲಿತಾಂಬರ ರತ್ನಭೂಷಣ
ಗಳನು ಕೊಂಡಡರಿದನು ರಥವನು
ಬಿಲುದುಡುಕಿ ಗಾಂಗೇಯನಡ ಹಾಯ್ದನು ಧನಂಜಯನ ॥92॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಉತ್ತರನು ಅರ್ಜುನನ ಆಜ್ಞೆಯಂತೆ ರಥದಿಂದ ಇಳಿದ. ಕೌರವನ ಕೋಮಲ ವಸ್ತ್ರಾಭರಣಗಳನ್ನು ಕರ್ಣ, ಕೃಪ, ಅಶ್ವತ್ಥಾಮರ ಮನೋಹರ ವಸ್ತ್ರಾಭರಣಗಳನ್ನು ತೆಗೆದುಕೊಂಡು ಮತ್ತೆ ರಥವನ್ನು ಏರಿದ. ಆಗ ಬಿಲ್ಲನ್ನು ಹಿಡಿದು ಬಂದ ಭೀಷ್ಮರು ಅರ್ಜುನನಿಗೆ ಅಡ್ಡ ಬಂದರು.
ಪದಾರ್ಥ (ಕ.ಗ.ಪ)
ನೇಮ-ಆಜ್ಞೆ, ಅವನಿಪ-ರಾಜ, ಅಡರು-ಏರು, ಅಡಹಾಯು-ಅಡ್ಡ ಬಾ ಅಡ್ಡಗಟ್ಟು
ಮೂಲ ...{Loading}...
ಫಲುಗುಣನ ನೇಮದಲಿ ರಥದಿಂ
ದಿಳಿದನುತ್ತರನವನಿಪನ ಕೋ
ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ
ಸುಲಲಿತಾಂಬರ ರತ್ನಭೂಷಣ
ಗಳನು ಕೊಂಡಡರಿದನು ರಥವನು
ಬಿಲುದುಡುಕಿ ಗಾಂಗೇಯನಡ ಹಾಯ್ದನು ಧನಂಜಯನ ॥92॥
೦೯೩ ಎರಡು ಶರದಲಿ ...{Loading}...
ಎರಡು ಶರದಲಿ ಚಾಪವನು ಕ
ತ್ತರಿಸಿ ಭೀಷ್ಮನ ನಿಲಿಸಿ ಕೌರವ
ಧರಣಿಪಾಲನ ಮಕುಟವನು ಮೂರಂಬಿನಲಿ ಕಡಿದು
ತಿರುಗಿದನು ಕಲಿಪಾರ್ಥ ನಗುತು
ತ್ತರ ಸಹಿತ ಬನ್ನಿಯಲಿ ಕೈದುವ
ನಿರಿಸಿ ಮುನ್ನಿನ ಹುಲುರಥದಿ ನಿಜನಗರಿಗೈತಂದ ॥93॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅರ್ಜುನನು ಎರಡು ಬಾಣಗಳಿಂದ ಭೀಷ್ಮರ ಬಿಲ್ಲನ್ನು ಕತ್ತರಿಸಿ ಅವರು ಹೋರಾಡದಂತೆ ಮಾಡಿದ. ಕೌರವನ ಕಿರೀಟವನ್ನು ಮೂರು ಬಾಣಗಳಿಂದ ಕತ್ತರಿಸಿ ಹಿಂದಿರುಗಿದ. ಅನಂತರ ಉತ್ತರನ ಸಮೇತ ಮೊದಲಿನಂತೆ ಬನ್ನಿಯ ಮರದ ಬಳಿಗೆ ಬಂದು ಅಲ್ಲಿ ಆಯುಧಗಳನ್ನು ಇರಿಸಿದ. ಮೊದಲಿನ ಸಾಮಾನ್ಯ ರಥದಲ್ಲಿ ವಿರಾಟನಗರಿಗೆ ಬಂದ.
ಪದಾರ್ಥ (ಕ.ಗ.ಪ)
ಚಾಪ-ಬಿಲ್ಲು, ಧರಣಿಪಾಲ-ದೊರೆ, ಕೈದು-ಆಯುಧ, ಹುಲುರಥ-ಸಾಮಾನ್ಯ ರಥ.
(ಹುಲು ರಥ: ಸಾಮಾನ್ಯ ರಥ, ಏಕೆಂದರೆ ಆ ರಥದಲ್ಲಿ ಈಗ ಅರ್ಜುನನ ಗಾಂಡೀವವಿಲ್ಲ, ಹನುಮನು ಧ್ವಜಸ್ಥಾನದಲ್ಲಿ ಇಲ್ಲ)
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಇನ್ನಷ್ಟು ವಿವರಗಳಿವೆ. ಕೌರವ ವೀರರೆಲ್ಲ ಸಂಮೋಹನಾಸ್ತ್ರಕ್ಕೆ ಒಳಗಾಗಿ ಮೂರ್ಛಿತರಾಗಿದ್ದರಷ್ಟೆ. ಸ್ವಲ್ಪ ಕಾಲದ ನಂತರ ಅವರಿಗೆಲ್ಲ ಎಚ್ಚರವಾಯಿತು. ದುರ್ಯೋಧನ ಮತ್ತೆ ಹಾರಾಡಿದ. ಆದರೆ ಭೀಷ್ಮರು ತುರುಗಳನ್ನು ಒಪ್ಪಿಸಿ ಊರಿಗೆ ಮರುಳುವುದು ಲೇಸೆಂದು ಸಲಹೆ ನೀಡಿದರು. ಅವರೆಲ್ಲ ಒಪ್ಪಿದರು. ಅನಂತರ ಅರ್ಜುನನು ಭೀಷ್ಮ ದ್ರೋಣರಿಗೆ ತಲೆ ಬಾಗಿ ನಮಸ್ಕರಿಸಿದ. ಅಶ್ವತ್ಥಾಮ ಕೃಪ ಬಾಹ್ಲಿಕ ಸೋಮದತ್ತಾದಿಗಳಿಗೆ ನಮಸ್ಕಾರದ ಬಾಣಗಳನ್ನು ಬಿಟ್ಟು ತನ್ನ ಭಕ್ತಿಯನ್ನು ಪ್ರದರ್ಶಿಸಿದ. ಅನಂತರ ಒಂದು ಬಾಣದಿಂದ ದುರ್ಯೋಧನ ರತ್ನ ಕಿರೀಟವನ್ನು ಕೆಳಗುರುಳಿಸಿದ.
ಮೂಲ ...{Loading}...
ಎರಡು ಶರದಲಿ ಚಾಪವನು ಕ
ತ್ತರಿಸಿ ಭೀಷ್ಮನ ನಿಲಿಸಿ ಕೌರವ
ಧರಣಿಪಾಲನ ಮಕುಟವನು ಮೂರಂಬಿನಲಿ ಕಡಿದು
ತಿರುಗಿದನು ಕಲಿಪಾರ್ಥ ನಗುತು
ತ್ತರ ಸಹಿತ ಬನ್ನಿಯಲಿ ಕೈದುವ
ನಿರಿಸಿ ಮುನ್ನಿನ ಹುಲುರಥದಿ ನಿಜನಗರಿಗೈತಂದ ॥93॥