೦೦೦ ಸೂ ಚಣ್ಡ ...{Loading}...
ಸೂ. ಚಂಡ ರಿಪುಬಲ ವಿಲಯ ಹರನು
ದ್ದಂಡ ಬಲ ಶಸ್ತ್ರಾಸ್ತ್ರವನು ಕೈ
ಕೊಂಡು ಸುರಪನ ಸೂನು ನಡೆದನು ವೈರಿ ಮೋಹರವ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಪ್ರಚಂಡನೂ ಶತ್ರು ಸೇನೆಗೆ ಪ್ರಳಯಾಂತಕನೂ ಆದ ಉದ್ದಂಡ ಬಲ ಅರ್ಜುನನು (ಮರದ ಮೇಲೆ ಬಚ್ಚಿಟ್ಟ ) ತನ್ನ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಬಂದು, ದನಗಳನ್ನು ಹೊತ್ತೊಯ್ಯುತ್ತಿದ್ದ ಕೌರವ ಸೇನೆಯ ಮೇಲೆ ಧಾಳಿ ಮಾಡಿದ.
ಪದಾರ್ಥ (ಕ.ಗ.ಪ)
ಚಂಡ-ಪ್ರಚಂಡ, ರಿಪುಬಲ-ಶತ್ರುಸೇನೆ, ವಿಲಯಹರ-ವಿನಾಶಕಾರಿಯಾದ ರುದ್ರ, ಸುರಪನ ಸೂನು-ಇಂದ್ರನ ಮಗ (ಅರ್ಜುನ), ಮೋಹರ-ಸೇನೆ
ಮೂಲ ...{Loading}...
ಸೂ. ಚಂಡ ರಿಪುಬಲ ವಿಲಯ ಹರನು
ದ್ದಂಡ ಬಲ ಶಸ್ತ್ರಾಸ್ತ್ರವನು ಕೈ
ಕೊಂಡು ಸುರಪನ ಸೂನು ನಡೆದನು ವೈರಿ ಮೋಹರವ
೦೦೧ ಎಲೆ ಪರೀಕ್ಷಿತ ...{Loading}...
ಎಲೆ ಪರೀಕ್ಷಿತ ತನಯ ಕೇಳ್ ನೃಪ
ತಿಲಕನತಿ ವೇಗದಲಿ ರಥವನು
ಕೊಳುಗುಳಕೆ ತರೆ ಕಂಡನುತ್ತರ ಮುಂದೆ ದೂರದಲಿ
ತಳಿತ ಕುಂತದ ಬಾಯಿ ಧಾರೆಯ
ಹೊಳವುಗಳ ಹೊದರೆದ್ದ ಸಿಂಧದ
ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನರು ಹೇಳಿದರು. ಪರೀಕ್ಷಿತನ ಮಗನಾದ ಜನಮೇಜಯನೇ ಕೇಳು. ನೃಪತಿಲಕನೆನಿಸಿದ ಅರ್ಜುನನು ಅತಿವೇಗದಲ್ಲಿ ರಥವನ್ನು ಯುದ್ಧ ಭೂಮಿಗೆ ತಂದನು. ಆಗ ಉತ್ತರ ನೋಡುತ್ತಾನೆ ! ಹೊಳೆಹೊಳೆಯುತ್ತಿದ್ದ ಕಾಂತಿಯಿಂದ ಕೂಡಿದ ಆಯುಧಗಳ ಬಾಯಧಾರೆಗಳಿಂದ, ಧ್ವಜ ಪಟಗಳ ಮತ್ತು ಶ್ವೇತಚ್ಛತ್ರಿಗಳ ಸಾಲಿನಿಂದ ಸಂಭ್ರಮಿಸುತ್ತಿರುವ ಕೌರವ ಸೇನೆ !
ಪದಾರ್ಥ (ಕ.ಗ.ಪ)
ಪರೀಕ್ಷಿತ ತನಯ- ಅಭಿಮನ್ಯುವಿನ ಮಗ ಪರೀಕ್ಷಿತ ರಾಜ, ಅವನ ಮಗ ಜನಮೇಜಯ, ಕೊಳುಗುಳ-ಯುದ್ಧಭೂಮಿ, ಕುಂತ-ಆಯುಧ, ಹೊದರು-ಸಮೂಹ, ಗುಂಪು, ಸಿಂಧ-ಧ್ವಜ, ಸೀಗುರಿ-ಚಾಮರ, ಸುರಂಭ-ಚೆಲುವು,? ಸಡಗರ, ಮೋಹರ-ಸೇನೆ
ಟಿಪ್ಪನೀ (ಕ.ಗ.ಪ)
ಸೈನ್ಯ ಎಂದರೆ ಹೇಗಿರುತ್ತದೆ ಎಂಬ ಕಲ್ಪನೆಯೇ ಇಲ್ಲದವನಂತೆ ಉತ್ತರನು ಬೆರಗಿನಿಂದ ವರ್ತಿಸುತ್ತಿದ್ದಾನೆ.
ಮೂಲ ...{Loading}...
ಎಲೆ ಪರೀಕ್ಷಿತ ತನಯ ಕೇಳ್ ನೃಪ
ತಿಲಕನತಿ ವೇಗದಲಿ ರಥವನು
ಕೊಳುಗುಳಕೆ ತರೆ ಕಂಡನುತ್ತರ ಮುಂದೆ ದೂರದಲಿ
ತಳಿತ ಕುಂತದ ಬಾಯಿ ಧಾರೆಯ
ಹೊಳವುಗಳ ಹೊದರೆದ್ದ ಸಿಂಧದ
ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ ॥1॥
೦೦೨ ಕರಿಘಟಾವಳಿಯೊಡ್ಡುಗಲ್ಲಿನ ...{Loading}...
ಕರಿಘಟಾವಳಿಯೊಡ್ಡುಗಲ್ಲಿನ
ತುರಗ ನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ
ನರನಿಕಾಯದ ಜಲಚರೌಘದ
ತರದ ವಾದ್ಯ ಧ್ವನಿಯ ರವದು
ಬ್ಬರದೊಳಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಪಕ್ಷದ ಆನೆಗಳ ಸಮೂಹ ಎಂಬುದು ಉತ್ತರನಿಗೆ ಒಡ್ಡುಗಲ್ಲಿನಂತೆ ಕಾಣುತ್ತದೆ. ಕುದುರೆಗಳ ಸಮೂಹ ಅಲೆಯಂತೆ ಕಾಣುತ್ತದೆ. ರಥಗಳ ಸಮೂಹಗಳು ಸುಳಿಯಂತಿವೆ. ಬೆಳ್ಗೊಡೆಗಳು ಗುಳ್ಳೆಗಳಂತಿವೆ. ಸೈನಿಕ ಜನರು ಮೀನುಗಳಂತಿದ್ದಾರೆ. ವಾದ್ಯ ಧ್ವನಿಗಳು ಸಮುದ್ರದ ಉಬ್ಬರದ ಶಬ್ದದಂತಿವೆ. ಒಟ್ಟಿನಲ್ಲಿ ಕೌರವ ಸೇನೆ ಉತ್ತರನಿಗೆ ಮಹಾ ಸಮುದ್ರದಂತೆ ಕಾಣಿಸಿತು.
ಪದಾರ್ಥ (ಕ.ಗ.ಪ)
ಕರಿಘಟಾವಳಿ-ಆನೆಗಳ ಸಮೂಹ, ಒಡ್ಡುಗಲ್ಲು-ಅಡ್ಡ ಬಂಡೆ, ಹೊರಳಿ-ಸಮೂಹ, ಆತಪತ್ರ-ಛತ್ರಿ, ಬುದ್ಬುದ-ಗುಳ್ಳೆ, ನರನಿಕಾಯ-(ಸೈನಿಕ) ಜನರ ಗುಂಪು, ಜಲಚರ-ಮೀನು, ಓಘ-ಸಮೂಹ, ರವ-ಧ್ವನಿ, ಜಲನಿಧಿ-ಸಮುದ್ರ
ಟಿಪ್ಪನೀ (ಕ.ಗ.ಪ)
ಸೇನೆಯನ್ನು ಸಮುದ್ರಕ್ಕೆ ಹೋಲಿಸುತ್ತಾರೆ. ಆ ಸಮುದ್ರದ ಒಡ್ಡುಕಲ್ಲು ಅಲೆ ಸುಳಿ ಗುಳ್ಳೆ ಮೀನು ನಿಘ್ರ್ಪೊಷಗಳನ್ನು ಉತ್ತರನು ಆನೆ, ಕುದುರೆ, ರಥ, ಶ್ವೇತಚ್ಛತ್ರ, ಕಾಲಾಳು, ವಾದ್ಯಗಳಲ್ಲಿ ಕಾಣುತ್ತಿದ್ದಾನೆ. ಇದೊಂದು ಸೂಕ್ತವಾದ ಪ್ರತಿಮೆಯಾಗಿದೆ.
ಮೂಲ ...{Loading}...
ಕರಿಘಟಾವಳಿಯೊಡ್ಡುಗಲ್ಲಿನ
ತುರಗ ನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ
ನರನಿಕಾಯದ ಜಲಚರೌಘದ
ತರದ ವಾದ್ಯ ಧ್ವನಿಯ ರವದು
ಬ್ಬರದೊಳಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ ॥2॥
೦೦೩ ಜಡಿವ ಖಡ್ಗದ ...{Loading}...
ಜಡಿವ ಖಡ್ಗದ ಕಿಡಿಯ ಸೇನೆಯ
ಕಡುಹುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ
ಇಡಿದ ಧೂಳಿಯ ಧೂಮ ರಾಶಿಯ
ಪಡೆ ವಿರಾಟನ ಮಗನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕತ್ತಿಯ ಸೆಳೆತದಿಂದ ಎದ್ದ ಕಿಡಿ , ಸೇನೆಯ ವೇಗದ ಚಲನೆಯಿಂದ ಎದ್ದ ಕೆಂಪು ಉರಿ, ಸೇನೆಯ ಅತಿಶಯ ಉದ್ಗಾರ, ಉದ್ಘೋಷಗಳ ಭಾರಿಯ ಶಬ್ದದಿಂದಾಗಿ ಎದ್ದ ಛಟಛಟ ಧ್ವನಿಗಳಿಂದ, ಧೂಳಿನಿಂದ ಎದ್ದ ಹೊಗೆಗಳಿಂದ ಕೂಡಿದ ಕೌರವರ ಸೇನೆಯು ವಿರಾಟಪುತ್ರ ಉತ್ತರನ ಕಣ್ಣುಗಳಿಗೆ ದಾವಾಗ್ನಿಯಂತೆ ಕಾಣುತ್ತಿತ್ತು.
ಪದಾರ್ಥ (ಕ.ಗ.ಪ)
ಜಡಿ-ಝಳಪಿಸು, ಕಡುಹು-ವೇಗ, ಕೇಸುರಿ-ಕೆಂಪು ಜ್ವಾಲೆ, ಬೆಂಕಿ, ಉಗ್ಗಡ-ಅತಿಶಯ, ನಿಸ್ವನ-ಧ್ವನಿ
ಟಿಪ್ಪನೀ (ಕ.ಗ.ಪ)
ಈ ಪದ್ಯದಲ್ಲಿ ದಾವಾಗ್ನಿಯ ಕಾರ್ಯಗಳನ್ನು ಸೇನೆಯ ಕಾರ್ಯಗಳೊಂದಿಗೆ ಹೋಲಿಸಲಾಗಿದೆ.
ಮನುಷ್ಯನಿಗೆ ಹೆದರಿಕೆ ಏಕೆ ಬರುತ್ತದೆ ? ಇದರ ಮೂಲವನ್ನು ಶೋಧಿಸುತ್ತ ಜಾನ್ ಸಿಂಗಲ್ಟನ್ ಹೇಳುತ್ತಾನೆ.
ಮೂಲ ...{Loading}...
ಜಡಿವ ಖಡ್ಗದ ಕಿಡಿಯ ಸೇನೆಯ
ಕಡುಹುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ
ಇಡಿದ ಧೂಳಿಯ ಧೂಮ ರಾಶಿಯ
ಪಡೆ ವಿರಾಟನ ಮಗನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ ॥3॥
೦೦೪ ಪ್ರಳಯ ಮೇಘದ ...{Loading}...
ಪ್ರಳಯ ಮೇಘದ ಮಾತೃಕೆಯೊ ಕರಿ
ಕುಲವೊ ಸಿಡಿಲಿನ ಗರುಡಿಯೋ ಕಳ
ಕಳವೊ ಕಲ್ಪಾನಲನ ಧೂಮಾವಳಿಯೊ ಕೈದುಗಳೊ
ನೆಲನ ದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇವೇನು ಪ್ರಳಯ ಮೇಘದ ಮೂಲಸ್ಥಾನವೋ ಅಥವಾ ಆನೆಯ ಹಿಂಡೋ ; ಸಿಡಿಲಿನ ಮಲ್ಲಶಾಲೆಯೋ ಅಬ್ಬರದ ಸೇನಾ ಧ್ವನಿಯೋ ಪ್ರಳಯಾಗ್ನಿಯ ಹೊಗೆಯೋ ಆಯುಧಗಳೋ ನೆಲಕ್ಕೆ ಹಬ್ಬಿಸಿರುವ ಬೆಟ್ಟದ ಅರಣ್ಯವೋ ತುಂಬಿ ಹರಡಿದ ಧ್ವಜಗಳೋ ಲೋಕ ವಿನಾಶಕರವಾದ ಸಮುದ್ರವೋ ಅಥವಾ ಸೇನೆಯೊ?” ನಮಗೆ ಇದು ಗೊತ್ತಿಲ್ಲ" ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಮಾತೃಕೆ-ಮೂಲಸ್ಥಾನ, ಕರಿಕುಲ-ಆನೆಗಳ ಸಮೂಹ, ಕಲ್ಪಾನಲ-ಪ್ರಳಯಾಗ್ನಿ, ಕೈದು-ಆಯುಧ, ದಡ್ಡಿ-ತೆರೆ, ಟೆಕ್ಕೆಯ-ಧ್ವಜ, ಜಲಧಿ-ಸಮುದ್ರ
ಮೂಲ ...{Loading}...
ಪ್ರಳಯ ಮೇಘದ ಮಾತೃಕೆಯೊ ಕರಿ
ಕುಲವೊ ಸಿಡಿಲಿನ ಗರುಡಿಯೋ ಕಳ
ಕಳವೊ ಕಲ್ಪಾನಲನ ಧೂಮಾವಳಿಯೊ ಕೈದುಗಳೊ
ನೆಲನ ದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ ॥4॥
೦೦೫ ಕಾಲಕೂಟದ ತೊರೆಯೊ ...{Loading}...
ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಇದೇನು ವಿಷದ ತೊರೆಯೋ ? ಮಾರಿಯ ಪಾಳಯವೋ ಮೃತ್ಯುವಿನ ಗಂಟಲ ನಾಲಗೆಯೋ ಭೈರವನ ಗಣಗಳೋ ಯಮನ ಪರಿವಾರವೋ ಕಾಲರುದ್ರನ ಹಣೆಯ ಬೆಂಕಿಯೋ ಅಥವಾ ಕೌರವನ ಸೇನಾ ಜಾಲವೋ” ಹೀಗೆ ಭಾವಿಸಿ ಉತ್ತರನು ಶಿವಶಿವಾ ಎಂದು ಹೆದರಿದ".
ಪದಾರ್ಥ (ಕ.ಗ.ಪ)
ಕಾಲಕೂಟ-ವಿಷ, ಗೂಳೆಯ-ಬಿಡಾರ, ತಾಳಿಗೆ-ನಾಲಗೆ, ಥಟ್ಟು-ಗುಂಪು, ಜವ-ಯಮ, ಜಂಗುಳಿ-ಸಮೂಹ, ನೊಸಲು-ಹಣೆ, ವಹ್ನಿ-ಬೆಂಕಿ
ಟಿಪ್ಪನೀ (ಕ.ಗ.ಪ)
ಆ ‘ಸುಕುಮಾರ’ ಅಂದು ಹೆದರಿದ" ! ಎಂಬ ಮಾತಿನ ಹಾಸ್ಯ ಧ್ವನಿಯನ್ನು ಗುರುತಿಸಬೇಕು.
ಈ ಮೇಲಣ ನಾಲ್ಕು ಪದ್ಯಗಳಲ್ಲಿ ಕೌರವರ ಸೇನೆಯು ಉತ್ತರನ ಮನಸ್ಸಿಗೆ ತಂದ ವಿಪತ್ತಿನ ಚಿತ್ರಗಳಿವೆ. ಹೆದರಿ ಕಂಗಾಲಾಗಿದ್ದನೆಂದು ಹೇಳಲು ಇಷ್ಟೊಂದು ಉಪಮೆಗಳನ್ನು ಕವಿ ನೀಡಬೇಕಾಯಿತು. ನಿಜವಾದ ವೀರರಿಗೆ ಶತ್ರು ಸೇನೆಯ ಅಗಾಧತೆ ಕಂಡರೆ ಆಶ್ಚರ್ಯವಾಗುವುದಿಲ್ಲ. ಬದಲಿಗೆ ಹೋರಾಟದ ಹುಮ್ಮಸ್ಸು ಹೆಚ್ಚಾಗುತ್ತದೆ.
ಮೂಲ ...{Loading}...
ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ ॥5॥
೦೦೬ ಕಡೆಗೆ ಹಾಯವು ...{Loading}...
ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವೀಸಾಡಲಾರದು
ವೊಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆಹಾ? ನನ್ನ ಕಣ್ಣುಗಳು ಈ ಸೇನೆಯ ಇನ್ನೊಂದು ಕಡೆಯನ್ನು ಕಾಣಲಾಗುತ್ತಿಲ್ಲ. ನನ್ನ ಮನಸ್ಸು ಈ ಸೇನಾ ಸಮುದ್ರದಲ್ಲಿ ಈಜಾಡಲಾರದು. ಜೀವಹಿಡಿದು ಬದುಕಿದ್ದರೆ, ಮುಂದೆ ಯಾವ ಅದ್ಭುತವನ್ನು ಬೇಕಾದರೂ ಕಾಣಬಹುದು. ಭೂಮಿ ಈ ಸೇನೆಯನ್ನು ಹೆತ್ತಿದೆ ಎಂದು ಕಾಣುತ್ತದೆ. (ಅಂದರೆ ಅಂಥ ವಿಸ್ತಾರವಾದ ಭೂ ಭಾಗವುಳ್ಳ ತಾಯಿ ಭೂಮಿ ಮಾತ್ರ ಇಂಥ ಸೇನೆಯನ್ನು ಹೆರಬಲ್ಲಳು ಎಂಬ ಭಾವ) ಈ ಸೇನೆಯ ಎದುರು ಯುದ್ಧ ಮಾಡಬಲ್ಲವನು ಈಶ್ವರನೊಬ್ಬನೇ ! ಶಿವಶಿವಾ ! ಇನ್ನು ನಾವು ಹೋರಾಡಿ ಗೆದ್ದಂತೆಯೇ ! ಈ ಸೇನೆಗೆ ನಮಸ್ಕಾರ " ಎಂದು ಉತ್ತರನು ಎಂದುಕೊಂಡ.
ಪದಾರ್ಥ (ಕ.ಗ.ಪ)
ಬಲಗಡಲು=ಬಲ+ಕಡಲು ಸೇನಾ ಸಮುದ್ರ, ಪೊಡವಿ-ಭೂ ತಾಯಿ, ಮೋಹರ-ಸೇನೆ, ಮೃಡ-ಶಿವ
ವಾಚಾಳನಾಗಿದ್ದ ಉತ್ತರನು ರಣವರ್ಣನೆಯಲ್ಲೂ ವಾಚಾಳನೇ ಆಗಿದ್ದಾನೆ !
ಟಿಪ್ಪನೀ (ಕ.ಗ.ಪ)
ಹಿಂದಿನ ನಾಲ್ಕು ಪದ್ಯಗಳಲ್ಲಿ ಸೇನೆಯ ಅಗಾಧತೆಯನ್ನು ಕಲ್ಪಿಸಿಕೊಳ್ಳಲು ಹೆಣಗಿದ ಉತ್ತರನು ಇಲ್ಲಿ ಸ್ಪಷ್ಟವಾದ ಮಾತುಗಳಲ್ಲಿ ಹೇಳಿಬಿಟ್ಟಿದ್ದಾನೆ.
ಮೂಲ ...{Loading}...
ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವೀಸಾಡಲಾರದು
ವೊಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ ॥6॥
೦೦೭ ಹಸಿದ ಮಾರಿಯ ...{Loading}...
ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಕ ಬಾರದು ಪ್ರಳಯ ಕಾಲನ
ಮುಸುಕನುಗಿವವನಾರು ಕೌರವ
ನಸಮ ಬಲನೈ ರಥವ ಮರಳಿಚು ಜಾಳಿಸುವೆನೆಂದ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ಸಾರಥಿ ನನ್ನ ಸ್ಥಿತಿ ಈಗ ಹಸಿದು ಬಾಯಿ ತೆರೆದು ನಿಂತ ಮಾರಿಯ ಗುಂಪಿನಲ್ಲಿ ಕುರಿ ನುಗ್ಗಿದಂತಾಗಿದೆ. ಬೃಹನ್ನಳೆ ! ರಥವನ್ನು ಮುಂದಕ್ಕೆ ಓಡಿಸಬೇಡ. ಅದರ ವೇಗವನ್ನು ನಿಲ್ಲಿಸು. ಕೈಯಲ್ಲಿರುವ ಚಾವಟಿಗೆಯನ್ನು ಎಸೆದು ಬಿಡು. ನಾವು ಈ ಸೇನೆಯ ಮೇಲೆ ಏನೂ ಮಾಡಲಾರೆವು. ಪ್ರಳಯ ಕಾಲದ ಯಮನ ಮುಸುಕನ್ನು ತೆರೆಯುವವರು ಯಾರಿದ್ದಾರೆ ? ಅಯ್ಯಾ ! ಕೌರವನು ನಿಜವಾಗಿ ಮಹಾ ಶಕ್ತಿವಂತ. ಆದುದರಿಂದ ರಥವನ್ನು ಹಿಂದಕ್ಕೆ ತಿರುಗಿಸು. ನಾನು ಜಾಳಿಸುತ್ತೇನೆ (ರಥಬಿಟ್ಟು ನಡೆದುಕೊಂಡು ಹೋಗುತ್ತೇನೆ)
ಪದಾರ್ಥ (ಕ.ಗ.ಪ)
ತೇಜಿ-ಕುದುರೆ, ಚಮ್ಮಟಿಗೆ-ಚಾವಟಿ, ಮುಸುಕು-ಕವಿದ ವಸ್ತ್ರ, ಉಗಿ-ಸೆಳೆ, ಜಾರಿಸು, ಜಾಳಿಸು-ನಡೆದುಕೊಂಡು ಹೋಗು ಚಲಿಸು.
ಮೂಲ ...{Loading}...
ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಮ್ಮಟಿಗೆಯನು ಬಿಸುಡು
ಮಿಸುಕ ಬಾರದು ಪ್ರಳಯ ಕಾಲನ
ಮುಸುಕನುಗಿವವನಾರು ಕೌರವ
ನಸಮ ಬಲನೈ ರಥವ ಮರಳಿಚು ಜಾಳಿಸುವೆನೆಂದ ॥7॥
೦೦೮ ಎಲೆ ಕುಮಾರಕ ...{Loading}...
ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಬಿದ್ದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ! ಕುಮಾರ ! ಮೊದಲ ಬಾರಿ ಮುತ್ತು ಕೊಡಲು ಹೋಗಿ ಹಲ್ಲು ಬೀಳಿಸಿಕೊಂಡವನಂತಾಗಿದ್ದೀಯಲ್ಲ. ಕಾಳಗಕ್ಕೆ ಇನ್ನೂ ಇಳಿದೇ ಇಲ್ಲ ಆಗಲೇ ನಿನಗೆ ಸಮರ ಭೀತಿ ಉಂಟಾಯಿತಲ್ಲ ? ಏನೂ ಹಿಂಜರಿಯಬೇಡ. ನಿಮ್ಮ ತಂದೆಯ ವಂಶಕ್ಕೆ ಕುಂದು ತರುವ ಕೆಲಸ ಮಾಡಬೇಡ. ಗೆಲುವಿನ ಮನಸ್ಸಿನಿಂದ ಹೋರಾಡು” ಹೀಗೆ ಹೇಳುತ್ತ ಅರ್ಜುನನು ರಥವನ್ನು ನಿಲ್ಲಿಸದೆ ಮುಂದಕ್ಕೆ ಹರಿಯಬಿಟ್ಟನು.
ಟಿಪ್ಪನೀ (ಕ.ಗ.ಪ)
ಮೊದಲ ಚುಂಬನದೊಳಗೆ ಹಲುಬಿದ್ದಂತೆ : ಇದೊಂದು ಗಾದೆಯ ಮಾತು. ಪ್ರೇಮ ಕೇಳಿಯ ಮೊದಲಿಗೆ ಚುಂಬನ. ಆ ಘಟ್ಟದಲ್ಲೇ ಅವನ ಹಲ್ಲು ಬಿದ್ದರೆ ಮುಂದೆ ಏನು ಪ್ರೇಮಿಸಿಯಾನು ? ಎಂಬಂತೆ ಇನ್ನು ಯುದ್ಧದ ಆರಂಭದಲ್ಲೇ ಹೀಗೆ ಸೇನೆಯನ್ನು ನೋಡಿ ಹೆದರಿದರೆ ಮುಂದೆ ಯುದ್ಧ ಮಾಡುವುದು ತಾನೇ ಹೇಗೆ ? ಎಂಬ ಭಾವ. ಅಳುಕು-ಹಿಂಜರಿ, ಮನಗೆಲುವು-ಸ್ಫೂರ್ತಿಯುಕ್ತ ಮನಸ್ಸು (ಒಂದು ಉತ್ತಮ ಶಬ್ದ ಪ್ರಯೋಗ)
ಮೂಲ ...{Loading}...
ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಬಿದ್ದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು ॥8॥
೦೦೯ ಸಾರಿ ಬರ ...{Loading}...
ಸಾರಿ ಬರ ಬರಲವನ ತನು ಮಿಗೆ
ಭಾರಿಸಿತು ಮೈ ಮುರಿದು ರೋಮ ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿ ಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ರಥವು ವೇಗವಾಗಿ ಸಾಗಿದಂತೆಲ್ಲ ಆ ಉತ್ತರನ ದೇಹ ಜಡವಾಗತೊಡಗಿತು. ಮೈ ನಡುಗಿತು. ಕೂದಲು ವಿಕಾರವಾಯಿತು. ಮೈಯಲ್ಲಿ ಕಾವೇರಿತು. ದೇಹದ ಅಂಗಾಂಗಗಳೆಲ್ಲ ಹೆದರಿ ನಡುಗಿದುವು. ತುಂಬ ಭಯದ ಕಾವಿನಿಂದ ನಾಲಿಗೆ ಒಣಗಿತು. ತುಟಿ ಒಣಗಿತು. ಆ ಸುಕುಮಾರನು ತನ್ನ ಕಣ್ಣಿನ ರೆಪ್ಪೆಗಳು ಸುಟ್ಟಂತಾಗಿ ಮುಖಮುಚ್ಚಿಕೊಂಡ.
ಪದಾರ್ಥ (ಕ.ಗ.ಪ)
ಭಾರಿಸು-ಭಾರವಾಗು, ಕಾಹೇರು-ಕಾವು ಏರು, ಡೆಂಡಣಿಸಿ-ಭಯಭೀತನಾಗಿ, ತಾಳಿಗೆ- ಗಂಟಲು
ಮೂಲ ...{Loading}...
ಸಾರಿ ಬರ ಬರಲವನ ತನು ಮಿಗೆ
ಭಾರಿಸಿತು ಮೈ ಮುರಿದು ರೋಮ ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿ ಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ ॥9॥
೦೧೦ ಏಕೆ ಸಾರಥಿ ...{Loading}...
ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡು ಸುಡು
ಕಾಕಲಾ ಕಣ್ಣೊಡೆದವೇ ಕಾಣಾ ಮಹಾ ಬಲವ
ನಾಕನಿಳಯರಿಗರಿದು ನಿನಗೆ ವಿ
ವೇಕವೆಳ್ಳನಿತಿಲ್ಲ ತೆಗೆ ತೆಗೆ
ಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ಸಾರಥಿ ! ಈ ರಥ ನಿಲ್ಲಿಸು ಎಂದರೆ ಸುಮ್ಮನೆ ಮುಂದಕ್ಕೆ ಹರಿಯ ಬಿಟ್ಟು ನನ್ನ ಗಂಟಲನ್ನೇಕೆ ಕೊಯ್ಯುತ್ತೀಯೆ ? ಸುಡು ಸುಡು. ನಿನಗೇನು ಕಣ್ಣು ಒಡೆದು ಹೋಗಿ ಏನೂ ಕಾಣದಂತಾಗಿದೆಯೇನು? ಕಣ್ಣು ಬಿಟ್ಟು ನೋಡು ! ಅದು ಮಹಾಸೈನ್ಯ ! ದೇವತೆಗಳು ಕೂಡ ಆ ಪ್ರಚಂಡ ಸೇನೆಯನ್ನು ಎದುರಿಸಲಾರರು. ನಿನಗೋ, ಸ್ವಲ್ಪವೂ ವಿವೇಕವಿಲ್ಲ. ತೆಗೆ ತೆಗೆ ಸಾಕು. ಕಡಿವಾಣವನ್ನು ಮತ್ತೆ ಎಳೆದು ಹಿಡಿ. ಕುದುರೆಗಳನ್ನು ಹಿಂದಕ್ಕೆ ತಿರುಗಿಸು” ಎಂದು ಉತ್ತರ ಹೇಳಿದ.
ಪದಾರ್ಥ (ಕ.ಗ.ಪ)
ಕಾಕು-ವಕ್ರಬುದ್ಧಿ , ನಾಕನಿಳಯ-(ಸ್ವರ್ಗವೇ ಮನೆಯಾಗುಳ್ಳ) ದೇವತೆ, ಅರಿದು-ಅಸಾಧ್ಯ, ವಾಘೆ-ಕಡಿವಾಣ (ಕಡಿಯಣ), ತೇಜಿ-ಕುದುರೆ
ಟಿಪ್ಪನೀ (ಕ.ಗ.ಪ)
ಮೂಲದಲ್ಲಿ ಉತ್ತರನು ನಡುಗುತ್ತ, ಅಳುತ್ತ “ಪ್ರತಿಯೋದ್ಧುಂ ನ ಶಕ್ಯಾಮಿ ನಿವರ್ತಸ್ವ ಬೃಹನ್ನಲಾ “ಅಯ್ಯ ನಾನು ಯುದ್ಧ ಮಾಡಲಾರೆ, ರಥವನ್ನು ಹಿಂದಿರುಗಿಸು” ಎನ್ನುತ್ತಾನೆ.
ಅಲ್ಲದೆ “ನನ್ನ ರೋಮಗಳು ಅಲುಗಾಡುತ್ತಿವೆ. ಮೂರ್ಛೆ ಬರುತ್ತಿದೆ” (“ಹೃಷಿತಾನಿ ಚ ರೋಮಾಣಿ, ಕಶ್ಮಲಂಚಾಗತಂ ಮಮ”) ಎನ್ನುತ್ತಾನೆ. ಇಂಥ ವೀರ ಕೌರವ ಪಡೆಯ ವೀರರನ್ನು ಗೆಲ್ಲುತ್ತೇನೆಂದು “ತಲೆಕೆಟ್ಟ ನಾನು ಬಂದಿದ್ದೇನೆ” (ತಾನ್ ಜೇತುಂ ಸಮರೇ ಶೂರಾನ್ ದುರ್ಬುದ್ಧಿರಹಮಾಗತಃ) ಎನ್ನುತ್ತಾನೆ.
ಮೂಲ ...{Loading}...
ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡು ಸುಡು
ಕಾಕಲಾ ಕಣ್ಣೊಡೆದವೇ ಕಾಣಾ ಮಹಾ ಬಲವ
ನಾಕನಿಳಯರಿಗರಿದು ನಿನಗೆ ವಿ
ವೇಕವೆಳ್ಳನಿತಿಲ್ಲ ತೆಗೆ ತೆಗೆ
ಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ ॥10॥
೦೧೧ ನುಡಿಯ ಕೇಳದೆ ...{Loading}...
ನುಡಿಯ ಕೇಳದೆ ಮುಂದೆ ಹತ್ತೆಂ
ಟಡಿಯನರ್ಜುನ ರಥವ ಹರಿಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನರೆತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಉತ್ತರನು ಹೇಳುತ್ತಿದ್ದರೂ ಲಕ್ಷಿಸದೆ ಅರ್ಜುನನು ರಥವನ್ನು ಮುಂದೆ ಎಂಟು ಹತ್ತು ಅಡಿ ಓಡಿಸಿದ. ಆಗ ಉತ್ತರನು ಕೈಯಲ್ಲಿ ಹಿಡಿದಿದ್ದ ಬಿಲ್ಲು ಬಾಣಗಳು ಕೆಳಗೆ ಬಿದ್ದುವು. ಕೈಯನ್ನು ಸ್ವಲ್ಪ ಎತ್ತಿ “ಅಯ್ಯಾ ಇರಿಗಾರ ಸಾರಥಿ (ನಮಗೆ ಇರಿಯಲು ಹೊರಟಿದ್ದೀಯಲ್ಲ ಎಂಬ ಭಾವ !) ಹೇಳುತ್ತಿರುವವನು ನಾನು ! ನನ್ನನ್ನು ಶತ್ರು ಎಂದು ಭಾವಿಸಿದ್ದೀಯೊ ಹೇಗೆ ? ನಾನು ನಿನ್ನ ಪ್ರಭುವಲ್ಲವೆ ? ಈ ಬಗೆಯ ಸ್ವಾಮಿ ದ್ರೋಹ ಲೇಸಾಯಿತು (ಒಳ್ಳೆಯದಲ್ಲ ಎಂಬ ಭಾವ !)” ಎಂದು ಎಚ್ಚರಿಸಿದ.
ಪದಾರ್ಥ (ಕ.ಗ.ಪ)
ಇರಿಗಾರ-ತಿವಿಯುವವನು, ದುರುಹಿಕೆ < ದ್ರೋಹ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ
“ವೈರಾಟಿಃ ಪ್ರಾದ್ಗವತ್ ಭೀತೋ ವಿಸೃಜ್ಯ ಸಶರಂ ಧನುಃ” (ಹೆದರಿದ ಉತ್ತರನು ಬಿಲ್ಲು ಬಾಣಗಳನ್ನು ಕೆಳಗೆ ಹಾಕಿದ) ಎಂದು ಹೇಳಲಾಗಿದೆ.
ಮೂಲ ...{Loading}...
ನುಡಿಯ ಕೇಳದೆ ಮುಂದೆ ಹತ್ತೆಂ
ಟಡಿಯನರ್ಜುನ ರಥವ ಹರಿಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನರೆತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ ॥11॥
೦೧೨ ಎನ್ದೊಡರ್ಜುನ ನಗುತ ...{Loading}...
ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಉತ್ತರ ಕುಮಾರನ ಮಾತಿಗೆ ಲಕ್ಷ್ಯ ಕೊಡದೆ ನಗುತ್ತ ರಥವನ್ನು ಮತ್ತೆ ನಾಲ್ಕೆಂಟಡಿ ಮುಂದಕ್ಕೆ ಸಾಗಿಸಿದ. ಉತ್ತರನು “ಇವನು ನನ್ನ ಮಾತು ಕೇಳುತ್ತಿಲ್ಲ. ನನ್ನನ್ನು ಕೊಲ್ಲುತ್ತಿದ್ದಾನೆ” ಎಂದು ಹೇಳಿ ತಾನೇ ಧುಮುಕಲು ಸಿದ್ಧನಾದ. ಪಂಚೆಯ ಸೆರಗನ್ನು ಮೇಲೆತ್ತಿ ಮೆಲ್ಲನೆ ರಥದ ಹಿಂಭಾಗಕ್ಕೆ ಸರಿಯುತ್ತ ಧುಮುಕಿಬಿಟ್ಟ. “ಸಧ್ಯ ! ಬದುಕಿದೆ” ಎಂದುಕೊಂಡು ಬಿಟ್ಟ ಮಂಡೆಯಲ್ಲಿಯೇ ಹಿಂದಕ್ಕೆ ಓಡಲಾರಂಭಿಸಿದ.
ಪದಾರ್ಥ (ಕ.ಗ.ಪ)
ಸಂವರಿಸಿ-ಸರಿಪಡಿಸಿ, ಮುಂಜೆರಗು-ಮುಂ+ಸೆರಗು, ಸೆರಗಿನ ಮುಂಭಾಗ, ನಿಟ್ಟೋಟ-ನಿಡಿದು+ಓಟ, ವೇಗವಾದ ಓಟ
ಮೂಲ ...{Loading}...
ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ॥12॥
೦೧೩ ನೋಡಿದನು ಕಲಿಪಾರ್ಥನೀ ...{Loading}...
ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವ ಸೇನೆ ಕೆಡೆದುದು ನಗೆಯ ಕಡಲೊಳಗೆ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕೇಡಿಗ ಉತ್ತರಕುಮಾರನು ಕೆದರಿದ ಕೇಶದಲ್ಲಿ ದಿಕ್ಕುಗೆಟ್ಟು ಓಡುತ್ತಿರುವುದನ್ನು ಅರ್ಜುನನು ನೋಡಿದ. “ಅಯ್ಯೋ ! ಪಾಪಿ ! ಓಡುತ್ತಿದ್ದಾನೆ. ಇವನನ್ನು ಹಿಡಿದು ತರಬೇಕು” ಎಂದು ಲಗುಬಗೆಯಿಂದ ಅಟ್ಟಿಸಿಕೊಂಡು ಹೋದ. ಆ ರಭಸಕ್ಕೆ ಭೂಮಿ ನಡುಗಿತು. ಭೂಮಿಯನ್ನು ಹೊತ್ತ ಆದಿಶೇಷನು ಹೆದರಿಕೊಂಡ. ಈ ಕಡೆ ಈ ದೃಶ್ಯವನ್ನು ನೋಡುತ್ತಿದ್ದ ಕುರುಸೇನೆ ನಗೆಯ ಕಡಲಲ್ಲಿ ಮುಳುಗಿತು. (ಪಲಾಯನ ದೃಶ್ಯ ಮತ್ತು ಅಟ್ಟಿಕೊಂಡು ಹೋಗುವ ದೃಶ್ಯಗಳು ಈ ನಗೆಯ ಸ್ಫೋಟಕ್ಕೆ ಕಾರಣವಾದುವು)
ಪದಾರ್ಥ (ಕ.ಗ.ಪ)
ಕೇಡಾಡಿ-ಕೇಡುಗ, ಸೂಟಿ-ರಭಸ, ಅಹಿಪತಿ-ಸರ್ಪರಾಜ, ಆದಿಶೇಷ, ಕೆಡೆ-ಬೀಳು
ಮೂಲ ...{Loading}...
ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವ ಸೇನೆ ಕೆಡೆದುದು ನಗೆಯ ಕಡಲೊಳಗೆ ॥13॥
೦೧೪ ಎಲೆಲೆ ಕಾದಲು ...{Loading}...
ಎಲೆಲೆ ಕಾದಲು ಬಂದ ವೀರನ
ಬಲುಹ ನೋಡಾ ಶಿವ ಶಿವಾ ಬೆಂ
ಬಳಿಯಲಟ್ಟುವ ವೀರನಾವನೊ ಸುಭಟನಹನವನು
ತಿಳಿಯಲರಿದಿವನಾವನೋ ವೆ
ಗ್ಗಳೆಯನಹನಾಕಾರದಲಿ ನೆರೆ
ಫಲುಗುಣನ ಹೋಲುವನೆನುತ ಗಜಬಜಿಸಿತರಿ ಸೇನೆ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
“ಆಹಾ ! ಹೋರಾಡಲೆಂದು ಬಂದ ವೀರನ ಸ್ಥಿತಿಯನ್ನು ನೋಡು. ಶಿವ ಶಿವಾ ! ಈ ಹೇಡಿಯನ್ನು ಬೆನ್ನಟ್ಟುತ್ತಿರುವ ವೀರನು ಮಹಾಯೋಧನಂತೆ ಕಾಣುತ್ತಾನೆ. ಆದರೆ ಯಾರೆಂದು ತಿಳಿಯುವುದಿಲ್ಲ. ತುಂಬ ಪರಾಕ್ರಮಿಯಂತೆ ಕಾಣುತ್ತಾನೆ. ಆಕಾರವನ್ನು ನೋಡಿದರೆ ಅರ್ಜುನನಂತೆ ಕಾಣುತ್ತಾನೆ” ಎಂದು ಕೌರವ ಸೇನೆಯವರು ತಮ್ಮ ತಮ್ಮಲ್ಲೇ ಹೇಳಿಕೊಂಡರು.
ಪದಾರ್ಥ (ಕ.ಗ.ಪ)
ಬಲುಹು-ಸಾಮಥ್ರ್ಯ, ಬೆಂಬಳಿ-ಹಿಂದೆಯೇ, ಅರಿದು-ಕಷ್ಟ, ಅಸಾಧ್ಯ, ವೆಗ್ಗಳೆಯನ್+ಅಹನ್=ಶಕ್ತಿಯುತನಾಗಿದ್ದಾನೆ.
ಟಿಪ್ಪನೀ (ಕ.ಗ.ಪ)
ಉತ್ತರ ಕುಮಾರನ ಬೆನ್ನುಹತ್ತಿ ತಲೆಗೂದಲು ಕೆದರಿ ತೂಗುತ್ತಿದ್ದ ಅರ್ಜುನನನ್ನು ನೋಡಿದ ಕೌರವ ಸೈನಿಕರಿಗೆ ಇವನು ಅರ್ಜುನ ಹೌದೋ ಅಲ್ಲವೋ ಎಂದು ನಿರ್ಧರಿಸುವುದು ಕಷ್ಟವಾಯಿತು ಎಂದು ವ್ಯಾಸರು ಹೇಳುತ್ತಾರೆ.
(ವಿಧೂಯ ವೇಣೂಂ ಧಾವಂತಂ ಪಾಂಡವಂ ಪ್ರೇಕ್ಷ್ಯ ಸೈನಿಕಾ :
ಅರ್ಜುನೇತಿಚ ನೇತ್ಯೇವ ವ್ಯವಸ್ಯಂತಿ ನ ತೇ ಪುನಃ)
ಮೂಲ ...{Loading}...
ಎಲೆಲೆ ಕಾದಲು ಬಂದ ವೀರನ
ಬಲುಹ ನೋಡಾ ಶಿವ ಶಿವಾ ಬೆಂ
ಬಳಿಯಲಟ್ಟುವ ವೀರನಾವನೊ ಸುಭಟನಹನವನು
ತಿಳಿಯಲರಿದಿವನಾವನೋ ವೆ
ಗ್ಗಳೆಯನಹನಾಕಾರದಲಿ ನೆರೆ
ಫಲುಗುಣನ ಹೋಲುವನೆನುತ ಗಜಬಜಿಸಿತರಿ ಸೇನೆ ॥14॥
೦೧೫ ಈತ ಸಾರಥಿಯಳವಿಯಲಿ ...{Loading}...
ಈತ ಸಾರಥಿಯಳವಿಯಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕವೇಷ ವೀಕ್ಷಿಸಲು
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕರ್ಣ ಈ ಗುಜುಗುಜು ಶಬ್ದವನ್ನು ಕೇಳಿ “ಸಾರಥಿಯ ಅಳವಿಯಲ್ಲಿ ಮಿಗುವ ಈತನು (ಅಂದರೆ ಸಾರಥಿಯ ಕೈಯಿಂದ ತಪ್ಪಿಸಿಕೊಂಡು ಓಡುತ್ತಿರುವವನು) ಉತ್ತರನಿರಬೇಕು. ಅರ್ಜುನನಿಗೆ ಈ ಸಾರಥಿತನ ಎಲ್ಲಿ ಬಂತು. ಅಲ್ಲದೆ ನೋಡಿದರೆ ನಪುಂಸಕ ವೇಷ ಬೇರೆ ಇದೆ. ಅಯ್ಯೋ ಯಾರಾದರೇನಂತೆ ! ಈತ ಅರ್ಜುನನೇ ಆಗಿರಲಿ ಅಥವಾ ಇಂದ್ರನೇ ಆಗಿರಲಿ ಶ್ರೀರಾಮನೇ ಆಗಿರಲಿ ಯುದ್ಧಕ್ಕೆ ಬಂದರೆ ಬರಲಿ ಕೊಲ್ಲುತ್ತೇನೆ” ಎಂದು ಕರ್ಣನು ಕೋಪದಿಂದಿ ಹೇಳಿದ.
ಪದಾರ್ಥ (ಕ.ಗ.ಪ)
ಅಳವಿಯಲಿ ಮಿಗುವಾತ -(ಸಾರಥಿಯ ಕೈಯಿಂದ ತಪ್ಪಿಸಿಕೊಂಡಿರುವವನು), ಸೂತತನ-ಸಾರಥಿತನ, ವೀಕ್ಷಿಸು-(ಸೂಕ್ಷ್ಮವಾಗಿ) ನೋಡು, ಪುರುಹೂತ-ದೇವೇಂದ್ರ, ಆತಡೆ-ಆಂತಡೆ, ಹೋರಾಡಲು ಬಂದರೆ, ಖಾತಿ-ಕೋಪ
ಮೂಲ ...{Loading}...
ಈತ ಸಾರಥಿಯಳವಿಯಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕವೇಷ ವೀಕ್ಷಿಸಲು
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ ॥15॥
೦೧೬ ಇತ್ತಲರ್ಜುನನುತ್ತರನ ಬೆಂ ...{Loading}...
ಇತ್ತಲರ್ಜುನನುತ್ತರನ ಬೆಂ
ಬತ್ತಿ ಬಂದನು ಹೋದೆಯಾದರೆ
ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲು ನಿಲ್ಲೆನುತ
ಮೃತ್ಯುವೋ ಸಾರಥಿಯೊ ಪಾಪಿಯ
ನೆತ್ತಣಿಂದವೆ ಮಾಡಿ ಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಕಡೆ ಅರ್ಜುನನು ಉತ್ತರನನ್ನು ಅಟ್ಟಿಸಿಕೊಂಡು ಬಂದ. “ನೀನು ಮುಂದೆ ಓಡಿದ್ದೇ ಆದರೆ ನಿನ್ನ ತಲೆಯನ್ನು ಕತ್ತರಿಸಿ ಬಿಡುತ್ತೇನೆ. ನಿಲ್ಲು ನಿಲ್ಲು” ಎಂದು ಕೂಗಿಕೊಂಡ. ಉತ್ತರನು ಸ್ವಲ್ಪ ಹಿಂದಕ್ಕೆ ತಿರುಗಿ “ಇವನು ನನ್ನ ಸಾರಥಿಯಾಗಿ ಬಂದಿದ್ದಾನೋ ನನ್ನ ಪಾಲಿಗೆ ಮೃತ್ಯುವಾಗಿ ಬಂದಿದ್ದಾನೋ ! ಈ ಪಾಪಿಯನ್ನು ಎಲ್ಲಿಂದ ತಂದು ಸಾರಥಿಯಾಗಿ ಮಾಡಿಕೊಂಡೆನೊ ?” ಎಂದುಕೊಂಡು ತನ್ನ ಓಟವನ್ನು ಮುಂದುವರಿಸಿದ.
ಪದಾರ್ಥ (ಕ.ಗ.ಪ)
ಎತ್ತಣಿಂದವೆ-ಎಲ್ಲಿಂದ(ತಂದು), ಸೈವರಿ-ಮುಂದುವರಿ, ಓಡು ಸೈ+ಪರಿ, ಸೈ-ಚೆನ್ನಾಗಿ ಪರಿ-ಧಾವಿಸು, ಓಡು
ಮೂಲ ...{Loading}...
ಇತ್ತಲರ್ಜುನನುತ್ತರನ ಬೆಂ
ಬತ್ತಿ ಬಂದನು ಹೋದೆಯಾದರೆ
ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲು ನಿಲ್ಲೆನುತ
ಮೃತ್ಯುವೋ ಸಾರಥಿಯೊ ಪಾಪಿಯ
ನೆತ್ತಣಿಂದವೆ ಮಾಡಿ ಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ ॥16॥
೦೧೭ ಇಟ್ಟಣಿಸಿ ನರ ...{Loading}...
ಇಟ್ಟಣಿಸಿ ನರ ನೂರು ಹಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನನ್ವಯವ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಟ್ಟಿಸಿಕೊಂಡು ಹೋದ ಅರ್ಜುನನು ನೂರು ಹೆಜ್ಜೆಗಳೊಳಗೆ ಉತ್ತರನನ್ನು ಹಿಡಿದ. “ಛೀ ! ನೀನು ಇದೇನು ಮಾಡಿದೆ ? ನೀನೇನು ಹಾದರಕ್ಕೆ ಹುಟ್ಟಿದವನೋ ? ಕ್ಷತ್ರಿಯ ಬೀಜವೋ ? ಅಲ್ಲ - ಆ ಅಂತಃಪುರದ ಹೆಂಗಸರ ಮುಂದೆ ಹಾಗೆ ಹೊಟ್ಟು ಕುಟ್ಟಿದೆಯಲ್ಲ. ಈಗ ಶತ್ರುಗಳ ಎದುರಿಗೆ ಹೇಡಿಯಂತೆ ಹೀಗಾಡುತ್ತಿದ್ದೀಯೆ. ದುರಾತ್ಮ ! ನೀನು ವಿರಾಟ ವಂಶಕ್ಕೇ ಅಪಕೀರ್ತಿ ತಂದೆಯಲ್ಲ” ಎಂದು ಗದರಿಕೊಂಡ.
ಪದಾರ್ಥ (ಕ.ಗ.ಪ)
ಇಟ್ಟಣಿಸು-ಆಕ್ರಮಿಸು, ಹೊಟ್ಟುಗುಟ್ಟು-ವ್ಯರ್ಥಾಲಾಪ ಮಾಡು. ಬತ್ತವನ್ನು ಕುಟ್ಟಿದರೆ ಅಕ್ಕಿ ಬರುತ್ತದೆ. ಬರಿಯ ತವುಡನ್ನೇ ಕುಟ್ಟಿದರೆ….? ಇದೊಂದು ನಾಣ್ಣುಡಿ.
ಟಿಪ್ಪನೀ (ಕ.ಗ.ಪ)
ಹುಟ್ಟಿದೆಯೊ ಹಾದರಕೆ…. ನೀನು : ಇದು ಜಾನಪದರ ಬೈಗುಳದ ಧಾಟಿ ! ಮಿಂಡರಿಗೆ ಹುಟ್ಟಿದವನು ಎಂಬುದು ಒಂದು ಲೈಂಗಿಕ ಬೈಗುಳ. ಕ್ಷತ್ರಿಯ ಬೀಜವಲ್ಲ ನೀನು ಎಂದರೆ ಕ್ಷಾತ್ರಸಂಪತ್ತು ನಿನ್ನಲಿಲ್ಲ ಎಂಬ ಬೈಗುಳ. ಅಭಿಜಾತ ಕಾವ್ಯಗಳಲ್ಲಿ ಕೂಡ ಇಂಥ ಗ್ರಾಮ್ಯ ಪದಗಳ ಬಳಕೆ ಕುಮಾರವ್ಯಾಸನ ವಿಶೇಷ.
ನೂರು ಹೆಜ್ಜೆ ಇಡುವುದರೊಳಗೆ… (ಮೂಲಭಾರತದಿಂದ ಈ ಮಾತು ಎತ್ತಿಕೊಂಡಂತಿದೆ. ಉತ್ತರನನ್ನು ಬೆನ್ನಟ್ಟಿ ಧನಂಜಯನು ನೂರು ಹೆಜ್ಜೆ ಇಟ್ಟು ಜುಟ್ಟು ಹಿಡಿದು ನಿಲ್ಲಿಸಿದ ಎಂದು ವ್ಯಾಸರು ಹೇಳುತ್ತಾರೆ.
(ಉತ್ತರಂತು ಪ್ರಧಾವಂತಂ ಅಭಿಧೃತ್ಯ ಧನಂಜಯಃ
ಗತ್ವಾ ‘ಪದಶತಂ’ ತೂರ್ಣಂ ಕೇಶಪಕ್ಷೇ ಪರಾಮೃಶತ್”)
ಮೂಲ ...{Loading}...
ಇಟ್ಟಣಿಸಿ ನರ ನೂರು ಹಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನನ್ವಯವ ॥17॥
೦೧೮ ಹಲುಗಿರಿದು ಬಾಯೊಳಗೆ ...{Loading}...
ಹಲುಗಿರಿದು ಬಾಯೊಳಗೆ ಬೆರಳಿ
ಟ್ಟಳುಕಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯರುಂಟೇ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಲ್ಲು ಕಿರಿದು ಬಾಯೊಳಗೆ ಬೆರಳಿಟ್ಟುಕೊಂಡು ತನ್ನ ಹೇಡಿತನವನ್ನು ಪ್ರದರ್ಶಿಸುತ್ತ “ಅಯ್ಯಾ ! ಸಾರಥಿ ! ದಯವಿಟ್ಟು ನನ್ನನ್ನು ಕಳಿಸಿಕೊಡು. ಆಗ ನಾನು ನಿನ್ನ ಬಸುರಲ್ಲಿ ಬಂದ ಮಗ ಎಂದ ಭಾವಿಸಿಕೊಳ್ಳುತ್ತೇನೆ (ನಿನ್ನ ಕೃಪೆಯಿಂದ ಉಳಿದವನು ಎಂದರ್ಥ) ಅಲ್ಲ ಸಾರಥಿ ! ಯುದ್ಧದಲ್ಲಿ ಈ ಭಾರಿಯ ಕೌರವ ಸೇನೆಯನ್ನು ಭಂಗಿಸುವ ಮಹಾವೀರರು ಈ ಲೋಕದಲ್ಲಿ ಇದ್ದಾರೆಯೆ ? ನೋಡು ! ಯಾರು ಯಾರಿಂದಲೋ ನನ್ನನ್ನು ಕೊಲ್ಲಿಸುವ ಬದಲಿಗೆ ನೀನೇ ನನ್ನನ್ನು ಚುಚ್ಚಿ ಕೊಂದು ಬಿಡು. ತಗೊ ಇಲ್ಲಿ ಕಠಾರಿಯಿದೆ ಕೊಡುತ್ತೇನೆ” ಎಂದು ಉತ್ತರನು ಗೋಗರೆದ.
ಪದಾರ್ಥ (ಕ.ಗ.ಪ)
ಕೊಳುಗುಳ-ಯುದ್ಧಭೂಮಿ, ಒಡ್ಡು-ಸೇನೆ, ಮುರಿ-ಸೋಲಿಸು, ಅಗ್ಗಳೆಯರು-ವೀರರು, ಲೋಗ-ಸಾಮಾನ್ಯ ಜನ, ಕುತ್ತಿ-ಚುಚ್ಚಿ
ಟಿಪ್ಪನೀ (ಕ.ಗ.ಪ)
ಉತ್ತರನ ಪಲ್ಲವಿ ಒಂದೇ. ಅದು ವ್ಯಾಸರು ಹೇಳುವಂತೆ (“ಬದುಕಿ ಉಳಿದರೆ ಮಂಗಳವನ್ನು ಕಂಡೇನು, ರಥ ಹಿಂದಿರುಗಿಸು”)
ನಿವರ್ತಯ ರಥಂ ಕ್ಷಿಪ್ರಂ ಜೀವನ್ ಭದ್ರಾಣಿ ಪಶ್ಯತಿ.
ಮೂಲ ...{Loading}...
ಹಲುಗಿರಿದು ಬಾಯೊಳಗೆ ಬೆರಳಿ
ಟ್ಟಳುಕಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯರುಂಟೇ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ ॥18॥
೦೧೯ ಮನದಲೊಡಲೊಡೆವನ್ತೆ ನಗುತ ...{Loading}...
ಮನದಲೊಡಲೊಡೆವಂತೆ ನಗುತ
ರ್ಜುನನು ಗಜರಿದನೆಲವೊ ಸಭೆಯಲಿ
ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ
ಅನುವರದೊಳೇನಾಯ್ತು ರಿಪು ವಾ
ಹಿನಿಯನಿರಿಯದೆ ನಾಡ ನರಿಯವೊ
ಲೆನಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇಹವೇ ಬಿರಿದು ಹೋಗಬೇಕು ಎನ್ನುವಷ್ಟರ ಮಟ್ಟಿಗೆ ಅರ್ಜುನನು ನಗುತ್ತ ಉತ್ತರನನ್ನು ಗದರಿಕೊಂಡ. “ಎಲವೊ ! ಉತ್ತರ ! ಸಭೆಯಲ್ಲಿ ಹೆಂಗಸರ ಎದುರಿಗೆ ಬಾಯಿಗೆ ಬಂದಂತೆ ಹರಟಿದೆಯಲ್ಲ ! ಈಗ ಯುದ್ಧಭೂಮಿಯಲ್ಲಿ ಆ ಪ್ರತಾಪ ಎಲ್ಲಿ ಹೋಯಿತು ? ನುಗ್ಗಿ ಶತ್ರು ಸೇನೆಯನ್ನು ಧ್ವಂಸ ಮಾಡಲಾಗದೆ ಈಗ ನಾಡನರಿಯಂತೆ ನನ್ನ ಮುಂದೆ ಹಲ್ಲು ಕಿರಿದರೆ ನಾನು ನಿನ್ನನ್ನು ಬಿಟ್ಟು ಬಿಡುತ್ತೇನೆ ಎಂದು ತಿಳಿದಿದ್ದೀಯೇನು ? ನಾನು ಖಂಡಿತ ಬಿಡುವುದಿಲ್ಲ ಈಗ ಹೋರಾಡುವೆಯಂತೆ, ನಡೆ”.
ಪದಾರ್ಥ (ಕ.ಗ.ಪ)
ಗಜರು-ಆರ್ಭಟಿಸು, ಸೊರಹು-ಹರಟು, ಅನುವರ-ಯುದ್ಧಭೂಮಿ, ವಾಹಿನಿ-ಸೈನ್ಯ
ಟಿಪ್ಪನೀ (ಕ.ಗ.ಪ)
ಮನದಲೊಡಲೊಡೆವಂತೆ-ಕುಮಾರವ್ಯಾಸನ ಅಪೂರ್ವ ಪ್ರಯೋಗಗಳಲ್ಲಿ ಇದು ಒಂದು. ಅರ್ಜುನ ಪ್ರಕಟವಾಗಿ ನಗಲಿಲ್ಲ. ಹೊಟ್ಟೆ ಬಿರಿಯುವಂತೆ ಮನಸ್ಸಿನಲ್ಲೇ ನಕ್ಕನಂತೆ !
ಮೂಲ ...{Loading}...
ಮನದಲೊಡಲೊಡೆವಂತೆ ನಗುತ
ರ್ಜುನನು ಗಜರಿದನೆಲವೊ ಸಭೆಯಲಿ
ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ
ಅನುವರದೊಳೇನಾಯ್ತು ರಿಪು ವಾ
ಹಿನಿಯನಿರಿಯದೆ ನಾಡ ನರಿಯವೊ
ಲೆನಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ ॥19॥
೦೨೦ ಹೇವ ಬೇಡಾ ...{Loading}...
ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಉತ್ತರನಿಗೆ ಹೇಳಿದ : “ಅಯ್ಯಾ ! ಉತ್ತರ ! ನಿನಗೆ ನಿನ್ನ ಬಗೆಗೇ ಅಸಹ್ಯವಾಗಬೇಡವೆ ? ವೀರರೆನ್ನಿಸಿಕೊಂಡವರು ಹೀಗೆ ಜೀವಗಳ್ಳರ ದಾರಿಯನ್ನು ಹಿಡಿಯಬಹುದೆ ? ನಾವು ನಪುಂಸಕರು. ಆದರೆ ಸಾವಿಗೆ ಹೆದರಿದ್ದೇವೆಯೆ ? (ನನ್ನನ್ನು ನೋಡಿ ಕಲಿ !) ಆಗ ಉತ್ತರನು “ಸಾರಥಿ , ನೀವು ನಪುಂಸಕರಲ್ಲ. ವೀರರು, ನಾವು ನಪುಂಸಕರು ಎಂದು ಭಾವಿಸು. ನಾವು ಸಾಯಲು ಬಯಸುವ ಜನ ಅಲ್ಲ. ಈ ಲೋಕದಲ್ಲಿ ಜೀವಗಳ್ಳರು ಯಾರು ಯಾರಿದ್ದಾರೋ ಅವರಿಗೆಲ್ಲ ಗುರು ನಾನು ಎಂದು ತಿಳಿದುಕೊ. ದಯವಿಟ್ಟು ನಮ್ಮನ್ನು ಬಿಟ್ಟುಕೊಡು” ಎಂದು ಅಂಗಲಾಚಿದ.
ಪದಾರ್ಥ (ಕ.ಗ.ಪ)
ಹೇವ-ಅಸಹ್ಯ,
ಟಿಪ್ಪನೀ (ಕ.ಗ.ಪ)
- ಹಿಂದಿನ ಅಂತಃಪುರದ ಹೆಂಗೆಳೆಯರೆದುರಿಗಿನ ಮಾತಿಗೂ ವಾಸ್ತವದ ನೆಲೆಗಟ್ಟಿನ ಮಾತಿಗೂ ಇರುವ ಅಂತರವೇ ಇಲ್ಲಿ ಹಾಸ್ಯಕ್ಕೆ ವಸ್ತು. ಈ ಎರಡು ಪಾತ್ರಗಳಲ್ಲೂ ಉತ್ತರನೊಬ್ಬನೇ ಮಿಂಚಿರುವುದನ್ನು ನೋಡಬಹುದು.
- ಕುಮಾರವ್ಯಾಸನು ಸಂಭಾಷಣೆಯ ಸಂದರ್ಭದಲ್ಲಿ ನಾಟ್ಯ ಗುಣವನ್ನು ಮೆರೆಯುತ್ತಾನೆ ಎಂಬುದಕ್ಕೆ ಈ ಪ್ರಕರಣವೂ ಸಾಕ್ಷಿ.
ಮೂಲ ...{Loading}...
ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ ॥20॥
೦೨೧ ಹರುಕನೇ ನೀನೆಲವೊ ...{Loading}...
ಹರುಕನೇ ನೀನೆಲವೊ ರಾಯರೊ
ಳುರುವ ನೃಪ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ಧುರಭರವು
ಸರಿಗಳೆಯದಪಕೀರ್ತಿ ರವಿ ಶಶಿ
ಮುರಿದು ಬೀಳ್ವನ್ನಬರವೆಲೆ ನರ
ಗುರಿಯೆ ನಡೆ ಕಾಳಗಕೆನುತ ಹಿಡಿದೆಳೆದನುತ್ತರನ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಛೀ ! ಉತ್ತರ ನೀನು ವೀರನಲ್ಲ ಹರುಕ. ನಿಮ್ಮ ತಂದೆಯಾದರೋ ಕ್ಷತ್ರಿಯ ರಾಜರುಗಳಲ್ಲಿ ಶ್ರೇಷ್ಠನಾದ ರಾಜ. ನೀನು ಯುವಕ. ತಾರುಣ್ಯದಲ್ಲಿ ಯುದ್ಧಕಾರ್ಯವನ್ನು ಒಪ್ಪಿಕೊಂಡು ಇರಿದು ಮೆರೆಯಬೇಕಲ್ಲವೆ ? ಅಲ್ಲದೆ ತಾರುಣ್ಯದ ಬಲವೂ ನಿನಗಿದೆ. ಹಾಗೆ ಮಾಡದೆ ಹೇಡಿಯಾದರೆ ಸರಿಯಲ್ಲ. ಅಪಕೀರ್ತಿ ಎಂಬುದು ರವಿ ಶಶಿಗಳಿರುವ ತನಕ ಹೋಗುವುದೇ ಇಲ್ಲ. ಎಲೈ ನರವೇಷದ ಕುರಿ ! ನಡೆ, ಯುದ್ಧ ಮಾಡು” ಎಂದು ಹೇಳುತ್ತ ಉತ್ತರನನ್ನು ಜೋರಾಗಿ ಎಳೆದ.
ಪದಾರ್ಥ (ಕ.ಗ.ಪ)
ಹರುಕ-ಇದು ಒಂದು ಗ್ರಾಮೀಣ ಬೈಗುಳ, ಸಡಿಲ ಸ್ವಭಾವದವನು, ನೀಚ. ಪಱುಕ>ಪರುಕ, ಉರುವ-ಶ್ರೇಷ್ಠ, ಅವಸರ-ಸಂದರ್ಭ, ಧುರಭರ- ಉಕ್ಕುತ್ತಿರುವ ಉದ್ದಾಮವಾದ, ಅತಿಶಯವಾದ, ಸರಿಗಳೆ-ಬಿಟ್ಟು ಹೋಗು, ಬೀಳ್ವನ್ನ ಬರ-ಬೀಳ್ವ ಅನ್ನವರ > ಅನ್ನಬರ-ಬೀಳುವ ತನಕ
ಮೂಲ ...{Loading}...
ಹರುಕನೇ ನೀನೆಲವೊ ರಾಯರೊ
ಳುರುವ ನೃಪ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ಧುರಭರವು
ಸರಿಗಳೆಯದಪಕೀರ್ತಿ ರವಿ ಶಶಿ
ಮುರಿದು ಬೀಳ್ವನ್ನಬರವೆಲೆ ನರ
ಗುರಿಯೆ ನಡೆ ಕಾಳಗಕೆನುತ ಹಿಡಿದೆಳೆದನುತ್ತರನ ॥21॥
೦೨೨ ಕೊಳುಗುಳದೊಳೋಡಿದೊಡೆ ...{Loading}...
ಕೊಳುಗುಳದೊಳೋಡಿದೊಡೆ ಹಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹಜ್ಜೆಯನಿಡಲು ಹಜ್ಜೆಯೊಳಶ್ವಮೇಧ ಫಲ
ಅಳಿದನಾದೊಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲನನುಗ್ಗಡಿಸುವನು ವೀರ ಸ್ವರ್ಗವಹುದೆಂದ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಯುದ್ಧ ಭೂಮಿಗೆ ಬಂದು ಪಲಾಯನ ಮಾಡಿದರೆ ಓಡಿದ ಒಂದೊಂದು ಹೆಜ್ಜೆಗೂ ಮಹಾಪಾತಕವು ಅಮರಿಕೊಳ್ಳುತ್ತದೆ. ಅದೇ ಹೆಜ್ಜೆಯನ್ನು ಪ್ರೀತಿಯಿಂದ ಮುಂದೆ ಇಟ್ಟರೆ ಒಂದೊಂದು ಹೆಜ್ಜೆಗೂ ಅಶ್ವಮೇಧಯಾಗ ಮಾಡಿದ ಫಲ ಲಭಿಸುತ್ತದೆ. ಒಂದು ವೇಳೆ ಯುದ್ಧ ಮಾಡುತ್ತ ಸತ್ತರೆ ದೇವಲೋಕದ ಸುಂದರಿಯರು ನಿನಗೆ ತೊತ್ತಿರುಗಳಾಗುತ್ತಾರೆ. ಆಗ ನಿನಗೆ ಪದವಿಯನ್ನಿತ್ತು ದೇವೇಂದ್ರನೇ ನೆಲವನ್ನು ಉಗ್ಗಡಿಸುತ್ತಾನೆ ಅಂದರೆ. ನಿನಗೆ ವೀರಸ್ವರ್ಗವು ಲಭಿಸುತ್ತದೆ” ಎಂದು ಅರ್ಜುನ ಹೇಳುತ್ತಾನೆ (ಇಂದ್ರ ಪದವಿ ನಿನಗೆ ದೊರೆಯುತ್ತದೆ ಎಂಬರ್ಥವೂ ಘಟಿಸುತ್ತದೆ)
ಪದಾರ್ಥ (ಕ.ಗ.ಪ)
ಕೊಳುಗುಳ-ಯುದ್ಧ, ಅಶ್ವಮೇಧ ಫಲ-ಅಶ್ವಮೇಧ ಯಾಗ ಮಾಡಿದರೆ ಬರುವ ಪುಣ್ಯಫಲ, ಅಳಿ-ಸಾಯಿ, ಉಗ್ಗಡಿಸು-ಉದ್ಘೋಷಿಸು
ಮೂಲ ...{Loading}...
ಕೊಳುಗುಳದೊಳೋಡಿದೊಡೆ ಹಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹಜ್ಜೆಯನಿಡಲು ಹಜ್ಜೆಯೊಳಶ್ವಮೇಧ ಫಲ
ಅಳಿದನಾದೊಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲನನುಗ್ಗಡಿಸುವನು ವೀರ ಸ್ವರ್ಗವಹುದೆಂದ ॥22॥
೦೨೩ ಧುರದಲೋಡಿದ ಪಾತಕವ ...{Loading}...
ಧುರದಲೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಮಗೆ
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನವೆಮಗಿಂದ್ರ ಪದವಿಯು ಬಿಟ್ಟು ಕಳುಹೆಂದ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆದರೆ ಬೃಹನ್ನಳೆ ! ಯುದ್ಧದಲ್ಲಿ ಪಲಾಯನ ಮಾಡಿದರೆ ಪಾಪ ಎಂದೆಯಲ್ಲವೆ ? ಅದನ್ನು ಬ್ರಾಹ್ಮಣರು ಮಂತ್ರ ಪ್ರಾಯಶ್ಚಿತ್ತಗಳಿಂದ ಹೋಗಲಾಡಿಸುತ್ತಾರೆ. ಇನ್ನು ಅಶ್ವಮೇಧ ಫಲ ಎಂದೆಯಲ್ಲ. ಸತ್ತು ಆ ಫಲ ಪಡೆಯುವ ಬದಲಿಗೆ ಭೂಮಿಯಲ್ಲಿ ಬದುಕಿಕೊಂಡಿದ್ದೇ ಅಶ್ವಮೇಧ ಯಾಗವನ್ನು ಮಾಡಬಹುದಲ್ಲವೆ ? ನಮಗೆ ದೇವಲೋಕದ ಲಲನೆಯರು ಬೇಕಾಗಿಲ್ಲ. ನಮ್ಮ ಅರಮನೆಯಲ್ಲಿರುವ ಸುಂದರಿಯರೇ ಸಾಕು ? ಇಂದ್ರ ಪದವಿ ಎಂದೆಯಲ್ಲವೆ ? ನಮ್ಮ ಕೈಯಲ್ಲಿರುವ ರಾಜ್ಯದ ಅರಸುತನವೇ ನಮಗೆ ಇಂದ್ರ ಪದವಿ. ಆದುದರಿಂದ ನಮ್ಮನ್ನು ಬಿಟ್ಟು ಉಪಕಾರ ಮಾಡು” ಎಂದು ಉತ್ತರನು ವಾದಿಸಿದ.
ಪದಾರ್ಥ (ಕ.ಗ.ಪ)
ಧುರ-ಯುದ್ಧ, ಭೂಸುರ-ಬ್ರಾಹ್ಮಣ
ಮೂಲ ...{Loading}...
ಧುರದಲೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಮಗೆ
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನವೆಮಗಿಂದ್ರ ಪದವಿಯು ಬಿಟ್ಟು ಕಳುಹೆಂದ ॥23॥
೦೨೪ ಆಳೊಳೊಡ್ಡುಳ್ಳವನು ಭಾರಿಯ ...{Loading}...
ಆಳೊಳೊಡ್ಡುಳ್ಳವನು ಭಾರಿಯ
ತೋಳುಗಳ ಹೊತ್ತವನು ಮನೆಯಲಿ
ಸೂಳೆಯರ ಮುಂದೊದರಿ ಬಾಷ್ಕಳಗೆಡೆದು ಬಂದೀಗ
ಕೋಲನಿಕ್ಕದೆ ಗಾಯವಡೆಯದೆ
ಕಾಲು ವೇಗವ ತೋರಿದೊಡೆ ನಿ
ನ್ನೋಲಗದೊಳೆಂತಕಟ ನಾಚದೆ ಕುಳ್ಳಿತಿಹೆಯೆಂದ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ! ಉತ್ತರ ! ನೀನು ವೀರರಲ್ಲಿ ಸಾಮಥ್ರ್ಯ ಹೊಂದಿದವನು. ಭಾರಿಯ ತೋಳುಗಳನ್ನು ಹೊತ್ತವನು. ಮನೆಯಲ್ಲಿ ಮಾತ್ರ ಸೂಳೆಯರ ಮುಂದೆ ಅಸಂಬದ್ಧವಾದುದನ್ನು ಒದರಿ ಈಗ ಬಾಣ ಪ್ರಯೋಗ ಮಾಡದೆ, ಗಾಯಗೊಳ್ಳದೆ ಕಾಲುಗಳ ವೇಗವನ್ನು ಮಾತ್ರ ತೋರಿಸುತ್ತಿದ್ದೀಯಲ್ಲ. ನಾಳೆ ರಾಜಸಭೆಯಲ್ಲಿ ನಾಚಿಕೆಯಿಲ್ಲದೆ ಹೇಗೆ ಕುಳಿತುಕೊಳ್ಳುತ್ತೀಯೆ ?” ಎಂದು ಅರ್ಜುನ ಅನ್ನುತ್ತಾನೆ.
ಪದಾರ್ಥ (ಕ.ಗ.ಪ)
ಆಳು-ವೀರ, ಒಡ್ಡುಉಳ್ಳವನು-ಸಮರ್ಥ, ಬಾಷ್ಕಳ ಗೆಡೆ-ಅಸಂಬದ್ಧವಾಗಿ ಮಾತಾಡು-ಸ್ವೈರ ವೃತ್ತಿ ತೋರಿಸು ಸುಳ್ಳು ಹೇಳು, ಕೋಲು-ಬಾಣ, ಕಾಲುವೇಗ-ಪಲಾಯನ ವೇಗ, ಓಲಗ-ರಾಜಸಭೆ, ಕುಳ್ಳಿತಿಹೆ-ಕುಳಿತಿಹೆ (ಛಂದಸ್ಸಿಗಾಗಿ ಈ ಬದಲಾವಣೆ)
ಮೂಲ ...{Loading}...
ಆಳೊಳೊಡ್ಡುಳ್ಳವನು ಭಾರಿಯ
ತೋಳುಗಳ ಹೊತ್ತವನು ಮನೆಯಲಿ
ಸೂಳೆಯರ ಮುಂದೊದರಿ ಬಾಷ್ಕಳಗೆಡೆದು ಬಂದೀಗ
ಕೋಲನಿಕ್ಕದೆ ಗಾಯವಡೆಯದೆ
ಕಾಲು ವೇಗವ ತೋರಿದೊಡೆ ನಿ
ನ್ನೋಲಗದೊಳೆಂತಕಟ ನಾಚದೆ ಕುಳ್ಳಿತಿಹೆಯೆಂದ ॥24॥
೦೨೫ ಕೆತ್ತುಕೊಣ್ಡಾ ನಾಚಿಕೆಗೆ ...{Loading}...
ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲ್ಲದೆ ಬಿಟ್ಟು ಕಳುಹೆಂದ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕೆತ್ತುಕೊಂಡು ಆ ನಾಚಿಕೆಗೆ ಚುಚ್ಚಿಕೊಳ್ಳಬೇಕು” ಎಂಬ ಗಾದೆಯನ್ನು ನಮಗೆ ಅನ್ವಯಿಸಬೇಡ . ನಮಗೆ ಯುದ್ಧವೆಂದರೆ ಭಯ. ನಿಜವಾಗಿ ನಾವು ಕಾಳಗಕ್ಕೆ ಹೆದರುವ ಜನ ಎಂದೇ ತಿಳಿ. ನೀನು ನಮ್ಮ ಸೇವಕ. ಆಪ್ತನಾಗಿರಬೇಕಾದ ಸೇವಕನೇ ಶತ್ರುವಿನ ಹಾಗೆ ನಮ್ಮ ಪಾಲಿನ ಮೃತ್ಯು ಆಗಬಹುದೆ ? ಅಯ್ಯಾ ! ನಿನಗೇನು ಬೇಕು ಹೇಳು. ನೀನು ಬೇಡಿದುದನ್ನು ಕೊಟ್ಟು ಕಾಪಾಡುತ್ತೇನೆ. ದಯವಿಟ್ಟು ನನ್ನನ್ನು ಕೊಲ್ಲದೆ ಬಿಟ್ಟು ಬಿಡು ಎಂದು ಉತ್ತರನು ಅರ್ಜುನನನ್ನು ಅಂಗಲಾಚಿದ.
ಪದಾರ್ಥ (ಕ.ಗ.ಪ)
ಕೆತ್ತುಕೊಂಡು…. ಬೇಕು ಇದೊಂದು ಗಾದೆ “ನಡುಗುತ್ತ ಆ ನಡುಗಿದ ನಾಚಿಕೆಗೆ ಚುಚ್ಚಿಕೊಳ್ಳಬೇಕು” ಎಂಬ ಗಾದೆ ಮಾತು, ಹೊದ್ದಿಸು-ಅನ್ವಯಿಸು, ತೆತ್ತಿಗ-ಸೇವಕ, ಮಿತ್ತುವಹರೇ-ಮಿತ್ತು+ಅಹರೇ-ಮೃತ್ಯವಾಗಬಹುದೆ ?
ಮೂಲ ...{Loading}...
ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲ್ಲದೆ ಬಿಟ್ಟು ಕಳುಹೆಂದ ॥25॥
೦೨೬ ವಳಿತವನು ವಾರುವನು ...{Loading}...
ವಳಿತವನು ವಾರುವನು ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿ ಕೊಡುವೆನು ರಾಜಭವನದಲಿ
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಂದುವರಿದು ಉತ್ತರನು “ವಳಿತವನ್ನು ಅಂದರೆ ಯಾವುದಾದರೂ ಭೂ ಪ್ರದೇಶವನ್ನು, ವಾರುವ (ಕುದುರೆ) ಮತ್ತು ಮುತ್ತು ರತ್ನಗಳ ಅಲಂಕಾರದೊಡವೆಗಳು ಇವನ್ನೆಲ್ಲ ನಾನು ರಾಜಭವನದಲ್ಲಿ ನಿನಗೆ ಕೊಡಿಸುತ್ತೇನೆ. ಅಯ್ಯಾ ! ಬೃಹನ್ನಳೆ , ನಿನ್ನನ್ನು ಸಾಕಿದಾತನು ನಮ್ಮ ತಂದೆ. ಹಾಗೆ ಕಾಪಾಡಿದುದಕ್ಕೆ ಹೀಗೆ ನಡೆದುಕೊಳ್ಳುತ್ತಿದ್ದೀಯಲ್ಲ. ನಿನ್ನದು ಕಲ್ಲು ಮನಸ್ಸಲ್ಲವೆ ?” ಎಂದು ಹೇಳಿದ. ಆಗ ಪಾರ್ಥನು ಹೀಗೆ ಹೇಳಿದ.
ಪದಾರ್ಥ (ಕ.ಗ.ಪ)
ವಳಿತ-ಪ್ರದೇಶ, ರಾಜ್ಯ, ವಾರುವ-ಕುದುರೆ, ಮುಕ್ತಾವಳಿ-ಮುತ್ತು, ಬೊಪ್ಪ-ತಂದೆ, ಕೈಯೊಡನೆ-ಕೂಡಲೇ
ಮೂಲ ...{Loading}...
ವಳಿತವನು ವಾರುವನು ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿ ಕೊಡುವೆನು ರಾಜಭವನದಲಿ
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ ॥26॥
೦೨೭ ಪೊಡವಿಪತಿಗಳ ಬಸುರ ...{Loading}...
ಪೊಡವಿಪತಿಗಳ ಬಸುರ ಬಂದೀ
ಯೊಡಲ ಕಕ್ಕುಲಿತೆಯನು ಕಾಳಗ
ದೆಡೆಗೆ ಮಾಡಿದರಿಲ್ಲ ಭೂತ ಭವಿಷ್ಯಮಾನದಲಿ
ನುಡಿಯಬಹುದೇ ಬಂಜೆವಾತನು
ಸುಡು ಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರೆಗೆ ಕಾದಲು ಬೇಡ ಬಾಯೆಂದ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು “ಅಲ್ಲ ಉತ್ತರ ಕುಮಾರ ! ರಾಜ ಸಂತತಿಯಲ್ಲಿ ಹುಟ್ಟಿ ಬಂದು ನಿನ್ನಂಥವನು ಹೀಗೆ ಯುದ್ಧಭೂಮಿಯಲ್ಲಿ ದೇಹದ ಮೇಲಿನ ಆಸೆಯನ್ನು ಇರಿಸಿಕೊಂಡಿದ್ದೀಯೆ. ಆದರೆ ಒಡಲಮೋಹವೊಂದನ್ನೇ ಇರಿಸಿಕೊಂಡ ಕ್ಷತ್ರಿಯರು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಛೀ ! ಉತ್ತರ ! ವ್ಯರ್ಥವಾದ ಮಾತುಗಳನ್ನು ಆಡಬಹುದೆ ? ಸುಡು ಸುಡು ! ಅಯ್ಯಾ ! ರಾಜ ಮರ್ಯಾದೆಯನ್ನು ಮೀರಿದವನೆ ! ನಡೆ ರಥದ ಬಳಿಗೆ ಬಾ. ನೀನೇನೂ ಕಾದಬೇಕಾಗಿಲ್ಲ. ಸುಮ್ಮನೆ ಬಾ’ ಎಂದು ಉತ್ತರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಪೊಡವಿಪತಿ-ರಾಜ, ಬಸುರ ಬಂದು (ವಿಭಕ್ತಿ ಪಲ್ಲಟ) ಬಸುರಲ್ಲಿ ಬಂದು, ಕಕ್ಕುಲಿತೆ-ಮೋಹ, ಬಂಜೆವಾತು-ವ್ಯರ್ಥಾಲಾಪ
ಮೂಲ ...{Loading}...
ಪೊಡವಿಪತಿಗಳ ಬಸುರ ಬಂದೀ
ಯೊಡಲ ಕಕ್ಕುಲಿತೆಯನು ಕಾಳಗ
ದೆಡೆಗೆ ಮಾಡಿದರಿಲ್ಲ ಭೂತ ಭವಿಷ್ಯಮಾನದಲಿ
ನುಡಿಯಬಹುದೇ ಬಂಜೆವಾತನು
ಸುಡು ಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರೆಗೆ ಕಾದಲು ಬೇಡ ಬಾಯೆಂದ ॥27॥
೦೨೮ ಕಾದುವೆನು ಮಾರೊಡ್ಡಿನಲಿ ...{Loading}...
ಕಾದುವೆನು ಮಾರೊಡ್ಡಿನಲಿ ನೀ
ನೈದಿಸೆನ್ನಯ ರಥವ ಮನದಲಿ
ಭೇದತನವನು ಬಿಟ್ಟು ಸಾರಥಿಯಾಗು ಸಾಕೆನಲು
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯವಲ್ಲೆಂದ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ! ಉತ್ತರ ಕುಮಾರ ! ನಾನೇ ಶತ್ರುಗಳ ಮೇಲೆ ಯುದ್ಧವನ್ನು ಮಾಡುತ್ತೇನೆ. ನೀನು ಸುಮ್ಮನೆ ರಥವನ್ನು ನಡೆಸುವ ಸಾರಥಿಯಾಗು. ಮನಸ್ಸಿನಲ್ಲಿ ಈ ದ್ವಂದ್ವ ಬುದ್ಧಿಯನ್ನು ಬಿಟ್ಟು (ಭೇದತನ ಎಂದರೆ ರಾಜಕುಮಾರನಾಗಿದ್ದವನು ಸಾರಥಿಯಾಗುವುದೆ ಎಂಬ ಭೇದ) ಸಾರಥಿಯ ಕೆಲಸ ಮಾಡು” ಎಂದು ಅರ್ಜುನ ಹೇಳಿದಾಗ ಉತ್ತರನು
“ಹಾಗಾದರೆ ಈ ಹಿಂದೆ ನೀನು ಯಾವ ರಾಜರ ಮೇಲೆ ಯುದ್ಧ ಮಾಡಿ ಗೆದ್ದಿದ್ದೀ ಹೇಳು. ಕ್ಷುದ್ರ ಬೃಹನ್ನಳೆಯಾದ ನಿನಗೆ ಈ ಯುದ್ಧ ಎಂಬುದು ಒಂದು ನಾಟ್ಯ ವಿದ್ಯೆಯಲ್ಲವಲ್ಲ ?
ಪದಾರ್ಥ (ಕ.ಗ.ಪ)
ಮಾರೊಡ್ಡು-ಶತ್ರುಸೇನೆ, ಐದಿಸು-ನಡೆಸು, ಹುಲು-ಅಲ್ಪ, ಕದನ ನಾಟಕ ವಿದ್ಯವಲ್ಲ… ಉತ್ತರನ ಪ್ರಕಾರ ಭರತನಾಟ್ಯ ಎಂದರೆ ಕುಣಿತ. ನರ್ತನ ಸಂಭಾಷಣೆ ಎಂಬ ವಿದ್ಯೆಗಳು, ಅವುಗಳಲ್ಲಿ ಯುದ್ಧ ವಿದ್ಯೆ ಸೇರಿಲ್ಲವಲ್ಲ ಎಂಬ ವ್ಯಂಗ್ಯ.
ಮೂಲ ...{Loading}...
ಕಾದುವೆನು ಮಾರೊಡ್ಡಿನಲಿ ನೀ
ನೈದಿಸೆನ್ನಯ ರಥವ ಮನದಲಿ
ಭೇದತನವನು ಬಿಟ್ಟು ಸಾರಥಿಯಾಗು ಸಾಕೆನಲು
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯವಲ್ಲೆಂದ ॥28॥
೦೨೯ ಎನ್ನವನ್ದಿಗ ರಾಜ ...{Loading}...
ಎನ್ನವಂದಿಗ ರಾಜ ಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ಯರನು ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇಯೀ
ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹೆಂದ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರ ಹೇಳಿದ “ಅಲ್ಲ ಬೃಹನ್ನಳೆ ನನ್ನಂಥ ಕ್ಷತ್ರಿಯ ವೀರ ರಾಜ ಪುತ್ರನಿಗೇ ಎದುರು ನಿಲ್ಲಲು ಸಾಧ್ಯವಾಗುತ್ತಿಲ್ಲ. ಅಂಥದರಲ್ಲಿ ನೀನು ನನ್ನನ್ನು ಸಾರಥಿಯಾಗಿ ಮಾಡಿಕೊಂಡು ಶತ್ರುಸೇನೆಯನ್ನು ಸೋಲಿಸುತ್ತೀಯೇನು? ಇನ್ನೊಬ್ಬರ ಪರಾಕ್ರಮವನ್ನು ಖಚಿತವಾಗಿ ತಿಳಿಯಬಹುದು. ಆದರೆ ನಿನ್ನ ಪರಾಕ್ರಮವನ್ನು ನೀನೇ ತಿಳಿದಿದ್ದೀಯೇನು ? ನೋಡು ಈ ಮೋಸದ ಮಾತೆಲ್ಲ ನಮಗೆ ಚೆನ್ನಾಗಿ ಗೊತ್ತು. ನಮ್ಮನ್ನು ಬಿಟ್ಟು ಬಿಡು”
ಪದಾರ್ಥ (ಕ.ಗ.ಪ)
ಎನ್ನವಂದಿಗ-ನನ್ನಂಥ, ಮೊಗಸು-ಎದುರಿಸಿ ನಿಲ್ಲು, ಹೋರಾಡು, ದಾಳಿಮಾಡು.
ಟಿಪ್ಪನೀ (ಕ.ಗ.ಪ)
(ವೀರನಾದವನು ಬೇರೆಯವರಿಗೆ ತನ್ನ ಪರಾಕ್ರಮ ತಿಳಿಯುವಂತೆ ಮಾಡುತ್ತಾನೆಯೇ ಹೊgತು ತಾನೇ ವೀರನೆಂದು ಪ್ರಕಟಿಸಿಕೊಳ್ಳುವುದಿಲ್ಲ)
ಇಲ್ಲಿ ಉತ್ತರನು ಬೃಹನ್ನಳೆಯು ಕವಚ ತೊಟ್ಟುಕೊಳ್ಳುವಾಗ ನಡೆದುಕೊಂಡ ರೀತಿ, ಮಾತುಕಥೆ ಎಲ್ಲವನ್ನು ಗಮನಿಸಿ ಈತ ಹೋರಾಟಗಾರನಲ್ಲ ಎಂದು ಭಾವಿಸಿದ್ದ. ಜೊತೆಗೆ ತಾನು ಒಳ್ಳೆಯ ಸಾರಥಿಯಲ್ಲ ಎಂಬುದೂ ಅವನಿಗೆ ಗೊತ್ತಿತ್ತು. ಹೀಗಾಗಿ ಇಬ್ಬರು ಅಸಮರ್ಥರು ಸೇರಿ ಭಾರಿಯ ಶತ್ರುಗಳನ್ನು ಎದುರಿಸಬಲ್ಲೆವೇ ಎಂಬ ಅನುಮಾನದಿಂದ ಉತ್ತರನು ಹಾಸ್ಯ ಮಾಡಿದ್ದಾನೆ.
ಮೂಲ ...{Loading}...
ಎನ್ನವಂದಿಗ ರಾಜ ಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ಯರನು ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇಯೀ
ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹೆಂದ ॥29॥
೦೩೦ ಎಲವೊ ಸಾರಥಿಯಾಗು ...{Loading}...
ಎಲವೊ ಸಾರಥಿಯಾಗು ನಡೆ ನೀ
ಗಳಹಿದೊಡೆ ಕಟವಾಯ ಕೊಯ್ವೆನು
ಕೊಲುವೆನೀ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ
ಬಳಿಕ ನೀ ನಗು ನಡೆಯೆನುತ ರಿಪು
ಬಲ ಭಯಂಕರನುತ್ತರನ ಹೆಡ
ತಲೆಯ ಹಗರಿನೊಳೌಂಕಿ ತಂದನು ರಥವನೇರಿಸಿದ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ಉತ್ತರ. ನೀನು ಈಗ ಸುಮ್ಮನೆ ಸಾರಥಿಯಾಗು ನಡೆ. ಅದು ಬಿಟ್ಟು ಹರಟಲು ಹೊರಟರೆ ನಿನ್ನ ಕಟವಾಯನ್ನು ಕೊಯ್ದು ಬಿಡುತ್ತೇನೆ. ಇನ್ನೊಂದು ಮಾತು. ನಿನ್ನ ಸಾಕ್ಷಿಯಾಗಿ ಈ ಸಮಸ್ತ ಶತ್ರು ವೀರರನ್ನು ಕೊಲ್ಲುತ್ತೇನೆ. ಆ ಮೇಲೆ ಬೇಕಾದರೆ ನೀನು ನಗುವಿಯಂತೆ ! ನಡೆ” ಎಂದು ಹೇಳಿ ಶತ್ರುಭಯಂಕರವಾದ ಅರ್ಜುನನು ಉತ್ತರನ ಕುತ್ತಿಗೆಯನ್ನು ಅವುಕಿ ಹಿಡಿದು ಕರೆತಂದು ರಥವನ್ನು ಹತ್ತಿಸಿದ.
ಪದಾರ್ಥ (ಕ.ಗ.ಪ)
ಗಳಹು-ಹರಟು, ಕಟವಾಯಿ-ಬಾಯಿಯ ಎರಡು ಬದಿಗಳು, ಪ್ರತಿಭಟ-ಶತ್ರು ಯೋಧ, ನಿಕಾಯ-ಸಮೂಹ,
ಹಗರು- ಕವೆಗೋಲಿನಂತೆ ಸೀಳಿದ ಬಿದಿರು. ಅದರಲ್ಲಿ ಕುತ್ತಿಗೆ ಅವುಕಿದರೆ ಮಿಸುಗಾಡಲಾಗುವುದಿಲ್ಲ.
ಪಾಠಾನ್ತರ (ಕ.ಗ.ಪ)
ಹದರಿನೊಳು-ಚಮತ್ಕಾರದ ಮಾತಿನಲ್ಲಿ ಎಂದರ್ಥ. ಇದು ಪ್ರಸಂಗಕ್ಕೆ ಹೊಂದುವುದಿಲ್ಲ. ಕೃಷ್ಣ ಜೋಯಿಸರ ‘ಹಗರಿನೊಳೌಂಕಿ’ ಎಂಬ ಪಾಠವಿದ್ದು ಇದನ್ನು ಸ್ವೀಕರಿಸಲಾಗಿದೆ. ( ವಿರಾಟಪರ್ವ, ಮೈ.ವಿ.ವಿ.)
ಟಿಪ್ಪನೀ (ಕ.ಗ.ಪ)
ಬಳಿಕ ನೀ ನಗು… ಬೃಹನ್ನಳೆಯು ‘ನಾನೇ ಯುದ್ಧ ಮಾಡುತ್ತೇನೆ’ ಎಂದಾಗ ಉತ್ತರ ಜೋರಾಗಿ ನಕ್ಕಿದ್ದ. ಅದನ್ನು ಜ್ಞಾಪಿಸಿಕೊಂಡು ಅರ್ಜುನ ಈ ಮಾತು ಹೇಳುತ್ತಿದ್ದಾನೆ
ಮೂಲ ...{Loading}...
ಎಲವೊ ಸಾರಥಿಯಾಗು ನಡೆ ನೀ
ಗಳಹಿದೊಡೆ ಕಟವಾಯ ಕೊಯ್ವೆನು
ಕೊಲುವೆನೀ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ
ಬಳಿಕ ನೀ ನಗು ನಡೆಯೆನುತ ರಿಪು
ಬಲ ಭಯಂಕರನುತ್ತರನ ಹೆಡ
ತಲೆಯ ಹಗರಿನೊಳೌಂಕಿ ತಂದನು ರಥವನೇರಿಸಿದ ॥30॥
೦೩೧ ಖೇಡತನ ಬೇಡೆಲವೊ ...{Loading}...
ಖೇಡತನ ಬೇಡೆಲವೊ ರಣದೊಳ
ಗೋಡಿಸುವೆನಹಿತರನು ಹರಣವ
ಹೂಡಿಸುವೆನಂತಕನ ನಗರಿಗೆ ಥಟ್ಟನಡೆಹೊಯ್ದು
ಕೋಡದಿರು ಕೊಂಕದಿರು ಧೈರ್ಯವ
ಮಾಡಿ ಸಾರಥಿಯಾಗೆನುತ ಕಲಿ
ಮಾಡಿ ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಉತ್ತರ ಕುಮಾರನಿಗೆ ಹೇಳಿದ : “ಅಯ್ಯಾ ! ಉತ್ತರ ! ಪುಕ್ಕಲುತನ ಬೇಡ. ಯುದ್ಧದಲ್ಲಿ ನಾನು ಶತ್ರುಗಳನ್ನು ಓಡಿಸುತ್ತೇನೆ. ತಟಕ್ಕನೆ ಹೊಡೆದು ಶತ್ರುಗಳನ್ನು (ಪ್ರಾಣಗಳನ್ನು) ಯಮನಗರಿಗೆ ಕಳಿಸುತ್ತೇನೆ. ನೀನು ಸ್ವಲ್ಪವೂ ಹೆದರಬೇಡ. ಹಿಂಜರಿಯ ಬೇಡ. ಧೈರ್ಯ ತಂದುಕೊಂಡು ರಥವನ್ನು ನಡೆಸು” ಹೀಗೆ ಹೇಳಿ ಉತ್ತರನಿಗೆ ಧೈರ್ಯ ತುಂಬಿ ಸಮೀಪದ ಬನ್ನಿ ಮರದ ಬಳಿಗೆ ಕರೆದೊಯ್ದು.
ಪದಾರ್ಥ (ಕ.ಗ.ಪ)
ಖೇಡತನ-ಅಂಜುಬುರುಕತನ, ಅಹಿತ-ಶತ್ರು, ಹರಣ-ಪ್ರಾಣ, ಶಮಿ-ಶಮೀವೃಕ್ಷ, ಬನ್ನಿಮರ ಪಾಂಡವರು ಶಸ್ತ್ರಾಸ್ತ್ರಗಳನ್ನಿರಿಸಿದ್ದ ಮರ.
ಮೂಲ ...{Loading}...
ಖೇಡತನ ಬೇಡೆಲವೊ ರಣದೊಳ
ಗೋಡಿಸುವೆನಹಿತರನು ಹರಣವ
ಹೂಡಿಸುವೆನಂತಕನ ನಗರಿಗೆ ಥಟ್ಟನಡೆಹೊಯ್ದು
ಕೋಡದಿರು ಕೊಂಕದಿರು ಧೈರ್ಯವ
ಮಾಡಿ ಸಾರಥಿಯಾಗೆನುತ ಕಲಿ
ಮಾಡಿ ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ ॥31॥
೦೩೨ ಮರನನೇರಿದರೊಳಗೆ ಪಾಣ್ಡವ ...{Loading}...
ಮರನನೇರಿದರೊಳಗೆ ಪಾಂಡವ
ರಿರಿಸಿ ಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಣ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು “ಉತ್ತರ ಕುಮಾರ ! ಈ ಮರದ ಮೇಲೆ ಪಾಂಡವರು ತಮ್ಮ ಆಯುಧಗಳನ್ನು ಇರಿಸಿ ಹೋಗಿದ್ದಾರೆ. ನೀನು ಮರವನ್ನು ಏರು. ಜೀವವುಳಿಸುವ ಸಾಮಥ್ರ್ಯವಿರುವ ಆಯುಧಗಳನ್ನು ನೀನು ತೆಗೆದುಕೊಡು” ಎಂದಾಗ ಉತ್ತರನು ಮೇಲೆ ನೋಡಿ “ಏನಿದು ಬೃಹನ್ನಳೆ ! ಇಲ್ಲಿ ಹೆಣ ಇದ್ದಂತಿದೆಯಲ್ಲ ! ರಾಜಕುಮಾರರು ಇದನ್ನು ಮುಟ್ಟುವುದು ಸಲ್ಲದು. ಬೃಹನ್ನಳೆ ಇದನ್ನು ಬಿಟ್ಟು ಬೇರೆಯಾವುದಾದರೂ ಕೆಲಸವನ್ನು ಹೇಳು” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಕೈದು-ಆಯುಧ, ಹರಣ-ಪ್ರಾಣ, ಭರಣ-ಉಳಿಸುವಿಕೆ, ಕ್ಷಮೆ-ಸಾಮಥ್ರ್ಯ, ಸೈರಣೆ, ಹರಣ ಭರಣ ಕ್ಷಮೆ - ಪ್ರಾಣವನ್ನು ಉಳಿಸುವ ಸಾಮಥ್ರ್ಯ
ಟಿಪ್ಪನೀ (ಕ.ಗ.ಪ)
ಈ ಶಸ್ತ್ರಾಸ್ತ್ರಗಳು ಜೀವಗಳನ್ನು ಉಳಿಸುವಂಥವು. ಇವುಗಳನ್ನು ಸಹನೆಯಿಂದ ಉತ್ತರನು ತೆಗೆದುಕೊಡಲಿ ಎಂಬ ಭಾವ… ? ಅಥವಾ ಪಾಂಡವರು ಹರಣ ಭರಣ ಕ್ಷಮೆಗಳಲ್ಲಿ ಇರಿಸಿ ಹೋಗಿದ್ದಾರೆ, ಅಂದರೆ ಮುಂದೆ ತಮ್ಮನ್ನು ಕಾಪಾಡಿಕೊಳ್ಳಲು ಸಹನೆಯಿಂದ ಇಲ್ಲಿ ಇರಿಸಿದ್ದಾರೆ ಎಂದೂ ಅರ್ಥ ಮಾಡಬಹುದು.
ಮೂಲ ...{Loading}...
ಮರನನೇರಿದರೊಳಗೆ ಪಾಂಡವ
ರಿರಿಸಿ ಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಣ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ ॥32॥
೦೩೩ ಹೊರಗೆ ತೊಗಲಲಿ ...{Loading}...
ಹೊರಗೆ ತೊಗಲಲಿ ಬಿಗಿದು ಕೆಲ ಬಲ
ನರಿಯದಂದದಿ ಪಾಂಡು ನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅರ್ಜುನ ಹೇಳಿದ : “ಹಾಗಲ್ಲ ಉತ್ತರ ! ಪಾಂಡವರು ಹೊರಗೆ ತೊಗಲಿನಿಂದ ಬಿಗಿದು ಯಾರಿಗೂ ಗೊತ್ತಾಗದಿರಲಿ ಎಂದು ಈ ಆಯುಧಗಳನ್ನು ಚರ್ಮದಿಂದ ಕಟ್ಟಿದ್ದಾರೆ. (ಹೆಣದಾಕಾರದಲ್ಲಿದೆಯೇ ಹೊರತು) ಇದು ಹೆಣವಲ್ಲ. ತೆಗೆ” ಆಗ ಉತ್ತರನು (ಸಮಾಧಾನಗೊಂಡು) ಭೀತಿಯನ್ನು ಬಿಟ್ಟು ಸೆರಗನ್ನು ಸಿಕ್ಕಿಸಿಕೊಂಡು ಮರದ ತುದಿಗೆ ಏರಿದ. ಹಗ್ಗಗಳನ್ನು ಕಿತ್ತು ಆಯುಧಗಳನ್ನು ಕಂಡ. ಕಂಡ ಕೂಡಲೇ ಅವನಿಗೆ ತುಂಬ ಭಯವಾಯಿತು.
ಪದಾರ್ಥ (ಕ.ಗ.ಪ)
ಕೈದು-ಆಯುಧ, ನೇಣ್-ಹಗ್ಗ, ಕೈದುವ ಬಿಟ್ಟು-ಆಯುಧಗಳನ್ನು ಮುಟ್ಟದೆ ಹಾಗೆಯೇ ಬಿಟ್ಟು…..
ಮೂಲ ...{Loading}...
ಹೊರಗೆ ತೊಗಲಲಿ ಬಿಗಿದು ಕೆಲ ಬಲ
ನರಿಯದಂದದಿ ಪಾಂಡು ನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು ॥33॥
೦೩೪ ಕಾಲ ಭುಜಗನ ...{Loading}...
ಕಾಲ ಭುಜಗನ ನಾಲಗೆಯೊ ಶರ
ಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ
ತೋಳು ಧರಿಸುವವೆಂತು ನೋಡಿದ
ಡಾಲಿಯುರೆ ಬೆಂದವು ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆನುತೋರಂತೆ ಹಲುಬಿದನು ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಆಯುಧ ದಿವ್ಯಾಸ್ತ್ರಗಳನ್ನು ಕಂಡ ಉತ್ತರ ಭೀತನಾಗಿದ್ದ. “ಇದೇನು ಕಾಲ ಸರ್ಪದ ನಾಲಗೆಯೋ ? ಶರಜಾಲವೋ ? ಪ್ರಳಯದ ಬೆಂಕಿಯ ಜ್ವಾಲೆಯೋ ? ಆಯುಧಗಳೋ ? ಕಾಲಯಮನ ಕೋರೆ ಹಲ್ಲುಗಳೋ ? ಇವುಗಳ ಭಾರವನ್ನು ತೋಳುಗಳು ತಡೆಯಬಲ್ಲವೆ ? ನೋಡಿದರೆ ಕಣ್ಣು ಬೆಂದು ಹೋಗುವಂತಿವೆಯಲ್ಲ. ಬೃಹನ್ನಳೆ ! ನೀನು ಕೆಟ್ಟ ಕೆಲಸ ಮಾಡಿದೆ. ನಮ್ಮನ್ನು ಕೊಂದೆ” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಕಾಲ ಭುಜಗ-ಕಾಲಸರ್ಪ, ಶರಜಾಲ-ಬಾಣ ಸಮೂಹ, ಕಲ್ಪಾಂತ-ಪ್ರಳಯಕಾಲದ, ವಹ್ನಿ-ಅಗ್ನಿ, ಕಾಳು ಮಾಡು-ಕೇಡು ಮಾಡು
ಮೂಲ ...{Loading}...
ಕಾಲ ಭುಜಗನ ನಾಲಗೆಯೊ ಶರ
ಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ
ತೋಳು ಧರಿಸುವವೆಂತು ನೋಡಿದ
ಡಾಲಿಯುರೆ ಬೆಂದವು ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆನುತೋರಂತೆ ಹಲುಬಿದನು ॥34॥
೦೩೫ ಹೊಗರ ಹೊರಳಿಯ ...{Loading}...
ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳ ತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹ ಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆನಸ್ತ್ರ ಸೀಮೆಯಲಿ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವೆಲ್ಲ ಕಾಂತಿಯ ಉಂಡೆಗಳಂತಿದ್ದವು. ಕತ್ತಿಯಂಚುಗಳು ಮಿಂಚುತ್ತಿದ್ದವು. ಚಿನ್ನದ ಹಿಡಿಕೆಗಳ ಪ್ರಭೆ ಅದ್ಭುತವಾಗಿತ್ತು. ಬಾಣ ಸಮೂಹದ ಕಾಂತಿ ಝಗಝಿಸುತ್ತಿತ್ತು, ಗಹಗಹಿಸಿ ನಗುವಂತಿತ್ತು. ಇದರಿಂದ ಉತ್ತರನು ಬೆಚ್ಚಿ ಕಣ್ಣು ಮುಚ್ಚಿ ಸಾರಥಿಗೆ ಹೇಳಿದ. “ಅಯ್ಯಾ ನಾನು ಅಸ್ತ್ರಗಳ ರಾಜ್ಯದಲ್ಲಿ ಸಿಕ್ಕಿಕೊಂಡಿದ್ದೇನೆ. ನನ್ನನ್ನು ಬಿಡಿಸು”.
(ಕೃಷ್ಣಜೋಯಿಸರ ಪಾಠ ಹೊಗರ ಹೊರಳಿಯ ಹೊಳೆವು, ಶರೌಘದ ನಯದ ಗಹಗಹಿಕೆ)
ಪದಾರ್ಥ (ಕ.ಗ.ಪ)
ಹೊಗರು-ಕಾಂತಿ, ಹೊರಳಿ-ಸಮೂಹ, ಬಾಯ್ಧಾರೆ-ಕತ್ತಿಯ ಅಲಗು, ತಳಪ-ಉಜ್ವಲತೆ, ಹೊನ್ನಾಯುಗ-ಚಿನ್ನದ ಹಿಡಿಕೆ, ಶರೌಘಾನಲ-ಬಾಣ ಸಮೂಹ ಎಂಬ ಬೆಂಕಿ, ಶರೌಘದ-ಬಾಣಗಳ, ಅನಲ-ಬೆಂಕಿ
ಮೂಲ ...{Loading}...
ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳ ತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹ ಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆನಸ್ತ್ರ ಸೀಮೆಯಲಿ ॥35॥
೦೩೬ ತುಡುಕಬಹುದೇ ದೋಷಿ ...{Loading}...
ತುಡುಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನು “ಅಬ್ಬಬ್ಬ ! ಪಾಪ ಮಾಡಿದವರು ಹಾವಿನ ಕೊಡಕ್ಕೆ ಕೈ ಇಕ್ಕಬಹುದೆ ? ಅಯ್ಯಾ ! ನಿನಗೆ ಇವು ಆಯುಧಗಳಂತೆ ಕಾಣುತ್ತವೆಯೆ ? ನನ್ನ ಕಣ್ಣಿಗೆ ಅವು ಬರಸಿಡಿಲ ಸಾಲುಗಳಾಗಿ ಕಾಣುತ್ತಿವೆಯಲ್ಲ. ನನಗೆ ಈ ಆಯುಧಗಳ ಮೇಲೆ ಕೈಯಿಡಲು ಹೆದರಿಕೆ. ಸಾರಥಿ ನನ್ನನ್ನು ಬಿಡಿಸು” ಎಂದು ಹೇಳಿದ. ಆಗ ಅರ್ಜುನನು “ಉತ್ತರ ! ಹೆದರಬೇಡ. ನಡುಗದೆ ಕೈಯಿಡು. ಹಿಡಿಯುವ ವೇಳೆ ಅರ್ಜುನನನ್ನು ಸ್ಮರಿಸು. ಆಗ ಇವು ನಿನ್ನ ಕೈವಶವಾಗುತ್ತವೆ” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ದಾವಣಿ-ಸಾಲು,
ಕೈ ದುಡುಕು-ಕೈ ಹಾಕು
ತುಡುಕು-ಹಿಡಿ,
ಟಿಪ್ಪನೀ (ಕ.ಗ.ಪ)
ತುಡುಕಬಹುದೇ… ಕೊಡನನು ಇದು ಅಪರಾಧ ನಿರ್ಣಯದ, ಶಿಕ್ಷೆಯ ಲೋಕಕ್ಕೆ ಸಂಬಂಧಿಸಿದ ಒಂದು ಗಾದೆ. ಹಿಂದೆ ಅಪರಾಧಿಗಳು ತಾವು ತಪ್ಪು ಮಾಡಿಲ್ಲ ಎಂದು ಸಾಬೀತು ಮಾಡಲು ಘಟಸರ್ಪ ವಿಧಾನವನ್ನನುಸರಿಸಬೇಕಾಗಿತ್ತು. ಅಂದರೆ ಕೊಡದೊಳಗೆ ಇಟ್ಟ ಹಾವನ್ನು ಮುಟ್ಟಬೇಕಾಗಿತ್ತು. ಅವನು ನಿರ್ದೋಷಿಯಾಗಿದ್ದರೆ ಸರ್ಪವು ಕಚ್ಚುತ್ತಿರಲಿಲ್ಲ ಎಂದು ನಂಬಿಕೆ, (ಇಂಥ ಪ್ರಯೋಗಗಳಿಗೆ ‘ದಿಬ್ಯ’ (ದಿವ್ಯ) ಎನ್ನುತ್ತಾರೆ ವಿವರಗಳಿಗೆ ನೋಡಿ ‘ದಿಬ್ಯ’ ಕನ್ನಡ ಕನ್ನಡ ನಿಘಂಟು). “ತುಡುಕಿದ ದೋಷಿಯನಲ್ಲದೆ ಪಿಡಿಯದು ಘಟಸರ್ಪಂ” (ಜಗನ್ನಾಥ ವಿಜಯ)
ಮೂಲ ...{Loading}...
ತುಡುಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ ॥36॥
೦೩೭ ಉಲಿದು ಸತ್ವದೊಳೌಕಿ ...{Loading}...
ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ
ಬಲುಹಿನಿಂದವಡೊತ್ತಿ ತೆಗೆ ತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಗುತ್ತ ಉತ್ತರನು ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಂಡು ಆ ಶಸ್ತ್ರಾಸ್ತ್ರವನ್ನು ತೆಕ್ಕೆಯಲ್ಲಿ ಎತ್ತಿಕೊಂಡು ಬೆವೆತು ಹೋದ. ಆಯಾಸಗೊಂಡು ಅರ್ಜುನನ ಕೈಗೆ ಗಾಂಡೀವ ಧನುಸ್ಸನ್ನು ನೀಡಿದ. ಅನಂತರ ಬಲ ಉಪಯೋಗಿಸಿ ಅವುಡು ಕಚ್ಚುತ್ತ ತೆಗೆ ತೆಗೆದು ಉಳಿದ ಬಿಲ್ಲುಗಳನ್ನು ನೀಡಿದ. ಆಯಾಸದಿಂದ ಮರವನ್ನು ನೆಮ್ಮಿ ಏದುಸಿರು ಬಿಡುತ್ತ ಉತ್ತರನು ಅರ್ಜುನನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಉಲಿ-ಶಬ್ದ ಮಾಡು, ಕಾಯ-ದೇಹ, ಕರತಳ-ಕೈ, ಢಗೆ-ಧಗೆ,ಗಾಂಡಿವ-ಅರ್ಜುನನ ಧನುಸ್ಸು
ಟಿಪ್ಪನೀ (ಕ.ಗ.ಪ)
ಗಾಂಡಿವ-ಅರ್ಜುನನ ಧನುಸ್ಸು, ಖಾಂಡವ ವನ ದಹನದ ಸಂದರ್ಭದಲ್ಲಿ ಅಗ್ನಿಯು ಅರ್ಜುನನಿಗೆ ಬಳುವಳಿಯಾಗಿ ಕೊಟ್ಟದ್ದು. ಇದರ ಹಗ್ಗವನ್ನು ಮೀಟಿ ಜೇವೊಡೆದರೆ ಶತ್ರುಗಳು ನಡುಗುತ್ತಿದ್ದರಂತೆ
ಮೂಲ ...{Loading}...
ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ
ಬಲುಹಿನಿಂದವಡೊತ್ತಿ ತೆಗೆ ತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ ॥37॥
೦೩೮ ಗಿರಿಯನೆತ್ತಲು ಬಹುದು ...{Loading}...
ಗಿರಿಯನೆತ್ತಲು ಬಹುದು ಬಿಲುಗಳ
ತೆರಳಿಚುವಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ
ಸರಳ ಹೊದೆಗಳ ದೇವದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರ ಕುಮಾರ ಹೇಳಿದ ಅಯ್ಯಾ ? ಬೃಹನ್ನಳೆ ! ಬೆಟ್ಟವನ್ನು ಬೇಕಾದರೂ ಎತ್ತಬಹುದು. ಆದರೆ ನನಗೆ ಈ ಬಿಲ್ಲುಗಳನ್ನು ಕೆರಳಿಸಲು ಸಾಧ್ಯವಿಲ್ಲ. ಬೃಹನ್ನಳೆ ! ನಿನಗೆ ಇದನ್ನು ಎತ್ತುವ ಸಾಮಥ್ರ್ಯ ಇದೆಯೇನು ? ಹಾಗಾದರೆ ನೀನೇ ಸಮರ್ಥ. ನಿನಗೆ ಶರಣು” ಎಂದು ಹೇಳುತ್ತ ಬಾಣಗಳನ್ನು ದೇವದತ್ತ ಎಂಬ ಶಂಖವನ್ನು ಪರಶು (ಕೊಡಲಿ) ತೋಮರ ಕುಂತ, ಕತ್ತಿ, ಮುದ್ಗರ ಗದಾ ದಂಡ ಮೊದಲಾದ ಶಸ್ತ್ರ, ಆಯುಧಗಳನ್ನು ಉತ್ತರನು ಬೃಹನ್ನಳೆಗೆ ತೆಗೆದು ಕೊಡುತ್ತ ಬಂದ.
ಪದಾರ್ಥ (ಕ.ಗ.ಪ)
ತೆರಳಿಚು-ಅಲುಗಾಡಿಸು , ಆಪೈ-(ನಿನಗೆ) ಸಾಧ್ಯ ಹೊರೆ-ಸಮೂಹ, ದೇವದತ್ತ-ಅರ್ಜುನನ ಬಳಿ ಇದ್ದ ಶಂಖ, ಪರಶು-ಕೊಡಲಿ, ತೋಮರ-ಗದೆ, ಒಂದು ಕಬ್ಬಿಣದ ಆಯುಧ, ಕುಂತ-ಈಟಿ, ಭರ್ಜಿ, ಅಸಿ-ಖಡ್ಗ, ಮುದ್ಗರ-ಒಂದು ಆಯುಧ
ಪಾಠಾನ್ತರ (ಕ.ಗ.ಪ)
ಕೆರಳಿಚುವಡಾರೆನು - ತೆರಳಿಚುವಡಾರೆನು
ವಿರಾಟಪರ್ವ, ಮೈ.ವಿ.ವಿ.
ಮೂಲ ...{Loading}...
ಗಿರಿಯನೆತ್ತಲು ಬಹುದು ಬಿಲುಗಳ
ತೆರಳಿಚುವಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ
ಸರಳ ಹೊದೆಗಳ ದೇವದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು ॥38॥
೦೩೯ ಹೇಳು ಸಾರಥಿ ...{Loading}...
ಹೇಳು ಸಾರಥಿ ಬಿಲ್ಲಿದಾವನ
ತೋಳಿಗಳವಡುವುದು ಮಹಾ ಶರ
ಜಾಲ ಬೆಸಗೈದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನು ಕೇಳಿದ : “ಸಾರಥಿ ಈ ಬಿಲ್ಲು ಯಾವ ವೀರನ ತೋಳುಗಳನ್ನು ಅಲಂಕರಿಸುತ್ತದೆ ? ಮಹಾ ಶರ ಸಮೂಹಗಳು ಯಾರ ಅಪ್ಪಣೆಯನ್ನು ಪಾಲಿಸುತ್ತವೆ ? ಈ ಉಳಿದ ಬಿಲ್ಲುಗಳಿವೆಯಲ್ಲ. ಇವು ಯಾರಿಗಾಗಿ ? ಯುದ್ಧದಲ್ಲಿ ಇವುಗಳನ್ನು ಯಾರು ಬಳಸುತ್ತಾರೆ ? ಉಳಿದ ಉತ್ತಮ ಆಯುಧಗಳು ಯಾರ ಕೈಯಲ್ಲಿ ಸೇರಿಕೊಳ್ಳುತ್ತವೆ ? ನನ್ನ ಮನಸ್ಸಿನ ಈ ಸಂಶಯಗಳೆಲ್ಲ ಪರಿಹಾರವಾಗುವಂತೆ ಉತ್ತರಕೊಡು”
ಪದಾರ್ಥ (ಕ.ಗ.ಪ)
ಬೆಸಗೈದಪವಿದಾರಿಗೆ-ಯಾರ ಆಜ್ಞೆಯಂತೆ ನಡೆದುಕೊಳ್ಳುತ್ತವೆ ? ಯಾರ ಸೇವೆಯನ್ನು ಮಾಡುತ್ತವೆ ? ಮೇಲುಗೈದು-ಮೇಲಾದ ಕೈದು, ಶ್ರೇಷ್ಠವಾದ ಆಯುಧ, ಮೇಳವಿಸು-ಸೇರು
ಮೂಲ ...{Loading}...
ಹೇಳು ಸಾರಥಿ ಬಿಲ್ಲಿದಾವನ
ತೋಳಿಗಳವಡುವುದು ಮಹಾ ಶರ
ಜಾಲ ಬೆಸಗೈದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ ॥39॥
೦೪೦ ಇದು ಕಣಾ ...{Loading}...
ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಠಿರ ಚಾಪವೀ ಧನು ಭೀಮಸೇನನದು
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಹೇಳಿದ “ಉತ್ತರ ! ಇದೇ ನೋಡು ಗಾಂಡೀವ ಎಂಬ ಬಿಲ್ಲು. ಮಹಾ ಧನುಸ್ಸು ಇದು. ಅರ್ಜುನನದು. ಈ ಬಿಲ್ಲು ಧರ್ಮರಾಯನದು. ಇದು ಭೀಮನ ಧನುಸ್ಸು. ಇದು ನಕುಲ ಸಹದೇವರುಗಳ ಬಿಲ್ಲುಗಳು. ಈ ಭಾರಿಯ ಗದೆಯಿದೆಯಲ್ಲ ಅದು ಭೀಮಸೇನನದು. ಇವುಗಳೆಲ್ಲ ಕಿರೀಟಿಯ ಬಾಣಗಳು” (ಹೀಗೆ ಒಂದೊಂದಾಗಿ ತೋರಿಸಿ ವಿವರಿಸುತ್ತ ಬಂದ)
ಪದಾರ್ಥ (ಕ.ಗ.ಪ)
ಚಾಪ-ಬಿಲ್ಲು, ಅನಿಲಜ-(ವಾಯುಪುತ್ರ) ಭೀಮ, ಕಿರೀಟಿ-ಅರ್ಜುನನ ದಶನಾಮಗಳಲ್ಲಿ ಒಂದು.
ಟಿಪ್ಪನೀ (ಕ.ಗ.ಪ)
“ಈ ಗಾಂಡಿವವನ್ನು ಬಿಟ್ಟರೆ ನನ್ನ ಭುಜೋದ್ರೇಕಕ್ಕೆ ಬೇರೆ ಯಾವ ಬಿಲ್ಲೂ ಸಾಲದು” ಎಂದು ಯರ್ರನನು ತೆಲುಗು ಭಾರತದಲ್ಲಿ ಹೇಳಿರುವುದು ಸೂಕ್ತವಾಗಿದೆ.
ಗಾಂಡಿವದ ಬಗೆಗೆ ಮೂಲಭಾರತದಲ್ಲಿ ಅರ್ಜುನ ಹೇಳುತ್ತಾನೆ. “ಈ ಗಾಂಡಿವವನ್ನು ದೇವದಾನವ ಗಂಧರ್ವರು ಅನೇಕ ವರ್ಷಗಳವರೆಗೆ ಪೂಜಿಸಿದ್ದಾರೆ. ಅದಕ್ಕೆ ಮುನ್ನ ಬ್ರಹ್ಮನು ಸಾವಿರ ವರ್ಷ, ಪ್ರಜಾಪತಿಯು ಐದು ನೂರ ಮೂರು ವರ್ಷ, ಇಂದ್ರನು ಎಂಬತ್ತೈದು ವರ್ಷ, ಸೋಮನು ನೂರು ವರ್ಷ, ವರುಣನು ನೂರು ವರ್ಷ ಧರಿಸಿದ್ದ ಬಿಲ್ಲು ಇದು”
ಮೂಲ ...{Loading}...
ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಠಿರ ಚಾಪವೀ ಧನು ಭೀಮಸೇನನದು
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ ॥40॥
೦೪೧ ಅವರವರ ಬತ್ತಳಿಕೆ ...{Loading}...
ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನ ಸೂನು ಬೆಸಗೊಂಡ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಂಡವರಲ್ಲಿ ಯಾರು ಯಾರಿಗೆ ಯಾವ ಯಾವ ಬತ್ತಳಿಕೆ, ಧನುಸ್ಸು, ಬಾಣ, ಶಂಖ ಖಡ್ಗ ಕವಚ ಸೀಸಕ ಜೋಡು ಬಿರುದು ಧ್ವಜಗಳು ಸೇರಿವೆ ಎಂಬುದನ್ನು ಅರ್ಜುನ ವಿವರಿಸಿದ. ಹಾಗೆಯೇ ವಿವಿಧ ಶಸ್ತ್ರಾಸ್ತ್ರಗಳನ್ನು ಪರಿಚಯ ಮಾಡಿಕೊಟ್ಟ. ಕೇಳುತ್ತ ಕೇಳುತ್ತ ಉತ್ತರನು ಬೆರಗಾದ. ಸಾರಥಿಯಾದ ನೀನು ಯಾರು ? ಎಂದು ಅರ್ಜುನನನ್ನು ಕೇಳಿದ.
ಪದಾರ್ಥ (ಕ.ಗ.ಪ)
ಕಂಬು-ಶಂಖ, ಸೀಸಕ-ಶಿರಸ್ತ್ರಾಣ, ಟೆಕ್ಕೆಯ-ಧ್ವಜ
ಮೂಲ ...{Loading}...
ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನ ಸೂನು ಬೆಸಗೊಂಡ ॥41॥
೦೪೨ ಆರು ನೀನರ್ಜುನನೊ ...{Loading}...
ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡು ಕು
ಮಾರರಾಯುಧ ತತಿಯ ನೀನೆಂತರಿವೆ ಹೇಳೆಂದ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರ ಕೇಳಿದ “ಅಯ್ಯಾ ! ಸಾರಥಿ ! ನೀನು ಯಾರು ? ಅರ್ಜುನನೋ ? ನಕುಲನೋ ? ಭೀಮನೋ ? ಯುಧಿಷ್ಠಿರದೇವನೋ ? ಸಹದೇವನೋ ? ಅಥವಾ ಅವರ ಬಂಧು ವರ್ಗದವನೋ ? ವೀರನೇ ಹೇಳು. ನಾನು ಬೇಡಿಕೊಳ್ಳುತ್ತಿದ್ದೇನೆ. ಅಲ್ಲ ! ಪಾಂಡವರ ಆಯುಧಗಳು ಇವು ಎಂಬುದು ನಿನಗೆ ಹೇಗೆ ಗೊತ್ತು. ಎಲ್ಲವನ್ನು ವಿಸ್ತಾರವಾಗಿ ತಿಳಿಸು”
ಪದಾರ್ಥ (ಕ.ಗ.ಪ)
ತತಿ-ಸಮೂಹ
ಮೂಲ ...{Loading}...
ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡು ಕು
ಮಾರರಾಯುಧ ತತಿಯ ನೀನೆಂತರಿವೆ ಹೇಳೆಂದ ॥42॥
೦೪೩ ಆದೊಡಾನರ್ಜುನನು ಬಾಣಸಿ ...{Loading}...
ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರ ಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ ॥43॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಹೇಳಿದ : “ಹಾಗಾದರೆ, ಉತ್ತರ ಕುಮಾರ, ಕೇಳು ? ನಾನೇ ಅರ್ಜುನ. ಅಡುಗೆಯ ಮನೆಯ ವಲಲ ಇದ್ದಾನಲ್ಲ ಅವನು ಭೀಮ, ಸಂನ್ಯಾಸಿಯಾಗಿ ಬಂದಿರುವ ಕಂಕನು ಧರ್ಮರಾಯ, ನಿಮ್ಮ ಅರಮನೆಯ ಗೋವುಗಳನ್ನು ನೋಡಿಕೊಳ್ಳುತ್ತಿರುವನು ಸಹದೇವ. ಕುದುರೆಗಳ ಮೇಲ್ವಿಚಾರಕನಾಗಿದ್ದವನು ನಕುಲ. ಸೈರಂಧ್ರಿಯಾಗಿ ಬಂದವಳು ದ್ರೌಪದಿ, ಅವಳು ನಮ್ಮ ಪತ್ನಿ”
ಪದಾರ್ಥ (ಕ.ಗ.ಪ)
ಬಾಣಸಿ-ಅಡಿಗೆಯವ, ಗೋಕುಲ-ಪಶುಸಮೂಹ
ಮೂಲ ...{Loading}...
ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರ ಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ ॥43॥
೦೪೪ ಅಹುದು ಬಳಿಕೇನುಳಿದವರಿಗೀ ...{Loading}...
ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ ॥44॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನಿಗೆ ಎಲ್ಲ ಸ್ಪಷ್ಟವಾಗತೊಡಗಿತು. “ಹೌದು. ಅಲ್ಲದೆ ಏನು ? ಉಳಿದವರಿಗೆ ಈ ಮಹಿಮೆ ಎಲ್ಲಿಂದ ಬರಬೇಕು ? ಆಹಾ ! ಜೀವಿಸಿದ್ದರೆ ಇಂತಹ ಅತಿಶಯವನ್ನು ಕಾಣಬಹುದಲ್ಲವೆ ? ಅರ್ಜುನ ! ನಿಮ್ಮನ್ನು ಲಕ್ಷ್ಯ ಮಾಡದೆ ಮಾತಾಡಿದ್ದೇನೆ. ಆ ಹೆಚ್ಚಿನ ತಪ್ಪುಗಳನ್ನು ಗಮನಿಸದೆ ನಾನು ಕುಹಕಿ ಎಂದು ಹಾಸ್ಯ ಮಾಡದೆ ದಯವಿಟ್ಟು ನನ್ನನ್ನು ಕಾಪಾಡು” ಎಂದು ಉತ್ತರನು ಅರ್ಜುನನ ಪಾದಗಳಿಗೆ ನಮಸ್ಕಾರ ಮಾಡಿ ಕೇಳಿಕೊಂಡ.
ಪದಾರ್ಥ (ಕ.ಗ.ಪ)
ಗಹನ-ಮಹಾ, ಎರಗು-ನಮಸ್ಕರಿಸು
ಟಿಪ್ಪನೀ (ಕ.ಗ.ಪ)
- ಮೂಲಭಾರತದಲ್ಲಿ ಉತ್ತರನಿಗೆ ಅರ್ಜುನನ ಮೇಲೆ ನಂಬಿಕೆ ಬರುತ್ತದೆ. ಅಲ್ಲಿ ಉತ್ತರನು
ದಾಸೋಹಂ ತೇ ಭವಿಷ್ಯಾಮಿ ಪಶ್ಯ ಮಾಮನು ಕಂಪಯೋ
ಯಾ ಪ್ರತಿಜ್ಞಾ ಕೃತಾಪೂರ್ವಂ ತವ ಸಾರಥ್ಯ ಕರ್ಮಣಿ
ಮನಃ ಸ್ವಾಸ್ಥ್ಯಂ ಚ ಮೇ ಜಾತಂ ಜಾತಂ ಭಾಗ್ಯಂಚ ಮೇ ಮಹತ್.
ನಾನು ನಿನ್ನದಾಸ. ದಯೆಯಿಂದ ನೋಡು, ಸಾರಥ್ಯವನ್ನು ವಹಿಸುತ್ತೇನೆ. ನನ್ನ ಮನಸ್ಸು ಈಗ ಸ್ವಸ್ಥವಾಗಿದೆ ಇದು ನನಗೆ ಮಹಾ ಭಾಗ್ಯ. ಎನ್ನುತ್ತಾನೆ
ಮೂಲಭಾರತದಲ್ಲಿ ಈ ಘಟ್ಟದಿಂದ ಮುಂದಕ್ಕೆ ಉತ್ತರ ಹೇಡಿಯಲ್ಲ. ರಥವನ್ನು ಚೆನ್ನಾಗಿಯೇ ನಡೆಸುತ್ತಾನೆ. - ಉತ್ತರ ಅರ್ಜುನನಿಗೆ ಹೇಳಿದ. “ಇಂದಿನಿಂದ ನಾನು ಹೆದರುವುದಿಲ್ಲ ನನ್ನ ಭಯವು ಸೂರ್ಯನ ಎದುರಿನ ಹಿಮದ ಹಾಗೆ ಕರಗಿ ಹೋಯಿತು”
ಮೂಲ ...{Loading}...
ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ ॥44॥
೦೪೫ ಮೌಳಿಯನು ನೆಗಹಿದನು ...{Loading}...
ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ
ಬಾಲಕನ ಬಿನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ ॥45॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ನಮಸ್ಕರಿಸಿದ ಉತ್ತರನ ತಲೆಯನ್ನು ಹಿಡಿದು ಮೇಲಕ್ಕೆ ಎತ್ತಿದ. ‘ನಿನ್ನದು ತಪ್ಪು ಏನೂ ಇಲ್ಲ’ ಎಂದು ಸಮಾಧಾನ ಪಡಿಸಿದ. ಆಗ ಉತ್ತರನು ನಿಂತು ಕೈಮುಗಿದು ಕೇಳಿಕೊಂಡ. “ಬಾಲಕನ ಒಂದು ಪ್ರಾರ್ಥನೆ ಕೇಳಬೇಕು. ನಿಮಗೆ ಹತ್ತು ಹೆಸರುಗಳಿವೆಯಲ್ಲ. ಅವುಗಳನ್ನು ಹೇಳಿ ಅಲ್ಪಮತಿಯಾದ ನನಗೆ ತಿಳಿಸಿಕೊಡಬೇಕು”.
ಪದಾರ್ಥ (ಕ.ಗ.ಪ)
ಮೌಳಿ-ತಲೆ, ನೆಗಹು-ಎತ್ತು, ಬೋಳವಿಸು-ಸಮಾಧಾನಪಡಿಸು, ಬಿನ್ನಪ-ಕೋರಿಕೆ, ದಶನಾಮಾವಳಿ-ಹತ್ತು ಹೆಸರುಗಳು
ಮೂಲ ...{Loading}...
ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ
ಬಾಲಕನ ಬಿನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ ॥45॥
೦೪೬ ಎನಲು ನಸುನಗುತರ್ಜುನನು ...{Loading}...
ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತವಾ
ಹನ ವಿಜಯ ಬೀಭತ್ಸು ಪಾರ್ಥ ಕಿರೀಟಿ ಮೊದಲಾದ
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ ॥46॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಂದು ಕೇಳಲು ಅರ್ಜುನನು ನಸುನಗುತ್ತ ತನಗಿದ್ದ ಫಲುಗುಣ, ಧನಂಜಯ, ಜಿಷ್ಣು, ಸಿತವಾಹನ, ವಿಜಯ, ಬೀಭತ್ಸು, ಪಾರ್ಥ, ಕಿರೀಟಿ, ಕೃಷ್ಣ, ಸವ್ಯಸಾಚಿ ಎಂಬ ಹೆಸರುಗಳನ್ನು ತಿಳಿಸಿ ಅವುಗಳು ತನಗೆ ಹೇಗೆ ಬಂದವು ಎಂಬುದನ್ನು ವಿಸ್ತಾರವಾಗಿ ವಿವರಿಸಿದನು.
ಟಿಪ್ಪನೀ (ಕ.ಗ.ಪ)
- ಫಲುಗುಣ-ಪೂರ್ವ ಫಲುಗುಣೀ ಉತ್ತರ ಫಲುಗುಣೀ ನಕ್ಷತ್ರಗಳ ಸಂಧಿಕಾಲದಲ್ಲಿ ಹುಟ್ಟಿದ್ದರಿಂದ ಫಲುಗುಣ.
- ಧನಂಜಯ-ಭೂಮಂಡಲವನ್ನು ಜಯಿಸಿ ಕಪ್ಪಕಾಣಿಕೆ ತಂದವನಾದ್ದರಿಂದ ಧನಂಜಯ
- ಜಿಷ್ಣು-ಅಣ್ಣನಾದ ಧರ್ಮರಾಯನಿಗೆ ಯಾರಾದರೂ ಹಾನಿಯುಂಟು ಮಾಡಲು ಹೋದರೆ ಅಂಥವರ ವಂಶದವರನ್ನೆಲ್ಲ ನಾಶ ಮಾಡುವುದಾಗಿ ಶಪಥ ಮಾಡಿದವನಾದ್ದರಿಂದ ಜಿಷ್ಣು (=ಹೋರಾಟಗಾರ, ಗೆಲ್ಲುವವನು) ಜಿಷ್ಣು : ಶತ್ರುಗಳು ನನ್ನನ್ನು ತಿರಸ್ಕರಿಸಲಾಗಲೀ ಹಿಡಿದುಕೊಳ್ಳುವುದಾಗಲೀ ಸಾಧ್ಯವಿಲ್ಲ. ಏಕೆಂದರೆ ಅವನು ಶತ್ರುದಮನ. ಆದ್ದರಿಂದ ಈ ಹೆಸರು.
- ಸಿತವಾಹನ (ಶ್ವೇತವಾಹನ)-ಅರ್ಜುನನಿಗೆ ಶ್ವೇತವಾಹನ ಸಿತವಾಹನ ಎಂಬ ಹೆಸರುಗಳಿವೆ. ಅವನ ರಥದ ಕುದುರೆಗಳು ಬಿಳಿಯ ಬಣ್ಣದವು. ಆದ್ದರಿಂದ ಶ್ವೇತವಾಹನ. ಅವಕ್ಕೆ ಬಂಗಾರದ ಕವಚಗಳು.
- ವಿಜಯ-ಯಾರನ್ನು ಬೇಕಾದರೂ ಎದುರಿಸಿ ಗೆಲ್ಲಬಲ್ಲವನು.
- ಭೀಭತ್ಸು-ಶತ್ರುಗಳ ಗುಂಡಿಗೆ ಹಾರುವಷ್ಟು ಭಯಂಕರವಾಗಿ ಯುದ್ಧ ಮಾಡುತ್ತಿದ್ದವನು.
- ಪಾರ್ಥ-ಪೃಥಾನಂದನ. ಪೃಥೆ ಎಂಬುದು ಕುಂತಿಯ ಹೆಸರು.
- ಕಿರೀಟಿ-ದೇವೇಂದ್ರನಿಂದ ಕಿರೀಟವನ್ನು ಪಡೆದವನು.
- ಕೃಷ್ಣ-ಎಳವೆಯಲ್ಲಿ ಅರ್ಜುನನು ಮುದ್ದಾಗಿ ನಿಲ್ಲುತ್ತಿದ್ದಾಗ ಪಾಂಡುರಾಜನು ಕೊಟ್ಟ ಹೆಸರು. ಕರ್ಷತಿ ಚಿತ್ತಂ ಇತಿ ಕೃಷ್ಣಃ
- ಸವ್ಯಸಾಚಿ-ಎಡಗೈ ಬಲಗೈ ಎರಡರಲ್ಲೂ ಬಾಣ ಬಿಡಲು ಸಮರ್ಥನಾಗಿದ್ದವನು.
ಇವಲ್ಲದೆ ಅರ್ಜುನ (ಕಾಂತಿಯುಕ್ತ ಶರೀರ) ಗಾಂಡೀವಿ, ನರ ಮೊದಲಾದ ಅನೇಕ ಹೆಸರುಗಳಿವೆ.
ಅರ್ಜುನಃ ಫಲ್ಗುನೋ ಜಿಷ್ಣು : ಕಿರೀಟಿ ಶ್ವೇತ ವಾಹನಃ
ಭೀಭತ್ಸು ರ್ವಿಜಯಃ ಕೃಷ್ಣ, ಸವ್ಯಸಾಚೀ ಧನಂಜಯ.
ಇವು ಅರ್ಜುನನ ದಶ ನಾಮಾವಳಿಗಳು
ಇವಲ್ಲದೆ ಇನ್ನು ಬೇರೆ ಬೇರೆ ಹೆಸರುಗಳೂ ಉಂಟು
ಮೂಲ ...{Loading}...
ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತವಾ
ಹನ ವಿಜಯ ಬೀಭತ್ಸು ಪಾರ್ಥ ಕಿರೀಟಿ ಮೊದಲಾದ
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ ॥46॥
೦೪೭ ನಮ್ಬಿದೆನು ಲೇಸಾಗಿ ...{Loading}...
ನಂಬಿದೆನು ಲೇಸಾಗಿ ನಿಶ್ಚಯ
ವಿಂಬುಗೊಂಡುದು ಪಾರ್ಥ ನಿನಗೀ
ಡೊಂಬಿದೇಕೈ ಹುಲುಬೃಹನ್ನಳೆತನದ ಬಹು ರೂಪು
ಅಂಬುಜಾಕ್ಷನ ಸಾಹಸ ಪ್ರತಿ
ಬಿಂಬವಲ್ಲಾ ನೀನು ನಿನ್ನ ವಿ
ಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನಿಗೆ ಸಮಾಧಾನವಾಯಿತು “ಅರ್ಜುನಾ, ನನಗೆ ಚೆನ್ನಾಗಿ ಮನವರಿಕೆಯಾಯಿತು. ನಂಬುತ್ತೇನೆ. ಅದೆಲ್ಲ ಸರಿ. ಆದರೆ ನಿನಗೆ ಈ ನಾಟಕ ಏಕೆ ? ಬೃಹನ್ನಳೆಯ ಬಹುರೂಪ ಏಕೆ ? ತಾವರೆಗಣ್ಣನಾದ ವಿಷ್ಣುವಿನ ಸಾಹಸದ ಪ್ರತಿಬಿಂಬವಲ್ಲವೆ ನೀನು ? ನಿನ್ನ ಈ ವಿಕಟ ವೇಷಕ್ಕೆ ಕಾರಣವೇನು ?” ಎಂದು ಕೇಳಿದ.
ಪದಾರ್ಥ (ಕ.ಗ.ಪ)
ಇಂಬುಗೊಂಡುದು-ಆಸರೆ ಪಡೆಯಿತು (ಸ್ಥಿರವಾಯಿತು), ಡೊಂಬು-ಕಪಟ, ನಾಟಕ, ಹುಲು-ಕ್ಷುದ್ರ, ಬಹುರೂಪು-ನಾಟಕದಲ್ಲಿ ಬಹುರೂಪಗಳನ್ನು ಮಾಡಬಲ್ಲವರನ್ನು, ಬಹುರೂಪಿ ಎನ್ನುತ್ತಾರೆ, ವೇಷಧಾರಿ.
ಅಂಜುಜಾಕ್ಷ-(ತಾವರೆಯ ಕಣ್ಣಿನ) ವಿಷ್ಣು, ವಿಡಂಬಿಸು-ಲೇವಡಿ ಮಾಡು, ರೂಹು-ರೂಪ
ಮೂಲ ...{Loading}...
ನಂಬಿದೆನು ಲೇಸಾಗಿ ನಿಶ್ಚಯ
ವಿಂಬುಗೊಂಡುದು ಪಾರ್ಥ ನಿನಗೀ
ಡೊಂಬಿದೇಕೈ ಹುಲುಬೃಹನ್ನಳೆತನದ ಬಹು ರೂಪು
ಅಂಬುಜಾಕ್ಷನ ಸಾಹಸ ಪ್ರತಿ
ಬಿಂಬವಲ್ಲಾ ನೀನು ನಿನ್ನ ವಿ
ಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ ॥47॥
೦೪೮ ಇದು ಕಣಾ ...{Loading}...
ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ
ಇದಕೆ ನಿಜ್ಜೋಡಾಯ್ತು ನಿರ್ವಿ
ಘ್ನದಲಿ ನೂಕಿದೆವವಧಿಯನು ತ
ನ್ನದಟುತನವನು ಭೀತಿಗೊಳ್ಳದೆ ನೋಡು ನೀನೆಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಅರ್ಜುನನು “ಧರ್ಮರಾಯನ ಸತ್ಯವನ್ನು ಉಳಿಸಿಕೊಂಡು ಬರಲು ಹೋಗಿ ನಾನು ಅಪ್ಸರೆಯಾದ ಊರ್ವಶಿಯಿಂದ ಶಾಪ ಪಡೆದು ಒಂದು ವರ್ಷ ಕಾಲವನ್ನು ಈ ವೇಷದಲ್ಲಿ ನೂಕಿದೆ. ಇದಕ್ಕೆ ನಿಜ್ಜೋಡಾಯಿತು. ಹೀಗೆ ಒಂದು ವರ್ಷ ಅಜ್ಞಾತವಾಸವನ್ನು ನಿರ್ವಿಘ್ನವಾಗಿ ಪೂರೈಸಿದೆವು. ಈಗ ನೀನು ಹೆದರದೆ ಯುದ್ಧ ರಂಗದಲ್ಲಿ ನನ್ನ ಪರಾಕ್ರಮವನ್ನು ನೋಡು” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ವತ್ಸರ-ವರ್ಷ, ನಿಜ್ಜೋಡು-ಸರಿಯಾಗಿ ಹೊಂದಿಕೊಳ್ಳುವಿಕೆ, ಅದಟುತನ-ಪರಾಕ್ರಮ
ಮೂಲ ...{Loading}...
ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ
ಇದಕೆ ನಿಜ್ಜೋಡಾಯ್ತು ನಿರ್ವಿ
ಘ್ನದಲಿ ನೂಕಿದೆವವಧಿಯನು ತ
ನ್ನದಟುತನವನು ಭೀತಿಗೊಳ್ಳದೆ ನೋಡು ನೀನೆಂದ ॥48॥
೦೪೯ ಬಳೆಯ ನೆಗ್ಗೊತ್ತಿದನು ...{Loading}...
ಬಳೆಯ ನೆಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಪಳಿಯನುಟ್ಟನು ಮಲ್ಲಗಂಟಿನಲಿ
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ಅರ್ಜುನನು ಕೌರವ ಸೇನೆಯ ಗಂಟಲ ಬಳೆಯನ್ನು ಮುರಿಯುವ ಹಾಗೆ ತನ್ನ ಬಳೆಯನ್ನು (ನೆಗ್ಗೊತ್ತಿದ) ಒತ್ತಿ ಪುಡಿ ಪುಡಿ ಮಾಡಿದ. ಆ ಮಹಾವೀರನು ಮಲ್ಲಗಂಟು ಹಾಕಿ ವಸ್ತ್ರವನ್ನು ಉಟ್ಟುಕೊಂಡ. ತಲೆಗೂದಲನ್ನು ಬಾಚಿಕೊಂಡು ತಿಲಕವನ್ನು ಹಚ್ಚಿದ. ಕಿಗ್ಗಟ್ಟಿನ (ಕೆಳಗಟ್ಟಿನ) ಕಠಾರಿಯ ಮಿರುಗುವ ಕುಚ್ಚ್ಚನ್ನು ಮೆರೆಸುತ್ತ ಗಂಡಸಿನ ಆಕಾರವನ್ನು ತಾಳಿದ.
ಪದಾರ್ಥ (ಕ.ಗ.ಪ)
ನೆಗ್ಗೊತ್ತು-ಪುಡಿಪುಡಿಮಾಡು, ಪಳಿ -ವಸ್ತ್ರ , ನವಿರು-ಕೂದಲು, ಹಿಣಿಲಿರಿದು-ಸಿಕ್ಕು ಬಿಡಿಸಿ, ಇರಿ < ಇಱÂ = ಬಿಚ್ಚು. ಕಿಗ್ಗಟ್ಟು-ಕೆಳಗಟ್ಟು, ಕೆಳಗಿನ ಪಟ್ಟಿ, ಗೊಂಡೆಯ-ಕುಚ್ಚು, ಗಂಟಲಬಳೆ-ಗಂಟಲ ಬಳೆಯಾಕಾರದ ಮೂಳೆ (ಎಂ.ವಿ.ಸೀ.) ಅಲಘು ಸಾಹಸಿ-ಮಹಾವೀರ.
ಪಾಠಾನ್ತರ (ಕ.ಗ.ಪ)
ಘಳಿ - ಪಳಿ
ವಿರಾಟಪರ್ವ, ಮೈ.ವಿ.ವಿ.
ಮೂಲ ...{Loading}...
ಬಳೆಯ ನೆಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಪಳಿಯನುಟ್ಟನು ಮಲ್ಲಗಂಟಿನಲಿ
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ ॥49॥
೦೫೦ ತೇರ ತೆಗೆದನು ...{Loading}...
ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣೆ ಮಿಗೆ ಧನುವ ಕೊಂಡನು ತಿರುವನೇರಿಸಿದ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ತೇರನ್ನು ತೆಗೆದ. ತನ್ನ ಮೊದಲಿನ ಕುದುರೆಗಳನ್ನು ಹೂಡಿದ. ಅವನು ಆಂಜನೇಯನ ಸ್ಮರಣೆ ಮಾಡಿದ ಕೂಡಲೇ ಆ ಕಪಿವೀರನು ಇವನ ರಥದ ಧ್ವಜದ ಮೇಲೆ ಬಂದು ನೆಲಸಿದ. ಸೊಗಸಾದ ಸೀಸಕ ಜೋಡು ಮತ್ತು ಕುಲಿಶದ ಕವಚವನ್ನು ಬಿಗಿದು ಭಾರಿಯ ಗರ್ಜನೆ ಮಾಡುತ್ತ ಧನುಸ್ಸನ್ನು ಎತ್ತಿಕೊಂಡು ಹಗ್ಗವನ್ನು ಏರಿಸಿದ.
ಪದಾರ್ಥ (ಕ.ಗ.ಪ)
ವಾರುವ-ಕುದುರೆ, ಮಂಡಿಸು-ಕುಳಿತುಕೋ, ಸೀಸಕ-ಶಿರಸ್ತ್ರಾಣ, ಜೋಡು-ಕವಚ, ಕುಲಿಶ-ವಜ್ರಾಯುಧ, ತಿರು-ಹಗ್ಗ
ಟಿಪ್ಪನೀ (ಕ.ಗ.ಪ)
ಆ ಶ್ಮಶಾನದಲ್ಲಿಯೇ ಪಾಂಡವರ ಕುದುರೆಗಳೂ ಇದ್ದವು ಎಂಬರ್ಥ ಇಲ್ಲಿ ಬರುತ್ತದೆ. ವಿರಾಟನಗರದ ರಥ ಕುದುರೆಗಳನ್ನು ಬಿಟ್ಟು ತನ್ನ ರಥ ಕುದುರೆಗಳನ್ನು ತೆಗೆದುಕೊಂಡ ಎನ್ನುತ್ತಾನೆ ಕುಮಾರವ್ಯಾಸ. ಇದು ಅಸಂಭವನೀಯ ಅಲ್ಲದೆ ಮೂಲಭಾರತದಲ್ಲಿ ಈ ಪ್ರಸ್ತಾವವಿಲ್ಲ.
ಮೂಲ ...{Loading}...
ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣೆ ಮಿಗೆ ಧನುವ ಕೊಂಡನು ತಿರುವನೇರಿಸಿದ ॥50॥
೦೫೧ ರಾಯ ಧರ್ಮಜ ...{Loading}...
ರಾಯ ಧರ್ಮಜ ಬಾಳುಗೆನುತ ನಿ
ಜಾಯುಧದ ಗುರುವಿಂಗೆರಗಿ ಸುರ
ರಾಯ ನಂದನನೊಲವಿನಲಿ ಗಾಂಡಿವವ ಜೇವಡಿಸಿ
ರಾಯ ಕುವರನ ಸೂತತನದ ವಿ
ಡಾಯಿಯರಿಯಲು ಬಹುದೆನುತ ಸಮ
ರಾಯತಾಸ್ತ್ರನು ಪಾರ್ಥ ಮೈದೋರಿದನು ಪರಬಲಕೆ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು “ರಾಯ ಧರ್ಮರಾಯನು ಬಾಳಲಿ” ಎಂದು ಘೋಷಿಸುತ್ತ ತನ್ನ ಆಯುಧದ ಗುರುವಿಗೆ (ದ್ರೋಣರಿಗೆ) ನಮಸ್ಕರಿಸಿದ. ಅನಂತರ ಇಂದ್ರಸುತನಾದ ಅವನು ಗಾಂಡಿವವನ್ನು ಜೇವೊಡೆದ”. “ರಾಜಕುಮಾರ ! ಈಗ ನಿನ್ನ ಸಾರಥಿತನದ ವೈಭವವನ್ನು ನೋಡೋಣ (ರಥ ನಡೆಸು)” ಎಂದು ಹೇಳುತ್ತ ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳಿಂದ ಇಡಿಕಿರಿದ ಅರ್ಜುನನು ಶತ್ರು ಸೇನೆಗೆ ಕಾಣಿಸಿಕೊಂಡ.
ಪದಾರ್ಥ (ಕ.ಗ.ಪ)
ಆಯುಧದ ಗುರು-ದ್ರೋಣ, ಸುರರಾಯನಂದನ-ದೇವೇಂದ್ರನ ಪುತ್ರ (ಅರ್ಜುನ), ಜೇವಡಿಸು-ಹಗ್ಗವನ್ನು ಮೀಟಿ ಶಬ್ದ ಮಾಡು, ವಿಡಾಯಿ-ವೈಭವ, ಬಿಂಕ, ಮೈದೋರು-ಕಾಣಿಸಿಕೋ
ಪಾಠಾನ್ತರ (ಕ.ಗ.ಪ)
ಗಾಂಡಿವವ ಜೇವಡಿಸಿ ಇದಕ್ಕೆ ಎಂ.ವಿ.ಸೀ. ಅವರ ಪಾಠ ‘ಗಾಂಡೀವವನು ಮಿಡಿದು”
ಮೂಲ ...{Loading}...
ರಾಯ ಧರ್ಮಜ ಬಾಳುಗೆನುತ ನಿ
ಜಾಯುಧದ ಗುರುವಿಂಗೆರಗಿ ಸುರ
ರಾಯ ನಂದನನೊಲವಿನಲಿ ಗಾಂಡಿವವ ಜೇವಡಿಸಿ
ರಾಯ ಕುವರನ ಸೂತತನದ ವಿ
ಡಾಯಿಯರಿಯಲು ಬಹುದೆನುತ ಸಮ
ರಾಯತಾಸ್ತ್ರನು ಪಾರ್ಥ ಮೈದೋರಿದನು ಪರಬಲಕೆ ॥51॥
೦೫೨ ಸಡಿಲ ಬಿಡೆ ...{Loading}...
ಸಡಿಲ ಬಿಡೆ ವಾಘೆಯನು ಚಿಮ್ಮಿದ
ವೊಡನೊಡನೆ ವೇಗಾಯ್ಲ ತೇಜಿಗ
ಳೊಡೆದುದಿಳೆಯೆನೆ ಗಜರು ಮಿಗೆ ಗರ್ಜಿಸಿದವಳ್ಳಿರಿದು
ಕುಡಿ ನೊರೆಯ ಕಟವಾಯ ಲೋಳೆಯೊ
ಳೊಡಲ ಸಂಚದ ನುಡಿಯ ಘುಡು ಘುಡು
ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲಗಾಮನ್ನು ಸಡಿಲಗೊಳಿಸಿದ ಕೂಡಲೇ ಆ ವೇಗಶಾಲಿ ಕುದುರೆಗಳು ಚಿಮ್ಮಿದುವು. ಅವು ಗುರುಗುಡುತ್ತ ಹೇಷಾರವವನ್ನು ಮಾಡತೊಡಗಿ ನೆಲವೇ ಬಿರಿಯುತ್ತಿದೆ ಎಂಬ ಭಾವವನ್ನು ತಂದುವು. ನೊರೆಸೂಸುತ್ತ ಕಟವಾಯಲೋಳೆಯಲ್ಲಿ ಒಡಲಿನ ಆಹಾರದ ಚೀಲ ತೂಗಾಡುತ್ತಿರಲು ಆ ಕುದುರೆಗಳ ಘುಡಿಘುಡಿಸುವ ಮೂಗಿನ ಹೊಳ್ಳೆಗಳ ಹುಂಕಾರ ಹೊಮ್ಮಿತು.
ಪದಾರ್ಥ (ಕ.ಗ.ಪ)
ವಾಘೆ-ಲಗಾಮು, ವೇಗಾಯ್ಲ-ವೇಗಶಾಲಿ, ತೇಜಿ-ಕುದುರೆ, ಗಜರು-ಆರ್ಭಟ, ಗರ್ಜನೆ, ಅಳ್ಳಿರಿ-ಅಲುಗಾಡು, ನಾಸಾಪುಟ-ಮೂಗು, ಮಸಗು-ಹೆಚ್ಚಾಗು, ಮುಂಚು-ಮುನ್ನುಗ್ಗು, ಮುಂದೆ ಸಾಗು
ಮೂಲ ...{Loading}...
ಸಡಿಲ ಬಿಡೆ ವಾಘೆಯನು ಚಿಮ್ಮಿದ
ವೊಡನೊಡನೆ ವೇಗಾಯ್ಲ ತೇಜಿಗ
ಳೊಡೆದುದಿಳೆಯೆನೆ ಗಜರು ಮಿಗೆ ಗರ್ಜಿಸಿದವಳ್ಳಿರಿದು
ಕುಡಿ ನೊರೆಯ ಕಟವಾಯ ಲೋಳೆಯೊ
ಳೊಡಲ ಸಂಚದ ನುಡಿಯ ಘುಡು ಘುಡು
ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು ॥52॥
೦೫೩ ಆರು ಕೌರವನಲ್ಲಿ ...{Loading}...
ಆರು ಕೌರವನಲ್ಲಿ ಭೀಷ್ಮನ
ದಾರು ಕೃಪನಾವವನು ದ್ರೋಣನ
ದಾರು ಬಲದೊಳಗಾವನಶ್ವತ್ಥಾಮನೆಂಬವನು
ವೀರ ತಿಳುಹೆನಗಿಲ್ಲಿ ಕರ್ಣನ
ದಾರು ನಾ ಕಂಡರಿಯೆನೆನಲಾ
ವೈರಿದಲ್ಲಣ ಪಾರ್ಥ ನಗುತುತ್ತರನೊಳಿಂತೆಂದ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅರ್ಜುನ ! ಅಲ್ಲಿ ಕೌರವ ಯಾರು ? ಭೀಷ್ಮ ಯಾರು ? ಕೃಪ ಯಾರು? ದ್ರೋಣನು ಯಾರು? ಅಶ್ವತ್ಥಾಮ ಎಂಬವನು ಯಾರು ? ಕರ್ಣ ಯಾರು ? ಇವರು ಯಾರನ್ನೂ ನಾನು ಕಂಡರಿಯೆನು. ದಯವಿಟ್ಟು ವಿವರಿಸು” ಎಂದು ಉತ್ತರ ಕೇಳಿಕೊಂಡ. ಆಗ ವೈರಿಗಳಿಗೆ ನಡುಕ ಹುಟ್ಟಿಸುವ ಅರ್ಜುನನು ನಗುತ್ತ ಉತ್ತರನಿಗೆ ಅವರ ಪರಿಚಯ ಮಾಡುತ್ತ ಹೋದ.
ಪದಾರ್ಥ (ಕ.ಗ.ಪ)
ವೈರಿದಲ್ಲಣ-ಶತ್ರುಗಳನ್ನು ನಡುಗಿಸುವ (ಅರ್ಜುನ)
ಮೂಲ ...{Loading}...
ಆರು ಕೌರವನಲ್ಲಿ ಭೀಷ್ಮನ
ದಾರು ಕೃಪನಾವವನು ದ್ರೋಣನ
ದಾರು ಬಲದೊಳಗಾವನಶ್ವತ್ಥಾಮನೆಂಬವನು
ವೀರ ತಿಳುಹೆನಗಿಲ್ಲಿ ಕರ್ಣನ
ದಾರು ನಾ ಕಂಡರಿಯೆನೆನಲಾ
ವೈರಿದಲ್ಲಣ ಪಾರ್ಥ ನಗುತುತ್ತರನೊಳಿಂತೆಂದ ॥53॥
೦೫೪ ಉದಯದರುಣನ ಕರುವ ...{Loading}...
ಉದಯದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಿಸಿ ಬೆಳಗುವ ಕೊಡನ ಹಳವಿಗೆಯ
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ ॥54॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಳೆಯ ಸೂರ್ಯನನ್ನೇ ಹಿಡಿದು ಬೆಸುಗೆ ಹಾಕಿದ್ದಾರೋ ಎಂಬಂತೆ ವರ್ಣಕಾಂತಿಯಿಂದ ಒಪ್ಪುವ ಕುದುರೆಗಳು ; ಥಳಥಳಿಸಿ ಬೆಳಗುವ ಕೊಡದ ಧ್ವಜ (ದ್ರೋಣ ಧ್ವಜ); ಶಬ್ದ ಮಾಡುತ್ತ ಸಾಗುವ ರತ್ನದ ರಥ. ಇವುಗಳಿಂದ ಕೂಡಿದ ಸಮರಕೋಲಾಹಲನೂ ಶಸ್ತ್ರ ಅಸ್ತ್ರ ವಿದ್ಯೆಯಲ್ಲಿ ಸಕಲವನ್ನು ಬಲ್ಲವನೂ ಆದ ಆ ಸರ್ವಜ್ಞನನ್ನು ನೋಡು. ಉತ್ತರ ಕುಮಾರ ! ಆತನೇ ದ್ರೋಣಾಚಾರ್ಯ.
ಪದಾರ್ಥ (ಕ.ಗ.ಪ)
ಉದಯದರುಣ-ಪ್ರಾತಃಸೂರ್ಯ, ಕರು-ಎರಕ, ಹಳವಿಗೆ-ಧ್ವಜ, ಗರುಡಿಯ ಸದನ ಸರ್ವಜ್ಞನನ್ನು…. (ದ್ರೋಣನನ್ನು) ಗರುಡಿ-ವಿದ್ಯಾಭ್ಯಾಸ ಮಾಡಿಸುವ ಪ್ರದೇಶ, ಸದನ-ಮನೆ, ಅಲ್ಲಿ ಸರ್ವಜ್ಞ ಎಂದರೆ ಧನುರ್ವೇದ ಪಾರಂಗತ
ಟಿಪ್ಪನೀ (ಕ.ಗ.ಪ)
ಅರ್ಜುನನು ಬಹಳ ಗೌರವ ಭಾವದಿಂದಲೇ ತನ್ನ ವಿದ್ಯಾಗುರುವಾದ ದ್ರೋಣರ ಪರಿಚಯ ಮಾಡಿಕೊಡುತ್ತಿರುವುದು ಅವನ ವಿನಯಕ್ಕೆ ಸಾಕ್ಷಿಯಾಗಿದೆ.
ಕೊಡನ ಹಳವಿಗೆ-ದ್ರೋಣ ಎಂದರೆ ಕೊಡ ಎಂದರ್ಥ. ಕೊqದಲ್ಲಿ ಹುಟ್ಟಿದವನು, ಆತ ಆದ್ದರಿಂದ ಕಳಶಜನೆಂಬ ಹೆಸರೂ ಇದೆ ಆತ ಅದನ್ನೇ ಧ್ವಜ ಚಿಹ್ನೆಯಾಗಿ ಮಾಡಿಕೊಂಡಿದ್ದಾನೆ
ಮೂಲ ...{Loading}...
ಉದಯದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಿಸಿ ಬೆಳಗುವ ಕೊಡನ ಹಳವಿಗೆಯ
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ ॥54॥
೦೫೫ ನವರತುನ ಕೇವಣದ ...{Loading}...
ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ
ಬವರ ಭೈರವನಾತನತಿ ಬಲ
ಶಿವನ ನೊಸಲಂದದಲಿ ಮೆರೆವವ
ನಿವನು ಜಿತಸಂಗ್ರಾಮನಶ್ವತ್ಥಾಮ ನೋಡೆಂದ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನವರತ್ನಗಳಿಂದ ಪೋಣಿಸಿದ ರಥ, ತುಂಬ ವೇಗದ ಕುದುರೆಗಳು, ಭಯಂಕರವಾದ ರೌದ್ರಾಯುಧಗಳ ಸಮೂಹ, (ಹರಿಯ) ಧ್ವಜಗಳಿಂದ ಮೆರೆಯುತ್ತಿರುವ ಸಮರ ಭೈರವನೂ ಶಿವನ ಹಣೆ (ಗಣ್ಣಿನಂತೆ) ಯಂತೆ ಉರಿಯುತ್ತಿರುವವನೂ ಯುದ್ಧದಲ್ಲಿ ಗೆಲುವನ್ನು ಪಡೆದವನೂ ಆದ ಅಶ್ವತ್ಥಾಮ ಎಂದರೆ ಈತನೇ ನೋಡು”
ಪದಾರ್ಥ (ಕ.ಗ.ಪ)
ಕೇವಣ-ಪೋಣಿಸು, ಜವ-ವೇಗ, ತೇಜಿ-ಕುದುರೆ, ಗಡಣ-ಗುಂಪು, ಹರಿ-ಸಿಂಹ ? ಹಳವಿಗೆ-ಧ್ವಜ, ಬವರ-ಯುದ್ಧ, ನೊಸಲು-ಹಣೆ, ಜಿತಸಂಗ್ರಾಮ-ಯುದ್ಧದಲ್ಲಿ ಜಯಶಾಲಿ
ಮೂಲ ...{Loading}...
ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ
ಬವರ ಭೈರವನಾತನತಿ ಬಲ
ಶಿವನ ನೊಸಲಂದದಲಿ ಮೆರೆವವ
ನಿವನು ಜಿತಸಂಗ್ರಾಮನಶ್ವತ್ಥಾಮ ನೋಡೆಂದ ॥55॥
೦೫೬ ಖುರದಲವನಿಯ ಹೊಯ್ದು ...{Loading}...
ಖುರದಲವನಿಯ ಹೊಯ್ದು ಲಹರಿಯ
ಲುರಿ ಮಸಗಲುಬ್ಬೆದ್ದ ತೇಜಿಯ
ಮೆರೆವ ಮುಕ್ತಾವಳಿಯ ತೇರಿನ ನವ ವಿಳಾಸದಲಿ
ಸರಳ ತಿರುಹುತ ನಿಂದು ಧನುವನು
ನಿರುತವನು ನೆರೆ ನೋಡಿ ತಾ ಝೇಂ
ಕರಿಸುವವನತಿ ಬಲ ಕೃಪಾಚಾರಿಯನು ನೋಡೆಂದ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು ಆಚಾರ್ಯ ಕೃಪರ ಬಗೆಗೆ ಹೇಳುತ್ತಿದಾನೆ. “ಉತ್ತರ ! ಅಲ್ಲಿ ನೋಡು. ಗೊರಸಿನಿಂದ ನೆಲವನ್ನು ಹೊಯ್ದು ಬೆಂಕಿಯ ಅಲೆಗಳನ್ನು ಎಬ್ಬಿಸುವ ರೀತಿಯಲ್ಲಿ ಉಬ್ಬೆದ್ದ ಕುದುರೆಗಳು, ಮುತ್ತಿನ ಅಲಂಕಾರದ ರಥ (ಹೊಸ ಬಗೆಯಲ್ಲಿ ರೂಪಗೊಂಡ ರಥ) ಇವುಗಳಿಂದ ಕೂಡಿ ಕೈಯ ಬಾಣವನ್ನು ತಿರುಗಿಸುತ್ತ ಧನುಸ್ಸನ್ನು ನೋಡುತ್ತ ಝೇಂಕರಿಸುತ್ತಿದ್ದಾನಲ್ಲ ಅವನೇ ಮಹಾಬಲಶಾಲಿಯಾದ ಕೃಪಾಚಾರ್ಯ.
ಪದಾರ್ಥ (ಕ.ಗ.ಪ)
ಖುರ-ಕಾಲಗೊರಸು, ಅವನಿ-ನೆಲ, ತೇಜಿ-ಕುದುರೆ, ಮುಕ್ತಾವಳಿ-ಮುತ್ತುಗಳು, ಸರಳು-ಬಾಣ, ನಿರುತ-ವಿಶ್ವಾಸಾರ್ಹವಾದದ್ದು, ದೃಢವಾದದ್ದು ಸ
ಮೂಲ ...{Loading}...
ಖುರದಲವನಿಯ ಹೊಯ್ದು ಲಹರಿಯ
ಲುರಿ ಮಸಗಲುಬ್ಬೆದ್ದ ತೇಜಿಯ
ಮೆರೆವ ಮುಕ್ತಾವಳಿಯ ತೇರಿನ ನವ ವಿಳಾಸದಲಿ
ಸರಳ ತಿರುಹುತ ನಿಂದು ಧನುವನು
ನಿರುತವನು ನೆರೆ ನೋಡಿ ತಾ ಝೇಂ
ಕರಿಸುವವನತಿ ಬಲ ಕೃಪಾಚಾರಿಯನು ನೋಡೆಂದ ॥56॥
೦೫೭ ಲಲಿತ ರತ್ನಪ್ರಭೆಯ ...{Loading}...
ಲಲಿತ ರತ್ನಪ್ರಭೆಯ ತೇರಿನ
ಲುಲಿವ ಬಹುವಿಧ ವಾದ್ಯ ರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ
ಲಳಿಯ ಲಹರಿಯ ಲಗ್ಗೆಗಳ ಮೋ
ಹಳಿಸಿ ಬಿಲು ಝೇಂಕಾರ ರವದಿಂ
ದುಲಿವವನು ಕಲಿಕರ್ಣನತುಳ ಪರಾಕ್ರಮಾನಲನು ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯಾ ಉತ್ತರ, ನೋಡು. ರತ್ನಕಾಂತಿಯಿಂದ ಸೊಗಸುವ ರಥ, ಸುತ್ತಲೂ ಶಬ್ದ ಮಾಡುವ ವಾದ್ಯಗಳ ರಭಸ, ಕಾಂತಿಯುಕ್ತವಾಗಿ ಕಡು ದರ್ಪದಿಂದ ಹೇಷಾರವ ಮಾಡುತ್ತಿರುವ ಕುದುರೆಗಳು, ಕಾಂತಿಯ ಅಲೆಗಳು ಇವುಗಳಿಂದ ಕೂಡಿ ಸಜ್ಜಾಗಿ, ಬಿಲ್ಲನ್ನು ಝೇಂಕಾರ ಮಾಡುತ್ತ ಗರ್ಜಿಸುತ್ತಿರುವವನೇ ್ಲ ಬೆಂಕಿಯಂತಹ ಪರಾಕ್ರಮಿಯಾದ ವೀರಕರ್ಣ.
ಪದಾರ್ಥ (ಕ.ಗ.ಪ)
ಕಳಕಳ-ಉತ್ಸಾಹ, ಅಳ್ಳಿರಿ-ಗರ್ಜಿಸು, ಮೋಹಳಿಸಿ- ಮೋಹರಿಸಿ- ಸಜ್ಜಾಗಿ, ಅಣಿಯಾಗಿ
ಟಿಪ್ಪನೀ (ಕ.ಗ.ಪ)
ಕರ್ಣ ಅರ್ಜುನರ ವೈರವು ಲೋಕ ಪ್ರಸಿದ್ಧವಾದದ್ದು ‘ಪೆಸರ್ಗೊಂಡ ಮಾತ್ರದೊಳೆ ಸೈರಿಸನ್’ ಎಂದು ಪಂಪನು ಭರತ-ಬಾಹು ಬಲಿಗಳ ವಿಷಯದಲ್ಲಿ ಹೇಳುವುದನ್ನು ಕರ್ಣಾರ್ಜುನರಿಗೂ ವಿಸ್ತರಿಸಬಹುದೆಂಬಷ್ಟು ವೈರ ಅವರಲ್ಲಿ. ಆದರೆ ಅರ್ಜುನನು ಇಲ್ಲಿ ಕರ್ಣನ ಬಗೆಗೆ ತುಂಬ ವಸ್ತುನಿಷ್ಠ ವರ್ಣನೆ ಮಾಡುತ್ತಿದ್ದಾನೆ. ಈ ಗುಣ ಮೆಚ್ಚಬೇಕಾದದ್ದು.
ಮೂಲ ...{Loading}...
ಲಲಿತ ರತ್ನಪ್ರಭೆಯ ತೇರಿನ
ಲುಲಿವ ಬಹುವಿಧ ವಾದ್ಯ ರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ
ಲಳಿಯ ಲಹರಿಯ ಲಗ್ಗೆಗಳ ಮೋ
ಹಳಿಸಿ ಬಿಲು ಝೇಂಕಾರ ರವದಿಂ
ದುಲಿವವನು ಕಲಿಕರ್ಣನತುಳ ಪರಾಕ್ರಮಾನಲನು ॥57॥
೦೫೮ ಅತ್ತಲೈದನೆ ಬಹಳ ...{Loading}...
ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಿಳಿಯ ತೇಜಿಗಳ
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರ ಗಂಗಾಸುತನು ನೋಡೆಂದ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉತ್ತರ ! ನೋಡು ಒತ್ತೊತ್ತಾದ ಭಾರಿಯ ಸೇನೆಯ ಮಧ್ಯದಲ್ಲಿ ಪಾಂಡವ ಕೌರವರ ಮುತ್ತಜ್ಜ ಎನ್ನಿಸಿಕೊಂಡು ಬಿಳೀ ಕುದುರೆಗಳ ಹೊಂಬಣ್ಣದ ಮಾಡಿದ ತಾಳ ಧ್ವಜದಲ್ಲಿ, ಛತ್ರಿಗಳ ಸಾಲಿನಲ್ಲಿ ಇರುವವನೇ ಶತ್ರು ಕುಲಕ್ಕೆ ಮೃತ್ಯು ಎನ್ನಿಸಿದ ವೀರ ಗಂಗಾಸುತ ಭೀಷ್ಮ” ಎಂದು ಅರ್ಜುನನು ಹೇಳಿದನು
ಪದಾರ್ಥ (ಕ.ಗ.ಪ)
ಐದನೆ-ಇದ್ದಾನೆ. ನಡುಗನ್ನಡ ರೂಪ (ಇದಾನೆ>ಐದನೆ), ಒತ್ತೊತ್ತೆ-ಕಿಕ್ಕಿರಿದ (ಸೇನೆ), ತೇಜಿ-ಕುದುರೆ, ಹೊಂದಾಳ-ಚಿನ್ನದ ಬಣ್ಣದ ತಾಳ, ಸಿಂಧ-ಧ್ವಜ (ಭೀಷ್ಮರಿಗೆ ತಾಳಧ್ವಜನೆಂದು ಹೆಸರಿದೆ) ಪಂಪನು ಭೀಷ್ಮರದು ‘ಕನಕತಾಳಧ್ವಜ’ ಎಂದಿದ್ದಾನೆ.
ಮೂಲ ...{Loading}...
ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಿಳಿಯ ತೇಜಿಗಳ
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರ ಗಂಗಾಸುತನು ನೋಡೆಂದ ॥58॥
೦೫೯ ಅಗಿವ ಹಾವಿನ ...{Loading}...
ಅಗಿವ ಹಾವಿನ ಹಳವಿಗೆಯ ಮಿಗೆ
ನೆಗಹಿ ಮುಸುಕಿದ ಝಲ್ಲರಿಯ ಜೋ
ಡಿಗಳ ತುಡುಕುವ ತಂಬಟಂಗಳ ಮೊರೆವ ಚಂಬಕದ
ನೆಗಹಿ ನಿಗುರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉತ್ತರ ! ನೋಡು. ಮಿಡುಕಾಡುತ್ತಿರುವ ಹಾವಿನ ಧ್ವಜ, ಎತ್ತಿ ಎತ್ತಿ ಕವಿದುಕೊಳ್ಳುವ ತಾಳಗಳು, ಬಡಿಯುವ ತಮಟೆಗಳು, ಮೊರೆಯುವ ಚಂಬಕ ತಮಟೆಗಳು, ಮೇಲೆದ್ದು ಕುಣಿಯುವ ಧ್ವಜ ಸ್ತಂಭಗಳು, ಮದ ಸುರಿಸುತ್ತ ಘೀಳಿಡುವ ಆನೆಗಳು-ಇವುಗಳ ಮಧ್ಯದಲ್ಲಿ ವೀರ ದುರ್ಯೋಧನನನ್ನು ನೋಡು. ಅವನು ಜೂಜಿನಲ್ಲಿ ಜಾಣ” ಎಂದು ಅರ್ಜುನ ಹೇಳಿದನು.
ಪದಾರ್ಥ (ಕ.ಗ.ಪ)
ಅಗಿ-ತೊನೆದಾಡು, ಹಳವಿಗೆ-ಧ್ವಜ, ನೆಗಹಿ-ಎತ್ತಿ, ಮುಸುಕಿದ- ಅಪ್ಪಳಿಸಿದ, ಝಲ್ಲರಿ-ತಾಳ, ಚಂಬಕ-ಒಂದು ವಿಧದ ತಮಟೆ, ನೆಗಹು-ಎತ್ತು, ನಿಗುರು-ಚಾಚಿಕೊ, ಟೆಕ್ಕೆಯ-ಧ್ವಜ, ಮದವೊಗುವ-ಮದಧಾರೆ ಸುರಿಯುವ, ಅಗಡು-ವೀರ, ದುಷ್ಟ
ಟಿಪ್ಪನೀ (ಕ.ಗ.ಪ)
ಕೌರವನ ಧ್ವಜದ ಬಗೆಗೆ ಕನ್ನಡ ಕವಿ ಪಂಪನ (ಅಥವಾ ಅವನಿಗೂ ಹಿಂದಿನ ಕವಿಗಳ) ಕಾಲದಿಂದ ಒಂದು ತಪ್ಪು ಕಲ್ಪನೆ ಬೆಳೆದು ಬಂದಿದೆ. ತೆಲುಗು ಕವಿಗಳೂ ಈ ತಪ್ಪನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಕೌರವನು ಸರ್ಪಧ್ವಜ, ಅಹಿಧ್ವಜ ಉರಗ ಪತಾಕ, ಹಾವುಹಳವಿಗೆಯಾದವನು ಮೊದಲಾದ ಬಗೆಯಲ್ಲಿ ಕರೆಯಲ್ಪಟ್ಟಿದ್ದಾನೆ. ಅವನು ಹಾವಿನ ಧ್ವಜದವನು ಎಂಬ ಕಲ್ಪನೆಯನ್ನು ಮುಂದುವರಿಸಿ ಕೌರವನು ಬುಸುಗುಟ್ಟುವ ಹಾವಿನಂತೆ ಆಡುತ್ತಾನೆ ಎಂಬವರೆಗೂ ಹೋಲಿಸಲಾಗಿದೆ ಆದರೆ ವಾಸ್ತವವಾಗಿ ಮೂಲಭಾರತದಲ್ಲಿ ಅವನು ಆನೆಯ ಧ್ವಜವುಳ್ಳವನು. ಹಸ್ತಿನಾವತಿ ಅವನ ರಾಜಧಾನಿಯಲ್ಲವೆ : ಹಸ್ತಿ ಎಂದರೆ ಆನೆ ಎಂದರ್ಥ. ಆನೆ ಹಾವಾದದ್ದು ಹೇಗೆ ? ನಾಗ ಎಂದರೂ ಆನೆ ಎಂಬರ್ಥವಿದೆ. ಆದುದರಿಂದ ಹಸ್ತಿನಾವತಿ ನಾಗಪುರವೂ ಹೌದು. ಪಂಪ ಈ ಅರ್ಥವನ್ನು ಕಳಚಿ ನಾಗಕ್ಕೆ ಇರುವ ಸರ್ಪ ಎಂಬರ್ಥವನ್ನೇ ಬಳಸಿಕೊಂಡ, ‘ಉರಗ ಪತಾಕ’ ಎನ್ನುವ ಕುಮಾರವ್ಯಾಸನಲ್ಲೂ ಇದೇ ಕಲ್ಪನೆಯಿದೆ.
ಮೂಲ ...{Loading}...
ಅಗಿವ ಹಾವಿನ ಹಳವಿಗೆಯ ಮಿಗೆ
ನೆಗಹಿ ಮುಸುಕಿದ ಝಲ್ಲರಿಯ ಜೋ
ಡಿಗಳ ತುಡುಕುವ ತಂಬಟಂಗಳ ಮೊರೆವ ಚಂಬಕದ
ನೆಗಹಿ ನಿಗುರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ ॥59॥
೦೬೦ ಅವನ ಬಲವಙ್ಕದಲಿ ...{Loading}...
ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಮತ್ತಾ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು
ತವತವಗೆ ಬಲುಗೈಗಳೆನಿಸುವ
ಶಿವನ ನೊಸಲಂದದಲಿ ಮೆರೆವವ
ರವನಿಪಾಲಕನನುಜರನು ನೋಡೆಂದನಾ ಪಾರ್ಥ ॥60॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉತ್ತರ ನೋಡು, ಕೌರವನ ಬಲಭಾಗದಲ್ಲಿ ನಿಂತವನು ಭೂರಿಶ್ರವ. ಕೌರವನ ಎಡಪಕ್ಕದಲ್ಲಿ ನಿಂತವನು ಸೈಂಧವ. ಸ್ವತಃ ಮಹಾ ವೀರರೆನ್ನಿಸಿಕೊಂಡು ಶಿವನ ಹಣೆಯಂತೆ ಕೆಂಗಣ್ಣಿನಿಂದ ಮೆರೆಯುವ ರಾಜರುಗಳನ್ನೂ ಕೌರವನ ತಮ್ಮಂದಿರನ್ನೂ ನೋಡು” ಎಂದು ಅರ್ಜುನನು ಉತ್ತರಕುಮಾರನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಬಲವಂಕ-ಬಲಬದಿ, ಭುವನಪತಿ-ಕೌರವ, ಎಡವಂಕ-ಎಡಭಾಗ, ಬಲುಗೈ-ವೀರ, ನೊಸಲು-ಹಣೆ, ಅನುಜ-ತಮ್ಮ
ಟಿಪ್ಪನೀ (ಕ.ಗ.ಪ)
ಭೂರಿಶ್ರವ-ಇವನು ಕುರುವಂಶದ ಒಬ್ಬ ವೀರ. ಇವನಿಗೆ ಕೌರವ ದಾಯಾದ, ಕುರುಪುಂಗವ, ಕುರೂದ್ವಹ ಎಂಬ ಸಂಬೋಧನೆಗಳೂ ಉಂಟು. ಮಹಾ ದಾನಿಯಾಗಿದ್ದುದರಿಂದ ‘ಭೂರಿ ದಕ್ಷಿಣ’ ಎಂಬ ಹೆಸರು ಬಂದಿದೆ. ಇವನು ಕುರುವಂಶದ ಸೋಮದ ಎಂಬಾತನ ಮಗ. ಈ ಸೋಮದನನ್ನು ಸಾತ್ಯಕಿಯ ವಂಶದ ಶಿನಿ ಎಂಬಾತ ಎದೆಗೆ ಒದ್ದು ಅವಮಾನಿಸಿದ್ದ. ಪ್ರತೀಕಾರ ಮಾಡಲು ಭೂರಿಶ್ರವನು ಸಾತ್ಯಕಿಯ ಜುಟ್ಟು ಹಿಡಿದು ಕೊಲ್ಲಲು ಹೋದಾಗ ಅರ್ಜುನನು ಭೂರಿಶ್ರವನನ್ನು ಕೊಂದನೆಂದು ಯುದ್ಧ ಪರ್ವಗಳಲ್ಲಿ ಹೇಳಲಾಗಿದೆ. ವಿವರಗಳಿಗೆ ‘ಮಹಾಭಾರತದ ಪಾತ್ರ ಸಂಗತಿಗಳು’ ನೋಡಿ ಅ.ರಾ.ಮಿತ್ರ ಸಂಪುಟ 1 ಪುಟ 223
ಮೂಲ ...{Loading}...
ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಮತ್ತಾ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು
ತವತವಗೆ ಬಲುಗೈಗಳೆನಿಸುವ
ಶಿವನ ನೊಸಲಂದದಲಿ ಮೆರೆವವ
ರವನಿಪಾಲಕನನುಜರನು ನೋಡೆಂದನಾ ಪಾರ್ಥ ॥60॥
೦೬೧ ಹೊಗಳಲನುಪಮ ಸೈನ್ಯವಿನ್ತೀ ...{Loading}...
ಹೊಗಳಲನುಪಮ ಸೈನ್ಯವಿಂತೀ
ದ್ವಿಗುಣವಂಧಾಸುರನ ಸೇನೆಗೆ
ತ್ರಿಗುಣವಿದು ರಾವಣನ ಮೋಹರಕೆನುತ ಫಲುಗುಣನು
ಹಗೆಯ ಭುಜದಗ್ಗಳಿಕೆಯನು ನಾ
ಲಗೆ ದಣಿಯೆ ಕೈವಾರಿಸುತ ಮಿಗೆ
ನಿಗುಚಿದನು ಫಲುಗುಣನು ಗಾಂಡಿವವ ಝೇವಡೆದು ॥61॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉತ್ತರ ಈ ಸೈನ್ಯದ ಮಹತ್ತನ್ನು ಹೇಳಲು ಕಷ್ಟ. ಅದು ಅಂಧಾಸುರನ ಸೇನೆಗೆ ಎರಡರಷ್ಟಿದೆ ರಾವಣನ ಸೇನೆಗೆ ಮೂರರಷ್ಟಿದೆ” ಎಂದು ಅರ್ಜುನನು ಉತ್ತರನಿಗೆ ಶತ್ರು ಸೇನೆಯ ಹಿರಿಮೆಯನ್ನು ನಾಲಗೆ ದಣಿಯುವಂತೆ ವರ್ಣಿಸಿದ. ಅನಂತರ ತನ್ನ ಗಾಂಡಿವ ಧನುಸ್ಸನ್ನು ಜೇವೊಡೆದು ಎತ್ತಿದ.
ಪದಾರ್ಥ (ಕ.ಗ.ಪ)
ದ್ವಿಗುಣ-ಎರಡರಷ್ಟು, (ಅಂಧಾಸುರ-ಒಬ್ಬರಾಕ್ಷಸ ಟಿಪ್ಪಣಿ ನೋಡಿ) ತ್ರಿಗುಣ-ಮೂರರಷ್ಟು ಅಗ್ಗಳಿಕೆ-ಪರಾಕ್ರಮ, ಕೈವಾರಿಸು-ಹೊಗಳು, ನಿಗುಚು-ನಿಮಿರ್, ನಿಮಿರ್ಚು-ಹರಡು, ನೆಟ್ಟಗೆ ಮಾಡು.
ಟಿಪ್ಪನೀ (ಕ.ಗ.ಪ)
ಈ ಪರ್ವಗಳಲ್ಲಿ ಅರ್ಜುನನು ಉತ್ತರನ ಸಾರಥ್ಯದಲ್ಲಿ ಏಕಾಕಿಯಾಗಿ ಕೌರವ ಮಹಾಸೇನೆಯನ್ನು ಎದುರಿಸಿದ ಎಂಬ ಕಥೆ ನಂಬಲು ಅಸಾಧ್ಯ ಎನ್ನಿಸುತ್ತದೆ. ಎಂಥ ವೀರನಾದರೂ ಏಕಾಕಿಯಾಗಿ ಅವರನ್ನೆಲ್ಲ ಎದುರಿಸಿ ಸೋಲಿಸಿದ ಎಂಬುದು ಅಸಂಗತವಾಗಿ ಕಾಣುತ್ತದೆ. ವಿರಾಟನ ಸೇನೆ ಅವನೊಂದಿಗೆ ಹೊರಟರೂ ಅರ್ಜುನ ಮಿಂಚಿನ ವೇಗದಲ್ಲಿ ರಥ ಓಡಿಸಿದ್ದರಿಂದ ಹಿಂಬಾಲಿಸಬಾರದೆ ಅಲ್ಲೇ ಉಳಿಯಿತು. ಎಂಬುದು ಇನ್ನೊಂದು ನಂಬಲಾಗದ ಮಾತು. ಯುದ್ಧ ಭೂಮಿಯೇನು ದೂರವಿರಲಿಲ್ಲ ಅಲ್ಲದೆ ಬೇಹಿನವರು ಕೌರವ ಸೇನೆ ಎಲ್ಲಿ ಎಂದು ಪತ್ತೆ ಹಚ್ಚಿ ಕೊಡುವುದು ಅಸಾಧ್ಯವೇನಾಗಿರಲಿಲ್ಲ. ಇಷ್ಟು ದೊಡ್ಡ ಸೇನೆಯನ್ನು ಆ ಸೇನೆಯ ಮಹಾ ವೀರರುಗಳನ್ನು ಅರ್ಜುನ ಸೋಲಿಸಿದ್ದು ಪವಾಡ ಸದೃಶವೂ ಕೌರವ ವೀರರ ಪಾಲಿಗೆ ಪರಮ ಅನ್ಯಾಯಕರವೂ ಆಗಿದೆ. ಅವರೆಲ್ಲ ಅಷ್ಟೊಂದು ಸಣ್ಣವರಾಗಿ ಬಿಟ್ಟಿದ್ದಾರೆ. ಹೀಗೆ ನಿಭಾಯಿಸಬಲ್ಲ ಅರ್ಜುನನು ಭೀಮನ ಕೃಷ್ಣರ ಸಹಾಯದಿಂದ ಮಹಾಸಮರದಲ್ಲಿ ಮುಂದೆ ಕೌರವ ಸೇನೆಯನ್ನೆಲ್ಲ ಎದುರಿಸುವುದು ಕಷ್ಟವಾಗಿತ್ತೆ ? ಎಂಬ ಸಂಶಯವೂ ಏಳುತ್ತದೆ.
ಮೂಲಭಾರತದಲ್ಲಿ ಉತ್ತರನೇ ಈ ಪ್ರಶ್ನೆ ಎತ್ತುತ್ತಾನೆ “ಒಬ್ಬನೇ ಆ ಭಾರಿಯ ಸೇನೆಯೊಂದಿಗೆ ಹೇಗೆ ಹೋರಾಡುತ್ತೀಯೆ ?” ಎಂದು ಪ್ರಶ್ನಿಸಿದಾಗ ಅರ್ಜುನನು ಗಂಧರ್ವರಾಜ ಚಿತ್ರ ಸೇನನ ಮೇಲೆ, ನಿವಾತ ಕವಚರ ಮೇಲೆ ಖಾಂಡವದಹನ ಸಂದರ್ಭದಲ್ಲಿ ಏಕಾಕಿಯಾಗಿ ಹೋರಾಡಿ ಗೆದ್ದಿರುವುದಾಗಿ ತಿಳಿಸುತ್ತಾನೆ. ಮೂಲದಲ್ಲಿ ಉತ್ತರನಿಗೇನೋ ನಂಬಿಕೆ ಬರುತ್ತದೆ. ಆದರೆ ನಮ್ಮ ಸಂಶಯ, ಪ್ರಶ್ನೆ ಹಾಗೇ ಉಳಿಯುತ್ತದೆ.
ಅಂಧಾಸುರ-ಅಂಧಕಾಸುರ
- ಒಬ್ಬರಾಕ್ಷಸ ಸಿಂಹಿಕಾ ವಿಪ್ರಚಿತ್ತರ ಮಗ- ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ವರ ಪಡೆದ ಪೊಗರಿನಲ್ಲಿ ಮಿತಿಮೀರಿ ವರ್ತಿಸಿದ. ಪಾರ್ವತಿ ದೇವಿಯನ್ನೇ ಮೋಹಿಸಿ ಶಿವನಿಂದ ಹತನಾದ.
- ಒಬ್ಬ ರಾಕ್ಷಸ. ಕಶ್ಯಪ-ದಿತಿಗಳ ಮಗ. ಇವನಿಗೆ ಸಾವಿರ ಕೈಗಳು ಸಾವಿರ ತಲೆಗಳು. ದೃಷ್ಟಿ ಚೆನ್ನಾಗಿದ್ದರೂ ಕುರುಡನಂತೆ ಸಂಚರಿಸುತ್ತಿದ್ದುದರಿಂದ ಈ ಹೆಸರು ಬಂದಿದೆ. ಸ್ವರ್ಗದಿಂದ ಪಾರಿಜಾತ ವೃಕ್ಷನನ್ನು ಅಪಹರಿಸಲು ದೊಡ್ಡ ಸೇನೆಯೊಂದಿಗೆ ಬಂದ. ಶಿವ ಇವನ್ನನು ಕೊಂದು ‘ಅಂಧಕರಿಪು’ ಎಂಬ ಹೆಸರು ಪಡೆದ.
ಮೂಲ ...{Loading}...
ಹೊಗಳಲನುಪಮ ಸೈನ್ಯವಿಂತೀ
ದ್ವಿಗುಣವಂಧಾಸುರನ ಸೇನೆಗೆ
ತ್ರಿಗುಣವಿದು ರಾವಣನ ಮೋಹರಕೆನುತ ಫಲುಗುಣನು
ಹಗೆಯ ಭುಜದಗ್ಗಳಿಕೆಯನು ನಾ
ಲಗೆ ದಣಿಯೆ ಕೈವಾರಿಸುತ ಮಿಗೆ
ನಿಗುಚಿದನು ಫಲುಗುಣನು ಗಾಂಡಿವವ ಝೇವಡೆದು ॥61॥
೦೬೨ ಖುರಪುಟದಲಾಕಾಶ ಭಿತ್ತಿಯ ...{Loading}...
ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದುವ್ವಾಳಿಸುವಡಾಹವಕೆ
ಅರರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂಧೂ
ಳಿರದೆ ನಭಕುಪ್ಪರಿಸಿ ರವಿ ಮಂಡಲವನಂಡಲೆಯೆ ॥62॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉತ್ತರನು ರಥವನ್ನು ನಡೆಸಲು ಸಿದ್ಧನಾದ. ಆಗ ಕುದುರೆಗಳು ತಮ್ಮ ಗೊರಸಿನ ಧೂಳಿನಿಂದಲೇ ಆಕಾಶದ ಗೋಡೆಯ ಮೇಲೆ ಬರೆಯುವಂತೆ, ಸೂರ್ಯನ ಕುದುರೆಗಳನ್ನು ಕರೆಯುವಂತೆ ಯುದ್ಧಕ್ಕೆ ರಭಸದಿಂದ ಹೊರಟವು. ಉತ್ತರನು ಅರರೆ ಭೇಷ್ ಎಂದು ಕುದುರೆಗಳನ್ನು ಮೆಚ್ಚಿ ಚಪ್ಪರಿಸಿದ. ಕೂಡಲೇ ಕುದುರೆಗಳ ಓಡಾಟದಿಂದ ಕೆಂಪು ಧೂಳು ಎದ್ದು ಆಕಾಶಕ್ಕೆ ಹಾರಿ ಸೂರ್ಯಮಂಡಲವನ್ನು ಆವರಿಸಿತು.
ಪದಾರ್ಥ (ಕ.ಗ.ಪ)
ಖುರಪುಟ-ಗೊರಸು, ಭಿತ್ತಿ-ಗೋಡೆ, ಸೂರಿಯ-ಸೂರ್ಯ, ತುರಗ-ಕುದುರೆ, ಕೈಗಟ್ಟು-ಆರಂಭವಾಗು, ಉಂಟಾಗು ದುವ್ವಾಳಿಸು-ವೇಗವಾಗಿ ಸಾಗು, ಪೂತುರೆ-ಭೇಷ್ ಎಂಬ ಉದ್ಗಾರ, ನಿಗುರು-ಮೇಲೇರು, ಅಂಡಲೆ-ಪೀಡಿಸು ಕಾಡು, ಉಪ್ಪರಿಸು-ಮೇಲೇಳು, ನೆಗೆ
ಮೂಲ ...{Loading}...
ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದುವ್ವಾಳಿಸುವಡಾಹವಕೆ
ಅರರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂಧೂ
ಳಿರದೆ ನಭಕುಪ್ಪರಿಸಿ ರವಿ ಮಂಡಲವನಂಡಲೆಯೆ ॥62॥
೦೬೩ ತುರಗ ಗರ್ಜನೆ ...{Loading}...
ತುರಗ ಗರ್ಜನೆ ರಥದ ಚೀತ್ಕೃತಿ
ವರ ಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆ ನಿಷ್ಠುರ ದೇವದತ್ತ ರವ
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕಿ
ಸುರಿಯೆ ಸುರಕುಲ ಪರಿಯೆ ಭೀತಿಯಲಹಿತ ಬಲ ಹರಿಯೆ ॥63॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಕುದುರೆಗಳ ಗರ್ಜನೆ, ರಥದ ಚೀತ್ಕಾರ ಶಬ್ದ, ರಥದ ಧ್ವಜದ ಮೇಲಿದ್ದ ಹನುಮಂತನ ಅಬ್ಬರ, ಅರ್ಜುನನ ಗರ್ಜನೆ, ಅರ್ಜುನನ ಶಂಖವಾದ ದೇವದತ್ತದ ಶಬ್ದ ಇವುಗಳ ಮೇಳದಿಂದಾಗಿ ಹೊದರೆದ್ದುವು.
ಆ ಶಬ್ದಕ್ಕೆ ಪರ್ವತಗಳು ಬಿರಿದುವು. ಸಮುದ್ರ ಹಿಂದಕ್ಕೆ ಸರಿಯಿತು. ನಕ್ಷತ್ರಗಳು ಉದುರಿದುವು. ಯುದ್ಧ ನೋಡಲೆಂದು ಬಂದಿದ್ದ ದೇವತೆಗಳು ಹೆದರಿ ಓಡಿದರು. ಹೆದರಿಕೆಯಿಂದ ಕೌರವ ಸೇನೆ ದಿಕ್ಕು ದಿಕ್ಕಿಗೆ ಓಡಿತು.
ಪದಾರ್ಥ (ಕ.ಗ.ಪ)
ತುರಗ-ಕುದುರೆ, ಚೀತ್ಕೃತಿ-ರಥದ ಚೀತ್ಕಾರದ ಧ್ವನಿ, ಧನುಷ್ಟಂಕಾರ-ಅರ್ಜುನನ ಗಾಂಡಿವದ ಶಬ್ದ, ಅಬ್ಬರಣೆ-ಕಿರುಚಾಟ, ಗರ್ಜನೆ, ನಿಷ್ಠುರ-ಒರಟು, ಗಡಸು, ರವ-ಶಬ್ದ, ಹೊದರೇಳು ಹೊದಱು +ಏಳು = ಗುಂಪಾಗು, ಸ್ಫೋಟಿಸು, ಗಿರಿವ್ರಜ-ಪರ್ವತ ಸಮೂಹ, ಜಲನಿಧಿ-ಸಮುದ್ರ, ಜರಿ-ಹಿಂದಕ್ಕೆ ಸರಿ, ತಾರಕಿ-ನಕ್ಷತ್ರ, ಪರಿ-ಓಡು, ಅಹಿತಬಲ-ಶತ್ರು ಸೇನೆ, ಹರಿ-ಪರಿ-ಓಡು
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಅರ್ಜುನನು ಭೂಮಿಯ ಎದೆ ಬಿರಿಯುವಂತೆ ಶಂಖಧ್ವನಿ ಮಾಡುತ್ತಿದ್ದ ಎಂದೂ ಬಿಲ್ಲಿನ ಜ್ಯಾರವದಿಂದ ಮತ್ತು ಅವನ ಮೈತಟ್ಟಿಕೊಳ್ಳುವ ಶಬ್ದದಿಂದ ಎಲ್ಲ ಜೀವಿಗಳೂ ತಲ್ಲಣಗೊಂಡರೆಂದೂ ಹೇಳಲಾಗಿದೆ
“ತತಃ ಶಂಖಮುಪಾಧ್ಮಾಸೀತ್
ದ್ವಾರಯನ್ನಿವ ಮೇದಿನೀಂ
ಜ್ಯಾಘೋಷಂ ತಲಘೋಷಂಚ
ಕೃತ್ವಾ ಭೂತಾನ್ಯ ಮೋಹಯತ್”
ಗೋಗ್ರಹಣದ ಯುದ್ಧದಲ್ಲಿ ಕೌರವ ಸೇನೆಯನ್ನು ಸೋಲಿಸಿ ಹಿಂದಿರುಗಿದ ಮೇಲೆ ಕೂಡ ಉತ್ತರನು ತನ್ನ ತಂದೆಗೆ ಈ ಶಂಖ ಘೋಷದ ಬಗೆಗೆ ಹೇಳುತ್ತ “ಅರ್ಜುನನ ಶಂಖವಾದನದಿಂದ ನನ್ನ ಕಿವಿ ತೂತು ಬಿದ್ದಿದೆ” (ಕಿವುಡಾಗಿದೆ) ಎನ್ನುತ್ತಾನೆ
“ಅಸ್ಯ ಶಂಖ ಪ್ರಣಾದೇನ ಕರ್ಣೌಮೇ ಬಧಿರೀಕೃತಾ”
ಮೂಲ ...{Loading}...
ತುರಗ ಗರ್ಜನೆ ರಥದ ಚೀತ್ಕೃತಿ
ವರ ಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆ ನಿಷ್ಠುರ ದೇವದತ್ತ ರವ
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕಿ
ಸುರಿಯೆ ಸುರಕುಲ ಪರಿಯೆ ಭೀತಿಯಲಹಿತ ಬಲ ಹರಿಯೆ ॥63॥
೦೬೪ ಶಿರವ ಸಿಡಿಲೆರಗಿದವೊಲುತ್ತರ ...{Loading}...
ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣ ವಾರಿಗಳ
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ ॥64॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಲೆಯ ಮೇಲೆ ಸಿಡಿಲು ಬಡಿದ ಹಾಗಾಗಿ ಉತ್ತರನು ಮೂರ್ಛೆ ಹೋಗಿ ತಿರುಗಿ ಬಿದ್ದ. ತಿರುಗಿ ತೆರೆದ ಕಣ್ಣಾಲಿಗಳು ರಕ್ತವನ್ನು ಕಾರಿದವು. ಸಂಕಟ ತಡೆಯಲಾರದೆ ಉತ್ತರನು ಹೊರಳಾಡುತ್ತಿದ್ದ. ಅದನ್ನು ಕಂಡು ಅರ್ಜುನನು ಅಯ್ಯಯ್ಯೋ ಈ ಪಾಪಿ ಆ ಶಬ್ದವನ್ನು ಸಹಿಸಿಕೊಳ್ಳಲಾರ. ಏನು ಮಾಡಲಿ ಎಂದುಕೊಂಡು ಸೆರಗಿನಿಂದ ಬೀಸಿ ಗಾಳಿಯ ಉಪಚಾರವನ್ನು ಮಾಡಿ ಉತ್ತರನನ್ನು ರಥದಲ್ಲಿ ಕುಳ್ಳಿರಿಸಿದ.
ಪದಾರ್ಥ (ಕ.ಗ.ಪ)
ಹೊಡೆಮರಳು-ತಿರುಗು, ಅರುಣವಾರಿ-ಕೆನ್ನೀರು, ರಕ್ತ
ಮೂಲ ...{Loading}...
ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣ ವಾರಿಗಳ
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ ॥64॥
೦೬೫ ಏನು ಮತ್ಸ್ಯಕುಮಾರ ...{Loading}...
ಏನು ಮತ್ಸ್ಯಕುಮಾರ ಭವಣಿಯಿ
ದೇನು ನಿನಗೆಂದೆನಲು ಜಗದವ
ಸಾನದಂದದಿ ಸಿಡಿಲು ಸುಳಿದುದು ಬಿರಿದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನ ಕಳುಹು ಮ
ಹಾ ನಿನಾದವ ಮಾಣು ಮಾಣೆನೆ ಪಾರ್ಥನಿಂತೆಂದ ॥65॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನ ಗಾಬರಿಯಿಂದ ಕೇಳಿದ “ಏನು ಉತ್ತರಕುಮಾರ? ಏನು ಸಂಕಟ ನಿನಗೆ ?” ಆಗ ಉತ್ತರನು “ಏನಿಲ್ಲ ಲೋಕ ಪ್ರಳಯದ ಸಮಯದಲ್ಲಾಗುವಂತೆ ಸಿಡಿಲು ಬಡಿಯಿತು. ನನ್ನ ಎದೆ ಬಿರಿಯಿತು. ಅಯ್ಯೋ ! ನಾನು ನಿನ್ನ ಆ ಭಯಂಕರ ಧ್ವನಿಯನ್ನು ಸಹಿಸಬಲ್ಲೆನೆ ? ಸಾಕು ! ನನ್ನನ್ನು ಹಿಂದಕ್ಕೆ ಕಳಿಸು. ಮಹಾಧ್ವನಿಯನ್ನು ದಯವಿಟ್ಟು ನಿಲ್ಲಿಸು” ಎಂದ. ಆಗ ಅರ್ಜುನನು ಹೀಗೆ ಹೇಳಿದ.
ಪದಾರ್ಥ (ಕ.ಗ.ಪ)
ಭವಣಿ-ಬವಣೆ, ತೊಂದರೆ, ವಿಪತ್ತು, ಅವಸಾನ-ಮುಕ್ತಾಯ, ಜಗದವಸಾನ-ಪ್ರಳಯ
ಮತ್ಸ್ಯ ಕುಮಾರ - ಮತ್ಸ್ಯ ರಾಜನ ಮಗ.
ಪಾಠಾನ್ತರ (ಕ.ಗ.ಪ)
ನಿಧಾನವ - ನಿನಾದವ
ವಿರಾಟಪರ್ವ, ಮೈ.ವಿ.ವಿ.
ಟಿಪ್ಪನೀ (ಕ.ಗ.ಪ)
ಮತ್ಸ್ಯ ಕುಮಾರ - ಮತ್ಸ್ಯ ರಾಜನ ಮಗ.
ಆನಲಾಪೆನೆ ನಿನ್ನ ಬಹಳ ಧ್ವಾನವನು-(ಅರ್ಜುನನ ಬೊಬ್ಬೆ , ಧನುಷ್ಟಂಕಾರದಿಂದ ಎದ್ದ ಬೊಬ್ಬೆ ಕುದುರೆಗಳ ಹೇಷಾರವದ ಬೊಬ್ಬೆ ಕಪಿಯ ಬೊಬ್ಬೆ, ದೇವದತ್ತ ಶಂಖದ ಬೊಬ್ಬೆ ಇವುಗಳನ್ನು ನಾನು ಸೈರಿಸಬಲ್ಲೆನೆ ? ಎಂಬ ಭಾವ |
ಮೂಲ ...{Loading}...
ಏನು ಮತ್ಸ್ಯಕುಮಾರ ಭವಣಿಯಿ
ದೇನು ನಿನಗೆಂದೆನಲು ಜಗದವ
ಸಾನದಂದದಿ ಸಿಡಿಲು ಸುಳಿದುದು ಬಿರಿದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನ ಕಳುಹು ಮ
ಹಾ ನಿನಾದವ ಮಾಣು ಮಾಣೆನೆ ಪಾರ್ಥನಿಂತೆಂದ ॥65॥
೦೬೬ ಖೇಡನಾಗದಿರದುಭುತ ಧ್ವನಿ ...{Loading}...
ಖೇಡನಾಗದಿರದುಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತ ಸಂತೈಸಿ
ಮೂಡಿಗೆಯ ಅಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ ॥66॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರ್ಜುನನು “ಅಯ್ಯಾ , ಉತ್ತರ ! ಹೇಡಿಯಾಗಬೇಡ ! ನಾನು ಮುಂದೆ ಆ ಮಹಾಧ್ವನಿ ಮಾಡುವುದಿಲ್ಲ. ಹೆದರಬೇಡ. ಧೈರ್ಯ ತಂದುಕೊಂಡು ಈ ರಥವನ್ನು ನಡೆಸು” ಎಂದು ಉತ್ತರನನ್ನು ಸಮಾಧಾನಪಡಿಸಿದ. ಅನಂತರ ಶರಕೋಶದಿಂದ ಬಾಣವನ್ನು ಹಗ್ಗಕ್ಕೆ ಹೂಡಿದ. ಅರ್ಜುನನ ಕದನವನ್ನು ನೋಡಲು ದೇವಗಣವು ಆಕಾಶದಲ್ಲಿ ಗುಂಪುಸೇರಿತ್ತು.
ಪದಾರ್ಥ (ಕ.ಗ.ಪ)
ಖೇಡ-ಹೆದರಿಕೊಂಡವ, ಧೃತಿ ಮಾಡಿಕೊಂಡು…- ಧೈರ್ಯದಿಂದ ಎದೆ ಗಟ್ಟಿಮಾಡಿಕೊಂಡು, ಮೂಡಿಗೆ-ಬತ್ತಳಿಕೆ, ಅಂಬು-ಬಾಣ, ಉಗಿ-ತೆಗೆ, ತಿರು-ಹಗ್ಗ, ಅಮರ ಶ್ರೇಣಿ-ದೇವತೆಗಳ ಸಮೂಹ
ಟಿಪ್ಪನೀ (ಕ.ಗ.ಪ)
- ಮೂಲಭಾರತದಲ್ಲಿ ಉತ್ತರನು ಹೀಗೆಲ್ಲ ಹೆದರುವ ಚಿತ್ರವಿಲ್ಲ. ಅರ್ಜುನನ ಮೇಲೆ ನಂಬಿಕೆ ಬಂದ ಸಮಯದಿಂದ ಆತ ವೀರನಾಗಿಯೇ ವರ್ತಿಸುತ್ತಾನೆ.
- “ನನಗೆ ರಥ ನಡೆಸುವ ಸಾರಥಿ ಶಿಕ್ಷಣ ದೊರಕಿದೆ (ಶಿಕ್ಷಿತೋ ಹ್ಯಸ್ಮಿಸಾರಥ್ಯೇ) ದಾರುಕನಂತೆ, ಮಾತಲಿಯಂತೆ ನಾನು ರಥ ಚಾಲನೆಯಲ್ಲಿ ಶಿಕ್ಷಿತನಾಗಿದ್ದೇನೆ” - ಎಂದು ಉತ್ತರ ಹೇಳಿರುವುದನ್ನು ಗಮನಿಸಬೇಕು.
ಮೂಲ ...{Loading}...
ಖೇಡನಾಗದಿರದುಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತ ಸಂತೈಸಿ
ಮೂಡಿಗೆಯ ಅಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ ॥66॥