೦೦೦ ಸೂ ವಿಗ್ರಹಕೆ ...{Loading}...
ಸೂ. ವಿಗ್ರಹಕೆ ಸಮತಳಿಸಿ ಕುರುಕುಲ
ದಗ್ರಣಿಯ ಮುಂಕೊಂಡು ದಕ್ಷಿಣ
ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕುರು ವೀರರಲ್ಲಿ ಒಬ್ಬನಾದ ತ್ರಿಗರ್ತಾಧಿಪತಿ ವೀರ ಸುಶರ್ಮನು ದಕ್ಷಿಣ ಗೋಗ್ರಹಣ ಮಾಡಿದಾಗ ಮತ್ಸ್ಯರಿಗೂ ಕುರು ತ್ರಿಗರ್ತವೀರರಿಗೂ ನಡೆದ ಯುದ್ಧದಲ್ಲಿ ಭೀಮನು ಸುಶರ್ಮನನ್ನು ಸೋಲಿಸಿ ದನಗಳನ್ನು ಬಿಡಿಸಿಕೊಂಡು ಬಂದ.
ಪದಾರ್ಥ (ಕ.ಗ.ಪ)
ಸಮತಳಿಸು-ಅಣಿಯಾಗು, ಸಜ್ಜಾಗು, ವಿಗ್ರಹ-ಯುದ್ಧ, ಮುಂಕೊಂಡು-ಎದುರಿಸಿ
ಮೂಲ ...{Loading}...
ಸೂ. ವಿಗ್ರಹಕೆ ಸಮತಳಿಸಿ ಕುರುಕುಲ
ದಗ್ರಣಿಯ ಮುಂಕೊಂಡು ದಕ್ಷಿಣ
ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ದೂತರವನಿಯ
ಮೇಲೆ ತೊಳಲುತಲರಸಿ ಕಾಣದೆ ಪಾಂಡುನಂದನರ
ಹೋಲುವಿಕೆಯಿಂಬಿಡಿಯಲಾರದೆ
ಕಾಲ ಸವೆಯಲು ನಾಲ್ಕು ದಿಕ್ಕಿನ
ಮೂಲೆಯವರೈತಂದು ಬಿನ್ನವಿಸಿದರು ಕುರುಪತಿಗೆ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವೈಶಂಪಾಯನರು ಜನಮೇಜಯನಿಗೆ ಹೇಳುತ್ತಿದ್ದಾರೆ. ರಾಜ ! ಕೇಳು ಕೌರವನ ದೂತರು ಪಾಂಡವರನ್ನು ಪತ್ತೆ ಹಚ್ಚಲು ಎಲ್ಲ ರಾಜ್ಯಗಳಲ್ಲೂ ಓಡಾಡುತ್ತಿದ್ದರು. ಆದರೂ ಅವರು ಪಾಂಡವರನ್ನು ಕಾಣಲಾರದೆ ಹೋದರು. ಅವರನ್ನೇ ಹೋಲುವ ಗುಪ್ತವೇಷಿಗಳ ಜಾಡು ಹಿಡಿಯಲಾರದೆ ಹೋದರು. ಅವಧಿ ಮುಗಿಯುತ್ತ ಬಂದಿತ್ತು. ಆಗ ನಾಲ್ಕು ಮೂಲೆಗಳಿಗೂ ತೆರಳಿದ್ದ ಬೇಹುಗಾರ ದೂತರು ಕೌರವನ ಬಳಿಗೆ ಬಂದು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಪದಾರ್ಥ (ಕ.ಗ.ಪ)
ಅವನಿ-ಭೂಮಿ, ರಾಜ್ಯ, ಹೋಲುವಿಕೆಯ + ಇಂಬು ಇಡಿಯಲಾರದೆ-ಪಾಂಡವರನ್ನು, ಹೋಲುವವರ ಗುರುತು ಹಿಡಿಯಲಾರದೆ (ಅಥವಾ ಹೋಲುವಿಕೆಯಿಂ + ಪಿಡಿಯಲಾರದೆ ಎಂದೂ ಬಿಡಿಸಬಹುದು), ಐತಂದು-ಬಂದು, ಬಿನ್ನವಿಸು-ನಿವೇದಿಸು, ಹೇಳಿಕೊ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ದೂತರವನಿಯ
ಮೇಲೆ ತೊಳಲುತಲರಸಿ ಕಾಣದೆ ಪಾಂಡುನಂದನರ
ಹೋಲುವಿಕೆಯಿಂಬಿಡಿಯಲಾರದೆ
ಕಾಲ ಸವೆಯಲು ನಾಲ್ಕು ದಿಕ್ಕಿನ
ಮೂಲೆಯವರೈತಂದು ಬಿನ್ನವಿಸಿದರು ಕುರುಪತಿಗೆ ॥1॥
೦೦೨ ವಿತಳದೊಳು ಹೊಕ್ಕಿರಲಿಯಮರಾ ...{Loading}...
ವಿತಳದೊಳು ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೇಹುಗಾರ ದೂತರು ಕೌರವನಿಗೆ ಹೇಳಿದರು ಪ್ರಭು ! ಪಾಂಡವರು ವಿತಳದಲ್ಲಿ ಹೊಕ್ಕಿರಲಿ, ಅಮರಾವತಿಯೊಳಗೆ ಅಡಗಿರಲಿ. ಆದರೆ ಭೂಮಿಯಲ್ಲಿ ಮಾತ್ರ ಅವರ ಸುಳಿವಿಲ್ಲ. ನಾವು ನಮ್ಮ ಊಹಾ ಬುದ್ಧಿಯನ್ನು ವಿಸ್ತರಿಸಿ ನಾನಾ ವೇಷಗಳಲ್ಲಿ, ಸ್ಥಿತಿಗಳಲ್ಲಿ ರಾಜ್ಯಗಳನ್ನೆಲ್ಲ ಹೊಕ್ಕು ಹುಡುಕಾಡಿದೆವು. ಆದರೆ ಪ್ರಭು ನಿನ್ನ ವೈರಿಗಳು ನಿರ್ನಾಮವಾಗಿದ್ದಾರೆ.
ಪದಾರ್ಥ (ಕ.ಗ.ಪ)
ವಿತಳ-ಸಪ್ತ ಅಧೋ ಲೋಕಗಳಲ್ಲಿ ಒಂದು. ಅತಲ, ವಿತ, ರಸಾತಲ, ಸುತಲ, ತಲಾತಲ, ಮಹಾತಲ, ಪಾತಾಳ, ಅಮರಾವತಿ-ದೇವೇಂದ್ರನ ಊರು, ಕ್ಷಿತಿ-ಭೂಮಿ, ಮತಿಯ ಹಬ್ಬುಗೆಯಿಂದ-ಬುದ್ಧಿಯನ್ನು ನಾನಾ ದಿಕ್ಕಿನಲ್ಲಿ ಓಡಿಸಿ,
ಟಿಪ್ಪನೀ (ಕ.ಗ.ಪ)
ಮೂಲದಲ್ಲಿಯೂ ಈ ಮಾತಿದೆ
ಅನ್ವೇಷಿತಾ ಚ ಸರ್ವತ್ರ ನ ಚ ಪಶ್ಯಮಪಾಂಡವಾನ್
(ಎಲ್ಲ ಕಡೆ ತಿರುಗಿದೆವು. ಅಲ್ಲಿ ಪಾಂಡವರು ಕಾಣಲಿಲ್ಲ)
ನಿರ್ನಾಮರಾದರು ನಿನ್ನ ವೈರಿಗಳು…… ಇದೊಂದು ಪ್ರಸಿದ್ಧ ಜನಪ್ರಿಯ ಸೂಕ್ತಿ. ಮೂಲಭಾರತದಲ್ಲಿ “ಪಾಂಡವರು ಕಾಣಲಿಲ್ಲ. ಬಹುಶಃ ನಶಿಸಿದ್ದಾರು. ನಿನಗೆ ಮಂಗಳವಾಗಲಿ” (ಅತ್ಯಂತಂ ವಾ ವಿನಷ್ಟಾಸ್ತೇ ಭದ್ರಂ ತುಭ್ಯಂ ನರರ್ಷಭ) ಎನ್ನುತ್ತಾರೆ. ಅಲ್ಲದೆ ಅವರು ಹೋದ ದಾರಿಯಾಗಲಿ ಅವರಾಗಲಿ ಪತ್ತೆಯಾಗಲಿಲ್ಲ ಎನ್ನುತ್ತಾರೆ (“ನಹಿ ವಿದ್ಮೋ ಗತಿಂತೇಷಾಂ ವಾಸಂಹಿ ನರಸತ್ತಮ”) ಚಾರರು ಪಾಂಡವರ ಸೂತರನ್ನು ಬೆನ್ನಟ್ಟಿದ್ದರಂತೆ. ಆದರೆ ಸೂತರೆಲ್ಲ ದ್ವಾರಾವತಿಗೆ ಹೋದರು. ಅಲ್ಲಿ ಹುಡುಕಿದರೂ ಕಾಣಲಿಲ್ಲ.
ಸಪ್ತಲೋಕಗಳು - ಅತಲ, ವಿತ, ರಸಾತಲ, ಸುತಲ, ತಲಾತಲ, ಮಹಾತಲ, ಪಾತಾಳ,
ಮೂಲ ...{Loading}...
ವಿತಳದೊಳು ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು ॥2॥
೦೦೩ ಎನಲು ನಸುನಗುತರಸ ...{Loading}...
ಎನಲು ನಸುನಗುತರಸ ಮನದಲಿ
ತನಗೆ ಹಗೆಯಿಲ್ಲೆಂದು ದೂತರ
ಮನವೊಲಿದು ಮನ್ನಿಸಿದ ನಾಲುಕು ಕಡೆಯ ವಾರ್ತೆಗಳ
ತನತನಗೆ ಮಂತ್ರಿಗಳು ಬೆಸಗೊಳ
ಲನಿತು ದೂತರೊಳೊಬ್ಬ ಕೀಚಕ
ಹನನವನು ವಿಸ್ತರಿಸಿದನು ಕುರುರಾಯನಿದಿರಿನಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೂತರ ಮಾತುಗಳನ್ನು ಕೇಳಿ ಕೌರವನಿಗೆ ತುಂಬ ನೆಮ್ಮದಿಯಾಗಿತ್ತು. “ನನಗೆ ಇನ್ನು ಶತ್ರುಗಳೇ ಇಲ್ಲ” ಎಂದು ಮನಸಿನಲ್ಲೇ ಹೇಳಿಕೊಂಡ. ನಾಲ್ಕೂ ದಿಕ್ಕುಗಳಿಂದ ಸುದ್ದಿ ತಂದಿದ್ದ ವಾರ್ತಾಹರರನ್ನು ಸನ್ಮಾನಿಸಿದ. ಮಂತ್ರಿಗಳು ಕೂಡ ಆ ದೂತರೊಂದಿಗೆ ವಾರ್ತಾವಿನಿಮಯ ಮಾಡಿಕೊಳ್ಳುತ್ತಿದ್ದರು. ಕೌರವನೂ ಅಲ್ಲಿಯೇ ಇದ್ದ. ಆ ದೂತರಲ್ಲಿ ಒಬ್ಬನು ವಿರಾಟನಗರದಲ್ಲಿ ಕೀಚಕ ವಧೆಯ ಪ್ರಕರಣವನ್ನು ವಿವರವಾಗಿ ಹೇಳಿದ.
ಪದಾರ್ಥ (ಕ.ಗ.ಪ)
ಬೆಸಗೊಳ್-ಕೇಳು, ಹನನ-ಸಾವು, ವಧೆ,
ಟಿಪ್ಪನೀ (ಕ.ಗ.ಪ)
ವಿರಾಟನಗರದ ಕೀಚಕನ ಸುದ್ದಿ ಹೇಳಿದ್ದು ಕೌರವರಿಗೆ ಅವನ ಮಿತ್ರರಾದ ತ್ರಿಗರ್ತಾಧೀಶರಿಗೆ ಸಂತೋಷವಾಗಲಿ ಎಂಬ ಉದ್ದೇಶದಿಂದ. ಮೊದಲಿನಿಂದಲೂ ತ್ರಿಗರ್ತರು ವಿರಾಟ ರಾಜ್ಯದ ವೈರಿಗಳು ಆದರೆ ಕೀಚಕನು ಸೇನಾಪತಿಯಾದ ಮೇಲೆ ತ್ರಿಗರ್ತರನ್ನೆಲ್ಲ ಸೋಲಿಸಿ ದೂರವಿರಿಸಿದ್ದ.
ಮೂಲ ...{Loading}...
ಎನಲು ನಸುನಗುತರಸ ಮನದಲಿ
ತನಗೆ ಹಗೆಯಿಲ್ಲೆಂದು ದೂತರ
ಮನವೊಲಿದು ಮನ್ನಿಸಿದ ನಾಲುಕು ಕಡೆಯ ವಾರ್ತೆಗಳ
ತನತನಗೆ ಮಂತ್ರಿಗಳು ಬೆಸಗೊಳ
ಲನಿತು ದೂತರೊಳೊಬ್ಬ ಕೀಚಕ
ಹನನವನು ವಿಸ್ತರಿಸಿದನು ಕುರುರಾಯನಿದಿರಿನಲಿ ॥3॥
೦೦೪ ಒನ್ದು ವಾರ್ತೆಯಲಾ ...{Loading}...
ಒಂದು ವಾರ್ತೆಯಲಾ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಒಂದು ಸುದ್ದಿ ಮಂತ್ರಿಗಳೇ ! ತ್ರಿಗರ್ತರಿಗೂ ಈ ಸುದ್ದಿ ಕೇಳಿ ಆನಂದವಾಗಬಹುದು. ಗಂಧರ್ವರು ಒಂದು ರಾತ್ರಿ ಇಳಿದು ಬಂದು ಕೋಪದಿಂದ ಕೀಚಕನನ್ನು ಅವನ ತಮ್ಮಂದಿರನ್ನು ಕೊಂದು ಹಾಕಿದರು. ಕೀಚಕನಿಗೆ ರಾವಣನ ಪಾಡು ಬಂದಿತ್ತು” ಈ ಸುದ್ದಿ ಕೇಳುತ್ತಿದ್ದ ಕೌರವನು ಒಂದು ನಿಮಿಷ ಸ್ತಬ್ಧನಾದ. ಅವನಿಗೆ ಬೆರಗಾಗಿತ್ತು. ಏನೋ ಹೊಳೆಯಿತು.
ಪದಾರ್ಥ (ಕ.ಗ.ಪ)
ಒಂದು ವಾರ್ತೆಯಲಾ-ಒಂದು ವಾರ್ತೆ ಕಾಣಿರೋ , ತ್ರಿಗರ್ತ-ಇದು ವಿರಾಟನ ರಾಜ್ಯದ ನೆರೆರಾಜ್ಯ. ಈ ರಾಜ್ಯವನ್ನು ಕೀಚಕ ನಾಶಪಡಿಸಿದ್ದ, ಖಾತಿ-ಕೋಪ, ಮೋನ-ಮೌನ
ಟಿಪ್ಪನೀ (ಕ.ಗ.ಪ)
ಮೂಲದಲ್ಲಿಯೂ ಈ ಮಾತಿದೆ
- ಸ ಹತೋ ನಿಶಿ ಗಂಧರ್ವೈ : ಸ್ತ್ರೀ ನಿಮಿತ್ತಂ ನರಾಧಿಪ.
(ಅಂಥ ವೀರ ಕೀಚಕನು ಸ್ತ್ರೀ ಕಾರಣವಾಗಿ ರಾತ್ರಿಯ ವೇಳೆ ಗಂಧರ್ವರಿಂದ ಹತನಾದ)
ಮೂಲ ...{Loading}...
ಒಂದು ವಾರ್ತೆಯಲಾ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ ॥4॥
೦೦೫ ಹೇಳು ಹೇಳಿನ್ನೊಮ್ಮೆ ...{Loading}...
ಹೇಳು ಹೇಳಿನ್ನೊಮ್ಮೆ ಮತ್ಸ್ಯನ
ತೋಳು ಮುರಿದುದೆ ಸುಭಟರೊಳು ಕ
ಟ್ಟಾಳು ಕೀಚಕ ಮಡಿದನೇ ಗಂಧರ್ವರಿರಿದವರೆ
ಮೇಲಣವರಿಗೆ ಮತ್ರ್ಯರಿಗೆ ಕೈ
ಕಾಲು ಮೆಟ್ಟಿನ ತೋಟಿಯೇತಕೆ
ಹೋಲದೋ ಹುಸಿ ಹೋಗೆನುತ ಮುಖದಿರುಹಿದನು ಭೂಪ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಕಿವಿ ನೆಟ್ಟಗಾಗಿತ್ತು “ಚಾರರೇ ಏನದು ಮತ್ತೆ ಹೇಳಿ. ಮತ್ಸ್ಯನ ತೋಳು ಮುರಿಯಿತೆ ? (ಕೀಚಕನು ವಿರಾಟನಿಗೆ ಭುಜಬಲನಾಗಿದ್ದ ಸಂಗತಿಯನ್ನು ಇದು ಧ್ವನಿಸುತ್ತದೆ) ವೀರರಲ್ಲಿ ಕಟ್ಟಾಳು ಎನ್ನಿಸಿಕೊಂಡ ಕೀಚಕ ಸತ್ತನೆ ? ಅವನನ್ನು ಕೊಂದವರು ಗಂಧರ್ವರೆ ? ಅದು ಸುಳ್ಳು.. ಗಂಧರ್ವರಿಗೂ ಮನುಷ್ಯರಿಗೂ ಹೊಡೆದಾಡುವಂಥ ಸ್ಪರ್ಧೆ ಏನಿದೆ ? ಈ ಘಟನೆಗಳು ತಾಳೆಯಾಗುವುದಿಲ್ಲ. ನಾನು ನಂಬುವುದಿಲ್ಲ” ಎಂದು ಹೇಳಿ ಕೌರವನು ಮುಖವನ್ನು ತಿರುಗಿಸಿದ. (ಅಂದರೆ ತಿರಸ್ಕಾರ ಸೂಚಿಸಿದ)
ಪದಾರ್ಥ (ಕ.ಗ.ಪ)
ಕೈಕಾಲು ಮೆಟ್ಟಿನ ತೋಟಿ-ಯುದ್ಧಕ್ಕೆ ನಿಲ್ಲುವಂತಹ ಸ್ಪರ್ಧೆ
ಟಿಪ್ಪನೀ (ಕ.ಗ.ಪ)
ಪಾಂಡವರನ್ನು ಕುರಿತ ಎಲ್ಲ ರಹಸ್ಯಗಳನ್ನು ಬಿಡಿಸಬಲ್ಲ ಕೀಲಿಕೈ ಎಂದರೆ ಕೀಚಕ ವಧಾ ಪ್ರಸಂಗ. ಇದು ದುರ್ಯೋಧನನಂಥ ಚಾಣಾಕ್ಷನಿಗೆ ಹೊಳೆಯದೆ ಇರುತ್ತದೆಯೆ ?
ಮೂಲ ...{Loading}...
ಹೇಳು ಹೇಳಿನ್ನೊಮ್ಮೆ ಮತ್ಸ್ಯನ
ತೋಳು ಮುರಿದುದೆ ಸುಭಟರೊಳು ಕ
ಟ್ಟಾಳು ಕೀಚಕ ಮಡಿದನೇ ಗಂಧರ್ವರಿರಿದವರೆ
ಮೇಲಣವರಿಗೆ ಮತ್ರ್ಯರಿಗೆ ಕೈ
ಕಾಲು ಮೆಟ್ಟಿನ ತೋಟಿಯೇತಕೆ
ಹೋಲದೋ ಹುಸಿ ಹೋಗೆನುತ ಮುಖದಿರುಹಿದನು ಭೂಪ ॥5॥
೦೦೬ ಅಹುದು ಜೀಯವಧರಿಸು ...{Loading}...
ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದಲ್ಲಿ ಸತಿಯಿರಲು
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹವ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದುರ್ಯೋಧನನಿಗೆ ಈ ಪ್ರಕರಣವನ್ನು ವಿವರವಾಗಿ ತಿಳಿಯುವ ಬಯಕೆ ಬಂದುದರಿಂದ ಚಾರನು ವಿಸ್ತರಿಸಿ ಹೇಳುತ್ತಾನೆ.
“ಹೌದು ಪ್ರಭು. ಗಂಧರ್ವರ ಪತ್ನಿಯೊಬ್ಬಳು ಮತ್ಸ್ಯನ ರಾಣಿ ಸುದೇಷ್ಣೆಯ ಬಳಿ ಕೆಲಸ ಮಾಡುತ್ತಿದ್ದಳು. ಆಕೆಯ ಅಂತಃಪುರದಲ್ಲಿ ಗಂಧರ್ವರಮಣಿ ಇದ್ದಳು. ಕುಹಕಿ ಕೀಚಕನು ಅವಳನ್ನು ಕಂಡು ಮೋಹಗೊಂಡ. ಗಂಧರ್ವರು ಗುಟ್ಟಾಗಿ ಉಪಾಯ ಮಾಡಿ ಅವನನ್ನು ನಾಟ್ಯಗೃಹಕ್ಕೆ ಬರುವಂತೆ ಸೂಚನೆಕೊಟ್ಟರು. ಸಕಲ ಕೀಚಕರನ್ನು ಕೊಂದು ಹಾಕಿದರು.
ಪದಾರ್ಥ (ಕ.ಗ.ಪ)
ದಿವಿಜ-ದೇವತೆ, ಓಲಗ-ಸಭೆ, ಅಳುಪು-ಆಸೆಪಡು, ರಹ=ಸೋಜಿಗ, ಗುಟ್ಟು.
ಮೂಲ ...{Loading}...
ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದಲ್ಲಿ ಸತಿಯಿರಲು
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹವ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ ॥6॥
೦೦೭ ಅವನಿಪತಿ ಮೂಗಿನಲಿ ...{Loading}...
ಅವನಿಪತಿ ಮೂಗಿನಲಿ ಕರ ಪ
ಲ್ಲವವನಿಟ್ಟನು ತಲೆಯ ತೂಗಿದ
ನವಳು ದುರುಪದಿ ಖಳರ ಕೊಂದವ ಭೀಮ ಗಂಧರ್ವ
ದಿವಿಜ ಸತಿಯೆತ್ತಲು ವಿರಾಟನ
ಭವನದೋಲಗವೆತ್ತಲದು ಪಾಂ
ಡವರ ಕೃತ್ರಿಮ ತಂತ್ರ ಮರೆಯಿರಿಗಾರರವರೆಂದ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಮೂಗಿನ ಮೆಲೆ ಬೆರಳಿಟ್ಟು ತಲೆಯನ್ನು ತೂಗಿದ. ಮಂತ್ರಿಗಳು ಬೇಹಿನವರು ಇದ್ದ ಸಭೆಯಲ್ಲಿ ಕೂಡಲೇ ಹೇಳಿದ. “ನೋಡಿ ಆ ಗಂಧರ್ವರಮಣಿ ಬೇರೆ ಯಾರೂ ಅಲ್ಲ, ದ್ರೌಪದಿ. ಆ ಕೀಚಕರನ್ನೆಲ್ಲ ಕೊಂದು ಹಾಕಿದ ಗಂಧರ್ವರಾಯ ಎಂದರೆ ಅವನೇ ಭೀಮ. ಗಂಧರ್ವರಾಣಿ ಎಲ್ಲಿ ವಿರಾಟನ ಭವನದ ಸೇವೆ ಎಲ್ಲಿ ? ಇವೆಲ್ಲ ಪಾಂಡವರು ಹೂಡಿದ ಕಪಟತಂತ್ರವೇ ಹೊರತು ಬೇರೆಯಲ್ಲ ! ಮರೆಯಲ್ಲಿದ್ದು ಇರಿಯುವ ವೀರರಲ್ಲವೆ ಅವರು !”
ಪದಾರ್ಥ (ಕ.ಗ.ಪ)
ಅವನಿಪತಿ-ರಾಜ (ಕೌರವ), ಕರಪಲ್ಲವ-ಚಿಗುರಿನಂಥ ಕೋಮಲ ಹಸ್ತ, ಮರೆಯಿರಿಗಾರ-ಮರೆಯಲ್ಲಿ ನಿಂತು ಅಂದರೆ, ಹೊಂಚುಹಾಕಿ, ಕೊಲ್ಲುವವರು. ಮರೆ- ಛದ್ಮವೇಷ.
ಟಿಪ್ಪನೀ (ಕ.ಗ.ಪ)
ಮೂಲದಲ್ಲಿ ಕೌರವನು “ವಿರಾಟನಗರಂ ಮನ್ಯೇ ಪಾಂಡವಾಶ್ಛನ್ನ ಚಾರಿಣಃ” (ಗುಪ್ತವಾಗಿ ವೇಷ ಮರೆಸಿಕೊಂಡು ಓಡಾಡುತ್ತಿರುವ ಪಾಂಡವರು ವಿರಾಟನಗರದಲ್ಲಿದ್ದಾರೆಂದು ಭಾವಿಸುತ್ತೇನೆ)
ಶಂಕೇ ಕೃಷ್ಣಾನಿಮಿತ್ತಂತು ಭೀಮಸೇನೇನ ಕೀಚಕ :
ಗಂಧರ್ವ ವ್ಯಪದೇಶೇನ ಹತೋ ನಿಶಿ ಮಹಾಬಲಃ
(“ಮಹಾಬಲಶಾಲಿಯಾದ ಕೀಚಕನು ದ್ರೌಪದಿಯ ಕಾರಣದಿಂದ ಭೀಮನಿಂದ ಹತನಾಗಿದ್ದಾನೆಂದು ಭಾವಿಸುತ್ತೇನೆ” ಎಂದು ಶಲ್ಯರು ಹೇಳಿದ್ದಾರೆ)
ಮೂಲ ...{Loading}...
ಅವನಿಪತಿ ಮೂಗಿನಲಿ ಕರ ಪ
ಲ್ಲವವನಿಟ್ಟನು ತಲೆಯ ತೂಗಿದ
ನವಳು ದುರುಪದಿ ಖಳರ ಕೊಂದವ ಭೀಮ ಗಂಧರ್ವ
ದಿವಿಜ ಸತಿಯೆತ್ತಲು ವಿರಾಟನ
ಭವನದೋಲಗವೆತ್ತಲದು ಪಾಂ
ಡವರ ಕೃತ್ರಿಮ ತಂತ್ರ ಮರೆಯಿರಿಗಾರರವರೆಂದ ॥7॥
೦೦೮ ಪರಿಮಳವ ಕದ್ದೋಡುವನಿಲನ ...{Loading}...
ಪರಿಮಳವ ಕದ್ದೋಡುವನಿಲನ
ಹರಿವ ಹೆಜ್ಜೆಯ ಹತ್ತುವರೆ ಮಧು
ಕರನೆ ಬಲ್ಲುದು ಜೀಯ ಬಲ್ಲಿರಿ ನಿಮ್ಮವರ ಪರಿಯ
ಹರದ ಮಾತಿನ ಹದನು ಬಳಿಕಾ
ಚರರಿಗಿದು ಗೋಚರಿಸುವುದೆಯೆಂ
ದರಸನನು ಕೊಂಡಾಡಿದರು ಮಂತ್ರಿಗಳು ತವತವಗೆ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಂತ್ರಿಗಳಿಗೆ ಕೌರವನ ತೀಕ್ಷ್ಣ ಬುದ್ಧಿಯನ್ನು ಕಂಡು ಆಶ್ಚರ್ಯವಾಯಿತು. ತತ್ಕ್ಷಣ ಹೇಳಿದರು : “ಹೂವಿನ ಪರಿಮಳವನ್ನು ಅರಿಯದೆ ಗಾಳಿ ಹೊತ್ತೋಡುತ್ತದಲ್ಲವೆ ? ಆ ಗಾಳಿ ಯಾವ ಕಡೆಗೆ ಸಾಗುತ್ತಿದೆ ಎಲ್ಲಿಂದ ಬಂದಿದೆ ?ಎಂದು ಗಾಳಿಯ ಹೆಜ್ಜೆಯ ಗುರುತು ಹಿಡಿಯಲು ದುಂಬಿಗೆ ಮಾತ್ರ ಸಾಧ್ಯವಲ್ಲವೆ ಪ್ರಭು ? ನಿಮ್ಮವರ ನಡತೆ ನಿಮಗೆ ಗೊತ್ತಿಲ್ಲದೆ ಇರುತ್ತದೆಯೆ? ಆದರೆ ಈಗ ನೀವು ಹೇಳಿದ ಬುದ್ಧಿವಂತಿಕೆಯ ಮಾತಿನ ಅರ್ಥ ನಮ್ಮ ಚಾರರಿಗೆ ಎಲ್ಲಿ ತಿಳಿದೀತು ? ಎಂದು ಹೇಳುತ್ತ ಮಂತ್ರಿಗಳು ತಮ್ಮ ತಮ್ಮಲ್ಲೇ ರಾಜನನ್ನು ಕೊಂಡಾಡಿದರು.
ಪದಾರ್ಥ (ಕ.ಗ.ಪ)
ಪರಿಮಳವ ಕದ್ದು ಓಡುವ-ಸುವಾಸನೆಯನ್ನು ಪತ್ತೆ ಹಚ್ಚಿ ಹಿಡಿದು ಓಡುವ, ಅನಿಲನ-ಗಾಳಿಯ, ಹರಿವ ಹೆಜ್ಜೆಯ-ನಡಿಗೆಯ ಗುರುತನ್ನು (ತಿಳಿಯಲು), ಮಧುಕರನೆ ಬಲ್ಲುದು-ದುಂಬಿಗೆ ಮಾತ್ರ ಸಾಧ್ಯ, ಹರದ ಮಾತು-ವ್ಯಾವಹಾರಿಕ ನೆಲೆಯ ಮಾತು, ಬುದ್ಧಿವಂತಿಕೆಯ ಮಾತು, ವ್ಯಾಪಾರೀ ಭಾಷೆ (ಹರದು-ವ್ಯಾಪಾರ), ಚರರಿಗೆ-ನಮ್ಮ ಬೇಹುಗಾರರಿಗೆ, ಗೋಚರಿಸುವುದೆ-ತಿಳಿದೀತೇನು?
ಟಿಪ್ಪನೀ (ಕ.ಗ.ಪ)
ಗಣಿತದ ಲೆಕ್ಕಗಳನ್ನು ಮಾಡುವಾಗ ಹಂತಹಂತವಾಗಿ ಮಾಡಿ ತೋರಿಸುತ್ತೇವೆ. ಆದರೆ ಅದರಲ್ಲಿ ಪಳಗಿದವರು ಒಂದೇ ಹಂತದಲ್ಲಿ ಉತ್ತರ ಹೇಳಿ ಬಿಡುತ್ತಾರೆ. ಅದು ಅವರ ಸಾಧನೆಯ ಫಲ. ಆದರೆ ಉಳಿದವರಿಗೆ ಅದು ಅರ್ಥವಾಗುವುದಿಲ್ಲ. ಹಾಗೆಯೇ ಇಲ್ಲಿ ಕೌರವ ಮತ್ತು ಚಾರರ ನಡುವಣ ಬೌದ್ಧಿಕ ವ್ಯತ್ಯಾಸವನ್ನು ಕವಿ ಹೇಳುತ್ತಿದ್ದಾನೆ.
ಬೇಹಿನ ವಾರ್ತೆ ತಂದವರು ಪಾಂಡವರು ಖಂಡಿತ ಇಲ್ಲ ಎಂದು ಹೇಳಿದರು. ಆದರೆ ಒಬ್ಬನು ವಿರಾಟನಗರದ ಕೀಚಕನ ಸುದ್ದಿ ಗಂಧರ್ವ ಸತಿ, ರಮಣರ ಸುದ್ದಿ ಹೇಳಿದ. ವಾಸ್ತವವಾಗಿ ಈ ಎರಡು ಸುದ್ದಿಗಳ ನಡುವೆ ಸಂಬಂಧವಿದೆ ಎಂದು ಕೌರವನಿಗೆ ಹೊಳೆದು ಹೋಯಿತು. ಹೆಣ್ಣಿನ ಕಾರಣ ಎಂದ ಮೇಲೆ ಸುಂದರಿಯಾದ ದ್ರೌಪದಿ ಇರಬೇಕು. ಗಂಧರ್ವಪತಿ ಎಂದರೆ ಭೀಮನೇ ಇರಬೇಕು. ಆದುದರಿಂದ ಪಾಂಡವರೆಲ್ಲ ವಿರಾಟನಗರದಲ್ಲಿದ್ದಾರೆ ಎಂದು ಹೇಳಿಬಿಟ್ಟ. ಚಾರರಿಗೆ ಬಿಡಿಸಿ ಹೇಳುವವರೆಗೆ ಅರ್ಥವಾಗಿರದಿದ್ದರೂ ಮಂತ್ರಿಗಳು ಅರ್ಥಮಾಡಿಕೊಂಡಿದ್ದರಿಂದ ರಾಜನನ್ನು ಹೊಗಳಿದರು.
ಗಾಳಿ ಪರಿಮಳವನ್ನು ಕದ್ದು ಓಡುತ್ತಿದ್ದರೆ ದುಂಬಿ ವಾಸನೆಯಿಂದಲೇ ಪತ್ತೆ ಹಚ್ಚಿ ಹೂವಿನ ನೆಲೆಯನ್ನು ಕಾಣುತ್ತದೆ ಎಂಬ ನಿದರ್ಶನದಿಂದ ಈ ಪ್ರಸಂಗವು ಅದ್ಭುತವಾಗಿ ವರ್ಣಿತವಾಗಿದೆ.
ಮೂಲ ...{Loading}...
ಪರಿಮಳವ ಕದ್ದೋಡುವನಿಲನ
ಹರಿವ ಹೆಜ್ಜೆಯ ಹತ್ತುವರೆ ಮಧು
ಕರನೆ ಬಲ್ಲುದು ಜೀಯ ಬಲ್ಲಿರಿ ನಿಮ್ಮವರ ಪರಿಯ
ಹರದ ಮಾತಿನ ಹದನು ಬಳಿಕಾ
ಚರರಿಗಿದು ಗೋಚರಿಸುವುದೆಯೆಂ
ದರಸನನು ಕೊಂಡಾಡಿದರು ಮಂತ್ರಿಗಳು ತವತವಗೆ ॥8॥
೦೦೯ ಪ್ರೌಢಿಯಲ್ಲಿದು ಕೇಳಿ ...{Loading}...
ಪ್ರೌಢಿಯಲ್ಲಿದು ಕೇಳಿ ಬಲ್ಲೆವು
ರೂಢಿಯಲಿ ಸಮಬಲರು ಭೀಮ ಸ
ಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬವರು
ಗೂಢರನು ಗರುವಾಯಿಗೆಡಿಸಿಯೆ
ಗಾಢಿಕೆಯ ನೆರೆ ಮೆರೆಯಬೇಕೆನೆ
ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕೆಂದ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಮಂತ್ರಿಗಳು ಭಾವಿಸಿದಂತೆ ನನ್ನದು ಅಂಥ ಪ್ರೌಢ ತಿಳಿವಳಿಕೆಯೇನೂ ಅಲ್ಲ, ನನಗೆ ಗೊತ್ತಿದೆ. ಏನೆಂದರೆ ಭೀಮ, ಬಲರಾಮ, ಶಲ್ಯ, ಕೀಚಕ ಈ ನಾಲ್ವರು ಮಲ್ಲಯುದ್ಧದಲ್ಲಿ ಗಾಢವಾದ ತಿಳಿವಳಿಕೆಯುಳ್ಳ ಪರಿಣತರು. ಈಗ ಪಾಂಡವರು ಗುಪ್ತ ಜೀವನ ನಡೆಸುತ್ತಿದ್ದಾರೆ. ಆ ಗೂಢರ ದರ್ಪವನ್ನು ಇಳಿಸಿ ನಮ್ಮ ಗಾಢಿಕೆಯನ್ನು ಅಂದರೆ ಶಕ್ತಿಯನ್ನು ಪ್ರದರ್ಶಿಸಬೇಕು. ಸೇನೆಯನ್ನು ಸಿದ್ಧಗೊಳಿಸಬೇಕು.
ಪದಾರ್ಥ (ಕ.ಗ.ಪ)
ಪ್ರೌಢಿ-ಪ್ರೌಢವಾದ ವಿಷಯ, ಸಗಾಢ-ಅತಿಶಯತೆ, ಜೋರು; ಗಾಢಿಕೆ-ಹೆಚ್ಚಳ, ಗರುವಾಯಿಗೆಡಿಸು-ದರ್ಪವನ್ನು ಹಾಳು ಮಾಡು, ಸಮತಳಿಸು-ಸಜ್ಜಾಗು,
ಟಿಪ್ಪನೀ (ಕ.ಗ.ಪ)
(ಹೋಲಿಸಿ : ಪಂಪ : “ಸಂದ ಸಿಂಹ ಬಲನಂ ಕೊಲ್ವನ್ನರಾರ್ ಭೀಮನಲ್ಲದವರ್ ? ಕೀಚಕ ಭೀಮ ಶಲ್ಯ ಬಲದೇವರ್ಕಳ್ ಸಮಾನರ್ಕಳಪ್ಪುದಱÂಂ ತೋಳ್ವಲದೊಳ್ ಪೆಱಂಗಮರಿದೀ ವಿಕ್ರಾಂತಮುಂ ಗರ್ವಮುಂ”)
ಮೂಲ ...{Loading}...
ಪ್ರೌಢಿಯಲ್ಲಿದು ಕೇಳಿ ಬಲ್ಲೆವು
ರೂಢಿಯಲಿ ಸಮಬಲರು ಭೀಮ ಸ
ಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬವರು
ಗೂಢರನು ಗರುವಾಯಿಗೆಡಿಸಿಯೆ
ಗಾಢಿಕೆಯ ನೆರೆ ಮೆರೆಯಬೇಕೆನೆ
ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕೆಂದ ॥9॥
೦೧೦ ಕರೆಸಿದನು ಗಾಙ್ಗೇಯ ...{Loading}...
ಕರೆಸಿದನು ಗಾಂಗೇಯ ಗರುಡಿಯ
ಗುರುವನಶ್ವತ್ಥಾಮ ಸೃಂಜಯ
ವರ ಕೃಪಾಚಾರಿಯನ ಸೈಂಧವ ಸೂರ್ಯನಂದನನ
ಬರಿಸಿದನು ತೆಂಕಣದ ದಿಗುತಟ
ದರಸುಗಳ ದೆಸೆಯಿಂದ ಬೇಹಿನ
ಚರರು ಬಂದರು ಕೇಳಿರೈ ಹೊಸ ವಾರ್ತೆಯೆನುಯೆಂದ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಕೌರವನು ಭೀಷ್ಮ ದ್ರೋಣ ಅಶ್ವತ್ಥಾಮ ಸೃಂಜಯ ಕೃಪ ಸೈಂಧವ ಕರ್ಣ ಇವರುಗಳನ್ನೆಲ್ಲ ಕರೆಸಿದ. ಅವರಿಗೆಲ್ಲ “ದಕ್ಷಿಣ ದಿಕ್ಕಿನ ರಾಜರುಗಳ ಕಡೆಯಿಂದ ಉತ್ತಮ ಬೇಹುಗಾರರು ಬಂದರು. ನಿಮಗೆ ಹೊಸವಾರ್ತೆ ಹೇಳುತ್ತೇನೆ ಕೇಳಿ” ಎಂದ.
ಪದಾರ್ಥ (ಕ.ಗ.ಪ)
ಗರುಡಿಯಗುರು-ದ್ರೋಣ, , ತೆಂಕಣ-ದಕ್ಷಿಣ ದಿಗುತಟದ-ದಿಕ್ಕಿನ, ಬೇಹು-ಗೂಢಚರ್ಯೆ
ಟಿಪ್ಪನೀ (ಕ.ಗ.ಪ)
ಸೃಂಜಯ-ಮಹಾರಥರಲ್ಲಿ ಒಬ್ಬ. ಮುಂದೆ ಪಾಂಚಾಲ ದೇಶದ ಈತ ಪಾಂಡವರ ಕಡೆ ಸೇರಿ ಮಹಾಭಾರತ ಯುದ್ಧದಲ್ಲಿ ಭಾಗವಹಿಸಿ ಕರ್ಣನಿಂದ ಹತನಾಗುತ್ತಾನೆ. ಇವನ ಮಗ ಸುವರ್ಣಷ್ಠೀವಿ. ಒಮ್ಮೆ ಇಂದ್ರನು ಕಳಿಸಿದ ಹುಲಿ ಮಗನನ್ನು ಕೊಲ್ಲುತ್ತದೆ. ಆದರೆ ಸೃಂಜಯನು ಸಮಾಧಾನ ಚಿತ್ತದಿಂದ ನಾರದನ ಮೂಲಕ ದೇವೇಂದ್ರನಿಗೆ ಹೇಳಿಸಿದಾಗ ಇಂದ್ರನು ಮಗನನ್ನು ಹಿಂದಕ್ಕೆ ತರಿಸಿಕೊಟ್ಟನಂತೆ.
ಮೂಲಭಾರತದಲ್ಲಿ ಪಾಂಡವರ ಇರವಿನ ಬಗೆಗೆ ಭೀಷ್ಮ ದ್ರೋಣಾದಿಗಳೆಲ್ಲ ಅಭಿಪ್ರಾಯ ತಿಳಿಸಿದ ಮೇಲೆ ದುರ್ಯೋಧನನು ಕೀಚಕನ ಸಾವಿನ ಸುದ್ದಿ ಹೇಳಿ 1. ರಕ್ತಪಾತವಿಲ್ಲ, 2. ಹೆಣ್ಣಿನ ಕಾರಣ, 3. ಮಲ್ಲಯುದ್ಧ ಮಾಡಿ ಕೊಲೆ ಈ ಅಂಶಗಳನ್ನು ಪ್ರಸ್ತಾವಿಸಿ ಅದು ಭೀಮನ ಕೆಲಸ ಎಂದು ಸ್ಪಷ್ಟವಾಗಿ ಹೇಳಿ ಪಾಂಡವರು ವಿರಾಟನಗರದಲ್ಲೇ ಇದ್ದಾರೆಂಬ ಸಂಗತಿಯನ್ನು ತಿಳಿಸುತ್ತಾನೆ.
ಮೂಲ ...{Loading}...
ಕರೆಸಿದನು ಗಾಂಗೇಯ ಗರುಡಿಯ
ಗುರುವನಶ್ವತ್ಥಾಮ ಸೃಂಜಯ
ವರ ಕೃಪಾಚಾರಿಯನ ಸೈಂಧವ ಸೂರ್ಯನಂದನನ
ಬರಿಸಿದನು ತೆಂಕಣದ ದಿಗುತಟ
ದರಸುಗಳ ದೆಸೆಯಿಂದ ಬೇಹಿನ
ಚರರು ಬಂದರು ಕೇಳಿರೈ ಹೊಸ ವಾರ್ತೆಯೆನುಯೆಂದ ॥10॥
೦೧೧ ಭೀಮ ಕೀಚಕ ...{Loading}...
ಭೀಮ ಕೀಚಕ ಶಲ್ಯನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡಿ ಭೀಮ, ಕೀಚಕ, ಶಲ್ಯ, ಬಲರಾಮ ಈ ನಾಲ್ವರೂ ಮಲ್ಲಯುದ್ಧದಲ್ಲಿ ಸಮಾನವೀರರು. ಆದುದರಿಂದ ಖೇಚರರು (ಗಂಧರ್ವ) ಕೀಚಕನನ್ನು ಕೊಂದರು ಎಂದು ಹೇಳುವುದು ಅರ್ಥವಿಲ್ಲದ ಆರೋಪ. ಈ ಕಾಮುಕ ಕೀಚಕನನ್ನು ಕೊಂದವನು ಭೀಮನೇ ಆಗಿರಬೇಕು. ಕಾಮುಕ ಕೀಚಕನು ದ್ರೌಪದಿಯನ್ನು ಬಯಸಿದ್ದರಿಂದ ಭೀಮನು ಆ ತಾಮಸನನ್ನು ಹಿಡಿದು ಕೊಂದಿರಬೇಕು” ಏನೆನ್ನುವಿರಿ?”
ಪದಾರ್ಥ (ಕ.ಗ.ಪ)
ಖಚರ-ಗಂಧರ್ವ, ಅಳುಪು-ಬಯಸು, ಮೋಹಿಸು,
ಟಿಪ್ಪನೀ (ಕ.ಗ.ಪ)
ಈ ನಾಲ್ವರ ಸಮಾನತೆಯ ವಿಷಯ ಮೂಲಭಾರತದಲ್ಲಿಲ್ಲ. ಆದರೆ ತೆಲುಗಿನಲ್ಲಿರುವ ವ್ಯಾಸಭಾರತ ಪ್ರತಿಗಳಲ್ಲಿ ಹೆಚ್ಚಿನ ಪದ್ಯವೆಂದು ಇದನ್ನು ತೋರಿಸಲಾಗಿದೆ. ಸಂಖ್ಯೆಯಿಲ್ಲದ ಈ ಪದ್ಯದಲ್ಲಿ.
“ಬಲದೇವಶ್ಚ ಭೀಮಶ್ಚ ಮದ್ರರಾಜಶ್ಚ ವೀರ್ಯವಾನ್
ಚತುರ್ಥ: ಕೀಚಕ ಸ್ತೇಷಾಂ ಪಂಚಮಂ ನಾನುಶುಶ್ರುಮ”
(ಈ ನಾಲ್ವರು ಸಮಾನ ವೀರರು, ಐದನೆಯವನನ್ನು ನಾನು ಕೇಳಿಲ್ಲ….)
(ತೆಲುಗು ಮೂಲಭಾರತ ಅಧ್ಯಾಯ 29. ಆದುದರಿಂದ ಕುಮಾರವ್ಯಾಸನು ಈ ತೆಲುಗು ಪ್ರತಿ ನೋಡಿರಬಹುದು ಅಥವಾ ಈ ಪದ್ಯವನ್ನು ಯಾರೋ ಬರೆದು ಇಲ್ಲಿ ಸೇರಿಸಿರಬಹುದು)
ಮೂಲ ...{Loading}...
ಭೀಮ ಕೀಚಕ ಶಲ್ಯನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು ॥11॥
೦೧೨ ಮಾತು ಹೋಲುವೆಯಹುದು ...{Loading}...
ಮಾತು ಹೋಲುವೆಯಹುದು ನುಡಿದುದು
ನೀತಿ ಧರ್ಮಜನಿದ್ದ ದೇಶ
ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು
ಬೀತ ಬನವಲ್ಲಿಲ್ಲ ಹುಸಿ ಕೊಲೆ
ಪಾತಕಾದಿಗಳಿಲ್ಲ ಸೊಂಪಿನ
ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು “ಹೌದು ಕೌರವ. ನಿನ್ನ ಮಾತು ಸರಿಯಾಗಿದೆ ಸಂದರ್ಭ ತಾಳೆಯಾಗುತ್ತದೆ. ಏಕೆಂದರೆ ಧರ್ಮರಾಯನು ಎಲ್ಲಿರುತ್ತಾನೋ ಆ ಪ್ರದೇಶದಲ್ಲಿ ಕ್ಷಾಮ ಇರುವುದಿಲ್ಲ. ಬೆಳೆದ ದವಸ ಧಾನ್ಯಗಳು ಸವೆಯುವುದೇ ಇಲ್ಲ. ಹಣ್ಣು ಬಿಡದ ವ್ಯರ್ಥ ವನಗಳು ಅಲ್ಲಿಲ್ಲ. ಹುಸಿ ಕೊಲೆ ಪಾತಕ ಮೊದಲಾದ ದುರಾಚಾರಗಳು ಅಲ್ಲಿಲ್ಲ. ಆ ಪ್ರದೇಶವು ನವೀನವಾದ ಸೊಂಪಿನ ಸಿರಿ” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಹೋಲುವೆಯಹುದು-ಹೋಲುತ್ತದೆ, ದೇಶವ್ರಾತ-ಪ್ರದೇಶ ಸಮೂಹ, ಬೀತ-ಹಣ್ಣು ಬಿಡದ, ಬಂಜೆ
ಟಿಪ್ಪನೀ (ಕ.ಗ.ಪ)
ಈ ಸಂದರ್ಭವನ್ನು ಭೀಷ್ಮರು ಧರ್ಮರಾಯನ ಗುಣಗಾನ ಮಾಡಲು ಬಳಸಿಕೊಂಡಿರುವುದು ಅವರ ಪಾಂಡವ ಪ್ರೇಮವನ್ನು ತೋರುತ್ತದೆ.
ಮೂಲ ...{Loading}...
ಮಾತು ಹೋಲುವೆಯಹುದು ನುಡಿದುದು
ನೀತಿ ಧರ್ಮಜನಿದ್ದ ದೇಶ
ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು
ಬೀತ ಬನವಲ್ಲಿಲ್ಲ ಹುಸಿ ಕೊಲೆ
ಪಾತಕಾದಿಗಳಿಲ್ಲ ಸೊಂಪಿನ
ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ ॥12॥
೦೧೩ ಎಲ್ಲಿ ಲಕ್ಷ್ಮಿಯ ...{Loading}...
ಎಲ್ಲಿ ಲಕ್ಷ್ಮಿಯ ಬೀಡು ಧರಣಿಯೊ
ಳೆಲ್ಲಿ ಸೊಂಪಿನ ನಾಡು ನಗರದೊ
ಳೆಲ್ಲಿ ವಿಭವದ ಕಡಲು ಶೈತ್ಯದ ಸಾರ ಸೌರಂಭ
ಎಲ್ಲಿ ನೆಲಸಿಹುದಲ್ಲಿ ಪಾಂಡವ
ರಿಲ್ಲದಿರರಿನ್ನವರ ನೆಲೆಗಾ
ಬಲ್ಲಿ ಸಂಶಯವಿಲ್ಲವೆಂದನು ಭೀಷ್ಮ ನಸುನಗುತ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು ತಮ್ಮ ನಿಲುವನ್ನು ಸಮರ್ಥಿಸುತ್ತ “ಎಲ್ಲಿ ಲಕ್ಷ್ಮಿ ವಾಸಿಸುತ್ತಾಳೊ ಅಲ್ಲಿನ ನಾಡು ಸೊಂಪಾಗಿರುತ್ತದೆ. ನಗರದಲ್ಲಿ ಎಲ್ಲಿ ವೈಭವ ಇರುತ್ತದೋ ತಂಪು ಇರುತ್ತದೋ ಅಲ್ಲಿ ಪಾಂಡವರು ಇರದೆ ಇರುವುದಿಲ್ಲ. ಕೌರವನ ಊಹೆ ಸರಿ. ಅಲ್ಲಿ ಪಾಂಡವರನ್ನು ಕಾಣಬಹುದು. ಅನುಮಾನವೇ ಇಲ್ಲ” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಲಕ್ಷ್ಮಿಯ ನಾಡು-ಸಂಪದ್ಭರಿತ ಪ್ರದೇಶ, ನೆಲೆಗಾಬಲ್ಲಿ-ನೆಲೆ-ನೆಲೆಯನ್ನು ಕಾಂಬಲ್ಲಿ-ಕಾಬಲ್ಲಿ-ಕಾಣುವುದರಲ್ಲಿ
ಟಿಪ್ಪನೀ (ಕ.ಗ.ಪ)
ವ್ಯಾಸಭಾರತದಲ್ಲಿ ಭೀಷ್ಮರು ಸಸ್ಯ ಶ್ಯಾಮಲವಾದ ಸುಭಿಕ್ಷವಾಗಿರುವ ಮತ್ಸ್ಯದೇಶದಲ್ಲಿ ಪಾಂಡವರು ಇರುವುದು ಸಂಭವನೀಯ ಎನ್ನುತ್ತಾರೆ
ಮೂಲ ...{Loading}...
ಎಲ್ಲಿ ಲಕ್ಷ್ಮಿಯ ಬೀಡು ಧರಣಿಯೊ
ಳೆಲ್ಲಿ ಸೊಂಪಿನ ನಾಡು ನಗರದೊ
ಳೆಲ್ಲಿ ವಿಭವದ ಕಡಲು ಶೈತ್ಯದ ಸಾರ ಸೌರಂಭ
ಎಲ್ಲಿ ನೆಲಸಿಹುದಲ್ಲಿ ಪಾಂಡವ
ರಿಲ್ಲದಿರರಿನ್ನವರ ನೆಲೆಗಾ
ಬಲ್ಲಿ ಸಂಶಯವಿಲ್ಲವೆಂದನು ಭೀಷ್ಮ ನಸುನಗುತ ॥13॥
೦೧೪ ಅತ್ತ ಹಿಮಗಿರಿ ...{Loading}...
ಅತ್ತ ಹಿಮಗಿರಿ ಮೇರೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ
ಹೊತ್ತಿ ಹೊಗೆದವು ಮಧ್ಯದೇಶದ
ಲುತ್ತಮದ ಸಿರಿ ಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ದ್ರೋಣಾಚಾರ್ಯರು ಕೂಡ ಭೀಷ್ಮರ ಮಾತಿಗೆ ಧ್ವನಿಗೂಡಿಸಿದರು. “ಹೌದು ಹೌದು ! ಆ ಕಡೆ ಹಿಮಗಿರಿಯ ಎಲ್ಲೆ. ಈ ಕಡೆ ಮೂರು ಸಮುದ್ರಗಳ ಗಡಿ ಇಟ್ಟುಕೊಂಡರೆ ಇವುಗಳ ಮಧ್ಯೆ ಇರುವ ಎಲ್ಲ ದೇಶಗಳು ಕ್ಷಾಮದ ಬೇಗೆ ಸಿಕ್ಕಿ ಉರಿಯುತ್ತಿವೆ. ಮಧ್ಯದೇಶದಲ್ಲಿ ಮಾತ್ರ ಉತ್ತಮ ಸಂಪತ್ತಿದೆ, ಫಲದ ಬೆಳಸುಗಳಿವೆ. ಆದುದರಿಂದ ಅವು ಪಾಂಡವರು ವಾಸವಾಗಿರುವ ಪ್ರದೇಶ ನಿಜ” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಮೇರೆ-ಎಲ್ಲೆ, ಒತ್ತೆ-ಇಡಿಕಿರಿದ, ತುಂಬಿಕೊಂಡ… ಇತ್ಯಾದಿ, ಚಾವಡಿ-ಮನೆ, ಪ್ರದೇಶ
ಮೂಲ ...{Loading}...
ಅತ್ತ ಹಿಮಗಿರಿ ಮೇರೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ
ಹೊತ್ತಿ ಹೊಗೆದವು ಮಧ್ಯದೇಶದ
ಲುತ್ತಮದ ಸಿರಿ ಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ ॥14॥
೦೧೫ ಅವಧಿ ತುಮ್ಬದ ...{Loading}...
ಅವಧಿ ತುಂಬದ ಮುನ್ನಲೀ ಪಾಂ
ಡವರ ಕಾಣಿಸಿಕೊಂಬ ಮತ್ತಂ
ತವರು ಸತ್ಯಕೆ ನಡೆಯಬೇಹುದು ಮುನ್ನಿನಂದದಲಿ
ಅವರ ನೆಲೆಗಾಣಿಸುವ ಮಂತ್ರದ
ಹವಣನರುಪುವೆನೆಂದು ರವಿಸುತ
ನವನಿಪಗೆ ನಸುನಗುತ ನುಡಿದನು ರಾಜಕಾರಿಯವ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಕರ್ಣನು “ನೋಡಿ ಪಾಂಡವರ ಆಜ್ಞಾತವಾಸದ ಅವಧಿ ತುಂಬುವುದಕ್ಕೆ ಮೊದಲೇ ನಾವು ಹೋಗಿ ಅವರನ್ನು ಪತ್ತೆ ಮಾಡಿಬಿಡೋಣ. ಆಗ ಅವರು ಪ್ರತಿಜ್ಞಾ ವಿಧಿಗೆ ತಕ್ಕಂತೆ ನಡೆಯಬೇಕಾಗುತ್ತದೆ (ಅಂದರೆ ಮತ್ತೆ ಹನ್ನೆರಡು ವರ್ಷ ವನವಾಸ ಒಂದು ವರ್ಷದ ಅಜ್ಞಾತವಾಸದ ಕಾರ್ಯ ನಡೆಸಬೇಕಾಗುತ್ತದೆ) ಈಗ ನಾನು ಅವರನ್ನು ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ಹೇಳುತ್ತೇನೆ ಆ ಮಂತ್ರ ನನಗೆ ಗೊತ್ತಿದೆ” ಎಂದು ಕೌರವನಿಗೆ ಹೇಳಿ, ಮುಂದಿನ ಕಾರ್ಯವನ್ನು ಸೂಚಿಸಿದ.
ಪದಾರ್ಥ (ಕ.ಗ.ಪ)
ಬೇಹುದು-ಬೇಕು, ಹವಣು-ರೀತಿ, ಅವನಿಪ-ರಾಜ (ಕೌರವ)
ಟಿಪ್ಪನೀ (ಕ.ಗ.ಪ)
ನಿಜವಾಗಿ ಪಾಂಡವರನ್ನು ಗುರುತು ಹಚ್ಚಲು ಎಣಿಸಿದ್ದ ತಂತ್ರ ಯಾವುದು ಎಂಬುದು ಕೊನೆಗೂ ಗೊತ್ತಾಗುವುದಿಲ್ಲ. ಭೀಷ್ಮರು ಮಧ್ಯೆ ತಲೆ ಹಾಕಿ ಅದನ್ನು ತಪ್ಪಿಸುವ ಅನ್ಯಾಯ ಮಾಡಿದ್ದಾರೆ.
ಮೂಲ ...{Loading}...
ಅವಧಿ ತುಂಬದ ಮುನ್ನಲೀ ಪಾಂ
ಡವರ ಕಾಣಿಸಿಕೊಂಬ ಮತ್ತಂ
ತವರು ಸತ್ಯಕೆ ನಡೆಯಬೇಹುದು ಮುನ್ನಿನಂದದಲಿ
ಅವರ ನೆಲೆಗಾಣಿಸುವ ಮಂತ್ರದ
ಹವಣನರುಪುವೆನೆಂದು ರವಿಸುತ
ನವನಿಪಗೆ ನಸುನಗುತ ನುಡಿದನು ರಾಜಕಾರಿಯವ ॥15॥
೦೧೬ ರಾಜಮನ್ದಿರದೊಳಗೆ ನೀತಿಗ ...{Loading}...
ರಾಜಮಂದಿರದೊಳಗೆ ನೀತಿಗ
ಳೋಜೆಯಿಲ್ಲದ ಸಚಿವರಿಂ ನಿ
ವ್ರ್ಯಾಜದಲಿ ಕೇಡಹುದು ತಪ್ಪದು ಲೋಕವಾರ್ತೆಯಿದು
ಗಾಜು ಕೇವಣಿಸಿದರೆ ರಜತದ
ರಾಜಭೂಷಣವಹುದೆ ಕರ್ಣನ
ಬೀಜಮಂತ್ರಗಳಿಂದ ಕೇಡಹುದೆಂದನಾ ಭೀಷ್ಮ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಷ್ಮರು “ನೋಡು ಕೌರವ, ಅರಮನೆಯಲ್ಲಿ ನೀತಿ ಬಾಹಿರರಾದ ಮಂತ್ರಿಗಳಿದ್ದರೆ ನಿಷ್ಕಾರಣವಾಗಿ ರಾಜ್ಯಕ್ಕೆ ಕೇಡಾಗುತ್ತದೆ ಎಂಬ ಮಾತು ನಿಜ. ಅಲ್ಲ ಗಾಜುಗಳನ್ನೇ ಪೋಣಿಸಿಟ್ಟರೆ ಅವು ರಾಜರ ಬೆಳ್ಳಿಯ ಆಭರಣವಾಗುತ್ತವೆಯೆ ? ಹಾಗೆಯೇ ಈ ಕರ್ಣನ ಬೀಜ ಮಂತ್ರಗಳಿಂದ ನಮ್ಮ ರಾಜ್ಯಕ್ಕೆ ಕೇಡಾಗುತ್ತದೆ” ಎಂದು ಹೇಳಿದರು.
ಪದಾರ್ಥ (ಕ.ಗ.ಪ)
ಓಜೆ-ಕ್ರಮ, ನಿವ್ರ್ಯಾಜ-ಕಾರಣವೇ ಇಲ್ಲದೆ, ಲೋಕವಾರ್ತೆ-ಜನಸೂಕ್ತಿ, ಕೇವಣಿಸು-ಪೋಣಿಸು, ಬೀಜಮಂತ್ರ-ಉಪದೇಶ, ಸಲಹೆ
ಟಿಪ್ಪನೀ (ಕ.ಗ.ಪ)
ನಿಜವಾಗಿ ಕರ್ಣ ತನ್ನ ಯೋಜನೆ ಏನು ಎಂಬುದನ್ನು ಇನ್ನೂ ಹೇಳಿಲ್ಲ. ಆದರೆ ಪೂರ್ವಗ್ರಹ ಪೀಡಿತರಾದ ಭೀಷ್ಮರು ಆತನ ಹೇಳಿಕೆ ಏನೆಂದು ಮೊದಲು ತಿಳಿದುಕೊಳ್ಳದೆ ಸಾರಾ ಸಗಟಾಗಿ ತಿರಸ್ಕರಿಸಿದ್ದು ಆಶ್ಚರ್ಯ ! ಅಥವಾ ಭೀಷ್ಮರ ಮನಸ್ಸಿನಲ್ಲಿ ಪಾಂಡವರನ್ನು ಕರೆದು ರಾಜ್ಯಭಾಗವನ್ನು ಕೊಡಿಸಿ ಕೌರವ ಪಾಂಡವರಿಬ್ಬರನ್ನು ಒಂದುಗೂಡಿಸುವ ಮನಸ್ಸಿದ್ದು ಅದನ್ನು ಕರ್ಣನು ತಪ್ಪಿಸುತ್ತಿದ್ದಾನೆಂಬ ಭಾವದಿಂದ ಹೀಗೆ ಮಾಡಿರಬಹುದು.
ಮೂಲ ...{Loading}...
ರಾಜಮಂದಿರದೊಳಗೆ ನೀತಿಗ
ಳೋಜೆಯಿಲ್ಲದ ಸಚಿವರಿಂ ನಿ
ವ್ರ್ಯಾಜದಲಿ ಕೇಡಹುದು ತಪ್ಪದು ಲೋಕವಾರ್ತೆಯಿದು
ಗಾಜು ಕೇವಣಿಸಿದರೆ ರಜತದ
ರಾಜಭೂಷಣವಹುದೆ ಕರ್ಣನ
ಬೀಜಮಂತ್ರಗಳಿಂದ ಕೇಡಹುದೆಂದನಾ ಭೀಷ್ಮ ॥16॥
೦೧೭ ಅವರು ಸತ್ಯಕೆ ...{Loading}...
ಅವರು ಸತ್ಯಕೆ ನಡೆವರಲ್ಲದೆ
ಬವರಕಂಜುವರಲ್ಲ ಪಾಂಡವ
ರವಧಿ ಬೀಳ್ಕೊಳ ಬಂದುದೈ ನೀ ಸಮಯದೊಳು ಕರೆಸಿ
ಅವರ ಧರಣಿಯನವರಿಗಿತ್ತರೆ
ನಿವಗನಿಷ್ಟತೆಯಿಲ್ಲ ಕೇಳೆಲೆ
ಅವನಿಪತಿಯೆಂದೆನುತ ನುಡಿದನು ಮತ್ತೆ ಗಾಂಗೇಯ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಆ ಪಾಂಡವರು ಸತ್ಯದ ಮಾರ್ಗದಲ್ಲಿ ನಡೆಯುತ್ತಾರೆ. ಹಾಗೆಂದು ಅವರು ಯುದ್ಧ ಎಂದರೆ ಹಿಂಜರಿಯುವವರೂ ಅಲ್ಲ. ಅಯ್ಯಾ ! ಕೌರವ ! ಪಾಂಡವರ ಅಜ್ಞಾತವಾಸದ ಅವಧಿ ಮುಗಿಯುತ್ತ ಬಂದಿದೆ. ಆದುದರಿಂದ ನೀನು ಈಗ ಆ ಪಾಂಡವರನ್ನು ಅವಧಿ ಮುಗಿದ ಸಮಯದಲ್ಲಿ ಕರೆಸಿ ಅವರ ರಾಜ್ಯವನ್ನು ಒಪ್ಪಿಸಿಕೊಟ್ಟರೆ ನಿಮಗೆ ಅಮಂಗಳ ತಪ್ಪುತ್ತದೆ” ಎಂದು ಗಾಂಗೇಯರು ಹೇಳಿದರು.
ಪದಾರ್ಥ (ಕ.ಗ.ಪ)
ಬವರ-ಯುದ್ಧ, ಧರಣಿ-ಭೂಮಿ, ನಿವಗೆ-ನಿಮಗೆ, ಅನಿಷ್ಟತೆ-ಅಮಂಗಳ, ಅವನಿಪತಿ-ರಾಜ
ಮೂಲ ...{Loading}...
ಅವರು ಸತ್ಯಕೆ ನಡೆವರಲ್ಲದೆ
ಬವರಕಂಜುವರಲ್ಲ ಪಾಂಡವ
ರವಧಿ ಬೀಳ್ಕೊಳ ಬಂದುದೈ ನೀ ಸಮಯದೊಳು ಕರೆಸಿ
ಅವರ ಧರಣಿಯನವರಿಗಿತ್ತರೆ
ನಿವಗನಿಷ್ಟತೆಯಿಲ್ಲ ಕೇಳೆಲೆ
ಅವನಿಪತಿಯೆಂದೆನುತ ನುಡಿದನು ಮತ್ತೆ ಗಾಂಗೇಯ ॥17॥
೦೧೮ ನನ್ನಿ ನಿಮ್ಮಯ ...{Loading}...
ನನ್ನಿ ನಿಮ್ಮಯ ನುಡಿಯ ಕೈಕೊಂ
ಡೆನ್ನ ಭೂಮಿಯನೀಯೆನಯ್ಯನ
ಬನ್ನಣೆಯ ಮಾತಿನ್ನು ಕೊಳ್ಳದು ಸಾಕು ಸಂಧಿಯನು
ಮನ್ನಿಸುತ ಮರುಳಾದೆನೀ ನಿ
ಷ್ಪನ್ನತೆಯ ಬೀಳ್ಕೊಂಡ ಪಾಂಡವ
ಗುನ್ನಿಗಳ ಗರುವಾಯ ಮಾಡುವಿರೆಂದು ಖಳ ನುಡಿದ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಗಾಂಗೇಯರ ಮಾತನ್ನು ಕೇಳಿದ ನಂತರ ಹೇಳಿದ. “ಇಷ್ಟು ನಿಜ. ನಿಮ್ಮ ಮಾತುಗಳನ್ನು ಒಪ್ಪಿ ನಾನು ರಾಜ್ಯವನ್ನು ಪಾಂಡವರಿಗೆ ಒಪ್ಪಿಸಿಕೊಡಲಾರೆ. ಅಯ್ಯನ ಬಣ್ಣ ಹಚ್ಚಿದ ಮಾತು ಇನ್ನು ಮುಂದೆ ನನ್ನ ಬಳಿ ನಡೆಯುವುದಿಲ್ಲ. ಸಾಕು. ಇವರ ಸಂಧಿಯ ಮಾತುಗಳಿಗೆ ಮನ್ನಣೆಗೊಟ್ಟು ನಾನು ಮರುಳಾದೆ. ತಮ್ಮ ಹುಟ್ಟಿನ ವಿಷಯವನ್ನೇ ಮರೆಮಾಚಿಸುವ ಈ ಪಾಂಡವ ನಾಯಿಗಳನ್ನು ನೀವು ಬಹಳ ಸಂಭಾವಿತರೆಂದು ತೋರಿಸಲು ಬರುತ್ತೀರಿ”
ಪದಾರ್ಥ (ಕ.ಗ.ಪ)
ನನ್ನಿ-ಸತ್ಯ, ಬನ್ನಣೆಯ ಮಾತು-ಅಲಂಕಾರದ ಮಾತು, ಸೋಗಿನ ಮಾತು, ಬಣ್ಣ ಹಚ್ಚಿದ ಮಾತು, ನಿಷ್ಪನ್ನತೆಯ ಬೀಳ್ಕೊಂಡ, ಹುಟ್ಟಿನ ಹಿರಿಮೆಯನ್ನು ಕಳೆದುಕೊಂಡಿರುವ (ಯಾರಿಗೋ ಹುಟ್ಟಿದವರಾದ…) ಕುನ್ನಿ-ನಾಯಿ, ಗರುವಾಯ-ಉತ್ತಮರನ್ನಾಗಿ, ಖಳ-ದುಷ್ಟ.
ಟಿಪ್ಪನೀ (ಕ.ಗ.ಪ)
ನಿಷ್ಪನ್ನತೆಯ ಬೀಳ್ಕೊಂಡ-ಎಂಬ ಮಾತಿಗೆ ಸರಿಯಾಗಿ ಅರ್ಥ ಹಚ್ಚುವುದು ಕಷ್ಟ. ಸಂಧಿಯ ಸಂಭಾವ್ಯತೆಯನ್ನು ಕಳೆದುಕೊಂಡಿರುವ ಎಂದೋ, ಅಜ್ಞಾತವಾಸದ ಅವಧಿಯಲ್ಲಿ ನಮಗೆ ಗೋಚರರಾಗಿರುವುದರಿಂದ ಮತ್ತೆ ರಾಜ್ಯ ಭಾಗದ ಸಂಭವನೀಯತೆಯಿಲ್ಲ ಎಂದೋ ಅರ್ಥಮಾಡಬಹುದು.
ಮೂಲ ...{Loading}...
ನನ್ನಿ ನಿಮ್ಮಯ ನುಡಿಯ ಕೈಕೊಂ
ಡೆನ್ನ ಭೂಮಿಯನೀಯೆನಯ್ಯನ
ಬನ್ನಣೆಯ ಮಾತಿನ್ನು ಕೊಳ್ಳದು ಸಾಕು ಸಂಧಿಯನು
ಮನ್ನಿಸುತ ಮರುಳಾದೆನೀ ನಿ
ಷ್ಪನ್ನತೆಯ ಬೀಳ್ಕೊಂಡ ಪಾಂಡವ
ಗುನ್ನಿಗಳ ಗರುವಾಯ ಮಾಡುವಿರೆಂದು ಖಳ ನುಡಿದ ॥18॥
೦೧೯ ಅರಿ ವಿರಾಟನ ...{Loading}...
ಅರಿ ವಿರಾಟನ ಪುರಕೆ ಹಾಯಿದು
ತುರು ಸೆರೆಯ ತೆಗೆಸುವೆವು ಪಾಂಡವ
ರಿರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು
ಅರವರಿಸದಂಗೈಸುವರು ನಾ
ವರಿದು ಕೊಂಬೆವು ಬಳಿಕ ವನದಲಿ
ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಶತ್ರುವಾದ ವಿರಾಟನ ಊರಿಗೆ ಧಾಳಿಯಿಟ್ಟು ದನಗಳನ್ನು ಹಿಡಿದುಕೊಂಡು ಬರುತ್ತೇವೆ. ಅಲ್ಲಿ ಪಾಂಡವರೇನಾದರೂ ಇದ್ದರೆ ಅವರು ಧರ್ಮದ ಮೇರೆ ಮರ್ಯಾದೆಗಳನ್ನು ಬಲ್ಲವರಾದುದರಿಂದ ತಡಮಾಡದೆ, ಹಿಂದೆ ಮುಂದೆ ನೋಡದೆ ಉದಾಸೀನಮಾಡದೆ ವಿರಾಟನ ಸಹಾಯಕ್ಕೆ ಧಾವಿಸುತ್ತಾರೆ. ಆಗ ನಾವು ಅವರನ್ನು ಪತ್ತೆಹಚ್ಚಿ ಮತ್ತೆ ಹದಿಮೂರು ವರ್ಷ ಕಾಡಿಗೆ ಹೋಗುವಂತೆ ವೀಳ್ಯವನ್ನು ಕೊಡುತ್ತೇವೆ” ಎಂದು ಕೌರವ ಹೇಳಿದ
ಪದಾರ್ಥ (ಕ.ಗ.ಪ)
ಅರಿ-ಶತ್ರು, ಹಾಯಿದು-ಹಾಯ್ದು, ನುಗ್ಗಿ, ತುರು-ದನ, ಅರವರಿಸದೆ-ಕಡೆಗಣಿಸದೆ, ಉಪೇಕ್ಷಿಸದೆ, “ತುಱುಗೊಂಡೊಡೆ ಪಾಂಡವರಿರ್ಪಗಂಡರೇ ?” ಪಂಪ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಈ ತೀರ್ಮಾನವಿದೆ. ಮತ್ಸ್ಯರಾಜ್ಯಕ್ಕೆ ಹೋಗೋಣ ಅವರ ಗೋಸಂಪತ್ತನ್ನು ಹಿಡಿಯೋಣ. ಆಗ ಪಾಂಡವರು ಅಲ್ಲಿದ್ದರೆ ಮುಂದೆ ಬಂದು ಯುದ್ಧಕ್ಕೆ ನಿಲ್ಲುತ್ತಾರೆ. ಆಗ ಪತ್ತೆ ಹಚ್ಚೋಣ.
(ಮತ್ಸ್ಯ ರಾಜ್ಯಂ ಗಮಿಷ್ಯಾಮಿ ಗ್ರಹೀಷ್ಯಾಮಶ್ಚ ಗೋಧನಂ/
ಗೃಹೀತೇ ಗೋಧನಂ ನೂನಂ ತೋ„ಪಿ ಯೋತ್ಸ್ಯಂತಿ ಪಾಂಡವಾ)
ಇದಕ್ಕೆ ಸಮಯ ಭಂಗ ತಂತ್ರ ಎಂದು ಹೇಳುತ್ತಾರೆ.
ಪಂಪಭಾರತದಲ್ಲಿ ಬೇಹುಗಾರರು ಬಂದು ಕೀಚಕನನ್ನು ಗಂಧರ್ವನು ಕೊಂದ ವಿಷಯವನ್ನು ಹೇಳಿ “ಅದು ಕಾರಣದಿಂದಾ ವಿರಾಟನ ಮಂಡಲಂ ಗೋಮಂಡಲದಂತೆ ಹೇಳಾಸಾಧ್ಯವಾಗಿ ಕೈಗೆ ವರ್ಕುಂ” (ಈಗ ವಿರಾಟ ದೇಶವು ದನಗಳ ಹಿಂಡಿನಂತೆ ಆಟದಷ್ಟು ಸುಲಭವಾಗಿ ಕೈವಶವಾಗುತ್ತದೆ” ಎಂಬ ಮಾತು ದುರ್ಯೋಧನನನ್ನು ಗೋಗ್ರಹಣಕ್ಕೆ ಪ್ರಚೋದಿಸಿರಬಹುದು.
ಮೂಲ ...{Loading}...
ಅರಿ ವಿರಾಟನ ಪುರಕೆ ಹಾಯಿದು
ತುರು ಸೆರೆಯ ತೆಗೆಸುವೆವು ಪಾಂಡವ
ರಿರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು
ಅರವರಿಸದಂಗೈಸುವರು ನಾ
ವರಿದು ಕೊಂಬೆವು ಬಳಿಕ ವನದಲಿ
ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ ॥19॥
೦೨೦ ಒಳ್ಳಿತಿದು ನಿರ್ದೋಷ ...{Loading}...
ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯವನರಿವುಪಾಯಕೆ ಬೇರೆ ಠಾವಿಲ್ಲ
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲ್ಲಿಯೂ ಹಿರಿದಿಲ್ಲ ನಿಶ್ವಯವೆಂದನಾ ಕರ್ಣ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೌದು ! ಇದು ಒಳ್ಳೆಯ, ದೋಷವಿಲ್ಲದ ನಿರ್ಣಯವಾಗಿದೆ. ನಮ್ಮೆಲ್ಲರ ಅಭಿಪ್ರಾಯವೂ ಇದೇ ಆಗಿದೆ. ಆ ಶತ್ರು ಪಾಂಡವರ ದುಷ್ಟ ವಿದ್ಯೆಯನ್ನು ಅರಿಯುವುದಕ್ಕೆ ಬೇರೆ ಯಾವ ಉಪಾಯವೂ ಇಲ್ಲ. ಖಂಡಿತ ಅಲ್ಲಿ ಪಾಂಡವರಿದ್ದಾರೆ. ನನಗೆ ಅನುಮಾನವೇ ಇಲ್ಲ. (ಭೀಷ್ಮರು ಹೇಳಿದಂತೆ) ಮತ್ಸ್ಯದೇಶದ ಸೊಂಪು ಸಂಪತ್ತು ಈಗ ಬೇರೆಲ್ಲಿಯೂ ಇಲ್ಲವಲ್ಲ” ಎಂದು ಕರ್ಣ ಹೇಳಿದ.
ಪದಾರ್ಥ (ಕ.ಗ.ಪ)
ನಿರ್ದೋಷ ನಿರ್ಣಯ-ಸಮರ್ಪಕವಾದ, ತಪ್ಪಿಲ್ಲದ ನಿರ್ಣಯ, ಅಭಿಮತ-ಒಪ್ಪಿಗೆ, ಅಭಿಪ್ರಾಯ, ರಿಪು-ಶತ್ರು (ಪಾಂಡವರು), ಖುಲ್ಲವಿದ್ಯೆ-ದುಷ್ಟ ವಿದ್ಯೆ, ಠಾವು-ಜಾಗ
ಮೂಲ ...{Loading}...
ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯವನರಿವುಪಾಯಕೆ ಬೇರೆ ಠಾವಿಲ್ಲ
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲ್ಲಿಯೂ ಹಿರಿದಿಲ್ಲ ನಿಶ್ವಯವೆಂದನಾ ಕರ್ಣ ॥20॥
೦೨೧ ಗುರುವಿನಭಿಮತವಹಡೆ ಕೃಪ ...{Loading}...
ಗುರುವಿನಭಿಮತವಹಡೆ ಕೃಪ ಮೊಗ
ದಿರುಹದಿದ್ದೊಡೆ ಭೀಷ್ಮ ಮನದಲಿ
ಮುರಿಯದಿರ್ದೊಡೆ ಗುರುಕುಮಾರನ ಮತಕೆ ಸೇರುವೊಡೆ
ವರ ಶಕುನಿಯಹುದೆಂದೊಡಾ ಸೋ
ದರರು ತಪ್ಪಲ್ಲೆಂದರಾದೊಡೆ
ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೋಡಿ, ದ್ರೋಣರು ಒಪ್ಪಿದರೆ, ಕೃಪಾಚಾರ್ಯರು ಮುಖ ತಿರುಗಿಸಿ ತಿರಸ್ಕಾರ ಸೂಚಿಸದಿದ್ದರೆ, ಭೀಷ್ಮರು ಅಂತರಂಗದಲ್ಲಿ ಕೂಡ ‘ಇದು ಸರಿಯಲ್ಲ’ ಎನ್ನದಿದ್ದರೆ, ಅಶ್ವತ್ಥಾಮನಿಗೆ ಇದು ಒಪ್ಪಿಗೆಯಾದರೆ, ಶಕುನಿ ಹೌದು ಎಂದರೆ, ಕೌರವ ಸೋದರರು ಇದು ತಪ್ಪಲ್ಲ ಎನ್ನುವುದಾದರೆ ನಮ್ಮ ದೊರೆ ಕೌರವ ಹೇಳಿದ್ದು ಸರಿ” ಎಂದು ಕೌರವನನ್ನು ಸುಶರ್ಮ ಹೊಗಳಿದ.
ಪದಾರ್ಥ (ಕ.ಗ.ಪ)
ಅಭಿಮತ-ಒಪ್ಪಿಗೆ, ಅಹಡೆ-ಆಗುವುದಾದರೆ, ನೆಗಳ್ದುದು-ಆಚರಿಸಿದ್ದು, ಮಾಡುತ್ತಿರುವುದು
ಟಿಪ್ಪನೀ (ಕ.ಗ.ಪ)
ಸುಶರ್ಮ : ಇವನು ತ್ರಿಗರ್ತದ ರಾಜ. ವಿರಾಟರಾಜನ ನೆರೆ ರಾಜ್ಯದವನು. ಇವನಿಗೆ ಸತ್ಯೇಷು, ಸತ್ಯಕರ್ಮ, ಸತ್ಯದೇವ, ಮತ್ತು ಸತ್ಯರಥ ಎಂಬ ನಾಲ್ವರು ತಮ್ಮಂದಿರಿದ್ದರು. ಈ ಐವರೂ ಮಹಾಭಾರತ ಯುದ್ಧದಲ್ಲಿ ಸಂಶಪ್ತಕರಾಗಿ ಹೋರಾಡಿ ಅರ್ಜುನನಿಂದ ಹತರಾಗುತ್ತಾರೆ.
(ಸುಶರ್ಮ ವಿರಾಟ ರಾಜ್ಯದ ನೆರೆ ರಾಜ್ಯದವನಾಗಿದ್ದುದರಿಂದ ಕೀಚಕ ಇಲ್ಲದಾಗ ಮತ್ಸ್ಯನ ಮೇಲೆ ಸೇಡು ತೀರಿಸಿಕೊಳ್ಳುವ ಬಯಕೆ ಅವನದು)
ಮೂಲ ...{Loading}...
ಗುರುವಿನಭಿಮತವಹಡೆ ಕೃಪ ಮೊಗ
ದಿರುಹದಿದ್ದೊಡೆ ಭೀಷ್ಮ ಮನದಲಿ
ಮುರಿಯದಿರ್ದೊಡೆ ಗುರುಕುಮಾರನ ಮತಕೆ ಸೇರುವೊಡೆ
ವರ ಶಕುನಿಯಹುದೆಂದೊಡಾ ಸೋ
ದರರು ತಪ್ಪಲ್ಲೆಂದರಾದೊಡೆ
ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು ॥21॥
೦೨೨ ಮತವಹುದು ತಪ್ಪಲ್ಲ ...{Loading}...
ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಭೀಷ್ಮರು ಹೇಳಿದರು “ದುರ್ಯೋಧನನ ಅಭಿಪ್ರಾಯದಲ್ಲಿ ತಪ್ಪೇನೂ ಇಲ್ಲ. ಪಾಂಡವರು ಅಲ್ಲಿದ್ದಾರೆಯೆ ಎಂದು ತಿಳಿಯಲು ಇದು ಸರಿಯಾದ ಮಾರ್ಗ. ಇದು ನನಗೆ ಒಪ್ಪಿಗೆ. ನಾನೇ ಅಲ್ಲ ನಿರ್ಮಲವಾದ ನೀತಿಯನ್ನು ಬಲ್ಲವರೆಲ್ಲ ಇದಕ್ಕೆ ಒಪ್ಪಲೇಬೇಕು. ಪಾಂಡವರ ಅಜ್ಞಾತವಾಸದ ಅವಧಿ ಮುಗಿಯುತ್ತ ಬಂದಿದೆ. ಬಹುಶಃ ಇನ್ನು ಐದು ಆರು ದಿನ ಅಷ್ಟೆ. ಅದಾದ ನಂತರ ಪಾಂಡವರು ಮತ್ತೆ ರಾಜ್ಯವನ್ನು ಹಿಂದಕ್ಕೆ ಪಡೆಯಲು ಹಕ್ಕುದಾರರಾಗುತ್ತಾರೆ”.
ಪದಾರ್ಥ (ಕ.ಗ.ಪ)
ಮತ-ಅಭಿಪ್ರಾಯ, ಒಪ್ಪಿಗೆ, ಅತಿಗಳಿತವಾಯ್ತು ಅವಧಿ-(ಅಜ್ಞಾತವಾಸದ) ಅವಧಿ ತೀರುತ್ತ ಬಂದಿದೆ, ದಿವಸ ಸ್ಥಿತಿ-ದಿನಗಳ ಲೆಕ್ಕ, ಉತ್ತರಾಯಿ-ಹಕ್ಕುದಾರ (ವಿರಾಟಪರ್ವದ ಸಂಪಾದಕರಾದ ಶ್ರೀ ಎಸ್ ಎನ್ ಕೃಷ್ಣಜೋಯಿಸ್ ಅವರು ಅನ್ಯ, ಹೊರಗಿನವ ಎಂಬರ್ಥ ಕೊಟ್ಟಿದ್ದಾರೆ)
ಟಿಪ್ಪನೀ (ಕ.ಗ.ಪ)
ಪ್ರಯಾಣ ಹೊರಟು ದನಗಳನ್ನು ಹಿಡಿದು ಪಾಂಡವರನ್ನು ಪತ್ತೆ ಹಚ್ಚುವುದರೊಳಗೆ ಈ ಅವಧಿ ಮುಗಿದು ಹೋಗಿರುತ್ತದೆಂಬುದು ಕೌರವರಿಗೆ ಗೊತ್ತಾಗದಿದ್ದುದು ಆಶ್ಚರ್ಯ.
ಮೂಲ ...{Loading}...
ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ ॥22॥
೦೨೩ ಪರಿಗಣಿಸಿ ನೋಡಿದೊಡೆ ...{Loading}...
ಪರಿಗಣಿಸಿ ನೋಡಿದೊಡೆ ಮಾಡಿದ
ವರುಷ ತತಿಯೊಳು ಹೆಚ್ಚು ಕುಂದುಂ
ಟುರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ
ಅರಿಯಲೇ ಬೇಕಾವ ಪರಿಯಿಂ
ದರಿದೆವಾದೊಡೆಯುತ್ತರೋತ್ತರ
ಧರಣಿ ಕುರುಪತಿಗೆಂದರಾ ದ್ರೋಣಾದಿ ನಾಯಕರು ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಲೆಕ್ಕ ಹಾಕಿ ನೋಡಿದರೆ ವರ್ಷ ವರ್ಷಗಳಲ್ಲಿ ಅಧಿಕ, ನ್ಯೂನ ಮೊದಲಾದ ಹೆಚ್ಚು ಕುಂದುಗಳು ಇರುತ್ತವೆ. ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಬೇಕು. ಅವರು ಎಲ್ಲಿದ್ದಾರೆಂಬುದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕು. ಪತ್ತೆ ಹಚ್ಚಿದೆವಾದರೆ ಇನ್ನು ಮುಂದೆ ರಾಜ್ಯವು ಕೌರವನಿಗೇ ಸಲ್ಲುತ್ತದೆ…” ಎಂದು ದ್ರೋಣಾದಿಗಳು ಹೇಳಿದರು.
ಪದಾರ್ಥ (ಕ.ಗ.ಪ)
ಪರಿಗಣಿಸು-ಲೆಕ್ಕಹಾಕು, ನಿರ್ಧರಿಸು, ತತಿ-ಗುಂಪು, ವರುಷತತಿ-ವರುಷಗಳ ಗುಂಪು, ಉರವಣಿಸಿ-ಶ್ರದ್ಧೆಯಿಂದ, ಚೆನ್ನಾಗಿ, ಉತ್ತರೋತ್ತರ-ಇಲ್ಲಿಂದ ಮುಂದೆ
ಮೂಲ ...{Loading}...
ಪರಿಗಣಿಸಿ ನೋಡಿದೊಡೆ ಮಾಡಿದ
ವರುಷ ತತಿಯೊಳು ಹೆಚ್ಚು ಕುಂದುಂ
ಟುರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ
ಅರಿಯಲೇ ಬೇಕಾವ ಪರಿಯಿಂ
ದರಿದೆವಾದೊಡೆಯುತ್ತರೋತ್ತರ
ಧರಣಿ ಕುರುಪತಿಗೆಂದರಾ ದ್ರೋಣಾದಿ ನಾಯಕರು ॥23॥
೦೨೪ ಬೀಡು ನಡೆಯಲಿ ...{Loading}...
ಬೀಡು ನಡೆಯಲಿ ಮುಂದೆ ಮತ್ಸ್ಯನ
ನಾಡಿನೊಳು ತಟವಾಯ್ದ ದೂತರು
ಕೂಡೆ ಸಾರಲಿ ಕರೆಯಲಕ್ಷೋಹಿಣಿಯ ನಾಯಕರ
ಜೋಡಿಸಲಿ ಗುಡಿ ದಡ್ಡಿಚಂಪೆಯ
ಗೂಡಿ ಕೊಟ್ಟಿಗೆ ಬಂಡಿ ನಡೆಯಲಿ
ನಾಡ ಬಿಟ್ಟಿಗಳೆಂದು ಕೌರವರಾಯ ನೇಮಿಸಿದ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೂಡಲೇ ಕೌರವನು “ನಮ್ಮ ಸೇನೆ ಹೊರಟು ಮತ್ಸ್ಯನ ರಾಜ್ಯವನ್ನು ಸೇರಿಕೊಳ್ಳಲಿ. ಸೇನೆಯವರು ದೂತರು ಎಲ್ಲ ಹೊರಡಲಿ. ಅಕ್ಷೋಹಿಣಿಯ ನಾಯಕರನ್ನೆಲ್ಲ ಕರೆಯಿರಿ. ಧ್ವಜ, ದಡ್ಡಿ, ಚಂಪೆಗಳೊಡನೆ ಬಂಡಿಗಳು ಸಜ್ಜಾಗಲಿ. ನಾಡ ಬಿಟ್ಟಿಗಳು ಅಂದರೆ ಸೇವಕರು ಹೊರಡಲಿ” ಎಂದು ಅಪ್ಪಣೆ ಮಾಡಿದ.
ಪದಾರ್ಥ (ಕ.ಗ.ಪ)
ದಡ್ಡಿಚಂಪೆಯ - ತೆರೆ ಹಾಕಿದ ಡೇರೆ ಸಹಿತವಾಗಿ
ಬೀಡು-ಶಿಬಿರ, ಸೇನೆಯ ಗುಂಪು, ಕಟಕಾಳಿ-ಕಟಕ+ಅಳಿ-ಸೇನಾಸಮೂಹ, ತಟವಾಯ್ದು-ನುಗ್ಗಿ, ದಾಟಿ, ಪೆಂಡೆಯ-ಬಿರುದಿನ ಕಾಲು ಬಳೆ, ಗುಡಿ-ಧ್ವಜ, ಬಿಟ್ಟಿ-ಸೇವಕ
ಬಿಟ್ಟಿ - ವಿಷ್ಟಿ - ವಿವಿಧ ಸೇವೆಗಳನ್ನು ಮಾಡುತ್ತಿದ್ದವರು
ಪಾಠಾನ್ತರ (ಕ.ಗ.ಪ)
ನಾಡಿನೊಳು ಕಟಕಾಳಿ… ಎರಡನೇ ಸಾಲು … ಸರಿಯಾಗಿ ಅರ್ಥವಾಗುವುದಿಲ್ಲ.
ಕೃಷ್ಣ ಜೋಯಿಸರು ಒಪ್ಪಿರುವ ಪಾಠ ಮತ್ಸ್ಯನ ನಾಡಿನೊಳು ತಟವಾಯ್ದ ದೂತರು- ಸ್ವೀಕೃತವಾಗಿದೆ.
ನಾಡೊಳಗೆ ತಟವಾಯ್ದು ದೂತರು ಸರಿಯಾಗಿದೆ.
ಟಿಪ್ಪನೀ (ಕ.ಗ.ಪ)
ಅಕ್ಷೋಹಿಣಿ-ಅಕ್ಷೌಹಿಣಿ ಇದು ಸೇನಾ ಸೂಚಕ ಪರಿಭಾಷೆಯ ಶಬ್ದ 21870 ಆನೆಗಳು, 21870 ರಥಗಳು, 65610 ಕುದುರೆಗಳು, 1,09350 ಕಾಲಾಳುಗಳು, ಗುಡಿ-ಧ್ವಜ, ದಡ್ಡಿ-ತಟ್ಟಿ ತಡಿಕೆಗಳು, ಚಂಪೆಯ>ಚಂಪಯ-ಡೇರೆ, ಸುಗಂಧ ದ್ರವ್ಯ, ಬಿಟ್ಟಿ-ಸೇವಕ,
ಉತ್ತರ ಗೋಗ್ರಹಣ, ದಕ್ಷಿಣ ಗೋಗ್ರಹಣ ಎಂದು ಗೋಗ್ರಹಣವು ಎರಡು ಘಟ್ಟದಲ್ಲಿ ನಡೆಯುತ್ತದೆ. ದಕ್ಷಿಣ ಗೋಗ್ರಹಣದಲ್ಲಿ ತ್ರಿಗರ್ತ ದೇಶದರಾಜ ಸುಶರ್ಮನು ಕೌರವ ಸೇನೆ ತನ್ನ ಸೇನೆಗಳೊಂದಿಗೆ ವಿರಾಟ ರಾಜ್ಯದ ಮೇಲೆ ದಕ್ಷಿಣ ಭಾಗದಿಂದ ಆಕ್ರಮಣ ಮಾಡುತ್ತಾನೆ.
ಅಕ್ಷೋಹಿಣ - ಹಿಂದಿನ ಚತುರಂಗ ಸೇನೆಯ ಒಂದುನಿಶ್ಚಿತ ಸಂಖ್ಯಾಸೂಚಕ ಶಬ್ದ ಅಕ್ಷೋಹಿಣಿ. ಇದರಲ್ಲಿ ಆನೆ ಕುದುರೆ ರಥ ಕಾಲಾಳುಗಳ ಸಂಖ್ಯೆ ಉಲ್ಲೆಖಿತವಾಗಿರುತ್ತದೆ. ಮಹಾಭಾರತದ ಸೈನ್ಯ ನಿರ್ಣಯ ಪರ್ವದಲ್ಲಿ ಈ ಬಗೆಗೆ ವಿವರಗಳಿವೆ. ವಾಸ್ತವವಾಗಿ ಮೂಲಶಬ್ದ ಅಕ್ಷೌಹಿಣೀ. ಅಕ್ಷಾಣಾಂ ಊಹಿನೀ-ಊಹ; ಸಮೂಹ; ಸೋ„ಸ್ಯಾಮಸ್ತಿ (ಸಂಸ್ಕೃತ ಕನ್ನಡ ಶಬ್ದಕೋಶ, ಸಂಪುಟ 1, ಪುಟ 10). ಮಹಾಭಾರತ ಯುದ್ಧದಲ್ಲಿ ಕೌರವರ ಕಡೆ ಹನ್ನೊಂದು, ಪಾಂಡವರ ಕಡೆ ಏಳು ಅಕ್ಷೌಹಿಣೀ ಸೇನೆಗಳಿದ್ದುವು ಎಂದು ಉಲ್ಲೇಖಿತವಾಗಿದೆ. ಇವುಗಳನ್ನು ಒಂಬತ್ತು ಉಪವಿಭಾಗದಲ್ಲಿ ಗುರುತಿಸಬಹುದು. ಪತ್ತಿ ಸೇನಾ ಮುಖ, ಗುಲ್ಮ, U್ಪಣ, ವಾಹಿನೀ, ಪೃತನಾ, ಚಮೂ, ಅನಿಕಿನೀ ಮತ್ತು ಅಕ್ಷೌಹಿಣೀ. ಒಂದೊಂದು ಮಂಡಲದ ಸಂಖ್ಯೆಯ ಮೂರರಷ್ಟು ಎರಡನೆಯದರಲ್ಲಿರುತ್ತದೆ. ಹೀಗೆ ವರ್ಧಿಸುತ್ತಾ ಹೋಗುವುದರಿಮದ ಈ ಶ್ರೇಣಿಯನ್ನು ಸರಿಯಾದ ಕ್ರಮದಲಲಿ ಬರೆಯಬೇಕು. ಉದಾ:
ಆನೆ ರಥ ಕುದುರೆ ಕಾಲಾಳು
ಪತ್ತಿ 1 3 3 5
ಸೇನಾಮುಖ 3 3 9 15
ಗುಲ್ಮ 9 9 27 45
U್ಪಣ 27 27 81 135
ವಾಹಿನೀ 81 81 243 405
ಪೃತನಾ 243 243 729 1215
ಚಮೂ 729 729 2187 3645
ಅನೀಕಿನೀ 2187 2187 65 61 10935
ಅಕ್ಷೌಹಿಣೀ 21870 21870 65610 109350
ಸಾಮಾನ್ಯವಾಗಿ ಅನೀಕಿನಿಯವರೆಗೆ ಕ್ರಮವಾಗಿ ಒಂದಕ್ಕಿಂತ ಒಂದು ಮೂರರಷ್ಟು ಅಧಿಕವಾಗಿರುವುದನ್ನು ಕೋಷ್ಟಕದಲ್ಲಿ ಕಾಣಬಹುದು. ಹತ್ತು ಅನೀಕಿನಿ ಎಂದರೆ ಒಂದು ಅಕ್ಷೋಹಿಣಿ ಅಂದರೆ ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ ಚತುರಂಗ ಸಂಖ್ಯೆ ಹೀಗಿದೆ:
ಆನೆ 3,95,660
ರಥಗಳು 3,95,660
ಕುದುರೆಗಳು 11,80,980
ಕಾಲಾಳು 19,68,300
ಇವುಗಳಲ್ಲಿ ಶೇಕಡ 95ರಷ್ಟು ಭಾಗ ಯುದ್ಧದಲ್ಲಿ ನಾಶವಾಗಿರುವುದನ್ನು U್ಪಮನಿಸಿದರೆ ನಡೆದ ದುರಂತದ ಪ್ರಮಾಣ ತಿಳಿದುಬರುತ್ತದೆ. ಈ ಚತುರಂಗ ಸೇನೆಗೆ ಸಹಾಯಕವಾದ ನಾಲ್ಕು ವಿಭಾಗಗಳನ್ನೂ ಮಹಾಭಾರತದಲ್ಲಿ ಗುರುತಿಸಲಾಗಿದೆ. ಅವು 1 ವಿಷ್ಟಿ (ಅಂದರೆ ಸಾಗಾಣಿಕೆಗೆ ಸಂಬಂಧಿಸಿದ ಅಂಶಗಳ ನಿರ್ವಹಣೆಗೆ ಆಯುಧಗಳು, ಬಾಣಗಳು, ವೈದ್ಯಕೀಯ ಉಪಚಾರ ಸಾಮಗ್ರ್ರಿ ಇತ್ಯಾದಿ).
2. ನೌಕೆ (ನದಿಗಳಲ್ಲಿ ನೌಕೆಯ ಮೂಲಕ ಸಹಾಯ ಸಾಮಗ್ರಿ, ಸೇನೆ ಆಹಾರ ಇತ್ಯಾದಿ ಸರಬರಾಜು) 3. ಗೂಢಚಾರರು, 4. ದೇಶಿಕರು ಅಂದರೆ ಬಹುಶಃ ಸೇನೆಯ ಮಾರ್ಗ ಸೂಚನೆ ಕೊಡುವವರು. ಶಾಚಿತಿಪರ್ವದಲ್ಲಿ ಈ ಎಚಿಟನ್ನೂ ವಿವರಿಸುವ ಒಂದು ಶ್ಲೋಕವಿದೆ (ಅಧ್ಯಾಯ 59)
ರಥಾ ನಾಗ ಹಯಾಶ್ಚೈವ ಪಾದಾತಾಶ್ಚೈವ ಪಾಂಡವ
ವಿಷ್ಟಿರ್ನಾವಶ್ಚ ನರಾಶ್ಚೈವ ದೇಶಿಕಾ ಇತಿಚಾಷ್ಟವಃ
ಅಕ್ಷೌಹಿಣಿಯ ಸಂಖ್ಯೆಯ ವಿಷಯದಲ್ಲಿ ಮಹಾಭಾರತದಲ್ಲಿಯೇ ವ್ಯತ್ಯಾಸಗಳಿವೆ ಎಂದು ರಾವ್ ಬಹದ್ದೂರ್ ಚಿಂತಾಮಣಿ ವೈದ್ಯರೆಂಬ ವಿದ್ವಾಂಸರು ಹೇಳಿದ್ದಾರೆ.ಧೃತರಾಷ್ಟ್ರ ಗಾಂಧಾರಿಯರ ನೂರು ಮಕ್ಕಳಲ್ಲಿ ಹಿರಿಯವನು. ಅಂಗಬಲ, ಅರ್ಥಬಲ, ಅಧಿಕಾರಬಲ, ಜನಬಲ ಎಲ್ಲ ಇದ್ದರೂ ಮತ್ಸತಭಾವದ ಬೆಂಕಿಯಲ್ಲಿ ವ್ಯಕ್ತಿತ್ವವನ್ನು ಸುಟ್ಟುಕೊಂಡವನೀತ. ಮಹಾಪ್ರತಾಪಶಾಲಿ, ಕಾರ್ಯಶೀಲ ಆದರೆ ಛಲವಾದಿ ಮತ್ಸರಗ್ರಸ್ತ, ಸ್ವಾರ್ಥಿ ಮತ್ತು ಮುಂಗೋಪಿ. ಈತ ದಕ್ಷ ಆಡಳಿತಗಾರ, ಪ್ರಜಾವತ್ಸಲ, ಆತ್ಮವಿಶ್ವಾಸಿ. ಆದರೂ ಕೃತ್ರಿಮಮಾರ್ಗಗಳಿಂದ ಗೆಲುವನ್ನು ಪಡೆಯಲು ಬಯಸಿದವನು. ಮುರಿದೇನೆಯೇ ಹೊರತು ಮಣಿಯುವುದಿಲ್ಲ ಎಂದು ಹೆಮ್ಮೆಯಿಮದ ಹೇಳಿಕೊಳ್ಳುತ್ತಿದ್ದ ಆತ್ಮಾಭಿಮಾನಿ. ಆದರೆ ಅಷ್ಟೇ ಅಹಂಕಾರಿ. ತನ್ನನ್ನು ನಂಬಿದವರಿಗೆಲ್ಲ ಅಂದರೆ ತಂದೆ ತಾಯಿ, ತಮ್ಮಂದಿರು, ಸೈನಿಕರು, ಗೆಳೆಯರಿಗೆಲ್ಲ ಸುಖದ ಸ್ವರ್ಗವನ್ನು ತೋರಿಸಿ ಪತನದ ಪಾತಾಳಕ್ಕೆ ಕೆಡವಿದವನು. ಪಾಂಡವರ ಪ್ರಶಂಸೆಯನ್ನಾಗಲಿ, ಏಳಿಗೆಯನ್ನಾಗಲಿ ಸಹಿಸದವನು. ಅವನು ಕರ್ಣನನ್ನು ಬೆಳೆಸಿದ್ದರ ಹಿಂದೆ ಈ ಮಾತ್ಸರ್ಯದ ಧ್ವನಿಯೇ ಇದೆ. ತಂದೆತಾಯಿಗಳನ್ನು ತನ್ನ ದಾರಿಗೆ ತರಲು ಇವನು ಆಗಾಗ ಯಶಸ್ವಿಯಾಗಿ ಬಳಸಿದ ತಂತ್ರವೆಂದರೆ ಆತ್ಮಹತ್ಯೆಯ ಹೆದರಿಕೆ.
ಕೌರವ-ಪಾಂಡವರ ವಿದ್ಯಾಪ್ರದರ್ಶನ ಕಾಲದಲ್ಲೇ ಈ ಮಾತ್ಸರ್ಯ ಭಾವ ಮುಗಿಲು ಮುಟ್ಟುತ್ರದೆ. ಅದಕ್ಕೂ ಮುನ್ನ ಆಟದ ಕಾಲದಲ್ಲೇ ಭೀಮನಿಗೆ ವಿಷಯ ಲಗ್ಗುಡಗೆ ತಿನ್ನಿಸುವ, ಹಾವಿನಿಂದ ಕಚ್ಚಿಸುವ, ನೀರಲ್ಲಿ ಮುಳುಗಿಸುವ ಆರಂಭಿಕ ಯತ್ನಗಳನ್ನು ಕೌರವ ಮಾಡಿದ. ಮುಂದೆ ಇದನ್ನೇ ಮುಂದುವರಿಸಿ ಅರಗಿನ ಮನೆಯಲ್ಲಿ ಪಾಂಡವರನ್ನೆಲ್ಲ ಸುಡುವ ಸಂಚು ನಡೆಸಿದ. ಕೊನೆಯಲ್ಲಿ ಶಕುನಿಯ ಸಹಾಯ ಪಡೆದು ಧರ್ಮರಾಜನನ್ನು ಜೂಜಿಗೆ ಕರೆದು ಸೋಲಿಸಿ ಕಾಡಿಗೆ ಅಟ್ಟುವ ಮಟ್ಟಕ್ಕೆ ಹೋದ. ದ್ರೌಪದಿಯನ್ನು ರಾಜಸಭೆಯಲ್ಲೇ ಅವಮಾನಿಸಿದ. ಮುಂದೆ ಪಾಂಡವರು ಕಾಡಿನಲ್ಲೂ ಸುಖವಾಗಿರಲು ಬಿಡಬಾರದೆಂದು ದುರ್ವಾಸರನ್ನು ಕಳಿಸಿದ, ಘೋಷಯಾತ್ರೆಯ ನೆವದಿಂದ ತಾನೇ ಅವರಿರುವಲ್ಲಿಗೆ ಹೋದ. ಕೊನೆಗೆ ಅವರು ವಿರಾಟನಗರಲ್ಲಿದ್ದಾರೆಂದು ಸರಿಯಾಗಿ ಊಹಿಸಿ ಸೇನಾಸಮೇತನಾಗಿ ಗೋಗ್ರಹಣದ ನೆಪ ಹೂಡಿ ವಿರಾಟನಗರಕ್ಕೆ ಮುತ್ತಿಗೆ ಹಾಕಿದ. ಆದರೆ ಅವನ ದುರದೃಷ್ಟ. ಅವನಿಗೆ ಪ್ರಚಂಡ ಪರಾಭವವೂ ಆಯಿತು. ಪಾಂಡವರ ಅಜ್ಞಾತವಾಸವೂ ಮುಗಿದುಹೋಗಿತ್ತು.
ಇಷ್ಟಾದರೂ ದುರ್ಯೋದನನು ಜನಪ್ರಿಯ ನಾಯಕನೆಂಬುದನ್ನು ಅವನ ಬಳಿಗೆ ಬಂದ ಹನ್ನೊಂದು ಅಕ್ಷೋಹಿಣೀ ಸೇನೆಯೇ ಹೇಳುತ್ತದೆ. ಪಾಂಡವರ ಸೋದರಮಾವನಾದ ಶಲ್ಯನಂಥವನೂ ಕೌರವನ ಬಲಗೆ ಬಿದ್ದನೆಂದ ಮೇಲೆ ಅವನ ವ್ಯಕ್ತಿತ್ವದ ಆಕರ್ಷಕ ಶಕ್ತಿ ತಿಳಿಯುತ್ತದೆ. ಅಲ್ಲದೆ ಅವನ ನಡತೆಯನ್ನು ಮೆಚ್ಚದ ಭೀಷ್ಮ, ದ್ರೋಣ, ಕೃಪಾದಿಗಳು ಕೂಡ ಅವನ ಸೇನೆಯನ್ನು ಬಿಟ್ಟು ಹೋಗಲಿಲ್ಲ ಎಂದರೆ ಅವನ ಸಂಘಟನಾ ಶಕ್ತಿ ಯಾವ ಮಟ್ಟದ್ದೆಂಬುದು ಗೊತ್ತಾಗುತ್ರದೆ. ಅರ್ಧರಾಜ್ಯವಿರಲಿ ಐದು ಊರುಗಳನ್ನೂ ಕೊಡುವುದಿಲ್ಲ ಎಂದು ಘೋಷಿಸುವಷ್ಟು ಕೆಚ್ಚು ಆತನಲ್ಲಿತ್ತು. ಆದುದರಿಂದ ಯುದ್ಧ ಸಿದ್ಧತೆ ಮಾಡಿಕೊಂಡ. ಸಂಧಾನಕ್ಕೆ ಬಂದ ಕೃಷ್ಣನನ್ನು ಬಂಧಿಸಿ ಅವಮಾನಗೊಳಿಸಲು ಹೋಗಿ ಸೋತ. ಯುದ್ಧಭೂಮಿಯಲ್ಲಿ ಸೋಲು ಹತ್ತಿರ ಬಂದಂತೆಲ್ಲ ತನ್ನ ಕಡೆಯ ವೀರರನ್ನು ಅವಹೇಳನ ಮಾಡುವ ಪದ್ಧತಿಯನ್ನು ಯುದ್ಧದ ಮೊದಲ ದಿನದಿಂದಲೇ ಆರಂಭಿಸಿದ್ದ. ಅವನ ಕ್ರೂರವಾದ ಬಾಯಿಗೆ ಸಿಕ್ಕದ ಯಾವ ಕೌರವ ನಾಯಕರೂ ಇಲ್ಲ. ತನ್ನ ಹುಚ್ಚಿನಿಂದಾಗಿ ಸಮಸ್ತ ಬಲವನ್ನು ಬಲಿಕೊಡಬೇಕಾಯಿತು. ಎಲ್ಲ ಕಳೆದುಕೊಂಡು ತಲೆ ಮರೆಸಿಕೊಳ್ಳಬೇಕಾಯಿತು. ಪಾಂಡವರು ಪತ್ತೆ ಹಚ್ಚಿ ಕೆಣಕಿದಾಗ ಕೊಳದಿಂದ ಎದ್ದು ಬರಬೇಕಾಯಿತು. ಅನಂತರ ವೀರಾವೇಶದಿಂದ ಭೀಮನೊಂದಿಗೆ ಹೋರಾಡಿ ವೀgಮರಣವನ್ನು ಪಡೆದ.
ದುರ್ಯೋಧನ ಆಡಳಿತದ ಬಗೆಗೆ ಯಾರೂ ಚಕಾರವೆತ್ತಿಲ್ಲ. ಪ್ರಜೆಗಳು ಅವನ ರಾಜ್ಯದಲ್ಲಿ ಸುಖವಾಗಿದ್ದರು. ಆದರೆ ಪಾಂಡವರ ಏಳಿಗೆಯನ್ನು ಸಹಿಸದ ಅವನ ಸ್ವಾರ್ಥಬುದ್ಧಿ ಹೀಗೆ ಆತ್ಮವಿನಾಶಕವಾಯಿತು.
ಮೂಲ ...{Loading}...
ಬೀಡು ನಡೆಯಲಿ ಮುಂದೆ ಮತ್ಸ್ಯನ
ನಾಡಿನೊಳು ತಟವಾಯ್ದ ದೂತರು
ಕೂಡೆ ಸಾರಲಿ ಕರೆಯಲಕ್ಷೋಹಿಣಿಯ ನಾಯಕರ
ಜೋಡಿಸಲಿ ಗುಡಿ ದಡ್ಡಿಚಂಪೆಯ
ಗೂಡಿ ಕೊಟ್ಟಿಗೆ ಬಂಡಿ ನಡೆಯಲಿ
ನಾಡ ಬಿಟ್ಟಿಗಳೆಂದು ಕೌರವರಾಯ ನೇಮಿಸಿದ ॥24॥
೦೨೫ ಹರಿದುದೋಲಗ ಮರುದಿವಸ ...{Loading}...
ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾ ಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವಂಟರೊಗ್ಗಿನಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಭೆ ಚೆದುರಿತು. ಮರುದಿನ ಸೇನೆ ಸಿದ್ಧವಾಯಿತು. ಧ್ವಜಗಳು ಮೆರೆದುವು. ವಾದ್ಯಗಳು ಬಾಜಿಸಿದವು. ಒಳ್ಳೆಯ ಮುಹೂರ್ತ ನೋಡಿ ಸುಶರ್ಮ ಮೊದಲಾದ ವೀರರೊಂದಿಗೆ ಕೌರವನು ಹೊರಟ. ಭೀಷ್ಮ, ಕರ್ಣ, ಕೃಪ, ದ್ರೋಣ, ಅಶ್ವತ್ಥಾಮ, ಮಹಾಪ್ರಧಾನರುಗಳು ಆನೆ ಕುದುರೆ ಕಾಲಾಳುಗಳೊಂದಿಗೆ ಒಟ್ಟಾಗಿ ಸಾಗಿದರು.
ಪದಾರ್ಥ (ಕ.ಗ.ಪ)
ಓಲಗ-ಸಭೆ, ಗುಡಿ-ಬಾವುಟ, ಗಡಣ-ಗುಂಪು, ಸುರನದೀಸುತ-ಸುರನದಿ-ಗಂಗೆ ಸುತ ಮಗ-ಭೀಷ್ಮ, ಪತ್ತಿ-ಯೋಧ, ಕಾಲಾಳು, ಒಗ್ಗಿನಲಿ-ಗುಂಪಾಗಿ, ಒಟ್ಟಾಗಿ
ಮೂಲ ...{Loading}...
ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾ ಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವಂಟರೊಗ್ಗಿನಲಿ ॥25॥
೦೨೬ ಮೋಹರವ ಮೇಳೈಸಿದನು ...{Loading}...
ಮೋಹರವ ಮೇಳೈಸಿದನು ನಿ
ರ್ವಾಹವನು ನಿಶ್ಚೈಸಿದನು ಮ
ತ್ತೂಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ
ಸಾಹಸರನಟ್ಟಿದನು ವೈರಿಗ
ಳಾಹವಕೆ ನೆಲನಗಲದಲಿ ಬಲ
ಮೋಹಿಸಿತು ನೆರಸಿದನು ಬಹಳಾಕ್ಷೋಹಿಣೀ ಬಲವ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನು ಅನೇಕ ಅಕ್ಷೋಹಿಣೀ ಸೇನೆಯ ಗುಂಪನ್ನು ಒಂದು ಕಡೆ ಸೇರಿಸಿದ. ಮುಂದೆ ಸಾಗಲು ನಿರ್ಧರಿಸಿದ (ಅಪ್ಪಣೆ ಮಾಡಿದ). ಎಲ್ಲಿದ್ದಾರೆ ಪಾಂಡವರು ಎಂದು ಪತ್ತೆ ಹಚ್ಚಬಲ್ಲ ಗೂಢಚಾರರನ್ನು ದನಗಳನ್ನು ಹಿಡಿಯಬಲ್ಲ ವೀರರನ್ನು ಯುದ್ಧ ಭೂಮಿಗೆ ಕಳಿಸಿದ. ಭೂಮಿಯ ಉದ್ದಗಲಕ್ಕೆ ಸೇನೆ ಸೇರಿತು.
ಪದಾರ್ಥ (ಕ.ಗ.ಪ)
ಮೋಹರ-ಗುಂಪು, ಸೇನೆ, ಮೇಳೈಸು-ಒಂದು ಕಡೆ ಸೇರಿಸು, ಊಹೆಕಾರರು-ವಾರ್ತಾಹರರು, ಬೇಹಿನವರು, ಸೋದಿಸು-ಶೋಧಿಸು-ಪತ್ತೆಹಚ್ಚು, ನಿಜಸಂಗತಿ ತಿಳಿ, ತುರುಗೊಂಬ-ದನಗಳನ್ನು ಹಿಡಿಯುವ, ಆಹವ-ಯುದ್ಧ, ಮೋಹಿಸು-ಗುಂಪುಗೂಡು
ಮೂಲ ...{Loading}...
ಮೋಹರವ ಮೇಳೈಸಿದನು ನಿ
ರ್ವಾಹವನು ನಿಶ್ಚೈಸಿದನು ಮ
ತ್ತೂಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ
ಸಾಹಸರನಟ್ಟಿದನು ವೈರಿಗ
ಳಾಹವಕೆ ನೆಲನಗಲದಲಿ ಬಲ
ಮೋಹಿಸಿತು ನೆರಸಿದನು ಬಹಳಾಕ್ಷೋಹಿಣೀ ಬಲವ ॥26॥
೦೨೭ ಕರಿಗಳಿಗೆ ಗುಳ ...{Loading}...
ಕರಿಗಳಿಗೆ ಗುಳ ಬೀಸಿದವು ವರ
ತುರಗ ಹಲ್ಲಣಿಸಿದವು ತೇಜಿಯ
ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು
ಅರಸನಿದಿರಲಿ ಮೋಹಿದುದು ಸೀ
ಗುರಿಯ ಸಬಳದ ಸಾಲಿನೊಳಗಂ
ಬರವ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವ ಸೇನೆ ವಿರಾಟನಗರಿಗೆ ಹೊರಟಿತು. ಆನೆಗಳಿಗೆ ಗುಳವನ್ನು (ಪಕ್ಷರೆಕ್ಕ್ರೆ) ಬೀಸಲಾಗಿತ್ತು. ಕುದುರೆಗಳಿಗೆ ಹಲ್ಲಣ (ಜೀನು)ಗಳನ್ನು ಹಾಕಲಾಗಿತ್ತು. ಕುದುರೆಗಳನ್ನು ತರಿಸಿ ರಥದಲ್ಲಿ ಹೂಡಲಾಗಿತ್ತು. ಕೈಯಲ್ಲಿ ಕತ್ತಿ ಹಿಡಿದ ಯೋಧರು ಮುಂದೆ ಸಾಗಿ ರಾಜನ ಮುಂದೆ ಗುಂಪಾಗಿ ನಿಂತರು. ಅವರು ಹಿಡಿದಿದ್ದ ಚಾಮರ ಮತ್ತು ್ಲ ಕೊಂತಗಳ (ಆಯುಧ) ಸಾಲು ಆಕಾಶವನ್ನು ಕವಿದಿತ್ತು. ಭೂಮಿ ಇವರೆಲ್ಲರ ಭಾರಕ್ಕೆ ತಗ್ಗಿತು. ಹೀಗೆ ಸೇನೆ ಸಿದ್ಧವಾಗಿತ್ತು.
ಪದಾರ್ಥ (ಕ.ಗ.ಪ)
ಕರಿ-ಆನೆ, ಗುಳ-ಆನೆಗೆ ಹೊದಿಸುವ ಪಕ್ಷರೆಕ್ಕೆ,್ರ, ತುರಗ-ಕುದುರೆ, ಹಲ್ಲಣಿಸು-ಹಲ್ಲಣ ಕಟ್ಟಿಕೊ, ತೇಜಿ-ಕುದುರೆ, ಕೈದು-ಕತ್ತಿ, ಮೋಹು-ಗುಂಪಾಗಿ ಸೇರು, ಸೀಗುರಿ-ಚಾಮರ, ಸಬಳ-ಕೊಂತ, ಒಂದು ಆಯುಧ, ಅಂಬರ-ಆಕಾಶ
ಪಾಠಾನ್ತರ (ಕ.ಗ.ಪ)
ಮೊದಲ ಸಾಲಿನಲ್ಲಿ ‘ವರ’ ಎಂಬ ಪಾಠಕ್ಕೆ ಬದಲಾಗಿ ‘ರಥ’ (ಕೃಷ್ಣಜೋಯಿಸ) ಎಂಬ ಪಾಠವನ್ನು ಸ್ವೀಕರಿಸಬಹುದು.
ಟಿಪ್ಪನೀ (ಕ.ಗ.ಪ)
“ಕರಿಗಳಿಗೆ ಗುಳ ಬೀಸಿದವು ರಥ ತುರಗ ಹಲ್ಲಣಿಸಿದವು ತೇಜಿಯ ತರಿಸಿರಥದಲಿ ಹೂಡಿ ಕೈದುವ ಸೆಳೆದು ಕಾಲಾಳು ಅರಸನಿದಿರಲಿ ಮೋಹಿದವು ಸೀಗುರಿಯ ಸಾಲಂಬರವ ಮುಸುಕಲು ಧರಣಿ ನೆಗ್ಗಲು ನೆರೆದು ಬಂದುದು ಕೂಡೆ ಕುರುಸೇನೆ” ಈ ಪಾಠ ಉತ್ತಮವೆನ್ನಿಸುತ್ತಿದೆ.
(ಕೌರವ ಸೇನೆ ಹೊರಟಿತು. ಆನೆಗಳಿಗೆ ವಸ್ತ್ರಾಲಂಕಾರ ಮಾಡಲಾಗಿತ್ತು. ರಥದ ಕುದುರೆಗಳಿಗೆ ಜೀನು ಹಾಕಿ ಸಿದ್ಧಪಡಿಸಲಾಗಿತ್ತು. ರಥಗಳಿಗೆ ಕುದುರೆಗಳನ್ನು ಹೂಡಲಾಗಿತ್ತು. ಕತ್ತಿ ಹಿಡಿದ ಯೋಧರು ರಾಜನೆದುರು ಸೇರಿದರು. ಚಾಮರದಂಡಗಳ ಸಾಲು ಆಕಾಶವನ್ನು ಮುಸುಕಿತ್ತು. ಭಾರಕ್ಕೆ ಭೂಮಿಯೇ ತಗ್ಗುವಂತೆ ಕುರುಸೇನೆ ಹೊರಟಿತ್ತು).
ಮೂಲ ...{Loading}...
ಕರಿಗಳಿಗೆ ಗುಳ ಬೀಸಿದವು ವರ
ತುರಗ ಹಲ್ಲಣಿಸಿದವು ತೇಜಿಯ
ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು
ಅರಸನಿದಿರಲಿ ಮೋಹಿದುದು ಸೀ
ಗುರಿಯ ಸಬಳದ ಸಾಲಿನೊಳಗಂ
ಬರವ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ ॥27॥
೦೨೮ ಆರತಿಗಳೆತ್ತಿದವು ತಳಿದು ...{Loading}...
ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನ ರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾ ನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆರತಿಗಳನ್ನು ಎತ್ತಿದರು,. ಉಪ್ಪಾರತಿಯನ್ನು ಸೂಸಿದರು, ಕೌರವನು ರಥದ ಮಧ್ಯದಲ್ಲಿ ಕುಳಿತಿದ್ದಾಗ ಈ ಸಂಭ್ರಮಗಳೆಲ್ಲ ನಡೆದುವು. ವಂದಿ ಮಾಗಧರು ಬಂದು ಬಿರುದಾವಳಿಗಳನ್ನು ಘೋಷಿಸಿದರು. ಮಹಾನಗಾರಿಗಳ ಶಬ್ದ ತುಂಬಿತು. ಜಯ ಜಯ ಧ್ವನಿಗಳೊಂದಿಗೆ ನಿಸ್ಸಾಳಗಳು ಮೊಳಗಿದವು.
ಪದಾರ್ಥ (ಕ.ಗ.ಪ)
ಉಪ್ಪಾರತಿ-ದೃಷ್ಟಿ ದೋಷ ಪರಿಹಾರಕ್ಕೆ ಉಪ್ಪಿನ ಆರತಿ; ಉಪ್ಪನ್ನು ನಿವಾಳಿಸಿ ತೆಗೆಯುವುದು, ಭಟ್ಟರು-ಹೊಗಳು ಭಟ್ಟರು, ವಂದಿ ಮಾಗಧರು, ನಾಗಾರಿ-ನಗಾರಿ (ಮರಾಠಿ ಶಬ್ದ), ಕೈವಾರಿಸು-ಹೊಗಳು, ಘೋಷಿಸು
ಮೂಲ ...{Loading}...
ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನ ರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾ ನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ ॥28॥
೦೨೯ ಹೊಗೆದುದಮ್ಬರವವನಿ ನಡುಗಿತು ...{Loading}...
ಹೊಗೆದುದಂಬರವವನಿ ನಡುಗಿತು
ಗಗನಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದವರುಣಾಂಬುಗಳ ಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆದರೆ ಕೌರವನ ಸೇನೆ ಹೊರಟಾಗ ಅನೇಕ ಉತ್ಪಾತಗಳೂ ಆದುವು. ಆಕಾಶದಲ್ಲೆಲ್ಲ ಹೊಗೆ ಕವಿಯಿತು. ಭೂಮಿ ಕಂಪಿಸಿತು. ಸೂರ್ಯನ ಸುತ್ತ ನಕ್ಷತ್ರಗಳು ಪ್ರಕಾಶಿಸಿದುವು. ರಕ್ತದ ಧಾರೆ ಹರಿಯಿತು. ಆಕಾಶದಲ್ಲಿ ಧೂಮಕೇತುಗಳು ಕಾಣಿಸಿಕೊಂಡವು. ಆದರೆ ಈ ಅವಶಕುನಗಳಾವುವನ್ನೂ ಬಗೆಯದೆ ಕೌರವನು ವೈಭವದಿಂದ ರಥದಲ್ಲಿ ಪ್ರಯಾಣ ಮಾಡಿದ.
ಪದಾರ್ಥ (ಕ.ಗ.ಪ)
ಹೊಗೆದುದಂಬರ-ಆಕಾಶದಲ್ಲಿ ಹೊಗೆ ಕಾಣಿಸಿತು, ಅವನಿ-ಭೂಮಿ, ಪರಿವೇಷ-ಮಂಡಲ, ಆವರಣ, ಅರುಣಾಂಬು-ರಕ್ತ, ಕೆನ್ನೀರು
ಟಿಪ್ಪನೀ (ಕ.ಗ.ಪ)
ಮನುಷ್ಯರ ಕಾರ್ಯವು ಮಂಗಳವೇ, ಅಪ್ರಶಸ್ತವೇ ಎಂಬುದನ್ನು ಮುಂಚೆಯೇ ಸೂಚಿಸಲು ಈ ಬಗೆಯ ಉತ್ಪಾತಗಳ ಕಲ್ಪನೆ ತರಲಾಗಿದೆ. ಮಹಾಭಾರತದಲ್ಲಿ ಹಲವಾರು ಕಡೆ ಈ ಉತ್ಪಾತಗಳಾಗಿವೆ. ಮುಖ್ಯವಾಗಿ ರಾಜಸೂಯ ಯಾಗದ ನಂತರ ಧರ್ಮರಾಯನ ಅರಮನೆಯಲ್ಲಿ ನಡೆದ ಉತ್ಪಾತ, ದ್ರೌಪದಿಗೆ ದುಶ್ಶಾಸನನು ಅವಮಾನ ಮಾಡಿದ ನಂತರದ ಉತ್ಪಾತ, ಮೊದಲಾದುವು.
ಮೂಲ ...{Loading}...
ಹೊಗೆದುದಂಬರವವನಿ ನಡುಗಿತು
ಗಗನಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದವರುಣಾಂಬುಗಳ ಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ ॥29॥
೦೩೦ ಪಳಹರದ ಪಲ್ಲವದ ...{Loading}...
ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಿಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯು ಧ್ವಜಗಳಿಂದ ಅಲಂಕರಣಗೊಂಡಿತ್ತು. ತಳಿರು ತೋರಣಗಳಿಂದ ಮೆರೆಯುತ್ತ ಹರಡಿದ ಅಲಂಕಾರ ವಸ್ತ್ರಗಳಿಂದ ಶೋಭಿಸುತ್ತ ತೋಮರ ಎಂಬ ಆಯುಧಗಳಿಂದ ಕೂಡಿತ್ತು. ಬಿಳಿಕೊಡೆ ಮತ್ತು ಹೊಳೆ ಹೊಳೆಯುವ ಚಮರ ಬೀಸಣಿಗೆಗಳು ಆಕಾಶವನ್ನು ತುಂಬಿ ಮೆರೆಯುತ್ತಿದ್ದುವು. ದೊಡ್ಡ ತಾಳಗಳನ್ನು ಬಾರಿಸುತ್ತಿದ್ದರು. ಹೀಗೆ ಸೇನೆ ಅತಿಶಯವಾಗಿ ಪ್ರಯಾಣದ ಮೇಲೆ ಪ್ರಯಾಣ ಮಾಡುತ್ತ ಸಾಗಿತು.
ಪದಾರ್ಥ (ಕ.ಗ.ಪ)
ಪಳಹರ-ಧ್ವಜ, ಪಲ್ಲವ-ತಳಿರು, ತೋರಣ, ಪಸರ-ಹರಡು, ಪಳಿಯ ಪಟ್ಟಿ-ವಸ್ತ್ರದ ಪಟ್ಟೆ, ತೋಮರ-ಒಂದು ಆಯುಧ, ಚಮರ-ಚಮರ ಮೃಗದ ತುಪ್ಪುಳಿನಿಂದ ಮಾಡಿದ ಬೀಸಣಿಗೆ, ಸೀಗುರಿ-ಛತ್ರಿ, ಡೊಂಕಣಿ-ಈಟಿ, ಭರ್ಜಿ, ತಿಂಥಿಣಿ-ತಿಂತಿಣಿ (ತಿಂತ್ರಿಣೀ), ಗುಂಪು, ಸಮೂಹ, ಝಲ್ಲರಿ-ಚರ್ಮವಾದ್ಯ, ತಾಳ, ತೀವು-ತುಂಬು
ಟಿಪ್ಪನೀ (ಕ.ಗ.ಪ)
ಇಲ್ಲಿ ವೃತ್ಯನುಪ್ರಾಸ ಇರುವುದನ್ನು ಗಮನಿಸಿ (ಉದಾ ಪಳಹರದ ಪಲ್ಲವದ ಪಸರದ ಪಳಿಯ ಪಟ್ಟಿಯ)
ಮೂಲ ...{Loading}...
ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಿಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ ॥30॥
೦೩೧ ರಾಯದಳ ನಡೆಗೊಣ್ಡುದೊಗ್ಗಿನ ...{Loading}...
ರಾಯದಳ ನಡೆಗೊಂಡುದೊಗ್ಗಿನ
ನಾಯಕರು ಮನ್ನೆಯರು ರಾಜ ಪ
ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ
ತಾಯಿಮಳಲುಬ್ಬಳಿಸೆ ಜಲನಿಧಿ
ಬಾಯಬಿಡೆ ಗರ್ಜಿಸುವ ನಿಸ್ಸಾ
ಳಾಯತದ ಸೂಳೊದಗೆ ಪಯಣದ ಮೇಲೆ ಪಯಣದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಸೇನೆ ಮುನ್ನುಗ್ಗಿತು. ಒತ್ತೊತ್ತಾಗಿ ನಾಯಕರು, ಮಂಡಳಿಕ ಮಾನ್ಯರು, ರಾಜರು ವಂದಿ ಮಾಗಧರು ಇವರುಗಳೆಲ್ಲ ರಕ್ಷಣೆಯ ಸಂಭ್ರಮದಿಂದ ಮುಂದೆ ನಡೆದರು. ಇದರಿಂದ ಸಮುದ್ರದ ಅಡಿಯ ಮರಳು ಮೇಲೆ ನುಗ್ಗುವ ಹಾಗೆ ಸಮುದ್ರವು ಬಾಯಿ ಬಿಟ್ಟಿತು. ಭೇರಿಗಳು ಮೊಳಗುತ್ತಿದ್ದುವು ಅವುಗಳ ಸೂಚನೆಯ ಮೇರೆಗೆ ಪ್ರಯಾಣದ ಮೇಲೆ ಪ್ರಯಾಣ ಸಾಗಿತ್ತು.
ಪದಾರ್ಥ (ಕ.ಗ.ಪ)
ಒಗ್ಗಿನ-ಒಟ್ಟಾಗಿದ್ದ, ಒತ್ತಾಗಿ ಸೇರಿಕೊಂಡಿದ್ದ, ಪಸಾಯಿತ-ಪಸಯಿತ, ವಂದಿ ಮಾಗಧರು, ಹೊಗಳು ಭಟ್ಟರು, ಸಂವರಣೆ - ಸಂರಕ್ಷಣೆ, ಕಾಪು, ತಾಯಿಮಳಲು-ನದಿ, ಸಮುದ್ರದ ತಳನೆಲದ ಮರಳು, ಉಬ್ಬಳಿಸು-ನಿಟ್ಟುಸಿರು ಬಿಡು, ವಾಂತಿ ಮಾಡು, ನಿಸ್ಸಾಳ ಆಯತದ ಸೂಳು-ಚರ್ಮವಾದ್ಯದ ಆರ್ಭಟ
ಮೂಲ ...{Loading}...
ರಾಯದಳ ನಡೆಗೊಂಡುದೊಗ್ಗಿನ
ನಾಯಕರು ಮನ್ನೆಯರು ರಾಜ ಪ
ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ
ತಾಯಿಮಳಲುಬ್ಬಳಿಸೆ ಜಲನಿಧಿ
ಬಾಯಬಿಡೆ ಗರ್ಜಿಸುವ ನಿಸ್ಸಾ
ಳಾಯತದ ಸೂಳೊದಗೆ ಪಯಣದ ಮೇಲೆ ಪಯಣದಲಿ ॥31॥
೦೩೨ ಸೆಳೆವ ಸಿನ್ಧದ ...{Loading}...
ಸೆಳೆವ ಸಿಂಧದ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳಿರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸೇನೆಯ ವರ್ಣನೆ ಮುಂದುವರಿದಿದೆ ಮೇಲೆತ್ತಿದ ಧ್ವಜಗಳು, ಕವಿದ ನವಿಲುಗರಿಗಳು, ತೋಮರ, ಚಾಮರ, ಡೊಂಕಣಿ (ಆಯುಧ) ಗಳ ವೈಭವವು ಆಕಾಶವೇ ಬಿರಿಯುವಂತೆ ಮಾಡಿತ್ತು. ಅಲ್ಲಿಯ ಜನ, ಪ್ರಾಣಿ, ರಥ ಸಂದಣಿ ಎಷ್ಟು ಒತ್ತೊತ್ತಾಗಿತ್ತೆಂದರೆ ಗಾಳಿ ಕೂಡ ಒಳಗೆ ಪ್ರವೇಶಿಸಲಾರದೆ ಸೋತು ಹೋಗಿತ್ತಂತೆ ? ಸೂರ್ಯನ ಪ್ರಕಾಶಕ್ಕೂ ಅಲ್ಲಿ ಆಸ್ಪದವಿರಲಿಲ್ಲ. ನೆಲ ಈ ಸೇನೆಯನ್ನು ಧರಿಸುವುದಕ್ಕೆ ತಿಣುಕಾಡುವಂತೆ ಸೇನೆ ಜೋಡಿಸಿಕೊಂಡಿತ್ತು.
ಪದಾರ್ಥ (ಕ.ಗ.ಪ)
ಸೆಳೆವ ಸಿಂಧ-ಹಾರಾಡುವ ಬಾವುಟ, ಕವಿವ ಹೀಲಿ-ಆವರಿಸುವ ನವಿಲುಗರಿ, ತೋಮರ-ಈಟಿಯಂಥ ಒಂದು ಆಯುಧ, ಚಮರ-ಚಮರ ಪಕ್ಷಿಯ ತುಪ್ಪುಳಿನ ಬೀಸಣಿಗೆ, ಡೊಂಕಣಿ-ಒಂದು ಆಯುಧ, ವಿಡಾಯಿ-ಠೀವಿ, ಕೆತ್ತುದು-ನಡುಗಿತು (ಕೆತ್ತು-ನಡುಕ) ಅಮಮ-ಅಬ್ಬಬ್ಬ ! ಅನಿಲ-ಗಾಳಿ, ಹೊಳಕು-ಪ್ರಕಾಶಿಸು, ಆನುವಡೆ-ಹೊರಲು, ಅರಿದು-ಕಷ್ಟ
ಟಿಪ್ಪನೀ (ಕ.ಗ.ಪ)
ಸುಳಿಯಲನಿಲಂಗಿಲ್ಲ ಪಥ. ‘ಮಂದಿಯಲಿ ಹೊಗಲನಿಲಗುಬ್ಬಸವಾಯ್ತು’ ಎಂದು ಉದ್ಯೋಗಪರ್ವದಲ್ಲಿ ಇದೇ ಅರ್ಥದಲ್ಲಿ ಹೇಳಲಾಗಿದೆ.
ಮೂಲ ...{Loading}...
ಸೆಳೆವ ಸಿಂಧದ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳಿರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ ॥32॥
೦೩೩ ಪೊಡವಿ ಜಡಿದುದು ...{Loading}...
ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾ ದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆ ವರೆಗಳಲಿ
ಕಡಲು ಮೊಗೆದುದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೂಮಿ ಅಲುಗಾಡಿತು. ಭೂಮಿಯ ಭಾರ ಹೊರಲಾರದೆ ಆದಿಶೇಷನ ಹೆಡೆಗಳು ಬಾಗಿದುವು. ದಿಕ್ಕಿನ ಆನೆಗಳು ತಲೆ ಕೊಡವಿಕೊಂಡವು. ಸೇನೆಯಲ್ಲಿ ಆರ್ಭಟಿಸುವ ಲಗ್ಗೆಯ ವಾದ್ಯಗಳ ಶಬ್ದಕ್ಕೆ ಭೀತವಾದ ಸಮುದ್ರವು ಅಲ್ಲಾಡಿ ರತ್ನಗಳನ್ನು ಭೂಮಿಗೆ ಎಸೆಯಿತು. ಆ ಮಹಾ ಕೌರವ ಸೇನೆಯು ನೆಲವನ್ನು ಸೀಳಿ ಹಾಕುವ ಹಾಗೆ ವೇಗವಾಗಿ ಧಾವಿಸುತ್ತಿತ್ತು. ಆ ಸೇನೆಯಿಂದೆದ್ದ ಧೂಳು ಸೂರ್ಯಮಂಡಲವನ್ನೆಲ್ಲ ವ್ಯಾಪಿಸಿತ್ತು.
ಪದಾರ್ಥ (ಕ.ಗ.ಪ)
ಪೊಡವಿ-ಭೂಮಿ, ಜಡಿ-ನಡುಗು, ಫಣಿ-ಆದಿಶೇಷ, ಆಶಾದಂತಿ-ದಿಕ್ಕಿನ ಆನೆಗಳು, ಲಗ್ಗೆವರೆ-ಲಗ್ಗೆ+ಹರೆ ವಾದ್ಯ (ಘೋಷ), ಮೊಗೆ-ಈಚೆಗೆ ಸುರಿ, ಅಗ್ಗ-ಶ್ರೇಷ್ಠ, ವಹಿಲ-ಬೇಗನೆ
ಮೂಲ ...{Loading}...
ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾ ದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆ ವರೆಗಳಲಿ
ಕಡಲು ಮೊಗೆದುದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ ॥33॥
೦೩೪ ಪ್ರಳಯಪಟು ಜಲರಾಶಿ ...{Loading}...
ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳಿಯೀ ಕಳ
ಕಳಿಕೆಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪ್ರಳಯ ಕಾಲದ ಪ್ರೌಢವಾದ ಸಮುದ್ರ ರಾಶಿ ಹೆದರಿ ಹಿಂಜರಿಯಿತೆಂಬಂತೆ ಇತ್ತು. ಒತ್ತೊತ್ತಾಗಿ ಬಂದ ಸೇನಾ ಸಂದಣಿಗೆ ಕಡೆಯೇ ಇರಲಿಲ್ಲ. ಈ ಕೌರವ ಸೇನೆಯನ್ನು ಪ್ರತಿಭಟಿಸಿ ಇಂದ್ರ ಯಮ ಮೊದಲಾದವರಲ್ಲಿ ಯಾರೊಬ್ಬರೂ ನಿಲ್ಲಲಾರರು ಎಂದ ಮೇಲೆ ಸಾಮಾನ್ಯ ಶತ್ರು ರಾಜರು ಈ ಸೇನೆಯ ಎದುರು ನಿಂತಾರೆಯೆ ? ಆ ಜನರಿಗೆ ಈ ಶಕ್ತಿ, ಈ ಕಾಂತಿ, ಹಿಂಡುಹಿಂಡಾಗಿ ಬರುವ ಶಕ್ತಿ, ಈ ಕಳಕಳಿ ಏನಿದ್ದೀತು ಎನ್ನುವ ಹಾಗೆ ಕುರುಸೇನೆ ದಟ್ಟವಾಗಿ ಮುನ್ನುಗ್ಗಿತು .
ಪದಾರ್ಥ (ಕ.ಗ.ಪ)
ಪ್ರಳಯ ಪಟು-ಪ್ರಳಯವನ್ನು ಉಂಟು ಮಾಡುವುದರಲ್ಲಿ ನಿಷ್ಣಾತವಾದ, ಜಲರಾಶಿ-ಸಮುದ್ರಜಲ, ಜರಿದುದೊ ? ಹಿಂದೆ ಸರಿಯಿತೋ? ತಳಿತ ಸಂದಣಿ-ಸೇರಿದ ಜನಸಂದಣಿ, ಮಾರ್ಮಲೆ-ಪ್ರತಿಭಟಿಸು, ಹುಲು-ಸಾಮಾನ್ಯ, ಅಲ್ಪ, ಒಡ್ಡು-ಗುಂಪು, ಬಲುಹು-ಸಾಮಥ್ರ್ಯ, ಹೊದರಿನ ಹೊರಳಿ-ಹಿಂಡು ಹಿಂಡಾಗುವ ಸಮೂಹ
ಮೂಲ ...{Loading}...
ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳಿಯೀ ಕಳ
ಕಳಿಕೆಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ ॥34॥
೦೩೫ ಎರಡು ಮೋಹರವಾಗಿ ...{Loading}...
ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತನನು ಕಳುಹಿ
ಹುರಿಯೊಡೆದು ಹದಿನಾರು ಸಾವಿರ
ವರ ಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ಧಾಳಿಯಿಟ್ಟನು ತೆಂಕ ದೆಸೆಗಾಗಿ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎರಡು ಕವಲಾಗಿ ಕೌರವ ಸೇನೆ ಸಾಗಲಿ. ಒಂದು ದಕ್ಷಿಣ ದಿಕ್ಕಿನಲ್ಲಿ ಸಾಗಿ ಅಲ್ಲಿ ದನಗಳನ್ನು ತಡೆಯಲಿ. ನಾವು ಉತ್ತರದ ಕಡೆಯಿಂದ ಶತ್ರುಗಳನ್ನು ಎದುರಿಸುತ್ತೇವೆ” ಎಂದು ಹೇಳಿ ಕೌರವನು ತ್ರಿಗರ್ತ ರಾಜ ಸುಶರ್ಮನನ್ನು ಕಳಿಸಿಕೊಟ್ಟ. ಮಹಾವೀರ ಸುಶರ್ಮನು ಹದಿನಾರು ಸಾವಿರ ಮಹಾರಥರಿಂದ ಕೂಡಿದ ಸೇನೆಯ ಸಮೇತ ಧಾಳಿಯಿಡಲು ದಕ್ಷಿಣ ದಿಕ್ಕಿಗೆ ಸಾಗಿದ”
ಪದಾರ್ಥ (ಕ.ಗ.ಪ)
ಮೋಹರ-ಗುಂಪು, ತೆಂಕಲು-ದಕ್ಷಿಣ, ಹರಿ-ಸಾಗು, ಧಾವಿಸು, ತಡೆಯಿ-ತಡೆಯಿರಿ, ಅಡ್ಡಗಟ್ಟಿ, ಆನು-ಎದುರಿಸು, ಹುರಿಯೊಡೆ-ಸಂಭ್ರಮಿಸು
ಟಿಪ್ಪನೀ (ಕ.ಗ.ಪ)
ದಕ್ಷಿಣ ಗೋಗ್ರಹಣ ಉತ್ತರ ಗೋಗ್ರಹಣ ಎಂಬ ಎರಡು ಪ್ರಸಂಗಗಳು ಇಲ್ಲಿವೆ ಸುಶರ್ಮನು ದಕ್ಷಿಣ ಭಾಗದಿಂದ ಮುತ್ತಿಗೆ ಆರಂಭಿಸುತ್ತಾನೆ. ಗೋಗ್ರಹಣದ ನೆಪದಲ್ಲಿ ಕೀಚಕನಿಲ್ಲದ ಮತ್ಸ್ಯ ರಾಜನನ್ನು ವಶಪಡಿಸಿಕೊಳ್ಳುವುದು ಸುಶರ್ಮನ ಉದ್ದೇಶವಾಗಿತ್ತು. ಪಾಂಡವರು ಬಂದರೆ ಅವರನ್ನು ಗುರುತು ಹಿಡಿಯುವುದೂ ಹಿಡಿದು ಒಪ್ಪಿಸುವುದೂ ಅವನ ಕೆಲಸವಾಗಿತ್ತು.
ಮೂಲ ...{Loading}...
ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತನನು ಕಳುಹಿ
ಹುರಿಯೊಡೆದು ಹದಿನಾರು ಸಾವಿರ
ವರ ಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ಧಾಳಿಯಿಟ್ಟನು ತೆಂಕ ದೆಸೆಗಾಗಿ ॥35॥
೦೩೬ ಅಸಿತ ಪಕ್ಷಾಷ್ಟಮಿಯ ...{Loading}...
ಅಸಿತ ಪಕ್ಷಾಷ್ಟಮಿಯ ದಿನ ಸಂ
ಧಿಸಿದರಾಳೆದ್ದುದು ವಿರಾಟನ
ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ
ಹೊಸ ಮುಖಕೆ ಸೀವರಿಸಿದವು ದೆಸೆ
ದೆಸೆಗೆ ಹಿಂಡುಗಳೊಡೆದು ಹಾಯ್ದವು
ಮಸಗಿತಂಬಾ ರವದ ಕಳವಳವಾಯ್ತು ನಿಮಿಷದಲಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ ಪಕ್ಷದ ಅಷ್ಟಮಿಯ ದಿನ ಸುಶರ್ಮನ ಆಳುಗಳು ಹೊರಟು ವಿರಾಟನ ಗೋವುಗಳನ್ನು ಮುತ್ತಿದರು. ಅಲ್ಲಿದ್ದ ಗೊಲ್ಲರನ್ನೆಲ್ಲ ಕೆಡವಿದರು. ವಿರಾಟನ ದನಗಳು ತಮಗೆ ಪರಿಚಿತವಲ್ಲದ ಹೊಸಮುಖಗಳನ್ನು ಕಂಡು ಮುಖವನ್ನು ಸೀವರಿಸಿಕೊಂಡುವು. ಅಲ್ಲದೆ ಹಿಂಡೊಡೆದು ಬೇರೆ ಬೇರೆ ದಿಕ್ಕುಗಳಿಗೆ ಧಾವಿಸಿದುವು. ಕರುಗಳ ‘ಅಂಬಾ’ ಎಂಬ ಶಬ್ದವು ಆ ಆವರಣದಲ್ಲೆಲ್ಲ ಹರಡಿತು.
ಪದಾರ್ಥ (ಕ.ಗ.ಪ)
ಸೀವರಿಸು-ಅಸಹ್ಯ ಪಡು, ಮಸಗು-ತುಂಬು, ರವ-ಶಬ್ದ, ಅಸಿತ-ಕೃಷ್ಣ ಪಕ್ಷ
ಟಿಪ್ಪನೀ (ಕ.ಗ.ಪ)
ಅಸಿತ ಪಕ್ಷಾಷ್ಟಮಿ - ತಿಂಗಳಲ್ಲಿ ಶುಕ್ಲ ಪಕ್ಷ, ಕೃಷ್ಣ ಪಕ್ಷ ಎಂಬ ಎರಡು ಅವಧಿ, ಅಸಿತ-ಕೃಷ್ಣ ಪಕ್ಷ, ಕೃಷ್ಣ ಪಕ್ಷದ ಅಷ್ಟಮಿಯ ದಿನ ಸುಶರ್ಮನಿಂದ ಗೋಗ್ರಹಣ ಎನ್ನುತ್ತಾನೆ ಕುಮಾರವ್ಯಾಸ. ಮೂಲಭಾರತದಲ್ಲಿ ಸಪ್ತಮಿಯ ದಿನ ಸುಶರ್ಮನೂ ಅಷ್ಟಮಿಯ ದಿನ ಕೌರವರೂ ಮುತ್ತಿಗೆ ಹಾಕುವುದೆಂದು ತೀರ್ಮಾನವಾಗಿತ್ತು ಎನ್ನಲಾಗಿದೆ.
ಮೂಲ ...{Loading}...
ಅಸಿತ ಪಕ್ಷಾಷ್ಟಮಿಯ ದಿನ ಸಂ
ಧಿಸಿದರಾಳೆದ್ದುದು ವಿರಾಟನ
ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ
ಹೊಸ ಮುಖಕೆ ಸೀವರಿಸಿದವು ದೆಸೆ
ದೆಸೆಗೆ ಹಿಂಡುಗಳೊಡೆದು ಹಾಯ್ದವು
ಮಸಗಿತಂಬಾ ರವದ ಕಳವಳವಾಯ್ತು ನಿಮಿಷದಲಿ ॥36॥
೦೩೭ ಆಳು ಸುತ್ತಲು ...{Loading}...
ಆಳು ಸುತ್ತಲು ಕಟ್ಟಿ ತುರುಗಳ
ಕೋಳಹಿಡಿದರು ಬೊಬ್ಬಿರಿದು ಗೋ
ಪಾಲರಾಂತರೆ ಕಾದಿದರು ಕಡಿಖಂಡಮುಯವಾಗೆ
ಮೇಲೆ ಮೇಲೈತಪ್ಪ ಹೆಬ್ಬಲ
ದಾಳು ಕುದುರೆಯ ಕಂಡು ನೂಕದು
ಕಾಳಗವು ತಮಗೆನುತ ತಿರುಗಿತು ಗೋವರುಳಿದವರು ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಕ್ಷಿಣ ಭಾಗದಿಂದ ಸುಶರ್ಮನ ಸೇನೆ ನುಗ್ಗಿತು. ದನಗಳ ಮಂದೆಯ ಸುತ್ತ ಸೈನಿಕರು ನಿಂತು ಹಸುಗಳನ್ನು ಸೆರೆಹಿಡಿದರು. ಬೊಬ್ಬಾಟ ಮಾಡಿದರು. ಅಲ್ಲಿದ್ದ ಗೊಲ್ಲರು ಎದುರಿಸಿ ನಿಂತಾಗ ಅವರೆಲ್ಲರನ್ನು ಕೊಚ್ಚಿ ತುಂಡರಿಸಿದರು. ಪಾಪ ಉಳಿದ ಗೊಲ್ಲರ ಪಾಡೇನು ? ಮತ್ತೆ ಮತ್ತೆ ನುಗ್ಗುತ್ತಲೇ ಇರುವ ಸೇನೆಯನ್ನು ಕಂಡು ಉಳಿದ ಗೊಲ್ಲರು ನಮಗೆ ಇನ್ನು ಸಾಧ್ಯವಿಲ್ಲ ಎಂದು ಕೊಂಡು ಹಿಂದಿರುಗಿದರು.
ಪದಾರ್ಥ (ಕ.ಗ.ಪ)
ತುರು-ಗೋವು, ಕೋಳ-ಸೆರೆ, ಆನು-ಎದುರಿಸು, ಕಡಿಖಂಡಮಯ-ತುಂಡು ತುಂಡಾಗು, ಐತಪ್ಪ-ಬರುವ, ನೂಕದು ಕಾಳಗವು ತಮಗೆ-ನಮಗೆ ಇವರನ್ನೆದುರಿಸಲು ಸಾಧ್ಯವಿಲ್ಲ.
ಮೂಲ ...{Loading}...
ಆಳು ಸುತ್ತಲು ಕಟ್ಟಿ ತುರುಗಳ
ಕೋಳಹಿಡಿದರು ಬೊಬ್ಬಿರಿದು ಗೋ
ಪಾಲರಾಂತರೆ ಕಾದಿದರು ಕಡಿಖಂಡಮುಯವಾಗೆ
ಮೇಲೆ ಮೇಲೈತಪ್ಪ ಹೆಬ್ಬಲ
ದಾಳು ಕುದುರೆಯ ಕಂಡು ನೂಕದು
ಕಾಳಗವು ತಮಗೆನುತ ತಿರುಗಿತು ಗೋವರುಳಿದವರು ॥37॥
೦೩೮ ಮಿಸುಪ ಕಮ್ಬಳಿಕೊಮ್ಬು ...{Loading}...
ಮಿಸುಪ ಕಂಬಳಿಕೊಂಬು ಕಲ್ಲಿಯ
ಬಿಸುಟು ಗಾಯದಿ ಗೋವಳರು ಹೊ
ತ್ತಸುವ ಕೊರಳಲಿ ಹಿಡಿದು ನಾಲಗೆಯೊಣಗಿ ಢಗೆ ಹೊಯ್ದು
ವಿಷಮ ರಣಭೀತಿಯಲಿ ಕಂದಿದ
ಮುಸುಡ ತೊದಲಿನ ನುಡಿಯ ಮರಣದ
ದೆಸೆಯ ಕೈಸನ್ನೆಗಳ ಕಾತರರೈದಿದರು ಪುರವ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಪ ಆ ಗೊಲ್ಲರು ಆಯುಧಗಳಿಲ್ಲದೆ ತಮ್ಮಲ್ಲಿದ್ದ ಕಂಬಳಿ, ವಾದ್ಯ, ಅನ್ನದ ಬುತ್ತಿಗಳನ್ನು ಎಸೆದು ಗಾಯಗೊಂಡು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ನಾಲಗೆ ಒಣಗಿ ಬೆವರುತ್ತಿದ್ದರು. ಭಯಂಕರವಾದ ಯುದ್ಧದ ಭೀತಿಯಲ್ಲಿ ಅವರ ಮುಖಗಳು ಬಾಡಿದ್ದುವು. ಮಾತಾಡಲಾಗದೆ ತೊದಲುತ್ತಿದ್ದರು. ಸಾಯುತ್ತಿದ್ದೇವೆ ಎಂಬ ಹಸ್ತ ಸಂಕೇತಗಳನ್ನು ಮಾಡುತ್ತಿದ್ದರು. ಅವರು ಊರೊಳಗೆ ಓಡಿ ಹೋದರು.
ಪದಾರ್ಥ (ಕ.ಗ.ಪ)
ಮಿಸುಪ-ಹೊಳೆಯುವ, ಕೊಂಬು-ಒಂದು ಊದುವ ವಾದ್ಯ, ಹೊತ್ತ ಅಸು-ಹೊತ್ತ ಜೀವ, ಢಗೆ-ಸೆಖೆ, ಕಲ್ಲಿ-ಬುತ್ತಿ, ಜಾಡಿ-ಕುರಿಯ ತುಪ್ಪಟದಿಂದ ತಯಾರಿಸಿದ ಹೊದಿಕೆ
ಮೂಲ ...{Loading}...
ಮಿಸುಪ ಕಂಬಳಿಕೊಂಬು ಕಲ್ಲಿಯ
ಬಿಸುಟು ಗಾಯದಿ ಗೋವಳರು ಹೊ
ತ್ತಸುವ ಕೊರಳಲಿ ಹಿಡಿದು ನಾಲಗೆಯೊಣಗಿ ಢಗೆ ಹೊಯ್ದು
ವಿಷಮ ರಣಭೀತಿಯಲಿ ಕಂದಿದ
ಮುಸುಡ ತೊದಲಿನ ನುಡಿಯ ಮರಣದ
ದೆಸೆಯ ಕೈಸನ್ನೆಗಳ ಕಾತರರೈದಿದರು ಪುರವ ॥38॥
೦೩೯ ಬಸಿವ ನೆತ್ತರ ...{Loading}...
ಬಸಿವ ನೆತ್ತರ ಗೋವರರಸಂ
ಗುಸುರಲಾರದೆ ಧೊಪ್ಪನಡಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶು ಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾಪ, ಆ ಗೊಲ್ಲರ ಮೈಯಲ್ಲಿ ರಕ್ತ ಬಸಿಯುತ್ತಿತ್ತು. ಅರಮನೆಯ ತನಕ ಓಡಿ ಬಂದವರು ಓಡಿದ ಆಯಾಸದಲ್ಲಿ ರಾಜನ ಬಳಿ ಮಾತಾಡಲು ಆಗದೆ ಅಲ್ಲೇ ಕುಸಿದುಬಿದ್ದರು. ಇನ್ನು ಕೆಲವರು ಸ್ವಲ್ಪ ಸಾವರಿಸಿಕೊಂಡು ರಾಜನಿಗೆ ಹೇಳಿದರು.
“ಪ್ರಭು ! ಮಹಾಸೈನ್ಯ ಧಾಳಿಯಿಟ್ಟಿದೆ. ಗೋಪಾಲಕರನ್ನು ಕೊಚ್ಚಿ ಹಾಕಿ ಅರವತ್ತು ಸಾವಿರ ದನಗಳನ್ನು ಹಿಡಿದುಕೊಂಡು ಹೋದರು”
ಪದಾರ್ಥ (ಕ.ಗ.ಪ)
ಬಸಿ-ಸುರಿ, ಅಸು-ಜೀವ, ಅಡಗೆಡೆ-ಬೀಳು, ಅಸಮಬಲ-ಮಹಾಸೈನ್ಯ, (ಎದುರಿಲ್ಲದ ಸೇನೆ) ಕುಸುರಿದರಿ-ಕೊಚ್ಚಿ ಹಾಕು
ಮೂಲ ...{Loading}...
ಬಸಿವ ನೆತ್ತರ ಗೋವರರಸಂ
ಗುಸುರಲಾರದೆ ಧೊಪ್ಪನಡಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶು ಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ ॥39॥
೦೪೦ ಕೇಳಿ ಬಿಸುಸುಯ್ದನು ...{Loading}...
ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತು ಕೇಳಿ ವಿರಾಟ ರಾಜನು ನಿಟ್ಟುಸಿರು ಬಿಟ್ಟ “ಅಯ್ಯೋ ! ಮಹಾವೀರ ಕೀಚಕನು ಇಲ್ಲಿ ಇಲ್ಲವಲ್ಲ” ಎಂದು ಹೇಳಿ ಎಡಬಲಗಳನ್ನು ನೋಡಿದ. ಆದರೆ ಕೀಚಕನಿಲ್ಲದಿದ್ದರೇನು ? ವೀರ ಸೈನಿಕರಿರಲಿಲ್ಲವೆ ? ಅವರು ಕೂಗಾಡಲಾರಂಭಿಸಿದರು. “ದೊರೆ ! ನಮಗೆ ವೀಳ್ಯಕೊಟ್ಟು ಯುದ್ಧಕ್ಕೆ ಕಳಿಸು”, ಎಂದರು. ಬೇರೆ ಬೇರೆಯವರು ಸ್ಪರ್ಧೆಗೆ ಇಳಿದು ನನಗೆ ತನಗೆ ಎಂದರು. ಅವರೆಲ್ಲರ ಘೋಷಣೆ ಹೆಚ್ಚಿತು. ಆಸ್ಥಾನವು ಕ್ಷೋಭೆಯಿಂದ ಕದಡಿ ಹೋಯಿತು.
ಪದಾರ್ಥ (ಕ.ಗ.ಪ)
ಬಿಸುಸುಯ್-ನಿಟ್ಟುಸಿರು ಬಿಡು, ಅಳಿ-ಸಾಯಿ, ಗಜಬಜಿಸು-ಘೋಷಿಸು, ಅಬ್ಬರಿಸು, ಅಬ್ಬರಣೆ-ಕಿರುಚಾಟ
ಮೂಲ ...{Loading}...
ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ ॥40॥
೦೪೧ ಕೇಳಿ ಸಿಡಿಲೇಳಿಗೆಯಲೆದ್ದು ...{Loading}...
ಕೇಳಿ ಸಿಡಿಲೇಳಿಗೆಯಲೆದ್ದು ನೃ
ಪಾಲಕರು ಗಜಬಜಿಸಿ ರಭಸದೊ
ಳೋಲಗವ ಹೊರವಂಟು ನಡೆದರು ಭಾಷೆಗಳ ಕೊಡುತ
ಆಳು ಕೈದುವ ಕೊಂಡು ಕರಿಘಟೆ
ಮೇಳವಿಸಿ ಹಲ್ಲಣಿಸಿ ತೇಜಿಗ
ಳೋಳಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಾಟನ ಆಸ್ಥಾನದಲ್ಲಿ ಇದ್ದ ಸಾಮಂತರುಗಳು ಈ ಸುದ್ದಿಯನ್ನು ಕೇಳಿ ಸಿಡಿಲಂತೆ ಗರ್ಜಿಸಿದರು. ಎದ್ದು ಕೂಗಾಡಿದರು ಶತ್ರುಗಳನ್ನು ಓಡಿಸುವುದಾಗಿ ವಾಗ್ದಾನ ಮಾಡುತ್ತ ರಾಜಸಭೆಯಿಂದ ಹೊರಗೆ ಹೊರಟು. ಯುದ್ಧಕ್ಕೆ ಸಿದ್ಧರಾದರು. ಸೈನಿಕರು ಆಯುಧಗಳನ್ನು ತೆಗೆದುಕೊಂಡು ಹೊರಟರು. ಆನೆಗಳನ್ನು ಕುದುರೆಗಳನ್ನು ರಥಗಳನ್ನು ಸಿದ್ಧಪಡಿಸಿ ಮತ್ಸ್ಯ ಸೇನೆ ಯುದ್ಧಕ್ಕೆ ಹೊರಟಿತು.
ಪದಾರ್ಥ (ಕ.ಗ.ಪ)
ಸಿಡಿಲೇಳಿಗೆ-ಅಬ್ಬರಿಸುವ ಸಿಡಿಲಿನಿಂತಹ ಕೂಗು, ಆಳು-ಯೋಧರು, ಕೈದು-ಆಯುಧ, ಹಲ್ಲಣಿಸು-ಹಲ್ಲಣ ಹಾಕಿ ಸಿದ್ಧ ಪಡಿಸು, ತೇಜಿ-ಕುದುರೆ, ಓಳಿ-ಸಮೂಹ
ಟಿಪ್ಪನೀ (ಕ.ಗ.ಪ)
ಉತ್ತರ ಭಾರತದ ಜೈಪುರ ರಾಜ್ಯದ ಜಿಲ್ಲೆಯ ಪರ್ವತ ಶ್ರೇಣಿಗಳ ಕೊರಕಲುಗಳ ಪ್ರದೇಶದಲ್ಲಿ ರಥಯುದ್ಧ ಸಾಧ್ಯವಿಲ್ಲವೆಂದೂ ವ್ಯಾಸರು ಭಾವುಕವಾಗಿ ರಥ ಯುದ್ಧವಾದಂತೆ ವರ್ಣಿಸಿದ್ದಾರೆಂದೂ ಎಸ್.ಎಲ್. ಭೈರಪ್ಪನವರು ಹೇಳುತ್ತಾರೆ. (ದಿ ಮಹಾಭಾರತ ರೀ ವಿಸಿಟೆಡ್ ಸಾಹಿತ್ಯ ಅಕಾಡೆಮಿ ದೆಹಲಿ ಪು. 257)
ಮೂಲ ...{Loading}...
ಕೇಳಿ ಸಿಡಿಲೇಳಿಗೆಯಲೆದ್ದು ನೃ
ಪಾಲಕರು ಗಜಬಜಿಸಿ ರಭಸದೊ
ಳೋಲಗವ ಹೊರವಂಟು ನಡೆದರು ಭಾಷೆಗಳ ಕೊಡುತ
ಆಳು ಕೈದುವ ಕೊಂಡು ಕರಿಘಟೆ
ಮೇಳವಿಸಿ ಹಲ್ಲಣಿಸಿ ತೇಜಿಗ
ಳೋಳಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ ॥41॥
೦೪೨ ಇವರು ತಮ್ಮೊಳಗೆನ್ದರದು ...{Loading}...
ಇವರು ತಮ್ಮೊಳಗೆಂದರದು ನ
ಮ್ಮವರ ಬಲ ತುರುಗೊಂಡವರು ಕೌ
ರವರು ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು
ಅವಧಿ ತೀರದ ಮುನ್ನ ಕಾಣಿಸಿ
ನಮಗೆ ಬಳಿಕಾರಣ್ಯವಾಸವ
ನಿವರು ಕರುಣಿಸ ಬಂದರೆಂದನು ಧರ್ಮನಂದನನು ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಛದ್ಮ ವೇಷದಲ್ಲಿದ್ದ ಪಾಂಡವರು ತಮ್ಮ ತಮ್ಮಲ್ಲಿಯೇ ಮಾತಾಡಿಕೊಂಡರು. ಧರ್ಮರಾಯನು ನಕುಲ ಸಹದೇವ ಭೀಮರಿಗೆ ಹೇಳಿದ. ನಮ್ಮ ಕಡೆಯವರ ದನಗಳನ್ನು ಹಿಡಿದಿರುವವರು ಕೌರವರು. ಬಹುಶಃ ಅವರು ನಮ್ಮನ್ನು ಪರೀಕ್ಷಿಸಲು ಈ ತಂತ್ರ ಹೂಡಿದ್ದಾರೆಂದು ಕಾಣುತ್ತದೆ. ನಮ್ಮನ್ನು ಕಂಡು ಹಿಡಿದು ನಮಗೆ ಮತ್ತೆ ಅರಣ್ಯ ವಾಸವನ್ನು ಕರುಣಿಸಲು ಇವರು ಬಂದಿದ್ದಾರೆ" ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಹದನಹುದು-ಆ ರೀರಿ ಕಾಣುತ್ತದೆ.
ಟಿಪ್ಪನೀ (ಕ.ಗ.ಪ)
ಪಾಂಡವರನ್ನು ನೋಡಿದರೆ ಯಾರೂ ಅವರ ಗುರುತು ಹಿಡಿಯುವಂತೆ ಕಾಣುತ್ತಿರಲಿಲ್ಲ. ಆದುದರಿಂದ ವ್ಯಾಸರು ‘ಛದ್ಮ ವೇಷ ಪ್ರವಿಷ್ಟಾನಾಂ’ ಎಂದು ಹೇಳಿದ್ದಾರೆ.
ಪಂಪಭಾರತ-ಪಾಂಡವರು ಐವರೂ ಸೇರಿ ಮಾತಾಡಿಕೊಂಡು ಅರ್ಜುನನನ್ನು ನಗರದ ಕಾವಲಿಗೆ ನಿಲ್ಲಿಸಿ ಉಳಿದ ನಾಲ್ವರು ವಿರಾಟನ ಜೊತೆ ಸೇರಿ ಯುದ್ಧ ಮಾಡುತ್ತಾರೆ.
ಮೂಲ ...{Loading}...
ಇವರು ತಮ್ಮೊಳಗೆಂದರದು ನ
ಮ್ಮವರ ಬಲ ತುರುಗೊಂಡವರು ಕೌ
ರವರು ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು
ಅವಧಿ ತೀರದ ಮುನ್ನ ಕಾಣಿಸಿ
ನಮಗೆ ಬಳಿಕಾರಣ್ಯವಾಸವ
ನಿವರು ಕರುಣಿಸ ಬಂದರೆಂದನು ಧರ್ಮನಂದನನು ॥42॥
೦೪೩ ಅವಧಿ ತೀರಲಿ ...{Loading}...
ಅವಧಿ ತೀರಲಿ ಮೇಣು ಮಾಣಲಿ
ಎವಗೆ ತುರು ಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರ ಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ಹೇಳಿದ: “ನಮ್ಮ ಆಜ್ಞಾತವಾಸದ ಅವಧಿ ತೀರಿರಲಿ ಅಥವಾ ಇನ್ನೂ ಉಳಿದಿರಲಿ. ಚಿಂತೆಯಿಲ್ಲ. ದನಕರುಗಳ ಆಕ್ರಂದನವನ್ನು ಕಿವಿಯಾರೆ ಕೇಳಿ ಆಮೇಲೆ ನಾವು ನೀರನ್ನು ಕುಡಿದರೆ ಎಂಥ ಪಾತಕ ಸುತ್ತಿಕೊಳ್ಳುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆ ವಿಷಯ ಹಾಗಿರಲಿ. ನಾನು ಆ ಶತ್ರುಗಳನ್ನು ಅಟ್ಟಿಸಿಕೊಂಡು ಹೋಗಿ ಗೋವುಗಳನ್ನು ಬಿಡಿಸಿಕೊಂಡು ಹಿಂದಕ್ಕೆ ಕರೆತರುತ್ತೇನೆ” (ನೀವು ನಮ್ಮೊಡನೆ ಬನ್ನಿ ಎಂಬ ಭಾವ ಇಲ್ಲಿದೆ)
ಪದಾರ್ಥ (ಕ.ಗ.ಪ)
ಮೇಣು-ಅಥವಾ, ಮಾಣಲಿ-ಬಿಡಲಿ, ಕೇಳಿದು-ಕೇಳಿದ ನಂತರ, ಎನಗೆ-ನಮಗೆ, ಬೆಂಬಳಿವಿಡಿ-ಹಿಂಬಾಲಿಸು, ನಿವಹ-ಸಮೂಹ, ಮರಳಿಚು-ಮರಳಿಸು
ಟಿಪ್ಪನೀ (ಕ.ಗ.ಪ)
ಹೆಂಗಸರ ಶೀಲಕ್ಕೆ ಬಾಧೆಯಾದಾಗ, ದನಕರುಗಳನ್ನು ಹೊತ್ತೊಯ್ದಾಗ ವೀರರು ಸಹಿಸಿಕೊಂಡಿರಬಾರದು - ಎಂದು ರನ್ನನು ಹೇಳುತ್ತಾನೆ
ಮೂಲ ...{Loading}...
ಅವಧಿ ತೀರಲಿ ಮೇಣು ಮಾಣಲಿ
ಎವಗೆ ತುರು ಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರ ಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು ॥43॥
೦೪೪ ಎನ್ದು ತಮ್ಮನ್ದಿರು ...{Loading}...
ಎಂದು ತಮ್ಮಂದಿರು ಸಹಿತ ಯಮ
ನಂದನನು ಕಲಹಾವಲೋಕಾ
ನಂದ ಪರಿಕರಲುಳಿತಕೋಮಲ ಕಾಯನನುವಾಗಿ
ಬಂದು ಮತ್ಸ್ಯನ ನೇಮದಲಿ ನಡೆ
ತಂದು ರಥವೇರಿದನು ಪಾರ್ಥನ
ಹಿಂದಕಿರಿಸಿ ವಿರಾಟನೊಡನವನೀಶ ಹೊರವಂಟ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ಹೇಳಿ ತಮ್ಮಂದಿರ ಸಹಿತ ಯುದ್ಧವನ್ನು ನೋಡುವ ಆನಂದದಿಂದ ಕೂಡಿದ ಕೋಮಲಕಾಯ (ಧರ್ಮರಾಯ)ನು ಯುದ್ಧಕ್ಕೆ ಸಿದ್ಧನಾಗಿ ಬಂದು ಮತ್ಸ್ಯರಾಜ ವಿರಾಟನನ್ನು ಕೇಳಿದ. ಆ ರಾಜನ ಆಜ್ಞೆಯಂತೆ ಬಂದು ರಥವೇರಿದ. ಅರ್ಜುನನೊಬ್ಬನನ್ನು ಬಿಟ್ಟು ಉಳಿದವರನ್ನೆಲ್ಲ ಜೊತೆಗೆ ಕರೆದುಕೊಂಡು ವಿರಾಟರಾಯನ ಜೊತೆಯಲ್ಲಿ ಹೊರಟ.
ಪದಾರ್ಥ (ಕ.ಗ.ಪ)
ಯಮನಂದನ-ಧರ್ಮರಾಯ, ಕಲಹಾವಲೋಕಾನಂದ ಪರಿಕರ ಲುಳಿತ..- ಯುದ್ಧವನ್ನು ನೋಡುವ ಆನಂದದ ಸಾಮಗ್ರಿಯಲ್ಲಿ ಓಲಾಡು.
ಟಿಪ್ಪನೀ (ಕ.ಗ.ಪ)
ನೇಮ ಅಪ್ಪಣೆ.
ಮೂಲಭಾರತದಲ್ಲಿ ಧರ್ಮರಾಯನು ವಿರಾಟನಿಗೆ ಹೇಳುತ್ತಾನೆ “ದೊರೆ ! ಹಿಂದೆ ಒಬ್ಬ ಮುನಿ ನನಗೆ ದಿವ್ಯಾಸ್ತ್ರಗಳನ್ನು ಉಪದೇಶಿಸಿದ್ದಾನೆ. ನನಗೆ ರಥ ಕುದುರೆ ಸೇನೆಗಳನ್ನು ಕೊಡು. ವಲಲನನ್ನು ಯುದ್ಧಕ್ಕೆ ಆಹ್ವಾನಿಸು. ಅವನು ಮಹಾಮಲ್ಲ. ಹಾಗೆಯೇ ದಾಮಗ್ರಂಥಿ ತಂತ್ರೀಪಾಲ ಈ ವೀರರನ್ನು ಕರೆಸು”.
ಕಲಹಾವಲೋಕಾನಂದ ಪರಿಕರ ಲುಳಿತ : ಈ ಪಾಠಕ್ಕೆ ಬದಲಾಗಿ ಕೃಷ್ಣ ಜೋಯಿಸರ ಕಲಹಾವಲೋಕಾನಂದ ಜಲ ಪರಿಲುಳಿತ- ಕೋಮಲ ಕಾಯನನುವಾಗಿ ಎಂಬ ಪಾಠವನ್ನು ಸ್ವೀಕರಿಸಬಹುದು. (ಯುದ್ಧವನ್ನು ನೋಡಬೇಕೆಂಬ ಆನಂದ ಜಲದಲ್ಲಿ ಓಲಾಡುವ ಮನಸ್ಸುಳ್ಳವನಾಗಿ)
ಮೂಲ ...{Loading}...
ಎಂದು ತಮ್ಮಂದಿರು ಸಹಿತ ಯಮ
ನಂದನನು ಕಲಹಾವಲೋಕಾ
ನಂದ ಪರಿಕರಲುಳಿತಕೋಮಲ ಕಾಯನನುವಾಗಿ
ಬಂದು ಮತ್ಸ್ಯನ ನೇಮದಲಿ ನಡೆ
ತಂದು ರಥವೇರಿದನು ಪಾರ್ಥನ
ಹಿಂದಕಿರಿಸಿ ವಿರಾಟನೊಡನವನೀಶ ಹೊರವಂಟ ॥44॥
೦೪೫ ವರ ವಿರಾಟ ...{Loading}...
ವರ ವಿರಾಟ ಸಹೋದರರು ಸಾ
ವಿರದ ಸಂಖ್ಯೆಯ ರಾಜಪುತ್ರರು
ಕೊರಳ ಪದಕವ ಕಾಲ ತೊಡರಿನ ಮಣಿಯ ಮೌಳಿಗಳ
ಪರಿಮಳದ ಕತ್ತುರಿಯ ತಿಲಕದ
ಹೊರೆದ ಗಂಧದ ತೋರ ಮುಡುಹಿನ
ಕರದ ಖಂಡೆಯರದಟರೈದಿದರಾನೆ ಕುದುರೆಯಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಾಟನ ಸಹೋದರರು, ಸಾವಿರಾರು ಸಂಖ್ಯೆಯ ರಾಜಪುತ್ರರು ಮತ್ತು ಯುದ್ಧಕ್ಕೆ ಹೊರಟವರು, ಅವರೆಲ್ಲ ಕೊರಳಲ್ಲಿ ಪದಕ ಧರಿಸಿದ್ದರು. ಕಾಲಿಗೆ ಪೆಂಡೆಯ ಧರಿಸಿದ್ದರು. ರತ್ನ ಕಿರೀಟಗಳನ್ನು ಧರಿಸಿದ್ದರು. ಪರಿಮಳಯುಕ್ತವಾದ ಕಸ್ತೂರಿ ತಿಲಕವಿಟ್ಟುಕೊಂಡಿದ್ದರು. ಗಂಧ ಹಚ್ಚಿಕೊಂಡಿದ್ದರು. ದಪ್ಪನೆಯ ತೋಳಿನ್ಲ, ಕೈಯಲ್ಲಿ ಕತ್ತಿ ಹಿಡಿದು ನಿಂತ ಆ ವೀರರೆಲ್ಲ ಆನೆ ಕುದುರೆಗಳ ಮೇಲೆ ಹೊರಟರು.
ಪದಾರ್ಥ (ಕ.ಗ.ಪ)
ಕಾಲ ತೊಡರು-ಕಾಲು ಬಳೆ, ಕತ್ತುರಿ-ಕಸ್ತೂರಿ, ತೋರ-ದಪ್ಪ, ಮುಡುಹು-ಭುಜ, ಹೊರೆ-ಲೇಪಿಸು, ಖಂಡೆಯರು-ಕತ್ತಿ ಹಿಡಿದವರು, ಐದು-ಹೋಗು
ಟಿಪ್ಪನೀ (ಕ.ಗ.ಪ)
- ವಿರಾಟನ ಸಹೋದರರು-ಶತಾನೀಕ, ಮದಿರಾಶ್ವ (ಮದಿರಾಕ್ಷ ಎಂಬ ಹೆಸರೂ ಇದೆ), ಸೂರ್ಯದತ್ತ ಮೊದಲಾದವರು
- ವಿರಾಟನ ಮಕ್ಕಳಲ್ಲಿ ಶಂಖನಿಗೆ, ಯುದ್ಧಕ್ಕೆ ಬಂದಿದ್ದ ಪಾಂಡವರಿಗೆಲ್ಲ ರಥಗಳನ್ನು ಕವಚ, ಆಯುಧಗಳನ್ನು ಕೊಡಲಾಗಿತ್ತು.
ಮೂಲ ...{Loading}...
ವರ ವಿರಾಟ ಸಹೋದರರು ಸಾ
ವಿರದ ಸಂಖ್ಯೆಯ ರಾಜಪುತ್ರರು
ಕೊರಳ ಪದಕವ ಕಾಲ ತೊಡರಿನ ಮಣಿಯ ಮೌಳಿಗಳ
ಪರಿಮಳದ ಕತ್ತುರಿಯ ತಿಲಕದ
ಹೊರೆದ ಗಂಧದ ತೋರ ಮುಡುಹಿನ
ಕರದ ಖಂಡೆಯರದಟರೈದಿದರಾನೆ ಕುದುರೆಯಲಿ ॥45॥
೦೪೬ ತೂಳುವರೆಗಳ ಲಗ್ಗೆಯಲಿ ...{Loading}...
ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದುದು ಪರಬಲವ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೇರಿಗಳನ್ನು ಬಾರಿಸುತ್ತ ಲಗ್ಗೆ ಹಾಕಿ ಕೆಂಪು ಧೂಳನ್ನು ಎಬ್ಬಿಸಿ ವಿರಾಟನ ಸೇನೆ ನುಗ್ಗಿ ಬಂದಿತು. ಅದನ್ನು ಕಂಡು ಸುಶರ್ಮಾದಿಗಳು ಪ್ರಯಾಣ ನಿಲ್ಲಿಸಿ ದನಕರುಗಳನ್ನು ಹಿಂದಕ್ಕೆ ಇಟ್ಟುಕೊಂಡು ಯುದ್ಧ ಮಾಡಲು ಮುಂದೆ ಬಂದರು. ವಾದ್ಯ ಘೋಷ ಏರುಮುಖವಾಯಿತು. ದಿಕ್ಕಿನ ಮೂಲೆ ಬಿರಿಯುವಂತೆ ವಿರಾಟನ ಸೇನೆಯು ಶತ್ರು ಸೇನೆಯ ಮೇಲೆ ಧಾಳಿಯಿಟ್ಟಿತು.
ಪದಾರ್ಥ (ಕ.ಗ.ಪ)
ತೂಳುವರೆ-ಆಕ್ರಮಣ ಸೂಚಕ ಯುದ್ಧವಾದ್ಯ, ಮಸಗು-ಕವಿದುಕೊಳ್ಳುವಿಕೆ, ತುರು-ದನ, ಛಡಾಳಿಸು-ಏರಿ ಹೋಗು, ಸೂಳವಿಸು-ಅಬ್ಬರಿಸು, ನಿಸ್ಸಾಳ-ವಾದ್ಯ, ಹಳಚು-ಪಳಂಚು, ತಾಗು, ಘರ್ಷಿಸು, ಪರಬಲ-ಶತ್ರು ಸೇನೆ
ಮೂಲ ...{Loading}...
ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದುದು ಪರಬಲವ ॥46॥
೦೪೭ ಫಡ ವಿರಾಟನ ...{Loading}...
ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟ ಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕುದು ಕೂಡೆ ಕುರುಸೇನೆ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಎಲವೋ ! ವಿರಾಟನ ಚುಕ್ಕಿಗಳಂತೆ ಕೆಲಸಕ್ಕೆ ಬಾರದ ವೀರರಿರಾ ! ಆತುರ ಪಡಬೇಡಿ. ಮಹಾವೀರರ ಕುತ್ತಿಗೆಗೆ ಮೆಟ್ಟಿಕೊಳ್ಳುವ ಹಾವಾಗಿದ್ದ ಆ ಕೀಚಕ ಸತ್ತಮೇಲೆ ನೀವೆಲ್ಲ ಏನು ಲೆಕ್ಕ ? ಅಯ್ಯೋ ! ಕೆರಳಿ ನರಿಯು ಸೇನೆಯನ್ನು ಹೊಕ್ಕು ಹಲ್ಲು ಬಾಯಿ ಬಿಡುವ ಹಾಗೆ ವಿರಾಟನು ಈಗ ಕೆಟ್ಟ” ಎನ್ನುತ್ತ ಸುಶರ್ಮನ ಸೇನೆ ನಗುತ್ತ ವಿರಾಟ ಸೇನೆಯನ್ನು ತಾಕಿತು.
ಪದಾರ್ಥ (ಕ.ಗ.ಪ)
ಫಡ-ಆಹಾ ಎಂಬ ತಿರಸ್ಕಾರದ ಮಾತು, ಅವಗಡಿಸು-ಆತುರಗೊಳ್ಳು, ಚುಕ್ಕಿ-ಚುಕ್ಕಿಗೆ ನಕ್ಷತ್ರ ಎಂದರ್ಥ ಆದರೆ ದೂರದ ನಕ್ಷತ್ರಗಳು ಚುಕ್ಕಿಯಂತೆ ಸಣ್ಣವು ಎಂಬರ್ಥ ಇಲ್ಲಿದೆ, ಅಪ್ರಯೋಜಕರು ಎಂದರ್ಥ, ಬಿರುದರ-ವೀರರ, ಹೆಡತಲೆ-ಕುತ್ತಿಗೆ, ಅಳಿದ-ಸತ್ತ, ಮಿಡುಕು-ಎದುರು ಬೀಳು, ಕಟಕ-ಸೈನ್ಯ, ಕೈವೊಯ್ದು-ಚಪ್ಪಾಳೆ ತಟ್ಟಿ
ಟಿಪ್ಪನೀ (ಕ.ಗ.ಪ)
ಸುಶರ್ಮನ ಮತ್ತು ಅವನ ಸೇನೆಯ ದೃಷ್ಟಿಯಲ್ಲಿ ವಿರಾಟನಿಗೆ ಬೆಲೆಯಿಲ್ಲ. ಕೀಚಕನಿಂದಾಗಿ ವಿರಾಟ ಮೆರೆಯುತ್ತಿದ್ದಾನೆಂದು ಅವರಿಗೆಲ್ಲ ಗೊತ್ತು. ಈಗ ಕೀಚಕ ಸತ್ತಿರುವುದರಿಂದ ಅವರಿಗೆಲ್ಲ ವಿರಾಟ ಮತ್ತು ಅವನ ಸೈನಿಕರು ‘ಚುಕ್ಕಿ’ ಗಳಂತೆ ಅಲ್ಪರಾಗಿ ಕಾಣುತ್ತಾರೆ.
ಮೂಲ ...{Loading}...
ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟ ಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕುದು ಕೂಡೆ ಕುರುಸೇನೆ ॥47॥
೦೪೮ ಕುದುರೆ ಹೊಕ್ಕುವು ...{Loading}...
ಕುದುರೆ ಹೊಕ್ಕುವು ದಂತಿ ಘಟೆ ತೂ
ಳಿದವು ರಥವಾಜಿಗಳು ಸೇನೆಯ
ಹೊದರ ಹೊಯ್ದವು ಕೂಡೆ ಕಾಲಾಳಿರಿದು ಕಾದಿದರು
ಕದಡಿತಾ ದಳ ಮೈಯೊಳೊಕ್ಕವು
ಬಿದಿರಿದೆಲುಗಳು ಮುರಿದು ನೆತ್ತಿಯ
ಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎರಡು ಸೇನೆಗಳೂ ಹೋರಾಟಕ್ಕೆ ಸಿದ್ಧವಾದುವು. ಕುದುರೆಗಳ ಯೋಧರು, ಆನೆಗಳ ಯೋಧರು ಪರಸ್ಪರ ಘರ್ಷಿಸಿದರು. ರಥದ ಕುದುರೆಗಳು ಎದುರು ಸೇನೆಯ ಶಕ್ತಿಯನ್ನು ಮಂಕು ಮಾಡಿದುವು. ಕಾಲಾಳುಗಳೂ ವೀರಾವೇಶದಿಂದ ಇರಿದು ಹೋರಾಡಿದರು. ಎರಡು ಸೇನೆಗಳೂ ಚಲ್ಲಾಪಿಲ್ಲಿಯಾದವು. ಬಿದಿರಿದ ಅಂದರೆ ನಡುಗಿದ ಎಲುಬುಗಳು ಮುರಿದು ಹೋದವು. ನೆತ್ತಿಯನ್ನು ಮುರಿದು ಮಿದುಳುಗಳನ್ನು ಚುಚ್ಚಿ ರಕ್ತ ಕಾರಿಸಿದುವು.
ಪದಾರ್ಥ (ಕ.ಗ.ಪ)
ದಂತಿಘಟೆ-ಆನೆಯ ಸೈನ್ಯ, ತೂಳು-ಮುತ್ತಿಗೆ ಹಾಕು, ಆಕ್ರಮಿಸು, ವಾಜಿ-ಕುದುರೆ, ಹೊದರು-ಕಾಂತಿ, ಸತ್ವ, ಒಕ್ಕವು-ಅಂಟಿಕೊಂಡವು, ಬಿದಿರಿದೆಲುಗಳು-ಬಿದಿರಿದ+ಎಲುಗಳು-ನಡುಗುವ ಎಲುಬು
ಮೂಲ ...{Loading}...
ಕುದುರೆ ಹೊಕ್ಕುವು ದಂತಿ ಘಟೆ ತೂ
ಳಿದವು ರಥವಾಜಿಗಳು ಸೇನೆಯ
ಹೊದರ ಹೊಯ್ದವು ಕೂಡೆ ಕಾಲಾಳಿರಿದು ಕಾದಿದರು
ಕದಡಿತಾ ದಳ ಮೈಯೊಳೊಕ್ಕವು
ಬಿದಿರಿದೆಲುಗಳು ಮುರಿದು ನೆತ್ತಿಯ
ಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ ॥48॥
೦೪೯ ದಿಣ್ಡುಗೆಡೆದವು ದನ್ತಿಘಟೆ ...{Loading}...
ದಿಂಡುಗೆಡೆದವು ದಂತಿಘಟೆ ಶತ
ಖಂಡವಾದವು ತುರಗದಳ ಮುಂ
ಕೊಂಡಿರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ
ತುಂಡಿಸಿತು ರಥವಾಜಿ ಮಿದುಳಿನ
ಜೊಂಡಿನಲಿ ರಣಭೂಮಿ ರಕುತದ
ಗುಂಡಿಗೆಗಳೊಗ್ಗಾಯ್ತು ಶಾಕಿನಿ ಡಾಕಿನೀ ಜನಕೆ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಗಳು ದೊಪ್ಪನೆ ನೆಲಕ್ಕೆ ಉರುಳಿದುವು. ಕುದುರೆಗಳ ಸಮೂಹ ನೂರು ತುಂಡಾದವು. ಮುಂದೆ ನುಗ್ಗಿ ಕಾದಾಡಿದ ಯೋಧರು ಕೆಳಗೆ ಬಿದ್ದರು. ರಥ ಕುದುರೆಗಳು ಅಸ್ತವ್ಯಸ್ತವಾಗಿ ತುಂಡಾಗಿ ಬಿದ್ದುವು. ರಣಭೂಮಿಯಲ್ಲಿ ಮಿದುಳಿನ ಜೊಂಡುಗಳು ಉದುರಿದುವು. ಎದೆಗಳು ರಕ್ತಕಾರುತ್ತ ಶಾಕಿನಿ ಡಾಕಿನೀ ಸಮೂಹಕ್ಕೆ ತುತ್ತಾದುವು.
ಪದಾರ್ಥ (ಕ.ಗ.ಪ)
ದಿಂಡುಗೆಡೆ-ಉರುಳಿ ಬೀಳು, ಶತಖಂಡ-ನೂರು ತುಂಡು, ತುರಗದಳ-ಕುದುರೆ ಸೈನ್ಯ , ತಾರುಥಟ್ಟು-ಚಲ್ಲಾಪಿಲ್ಲಿ, ಅಸ್ತವ್ಯಸ್ತ, ಜೊಂಡು-ನಾರುವ ಕಸ, ಗುಂಡಿಗೆ-ಎದೆ, ಕೊಳ, ಹಳ್ಳ
ಮೂಲ ...{Loading}...
ದಿಂಡುಗೆಡೆದವು ದಂತಿಘಟೆ ಶತ
ಖಂಡವಾದವು ತುರಗದಳ ಮುಂ
ಕೊಂಡಿರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ
ತುಂಡಿಸಿತು ರಥವಾಜಿ ಮಿದುಳಿನ
ಜೊಂಡಿನಲಿ ರಣಭೂಮಿ ರಕುತದ
ಗುಂಡಿಗೆಗಳೊಗ್ಗಾಯ್ತು ಶಾಕಿನಿ ಡಾಕಿನೀ ಜನಕೆ ॥49॥
೦೫೦ ಚೂಳಿಕೆಯ ಬಲ ...{Loading}...
ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲು ದಳ ಕವಿದುದು ಮಹಾರಥ
ರೇಳು ಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಾಟನ ಸೇನೆಯ ಮುಂಭಾಗದ ಪಡೆ ಭಗ್ನವಾಯಿತು. ಆದ್ದರಿಂದ ರಾಜರುಗಳ ಮೇಲೆಯೇ ಯುದ್ಧದ ಜವಾಬ್ದಾರಿ ಬಿದ್ದಿತ್ತು. ಅವರೆಲ್ಲ ಮಹಾಸಾಹಸದಿಂದ ಶತ್ರುಗಳ ಮೇಲೆ ಯುದ್ಧ ಮಾಡಿದರು. ವಿರಾಟನ ರಥದ ಮೇಲುದಳವೂ ಅವರೊಂದಿಗೆ ಹೋರಾಟಕ್ಕೆ ಇಳಿಯಿತು. ಮತ್ಸ್ಯರಾಜನ ಕಡೆಯ ಏಳು ಸಾವಿರ ಮಹಾರಥರು ಯುದ್ಧ ಮಾಡುತ್ತ ತ್ರಿಗರ್ತರ ಸೇನೆ ಭಂಗಗೊಳ್ಳುವಂತೆ ಮಾಡಿದರು.
ಪದಾರ್ಥ (ಕ.ಗ.ಪ)
ಚೂಳಿಕೆ-(ಸೇನೆಯ) ಮುಂಭಾಗ, ಬವರ-ಯುದ್ಧ, ಎಚ್ಚಾಳುತನ-ಪರಾಕ್ರಮ ದುವ್ವಾಳಿಸು-ರಭಸದಿಂದ ನುಗ್ಗು
ಮೂಲ ...{Loading}...
ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲು ದಳ ಕವಿದುದು ಮಹಾರಥ
ರೇಳು ಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು ॥50॥
೦೫೧ ಬಲ ಮುರಿದು ...{Loading}...
ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರ ಸುಶರ್ಮನಂಬಿನ
ಮಳೆಯ ಕರೆವುತ ರಿಪು ವಿರಾಟನ ರಥವ ತರುಬಿದನು
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯುದ್ಧದಲ್ಲಿ ತನ್ನ ಸೇನೆ ಭಂಗಗೊಂಡು ಹಿಂದಿರುಗುತ್ತಿರುವುದನ್ನು ಸುಶರ್ಮನು ನೋಡಿದ. ಕೋಪಗೊಂಡು ಬಾಣಗಳ ಮಳೆ ಕರೆಯುತ್ತ ಶತ್ರು ವಿರಾಟರಾಜನ ರಥವನ್ನು ಅಟ್ಟಿಸಿಕೊಂಡು ಹೋದ. “ಅಯ್ಯಾ, ಮತ್ಸ್ಯ ! ಕ್ಷುದ್ರ ಮಾಂಡಲಿಕನಾದ ನಿನಗೆ ಪರಾಕ್ರಮ ಎಲ್ಲಿ ಬಂತು ?” ಎನ್ನುತ್ತ ಕೂಗಿ ವಿರಾಟನೊಂದಿಗೆ ಉಗ್ರವಾಗಿ ಕಾದಿದ.
ಪದಾರ್ಥ (ಕ.ಗ.ಪ)
ತರುಬು-ಅಡ್ಡಗಟ್ಟು, ಆಳುತನ-ಹೆಮ್ಮೆ, ಪರಾಕ್ರಮ
ಮೂಲ ...{Loading}...
ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರ ಸುಶರ್ಮನಂಬಿನ
ಮಳೆಯ ಕರೆವುತ ರಿಪು ವಿರಾಟನ ರಥವ ತರುಬಿದನು
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ ॥51॥
೦೫೨ ಸರಳು ತೀರಲು ...{Loading}...
ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಶರ್ಮ ವಿರಾಟರ ನಡುವೆ ಘೋರ ಯುದ್ಧ ನಡೆಯಿತು ಇಬ್ಬರ ಬಾಣಗಳೂ ಬರಿದಾದುವು. ಆಗ ಅವರು ಕತ್ತಿಯನ್ನು ತಿರುಗಿಸಿ ಹೋರಾಡಿದರು. ಕತ್ತಿಗಳು, ಮುರಿದು ಬಿದ್ದಾಗ ಗದೆಯ ಸರದಿ. ಅನಂತರ ಕತ್ತಿ ಗುರಾಣಿಗಳಿಂದ ತಿವಿದಾಡಿದರು. ಮತ್ಸ್ಯನ ಪರಾಕ್ರಮವನ್ನು ಹೊಗಳುತ್ತ ವೀರಸುಶರ್ಮನು ಅಟ್ಟಹಾಸ ಮಾಡಿದ. ಅವನಿಗೂ ಗಾಯವಾಗಿತ್ತು. ಆದರೆ ಮುಂದೆ ನುಗ್ಗಿ ವಿರಾಟನನ್ನು ಸೆರೆ ಹಿಡಿದ.
ಪದಾರ್ಥ (ಕ.ಗ.ಪ)
ಸರಳು-ಬಾಣ, ಸುರಗಿ-ಕತ್ತಿ, ಪರಿಘ-ಕಬ್ಬಿಣದ ಆಯುಧ (ಗದೆ) ಉರವಣಿಸು-ಮುನ್ನುಗ್ಗು, ಸಂಭ್ರಮ ಪಡು
ಮೂಲ ...{Loading}...
ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ ॥52॥
೦೫೩ ಸಿಕ್ಕಿದನು ...{Loading}...
ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಲೀಸುವನೇ ವಿರಾಟನೆನುತ್ತ ಬಲ ಬೆದರೆ
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಅಯ್ಯೋ ! ದೊರೆ ಸಿಕ್ಕಿಕೊಂಡ. ಈ ಅಲ್ಪರೆಲ್ಲ ಸೇರಿಕೊಂಡು ವಿರಾಟನನ್ನು ಸುಶರ್ಮನಿಗೆ ಒಪ್ಪಿಸಿಕೊಟ್ಟರು. ಒಂದು ವೇಳೆ ಕೀಚಕನ ಆಶ್ರಯ ಇವನಿಗಿದ್ದಿದ್ದರೆ ಅವನು ರಾಜನು ಕೈಸೆರೆ ಆಗದಂತೆ ನೋಡಿಕೊಳ್ಳುತ್ತಿದ್ದ” ಎಂದು ಸೈನಿಕರು ಹೇಳಿದರು. ಆಗ ಮತ್ಸ್ಯನ ಸಹೋದರರಾದ ಶತಾನೀಕ, ಮದಿರಾಕ್ಷ ಮೊದಲಾದವರು “ಅಯ್ಯೋ! ಸುಮ್ಮನೆ ಉಕ್ಕಿನಿಂದ ನಡೆದರೆ ಭುಜ ಬೆಂದು ಹೋಗುತ್ತದೆ. ಯುದ್ಧ ಎಂದರೆ ಮಕ್ಕಳಾಟವಾಯಿತಲ್ಲ. ನಾವೇಕೆ ಇದರಲ್ಲಿ ಸಿಕ್ಕಿಕೊಳ್ಳಬೇಕಾಗಿತ್ತು ?” ಎಂದು ಹೇಳಿಕೊಂಡರು.
ಪದಾರ್ಥ (ಕ.ಗ.ಪ)
ಒಪ್ಪುಗೊಡು-ಒಪ್ಪಿಸಿಕೊಡು, ಕೀಚಕನ ನೆರಳಿರೆ..–. ವೀರಕೀಚಕನ ಆಶ್ರಯ ಇದ್ದಿದ್ದರೆ
ಮೂಲ ...{Loading}...
ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಲೀಸುವನೇ ವಿರಾಟನೆನುತ್ತ ಬಲ ಬೆದರೆ
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು ॥53॥
೦೫೪ ಬಲವನಾಯಕವಾಯ್ತು ಮತ್ಸ್ಯನ ...{Loading}...
ಬಲವನಾಯಕವಾಯ್ತು ಮತ್ಸ್ಯನ
ಕುಲಕೆ ಬಂದುದು ಕೇಡು ಸುಮ್ಮನೆ
ನಿಲುವುದನುಚಿತ ಭೀಮ ಬಿಡಿಸು ವಿರಾಟ ಭೂಪತಿಯ
ಗೆಲವು ಪರಬಲಕಾಯಿತೆನೆ ರಿಪು
ಕುಲ ದವಾನಳನಣ್ಣನಾಜ್ಞೆಯ
ತಲೆಯೊಳಾಂತನು ಮುಂದಣಾಲದ ಮರನ ನೋಡಿದನು ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಸೇನೆ ಈಗ ನಾಯಕರಿಲ್ಲದಂತಾಗಿದೆ. ಮತ್ಸ್ಯನ ವಂಶಕ್ಕೇ ವಿಪತ್ತು ಬಂದಿದೆ. ಈಗ ನಾವು ಸುಮ್ಮನಿರುವುದು ಸರಿಯಲ್ಲ. ಭೀಮ ನೀನು ಹೋಗಿ ವಿರಾಟ ರಾಜನನ್ನು ಬಿಡಿಸಿಕೊಂಡು ಬಾ, ಈಗ ಶತ್ರುಗಳಿಗೆ ಗೆಲುವಾಗಿದೆಯಲ್ಲವೆ ?” ಎಂದ. ಆಗ ಶತ್ರುಗಳ ಪಾಲಿಗೆ ದಳ್ಳುರಿಯಂತಿದ್ದ ಭೀಮನು ಅಣ್ಣನ ಆಜ್ಞೆಯನ್ನು ತಲೆಯಲ್ಲಿ ಹೊತ್ತು ಮುಂದಿದ್ದ ಆಲದ ಮರವನ್ನು ನೋಡಿದ.
ಪದಾರ್ಥ (ಕ.ಗ.ಪ)
ಅನಾಯಕ-ನಾಯಕನಿಲ್ಲದ ಸ್ಥಿತಿ, ರಿಪುಕುಲದವಾನಳ-ಶತ್ರುವಂಶದ ಪಾಲಿಗೆ ಕಾಡುಕಿಚ್ಚು (ಭೀಮ) ಆನು-ಧರಿಸು, ಹೊತ್ತುಕೋ,
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಧರ್ಮರಾಯಾದಿಗಳು ವ್ಯೂಹ ರಚನೆಯನ್ನು ಮಾಡಿಕೊಂಡು ಬೇರೆಯವರನ್ನು ಕೂಡಿಕೊಂಡು ಯುದ್ಧದಲ್ಲಿ ಭಾಗವಹಿಸಿದ್ದರು ಎಂಬ ಮಾತಿದೆ.
“ಸರಾಜಾ ಮಹತೀಂ ಸೇನಾಂ ಮತ್ಸ್ಯಾನಾಂ ಸಮವಾಹವತ್ … ವ್ಯೂಹಂ ಕೃತ್ವಾ ವಿರಾಟಸ್ಯ ಅನ್ವಯುಧ್ಯತ ಪಾಂಡವಾ :”
ಮೂಲ ...{Loading}...
ಬಲವನಾಯಕವಾಯ್ತು ಮತ್ಸ್ಯನ
ಕುಲಕೆ ಬಂದುದು ಕೇಡು ಸುಮ್ಮನೆ
ನಿಲುವುದನುಚಿತ ಭೀಮ ಬಿಡಿಸು ವಿರಾಟ ಭೂಪತಿಯ
ಗೆಲವು ಪರಬಲಕಾಯಿತೆನೆ ರಿಪು
ಕುಲ ದವಾನಳನಣ್ಣನಾಜ್ಞೆಯ
ತಲೆಯೊಳಾಂತನು ಮುಂದಣಾಲದ ಮರನ ನೋಡಿದನು ॥54॥
೦೫೫ ಹೆಮ್ಮರವನಿದ ಕಿತ್ತು ...{Loading}...
ಹೆಮ್ಮರವನಿದ ಕಿತ್ತು ವೈರಿ ಸು
ಶರ್ಮಕನನೊರೆಸುವೆನು ಬವರದೊ
ಳೊಮ್ಮೆಯರಿ ಮೋಹರವನರೆವೆನು ಜೀಯ ಚಿತ್ತೈಸು
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಹೆಮ್ಮರವನ್ನು ಕಿತ್ತು ಈ ವೈರಿ ಸುಶರ್ಮಕನನ್ನು ಒರೆಸಿಹಾಕಿ ಬಿಡುತ್ತೇನೆ. ಯುದ್ಧದಲ್ಲಿ ಒಂದು ಸಲ ಶತ್ರು ಸೇನೆಯನ್ನು ಅರೆದುಹಾಕುತ್ತೇನೆ. ಅಣ್ಣ ಕೇಳು” ಎಂದು ಭೀಮನು ಹೇಳಿದರೆ ಧರ್ಮರಾಯನು. “ತಮ್ಮ ಸೈರಿಸು, ಮರವನ್ನು ಮುರಿಯಲು ಹೋಗಬೇಡ. ನಮ್ಮ ಮಾತು ಕೇಳು. ನೀನು ಹಾಗೆ ಮಾಡಿದರೆ ನಮಗೆ ಕೆಡುಕಾಗದೆ ಇರುವುದಿಲ್ಲ” ಎಂದನು.
ಪದಾರ್ಥ (ಕ.ಗ.ಪ)
ಬವರ-ಯುದ್ಧ, ಹೊಲ್ಲೆಹ-ಕೆಡುಕು
ಮೂಲ ...{Loading}...
ಹೆಮ್ಮರವನಿದ ಕಿತ್ತು ವೈರಿ ಸು
ಶರ್ಮಕನನೊರೆಸುವೆನು ಬವರದೊ
ಳೊಮ್ಮೆಯರಿ ಮೋಹರವನರೆವೆನು ಜೀಯ ಚಿತ್ತೈಸು
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು ॥55॥
೦೫೬ ಮರನ ಮುರಿದೊಡೆ ...{Loading}...
ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯ ಭೀಮನಿಗೆ ಹೇಳಿದ : ತಮ್ಮ ! ಏಕೆ ಗೊತ್ತೆ ? ಮರವನ್ನು ಮುರಿದರೆ ಕೌರವನು ನಾವಿಲ್ಲಿ ಇರುವುದನ್ನು ತಿಳಿದು ಬಿಡುತ್ತಾನೆ. ಇಂಥ ಮನುಷ್ಯ ಸುಲಭವಲ್ಲದ ಸಾಹಸವು ಭೀಮನದೇ ಹೊರತು ಬೇರೆಯವರದಲ್ಲ ಎಂದು ಅವನಿಗೆ ತಿಳಿದು ಬಿಡುತ್ತದೆ". ಆದರೆ ಭೀಮನು ಆ ಮಾತಿಗೆ ಒಪ್ಪದೆ “ಅಣ್ಣ ಆ ಕುರುಕುಲಾಗ್ರಣಿ ಕೌರವನ ಸಮೇತ ಇವರನ್ನೆಲ್ಲ ಒರಸಿಹಾಕಿದರೆ ನಮ್ಮ ಮೇಲೆ ಕೋಪಿಸಿಕೊಂಡು ಬರುವವರು ಯಾರಿದ್ದಾರೆ?” ಎಂದು ಪ್ರತ್ಯುತ್ತರವನ್ನು ಕೊಟ್ಟನು.
ಪದಾರ್ಥ (ಕ.ಗ.ಪ)
ಅಮಾನುಷ-ಸಾಮಾನ್ಯ ಮನುಷ್ಯನಿಂದ ಸಾಧ್ಯವಾಗದ, ಅರಿಕೆಯಹುದು-ತಿಳಿದುಹೋಗುತ್ತದೆ, ಕುರುಕುಲಾಗ್ರಣಿ-ಕೌರವ
ಮೂಲ ...{Loading}...
ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು ॥56॥
೦೫೭ ಉಗ್ರಕರ್ಮವ ನೆನೆಯಬೇಡ ...{Loading}...
ಉಗ್ರಕರ್ಮವ ನೆನೆಯಬೇಡ
ವ್ಯಗ್ರದಲಿ ಸಾಧಿಸಿದೆವವಧಿ ಸ
ಮಗ್ರವನು ಸಾಕಿನ್ನು ಬಿಡಿಸು ವಿರಾಟ ಭೂಪತಿಯ
ವಿಗ್ರಹವ ಜಯಿಸೆನಲು ಕುರು ಕುಲ
ದಗ್ರಿಯನು ಬೀಳ್ಕೊಂಡು ವಿಲಯ ಮ
ಹೋಗ್ರ ಸನ್ನಿಭನರೆದನಿಭ ಹಯ ರಥ ಪದಾತಿಗಳ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಧರ್ಮರಾಯನು, ಭೀಮ ನೀನು ಉಗ್ರ ಕಾರ್ಯಾಚರಣೆಗೆ ಹೋಗಬೇಡ, ನಾವು ತುಂಬ ಸಂಕಟದಿಂದಲೇ (ಅವ್ಯಗ್ರದಲಿ ಅಂದರೆ ಹೆಚ್ಚು ಸಂಕಟವಿಲ್ಲದೆ ಎಂದೂ ಆಗಬಹುದು) ವನವಾಸ ಅಜ್ಞಾತವಾಸಗಳ ಅವಧಿಯನ್ನು ಕಳೆದಿದ್ದೇವೆ. (ಈ ಕೊನೆಯ ಘಟ್ಟದಲ್ಲಿ ಇವೆಲ್ಲ ಏಕೆ ?) ನೀನು ಹೆಚ್ಚಿನದೇನನ್ನೂ ಮಾಡುವುದು ಬೇಡ. ಆ ವಿರಾಟ ಭೂಪತಿಯನ್ನು ಬಿಡಿಸಿಕೊಂಡು ಬಾ, ಯುದ್ಧದಲ್ಲಿ ಗೆಲುವನ್ನು ಪಡೆ ಎಂದು ಹೇಳಿದ. ಆಗ ಅಣ್ಣನನ್ನು ಬೀಳ್ಕೊಂಡು ಉಗ್ರ ಪ್ರಳಯಕ್ಕೆ ಸಮಾನನಾದ ಭೀಮನು ಶತ್ರುಗಳ ಮೇಲೆ ನುಗ್ಗಿ ಅವರ ರಥ ಕುದುರೆ ಕಾಲಾಳುಗಳನ್ನೆಲ್ಲ ಅರೆದುಹಾಕಿದ.
ಪದಾರ್ಥ (ಕ.ಗ.ಪ)
ವ್ಯಗ್ರ-ಖಿನ್ನ, ಕುರುಕುಲದಗ್ರಿಯನು… ಕುರುವಂಶದ ಶ್ರೇಷ್ಠನಾದ ಧರ್ಮರಾಯನನ್ನು. ಅವ್ಯಗ್ರದಲಿ=ಯೋಚನೆಯೇ ಇಲ್ಲದೆ, ವಿಲಯ ಮಹೋಗ್ರ ಸನ್ನಿಭ… ಮಹಾ ಉಗ್ರವಾದ ಪ್ರಳಯಕ್ಕೆ ಸಮಾನನಾದ (ಭೀಮ)
ಮೂಲ ...{Loading}...
ಉಗ್ರಕರ್ಮವ ನೆನೆಯಬೇಡ
ವ್ಯಗ್ರದಲಿ ಸಾಧಿಸಿದೆವವಧಿ ಸ
ಮಗ್ರವನು ಸಾಕಿನ್ನು ಬಿಡಿಸು ವಿರಾಟ ಭೂಪತಿಯ
ವಿಗ್ರಹವ ಜಯಿಸೆನಲು ಕುರು ಕುಲ
ದಗ್ರಿಯನು ಬೀಳ್ಕೊಂಡು ವಿಲಯ ಮ
ಹೋಗ್ರ ಸನ್ನಿಭನರೆದನಿಭ ಹಯ ರಥ ಪದಾತಿಗಳ ॥57॥
೦೫೮ ಸರಳ ಸಾರದಲೆಣ್ಟು ...{Loading}...
ಸರಳ ಸಾರದಲೆಂಟು ಸಾವಿರ
ತುರಗವನು ಸೀಳಿದನು ಕೊಂದನು
ಕರಿಘಟೆಯನೈನೂರ ಮುರಿದನು ತೇರು ಸಾವಿರವ
ಅರಿ ಪದಾತಿಯನೊಂದು ಲಕ್ಕವ
ನೊರೆಸಿದನು ಬೆಂಬತ್ತಿ ಬಿಡು ಬಿಡು
ದೊರೆ ವಿರಾಟನನೆನುತ ಹಿಡಿದನು ಕಲಿ ಸುಶರ್ಮಕನ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನು ತನ್ನ ಬಾಣಗಳ ಸಾಲಿನಿಂದ ಎಂಟು ಸಾವಿರ ಕುದುರೆಗಳನ್ನು ಸೀಳಿಹಾಕಿದ. ಐದು ನೂರು ಆನೆಗಳನ್ನು ವಧಿಸಿದ. ಒಂದು ಸಾವಿರ ರಥಗಳನ್ನು ಧ್ವಂಸ ಮಾಡಿದ. ಒಂದು ಲಕ್ಷದಷ್ಟು ಶತ್ರು ಯೋಧರನ್ನು ಒರೆಸಿಹಾಕಿದ. ಅನಂತರ ಸುಶರ್ಮನನ್ನು ಅಟ್ಟಿಸಿಕೊಂಡು ಹೋಗಿ “ನಮ್ಮ ದೊರೆ ವಿರಾಟನನ್ನು ಬಿಡು, ಬಿಡು” ಎಂದು ಹೇಳುತ್ತ ಹಿಡಿದುಕೊಂಡ.
ಪದಾರ್ಥ (ಕ.ಗ.ಪ)
ಸರಳ ಸಾರ-ಬಾಣಗಳ ಶ್ರೇಣಿ, ಸಾಲು, ಸೇತುವೆ, ಪದಾತಿ-ಯೋಧ, ಕಾಲಾಳು, ಲಕ್ಕ-ಒಂದು ಲಕ್ಷ
ಮೂಲ ...{Loading}...
ಸರಳ ಸಾರದಲೆಂಟು ಸಾವಿರ
ತುರಗವನು ಸೀಳಿದನು ಕೊಂದನು
ಕರಿಘಟೆಯನೈನೂರ ಮುರಿದನು ತೇರು ಸಾವಿರವ
ಅರಿ ಪದಾತಿಯನೊಂದು ಲಕ್ಕವ
ನೊರೆಸಿದನು ಬೆಂಬತ್ತಿ ಬಿಡು ಬಿಡು
ದೊರೆ ವಿರಾಟನನೆನುತ ಹಿಡಿದನು ಕಲಿ ಸುಶರ್ಮಕನ ॥58॥
೦೫೯ ವಲಲ ಮೆಚ್ಚಿದನೈ ...{Loading}...
ವಲಲ ಮೆಚ್ಚಿದನೈ ಮಹಾದೇ
ವಲಘು ಸಾಹಸಿ ತನ್ನ ಬಿಡಿಸಿದೆ
ಸಿಲುಕಿದನು ಹಗೆಯೆನುತ ಬೋಳೈಸಿದ ವಿರಾಟ ನೃಪ
ಬಳಿಕ ಯಮನಂದನನು ಬಿಡಿಸಿದ
ಕಲಿ ಸುಶರ್ಮನನಿರುಳುಗಾಳಗ
ದೊಳಗೆ ತುರು ಮರಳಿದವು ಗೆಲಿದರು ಪಾಂಡುನಂದನರು ॥59॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ವಲಲ ! ನಿನ್ನ ಪರಾಕ್ರಮಕ್ಕೆ ಮೆಚ್ಚಿದೆ ! ಮಹಾದೇವ ! ಮಹಾವೀರ ನೀನು ! ನನ್ನನ್ನು ಸೆರೆಯಿಂದ ಬಿಡಿಸಿ ಶತ್ರು ಸುಶರ್ಮನನ್ನೇ ಸೆರೆಹಿಡಿದೆಯಲ್ಲ” ಎಂದು ವಿರಾಟನು ಭೀಮನನ್ನು ಹೊಗಳಿದ. ಅನಂತರ ಧರ್ಮರಾಯನು ವಿರಾಟ ಭೀಮರಿಗೆ ಸುಶರ್ಮನನ್ನು ಬಿಟ್ಟು ಬಿಡಿ ಎಂದು ಹೇಳಿ ಬಿಡಿಸಿದ. ಹೀಗೆ ರಾತ್ರಿಯ ಕಾಳಗದಲ್ಲಿ ದನಗಳು ಹಿಂದಕ್ಕೆ ಬಂದವು. ಪಾಂಡವರು ಜಯಶಾಲಿಗಳಾದರು.
ಪದಾರ್ಥ (ಕ.ಗ.ಪ)
ಅಲಘು-ಅಲ್ಪವಲ್ಲದ, ಮಹಾ, ಬೋಳೈಸು-(ಮೆಚ್ಚು) ಸಮಾಧಾನ ಮಾಡು
ಟಿಪ್ಪನೀ (ಕ.ಗ.ಪ)
ವಲಲ - ಅಜ್ಞಾತವಾಸದ ಕಾಲದಲ್ಲಿ ಭೀಮ ಇಟ್ಟುಕೊಂಡಿದ್ದ ಹೆಸರು ವಲಲ. ವಲಲ ಎಂದರೆ ಅಡಿಗೆಯವನು ಎಂದರ್ಥ. ಅಲ್ಲದೆ ಇವನಿಗೆ ಜಯಂತ, ಪುರೋಗವ (ಅಂದರೆ ವಾಯುವಿನ ಮಗ) ಎಂಬ ಹೆಸರುಗಳೂ ಇವೆ. ಇವನು ವಿರಾಟರಾಜನ ಬಳಿಗೆ ಬಂದು
ಪೌರೋಗವೋ ಬ್ರುವಾನೋ„ಹಂ ವಲ್ಲವೋ ನಾಮ ಭಾರತ
ಉಪಸ್ಥಾಸ್ಯಾಮಿ ರಾಜಾನಂ ವಿರಾಟಮಿತಿ ಮೇ ಮತಃ
ಎಂದು ಹೇಳಿಕೊಳ್ಳುತ್ತಾನೆ. ತಾನು ಶೂದ್ರರವನು ಎಂದೂ ಹೇಳುತ್ತಾನೆ. ಅಲ್ಲದೆ ತನ್ನ ರಟ್ಟೆಯ ಸಾಮಥ್ರ್ಯವನ್ನೂ ಹೇಳಿಕೊಳ್ಳುತ್ತಾನೆ.
ದ್ವಿಪಾವಾ ಬಲಿನೋ ರಾಜನ್ ವೃಷಭಾ ವಾ ಮಹಾಬಿಲಾಃ
ವಿನಿU್ಫ್ರಹ್ಯಯದಿ ಮಯಾ ನಿU್ಪ್ರಹಿಷ್ಯಾಮಿ ತಾನ ಪಿ
ಮದ್ದಾನೆಗಳನ್ನೂ ಭಾರಿಯ ಗೂಳಿಗಳನ್ನೂ ಮಲ್ಲಯುದ್ಧಕ್ಕೆಂದು ಎದುರು ನಿಂತರವನ್ನೂ ಸಿಂಹಗಳನ್ನೂ ಸೋಲಿಸಬಲ್ಲೆನೆಂದು ಹೇಳುತ್ತಾನೆ. ತನ್ನ ಪಾಕ ಪ್ರಾವೀಣ್ಯಕ್ಕೆ ಧರ್ಮರಾಯನೇ ಮಾರುಹೋಗಿದ್ದನೆಂದು ಹೇಳುತ್ತಾನೆ.
ಪಾಕಶಾಲೆಯ ಅಧ್ಯಕ್ಷನಾಗಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದವನು ವಲಲ. ಇವನ ಮನಮೋಹಕವಾದ ಮೈಕಟ್ಟು ಎಲ್ಲರನ್ನೂ ಆಕರ್ಷಿಸಿತ್ತು. ಅಂತಃಪುರದ ನಾರಿಯರಿಗೆ ಇವನ ಮೇಲೆ ಸ್ವಲ್ಪ ಅಸೂಯೆ ಕೂಡ ಇತ್ತಂತೆ! ಆದ್ದರಿಂದ ಅವರು ವಲಲನ ಬಗೆಗೆ ಗುಟ್ಠಾಗಿ ಪಿಸುಗುಟ್ಟಿಕೊಳ್ಳುತ್ತಿದ್ದುದು ಉಂಟು. ಈ ಚಾಡಿಯ ಪ್ರತಿಭಾವಂತರು ವಿಚಿತ್ರರೀತಿಯಲ್ಲಿ ಸೈರಂಧ್ರಿಗೂ ವಲಲನಿಗೂ ಗಂಟುಹಾಕುತ್ತಿದ್ದರು. ಅವರುಗಳು ‘‘ದ್ರೌಪದಿಯು ಮಹಾಸುಂದರಿ. ವಲಲ ಕೂಡ ಎಲ್ಲರ ಮನಸ್ಸು ಸೆಳೆಯುವಂತಿದ್ದಾನೆ. ಇವರಿಬ್ಬರೊಳಗೆ ಸಂಬಂಧವಿದ್ದರೂ ಇದ್ದೀತು’’ ಎಂದು ಮಾತಾಡಿಕೊಂಡದ್ದೇ ಇದಕ್ಕೆ ಸಾಕ್ಷಿ.
ಸೈರಂಧ್ರಿಯನ್ನು ಕೀಚಕನು ರಾಜಸಭೆಯಲ್ಲಿಯೇ ಅವಮಾನಿಸಿದಾಗ ಭೀಮ ಮೂಲೆಯಲ್ಲಿ ಬೆಳೆದು ನಿಂತಿದ್ದ ಮರದ ಕಡೆಗೆ ಸಿಟ್ಟಿನಿಂದ ನೋಡಿದನಂತೆ! ಇವನು ಮರದ ಕೊಂಬೆಯನ್ನೇ ಕಿತ್ತು ಕೀಚಕನನ್ನು ಕೊಂದರೆ ತಮ್ಮ ಗುರುತನ್ನು ಕೌರವರು ಪತ್ತೆ ಹಚ್ಚಬಹುದೆಂಬ ಹೆದರಿಕೆ ಧರ್ಮರಾಯನಿಗೆ. ಅದಕ್ಕೆ ಶ್ಲೇಷೆಯಲ್ಲಿ ತಮ್ಮನಿಗೆ ಹೇಳುತ್ತಾನೆ. ಆಲೋಕಯಸಿ ಕಿಂ ವೃಕ್ಷಂ ಸೂದ ದಾರು ಕೃತೇನವೈ
ಯದಿ ತೇ ದಾರುಭಿಃ ಕೃತ್ಯಂ ಬಹಿರ್ವೃಕ್ಷಂ ನಿಗೃಹ್ಯತಾಂ
ಅಂದರೆ ಕೀಚಕ ಎಂಬ ವೃಕ್ಷವನ್ನು ಅರಮನೆಯ ರಾಜಸಭೆಯಲ್ಲಿ ಕೊಲ್ಲುವುದು ಬೇಡ. ಊರ ಹೊರಗೆ ಈ ಕೆಸಲ ಮಾಡಿಕೊ ಎಂಬ ಸೂಚನೆ ಇಲ್ಲಿದೆ.
ವಲಲನು ರಾಜನ ಮತ್ತು ಪರಿವಾರದವರ ಸಂತೋಷಕ್ಕೆ ಆನೆಗಳೊಂದಿಗೆ ಸಿಂಹ ಗೂಳಿಗಳೊಂದಿಗೆ ಸೆಣಸಾಡಿದ್ದೂ ಉಂಟು. ಜೀಮೂತನೆಂಬ ಮಹಾಮಲ್ಲನೊಬ್ಬನು ಬಂದಾಗ ಅವನನ್ನು ಎದುರಿಸಲು ಯಾರಿಗೂ ಸಾಧ್ಯವಾಗದೆ ವಿರಾಟನು ಸಂಕಟಪಡುತ್ತಿದ್ದಾಗ ಭೀಮನೇ ಮುಂದೆ ಬಂದು ಆ ಜಟ್ಟಿಯನ್ನು ಕೊಂದದ್ದು ಪುಣ್ಯಕ್ಕೆ ದೊಡ್ಡ ಸುದ್ದಿಯಾಗಲಿಲ್ಲ.
ವಲಲನು ಕೀಚಕನನ್ನು ಕೊಂದದ್ದು ಮಹಾಭಾರತದಲ್ಲಿ ಒಂದು ಪ್ರಸಿದ್ಧ ಘಟನೆ. ಕೀಚಕನು ಸೈರಂಧ್ರಿಯನ್ನು ಕಾಮಿಸಿದ್ದು, ಸೈರಂಧ್ರಿ ಭೀಮನ ಬಳಿಗೆ ಬಂದು ದೂರುಹೇಳಿದ್ದು, ಕೀಚಕನ ಗುರುತು ಕೂಡ ಸಿಕ್ಕದಂತೆ ವಲಲನು ಅವನನ್ನು ಕೊಂದದ್ದು ಇವೆಲ್ ವಿರಾಟಪರ್ವದ ಕುತೂಹಲಕಾರಿ ದೃಶ್ಯಗಳು.
ಕೀಚಕನು ಸತ್ತಮೇಲೆ ತ್ರಿಗರ್ತರು ಗೋಗ್ರಹಣ ಮಾಡಿದಾಗ ಕಂಕಭಟ್ಟನ ಆಜ್ಞೆಯಂತೆ ಭೀಮನು ಯುದ್ಧದಲ್ಲಿ ಭಾಗವಹಿಸಿ ತ್ರಿಗರ್ತರನ್ನು ಸದೆಬಡಿದು ವಿರಾಟನ ಗೋವುಗಳನ್ನು ಬಿಡಿಸಿಕೊಂಡು ಬಂದದ್ದು ಇನ್ನೊಂದು ರೋಚಕ ಘಟನೆಯಾಗಿದೆ.
ಗುಪ್ತವೇಷದಲ್ಲಿದ್ದಾಗ ಕೂಡ ಭೀಮನು ತನ್ನ ಸಾಹಸೀ ಕೃತ್ಯಗಳನ್ನು ಮೆರೆದದ್ದು ಅವನ ಕ್ರಿಯಾಶೀಲತೆಯ ಗುರುತಾಗಿದೆ.ಅಜ್ಞಾತವಾಸದ ಕಾಲದಲ್ಲಿ ಭೀಮ ಇಟ್ಟುಕೊಂಡಿದ್ದ ಹೆಸರು ವಲಲ. ವಲಲ ಎಂದರೆ ಅಡಿಗೆಯವನು ಎಂದರ್ಥ. ಅಲ್ಲದೆ ಇವನಿಗೆ ಜಯಂತ, ಪುರೋಗವ (ಅಂದರೆ ವಾಯುವಿನ ಮಗ) ಎಂಬ ಹೆಸರುಗಳೂ ಇವೆ. ಇವನು ವಿರಾಟರಾಜನ ಬಳಿಗೆ ಬಂದು
ಮೂಲ ...{Loading}...
ವಲಲ ಮೆಚ್ಚಿದನೈ ಮಹಾದೇ
ವಲಘು ಸಾಹಸಿ ತನ್ನ ಬಿಡಿಸಿದೆ
ಸಿಲುಕಿದನು ಹಗೆಯೆನುತ ಬೋಳೈಸಿದ ವಿರಾಟ ನೃಪ
ಬಳಿಕ ಯಮನಂದನನು ಬಿಡಿಸಿದ
ಕಲಿ ಸುಶರ್ಮನನಿರುಳುಗಾಳಗ
ದೊಳಗೆ ತುರು ಮರಳಿದವು ಗೆಲಿದರು ಪಾಂಡುನಂದನರು ॥59॥
೦೬೦ ನೀವೆಯರಸುಗಳಿನ್ನು ನಿಮ್ಮಯ ...{Loading}...
ನೀವೆಯರಸುಗಳಿನ್ನು ನಿಮ್ಮಯ
ಸೇವೆಯಲಿ ತಾನಿಹೆನು ನಾಲ್ವರಿ
ದಾವ ದೇಶದ ವೀರರೋ ಕಂಕಾದಿ ಭಟರೆನುತ
ಆ ವಿರಾಟನು ನುಡಿಯೆ ಸನ್ಮಾ
ನಾವಲಂಬಕೆ ತುಷ್ಟನಾದೆನು
ಭಾವಿಪೊಡೆ ಧರೆ ನಮ್ಮದೆಂದನು ಧರ್ಮನಂದನನು ॥60॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಾಟನು “ಈಗ ನೀವೇ ರಾಜರುಗಳು. ನಾನು ನಿಮ್ಮ ಸೇವೆ ಮಾಡಿಕೊಂಡು ಇರುತ್ತೇನೆ. ಮಹಾನುಭಾವರಾದ ಕಂಕ ಮೊದಲಾದ ನೀವು ನಾಲ್ವರೂ ಯಾವ ದೇಶದ ವೀರರೋ !” ಎಂದು ಮೆಚ್ಚಿಗೆ ವ್ಯಕ್ತ ಪಡಿಸಿದ. ಆಗ ಧರ್ಮರಾಯನು “ದೊರೆ ! ನಿಮ್ಮ ಸನ್ಮಾನ ಆಶ್ರಯಗಳಿಂದ ನಮಗೆ ತೃಪ್ತಿಯಾಗಿದೆ. ಹೌದು ಈ ಭೂಮಿ ನಮ್ಮದೆ” ಎಂದು ನಗುತ್ತ ಹೇಳಿದ. (ಶ್ಲೇಷೆಯಿಂದ ಧರ್ಮರಾಯ ತನ್ನ ನೈಜ ವಿಷಯವನ್ನು ತಿಳಿಸಿದ್ದಾನೆ)
ಟಿಪ್ಪನೀ (ಕ.ಗ.ಪ)
ಸನ್ಮಾನಾವಲಂಬನ-ನಮ್ಮನ್ನು ಆಶ್ರಯಿಸಿದ್ದು ಆಶ್ರಯ ನೀಡಿದ್ದು ನಮಗೆ ಸನ್ಮಾನ ಮಾಡಿದ್ದು (ಈಗ ವಿರಾಟನು ಧರ್ಮರಾಯನನ್ನು ಆಶ್ರಯಿಸಿ ಸ್ವತಂತ್ರನಾದ ವಿಷಯ ಇಲ್ಲಿದೆ) ತಾವು ಮೂವರನ್ನು ವಿರಾಟನು ನಂಬಿ ಆಶ್ರಯಿಸಿದ್ದು, ಮತ್ತು ಈಗ ಸನ್ಮಾನಿಸುತ್ತಿರುವುದು ಎರಡೂ ಧರ್ಮರಾಯನಿಗೆ ಸಂತೋಷ ತಂದಿದ್ದುವು.
ಮೂಲಭಾರತದಲ್ಲಿ ಪ್ರೀತನಾದ ವಿರಾಟನು “ಏಹಿತ್ವಾಮಭಿಷೇಕ್ಷ್ಯಾಮಿ ಮತ್ಸ್ಯರಾಜಸ್ತು ನೋ ಭವಾನ್” (“ಬಾ ನಿನಗೆ ರಾಜ್ಯಾಭಿಷೇಕ ಮಾಡುತ್ತೇನೆ. ನಮಗೆ ನೀನೇ ಮತ್ಸ್ಯರಾಜ) ಎಂದು ವಿನಯವನ್ನು ಮೆರೆದಿದ್ದಾನೆ. “ನನ್ನ ಸರ್ವಸ್ವವೂ ನಿನ್ನದೇ” ಎನ್ನುತ್ತಾನೆ.
ಮೂಲ ...{Loading}...
ನೀವೆಯರಸುಗಳಿನ್ನು ನಿಮ್ಮಯ
ಸೇವೆಯಲಿ ತಾನಿಹೆನು ನಾಲ್ವರಿ
ದಾವ ದೇಶದ ವೀರರೋ ಕಂಕಾದಿ ಭಟರೆನುತ
ಆ ವಿರಾಟನು ನುಡಿಯೆ ಸನ್ಮಾ
ನಾವಲಂಬಕೆ ತುಷ್ಟನಾದೆನು
ಭಾವಿಪೊಡೆ ಧರೆ ನಮ್ಮದೆಂದನು ಧರ್ಮನಂದನನು ॥60॥
೦೬೧ ಮಾನಭಙ್ಗದ ಮೇಲೆ ...{Loading}...
ಮಾನಭಂಗದ ಮೇಲೆ ಕೌರವ
ಸೇನೆ ಸರಿಯೆ ಸುಶರ್ಮ ಕಡು ದು
ಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ
ಭಾನು ಭುವನದ ಜನದ ನಿದ್ರಾ
ಮೌನ ಮುದ್ರೆಯನೊಡೆದನುತ್ತರ
ಧೇನು ವಿಗ್ರಹಣವನು ಮಾಡಿದನಂದು ಕುರುರಾಯ ॥61॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವಮಾನಗೊಂಡು ಕೌರವ ತ್ರಿಗರ್ತರ ಸೇನೆ ಹಿಂದಕ್ಕೆ ಸರಿಯಿತು. ಸೆರೆಯಿಂದ ಬಿಡುಗಡೆಹೊಂದಿ ತುಂಬ ದುಃಖದಿಂದ ತಲೆಯ ಮೇಲೆ ಮುಸುಕು ಎಳೆದುಕೊಂಡು ಸುಶರ್ಮನು ತನ್ನ ಶಿಬಿರಕ್ಕೆ ಹಿಂತಿರುಗಿದ. ಮುಂದೆ ಪ್ರಭಾತವಾಯಿತು. ಸೂರ್ಯನು ಲೋಕದ ಜನರ ನಿದ್ರಾ ಮೌನದ ಮುದ್ರೆಯನ್ನು ಒಡೆದ. ಆ ಕಡೆ ಮರುದಿನ ಕೌರವನು ಉತ್ತರಗೋಗ್ರಹಣ (ಅಂದರೆ ಉತ್ತರದ ಕಡೆಯಿಂದ ದನಗಳನ್ನು ಸೆರೆಹಿಡಿಯುವುದು ಕೆಲಸ) ಮಾಡಿದ.
ಪದಾರ್ಥ (ಕ.ಗ.ಪ)
ದುಮ್ಮಾನ-ದುಗುಡ, ಸಂಕಟ, ಭಾನು-ಸೂರ್ಯ, ಭುವನದ ಜನದ ನಿದ್ರಾ ಮೌನ ಮುದ್ರೆಯನೊಡೆದು… ಬೆಳಗಾಯಿತು ಎಂಬುದನ್ನು ಈ ನುಡಿ ವಿಶೇಷಣ ಸೂಚಿಸುತ್ತದೆ. ಲೋಕದ ಮಂದಿಯು ನಿದ್ರೆ ಮಾಡುತ್ತ ಮೌನವಾಗಿದ್ದರಲ್ಲ. ಸೂರ್ಯನ ಬೆಳಕು ಆ ಮೌನವನ್ನು ಒಡೆದು ಅವರೆಲ್ಲ ಚಟುವಟಿಕೆಯನ್ನು ಆರಂಭಿಸುತ್ತಾರೆಂಬ ಧ್ವನಿ.
ಮೂಲ ...{Loading}...
ಮಾನಭಂಗದ ಮೇಲೆ ಕೌರವ
ಸೇನೆ ಸರಿಯೆ ಸುಶರ್ಮ ಕಡು ದು
ಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ
ಭಾನು ಭುವನದ ಜನದ ನಿದ್ರಾ
ಮೌನ ಮುದ್ರೆಯನೊಡೆದನುತ್ತರ
ಧೇನು ವಿಗ್ರಹಣವನು ಮಾಡಿದನಂದು ಕುರುರಾಯ ॥61॥