೦೪

೦೦೦ ಸೂ ವಿಗ್ರಹಕೆ ...{Loading}...

ಸೂ. ವಿಗ್ರಹಕೆ ಸಮತಳಿಸಿ ಕುರುಕುಲ
ದಗ್ರಣಿಯ ಮುಂಕೊಂಡು ದಕ್ಷಿಣ
ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ದೂತರವನಿಯ
ಮೇಲೆ ತೊಳಲುತಲರಸಿ ಕಾಣದೆ ಪಾಂಡುನಂದನರ
ಹೋಲುವಿಕೆಯಿಂಬಿಡಿಯಲಾರದೆ
ಕಾಲ ಸವೆಯಲು ನಾಲ್ಕು ದಿಕ್ಕಿನ
ಮೂಲೆಯವರೈತಂದು ಬಿನ್ನವಿಸಿದರು ಕುರುಪತಿಗೆ ॥1॥

೦೦೨ ವಿತಳದೊಳು ಹೊಕ್ಕಿರಲಿಯಮರಾ ...{Loading}...

ವಿತಳದೊಳು ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು ॥2॥

೦೦೩ ಎನಲು ನಸುನಗುತರಸ ...{Loading}...

ಎನಲು ನಸುನಗುತರಸ ಮನದಲಿ
ತನಗೆ ಹಗೆಯಿಲ್ಲೆಂದು ದೂತರ
ಮನವೊಲಿದು ಮನ್ನಿಸಿದ ನಾಲುಕು ಕಡೆಯ ವಾರ್ತೆಗಳ
ತನತನಗೆ ಮಂತ್ರಿಗಳು ಬೆಸಗೊಳ
ಲನಿತು ದೂತರೊಳೊಬ್ಬ ಕೀಚಕ
ಹನನವನು ವಿಸ್ತರಿಸಿದನು ಕುರುರಾಯನಿದಿರಿನಲಿ ॥3॥

೦೦೪ ಒನ್ದು ವಾರ್ತೆಯಲಾ ...{Loading}...

ಒಂದು ವಾರ್ತೆಯಲಾ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ ॥4॥

೦೦೫ ಹೇಳು ಹೇಳಿನ್ನೊಮ್ಮೆ ...{Loading}...

ಹೇಳು ಹೇಳಿನ್ನೊಮ್ಮೆ ಮತ್ಸ್ಯನ
ತೋಳು ಮುರಿದುದೆ ಸುಭಟರೊಳು ಕ
ಟ್ಟಾಳು ಕೀಚಕ ಮಡಿದನೇ ಗಂಧರ್ವರಿರಿದವರೆ
ಮೇಲಣವರಿಗೆ ಮತ್ರ್ಯರಿಗೆ ಕೈ
ಕಾಲು ಮೆಟ್ಟಿನ ತೋಟಿಯೇತಕೆ
ಹೋಲದೋ ಹುಸಿ ಹೋಗೆನುತ ಮುಖದಿರುಹಿದನು ಭೂಪ ॥5॥

೦೦೬ ಅಹುದು ಜೀಯವಧರಿಸು ...{Loading}...

ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದಲ್ಲಿ ಸತಿಯಿರಲು
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹವ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ ॥6॥

೦೦೭ ಅವನಿಪತಿ ಮೂಗಿನಲಿ ...{Loading}...

ಅವನಿಪತಿ ಮೂಗಿನಲಿ ಕರ ಪ
ಲ್ಲವವನಿಟ್ಟನು ತಲೆಯ ತೂಗಿದ
ನವಳು ದುರುಪದಿ ಖಳರ ಕೊಂದವ ಭೀಮ ಗಂಧರ್ವ
ದಿವಿಜ ಸತಿಯೆತ್ತಲು ವಿರಾಟನ
ಭವನದೋಲಗವೆತ್ತಲದು ಪಾಂ
ಡವರ ಕೃತ್ರಿಮ ತಂತ್ರ ಮರೆಯಿರಿಗಾರರವರೆಂದ ॥7॥

೦೦೮ ಪರಿಮಳವ ಕದ್ದೋಡುವನಿಲನ ...{Loading}...

ಪರಿಮಳವ ಕದ್ದೋಡುವನಿಲನ
ಹರಿವ ಹೆಜ್ಜೆಯ ಹತ್ತುವರೆ ಮಧು
ಕರನೆ ಬಲ್ಲುದು ಜೀಯ ಬಲ್ಲಿರಿ ನಿಮ್ಮವರ ಪರಿಯ
ಹರದ ಮಾತಿನ ಹದನು ಬಳಿಕಾ
ಚರರಿಗಿದು ಗೋಚರಿಸುವುದೆಯೆಂ
ದರಸನನು ಕೊಂಡಾಡಿದರು ಮಂತ್ರಿಗಳು ತವತವಗೆ ॥8॥

೦೦೯ ಪ್ರೌಢಿಯಲ್ಲಿದು ಕೇಳಿ ...{Loading}...

ಪ್ರೌಢಿಯಲ್ಲಿದು ಕೇಳಿ ಬಲ್ಲೆವು
ರೂಢಿಯಲಿ ಸಮಬಲರು ಭೀಮ ಸ
ಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬವರು
ಗೂಢರನು ಗರುವಾಯಿಗೆಡಿಸಿಯೆ
ಗಾಢಿಕೆಯ ನೆರೆ ಮೆರೆಯಬೇಕೆನೆ
ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕೆಂದ ॥9॥

೦೧೦ ಕರೆಸಿದನು ಗಾಙ್ಗೇಯ ...{Loading}...

ಕರೆಸಿದನು ಗಾಂಗೇಯ ಗರುಡಿಯ
ಗುರುವನಶ್ವತ್ಥಾಮ ಸೃಂಜಯ
ವರ ಕೃಪಾಚಾರಿಯನ ಸೈಂಧವ ಸೂರ್ಯನಂದನನ
ಬರಿಸಿದನು ತೆಂಕಣದ ದಿಗುತಟ
ದರಸುಗಳ ದೆಸೆಯಿಂದ ಬೇಹಿನ
ಚರರು ಬಂದರು ಕೇಳಿರೈ ಹೊಸ ವಾರ್ತೆಯೆನುಯೆಂದ ॥10॥

೦೧೧ ಭೀಮ ಕೀಚಕ ...{Loading}...

ಭೀಮ ಕೀಚಕ ಶಲ್ಯನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು ॥11॥

೦೧೨ ಮಾತು ಹೋಲುವೆಯಹುದು ...{Loading}...

ಮಾತು ಹೋಲುವೆಯಹುದು ನುಡಿದುದು
ನೀತಿ ಧರ್ಮಜನಿದ್ದ ದೇಶ
ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು
ಬೀತ ಬನವಲ್ಲಿಲ್ಲ ಹುಸಿ ಕೊಲೆ
ಪಾತಕಾದಿಗಳಿಲ್ಲ ಸೊಂಪಿನ
ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ ॥12॥

೦೧೩ ಎಲ್ಲಿ ಲಕ್ಷ್ಮಿಯ ...{Loading}...

ಎಲ್ಲಿ ಲಕ್ಷ್ಮಿಯ ಬೀಡು ಧರಣಿಯೊ
ಳೆಲ್ಲಿ ಸೊಂಪಿನ ನಾಡು ನಗರದೊ
ಳೆಲ್ಲಿ ವಿಭವದ ಕಡಲು ಶೈತ್ಯದ ಸಾರ ಸೌರಂಭ
ಎಲ್ಲಿ ನೆಲಸಿಹುದಲ್ಲಿ ಪಾಂಡವ
ರಿಲ್ಲದಿರರಿನ್ನವರ ನೆಲೆಗಾ
ಬಲ್ಲಿ ಸಂಶಯವಿಲ್ಲವೆಂದನು ಭೀಷ್ಮ ನಸುನಗುತ ॥13॥

೦೧೪ ಅತ್ತ ಹಿಮಗಿರಿ ...{Loading}...

ಅತ್ತ ಹಿಮಗಿರಿ ಮೇರೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ
ಹೊತ್ತಿ ಹೊಗೆದವು ಮಧ್ಯದೇಶದ
ಲುತ್ತಮದ ಸಿರಿ ಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ ॥14॥

೦೧೫ ಅವಧಿ ತುಮ್ಬದ ...{Loading}...

ಅವಧಿ ತುಂಬದ ಮುನ್ನಲೀ ಪಾಂ
ಡವರ ಕಾಣಿಸಿಕೊಂಬ ಮತ್ತಂ
ತವರು ಸತ್ಯಕೆ ನಡೆಯಬೇಹುದು ಮುನ್ನಿನಂದದಲಿ
ಅವರ ನೆಲೆಗಾಣಿಸುವ ಮಂತ್ರದ
ಹವಣನರುಪುವೆನೆಂದು ರವಿಸುತ
ನವನಿಪಗೆ ನಸುನಗುತ ನುಡಿದನು ರಾಜಕಾರಿಯವ ॥15॥

೦೧೬ ರಾಜಮನ್ದಿರದೊಳಗೆ ನೀತಿಗ ...{Loading}...

ರಾಜಮಂದಿರದೊಳಗೆ ನೀತಿಗ
ಳೋಜೆಯಿಲ್ಲದ ಸಚಿವರಿಂ ನಿ
ವ್ರ್ಯಾಜದಲಿ ಕೇಡಹುದು ತಪ್ಪದು ಲೋಕವಾರ್ತೆಯಿದು
ಗಾಜು ಕೇವಣಿಸಿದರೆ ರಜತದ
ರಾಜಭೂಷಣವಹುದೆ ಕರ್ಣನ
ಬೀಜಮಂತ್ರಗಳಿಂದ ಕೇಡಹುದೆಂದನಾ ಭೀಷ್ಮ ॥16॥

೦೧೭ ಅವರು ಸತ್ಯಕೆ ...{Loading}...

ಅವರು ಸತ್ಯಕೆ ನಡೆವರಲ್ಲದೆ
ಬವರಕಂಜುವರಲ್ಲ ಪಾಂಡವ
ರವಧಿ ಬೀಳ್ಕೊಳ ಬಂದುದೈ ನೀ ಸಮಯದೊಳು ಕರೆಸಿ
ಅವರ ಧರಣಿಯನವರಿಗಿತ್ತರೆ
ನಿವಗನಿಷ್ಟತೆಯಿಲ್ಲ ಕೇಳೆಲೆ
ಅವನಿಪತಿಯೆಂದೆನುತ ನುಡಿದನು ಮತ್ತೆ ಗಾಂಗೇಯ ॥17॥

೦೧೮ ನನ್ನಿ ನಿಮ್ಮಯ ...{Loading}...

ನನ್ನಿ ನಿಮ್ಮಯ ನುಡಿಯ ಕೈಕೊಂ
ಡೆನ್ನ ಭೂಮಿಯನೀಯೆನಯ್ಯನ
ಬನ್ನಣೆಯ ಮಾತಿನ್ನು ಕೊಳ್ಳದು ಸಾಕು ಸಂಧಿಯನು
ಮನ್ನಿಸುತ ಮರುಳಾದೆನೀ ನಿ
ಷ್ಪನ್ನತೆಯ ಬೀಳ್ಕೊಂಡ ಪಾಂಡವ
ಗುನ್ನಿಗಳ ಗರುವಾಯ ಮಾಡುವಿರೆಂದು ಖಳ ನುಡಿದ ॥18॥

೦೧೯ ಅರಿ ವಿರಾಟನ ...{Loading}...

ಅರಿ ವಿರಾಟನ ಪುರಕೆ ಹಾಯಿದು
ತುರು ಸೆರೆಯ ತೆಗೆಸುವೆವು ಪಾಂಡವ
ರಿರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು
ಅರವರಿಸದಂಗೈಸುವರು ನಾ
ವರಿದು ಕೊಂಬೆವು ಬಳಿಕ ವನದಲಿ
ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ ॥19॥

೦೨೦ ಒಳ್ಳಿತಿದು ನಿರ್ದೋಷ ...{Loading}...

ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯವನರಿವುಪಾಯಕೆ ಬೇರೆ ಠಾವಿಲ್ಲ
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲ್ಲಿಯೂ ಹಿರಿದಿಲ್ಲ ನಿಶ್ವಯವೆಂದನಾ ಕರ್ಣ ॥20॥

೦೨೧ ಗುರುವಿನಭಿಮತವಹಡೆ ಕೃಪ ...{Loading}...

ಗುರುವಿನಭಿಮತವಹಡೆ ಕೃಪ ಮೊಗ
ದಿರುಹದಿದ್ದೊಡೆ ಭೀಷ್ಮ ಮನದಲಿ
ಮುರಿಯದಿರ್ದೊಡೆ ಗುರುಕುಮಾರನ ಮತಕೆ ಸೇರುವೊಡೆ
ವರ ಶಕುನಿಯಹುದೆಂದೊಡಾ ಸೋ
ದರರು ತಪ್ಪಲ್ಲೆಂದರಾದೊಡೆ
ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು ॥21॥

೦೨೨ ಮತವಹುದು ತಪ್ಪಲ್ಲ ...{Loading}...

ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ ॥22॥

೦೨೩ ಪರಿಗಣಿಸಿ ನೋಡಿದೊಡೆ ...{Loading}...

ಪರಿಗಣಿಸಿ ನೋಡಿದೊಡೆ ಮಾಡಿದ
ವರುಷ ತತಿಯೊಳು ಹೆಚ್ಚು ಕುಂದುಂ
ಟುರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ
ಅರಿಯಲೇ ಬೇಕಾವ ಪರಿಯಿಂ
ದರಿದೆವಾದೊಡೆಯುತ್ತರೋತ್ತರ
ಧರಣಿ ಕುರುಪತಿಗೆಂದರಾ ದ್ರೋಣಾದಿ ನಾಯಕರು ॥23॥

೦೨೪ ಬೀಡು ನಡೆಯಲಿ ...{Loading}...

ಬೀಡು ನಡೆಯಲಿ ಮುಂದೆ ಮತ್ಸ್ಯನ
ನಾಡಿನೊಳು ತಟವಾಯ್ದ ದೂತರು
ಕೂಡೆ ಸಾರಲಿ ಕರೆಯಲಕ್ಷೋಹಿಣಿಯ ನಾಯಕರ
ಜೋಡಿಸಲಿ ಗುಡಿ ದಡ್ಡಿಚಂಪೆಯ
ಗೂಡಿ ಕೊಟ್ಟಿಗೆ ಬಂಡಿ ನಡೆಯಲಿ
ನಾಡ ಬಿಟ್ಟಿಗಳೆಂದು ಕೌರವರಾಯ ನೇಮಿಸಿದ ॥24॥

೦೨೫ ಹರಿದುದೋಲಗ ಮರುದಿವಸ ...{Loading}...

ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾ ಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವಂಟರೊಗ್ಗಿನಲಿ ॥25॥

೦೨೬ ಮೋಹರವ ಮೇಳೈಸಿದನು ...{Loading}...

ಮೋಹರವ ಮೇಳೈಸಿದನು ನಿ
ರ್ವಾಹವನು ನಿಶ್ಚೈಸಿದನು ಮ
ತ್ತೂಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ
ಸಾಹಸರನಟ್ಟಿದನು ವೈರಿಗ
ಳಾಹವಕೆ ನೆಲನಗಲದಲಿ ಬಲ
ಮೋಹಿಸಿತು ನೆರಸಿದನು ಬಹಳಾಕ್ಷೋಹಿಣೀ ಬಲವ ॥26॥

೦೨೭ ಕರಿಗಳಿಗೆ ಗುಳ ...{Loading}...

ಕರಿಗಳಿಗೆ ಗುಳ ಬೀಸಿದವು ವರ
ತುರಗ ಹಲ್ಲಣಿಸಿದವು ತೇಜಿಯ
ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು
ಅರಸನಿದಿರಲಿ ಮೋಹಿದುದು ಸೀ
ಗುರಿಯ ಸಬಳದ ಸಾಲಿನೊಳಗಂ
ಬರವ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ ॥27॥

೦೨೮ ಆರತಿಗಳೆತ್ತಿದವು ತಳಿದು ...{Loading}...

ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನ ರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾ ನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ ॥28॥

೦೨೯ ಹೊಗೆದುದಮ್ಬರವವನಿ ನಡುಗಿತು ...{Loading}...

ಹೊಗೆದುದಂಬರವವನಿ ನಡುಗಿತು
ಗಗನಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದವರುಣಾಂಬುಗಳ ಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ ॥29॥

೦೩೦ ಪಳಹರದ ಪಲ್ಲವದ ...{Loading}...

ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಿಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ ॥30॥

೦೩೧ ರಾಯದಳ ನಡೆಗೊಣ್ಡುದೊಗ್ಗಿನ ...{Loading}...

ರಾಯದಳ ನಡೆಗೊಂಡುದೊಗ್ಗಿನ
ನಾಯಕರು ಮನ್ನೆಯರು ರಾಜ ಪ
ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ
ತಾಯಿಮಳಲುಬ್ಬಳಿಸೆ ಜಲನಿಧಿ
ಬಾಯಬಿಡೆ ಗರ್ಜಿಸುವ ನಿಸ್ಸಾ
ಳಾಯತದ ಸೂಳೊದಗೆ ಪಯಣದ ಮೇಲೆ ಪಯಣದಲಿ ॥31॥

೦೩೨ ಸೆಳೆವ ಸಿನ್ಧದ ...{Loading}...

ಸೆಳೆವ ಸಿಂಧದ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳಿರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ ॥32॥

೦೩೩ ಪೊಡವಿ ಜಡಿದುದು ...{Loading}...

ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾ ದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆ ವರೆಗಳಲಿ
ಕಡಲು ಮೊಗೆದುದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ ॥33॥

೦೩೪ ಪ್ರಳಯಪಟು ಜಲರಾಶಿ ...{Loading}...

ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳಿಯೀ ಕಳ
ಕಳಿಕೆಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ ॥34॥

೦೩೫ ಎರಡು ಮೋಹರವಾಗಿ ...{Loading}...

ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತನನು ಕಳುಹಿ
ಹುರಿಯೊಡೆದು ಹದಿನಾರು ಸಾವಿರ
ವರ ಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ಧಾಳಿಯಿಟ್ಟನು ತೆಂಕ ದೆಸೆಗಾಗಿ ॥35॥

೦೩೬ ಅಸಿತ ಪಕ್ಷಾಷ್ಟಮಿಯ ...{Loading}...

ಅಸಿತ ಪಕ್ಷಾಷ್ಟಮಿಯ ದಿನ ಸಂ
ಧಿಸಿದರಾಳೆದ್ದುದು ವಿರಾಟನ
ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ
ಹೊಸ ಮುಖಕೆ ಸೀವರಿಸಿದವು ದೆಸೆ
ದೆಸೆಗೆ ಹಿಂಡುಗಳೊಡೆದು ಹಾಯ್ದವು
ಮಸಗಿತಂಬಾ ರವದ ಕಳವಳವಾಯ್ತು ನಿಮಿಷದಲಿ ॥36॥

೦೩೭ ಆಳು ಸುತ್ತಲು ...{Loading}...

ಆಳು ಸುತ್ತಲು ಕಟ್ಟಿ ತುರುಗಳ
ಕೋಳಹಿಡಿದರು ಬೊಬ್ಬಿರಿದು ಗೋ
ಪಾಲರಾಂತರೆ ಕಾದಿದರು ಕಡಿಖಂಡಮುಯವಾಗೆ
ಮೇಲೆ ಮೇಲೈತಪ್ಪ ಹೆಬ್ಬಲ
ದಾಳು ಕುದುರೆಯ ಕಂಡು ನೂಕದು
ಕಾಳಗವು ತಮಗೆನುತ ತಿರುಗಿತು ಗೋವರುಳಿದವರು ॥37॥

೦೩೮ ಮಿಸುಪ ಕಮ್ಬಳಿಕೊಮ್ಬು ...{Loading}...

ಮಿಸುಪ ಕಂಬಳಿಕೊಂಬು ಕಲ್ಲಿಯ
ಬಿಸುಟು ಗಾಯದಿ ಗೋವಳರು ಹೊ
ತ್ತಸುವ ಕೊರಳಲಿ ಹಿಡಿದು ನಾಲಗೆಯೊಣಗಿ ಢಗೆ ಹೊಯ್ದು
ವಿಷಮ ರಣಭೀತಿಯಲಿ ಕಂದಿದ
ಮುಸುಡ ತೊದಲಿನ ನುಡಿಯ ಮರಣದ
ದೆಸೆಯ ಕೈಸನ್ನೆಗಳ ಕಾತರರೈದಿದರು ಪುರವ ॥38॥

೦೩೯ ಬಸಿವ ನೆತ್ತರ ...{Loading}...

ಬಸಿವ ನೆತ್ತರ ಗೋವರರಸಂ
ಗುಸುರಲಾರದೆ ಧೊಪ್ಪನಡಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶು ಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ ॥39॥

೦೪೦ ಕೇಳಿ ಬಿಸುಸುಯ್ದನು ...{Loading}...

ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ ॥40॥

೦೪೧ ಕೇಳಿ ಸಿಡಿಲೇಳಿಗೆಯಲೆದ್ದು ...{Loading}...

ಕೇಳಿ ಸಿಡಿಲೇಳಿಗೆಯಲೆದ್ದು ನೃ
ಪಾಲಕರು ಗಜಬಜಿಸಿ ರಭಸದೊ
ಳೋಲಗವ ಹೊರವಂಟು ನಡೆದರು ಭಾಷೆಗಳ ಕೊಡುತ
ಆಳು ಕೈದುವ ಕೊಂಡು ಕರಿಘಟೆ
ಮೇಳವಿಸಿ ಹಲ್ಲಣಿಸಿ ತೇಜಿಗ
ಳೋಳಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ ॥41॥

೦೪೨ ಇವರು ತಮ್ಮೊಳಗೆನ್ದರದು ...{Loading}...

ಇವರು ತಮ್ಮೊಳಗೆಂದರದು ನ
ಮ್ಮವರ ಬಲ ತುರುಗೊಂಡವರು ಕೌ
ರವರು ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು
ಅವಧಿ ತೀರದ ಮುನ್ನ ಕಾಣಿಸಿ
ನಮಗೆ ಬಳಿಕಾರಣ್ಯವಾಸವ
ನಿವರು ಕರುಣಿಸ ಬಂದರೆಂದನು ಧರ್ಮನಂದನನು ॥42॥

೦೪೩ ಅವಧಿ ತೀರಲಿ ...{Loading}...

ಅವಧಿ ತೀರಲಿ ಮೇಣು ಮಾಣಲಿ
ಎವಗೆ ತುರು ಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರ ಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು ॥43॥

೦೪೪ ಎನ್ದು ತಮ್ಮನ್ದಿರು ...{Loading}...

ಎಂದು ತಮ್ಮಂದಿರು ಸಹಿತ ಯಮ
ನಂದನನು ಕಲಹಾವಲೋಕಾ
ನಂದ ಪರಿಕರಲುಳಿತಕೋಮಲ ಕಾಯನನುವಾಗಿ
ಬಂದು ಮತ್ಸ್ಯನ ನೇಮದಲಿ ನಡೆ
ತಂದು ರಥವೇರಿದನು ಪಾರ್ಥನ
ಹಿಂದಕಿರಿಸಿ ವಿರಾಟನೊಡನವನೀಶ ಹೊರವಂಟ ॥44॥

೦೪೫ ವರ ವಿರಾಟ ...{Loading}...

ವರ ವಿರಾಟ ಸಹೋದರರು ಸಾ
ವಿರದ ಸಂಖ್ಯೆಯ ರಾಜಪುತ್ರರು
ಕೊರಳ ಪದಕವ ಕಾಲ ತೊಡರಿನ ಮಣಿಯ ಮೌಳಿಗಳ
ಪರಿಮಳದ ಕತ್ತುರಿಯ ತಿಲಕದ
ಹೊರೆದ ಗಂಧದ ತೋರ ಮುಡುಹಿನ
ಕರದ ಖಂಡೆಯರದಟರೈದಿದರಾನೆ ಕುದುರೆಯಲಿ ॥45॥

೦೪೬ ತೂಳುವರೆಗಳ ಲಗ್ಗೆಯಲಿ ...{Loading}...

ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದುದು ಪರಬಲವ ॥46॥

೦೪೭ ಫಡ ವಿರಾಟನ ...{Loading}...

ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟ ಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕುದು ಕೂಡೆ ಕುರುಸೇನೆ ॥47॥

೦೪೮ ಕುದುರೆ ಹೊಕ್ಕುವು ...{Loading}...

ಕುದುರೆ ಹೊಕ್ಕುವು ದಂತಿ ಘಟೆ ತೂ
ಳಿದವು ರಥವಾಜಿಗಳು ಸೇನೆಯ
ಹೊದರ ಹೊಯ್ದವು ಕೂಡೆ ಕಾಲಾಳಿರಿದು ಕಾದಿದರು
ಕದಡಿತಾ ದಳ ಮೈಯೊಳೊಕ್ಕವು
ಬಿದಿರಿದೆಲುಗಳು ಮುರಿದು ನೆತ್ತಿಯ
ಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ ॥48॥

೦೪೯ ದಿಣ್ಡುಗೆಡೆದವು ದನ್ತಿಘಟೆ ...{Loading}...

ದಿಂಡುಗೆಡೆದವು ದಂತಿಘಟೆ ಶತ
ಖಂಡವಾದವು ತುರಗದಳ ಮುಂ
ಕೊಂಡಿರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ
ತುಂಡಿಸಿತು ರಥವಾಜಿ ಮಿದುಳಿನ
ಜೊಂಡಿನಲಿ ರಣಭೂಮಿ ರಕುತದ
ಗುಂಡಿಗೆಗಳೊಗ್ಗಾಯ್ತು ಶಾಕಿನಿ ಡಾಕಿನೀ ಜನಕೆ ॥49॥

೦೫೦ ಚೂಳಿಕೆಯ ಬಲ ...{Loading}...

ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲು ದಳ ಕವಿದುದು ಮಹಾರಥ
ರೇಳು ಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು ॥50॥

೦೫೧ ಬಲ ಮುರಿದು ...{Loading}...

ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರ ಸುಶರ್ಮನಂಬಿನ
ಮಳೆಯ ಕರೆವುತ ರಿಪು ವಿರಾಟನ ರಥವ ತರುಬಿದನು
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ ॥51॥

೦೫೨ ಸರಳು ತೀರಲು ...{Loading}...

ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ ॥52॥

೦೫೩ ಸಿಕ್ಕಿದನು ...{Loading}...

ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಲೀಸುವನೇ ವಿರಾಟನೆನುತ್ತ ಬಲ ಬೆದರೆ
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು ॥53॥

೦೫೪ ಬಲವನಾಯಕವಾಯ್ತು ಮತ್ಸ್ಯನ ...{Loading}...

ಬಲವನಾಯಕವಾಯ್ತು ಮತ್ಸ್ಯನ
ಕುಲಕೆ ಬಂದುದು ಕೇಡು ಸುಮ್ಮನೆ
ನಿಲುವುದನುಚಿತ ಭೀಮ ಬಿಡಿಸು ವಿರಾಟ ಭೂಪತಿಯ
ಗೆಲವು ಪರಬಲಕಾಯಿತೆನೆ ರಿಪು
ಕುಲ ದವಾನಳನಣ್ಣನಾಜ್ಞೆಯ
ತಲೆಯೊಳಾಂತನು ಮುಂದಣಾಲದ ಮರನ ನೋಡಿದನು ॥54॥

೦೫೫ ಹೆಮ್ಮರವನಿದ ಕಿತ್ತು ...{Loading}...

ಹೆಮ್ಮರವನಿದ ಕಿತ್ತು ವೈರಿ ಸು
ಶರ್ಮಕನನೊರೆಸುವೆನು ಬವರದೊ
ಳೊಮ್ಮೆಯರಿ ಮೋಹರವನರೆವೆನು ಜೀಯ ಚಿತ್ತೈಸು
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು ॥55॥

೦೫೬ ಮರನ ಮುರಿದೊಡೆ ...{Loading}...

ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು ॥56॥

೦೫೭ ಉಗ್ರಕರ್ಮವ ನೆನೆಯಬೇಡ ...{Loading}...

ಉಗ್ರಕರ್ಮವ ನೆನೆಯಬೇಡ
ವ್ಯಗ್ರದಲಿ ಸಾಧಿಸಿದೆವವಧಿ ಸ
ಮಗ್ರವನು ಸಾಕಿನ್ನು ಬಿಡಿಸು ವಿರಾಟ ಭೂಪತಿಯ
ವಿಗ್ರಹವ ಜಯಿಸೆನಲು ಕುರು ಕುಲ
ದಗ್ರಿಯನು ಬೀಳ್ಕೊಂಡು ವಿಲಯ ಮ
ಹೋಗ್ರ ಸನ್ನಿಭನರೆದನಿಭ ಹಯ ರಥ ಪದಾತಿಗಳ ॥57॥

೦೫೮ ಸರಳ ಸಾರದಲೆಣ್ಟು ...{Loading}...

ಸರಳ ಸಾರದಲೆಂಟು ಸಾವಿರ
ತುರಗವನು ಸೀಳಿದನು ಕೊಂದನು
ಕರಿಘಟೆಯನೈನೂರ ಮುರಿದನು ತೇರು ಸಾವಿರವ
ಅರಿ ಪದಾತಿಯನೊಂದು ಲಕ್ಕವ
ನೊರೆಸಿದನು ಬೆಂಬತ್ತಿ ಬಿಡು ಬಿಡು
ದೊರೆ ವಿರಾಟನನೆನುತ ಹಿಡಿದನು ಕಲಿ ಸುಶರ್ಮಕನ ॥58॥

೦೫೯ ವಲಲ ಮೆಚ್ಚಿದನೈ ...{Loading}...

ವಲಲ ಮೆಚ್ಚಿದನೈ ಮಹಾದೇ
ವಲಘು ಸಾಹಸಿ ತನ್ನ ಬಿಡಿಸಿದೆ
ಸಿಲುಕಿದನು ಹಗೆಯೆನುತ ಬೋಳೈಸಿದ ವಿರಾಟ ನೃಪ
ಬಳಿಕ ಯಮನಂದನನು ಬಿಡಿಸಿದ
ಕಲಿ ಸುಶರ್ಮನನಿರುಳುಗಾಳಗ
ದೊಳಗೆ ತುರು ಮರಳಿದವು ಗೆಲಿದರು ಪಾಂಡುನಂದನರು ॥59॥

೦೬೦ ನೀವೆಯರಸುಗಳಿನ್ನು ನಿಮ್ಮಯ ...{Loading}...

ನೀವೆಯರಸುಗಳಿನ್ನು ನಿಮ್ಮಯ
ಸೇವೆಯಲಿ ತಾನಿಹೆನು ನಾಲ್ವರಿ
ದಾವ ದೇಶದ ವೀರರೋ ಕಂಕಾದಿ ಭಟರೆನುತ
ಆ ವಿರಾಟನು ನುಡಿಯೆ ಸನ್ಮಾ
ನಾವಲಂಬಕೆ ತುಷ್ಟನಾದೆನು
ಭಾವಿಪೊಡೆ ಧರೆ ನಮ್ಮದೆಂದನು ಧರ್ಮನಂದನನು ॥60॥

೦೬೧ ಮಾನಭಙ್ಗದ ಮೇಲೆ ...{Loading}...

ಮಾನಭಂಗದ ಮೇಲೆ ಕೌರವ
ಸೇನೆ ಸರಿಯೆ ಸುಶರ್ಮ ಕಡು ದು
ಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ
ಭಾನು ಭುವನದ ಜನದ ನಿದ್ರಾ
ಮೌನ ಮುದ್ರೆಯನೊಡೆದನುತ್ತರ
ಧೇನು ವಿಗ್ರಹಣವನು ಮಾಡಿದನಂದು ಕುರುರಾಯ ॥61॥

+೦೪ ...{Loading}...