೦೦೦ ಸೂ ಕಾಯಿದರು ...{Loading}...
ಸೂ. ಕಾಯಿದರು ಸತ್ಯವನು ವನವಾ
ಸಾಯತವ ನೆರೆ ಗೆಲಿದು ಪಾಂಡವ
ರಾಯರೋಲೈಸಿದರು ಬಂದು ವಿರಾಟ ನಗರಿಯಲಿ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ವನವಾಸದ 12 ವರ್ಷಗಳ ಅವಧಿಯನ್ನು ಕಳೆದ ಪಾಂಡವರು ಸತ್ಯವನ್ನು ಕಾಯ್ದುಕೊಂಡು ಜಯಶೀಲರಾದರು. ಮುಂದೆ ವಿರಾಟನ ನಗರಿಗೆ ಬಂದು ಆ ರಾಜನನ್ನು ಓಲೈಸಿಕೊಂಡು ಬಾಳಿದರು.
ಪದಾರ್ಥ (ಕ.ಗ.ಪ)
ಕಾಯಿದರು ಸತ್ಯವನು-ಪಾಂಡವರು ಅರಣ್ಯ ವಾಸದ ಸಮಯದಲ್ಲಿ ಅವಧಿಯನ್ನು ಯಶಸ್ವಿಯಾಗಿ ಪೂರೈಸಿ ಸತ್ಯವನ್ನು ಕಾಪಾಡಿಕೊಂಡರು, ವನವಾಸಾಯತ-ದೀರ್ಘವಾದ ಅರಣ್ಯವಾಸದ ಅವಧಿ, ಓಲೈಸು-ಸೇವಿಸು, ಕೆಲಸಮಾಡು
ಟಿಪ್ಪನೀ (ಕ.ಗ.ಪ)
(ಬೇರೆ ಬೇರೆಯಾಗಿ ಬಂದು ಬೇರೆ ಬೇರೆ ಹೆಸರುಗಳನ್ನು ಹೇಳಿ ಐವರು ಪಾಂಡವರು ಹಾಗೂ ದ್ರೌಪದಿ ವಿರಾಟನಗರಿಯಲ್ಲಿ ಕೆಲಸಕ್ಕೆ ಸೇರಿದರು. ‘ವಿರಾಟನು ಬಲಶಾಲಿ, ಪಾಂಡವರ ಬಗೆಗೆ ಪ್ರೀತಿ ಉಳ್ಳವ ಧರ್ಮಶೀಲ, ದಾತ, ಸದಾ ನಮಗೆ ಪ್ರಿಯ’ ಎಂದು ವ್ಯಾಸಭಾರತದಲ್ಲಿ ಧರ್ಮರಾಯ ಹೇಳಿರುವುದನ್ನು ಗಮನಿಸಬೇಕು).
ಮೂಲ ...{Loading}...
ಸೂ. ಕಾಯಿದರು ಸತ್ಯವನು ವನವಾ
ಸಾಯತವ ನೆರೆ ಗೆಲಿದು ಪಾಂಡವ
ರಾಯರೋಲೈಸಿದರು ಬಂದು ವಿರಾಟ ನಗರಿಯಲಿ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಜನ ನೃಪಜನಂಗಳ
ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ
ಮೇಲು ಶಕುನದ ಚಾರು ನಿನದವ
ನಾಲಿಸುತ ಸೋದರರು ಸಹಿತ ವ
ನಾಲಯವ ಹೊರವಂಟು ಸಾರಿದರೊಂದು ವಟಕುಜವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಣ್ಯವಾಸದ ಅಂತ್ಯದಲ್ಲಿ ಧರ್ಮರಾಯನು ತನ್ನೊಂದಿಗೆ ಇದ್ದ ರಾಜರುಗಳನ್ನು ಋಷಿಜನಗಳನ್ನು ಬೀಳ್ಕೊಂಡನು. ಅನಂತರ ಅಗ್ನಿದೇವನಿಗೆ ಪ್ರದಕ್ಷಿಣ ನಮಸ್ಕಾರ ಮಾಡಿ ಹಕ್ಕಿಗಳ ಮಂಗಳ ಶಕುನ ಧ್ವನಿಯನ್ನು ಕೇಳುತ್ತ ಧರ್ಮರಾಯನು ತಮ್ಮಂದಿರೊಂದಿಗೆ (ಮತ್ತು ದ್ರೌಪದಿಯೊಂದಿಗೆ) ಹೊರಟ. ತಾವಿದ್ದ ಕಾಡಿನ ಭಾಗವನ್ನು ಬಿಟ್ಟು ಅವರೆಲ್ಲ ಒಂದು ವಟವೃಕ್ಷದ ಸಮೀಪಕ್ಕೆ ತೆರಳಿದರು.
ಪದಾರ್ಥ (ಕ.ಗ.ಪ)
ನೃಪಜನ-ರಾಜವರ್ಗ, ಭೂಮಿಪತಿ-(ಧರ್ಮರಾಯ) ರಾಜ, ಹುತವಹ-ಅಗ್ನಿ, ಬಲವಂದು-ಪ್ರದಕ್ಷಿಣೆ ಮಾಡಿ, ಮೇಲು ಶಕುನ-ಮಂಗಳ ಸೂಚಕವಾದ ಶಕುನ ಪಕ್ಷಿ, ಚಾರು-ಮನೋಹರ, ನಿನದ-ಶಬ್ದ, ವನಾಲಯ-ಕಾಡಿನ ಮನೆ, ಹೊರವಂಟು-ಹೊರಟು, ವಟಕುಜ-ವಟವೃಕ್ಷ, ಆಲದಮರ.
ಪೂರ್ವ ಪೀಠಿಕೆ : ಮೂಲಭಾರತ : ಅರ್ಜುನನ ಸೂಚನೆಯಂತೆ ಪಾಂಡವರು ವಿರಾಟನಗರಿಯಲ್ಲಿ ಅಜ್ಞಾತವಾಸದ ನಿರ್ಧಾರ ಮಾಡುತ್ತಾರೆ. ಕೆಲಸದವರನ್ನೆಲ್ಲ ಪಾಂಚಾಲ ನಗರಿಗೆ ಕಳಿಸುತ್ತಾರೆ. ಸೇನೆ ರಥಾದಿಗಳೆಲ್ಲ ದ್ವಾರಕಿಗೆ, ಅನಂತರ ಧೌಮ್ಯರು ಸೇವಕ ಧರ್ಮದ ಬಗೆಗೆ ದೀರ್ಘ ಉಪನ್ಯಾಸ ಮಾಡುತ್ತಾರೆ. ರಾಜರುಗಳಾಗಿದ್ದ ಪಾಂಡವರಿಗೆ ಸೇವಕರ ನಡವಳಿಕೆ ಬಗೆಗೆ ಕೊಟ್ಟಿರುವ ಉಪದೇಶ ತುಂಬ ಸ್ವಾರಸ್ಯಕರವಾಗಿದೆ.
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಜನ ನೃಪಜನಂಗಳ
ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ
ಮೇಲು ಶಕುನದ ಚಾರು ನಿನದವ
ನಾಲಿಸುತ ಸೋದರರು ಸಹಿತ ವ
ನಾಲಯವ ಹೊರವಂಟು ಸಾರಿದರೊಂದು ವಟಕುಜವ ॥1॥
೦೦೨ ಬನ್ದು ವಟಕುಜದಡಿಯಲನಿಬರು ...{Loading}...
ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿಂಗೇನು ಗತಿ ಬಳಿ
ಕೊಂದು ವರುಷಜ್ಞಾತವಾಸಕ್ಕಾವ ಠಾವೆಂದ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಟವೃಕ್ಷದ ಕೆಳಗೆ ದ್ರೌಪದಿ ಮತ್ತು ಪಾಂಡವರು ವಿಶ್ರಮಿಸಿದರು. ಎಲ್ಲರಿಗೂ ತುಂಬ ಆಯಾಸವಾಗಿತ್ತು. ಅನಂತರ ಧರ್ಮರಾಯನು ಮಾತು ತೆಗೆದ: “ಈಗ ಹನ್ನೆರಡು ವರ್ಷ ಗತಿಸಿತು. ಮುಂದೆ ಏನು ಮಾಡೋಣ ? ಒಂದು ವರ್ಷದ ಅಜ್ಞಾತ ವಾಸವನ್ನು ಎಲ್ಲಿ ಕಳೆಯೋಣ?”
ಪದಾರ್ಥ (ಕ.ಗ.ಪ)
ವಟಕುಜ-ವಟವೃಕ್ಷ, ಆಲದ ಮರ, ಅನಿಬರು-ಸರ್ವರೂ, ದುರುಪದಿ-ದ್ರೌಪದಿ ಶಬ್ದದ ಕನ್ನಡೀಕರಣ ದುರುಪದಿ, ಅಬುದ-ವರ್ಷ, ಠಾವು-ಪ್ರದೇಶ, ಜಾಗ-ಊರು
ಟಿಪ್ಪನೀ (ಕ.ಗ.ಪ)
ಅಜ್ಞಾತವಾಸ-ಜೂಜಿನ ನಿಬಂಧನೆಯ ಪ್ರಕಾರ ಪಾಂಡವರು ಹನ್ನೆರಡು ವರ್ಷ ವನವಾಸ ಮಾಡಬೇಕಾಗಿತ್ತು. ಅನಂತರ ಒಂದು ವರ್ಷದ ಅಜ್ಞಾತವಾಸ. ಅಜ್ಞಾತವಾಸ ಎಂದರೆ ಕೌರವರ ಕಣ್ಣಿಗೆ ಬೀಳದೆ ಗುಪ್ತವಾಗಿ ಜನಸಮೂಹದ ಮಧ್ಯೆ ವಾಸ ಮಾಡುವಿಕೆ. ಈ ಅವಧಿಯಲ್ಲಿ ಅವರ ಗುರುತು ಹಿಡಿದರೆ ಮತ್ತೆ ಹನ್ನೆರಡು ವರ್ಷ ವನವಾಸ, ಒಂದು ವರ್ಷದ ಅಜ್ಞಾತವಾಸ ಎಂಬ ಕರಾರು,
ಮೂಲ ...{Loading}...
ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿಂಗೇನು ಗತಿ ಬಳಿ
ಕೊಂದು ವರುಷಜ್ಞಾತವಾಸಕ್ಕಾವ ಠಾವೆಂದ ॥2॥
೦೦೩ ಬಡಗಲವರದು ಮೂಡಣರಸುಗ ...{Loading}...
ಬಡಗಲವರದು ಮೂಡಣರಸುಗ
ಳೊಡೆ ಗೆಣೆಯರಾಗಿಹರು ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಾವಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಉತ್ತರ ದೇಶವೆಲ್ಲ ಕೌರವರದೇ ಆಗಿದೆ. ಪೂರ್ವದೇಶದ ಅರಸರು ಕೌರವನಿಗೆ ಸ್ನೇಹಿತರು. ದಕ್ಷಿಣ ದೇಶದವರು ನಮ್ಮನ್ನು ಗುರುತು ಹಿಡಿಯಬಲ್ಲರು. ಅಕ್ಕಪಕ್ಕದ ರಾಜ್ಯಗಳಿಗೆ ಹೋಗೋಣ ಎಂದರೆ ಅವರೆಲ್ಲ ಚಾಡಿಕೋರರು, ನಮ್ಮ ಸಂಗತಿಯನ್ನು ಕೌರವನಿಗೆ ತಿಳಿಸಿಬಿಡುತ್ತಾರೆ. ಪಶ್ಚಿಮದೇಶದವರು ತುಂಬ ದುರ್ಬಲರಾಗಿರುವುದರಿಂದ ಅವರನ್ನು ಆಶ್ರಯಿಸಿ ಪ್ರಯೋಜನವಿಲ್ಲ. ವಸ್ತುಸ್ಥಿತಿ ಹೀಗಿದೆ. ಈಗ ನಾವು ಎಲ್ಲಿ ಗುಪ್ತವಾಸ ಮಾಡಬೇಕೆಂಬುದನ್ನು ತಿಳಿಸಿ” ಧರ್ಮರಾಯನ ಈ ಮಾತು ಕೇಳಿ ಅರ್ಜುನನು ವಿನಯದಿಂದ ಅಣ್ಣನಿಗೆ ಹೇಳಿದ.
ಪದಾರ್ಥ (ಕ.ಗ.ಪ)
ಬಡಗಲವರದು-ಉತ್ತರ ಭಾಗ ಅವರದು ಅಂದರೆ ಕೌರವರದು, ಮೂಡಣರಸುಗಳು-ಪೂರ್ವದಿಕ್ಕಿನ ರಾಜರುಗಳು, ಕೆಲಬಲ-ಅಕ್ಕಪಕ್ಕದವರು, ಒಡೆಗೆಣೆಯರು-(ಕೌರವರ) ಸ್ನೇಹಿತರು, ಕೊಂಡೆಯರು-ಚಾಡಿಕೋರರು, ಪಡುವಣವರು-ಪಶ್ಚಿಮಭಾಗದವರು, ಅತಿಕೃಶರು-ತುಂಬ ದುರ್ಬಲರು, ಅವನೀಪತಿ-ಅರಸ (ಧರ್ಮರಾಯ)
ಟಿಪ್ಪನೀ (ಕ.ಗ.ಪ)
ದೇಶಗಳು -ಪಾಂಚಾಲದೇಶ, ಚೇರಿದೇಶ, ಮತ್ಸ್ಯದೇಶ, ಶೂರಸೇನ ದೇಶ, ಪಟ್ಟಚ್ಚರ ದೇಶ ದಶಾರ್ಣ, ನವರಾಷ್ಟ್ರ, ಮಲ್ಲ, ಶಾಲ್ವ, ಯುಗಂಧರ ಕುಂತಿರಾಷ್ಟ್ರ ಸುರಾಷ್ಟ್ರ ಅವಂತಿ ಮೊದಲಾದ ರಾಜ್ಯಗಳ ಬಗೆಗೆ ಮೂಲ ಭಾರತದಲ್ಲಿ ಪ್ರಸ್ತಾವವಿದೆ. ಇಲ್ಲಿ ಧರ್ಮರಾಯನು ದೇಶಗಳ ಬಗೆಗೆ ಹೇಳುತ್ತಿದ್ದಾನೆ.
ಮೂಲ ...{Loading}...
ಬಡಗಲವರದು ಮೂಡಣರಸುಗ
ಳೊಡೆ ಗೆಣೆಯರಾಗಿಹರು ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಾವಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ ॥3॥
೦೦೪ ವಳಿತವನು ಹೊಕ್ಕಿರಿದು ...{Loading}...
ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲ ವಿರಾಟನಿಗವನ ದೆಸೆಯಿಂ ಭಯ ವಿಹೀನವದು
ಮುಳಿದು ಹೇಳಿಕೆಯಾದ ರವಿಸುತ
ಕಲಿ ತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಶತ್ರುಗಳ ರಾಜ್ಯದ ಮೇಲೆ ದಂಡೆತ್ತಿ ಹೋಗಿ (ಅವರೆಲ್ಲ ಕೌರವ ಮಿತ್ರರು) ಕೀಚಕನು ಕೌರವರಿಗೆಲ್ಲ ಶತ್ರು ಎನ್ನಿಸಿದ್ದಾನೆ. ಕೀಚಕನು ವಿರಾಟನ ಬೆಂಬಲಕ್ಕೆ ನಿಂತಿದ್ದಾನೆ. ಆದುದರಿಂದ ವಿರಾಟನಿಗೆ ಶತ್ರುಗಳ ಭಯ ಇಲ್ಲದಂತಾಗಿದೆ. ಕ್ರೋಧದಿಂದ ವಿರಾಟ ರಾಜ್ಯದ ಮೇಲೆ ದಂಡೆತ್ತಿ ಬಂದು ಅವಮಾನಕ್ಕೆ ಗುರಿಯಾದ ಅಂಗದೇಶದ ಕರ್ಣನಿಗಾಗಲಿ ವೀರರಾದ ತ್ರಿಗರ್ತರೇ ಮೊದಲಾದ ಸಾಮಂತರಿಗಾಗಲಿ ಲಕ್ಷ್ಯ ಮಾಡದೆ ವಿರಾಟನು ಪಶ್ಚಿಮ ಭಾಗವನ್ನು ಆಳುತ್ತಿದ್ದಾನೆ.
ಪದಾರ್ಥ (ಕ.ಗ.ಪ)
ವಳಿತ-ವಲಿತ, ರಾಜ್ಯ, ಪ್ರಾಂತ್ಯ, ಮುಳಿದು ಹೇಳಿಕೆಯಾದ-ಅಂದರೆ ಕೋಪದಿಂದ ಬಂದು ಎದುರಿಸಿ ಅಪಹಾಸ್ಯಕ್ಕೆ ಗುರಿಯಾದ, ಮಂಡಳಿಕ-ಮಾಂಡಲಿಕ, ಸಾಮಂತ,
ಟಿಪ್ಪನೀ (ಕ.ಗ.ಪ)
ವಿರಾಟ-ಮೂಲಭಾರತದಲ್ಲಿ ಯುಧಿಷ್ಠಿರನು ಮತ್ಸ್ಯರಾಜ ವಿರಾಟದ ಬಗೆಗೆ ಹೇಳುತ್ತ “ವಿರಾಟನು ಬಲಶಾಲಿ, ಪಾಂಡವ ಪಕ್ಷಪಾತಿ, ಧರ್ಮಾತ್ಮ, ದಾತ, ವೃದ್ಧ” ಎಂದು ಹೇಳುತ್ತಾನೆ.
ವಿರಾಟರಾಯ - ಮಹಾಭಾರತದ ಗಣನೀಯ ಪಾತ್ರೆಗಳಲ್ಲಿ ಒಬ್ಬ ವಿರಾಟರಾಯ. ಈತ ಮತ್ಸ್ಯದೇಶಾಧಿಪತಿಯಾದುದರಿಂದ ಮತ್ಸ್ಯಭೂಪತಿ. ಇವನು ಸೂತಕುಲದವನಾಗಿದ್ದ. ಇವನ ಹೆಂಡತಿ ಸುದೇಷ್ಣೆ. ಈ ದಂಪತಿಗಳಿಗೆ ಶಂಖ, ಉತ್ತರ ಮತ್ತು ಉತ್ತರೆ ಎಂಬ ಮೂವರು ಮಕ್ಕಳಿದ್ದರು. ಅಲ್ಲದೆ ಮೊದಲ ಪತ್ನಿ ಕೋಸಲ ರಾಜಕನ್ಯೆ ಸುರಥೆಯಲ್ಲಿ ಅವನಿಗೆ ಶ್ವೇತನೆಂಬ ಮಗನೂ ಇದ್ದ. ಅವಳು ಸತ್ತನಂತರ ಕೇಕಯ ರಾಜಕುಮಾರಿ ಸುದೇಷ್ಣೆಯನ್ನು ಮದುವೆಯಾಗಿದ್ದ. ಶತಾನೀಕ, ಹೇಮವರ್ಮ, ಸೂರ್ಯದತ್ತ ಎಂಬ ತಮ್ಮಂದಿರಿದ್ದರು. ವಿರಾಟನು ಮೊದಲಿನಿಂದಲೂ ಪಾಂಡವ ಪ್ರೇಮಿಯಾಗಿದ್ದ. ಈ ಸಂಗತಿ ತಿಳಿದೇ ಪಾಂಡವರು ತಮ್ಮ ಅಜ್ಞಾತವಾಸವನ್ನು ಗುಟ್ಟಾಗಿ ಇವನ ರಾಜ್ಯದಲ್ಲೇ ಕಳೆಯಲು ತೀರ್ಮಾನಿಸುತ್ತಾರೆ.
ಮತ್ಸ್ಯೋ ವಿರಾಟೋ ಬಲವಾನ್ ಅಭಿರಕ್ತೋ„ಥ ಪಾಂಡವಾನ್
ಧರ್ಮಶೀಲೋ ವಧಾನ್ಯಶ್ಚ ವೃದ್ಧಶ್ಚ ಸತತಂ ಪ್ರಿಯಃ
(ಮತ್ಸ್ಯರಾಜನಾದ ವಿರಾಟನು ಮಹಾಬಲಶಾಲಿ. ನಮ್ಮ ಬಗೆಗೆ ಪ್ರೀತಿ ಉಳ್ಳವ. ಧರ್ಮಶೀಲ, ದಾಟ, ದೊಡ್ಡ ಮನುಯ, ನಮಗೆ ಪ್ರಿಯನಾದವನು)
ಹೀಗೆ ಇವನ ಆಶ್ರಯಬೇಡಿ ಬಂದುದರಿಂದ ಮಹಾಭಾರತದಲ್ಲಿ ಈತನ ಕೀರ್ತಿಯೂ ಹೆಚ್ಚಿದೆ. ಗುಣಶಾಲಿಯಾದ ಈತನ ಒಂದೇ ದೌರ್ಬಲ್ಯ ಎಂದರೆ ಸುದೇಷ್ಣೆಯ ತಮ್ಮನಾದ ಸಿಂಹಬಲ ಎಂಬ ಹೆಸರಿನ ಕೀಚಕನನ್ನು ನಿಯಂತ್ರಿಸಲಾಗದೆ ಹೋದದ್ದು. ಕೀಚಕನು ವಿರಾಟ ಸಾಮ್ರಾಜ್ಯದ ಮಹಾಸೇನಾಪತಿಯಾಗಿದ್ದ. ಅಕ್ಕಪಕ್ಕದ ರಾಜ್ಯಗಳವರನ್ನೆಲ್ಲ ತಮ್ಮ ರಾಜ್ಯದ ತಂಟೆಗೆ ಬರದಂತೆ ದೂರದಲ್ಲೇ ಇರಿಸಿದ್ದ. ಅವನಿಗೆ ನೂರು ಜನ ತಮ್ಮಂದಿರೂ ಇದ್ದರು. ಅವರ ಸಹಾಯದಿಂದ ಬಲಿಷ್ಠನಾದ ಕೀಚಕ ಅಕ್ಕ ಭಾವಂದಿರನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದ್ದ. ಇವನು ದುಷ್ಟನಾದರೂ ಆಡಳಿತದಲ್ಲಿ ಸಹಕರಿಸುತ್ತಿದ್ದಾನೆಂಬ ಕಾರಣಕ್ಕೆ ವಿರಾಟನು ಇವನನ್ನು ಒಪ್ಪಿಕೊಂಡಿದ್ದ. ಎರಡನೆಯ ದೌರ್ಬಲ್ಯ ಎಂದರೆ ಸ್ತ್ರೀಮೋಹ. ಸೈರಂಧ್ರಿ ಇವನ ಕಣ್ಣಿಗೆ ಬಿದ್ದರೆ ವಿರಾಟನ ಮನಸ್ಸು ಚಂಚಲವಾದೀತು ಎಂದು ಸುದೇಷ್ಣೆ ಹೆದರಿಕೊಂಡಿದ್ದಳೆಂಬ ಸಂಗತಿಯೂ ವರ್ಣಿತವಾಗಿದೆ.
ವೇಷ ಮರೆಸಿಕೊಂಡು ತನ್ನ ಬಳಿಗೆ ಉದ್ಯೋಗಾರ್ಥಿಗಳಾಗಿ ಬಂದ ಪಾಂಡವರನ್ನು ಅವರು ಪಾಂಡವರೆಂದು ತಿಳಿಯದಿದ್ದರೂ ತುಂಬ ಗೌರವದಿಂದ ನಡೆಸಿಕೊಂಡಿರುವುದನ್ನು ನೋಡಿದರೆ ಇವನ ಪ್ರತಿಭಾಗ್ರಹಣ ಶಕ್ತಿಯ ಪರಿಚಯವಾಗುತ್ತದೆ. ಕೈಕೆಳಗಿನವರ ಬಗೆಗೆ ಅವರ ನಡವಳಿಕೆ ಉದಾತ್ತವಾದುದು.
ಮಗ ಉತ್ತರನು ಕೌರವಸೇನೆಯ ಮೇಲೆ ದಂಡೆತ್ತಿ ಹೋಗಿದ್ದಾನೆಂಬ ಸುದ್ದಿ ತಿಳಿದಾಗ ಮಗನ ಸಾಹಸದ ಬಗೆಗೆ ತಂದೆಗೆ ಹೆಮ್ಮೆಯೆನಿಸಿತ್ತ. ಆದ್ದರಿಂದ ಮಗನ ಸಾಹಸದ ಗುಣಗಾನ ಮಾಡಲಾರಂಭಿಸಿದಾಗ ಅಲ್ಲೇ ಇದ್ದ ಕಂಕಭಟ್ಟನು ಸಾರಥಿಯ ಸಹಾಯವಿದ್ದರೆ ಎಲ್ಲವೂ ಸಾಧ್ಯ ಎನ್ನಲಾರಂಭಿಸಿದ. ತನ್ನ ಪುತ್ರನ ಹಿರಿಮೆಯನ್ನು ಕಂಕಭಟ್ಟ ಹೇಳುತ್ತಿಲ್ಲವಲ್ಲ ಎಂಬ ಕೋಪಕ್ಕೆ ವಿರಾಟನು ಸಿಟ್ಟಿನಿಂದ ಕಂಕನ ಹಣೆಯಿಂದ ರಕ್ತ ಸುರಿಯುವಂತೆ ಬಲವಾಗಿ ದಾಳವನ್ನು ಎಸೆದ. ರಕ್ತ ಸುರಿಯುವುದನ್ನು ಸೈರಂಧ್ರಿ ತಪ್ಪಿಸದಿದ್ದರೆ ವಿರಾಟನಿಗೆ ತೊಂದರೆಯಾಗುತ್ತಿತ್ತು. ಕೊನೆಯಲ್ಲಿ ಎಲ್ಲವೂ ಬಯಲಾದ ಮೇಲೆ ವಿರಾಟನು ತನ್ನ ಎಂದಿನ ಪಾಂಡವ ಪ್ರೀತಿಯನ್ನು ಬೆಳಗಿದ್ದಷ್ಟೇ ಅಲ್ಲದೆ ತನ್ನ ಮಗಳಾದ ಉತ್ತರೆಯನ್ನು ಅಭಿಮನ್ಯುವಿಗೆ ಮದುವೆ ಮಾಡಿಕೊಡುವುದರ ಮೂಲಕ ಎರಡು ವಂಶಗಳ ರಕ್ತ ಸಂಬಂಧವನ್ನೂ ಕುದುರಿಸಿ ಪಾಂಡವರಿಗೆ ಆಪ್ತನಾದನು. ಮುಂದೆ ಮಹಾಭಾರತ ಯುದ್ಧದಲ್ಲಿ ಅವನ ಕುಟುಂಬದವರೆಲ್ಲ ಪಾಂಡವರ ಪರವಾಗಿ ಹೋರಾಡಿದುದನ್ನು ಮರೆಯುವಂತಿಲ್ಲ.
ಮೂಲ ...{Loading}...
ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲ ವಿರಾಟನಿಗವನ ದೆಸೆಯಿಂ ಭಯ ವಿಹೀನವದು
ಮುಳಿದು ಹೇಳಿಕೆಯಾದ ರವಿಸುತ
ಕಲಿ ತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ ॥4॥
೦೦೫ ನೃಪತಿ ನಿಶ್ಚೈಸಿದನು ...{Loading}...
ನೃಪತಿ ನಿಶ್ಚೈಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಾಟರಾಜನ ನಗರಿಯಲ್ಲಿ ವಾಸಮಾಡಬೇಕೆಂದು ಗೊತ್ತುಪಡಿಸಿದ ಒಂದು ವರ್ಷದ ಅವಧಿಯನ್ನು ಸಹನೆಯಿಂದ ಕೃಪಣತನದಿಂದ ಕಳೆಯಬೇಕೆಂದು ಧರ್ಮರಾಯನು ನಿರ್ಧರಿಸಿದ. ಅನಂತರ ತಮ್ಮಂದಿರಿಗೆ ದ್ರೌಪದಿಗೆ ಹೇಳಿದ.
ಅಲ್ಲಿ ಗುಪ್ತವಾಗಿರುವುದು ಹೇಗೆ ? ರಾಜನಿಗೆ ಅಧೀನರಾಗಿ ಬಾಳುವ ಹೀನಾವಸ್ಥೆಯನ್ನು ಹೇಗೆ ಸಹಿಸಿಕೊಳ್ಳುತ್ತೀರಿ? ಕರುಣೆಯಿಲ್ಲದೆ ನಾನು ಈ ಮಾತುಗಳನ್ನು ಏನೆಂದು ತಿಳಿಸಲಿ".
ಪದಾರ್ಥ (ಕ.ಗ.ಪ)
ಮತ್ಸ್ಯಾಧಿಪ-ವಿರಾಟರಾಯ, ಮತ್ಸ್ಯದೇಶದ ಒಡೆಯ, ಕೃಪಣತನ-ದೀನಾವಸ್ಥೆ, ಅಸಹಾಯಕತೆ, ಸೇವಕರಾಗಿ ಬದುಕುವ ಕಾರ್ಪಣ್ಯ, ವತ್ಸರ-ವರ್ಷ, ಗುಪಿತ-ಅಜ್ಞಾತತೆ, ಗುಟ್ಟಿನ ವಾಸ, ಆನುವಿರಿ-ಸಹಿಸುತ್ತೀರಿ ? ನಿಷ್ಕೃಪೆ-ಕರುಣಾರಾಹಿತ್ಯ, ಅಪದೆಸೆ-ಅಪದಶೆ, ಕೀಳಾದ ಸ್ಥಿತಿ.
ಟಿಪ್ಪನೀ (ಕ.ಗ.ಪ)
ವಿರಾಟ ನಗರ-ವಿರಾಟನ ರಾಜ್ಯವು ಈಗಿನ ಜೈಪುರ ಸಂಸ್ಥಾನ ಎಂದು ಹಲವರು ವಿದ್ವಾಂಸರು ಹೇಳುತ್ತಾರೆ. ಕೆಲವರ ಪ್ರಕಾರ ಇದು ಪಂಜಾಬಿನಲ್ಲಿದೆ. ವಿgಹೋಷಿಯಾರ್ ಪುರ ಜಿಲ್ಲಾ ಕೇಂದ್ರಕ್ಕೆ ನಲವತ್ತು ಮೈಲಿ ಕಿ.ಮೀ. ದೂರದಲ್ಲಿರುವ ದಸೂಹವೇ ಅಂದಿನ ವಿರಾಟ ನಗರಿ ಎನ್ನುತ್ತಾರೆ. ಈಗಲೂ ಜನ ದಸೂಹವನ್ನು ವಿರಾಟ ನಗರಿ ಎನ್ನುತ್ತಾರಂತೆ. ದ್ರೌಪದಿಯ ಶಾಪದಿಂದಾಗಿ ಈ ನಗರ ಒಂಬತ್ತು ಬಾರಿ ಹಾಳಾಯಿತು. ಹತ್ತನೇ ಬಾರಿ ಕಟ್ಟಿದ ಮೇಲೆ ವಾಸಯೋಗ್ಯ ಸ್ಥಳವಾಯಿತಂತೆ, ಆದ್ದರಿಂದ ದಸೋಹ ಎಂಬ ಹೆಸರಂತೆ. ಕೋಟೆಯ ಆಚೆ ಇರುವ ಬನ್ನಿಯಮರದ ಠಾವು ಎಂದು ಈಗಲೂ ಒಂದು ಪ್ರದೇಶವನ್ನು ಗುರುತಿಸುತ್ತಾರೆ. ಇಲ್ಲೊಂದು ಭೀಮ ಸರೋವರವೂ ಇದೆಯಂತೆ.
ಮೂಲ ...{Loading}...
ನೃಪತಿ ನಿಶ್ಚೈಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು ॥5॥
೦೦೬ ದೇವ ನಿಮ್ಮಯ ...{Loading}...
ದೇವ ನಿಮ್ಮಯ ಮತವೆ ಮತವೆಮ
ಗಾವ ವೇಷದ ವಿವರ ನಿಮಗದ
ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ
ನಾವು ಭೂಸುರ ವೇಷದಲಿ ಸಂ
ಭಾವಿತರು ಮತ್ತಲ್ಲಿ ಸನ್ಯಾ
ಸಾವಲಂಬನ ಕಂಕನೆಂಬಭಿಧಾನ ತನಗೆಂದ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಾತು ಕೇಳಿ ಭೀಮಾರ್ಜುನರು ಧರ್ಮರಾಯನಿಗೆ ಹೇಳಿದರು. “ದೇವ ನಿಮ್ಮ ತೀರ್ಮಾನವೇ ನಮಗೆ ಸಮ್ಮತ. ನೀವು ಯಾವ ವೇಷದಲ್ಲಿ ಅಲ್ಲಿಗೆ ಹೋಗುತ್ತೀರೆಂಬುದನ್ನು ದಯವಿಟ್ಟು ಅಪ್ಪಣೆ ಮಾಡಿ”. ಆಗ ಧರ್ಮರಾಯನು “ನಾನು ಬ್ರಾಹ್ಮಣವೇಷದಲ್ಲಿ ಕಾಣಿಸಿಕೊಳ್ಳುತ್ತೇನೆ, ಸನ್ಯಾಸಿಯಂತೆ ಹೋಗುತ್ತೇನೆ, ಕಂಕ ಎಂಬ ಹೆಸರಿಟ್ಟುಕೊಳ್ಳುತ್ತೇನೆ” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಮತ-ಅಭಿಪ್ರಾಯ, ತೀರ್ಮಾನ, ಬೆಸಸು-ಅಪ್ಪಣೆ ಮಾಡು, ಹೇಳು, ಬಿನ್ನವಿಸೆ-ಬೇಡಿಕೊಂಡಾಗ, ಭೂಸುರ-ಬ್ರಾಹ್ಮಣ, ಸಂಭಾವಿತರು-ಬ್ರಾಹ್ಮಣ ವೇಷವನ್ನು ಕಲ್ಪಿಸಿಕೊಂಡಿರುತ್ತೇವೆ ಎಂಬರ್ಥ, ಅಭಿಧಾನ-ಹೆಸರು
ಮೂಲ ...{Loading}...
ದೇವ ನಿಮ್ಮಯ ಮತವೆ ಮತವೆಮ
ಗಾವ ವೇಷದ ವಿವರ ನಿಮಗದ
ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ
ನಾವು ಭೂಸುರ ವೇಷದಲಿ ಸಂ
ಭಾವಿತರು ಮತ್ತಲ್ಲಿ ಸನ್ಯಾ
ಸಾವಲಂಬನ ಕಂಕನೆಂಬಭಿಧಾನ ತನಗೆಂದ ॥6॥
೦೦೭ ವಲಲನೆಮ್ಬಭಿಧಾನದಲಿ ನೃಪ ...{Loading}...
ವಲಲನೆಂಬಭಿಧಾನದಲಿ ನೃಪ
ನಿಳಯವನು ಸಾರುವೆನು ತಾನೆಂ
ದುಲಿಯೆ ಮಾರುತಿ ನುಡಿದ ವರ ನಾಟ್ಯವಿದ ವೇಷವನು
ಫಲುಗುಣನು ಹಯ ಗೋ ನಿವಾಸ
ಸ್ಥಳ ವಿಳಾಸಿತರೆನಲು ಯಮಳರು
ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ “ನಾನು ವಲಲ ಎಂಬ ಹೆಸರಿಟ್ಟುಕೊಂಡು ರಾಜನ ಮನೆಗೆ ಹೋಗುತ್ತೇನೆ” ಎಂದು ಭೀಮ ಹೇಳಿದ. ಅರ್ಜುನನು ತಾನು ನಾಟ್ಯಾಚಾರ್ಯನ ವೇಷದಲ್ಲಿ ಹೋಗುವುದಾಗಿ ಹೇಳಿದ. ನಕುಲ ಸಹದೇವರು ತಾವು ಕುದುರೆಗಳ, ದನಗಳ ಮೇಲ್ವಿಚಾರಣೆಯ ಕೆಲಸದಲ್ಲಿ ನಿಲ್ಲುವುದಾಗಿ ತಿಳಿಸಿದರು. ದ್ರೌಪದಿಯು ತಾನು ಸೈರಂಧ್ರಿಯ ವೇಷದಲ್ಲಿ ಅರಸಿಯ ಬಳಿ ಇರುವುದಾಗಿ ತಿಳಿಸಿದಳು.
ಪದಾರ್ಥ (ಕ.ಗ.ಪ)
ಅಭಿಧಾನ-ಹೆಸರು, ನೃಪನಿಳಯ-ರಾಜನ ಮನೆ, ಸಾರು-ಹೋಗು, ಹಯ-ಕುದುರೆ, ಗೋಹಯ ಸ್ಥಳನಿವಾಸಿತರು-ಕುದುರೆ, ಹಸುಗಳ ಪ್ರದೇಶದಲ್ಲಿ ವಾಸಮಾಡುವವರು. ಸೈರಂಧ್ರಿ - ಸ್ವಾvಂತ್ರ್ಯವನ್ನು ಉಳಿಸಿಕೊಂಡಿರುವ, ರಾಣೀವಾಸದ ಪರಿಚಾರಿಕೆ
ಟಿಪ್ಪನೀ (ಕ.ಗ.ಪ)
ಸೈರಂಧ್ರಿ (ಮಾಲಿನಿ, ದ್ರೌಪದಿ) - ವಿರಾಟಪರ್ವದಲ್ಲಿ ಸೈರಂಧ್ರಿ ಸುದೇಷ್ಣೆಯ ಬಳಿಗೆ ಬಂದದ್ದು ಒಂದು ವಿಶಿಷ್ಟ ದೃಶ್ಯ. ಮಾಸಿದ ಒಂಟಿವಸ್ತ್ರ, ದಾಸಿಯ ರೂಪ. ‘ಮಾಲಿನೀತ್ಯೇವ ಮೇ ನಾಮ’ ಎಂದು ಹೇಳಿಕೊಂಡೇ ಬರುತ್ತಿದ್ದರೆ ದಾರಿಯಲ್ಲಿ ಪುರುಷರಿರಲಿ ಸ್ತ್ರೀಯರು ಕೂಡ ಈಕೆಯನ್ನು ಹಿಂಬಾಲಿಸಿಕೊಂಡು ಬಂದರಂತೆ! ಇದು ಮನುಷ್ಯರ ವಿಷಯವಾದರೆ ದಾರಿಯ ಮರಗಳು ಕೂಡ ಕೊಂಬೆಯನ್ನು ಬಗಿಸಿ ಎಲೆಗಳಿಂದ ಇವಳನ್ನು ಸ್ಪರ್ಶಿಸಲು ಹಾತೊರೆಯುತ್ತಿದ್ದುವಂತೆ! ವಸ್ತ್ರಾಲಂಕಾರ ಮಾಡುವುದರಲ್ಲಿ ಪಳಗಿದವಳು, ಕೇಶಶೃಂಗಾರದಲ್ಲಿ ಪರಿಣತಳು, ಸುಗಂಧ ದ್ರವ್ಯ ಲೇಪನದಲ್ಲೂ ಸಿದ್ಧಹಸ್ತಳು ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಸೈರಂಧ್ರಿ ಒಳ್ಳೆಯ ಊಟ ದೊರೆಯುವ ಜಾಗದಲ್ಲಿ ಇರುತ್ತೇನೆಂದು ಹೇಳುತ್ತಾಳೆ. ಎಂಜಲು ತಿನ್ನುವುದಿಲ್ಲ, ಕಾಲೊತ್ತುವುದಿಲ್ಲ ಎಂದು ಮೊದಲಿಗೇ ಹೇಳಿಬಿಡುತ್ತಾಳೆ. ‘‘ಗಂಧರ್ವಾ ಪತಯೋಮಹ್ಯಂ ಯುವಾನಃ ಪಂಚಭಾಮಿನೀ’’ ಎಂದು ಅದೃಶ್ಯರಾಗಿ ತನ್ನನ್ನು ಕಾಪಾಡುತ್ತಿರುವ ಗಂಧರ್ವ ಪತಿಗಳ ಬಗೆಗೆ ಹೇಳಿ
ಮೂಲ ...{Loading}...
ವಲಲನೆಂಬಭಿಧಾನದಲಿ ನೃಪ
ನಿಳಯವನು ಸಾರುವೆನು ತಾನೆಂ
ದುಲಿಯೆ ಮಾರುತಿ ನುಡಿದ ವರ ನಾಟ್ಯವಿದ ವೇಷವನು
ಫಲುಗುಣನು ಹಯ ಗೋ ನಿವಾಸ
ಸ್ಥಳ ವಿಳಾಸಿತರೆನಲು ಯಮಳರು
ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು ॥7॥
೦೦೮ ತೊಳಲಿದಿರಿ ಹನ್ನೆರಡು ...{Loading}...
ತೊಳಲಿದಿರಿ ಹನ್ನೆರಡು ವರುಷವು
ಹಳುವದಲಿ ಸೊಂಪಡಗಿ ಪರರೊಡ
ನುಳಿಗೆಲಸದೋಲಗವಿದೆಂತೈ ಸಾರ್ವಭೌಮರಿಗೆ
ಬಳಲಿದಿರಿ ಹಿರಿದಾಗಿ ನಿಮ್ಮುವ
ನಳಲಿಸಿದೆನೆನ್ನಿಂದ ಪಾಪಿಗ
ಳೊಳರೆ ಭುವನದೊಳೆಂದು ಕುಂತೀಸೂನು ಬಿಸುಸುಯ್ದ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪತ್ನಿಗೆ ಮತ್ತು ತಮ್ಮಂದಿರಿಗೆ ಬಂದ ಸ್ಥಿತಿಯನ್ನು ಕಂಡು ಧರ್ಮರಾಯನಿಗೆ ತನ್ನ ಬಗೆಗೇ ಬೇಸರವಾಯಿತು. ಇದಕ್ಕೆಲ್ಲ ತಾನೇ ಕಾರಣ ಎಂದು ಪಶ್ಚಾತ್ತಾಪ ಪಡುತ್ತ ಹೇಳಿದ. “ನೀವೆಲ್ಲ ಸಂತೋಷವಿಲ್ಲದೆ ಕಾಡಿನಲ್ಲಿ ಹನ್ನೆರಡು ವರ್ಷ ಸಂಕಟಪಟ್ಟಿದ್ದೀರಿ. ರಾಜಮನೆತನದ ನೀವೆಲ್ಲ ಪರರ ಸೇವೆಯನ್ನು ಹೇಗೆ ಮಾಡುವಿರಿ? ನೀವು ತುಂಬ ಬಳಲಿದ್ದೀರಿ. ನಿಮಗೆ ಹೀಗೆ ಯಾತನೆಯನ್ನು ತಂದವನು ನಾನೇ ಅಲ್ಲವೆ ? ನನಗಿಂತ ಪಾಪಿಗಳಾದವರು ಇದ್ದಾರೆಯೆ ?”
ಪದಾರ್ಥ (ಕ.ಗ.ಪ)
ತೊಳಲು-ಓಡಾಡು, ಯಾತನೆ ಪಡು, ಹಳುವ-ಕಾಡು, ಉಳಿಗೆಲಸದೋಲಗ<ಉೞಿ,=ಅವಶಿಷ್ಟ, ಉಳಿದ ಚಿಲ್ಲರೆ ಸೇವೆ, ನಿಮ್ಮುವನು-ನಿಮ್ಮನ್ನು (ನಿಮ್ಮ ಎಂಬುದರ ನಡುಗನ್ನಡ ರೂಪ), ಅಳಲಿಸು-ದುಃಖಿತರಾಗುವಂತೆ ಮಾಡು, ಒಳರೆ-ಇದ್ದಾರೆಯೆ?, ಭುವನ-ಜಗತ್ತು, ಸೂನು-ಮಗ.
ಟಿಪ್ಪನೀ (ಕ.ಗ.ಪ)
ತೆಲುಗು ಭಾರತದಲ್ಲಿ ‘ಕುಂಜರ ಯಾಧಂಬುದೋಮಕುತ್ತುಕ ಜೊಚ್ಚೆನ್’ ಎಂಬ ಮಾತಿದೆ. ಚಕ್ರಾಧಿಪತಿಗಳಾಗಿದ್ದ ಪಾಂಡವರು ಈಗ ಊಳಿಗದವರಾಗಿ ಬದುಕ ಬೇಕಾಯಿತು. ಅದನ್ನು ತೆಲುಗು ಕವಿ “ಆನೆ ಸೊಳ್ಳೆಯ ಗಂಟಲನ್ನು ಪ್ರವೇಶಿಸಿದ ಸ್ಥಿತಿಗೆ ಹೋಲಿಸಿದ್ದಾನೆ.
ಮೂಲ ...{Loading}...
ತೊಳಲಿದಿರಿ ಹನ್ನೆರಡು ವರುಷವು
ಹಳುವದಲಿ ಸೊಂಪಡಗಿ ಪರರೊಡ
ನುಳಿಗೆಲಸದೋಲಗವಿದೆಂತೈ ಸಾರ್ವಭೌಮರಿಗೆ
ಬಳಲಿದಿರಿ ಹಿರಿದಾಗಿ ನಿಮ್ಮುವ
ನಳಲಿಸಿದೆನೆನ್ನಿಂದ ಪಾಪಿಗ
ಳೊಳರೆ ಭುವನದೊಳೆಂದು ಕುಂತೀಸೂನು ಬಿಸುಸುಯ್ದ ॥8॥
೦೦೯ ಒಡಲ ಬಳಿ ...{Loading}...
ಒಡಲ ಬಳಿ ನೆಳಲಿಂಗೆ ಗತಿ ಬೇ
ರ್ಪಡಿಸಿಹುದೆ ಸುಖದುಃಖವಿವು ನಿ
ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ
ಅಡವಿಯೇ ಸಾಮ್ರಾಜ್ಯ ನಿಮ್ಮಡಿ
ಯೊಡನಿರಲು ನೀವಿಲ್ಲದಾ ಪುರ
ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ದೇಹದ ಹಿಂದೆಯೇ ನೆರಳು ಇರಬೇಕು. ದೇಹವನ್ನು ಬಿಟ್ಟು ಆ ನೆರಳು ಸ್ವತಂತ್ರವಾಗಿ ಇರಬಲ್ಲುದೆ ? ನಮ್ಮೆಲ್ಲರಿಗೂ ಸುಖ ಬರಲಿ ದುಃಖ ಬರಲಿ ನೀವೇ ಜೀವಾತ್ಮವಲ್ಲವೆ ? ನಿಮ್ಮ ಸಂಗಡ ಇದ್ದರೆ ನಮಗೆ ಅರಣ್ಯವೇ ಸಾಮ್ರಾಜ್ಯ, ನೀವಿಲ್ಲದ ಊರು ನಮ್ಮ ಪಾಲಿಗೆ ಅಡವಿ” ಎಂದು ಸೋದರರು ಧರ್ಮರಾಯನಿಗೆ ಹೇಳಿದರು.
ಪದಾರ್ಥ (ಕ.ಗ.ಪ)
ಬಳಿ = ಹತ್ತಿರ, ಜೊತೆ
ನಿಮ್ಮಡಿ-ನಿಮ್ಮ ಪಾದ, ನಿಮ್ಮ ಆಶ್ರಯ, ನೀವು, ತಾವು, ಒಡನಿರಲು-(ನಮ್ಮ) ಜೊತೆ ಇದ್ದರೆ.
ಟಿಪ್ಪನೀ (ಕ.ಗ.ಪ)
ಪಾಂಡವರ ಸೋದರ ಸಂಬಂಧ -ಪಾಂಡವರ ಸಂಬಂಧದ ಬೆಸುಗೆ ಎಷ್ಟು ಭದ್ರವಾದುದೆಂಬುದನ್ನು ಅವರ ಮಾತಿನಲ್ಲಿ ತಿಳಿಯಬಹುದಾಗಿದೆ. ಒಡಲು-ನೆರಳುಗಳ ಉಪಮೆ ಇದನ್ನು ಸಮರ್ಥವಾಗಿ ವಿವರಿಸುತ್ತದೆ. ಸುಮಿತ್ರೆಯು ಕಾಡಿಗೆ ಹೊರಟ ಲಕ್ಷ್ಮಣನಿಗೆ “ರಾಮಂ ದಶರಥಂ ವಿದ್ಧಿ……. ಗಚ್ಛ ತಾತ ಯಥಾ ಸುಖಂ” “ಮಗು ನಿಮ್ಮ ಅಣ್ಣನನ್ನೇ ಅಪ್ಪನೆಂದು ಭಾವಿಸಿ ಸುಖವಾಗಿ ಹೋಗಿಬಾ” ಎಂದು ಹೇಳಿದ ಮಾತನ್ನು ಇಲ್ಲಿ ನೆನಪಿಗೆ ತಂದುಕೊಳ್ಳಬಹುದು.
ಮೂಲ ...{Loading}...
ಒಡಲ ಬಳಿ ನೆಳಲಿಂಗೆ ಗತಿ ಬೇ
ರ್ಪಡಿಸಿಹುದೆ ಸುಖದುಃಖವಿವು ನಿ
ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ
ಅಡವಿಯೇ ಸಾಮ್ರಾಜ್ಯ ನಿಮ್ಮಡಿ
ಯೊಡನಿರಲು ನೀವಿಲ್ಲದಾ ಪುರ
ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ ॥9॥
೦೧೦ ತುಷ್ಟನಾದನು ನೃಪತಿ ...{Loading}...
ತುಷ್ಟನಾದನು ನೃಪತಿ ಕೃತ ಪರಿ
ಶಿಷ್ಟಪಾಲನು ಜಗದೊಳತ್ಯು
ತ್ಕೃಷ್ಟ ಚರಿತನು ತೆಂಕ ದೆಸೆಗೆ ಸಹೋದರರು ಸಹಿತ
ದುಷ್ಟ ಮೃಗಗಳ ಬೇಂಟೆಯಾಡಿ ವ
ಸಿಷ್ಠ ಮುನಿಯಾಶ್ರಮದ ಸುಜನರ
ರಿಷ್ಟವನು ಪರಿಹರಿಸುತೈತಂದನು ಸರಾಗದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತಮ್ಮಂದಿರ ಮಾತು ಕೇಳಿ ಯುಧಿಷ್ಠಿರನಿಗೆ ಸಮಾಧಾನವಾಯಿತು. ಧರ್ಮರಾಯನು ಕೃತ ಪರಿಶಿಷ್ಟಪಾಲ ಅಂದರೆ ಸಜ್ಜನರನ್ನು ಪೋಷಿಸುವವನು. ಮಹಾ ಗುಣಶಾಲಿ ಈ ಧರ್ಮರಾಯನು ತನ್ನ ತಮ್ಮಂದಿರೊಂದಿಗೆ ದಕ್ಷಿಣ ದಿಕ್ಕಿನಲ್ಲಿ ಹೊರಟ. ದಾರಿಯಲ್ಲಿ ಎಲ್ಲರೂ ದುಷ್ಟ ಮೃಗಗಳ ಬೇಟೆಯಾಡಿದರು ಅನಂತರ ಅಲ್ಲಿದ್ದ ವಸಿಷ್ಠ ಮುನಿಗಳ ಆಶ್ರಮದ ಸಾಧುಗಳ ಅರಿಷ್ಟ (ವಿಪತ್ತು)ಗಳನ್ನು ದೂರ ಮಾಡಿ ಧರ್ಮರಾಯನು ಮುಂದೆ ಪ್ರಯಾಣ ಮಾಡಿದ.
ಪದಾರ್ಥ (ಕ.ಗ.ಪ)
ತುಷ್ಟ-ಸಮಾಧಾನಿ, ಕೃತ ಪರಿಶಿಷ್ಟ ಪಾಲ-ಸಜ್ಜನರನ್ನು ಕಾಪಾಡುವವನಾಗಿ, ಅತ್ಯುತ್ಕೃಷ್ಟಚರಿತ-ಅತಿಶ್ರೇಷ್ಠ ಗುಣಗಳಿಂದ ಶೋಭಿಸುವವನು, ತೆಂಕದೆಸೆ-ದಕ್ಷಿಣ ದಿಕ್ಕು,
(ಸುಜನರ + ಅರಿಷ್ಟವನು ಎಂದು ಬಿಡಿಸಿಕೊಳ್ಳಬೇಕು)
ಅರಿಷ್ಟ-ಅಮಂಗಳ, ಐತಂದ-ಬಂದ
ಮೂಲ ...{Loading}...
ತುಷ್ಟನಾದನು ನೃಪತಿ ಕೃತ ಪರಿ
ಶಿಷ್ಟಪಾಲನು ಜಗದೊಳತ್ಯು
ತ್ಕೃಷ್ಟ ಚರಿತನು ತೆಂಕ ದೆಸೆಗೆ ಸಹೋದರರು ಸಹಿತ
ದುಷ್ಟ ಮೃಗಗಳ ಬೇಂಟೆಯಾಡಿ ವ
ಸಿಷ್ಠ ಮುನಿಯಾಶ್ರಮದ ಸುಜನರ
ರಿಷ್ಟವನು ಪರಿಹರಿಸುತೈತಂದನು ಸರಾಗದಲಿ ॥10॥
೦೧೧ ಕಾಳಿ ಪರಮ ...{Loading}...
ಕಾಳಿ ಪರಮ ಕರಾಳಿ ಸುರಮುನಿ
ಮೌಳಿಮಂಡಿತ ಚರಣೆ ಖಳ ದನು
ಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧ ತನುಯುತಳೆ
ಶೂಲ ಪರಶು ಪರಶ್ವಧಾದಿಗ
ಳಾಳುತೊಪ್ಪುವ ಕರಚತುಷ್ಟಯೆ
ಪಾಲಿಸೆಮ್ಮನೆನುತ್ತ ದುರ್ಗೆಯನಂದು ನುತಿಸಿದರು ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಕಾಳಿಕಾದೇವಿ ! ನೀನು ಮಹಾಭಯಂಕರಳು. ದೇವರು ಮುನಿಜನರು ಎಲ್ಲರೂ ನಮಸ್ಕರಿಸುವಂಥ ಶ್ರೀಪಾದ ನಿನ್ನದು. ದುಷ್ಟರಾದ ರಾಕ್ಷಸರ ಸಮೂಹವನ್ನು ಮರ್ದನ ಮಾಡುವಂಥವಳು. ಮಹಾಶಿವನ ಅರ್ಧಾಂಗಿಯಾದವಳು. ಶೂಲ, ಪರಶು, ಪರಶ್ವಧ ಮೊದಲಾದುವುಗಳನ್ನು ನಾಲ್ಕು ಕೈಗಳಲ್ಲಿ ಹಿಡಿದವಳು, ಇಂಥ ಮಹಿಮೆಯುಳ್ಳ ನೀನು ನಮ್ಮನ್ನು ಕಾಪಾಡು” ಎಂದು ಪಾಂಡವರು ಕಾಳಿಯನ್ನು ಪ್ರಾರ್ಥಿಸಿದರು.
ಪದಾರ್ಥ (ಕ.ಗ.ಪ)
ಮೌಳಿ-ತಲೆ, ಖಳ-ದುಷ್ಟರಾದ, ದನುಜಾಳಿ (ದನುಜ+ಅಳಿ) - ರಾಕ್ಷಸ ಸಮೂಹ, ಮರ್ದಿನಿ-ಕೊಲ್ಲುವವಳು, ಘನ ಕಪರ್ದಿ-ಮಹಾಶಿವನ, ವರಾರ್ಧ ತನುಯುತೆ-ಅರ್ಧಶರೀರದಲ್ಲಿ ನೆಲೆ ನಿಂತವಳು, ಪರಶು-ಕೊಡಲಿ, ಪರಶ್ವಧ-ಚಪಗೊಡಲಿ, ಕುಠಾರ. ನುತಿಸು-ಬೇಡು, ಪ್ರಾರ್ಥಿಸು,
ಟಿಪ್ಪನೀ (ಕ.ಗ.ಪ)
ದಾಕ್ಷಿಣಾತ್ಯ ಪಾಠಗಳಲ್ಲಿ ಕಾಳಿಯು ಪ್ರಸನ್ನಳಾದ ವಿಷಯವಿದೆ ಮೂಲಭಾರತದ “ಮತ್ ಪ್ರಸಾದಾಚ್ಚ ವಃ ಸರ್ವಾನ್ ವಿರಾಟ ನಗರೇ ಸ್ಥಿತಾನ್ !ನ ಪ್ರಜ್ಞಾಸ್ಯಂತಿ ಕುರವೋ ನರಾವಾ ತನ್ನಿದಾಸಿನ:” ನನ್ನ ಅನುಗ್ರಹದಿಂದ ವಿರಾಟನಗರದಲ್ಲಿ ನಿಮ್ಮನ್ನು ಕೌರವರಾಗಲಿ ನಗರದವರಾಗಲಿ ಗುರುತಿಸದಿರಲಿ.
ಮೂಲಭಾರತದಲ್ಲಿ ಪಾಂಡವರು ಆಯುಧಗಳನ್ನು ಬನ್ನಿಮರದ ಮೇಲೆ ಇಟ್ಟ ನಂತರ ಕಾಳಿಯ ಆರಾಧನೆ ಮಾಡಿದ ಸಂಗತಿ ಬರುತ್ತದೆ. ಇಲ್ಲಿ ಮೊದಲಿಗೇ ಕಾಳಿಯ ಪೂಜೆ.
ದುರ್ಗೆ ಎಂದರೆ “ದುಸ್ಸಾಧ್ಯವಾದ ವಿಪತ್ತುಗಳಿಂದ ನಮ್ಮನ್ನು ಪಾರಮಾಡುವವಳು” ಎಂಬರ್ಥವನ್ನು ಗಮನಿಸಬೇಕು.
ಈ ದುರ್ಗಾಸ್ತುತಿಯನ್ನು ಕುಮಾರವ್ಯಾಸ ಒಂದೇ ಒಂದು ಪದ್ಯದಲ್ಲಿ ಮುಗಿಸಿದ್ದಾನೆ ಮೂಲಭಾರತದಲ್ಲಿ ಆರನೆಯ ಅಧ್ಯಾಯ ಪೂರ್ಣವಾಗಿ ದುರ್ಗಾಸ್ತುತಿಗೆ ಮೀಸಲಾಗಿದೆ (35 ಶ್ಲೋಕಗಳು).
ಮೂಲ ...{Loading}...
ಕಾಳಿ ಪರಮ ಕರಾಳಿ ಸುರಮುನಿ
ಮೌಳಿಮಂಡಿತ ಚರಣೆ ಖಳ ದನು
ಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧ ತನುಯುತಳೆ
ಶೂಲ ಪರಶು ಪರಶ್ವಧಾದಿಗ
ಳಾಳುತೊಪ್ಪುವ ಕರಚತುಷ್ಟಯೆ
ಪಾಲಿಸೆಮ್ಮನೆನುತ್ತ ದುರ್ಗೆಯನಂದು ನುತಿಸಿದರು ॥11॥
೦೧೨ ಬನ್ದು ಮತ್ಸ್ಯ ...{Loading}...
ಬಂದು ಮತ್ಸ್ಯ ಪುರೋಪಕಂಠದ
ನಂದನದ ಕೆಲ-ಕಡೆಯಲ್ ಅನಿಬರು+++(=ಅನೇಕರು)+++
ನಿಂದು ನಾಲುಕು ದೆಸೆಯನ್ ಈಕ್ಷಿಸಿ ನಿಜ-ನಿವಾಸದಲಿ
ತಂದ ಚರ್ಮದಲ್ ಅಖಿಳ ಕೈದುವನ್+++(=ಶಸ್ತ್ರಗಳನ್)+++
ಒಂದು ಹೆಣನ್ ಆಕಾರದಲಿ ಬಿಗಿದ್
ಒಂದು ಬನ್ನಿಯ ಮರನ ತುದಿಯಲಿ ಕಟ್ಟಲ್ ಏಱಿದರು ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಾಗೆ ಬಂದ ಪಾಂಡವರು ಮತ್ಸ್ಯನಗರಿಯ ಹೊರಭಾಗದ ಒಂದು ತೋಟದ ಪಕ್ಕದಲ್ಲಿ ನಿಂತರು. ಯಾರಾದರೂ ಇದ್ದಾರೆಯೇ ಎಂದು ಸುತ್ತಲೂ ನೋಡಿದರು. ತಾವು ಮನೆಯಿಂದ ತಂದಿದ್ದ ಚರ್ಮದ ಚೀಲದೊಳಗೆ ತಮ್ಮ ಎಲ್ಲ ಶಸ್ತ್ರಾಸ್ತ್ರ ಆಯುಧಗಳನ್ನು ಒಂದು ಹೆಣದ ಆಕಾರದಲ್ಲಿ ಬಿಗಿದರು. ಅನಂತರ ಮರದ ತುದಿಯಲ್ಲಿ ಆ ಚೀಲವನ್ನು ತೂಗಹಾಕಿದರು.
ಪದಾರ್ಥ (ಕ.ಗ.ಪ)
ಉಪಕಂಠ-ಸಮೀಪ, ನಂದನ-ತೋಟ, ಕೆಲಕಡೆ-ಒಂದು ಪಕ್ಕ, ಅನಿಬರು-ಎಲ್ಲರೂ, ಕೈದು-ಆಯುಧ, ಶಸ್ತ್ರಾಸ್ತ್ರ,
ಪಾಠಾನ್ತರ (ಕ.ಗ.ಪ)
- ಮರದ ತುದಿಯಲಿ ‘ಕಟ್ಟಲೇರಿದರು’ ಎಂಬುದನ್ನು ಕುಮಾರವ್ಯಾಸ ಭಾರತ ಸಂಗ್ರಹದಲ್ಲಿ (ಎಂ.ವಿ.ಸೀ) “ಕಟ್ಟನೇಱುದರು” ಎಂದು ಸೂಚಿಸಿದ್ದಾರೆ. ಕಟ್ಟನ್ ಏಱುದರು ಎಂದರೆ ತೂಗಹಾಕಿದರು ಎಂದರ್ಥ. ಆಯುಧ ವಿಕ್ಷೇಪಣ ಎಂಬರ್ಥದಲ್ಲಿ ಕಟ್ಟನ್ ಏಱಿಸಿದರು ಎಂಬ ಪಾಠ ಸಾಧುವಾದದ್ದು.
ಟಿಪ್ಪನೀ (ಕ.ಗ.ಪ)
ಪುರೋಪಕಂಠದ ನಂದನ : ಊರಸಮೀಪದ ತೋಟ ಎನ್ನುತ್ತಾನೆ ಕುಮಾರವ್ಯಾಸ. ಆದರೆ ಮೂಲದಲ್ಲಿ ‘ಶ್ಮಶಾನ’ ಎಂದೇ ಹೇಳಿದೆ.
ಹೆಣನ ಆಕಾರದಲ್ಲಿ ಆಯುಧಗಳನ್ನು ಕಟ್ಟಲಾಗಿತ್ತು ಎಂದು ಕುಮಾರವ್ಯಾಸ ಹೇಳುತ್ತಾನೆ.
ಮೂಲ ಭಾರತದಲ್ಲಿ ಒಂದು ಹೆಣವನ್ನೇ ಪಕ್ಕದಲ್ಲಿ ಕಟ್ಟಿದರು ಎಂದು ಹೇಳಲಾಗಿದೆ.
“ಅಬದ್ಧ ಶವ ಮತ್ರೇತಿ ಗಂಧಮಾಧಾಯ ಪೂತಿಕಂ
ಅಶೀತಿ ಶತವರ್ಷೇಯಂ ಮಾತಾನ ಇತಿ ವಾದಿನ”
(ಪಾಂಡವರು ಸತ್ತುಬಿದ್ದಿದ್ದ ಒಬ್ಬನ ದೇಹವನ್ನು (ಶವ) ಅದರ ಮೇಲೆ ಕಟ್ಟಿದರು. ದುರ್ವಾಸನೆ ಬೀರುವುದರಿಂದ ಹತ್ತಿರ ಬಂದವರು ದೂರ ಹೋಗಲಿ ಎಂಬುದು ಅವರ ಆಶಯವಾಗಿತ್ತು. ಅಲ್ಲದೆ ಇದು ನಮ್ಮ ಕುಲಧರ್ಮ, ನಮ್ಮ ಪೂರ್ವಿಕರು ಹೀಗೇ ಮಾಡುತ್ತಿದ್ದರು ಎಂದು ಅಲ್ಲಿದ್ದ ಗೊಲ್ಲರಿಗೆ ಹೇಳಿದರು)
ಮೂಲ ...{Loading}...
ಬಂದು ಮತ್ಸ್ಯ ಪುರೋಪಕಂಠದ
ನಂದನದ ಕೆಲಕಡೆಯಲನಿಬರು
ನಿಂದು ನಾಲುಕು ದೆಸೆಯನೀಕ್ಷಿಸಿ ನಿಜನಿವಾಸದಲಿ
ತಂದ ಚರ್ಮದಲಖಿಳ ಕೈದುವ
ನೊಂದು ಹೆಣನಾಕಾರದಲಿ ಬಿಗಿ
ದೊಂದು ಬನ್ನಿಯ ಮರನ ತುದಿಯಲಿ ಕಟ್ಟಲೇಱಿದರು ॥12॥
೦೧೩ ತೆಗೆಯದಿರಿ ನೀವೆನ್ದು ...{Loading}...
ತೆಗೆಯದಿರಿ ನೀವೆಂದು ತುರುಗಾ
ಹಿಗಳನಂಜಿಸಿ ಧರ್ಮಸುತ ದೃಗು
ಯುಗವ ಮುಚ್ಚಿ ಸುರೇಂದ್ರ ಯಮ ವರುಣಾದಿಗಳಿಗೆರಗಿ
ವಿಗಡನೀ ಕಲಿಭೀಮನೀ ಕೈ
ದುಗಳನೀತಂಗೀಯದಿರಿ ಕೈ
ಮುಗಿದು ಬೇಡಿದೆನೆಂದು ಸುರರಿಗೆ ನುಡಿದನವನೀಶ ॥13॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೆಣದ ಆಕಾರದಲ್ಲಿ ತೂಗು ಹಾಕಿದುದನ್ನು ಅಲ್ಲಿದ್ದ ದನಕಾಯುವ ಹುಡುಗರು ಕುತೂಹಲದಿಂದ ನೋಡುತ್ತಿದ್ದರು. ಅದರ ತಂಟೆಗೆ ಹೋಗಬೇಡಿ ಅಪಾಯ ಎಂದು ಆ ಹುಡುಗರನ್ನು ಹೆದರಿಸಿದ್ದಾಯಿತು. ಆ ಹುಡುಗರೆಲ್ಲ ಹೆದರಿ ಚದುರಿದರು. ಅನಂತರ ಧರ್ಮರಾಯನು ಕಣ್ಣುಮುಚ್ಚಿ ಇಂದ್ರ ಯಮ ವರುಣ ಮೊದಲಾದ ದಿಕ್ಪಾಲಕರಿಗೆಲ್ಲ ನಮಸ್ಕರಿಸಿ “ದಿಗ್ದೇವತೆಗಳಿರಾ ದುಡುಕಿನ ಸ್ವಭಾವದ ಕಲಿಭೀಮನೇನಾದರೂ ನಿಮ್ಮಲ್ಲಿಗೆ ಬಂದು ಕೇಳಿದರೆ ಅವನಿಗೆ ಈ ಶಸ್ತ್ರಾಸ್ತ್ರಗಳನ್ನು ಕೊಡಬೇಡಿ” ಎಂದು ಬೇಡಿಕೊಂಡ.
ಪದಾರ್ಥ (ಕ.ಗ.ಪ)
ತುರುಗಾಹಿ-ದನಕಾಯುವ ಹುಡುಗರು, ದೃಗುಯುಗ-ಎರಡು ಕಣ್ಣು, ಎರಗು-ತಲೆಬಾಗು, ಕೈದು-ಶಸ್ತ್ರಾಸ್ತ್ರ, ಆಯುಧ.
ಟಿಪ್ಪನೀ (ಕ.ಗ.ಪ)
ಹೆಣದ ಆಕಾರದಲ್ಲಿ ಶಸ್ತ್ರಾಸ್ತ್ರ -ಶಸ್ತ್ರಾಸ್ತ್ರಗಳನ್ನು ಹೆಣದ ಆಕಾರದಲ್ಲಿ ಮರದ ಮೇಲೆ ಇಟ್ಟದ್ದು ಅರ್ಥಪೂರ್ಣವಾಗಿದೆ. ಅದು ಯಾರೋ ಸಂಬಂಧಿಕರ ಹೆಣ ಎಂಬ ಭಾವನೆ ತಂದರೆ ಯಾರೂ ಹತ್ತಿರ ಸುಳಿಯುವುದಿಲ್ಲ, ಹುಡುಗರಂತೂ ಹೆದರಿ ಕಾಲು ಕೀಳುತ್ತಾರೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದರು.
“ಶ್ಮಶಾನದ ಪಕ್ಕದಲ್ಲಿದ್ದ ಬನ್ನಿ ಮರದ ಮೇಲೆ ತಮ್ಮ ಶಸ್ತ್ರಾಗಳನ್ನೆಲ್ಲ ಮನುಷ್ಯಾಕೃತಿಯಲ್ಲಿ ನೇಣುಹಾಕಿದ ಪಾಂಡವರು ಪಕ್ಕದಲ್ಲಿದ್ದ ಹೆಣಗಳನ್ನೆಲ್ಲ ಅದರ ಮೇಲೆ ರಾಶಿ ಹಾಕಿದರು” ಎಂದು ಪಂಪ ಹೇಳುತ್ತಾನೆ.
ಮೂಲ ...{Loading}...
ತೆಗೆಯದಿರಿ ನೀವೆಂದು ತುರುಗಾ
ಹಿಗಳನಂಜಿಸಿ ಧರ್ಮಸುತ ದೃಗು
ಯುಗವ ಮುಚ್ಚಿ ಸುರೇಂದ್ರ ಯಮ ವರುಣಾದಿಗಳಿಗೆರಗಿ
ವಿಗಡನೀ ಕಲಿಭೀಮನೀ ಕೈ
ದುಗಳನೀತಂಗೀಯದಿರಿ ಕೈ
ಮುಗಿದು ಬೇಡಿದೆನೆಂದು ಸುರರಿಗೆ ನುಡಿದನವನೀಶ ॥13॥
೦೧೪ ಈವುದಾ ಬೇಡಿದರೆ ...{Loading}...
ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡ
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡೊತ್ತಿ ಗರ್ಜಿಸಿದ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಆ ಮರವನ್ನು ಬೇಡಿಕೊಂಡ. “ನಾನು ಬಂದು ಕೇಳಿದರೆ ಈ ಶಸ್ತ್ರಾಸ್ತ್ರಗಳನ್ನು ಕೊಡಿ. ಅರ್ಜುನನು ಬಂದು ಕೇಳಿದರೂ ಕೊಡಿ. ಆದರೆ ಈ ಅಜ್ಞಾತವಾಸದ ಅವಧಿಯಲ್ಲಿ ಭೀಮನೇನಾದರೂ ಬಂದು ಕೇಳಿದರೆ ಕೊಡಬೇಡಿ” ಎಂದು ತಾನು ಹಿಂದೆ ಹೇಳಿದುದನ್ನೇ ವಿಸ್ತರಿಸಿ ಹೇಳಿದ. ಈ ಮಾತು ಕೇಳಿ ಮೊದಲೇ ಮುಂಗೋಪಿಯಾಗಿದ್ದ ಭೀಮನಿಗೆ ಸಿಟ್ಟು ಬರದೆ ಇದ್ದೀತೆ ? ಭೀಮನು ಧರ್ಮರಾಯನ ಕಡೆ ತಿರುಗಿ ವ್ಯಂಗ್ಯವಾಗಿ “ಹೌದು, ಹೌದು. ನೀವು ಕುಂತಿಯ ಮಕ್ಕಳು ನಾವು ದುರ್ಯೋಧನನ ಕಡೆಯವರೆಂದು ಭಾವಿಸಿದ್ದೀರೇನು ? ಹೌದು ಹೌದು ತಪ್ಪೇನಿಲ್ಲ” ಎಂದು ಹಲ್ಲುಕಡಿಯುತ್ತ ಕೂಗಾಡಿದ.
ಪದಾರ್ಥ (ಕ.ಗ.ಪ)
ಆ=ಆನ್-ನಾನು, ವಿಗಡ-ಮಹಾ ಪ್ರತಾಪಶಾಲಿ, ವೀರ, ಖತಿ-ಕೋಪ, ಅನಿಲಸುತ-ಭೀಮ
ಟಿಪ್ಪನೀ (ಕ.ಗ.ಪ)
ಮೂಲಭಾರತದಲ್ಲಿ ಈ ಪ್ರಸಂಗವೇ ಇಲ್ಲ. ಇದು ಕುಮಾರವ್ಯಾಸನ ಸ್ವಂತ ಕಲ್ಪನೆಯೊ ಅಥವಾ ಜಾನಪದ ಕಥನವನ್ನು ಕವಿ ಅನುಸರಿಸಿದ್ದಾನೊ ಹೇಳುವುದು ಕಷ್ಟ. ತೆಲುಗು ಭಾರತದಿಂದಲೂ ಪ್ರಭಾವಿತನಾಗಿರಬಹುದು. (ಆದಿಪಂಚಕಮು ಪರಾಯಿತಂ- ಕೃಷ್ಣಮೂರ್ತಿ) ಕನ್ನಡ ಜನಪದ ಕಥನ ಗೀತೆಯೊಂದರಲ್ಲಿ ಧರ್ಮರಾಯನು “ಬನ್ನಿ ಗಿಡದಾಗ ಬಾಣ ಇಟ್ಟೀವಿ ತಾಯಿ | ಯಾರು ಬಂದರೂ ಕೊಡಬೇಡ | ಹಡದವ್ವ - ಅರ್ಜುನ ಬಂದರೆ ಕೊಡಬೇಕು”. ಎನ್ನುತ್ತಾನೆ.
ಮೂಲ ...{Loading}...
ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡ
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡೊತ್ತಿ ಗರ್ಜಿಸಿದ ॥14॥
೦೧೫ ಸುರನಿಕರ ಕಾದಿರಲಿ ...{Loading}...
ಸುರನಿಕರ ಕಾದಿರಲಿ ಮೇಣೀ
ಧರಣಿ ಕೊಡೆನೆಂದಿರಲಿ ಹಸ್ತಿನ
ಪುರಿಗೆ ಧಾಳಿಯನಿಡುವೆನಮರರ ಮೋರೆಗಳ ತಿವಿದು
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಿಡುಕನಾದ ಭೀಮ ಅಣ್ಣನಿಗೆ ಹೇಳಿದ : “ಕೌರವನು ಭೂಮಿಯನ್ನು ನಮಗೆ ಹಿಂದಕ್ಕೆ ಕೊಡುವುದಿಲ್ಲ ಎಂದು ಹೇಳಿದರೂ ಚಿಂತೆಯಿಲ್ಲ. ದೇವತೆಗಳೇ ಆ ಕೌರವರನ್ನು ಕಾಪಾಡಿಕೊಳ್ಳಲು ಬರಲಿ ಚಿಂತೆಯಿಲ್ಲ. ನಾನು ಆ ದೇವತೆಗಳ ಮೋರೆಗಳನ್ನು ತಿವಿದು ಈ ಶ್ರೇಷ್ಠವಾದ ಆಯುಧ ಸಾಮಗ್ರಿಯನ್ನು ಹೊತ್ತುಕೊಂಡು ಹೋಗುತ್ತೇನೆ. ಹಸ್ತಿನಾಪುರಕ್ಕೆ ಧಾಳಿ ಇಡುತ್ತೇನೆ”. ಅಬ್ಬರಿಸುತ್ತ ಭೀಮನು ಹೀಗೆ ಮಾತಾಡಿದಾಗ ಧರ್ಮರಾಯನು ಮುಂದೆ ಬಂದು ಭೀಮನನ್ನು ತಬ್ಬಿಕೊಂಡು ಅವನ ಮೈಸವರಿದ.
ಪದಾರ್ಥ (ಕ.ಗ.ಪ)
ಸುರನಿಕರ-ದೇವ ಸಮೂಹ, ಮೇಣ್-ಮತ್ತು, ಅಥವಾ, ಉರುತರ-ಶ್ರೇಷ್ಠವಾದ
ಮೂಲ ...{Loading}...
ಸುರನಿಕರ ಕಾದಿರಲಿ ಮೇಣೀ
ಧರಣಿ ಕೊಡೆನೆಂದಿರಲಿ ಹಸ್ತಿನ
ಪುರಿಗೆ ಧಾಳಿಯನಿಡುವೆನಮರರ ಮೋರೆಗಳ ತಿವಿದು
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿಯಪ್ಪಿ ಮೈದಡವಿದನು ಭೂಪಾಲ ॥15॥
೦೧೬ ಅವಧಿಯೊನ್ದೇ ವರುಷವಿದರೊಳ ...{Loading}...
ಅವಧಿಯೊಂದೇ ವರುಷವಿದರೊಳ
ಗೆವಗೆ ಸೈರಣೆಯುಂಟು ನೀ ಮುನಿ
ದವಗಡಿಸಿದೊಡೆ ಬಳಿಕ ಸೈರಿಸಲರಿಯೆ ಮನ ಮುಳಿದು
ಅವನಿಯಲಿ ಹನ್ನೆರಡು ವರುಷವು
ನವೆದುದುಂ ನಿಷ್ಫಲವಲಾ ಕೌ
ರವರಿಗತಿ ಲಾಗಹುದು ನೀನೇ ಬಲ್ಲೆ ಹೋಗೆಂದ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ತಮ್ಮ ಭೀಮ ! ಅರಣ್ಯವಾಸವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಈಗ ಒಂದೇ ಒಂದು ವರ್ಷದ ಅಜ್ಞಾತವಾಸ. ಈ ಅವಧಿಯನ್ನು ನಾವುಗಳು ತಾಳ್ಮೆಯಿಂದ ಕಳೆಯುತ್ತೇವೆ. ಆದರೆ ನೀನು ಕೋಪಿಷ್ಠ. ಸಣ್ಣ ಪುಟ್ಟ ಪ್ರಚೋದನೆಗೇ ನೀನು ಕೆರಳಿ ಕಾರ್ಯಾಚರಣೆ ಮಾಡಲು ಹೋದರೆ ಕೌರವ ನಮ್ಮನ್ನು ಪತ್ತೆ ಹಚ್ಚುವಂತಾಗುತ್ತದೆ. ಆಗ ನಮ್ಮ ಹನ್ನೆರಡು ವರ್ಷದ ವನವಾಸ ವ್ಯರ್ಥವಾಗಿ ಮತ್ತೊಮ್ಮೆ ನಾವು ಕಾಡುಪಾಲಾಗಬೇಕಾಗುತ್ತದೆ. ಈ ನಿನ್ನ ಆರ್ಭಟದಿಂದ ಕೌರವರಿಗೇ ಪ್ರಯೋಜನವಾಗುವುದಿಲ್ಲವೇ ? ನಿನಗೇನು ಇದು ಗೊತ್ತಿಲ್ಲವೆ ? ಸುಮ್ಮನಿರು” ಎಂದು ಧರ್ಮರಾಯನು ತಮ್ಮನನ್ನು ಒಲಿಸಿಕೊಂಡ.
ಪದಾರ್ಥ (ಕ.ಗ.ಪ)
ಎವಗೆ-ಎಮಗೆ, ನಮಗೆ (ಮಕಾರ ಇಲ್ಲಿ ವಕಾರವಾಗಿದೆ ಈ ಪದ ಮಧ್ಯ ವ್ಯತ್ಯಾಸವನ್ನು ವ್ಯಾಕರಣವು ಅನುಮೋದಿಸಿದೆ),
ಅವನಿ-ಭೂಮಿ, ಅವಗಡಿಸು-ಕೆರಳು, ಧಿಕ್ಕರಿಸು, ಅವಸರಪಡು, ಲಾಗು-ಅಧಿಕ, ಹೆಚ್ಚಳ
ಮೂಲ ...{Loading}...
ಅವಧಿಯೊಂದೇ ವರುಷವಿದರೊಳ
ಗೆವಗೆ ಸೈರಣೆಯುಂಟು ನೀ ಮುನಿ
ದವಗಡಿಸಿದೊಡೆ ಬಳಿಕ ಸೈರಿಸಲರಿಯೆ ಮನ ಮುಳಿದು
ಅವನಿಯಲಿ ಹನ್ನೆರಡು ವರುಷವು
ನವೆದುದುಂ ನಿಷ್ಫಲವಲಾ ಕೌ
ರವರಿಗತಿ ಲಾಗಹುದು ನೀನೇ ಬಲ್ಲೆ ಹೋಗೆಂದ ॥16॥
೦೧೭ ಹದುಳವಿಟ್ಟನು ಭೀಮನನು ...{Loading}...
ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನ ಪುರಿಗೆ ಯತಿ ವೇ
ಷದಲಿ ಬಂದನು ಹೊನ್ನ ಸಾರಿಯ ಚೀಲ ಕಕ್ಷದಲಿ
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಧರ್ಮರಾಯನು ಸಮಾಧಾನ ಚಿತ್ತದಿಂದಲೇ ಭೀಮನನ್ನು ಶಾಂತಿಗೊಳಿಸಿದ. ಅನಂತರ ತಾನೊಬ್ಬನೇ ವಿರಾಟನಗರಕ್ಕೆ ಯತಿ ವೇಷದಲ್ಲಿ ಬಂದ. ಅವನ ಕಂಕುಳಲ್ಲಿ ಚಿನ್ನದ ದಾಳಗಳನ್ನುಳ್ಳ ಪಗಡೆಯ ಚೀಲವಿತ್ತು. ಧರ್ಮರಾಯನ ಮುಖದ ತೇಜಸ್ಸನ್ನು ಕಂಡು ಸಭಾಸದರೆಲ್ಲ ನಮಸ್ಕರಿಸಿದರು. ಶಾಂತಿ ಸಂಪನ್ನನಾಗಿ ಬಂದ ಧರ್ಮರಾಯನನ್ನು ವಿರಾಟನು ಕಂಡು ಬಂದ ಕಾರಣವನ್ನು ಕೇಳಿದ.
ಪದಾರ್ಥ (ಕ.ಗ.ಪ)
ಹದುಳ-ಕ್ಷೇಮ, ನಿರ್ಮದ-ಮದ ರಹಿತನಾದ ಧರ್ಮರಾಯ, ಹೊನ್ನ ಸಾರಿ-ಚಿನ್ನದ ಪಗಡೆಕಾಯಿ, ಕಕ್ಷ-ಕಂಕುಳು, ಆನತ-ಬಾಗು, ಬೆಸಗೊಂಡ-ಕೇಳಿದ.
ಟಿಪ್ಪನೀ (ಕ.ಗ.ಪ)
- ವೇಷ ಮರೆಸಿಕೊಂಡಿದ್ದ ಧರ್ಮರಾಯನು ಅಪರಿಚಿತರ ಗಮನವನ್ನು ಸೆಳೆಯಬಲ್ಲಷ್ಟು ತೇಜೋವಂತನಾಗಿದ್ದನೆಂದು ಕುಮಾರವ್ಯಾಸನು ಸೂಚಿಸುತ್ತಿದ್ದಾನೆ.
- ಬೃಹದಶ್ವ (ಮತಾಕ್ಷ) ಎಂಬುವನು ಧರ್ಮರಾಯನಿಗೆ ನಳ ಚರಿತ್ರೆಯನ್ನು ಹೇಳಿ ಅಕ್ಷ (ಪಗಡೆ) ವಿದ್ಯೆಯನ್ನು ಕಲಿಸಿಕೊಟ್ಟಿದ್ದ ಸಂಗತಿಯು ವ್ಯಾಸ ಭಾರತದಲ್ಲಿ ಬಂದಿದೆ.
- ವಿರಾಟ ರಾಜ್ಯವನ್ನು ಈಗಿನ ಜೈಪುರ ಸಂಸ್ಥಾನ ಎನ್ನಲಾಗಿದೆ.
ಕಂಕ ಶಬ್ದಕ್ಕೆ ಯಮಧರ್ಮರಾಜ ಎಂಬರ್ಥವೂ ಇರುವುದನ್ನು ಗಮನಿಸಬೇಕು.
ಮೂಲ ...{Loading}...
ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನ ಪುರಿಗೆ ಯತಿ ವೇ
ಷದಲಿ ಬಂದನು ಹೊನ್ನ ಸಾರಿಯ ಚೀಲ ಕಕ್ಷದಲಿ
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ ॥17॥
೦೧೮ ಇತ್ತ ಬಿಜಯಙ್ಗೈಯಿ ...{Loading}...
ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು
ಇತ್ತಪೆವು ಬೇಡಿದುದ ನಾವೆನೆ
ಸುತ್ತಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಾಟನು ಗೌರವಾದರಗಳಿಂದ ಧರ್ಮರಾಯನಿಗೆ ಹೇಳಿದ :
ದಯಮಾಡಿ. ತಾವು ದೊಡ್ಡವರು ಎಲ್ಲಿಂದ ಬಂದಿರಿ ? ನಿಮ್ಮಂಥ ಸದ್ವೇಷದ ಮಹಾತ್ಮರನ್ನು ಕಂಡು ಧನ್ಯರಾಗಿದ್ದೇವೆ. ತಮಗೇನು ಬೇಕು, ಹೇಳಿ ಕೊಡುತ್ತೇವೆ. ಆ ಮಾತು ಕೇಳಿ ಧರ್ಮರಾಯನು “ನಾವು ಸುತ್ತಿ ಬಳಸಿ ಮಾತಾಡುವುದಿಲ್ಲ. ನಿಮ್ಮ ಸೇವೆ ಮಾಡುವುದಕ್ಕೆಂದೇ ಇಲ್ಲಿಗೆ ಬಂದಿದ್ದೇವೆ. ನಾನು ಹಿಂದೆ ಒಬ್ಬ ರಾಜನ ಸೇವೆ ಮಾಡುತ್ತಿದ್ದೆ. ಅದು ತಪ್ಪಿದ್ದರಿಂದ ಇಲ್ಲಿಗೆ ಬಂದಿದ್ದೇನೆ” ಎಂದನು
ಪದಾರ್ಥ (ಕ.ಗ.ಪ)
ಬಿಜಯಂಗೈಯಿ-ದಯಮಾಡಿ, ಬನ್ನಿ, ಸುತ್ತ ಬಳಸೆವು-ಲೋಕಾಭಿರಾಮವಾದ ಮಾತುಗಳನಾಡುವುದಿಲ್ಲ ನೇರವಾಗಿ ವಿಚಾರಕ್ಕೆ ಬರುತ್ತೇನೆ ಎಂದರ್ಥ, ನಿಮಿತ್ತ-ಕಾರಣದಿಂದ, ಅಂತರಿಸು-ದೂರವಾಗು, ಕೈತಪ್ಪು
ಟಿಪ್ಪನೀ (ಕ.ಗ.ಪ)
ವಿರಾಟ -ಸತ್ಯವತಿಯ ಸೋದರ ‘ವಿರಾಟ’ ಎನ್ನುವ ಅಭಿಪ್ರಾಯವೂ ಇದೆ. ಅಥವಾ ಆ ಮತ್ಸ್ಯನ ಮಗನಿದ್ದರೂ ಇರಬಹುದು. (ಉಪರಿಚರವಸು ಕಥೆ ನೋಡಿ) ವಿರಾಟನಿಗೆ ಸುದೇಷ್ಣೆಯಲ್ಲಿ ಉತ್ತರ (ಭೂಮಿಂಜಯ) ಬಭ್ರುವ, ಉತ್ತರೆ ಎಂಬ ಮಕ್ಕಳೂ, ಸುರಥೆಯಲ್ಲಿ ಶಂಖ ಶ್ವೇತ ಎಂಬ ಇಬ್ಬರು ಮಕ್ಕಳೂ ಇದ್ದರೆನ್ನಲಾಗಿದೆ. ಅಲ್ಲದೆ ಶತಾನೀಕನೇ ಮೊದಲಾದ ಹನ್ನೊಂದು ಮಂದಿ ತಮ್ಮಂದಿರೂ ಇದ್ದರು.
ಮೂಲ ...{Loading}...
ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು
ಇತ್ತಪೆವು ಬೇಡಿದುದ ನಾವೆನೆ
ಸುತ್ತಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ ॥18॥
೦೧೯ ಕೆಟ್ಟುದಿನ್ದ್ರಪ್ರಸ್ಥ ...{Loading}...
ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟು ಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ರಾಜಾನ್ವಯದ ರಾಯರಿಗೆ
ಬಿಟ್ಟರೆಮ್ಮನು ಜಠರ ಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಭಿಧಾನ ತನಗೆಂದ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂದ್ರಪ್ರಸ್ಥದಲ್ಲಿ ಧರ್ಮರಾಯನೊಂದಿಗೆ ತಾನು ಇದ್ದುದನ್ನು ವಿವರಿಸುತ್ತಾ, “ಇಂದ್ರಪ್ರಸ್ಥ ಹಾಳಾಯಿತು. ಪಾಂಡವರು ನಾರಸೀರೆಯನ್ನು ಉಟ್ಟುಕೊಂಡರು. ಅವರಿಗೆ ಭೀಕರವಾದ ಕಾಡು ವಾಸಸ್ಥಾನವಾಯಿತು. ಆ ರಾಜವಂಶದ ಮಹಾತ್ಮರು ನಮ್ಮನ್ನು ತೊರೆದರು. ನಮಗೆ ಹೊಟ್ಟೆಯ ಪಾಡನ್ನು ಕಳೆಯುವ ಆಶ್ರಯದಾತರೇ ಇಲ್ಲದಂತಾಯಿತು. ಕಂಗೆಟ್ಟು ಸುತ್ತಾಡುತ್ತ ನಾವು ಇಲ್ಲಿಗೆ ನಿಮ್ಮಲ್ಲಿಗೆ ಬಂದಿದ್ದೇವೆ ನನ್ನ ಹೆಸರು ಕಂಕಭಟ್ಟ” ಎಂದು ಹೇಳಿದ.
ಪದಾರ್ಥ (ಕ.ಗ.ಪ)
ಇಂದ್ರಪ್ರಸ್ಥ-ಪಾಂಡವರ ರಾಜಧಾನಿ, ರಾಜಾನ್ವಯ-ರಾಜವಂಶ, ಜಠರಭರಣ-ಹೊಟ್ಟೆಯ ಪಾಡು, ಅಭಿಧಾನ-ಹೆಸರು
ಟಿಪ್ಪನೀ (ಕ.ಗ.ಪ)
ಕಂಕ- ಧರ್ಮರಾಯನು ವಿರಾಟನ ಸಭೆಯಲ್ಲಿ ಕೊಳ್ಳುತ್ತಾನೆ. ಕಂಕ ಎಂಬುದು ಯಮನ ಹೆಸರು. ವೇಷಧಾರಿ ಬ್ರಾಹ್ಮಣನಿಗೂ ಈ ಹೆಸರಿದೆ.
ಕಾಳಿಯ ಕೃಪೆ- ಕಾಳಿಯ ಕೃಪೆ, ತೃಣಬಿಂದು ಮಹರ್ಷಿಯ ಆಶೀರ್ವಾದಗಳಿಂದಾಗಿ ಪಾಂಡವರನ್ನು ಯಾರೂ ಗುರುತಿಸಲಾಗಲಿಲ್ಲ. “ನೀವು ಪಾಂಡವರೆಂದು ನಿಮ್ಮನದಾವ ಮಾನವರರಿಯದಿರಲಿ” ಎಂದು ಯಮನೂ ಹೇಳಿದ್ದನಲ್ಲ (ಅರಣ್ಯಪರ್ವ 23-51).
ನೋಡಿ ವ್ಯಾಸಭಾರತ :
‘ಕಂಕಾನಾಮ ಬ್ರುವಾಣೋಹಂ ಮತಾಕ್ಷಸ್ಸಾಧು ದೇವಿತಾ”
(ನನ್ನ ಹೆಸರು ಕಂಕ, ಪಗಡೆಯನ್ನು ಬಲ್ಲವನು, ಜೂಜಿನಲ್ಲಿ ನಿಪುಣ) ಇದರಿಂದ ವಿರಾಟನ ಬಳಿಗೆ ಬಂದರೂ ಅವನಿಗೆ ಜೂಜಿನ ಮೋಹ ಮಾತ್ರ ಹೋಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಕಂಕನಲ್ಲದೆ ವೈಯಾಘ್ರಪಾದ ಎಂಬ ಹೆಸರೂ ಧರ್ಮರಾಯನಿಗಿದೆ. ರಾಜರು ತಮ್ಮ ಪುರೋಹಿತರ ಗೋತ್ರವನ್ನೇ ಇಟ್ಟುಕೊಳ್ಳುತ್ತಿದ್ದರು. ಪಾಂಡವರ ಗುರುಗಳಾದ ಧೌಮ್ಯರು ವ್ಯಾಘ್ರಪಾದ ಎಂಬುವರ ಮಗ. ಶ್ರೌತಸೂತ್ರದಲ್ಲಿ ರಾಜರಿಗೆ ತಮ್ಮ ಪುರೋಹಿತರ ಗೋತ್ರವೇ ಇರುತ್ತದೆಂದು ಹೇಳಲಾಗಿದೆ.
ಕಂಕನು ಯಮನನ್ನು ಪ್ರಾರ್ಥಿಸಿ ಬ್ರಾಹ್ಮಣ ಯುವಕನಾಗಿ ತ್ರಿದಂಡಧಾರಿಯಾಗಿ, ಕಮಂಡಲಧಾರಿಯಾಗಿ, ತಲೆಗೆ ಪೇಟಸುತ್ತಿ, ಕಾಷಾಯ ವಸ್ತ್ರಧಾರಿಯಾಗಿ ಜುಟ್ಟು ಬಿಟ್ಟು ದರ್ಭೆ ಪವಿತ್ರಗಳನ್ನು ಹಿಡಿದು ಸನ್ಯಾಸಿ ವೇಷದಲ್ಲಿ ಬಂದನೆಂದು ವ್ಯಾಸರು ಹೇಳುತ್ತಾರೆ.
ಮೂಲ ...{Loading}...
ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟು ಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ರಾಜಾನ್ವಯದ ರಾಯರಿಗೆ
ಬಿಟ್ಟರೆಮ್ಮನು ಜಠರ ಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಭಿಧಾನ ತನಗೆಂದ ॥19॥
೦೨೦ ಓಲಗಕೆ ಬನ್ದಖಿಳ ...{Loading}...
ಓಲಗಕೆ ಬಂದಖಿಳ ರಾಯರ
ಮೌಳಿಮೌಕ್ತಿಕಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದಪದ್ಮಯುಗ
ಕಾಲವಾವನನಾವ ಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಿಂದೆ ಧರ್ಮರಾಯನ ಸಭೆಗೆ ಬರುತಿದ್ದ ನಾನಾ ದೇಶದ ರಾಜರುಗಳು ನಮಸ್ಕರಿಸಿದಾಗ ಅವರ ಕಿರೀಟದ ರತ್ನಗಳ ಕಾಂತಿ ಧರ್ಮರಾಯನ ಪಾದಗಳ ಮೇಲೆ ಹರಿಯುತ್ತಿತ್ತಲ್ಲವೆ ? ಆದರೆ ಕಾಲವು ಯಾರನ್ನು ತಾನೇ ಯಾವುದೇ ರೀತಿಯಲ್ಲಿ ಕೀಳು ಮಾಡದೆ ಇರುತ್ತದೆಯೆ ? ಈಗ ಮತ್ಸ್ಯನು ಧರ್ಮರಾಯನನ್ನು ತನ್ನ ಸೇವಕನನ್ನಾಗಿ ಮಾಡಿಕೊಂಡ ಎಂಬ ಸಂಗತಿಯನ್ನು ಜನಮೇಜಯನಿಗೆ ವೈಶಂಪಾಯನರು ಹೇಳುತ್ತಿದ್ದಾರೆ.
ಪದಾರ್ಥ (ಕ.ಗ.ಪ)
ಓಲಗ-ರಾಜಸಭೆ, ಅಖಿಳ-ಸಮಸ್ತ, ಮೌಳಿ-ಕಿರೀಟ, ಮೌಕ್ತಿಕಮಣಿ-ಮುತ್ತಿನಮಣಿ ರತ್ನ, ಯುಗ-ಎರಡು, ಆಳುಗೊಳ್ಳು-ಆಳಾಗಿ ಮಾಡಿಕೊ, ಸೇವೆಯಲ್ಲಿ ಸ್ಥಾಪಿಸು, ಕ್ಷಿತಿಪ-ಅರಸ
ಟಿಪ್ಪನೀ (ಕ.ಗ.ಪ)
ಧರ್ಮರಾಯನಿಗೆ ಈಗ ಬಂದ ಸ್ಥಿತಿಯನ್ನು ಕವಿ ಇಲ್ಲಿ ಹಿಂದಿನ ಸ್ಥಿತಿಯೊಂದಿಗೆ ಹೋಲಿಸಿ ತೂಗಿ ನೋಡುತ್ತಿದ್ದಾನೆ.
ಮೂಲ ...{Loading}...
ಓಲಗಕೆ ಬಂದಖಿಳ ರಾಯರ
ಮೌಳಿಮೌಕ್ತಿಕಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದಪದ್ಮಯುಗ
ಕಾಲವಾವನನಾವ ಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ ॥20॥
೦೨೧ ಆದುದೈ ನಿರ್ವಾಹ ...{Loading}...
ಆದುದೈ ನಿರ್ವಾಹ ಕಂಕಂ
ಗಾದುದಾ ಮತ್ಸ್ಯೇಶನಿಂದ ವಿ
ವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು
ಹೋದವಿತ್ತಲು ಕೆಲವು ದಿನ ತನ
ಗಾದ ಸಾಹಾಯ್ಯದಲಿ ರಿಪುಬಲ
ಭೇದಿ ಮಾರುತಿ ಬಂದು ಕಂಡನು ಮತ್ಸ್ಯಭೂಪತಿಯ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಮತ್ಸ್ಯರಾಜನಿಂದ ಕಂಕಭಟ್ಟನಿಗೆ ಉದ್ಯೋಗ ದೊರಕಿದಂತಾಯಿತು. ವಿವಾದಕ್ಕೆ ಆಸ್ಪದವೇ ಇಲ್ಲದಂತೆ ನಿಜವಾದ ಉದ್ಯೋಗಿಯಂತೆ ಧರ್ಮರಾಯನು ನಡೆದುಕೊಳ್ಳುತ್ತಿದ್ದ. ಹೀಗೆಯೇ ಕೆಲವು ದಿನ ಕಳೆದುವು. ಅನಂತರ ಶತ್ರು ವಿನಾಶಕನಾದ ಭೀಮನು ಬಂದು ಮತ್ಸ್ಯ ಭೂಪತಿಯನ್ನು ಕಂಡ.
ಪದಾರ್ಥ (ಕ.ಗ.ಪ)
ನಿರ್ವಾಹ-ಕೆಲಸ, ನಿರ್ವಹಣೆ, ಮತ್ಸ್ಯೇಶ-ಮತ್ಸರಾಜ್ಯದ ಪ್ರಭು, ವಿರಾಟ, ಸಾಹಾಯ್ಯ-ವೇಷ ?
ಮೂಲ ...{Loading}...
ಆದುದೈ ನಿರ್ವಾಹ ಕಂಕಂ
ಗಾದುದಾ ಮತ್ಸ್ಯೇಶನಿಂದ ವಿ
ವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು
ಹೋದವಿತ್ತಲು ಕೆಲವು ದಿನ ತನ
ಗಾದ ಸಾಹಾಯ್ಯದಲಿ ರಿಪುಬಲ
ಭೇದಿ ಮಾರುತಿ ಬಂದು ಕಂಡನು ಮತ್ಸ್ಯಭೂಪತಿಯ ॥21॥
೦೨೨ ಏನು ಪರಿಣತೆ ...{Loading}...
ಏನು ಪರಿಣತೆ ನಿನಗೆ ಬಾಣಸಿ
ಯಾನು ಭೀಮನ ಮನೆಯವನು ಮ
ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ
ನೀನಧಿಕನೆಂದಾ ಸಮೀರನ
ಸೂನುವನು ಮನ್ನಿಸಿದನಿತ್ತಲು
ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿರಾಟ ಅವನನ್ನು ಕೇಳಿದ : “ನಿನಗೆ ಯಾವ ಪರಿಶ್ರಮವಿದೆ?” ಅದಕ್ಕೆ ಭೀಮನು “ನಾನು ಅಡುಗೆಯವನು ಭೀಮನ ಮನೆಯಲ್ಲಿ ಅಡುಗೆಯ ಕೆಲಸಕ್ಕಿದ್ದವನು. ಎಂದು ಹೇಳಿದ. “ವಿರಾಟ “ಇನ್ನೇನು ವಿಶೇಷ ಗುಣಗಳಿವೆ?” ಎಂದು ಕೇಳಲು ಭೀಮ “ನನಗೆ ಮಲ್ಲ ಯುದ್ಧದಲ್ಲಿ ಹೋರಾಡುವ ಸಾಮಥ್ರ್ಯವಿದೆ”. ಎಂದ. ಆಗ ವಿರಾಟ ನೀನು ವಿಶಿಷ್ಟ ವ್ಯಕ್ತಿ ಎಂದು ಹೇಳಿ ಭೀಮನನ್ನು ಕೆಲಸಕ್ಕೆ ಇರಿಸಿಕೊಂಡ. ಮರು ದಿವಸ ಅರ್ಜುನನು ಮತ್ಸ್ಯ ನಗರಕ್ಕೆ ಬಂದ.
ಪದಾರ್ಥ (ಕ.ಗ.ಪ)
ಪರಿಣತೆ-ವಿಶೇಷ ಪರಿಶ್ರಮ, ಅಭಿರುಚಿ, ಬಾಣಸಿ-ಅಡಿಗೆಯವನು, ಸಮೀರನ ಸೂನು-ವಾಯುಪುತ್ರ (ಭೀಮ), ಹೊಳಲು-ಪಟ್ಟಣ.
ಟಿಪ್ಪನೀ (ಕ.ಗ.ಪ)
ಪಂಪನ ಭೀಮನು ತನ್ನ ಪಾಕಕಲೆಯನ್ನು ವರ್ಣಿಸುತ್ತ “ಎನ್ನ ಅಟ್ಟ ಅಡುಗೆಯನ್ ಉಂಡೊಡೆ ಬಿನ್ನಣಮೇನ್ ಅರಸ, ನರೆಗಳಾಗವು ಸವಿಯೊಳ್” ಎಂದು ಹೇಳುತ್ತಾನೆ. ಅಂದರೆ ಅವನು ಬಡಿಸಿದ್ದನ್ನು ತಿಂದರೆ ರುಚಿಗೆ ಮುಪ್ಪೇ ಬರುತ್ತಿರಲಿಲ್ಲವಂತೆ !
ವಲ್ಲಲ, ವಲಲ ಪೌರೋಗವ ಪುರೋಗವ = ವಾಯುವಿನ ಮಗನಾದ ಭೀಮ ಎಂದರ್ಥ, ವ್ಯಾಸ ಭಾರತ ಸಾರೋದ್ಧಾರದಲ್ಲಿ “ಬೇಕಾದರೆ ಮಲ್ಲಯುದ್ಧವನ್ನು ಮಾಡುತ್ತೇನೆ. ನಾನು ಆರಾಲಿಕ ಎಂದರೆ ಮದ್ದಾನೆಯೊಂದಿಗೆ ಹೋರಾಟಬಲ್ಲವ, ಗೋವಿಕರ್ತ=ಗೂಳಿಗಳನ್ನು ಎದುರಿಸಬಲ್ಲವನು” ಎನ್ನುತ್ತಾನೆ. ಅರಾಲಿಕ ಎಂದರೆ ಸೂಪಕರ್ತ ಎಂಬರ್ಥವೂ ಗೋವಿಕರ್ತಎಂದರೆ ಗದ್ಯ ಪದ್ಯ ರಚನೆಗಳಲ್ಲಿ ನಿಪುಣ ಎಂಬರ್ಥವೂ ಇದೆ. ಪೌರೋಗವ < ಪುರೋಗು=ವಾಯು, ಪೌರೋಗವ=ವಾಯು ಪುತ್ರ. ಪೌರೋಗವ ಶಬ್ದಕ್ಕೆ ಪಾಕಶಾಲಾಧ್ಯಕ್ಷ ಎಂಬರ್ಥವಿದೆ ಎಂದು ವಿರಾಟಪರ್ವ ತೆಲುಗು ಗದ್ಯಾನುವಾದದಲ್ಲಿ ಕಪ್ಪಗಂತುಲ ಲಕ್ಷ್ಮಣ ಶಾಸ್ತ್ರಿಗಳು ವಿವರಿಸಿದ್ದಾರೆ.
ಮಹಾಭಾರತಮು. ವಿರಾಟಪರ್ವಮು. ಪು. 5
“ದೊಡ್ಡ ದೊಡ್ಡ ಸೌದೆ ಹೊರೆಗಳನ್ನು ಒಬ್ಬನೇ ಹೊತ್ತು ತರುತ್ತೇನೆ” ಎಂದು ವಲಲನು ವಿರಾಟನಿಗೆ ಹೇಳಿದ್ದ. ಬಲವಾದ ಆನೆ, ಗೂಳಿಗಳೊಂದಿಗೆ ಸೆಣಸಬಲ್ಲೆನೆಂದೂ ಹೇಳಿಕೊಂಡಿದ್ದ.
ಮೂಲ ...{Loading}...
ಏನು ಪರಿಣತೆ ನಿನಗೆ ಬಾಣಸಿ
ಯಾನು ಭೀಮನ ಮನೆಯವನು ಮ
ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ
ನೀನಧಿಕನೆಂದಾ ಸಮೀರನ
ಸೂನುವನು ಮನ್ನಿಸಿದನಿತ್ತಲು
ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ ॥22॥
೦೨೩ ಸುರಪನರಸಿಯ ಶಾಪದಲಿ ...{Loading}...
ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯವಿದ್ಯಾಭ್ಯಾಸ ಸಂಗದಲಿ
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಉರ್ವಶಿಯ ಶಾಪದಿಂದಾಗಿ ಅರ್ಧ ಹೆಣ್ಣಾಗಿದ್ದ ಅರ್ಜುನನು ಮತ್ಸ್ಯ ರಾಜನ ಬಳಿಗೆ ಬಂದು ತನ್ನ ನಾಟ್ಯ ವಿದ್ಯಾ ಪರಿಣತಿಯನ್ನು ಹೇಳಿಕೊಂಡು ವಿರಾಟನ ಮಗಳಾದ ಉತ್ತರೆಗೆ ನಾಟ್ಯಗುರುವಾಗಿ ನೇಮಿತನಾದ. ನಕುಲ ಸಹದೇವರು ಬಂದು ಕ್ರಮವಾಗಿ ಕುದುರೆ ಪಶುಸಮೂಹಗಳ ಮೇಲ್ವಿಚಾರಕರಾಗಿ ನೇಮಕಗೊಂಡರು. ಪಾಂಡವರ ರಾಣಿ ದ್ರೌಪದಿಯು ವಿರಾಟ ನಗರಿಗೆ ಬಂದಳು.
ಪದಾರ್ಥ (ಕ.ಗ.ಪ)
ಸುರಪನರಸಿ-ಇಂದ್ರನ ಅರಸಿ,ಉರ್ವಶಿ, ಸಿತತುರಗ-ಶ್ವೇತವಾಹನ ಅಂದರೆ ಅರ್ಜುನನ ಹೆಸರು, ಅವನ ರಥಕ್ಕೆ ಬಿಳಿಯ ಕುದುರೆಗಳಿದ್ದುವು. ಯಮಳರು-ಜೋಡಿ ಪುತ್ರರು ನಕುಲ ಸಹದೇವರು, ತುರಗ-ಕುದುರೆ, ಗೋವ್ರಜ-ಪಶು ಸಮೂಹ, ಭರಣರು-ಕಾಪಾಡುವವರು
ಟಿಪ್ಪನೀ (ಕ.ಗ.ಪ)
ತಂತಿಪಾಲ - ವಿರಾಟನಗರದಲ್ಲಿ ಅಜ್ಞಾತವಾಸದ ಅವದಿಯಲ್ಲಿ ಸಹದೇವನಿಗಿದ್ದ ಹೆಸರು ತಂತಿಪಾಲ. ತಂತಿ ಎಂದರೆ ವಾಕ್ ಎಂಬ ಅರ್ಥವೂ ಇದೆ. ಗೊಲ್ಲರಂತೆ ವೇಷಧರಿಸಿ ಗೊಲ್ಲರ ಭಾಷೆಯಲ್ಲೇ ಮಾತಾಡುತ್ತ ಬಂದ ಇವನಿಗೆ ಅರಿಷ್ಟನೇಮಿ (ಅಡ್ಡಿಯಿಲ್ಲದ ಚಕ್ರವುಳ್ಳವನು) ಜಯದ್ಭಲ ಎಂಬ ಹೆಸರುಗಳೂ ಇವೆ. ತಂತಿಪಾಲ ಎಂದರೆ ಹಸು-ಎತ್ತುಗಳನ್ನು ಕಟ್ಟುವ ತಂದಿ ಎಂಬರ್ಥದ ಜೊತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವವನು, ಆಜ್ಞಾಪಾಲಕ ಎಂಬರ್ಥಗಳೂ ಇವೆ. ಗೋವುಗಳ ಸ್ವಭಾವ, ನಡವಳಿಕೆಗಳೆಲ್ಲ ಅವನಿಗೆ ಚೆನ್ನಾಗಿ ತಿಳಿದಿದ್ದುವು. ವಿರಾಟನ ಬಳಿಗೆ ಬಂದು ಪರಿಚಯ ಮಾಡಿಕೊಳ್ಳುತ್ತೇನೆಂದು ಧರ್ಮರಾಯನಿಗೆ ಮೊದಲೇ ಹೇಳುತ್ತಾನೆ.
ತಂತಿಪಾಲ ಇತಿ ಖ್ಯಾತೋ ನಾಮ್ನಾಹಂ ವಿದಿತಸ್ತ್ವಥ
ನಿಪುಣಂ ಚ ಕರಿಷ್ಯಾಮಿ ವ್ಯೇತು ತೇ ಮನ ಸೋ ಜ್ವರಃ
‘‘ನನ್ನ ಹೆಸರು ತಂತಿಪಾಲ ಎಂದು ವಿರಾಟನಿಗೆ ಹೇಳುತ್ತೇನೆ.. ತುಂಬ ಎಚ್ಚರಿಕೆಯಿಂದ ವ್ಯವಹರಿಸುತ್ತೇನೆನೀನು ಹೆದರಬೇಕಾಗಿಲ್ಲ’’ ಆತ ವಿರಾಟನ ಬಳಿಗೆ ಬಂದಾಗ ‘‘ರಾಜ! ನಿನ್ನ ಬಳಿ ಆಶ್ರಯ ಬೇಡಿ ಬಂದಿದ್ದೇನೆ. ರಾಜಸಿಂಹರಾದ ಪಾಂಡವರು ಎಲ್ಲಿಗೆ ಹೋದರೋ ತಿಳಿಯದು. ಉದ್ಯೋಗವಿಲ್ಲದೆ ಬದುಕುವುದು ಕಷ್ಟ. ನಿನ್ನನ್ನು ಬಿಟ್ಟರೆ ಬೇರೆ ರಾಜರನ್ನು ನಾನು ಇಷ್ಟಪಡುವುದಿಲ್ಲ. ಧರ್ಮರಾಜನ ಬಳಿ ಒಂದು ನೂರ ಎಂಟು ಸಾವಿರ ಹಸುಗಳಿದ್ದುವು. ನಾನೇ ಆ ಗೋವುಗಳ ಪಾಲಕನಾಗಿದ್ದೆ. ತಂತಿಪಾಲ ಎಂದು ನನ್ನ ಹೆಸರು. ನಾನು ವೈಶ್ಯ. ಗೋವುಗಳ ಪರೀಕ್ಷೆಯಲ್ಲಿ ಅಗ್ರಗಣ್ಯ. ಅವಕ್ಕೆ ಏನು ರೋಗ ಬಂದರೂ ಗುಣಪಡಿಸಬಲ್ಲೆ….’’
ಚಕ್ರವರ್ತಿಯ ಗಾಂಭೀರ್ಯ ಮುಖ ತೇಜಸ್ಸುಳ್ಳ ತಂತಿಪಾಲ ಸಾಮಾನ್ಯ ಅಧಿಕಾರಿ, ವೈಶ್ಯ ಎಂದು ರಾಜನಿಗೆ ನಂಬಿಕೆ ಬರಲಿಲ್ಲ.
ಸಹದೇವನ ಮೇಲೆ ವಿಶ್ವಾಸವಿರಿಸಿದ ವಿರಾಟನು
ಪಶೂನ್ ಸ ಪಾಲಾನ್ ಭವತೇ ದದಾಮ್ಯಹಂ
ತ್ವದಾಶ್ರಯಾ ಮೇ ವಶವೋ ಭವಂತ್ವಿಹ
(ನನ್ನಲ್ಲಿರುವ ಒಂದೇ ಬಣ್ಣದ, ವಿವಿಧ ಬಣ್ಣಗಳ ಹಸುಗಳನ್ನು ಸಕಲ ಗೋಪಾಲರೊಂದಿಗೆ ನಿನಗೆ ಒಪ್ಪಿಸಿದ್ದೇನೆ. ಇನ್ನೂ ಮುಂದೆ ನೀನೇ ಅವುಗಳ ಒಡೆಯ)
ಎಂದು ಹೇಳಿ ತಂತಪಾಲನನ್ನು ನೇಮಿಸಿಕೊಂಡ. ಅವನು ಕೋರಿದಷ್ಟು ಹಣವನ್ನು ಕೊಡಲು ಒಪ್ಪಿಕೊಂಡ. ತಂತಿಪಾಲನು ತನ್ನನ್ನು ಯಾರೂ ಗುರುತಿಸದಿರುವುದನ್ನು ಕಂಡು ಸಂತೋಷಪಟ್ಟು ಕ್ರಿಯಾತತ್ಪರನಾಗಿದ್ದ.
ತನ್ನ ಬಿಡುವಿಲ್ಲದ ಕೆಲಸದ ನಡುವೆಯೂ ತಂತಿಪಾಲನು ಇತರ ಸೋದರರೊಡನೆ ಆಗಾಗ ಕಲೆಯುತ್ತಿದ್ದ. ದ್ರೌಪದಿಯು ಕೌರವನಿಗೆ ಪತ್ತೆಯಾಗದಂತೆ ಎಲ್ಲರೂ ಎಚ್ಚರಿಕೆ
ವಹಿಸುತ್ತಿದ್ದರು.
ಮುಂದೆ ಸುಶರ್ಮನು ಗೋಗ್ರಹಣ ಮಾಡಿದಾಗ ವಿರಾಟನು ಯುದ್ಧಕ್ಕೆ ಹೋದಾಗ ಅಣ್ಣನ ಅಪ್ಪಣೆಯಂತೆ ತಂತಿಪಾಲನೂ ಯುದ್ಧದಲ್ಲಿ ಭಾಗವಹಿಸಿ ವಿರಾಟನು ಗೆಲ್ಲಲು ನೆರವಾದನು.
ವೈಶ್ಯ ಎಂದರೆ ಬೇರೆ ವೇಷ ಧರಿಸಿದವನು ಎಂಬರ್ಥವನ್ನೂ ವ್ಯಾಖ್ಯಾನಕಾರರು ಕೊಟ್ಟಿದ್ದಾರೆ. ಮಹಾಭಾರತ ಯುದ್ಧದ ಹದಿನೆಂಟು ದಿನಗಳಲ್ಲೂ ಪಾಂಡವರ ಪರವಾಗಿ ಕೌರವ ಸೇನೆಯೆದುರು ಉಗ್ರವಾಗಿ ಕಾದಾಡಿದ ವ್ಯಕ್ತಿ ತಂತಿಪಾಲ.
ಅರ್ಜುನನು ವಿರಾಟನ ಬಳಿಗೆ ಬಂದು
ಗಾಯಾಮಿ ನೃತ್ಯಾಮಿ ಅಥ ವಾದಯಾಮಿ
ಭದ್ರೋಸ್ಮಿ ನೃತ್ಯೇ ಕುಶಲೋ„ಸ್ಮಿ ಗೀತೇ
ತ್ವ ಮುತ್ತರಾಯೇತಿ ಪ್ರದಿಶಸ್ವಮಾಂ ಸ್ವಯಂ
ಭವಾಮಿ ದೇವ್ಯಾ ನರದೇವ ನರ್ತಕಃ
ಎನ್ನುತ್ತಾನೆ. (ವ್ಯಾಸಭಾರತ ಸಾರೋದ್ಧಾರ)
ನಕುಲ ಸಹದೇವ-ಮೂಲಭಾರತದಲ್ಲಿ ನಕುಲನು ಗ್ರಂಥಿಕ ಎಂಬ ಹೆಸರು ಪಡೆದು ವಿರಾಟನ ಬಳಿ ಸೇರಿಕೊಳ್ಳುತ್ತಾನೆ. ಗ್ರಂಥಿಕ ಎಂದರೆ ಆಯುರ್ವೇದವನ್ನು ಬಲ್ಲವನು, ಯಜ್ಞದಲ್ಲಿ ಅಧ್ವರ್ಯುವಿನ ಕಾರ್ಯದಲ್ಲಿ ಸಹಾಯಕನಾದವನು, ಅಶ್ವವಿದ್ಯಾ ನಿಪುಣ ಎಂಬರ್ಥಗಳಿವೆ. ದಾಮಗ್ರಂಥಿ ಎಂದೂ ಮೂಲದಲ್ಲಿ ಕರೆಯಲಾಗಿದೆ. ನಕುಲನಿಗೆ ಸಾಲಿಹೋತ್ರ ಎಂಬ ಋಷಿ ಅಶ್ವಹೃದಯ ಎಂಬ ವಿದ್ಯೆಯನ್ನು ಕಲಿಸಿದ್ದನಂತೆ.
ಸಹದೇವನು ತಂತಿಪಾಲ, ಅರಿಷ್ಟನೇಮಿ ಎಂಬ ಹೆಸರುಗಳಿಂದಲೂ ಮೂಲಭಾರತದಲ್ಲಿ ಪರಿಚಿತನಾಗಿದ್ದಾನೆ. ಗೋ ಎಂದರೆ ಇಂದ್ರಿಯ. ತಾನು ಐದನೆಯವನು ಎಂಬರ್ಥ ಇಲ್ಲಿದೆ ಎನ್ನುತ್ತಾರೆ. ತಂತಿಪಾಲ ಎಂದರೆ ನಿನ್ನ ಮಾತಿಗೆ ತಪ್ಪುವುದಿಲ್ಲ ಎಂಬ ಭಾವ ಪ್ರಕಟಿಸುವವನು ಎಂದೂ ಹೇಳಲಾಗಿದೆ. ತಂತಿಪಾಲ ಎಂದರೆ ಗೋವುಗಳ ಕೊರಳಿಗೆ ಪಟ್ಟಿ ಹಾಕುವವ.
ಬೃಹನ್ನಳೆ - ನಳನಂತೆ ಪ್ರಚ್ಛನ್ನ ವೇಷಿಯಾದವನು ಎಂದು ಅರ್ಥಮಾಡಲಾಗಿದೆ. ‘ಬೃಹನ್ನರಾ’ ಎಂದೂ ಕರೆಯುತ್ತಾರೆ. ಅಂದರೆ ಮಹಾಪುರುಷ ಇವನು ನರ ನಾರಾಯಣರ ಪೈಕಿ ನರ. ‘ದೊಡ್ಡನರ’. ತಾನು ದ್ರೌಪದಿಗೆ ಪರಿಚಾರಕನಾಗಿದ್ದುದಾಗಿ ಹೇಳಿಕೊಳ್ಳುತ್ತಾನೆ.
ಈ ಐವರಿಗೆ ಜಯ, ಜಯೇಶ, ವಿಜಯ, ಜಯತ್ಸೇನ ಜಯದ್ಬಲ ಎಂಬ ಹೆಸರುಗಳೂ ಇದ್ದುವು.
ಪಂಪ ಭಾರತದಲ್ಲಿ ಅರ್ಜುನನು ಬೃಹಂದಳೆಯ ವೇಷದಲ್ಲಿ ಬಂದುದನ್ನು ಹಿಂದೆ ವಿಷ್ಣುವು ಭೂಮಿಯನ್ನು ತರಲು ಹಂದಿಯಾದುದಕ್ಕೆ ಹೋಲಿಸಲಾಗಿದೆ.
ಮೂಲ ...{Loading}...
ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯವಿದ್ಯಾಭ್ಯಾಸ ಸಂಗದಲಿ
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ ॥23॥
೦೨೪ ತರಣಿಗಞ್ಜಿದಡಿನ್ದು ತಲೆಗಾ ...{Loading}...
ತರಣಿಗಂಜಿದಡಿಂದು ತಲೆಗಾ
ಯ್ದಿರಿಸಿದನೊ ಮರೆಯಾಗಿ ತಿಮಿರದ
ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ
ಹಿರಿದು ಸೈರಿಸಲಾರೆನೆಂದೊಡ
ನಿರಿಸಿದನೊ ಕೈರವವನೆನಲೆಂ
ದರರೆ ಕಂಗಳ ಢಾಳವೊಪ್ಪಿರೆ ಬಂದಳಬುಜಮುಖಿ ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪಯು ಸೂರ್ಯನಿಗೆ ( ಸೂರ್ಯನ ಬಿಸಿಲಿಗೆ ) ಅಂಜಿದರೆ ಚಂದ್ರನು ರಕ್ಷಣೆ ನೀಡಿ ಕತ್ತಲೆಯನ್ನೇ ಅವಳ ಮುಡಿಗೆ ಮರೆಯಾಗಿ ಇರಿಸಿದನೋ ಎಂಬಂತೆ ಅವಳ ಬಳ್ಳಿಗೂದಲು ಮುಡಿಯನ್ನು ದಟ್ಟೈಸಿತ್ತು. ಅವಳು ಆ ಭಾರವನ್ನು ಸೈರಿಸಲಾರೆ ಎಂದಾಗ ಕನ್ನೈದಿಲೆ ಹೂವನ್ನು ಇರಿಸಿನೋ ಎಂಬಂತೆ ಕಣ್ಣಿನ ಕಾಂತಿ ಮಿಂಚುತ್ತಿರಲು ದ್ರೌಪದಿ ಬಂದಳು.
ಪದಾರ್ಥ (ಕ.ಗ.ಪ)
ತರಣಿ-ಸೂರ್ಯ, ತಲೆಗಾಯ್ದು-ಕಾಪಾಡಿ, ತಿಮಿರದ ಹೊರಳಿ-ಕತ್ತಲ ಸಮೂಹ, ಮೋಹು-ಆವರಿಸು, ವೇಣಿವಲ್ಲರಿ-ತಲೆಗೂದಲು, ಕೈರವ-ನೈದಿಲೆ, ಢಾಳ-ಕಾಂತಿ
ಟಿಪ್ಪನೀ (ಕ.ಗ.ಪ)
ದ್ರೌಪದಿಯ ರೂಪಸಂಪತ್ತಿನ ಅತಿಶಯತೆಯನ್ನು ಹೊಗಳುವುದೇ ಈ ಪದ್ಯದ ವಿಶೇಷ.
ಮೂಲ ...{Loading}...
ತರಣಿಗಂಜಿದಡಿಂದು ತಲೆಗಾ
ಯ್ದಿರಿಸಿದನೊ ಮರೆಯಾಗಿ ತಿಮಿರದ
ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ
ಹಿರಿದು ಸೈರಿಸಲಾರೆನೆಂದೊಡ
ನಿರಿಸಿದನೊ ಕೈರವವನೆನಲೆಂ
ದರರೆ ಕಂಗಳ ಢಾಳವೊಪ್ಪಿರೆ ಬಂದಳಬುಜಮುಖಿ ॥24॥
೦೨೫ ಮೊಲೆಯ ಮೇಲುದು ...{Loading}...
ಮೊಲೆಯ ಮೇಲುದು ಜಾರೆ ಜಾರಿದ
ರಳಿಮನರು ಕಂಗಳಿನ ಮಿಂಚಿನ
ಹಿಳುಕಿನೆಡೆ ನಡೆಗೆಟ್ಟು ನಿಂದರು ಚಿತ್ತವಿಹ್ವಲರು
ತೆಳುವಸುರು ತಲೆದೋರೆ ತೋರಿದು
ದಲಗು ಮರು ಮೊನೆಯೆನುತ ವಿಟರಳ
ವಳಿಯೆ ನಡೆತರುತಿರ್ದಳಂಗನೆ ರಾಜ ವೀಧಿಯಲಿ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ಎದೆಯ ಮೇಲುವಸ್ತ್ರ ಸ್ವಲ್ಪ ಜಾರಿದಾಗ ಅಕ್ಕಪಕ್ಕದಲ್ಲಿ ಹೋಗುತ್ತಿದ್ದ ಅದೃಢ ಮನಸ್ಕರು ಚಂಚಲಶೀಲರಾದರು. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದ ಜನರು ಅವಳ ಕಣ್ಣುಗಳ ಕಾಂತಿ ಎಂಬ ಮಿಂಚಿನ ಬಾಣದಿಂದಾಗಿ ದಿಙ್ಮೂಢರಾಗಿ ನಿಂತರು. ಅವಳ ತೆಳು ಬಸಿರನ್ನು ನೋಡಿ ವಿಟರು ಅವಳ ರೂಪದ ಕತ್ತಿಯು ಎದೆಯಲ್ಲಿ ಹೊಕ್ಕು ಬೆನ್ನಿನಲ್ಲಿ ಬಂದಂತಾಗಿ ಬಸವಳಿದರು. ಹೀಗೆ ದ್ರೌಪದಿ ರಾಜ ಬೀದಿಯಲ್ಲಿ ನಡೆದು ಬರುತ್ತಿದ್ದಳು.
ಪದಾರ್ಥ (ಕ.ಗ.ಪ)
ಮೇಲುದು-ಮೇಲುವಸ್ತ್ರ, ಆಳಿಮನರು-ಸಡಿಲ ಮನಸ್ಸಿನವರು, ಹಿಳುಕು-ಬಾಣದ ಇನ್ನೊಂದು ತುದಿ, ಬಾಣ, ಬಾಣದ ಹಿಂತುದಿಗೆ ಕಟ್ಟಿದ ಗರಿ, ಅಲಗು-ಕತ್ತಿಯ ತುದಿ.
ಮೂಲ ...{Loading}...
ಮೊಲೆಯ ಮೇಲುದು ಜಾರೆ ಜಾರಿದ
ರಳಿಮನರು ಕಂಗಳಿನ ಮಿಂಚಿನ
ಹಿಳುಕಿನೆಡೆ ನಡೆಗೆಟ್ಟು ನಿಂದರು ಚಿತ್ತವಿಹ್ವಲರು
ತೆಳುವಸುರು ತಲೆದೋರೆ ತೋರಿದು
ದಲಗು ಮರು ಮೊನೆಯೆನುತ ವಿಟರಳ
ವಳಿಯೆ ನಡೆತರುತಿರ್ದಳಂಗನೆ ರಾಜ ವೀಧಿಯಲಿ ॥25॥
೦೨೬ ಎಲೆಲೆ ಮದನನ ...{Loading}...
ಎಲೆಲೆ ಮದನನ ಗಜವು ತೊತ್ತಳ
ದುಳಿದುದೋ ಕಾಮುಕರನೆನೆ ಗಾ
ವಳಿಯೊಳಗೆ ಗಾರಾಯ್ತು ಗರುವಿಕೆ ವಿಟ ವಿದೂಷಕರ
ಅಳುಕಿದರು ಮನುಮಥನ ಗರುಡಿಯ
ಬಲುವೆಗಾರರು ಬಂದಳಗ್ಗದ
ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯ ರೂಪದ ಆರ್ಭಟ ಹೇಗಿತ್ತೆಂದರೆ ಅಯ್ಯಯ್ಯೋ ! ಮನ್ಮಥನ ಆನೆಯು ಕಾಮುಕರನ್ನು ತುಳಿದು ಹಾಕುತ್ತಿದೆಯೊ ಎನ್ನಿಸುತ್ತಿತ್ತು. ವಿಟ ವಿದೂಷಕರ ಗರ್ವವು ಆ ದೊಂಬಿಯಲ್ಲಿ ಬತ್ತಿಹೋಗಿತ್ತು. ಮನ್ಮಥನ ಮಲ್ಲಶಾಲೆಯ ಮಹಾವೀರರು ಅವಳ ರೂಪವನ್ನು ಕಂಡು ಅಳುಕುತ್ತಿದ್ದರು. ಹೀಗೆ ದ್ರೌಪದಿಯು ದಾರಿಹೋಕರ ಮನಸ್ಸಿಗೆ ಆಶ್ಚರ್ಯವನ್ನು ಉಂಟು ಮಾಡುವ ರೀತಿಯಲ್ಲಿ ರಾಜಬೀದಿಯಲ್ಲಿ ನಡೆದು ಬರುತ್ತಿದ್ದಳು.
ಪದಾರ್ಥ (ಕ.ಗ.ಪ)
ತೊತ್ತಳದುಳಿ-ತುಳಿದು ದಾಳಿ ಮಾಡು, ಗಾವಳಿ-ದೊಂಬಿ, ರಂಪ, ಗಾರಾಗು-ಒಣಗಿಹೋಗು<ಗಾಱು, ಬಲುವೆಗಾರರು-ವೀರರು, ಅಗ್ಗದ-ಶ್ರೇಷ್ಠವಾದ
ಮೂಲ ...{Loading}...
ಎಲೆಲೆ ಮದನನ ಗಜವು ತೊತ್ತಳ
ದುಳಿದುದೋ ಕಾಮುಕರನೆನೆ ಗಾ
ವಳಿಯೊಳಗೆ ಗಾರಾಯ್ತು ಗರುವಿಕೆ ವಿಟ ವಿದೂಷಕರ
ಅಳುಕಿದರು ಮನುಮಥನ ಗರುಡಿಯ
ಬಲುವೆಗಾರರು ಬಂದಳಗ್ಗದ
ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ ॥26॥
೦೨೭ ಜನದ ಜಾಣಕ್ಕಾಡಲಾ ...{Loading}...
ಜನದ ಜಾಣಕ್ಕಾಡಲಾ ಮೋ
ಹನ ಮಹಾಂಬುಧಿಯೊಳಗೆ ನೃಪನಂ
ಗನೆಯು ಭವನಕೆ ಬರಲು ಬೆರಗಾಯ್ತಖಿಳ ನಾರಿಯರು
ವನಿತೆ ಮಾನಿಸೆಯಲ್ಲ ಮನುಜರಿ
ಗಿನಿತು ರೂಪೆಲ್ಲಿಯದು ವಿಸ್ಮಯ
ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೋಡುತ್ತಿದ್ದ ಬೀದಿಯ ಜನರ ವಿವೇಕವು ಮುಳುಗಿ ಹೋಗುವಂತೆ ಅವಳ ರೂಪವೆಂಬ ಸಮುದ್ರವು ಇದ್ದಿತು. ಅವಳು ಸುದೇಷ್ಣೆಯ ಅಂತಃಪುರ ಭವನಕ್ಕೆ ಬಂದಾಗ ಅಲ್ಲಿದ್ದ ಹೆಂಗಸರೆಲ್ಲ ಅವಳ ರೂಪಕ್ಕೆ ಬೆರಗಾದರು. “ಈ ಹೆಣ್ಣು ಮನುಷ್ಯವರ್ಗದವಳಲ್ಲ, ಮನುಷ್ಯ ಸ್ತ್ರೀಯರಿಗೆ ಇಂತಹ ರೂಪ ವೈಭವ ಎಲ್ಲಿರುತ್ತದೆ ? ಇವಳ ರೂಪವು ಆಶ್ಚರ್ಯಕರವಾದದ್ದು” ಎಂದು ಮತ್ಸ್ಯರಾಜನ ಇತರ ರಾಣಿಯರು ಮನಸ್ಸಿನಲ್ಲೇ ಅಳುಕಿದರು.
ಪದಾರ್ಥ (ಕ.ಗ.ಪ)
ಜಾಣ್-ವಿವೇಕ, ಅಕ್ಕಾಡು<ಅೞ್ಕಾಡು=ಮುಳುಗು, ಅಳುಕು-ಹಿಂಜರಿ
ಮೂಲ ...{Loading}...
ಜನದ ಜಾಣಕ್ಕಾಡಲಾ ಮೋ
ಹನ ಮಹಾಂಬುಧಿಯೊಳಗೆ ನೃಪನಂ
ಗನೆಯು ಭವನಕೆ ಬರಲು ಬೆರಗಾಯ್ತಖಿಳ ನಾರಿಯರು
ವನಿತೆ ಮಾನಿಸೆಯಲ್ಲ ಮನುಜರಿ
ಗಿನಿತು ರೂಪೆಲ್ಲಿಯದು ವಿಸ್ಮಯ
ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು ॥27॥
೦೨೮ ಬರವ ಕಣ್ಡು ...{Loading}...
ಬರವ ಕಂಡು ಸುದೇಷ್ಣೆ ಮನದಲಿ
ಹರುಷ ಮಿಗೆ ಹೊಂಗಿದಳು ಕರೆ ಕರೆ
ತರುಣಿಯಾರೆಂದಟ್ಟಿದಳು ಕೆಳದಿಯರನನಿಬರನು
ಸರಸಿಜಾಯತದಂದವನು ಮೋ
ಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜ ಮಂದಿರವ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ತನ್ನ ಮನೆಗೆ ಆ ಹೆಂಗಸು ಬಂದುದನ್ನು ಕಂಡು ಸುದೇಷ್ಣೆ ಮನಸ್ಸಿನಲ್ಲಿಯೇ ಸಂತಸಪಟ್ಟು ಉಬ್ಬಿದಳು. “ಆ ತರುಣಿ ಯಾರು? ಅವಳನ್ನು ಇಲ್ಲಿಗೆ ಕರೆ ತನ್ನಿ” ಎಂದು ಸಖಿಯರನ್ನು ಅಟ್ಟಿದಳು. ಆಗ ಅರಳಿದ ತಾವರೆಯ ಅಂದವನ್ನೂ ಹಿತವಾಗುವ ಪರಿಮಳವನ್ನೂ ಬೀರುತ್ತ ದ್ರೌಪದಿಯು ರಾಜಮಂದಿರವನ್ನು ಹೊಕ್ಕಳು.
ಪದಾರ್ಥ (ಕ.ಗ.ಪ)
ಬರವು-ಬರುವಿಕೆ, ಹೊಂಗು-ಉಬ್ಬು, ಬೀಗು, ಅನಿಬರನು-ಎಲ್ಲರನ್ನು, ಸರಸಿಜಾಯತ-ವಿಸ್ತಾರವಾದ ತಾವರೆ, ಅರಳಿದ ತಾವರೆ, ಮೋಹರಿಸು-ಕವಿ, ಮುಂಚು-ಮುನ್ನುಗ್ಗು, ಧಾವಿಸು, ಹರಡು
ಟಿಪ್ಪನೀ (ಕ.ಗ.ಪ)
ಸುದೇಷ್ಣೆ-ಮೂಲಭಾರತದಲ್ಲಿಸುದೇಷ್ಣೆಯು ದ್ರೌಪದಿಯ ರೂಪಕ್ಕೆ ಮೆಚ್ಚಿ ‘ಕಾಶ್ಮೀರೀವ ತುರಂಗಮೀ’ ಕಾಶ್ಮೀರದ ಕುದುರೆಯಂಥವಳು ಎಂದು ಹೊಗಳುತ್ತಾಳೆ. “ಪುರುಷಂ ಕಂ ನ ಮೋಹಯೇ?” ನಿನ್ನನ್ನು ನೋಡಿ ಮೋಹಗೊಳ್ಳದ ಪುರುಷನಿದ್ದಾನೆಯೆ ? ಎನ್ನುತ್ತಾಳೆ.‘‘ಉತ್ತಷ್ಠ ಗಚ್ಛ ಸೈರಂಧ್ರೀ ಕೀಚಕಸ್ಯ ನಿವೇಶನಂ
ಪಾನಮಾನಯ ಕಲ್ಯಾಣಿ ಪಿಪಾಸ ಮಾಂ ಪ್ರಬಾಧತೇ’’
ಇದು ಮಹಾಭಾರತದಲ್ಲಿ ವಿರಾಟಪತ್ನಿ ಸುದೇಷ್ಣೆ ತನ್ನ ಬಳಿಗೆ ಸೈರಂಧ್ರಿಯಾಗಿ ಬಂದಿದ್ದ ದ್ರೌಪದಿಗೆ ಹೇಳಿರುವ ಮಾತು. ‘‘ಕೀಚಕನ ಮನೆಗೆ ಹೋಗಿ ಮದ್ಯವನ್ನು ತಾ.. ನನಗೆ ತುಂಬ ಬಾಯಾರಿಕೆಯಾಗಿದೆ’’ ಎನ್ನುವ ಸುದೇಷ್ಣೆ ರಾಜವನಿತೆಯರ ಪಾನಪ್ರಿಯತೆಯನ್ನು ನಿಸ್ಸಂಕೋಚವಾಗಿ ಹೇಳಿಕೊಂಡಿದ್ದಾಳೆ. ಆದರೆ ಆ ಕೆಲಸವನ್ನು ಸೈರಂಧ್ರಿಗೆ ಒಪ್ಪಿಸಿರುವ ಇವಳ ವರ್ತನೆ ಚರ್ಚಾಸ್ಪದವಾದದ್ದಾದರೂ ಅನಿವಾರ್ಯವಾಗಿ ಅವಳು ಈ ಹಾದಿ ತುಳಿಯಬೇಕಾಯಿತೆನ್ನುವುದೂ ನಿಜವೇ.
ಸುದೇಷ್ಣೆ ಕೇಕಯ ರಾಜನ ಮಗಳು. ಈಕೆಗೆ ಚಿತ್ರಾ ಎಂಬ ಹೆಸರೂ ಇದೆ. ಇವಳ ತಮ್ಮನೇ ಕೀಚಕ ಎಂದು ಕುಪ್ರಸಿದ್ಧನಾಗಿರುವ ಮಹಾಬಲ. ಇವನು ರಾಜ್ಯದ ದಂಡನಾಯಕನಾಗಿ ನೆರೆಹೊರೆಯ ರಾಜ್ಯಗಳವರು ವಿರಾಟನ ತಂಟೆಗೆ ಬರದಂತೆ ಮಾಡಿದ್ದ ಬಲಾಢ್ಯ. ಈ ಕಾರಣದಿಂದಾಗಿ ಅವನು ಅಕ್ಕಭಾವಂದಿರಿಬ್ಬರನ್ನೂ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದನೆಂಬುದೂ ನಿಜ. ಇವನು ಸೈರಂಧ್ರಿಯ ರೂಪಕ್ಕೆ ಮನಸೋತು ಅವಳನ್ನು ತನಗೆ ಒಪ್ಪಿಸುವಂತೆ ಅಕ್ಕನನ್ನು ಪರಿಪರಿಯಾಗಿ ಬೇಡಿಕೊಂಡ.
ಸೈರಂಧ್ರಿ ಮೊದಲಿಗೇ ಸುದೇಷ್ಣೆಯ ಬಳಿ ತನ್ನ ಗಂಧರ್ವಪತಿಗಳ ಬಗೆಗೆ ಹೇಳಿಯಾಗಿತ್ತು. ಆದುದರಿಂದ ಸೈರಂಧ್ರಿಯ ತಂಟೆಗೆ ಹೋಗುವುದು ಬೇಡವೆಂದು ಸುದೇಷ್ಣೆ ತಮ್ಮನ್ನು ಬಗೆಬಗೆಯಲ್ಲಿ ಎಚ್ಚರಿಸಿದಳು. ಆದರೆ ಒತ್ತಡಕ್ಕೆ ಮಣಿದಳು. ಏನೆಂದರೂ ರಾಜಕುಲದವರಿಗೆ ಕೆಳಗಿನ ಕೆಲಸಗಾರರ ಬಗ್ಗೆ ಗೌರವಾದರ, ಭಯ ಕಡಿಮೆಯಲ್ಲವೆ? ಸುದೇಷ್ಣೆಯೂ ಇದಕ್ಕೆ ಹೊರತಲ್ಲ. ಆದುದರಿಂದ ಸೈರಂಧ್ರಿಯ ಶೀಲರಕ್ಷಣೆ ತನ್ನ ಜವಾಬ್ದಾರಿ ಎಂಬುದನ್ನು ನಿರ್ಲಕ್ಷಿಸಿದಳೆಂದು ಕಾಣುತ್ತದೆ. ಮಾಲಿನೀ ಎಂಬ ಹೆಸರಿಟ್ಟುಕೊಂಡು ಸೈರಂಧ್ರಿ ತನ್ನ ಬಳಿಗೆ ಬಂದಾಗಲೇ ಇವಳ ರೂಪವು ವಿರಾಟನ ಮನಸ್ಸನ್ನು ಕೆಡಿಸಬಹುದೆಂಬ ಶಂಕೆ ಅವಳಿಗಿತ್ತು. ಆದರೆ ಅದು ಕೀಚಕನ ಮನಸ್ಸು ಕೆಡಿಸಿತು. ಅವನನ್ನು ತಿರಸ್ಕರಿಸಿ ಹಿಂದಿರುಗಿ ಬಂದು ಸೈರಂಧ್ರಿ ಕೊನೆಗೆ ಭೀಮನಿಂದ ಕೀಚಕನನ್ನು ಕೊಲ್ಲಿಸಬೇಕಾಯಿತು. ಈ ಸುದ್ದಿ ತಿಳಿದ ಸುದೇಷ್ಣೇ ಸೈರಂಧ್ರಿಯನ್ನು ಕರೆಸಿದಳು. ಮೃತ್ಯರೂಪಿಣಿ ಎಂದು ಅವಳನ್ನು ಕರೆದು ಈ ಕೂಡಲೇ ಮತ್ಸ್ಯನಗರವನ್ನು ಬಿಟ್ಟು ಹೋಗಬೇಕೆಂದು ಆಜ್ಞೆ ಮಾಡಿದಳು. ಆದರೆ ಇನ್ನು ಕೆಲವೇ ದಿನ ತನಗೆ ಆಶ್ರಯ ಕೊಡಬೇಕೆಂದೂ ತನ್ನಿಂದ ಮುಂದೆ ಯಾರಿಗೂ ತೊಂದರೆಯಾಗುವುದಿಲ್ಲವೆಂದೂ ಮಾಲಿನಿ (ಸೈರಂಧ್ರಿ) ಹೇಳಿದಾಗ ಅದಕ್ಕೆ ಒಪ್ಪಿ ತನ್ನಲ್ಲೆ ಇರಿಸಿಕೊಂಡಿದ್ದು ಅವಳ ಅಂತಃಕರಣವನ್ನು ತೋರುತ್ತದೆ. ಬಹುಶಃ ಈ ಕೊನೆಯ ಉಪಕಾರದ ಕಾರಣದಿಂದಾಗಿ ಪಾಂಡವರು, ಅವಳು ದ್ರೌಪದಿಯನ್ನು ಅರಿತರಿತೂ ಕೀಚಕನ ಮನೆಗೆ ಕಳಿಸಿದ ಅಪರಾಧವನ್ನು ಕ್ಷಮಿಸಿದರೆಂದು ಕಾಣುತ್ತದೆ. ತಮ್ಮನನ್ನು ಉಪೇಕ್ಷಿಸಿದರೆ ರಾಜ್ಯಕ್ಕೆ ಗಂಡಾಂತರ ಬಂದೀತೆಂದು ಹೆದರಿದ ಸುದೇಷ್ಣೆ ಸೈರಂಧ್ರಿಯ ವಿಚಾರದಲ್ಲಿ ಅನುಚಿತವಾಗಿ ನಡೆದುಕೊಳ್ಳಬೇಕಾದ ಅನಿವಾರ್ಯಕ್ಕೆ ಒಳಗಾಗಿದ್ದಳು.
ಮೂಲ ...{Loading}...
ಬರವ ಕಂಡು ಸುದೇಷ್ಣೆ ಮನದಲಿ
ಹರುಷ ಮಿಗೆ ಹೊಂಗಿದಳು ಕರೆ ಕರೆ
ತರುಣಿಯಾರೆಂದಟ್ಟಿದಳು ಕೆಳದಿಯರನನಿಬರನು
ಸರಸಿಜಾಯತದಂದವನು ಮೋ
ಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜ ಮಂದಿರವ ॥28॥
೦೨೯ ಕೆಳದಿಯರು ಕಾಣಿಸಿದರರಸನ ...{Loading}...
ಕೆಳದಿಯರು ಕಾಣಿಸಿದರರಸನ
ಲಲನೆಯನು ಪರಿಯಂಕ ಪೀಠದ
ಕೆಲಕೆ ಕರೆದಳು ಕಮಲವದನೆಯನುಚಿತ ವಚನದಲಿ
ನಳಿನಮುಖಿ ನೀನಾರು ನಿನಗಾ
ರೊಳರು ರಮಣರು ಮಾಸಿಕೊಂಡಿಹ
ಮಲಿನ ವೃತ್ತಿಯಿದೇಕೆನುತ ಬೆಸಗೊಂಡಳಂಗನೆಯ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸಖಿಯರೆಲ್ಲ ದ್ರೌಪದಿಯನ್ನು ಸುದೇಷ್ಣೆಯ ಬಳಿಗೆ ಕರೆ ತಂದರು. ರಾಣಿಯು ದ್ರೌಪದಿಯನ್ನು ತನ್ನ ಮಂಚದ ಬಳಿಗೆ ಮೃದುವಾದ ಮಾತುಗಳಿಂದಲೇ ಆಹ್ವಾನಿಸಿದಳು. ಬಂದನಂತರ “ಸುಂದರಿ ನೀನು ಯಾರು? ನಿನ್ನ ರಮಣರು ಯಾರು ? ಈ ಕೊಳಕು ಬಟ್ಟೆ ಏಕೆ ? ಎಂದು ಕೇಳಿದಳು.
ಪದಾರ್ಥ (ಕ.ಗ.ಪ)
ಕೆಳದಿ-ಗೆಳತಿ, ಪರಿಯಂಕ-ಮಂಚ, ನಳಿನಮುಖಿ-ತಾವರೆಯ ಮುಖದªಳು, ಒಳರು-ಇದ್ದಾರೆ.
ಮೂಲ ...{Loading}...
ಕೆಳದಿಯರು ಕಾಣಿಸಿದರರಸನ
ಲಲನೆಯನು ಪರಿಯಂಕ ಪೀಠದ
ಕೆಲಕೆ ಕರೆದಳು ಕಮಲವದನೆಯನುಚಿತ ವಚನದಲಿ
ನಳಿನಮುಖಿ ನೀನಾರು ನಿನಗಾ
ರೊಳರು ರಮಣರು ಮಾಸಿಕೊಂಡಿಹ
ಮಲಿನ ವೃತ್ತಿಯಿದೇಕೆನುತ ಬೆಸಗೊಂಡಳಂಗನೆಯ ॥29॥
೦೩೦ ಅತುಳಬಲ ಗನ್ಧರ್ವರೈವರು ...{Loading}...
ಅತುಳಬಲ ಗಂಧರ್ವರೈವರು
ಪತಿಗಳೆನಗುಂಟೆನ್ನ ಚಿತ್ತಕೆ
ಖತಿಯ ಮಾಡಿದರೊಂದು ವರುಷವು ಬಿಡುವೆನವರುಗಳ
ಸತತವಾ ಕುಂತೀಕುಮಾರರ
ಸತಿಯರೋಲೈಸಿದ್ದೆ ಬಳಿಕವ
ರತಿ ಗಹನ ವನನಿಷ್ಠರಾದರು ತನಗೆ ಬರವಾಯ್ತು ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿ ಸುದೇಷ್ಣೆಗೆ ಹೇಳಿದಳು “ಮಹಾಬಲಶಾಲಿಗಳಾದ ಐವರು ಗಂಡಂದಿರು ನನಗಿದ್ದಾರೆ. ಅವರು ನನಗೆ ಕೋಪಬರುವಂಥ ಕೆಲಸ ಮಾಡಿದ್ದರಿಂದ ಒಂದು ವರ್ಷದವರೆಗೆ ಅವರನ್ನು ಬಿಟ್ಟಿರುತ್ತೇನೆ. ನಾನು ಸದಾ ಕುಂತಿಯಕುಮಾರರ ರಾಣಿಯರುಗಳ ಸೇವೆಯಲ್ಲಿ ನಿರತಳಾಗಿದ್ದೆ. ಬಳಿಕ ಅವರು ದಟ್ಟ ಕಾಡಿಗೆ ಹೊರಟು ಹೋದರು. ಆದುದರಿಂದ ಇಲ್ಲಿಗೆ ಬಂದೆ.
ಪದಾರ್ಥ (ಕ.ಗ.ಪ)
ಅತುಳ-ಮಹಾ, ಖತಿ-ಕೋಪ, ಸತತ-ಸದಾ, ಅತಿಗಹನವನನಿಷ್ಠರಾದರು-ತುಂಬ ದಟ್ಟವಾದ ಕಾಡಿಗೆ ಹೋದರು, ಬರವು-ಬರುವಿಕೆ, ಆಗಮನ,
ಟಿಪ್ಪನೀ (ಕ.ಗ.ಪ)
ಕುಮಾರವ್ಯಾಸನ ದ್ರೌಪದಿ ಕೊಡುವ ಕಾರಣಗಳು ಅಷ್ಟು ಸಮಂಜಸವಾಗಿಲ್ಲ. ಒಂದು ವರ್ಷದವರೆಗೆ ಗಂಡಂದಿರನ್ನು ಬಿಟ್ಟು ಇರುವುದಕ್ಕೆ ಅವರೆಲ್ಲ ತನ್ನ ಮನಸ್ಸಿಗೆ ನೋವುಂಟುಮಾಡುವ ಕೆಲಸ ಮಾಡಿದರು ಎನ್ನುತ್ತಾಳೆ. ಜೊತೆಗೆ ಸದಾ ನಾನು ಪಾಂಡವರ ಅಂತಃಪುರದಲ್ಲಿ ದ್ರೌಪದಿ ಮೊದಲಾದವರ ಸೇವೆ ಮಾಡುತ್ತಿದ್ದೆ ಎನ್ನುತ್ತಾಳೆ. ಗಂಧರ್ವರಮಣಿಯಾಗಿ ದ್ರೌಪದಿಯ ಅಂತಃಪುರದಲ್ಲಿ ಕೆಲಸ ಮಾಡುವ ಅಗತ್ಯವೇನಿತ್ತು ಎಂಬುದು ಸ್ಪಷ್ಟವಾಗುವುದಿಲ್ಲ. ಮೂಲದಲ್ಲಿ “ನನ್ನ ಪತಿಗಳು ಗಂಧರ್ವರು, ನನ್ನಂತೆಯೇ ದುಃಖಶೀಲರು, ಬಲಶಾಲಿಗಳು ನನ್ನ ಬಗೆಗೆ ಅನುರಾಗವುಳ್ಳವರು. ಅವರು ಯಾರಿಗೂ ಕಾಣದಂತೆ ನನ್ನನ್ನು ಸದಾ ಕಾಪಾಡುತ್ತಾರೆ” ಎಂದು ದ್ರೌಪದಿ ಹೇಳುತ್ತಾಳೆ. “ದುಃಖಶೀಲಾಹಿ ಗಂಧರ್ವಾಸ್ತೇಚಯೇ ಬಲಿನಃ ಪ್ರಿಯಾಃ
ಪ್ರಚ್ಛನ್ನಾಶಾಪಿ ರಕ್ಷಂತಿ ತೇ ಮಾಂ ಶುಚಿಸ್ಮಿ ತೇ”
ಅಲ್ಲದೆ ಸೈರಂಧ್ರಿಯು ಸುದೇಷ್ಣೆಗೆ “ಹೆಚ್ಚುಕಾಲ ಒಂದೇ ಪ್ರದೇಶದಲ್ಲಿ ಇರದೆ ಅನೇಕ ಕಡೆಗಳಲ್ಲಿ ಸುತ್ತಾಡುವುದು ನನ್ನ ಕುಲಧರ್ಮ, ಕಾಡಿನಲ್ಲಿ ಸಂಚರಿಸುವುದು ನನ್ನ ಪತಿಗಳ ಕುಲಧರ್ಮ. ಅವರೆಲ್ಲ ಗಂಧರ್ವರು. ದಿಕ್ಪಾಲಕರಾದ ಯಮ ವಾಯು ಇಂದ್ರ ಮತ್ತು ಅಶ್ವಿನೀ ದೇವತೆಗಳ ಅನುಗ್ರಹವೂ ನನಗಿದೆ. ಕಾರಣಾಂತರದಿಂದ ನನಗೂ ನನ್ನ ಪತಿಗಳಿಗೂ ವಿಯೋಗವಾಗಿದೆ ಎಂದು ವಿವರವಾಗಿ ಹೇಳಿಕೊಳ್ಳುತ್ತಾಳೆ.
‘ಸೀರಂಧಿಯೇ ಸೈರಂಧ್ರಿ’ ಅಂದರೆ ಅಂತಃಪುರದ ಪರಿಚಾರಕಿ, ರಾಜಭಾರ್ಯೆ ಎಂಬರ್ಥಗಳೂ ಇವೆ.
ಮೂಲ ...{Loading}...
ಅತುಳಬಲ ಗಂಧರ್ವರೈವರು
ಪತಿಗಳೆನಗುಂಟೆನ್ನ ಚಿತ್ತಕೆ
ಖತಿಯ ಮಾಡಿದರೊಂದು ವರುಷವು ಬಿಡುವೆನವರುಗಳ
ಸತತವಾ ಕುಂತೀಕುಮಾರರ
ಸತಿಯರೋಲೈಸಿದ್ದೆ ಬಳಿಕವ
ರತಿ ಗಹನ ವನನಿಷ್ಠರಾದರು ತನಗೆ ಬರವಾಯ್ತು ॥30॥
೦೩೧ ಏನ ಮಾಡಲು ...{Loading}...
ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವ
ಸೂನ ಮುಡಿಸುವ ವರ ಕಟಾಕ್ಷಕೆ ಕಾಡಿಗೆಯನಿಡುವ
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿದಳಂದು ವಿನಯದಲಿ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುದೇಷ್ಣೆಯು ಆ ಹೆಂಗಸನ್ನು “ನೀನು ಏನು ಕೆಲಸ ಮಾಡಬಲ್ಲೆ ?” ಎಂದಾಗ ಆಕೆ “ಮಾನಿನಿಯರ ಸಿರಿಮುಡಿಯನ್ನು ಕಟ್ಟುತ್ತೇನೆ. ಹೂವು ಮುಡಿಸುತ್ತೇನೆ. ಕಣ್ಣಿಗೆ ಕಾಡಿಗೆ ಹಚ್ಚುತ್ತೇನೆ. ಅಷ್ಟೇ ಅಲ್ಲ. ಏನು ಹೇಳಿದರೂ ಮಾಡುತ್ತೇನೆ. ಪ್ರೀತಿ ಶ್ರದ್ಧೆಗಳಿಂದ ಮಾಡುತ್ತೇನೆ” ಎಂದಳು ಆಗ ಸಂತೋಷಗೊಂಡ ಸುದೇಷ್ಣೆ ದ್ರೌಪದಿಯೊಂದಿಗೆ ವಿನಯದಿಂದ ಹೇಳಿದಳು.
ಪದಾರ್ಥ (ಕ.ಗ.ಪ)
ಸೂನ-ಹೂವು, ಕಟಾಕ್ಷ-ಕಡೆಗಣ್ಣು,
ಟಿಪ್ಪನೀ (ಕ.ಗ.ಪ)
- ಸೈರಂಧ್ರಿ ಎಂದರೆ ಸೈರಂ-ಸ್ವಾತಂತ್ರ್ಯವನ್ನು ಧ್ರೀ-ಹೊಂದಿರುವ ದಾಸಿ ಎಂಬರ್ಥವನ್ನು ಹೇಳುತ್ತಾರೆ. ಸುದೇಷ್ಣೆಯ ಅರಮನೆಯಲ್ಲಿ ಅವಳು ‘ಮಾಲತಿ’. ಅವಳು ಹಿಂದೆ ದ್ರೌಪದಿ ಸತ್ಯಭಾಮೆಯರ ಸೇವೆ ಮಾಡಿದ್ದಳಂತೆ.
- ಇಲ್ಲಿ ಯಾವ ಕೆಲಸ ಹೇಳಿದರೂ ಮಾಡುತ್ತೇನೆ ಎಂಬ ಮಾತಿದೆ. ಆದರೆ ವ್ಯಾಸಭಾರತದಲ್ಲಿ ಸೈರಂಧ್ರಿ ಸ್ಪಷ್ಟವಾಗಿ “ನಾನು ಎಂಜಲು ತಿನ್ನುವುದಿಲ್ಲ. ಕಾಲು ತೊಳೆಯುವುದಿಲ್ಲ” ಎಂದು ಮೊದಲಿಗೇ ಹೇಳಿ ಬಿಡುತ್ತಾಳೆ. ಸುದೇಷ್ಣೆ ಒಪ್ಪಿ “ನ ಚ ಪಾಕಾ ನಚೋಚ್ಛಿಷ್ಠಂ ಸ್ಪೃಶಸಿ ತ್ವಂ ಕಥಂಚನ” ಎನ್ನುತ್ತಾಳೆ. ತನ್ನನ್ನು ಹಗುರವಾಗಿ ಕಾಣಬಾರದು, ಕೆಟ್ಟಕೆಲಸಗಳಿಗೆ ಬಳಸಿಕೊಳ್ಳಬಾರದು, ನನ್ನೆದುರಿಗೆ ಯಾರೂ ಕಾಲುಚಾಚಿ ಕೂರಬಾರದು ಎಂಬ ನಿಬಂಧನೆಗಳನ್ನು ವಿಧಿಸುತ್ತಾಳೆ. ಸೈರಂಧ್ರಿ ಎಂದರೆ ತನ್ನ ಮಾನವನ್ನೂ ಗೌರವವನ್ನೂ ಕಾಪಾಡಿಕೊಳ್ಳುತ್ತ ಬೇರೆಯವರ ಮನೆಯಲ್ಲಿ ಪರಿಚಾರಕಿಯಾಗಿ ಇರುವಾಕೆ.
ಮೂಲ ...{Loading}...
ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವ
ಸೂನ ಮುಡಿಸುವ ವರ ಕಟಾಕ್ಷಕೆ ಕಾಡಿಗೆಯನಿಡುವ
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿದಳಂದು ವಿನಯದಲಿ ॥31॥
೦೩೨ ಎನಲು ಮೆಚ್ಚಿದಳಾ ...{Loading}...
ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳನಿಬರಿಗಾಯ್ತು ನಿರ್ವಾಹ
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈಮರೆ
ಸನುಪಮಿತ ಭುಜಸತ್ವರಿದ್ದರು ಭೂಪ ಕೇಳ್ ಎಂದ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ವೀರವನಿತೆಯನ್ನು ಸುದೇಷ್ಣೆ ಮೆಚ್ಚಿಕೊಂಡಳು. ಅವಳನ್ನು ಸಖಿಯಾಗಿ ನೇಮಿಸಿದಳು. ಹೀಗೆ ಪಾಂಡವರಿಗೆಲ್ಲ ಉದ್ಯೋಗ ದೊರಕಿತು. ಅವರ ಮನಸ್ಸಿನ ತಾಪ ಕಡಮೆಯಾಯಿತು. ಎಲ್ಲರೂ ಮಾರುವೇಷದಲ್ಲಿ ವಿರಾಟನ ಊರಿನಲ್ಲಿದ್ದರು ಎಂದು ವೈಶಂಪಾಯನರು ಜನಮೇಜಯನಿಗೆ ಹೇಳುತ್ತಿದ್ದಾರೆ.
ಪದಾರ್ಥ (ಕ.ಗ.ಪ)
ಅನಿಬರಿಗೆ-ಪಾಂಡವರೆಲ್ಲರಿಗೆ, ಪುರಾಂತರ-ಊರು, ಮೈಮರೆಸಿ-ವೇಷಾಂತರದಿಂದ
ಟಿಪ್ಪನೀ (ಕ.ಗ.ಪ)
ಹಿಂದಿನ ಪದ್ಯದಲ್ಲಿ ನಸುನಗುತ್ತ ಸುದೇಷ್ಣೆ ವಿನಯದಿಂದ ಮಾತಾಡಿದಳು ಎಂಬ ಮಾತಿದೆ. ಈ ಪದ್ಯದ ಆರಂಭದಲ್ಲಿ ಎನಲು ಎಂದು ಹೇಳಲಾಗಿದೆ. ಹಾಗೆ ಹೇಳಿದಾಗ ಆ ಮಾತಿಗೆ ಅರ್ಥವಾಗುವುದಿಲ್ಲ. ಮಧ್ಯೆ ಒಂದು ಪದ್ಯ ಬಿಟ್ಟು ಹೋಗಿರಬಹುದೆ ? ಹಿಂದಿನ ಪದ್ಯದ ಧೋರಣೆಗೆ ಇದು ಹೊಂದಿಕೊಳ್ಳುವುದಿಲ್ಲ ಅಥವ ಏನು ಮಾಡಲು ಬಲ್ಲೆಯೆಂದರೆ ಎಂದು ಆರಂಭವಾಗುವ ಪದ್ಯವನ್ನು ತೆಗೆದುಹಾಕಿದರೆ ಅರ್ಥ ಪರಂಪರೆ ಸರಿಹೋದೀತು(ಇದು ಕೃಷ್ಣಜೋಯಿಸರು ಸಂಪಾದಿಸಿರುವ ವಿರಾಟಪರ್ವದಲ್ಲಿ ಇಲ್ಲ).
ಮೂಲ ...{Loading}...
ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳನಿಬರಿಗಾಯ್ತು ನಿರ್ವಾಹ
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈಮರೆ
ಸನುಪಮಿತ ಭುಜಸತ್ವರಿದ್ದರು ಭೂಪ ಕೇಳೆಂದ ॥32॥
೦೩೩ ಆ ಸುದೇಷ್ಣಾ ...{Loading}...
ಆ ಸುದೇಷ್ಣಾ ದೇವಿಯರ ನಿಡು
ಕೇಶವನು ಹಿಕ್ಕುವಳು ಮುದದಲಿ
ಸೂಸು ಮಲ್ಲಿಗೆಯರಳ ದೆಖ್ಖಾಳವನು ಮುಡಿಸುವಳು
ಆ ಸತಿಯ ಮನವೊಲಿದು ನಡೆವಳು
ಲೇಸು ಲೇಸೆಂದೆನಿಸಿ ಬಾಳುವ
ಭಾಷೆಯನು ಸಲಿಸುತ್ತಲಿರ್ದಳು ಪತಿಗಳಾಜ್ಞೆಯಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದ್ರೌಪದಿಯು ರಾಣಿಯ ಉದ್ದನೆಯ ತಲೆಗೂದಲನ್ನು ಹಿಕ್ಕುತ್ತಾ, ಸಂತೋಷದಿಂದ ಮಲ್ಲಿಗೆಯ ಹೂವಿನ ಹಾರವನ್ನು ಸಮೃದ್ಧವಾಗಿ ಮುಡಿಸುತ್ತ ರಾಣಿಗೆ ಸಂತೋಷವಾಗುವಂತೆ ನಡೆದುಕೊಳ್ಳುತ್ತ ಗಂಡಂದಿರ ಅಪ್ಪಣೆಯಂತೆ ಒಳ್ಳೆಯ ಹೆಸರು ತೆಗೆದುಕೊಂಡು ಬಾಳುತ್ತಿದ್ದಳು.
ಪದಾರ್ಥ (ಕ.ಗ.ಪ)
ನಿಡುಕೇಶ-ಉದ್ದನೆಯ ತಲೆಗೂದಲು, ಹಿಕ್ಕು-ಸಿಕ್ಕು ಬಿಡಿಸು, ಅರಳು-ಹೂವು, ದೆಖ್ಖಾಳ<ದೆಖ್ಖಾಣ, ದೆಖ್ಖಾಣಮೆನಲ್ ಹೆಚ್ಚುಗೆ ಅತಿಶಯ, ಸಮೃದ್ಧ.
ಟಿಪ್ಪನೀ (ಕ.ಗ.ಪ)
- ಕುಮಾರವ್ಯಾಸನು ಧರ್ಮರಾಯನು ರಾಜಸಭೆಯಲ್ಲಿ ಕೆಲಸಕ್ಕೆ ನೇಮಿತನಾದ ಪ್ರಸಂಗವನ್ನು ಮೂರು ಪದ್ಯಗಳಲ್ಲಿ ವಿವರಿಸಿದ್ದಾನೆ ಮುಂದೆ ಎರಡೇ ಪದ್ಯಗಳಲ್ಲಿ ಉಳಿದ ನಾಲ್ವರ ವಿಷಯ ಪ್ರಸ್ತಾವಿಸಿದ್ದಾನೆ ಮುಂದಿನ ಹನ್ನೊಂದು ಪದ್ಯಗಳ ದೀರ್ಘ ವಿವರಣೆಯನ್ನು ದ್ರೌಪದಿಗೆ ಮೀಸಲಿರಿಸಿದ್ದಾನೆ.
- ದ್ರೌಪದಿಯ ರೂಪದ ಬಗೆಗೆ ಮೂಲದಲ್ಲಿ ಸುದೇಷ್ಣೆ ಹೇಳುತ್ತಾಳೆ.
“ಸೈರಂಧ್ರಿ ! ನನ್ನಂಥ ಹೆಂಗಸರಿಗೇ ನಿನ್ನ ಮೇಲೆ ಮೋಹವಾಗುತ್ತದೆ. ಇನ್ನು ಗಂಡಸರ ವಿಷಯ ಏನು ಹೇಳಲಿ ? ಅವರಿವರಿರಲಿ ಇಲ್ಲಿರುವ ಮರದ ಕೊಂಬೆಗಳು ಕೂಡ ನಿನ್ನ ಕಡೆಗೆ ವಾಲುತ್ತವೆ. ನನ್ನ ಪತಿ ನಿನ್ನನ್ನು ಕಂಡರೆ ನನ್ನನ್ನು ಕೂಡ ಮರೆತಾನು”
ಮೂಲ ...{Loading}...
ಆ ಸುದೇಷ್ಣಾ ದೇವಿಯರ ನಿಡು
ಕೇಶವನು ಹಿಕ್ಕುವಳು ಮುದದಲಿ
ಸೂಸು ಮಲ್ಲಿಗೆಯರಳ ದೆಖ್ಖಾಳವನು ಮುಡಿಸುವಳು
ಆ ಸತಿಯ ಮನವೊಲಿದು ನಡೆವಳು
ಲೇಸು ಲೇಸೆಂದೆನಿಸಿ ಬಾಳುವ
ಭಾಷೆಯನು ಸಲಿಸುತ್ತಲಿರ್ದಳು ಪತಿಗಳಾಜ್ಞೆಯಲಿ ॥33॥
೦೩೪ ಜವನ ಮಗ ...{Loading}...
ಜವನ ಮಗ ಸನ್ಯಾಸಿ ವೇಷದಿ
ಪವನಸುತ ಬಾಣಸಿನ ಮನೆಯಲಿ
ದಿವಿಜ ರಾಯನ ತನಯನಿರ್ದ ಶಿಖಂಡಿ ವೇಷದಲಿ
ಜವಳಿ ಮಕ್ಕಳು ತುರಗ ಗೋವ್ರಜ
ನಿವಹಕಾರರು ಕಮಲಮುಖಿ ಕಾ
ಲವನು ಕಳೆದಳು ರಾಯನೊಲುಮೆಯ ಕೆಳದಿಯರ ಕೂಡೆ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಯಮನ ಮಗ ಧರ್ಮರಾಯನು ಸನ್ಯಾಸಿ ವೇಷದಲ್ಲಿದ್ದ. ಭೀಮನು ಅಡಿಗೆ ಮನೆಯಲ್ಲಿದ್ದ. ದೇವೇಂದ್ರ ಸುತನಾದ ಅರ್ಜುನನು ಶಿಖಂಡಿ ವೇಷದಲ್ಲಿದ್ದ. ಅವಳಿ ಮಕ್ಕಳಾದ ನಕುಲ ಸಹದೇವರು ಕುದುರೆ ಮತ್ತು ಗೋವುಗಳ ಮಧ್ಯೆ ಕಾರ್ಯ ನಿರ್ವಹಿಸಿದರು. ದ್ರೌಪದಿ ಸೈರಂಧ್ರಿಯಾಗಿ ರಾಣಿಯ ಸಖಿಯರ ಜತೆಯಲ್ಲಿ ಕಾಲಕಳೆದಳು.
ಪದಾರ್ಥ (ಕ.ಗ.ಪ)
ಜವ-ಯಮ, ಪವನಸುತ-ಭೀಮ (ವಾಯುಪುತ್ರ), ಬಾಣಸಿನಮನೆ-ಪಾಕಶಾಲೆ, ದಿವಿಜರಾಯನ ತನಯ-ದೇವೇಂದ್ರ ಪುತ್ರನಾದ ಅರ್ಜುನ, ಜವಳಿ-ಜೋಡಿ, ಗೋವ್ರಜ-ಗೋವುಗಳ ಸಮೂಹ, ನಿವಹಕಾರರು-ನಿರ್ವಾಹಕರು.
ಪಾಠಾನ್ತರ (ಕ.ಗ.ಪ)
ನಿವಹರಾದರು - ‘ನಿವಹಕಾರರು’
ವಿರಾಟ ಪರ್ವ, ಮೈ.ವಿ.ವಿ.
(ನಿವಹರಾದರು ಎಂಬುದಕ್ಕಿಂತ ಕೃಷ್ಣಜೋಯಿಸರ ‘ನಿವಹಕಾರರು’ ಎಂಬ ಪಾಠಸೂಕ್ತವಾಗಿದೆ.
ಟಿಪ್ಪನೀ (ಕ.ಗ.ಪ)
ಪಾಂಡವರು ಗುಟ್ಟಾಗಿ ಆಗಾಗ ಸಂಧಿಸುತ್ತಿದ್ದರು. ಪರಸ್ಪರ ಸಹಾಯಕರಾಗಿದ್ದರು. ಕೌರವ ಭಯದಿಂದ ತುಂಬ ಎಚ್ಚರಿಕೆಯಿಂದ ಇದ್ದರು. ಅಕ್ಷಕ್ರೀಡೆಯಲ್ಲಿ ಹಣವನ್ನು ಗೆದ್ದು ಧರ್ಮರಾಯನು ಗುಟ್ಟಾಗಿ ತಮ್ಮಂದಿರಿಗೆ ಕೊಡುತ್ತಿದ್ದ. ಉಳಿದವರೂ ಹೆಚ್ಚಿನ ಕೆಲಸದಿಂದ ದೊಡ್ಡ ಸಂಭಾವನೆ ಪಡೆಯುತ್ತಿದ್ದರು. ಭೀಮನು ಜೀಮೂತನೆಂಬ ಪ್ರಸಿದ್ಧ ಜಟ್ಟಿಯನ್ನು ಸೋಲಿಸಿ ರಾಜನ ಮಾನ ಕಾಪಾಡಿದ. ಭೀಮನು ಆಗಾಗ ಹುಲಿಸಿಂಹಗಳ ಜೊತೆ ಹೋರಾಡಿ ಮನರಂಜಿಸುತ್ತಿದ್ದ ಇತ್ಯಾದಿ ವಿಷಯಗಳು ಮೂಲ ಭಾರತದಲ್ಲಿವೆ. ನಕುಲನು ಗ್ರಂಥಿಕ ಎಂಬ ಹೆಸರನ್ನು ಇಟ್ಟುಕೊಂಡಿದ್ದ. ಅಶ್ವಬಂಧ ಕಾರ್ಯವನ್ನು ಮಾಡುವುದಾಗಿ ಹೇಳಿದ. ಗ್ರಂಥಿಕ ಎಂದರೆ ಆಯುರ್ವೇದ, ಅಥರ್ವಣ ವಿದ್ಯೆಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಅಧ್ಯಯನ ಮಾಡಿದವನು.
ಸಹದೇವ ಗೋಪಾಲಾಧ್ಯಕ್ಷ ಪದವಿಯನ್ನು ಸ್ವೀಕರಿಸಿದ. ಇವನಿಗೆ ತಂತಿಪಾಲ ಎಂಬ ಹೆಸರಿದೆ. ತಂತಿಪಾಲ ಎಂದರೆ ಗೋವುಗಳ ಕೊರಳಿಗೆ ಕಟ್ಟುವ ಕೋಲು. ತಂತಿ ಎಂದರೆ ‘ವಾಕ್’ ಎಂಬರ್ಥವೂ ಇದೆ. ಆಜ್ಞೆಯ ಪರಿಪಾಲಕ ಎಂದರ್ಥ.
ಸಹದೇವನು ತುಂಬ ಸೂಕ್ಷ್ಮಸ್ವಭಾವದ ಲಜ್ಜಾಶೀಲನಾದ ವ್ಯಕ್ತಿ. ಸುಕುಮಾರ. ಕುಂತಿಯು ಪಾಂಡವರನ್ನು ಕಾಡಿಗೆ ಕಳಿಸುವಾಗ ದ್ರೌಪದಿಗೆ “ಈ ಸಹದೇವನ ಕೈಹಿಡಿದುಕೊಂಡು ಕಾಡಿನಲ್ಲಿ ನಡೆಸಬೇಕು. ಸ್ವಯಂ ನೀನೇ ಅವನಿಗೆ ಆಹಾರವನ್ನು ತಿನ್ನಿಸು” ಎಂದು ಹೇಳಿದ್ದಳು. (ವಿರಾಟಪರ್ವ 19-32)
ಸುಕುಮಾರಶ್ಚ ಶೂರಶ್ಚ ರಾಜಾನಂಚಾಪ್ಯನುವ್ರತಃ
ಜ್ಯೇಷ್ಠಾಪ ಚಾಯಿನಂ ವೀರಂ ಸ್ವಯಂ ಪಾಂಚಾಲಿ ಭೋಜಯೇ
ಮೂಲ ...{Loading}...
ಜವನ ಮಗ ಸನ್ಯಾಸಿ ವೇಷದಿ
ಪವನಸುತ ಬಾಣಸಿನ ಮನೆಯಲಿ
ದಿವಿಜ ರಾಯನ ತನಯನಿರ್ದ ಶಿಖಂಡಿ ವೇಷದಲಿ
ಜವಳಿ ಮಕ್ಕಳು ತುರಗ ಗೋವ್ರಜ
ನಿವಹಕಾರರು ಕಮಲಮುಖಿ ಕಾ
ಲವನು ಕಳೆದಳು ರಾಯನೊಲುಮೆಯ ಕೆಳದಿಯರ ಕೂಡೆ ॥34॥