೨೨

೦೦೦ ಸೂ ರಾಯನರಸಿಯ ...{Loading}...

ಸೂ. ರಾಯನರಸಿಯ ಹಿಡಿದೆಳೆವ ರಿಪು
ರಾಯ ದಳವನು ಮುರಿದು ಫಲುಗುಣ
ವಾಯುಜರು ಪರಿಭವಿಸಿ ಬಿಟ್ಟರು ಕಲಿ ಜಯದ್ರಥನ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಲೆಕ್ಕಕೆ ಸಂದುದಟವೀ
ಪಾಳಿ ಪರಿಯಟಣ ಪ್ರಬಂಧಕೆ ವರುಷ ಹನ್ನೊಂದು
ಮೇಲೆ ಮೇಲೌಕುವ ವಿಪತ್ಕ
ಲ್ಲೋಲ ಕೋಳಾಹಲಿತ ಕಲುಷ ಕ
ರಾಳ ಕಾಲಾಂಬುಧಿಯನೀಸಾಡಿದರು ಬೇಸರದೆ ॥1॥

೦೦೨ ಸಿನ್ಧು ದೇಶಕೆ ...{Loading}...

ಸಿಂಧು ದೇಶಕೆ ಬಂದನವನಿಪ
ಬಂಧ ಕೃತಿಯಲಿ ಬಳಿಕ ಬಿಡುಗಡೆ
ಯಂಧಭೂಪತಿಯಳಿಯ ಕೇಳಿದನಾ ಜಯದ್ರಥನು
ಅಂಧತೆಯನೇನೆಂಬೆನೈ ಪ್ರತಿ
ಬಂಧಕರು ಬೇಡೆನಲು ನಯದಭಿ
ಸಂಧಿಯಲಿ ಸೀವರಿಸಿ ಸಂವರಿಸಿದನು ಸೈನಿಕವ ॥2॥

೦೦೩ ನೆರಹಿದನು ಹದಿನಾರು ...{Loading}...

ನೆರಹಿದನು ಹದಿನಾರು ಸಾವಿರ
ಕರಿಘಟೆಯನೈವತ್ತು ಸಾವಿರ
ತುರಗವನು ಹದಿನಾಲ್ಕು ಸಾವಿರ ಕನಕಮಯ ರಥವ
ಚರಣಚೌಪಟರೈದು ಲಕ್ಷವ
ಬರಿಸಿದನು ಬಹುವಾದ್ಯ ರವ ದಿಗು
ಶಿರವೊಡೆಯೆ ಸೂಳೈಸೆ ಮೇಳೈಸಿದನು ಮೋಹರವ ॥3॥

೦೦೪ ಜೀಯ ಭಾಸ್ಕರ ...{Loading}...

ಜೀಯ ಭಾಸ್ಕರ ಭೌಮರಶುಭ
ಸ್ಥಾಯಿಗಳು ಗುರು ಮಂದರಭಿಭವ
ದಾಯಿಗಳು ವಿಪರೀತ ದೆಸೆ ಬುಧ ಶುಕ್ರ ರಾಹುಗಳ
ಯಾಯಿಗಳಿಗಪಜಯ ನಿವಾಸ
ಸ್ಥಾಯಿಗೊಳ್ಳಿತು ಚಿತ್ತವಿಸಿಯೆನೆ
ಜೋಯಿಸರ ಜವಿವಲೆಗೆ ಸಿಲುಕೆನೆನುತ್ತ ಹೊರವಂಟ ॥4॥

೦೦೫ ಉರಿ ಹೊಗೆಯ ...{Loading}...

ಉರಿ ಹೊಗೆಯ ದಿಕ್ಕಿನಲಿ ಹಕ್ಕಿಗ
ಳೊರಲಿದವು ಗೋಮಾಯು ರವವ
ಬ್ಬರಿಸಿದುದು ದೆಸೆ ದೆಸೆಗಳಲಿ ಸೂಚಿಸಿತು ರಣಭಯವ
ದುರುಳನದ ಕೈಕೊಂಬನೇ ಕುರು
ನರಪತಿಯ ತತ್ಸಂಪ್ರದಾಯದ
ಗರುಡಿಕಾರನಲಾ ಚತುಷ್ಟಯ ದುಷ್ಟಮಂತ್ರಿಗಳ ॥5॥

೦೦೬ ಭರದ ಪಯಣದ ...{Loading}...

ಭರದ ಪಯಣದ ಮೇಲೆ ಪಯಣದ
ಲುರವಣಿಸಿ ನಡೆತಂದು ಪಾಂಡವ
ರರಸನಿಹ ವಿಮಲಾಶ್ರಮದ ವಿಪಿನೋಪಕಂಠದಲಿ
ಹರಹಿದವು ಗುಡಿ ಗಜ ಹಯದ ಮಂ
ದಿರ ರಚನೆ ರಹಿಯಾಯ್ತು ಬಿಟ್ಟನು
ಕುರುನೃಪಾಲನ ಮೈದುನನು ಭೂಪಾಲ ಕೇಳ್ ಎಂದ ॥6॥

೦೦೭ ಏನ ನೆನೆದನೊ ...{Loading}...

ಏನ ನೆನೆದನೊ ದುಷ್ಟಮಂತ್ರ ವಿ
ತಾನ ದೀಕ್ಷಿತ ಕಳುಹಿದನು ಮದ
ನಾನುರಾಗದಲಾಭರಣವನುಲೇಪನಾದಿಗಳ
ಸಾನುನಯದಲಿ ಪಾಂಡುಪುತ್ರರ
ಮಾನಿನಿಗೆ ಕೊಡಿ ನಿರ್ಜನದೊಳಬು
ಜಾನನೆಯ ಸೇರಿಸುವುದೆಮಗೆಂದಟ್ಟಿದನು ಚರರ ॥7॥

೦೦೮ ಬನದೊಳಡಗಿದರವರು ಕುನ್ತೀ ...{Loading}...

ಬನದೊಳಡಗಿದರವರು ಕುಂತೀ
ತನುಜರೈವರು ಬೇಂಟೆಯಾಡಲು
ನೆನೆದು ಧೌಮ್ಯನನಬುಜಮುಖಿಯಾಶ್ರಮದ ಕಾಹಿನಲಿ
ಮುನಿಜನಂಗಳ ನಿಲಿಸಿ ಕೊಂಡರು
ಧನುವ ಬೆಂಬತ್ತಳಿಕೆಗಳ ನೃಪ
ಜನ ಲಲಾಮರು ಬನಬನದೊಳರಸಿದರು ಮೃಗಕುಲವ ॥8॥

೦೦೯ ಹೋದರವರತ್ತಲು ವಿಕಾರ ...{Loading}...

ಹೋದರವರತ್ತಲು ವಿಕಾರ ವಿ
ನೋದ ಶೀಲನ ಶಿಷ್ಯರುಬ್ಬಟೆ
ಬೀದಿವರಿದುದು ಪರ್ಣಶಾಲೆಗೆ ಬಂದರಂಗನೆಯ
ಆದರಿಸಿ ಮುನಿಜನವನೊಯ್ಯನೆ
ಕೈದುಗಳ ಹೊರಗಿರಿಸಿ ದೂರದ
ಲಾ ದುರಾತ್ಮರು ಕಂಡು ಮೈಯಿಕ್ಕಿದರು ಮಾನಿನಿಗೆ ॥9॥

೦೧೦ ದೇವಿ ಚಿತ್ತೈಸುವುದು ...{Loading}...

ದೇವಿ ಚಿತ್ತೈಸುವುದು ನಿಮ್ಮಯ
ಭಾವ ಕೌರವನೃಪನ ಮೈದುನ
ಭಾವಿಸಲು ದುಸ್ಸಳೆಯ ರಮಣನು ಕಲಿ ಜಯದ್ರಥನು
ಈ ವಿವಿಧ ರತ್ನಾಭರಣ ಪ
ಟ್ಟಾವಳಿಯನನುಲೇಪನಾದಿಯ
ಪಾವುಡವನವಧರಿಸ ಬೇಕೆಂದಿಳುಹಿದರು ಮುಂದೆ ॥10॥

೦೧೧ ಎಸೆವಳೇ ದುಸ್ಸಳೆ ...{Loading}...

ಎಸೆವಳೇ ದುಸ್ಸಳೆ ಜಯದ್ರಥ
ಕುಶಲನೇ ಪಾವುಡವ ನೀವೊ
ಪ್ಪಿಸುವುದೊಡೆಯರ ಮುಂದೆ ಬಿಜಯಂಗೈವರೀ ಕ್ಷಣಕೆ
ಶಿಶುಗಳಾವೆಮಗೀ ಸ್ವತಂತ್ರತೆ
ಯೆಸಕವೆಲ್ಲಿಯದಕಟ ವಸ್ತು
ಪ್ರಸರವೆಮಗೇಕೆನುತ ನುಡಿದಳು ನಗುತ ನಳಿನಾಕ್ಷಿ ॥11॥

೦೧೨ ನಾರ ಸೀರೆಯನುಡುವೆನೆಮಗಾ ...{Loading}...

ನಾರ ಸೀರೆಯನುಡುವೆನೆಮಗಾ
ಹಾರವೇ ಫಲ ಮೂಲತತಿ ಶೃಂ
ಗಾರವೆಮಗೆ ಪತಿವ್ರತಾ ಗುಣವಲ್ಲದಿತರರಲಿ
ಸೇರುವುದೆ ಮನವಿದನು ಪಾಂಡು ಕು
ಮಾರರಿಗೆ ತೋರಿಸುವುದೈ ಬೀ
ಡಾರವನು ಬಿಡಿ ಬೇರೆ ವನದೊಳಗೆಂದಳಿಂದುಮುಖಿ ॥12॥

೦೧೩ ತಾಯೆ ನೀವಿವನೊಪ್ಪುಗೊಮ್ಬುದು ...{Loading}...

ತಾಯೆ ನೀವಿವನೊಪ್ಪುಗೊಂಬುದು
ರಾಯ ಬಡವನೆ ಮತ್ತೆ ಪಾಂಡವ
ರಾಯರಿಗೆ ಪಾವುಡವನಟ್ಟುವನಿದನುಪೇಕ್ಷಿಸದೆ
ಆಯತಾಂಬಕಿ ತೆಗೆಸಿಯೆನೆ ನುಡಿ
ರಾಯಸವಿದೇಕೆನುತ ದೂತರ
ನಾ ಯುವತಿ ಜರಿದೊಳಗೆ ಹೊಕ್ಕಳು ತಳಿರ ಮಂಟಪವ ॥13॥

೦೧೪ ಮುಸುಳಿತಿವದಿರ ಮೋರೆ ...{Loading}...

ಮುಸುಳಿತಿವದಿರ ಮೋರೆ ಕಾರ್ಯದ
ಬೆಸುಗೆ ಹತ್ತದೆ ಸತಿಯ ನುಡಿಯಲಿ
ರಸವ ಕಾಣದೆ ಭೀತಿಯಲಿ ಮರಳಿದರು ಪಾಳಯಕೆ
ಉಸುರಲಮ್ಮೆವು ಜೀಯ ಸೋಲಳು
ಶಶಿವದನೆ ಗುಣ ಸಾಮದಲಿ ಸಾ
ಧಿಸುವುದರಿದೆನೆ ತಾನೆ ನೋಡುವೆನೆನುತ ಹೊರವಂಟ ॥14॥

೦೧೫ ಹೆಗಲ ಹಿರಿಯುಬ್ಬಣ ...{Loading}...

ಹೆಗಲ ಹಿರಿಯುಬ್ಬಣ ಕಠಾರಿಯ
ಬಿಗಿದುಡಿಗೆ ರತ್ನಾಭರಣ ಝಗ
ಝಗಿಸೆ ಝಣಝಣ ರವದ ರಭಸದ ಖಡಿಯ ತತಿ ಮೆರೆಯೆ
ಒಗುವ ಸಾಧು ಜವಾಜಿ ಕತ್ತುರಿ
ಯಗರು ಪರಿಮಳದಂಗವಟ್ಟದ
ವಿಗಡ ಹೊಕ್ಕನು ವನವನಾ ಪಾಂಚಾಲಿಯಾಶ್ರಮವ ॥15॥

೦೧೬ ತೊಲಗಿದುದು ಮುನಿ ...{Loading}...

ತೊಲಗಿದುದು ಮುನಿ ನಿಕರವೀತನ
ಸುಳಿವು ಕಂಡು ಸುತೇಜದಲಿ ಖಳ
ತಿಲಕ ಬಂದನು ಪರ್ಣಶಾಲೆಯ ಮುಖದ ಮಂಟಪಕೆ
ಲಲನೆಯೊಳಹೊಗಲೊಡನೆ ಹೊಕ್ಕನು
ನಳಿನಮುಖಿ ಬಂದವ ಜಯದ್ರಥ
ನಳುಕಲೇಕೌ ದ್ರೌಪದಿಯೆ ನೀನೆನುತ ಮಂಡಿಸಿದ ॥16॥

೦೧೭ ಬೆದರಲೇತಕೆ ನಮ್ಮ ...{Loading}...

ಬೆದರಲೇತಕೆ ನಮ್ಮ ನಾದಿನಿ
ಮದವಳಿಗ ನೀನಾದರೊಡಹು
ಟ್ಟಿದನು ನೀನಹೆಯೆನಗೆ ನಿನ್ನಲಿ ಬೇರೆ ಭಯವೇನು
ಸದನವಿದು ಪತಿಶೂನ್ಯ ತಾನೆಂ
ಬುದು ಪತಿವ್ರತೆಯಲ್ಲಿಯನುಚಿತ
ವಿದು ವಿಚಾರವ ಬಲ್ಲೆ ನೀನೆಂದಳು ಸರೋಜಮುಖಿ ॥17॥

೦೧೮ ಅಹಹ ಪಾತಿವ್ರತ್ಯವತಿ ...{Loading}...

ಅಹಹ ಪಾತಿವ್ರತ್ಯವತಿ ಸ
ನ್ನಿಹಿತವಲ್ಲಾ ನಿನಗೆ ಹಲಬರ
ಮಹಿಳೆ ಸತಿಯೆನಿಸುವರೆ ಸೂಳೆಯರೇಕಪುರುಷರಲಿ
ವಿಹರಿಸುವರೇ ಲೋಕಧರ್ಮದ
ರಹಣಿ ರಹಿಸುವುದೈಸಲೇ ನಮ
ಗಿಹುದು ಮತವಲ್ಲದೊಡೆ ಮಾಣಲೆನುತ್ತ ಮುರಿದೆದ್ದ ॥18॥

೦೧೯ ತರಳೆ ಮಿಗೆ ...{Loading}...

ತರಳೆ ಮಿಗೆ ತಲ್ಲಣಿಸಿ ತಳಿರೋ
ವರಿಯ ಹೊಗುತಿರಲಟ್ಟಿ ಮೇಲುದ
ಬರಸೆಳೆದು ತುರುಬಿಂಗೆ ಹಾಯ್ದನು ಹಿಡಿದು ಕುಸುಬಿದನು
ಒರಲಿದಳು ಹಾ ಭೀಮ ಹಾ ನೃಪ
ವರ ಧನಂಜಯ ಹಾಯೆನುತ ಕಾ
ತರಿಸೆ ಕಮಲಾನನೆಯ ಕಂಠವನೌಚಿ ಹೊರವಂಟ ॥19॥

೦೨೦ ರಾಣಿವಾಸವಲಾ ಯುಧಿಷ್ಠಿರ ...{Loading}...

ರಾಣಿವಾಸವಲಾ ಯುಧಿಷ್ಠಿರ
ನಾಣೆ ಬಿಡು ಬಿಡೆನುತ್ತ ಸುಜನ
ಶ್ರೇಣಿಯಡ್ಡೈಸಿದೊಡೆ ಬೀಸಿದನವನು ಖಂಡೆಯವ
ರಾಣಿ ನಡೆ ನಡೆ ನಮಗೆ ಪಾಂಡವ
ರಾಣೆಯಿಟ್ಟರು ಮುನಿಗಳಿಲ್ಲಿಹ
ಜಾಣು ತಪ್ಪುವುದೆನುತ ಹೊರವಂಡಿಸಿದನಾಶ್ರಮವ ॥20॥

೦೨೧ ಒಡನೆ ಬನ್ದನು ...{Loading}...

ಒಡನೆ ಬಂದನು ಧೌಮ್ಯಮುನಿಯಡಿ
ಯಿಡುತ ಘನ ರಕ್ಷೋಘ್ನ ಸೂಕ್ತವ
ನಡಿಗಡಿಗೆ ಜಪಿಸುತ ಜಯದ್ರಥ ಬೇಡ ಬೇಡೆನುತ
ಮಿಡುಕದೈತರಲೌಕಿ ಹೊಕ್ಕನು
ಪಡೆಯ ಮಧ್ಯದ ರಥವನೇರಿಸಿ
ನಡೆದನವ ಸೂಟಿಯಲಿ ತಾಟಿಸಿ ರಥದ ವಾಜಿಗಳ ॥21॥

೦೨೨ ಚೆಲ್ಲಿತೀ ಮುನಿಯೂಥ ...{Loading}...

ಚೆಲ್ಲಿತೀ ಮುನಿಯೂಥ ದೆಸೆದೆಸೆ
ಗೆಲ್ಲ ಹರಿದುದು ಬಾಯ ಮೊರೆಗಳ
ಪಲ್ಲವದ ಪಾಣಿಗಳ ಸೂಸುವ ಸಮಿಧೆ ಬರ್ಹಿಗಳ
ತಲ್ಲಣದ ತೋಪಿನ ವಿಷಾದದ
ವಲ್ಲರಿಯ ಹೂದೊಡಬೆಗಳ ಹೊ
ಯ್ವಳ್ಳೆಗಳ ಮುನಿಜನವ ಕಂಡರು ಪಾಂಡುನಂದನರು ॥22॥

೦೨೩ ಏನು ಗಜಬಜ ...{Loading}...

ಏನು ಗಜಬಜ ಋಷಿ ಜನಂಗಳಿ
ಗೇನಪಾಯವೊ ನಮ್ಮ ಬನದಲಿ
ದಾನವರ ದುರ್ಘಟದ ದುರ್ನಯವಲ್ಲಲಾಯೆನುತ
ಆ ನರೆಂದ್ರ ಮನೋಹರದ ಮೃಗ
ಯಾ ನಿರೂಢಿಯ ಬಿಸುಟು ಬಂದನಿ
ದೇನಿದೇನೂಳಿಗವೆನುತ ಬೆಸಗೊಂಡನವರುಗಳ ॥23॥

೦೨೪ ಹೇಳಲಮ್ಮೆವು ಜೀಯ ...{Loading}...

ಹೇಳಲಮ್ಮೆವು ಜೀಯ ಸಿಂಧು ನೃ
ಪಾಲ ದಶಮುಖನಾದನಾ ಪಾಂ
ಚಾಲೆ ಜಾನಕಿಯಾದಳಿಂದಿನ ರಾಜಕಾರ್ಯವಿದು
ಮೇಲೆ ರಾಘವತನದ ತೋಟಿಯ
ತೋಳ ಬಿಂಕವು ನಿಮ್ಮದೆನೆ ನರ
ಪಾಲನಾಜ್ಞೆಯಲಂದು ಹರಿದರು ಭೀಮ ಫಲುಗುಣರು ॥24॥

೦೨೫ ಐದುವರೆ ರಿಪು ...{Loading}...

ಐದುವರೆ ರಿಪು ಮರಣ ಸಿದ್ಧಿಯ
ಕೈದು ಮನೆಯಲ್ಲಿಹುದು ಬೇಂಟೆಯ
ಕೈದು ಕೈಯಲಿ ಸಮಯವಿಲ್ಲ ಮಹಾಸ್ತ್ರಕರ್ಷಣಕೆ
ಮೈದುನನ ಮೈಸರಸಕೀ ಹುಲು
ಗೈದು ಸಾಲದೆ ತಂಗಿ ದುಸ್ಸಳೆ
ಯೈದೆತನ ಬಯಲಾಯ್ತೆನುತ ಬೆಂಬತ್ತಿದರು ಖಳನ ॥25॥

೦೨೬ ಕಣ್ಡರಡವಿಯಲವನನೆಲವೋ ಭಣ್ಡ ...{Loading}...

ಕಂಡರಡವಿಯಲವನನೆಲವೋ
ಭಂಡ ಫಡ ಹೋಗದಿರೆನುತ ಕೈ
ಕೊಂಡು ಸುರಿದರು ಸರಳನಾ ಪಿಂಗಳಿಯ ಸೇನೆಯಲಿ
ಭಂಡರಿವದಿರು ತಾವು ಕಡುಹಿನ
ಖಂಡೆಯದ ಸಿರಿವಂತರಿವರು
ದ್ದಂಡ ಭಟರೆನುತಾ ಜಯದ್ರಥ ನಿಲಿಸಿದನು ಬಲವ ॥26॥

೦೨೭ ಸೆರೆ ಸಹಿತ ...{Loading}...

ಸೆರೆ ಸಹಿತ ತಾನೈದುವೆನು ನಿಜ
ಪುರವ ನೀವಾನುವುದು ಭೀಮನ
ನಿರಿವುದರ್ಜುನನೊಡನೆ ನಿಮಗುಗ್ಗಡದ ಸಮರವಿದು
ಇರಿತಕಂಜದ ಸ್ವಾಮಿಕಾರ್ಯದ
ಹೊರಿಗೆಯುಳ್ಳ ನವಾಯ ಬಿರುದಿನ
ಮುರುಕವುಳ್ಳ ಭಟಾಳಿ ನಿಲುವುದು ತಡೆವುದರಿ ಭಟರ ॥27॥

೦೨೮ ಎನ್ದು ವಾಘೆಯ ...{Loading}...

ಎಂದು ವಾಘೆಯ ಕೊಂಡು ರಥವನು
ಮುಂದೆ ದುವ್ವಾಳಿಸಿದನಿತ್ತಲು
ಹಿಂದೆ ನಿಂದುದು ಗಜರಥಾಶ್ವ ಪದಾತಿ ಚತುರಂಗ
ಇಂದುವದನೆಯ ತೇರು ಹಾಯ್ದುದೆ
ಮುಂದೆ ಹೊಳ್ಳುಗರಡ್ಡವಿಸಿದರೆ
ಹಿಂದೆ ಹೊಲ್ಲೆಹವೇನೆನುತ ಹೊಕ್ಕೆಚ್ಚನಾ ಪಾರ್ಥ ॥28॥

೦೨೯ ಮುರಿದು ಮರನನು ...{Loading}...

ಮುರಿದು ಮರನನು ಭೀಮನಹಿತರ
ತುರುಬಿದನು ಮಲೆತಾನೆಗಳ ಹೊ
ಕ್ಕೆರಗಿದನು ತುರುಗಿದನು ಭಟರಭ್ರದವಿಮಾನದಲಿ
ಜುರಿತಡಗಿನಿಂಡೆಗಳ ಮಿದುಳಿನ
ನಿರಿಗರುಳ ನೆಣವಸೆಯ ಜಿನಿಯಲಿ
ಮೆರೆದುದಾ ಮರನಲ್ಲಿ ತಳಿತುದು ಹೂತುದೆಂಬಂತೆ ॥29॥

೦೩೦ ಸಾಯೆಸಾವತಿಬಲರನೆಲ್ಲರ ...{Loading}...

ಸಾಯೆಸಾವತಿಬಲರನೆಲ್ಲರ
ಕಾಯಲಿರಿಸಿದ ಭಟರ ತಲೆಗಳು
ಬೀಯವಾದವು ಮತ್ತೆ ರಪಣವ ತೋರಿಸಾ ರಣಕೆ
ರಾಯರಂಗವನೆತ್ತ ಬಲ್ಲೆ ನಿ
ಜಾಯುಧವ ಹಿಡಿ ನಿನ್ನ ಬಿರುದಿನ
ಬಾಯಲೆರೆವುದು ಮಧುವನೆನುತುರವಣಿಸಿದನು ಭೀಮ ॥30॥

೦೩೧ ಧನುವ ಕೊಣ್ಡನು ...{Loading}...

ಧನುವ ಕೊಂಡನು ಸರಳ ಸಾರದ
ಲನಿಲಜನ ಮುಸುಕಿದನು ಪಾರ್ಥನ
ಮೊನೆಗಣೆಯ ತರಿದೊಟ್ಟಿ ಬೊಬ್ಬಿರಿದನು ಜಯದ್ರಥನು
ತನತನಗೆ ಸೈಂಧವನ ಬೆಂಗಾ
ಹಿನ ಭಟರು ಭಾರಣೆಯಲೊದಗಿದ
ರನಿಬರನು ನಿಮಿಷಾರ್ಧದಲಿ ನಿರ್ಣೈಸಿದನು ಪಾರ್ಥ ॥31॥

೦೩೨ ಅಞ್ಜದಿರು ಕಮಳಾಕ್ಷಿ ...{Loading}...

ಅಂಜದಿರು ಕಮಳಾಕ್ಷಿ ಧೌಮ್ಯ ನಿ
ರಂಜನನು ನಿನಗಿಂದು ಸುತಿ ಪವಿ
ಪಂಜರವಲಾಯೆನುತ ಹಾಯ್ದನು ಪವನಸುತ ರಥಕೆ
ಕುಂಜರನು ಕೈಯಿಕ್ಕೆ ನಿಲುಕದೆ
ಕಂಜವನವನಿಲಜನ ಜಾಡಿಯ
ಜಂಜಡಕೆ ದಿಟ್ಟನೆ ಜಯದ್ರಥನರಸ ಕೇಳ್ ಎಂದ ॥32॥

೦೩೩ ಸೆಳೆದೊಡಾಯುಧವಾತನೀತನ ...{Loading}...

ಸೆಳೆದೊಡಾಯುಧವಾತನೀತನ
ನಿಲುಕಿ ಹೊಯ್ದನು ದಂಡೆಯಿಂದದ
ಕಳಚಿ ಮಾರುತಿ ಹೊಕ್ಕಡವ ಚಿಮ್ಮಿದನು ಚೀಲಯವ
ಖಳನ ಬಾಹುವನೊದೆದು ತುರುಬಿಗೆ
ನಿಲುಕಿ ಕುಸುಬಿದನವನ ಗೋಣಿನ
ಲಲಗ ಹೂಡಲು ಕಂಡನರ್ಜುನನಾ ವೃಕೋದರನ ॥33॥

೦೩೪ ಭೀಮ ಬಿಡಿಸದಿರವನ ...{Loading}...

ಭೀಮ ಬಿಡಿಸದಿರವನ ಗಂಟಲ
ನೀ ಮದಾಂಧನನೊಯ್ದು ಕೆಡಹುವ
ಭೂಮಿಪತಿಯಂಘ್ರಿಯಲಿ ಕಾಯಲಿ ಮುನಿದು ಮೇಣ್ಕೊಲಲಿ
ತಾಮಸನ ಬಿಗಿಯೆನಲು ನಗುತು
ದ್ದಾಮನೆಂದನು ಕೊಲುವೆನೆಂದೇ
ಕಾಮಿಸಿದೆನೈ ಪಾರ್ಥ ಕೆಡದೇಯೆನ್ನ ಸಂಕಲ್ಪ ॥34॥

೦೩೫ ನೆನೆಯದಿರು ಸಙ್ಕಲ್ಪ ...{Loading}...

ನೆನೆಯದಿರು ಸಂಕಲ್ಪ ಹಾನಿಯ
ನನುಚಿತಕೆ ಮನ ತಾರದಿರು ಮಾ
ನಿನಿಯಿರಲಿ ರಥದಿಂದ ಕುನ್ನಿಯ ಕೆಡಹು ಧಾರುಣಿಗೆ
ಮುನಿಪನೇರಲಿ ರಥದ ವಾಜಿಯ
ನನುಗೊಳಿಸಿ ಸಾರಥ್ಯದಲಿ ಬರ
ಲೆನುತ ಭೀಮನ ಮನದ ಖತಿಯನು ಬಿಡಿಸಿದನು ಪಾರ್ಥ ॥35॥

೦೩೬ ವೈರಿ ಬಾಹುದ್ವಯವ ...{Loading}...

ವೈರಿ ಬಾಹುದ್ವಯವ ಬದ್ದುಗೆ
ದಾರದಲಿ ಕಟ್ಟಿದನು ನಾರೀ
ಚೋರ ನಡೆ ನಡೆಯೆನುತ ತಿವಿದನು ಬಿಲ್ಲ ಕೊಪ್ಪಿನಲಿ
ಕೌರವೇಂದ್ರನ ಮತವೊ ನಿನ್ನ ವಿ
ಕಾರವೋ ಹೆಂಗಳ್ಳ ವಿದ್ಯೆಯ
ನಾರು ಕಲಿಸಿದರೆನುತ ತಂದರು ಧರ್ಮಜನ ಹೊರೆಗೆ ॥36॥

೦೩೭ ಸಿನ್ಧು ಭೂಪನಲಾ ...{Loading}...

ಸಿಂಧು ಭೂಪನಲಾ ಭುಜಾಗ್ರದ
ಬಂಧನವ ಬಿಡು ಭೀಮ ಶಿವ ಶಿವ
ನೊಂದನೈ ನಿಷ್ಕರುಣಿಗಳು ನೀವೆಂದನವನೀಶ
ಕೊಂದು ಬಿಸುಡುವ ನೇಮ ಕಂದ
ರ್ಪಾಂಧಕನನುಳುಹುವೊಡೆ ತನಗಿ
ನ್ನಿಂಧನವ ಮಾಡಿಸುವುದೈಸಲೆಯೆಂದನಾ ಭೀಮ ॥37॥

೦೩೮ ಹದನಿದೊಳ್ಳಿತು ತಙ್ಗಿ ...{Loading}...

ಹದನಿದೊಳ್ಳಿತು ತಂಗಿ ವೈಧ
ವ್ಯದಲಿ ನವೆಯಳೆ ಸುಬಲ ನಂದನೆ
ಯುದರ ಕುಂತೀದೇವಿಯುದರಕೆ ಭಿನ್ನ ಭಾವನೆಯೆ
ಕದನದಲಿ ಹಿಡಿವಡೆದವರ ಕೊಲು
ವುದು ನರೇಂದ್ರರ ಧರ್ಮವಲ್ಲಿ
ನ್ನಿದರ ಮೇಲಾವರಿಯೆವೆಂದನು ಧರ್ಮನಂದನನು ॥38॥

೦೩೯ ಈತನಳಿಯದೆ ಮತ್ಪ್ರತಿಜ್ಞಾ ...{Loading}...

ಈತನಳಿಯದೆ ಮತ್ಪ್ರತಿಜ್ಞಾ
ಖ್ಯಾತಿ ಮಸುಳದೆ ತಿದ್ದುವನುವನು
ಭೂತಳಾಧಿಪ ನೀವು ಬೆಸಸುವುದೆನಲು ಮುನಿಜನವ
ಆತ ನೋಡಿದನಾವುದಿದಕನು
ನೀತಿಯೆನೆ ಧೌಮ್ಯಾದಿ ಸುಜನ
ವ್ರಾತ ನಿಶ್ಚೈಸಿದರು ಮನದಲಿ ಧರ್ಮ ನಿರ್ಣಯವ ॥39॥

೦೪೦ ಮಾನಧನರಿಗೆ ವಧೆಯೆನಿಪುದಭಿ ...{Loading}...

ಮಾನಧನರಿಗೆ ವಧೆಯೆನಿಪುದಭಿ
ಮಾನಭಂಜನವಿವನು ಕಟ್ಟಭಿ
ಮಾನಿ ಭಂಗಿಸಿ ಬಿಟ್ಟೊಡೀತಂಗಿದುವೆ ಮರಣವಲ
ಈ ನುಡಿಯ ಸಲಿಸಿದೊಡೆ ಇವನಪ
ಮಾನಹತನಿದು ಧರ್ಮ ನಿಶ್ಚಯ
ವೇನು ಸಂಶಯವಿಲ್ಲೆನುತ ನುಡಿದುದು ಮುನಿಸ್ತೋಮ ॥40॥

೦೪೧ ಅಹುದೆನುತ ಕಲಿಭೀಮ ...{Loading}...

ಅಹುದೆನುತ ಕಲಿಭೀಮ ಮಾಡಿದ
ರಹವನದನೇನೆಂಬೆನೈ ಕೂ
ರಿಹ ಕಠಾರಿಯ ಹಣಿಗೆಯಲಿ ಬಾಚಿದನು ಸಿರಿಮುಡಿಯ
ಅಹಿತ ಶಿರವಿದಲಾಯೆನುತ ಗೃಹ
ಮಹಿಳೆಯರು ವಿಹಿತಾಂಗುಲಿಯ ಸಂ
ಪ್ರಹರಣದಿ ಪರಿಭವಿಸಿದರು ಘೊಳ್ಳೆನಲು ನಿಖಿಳಜನ ॥41॥

೦೪೨ ಬಿಟ್ಟರೀತನ ತೋಳ ...{Loading}...

ಬಿಟ್ಟರೀತನ ತೋಳ ಹಿಂಗೈ
ಗಟ್ಟುಗಳನೆಲೆ ಕುನ್ನಿ ಹೋಗೆನೆ
ಕೆಟ್ಟ ಕೇಡದನೇನ ಹೇಳುವೆನಾ ಜಯದ್ರಥನ
ಬೆಟ್ಟದಿಂದುರುಳುವೆನೊ ಹಾಸರೆ
ಗಟ್ಟಿ ಹೊಗುವೆನೊ ಮಡುವನೆನುತಡಿ
ಯಿಟ್ಟನಂತಃಕಲುಷಚಿತ್ತ ದುರಂತ ಚಿಂತೆಯಲಿ ॥42॥

೦೪೩ ಚಿನ್ತಿಸಿದೊಡೇನಹುದು ...{Loading}...

ಚಿಂತಿಸಿದೊಡೇನಹುದು ಹೊಗುವೆನು
ಕಂತುಮಥನನ ಮರೆಯನಿವದಿರಿ
ಗಂತಕನು ತಾನಹೆನು ಗೆಲುವೆನು ಬಳಿಕ ಬವರದಲಿ
ಭ್ರಾಂತಿಯೇ ಬಿಡು ತನ್ನನೆನುತ ಪು
ರಾಂತಕ ಧ್ಯಾನದಲಿ ವಿಮಲ
ಸ್ವಾಂತನೇಕಾಗ್ರದಲಿ ಭಜಿಸಿದನಿಂದುಶೇಖರನ ॥43॥

೦೪೪ ಇವನ ನಿಷ್ಠೆಗೆ ...{Loading}...

ಇವನ ನಿಷ್ಠೆಗೆ ಮೆಚ್ಚಿ ಗೌರೀ
ಧವನು ಮೈದೋರಿದನು ರಾಜ
ಪ್ರವರ ಕೊಟ್ಟೆನು ಬೇಡು ಸಾಕು ಭವನ್ಮನೋರಥವ
ವಿವರಿಸೆನೆ ಕಂದೆರೆದು ಮುಂದಿಹ
ಶಿವನ ಕಂಡನು ಮೈಯ ಚಾಚಿದ
ನವನಿಯಲಿ ಜಯ ಜಯ ಮಹೇಶ ನಮಃಶಿವಾಯೆನುತ ॥44॥

೦೪೫ ವರದನಾದೈ ಶಮ್ಭು ...{Loading}...

ವರದನಾದೈ ಶಂಭು ಕರುಣಾ
ಕರ ಹಸಾದವು ಪಾಂಡುಸುತರೈ
ವರನು ದಿನವೊಂದರಲಿ ಗೆಲುವುದು ತನಗಭೀಷ್ಟವಿದು
ಕರುಣಿಸೈ ತನಗೆನಲು ನಕ್ಕನು
ಗಿರಿಸುತೆಯ ಮೊಗ ನೋಡಿ ಭಾರಿಯ
ವರವ ವಿವರಿಸಿದನು ಜಯದ್ರಥನೆಂದನಿಂದುಧರ ॥45॥

೦೪೬ ಪಾಶುಪತಶರವೆನ್ನ ಸತ್ವ ...{Loading}...

ಪಾಶುಪತಶರವೆನ್ನ ಸತ್ವ ವಿ
ಳಾಸವದೆ ಫಲುಗುಣನ ಕೈಯಲಿ
ವಾಸವಾಬ್ಜಭವಾದಿ ಬಿರುದರ ಬಗೆಯದಾಹವಕೆ
ಆ ಸುಭಟನೊಬ್ಬನನುಳಿಯೆ ಮಿ
ಕ್ಕೇಸು ಪಾಂಡವರುಗಳನೊಂದೇ
ವಾಸರದಲವಗಡಿಸು ಹೋಗೆಂದನು ಮಖದ್ವಂಸಿ ॥46॥

೦೪೭ ಸಾಕು ಜೀಯ ...{Loading}...

ಸಾಕು ಜೀಯ ಹಸಾದವೆಂದವಿ
ವೇಕನಿಧಿ ಬೀಳ್ಕೊಂಡನೀಶನ
ನೀ ಕುಮಾರರು ವನದೊಳಿದ್ದರು ಖತಿಯ ಭಾರದಲಿ
ನೂಕು ನೂಕಾಡುವ ವಿಪತ್ತಿನ
ವೈಕೃತಿಗೆ ನಾನೊಬ್ಬನೇ ದಿಟ
ವಾಕೆವಾಳನೆ ಶಿವ ಶಿವಾಯೆಂದರಸ ಬಿಸುಸುಯ್ದ ॥47॥

೦೪೮ ಬನ್ದ ಮಾರ್ಕಣ್ಡೇಯ ...{Loading}...

ಬಂದ ಮಾರ್ಕಂಡೇಯ ಮುನಿಗಭಿ
ವಂದಿಸಿದನೀ ಬ್ರಹ್ಮ ಸೃಷ್ಟಿಯ
ಲಿಂದು ತಾನಲ್ಲದೆ ಸುಧಾಕರ ಸೂರ್ಯವಂಶದಲಿ
ಹಿಂದೆ ನಡೆದವರಾರು ಪರಿಭವ
ದಿಂದ ನಮ್ಮಂದದಲಿ ವಿಪಿನದೊ
ಳಿಂದುಮುಖಿಯರು ಭಂಗಪಟ್ಟರೆಯೆನುತ ಬಿಸುಸುಯ್ದ ॥48॥

೦೪೯ ಎನಲು ನಕ್ಕನು ...{Loading}...

ಎನಲು ನಕ್ಕನು ಮುನಿಪನವನಿಪ
ಜನ ಶಿರೋಮಣಿ ಕೇಳು ನಿಮ್ಮೀ
ವನದೊಳಬುಜಾನನೆಯ ಕೊಂಡೋಡಲು ಜಯದ್ರಥನು
ಅನುಜರಾಗಳೆ ಹರಿದು ಮರಳಿಚಿ
ವನಜಮುಖಿಯನು ತಂದರವನನು
ನೆನೆಯಬಾರದ ವಿಧಿಯ ಮಾಡಿದರೆಂದನಾ ಮುನಿಪ ॥49॥

೦೫೦ ಅರಸ ಮುನಿಯದಿರಾವ ...{Loading}...

ಅರಸ ಮುನಿಯದಿರಾವ ಪಾಡಿನ
ನರಪತಿಗಳೈ ನೀವು ವಿಶ್ವಂ
ಭರಿಯ ಘನತೆಯ ಕೇಳಿದರಿಯಾ ಕೈಟಭಾಂತಕನ
ವರ ಮುನಿಯ ಶಾಪವನು ತಾನೇ
ಧರಿಸಿ ನರರೂಪಿನಲಿ ನವೆದುದ
ನರಸ ಬಣ್ಣಿಸಲೆನ್ನ ಹವಣಲ್ಲೆಂದನಾ ಮುನಿಪ ॥50॥

೦೫೧ ಅಡವಿಯಲಿ ತೊಳಲಿದನು ...{Loading}...

ಅಡವಿಯಲಿ ತೊಳಲಿದನು ರಾಮನ
ಮಡದಿಯನು ರಕ್ಕಸನು ಕದ್ದನು
ನಡೆದು ಬಳಿಕರಸಿದನು ರಾಣೀವಾಸವನು ಕೂಡೆ
ಕಡಲ ಮಧ್ಯದ ಖಳನೊಡನೆ ಕೈ
ಹೊಡೆದುದಲ್ಲಿಗೆ ತೆತ್ತಿಗರು ನಾ
ಡಡವಿಗೋಡಗವಾಳು ಕುದುರೆಗಳಸುರ ವಿಗ್ರಹಕೆ ॥51॥

೦೫೨ ಸಾಗರದ ತೆರೆಗಳಲಿ ...{Loading}...

ಸಾಗರದ ತೆರೆಗಳಲಿ ಗಿರಿಗಳ
ತೂಗಿ ಸೇನೆಯ ನಡೆಸಿ ದಶಮುಖ
ನಾಗ ಕೆಡಿಸಿದು ರಾಮ ರಮಣಿಯ ಬಿಡಿಸಿದಾಯಸವ
ಈಗಳೀ ನರರೇನನಾನುವ
ರಾ ಗರುವ ರಘುರಾಯ ವಜ್ರಕೆ
ಬೇಗಡೆಯ ವಿಧಿ ಮಾಡಿತೆಂದನು ಮುನಿ ನೃಪಾಲಂಗೆ ॥52॥

೦೫೩ ಎನ್ದು ರಾಮಾಯಣವ ...{Loading}...

ಎಂದು ರಾಮಾಯಣವ ವಿಸ್ತರ
ದಿಂದ ಹೇಳಿದು ಸಂತವಿಟ್ಟನು
ಕಂದು ಕಸರಿಕೆಯಡಗಿತಾ ಧರ್ಮಜನ ಚಿತ್ತದಲಿ
ಸಂದಣಿಸೆ ತನುಪುಳಕ ಪರಮಾ
ನಂದ ರಸಮಯ ನಯನಜಲ ಭರ
ದಿಂದಲೆಸೆದರು ವೀರನಾರಾಯಣನ ಕರುಣದಲಿ ॥53॥

+೨೨ ...{Loading}...