೧೫

೦೦೦ ಸೂ ಮುನಿಗಳುಪ ...{Loading}...

ಸೂ. ಮುನಿಗಳುಪ ಕಥೆಯಲಿ ಯುಧಿಷ್ಠಿರ
ಜನಪತಿಯ ಸಂತೈಸಿ ಕಾಮ್ಯಕ
ವನದಿನಸುರಾರಾತಿ ಬಂದನು ದ್ವಾರಕಾಪುರಿಗೆ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಮಾರ್ಕಂಡೇಯ ಮುನಿಪತಿ
ಹೇಳಿದನು ವೇದೋಕ್ತ ಧರ್ಮದ ಸಾರ ಸಂಗತಿಯ
ಶೀಲಗುಣ ಸಚ್ಚರಿತನಲಿ ಸಂ
ಮೇಳವಿಸಿ ಮುದ್ಗಲ್ಯವಂಶ ವಿ
ಶಾಲನೊಬ್ಬನು ವಿಪ್ರನಿರ್ದನು ಬೊಮ್ಮಚರಿಯದಲಿ ॥1॥

೦೦೨ ಧರಣಿಪತಿ ಕೇಳಾ ...{Loading}...

ಧರಣಿಪತಿ ಕೇಳಾ ಮಹೀಸುರ
ವರನು ವೇದಾಧ್ಯಯನ ಪರನನ
ವರತ ವಿದ್ಯಾಭ್ಯಾಸಶೀಲನು ವನದಲೊಂದು ದಿನ
ಮರದ ಮೊದಲಲಿ ವೇದ ಪಾಠದ
ಲಿರೆ ಮಹೀರುಹದಗ್ರದಲಿ ಸಂ
ಚರಿಸುತಿಹ ಖಗವಿಷ್ಠೆ ಬಿದ್ದುದು ಮೇಲೆ ಭೂಸುರನ ॥2॥

೦೦೩ ಮೇಲೆ ನೋಡಿದಡಧಿಕ ...{Loading}...

ಮೇಲೆ ನೋಡಿದಡಧಿಕ ರೋಷ
ಜ್ವಾಲೆಯಲಿ ಗರಿ ಸೀದು ಧರಣಿಯ
ಮೇಲೆ ಬಿದ್ದುದು ವಿಹಗವೀತನ ಮುಂದೆ ತನು ಬೆಂದು
ಲೀಲೆಯಲಿ ಭೂದೇವನಲ್ಲಿಂ
ಮೇಲೆ ಭಿಕ್ಷಾಟನಕೆ ಭೂಸುರ
ರಾಲಯದ ಹಂತಿಯಲಿ ಹೊಕ್ಕನು ರಾಯ ಕೇಳ್ ಎಂದ ॥3॥

೦೦೪ ಒನ್ದು ಮನೆಯಲಿ ...{Loading}...

ಒಂದು ಮನೆಯಲಿ ಭಿಕ್ಷಕೋಸುಗ
ನಿಂದನಾ ಮನೆಯಾಕೆ ಭಿಕ್ಷವ
ತಂದಪೆನು ನಿಲ್ಲೆನುತ ಪತಿ ಪರಿಚರ್ಯೆಯನು ಮಾಡಿ
ತಂದು ಭಿಕ್ಷವ ಹಿಡಿಯೆನಲ್ ದ್ವಿಜ
ನಂದು ಮುನಿದೀಕ್ಷಿಸಿದೊಡಾ ಸತಿ
ಯೆಂದಳೆಲೆ ಮರುಳೇ ಕುಜಾಗ್ರದ ವಿಹಗನಲ್ಲೆಂದು ॥4॥

೦೦೫ ಬೆರಗಿನೊಳು ...{Loading}...

ಬೆರಗಿನೊಳು ದ್ವಿಜನಿರ್ದನಿದನೆಂ
ತರಿತಳೆನುತೆಲೆ ವಿಪ್ರ ನಿಗಮವ
ನರಿಯೆ ಧರ್ಮರಹಸ್ಯ ತತ್ವದ ಸಾರ ಸಂಗತಿಯ
ಅರಿದು ಪತಿಪರಿಚರ್ಯದಲಿ ಕೈ
ಮರೆಯದಾರಾಗಲಿ ಸುಧರ್ಮದೊ
ಳೆರಕವುಳ್ಳೊಡೆ ಧನ್ಯರೆಂದಳು ಕಾಂತೆ ಭೂಸುರಗೆ ॥5॥

೦೦೬ ಇಲ್ಲಿಗಿದೆ ನಾಲ್ಕೈದು ...{Loading}...

ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಪಟ್ಟಣವದರೊಳೊಬ್ಬನು
ಬಲ್ಲನಗ್ಗದ ಧರ್ಮಮುದ್ರಾಘಟನ ವಿಘಟನವ
ಅಲ್ಲಿಗೈದುವುದಾತನಲಿ ನೀ
ನೆಲ್ಲವನು ತಿಳಿ ನಿನ್ನ ಚಿತ್ತದೊ
ಳಿಲ್ಲಲೇ ಪರಿಪಾಕವೆಂದುಪದೇಶಿಸಿದಳಬಲೆ ॥6॥

೦೦೭ ಹೆಸರು ಧರ್ಮವ್ಯಾಧನಾತನ ...{Loading}...

ಹೆಸರು ಧರ್ಮವ್ಯಾಧನಾತನ
ದೆಸೆಯೊಳರಿ ಹೋಗೆನಲು ಬಂದನು
ವಸುಧೆಯಮರನು ನಗರಿಗಾ ಸತಿ ಕೊಟ್ಟ ಕುರುಹಿನಲಿ
ಹಸಿದು ಬೀದಿಗಳೊಳಗೆ ತೊಳಲಿದು
ಗಸಣಿಗೊಳುತ ಪುರಾಂತದಲಿ ಕ
ರ್ಕಶ ಪುಳಿಂದರ ಕೇರಿಯಿರೆ ಕಂಡಲ್ಲಿಗೈತಂದ ॥7॥

೦೦೮ ಬಸೆ ನೆಣನ ...{Loading}...

ಬಸೆ ನೆಣನ ಸುಂಟಿಗೆಯ ಹರಹಿದ
ಹಸಿಯ ತೊಗಲಿನ ತಳಿತ ಖಂಡದ
ಹಸರದುರುಗಲ ಕಾಳಿಜದ ಜಂಗಡೆಯ ಗಳಗೆಗಳ
ಬಸೆಯ ಹರವಿಯ ಸಾಲ ತೊರಳೆಗೆ
ಬೆಸಳಿಗೆಯ ಕುರಿದಲೆಯ ಹಂತಿಯ
ಕುಸುರಿದೆಲುವಿನ ಕೋದ ಮೀನಂಗಡಿಯಲೈತಂದ ॥8॥

೦೦೯ ಬರಬರಲು ದೂರದಲಿ ...{Loading}...

ಬರಬರಲು ದೂರದಲಿ ವಿಪ್ರನ
ಬರವ ಕಂಡಿದಿರಾಗಿ ಬಂದುಪ
ಚರಿಸಿದನು ಬಂದೈ ಪತಿವ್ರತೆಯೆನ್ನ ದೂರಿದಳೆ
ಧರಣಿಯಮರೋತ್ತಮರಿಗಿದು ಸಂ
ಚರಣೆ ಯೋಗ್ಯ ಸ್ಥಾನವಲ್ಲಾ
ದರಿಸುವೊಡೆ ಬಾಯೆನುತ ತನ್ನಾಲಯಕೆ ಕೊಂಡೊಯ್ದ ॥9॥

೦೧೦ ಒಳಗೆ ಮಞ್ಚದ ...{Loading}...

ಒಳಗೆ ಮಂಚದ ಮೇಲೆ ನಡುಗುವ
ತಲೆಯ ತೆರಳಿದ ಮೈಯ್ಯ ಬೆಳುಪಿನ
ತಲೆನವಿರ ತಗ್ಗಿದ ಶರೀರದ ನೆಗ್ಗಿದವಯವದ
ತಳಿತ ಸೆರೆಗಳ ತಾರಿದಾನನ
ದಿಳಿದ ಹುಬ್ಬಿನ ಹುದಿದ ಕಣ್ಗಳ
ಚಲಿತ ವಚನದ ವೃದ್ಧರನು ತೋರಿದನು ಮುನಿಸುತಗೆ ॥10॥

೦೧೧ ಇವರು ಮಾತಾಪಿತೃಗಳೆನ್ನಯ ...{Loading}...

ಇವರು ಮಾತಾಪಿತೃಗಳೆನ್ನಯ
ಯುವತಿಯಿವಳಿವನೆನ್ನ ಮಗನಿಂ
ತಿವರ ರಕ್ಷೆಗೆ ಬೇಂಟೆಯಾಡುವೆನಡವಿಯಡವಿಯಲಿ
ಕವಲುಗೋಲಲಿ ಮೃಗಗಣವ ಕೊಂ
ದವನು ತಹೆನಂಗಡಿಯಲವ ಮಾ
ರುವೆನು ಲೋಭವನಿಲ್ಲಿ ಮಾಡೆನು ವಿಪ್ರ ಕೇಳ್ ಎಂದ ॥11॥

೦೧೨ ದೊರಕಿದನಿತಾ ದ್ರವ್ಯದಲಿ ...{Loading}...

ದೊರಕಿದನಿತಾ ದ್ರವ್ಯದಲಿ ವಿ
ಸ್ತರಿಸುವೆನು ಸಕುಟುಂಬವಿದನೇ
ಹೊರೆವೆನಾರ್ಜಿಸುವೆನು ಕುಟುಂಬಕೆ ತಕ್ಕನಿತು ಧನವ
ನಿರುತವಿದು ಮಾತಾಪಿತರ ಪರಿ
ಚರಿಯದಲಿ ರಾಗಾದಿ ದೋಷಾ
ಚರಣವದು ಮನ ವಚನ ಕಾಯದಲಿಲ್ಲ ತನಗೆಂದ ॥12॥

೦೧೩ ಭೂತ ಹಿಂಸೆಯಿದಲ್ಲ ...{Loading}...

ಭೂತ ಹಿಂಸೆಯಿದಲ್ಲ ನಮಗಿದು
ಮಾತೃಪಿತೃ ರಕ್ಷಾರ್ಥವೆಮ್ಮಯ
ಜಾತಿ ಧರ್ಮವು ಮಾಂಸ ವಿಕ್ರಯ ಮೃಗವಧಾದಿಗಳು
ಜಾತಿಧರ್ಮತ್ಯಾಗ ಕರ್ಮ ವಿ
ಜಾತಿ ಧರ್ಮಗ್ರಹಣವೇ ವಿ
ಖ್ಯಾತ ಕುಂಭೀಪಾಕಸಾಧನ ವಿಪ್ರ ಕೇಳ್ ಎಂದ ॥13॥

೦೧೪ ವಿತಥ ಭಾಷಿತವನ್ಯವಿತ್ತಾ ...{Loading}...

ವಿತಥ ಭಾಷಿತವನ್ಯವಿತ್ತಾ
ಹೃತಿ ಪರ ವ್ಯಾಪಾದವಾತ್ಮ
ಸ್ತುತಿ ಪರಸ್ತ್ರೀವ್ಯಸನವತ್ಯಾಚಾರ ಬಕವೃತ್ತಿ
ಕೃತ ವಿನಾಶನ ಡಂಭ ಹಿಂಸಾ
ರತಿ ನಿಜಾನ್ವಯ ಧರ್ಮ ಕರ್ಮ
ಚ್ಯುತಿಗಳಿವು ದೋಷಾಂಕುರಂಗಳು ವಿಪ್ರ ಕೇಳ್ ಎಂದ ॥14॥

೦೧೫ ಸಾಙ್ಗ ವೇದಾಧ್ಯಯನ ...{Loading}...

ಸಾಂಗ ವೇದಾಧ್ಯಯನ ಸಜ್ಜನ
ಸಂಗ ಶಾಸ್ತ್ರ ಶ್ರವಣ ತೃಷ್ಣಾ
ಭಂಗ ಯಜನಾಧ್ಯಾನ ಮೌನವ್ರತ ಸದಾಚಾರ
ಮಾಂಗಲಿಕ ಕರ್ಮಾಭಿಯೋಗ ಕು
ಲಾಂಗನಾ ರತಿಯಾತ್ಮಚಿಂತೆ ಪ
ರಾಂಗನಾ ವೈಮುಖ್ಯವಿವು ಸದ್ಧರ್ಮ ಗತಿಯೆಂದ ॥15॥

೦೧೬ ಧನಮದವ ಸತ್ಕುಲ ...{Loading}...

ಧನಮದವ ಸತ್ಕುಲ ಮದವ ಯೌ
ವನ ಮದವ ವಿದ್ಯಾಮದವ ಪರಿ
ಜನ ಮದವ ವೈಭವ ಮದವನಾಚಾರಪದ ಮದವ
ಮನನದಿಂ ಶ್ರವಣದಿ ನಿಧಿ ಧ್ಯಾ
ಸನದಿನಿವಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳ್ ಎಂದ ॥16॥

೦೧೭ ನೀವು ಜಾತಿಯೊಳಧಿಕತರರಿಂ ...{Loading}...

ನೀವು ಜಾತಿಯೊಳಧಿಕತರರಿಂ
ದಾವು ಜಾತಿವಿಹೀನರಾಗಿಯೆ
ಭಾವಶುದ್ಧಿಯಲೇ ಸ್ವಧರ್ಮಾಚಾರ ಮಾರ್ಗದಲಿ
ಆವುದೂಣೆಯವಿಲ್ಲವೀ ದ್ವಿಜ
ದೇವ ಗುರು ಪರಿಚರ್ಯದಲಿ ಸಂ
ಭಾವಿತರು ನಾವಾದೆವೆಮ್ಮನು ನೋಡಿ ನಡೆಯೆಂದ ॥17॥

೦೧೮ ಈ ಪರಿಯಲುರು ...{Loading}...

ಈ ಪರಿಯಲುರು ಧರ್ಮ ಕಥನಾ
ಳಾಪದಲಿ ಮುನಿಸುತಗೆ ಸಂದೇ
ಹಾಪನೋದವ ಗೈದು ತಿಳುಹಿದನಾ ಮಹೀಸುರನ
ಭೂಪ ಕೇಳೈ ಕ್ಷತ್ರಧರ್ಮ ಕ
ಳಾಪದಲಿ ನಿನಗಿಲ್ಲ ಕೊರತೆ ಕೃ
ತಾಪರಾಧರು ಕೌರವರು ನಿರ್ನಾಮರಹರೆಂದ ॥18॥

೦೧೯ ಬಾಹುಬಲ ಬಲವಲ್ಲ ...{Loading}...

ಬಾಹುಬಲ ಬಲವಲ್ಲ ದೈವ
ದ್ರೋಹಿಗಳಿಗೆ ಸುಧರ್ಮನಿಷ್ಠರ
ಸಾಹಸವು ಕಿರಿದಾದೊಡೆಯು ಕೊಯ್ವರು ವಿರೋಧಿಗಳ
ಆ ಹರಾತ್ಮಜ ಹಸುಳೆತನದ
ವ್ಯೂಹದಲಿ ತಾರಕನನಿಕ್ಕನೆ
ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆಂದ ॥19॥

೦೨೦ ಎನ್ದು ಮಾರ್ಕಣ್ಡೇಯ ...{Loading}...

ಎಂದು ಮಾರ್ಕಂಡೇಯ ಮುನಿ ಯಮ
ನಂದನನನಿತಿಹಾಸ ಕಥೆಗಳ
ಲಂದವಿಟ್ಟನು ಚಿತ್ತವನು ಖಯಖೋಡಿಗಳ ಕಳೆದು
ಕಂದು ಕಸರಿಕೆಯೇಕೆ ನಿಮಗೆ ಮು
ಕುಂದನೊಲವಿದೆ ಬಯಕೆ ಬೇರೇ
ಕೆಂದು ಮಾರ್ಕಂಡೇಯ ನಾರದರಡರಿದರು ನಭವ ॥20॥

೦೨೧ ಅರಸ ಕೇಳೈ ...{Loading}...

ಅರಸ ಕೇಳೈ ದ್ರೌಪದಿಗೆ ಹರಿ
ಯರಸಿ ನುಡಿದಳು ಸತ್ಯಭಾಮಾ
ಸರಸಿಜಾನನೆ ನಗೆನುಡಿಯ ಸಮ್ಮೇಳ ಖೇಳದಲಿ
ಅರಸಿ ಕೌತುಕವೆನಗೆ ನೀನೈ
ವರಿಗೆ ಸತಿ ವಲ್ಲಭರ ಚಿತ್ತಾ
ಕರುಷಣವು ನಿನಗೆಂತು ಸೇರಿಹುದೇಕ ಭಾವದಲಿ ॥21॥

೦೨೨ ಮನ್ತ್ರಸಿದ್ಧಿಯೊ ಮೇಣು ...{Loading}...

ಮಂತ್ರಸಿದ್ಧಿಯೊ ಮೇಣು ಶಾಬರ
ಯಂತ್ರರಕ್ಷೆಯೊ ಮೇಣ್ ವರೌಷಧ
ತಂತ್ರತಿಲಕವೊ ರಮಣರಿವರೈವರ ವಶೀಕರಣ
ಯಂತ್ರಮಯ ಹೂಹೆಗಳು ನೃಪರೀ
ಯಂತ್ರಸೂತ್ರದ ಕುಣಿಕೆ ನಿನ್ನ ನಿ
ಯಂತ್ರಣವ ಹೇಳೌ ನಿಧಾನವನೆಂದಳಿಂದುಮುಖಿ ॥22॥

೦೨೩ ದೇವಿಯೆನ್ದಳು ಸತ್ಯಭಾಮಾ ...{Loading}...

ದೇವಿಯೆಂದಳು ಸತ್ಯಭಾಮಾ
ದೇವಿಯರು ಮುಗುದೆಯರಲಾ ನಾ
ನಾವ ಮಂತ್ರದ ತಂತ್ರ ತೊಡಕಿನ ತೋಟಿಯುಳ್ಳವಳು
ಭಾವಶುದ್ಧಿಯಲೈವರನು ಸಂ
ಭಾವಿಸುವೆನವರವರ ಚಿತ್ತದ
ಭಾವವರಿದುಪಚರಿಸುವೆನು ಚತುರತೆಯ ಚಾಳಿಯಲಿ ॥23॥

೦೨೪ ಒಲವರಿದು ಹತ್ತುವದು ...{Loading}...

ಒಲವರಿದು ಹತ್ತುವದು ಚಿತ್ತದ
ನೆಲೆಯರಿದು ನೆಮ್ಮುವುದು ಮುರಿವಿನ
ಹೊಳವರಿದು ಹಿಂಗುವುದು ಹೊಗುವದು ಮನದೊಳೊಲವರಿದು
ಸುಳಿವರಿದು ಸೋಂಕುವುದು ತವಕಕೆ
ಬಲಿದು ಮುನಿವುದು ಸವಿಯ ಬೇಟವ
ಬೆಳಸಿ ಬೆಸವುದು ಬಗೆಯಲೆಂದಳು ನಳಿನಮುಖಿ ನಗುತ ॥24॥

೦೨೫ ರಸಿಕ ಹರಿ ...{Loading}...

ರಸಿಕ ಹರಿ ಹದಿನಾರು ಸಾವಿರ
ಶಶಿಮುಖಿಯರಲಿ ಬೇಟ ಜಾಣಿನ
ದೆಸಕ ದಿಮ್ಮಿತು ಬಗೆಯ ಭಂಗವ್ಯಾಪ್ತಿ ಕೃಷ್ಣನಲಿ
ನುಸುಳು ನೆಲೆ ಡಿಳ್ಳಾಯ್ತ ಪೈಸರ
ಬೆಸುಗೆ ಬಿಗುಹುಳುಕೊತ್ತು ಕಲೆಗಳ
ರಸದ ಪಸರವನರಿಯಬಾರದು ವಿಗಡ ವಿಟರುಗಳ ॥25॥

೦೨೬ ನೀವು ಮುಗುದೆಯರತಿ ...{Loading}...

ನೀವು ಮುಗುದೆಯರತಿ ವಿದಗ್ಧನು
ದೇವಕೀಸುತನೆನ್ನವರು ಧ
ರ್ಮಾವಲಂಬರು ದಿಟ್ಟರಲ್ಲ ಮನೋಜ ಲೀಲೆಯಲಿ
ನೀವು ಸೊಬಗಿನ ನಿಧಿಯಲೇ ಶತ
ಸಾವಿರದ ಸತಿಯರಲಿ ಕೃಷ್ಣನ
ಜೀವವಶ್ರಮ ರತಿಯರೆಂದಳು ನಗುತ ತರಳಾಕ್ಷಿ ॥26॥

೦೨೭ ಅರಸ ಕೇಳೈ ...{Loading}...

ಅರಸ ಕೇಳೈ ಸತ್ಯಭಾಮಾ
ಸರಸಿಜಾನನೆ ದ್ರುಪದ ಸುತೆಯರು
ಸರಸ ಮೇಳದಲೊಪ್ಪಿದರು ಚದುರೋಕ್ತಿ ಲೀಲೆಯಲಿ
ಹರಿ ಯುಧಿಷ್ಠಿರ ಭೀಮ ಪಾರ್ಥರು
ವರ ಮುನಿಗಳಿತಿಹಾಸಮಯ ಬಂ
ಧುರ ಕಥಾ ಕೇಳಿಯಲಿ ಕಳೆದರು ಹಲವು ದಿವಸಗಳ ॥27॥

೦೨೮ ಹಗೆಗಳಮರಾರಿಗಳು ನಮ್ಮಯ ...{Loading}...

ಹಗೆಗಳಮರಾರಿಗಳು ನಮ್ಮಯ
ನಗರಿ ಶೂನ್ಯಾಸನದಲಿದ್ದುದು
ವಿಗಡ ರಾಮಾದಿಗಳು ವಿಷಯಂಗಳ ವಿನೋದಿಗಳು
ಅಗಲಲಾರೆನು ನಿಮ್ಮ ವನದೋ
ಲಗಕೆ ಬಿಡೆಯವ ಕಾಣೆನೆಂದನು
ನಗುತ ಕರುಣಾಸಿಂಧು ಯಮನಂದನನ ಮೊಗ ನೋಡಿ ॥28॥

೦೨೯ ನುಡಿದ ಕಾಲಾವಧಿಗೆ ...{Loading}...

ನುಡಿದ ಕಾಲಾವಧಿಗೆ ಜರೆ ತೆರೆ
ಯಡಗಿದವು ಜಾಣಿನಲಿ ¸ಧತ್ಯವ
ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದೊಡೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ ॥29॥

೦೩೦ ಮರೆಯಲಿಹ ಕಾಲದಲಿ ...{Loading}...

ಮರೆಯಲಿಹ ಕಾಲದಲಿ ಬಲಿದೆ
ಚ್ಚರದಿಹುದು ಬೇಕಾದೊಡೆಮಗೆ
ಚ್ಚರಿಸಿ ಕಾರ್ಯಸ್ಥಿತಿಯನೇ ಚರಿಸುವುದು ನಿಮ್ಮೊಳಗೆ
ಅರಿದಿಹುದು ನೀನೆಂದು ರಾಯಂ
ಗರುಹಿ ಭೀಮಾದಿಗಳಿಗುಚಿತವ
ನೆರೆ ನುಡಿದು ದುರುಪದಿಯ ಮನ್ನಿಸಿ ಮರಳಿದನು ಪುರಕೆ ॥30॥

೦೩೧ ಅರಸಿ ಹರಿಯಾಮ್ನಾಯತತಿ ...{Loading}...

ಅರಸಿ ಹರಿಯಾಮ್ನಾಯತತಿ ಕು
ಕ್ಕರಿಸಿದವು ಮುನಿಗಳ ಸಮಾಧಿಗೆ
ಕರುಬುವವರಾವಲ್ಲ ಕಾಣರು ನಖದ ಕೊನೆಗಳನು
ಅರಸ ತಾನೇ ಹರಿಹರಿದು ತ
ನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ ರಾಯ ಗದುಗಿನ ವೀರನರಯಣನ ॥31॥

+೧೫ ...{Loading}...