೦೦೦ ಸೂ ಕರುಣಿ ...{Loading}...
ಸೂ. ಕರುಣಿ ಬಿಜಯಂಗೈದು ಪಾಂಡವ
ಧರಣಿಪನ ಸಂತೈಸಿ ಯಾದವ
ರರಸನಿದ್ದನು ಸಕಲ ಮುನಿಜನ ಸಹಿತ ವನದೊಳಗೆ
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಕರುಣಾಮೂರ್ತಿಯಾದ ಶ್ರೀಕೃಷ್ಣನು ಬಂದು, ಧರ್ಮರಾಜನನ್ನು ಸಮಾಧಾನಪಡಿಸಿ, ಮುನಿಜನರೊಂದಿಗೆ ವನದಲ್ಲಿ ಇದ್ದನು.
ಮೂಲ ...{Loading}...
ಸೂ. ಕರುಣಿ ಬಿಜಯಂಗೈದು ಪಾಂಡವ
ಧರಣಿಪನ ಸಂತೈಸಿ ಯಾದವ
ರರಸನಿದ್ದನು ಸಕಲ ಮುನಿಜನ ಸಹಿತ ವನದೊಳಗೆ
೦೦೧ ಚಿತ್ತವಿಸು ಜನಮೇಜಯ ...{Loading}...
ಚಿತ್ತವಿಸು ಜನಮೇಜಯ ಕ್ಷಿತಿ
ಪೋತ್ತಮನೆ ಧರ್ಮಜನು ಮುಖದಲಿ
ಕೆತ್ತ ದುಗುಡವ ಬಿಡಿಸಿ ಭೀಮನ ತಂದನಾಶ್ರಮಕೆ
ಮತ್ತಕಾಶಿನಿ ಧೌಮ್ಯ ನಿಖಿಲ ಮ
ಹೋತ್ತಮರು ಪೀಯೂಷ ಮಧುರ ರ
ಸೋತ್ತರದ ನುಡಿಗಳಲಿ ನಾದಿದರನಿಲಜನ ಮನವ ॥1॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಲಾಲಿಸು. ಧರ್ಮರಾಯನು ಭೀಮನ ದುಃಖಭಾವವನ್ನು ಹೋಗಲಾಡಿಸಿ, ಆಶ್ರಮಕ್ಕೆ ಕರೆತಂದನು. ದ್ರೌಪದಿ, ಧೌಮ್ಯನೇ ಮುಂತಾದವರು ಅಮೃತತುಲ್ಯವಾದ ಮಾತುಗಳಿಂದ ಭೀಮನನ್ನು ಸಂತಸಗೊಳಿಸಿದರು.
ಪದಾರ್ಥ (ಕ.ಗ.ಪ)
ಮತ್ತಕಾಶಿನಿ - ಸುಂದರಿ ( ದ್ರೌಪದಿ)
ಕೆತ್ತ - ಅಕ್ರಮಿಸಿಕೊಂಡಿದ್ದ
ಪೀಯೂಷ - ಅಮೃತ
ನಾದು - ನೆನೆಸು
ಮೂಲ ...{Loading}...
ಚಿತ್ತವಿಸು ಜನಮೇಜಯ ಕ್ಷಿತಿ
ಪೋತ್ತಮನೆ ಧರ್ಮಜನು ಮುಖದಲಿ
ಕೆತ್ತ ದುಗುಡವ ಬಿಡಿಸಿ ಭೀಮನ ತಂದನಾಶ್ರಮಕೆ
ಮತ್ತಕಾಶಿನಿ ಧೌಮ್ಯ ನಿಖಿಲ ಮ
ಹೋತ್ತಮರು ಪೀಯೂಷ ಮಧುರ ರ
ಸೋತ್ತರದ ನುಡಿಗಳಲಿ ನಾದಿದರನಿಲಜನ ಮನವ ॥1॥
೦೦೨ ಮುಗಿಲು ಬೆಳೆತುದು ...{Loading}...
ಮುಗಿಲು ಬೆಳೆತುದು ಬರಿಯ ಗಡಬಡೆ
ಗಗನಕುಳಿದುದು ಕೊಂಡ ನೆಲನನು
ತೆಗೆದು ನಿಂದುದು ಮೋಡಿಯಂಕದವೊಲು ನದೀನಿವಹ
ನಗುವ ಕೊಳನಭ್ಯಾಗತೆಯ ಹಂ
ಸೆಗಳು ಮೆರೆದವು ಮೊರೆವ ತುಂಬಿಯ
ಸುಗುಡತನ ತಾವರೆಯೊಳೆಸೆದುದು ಶರದ ಸಮಯದಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆಗ ಶರತ್ಕಾಲವು ಬಂದಿತು. ಆಕಾಶದಲ್ಲಿ ಮೋಡಗಳು ಹಾರಾಡಿದವು. ನದಿಗಳೆಲ್ಲ ತುಂಬಿ ಹರಿದವು. ಕೆರೆಕೊಳಗಳ ನೀರಲ್ಲಿ ಹಂಸಪಕ್ಷಿಗಳು ತೇಲಾಡಿದವು. ಬಯಕೆಯಿಂದ ಕೂಡಿದ ದುಂಬಿಗಳು ತಾವರೆಯ ಹೂಗಳ ಮೇಲೆ ಕುಳಿತು ಮೊರೆದವು.
ಪದಾರ್ಥ (ಕ.ಗ.ಪ)
ಸುಗುಡತನ - ಬಯಕೆ
ಮೂಲ ...{Loading}...
ಮುಗಿಲು ಬೆಳೆತುದು ಬರಿಯ ಗಡಬಡೆ
ಗಗನಕುಳಿದುದು ಕೊಂಡ ನೆಲನನು
ತೆಗೆದು ನಿಂದುದು ಮೋಡಿಯಂಕದವೊಲು ನದೀನಿವಹ
ನಗುವ ಕೊಳನಭ್ಯಾಗತೆಯ ಹಂ
ಸೆಗಳು ಮೆರೆದವು ಮೊರೆವ ತುಂಬಿಯ
ಸುಗುಡತನ ತಾವರೆಯೊಳೆಸೆದುದು ಶರದ ಸಮಯದಲಿ ॥2॥
೦೦೩ ಸವೆದುದೀ ವನವಿಲ್ಲಿ ...{Loading}...
ಸವೆದುದೀ ವನವಿಲ್ಲಿ ಫಲ ಮೃಗ
ನಿವಹ ಬೀತುದು ನಮ್ಮ ಕಾಲಾ
ಟವನು ಸೈರಿಸಿ ನಿಲುವ ವನವನು ಕಾಣೆ ನಾನೆನುತ
ನಮಗೆ ಮಗುಳಾ ಕಾಮ್ಯಕದ ವನ
ಭವನವೈಸಲೆಯೆಂದು ಮುನಿಜನ
ನಿವಹ ಸಹಿತವನೀಶ ಕಾಮ್ಯಕ ವನಕೆ ನಡೆತಂದ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ವನವು ಫಲಗಳಿಲ್ಲದೆ ಬರಿದಾಯಿತು. ಮೃಗಸಂಕುಲ ನಾಶವಾಯಿತು. ನಮ್ಮ ವಿಹಾರದಿಂದ ಉಳಿಯುವ ವನವನ್ನು ನಾನು ಕಾಣೆನು. ನಮಗೆ ಮತ್ತೆ ಆ ಕಾಮ್ಯಕ ವನವೇ ಸರಿ ಎಂದು ಧರ್ಮಜ ಮುನಿಗಳೊಂದಿಗೆ ಕಾಮ್ಯಕವನಕ್ಕೆ ಹೊರಟು ಬಂದನು.
ಪದಾರ್ಥ (ಕ.ಗ.ಪ)
ಕಾಲಾಟ - ಸಂಚಾರ
ಮಗುಳು - ಮತ್ತೆ
ಮೂಲ ...{Loading}...
ಸವೆದುದೀ ವನವಿಲ್ಲಿ ಫಲ ಮೃಗ
ನಿವಹ ಬೀತುದು ನಮ್ಮ ಕಾಲಾ
ಟವನು ಸೈರಿಸಿ ನಿಲುವ ವನವನು ಕಾಣೆ ನಾನೆನುತ
ನಮಗೆ ಮಗುಳಾ ಕಾಮ್ಯಕದ ವನ
ಭವನವೈಸಲೆಯೆಂದು ಮುನಿಜನ
ನಿವಹ ಸಹಿತವನೀಶ ಕಾಮ್ಯಕ ವನಕೆ ನಡೆತಂದ ॥3॥
೦೦೪ ಆ ಶರತ್ಕಾಲವನು ...{Loading}...
ಆ ಶರತ್ಕಾಲವನು ತದ್ವನ
ವಾಸದಲಿ ನೂಕಿದನು ಘನ ಪರಿ
ತೋಷ ಸೂಚಕ ಶಕುನವಂಗಸ್ಫುರಣೆ ಮೊದಲಾದ
ಮೀಸಲಳಿಯದ ಹರುಷ ರಸದಾ
ವೇಶದಲಿ ಮನವುಕ್ಕಿ ಹಿಗ್ಗಿದ
ನೀ ಶಕುನ ಸುಮ್ಮಾನವಿದಕೇನಹುದು ಫಲವೆಂದ ॥4॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಯೇ ಮಳೆಗಾಲವನ್ನು ಪೂರೈಸಿದನು. ಸಂತೋಷ ಸೂಚಕವಾದ ಶಕುನಗಳು, ಅಂಗಸ್ಫುರಣೆಗಳುಂಟಾದಾಗ ಧರ್ಮರಾಯನು ಹರ್ಷಚಿತ್ತನಾಗಿ, ಇವುಗಳಿಗೆ ಯಾವ ಫಲವೆಂದು ಧೌಮ್ಯರನ್ನು ಧರ್ಮಜನು ಕೇಳಿದನು.
ಪದಾರ್ಥ (ಕ.ಗ.ಪ)
ತದ್ವನ- ಆ ವನ
ಪರಿತೋಷ - ಸಂತೋಷ
ಮೂಲ ...{Loading}...
ಆ ಶರತ್ಕಾಲವನು ತದ್ವನ
ವಾಸದಲಿ ನೂಕಿದನು ಘನ ಪರಿ
ತೋಷ ಸೂಚಕ ಶಕುನವಂಗಸ್ಫುರಣೆ ಮೊದಲಾದ
ಮೀಸಲಳಿಯದ ಹರುಷ ರಸದಾ
ವೇಶದಲಿ ಮನವುಕ್ಕಿ ಹಿಗ್ಗಿದ
ನೀ ಶಕುನ ಸುಮ್ಮಾನವಿದಕೇನಹುದು ಫಲವೆಂದ ॥4॥
೦೦೫ ಇದಕೆ ಕೃಷ್ಣಾಗಮನವೇ ...{Loading}...
ಇದಕೆ ಕೃಷ್ಣಾಗಮನವೇ ಫಲ
ದುದಯವೈಸಲೆಯೆನುತಲಿರೆ ಬಂ
ದಿದಿರೆ ನಿಂದನು ದೂತನಮಲ ದ್ವಾರಕಾಪುರದ
ಇದೆ ಕೃಪಾನಿಧಿ ಬಂದನಸುರಾ
ಭ್ಯುದಯ ಘಾತಕ ಬಂದ ರಿಪುಬಲ
ಮದನ ಮದಹರ ಬಂದನಿದೆಯೆಂದನು ಮಹೀಪತಿಗೆ ॥5॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವುಗಳಿಗೆಲ್ಲಾ ಶ್ರೀಕೃಷ್ಣದರ್ಶನ ಯೋಗವೆಂದು ಧೌಮ್ಯರು ಹೇಳಲು ಎದುರಿಗೇ ದ್ವಾರಾವತಿಯ ದೂತನೊಬ್ಬನು ಬಂದು, ‘ಇದೋ ಕರುಣಾ ಸಾಗರನಾದ ಹರಿಯು ಬಂದನು, ರಾಕ್ಷಸ ಸಂಹಾರಿ ಬಂದನು, ವೈರಿ ವಿಘಾತಕರನಾದ ,ಕೃಷ್ಣನು ಬಂದನು’ ಎಂದು ಧರ್ಮಜನಿಗೆ ತಿಳಿಸಿದನು.
ಪದಾರ್ಥ (ಕ.ಗ.ಪ)
ಅಮಲ - ಪವಿತ್ರ
ರಿಪುಬಲ ಮದನ ಮದಹರ -ಶತ್ರುಸೇನೆ ಎಂಬ ಮನ್ಮಥನ ಪಾಲಿಗೆ ಶತ್ರು ( ಕೃಷ್ಣ )
ಮೂಲ ...{Loading}...
ಇದಕೆ ಕೃಷ್ಣಾಗಮನವೇ ಫಲ
ದುದಯವೈಸಲೆಯೆನುತಲಿರೆ ಬಂ
ದಿದಿರೆ ನಿಂದನು ದೂತನಮಲ ದ್ವಾರಕಾಪುರದ
ಇದೆ ಕೃಪಾನಿಧಿ ಬಂದನಸುರಾ
ಭ್ಯುದಯ ಘಾತಕ ಬಂದ ರಿಪುಬಲ
ಮದನ ಮದಹರ ಬಂದನಿದೆಯೆಂದನು ಮಹೀಪತಿಗೆ ॥5॥
೦೦೬ ಸೂಚಿಸಿದವೇ ಶಕುನ ...{Loading}...
ಸೂಚಿಸಿದವೇ ಶಕುನ ಪುನರಪಿ
ಗೋಚರಿಸಿತೇ ಗರುವನಿಧಿ ನಾ
ವಾಚರಿಸಿತೇನೋ ಶಿವಾ ಭವ ಭವ ಸಹಸ್ರದಲಿ
ನಾಚಿದವು ನಿಗಮಂಗಳಾವನ
ಸೂಚಿಸುವುವೆಮ್ಮೊಳಗೆ ಕೃಪೆಯಲ
ರೋಚಕವನಾ ದೈವ ಮಾಡದೆನುತ್ತ ಹೊರವಂಟ ॥6॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಶಕುನಗಳು ಸೂಚಿಸಿದವೇ ? ಅಥವಾ ಆತ್ಮ ಸ್ವರೂಪಿಯಾದ ಭಗವಂತನೇ ಮತ್ತೆ ಗೋಚರನಾದನೆ ? ಇದಕ್ಕಾಗಿ ಸಾವಿರ ಜನ್ಮಗಳಲ್ಲಿ ನಾವು ಪುಣ್ಯ ಸಂಚಯನ ಮಾಡಿದೆವೆ ? ವೇದಗಳು ಯಾವನನ್ನು ವಿವರಿಸಲು ನಾಚುತ್ತವೆಯೋ ಆ ಪರಮಾತ್ಮನು ನಮ್ಮ ಮೇಲೆ ಕರುಣೆಯಿಟ್ಟು ಯಥಾ ಯೋಗ್ಯವನ್ನೇ ಮಾಡಿದ್ದಾನೆ ಎಂದುಕೊಂಡು ಧರ್ಮರಾಯನು ಹೊರಟನು.
ಪದಾರ್ಥ (ಕ.ಗ.ಪ)
ಪುನರಪಿ - ಮತ್ತೆ
ಭವ - ಜನ್ಮಾಂತರ
ನಿಗಮ - ವೇದ
ಅರೋಚಕ - ರುಚಿಸದೇ ಇರುವಂತಹದು
ಮೂಲ ...{Loading}...
ಸೂಚಿಸಿದವೇ ಶಕುನ ಪುನರಪಿ
ಗೋಚರಿಸಿತೇ ಗರುವನಿಧಿ ನಾ
ವಾಚರಿಸಿತೇನೋ ಶಿವಾ ಭವ ಭವ ಸಹಸ್ರದಲಿ
ನಾಚಿದವು ನಿಗಮಂಗಳಾವನ
ಸೂಚಿಸುವುವೆಮ್ಮೊಳಗೆ ಕೃಪೆಯಲ
ರೋಚಕವನಾ ದೈವ ಮಾಡದೆನುತ್ತ ಹೊರವಂಟ ॥6॥
೦೦೭ ಹಳುವವನು ಹೊರವಣ್ಟು ...{Loading}...
ಹಳುವವನು ಹೊರವಂಟು ಗರುಡನ
ಹಳವಿಗೆಯ ದೂರದಲಿ ಕಂಡನು
ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ
ತಳಿತ ರೋಮಾಂಚದಲಿ ಸಮ್ಮುದ
ಪುಳಕದಲಿ ಪೂರಾಯದುಬ್ಬಿನ
ಲಿಳೆಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ ॥7॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಾಡಿನಲ್ಲಿ ಬರುತ್ತಾ, ದೂರದಲ್ಲೇ ಗರುಡಧ್ವಜವನ್ನು ಕಂಡನು. ಕೂಡಲೇ ಬಿಟ್ಟ ಕಣ್ಣುಗಳಲ್ಲಿ ಸಂತೋಷ ಬಾಷ್ಪ ತುಂಬಿ ತುಳುಕಿತು. ರೋಮಾಂಚನಗೊಂಡ ಧರ್ಮಜನು ಉತ್ಸಾಹದಲ್ಲಿ ಸಮಸ್ತ ಜನರೊಡನೆ ಸಾಷ್ಟಾಂಗ ವಂದಿಸುತ್ತಾ ಮುಂದೆ ಬಂದನು.
ಪದಾರ್ಥ (ಕ.ಗ.ಪ)
ಹಳುವ - ಕಾಡು
ಹಳವಿಗೆ - ಧ್ವಜ
ಮೂಲ ...{Loading}...
ಹಳುವವನು ಹೊರವಂಟು ಗರುಡನ
ಹಳವಿಗೆಯ ದೂರದಲಿ ಕಂಡನು
ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ
ತಳಿತ ರೋಮಾಂಚದಲಿ ಸಮ್ಮುದ
ಪುಳಕದಲಿ ಪೂರಾಯದುಬ್ಬಿನ
ಲಿಳೆಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ ॥7॥
೦೦೮ ಇಳಿದು ದಣ್ಡಿಗೆಯಿನ್ದ ...{Loading}...
ಇಳಿದು ದಂಡಿಗೆಯಿಂದ ಕರುಣಾ
ಜಲಧಿ ಬಂದನು ಕಾಲು ನಡೆಯಲಿ
ಸೆಳೆದು ಬಿಗಿಯಪ್ಪಿದನಿದೇನಾಸುರವಿದೇನೆನುತ
ಬಳಿಕ ಭೀಮಾರ್ಜುನರ ಯಮಳರ
ನೊಲಿದು ಮನ್ನಿಸಿ ಸತಿಯ ಲೋಚನ
ಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ ॥8॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದಂಡಿಗೆಯಿಂದ ಇಳಿದು ಶ್ರೀಕೃಷ್ಣನು ನಡೆದುಕೊಂಡು ಬಂದು, ಧರ್ಮಜನನ್ನು ಪ್ರೀತಿಯಿಂದ ಆಲಿಂಗಿಸಿದನು. ಅನಂತರ ಭೀಮಾರ್ಜುನರನ್ನೂ, ನಕುಲ ಸಹದೇವರನ್ನು ಮನ್ನಿಸಿ, ದ್ರೌಪದಿಯ ಕಂಬನಿಯನ್ನು ಸೆರಗಿನಿಂದ ಒರೆಸಿ ಸಮಾಧಾನಪಡಿಸಿದನು.
ಮೂಲ ...{Loading}...
ಇಳಿದು ದಂಡಿಗೆಯಿಂದ ಕರುಣಾ
ಜಲಧಿ ಬಂದನು ಕಾಲು ನಡೆಯಲಿ
ಸೆಳೆದು ಬಿಗಿಯಪ್ಪಿದನಿದೇನಾಸುರವಿದೇನೆನುತ
ಬಳಿಕ ಭೀಮಾರ್ಜುನರ ಯಮಳರ
ನೊಲಿದು ಮನ್ನಿಸಿ ಸತಿಯ ಲೋಚನ
ಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ ॥8॥
೦೦೯ ಕುಶಲವೇ ಕುರುರಾಯನೂಳಿಗ ...{Loading}...
ಕುಶಲವೇ ಕುರುರಾಯನೂಳಿಗ
ವೆಸಗದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರೆಲಾ ವನವನಾಂತದಲಿ
ಪಶುಪತಿಯು ಹಿಡಿವಂಬು ಕೈವ
ರ್ತಿಸಿತು ಗಡ ಪಾರ್ಥಂಗೆ ನಮಗಿಂ
ದೊಸಗೆಯಾಯಿತು ಪುಣ್ಯವೆಂದನು ಹರಿ ಯುಧಿಷ್ಠಿರಗೆ ॥9॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೌರವನ ಕೋಟಲೆಗಳಿಂದ ನೀವು ಮುಕ್ತರೆ? ನಿಮ್ಮ ವನವಾಸದ ಅವಧಿ ಮುಗಿಯುತ್ತ ಬಂದಿತೆ ? ವನವನಾಂತರಗಳಲ್ಲಿ ಸುಳಿದು ಬಳಲಿದ್ದೀರಲ್ಲವೆ ? ಅರ್ಜುನನು ಪರಮೇಶ್ವರನ ಪಾಶುಪತಾಸ್ತ್ರವನ್ನು ಸಂಪಾದಿಸಿದ್ದರಿಂದ ನಮಗೆ ಸಂತೋಷವಾಯಿತು. ಇದು ನಮ್ಮ ಪುಣ್ಯ ಎಂದು ಶ್ರೀಹರಿಯು ಹೇಳಿದನು.
ಮೂಲ ...{Loading}...
ಕುಶಲವೇ ಕುರುರಾಯನೂಳಿಗ
ವೆಸಗದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರೆಲಾ ವನವನಾಂತದಲಿ
ಪಶುಪತಿಯು ಹಿಡಿವಂಬು ಕೈವ
ರ್ತಿಸಿತು ಗಡ ಪಾರ್ಥಂಗೆ ನಮಗಿಂ
ದೊಸಗೆಯಾಯಿತು ಪುಣ್ಯವೆಂದನು ಹರಿ ಯುಧಿಷ್ಠಿರಗೆ ॥9॥
೦೧೦ ಆಗಲೀ ವೈಷ್ಣವಕೆ ...{Loading}...
ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದು
ದಾಗಳಿದ್ದುದು ಪಾಶುಪತ ಶರವದರ ಬಳಿವಿಡಿದು
ಈಗಳೊಸಗೆಯೆ ಯೆಮ್ಮ ಪಂಚಕ
ದಾಗು ಹೋಗನು ಹೊತ್ತು ನಡೆಸಿದ
ಡಾಗಳಾಯ್ತೆಮಗೊಸಗೆಯೆಂದನು ನೃಪತಿ ವಿನಯದಲಿ ॥10॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ವೈಷ್ಣವ ಸಹಯೋಗ ನಮಗಾಗಲಿ. ನಮ್ಮ ನಾಡಾಡಿತನವನ್ನು ಗಣಿಸದೆ ನಮ್ಮನ್ನು ರಕ್ಷಿಸು. ಇದುವರೆಗೆ ನಮ್ಮಲ್ಲಿದ್ದುದು ಪಾಶುಪತಾಸ್ತ್ರ ಮಾತ್ರ.. ನಮ್ಮ ಐವರನ್ನೂ ಕಾಪಾಡಲು ಈಗ ನೀವು ಬಂದಿರುವುದು ನಮ್ಮ ಭಾಗ್ಯ ಎಂದು ಧರ್ಮಜನು ಹೇಳಿದನು.
ಪದಾರ್ಥ (ಕ.ಗ.ಪ)
ತಾಗು ಥಟ್ಟು - ನಾಡಾಡಿತನ ( ? - ಕನ್ನಡ - ಕನ್ನಡ ನಿಘಂಟು , ಕಸಾಪ)
ಎಮ್ಮ ಪಂಚಕ - ನಾವೈವರು - ಪಾಂಡವರು
ಮೂಲ ...{Loading}...
ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದು
ದಾಗಳಿದ್ದುದು ಪಾಶುಪತ ಶರವದರ ಬಳಿವಿಡಿದು
ಈಗಳೊಸಗೆಯೆ ಯೆಮ್ಮ ಪಂಚಕ
ದಾಗು ಹೋಗನು ಹೊತ್ತು ನಡೆಸಿದ
ಡಾಗಳಾಯ್ತೆಮಗೊಸಗೆಯೆಂದನು ನೃಪತಿ ವಿನಯದಲಿ ॥10॥
೦೧೧ ತೊಳಲಿದೆವಲಾ ಕೃಷ್ಣ ...{Loading}...
ತೊಳಲಿದೆವಲಾ ಕೃಷ್ಣ ತಪ್ಪದೆ
ಹಳುವ ಹಳುವವನಮರ ಪುರದಲಿ
ಕೆಲವು ದಿನವಿರಲರ್ಜುನಂಗಾಯ್ತೂರ್ವಶಿಯ ಶಾಪ
ಖಳರನಲ್ಲಿ ನಿವಾತಕವಚರ
ಗೆಲಿದು ಬಂದನು ಪಾರ್ಥನದರೊಳು
ಕೆಲಬರಸುರರ ಕಾದಿ ಕೊಂದನು ಭೀಮನಡವಿಯಲಿ ॥11॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷ್ಣ, ಅರಣ್ಯಗಳಲ್ಲಿ ತಿರುಗಾಡಿ ಸೋತೆವು. ಅರ್ಜುನನಿಗೆ ಸ್ವರ್ಗದಲ್ಲಿರುವಾಗ ಊರ್ವಶಿಯ ಶಾಪವು ಪ್ರಾಪ್ತಿಯಾಯಿತು. ಅಲ್ಲಿ ನಿವಾತಕವಚ ರಾಕ್ಷಸರನ್ನು ಅವನು ಗೆದ್ದು ಬಂದನು. ಅಡವಿಯಲ್ಲಿ ಭೀಮನೂ ಅನೇಕ ರಾಕ್ಷಸರನ್ನು ಕೊಂದನು.
ಪದಾರ್ಥ (ಕ.ಗ.ಪ)
ಅಮರಪುರ - ಅಮರಾವತಿ
ಹಳುವ - ಕಾಡು
ಮೂಲ ...{Loading}...
ತೊಳಲಿದೆವಲಾ ಕೃಷ್ಣ ತಪ್ಪದೆ
ಹಳುವ ಹಳುವವನಮರ ಪುರದಲಿ
ಕೆಲವು ದಿನವಿರಲರ್ಜುನಂಗಾಯ್ತೂರ್ವಶಿಯ ಶಾಪ
ಖಳರನಲ್ಲಿ ನಿವಾತಕವಚರ
ಗೆಲಿದು ಬಂದನು ಪಾರ್ಥನದರೊಳು
ಕೆಲಬರಸುರರ ಕಾದಿ ಕೊಂದನು ಭೀಮನಡವಿಯಲಿ ॥11॥
೦೧೨ ಇನ್ತು ತಲೆಯೊತ್ತುತ ...{Loading}...
ಇಂತು ತಲೆಯೊತ್ತುತ ಮಹಾ ವಿಪಿ
ನಾಂತರವ ತೊಳಲಿದೆವು ಬಳಿಕ ವ
ನಾಂತರದೊಳಗಿಂದಾದುದೂಳಿಗ ನಹುಷ ನೃಪತಿಯಲಿ
ಭ್ರಾಂತಿಯೈ ಸಲೆ ಭೀಮನುರಗಾ
ಕ್ರಾಂತನಾದನು ಧರ್ಮಕಥೆಯಲಿ
ಸಂತವಾಯ್ತು ವಿಶಾಪವಾದನು ನಹುಷನಾ ಕ್ಷಣಕೆ ॥12॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಹೋರಾಡುತ್ತಾ ವಿಪಿನಾಂತರಗಳಲ್ಲಿ ನಡೆದಾಡಿ ಅನಂತರ ನಹುಷ ಚಕ್ರವರ್ತಿಯು ಸರ್ಪರೂಪದಲ್ಲಿದ್ದು ಭೀಮನನ್ನು ಬಂಧಿಸಿದನು. ಧರ್ಮಕಥಾ ಪ್ರಸಂಗದಿಂದ ನಹುಷನು ವಿಶಾಪ ಹೊಂದಿ ಪ್ರಕರಣವು ಶಾಂತವಾಯಿತು.
ಪದಾರ್ಥ (ಕ.ಗ.ಪ)
ವಿಶಾಪ - ಶಾಪದಿಂದ ಮುಕ್ತಿ ಪಡೆಯುವುದು
ಮೂಲ ...{Loading}...
ಇಂತು ತಲೆಯೊತ್ತುತ ಮಹಾ ವಿಪಿ
ನಾಂತರವ ತೊಳಲಿದೆವು ಬಳಿಕ ವ
ನಾಂತರದೊಳಗಿಂದಾದುದೂಳಿಗ ನಹುಷ ನೃಪತಿಯಲಿ
ಭ್ರಾಂತಿಯೈ ಸಲೆ ಭೀಮನುರಗಾ
ಕ್ರಾಂತನಾದನು ಧರ್ಮಕಥೆಯಲಿ
ಸಂತವಾಯ್ತು ವಿಶಾಪವಾದನು ನಹುಷನಾ ಕ್ಷಣಕೆ ॥12॥
೦೧೩ ಮರಳಿ ಕಾಮ್ಯಕ ...{Loading}...
ಮರಳಿ ಕಾಮ್ಯಕ ವನದ ದಳಮಂ
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿಂದಾದ ವಿಪಿನಾಂತರ ಪರಿಭ್ರಮದ
ಕರುಣಿ ನಿಮ್ಮಡಿದಾವರೆಯ ಸಿರಿ
ದರುಶನದಿನಾಯಾಸ ಪಾರಂ
ಪರೆಗೆ ಬಿಡುಗಡೆಯೆನುತ ಮೈಯಿಕ್ಕಿದನು ಯಮಸೂನು ॥13॥|
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಳಿಕ ಕಾಮ್ಯಕವನಕ್ಕೇ ಬಂದು ವಾಸ ಹೂಡಿದೆವು. ಹಿಂದೆ ಅನೇಕ ಕಾಡನ್ನು ಸುತ್ತಿ ಸುಳಿದ ನಮಗೆ ಇದು ಮತ್ತೆ ವನವಾಸದ ವಿಸ್ತರಣೆ ಎನಿಸಿತು. ದಯಾನಿಧಿಯಾದ ನಿಮ್ಮ ಪಾದಪದ್ಮಗಳ ದರ್ಶನವಾದ ಈ ದಿವಸ, ನಮ್ಮ ವಿಪತ್ತುಗಳ ಪರಿಹಾರವಾಯಿತು ಎಂದು ಧರ್ಮರಾಯನು ಕೃಷ್ಣನಿಗೆ ಸಾಷ್ಟಾಂಗ ವಂದಿಸಿದನು.
ಪದಾರ್ಥ (ಕ.ಗ.ಪ)
ವಿಪಿನಾಂತರ ಪರಿಕ್ರಮ - ಕಾಡನಲ್ಲಿ ಸಂಚಾರ
ಮೂಲ ...{Loading}...
ಮರಳಿ ಕಾಮ್ಯಕ ವನದ ದಳಮಂ
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿಂದಾದ ವಿಪಿನಾಂತರ ಪರಿಭ್ರಮದ
ಕರುಣಿ ನಿಮ್ಮಡಿದಾವರೆಯ ಸಿರಿ
ದರುಶನದಿನಾಯಾಸ ಪಾರಂ
ಪರೆಗೆ ಬಿಡುಗಡೆಯೆನುತ ಮೈಯಿಕ್ಕಿದನು ಯಮಸೂನು ॥13॥|
೦೧೪ ರಾಯ ಕೇಳಾಕ್ಷಣಕೆ ...{Loading}...
ರಾಯ ಕೇಳಾಕ್ಷಣಕೆ ಮಾರ್ಕಂ
ಡೇಯ ನಾರದರಿಳಿದರಬುಜ ದ
ಳಾಯತಾಕ್ಷಂಗೆರಗಿದರು ಭಯಭರಿತ ಭಕ್ತಿಯಲಿ
ತಾಯಿ ಕರುಗಳ ಬಿಡದವೊಲು ನಿ
ರ್ದಾಯದಲಿ ನಿಜಭಕ್ತಸಂಗದ
ಮಾಯೆ ಬಿಡದೈ ನಿನ್ನನೆಂದರು ಹೊರಳಿ ಚರಣದಲಿ ॥14॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು ಆಗ ಮಾರ್ಕಂಡೇಯ ಮುನಿ ಮತ್ತು ನಾರದ ಋಷಿಗಳು ಕೆಳಗಿಳಿದು ಬಂದು ಭಯಭಕ್ತಿಯಿಂದ ಶ್ರೀಹರಿಗೆ ನಮಸ್ಕರಿಸಿದರು. ‘ತಾಯಿ ಹಸುವು ಕರುಗಳನ್ನು ಹೇಗೆ ಬಿಡುವುದಿಲ್ಲವೋ ಹಾಗೆ ಭಕ್ತರ ಸಂಗವನ್ನು ನೀನು ಬಿಡಲಾರೆ’ ಎಂದು ಹೇಳುತ್ತಾ ಕೃಷ್ಣನ ಪಾದದಲ್ಲಿ ಹೊರಳಿದರು.
ಮೂಲ ...{Loading}...
ರಾಯ ಕೇಳಾಕ್ಷಣಕೆ ಮಾರ್ಕಂ
ಡೇಯ ನಾರದರಿಳಿದರಬುಜ ದ
ಳಾಯತಾಕ್ಷಂಗೆರಗಿದರು ಭಯಭರಿತ ಭಕ್ತಿಯಲಿ
ತಾಯಿ ಕರುಗಳ ಬಿಡದವೊಲು ನಿ
ರ್ದಾಯದಲಿ ನಿಜಭಕ್ತಸಂಗದ
ಮಾಯೆ ಬಿಡದೈ ನಿನ್ನನೆಂದರು ಹೊರಳಿ ಚರಣದಲಿ ॥14॥
೦೧೫ ತಪದಲುರಿದು ಸಮಾಧಿ ...{Loading}...
ತಪದಲುರಿದು ಸಮಾಧಿ ಯೋಗದ
ಲುಪಶಮದಲುಬ್ಬೆದ್ದು ಹೋಮದ
ಜಪದ ಜಂಜಡದೊಳಗೆ ಸಿಲುಕಿ ಜನಾರ್ದನನ ಮರೆವ
ಅಪಸದರು ನಾವ್ ಕರ್ಮ ನಿಷ್ಠೆಯ
ಕೃಪಣರೆವಗೆಯು ತನ್ನ ತೋರುವ
ಕೃಪೆಯ ನೋಡೈ ಭೂಪಯೆನುತೀಕ್ಷಿಸಿದರಚ್ಯುತನ ॥15॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಠಿಣವಾದ ತಪಸ್ಸಿನಲ್ಲಿದ್ದು, ಯೋಗಸಮಾಧಿಗಳಲ್ಲಿ ಮುಳುಗಿ, ಹೋಮ ಜಪಾದಿ ಆಚರಣೆಗಳಲ್ಲಿ ಭಗವಂತನನ್ನೇ ಮರೆಯುವ ಮೂರ್ಖರು ನಾವು. ಕರ್ಮನಿಷ್ಠೆಯಲ್ಲಿ ಜಿಪುಣರಾಗಿರುವ ನಮಗೂ ದರ್ಶನವನ್ನು ತೋರುವ ದಯೆಯನ್ನು ನೋಡು ಎಂದು ಅವರು ಧರ್ಮರಾಯನಿಗೆ ಹೇಳುತ್ತ ಅಚ್ಯುತನನ್ನು ನೋಡಿದರು.
ಪದಾರ್ಥ (ಕ.ಗ.ಪ)
ಅಪಸದ - ಮಾರ್ಖರು
ಮೂಲ ...{Loading}...
ತಪದಲುರಿದು ಸಮಾಧಿ ಯೋಗದ
ಲುಪಶಮದಲುಬ್ಬೆದ್ದು ಹೋಮದ
ಜಪದ ಜಂಜಡದೊಳಗೆ ಸಿಲುಕಿ ಜನಾರ್ದನನ ಮರೆವ
ಅಪಸದರು ನಾವ್ ಕರ್ಮ ನಿಷ್ಠೆಯ
ಕೃಪಣರೆವಗೆಯು ತನ್ನ ತೋರುವ
ಕೃಪೆಯ ನೋಡೈ ಭೂಪಯೆನುತೀಕ್ಷಿಸಿದರಚ್ಯುತನ ॥15॥
೦೧೬ ಈಯಘಾಟದ ದೈವವಿದು ...{Loading}...
ಈಯಘಾಟದ ದೈವವಿದು ನಿ
ರ್ದಾಯದಲಿ ನಿಮ್ಮೊಳಗೆ ಸೇರಿತು
ರಾಯರಿದ್ದರು ಹಿಂದೆ ಭರತ ಭಗೀರಥಾದಿಗಳು
ಆಯಿತೇನವರಿಗೆ ಸರೋಜದ
ಳಯತಾಕ್ಷನ ಚರಣ ಸೇವೆ ನಿ
ರಾಯಸದ ಸಹವಾಸ ಭೋಜನವೆಂದನಾ ನೃಪನ ॥16॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಅತಿಶಯವಾದ ದೈವವು ನಿಶ್ಚಯವಾಗಿ ನಿಮಗೆ ದೊರಕಿತು. ಹಿಂದೆ ಭರತ ಭಗೀರಥರೇ ಮೊದಲಾದ ಅರಸರಿಗೆ ದೊರಕದ ಕಮಲಾಕ್ಷನಾದ ಶ್ರೀಹರಿಯ ಚರಣ ಸೇವೆ ನಿಮಗೆ ನಿರಾಯಾಸವಾಗಿ ಪ್ರಾಪ್ತಿಯಾಯಿತು ಎಂದನು.
ಪದಾರ್ಥ (ಕ.ಗ.ಪ)
ನಿರ್ದಾಯ - ನಿಶ್ಚಯ
ಮೂಲ ...{Loading}...
ಈಯಘಾಟದ ದೈವವಿದು ನಿ
ರ್ದಾಯದಲಿ ನಿಮ್ಮೊಳಗೆ ಸೇರಿತು
ರಾಯರಿದ್ದರು ಹಿಂದೆ ಭರತ ಭಗೀರಥಾದಿಗಳು
ಆಯಿತೇನವರಿಗೆ ಸರೋಜದ
ಳಯತಾಕ್ಷನ ಚರಣ ಸೇವೆ ನಿ
ರಾಯಸದ ಸಹವಾಸ ಭೋಜನವೆಂದನಾ ನೃಪನ ॥16॥
೦೧೭ ವರುಷ ಹದಿನಾರರಲಿ ...{Loading}...
ವರುಷ ಹದಿನಾರರಲಿ ಮೃತ್ಯುವ
ಪರುಟವಿಸಿದುದು ಕರ್ಮಗತಿ ಮುರ
ಹರನ ಸೇವೆಯ ಮಾಡಿ ಸವೆದೆನು ಸರ್ವಭಾವದಲಿ
ಕರುಣಿ ಬಿಜಯಂಗೈದು ಮೃತ್ಯುವಿ
ನುರಿವ ಗಂಟಲೊಳಿಳಿವ ತನ್ನನು
ಬರಸೆಳೆದನೆಂದಮಳ ಮಾರ್ಕಂಡೇಯ ಮುನಿ ನುಡಿದ ॥17॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭಗವಂತನ ಸೇವೆ ಮಾಡುತ್ತಾ ಇದ್ದರೂ, ಹದಿನಾರನೇ ವರ್ಷದಲ್ಲಿ ಮೃತ್ಯುವು ಆಕ್ರಮಿಸಿ ಎಲ್ಲಾ ರೀತಿಯಿಂದ ನಾನು ತೊಳಲಿದೆನು. ಶ್ರೀಹರಿಯು ಪ್ರತ್ಯಕ್ಷನಾಗಿ ಮೃತ್ಯುವಿನಿಂದ ನನ್ನನ್ನು ಪಾರು ಮಾಡಿದನು ಎಂದು ಮಾರ್ಕಂಡೇಯ ಮುನಿಯು ಹೇಳಿದನು.
ಮೂಲ ...{Loading}...
ವರುಷ ಹದಿನಾರರಲಿ ಮೃತ್ಯುವ
ಪರುಟವಿಸಿದುದು ಕರ್ಮಗತಿ ಮುರ
ಹರನ ಸೇವೆಯ ಮಾಡಿ ಸವೆದೆನು ಸರ್ವಭಾವದಲಿ
ಕರುಣಿ ಬಿಜಯಂಗೈದು ಮೃತ್ಯುವಿ
ನುರಿವ ಗಂಟಲೊಳಿಳಿವ ತನ್ನನು
ಬರಸೆಳೆದನೆಂದಮಳ ಮಾರ್ಕಂಡೇಯ ಮುನಿ ನುಡಿದ ॥17॥
೦೧೮ ಓಕರಿಸಿದಳು ಮೃತ್ಯುವೆನ್ನನು ...{Loading}...
ಓಕರಿಸಿದಳು ಮೃತ್ಯುವೆನ್ನನು
ಲೋಕದಲಿ ಹೊರಗೆಂದು ಯಮನ ನಿ
ರಾಕರಣೆಗಳ ಜೀವ ಜಾತಿಯೊಳಲ್ಲವಿವನೆಂದು
ಲೋಕದಲಿ ಡಂಗುರವ ಹೊಯ್ಸಿದ
ನೀ ಕಮಲನಾಭನೆ ಕಣಾ ಕರು
ಣೈಕನಿಧಿ ನಿಮಗೊಲಿದನೆಂದನು ಮುನಿ ಯುಧಿಷ್ಠಿರಗೆ ॥18॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೃತ್ಯುವು ತಿರಸ್ಕರಿಸಿದ ನನ್ನನ್ನು , ಯಮನು ಒಯ್ಯುಬಹುದಾದ ಜೀವಜಾತಿಯವನಲ್ಲವೆಂದೂ ಡಂಗುರ ಹೊಯ್ಸಿದ ಈ ಕರುಣನಿಧಿ ಶ್ರೀಹರಿಯು ನಿಮಗೆ ಒಲಿದಿದ್ದಾನೆ ಎಂದು ಮಾರ್ಕಂಡೇಯನು ಧರ್ಮಜಗೆ ಹೇಳಿದನು.
ಪದಾರ್ಥ (ಕ.ಗ.ಪ)
ಓಕರಿಸು - ತಿರಸ್ಕರಿಸು
ಮೂಲ ...{Loading}...
ಓಕರಿಸಿದಳು ಮೃತ್ಯುವೆನ್ನನು
ಲೋಕದಲಿ ಹೊರಗೆಂದು ಯಮನ ನಿ
ರಾಕರಣೆಗಳ ಜೀವ ಜಾತಿಯೊಳಲ್ಲವಿವನೆಂದು
ಲೋಕದಲಿ ಡಂಗುರವ ಹೊಯ್ಸಿದ
ನೀ ಕಮಲನಾಭನೆ ಕಣಾ ಕರು
ಣೈಕನಿಧಿ ನಿಮಗೊಲಿದನೆಂದನು ಮುನಿ ಯುಧಿಷ್ಠಿರಗೆ ॥18॥
೦೧೯ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಪ್ರಳಯದಲಿ ಸಾ
ಗರದ ತೆರೆ ಮುಂಡಾಡಿದವು ಸಾ
ಗರದ ತೆರೆಯಲಿ ಸಕಲ ಜಲಧಿಗಳೇಕ ರೂಪದಲಿ
ಧರೆಯ ಮುಳುಗಿಸಿ ಮೇಲೆ ಮೇಲು
ಬ್ಬರಿಸಿ ಜಗದಡಿಕಿಲಿನ ಜೋಡಿಯ
ಜರುಹಿದವು ನೀರೇರಿತಗ್ಗದ ಸತ್ಯಲೋಕದಲಿ ॥19॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಪ್ರಳಯಕಾಲದಲ್ಲಿ ಸಮುದ್ರಗಳು ಮೇರೆ ತಪ್ಪಿ, ಎಲ್ಲ ಸಮುದ್ರಗಳೂ ಒಂದಾಗಿ ಭೂಮಿಯನ್ನು ಮುಳುಗಿಸಿದವು. ನಂತರ ನೀರು ಸತ್ಯಲೋಕಕ್ಕೇ ಏರಿ ನುಗ್ಗಿತು.
ಪದಾರ್ಥ (ಕ.ಗ.ಪ)
ಅಡಕಿಲು - ರಾಶಿ
ಜರುಹು - ಜರುಗಿಸು
ಅಗ್ಗ - ಶ್ರೇಷ್ಠ
ಮೂಲ ...{Loading}...
ಧರಣಿಪತಿ ಕೇಳ್ ಪ್ರಳಯದಲಿ ಸಾ
ಗರದ ತೆರೆ ಮುಂಡಾಡಿದವು ಸಾ
ಗರದ ತೆರೆಯಲಿ ಸಕಲ ಜಲಧಿಗಳೇಕ ರೂಪದಲಿ
ಧರೆಯ ಮುಳುಗಿಸಿ ಮೇಲೆ ಮೇಲು
ಬ್ಬರಿಸಿ ಜಗದಡಿಕಿಲಿನ ಜೋಡಿಯ
ಜರುಹಿದವು ನೀರೇರಿತಗ್ಗದ ಸತ್ಯಲೋಕದಲಿ ॥19॥
೦೨೦ ಜಗದ ಜೀವರ ...{Loading}...
ಜಗದ ಜೀವರ ಕರ್ಮ ಬೀಜಾ
ಳಿಗಳ ಭೈತ್ರವ ತನ್ನ ಬಾಲಕೆ
ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ
ಬಗೆಯಲಾ ಹರಿಯೀತನೇ ದೃ
ಗ್ಯುಗಕೆ ಗೋಚರನಾದನರಸುವ
ನಿಗಮವೀತನ ಹಜ್ಜೆಗಾಣವು ರಾಯ ಕೇಳ್ ಎಂದ ॥20॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಲೋಕದ ಜೀವಿಗಳ ಎಲ್ಲ ಕರ್ಮಗಳ ನಾವೆಯನ್ನು ತನ್ನ ಬಾಲಕ್ಕೆ ಬಿಗಿದುಕೊಂಡು, ಶ್ರೀಹರಿಯು ಮತ್ಸ್ಯರೂಪ ಧಾರಣೆ ಮಾಡಿ ನೀರಿಗೆ ಧುಮುಕಿದನು. ವೇದಗಳೇ ಇವನ ಹೆಜ್ಜೆ ಕಾಣದೇ ಹುಡುಕುತ್ತಿರುವಾಗ, ನನ್ನ ದೃಷ್ಟಿಗೆ ಅಂದು ಗೋಚರನಾದ ಆ ಪರಮಾತ್ಮನೇ ಇವನೆಂದು ತಿಳಿ’ ಎಂದು ಹೇಳಿದನು.
ಪದಾರ್ಥ (ಕ.ಗ.ಪ)
ಭೈತ್ರ - ನಾವೆ
ಮೂಲ ...{Loading}...
ಜಗದ ಜೀವರ ಕರ್ಮ ಬೀಜಾ
ಳಿಗಳ ಭೈತ್ರವ ತನ್ನ ಬಾಲಕೆ
ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ
ಬಗೆಯಲಾ ಹರಿಯೀತನೇ ದೃ
ಗ್ಯುಗಕೆ ಗೋಚರನಾದನರಸುವ
ನಿಗಮವೀತನ ಹಜ್ಜೆಗಾಣವು ರಾಯ ಕೇಳೆಂದ ॥20॥
೦೨೧ ಮರಳಿ ಹೂಡಿದನಿವನು ...{Loading}...
ಮರಳಿ ಹೂಡಿದನಿವನು ಜಗದ್ವಿ
ಸ್ತರಣವನು ಮಾಯಾ ಮಹೋದಧಿ
ಹೊರೆದನುನ್ನತ ಸತ್ವದಲಿ ಮೇಲಾದ ಲೋಚನದ
ಉರಿಯಲದ್ದುವನಿದನು ಲೀಲಾ
ಚರಿತವಿದು ಕೃಷ್ಣಂಗೆ ನಿನ್ನಯ
ಸಿರಿಯೆ ಸಿರಿ ಬಡತನವೆ ಬಡತನವೆಂದನಾ ಮುನಿಪ ॥21॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇವನು ಲೋಕವನ್ನು ಮತ್ತೆ ಸೃಷ್ಟಿಮಾಡಿ ವಿಸ್ತರಿಸಿದನು. ಅನಂತರ ಅದನ್ನು ಪಾಲಿಸಿ ಕೊನೆಗೆ ಕಣ್ಣ ಬೆಂಕಿಯಿಂದಲೇ ಲಯಗೊಳಿಸುವವನು. ಇದು ಶ್ರೀಕೃಷ್ಣನಿಗೆ ಲೀಲಾಕಾರ್ಯವೇ ಆಗಿದೆ. ಇದು ನಿನ್ನ ಸಂಪತ್ತು ಕೂಡಾ ಹೌದು, ದಾರಿದ್ರ್ಯ ಕೂಡಾ ಹೌದು’ ( ? ) ಎಂದನು.
ಪದಾರ್ಥ (ಕ.ಗ.ಪ)
ಮಹೋದಧಿ - ಮಹಾ ಸಮುದ್ರ
ಹೊರೆ - ಕಾಪಾಡು
ಮೂಲ ...{Loading}...
ಮರಳಿ ಹೂಡಿದನಿವನು ಜಗದ್ವಿ
ಸ್ತರಣವನು ಮಾಯಾ ಮಹೋದಧಿ
ಹೊರೆದನುನ್ನತ ಸತ್ವದಲಿ ಮೇಲಾದ ಲೋಚನದ
ಉರಿಯಲದ್ದುವನಿದನು ಲೀಲಾ
ಚರಿತವಿದು ಕೃಷ್ಣಂಗೆ ನಿನ್ನಯ
ಸಿರಿಯೆ ಸಿರಿ ಬಡತನವೆ ಬಡತನವೆಂದನಾ ಮುನಿಪ ॥21॥
೦೨೨ ಅರಸ ಕೇಳ್ ...{Loading}...
ಅರಸ ಕೇಳ್ ಕಲ್ಪಾಂತದಲಿ ಬಿಡೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲನಿಧಿ ಜಲದೊಳೊಂದಾಯ್ತೇನನುಸುರುವೆನು
ಹರಿ ವಿನೋದದೊಳಾಲದೆಲೆಯಲಿ
ಸಿರಿ ಸಹಿತ ಪವಡಿಸಿದನಿನ ಶಶಿ
ಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತೆಂದ ॥22॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ಕಲ್ಪಾಂತ್ಯದಲ್ಲಿ ಬ್ರಹ್ಮಾಂಡವೇ ಒಡೆದು ಹೋಗಿ, ಹೊರಗಿನ ಆವರಣದಲ್ಲಿದ್ದ ನೀರು, ಒಳಗೆ ಹರಿದು ಬಂತು. ಇದನ್ನು ಏನೆಂದು ಹೇಳಲಿ ? ಆಗ ಶ್ರೀಹರಿಯು ಅಲದ ಎಲೆಯ ಮೇಲೆ ಲಕ್ಷ್ಮಿಯೊಂದಿಗೆ ಸೂರ್ಯಚಂದ್ರರ ಬೆಳಕಿಲ್ಲದ ಆ ಗಾಢಾಂಧಕಾರದಲ್ಲಿ, ಲೀಲೆಯಿಂದ ಮಲಗಿದ್ದನು.
ಪದಾರ್ಥ (ಕ.ಗ.ಪ)
ಜಲನಿಧಿ -ಸಮುದ್ರ
ಪವಡಿಸು - ಮಲಗು
ಮೂಲ ...{Loading}...
ಅರಸ ಕೇಳ್ ಕಲ್ಪಾಂತದಲಿ ಬಿಡೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲನಿಧಿ ಜಲದೊಳೊಂದಾಯ್ತೇನನುಸುರುವೆನು
ಹರಿ ವಿನೋದದೊಳಾಲದೆಲೆಯಲಿ
ಸಿರಿ ಸಹಿತ ಪವಡಿಸಿದನಿನ ಶಶಿ
ಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತೆಂದ ॥22॥
೦೨೩ ಈ ನೆಲನನೀ ...{Loading}...
ಈ ನೆಲನನೀ ಚಂದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೂನ ಭುವನವ ಕಾಣೆನೊಂದೇ ಸಲಿಲ ಸೃಷ್ಟಿಯಲಿ
ಏನ ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನು ಮುಳುಗುತ್ತೇಳುತಿದ್ದೆನು ರಾಯ ಕೇಳ್ ಎಂದ ॥23॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆ ಜಲಪ್ರಳಯದಲ್ಲಿ ಭೂಮಿ, ಚಂದ್ರ, ಸೂರ್ಯ, ಅಗ್ನಿ, ವಾಯು ಯಾರನ್ನು ಕೂಡಾ ನಾನು ನೋಡಲಿಲ್ಲ. ನನ್ನ ಮನಸ್ಸಿನ ಗೊಂದಲವನ್ನು ಏನೆಂದು ಹೇಳಲಿ ? ಆ ಜಲರಾಶಿಯ ತೆರೆಗಳಲ್ಲಿ ನಾನು ಮುಳುಗೇಳುತ್ತಿದ್ದೆ’ ಎಂದನು.
ಪದಾರ್ಥ (ಕ.ಗ.ಪ)
ಕೃಶಾನು -ಗ್ನಿ
ಸಮೀರಣ - ವಾಯು
ಸಲಿಲ - ನೀರು
ಮೂಲ ...{Loading}...
ಈ ನೆಲನನೀ ಚಂದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೂನ ಭುವನವ ಕಾಣೆನೊಂದೇ ಸಲಿಲ ಸೃಷ್ಟಿಯಲಿ
ಏನ ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನು ಮುಳುಗುತ್ತೇಳುತಿದ್ದೆನು ರಾಯ ಕೇಳೆಂದ ॥23॥
೦೨೪ ಹೇಳಲೇನದ ಮೃತ್ಯುವಿನ ...{Loading}...
ಹೇಳಲೇನದ ಮೃತ್ಯುವಿನ ಗೋ
ನಾಳಿಯೊಳಗಂದಿಳಿಯಲೊಲ್ಲದೆ
ಕಾಳು ಮಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ
ಬಾಲಕನೊಳವಗುಣವನಕಟಾ
ತಾಳಬಹುದೇ ತಾಯೆ ಮೃತ್ಯುವ
ತಾಳಿಗೆಯ ತೆಗೆದೆನ್ನನೊಳಕೊಳ್ಳೆಂದು ಹಲುಬಿದೆನು ॥24॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ಏನು ಹೇಳುವುದು? ಶ್ರೀಹರಿಯನ್ನು ಭಕ್ತಿಯಿಂದ ಭಜಿಸಿದ ತಪ್ಪಿನಿಂದಾಗಿ ಮೃತ್ಯು ಕೂಪದೊಳಗೆ ಇಳಿಯಲು ಸಾಧ್ಯವಾಗಲಿಲ್ಲ. ತಾಯಿ, ಈ ಮಗುವಿನಲ್ಲಿ ಏನು ದುರ್ಗುಣಗಳಿದ್ದರೂ ಸಹಿಸಿಕೋ. ಮೃತ್ಯು ನಾಲಿಗೆಯನ್ನು ಚಾಚಿ ನನ್ನನ್ನು ನುಂಗಿಬಿಡು ಎಂದು ನಾನು ಹಲುಬಿದೆನು.
ಪದಾರ್ಥ (ಕ.ಗ.ಪ)
ಗೋನಾಳಿ - ಕಂಠನಾಳ
ತಾಳಿಗೆ - ಗಂಟಲು
ಮೂಲ ...{Loading}...
ಹೇಳಲೇನದ ಮೃತ್ಯುವಿನ ಗೋ
ನಾಳಿಯೊಳಗಂದಿಳಿಯಲೊಲ್ಲದೆ
ಕಾಳು ಮಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ
ಬಾಲಕನೊಳವಗುಣವನಕಟಾ
ತಾಳಬಹುದೇ ತಾಯೆ ಮೃತ್ಯುವ
ತಾಳಿಗೆಯ ತೆಗೆದೆನ್ನನೊಳಕೊಳ್ಳೆಂದು ಹಲುಬಿದೆನು ॥24॥
೦೨೫ ನೀರು ಹೊಕ್ಕುದು ...{Loading}...
ನೀರು ಹೊಕ್ಕುದು ನೂಕಿ ವಿವಿಧ
ದ್ವಾರದಲಿ ಬೆಂಡೇಳ್ವೆನೊಮ್ಮತಿ
ದೂರ ಮುಳುಗುವೆನಡ್ಡ ಬೀಳ್ವೆನು ತೆರೆಯ ಹೊಯ್ಲಿನಲಿ
ಮಾರಿಗುಬ್ಬಸವೆನ್ನ ಮರಣವ
ನಾರು ಕಂಡರು ಹೇಸಿ ನನ್ನನು
ದೂರ ಬಿಸುಟಳು ಮೃತ್ಯು ಬಳಲಿದೆ ನಿಂತು ಹಲಕಾಲ ॥25॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಿವಿಧ ರಂಧ್ರಗಳಲ್ಲಿ ನೀರು ಒಳಹೊಕ್ಕಿತು. ತೆರೆಯ ರಭಸದಲ್ಲಿ ಒಮ್ಮೆ ಬೆಂಡಿನಂತೆ ತೇಲಾಡಿ, ಮತ್ತೊಮ್ಮೆ ದೂರಕ್ಕೆ ಎಸೆಯಲ್ಪಟ್ಟು ಮುಳುಗಿದೆ. ಒಮ್ಮೆ ಅಡ್ಡ ಬಿದ್ದೆ. ಮಾರಿಗೆ ಉಬ್ಬಸ ಬಂದಂತೆ ಈ ಪರಿಸ್ಥಿತಿಯಲ್ಲಿದ್ದ ನನ್ನನ್ನು ಮೃತ್ಯು ಹೇಸಿ ಬಿಸಾಡಿದಳು. ಹೀಗೆ ಅನೇಕ ಕಾಲ ಪರ್ಯಂತ ನಾನು ಬಳಲಿದೆ.
ಮೂಲ ...{Loading}...
ನೀರು ಹೊಕ್ಕುದು ನೂಕಿ ವಿವಿಧ
ದ್ವಾರದಲಿ ಬೆಂಡೇಳ್ವೆನೊಮ್ಮತಿ
ದೂರ ಮುಳುಗುವೆನಡ್ಡ ಬೀಳ್ವೆನು ತೆರೆಯ ಹೊಯ್ಲಿನಲಿ
ಮಾರಿಗುಬ್ಬಸವೆನ್ನ ಮರಣವ
ನಾರು ಕಂಡರು ಹೇಸಿ ನನ್ನನು
ದೂರ ಬಿಸುಟಳು ಮೃತ್ಯು ಬಳಲಿದೆ ನಿಂತು ಹಲಕಾಲ ॥25॥
೦೨೬ ಮುಳುಗುತೇಳುತ ಬರುತ ...{Loading}...
ಮುಳುಗುತೇಳುತ ಬರುತ ವಟ ಕುಜ
ದೆಲೆಯಲೀತನ ಕಂಡೆನೈ ನಾ
ನೆಳತಟಕೆ ಬಿದ್ದಂತೆ ತೆರೆಯೆಡತರಕೆ ತನಿಗೆಡೆದು
ಜಲಜಸಂಭವನಾ ಜಲವ ಮು
ಕ್ಕುಳಿಸುತುಗುಳುತ ನಾಲ್ಕು ಮುಖದಲಿ
ನಿಲುಕಿ ನಿಗುರುತ ನಿಲುತ ಬಂದನು ಕಂಡನೀ ಹರಿಯ ॥26॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮುಳುಗಿ ಏಳುತ್ತಾ ಬರುತ್ತಿರಲು, ವಟಪತ್ರದಲ್ಲಿ ಇವನನ್ನು ನೋಡಿದೆ. ನಾನು ನೀರ ತೆರೆಗೆ ಸಿಲುಕಿ ಬಿದ್ದೆ. ಆಗ ಬ್ರಹ್ಮದೇವನು ನೀರನ್ನು ನಾಲ್ಕು ಮುಖಗಳಿಂದಲೂ ಮುಕ್ಕಳಿಸುತ್ತಾ ಬಂದು ಇವನನ್ನು ನೋಡಿದನು.
ಪದಾರ್ಥ (ಕ.ಗ.ಪ)
ವಟಪತ್ರ - ಆಲದ ಮರ
ಮೂಲ ...{Loading}...
ಮುಳುಗುತೇಳುತ ಬರುತ ವಟ ಕುಜ
ದೆಲೆಯಲೀತನ ಕಂಡೆನೈ ನಾ
ನೆಳತಟಕೆ ಬಿದ್ದಂತೆ ತೆರೆಯೆಡತರಕೆ ತನಿಗೆಡೆದು
ಜಲಜಸಂಭವನಾ ಜಲವ ಮು
ಕ್ಕುಳಿಸುತುಗುಳುತ ನಾಲ್ಕು ಮುಖದಲಿ
ನಿಲುಕಿ ನಿಗುರುತ ನಿಲುತ ಬಂದನು ಕಂಡನೀ ಹರಿಯ ॥26॥
೦೨೭ ಆರು ನೀನೆನುತಾತನೀತನ ...{Loading}...
ಆರು ನೀನೆನುತಾತನೀತನ
ಸಾರಿದನು ಬೆಸಗೊಳಲು ಜಗದಾ
ಧಾರಕನು ಜಗದುದರ ಹರಿ ತಾನೆಂದೊಡಜ ನಗುತ
ಭೂರಿ ಜಗವೆನ್ನುದರದಲಿ ನೀ
ನಾರು ಜಗಕೆಂದೆನುತ ಗರುವ ವಿ
ಕಾರದಲಿ ಪರಮೇಷ್ಠಿ ನಿಜತೇಜನಪಚಾರಿಸಿದ ॥27॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನೀನು ಯಾರು ? ಎಂದು ಅವನು ಹರಿಯನ್ನು ಕೇಳಲು, ‘ನಾನು ಜಗದ ಆಧಾರ ಪುರುಷನಾದ ನಾರಾಯಣ’ ಎಂದು ಹೇಳಿದನು. ಇದಕ್ಕೆ ಬ್ರಹ್ಮನು ನಗುತ್ತಾ ‘ಸಮಸ್ತ ಲೋಕಗಳೇ ನನ್ನ ಹೊಟ್ಟೆಯಲ್ಲಿರುವಾಗ ನೀನು ಜಗದಾಧಾರ ಹೇಗೆ’ ಎಂದು ಹರಿಯನ್ನು ಪ್ರಶ್ನಿಸಿದನು.
ಪದಾರ್ಥ (ಕ.ಗ.ಪ)
ಪಚಾರಿಸು - ಲೇವಡಿ ಮಾಡು, ಹೀಯಳಿಸು
ಪರಮೇಷ್ಠಿ - ಬ್ರಹ್ಮ
ಭೂರಿ - ವಿಸ್ತಾರವಾದ
ಮೂಲ ...{Loading}...
ಆರು ನೀನೆನುತಾತನೀತನ
ಸಾರಿದನು ಬೆಸಗೊಳಲು ಜಗದಾ
ಧಾರಕನು ಜಗದುದರ ಹರಿ ತಾನೆಂದೊಡಜ ನಗುತ
ಭೂರಿ ಜಗವೆನ್ನುದರದಲಿ ನೀ
ನಾರು ಜಗಕೆಂದೆನುತ ಗರುವ ವಿ
ಕಾರದಲಿ ಪರಮೇಷ್ಠಿ ನಿಜತೇಜನಪಚಾರಿಸಿದ ॥27॥
೦೨೮ ಆದುವೇ ನಿನ್ನುದರದಲಿ ...{Loading}...
ಆದುವೇ ನಿನ್ನುದರದಲಿ ಜಗ
ವಾದೊಡೀಕ್ಷಿಪೆನೆನುತಲೀ ಕಮ
ಲೋದರನು ಕಮಲಜನ ಜಠರವ ಹೊಕ್ಕು ಹೊರವಂಟು
ಭೇದಿಸಿದೆ ನಾನೆನ್ನ ಜಠರದೊ
ಳಾದ ಲೋಕವನೆಣಿಸಿ ಬಾಯೆನ
ಲಾ ದುರಾಗ್ರಹಿಯಿಳಿದನಸುರಾಂತಕನ ಜಠರದಲಿ ॥28॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ಉದರದಲ್ಲಿ ಲೋಕಗಳಿವೆಯೇ ? ನಾನು ಅದನ್ನು ಪರೀಕ್ಷಿಸುತ್ತೇನೆ ’ ಎಂದು ಹರಿಯು ಬ್ರಹ್ಮನ ಜಠರವನ್ನು ಪ್ರವೇಶಿಸಿ ಹೊರಗೆ ಬಂದನು. ‘ನಿನ್ನನ್ನು ಭೇದಿಸಿದೆನು. ಈಗ ನೀನು ನನ್ನ ಉದರವನ್ನು ಹೊಕ್ಕು ಲೋಕಗಳನ್ನು ಲೆಕ್ಕ ಹಾಕಿ ಬಾ’ ಎಂದು ಹರಿಯು ಹೇಳಲು, ಬ್ರಹ್ಮನು ಹರಿಯ ಉದರವನ್ನು ಹೊಕ್ಕನು.
ಪದಾರ್ಥ (ಕ.ಗ.ಪ)
ಈಕ್ಷಿಸು - ನೋಡು
ಅಸುರಾಂತಕ - ವಿಷ್ಣು
ಮೂಲ ...{Loading}...
ಆದುವೇ ನಿನ್ನುದರದಲಿ ಜಗ
ವಾದೊಡೀಕ್ಷಿಪೆನೆನುತಲೀ ಕಮ
ಲೋದರನು ಕಮಲಜನ ಜಠರವ ಹೊಕ್ಕು ಹೊರವಂಟು
ಭೇದಿಸಿದೆ ನಾನೆನ್ನ ಜಠರದೊ
ಳಾದ ಲೋಕವನೆಣಿಸಿ ಬಾಯೆನ
ಲಾ ದುರಾಗ್ರಹಿಯಿಳಿದನಸುರಾಂತಕನ ಜಠರದಲಿ ॥28॥
೦೨೯ ಹೊಲಬುದಪ್ಪಿದನಲ್ಲಿ ಭುವನಾ ...{Loading}...
ಹೊಲಬುದಪ್ಪಿದನಲ್ಲಿ ಭುವನಾ
ವಳಿಗಳಿದ್ದವು ಕೋಟಿ ರುದ್ರಾ
ವಳಿಗಳಿದ್ದರು ಕೋಟಿ ಪರಮೇಷ್ಠಿಗಳು ಶತಕೋಟಿ
ಹುಲು ನೊರಜು ಸಾಗರದ ಸಲಿಲವ
ನಳೆವವೊಲು ನೊಣ ಹಾರಿ ಗಗನದ
ತಲೆಗಡೆಯ ಕಾಣಿಸುವದೆಂಬವೊಲಾಯ್ತು ಕೇಳ್ ಎಂದ ॥29॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿ ಅವನು ದಾರಿ ತಪ್ಪಿ ಕೋಟಿ ಸಂಖ್ಯೆಯ ಲೋಕಗಳನ್ನು ಕೋಟಿ ಸಂಖ್ಯೆಯ ರುದ್ರ-ಬ್ರಹ್ಮರನ್ನೂ ಕಂಡನು. ಹುಲ್ಲು ಕಡ್ಡಿಯೊಂದು ಸಮುದ್ರದ ನೀರನ್ನು ಅಳೆಯುವಂತೆ, ನೊಣವೊಂದು ಗಗನದ ಮೇಲ್ತುದಿಯನ್ನು ಕಾಣಹೋದಂತೆ ಅವನ ಪರಿಯಾಯ್ತು.
ಪದಾರ್ಥ (ಕ.ಗ.ಪ)
ಹೊಲಬು - ದಾರಿ
ನೊರಜು - ಸೊಳ್ಳೆ
ಮೂಲ ...{Loading}...
ಹೊಲಬುದಪ್ಪಿದನಲ್ಲಿ ಭುವನಾ
ವಳಿಗಳಿದ್ದವು ಕೋಟಿ ರುದ್ರಾ
ವಳಿಗಳಿದ್ದರು ಕೋಟಿ ಪರಮೇಷ್ಠಿಗಳು ಶತಕೋಟಿ
ಹುಲು ನೊರಜು ಸಾಗರದ ಸಲಿಲವ
ನಳೆವವೊಲು ನೊಣ ಹಾರಿ ಗಗನದ
ತಲೆಗಡೆಯ ಕಾಣಿಸುವದೆಂಬವೊಲಾಯ್ತು ಕೇಳೆಂದ ॥29॥
೦೩೦ ಹಲವು ಯುಗ ...{Loading}...
ಹಲವು ಯುಗ ಪರಿಯಂತರಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದಸಹಸ್ರ ಸೂಕ್ತದಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿಂಚಿಗೆ
ನಳಿನಸಂಭವನೆಂಬ ಹೆಸರಾಯ್ತಂದು ಮೊದಲಾಗಿ ॥30॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹೀಗೆ ಅವನು ಅನೇಕ ಯುಗಗಳ ಪರ್ಯಂತ ಅಲ್ಲಿಯೇ ತೊಳಲಾಡುತ್ತಿದ್ದು, ಕೊನೆಗೆ ದಯಾಮಯಿಯಾದ ಶ್ರೀಹರಿಯನ್ನು ವೇದಮಂತ್ರಗಳಿಂದ ಹೊಗಳಿದನು. ಅನಂತರ ಹರಿಯ ದಯೆಯಿಂದ, ಬ್ರಹ್ಮನು ಭಗವಂತನ ನಾಭೀಕಮಲದ ನಾಳದಿಂದ ಹೊರಗೆ ಬಂದನು. ಹೀಗೆ ಅಂದಿನಿಂದ ಅವನಿಗೆ ಜಲಜಸಂಭವನೆಂಬ ಹೆಸರಾಯ್ತು.
ಪದಾರ್ಥ (ಕ.ಗ.ಪ)
ನಾಭಿ - ಹೊಕ್ಕಳು
ನಳಿನ - ತಾವರೆ
ಸೂಕ್ತ - ವೇದದಲ್ಲಿಯ ಸ್ತೋತ್ರಭಾಗ
ವಿರಿಂಚಿ - ಬ್ರಹ್ಮ
ಮೂಲ ...{Loading}...
ಹಲವು ಯುಗ ಪರಿಯಂತರಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದಸಹಸ್ರ ಸೂಕ್ತದಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿಂಚಿಗೆ
ನಳಿನಸಂಭವನೆಂಬ ಹೆಸರಾಯ್ತಂದು ಮೊದಲಾಗಿ ॥30॥
೦೩೧ ಆ ಮಹಾ ...{Loading}...
ಆ ಮಹಾ ಜಲಕಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾ ಮರುತ್ತಿನಲಾ ಬಹಳ ಬಹಿರಾವರಣ ಪವನ
ವ್ಯೋಮದಲಿ ತದಹಮ್ಮಹತ್ತು ವಿ
ರಾಮವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ ॥31॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಂತರ ಆ ಮಹಾಜಲರಾಶಿಯು ಅಗ್ನಿಯಲ್ಲಿ ಅಡಗಿತು. ಆ ಅಗ್ನಿಯು ವಾಯುವಿನಲ್ಲಿ ಅಡಗಿತು. ವಾಯುವು ಆಕಾಶದಲ್ಲಿ ಮತ್ತು ಅಹಂ ಹಾಗೂ ಮಹತ್ ತತ್ತ್ವಗಳು ಪ್ರಕೃತಿಯಲ್ಲಿ ಐಕ್ಯವಾಗುತ್ತವೆ. ಮಾಯೆಯು ಭಗವಂತನಲ್ಲಿ ಐಕ್ಯಗೊಳ್ಳುತ್ತಾಳೆ.
ಪಾಠಾನ್ತರ (ಕ.ಗ.ಪ)
ಜಮದಗ್ನಿ - ಜಲಕಗ್ನಿ
ಅರಣ್ಯ ಪರ್ವ,ಮೈ.ವಿ.ವಿ.
ಮೂಲ ...{Loading}...
ಆ ಮಹಾ ಜಲಕಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾ ಮರುತ್ತಿನಲಾ ಬಹಳ ಬಹಿರಾವರಣ ಪವನ
ವ್ಯೋಮದಲಿ ತದಹಮ್ಮಹತ್ತು ವಿ
ರಾಮವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ ॥31॥
೦೩೨ ಏಸು ದಿನವೀ ...{Loading}...
ಏಸು ದಿನವೀ ಜಗದ ಬಾಳುವೆ
ಯೇಸು ದಿನವೀ ಪ್ರಳಯಮಯ ಪರಿ
ಭಾಸಮಾನ ಬ್ರಹ್ಮತೇಜೋರೂಪವೇಸು ದಿನ
ಆ ಸದಾನಂದೈಕ ರಸಕೆ ಪ
ರಾಸಿತಾವಿದ್ಯಾಪ್ರಪಂಚವಿ
ಲಾಸವಾಯ್ತು ವಿಭಾಗಸೃಷ್ಟಿವಿಧಾನಚಿಂತೆಯಲಿ ॥32॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಜಗತ್ತಿನ ಆಯುರ್ಮಾನ ಎಷ್ಟು ದಿನ ? ಈ ಪ್ರಳಯ ಎಷ್ಟು ದಿನ ? ಬ್ರಹ್ಮನ ತೇಜೋಮಯ ಸ್ವರೂಪ ಎಷ್ಟು ದಿನ ? ಆ ಪರಬ್ರಹ್ಮ ಸದಾನಂದದ ಅಖಂಡ ಲೀಲೆಗೆ ಅವಿದ್ಯಾಪ್ರಪಂಚದ ಮೋಹವು ನಿರಾಕರಿಸಲ್ಪಟ್ಟಿತು.
ಟಿಪ್ಪನೀ (ಕ.ಗ.ಪ)
ಅವಿದ್ಯೆ : ವಿದ್ಯೆಯಲ್ಲದ್ದು ಅವಿದ್ಯೆ ಅಜ್ಞಾನ ಎಂದರೆ ತಿಳಿಯದಿರುವುದು. ತಿಳಿಯದಿರುವುದರಿಂದ ತಪ್ಪು ತಿಳಿವಳಿಕೆ ಹುಟ್ಟುತ್ತದೆ. ಇದು ಸಾಮಾನ್ಯ ಅರ್ಥ. ಅದ್ವೈತದಲ್ಲಿ ಇದಕ್ಕೆ ವಿಶೇಷ ಅರ್ಥವಿದೆ. ಅವಿದ್ಯೆ ಬರಿಯ ಅಜ್ಞಾನವಲ್ಲ, ಈ ಲೋಕಕ್ಕೇ ಕಾರಣಭೂತವಾದುದು. ಅಂದರೆ ಈ ಲೋಕ ಲೋಕಸ್ವರೂಪವಾಗಿ ಇರುವುದು ಇದರ ದೆಸೆಯಿಂದ. ಇದಕ್ಕೆ ಎರಡು ಶಕ್ತಿಗಳಿವೆ. ಸದಾ ಇರುವುದನ್ನು ಮರೆ ಮಾಡುವುದು, ಸದಾ ಇಲ್ಲದ್ದನ್ನು ಇರುವಂತೆ ತೋರಿಸುತ್ತದೆ. ಇದಕ್ಕೆ ಮಾಯಾಶಕ್ತಿಯೆಂದು ಹೆಸರು. ಮಾಯೆ ಈಶ್ವರನಲ್ಲಿರುವ, ಈಶ್ವರನಿಗೆ ಸೇರಿದ ಶಕ್ತಿ. ಅದು ಅವನ ಶಕ್ತಿಯೇ ಆದುದರಿಂದ ಅವನನ್ನು ಮೋಸಗೊಳಿಸಲಾರದು. ಈ ಮಾಯಾಶಕ್ತಿಯಿಂದ ಈ ವಿಶ್ವ ಹುಟ್ಟಿದೆ. ವಿಶ್ವವ್ಯಾಪಾರವೆಲ್ಲ ಮಾಯಾಜಾಲದ ಒಂದು ಭಾಗ. ಈ ಮಾಯಾಶಕ್ತಿ ಮೂಲಾವಿದ್ಯೆ. ಇದು ಒಂದಾಗಿದೆ. ಇದು ಅವ್ಯಕ್ತ. ಇದು ವ್ಯಕ್ತವಾಗಿ ಒಂದೊಂದು ವಸ್ತುವಿನಲ್ಲೂ ಮುಖ್ಯವಾಗಿ ಒಂದೊಂದು ವ್ಯಕ್ತಿಯಲ್ಲೂ ಅದಕ್ಕೆ ಸೇರಿದಂತೆ, ಅದು ಬೇರೆಯಾಗಿ ತೋರುವಂತೆ ನಡೆಸುವುದು-ತೂಲಾವಿದ್ಯೆ. ಮೂಲಾವಿದ್ಯೆ ಈಶ್ವರನನ್ನು ಬಾಧಿಸುವುದಿಲ್ಲ, ಏಕೆಂದರೆ ಅದು ಅವನಲ್ಲಿಯೇ ಅವನಿಗೆ ಅರಿಯದಂತೆ ಇದೆ. ಆದರೆ ಜೀವರಾದ ಮನುಷ್ಯರಿಗೆ ಅದು ಬೇರೆಯಾದದ್ದು. ಅದು ಅವರ ಸಮ್ಮುಖದಲ್ಲಿಲ್ಲ. ಅವರಲ್ಲಿ ಅವಿತುಕೊಂಡು ಅವರ ತಪ್ಪುತಿಳಿವಳಿಕೆಗೆ ಕಾರಣವಾಗಿದೆ. ಅದು ಅವರನ್ನು ಬಾಧಿಸುತ್ತದೆ. ಅದು ಮಾಯಾಸ್ವರೂಪವೆಂದು ತಿಳಿದಾಗ ಅವರ ಬಾಧೆ ಹರಿಯುತ್ತದೆ.
ಮೂಲ ...{Loading}...
ಏಸು ದಿನವೀ ಜಗದ ಬಾಳುವೆ
ಯೇಸು ದಿನವೀ ಪ್ರಳಯಮಯ ಪರಿ
ಭಾಸಮಾನ ಬ್ರಹ್ಮತೇಜೋರೂಪವೇಸು ದಿನ
ಆ ಸದಾನಂದೈಕ ರಸಕೆ ಪ
ರಾಸಿತಾವಿದ್ಯಾಪ್ರಪಂಚವಿ
ಲಾಸವಾಯ್ತು ವಿಭಾಗಸೃಷ್ಟಿವಿಧಾನಚಿಂತೆಯಲಿ ॥32॥
೦೩೩ ಏಕಮೇವಾದ್ವಿತಿಯಮೆಮ್ಬ ನಿ ...{Loading}...
ಏಕಮೇವಾದ್ವಿತಿಯಮೆಂಬ ನಿ
ರಾಕುಳಿತ ತೇಜೋನಿಧಿಗೆ ಮಾ
ಯಾ ಕಳತ್ರದೊಳಾಯ್ತು ನಿಜಗುಣ ಭೇದವವರಿಂದ
ಆ ಕಮಲಭವನೀ ಮುಕುಂದ ಪಿ
ನಾಕಿಯೆಂಬಭಿಧಾನದೊಳ್ ತ್ರಿಗು
ಣಾಕೃತಿಯ ಕೈಕೊಂಡನುರು ಲೀಲಾ ವಿನೋದದಲಿ ॥33॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಏಕಮೇವಾದ್ವಿತೀಯವಾದ ಈ ಭಗವತ್ ಶಕ್ತಿಗೆ ಮಾಯಾದೇವಿಯ ಸಂಗದಿಂದ ಮೂರುಗುಣ ಸ್ವರೂಪವುಂಟಾಗಿ, ಬ್ರಹ್ಮ ,ವಿಷ್ಣು ಶಿವರೆಂಬ ಮೂರು ಮೂರ್ತಿಗಳು ಲೀಲಾ ವಿನೋದದಿಂದ ಉಂಟಾದರು.
ಪದಾರ್ಥ (ಕ.ಗ.ಪ)
ಕಳತ್ರ -ಪತ್ನಿ
ಕಮಲಭವ - ಬ್ರಹ್ಮ
ಪಿನಾಕಿ -ಈಶ್ವರ
ಟಿಪ್ಪನೀ (ಕ.ಗ.ಪ)
ಮೂರುಗುಣ - ರಜೋಗುಣ, ತಮೋಗುಣ, ಸತ್ವಗುಣ
ಮೂಲ ...{Loading}...
ಏಕಮೇವಾದ್ವಿತಿಯಮೆಂಬ ನಿ
ರಾಕುಳಿತ ತೇಜೋನಿಧಿಗೆ ಮಾ
ಯಾ ಕಳತ್ರದೊಳಾಯ್ತು ನಿಜಗುಣ ಭೇದವವರಿಂದ
ಆ ಕಮಲಭವನೀ ಮುಕುಂದ ಪಿ
ನಾಕಿಯೆಂಬಭಿಧಾನದೊಳ್ ತ್ರಿಗು
ಣಾಕೃತಿಯ ಕೈಕೊಂಡನುರು ಲೀಲಾ ವಿನೋದದಲಿ ॥33॥
೦೩೪ ಆ ರಜೋಗುಣಕಬುಜಭವನಧಿ ...{Loading}...
ಆ ರಜೋಗುಣಕಬುಜಭವನಧಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನು ಶತರೂಪಾಭಿಧಾನದಲಿ
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನು ಭುವನವಿಭುವಾಗಿ ॥34॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ರಜೋಗುಣಕ್ಕೆ ಬ್ರಹ್ಮನು ಅಧಿಕಾರಿಯಾಗಿ, ತನ್ನ ದೇಹಾರ್ಧವನ್ನೇ ಸ್ತ್ರೀರೂಪವನ್ನಾಗಿ ಮಾಡಿ ಶತರೂಪೆ ಎಂಬ ಹೆಸರಿಟ್ಟನು. ಉಳಿದರ್ಧ ದೇಹವನ್ನು ಮನುವನ್ನಾಗಿ ಮಾಡಿ ಸಕಲ ಧರ್ಮಸಾರವನ್ನು ಅವನಿಗೆ ತಿಳಿಯ ಹೇಳಿ ಲೋಕಾಧಿಪತಿಯನ್ನಾಗಿ ಮಾಡಿದನು.
ಪದಾರ್ಥ (ಕ.ಗ.ಪ)
ಅಬುಜಭವ - ಬ್ರಹ್ಮ
ಮೂಲ ...{Loading}...
ಆ ರಜೋಗುಣಕಬುಜಭವನಧಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನು ಶತರೂಪಾಭಿಧಾನದಲಿ
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನು ಭುವನವಿಭುವಾಗಿ ॥34॥
೦೩೫ ಭೃಗು ಪುಲಸ್ತ್ಯ ...{Loading}...
ಭೃಗು ಪುಲಸ್ತ್ಯ ವಸಿಷ್ಠ ದಕ್ಷಾ
ದಿಗಳೆನಿಪ್ಪ ನವವ್ರಜೇಶ್ವರ
ರೊಗುಮಿಗೆಯ ಮಾಡಿದನು ಸೃಷ್ಟಿಗೆ ಬೇರೆ ಬೇರವರ
ಜಗದ ಜೋಡಣೆಯಾಯ್ತು ಭೂತಾ
ಳಿಗೆ ಚತುರ್ವಿಧ ಸೃಷ್ಟಿಯೊಡ್ಡಣೆ
ನಿಗಮ ಮತದಲಿ ಹೂಡಿತವನೀಪಾಲ ಕೇಳ್ ಎಂದ ॥35॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೃಗು, ಪುಲಸ್ತ್ಯ, ವಸಿಷ್ಠ, ದಕ್ಷರೇ ಮೊದಲಾಗಿ ಒಂಬತ್ತು ಜನರನ್ನು ಪ್ರಜಾಪತಿಗಳನ್ನಾಗಿ ಮಾಡಿ ಬೇರೆ ಬೇರೆ ಸೃಷ್ಟಿಗಳಿಗೆ ನಿಯೋಜಿಸಿದನು. ಮುಂದೆ ಸ್ವೇದಜ, ಅಂಡಜ, ಜರಾಯುಜ ಮತ್ತು ಉದ್ಬಿಜ್ಜ ಎಂಬ ನಾಲ್ಕು ಬಗೆಯ ಜೀವಗಳು ಉತ್ಪತ್ತಿಯಾದವು.
ಮೂಲ ...{Loading}...
ಭೃಗು ಪುಲಸ್ತ್ಯ ವಸಿಷ್ಠ ದಕ್ಷಾ
ದಿಗಳೆನಿಪ್ಪ ನವವ್ರಜೇಶ್ವರ
ರೊಗುಮಿಗೆಯ ಮಾಡಿದನು ಸೃಷ್ಟಿಗೆ ಬೇರೆ ಬೇರವರ
ಜಗದ ಜೋಡಣೆಯಾಯ್ತು ಭೂತಾ
ಳಿಗೆ ಚತುರ್ವಿಧ ಸೃಷ್ಟಿಯೊಡ್ಡಣೆ
ನಿಗಮ ಮತದಲಿ ಹೂಡಿತವನೀಪಾಲ ಕೇಳೆಂದ ॥35॥
೦೩೬ ಆದಿಯಲಿ ಕೃತಯುಗ ...{Loading}...
ಆದಿಯಲಿ ಕೃತಯುಗ ಹರಿಶ್ಚಂ
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ
ಮೇದಿನಿಯನಾ ಯುಗದಲವರೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಮಿಗಿಲಾಗಿ ॥36॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೊದಲಿಗೆ ಕೃತಯುಗವುಂಟಾಗಿ ಅದರಲ್ಲಿ ಸೂರ್ಯವಂಶದಲ್ಲಿ ಹರಿಶ್ಚಂದ್ರರೇ ಮೊದಲಾದವರು, ಚಂದ್ರವಂಶದಲ್ಲಿ ಬುಧಪುರೂರವಾದಿಗಳು ಉದಿಸಿದರು. ಆ ಯುಗದಲ್ಲಿ ಭೂಮಿಯನ್ನು ಯಾರೂ ಅವರಂತೆ ಪಾಲಿಸಲಿಲ್ಲ. ವೇದ ಧರ್ಮವು ಸೂರ್ಯ ತೇಜಕ್ಕೂ ಮಿಗಿಲಾಗಿ ಬೆಳಗಿತು.
ಪದಾರ್ಥ (ಕ.ಗ.ಪ)
ಅನ್ವಯ - ವಂಶ
ಟಿಪ್ಪನೀ (ಕ.ಗ.ಪ)
ಪುರೂರವ - ಪುರೂರವ ಷೋಡಶ ಪ್ರಾಚೀನ ಚಕ್ರವರ್ತಿಗಳಲ್ಲಿ ಒಬ್ಬನೆಂದು ಪ್ರಕೀರ್ತಿತನಾಗಿದ್ದಾನೆ. ಇಳಾ ಮತ್ತು ಬುಧರ ಮಗ ಇವನು. ಇಳಾ ಇವನಿಗೆ ತಂದೆ-ತಾಯಿ ಎರಡೂ ಆಗಿ ನೋಡಿಕೊಂಡಳಂತೆ. ಪುರೂರವನಿಗೆ ಹದಿಮೂರು ದ್ವೀಪಗಳ ಒಡೆತನವಿತ್ತು. ಒಮ್ಮೆ ಇವನು ಒಬ್ಬ ಸಾಧುವಿನ ಸಂಪತ್ತನ್ನು ಅಪಹರಿಸಿದನಂತೆ. ಇದು ಸರಿಯಲ್ಲವೆಂದು ಯಾರು ಹೇಳಿದರೂ ದರ್ಪದಿಂದ ತಿರಸ್ಕರಿಸುತ್ತಿದ್ದ. ಸ್ವತಃ ದೇವಲೋಕದ ಸನತ್ಕುಮಾರನೇ ಬಂದು ಹಿತವಚನವನ್ನು ಹೇಳಿದರೂ ಲಕ್ಷಿಸದೆ ಮಹರ್ಷಿಗಳ ಶಾಪಕ್ಕೆ ಗುರಿಯಾದ. ಪುರೂರವನ ಒಂದು ದೊಡ್ಡ ಸಾಧನೆ ದೇವ-ಮಾನವ ಲೋಕಗಳ ಮಧ್ಯೆ ಮಧುರಸಂಬಂದವನ್ನು ಸ್ಥಾಪಿಸಿದ್ದು ಮತ್ತು ಯಾಗಕಾರ್ಯಕ್ಕೆ ಗಂಧರ್ವಲೋಕದಿಂದ ಅಗ್ನಿಗಳನ್ನು ತಂದದ್ದು. ಇವನು ಮತ್ರ್ಯನಾದರೂ ಅಮತ್ರ್ಯರೇ ಇವನ ಸುತ್ತ ಇರುತ್ತಿದ್ದರು.
ಮೂಲ ...{Loading}...
ಆದಿಯಲಿ ಕೃತಯುಗ ಹರಿಶ್ಚಂ
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ
ಮೇದಿನಿಯನಾ ಯುಗದಲವರೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಮಿಗಿಲಾಗಿ ॥36॥
೦೩೭ ಆ ಯುಗದ ...{Loading}...
ಆ ಯುಗದ ತರುವಾಯಲಾ ತ್ರೇ
ತಾಯುಗವಲೇ ಬಳಿಕ ಧರ್ಮದ ಲಾ
ಯದಲಿ ಕಟ್ಟಿದರಧರ್ಮವನೊಂದು ಪಾದದಲಿ
ರಾಯ ಕೇಳೈ ದ್ವಾಪರದಲಿ ದೃ
ಢಾಯದಲಿ ತಾ ಧರ್ಮವೆರಡಡಿ
ಬೀಯವಾದುದು ನಿಂದುದೆನಿಸಿತು ನಿನ್ನ ದೆಸೆಯಿಂದ ॥37॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ ತ್ರೇತಾಯುಗದಲ್ಲಿ ಧರ್ಮದ ಮನೆಯಲ್ಲಿ ಅಧರ್ಮದ ಒಂದು ಪಾದವು ಕಾಣಿಸಿತು. ಮೂರನೆಯ ದ್ವಾಪರದಲ್ಲಿ ಧರ್ಮವು ಎರಡು ಪಾದಗಳಲ್ಲಿ ಮಾತ್ರ ನಿಂತು ಅಧರ್ಮಕ್ಕೆ ಆಸ್ಪದವಿತ್ತಿತು.
ಮೂಲ ...{Loading}...
ಆ ಯುಗದ ತರುವಾಯಲಾ ತ್ರೇ
ತಾಯುಗವಲೇ ಬಳಿಕ ಧರ್ಮದ ಲಾ
ಯದಲಿ ಕಟ್ಟಿದರಧರ್ಮವನೊಂದು ಪಾದದಲಿ
ರಾಯ ಕೇಳೈ ದ್ವಾಪರದಲಿ ದೃ
ಢಾಯದಲಿ ತಾ ಧರ್ಮವೆರಡಡಿ
ಬೀಯವಾದುದು ನಿಂದುದೆನಿಸಿತು ನಿನ್ನ ದೆಸೆಯಿಂದ ॥37॥
೦೩೮ ಕಲಿಯ ರಾಜ್ಯದಲೊನ್ದು ...{Loading}...
ಕಲಿಯ ರಾಜ್ಯದಲೊಂದು ಪಾದದ
ಸಲುಗೆ ಧರ್ಮಕ್ಕಹುದು ಗಡ ವೆ
ಗ್ಗಳೆಯವದರೊಳಸತ್ಯ ಧರ್ಮದ್ರೋಹ ಮಾತ್ಸರ್ಯ
ಕಳವು ಹಿಂಸೆಯನೀತಿ ಲೋಭ
ಸ್ಖಲಿತವಾರಡಿ ಠಕ್ಕು ವಂಚನೆ
ಹಳಿವು ಹಾದರಗವತೆಯೆಂಬಿವರುಬ್ಬು ಹಿರಿದೆಂದ ॥38॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಯುಗದಲ್ಲಿ ಧರ್ಮಕ್ಕೆ ಒಂದೇ ಪಾದ ಉಂಟಾಗುವುದು ಅಸತ್ಯ, ಧರ್ಮದ್ರೋಹ, ಮಾತ್ಸರ್ಯ, ಕಳವು, ಹಿಂಸೆ, ಅನೀತಿ, ಲೋಭ, ಕಪಟ, ವಂಚನೆ, ನಿಂದೆ, ಹಾದರ ಇತ್ಯಾದಿಗಳು ಉಬ್ಬಿ ಮೆರೆಯುತ್ತವೆ.
ಪದಾರ್ಥ (ಕ.ಗ.ಪ)
ವೆಗ್ಗಳೆಯವು -ಉತ್ತಮವಾದವು
ಸ್ಖಲಿತ - ಜಾರಿದ, ತಪ್ಪಾದ
ಆರಡಿ - ಹಿಂಸೆ ಆಟ
ಕವತೆ -ಸುಲಿಗೆ, ಹಿಂಸೆ
ಟಿಪ್ಪನೀ (ಕ.ಗ.ಪ)
ಪಾದ - ಧರ್ಮವು ನಲ್ಕು ಪಾದಗಳನ್ನು ಊರಿ ನಿಲ್ಲುತ್ತದೆ. ಆದರೆ ಕಲಿಯುಗದಲ್ಲಿ ಅದು ಒಂದೇ ಪಾದದಲ್ಲಿ ನಿಂತಿರುತ್ತದೆ.
ಮೂಲ ...{Loading}...
ಕಲಿಯ ರಾಜ್ಯದಲೊಂದು ಪಾದದ
ಸಲುಗೆ ಧರ್ಮಕ್ಕಹುದು ಗಡ ವೆ
ಗ್ಗಳೆಯವದರೊಳಸತ್ಯ ಧರ್ಮದ್ರೋಹ ಮಾತ್ಸರ್ಯ
ಕಳವು ಹಿಂಸೆಯನೀತಿ ಲೋಭ
ಸ್ಖಲಿತವಾರಡಿ ಠಕ್ಕು ವಂಚನೆ
ಹಳಿವು ಹಾದರಗವತೆಯೆಂಬಿವರುಬ್ಬು ಹಿರಿದೆಂದ ॥38॥
೦೩೯ ಈಯಧರ್ಮವ ಪತಿಕರಿಸಿ ...{Loading}...
ಈಯಧರ್ಮವ ಪತಿಕರಿಸಿ ತ
ನ್ನಾಯತಕೆ ಭೂತಳವ ತಂದು ನಿ
ರಾಯಸದಲೇ ಬಳಸುತಿರ್ದನು ದುಂದುವೆಂಬಸುರ
ರಾಯ ಕೇಳಾ ದೈತ್ಯನನು ತ
ನ್ನಾಯಧಕೆ ಬಲಿಗೊಟ್ಟು ಬಳಿಕ
ಸ್ಥಾಯಿ ಧರ್ಮವ ಬಲಿದು ಕೊಟ್ಟನು ದುಂದುಮಾರನೃಪ ॥39॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇಂತಹ ಅಧರ್ಮವನ್ನೇ ಹಿಡಿದು ಭೂಮಿಯನ್ನು ತನ್ನ ಅಧಿಕಾರಕ್ಕೆ ಒಳಪಡಿಸಿ ದುಂದುನಾಮಕ ರಾಕ್ಷಸನು ಮೆರೆಯುತ್ತಿದ್ದನು. ಆ ರಾಕ್ಷಸನನ್ನು ದುಂದುಮಾರನೆಂಬ ನೃಪತಿಯು ಕಾಳಗದಲ್ಲಿ ಕೊಂದು, ಧರ್ಮವನ್ನು ಮತ್ತೆ ನೆಲೆಗೊಳಿಸಿದನು.
ಮೂಲ ...{Loading}...
ಈಯಧರ್ಮವ ಪತಿಕರಿಸಿ ತ
ನ್ನಾಯತಕೆ ಭೂತಳವ ತಂದು ನಿ
ರಾಯಸದಲೇ ಬಳಸುತಿರ್ದನು ದುಂದುವೆಂಬಸುರ
ರಾಯ ಕೇಳಾ ದೈತ್ಯನನು ತ
ನ್ನಾಯಧಕೆ ಬಲಿಗೊಟ್ಟು ಬಳಿಕ
ಸ್ಥಾಯಿ ಧರ್ಮವ ಬಲಿದು ಕೊಟ್ಟನು ದುಂದುಮಾರನೃಪ ॥39॥
೦೪೦ ಆ ನೃಪನ ...{Loading}...
ಆ ನೃಪನ ರಾಜ್ಯದಲಿ ಯಜ್ಞ ವಿ
ಧಾನ ವೈದಿಕವಿಧಿ ಕೃತಾನು
ಷ್ಠಾನ ಯಮ ನಿಯಮಾದಿ ಯೋಗವಿಶಿಷ್ಟ ನೀತಿಯಲಿ
ದೀನ ಭಾವವನುಳಿದು ಯಾಚ್ನಾ
ಹೀನ ವೃತ್ತಿಯ ಬಿಸುಟು ಲೋಕದ
ಭಾನು ತೇಜದಲೆಸೆದುದಂದು ಮಹೀಸುರವ್ರಾತ ॥40॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ರಾಜನ ರಾಜ್ಯದಲ್ಲಿ ಯಾಗಯಜ್ಞ, ವೈದಿಕ ವಿಧಿವಿಧಾನ, ಯಮನಿಯಮಾದಿ ಅನುಷ್ಠಾನಗಳು ನೀತಿಯುತವಾಗಿ ನಡೆಯುತ್ತಿದ್ದವು. ಬ್ರಾಹ್ಮಣರು ದೀನರಾಗದೆ, ಯಾಚನೆಯ ಹೀನವೃತ್ತಿಯನ್ನು ಅವಲಂಬಿಸದೆ, ತೇಜಸ್ವಿಗಳಾಗಿ ಬದುಕಿದರು.
ಪದಾರ್ಥ (ಕ.ಗ.ಪ)
ಮಹೀಸುರ - ಬ್ರಾಹ್ಮಣ
ವ್ರಾತ - ಸಮೂಹ
ಮೂಲ ...{Loading}...
ಆ ನೃಪನ ರಾಜ್ಯದಲಿ ಯಜ್ಞ ವಿ
ಧಾನ ವೈದಿಕವಿಧಿ ಕೃತಾನು
ಷ್ಠಾನ ಯಮ ನಿಯಮಾದಿ ಯೋಗವಿಶಿಷ್ಟ ನೀತಿಯಲಿ
ದೀನ ಭಾವವನುಳಿದು ಯಾಚ್ನಾ
ಹೀನ ವೃತ್ತಿಯ ಬಿಸುಟು ಲೋಕದ
ಭಾನು ತೇಜದಲೆಸೆದುದಂದು ಮಹೀಸುರವ್ರಾತ ॥40॥
೦೪೧ ರಣದೊಳಹಿತರ ಶಿರದ ...{Loading}...
ರಣದೊಳಹಿತರ ಶಿರದ ಮಿದುಳೌ
ತಣವು ಶಸ್ತ್ರಕೆ ವಿತ್ತ ಭೂಸುರ
ಗಣಕೆ ವರಯವ್ವನದ ವಿಭ್ರಮ ನಿಜಸತೀಜನಕೆ
ಗುಣ ಮನುಷ್ಯವ್ರಜಕೆ ಪರಿ ರ
ಕ್ಷಣವಶೇಪ ವ್ರಜಕೆನಲು ಧಾ
ರುಣಿಪತಿಗಳೊಪ್ಪಿದರು ಕೃತಯುಗದಾದಿ ಕಾಲದಲಿ ॥41॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕ್ಷತ್ರಿಯರ ಅಸ್ತ್ರಗಳಿಗೆ ದುಷ್ಟರ ತಲೆಯ ಔತಣ, ಬ್ರಾಹ್ಮಣರಿಗೆ ಧನಸಂಪತ್ತು, ನಾರಿಯರಿಗೆ ಯೌವನದ ಸುಖ, ಮನುಜರಿಗೆ ಸದ್ಗುಣ, ಜನರಿಗೆ ರಕ್ಷಣೆ ಹೀಗೆ ಕೃತಯುಗದ ಆದಿಕಾಲದಲ್ಲಿ ರಾಜ್ಯವಾಳುತ್ತ ನೃಪತಿಗಳು ಶೋಭಿಸಿದರು.
ಪದಾರ್ಥ (ಕ.ಗ.ಪ)
ಅಹಿತ - ಶತ್ರು
ವಿತ್ತ - ಸಂಪತ್ತು
ವ್ರಜ - ಸಮೂಹ
ಅಶೇಷ - ಅಸಂಖ್ಯಾತ
ಮೂಲ ...{Loading}...
ರಣದೊಳಹಿತರ ಶಿರದ ಮಿದುಳೌ
ತಣವು ಶಸ್ತ್ರಕೆ ವಿತ್ತ ಭೂಸುರ
ಗಣಕೆ ವರಯವ್ವನದ ವಿಭ್ರಮ ನಿಜಸತೀಜನಕೆ
ಗುಣ ಮನುಷ್ಯವ್ರಜಕೆ ಪರಿ ರ
ಕ್ಷಣವಶೇಪ ವ್ರಜಕೆನಲು ಧಾ
ರುಣಿಪತಿಗಳೊಪ್ಪಿದರು ಕೃತಯುಗದಾದಿ ಕಾಲದಲಿ ॥41॥
೦೪೨ ಪ್ರೌಢನೇ ವ್ಯವಹರಿಸಲಗ್ಗದ ...{Loading}...
ಪ್ರೌಢನೇ ವ್ಯವಹರಿಸಲಗ್ಗದ
ಮೂಢನೇ ಬರಲೊಂದೆ ಸತ್ಯ ನಿ
ರೂಢಿಯಲಿ ವಾಣಿಜ್ಯ ಸುವ್ಯವಹಾರ ಮಾರ್ಗದಲಿ
ಗಾಢ ವಿಕ್ರಯ ಸಕ್ರಯದೊಳೇ
ಗೂಢಕರು ಮೂಲೈಕ ಲಾಭ ನಿ
ರೂಢ ಪರರೊಪ್ಪಿದರು ವೈಶ್ಯರು ಧರ್ಮಕಾಲದಲಿ ॥42॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ವಾಣಿಜ್ಯ ವ್ಯವಹಾರ ಮಾರ್ಗದಲ್ಲಿ ಬುದ್ಧಿವಂತನೇ ಬರಲಿ ಮೂಢನೇ ಬರಲಿ ಒಂದೇ ರೀತಿಯಿಂದ ವ್ಯವಹರಿಸುತ್ತಿದ್ದರು. ವ್ಯಾಪಾರದಲ್ಲಿ ಮಾರಾಟದ ಮೌಲ್ಯದಲ್ಲಿ ಒಂದಂಶ ಮಾತ್ರ ಲಾಭ ಉಳಿಸಿಕೊಂಡು ವೈಶ್ಯರು ಧರ್ಮಯುಕ್ತರಾಗಿ ಮೆರೆದರು.
ಪದಾರ್ಥ (ಕ.ಗ.ಪ)
ನಿರೂಢಿ - ಪ್ರಸಿದ್ಧಿ
ವಿಕ್ರಯಸಕ್ರಯ - ಮಾರುವಿಕೆ, ಕೊಳ್ಳುವಿಕೆ
ಗೂಢಕ - ಗುಟ್ಟಾಗಿ ವ್ಯವಹರಿಸುವವನು, ರಹಸ್ಯವನ್ನು ಕಾಪಾಡಿಕೊಳ್ಳುವವನು
ಮೂಲ ...{Loading}...
ಪ್ರೌಢನೇ ವ್ಯವಹರಿಸಲಗ್ಗದ
ಮೂಢನೇ ಬರಲೊಂದೆ ಸತ್ಯ ನಿ
ರೂಢಿಯಲಿ ವಾಣಿಜ್ಯ ಸುವ್ಯವಹಾರ ಮಾರ್ಗದಲಿ
ಗಾಢ ವಿಕ್ರಯ ಸಕ್ರಯದೊಳೇ
ಗೂಢಕರು ಮೂಲೈಕ ಲಾಭ ನಿ
ರೂಢ ಪರರೊಪ್ಪಿದರು ವೈಶ್ಯರು ಧರ್ಮಕಾಲದಲಿ ॥42॥
೦೪೩ ನಿಜಕೃಷಿ ವ್ಯವಸಾಯದಲಿ ...{Loading}...
ನಿಜಕೃಷಿ ವ್ಯವಸಾಯದಲಿ ತ
ದ್ದ್ವಿಜ ಕುಲದ ಶುಶ್ರೂಷೆಯಲಿ ಪಾ
ದಜರು ಕೃತ ಕೃತ್ಯರು ಚತುರ್ವರ್ಣದಲಿ ಮಾರ್ಗವಿದು
ನಿಜನಿಜಾಂಗದ ಧರ್ಮಗತಿಯಲಿ
ಮಜಡರಾದರೆ ಮನುಜರಾದವ
ರಜನ ಪರಮಾಯುಷ್ಯ ಪರಿಯಂತಿಹರು ನರಕದಲಿ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃಷಿ ವ್ಯವಸಾಯ, ಬ್ರಾಹ್ಮಣ ಶುಶ್ರೂಷೆಗಳಲ್ಲಿ ಶೂದ್ರರಿದ್ದರು. ಹೀಗೆ ಚತುವರ್ಣದವರು ಧರ್ಮಯುಕ್ತವಾದ ರೀತಿಯಲ್ಲಿದ್ದರು. ಈ ಧರ್ಮಗತಿಯಲ್ಲಿ ನಡೆಯದೇ ಹೋದರೆ ಮನುಷ್ಯರು ಬ್ರಹ್ಮನ ಆಯುಷ್ಯ ಪರ್ಯಂತವೂ ನರಕದಲ್ಲಿರಬೇಕಾಗುತ್ತದೆ.
ಪದಾರ್ಥ (ಕ.ಗ.ಪ)
ಮಜಡ - ದಡ್ಡ, ತಿಳಿಗೇಡಿ
ಅಜ - ಬ್ರಹ್ಮ
ಮೂಲ ...{Loading}...
ನಿಜಕೃಷಿ ವ್ಯವಸಾಯದಲಿ ತ
ದ್ದ್ವಿಜ ಕುಲದ ಶುಶ್ರೂಷೆಯಲಿ ಪಾ
ದಜರು ಕೃತ ಕೃತ್ಯರು ಚತುರ್ವರ್ಣದಲಿ ಮಾರ್ಗವಿದು
ನಿಜನಿಜಾಂಗದ ಧರ್ಮಗತಿಯಲಿ
ಮಜಡರಾದರೆ ಮನುಜರಾದವ
ರಜನ ಪರಮಾಯುಷ್ಯ ಪರಿಯಂತಿಹರು ನರಕದಲಿ ॥43॥
೦೪೪ ನಯವಿದನೆ ಕೇಳ್ ...{Loading}...
ನಯವಿದನೆ ಕೇಳ್ ವೇದ ಶಾಸ್ತ್ರಾ
ಧ್ಯಯನದಲಿ ಪಿತೃಮಾತೃ ಶುಶ್ರೂ
ಷೆಯಲಿ ಗುರು ಪರಿಚರ್ಯದಲಿ ವಿಮಲಾಗ್ನಿ ಕಾರ್ಯದಲಿ
ನಿಯತ ಮೌನವ್ರತದ ಸಂಗ
ಪ್ರಿಯದ ಶೌಚಾಸ್ತೇಯದಿಂದ್ರಿಯ
ಜಯದ ವಿಮಲ ಬ್ರಹ್ಮಚರ್ಯಾಶ್ರಮದ ಗತಿಯೆಂದ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವೇದಶಾಸ್ತ್ರಾಧ್ಯಯನ, ಪಿತೃಮಾತೃ ಸೇವೆ, ಗುರುವಿನ ಶುಶ್ರೂಷೆ, ಅಗ್ನಿಕಾರ್ಯ, ನಿಯಮಿತವಾದ ಮೌನ, ಶೌಚ, ಅಸ್ತೇಯ, ಇಂದ್ರಿಯ ನಿಗ್ರಹ - ಇವುಗಳು ಬ್ರಹ್ಮಚರ್ಯಾಶ್ರಮದ ಲಕ್ಷಣಗಳು’ ಎಂದನು.
ಪದಾರ್ಥ (ಕ.ಗ.ಪ)
ನಯವಿದ - ನೀತಿಯನ್ನು ಬಲ್ಲವನು
ಅಸ್ತೇಯ - ಕಳ್ಳತನ ಮಾಡದಿರುವಿಕೆ
ಮೂಲ ...{Loading}...
ನಯವಿದನೆ ಕೇಳ್ ವೇದ ಶಾಸ್ತ್ರಾ
ಧ್ಯಯನದಲಿ ಪಿತೃಮಾತೃ ಶುಶ್ರೂ
ಷೆಯಲಿ ಗುರು ಪರಿಚರ್ಯದಲಿ ವಿಮಲಾಗ್ನಿ ಕಾರ್ಯದಲಿ
ನಿಯತ ಮೌನವ್ರತದ ಸಂಗ
ಪ್ರಿಯದ ಶೌಚಾಸ್ತೇಯದಿಂದ್ರಿಯ
ಜಯದ ವಿಮಲ ಬ್ರಹ್ಮಚರ್ಯಾಶ್ರಮದ ಗತಿಯೆಂದ ॥44॥
೦೪೫ ದೇವ ಗುರು ...{Loading}...
ದೇವ ಗುರು ಪಿತೃ ವಹ್ನಿ ಶುಶ್ರೂ
ಷಾವಧಾನ ನಿರಂತ ಷಟ್ಕ
ರ್ಮಾವಲಂಬ ನಿಜೋನ್ನತಾಲಾಭೈಕ ಸಂತೋಷ
ಪಾವನವ್ರತ ನಿಜ ಪುರಂಧ್ರೀ
ಸೇವೆ ಸತ್ಯಾಸ್ತೇಯ ಶೌಚ ಗು
ಣಾವಳಿಗಳುಳ್ಳಾತ ಗೃಹಪತಿಯೆಂದನಾ ಮುನಿಪ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ದೇವರು ಮತ್ತು ಗುರುಗಳಲ್ಲಿ ಭಕ್ತಿ, ಪಿತೃಸೇವೆ, ಅಗ್ನಿಕಾರ್ಯ, ಷಟ್ಕರ್ಮಗಳ ಆಚರಣೆ ಪವಿತ್ರ ವ್ರತಗಳ ಪುಣ್ಯ ಸಂಚಯನದ ಏಕೈಕ ಪ್ರೀತಿ, ನಿಜಪತ್ನಿಯಲ್ಲಿ ಅನುರಾಗ, ಸತ್ಯ, ಅಸ್ತೇಯ, ಶೌಚ ಗುಣಗಳುಳ್ಳವನೇ ಗೃಹಸ್ಥನು’ ಎಂದನು.
ಟಿಪ್ಪನೀ (ಕ.ಗ.ಪ)
ಷಟ್ಕರ್ಮಗಳು - ಧರ್ಮಾರ್ಥಕಾಮಾಚರಣೆ, ವೇದಪಾಠ, ವೈಶ್ವದೇವಾವಾದಿ ಹೋಮ, ಅತಿಥಿ ಪೂಜೆ, ಪಿತೃ ತರ್ಪಣ, ಭೂತಬಲಿ
- ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹಣ
- ಸ್ನಾಸಂಧ್ಯೋಪಾಸನೆ, ಜಪ, ಅಗ್ನಿಹೋತ್ರ, ದೇವಪೂಜೆ, ಆತಿಥ್ಯ, ವೈಶ್ವದೇವ
ಈ ರೀತಿಯಲ್ಲಿ ಮೂರು ವಿಧದ ಷಟ್ಕರ್ಮಗಳು ಇವೆ.
ಮೂಲ ...{Loading}...
ದೇವ ಗುರು ಪಿತೃ ವಹ್ನಿ ಶುಶ್ರೂ
ಷಾವಧಾನ ನಿರಂತ ಷಟ್ಕ
ರ್ಮಾವಲಂಬ ನಿಜೋನ್ನತಾಲಾಭೈಕ ಸಂತೋಷ
ಪಾವನವ್ರತ ನಿಜ ಪುರಂಧ್ರೀ
ಸೇವೆ ಸತ್ಯಾಸ್ತೇಯ ಶೌಚ ಗು
ಣಾವಳಿಗಳುಳ್ಳಾತ ಗೃಹಪತಿಯೆಂದನಾ ಮುನಿಪ ॥45॥
೦೪೬ ವನ ವನದೊಳಾಶ್ರಮದೊಳಗೆ ...{Loading}...
ವನ ವನದೊಳಾಶ್ರಮದೊಳಗೆ ಕುಲ
ವನಿತೆ ಸಹಿತಮಲಾಗ್ನಿ ಹೋತ್ರದ
ನೆನಹು ತಪ್ಪದೆ ಕಂದಮೂಲ ಫಲಾಶನಂಗಳಲಿ
ವಿನಯ ಯಜ್ಞ ತಪೋವ್ರತಾದಿಗ
ಳನಿತರಲಿ ನಿಷ್ಠಾತ್ಮನಾದೊಡೆ
ವಿನುತ ವಾನಪ್ರಸ್ಥನೆಂಬರು ರಾಯ ಕೇಳ್ ಎಂದ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಪತ್ನೀಸಮೇತನಾಗಿ ವನಾಶ್ರಮದಲ್ಲಿ ವಾಸಮಾಡುತ್ತಾ ಅಗ್ನಿಹೋತ್ರವನ್ನು ಕೈಗೊಂಡು ಕಂದ ಮೂಲ ಫಲಾಹಾರದಿಂದ ಯಾಗ, ತಪಸ್ಸು, ವ್ರತಾಚರಣೆಯಲ್ಲಿ ಮಗ್ನನಾಗಿರುವವನೇ ವಾನಪ್ರಸ್ಥಾಶ್ರಮಿ’ ಎಂದನು.
ಪದಾರ್ಥ (ಕ.ಗ.ಪ)
ಅಗ್ನಿಹೋತ್ರ - ಬೆಳಿಗ್ಗೆ ಸಂಜೆ, ಅಗ್ನಿಯ ಎದುರಿಗೆ ಮಾಡುವ ಹೋಮ
ಮೂಲ ...{Loading}...
ವನ ವನದೊಳಾಶ್ರಮದೊಳಗೆ ಕುಲ
ವನಿತೆ ಸಹಿತಮಲಾಗ್ನಿ ಹೋತ್ರದ
ನೆನಹು ತಪ್ಪದೆ ಕಂದಮೂಲ ಫಲಾಶನಂಗಳಲಿ
ವಿನಯ ಯಜ್ಞ ತಪೋವ್ರತಾದಿಗ
ಳನಿತರಲಿ ನಿಷ್ಠಾತ್ಮನಾದೊಡೆ
ವಿನುತ ವಾನಪ್ರಸ್ಥನೆಂಬರು ರಾಯ ಕೇಳೆಂದ ॥46॥
೦೪೭ ಮದನನಮ್ಬನು ಮುರಿದು ...{Loading}...
ಮದನನಂಬನು ಮುರಿದು ರೋಷವ
ಕದನದಲಿ ಸೋಲಿಸಿದು ಲೋಭವ
ನೊದೆದು ಮೋಹವ ನೂಕಿಯುಳಿದಾ ಮದವ ಮತ್ಸರದ
ಎದೆಯಲಂಕವ ಬರೆದು ವೈರಾ
ಗ್ಯದ ಸುಸಮ್ಯಗ್ಜ್ಞಾನ ಯೋಗದ
ಪದದ ಬೆಳೆ ಸಿರಿವಂತನೇ ಯತಿಯೆಂದನಾ ಮುನಿಪ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕಾಮವನ್ನು ಮೀರಿ, ಸಿಟ್ಟನ್ನು ಬಿಟ್ಟು, ಲೋಭ-ಮೋಹ-ಮದ ಮತ್ಸರಗಳನ್ನು ಗೆದ್ದು , ಹೃದಯ ಮಂಟಪದಲ್ಲಿ ವೈರಾಗ್ಯವನ್ನು ತಾಳಿ, ಜ್ಞಾನಯೋಗದ ಬೆಳೆ ಬೆಳೆಯುವಾತನೇ ಸನ್ಯಾಸಿಯು’ ಎಂದನು.
ಪದಾರ್ಥ (ಕ.ಗ.ಪ)
ಮದನನಂಬು - ಕಾಮನ ಬಣ
ಅಂಕ - ಗುರುತು
ಮೂಲ ...{Loading}...
ಮದನನಂಬನು ಮುರಿದು ರೋಷವ
ಕದನದಲಿ ಸೋಲಿಸಿದು ಲೋಭವ
ನೊದೆದು ಮೋಹವ ನೂಕಿಯುಳಿದಾ ಮದವ ಮತ್ಸರದ
ಎದೆಯಲಂಕವ ಬರೆದು ವೈರಾ
ಗ್ಯದ ಸುಸಮ್ಯಗ್ಜ್ಞಾನ ಯೋಗದ
ಪದದ ಬೆಳೆ ಸಿರಿವಂತನೇ ಯತಿಯೆಂದನಾ ಮುನಿಪ ॥47॥
೦೪೮ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಜಾತಿ ವರ್ಗದ
ಪರಮ ಧರ್ಮದ ಸಾರವಿದನಾ
ಚರಿಸಿ ಸಿದ್ಧಿಯನೈದಿದನ ಪಿತೃಮಾತೃ ಭಕ್ತಿಯಲಿ
ಒರೆಗೆ ಬಣ್ಣಕೆ ಬೆರಸಿ ವೇದೋ
ಚ್ಚರಿತ ಧರ್ಮವನರುಹಿದನು ಭೂ
ಸುರಗೆ ಧರ್ಮವ್ಯಾಧನೆಂಬನ ಕಥೆಯ ಕೇಳ್ ಎಂದ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಧರಣೀಪಾಲ, ವರ್ಣಾಶ್ರಮ ಧರ್ಮವನ್ನು ಆಚರಿಸಿ, ತಂದೆತಾಯಿಗಳ ಭಕ್ತಿಯಿಂದಾಗಿ ಸಿದ್ಧಿಯನ್ನು ಪಡೆದ ಧರ್ಮವ್ಯಾಧನೆಂಬವನು ವೇದೋಕ್ತವಾದ ಧರ್ಮಸೂಕ್ಷ್ಮವನ್ನು ಒರೆಗೆ ಹಚ್ಚಿ , ಆಕರ್ಷಕವಾಗಿ ಮುನಿಪುತ್ರನಿಗೆ ತಿಳಿಸಿದ ಕಥೆಯನ್ನು ಹೇಳುತ್ತೇನೆ, ಕೇಳು’ ಎಂದನು.
ಟಿಪ್ಪನೀ (ಕ.ಗ.ಪ)
ಧರ್ಮವ್ಯಾಧ - ಜಾತಿಯಲ್ಲಿ ಬೇಡನಾಗಿದ್ದರೂ ಸ್ವಭಾವದಲ್ಲಿ ಮಹರ್ಷಿಯಾಗಿದ್ದ ಧರ್ಮವ್ಯಾಧನದು ಅರಣ್ಯ ಪರ್ವದಲ್ಲಿ ಧರ್ಮರಾಯನು ಕೇಳುವ ಕಥೆಗಳಲ್ಲಿ ಒಂದು ಉತ್ತಮ ಕಥೆ. ಇವನಿಗೆ ಅರ್ಜುನ, ಅರ್ಜುನಿಕಿ ಎಂಬ ಇಬ್ಬರು ಮಕ್ಕಳಿದ್ದರು. ಅರ್ಜುನಿಕಿಯನ್ನು ಪತಂಗೃಷಿ ಮದುವೆಯಾದ. ಆದರೆ ಅತ್ತೆ ಇವನು ಬೇಢರ ಕುಲದವರು ಪ್ರಾಣಿ ಹಿಂಸಕರು ಎಂದು ತಿರಸ್ಕಾರದಿಂದ ಕಂಡಾಗ ಧರ್ಮವ್ಯಾಧನು ‘ನೀವು ದಿನವೂ ತಿನ್ನುವ ಸಸ್ಯಗಳಿಗೂ ಹಿಂಸೆಯಾಗುತ್ತಿಲ್ಲವೆ?’ ಎಂದು ಧೈರ್ಯವಾಗಿ ಕೇಳಿ ಅತ್ತೆ ಪಶ್ಚಾತ್ತಾಪ ಪಡುವಂತೆ ಮಾಡಿದ ವಿಚಾರವಾದಿ.
ಧರ್ಮವ್ಯಾಧನು ಮಿಥಿಲಾನಗರದಲ್ಲಿ ಬೇಡ ವೃತ್ತಿ ಮಾಡಕೊಂಡಿದ್ದು ತಂದೆ, ತಾಯಿಗಳನ್ನು ಪ್ರೀತಿಯಿಂದ ಪೋಷಿಸಿ ಬಿಡುವಿನ ವೇಳೆಯಲ್ಲಿ ಧರ್ಮಚಿಂತನೆ ಮಾಡುತ್ತಿದ್ದ ಒಬ್ಬ ಮಹಾನುಭಾವ. ಹಿಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿದ್ದು ಮಹಾರಾಜನೊಬ್ಬನ ಗೆಳೆಯನಾಗಿದ್ದನಂತೆ. ಒಮ್ಮೆ ಬೇಟೆಗೆ ಹೋದಾಗ ಜಿಂಕೆಯೆಂದು ತಿಳಿದು ಒಬ್ಬ ಮುನಿಯ ಸಾವಿಗೆ ಕಾರಣನಾಗಿ ಆತನಿಂದ ಬೇಡನಾಗೆಂಬ ಶಾಪ ಪಡೆದ. ಬ್ರಾಹ್ಮಣ ಕ್ಷಮಾಯಾಚನೆ ಮಾಡಿದಾಗ ಋಷಿ ಕನಿಕರಿಸಿ ‘ನಿನ್ನ ತಪಶ್ಯಕ್ತಿಗೆ ನಿನ್ನ ವೃತ್ತಿಯಿಂದ ಕುಂದು ಬಾರದಿರಲಿ’ ಎಂದು ಹೇಳಿದ.
ಕೌಶಿಕ ಎಂಬ ಬ್ರಾಹ್ಮಣನೊಬ್ಬನು ಸಾಧ್ವಿಯೊಬಳ ಹಿತವಾದದಂತೆ ಧರ್ಮವ್ಯಾಧನ ಬಳಿಗೆ ಬಂದು ಅವನ ಶಿಷ್ಯನಾಗುತ್ತಾನೆ. ಮಹಾಭಾರತದ ವನಪರ್ವದ 27ರಿಂದ 33ನೇ ಅಧ್ಯಾಯದವರೆಗಿನ ಭಾಗಗಳು ಆ ಮಹಾತ್ಮನ ಹಿರಿಮೆಯನ್ನು ಸಾರುತ್ತವೆ. ಆಗ ಕೌಶಿಕನಿಗೆ ಹಿಂಸೆ-ಅಹಿಂಸೆಗಳ ವಿವೇಚನೆ, ಧರ್ಮಕರ್ಮ ವಿಷಯಕ ಮೀಮಾಂಸೆ, ವಿಷಯಾಸಕ್ತಿಯಿಂದಾಗುವ ಹಾನಿ, ವರ್ಣಧರ್ಮ, ಶಿಷ್ಟಾಚಾರ ಬ್ರಹ್ಮ ವಿದ್ಯಾವರ್ಣನೆ ಇಂದ್ರಿಯ ನಿU್ಪ್ರಹ ವರ್ಣನೆ ತ್ರಿಗುಣಗಳ (ಸತ್ವ, ರಜಸ್, ತಮಸ್) ಸ್ವರೂಪ ಹಾಗೂ ಫಲ ನಿರೂಪಣೆ, ಪ್ರಾಣವಾಯುವಿನ ಸ್ಥಿತಿಯ ಪ್ರತಿಪಾದನೆ ಮಾತಾಪಿತೃ ಸೇವೆಯ ಮಹತ್ವ ಮೊದಲಾದ ಮಹತ್ತಾರು ವಸ್ತು, ವಿಷಯಗಳ ಉಪದೇಶ ಮಾಡುತ್ತಾನೆ. ‘ಇಂದ್ರಿಯ ವರ್ಗದ ಜಯವೇ ಸ್ವರ್ಗ, ಗೆಲ್ಲಲಾಗದ ದೌರ್ಬಲ್ಯವೇ ನರಕ’ ಎಂಬುದು ಈತನ ಒಂದು ಹಿತೋಕ್ತಿ. ಈವ ಲಕ್ಷಣವನ್ನು ಹೇಳುತ್ತಾನೆ. ‘‘ದೇಹ ಪತನವಾದರೂ ಜೀವವು ನಶಿಸುವುದಿಲ್ಲ; ಮನುಷ್ಯನು ಮೋಹ ಸಮುದ್ರದಲ್ಲಿ ಪರಿಭ್ರಮಿಸುತ್ತಿರುತ್ತಾನೆಯೇ ಹೊರತು ಆತ ಎಂದಿಗೂ ದಡ ಸೇರುವುದಿಲ್ಲ’’ ಇಂಥ ಸೂಕ್ತಿ ಮುಕ್ತಾಫಲಗಳು ಈತನ ಉಪದೇಶದಲ್ಲಿ ಇಡಿಕಿರಿದಿವೆ. ಈತ ಹೇಳುಂತೆ ಇದು ಹಿಂಸೆ ಇದು ಅಹಿಂಸೆ ಎಂದು ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಒಂದು ಪ್ರಾಣಿ ಇನ್ನೊಂದನ್ನು ತಿಂದು ಬದುಕಿದರೆ ಅದನ್ನು ಹಿಂಸೆ ಎನ್ನಲಾದೀತೇ.
ಮಹಾಭಾರತದಲ್ಲಿ ಬರುವ ವಿದುರನೀತಿ ಸನತ್ಸುಜಾತೀಯ ಭೀಷ್ಮ ನೀತಿಗಳಂತೆ ಧರ್ಮವ್ಯಾಧ ನೀತಿಯೂ ಒಂದು ಉತ್ತಮ ಸೂಕ್ತಿಮಾಲೆಯಾಗಿದೆ.
ಮೂಲ ...{Loading}...
ಧರಣಿಪತಿ ಕೇಳ್ ಜಾತಿ ವರ್ಗದ
ಪರಮ ಧರ್ಮದ ಸಾರವಿದನಾ
ಚರಿಸಿ ಸಿದ್ಧಿಯನೈದಿದನ ಪಿತೃಮಾತೃ ಭಕ್ತಿಯಲಿ
ಒರೆಗೆ ಬಣ್ಣಕೆ ಬೆರಸಿ ವೇದೋ
ಚ್ಚರಿತ ಧರ್ಮವನರುಹಿದನು ಭೂ
ಸುರಗೆ ಧರ್ಮವ್ಯಾಧನೆಂಬನ ಕಥೆಯ ಕೇಳೆಂದ ॥48॥