೧೨

೦೦೦ ಸೂ ಲೀಲೆ ...{Loading}...

ಸೂ. ಲೀಲೆ ಮಿಗೆ ನರನಮರಲೋಕದ
ಕಾಲಕೇಯ ನಿವಾತಕವಚರ
ಸೀಳಿ ಬಿಸುಟಂದವನು ಬಣ್ಣಿಸಿದನು ಮಹೀಪತಿಗೆ

೦೦೧ ಕೇಳು ಜನಮೇಜಯ ...{Loading}...

ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನರ್ಜುನನನುಪ
ಲಾಲಿಸಿದನುರೆ ಮುಳುಗಿದನು ಪುಳಕಾಶ್ರು ಪೂರದಲಿ
ಹೇಳು ಪಾರ್ಥ ಕಪರ್ದಿಯಸ್ತ್ರ
ವ್ಯಾಳ ಸಂಗ್ರಹಣ ಪ್ರಪಂಚವ
ನಾಲಿಸುವೆನೆನೆ ನೃಪತಿಗಭಿವರ್ಣಿಸಿದನಾ ಕಥೆಯ ॥1॥

೦೦೨ ಹರನ ಶರ ...{Loading}...

ಹರನ ಶರ ಲಾಭಾರ್ಥ ಸಿದ್ಧಿಗೆ
ಕರೆಸಿದನು ಸುರನಾಥ ರಾಗದ
ಲರುಹಲಾ ಸುರರಿಪುಗಳೂಳಿಗವನು ಸುರಾಚಾರ್ಯ
ಅರಿಗಳೆವಗೆ ನಿವಾತಕವಚರು
ಸುರಪದವಿ ಸೋಪದ್ರವದ ನಿ
ಷ್ಠುರವಿದೆಂದು ರಹಸ್ಯದಲಿ ನನಗೆಂದನಮರೇಂದ್ರ ॥2॥

೦೦೩ ಶಿವನ ಶರ ...{Loading}...

ಶಿವನ ಶರ ನಿನಗಾಯ್ತು ನಿರ್ಜರ
ನಿವಹವಿದೆ ನಾಕದಲಿ ಬಲು ದಾ
ನವರ ವಿಲಗದಿ ವೀಚಿ ಹೋದುದು ಸಗ್ಗ ಸೌಖ್ಯಫಲ
ಜವ ಸಭೆಯು ಜೀವರಿಗೆ ದುರ್ಜನ
ರವಗಡವು ಸುಜನರಿಗೆ ತಮ ಶಶಿ
ರವಿಗಳಿಗೆ ಮುನಿವಂತೆ ಖಳರಿದೆಯೆಂದನಮರೇಂದ್ರ ॥3॥

೦೦೪ ಮುದದ ನೆಲೆ ...{Loading}...

ಮುದದ ನೆಲೆ ಶುಭದಿಕ್ಕೆ ಸೊಗಸಿನ
ಸದನ ಸೌಖ್ಯದ ಗರುಡಿ ಸೊಂಪಿನ
ಪದವಿ ಲೀಲೆಯ ತಾಣ ತಾಯ್ಮನೆ ಖೇಳ ಮೇಳವದ
ಮದದ ಮಡು ಭೋಗೈಕನಿಧಿ ಸಂ
ಪದದ ಜನ್ಮಸ್ಥಳ ಮನೋರಥ
ದುದಯಗಿರಿ ಹಿಂದೀಸು ದಿನವಮರಾವತೀ ನಗರ ॥4॥

೦೦೫ ಕಳವಳದ ನೆಲೆ ...{Loading}...

ಕಳವಳದ ನೆಲೆ ಭಯದ ಜನ್ಮ
ಸ್ಥಳ ವಿಷಾದದ ಪೇಟೆ ಖಾತಿಯ
ನಿಳಯ ಖೋಡಿಯ ಕಟಕ ಭಂಗದ ಸಂಭವಸ್ಥಾನ
ಅಳುಕಿನಂಗಡಿ ಹಳುವಿನಾಡುಂ
ಬೊಲ ನಿರೋಧದ ಶಾಲೆ ದುಗುಡದ
ಕಳನೆನಿಸಿತೀ ನಗರಿ ಈಗಲು ಪಾರ್ಥ ಕೇಳ್ ಎಂದ ॥5॥

೦೦೬ ಸಿಡಿಲಕಾಲದೊಳೆರಗುವನ್ತಿರೆ ...{Loading}...

ಸಿಡಿಲಕಾಲದೊಳೆರಗುವಂತಿರೆ
ಕಡಲು ಕಲ್ಪದೊಳುಕ್ಕುವಂತಿರೆ
ಪೊಡವಿಯಾಕಸ್ಮಿಕದೊಳಿಳಿವಂತಿರೆ ರಸಾತಳಕೆ
ತುಡುಕುವುದು ರಕ್ಕಸರ ಭಯ ಹುಡಿ
ಹುಡಿಯಹುದು ಸುರ ವಿಭವವೆಮಗಿ
ಮ್ಮಡಿಯಲವರು ನಿವಾತಕವಚರು ಪಾರ್ಥ ಕೇಳ್ ಎಂದ ॥6॥

೦೦೭ ಕೆತ್ತ ಕದ ...{Loading}...

ಕೆತ್ತ ಕದ ತೆಗೆಯದು ಸುರೌಘದ
ಹೊತ್ತ ಸರಕಿಳಿಯದು ಸುಕಲ್ಪಿತ
ಮತ್ತಗಜ ರಥವಾಜಿ ತೆಗೆಯವು ಪುರದ ಬಾಹೆಯಲಿ
ತೆತ್ತು ಹರಿಯದು ಕಾದಿ ರಣದಲಿ
ಸತ್ತು ಹಿಂಗದು ಸುರರ ಸತಿಯರು
ತೊತ್ತಿರಾದರು ಖಳರ ಮನೆಗಳಿಗೆಂದನಮರೇಂದ್ರ ॥7॥

೦೦೮ ಭಯದ ಬಾಹೆಯಲಪಸರದ ...{Loading}...

ಭಯದ ಬಾಹೆಯಲಪಸರದ ನಿ
ಶ್ಚಯದ ದುಮ್ಮಾನದ ವಿಘಾತಿಯ
ಲಯದ ಲಾವಣಿಗೆಯ ವಿರಾಗದ ತಡಿಯ ಸಂಕಟದ
ಪಯದ ಪಾಡಿನ ಹೃದಯ ಕಂಪದ
ನಯನದೊರತೆಯ ಬಗೆಯ ಕೊರತೆಯ
ಜಯದ ಜೋಡಿಯ ದೇವರಿದೆ ನೋಡೆಂದನಮರೇಂದ್ರ ॥8॥

೦೦೯ ಅವರುಪೇಕ್ಷೆಯ ಉಳಿವಿನಲಿ ...{Loading}...

ಅವರುಪೇಕ್ಷೆಯ ಉಳಿವಿನಲಿ ನ
ಮ್ಮವರ ಬೇಹಿನ ಸುಳಿವಿನಲಿ ಮೇ
ಣವರನಳುಕಿಸುವಾಧಿದೈವಿಕ ಕರ್ಮಗತಿಗಳಲಿ
ದಿವಿಜರಿಂದವರುಳಿದರಾ ದಾ
ನವರ ಮರ್ದಿಸಿ ದೇವ ಲೋಕವ
ನೆವಗೆ ನಿರುಪದ್ರವದಲೆಡೆಮಾಡೆಂದನಮರೇಂದ್ರ ॥9॥

೦೧೦ ಹೈ ಹಸಾದವು ...{Loading}...

ಹೈ ಹಸಾದವು ನಿಮ್ಮ ಕೃಪೆಯವ
ಗಾಹಿಸುವೊಡರಿದೇನು ದೈತ್ಯರು
ಸಾಹಸಿಗರೇ ಸದೆವೆನೀ ಸುರಜನಕೆ ಹಿತವಹರೆ
ಆ ಹರಾಸ್ತ್ರದೊಳಮರವೈರಿ
ವ್ಯೂಹ ಭಂಜನವಹುದು ನಿಷ್ಪ್ರ
ತ್ಯೂಹ ನಿಶ್ಚಯವೆಂದು ಬಿನ್ನವಿಸಿದೆನು ಸುರಪತಿಗೆ ॥10॥

೦೧೧ ಈ ರಥವನೇ ...{Loading}...

ಈ ರಥವನೇ ಹೂಡಿಸಿದೆನೀ
ಸಾರಥಿಯ ಬೆಸಸಿದೆನು ಸುರ ಪರಿ
ವಾರ ನೆರೆದುದನೆಣಿಸಲಳವೇ ಕೋಟಿ ಜಿಹ್ವೆಯಲಿ
ವಾರಣದ ಹಯ ರಥ ಪದಾತಿಯ
ಭಾರಣೆಗೆ ದೆಸೆ ನೆರೆಯದಿಂದ್ರನ
ವೀರ ಭಟರೆನ್ನೊಡನೆ ನೆರೆದುದು ರಾಯ ಕೇಳ್ ಎಂದ ॥11॥

೦೧೨ ಹೊಲಬಿಗರು ಹರಿದರು ...{Loading}...

ಹೊಲಬಿಗರು ಹರಿದರು ಸುರೇಂದ್ರನ
ದಳದ ಮಾನ್ಯರ ಸನ್ನೆಯಲಿ ದಿಗು
ವಳಯದಗಲದಲೊಲಿವ ಲಲಿತಚ್ಛತ್ರ ಚಮರಗಳ
ಜಲಧಿ ಜಲಧಿಯ ಹಳಚಲಗಿದ
ವ್ವಳಿಪ ವಾದ್ಯ ಧ್ವನಿಯ ಡಾವರ
ಸೆಳೆದುದಸುರರ ಧುರದ ಧೈರ್ಯವನರಸ ಕೇಳ್ ಎಂದ ॥12॥

೦೧೩ ಆಳು ನಡೆದುದು ...{Loading}...

ಆಳು ನಡೆದುದು ಮುಂಗುಡಿಯ ಹರಿ
ಧಾಳಿ ನೂಕಿ ಹಿರಣ್ಯ ನಗರಿಯ
ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ದನುಜ ಪುರೋಪಕಂಠದ
ಕೂಲವತಿಗಳ ತೀರದಲಿ ಬಿಡಿಸಿದೆನು ಪಾಳೆಯವ ॥13॥

೦೧೪ ಅರಿಯದಾ ಪಟ್ಟಣವಿದೇನೋ ...{Loading}...

ಅರಿಯದಾ ಪಟ್ಟಣವಿದೇನೋ
ಹೊರಗೆ ಗಜಬಜವೆನೆ ಸುಪರ್ವರ
ಕುರುಹುಗಳನರಿದಮರರಿಪುಗಳು ಹರಿದರರಮನೆಗೆ
ಬಿರುನಗೆಯ ಸುಮ್ಮಾನದುಬ್ಬಿನ
ನೆರೆ ನಗೆಯ ನಯನಾಂಬುಗಳ ಖಳ
ನೆರಗಲತಿ ಸುಮ್ಮಾನವೇನೆಂದಸುರ ಬೆಸಗೊಂಡ ॥14॥

೦೧೫ ಜೀಯ ಬಲೆಗಳ ...{Loading}...

ಜೀಯ ಬಲೆಗಳ ತೆಗೆಸು ನಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿದೆ ನಗರೋಪಕಂಠದಲಿ
ಹೋಯಿತಸುರರ ಕೈಯ ಹೊಸದಿರು
ಪಾಯ ಪಾಯವಧಾರೆನಲು ಖಳ
ರಾಯ ಕೇಳುತ ಮೃಗವದಾವುದೆನುತ್ತ ಬೆಸಗೊಂಡ ॥15॥

೦೧೬ ಜೋಡಿಸಿದನಮರೇನ್ದ್ರನಮರರ ...{Loading}...

ಜೋಡಿಸಿದನಮರೇಂದ್ರನಮರರ
ವೇಡೆಯಾಯ್ತು ಹಿರಣ್ಯ ನಗರಿಗೆ
ಗಾಢ ಬಲರಿದೆ ಬಂದು ವರುಣ ಯಮಾಗ್ನಿ ವಾಯುಗಳು
ರೂಢಿಗಚ್ಚರಿಯಾಯ್ತಲಾ ಪರಿ
ಗೂಢ ಮೃಗಗಣವೆಲ್ಲವಿದೆ ನಿ
ರ್ಮೂಢರನು ಹಿಡಿತರಿಸುಯೆಂದನು ದೂತನೊಡೆಯಂಗೆ ॥16॥

೦೧೭ ಇವನ ಹೊಯ್ ...{Loading}...

ಇವನ ಹೊಯ್ ಕಟವಾಯ ಕೊಯ್ ತ
ಪ್ಪುವನೆ ಸುರಪತಿ ಶಿವಶಿವಾ ಸುರ
ರವಗಡಿಸುವರೆ ವೇಡೆ ಗಡ ಹೈರಣ್ಯ ನಗರಿಯಲಿ
ಇವನ ಸೀಳೆನೆ ಹೊರಗೆ ಸುರ ಸೈ
ನ್ಯವನು ಸೀಳಿದು ಬಳಿಕ ನೀ ನಿ
ನ್ನವನ ಮನವೊಲಿವಂತೆ ಮಾಡೆನೆ ಖಳನು ಖತಿಗೊಂಡ ॥17॥

೦೧೮ ಬನ್ದನೇ ಸುರರಾಯನಕಟೈ ...{Loading}...

ಬಂದನೇ ಸುರರಾಯನಕಟೈ
ತಂದು ಮುತ್ತಿತೆ ದಿವಿಜಗಣ ತರು
ಣೇಂದುಧರನೇ ತರಿಸಿದನೊ ಶಿವಶಿವ ವಿಶೇಷವಲ
ಇಂದಿನಲಿ ಕಡೆ ತನಗೆ ಮೇಣು ಪು
ರಂದರನು ನಿರ್ನಾಮನೈಸಲೆ
ಯೆಂದು ಬಿಟ್ಟನು ಚೂಣಿಯನು ಪಟುಭಟರ ಬೊಬ್ಬೆಯಲಿ ॥18॥

೦೧೯ ಧರಣಿಪತಿ ಚಿತ್ತೈಸು ...{Loading}...

ಧರಣಿಪತಿ ಚಿತ್ತೈಸು ವೇಲೆಯ
ಶಿರವನೊಡೆದುಬ್ಬೇಳ್ವ ಘನ ಸಾ
ಗರದವೊಲು ಪಿಡಿದೊದರಿ ಕವಿದುದು ಕೂಡೆ ವಂಕದಲಿ
ಕರಿತುರಗ ರಥವಾಜಿ ಕಾಲಾ
ಳುರವಣಿಸಿತೇನೆಂಬೆನಸುರರ
ದೊರೆಯ ಸನ್ನೆಗೆ ಸೂಳವಿಪ ನಿಸ್ಸಾಳ ರಭಸದಲಿ ॥19॥

೦೨೦ ಕವಿದುದಸುರರ ಚೂಣಿ ...{Loading}...

ಕವಿದುದಸುರರ ಚೂಣಿ ಬೊಬ್ಬೆಯ
ವಿವಿಧ ವಾದ್ಯಧ್ವನಿಯ ಕಹಳಾ
ರವದ ಕೋಳಾಹಳಕೆ ತುಂಬಿತು ಬಹಳ ಭೇರಿಗಳು
ರವಿಯನಾಕಾಶವ ದಿಗಂತವ
ತಿವಿದು ಕೆದರುವ ಧೂಳಿ ತಿಮಿರಾ
ರ್ಣವವಲೈ ತ್ರೈಜಗವೆನಲು ಜೊಂಪಿಸಿದುದರಿ ಸೇನೆ ॥20॥

೦೨೧ ದಾನವರ ದಕ್ಕಡತನವನದ ...{Loading}...

ದಾನವರ ದಕ್ಕಡತನವನದ
ನೇನನೆಂಬೆನು ಜೀಯ ತೂಳಿದ
ವಾನೆಗಳು ತರುಬಿದವು ತೇಜಿಗಳುರುಬಿದವು ತೇರು
ಆನಲಳವೇ ಭಟರ ಶರ ಸಂ
ಧಾನವನು ಬಲುಸರಳ ಸೂಟಿಯ
ಸೋನೆಯಲಿ ಜಗ ನೆನೆಯಿತೆನೆ ಜೋಡಿಸಿತು ಖಳಸೇನೆ ॥21॥

೦೨೨ ಮುರಿದುದಮರರ ಚೂಣಿ ...{Loading}...

ಮುರಿದುದಮರರ ಚೂಣಿ ದಾನವ
ರುರುಬೆಗಳುಕಿತು ಸಿದ್ಧ ವಿದ್ಯಾ
ಧರ ಮಹೋರಗ ಯಕ್ಷ ರಾಕ್ಷಸ ಗುಹ್ಯಕಾದಿಗಳು
ಹೊರಗೆ ವನವೀಧಿಯಲಿ ಕಾಹಿನ
ಕುರುವದಲಿ ಗೋಪುರದೊಳೌಕಿತು
ಸುರರು ಮುರಿದರು ಮೇಲು ಕಾಳಗವಾದುದಸುರರಿಗೆ ॥22॥

೦೨೩ ಕೆಣಕಿದಸುರರು ಕೋಲುಗಟ್ಟಿತು ...{Loading}...

ಕೆಣಕಿದಸುರರು ಕೋಲುಗಟ್ಟಿತು
ಬಣಗು ಸುರರೋಸರಸಿ ಭಾರಾಂ
ಕಣವನೆನ್ನಿದಿರಿನಲಿ ಸುಭಟರು ಸೂಸಿ ದೆಸೆದೆಸೆಗೆ
ರಣವನದನೇನೆಂಬೆನೈ ಧಾ
ರುಣಿಪತಿಯೆ ವಿಗ್ರಹದ ವಿಸ್ತಾ
ರಣ ವಿಗುರ್ವಣೆ ವಿಗಡಿಸಿತು ವಿಬುಧರ ವಿಡಾಯಿಗಳ ॥23॥

೦೨೪ ಬಳಿಕ ಬಿಟ್ಟನು ...{Loading}...

ಬಳಿಕ ಬಿಟ್ಟನು ರಥವನೀ ಮಾ
ತಲಿ ವಿಭಾಡಿಸಿ ಹೊಕ್ಕು ಚೂಣಿಯ
ಬಲಸಮುದ್ರದ ಮಧ್ಯದಲಿ ಮುಳುಗಿತು ವರೂಥವಿದು
ಬಲದಲೆಚ್ಚೆನು ಹಿಂದು ಮುಂದಿ
ಟ್ಟಿಳಿಸಿದರನಿಟ್ಟೊರೆಸಿದೆನು ಮುಂ
ಕೊಳಿಸಿ ಮೇಲ್ವಾಯ್ವವರ ಮುರಿದೆನು ವಾಮ ಭಾಗದಲಿ ॥24॥

೦೨೫ ಕೆಟ್ಟುದಹಿತರ ಚೂಣಿ ...{Loading}...

ಕೆಟ್ಟುದಹಿತರ ಚೂಣಿ ರಿಪು ಜಗ
ಜಟ್ಟಿಗಳು ನುಗ್ಗಾಯ್ತು ದಿವಿಜರ
ಥಟ್ಟಿನಲಿ ಬೊಬ್ಬಾಟವಾಯ್ತು ಗಭೀರ ಭೇರಿಗಳು
ಬಿಟ್ಟ ಮಂಡೆಯಲಸುರ ಸುಭಟರು
ಕೆಟ್ಟು ಹಾಯ್ದರು ಕೂಡೆ ಹೆಣ ಸಾ
ಲಿಟ್ಟುದುರೆಯೆನಲರುಣಜಲ ನಗರೋಪಕಂಠದಲಿ ॥25॥

೦೨೬ ನೂಕಿ ದೈತ್ಯರ ...{Loading}...

ನೂಕಿ ದೈತ್ಯರ ಚೂಣಿಯನು ಮುರಿ
ದೌಕಿ ದುರ್ಗವ ಹೊಗಿಸಿದೆನು ಸ
ವ್ಯಾಕುಲರು ಸೂಸಿದರು ಭಯವ ನಿವಾತಕವಚರಿಗೆ
ಆಕೆವಾಳರು ಜೀಯ ನಮ್ಮ ದಿ
ವೌಕಸರ ಪರಿಯಲ್ಲ ಯುದ್ಧ
ವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು ॥26॥

೦೨೭ ಕೇಳಿದನು ಕಡುಗೋಪದಲಿ ...{Loading}...

ಕೇಳಿದನು ಕಡುಗೋಪದಲಿ ಸಿಡಿ
ಲೇಳಿಗೆಯಲೆದ್ದನು ಸುರೇಂದ್ರಗೆ
ಮೇಲುಗಾಳಗವೇ ಸುಪರ್ವರು ನಮ್ಮ ಸದೆವರಲೆ
ಕಾಲಗತಿಯೋ ಮೇಣ್ ಕಪರ್ದಿಯ
ಕೀಲಕವೊ ರವಿಯೊಡನೆ ತಮ ಕೈ
ಮೇಳವಿಸಿತೇ ಶಿವ ಶಿವಾಯೆನುತಸುರ ಹಲು ಮೊರೆದ ॥27॥

೦೨೮ ಭಟರ ಬರಹೇಳೋ ...{Loading}...

ಭಟರ ಬರಹೇಳೋ ಸುರೇಂದ್ರನ
ಕಟಕವಿಕ್ಕಿದ ವೇಡೆಯಲಿ ಲಟ
ಕಟಿಸುತಿದೆ ದಾನವರು ಮಾನಚ್ಯುತಿಯ ಮನ್ನಿಸದೆ
ನಿಟಿಲನಯನನನೇಳಿಸುವ ಚಾ
ವಟೆಯರಾವೆಡೆ ಚದುರ ರಣ ಲಂ
ಪಟರ ಬರಹೇಳೆನುತ ಮಿಗೆ ಗರ್ಜಿಸಿದನಮರಾರಿ ॥28॥

೦೨೯ ನೆರೆದುದಸುರರು ಕಾಲಕೂಟದ ...{Loading}...

ನೆರೆದುದಸುರರು ಕಾಲಕೂಟದ
ಕರುವಿನೆರಕವೊ ಸಿಡಿಲ ದಳ್ಳುರಿ
ತಿರುಳ ದಡ್ಡಿಯೊ ವಿಲಯ ಭೈರವನುಬ್ಬಟೆಯ ಪಡೆಯೊ
ಹರನ ನಯನ ಜ್ವಾಲೆಯವದಿರ
ಗರುಡಿಯೋ ಗಾಢಾಯ್ಲ ತೇಜದ
ದುರುಳ ದಾನವ ಭಟರು ಬಂದುದು ಕೋಟಿ ಸಂಖ್ಯೆಯಲಿ ॥29॥

೦೩೦ ನೆರೆದಿರೈ ಪರಿಭವದ ...{Loading}...

ನೆರೆದಿರೈ ಪರಿಭವದ ನೆಲೆಯಲಿ
ನೆರೆದಿರೈ ದುಷ್ಕೀರ್ತಿಸತಿಯಲಿ
ನೆರೆದಿರೈ ಸಲೆ ಹೊರೆದಿರೈ ದುಷ್ಕೃತಿಯಲೊಡಲುಗಳ
ಸುರರಲೇ ನೀವ್ ನಿಮ್ಮ ಹೆಂಡಿರ
ಕುರುಳ ಕೈದೊಳಸಿಂಗೆ ಮಿಗೆ ಕಾ
ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ ॥30॥

೦೩೧ ಜೀಯ ಖಾತಿಯಿದೇಕೆ ...{Loading}...

ಜೀಯ ಖಾತಿಯಿದೇಕೆ ದಿವಿಜರ
ರಾಯನರಸಿಯ ನಿನ್ನ ತೊತ್ತಿರ
ಲಾಯದಲಿ ತೋರುವೆವು ತಾ ತಾ ವೀಳಯವನೆನುತ
ಹಾಯಿದರು ತಮ ತಮಗೆ ಮುಂಗುಡಿ
ದಾಯದಲಿ ಧಟ್ಟಿಸುವ ನಿಸ್ಸಾ
ಳಾಯತದ ಬಹುವಿಧದ ವಾದ್ಯದ ಲಳಿಯ ಲಗ್ಗೆಯಲಿ ॥31॥

೦೩೨ ಒಡೆದುದಿಳೆಯೆನೆ ಸಮ ...{Loading}...

ಒಡೆದುದಿಳೆಯೆನೆ ಸಮ ವಿಷಮದುರಿ
ಗಡಲು ಶಿವ ಶಿವಯೆನೆ ನಿಹಾರದ
ದಡಿಗ ದಾನವರೈದಿ ಕವಿದುದು ಕೆದರಿ ಸುರಬಲವ
ಫಡ ಫಡಿದಿರಾಗಲಿ ಸುರೇಂದ್ರನ
ತುಡುಕ ಹೇಳಾ ಕಾಲವಿದಲಾ
ತೊಡರೆನುತ ಹೊಯ್ದರುಬಿತಸುರರು ಸುರರ ಸಂದಣಿಯ ॥32॥

೦೩೩ ಮುರಿದುದಮರರು ಮತ್ತೆ ...{Loading}...

ಮುರಿದುದಮರರು ಮತ್ತೆ ಬೊಬ್ಬಿರಿ
ದುರುಬಿದೆನು ಹೆಸರೆನಿಸಿದಸುರರ
ತರಿದೆನದರೊಳು ಕೋಟಿ ಸಂಖ್ಯೆಯನೈಂದ್ರ ಬಾಣದಲಿ
ಹರಿದುದಮರಾರಿಗಳು ಕೋಟೆಯ
ಹೊರಗೆ ಸುರಬಲವೌಕಿ ಬಿಟ್ಟುದು
ತುರುಗಿತಮರರು ಖಳನ ದುರ್ಗದ ತುದಿಯ ತೆನೆಗಳಲಿ ॥33॥

೦೩೪ ಎಲೆಲೆ ಸುರಪತಿಯಾಳು ...{Loading}...

ಎಲೆಲೆ ಸುರಪತಿಯಾಳು ಕೋಟೆಯ
ನಿಳಿವುತಿದೆ ನಡೆಯೆನುತ ದಾನವ
ರುಲಿದು ಕವಿದುದು ಖಾತಿಯಲಿ ಮಿಗೆ ಭಾಷೆಗಳ ಕೊಡುತ
ತಲೆಯ ಹೊಯ್ದಡೆಗೆಡಹು ಸುರಪನ
ಲಲನೆಯರ ಮುಂದಣ ವಿಕಾರಿಗ
ಳೆಲವೊ ಸರಿಯೋ ಪೂತು ಮಝಯೆನುತೈದಿದರು ಭಟರು ॥34॥

೦೩೫ ಏನನೆಮ್ಬೆನು ಜೀಯ ...{Loading}...

ಏನನೆಂಬೆನು ಜೀಯ ಬಳಿಕಾ
ದಾನವಾಧಿಪರುಬ್ಬೆಯನು ಸು
ಮ್ಮಾನವನು ತರಹರಿಸಲಳವೇ ಖಳರ ಗಲ್ಲಣೆಯ
ವೈನತೇಯನ ಪಕ್ಷಗತ ಪವ
ಮಾನನಂತಿರೆ ಭಟರ ಸುಯ್ಲಿನ
ಲಾ ನಿರೂಢಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ ॥35॥

೦೩೬ ತೋರು ತೋರಮರೇನ್ದ್ರನಾವೆಡೆ ...{Loading}...

ತೋರು ತೋರಮರೇಂದ್ರನಾವೆಡೆ
ತೋರಿಸೈರಾವತವದೆತ್ತಲು
ತೋರಿಸುಚ್ಚೈಃ ಶ್ರವವನೆಲ್ಲಿಹರಗ್ನಿ ಯಮಗಿಮರು
ತೋರಿರೈ ಕೈಗುಣವನಸುರರ
ಗಾರುಗೆದರಿದ ಗರ್ವಿತರ ಮೈ
ದೋರ ಹೇಳಾ ಕಾಣಬಹುದೆನುತುರುಬಿದರು ಭಟರು ॥36॥

೦೩೭ ಕರೆದರವದಿರು ಕಲ್ಪಮೇಘದ ...{Loading}...

ಕರೆದರವದಿರು ಕಲ್ಪಮೇಘದ
ಬಿರುವಳೆಯವೊಲು ಸರಳನನಿತುವ
ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಶರವ
ಅರಿಯರೆನ್ನನು ಶಕ್ರನೆಂದೇ
ತರುಬಿ ದಿಙ್ಮಂಡಲವ ಮುಸುಕಿದ
ರಿರಿತಕಂಜದ ದಿಟ್ಟನಾವನು ಸುರರ ಥಟ್ಟಿನಲಿ ॥37॥

೦೩೮ ಝಗ ಝಗಿಪ ...{Loading}...

ಝಗ ಝಗಿಪ ಬಾಣಾಗ್ನಿ ಭುಗುಭುಗು
ಭುಗಿಲೆನಲು ದಿವ್ಯಾಸ್ತ್ರ ತತಿಯಲಿ
ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ
ವಿಗಡರದ ಲೆಕ್ಕಿಸದೆ ಲೋಟಿಸಿ
ಮಗುಚಿದರು ಮದ್ಬಾಣ ಮಹಿಮೆಯ
ನೊಗಡಿಸಿತು ಕಾಲಾಗ್ನಿ ಕಾಲಾಂತಕರಿಗಾ ಸಮರ ॥38॥

೦೩೯ ದೊರೆಗಳೇರಿತು ರಥ ...{Loading}...

ದೊರೆಗಳೇರಿತು ರಥ ತುರಂಗಮ
ಕರಿಗಳಲಿ ಕಾಲಾಳ ಬಿಂಕವ
ನರಸ ಬಣ್ಣಿಸಲರಿಯೆನಾಸುರ ಕರ್ಮ ಕಲಹವಲೆ
ಸರಿಗರೆದ್ದುದು ಮೂರು ಕೋಟಿಯ
ಸುರರು ಸರಿಗಳಲಿಟ್ಟರಶನಿಯ
ಶರದಲೆಡೆಯಲಿ ತರುಬಿದರು ಕೈ ಸೋತುದೆನಗೆಂದ ॥39॥

೦೪೦ ಲಟಕಟಿಸುವಾ ಮೂರು ...{Loading}...

ಲಟಕಟಿಸುವಾ ಮೂರು ಕೋಟಿಯ
ಭಟರು ಕರೆದರು ಕಲುವಳೆಯನು
ಬ್ಬಟೆಯನದನೇನೆಂಬೆನವದಿರ ಸಮರ ಸಂಭ್ರಮವ
ಕುಟಿಲ ಕದನದೊಳೊದಗಿತದು ಕಲು
ಗುಟಿಗ ಶರ ಶತಕೋಟಿಯಲಿ ಪಡಿ
ಭಟಬಲವ ಬೆದರಿಸಿದೆ ಚಿತ್ತೈಸೆಂದನಾ ಪಾರ್ಥ ॥40॥

೦೪೧ ತೆರಳದವದಿರು ಹೂಡಿದರು ...{Loading}...

ತೆರಳದವದಿರು ಹೂಡಿದರು ದ
ಳ್ಳುರಿಯ ಧಾರೆಯ ಪಾವಕಾಸ್ತ್ರವ
ನರಸ ಹೊಗೆದುದು ಭುವನ ಹೊಯ್ದುದು ಝಳ ಜಗತ್ರಯವ
ಸರಕುದೆಗೆದುದು ಸತ್ಯಲೋಕಕೆ
ತರತರದ ಜಗವಿಂದ್ರಸಾರಥಿ
ಜರಿದು ಜವಗುಂದಿದನು ಜಾಡಿಸುವನಲನುಬ್ಬೆಯಲಿ ॥41॥

೦೪೨ ಸಾರಥಿಯ ಸನ್ತೈಸಿ ...{Loading}...

ಸಾರಥಿಯ ಸಂತೈಸಿ ತೇರಿನ
ವಾರುವಂಗಳ ನೇಣನೋಜೆಯೊ
ಳೋರಣಿಸಿ ಸಂವರಿಸಿ ರಥವನು ವರುಣ ಬಾಣದಲಿ
ವಾರಿಧಿಯ ಕೆದರಿದೆನು ಕೆಟ್ಟವು
ಭೂರಿಗಿಡಿಗಳು ಮಾರುತನ ಕೈ
ವಾರ ಕುಂದಿದುದಸುರ ಮುಖದನಲಾಸ್ತ್ರ ಪರಿಹರಿಸಿ ॥42॥

೦೪೩ ಅವರು ಮಗುಳೆಚ್ಚರು ...{Loading}...

ಅವರು ಮಗುಳೆಚ್ಚರು ಶಿಲೀಮುಖ
ದವಯವದೊಳುಬ್ಬೆದ್ದು ಗಿರಿಗಳು
ಕವಿಯೆ ಕಡಿದೊಟ್ಟಿದೆನು ಭಾರಿಯ ವಜ್ರಬಾಣದಲಿ
ಅವರು ತಿಮಿರಾಸ್ತ್ರದಲಿ ಕೆತ್ತರು
ಭುವನ ನಯನದ ಕದವನಾಗಳೆ
ರವಿಯ ಶರದಲಿ ಮುರಿದೆನಗುಳಿಯನರಸ ಕೇಳ್ ಎಂದ ॥43॥

೦೪೪ ಬಳಿಕ ಸುರಿದರು ...{Loading}...

ಬಳಿಕ ಸುರಿದರು ಹಾವುಗಳ ಹೆ
ಮ್ಮಳೆಯನಲ್ಲಿಗೆ ಗರುಡ ಬಾಣವ
ಸುಳಿಸಿದೆನು ಬಳಿಕಾದುದರ್ಧಗ್ರಾಸವಾ ಶರಕೆ
ಉಲಿದು ದನುಜರು ಮತ್ತೆ ಕೆಂಡದ
ಮಳೆಯ ಕರೆದರು ಮರಳಿ ಜಲಧಿಯ
ತುಳುಕಿದೆನು ತೊಡಕಾಯ್ತು ಸಾರಥಿ ಮತ್ತೆ ಬಸವಳಿದ ॥44॥

೦೪೫ ಸಾರಥಿತ್ವದ ಕೈಮೆ ...{Loading}...

ಸಾರಥಿತ್ವದ ಕೈಮೆ ತತ್ಪ್ರತಿ
ಕಾರ ಶರ ಸಂಧಾನವೆರಡರ
ಭಾರ ಬಿದ್ದುದು ಮೇಲೆ ದನುಜರ ಮೂರು ಕೋಟಿಯದು
ಧೀರರಾತ್ಮಸ್ತುತಿಗೆ ನಾಚದ
ರಾರು ಜೀಯ ಮಹಾಹವದ ವಿ
ಸ್ತಾರವನು ಮಾತಲಿಯ ಕೈಯಲಿ ಚಿತ್ತವಿಸಿಯೆಂದ ॥45॥

೦೪೬ ತೊಡಚಿದೆನು ಬೊಮ್ಮಾಸ್ತ್ರವನು ...{Loading}...

ತೊಡಚಿದೆನು ಬೊಮ್ಮಾಸ್ತ್ರವನು ಹುರಿ
ಯೊಡೆದುದಸುರರು ಮಲೆತವರನಿ
ಕ್ಕಡಿಯ ಮಾಡಿತು ಬಂದುದಳಿವು ನಿವಾತಕವಚರಿಗೆ
ಕಡುಹಿನಿಂದ್ರಾಗ್ನೇಯ ವಾರುಣ
ದಡಬಳಿಗರನು ಬಾಚಿದವು ಬರ
ಸಿಡಿಲ ಸೆರೆ ಬಿಟ್ಟಂತೆ ಕಳಚಿದವಸುರ ಬಲದಸುವ ॥46॥

೦೪೭ ಕಾಳ ದನುಜರು ...{Loading}...

ಕಾಳ ದನುಜರು ಮೂರು ಕೋಟಿಯೊ
ಳಾಳುಳಿಯದಕ್ಕಾಡಿತಮರರ
ಸೂಳೆಯರ ಸೆರೆ ಬಿಟ್ಟುದರಿ ನಗರೋಪಕಂಠದಲಿ
ಧೂಳಿಪಟವಾಯಿತು ಹಿರಣ್ಯ ಪು
ರಾಲಯದ ನೆಲೆಗಟ್ಟು ಮರಳಿದು
ಕಾಲಕೇಯರ ಪುರಕೆ ಬಂದೆನು ರಾಯ ಕೇಳ್ ಎಂದ ॥47॥

೦೪೮ ಕೆರಳಿತಲ್ಲಿ ನಿವಾತಕವಚರ ...{Loading}...

ಕೆರಳಿತಲ್ಲಿ ನಿವಾತಕವಚರ
ಮರಣ ವಾರ್ತೆಯ ಕೇಳಿದಸುರರು
ಪುರದ ಬಾಹೆಯೊಳಡ್ಡಹಾಯ್ದರು ತರುಬಿದರು ರಥವ
ಅರಸ ಚಿತ್ತೈಸವದಿರಲಿ ಪರಿ
ಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ ॥48॥

೦೪೯ ಬೀಸಿದರು ಬಿರುಗಾಳಿಯಾಗಿ ...{Loading}...

ಬೀಸಿದರು ಬಿರುಗಾಳಿಯಾಗಿ ಮ
ಹಾ ಸಮುದ್ರದ ನೂಕು ತೆರೆಯಲಿ
ಬೇಸರಿಸಿದರು ಹರಿದರವನಿಯಲಗ್ನಿ ರೂಪಾಗಿ
ಆಸುರದ ತಮವಾಗಿ ರವಿಶತ
ದಾಸರಿನ ಬಿಸಿಲಾಗಿ ಮಾಯಾ
ಭ್ಯಾಸಿಗಳು ಮೋಹಿಸುವರದನೇ ಬಣ್ಣಿಸುವೆನೆಂದ ॥49॥

೦೫೦ ಘೋರತರವದು ಬಳಿಕ ...{Loading}...

ಘೋರತರವದು ಬಳಿಕ ತತ್ಪ್ರತಿ
ಕಾರವಿತರರಿಗಿಂದುಮೌಳಿಯ
ಸಾರತರ ಕೃಪೆಯಾಯ್ತಲೇ ಸರಹಸ್ಯ ಸಾಂಗದಲಿ
ಬಾರಿಸಿದುದಾವಂಗದಲಿ ಮಾ
ಯಾ ರಚನೆಯಾ ವಿಧದಲಾ ಮಾ
ಯಾ ರಚನೆಯನು ಸೀಳಿ ಬಿಸುಟೆನು ಶಿಲ್ಪದಲಿ ಖಳರ ॥50॥

೦೫೧ ಮುರಿದುದಸುರರ ಮಾಯೆ ...{Loading}...

ಮುರಿದುದಸುರರ ಮಾಯೆ ಕಾಹಿನೊ
ಳೆರೆದ ರಸದವೊಲವರು ನಿಜದಲಿ
ತರುಬಿ ನಿಂದರು ತೂಳಿದರು ಗಜಹಯ ರಥೌಘದಲಿ
ತರಿದವುಗಿದವು ತುಂಡಿಸಿದವಗಿ
ದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ ॥51॥

೦೫೨ ಜೀಯ ವಿಗಡ ...{Loading}...

ಜೀಯ ವಿಗಡ ಬ್ರಹ್ಮಶರವಿಂ
ದ್ರಾಯುಧದ ಮುಂಗುಡಿಯಲಿರಿದುದು
ಮಾಯಕಾರರ ಮೋಹರವನುಬ್ಬಟೆ ಚತುರ್ಬಲವ
ಹೋಯಿತಸುರರ ಸೇನೆ ಸರಿದುದು
ನಾಯಕರು ನಾನಾ ದಿಗಂತ
ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳ್ ಎಂದ ॥52॥

೦೫೩ ಕಡುಹುವಗ್ಗದ ಕಾಲಕೇಯರ ...{Loading}...

ಕಡುಹುವಗ್ಗದ ಕಾಲಕೇಯರ
ಗಡಣವಡಗಿತು ಸುರರ ಬಲುಸೆರೆ
ಬಿಡಿಸಿದೆವು ಬಳಿಕಾಯ್ತು ಕಡುಸುಮ್ಮಾನ ಸುರಕುಲಕೆ
ಒಡೆದುದಿಳೆಯೆನೆ ಬಾಹುವಿನ ಬಿರು
ನುಡಿಯ ಕೈಗಳ ತುದಿವೆರಳ ಬೊ
ಬ್ಬಿಡಿಕೆಗಳ ಸುರಭಟರು ಹರಿದರು ಮುಂದೆ ಸುರಪುರಕೆ ॥53॥

೦೫೪ ಕಟ್ಟು ಗುಡಿಯನು ...{Loading}...

ಕಟ್ಟು ಗುಡಿಯನು ಖೋಡಿಯೇ ಜಗ
ಜಟ್ಟಿಗಳು ನುಗ್ಗಾಯ್ತಲೇ ನೀ
ನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ
ಕೆಟ್ಟುದಹಿತ ನಿವಾತಕವಚರ
ಥಟ್ಟು ಹುಡಿ ಹುಡಿಯಾಯ್ತು ದನುಜರ
ಹುಟ್ಟುವುರಿದುದು ಜೀಯ ಚಿತ್ತೈಸೆಂದರಿಂದ್ರಂಗೆ ॥54॥

೦೫೫ ಕಾಲಕೇಯರ ನಗರಿಯಲಿ ...{Loading}...

ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯು ದಿವಿಜರ
ಸೂಳೆಯರು ಸೆರೆ ಬಿಟ್ಟು ಬಂದರು ಯಕ್ಷ ಕಿನ್ನರರ
ಕಾಲ ಸಂಕಲೆ ಕಡಿದವಾ ಖಳ
ರೂಳಿಗಕೆ ಕಡೆಯಾಯ್ತು ಸುರಪುರ
ದಾಳುವೇರಿಯ ಕಾಹು ತೆಗೆಯಲಿಯೆಂದರಾ ಚರರು ॥55॥

೦೫೬ ಪುರದ ಬಾಹೆಯ ...{Loading}...

ಪುರದ ಬಾಹೆಯ ಕೋರಡಿಯ ಸಂ
ವರಣೆ ತೆಗೆಯಲಿ ನಿರ್ಭಯದಿ ಸಂ
ಚರಿಸುವುದು ನಂದನದೊಳಗೆ ನಿಮ್ಮಡಿಯ ರಾಣಿಯರು
ತರತರದ ಕೊತ್ತಳದ ಕಾಹಿನ
ಸುರಭಟರು ಸುಖನಿದ್ರೆಗೈಯಲಿ
ನಿರುತ ನಿಜನಿಳಯದೊಳಗೆಂದುದು ಸುರಜನವ್ರಾತ ॥56॥

೦೫೭ ಕೇಳಿದನು ಹರುಷಾಶ್ರು ...{Loading}...

ಕೇಳಿದನು ಹರುಷಾಶ್ರು ಹೊದಿಸಿದ
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮ ಪುಳಕದ ಸರ್ವಸೌಖ್ಯದಲಿ
ಬಾಲೆಯರ ಬರಹೇಳು ರತುನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿಮಂಡಿತಚರಣನೆದ್ದನು ಬಂದನಿದಿರಾಗಿ ॥57॥

೦೫೮ ಕವಿದುದಮರವ್ರಾತ ಕಾನ್ತಾ ...{Loading}...

ಕವಿದುದಮರವ್ರಾತ ಕಾಂತಾ
ನಿವಹ ಹೊರವಂಟುದು ಸುರೇಂದ್ರನ
ಭವನದಲಿ ಗುಡಿ ನೆಗಹಿತಮರಾವತಿಯ ಚೌಕದಲಿ
ತವತವಗೆ ತನಿವರಿವ ಜನದು
ತ್ಸವವನದನೇನೆಂಬೆನಂದಿನ
ದಿವಸದೊಸಗೆಯನಮರ ಲೋಕದೊಳರಸ ಕೇಳ್ ಎಂದ ॥58॥

೦೫೯ ಇದಿರು ಬನ್ದನು ...{Loading}...

ಇದಿರು ಬಂದನು ಪದಯುಗದಲೆರ
ಗಿದರೆ ಬಿಗಿದಪ್ಪಿದನು ಸುಮ್ಮಾ
ನದ ಸಗಾಢವನೇನನೆಂಬೆನು ಸಾವಿರಾಲಿಗಳ
ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳಲೆನ್ನ
ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷ ಕೃಪೆಯೆಂದ ॥59॥

೦೬೦ ಸುರರು ಕೊಣ್ಡಾಡಿದರು ...{Loading}...

ಸುರರು ಕೊಂಡಾಡಿದರು ಸುರಮುನಿ
ವರರ ಪರಮಾಶೀರ್ವಚೋ ವಿ
ಸ್ತರಕೆ ಫಲವಿದೆಲಾ ಭವತ್ಕರುಣಾಂಬಕಾಲೋಕ
ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬ
ಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ ॥60॥

೦೬೧ ಲೇಸು ಮಾಡಿದೆ ...{Loading}...

ಲೇಸು ಮಾಡಿದೆ ನಾಕವನು ಖಳ
ರೀಸು ದಿವಸ ವಿಭಾಡಿಸಿದರೆ ಸು
ರೇಶನಾಪತ್ತಾಪ ನಿರ್ವಾಪಣವ ರಚಿಸಿದೆಲ
ಈಸು ಪುಣ್ಯೋದಯಕೆ ಪೂರ್ವಮ
ಹೀಶಕುಲ ನೋಂತುದುಯೆನುತ ಸಂ
ತೋಷಮಯ ಜಲಧಿಯಲಿ ತೇಂಕಾಡಿದನು ಯಮಸೂನು ॥61॥

೦೬೨ ಹೊಗಳಿ ನಿಲ್ಲದು ...{Loading}...

ಹೊಗಳಿ ನಿಲ್ಲದು ಜಿಹ್ವೆ ತೆಕ್ಕೆಯ
ಸೊಗಸಿನಲಿ ಮೈ ದಣಿಯದೀಕ್ಷಣ
ಯುಗಳ ಬೀಯದು ನೋಡಿ ಪಾರ್ಥನ ಮಾತ ಸವಿಸವಿದು
ತೆಗೆದು ನಿಲ್ಲದು ಕರ್ಣಯುಗ ಸುರ
ನಗರಿಯುತ್ತಮ ಗಂಧ ಭರದಲಿ
ಮುಗಿಯದರಸನ ಗಂಧವಹವವನೀಶ ಕೇಳ್ ಎಂದ ॥62॥

೦೬೩ ನೃಪನ ಮುದವನು ...{Loading}...

ನೃಪನ ಮುದವನು ಭೀಮಸೇನನ
ವಿಪುಳ ಸುಮ್ಮಾನವನು ನಕುಲನ
ಚಪಲ ಮದವನು ಪುಳಕವನು ಸಹದೇವನವಯವದ
ದ್ರುಪದಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನಂದವನು ಬಣ್ಣಿಸಲರಿದು ತನಗೆಂದ ॥63॥

೦೬೪ ಶಿವನಘಾಟದ ಶರ ...{Loading}...

ಶಿವನಘಾಟದ ಶರ ಚತುರ್ದಶ
ಭುವನ ಭಂಜನವಿದು ಮದೀಯಾ
ಹವಕೆ ಹೂಣಿಗನಾಯ್ತಲಾ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀ ಶಾಂ
ಭವ ಮಹಾಸ್ತ್ರ ಪ್ರೌಢ ಕೇಳೀ
ವಿವರಣವ ಕಾಂಬರ್ತಿಯಾಯ್ತೆಂದನು ಧನಂಜಯಗೆ ॥64॥

೦೬೫ ಜೀಯ ನಿಮ್ಮರ್ತಿಯನು ...{Loading}...

ಜೀಯ ನಿಮ್ಮರ್ತಿಯನು ಶಂಭುವಿ
ನಾಯುಧದಲೇ ಸಲಿಸಿದಪೆನಾ
ಗ್ನೇಯ ವಾರುಣವೈಂದ್ರ ಕೌಬೇರಾಸ್ತ್ರ ಕೌಶಲವ
ಆಯತವ ತೋರಿಸುವೆನೀಗಳ
ನಾಯತವು ರವಿ ತುರಗ ರಾಜಿಗೆ
ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ ॥65॥

೦೬೬ ಅರಸ ಕಳುಹಿದನಿನ್ದ್ರ ...{Loading}...

ಅರಸ ಕಳುಹಿದನಿಂದ್ರ ಸೂತನ
ನರಮನೆಗೆ ಬಂದನು ಧನಂಜಯ
ವೆರಸಿ ಪರ್ಣದ ಚೌಕಿಗೆಯಲಿ ಮುನೀಂದ್ರ ಮೇಳದಲಿ
ಅರಸಿ ಬಣ್ಣದ ಸೊಡರ ಬಲಿದಳು
ಹರಸಿದರು ಮುನಿ ವಧುಗಳಕ್ಷತೆ
ವೆರಸಿ ಗದುಗಿನ ವೀರನಾರಾಯಣನ ಮೈದುನನ ॥66॥

+೧೨ ...{Loading}...