೦೦೦ ಸೂ ಕಣ್ಡನಡವಿಯೊಳನಿಲಜನನಾ ...{Loading}...
ಸೂ. ಕಂಡನಡವಿಯೊಳನಿಲಜನನಾ
ಖಂಡಲನ ತನುಜನ ಪತಾಕಾ
ದಂಡದಲಿ ನಿಲುವಂತೆ ವರವನು ಪಡೆದನಾ ಭೀಮ
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
ಸೂಚನೆ : ಅರಣ್ಯದಲ್ಲಿ ಹನುಮಂತನನ್ನು ಕಂಡು, ಇಂದ್ರ ಸುತನಾದ ಅರ್ಜುನನ ಧ್ವಜದಲ್ಲಿ ನಿಲ್ಲುವಂತೆ ಭೀಮಸೇನನು ಅವನಿಂದ ವರವನ್ನು ಪಡೆದನು.
ಪದಾರ್ಥ (ಕ.ಗ.ಪ)
ಸರೋಮ ಪುಳಕ - ರೋಮಾಂಚನ
ನಿವಾಳಿ - ಆರತಿ
ಮೂಲ ...{Loading}...
ಸೂ. ಕಂಡನಡವಿಯೊಳನಿಲಜನನಾ
ಖಂಡಲನ ತನುಜನ ಪತಾಕಾ
ದಂಡದಲಿ ನಿಲುವಂತೆ ವರವನು ಪಡೆದನಾ ಭೀಮ
೦೦೧ ಕೇಳು ಜನಮೇಜಯ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನರ ನಾರಾಯಣಾಶ್ರಮ
ಕೂಲವತಿಗಳ ನಂದನದ ನಿರ್ಮಳ ಸರೋವರದ
ಕೇಳಿಕೆಯ ನವಿಲುಗಳ ತುಂಬಿಯ
ಮೇಳವದ ಗೀತದ ವಿನೋದದ
ಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ ॥1॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಜನಮೇಜಯನೇ ಕೇಳು, ಧರ್ಮರಾಜನು ನರನಾರಾಯಣಾಶ್ರಮದ ನದಿ, ಉಪವನ, ಸರೋವರ, ನವಿಲು, ತುಂಬಿಗಳ ಮೇಳಗೀತ ವಿನೋದಗಳಿಂದ ಕೂಡಿದ ವನವಾಸವೆಂಬ ಸಾಮ್ರಾಜ್ಯವನ್ನು ಚೆನ್ನಾಗಿ ಆಳಿದನು.
ಪದಾರ್ಥ (ಕ.ಗ.ಪ)
ಕೂಲವತಿ-ನದಿ
ಮೂಲ ...{Loading}...
ಕೇಳು ಜನಮೇಜಯ ಧರಿತ್ರೀ
ಪಾಲ ನರ ನಾರಾಯಣಾಶ್ರಮ
ಕೂಲವತಿಗಳ ನಂದನದ ನಿರ್ಮಳ ಸರೋವರದ
ಕೇಳಿಕೆಯ ನವಿಲುಗಳ ತುಂಬಿಯ
ಮೇಳವದ ಗೀತದ ವಿನೋದದ
ಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ ॥1॥
೦೦೨ ಪರಮ ಧರ್ಮಶ್ರವಣ ...{Loading}...
ಪರಮ ಧರ್ಮಶ್ರವಣ ಸೌಖ್ಯದೊ
ಳರಸನಿರೆ ಬದರಿಯಲಿ ಪೂರ್ವೋ
ತ್ತರದ ದೆಸೆವಿಡಿದೆಸಗಿತತಿಶಯ ಗಂಧ ಬಂಧುರದ
ಭರಣಿ ಮನ್ಮಥ ಪೋತ ವಣಿಜನ
ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮೀರಣನಾ ಮಹಾದ್ರಿಯಲಿ ॥2॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬದರಿಕಾಶ್ರಮದಲ್ಲಿ ಧರ್ಮಶ್ರವಣಾನಂದದಲ್ಲಿ ಅರಸನಿದ್ದನು. ಆಗ ಸುಗಂಧದ ಭರಣಿ, ಮನ್ಮಥನೆಂಬ ಸಮುದ್ರದ ವ್ಯಾಪಾರಿಯ ಹಡಗು, ಸೇವೆಯಲ್ಲಿ ತೊಡಗಿರುವ ಎಳೆದುಂಬಿಗಳ ದಂಡು ಎಂಬ ಹಾಗೆ ಈಶಾನ್ಯ ದೆಸೆಯಿಂದ ಸುಗಂಧಭರಿತವಾದ, ಮಂದಾನಿಲವು ಬೀಸಿತು.
ಪದಾರ್ಥ (ಕ.ಗ.ಪ)
ಪೋತ - ಸಮುದ್ರದ ವ್ಯಾಪಾರಿ -
ತರಣಿ - ದೋಣಿ
ಮೂಲ ...{Loading}...
ಪರಮ ಧರ್ಮಶ್ರವಣ ಸೌಖ್ಯದೊ
ಳರಸನಿರೆ ಬದರಿಯಲಿ ಪೂರ್ವೋ
ತ್ತರದ ದೆಸೆವಿಡಿದೆಸಗಿತತಿಶಯ ಗಂಧ ಬಂಧುರದ
ಭರಣಿ ಮನ್ಮಥ ಪೋತ ವಣಿಜನ
ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮೀರಣನಾ ಮಹಾದ್ರಿಯಲಿ ॥2॥
೦೦೩ ಸರಸ ಸೌಗನ್ಧಿಕದ ...{Loading}...
ಸರಸ ಸೌಗಂಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
ಮೊರೆದೊಗುವ ಮರಿದುಂಬಿಗಳ ಮೋ
ಹರದ ಮೋಡಾಮೋಡಿಯಲಿ ಡಾ
ವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ ॥3॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಸೌಗಂಧಿಕ ಪುಷ್ಪದ ಸುವಾಸನೆ, ಅದರೊqನೆ ತಿಳಿಗೊಳದ ಕಿರುತೆರೆಗಳು ಚೆಲ್ಲಿದ ತುಷಾರದ ತುಂತುರು, ಮರಿದುಂಬಿಗಳ ಗುಂಜಾರವ ಇವೆಲ್ಲಾ ಹೀಗೆ ಸಕಲ ಮುನಿಜನಗಳ ಐದೂ ಇಂದ್ರಿಯಗಳ ಪೈಕಿ ನಾಲ್ಕನ್ನು ಆವರಿಸಿತು
ಮೂಲ ...{Loading}...
ಸರಸ ಸೌಗಂಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
ಮೊರೆದೊಗುವ ಮರಿದುಂಬಿಗಳ ಮೋ
ಹರದ ಮೋಡಾಮೋಡಿಯಲಿ ಡಾ
ವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ ॥3॥
೦೦೪ ಮೇಲು ರತದಲಿ ...{Loading}...
ಮೇಲು ರತದಲಿ ಪರಿಮಳದ ವೈ
ಹಾಳಿಯಲಿ ಸಲೆ ಬೀದಿವರಿದು ಚ
ಡಾಳಿಸುವ ಸೊಗಸಿನಲಿ ಸೊಂಪಾದಳು ಸರೋಜಮುಖಿ
ಸೋಲಿಸಿತಲಾ ಚೂಣಿಯಲಿ ಸಂ
ಪಾಳಿಸಿದ ಸೌಗಂಧವಿನ್ನು ವಿ
ಶಾಲ ಪದುಮವದೆಂತುಟೆನುತವೆ ತೂಗಿದಳು ಶಿರವ ॥4॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬೀಸಿಬಂದ ಗಾಳಿಯಲ್ಲಿ ಅನುಭವಕ್ಕೆ ಬಂದ ಪರಿಮಳದ ವಿಶೇಷ ಸೊಗಸಿಗೆ ದ್ರೌಪದಿಯು ಮನಸೋತು, ಈ ಸುಗಂಧವೇ ಹೀಗಿರುವಾಗ ಆ ಹೂವು ಇನ್ನೆಷ್ಟು ಚೆನ್ನಾಗಿರಬಹುದೋ ಎಂದು ಯೋಚಿಸುತ್ತಾ ತಲೆದೂಗಿದಳು.
ಮೂಲ ...{Loading}...
ಮೇಲು ರತದಲಿ ಪರಿಮಳದ ವೈ
ಹಾಳಿಯಲಿ ಸಲೆ ಬೀದಿವರಿದು ಚ
ಡಾಳಿಸುವ ಸೊಗಸಿನಲಿ ಸೊಂಪಾದಳು ಸರೋಜಮುಖಿ
ಸೋಲಿಸಿತಲಾ ಚೂಣಿಯಲಿ ಸಂ
ಪಾಳಿಸಿದ ಸೌಗಂಧವಿನ್ನು ವಿ
ಶಾಲ ಪದುಮವದೆಂತುಟೆನುತವೆ ತೂಗಿದಳು ಶಿರವ ॥4॥
೦೦೫ ಅರಸನಲಿ ಮೇಣ್ ...{Loading}...
ಅರಸನಲಿ ಮೇಣ್ ನಕುಲ ಸಹದೇ
ವರಲಿ ತನ್ನ ಮನೋರಥಕೆ ವಿ
ಸ್ತರಣವಾಗದು ನುಡಿವಡಿಲ್ಲರ್ಜುನ ಸಮೀಪದಲಿ
ಅರಿಭಯಂಕರ ಭೀಮನೇ ಗೋ
ಚರಿಸುವನಲಾಯೆನುತಲಾತನ
ಹೊರೆಗೆ ಬಂದಳು ನಗುತ ನುಡಿದಳು ಮಧುರ ವಚನದಲಿ ॥5॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ಈ ನನ್ನ ಮನೋರಥವನ್ನು ಯುಧಿಷ್ಠಿರ, ನಕುಲ ಸಹದೇವರುಗಳಲ್ಲಿ ಹೇಳಿ ಪ್ರಯೋಜನವಿಲ್ಲ. ಅರ್ಜುನನಲ್ಲಿ ಹೇಳೋಣವೆಂದರೆ ಅವನು ಸಮೀಪದಲ್ಲಿಲ್ಲ. ಶತ್ರುಭಯಂಕರನಾದ ಭೀಮಸೇನನೇ ಕಾಣಿಸುತ್ತಿದ್ದಾನೆ,” ಎಂದು ಅವನ ಬಳಿ ಬಂದು ನಗುತ್ತಾ ಪ್ರೀತಿಯಿಂದ ಮಾತಾಡಿಸಿದಳು.
ಮೂಲ ...{Loading}...
ಅರಸನಲಿ ಮೇಣ್ ನಕುಲ ಸಹದೇ
ವರಲಿ ತನ್ನ ಮನೋರಥಕೆ ವಿ
ಸ್ತರಣವಾಗದು ನುಡಿವಡಿಲ್ಲರ್ಜುನ ಸಮೀಪದಲಿ
ಅರಿಭಯಂಕರ ಭೀಮನೇ ಗೋ
ಚರಿಸುವನಲಾಯೆನುತಲಾತನ
ಹೊರೆಗೆ ಬಂದಳು ನಗುತ ನುಡಿದಳು ಮಧುರ ವಚನದಲಿ ॥5॥
೦೦೬ ಹಿರಿದು ಸೊಗಸಾಯ್ತೆನಗಪೂರ್ವದ ...{Loading}...
ಹಿರಿದು ಸೊಗಸಾಯ್ತೆನಗಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋರಥ ವ್ಯಥೆಯ
ಪರಿಹರಿಪುದೆನಲಬುಜವದನೆಯ
ಕುರುಳನುಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗದಾಯುಧವ ॥6॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
6ಗೀ ಅಪೂರ್ವವಾದ ಸುವಾಸನೆಯಲ್ಲಿ ಸುಖವೆನಿಸುತ್ತಿದೆ. ನೀನು ಆ ಕಮಲವನ್ನು ತಂದು ನನ್ನ ಮನೋರಥವನ್ನು ಈಡೇರಿಸಬೇಕು. ವ್ಯಥೆಯನ್ನು ನಿವಾರಿಸಬೇಕು." ಎಂದು ದ್ರೌಪದಿ ಹೇಳಲು, ಭೀಮನು ಅವಳ ಮುಂಗುರಳನ್ನು ಉಗುರಿನಿಂದ ತಿದ್ದಿ, ಆ ಕಮಲಪುಷ್ಪವನ್ನು ತಂದುಕೊಡುವೆನು ಎನ್ನುತ್ತಾ ಗದೆಯನ್ನು ಕೊಂಡನು.
ಮೂಲ ...{Loading}...
ಹಿರಿದು ಸೊಗಸಾಯ್ತೆನಗಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋರಥ ವ್ಯಥೆಯ
ಪರಿಹರಿಪುದೆನಲಬುಜವದನೆಯ
ಕುರುಳನುಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗದಾಯುಧವ ॥6॥
೦೦೭ ಬಿಗಿದು ಬತ್ತಳಿಕೆಯನು ...{Loading}...
ಬಿಗಿದು ಬತ್ತಳಿಕೆಯನು ಹೊನ್ನಾ
ಯುಗದ ಖಡ್ಗ ಶರಾಸನವ ಕೊಂ
ಡಗಧರನ ನೆನದನಿಲಸುತ ಹೊರವಂಟನಾಶ್ರಮವ
ಬಗಿದು ಹೊಕ್ಕನರಣ್ಯವನು ಬೊ
ಬ್ಬೆಗಳ ಬಿರುಬಿನ ಬಾಹುಸತ್ವದ
ವಿಗಡ ಭೀಮನ ಕಾಲುದುಳಿ ಕಂಪಿಸಿತು ಕಾನನವ ॥7॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬತ್ತಳಿಕೆಯನ್ನು ಬಿಗಿದು, ಚಿನ್ನದ ಹಿಡಿಯಿರುವ ಖಡ್ಗ ಮತ್ತು ಬಿಲ್ಲುಗಳನ್ನು ಹಿಡಿದು ಕೃಷ್ಣನನ್ನು ನೆನೆಯುತ್ತ ಭೀಮಸೇನನು ಬದರಿಕಾಶ್ರಮದಿಂದ ಹೊರಟನು. ಅರಣ್ಯವನ್ನು ಹೊಕ್ಕ ಭೀಮನ ಅಬ್ಬರ ಬಾಹುಬಲದ ಉರುಬು ಭಯಂಕರ ಕಾಲ್ತುಳಿತ ಇವುಗಳಿಗೆ ಅರಣ್ಯವೇ ಕಂಪಿಸಿತು.
ಪದಾರ್ಥ (ಕ.ಗ.ಪ)
ಆಯುಧ - ಆಯುಧದ ಹಿಡಿ
ಮೂಲ ...{Loading}...
ಬಿಗಿದು ಬತ್ತಳಿಕೆಯನು ಹೊನ್ನಾ
ಯುಗದ ಖಡ್ಗ ಶರಾಸನವ ಕೊಂ
ಡಗಧರನ ನೆನದನಿಲಸುತ ಹೊರವಂಟನಾಶ್ರಮವ
ಬಗಿದು ಹೊಕ್ಕನರಣ್ಯವನು ಬೊ
ಬ್ಬೆಗಳ ಬಿರುಬಿನ ಬಾಹುಸತ್ವದ
ವಿಗಡ ಭೀಮನ ಕಾಲುದುಳಿ ಕಂಪಿಸಿತು ಕಾನನವ ॥7॥
೦೦೮ ಒದರಿದರೆ ಪರ್ವತದ ...{Loading}...
ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿ
ದೊದೆಯ ಬಿದ್ದುವು ಬೇರು ಸಹಿತ ಮಹಾದ್ರುಮಾಳಿಗಳು
ಗದೆಯ ಹೊಯ್ಲಿನ ಗಂಡಶೈಲವೊ
ಕದಳಿಗಳೊ ತಾವರಿಯೆವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ ॥8॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅವನು ಜೋರಾಗಿ ಅಬ್ಬರಿಸಿದಾಗ ಪರ್ವತ ಶಿಖರದ ಕಲ್ಲುಗುಂಡುಗಳು ಕೆಳಗೆ ಉರುಳಿದವು. ಕಾಲಿನ ಒದೆತಕ್ಕೆ ಮಹಾವೃಕ್ಷಗಳು ಬೇರು ಸಹಿತ ಬಿದ್ದವು. ಭೀಮನ ಗದೆಗೆ ತಾಗಿ ಬಿದ್ದವುಗಳು ಬೆಟ್ಟಗಳೋ ಬಾಳೆಗಿಡಗಳೋ ಎಂಬುದೇ ತಿಳಿಯದಾಯಿತು. ಅವನ ನಡೆಯ ರಭಸಕ್ಕೆ ಗಿರಿ ಮರಗಿಡಗಳು ಮುರಿದು ಬಿದ್ದವು.
ಪದಾರ್ಥ (ಕ.ಗ.ಪ)
ಗಂಡ ಶೈಲ - ಪರ್ವತದ ಮೇಲಿಂದ ಉರುಳಿಬಿದ್ದ ಬಂಡೆ
ದ್ರುಮ - ಮರ
ಕದಳಿ - ಬಾಳೆ
ಮೂಲ ...{Loading}...
ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿ
ದೊದೆಯ ಬಿದ್ದುವು ಬೇರು ಸಹಿತ ಮಹಾದ್ರುಮಾಳಿಗಳು
ಗದೆಯ ಹೊಯ್ಲಿನ ಗಂಡಶೈಲವೊ
ಕದಳಿಗಳೊ ತಾವರಿಯೆವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ ॥8॥
೦೦೯ ಮುಡುಹು ಸೋಙ್ಕಿದೊಡಾ ...{Loading}...
ಮುಡುಹು ಸೋಂಕಿದೊಡಾ ಮಹಾದ್ರಿಗ
ಳೊಡನೆ ತೋರಹತರು ಕೆಡೆದುವಡಿ
ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು
ಒಡೆದುದಿಳೆ ಬೊಬ್ಬಿರಿತಕೀತನ
ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು ಮೀರಿ ನಡೆದನು ಭೀಮನಡವಿಯಲಿ ॥9॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪಾದದ ಹಿಮ್ಮಡಿ ಸೋಕಿದ ಕೂಡಲೇ ಮಹಾದ್ರಿಗಳು ಕಂಪಿಸಿ ಮರಗಳುರುಳಿದವು. ಹೆಜ್ಜೆಯಿಟ್ಟಾಗ ನೆಲವೇ ಕುಸಿಯಿತು. ಬೊಬ್ಬೆಗೆ ಭೂಮಿಯೇ ಒಡೆಯಿತು. ತೊಡೆಯ ಗಾಳಿಗೆ ಗಿಡ, ಕಿರುಮರಗಳು ಹಾರಿಹೋದವು. ಹೀಗೆ ಭೀಮನು ಮುಂದೆ ನಡೆದನು.
ಪದಾರ್ಥ (ಕ.ಗ.ಪ)
ಮುಡುಹು-ಕಾಲಹಿಮ್ಮಡಿ
ಹೆದ್ದೆವರು - ದೊಡ್ಡದಾಗಿ ಹೊರಚೆಲ್ಲಿದ ಮಣ್ಣು
ಮೂಲ ...{Loading}...
ಮುಡುಹು ಸೋಂಕಿದೊಡಾ ಮಹಾದ್ರಿಗ
ಳೊಡನೆ ತೋರಹತರು ಕೆಡೆದುವಡಿ
ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು
ಒಡೆದುದಿಳೆ ಬೊಬ್ಬಿರಿತಕೀತನ
ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು ಮೀರಿ ನಡೆದನು ಭೀಮನಡವಿಯಲಿ ॥9॥
೦೧೦ ಹುಲಿ ಕರಡಿ ...{Loading}...
ಹುಲಿ ಕರಡಿ ಕಾಡಾನೆ ಸಿಂಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿಮುರಿದು
ಹಳುವ ತಳಪಟವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬಂದನು ವನದ ಮಧ್ಯದಲಿ ॥10॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವನ ಧ್ವನಿಗೆ ಹುಲಿ ಕರಡಿ ಕಾಡಾನೆ ಸಿಂಹಗಳು ಯೋಜನಾಂತರ ಓಡಿಹೋದವು. ನೋಡುನೋಡುತ್ತಲೇ ಅರಣ್ಯವು ಹಾಳು ಬಿದ್ದು, ದಿಗ್ಗಜವು ತುಳಿದ ಬಾಳೆತೋಟದಂತಾಯಿತು. ಹೀಗೆ ಕಲಿಭೀಮನು ವನದ ಮಧ್ಯಭಾಗಕ್ಕೆ ಬಂದನು.
ಮೂಲ ...{Loading}...
ಹುಲಿ ಕರಡಿ ಕಾಡಾನೆ ಸಿಂಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿಮುರಿದು
ಹಳುವ ತಳಪಟವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬಂದನು ವನದ ಮಧ್ಯದಲಿ ॥10॥
೦೧೧ ಬಿರಿದವದ್ರಿಗಳನಿಲಸುತನು ...{Loading}...
ಬಿರಿದವದ್ರಿಗಳನಿಲಸುತನು
ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
ಶರಭ ಶಾರ್ದೂಲಂಗಳಿಲ್ಲ ವಿಲೋಚನಾಂತದಲಿ
ಮರಗಿರದ ಮೃಗಗಿಗದ ಮಾತೇ
ನರಸ ಭೀಮನ ದನಿಗೆ ಬೆಚ್ಚದೆ
ಗಿರಿ ಗುಹೆಗಳೇ ಮಲೆತು ನಿಂದವು ದನಿಗೆ ದನಿಗೊಡುತ ॥11॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮನ ಬೊಬ್ಬೆಗೆ ಪರ್ವತಗಳು ಬಿರುಕು ಬಿಟ್ಟವು. ಕಣ್ಣೆದುರಿನಲ್ಲಿ ಶರಭ ಶಾರ್ದೂಲಗಳು ನಿಲ್ಲದೆ ಓಡಿದವು. ಮರಗಿಡ, ಮೃಗಗಿಗದ ಮಾತೇಕೆ ? ಗಿರಿಗುಹೆಗಳು ಭೀಮನ ಧ್ವನಿಗೆ ಪ್ರತಿಧ್ವನಿ ನೀಡಿ ಮಲೆತು ನಿಂತವು.
ಮೂಲ ...{Loading}...
ಬಿರಿದವದ್ರಿಗಳನಿಲಸುತನು
ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
ಶರಭ ಶಾರ್ದೂಲಂಗಳಿಲ್ಲ ವಿಲೋಚನಾಂತದಲಿ
ಮರಗಿರದ ಮೃಗಗಿಗದ ಮಾತೇ
ನರಸ ಭೀಮನ ದನಿಗೆ ಬೆಚ್ಚದೆ
ಗಿರಿ ಗುಹೆಗಳೇ ಮಲೆತು ನಿಂದವು ದನಿಗೆ ದನಿಗೊಡುತ ॥11॥
೦೧೨ ಆ ಮಹಾದ್ರಿಯ ...{Loading}...
ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀಷಂಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
ಭೀಮ ವಿಕ್ರಮನಿದ್ದನೀಯು
ದ್ದಾಮ ಸಿಂಹಧ್ವನಿಗೆ ನಿದ್ರಾ
ತಾಮಸದ ತನಿಮದವಡಗೆ ಕಂದೆರೆದನಾ ಹನುಮ ॥12॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆ ಮಹಾ ಪರ್ವತದ ತಪ್ಪಲಿನಲ್ಲಿರುವ ಬಾಳೆ ತೋಟದಲ್ಲಿ ಶ್ರೀರಾಮನಾಮ ಭಜನೆಯನ್ನು ಮಾಡುತ್ತಾ ಹನುಮಂತನಿದ್ದನು. ಭೀಮನ ಅರಣ್ಯ ಗಮನದ ಸಿಂಹನಾದದಿಂದಾಗಿ ಧ್ಯಾನದ ಗುಂಗಿನಿಂದ ಎಚ್ಚರವಾಗಿ ಹನುಮನು ಕಣ್ತೆರೆದನು.
ಮೂಲ ...{Loading}...
ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀಷಂಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
ಭೀಮ ವಿಕ್ರಮನಿದ್ದನೀಯು
ದ್ದಾಮ ಸಿಂಹಧ್ವನಿಗೆ ನಿದ್ರಾ
ತಾಮಸದ ತನಿಮದವಡಗೆ ಕಂದೆರೆದನಾ ಹನುಮ ॥12॥
೦೧೩ ಏನಿದೆತ್ತಣ ರಭಸವೀ ...{Loading}...
ಏನಿದೆತ್ತಣ ರಭಸವೀ ಗಿರಿ
ಸಾನುವಿದಮಾನುಷ ವಿಹಾರ
ಸ್ಥಾನವಿವನಾರೋ ಮಹಾದೇವಾ ಪ್ರಚಂಡನಲ
ಈ ನಿನದವೆಮ್ಮಂದಿನಗ್ಗದ
ವಾನರರ ಗರ್ಜನೆಗೆ ಗುರುವಾ
ಯ್ತೇನನೆಂಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ ॥13॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇದೇನು ಈ ರಭಸ ? ಮನುಷ್ಯರಿಗೆ ಪ್ರವೇಶವಿಲ್ಲದ ಈ ಗಿರಿ ಪ್ರದೇಶದಲ್ಲಿ ಇವನಾರು ಪ್ರಚಂಡ ? ಶಿವಶಿವಾ… ಈ ಧ್ವನಿ ನಮ್ಮ ಆ ಕಾಲದ ಕಪಿಗಳ ಕೂಗಿಗಿಂತಲೂ ಹೆಚ್ಚಾಗಿದೆ. ಏನು ಹೇಳೋಣ? - ಎಂದು ಹನುಮಂತನು ಮೆಲ್ಲನೆ ಮಿಡುಕಿದನು.
ಮೂಲ ...{Loading}...
ಏನಿದೆತ್ತಣ ರಭಸವೀ ಗಿರಿ
ಸಾನುವಿದಮಾನುಷ ವಿಹಾರ
ಸ್ಥಾನವಿವನಾರೋ ಮಹಾದೇವಾ ಪ್ರಚಂಡನಲ
ಈ ನಿನದವೆಮ್ಮಂದಿನಗ್ಗದ
ವಾನರರ ಗರ್ಜನೆಗೆ ಗುರುವಾ
ಯ್ತೇನನೆಂಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ ॥13॥
೦೧೪ ಮುರಿಯದನ್ತಿರೆ ಲಘುವಿನಲಿ ...{Loading}...
ಮುರಿಯದಂತಿರೆ ಲಘುವಿನಲಿ ಹೆ
ಮ್ಮರನನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿ ದಿಶಾಪಟ ನುಡಿಸಿದನು ಪವಮಾನ ನಂದನನ
ಭರವಿದೆಲ್ಲಿಗೆ ಮತ್ರ್ಯನೋ ಖೇ
ಚರನೊ ದೈತ್ಯನೊ ದಿವಿಜನೋ ಕಿ
ನ್ನರನೊ ನೀನಾರೆಂದು ಭೀಮನ ನುಡಿಸಿದನು ಹನುಮ ॥14॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಸುಲಭದಿಂದ ಮುರಿಯದಿರುವ ಹೆಮ್ಮರವನ್ನು ಒರಗಿ ಕುಳಿತಿದ್ದ ಅರಿಭಯಂಕರನಾದ ಹನುಮಂತನು ಭೀಮಸೇನನನ್ನು ನುಡಿಸಿದನು. ‘ಇದೆಲ್ಲಿಗೆ ಪಯಣ, ನೀನು ಮತ್ರ್ಯನೊ, ಗಂಧರ್ವನೊ, ದೈತ್ಯನೊ, ದೇವತೆಯೊ, ಕಿನ್ನರನೊ, ನೀನು ಯಾರು ?’ ಎಂದು ವಿಚಾರಿಸಿದನು.
ಪದಾರ್ಥ (ಕ.ಗ.ಪ)
ಮತ್ರ್ಯ - ಮನುಷ್ಯ
ಖೇಚರ - ಆಕಾಶದಲ್ಲಿ ಚಲಿಸುವವನು - ಗಂಧರ್ವ
ಮೂಲ ...{Loading}...
ಮುರಿಯದಂತಿರೆ ಲಘುವಿನಲಿ ಹೆ
ಮ್ಮರನನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿ ದಿಶಾಪಟ ನುಡಿಸಿದನು ಪವಮಾನ ನಂದನನ
ಭರವಿದೆಲ್ಲಿಗೆ ಮತ್ರ್ಯನೋ ಖೇ
ಚರನೊ ದೈತ್ಯನೊ ದಿವಿಜನೋ ಕಿ
ನ್ನರನೊ ನೀನಾರೆಂದು ಭೀಮನ ನುಡಿಸಿದನು ಹನುಮ ॥14॥
೦೧೫ ನಾವು ಮತ್ರ್ಯರು ...{Loading}...
ನಾವು ಮತ್ರ್ಯರು ದೂರದಲಿ ರಾ
ಜೀವಗಂಧ ಸಮೀರಣನ ಸಂ
ಭಾವನೆಗೆ ಸೊಗಸಿದಳು ಸತಿಯಾಕೆಯ ವಚಸ್ಸಿನಲಿ
ತಾವರೆಯ ತಹೆನೆನುತ ಸಿಂಹ ವಿ
ರಾವದಲಿ ವಿಕ್ರಮಿಸೆ ವಿಗಡನ
ದಾವರಿಸಿ ಬಲುಬಾಲ ತಡೆದುದು ಪವನಜನ ಪಥವ ॥15॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ಭೂಲೋಕದವರು, ದೂರದಲ್ಲಿರುವ ಕಮಲದ ಹೂವಿನ ಸುವಾಸನೆಗೆ ನನ್ನ ಹೆಂಡತಿ ಮಾರು ಹೋದಳು. ಅವಳ ಮಾತಿನಂತೆ ಅದನ್ನು ತರುವುದಕ್ಕಾಗಿ ಈ ಕಾಡಿಗೆ ಬಂದಿದ್ದೇನೆ’ ಎನ್ನುತ್ತಾ ಸಿಂಹನಾದ ಮಾಡುತ್ತಾ ಮುಂದೆ ನಡೆದಾಗ ಹನುಮಂತನ ಬಾಲ ಭೀಮನನ್ನು ತಡೆಯಿತು.
ಮೂಲ ...{Loading}...
ನಾವು ಮತ್ರ್ಯರು ದೂರದಲಿ ರಾ
ಜೀವಗಂಧ ಸಮೀರಣನ ಸಂ
ಭಾವನೆಗೆ ಸೊಗಸಿದಳು ಸತಿಯಾಕೆಯ ವಚಸ್ಸಿನಲಿ
ತಾವರೆಯ ತಹೆನೆನುತ ಸಿಂಹ ವಿ
ರಾವದಲಿ ವಿಕ್ರಮಿಸೆ ವಿಗಡನ
ದಾವರಿಸಿ ಬಲುಬಾಲ ತಡೆದುದು ಪವನಜನ ಪಥವ ॥15॥
೦೧೬ ಗದೆಯ ಮೊನೆಯಲಿ ...{Loading}...
ಗದೆಯ ಮೊನೆಯಲಿ ನೂಕಿದನು ರೋ
ಮದಲಿ ಚಲಿಸದು ಬಾಲ ನೋಡಿದ
ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ
ಒದೆದಡದ್ರಿಗಳಳಿವವೆನ್ನಂ
ಗದಲಿ ನಾ ಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ ॥16॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅದನ್ನು ಗದೆಯ ಮೊನೆಯಿಂದ ನೂಕಿದನು. ಆದರೆ ಬಾಲದ ರೋಮವೂ ಕೊಂಕಲಿಲ್ಲ. ಇದು ವಿಚಿತ್ರವಾಗಿದೆಯಲ್ಲಾ ಎಂದು ಆ ಕಪಿಯನ್ನು ಮಾತಾಡಿಸಿದನು. ‘ನಾನು ಒದೆದರೆ ಪರ್ವತಗಳೇ ನಾಶವಾಗುತ್ತವೆ. ದಾರಿಯಲ್ಲಿರುವ ಬಾಲವನ್ನು ತೆಗೆ’ ಎಂದು ಭೀಮ ಗರ್ಜಿಸಿದನು.
ಪದಾರ್ಥ (ಕ.ಗ.ಪ)
ಅದ್ರಿ- ಪರ್ವತ
ಬಲ್ಲಿದ - ಶೂರ
ಮೂಲ ...{Loading}...
ಗದೆಯ ಮೊನೆಯಲಿ ನೂಕಿದನು ರೋ
ಮದಲಿ ಚಲಿಸದು ಬಾಲ ನೋಡಿದ
ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ
ಒದೆದಡದ್ರಿಗಳಳಿವವೆನ್ನಂ
ಗದಲಿ ನಾ ಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ ॥16॥
೦೧೭ ನೀವು ಬಲ್ಲಿದರಿದಕೆ ...{Loading}...
ನೀವು ಬಲ್ಲಿದರಿದಕೆ ಸಂಶಯ
ವಾವುದಲ್ಲದೊಡೀ ಮದ ದ್ವಿಪ
ವೀ ವಿಹಗಕುಲವೀ ಮೃಗವ್ರಜವಂಜುವವೆ ನಿಮಗೆ
ನಾವು ವೃದ್ಧರು ನಮ್ಮ ಬಾಲವ
ನಾವು ಹದುಳಿಸಲಾರೆವೀಗಳು
ನೀವು ತೊಲಗಿಸಿ ಬಿಜಯ ಮಾಡುವುವೆಂದನಾ ಹನುಮ ॥17॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನೀವು ಬಲ್ಲಿದರು. ಸಂದೇಹವೇ ಇಲ್ಲ. ಇಲ್ಲವಾದರೆ ಈ ಕಾಡಾನೆಗಳು ಪ್ರಾಣಿಸಂಕುಲಗಳು, ಪಕ್ಷಿಕುಲಗಳೆಲ್ಲಾ ನಿಮಗೆ ಹೆದರುತ್ತವೆಯೇ ? ನಾವು ಮುದುಕರು, ನಮ್ಮ ಬಾಲವನ್ನು ಎತ್ತಿ ಬೇರೆಡೆ ಇಡಲಿಕ್ಕೂ ಅಶಕ್ತರು. ನೀವೇ ಅದನ್ನೆತ್ತಿಟ್ಟು ಮುಂದೆ ಹೋಗುವುದು’ ಎಂದು ಹನುಮಂತನು ಹೇಳಿದನು.
ಮೂಲ ...{Loading}...
ನೀವು ಬಲ್ಲಿದರಿದಕೆ ಸಂಶಯ
ವಾವುದಲ್ಲದೊಡೀ ಮದ ದ್ವಿಪ
ವೀ ವಿಹಗಕುಲವೀ ಮೃಗವ್ರಜವಂಜುವವೆ ನಿಮಗೆ
ನಾವು ವೃದ್ಧರು ನಮ್ಮ ಬಾಲವ
ನಾವು ಹದುಳಿಸಲಾರೆವೀಗಳು
ನೀವು ತೊಲಗಿಸಿ ಬಿಜಯ ಮಾಡುವುವೆಂದನಾ ಹನುಮ ॥17॥
೦೧೮ ಐಸಲೇ ತಪ್ಪೇನೆನುತ ...{Loading}...
ಐಸಲೇ ತಪ್ಪೇನೆನುತ ತನ
ಗೇಸು ಬಲುವುಂಟೈಸರಲಿ ಕ
ಟ್ಟಾಸುರದಲೌಂಕಿದನು ಬಾಲವನೊದರಿ ಬೊಬ್ಬಿಡುತ
ಗಾಸಿಯಾದನು ಪವನಸುತನೆ
ಳ್ಳೈಸು ಮಿಡುಕದು ಬಾಲ ಊಧ್ರ್ವ
ಶ್ವಾಸ ಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ ॥18॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೌದೇ, ತಪ್ಪೇನು’ ಎನ್ನುತ್ತಾ ಭೀಮಸೇನನು ತನ್ನಲ್ಲಿರುವ ಸಮಸ್ತ ಬಲವನ್ನು ಪ್ರಯೋಗಿಸಿ ಹನುಮನ ಬಾಲವನ್ನು ನೂಕಿದನು. ಆದರೆ ಅದು ಸ್ವಲ್ಪವೂ ಮಿಡುಕದಿದ್ದಾಗ ಭೀಮಸೇನನು ಘಾಸಿಗೊಂಡು ನಿಟ್ಟುಸಿರು ಬಿಟ್ಟನು.
ಮೂಲ ...{Loading}...
ಐಸಲೇ ತಪ್ಪೇನೆನುತ ತನ
ಗೇಸು ಬಲುವುಂಟೈಸರಲಿ ಕ
ಟ್ಟಾಸುರದಲೌಂಕಿದನು ಬಾಲವನೊದರಿ ಬೊಬ್ಬಿಡುತ
ಗಾಸಿಯಾದನು ಪವನಸುತನೆ
ಳ್ಳೈಸು ಮಿಡುಕದು ಬಾಲ ಊಧ್ರ್ವ
ಶ್ವಾಸ ಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ ॥18॥
೦೧೯ ತೆಗೆದು ಸೈರಿಸಿ ...{Loading}...
ತೆಗೆದು ಸೈರಿಸಿ ನಿಂದು ಹೊಯ್ವ
ಳ್ಳೆಗಳು ಡಾವರವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ
ಢಗೆಯಡಗೆ ಮರುವಲಗೆ ಗೌಡೊ
ತ್ತುಗಳ ಬಲಿದವಯವದ ಸತ್ರಾ
ಣಿಗಳ ದೇವನು ಠಾವುಡಿಯಲೊದಗಿದನು ಬಾಲದಲಿ ॥19॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮತ್ತೆ ಸಾವರಿಸಿಕೊಂಡು, ಹೊಯ್ದಾಡುತ್ತಿದ್ದ ಅಳ್ಳೆಗಳ ಡಾವರ ನಿಂತ ಮೇಲೆ ಢಗೆಯನ್ನು ಹೋಗಲಾಡಿಸಿಕೊಂಡು ಕರ್ಪೂರದ ತುಣುಕುಗಳಿದ್ದ ವೀಳ್ಯವನ್ನು ಬಾಯೊಳಗೆ ಹಾಕಿಕೊಂಡು ಮತ್ತೆ ಅಂಗಾಂಗಗಳನ್ನು ಹುರಿಗೊಳಿಸಿ ಕ್ರೋಧದಿಂದ ಭೀಮನು ಬಾಲವನ್ನೆತ್ತಲು ಮುಂದಾದನು.
ಪದಾರ್ಥ (ಕ.ಗ.ಪ)
ಠಾವುಡಿಯಲು- ಜಾಗ ತಪ್ಪಿಸಲು, ಇಲ್ಲ್ಲಿ ಬಾಲವನ್ನು ಕದಲಿಸು
ಪಾಠಾನ್ತರ (ಕ.ಗ.ಪ)
ಕಳವಳ - ಕವಳವ
ಠಾವುರಿಯಲೊದಗಿದನು -ಠಾವುಡಿಯಲೊದಗಿದನು
ಅರಣ್ಯಪರ್ವ, ಮೈ.ವಿ.ವಿ.
ಮೂಲ ...{Loading}...
ತೆಗೆದು ಸೈರಿಸಿ ನಿಂದು ಹೊಯ್ವ
ಳ್ಳೆಗಳು ಡಾವರವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ
ಢಗೆಯಡಗೆ ಮರುವಲಗೆ ಗೌಡೊ
ತ್ತುಗಳ ಬಲಿದವಯವದ ಸತ್ರಾ
ಣಿಗಳ ದೇವನು ಠಾವುಡಿಯಲೊದಗಿದನು ಬಾಲದಲಿ ॥19॥
೦೨೦ ಮಿಡುಕದದು ಮಹಿಯಿನ್ದ ...{Loading}...
ಮಿಡುಕದದು ಮಹಿಯಿಂದ ಭೀಮನ
ಕಡುಹು ನಿಂದುದು ಬಾಲದಲಿ ತುದಿ
ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು
ತೊಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭಂಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ ॥20॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಾಲವು ನೆಲದಿಂದ ಅಲುಗಾಡದು. ಬಾಲದ ತುದಿಕೂಡ ನಡುಗಲಿಲ್ಲ. ಆಗ ಭೀಮನ ಪೌರುಷವು ನಿಂತು ‘ಕಾರ್ಯ ಕೆಟ್ಟಿತಲ್ಲಾ, ದುರ್ಬಲನೊಡನೆ ಅವಮಾನ ಉಂಟಾಯಿತಲ್ಲಾ, ತನ್ನನ್ನು ಸುಡಲಿ’ ಎಂದು ಮಮ್ಮಲ ಮರುಗಿದನು.
ಮೂಲ ...{Loading}...
ಮಿಡುಕದದು ಮಹಿಯಿಂದ ಭೀಮನ
ಕಡುಹು ನಿಂದುದು ಬಾಲದಲಿ ತುದಿ
ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು
ತೊಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭಂಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮ ॥20॥
೦೨೧ ಈತ ಕಪಿರೂಪದ ...{Loading}...
ಈತ ಕಪಿರೂಪದ ಸುರೇಂದ್ರನೊ
ಭೂತನಾಥನೊ ಮೇಣು ವಿಮಳ
ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ
ಏತರವು ನಮ್ಮುಬ್ಬಟೆಗಳಿಂ
ದೀತ ಗೆಲಿದನು ಬಾಲದಲಿ ಸ
ತ್ವಾತಿಶಯವಿನ್ನಿವನೊಳೆಂತುಟೊ ಶಿವ ಶಿವಾಯೆಂದ ॥21॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಇವನು ಕಪಿರೂಪದ ದೇವೇಂದ್ರನೊ, ಸಾಕ್ಷಾತ್ ಶಿವನೋ, ಅಥವಾ ತ್ರೇತಾಯುಗದಲ್ಲಿ ರಾವಣನನ್ನು ಬಡಿದ ಹನುಮಂತನೋ, ನಮ್ಮ ಸಾಹಸ ವ್ಯರ್ಥವಾಯಿತು. ಈಗ ಇವನು ನಮ್ಮನ್ನು ಬಾಲದಿಂದಲೇ ಗೆದ್ದನು. ಇವನಲ್ಲಿ ಇನ್ನೂ ಎಷ್ಟು ಸತ್ವಗಳು ಅಡಗಿವೆಯೋ, ಶಿವಶಿವಾ’ ಎಂದನು.
ಪದಾರ್ಥ (ಕ.ಗ.ಪ)
ಇಕ್ಕೆ - ಆಶ್ರಯದ ಸ್ಥಾನ
ಮೂಲ ...{Loading}...
ಈತ ಕಪಿರೂಪದ ಸುರೇಂದ್ರನೊ
ಭೂತನಾಥನೊ ಮೇಣು ವಿಮಳ
ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ
ಏತರವು ನಮ್ಮುಬ್ಬಟೆಗಳಿಂ
ದೀತ ಗೆಲಿದನು ಬಾಲದಲಿ ಸ
ತ್ವಾತಿಶಯವಿನ್ನಿವನೊಳೆಂತುಟೊ ಶಿವ ಶಿವಾಯೆಂದ ॥21॥
೦೨೨ ಭೀಮ ಗದೆ ...{Loading}...
ಭೀಮ ಗದೆ ತಾನೌಕಿ ನಿಲಲು
ದ್ಧಾಮ ಬಾಲದ ನಿದ್ರೆ ತಿಳಿಯದು
ರೋಮತತಿ ಮಸೆಗಾಣಿಸಿದವೆನ್ನಂಗವಟ್ಟದಲಿ
ಈ ಮನುಷ್ಯ ಶರೀರವಪಜಯ
ಧಾಮವಲ್ಲಾ ಶಿವ ಶಿವಾ ನಿ
ಸ್ಸೀಮ ಕಪಿ ನೀನಾರೆನುತ ಪವನಜನ ಬೆಸಗೊಂಡ ॥22॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮ ಗದೆಯಿಂದ ನೂಕಿದರೂ ಬಾಲವು ಕೊಂಚವೂ ಅಲುಗಾಡದೆ, ರೋಮಗಳು ಸ್ವಲ್ಪವೂ ಕದಲದೆ ಇರಲು, ಭೀಮಸೇನನು ಹೀಗೆ ಆಲೋಚಿಸಿದನು - ’ ಬಾಲದ ರೋಮಸಮೂಹವು ನನ್ನ ದೃಢ ಶರೀರ ಶಕ್ತಿಯನ್ನೇ ಮಸುಕಾಗಿಸಿತು. ಈ ಮನುಷ್ಯ ಶರೀರ ಸೋಲಿನ ಆಗರ. ಶಿವಶಿವಾ, ಬಲಶಾಲಿಯಾದ ನೀನು ಯಾರು’ ಎಂದು ಹನುಮನನ್ನು ಮಾತಾಡಿಸಿದನು.
ಪದಾರ್ಥ (ಕ.ಗ.ಪ)
ಖಾತಿ -ಕೋಪ
ಕಟಕ ಭಂಗ - ಸೇನೆಯ ಸೋಲು
ಹಳವಿನ ಆಡೊಂಬಲ -ದುಃಖ ದುಮ್ಮಾನಗಳ ಅಂಗಳ
ಪಾಠಾನ್ತರ (ಕ.ಗ.ಪ)
ಮಸೆಗಾಣಿಸಿದವೆನುತುತ್ತಮಾಂಗದಲಿ -ಮಸೆಗಾಣಿಸಿದವೆನ್ನಂಗವಟ್ಟದಲಿ ಅರಣ್ಯ ಪರ್ವ, ಮೈ.ವಿ.ವಿ.
ಮೂಲ ...{Loading}...
ಭೀಮ ಗದೆ ತಾನೌಕಿ ನಿಲಲು
ದ್ಧಾಮ ಬಾಲದ ನಿದ್ರೆ ತಿಳಿಯದು
ರೋಮತತಿ ಮಸೆಗಾಣಿಸಿದವೆನ್ನಂಗವಟ್ಟದಲಿ
ಈ ಮನುಷ್ಯ ಶರೀರವಪಜಯ
ಧಾಮವಲ್ಲಾ ಶಿವ ಶಿವಾ ನಿ
ಸ್ಸೀಮ ಕಪಿ ನೀನಾರೆನುತ ಪವನಜನ ಬೆಸಗೊಂಡ ॥22॥
೦೨೩ ನಾವು ವಾನರರಡವಿಯಲಿ ...{Loading}...
ನಾವು ವಾನರರಡವಿಯಲಿ ಫಲ
ಜೀವಿಗಳು ನಿಸ್ಸತ್ವರಿಲ್ಲಿಯ
ಠಾವ ಬಿಡಲನ್ಯತ್ರ ಗಮನತ್ರಾಣವಿಲ್ಲೆಮಗೆ
ನೀವು ದಿಟವಾರೈ ಮಹಾ ಸಂ
ಭಾವಿತರು ಸುರ ನರ ಭುಜಂಗರೊ
ಳಾವ ಕುಲ ನಿಮಗೆಂದು ಭೀಮನ ನುಡಿಸಿದನು ಹನುಮ ॥23॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ಮಂಗಗಳು, ಕಾಡಿನಲ್ಲಿ ಹಣ್ಣು ತಿಂದು ಬದುಕುವವರು, ಇಲ್ಲಿಂದ ಬೇರೆಡೆಗೆ ಹೋಗಲು ಶಕ್ತಿಯಿಲ್ಲದವರು. ನಿಜವಾಗಿ ಸಂಭಾವಿತರಂತೆ ಕಾಣುವ ನೀವು ಯಾರು ? ಸುರರೊ, ನರರೊ, ಉರಗರೊ, ನಿಮ್ಮದು ಯಾವ ಕುಲ’ ಎಂದು ಹನುಮಂತನು ಭೀಮನನ್ನು ಮಾತಾಡಿಸಿದನು.
ಮೂಲ ...{Loading}...
ನಾವು ವಾನರರಡವಿಯಲಿ ಫಲ
ಜೀವಿಗಳು ನಿಸ್ಸತ್ವರಿಲ್ಲಿಯ
ಠಾವ ಬಿಡಲನ್ಯತ್ರ ಗಮನತ್ರಾಣವಿಲ್ಲೆಮಗೆ
ನೀವು ದಿಟವಾರೈ ಮಹಾ ಸಂ
ಭಾವಿತರು ಸುರ ನರ ಭುಜಂಗರೊ
ಳಾವ ಕುಲ ನಿಮಗೆಂದು ಭೀಮನ ನುಡಿಸಿದನು ಹನುಮ ॥23॥
೦೨೪ ಮನುಜರಾವ್ ಸೋಮಾಭಿಕುಲದಲಿ ...{Loading}...
ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ
ತನುಜರಾವು ಯುಧಿಷ್ಠಿರಾರ್ಜುನ ಭೀಮ ಯಮಳರೆನೆ
ವನಕೆ ಬಂದೆವು ನಮ್ಮ ದಾಯಾ
ದ್ಯನ ವಿಕಾರದ್ಯೂತಕೇಳೀ
ಜನದ ಕಿಲ್ಬಿಷದಿಂದ ರಾಜ್ಯಭ್ರಂಶವಾಯ್ತೆಂದ ॥24॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ಮನುಷ್ಯರು. ಚಂದ್ರವಂಶದಲ್ಲಿ ಪಾಂಡು ಚಕ್ರವರ್ತಿಯ ಮಕ್ಕಳು. ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವರೆಂದು ಐವರು, ದಾಯಾದಿಗಳ ಕಪಟ ದ್ಯೂತದಿಂದಾಗಿ ರಾಜ್ಯಭ್ರಷ್ಟರಾಗಿ ವನವಾಸಕ್ಕಾಗಿ ಬಂದವರು’ ಎಂದನು.
ಮೂಲ ...{Loading}...
ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ
ತನುಜರಾವು ಯುಧಿಷ್ಠಿರಾರ್ಜುನ ಭೀಮ ಯಮಳರೆನೆ
ವನಕೆ ಬಂದೆವು ನಮ್ಮ ದಾಯಾ
ದ್ಯನ ವಿಕಾರದ್ಯೂತಕೇಳೀ
ಜನದ ಕಿಲ್ಬಿಷದಿಂದ ರಾಜ್ಯಭ್ರಂಶವಾಯ್ತೆಂದ ॥24॥
೦೨೫ ಬಳಕ ಸೌಗನ್ಧಿಕದ ...{Loading}...
ಬಳಕ ಸೌಗಂಧಿಕದ ಪವನನ
ಬಳಿವಿಡಿದು ನಾ ಬಂದೆನೆಮ್ಮಯ
ಲಲನೆ ಕಾಮಿಸಿದಳು ಸಹಸ್ರದಳಾಬ್ಜ ದರುಶನವ
ತಿಳಿಯಲಿದು ವೃತ್ತಾಂತ ನೀನ
ಸ್ಖಲಿತ ಬಲ ನೀನಾರು ತನ್ನನು
ತಿಳುಹ ಹೇಳು ಮಹಾತ್ಮ ಕಪಿ ನೀನೆನುತ ಕೈಮುಗಿದ ॥25॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅನಂತರ, ನಮ್ಮ ಮಡದಿಯು ಸಹಸ್ರದಳದ ಕಮಲವನ್ನು ಬಯಸಲು, ಸೌಗಂಧಿಕದ ಸುವಾಸನೆಯನ್ನು ಅನುಸರಿಸಿ ಇಲ್ಲಿಗೆ ಬಂದೆವು. ಇದು ನಮ್ಮ ವೃತ್ತಾಂತ. ಆದರೆ ಮಹಾತ್ಮನಾದ ನೀನು ಯಾರು ? ತಿಳಿಸು’ ಎಂದು ಭೀಮನು ಕೈ ಮುಗಿದನು.
ಟಿಪ್ಪನೀ (ಕ.ಗ.ಪ)
ಸೌಗಂಧಿಕ ಕಮಲಪುಷ್ಪ - ಇದು ಒಂದು ಕವಿ ನಿರ್ಮಿತ ಊಹಾ ಕಮಲ. ಇದಕ್ಕೆ ಸಾವಿರ ದಳಗಳು. ಈಶಾನ್ಯದ ಕುಬೇರ ಸರೋವರದಲ್ಲಿ ಇವು ಸಾವಿರಾರು. ಹೂವಿನ ಕಂಪಿಗೆ ಮರುಳಾದ ಸ್ತ್ರೀ ಅದನ್ನು ಬಯಸದೆ ಇರುತ್ತಾಳೆಯ?
ಪಾಂಡವರು ಅರಣ್ಯವಾಸದ ಕಾಲದಲ್ಲಿ ನರನಾರಾಯಣ ಪ್ರದೇಶ ಎನ್ನಿಸಿದ ಬದರಿಕಾಶ್ರಮದಲ್ಲಿದ್ದರು. ಒಮ್ಮೆ ಅವರಲ್ಲ ಇದ್ದಲ್ಲಿಗೆ ಗಾಳಿಗೆ ಹಾರಿಕೊಂಡು ಬಂದ ಒಂದು ಸೌಗಂಧಿಕ ಪುಷ್ಪ ದ್ರೌಪದಿಯ ಹಷ್ಕ್ಕೆ ಕಾರಣವಾಯಿತು. ಅವಳಿಗೆ ಇಂಥದೊಂದು ಹೊಸ ಹೂವನ್ನು ಧರ್ಮರಾಯನಿಗೆ ಅರ್ಪಿಸುವ ಆಶೆ. ಜೊತೆಗೆ ಇನ್ನು ಕೆಲವನ್ನು ತಂದರೆ ಕಾಮ್ಯಕವನಕ್ಕೆ ಕೊಂಡೊಯ್ಯುವ ಆಸೆ! ಅದರ ಸುಮಾರತೆ ಸುವಾಸನೆ ಮತ್ತು ಬಣ್ಣಗಳನ್ನು ಹೊಗಳಿ ಆ ಹೂಗಳನ್ನು ತಂದುಕೊಡುವಂತೆ ಭೀಮನನ್ನು ಪ್ರಾರ್ಥಿಸಿಕೊಂಡಳು. ಮೊದಲೆ ಸಾಹಸಪ್ರಿಯನಾದ ಭೀಮನು ವ್ಯಾಸರು ಹೇಳುವಂತೆ ‘ದ್ರೌಪದೀ ವಾಕ್ಯಪಥೇಯ’ (ದ್ರೌಪದಿಯ ಮಾತುಗಳೇ ಅವಿಗೆ ದಾರಿಯ ಬುತ್ತಿಯಂತೆ ಹಿತ!). ಕೇಳಬೇಕೆ? ಅವನು ಈಶಾನ್ಯದಿಕ್ಕಿಗೆ ಧಾವಿಸಿದ. ಬಾಣಖಡ್ಗಗದೆಗಳಿಂದ ಸಂಭ್ರಮಿಸಿ ಪಂಡ್ರಶಂಖವನ್ನು ಊದಿ U್ಪರ್ಜನೆ ಮಾಡುತ್ತ ಹೊರಟ. ಪಕ್ಷಿಪ್ರಾಣಿಗಳೆಲ್ಲ ಹೆದರಿ ಕಿರುಚಿಕೊಂಡವು. ರೂಪ, ವೇಷಭೂಷಣಗಳನ್ನು ಕಂಡು ಕಿನ್ನರಕಾಂತೆಯರು ಅವನ ಚಾರುಸುಂದರ ಸರ್ವಾಂಗವನ್ನು ಮೆಚ್ಚಿಕೊಂಡರು.
ಮುಂದೆ ಸರೋವರದ ದಾರಿಯಲ್ಲಿ ಅವನಿಗೆ ರಾಮಾಯಣ ಕಾಲದ ಹನುಮಂತನ ದರ್ಶನವೂ ಆಗುತ್ತದೆ. ಇದು ಸೌಗಂಧಿಕಾ ಪ್ರಸಂಗಕ್ಕೆ ಉಪಪ್ರಸಂಗ ಎಂದು ಹೇಳಬಹುದು. ಭೀಮ-ಹನುಮ ಇಬ್ಬರೂ ವಾಯುಪುತ್ರರೇ! ಮಹಾಬಲಶಾಲಿಗಳೇ! ಆದರೆ ಮಹಾಬಲಶಾಲಿಯೆಂದು ಭಾವಿಸಿಕೊಂಡಿದ್ದ ಭೀಮಿಗೆ ಹಳೆಯ ಯುಗದ ವೃದ್ಧನೊಬ್ಬನ ಬಾಲವನ್ನು ಅಲುಗಾಡಿಲು ಆಗಲಿಲ್ಲ. ಆದ್ದರಿಂದ ಇದು ಭೀಮಗರ್ವಬಂಧದ ಉಪಪ್ರಸಂಗವೂ ಆಗಿದೆ. ಶರಣಾಗತನಾದ ಭೀಮನಿಗೆ ಹನುಮಂತನು ಭೀಮನ ಕೋರಿಕೆಯಂತೆ ತಾನು ಲಂಕೆಯ ಸಮುದ್ರವನ್ನು ಹಾರುವಾಗ ಧರಿಸಿದ್ದ ದೈತ್ಯಗಾತ್ರವನ್ನು ತೋರಿಸುತ್ತಾನೆ. ಭೀಮ ನಡುಗುತ್ತಾನೆ. ಕೊನೆಗೆ ಹನುಮನು ಅರ್ಜುನನ ರಥದಲ್ಲಿ ವಾಸಿಸುವುದಾಗಿಯೂ ಭೀಮನು ಯುದ್ಧಭೂಮಿಯಲ್ಲಿ U್ಪರ್ಜಿಸಿದಾಗಲೆಲ್ಲ ತನ್ನ U್ಪರ್ಜನೆಯನ್ನು ಸೇರಿಸುವುದಾಗಿಯೂ ಹೇಳುತ್ತಾನೆ.
ಕದಳೀವನವನ್ನು ಬಿಟ್ಟು ಭೀಮನು ಕುಬೇರನ ಸೌಗಂಧಿಕವನಕ್ಕೆ ಬರುತ್ತಾನೆ. ಆ ಕುಬೇರನ ಕೊಳವನ್ನು ಕಾಯುತ್ತಿದ್ದವನು ಕ್ರೋಧವಶ ಎಂಬ ರಾಕ್ಷಸ. ಅವನಿಗೆ ಒಂದು ಲಕ್ಷ ಸಹಾಯಕರಿದ್ದರು. ಯುದ್ಧದಲ್ಲಿ ಭೀಮನು ಅವರನ್ನೆಲ್ಲ ಸೋಲಿಸಿ ನೀರಿಗಿಳಿದನು.
ಈ ಕಥೆಗೆ ಇನ್ನೊಂದು ಮರಿ ಪ್ರಸಂಗವೂ ಸೇರಿದೆ. ಇತ್ತ ಧರ್ಮರಾಯಾದಿಗಳು ಭೀಮ ಬರಲಿಲ್ಲವೆಂದು ಚಿಂತಾಕ್ರಾಂತರಾಗಿ ಕೊನೆಗೆ ಘಟೋತ್ಕಚನ ಸಹಾಯದಿಂದ ಕೊಳದ ಬಳಿಗೇ ಬರುತ್ತಾರೆ. ಅಲ್ಲಿಂದ ಯಕ್ಷ ಕುಬೇರನ ಊರಿಗೆ ಹೋಗುವ ಬಯಕೆ ಧರ್ಮರಾಯನಿಗಿತ್ತು. ಆಕಾಶವಾಣಿಯ ನಿರ್ದೇಶನದಂತೆ ನರನಾರಾಯಣಾಶ್ರಮವೆನಿಸಿದ್ದ ಬದರಿಕಾಶ್ರಮಕ್ಕೇ ಎಲ್ಲರೂ ಹಿಂದಿರುಗುತ್ತಾರೆ.
ವಯಸ್ಸಾದವರು ಮಲಗಿರುವಾಗ ಗಟ್ಟಿಯಾಗಿ ಕಿರುಚಿ ಅವರ ನಿದ್ರಾಹರಣ ಮಾಡಬಾರದು ಎಂಬ ಪ್ರಾಥಮಿಕ ವಿವೇಕವೂ ಭೀಮನಿಗೆ ಇರಲಿಲ್ಲ ಎಂದು ಹನುಮಂತನು ಭೀಮನನ್ನು ಟೀಕಿಸಿರುವುದು ಪರಿಸರವಾದಿಗಳಿಗೆ ತುಂಬ ಹಿತವನೆನ್ನಿಸುವ ಒಂದು ಪ್ರಸಂಗವಾಗಿದೆ. ಪಂಪನ ಆದಿಪುರಾಣದಲ್ಲಿ ಭರತನಿಗೆ ಸೋರ್ದುದು ಕೊಳಗೊಂಡ U್ಪರ್ವರಸಂ (ಮಡುಗಟ್ಟಿ ನಿಂತಿದ್ದ U್ಪರ್ವರಸವೆಲ್ಲ ಸೋರಿ ಹೋಯಿತು) ಎನ್ನಿಸಿದ ಹಾಗೆ ಭೀಮನಿಗೆ ಹನುಮದರ್ಶನದಿಂದ ಅಹಂಕಾರ ತಗ್ಗಿತು.
ಮೂಲ ...{Loading}...
ಬಳಕ ಸೌಗಂಧಿಕದ ಪವನನ
ಬಳಿವಿಡಿದು ನಾ ಬಂದೆನೆಮ್ಮಯ
ಲಲನೆ ಕಾಮಿಸಿದಳು ಸಹಸ್ರದಳಾಬ್ಜ ದರುಶನವ
ತಿಳಿಯಲಿದು ವೃತ್ತಾಂತ ನೀನ
ಸ್ಖಲಿತ ಬಲ ನೀನಾರು ತನ್ನನು
ತಿಳುಹ ಹೇಳು ಮಹಾತ್ಮ ಕಪಿ ನೀನೆನುತ ಕೈಮುಗಿದ ॥25॥
೦೨೬ ನಾವು ಹಿನ್ದಣ ...{Loading}...
ನಾವು ಹಿಂದಣ ಯುಗದ ರಾಘವ
ದೇವನೋಲೆಯಕಾರರಾ ಸು
ಗ್ರೀವ ಸಖ್ಯರು ಪವನನಿಂದಂಜನೆಗೆ ಜನಿಸಿದೆವು
ನಾವು ನಿಮ್ಮೊಡ ಹುಟ್ಟಿದರು ಸಂ
ಭಾವಿಸಿತು ನಿಮ್ಮಿಷ್ಟವೆನೆ ನಗು
ತಾ ವೃಕೋದರನೆರಗಿದನು ಕಲಿ ಹನುಮನಂಘ್ರಿಯಲಿ ॥26॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಾವು ಹಿಂದಿನ ತ್ರೇತಾಯುಗದವರು ಶ್ರೀರಾಮಚಂದ್ರನ ದೂತರು. ಸುಗ್ರೀವನ ಗೆಳೆಯರು. ವಾಯುವಿನಿಂದ ಅಂಜನೆಯಲ್ಲಿ ಜನಿಸಿದವರು. ನಿಮಗೆ ಒಡಹುಟ್ಟಿದವರು. ನಿಮ್ಮ ಇಷ್ಟ ಈಡೇರಿತು’ ಎಂದು ಹೇಳಲು ಭೀಮಸೇನನು ಹನುಮಂತನ ಚರಣಕ್ಕೆರಗಿದನು.
ಮೂಲ ...{Loading}...
ನಾವು ಹಿಂದಣ ಯುಗದ ರಾಘವ
ದೇವನೋಲೆಯಕಾರರಾ ಸು
ಗ್ರೀವ ಸಖ್ಯರು ಪವನನಿಂದಂಜನೆಗೆ ಜನಿಸಿದೆವು
ನಾವು ನಿಮ್ಮೊಡ ಹುಟ್ಟಿದರು ಸಂ
ಭಾವಿಸಿತು ನಿಮ್ಮಿಷ್ಟವೆನೆ ನಗು
ತಾ ವೃಕೋದರನೆರಗಿದನು ಕಲಿ ಹನುಮನಂಘ್ರಿಯಲಿ ॥26॥
೦೨೭ ಜರುಗಿನಲಿ ಜಾಮ್ಬೂನದದ ...{Loading}...
ಜರುಗಿನಲಿ ಜಾಂಬೂನದದ ಸಂ
ವರಣೆಕಾರಂಗೆಡೆಯಲಿದ್ದುದು
ಪರಮನಿಧಿ ಮಝ ಪೂತು ಪುಣ್ಯೋದಯದ ಫಲವೆನುತ
ಸರಸಿಯೆತ್ತಲು ಗಂಧವೆತ್ತಲು
ಬರವಿದೆತ್ತಣಿದೆತ್ತ ಘಟಿಸಿದು
ದರರೆ ಮಾರುತಿ ತಂದೆ ನೀನೆಂದೆನುತ ಬಣ್ಣಿಸಿದ ॥27॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮಣ್ಣಿನಲ್ಲಿ ಬೆರೆತಿರುವ ಚಿನ್ನದ ಕಣವನ್ನು ಅರಸುವವನಿಗೆ ಬಳಿಯಲ್ಲಿಯೇ ತವ ನಿಧಿ ದೊರಕಿದಂತೆ, ನಮ್ಮ ಪುಣ್ಯಫಲ ರೂಪದಲ್ಲಿ ನಿಮ್ಮ ಭೇಟಿಯಾಯಿತು. ಸರೋವರವೆತ್ತ ? ಸುವಾಸನೆಯೆತ್ತ ? ಈ ಕಡೆ ಬರೋಣವೆತ್ತ ? ಇದೆಲ್ಲಾ ಘಟಿಸಿದ್ದು ಆಶ್ಚರ್ಯವೇ ಸರಿ. ನೀವೇ ನಮಗೆ ತೀರ್ಥರೂಪ ಸಮಾನರು’ ಎಂದು ಭೀಮನು ವರ್ಣಿಸಿದ.
ಪದಾರ್ಥ (ಕ.ಗ.ಪ)
ಜರುಗು-ಚಿನ್ನದ ಸೂಕ್ಷ್ಮ ಕಣಗಳು ಇರುವ ಮಣ್ಣು
ಜಾಂಬೂನದ - ಚಿನ್ನ
ಮೂಲ ...{Loading}...
ಜರುಗಿನಲಿ ಜಾಂಬೂನದದ ಸಂ
ವರಣೆಕಾರಂಗೆಡೆಯಲಿದ್ದುದು
ಪರಮನಿಧಿ ಮಝ ಪೂತು ಪುಣ್ಯೋದಯದ ಫಲವೆನುತ
ಸರಸಿಯೆತ್ತಲು ಗಂಧವೆತ್ತಲು
ಬರವಿದೆತ್ತಣಿದೆತ್ತ ಘಟಿಸಿದು
ದರರೆ ಮಾರುತಿ ತಂದೆ ನೀನೆಂದೆನುತ ಬಣ್ಣಿಸಿದ ॥27॥
೦೨೮ ತೀದುದೆಮಗೆ ವನ ...{Loading}...
ತೀದುದೆಮಗೆ ವನ ಪ್ರವಾಸದ
ಖೇದವರ್ಜುನನಗಲಿಕೆಯ ದು
ರ್ಭೇದ ವಿಷವಿಂದಿಳಿದುದೈ ಶಿವಶಿವ ಮಹಾದೇವ
ಹೋದ ರಾಜ್ಯಭ್ರಂಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವುಯಮಗಾಯ್ತಲಾ ಚರಿತಾರ್ಥರಾವೆಂದ ॥28॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ವನದೊಳಗೆ ತಿರುಗಾಡಿದ ಕ್ಲೇಶಾಯಾಸಗಳು ಪರಿಹಾರವಾಯಿತು. ಅರ್ಜುನನ ಅಗಲಿಕೆಯ ನೋವು ಉಪಶಮನವಾಯಿತು. ರಾಜ್ಯಭ್ರಷ್ಟರಾದೆವೆಂಬ ದುಃಖ ದೂರವಾಯಿತು. ನಿಮ್ಮ ಅನುಗ್ರಹ ಆಶೀರ್ವಾದಗಳಿಂದ ನಾವು ಕೃತಾರ್ಥರಾದೆವು’ ಎಂದನು.
ಮೂಲ ...{Loading}...
ತೀದುದೆಮಗೆ ವನ ಪ್ರವಾಸದ
ಖೇದವರ್ಜುನನಗಲಿಕೆಯ ದು
ರ್ಭೇದ ವಿಷವಿಂದಿಳಿದುದೈ ಶಿವಶಿವ ಮಹಾದೇವ
ಹೋದ ರಾಜ್ಯಭ್ರಂಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವುಯಮಗಾಯ್ತಲಾ ಚರಿತಾರ್ಥರಾವೆಂದ ॥28॥
೦೨೯ ಹಿರಿಯರೆನಗಿಬ್ಬರು ...{Loading}...
ಹಿರಿಯರೆನಗಿಬ್ಬರು ಯುಧಿಷ್ಠಿರ
ಧರಣಿಪತಿ ನೀನೊಬ್ಬನಯ್ಯಂ
ದಿರುಗಳಿಬ್ಬರು ಮಾರುತನು ನೀನೊಬ್ಬ ನಿಂದೆನಗೆ
ಗುರುಗಳಿಬ್ಬರು ಬಾದರಾಯಣ
ಪರಮಋಷಿ ನೀನೊಬ್ಬನೆಂದುಪ
ಚರಿಸಿದನು ಪವಮಾನ ನಂದನನಂಜನಾ ಸುತನ ॥29॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನನಗೆ ಧರ್ಮಜ ಮತ್ತು ನೀನು ಇಬ್ಬರು ಹಿರಿಯರು. ವಾಯುದೇವ ಮತ್ತು ನೀನು ಈರ್ವರು ನನಗೆ ತಂದೆಯಂದಿರು. ವೇದವ್ಯಾಸರು ಮತ್ತು ನೀನು ಈರ್ವರು ನನಗೆ ಗುರುಗಳು ಎಂದು ಆಂಜನೇಯನನ್ನು ಭೀಮಸೇನ ಉಪಚರಿಸಿದನು.
ಮೂಲ ...{Loading}...
ಹಿರಿಯರೆನಗಿಬ್ಬರು ಯುಧಿಷ್ಠಿರ
ಧರಣಿಪತಿ ನೀನೊಬ್ಬನಯ್ಯಂ
ದಿರುಗಳಿಬ್ಬರು ಮಾರುತನು ನೀನೊಬ್ಬ ನಿಂದೆನಗೆ
ಗುರುಗಳಿಬ್ಬರು ಬಾದರಾಯಣ
ಪರಮಋಷಿ ನೀನೊಬ್ಬನೆಂದುಪ
ಚರಿಸಿದನು ಪವಮಾನ ನಂದನನಂಜನಾ ಸುತನ ॥29॥
೦೩೦ ಲಲಿತ ವಚನಕೆ ...{Loading}...
ಲಲಿತ ವಚನಕೆ ನಿನ್ನ ಭುಜದ
ಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ
ಗೆಲವು ನಿಮಗಹಿತರಲಿ ಪಾರ್ಥನ
ಕೆಲವು ದಿವಸಕೆ ಕಾಂಬಿರೆಮಗೆಯು
ಫಲಿಸಿತೀ ದಿನಕೆಂದು ಕೊಂಡಾಡಿದನು ಹನುಮಂತ ॥30॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ನಿನ್ನ ಮಧುರ ಮಾತಿಗೆ ಹಾಗು ಸಾಹಸ ಶೌರ್ಯಕ್ಕೆ ಮೆಚ್ಚಿದೆ. ಚಂದ್ರವಂಶಕ್ಕೆ ಭೂಷಣರಾಗಿ ಪಾಂಡುವಿಗೆ ಮಕ್ಕಳಾಗಿ ಹುಟ್ಟಿದಿರಿ. ನಿಮಗೆ ಶತ್ರುಗಳಲ್ಲಿ ಗೆಲುವುಂಟಾಗುತ್ತದೆ. ಕೆಲವೇ ದಿವಸಗಳಲ್ಲಿ ಅರ್ಜುನನನ್ನು ನೋಡುತ್ತೀರಿ. ನಮಗೂ ಕೂಡಾ ಈ ದಿನ ಪುಣ್ಯಫಲ’ ಎಂದು ಹನುಮನು ಭೀಮನನ್ನು ಕೊಂಡಾಡಿದನು.
ಮೂಲ ...{Loading}...
ಲಲಿತ ವಚನಕೆ ನಿನ್ನ ಭುಜದ
ಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ
ಗೆಲವು ನಿಮಗಹಿತರಲಿ ಪಾರ್ಥನ
ಕೆಲವು ದಿವಸಕೆ ಕಾಂಬಿರೆಮಗೆಯು
ಫಲಿಸಿತೀ ದಿನಕೆಂದು ಕೊಂಡಾಡಿದನು ಹನುಮಂತ ॥30॥
೦೩೧ ಅಞ್ಜುವೆನು ಬಿನ್ನಹಕೆ ...{Loading}...
ಅಂಜುವೆನು ಬಿನ್ನಹಕೆ ಬಾಂಧವ
ವಂಜಿಕೆಯ ನಭಕೊತ್ತುತಿದೆ ಕೇ
ಳಂಜನಾಸುತ ತನ್ನ ಸಲುಗೆಯ ಮಾತ ಸಲಿಸುವೊಡೆ
ಅಂಜದೆಂಬೆನು ದನುಜ ಪುರಕೆ ಧ
ನಂಜಯನ ಹೊತ್ತಿಸಿದ ಖಳರನು
ಭಂಜಿಸಿದ ಸಾಗರವ ದಾಂಟಿದ ರೂಪು ತೋರೆಂದ ॥31॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಬಿನ್ನಹವನ್ನು ಮಾಡಲು ಭಯವಾಗುತ್ತಿದೆ. ಬಾಂಧವನೆಂಬ ಭಾವನೆಯು ಆಕಾಶಕ್ಕೆ ನನ್ನನ್ನು ಒತ್ತುತ್ತಿದೆ. ಆಂಜನೇಯ, ನನ್ನ ಸಲುಗೆಯ ಮಾತೊಂದನ್ನು ಈಡೇರಿಸುತ್ತೀಯಾ ಎಂದಾದರೆ ಹೆದರದೆ ಕೇಳುತ್ತೇನೆ. ಲಂಕಾನಗರವನ್ನು ಸುಟ್ಟು ಸಮುದ್ರ ಲಂಘನ ಮಾಡಿದ ನಿನ್ನ ದಿವ್ಯರೂಪವನ್ನು ನನಗೆ ತೋರುವೆಯಾ’ ಎಂದನು.
ಪದಾರ್ಥ (ಕ.ಗ.ಪ)
ಧನಂಜಯ - ಅಗ್ನಿ, ಬೆಂಕಿ
ಮೂಲ ...{Loading}...
ಅಂಜುವೆನು ಬಿನ್ನಹಕೆ ಬಾಂಧವ
ವಂಜಿಕೆಯ ನಭಕೊತ್ತುತಿದೆ ಕೇ
ಳಂಜನಾಸುತ ತನ್ನ ಸಲುಗೆಯ ಮಾತ ಸಲಿಸುವೊಡೆ
ಅಂಜದೆಂಬೆನು ದನುಜ ಪುರಕೆ ಧ
ನಂಜಯನ ಹೊತ್ತಿಸಿದ ಖಳರನು
ಭಂಜಿಸಿದ ಸಾಗರವ ದಾಂಟಿದ ರೂಪು ತೋರೆಂದ ॥31॥
೦೩೨ ಈ ಯುಗದ ...{Loading}...
ಈ ಯುಗದ ಗುಣ ಧರ್ಮವಾ ತ್ರೇ
ತಾಯುಗದವರಿಗೈದದಾ ತ್ರೇತಾ
ಯುಗವು ಸರಿಯಿಲ್ಲ ಕೃತಯುಗದೇಕ ದೇಶದಲಿ
ಆ ಯುಗದಲಾ ಮನುಜರಾ ಸ
ತ್ವಾಯುವಾ ಸಾಮಥ್ರ್ಯವಾ ತರು
ವಾಯ ಯುಗದಲಿ ಸಲ್ಲದೆಂದನು ನಗುತ ಹನುಮಂತ ॥32॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ಯುಗದ ಗುಣಧರ್ಮಗಳು ತ್ರೇತಾಯುಗದವರಿಗೆ ಸಾಧ್ಯವಿಲ್ಲ. ತ್ರೇತೆಯು ಕೃತಯುಗದಂತಿಲ್ಲ. ಆ ಯುಗದ ಮಾನವರ ಸತ್ತ್ವ ಸಾಮಥ್ರ್ಯಗಳು ಅನಂತರದ ಯುಗದವರಲ್ಲಿಲ್ಲ ಎಂದು ನಗುತ್ತಾ ಹನುಮನು ಹೇಳಿದನು.
ಮೂಲ ...{Loading}...
ಈ ಯುಗದ ಗುಣ ಧರ್ಮವಾ ತ್ರೇ
ತಾಯುಗದವರಿಗೈದದಾ ತ್ರೇತಾ
ಯುಗವು ಸರಿಯಿಲ್ಲ ಕೃತಯುಗದೇಕ ದೇಶದಲಿ
ಆ ಯುಗದಲಾ ಮನುಜರಾ ಸ
ತ್ವಾಯುವಾ ಸಾಮಥ್ರ್ಯವಾ ತರು
ವಾಯ ಯುಗದಲಿ ಸಲ್ಲದೆಂದನು ನಗುತ ಹನುಮಂತ ॥32॥
೦೩೩ ಕೃತಯುಗದವರು ತ್ರೇತೆಯವರಿಂ ...{Loading}...
ಕೃತಯುಗದವರು ತ್ರೇತೆಯವರಿಂ
ದತಿ ಪರಾಕ್ರಮ ಯುಕ್ತರವರದು
ಭುತದ ಬಲವೀ ತ್ರೇತೆಯವರಲಿ ದ್ವಾಪರ ಸ್ಥಿತಿಗೆ
ವಿತತ ಸತ್ವರು ಕಲಿಯುಗದ ದು
ರ್ಮತಿ ಮನುಷ್ಯವ್ರಾತ ಹೀನಾ
ಕೃತಿ ಕಣಾ ಯುಗಧರ್ಮ ಕೃತ ಮೊದಲಾಗಿ ಕಲಿಯುಗಕೆ ॥33॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೃತಯುಗದವರು ತ್ರೇತಾಯುಗದವರಿಗಿಂತ ಬಲಿಷ್ಠರು. ದ್ವಾಪರದವರಿಗಿಂತ ಅದ್ಭುತಶಕ್ತಿ ತ್ರೇತೆಯವರಲ್ಲಿತ್ತು. ಕಲಿಯುಗದ ಮಾನವರು ದುರ್ಬುದ್ಧಿಯಿಂದಲೂ ಹೀನಾಕೃತಿಯಿಂದಲೂ ಕೂಡಿರುತ್ತಾರೆ.
ಮೂಲ ...{Loading}...
ಕೃತಯುಗದವರು ತ್ರೇತೆಯವರಿಂ
ದತಿ ಪರಾಕ್ರಮ ಯುಕ್ತರವರದು
ಭುತದ ಬಲವೀ ತ್ರೇತೆಯವರಲಿ ದ್ವಾಪರ ಸ್ಥಿತಿಗೆ
ವಿತತ ಸತ್ವರು ಕಲಿಯುಗದ ದು
ರ್ಮತಿ ಮನುಷ್ಯವ್ರಾತ ಹೀನಾ
ಕೃತಿ ಕಣಾ ಯುಗಧರ್ಮ ಕೃತ ಮೊದಲಾಗಿ ಕಲಿಯುಗಕೆ ॥33॥
೦೩೪ ಹೀನ ಸತ್ವರು ...{Loading}...
ಹೀನ ಸತ್ವರು ಸತ್ಯ ಧರ್ಮ ವಿ
ಹೀನರರ್ಥ ಪರಾಯಣರು ಕುಜ
ನಾನುರಕ್ತರು ವರ್ಣ ಧರ್ಮಾಶ್ರಮ ವಿದೂಷಕರು
ದಾನಿಗಳು ದುಷ್ಪಾತ್ರದಲಿ ಗುಣ
ಮೌನಿಗಳು ಗರ್ವಿತರು ಮಿಥ್ಯಾ
ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳ್ ಎಂದ ॥34॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕಲಿಯುಗದವರು ಶಕ್ತಿಹೀನರು. ಸತ್ಯಧರ್ಮವಿಹೀನರು. ಕೇವಲ ಹಣದಾಸೆಯುಳ್ಳವರು. ದುರ್ಜನರೊಂದಿಗಿದ್ದು ವರ್ಣಧರ್ಮಾಶ್ರಮಗಳನ್ನು ದೂಷಿಸುವವರು. ದುಷ್ಟರಿಗೆ ದಾನ ಮಾಡುವವರು, ಗುಣವನ್ನು ಹೊಗಳದವರು, ಗರ್ವಿಷ್ಟರು, ಅಜ್ಞಾನಿಗಳು, ಎಂದು ಹನುಮನು ಹೇಳಿದನು.
ಮೂಲ ...{Loading}...
ಹೀನ ಸತ್ವರು ಸತ್ಯ ಧರ್ಮ ವಿ
ಹೀನರರ್ಥ ಪರಾಯಣರು ಕುಜ
ನಾನುರಕ್ತರು ವರ್ಣ ಧರ್ಮಾಶ್ರಮ ವಿದೂಷಕರು
ದಾನಿಗಳು ದುಷ್ಪಾತ್ರದಲಿ ಗುಣ
ಮೌನಿಗಳು ಗರ್ವಿತರು ಮಿಥ್ಯಾ
ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳೆಂದ ॥34॥
೦೩೫ ಅದರಿನೀ ದ್ವಾಪರದ ...{Loading}...
ಅದರಿನೀ ದ್ವಾಪರದ ಕಡೆಯಲಿ
ಯುದಿತ ಮಾನುಷ ಕರ್ಮ ಸಂಶಯ
ವಿದರೊಳೆಮ್ಮಯ ರೂಪು ಗೋಚರವಲ್ಲ ಮತ್ರ್ಯರಿಗೆ
ಇದು ನಿಧಾನವು ಭೀಮಯೆನೆ ತ
ತ್ಪದ ಯುಗಕೆ ಮಗುಳೆರಗಿ ನಿರ್ಬಂ
ಧದಲಿ ಬಿನ್ನಹ ಮಾಡಲಮ್ಮೆನು ರೂಪ ತೋರೆಂದ ॥35॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಈ ದ್ವಾಪರಾಂತ್ಯದಲ್ಲಿ ಮಾನುಷಕರ್ಮದ ಸಂಶಯ ಭಾವನೆ ಹುಟ್ಟಿರುವುದರಿಂದ ನಮ್ಮ ರೂಪವು ಮತ್ರ್ಯರಿಗೆ ಗೋಚರಿಸಲಾರದು. ಇದು ನಿಯಮ ಎಂದು ಹೇಳಲು, ಭೀಮಸೇನನು ಅವನ ಕಾಲಿಗೆ ನಮಸ್ಕರಿಸಿ ‘ಒತ್ತಾಯಪೂರ್ವಕ ವಿನಂತಿ ಮಾಡುವುದಿಲ್ಲ ಆದರೂ ರೂಪು ತೋರಿಸು’ ಎಂದು ಪ್ರಾರ್ಥಿಸಿದನು.
ಮೂಲ ...{Loading}...
ಅದರಿನೀ ದ್ವಾಪರದ ಕಡೆಯಲಿ
ಯುದಿತ ಮಾನುಷ ಕರ್ಮ ಸಂಶಯ
ವಿದರೊಳೆಮ್ಮಯ ರೂಪು ಗೋಚರವಲ್ಲ ಮತ್ರ್ಯರಿಗೆ
ಇದು ನಿಧಾನವು ಭೀಮಯೆನೆ ತ
ತ್ಪದ ಯುಗಕೆ ಮಗುಳೆರಗಿ ನಿರ್ಬಂ
ಧದಲಿ ಬಿನ್ನಹ ಮಾಡಲಮ್ಮೆನು ರೂಪ ತೋರೆಂದ ॥35॥
೦೩೬ ಆದಡಿನ್ನು ನಿರೀಕ್ಷಿಸೆನುತ ...{Loading}...
ಆದಡಿನ್ನು ನಿರೀಕ್ಷಿಸೆನುತ ನಿ
ನಾದದಲಿ ನೆಲ ಬಿರಿಯೆ ಬಾಲದ
ಬೀದಿವರಿ ಬಾಸಣಿಸೆ ಘನ ನಕ್ಷತ್ರ ಮಂಡಲವ
ಮೇದಿನಿಯ ಹೊರೆಗಾರರಳ್ಳೆದೆ
ಯಾದರಳುಕಿದವದ್ರಿಗಳು ಸ
ಪ್ತೋದಧಿಗಳಂಜಿದವೆನಲು ಹೆಚ್ಚಿದನು ಕಲಿ ಹನುಮ ॥36॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆದರೂ ನೀನು ನೋಡು’ ಎಂದು ಹೇಳಿ ಹನುಮಂತನು ನೆಲವು ಬಿರಿಯುವಂತೆ, ಬಾಲದ ತುದಿಯು ನಕ್ಷತ್ರ ಮಂಡಲವನ್ನು ಮುಟ್ಟುವಂತೆ, ಭೂಮಿಯ ಪರಾಕ್ರಮಿಗಳು ಬೆದರುವಂತೆ, ಪರ್ವತಗಳು ಅಳುಕುವಂತೆ, ಸಪ್ತಸಾಗರಗಳು ಅಂಜುವಂತೆ, ಬೆಳೆಯುತ್ತಾ ಹೋದನು.
ಮೂಲ ...{Loading}...
ಆದಡಿನ್ನು ನಿರೀಕ್ಷಿಸೆನುತ ನಿ
ನಾದದಲಿ ನೆಲ ಬಿರಿಯೆ ಬಾಲದ
ಬೀದಿವರಿ ಬಾಸಣಿಸೆ ಘನ ನಕ್ಷತ್ರ ಮಂಡಲವ
ಮೇದಿನಿಯ ಹೊರೆಗಾರರಳ್ಳೆದೆ
ಯಾದರಳುಕಿದವದ್ರಿಗಳು ಸ
ಪ್ತೋದಧಿಗಳಂಜಿದವೆನಲು ಹೆಚ್ಚಿದನು ಕಲಿ ಹನುಮ ॥36॥
೦೩೭ ಮೇರುವಿನ ತಪ್ಪಲಲಿ ...{Loading}...
ಮೇರುವಿನ ತಪ್ಪಲಲಿ ಬೆಳೆದ ಬ
ಲಾರಿ ಚಾಪವೊ ಮೇಣ್ ತ್ರಿವಿಕ್ರಮ
ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲು ಮಿಳಿಯೊ
ಚೂರಿಸುವ ಬಲು ಬಾಲವೋ ಜಂ
ಭಾರಿ ಭವನವನಳ್ಳಿರಿಯೆ ತ್ರಿಪು
ರಾರಿಯೊಡ್ಡಿನ ಹೊಳಹಿನಲಿ ಹೊಳೆ ಹೊಳೆದನಾ ಹನುಮ ॥37॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮೇರುಪರ್ವತದ ಕೆಳಗೆ ಇರುವ ಇಂದ್ರಚಾಪವೋ, (ಕಾಮನಬಿಲ್ಲೋ) ತ್ರಿವಿಕ್ರಮನ ಆರ್ಭಟೆಗೆ ನಿಂತ ಮಿಂಚಿನ ಎಳೆಯಂತಿರುವ ಹಗ್ಗವೋ, ಸ್ವರ್ಗಲೋಕಕ್ಕೆ ಕೋರೈಸಿದ ತ್ರಿಪುರಾರಿಯ ತೇಜವೋ, ತಿವಿಯುವ ಬಾಲವೋ ಎಂಬಂತೆ ಹನುಮನು ಹೊಳೆದನು.
ಪದಾರ್ಥ (ಕ.ಗ.ಪ)
ಬಲಾರಿ ಚಾಪ - ಕಾಮನ ಬಿಲ್ಲು
ಮಿಳಿ - ಹಗ್ಗ
ಚೂರಿಸು - ತಿವಿ
ಮೂಲ ...{Loading}...
ಮೇರುವಿನ ತಪ್ಪಲಲಿ ಬೆಳೆದ ಬ
ಲಾರಿ ಚಾಪವೊ ಮೇಣ್ ತ್ರಿವಿಕ್ರಮ
ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲು ಮಿಳಿಯೊ
ಚೂರಿಸುವ ಬಲು ಬಾಲವೋ ಜಂ
ಭಾರಿ ಭವನವನಳ್ಳಿರಿಯೆ ತ್ರಿಪು
ರಾರಿಯೊಡ್ಡಿನ ಹೊಳಹಿನಲಿ ಹೊಳೆ ಹೊಳೆದನಾ ಹನುಮ ॥37॥
೦೩೮ ನೋಡಿದನು ನಡುಗಿದನು ...{Loading}...
ನೋಡಿದನು ನಡುಗಿದನು ಕಂಗಳ
ಕೋಡಿಯಲಿ ನೀರೊರೆಯೆ ಹರುಷದ
ರೂಢಿಯಲಿ ಜೊಮ್ಮೆದ್ದು ಮನ ಡೆಂಡಣಿಸಿ ಭೀತಿಯಲಿ
ಬಾಡು ಮೋರೆಯನೆತ್ತಿ ಕೈಗಳ
ನೀಡಿ ಕಂಗಳ ಮುಚ್ಚಿ ಮರಳಿದು
ನೋಡಿ ಶಿವ ಶಿವಯೆನುತ ಬೆಚ್ಚಿದನಡಿಗಡಿಗೆ ಭೀಮ ॥38॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಭೀಮಸೇನನು ಈ ರೂಪವನ್ನು ನೋಡುತ್ತಾ ನಡುಗಿ, ಕಂಗಳಲ್ಲಿ ಆಶ್ಚರ್ಯದ ಅಶ್ರುಧಾರೆಯನ್ನು ಸುರಿಸಿದನು. ಹರ್ಷಾತಿರೇಕದಲ್ಲಿ ಮುಳುಗಿ ಎದ್ದು, ಭಯಭೀತನಾಗಿ ಬಾಡಿದ ಮೋರೆಯಿಂದ ಕೈಯೆತ್ತಿ ಕಣ್ಮುಚ್ಚಿ , ಮತ್ತೆ ನೋಡಿ ಶಿವಶಿವಾ ಎನ್ನುತ್ತ ಭೀಮನು ಬೆಚ್ಚಿಬಿದ್ದನು.
ಮೂಲ ...{Loading}...
ನೋಡಿದನು ನಡುಗಿದನು ಕಂಗಳ
ಕೋಡಿಯಲಿ ನೀರೊರೆಯೆ ಹರುಷದ
ರೂಢಿಯಲಿ ಜೊಮ್ಮೆದ್ದು ಮನ ಡೆಂಡಣಿಸಿ ಭೀತಿಯಲಿ
ಬಾಡು ಮೋರೆಯನೆತ್ತಿ ಕೈಗಳ
ನೀಡಿ ಕಂಗಳ ಮುಚ್ಚಿ ಮರಳಿದು
ನೋಡಿ ಶಿವ ಶಿವಯೆನುತ ಬೆಚ್ಚಿದನಡಿಗಡಿಗೆ ಭೀಮ ॥38॥
೦೩೯ ಸಾಕು ಸಾಕಞ್ಜಿದೆನು ...{Loading}...
ಸಾಕು ಸಾಕಂಜಿದೆನು ಮನುಜರು
ಕಾಕು ಬಲರು ನಿಜ ಸ್ವಭಾವವ
ನೇಕೆ ಬಿಡುವೆವು ತಿಳಿದು ತಿಳಿಯೆವು ಕಂಡೊಡಂಜುವೆವು
ಸಾಕು ಪೂರ್ವದ ರೂಪಿನಲಿ ನಿ
ವ್ರ್ಯಾಕುಲನ ಮಾಡೆನಲು ಪವನಜ
ನಾ ಕಪೀಶ್ವರ ನಗುತ ಮುನ್ನಿನ ರೂಪ ಕೈಕೊಂಡ ॥39॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಸಾಕಪ್ಪಾ ಸಾಕು, ಮಾನವರು ಹುಲು ಪರಾಕ್ರಮಿಗಳು. ನಿಜಸ್ವಭಾವ ಬಿಡದೆ, ತಿಳಿದೂ ತಿಳಿಯದೆ ಇದ್ದು ನೋಡಿದ ಮೇಲೆ ಬೆದರುತ್ತೇವೆ. ನಿನ್ನ ದಿವ್ಯರೂಪ ಸಾಕು. ಮೊದಲಿದ್ದಂತೆಯೇ ಆಗಿ ನನ್ನ ಭಯವನ್ನು ಕಳೆ’. ಎಂದು ಭೀಮನು ಹೇಳಲು, ಹನುಮ ಮೊದಲಿನ ರೂಪವನ್ನು ಧರಿಸಿದನು.
ಮೂಲ ...{Loading}...
ಸಾಕು ಸಾಕಂಜಿದೆನು ಮನುಜರು
ಕಾಕು ಬಲರು ನಿಜ ಸ್ವಭಾವವ
ನೇಕೆ ಬಿಡುವೆವು ತಿಳಿದು ತಿಳಿಯೆವು ಕಂಡೊಡಂಜುವೆವು
ಸಾಕು ಪೂರ್ವದ ರೂಪಿನಲಿ ನಿ
ವ್ರ್ಯಾಕುಲನ ಮಾಡೆನಲು ಪವನಜ
ನಾ ಕಪೀಶ್ವರ ನಗುತ ಮುನ್ನಿನ ರೂಪ ಕೈಕೊಂಡ ॥39॥
೦೪೦ ಅಞ್ಜದಿರು ನೀನಿನ್ನು ...{Loading}...
ಅಂಜದಿರು ನೀನಿನ್ನು ಮೆಚ್ಚಿದೆ
ನಂಜಲಿಸು ನಾ ಸಲಿಸುವೆನು ನ
ಮ್ಮಂಜನಾ ದೇವಿಯರು ಕುಂತೀದೇವಿಯಾದರಲೆ
ರಂಜಕರು ನಾವಲ್ಲ ಹೇಳು ಸ
ಮಂಜಸದಲೆನೆ ಭೀಮ ನಗುತ ಧ
ನಂಜಯನ ಟೆಕ್ಕೆಯಕೆ ಬಿಜಯಂಗೈಯ ಬೇಕೆಂದ ॥40॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- “ನೀನು ಇನ್ನು ಹೆದರಬೇಡ ನಿನಗೆ ಮೆಚ್ಚಿದ್ದೇನೆ ; ನಮ್ಮ ತಾಯಿ ಅಂಜನಾದೇವಿ ಕುಂತೀದೇವಿ ಆದಳು. ವಿನೋದದ ಮಾತು ಇದಲ್ಲ. ನಿನಗೆ ಏನು ಬೇಕೋ ಕೇಳು” ಎನ್ನಲು ಭೀಮನು ‘ನಮ್ಮ ಅರ್ಜುನನ ರಥದ ಪತಾಕೆಗೆ ನೀನು ಆಗಮಿಸಬೇಕು’ ಎಂದು ಪ್ರಾರ್ಥಿಸಿದನು.
ಮೂಲ ...{Loading}...
ಅಂಜದಿರು ನೀನಿನ್ನು ಮೆಚ್ಚಿದೆ
ನಂಜಲಿಸು ನಾ ಸಲಿಸುವೆನು ನ
ಮ್ಮಂಜನಾ ದೇವಿಯರು ಕುಂತೀದೇವಿಯಾದರಲೆ
ರಂಜಕರು ನಾವಲ್ಲ ಹೇಳು ಸ
ಮಂಜಸದಲೆನೆ ಭೀಮ ನಗುತ ಧ
ನಂಜಯನ ಟೆಕ್ಕೆಯಕೆ ಬಿಜಯಂಗೈಯ ಬೇಕೆಂದ ॥40॥
೦೪೧ ಐಸೆ ಸಲಿಸಿದೆನೆನುತಲಾ ...{Loading}...
ಐಸೆ ಸಲಿಸಿದೆನೆನುತಲಾ ಕಪಿ
ಯಾ ಸಮಯದಲದೃಶ್ಯವಾಗೆ ವಿ
ಕಾಸವಾದುದು ವಿಸ್ಮಯಕೆ ಪವಮಾನ ನಂದನನ
ಆ ಸುಗಂಧಿಕ ಕಮಲ ತಾನಿ
ನ್ನೇಸು ದೂರವೊ ದ್ರುಪದಸುತೆ ತನ
ಗೇಸು ಮುನಿವಳೊ ಹಾಯೆನುತ ಹರಿದನು ವನಾಂತರವ ॥41॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಆಯ್ತು ಈಡೇರಿಸಿದೆ’ ಎಂದು ಹನುಮಂತ ಆ ಕೂಡಲೇ ಅದೃಶ್ಯನಾದನು. ಭೀಮನ ವಿಸ್ಮಯ ಇನ್ನೂ ಹೆಚ್ಚಿತು. ಆ ಸೌಗಂಧಿಕ ಪುಷ್ಪ ಇನ್ನೆಷ್ಟು ದೂರವಿದೆಯೋ ಎಂದುಕೊಳ್ಳುತ್ತಾ, ದ್ರೌಪದಿಯು ಎಷ್ಟು ಸಿಟ್ಟಾಗುತ್ತಾಳೋ ಎಂದು ಭಾವಿಸುತ್ತಾ, ವನಾಂತರದೊಳಗೆ ನಡೆದನು.
ಮೂಲ ...{Loading}...
ಐಸೆ ಸಲಿಸಿದೆನೆನುತಲಾ ಕಪಿ
ಯಾ ಸಮಯದಲದೃಶ್ಯವಾಗೆ ವಿ
ಕಾಸವಾದುದು ವಿಸ್ಮಯಕೆ ಪವಮಾನ ನಂದನನ
ಆ ಸುಗಂಧಿಕ ಕಮಲ ತಾನಿ
ನ್ನೇಸು ದೂರವೊ ದ್ರುಪದಸುತೆ ತನ
ಗೇಸು ಮುನಿವಳೊ ಹಾಯೆನುತ ಹರಿದನು ವನಾಂತರವ ॥41॥
೦೪೨ ಧರಣಿಪತಿ ಕೇಳ್ ...{Loading}...
ಧರಣಿಪತಿ ಕೇಳ್ ಬಹಳ ವಿಪಿನಾ
ತರವನಂತವ ಕಳೆದು ಬರೆಬರೆ
ಸರಸಿಜದ ಮೋಹರದ ಮುಂದೈತಪ್ಪ ಪರಿಮಳದ
ಮೊರೆವ ತುಂಬಿಯ ತಟ್ಟುಗಳ ತನಿ
ವರಿವ ತಂಪಿನ ತುರುಗಲಿನ ತ
ತ್ಸರಸಿಯನು ದೂರದಲಿ ಕಂಡುಬ್ಬಿದನು ಕಲಿಭೀಮ ॥42॥
ವಾಚನ ...{Loading}...
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅರಸನೇ ಕೇಳು, ಭೀಮಸೇನನು ಅನೇಕ ಕಾನನಗಳನ್ನು ದಾಟಿ, ಸೌಗಂಧಿಕದ ಸುವಾಸನೆಯನ್ನು ಅರಸುತ್ತಾ ಮುಂದೆ ಬರುವ ದುಂಬಿಗಳನ್ನು ಹಿಂಬಾಲಿಸಿ, ತಂಪಾದ ಪ್ರದೇಶದಲ್ಲಿರುವ ಆ ಸರೋವರವನ್ನು ದೂರದಲ್ಲೇ ಕಂಡು ಸಂತಸಪಟ್ಟನು.
ಪದಾರ್ಥ (ಕ.ಗ.ಪ)
ತಟ್ಟು - ಸಮೂಹ
ತುರುಗಲು - ಆಧಿಕ್ಯ
ಮೂಲ ...{Loading}...
ಧರಣಿಪತಿ ಕೇಳ್ ಬಹಳ ವಿಪಿನಾ
ತರವನಂತವ ಕಳೆದು ಬರೆಬರೆ
ಸರಸಿಜದ ಮೋಹರದ ಮುಂದೈತಪ್ಪ ಪರಿಮಳದ
ಮೊರೆವ ತುಂಬಿಯ ತಟ್ಟುಗಳ ತನಿ
ವರಿವ ತಂಪಿನ ತುರುಗಲಿನ ತ
ತ್ಸರಸಿಯನು ದೂರದಲಿ ಕಂಡುಬ್ಬಿದನು ಕಲಿಭೀಮ ॥42॥
೦೪೩ ಒಗುಮಿಗೆಯ ಪರಿಮಳದ ...{Loading}...
ಒಗುಮಿಗೆಯ ಪರಿಮಳದ ಕಂಪಿನ
ತಗಡ ತೆಕ್ಕೆಯ ಬೀದಿವರಿಗಳ
ಮುಗುಳ ಮೊಗ್ಗೆಯ ತೆಗೆವ ತುಂಬಿಯ ಲಳಿಯ ಲಗ್ಗೆಗಳ
ಹೊಗರ ಹೊರಳಿಯ ಕಿರುದೆರೆಯ ನೂ
ಕುಗಳ ತಳಿತ ತುಷಾರ ಭಾರದ
ಸೊಗಸ ಸೇರಿಸಿ ಮಂದಮಾರುತನಪ್ಪಿದನು ಮಗನ ॥43॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಪರಿಮಳವನ್ನು ತುಂಬಿಕೊಂಡಿರುವ, ಮೊಗ್ಗು ಹೂಗಳ ಮೇಲೆ ಕುಳಿತ ತುಂಬಿಗಳ ಸ್ಪರ್ಶದಿಂದ ಸಿಡಿದ ರೇಣುಗಳಿಂದ, ಇಬ್ಬನಿಯ ಸಿಂಚನದಿಂದ ಕೂಡಿದ ಮಂದಾನಿಲವು ಮಗನಾದ ಭೀಮನನ್ನು ಅಪ್ಪಿಕೊಂಡಿತು.
ಪದಾರ್ಥ (ಕ.ಗ.ಪ)
ತುಷಾರ - ಇಬ್ಬನಿ
ಮೂಲ ...{Loading}...
ಒಗುಮಿಗೆಯ ಪರಿಮಳದ ಕಂಪಿನ
ತಗಡ ತೆಕ್ಕೆಯ ಬೀದಿವರಿಗಳ
ಮುಗುಳ ಮೊಗ್ಗೆಯ ತೆಗೆವ ತುಂಬಿಯ ಲಳಿಯ ಲಗ್ಗೆಗಳ
ಹೊಗರ ಹೊರಳಿಯ ಕಿರುದೆರೆಯ ನೂ
ಕುಗಳ ತಳಿತ ತುಷಾರ ಭಾರದ
ಸೊಗಸ ಸೇರಿಸಿ ಮಂದಮಾರುತನಪ್ಪಿದನು ಮಗನ ॥43॥
೦೪೪ ಝಳದ ಲಳಿ ...{Loading}...
ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದ ಬಿಂದುಗ
ಳೊಳ ಸರಿಯೆ ರೋಮಾಳಿ ಚಾಳಿಸೆ ತೃಷೆಯ ದೆಸೆ ಮುರಿಯೆ
ತಳಿತುದಾಪ್ಯಾಯನ ಮನೋರಥ
ಫಲಿಸಿತರಸಿಯ ಹರುಷ ದರ್ಪಣ
ಬೆಳಗುವುದು ಮಝ ಭಾಪೆನುತ ಭುಲ್ಲವಿಸಿದನು ಭೀಮ ॥44॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಬಿಸಿಲ ಝಳ ಪರಿಹಾರವಾಗಿ, ಮಾರ್ಗಾಯಾಸದಿಂದ ಉಂಟಾದ ಬೆವರು ಬಿಂದುಗಳು ಅರಿಹೋಗಿ, ರೋಮಗಳು ತಂಪಾಗಿ, ಬಾಯಾರಿಕೆ ನೀಗಿ, ತನ್ನ ಮನೋರಥ ಈಡೇರಿತೆಂದೂ, ರಾಣಿಯ ಬಯಕೆ ಫಲಿಸಿತೆಂದೂ ಭೀಮನು ಮಝ, ಭಾಪು ಎಂದು ಹಿಗ್ಗಿದನು.
ಮೂಲ ...{Loading}...
ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದ ಬಿಂದುಗ
ಳೊಳ ಸರಿಯೆ ರೋಮಾಳಿ ಚಾಳಿಸೆ ತೃಷೆಯ ದೆಸೆ ಮುರಿಯೆ
ತಳಿತುದಾಪ್ಯಾಯನ ಮನೋರಥ
ಫಲಿಸಿತರಸಿಯ ಹರುಷ ದರ್ಪಣ
ಬೆಳಗುವುದು ಮಝ ಭಾಪೆನುತ ಭುಲ್ಲವಿಸಿದನು ಭೀಮ ॥44॥
೦೪೫ ಸಾರೆ ಬರೆವರೆ ...{Loading}...
ಸಾರೆ ಬರೆವರೆ ಕಂಡನಲ್ಲಿ ಕು
ಬೇರನಾಳಿದ್ದುದು ತದೀಯ ಸ
ರೋರುಹದ ಕಾಹಿನಲಿ ಯಕ್ಷರು ಲಕ್ಷ ಸಂಖ್ಯೆಯಲಿ
ಸಾರೆ ಚಾಚಿದ ಹರಿಗೆಗಳ ಕರ
ವಾರಿಗಳ ಹೊದೆಯಂಬು ಚಾಪ ಕ
ಠಾರಿ ಸಲ್ಲೆಹ ಸಬಳಗಳ ಸೋಪಾನ ಮಾರ್ಗದಲಿ ॥45॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಅಲ್ಲಿಗೆ ಬಂದು, ಆ ಸರೋಜ ಪುಷ್ಪದ ರಕ್ಷಣೆಗಾಗಿ ಇದ್ದ ಕುಬೇರನ ಆಳುಗಳಾದ ಲಕ್ಷಗಟ್ಟಲೆ ಯಕ್ಷರನ್ನು ನೋಡಿದನು. ಹತ್ತಿರ ಬಂದಾಗ ಗುರಾಣಿ, ಖಡ್ಗ, ಬತ್ತಳಿಕೆಯಲ್ಲಿದ್ದ ಬಾಣ, ಬಿಲ್ಲು, ಕಠಾರಿ, ಸಬಳಗಳನ್ನು ಹೊಂದಿದ್ದ ಭಟರನ್ನು ಕಂಡನು.
ಪದಾರ್ಥ (ಕ.ಗ.ಪ)
ಕರವಾರಿ - ಕರವಾಳ, ಖಡ್ಗ
ಹೊದೆ - ಬತ್ತಳಿಕೆ
ಮೂಲ ...{Loading}...
ಸಾರೆ ಬರೆವರೆ ಕಂಡನಲ್ಲಿ ಕು
ಬೇರನಾಳಿದ್ದುದು ತದೀಯ ಸ
ರೋರುಹದ ಕಾಹಿನಲಿ ಯಕ್ಷರು ಲಕ್ಷ ಸಂಖ್ಯೆಯಲಿ
ಸಾರೆ ಚಾಚಿದ ಹರಿಗೆಗಳ ಕರ
ವಾರಿಗಳ ಹೊದೆಯಂಬು ಚಾಪ ಕ
ಠಾರಿ ಸಲ್ಲೆಹ ಸಬಳಗಳ ಸೋಪಾನ ಮಾರ್ಗದಲಿ ॥45॥
೦೪೬ ಎದ್ದರವರಿದಿರಾಗಿ ಭೀಮನ ...{Loading}...
ಎದ್ದರವರಿದಿರಾಗಿ ಭೀಮನ
ಹೊದ್ದಿದರು ನೀನಾರು ಹದ್ದಿಗೆ
ಬಿದ್ದಿನನೊ ಮೇಣ್ ಮಿತ್ರಭಾವದಲೆವಗೆ ಬಿದ್ದಿನನೊ
ಉದ್ದುರುಟುತನ ನಿನ್ನ ಮೋರೆಯ
ಲಿದ್ದುದೈ ನೀನಾರು ನಿನಗೇ
ನಿದ್ದುದಿಲ್ಲಿಯೆನುತ್ತ ಜರೆದರು ಯಕ್ಷರನಿಲಜನ ॥46॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಇವರೆಲ್ಲಾ ಎದ್ದು ಭೀಮನನ್ನು ಸುತ್ತುವರಿದು ‘ನೀನು ಯಾರು ? ಶತ್ರುಭಾವದಿಂದ ಬಂದವನೋ, ಅಥವಾ ಮಿತ್ರಭಾವದಿಂದ ಬಂದ ಅತಿಥಿಯೋ ? ನಿನ್ನ ಮುಖ ನೋಡಿದರೆ ಒರಟುತನ ಕಾಣುತ್ತಿದೆ. ನಿನಗೆ ಇಲ್ಲಿ ಏನಿದೆ ?’ ಎಂದು ಜರೆದು ಮಾತಾಡಿದರು.
ಮೂಲ ...{Loading}...
ಎದ್ದರವರಿದಿರಾಗಿ ಭೀಮನ
ಹೊದ್ದಿದರು ನೀನಾರು ಹದ್ದಿಗೆ
ಬಿದ್ದಿನನೊ ಮೇಣ್ ಮಿತ್ರಭಾವದಲೆವಗೆ ಬಿದ್ದಿನನೊ
ಉದ್ದುರುಟುತನ ನಿನ್ನ ಮೋರೆಯ
ಲಿದ್ದುದೈ ನೀನಾರು ನಿನಗೇ
ನಿದ್ದುದಿಲ್ಲಿಯೆನುತ್ತ ಜರೆದರು ಯಕ್ಷರನಿಲಜನ ॥46॥
೦೪೭ ನಾವಲೇ ಕುನ್ತೀ ...{Loading}...
ನಾವಲೇ ಕುಂತೀ ಕುಮಾರರು
ಭೂವಧೂವಲ್ಲಭರು ನಮ್ಮಯ
ದೇವಿಗಾದುದು ಬಯಕೆ ಸೌಗಂಧಿಕ ಸರೋರುಹದ
ಠಾವು ಕಾಣಿಸಿಕೊಂಡು ಬಹುದಾ
ತಾವರೆಯನೆನೆ ಬಂದೆವಿಲ್ಲಿಗೆ
ನೀವು ಕಾಹಿನ ಬಂಟರೆಂಬುದನರಿಯೆವಾವೆಂದ ॥47॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
47.’ ನಾವು ಕುಂತೀಕುಮಾರರು; ರಾಜರು. ನಮ್ಮರಸಿ ದ್ರೌಪದಿಗೆ ಸೌಗಂಧಿಕ ಹೂವನ್ನು ಮುಡಿಯುವ ಆಸೆಯಾಗಿದೆ. ಅದನ್ನು ತರುವಂತೆ ಅವಳು ಹೇಳಿದುದರಿಂದ ಇಲ್ಲಿಗೆ ಹುಡುಕುತ್ತಾ ಬಂದಿದ್ದೇವೆ. ನೀವು ಇದರ ಕಾಹುಭಟರೆಂಬುದನ್ನು ತಿಳಿಯೆವು’ ಎಂದು ಭೀಮಸೇನನು ಹೇಳಿದನು.
ಮೂಲ ...{Loading}...
ನಾವಲೇ ಕುಂತೀ ಕುಮಾರರು
ಭೂವಧೂವಲ್ಲಭರು ನಮ್ಮಯ
ದೇವಿಗಾದುದು ಬಯಕೆ ಸೌಗಂಧಿಕ ಸರೋರುಹದ
ಠಾವು ಕಾಣಿಸಿಕೊಂಡು ಬಹುದಾ
ತಾವರೆಯನೆನೆ ಬಂದೆವಿಲ್ಲಿಗೆ
ನೀವು ಕಾಹಿನ ಬಂಟರೆಂಬುದನರಿಯೆವಾವೆಂದ ॥47॥
೦೪೮ ಐಸಲೇ ತಪ್ಪೇನು ...{Loading}...
ಐಸಲೇ ತಪ್ಪೇನು ನೀ ಯ
ಕ್ಷೇಶನಲ್ಲಿಗೆ ಹೋಗಿ ಬೇಡುವು
ದೀ ಸರೋರುಹವಾವ ಘನ ಧನಪತಿಯುದಾರನಲೆ
ಮೀಸಲಿನ ಸರಸಿಯಲಿ ದೃಷ್ಟಿಯ
ಸೂಸಬಹುದೇ ರಾಯನಾಜ್ಞಾ
ಭಾಷೆಯಿಲ್ಲದೆ ಬಗೆಯಲರಿದೆಂದುದು ಭಟಸ್ತೋಮ ॥48॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಹೌದೇ. ತಪ್ಪೇನು ? ನೀನು ಕುಬೇರನಲ್ಲಿಗೆ ಹೋಗಿ ಈ ಹೂವನ್ನು ಬೇಡಿದರೆ, ಉದಾರಿಯಾದ ಅವನು ಕೊಡಬಹುದು. ಅವನಿಗೆ ಇದೇನು ದೊಡ್ಡದು ? ಅದನ್ನು ಬಿಟ್ಟು ಮೀಸಲಾಗಿರುವ ಈ ಸರೋವರದ ಕಡೆ ದೃಷ್ಟಿ ಹಾಯಿಸಬಾರದು. ಕುಬೇರನ ಆಜ್ಞೆಯಿಲ್ಲದೆ ಇದು ಸಾಧ್ಯವಿಲ್ಲ’ ಎಂದಿತು ಭಟಸ್ತೋಮ.
ಮೂಲ ...{Loading}...
ಐಸಲೇ ತಪ್ಪೇನು ನೀ ಯ
ಕ್ಷೇಶನಲ್ಲಿಗೆ ಹೋಗಿ ಬೇಡುವು
ದೀ ಸರೋರುಹವಾವ ಘನ ಧನಪತಿಯುದಾರನಲೆ
ಮೀಸಲಿನ ಸರಸಿಯಲಿ ದೃಷ್ಟಿಯ
ಸೂಸಬಹುದೇ ರಾಯನಾಜ್ಞಾ
ಭಾಷೆಯಿಲ್ಲದೆ ಬಗೆಯಲರಿದೆಂದುದು ಭಟಸ್ತೋಮ ॥48॥
೦೪೯ ಬೇಡಲರಿಯೆವು ಬೇಡುವರ ...{Loading}...
ಬೇಡಲರಿಯೆವು ಬೇಡುವರ ಕೂ
ಡಾಡುವರು ನಾವಲ್ಲ ಕದನವ
ಬೇಡಬಲ್ಲೆವು ಕರೆಯಿ ಕೊಡಲಾಪರೆ ಧನೇಶ್ವರನ
ಬೇಡುವುದು ಗದೆ ನಿಮ್ಮ ವಕ್ಷವ
ತೋಡಿ ನೆತ್ತರುಗೊಳದಲೋಕುಳಿ
ಯಾಡುವುದನೆಂದನಿಲಸುತ ಬೀಸಿದನು ನಿಜಗದೆಯ ॥49॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ನಾವು ಬೇಡುವವರಲ್ಲ. ಬೇಡುವವರೊಂದಿಗೆ ಕೂಡಿ ಮಾತಾಡುವವರೂ ಅಲ್ಲ. ಯುದ್ಧವನ್ನು ಮಾತ್ರ ಬೇಡಬಲ್ಲೆವು. ಅದನ್ನು ಕುಬೇರ ಕೊಡಬಲ್ಲನಾದರೆ ಅವನನ್ನು ಕರೆಯಿರಿ. ನಿಮ್ಮ ಎದೆಯನ್ನು ಬಗಿದು ನೆತ್ತರಾಡುವುದಕ್ಕಾಗಿ ಈ ಗದೆ ಬೇಡುತ್ತಿದೆ ? ಎಂದು ಭೀಮನು ತನ್ನ ಗದೆಯನ್ನು ಬೀಸಿದನು.
ಪದಾರ್ಥ (ಕ.ಗ.ಪ)
ಧನೇಶ್ವರ - ಕುಬೇರ
ಮೂಲ ...{Loading}...
ಬೇಡಲರಿಯೆವು ಬೇಡುವರ ಕೂ
ಡಾಡುವರು ನಾವಲ್ಲ ಕದನವ
ಬೇಡಬಲ್ಲೆವು ಕರೆಯಿ ಕೊಡಲಾಪರೆ ಧನೇಶ್ವರನ
ಬೇಡುವುದು ಗದೆ ನಿಮ್ಮ ವಕ್ಷವ
ತೋಡಿ ನೆತ್ತರುಗೊಳದಲೋಕುಳಿ
ಯಾಡುವುದನೆಂದನಿಲಸುತ ಬೀಸಿದನು ನಿಜಗದೆಯ ॥49॥
೦೫೦ ಎಲೆಲೆ ಕವಿ ...{Loading}...
ಎಲೆಲೆ ಕವಿ ಕವಿ ಯಕ್ಷ ರಾಕ್ಷಸ
ದಳವ ನರನೊಟ್ಟೈಸುವನೆ ಹೆ
ಬ್ಬುಲಿಯ ಹಿಂಡಿಗೆ ಹೋತ ಹೊಡಕರಿಸಿತು ಮಹಾದೇವ
ತಲೆಯ ಹೊಯ್ ಚೆಂಡಾಡು ತಿನ್ನಿವ
ನೆಲುವನೆನುತೀಟಿಯಲಿ ಸಬಳದ
ಲಲಗಿನಲಿ ಖಡುಗದಲಿ ಹೊಯ್ದರು ಪವನ ನಂದನನ ॥50॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಎಲೆಲೇ ಇವನು ಯಕ್ಷರಾಕ್ಷಸ ಸೇನೆಯನ್ನು ಬಡಿಯುವನೆ ? ಹೆಬ್ಬುಲಿಯ ಹಿಂಡಿಗೆ ಹೋತ ಬಂದ ಹಾಗಾಯ್ತು. ಶಿವನೇ… ಇವನ ತಲೆಯನ್ನು ಬಡಿದು ಚೆಂಡಾಡಿ. ಇವನ ಎಲುಬುಗಳನ್ನು ತಿನ್ನಿ ಎಂದು ಈಟಿ ಭರ್ಜಿ ಖಡ್ಗಗಳಿಂದ ಭೀಮನಿಗೆ ಹೊಯ್ದರು.
ಮೂಲ ...{Loading}...
ಎಲೆಲೆ ಕವಿ ಕವಿ ಯಕ್ಷ ರಾಕ್ಷಸ
ದಳವ ನರನೊಟ್ಟೈಸುವನೆ ಹೆ
ಬ್ಬುಲಿಯ ಹಿಂಡಿಗೆ ಹೋತ ಹೊಡಕರಿಸಿತು ಮಹಾದೇವ
ತಲೆಯ ಹೊಯ್ ಚೆಂಡಾಡು ತಿನ್ನಿವ
ನೆಲುವನೆನುತೀಟಿಯಲಿ ಸಬಳದ
ಲಲಗಿನಲಿ ಖಡುಗದಲಿ ಹೊಯ್ದರು ಪವನ ನಂದನನ ॥50॥
೦೫೧ ತಾಗಿದೆಳೆ ಮುಳ್ಳಿನಲಿ ...{Loading}...
ತಾಗಿದೆಳೆ ಮುಳ್ಳಿನಲಿ ಮದಗಜ
ಸೀಗುರಿಸುವುದೆ ಭಟರ ಕೈದುಗ
ಳೇಗುವವು ಪವಮಾನಸುತ ಕೈದೋರೆ ಖಾತಿಯಲಿ
ತಾಗಿದವದಿರನಿಕ್ಕಿದನು ರಣ
ದಾಗಡಿಗರನುಯೆಕ್ಕಿದನು ಕೈ
ದಾಗಿಸಿದನನಿಬರಲಿ ಗಂಡುಗತನದ ಗಾಡಿಕೆಯ ॥51॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಮದ್ದಾನೆ ತನಗೆ ತಾಗಿದ ಎಳೆ ಮುಳ್ಳಿಗೆ ಹೆದರುವುದೆ ? ಭೀಮನು ಖಾತಿಯಿಂದ ಕೈಯೆತ್ತಲು ಯಕ್ಷಭಟರು ಕೈಸೋತರು. ಭೀಮನ ಪೌರುಷದ ಎದುರು ಅವರೆಲ್ಲಾ ದಿಕ್ಕಾಪಾಲಾದರು.
ಮೂಲ ...{Loading}...
ತಾಗಿದೆಳೆ ಮುಳ್ಳಿನಲಿ ಮದಗಜ
ಸೀಗುರಿಸುವುದೆ ಭಟರ ಕೈದುಗ
ಳೇಗುವವು ಪವಮಾನಸುತ ಕೈದೋರೆ ಖಾತಿಯಲಿ
ತಾಗಿದವದಿರನಿಕ್ಕಿದನು ರಣ
ದಾಗಡಿಗರನುಯೆಕ್ಕಿದನು ಕೈ
ದಾಗಿಸಿದನನಿಬರಲಿ ಗಂಡುಗತನದ ಗಾಡಿಕೆಯ ॥51॥
೦೫೨ ಗಾಡಿಸಿತು ಗಜಬಜ ...{Loading}...
ಗಾಡಿಸಿತು ಗಜಬಜ ಕುಬೇರನ
ಬೀಡಿನಗ್ಗದ ಬಂಟರೇ ಕೈ
ಮಾಡಿರೈ ಕೊಳಗಾಹಿಗಳು ಫಡ ಹಿಂಗಬೇಡೆನುತ
ಜಾಡಿಸುವ ಮಣಿಮಯದ ಗದೆಯಲಿ
ತೋಡುವೊಯ್ಲಿನ ತುಡುಕುಗಾಯದ
ನೀಡು ಮೊನೆಗಳ ವಿಗಡನಿಕ್ಕಿದನದಟ ರಕ್ಕಸರ ॥52॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಕುಬೇರನ ಮನೆಯಾಳುಗಳೇ, ಕೈಮಾಡ ಬನ್ನಿ. ಕೊಳದ ಕಾಹಿನ ಭಟರೇ ಓಡಬೇಡಿ ! ಎನ್ನುತ್ತಾ ಮಣಿಮಯವಾದ ಗದೆಯಿಂದ ಆ ಯಕ್ಷರ ಮೈಮೇಲೆ ಹೊಡೆದು ಗಾಯಗೊಳಿಸಿದನು.
ಮೂಲ ...{Loading}...
ಗಾಡಿಸಿತು ಗಜಬಜ ಕುಬೇರನ
ಬೀಡಿನಗ್ಗದ ಬಂಟರೇ ಕೈ
ಮಾಡಿರೈ ಕೊಳಗಾಹಿಗಳು ಫಡ ಹಿಂಗಬೇಡೆನುತ
ಜಾಡಿಸುವ ಮಣಿಮಯದ ಗದೆಯಲಿ
ತೋಡುವೊಯ್ಲಿನ ತುಡುಕುಗಾಯದ
ನೀಡು ಮೊನೆಗಳ ವಿಗಡನಿಕ್ಕಿದನದಟ ರಕ್ಕಸರ ॥52॥
೦೫೩ ಹಾರಿದವು ಹಂಸೆಗಳು ...{Loading}...
ಹಾರಿದವು ಹಂಸೆಗಳು ತುದಿಮರ
ನೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳವು ಜಕ್ಕವಕ್ಕಿಗಳು
ಚೀರಿದವು ಕೊಳವಕ್ಕಿ ಜಲದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ ॥53॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಹಂಸೆಗಳು ಹಾರಿಹೋದವು. ನವಿಲುಗಳು ಮರದ ತುದಿಯನ್ನು ಏರಿದವು. ಭೀಮನ ಕೋಲಾಹಲದಿಂದ ಮರಾಳಗಳು ನೀರೊಳಗೆ ಕೊಕ್ಕುಗಳನ್ನು ಮುಳುಗಿಸಿದವು. ಜಕ್ಕವಕ್ಕಿಗಳು ಚೀರಿದವು. ದುಂಬಿಗಳು ತಾವರೆ ಎಲೆಯ ಮರೆಯಲ್ಲಿ ಅಡಗಿ ಕುಳಿತವು.
ಮೂಲ ...{Loading}...
ಹಾರಿದವು ಹಂಸೆಗಳು ತುದಿಮರ
ನೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳವು ಜಕ್ಕವಕ್ಕಿಗಳು
ಚೀರಿದವು ಕೊಳವಕ್ಕಿ ಜಲದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ ॥53॥
೦೫೪ ಚೆಲ್ಲಿದರು ರಕ್ಕಸರು ...{Loading}...
ಚೆಲ್ಲಿದರು ರಕ್ಕಸರು ಯಕ್ಷರು
ಬಿಲ್ಲ ಬಿಸುಟರು ಗುಹ್ಯಕರು ನಿಂ
ದಲ್ಲಿ ನಿಲ್ಲರು ಕಿನ್ನರರನಿನ್ನೇನನುಸುರುವೆನು
ಗೆಲ್ಲವಿದು ಲೇಸಾಯ್ತು ಮಾನವ
ನಲ್ಲಿ ನಮಗೀ ಭಂಗ ಭಯರಸ
ವೆಲ್ಲಿ ಭಾಪುರೆ ವಿಧಿಯೆನುತ ಬೆಚ್ಚಿದುದು ಭಟಸ್ತೋಮ ॥54॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ‘ಯಕ್ಷರಾಕ್ಷಸರು, ಗುಹ್ಯಕ ಕಿನ್ನರರು ಅಲ್ಲಿ ನಿಲ್ಲದೆ ಓಡಿಹೋದರು. ಇದನ್ನು ಏನೆಂದು ಹೇಳಲಿ ? ಲೇಸಾಯ್ತು, ಈ ಮನುಷ್ಯನಲ್ಲಿ ನಮಗೆ ಸೋಲಾಯ್ತು. ಈ ಭಯ ನಮಗೆ ಒದಗಿತಲ್ಲಾ, ಭಲರೇ’ ಎಂದು ಭಟಸ್ತೋಮ ಬೆದರಿತು.
ಮೂಲ ...{Loading}...
ಚೆಲ್ಲಿದರು ರಕ್ಕಸರು ಯಕ್ಷರು
ಬಿಲ್ಲ ಬಿಸುಟರು ಗುಹ್ಯಕರು ನಿಂ
ದಲ್ಲಿ ನಿಲ್ಲರು ಕಿನ್ನರರನಿನ್ನೇನನುಸುರುವೆನು
ಗೆಲ್ಲವಿದು ಲೇಸಾಯ್ತು ಮಾನವ
ನಲ್ಲಿ ನಮಗೀ ಭಂಗ ಭಯರಸ
ವೆಲ್ಲಿ ಭಾಪುರೆ ವಿಧಿಯೆನುತ ಬೆಚ್ಚಿದುದು ಭಟಸ್ತೋಮ ॥54॥
೦೫೫ ಗಾಯವಡೆದರು ಕೆಲರು ...{Loading}...
ಗಾಯವಡೆದರು ಕೆಲರು ಕೆಲರಸು
ಬೀಯವಾದುದು ಬಿಡುದಲೆಯ ಬಲು
ನಾಯಕರು ಸಂತೈಸಿದರು ಕೌಬೇರ ಭವನದಲಿ
ವಾಯುಸುತನೀ ವಿಜಯ ಸಿರಿಯ ಪ
ಸಾಯಿತಂಗಭಿಷೇಕವೆಂದು ಗ
ದಾಯುಧವನಲುಬಿದನು ಕೊಳನಲಿ ಚಾಚಿದನು ತಡಿಗೆ ॥55॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೆಲವರಿಗೆ ಗಾಯವಾಯಿತು. ಮತ್ತೆ ಕೆಲವರ ಪ್ರಾಣವೇ ಹೋಯ್ತು. ಕುಬೇರನ ಅರಮನೆಯಲ್ಲಿ ಕೆದರಿದ ತಲೆಗೂದಲಿನ ನಾಯಕರು ಸಮಾಧಾನಗೊಂಡರು. ‘ಇದು ವಿಜಯಲಕ್ಷ್ಮಿಗೆ ಅಭಿಷೇಕ’ವೆಂದು ಭೀಮನು ಗದೆಯನ್ನು ಕೊಳದೊಳಗೆ ತೊಳೆದು ದಡದ ಮೇಲಿಟ್ಟನು.
ಪದಾರ್ಥ (ಕ.ಗ.ಪ)
ಅಲುಬು - ತೊಳೆ
ಮೂಲ ...{Loading}...
ಗಾಯವಡೆದರು ಕೆಲರು ಕೆಲರಸು
ಬೀಯವಾದುದು ಬಿಡುದಲೆಯ ಬಲು
ನಾಯಕರು ಸಂತೈಸಿದರು ಕೌಬೇರ ಭವನದಲಿ
ವಾಯುಸುತನೀ ವಿಜಯ ಸಿರಿಯ ಪ
ಸಾಯಿತಂಗಭಿಷೇಕವೆಂದು ಗ
ದಾಯುಧವನಲುಬಿದನು ಕೊಳನಲಿ ಚಾಚಿದನು ತಡಿಗೆ ॥55॥
೦೫೬ ತೊಳೆದು ಚರಣಾನನವ ...{Loading}...
ತೊಳೆದು ಚರಣಾನನವ ನಡುಗೊಳ
ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು
ಕ್ಕಳಿಸಿ ತೀರದಲುಗುಳಿ ದಿವ್ಯಾಂಭೋಜ ಪರಿಮಳವ
ವಿಲಸದಲಿ ತನಿಹೊರೆದ ಶೀತಳ
ಜಲವ ಕುಡಿದಾಪ್ಯಾಯನಾಂತರ
ಲಲಿತ ಹೃದಯ ನಿಮಿರ್ದು ಹಿಡಿದನು ಕಮಲಪಙÂ್ತಗಳ ॥56॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೈಕಾಲು ಮುಖಗಳನ್ನು ತೊಳೆದು, ನಡು ನೀರವರೆಗೆ ಹೋಗಿ, ತೀರಕ್ಕೆ ಬಂದು ಬಾಯಿ ಮುಕ್ಕಳಿಸಿ, ದಡದ ಮೇಲೆ ಉಗಿದು ದಿವ್ಯ ಕುಸುಮದ ಸುಗಂಧ ವಿಲಾಸದಿಂದ ಕೂಡಿದ ಶೀತಜಲವನ್ನು ಕುಡಿದು, ಅನಂತರ ಭೀಮಸೇನನು ಕಮಲದಳಗಳನ್ನು ಗಟ್ಟಿಯಾಗಿ ಹಿಡಿದನು.
ಮೂಲ ...{Loading}...
ತೊಳೆದು ಚರಣಾನನವ ನಡುಗೊಳ
ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು
ಕ್ಕಳಿಸಿ ತೀರದಲುಗುಳಿ ದಿವ್ಯಾಂಭೋಜ ಪರಿಮಳವ
ವಿಲಸದಲಿ ತನಿಹೊರೆದ ಶೀತಳ
ಜಲವ ಕುಡಿದಾಪ್ಯಾಯನಾಂತರ
ಲಲಿತ ಹೃದಯ ನಿಮಿರ್ದು ಹಿಡಿದನು ಕಮಲಪಙÂ್ತಗಳ ॥56॥
೦೫೭ ಚಾಚಿದನು ಬರಿ ...{Loading}...
ಚಾಚಿದನು ಬರಿ ಕೈಯನಬುಜಕೆ
ಚಾಚುವಿಭಪತಿಯಂತೆ ತುಂಬಿಗ
ಳಾ ಚಡಾಳ ಧ್ವನಿಯ ದಟ್ಟಣೆ ಮಿಗಲು ಚೀರಿದವು
ವೀಚಿ ಮಸಗುವ ಕೊಳನು ಜಿನ ಋಷಿ
ಯಾಚರಣೆಯೊಳು ಕಮಲ ವನವನು
ಲೋಚಿನಲಿ ಲಾವಣೆಗೆಗೊಂಡನು ಭೀಮ ನಿಮಿಷದಲಿ ॥57॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಆನೆಯು ಸೊಂಡಿಲನ್ನು ಚಾಚುವಂತೆ, ಭೀಮನು ಕೈಯನ್ನು ಚಾಚಿ ಕಮಲವನ್ನು ಹಿಡಿದನು. ಆಗ ಅದರೊಳಗಿರುವ ದುಂಬಿಗಳು ಚೀರಿ ಹೊರಬಂದವು. ಜೈನಮುನಿಯು ತನ್ನ ಮೈಮೇಲಿನ ಕೂದಲನ್ನು ಬುಡಮುಟ್ಟ ಕೀಳುವಂತೆ, ಭೀಮನು ಪ್ರಕಾಶಿಸುವ ಕೊಳದಿಂದ ಸೌಗಂಧಿಕಪುಷ್ಪಗಳನ್ನು ಕಿತ್ತು ಸಂಗ್ರಹಿಸಿದನು.
ಪದಾರ್ಥ (ಕ.ಗ.ಪ)
ಲೋಚು-ಮೈ ಮೇಲಿನ ಕೂದಲನ್ನು ಬುಡಸಮೇತ ಕೀಳು, ಲಾವಣಿಗೆ-ಸಂಗ್ರಹ
ಮೂಲ ...{Loading}...
ಚಾಚಿದನು ಬರಿ ಕೈಯನಬುಜಕೆ
ಚಾಚುವಿಭಪತಿಯಂತೆ ತುಂಬಿಗ
ಳಾ ಚಡಾಳ ಧ್ವನಿಯ ದಟ್ಟಣೆ ಮಿಗಲು ಚೀರಿದವು
ವೀಚಿ ಮಸಗುವ ಕೊಳನು ಜಿನ ಋಷಿ
ಯಾಚರಣೆಯೊಳು ಕಮಲ ವನವನು
ಲೋಚಿನಲಿ ಲಾವಣೆಗೆಗೊಂಡನು ಭೀಮ ನಿಮಿಷದಲಿ ॥57॥
೦೫೮ ತಿರಿದು ತಾವರೆ ...{Loading}...
ತಿರಿದು ತಾವರೆ ವನವ ಕಕ್ಷದೊ
ಳಿರುಕಿ ಗದೆಯನು ಕೊಂಡು ಸರಸಿಯ
ಹೊರವಳಯದಲಿ ನಿಂದು ಕಾಹಿನ ಯಕ್ಷ ರಾಕ್ಷಸರ
ಒರಲಿ ಕರೆದನು ನಿಮ್ಮ ಕೊಳನಿದೆ
ಬರಿದೆ ದೂರದಿರೆಮ್ಮನೆನುತಾ
ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ ॥58॥
ಸರ್ವ-ಟೀಕೆಗಳು ...{Loading}...
ಗದ್ಯ (ಕ.ಗ.ಪ)
- ಕೊಳದಲ್ಲಿದ್ದ ತಾವರೆಗಳನ್ನೆಲ್ಲಾ ಕಿತ್ತುಕೊಂಡು, ಕಂಕುಳಲ್ಲಿ ಗದೆಯನ್ನಿಟ್ಟುಕೊಂಡು, ಸರೋವರದ ಹೊರಭಾಗಕ್ಕೆ ಬಂದು ನಿಂತನು. ಕಾವಲಿನ ಯಕ್ಷ ರಾಕ್ಷಸ ಭಟರನ್ನು ಗಟ್ಟಿಯಾಗಿ ಕರೆದು ‘ನಿಮ್ಮ ಕೊಳ ಹಾಗೆಯೇ ಇದೆ ; ಆ ಮೇಲೆ ನಮ್ಮನ್ನು ದೂರಬೇಡಿ’ ಎಂದು ಹೇಳಿ ಕಲಿಭೀಮ ಮರಳಿದನು.
ಮೂಲ ...{Loading}...
ತಿರಿದು ತಾವರೆ ವನವ ಕಕ್ಷದೊ
ಳಿರುಕಿ ಗದೆಯನು ಕೊಂಡು ಸರಸಿಯ
ಹೊರವಳಯದಲಿ ನಿಂದು ಕಾಹಿನ ಯಕ್ಷ ರಾಕ್ಷಸರ
ಒರಲಿ ಕರೆದನು ನಿಮ್ಮ ಕೊಳನಿದೆ
ಬರಿದೆ ದೂರದಿರೆಮ್ಮನೆನುತಾ
ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ ॥58॥